ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-20


ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತನ್ನ ಸ್ನೇಹಿತೆ ಮಾನ್ವಿಯನ್ನು ಭೇಟಿಯಾಗಲು ಮುಂಬೈಗೆ ಹೊರಟಿರುವುದಾಗಿ ತಿಳಿಸಿ ಅವರ ಅನುಮತಿ ಪಡೆದಿದ್ದಳು. ಹರ್ಷನಿಗೆ  ಹಳೆಯದನ್ನೆಲ್ಲ ನೆನಪಿಸಲು ಕೆಲವು ಫೋಟೋ ಆಲ್ಬಮ್‌ಗಳನ್ನು ತೆಗೆದು ತನ್ನ ಬ್ಯಾಗಿಗೆ ತುರುಕಿದ್ದಳು. ತನ್ನ ರೂಮಿನಲ್ಲಿದ್ದ ಹೂದಾನಿ, ಗೊಲ್ಡನ್ ಫಿಶ್‌ಗಳನ್ನ ಗೋಪಿಯ ಸುಪರ್ದಿಗೆ ಒಪ್ಪಿಸಿ ಜೋಪಾನವಾಗಿ ನೋಡಿಕೊಳ್ಳಲು ಹೇಳಿದ್ದಳು.

                      ⚛⚛⚛⚛⚛

ಸಂಜೆ ನಾಲ್ಕು ಗಂಟೆ ಆಸುಪಾಸಿಗೆ ಮನೆಗೆ ಬಂದ ಪ್ರಸನ್ನ  ಕುರುಕಲು ತಿಂಡಿಗಳ ಘಮವನ್ನು ಅನುಸರಿಸಿ ಅಡಿಗೆ ಮನೆ ಹೊಕ್ಕಿದ್ದ. ಚಕ್ಕುಲಿ ಮಾಡುತ್ತಿದ್ದ ಸುಲೋಚನರನ್ನು ನೋಡಿ ಒಂದು ಚಕ್ಕುಲಿಯನ್ನು ಕೈಗೆತ್ತಿಕೊಂಡು ಮುರಿದು ಬಾಯಿಗಿಡುತ್ತ ಕೇಳಿದ "ಈಗೇನು ವಿಶೇಷ..??  ಚಕ್ಕುಲಿ ಕೊಡ್ಬಳೆ, ಎಲ್ಲಾ..."

"ಇವೆಲ್ಲಾ ನಿನಗೆ ಮತ್ತೆ ಪರಿಗೆ ಕಣೋ.. ಅವಳು ಫ್ರೆಂಡ್‌ನ ಮೀಟ್ ಮಾಡೋಕೆಂತ ಮುಂಬೈಗೆ ಹೊರಟಿದ್ದಾಳೆ. ನೀನು ಸೆಮಿನಾರ್‌ಗೆ ಅಂತ ಹೊರಡ್ತಿದ್ದಿಯಲ್ಲ,, ಅದ್ಕೆ ಇಬ್ಬರಿಗೂ ತಿನ್ನೋಕೆ ಮಾಡಿದ್ದು. ಕೆಳಗಿನ ಬಾಕ್ಸ್‌ಲ್ಲಿ ಬಾದಾಮ್ ಪುರಿ, ಮೇಲೆ ಚಕ್ಕಲಿ ಕೊಡ್ಬಳೆ ಇಟ್ಟಿದಿನಿ.. ಹಸಿವಾದಾಗ ತಿನ್ನು ಆಯ್ತಾ..ಹೋಗೋವಾಗ ತಗೊಂಡ್ ಹೋಗು.." ಎನ್ನುತ್ತ ಬಾಕ್ಸ್ ಅವನ ಮುಂದಿಟ್ಟರು ಸುಲೋಚನ.

"ಇದೆಲ್ಲಾ ಯಾಕ್ ತೊಂದ್ರೆ ತಗೊಂಡ್ರಿ ಮಾ.." ರಾಗವೆಳೆದ ಪ್ರಸನ್ನ.

"ಓಹ್.... ಹಾಗಿದ್ರೆ ಬೇಡ್ವಾ..... ಬಿಡು,, ನಮ್ಮ ಹರಿಣಿಗೆ ಐದು ನಿಮಿಷ ಸಾಕು, ಇವನ್ನೆಲ್ಲಾ ಖಾಲಿ ಮಾಡೋಕೆ... ನೀನು ಹೊರಡು.." ಎಂದು ಬಾಕ್ಸ್ ಹಿಂದಕ್ಕೆಳೆದುಕೊಂಡರು ಮುನಿಸಿಕೊಂಡು.

"ಅಯ್ಯೋ...ಮಾ,, ಸುಮ್ನೆ ಮಾತಿಗೆ ಹೇಳಿದ್ದು. ಇರಲಿ ಬಿಡಿ... ಹೋಗೋವಾಗ ತಗೊಂಡು ಹೋಗ್ತಿನಿ. ಈಗ ಇಲ್ಲೇ ಇರಲಿ." ಎಂದು ಹೇಳಿ ಒಂದೆರಡು ಚಕ್ಕಲಿ ಕೈಯಲ್ಲಿ ಹಿಡಿದುಕೊಂಡು ಹರಿಣಿ ರೂಮ್‌ನತ್ತ ನಡೆದಿದ್ದ ಪ್ರಸನ್ನ. ಮರುದಿನದ ಪರೀಕ್ಷೆಗೆ ತುಂಬಾ ಗಂಭೀರವಾಗಿ ಓದುತ್ತಾ ಪುಸ್ತಕದೊಳಗೆ ಹುದುಗಿದ್ದ ಹರಿಣಿ ಪ್ರಸನ್ನ ಬಂದಿದ್ದನ್ನು ಗಮನಿಸಲಿಲ್ಲ. 

"ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೊಡ್ತಿದ್ರಂತೆ ಯಾರೋ ಬುದ್ದಿವಂತರು..." ಹರಿಣಿಯ ಲಾಸ್ಟ್ ಮಿನಿಟ್ ಪ್ರಿಪರೆಶನ್‌ನನ್ನು ಕಂಡು ಅಣುಗಿಸಿದ ಪ್ರಸನ್ನ.

"ಫರ್ಸ್ಟ್ ಆಫ್ ಆಲ್ ಐ ಡೋಂಟ್ ಹ್ಯಾವ್ ಬೀಯರ್ಡ್ ಪಚ್ಚು..!" ಬಾಲಕ್ಕೆ ಬೆಂಕಿ ಹತ್ತಿದಾಗಲೇ ಅಲ್ವಾ... ರಾಕೆಟ್ ಮೇಲೆ ಎತ್ತರಕ್ಕೆ... ಹಾರೋದು!! ಯು ನೋ.. ನಾವೊಂತರಾ ರಾಕೆಟ್ ತರಾನೇ.. ನೌ ಡೋಂಟ್ ಡಿಸ್ಟರ್ಬ್ ಮಿ!!" ಗಂಭೀರವಾಗಿ ಪುಸ್ತಕದೊಳಗಿಂದಲೇ ಉತ್ತರಿಸಿದಳು ಹರಿಣಿ.

"ಸರಿ ಬಿಡಮ್ಮ.. ಇವತ್ತಲ್ಲ ಇನ್ನೊಂದು ವಾರ ನಿನ್ನ ಡಿಸ್ಟರ್ಬ್ ಮಾಡಲ್ಲ. ಯಾಕಂದ್ರೆ ನಾನು ಮುಂಬೈಗೆ ಹೋಗ್ತಿದಿನಿ. ಚೆನ್ನಾಗಿ ಓದಿ.. ಪರೀಕ್ಷೆ ಬರಿ ಒಕೆ. ನಿನ್ನ ಎಕ್ಸಾಮ್ಸ್‌ಗೆ ಆಲ್ ದಿ ವೆರಿ ಬೆಸ್ಟ್‌!! " ಅವಳ ತಲೆ ತಡವುತ್ತ ಹೇಳಿದ ಪ್ರಸನ್ನ.

"ಮುಂಬೈಗಾ.. ಯಾಕೆ? ಯಾವಾಗ ಹೋಗ್ತಿದಿಯಾ? ನನಗ್ಯಾಕೆ ಮೊದಲೇ ಹೇಳ್ಲಿಲ್ಲ ನೀನು..? ನನ್ನ ಎಕ್ಸಾಮ್ಸ್ ಮುಗಿದ ಮೇಲೆ ಹೋಗೋಣ ನಾನು ಬರ್ತೆನೆ" ಸ್ವಲ್ಪ ಕೋಪಿಸಿಕೊಂಡು ಕೇಳಿದಳು ಹರಿಣಿ

"ಇಂಪಾರ್ಟೆಂಟ್ ಕೆಲಸ ಇದೆ ಕಣೋ.. ಯಾಕೆ ಏನು ಎತ್ತ ಎಲ್ಲಾ ಬಂದಮೇಲೆ ಮಾತಾಡೋಣ.  ಈಗ ಓದ್ಕೋ.." ಎಂದು ಎದ್ದು ಹೊರಟಿದ್ದ ಪ್ರಸನ್ನ " ಏನಾದರೂ ತರ್ಬೇಕಾ ನಿನಗೆ ಅಲ್ಲಿಂದ" ಹಿಂತಿರುಗಿ ಕೇಳಿದ. ಸ್ವಲ್ಪ ಹೊತ್ತು ಏನೋ ಯೋಚಿಸಿದ ಹರಿಣಿ ಏನೂ ಬೇಡವೆಂದು ಕತ್ತು ಅಲ್ಲಾಡಿಸಿದಳು. ಅವಳ ಮುಖ ಸಪ್ಪೆಯಾದದ್ದನ್ನು ಕಂಡು ಪ್ರಸನ್ನ ನಯವಾಗಿ ಕೇಳಿದ - "ಯಾಕೆ...ಏನಾಯ್ತು..? ಯಾಕೊಂಥರಾ ಆದೆ..."

"ಅದೂ..... ಲಾಸ್ಟ್ ಟೈಮ್ ಅಣ್ಣಾನೂ ಹೀಗೆ ಕೇಳಿದ್ದ ಏನು ಬೇಕು ಅಂತ. ನಾನು ಟೆಡ್ಡಿ ಕೇಳಿದ್ದೆ. ನಾನು ಹೇಳಿದ ಟೆಡ್ಡಿ ಮಾತ್ರ ವಾಪಸ್ ಬಂತು ಆದರೆ ಅವನು ಮತ್ತೆ ಬರಲೇ ಇಲ್ಲ..." ಅವಳ ಕಣ್ಣು ನೀರಾದವು. " ಅದ್ಕೆ.. ನನಗೇನು ಬೇಕಾಗಿಲ್ಲ. ನೀನು ಬೇಗ ಬಂದ್ರೆ ಅಷ್ಟೇ ಸಾಕು.. ಮತ್ತೆ ಡೇಲಿ  ಕಾಲ್ ಮಾಡ್ಬೇಕು. ಮಿನಿಮಮ್ ಫಿಫ್ಟಿನ್ ಮಿನಿಟ್ಸ್ ನಂಜೊತೆ ಮಾತಾಡ್ಬೇಕು ಒಕೆ.." ತಾಕೀತು ಮಾಡಿ ತನ್ನ ಟೂಲ್‌ಕಿಟ್‌ನಿಂದ ಫ್ರೆಂಡ್ಸ್ ‌ಶಿಪ್ ಬ್ಯಾಂಡ್‌ನ್ನು ಅವನ ಕೈಗೆ ಹಾಕಿ ಪಕ್ಕಾ ಪ್ರಾಮೀಸ್.. ತಾನೇ" ಎಂದಳು.

"ಹ್ಮ್.. ಪಕ್ಕಾ ಪ್ರಾಮೀಸ್.. ದಿನ ಮಾತಾಡೋಣ. ನಾನೂ ಬೇಗ ಬರ್ತಿನಿ ಆಯ್ತಾ.." ಎಂದು ಅವಳ ಕೈ ಮೇಲೆ ಕೈಯೊತ್ತಿ 'ಬರೋವಾಗ ನಾನೊಬ್ನೆಯಲ್ಲ ಹರ್ಷನ್ನು ಜೊತೆಗೆ ಕರ್ಕೊಂಡೇ ಬರೋದು!' ಎಂದು ಮನಸ್ಸಲ್ಲೇ ಮಾತು ನೀಡಿದ.

ಹರಿಣಿಗೆ ಓದಲು ಬಿಟ್ಟು ಅಲ್ಲಿಂದ ಪರಿಧಿ ಕೋಣೆಗೆ ಹೊರಟ ಪ್ರಸನ್ನ. ಸಂಜೆಯ ಪ್ರಯಾಣಕ್ಕೆ ತನ್ನ ಲಗೇಜ್ ಸಿದ್ದಪಡಿಸಿಕೊಳ್ಳುತ್ತಿದ್ದಳು ಪರಿ. ಅವನನ್ನು ನೋಡಿ " ಇಷ್ಟು ಬೇಗ ಕೋಪ ಇಳಿತಾ.." ಎಂದು ಕೇಳಿದಳು.

"ಕೆಳಗೆ ಅಮ್ಮ ನನಗೋಸ್ಕರ ಒಂದು ಬಾಕ್ಸ್ ರೆಡಿ ಮಾಡಿದಾರೆ. ಸದ್ಯಕ್ಕೆ ನಿಮ್ಜತ್ರ ಇಟ್ಕೊಂಡು ಬನ್ನಿ ಅಲ್ಲಿಗೆ ಹೋದ್ಮೇಲೆ ನನಗೆ ಕೊಡ್ಬೇಕು ಆಯ್ತಾ.."

"ಅಲ್ಲಿಗೆ ಹೋದಮೇಲಾ...? ಎಲ್ಲಿಗೆ ಪ್ರಸನ್ನ??" ಓರೆನೋಟದಲ್ಲಿ ಕೆಣಕಿದಳು

"ಅದೇನೋ ಹೇಳ್ತಿದ್ರಲ್ಲ.. ಪ್ರೀತಿಸಿದವರನ್ನ ಕಳ್ಕೊಂಡಾಗ ಆಗೋ ನೋವು ಪ್ರೀತಿ ಅನ್ನೋದಾದ್ರೆ,, ಆ ನೋವಿಗೆ ಕಾರಣವಾದವ್ರನ್ನ ದ್ವೇಷಿಸೋದು ಕೂಡ ಪ್ರೀತಿನಾ...!? ಏನ್ ಹಾಗಂದ್ರೆ?? ಇದರರ್ಥ.... ಮಾನ್ವಿ ಯಾರನ್ನಾದರೂ ಪ್ರೀತಿಸ್ತಿದ್ಳಾ? ಅವಳ ಪ್ರೀತಿ ದೂರವಾಗೋಕೆ ನೀವ್ ಕಾರಣಾನಾ...? ಹೇಗೆ...? ಅವಳ್ಯಾಕೆ ನಿಮ್ಮನ್ನ ಅಷ್ಟೊಂದು ದ್ವೇಷಿಸೋದು?" ಅವಳ ಪ್ರಶ್ನೆಗೆ ಮರುಪ್ರಶ್ನೆಗಳನ್ನು ಎಸೆದಿದ್ದ ಪ್ರಸನ್ನ.

"ಈಗ ಅದೆಲ್ಲ ಮಾತಾಡೋಕೆ ಟೈಮಿಲ್ಲ ಪ್ರಸನ್ನ.. ನಿಮ್ ಲಗೇಜ್ ಎಲ್ಲಾ ರೆಡಿ ಇದೆಯಾ? ಟ್ರಾಫಿಕ್ ತುಂಬಾ ಇರುತ್ತೆ ಬೇಗ ಹೋಗೋಣ ಫ್ಲೈಟ್ ಮಿಸ್ ಆದ್ರೆ ಕಷ್ಟ.." ಪರಿಧಿ ಮಾತು ಬದಲಿಸಿದಳು.

"ಹ್ಮ್... ಸರಿ. ಹರ್ಷನ ಎಲ್ಲಾ ಫೋಟೋಸ್ ಮತ್ತೆ ವಿಡಿಯೋಸ್ ಬೇಕಾಗಿತ್ತು. ಲ್ಯಾಪ್‌ಟಾಪ್ ಎಲ್ಲಿ?" ಅವಳ ಮಾತಿಗೆ ಸಮ್ಮತಿಸಿ ಸೂಚಿಸುತ್ತಲೇ ಕೇಳಿದ ಪ್ರಸನ್ನ. ಪರಿ ತಾನು ಎಲ್ಲಾ ಫೋಟೋಸ್ ಮತ್ತು ವಿಡಿಯೋಗಳನ್ನು ಈಗಾಗಲೇ ಮೊಬೈಲಿಗೆ ಕಾಪಿ ಮಾಡಿಕೊಂಡಿರುವುದಾಗಿ ಹೇಳಿದರೂ ಕೇಳದ ಪ್ರಸನ್ನ ತನ್ನ ಬಳಿಯೂ ಕೆಲವು ಬೇಕೆಂದು ಹೇಳಿ ಲ್ಯಾಪ್‌ಟಾಪ್ ಹಿಡಿದುಕೊಂಡು ಕುಳಿತುಬಿಟ್ಟ. ಅದರಲ್ಲಿನ ಫೋಟೋಗಳನ್ನು ಕಾಪಿ ಮಾಡುವ ಸಮಯದಲ್ಲಿ ಪರಿಧಿಗೆ ಆಲಾಪ್ ಕಳಿಸಿದ ಮೇಲ್ ಬಂದಿತ್ತು. ನೋಡಲೋ ಬೇಡವೋ ಎಂದು ಅನುಮಾನದೊಂದಿಗೆ ಪ್ರಸನ್ನ ಅದನ್ನು ಒಮ್ಮೆ ತೆರೆದು ನೋಡಿದ್ದ. ಆಲಾಪ್‌ನ ಸಂದೇಶವನ್ನು ಓದುತ್ತಿದ್ದವನ ಉಸಿರು ಒಂದು ಕ್ಷಣ ನಿಂತು ಹೋದಂತಾಗಿತ್ತು. ದಿಗ್ಭ್ರಮೆಗೊಳಗಾಗಿ ಲ್ಯಾಪ್‌ಟಾಪ್ ದಿಟ್ಟಿಸುತ್ತ ಕುಳಿತಿದ್ದ ಪ್ರಸನ್ನನನ್ನು ಗಮನಿಸಿದ ಪರಿಧಿ 'ಏನಾಯಿತೆಂದು' ಕೇಳಿ ಮುಂದೆ ಬಂದಾಗ,, ಅವಸರದಲ್ಲಿ ಲ್ಯಾಪ್‌ಟಾಪ್ ಮುಚ್ಚಿದ ಪ್ರಸನ್ನ 'ಏನಿಲ್ಲ ಪರಿ..' ಎಂದು ಕ್ಲುಪ್ತವಾಗಿ ಉತ್ತರಿಸಿ ಬೇಗ ಹೊರಡಲು ಅವಸರಿಸಿದ್ದ. ಹೊರನೋಟಕ್ಕೆ ತುಂಬಾ ಸಾಮಾನ್ಯವಾಗಿ ಕಾಣುತ್ತಿದ್ದ ಪ್ರಸನ್ನನ ಮನಸ್ಸು ಮಾತ್ರ ಕೋಲಾಹಲಕ್ಕೊಳಗಾಗಿತ್ತು. ಮುಂದೆ ಆಗುವ ಅನಾಹುತವನ್ನು ತಿಳಿದು ಸಹ ಯಾರೊಡನೆಯೂ ಹಂಚಿಕೊಳ್ಳಲಾಗದ ಸಂದಿಗ್ಧತೆಗೆ ಆತ ಒಳಗಾಗಿದ್ದ.

                                  ********

ಪರಿಧಿ ಮತ್ತು ಪ್ರಸನ್ನನನ್ನು ಮುಂಬೈಗೆ ಬೀಳ್ಕೊಡಲು ರೋಹಿತ್ ಮತ್ತು ಧ್ರುವ ಸಹ ಏರ್ಪೋರ್ಟ್‌ಗೆ ಬಂದಿದ್ದರು. ಮುಂಬೈಗೆ ಹೋದ ನಂತರದ ಕೆಲಸಗಳು, ಹರ್ಷನನ್ನ ಹುಡುಕುವ ಮತ್ತು ಗುಣಪಡಿಸುವ ಕುರಿತು ದೀರ್ಘ ಸಮಯ ಮಾತನಾಡುತ್ತಾ ನಿಂತಿದ್ದರು. ಫ್ಲೈಟ್ ಹೊರಡಲು ಇನ್ನೂ ಅರ್ಧಗಂಟೆಯಿತ್ತು. ಆಗ ಓಡಿ ಬಂದಿದ್ದರು ಶ್ರಾವ್ಯ ಮತ್ತು ದಿವ್ಯ.. ಅವರನ್ನು ನೋಡಿದ್ದೆ ತಡ ಅವರ ಮುಂದಿನ ಮಾತುಕಥೆಯ ಸುಳಿವು ಸಿಕ್ಕ ರೋಹಿತ್  ಹೇಳಿದ್ದ - "ಸರ್.. ನಾವಿಬ್ರೂ ಟೀ ಕುಡಿದು ಬರ್ತೀವಿ.. ನಿಮ್ಮಿಬ್ರಿಗೂ ಬೇಕಾ.."

ಪ್ರಸನ್ನ ತನಗೆ ಬೇಡವೆಂದನಾದರೂ ಪರಿಯನ್ನು ಒತ್ತಾಯದಿಂದ ಧ್ರುವ ಮತ್ತು ರೋಹಿತ್ ನೊಡನೆ ಟೀ ಕುಡಿಯಲು ಕಳಿಸಿದ. ಶ್ರಾವ್ಯ ತಾನು ತಿಳಿದುಕೊಂಡ ಸಂಕಲ್ಪ್ ಆಥ್ರೇಯನ ಸಂಪೂರ್ಣ ಮಾಹಿತಿಯನ್ನು ಪ್ರಸನ್ನನ ಮುಂದೆ ವಿವರಿಸಿದ್ದಳು. ಮತ್ತು ಕೆಲವು ಗಂಭೀರವಾದ ಸತ್ಯವನ್ನು ಬಿಚ್ಚಿಟ್ಟಿದ್ದಳು. ಆ ವಿಷಯ ತನಗೂ ತಿಳಿಯಿತೆಂದು ಪ್ರಸನ್ನ ಬೇಸರದಿಂದ ತಿಳಿಸಿ ತಲೆ ಕೊಡವಿದ. ಮತ್ತು ಯಾವುದೇ ವಿಷಯವನ್ನು ಪರಿ ಎದುರು ಪ್ರಸ್ತಾಪ ಮಾಡಬೇಡವೆಂದು ಎಚ್ಚರಿಸಿದ. ಅಷ್ಟರಲ್ಲಿ ಟೀ ಕುಡಿದು ಮರಳಿದ ಪರಿ ತುಂಬಾ ಸಂತೋಷದಿಂದ ಎಲ್ಲರಿಗೂ ಕೈ ಕುಲುಕಿ ಫ್ಲೈಟ್ ಕಡೆಗೆ ನಡೆದಿದ್ದಳು. ಪ್ರಸನ್ನ ಕೂಡ ಕಣ್ಣ ಸನ್ನೆಯಲ್ಲಿ ಬಾಯ್ ಹೇಳಿ ಬೋರ್ಡಿಂಗ್ ಕಡೆಗೆ ನಡೆದಿದ್ದ. ಫ್ಲೈಟ್ ‌ನಲ್ಲಿ ಕುಳಿತಾದ ಮೇಲೆ ಪ್ರಸನ್ನ ದೂರದಲ್ಲಿದ್ದ ಸ್ಥಾನವನ್ನು ಪರಿಧಿ ಪಕ್ಕಕ್ಕೆ ಬದಲಾಯಿಸಿಕೊಂಡು ಬಂದು ಕುಳಿತಿದ್ದ. "ಹ್ಮ್.. ಈಗ ಹೇಳಿ ಪರಿ... ಏನು ನಡೆದಿತ್ತು ನಿಮ್ಮ ಮತ್ತೆ ಮಾನ್ವಿ ಮಧ್ಯೆ... ನನಗೆ ನಿಮ್ಮ ವಿಷಯದಲ್ಲಿ ತಲೆ ಹಾಕೋ ಕೂತುಹಲ ಏನಿಲ್ಲ. ಆದರೆ ಯಾವುದೇ ಕೇಸ್‌ನಾ ಹ್ಯಾಂಡಲ್ ಮಾಡೋಕು ಮೊದಲು ಅದರ ಪೂರ್ವಾಪರ ತಿಳಿಯೋದು ಮುಖ್ಯ!! ಅದಕ್ಕೆ ಕೇಳ್ತಿದಿನಿ.. ಹೇಳಿ ಪರಿ... ಏನಾಗಿತ್ತು ನಿಮ್ಮ ಮಧ್ಯೆ??"

ಪರಿ ಮಾನ್ವಿಯ ಬಗ್ಗೆ ಪೀಠಿಕೆ ಹಾಕುತ್ತ ಹಿಂದಿನ ಕಹಿ ಘಟನೆಗಳನ್ನು ಮೆಲುಕು ಹಾಕಿದ್ದಳು...

ನಿಮ್ಮ ಪ್ರಕಾರ ಮಾನ್ವಿ ಅಂದ್ರೆ ಹಣದ ಗರ್ವದಿಂದ ಮೆರೆಯೋ ಒಬ್ಬ ದುರಹಂಕಾರಿ ಹುಡುಗಿ ಅಲ್ವಾ ಪ್ರಸನ್ನ... ಆದ್ರೆ ಮಾನ್ವಿ ನೀವು ತಿಳ್ಕೊಂಡ್ ಹಾಗಲ್ಲ.. ಒಳ್ಳೆಯ ಮನಸ್ಸು ಯಾವತ್ತೂ ಕಣ್ಣಿಗೆ ಕಾಣೋಲ್ಲ,, ಅದನ್ನ ಅರ್ಥ ಮಾಡಿಕೊಳ್ಳುವವರಿಗೆ ಮಾತ್ರ ಅದು ಅರ್ಥವಾಗೋದು..  ಅದೊಂತರಾ ತೆಂಗಿನಕಾಯಿ ಹಾಗೆ ಮೇಲಿನ ವ್ಯಕ್ತಿತ್ವ ಎಷ್ಟೇ ಕಠೋರ ಅನ್ನಿಸಬಹುದು. ಆದರೆ ತಿರುಳು ತೆಗೆದಾಗಲೇ ಒಳಗಿನ ಸಿಹಿ ಮೃದುತ್ವದ ಪರಿಚಯವಾಗೋದು.  ನಾನು ಮಾನ್ವಿನ ತುಂಬಾ ಹತ್ತಿರದಿಂದ ನೋಡಿದ್ದೀನಿ. ಅವಳೇನು ಅಂತ ನನಗೊತ್ತು. ಅವಳ ಪ್ರೀತಿ ತುಂಬಾ ವಿಚಿತ್ರ.. ಒಬ್ಬರನ್ನು ನಂಬಿದ್ರೆ ತನ್ನ ಅಸ್ತಿತ್ವವನ್ನೇ ಧಾರೆಯೆರೆಯುವಷ್ಟು ಅವರನ್ನ ಪ್ರೀತಿಸ್ತಾಳೆ ಅವಳು.. ಅದೇ ತನ್ನ ನಂಬಿಕೆಗೆ ದ್ರೋಹವಾದಾಗ ಆ ಪ್ರೀತಿಯಲ್ಲ ಅದೇ ಮಾತ್ರದ ಭಯಾನಕ ದ್ವೇಷವಾಗಿ ಹೀಗೆ ನನ್ನ ಬದುಕಿಗೆ ಮುಳ್ಳಾಗುತ್ತೆ ಅಂತ ನಾನಂದುಕೊಂಡಿರಲಿಲ್ಲ ಪ್ರಸನ್ನ!!  ಅವಳ ಮನಸ್ಸು ಚಿಕ್ಕ ಮಗುವಿನ ಹಾಗೆ,, ಸ್ವಲ್ಪ ಹಠ ಜಾಸ್ತಿ. ಆದ್ರೆ ಕೆಟ್ಟವಳೇನಲ್ಲ. ಕೆಲವೊಮ್ಮೆ ತುಂಬಾ ಹಚ್ಕೊಂಡು ಬಿಡ್ತಾಳೆ,, ಎಷ್ಟು ಅಂದ್ರೆ ಅವರು ದೂರವಾದ್ರೆ ಮುಂದೆ ಬದುಕೇ ಇಲ್ಲ ಅನ್ನಿಸುವಷ್ಟು..  ನನ್ನ ಅವಳ ಸ್ನೇಹ ‌‌ಬರೀ ಐದುವರೆ ವರ್ಷದ್ದಾದರೂ ನಮ್ಮಿಬ್ಬರ ಮಧ್ಯೆ ಸ್ವಂತ ಅಕ್ಕ ತಂಗಿಗಿಂತ ಹೆಚ್ಚು ಅನ್ನಿಸುವಷ್ಟು ಸಲಿಗೆಯಿತ್ತು. ಮಾನ್ವಿ ತಂದೆ ತಾಯಿ ಆಗರ್ಭ ಶ್ರೀಮತರೇ ಆಗಿರಬಹುದು ಆದರೆ ಯಾವತ್ತೂ ಅವಳ ಜೊತೆ ಕುಳಿತು ಅವಳ ಕಷ್ಟ ಸುಖ ಹಂಚಿಕೊಳ್ಳಲು ಪುರುಸೊತ್ತಿಲ್ಲ ಅವರಿಗೆ! ಹೀಗಿರುವಾಗ ಅವಳ ಬದುಕಲ್ಲಿ ಎಲ್ಲ ಪ್ರೀತಿಯ ಕೊರತೆಯನ್ನು ನೀಗಿದವನು ಅವಳ ಬೆಸ್ಟ್ ಫ್ರೆಂಡ್ ಆಲಾಪ್!! ನಾನು ಹರ್ಷನ್ನ ಪ್ರೀತಿಸುವಂತೆ ಅವಳು ಪ್ರೀತಿಸ್ತಿದ್ದಳು.. ಆಲಾಪ್‌ನನ್ನ!!

"ಆಲಾಪ್‌ಂದ್ರೆ ಅದೇ ನಿಮ್ಮ ಬ್ಯಾಚ್‌ನಲ್ಲಿದ್ನಲ್ಲ ಸ್ಪೆಕ್ಟ್,, ಕರ್ಲಿ ಹೇರ್,, ಅವನೇ ತಾನೇ.." ತನ್ನ ಅನುಮಾನ ಖಚಿತ ಪಡಿಸಿಕೊಂಡ ಪ್ರಸನ್ನ

"ಹ್ಮ್.... ಅವನೇ ಆಲಾಪ್!! ಅವರಿಬ್ಬರೂ ಚಿಕ್ಕ ವಯಸ್ಸಿನಿಂದಲೇ ಕೂಡಿ ಬೆಳೆದವರು.  ಮಾನ್ವಿ ಮಾತ್ರ ಅದಾವ ಘಳಿಗೆಯಲ್ಲಿ ಅವನನ್ನು ತುಂಬಾ ಪ್ರೀತಿಸಿದಳೋ. ಆದರೆ ಆಲಾಪ್ ಮನಸ್ಸಲ್ಲಿ ಆ ರೀತಿಯ ಫೀಲಿಂಗ್ಸ್ ಯಾವತ್ತೂ ಇರಲಿಲ್ಲ. ನಮ್ಮ ಮಧ್ಯೆ ಅಲ್ಲಿಯವರೆಗೂ ಎಲ್ಲಾ ಚೆನ್ನಾಗಿಯೇ ಇತ್ತು. ಆದರೆ ಇಂಟರನಿಶಿಪ್ ಟೈಮ್‌ಲ್ಲಿ ನೀವು ಅವಳನ್ನ ರೆಸ್ಟಿಗೇಟ್ ಮಾಡಿದ್ಮೇಲೆ ಅವಳು ಯು.ಎಸ್‌ಗೆ ಹೊರಟು ಹೋದಳು. ಅದಾದನಂತರ ನಮ್ಮ ಮಧ್ಯೆ ಮಾತುಕತೆ ತುಂಬಾ ಅಪರೂಪವಾಗ್ತಾ ಹೋಯ್ತು. ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಫೋನ್‌ಲ್ಲಿ ಮಾತು ಅಷ್ಟೇ!! ಅದೇ ರೀತಿ ನಮ್ಮ ಇಂಟರ್ನ್‌ಶಿಪ್ ಮುಗಿದು ನಾವೆಲ್ಲರೂ ಒಂದೊಂದು ಕಡೆಗೆ ಪ್ರ್ಯಾಕ್ಟೀಸ್ ಆರಂಭಿಸಿದೆವು. ಎಂದು ಪೂರ್ವವನ್ನು ವಿವರಿಸಿ ಹಳೆಯ ಘಟನೆಯನ್ನು ಹೇಳಲು ಆರಂಭಿಸಿದ್ದಳು...

ಅವತ್ತೊಂದಿನ ಪರಿ ಆಸ್ಪತ್ರೆಯಲ್ಲಿರುವಾಗ ಸಂಜೀವಿನಿ ಕಾಲ್ ಮಾಡಿದ್ದಳು. ತುಂಬಾ ಗಾಬರಿ ಗೊಂಡಿದ್ದಳು ಅವತ್ತು. ಪರಿ ಕಾಲ್ ರಿಸೀವ್ ಮಾಡಿ ಮಾತಾಡಿದಾಗ ಆಕೆ ಅಳುತ್ತ ತಿಳಿಸಿದ್ದಳು..
"ಪರಿ,, ನಾಡಿದ್ದು ನನ್ನ ಮದುವೆ ಫಿಕ್ಸ್ ಆಗಿದೆ ಕಣೇ.."

"ಹೇಯ್.. ಕಂಗ್ರ್ಯಾಟ್ಸ್ ಕಣೇ.. ಅದಕ್ಕೆ ಖುಷಿ ತಾನೇ ಪಡಬೇಕು,, ಗಾಬರಿ ಯಾಕೆ ಆಗಿದೀಯೇ ಪೆದ್ದಿ.. ಅಳೋದ್ಯಾಕೆ" ಪ್ರೀತಿಯಿಂದ ಗದರಿದಳು ಪರಿ

"ಅದು... ನನಗೆ ಈ ಮದುವೆ ಇಷ್ಟ ಇಲ್ವೆ.. ಆದರೆ ಮನೇಲಿ ಅಪ್ಪ ಕೇಳ್ತಿಲ್ಲ.. ಒತ್ತಾಯ ಪೂರ್ವಕವಾಗಿ ಒಂದೇ ದಿನದಲ್ಲಿ ನನ್ನ ಮದುವೆ ತಯಾರಿ ನಡೆಸಿದ್ದಾರೆ. " ಅಳುತ್ತ ಬಿಕ್ಕಿದಳು.

"ಇಷ್ಟ ಯಾಕಿಲ್ಲ? ಹುಡುಗ ಚೆನ್ನಾಗಿಲ್ವ ಅಥವಾ ಈಗಲೇ ಮದುವೆ ಬೇಡವಂತಾನೋ?"

"ಪ್ಲೀಸ್ ಪರಿ ನನಗ್ ತುಂಬಾ ಭಯ ಆಗ್ತಿದೆ,, ಏನ್ ಮಾಡಬೇಕು ತೋಚ್ತಿಲ್ವೆ,, ನೀನಿವತ್ತೆ ಇಲ್ಲಿಗೆ ಬಾರೇ.. " ಗೋಗರೆದಳು ಸಂಜೀವಿನಿ

" ಸರಿ, ಬರ್ತಿನಿ,, ನೀನು ಅಳಬೇಡ್ವೆ"

"ಪರಿ,, ನಾನು ನಿನಗೆ ಇನ್ನೊಂದು ವಿಷಯ ಹೇಳ್ಬೇಕಿತ್ತು....."

"ಹ್ಮಾ... ಹೇಳು.."

"ಅದೂ..... ನಾನು........ ಹ್ಮ!! ಅಮ್ಮಾ ಬಂದ್ರು.. ಈಗ ಬೇಡ, ನಾಳೆ ಪ್ಲೀಸ್ ಬೇಗ ಬಾ ಆಯ್ತಾ.. ನಾಡಿದ್ದೆ ಮದುವೆ.." ಸಂಜೀವಿನಿಯ ಧ್ವನಿಯಲ್ಲಾದ ಬದಲಾವಣೆ ಗಮನಿಸಿ ಹೆಚ್ಚೆನೂ ಕೇಳದೆ ಫೋನ್ ಇರಿಸಿದ್ದಳು ಪರಿ. ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಹೊರಡುವ ಸಿದ್ದತೆ ನಡೆಸಿದ್ದಳು ಪರಿಧಿ. ಜೊತೆಗೆ ಆ ಕೂಡಲೇ ಮಾನ್ವಿಗೂ ಕೂಡ ಕರೆ ಮಾಡಿ ತಕ್ಷಣವೇ ಸಂಜೀವಿನಿ ಮದುವೆಗೆ ಹೊರಟು ಬರುವಂತೆ ಒತ್ತಾಯಿಸಿದಳು. ಅವಳ ಒತ್ತಾಯಕ್ಕೆ ಮಣಿದು ಮಾನ್ವಿ ಕೂಡ ಬರುವೆನೆಂದು ಹೇಳಿದ್ದಳು. ಆ ದಿನ ಆಸ್ಪತ್ರೆಗೆ ರಜೆಯ ಹಾಕಿ ಹರ್ಷನಿಗೆ ಕರೆ ಮಾಡಿ ವಿಷಯವನ್ನ ತಿಳಿಸಿ ಧಾರವಾಡ ಬರಲು ದುಂಬಾಲು ಬಿದ್ದಳು. ಮೊದಮೊದಲು ಕೆಸದೊತ್ತಡದಿಂದ ಅಲ್ಲಿಗೆ ಹೋಗಲು ನಿರಾಕರಿಸಿದ ಹರ್ಷ ಡ್ರೈವರ್ ಜೊತೆಗೆ ಹೋಗುವಂತೆ ವ್ಯವಸ್ಥೆ ಮಾಡಿದ. ಆದರೆ ಕೊನೆಗೆ ಅವಳ ಒತ್ತಾಯಕ್ಕೆ ಸೋತು ಎಲ್ಲಾ ಕೆಲಸಗಳನ್ನು ಮುಂದುಡಿ ಅವಳೊಟ್ಟಿಗೆ ಧಾರವಾಡಕ್ಕೆ ಹೊರಡಲು ಸಿದ್ದನಾಗಿದ್ದ.

ಆ ಸಂಜೆಯೇ ಇಬ್ಬರೂ ಕಾರಿನಲ್ಲಿ ಪ್ರಯಾಣ ಆರಂಭಿಸಿದರು.  ರಾತ್ರಿ ಮೂರು ಗಂಟೆ ಸುಮಾರಿಗೆ ಧಾರವಾಡ ತಲುಪಿದ್ದರು. ನೇರವಾಗಿ ಸಂಜೀವಿನಿ ಮನೆಗೆ ಹೋಗಬೇಕೆಂದುಕೊಂಡ ಪರಿ ಅವಳ ತಂದೆಯ ಸಿಡುಕು ಸ್ವಭಾವ ನೆನಪಾಗಿ ಹರ್ಷನ ಸಮೇತವಾಗಿ ಮನೆಗೆ ಬೇಡವೆಂದು ಹೋಟೆಲ್ ನಲ್ಲಿ ರೂಮ್ ಮಾಡಿ ಉಳಿದುಕೊಂಡರು.  ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಇನ್ನೇನೂ ಸಂಜೀವಿನಿ ಮನೆಗೆ ಹೊರಡಬೇಕೆನ್ನುವಷ್ಟರಲ್ಲಿ ಅವಳೇ ಕರೆ ಮಾಡಿ ಆಶಯ ನಗರದ ಲಕ್ಷ್ಮಿ ನಾರಾಯಣ ದೇವಸ್ಥಾನಕ್ಕೆ ಬೇಗ ಬರಲು ತಿಳಿಸಿದಳು. ಅವಳ ಧ್ವನಿಯಲ್ಲಿದ್ದ ಗಾಬರಿ ಆತಂಕಗಳನ್ನು ಗುರುತಿಸಿ, ಏನೋ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾಳೆಂಬುದನ್ನು ಪರಿ ಅರ್ಥ ಮಾಡಿಕೊಂಡಳು. ಹರ್ಷನಿಗೂ ಆ ಬಗ್ಗೆ ತಿಳಿಸಿ ಬೇಗ ಬೇಗ ಆ ದೇವಸ್ಥಾನಕ್ಕೆ ಹೊರಡುವಂತೆ ಅವಸರಿಸಿದಳು. ಹರ್ಷ ಕೂಡ ಧಾವಂತದಲ್ಲೇ ಕಾರು ಚಲಾಯಿಸಿ ಗೂಗಲ್ ನಕ್ಷೆ ಅನುಸರಿಸಿ ದೇವಸ್ಥಾನದ ಎದುರು ಕಾರು ನಿಲ್ಲಿಸಿದ. ಕಾರಿನಿಂದಿಳಿದು ಒಳಗೆ ಕಾಲಿಟ್ಟ ಪರಿ ದಂಗಾಗಿ ಹೋಗಿದ್ದಳು. ಸಂಜೀವಿನಿ ಮತ್ತು ಆಲಾಪ್ ಇಬ್ಬರೂ ಮದುವೆ ಅಲಂಕಾರ ಮಾಡಿಕೊಂಡು ಕೈಯಲ್ಲಿ ಹಾರ ಹಿಡಿದು ನಿಂತಿದ್ದರು. ಒಂದು ಕ್ಷಣ ಪರಿಗೆ ಉಸಿರೇ ನಿಂತಂತಾಯ್ತು. ಮಾನ್ವಿ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಆಲಾಪ್,, ಸಂಜೀವಿನಿ ಸ್ವಂತವಾಗಲು ಸಜ್ಜಾಗಿ ನಿಂತಿದ್ದ. ಮುಂದೆ ಹೆಜೆಎತ್ತಿಡಲಾಗದೆ, ಈ ವಿಷಯ ಮಾನ್ವಿಗೆ ತಿಳಿದರೆ ಅವಳ ಮನಸ್ಸಿಗೆ ಎಂತಹ ಆಘಾತವಾಗಬಹುದು ಎಂಬುದನ್ನೇ ಯೋಚಿಸಿ ಅವಳ ಹೃದಯ ಕಂಪಿಸಿ ಕಣ್ಣು ತೇವವಾದವು. ಏಕೆಂದರೆ ಮಾನ್ವಿ, ಆಲಾಪ್‌ನನ್ನು ಅದೆಷ್ಟು ಮುಗ್ಧವಾಗಿ ಪ್ರೀತಿಸುತ್ತಾಳೆಂದು ಅವಳಿಗೆ ಮಾತ್ರ ಗೊತ್ತು!! ಅವಳ ಗೊಂದಲವನ್ನು ಅರ್ಥ ಮಾಡಿಕೊಂಡ ಹರ್ಷ 'ಯಾಕಷ್ಟು ಗಾಬರಿಯಾಗ್ತಿಯಾ,,, ಇದು ಲವ್ ಮ್ಯಾಟರ್ ಅನ್ಸುತ್ತೆ. ಹೆದರ್ಬೇಡ ನಾನಿದ್ದಿನಿ ಬಾ..' ಎಂದು ಕೈ ಹಿಡಿದು  ಒಳಗೆ ಕರೆದೋಯ್ದ. ಪರಿಧಿಯನ್ನು ನೋಡಿದ್ದೇ, ಓಡಿ ಬಂದು ಬಿಗಿದಪ್ಪಿದಳು ಸಂಜೀವಿನಿ. "ಇದೆಲ್ಲಾ... ಏನೇ? ನೀನು,, ಆಲಾಪ್,, ಮದುವೆ?? ಕೇಳಿದಳು ಪರಿ

" ಹ್ಮೂ... ನಿನ್ನೆ ಫೋನ್‌ನಲ್ಲಿ ಇದನ್ನೇ ಹೇಳೋಣಾಂತಿದ್ದೆ,ಅಷ್ಟ್ರೊಳಗ ಅಮ್ಮ ಬಂದ್ಬಿಟ್ರು. ಈಗ ನೀನ್ ಬಂದ್ಯೆಲ್ಲಾ... ನನಗ ಧೈರ್ಯ ಬಂತು ನೋಡು.." ಏದುಸಿರು ಬಿಟ್ಟಳು ಸಂಜೀವಿನಿ.

"ನೀವಿಬ್ರೂ ಜೊತೆಗೆ ನಿಂತು ಮಾತಾಡಿದ್ದನ್ನೇ ‌ನೋಡಿಲ್ಲ ನಾನು... ಅಂತದ್ರಲ್ಲಿ ಸಡನ್ನಾಗಿ ಮದುವೆ,,???"

"ಮೆಡಿಕಲ್ ಫರ್ಸ್ಟ್ ಇಯರ್‌‌ನಲ್ಲೇ ಆಲಾಪ್ ನನ್ನ ಡ್ರಾಪ್ ಮಾಡೋಕೆ ಬರ್ತಿದ್ದಾಗಲೇ ನಮ್ಮ ಮಾತುಕತೆ ಶುರುವಾಯ್ತು, ಇಷ್ಟಕಷ್ಟ ಹವ್ಯಾಸ ನಮ್ಮ ಮನೆಯವರ ಬಗ್ಗೆ ತುಂಬಾ ಹರಟೆ ಹೊಡಿತಾ ಹೋಗ್ತಿದ್ವಿ. ಅವತ್ತು ನನ್ನ ಬರ್ತಡೇ ದಿನ ಆಲಾಪ್ ನನಗೊಂದು ಬುಕ್ ಪ್ರೆಸೆಂಟ್ ಮಾಡಿದ್ನಲ್ವಾ ಅದರಲ್ಲಿ....." ಅವಳು ನಾಚಿಕೆಯಿಂದ ಮಾತು ನಿಲ್ಲಿಸಿದಳು.

"ಅದರಲ್ಲಿ..... ನಾನು ನನ್ನ ಭಾವನೆಗಳನ್ನು ಬರೆದು ಅವಳನ್ನು ಪ್ರೀತಿಸ್ತಿರೋ ವಿಷಯಾ ತಿಳಿಸಿದೆ. ಒಂದು ವಾರದ ನಂತರ ಅವಳೊಂದು ಬುಕ್‌ನಾ ನನಗೆ ಗಿಫ್ಟ್ ಮಾಡಿ ತನ್ನ ಒಪ್ಪಿಗೆ ತಿಳಿಸಿದಳು. ಆಮೇಲೆ... ದಿನ ಡ್ರಾಪ್ ಮಾಡೋ ನೆಪದಲ್ಲಿ ನಮ್ಮ ಪ್ರೀತಿ ಗಟ್ಟಿಯಾಗ್ತಾ ಹೋಯ್ತು. ನಿನಗೂ ಗೊತ್ತಲ್ವ ಇವಳಿಗೆ ಸಂಕೋಚ ಜಾಸ್ತಿ ಅಂತ.. ಹೀಗಾಗಿ ಎಲ್ರೆದುರು ಹೆಚ್ಚಿಗೆ ಮಾತಾಡ್ತಿರ್ಲಿಲ್ಲ ನಾವು.. ಎಲ್ಲಾ ಮಾತುಕತೆ ಪುಸ್ತಕ ಪತ್ರ ವ್ಯವಹಾರದ ಮೂಲಕವೇ! ಮತ್ತೆ ಮೇಡಮ್ಮು,, ಯಾರಿಗೂ ಹೇಳ್ಬೇಡಾಂತ ಬೇರೆ ಪ್ರಮಾಣ ಮಾಡಿಸ್ಕೊಂಡಿದ್ರು ಅದ್ಕೆ ಈ ವಿಷಯಾನಾ ನನ್ನ ಪಾಪಚ್ಚಿ ಮಾನುಗೂ ಹೇಳಿಲ್ಲ ನಾನು.. " ಆಲಾಪ್ ಸಂಜೀವಿನಿಯ ಅರ್ಧ ಮಾತನ್ನು ಪೂರ್ಣಗೊಳಿಸಿದ್ದ.

" ಅದೆಲ್ಲ ಸರಿ. ಈಗ ಇದ್ದಕ್ಕಿದ್ದಂತೆ.. ಹೀಗೆ.. ಕದ್ದುಮುಚ್ಚಿ ಮದುವೆ ಯಾಕೆ" ಹರ್ಷ ಕೇಳಿದ್ದ.

"ಅದೂ.. ಇಷ್ಟು ದಿನ ಮುಚ್ಚಿಟ್ಟಿದ್ದ ನಮ್ಮ ಲವ್ ಮ್ಯಾಟರ್ ಇವ್ರ ಮನೇಲಿ ಗೊತ್ತಾಗೋಗಿದೆ. ಹಿಸ್ಟರಿ ಮೇಷ್ಟ್ರು ತಮ್ಮ ಮಗಳಿಗೆ ಅವಸರದಲ್ಲಿ ಮದುವೆ ನಿಶ್ಚಯ ಮಾಡ್ಬಿಟ್ರು,, ಇವಳು ಗಾಬರಿಯಾಗಿ ನನಗೆ ಕಾಲ್ ಮಾಡಿ ವಿಷಯ ತಿಳಿಸಿದ್ಲು. ನಾನು ರಾತ್ರೋರಾತ್ರಿ ನನ್ನ ಫ್ರೆಂಡ್ಸ್ ಜೊತೆ ಪ್ಲ್ಯಾನ್ ಮಾಡಿ ನಮ್ಮ ಮದುವೆಗೆ ಎಲ್ಲಾ ತಯಾರಿ ಮಾಡಿದೆ. ಅಂತೂ ನೀವಿಬ್ರೂ ಸರಿಯಾದ ಸಮಯಕ್ಕೆ ಬಂದಿದ್ದೀರಾ.. " ಎನ್ನುತ್ತ " ಇವರೆಲ್ಲರೂ ನಮ್ಮ ಹಾಸ್ಟೆಲ್ ಫ್ರೆಂಡ್ಸ್..." ಎಂದು ಎಲ್ರನ್ನೂ ಪರಿಚಯಿಸಿದ. ಹರ್ಷ ಎಲ್ಲರೊಂದಿಗೆ ನಗುಮೊಗದಿಂದ ಕೈ ಕುಲುಕುತ್ತಿದ್ದರೆ ಪರಿಧಿ ಮಾತ್ರ ಏನು  ಮಾಡಬೇಕೆಂದು ದಿಕ್ಕು ಕಾಣದೆ ಪರಿತಪಿಸಿದ್ದಳು.

ಮಾನ್ವಿ ಆಲಾಪ್‌‌ನನ್ನ ಪ್ರೀತಿಸ್ತಿರೋ ವಿಷಯ ಹೇಳಿಬಿಡಲಾ.. ಆದರೆ, ಮಾನ್ವಿಗೆ ಕೊಟ್ಟ ಮಾತು..?? ಒಂದು ವೇಳೆ ಮಾತು ಮೀರಿ ವಿಷಯ ಹೇಳಿದರೂ ಇವರಿಬ್ಬರೂ ಮದುವೆ ನಿಲ್ಲಿಸಿ ಮಾನ್ವಿಗೋಸ್ಕರ ತಮ್ಮ ಪ್ರೀತಿ ಮರೆತು ಬಿಡ್ತಾರಾ?? ಮುಂದೆ ಮಾನ್ವಿ ಗತಿ ಏನು?? ಅವಳಿಗೂ ಕೂಡ ಬಾ ಅಂದಿದ್ದೆ,, ಇವತ್ತೇ ಬರ್ತಿನಿ ಅಂತ ಹೇಳಿದ್ದಳಲ್ವಾ... ಕೊನೆಯಪಕ್ಷ ಅವಳು ಬರೋವರೆಗಾದ್ರೂ ಈ ಮದುವೆ ನಡೆಯಕೂಡದು ಎಂದು ಮನಸ್ಸಲ್ಲೇ ಒದ್ದಾಡುತ್ತಿದ್ದಳು ಪರಿಧಿ. ಪಂಡಿತರು ಮದುವೆ ಮೂಹೂರ್ತ ಸಮೀಪಿಸುತ್ತಿದ್ದಂತೆ ಮಂತ್ರಘೋಷ ಆರಂಭಿಸಿದ್ದರು. ಮಾನ್ವಿ ಬರುವವರೆಗೂ ಕಾಯೋಣ... ಪರಿ ಅವರನ್ನು ತಡೆದು ನಿಲ್ಲಿಸಿದಳು. ಆದರೆ ಅಷ್ಟರಲ್ಲಿ ಸಂಜೀವಿನಿಯ ತಂದೆ ಹಾಗೂ ಆಕೆಯ ವಿವಾಹ ನಿಶ್ಚಯವಾದ ಹುಡುಗನ ಕುಟುಂಬದ ಸದಸ್ಯರು ಅದೇ ದೇವಸ್ಥಾನಕ್ಕೆ ಧಾವಿಸಿ ಬಂದಿದ್ದರು. ಅವರ ಕೋಪತಾಪಗಳಿಂದ ಪರಿಸ್ಥಿತಿ ವಿಕೋಪಕ್ಕೇರಿತು. ಸಂಯಮ ಕೈ ತಪ್ಪಿ ಹೋಗಿತ್ತು. ಹುಡುಗನ ಕಡೆಯವರಿಗೂ ಮತ್ತು ಆಲಾಪ್ ‌ನ ಸ್ನೇಹಿತರ ಮಧ್ಯೆ ಮಾತಿನ ಚಕಮಕಿ ಎದ್ದಿತು. ಹರ್ಷ ತುಂಬಾ ತಾಳ್ಮೆಯಿಂದ ಸಂದರ್ಭವನ್ನು ಎದುರಿಸಲು ಪ್ರಯತ್ನಿಸಿದ. ಎರಡೂ ಕುಟುಂಬಗಳಿಗೆ ಅವರ ಪ್ರೀತಿ ವಿಷಯವನ್ನು ತಿಳಿಸಿ ಹೇಳಿ ರಾಜಿ ಮಾಡಿಸಲು ನೋಡಿದ ಆದರೆ ಅವನ ಮಾತನ್ನು ಕೇಳುವ ವ್ಯವಧಾನವಿಲ್ಲದ ಗಂಡಿನ ಕಡೆಯವರು ತಮ್ಮ ಮಾನ ಪ್ರತಿಷ್ಟೆಗೆ ಮೊಂಡರಾಗಿ ಹೊಡೆದಾಟಕ್ಕೆ ಮುಂದಾಗಿದ್ದರು. ಕೊನೆಗೆ ಹರ್ಷ, ಹುಡುಗ ಹುಡುಗಿ ಇಬ್ಬರೂ ವಯಸ್ಕರಾಗಿದ್ದು ಅವರಿಷ್ಟದ ಮದುವೆ ಮಾಡಿಕೊಳ್ಳುವದರಲ್ಲಿ ಯಾವ ಅಭ್ಯಂತರವೂ ಇಲ್ಲವೆಂದು ವಾದಿಸಿ,, ಪೋಲಿಸ್ ಕಂಪ್ಲೆಂಟ್‌ನ ಬೆದರಿಕೆ ಹಾಕಿ ಅವರನ್ನು ಅಲ್ಲಿಂದ ಸಾಗಿಹಾಕಿದ್ದ.  ಇನ್ನೂಳಿದಂತೆ ಸಂಜೀವಿನಿಯ ತಂದೆ ತಮ್ಮ ಪಾಲಿಗೆ ಅಂದಿಗೆ ಮಗಳು ಸತ್ತಳೆಂಬಂತೆ ಶಪಿಸಿ ತಿರುಗಿ ನೋಡದೆ ತಮ್ಮ ಪತ್ನಿ ಸಮೇತ ಅಲ್ಲಿಂದ ಹೊರಟು ಹೋಗಿದ್ದರು. ಎಲ್ಲವನ್ನೂ ನೋಡಿ ಒಂದೇ ಸಮನೆ ಅಳುತ್ತಿದ್ದ ಸಂಜೀವಿನಿಯನ್ನ ಸಮಾಧಾನ ಮಾಡುವುದೇ ಪರಿಗೆ ಹರಸಾಹಸವಾಗಿ ಹೋಗಿತ್ತು. ಅವರೆಲ್ಲ ಹೊರಟು ಹೋದಮೇಲೆ ಇನ್ನೂ ತಡ ಮಾಡುವುದು ಬೇಡವೆಂದು ಹರ್ಷ  ಆಲಾಪ್‌ ಮತ್ತು ಆತನ ಸ್ನೇಹಿತರು ಮಾತನಾಡಿಕೊಂಡು ಮದುವೆ ಶಾಸ್ತ್ರಗಳನ್ನು ಮುಂದುವರೆಸಲು ಹೇಳಿದರು. ಈ ಬಾರಿ ಪರಿಗೆ ಮದುವೆ ನಿಲ್ಲಿಸುವ ಕೊನೆಯ ಆಸೆಯೂ ಕಮರಿ ಹೋದಂತೆ ಸೋತು ಸುಮ್ಮನಾಗಿದ್ದಳು. ಸದ್ಯಕ್ಕೆ ಸಂಜೀವಿನಿಯ ಬದುಕು ಮುಖ್ಯ ಎನ್ನಿಸಿಬಿಟ್ಟಿತ್ತವಳಿಗೆ. ಆದರೆ ಮಾನ್ವಿಗೆ ಹೇಗೆ ಸಮಾಧಾನ ಮಾಡಬೇಕೆಂಬುದನ್ನ ಮನದಲ್ಲಿ ತನಗೆ ತಾನೇ ಸಾವಿರ ಬಾರಿ ಧೈರ್ಯ ಹೇಳಿಕೊಂಡಿದ್ದಳು. ಮಾನ್ವಿ ಜೊತೆಗೆ ತಾನು ಖುದ್ದಾಗಿ ನಿಂತು ಧೈರ್ಯ ಹೇಳಿ ಅವಳ ಮನಸ್ಸಿಗಾಗುವ ಆಘಾತವನ್ನು ಕಡಿಮೆ ಮಾಡಿ ಅವಳ ನೋವಿಗೆ ಜೊತೆಯಾಗಬೇಕೆಂದು ನಿರ್ಧರಿಸಿದ್ದಳು. ಆದರೆ ಅವಳಿಗೆಲ್ಲಿ ತಿಳಿದಿತ್ತು ತನ್ನ ಈ ಅರಿಯದ ಅಪರಾಧವೇ ಮುಂದೆ ತನಗೆ ತನ್ನ ಬದುಕಿಗೆ ಮುಳ್ಳಾಗುವುದೆಂದು!! ಎಲ್ಲ ವಿಘ್ನಗಳ ನಡುವೆಯೇ ಆಲಾಪ್ ಸಂಜೀವಿನಿ ಮದುವೆ ಸಾಂಗವಾಗಿ ನೇರವೇರಿಯಾಗಿತ್ತು.

ಮಾನ್ವಿಗೆ ಅದೇ ದೇವಸ್ಥಾನಕ್ಕೆ ಬರಲು ಹೇಳಿದ್ದರಿಂದ ಅವಳು ಬರುವುದನ್ನೇ ಕಾಯುತ್ತಾ ಎಲ್ಲರೂ ಅಲ್ಲಿಯೇ ದೇವಸ್ಥಾನದಲ್ಲಿ ಮಾತನಾಡುತ್ತಾ ಕುಳಿತಿದ್ದರು. ಆಲಾಪ್ ತನ್ನ ತಂದೆ ತಾಯಿ ತುಂಬಾ ಫ್ರೆಂಡ್ಲಿ ಎಂದು ತಮ್ಮ ಈ ಮದುವೆಗೆ ಶುದ್ಧ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆಂದು ಸಂಜೀವಿನಿಗೆ ಭರವಸೆಯ ಮಾತು ಹೇಳುತ್ತಾ  ಮುಂದಿನ ಭವಿಷ್ಯದ ಬಗ್ಗೆ ಧೈರ್ಯ ತುಂಬುತ್ತಿದ್ದ. ಆಗ ಅಲ್ಲಿಗೆ ಬಂದಿದ್ದಳು ಮಾನ್ವಿ..!! ಆಲಾಪ್ ಮತ್ತು ಸಂಜೀವಿನಿಯ ಮದುವೆ ಅಲಂಕಾರದಲ್ಲಿ ನೋಡಿದ್ದಲ್ಲದೆ ಅವರಿಬ್ಬರೂ ಕೈ ಕೈ ಹಿಡಿದುಕೊಂಡು ಕುಳಿತಿದ್ದನ್ನು ಕಂಡು ಅವಳ ಮನಸ್ಸು ಎಲ್ಲವನ್ನೂ ಗ್ರಹಿಸಿ ಅರ್ಥೈಸಿಕೊಂಡಿತು. ತನ್ನ ಸ್ನೇಹಿತೆ ಸಂಜೀವಿನಿಯ ಮದುವೆಗೆಂದು ರಾತ್ರೋರಾತ್ರಿ ಹೊರಟು ಓಡಿ ಬಂದಿದ್ದ ಮಾನ್ವಿ ಮನಸ್ಸು ಒಡೆದು ನುಚ್ಚು ನೂರಾಗಿತ್ತು. ಅವಳಿಗೆಂದು ತಂದಿದ್ದ ಉಡುಗೊರೆ ಕೈಯಿಂದ ಕುಸಿದು ನೆಲಕ್ಕಪ್ಪಿತ್ತು. ಕಣ್ಣಿಂದ ಜಾರಲು ಕಾಯುತ್ತಿದ್ದ ಕಣ್ಣೀರು ಎಲ್ಲರೂ ಕೇಳುವ ಪ್ರಶ್ನೆಗೆ ಉತ್ತರಿಸಲು ಕಾರಣವಿಲ್ಲದೆ ಕಣ್ಣಿನಲ್ಲೇ ಒದ್ದಾಡುತ್ತಿತ್ತು. ಮುಖದಲ್ಲಿ ಎಲ್ಲಾ ಭಾವನೆಗಳೂ ಸತ್ತು ಹೋಗಿ ಅವಳಲ್ಲೊಂದು ಶೂನ್ಯ ಮನೆ ಮಾಡಿತ್ತು. ಆಕೆ ಹಾಗೆ ಗರಬಡಿದಂತೆ ನಿಂತದ್ದನ್ನು ಕಂಡ ಆಲಾಪ್ 'ಹೇಯ್.. ಮಾನು..' ಎಂದು ಓಡಿ ಹೋಗಿ ಅವಳನ್ನು ಬಿಗಿದಪ್ಪಿ ಮಾತನಾಡಿಸಿದ್ದ. "ಏನೇ ನೀನು.. ಬೆಸ್ಟ್ ಫ್ರೆಂಡ್ ಆಗಿ ಬೆಸ್ಟ್ ಫ್ರೆಂಡ್ ಮದುವೆಗೆ ಇಷ್ಟೊಂದು ಲೇಟಾಗ್ ಬರೋದಾ...!! ನಿನಗೋಸ್ಕರ ಕಾದು ಸಾಕಾಗಿ, ನಿನ್ನ ಬದಲಿಗೆ ಇವತ್ತು ಪರಿನೇ ಮುಂದೆ ನಿಂತು ಎಲ್ಲಾ ವ್ಯವಸ್ಥೆ ನೋಡಿಕೊಂಡು ನಮ್ಮ ಮದುವೆ ಮಾಡಿದ್ಲು ಗೊತ್ತಾ..!!" ಎಂದು ಒಂದೇ ಉಸಿರಲ್ಲಿ ಹೇಳಿದ್ದ. ಆಲಾಪ್‌‌ನ ಈ ಮಾತಿಗೆ ಮಾನ್ವಿಯ ಸಹನೆಯ ಕಟ್ಟೆ ಒಡೆದು ಹೋಗಿತ್ತು. ಆಲಾಪ್‌ನ ಬಳಿ ಯಾವತ್ತೂ ತಾನು ತನ್ನ ಪ್ರೇಮ ನೀವೇದನೆಯನ್ನ ಹೇಳಿಕೊಂಡಿರಲಿಲ್ಲ. ಅವನಿಗೆ ಆ ವಿಷಯ ಗೊತ್ತು ಇರಲಿಲ್ಲ. ಆದರೆ ತಾನು ಆಲಾಪ್‌ನನ್ನು ಪ್ರೀತಿಸೋ ವಿಷಯ ಗೊತ್ತಿದ್ದ ಪರಿ ಹೀಗೆ ಏಕಾಏಕಿ ಅವರಿಬ್ಬರ ಮದುವೆ ಮಾಡಿಸಿದ್ದು, ತನ್ನನ್ನು ಸಹ ಬೇಕೆಂತಲೆ ಇಲ್ಲಿಗೆ ಬರಲು ಹೇಳಿ ತನ್ನ ನಂಬಿಕೆಗೆ ದ್ರೋಹ ಬಗೆದಂತೆ ಎನ್ನಿಸಿತವಳಿಗೆ. ಪ್ರೀತಿ ಕೈ ತಪ್ಪಿ ಹೋದಾಗ ಸ್ನೇಹದ ಅಸರೆಯಾದರೂ ಸಿಗಬೇಕು. ಆದರೆ ಮಾನ್ವಿ ಪಾಲಿಗೆ ಒಂದೇ ಸಮಯಕ್ಕೆ ಎರಡೂ ಆಘಾತವನ್ನೇ ಉಂಟು ಮಾಡಿದ್ದವು. ಅವಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಪರಿ ಅವಳನ್ನು ಸಂತೈಸಲು ಅವಳ ಎದುರು ಬಂದು ನಿಂತು ಕೈ ಹಿಡಿದುಕೊಂಡಿದ್ದಳು. ತಕ್ಷಣ ತನ್ನ ಕೈಯನ್ನು ಕೊಸರಿಕೊಂಡ ಮಾನ್ವಿ ಪರಿಯ ಕೆನ್ನೆಗೆ ಛಟೀರನೇ ಬಾರಿಸಿ ತನ್ನ ಸಿಟ್ಟು ದ್ವೇಷ ಅಸಹನೆಯನ್ನು ಹೊರಹಾಕಿದ್ದಳು. ಸೂತ್ತಲು ನಿಂತವರು ಅವಾಕ್ಕಾಗಿ ಏನಾಯಿತೆಂದು ನೋಡುವಷ್ಟರಲ್ಲಿ ಪರಿಯ ಕೆನ್ನೆಗೆ ಹೊಡೆದದ್ದನ್ನು ಸಹಿಸಲಾರದೆ ಕೋಪದಿಂದ ಮಾನ್ವಿ ಕೆನ್ನೆಗೊಂದು ತಿರುಗಿ ಬಾರಿಸಿದ್ದ ಹರ್ಷ!! ಮಾನ್ವಿ ಮತ್ತು ಹರ್ಷ ಇಬ್ಬರ ಕೋಪ ಎದುರು ಬದುರಾಗಿತ್ತು. "ಹೌ ಡೇರ್ ಯು.. ಹರ್ಷ?! ಇದುವರೆಗೂ ನನ್ನ ಅಪ್ಪ ಅಮ್ಮ ಕೂಡ ನನಗೆ ಒಂದೇಟು ಹೊಡೆದಿರಲಿಲ್ಲ" ಅರಚಿದಳು ಮಾನ್ವಿ.
"ನಾನೂ ಅಷ್ಟೇ... ಇದುವರೆಗೂ ಯಾರಿಗೂ ನನ್ನ ಪರಿ ಮೇಲೆ ಕೈ ಮಾಡೋಕೆ ಬಿಟ್ಟಿರ್ಲಿಲ್ಲ.. ಯಾವ ಅಧಿಕಾರದಿಂದ ಹೊಡೆದೆ ನೀನು ಅವಳಿಗೆ? ಏನ್ ತಪ್ಪು ಮಾಡಿದ್ದಾಳೆಂತ ಹೊಡೆದೆ??" ಹರ್ಷ ಕೂಡ ಗಂಭೀರ ಸ್ವರದಲ್ಲಿ ಕೇಳಿದ. ಅವರಿಬ್ಬರ ಸಿಟ್ಟಿನ ಅನುಭವವಿದ್ದ ಪರಿ ಸಾಧ್ಯವಾದಷ್ಟು ಸನ್ನಿವೇಶವನ್ನು ತಣ್ಣಗಾಗಿಸಲು ಪ್ರಯತ್ನಿದಳು. ಆಲಾಪ್ ಮಾನ್ವಿಗೆ ತಿಳಿಸದೆ ಮದುವೆ ಮಾಡಿಕೊಂಡಿದ್ದಕ್ಕೆ ಅವಳು ಕೋಪಿಸಿಕೊಂಡಿದ್ದಾಳೆಂದುಕೊಂಡು ಅವಳಿಗೆ ಕ್ಷಮೆ ಕೇಳುತ್ತಾ ಸಮಾಧಾನ ಮಾಡಲಾರಂಭಿಸಿದ. ಆದರೆ ಅವನೊಡನೆ ಒಂದು ಮಾತು ಆಡದೆ ಮಾನ್ವಿ ಅಲ್ಲಿಂದ ಹೊರಗೆ ಕಾರಿನತ್ತ ದರದರನೆ ನಡೆದು ಹೋದಳು. ಅವಳನ್ನು ಬೆನ್ನಟ್ಟಿ ಪರಿ ಹಿಂದೆಯೇ ಓಡಿದಳು. ಕಾರಿನೆದುರಿನ ಮರದ ದಿಮ್ಮಿ ಮೇಲೆ ಕುಳಿತು ಮಾನ್ವಿ ಒಂದೇ ಸಮನೆ ಕಂಬನಿಗರೆಯುತ್ತಿದ್ದರೆ ಪರಿ ಅವಳನ್ನು ಗಟ್ಟಿಯಾಗಿ ಬಿಗಿದಪ್ಪಿ ಸಮಾಧಾನ ಮಾಡುತ್ತಿದ್ದಳು. "ಪ್ರೀತಿ ಅಂದ್ರೆ ಅವರನ್ನ ಪಡೆದುಕೊಳ್ಳೊದಷ್ಟೇ ಅಲ್ವೇ.. ಅವರ ಸಂತೋಷವನ್ನು ಬಯಸೋದು,, ಅವರು ಇಷ್ಟಪಟ್ಟವರ ಜೊತೆಗೆ ಬದುಕೋದನ್ನ ನೋಡಿ ನಾವು ಖುಷಿ ಪಡೋದು ಕಣೇ.. ಆಲಾಪ್ ಎಲ್ಲೂ ದೂರ ಹೋಗಿಲ್ಲ.. ಈಗ್ಲೂ ನಿನ್ನ ಜೊತೆಗೆ ಇದ್ದಾನೆ ನಿನ್ನ ಜೊತೆಗೆ ಮಾತಾಡ್ತಾನೆ.. ಅಳಬೇಡ್ವೆ..."

"ಅವತ್ತು ನನ್ನ ಆಲಾಪ್ ಜೊತೆಗೆ ತುಂಬಾ ಮಾತಾಡ್ಬೇಡ ಅಂದ ಮಾತಿಗೆ ಎಷ್ಟು ನಯವಾಗಿ ಮೋಸ ಮಾಡಿದೆಯಲ್ಲೇ ಪರಿ.. ನಿನ್ನ ನಂಬಬಾರದಿತ್ತು ನಾನು!! ತಪ್ಪು ಮಾಡ್ಬಿಟ್ಟೆ! ಬೆಸ್ಟ್ ಫ್ರೆಂಡ್ ಅಂತ ಎಷ್ಟು ನಂಬಿದ್ನಲ್ಲೇ ನಿನ್ನ.. ನನ್ನ ಪ್ರೀತಿನೇ ನನ್ನಿಂದ ದೂರ ಮಾಡಿಬಿಟ್ಟೆ.. ದ್ರೋಹಿ ನೀನು..  ನೋಡ್ತಿರು ಮುಂದೊಮ್ಮೆ ನಿನ್ನ ಹರ್ಷನ ಪ್ರೀತೀನೂ ನಿನಗೆ ಸಿಗದೆ ಒದ್ದಾಡ್ತಿಯಲ್ಲ.. ಆಗ ಗೊತ್ತಾಗುತ್ತೆ ನಿನಗೆ ನನ್ನ ನೋವು ಏನಂತ... ಐ ಹೇಟ್ ಯು ಪರಿ... ಐ ಹೇಟ್ ಯು.." ಕಿರುಚಿದ್ದಳು ಮಾನ್ವಿ

" ಮಾನ್ವಿ.... ನೀನು ತಪ್ಪು ತಿಳ್ಕೊಂಡಿದಿಯಾ.. ನನಗೂ ಇಲ್ಲಿಗೆ ಬಂದ ನಂತರವೇ ಅವರಿಬ್ಬರ ಮದುವೆ ವಿಷಯ ಗೊತ್ತಾಗಿದ್ದು.." ಪರಿ ತನ್ನ ನಿರ್ದೋಷವನ್ನು ಹೇಳಿಕೊಂಡಳು. ಆದರೆ ಮಾನ್ವಿ ಅದನ್ನು ಕೇಳಿಸಿಕೊಳ್ಳುವ ಸಹನೆಯಲ್ಲಿ ಇರಲಿಲ್ಲ. "ಪ್ರೀತಿ ತ್ಯಾಗ ಅಂತೆಲ್ಲ ಭಾಷಣ ಬಿಗಿತಿಯಲ್ಲ, ಇದೇ ಕ್ಷಣ ನನಗೆ ನಿನ್ನ ಹರ್ಷ ಬೇಕು ಅಂದ್ರೆ ಬಿಟ್ಟು ಕೊಡ್ತಿಯಾ!!" ಸವಾಲೆಸೆದಳು ಮಾನ್ವಿ. "ಹರ್ಷ ಕೂಡ ನಿನ್ನ ಒಪ್ಕೊಳ್ಳೋದಾದ್ರೆ ಖಂಡಿತ..  ಧಾರಾಳವಾಗಿ.. ಸಂತೋಷವಾಗಿ ನಾನು ದೂರಾಗ್ತಿನಿ. ನನಗೆ ಅವನ ಸಂತೋಷ ಮುಖ್ಯ! ಅದಕ್ಕಿಂತ ಹೆಚ್ಚಿನದೇನಿಲ್ಲ" ತುಂಬಾ ಶಾಂತವಾಗಿ ಉತ್ತರಿಸಿದಳು ಪರಿ. "ಈ ಮಾತನ್ನು ಬರೆದಿಟ್ಕೊ.. ಮುಂದೊಮ್ಮೆ ನಿನಗೆ ಬೇಕಾಗುತ್ತೆ, ನೋಡೋಣ ಮಾತಿಗೆ ಬದ್ದವಾಗಿ ಇರ್ತಿಯಾ ಅಂತ.." ಎಂದು ವ್ಯಂಗ್ಯವಾಗಿ ನುಡಿದು ಕಾರು ಏರಿ ಹೊರಟಿದ್ದಳು ಮಾನ್ವಿ. ಕೊನೆಯ ಮಾತು ಎಂಬಂತೆ ಹಿಂತಿರುಗಿ ಹೇಳಿದ್ದಳು -"ಕೊನೆಯದಾಗಿ ಒಂದು ಉಪಕಾರ ಮಾಡು. ನಾನು ಆಲಾಪ್‌ನ ಪ್ರೀತಿಸೋ ಸತ್ಯಾನಾ ನಿನ್ನೊಳಗೆ ಸಾಯಿಸಿಬಿಡು, ಯಾವತ್ತೂ ಯಾರಮುಂದೆಯೂ ಪ್ರಸ್ತಾಪ ಮಾಡಬೇಡ" ಮಾನ್ವಿಯ ಕಾರು ಚಲಿಸಿತ್ತು. ಪರಿ ದಂಗು ಬಡಿದು ಅಲ್ಲಿಯೇ ಕೂತು ಮಾನ್ವಿಯ ಬಗ್ಗೆ ಆತಂಕಗೊಂಡಿದ್ದಳು. ಅದಾದ ನಂತರ ಮಾನ್ವಿ ಯಾರ ಜೊತೆಗೂ ಮಾತಾಡಿರಲಿಲ್ಲ. ಸಂಪರ್ಕಿಸುವ ಎಲ್ಲಾ ಅವಕಾಶದಿಂದಲೂ ಆಕೆ ದೂರ ಉಳಿದಿದ್ದಳು.

ಪೂರ್ಣ ಕಥೆಯನ್ನು ಕೇಳಿದ ಪ್ರಸನ್ನ ದೀರ್ಘ ನಿಟ್ಟುಸಿರು ಹೊರಚೆಲ್ಲಿದ. "ಸೋ.. ಮಾನ್ವಿ ಹೀಗೆಲ್ಲ ಮಾಡಿರೋದು ನಿಮ್ಮ ಮೇಲಿರೋ ಸಿಟ್ಟಿಗೆ ಅಂತಿರಾ?"

"ಹ್ಮ್.. ಒಮ್ಮೆ ಅವಳ ಜೊತೆಗೆ ಮಾತಾಡಿದ್ರೆ ಎಲ್ಲಾ ಸರಿ ಹೋಗಬಹುದೆನೋ.."

"ಅವಳು ನಿಮ್ಮ ಹರ್ಷನ್ನ ಬಿಟ್ಟು ಕೊಡೋ ಬಗ್ಗೆ ಕೇಳಿದಳಲ್ವಾ.. ಅದೂ ನಿಮ್ಮ ಮೇಲಿನ ದ್ವೇಷಕ್ಕಾ? ಅಥವಾ ಹರ್ಷನ ಮೇಲಿನ ಪ್ರೀತಿಗಾ??"

"ಛೇ..ಛೇ.. ಅವಳು ಹರ್ಷನ್ನ ಪ್ರೀತ್ಸೋದಾ ಇಂಪಾಸಿಬಲ್. ಅದು ಬರೀ ಸಿಟ್ಟಿನಲ್ಲಿ ಹಾಗೆ ಹೇಳಿದ್ದು ಅಷ್ಟೇ... ನೀವ್ಯಾಕೆ ಈ ತರಾ ಕೇಳ್ತಿದೀರಾ" ಪರಿ ಪ್ರಸನ್ನನ ಮುಖ ಗಮನಿಸಿದಳು. ಅವನು ಕಣ್ಣು ಮುಚ್ಚಿಕೊಂಡು ಏನೋ ಯೋಚಿಸುತ್ತ ಕುಳಿತಿದ್ದ. ಹಾಗೆ ಉತ್ತರಿಸಿದ -"ಇವತ್ತು ನಿಮ್ಮ ಲ್ಯಾಪ್‌ಟಾಪ್ ನೋಡೋವಾಗ ಮಿಸ್ ಆಗಿ ಆಲಾಪ್ ಮೇಲ್ ಒಪನ್ ಆಗೋಯ್ತು... "

"ಓಹ್ಮ.. ಅದಕ್ಯಾಕೆ ಇಷ್ಟೊಂದು ಸಿರಿಯಸ್ ಆಗಿದಿರಾ. ಏನ್ ಹೇಳಿದಾ ಆಲಾಪ್ "

"ಮುಂದಿನ ಗುರುವಾರ.. ಅಂದ್ರೆ ಎಪ್ರಿಲ್ ಹದಿನೈದನೇ ತಾರಿಕಿಗೆ ನಿಮ್ಮ ಮಗುವಿನಂತ ಗೆಳತಿಯ ಮದುವೆಯಂತೆ!!"

"ಓಹ್.. ವ್ಹಾವ್ ಗ್ರೇಟ್!! ಮಾನ್ವಿ ಹಳೆಯದನ್ನ ಮರೆತು ಮದುವೆಗೆ ಒಪ್ಕೊಂಡಿದ್ದಾಳಾ? ಬಹುಶಃ ಅವತ್ತು ರೈಲ್ವೆ ಸ್ಟೇಷನ್‌ನಲ್ಲಿ ಆಲಾಪ್ ಇದನ್ನೇ ಹೇಳ್ತಿದ್ದ ಅನ್ಸುತ್ತೆ... ಎಂದು ಸಂತೋಷದಿಂದ ನುಡಿಯುತ್ತಿದ್ದವಳ ತಲೆಗೆ ರಪ್‌ನೇ ವಾಸ್ತವದ ಗಾಳಿ ಸೋಕಿತ್ತು. ಉಸಿರು ಬಿಗಿಹಿಡಿದು ಕೇಳಿದ್ದಳು " ಹುಡುಗ ಯಾರಂತೆ?? "

ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಪ್ರಸನ್ನ "ಹೆಸರು ಹೇಳದೇನೆ ಉಸಿರು ಕಟ್ಟಿಕೊಂಡಿದೀರಾ.. ಇನ್ನೂ ಹೆಸರು ಕೇಳಿ ಉಸಿರೇ ನಿಂತು ಹೋದರೆ.. ಬೇಡ ಬಿಡಿ!! ಇನ್ನೂ ಹನ್ನೆರಡು ದಿನ ಬಾಕಿ ಇವೆ. ಡೋಂಟ್ ವರಿ.. ಈ ಮದುವೆ ನಡೆಯೋಕೆ ನಾನು ಬಿಡಲ್ಲ" ಪ್ರಸನ್ನ ಸಾಂತ್ವನಿಸಿದ. ಪರಿಗೆ ಮಂಗಳೂರಿನಲ್ಲಿ ನಡೆದ ಘಟನೆಗಳು ಅವರಿಬ್ಬರೂ ಮಂಗಳೂರಿಗೆ ಯಾಕೆ ಬಂದಿರಬಹುದು ಎಂಬುದರ ಅಂದಾಜು ಸಿಕ್ಕಿತು. ಮಾನ್ವಿ ಮನೆಗೆ ಹೋದಾಗ ಕೆಲಸದಾಕೆ ಏನೋ ಹೇಳಲು ಹವಣಿಸಿದ ವಿಷಯ ಇದೆ ಎಂದು ಅವಳಿಗೆ ಈಗ ತೆರೆ ತೆರೆಯಾಗಿ ಅರ್ಥವಾಗುತ್ತಿತ್ತು. ಆದರೆ ಮುಂದೆ ಸಂಭವಿಸಬಹುದಾದ ದುರಂತವನ್ನು ಹೇಗೆ ತಡೆಯುವುದು ಎಂಬುದಕ್ಕೆ ಅವಳಿಗೆ ಸ್ಪಷ್ಟ ಉತ್ತರವಿರಲಿಲ್ಲ.

ಮುಂದುವರೆಯುವುದು..


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ಮುಗುಳ್ನಕ್ಕಳು ಪರಿ.