ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ- 55



               ಕೆಲವು ದಿನಗಳ ನಂತರ

ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ. 


ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು. 

ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ

"ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು.
ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ 

"ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ. 

"ಹೇಳೊಕಾಗಲ್ಲ, ಇದೇ ಜಗಳ ಮುಂದೆ ಪ್ರೀತಿಯಾಗಿ ಬದಲಾಗಬಹುದಲ್ವ" ಕುತೂಹಲದಿಂದ ನೋಡುತ್ತ ಉಗುರು ಕಚ್ಚುತ್ತ ಹೇಳಿದಳು ಪರಿ.

"ನೀನು ಉಗುರು ಕಚ್ಚೊದನ್ನ ಬಿಡೋದು, ಇವರಿಬ್ಬರೂ ಕಿತ್ತಾಡೋದನ್ನ ಬಿಡೋದು ಎರಡೂ ಅಸಾಧ್ಯ" ಖಡಾಖಂಡಿತವಾಗಿ ನುಡಿದ ಹರ್ಷ. ಆಕೆ ತಟ್ಟನೆ ಕೈ ಹಿಂತೆಗೆದು ಪೇಲವನಗೆ ಬೀರಿದಳು.

"ಅಕಸ್ಮಾತ್ ಇದೇ ಜನ್ಮದಲ್ಲಿ ಇವರ ಮಧ್ಯೆ ಪ್ರೀತಿ ಗೀತಿ ಇತ್ಯಾದಿ ಶುರುವಾದದ್ದೇ ಆದರೆ ನಾನು ನನ್ನ ತಲೆ ಬೋಳಿಸಿಕೊಳ್ತಿನಿ!!" ರೊಚ್ಚಿಗೆದ್ದ ರೋಹಿತ್ ತಲೆ ಮೇಲಿನ ಕ್ಯಾಪ್ ನೆಲಕ್ಕೆ ಬಿಸಾಕಿದ್ದ‌.

"ಓಹ್.. ಹಂಗಾದ್ರೆ ಬೆಟ್ಸ್...?!" ಶ್ರಾವ್ಯ ಸವಾಲೆಸೆದಳು.

"ನಮ್ಮ ಇಂಟರ್ನಶಿಪ್ ಮುಗಿಯುವಷ್ಟರಲ್ಲಿ ಇವರಿಬ್ಬರೂ ಒಂದಾದ್ರೆ ನಿನ್ನ ಕೂದಲು ಗೋವಿಂದ! ಒಂದು ವೇಳೆ ನಾವು ಸೋತರೆ 1000rs ನಿನ್ನ ಜೇಬಿಗೆ! ಏನಂತೀಯಾ?" ದಿವ್ಯ ಕೇಳಿದಳು.

"ಡನ್ ಡನಾ ಢಣ್!!" ದುಡ್ಡಿನ ಹೆಸರು ಕೇಳಿ ಉತ್ಸಾಹ ಉಕ್ಕಿತು ರೋಹಿತ್ ಗೆ.

"ಹುಷಾರ್ ಮಗಾ... ಆತುರದಲ್ಲಿ ಏನೇನೋ ಬೊಗಳಬೇಡ" ಧೃವ ಎಚ್ಚರಿಸಿದ. ಅಷ್ಟರಲ್ಲಿ ಜೋಡಿ ಜಗಳದ ನ್ಯಾಯ ತೀರ್ಮಾನವಾಗಿತ್ತು. ಮುಂದೆ ವಾಲಿಬಾಲ್ ಆಟ ಶುರುವಾಯಿತು. 

 ಹರ್ಷ ಆಶ್ಚರ್ಯಕರ ರೀತಿಯಲ್ಲಿ ಆಟದ ಮಧ್ಯದಿಂದ ಓಡಿ ಹೋದ. ಎಲ್ಲರ ದೃಷ್ಟಿ ಅವನೆಡೆಗೆ ಸಾಗಿತ್ತು. 


 ಅಲ್ಲಿಗೆ ಬಂದಿದ್ದವರು ಅರುಣಾ. ಹರ್ಷ ಓಡಿ ಹೋಗಿ ಅವರನ್ನು ಮುಗುಳ್ನುವಿನೊಡನೆ ಮಾತನಾಡಿಸಿದ್ದ. 

 " What a surprise aunty, ನೀವು ಇಲ್ಲಿ.. ! ಹೇಗಿದ್ದಿರಾ? ಇಲ್ಲಿ ಯಾವುದಾದರೂ ಕೆಲಸದ ಮೇಲೆ ಬಂದಿದ್ದಾ?" ಎದುಸಿರಿನಲ್ಲಿ ಕೇಳಿದ.

"ನೀನು ನನ್ನ ಮಗ ಸಂಕಲ್ಪ್ ಅಲ್ಲದೇ ಇರಬಹುದು. ಆದರೆ ನಾನು ನಿನಗೆ ಅಮ್ಮ ಆಗಿದ್ದು ಸುಳ್ಳಲ್ಲವಲ್ಲ. ಅಮ್ಮ ಅಂತ ಕೂಗಿದ್ದರೆ ಮನಸ್ಸಿಗೆ ನೆಮ್ಮದಿ ಸಿಗುತ್ತಿತ್ತು" ಅವನ ಕೆನ್ನೆ ಸವರಿ,  ಮಗನ ಪ್ರತಿರೂಪವನ್ನು ಕಣ್ಣೆವೆಯಿಕ್ಕದೆ ನೋಡುತ್ತಾ ಹೇಳಿದರು.

"ಆ ಭಾವನೆ ಮನಸ್ಸಿನಿಂದ ಬಂದರೆ ಆ ಪದಕ್ಕೊಂದು ಬೆಲೆ. ಕ್ಷಮಿಸಿ ಸುಳ್ಳಾಡಲು ಮನಸ್ಸಿಗೆ ಮುಜುಗರ" ಹರ್ಷ ನಿಷ್ಠುರವಾಗಿ ತಿರಸ್ಕರಿಸಿದ




"ನಾನು ಹೇಳಿರಲಿಲ್ಲವಾ ನಿನಗೆ... ಖಂಡಿತ ಆಶ್ರಮದ ಒಂದು ಮಗುವನ್ನು ದತ್ತು ತಗೊಳ್ಳೊಕೆ ಬಂದಿರಬೇಕು. " ಮಾನ್ವಿ ದೃಢ ಧ್ವನಿಯಲ್ಲಿ ನುಡಿದಳು. ಪ್ರಸನ್ನನ ಮುಖ ಗಂಭಿರವಾಗಿತ್ತು. ವಿನಃ ಒಂದೂ ಮಾತಾಡದೆ ಮಕ್ಕಳೊಡನೆ ಆಟದಲ್ಲಿ ವ್ಯಸ್ತನಾದ. ಅಥವಾ ಹಾಗೆ ಬಿಂಬಿಸಿಕೊಂಡ‌.



"ನೀವು ಇಲ್ಲಿಗೆ ಬಂದ ಉದ್ದೇಶ?" ಕೇಳಿದ ಹರ್ಷ

" ಆಶ್ರಮದ ಒಂದು ಮಗುವಿನ ಬಗ್ಗೆ ಮಾಹಿತಿ ಬೇಕಿತ್ತು "

"ಯಾವ ಮಗು? 
ಸಾರಿ, ಅದು ನಿಮ್ಮ ವೈಯಕ್ತಿಕ!" ತಕ್ಷಣ ಕ್ಷಮೆಯಾಚಿಸಿ
 ಆಶ್ರಮದ ಫಾದರ್ ಊರಲ್ಲಿಲ್ಲ. ಆದರೆ ಪ್ರಸನ್ನನಿಗೆ ಆಶ್ರಮದ ಬಗ್ಗೆ ಎಲ್ಲಾ ಮಾಹಿತಿ ಗೊತ್ತಿರುತ್ತೆ. ಬನ್ನಿ ಕೇಳೋಣ" ಒಳಗೆ ಕರೆದುಕೊಂಡು ಹೋದ.



ಅರುಣಾ ಅವರು ಬಂದ ಮುಖ್ಯ ಉದ್ದೇಶವನ್ನು  ತಿಳಿಸಿದ ಹರ್ಷ ಅವರಿಗೆ ಸಹಾಯ ಮಾಡುವಂತೆ ಪ್ರಸನ್ನನಿಗೆ ಕೇಳಿದ. ಅದನ್ನು ಪ್ರಸನ್ನ ಗಂಭೀರವಾಗಿ ಪರಿಗಣಿಸಲೇ ಇಲ್ಲ.

"ಯಾವ ಮಗು ಬಗ್ಗೆ ಮಾಹಿತಿ ಬೇಕು ನಿಮಗೆ?" ಎತ್ತಲೋ ನೋಡುತ್ತಾ ಕೇಳಿದ

"ಒಂದು ಗಂಡು ಮಗು.  ಇಪ್ಪತ್ತೆಂಟು ವರ್ಷಗಳ ಹಿಂದೆ,ರಾತ್ರಿ ವೇಳೆ ಯಾರೋ ಆಶ್ರಮದಲ್ಲಿ ಬಿಟ್ಟು ಹೋದರಂತೆ. ಆ ಮಗು ಬಗ್ಗೆ ನಿಮಗೆ ಏನಾದರೂ ಗೊತ್ತಿದೆಯಾ?" ನಿರ್ದಿಷ್ಟ ದಿನಾಂಕ ಸಮೇತ ಕೇಳಿದರು.

" ಆ ಮಗುವಿಗೂ ನಿಮಗೂ ಏನಾದರೂ ಸಂಬಂಧ?" ಕೈಯಲ್ಲಿ ಬಾಲ್ ಆಡಿಸುತ್ತ ಗಂಭೀರವಾಗಿ ಪ್ರಶ್ನಿಸಿದ ಪ್ರಸನ್ನ. 

"ಲುಕ್ ಡಾ.ಪ್ರಸನ್ನ ಅದೆಲ್ಲ ನಿಮಗೆ ಬೇಡದಿರೋ ವಿಚಾರ. ನಾನು ಕೇಳಿದ ಮಗು ಬಗ್ಗೆ ಮಾಹಿತಿ ಸಿಗುತ್ತಾ ಇಲ್ವಾ?" 

"ಯಾರೋ ಬಂದು ಕೇಳಿದ ತಕ್ಷಣ ಮಾಹಿತಿ ಕೊಟ್ಟು ಬಿಡುವುದು ಇಲ್ಲಿನ ನಿಯಮಕ್ಕೆ ವಿರುದ್ಧ. ಮಗುವನ್ನು ದಾಖಲು ಮಾಡಿಕೊಳ್ಳಲು ಅಥವಾ ದತ್ತು ಪಡೆಯಲು ಪ್ರತಿಯೊಂದಕ್ಕೂ ಕಾಯ್ದೆ ಕಾನೂನುಗಳಿವೆ. ಅದೇ ಆಧಾರದ ಮೇಲೆ ಪ್ರಶ್ನೆ ಕೇಳ್ತಿದ್ದೇನಷ್ಟೇ. ಹೇಳಿ.‌. ನಿಮಗೂ ಆ ಮಗುವಿಗೂ ಏನಾದರೂ ಸಂಬಂಧ?"

"ಇಲ್ಲ. ನನಗೂ ಆ ಮಗುವಿಗೂ ಯಾವ ಸಂಬಂಧವೂ ಇಲ್ಲ. ಅದೂ... ನಮ್ಮ ಮನೆಯ ಕೆಲಸದವಳ ಮಗು" ಕಡ್ಡಿ ತುಂಡು ಮಾಡಿದಂತೆ ಹೇಳಿದರು. ಅವನ ಮುಷ್ಟಿ ಬಿಗಿಯಾಯಿತು.

" ಓಹ್. ಇಲ್ಲಿಗೆ ಹೇಗೆ ಬಂದಿತ್ತು? ಯಾರು ತಂದು ಬಿಟ್ಟಿದ್ದು?"  ಅಮಾಯಕನಂತೆ ಕೇಳಿದ

"ನನಗೇನೂ ಗೊತ್ತು. ಕಿತ್ತು ತಿನ್ನುವ ಬಡತನ. ಸಾಲದ ಹೊರೆ. ತಮಗೆ ಊಟಕ್ಕೆ ಇಲ್ಲದಿರುವಾಗ ಮಗುನ ಸಾಕೋದು ಕಷ್ಟ ಅನ್ನಿಸಿರಬಹುದು. ಅದಕ್ಕೆ ಆಶ್ರಮಕ್ಕೆ ಸೇರಿಸಿರಬಹುದು. ನನಗೆ ಈಗ ವಿಷಯ ಗೊತ್ತಾಯ್ತು. ಅದಕ್ಕೆ ಬಂದೆ" ನಿಷ್ಠುರ ವಾಣಿ ಅವರದು.


"ಈಗ ಆ ಮಗು ಬಗ್ಗೆ ಮಾಹಿತಿಯಿಂದ ನಿಮಗೇನಾಗಬೇಕು ?" 

" ಆ ಮಗುವನ್ನು ನಾನು ದತ್ತು ಪಡೆಯಬೇಕು ಅಂತ ತೀರ್ಮಾನಿಸಿದ್ದೇನೆ."

"ಇದೇ ಕೆಲಸವನ್ನು ಆಗಲೇ ಮಾಡಬಹುದಿತ್ತಲ್ಲವಾ?"

"ಹೇಳಿದೆನಲ್ಲ, ನನಗೆ ವಿಷಯ ಗೊತ್ತಾಗಿದ್ದೆ ಈಗ. ನೀವು ಇಲ್ಲಸಲ್ಲದ ಅಸಂಬದ್ಧ ಪ್ರಶ್ನೆ ಕೇಳ್ತಿದ್ದೀರಿ ಡಾ.ಪ್ರಸನ್ನ " ಕೊಂಚ ರೇಗಿದರು.

"ಕೂಲ್ ಕೂಲ್.‌. ಯಾಕೆ ರೇಗ್ತಿರಾ? ನೇರವಾಗಿ ಹೇಳಿ...  ಆಗ ಮಗುವಿನ ಅವಶ್ಯಕತೆ ಇರಲಿಲ್ಲ. ಈಗ ಮಗ ಸತ್ತ ನಂತರ ಆ ಮಗುವಿನ ನೆನಪಾಗಿದೆ. ಅದಕ್ಕೆ..."

" ಡಾ.ಪ್ರಸನ್ನ......!!!"

"ಕಿರುಚಿದ ತಕ್ಷಣ ಸತ್ಯ  ಸುಳ್ಳಾಗುವುದಿಲ್ಲ ಅಲ್ವಾ ಅರುಣಾ ಅವ್ರೆ.‌" ವಿನಮ್ರನಾಗಿ ನುಡಿದ

" ಏನ್ ನಿಮ್ಮ ಮಾತಿನ ಅರ್ಥ? ಯಾವ ಸತ್ಯ?"

"ಅದೇ ನೀವು ಕೇಳ್ತಿರೋ ಮಗು ನಿಮ್ಮದೇ ಅನ್ನೋ ಸತ್ಯ!!" 

ಅದುವರೆಗೂ ಅವರಿಬ್ಬರ ವಾಕ್ಝರಿಯನ್ನು ಕೂತುಹಲದಿಂದ ನೋಡುತ್ತಾ ನಿಂತಿದ್ದವರು ಪ್ರಸನ್ನನ ಮಾತಿನಿಂದ ಧಂಗಾದರು.

"ಯಾಕೆ? ನೆನಪಿಲ್ವಾ..?  ನಾನು ಜ್ಞಾಪಿಸಲಾ..." ವ್ಯಂಗ್ಯವಾಗಿ ಕೇಳಿದ. ಅರುಣಾ ಅವಮಾನದಿಂದಲೂ ಅಚ್ಚರಿ ಆಘಾತದಿಂದಲೂ ಮುಜುಗರದಿಂದಲೂ ಮೂಕವಾಗಿದ್ದರು. ಪ್ರಸನ್ನನೇ ಮಾತಾಡಿದ

"ನೀವು ಹುಡುಕ್ತಿರೋ ಆ ಮಗು  ನಿಮ್ಮದೇ!! ನಿಜ ತಾನೇ?"

"..........." 

" ಮದುವೆಗೂ ಮೊದಲೇ ಪ್ರೀತಿ ಪ್ರೇಮ ಪ್ರಣಯ ಯಾವುದೋ ಅಶುಭ ಘಳಿಗೆಯಲ್ಲಿ ಹುಟ್ಟಿದ ಮಗುವದು. ಅತ್ತ ಅದಕ್ಕೊಂದು ಹೆಸರು ಕೊಡಲಾಗದೆ, ಇತ್ತ ಸಮಾಜಕ್ಕೂ ಮುಖ ತೋರಿಸಲಾಗದೆ ನೀವಾಗಿಯೇ ದೂರ ತಳ್ಳಿದ ಮಗುವದು.  ಅದು ಹುಟ್ಟಿದ ನಂತರ ನಿಮ್ಮ ಬಾಯಿಂದ ಬಂದ ಮೊದಲ ಮಾತು 'ಎಲ್ಲಾದರೂ ದೂರ ತಗೊಂಡು ಹೋಗಿ ಕೊಂದು ಬಿಸಾಕಿ ಇದನ್ನ' 
ಅದೇ ಮಗುವನ್ನು ತಾನೇ ನೀವೀಗ ಹುಡುಕಲು ಬಂದಿರೋದು‌?

"........." ನೋಟ ಶೂನ್ಯವಾಗಿತ್ತು.

"ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇಲ್ಲವೆಂದು ಹೇಳ್ತಾರೆ. ಆದರೆ ನೀವು ಆ ಮಾತಿಗೆ ಅಪವಾದ ಅನ್ನಿಸ್ತಿದ್ದೀರಾ ಅರುಣಾ ಅವ್ರೇ.." 

ಮಾತಿನ ಪೆಟ್ಟಿಗೋ, ಪಶ್ಚಾತ್ತಾಪದ ಬೇಗುದಿಗೋ ಅವರ ಕಣ್ಣು ಮಂಜಾಯಿತು. ಅವನ ಕಣ್ಣನ್ನೇ ದಿಟ್ಟಿಸಿ ನೋಡಿ...

"ಆ ಕ್ಷಣ ಕೋಪವಿತ್ತು. ನನ್ನ ಮೇಲೆ, ಪರಿಸ್ಥಿತಿಯ ಮೇಲೆ, ಅದಕ್ಕೆ ಕಾರಣವಾಗಿರೋ ವ್ಯಕ್ತಿ ಮೇಲೆ! ನನ್ನ ಮಗುವಿನ ಮೇಲಲ್ಲ. "

"ಆದರೆ ಶಿಕ್ಷೆ ಅನುಭವಿಸಿದ್ದೂ ಅದೇ ಮಗು! ಆ ಮಗು ಮಾತ್ರ!! ನೀವೂ ಅಲ್ಲ. ನೀವು ದ್ವೇಷಿಸೋ ಆ ವ್ಯಕ್ತಿನೂ ಅಲ್ಲ!! " ಒತ್ತಿ ಹೇಳಿದ್ದ.

" ನನ್ನ ಇದ್ದೊಬ್ಬ ಮಗನನ್ನು ಕಳೆದುಕೊಂಡು ಶಿಕ್ಷೆ  ಅನುಭವಿಸುತ್ತಿದ್ದೇನೆ. ಪಶ್ಚಾತ್ತಾಪ ಪಡ್ತಿದ್ದೇನೆ ಅಷ್ಟು ಸಾಲದೇ?!" 

"ಪಶ್ಚಾತ್ತಾಪ ಪಡೋಕೆ ಇಷ್ಟು ವರ್ಷ ಬೇಕಾಯ್ತಾ ನಿಮಗೆ? ಅಥವಾ ಒಬ್ಬ ಮಗ ಇಲ್ಲವಾದ ನಂತರ ಈ ಮಗು ನಿಮ್ಮ ಪಾಲಿನ ಕೊನೆಯ ಆಯ್ಕೆಯೇ? " ಅವನು ಸುಲಭಕ್ಕೆ ಒಪ್ಪಲಿಲ್ಲ.

" ಲುಕ್, ಡಾ.ಪ್ರಸನ್ನ ನಿಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನೀವು ತುಂಬಾ ಉದ್ದಟತನದಿಂದ ಮಾತಾಡ್ತಿದ್ದೀರಿ. ನನಗೆ ಮಗುವಿನ ಮೇಲೆ ಮಮಕಾರ ಇರಲಿಲ್ಲ ನಿಜ. ಆದರೆ ನಮ್ಮ ತಂದೆಗೆ ಮಗು ಬಗ್ಗೆ ತುಂಬಾ ಕಾಳಜಿಯಿತ್ತು. ಅದೇ ಕಾರಣಕ್ಕೆ ನಮ್ಮನೆಯ ಕೆಲಸದಾಕೆ ಜಾನಕಮ್ಮನ ಹತ್ತಿರ ಮಗುವನ್ನು ಈ ಆಶ್ರಮದಲ್ಲಿ ಸೇರಿಸಿದ್ದು. ಪ್ರತಿತಿಂಗಳು ಅವನಿಗೆ ಯಾವುದೇ ಕುಂದು ಕೊರತೆ ಬರದಂತೆ ಹಣದ ವ್ಯವಸ್ಥೆ ಮಾಡಿದ್ದರು. ಈಗ ತಮ್ಮ ಆಸ್ತಿಯನ್ನು ಸಹ ಆಶ್ರಮಕ್ಕೆ ಬರೆದಿದ್ದಾರೆ.  ನಾನು ಒಳ್ಳೆಯ ತಾಯಿ ಹೌದೋ ಅಲ್ಲವೋ? ನನ್ನನ್ನು ಕ್ಷಮಿಸಬೇಕೋ ಬೇಡವೋ? ನನ್ನ ಜೊತೆಗೆ ಬರಬೇಕೋ ಬೇಡವೋ? ಅದನ್ನೆಲ್ಲ ನನ್ನ ಮಗ ನಿರ್ಧಾರ ಮಾಡ್ತಾನೆ. ನೀವು ಅವನನ್ನು ಒಮ್ಮೆ ಭೇಟಿ ಮಾಡಿಸಿ ಸಾಕು." ಬೆರಳೆಚ್ಚರಿಕೆ ತೋರಿ ತಾಕೀತು ಮಾಡಿದರು.

"ಇಷ್ಟೆಲ್ಲಾ ವಿಷಯ ಗೊತ್ತಿರುವ ನಿಮಗೆ ನಿಮ್ಮ ಮಗನ ಹೆಸರು ವಿಳಾಸ ಗೊತ್ತಿಲ್ವೇ?" ಅನುಮಾನದಿಂದ ಕೇಳಿದ.

"ಇಲ್ಲ. ಅಸಲಿಗೆ ನನಗೆ ನನ್ನ ಮಗು ಬದುಕಿರುವ ವಿಷಯವೇ ಗೊತ್ತಿರಲಿಲ್ಲ. ನಮ್ಮ ತಂದೆ ಆಸ್ತಿಯನ್ನು ಈ ಆಶ್ರಮಕ್ಕೆ ಯಾಕೆ ಬರೆದಿರಬಹುದು ಅನ್ನೋ ಕುತೂಹಲದಿಂದ ವಿಷಯವನ್ನು ಕೆಣಕಿದ್ದೆ. ನಮ್ಮ ತಂದೆಯ ಲೀಗಲ್ ಅಡ್ವೈಸ಼್‌ರ್ ಮೂರ್ತಿ ಅವರು ಹೇಳಿದರು

 -'ನಮ್ಮ ತಂದೆಯವರಿಗೆ ಈ ಆಶ್ರಮದ ಮೇಲೆ ತುಂಬಾ ಗೌರವ ಪ್ರೀತಿ. ಪ್ರತಿ ವರ್ಷ ಕೋಟಿಗಟ್ಟಲೇ ದೇಣಿಗೆ ಕೊಡುತ್ತಿದ್ದರಂತೆ.  ಅವರಿಗೆ ಮೊದಲಿನಿಂದಲೂ ನನ್ನ ಗಂಡನ ಮೇಲೆ ನಂಬಿಕೆ ಇರಲಿಲ್ಲವೆಂದು. ಅದಕ್ಕೆ ಆ ರೀತಿ ಉಯಿಲು ಬರೆಸಿದ್ದರೇನೋ ಅಂತ.'

 ನನ್ನ ಸಂದೇಹ ಅಷ್ಟಕ್ಕೇ ಪರಿಹಾರವಾಗಲಿಲ್ಲ. ಜಾನಕಮ್ಮನ ಮನೆಯನ್ನು ಹುಡುಕಿಕೊಂಡು ಹೋಗಿದ್ದೆ. ಅವರೀಗ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ತುಂಬು ವೃದ್ಧಾಪ್ಯ. ಕಣ್ಣು ಮಂಜು. ಕಿವಿ ಮಂದ. ಹಾಗೋ ಹೀಗೋ ನಾನು ನನ್ನ ಪರಿಚಯ ಹೇಳಿದ ಎಷ್ಟೋ ಸಮಯದ ನಂತರ ನನ್ನನ್ನು ನೋಡಿ ತೊದಲು ನುಡಿ ಸನ್ನೆಯಲ್ಲಿ ಹೇಳಿದರು - 'ನನ್ನ ಮಗ ಬದ್ಕಿದ್ದಾನೆ‌. ಇದೇ ಆಶ್ರಮದಲ್ಲಿ ಅವನು ಬೆಳೆದಿದ್ದು' ಎಂದು. ಇಷ್ಟು ಹೊರತಾಗಿ ನನಗೆ ನನ್ನ ಮಗನ ಬಗ್ಗೆ ಬೇರೆನೂ ಗೊತ್ತಿಲ್ಲ. " ನಿಟ್ಟುಸಿರು ಬಿಟ್ಟರು‌.

"ಹೌದು. ನಿಜ. ‌ ನಿಮ್ಮ ಮಗ ಇದೇ ಆಶ್ರಮದಲ್ಲಿ ಬೆಳೆದಿದ್ದು. ನನಗೂ ಗೊತ್ತು. ಯಾಕೆಂದರೆ ನಾವಿಬ್ಬರೂ ಜೊತೆಗೆ ಆಡಿ ಬೆಳೆದವರು!!" ಅರುಣಾ ಮುಖದಲ್ಲಿ ನಗುವರಳಿತು. 

"ಈಗ ಎಲ್ಲಿದ್ದಾನವನು? ಏನ್ಮಾಡ್ಕೊಂಡಿದ್ದಾನೆ? ಅವನೂ ಡಾಕ್ಟರಾ? ಇಬ್ಬರೂ ಜೊತೆಗೆ ಕಲಿತಿದ್ದಾ?" ಬಿಡುವಿಲ್ಲದ ಕುತೂಹಲದ ಪ್ರಶ್ನೆಗಳು. 

" ಬನ್ನಿ..." ಒಂದು ಸ್ನಿಗ್ಧ ಮುಗುಳ್ನಗು ಬೀರಿ ಕರೆದುಕೊಂಡು ಹೊರಟ ಅವರನ್ನು.

ಹಳೆಯ ಫೈಲ್‌ಗಳನ್ನು ಒಳಗೊಂಡ ಕೋಣೆಯೊಳಗೆ ಹೋಗಿ ಒಂದಷ್ಟು ಫೈಲ್ ಹುಡುಕಾಡಿ ಅವರ ಮುಂದೆ ಒಂದನ್ನು ಚಾಚಿದ.  

"ಇದೇನು? ನನ್ನ ಮಗನನ್ನು ಭೇಟಿ ಮಾಡಿಸಿ ಎಂದರೆ.."

"ಹ್ಮಾ.. ಅದನ್ನೇ ಮಾಡ್ತಿದ್ದೇನಲ್ಲ." ಫೈಲ್ ತೆಗೆದು ಅವರ ಮುಂದೆ ಬಿಸಾಕಿ ಹೇಳಿದ್ದ..

"ಇವನೇ ನಿಮ್ಮ ಮಗ. 
ಅವನ ಹೆಸರು ಕುಲ ಗೋತ್ರ ಎಲ್ಲಾ ಬರೆದಿದೆ ಓದಿ... 
ಕೇಳಿನೋಡಿ,  ನಿಮ್ಮ ಜೊತೆಗೆ ಬರುತ್ತಾನೋ ಇಲ್ಲವೋ? ಬಂದರೆ ಕರೆದುಕೊಂಡು ಹೋಗಿ. ನನ್ನ ಅಭ್ಯಂತರವೇನು ಇಲ್ಲ. " ಅವನ ಧ್ವನಿ ಕೋಪ ಹಾಗೂ ದುಃಖದಿಂದ ಗಡುಸಾಗಿತ್ತು. 

ಫೈಲಿನಲ್ಲಿದ್ದ ಹದಿನೈದು ಹದಿನಾರು ವರ್ಷದ ಹುಡುಗನ ಫೋಟೋ ನೋಡಿದ ಅರುಣಾ ರೇಗಿದರು "ತಮಾಷೆ ಮಾಡ್ತಿದ್ದೀರಾ ಡಾ.ಪ್ರಸನ್ನ!? ಯಾವುದೋ ಚಿಕ್ಕ ಹುಡುಗನನ್ನು ತೋರಿಸಿ ನನ್ನ ಮಗ ಎಂದು ನಂಬಿಸ್ತಿದ್ದಿರಾ?" 

"ಜೀವಂತವಾಗಿ ಇದ್ದಿದ್ದರೆ ದೊಡ್ಡವನಾಗಿ ಬೆಳೆಯುತ್ತಿದ್ದನೇನೋ? ನಿಮ್ಮ ಪಾಪದ ಫಲ ತಾನು ಎಂದು ಗೊತ್ತಾದ ತಕ್ಷಣ ಜೀವನ ಹೀನಾಯ ಎನ್ನಿಸಿ ಹೊರಟು ಹೋದ ನೋಡಿ ಪಾಪ.. ಕಾಯಬೇಕಾಗಿತ್ತಲ್ವ...  ಇವತ್ತು ನೀವು ಬರುವವರೆಗೂ... ನಿಮ್ಮನ್ನು ಕ್ಷಮಿಸಿ ತಾಯಿ ಎಂದು ಒಪ್ಪಿಕೊಳ್ಳುವವರೆಗೂ.. ನಿಮ್ಮ ಆಸ್ತಿಗೆ ವಾರಸುದಾರನಾಗುವವರೆಗೂ.. ಬದುಕ್ಬೇಕಿತ್ತಲ್ವಾ ಪಾಪಿ..?" ಕೆನ್ನೆಗೆ ಬಾರಿಸಿದಂತಿತ್ತು ಅವನ ಮಾತಿನ ದಾಳಿ.

ಅವನ ಆಕ್ರಂದಿತ ಧ್ವನಿಗೆ ವಾತಾವರಣ ಸ್ತಬ್ಧವಾಗಿತ್ತು. ಅರುಣಾ ಮತ್ತೊಂದು ಆಘಾತ ಎರಗಿದಂತೆ ಕಲ್ಲಾದರು.

"ಅವನಿಗೆ ನನ್ನ ಬಗ್ಗೆ ಗೊತ್ತಾಗಿತ್ತಾ... ಹೇಗೆ?" ಅಳುಕಿದರು.

"ನಿಮಗೆ ಯಾರ ಮೂಲಕ ವಿಷಯ ತಿಳಿಯಿತೋ ಅದೇ ಜಾನಕಮ್ಮ ಹೇಳಿದ್ದು. ಆಗಾಗ ಆಶ್ರಮಕ್ಕೆ ಬಂದು ಹೋಗುತ್ತಿದ್ರು. ಬಂದಾಗಲೆಲ್ಲ ಏನೋ ತಿಂಡಿ ತಿನಿಸುಗಳು ಯಥೇಚ್ಛವಾಗಿ ತರುತ್ತಿದ್ರು. ಅವರ ಜೊತೆ ತುಂಬಾ ಸಲಿಗೆ ಬೆಳೆದಿತ್ತು. ಒಮ್ಮೆ ಬಾಯಿತಪ್ಪಿ ಅವನಿಗೆ ಹೇಳಿದ್ರು - 'ಅರಮನೆಯಲ್ಲಿ ಇರಬೇಕಾದವ್ನು ಹೀಗೆ ಅನಾಥನಾಗಿ ಬೆಳೆಯೋ ಕರ್ಮ ಬಂತಲ್ಲ ಕೂಸೇ' ಎಂದು. 
ಅವರು ಅಷ್ಟು ಹೇಳಿದ್ದೇ ಅವನು  ತನ್ನ ವಾಸ್ತವಿಕತೆ ಬಗ್ಗೆ ತಿಳಿಯುವ ಹಠಕ್ಕೆ ಬಿದ್ದ. ಏನೇನೋ ಪ್ರಯತ್ನಗಳ ನಂತರ ಒಮ್ಮೆ ಅವರನ್ನು ಹಿಂಬಾಲಿಸಿ ಹೋಗಿದ್ದ. ಅವರು ಹೋದ ಮನೆಯಲ್ಲಿ ತನ್ನ ತಾಯಿಯನ್ನು ನೋಡಿ ಅವರ ಬಗ್ಗೆ ತಿಳಿದುಕೊಂಡೂ ಬಿಟ್ಟ. ಅನಾಥ ಎನಿಸಿಕೊಳ್ಳುವಾಗಲೂ ಆಗದಷ್ಟು ನೋವು, ಹೆತ್ತ ತಾಯಿಗೆ ಬೇಡದ ಮಗುವೆಂದು ತಿಳಿದಾಗ ಆಗಿತ್ತು. ಹೇಳಿಕೊಂಡು ರಾತ್ರಿಯಿಡೀ ಅತ್ತಿದ್ದ. ಸಮಾಧಾನ ಆಗಲಿಲ್ಲವೇನೋ. ತನ್ನ ನೆರಳು ಜೊತೆಗಿರದ ಕತ್ತಲಲ್ಲಿ ಕರಗಿ ಹೋದ. ಅವನ ಪಾಲಿಗೆ ಬೆಳಗು ಆಗಲೇ ಇಲ್ಲ. He hanged himself, he is no more!! " ನಿರೀಕ್ಷೆಗಳ ಅಂತ್ಯವಾಗಿತ್ತು.

ಅರುಣಾ ಅವರ ಮಾತುಗಳು ಸತ್ತು ಹೋದವು. ಮುಂದೆ ಹೇಳಲು ಕೇಳಲು ಏನು ಉಳಿದೇ ಇರಲಿಲ್ಲ. ಗಂಟಲು ಗಧ್ಘದಿತವಾಯಿತು. ತಮ್ಮ ಒಡಲ ಕುಡಿಯನ್ನು ಧಿಕ್ಕರಿಸಿದಾಗ ಇಲ್ಲದ ಅಪರಾಧಿ ಪ್ರಜ್ಞೆ ಅಂದು ಜಾಗೃತವಾಯಿತು. ಹೆಜ್ಜೆಗಳು ಮೆಲ್ಲಗೆ ಹಿಂದೆ ಸರಿದವು. 

ಸುತ್ತ ನಿಂತವರ ಮನವು ಸ್ತಬ್ಧವಾದಂತಾಯಿತು. ಅವರ ಬದುಕಿನ ಕಥೆಗೊಂದು ಸಂತೋಷದ ತಿರುವು ನಿರೀಕ್ಷಿಸಿದವರ ಮುಖ ಸಪ್ಪಗಾಯಿತು.‌ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಸಂದರ್ಭವನ್ನು ಎದುರಿಸಲಾಗದೆ ಸೋತು ಹೊರನಡೆದರು. 

ಮಾನ್ವಿ ಮತ್ತು ಹರ್ಷ, ಅರುಣಾ ಅವರ ನೋವನ್ನು ಸಂತೈಸಲು ಅವರ ಹಿಂದೆ ಹೋದರು.

ಅಲ್ಲಿ ಉಳಿದದ್ದು ನೀರವ ಮೌನ..
 ಪ್ರಸನ್ನ ಧ್ಯಾನಮಗ್ನ ಯೋಗಿಯಂತೆ ಶೂನ್ಯ ದೃಷ್ಟಿಯಲ್ಲಿ ಮೊಣಕಾಲ ಮೇಲೆ ಕುಸಿದು ಕುಳಿತಿದ್ದ. ಪರಿ ನಿಧಾನವಾಗಿ ಅವನೆದುರು ಕುಳಿತು ಕೈ ಅದುಮಿದಳು. ಅವನು ಮಿಸುಕಾಡಲಿಲ್ಲ.

"ನೀವು ನನ್ನ ಮುಂದೆ ಕೂಡ ಇದೇ ಕಥೆಯನ್ನಲ್ಲವಾ ಹೇಳಿದ್ದು..? ಇದೊಂದು ಕಟ್ಟುಕಥೆ..." ಆತ ಜೀವವಿಲ್ಲದ ನಗೆ ನಕ್ಕ.

" ಕಥೆಯಲ್ಲಿನ ಅರುಣಾರ ಮಗ ನೀವೇ ಎನ್ನುವುದು ವಾಸ್ತವ! ಅಲ್ವಾ..? ಯಾಕೆ ನಿಮಗೆ ನೀವೇ ಮೋಸ ಮಾಡಿಕೊಳ್ತಿದ್ದೀರಾ ಪ್ರಸನ್ನ? ನಿಜ ಹೇಳಬೇಕಿತ್ತು ತಾನೇ" ಪರಿ ಅವನನ್ನು ಅಲುಗಿಸಿದಳು.

"ನಿಜಾನೇ ಹೇಳಿದ್ದಿನಿ ಪರಿ... ಅವತ್ತು ಸಂಜೆ ತಾನು ಅನಾಥನಲ್ಲ. ಹೆತ್ತವರಿಗೆ ಬೇಡವಾಗಿರೋ ಮಗು, ಕನಿಷ್ಟ ಮಮಕಾರಕ್ಕೂ ಯೋಗ್ಯವಲ್ಲದಿರೋ ಮಗು ಎಂದು ಗೊತ್ತಾದ ಕೂಡಲೇ ನಿಜವಾಗಿಯೂ ಅವರ ಮಗ ಸತ್ತು ಹೋದ ಗೊತ್ತಾ..!? 

ಎಷ್ಟೊಂದು ಹಂಬಲದಿಂದ ಅಮ್ಮನನ್ನು ಹುಡುಕಿಕೊಂಡು ಹೋಗಿದ್ದ.. ನೋಡಿದ ಕೂಡಲೇ ಹೇಳಿಬಿಡಬೇಕು 'ಅಮ್ಮಾ, ನಾನು ನಿನ್ನ ಮಗನಂತೆ. ಯಾರೋ ನಮ್ಮನ್ನು ದೂರ ಮಾಡಿಬಿಟ್ಟಿದ್ದರಂತೆ. ಕೇಳು ಜಾನಕಮ್ಮನ್ನ ಅವರಿಗೆ ಎಲ್ಲಾ ನಿಜ ಗೊತ್ತಿದೆ.' ಅಂತ. 

ಆದರೆ ಗೇಟ್ ಎದುರಿಗೆ ನಿಂತು " ಅಮ್ಮಾ.. " ಎಂದು ಕೂಗಿದ್ದೇ,  ಕೈಯಲ್ಲಿ ಫೋನ್ ಹಿಡಿದಿದ್ದ ಆ ತಾಯಿ "ಯಾರೋ ಭಿಕ್ಷುಕ ಬಂದಿದ್ದಾನೆ, ಕಳಿಸು ಅವನನ್ನ ಆಚೆಗೆ" ಕೂಗಿದ್ದರು. 

ಜಾನಕಮ್ಮ ಬಂದು 'ಅಯ್ಯೋ, ಮಗಾ.. ಇಲ್ಲಿಗ್ಯಾಕೋ ಬಂದೆ. ಅರುಣಮ್ಮಂಗೆ ಗೊತ್ತಾದ್ರೆ ನಿನ್ನ ಜೀವಾನೇ ತೆಗೆದು ಬಿಟ್ಟಾರೂ.. ಹೋಗು ಮಗಾ ಆಶ್ರಮಕ್ಕೆ ಹೋಗು " ಎಂದು ಅವಸರಿಸಿದ್ದರು.

"ನೀವು ಹೇಳಿದ ನಮ್ಮಮ್ಮ ಇವರೇ..  ಕೂಗಿ ಅವರನ್ನು ನಾನು ಅವರ ಜೊತೆ ಮಾತಾಡಬೇಕು." ಬಿಡಲಾರದ ಹಠ ಮಾಡಿದ್ದ ಅವನು.

"ಅಯ್ಯೋ.. ಮಾಡೋದೆಲ್ಲ ಮಾಡಿ ಮರ್ಯಾದೆಗಂಜಿ ಇನ್ನೊಬ್ರನ್ನ ಬಲಿ ಕೊಡೋ ಈ ಶ್ರೀಮಂತರ ಸಹವಾಸ ಬೇಡಪ್ಪ. ಹೇಗಪ್ಪಾ ಹೇಳಲಿ ನಿನಗೆ, ಅದೇ ಹೆಂಗಸು ನಿನ್ನನ್ನ ಸಾಯಿಸಿಬಿಡೋಕೆ ಹೇಳಿದ್ದು! ಏನೋ‌ ಯಜಮಾನ್ರ ದೊಡ್ಡತನದಿಂದ ಬದ್ಕಿದ್ದೀಯಾ‌. ಹೋಗು ಮಗಾ ಹೋಗು, ಇನ್ನೊಮ್ಮೆ ಈಕಡೆಗೆ ತಲೆ ಹಾಕಬೇಡ. " ಅಟ್ಟಿಬಿಟ್ಟರು ಅವನನ್ನು.

ಅನಾಥನಾಗಿ ಹುಟ್ಟಿದ್ದಕ್ಕೆ ಯಾವತ್ತೂ ಅತ್ತಿರಲಿಲ್ಲ ಅವನು. ಜೊತೆಗಿದ್ದ ಅನೇಕರಿಗೆ ಧೈರ್ಯ ತುಂಬಿ, ನಗಿಸಿ ದುಃಖ ಮರೆಸುತ್ತಿದ್ದವನು ಅವತ್ತು ಮೊದಲ ಬಾರಿ ಅತ್ತ. ಅದೇ ಕೊನೆಯ ಬಾರಿ ಕೂಡ... ಕಣ್ಣೀರಲ್ಲಿ ಸತ್ಯವೊಂದು ಸತ್ತು ಹೋಗುವಂತೆ ಅತ್ತ. ಅದೇ ರಾತ್ರಿ ಸತ್ಯದೊಂದಿಗೆ ಅವನೂ ಸತ್ತು ಹೋದ. ಮರುದಿನ ಹೊಸ ಜನ್ಮ ಪಡೆದ. ಮತ್ತದೇ ನಗುಮುಖ. ತಮಾಷೆ ಮಾತು. ಎಗ್ಗಿಲ್ಲದ ಜಂಭ. ಸರಳ ಶಾಂತ ಆಗಾಗ್ಗೆ ಉಗ್ರಕೋಪ. ನಿರ್ಭಾವುಕ, ನಿಷ್ಠುರ, ನಿರ್ಲಿಪ್ತ!! " ಅವನ ಮನಸ್ಸು ಶಾಂತವಾಗಿತ್ತು.
"ಕೊನೆಯಲ್ಲಿ ಆದ ಒಳ್ಳೆಯ ಅಂಶವೆಂದರೆ ಇನ್ಮುಂದೆ ನಾನು ಹೆಮ್ಮೆಯಿಂದ ಹೇಳಬಹುದು ಇದು ನಮ್ಮ ತಾತನ ಆಸ್ತಿಯಂತ.." ನಕ್ಕನಾತ.

"ಪ್ರಸನ್ನ, ಆದದ್ದು ಮರೆತು ಈಗಲಾದರೂ ನಿಮ್ಮ ತಾಯಿಯನ್ನು ಒಪ್ಪಿಕೊಳ್ಳಬೇಕಿತ್ತು ನೀವು." 

"ಅವರು ತಮ್ಮ ಮಗನಿಗಾಗಿ ಹುಡುಕಿಕೊಂಡು ಬಂದಿದ್ದರೆ ಒಪ್ಪಬಹುದಿತ್ತು. ಆದರೆ ಅವರು ಬಂದಿದ್ದು ತಮ್ಮ ಕೆಲಸದವನ ಮಗನಿಗಾಗಿ.. ತಮ್ಮ ತಂದೆಯ ದುಡ್ಡಿನಲ್ಲಿ ಬೆಳೆದ ಮಗನಿಗಾಗಿ.‌. ಮುಂದೆ ತಮ್ಮ ಆಸ್ತಿಗೆ ವಾರಸ್ದಾರನಾಗುವ ಮಗನಿಗಾಗಿ.‌. ನಾನು ಅವನಲ್ಲ ಬಿಡಿ. 
ಅಂದು ಅವರು ನನ್ನನ್ನು ತಿರಸ್ಕರಿಸಿದ್ದರು ಇಂದು ನಾನು ಅವರನ್ನು ಧಿಕ್ಕರಿಸುತ್ತೇನೆ. ಇದು ನನ್ನ ಪ್ರತೀಕಾರ" 


"ಹೆತ್ತ ತಾಯಿ ಜೊತೆಗೆ ಎಂಥ ವೈಷಮ್ಯ ನಿಮಗೆ? ಈಗಲೂ ಸಮಯ ಮೀರಿಲ್ಲ. ನಾನು ಹೋಗಿ ಅವರನ್ನು ಕರೆದುಕೊಂಡು ಬರ್ತೇನೆ. "

"ಪರಿಸ್ಥಿತಿಯನ್ನು ಇನ್ನಷ್ಟು ಹಾಳು ಮಾಡೋ ಹುಚ್ಚು ನಿಮಗೆ "

"ನೀವು ಹೇಗೆಂದುಕೊಂಡರೂ ಸರಿ.." 

"ಪರಿ..." ಕೂಗಿದ. 
"ಅನಿವಾರ್ಯವಾಗಿ ಹುಟ್ಟಿದ ಸಂಬಂಧಗಳು ಹೆಚ್ಚು ಕಾಲ ಬಾಳಿಕೆ ಬರಲ್ಲ. ಗಾಯ ವಾಸಿಯಾದರೂ ಕಲೆ ಆಗಾಗ ಆದ ದುರ್ಘಟನೆಯನ್ನು ನೆನಪಿಸುತ್ತೆ. ಮುಗಿದು ಹೋಗಿರುವುದನ್ನು ಮತ್ತೆ ಕೆದುಕುವ ಕೆಲಸ ಬೇಡ. ನಾನು ಅನಾಥನಾಗಿಯೇ ಇರಲು ಇಷ್ಟಪಡ್ತಿನಿ. ಪ್ಲೀಸ್‌..."

ಹೊರಟಿದ್ದಾಕೆ ಹೆಜ್ಜೆ ಕಿತ್ತಿಡದೆ ನಿಂತು ಬಿಟ್ಟಳು. 
" ಇನ್ನೊಮ್ಮೆ ಯೋಚನೆ ಮಾಡಿ ಪ್ರಸನ್ನ, ಹಳೆಯದನ್ನ ಮರೆತು ಹೊಸ ಜೀವನ ಆರಂಭಿಸಿ. "

"ಒಂದು ವೇಳೆ ಸಂಕಲ್ಪ್ ಇನ್ನೂ ಬದುಕಿದ್ದರೆ  ನನಗೆ ಇಂತಹ ಅವಕಾಶ ಸಿಗುತ್ತಿತ್ತಾ.. ಅವನ ಸಮಾಧಿ ಮೇಲೆ ನನ್ನ ಬದುಕು!! ಬೇಕಾಗಿಲ್ಲ ಪರಿ. ಈ ವಿಷಯ ಇಲ್ಲಿಯೇ ಕೊನೆಯಾಗಲಿ‌. ಇನ್ನೆಂದೂ ಈ ಬಗ್ಗೆ ಯಾರ ಮುಂದೆಯೂ ಚರ್ಚೆ ಆಗಕೂಡದು. ಹರ್ಷನ ಮುಂದೆ ಕೂಡ.." ಆತ ಕಣ್ಣು ನೀವಿಕೊಳ್ಳುತ್ತ ಎದ್ದು ನಿಂತ.

"ಇದಂತೂ ಅಸಾಧ್ಯ" 

"ಅಂದ್ರೆ ನಿಮ್ಮಿಬ್ಬರ ಮಧ್ಯೆ ಯಾವುದೇ ಗುಟ್ಟುಗಳೇ ಇಲ್ಲವಾ?" ಸಹಜವಾಗಿಯೇ ಛೇಡಿಸಿದ.

"ನೋ.. ಗಂಡ ಹೆಂಡತಿ ಮಧ್ಯೆ ರಹಸ್ಯಗಳು ಇರಬಾರದು ಕೂಡ. ನೀವು ಮಾನ್ವಿಯಿಂದ ಏನಾದ್ರೂ ಮುಚ್ಚಿಟ್ಟಿದ್ದೀರಾ?" ಸನ್ನಿವೇಶ ತಿಳಿಯಾಗಿತ್ತು.

ಆತ ಮೆಲುವಾಗಿ ನಕ್ಕ. "ನಿಜ ಹೇಳಲಾ..‌ ನಮ್ಮ ಮೊದಲ ಭೇಟಿಯ ಜಗಳ ಆಕಸ್ಮಿಕವಲ್ಲ. ನಾನೇ ಬೇಕೇಂದೇ ಶುರುಮಾಡಿದ್ದು..

ಅವತ್ತು ಎಷ್ಟು ಕಷ್ಟ ಪಟ್ಟು ಎಲ್ಲಾ ಬೈಕ್‌ಗಳನ್ನ ಸರಿಸಿ ಪಕ್ಕಕ್ಕೆ ನಿಲ್ಲಿಸಿದ್ದಳು ಗೊತ್ತಾ.. ಹಾರಾಡ್ತಿದ್ದ ಅವಳ ಮುಂಗುರುಳಲ್ಲಿ ಏನೋ ಜಾದೂವಿದೆ ಅನ್ಸುತ್ತೆ. ನಾನು ಕೆಲವು ನಿಮಿಷ ಅವಳನ್ನೇ ನೋಡ್ತಾ ನಿಂತಿದ್ದೆ. ಅವಳು ಜಾಗ ಮಾಡಿದ ತಕ್ಷಣ ಹೋಗಿ ನನ್ನ ಬೈಕ್'ನ್ನು ಅಲ್ಲಿ ಪಾರ್ಕ್ ಮಾಡಿದ್ದೆ. ಅವಳನ್ನು ಸತಾಯಿಸಿ ಜಗಳಕ್ಕೆ ಮುನ್ನುಡಿ ಬರೆಯೋದೇ ನನ್ನಾಸೆಯಾಗಿತ್ತೇನೋ. ಹಾಗೆ ಆಯ್ತು ಕೂಡ..

 Obviously, ಅವಳ ಜಾಗದಲ್ಲಿ ಯಾರೇ ಇದ್ದರೂ ಕೋಪ ಬರೋದು ಸಹಜ ತಾನೇ.. ಸಿಟ್ಟು ಬಂದು ಬಾಯಿಗೆ ಬಂದಂತೆ ಬೈದದ್ದು ಆಯಿತು.ನಾನು ಅವಳನ್ನ ಕಾಡಿಸಿದ್ದು ಆಯಿತು. ಇಬ್ಬರ ಮಧ್ಯೆ ಆವತ್ತು ಶುರುವಾದ ಕದನ ಇಂದಿಗೂ ಬಗೆಹರಿದಿಲ್ಲ ನೋಡಿ "

"ಬಗೆಹರಿಸಲು ನಿಮಗೆ ಇಷ್ಟವೂ ಇಲ್ಲ ಅಂತ ಕಾಣ್ಸುತ್ತೆ..!! ಹೌದು ಜಗಳ ಶುರು ಮಾಡಿದ್ದಾದರೂ ಯಾಕೆ??." ಓರೆನೋಟದಲ್ಲಿ ನೋಡುತ್ತಾ ಕೇಳಿದಳು.

" ಅದೇ ನನಗೂ ಇಲ್ಲಿಯವರೆಗೂ ಅರ್ಥವಾಗಿಲ್ಲ ನೋಡಿ... ಅವಳ ಜೊತೆಗೆ ಜಗಳ ಮಾಡೋದ್ರಲ್ಲೂ ಒಂತರಾ ಖುಷಿ ಸಿಗುತ್ತೇನೋ!!" ಚಂದದ ನಗು ಬೀರಿದ್ದ 

"ಪರವಾಗಿಲ್ಲ. ಅವಳನ್ನು ಕಂಡರೆ ಆಗದವರು ಈಗ ಒಂದು ಹಂತಕ್ಕೆ ಬಂದಿದ್ದೀರಾ.." ನಕ್ಕಳಾಕೆ. ಮನಸ್ಸಲ್ಲಿ ಅನುಕಂಪವೊಂದು ಉಳಿದು ಹೋಗಿತ್ತು. ಅರುಣಾರ ಬಗ್ಗೆ? ಪ್ರಸನ್ನ ಬಗ್ಗೆ ? ಯಾರ ಮೇಲೆ ಎಂಬುದು ನಿರ್ವಿವಾದ.



ಬಾಗಿಲ ಬಳಿ ನಿಂತಿದ್ದ ಮಾನ್ವಿಯನ್ನು ನೋಡಿ ಇಬ್ಬರ ನಗು ತುಟಿಯಲ್ಲೇ ಇಂಗಿಹೋಯಿತು.
"ಪಾಪ ಅರುಣಾ ಆಂಟಿ ಅಳುತ್ತಾ ಹೋದ್ರು." ಕನಿಕರದಿಂದ ನುಡಿದಳು.

" ನೀ ಹೋಗ್ಬೇಕಿತ್ತು ತಾನೇ ಅವರ ಹಿಂದೆ ಕಣ್ಣೀರು ಒರೆಸೋಕೆ. ನಾನು ಬಟ್ಟೆ ಪಾತ್ರೆ ತೊಳೆಯೋದು  ತಪ್ಪುತ್ತಿತ್ತು. "ಸಿಡುಕಿದ

"ಬಟ್ಟೆ ಪಾತ್ರೆ ತೊಳೆಯೋದು ತಪ್ತಿತ್ತಾ? ಅಂದರೆ ಏನರ್ಥ?" ಪರಿ ತಟ್ಟನೆ ಕೇಳಿದಳು.

" ಏನಿಲ್ಲ ಏನಿಲ್ಲ‌.. ನಮ್ಮ ಸ್ಕೋರ್ ಎಷ್ಟಾಗಿತ್ತು?" ಮಾತು ಮರೆಸಿದ ಪ್ರಸನ್ನ ಮಕ್ಕಳ ಕಡೆಗೆ ಓಡಿದ

ಮಾನ್ವಿ ಪರಿಗೆ ಕಣ್ಣು ಹೊಡೆದು ನಕ್ಕಳು. 

                             *************


"ನೀನು ಅಡುಗೆ ಮಾಡುವ ಸಾಹಸ ಮಾಡಬೇಡ ಮಹಾತಾಯಿ. ನಾನೇ ಮಾಡ್ತಿನಿ. ಪಾತ್ರೆ ತೊಳೆಯುವ ಭಾರ ನಿನ್ನದು." ಪ್ರಸನ್ನನ ಉವಾಚ

"ಬರೀ ಮಾಡೋದೇನು, ತುತ್ತು ಮಾಡಿ ತಿನ್ನಿಸು"

"ಹ್ಮಾ ಅದೊಂದು ಕಡಿಮೆಯಾಗಿದೆ ನನಗೆ"

"ಸೀರಿಯಸ್ಲೀ,, ನನಗಿವತ್ತು ಡ್ಯಾಡ್ ತುಂಬಾ ನೆನಪಾಗ್ತಿದ್ದಾರೆ. ಅವರ ಕೈ ತುತ್ತು ತಿನ್ನಬೇಕು ಅನ್ನಿಸ್ತಿದೆ‌. ಅವರು ಈಗ ಇಲ್ಲಿಲ್ವಲ್ಲ, ನೀನು ತಿನ್ನಿಸು‌. ಪ್ಲೀಸ್‌... "ಅಂಗಲಾಚಿದಳು ಮಾನ್ವಿ

ಇದ್ಯಾವ ಹೊಸ ವರಸೆ ಎಂದು ಹಳಿಯುತ್ತಲೇ ಮಾಡಿದ ಅಡುಗೆ ಬಡಿಸಿ, ತುತ್ತು ಕಲಿಸಿ ಬಾಯಿಗಿಟ್ಟ. 

ಅವಳು ಅವನನ್ನು ಅನುಕರಿಸಿ ಅವನಿಗೆ ತಿನ್ನಿಸಲು ಕೈ ಚಾಚಿದಳು.

"ನಾನೇನು ಕೇಳ್ಲಿಲ್ವಲ್ಲ" ಪ್ರಶ್ನಾರ್ಥಕವಾಗಿ ನೋಡಿದ

" ಪರವಾಗಿಲ್ಲ ‌. ನೀನು ನನ್ನ ಡ್ಯಾಡ್ ಆಗಿರುವಾಗ, ನಾನು ನಿನ್ನ ಅಮ್ಮ ಅಂದ್ಕೋ" ಎನ್ನುತ್ತಲೇ ತುತ್ತು ಬಾಯಿಗಿಟ್ಟಳು

ಅವನಿಗೇನೋ ಅನುಮಾನ. "ನಾನು ಪರಿ ಮಾತಾಡುವಾಗ ಏನಾದರೂ ಕೇಳಿಸಿಕೊಂಡೆಯಾ? ಅಥವಾ ಪರಿ ಏನಾದರೂ ಹೇಳಿದ್ರಾ? 

"ಇಲ್ವಲ್ಲ. ಯಾಕೆ? ನನ್ನ ಬಗ್ಗೆ ಏನಾದರೂ ಹೇಳ್ತಿದ್ದೇಯಾ?" ಹುಬ್ಬು ಗಂಟಿಕ್ಕಿದಳಾಕೆ.

ಏನಿಲ್ಲವೆಂದು ತಲೆ ಅಲ್ಲಾಡಿಸಿ ತುತ್ತು ಬಾಯಿಗಿಟ್ಟ‌. 

' ಮನಸ್ಸಲ್ಲಿ ಇಷ್ಟೆಲ್ಲಾ ನೋವಿದ್ದರೂ ಅದ್ಹೇಗೋ ನಗ್ತಿಯಾ ನೀನು? ನನಗೂ ಸ್ವಲ್ಪ ಕಲಿಸೋ ನಿನ್ನ ಹಾಗೆ ಬದುಕುವುದನ್ನ.... ನನ್ನ ದೃಷ್ಟಿಯಲ್ಲಿ ನಿನ್ನ ಬೆಲೆ ಇನ್ನೂ ಹೆಚ್ಚಾಗಿ ಹೋಯ್ತು ಕಣೋ ಇವತ್ತು. ನಿನ್ನ ಬಗ್ಗೆ ಎಲ್ಲಾ ಗೊತ್ತು ಅಂತ ಹೇಳಿದರೆ ಅನುಕಂಪ ದಾರ್ಷ್ಯ ಅಂದುಕೊಳ್ತಿಯ. ಅದೇ ಕೋಪದಲ್ಲಿ ನನ್ನಿಂದ ದೂರಾದರೇ? ಸಹಿಸಿಕೊಳ್ಳಲು ಆಗಲ್ವೋ!! ಕಿತ್ತಾಡಿಕೊಂಡರೂ ಸರಿ ಜೀವನಪೂರ್ತಿ ನಿನ್ನ ಜೊತೆಗೆ ಇರ್ಬೇಕು ಅಂತ ಅನ್ನಿಸ್ತಿದೆ. ನಿನ್ನ ಮನಸ್ಸಿನ ಆಳದಲ್ಲಿರೋ ನೋವಿನಲ್ಲಿ ನನಗೂ ಪಾಲುಬೇಕು ಕಣೋ ಹಿಟ್ಲರ್' 

ಆಕೆ ಮನಸ್ಸಲ್ಲಿ ಮಾತಾಡುತ್ತ ಪೂರ್ತಿ ಅವನಿಗೇ ತಿನ್ನಿಸತೊಡಗಿದ್ದಳು. ಆ ಭಾವ ಅನುಭವ ಹೊಸತು ಅವನಿಗೆ. ಆ ಸ್ಪರ್ಶ ಅನುಭೂತಿ ಹೊಸತು ಅವನಿಗೆ. ತನ್ಮಯನಾಗಿದ್ದನಾತ. 

ಅದೇ ವೇಳೆ ಎಫ್ ಎಂ ನಲ್ಲಿ ಕಿಸ್ಮತ್ ಮೂವಿಯ ಹಾಡೊಂದು ಗುನುಗುತ್ತಿತ್ತು...

"ಪ್ರೀತಿಯಲ್ಲೊಂದನೇ ತರಗತಿ ಈಗ ನಾನಾದೇ
ಮಾತಿಲ್ಲದೇ ಮೂಗನ ಮಾಡಿದೆಯಲ್ಲೇ
ಎಲ್ಲೇ ಹೋದರೂ ನಿನ್ನ ಲೀಲೆ ನನ್ನ ಮೇಲೆ
ಕಾಣೆಯಾದೆನು ನಾ ನಿಂತಲ್ಲೇ.. 

ಒಲವೆಂದರೆ ಸ್ವಲ್ಪಾನೂ ಆಸಕ್ತಿ ಇರಲಿಲ್ಲ
ಈ ಕಣ್ಣಿಗೆ ನೀ ಬೀಳುವ ಮುನ್ನ
ನೀ ಬಂದ ಕ್ಷಣದಿಂದ ಮರುಜನ್ಮ ಬಂತೇನೋ
ನಾನೀಗ ಸಂಪೂರ್ಣ ಭಿನ್ನ‌.." 


                          ********

ಹರ್ಷನ ಮುಂದೆ ಪ್ರಸನ್ನನ ಬಗ್ಗೆ ತನಗೆ ತಿಳಿದ ಮಾಹಿತಿಯನ್ನು ಪೂರ್ಣ ಅರುಹಿದಳು ಪರಿ. ಎಲ್ಲಾ ಕೇಳಿದ ಹರ್ಷ..

"ಹ್ಮಾ ನನಗೂ ಗೊತ್ತು!!" ವಿವಶವಾಗಿ ಹೇಳಿದ.

"ಯಾವಾಗ?" ಆಶ್ಚರ್ಯಗೊಂಡಳಾಕೆ.

"ಮುಂಬೈನಲ್ಲೇ... ಅರುಣಾ ಅವರನ್ನು ನೋಡಿದ ದಿನ ತುಂಬಾ ಅಪ್ಸೆಟ್ ಆಗಿದ್ದ. ಒತ್ತಾಯ ಮಾಡಿ ಕೇಳಿದೆ ಎಲ್ಲಾ ಬಾಯ್ಬಿಟ್ಟ ಇಡಿಯಟ್! ಯಾರನ್ನೂ ಈಜಿಯಾಗಿ ನಂಬೋದಿಲ್ಲ. ಒಳಗೊಳಗೆ ಕೊರಗ್ತಾನೆ. ಐ ಹೋಪ್ ಇವತ್ತು ಮಾನ್ವಿ ಮನಸ್ಸು ಬದಲಾಗಿರುತ್ತೆ" 

"ಮಾನ್ವಿ ಮನಸ್ಸು ಬದಲಾಗುತ್ತಾ?  ಯಾಕೆ?" 

"ಅವನ ಬದುಕಿನ ಕಹಿ ಸತ್ಯವನ್ನ ಕೇಳಿದ್ದಾಳಲ್ಲ ಅದಕ್ಕೆ! 
ಮಗ ಬದುಕಿಲ್ಲ ಅಂದಾಕ್ಷಣ ಅರುಣಾ ಅವರು ಒಂದು ಕ್ಷಣನೂ ನಿಲ್ಲಲಿಲ್ಲ. ಅವರು ಹೋಗುತ್ತಿದ್ದ ಹಾಗೆ ಮಾನ್ವಿ ಆಕಡೆಗೆ ಬಂದು ನಿಂತಿದ್ದನ್ನು ನೋಡಿದೆ. ಬಹುಶಃ ಕೇಳಿದ್ದಾಳೆ ಅನ್ಸುತ್ತೆ" 

"ಆದರೂ ಪ್ರಸನ್ನನ ನಿರ್ಧಾರ ತಪ್ಪಲ್ಲವಾ?" 

"ಅವರವರ ಬದುಕನ್ನು ಅವರ ದೃಷ್ಟಿಯಲ್ಲಿ ನೋಡಿದಾಗಲೇ ಅವರ ಸಮಸ್ಯೆ ಗೊತ್ತಾಗೋದು. ನನಗೂ ಅವನ ನಿರ್ಧಾರ ಸರಿ ಅನ್ಸುತ್ತೆ! 
ಎಷ್ಟು ವಿಚಿತ್ರ ನೋಡು... ಅವತ್ತು ಮರ್ಯಾದೆಗೆ ಹೆದರಿ ಯಾವ ಮಗುವನ್ನು ದೂರ ತಳ್ಳಿದರೋ , ಇವತ್ತು ಅದೇ ಮಗುವನ್ನು ಸಮಾಜದ ಎದುರಿಗೆ   ಹುಡುಕಿಕೊಂಡು ಬಂದಿದ್ದಾರೆ‌. ಎಲ್ಲಾ ತಮ್ಮ ಅನುಕೂಲಕ್ಕೆ ತಕ್ಕಂತೆ!  ಕ್ಷಣಕ್ಕೊಮ್ಮೆ ಬದಲಾಗೋ ಇಂತಹ ಮನಸ್ಥಿತಿಯವರ ಮಧ್ಯೆ ಬದುಕು ಕಷ್ಟ ಕಣೇ.. ದೂರ ಇರೋದೆ ಒಳಿತು" ನಿಟ್ಟುಸಿರು ಬಿಟ್ಟ.

"ನಿನ್ನ ಮುಂದೆ ನಿಜ ಹೇಳಿ ನನಗ್ಯಾಕೆ ಅರುಣಾ ಅವರ ಮಗ ನನ್ನ ಸ್ನೇಹಿತ ಹಾಗೆ ಹೀಗೆ ಎಂದು ಕಥೆ ಕಟ್ಟಿದ್ದರೋ?" 

"ಹುಡುಗಿಯರ ಮುಂದೆ ಯಾವ ಗುಟ್ಟು ಗುಟ್ಟಾಗಿ ಉಳಿಯಲ್ಲ ಅನ್ನೋ ಸತ್ಯ ಅವನಿಗೂ ಗೊತ್ತಿತ್ತೇನೋ" ನಗುತ್ತ ಜಾಗ ಖಾಲಿ ಮಾಡಿದ. ಅವಳಿಂದ ಬೀಸಿ ಬಂದ ದಿಂಬು ಅವನ ಬೆನ್ನು ತಟ್ಟಿ ಮತ್ತೊಂದು ಇರುಳ ಕದನಕ್ಕೆ ನಾಂದಿ ಹಾಡಿತು.

                 ***********


ದಿನಗಳು ಸರಿದು ಹೋಗುತ್ತಲೇ ಇದ್ದವು. ಬದುಕು ಹರಿಯುವ ನದಿಯಾಗಿತ್ತು. ಭಾವನೆಗಳು ಬದಲಾಗುತ್ತ ಹೋದವು. ಮಾನ್ವಿ ದಿನೇದಿನೇ ಪ್ರಸನ್ನನ ಅವಿಭಾಜ್ಯಳಾಗುತ್ತ ಸಾಗಿದಳು. ಅವನ ಇಷ್ಟ ಕಷ್ಟಗಳ ಕಾಳಜಿ ವಹಿಸಿದಳು‌. ಹವ್ಯಾಸ ಅಭಿರುಚಿ ಉಡುಗೆ ತೊಡುಗೆ ಮಾತನಾಡುವ ಭಾಷೆ ಕೂಡ ಅಚ್ಚಕನ್ನಡವಾಗಿ ಮಾರ್ಪಟ್ಟಿತು. ಅವನ ಕೆಲಸ ಕಾರ್ಯ ಊಟ ನಿದ್ರೆ, ಆಶ್ರಮ ಅಲ್ಲಿಯ ಮಕ್ಕಳು ಅವನ ಸರ್ವಸ್ವ ಅವಳ ಸ್ವಂತದ್ದೆಂದು ಭಾವಿಸಿದಳು.. ಅವನ ಕನಸುಗಳಿಗೆ ರೆಕ್ಕೆಯಾದಳು. ಅವಳ ವರ್ತನೆ ಒಳಗೊಳಗೆ ಖುಷಿ ಕೊಟ್ಟರೂ ಪ್ರಸನ್ನನ ಮುಖದ ಮೇಲೆ ಅದೇ ಗಂಭೀರತೆಯ ಪ್ರದರ್ಶನ‌. ಕದನಗಳಿಗೆ ಈಗಲೂ ವಿರಾಮವಿಲ್ಲ. ಪ್ರತಿ ಕೆಲಸಕ್ಕೂ ಮೊದಲ ಟಾಸ್ ಹಾಕುತ್ತಾರೆ. ಸೋತವರು ಕೆಲಸ ಮಾಡುವ ಪ್ರತೀತಿ. ಆದರೆ ಇಬ್ಬರ ಚಾಣಾಕ್ಷ ಬುದ್ದಿಯಿಂದ ಕೆಲವೊಮ್ಮೆ ನಿಯಮ ಪಾಲನೆ ಆಗುವುದೇ ಇಲ್ಲ.

ಅದೊಂದು ಸಂಜೆ ಪ್ರಸನ್ನ ಸ್ನಾನ ಮುಗಿಸಿ ಆಚೆ ಬಂದಾಗ ಮಂಚದ ಮೇಲೆ ಒಂದು ಪತ್ರವನ್ನು ಕಂಡ. ಸುತ್ತಲೂ ಮಾನ್ವಿ ಎಲ್ಲೂ ಕಾಣಲಿಲ್ಲ. ತೆರೆದು ಓದಿದ....


ಸ್ವಾತಿಮುತ್ತಿನಂಥ ಹುಡುಗನಿಗೆ...

ದಿಕ್ಕು ದೆಸೆಯಿಲ್ಲದೆ ಅಲೆಯುತ್ತಿದ್ದ ಗಾಳಿಪಟ ದಂತ ಬದುಕಿಗೆಲ್ಲಿ ತಿಳಿದಿತ್ತು ಇದರ ಗಮ್ಯ ನೀನೆಂದು... ಎದುರು ಸಿಕ್ಕಾಗ ಘಟಿಸಿದ್ದು ಬರೀ ಕದನ ಇರಿಸು ಮುರಿಸು‌.. ಅದರಲ್ಲೂ ಒಂದು ಸಂತೃಪ್ತಿ ಇತ್ತು. ಮಾಸದ ಸೊಗಸಿತ್ತು.. ನಿನ್ನ ಅಂತರಾಳಕ್ಕೆ ನಾ ಇಳಿಯಲಿಲ್ಲ. ನನ್ನ ಭಾವನೆಗಳಿಗೆ ನೀ ಸ್ಪಂದಿಸಲಿಲ್ಲ.ಆದರೂ ನವಿರಾದ ಸಲ್ಲಾಪವಿತ್ತು. ಮೌನವಾಗೇ ಕರಗಿ ಹೋದ ಅದೆಷ್ಟೋ ಸಂತಸದ ಘಳಿಗೆಗಳ ಪರ್ಯಾಯಕ ದ್ವಂದ್ವಗಳನ್ನು ಇಂದಿಗೂ ಹಳಿಯುತ್ತೇನೆ ನಾನು. 'ಛೇ, ಒಂದೊಳ್ಳೆ ನೆನಪಿನ ಹೊತ್ತಿಗೆ ಬರೆಯುವ ಮುನ್ನವೇ ಭಗ್ನವಾಯಿತಲ್ಲ' ಎಂದು. ಅದೆಷ್ಟು ಜಗಳಾಡಿ ಬಿಡುತ್ತಿದ್ದೆವಲ್ಲ ಚಿಕ್ಕ ಮಕ್ಕಳ ಹಾಗೆ.. 

ಆದರೀಗ ಮನಸ್ಸು ಮಾಗಿದೆ ಕಣೋ ಹುಡುಗ. ನೀನು ಬೇಕು. ನೀನು ಬೇಕೇ ಬೇಕು ಎನ್ನಿಸುವಷ್ಟು.‌ 

ಒಂದೊಮ್ಮೆ 'ನಿನ್ನನ್ನ ಕೊಂದು ಬಿಡ್ತಿನಿ' ಎಂದು ರಾಜಾರೋಷವಾಗಿ ಕೂಗಿ ಕಿರುಚಿದ್ದ ಧ್ವನಿ ಇಂದು 'ಲೋ ಹುಡುಗ ನಿನ್ನನ್ನು ಸಾಯುವಷ್ಟು ಪ್ರೀತಿಸ್ತೀನಿ ಕಣೋ' ಎಂದು ಪಿಸುಗುಡಲು ಹಿಂದೇಟು ಹಾಕುತ್ತದೆ ಯಾಕೋ! 

ನಿಗಿನಿಗಿ ಕೆಂಡ ಕಾರುತ್ತಿದ್ದ ಕಣ್ಣುಗಳು ನಾಚಿಕೆಯ ಗರಿ ಹೊದ್ದು ನಿನ್ನನ್ನು ಅರಸುತ್ತಿವೆ ಯಾಕೋ! ಎದೆಗೂಡಲ್ಲಿ ಅವಿತಿಟ್ಟ ಪುಟ್ಟ ಪುಟ್ಟ ಕನಸಿನ ಹಕ್ಕಿಗಳನ್ನು ನಿನ್ನೆದುರು ಹರವಿ ಬಿಡಬೇಕು ಎನಿಸುತ್ತಿದೆ ಯಾಕೋ! ಚೂರೂ ಇಷ್ಟವಾಗದ ನಿನ್ನ ಹೆಸರನ್ನು ರಾಗವಾಗಿ ಗುನುಗುವ ಚಟವಾಗಿದೆ ಯಾಕೋ! ಗೊತ್ತಿಲ್ಲದೆ ಅಚಾನಕ್ಕಾಗಿ ಹರಿಹಾಯ್ದ ಎದೆಗೊಮ್ಮೆ ಮುದ್ದಾಗಿ ಗುಮ್ಮಬೇಕಿದೆ ಯಾಕೋ! ಗಾಂಭೀರ್ಯವೇ ಗೊತ್ತಿರದ ಹಣೆತುಂಬ ಹರಡಿರುವ ನಿನ್ನ ತುಂಟ ಕೂದಲನ್ನು ಸವರುವ ಮನಸ್ಸಾಗಿದೆ ಯಾಕೋ! 

ಯಾರನ್ನು ಹಚ್ಚಿಕೊಳ್ೞದ ನಿನ್ನ ಒರಟು ಮನಸ್ಸಲ್ಲಿ ಪ್ರೀತಿ ಅಭಿಸಾರಕಿಯಾಗಿ ಮೆರೆಯುವಾಸೆಯಾಗಿದೆ ಯಾಕೋ! 
ಕನ್ನಡಿಯಲ್ಲಿ ನೀ ಎದುರಾಗಿ ನನ್ನದೇ ನೋಟ ಮಸುಕಾಗಿದೆ ಯಾಕೋ!
ಯೋಗ್ಯತೆ ಮೀರಿದ ಖುಷಿಯನ್ನು ಕೊಟ್ಟು ಬಿಟ್ಟೆ ಕಣೋ ಹುಡುಗ! ಹೇಗೋ ಹೇಳಲಿ ನಿನಗೆ?  ಈ ಖುಷಿ ನನಗೆ ನನ್ನ ಬದುಕಿನ ಕೊನೆಯವರೆಗೂ ಜೊತೆಗೆ ಇರಬೇಕು ಎಂದು. 

ನಾ ಏನನ್ನೂ ಹೇಳುವುದಿಲ್ಲ. ಮೌನದಲ್ಲೇ ಮನಸ್ಸನ್ನು ಓದಿಬಿಡು. ಕಣ್ಣಲ್ಲೇ ಉತ್ತರವ ತಿಳಿಸಿಬಿಡು‌. ಹೇಳು... ಬಾಳಪೂರ್ತಿ ಜೊತೆಗೆ ಇರುತ್ತಿಯಲ್ಲವಾ? 

ಇಂತಿ
ನಿನ್ನ ಪಾಲಿನ ಮುದ್ದು ರಾಕ್ಷಸಿ :) 




ಓದಿದವನ ತುಟಿಯಂಚಲ್ಲೊಂದು ಕಿರುನಗು. ತೋರಿದರೆ ಸೋಲುವ ಭಯ. ನಟನೆಯ ಮುಖವಾಡ ಹೊತ್ತು ಹೊರಬಂದ. ಮಾನ್ವಿ ಎಲ್ಲೂ ಕಾಣಲಿಲ್ಲ. 

"ಓಯ್ ಕೊಲೆಸ್ಟ್ರಾಲ್..." ಕೂಗಿದ. ಪ್ರತ್ಯುತ್ತರವಿಲ್ಲ.
"ರೋಹಿತ್ ಮತ್ತೊಂದು ಅವಾಂತರ ಮಾಡಿದ್ದಾನೆ ನೋಡಿಲ್ಲಿ. ನಿನ್ನ ಹೆಸರಲ್ಲಿ ಪ್ರೇಮ ಪತ್ರ. ಅದೂ ಅಚ್ಚಕನ್ನಡದಲ್ಲಿ.  ಇವನಿಗೆ ಒಮ್ಮೆ ಕ್ಲಾಸ್ ತೆಗೆದುಕೊಳ್ಳಲೇಬೇಕು" ಪೋನ್ ಕೈಗೆತ್ತಿದ

"ಹಲೋ.. ಅದನ್ನ ಬರ್ದಿದ್ದು ನಾನೇ" ಬಾಗಿಲಿಗೊರಗಿ ಕೈ ಕಟ್ಟಿ ನಿಂತಿದ್ದಳು ಮಾನ್ವಿ‌. ಎತ್ತಲೋ ನೋಡುತ್ತಾ ಹೇಳಿದಳು

"ನಿನ್ನ ಮುಖಕ್ಕೂ ಈ ಬರವಣಿಗೆಗೂ ಹೋಲಿಕೆ ಕಾಣ್ತಿಲ್ವಲ್ಲ." ಹುಬ್ಬೇರಿಸಿದ. 

"ಹೋಲಿಕೆಯಿಂದ ಏನಾಗಬೇಕಿದೆ ಈಗ? Come to the point.  ಅದರಲ್ಲಿ ಇರೋದು ಒಕೆ ತಾನೇ?" 

"ಏನಿದೆ ಇದರಲ್ಲಿ? ಯಾವ ಪುಸ್ತಕದಿಂದ ಕದ್ದೇ ಈ ಸಾಲುಗಳನ್ನು " ಮತ್ತೂ ಕೆಣಕಿದ

"ಅದು ನಾನೇ ಬರೆದಿದ್ದು. ಸ್ವಂತ.. ನನ್ನ ಭಾವನೆಗಳವು.. ಕೊನೆಯವರೆಗೂ ಜೊತೆಗೆ ಇರ್ತಿಯಾ ತಾನೇ? ಮಧ್ಯೆ ದಾರಿಯಲ್ಲಿ ಕೈ ಬಿಟ್ಟರೆ ಸಾಯಿಸಿಬಿಡ್ತಿನಿ " ಹುಸಿ ಕೋಪದಿಂದ ನುಡಿದಳು.

"ಇದರಲ್ಲಿ ಕೇಳೋದೇನಿದೆ? ಜೊತೆಗೆ ಇರಲೇಬೇಕಲ್ಲ.. ಪ್ಚ್.. ತಪ್ಪದ ಶಿಕ್ಷೆ"  ಮುಖ ಸಪ್ಪೆ ಮಾಡಿದ. ಅವನ ಹೊಟ್ಟೆಗೊಂದು ಗುಮ್ಮಿದ ಮಾನ್ವಿ ಅವನನ್ನು ಇಡಿಯಾಗಿ ಬಿಗಿದಪ್ಪಿದಳು.

"ಈ ಮನೆ ತುಂಬಾ ಚಿಕ್ಕದು‌. ನನಗೆ ನಿನ್ನ ಮನಸ್ಸಲ್ಲಿ ಜಾಗ ಬೇಕು. ಕೊನೆವರೆಗೂ ಹೀಗೆ ನಿನ್ನ ತೋಳಿನ ಬಿಸಿ ಅಪ್ಪುಗೆಯಲ್ಲಿ ಬದುಕನ್ನ ಸವಿಬೇಕು. ಇಷ್ಟೇ ಬೇಕಿರೋದು" 

"ಹ್ಮಾ... ಹ್ಮಾ.. ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ತಥಾಸ್ತು ಭಕ್ತೆ!! " ಅವಳ ತಲೆ ನೇವರಿಸಿದ. 
"ಅಂದಹಾಗೆ,, ಯಾವ ಮೂವಿ ಡೈಲಾಗ್ ನೀ ಹೇಳಿದ್ದು?!" ಅವನ ನಗುವಿಗೂ ಆಸ್ಪದವಿಲ್ಲದಂತೆ ಆಕೆ ಇನ್ನೂ ಬಿಗಿಯಾಗಿ ಅಪ್ಪಿದಳು.

'ನಿನ್ನ ಮುಂಗುರುಳಿಂದ ಶುರುವಾಗಿ ನಿನ್ನ ಮುಂಗುರಳಲ್ಲೇ ಕೊನೆಯಾಗುವ ನನ್ನ ದೃಷ್ಟಿ ದೋಷಕ್ಕೆ ಒಂದು ಇಡೀ ಜೀವನವೇ ಸರ್ವನಾಶವಾಗಿ ಹೋಯ್ತಲ್ಲೇ ರಾಕ್ಷಸಿ.. ನನಗೂ ಅಷ್ಟೇ.. ಇಷ್ಟೇ ಬೇಕಿರೋದು' ಮನಸ್ಸಲ್ಲಿ ಗುನುಗುತ್ತ ಪರವಶನಾದ.


ಅಷ್ಟೇ ಅಷ್ಟೇ ಜೀವನ... :)


ಪ್ರಸನ್ನನ ಪ್ರೇಮ್ ಕಹಾನಿ ಶುರುವಾದ ನಂತರ ಬೆಟ್ಟಿಂಗ್ ಸೋತ ಸೈಂಟಿಸ್ಟ್ ರೋಹಿತ್ ಪಾಡು ಏನಾಗಿರಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟದ್ದು.. :D 


                     ----     ಇತಿ ಶುಭಂ   ----


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತನ್ನ

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ಮುಗುಳ್ನಕ್ಕಳು ಪರಿ.