ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ- 54




ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ. 

ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ

"Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ. 

" ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ.

"ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ.

" ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?" 

"ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. "

" irresponsible fellow. ಸರಿಯಾಗೇ ಮಾಡಿದ್ದಾರೆ ಇವನಿಗೆ" ಶ್ರಾವ್ಯ ಉಗಿದಳು

" ನ್ಯೂಸ್ ಚಾನೆಲ್ ನೋಡಿದ್ದಿಯಾ ತಾನೇ?! ಎಂ.ಆರ್ ಹಾಸ್ಪಿಟಲ್ ಕರ್ಮ ಕಾಂಡವನ್ನು ! ಆಸ್ತಿಗಾಗಿ ಉದ್ದೇಶ ಪೂರ್ವಕವಾಗೇ ಹರ್ಷನನ್ನು ಸತ್ತಿರೋ ಹಾಗೆ ಡಾಕ್ಯುಮೆಂಟ್ ಸೃಷ್ಟಿಸಿದ್ದು. ಇವನೇನು ಹಾಗೆ ಬೇಕೂಂತ ಮಾಡಿದ್ದಲ್ಲ, ಏನೋ ಆಕಸ್ಮಿಕವಾಗಿ ನಡೆದಿದೆಯಷ್ಟೇ! "ರೋಹಿತ್ ಪರವಾಗಿ ಮಾತನಾಡಿದ ಧೃವ.

ಮಾನ್ವಿ ಕೆನ್ನೆಗೆ ಛಟೀರನೇ ಬಾರಿಸಿದಷ್ಟೇ ಆಘಾತವಾಯಿತು. 


"ತಪ್ಪು ಮಾಡಿರೋ ವ್ಯಕ್ತಿಗೆ ಶಿಕ್ಷೆ ಕೂಡ ಆಯ್ತಲ್ಲ ಅದನ್ನು ನೋಡಲಿಲ್ವಾ. ಅದರಲ್ಲಿ ಎಂ.ಆರ್ ಹಾಸ್ಪಿಟಲ್ ತಪ್ಪಾಗಲಿ, ರಘುನಂದನ್ ರೈ ಅವರ ತಪ್ಪಾಗಲಿ ಇರಲಿಲ್ಲ.  ಯಾರದೋ ತಪ್ಪಿಗೆ ಇನ್ಯಾರನ್ನೋ ಹೊಣೆ ಮಾಡೋದು ಕೂಡ ಯಾವುದೇ ಅಪರಾಧಕ್ಕಿಂತ ಕಡಿಮೆ ಏನಲ್ಲ. Drop it here.
ಇವಳು ನನ್ನ... ಅರ್ಧಾಂಗಿ ಡಾ.ಮಾನ್ವಿ.‌." ಪರಿಚಯಿಸಿದ. 

"ಗುಡ್ ಮಾರ್ನಿಂಗ್ ಮ್ಯಾಮ್. ಕಂಗ್ರಾಜುಲೇಷನ್ ನಿಮಗೂ"

"ಥ್ಯಾಂಕ್ಸ್.." ತನ್ನ ತಂದೆಯ ಪರ ವಹಿಸಿಕೊಂಡ ಪ್ರಸನ್ನನನ್ನು ಮನಸ್ಸಲ್ಲೇ ಮೆಚ್ಚಿದಳು ಮಾನ್ವಿ.



ಒಳಗಡೆ ಹೋಗುತ್ತಿದ್ದಂತೆಯೇ  ಸಿಬ್ಬಂದಿಗಳಿಂದ ಅಭಿನಂದನೆಗಳ ಧಾರಾಕಾರ ಪ್ರವಾಹ. ಬ್ರಹ್ಮಚಾರಿ ಪ್ರಸನ್ನನ ಜೀವನಕ್ಕೆ ಕಡಿವಾಣ ಬಿದ್ದದ್ದು ಕೆಲವು ಸಂಗಡಿಗರಿಗೆ ಸಂತಸದ ವಿಷಯವಾಗಿದ್ದರೆ ಇನ್ನೂ ಕೆಲವು ಹಿಂಬಾಲಕಿಯರಿಗೆ ಮಾತ್ಸರ್ಯದ ವಿಚಾರವಾಗಿತ್ತು. ಅದೂ ರಘುನಂದನ್ ರೈ' ನಂತಹ ಪ್ರತಿಷ್ಠಿತರ ಮಗಳು ಮಾನ್ವಿ ಜೊತೆಗೆ ಎನ್ನುವ ಹೆಗ್ಗಳಿಕೆಯಿಂದಾಗಿ ಎಲ್ಲರ ಕುತೂಹಲ ಅವರ ಮೇಲೆ ಕೇಂದ್ರಿಕೃತವಾಗಿತ್ತು. 

ಕಂಗ್ರಾಟ್ಸ್.. ಥ್ಯಾಂಕ್ಸ್... ಕಂಗ್ರಾಟ್ಸ್.. ಥ್ಯಾಂಕ್ಸ್... ಹಾವಳಿಗಳ ಮಧ್ಯೆ ಮಾತಿನ ಭರದಲ್ಲಿ ಯಾರೋ ಕೇಳಿದರು 
"ಮದುವೆಗಂತೂ ಆಮಂತ್ರಿಸಲಿಲ್ಲ. ಈಗಲಾದರೂ ವಿಜೃಂಭಣೆಯಿಂದ ಹೋಟೆಲ್ಲೊಂದರಲ್ಲಿ  ಪಾರ್ಟಿ ಕೊಡಿಸಲೇಬೇಕು ಡಾ.ಪ್ರಸನ್ನ" 

 ಮದುವೆಯಾದದ್ದೇ ದೊಡ್ಡ ಅನ್ಯಾಯ ಎಂದುಕೊಳ್ಳುತ್ತಿದ್ದ ಪ್ರಸನ್ನನಿಗೆ ಅದಕ್ಕಾಗಿ ಮತ್ತೊಂದು ವೆಚ್ಚದ ಪಾರ್ಟಿ ವ್ಯರ್ಥ ಎನಿಸುವುದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ. ಆದರೆ ಹಾಗೆಂದು ನೇರಾನೇರ ಹೇಳಲಾಗದು ನೋಡಿ.. ಅದಕ್ಕೆ ಚೂರು ತೇಪೆ ಹಚ್ಚಿದ್ದ.

"Yeah yeah sure, ಪಾರ್ಟಿ ಎಲ್ಲಾ ಯಾಕೆ? ನನ್ನ ಮಿಸೆಸ್ ಭಾರಿ ರುಚಿಯಾಗಿ ಅಡಿಗೆ ಮಾಡ್ತಾಳೆ ಗೊತ್ತಾ.. ಈ ಭಾನುವಾರ ನಮ್ಮನೆಯಲ್ಲೇ ಒಂದು ಭರ್ಜರಿ ಔತಣ ಇಟ್ಟುಕೊಂಡು ಬಿಡೋಣ. ಒಕೆ ಅಲ್ವಾ ಮಾನು..." ಅವಳ ಭುಜ ಬಳಸಿದ.

ಇನ್ನು ಜವಾಬ್ದಾರಿ ಎಲ್ಲಾ ಮಾನ್ವಿಯ ಹೆಗಲ ಮೇಲೆ ಬಿದ್ದಿತು. ಅವಳು ಗೊಂದಲದಲ್ಲಿ 'ಹ್ಮಾ ಹ್ಮೂ..'  ಎಂದು ನಗುತ್ತಾ ತಲೆದೂಗಿದಳಾದರೂ ಒಳಗೊಳಗೆ ಕೋಪ ನೆತ್ತಿಗೇರಿತ್ತು. 

ಯಾರಿಗೂ ಕಾಣದಂತೆ ಅವನ ಮುಂಗೈಯ ಚಿವುಟಿ "ಭಾರಿ ರುಚಿಯಾದ ಅಡುಗೆ ಮಾಡ್ತಿನಲ್ವ ನಾನು.. ಇವತ್ತು ನಾನೇ ಅಡುಗೆ ಮಾಡಿ, ನನ್ನ ಕೈ ರುಚಿ ಮೊದಲು ನಿನಗೇ ತಿನ್ನಿಸ್ತೇನೆ. " ಸಿಡಿಮಿಡಿಯಿಂದ ಪಿಸುಗುಟ್ಟಿದಳು.

'ಇವತ್ತೇ ನನ್ನ ಕೊನೆಯ ದಿನ ಎನಿಸುತ್ತೆ!!' ಅವನ ಅಂತರಾತ್ಮ ಎಚ್ಚರಿಸಿತು. 

ಎದುರುಗೊಂಡ  ದಿ ಗ್ರೇಟ್ ಸೈಂಟಿಸ್ಟ್ ರೋಹಿತ್ ವಿಷ್ ಮಾಡಿ, ಮಾನ್ವಿಯೆಡೆ ನೋಡಿ

"Good morning mrs .ಪ್ರ‌ಸನ್ ಕ್ಷಮಿಸಿ... ಮ್ಯಾಮ್!" ತಿದ್ದಿದ
"ನಮ್ಮ ಆಸ್ಪತ್ರೆಗೆ ನಿಮಗೆ ಸ್ವಾಗತ ಸುಸ್ವಾಗತ.. ಸರ್ ನಾನು ಇವರಿಗೆ ಡೀನ್ ಕ್ಯಾಬಿನ್ ತೋರಿಸ್ತೇನೆ ನೀವು ಹೊರಡಿ.. " ಪ್ರಸನ್ನನಿಂದ ಅಗಲಿಸಿ ಕರೆದುಕೊಂಡು ಹೊರಟ‌. 

ಅವಳಿಗೆ ಆಸ್ಪತ್ರೆಯ ಕುರಿತು ಮಾಹಿತಿ ನೀಡುತ್ತಾ ತಾನು ಬಂದ ಕಾರ್ಯವನ್ನು ಸಾಧಿಸಿ ಹೊರಟಿದ್ದ‌. 


****************

ಅಂದು ಸಂಜೆ: 


"ನನ್ನ ಮಿಸೆಸ್ ಭಾರಿ ರುಚಿ ಅಡುಗೆ ಮಾಡ್ತಾಳೆ. ಓಹ್..." ಪ್ರಸನ್ನನ ಶೈಲಿಯಲ್ಲಿ ಅಣುಗಿಸಿದ ಮಾನ್ವಿ
ಆಸ್ಪತ್ರೆಯಲ್ಲಿ ಎಲ್ಲರೆದುರಿಗೆ ಹಾಗೆ ಹೇಳುವ ಅವಶ್ಯಕತೆ ಏನಿತ್ತು?" ಸಿಡುಕಿದಳು.

"ಇನ್ನೇನು ಮತ್ತೆ, ಫೈವ್ ಸ್ಟಾರ್ ಹೋಟೆಲ್ ಕರೆದುಕೊಂಡು ಹೋಗಿ ಪಾರ್ಟಿ ಕೊಡಿಸ್ಬೇಕಿತ್ತಾ..? ಹೋಗೆಲೇ ದುಡ್ಡು ಹಾಳು.." ಗೊಣಗಿದ‌.

"ನಿನ್ನ ಕಂಜೂಸ್ ಬುದ್ದಿ ಬಿಡೋದಿಲ್ಲ ಅಲ್ವಾ ನೀನು..! ಅದು ಸಾಲದು ಅಂತ ಅಡುಗೆ ಜವಾಬ್ದಾರಿ ನನ್ನ ಮೇಲೆ ಹೇರಿದ್ದೀಯಾ.. ನನಗೆ ಬೆಂಕಿ ಹಚ್ಚೋದಕ್ಕೂ ಬರಲ್ಲ‌. ಈಗ ನಾನೇನು ಮಾಡಬೇಕು?" 


"ಬೆಂಕಿ ಹಚ್ಚುವ ಅಗತ್ಯವೇ ಇಲ್ಲ ಬಿಡು, ನೀನೇ ಲಾವಾಗ್ನಿ ತರ ಇದ್ದೀಯ" ಅವಳಿಂದ ಬೀಸಿ ಬಂದ ಬುಕ್ ಒಂದನ್ನು ಕ್ಯಾಚ್ ಹಿಡಿದು ಮಾತು ಮುಂದುವರೆಸಿದ

"ನಿನಗೆ ಗೊತ್ತಿರೋ ಯಾವುದೋ ಒಂದು ರೆಸಿಪಿ ಮಾಡಿ ಬಡಿಸು. ತಿಂದು ಬದುಕಿದ್ರೆ ಅವರ ಪುಣ್ಯ. ಇಲ್ಲದಿದ್ದರೆ ಹೇಗಿದ್ದರೂ ಎಲ್ಲರೂ ಮರುದಿನ ಆಸ್ಪತ್ರೆಗೆ ಹೋಗಲೇಬೇಕು. ಡಾಕ್ಟರ್ ಬದಲು ಪೇಷಂಟಾಗಿ ಹೋಗಬೇಕಾಗಹುದು ಅಷ್ಟೇ!
ಹ್ಮಾ,, ಇದರಿಂದಾಗಿ ಇನ್ನೊಮ್ಮೆ ಯಾವತ್ತೂ ನನಗೆ ಪಾರ್ಟಿ ಕೊಡಿ ಅಂತ ಕೇಳುವ ದುಸ್ಸಾಹಸ ಖಂಡಿತ ಮಾಡಲ್ಲ ಅವರು." ಗಂಭೀರ ಯೋಜನೆ ತಿಳಿಸಿದ್ದ.


ಎಲ್ಲವನ್ನೂ ಮೌನವಾಗಿ ಕೇಳಿದ ಮಾನ್ವಿ ಕೊನೆಗೆ ಎದುರಿದ್ದ ತನ್ನ ಫೋನ್ ಎತ್ತಿಕೊಂಡು ಬಾಲ್ಕನಿಯತ್ತ ನಡೆದಳು.


"ಹ್ಮ್.. ಒಕೆ ಶ್ಯೂರ್." ಮಾತು ಮುಗಿಸುತ್ತ ಬಂದವಳೇ
"ಈ ಭಾನುವಾರ ಪರಿಗೆ ಬರಲು ಹೇಳಿದ್ದಿನಿ. ಅವಳು ನಾನು ಸೇರಿ ಏನೋ ಒಂದು ವ್ಯವಸ್ಥೆ ಮಾಡ್ತಿವಿ. ಈ ವಿಚಾರದಲ್ಲಿ ನೀನು ತಲೆ ಹಾಕುವ ಹಾಗಿಲ್ಲ ಒಕೆ.." ಕಟ್ಟಾಜ್ಞೆಯಾಯಿತು. ಅವನಾಗಲೇ ಪುಸ್ತಕದಲ್ಲಿ ಕಳೆದಿದ್ದ.

"ಏನಾದ್ರೂ ಮಾಡಿಕೊಂಡು ಹಾಳಾಗಿ ಹೋಗು.." ಆಶೀರ್ವದಿಸಿದ

"ಅದಕ್ಕಿಂತ ಮೊದಲು ಇದನ್ನು ಮನೆ ತರಹ ಕಾಣೋ ಹಾಗೆ ಮಾಡಬೇಕು. ನಾನು ಒಂದಷ್ಟು ಫರ್ನಿಚರ್ಸ್ ಮತ್ತೆ ಮೇಟಿರಿಯಲ್ ಆರ್ಡರ್ ಮಾಡಿದ್ದೀನಿ. " ಪ್ರಸನ್ನ ಏನೋ ಹೇಳಲು ಬಾಯಿತೆರೆದ

"ನೀನು ಮಾತಾಡಲೇ ಬೇಡ, ಅದೆಲ್ಲದಕ್ಕೂ ನಾನು ನನ್ನ ಸಂಬಳದಲ್ಲಿ ಪೇ ಮಾಡ್ತಾ ಹೋಗ್ತಿನಿ ಒಕೆ" 


"ಇನ್ನು ಸಂಬಳನೇ ಬಂದಿಲ್ಲ ಆಗಲೇ ಖರ್ಚು ಮಾಡಿ ಮುಗಿಸಿಬಿಟ್ಟಳು ರಾಕ್ಷಸಿ..!" ಗೊಣಗಿಕೊಂಡ.

                         --------

"ಸಸ್ಪೆಂಡ್ ಅವಧಿ ಮುಗಿದ ನಂತರ ನೀನು ಮತ್ತೆ ಆ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ." ಊಟ ಮಾಡುತ್ತಿರುವಾಗ ಹರ್ಷ ಹೇಳಿದ

"ಯಾಕೆ?" ಅಚ್ಚರಿಗೊಂಡಳು ಪರಿ

"ಹೇಳಿದೆನಲ್ಲ. ಬೇಡ ಅಂದ್ರೆ ಬೇಡ ಅಷ್ಟೇ. ಹೆಚ್ಚು ಪ್ರಶ್ನೆ ಕೇಳಬೇಡ" ಕಠೋರವಾಗಿ ಉತ್ತರಿಸಿ ಎದ್ದು ಹೋಗಿದ್ದ. 

ಹರ್ಷನ ವರ್ತನೆ ಏಕೋ ಭಿನ್ನವಾಗಿತ್ತು. ಯಾವುದೋ ಟೆನ್ಷನ್‌ಲ್ಲಿ ಹೀಗೆ ಹೇಳಿರಬಹುದು ಎಂದುಕೊಂಡು ಸುಮ್ಮನಾದಳು ಪರಿ.


                   *****************

ಮಧ್ಯಾಹ್ನ ಮೂರು ಗಂಟೆ ಸಮಯ :

ಪ್ರಸನ್ನ ರೌಂಡ್ಸ್ ಮುಗಿಸಿ ತನ್ನ ಕ್ಯಾಬಿನ್ ಕಡೆಗೆ ಹೊರಟಿದ್ದ. ಫೋನ್ ರಿಂಗ್ ಮೊಳಗಿತು. ಸ್ಕ್ರೀನ್ ಮೇಲೆ ಮಾನ್ವಿ ಹೆಸರು ನೋಡಿ  ಹುಬ್ಬು ಕಿರಿದಾಗಿಸಿ ಕರೆ ಸ್ವೀಕರಿಸಿದ್ದ. ದಿನ ರಾತ್ರಿ ಮನೆಯಲ್ಲಿ ಕಿತ್ತಾಡಿದ್ದು ಸಾಕಾಗಲಿಲ್ಲವೇ? ಎಂದು ಬಹಳಷ್ಟು ಚಂದವಾಗಿ ಬೈಯಬೇಕೆಂದುಕೊಂಡಿದ್ದವನು ಶಾಕ್ ನಿಂದ ಮೂಕವಿಸ್ಮಿತನಾಗಿ ನಿಂತಿದ್ದ.

ಆಕಡೆಯಿಂದ ಕೇಳಿದ್ದು ಒಂದೇ ವಾಕ್ಯದ ಪ್ರಶ್ನೆ. 
" ನಾನು ನಿನ್ನನ್ನ ಪ್ರೀತಿಸಬಹುದಾ?" ಮಾನ್ವಿಯ ಮೃದು ಧ್ವನಿ

ಇದೆಂತಹ ವಿಚಿತ್ರ ಪ್ರಶ್ನೆ? ಇದುವರೆಗೂ ಯಾರೂ ಯಾರನ್ನು ಅನುಮತಿ ಕೇಳಿ ಪ್ರೀತಿಸಿರಲಿಕ್ಕಿಲ್ಲ. ಅಷ್ಟಕ್ಕೂ ಮನೆಯಲ್ಲಿ ರಾದ್ದಾಂತ ಮಾಡಿ ಹೀಗೆ ಫೋನಿನಲ್ಲಿ ನಯವಾಗಿ ಪೀಠಿಕೆ ಹಾಕುತ್ತಿರುವವಳು ಅದೇ ರಾಕ್ಷಸಿಯಾ? ಇದಕ್ಕೆ ಏನೆಂದು ಉತ್ತರಿಸೋದು? ಪ್ರಸನ್ನ ಮೊಬೈಲ್ ಪಿಳಿಪಿಳಿ ನೋಡಿ ಹಣೆ ನೀವಿಕೊಂಡ.


"ಯಾವುದಾದರೂ ಗೋಡೆಗೆ ಬಲವಾಗಿ ಢಿಕ್ಕಿ ಹೊಡೆದೆಯಾ? ಅಥವಾ ಮೆಟ್ಟಿಲು ಜಾರಿ..."

" ನಾನು ಕೇಳಿದ ಪ್ರಶ್ನೆಗೆ ಉತ್ತರ ಸಿಗಲಿಲ್ಲ" 

"ಸಿಗೋದು ಇಲ್ಲ. ತಲೆ ಕೆಟ್ಟಿದೆ ನಿನಗೆ. ಒಂದೊಂದು ಕ್ಷಣಕ್ಕೆ ಒಂದೊಂದು ಹೊಸ ಅವತಾರ. ಕೆಲಸದ ಕಡೆಗೆ ಗಮನ ಹರಿಸು. " ಕರೆ ತುಂಡರಿಸಿ ಬಿಟ್ಟ.


ಸಂಜೆ ಬೈಕ್ ಹತ್ತಿ ಹೊರಟಾಗ ಅವಳನ್ನೇ ಗಮನಿಸುತ್ತಿದ್ದ ಪ್ರಸನ್ನ. ಅವಳು ಯತಾರೀತಿ ತನ್ನ ಬ್ಯಾಗ್ ಹೆಗಲಿಗೇರಿಸಿ, ಕೋರ್ಟ್ ಹಿಡಿದು, ಕೂದಲು ಸರಿಮಾಡಿಕೊಂಡು ಹೊರಡಲು ಸೂಚಿಸಿದಳು.

ಕಾಲ್ ಮಾಡಿ ಆ ರೀತಿ ಯಾಕೆ ಕೇಳಿರಬಹುದು? ಅದಾಗಲೇ ಪ್ರಸನ್ನನ ನೆಮ್ಮದಿಗೆ ಬೆಂಕಿ ಬಿದ್ದಾಗಿತ್ತು. ನೇರವಾಗಿ ಕೇಳಲು ಬಿಗುಮಾನ. ಅವಳಾಗಿಯೇ ವಿಷಯ ಪ್ರಸ್ತಾಪ ಮಾಡುವಳೇನೋ ಎಂದು ಕಾದು ನೋಡಿದ. ಊಹ್ಮೂ ಆಕೆ ಸಹಜವಾಗಿಯೇ ಇದ್ದಳು..


ಇವಳಿಗೆ split personality ಅಥವಾ ಮರೆವಿನ ಕಾಯಿಲೆ ಏನಾದರೂ ಇದೆಯಾ? ದಾರಿಯಲ್ಲಿ ಅವನ ಯೋಚನೆ ಎಲ್ಲಿಂದ ಎಲ್ಲಿಗೋ ಸಾಗಿತ್ತು. 

"ನಾನು ಕೇಳಿದ ವಿಷಯ ಏನ್ ನಿರ್ಧಾರ ಮಾಡಿದೆ?" ಮನೆಗೆ ಬರುತ್ತಿದ್ದ ಜಾಗ ಕೇಳಿದಳು. 

'ಹ್ಮಾ, ಈಗ ಬಂತು ವಿಷಯ' ಮನಸ್ಸಲ್ಲೇ ಖುಷಿಗೊಂಡು
"ನಿನಗೇನಾದ್ರೂ ಮೆಂಟಲ್ ಇಶ್ಯೂ ಇದೆಯಾ? ಯಾಕೆ ಒಂದೊಂದು ಕ್ಷಣ ಒಂದೊಂದು ತರ ಮಾತಾಡ್ತಿಯಾ??" ರೇಗಿದ.


"ಹಲೋ, ಏನಾಯ್ತು ಈವಾಗ? ಬೆಳಿಗ್ಗೆನೇ ಹೇಳಿದ್ದೆ ತಾನೇ ಶಾಪಿಂಗ್ ಹೋಗಬೇಕೆಂದು. ನೋಡೋಣ ಅಂದಿದ್ದೆ. ಮರೆತೋಯ್ತಾ?" 

" ಓಹ್ ಅದನ್ನಾ ನೀ ಕೇಳಿದ್ದು? ಬೇರೆ ಏನಿಲ್ಲವಾ?"

"ಏನಿರುತ್ತೆ ಬೇರೆ?" 

ಎಲ್ಲೋ ಏನೋ ಎಡವಟ್ಟಾಗಿದೆ. ನಾನಾಗಿಯೇ ಕೇಳಲೆಂದು ಕಾಯುತ್ತಿದ್ದಾಳಾ? ನಾನಂತೂ ಸೋಲಲ್ಲ. ಅಥವಾ ಬೇಕೆಂದೇ ನನ್ನನ್ನು ಫೂಲ್ ಮಾಡ್ತಿದ್ದಾಳಾ?  ಗೊಂದಲ ಶುರುವಾಯಿತು ಪ್ರಸನ್ನನಿಗೆ..

                                 ***************


ಅದೇ ಸಂಜೆ ಪ್ರಸನ್ನ ಮಾನ್ವಿ ಜೊತೆಗೆ ಬೃಂದಾವನಕ್ಕೆ ಬಂದಿಳಿದ.

"ನಿನಗೆ ಪರಿ ಪರಿಚಯವಿತ್ತು. ಆದರೆ ಅವರ ಮನೆಯವರ ಪರಿಚಯ ಹೇಗಾಯ್ತು?" ಬೈಕ್ ಇಳಿಯುತ್ತ ಕೇಳಿದಳಾಕೆ.

"ನಾನು ಮೊದಲನೆಯ ಸಲ ಅವರ ಮನೆಗೆ ಬಂದಿದ್ದು ಯಾವಾಗ ಗೊತ್ತಾ?? ಹರ್ಷನ ಸಾವಿನ ಸುದ್ದಿ ತಿಳಿದಾಗ. ಇಡೀ ಮನೆ ಅಕ್ಷರಶಃ ಸ್ತಬ್ಧವಾಗಿತ್ತು ಅಂದು. ಅಮ್ಮ ಹರಿಣಿ ತಾತ ಪರಿ ಅಂಕಲ್ ಇವರನ್ನೆಲ್ಲ ನೋಡಿ ಎಷ್ಟು ಸಂಕಟವಾಗಿತ್ತು. ಆಗಲೇ ಅವರೊಂದಿಗೆ ಬೆರೆತಿದ್ದು. ಅವರಿಗೆ ಸಮಾಧಾನ ಹೇಳಿದೆ‌. ಧೈರ್ಯ ತುಂಬಿದೆ. ಅಷ್ಟೇ.. ‌ ಅದಕ್ಕೆ ಪ್ರತಿಯಾಗಿ ಈ ಮನೆಯವರು ನನ್ನನ್ನೇ ತಮ್ಮ ಮಗನಾಗಿ ಸ್ವೀಕರಿಸಿ ಬಿಟ್ಟರು. ಅದೆಷ್ಟು ಒಳ್ಳೆಯ ಮನಸ್ಸುಗಳಲ್ಲವಾ.. ಯಾರೋ ಅಪರಿಚಿತನನ್ನು ಈ ರೀತಿ ಪ್ರೀತಿಸುವುದು. ತಮ್ಮ ಕುಟುಂಬದ ಸದಸ್ಯನನ್ನಾಗಿ ಮಾಡಿಕೊಳ್ಳುವುದು. ಇದೊಂದು ಕನಸು ನನಸಾದ ಹಾಗಿದೆ" 

You know what.. ಬದುಕಿನಲ್ಲಿ ಯಾವುದೂ ಆಕಸ್ಮಿಕವಾಗಿ ಆಗೋದಿಲ್ಲ. ಯಾವುದೋ ಒಂದು  ಉದ್ದೇಶದಿಂದ ಮತ್ತೊಂದು ಘಟನೆ ನಡೆಯುತ್ತಂತೆ. ಬಹುಶಃ ಹರ್ಷ ಕಣ್ಮರೆಯಾಗದಿದ್ದರೆ ನನಗೆ ಈ ಪರಿವಾರ, ಇವರ ಪ್ರೀತಿ ಸಿಗುತ್ತಿರಲಿಲ್ಲವೇನೋ?" ಕೈಕಟ್ಟಿ ಮನೆ ನೋಡುತ್ತಾ ನಿಂತ.

" ಹ್ಮ್.. ನಿಜ. ನನ್ನ ಮತ್ತೆ ಪರಿ ಮಧ್ಯೆ ಬೆಳೆದಿದ್ದ ಮನಸ್ತಾಪ ಕೂಡ ಬಗೆಹರಿಯುತ್ತಿರಲಿಲ್ಲ!  ಆಲಾಪ್ ಸಂಜೀವಿನಿ ಸಿಗುತ್ತಿರಲಿಲ್ಲ. ಅದ್ವೈ..." ಮಾನ್ವಿ ಮಾತು ಎಲ್ಲೋ ಸಾಗಿತ್ತು.

"ಎಷ್ಟೂ ಅಂತ ಮಾತಾಡ್ತಿಯಾ? ಬಾ ಒಳಗೆ ಹೋಗೋಣ"  ರೇಗಿದ

"ನಾನಾ? ನೀನು ಗಂಟೆಗಟ್ಟಲೆ ಕೊರೆದರೂ ನಾನು ಸುಮ್ಮನೆ ತಲೆದೂಗಬೇಕು. ನಾನು ಒಂದು ಹೆಚ್ಚಾಗಿ ಮಾತಾಡಿದ್ರೂ ನಿನಗೆ ತಲೆ ನೋವು ಬರುತ್ತಲ್ವಾ..."

"ಓಹ್, ಡಾಕ್ಟ್ರು, ಬನ್ನಿ ಒಳಗೆ. ಇದೇನು ಮನೆ ಹೊರಗೆ ಕೋಳಿ ಜಗಳ ಶುರು ಮಾಡಿ ಬಿಟ್ಟಿದ್ದೀರಾ?" ಗೋಪಿ ಸ್ವಾಗತಿಸಿದ.

"ನನ್ನ ಬಗ್ಗೆ ನಿನಗೆ ಗೊತ್ತಿಲ್ಲವೇನೋ ಗೋಪಿ, ಎಷ್ಟು ಮುಗ್ಧ ನಾನು. ಅಮ್ಮ ನೋಡು ಎಂಥ ಜಗಳಗಂಟಿ ಜೊತೆಗೆ ನನ್ನ ಮದುವೆ ಮಾಡಿಸಿ ಬಿಟ್ಟರು. " ಹೇಳುತ್ತ ಒಳಗಡಿಯಿಟ್ಟ.

ಅಷ್ಟರಲ್ಲಿ ಅಲ್ಲಿಗೆ ಬಂದ ಹರಿಣಿ ಪ್ರಸನ್ನನ ಸುತ್ತ ಗಸ್ತು ತಿರುಗುತ್ತ ದಿಟ್ಟಿಸತೊಡಗಿದಳು.

"ಹೇಯ್ ಸ್ವೀಟಿ...  ಹೇಗಾದ್ವೇ ಪರೀಕ್ಷೆ? ಏನು ಈ ರೀತಿ ಹೊಸದಾಗಿ ನೋಡ್ತಿದ್ದೀಯಾ? " ಕೇಳಿದ. 

"ಯಾವ ಕಡೆಯಿಂದ ನೋಡಿದರೆ ಮುಗ್ಧನಾಗಿ ಕಾಣ್ತಿಯಾ ಅಂತ ನೋಡ್ತಿದ್ದೆ!!  " ಅವಳ ವ್ಯಂಗ್ಯ ಮಾತಿಗೆ ಮಾನ್ವಿ ನಕ್ಕು ನಗದಂತೆ ಮುಖ ತಿರುಗಿಸಿದಳು.

"ಸ್ವೀಟಿ.. ನಿನ್ನೆ ಮನೆಗೆ ಬರಲಿಲ್ಲ ಅನ್ನೋ ಕೋಪದಲ್ಲಿ ಹೀಗೆಲ್ಲ ಮಾತಾಡೋದಾ? " ಕೆನ್ನೆ ಗಿಲ್ಲಿದ.

"ಸ್ವೀಟಿ ಅಂತೆ ಸ್ವೀಟಿ... ನಿನ್ನ ಮೂತಿಗಿಷ್ಟು! ಹೋದಾಗಿನಿಂದ ಸರಿಯಾಗಿ ಒಂದು ಮಾತಿಲ್ಲ ಕಥೆಯಿಲ್ಲ. ನಾ ಕೇಳಿದ್ದೆ ತಾನೇ ಯಾರಾದ್ರೂ ಸಿಕ್ಕಿದ್ದಾರಾ ಅಂತ? ಏಯ್, ಹಾಗೆಲ್ಲ ಏನಿಲ್ಲ.. ಅಂತ ಬಿಲ್ಡ್‌ಪ್ ಬೇರೆ ಕೊಟ್ಟಿದ್ದೆ. ಈಗ ನೋಡಿದ್ರೆ ಹೆಂಡತಿ ಜೊತೆಗೆ ಎಂಟ್ರಿ ಕೊಟ್ಟಿದ್ದಿಯಾ! ಅಷ್ಟಕ್ಕೂ ಮಾನು ಧೀ  ನಿನಗಿಂತ ಮೊದಲೇ ಗೊತ್ತು. ನೀನೇ ಜಗಳ ಶುರು ಮಾಡ್ತಿರ್ಬೇಕು, ಅವಳಲ್ಲ. "

" ಹೌದೌದು. ಅವಳಿಗೆ ಮಾತೇ ಬರಲ್ಲ. ತುಂಬಾ ಮೃದು ಸ್ವಭಾವ! " ತಲೆ ಕೊಡವಿದ.

" ನಮ್ಮ ಪ್ರಸನ್ನ, ಹೆಂಡತಿ ಗುಣಗಾನ ಮಾಡ್ತೀರೋ ಹಾಗಿದೆ. ಒಂದು ನಿಮಿಷ ಅಲ್ಲೇ ನಿಂತ್ಕೊಳ್ಳಿ ಇಬ್ಬರೂ.." ಸುಲೋಚನ ಮಧ್ಯ ಪ್ರವೇಶಿಸಿದರು.

"ಸೂರ್ಯ ಇವತ್ತು ದಿಕ್ಕು ಬದಲಿಸಿ ಹುಟ್ಟಿರಬೇಕೇನೋ ಅತ್ತೆ" ಆರತಿ ತಟ್ಟೆ ಹಿಡಿದುಕೊಂಡು ಬಂದ ಪರಿ ಇಬ್ಬರಿಗೂ ಆರತಿ ಬೆಳಗಿಯೇ ಒಳಗೆ ಬರಮಾಡಿಕೊಂಡಳು.

"ಇದೆಲ್ಲಾ ಬೇಕಿತ್ತಾ?" ಪ್ರಸನ್ನ ಆಕ್ಷೇಪಿಸಿದ. 

"ಹ್ಮೂ ಸಂಪ್ರದಾಯದ ಪ್ರಕಾರ ಮದುವೆಯಾಗಿ ಬಂದ ಮಗ ಸೊಸೆನಾ ಹೀಗೆ ಮನೆ ತುಂಬಿಸ್ಕೊಳ್ತಾರೆ. ಆದರೆ ಈ ಮೊಂಡು ಮಗ ನಿನ್ನೆ ಕೈತಪ್ಪಿಸಿಕೊಂಡು ಹೊರಟು ಹೋದ. ಅದಕ್ಕೆ ಈಗ ಶಾಸ್ತ್ರ ಪೂರ್ತಿಯಾಯ್ತು." ಅವನ ಕಿವಿ ಹಿಂಡಿದರು ಸುಲೋಚನ. ಪ್ರಸನ್ನನಿಗೇನೂ ಮಾತೇ ಹೊರಡಲಿಲ್ಲ.

"ಅದ್ಸರಿ, ನಿನ್ನೆ ಮನೆಗೆ ಹೋದ ತಕ್ಷಣ ಏನು ಮಾಡಿದ್ರಿ ಇಬ್ಬರೂ? ರೋಮ್ಯಾಂಟಿಕ್ ಡೇಟ್?"  ಕಣ್ಣು ಹೊಡೆದು ಕೇಳಿದಳು ಹರಿಣಿ‌.

ವಾಸ್ತವದಲ್ಲಿ ಮೆಟ್ಟಿಲೇರಿ ಫ್ಲಾಟ್ ತಲುಪಿದ ಹರಸಾಹಸ ನೆನಪಾಗಿ ಇಬ್ಬರೂ ಮುಖ ಮುಖ ನೋಡಿಕೊಂಡು ನಿಟ್ಟುಸಿರು ಬಿಟ್ಟರು. 

"ನಮ್ಮ ವಿಷಯ ಹಾಗಿರಲಿ, ಹರ್ಷ ಏನೋ ಸರ್ಪ್ರೈಸ್ ಇದೆ ಬನ್ನಿ ಎಂದನಲ್ಲ. ಏನದು?' ಮಾತು ಬದಲಿಸಿದ. 


" ಊಹೆ ಮಾಡು ನೋಡೋಣ"  ಅಷ್ಟರಲ್ಲೇ ಅಲ್ಲಿಗೆ ಬಂದ ಹರ್ಷ ಸವಾಲೆಸೆದಿದ್ದ. 

"ಇತ್ತೀಚೆಗೆ ನನ್ನ ತಲೆ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಟ್ಟಿದೆ,  ಅಂತಹುದರಲ್ಲಿ ನೀನೊಬ್ಬ ಕೆಣಕಬೇಡವೋ.. ಬೇಗ ಹೇಳು ಅದೇನಂತ? ನಾವಿನ್ನೂ ಶಾಪಿಂಗ್ ಬೇರೆ ಹೋಗಬೇಕಿದೆ " ಹೆಂಡತಿ ಮುಖ ದುರುದುರು ನೋಡುತ್ತಾ ಹೇಳಿದ. 



"ಅದೇನೆಂದರೆ ಇನ್ನೂ ಕೆಲವು ತಿಂಗಳಲ್ಲಿ ನೀವು ನಿಮ್ಮ ಕೆಲಸ ಬಿಡಬೇಕಾಗಬಹುದು. " ಗಂಭೀರವಾಗಿ ನುಡಿದ.

"ಕೆಲಸ ಬಿಡಬೇಕಾ? ಯಾಕೆ?" ಪ್ರಸನ್ನ ಚಕಿತನಾದ.

"ಮತ್ತೆ ನಿಮ್ಮ ಚಾರಿಟೇಬಲ್ ಹಾಸ್ಪಿಟಲ್‌ನ್ನು ನಡೆಸಿಕೊಂಡು ಹೋಗುವವರು ಯಾರು? " ಮುಗುಳ್ನಕ್ಕ ಹರ್ಷ.

"ಯಾವ  ಚಾರಿಟೇಬಲ್ ಹಾಸ್ಪಿಟಲ್?? ಏನ್ ಹೇಳ್ತಿದ್ದಿಯಾ ?" ಮಾನ್ವಿ ಕೇಳಿದಳು. ಆತ ಫೈಲೊಂದನ್ನು ಅವಳ ಕೈಗಿಟ್ಟು ಹೇಳಿದ

"ಇವು ಸೈಟ್ ಪೇಪರ್ಸ್. ನಾಳೆ ಮಧ್ಯಾಹ್ನ ಇದನ್ನು ನಿಮ್ಮ ಹೆಸರಿನಲ್ಲಿ ರಿಜಿಸ್ಟರ್ ಮಾಡಲಾಗುತ್ತೆ‌. ಇನ್ನೊಂದು ವಾರದಲ್ಲಿ ಮುಹೂರ್ತ ನೋಡಿ ಭೂಮಿ ಪೂಜೆ ಮಾಡಿಸಿ ಆಸ್ಪತ್ರೆಯ ನಿರ್ಮಾಣದ ಕೆಲಸ ಆರಂಭಿಸಿದರೆ ಕೆಲವು ತಿಂಗಳಲ್ಲಿ ನಿಮ್ಮದೇ ಆಸ್ಪತ್ರೆಯಲ್ಲಿ ನೀವು ನಿಮ್ಮ ಕಾಯಕವನ್ನ ಮುಂದುವರಿಸಬಹುದು. " 

"ಯಾರು ಇದನ್ನು ಮಾಡಲು ಹೇಳಿದ್ದು?" ಪ್ರಸನ್ನನ ಗಂಭೀರ ಪ್ರಶ್ನೆ ‌.

"ನಿನ್ನ ಪ್ರಶ್ನೆ ತಪ್ಪಾಗಿದೆ. ಯಾರು ಅಂತ ಕೇಳುವ ಬದಲು ಯಾಕೆ? ಇದರಿಂದ ಯಾರಿಗೆ ಪ್ರಯೋಜನ?  ಅನ್ನೋ ಪ್ರಶ್ನೆ ಕೇಳಿಕೊಂಡರೆ ನಿನ್ನ ಮನಸ್ಸಿನ ಗೊಂದಲ ಪರಿಹಾರವಾಗುತ್ತೆ. 
ಇದೊಂದು ಚಾರಿಟೇಬಲ್ ಹಾಸ್ಪಿಟಲ್ ಪ್ರಸನ್ನ. ಯಾವುದೇ ಆರ್ಥಿಕ ಲಾಭದ ಉದ್ದೇಶದಿಂದ ನಿರ್ಮಿಸುತ್ತಿರೋದಲ್ಲ. ಬಡಜನರಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ನಿರ್ಮಿಸಲಾಗ್ತಿದೆ. ಕೆಲವು ಜನರಿಗಾದರೂ ಇದರಿಂದ ಒಳ್ಳೆಯದಾದರೆ ನಮ್ಮ ಶ್ರಮ ಸಫಲ‌.  ಆಸ್ಪತ್ರೆಯ ಖರ್ಚು ವೆಚ್ಚ,  ಇಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ವೃತ್ತಿಪರರ ಸಂಬಳ ಇತ್ಯಾದಿಗಳನ್ನು ನಮ್ಮ ಸಂಸ್ಥೆ ನೋಡಿಕೊಳ್ಳುತ್ತದೆ. " 

"ನಿಮ್ಮ ಸಂಸ್ಥೆ ಎಂದರೆ?" 

"@ARVI CO-OP COMPANY ಭಾರ್ಗವ್ ಮತ್ತು ರೈ ಕಂಪನಿ ಎರಡೂ ಸೇರಿ ನಿರ್ಮಿಸಿರುವ ಹೊಸ ಸಂಸ್ಥೆ.  ರಘು ಅಂಕಲ್ ತಮ್ಮ ಹೊಸ ಸೆಕ್ರೆಟರಿ ಮೂಲಕ ಎಲ್ಲಾ ಫೈಲ್ ಸಬ್ಮಿಟ್ ಮಾಡಿದ್ದಾರೆ.  ನನಗೆ ಬರುವಾಗಲೇ ಈ ಎಲ್ಲಾ ವಿಚಾರಗಳನ್ನು ತಿಳಿಸಿದ್ದರು‌. ನಾನು ಈಗ ಎಲ್ಲರ ಮುಂದೆ ಹೇಳ್ತಿದ್ದೇನಷ್ಟೆ. ಇದೆಲ್ಲಾ ಕ್ರೆಡಿಟ್ ಅವರದೇ.." ಹರ್ಷ ಹೇಳಿ ಮುಗಿಸಿದ. 

ಮಾವನ ಆಸ್ತಿ ಎಂದು ನಿರಾಕರಣೆ ಮಾಡಬಹುದಿತ್ತು ಆದರೆ ಪ್ರಸನ್ನನಿಗೆ ಈ ನಿಸ್ವಾರ್ಥ ಸೇವೆಯಲ್ಲಿ ಒಂದು ಸಂತೃಪ್ತಿ ಕಂಡಿತು. ಮಾನ್ವಿಯೆಡೆಗೆ ನೋಡಿದವನ ಮನಸ್ಸು ಮಾರ್ದನಿಸಿತು -'ಇನ್ನು ಆನೆ ಸಾಕುವುದು ಕಷ್ಟ ಎನಿಸುವುದಿಲ್ಲ ಬಿಡು' ಆತ ಮುಗುಳ್ನಕ್ಕ.

 ಎಲ್ಲರೂ ತಮ್ಮದೇ ದೃಷ್ಟಿಕೋನದಿಂದ ಆ ನಗುವಿನ ಅರ್ಥ ಅರ್ಥೈಸಿಕೊಂಡರು.


ಇದೇ ಚಾರಿಟಿ ಹಾಸ್ಪಿಟಲ್ ನ ಕಾರಣಕ್ಕಾಗಿ ಹರ್ಷ ತನ್ನೊಂದಿಗೆ ರಾತ್ರಿ ಹಾಗೆ ಹೇಳಿದ್ದು ಎಂದು ಅರ್ಥ ಮಾಡಿಕೊಂಡ ಪರಿ ಅವನೆಡೆ ಕೋಪದಿಂದ ನೋಡಿದಳು.

ಅವಳಿಗೆ ಮಾತ್ರ ಕಾಣುವಂತೆ ಎರಡು ಕಿವಿ ಹಿಡಿದು ಕ್ಷಮಿಸುವಂತೆ ಮುಖ ಮಾಡಿದ್ದನಾತ. 



                                ************



ಅವತ್ತು ಭಾನುವಾರ ಮಧ್ಯಾಹ್ನ ಎಲ್ಲರೂ ಮನೆಗೆ ಆಗಮಿಸಿದರು. ಮಾನ್ವಿ, ಪರಿಧಿ ಮತ್ತು ಹರಿಣಿ ಮನೆಯ ಕೆಲಸಗಳಲ್ಲಿ ತೊಡಗಿಕೊಂಡು  ತರಹೇವಾರಿ ಭೋಜನ ಮಾಡಿ ಬಡಿಸಿದರು.  ಪ್ರಸನ್ನ ಮೊದಲು ಅನುಮಾನಿಸಿ ಹಿಂಜರಿದನಾದರೂ ಪರಿಯ ಮೇಲಿನ ಭರವಸೆಯಿಂದ ಭರ್ಜರಿ ಭೋಜನ ಬಾರಿಸಿದನು.


"ಇಷ್ಟೊಂದು ಜನ ಡಾಕ್ಟರ್ಸ್ ಗಳನ್ನ ಒಟ್ಟಿಗೆ ನೋಡಿ ಇದು ಮನೆಯೋ ಆಸ್ಪತ್ರೆಯೋ ಅಂತ ಡೌಟ್ ಬರ್ತಿದೆ" ಊಟ ಮಾಡುತ್ತ ಹರ್ಷ ಹಾಸ್ಯ ಮಾಡಿದ. 

"ನನಗೂ ನಿಮ್ಮ ಜೊತೆಗೆ ಹೀಗೆ ಕುಳಿತು ಊಟ ಮಾಡ್ತಿರೋದು ಕನಸೋ ನನಸೋ ಅಂತ ಡೌಟು ಮಿ.ಸಂಕಲ್ಪ್ ಅಥ್ರೇಯ" ಶ್ರಾವ್ಯ ತಟ್ಟೆಯಲ್ಲಿ ಬೆರಳಾಡಿಸುತ್ತ ಲಜ್ಜೆಯಿಂದ ಉಲಿದಳು. ತುತ್ತು ನೆತ್ತಿಗೇರಿತು ಹರ್ಷನಿಗೆ. 

ರೋಹಿತ್ ಧೃವ ಮುಖ ಮುಖ ನೋಡಿಕೊಂಡು ಗೊಳ್ಳನೇ ನಕ್ಕರು.

"ಓಯ್, ಅವನು ಹರ್ಷ ಕಣೇ.." ದಿವ್ಯ ಮೊಣಕೈಯಿಂದ ತಿವಿದಳು. 

"ನನ್ನ ಪಾಲಿಗೆ ಸಂಕಲ್ಪ್ ಆಗೇ ಇರಲಿ ಬಿಡು" ಮುಗ್ಧವಾಗಿ ನಕ್ಕಿತು ಹೆಣ್ಣು ಹೃದಯ.


ಅತೀವ ಇರಿಸು ಮುರಿಸು ಉಂಟಾಗಿ ಹರಿಣಿ ಪರಿಯ ಊಟ ಮುಗಿಯುತ್ತಿದ್ದಂತೆ ಆದಷ್ಟೂ ಬೇಗ ಅಲ್ಲಿಂದ ಜಾಗ ಖಾಲಿ ಮಾಡಿದ್ದ ಹರ್ಷ.

"ವ್ಹಾ ವ್ಹಾ... ನೀವೇ ಲಕ್ಕಿ ಡಾ.ಪ್ರಸನ್ನ. ಥೇಟ್ ಫೈವ್ ಸ್ಟಾರ್ ಹೋಟೆಲ್ ಊಟ ಮಾಡಿದ ಹಾಗಿತ್ತು ನಿಮ್ಮ ಮಿಸೆಸ್ ಕೈರುಚಿ" 
ಬಂದ ಅತಿಥಿಗಳು ಮಾನ್ವಿ ಕೈರುಚಿಯನ್ನು ಹೊಗಳಿ ಹೊಗಳಿ ಕೈ ಕುಲುಕಿ ಮತ್ತೊಮ್ಮೆ ಅಭಿನಂದಿಸಿ ಹೊರಟು ಹೋದರು.

ಕೊನೆಗೆ ಉಳಿದದ್ದು ದಂಪತಿಗಳು ಇಬ್ಬರೇ..
"You are really great ಕಣೇ ಪಿಶಾಚಿ, ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಅಡುಗೆ ಹೇಗೆ?" ಆಶ್ಚರ್ಯ ವ್ಯಕ್ತಪಡಿಸಿದ.


ಆಕೆ ಒಂದು ಹಾಳೆಯನ್ನು ತಂದು ಅವನ ಮುಂದೆ ಎಸೆದಳು. ಏನೆಂದು ನೋಡಿದ‌. ಫೈವ್‌ ಸ್ಟಾರ್ ಹೋಟೆಲೊಂದರ ಬಿಲ್ ಪಾವತಿ. ಒಟ್ಟು  62600/- ರೂ. 

ತಲೆ ಸಿಡಿದು ಹೋಗುವುದೊಂದು ಬಾಕಿ ಮಹಾಶಯನದು. 

" ಅಂದರೆ ಇಷ್ಟೊತ್ತು ನಾವೆಲ್ಲ ತಿಂದು ತೇಗಿದ್ದು.."

" ಹ್ಮಾ ‌‌... ಅದೇ ಹೋಟೆಲ್ ಕೈರುಚಿ. ಸಖತ್ ಇತ್ತಲ್ವ.. ವೆಜ್ ನಾನ್ವೆಜ್ ಎಲ್ಲಾ ಸೇರಿ ಕೆಲವೇ ರೂ ಅಷ್ಟೇ! " 

"ಇಷ್ಟು ದುಡ್ಡಿನಲ್ಲಿ ಒಂದು ಹೋಟೆಲ್'ನ್ನೇ ಕೊಳ್ಳಬಹುದಿತ್ತಲ್ವಾ‌.. "

"ಮೊದಲು ಈ ಬಿಲ್ ಪೇ ಮಾಡು. ಒಳಗೆ ಬಿದ್ದಿರೋ ರಾಶಿ ಪಾತ್ರೆಗಳನ್ನು ತೊಳೆದಿಡು. ಆಮೇಲೆ ಬಿಜಿನೆಸ್ ಯೋಚನೆ ಮಾಡುವಂತೆ.." ತಿರುಚಿ ನುಡಿದು ಎದ್ದು ಹೋದಳಾಕೆ.

"ಬಿಲ್ ಒಕೆ. ಪಾತ್ರೆ ತೊಳೆಯುವ ಕೆಲಸ ನನ್ನ ಪಾಲಿಗೆ ಯಾಕೆ? ನೀ ಯಾತಕ್ಕೆ ಇರೋದು?" 

"ನನಗೆ ಇವೆಲ್ಲ ಅಭ್ಯಾಸ ಇಲ್ಲ. ನಿನಗಿದೆ ತಾನೇ, ನೀನೇ ಮಾಡು" 

"ಮಾನು... ತುಂಬಾ ದಿನ ಆಯ್ತು. ನಿಮ್ಮ ಡ್ಯಾಡ್ ಆರೋಗ್ಯ ಹೇಗಿದೆಯಂತ ವಿಚಾರಿಸೇ ಇಲ್ಲ. ಕಾಲ್ ಮಾಡ್ತಿನಿ." ಫೋನ್ ಕೈಗೆತ್ತಿದ.

"ಇಲ್ಲಿ ನಡೆಯುವ ಪ್ರತಿಯೊಂದನ್ನು ಅವರ ಮುಂದೆ ಹೇಳೋ ಅಗತ್ಯವಿಲ್ಲ. ಈಗೇನು ಪಾತ್ರೆ ತಾನೇ? ನಾನು ವಾಷ್ ಮಾಡ್ತೇನೆ" ಅವನ ಮೊಬೈಲ್ ತೆಗೆದು ಪಕ್ಕಕ್ಕೆ ಎಸೆದು ಎದ್ದು ಒಳ ಹೋದಳು‌. 

ಐದೇ ನಿಮಿಷಗಳಲ್ಲಿ ಒಳಗಿನಿಂದ ಧಢಾರ್ ಎಂಬ ದೊಡ್ಡ ಸದ್ದು!! ಪ್ರಸನ್ನ ಓಡಿ ಹೋಗಿ ನೋಡುವಷ್ಟರಲ್ಲಿ ಮಾನ್ವಿ ನೆಲದ ಮೇಲೆ ಬಿದ್ದು ಮೊಣಕಾಲು ಹಿಡಿದು ಒದ್ದಾಡುತ್ತಿದ್ದಳು. 

ತಟ್ಟನೆ ಅವಳನ್ನು ಎಬ್ಬಿಸಿ ಕೂರಿಸಿದ ಪ್ರಸನ್ನ "ನೋಡಿಕೊಂಡು ನಡೆಯೋಕು ಬರಲ್ವ ನಿನಗೆ? ಕಣ್ಣೇನು ದಾನ ಮಾಡಿದ್ದೀಯಾ?" ಮೆಲ್ಲಗೆ ಗದರಿದ್ದ. 

"ನಾನು ಪಾತ್ರೆ ತೊಳೆಯೋಕೆ ಸಿಂಕ್ ಹತ್ತಿರ ಹೋಗ್ತಿದ್ದೆ ಅಷ್ಟರಲ್ಲಿ ಕಾಲು... ಆsss. ಅಮ್ಮಾ.. " ನೋವಿನಿಂದ ಕಿರುಚಿದಳು. 
ಅವಳ ಕರ್ಕಶ ಧ್ವನಿಗೆ ಬೆಚ್ಚಿ ಎರಡು ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡವನೇ

"ಆಯ್ತಾಯ್ತು.. ಕಿರುಚಬೇಡ. ಏನಾಗಲ್ಲ, ಕಾಲು ಉಳುಕಿರಬೇಕು ಸ್ಪ್ರೇ ಹಾಕು ಸರಿಹೋಗುತ್ತೆ. ಈಗ ನಿಧಾನಕ್ಕೆ ಎದ್ದೇಳು ತಾಯಿ. " ತಾನು ಸಹಕರಿಸಿದ.


ಆಕೆ ಸಾವಕಾಶವಾಗಿ ಕುಂಟುತ್ತ ಹೋಗಿ ಬೆಡ್ ಮೇಲೆ ವಿರಮಿಸಿದಳು.
"ಡ್ಯಾಡ್'ಗೆ ಕಾಲ್ ಮಾಡ್ಲಾ? ಮಾತಾಡ್ತಿಯಾ?" ಸಪ್ಪೆ ಮುಖ ಹೊತ್ತು ಕೇಳಿದಳು.

"ಏನು ಬೇಡ.. ಈ ointment ಹಚ್ಚಿಕೋ.  ಸುಮ್ಮನೆ ಮಲಗು ಸಾಕು" ಕೈ ಎತ್ತಿ ಮುಗಿದು  ಕಿಚನ್ ಕಡೆಗೆ ನಡೆದ‌. ಪಾತ್ರೆ ತೊಳೆಯುವ ಮಹಾನ್ ಕಾರ್ಯ ಪ್ರಸನ್ನನ ಹೇಗಲೇರಿತು. 

ಅವನು ಅತ್ತ ಹೋಗುತ್ತಲೇ ಬಿಗಿದಿಟ್ಟ ನಗು ಶಬ್ದವಿಲ್ಲದಂತೆ ಅಲೆಯಲೆಯಾಗಿ ತೇಲಿ ಬಂದಿತ್ತು. ಬೆಡ್ ಮೇಲೆ ಬಡಿದು ಬಡಿದು ನಕ್ಕು 'ಮುಯ್ಯಿಗೆ ಮುಯ್ಯಿ.. ಏನೋ ಅನ್ಕೊಂಡಿದೀಯಾ ಈ ಮಾನ್ವಿನಾ?! ಇನ್ನೂ ಇದೆ ನಿನಗೆ ಮಾರಿಹಬ್ಬ.. ' ಬಿಂಕದಿಂದ ಕೂದಲು ಹಿಂದೆ ಹಾರಿಸಿದಳಾಕೆ.

ಅಡುಗೆ ಮನೆ ಅವತಾರ, ಪಾತ್ರೆಗಳನ್ನು ನೋಡಿ ತಲೆ ಕೆದರಿಕೊಳ್ಳುತ್ತ ಒಳಗೆ ಅಡಿಯಿಟ್ಟ ಪ್ರಸನ್ನ
 'ಥೂ.... ಬೇಕಿತ್ತೇನೋ ಪಾಪಿ ನಿನಗೆ ಈ ರಗಳೆ? ಹೋಟೆಲ್ ನಲ್ಲಾಗಿದ್ದರೆ ಪಾತ್ರೆ ತೊಳೆಯುವ ಕೆಲಸನಾದ್ರೂ ತಪ್ಪುತ್ತಿತ್ತು. ಆ ಕಡೆಗೆ ಹಣನೂ ಹೋಯ್ತು. ಈ ಕಡೆಗೆ ನಿನ್ನ ಹೆಣನೂ ಬಿಳುತ್ತೆ'  ಹಳಿದುಕೊಳ್ಳುತ್ತಲೇ ಒಂದೊಂದಾಗಿ ಪಾತ್ರೆ ಉಜ್ಜಿ ಉಜ್ಜಿ ತೊಳೆಯಲು ನಿಂತ.

"ಮನೆಯಲ್ಲಿ ಇರುವಾಗ ಯಾವತ್ತೂ ಪ್ರೀತಿ ಗೀತಿ ಹೆಸರು ಎತ್ತದವಳು, ಅದ್ಯಾಕೆ ಫೋನ್ ನಲ್ಲಿ ಒಂದೇ ಸಮನೆ 'ಪ್ರೀತಿಸಬಹುದಾ ಪ್ರೀತಿಸಬಹುದಾ' ಅಂತ ಕೇಳುತ್ತಾಳೋ! ನಾಳೆನೇ ಇದಕ್ಕೊಂದು  ಅಂತ್ಯ ಹಾಡಲೇ ಬೇಕು" ನಿರ್ಧರಿಸಿಕೊಂಡ.


ಎಲ್ಲ ಕೆಲಸ ಮುಗಿಸಿ ಬರುವಷ್ಟರಲ್ಲಿ ಮಾನ್ವಿ ಅವನಿಗೆ ವಾಷರೂಂ ಕಡೆಗೆ ಕೈ ಮಾಡಿ ತೋರಿಸಿದಳು. ಬಕೆಟ್‌ನಲ್ಲಿ ನೆನೆಸಿದ ರಾಶಿ ಬಟ್ಟೆಗಳು. 

 "ಸಾರಿ, ಬೀಳ್ತಿನಿ ಅಂತ ಗೊತ್ತಿರಲಿಲ್ಲ ‌‌. ಇವತ್ತು ರಜೆ ಅಂತ ಎಲ್ಲಾ ಬಟ್ಟೆಗಳನ್ನು ಒಗೆಯೋಕೆ ನೆನಸಿಬಿಟ್ಟಿದ್ದೀನಿ. If you don't mind.. Please.... " ರಾಗ ಎಳೆದಳು. 

ಕುಸಿದು ಕುಳಿತ ಪ್ರಸನ್ನ. ಉಂಡಿದ್ದಾಗಲೇ ಅರ್ಧ ಕರಗಿತ್ತು. ಬೈಯಲು ಸಹ ಬೇಸರವಾಗಿ ಕಣ್ಣಲ್ಲೇ ಹಿಡಿ ಶಾಪ ಹಾಕಿ ಎದ್ದು ಹೋದ.

ಎಷ್ಟು ಶಾಪ ಹಾಕಿದರೇನು? ಮಡದಿಯ ಬಟ್ಟೆ ಒಗೆಯುವ ಪುಣ್ಯದ ಕಾಯಕ ತಪ್ಪಲಿಲ್ಲ ಪ್ರಸನ್ನನಿಗೆ. ಹಿಂದೆಲ್ಲಾ ಶಿಕ್ಷೆ ಅನುಭವಿಸಿದ ಸೇಡು ತೀರಿಸಿಕೊಂಡ ತೃಪ್ತಿ ಮಾನ್ವಿಗೆ.


                     ***********

ಅಂದು ಕಾದು ಕುಳಿತಿದ್ದ ಪ್ರಸನ್ನ. ಕಾಲ್ ಮಾಡಿ ಪ್ರೀತಿಸಬಹುದಾ ಎಂದು ಕೇಳಿ ಸತಾಯಿಸುವ ಹೆಂಡತಿ ಜೊತೆಗೆ ಸಮಕ್ಷಮ ಮಾತನಾಡಲು. ಅಂದುಕೊಂಡ ಹಾಗೆ ಮಧ್ಯಾಹ್ನದ ನಂತರ ಕರೆ ಬಂದು ಬಿಟ್ಟಿತು. ಮತ್ತದೇ ರಾಗ "ನಾನು ನಿನ್ನನ್ನು ಪ್ರೀತಿಸಬಹುದಾ?" 

"ಇದೇ ಕ್ಷಣ ನನ್ನ ಮುಂದೆ ಬಂದು ನಿಂತು ಈ ಮಾತು ಕೇಳು. ಆಗ ಒಪ್ಪಿಗೆ ಸಿಗುತ್ತೆ" 

"ನನಗೆ ಮುಜುಗರ. ನೀನೇ ಮೊದಲು ಹೇಳು. ನಾನು ಒಪ್ಪಿಕೊಳ್ತೆನೆ" ನಮ್ರವಾಗಿತ್ತು ಮಾನ್ವಿ ಧ್ವನಿ. ಇಷ್ಟು ದಿನಗಳ ಪ್ರಸನ್ನನ ತಾಳ್ಮೆ ಕೈ ಮೀರಿತ್ತು. 

"ಹ್ಮಾ ಬರ್ತಾ ಇದ್ದೀನಿ ಎಲ್ಲಿದಿಯಾ?" ಆಕೆ ಉತ್ತರಿಸಿದಳು.

ಹತ್ತು ನಿಮಿಷಗಳಲ್ಲಿ ಕಾರಿಡಾರ್ ಪಕ್ಕದ ವಾರ್ಡ್ ಎದುರು ನಿಂತ ಮಾನ್ವಿಯ ತೋಳು ಬಿಗಿಹಿಡಿದು ಕೇಳಿದ್ದ

"ಏನಿದು ಹುಡುಗಾಟ? ಎದುರಿದ್ದಾಗ ಒಂತರಾ, ಫೋನ್ ನಲ್ಲಿ ಒಂತರಾ? ತಲೆ ಕೆಟ್ಟಿದೆಯಾ ನಿನಗೆ? " 

"ನಾನೇನ್ ಮಾಡಿದೆ? ಯಾಕಿಷ್ಟು ಹೈಪರ್ ಆಗಿದ್ದಿಯಾ?" 

"ನೀನೇ ತಾನೇ ಒಂದು ವಾರದಿಂದ ಫೋನ್ ಮಾಡಿ 'ನಾ ನಿನ್ನ ಪ್ರೀತಿಸ್ಬಹುದಾ ಪ್ರೀತಿಸ್ಲಾ' ಅಂತ ತಲೆ ತಿಂತಿರೋದು. ನೆಮ್ಮದಿ ಇಲ್ಲವಾಗಿದೆ ನನಗೆ" ತಲೆ ಒತ್ತಿಕೊಂಡ ರೇಗಿ.

"ನಿನಗೆ ತಲೆ ಕೆಟ್ಟಿದೆ ಬಹುಶಃ. ನಾನು ನಿನಗೆ ಕಾಲ್ ಮಾಡಿಯೇ ಇಲ್ಲ.. ನಿನ್ನ ಜೊತೆಗೆ ಈ ರೀತಿ ಮಾತಾಡೋದಂತೂ ಕನಸಿನ ಮಾತು" 

ತನ್ನ ಮೊಬೈಲಿನಲ್ಲಿ ವಾರದಿಂದ ಬಂದಿದ್ದ ಕರೆಗಳ ಪಟ್ಟಿ ಅವಳೆದುರು ಚಾಚಿ "ನಾನು ಸುಳ್ಳು ಹೇಳ್ತಿದ್ದೀನಾ??!" ಧ್ವನಿ ಗಡುಸಾಯಿತು. ಆಶ್ಚರ್ಯ ಪಡುವ ಸರದಿ ಮಾನ್ವಿಯದಾಗಿತ್ತು.

"ಆದರೆ ಡ್ಯೂಟಿ ಟೈಮ್‌ಲ್ಲಿ ಮೊಬೈಲ್ ಬಳಸಿದರೆ ಡೀನ್‌ಗೆ ಕೋಪ ಬರುತ್ತೆ,  ರಿಸಪ್ಷನ್ ಕೌಂಟರ್ ನಲ್ಲೇ ಅಥವಾ ಕ್ಯಾಬಿನ್‌ನಲ್ಲಿ ಇಟ್ಟು ಬಿಡಿ ಎಂದು ಹೇಳಿದರಲ್ಲ. ನೀನು ಹಿಡಿದು ತಿರುಗಾಡಿದ್ರೆ ನಡೆಯುತ್ತಾ.." ಅವಳೂ ಕದನಕ್ಕಿಳಿದಳು.

"ಹ್ಮಾ ಅದು ನಿಜ... ಅಂದರೆ ಮೊಬೈಲ್ ಈಗ ನಿನ್ನ ಬಳಿಯಿಲ್ಲ! ಹಾಗಾದ್ರೆ ಕಾಲ್ ಮಾಡಿ ಮಾತಾಡಿದ್ದು..? ಅದೂ ನಿನ್ನದೇ ಧ್ವನಿಯಲ್ಲಿ...!!" ಯೋಚನೆಗೆ ಬಿದ್ದ ಪ್ರಸನ್ನ. ತಕ್ಷಣ ಏನೋ ಹೊಳೆದವನಂತೆ ಅವಸರದಿಂದ ಹೊರಟ.

ಬ್ರೇಕ್ ಟೈಮ್ ಆದ್ದರಿಂದ ಕ್ಯಾಂಟೀನಲ್ಲಿ ಹರಟುತ್ತ ಕಾಫಿ ಹೀರುತ್ತಿದ್ದರು ಅವನ ಚತುರ ಶಿಷ್ಯರು. 
"ಏನ್ ಸರ್, ಶೀತ ಆಗಿದೆಯಾ? ಧ್ವನಿ ಯಾಕೋ ಸಣ್ಣಗೆ ಕೇಳ್ತಾ ಇತ್ತು." ರೋಹಿತ್‌ನ ಎದುರು ಕುಳಿತು ತನಿಖೆಯ ರೀತಿ ಕೇಳಿದ.

ಒಮ್ಮೆಗೆ ಜೋರಾಗಿ ಕೆಮ್ಮಿದ ರೋಹಿತ್ "ಸರ್.. ಏನು ಕೇಳ್ತಿದ್ದೀರಾ? ನನ್ನ ಧ್ವನಿಗೆ ಏನಾಗಿದೆ?" 

"ನೀನಾಗಿಯೇ ನಿಜ ಹೇಳಿದ್ರೆ ಕ್ಷಮೆಯಾದರೂ ಸಿಗುತ್ತೆ. ನಾನಾಗೇ ತಿಳಿದುಕೊಂಡರೆ ಆಮೇಲೆ ಕಥೆ ಬೇರೆ ತರ ಇರುತ್ತೆ" ಕೂಲಾಗಿ ಹೇಳಿದ.

"ಅದೂ‌.... Sorry.... ನಿಮ್ಮಿಬ್ಬರ ನಡುವಿನ ಮನಸ್ತಾಪ ಸರಿ ಹೋಗಲೆಂದು ಏನಾದರೂ ಮಾಡೋಣ ಎಂದುಕೊಂಡೆ. ಅದು ಹೀಗೆ ನನಗೆ ಉಲ್ಟಾ ಹೊಡೆಯುತ್ತೆ ಅಂದ್ಕೊಂಡಿರಲಿಲ್ಲ. ಹಿಹಿಹಿ.." ಹಿಂದೆಲೆ ಕೆರೆದುಕೊಂಡ.

"ವ್ಹಾಟ್ ಡು ಯು ಮೀನ್!? ಏನು ಮಾಡಿದ್ದ ಇವನು?" ಕೇಳಿದಳು ಮಾನ್ವಿ.

"ನಿನ್ನ ಫೋನಿಂದ ಕಾಲ್ ಮಾಡಿ, ನಿನ್ನ ಧ್ವನಿಯಲ್ಲಿ ಮಾತಾಡಿ ನನಗೆ ಲವ್ ಪ್ರಪೋಸ್ ಮಾಡಿದ್ದ‌. ಬಹುಶಃ ಕಾಲ್ ಹಿಸ್ಟರಿ ಡಿಲೀಟ್ ಮಾಡಿರಬಹುದು. ನಿನಗೂ ತಿಳಿದಿಲ್ಲ. ನೀನೇ ಎಂದುಕೊಂಡು ನಾನು ಗಾಬರಿಯಾಗಿದ್ದೆ. ಸದ್ಯ ಬಚಾವು " ಪ್ರಸನ್ನ ನಿರಾಳನಾದ

ಮಾನ್ವಿ  ರೋಹಿತ್‌ನನ್ನು ಹಿಗ್ಗಾ ಮುಗ್ಗಾ ಬೈದು ತರಾಟೆಗೆ ತೆಗೆದುಕೊಂಡಳು. 

"ಹ್ಮಾ... ಅವತ್ತು ಪರಿಗೆ ಸಹಾಯ ಮಾಡಿದ್ದು ಇವನೇ! ಮತ್ತೆ ನಿನಗೊಂದು ಪ್ರ್ಯಾಂಕ್ ಕಾಲ್ ಬಂದಿತ್ತಲ್ಲ ರೋಜಿ, ಬೌಬೌ, ಅದೂ ಇವನೇನೇ!!" ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದ. ಆಕೆ ಮತ್ತಷ್ಟು ರೊಚ್ಚಿಗೆದ್ದು ಉಗಿಯಲು ಶುರುವಿಟ್ಟಳು.

"ಹಿಂಗೆಲ್ಲ ಬೈದರೆ ಸರಿ ಹೋಗಲ್ಲ ಕಣೇ ಇವನು, ಒಮ್ಮೆ ನೀನು ಮಾಡೋ ಅಮಿಬಾ ಪಕೋಡ ತಿನ್ನಿಸು ಬುದ್ದಿ ನೆಟ್ಟಗಾಗುತ್ತೆ" ನಕ್ಕ ಪ್ರಸನ್ನ ‌ಶಿಷ್ಯನ ಪಾಡು ನೋಡಿ. 

"ಹ್ಮಾ ಅದೇ ಸರಿ..." ಮಾತಿನ ದಾಳಿಯಲ್ಲಿ ನುಡಿದ ಮಾನ್ವಿ, ತನಗೆ ತಾನೇ ಅವಮಾನಿಸಿಕೊಂಡು ಮುಖ ಹಿಡಿಯಾಗಿಸಿ, ಮುಷ್ಟಿ ಬಿಗಿದಳು.

ಪ್ರಸನ್ನನ ನಗುವಿನ ಜೊತೆ ಸುತ್ತಲಿನವರ ನಗು ಸೇರಿತು‌. ಅದೇಕೋ ಮಾನ್ವಿಯ ತುಟಿಯಂಚಲ್ಲಿ ಬಿಗಿದಿಟ್ಟ  ಕೋಪ ಕಿರುನಗುವಾಗಿ ಜಾರಿತು.
ಆದರೆ ಮಾಸ್ಟರ್ ಮೈಂಡ್ ರೋಹಿತ್ ಯೋಜನೆ  ತೋಪಾಯಿತು.


ಮುಂದುವರೆಯುವುದು..



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತನ್ನ

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ಮುಗುಳ್ನಕ್ಕಳು ಪರಿ.