ವಿಷಯಕ್ಕೆ ಹೋಗಿ

ಅನೂಹ್ಯ


ಅನೂಹ್ಯ

ಬದುಕಿನ ದಾರಿಯಲ್ಲಿ ಅಚಾನಕ್ಕಾಗಿ ಸಿಕ್ಕ ಅನಾಮಿಕನೊಬ್ಬ ಹೇಳದೆ ಕೇಳದೆ ಮನಸ್ಸು ದೋಚಿಬಿಟ್ಟಿದ್ದ. ನನಗೆ ಅದರ ಪರಿವು ಇರಲಿಲ್ಲ. ನಿದ್ರೆಯಿಲ್ಲದೆ ಕಳೆದ ಇರುಳುಗಳಲ್ಲಿ ಇಣುಕಿ ಕಾಡುವ ಅವನ ನೆನಪುಗಳು ಸಹ ನನಗೆ ಇಡೀ ದಿನದ ದಿನಚರಿಯೆಂದೇ ಭಾಸವಾಗುತ್ತಿತ್ತು. ಬಹುಶಃ ಅವನಿಗೂ ಇದರ ಕಲ್ಪನೆ ಇರಲಿಲ್ಲವೇನೋ!  ನಾನು ಮಾತ್ರ ಪ್ರತಿದಿನ ಹೊಸತೊಂದು ಕನಸುಗಳ ಪೊಣಿಸುತ್ತಲೇ ಇದ್ದೆ!  ಹೀಗೊಂದು ದಿನ ಅವನು ನನ್ನೆದುರು ಮೊಣಕಾಲುರಿ ಕೈ ಚಾಚಿ ನನ್ನ ಪ್ರೀತಿಗಾಗಿ ಹಂಬಲಿಸಬಹುದೇ?!  ಹೀಗೊಮ್ನೆ ಅವನು ನನ್ನ ಕಣ್ಣಲ್ಲಿ ಕಣ್ಣಿಟ್ಟು ತನ್ನ ಪ್ರೀತಿಯನ್ನು ಮನಸಾರೆ ಹೇಳಬಹುದೇ?! ಎಂದೆಲ್ಲಾ ಕನಸು ಕಾಣುತ್ತಿದ್ದೆ. ನಮ್ಮ ಬದುಕು ನಾವು ಅಂದುಕೊಂಡ ಹಾಗೆ ನಡೆದು ಹೋಗುವಂತಿದ್ದರೆ ವಿಧಿಗೆ ಕೆಲಸವಿಲ್ಲದೆ ನಿರುದ್ಯೋಗಿಯಾಗಿ ಇಲ್ಲೆ ಎಲ್ಲೋ ಭೂಮಿ ಮೇಲೆ ಕೆಲಸಕ್ಕಾಗಿ ಅಲೆಯುತ್ತಿತ್ತೇನೋ ಅಲ್ವಾ..

ಬಹಳ ದಿನಗಳ ಕಠಿಣ ಪರಿಶ್ರಮದ ನಂತರ ಸಿಕ್ಕ ಒಂದು ಒಳ್ಳೆಯ ಅವಕಾಶವನ್ನು ಸಾಧನೆಯ ಮೆಟ್ಟಿಲಾಗಿ ಮಾಡಿಕೊಳ್ಳುವ ಗುರಿಯಿಟ್ಟುಕೊಂಡು ಆ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದೆ. ನಮ್ಮ ಟೀಮ್ ನಲ್ಲಿ ಇದ್ದದ್ದು ಒಟ್ಟು ಏಳು ಜನರು. ನಾಲ್ಕು ಜನ ಹುಡುಗರು, ಮೂರು ಜನ ಹುಡುಗಿಯರು. ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲರೂ ಯುವಜನಾಂಗದವರೇ. ಟೀಮ್ ಲೀಡರ್ ಒಬ್ಬನನ್ನು ಹೊರತು ಪಡಿಸಿ ಉಳಿದ ಎಲ್ಲರೂ ತುಂಬಾ ಫ್ರೆಂಡ್ಲಿಯಾಗಿದ್ದರು. ಒಬ್ಬರಿಗೊಬ್ಬರು ಪರಸ್ಪರ ಚೇಷ್ಟ ಮಾಡುವುದು, ನಗುವುದು ನಗಿಸುವುದು, ಅವರ ಮಧ್ಯೆ ಹೊಸದಾಗಿ ಸೇರಿದ ನನಗೆ ಎಲ್ಲರೂ ಬಹಳ ಕಾಲದಿಂದಲೂ ಪರಿಚಿತರಂತೆ ಹೊಂದಿಕೊಂಡರು. ಆದರೆ ಟೀಮ್ ಲೀಡರ್ ಮಾತ್ರ ಕೆಲಸ ಎಷ್ಟಿದೆಯೋ ಅಷ್ಟೇ ಮಾತಾಡುತ್ತಿದ್ದ. ಒಂದು ದಿನ ನಗುಮುಖವಿಲ್ಲ. ಇಡೀ ಆಕಾಶವನೇ ತಲೆ ಮೇಲೆ ಎತ್ತಿಕೊಂಡತ್ತೆ ಚೀರಾಡುತ್ತಿದ್ದ. ಹೊಸದರಲ್ಲಿ ಆ ಲೀಡರ್ ಯಾಕೆ ಹಾಗೆ ಎಂದು  ಕೇಳಿದಾಗ ಅವನೊಬ್ಬ ಹಿಟ್ಲರ್ ಪುನರವತಾರ. ಯಾವಾಗಲೂ ಸಿಡುಕುತ್ತಾನೆ. ಆದರೆ ಸಭ್ಯಸ್ಥ. ಹುಡುಗಿಯರೆಂದರೆ ಗೌರವ, ಯಾರೊಂದಿಗೂ ಹೆಚ್ಚು ಮಾತಾಡಲ್ಲ ಇತ್ಯಾದಿ ಸಮಾಚಾರ ಕೇಳಿಪಟ್ಟೆ. ಆಗಲೇ ಅವನ ಮೇಲೆ ಏನೋ ವಿಶೇಷ ಕುತೂಹಲ ಚಿಗುರೊಡೆಯಿತು. ಮೊದಮೊದಲು ಹೊಸ ಕೆಲಸ ಅಲ್ಲವಾ ತುಂಬಾ ಆಸಕ್ತಿಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದೆ. ಹೊಸದರಲ್ಲಿ ಅಗಸ ಬಟ್ಟೆಗಳನ್ನ ಎತ್ತಿ ಎತ್ತಿ ಒಗೆದ ಹಾಗೆ ಊಟದ ಅವಧಿಯಲ್ಲಿ ಸಹ ಬಿಡುವಿಲ್ಲದೆ, ಹನಿ ನೀರು ಕುಡಿಯಲು ಸಮಯ ವ್ಯರ್ಥ ಮಾಡದೆ, ಕಂಪ್ಯೂಟರಿಗೂ ಜೀವನ ಬೇಸರವಾಗುವಂತೆ ಕುಟ್ಟುತ್ತ ಕುಳಿತಿರುತ್ತಿದ್ದೆ. ಕಂಪ್ಯೂಟರ್‌ಗೆ ಏನಾದ್ರೂ ಮಾತು ಬರ್ತಿದ್ರೆ ಕ್ಯಾಕರಿಸಿ ಮುಖಕ್ಕೆ ಉಗಿಯುತ್ತಿತ್ತೆನೋ ಆದರೆ ಅದರ ಬದಲಿಗೆ ಜೊತೆಗಿದ್ದ ನಮ್ಮ ಟೀಮ್ ನವರು ಹೀಗೆಲ್ಲ ಹೆವಿ ವರ್ಕ್ ಮಾಡಿದ್ರೆ ಹುಚ್ಚು ಹಿಡಿಯುತ್ತೆ ಅಂತ ಸೂಕ್ಷ್ಮವಾಗಿ ಬುದ್ದಿ ಹೇಳಿದರು‌. ಆದರೆ ನಾನು ಅವರ ಮಾತಿಗೆ ಸುಮ್ಮನೆ ಹಿಹಿಹಿ ಎಂದು ಕಿಸಿದು ಮತ್ತೆ ಕಾಯಕವೇ ಕೈಲಾಸ ಎಂಬ ಉಕ್ತಿಯನ್ನೇ ಮುಂದುವರೆಸಿದೆ.. ಆವಾಗ ನಾನು ಕೆಲಸ ಮಾಡಿದ್ದು ಕೇವಲ ಹೊಸ ಕೆಲಸದ ಉತ್ಸಾಹದಿಂದಲ್ಲ, ನನ್ನ ಮುಂದಿನ ಉನ್ನತ ಬಡ್ತಿಗಾಗಿ, ಒಳ್ಳೆಯ ಸಂಬಳಕ್ಕಾಗಿ, ಅನುಭವಕ್ಕಾಗಿ, ಒಳ್ಳೆಯ ಹೆಸರಿಗಾಗಿ..!!  ಆದರೆ ಈಗ ಅನ್ನಿಸುತ್ತಿದೆ ಆಗ ಹಾಗೆಲ್ಲ ಮಾಡಬಾರದಿತ್ತೆನೋ! ಹಾಗೆ ಮಾಡಿರದಿದ್ದರೆ ಯಾರೊಂದಿಗೂ ಮುಖಕ್ಕೆ ಮುಖ ಕೊಟ್ಟು ಮಾತಾಡದ ಆ ಟೀಮ್ ಲೀಡರ್ ಅಷ್ಟೊಂದು ಆಪ್ತ ಆಗುತ್ತಿರಲಿಲ್ಲವೆನೋ! ದಿನಪೂರ್ತಿ ಹರಟೆಯಲ್ಲಿ ಕಾಲಹರಣ ಮಾಡುತ್ತ  ಬರೀ ತಿಂಗಳ ಸಂಬಳಕ್ಕಾಗಿ ಒಂದೆರಡು ಗಂಟೆ ಕೆಲಸ ಮಾಡುವ ನಮ್ಮ ಟೀಮ್ ನವರ ನಡುವೆ ಇಡೀ ಆಫೀಸಿನಲ್ಲಿ ತುಂಬಾ ಶ್ರದ್ಧೆಯಿಂದ ಕೆಲಸ ಮಾಡುವ, ಮತ್ತು ಎಲ್ಲರ ತಪ್ಪುಗಳನ್ನು ಖಂಡಿಸಿ ನಿಷ್ಠುರವಾಗಿದ್ದ ಅವನು, ಎಲ್ಲರ ದೃಷ್ಟಿಯಲ್ಲಿ ಹಿಟ್ಲರ್, ಗರ್ವಿಷ್ಟ, ಪಾಪಿಷ್ಟ, ದರ್ಪಿಷ್ಟ ಇನ್ನೂ ಏನೇನೋ ಪಿಷ್ಟ ಆಗಿದ್ದವನು, ಆದರೆ ನನಗೆ ಯಾಕೆ ಇಷ್ಟ ಆದನೋ ನನಗೆ ಈಗಲೂ ಒಂದು ಪ್ರಶ್ನೆಯಾಗಿಯೇ ಉಳಿದಿದೆ. 

ಹೀಗೆ ಒಂದು ಮಧ್ಯಾಹ್ನ ನಾನು ಊಟಕ್ಕೆ ಹೋಗದೆ ಕಂಪ್ಯೂಟರ್ ಮುಂದೆ ನನ್ನ ಕಷ್ಟ ಸುಖದ ಲೆಕ್ಕಾಚಾರ ಹೇಳುತ್ತ ಕೆಲಸ ಮಾಡುತ್ತಿದ್ದಾಗ ಹಿಂದಿನಿಂದ ಬಂದವನೇ 'ಊಟಕ್ಕೆ ಹೊಗಲ್ವಾ' ಎಂದು ಕೇಳಿದ. ಈ ದಿನ ದೇವರು ಯಾವ ಮಗ್ಗುಲಲ್ಲಿ ಇದ್ದಿರಬಹುದು ಎಂದು ಆಲೋಚಿಸುತ್ತಲೇ 'ಇಲ್ಲ ಸರ್. ಹಸಿವಿಲ್ಲ' ಎಂದು ಹೇಳಿ ಕೆಲಸ ಮುಂದುವರೆಸಿದೆ. ಅಷ್ಟರಲ್ಲೇ ಮತ್ತೊಂದು ಪ್ರಶ್ನೆ ತೇಲಿ ಬಂದಿತು 'ನನ್ನ ಜೊತೆಗೆ ಊಟಕ್ಕೆ ಬರ್ತಿರಾ?' ನನಗೆ ನಂಬಲು ಆಗಲಿಲ್ಲ. ಎಲ್ಲರೊಂದಿಗೆ ಅಷ್ಟೊಂದು ದೂರದ ಅಂತರ ಇಟ್ಟುಕೊಂಡಿರುವ ಇವನೇನಾ ನನ್ನನ್ನು ಊಟಕ್ಕೆ ಕರೆಯುತ್ತಿರೋದು!! ಒಳಗೊಳಗೆ ಖುಷಿ ಜೊತೆಗೆ ಹೆಮ್ಮೆಯಾಯಿತು. ಯಾರಿಗೂ ಎಟುಕದ ಬೆಟ್ಟದ ಹೂ ತಾನಾಗಿಯೇ ಬಳಿ ಬಂದು ಮಾತಾಡುವಾಗ ಹೇಗೆ ಬಿಡಲಾದೀತು 'ಸರಿ, ಬನ್ನಿ' ಎಂದು ಹೊರಟೆ.

ನಾನು ಅವನ ಜೊತೆಗೆ ಊಟಕ್ಕೆ ಕ್ಯಾಂಟೀನ್ ಕಡೆಗೆ ಹೆಜ್ಜೆ ಹಾಕುವಾಗ ಎಲ್ಲರ ದೃಷ್ಟಿ ನಮ್ಮ ಮೇಲೆಯೇ! ಯಾರಿಗೂ ಒಲಿಯದ ಹುಡುಗನ ಮನಸ್ಸು ನನಗೆ ಸೋತಿದೆ ಎಂದು ಪದೇ ಪದೇ ಅದನ್ನೇ ಸ್ಮರಿಸುತ್ತಾ ಮನಸ್ಸಲ್ಲೇ ಕುಣಿದಾಡಿದೆ. ಎಲ್ಲಾ ಹುಡುಗಿಯರ ಮನಸ್ಸು ಹೀಗೆನಾ,  ಹಿಂದೆ ಬೀಳುವ ಸಾವಿರ ಪ್ರೀತಿಯನ್ನು ಧಿಕ್ಕರಿಸಿ ಯಾರಿಗೂ ಕರಗದ ಕಲ್ಲು ಹೃದಯವನ್ನು ನೀರಾಗಿ ಆವರಿಸಲು ಆಸೆ ಪಡುವುದು. ಏನೋ ಎಂತೋ ಆ ದಿನ ಮಾತ್ರ ಮನಸ್ಸು ಬೀಗುತ್ತಿತ್ತು.

ಆ ದಿನ ಊಟದ ಸಮಯದಲ್ಲಿ ಅವನು ನನ್ನೊಂದಿಗೆ ತುಂಬಾ ಮುಕ್ತವಾಗಿ ಮಾತನಾಡಿದ. ವೈಯಕ್ತಿಕ ಜೀವನದ ಬಗ್ಗೆ ಅಲ್ಲ ಕೇವಲ ವೃತ್ತಿಪರ ವಿಚಾರಗಳ ಬಗ್ಗೆ ಅಷ್ಟೇ. ನನ್ನ ಕೆಲಸದ ಮೇಲಿನ ಶ್ರದ್ಧೆ ಆಸಕ್ತಿಯನ್ನು ಹೊಗಳಿದ. ಬಾಕಿ ಟೀಮ್ ಮೆಂಬರ್ಸ್ ಕಾರ್ಯವೈಖರಿಯನ್ನು ಹೇಳಿ ಉಗಿದು ನಿವಾಳಿಸಿ ಎಸೆದ. ನಾನು ಸುಮ್ಮನೆ ನನ್ನ ಪ್ರಶಂಸೆಗಳ ಪ್ರಶಸ್ತಿಯನ್ನು ಆಹ್ಲಾದಿಸುತ್ತಿದ್ದೆ. ಮತ್ತೆ ಹೇಳಿದ 'ಸೀನಿಯರ್ ಅಂತ ಸಂಕೋಚ ಪಟ್ಟುಕೊಳ್ಳಬೇಡಿ, ಕೆಲಸದಲ್ಲಿ ಏನಾದರೂ ಸಮಸ್ಯೆ, ಶಂಕೆಗಳಿದ್ದರೆ ಕೇಳಿ.'  ನಾನು ಎಲ್ಲದಕ್ಕೂ ಮುಗುಳ್ನಗುತ್ತಾ ಮೇಕೆಯಂತೆ ಕತ್ತು ಅಲ್ಲಾಡಿಸಿ ಹ್ಮೂ ಅಂದೆ.

ಇಡೀ ಆಫೀಸನ್ನು ಹಿಡಿತದಲ್ಲಿಟ್ಟುಕೊಂಡ, ಎಲ್ಲರೂ ಗೌರವಿಸುವ (ಮೇಲ್ನೋಟಕ್ಕೆ ಮಾತ್ರ) ಹುಡುಗನೊಬ್ಬ ನನ್ನನ್ನು ಮೆಚ್ಚಿದ್ದು, ಹೊಗಳಿದ್ದು, ಮಾತಾಡಿಸಿದ್ದು, ತನ್ನೊಡನೆ ಊಟಕ್ಕೆ ಆಹ್ವಾನಿಸಿದ್ದು ನನ್ನ ಕಲ್ಪನಾಲೋಕಕ್ಕೆ ಮತ್ತೆರಡು ಗರಿ ಮೂಡಿಸಿತ್ತು. 'ಇನ್ಮುಂದೆ ಹೀಗೆ ಊಟ ಬಿಟ್ಟು ಕೆಲಸ ಮಾಡಬೇಡಿ. ಆರೋಗ್ಯ ಚೆನ್ನಾಗಿದ್ದರೆ ತಾನೇ ಮಾಡುವ ಕೆಲಸದಲ್ಲಿ ಶಿಸ್ತು ಆಸಕ್ತಿ ಇರೋದು. ಸೋ ಮೊದಲು ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ' ಎಂದು ಹೇಳಿದ. ನನ್ನ ಬಗ್ಗೆ ಆತ ತೋರಿಸಿದ ವಿಶೇಷ ಕಾಳಜಿ ನೋಡಿ ಅವನಿಗೆ ನನ್ನ ಮೇಲೆ ಸಮಥಿಂಗ್ ಫೀಲಿಂಗ ಇರಬಹುದು ಅನ್ನಿಸಿತು‌‌.  ಊಟ ಮುಗಿಸಿ ಹೊರಡುವಾಗ ಫೋನಿನ ಕಾಂಟ್ಯಾಕ್ಟ್ ಸಾಲಿನಲ್ಲಿ ಇಬ್ಬರ ನಂಬರ್ ಗಳು ಮನೆ ಮಾಡಿದವು. ಆ ದಿನ ನನಗೆ ತುಂಬಾ ವಿಶೇಷವಾಗಿ ನೆನಪಿನ ಪುಟದಲ್ಲಿ ಅವಿತುಕೊಂಡಿತು.

ಆ ರಾತ್ರಿ ಗೆಳತಿ ಜೊತೆಗೆ ಹಾಸ್ಟೆಲಿನಲ್ಲಿ ಊಟ ಮುಗಿಸಿ, ವಾಕಿಂಗ್ ಹೊರಡುವಾಗ ವಾಡಿಕೆಯಂತೆ ಮೊಬೈಲ್ ತೆಗೆದು ನೋಡಿದೆ. ಯಾವುದೋ ಒಂದು ಅನಾಮಧೇಯ ಸಂಖ್ಯೆಯಿಂದ ಸಂದೇಶ ಬಂದಿತ್ತು.  ಯಾರೆಂದುಕೊಳ್ಳುತ್ತಲೇ ತೆಗೆದು ನೋಡಿದೆ 'ಹಾಯ್‌..ಊಟ ಆಯ್ತಾ' ಎಂದಿತ್ತು. ಯಾವತ್ತೂ ಆ ರೀತಿಯ ಅನಾಮಧೇಯ ಸಂದೇಶಗಳಿಗೆ ತಲೆ ಕೆಡಿಸಿಕೊಳ್ಳದ ನಾನು ಅಂದು ಟ್ರೂ ಕಾಲರ್ ನಲ್ಲಿ ನಂಬರ್ ಚೆಕ್ ಮಾಡಿದಾಗ ಅದರಲ್ಲಿ "ಅನೂಹ್ಯ" ಎಂಬ ಹೆಸರು ಕಾಣಿಸಿತು. ಯಾರಿರಬಹುದು ಎಂದು ಬಹಳ ಹೊತ್ತು ಯೋಚಿಸಿದೆ. ನಮ್ಮ ಟೀಮ್ ನವರ ಎಲ್ಲರ ಫೋನ್ ನಂಬರ್ ನನಗೆ ಗೊತ್ತು. ಎಂದೂ ಹೀಗೆ ಮಾಡಿದವರಲ್ಲ. ಮತ್ತೆ ಯಾರು? ಎಂದು ಆಲೋಚಿಸುವಾಗ ಅವತ್ತು ನಮ್ಮ ಟೀಮ್ ಲೀಡರ್ ಅಂದ್ರೆ ಸೀನಿಯರ್ ನನ್ನ ಫೋನ್ ನಂಬರ್ ತೆಗೆದುಕೊಂಡದ್ದು ನೆನಪಾಯಿತು. ಆಗಲೇ ನನಗೆ ಗೊತ್ತಾಗಿ ಹೋಗಿತ್ತು ಇದು ಅವನೇ.. ಹಿಟ್ಲರ್!! ಆದರೆ ಬೇರೆ ನಂಬರಿನಿಂದ  ಮೆಸೇಜ್ ಮಾಡಿದ್ದನೆಂದು.  ಒಂದು ಕಡೆಗೆ ತಡೆಯಲಾಗದ ಖುಷಿ ಆದರೂ ಅದನ್ನು ಹೇಳಿಕೊಳ್ಳದೆ 'ಯಾರು ನೀವು' ಎಂದು ಕೇಳಿದೆ.  ಬೀಪ್ ಸದ್ದಿನೊಂದಿಗೆ ಪ್ರತ್ಯುತ್ತರ ಬಂದಿತು 'ನಿಮ್ಮ ಟೀಮ್ ನವನೆ! ಯಾರು ಕಂಡು ಹಿಡಿರೀ ನೋಡೋಣ' ಎಂದಿತ್ತು. ನೇರವಾಗಿ ಮಾತಾಡಲು ಸಂಕೋಚವಾಗಿ ಹೀಗೆ ಮಾಡ್ತಿದ್ದನೆಂದು ಅರಿತೆ.  'ಕಂಡು ಹಿಡಿದರೆ ನನಗೇನು ಬಹುಮಾನ' ಎಂದು ಕೇಳಿದೆ. 'ನಾನು ಯಾರಂತ ಕಂಡು ಹಿಡಿದ್ರೆ ನಾನು ನಿಮಗೆ ಟ್ರೀಟ್ ಕೊಡಿಸ್ತಿನಿ. ಅಕಸ್ಮಾತ್ ನೀವು ಸೋತರೆ...' ಎಂದು ಕಳಿಸಿದ್ದ. ಕೆಲ ಸಮಯ ಕಣ್ಣೋಟ ಎಲ್ಲೆಲ್ಲೂ ಅಲೆದಾಡಿ ಯೋಚಿಸಿ 'ಅಕಸ್ಮಾತ್ ಕಂಡು ಹಿಡಿಯಲಾಗದೆ ಸೋತರೆ....?? ಏನು ಮಾಡಬೇಕು' ಎಂದು ಕೇಳಿದೆ. 'ನನ್ನ ಪ್ರೀತಿನ  ನೀವು ಒಪ್ಕೋಬೇಕು' ಎಂದು ನೇರವಾಗಿ ದಿಟ್ಟವಾಗಿ ಹೇಳಿದ. ನನಗೆ ಒಂದು ಕ್ಷಣ ಏನೂ ತೋಚದಂತಾಯಿತು. ಮೊದಲೇ ಅವನ ಮೇಲೆ ಒಂದು ರೀತಿಯ ಕುತೂಹಲವಿತ್ತು. ಅವನು ಹೀಗೆ ಹೇಳಿದ್ದು ನೋಡಿ ಸ್ವರ್ಗವೇ ಮೇಲಿಂದ ಜಾರಿ ಅಂಗೈ ಮೇಲೆ ಸಿಕ್ಕ ಹಾಗಾಯಿತು. ಆದರೆ ನನಗೆ ಅವನ ಮೇಲೆ ಪ್ರೀತಿ ಇತ್ತಾ. ಅಥವಾ ಬರೀ ಸೆಳೆತವಾ? ಏನಾದರಾಗಲಿ ನೋಡೇ ಬಿಡೋಣವೆಂದು  ಸ್ವಲ್ಪ ತಡ ಮಾಡಿ 'ಸರಿ ಆಯ್ತು, ಆದರೆ ನನಗೆ ಮೂವತ್ತು ದಿನ ಅವಕಾಶ ಬೇಕು ಕಂಡು ಹಿಡಿಯೊಕೆ' ಎಂದು ಕಳಿಸಿದೆ. ಅವನು ಅದಕ್ಕೆ ಸಮ್ಮತಿಸಿ ತಾನು ಯಾರೆಂದು ಕಂಡು ಹಿಡಿಯುವ ಮುನ್ನ ಕಾಲ್ ಮಾಡಿ ಮಾತಾಡುವ ಹಾಗಿಲ್ಲ ಎಂಬ ಷರತ್ತಿನ ಜೊತೆಗೆ ಈ ಚಾಲೆಂಜಿನ ಗಡುವು ಮೂವತ್ತು ದಿನಗಳು ಎಂದು ನಿಗದಿಪಡಿಸಿದ. ಆದರೆ ನಾನು ಬೇರೆ ಫ್ರೆಂಡ್ ನಂಬರಿನಿಂದ ಕಾಲ್ ಮಾಡಿ ಮಾತಾಡಲು ಪ್ರಯತ್ನಿಸಿದೆ ಅದು ಹೇಗೋ ಅವನಿಗೆ ಗೊತ್ತಾಗಿ ಹೀಗೆಲ್ಲ ಚೀಟಿಂಗ್ ಮಾಡಿದ್ರೆ ಮೂಗು ಇನ್ನಷ್ಟು ಉದ್ದ ಆಗುತ್ತೆ ಎಂದು ಅಣುಗಿಸಿದ. ಆ ಪ್ರಯತ್ನವನ್ನು ಅಲ್ಲಿಗೆ ಕೈ ಬಿಟ್ಟೆ.

ಅದಾದ ನಂತರ ನಮ್ಮ ಸಂಭಾಷಣೆ ಹೀಗೆ ಮುಂದುವರೆಯಿತು. ಊಹೆಗೆ ನಿಲುಕದ ಆ ಅನಾಮಿಕನಿಗೆ "ಅನೂಹ್ಯ" ಎಂದೇ ಕರೆಯುವುದು ರೂಢಿಯಾಯಿತು. ಪ್ರತಿ ಮುಂಜಾವು ಅವನ ಶುಭೋದಯದಿಂದ ಆರಂಭವಾಗಿ ಇರುಳು ಅವನ ಕವನ ಮಿಶ್ರಿತ ಶುಭರಾತ್ರಿಯೊಂದಿಗೆ ಮಲಗುವ ಸನ್ನಾಹದಲ್ಲಿರುತ್ತಿತ್ತು. ನೀವು ತಾವುಗಳು ಲೇ..ಲೋ.. ಗಳಾಗಿ ಬದಲಾದವು. ರಾಜಕೀಯ, ಚಲನಚಿತ್ರ, ಹಾಡುಗಳು, ಪ್ರಸ್ತುತ ಸಂಸ್ಕೃತಿಗಳ ಬಗ್ಗೆ, ಹೊಸ ಹೊಸ ತಂತ್ರಜ್ಞಾನದ ಬಗ್ಗೆ ಲೋಕಾಭಿರಾಮವಾಗಿ ಹರಟುತ್ತಿದ್ದ ನಾವು ಯಾವತ್ತೂ ಅಪ್ಪಿತಪ್ಪಿಯೂ ವೈಯಕ್ತಿಕ ವಿಚಾರಗಳನ್ನು ಚರ್ಚಿಸುತ್ತಿರಲಿಲ್ಲ. ದಿನಗಳೆದಂತೆ ಇಬ್ಬರ ಆಸಕ್ತಿ ಅನಾಸಕ್ತಿಗಳು, ಇಷ್ಟ ಕಷ್ಟಗಳು, ಗುಣಾವಗುಣಗಳು ವಿನಿಮಯವಾದವು. ಚಾಟ್ ಮಾಡುವಾಗ ಚಿಕ್ಕ ಮಗುವಂತೆ ಕಾಡುವ, ಸತಾಯಿಸುವ, ಕತ್ತೆ ಕೋತಿ ಎಂದೆಲ್ಲ ಜಗಳಾಡುವ ಹುಡುಗ ಆಫೀಸಿನಲ್ಲಿ ಎಲ್ಲರ ಎದುರು ಮಾತ್ರ ಗಂಭೀರವಾಗಿ ವರ್ತಿಸುತ್ತಿದ್ದ. ಒಮ್ಮೆ ನಾನು ಅವನ ಷರತ್ತು ಮೀರಿ  ಬೇರೆ ಫ್ರೆಂಡ್ ನಂಬರಿನಿಂದ ಕಾಲ್ ಮಾಡಿ ಮಾತಾಡಲು ಪ್ರಯತ್ನಿಸಿದಾಗ ಅದು ಹೇಗೋ ಅವನಿಗೆ ಗೊತ್ತಾಗಿ ಹೀಗೆಲ್ಲ ಚೀಟಿಂಗ್ ಮಾಡಿದ್ರೆ ಮೂಗು ಇನ್ನಷ್ಟು ಉದ್ದ ಆಗುತ್ತೆ ಎಂದು ಅಣುಗಿಸಿದ. ಅಲ್ಲಿಗೆ  ನನ್ನ ಮೂಗಿನ ಮೇಲೆ ನನಗಿದ್ದ ಅಸಮಾಧಾನವನ್ನು ಕೂಡ ಅವನು ಗಮನಿಸಿದ್ದಾನೆ ಎಂದು ಅರ್ಥಮಾಡಿಕೊಂಡೆ. ಆ ಪ್ರಯತ್ನವನ್ನು ಅಲ್ಲಿಗೆ ಕೈ ಬಿಟ್ಟೆ. 

ಮೊದಲೆಲ್ಲ ಗಂಭೀರವಾಗಿರುತ್ತಿದ್ದ ಮುಖದಲ್ಲಿ ಈಗೀಗ ನನ್ನ ಕಂಡಾಗ,  ಆಗೊಮ್ಮೆ ಈಗೊಮ್ಮೆ ಎದುರು ಬಂದಾಗ ಮುಗುಳ್ನಗುತ್ತಿದ್ದ. ಹೀಗೆ ಗಂಭೀರವಾಗಿ ಇರುವ ಬದಲು ಚಾಟ್ ಮಾಡುವ ಹಾಗೆ ತಮಾಷೆ ಮಾಡುತ್ತಾ ಇರಬಹುಲ್ಲೋ ಹುಡುಗ ಎಂದುಕೊಂಡೆ ಎಷ್ಟೋ ಸಲ. ಈಗೀಗ ಅವನೆಂದೆರೆ ಮನಸ್ಸು ಗರಿಬಿಚ್ಚಿ ಕುಣಿದಾಡುತ್ತಿತ್ತು. ಪ್ರಾಜೆಕ್ಟ್ ಡಿಸ್ಕಷನ್ ಮಾಡುವಾಗ ನಾನು ಅವನ ಮಾತುಗಳನ್ನೇ ಆಲಿಸುವಂತೆ ಅವನನ್ನೇ ತದೇಕಚಿತ್ತದಿಂದ ನೋಡುತ್ತಾ ಮೈಮರೆತಾಗ, ಅವನು ಪೆನ್ನಿನಿಂದ ತಲೆಗೆ ಟಕ್ ಎಂದು ಕುಟ್ಟಿ ಎಚ್ಚರಗೊಳಿಸಿ ಹುಬ್ಬು ಹಾರಿಸಿದರೆ ನಾನು ನಾಲಿಗೆ ಕಚ್ಚಿ ಕಿವಿ ಹಿಡಿದುಕೊಳ್ಳುತ್ತಿದ್ದೆ. ಅವನು ನಕ್ಕು ನನ್ನ ತಲೆ ಸವರುತ್ತಿದ್ದ. ಪರಿಪಕ್ವಗೊಂಡ ಅವನ ವ್ಯಕ್ತಿತ್ವದ ಮಧ್ಯೆ ನನಗೊಂತರಾ ಮಗುವಿನಂತ ಭಾವನೆ. ಹಿನ್ನೆಲೆಯಲ್ಲಿ ಮಧುರವಾದ 'ಚಂದ ಅವನ ಕಣ್ಸನ್ನೇ.. ಮರೆತೆ ನಾನು ನನ್ನನ್ನೇ..' ಹಾಡು ಗುನುಗಿದಂತಾಗುತ್ತಿತ್ತು. ಅವನು ನನ್ನ ಪಕ್ಕದಲ್ಲಿ ಹಾದು ಹೋದಾಗ ಅರಿವಿಲ್ಲದೆ ಬೆರಳಂಚು ಕೊಂಚ ಸೋಕಿದಾಗ ಮನಸ್ಸಲ್ಲೇನೋ ಪುಳಕ. ಮೊದಲೆಲ್ಲ ಬರೀ ಕುತೂಹಲ ಕೆರಳಿಸಿದ ಅವನ ಗಾಂಭೀರ್ಯ, ಯಾರನ್ನೂ ಕೇರ್ ಮಾಡದ ವ್ಯಕ್ತಿತ್ವ, ಸಮಯ ಸರಿದಂತೆ ಮನದಲ್ಲಿ ಅಚ್ಚೊತ್ತಿ, ಒಲವು ಮೂಡುವಂತಾಯಿತು. ಅವನು ನನ್ನನ್ನು ಹೊಗಳುವದನ್ನು ಸಹಿಸದ ನಮ್ಮ ಟೀಮಿನ ಕೆಲವು ಜನ ಹೊಟ್ಟೆಕಿಚ್ಚಿನಿಂದ ನನ್ನೊಡನೆ ಮಾತು ಬಿಟ್ಟರು. ಒಂದು ರೀತಿಯಲ್ಲಿ ಅವರ ಗುಂಪಿನಿಂದಲೇ ಬಹಿಷ್ಕಾರ ಹಾಕಿದರು. ವಿಷಯ ತಿಳಿದ ಅವನು ನನ್ನ ಬೆನ್ನು ತಟ್ಟಿ ಧೈರ್ಯ ಹೇಳಿದ- "ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಡಿ. ಯು ಆರ್ ದ ಬೆಸ್ಟ್..  ಹೀಗೆ ಕೆಲಸ ಮುಂದುವರಿಸಿ."  ನನಗೆ ಇಷ್ಟು ಸಾಕಿತ್ತು ಮನಸ್ಸಿಗೆ ರೆಕ್ಕೆಗಳು ಮೂಡಿ ಕಲ್ಪನೆಯಲ್ಲಿ ತೇಲಾಡಲು.ಯಾರಿದ್ದರೆನೂ ಬಿಟ್ಟರೆನೂ ನಿನೊಬ್ಬ ಜೊತೆಗಿದ್ದರೆ ಸಾಕು ಜಗವನ್ನೇ ಎದುರಿಸಬಲ್ಲೆ ಎಂದು ಪ್ರತಿಧ್ವನಿಸಿತು ಮನಸ್ಸು..

ಚಾಟ್ ಮಾಡುವಾಗೆಲ್ಲ ನಾನು ಆ ದಿನ ಹಾಕಿಕೊಂಡ ಬಟ್ಟೆಯ ಬಣ್ಣದಿಂದ ಹಿಡಿದು ನನ್ನ ಹೇರಸ್ಟೈಲ್, ಬಿಂದಿ, ಜುಮುಕಿ ಅಷ್ಟೇ ಯಾಕೆ ಆ ದಿನ ನಾನು ಎಷ್ಟು ಬಾರಿ ಆಕಳಿಸಿದೆ ಎಂಬುದರವರೆಗೂ  ವರದಿ ಹೇಳುತ್ತಿದ್ದ. ನಾ ಕುಳಿತ ಜಾಗದಿಂದ ಎಡಗಡೆಯಿಂದ ಹಿಂದಿರುಗಿ ನೋಡಿದರೆ ಅವನು ಕಾಣುತ್ತಾನೆ. ಅವನಿಗೂ ನಾನು ಕಾಣಿಸುತ್ತೆನೆ ನಿಜ ಆದರೆ ಯಾವಾಗಲೂ ಕೆಲಸದಲ್ಲಿ ಮಗ್ನನಾಗಿರುವ ಇವನು ಯಾವಾಗ ನನ್ನನ್ನು ಇಷ್ಟೆಲ್ಲ ಗಮನಿಸುತ್ತಾನೆ ಎಂದು ಅನುಮಾನ ಶುರುವಾಯಿತು.
 ಒಮ್ಮೆ ಅವನನ್ನು ಪರೀಕ್ಷೆ ಮಾಡಲೆಂದು ಆಫೀಸಿನಲ್ಲಿ ಕುಳಿತಾಗಲೇ ಅವನಿಗೆ ಮೆಸೇಜ್ ಮಾಡಿದೆ. ಅವನು ಫೋನ್ ಕಡೆಗೆ ತಿರುಗಿಯೂ ನೋಡಲಿಲ್ಲ. ಉಳಿದ ಎಲ್ಲರ ಕಡೆಗೆ ಗಮನಿಸಿದೆ. ಎಲ್ಲರ ಕೈಯಲ್ಲಿ ಮೊಬೈಲಿತ್ತು ಆದರೆ ನನಗೆ ಯಾವ ರಿಪ್ಲೈ ಬರಲಿಲ್ಲ. ಆ ಅನೂಹ್ಯ ಅವನೇ ಎಂದು ಮತ್ತೊಮ್ಮೆ ದೃಢವಾಯಿತು. ಬೇರೆಯವರ ಹಾವಭಾವಗಳನ್ನು ಗಮನಿಸಿ ನೋಡಿದೆ. ಎಲ್ಲಾ ಮೊದಲಿನಂತೆ ಮಾಮೂಲಾಗಿದ್ದರು. ಇತ್ತೀಚೆಗೆ ಇವನ ವರ್ತನೆಯಲ್ಲಿ ಬದಲಾವಣೆಗಳನ್ನು ಕಂಡಿದ್ದ ನನಗೆ ಇವನೇ ಅನೂಹ್ಯನೆಂದು ಮತ್ತೆ ಮತ್ತೆ ಮನದಟ್ಟಾಯಿತು. ಆ ರಾತ್ರಿ ಅವನು ಮೆಸೇಜ್ ಮಾಡಿದಾಗ ಮಧ್ಯಾಹ್ನ ರಿಪ್ಲೈ ಮಾಡದಿದ್ದಕ್ಕೆ ನಾನು ಕೋಪಗೊಂಡಂತೆ ನಟಿಸಿ ಅವತ್ತು ರಿಪ್ಲೈ ಮಾಡಲಿಲ್ಲ. ಅವನು ಮಧ್ಯಾಹ್ನ ಉತ್ತರಿಸದಕ್ಕೆ ಕ್ಷಮೆ ಕೇಳಿದರೂ ನಾನು ಏನೂ ಹೇಳದೆ ಸುಮ್ಮನಾದೆ.

ಮರುದಿನ  ಆಫೀಸಿಗೆ ಹೋಗಿ ನೋಡುವಷ್ಟರಲ್ಲಿ ನನ್ನ ಟೇಬಲ್ ಮೇಲೆ ಒಂದು ಗಿಫ್ಟ್ ಜೊತೆಗೆ ಒಂದು ಲೆಟರ್ ಸಿಕ್ಕಿತು. ಗಿಫ್ಟ್ ನಲ್ಲಿ ಸಾರಿ ಕೇಳುತ್ತಿದ್ದ ಪುಟ್ಟ ಟೆಡ್ಡಿ ಗೊಂಬೆ ನಗುತ್ತಿತ್ತು, ಪತ್ರದಲ್ಲಿ 
"ಕಂಡು ಕಾಣದಂತೆ ನೀ ದೂರವಾಗುತಿರೆ 
ಮನಸ್ಸೆಕೋ ದೂರುತಿದೆ ತನ್ನನ್ನೇ, 
ಅರಿತು ಅರಿಯದೆ ತಪ್ಪಾಗಿರಬಹುದು 
ಕ್ಷಮಿಸಿ ಅದನೊಮ್ಮೆ ರಮಿಸಿ ಬಿಡು ನೀ ಸುಮ್ಮನೆ, 
ಅಪರಿಚಿತ ಭಾವನೆಗಳ ಒಡನಾಟ ಲಭಿಸಿತು
ನೀ ಪರಿಚಿತಳಾದ ಮೇಲೆ, 
ನಿಷ್ಕಾರಣ ದೂರಾಗಿ 
ದೂರ ಮಾಡದಿರು ನನ್ನಿಂದ ನನ್ನನ್ನೇ, 
ಮನವಿ ಮಾಡಿದೆ ಇರುಳು ನೀಡೊಂದು ಮುಗುಳ್ನಗೆ,
ಸರಿದೂಗಿ ಇಡೀ ಹಗಲಿನ ನಿಂದನೆಯ ಮರೆತು ನಿದಿರೆಗೆ ಜಾರುವೆ, ಜರಿಯದಿರು ಕನವರಿಕೆಯಲಿ ಬಿಡದೆ ನಿನ್ನ ಸ್ಮರಿಸಿದರೆ
ರೂಢಿಯಾಗಿದೆ ಮನಕೆ ನಿನ್ನ ಮಾತುಗಳ ಆಲಿಕೆ, 
ಒಂದೆರಡು ಸಿಹಿಮಾತಿನ ಸಾಲ ನೀಡು ಪ್ರತಿ ಇರುಳು, 
ನಿನಗೆಂದೂ ಆಭಾರಿಯಾಗಿಹುದು ನೆಮ್ಮದಿಯ ಪ್ರತಿ ಉಸಿರು.." ಈ ಸಾಲುಗಳನ್ನು ಓದುತ್ತಿದ್ದಂತೆ ತುಟಿಯಂಚಲ್ಲಿ ನಗು ಜಾರಿತು. ಹಿಂದೆ ತಿರುಗಿ ನೋಡಿದೆ ಅವನೋ ಆಗಲೇ ತನ್ನ ಕೆಲಸದಲ್ಲಿ ಮುಳುಗಿದ್ದ.

ಯಾವಾಗಲೂ ಹೀಗೆ ಕೆಲಸದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿ ಇರುವ ಹುಡುಗ. ಅಪರೂಪಕ್ಕೊಮ್ಮೆ ಒಳ್ಳೆಯ ಕೆಲಸಕ್ಕೆ ಹೆಗಲು ಮುಟ್ಟಿ, ಬೆನ್ನು ತಟ್ಟಿ ಪ್ರೋತ್ಸಾಹಿಸುವ ಹುಡುಗ... ನನಗೆ ಆಫೀಸಿನಲ್ಲಿರುವ ಈ ಗಂಭೀರ ಹುಡುಗನಿಗಿಂತ  ಫೋನ್ ನಲ್ಲಿ ಹರಟುವ  ಆ ಅನೂಹ್ಯನೇ ತುಂಬಾ ಇಷ್ಟವಾಗುತ್ತಿದ್ದ. ಆಫೀಸಿನಲ್ಲಿ ಪ್ರಬುದ್ದನಂತೆ ವರ್ತಿಸುವ ಹುಡುಗ ಚಾಟ್ ಮಾಡುವಾಗ ತುಂಟತನ ಮಾಡಿ ನೋವೆಲ್ಲ ಮರೆಸಿಬಿಡುವ ಮಗುವಿನಂತಾಗಿ ಬಿಡುತ್ತಿದ್ದ. ಅವನ ತುಂಟತನ ತುಂಬಿದ ಮಾತುಗಳು,  ಪ್ರೀತಿಯ ಕವನಗಳು, ಅವನ ಮನೋಭಾವ, ಮಗುವಿನಂತ ಮನಸ್ಸು ಪರಸ್ಪರ ವಿನಿಮಯಗೊಂಡ ಸಹಸ್ರಾರು ಭಾವನೆಗಳು ದಿನೇ ದಿನೇ ನನ್ನ ಮನಸ್ಸನ್ನು ಅವನೆಡೆಗೆ ಮತ್ತಷ್ಟು ಸೆಳೆಯುತ್ತಿದ್ದವು. ಆದರೆ ಇವನೇ ಅವನು ಎಂದು ಗೊತ್ತಿದ್ದರೂ ಅದನ್ನು ಹೇಳುವ ಹಾಗಿರಲಿಲ್ಲ. ಹೇಳಿದರೆ ಗೆದ್ದುಬಿಡುವೆ. ನನಗೆ ಅವನ ಮುಂದೆ ಸೋಲಬೇಕಿತ್ತು. ಸೋತು ಅವನನ್ನೇ ಗೆಲ್ಲಬೇಕಿತ್ತು. 

ಹೀಗೆ ಮಾತು ಮಾತಲ್ಲಿ ಮೂವತ್ತು ದಿನಗಳು ಕಳೆದು ಹೋಗಿದ್ದವು. ಚಾಲೆಂಜ್ ಮುಗಿದ  ರಾತ್ರಿ ಅವನು  'ಸೋತು ಬಿಟ್ಟೆಯಲ್ಲೇ..ಕಪಿ! ಈಗ ನಾ ಹೇಳಿದಂತೆ ಕೇಳಬೇಕು' ಎಂದು ಮೆಸೇಜ್ ಮಾಡಿದ. 'ಸರಿ. ಆದರೆ ನೀನು ಯಾರು ಎಂದೆ ಗೊತ್ತಿಲ್ಲವಲ್ಲ' ಎಂದೆ. ಮರುದಿನ ನಾವು ಭೇಟಿಯಾಗುವ ಸ್ಥಳ ಸಮಯ ಹೇಳಿದ. ನಾನು ಆ ಭೇಟಿಗಾಗಿ ನಿದ್ರೆಯಿಲ್ಲದೆ ಇರುಳು ಕಳೆದೆ. ಅವನು ಹೇಗೆ ತನ್ನ ಪ್ರೇಮ ನಿವೇದನೆ ಮಾಡಬಹುದು, ಅದಕ್ಕೆ ಪ್ರತಿಯಾಗಿ ನನ್ನ ಪ್ರತಿಕ್ರಿಯೆ ಹೇಗಿರಬೇಕು ಎಂದೆಲ್ಲಾ ಊಹಿಸಿ, ಕಲ್ಪಿಸಿಕೊಂಡು ಖುಷಿಯಿಂದ ಕುಣಿದಾಡಿದೆ.

ಮಾರನೆಯ ದಿನ ಸಂಜೆ ಅವನು ಹೇಳಿದ ರೆಸ್ಟೋರೆಂಟ್ ಎದುರು ಅವನಿಗಾಗಿ ಕಾದು ನಿಂತಿದ್ದೆ. ಜನರ ಓಡಾಟವನ್ನು ನೋಡುತ್ತಾ ಅವನು ಬರುವ ದಾರಿಯನ್ನೇ ಕಾಯುತ್ತಿದ್ದೆ. ಸ್ವಲ್ಪ ಸಮಯದ ನಂತರ ಅವನು ದೂರದಲ್ಲಿ ಬರುವುದು ಕಾಣಿಸಿತು. ನಾನು ಮುಂಗುರುಳು ಸರಿ ಮಾಡಿಕೊಂಡೆ. ಅವನು ಹತ್ತಿರ ಬಂದವನೇ ಆಶ್ಚರ್ಯದಿಂದ 'ಹೇ ಹಾಯ್...  ನೀವೆನಿಲ್ಲಿ??'  ಎಂದು ಕೇಳಿದ. ಇವನು ಬಂದು ಸರ್ಪ್ರೈಜ್ ಕೊಡ್ತಾನೆ ಅಂದುಕೊಂಡ್ರೆ ಇದೇನು ಹೀಗೆ ಕೇಳ್ತಿದ್ದಾನೆ ಅಂದುಕೊಂಡೆ.  ನಾನು ಏನು ಹೇಳಬೇಕು ತೋಚದೆ ಒದ್ದಾಡುತ್ತ ಅದು..ಅದು.. ಎನ್ನುವಾಗ, ದೂರದಲ್ಲಿ ಏಳು ವರ್ಷದ ಮಗುವೊಂದು ಅವನನ್ನು 'ಡ್ಯಾಡ್ ಕಮ್ ಫಾಸ್ಟ್' ಎಂದು ಕೂಗಿತು. ನಾನು ಶಾಕ್‌ ನಿಂದ ಡ್ಯಾಡ್ ಆ...!! ಎಂದೆ. 'ಹ್ಮೂ.. ನನ್ನ ಮಗ. ಕಮ್ ಮೀಟ್ ಮೈ ಫ್ಯಾಮಿಲಿ' ಎಂದು ಕರೆಯುತ್ತಾ ಒಳನಡೆದ. ನಾನು 'ಹ್ಮೂ' ಎಂದು ಕತ್ತು ಅಲ್ಲಾಡಿಸಿ ಅವನು ಹೋದ ದಿಕ್ಕನ್ನೇ ನೋಡುತ್ತಾ, ಇವನು ಇಷ್ಟು ದಿನ ನನಗೆ ಮೋಸ ಮಾಡಿದನಾ? ಅಥವಾ ಇಷ್ಟು ದಿನ ನನ್ನ ಜೊತೆಗೆ ಚಾಟ್ ಮಾಡಿದ್ದು ಇವನಲ್ಲವಾ..?  ಮತ್ತೆ ಯಾರು? ಎಂದು ಯೋಚಿಸುವಾಗ, ಹಿಂದೆ ಯಾರೋ ಜೋರಾಗಿ ನಗುವ ಸದ್ದು ಕೇಳಿ ಹಿಂದೆ ತಿರುಗಿ ನೋಡಿದೆ. ನಮ್ಮ ಟೀಮ್ ನ ಬೇರೆ ಹುಡುಗ. ನನಗೆ ಗೊತ್ತಿರುವ ಹುಡುಗ. ರೆಡ್ ಟೀ ಶರ್ಟ್ ಮೇಲೆ ಬ್ಲ್ಯಾಕ್ ಜಾಕೆಟ್, ಬ್ಲ್ಯಾಕ್ ಜೀನ್ಸ್ ಹಾಕಿದ್ದ. ಅವನನ್ನೇ ಅಡಿಯಿಂದ ಮುಡಿವರೆಗೆ ನೋಡಿದೆ. ಇವನು ಈಗೇಕೆ ಇಲ್ಲಿ ಎಂದು ಗಮನಿಸಿ ನೋಡಿದೆ. ಅವನು ತನ್ನ  ಎರಡು ಕಿವಿ ಹಿಡಿದುಕೊಂಡು ತುಂಟ ಕಣ್ಣಲ್ಲಿ 'ಸಾರಿ ತುಂಬಾ ಸತಾಯಿಸಿಬಿಟ್ಟೆ' ಎಂದ. ನಾನು ಅರ್ಥವಾಗದೆ ಏನು ಎಂದು ನೋಡುತ್ತಾ ನಿಂತಾಗ 'ಅದು.... ನಾನು ಅನೂಹ್ಯ..' ಎಂದ. ಅಂದರೆ ನಾನು ಇಷ್ಟು ದಿನ ಚಾಟ್ ಮಾಡಿದ್ದು, ಆ ಗಿಫ್ಟ್..ಆ ಲೆಟರ್, ಎಲ್ಲಾ ಕೊಟ್ಟಿದ್ದು ನೀನೇನಾ ಅಂದೆ ಹೌಹಾರಿದಂತೆ.  ಹೌದೆಂದು ಕತ್ತು ಅಲ್ಲಾಡಿಸಿದ ನಗು ಮಾತ್ರ ಇನ್ನೂ ನಿಲ್ಲಿಸಿರಲಿಲ್ಲ. 

ಆಫೀಸಿನಲ್ಲಿ ಯಾವಾಗಲೂ ನೀನು ಎಡಗಡೆಗೆ ಹಿಂತಿರುಗಿ ನೋಡುವ ಬದಲು ಬಲಗಡೆ ನೋಡಿದ್ದರೆ ಗೊತ್ತಾಗಿರೋದು ನಾನು ನಿನ್ನನ್ನ ಗಮನಿಸ್ತಾನೆ ಇದ್ದೆ. ಆದರೆ ನಿನಗೆ ಯಾವಾಗಲೂ ಹಿಟ್ಲರ್ ಮೇಲೆ ಕಣ್ಣು ಎಂದು ನಗುತ್ತಿದ್ದ. ಹೋಗ್ಹೋಗಿ ಅಂಕಲ್ ಗೆ ಕಾಳು ಹಾಕೋದಾ ಎಂದು ಚೇಡಿಸಿದ. ಹೇ ಹಾಗೆಲ್ಲ ಅನ್ಬೇಡ, ಅವ್ರು ತುಂಬಾ ಒಳ್ಳೆಯವ್ರು ಅಂದೆ. ಎಷ್ಟೇ ಆದ್ರೂ ನಿನ್ನ ಫರ್ಸ್ಟ್ ಲವ್ ಅಲ್ವಾ ಸಾರಿ ಸಾರಿ.. ಮುಂದೆ ಹುಟ್ಟೋ ನಮ್ಮ ಮಗುಗೆ ಅವರ ಹೆಸರೇ ಇಡೋಣ ಆಯ್ತಾ ಎಂದು ತುಂಟ ಕಣ್ಣಲ್ಲೇ ನಕ್ಕ. ಅವನ ತಲೆಗೊಂದು ಮೊಟಕಿ 'ನಾನು ಯಾವತ್ತೂ ಅವರ ಕುಟುಂಬದ ಬಗ್ಗೆ ಕೇಳೇ ಇರಲಿಲ್ಲ. ಚಾಟ್ ಮಾಡ್ತಿರೋದು ಅವರೇ ಅಂದುಕೊಂಡೇ ಬೇರೆ ಕಡೆಗೆ ಗಮನ ಕೂಡ ಹರಿಸಲಿಲ್ಲ. ಇದನ್ನೇ ನೆಪ ಮಾಡಿಕೊಂಡು ನೀನು ನನ್ನ ಆಟ ಆಡಿಸಿದೆ ಅಲ್ವಾ' ಎಂದೆ ಕೋಪದಿಂದ. ಅವನು ನಗುತ್ತಲೇ "ಸಾರಿ ಕಣೋ.. ನಿನಗೊಸ್ಕರನೇ ಇಷ್ಟೆಲ್ಲಾ ಮಾಡಿದ್ದು..ನಿನ್ನ ಪ್ರೀತಿಗೊಸ್ಕರ ಮಾಡಿದ್ದು... ನೀನೂ ನನ್ನನ್ನ ಪ್ರೀತಿಸಲೇಬೇಕು ಅಂತ ಒತ್ತಾಯ ಏನಿಲ್ಲ. ಆದರೆ ನಾನಂತೂ ಕೊನೆವರೆಗೂ ನಿನ್ನನ್ನೇ ಪ್ರೀತಿಸೋದು..." ಎಂದು ತಾನು ತಂದಿದ್ದ ಕೆಂಗುಲಾಬಿ ಹೂ ಹಿಡಿದು ಮಂಡಿಯೂರಿ ಕುಳಿತು ಅದು ರಸ್ತೆ, ಜನ ನೋಡ್ತಿದಾರೆ ಎಂಬುದರ ಪರಿವಿಲ್ಲದೆ ತನ್ನ ಪ್ರೀತಿಯನ್ನು ಹೇಳಿಕೊಂಡ. ಏನು ಹೇಳಬೇಕು ತೋಚಲಿಲ್ಲ. ಅವನ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದ ಮನಸ್ಸು ಅವನೇ ಎಂದುಕೊಂಡ ಅನೂಹ್ಯನೊಂದಿಗೆ ಭಾವನೆಗಳ ವಿಲೇವಾರಿ ಮಾಡಿ ಬಿಟ್ಟಿತ್ತು. ಇವನು ಅಷ್ಟೇನೂ ಕೆಟ್ಟವನಲ್ಲ ಆದರೆ ತನ್ನ ಪ್ರೀತಿ ಹುಡುಗಾಟಕ್ಕೆ ನನ್ನ ಮನಸ್ಸು ಘಾಸಿ ಮಾಡಿದನೆಂದು ತುಸು ಬೇಸರವಾಯಿತು. ನನಗೂ ಅನೂಹ್ಯ ಅಂದ್ರೆ  ಇಷ್ಟ ಆದ್ರೆ ಈ ಇಷ್ಟ ಇನ್ನೂ ಪ್ರೀತಿಯಾಗೋಕೆ ಸ್ವಲ್ಪ ಸಮಯ ಬೇಕು ಅಂದೆ. ಇಡೀ ಜೀವನ ಹೇಗೂ ಜೊತೆಗೆ ಇರ್ತಿವಲ್ಲಾ ಈಗಲೇ ಸ್ವಲ್ಪ ಸಮಯ ತಗೊಂಡು ಬಿಡು ಎಂದು ನಕ್ಕ. ನಾನು ಮುಗುಳ್ನಗುತ್ತಾ ಸೀನಿಯರ್ ಮದುವೆ ಆಗಿದ್ದು ನಿನಗೆ ಮೊದಲೇ ಗೊತ್ತಿತ್ತಾ ಎಂದು ಕೇಳಿದೆ. "ಹ್ಮೂ.. ಮದುವೆಯಾಗಿದ್ದು ಗೊತ್ತು, ಮಗುವಾಗಿದ್ದು ಗೊತ್ತು, ಇವತ್ತು ಇದೇ ರೆಸ್ಟೋರೆಂಟ್ ಗೆ ಬರ್ತಿದಾರೆ ಅಂತನೂ ಗೊತ್ತು. ಅದ್ಕೆ ನಿನಗಿಂತ ಮೊದಲೇ ಬಂದು ದೂರ ನಿಂತು ನಿನ್ನನ್ನೇ ನೋಡ್ತಿದ್ದೆ. " ಎಂದ. " ಅದ್ಹೇಗೆ ಅವರು ಬರೋದು ಗೊತ್ತು ನಿನಗೆ " ಅಂತ ಕೇಳಿದಾಗ "ಅವರ ಹೆಂಡತಿ ಹುಟ್ಟಿದ ಹಬ್ಬ ಅಲ್ವಾ ಅದಕ್ಕೆ" ಎಂದ್ಹೇಳಿದ.  "ಅವರ ಹೆಂಡತಿ ಹುಟ್ಟಿದ ಹಬ್ಬ ಅಂತ ನಿನಗೆ ಹೇಗೋ ಗೊತ್ತು" ಎಂದು ಮರು ಪ್ರಶ್ನಿಸಿದೆ ಆಶ್ಚರ್ಯದಿಂದ. "ಹೇಗೆ ಅಂದರೆ ಅವಳು ನನ್ನ ಅಕ್ಕ, ಅದಕ್ಕೆ" ಎಂದ ಎತ್ತಲೋ ನೋಡುತ್ತಾ. ಅಂದರೆ ಸೀನಿಯರ್ ನಿಮ್ಮ ಭಾವಾ.‌.!! ಎಂದು ಮಾತು ಹೊರಡಿತ್ತು ಬಾಯಿಂದ ಅನಾಯಾಸವಾಗಿ. ಅವನು ಕತ್ತು ಅಲ್ಲಾಡಿಸಿ ನಗುತ್ತಲೇ ಕೈ ಹಿಡಿದು ಒಳಗೆ ಕರೆದುಕೊಂಡು ಹೋದ‌. 


 ರೆಸ್ಟೋರೆಂಟ್ ನಲ್ಲಿ ನಮ್ಮ ಸೀನಿಯರ್ ನ ಕುಟುಂಬವನ್ನು ಅಂದರೆ ಅವನ ಅಕ್ಕ ಭಾವನನ್ನು ಭೇಟಿಯಾದೆವು. ಅವರ ಹೆಂಡತಿಗೆ ಬರ್ತಡೇ ವಿಷ್ ಮಾಡಿದೆವು.  ಲಕ್ಷಣವಾದ ಹೆಂಡತಿ ಮುದ್ದಾದ ಮಗು ಎಷ್ಟು ಚಂದದ ಸಂಸಾರ ಅವರದು. ಛೇ ಪಾಪ, ಅವರು ನನ್ನ ಕೆಲಸವನ್ನು ಪ್ರಶಂಸಿಸಿ, ಸ್ನೇಹಭಾವದಿಂದ ಮಾತಾಡಿದ್ದನ್ನು ನಾನು ಪ್ರೀತಿ ಎಂದೆಲ್ಲಾ ಕಲ್ಪಿಸಿಕೊಂಡು ಅಪಾರ್ಥ ಮಾಡಿಕೊಂಡಿದ್ದೆ. ಅವರ ಕಣ್ಣಲ್ಲೊಮ್ಮೆ ನೋಡಿದೆ ಅದೇ ನಿಷ್ಕಲ್ಮಷ ಭಾವನೆ, ಅದೇ ಮಗುಳ್ನಗು. ಆದರೆ ಯಾವುದು ನನ್ನ ಸ್ವಂತವಲ್ಲ. ಕಣ್ಣಂಚಲಿ ಹನಿ ಜಿನುಗಿ ಮರೆಯಾಯ್ತು.  ಈ ಬಾರಿ ಹಿನ್ನೆಲೆಯಲ್ಲಿ 'ನನ್ನ ಪ್ರೀತಿ ಕುಸುರಿ ಚೂರಾಯ್ತು.. ಚೂರಾಗಿ ಮನದಿ ದೂರಾಯ್ತು..' ಹಾಡು ಕೇಳಿ ಬಂದಿತ್ತು.  ಹಾಗೆಂದು ನಾನು ಅವರನ್ನು ದೂರ ಮಾಡಿಲ್ಲ. ಈಗಲೂ ಅವರೆಂದರೆ ನನಗೆ ಬೆಟ್ಟದಷ್ಟು ಪ್ರೀತಿ ಇದೆ. ಒಬ್ಬ ಒಳ್ಳೆಯ ಸ್ನೇಹಿತನಂತೆ. ಮಾರ್ಗದರ್ಶಿಯಂತೆ, ಗುರುವಿನಂತೆ. 


ಅವರನ್ನು ಮಾತಾಡಿಸಿ ನಾವು ಬೇರೆ ಕಡೆಗೆ ಹೋಗಿ ಕುಳಿತಾಗ ನನ್ನ ಊಹೆಗಳು ಕಲ್ಪನೆಗಳು ತರ್ಕವಿತರ್ಕಗಳು ಎಲ್ಲಾ ತಲೆ ಕೆಳಗಾಗಿ ಏನೂ ಅರ್ಥವಾಗದೆ ನಾನು ಮೌನವಾಗಿ ಹಣೆಗೆ ಕೈ ಹಚ್ಚಿ ಕುಳಿತಾಗ ಆತ ಕೇಳಿದ - ಆ ಮಗು ಅವರನ್ನು ಡ್ಯಾಡಿ ಎಂದಾಗ ನಿನಗೆ ಏನ್ ನೆನಪಾಯಿತು?
ಏನ್ ನೆನಪಾಗುತ್ತೆ, ಶಾಕ್ ಆಯ್ತು ನೋಡೋಕೆ ಇಷ್ಟು ಸ್ಮಾರ್ಟ್ ಇದ್ದಾರೆ, ಇವರಿಗೆ ಮದ್ವೆಯಾಗಿ ಇಷ್ಟು ದೊಡ್ಡ ಮಗು ಬೇರೆ ಇದೆಯಾ ಅಂತ. ಯಾಕೆ ನಿನಗೇನು ನೆನಪಾಯಿತು? ಅಂದೆ
ದೂರದಲ್ಲಿ ನಿಂತು ಸೀನ್ ನೋಡ್ತಿದ್ದ ನನಗೆ 'ಸಂತೂರ್ ಸಂತೂರ್ ಆ್ಯಡ್' ನೆನಪಾಯಿತು. ಆ ಆ್ಯಡ್ ನಲ್ಲಿ ಮಗು ಮಮ್ಮಿ ಅಂತ ಬರುತ್ತೆ. ಆದರೆ ಇಲ್ಲಿ ಡ್ಯಾಡಿ ಅಂತ ಕೂಗಿತು ಅಷ್ಟೇ ವ್ಯತ್ಯಾಸ ಎಂದು ನಕ್ಕ.‌
ಅದನ್ನೆಲ್ಲ ಒಮ್ಮೆ ಊಹಿಸಿಕೊಂಡ ಮೇಲೆ ನನಗೂ ಹಾಗೆ ಅನ್ನಿಸಿ ಕೂತ ಜಾಗದ ಪರಿವಿಲ್ಲದೆ ಒಮ್ಮೆ ಜೋರಾಗಿ ನಕ್ಕು ಬಿಟ್ಟೆ.
ಹೀಗೆ ನನ್ನ ಮೊದಲ ಭಗ್ನಪ್ರೇಮ ನಗೆಗಡಲಲ್ಲಿ ತೇಲಿ ಹೋಗಿ ಅಲ್ಲಿ ಅರಿತೂ ಅರಿಯದ ಅನೂಹ್ಯನ ಜೊತೆಗೆ ಹೊಸ ಅಧ್ಯಾಯ ಆರಂಭವಾಯಿತು.




                           -------------





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...