ವಿಷಯಕ್ಕೆ ಹೋಗಿ

ಪರಿಭ್ರಮಣ

ಜಿಟಿ ಜಿಟಿ ಮಳೆಯಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದೆ. ಅವತ್ತು ಬೆಳಗ್ಗೆ ಏಳೋದು ಸ್ವಲ್ಪ ತಡವಾದ ಕಾರಣ ಮೊದಲನೇ ಬಸ್ ಮಿಸ್ ಆಗಿತ್ತು. ಮುಂದಿನ ಬಸ್ ಬರೋವರ್ಗು ಕಾಯ್ಲೇ ಬೇಕು. ತಡವಾಗಿ ಹೋಗಿದ್ದಕ್ಕೆ ಭೂತದ ಬಾಯಿಂದ ಸಹಸ್ರಾರ್ಚನೆ ಬೇರೆ ಕೇಳಬೇಕು. ಯಾಕ್ ಬೇಕು ಈ ಕೆಲಸ ಸುಮ್ನೆ ಚೆನ್ನಾಗಿರೋ ಹುಡುಗನ್ನ ಮದುವೆ ಆಗಿ ಸೆಟ್ಲ್ ಆಗ್ಬಾರ್ದೆನೋ ಅನ್ನೋ ಅಮ್ಮನ ಮಾತು ನೆನಪಾಯ್ತು. ಮದುವೆ ಆದ್ರೆ ಕೆಲಸಾನೇ ಇರಲ್ವ ಅಲ್ಲಿಯೂ ಜವಾಬ್ದಾರಿ ಹೇಗಲೇರಿದ ಶನಿ ಹಾಗೆ ಗಂಡನ ಸಮಾನವಾಗಿ ದುಡಿದ್ರು ಮನೆಗೆಲಸ ಹಗುರ ಅನ್ನೋ ಹಗುರವಾದ ಮಾತು ಸಂಬಳವಿಲ್ಲದ ಜೀತ, ಕನಿಷ್ಟ ಹೊಗಳಿಕೆ ಇಲ್ಲದ ಪಟ್ಟಾಭಿಷೇಕ, ಆದ್ರೆ ನಾನು ಮದುವೆಯಿಂದ ಮಾರು ದೂರ ಹೋಗೋದು ಇದಕ್ಕಲ್ಲ, ಕಾಯ್ತಿದ್ದೆ ಅವನಿಗೋಸ್ಕರ..

ಅವನಿ.. ಅವನಿ.. ಸಂಧ್ಯಾ ಕೂಗಿದ ಧ್ವನಿಗೆ ಇಡೀ ಬಸ್ ಸ್ಟ್ಯಾಂಡ್ ನಮ್ ಕಡೆ ತಿರುಗಿ ನೋಡ್ತಿತ್ತು. ಯಪ್ಪಾ ಏನ್ ಬಾಯಿನೆ ನಿಂದು!! ಲೌಡ್ ಸ್ಪೀಕರ್ ಬೇಡ, ನೀನಿದ್ರೆ ಮುಗಿತು ಅಂದೆ.

"ಓಹ್ ನಿನ್ ಮದ್ವೆಲಿ ಆರ್ಕೆಸ್ಟ್ರಾ ಕರಿಸೋ ಬದ್ಲು ನಂಗೇ ಆರ್ಡರ್ ಕೊಡು ನಾ ಹಾಡ್ತಿನಿ"

"ಹ್ಮೂ..ನಿನ್ನ ಹಾಡು ಕೇಳಿ ಜನ ಊಟಾ ಮಾಡದೆ ಮುಯ್ಯಿ ಕೊಟ್ಟು ಹೊಗ್ತಾರೆ ಅಷ್ಟೇ"

"ಅದ್ಯಾಕೆ ಊಟಾ ಮಾಡ್ದೆ ಮುಯ್ಯಿ ಕೊಡ್ತಾರೆ"

" ನಿನ್ನ ಹಾಡು ನಿಲ್ಲಿಸು ತಾಯೇ ಅಂತಾ.!!" ನಕ್ಕೆ.

ಅವಳು ಮುಖ ಗಂಟು ಹಾಕ್ಕೊಂಡ್ಳು ನಾನು ರಮಿಸೋಕೆ ಹೋಗಲಿಲ್ಲ. ಗೊತ್ತು ಅವಳ ಮುನಿಸು ಕ್ಷಣಮಾತ್ರ, ಸಂಧ್ಯಾ ನಾನು ಚಿಕ್ಕಂದಿನಿಂದಲೇ ಸ್ನೇಹಿತರು ಕೂಡಿ ಆಡಿದ್ದು ಬೆಳದದ್ದು ಕಲಿತದ್ದು..ಈಗ ಕೆಲಸ ಕೂಡ ಒಂದೇ ಕಂಪನಿಯಲ್ಲಿ ಸಿಕ್ಕಿತ್ತು.

ಬಸ್ ಬಂತು..ಹತ್ತಿದ್ವಿ..ಆಫಿಸ್ ಮುಟ್ಟೋಕೆ 30 ನಿಮಿಷದ ದಾರಿ. ಮುನಿಸು ಮರೆತು ಅವಳೆ ಮಾತು ಶುರು ಮಾಡಿದಳು ನಿಂಗೊತ್ತಾ ರಮ್ಯ ಮದುವೆ ಫಿಕ್ಸ ಆಯ್ತಂತೆ, ನಾಳೆನೇ ನಿಶ್ಚಿತಾರ್ಥ ಅಂತೆ, ಎಷ್ಟು ಚಂದ ಇತ್ತಲ್ವಾ ಕಾಲೇಜ್ ಲೈಫ್.. ಈ ಪ್ರೊಫೆಷನಲ್ ಲೈಫ್ ಬೋರು ಕಣೋ!! ಹೌದು ಅಂದೆ ಮೇಲ್ನೋಟಕ್ಕೆ. ಆದರೆ ಮನಸ್ಸಿನಲ್ಲಿ ಏನೇನೊ ನೆನಪುಗಳು ಹಾಗೆ ತೇಲಿ ಬಂದವು.

ಅವತ್ತು ಎಂದಿನಂತೆ ಕಾಲೆಜ ಬರೋವಾಗ ಒಂದ್ ಬೈಕ್ ಪಕ್ಕದಲ್ಲಿ ಹಾದು ಹೊಯ್ತು, ರಾತ್ರಿ ಜೋರು ಮಳೆಯಾದ ಕಾರಣ ರಸ್ತೆಯ ಕೆಸರು ನನ್ನ ಬ್ಯಾಗ್ ಗೆ ಸಿಡಿದಿತ್ತು. ಕೋಪದಲ್ಲಿ ಬಾಯಿಗೆ ಬಂದಂಗೆ ಬೈದು "ಲೋ ನಿಂತ್ಕೊಳ್ಳೊ, ಬೈಕ್ ಏನ್ ಆಕಾಶ ನೋಡಿ ಓಡುಸ್ತ್ಯಾ ರಸ್ತೆಯಲ್ಲಿ ಕೆಸರು ಮನುಷ್ಯರು ಯಾವುದು ಕಾಣ್ಸೋದಿಲ್ವಾ?! ಇಳಿಯೋ ಕೆಳಗೆ, ಮರ್ಯಾದೆಯಿಂದ ನನ್ನ ಬ್ಯಾಗ್ ಕ್ಲೀನ್ ಮಾಡಿ ಕೊಟ್ರೆ ಸರಿ" ಅಂದೆ. "ನಾನಾ" ಅಂತ ಕೇಳ್ದ. ಹ್ಮೂ..ನಿಮ್ ತಾತಾ ಬರ್ತಾರಾ.. ನೋಡು ಅಂತ ಏನೋ ಹೇಳಕ್ಬಂದವನೇ ಸುತ್ತಲಿನ ಜನ ನೋಡಿ ಸಾರಿ ಕೇಳಿದ್ದ. ದುರುಗುಟ್ಟಿ ನನ್ನೆ ನೋಡ್ತಾ ಬ್ಯಾಗ್ ನ್ನು ಕ್ಲೀನ್ ಮಾಡಿಕೊಟ್ಟು ಬೈಕ್ ಹತ್ತಿ ಹೊರಟು ಹೋದ.

"ಹೇ ಪಾಪ ಕಣೇ.. ಎಷ್ಟು ಸ್ಮಾರ್ಟ್ ಹುಡ್ಗ.. ಸಾರಿ ಕೇಳಿದಾಗ್ಲೇ ಪರವಾಗಿಲ್ಲ ಅಂದು ಪರಿಚಯ ಮಾಡ್ಕೊಬೇಕಿತ್ತು" ಸಂಧ್ಯಾ ಗೊಣಗ್ತಿದ್ಲು. ಹೌದೌದು ಸುರಸುಂದರಾಂಗ ಅನ್ಕೋಳ್ತಾ ತಮಾಷೆ ಮಾಡ್ತಾ ಕಾಲೆಜ್ ಗೆ ಬಂದ್ವಿ. ಅಲ್ಲಿ ಕ್ಲಾಸ್ ಹೋಗೋ ದಾರಿಯಲ್ಲಿ ನಿಂತಿದ್ದ ಅವನು.. ಇದೇ ಕಾಲೆಜ್ ಲ್ಲಿ ಹೊಸ ಅಡ್ಮಿಷನ್ನಾ.. ಅಥವಾ ಹಿಂಬಾಲಿಸಿಕೊಂಡು ಬಂದಿದ್ದಾನಾ..ಇದೇ ಯೋಚನೆಯಲ್ಲಿ ಹೋಗೊವಾಗ ಜೋರಾಗಿ ಯಾರೋ ಬಂದು ಹಾಯ್ದಂಗಾಯ್ತು ನಾ ಅವನ ಮೇಲೆ ಬಿದ್ದೆ! ರಸ್ತೆಲಿ ಬೈದಿದ್ದ ಸಿಟ್ಟಿತ್ತು ನೀನಾ..ಅಂದ, ನಾ ರಸ್ತೇಲಿ ಬೈದಿದ್ದಷ್ಟು ಬಡ್ಡಿ ಸಮೇತ ತಿರಿಸ್ಕೊಳ್ತಾ ಬೈದ. ಕಣ್ಣು ಆಕಾಶದಲ್ಲಿ ಇಟ್ಕೊಂಡು ನಡೀತಿಯಾ? ನೋಡ್ಕೊಂಡ್ ಹೋಗಕ್ಕಾಗಲ್ವಾ.. ನಂಗು ಸಿಟ್ಟು ನೆತ್ತಿಗೇರಿತು, ನಾನು ಹೇಳಿದೆ "ಓಡಾಡೋ ದಾರೀಲಿ ಹೀಗೆ ನಿಂತ್ರೆ ಹೆಂಗ್ ತಿರುಗಾಡೋದು?" ಮಾತಿಗೆ ಮಾತು ಬೆಳೆದಿತ್ತು. ಪ್ರೊ.ಚಿದಾನಂದ ಮೂರ್ತಿ ಸರ್ ಬಂದು ಸಮಾಧಾನ ಮಾಡೋವರೆಗೂ ಜಗಳ ಹಾಗೇ ಮುಂದುವರೆದಿತ್ತು. ಚಿದಾನಂದ ಸರ್ ಕಂಡ್ರೆ ನನಗೆ ತುಂಬಾ ಅಕ್ಕರೆ,ಗೌರವ ಅವರ ಮಾತಿಗೆ ಎದುರಾಡದೇ ಸುಮ್ಮನಾಗಿದ್ದೆ.

ಅವತ್ತಿನಿಂದ ಇಬ್ಬರೂ ಹಾವು ಮುಂಗಸಿ ತರಾ ಕಿತ್ತಾಡ್ತಾನೇ ಇದ್ವಿ. ಕೂತ್ಕೊಳ್ಳೊ ಬೆಂಚ್ ನಿಂದ ಹಿಡಿದು ಡಿಬೆಟ್ ಕಾಂಪಿಟೇಷನ್ ವರೆಗೂ ಹರಿದಾಡಿತ್ತು ನಮ್ಮ ಕದನ. ಇದನ್ನು ಗಮನಿಸಿದ ಪ್ರೋ.ಚಿದಾನಂದ ಮೂರ್ತಿ ಸರ್ "ಸೂರ್ಯಾ ತುಂಬಾ ಒಳ್ಳೆ ಹುಡುಗ ಇಂಟಲಿಜೆಂಟ್ ಕೂಡಾ.. ಯಾಕೆ ನೀನು ಅವನ ಮೇಲೆ ಯಾವಾಗಲೂ ಹರಿಹಾಯ್ತಿಯಾ ಏನಾದರೂ ಮಿಸ್ ಅಂಡರ್ಸ್ಟ್ಯಾಂಡ್ ಇದ್ರೆ ಕೂತು ಮಾತಾಡಿ ಬಗೇಹರಿಸಿಕೊಳ್ಳಿ.." ಅಂದಿದ್ರು. " ಇಲ್ಲಾ ಸರ್, ಕೊಬ್ಬು ಅವನಿಗೆ, ತಪ್ಪು ಮಾಡಿದ್ರು ಒಪ್ಕೊಳ್ದೆ ನಂಜೊತೆ ವಾದಿಸ್ತಾನೆ. ಐ ಜಸ್ಟ್ ಹೇಟ್ ಹಿಮ್.." ಅಂದಿದ್ದೆ. ಅವರು ನಕ್ಕು ಸುಮ್ಮನಾದ್ರು.

ದಿನಗಳು ಉರುಳ್ತಾ ಅವನ ಜೊತೆ ಜಗಳಾಡೊದು ಎಷ್ಟು ರೂಢಿಯಾಯ್ತು ಅಂದ್ರೆ ಜಗಳ ಆಡದಿದ್ರೆ ದಿನ ಬಿಕೋ ಅನ್ನಿಸೋದು. ರಜೆಗಳಲ್ಲಿ ದೂರ ಇದ್ರು ಅವನದೇ ಯೋಚನೆಯಾಗಿರ್ತಿತ್ತು. ಸೂರ್ಯಾ ನೋಡೋಕೆ ಸ್ಮಾರ್ಟ್ ಹುಡುಗ, ಸಭ್ಯಸ್ಥ, ಎಲ್ಲರ ಜೊತೆ ತುಂಬಾ ಫ್ರೇಂಡ್ಲಿಯಾಗಿ ಇರ್ತಿದ್ದ ತಮಾಷೆ ತುಂಟಾಟ ಬೆರೆತ ಮಾತುಗಳು, ಆದರೆ ನಮ್ಮ ಪರಿಚಯನೇ ಕಲಹದಿಂದ ಆರಂಭವಾಗಿತ್ತು. ನನಗೆ ಅಭಿಮಾನ ಅವನಿಗೆ ಬಿಗುಮಾನ..ಮನಸ್ಸು ಮಾತಿಗೆ ಹಪಹಪಿಸಿದಾಗ ಯಾವುದೋ ಕುಂಟ ನೆಪ ಜಗಳವಾಗಿ ಮಾತಾಗುತ್ತಿತ್ತು. ದೂರವಿದ್ದಾಗ ನೆನಪುಗಳಲ್ಲಿ ಬದುಕಿದ್ರೆ, ಎದುರು ಬಂದ್ರೆ ಅದೇ ಸಿಟ್ಟು ಜಗಳಗಳ ಆಲಾಪನೆ. ನನ್ನ ಮನದ ಮಾತು ನನಗೆ ಸ್ಪಷ್ಟವಾಗಿತ್ತು ಅವನಿಲ್ಲದೆ ನಾನಿಲ್ಲ!!

"ಸೂರ್ಯನಿಲ್ಲದೆ ಅವನಿ ನಗುವ ಮರೆಯುವಳು,
ಸೂರ್ಯನಿಂದಲೇ ಅವನಿ ನಗುವ ಕಲಿತಿಹಳು
ಸೂರ್ಯನಿಗಾಗಿ ಅವನಿ ನಿತ್ಯ ತಿರುಗುವಳು
ಸೂರ್ಯನಿಗಾಗಿಯೇ ಅವನಿ ಬದುಕಿಹಳು"

ಸೂರ್ಯನಿಗೂ ಅದೇ ಭಾವನೆ ಇತ್ತಾ? ಹೇಳಿದ್ರೆ ನಿರಾಕರಿಸ್ತಿನಿ ಅಂತ ದೂರ ಇದ್ನಾ ? ಗೊತ್ತಿಲ್ಲ, ನಾನಾಗೇ ಹೋಗಿ ಹೇಳಬಹುದಿತ್ತು ಅವನು ತಮಾಷೆಯಾಗಿ ತಗೊಂಡ್ರೆ ಅವಮಾನ ಮಾಡ್ಬಿಟ್ರೆ ಹುಡುಗಿಯಾಗಿ ಸೂಕ್ಷ್ಮ ಇಲ್ವಾ ಅನ್ಕೊಂಡ್ರೆ !! ಹೀಗೆ ದೂರ ಉಳಿದುಬಿಟ್ಟೆ. ಕಾಲೇಜ್ ಕೊನೆ ದಿನವಾದರೂ ಏನಾದ್ರೂ ಹೇಳ್ತಾನೆ ಅನ್ಕೊಂಡೆ, ಅವತ್ತು ಹೇಳಲಿಲ್ಲ.

ಈಗವನು ಎಲ್ಲಿರಬಹುದು ಹೇಗಿರಬಹುದು ಅಂತ ಯೋಚನಾಲಹರಿಯಲ್ಲಿ ಇರುವಾಗಲೇ ಕಿವಿಗೆ ಅಪ್ಪಳಿಸಿದ್ದು "ರಮ್ಯಾ ಮದುವೆ ಆಗೋ ಹುಡುಗ ಯಾರ್ ಗೊತ್ತಾ... ಸೂರ್ಯಾ.. ಅಂತೆ..!!" ಮೈಮೇಲೆ ಒಂದ್ಕ್ಷಣ ಸಿಡಿಲು ಬಿದ್ದಂಗಾಯ್ತು ಸ್ವಲ್ಪ ಸಾವರಿಸಿಕೊಂಡು ಕೇಳಿದೆ "ಯಾವ ಸೂರ್ಯಾ..?"
"ಅದೇ ಕಣೋ ನಿನ್ ಸೋ ಕಾಲ್ಡ್ ಶತ್ರು.. ಸೂರ್ಯಾ.."

ಬಸ್ಸಿಂದ ಕೆಳಗೆ ಧುಮುಕಿ ಪ್ರಾಣ ಬಿಡೋಣ ಅನ್ನಿಸ್ತು ಕಣ್ ತುಂಬಿ ಹರಿಯುವ ಭರದಲ್ಲಿತ್ತು, ದುಃಖ ಉಮ್ಮಳಿಸಿ ಬಂದಿತ್ತು, ಇಷ್ಟು ದಿನದ ಸಹನೆ ನಿರೀಕ್ಷೆ ಈಗ ಮುಕ್ತಾಯ ಹಾಡುತ್ತಿತ್ತು ಅಂದ್ರೆ ಅವನಿಗೆ ನನ್ನ ಮೇಲೆ ಯಾವ ಭಾವನೆಗಳೂ ಇರಲಿಲ್ವ..

ಅವಳು ಮುಂದುವರಿಸಿದ್ದಳು ಸೂರ್ಯಾ ಈಗ ಮಂಗಳೂರಿನಲ್ಲಿ ವರ್ಕ್ ಮಾಡ್ತಿದಾನಂತೆ. ಮದುವೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿದೆ. ಅದ್ಕೆ ಈಗ ಬೆಂಗಳೂರ್ ಗೆ ಬಂದಿದಾನಂತೆ, ಅವಳು ಇನ್ನೂ ಹೇಳ್ತಾ ಇದ್ಲು ನಾ ಕೇಳೋ ಪರಿಸ್ಥಿತಿಯಲ್ಲಿ ಇರಲಿಲ್ಲ.ಅಷ್ಟರಲ್ಲಿ ಬಸ್ ಆಫಿಸ್ ಮುಂದಿತ್ತು. ಆದರೆ ನಾನು ತಲೆನೋವು ನೆಪ ಮಾಡಿ ಮನೆಗೆ ವಾಪಸ್ ಬಂದ್ಬಿಟ್ಟೆ. ರೂಮ್ ಬಾಗಿಲು ಹಾಕ್ಕೊಂಡು ಮನಸ್ಪೂರ್ತಿ ಅತ್ತೆ,. ಅಷ್ಟು ದಿನದ ಅವಿತಿರಿಸಿದ ಪ್ರೀತಿ ಬಯಲಾಗುವಷ್ಟು ಅತ್ತೆ., ಕಡಲ ಸೇರಲಾಗದೆ ಬಿಸಿಲ ಬೇಗೆಗೆ ಆವಿಯಾದ ನೀರು ಮಳೆಯಾಗಿ ಸುರಿವಂತೆ ಅತ್ತೆ.. ಮಳೆನೀರು ಮತ್ತೆ ಕಡಲ ಸೇರಬಹುದು ನನ್ನ ಕಣ್ಣೀರು?

ಅಷ್ಟರಲ್ಲಿ ಅಮ್ಮನ ಕೂಗು ನಿನ್ ಫ್ರೆಂಡ್ ರಮ್ಯಾ ಮದುವೆಗೆ ಇನ್ವೈಟ್ ಮಾಡಿದಾಳೇ ಕಣೇ ನಾಳೆ ನಿಶ್ಚಿತಾರ್ಥ ಅಂತೆ ನಾಡಿದ್ದು ಮದುವೆ ಸಂಜೆ ರಿಸಪ್ಶನ್ ಅಂತೆ. ನೀ ಆಫೀಸ್ ಗೆ ಹೋದಾಗ ಬಂದಿದ್ರು ಇನ್ವಿಟೆಷನ್ ಕಾರ್ಡ್ ಕೊಟ್ಟು ಹೊದ್ರು ಅಂತ ಹೇಳುವಷ್ಟರಲ್ಲಿ ನಾನು ಎದ್ದು ಹೋಗಿ ಆ ಕಾರ್ಡ್ ನಾ ಹರಿದು ಬಿಸಾಕಿದ್ದೆ. ಹೊಟ್ಟೆಕಿಚ್ಚಿಗಲ್ಲ..ಮನದ ಸಾಂತ್ವನಕ್ಕೆ.. ದುಃಖ ನಿವಾರಣೆಗೆ..ಅಮ್ಮ ಪೆಚ್ಚಾಗಿ ನನ್ನೇ ನೋಡ್ತಿದ್ರು ಆದರೆ ಸಮಜಾಯಿಷಿ ಕೊಡುವ ತಾಳ್ಮೆ ನನಗಿರಲಿಲ್ಲ.

ಅವತ್ತು ರಾತ್ರಿ ಇಡೀ ನಿದ್ರೆ ಇಲ್ಲ. ಬೆಳಗಾದ ಮೇಲೂ ಚಡಪಡಿಕೆ ಹೋಗಲಿಲ್ಲ. ಇವತ್ತು ಸೂರ್ಯನ ನಿಶ್ಚಿತಾರ್ಥ, ನಾಳೆ ಮದುವೆ, ಅವನು ಇನ್ನೊಬ್ಬರ ಸ್ವತ್ತು ನನಗಿನ್ನೂ ಅವನ ನೆನಪು ಪರಕೀಯ ಅನ್ನಿಸ್ತಿತ್ತು. ಏನಾದ್ರೂ ಆಗ್ಲಿ ಒಂದ್ಸಲ ಅವನನ್ನ ನೋಡ್ಬೆಕು ಅನ್ಕೊಂಡೆ. ಸ್ನಾನಮಾಡಿ ತಯಾರಾದೆ, ಆಫಿಸ್ ಗೆ ಕಾಲ್ ಮಾಡಿ ರಜೆ ಹಾಕ್ದೆ.

ಸಂಧ್ಯಾ ನಾನು ಕ್ಯಾಬ್ ನಲ್ಲಿ ಪ್ಯಾಲೇಸ್ ಗ್ರೌಂಡ್ ಗೆ ಬಂದ್ವಿ. ಹೂವಿನ ಅಲಂಕಾರ ಭರ್ಜರಿಯಾಗಿತ್ತು. ಎದುರಿಗೆ "ಸೂರ್ಯಾ ವೆಡ್ಸ್ ರಮ್ಯಾ" ಅನ್ನೋ ಬೋರ್ಡ್ ಅಳು ಬಂತು ವಾಪಸ್ ಹೋಗಿ ಬಿಡೋಣ ಅನ್ನಿಸ್ತು, ಸಂಧ್ಯಾ ಬಿಡಲಿಲ್ಲ. ನಿಶ್ಚಿತಾರ್ಥಕ್ಕೆ ಎಲ್ಲಾ ಸಿದ್ದವಾಗಿತ್ತು ಪ್ರೊ ಚಿದಾನಂದ ಸರ್ ಮುಗುಳ್ನಗುತ್ತಾ ಸ್ವಾಗತಿಸಿದ್ರು ನಾನು ಮೇಲ್ನೋಟಕ್ಕೆ ನಗುತ್ತಾ ಕೇಳ್ದೆ.." ಸರ್ ನೀವು ಯಾವಾಗ ಬಂದ್ರೀ" ಅವರು "ಏನಮ್ಮ ಹೀಗಂತಿಯಾ..ನನ್ನ ಮಗನ ಮದುವೆ, ನಾನ್ ತಾನೇ ಓಡಾಡಬೇಕು ಅಂದ್ರು.." "ಸೂರ್ಯಾ ಇವ್ರ ಮಗಾ ನಾ? ಅಥವಾ ಸುಮ್ಮನೆ ಮಾತಿಗೆ ಅಂದ್ರಾ" ಕೇಳಬೇಕು ಅನಿಸಿದ್ರು ಕೇಳಲಿಲ್ಲ. ಒಳಗೆ ಹೋದೆವು ನನ್ನ ಹುಡುಕಾಟ ಸೂರ್ಯನಿಗಾಗಿ, ಸಂಧ್ಯಾ ಗೆ ಹುಡುಗಾಟವಾಗಿತ್ತು.

ಮಂಟಪ ಪೂರಾ ಸುತ್ತಾಡಿದೆ ಕೊನೆಗೆ ಡ್ರೆಸ್ಸಿಂಗ್ ರೂಮ್ ಆಚೆ ಕಂಡ. ವೈಟ್ ಶರ್ಟ್ ಬ್ಲೂ ಪ್ಯಾಂಟ್ ಬಹುಶಃ ಕೊರ್ಟ್ ಬಿಚ್ಚಿಟ್ಟಿದ್ದ ಅನ್ಸುತ್ತೆ. "ಹ್ಮ ಮದುಮಗನ ಕಳೆ ಎದ್ದು ಕಾಣ್ತಿದೆ" ಅಂದೆ.

"ಹ್ಮೂ ಮತ್ತೆ.. ನಮ್ ಹುಡುಗಿ ನೋಡಿ ಫೀದಾ ಆಗೋದು ಬೇಡ್ವಾ"

"ಬಾವಿಗೆ ತಾವೇ ಬಿದ್ರೋ ಯಾರಾದ್ರೂ ತಳ್ಳಿದ್ರೋ" ಅಂತ ಕೇಳಿದೆ

"ನಮ್ ಹುಡುಗಿ ಕಣ್ಣ ಬೆಳಕಿಗೆ ಜಗತ್ತು ಮಂದವಾಗಿ ಹಾಡು ಹಗಲೇ ಬಾವಿಗೆ ಬಿದ್ದೆ"

ಸಿಟ್ಟು ತಡೆಯಲಾಗದೆ "ನಿಂಗ್ ನಾಚಿಕೆ ಆಗಲ್ವಾ ನನ್ನ ಪ್ರೀತ್ಸಿ ಈಗ ಅವಳ್ನ ಮದುವೆ ಆಗೋಕೆ" ಅಂತ ಕೇಳಿದೆ

"ಹಲೋ ನಾವ್ ಯಾವಾಗ್ ಪ್ರೀತಿಸಿದ್ವಿ?! ಆಡಿದ್ದು ಬರೀ ಜಗಳ..ಅಲ್ವಾ"

"ಆ ತುಂಟಜಗಳದಲ್ಲಿ ಇಣುಕ್ತಿದ್ದ ಪ್ರೀತಿ ನಿಂಗ್ ಗೊತ್ತಿಲ್ವಾ"

"ಇಲ್ಲಾಪ್ಪಾ..ನಂಗ್ ಹೇಗ್ ಗೊತ್ತಾಗ್ಬೇಕು ಆಕಾಶ ನೋಡ್ಕೊಂಡ್ ಬೈಕ್ ಓಡ್ಸೊ ಅವೀವೆಕಿ ನಾನು"

ಹಳೆಯ ದಿನಗಳು ನೆನಪಾದವು.. ಸೂರ್ಯಾ ಅಂತಾ ಜೋರಾಗಿ ಬಿಗಿದಪ್ಪಿದೆ ಕಣ್ಣೀರಿಗೆ ಅವನ ಭುಜ ಸಿಕ್ಕಿತ್ತು. ಒಂದು ಕ್ಷಣ ಮೌನ ಆವರಿಸಿತ್ತು. ಅವನು ಕೇಳಿದ ಅಳೋವಂತದ್ದು ಏನಾಗಿದೆ ೩ವರ್ಷದಲ್ಲಿ ಅಷ್ಟು ಜಗಳಾಡಿದ್ರು ಯಾವತ್ತೂ ಅತ್ತಿಲ್ಲ ಇವತ್ತೇನು ವಿಶೇಷ? "ನಿಂಗೊತ್ತಿಲ್ವಾ ಏನೂ? ನಿಂಗ್ ಈ ಮದುವೆ ಇಷ್ಟಾನಾ?"

"ಹ್ಮೂ ಮತ್ತೆ ಇಷ್ಟೊಂದು ವೈಭವದ ಮದುವೆ ಇಷ್ಟಾ ಆಗ್ದೆ ಇರುತ್ತಾ"

" ಹಾಗಲ್ಲ ಹುಡುಗಿ ನಿಂಗೆ ಒಪ್ಕೆ ನಾ"

" ಹ್ಮೂ ಎಷ್ಟು ಚಂದ ಕೂಸು ಮಾರ್ರೆ ಇಷ್ಟಾ ಪಡ್ದೆ ಇರೋ ಮಾಣಿ ಉಂಟಾ " ಅಂದ.

ಅಷ್ಟರಲ್ಲಿ ಬಿಳಿ ಶರ್ಟು ಪಂಚೆ ಉಟ್ಟುಕೊಂಡ ಒಬ್ಬ ಹುಡುಗ ಬಂದ. ಇವರು? ಅಂದೆ. ಅವರು ಚಿದಾನಂದ ಮೂರ್ತಿ ಸರ್ ಮಗ ಸೂರ್ಯ ಮೂರ್ತಿ ಅಂತ. ಒಳಗೊಳಗೆ ಖುಷಿ ಅಂದರೆ ಮದುವೆ ಈ ಸೂರ್ಯನದಲ್ಲ. ಒಂದ್ಸಲ ಕಾರ್ಡ್ ತೆಗೆದು ಓದ್ಬೆಕಿತ್ತು. ಸಂಧ್ಯಾ ಯಾಕೆ ಹಾಗೆ ಹೇಳಿದ್ಲು? ಸೂರ್ಯಾ ಕೂಡಾ ಹಾಗೇ ಮಾತಾಡಿದ್ದು ಯಾಕೆ? ಪ್ರಶ್ನೆಗಳನ್ನು ಹತ್ತಿಕ್ಕಿ ಮುಗುಳ್ನಗುತ್ತಾ ಕೊಂಗ್ರ್ಯಾಟ್ಸ್ ಅಂತ ಹೇಳಿದೆ. ಅವರು ನಗುತ್ತಾ ಥ್ಯಾಂಕ್ಸ್ ಹೇಳಿ ಹೋದರು. ಕೋಪಮಾಡಿಕೊಂಡಂತೆ ಕೇಳಿದೆ - "ಇದು ನಿನ್ನ ಮದುವೆ ನಾ??"

"ನೀ ಹ್ಮೂ ಅಂದ್ರೆ ನನ್ ಮದುವೆನೇ.. ಇದೇ ಮಂಟಪದಲ್ಲಿ ನಿಂಜೊತೆನೇ ಏನಂತೀಯಾ"

"ನಾನು ನಿಂಜೊತೆ ಮದುವೆ ನಾ..ನೋ.. ವೇ.. ಸಾಧ್ಯಾನೇ ಇಲ್ಲ"

"ಸರಿಬಿಡು..ಸಂಧ್ಯಾನೂ ಸಿಂಗಲ್ ಅಂತೆ...."

ಅಷ್ಟರಲ್ಲಿ ಸಂಧ್ಯಾ ಓಡಿಬಂದು "ನಾನಂತೂ ರೆಡಿ..ಸೂರ್ಯಾ ಹನಿಮೂನ್ ಗೆ ಎಲ್ಲಿಗೆ ಹೋಗೊಣ" ಅಂದ್ಲು‌. ಅದಕ್ಕವ್ನು "ಬಾ ಈಗಲೇ ಓಡಿ ಹೋಗೋಣ, ಇಲ್ಲಿ ಎಲ್ಲೋ ಏನೋ ಸುಟ್ಟಂಗೆ ವಾಸನೆ ಬರ್ತಿದೆ (ನನ್ನನ್ನು ನೋಡ್ಕೊಂಡು) ಅಂತಿದ್ದ.

ಇಬ್ಬರೂ ಸೇರಿ ಮಾಡ್ತಿದ್ದ ಕಿತಾಪತಿ ಗೊತ್ತಾಯ್ತು..ಇಬ್ಬರೂ ಒಂದಾಗಿ ನಂಗೆ ಆಟಾ ಆಡ್ಸಿದ್ರು!! ಬೆಸ್ಟ್ ಫ್ರೆಂಡ್ ಆಗಿ ಹೀಗ್ ಮಾಡೋದಾ..ಸಾಯ್ಸ್ಬಿಡ್ತಿನಿ ಇಬ್ರುನ್ನೂ ಅಂತ್ಹೇಳಿ ಇಬ್ರನ್ನೂ ಬಿಗಿದಪ್ಪಿದೆ.
*********

ನಂಗ್ ರೆಡ್ ಕಲರ್ ಇಷ್ಟಾ ಇಲ್ಲ ನಂಗ್ ಬೇಡ.. ವಾಪಸ್ ಕೊಟ್ಟು ಬೇರೆದು ತಗೊಂಡ್ ಬಾ ಇಲ್ಲಾ ನೀನೇ ಉಟ್ಕೋ ಈ ರೆಡ್ ಸ್ಯಾರಿ..

"ಪ್ರೀತಿಯಿಂದ ಗಿಫ್ಟ್ ಅಂತ ತಂದ್ಮೇಲೆ ಹೇಗಿದ್ರು ಪ್ರೀತಿಯಿಂದ ಒಪ್ಕೊಬೇಕು.ಅದು ಬಿಟ್ಟು ಎಲ್ಲದಕ್ಕೂ ಕ್ಯಾತೆ ತೆಗಿತಾಳೆ.. ಹೋಗೆಲೆ ನಿನಗಿಂತ ಸಂಧ್ಯಾ ನೇ ಬೆಸ್ಟು. ನಿನ್ನಂಥ ಜಗಳಗಂಟಿನಾ ಯಾಕಾದ್ರೂ ಮದುವೆ ಆದ್ನೊ ಭಗವಂತ.. "

"ಹಲೋ ನೀನೇ ಹುಡಕ್ಕೊಂಡ್ ಬಂದು ಪ್ರಪೋಸ್ ಮಾಡಿದ್ದು" ನಾನಂದೆ.

"ಅಲ್ವಾ ಮಂಟಪ ಎಲ್ಲಾ ಸುತ್ತಾಡಿ ಹುಡುಕಾಡಿ ಅಪ್ಕೊಂಡ್ ಅಳ್ತಿದ್ದೆ ನೀನು ಸಮಾಧಾನ ಮಾಡ್ತಿದ್ದೆ ಅಲ್ವಾ" ಅಂದು ಕಣ್ ಹೊಡೆದ.

ನಿಜಕ್ಕೂ ಯಾರಿಗೆ ಯಾರು ಪ್ರೀತಿ ಹೇಳಿಕೊಂಡೆವೋ ಗೊತ್ತಿಲ್ಲ, ಆದರೆ ನಮ್ಮ ಕಲಹದ ಒಲವಿನ ಒರತೆಗೆ ಕೊನೆ ಇರಲಿಲ್ಲ. ಅವನಿಯ ಮೊಗದ ನಗುವಾದ ಸೂರ್ಯ, ಅವನಿಗೆ ಅರಿಯದಂತೆ ಅವನಿಯೊಳು ಬೆರೆತಾಗಿತ್ತು.

                 ---------------


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ...