ಅವತ್ತು ಫ್ರೆಂಡ್ ಶಿಪ್ ಡೇ ಇಡೀ ಕಾಲೇಜ್ ಸ್ನೇಹದ ಕಡಲಲ್ಲಿ ಮಿಂದೆಳುತಿತ್ತು. ಎಲ್ಲರೂ ಒಬ್ಬರ ಕೈಗೊಬ್ಬರು ಬ್ಯಾಂಡ್ ಕಟ್ಟುತ್ತಾ ಉಡುಗೊರೆ ವಿನಿಮಯ ಮಾಡಿಕೊಳ್ಳುವ ಭರದಲ್ಲಿದ್ದರು. ನನ್ನ ಹೊರತು, ಕಾರಿಡಾರ್ ನ ಒಂದು ಮೂಲೆಯಲ್ಲಿ ಒಬ್ಬಳೇ ಕೂತು ಗೋಡೆಗೆ ತಲೆಯಾನಿಸಿ ನಡೆಯುತ್ತಿದ್ದ ಸಂಭ್ರಮವನ್ನು ಮನಸ್ಸಿಲ್ಲದ ಮನಸ್ಸಿನಿಂದ ನೋಡುತ್ತಾ ಕುಳಿತಿದ್ದೆ. ನನಗ್ಯಾರು ಫ್ರೆಂಡ್ಸ್ ಇಲ್ಲ ಅಂತಲ್ಲ, ಇದ್ದ ಒಬ್ಬ ಸ್ನೇಹಿತನ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದೆ. ಅವನಿಲ್ಲದೆ ಎಲ್ಲ ಸಂಭ್ರಮಗಳು ಶೂನ್ಯವಾಗಿ, ನನಗೆ ನಾನೇ ಅಪರಿಚಿತಳೆನ್ನುವಷ್ಟು ಒಂಟಿತನ. ಬಾಹ್ಯ ಪ್ರಪಂಚಕ್ಕೆ ಕಣ್ಣು ತೆರೆದಿದ್ದವು, ಅಂತರಂಗದಲ್ಲಿ ನೆನಪುಗಳ ಮೆರವಣಿಗೆ ನಡೆದಿತ್ತು.
ನನಗಿನ್ನು ನೆನಪಿದೆ ಅವತ್ತು ಬೋರ್ಡಿಂಗ್ ಸ್ಕೂಲ್ ನಲ್ಲಿ ನನ್ನ ಮೊದಲ ದಿನ. ಯಾರೊಬ್ಬರೂ ಪರಿಚಯವಿರಲಿಲ್ಲ. ಅಪರಿಚಿತರ ಮಧ್ಯೆ ವ್ಯಾಸಂಗ ಮುಂದುವರಿಸಬೇಕಿತ್ತು. 7 ನೇ ತರಗತಿವರೆಗೂ ಸ್ವಚ್ಛಂದವಾಗಿ ಹಾರಾಡಿಕೊಂಡು ಊಟ ಪಾಠ ಮಾಡಿಕೊಂಡಿದ್ದವಳಿಗೆ ಪಂಜರದಲ್ಲಿ ಹಾಕಿದಂತೆ ಅನಿಸಿದ್ದು ಸುಳ್ಳಲ್ಲ. ನನಗೆ ಬೋರ್ಡಿಂಗ್ ಹೋಗೋಕೆ ಇಷ್ಟ ಇಲ್ಲ ಅಂತ ಅಪ್ಪ-ಅಮ್ಮನ್ನ ಕೇಳ್ಕೊಂಡು ಸಾಕಾಗಿತ್ತು. ಆದರೆ ಅವರು ಕೇಳಬೇಕಲ್ಲ,
"ಇಲ್ಲೇ ಇದ್ರೆ ಮುದ್ದಿನಿಂದ ಹಾಳಾಗೋಗ್ತಿಯಾ ಇಂಡಿಪೆಂಡೆಂಟ್ ಆಗೋದ್ಯಾವಾಗ ಅಂತ.. ಅಲ್ಲಿ ನಿನ್ನ ಹಾಗೆ ಎಷ್ಟೋ ಜನ ಮಕ್ಕಳು ಬಂದಿರ್ತಾರೆ. ಅವರ ಜೊತೆ ಆಟ-ಪಾಟ ಎಷ್ಟು ಚೆನ್ನಾಗಿರ್ತಿಯಾ ಗೊತ್ತಾ, ಮನೆ ನೆನಪು ಕೂಡ ಬರಲ್ಲ ಹಾಗಿರುತ್ತೆ" ಅಂತ ಪೂಸಿ ಹೊಡೆದು ಕರೆದುಕೊಂಡು ಬಂದ್ಬಿಟಿದ್ರು.
ಅಲ್ಲಿ ಅಪರಿಚಿತ ಮುಖಗಳನ್ನು ಕಂಡು, ಯಾರೊಡನೆಯು ಸುಲಭವಾಗಿ ಬೆರೆಯದ ನನ್ನ ಸ್ವಭಾವ ನನಗೆ ಮುಳ್ಳಾಗಿತ್ತು. ಅಪ್ಪ ಅಮ್ಮ ಇನ್ನೇನೂ ಬಿಟ್ಟು ಹೊರಡುವ ಸಮಯ ಒತ್ತರಿಸಿ ಬಂದಿತು ದುಃಖ. ಅಳು ತಡೆಯಲಾಗಲಿಲ್ಲ. ಆಗ್ಲೆ ಕಂಡಿದ್ದು "ಅವನು"!! ಅಳುತ್ತಾ ತಂದೆ ತಾಯಿಯನ್ನು ಬೀಳ್ಕೊಡುವರ ಮಧ್ಯೆ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಖುಷಿಯಾಗಿದ್ದ. ತನ್ನ ಬದಿಯಲ್ಲಿ ಸಪ್ಪೆಯಾಗಿ ಕೂತಿದ್ದ ಸ್ನೇಹಿತನಿಗೆ ಏನೋ ತಮಾಷೆ ಮಾಡಿ ನಗಿಸುವ ಪ್ರಯತ್ನದಲ್ಲಿ ನಿರತನಾಗಿದ್ದ. ಅವನ ನಗು ಅಳ್ತಿದ್ದ ನನಗೆ ಅಣುಕಿಸಿದ ಹಾಗಾಯ್ತು. ಅದು ಸಿಟ್ಟೋ, ಅವನ ಖುಷಿ ಕಂಡ ಅಸೂಯೆಯೋ? ನನಗೂ ಯಾವಾಗಲೂ ಹಾಗೆ ಖುಷಿಯಾಗಿ ಇರಬೇಕೆಂಬ ಆಸೆ, ಆದರೆ ಹುಟ್ಟು ಸ್ವಭಾವವಾಗಿದ್ದ ಮುಂಗೋಪ ಮತ್ತು ಅಹಂ ಭಾವದ ಕಾರಣದಿಂದ ಯಾರೊಡನೆಯೂ ಬೆರೆಯಲಾಗುತ್ತಿರಲಿಲ್ಲ. ನನ್ನ ಕಲ್ಪನಾತೀತ ಸ್ವಭಾವದ ಪ್ರತಿಮೂರ್ತಿಯಾಗಿದ್ದ ಅವನನ್ನು ಕಂಡು ಸ್ವಲ್ಪ ಅಸೂಯೆ ಉಂಟಾಗಿತ್ತು. ಜೊತೆಗೆ ಮನಸ್ಸು ಒಳಗೊಳಗೆ ತನಗರಿಯದಂತೆ ಅವನನ್ನು ಅನುಸರಿಸಲು ಮೊದಲಾಗಿತ್ತು. ಕಣ್ಣೊರೆಸಿಕೊಂಡು ಅಪ್ಪ-ಅಮ್ಮನ ನಗ್-ನಗ್ತಾ ಟಾಟಾ ಮಾಡಿ ಬೀಳ್ಕೊಟ್ಟೆ.
ಅವತ್ತಿಂದ ಅವನು ನನ್ನ ಪ್ರತಿಸ್ಪರ್ಧಿ ಏನೋ ಅನ್ನೋ ಭಾವನೆ ಶುರುವಾಗಿತ್ತು. ನನಗೆ ಹಸಿವಾಗದಿದ್ರೂ ಅವನು ಮೆಸ್ ನಲ್ಲಿ ಆಸ್ವಾದಿಸುತ್ತಾ ಊಟಾ ಮಾಡೋದ್ನ ನೋಡಿ ನಾನ್ ಯಾಕ್ ಉಪವಾಸ ಇರ್ಬೇಕು ಅನ್ಕೊಂಡು ಊಟಾ ಮಾಡ್ತಿದ್ದೆ! ಓದೋಕೆ ಇಷ್ಟ ಇಲ್ಲದಿದ್ರು ಎದುರು ಕಿಟಕಿಲಿ ಬಾಯ್ಸ್ ಹಾಸ್ಟೆಲ್ ನಲ್ಲಿ ಅವನು ಓದ್ತಿರೋದು ಕಂಡು ನಾನು ಏನ್ ಕಮ್ಮಿ ಅಂತಾಪುಸ್ತಕ ಹಿಡಿದು ಕೂರ್ತಿದ್ದೆ. ಎಲ್ಲರ ಜೊತೆ ಸ್ನೇಹದಿ ಬೆರೆವ ಅವನ ಸ್ವಭಾವ, ಒಂಟಿ ಗೂಬೆ ತರಾ ಇದ್ದ ನನಗೆ ಆಗಾಗ ಹೊಟ್ಟೆಕಿಚ್ಚು ಹುಟ್ಟಿಸ್ತಾನೇ ಇತ್ತು. ಅವನು ನನ್ನ ಜೊತೆ ಕೂಡ ಎಷ್ಟೋ ಬಾರಿ ಎಲ್ಲರ ಹಾಗೆ ಮಾತಾಡಿಸಲು ಪ್ರಯತ್ನಿಸಿದ್ದ. ಆದರೆ ನಾನೇ ಕೊಬ್ಬಿನಿಂದ ಹೊರಟು ಹೋದರೂ ಒಳಗೊಳಗೆ ನನ್ನನ್ನು ನಾನೇ ಶಪಿಸಿದ್ದು ಉಂಟು. "ನಾನ್ಯಾಕೇ ಹೀಗೆ? ಮಾತಾಡಬಹುದಿತ್ತಲ್ವಾ!!" ಎಂದು.
ಒಂದಿನ ಕ್ಲಾಸ್ ನಲ್ಲಿ ಸರ್ ಕೇಳಿದ ಪ್ರಶ್ನೆಗೆ ತಪ್ಪು ಉತ್ತರ ನೀಡಿದಾಗ ಇಡೀ ಕ್ಲಾಸ್ ನನ್ನ ನೋಡಿ ಗೊಳ್ ಎಂದು ನಕ್ಕಿತ್ತು. ಆದರೆ ನನಗೆ ಮುಖ್ಯವಾಗಿ ಅಣುಗಿಸಿದಂತಿದಿದ್ದು ಮಾತ್ರ ಅವನ ನಗು!! ಮನಸ್ಸಲ್ಲೇ "ಮಾಡ್ತಿನಿ ಇರೋ ನಿಂಗೆ" ಅಂತ ಪ್ರತಿಜ್ಞೆ ಬೇರೆ ಮಾಡಿದೆ.
ಮರುದಿನ ಬೆಳಗಿನ ಜಾವ ಎಲ್ಲರೂ ಜಾಗಿಂಗ್ ಹೋದಾಗ ಹುಷಾರಿಲ್ಲದ ನೆಪ ಮಾಡಿ ಹಾಸ್ಟೆಲ್ ರೂಮಲ್ಲೇ ಮಲಗಿದ್ದೆ, ಎಲ್ಲ ಹೋದ ಮೇಲೆ, ಯಾರೂ ಇಲ್ಲದ ಸಮಯ ಖಚಿತ ಪಡಿಸಿಕೊಂಡು, ಎದ್ದು ಕಳ್ಳಬೆಕ್ಕಿನಂತೆ ಅವನ ರೂಂ ಹೊಕ್ಕು ಅವನ ಬ್ಯಾಗ್ ಹುಡುಕಿದೆ. ಅವನ ಬ್ಯಾಗ್ ನಿಂದ ಅಸೈನ್ಮೆಂಟ್ ಹೊರತೆಗೆದು ತಡಮಾಡದೆ ಅವಸರವಸರವಾಗಿ ಇರೋಬರೋ ಸಿಟ್ಟೆಲ್ಲಾ ಪೆನ್ನಿಗೆ ಹಾಕಿ ಅಸೈನ್ಮೆಂಟ್ ತುಂಬಾ ಗೀಚಾಡಿದೆ. ತಕ್ಷಣ ಮತ್ತೆ ಅದನ್ನು ಬ್ಯಾಗ್ ನಲ್ಲಿಟ್ಟು ತೃಪ್ತಿಯಿಂದ ಹೋಗಿ ರೂಮಲ್ಲಿ ಮಲಗಿದೆ.
ಕ್ಲಾಸ್ ಗೆ ಬಂದಾಗ ನನ್ನ ಮುಖದಲ್ಲಿ ಗೆಲುವಿನ ಹೊಳಪಿತ್ತು. ಏನೋ ಸಾಧಿಸಿದ ಉತ್ಸಾಹವಿತ್ತು. ಮುಂದೇನಾಗಬಹುದು ಎಂಬ ಕುತೂಹವಿತ್ತು. ಸರ್ ಅವನಿಗೆ ಮಂಗಳಾರತಿ ಮಾಡುವುದನ್ನು ಊಹಿಸಿಕೊಂಡು ಮನಸ್ಸಿಲ್ಲೇ ನಗುತ್ತಿದ್ದೆ.ಅವನು ಕ್ಲಾಸಲ್ಲಿ ಕೂತಿದ್ದ. ಅವನ ಮುಖ ನೋಡಿದರೆ ಅವನಿಗಿನ್ನೂ ಅಸೈನ್ಮೆಂಟ್ ವಿಷಯ ಗೊತ್ತಿಲ್ಲ ಅನಿಸ್ತು. "ಇರಲಿ ಮುಂದೆ ಇದೆ ಮಾರಿ ಹಬ್ಬ" ಅನ್ಕೊಂಡೆ.
ಸರ್ ಅಸೈನ್ಮೆಂಟ್ ಕೇಳಿದಾಗ ಎಲ್ರೂ ತಮ್ಮ ತಮ್ಮ ಅಸೈನ್ಮೆಂಟ್ ಟೇಬಲ್ ಮೇಲೆ ಇಡುತ್ತಿದ್ರು. ನಾನು ನನ್ನದನ್ನು ಕೈಯಲ್ಲಿ ಹಿಡಿದು ಹೊರಡಲು ಸಿದ್ದಳಾಗಿ ಅವನ ಕಡೆಯೊಮ್ಮೆ ನೋಡಿದೆ. ಅವನು ಸರ್ ಕಡೆ ಹೋಗೋದು ಬಿಟ್ಟು ನನ್ನ ಕಡೆಗೆ ನಡೆದು ಬಂದ. ಯಾಕೆ?? ನಾ ಮಾಡಿದ ಕಿತಾಪತಿ ಗೊತ್ತಾಗೊಯ್ತಾ? ಕತ್ತು ಎತ್ತಿ ನೋಡಿದೆ.
ಅವನು ಹೇಳಿದ "ನಿನ್ನೆ ಸ್ಪೋರ್ಟ್ಸ್ ಗೆ ಅಂತ ಓಡಿ ಹೋಗುತ್ತಿದ್ದಾಗ ನಿನಗೆ ಡಿಕ್ಕಿ ಹೊಡೆದೆನಲ್ಲಾ ಇಬ್ರೂದು ಅಸೈನ್ಮೆಂಟ್ ಎಕ್ಸೆಂಜ್ ಆಗಿವೆ ಅನ್ಸುತ್ತೆ!! ನೋಡು ಇದರಲ್ಲಿ ನಿನ್ನ ಹೆಸರಿದೆ" ಅಂತ ತೋರಿಸಿದ. ಒಂದು ಕ್ಷಣ ದಿಕ್ಕು ತಪ್ಪಿ ಹೋಯಿತು ನನಗೆ!!. ನನ್ನ ಕೈಯಲ್ಲಿದ್ದ ಅಸೈನ್ಮೆಂಟ್ ತೆಗೆದು ನೋಡಿದೆ ಅವನ ಹೆಸರಿತ್ತು. ಹಾಗಾದರೇ ಗೀಚಾಡಿದ್ದು ನನ್ನದೇ ಅಸೈನ್ಮೆಂಟ್ ನಲ್ಲಿ!!! ಅವನದು ನನ್ನ ಹತ್ತಿರವೇ ಕ್ಷೇಮವಾಗೇ ಇತ್ತು?!
ಕರ್ಮ ಪುನರಾವರ್ತಿ ಆಗುತ್ತೆ ಅಂತ ಗೊತ್ತಿತ್ತು, ಆದರೆ ಇಷ್ಟು ವೇಗವಾಗಿ ತಿರುಗಿ ಬರುತ್ತೆ ಅಂತ ಅಂದುಕೊಂಡಿರಲಿಲ್ಲ!! ಕೊಟ್ಟ ಕೆಲಸ ನೆಟ್ಟಗೆ ಮಾಡದಿದ್ದ ತಪ್ಪಿಗೆ ಗ್ರೌಂಡ್ ಕ್ಲೀನ್ ಮಾಡೋ ಶಿಕ್ಷೆ ಒಂದು ಕಡೆಯಾದರೆ ಅದರ ಮೇಲ್ವಿಚಾರಣೆಗೆ ಅವನನ್ನೇ ಕಳಿಸಿದ್ದು ಇನ್ನೊಂದು ದುರಂತ. ನಾನು ಸುಡೋ ಬಿಸಿಲಿನಲ್ಲಿ ಕಸ ಕಡ್ಡಿ ಆಯ್ತಿದ್ರೆ, ಅವನು ನೆರಳಲ್ಲಿ ಕೂತು ಚಿವಿಂಗಮ್ ಅಗಿತಿದ್ದ. ಅವನನ್ನೇ ದಿಟ್ಟಿಸಿ ನೋಡುತ್ತಾ ನೋಡ್ಕೊತಿನಿ ಲೋ ನಿನ್ನ ಅಂದಿತ್ತು ಮನಸ್ಸು ಒಳಗೊಳಗೆ. ಅವನೇನು ಮಾಡಿರಲಿಲ್ಲ ಅನ್ನೋದು ನನ್ನ ದುರಹಂಕಾರಿ ಮನಸ್ಸಿಗೂ ಗೊತ್ತಿತ್ತು. ಯಾವಾಗಲೂ ಮುಗುಳ್ನಗುವಿನ ಆಪ್ತಸ್ನೇಹಿತನಾಗಿದ್ದ ಅವನ ಕಂಡರೆ ಅದೇನೋ ಅವ್ಯಕ್ತ ದ್ವೇಷ, ನಾನೂ ಯಾಕೆ ಹಾಗೇ ಇರೋದಿಲ್ಲ ಅನ್ನೊದನಕ್ಕಿಂತ, ಹೇಗೆ ಇವನು ಹೀಗೆ ಅಂತ ಅದನ್ನೇ ಯೋಚಿಸ್ತಿದ್ದೆ.
ಮರುದಿನ ಕ್ಲಾಸ್ ಟೆಸ್ಟ್ ಇತ್ತು, ಎಲ್ಲರೂ ಬರೆಯೋದರಲ್ಲಿ ಮಗ್ನರಾಗಿದ್ರೆ ನಂಗೆ ಹೊಟ್ಟೆ ಹಸಿದು ಇಲಿ ಓಡಾಡಿದ ಹಾಗಾಗಿತ್ತು! ಮೆಲ್ಲಗೆ ಯಾರ ಕಣ್ಣಿಗೂ ಬೀಳದಂತೆ ಚಾಕೊಲೇಟ್ ತೆಗೆದು ಬಾಯಿಗೆ ಹಾಕಿದೆ. ಸರ್ ನನ್ನತ್ರ ಬರ್ತಿರೋದ್ನ ನೋಡಿ ವ್ರ್ಯಾಪರ್ ನ ದೂರ ಎಸೆದು ಏನೋ ಯೋಚಿಸೋ ಭಂಗಿಯಲ್ಲಿ ಕೂತಿದ್ದೆ. ಚಾಕೊಲೇಟ್ ಹಾಳೆ ಹಾರಿ ಅವನ ಹತ್ರ ಹೋಗಿ ಬಿದ್ದಿತ್ತು! ಅವನು ಬರೆಯೋ ಆತುರದಲ್ಲಿ ಗಮನಿಸಿರಲಿಲ್ಲ.
ಸರ್ ಓಡಾಡೋವಾಗ ಅದು ಅವರ ಕಣ್ಣಿಗೆ ಬಿದ್ದಿತ್ತು. ಯಾರದು ಕ್ಲಾಸ್ ಲಿ ಚಾಕೊಲೇಟ್ ತಿಂದದ್ದು ಎದ್ದು ನಿಲ್ಲಿ ಅಂದ್ರು ನಾನು ಏನೂ ಗೊತ್ತಿಲ್ದಂತೆ ಕೂತಿದ್ದೆ. ಅವನೇ ಎದ್ದು ನಿಂತು ತಾನೇ ತಿಂದಿದ್ದು ಅಂತ ತಪ್ಪೊಪ್ಪಿಕೊಂಡ. ನನಗೆ ಮೈಯಲ್ಲ ಉರ್ದೋಯ್ತು!! ನನಗೆ ಉಪಕಾರ ಮಾಡ್ತಿದಾನಾ ಇವನು? ನನಗೇಕೆ ಇವನ ಋಣ ಅಂತ ನಾನು ಎದ್ದು ನಿಂತು "ಸರ್ ಅವನಲ್ಲ, ಚಾಕೊಲೇಟ್ ತಿಂದಿದ್ದು ನಾನು" ಅಂದೆ.
ಒಟ್ಟಿನಲ್ಲಿ ಇಬ್ಬರನ್ನೂ ಒಟ್ಟಿಗೆ ಕ್ಲಾಸ್ ನಿಂದ ಆಚೆಗೆ ಅಟ್ಟಿದರು. ಇಬ್ಬರೂ ಹೊರಗಡೆ ಬಗ್ಗಿ ಕಿವಿ ಹಿಡಿದು ನಿಂತೆವು. ಒಮ್ಮೆ ಅವನು ಏನು ಮಾಡ್ತಿರಬಹುದು ಅಂತ ತಲೆಯೆತ್ತಿ ನೋಡಿದೆ. ಅಂತಹ ವಿಷಮ ಅವಮಾನಕರ ಪರಿಸ್ಥಿತಿಯಲ್ಲಿಯೂ ನಗ್ತಾವನೆ!! ನನಗೆ ಕೋಪ ಕೆರಳಿತು, ಎಲ್ಲಾ ನಿನ್ನಿಂದಲೇ... ಮುಚ್ಕೊಂಡು ಕೂತಿದ್ರೆ ಇಬ್ಬರೂ ಟೆಸ್ಟ್ ಬರಿಬಹುದಿತ್ತು ಅಂದೆ. ನನಗೆ ಟೆಸ್ಟ್ ಬರೆಯೋದು ಬೇಡವಾಗೇ ಒಪ್ಕೊಂಡು ಆಚೆ ಬಂದೆ ನಾನು.. ತಲೆ ಬುಡ ಒಂದು ಅರ್ಥ ಆಗ್ಲಿಲ್ಲ.. ಹೊರಗಡೆ ಸಖತ್ ಚೆನ್ನಾಗಿದೆ ಗಾಳಿ ಹಾ...!! ಆದರೆ ನೀನ್ಯಾಕೆ ಒಪ್ಕೋಂಡೆ ಅಂತ ಕೇಳಿದ. ತಿಂದದ್ದು ನಾನೇ ಅಂತ ಹೇಳಿದ್ರೆ ಇನ್ನೂ ಜೋರಾಗಿ ನಗ್ತಾನೆ ಅಂತ ಅನ್ನಿಸಿ, ನಿನಗೆ ಕಂಪನಿ ಕೊಡೊಕೆ ಅಂತ ಬಂದೆ ಅಂದೆ. ಓಹ್ ನೀನು ಮುಂದೆ ಸಮಾಜಸೇವಕಿ ಆಗ್ತಿಯಾ ಅನ್ಸುತ್ತೆ!! ಇವತ್ತಿಂದ ನೀನು ನನ್ನ ಬೆಸ್ಟ್ ಫ್ರೆಂಡ್ ಹಾಗಾದ್ರೆ ಅಂತ ಹೇಳಿದ. ಆ ಕ್ಷಣ ಅಹಮ್ಮು ಹೊದ್ದು ಮಲಗಿ ಗಾಢ ನಿದ್ರೆ ಹೋಗಿತ್ತೇನೋ ಕಾಣೆ, ನನಗೂ ಗೂಬೆ ಲೈಫ್ ಸಾಕಾಗಿತ್ತು ನಕ್ಕು ಹ್ಮೂ ಅಂದುಬಿಟ್ಟೆ.
" ಹಾಯ್..ನಾನು ಸಾತ್ವಿಕ್.. 8th std "B" section ಮೈಸೂರಿನವನು. ನೀನು??" ಅಂತ ಹೊಸದಾಗಿ ಪರಿಚಯವಾದಂತೆ ಕೇಳಿದ.
"ನಾನು ಕ್ಷಿತಿಜಾ ಅಂತ. ನಿನ್ನ ಕ್ಲಾಸ್ ನವಳೇ ಆದರೆ ಯಾವತ್ತೂ ನಿನ್ನ ನೋಡೇ ಇಲ್ವಲ್ಲಾ" ಅಂದೆ ತಮಾಷೆಗೆ.
"ಅದು ನಾನು ಕ್ಲಾಸ್ ಒಳಗಿದ್ದು ಕಲಿಯೊದಕ್ಕಿಂತ ಹೊರಗೆ ತಿರಾಗಾಡ್ತಾ ಕಲಿಯೋದೇ ಹೆಚ್ಚು ಹೀಗಾಗಿ ನಿನಗೆ ಕಾಣಿಸಿಲ್ಲ ಅಷ್ಟೇ"
ಓಹೋ ತಿರುಗಾಡ್ತಾ ಅಲ್ಲ ಹೀಗೆ ಕೋಳಿ ತರ ನಿಂತುಕೊಂಡು ಕಲಿತೀರಬೇಕು ಅಲ್ವಾ ಅನ್ನುತ್ತಾ ಜೋರಾಗಿ ನಕ್ಕೆ. ಅವನು ಹ್ಮೂ ನನ್ನ ಸಹವಾಸ ಮಾಡಿದ್ರೆ ಮುಗೀತು ನೀನು ಪಂಡಿತೆಯಾಗಿಬಿಡ್ತೆ ಅಂತ ಹಾಸ್ಯ ಮಾಡಿದ. ಹೀಗೆ ಶುರುವಾಗಿತ್ತು ನಮ್ಮ ಸ್ನೇಹ..
ಸಾತ್ವಿಕ್ ಜೊತೆ ಬೆರಿತಾ ಗೊತ್ತಾಯ್ತು ಅವನಿಗೆ ತಾಯಿ ಇರಲಿಲ್ಲ. ತಂದೆ ಬಿಸಿನೆಸ್ ಸಲುವಾಗಿ ಬೇರೆ ದೇಶಕ್ಕೆ ಓಡಾಡುತ್ತಿದ್ದರಿಂದ ಅವನನ್ನು ಬೋರ್ಡಿಂಗ್ ಸೇರ್ಸಿದ್ರು. ಎಲ್ಲಾ ಇದ್ದು ಯಾವಾಗಲೂ ಗುಂ ಅಂತಿದ್ದ ನನ್ನ ದಿನಚರಿ, ಹವ್ಯಾಸ, ನನಗೆ ಅರಿಯದಂತೆ ನನ್ನ ಸ್ವಭಾವ ಸಹ ಬದಲಾಗುತ್ತ ಹೋಯಿತು. ಅವನೊಂದಿಗೆ ಸ್ನೇಹ ಎಷ್ಟು ಗಾಢವಾಯ್ತಾ ಹೋಗಿತ್ತೆಂದರೆ, ಅವನು ನನ್ನ ಹೊರತು ಬೇರೆಯವರ ಜೊತೆ ಒಂದು ಮಾತು ಹೆಚ್ಚಾಗಿ ಆಡಿದರೂ ಜಗಳ ಮಾಡಿ ಬಿಡುತ್ತಿದ್ದೆ. ಅವನಿಗೆ ನನ್ನ ಕೋಪ ಮರೆಸಿ ನಗಿಸುವ ಕಲೆ ಸರ್ವೇಸಾಮಾನ್ಯ ಎಂಬಷ್ಟು ರೂಢಿಯಾಗಿಬಿಟ್ಟಿತ್ತು.
ರಜಾ ದಿನಗಳಲ್ಲಿ ಒಂದೆರಡು ಬಾರಿ ನಮ್ಮ ಮನೆಗೂ ಕರೆದುಕೊಂಡು ಹೋಗಿದ್ದೆ. ಅಮ್ಮನ ಪ್ರೀತಿಯ ಕೈ ತುತ್ತು ಅಪ್ಪನ ಜೊತೆ ಲಾಂಗ್ ಡ್ರೈವ್, ಅವನ ಮನದಲ್ಲಿ ಹೇಳಲಾಗದೆ ಅಡಗಿದ್ದ ಕೊರತೆಗಳನ್ನು ನೀಗಿಸಿದ್ದವು. ನನಗೆ ವರ್ಷಗಟ್ಟಲೆ ಕಲಿಯಲಾಗದಿದ್ದ ಸೈಕಲ್ ಸವಾರಿ ಸ್ನೇಹಿತನ ಹಿತಭೋಧನೆ ಅಡಿಯಲ್ಲಿ ಎರಡೇ ದಿನಕ್ಕೆ ಪರಿಪಕ್ವವಾಗಿತ್ತು. ತೋಟದಲ್ಲಿ ಜೋತುಬಿದ್ದ ಜೇನುಗೂಡಿಗೆ ಕಲ್ಲೆಸೆದು ಜೇನುನೋಣಗಳಿಂದ ಕಚ್ಚಿಸಿಕೊಂಡು, ಎಲ್ಲರ ಸಹಸ್ರಾರ್ಚನೆಗೆ ನಾಮಾಂಕಿತರಾಗಿ ಹೆಸರುವಾಸಿಯಾದೆವು. ಇಬ್ಬರೂ ಸೇರಿ ಮಾಡಿದ ಕಿತಾಪತಿ ವಿದೇಶದಲ್ಲಿ ಇದ್ದ ಅವನ ಪಿತಾಶ್ರೀಗೂ ನನ್ನ ಪಿತಾಶ್ರೀ ಮುಖಾಂತರ ತಲುಪುತ್ತಿದ್ದವು. ಕೋಪದಲ್ಲಿ ಎರಡು ಮಾತು ಉಗಿದರೂ ನಾವು ಮಾಡುವ ಕೆಲವು ಕುಚೇಷ್ಟೆಗೆ ಅಪ್ಪ ಅಮ್ಮನಿಗೂ ನಗು ತಡೆಯಲಾಗುತ್ತಿರಲಿಲ್ಲ. ಹೀಗೆ ಸವಿ ನೆನಪುಗಳ ಕ್ರೋಡೀಕರಿಸಿ ಅತ್ಯಂತ ತೃಪ್ತನಾಗಿ ಅಷ್ಟೇ ಬೇಜಾರಿನಲ್ಲಿ ನಮ್ಮನ್ನು ಬೀಳ್ಕೊಡುತ್ತಿದ್ದ ಸಾತ್ವಿಕ್. ನಾನಂತು ರಜೆ ಯಾವಾಗ ಮುಗಿಯುತ್ತೊ ಅಂತ ದಿನ ಲೆಕ್ಕ ಹಾಕ್ತಿದ್ದೆ.
ಫ್ರೆಂಡ್ ಶಿಪ್ ಡೇ ಗೆ ಅವನ ಹೊರತು ಯಾರಿಂದಲೂ ಬ್ಯಾಂಡ್ ಕಟ್ಟಿಸಿಕೊಳ್ಳದ ನಾನು ಎಲ್ಲರ ದೃಷ್ಟಿಯಲ್ಲಿ ದುರಹಂಕಾರಿ ! ! ಆದರೆ ನನ್ನ ಪಾಲಿಗದು ಸ್ನೇಹದ ಪರಾಕಾಷ್ಠೆ!! ಆದರೆ ಸ್ನೇಹ ಅತಿಯಾದರೆ ಒಲವಾಗಿ ಪರಿವರ್ತಿಸುವದೆಂದು ಆ ಬಾಲ್ಯಕ್ಕೆ ತಾನೇ ಹೇಗೆ ಗೊತ್ತಾಗಬೇಕು.
ಮೈಮೇಲೆ ಏನೋ ಬಿದ್ದಂತಾಗಿ ನೆನಪಿಗೆ ತಡೆಯಾಗಿ ಚಿಟ್ಟನೇ ಅಮ್ಮಾ ಎಂದು ಚೀರಿದೆ!! ಜಿರಳೆ..ಕಂಡರೆ ಬೆಚ್ಚಿ ಬೀಳುವ ನನ್ನ ಗೋಳಾಡಿಸಲು ಜಿರಳೆ ಜೊತೆಗೂ ಆತ್ಮೀಯನಾಗಿ, ಜಿರಳೆಯನ್ನು ತಂದಿದ್ದದಲ್ಲದೇ ನನ್ನ ಮೇಲೆಸೆದ ಅವನಿಗೆ ಹೊಡೆಯಲು ಅಟ್ಟಿಸಿಕೊಂಡು ಹೋದೆ.
ಓಡುವಷ್ಟು ದೂರ ಓಡಿ..ಲೋ ಕ್ಷಿತಿ ನಿಂಗೆ ಅಂತ ಒಳ್ಳೆ ಗಿಫ್ಟ್ ತಂದಿದ್ರೆ ನೀನೆನೇ ಹೊಡೆಯೊ ಪ್ರೊಗ್ರಾಮ್ ಫಿಕ್ಸ್ ಮಾಡಿದಿಯಾ ಅಂದನವನು.
ಗಿಫ್ಟ್ ಅಂದ ತಕ್ಷಣ ಏನೋ ಆಶ್ಚರ್ಯ ಕಾದಿರುವಂತೆ ಅವನತ್ತ ಮುಖ ಮಾಡಿ ಕೈ ಮುಂದೆ ಮಾಡಿ "ಎಲ್ಲಿ ಕೊಡು ನೋಡೋಣ ಅಂದೆ"
ಟನ್ ಟಡಾ ಡಾ ಅನ್ಕೊಂಡು ಜೇಬಿನಿಂದ ಏನೋ ಹೊರ ತೆಗೆದ ಲಕ್ಷಕೊಟ್ಟು ನೋಡುತ್ತಿದ್ದ ನನಗೆ ಕಾಣಿಸಿದ್ದು ಅವನ ಕೈ ಮಾತ್ರ..ಹಾಗೇ ನೋಡುತ್ತಾ ಹೇಳಿದೆ ಏನೋ ಇದೆ ಏನೂ ಕಾಣ್ತಾನೇ ಇಲ್ಲ ಅಂದೆ ಉದಾಸೀನಳಾಗಿ. ಕಾಣ್ತಿಲ್ವ ನೋಡೇ ಸರಿಯಾಗಿ ನನ್ನ ಕೈ ಕಾಣಿಸ್ತಿದೆ ತಾನೇ "ಹ್ಮೂ" ಅಂದೆ
ಅವನು ತಕ್ಷಣ ತನ್ನ ಕೈಯನ್ನು ನನ್ನ ಕೈ ಮೇಲಿಟ್ಟು ಈ ಜನ್ಮಪೂರ್ತಿ ನಿನ್ನ ನಗುವಿಗೆ ಕಾರಣವಾಗಿ, ಬದುಕಿನ ಏಳುಬೀಳುಗಳಲ್ಲಿ ಯಾವತ್ತೂ ಕೈಬಿಡದೆ ಸ್ನೇಹಿತನಾಗಿ, ಕಣ್ಣೀರಿಗೆ ಕರ್ಚೀಫ್ ಆಗಿ ಕ್ಲಾಸಲ್ಲಿ ಬರೋ ನಿದ್ರೆಗೆ ಭುಜವಾಗಿ, ತಲೆನೋವಿಗೆ ಮಾತ್ರೆಯಾಗಿ, ಕೆಲವೊಮ್ಮೆ ನಾನೇ ತಲೆನೋವಾಗಿ ಯಾವತ್ತೂ ನಿಂಜೊತೆನೆ ಇರ್ತೆನೆ ಅಂತ ಈ ಮೂಲಕ ಕ್ಷಿತಿಜಾ ಅವರ ಏಕೈಕ ಮಿತ್ರನಾದ ನಾನು ಸಾತ್ವಿಕ್ ಭಾಷೆಯನ್ನು ಕೊಡುತ್ತಿದ್ದೆನೆ. ಒಂದು ವೇಳೆ ನಾನು ಮಾತಿಗೆ ತಪ್ಪಿದ್ದಲ್ಲಿ ಕುಮಾರಿ ಕ್ಷಿತಿಜಾ ಅವರು ಮುಲಾಜಿಲ್ಲದೆ ನನ್ನನ್ನು ದಂಡಿಸುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಸಹ ತಿಳಿಸುತ್ತೇನೆ. ಆದರೆ ದಂಡನೆಗೆ ಕೋಲು ದೊಣ್ಣೆ ಕಲ್ಲಿನಂತಹ ಆಯುಧಗಳನ್ನು ಬಳಸುವ ಹಾಗಿಲ್ಲ. ಎಂದು ನಗುತ್ತಾ ಕೈಗೆ ಫ್ರೆಂಡಶಿಪ್ ಬ್ಯಾಂಡ್ ಕಟ್ಟಿದ.
ನಾನು ಯಾವುದೋ ಹೊಸ ಪ್ರಪಂಚವನ್ನು ಪ್ರಥಮವಾಗಿ ಕಾಣುತ್ತಿರುವಂತೆ ಕಳೆದು ಹೋಗಿದ್ದೆ. ಯಾವುದೇ ಗಿಫ್ಟ್ ಕೊಟ್ಟಿದ್ದರೂ ಇಷ್ಟೊಂದು ಖುಷಿಯಾಗುತ್ತಿರಲಿಲ್ಲವೇನೋ, ಅವನಾಡಿದ ಮಾತುಗಳು ಮನಸ್ಸಲ್ಲೇ ಅಚ್ಚೊತ್ತಿದ್ದಂತೆ ಪ್ರತಿಧ್ವನಿಸುತ್ತಿದ್ದವು.."ಯಾವತ್ತೂ ನಿನ್ನ ಜೊತೆಗೆ ಇರ್ತೆನೆ" ನಿಜವಾಗಿಯೂ?? ಮನಸ್ಸು ತನಗೆ ತಾನೇ ಪ್ರಶ್ನೆ ಹಾಕಿತ್ತು.
ನಾ ಯೋಚನೆಯಲ್ಲಿ ಮುಳುಗಿದಾಗಲೇ ಎಚ್ಚರಿಸುವಂತೆ ಒಂದು ಕಿಟ್ ಕ್ಯಾಟ್ ಬಾಕ್ಸ್ ಕೈಯಲ್ಲಿಟ್ಟ. ಅದರಿಂದಲೇ ಒಂದು ಚಾಕಲೇಟ್ ಹೊರತೆಗೆದು ನನಗೆ ತಿನಿಸಿದ. ಅದೇಕೋ ಏನೋ ಕಣ್ಣಂಚಲಿ ಹನಿ ಜಿನುಗಿ ಮರೆಯಾಗಿತ್ತು. ತುಟಿ ಮುಗುಳುನಗೆಗೆ ಮರುಳಾಗಿತ್ತು.
ಹಾಡು ನೃತ್ಯ ಗದ್ದಲಗಳಿಂದ ಆಡಿಟೋರಿಯಂ ರಾರಾಜಿಸುತ್ತಿತ್ತು. ಎಲ್ಲೆಲ್ಲೂ ಸ್ನೇಹದ ಚಿನ್ಹೆಯಾಗಿ ಹೂವಿನ ಅಲಂಕಾರದ ಅದ್ಬುತ ನೋಟ ಕಣ್ಣು ಕೋರೈಸಿತ್ತು. ಆದರೆ ಆಸ್ವಾದಿಸುವ ಮನಸ್ಸು ಮಾತ್ರ ಆ ಜಾಗದಲ್ಲಿರದೆ ಒಮ್ಮೆ ಭೂತದ ನೆನಪುಗಳಲ್ಲಿ ಮತ್ತೊಮ್ಮೆ ಭವಿಷ್ಯದ ಕನಸುಗಳಲ್ಲಿ ಹಾರಾಡುತ್ತಿತ್ತು.
ಬಾಲ್ಯದ ಸ್ನೇಹ ಹರೆಯದ ಸಮಯಕ್ಕೆ ಪ್ರೀತಿಯಾಗಿ ಮಾಗಿತ್ತು. ನನ್ನಲ್ಲಿ ಮಾತ್ರವೋ ಅವನಿಗೂ ಹಾಗೇ ಆಗಿತ್ತೋ ಅದು ಮಾತ್ರ ತಿಳಿಯದು. ಬೇಕೆನಿಸುವ ಒಲವ ಸಾಂಗತ್ಯಕ್ಕೆ ಸ್ನೇಹ ಕೈ ಜಾರಿ ಹೋಗುವ ಭಯ ಕಾಡುತ್ತಿತ್ತು. ಹೇಳದೆ ಉಳಿದ ಮಾತುಗಳು, ಮನದ ಕಿಟಕಿಯಲ್ಲಿ ಕುಳಿತು ದಿನವೂ ಅವನನ್ನು ಕಾಣುತ್ತ ಅವನೆದುರು ಬರಲು ಹವಣಿಸಿ ಬರಲಾಗದೆ ಹಿಂಜರಿಯುತ್ತಿದ್ದವು.
********
ಹೀಗೊಂದು ಇರುಳು ಜಾರುತ್ತಿತ್ತು ಹಗಲಿನ ಮಡಿಲು, ನೀರವ ಮೌನದ ಜೋಗುಳಕೆ ಬೆಳದಿಂಗಳಿಗೂ ತೂಕಡಿಕೆ ಬಂದಿತ್ತು, ಚಂದ್ರ ಕೂಡ ಓಡುವ ಮೋಡಗಳ ತೊಟ್ಟಿಲಲಿ ತೇಲಾಡಿ ಮಲಗೇಳುತ ನಿರಂತರ, ಕಾಯಕದ ನೆನಪಾಗಿ ಬೆಚ್ಚಿ ಎದ್ದು ಕೂತು ಪ್ರಖರ ಬೆಳಕಿನ ನಗೆಯ ಚೆಲ್ಲುತ್ತಿದ್ದ. ತೆರಳಿ ಹೊರಳಿ ರಸ್ತೆಯ ತಿರುವು ಮನೆಯ ದಾರಿಯನು ನೆನಪಿಸುತ್ತಿತ್ತು ಮರಳಿ ಮರಳಿ, ಹೆಜ್ಜೆಗಳಿಗೆ ಗಮ್ಯಕ್ಕಿಂತ ಈ ಪಯಣವೇ ಹಿತವೆನಿಸುತ್ತಿತ್ತು ಘಳಿಗೆ ಘಳಿಗೆ...
ನಾನು ಮೌನವಾಗಿ ಹೆಜ್ಜೆ ಹಾಕುತಿದ್ದೆ. ಅವನು ನನ್ನ ಅನುಸರಿಸುತ್ತಾ ಆಗಾಗ ಏನೋ ತಮಾಷೆ ಮಾಡಿ ನಗಿಸುವ, ನನ್ನ ಮೌನವ್ರತ ಭಂಗ ಮಾಡುವ, ನನ್ನ ಕೋಪ ಶಮನಗೊಳಿಸುವ ಪ್ರಯತ್ನದಲ್ಲಿ ಕಾರ್ಯ ನಿರತನಾಗಿದ್ದ. ಕಾರಣ ಕ್ಷುಲ್ಲಕ ಇರಬಹುದು ಹುಸಿ ಮುನಿಸಿಗೆ ಅವನ ರಮಿಸುವಿಕೆಯೆಂದರೆ ಜೀವ..
ಕಾಲೇಜು ಸ್ನೇಹಿತ ಕಾರ್ತಿಕ್ ತನ್ನ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ. ಕಾರ್ತಿಕ್ ಬರ್ತ್ ಡೇ ಗೆ ಇಬ್ಬರೂ ಒಟ್ಟಿಗೆ ಹೋಗೋಣ ಅಂತ ನಿರ್ಧಾರವಾಗಿತ್ತು. ಹೋಗುವ ಮುನ್ನ ಫೋನ್ ಮಾಡಿ ಇಬ್ಬರೂ ಒಂದೇ ಕಲರ್ ಬಟ್ಟೆ ಹಾಕೊಂಡು ಹೋಗೋಣ, ಬ್ಲೂ ಕಲರ್ ಡ್ರೆಸ್ ನೇ ಹಾಕಿಕೊಂಡು ರೆಡಿ ಆಗಿರು ನಾನೇ ಪಿಜಿ ಗೆ ಬಂದು ಕರ್ಕೊಂಡು ಹೋಗ್ತಿನಿ ಅಂತ ಬೇರೆ ಹೇಳಿದ್ದ. ನಾನು ಖುಷಿಯಿಂದ ಒಪ್ಪಿಕೊಂಡಿದ್ದೆ.
ಆದರೆ ಆಗಿದ್ದೆ ಬೇರೆ.. ನಾನು ಇರೋ ಬರೋ ಬಟ್ಟೆಗಳನ್ನು ಹರವಿ ಹಾಕಿ ಅದರಲ್ಲಿ ಚೆನ್ನಾಗಿರೋ ಬ್ಲೂ ಕಲರ್ ಬಟ್ಟೆ ಆಯ್ದುಕೊಂಡು ರೆಡಿಯಾಗಿ, ಅವನಿಗಾಗಿ ಕಾಯುತ್ತಾ ಕೂತಿದ್ದೆ. ಗಂಟೆ 7.30 ಆಗಿತ್ತು ಅವನಿನ್ನು ಬಂದಿರಲಿಲ್ಲ. ಮನಸ್ಸು ಸಮಾಧಾನ ಆಗದೆ ಅವನಿಗೆ ಐದಾರು ಬಾರಿ ಫೋನ್ ಕೂಡ ಮಾಡಿದೆ. ಅವನು ರೀಸೀವ್ ಕೂಡ ಮಾಡಲಿಲ್ಲ. ಏನೋ ಅಶುಭ ಸೂಚನೆಗಳು ಕಾಡಲು ಶುರುವಾಯಿತು ಮನಸೊಳಗೆ, ಕೊನೆಗೆ ಅವನಿಂದಲೇ ಕಾಲ್ ಬಂದಿತ್ತು "ಲೊ ಕ್ಷಿತಿ.. ನಾನು ಇಲ್ಲಿ ಬೇರೆ ಕೆಲಸದಲ್ಲಿ ಸಿಗಾಕೊಂಡಿದಿನಿ, ಬರೋದು ಲೇಟ್ ಆಗುತ್ತೆ, ಕಾರ್ತಿಕ್ ಪಾರ್ಟಿ ಲಿ ಸಿಗೋಣ, ನೀನೂ ಅಲ್ಲಿಗೆ ಬಂದುಬಿಡೋ ಒಕೆ ನಾ" ಅಂದ. ನನಗೆ ಬಂದ ಕೋಪಕ್ಕೆ ಹ್ಮೂ ಕೂಡ ಹೇಳದೆ ಕಾಲ್ ಕಟ್ ಮಾಡಿದೆ.
ಅವತ್ತು ಬರ್ತಡೇ ಪಾರ್ಟಿ ನೇ ಬೇಡವಾಗಿ ಬಿಟ್ಟಿತು. ಆದರೂ ಹೋದೆ ಅವನ ನೋಡುವ ಸಲುವಾಗಿ, ಕರೆಯಲು ಬರದೆ ಇರಲು ಅವನು ಹೇಳುವ ಕುಂಟ ನೆಪಗಳ ಕೇಳುವ ಸಲುವಾಗಿ..
ನಾ ಹೋಗುವಷ್ಟರಲ್ಲಿ ಗಂಟೆ 8.35 ಆಗಿತ್ತು. ಎಲ್ಲಾ ಸ್ನೇಹಿತರು ಆಗಲೇ ಬಂದು ತುಂಬಾ ಹೊತ್ತಾದಂತೆ ತೋರಿತು. ಕಣ್ಣು ಸಾತ್ವಿಕ್ ನ ಹುಡುಕಾಟದಲ್ಲಿದ್ದವು.
ಯಾರೋ ನೋಡಿದವರು ಹೇಳಿದರು 'ಬರ್ತ್ ಡೇ ಬಾಯ್ ಕಾರ್ತಿಕ್ ಅಲ್ಲಿ ಇದಾರೆ ಹೋಗಿ' ನಾನು ಹಲ್ಲು ಕಿರಿದು ಓಹ್ ಥ್ಯಾಂಕ್ಸ್ ಅಂತ ಹೇಳಿ ಮುನ್ನಡೆದೆ. ಬಂದ ಉದ್ದೇಶ ಅಂತರಂಗದಲ್ಲೊಂದು, ಬಹಿರಂಗದಲ್ಲೊಂದಾಗಿತ್ತು. ಅವರಿಗೆ ಕಂಡಿದ್ದು ಬಹಿರಂಗದ ಉದ್ದೇಶ ಮಾತ್ರ! ಅಂತರಂಗ ತನ್ನೊಳಗೆ ತಾನೇ ನಗುತಿತ್ತು.
ಕಾರ್ತಿಕ್ ಗೆ ವಿಷ್ ಮಾಡಿದ್ದಾಯ್ತು ಕೇಕ್ ಕಟ್ ಮಾಡಿದ್ದಾಯ್ತು ತಿಂದಿದ್ದು ಆಯ್ತು ಇನ್ನೇನೂ ಪಾರ್ಟಿ ಮುಗಿಯುವ ಹೊತ್ತು, ಅವನು ಕೊನೆಗೂ ಬಂದ. ನೋಡಿದೆ ಕೋಪ ಇನ್ನಷ್ಟು ಕೆರಳಿತು..ನನಗೆ ಬ್ಲೂ ಡ್ರೆಸ್ ಹೇಳಿ ತಾನು ವೈಟ್ ಟೀ ಶರ್ಟ್ ಹಾಕಿಕೊಂಡು ಬಂದಿದ್ದ. ನಂಗೆ ಉರ್ದೋಯ್ತು..!! ಅಲ್ಲಿಂದ ಕೋಪಿಸಿಕೊಂಡ ಹೊರಗಡೆ ನಡೆದು ಬಂದೆ. ಅವನು ಹಿಂದೆ ಓಡಿ ಬಂದು "ಬಾರೋ ಬೈಕ್ ಹತ್ತು ಡ್ರಾಪ್ ಮಾಡ್ತಿನಿ" ಅಂದ.
" ನಾ ಹೇಗೆ ಬಂದ್ನೊ ಹಾಗೆ ಹೋಗ್ತಿನಿ ಏನು ಬೇಕಾಗಿಲ್ಲ" ಅಂದೆ ಕೋಪದಲ್ಲಿ.
ಕೊನೆಗೆ ಅವನು ತನ್ನ ಬೈಕ್ ಅಲ್ಲಿಯೇ ಬಿಟ್ಟು, ನನ್ನ ಹಿಂದೆಯೇ ನಡೆದು ಬರುತಿದ್ದ. ಮಾತಾಡಿಸುವ ಪ್ರಯತ್ನ ಜಾರಿಯಲ್ಲಿತ್ತು..ವ್ಹಾವ್ ನೋಡೋ ಚಂದ್ರ ಎಷ್ಟು ಹೊಳಿತಿದಾನೆ. ಸೇಮ್ ನಿನ್ ಹಾಗೆ ಅಲ್ವ ನಾ ಉತ್ತರಿಸಲಿಲ್ಲ. ಹೇ ಇಲ್ಲ ಬಿಡು ನಿನ್ ಮೂಗಿನ ಮೇಲೆ ನಾಲ್ಕು ಚೇರ್ ಹಾಕೊಂಡು ಕೂರಬಹುದು. ಚಂದ್ರಂಗೆ ಮೂಗೇ ಇಲ್ಲ. ನಾನು ತಕ್ಷಣ ಆಶ್ಚರ್ಯದಿಂದ ಮೂಗು ನೋಡಿಕೊಂಡೆ ಅಷ್ಟು ದೊಡ್ಡದಿದೆಯಾ? ಅಂದುಕೊಳ್ಳುತ್ತಾ!! ಅವನ ನಗು ಕೇಳಿ ಅರ್ಥವಾಯಿತು, ಇದೊಂದು ಮೌನ ಮುರಿಯುವ ರಾಜತಂತ್ರ ಅಂತ. ನಿರ್ಜನ ರಸ್ತೆಯಲ್ಲಿ ನಮ್ಮ ಹೆಜ್ಜೆ ಸದ್ದು ಕೇಳುತ್ತಿದ್ದವು ಆಗಲೇ ಶುರುವಾಯಿತು ಕರ್ಣಕರ್ಕಶವಾದ ಅವನ ಹಾಡುಗಳ ಆಕ್ರಮಣ!! ನಾನು ಸಾಕು ನಿಲ್ಸೋ ಅನ್ನೊವರ್ಗು ನಿಲ್ಲಲಿಲ್ಲ ಆ ದಾಳಿ.. ನಾನೇ ಸೋತು ಶರಣಾದರೂ, ಪ್ರಶ್ನೆಗಳ ಬಾಣ ಬಿಟ್ಟೆ..
ಯಾಕೆ ಕರಿಲಿಕ್ಕೆ ಬರಲಿಲ್ಲ? ಯಾಕೆ ಲೇಟ್ ? ಮತ್ತೆ ಈ ಶರ್ಟ್ ಯಾಕೆ?
"ಲೋ ಅದು ನಾ ರೆಡಿ ಆಗಿ ನಿನ್ನ ಪಿಜಿ ಕಡೆಗೆ ಬರ್ತಿದ್ದೆ, ಅಷ್ಟರಲ್ಲಿ ರಸ್ತೆ ಮಧ್ಯೆ ತುಂಬಾ ಜನ ಗುಂಪು ಸೇರಿದ್ರು ಏನು ಅಂತ ಹೋಗಿ ನೋಡಿದೆ. ಯಾವುದೋ ಹುಡುಗಿ ಆ್ಯಕ್ಸಿಡೆಂಟ್ ಆಗಿ ಬಿದ್ದು ಬಿಟ್ಟಿದೆ. ಯಾರೊಬ್ಬರೂ ಸಹಾಯ ಮಾಡ್ತಿಲ್ಲ, ನನಗೆ ಅಯ್ಯೋ ಅನ್ನಿಸಿ ಆಟೋ ಕರೆಸಿ ಎತ್ಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದೆ. ಆ್ಯಕ್ಸಿಡೆಂಟ್ ಕೇಸ್ ಆದ್ದರಿಂದ ಪೋಲಿಸರು ನನ್ನ ನಂಬರ್ ತಗೊಂಡ್ರು ಕೆಲವು ವಿಚಾರಣೆ ಮಾಡಿದ್ರು. ಈಗ ಹೋಗಿ ಹೇಳಿ ಕಳಿಸಿದಾಗ ಬರ್ಬೇಕಾಗುತ್ತೆ ಅಂದಿದಾರೆ. ನೀನು ಆ ಸಮಯಕ್ಕೆ ಕಾಲ್ ಮಾಡಿದ್ದೆ ಅದ್ಕೆ ರಿಸೀವ್ ಮಾಡಲಿಲ್ಲ. ಆಮೇಲೆ ಬರೋಣ ಅಂತ ನೋಡಿದ್ರೆ ಬಟ್ಟೆ ಎಲ್ಲಾ ರಕ್ತದ ಕಲೆಯಾಗಿತ್ತು. ರೂಂ ಗೆ ಹೋಗಿ ಬಟ್ಟೆ ಬದಲಿಸಿ ಬರುವಷ್ಟರಲ್ಲಿ ನಿನಗೂ ಲೇಟ್ ಆಗುತ್ತೆ ಅಂತ ಹೋಗೋಕೆ ಹೇಳಿದೆ. ನಾನು ಬಟ್ಟೆ ಬದಲಿಸಿ ಬರೋದು ಇಷ್ಟು ತಡವಾಯಿತು"
ಅವನ ಮಾತುಗಳನ್ನು ಆಲಿಸುತ್ತಾ ಅದನ್ನೇ ಕಲ್ಪಿಸುತ್ತಿದ್ದ ನನಗೆ ಅವನ ಮೇಲಿದ್ದ ಮುನಿಸು ಮರೆಯಾಗಿ ಪ್ರಿಯ ಸ್ನೇಹಿತನ ಮೇಲಿದ್ದ ಪ್ರೀತಿ ವಿಶ್ವಾಸ ಅಭಿಮಾನ ಇಮ್ಮಡಿಯಾಯಿತು. ಛೇ ವಿಷಯ ಗೊತ್ತಿಲ್ದೆ ಎಷ್ಟು ಗೋಳಾಡಿಸಿಬಿಟ್ಟೆ!!
" ಸಾತ್ವಿ... ಆ ಹುಡುಗಿ ಹೇಗಿದಾಳೆ ಈಗ ?"
"ಪರವಾಗಿಲ್ಲ.. ಅನಿಸುತ್ತೆ, ರಕ್ತ ತುಂಬಾ ಹೋಗಿತ್ತು !! ಬ್ಲಡ್ ಹಾಕಿದ್ರು ತಲೆಗೆ ತುಂಬಾ ಪೆಟ್ಟು ಬಿದ್ದಿದೆಯಂತೆ!! ಐಸಿಯು ನಲ್ಲಿ ಇಟ್ಟಿದಾರೆ! ಬೆಳಿಗ್ಗೆ ನೋಡಬೇಕು ಏನಾಗತ್ತೊ ಅಂತ"
"ನಾಳೆ ಬೆಳಿಗ್ಗೆ ಇಬ್ಬರೂ ಹೋಗಿ ನೋಡಿ ಬರೋಣ ಒಕೆ ನಾ" ಅಂತ ಕೇಳಿದೆ.
"ಹ್ಮೂ...ನಿಮ್ಮ ಆಜ್ಞೆಯಂತೆ ಮಹಾರಾಣಿಯವರೆ!! ಏನೋ, ಈ ಬಡಪಾಯಿಯನ್ನು ಕ್ಷಮಿಸಿದಿರಲ್ಲಾ ಅದೇ ಮಹದಾನಂದ ನಮಗೆ..!!"
ಇಬ್ಬರೂ ನಕ್ಕು ಹಗುರಾದೆವು. ನಕ್ಷತ್ರಗಳು ನಮ್ಮೊಂದಿಗೆ ನಗುತ್ತಿರುವಂತೆ ತೋರಿತು. ಹರಟೆಗಳಲ್ಲಿ ಪ್ರಯಾಣ ಮುಂದುವರಿದಿತ್ತು. ಜಾರಿದ ನಕ್ಷತ್ರವೊಂದನ್ನು ಕಂಡು ಮನಸ್ಸು ಏನೋ ಕೋರಿಕೊಳ್ಳುತ್ತಿತ್ತು.
"ಈ ಇರುಳು ಕಳೆಯದಿರಲಿ, ಈ ದಾರಿ ಸರಿಯದಿರಲಿ, ಬೆಸೆದ ಹೆಜ್ಜೆಗಳೆಂದು ದೂರಾಗದಿರಲಿ, ಒಲವಿನ ರಂಗೇರುತಿರುವ ಈ ಸ್ನೇಹಕ್ಕೆ ಕೊನೆಯೇ ಇರದಿರಲಿ..."
ಮೂಡಣದ ಹೊಂಗಿರಣ ಕಿಟಕಿಯ ಕಾವಲು ದಾಟಿ ಮುಖವ ಚುಂಬಿಸಿ ಏಳುವಂತೆ ಆಜ್ಞಾಪಿಸಿತು. ರಾತ್ರಿ ಸರಿಯಾಗಿ ನಿದಿರೆಯಿಲ್ಲದ ಕಣ್ಣು, ತೆರೆಯದೆ ಮತ್ತೆ ಆಲಸ್ಯದಿ ನಿದ್ರೆಗೆ ಜಾರುತ್ತಿತ್ತು. ಈ ವ್ಯವಹಾರದ ಮಧ್ಯೆ ರಿಂಗಣಿಸಿತು ಫೋನು.. ಹಲೋ.. ಅಂದೆ.
"ರೆಡಿನೇನೋ ನಾ ಬರ್ತಿದಿನಿ ಕರ್ಕೊಂಡ ಹೋಗಕ್ಕೆ" ಸಾತ್ವಿ ಧ್ವನಿ ಅಂತ ಗೊತ್ತಾಗಿ ಮನಸ್ಸು ಎಚ್ಚರವಾಯಿತು.
"ಎಲ್ಲಿಗೆ ಹೋಗೋದು ? ಏನು ವಿಶೇಷ ಇವತ್ತು ? ಕಾಲೇಜಂತು ರಜೆ, ನಾ ಮಲಗಬೇಕು ಗುಡ್ ನೈಟ್" ಅಂದೆ.
"ಲೋ..ನಿದ್ದೆಲಿದಿಯಾ? ಸರಿ ಮಲಗು, ನಾ ಆ ಹುಡುಗಿ ಹೇಗಿದಾಳೆ ಈಗ ಅಂತ ನೋಡ್ಕೊಂಡು ಬರ್ತೆನೆ ಆಸ್ಪತ್ರೆಗೆ ಹೋಗಿ, ಒಕೆ ಬಾಯ್!"
ತಕ್ಷಣ ನಿದ್ರೆ ಮಂಪರು ಹಾರಿ ರಾತ್ರಿಯ ಘಟನೆ ಎಲ್ಲಾ ನೆನಪಾಗಿ "ಹೇ.... ಇಲ್ವೋ ನಾನು ಬರ್ತಿನೋ ನಿಂಜೊತೆ ಹತ್ತು ನಿಮಿಷ ನೀನು ಇಲ್ಲಿ ಬರುವಷ್ಟರಲ್ಲಿ ನಾನು ರೆಡಿಯಾಗಿರ್ತಿನಿ ಒಕೆ "
"ಸರಿ ಬೇಗ ತಯಾರಾಗಿರು ಇಗೋ ನಾ ಬಂದೆ" ಫೋನ್ ಕಟ್ ಆಯ್ತು.
***********
ಆಸ್ಪತ್ರೆಗೆ ಬಂದು ಆ ಹುಡುಗಿಯ ವಾರ್ಡ್ ಗೆ ಹೋಗುವಷ್ಟರಲ್ಲಿ ಎದುರಾದ ಡಾಕ್ಟರ್ "ಹಲೋ ಸಾತ್ವಿಕ್, ಗುಡ್ ಮಾರ್ನಿಂಗ್' ಅಂದ್ರು
"ಗುಡ್ ಮಾರ್ನಿಂಗ್ ಡಾಕ್ಟರ್, ಹೇಗಿದಾಳೆ ಅವಳು ಈಗ"
ಈಗ ಪರವಾಗಿಲ್ಲ.. ಹೋಗಿ ಮಾತಾಡಬಹುದು. ನಿಮ್ಮ ಚಿಕ್ಕಮ್ಮ ಬರಲಿಲ್ಲವಾ?
"ಇಲ್ಲ ಡಾಕ್ಟರ್ ಅವ್ರು ಸ್ವಲ್ಪ busy" ಸಾತ್ವಿಕ್ ಉತ್ತರಿಸಲು ತಡಬಡಾಯಿಸಿದ. ನಿನ್ನೆ ಏನೋ ಸುಳ್ಳು ಹೇಳಿ ಮ್ಯಾನೆಜ್ ಮಾಡಿದ್ದ ಅನ್ಸುತ್ತೆ.
ಸರಿ.. ಯಾರಾದ್ರೂ ಒಬ್ರು ಒಳಗೆ ಹೋಗಿ ನೋಡಿ, ಮಲಗಿದಾಳೆ ಅನಿಸುತ್ತೆ, ಜಾಸ್ತಿ ಮಾತಾಡಬೇಡಿ ಅಂತ ಎಚ್ಚರಿಕೆ ಕೊಟ್ಟರು ಡಾಕ್ಟರ್!
ನಾನು ಹೊರಗೆ ನಿಂತೆ, ಸಾತ್ವಿಕ್ ಒಬ್ಬನೇ ಒಳಗೆ ಹೋದ.
ಸಾತ್ವಿಕ್ ಒಳಗೆ ವಾರ್ಡ್ ಗೆ ಹೋದ ಐದು ನಿಮಿಷಕ್ಕೆ ಏನೋ ಕಿರುಚಾಡುವ ಧ್ವನಿ ಕೇಳಿಸಿತು. "ಯಾರ್ ನೀವು ನನಗೇನಾಗಬೇಕು ನಾನು ಹೆಳಿದ್ನಾ ಉಳಿಸಿ ಅಂತಾ ಸತ್ತೋಗಿದ್ರೆ ನನ್ನೊಡನೆ ಎಲ್ಲಾ ಸಮಸ್ಯೆಗಳು ಸತ್ತು ಹೋಗ್ತಿದ್ವು. ಅಂತ ಅಳುತ್ತಿದ್ದಳು"
ಸಾತ್ವಿಕ್ ಹೊರಗೆ ಬಂದಾಗ ಮುಖ ಪೆಚ್ಚಾಗಿತ್ತು. ಏನಾಯ್ತೋ? ಏನ್ಮಾಡಿದೆ ಅವಳಿಗೆ? ಅಂತ ಸ್ವಲ್ಪ ಗಾಬರಿ, ಸ್ವಲ್ಪ ವ್ಯಂಗ್ಯವಾಗಿ ಕೇಳಿದೆ.
ನಾನು ಸಾತ್ವಿಕ್ ಅಂತ ನಿನ್ನೆ ನಿಮ್ಮನ್ನು ಆಸ್ಪತ್ರೆಗೆ ಕರ್ಕೊಂಡು ಬಂದಿದ್ದು ನಾನೇ ಅನ್ನುವುದೇ ತಡ, ಕೀರುಚಾಡೋಕೆ ಶುರು ಮಾಡಿದಳು. ಜೋರಾದ ಅಳು ಧ್ವನಿ ಕೇಳಿದ ನರ್ಸ್ ಒಳಗೆ ಬಂದು ನನ್ನ ಹೊರಗೆ ಅಟ್ಟಿದಳು ಪೆಷಂಟ್ ಗೆ ಡಿಸ್ಟರ್ಬ್ ಮಾಡ್ಬೇಡಿ. ಅನ್ನುತ್ತಾ ಅಂತ ನಡೆದ ಸಂಗತಿ ತಿಳಿಸಿದ.
ಇಬ್ಬರೂ ಮೌನವಾಗಿ ಆಸ್ಪತ್ರೆಯಿಂದ ಹೊರಗೆ ಬರೋವಾಗ ಅವನು ತಕ್ಷಣ ಕೇಳಿದ..
"ಲೋ..ಕ್ಷಿತಿ, ನೀನು ನನಗೊಂದು ಸಹಾಯ ಮಾಡಬೇಕು"
"ಏನು ಆ ಹುಡುಗಿ ಜೊತೆ ಮದುವೆ ಮಾಡಸ್ಬೇಕಾ" ಅಂದೆ ನಗುತ್ತಾ
"ಇಲ್ಲ ನೀನೇ ಮದುವೆ ಆಗ್ಬೇಕು" ಗಂಭೀರವಾಗಿ ಹೇಳಿದ
"ಏನೂ??" ಆಶ್ಚರ್ಯಕರವಾಗಿ ಕೇಳಿದೆ
ಅಂದ್ರೆ ನೀನು ಅವಳ ಸ್ನೇಹಿತೆ ಆಗಬೇಕು. ಅವಳಿಗೆ ತುಂಬಾ ಹತ್ತಿರ ಆಗಬೇಕು. ಆಗ ಅವಳು ನಿನಗೆ ತನ್ನ ಸಮಸ್ಯೆ ಹೇಳ್ಕೊತಾಳೆ ನಾವಿಬ್ರೂ ಸೇರಿ ಅದನ್ನು ಪರಿಹರಿಸೋದು it's so simple you know,
"ಹೋಗಲೋ ನಾನು ನಿನ್ನ ಹೊರತು ಯಾರಿಗೂ ಅತಿಯಾಗಿ ಹತ್ತಿರ ಆಗಿಲ್ಲ ಆಗೋದು ಇಲ್ಲ"
"ಕ್ಷಿತಿ...ನನ್ನ ಬಂಗಾರ ಅಲ್ಲಾ ನನ್ನ ಮುದ್ದು ಅಲಾ ನನ್ನ ಮಾತು ಹೇಗೋ ಮೀರ್ತಿಯಾ ನಂಗೊತ್ತು ನನ್ನ ಕ್ಷಿತಿ ಏನಂತ.." ಬೆಣ್ಣೆ ಅಲಂಕಾರ ಶುರುವಾಗಿತ್ತು!
"ನೀ ಏನೇ ಪೂಸಿ ಹೊಡೆದ್ರು ಅಷ್ಟೇ ಆಗಲ್ಲ ಅಂದ್ರೆ ಆಗಲ್ಲ, ನೀನೇ ಮಾತಾಡು ಬೇಕಿದ್ರೆ" ಅಂದೆ
.
"ಇಲ್ಲ ಅವಳು ನನ್ನ ಜೊತೆ ಮಾತಾಡಲ್ಲ ಸತ್ತರೂ...ಅವಳ ದೃಷ್ಟಿಯಲ್ಲಿ ನಾಮ ಪ್ರಾಣ ಉಳಿಸಿದ್ದೆ ಅಪರಾಧ ಆಗೋಗಿದೆ, ನಿನ್ನನ್ನ ನೋಡಿಲ್ಲ ಇದುವರೆಗೆ ಸೋ ನೀನೇ ಮಾತಾಡಬೇಕು" ಹೇಳಿದ
"ಚಾಕೊಲೇಟ್ ಬೇಕಾ?" ಕೇಳಿದ
"ಊಹ್ಮೂ"
" ಲಾಂಗ್ ಡ್ರೈವ್"
" ಊಹ್ಮೂ "
"ಶಾಪಿಂಗ್ ಹೋಗಣಾ?"
" ನೋ ವೇ ಚಾನ್ಸೇ ಇಲ್ಲ"
ಇನ್ನೇನೋ ಬೇಕು ನಿಂಗೆ? ಸುದೀಪ್ ಸರ್ ಡೈಲಾಗ್ ಹೊಡೆದ.
"ಪ್ಲೀಜ್ ಕಣೋ ನೀ ಹೇಳಿದ್ದ ಕೇಳ್ತಿನಿ ಇದೊಂದು ಮಾತು ಕೇಳೋ" ಗೋಗರೆದ
"ಸರಿ ನಂಗೆ ಬೈಕ್ ಓಡಿಸೋದು ಕಲ್ಸ ಬೇಕು ಒಕೆ ನಾ" ಅಂದೆ
"ಹೋಗೋಲೆ ಈಗಾಗಲೇ ಎರಡು ಸಲ ಸೊಂಟ ಮುರ್ದಿದಿಯಾ ಮೂರಕ್ಕೆ ಮುಕ್ತಾಯ ಅಂತ ಮೇಲೆ ಕಳಿಸಿಬಿಡ್ತಿಯಾ"
"ಸರಿ ಬಿಡು ನಿನ್ನ ಮಾತು ನಾ ಯಾಕೆ ಕೇಳ್ಲಿ"
"ಕ್ಷಿತಿ...ಗೋಗರೆದು.. ಸರಿ...ಡೀಲ್ ಒಕೆ !! ನೀನು ಅವಳ ಫ್ರೆಂಡ್ ಶಿಪ್ ಮಾಡಿ ಸಮಸ್ಯೆ ತಿಳ್ಕೊ , ನಾ ನನ್ನ ಬೈಕ್ ಗೆ ಬರೋ ದುರ್ಗತಿಗೆ ಮುನ್ನೆಚ್ಚರಿಕೆ ಕ್ರಮ ಹುಡುಕ್ತಿನಿ!!!
"ಹ್ಮೂ ಸರಿ ಸರಿ...ನಾಳೆ ಇಂಟರ್ನಲ್ ಇದೆ ! ನೆನಪಿದೆ ತಾನೇ? ಓದೋದರ ಕಡೆನೂ ಗಮನ ಇರಲಿ ಸ್ವಲ್ಪ!! "
"ನೀ ಇದಿಯಲ್ಲ ಅದ್ಕೆಲ್ಲ !! ಚಾಕೊಲೇಟ್ ತಿಂದು ಹಾಳೆ ಬಿಸಾಕು.. ಸರ್ ಕೇಳಿದ್ರೆ ಇಬ್ಬರೂ ಒಟ್ಟಿಗೆ ಹ್ಮೂ ಅಂದು ಆಚೆ ಹಾರಿಬಿಡೋಣ" ನಕ್ಕ.
"ನಿನ್ನ ಮುಂದೆ ನಿಜ ಹೇಳಿದ್ದೆ ತಪ್ಪಾಗಿದೆ ಇನ್ನೊಂದು ಜನ್ಮ ಹುಟ್ಟಿ ಬಂದರೂ ಬಿಡಲ್ಲ ನೀ ನನ್ನ ಕಾಲೆಳೆಯೋದು!!" ತಲೆ ಚಚ್ಚಿಕೊಂಡೆ.
ಅಂದಂಗೆ ಬೆಳಿಗ್ಗೆಯಿಂದ ಏನು ತಿಂದಿಲ್ಲ ಹೊಟ್ಟೆ ತಾಳ ಹಾಕ್ತಿದೆ ಏನಾದ್ರೂ ಕೊಡ್ಸೊ.... " ಸರಿ ಬಾ ತಿಂಡಿಪೋತಿ" ಇಬ್ಬರೂ ಭೋಜನಾಲಯದ ಕಡೆಗೆ ಹೆಜ್ಜೆ ಹಾಕಿದೆವು.
*********
ಮಟಮಟ ಮಧ್ಯಾಹ್ನದ ಸಮಯ ಭೋಜನ ಕಾರ್ಯಕ್ರಮ ಮುಗಿಸಿ ಇಬ್ಬರೂ ಮತ್ತೆ ಆಸ್ಪತ್ರೆಗೆ ಬಂದೆವು. ಏನು ಮಾತಾಡೋದು ಹೇಗೆ ವರ್ತಿಸೋದು ಎಲ್ಲಾ ಮೊದಲೇ ಸಾತ್ವಿಕ್ ತಾನೇ ನಾನಾಗಿ ತರಭೇತಿ ನೀಡಿದ್ದ, ಈಗ ನಾನು ಹೋಗಿ ಅದನ್ನು ಕಾರ್ಯಗತಗೊಳಿಸಬೇಕಿತ್ತು.
ಮೆಲ್ಲಗೆ ಬಾಗಿಲು ತೆಗೆದು ಒಳಹೊಕ್ಕು ನೋಡಿದೆ. ಅವಳು ಮೇಲ್ಛಾವಣಿಯ ನೋಡುತ್ತಾ ಮಲಗಿದ್ದಳು. ಸಮೀಪ ಹೋದೆ ತಿರುಗಿ ನೋಡಿದಳು. ನೋಡೋಕೆ ತುಂಬಾ ಮುದ್ದಾಗಿದ್ದಳು. ನಮಗಿಂತ ವಯಸ್ಸಿನಲ್ಲಿ ಚಿಕ್ಕವಳಂತೆ ಕಂಡಳು. ಸಾತ್ವಿಗೇನಾದ್ರೂ ಇವಳ ಮೇಲೆ ಕ್ರಷ್ ಆಗಿರಬಹುದಾ ಅನ್ನೋ ಅನುಮಾನ ಕೂಡ ಬಂತು. ಆದರೆ ಸಾತ್ವಿಕ್ ಗೆ ಕೊಟ್ಟ ಮಾತು ನೆನಪಾಗಿ ಮುಗುಳ್ನಗುತ್ತಾ ತಂದಿದ್ದ ಹಣ್ಣು ಹಂಪಲು ಅವಳ ಪಕ್ಷದ ಟೇಬಲ್ ಮೇಲಿಟ್ಟು ಹಾಯ್ ಹೇಗಿದಿಯಾ ಈಗ? ಅಂತ ಕೇಳಿದೆ.
ಅವಳು ಪ್ರಶ್ನಾರ್ಥಕವಾಗಿ ನೋಡಿದಳು. "ಯಾರು ನೀವು?" ಅಂದಳು. "ನಾನು ಕ್ಷಿತಿಜ ಅಂತ ಅಮ್ಮ ನಿನ್ನ ಬಗ್ಗೆ ಹೇಳಿದರು ನಿನ್ನೆ ಆ್ಯಕ್ಸಿಡೆಂಟ್ ಆಯ್ತಂತೆ ನೋಡಿ ಮಾತಾಡೋಕೆ ಬಂದೆ."
"Sorry ನೀವ್ ಯಾರೋ ನಂಗೊತ್ತಾಗ್ಲಿಲ್ಲ !!"
"ನನಗೆ ತಾನೇ ಏನ್ ಗೊತ್ತು... ಐ ಮೀನ್ ನೀನು ರಾಕೇಶ ಅಂಕಲ್ ಮಗಳು ದಿಪ್ತಿ ಅದೇ ಕುದ್ರೋಳಿಯವರು?! ಹೌದು ತಾನೇ ಚಿಕ್ಕ ವಯಸ್ಸಲ್ಲಿ ಆಟ ಆಡಿದ ನೆನಪು. ಈಗಲೇ ನೋಡಿದ್ದು ಮತ್ತೆ!!" ಸುಳ್ಳಿನ ಪ್ರಹಾರ ಶುರು ಮಾಡಿದೆ.
"ನೋ ಐಮ್ ಸಾಕ್ಷಿ ! ನೀವು ಯಾರೋ ಬೇರೆಯವರನ್ನ ಹುಡುಕ್ತಿರಬೇಕು"
"ಹೋ ಸಾರಿ...ಅಮ್ಮ ಹೇಳಿದ ಹುಡುಗಿ ನೀವಲ್ಲ ಅನ್ಸುತ್ತೆ, ಸಾರಿ ಡಿಸ್ಟರ್ಬ್ ಮಾಡಿದ್ದಕ್ಕೆ.." ವಾಪಸ್ ಬರುವಂತೆ ನಟಿಸಿ "ಅಂದಹಾಗೆ ನಿಮಗೆ ಏನಾಯ್ತು ತಲೆಗೆ? "
"ನಿನ್ನೆ ದಾರಿಲಿ ಬರೋವಾಗ ಆ್ಯಕ್ಸಿಡೆಂಟ್ ಆಗೊಯ್ತು. ಯಾರೋ ಕರ್ಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದಾರೆ. "
"ಎಲ್ಲಿ ನಿಮ್ಮ ಮನೆಯವರು ಯಾರು ಕಾಣ್ತಾ ಇಲ್ಲ? "
" ಕಾಲ್ ಮಾಡಿಲ್ಲ ಅವರಿಗೆ ಗೊತ್ತಿಲ್ಲ. ಯಾಕೆ ? ಯಾಕೆ ಹೇಳಬೇಕು ಅವರಿಗೆ ? ಮಕ್ಕಳ ಇಷ್ಟ ಕಷ್ಟಕ್ಕೆ ಬೆಲೆನೇ ಕೊಡದಿರೋ ಅಪ್ಪ ಅಮ್ಮಗೆ ಯಾಕೆ ಹೇಳಬೇಕು?" ಒಂದೇ ಸಮನೆ ಅರಚಿದಳು.
ಇಲ್ಲಿಯವರೆಗೂ ಸಾತ್ವಿಕ್ ಹೇಳಿದಂತೆ ಮಾತಾಡಿದ ನನಗೆ ಈ ಹಠಾತ್ ವ್ಯತಿರಿಕ್ತ ಪ್ರತ್ಯುತ್ತರಕ್ಕೆ ಹೇಗೆ ಪ್ರತಿಕ್ರಿಯಸಬೇಕು ಗೊತ್ತಾಗದೆ, ಹೇಳದಿದ್ರೆ ಬೇಡ ಬಿಡು ಮಹಾತಾಯಿ ಆದರೆ ಕಿರುಚಬೇಡ ಅನ್ಕೊಂಡೆ ಮನಸ್ಸಲ್ಲೇ! ( ಎಲ್ಲಿ ನರ್ಸ್ ಬಂದು ಬೈದು ಆಚೆ ಹಾಕ್ತಾಳೆ ಅನ್ನೋ ಚಿಂತೆ ನನಗೆ)
"ಅಪ್ಪ ಅಮ್ಮ ಏನೇ ಮಾಡಿದ್ರೂ ಅದರಲ್ಲಿ ಮಕ್ಕಳ ಹಿತಾನೇ ಬಯಸ್ತಾರೆ. ನಾನೂ ಒಂದು ಕಾಲದಲ್ಲಿ ನಿನ್ ಹಾಗೆ ಯೋಚನೆ ಮಾಡ್ತಿದ್ದೆ, ಗೊತ್ತು ಗುರಿ ಇಲ್ಲದ ಬೋರ್ಡಿಂಗ್ ಶಾಲೆಗೆ ಸೇರಿಸಿದ್ದಕ್ಕೆ ಅಪ್ಪ ಅಮ್ಮನ ಜೊತೆ ಮಾತು ಬಿಟ್ಟಿದ್ದೆ, ಆದರೆ ಅವರು ಆಗ ಹಾಗೆ ಮಾಡಿದ್ದಕ್ಕೆ ನಾನು ಈಗ ನಿರ್ಭಯವಾಗಿ ಎಲ್ಲಿ ಬೇಕಾದರೂ ಬದುಕಬಲ್ಲೆ ಅನ್ನೋ ಆತ್ಮವಿಶ್ವಾಸ ಬೆಳೆದಿದೆ. ಇದು ಅವರು ನನಗೆ ಕೊಟ್ಟಿರೋ ಬೆಸ್ಟ್ ಗಿಫ್ಟ್!!" ( ಸಾತ್ವಿ ಅಂತಹ ಒಳ್ಳೆಯ ಫ್ರೆಂಡ್ ಸಿಕ್ಕಿದ್ದು ಕೂಡ ಮನಸ್ಸು ನುಡಿದಿತ್ತು)
ಏನಾಯ್ತು? ಅಪ್ಪ ಅಮ್ಮನ ಮೇಲೆ ಯಾಕೆ ಕೋಪ? ಕೇಳಿದೆ.
"ಮತ್ತೆ ಫ್ರೀ ಮೆಡಿಕಲ್ ಸೀಟ್ ಸಿಕ್ತು ಅಂತ ಗೊತ್ತು ಗುರಿ ಇಲ್ಲದ ಊರಲ್ಲಿ ತಂದು ಬಿಟ್ಟೊಗಿದ್ದಾರೆ. ಊರು ಹೊಸತು, ಜನರು ಅಪರಿಚಿತರು, ಇದಕ್ಕೆಲ್ಲ ಹೊಂದಿಕೆ ಆಗುವಷ್ಟರಲ್ಲಿ ಹಾಸ್ಟೆಲ್ ನಲ್ಲಿ ಸೀನಿಯರ್ಸ್ ಕಾಟ ಬೇರೆ, ರೇಗಿಸೋದು ಟೀಸ್ ಮಾಡೋದು ನನಗೆ ಹಿಂಸೆ ಅನಿಸ್ತಿದೆ. ಇರೋಕು ಆಗ್ತಿಲ್ಲ ಬಿಟ್ಟು, ಹೋಗೋಕು ಆಗ್ತಿಲ್ಲ.. ಅಪ್ಪ ಅಮ್ಮಗೆ ಇದನ್ನೆಲ್ಲ ಹೇಳಿದ್ರು ಅರ್ಥ ಆಗಲ್ಲ. ಏನ್ ಮಾಡೋದು!!"
"ನೋಡು ಸಾಕ್ಷಿ.. ಎಲ್ಲಿವರೆಗೆ ನೀ ಹೆದರ್ತಿಯೋ ಅಲ್ಲಿವರೆಗೆ ಸಮಸ್ಯೆಗಳು ನಿನ್ನ ಹೆದರಿಸ್ತಾನೆ ಇರ್ತವೆ, ಯಾವಾಗ ನೀನೇ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ನಿಲ್ತಿಯೋ ತಾವೇ ಹೆದರಿಕೊಂಡು ಮೂಲೆ ಸೇರ್ತಾವೆ ಅಷ್ಟೆ!! ಸಿನಿಯರ್ಸ್ ಅಬ್ಬಬ್ಬಾ ಅಂದ್ರೆ 2 - 3 ವರ್ಷ ಇರ್ತಾರೆ ಹೋಗ್ತಾರೆ ಅವರಿಗೋಸ್ಕರ ಭವಿಷ್ಯಕ್ಕೆ ಅಡ್ಡಗೋಡೆ ಕಟ್ಟೋದು ತಪ್ಪು. You have to face it. ನಾನು ನಿಂಜೊತೆ ಇರ್ತೆನೆ ಏನೇ ಆದರೂ ಹೆದರಬೇಡ ಒಕೆ.." ಅಂದೆ.
ಅವತ್ತಿಂದ ಇಬ್ಬರೂ ಆಪ್ತರಾಗುತ್ತಾ ಹೋದೆವು. ಅವಳಲ್ಲಿ ನನಗೆ ಇಷ್ಟವಾದ ಗುಣವೆಂದರೆ ಅವಳ ಮುಗ್ದತೆ. ಪುಟ್ಟ ಮಗುವಿನಂತ ನಿಷ್ಕಲ್ಮಷ ಮನಸ್ಸು. ಅವಳು ಆಸ್ಪತ್ರೆಯಲ್ಲಿ ಇರುವಷ್ಟು ದಿನ ನಾನೇ ಅವಳ ಆರೈಕೆ ಮಾಡಿದೆ. ಸಾತ್ವಿ ಕೂಡ ಜೊತೆಗೆ ಬರ್ತಿದ್ದ ಆದರೆ ಅವಳೆದುರು ಬರುತ್ತಿರಲಿಲ್ಲ. ಕಾಲೇಜು ಮುಗಿದ ಕೂಡಲೇ ನಮ್ಮ ಸವಾರಿ ನೇರ ಆಸ್ಪತ್ರೆ ಕಡೆ ಸಾಗುತ್ತಿತ್ತು. ಅವಳಿಗೆ ಏನಾದ್ರೂ ತಿನ್ನಿಸಿ, ಕ್ಷೇಮ ವಿಚಾರಿಸಿದ ಮೇಲೆ ನಮ್ಮ ಊಟ ಉಪಚಾರ ಎಲ್ಲಾ..
ಸಾತ್ವಿ ಜೊತೆಗಿದ್ದಾಗ ಪುಟ್ಟ ಮಗುವಂತೆ ವರ್ತಿಸುವ ನಾನು, ಸಾಕ್ಷಿ ಜೊತೆ ಇದ್ದಾಗ ಅವಳಿಗೆ ತಾಯಿಯಂತೆ ಪ್ರೀತಿ ತೋರುತ್ತಿದ್ದೆ, ಧೈರ್ಯ ಹೇಳುತ್ತಿದ್ದೆ. ಬಹುಶಃ ಅವಳ ಮುಗ್ಧ ಮನಸ್ಸಿಗೆ ನನ್ನ ಮನಸ್ಸು ಸೋತು ಶರಣಾಗಿತ್ತು. ಅವಳ ಕೀಟಲೆಗಳು ತುಂಬಾ ಅಪ್ಯಾಯವಾಗಿದ್ದವು. ಸಾತ್ವಿಕ್ ಮುಂದೆ ಅವನ್ನೆಲ್ಲ ಹೇಳಿ ನಕ್ಕು ಹಗುರಾಗುತ್ತಿದ್ದೆ. ಅವನೂ ಬಿದ್ದು ಬಿದ್ದು ನಗುತ್ತಿದ್ದ.
ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದಮೇಲೆ ಕೂಡಾ ನನ್ನ ಮತ್ತು ಸಾಕ್ಷಿ ಸ್ನೇಹ ಇನ್ನೂ ಗಾಢವಾಯ್ತಾ ಹೋಯ್ತು. ಅವಳು ಪ್ರತಿಯೊಂದು ವಿಷಯಕ್ಕೂ ನನ್ನ ಅಭಿಪ್ರಾಯ ಕೇಳುತ್ತಿದ್ದಳು. ಯಾವ ಬಟ್ಟೆ ತಗೋಬೇಕು? ಯಾವ ಮೂವಿಗೆ ಹೋಗಬೇಕು? ಯಾರಜೊತೆ ಹೇಗೆ ವ್ಯವಹರಿಸಬೇಕು? ಇತ್ಯಾದಿ ಚಿಕ್ಕ ಚಿಕ್ಕ ವಿಷಯಗಳನ್ನು ಸಹ.. ಒಂದು ದಿನ ಸಮಯ ನೋಡಿ ಸಾತ್ವಿಕ್ ನ ಪರಿಚಯ ಕೂಡ ಮಾಡಿಸಿದ್ದಾಯ್ತು. ಇಬ್ಬರೂ ಎಷ್ಟೋ ವರ್ಷದಿಂದ ಪರಿಚಯವಿರುವಂತೆ ಆತ್ಮೀಯರಾದರು. ನನ್ನ ಸ್ನೇಹದ ಪರಿಧಿ ವಿಸ್ತರಣೆಯಾಗಿತ್ತು, ಮೊದಲು ನಾನು ಸಾತ್ವಿ ಮಾತ್ರ ಈಗ ಸಾಕ್ಷಿ ಕೂಡಾ.. ಆದರೆ ಅವರಿಬ್ಬರು ಎಷ್ಟರಮಟ್ಟಿಗೆ ಆತ್ಮೀಯವಾಗಿದ್ದರೆಂದರೆ ಆ ಪರಿಧಿಯಿಂದ ನನ್ನನ್ನೇ ಹೊರ ಹಾಕಿದಂತಿತ್ತು..!! ಕೆಲವೊಮ್ಮೆ ಅವರಿಬ್ಬರ ನಡುವೆ ನಾನೇ ಪರಕೀಯಳು ಅನಿಸುತ್ತಿತ್ತು. ಎರಡೂ ನನ್ನದೇ ಕಣ್ಣುಗಳು.. ಇಬ್ಬರೂ ಬೇಕು.. ಯಾರನ್ನು ದೂರುವುದು, ಯಾರನ್ನು ಸಮಂಜಿಸುವುದು..?! ಮನಸ್ಸು ಗೊಂದಲಕ್ಕೊಳಗಾಗಿತ್ತು. ಮೌನದಲ್ಲೇ ದಿನಗಳುರುಳುತ್ತಿದ್ದವು.
ಒಂದೇ ವರ್ಷದಲ್ಲಿ ಸಾಕ್ಷಿಯ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿತ್ತು. ತನ್ನ ಸೀನಿಯರ್ಸ್ ಗಳನ್ನು ಕೂಡಾ ಸ್ನೇಹಿತರನ್ನಾಗಿ ಮಾಡಿಕೊಂಡು ಎಲ್ಲರ ಜೊತೆ ಆಪ್ತವಾಗಿದ್ದಳು. ಅಲ್ಲಿಗೆ ಸಾತ್ವಿಕ್ ಮತ್ತೆ ನನ್ನದು ಗ್ರಾಜ್ಯುಯೇಟ್ ಮುಗಿದಿತ್ತು. ಅವನು ಅವರ ತಂದೆ ವ್ಯವಹಾರ ನೋಡಿಕೊಳ್ಳಲು ಆಗಾಗ ಊರೂರು ಸುತ್ತುತ್ತಿದ್ದ. ನಾನು ಬೆಂಗಳೂರಿನಲ್ಲೇ ಕೆಲಸದ ಹುಡುಕಾಟದಲ್ಲಿದ್ದೆ.
********
ಆ ಮುಸ್ಸಂಜೆ ಕಾದು ಕುಳಿತಿತ್ತು ಸಖನ ಆಗಮನಕೆ, ನಿರೀಕ್ಷೆಯ ಪ್ರತಿ ಘಳಿಗೆಯು ಅವ್ಯಕ್ತ ಹರುಷದ ಹೆಸರಿನ ಪಾಲಾಗಿತ್ತು. ಅವನನ್ನ ನೋಡದೆ ಹತ್ತತ್ರ ಒಂದು ತಿಂಗಳಾಗಿತ್ತು. ಫೋನ್ ಲ್ಲೇ ಗಂಟೆಗಟ್ಟಲೆ ಮಾತು ಹರಟೆ ನಡಿತಿತ್ತು. ಆದರೆ ಮನಸ್ಸಿನ ಮಾತನ್ನು ಹೇಳಲು ಸರಿಯಾದ ಸಮಯಕ್ಕೆ ಮನಸ್ಸು ಕಾಯುತ್ತಿತ್ತು. ಅವನು ಬಂದಕೂಡಲೇ ನೇರವಾಗಿ ಕೇಳಬೇಕು ನನಗೆ ನೀನೇ ಎಲ್ಲಾ..ನಿನಗೂ ನಾನು ಇಷ್ಟ ಇದ್ರೆ.. ನಮ್ಮ ಸ್ನೇಹ, ಮಧುರ ಬಾಂಧವ್ಯವಾಗಿ ಯಾಕೆ ಮುಂದುವರಿಯಬಾರದು.. ತಂಗಾಳಿಯು ಸೋಕಿ ಮನ ರೋಮಾಂಚನವಾದಂತೆ, ಅವನ ಆಗಮನಕೆ ಮನ ಉಲ್ಲಾಸದಿಂದ ಕುಣಿಯುತ್ತಿತ್ತು.
"ಅಬ್ಬೋ.. ಏನೋ.. ಸಾತ್ವಿ ಹಿಂಗಾಗಿದಿಯಾ ಇನ್ ಶರ್ಟ್, ರೋಲ್ಡ್ ಅಪ್ ಸ್ಲೀವ್ಸ್, ಟ್ರಿಮ್ ಮಾಡಿರೋ ಸ್ಟೈಲಿಷ್ ಗಡ್ಡ, ನಂದೇ ದೃಷ್ಟಿ ಆಗೋ ಹಾಗಿದ್ಯಲ್ಲೋ.."
"ಮತ್ತೆ...ನಾವಂದ್ರೆ ಸುಮ್ನೆ ನಾ.. ಎಷ್ಟು ಹುಡುಗಿಯರ ಪ್ರಪೋಸಲ್ ಉಫ್ ಸಾಕಪ್ಪ ಸಾಕು ಹುಡುಗೀರ ಸಹವಾಸ...!! "
"ಹಲೋ.. ಏನೋ ಅಪರೂಪಕ್ಕೆ ಒಂದೆರಡು ಸುಳ್ಳು ಹೇಳಿದ್ರೆ, ಅಷ್ಟಕ್ಕೇ ತಲೆ ಮೇಲೆ ಕೊಂಬು ಬಂದ್ಬಿಡುತ್ತಲ್ಲಾ!! ಸಾಕು ಹೋಗಲೋ ಕಂಡಿದಿನಿ.."
"ಈಗತಾನೇ ಬಂದಿದಿನಿ, ಆಗಲೇ ಹೋಗು ಅಂತಿಯಲ್ಲೇ, ನೀನು ಒಬ್ಳು ಫ್ರೇಂಡಾ.. ಥೂ ಹೋಗಲೋ..ಅಲ್ಲಿಂದ ಕಷ್ಟ ಪಟ್ಟು ಬಂದಿದ್ದು ವ್ಯರ್ಥ ಆಗೋಯ್ತು!!"
"ಹೇ ಸಾಕ್ ಬಿಡಲೋ ನಿನ್ ಕೆಟ್ಟ ಒವರ್ ಆ್ಯಕ್ಟಿಂಗ್ ಎಲ್ಲಾ ಬೇಡ ಈಗ.. ಏನು ಸಮಾಚಾರ ಅರ್ಜೆಂಟಾಗಿ ಮೀಟ್ ಮಾಡ್ಬೇಕು ಅಂದಿದ್ದು?"
"ಹ್ಮ್ಮ್ಮ.... ಗೆಸ್ ಮಾಡು ನೋಡೋಣ.."
"ನಾಳೆ ನಿನ್ ಮದ್ವೆಗೆ ಇನ್ವೈಟ್ ಮಾಡೋಕ್ ಬಂದಿದಿಯಾ?" ನಕ್ಕೆ.
"ಎಷ್ಟು ಕರೆಕ್ಟಾಗಿ ಗೆಸ್ ಮಾಡಿದಿಯೇ!! ಆದ್ರೆ ಅರ್ಧಂಬರ್ದ ಕರೆಕ್ಟು.."
"ಅಂದ್ರೆ, ಏನರ್ಥ? "
"ಮದ್ವೆ ಅಲ್ಲ ನಿಶ್ಚಿತಾರ್ಥ!!! ನನಗೂ ಮತ್ತೆ ಸಾಕ್ಷಿಗೂ.. ಹೇಗಿದೆ ಜೋಡಿ? ( ಆಘಾತವೋ ಆಶ್ಚರ್ಯವೋ ಒಂದು ಕ್ಷಣ ನನಗೆ ಪ್ರಜ್ಞೆ ಇಲ್ಲದಂತಾಯ್ತು, ಅವನ ಮುಂದಿನ ಮಾತುಗಳು ನನ್ನ ಕಿವಿಗೆ ಬೀಳಲಿಲ್ಲ) ಅವಳನ್ನ ಫರ್ಸ್ಟ್ ಟೈಮ್ ನೋಡಿದಾಗಲೇ ಯರ್ರಾಬಿರ್ರಿ ಇಷ್ಟ ಆಗೋದ್ಲು. ಆಮೇಲೆ ನಿನ್ನಿಂದ ಅವಳ ಸ್ನೇಹ ಆಯ್ತು, ಸ್ನೇಹ ಪ್ರೀತಿಯಾಯ್ತು, ಪ್ರೀತಿ ಈಗ ಸಂಬಂಧವಾಗಿ ಬದಲಾಗ್ತಿದೆ.. ನೀನಂತು ಇವತ್ ರಾತ್ರಿನೇ ಮೈಸೂರಿಗೆ ಬರ್ತಿದಿಯಾ ಅಷ್ಟೇ.."
ನನಗೆ ದುಃಖ ಉಮ್ಮಳಿಸಿ ಬಂದಿತ್ತು "ಸಾಕು ನಿಲ್ಸೋ.. ಬೆಸ್ಟ್ ಫ್ರೆಂಡ್ ಅಂತ ಹೇಳ್ತಿದ್ದೆ, ಈ ವಿಷಯ ಮೊದಲೇ ಯಾಕೋ ಹೇಳಲಿಲ್ಲ. ಯಾವತ್ತೂ ನಂಜೊತೆನೆ ಇರ್ತಿನಿ ಅಂತ ಮಾತು ಕೊಟ್ಟಿದ್ದೆ, ಯಾವತ್ತೂ ಅಳೋಕೆ ಬಿಡಲ್ಲ ಅಂದಿದ್ದೆ, ಈಗ ಬರ್ತಿದೆಯಲ್ಲ ಕಣ್ಣೀರು ಅದ್ಕೆ ನೀನೇ ಕಾರಣ... ಒಂದು ವರ್ಷದಿಂದ ಅನಿಸ್ತಾನೆ ಇತ್ತು ಅವತ್ತು ಕ್ಲಾಸ್ ಆಚೆ ಫ್ರೆಂಡ್ ಶಿಪ್ ಮಾಡಿದ ಸಾತ್ವಿಕ್ ಇವನೇನಾ ಅಂತ, ನಾನೇ ಹುಚ್ಚಿ ಅವತ್ತಿಂದನೂ ನಿನ್ ನೆನಪುಗಳನ್ನು ಕನಸುಗಳನ್ನು ಹೃದಯದಲ್ಲಿಟ್ಟು ಜೋಪಾನ ಮಾಡ್ತಾನೆ ಇದೀನಿ.. ನಿನೊಬ್ಬ ಇದ್ರೆ ಸಾಕು ಬೇರೆ ಜಗತ್ತೇ ಬೇಡ ಅನ್ನಿಸೋವಷ್ಟು ಪ್ರೀತ್ಸಿದೀನಿ.. ನನ್ನ ವ್ಯಕ್ತಿತ್ವದಲ್ಲೂ ನಿನ್ನ ಕಾಣುವಷ್ಟು ಪ್ರೀತ್ಸಿದಿನಿ.. ಯಾವತ್ತೋ ಒಂದಿನ ನಿನಗೂ ನನ್ ಪ್ರೀತಿ ಅರ್ಥ ಆಗುತ್ತೆ, ನೀನೂ ನನ್ನ ಪ್ರೀತಿಸ್ತಿಯಾ ಅಂತ ಕಾಯ್ತಾನೇ ಇದೀನಿ.. ಇದೊಂದು ನಿಜ ಹೇಳು.... ಒಂದ್ ಸಾರಿನೂ ನಾನು ನಿನ್ನ ಪ್ರೀತಿಸ್ತಿರ್ಬಹುದು ಅಂತ ನಿನಗೆ ಅನ್ನಿಸ್ಲೇ ಇಲ್ವಾ ?!
ಅಷ್ಟರಲ್ಲಿ ಹಿಂದಿನಿಂದ ಯಾರೋ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿದಂತಾಯ್ತುಅ!! ಹೇ.. ನಾನ್ ಗೆದ್ಬಿಟ್ಟೆ... ಖುಷಿಯಿಂದ ಜಿಗಿತಾ ಬಂದಳು ಸಾಕ್ಷಿ.. ( ಇವಳು ಬಂದಿದಾಳಾ, ಇವಳಿಗ್ಯಾಕೆ ಇಷ್ಟು ಖುಷಿ ಮನಸ್ಸಲ್ಲೇ ಪ್ರಶ್ನೆಗಳು ಓಡುತ್ತಿದ್ದವು)
"ಹೇ..ಕೋತಿ ಯಾಕೆ ಇಷ್ಟು ಬೇಗ ಬಂದೆ?! ಅವಳು ಇನ್ನೂ ಏನೇನೋ ಹೇಳ್ತಿದ್ಲೋ ಛೇ..ಎಲ್ಲಾ ಹಾಳು ಮಾಡಿಬಿಟ್ಟೆ" ಸಾತ್ವಿಕ್ ಅವಳ ಮೇಲೆ ಮುನಿಸಿಕೊಂಡ.
"ಹಲೋ... ಲವ್ ವಿಷಯ ಗೆಸ್ ಮಾಡಿದ್ದೆ ನಾನು ಈಗ ನಾನೇ ವಿಲನ್ ಆಗೊದ್ನಾ!!" ಸಾಕ್ಷಿಯ. ವಾದ
"ಏನ್ ನಡೀತಿದೆ ಇಲ್ಲಿ" ಸಿಟ್ಟಿನಿಂದ ಕೇಳಿದೆ.
"ಹಾಯ್ ಅತ್ತಿಗೆ ನಾನು ನಿಮ್ ನಾದಿನಿ ಸಾಕ್ಷಿ ಅಂತ!! Unfortunately ಈ ಪುಣ್ಯಾತ್ಮನ ತಂಗಿ..ಸ್ವಂತ ಅಲ್ಲ..."
"ಬಾಡಿಗೆಗೆ ತಂದಿದ್ದು.. ಬರ್ಮಾ ಬಜಾರ್ ನಿಂದ.." ಸಾತ್ವಿಕ್ ಹಾಸ್ಯ ಮಾಡಿದ.
"ಹೇ ಸುಮ್ನಿರೋ ನಾ ಹೇಳ್ತಿದಿನಿ ತಾನೇ.. ತಂಗಿ ಅಂದ್ರೆ ಚಿಕ್ಕಮ್ಮನ ಮಗಳು ಇವನು ನಿಮ್ಮಿಬ್ಬರ ಫ್ರೆಂಡ್ ಶಿಪ್ ಬಗ್ಗೆ ಫೋನಲ್ಲಿ ಗಂಟೆಗಟ್ಟಲೆ ಕುಯ್ತಿದ್ದ. ನೀವ್ ಇವನ್ನ ಬಿಟ್ಟು ಬೇರೆ ಯಾರ್ ಜೊತೆಗೂ ಜಾಸ್ತಿ ಮಾತಾಡಲ್ಲ, ಸೀಕ್ರೆಟ್ ಶೇರ್ ಮಾಡಲ್ಲ..ಇತ್ಯಾದಿ.. ಅವಾಗ್ಲೆ ನಂಗನ್ನಿಸ್ತು ನೀವ್ ಇವನನ್ನ ಪ್ರೀತಿಸ್ತಿರಬಹುದು ಅಂತ. ಆದರೆ ಇವನು ನಂಬಲಿಲ್ಲ. ಇಬ್ಬರ್ಗೂ ಚಾಲೆಂಜ್ ಆಯ್ತು, ನೀವ್ ಪ್ರೀತಿಸ್ತಿದ್ರೆ ನಾ ಗೆದ್ದಂಗೆ ಇಲ್ಲ ಅಂದ್ರೆ ಅವನು ಗೆದ್ದಂಗೆ!!
ಅದೇ ಟೈಮ್ ಗೆ ನನಗೆ ಬೆಂಗಳೂರಲ್ಲಿ ಸೀಟ್ ಸಿಕ್ತು. ಹೇಗೋ ಮಾಡಿ ನಿಮ್ಮಿಂದ ಸತ್ಯ ತಿಳ್ಕೊಬೇಕಿತ್ತು. ಆದರೆ ಅಷ್ಟರಲ್ಲಿ ನಂಗೆ ಆ್ಯಕ್ಸಿಡೆಂಟ್ ಆಗೊಯ್ತು! ಅವತ್ತು ರಾತ್ರಿ ಬ್ರದರ್ ಹಾಸ್ಪಿಟಲ್ ನಲ್ಲಿ ನನ್ನ ಮಾತಾಡ್ಸೆ ನಿಮ್ ಹತ್ರ ಬಂದಿದ್ದು, ನೀವ್ ಕೋಪ ಮಾಡ್ಕೊಂಡಿರ್ತಿರಾ, ನಾಳೆ ಕರ್ಕೊಂಡ್ ಬಂದು ಮೀಟ್ ಮಾಡಸ್ತಿನಿ ಮಾತಾಡು ಅಂದ. ಆವಾಗ್ಲೇ ನಂಗೆ ಐಡಿಯಾ ಹೊಳಿತು ನೋಡಿ, ಇವನು ಇದೆಲ್ಲಾ ಆಗೋ ಮಾತಲ್ಲ, ನಾವು ಅಣ್ಣ ತಂಗಿ ಅಂತ ಕ್ಷಿತಿ ಒಂದೇ ಕ್ಷಣದಲ್ಲಿ ಕಂಡು ಹಿಡಿತಾಳೆ ಅಂದ. ಆದರೆ ನೋಡಿ ಒಂದು ವರ್ಷದ ಮೇಲಾದ್ರೂ ನಿಮ್ಗೆ ಗೊತ್ತೇ ಆಗ್ಲಿಲ್ಲ...
Actually ನಾವಿಬ್ರೂ ತುಂಬಾ ಅನ್ಯೋನ್ಯವಾಗಿ ಇರೋದ್ನಾ ನೋಡೇ, jealous ಆಗಿ ಏನಾದ್ರೂ ಹೇಳ್ತಿರಾ ಅನ್ಕೊಂಡೆ ಆದ್ರೆ ನೀವು ಸುಮ್ನೆನೆ ಇರೋದು ನೋಡಿ ಪ್ರೀತಿಸ್ತಿರೋ ಇಲ್ವೋ ಅಂತ ಅನುಮಾನ ಇತ್ತು. ಅದ್ಕೆ ಈ ಮಾಸ್ಟರ್ ಪ್ಲ್ಯಾನು.. ಹೇಗಿದೆ?! ಆದರೆ ಆಗ ನನಗೆ ಊರು ಜನ ಹೊಸತು, ಏನೂ ಹೇಗೆ ದಿಕ್ಕು ತಪ್ಪಿ ಹೋಗಿತ್ತು, as a friend ಕ್ಷಿತಿ ನೀ ಕೊಟ್ಟ ಧೈರ್ಯ ವಿಶ್ವಾಸ ನನ್ನ ಲೈಫ್ ಟೈಮ್ ಗಿಫ್ಟ್ ಅದು.. ಬಂದು ಅಪ್ಪಿಕೊಂಡಳು. ಹೆದರಬೇಡಿ ನಿಮ್ ಸಾತ್ವಿ ನಾ ದೂರ ಮಾಡೋಕೆ ಬಂದಿಲ್ಲ ಒಂದು ಮಾಡೋಕೆ ಬಂದಿದಿನಿ. ಸಾ ತ್ವಿಕ - ಕ್ಷಿ ತಿಜಾ ಹೆಸರಲ್ಲಿ ಒಂದಕ್ಷರ ಸಾಲ ಪಡೆದವಳು ನಾನು ಇಷ್ಟು ಮಾಡದಿದ್ರೆ ಹೇಗೆ "
ಸಾತ್ವಿಕ್ ತನಗೊಬ್ಬಳು ತಂಗಿ ಇದಾಳೆ ಅಂತಿದ್ದ. ಆದ್ರೆ ಯಾವತ್ತೂ ಹೆಸರೇ ಹೇಳಿರ್ಲಿಲ್ಲ ಕೋತಿ ಕೋತಿ ಅಂತಿದ್ದ. ಅವತ್ತು ಆಸ್ಪತ್ರೆಲಿ ಡಾಕ್ಟರ್ ಕೂಡ ಕೇಳಿದ್ರು ನಿಮ್ ಚಿಕ್ಕಮ್ಮ ಬರ್ಲಿಲ್ವಾ ಅಂತ.. ಎಷ್ಟು ಪೆದ್ದಿ ನಾನು ಒಂದು ವರ್ಷದಿಂದ ಫೂಲ್ ಆಗ್ತಾನೆ ಇದೀನಲ್ಲಾ ನನ್ನೊಳಗೆ ನಾನೇ ನಕ್ಕೆ.
"ಹಲೋ.... ಅತ್ತಿಗೆ, ನಾದಿನಿ ಸೆಂಟಿಮೆಂಟ್ ಮುಗೀತಾ ಇನ್ನೂ ಇದೆಯಾ?? ಇದೇ ಆದ್ರೆ ನಾಳೆ ನಿಶ್ಚಿತಾರ್ಥಕ್ಕೆ ಶಾಪಿಂಗ್ ಮಾಡೋದು ಯಾವಾಗ? " ಸಾತ್ವಿಕ್ ಪ್ರಶ್ನೆಗೆ ತಬ್ಬಿಬ್ಬಾಗಿ ಕೇಳಿದೆ - "ನಾಳೆ ನಿಶ್ಚಿತಾರ್ಥ ನಾ? ಯಾರ್ದು? "
ನಿಮ್ಮಜ್ಜಿಗೂ ನಮ್ ತಾತಂಗೂ ಸಾತ್ವಿಕ್ ಅಣುಗಿಸಿದ.
"ಅಯ್ಯೋ ಅತ್ತಿಗೆ ನಿಮ್ದು ಮತ್ತೆ ಬ್ರದರ್ ದು..!! ನಿಮ್ ತಂದೆ ತಾಯಿ ಕೂಡ ಒಪ್ಕೊಂಡಾಗಿದೆ, US ನಿಂದ ದೊಡ್ಡಪ್ಪ ಕೂಡ ಬಂದಿದಾರೆ, ನಮ್ಮ ಅಪ್ಪಾಮ್ಮನೂ ಮೈಸೂರಲ್ಲೆ ಇದಾರೆ. ನಿಮ್ಮ ಅಭಿಪ್ರಾಯ ಒಂದೇ ಬೇಕಾಗಿತ್ತು."
"ಮತ್ತೆ ಹುಡುಗನ ಅಭಿಪ್ರಾಯ ಕೇಳೇ ಇಲ್ಲ?" ನಾನಂದೆ ಕಣ್ಣು ಮಿಟುಕಿಸಿ
"ಅದನ್ನ ನೀವೇ ಕೇಳಿ ಬಗೆಹರಸ್ಕೊಳ್ಳಿ..ಪಾ, ನಾನು ಕಾರ್ ಹತ್ರ ಕಾಯ್ತಿರ್ತಿನಿ ಬಂದ್ಬಿಡಿ, ಅಂದಂಗೆ ಬ್ರೋ ಯಾವಾಗ ಕೊಡಸ್ತಿಯಾ ನನಗೆ ಸ್ಕೂಟಿ.. ನನ್ ವಿನ್ನಿಂಗ್ ಪ್ರೈಜು.."
"ಸದ್ಯಕ್ಕೆ ಕಾಲಲ್ಲಿ ನಡ್ಕೊಂಡು ಕಾರ್ ಹತ್ರ ಹೋಗು..ಸ್ಕೂಟಿ ಆಮೇಲೆ ಬರುತ್ತೆ.."
"ಹೋಗಲೋ..ದಡ ಸಿಕ್ಕ ಮೇಲೆ ದೋಣಿಗೇನು ಬೆಲೆ!! ಟೈಂ ಬರ್ಲಿ ನೊಡ್ಕೊತಿನಿ ನಿನ್ನ" ಅಂತ ಸಾಕ್ಷಿ ಹೊರಟು ಹೋದಳು.
ಬಾಲ್ಯದಿಂದಲೂ ಆಡಿ ಬೆಳೆದ ಸ್ನೇಹಿತ ಇವತ್ತೇನೋ ಹೊಸ ಪರಿಚಿತನಂತೆ ಕಾಣತೊಡಗಿದ ಹೇಗೆ ಮಾತು ಶುರು ಮಾಡುವದೋ ತಿಳಿಯಲಿಲ್ಲ. "ಅಂತು ಇಂತು ನನ್ನ ಕೈಯಲ್ಲಿ ಚೆನ್ನಾಗಿ ನಾದಿನಿ ಸೇವೆ ಮಾಡ್ಸಿಬಿಟ್ಟೆಯಲ್ಲಾ!!
ಹ್ಮೂ ಮತ್ತೆ ಮದ್ವೆ ಆದ್ಮೇಲೆ ನನ್ ಕೈಯಲ್ಲೇ ಎಲ್ಲಾ ಮಾಡಸ್ತಿಯಾ ಅಂತ ಗೊತ್ತಮ್ಮಾ ನಮ್ಗೆ ಅದ್ಕೆ ಅಡ್ವಾನ್ಸ್ ಆಗಿ ಕೆಲಸ ತಗೊಂಡ್ವಿ.. ಹೆಂಗೆ ನಾವು..
"ಅವಳಿಗೆ ಗೊತ್ತಾದ ನನ್ನ ಪ್ರೀತಿ ನಿನಗೆ ಗೊತ್ತಾಗ್ಲಿಲ್ವಲ್ಲೋ ಇಡಿಯಟ್!! ಅವಳ ಮುಂದೆ ಸೋತೋದೆ ನೀನು, ಮೇಲೆ ದೊಡ್ಡ ಬಿಲ್ಡಪ್ ಬೇರೆ..!"
"ಪ್ರೀತಿ ಹೇಳಿದ್ರೆನೆ ಗೊತ್ತಾಗ್ಬೇಕು ಅಂತಿಲ್ಲ, ಅದೊಂದು ಅನುಭೂತಿ, ಪ್ರೀತಿಸೋ ಹೃದಯಕ್ಕೆ ತಾನಾಗೇ ಅರ್ಥ ಆಗಿಬಿಡುತ್ತೆ, ಆದರೆ ನಾವೇ ಎಲ್ಲಿ ಇರೋ ಸ್ನೇಹಾನು ಕಳ್ಕೋಳ್ತಿವೋ ಅನ್ನೋ ಭಯಕ್ಕೆ ಆ ಭಾವನೆನಾ ಮನಸ್ಸಲ್ಲೇ ಚಿವುಟಿ ಹಾಕೋ ಪ್ರಯತ್ನದಲ್ಲಿರ್ತಿವಿ.. ಅಷ್ಟಕ್ಕೂ ಇಲ್ಲಿ ಯಾರೂ ಸೋತಿಲ್ಲ, ಅವಳು ಸ್ಕೂಟಿ ಗೆದ್ದಳು, ನಾನು ನಿನ್ನ ಗೆದ್ದೆ" ಅಂತ ಹಣೆಗೆ ಮುತ್ತಿಟ್ಟ..
ಭಾವನೆಗಳ ಮಳೆಯಲ್ಲಿ ಮಿಂದ ಹೃದಯಕ್ಕಿಂದು ಸ್ವಾತಿಮುತ್ತಿನಾಗಮನ, ಅನುವಾದಿಸಲಾರೆ ನಾ ಖುಷಿಯ, ಹಿಡಿದಿಡಲಾರೆ ಮುಷ್ಟಿ ಹೃದಯದಿ, ಜಿನುಗಿದೆ ಕಣ್ಣಂಚಲಿ ಇಬ್ಬನಿಯಾಗಿ..
-: ಮುಕ್ತಾಯ :-
--------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ