ವಿಷಯಕ್ಕೆ ಹೋಗಿ

ಗುಜಾರಿಷ್


ಲೈಫ್ ಬಹುತ್ ಛೋಟಿ ಹೇ ದೋಸ್ತೋ... ಪರ್ ದಿಲ್ ಸೇ ಜಿಯೋ ತೋ ಬಹುತ್ ಹೇ..   so go on.. break the rules, forgive quickly, love truly and never regret anything that made you smile

ಹೀಗೆ ಬದುಕಿನ ಬಗ್ಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ ತನ್ನ ಶೋತೃಗಳಿಗೆ ಬಹು ಮೆಚ್ಚಿನ RJ ಯಾಗಿದ್ದ ನಾಯಕ ಈಥನ್ ಮಾಸ್ಕರೇನಸ್.

ಈಥನ್,  ಒಂದು ಕಾಲದಲ್ಲಿ ಜಗತ್ತಿನ ಪ್ರಖ್ಯಾತ ನಂಬರ್ ಒನ್ ಮ್ಯಾಜಿಶಿಯನ್! ಗಾಳಿಯಲ್ಲಿ ಹಾರುವುದು, ನೀರಿನಲ್ಲೂ ದೀಪ ಉರಿಸುವುದು, ಖಂಡ ತುಂಡ ಮಾಡಿದ ದೇಹವನ್ನು ಮತ್ತೆ ಜೋಡಿಸುವುದು ಹೀಗೆ ಅನೇಕಾನೇಕ ಚಿತ್ರ ವಿಚಿತ್ರ ಪ್ರದರ್ಶನಗಳ ಮೂಲಕ ಮನರಂಜನೆ ನೀಡಿ ಜನಮನವನ್ನು ಗೆದ್ದವನು.

ಆದರೆ ಅದೇ ಮ್ಯಾಜಿಕ್ ಆತನ ಜೀವನವನ್ನು ಬದುಕಿದ್ದು ಸತ್ತಹಾಗೆ ನಿರ್ಜೀವನನ್ನಾಗಿ ಮಾಡಿಬಿಡುತ್ತದೆ. ಹೌದು ಸ್ನೇಹಿತರೇ.... ಮ್ಯಾಜಿಕ್ ಟ್ರಿಕ್ ಮಾಡುವ ಸಂಧರ್ಭದಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಮೇಲಿನಿಂದ ಅನಾಮತ್ತಾಗಿ ಕೆಳಗೆ ಬಿದ್ದ ಈಥನ್, ಎರಡು ವರ್ಷಗಳ ಸತತ ಚಿಕಿತ್ಸೆಯ ನಂತರ ಜೀವಂತವಾಗೇನೊ ಉಳಿಯುತ್ತಾನೆ.  ಆದರೆ ಬೆನ್ನಿನ ಮೂಳೆಗೆ ಪೆಟ್ಟಾದ ಕಾರಣ ತನ್ನ ಕೈಕಾಲು ದೇಹದ ಸಂಪೂರ್ಣ ಸ್ವಾಧೀನತೆಯನ್ನು ಕಳೆದುಕೊಳ್ಳುತ್ತಾನೆ. ಕತ್ತನ್ನು ಹೊರತುಪಡಿಸಿ ದೇಹದ ಯಾವುದೇ ಭಾಗವನ್ನು ಹೊರಳಾಡಿಸಲಾಗದ ಅಸಹಾಯಕ ಹಂತವನ್ನು ತಲುಪುತ್ತಾನೆ. ಎಷ್ಟರಮಟ್ಟಿಗೆ ಎಂದರೆ ಬಿಸಿ ತಂಪು ಯಾವುದೇ ರೀತಿಯ ಸ್ಪರ್ಶ ಜ್ಞಾನ ಕೂಡ ಆತನ ಚರ್ಮಕ್ಕೆ ಅರಿವಾಗುವುದಿಲ್ಲ.

ಆ ಪರಿಸ್ಥಿತಿಯಲ್ಲಿ ಕೂಡ ಆತ ಜೀವನದ ಬಗ್ಗೆ ನಿರಾಸೆಗೊಳ್ಳದೆ ಇತರರಿಗೆ ಮಾದರಿಯಾಗುವಂತೆ ಬದುಕನ್ನು ಪ್ರೀತಿಸುತ್ತಾನೆ. ಅಷ್ಟೇ ಸುಂದರವಾಗಿ ಬದುಕನ್ನು ರೂಪಿಸಿಕೊಳ್ಳುತ್ತಾನೆ. ರೆಡಿಯೋ ಜಿಂದಗಿ ಎಂಬ ಕಾರ್ಯಕ್ರಮ ಮುಖೇನ ಸಾವಿರಾರು ಕ್ವಾಡ್ರಿಯಾಪ್ಲೇಜಿಕ್ ಹಾಗೂ ವಿಶೇಷ ಚೇತನರಿಗೆ ಸ್ಪೂರ್ತಿ ತುಂಬುತ್ತಾನೆ.

ಆತ ಬರೆದ. 'Learning to fly' ಎಂಬ ಪುಸ್ತಕದ ಬಿಡುಗಡೆಯ ಸಂಧರ್ಭದಲ್ಲಿ ಅವರನ್ನು ಕುರಿತು ಆತ ಹೇಳುತ್ತಾನೆ..

"ಕೋಯಿ ಭೂಲ್ ಕೆ ಭಿ ಯೇ ನಾ ಸೋಚೆ ಕಿ ಹಮ್ ಮೆ ಅಬ್ ಜ಼ಿಂದಗಿ ನಹಿ ಬಚಿ.. ಜಿತ್ನಿ ಭಿ ಹೇ, ಜೈಸಿ ಭಿ ಹೇ, ಜ಼ಿಂದಗಿ ಬಹುತ್ ಖುಬ್ಸೂರತ್ ಹೇ... Live it with dignity..."

ಅವನು ಬದುಕನ್ನು ನೋಡುವ ರೀತಿಯೇ ಅಷ್ಟು ಚಂದ.

ಕಥೆಯ ಇನ್ನೊಂದು ಮುಖ್ಯ ಪಾತ್ರ ಸೋಫಿಯಾ! ಆಕೆ ವಿವಾಹಿತೆಯಾದರೂ ಗಂಡನ ಕಿರುಕುಳ ತಾಳದೆ ಡೈವೋರ್ಸ್‌ಗೆ ಮನವಿ ಸಲ್ಲಿಸಿದಾಕೆ.

ಹನ್ನೆರಡು ವರ್ಷಗಳಿಂದ ಒಂದು ದಿನವೂ ರಜೆ ಹಾಕದೆ ಅವನನ್ನು ನೋಡಿಕೊಳ್ಳುವ ಸೋಫಿಯಾ ಅವನ ನರ್ಸ್/ಕೇರ್‌ಟೇಕರ್. ಹೆಸರಿಗೆ ನರ್ಸ್ ಆದರೂ ಅವಳ ಕಾಳಜಿ ಪ್ರೀತಿ ಅಪಾರ.

ಕಥೆಯ ದೃಷ್ಟಿಕೋನ ಬದಲಾಗುವುದು ಈಥನ್ ತನ್ನ ಆತ್ಮೀಯ ಸ್ನೇಹಿತೆ ಅಡ್ವೊಕೆಟ್ ದೇವಯಾನಿಗೆ ಕೋರ್ಟ್ ನಲ್ಲಿ ದಯಾಮರಣ ಕುರಿತು ಪೆಟಿಷನ್ ಫೈಲ್ ಮಾಡಲು ಕೇಳಿಕೊಂಡಾಗ..

ಪ್ರತಿದಿನ ತಪ್ಪದೇ ಡಯಾಲಿಸಿಸ್ ಗಾಗಿ ಬರುವ ಆತನ ಪರ್ಸನಲ್ ಡಾಕ್ಟರ್ ನಾಯಕ್ ಕೂಡ ಅವನ ನಿರ್ಧಾರವನ್ನು ಬದಲಾಯಿಸಲಾಗದೆ ಸೋಲುತ್ತಾರೆ.

ಈಥನ್ ಈ ನಿರ್ಧಾರಕ್ಕೆ ಮುಖ್ಯ ಕಾರಣ - ಮುಂದೆಂದೂ ಆತ ಸರಿ ಹೋಗುವ ಯಾವುದೇ ಭರವಸೆಗಳು ಉಳಿದಿಲ್ಲ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ ಮತ್ತು ಶ್ವಾಸಕೋಶದ ತೊಂದರೆಯೂ ಎದುರಾಗುತ್ತಿದೆ.  ಅವನ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿತ್ತು.  ಪ್ರತಿದಿನವೂ ಡಯಾಲಿಸಿಸ್'ನ ಅವಶ್ಯಕತೆ ಇತ್ತು. ಇನ್ನೂ ಕೆಲವು ದಿನಗಳಲ್ಲಿ ಆತನಿಗೆ ಉಸಿರಾಡಲು ಕೂಡ ಅಸಾಧ್ಯವಾಗಿ ವೆಂಟಿಲೇಟರ್ ಅಳವಡಿಸುವುದು ಅನಿವಾರ್ಯವಾಗುತ್ತದೆ. ಇಷ್ಟು ವರ್ಷ ಬದುಕನ್ನು ಪ್ರೀತಿಯಿಂದ ಸವಿದಿದ್ದ ಈಥನ್ ಗೆ ಮಶಿನ್ ಗಳ ಸಹಾಯದೊಂದಿಗೆ ಹಿಂಸೆಯಿಂದ ಬದುಕಲು ಸಹಮತವಿಲ್ಲ.

ಆದರೆ ಕೋರ್ಟ್ ಈಥನ್‌ನ ದಯಾಮರಣ  ನಿರ್ಧಾರವನ್ನು ಸಾರಾಸಗಟಾಗಿ ತಳ್ಳಿಹಾಕಿ ಕೇಸ್ ರದ್ದುಗೊಳಿಸುತ್ತದೆ.

ಈ ವಿಷಯ  ಹೆಮ್ಮರವಾಗಿ ಬೆಳೆದು ಮರುದಿನ ಪತ್ರಿಕೆಯಲ್ಲಿ ಸಹ ಪ್ರಕಟವಾಗುತ್ತದೆ. ಆಗ ವಿಷಯ ತಿಳಿದ ಸೋಫಿಯಾ ತನಗೆ ಒಂದೂ ಮಾತು ತಿಳಿಸದ ಈಥನ್ ಮೇಲೆ ಕೋಪಗೊಳ್ಳುತ್ತಾಳೆ. ಆಕೆಗೆ ಈಥನ್ ನಿರ್ಧಾರ ಸರಿಯೆನಿಸುವುದಿಲ್ಲ. ಆಕೆ ಅದನ್ನು ವಿರೋಧಿಸುತ್ತಾಳೆ.

ಆಗ ಕಥೆಯಲ್ಲಿ ಹೊಸ ಪಾತ್ರವೊಂದರ ಆಗಮನವಾಗುತ್ತದೆ. ಓಮರ್!!
ಈತ ಈಥನ್' ನ ದೊಡ್ಡ ಅಭಿಮಾನಿ ಮತ್ತು ಆತನಿಂದ ಮ್ಯಾಜಿಕ್ ಕಲಿಯಲು ಬಂದಿರುವಾತ. ಈಥನ್ ಈತನಿಗೆ ತನ್ನ ಯಕ್ಷಿಣಿ ವಿದ್ಯೆಯನ್ನು ಧಾರೆಯೆರೆಯಲು ಒಪ್ಪಿ ತನ್ನ ಪುಸ್ತಕಗಳನ್ನು ಅವನಿಗೆ ಕೊಡುತ್ತಾನೆ.

ಓಮರ್‌ನಿಗೆ ಕಲಿಸುತ್ತಾ ಕಲಿಸುತ್ತಾ ಈಥನ್ ತನ್ನ ನೆನಪುಗಳ ಮೆರವಣಿಗೆಯಲ್ಲಿ ತೇಲುತ್ತಾನೆ. ತನ್ನ ಜೀವನದ ಮೊದಲ ಮ್ಯಾಜಿಕ್ ತನ್ನ ತಾಯಿಯನ್ನು ನಗಿಸಿದ ಆ ಸವಿಕ್ಷಣವನ್ನು ಮೆಲುಕು ಹಾಕುತ್ತಾನೆ. ನಗುತ್ತಾನೆ. ಅಳುತ್ತಾನೆ. ಓಮರ್ ಒಂದೊಂದು ಹೊಸ ಟ್ರಿಕ್ ಕಲಿತು ತೋರಿಸುವಾಗ, ಸೋಫಿಯಾಳ ಕರತಾಡನ ಶಬ್ದ ಈಥನ್ ಗೆ ಗತದಲ್ಲಿ ತನಗೆ ತಟ್ಟುತ್ತಿದ್ದ ಸಾವಿರ ಚಪ್ಪಾಳೆಗಳ ಸದ್ದಿನಂತೆ ಭಾಸವಾಗಿ ಸಂಭ್ರಮಿಸುತ್ತಾನೆ.

ದೇವಯಾನಿ ಈಥನ್'ಗೆ ಒಂದು ಹೊಸ ಮಾರ್ಗ ಸೂಚಿಸಿ ಜನರ ಸಮ್ಮತಿ ಪಡೆಯಲು ತಿಳಿಸಿ ಪ್ರಾಜೆಕ್ಟ್ ಈಥಿನೇಶಿಯಾ ಆರಂಭಿಸಲು ಹೇಳುವಳು.

ಈಗಾಗಲೇ 'ರೇಡಿಯೋ ಜಿಂದಗಿ' ಎಂಬ ಕಾರ್ಯಕ್ರಮದಿಂದ ಖ್ಯಾತಿ ಪಡೆದ ಈಥನ್ ಶೋತ್ರುಗಳಿಂದ ತನ್ನ ನಿರ್ಧಾರದ ಬಗ್ಗೆ ಅಭಿಪ್ರಾಯ ಕಲೆಹಾಕಲು ಮುಂದಾಗುತ್ತಾನೆ.

ಬಂದ ಬಹುತೇಕ ಕರೆಗಳು ಅವನ ನಿರ್ಧಾರಕ್ಕೆ ವಿರುಧ್ಧವಾದವುಗಳೇ.. ಕೆಲವು ಜನ ಆತನಿಗೆ ಬದುಕಲು ಪ್ರೇರೆಪಿಸುತ್ತಾರೆ‌. ಮತ್ತೆ ಕೆಲವರು ಅವನ ಅಭಿಪ್ರಾಯವನ್ನು ನಿರ್ದಾಕ್ಷಿಣ್ಯವಾಗಿ ಹಳಿದು ಹೀಯಾಳಿಸಿ ಮಾತನಾಡುತ್ತಾರೆ. ಈಥನ್ ನೊಂದುಕೊಳ್ಳುತ್ತಾನೆ. ಹೇಳಲಾಗದ ಅನುಭವಿಸಲು ಆಗದ ಮಾನಸಿಕ ಯಾತನೆಯಿಂದ ತೊಳಲುತ್ತಾನೆ.

ಅವನನ್ನು ಬೆಂಬಲಿಸುವ ಅವನ ಸ್ನೇಹಿತೆ ದೇವಯಾನಿ ದತ್ತಾ ಮತ್ತೊಮ್ಮೆ ಕೋರ್ಟ್ ನಲ್ಲಿ ಪೆಟಿಶನ್ ಫೈಲ್ ಮಾಡುತ್ತಾಳೆ. ಮತ್ತು ಈ ಬಾರಿ ಖುದ್ದು ಈಥನ್ ನನ್ನೇ ಕೋರ್ಟ್ ಗೆ ಕರೆದೊಯ್ಯಲು ಸಿದ್ದವಾಗುತ್ತಾಳೆ.

ಆಗ ಬಂದ ಚರ್ಚಿನ ಪಾದ್ರಿಯೊಬ್ಬರು - ನಿನ್ನ ನಿರ್ಧಾರ ದೇವರಿಗೆ ವಿರುದ್ದವಾದುದು. ಭಗವಂತ ಕೊಟ್ಟ ಬದುಕನ್ನು ಹೀಗೆ ಸ್ವ ಇಚ್ಛೆಯಿಂದ ಕೊಂದುಕೊಳ್ಳುವುದು ತಪ್ಪು, ದೇವರ ಮೇಲೆ ನಂಬಿಕೆ ಇಡು. ಎಂದೆಲ್ಲಾ ಭೋಧನೆ ಮಾಡಿದರೆ, ಈಥನ್ ಹೇಳುತ್ತಾನೆ - ದೇವರ ಮೇಲೆ ನಂಬಿಕೆ ಇದೆ ಅದಕ್ಕೆ ತಾನೇ I'm just dying to  meet him ಎಂದುತ್ತರಿಸಿ ತಾನೊಬ್ಬ ಆಸ್ಥಿಕನೆಂದು ಸಾಬೀತುಗೊಳಿಸುತ್ತಾನೆ.

ಹದಿನಾಲ್ಕು ವರ್ಷಗಳ ನಂತರ ಹೊರ ಜಗತ್ತಿಗೆ ಕಾಲಿಡುತ್ತಲಿದ್ದ ಈಥನ್. ಕೋರ್ಟ್ ಗೆ ಹೋಗುವ ಮಾರ್ಗದಲ್ಲಿ ಈಥನ್ ಕತ್ತಲೆ ಬದುಕಿನಲ್ಲಿ ತಾನು ಕಳೆದುಕೊಂಡ ಪ್ರಕೃತಿಯ ಮಡಿಲಲ್ಲಿನ ಸವಿಕ್ಷಣಗಳ ಅನುಭವವನ್ನು ಪಡೆಯುತ್ತಾನೆ. ಪ್ರಕೃತಿಯನ್ನು ಆಸ್ವಾದಿಸುತ್ತಾನೆ. ಬಿಚ್ಚು ಸ್ವಚ್ಛಂದದ ಆಕಾಶ, ತೇಲಿ ಹೋಗುವ ಮೋಡಗಳು,  ಹಾರಾಡುವ ಹಕ್ಕಿಗಳು, ಹಿಮ್ಮುಖವಾಗಿ ಓಡುವ ಹಚ್ಚ ಹಸುರಿನ ಗಿಡಮರಗಳು, ಆಟ ಆಡುವ ಪುಟ್ಟ ಮಕ್ಕಳು, ತಂಗಾಳಿಗೆ ತೊನೆಯುವ ತನ್ನ ಕೂದಲುಗಳ ಕಂಪನ, ಆ ಅನುಭೂತಿ ಆತನಿಗೆ ಮತ್ತೊಂದು ಘಳಿಗೆ ಹೊಸ ಜನ್ಮದಂತೆಯೇ ತೋರುತ್ತದೆ.

ಕೋರ್ಟ್ ನಲ್ಲಿ ಪ್ರಾಸಿಕ್ಯೂಟ್ ಲಾಯರ್ 'ಕೇಸ್ ಸ್ಟಡಿ ಮಾಡಲು ತನಗೆ ಇನ್ನಷ್ಟು ಅವಧಿ ಬೇಕೆಂದು' ಕೋರಿಕೊಳ್ಳಲು ವಿಚಾರಣೆಯನ್ನು ಮುಂದೂಡಲಾಗುತ್ತದೆ. ದೇವಯಾನಿ ಸೋಫಿಯಾ ಎಷ್ಟೇ ಎದುರು ವಾದ ಮಾಡಿದರು ಜಡ್ಜ್ ತೀರ್ಪು ಬದಲಾಗುವುದಿಲ್ಲ. ಈಥನ್ ನ ಸಲುವಾಗಿ ಮುಂದಿನ ವಿಚಾರಣೆಯನ್ನು  ಅವನ ಮನೆಯಲ್ಲಿ ನಡೆಸುವುದಾಗಿ ಹೇಳಲಾಗುತ್ತದೆ ಹೊರತು ಅವನ ಒಂದು ಮಾತು ಕೇಳಲು ಕೋರ್ಟ್ ಗೆ ಸಮಯವಿರುವುದಿಲ್ಲ.

ಮುಂದೆ ಕೋರ್ಟ್ ವಿಚಾರಣೆ ಈಥನ್ ಮನೆಯಲ್ಲೇ ನಡೆಯುತ್ತದೆ. ಆ ಸಮಯ ಅಲ್ಲಿಗೆ ಆಗಮಿಸಿದ ಈಥನ್ ತಾಯಿಯನ್ನು ಲಾಯರ್ ನಾನಾ ಪ್ರಶ್ನೆಗಳನ್ನು ಕೇಳಿ ಭಾವನಾತ್ಮಕವಾಗಿ ಕಟ್ಟಿಹಾಕಲು ನೋಡುತ್ತಾರೆ ಆದರೆ ಆ ತಾಯಿಯ ಉತ್ತರ ಒಂದೇ... ತನ್ನ ಮಗ ಅನುಭವಿಸುವ ಯಾತನೆ ಹಿಂಸೆಯನ್ನು ತನ್ನಿಂದ ನೋಡಲಾಗುತ್ತಿಲ್ಲ. ಅವನಿಗಾಗಿ ಅವನ ಜೀವ ತೆಗೆಯಲು ನಾನು ಸಿದ್ದವಿದ್ದೇನೆ.

ಮುಂದೆ ಓಮರ್ ನನ್ನು ಪ್ರಶ್ನಿಸುವ ಲಾಯರ್ ಅವನು ಕೊಡುವ ಉತ್ತರಗಳಲ್ಲಿ ಇಲ್ಲದ ಕೊಂಕುಗಳನ್ನು ಕಂಡು ಹಿಡಿದು ಈಥನ್ ಒಬ್ಬ ಮಾನಸಿಕ ಅಸ್ವಸ್ಥ. ಆತನ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ. ವೃಥಾ ಕೋರ್ಟ್ ಸಮಯ ಹಾಳು ಎಂದು ವಾದಿಸುತ್ತಾನೆ.

ಸೋಫಿಯಾಳ ಮೇಲೂ ಇಲ್ಲಸಲ್ಲದ ಆರೋಪಗಳನ್ನು ಹೇರಲಾಗುತ್ತದೆ.  ಮತ್ತು ಡಾ.ನಾಯಕ್ ಅವರ ಅಭಿಪ್ರಾಯವನ್ನು ಕೇಳಲಾಗಿ ಈಥನ್ ಗೆ ದಯಾಮರಣ ನೀಡುವ ಅವಶ್ಯಕತೆ ಇಲ್ಲ. ಆತ ಇನ್ನೂ ಬದುಕಬಲ್ಲ. ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದಾನೆಂದು  ವಾದಿಸುತ್ತಾರೆ ಲಾಯರ್. ಎಲ್ಲದಕ್ಕೂ ದೇವಯಾನಿ ತಕ್ಕ ಪ್ರತ್ಯುತ್ತರಗಳನ್ನು ಮಂಡಿಸುತ್ತಾಳೆ.

ಎಲ್ಲವನ್ನೂ ಆಲಿಸುವ ಜಡ್ಜ್ ಕೊನೆಗೆ ಈಥನ್  ಅಭಿಪ್ರಾಯವನ್ನು ಕೇಳಿದಾಗ ಆತ ತನ್ನದೊಂದು ಮ್ಯಾಜಿಕ್ ಟ್ರಿಕ್ ತೋರಿಸಲು ಅನುಮತಿ ಬೇಡುತ್ತಾನೆ

ಒಂದು ಕಬ್ಬಿಣದ ಪೆಟ್ಟಿಗೆ ತಂದಿಡಲಾಗುತ್ತದೆ. ಕೇವಲ ಅರವತ್ತು ಸೆಕೆಂಡ್ ಅದರೊಳಗೆ ಕುಳಿತರೆ ಹೊಸ ಪ್ರಪಂಚ ತೋರಿಸುವುದಾಗಿ ಹೇಳುವ ಈಥನ್ ಇದಕ್ಕೆ ಪ್ರಾಸಿಕ್ಯೂಟ್ ಲಾಯರ್ ನನ್ನೇ ಆಯ್ಕೆ ಮಾಡುತ್ತಾನೆ. ಲಾಯರ್ ಇಷ್ಟವಿರದಿದ್ದರೂ ಜಡ್ಜ್ ಮಾತಿಗೆ ಬಗ್ಗಿ ಒಳಗೆ ಕೂರುತ್ತಾನೆ. ಸೆಕೆಂಡ್ ಉರುಳುತ್ತಿದ್ದರು ಈಥನ್ ನ ಮೌನ ಜಡ್ಜ್ ಗೆ ಕಿರಿಕಿರಿ ಎನ್ನಿಸಿ ಏನಿದು ಹುಚ್ಚುತನ ಎಂದು ಕೂಗುತ್ತಾರೆ. ಅದಕ್ಕುತ್ತರವಾಗಿ ಇವತ್ತು ಮಳೆ ಬರುತ್ತದೆ ಎನ್ನುತ್ತಾನೆ ಈಥನ್. ಅಷ್ಟರಲ್ಲಿ ಉಸಿರಾಡಲಾಗದೆ ಟಪಟಪನೆ ಪೆಟ್ಟಿಗೆ ಬಾರಿಸಲು ಶುರು ಮಾಡಿದ ಲಾಯರ್‌. ಜಡ್ಜ್ ಕೂಗಾಟ,  ಒಳಗಿನ ಲಾಯರ್ ಒದ್ದಾಟ ನೋಡಿ ಪೆಟ್ಟಿಗೆ ತೆಗೆಯಲು ಸೂಚಿಸುತ್ತಾನೆ ಈಥನ್..

ಹೊರಗೆ ಬಂದ ಲಾಯರ್ ಏದುಸಿರಿನಿಂದ ಒದ್ದಾಡುತ್ತಿರುವಾಗ ಈಥನ್ ಹೇಳುತ್ತಾನೆ - ಕೇವಲ ಅರವತ್ತು ಸೆಕೆಂಡ್ ನನ್ನ ಬದುಕನ್ನು ಬದುಕಲಾಗಲಿಲ್ಲ ನಿಮಗೆ ಎಂದು.

ಲಾಯರ್ ಮುಖ ಕಳೆಗುಂದಿದಂತಾಗುತ್ತದೆ. ಉಸಿರುಗಟ್ಟುವ ಬದುಕಿನ ನೋವು ಯಾತನೆ ಬದುಕಿದವರಿಗಷ್ಟೇ ಗೊತ್ತು ಎಂಬಂತಿತ್ತು ಈಥನ್ ಧೋರಣೆ. ಕೇಸ್ ಮುಂದುಡಲಾಗುತ್ತದೆ. ಈ  ಮಧ್ಯೆ ಈಥನ್ ತಾಯಿಯ ಸಾವು ಆತನನ್ನು ಮತ್ತಷ್ಟು ಬಲಹೀನನ್ನಾಗಿ ಮಾಡುತ್ತದೆ.

ಮರುದಿನ ರೇಡಿಯೋ ಕಾರ್ಯಕ್ರಮದಲ್ಲಿ  ಯಾಸಿರ್ ಸಿದ್ದಿಕಿ ಕರೆ ಮಾಡಿ ಅವನ ತಾಯಿ ಸಾವಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸುತ್ತಾನೆ.. ಈತ ಹಿಂದೊಮ್ಮೆ ಈಥನ್ ನ ಬೆಸ್ಟ್ ಫ್ರೆಂಡ್ ಹಾಗೂ ಮ್ಯಾಜಿಕ್ ಲೋಕದಲ್ಲಿ ಅವನ ಪ್ರತಿಸ್ಪರ್ಧಿ. ಈಥನ್ ಗೆ ಮೊದಲೇ ಗೊತ್ತಿತ್ತು.. ತನ್ನ ಈ ಪರಿಸ್ಥಿತಿಗೆ ಕಾರಣವಾದ ಆ ಒಂದು ಘಟನೆ, ಅದು ಆಕಸ್ಮಿಕವಲ್ಲ; ಯಾಸೀರ್‌ನ ಕುತಂತ್ರದಿಂದ ನಡೆದದ್ದು ಎಂದು. ಆದರೂ ಆತನನ್ನು ಕ್ಷಮಿಸಿ ಮುಗುಳ್ನಗುತ್ತಲೇ ಮಾತನಾಡುತ್ತಾನೆ ಈಥನ್.

ಈಥನ್ ನಿಂದ ಯಕ್ಷಿಣಿ ವಿದ್ಯೆಯೆಲ್ಲ ಕಲಿತು ಹೊರಟು ನಿಂತ ಓಮರ್ ಅವನ ಬಳಿ ಕೆಲವು ಮಾತುಗಳನ್ನು ಹೇಳಬಯಸುತ್ತಾನೆ. ಅವನಿಗೂ ಮುಂಚಿತವಾಗಿ ಈಥನ್ ಅವನ ಮನದ ಮಾತುಗಳನ್ನು ಹೇಳಿ ಮುಗಿಸುತ್ತಾನೆ.. ಅಸಲಿಗೆ ಓಮರ್, ಯಾಸಿರ್ ಸಿದ್ದಿಕಿಯ ಮಗನಾಗಿರುತ್ತಾನೆ.

ಯಾವ ವ್ಯಕ್ತಿ ಈಥನ್ ನ  ಈ ಪರಿಸ್ಥಿತಿಗೆ ಕಾರಣವಾದನೋ ಅವನ ಮಗನೆಂದು ತಿಳಿದೂ ಆತನಿಗೆ ತನ್ನೆಲ್ಲಾ ವಿದ್ಯೆಯನ್ನು ಧಾರೆಯೆರೆದಿರುತ್ತಾನೆ ಈಥನ್. ಇಂತಹ ವಿಶಾಲ ಮನಸ್ಸು ಪ್ರಪಂಚದಲ್ಲಿ ತೀರ ವಿರಳ.. ಓಮರ್‌ ನೊಂದಿಗೆ ಕಳೆದ ಸಮಯ, ಪಡೆದುಕೊಂಡ ಸಂತೋಷದ ಕ್ಷಣಗಳಿಗೆ ಈಥನ್ ಧನ್ಯವಾದ ತಿಳಿಸುತ್ತಾನೆ.

ಹೀಗಿರುವಾಗ ಈಥನ್ ಮನೆಗೆ ಧಾವಿಸುವ ಸೋಫಿಯಾಳ ಗಂಡ ಅವಳನ್ನ ಹೊಡೆದು ಬಡಿದು ಈಥನ್ ನನ್ನು ಹೀಯಾಳಿಸಿ ಸೋಫಿಯಾಳನ್ನು ಬಲವಂತವಾಗಿ ಎಳೆದುಕೊಂಡು ಹೋಗಿಬಿಡುತ್ತಾನೆ.

ಇನ್ನೊಂದೆಡೆ ಕೋರ್ಟ್ ಈಥನ್ ಮನವಿಯನ್ನು ಮತ್ತೊಮ್ಮೆ ರದ್ದುಗೊಳಿಸಿ ಬಿಡುತ್ತದೆ.

ಈಥನ್ ಬದುಕು ಈಗ ಅಕ್ಷರಶಃ ದುರ್ಭರ!!! ಡಾಕ್ಟರ್ ಅವನನ್ನು ಆಸ್ಪತ್ರೆಗೆ ಸೇರಿಸುವ ನಿರ್ಧಾರ ಮಾಡುತ್ತಾರೆ.

ಮರಳಿ ಬಂದ ಸೋಫಿಯಾ ತನ್ನ ಗಂಡನಿಂದ ಡೈವೋರ್ಸ್ ಸಿಕ್ಕು ಶಾಶ್ವತವಾಗಿ ಅವನನ್ನು ತೊರೆದು ಬಂದ ಸಂತೋಷದಲ್ಲಿರುತ್ತಾಳೆ. ಆ ಸಮಯ ಆಕೆ ಒಂದು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ. ಕೋರ್ಟ್ ಈಥನ್ ನ ಮನವಿಯನ್ನು  ತಿರಸ್ಕರಿಸಿದರೂ ಅವನ ಸಂತೋಷಕ್ಕಾಗಿ ತಾನೇ ಅವನ ಇಚ್ಛೆಯನ್ನು ಪೂರೈಸಲು ಮುಂದಾಗುತ್ತಾಳೆ. ಅಂದರೆ ಆಕೆ ಈಥನ್ ಗೆ ಸಾಯಲು  ಸಹಾಯ ಮಾಡಿ ಮುಕ್ತಿ ನೀಡಲು ಬಯಸುತ್ತಾಳೆ.

ಈಥನ್ ಹರ್ಷಿತನಾದರೂ ಆಕೆಗೆ ಎಚ್ಚರಿಸುತ್ತಾನೆ ಇದರಿಂದಾಗಿ ನಿನಗೆ ಜೈಲು ಶಿಕ್ಷೆ ಆಗಬಹುದು ವರ್ಷ, ಹತ್ತು ವರ್ಷ...

ಜೀವಾವಧಿ ಶಿಕ್ಷೆಯಾದರೂ ಪರವಾಗಿಲ್ಲ ನಿಮ್ಮ ಸಂತೋಷಕ್ಕಾಗಿ ಏನು ಬೇಕಾದರೂ ಸರಿ.. ಎನ್ನುತ್ತಾಳೆ ಸೋಫಿಯಾ

ಆರಂಭದಿಂದಲೂ ಈಥನ್ ಮೇಲಿದ್ದ ಅವಳ ಅದಮ್ಯ ಪ್ರೀತಿಯನ್ನು ಗುರುತಿಸಿದ ಈಥನ್ ಅವಳಿಗೆ ಉಡುಗೊರೆಯಾಗಿ ತನ್ನ ಹೆಸರನ್ನು ಉಳಿಸಿ ಹೋಗುವಂತೆ ನಿರ್ಧರಿಸಿ ಮದುವೆ ಪ್ರಸ್ತಾಪ ಮಾಡುತ್ತಾನೆ. ಸೋಫಿಯಾ, ಮಿಸೆಸ್ ಮಾಸ್ಕರೇನಸ್ ಆಗಲು ಸಮ್ಮತಿಸಿ ಸಂತೋಷಗೊಳ್ಳುತ್ತಾಳೆ‌.

ಪ್ರೀತಿಗೆ ಈ ಕಥೆ ಹೊಸದಾದ ವ್ಯಾಖ್ಯಾನವನ್ನೇ ಸೃಷ್ಟಿ ಮಾಡಿದೆ. ಕೂಡಿ ಬಾಳಲಿಲ್ಲ. ಕೈ ಹಿಡಿದು ಸಾಗಲಿಲ್ಲ. ಅದ್ದೂರಿ ಮದುವೆಯಿಲ್ಲ. ಉಂಗುರ ಬದಲಿಸಲಿಲ್ಲ. ಹಾಡು ಕುಣಿತ ವಿಜೃಂಭಣೆಯಿಲ್ಲ.  ಆದರೂ ಕೂಡ ಒಂದು ಅದ್ಭುತವಾದ ಪ್ರೇಮ ಕಥೆ ಕಣ್ಣ ಪುಟದಲ್ಲಿ ಉಳಿಸಿ ಬಿಡುತ್ತದೆ ಈ ಕಥೆ..

ಅವಳ ಅಪೇಕ್ಷೆ ಮೀರಿದ ಪಾಲನೆ ಪೋಷಣೆ, ಚಿಕ್ಕ ಪುಟ್ಟ ವಿಷಯಕ್ಕೂ ಅವಳನ್ನ ಕೆಣಕುವ ಅವನ ಮಾತು, ಹಸಿ ಕದನ, ಹುಸಿ ಮುನಿಸು, ಮತ್ತೊಂದು ಘಳಿಗೆಯಲ್ಲಿ ನಕ್ಕು ಎಲ್ಲಾ ಮರೆತು ಬಿಡುವ ಒಂದು ಬಾಂಧವ್ಯ, ಅವಳಿಲ್ಲದೇ ಅವನಿಲ್ಲ.. ಅವನಿಲ್ಲದ ಅವಳು ಅವಳಲ್ಲ..

ಮಿತ್ರರು ಬಂಧುಗಳ ನಡುವೆ ಚಿಕ್ಕ ಪಾರ್ಟಿಯಲ್ಲಿ ತನ್ನ ಕೊನೆಯ ದಿನವನ್ನು ಸಂಭ್ರಮದಿಂದ ಕಳೆಯುತ್ತಾನೆ ಈಥನ್. ಆತನ ಕೊನೆಯ ಸಂಭಾಷಣೆ ಎಂತವರ ಮನಸ್ಸು ಆರ್ದ್ರವಾಗಿ ಕಂಬನಿಗರೆಯುವುದು ಸುಳ್ಳಲ್ಲ..

ಹದಿನಾಲ್ಕು ವರ್ಷಗಳ ನಿರಂತರ ಹೋರಾಟದ ಬದುಕಿನಲ್ಲಿ ಈಥನ್ ಯಾವತ್ತೂ ಯಾವುದಕ್ಕೂ ಕುಗ್ಗಿದವನಲ್ಲ. ಅವನದು ಬತ್ತದ ಜೀವನೋತ್ಸಾಹ, ಅಂತಹ ತೀವ್ರತರವಾದ ನೋವಿನಲ್ಲೂ ಮಿನುಗುವ ನಗು, ಹಾಸ್ಯಪ್ರಜ್ಞೆ ನೊಂದವರನ್ನು ಸಂತೈಸುವ ರೀತಿ, ಸೋತವರಿಗೆ ಹೇಳುವ  ಧೈರ್ಯದ ನುಡಿಗಳು ಒಂದು ಕ್ಷಣ ನಮಗೂ ಅನ್ನಿಸಿಬಿಡುತ್ತದೆ.. ಸಚ್ ಮೇ ಲೈಫ್ ಬಹುತ್ ಖುಬ್ಸೂರತ್ ಹೇ...!!

ಈಥನ್ ಪಾತ್ರದಲ್ಲಿ ಹೃತಿಕ್ ರೋಶನ್ ಅಭಿನಯಿಸಿದ್ದು ಇವರ ಅಭಿನಯ ಶ್ಲಾಘನೀಯವಾಗಿದೆ‌. ಇನ್ನು ಸೋಫಿಯಾ ಆಗಿ ಐಶ್ವರ್ಯ ರೈ ಬಚ್ಚನ್ ಮತ್ತು ಓಮರ್ ಪಾತ್ರದಲ್ಲಿ ಆಶಿಕಿ2 ಖ್ಯಾತಿಯ ಆದಿತ್ಯ ರಾಯ್‌ ಅಭಿನಯಿಸಿದ್ದಾರೆ.

"ಗುಜಾರಿಷ್" ಹಿಂದಿ ಚಲನಚಿತ್ರದಲ್ಲಿ ಪ್ರತಿಯೊಬ್ಬರ ನಟನೆಯೂ ವಾಸ್ತವಿಕ ಜೀವನದ ನೈಜ ಪರಿಚಯ ಮಾಡಿಕೊಡುತ್ತದೆ.  ಸಂಜಯ್ ಲೀಲಾ ಬನ್ಸಾಲಿ ಅವರ ಸಂಗೀತ ಮಂತ್ರ ಮುಗ್ಧರನ್ನಾಗಿಸಿದರೆ, ಅವರ ಅದ್ಭುತ ನಿರ್ದೇಶನ ಹಾಗೂ  ಸುದೀಪ್ ಚಟರ್ಜಿಯವರ ಸಿನೆಮಾಟೋಗ್ರಫಿ  ಪ್ರೇಕ್ಷಕರನ್ನು ವಾಸ್ತವದಿಂದ ಕಥೆಯೊಳಗೆ ಮೋಡಿಮಾಡಿ ಸೆಳೆಯುತ್ತದೆ.

ತೆರೆಕಂಡ ಈ ಚಿತ್ರ ಹೇಳಿಕೊಳ್ಳುವ ಖ್ಯಾತಿ ಗಳಿಸಿಲ್ಲವಾದರೂ ಇಂದಿಗೂ ತನ್ನದೇಯಾದ ಪ್ರತ್ಯೇಕ ಪ್ರೇಕ್ಷಕ ವರ್ಗವನ್ನು ಬೆಳೆಸಿಕೊಳ್ಳುತ್ತಲೇ ಇದೆ‌. ನಿಮಗೆ ಭಾವನಾತ್ಮಕ ಕಥೆಗಳಲ್ಲಿ ಆಸಕ್ತಿಯಿದ್ದರೆ,  ನೀವಿನ್ನು ನೋಡಿಲ್ಲವಾದರೆ ಈ ಚಲನಚಿತ್ರವನ್ನು ಸಂಪೂರ್ಣವಾಗಿ ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು.

               **********



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ...