ವಿಷಯಕ್ಕೆ ಹೋಗಿ

ಪ್ರಕ್ಷುಬ್ಧತೆ



ಈ ಸಂಜೆ ಏಕೆ ಜಾರುತಿದೆ..ಸದ್ದಿಲ್ಲದಂತೆ ಸಾಗುತಿದೆ.. ಹಿತವಾದ ಹಾಡನ್ನು ಗುನುಗುತ್ತ ಸ್ನಾನ ಮಾಡುತ್ತಿದ್ದ ಮಗನನ್ನು ಅನ್ನಪೂರ್ಣಮ್ಮನವರು ಕೂಗಿ ಹೇಳಿದರು "ವಿಶ್ವಾ..ನಾಳೆ ಅಂಬುಜಾ ಅತ್ತೆ ಮಗಳು ದಿಪ್ತಿ ಮದುವೆ ಇದೆ ಕಣೋ ನಾನು ನಿಮ್ಮಪ್ಪಾಜಿ ಇವತ್ತು ಮಧ್ಯಾಹ್ನ ಹೊರಡ್ತಾ ಇದೀವಿ. ನಿಂಗೆ ರಾತ್ರಿ ಅಡಿಗೆನೂ ರೇಡಿ ಮಾಡಿ ಫ್ರೀಜ್ ನಲ್ಲಿ ಇಟ್ಟಿದೀನಿ, ಬಿಸಿ ಮಾಡ್ಕೊಂಡು ತಿನ್ನು, ಆಚೆ ಎಲ್ಲೂ ತಿನ್ನಕ್ಕೆ ಹೋಗ್ಬೇಡ, ನಿಂಗೆ ಹೊರಗಿನ ಊಟಾ ಒಗ್ಗಲ್ಲ! ನೀನೂ ನಾಳೆ ಬೆಳಿಗ್ಗೆನೇ ಮದುವೆಗೆ ಬಂದ್ಬಿಡು ಆಯ್ತಾ."

"ಅಮ್ಮಾss.. ಎಷ್ಟು ಸಲ ಹೇಳೋದು, ನಂಗೆ ಈ ಮದುವೆ, ಫಂಕ್ಷನ್ ಅಂದ್ರೆ ಆಗಲ್ಲ ಅಂತ. ನೀನು ಅಪ್ಪ ಹೋಗ್ಬನ್ನಿ ನಾನಂತೂ ಬರಲ್ಲ.. ಬರಲ್ಲ ಅಂದ್ರೆ ಬರಲ್ಲ ಅಷ್ಟೇ!" ಖಡಾಖಂಡಿತವಾಗಿ ಹೇಳಿದ ವಿಶ್ವಾಸ್.

ಲೋ ಮಗನೇ ನೀನು ಮೊಂಡು ಅಂದ್ರೆ ನಿಮ್ಮಮ್ಮ ನಾನು ಜಗಮೊಂಡು, ನಿನ್ನ ಹೇಗೆ ಕರ್ಸಿಕೊಳ್ಳೊದು ಅಂತ ನಂಗೊತ್ತಿಲ್ವ, ಅಂದುಕೊಂಡು ಮನಸ್ಸಲ್ಲೇ ನಕ್ಕರು ಅನ್ನಪೂರ್ಣಮ್ಮ.

                    *******

ಆಫೀಸಿನಿಂದ ಬಂದವನೇ ಬೆಡ್ ಮೇಲೆ ಮೈ ಚೆಲ್ಲಿದ ವಿಶ್ವಾಸ್. ಅಮ್ಮಾ.. ಎಂದು ಕೂಗುವಷ್ಟರಲ್ಲಿ ಬೆಳಗ್ಗೆ ಅಮ್ಮ ಹೇಳಿದ್ದು ನೆನಪಾಗಿ ಥೋ..ಮದುವೆಗೆ ಹೋಗಿದಾರಲ್ಲಾ ಎಂದುಕೊಂಡು ಸುಮ್ಮನಾದ.  ಆಗಲೇ ಫೋನ್ ರಿಂಗಣಿಸಿತು. ರೀಸಿವ್ ಮಾಡಿ ಹಲೋ.. ಎನ್ನಲು, "ಲೋ ವಿಶ್ವಾ ಬೇಜಾರ್ ಮಾಡ್ಕೊಬೇಡ್ವೋ ಮಧ್ಯಾಹ್ನ ಬರೋವಾಗ ಅವಸರದಲ್ಲಿ ದಿಪ್ತಿಗೆ ಅಂತ ತಗೊಂಡಿದ್ದ ನೆಕ್ಲೆಸ್ ಮನೇಲೇ ಬಿಟ್ಬಂದ್ಬಿಟ್ಟಿದಿನಿ ಸ್ವಲ್ಪ ತಂದುಕೊಟ್ಟು ಹೋಗೋ.." ಎಂದು ರಾಗ ಎಳೆದರು ಅನ್ನಪೂರ್ಣಮ್ಮ.

ಥೋ..ಏನಮ್ಮ ನೀನು ಹೋಗೋವಾಗ್ಲೆ ಎಲ್ಲಾ ಸರಿಯಾಗಿ ಇಟ್ಕೋಬೆಕಲ್ವಾ? ನೆಕ್ಲೆಸ್ ಕೊಡೋಕೆ ನಾನ್ ಬರ್ಬೇಕಾ ಈವಾಗಾ?

'ವಿಶು ಬೇಜಾರಾಗ್ಬೇಡ್ವೋ ನೆಕ್ಲೆಸ್ ಕೊಟ್ಟು ತಕ್ಷಣ ಹೊರಟ್ಬಿಡು ಆಯ್ತಾ!
ಸರಿ ಎಲ್ಲಿಟ್ಟಿದಿಯಾ ಅದ್ನ'

"ಅಲ್ಲೇ ಬೀರುನಲ್ಲಿದೆ, ಕೀ ಅಲ್ಲೇ ಬೆಡ್ ಕೆಳಗಿದೆ ನೋಡೋ. ಜೋಪಾನವಾಗಿ ತಗೊಂಡ ಬಾ ಸರಿನಾ!" ಎಂದು ಪೋನ್ ಕಟ್ ಮಾಡಿದರು.

ಮದುವೆ ಮನೇಲಿ ಭೇಟಿಯಾಗೋ ಸಂಬಂಧಿಕರು ಅವರು ಕೇಳೋ ಎರ್ರಾಬಿರ್ರಿ ಪ್ರಶ್ನೆಗಳನ್ನು ನೆನೆಸಿಕೊಂಡೇ 'ಕೊನೆಗೂ ಹೋಗಲೇಬೇಕಾಯ್ತ ಈ ಮದುವೆಗೆ, ಛೇ' ಅಂದುಕೊಂಡು ಫ್ರೆಶ್ ಆಗಲು ಬಾತರೂಂ ಗೆ ಹೋದ ವಿಶ್ವಾಸ್.

                ******

    ಮದುವೆ ಹಾಲ್ ಜನಜಂಗುಳಿಯಿಂದ ತುಂಬಿ ತುಳುಕುತ್ತಿತ್ತು. ಸಂಭ್ರಮ ಸಡಗರದ ವಾತಾವರಣದ ಮಧ್ಯೆ ತಾನೊಬ್ಬ ಅನ್ಯಗ್ರಹದ ಜೀವಿಯಂತೆ ಭಾಸವಯಿತವನಿಗೆ. 'ಛೇ ಇಂತಹ ಗದ್ದಲದಲ್ಲಿ ಅಮ್ಮನ್ನ ಎಲ್ಲಪ್ಪ ಹುಡ್ಕೋದು, ಅಂದುಕೊಳ್ಳುತ್ತಾ ಅಮ್ಮನ ಮೊಬೈಲ್ ಗೆ ರಿಂಗ್ ಮಾಡಿದ. ರಿಂಗ್ ಆಯ್ತೇ ವಿನಃ ರಿಸೀವ್ ಮಾಡಲಿಲ್ಲ. ಉಫ್ ಎಂದು ಉಸುರುತ್ತ ತಾನೇ ಮದುವೆ ಮಂಟಪದೊಳಗೆ ಹೆಜ್ಜೆ ಬೆಳೆಸಿದ. ಯಾವುದೋ ಮರ್ತ್ಯಲೋಕಕ್ಕೆ ಹೊರಟ ಹಾಗಿತ್ತು ಅವನ ಗಂಭೀರ ನಡಿಗೆ. ಒಳಗೆ ಹೋಗಿ ಯಾರೂ ಇರದ ಒಂದು ಖಾಲಿ ಸುಖಾಸನದ ಮೇಲೆ ಕುಳಿತ. ಅಮ್ಮ ಎಲ್ಲಿಯಾದರೂ ಕಾಣುತ್ತಾರಾ ಎಂದು ಹುಡುಕುತ್ತಿದ್ದವನ ಪಕ್ಕದಲ್ಲಿ, ಯಾವುದೋ ಯುವತಿ ಬಂದು ಕುಳಿತಳು. ನೋಡೋಕೆ ತುಂಬಾ ಆಕರ್ಷಕವಾಗಿ ಕಾಣುತ್ತಿದ್ದ ಯುವತಿಯನ್ನ ನಖಶಿಖಾಂತ ಗಮನಿಸುತ್ತಿದ್ದಾಗಲೇ  "ಹಾಯ್... ಎಷ್ಟು ಕೊಬ್ಬು ನೋಡ್ರಿ ಆ ಕೋತಿಗೆ ನಾನು... ನಾನು ಮಾಡಿದ ಹೆರ್ ಸ್ಟೈಲ್ ಇಷ್ಟ ಆಗ್ಲಿಲ್ವಂತೆ, ಎಲ್ಲದಕ್ಕೂ ಪಡ್ಕೊಂಡು ಬಂದಿರ್ಬೇಕು, ಟೇಸ್ಟ ಲೆಸ್ ಫೆಲೋ, ಇನ್ನೊಮ್ಮೆ ಬರ್ಲಿ ಅವಳು ಏನಾದ್ರೂ ಕೇಳ್ಕೊಂಡು ಅವಾಗ್ ತೋರಿಸ್ತಿನಿ ನಾನೇನುಂತಾ...." ಒಂದೇ ಸಮನೆ ವಟವಟ ಮಾತಾಡ್ತಾನೆ ಇದ್ದಳು ಆ ಯುವತಿ.

ಇವನು ನಕ್ಕು ಅಂದಹಾಗೆ ಯಾವ್ ಹಾಸ್ಪಿಟಲ್ ನಿಮ್ದು ? ಮದುವೆ ಮನೆಗೆ ಹೇಗೆ ಬಂದ್ರೋ? ಎಂದು ಕೇಳಿದ.

'ಹೇ.. ನಾನು ಮೆಡಿಕಲ್ ಸ್ಟೂಡೆಂಟ್ ಅಂತ ನಿಮಗೆ ಹೇಗೆ ಗೊತ್ತಾಯ್ತು? ಮೊದಲೇ ಪರಿಚಯನಾ ನಾವು??

ಮೆಡಿಕಲ್ ಸ್ಟೂಡೆಂಟಾ!! ಇನ್ಸ್ಟಿಟ್ಯೂಟ್ ನವರೇ ಇವಳನ್ನು ಸ್ಟಡಿ ಮಾಡ್ತಿದಾರೋ ಏನೋ! ಅಂದುಕೊಂಡ ಮನಸ್ಸಲ್ಲೇ.

ಹೇಳ್ರಿ..ಗೊತ್ತಾ ನಾನು ನಿಮಗೆ?? ಮತ್ತೆ ಕೇಳಿದಳು.

ಏನೋ.. ನಂಗೇನ್ರಿ ಗೊತ್ತು, ನೀವೇ ಮಾತಾಡ್ಸಿದ್ದು ಫರ್ಸ್ಟ್!

ಓಹ್ ಅದಾ... ನಂಗೆ ಕೋಪ ಬಂದ್ರೆ ಹಾಗೆ, ಎದುರಿಗೆ ಸಿಗೋ ಅಪರಿಚಿತರ ಮುಂದೆ ಎಲ್ಲಾ ಹೇಳಿ ಮನಸ್ಸು ಹಗುರ ಮಾಡ್ಕೊಂಡು ಬಿಡ್ತಿನಿ. ಡೈರೆಕ್ಟ್ ಆಗಿ ಬೈದ್ರೆ ಸುಮ್ನೆ ಮನಸ್ತಾಪ ಯಾಕೆ ಅಂತ.

(ನನ್ನ ಗ್ರಹಚಾರ ಕೆಟ್ಟಿತ್ತು. ನಿಮ್ಮ ಎದುರಿಗೆ ನಾನೇ ಸಿಕ್ಕೆ. ಅಮ್ಮಾssss  ಎಲ್ಲಿದಿಯೇ.. ಅಂದುಕೊಳ್ಳುತ್ತಾ ಜಾಗ ಖಾಲಿ ಮಾಡಿದ.)

ನಿಂತ್ಕೋಳ್ರಿ..ಇನ್ನು ಸಮಾಧಾನ ಆಗಿಲ್ಲ ನಂಗೆ..

ಬೇರೆ ಯಾರನ್ನಾದ್ರೂ ಹುಡಿಕ್ಕೊಳ್ರಿ, ನಂಗೆ ಬೇರೆ ಕೆಲಸ ಇದೆ. ಎಂದು ದಡದಡನೆ ಎದ್ದು ಹೊರಟ. ಅವಳು ಅವನನ್ನ ಹಿಂಬಾಲಿಸುತ್ತಲೇ ಏನೋ ಹೇಳುವ ಪ್ರಯತ್ನದಲ್ಲಿ ನಿರತಳಾಗಿದ್ದಳು.

ಎದುರಿಗೆ ಸಿಕ್ಕ ಒಬ್ಬ ಮಹಿಳೆ " ಹೇ ವಿಶ್ವಾ.. ಯಾವಾಗ ಬಂದ್ಯೋ.. ಹೇಗಿದ್ದಿಯೋ.. ಎಷ್ಟು ಸೊರಗೊಗಿದ್ಯೋ.. ಪ್ಚ್..ಪಾಪ ನಿನ್ನ ಮದುವೆ ನಿಶ್ಚಯವಾಗಿ ನಿಂತೊಯ್ತು ಅಂತ ತುಂಬಾ ತಲೆ ಕೆಡಸ್ಕೊಂಡಿದಿಯೇನೋ.. ಅವಳು ಹೋದ್ರೆ ಏನಂತೆ ಬೇರೆ ದಂತದ ಗೊಂಬೆನಾ ಹುಡುಕಿ ಮದುವೆ ಮಾಡೋಣ! ಯೋಚನೆ ಮಾಡ್ಬೇಡ ಕಣೋ.." ಎಂದು ಅವನಿಗೆ ಉತ್ತರಿಸಲು ಅವಕಾಶ ಕೊಡದೆ ಎಡಬಿಡದೆ ಮಾತಾಡುತ್ತಿದ್ದರು.

"ಆಂಟಿ, ವ್ಹಾಟ್ ಎ ನೈಸ್ ಸ್ಯಾರಿ.. ನೀವ್ ಏನ್ ಸಖತ್ ಕಾಣ್ತಿದಿರಾ ಗೊತ್ತಾ.. ಈ ಸಾರೀಲಿ.. ನಂದೇ ದೃಷ್ಟಿ ಆಗೋಗುತ್ತೆ ಅನ್ಸತ್ತೆ!."

ಅವರು ಇವನ ಮಾತಿಗೆ ಮರುಳಾಗಿ " ಹೇ..ಹೋಗಪ್ಪ ಏನೇನೋ ಹೇಳ್ತಿಯಾ ನೀನಂತು, ಅಂದಂಗೆ ಈ ಸೀರೆನಾ RR  ಮಾಲ್ ನಲ್ಲಿ ತಗೊಂಡಿದ್ದು 15000rs/- ಎಂದು ಕೊಚ್ಚಿಕೊಡರು.

" ಪಾರ್ವತಿ ಆಂಟಿಗೆ ತೋರಿಸಿದ್ರಾ ಇದ್ನ, ಉರ್ಕೊಂಬಿಡ್ತಾರೆ ಅನ್ಸುತ್ತೆ "

ನಮಗ್ಯಾಕೆ ಬಿಡೋ ಬೇರೆಯವರನ್ನ ಮೆಚ್ಚಿಸೋ ಕೆಲಸ ಅಂತ ಹೇಳಿ ಇಲ್ಲೇ ಇರು ಬಂದೆ ಎಂದು ಯಾರನ್ನೊ ಹುಡುಕುತ್ತಾ ಮುಂದೆ ಸಾಗಿದರು.

ಬೆಳ್-ಬೆಳಿಗ್ಗೆ ಯಾರ್ ಮೂಖ ನೋಡಿದ್ಯೋ ವಿಶ್ವಾ, ಎಲ್ಲಾ ಚಾಟರ್ ಬಾಕ್ಸ್ ಗಳೇ ಸಿಗ್ತಿದಾವಲ್ಲೋ ಎಂದುಕೊಂಡ ಮನಸ್ಸಲ್ಲೇ. ಪಕ್ಕದಲ್ಲಿ ಜೋರಾಗಿ ನಗುತ್ತಿದ್ದ ಯುವತಿಯನ್ನ ಕಂಡು ಇನ್ನೊಂದು ಬೇತಾಳ ಇದೆಯಲ್ಲಾ ತಪ್ಪಿಸ್ಕೊಬೇಕು ಎಂದುಕೊಂಡ.

"ಎಷ್ಟು ಕ್ಲೆವರ್ ನೀವು, ಅವರನ್ನ ಸಾಗಿಹಾಕಿದ ರೀತಿ ನೋಡಿ ನಗು ತಡಿಯಕ್ಕಾಗ್ಲಿಲ್ಲ"

ನೀವುಗಳು ಇದೀರಲ್ಲಾ, ಅಸಮಾನ್ಯರು!! ಹೊಗಳಿದ್ರೆ ಅಟ್ಟ ಏರ್ಬಿಡ್ತಿರಾ, ತೆಗಳಿದ್ರೆ ನಮಗೆ ಚಟ್ಟ ಕಟ್ಬಿಡ್ತಿರಾ ನಿಮ್ಗಳ ಸಾವಾಸ ಯಪ್ಪಾ.. ಧನ್ಯೋಸ್ಮಿ..🙏🙏

ಅವಳು ನಗುತ್ತಲೇ ತುಂಬಾ ತಿಳ್ಕೊಂಡಿದಿರಲಾ, ಎಷ್ಟು ಜನ ಇದಾರೆ ಈ ರೀಸರ್ಚ್ ಹಿಂದಿನ ಟೀಚರ್ಸ್ ಎಂದು ಕೇಳಿದಳು.

ಲೆಕ್ಕ ಹಾಕೋ ಗೋಜಿಗೆ ಹೋಗ್ಬೇಡಿ, ಮಿದುಳಿಗೆ ಹಾನಿಕರ.. !!

ನಿಮ್ಮ ಮದುವೆ ದಿನ ಎಲ್ಲರೂ ಒಟ್ಟಿಗೆ ಹುಡ್ಕೊಂಡು ಬಂದ್ರು ಅನ್ಸತ್ತೆ ಅದ್ಕೆ ಮದುವೆ ನಿಂತೊಯ್ತಾ ಎಂದು ನಕ್ಕಳು.

ಅವನ ಮುಖ ಗಂಭೀರತೆಯನ್ನು ಗಮನಿಸಿ ತಾನೇ 'ಕ್ಷಮಿಸಿ ತಮಾಷೆಗಾಗಿ ಹೇಳಿದೆ ಎಂದಳು.

ಹೇ ನೋಡ್ರಿ ಅಲ್ಲಿ.. ನಿಮ್ ಕೋತಿ ಕರಡಿಗಳು ಅನ್ಸತ್ತೆ.. ಕೂಗ್ತಿದಾವೆ ನೋಡಿ ನಿಮ್ಮನ್ನ ಅಂತ ಹೇಳಿದ. ಆಕೆ ಆಕಡೆಗೆ ನೋಡಿದಾಗ ತನಗೆ ಬೇಕಾದವರು ಯಾರೂ ಇರಲಿಲ್ಲ. ತಿರುಗಿ ಇತ್ತ ನೋಡುವಷ್ಟರಲ್ಲಿ ಆತ ಜನಜಂಗುಳಿ ಮಧ್ಯ ಕಳೆದು ಹೋಗಿದ್ದ.

ಛೇ ಅವರ ಎಸ್ಕೇಪಿಂಗ್ ಟೆಕ್ನಿಕ್ ಗೊತ್ತಿದ್ದು ಯಾಮಾರಿ ಬಿಟ್ನಲ್ಲ ಎಂದು ಕೈ ಕೈ ಹಿಸುಕಿಕೊಂಡಳು. ಇರಲಿ ಎಲ್ಲಿ ಹೋಗ್ತಾರೆ, ಮದುವೆ ಇನ್ನೂ ಮುಗಿದಿಲ್ವಲ್ಲ!! ಇವರ ಕಥೆ ಏನೀರಬಹುದು ಅಂತ ಯೋಚನೆಯಲ್ಲೆ ಹುಡುಕುತ್ತಾ ಮುಂದೆ ಸಾಗಿದಳು.

      ‌                *********

              ಮದುವೆ ಗಲಾಟೆಯ ಮಧ್ಯೆ ತಲೆ ತಿನ್ನುವ ಹುಡುಗಿಯ ಕಣ್ತಪ್ಪಿಸಿಕೊಂಡು ಹೇಗೋ ಅಮ್ಮನ ಕೈಗೆ ನೆಕ್ಲೆಸ್ ಒಪ್ಪಿಸಿ ಕೆಲಸದ ನೆಪ ಹೂಡಿ ಅವಸರವಸರವಾಗಿ ಮನೆಗೆ ಬಂದಿದ್ದ ವಿಶ್ವಾಸ್. ಮನೆಗೆ ಬಂದು ಮಂಚದ ಮೇಲೊರಗಿದವನು ಮದುವೆ ಮನೆಯ ಪ್ರತಿಯೊಂದು ವಿಷಯವನ್ನು ಮೆಲುಕು ಹಾಕುತ್ತಾ ಮಲಗಿದ್ದ. ಎದುರು ಸಿಕ್ಕ ಸಂಬಂಧಿಗಳ ಕುಹಕ ಕುಶಲೋಪರಿಗಳು, ಸದ್ದು ಗದ್ದಲ ಮಧ್ಯೆಯು ಕಾಡುವ ನಿರ್ಲಿಪ್ತತೆ, ಹುಚ್ಚು ಹುಡುಗಿಯ ಮಾತುಗಳು, ಆ ನೆನಪಿಗೆ ತುಟಿಯಂಚಲಿ, ಅವನಿಗೂ ತಿಳಿಯದಂತೆ ಒಂದು ಕಿರುನಗೆ ಮೂಡಿ ಮಾಯವಾಗಿತ್ತು!

        ಮನೆಗೆ ಬಂದ ನಂತರವೂ ಕಿವಿಯಲ್ಲಿ ನಾದಸ್ವರದ ಗುಂಗಿನ್ನು ಕೇಳುವಂತೆ ಭಾಸವಾಗುತ್ತಿತ್ತು. ತನ್ನ ಗತಜೀವನದಲ್ಲೂ ಈ ಸ್ವರ ಅಪಸ್ವರವಾಗಿ ಬದಲಾಗಿತ್ತಲ್ಲವೇ!  ಕೆದಕುವ ನೆನಪುಗಳ ದಾಳಿಗೆ ಕಣ್ಣು ಮಂಜಾಯಿತು. ಬಿಕ್ಕಿ ಅಳುವ ದುರ್ಬಲ ಮನಸ್ಸಿನವನಲ್ಲ ವಿಶ್ವಾಸ್, ಆದರೆ ಹೃದಯದ ಗಾಯದ ಆಳ ಎಂತವರನ್ನು ಮಗುವಂತೆ ಮಾಡಿ ಬಿಡುತ್ತದೆ.

        ತನ್ನ ಲ್ಯಾಪ್ ಟಾಪ್ ತೆಗೆದು ಏನೋ ಟೈಪ್ ಮಾಡತೊಡಗಿದ, " ಮರೆಯಲಾಗದ ಕನಸು ನೀ, ಮರೆಯಲಿ ಹೇಗೆ ನಿನ್ನ,  ಕಣ್ಮರೆಯಾಗಿ ಕಾಡುತಿರುವ ಕನವರಿಕೆಯ ಬದುಕು ನೀ,  ಹೇಗೆ ಹುಡುಕಲಿ ನಿನ್ನ.. ಹೇಗೆ ಬದುಕಲಿ ನಿನ್ನ.." ಎಷ್ಟೋ ಹೊತ್ತು ಹೀಗೆ ಬರೆಯುತ್ತಾ ಕುಳಿತಿದ್ದವನು ಅದ್ಯಾವಾಗ ನಿದ್ರೆಗೆ ಜಾರಿದ್ದನೋ ಗೊತ್ತು ಆಗಿರಲಿಲ್ಲ.

                ಬೆಳಗ್ಗೆ ಅವನಿಗೆ ಎಚ್ಚರವಾಗಿದ್ದು ಅಮ್ಮನ ಮಂಗಳಾರತಿ ಸದ್ದು ಕೇಳಿದ ಮೇಲೆಯೇ! ಎದ್ದು ಕಣ್ಣುಜ್ಜಿಕೊಳ್ಳುತ್ತಾ ರೂಂನಿಂದ ಹೊರಗೆ ಬಂದು ಕೇಳಿದ- ನೀವ್ ಯಾವಾಗ್ ಬಂದ್ರಿ? ನಂಗೆ ಗೊತ್ತೇ ಆಗಿಲ್ವಲ್ಲ.

' ರಾತ್ರಿ 10 ಗಂಟೆಗೆ ಬಂದ್ವಿ‌. ನೀನು ಗಢದ್ದಾಗಿ ನಿದ್ದೆ ಹೊಡಿತಿದ್ದೆ. ಎಲ್ಲಾ ಬಾಗಿಲು ತೆರೆದಿಟ್ಕೊಂಡು..! ' ಅಮ್ಮ ಉತ್ತರಿಸಿದ್ದರು.

ಕೊನೆಯ ವಾಕ್ಯ ಕೇಳ್ತಿದ್ದಂತೆ 'ಓಹ್ ದೇವರಿಗೆ ಮಂಗಳಾರತಿ ಮುಗಿತು! ಇವಾಗ್ ನಿನಗೆ ಮಂಗಳಾರತಿ ಶುರುವಾಗತ್ತೆ! ವಿಶ್ವಾ ಎಸ್ಕೇಪ್ ಆಗಲೋ ಬೇಗ' ಎಂದು ಮನಸ್ಸು ಎಚ್ಚರಿಸಿತು.

' ಮನೇಲಿ ಯಾರೂ ಇಲ್ಲ, ಎಲ್ಲಾ ಬಾಗಿಲು ತೆರೆದಿಟ್ಟು ಮಲಗಿದಿಯಲ್ಲಾ, ಕಳ್ರು ಖದೀಮ್ರು ಬಂದು ಎಲ್ಲಾ ಲೂಟಿ ಮಾಡ್ಕೊಂಡು ಹೋಗ್ಲಿ ಅಂತಾನಾ! ಎರಡು ಕತ್ತೆ ವಯಸ್ಸಾಯ್ತು ಯಾವಾಗೋ ಜವಾಬ್ದಾರಿ ಬರೋದು ನಿನಗೆ...!'

' ಏನೋಪಾ.. ಸುಸ್ತಾಗಿ ನಿದ್ದೆ ಹೋಗ್ಬಿಟ್ಟೆ.. ಹೋಗ್ಲಿ ಬಿಡು ಏನಾಗಿಲ್ವಲ್ಲಾ! ಒಂದ್ವೇಳೆ ಕಳ್ರು ಖದೀಮ್ರು ಬಂದಿದ್ರೂ ನಮ್ಮ ಶ್ರೀಕಂಠ ಮಾವನ ಹಾಗೆ ಲೂಟಿ ಮಾಡ್ತಿರ್ಲಿಲ್ಲ ಬಿಡು' ಎಂದು ನಕ್ಕನು.

ಈ ಮಾತಿಗೆ ಪೇಪರ್ ಓದುತ್ತಿದ್ದ ಅನ್ನಪೂರ್ಣಮ್ಮನವರ ಪತಿದೇವ್ರು ಶಂಕರನಾರಾಯಣರು 'ಸರಿಯಾಗಿ ಹೇಳಿದೆ ನೋಡೋ ಮಗನೇ' ಎಂದು ಜೋರಾಗಿ ನಕ್ಕರು.

'ನನ್ನ ತವರನವರನ್ನ ಮಧ್ಯೆ ಎಳಿಬೇಡ ನೋಡು ಮತ್ತೆ! ಮಗನಿಗೆ ಬುದ್ದಿ ಹೇಳೋದು ಬಿಟ್ಟು ನೀವೂ ಅವನ ಮಾತಿಗೆ ನಗ್ತಿರಲ್ಲಾ ನಿಮ್ಮ ಬೇಜವಾಬ್ದಾರಿತನಾನೇ ಅವನಿಗೂ ಬಂದಿರೋದು' ಎಂದು ಅನ್ನಪೂರ್ಣಮ್ಮ ಗಂಡನನ್ನು ಮಗನನ್ನು ಗದರಿಸಿ ಅಡಿಗೆ ಮನೆಯ ಕೆಲಸದಲ್ಲಿ ಮಗ್ನರಾದರು.

   ಅನ್ನಪೂರ್ಣಮ್ಮನವರ ಏಕೈಕ ವೀಕನೆಸ್ ಅವರ ತಮ್ಮ ಶ್ರೀಕಂಠ. ಅವನೋ ಶುದ್ಧ ಅಬ್ಬೇಪಾರಿ ಜೊತೆಗೆ ಸೋಮಾರಿ ! ತಂದೆಯ ಆಸ್ತಿ ಎಲ್ಲಾ ಕೂತು ತಿಂದು ಕರಗಿಸಿದ್ದ‌. ಅವನ ಹೆಂಡತಿ ಲಕ್ಷ್ಮೀಯ ಚಾಣಾಕ್ಷತೆಯಿಂದ ಒಂದಿಷ್ಟು ಹೊಲ ಮನೆ ಉಳಿದು ಮನೆ ಹೇಗೋ ನಡೆದಿತ್ತು. ಆದರೂ ಹೆಚ್ಚುವರಿ ಹಣದ ಅವಶ್ಯಕತೆಗೆ ಅನ್ನಪೂರ್ಣನವರ ಬಳಿ ಜೋತುಮುಖ ಹಾಕಿಕೊಂಡು ಬರ್ತಿದ್ದ.

                  ಹೆಣ್ಣಿಗೆ ತವರೆಂದರೆ ಮಮಕಾರ ಕೇಳಬೇಕೇ?! ತಮ್ಮಿಂದ ಸಾಧ್ಯವಾದಷ್ಟು ಹಣ, ಬಟ್ಟೆ ಬರೆ, ತಿಂಡಿ ತಿನಿಸುಗಳನ್ನು ಮಾಡಿ ಕೊಟ್ಟು ಕಳಿಸುತ್ತಿದ್ದರು. ಶ್ರೀಕಂಠನಿಗೆ ಒಬ್ಬಳು ಮಗಳಿದ್ದಳು ಸೌಂದರ್ಯ ಅಂತ ಹೆಸರು. ಹೆಸರಿಗೆ ತದ್ವಿರುದ್ಧವಾದ ರೂಪವತಿಯಾದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ!! ಪ್ರೀತಿಯಿಂದ ಸುಂದರಿ ಎಂದೇ ಕರೆಯುತ್ತಿದ್ದರು!

        
                 ಶ್ರೀಕಂಠನಿಗೆ  ಅವಳನ್ನ ವಿಶ್ವಾಸ್ ಗೆ ಕೊಟ್ಟು ಮದುವೆ ಮಾಡೋ ವಿಚಾರ ಕೂಡ ಇತ್ತು. ಆದರೆ ವಿಶ್ವಾಸ್ 'ಆ ಸುಂದ್ರಿನಾ ಮದುವೆ ಆಗೊದಕ್ಕಿಂತ ನಾನೇ ಸನ್ಯಾಸಿ ಆಗೋದು ವಾಸಿ ಎಂದಿದ್ದ' 'ಲೋ ಮಗನೇ ರೂಪಕ್ಕಿಂತ ಗುಣ ಮುಖ್ಯ ಕಣೋ' ಅಂದಿದ್ದರು ಅನ್ನಪೂರ್ಣಮ್ಮ‌.

' ಅಯ್ಯಯ್ಯೋ ಗುಣ.. ಗುಣಗಾನ ಮಾಡಿದಷ್ಟು ಪದಗಳೇ ಸಾಲಲ್ಲ ವರ್ಣಿಸೋಕೆ! ಕಪಿ ತರಾನೇ.. ತರಾ ಏನ್ಬಂತು ಸಾಕ್ಷಾತ್ ಕಪಿನೇ!! ಕಪಿಗೂ ಒಂದು ಕೈ ಜಾಸ್ತಿನೇ!! ನೀ ಇನ್ನೊಮ್ಮೆ ಸುಂದ್ರಿ.. ವಿಷಯ ತೆಗದ್ರೆ ನಾನ್ ಹಿಮಾಲಯಕ್ಕೆ ಶಿಫ್ಟ್ ಆಗ್ಬೇಕಾಗತ್ತೆ !!' ಎಂದು ತಾಕೀತು ಮಾಡಿದ್ದ. ಅನ್ನಪೂರ್ಣನವರು ಆ ವಿಷಯ ಅಲ್ಲಿಗೆ ಬಿಟ್ಟಿದ್ದರು.

       ತವರನ್ನು ಬಿಟ್ಟು ಕೊಡದ ಅನ್ನಪೂರ್ಣನವರನ್ನು ಗೋಳು ಹೊಯ್ದುಕೊಳ್ಳಲು ತಂದೆ ಮಗ ಇಬ್ಬರಿಗೂ ಇದೊಂದು ಎಂಟರ್ಟೈನ್ಮೆಂಟ್  ವಿಷಯ ಆಗಿತ್ತು.

                    *******

     ಹೀಗೆ ಒಂದು ಮುಸ್ಸಂಜೆ ವಿಶ್ವಾಸ್ ಕೆಲಸ ಮುಗಿಸಿ ಮನೆಗೆ ಬಂದಾಗ ಜೋರು ಮಳೆ ಸುರಿಯುತ್ತಿತ್ತು. ಅನ್ನಪೂರ್ಣಮ್ಮ ಮನೆಯೆದುರು ಕಾಯ್ತಾ ನಿಂತಿದ್ರು. ಮುಖದಲ್ಲಿ ಗಾಬರಿಯಿತ್ತು. ವಿಶ್ವಾಸ್ ಕಾರು ನಿಲ್ಲಿಸಿ ಮನೆಗೆ ಬರೋಕು ಬಿಡದೆ "ದಿಪ್ತಿ ಮತ್ತೆ ಅವಳ ಗಂಡ ನಮ್ಮೂರಿಗೆ ಬಂದಿದಾರಂತೆ. ಮನೆಗೆ ಬರೋ ದಾರೀಲಿ ಕಾರು ಕೆಟ್ಟೋಗಿದೆಯಂತೆ. ನಾನೇನೋ ನಿನ್ನ ಕಳಿಸಿ ಕೊಡ್ತಿನಿ ಅಂತ ಹೇಳ್ಬಿಟ್ಟೆ! ಬೇಗ ಬರೋದಲ್ವಾ? ನವದಂಪತಿಗಳು ಎಷ್ಟೋತ್ತಿನಿಂದ ಮಳೆಲೇ ನಿಂತಿದಾರೆ.  ನಿಂಗೆ ಫೋನ್ ಮಾಡಿದ್ರೆ ಸ್ವಿಚ್ ಆಫ್ ಆಗಿತ್ತು ಅದ್ಕೆ ನಿಂಗೊಸ್ಕರ ಕಾಯ್ತಿದ್ದೆ  ಬೇಗ ಹೋಗಿ ಕರ್ಕೊಂಡು ಬಾ ಈಗ! "

"ಛೇ.. ಮನೆಗೆ ಇಷ್ಟು ಬೇಗ ಬರಬಾರದಿತ್ತು ತಪ್ಪು ಮಾಡ್ಬಿಟ್ಟೆ". ಅಂದ್ಕೊಳ್ತಾನೆ ಕಾರ್ ಸ್ಟಾರ್ಟ್ ಮಾಡಿದ ವಿಶ್ವಾಸ್.  ದಿಪ್ತಿಗೆ 'ಎಲ್ಲಿದ್ದಾರೆ' ಅಂತ ಕೇಳೋಕೆ ಫೋನ್ ಮಾಡಿದ. 'ಹಾಯ್ ದಿಪ್ತಿ' ಎಂದಿದ್ದೆ ತಡ..

'ಏನ್ ಹಾಯೋದು.. ಯಾವ ಗೋಡೆಗೆ ಹಾಯೋದು.. ಜೋರು ಮಳೆ ಬರ್ತಿದೆ ! ಎಷ್ಟೊತ್ತಿಂದ ಕಾಯ್ತಿದೀವಿ ಬೇಗ ಬರಬೇಕು ಅನ್ನೋ ಟೈಮ್ ಸೆನ್ಸ್ ಇಲ್ವ, ಅದರ ಮೇಲೆ ಹಾಯ್ ಅಂತೆ ಹಾಯ್.‌.! ನಂಗೇನಾದ್ರೂ ಕೊಂಬು ಇರ್ಬೇಕಿತ್ತು ಅಟ್ಟಾಡುಸ್ಕೊಂಡು ನಿಮಗೆ ಹಾಯ್ತಿದ್ದೆ !! ಬನ್ರಿ ಬೇಗ ಈಗ..!" ಎಂದು ಯಾವುದೋ ಬೇರೆ ಹೆಣ್ಣು ಧ್ವನಿ ಕೇಳಿತ್ತು.

            ಇವನು ಅವಳ ಮಾತಿನ ದಾಟಿಗೆ wrong ನಂಬರ್ರಾ ಅನ್ಕೊಂಡು ಮೊಬೈಲ್ ದೂರ ಹಿಡಿದು ಯೋಚಿಸ್ತಿದ್ದವನು ಮತ್ತೊಂದು ಧ್ವನಿ ಕೇಳಿ ಮತ್ತೆ ಫೋನ್ ಕಿವಿಗಿಟ್ಟ "ಹೇ ವಿಶ್ವಾ.. ಎಲ್ಲಿದ್ದಿಯೋ? ನಾವು  ಪದ್ಮಾವತಿ ಬೆಟ್ಟದ ರಸ್ತೆ ಹತ್ರ ಇದೀವಿ ಬೇಗ ಬಾ" ಎಂದಳು ದಿಪ್ತಿ.

" ಸರಿ, ಬರ್ತಿದ್ದಿನಿ.. ಯಾವ್ದೇ ಅದು ರೊಚ್ಚಿಗೆದ್ದ ಹೆಣ್ಣು ಆತ್ಮ?! ಹಿಂಗ್ ಬಡಕ್ಕೊಳ್ತಾ ಇದೆ"

" ಬೇಜಾರಾಗ್ಬೇಡ್ವೋ ಅವಳು ನನ್ನ ನಾದಿನಿ, ಸೃಷ್ಟಿ ‌..  ಸ್ವಲ್ಪ ಶಾರ್ಟ್ ಟೆಂಪರ್ ಅಷ್ಟೇ! ಬೇಗ ಬಂದ್ಬಿಡು ಆಯ್ತಾ?!

"  ಹ್ಮಾ.. ಬಂದೇ ತಾಳಮ್ಮ"

  
          ವಿಶ್ವಾಸ್ ಅವರಿದ್ದ ಜಾಗಕ್ಕೆ ಹೋಗುವಷ್ಟರಲ್ಲಿ ಮಳೆ ಇವನ ಸ್ವಾಗತಕ್ಕೆ ಕಾಯುತ್ತಿರುವಂತೆ ಮತ್ತಷ್ಟು ಜೋರಾಯಿತು. ವಿಶ್ವಾಸ್  ಜೊತೆಗೆ ಕರೆತಂದ ಮೆಕ್ಯಾನಿಕ್ ಗೆ ಅವರ ಕಾರ್ ರಿಪೇರಿ ಮಾಡಿ ಮನೆಗೆ ತರುವಂತೆ ಹೇಳಿ, ದಿಪ್ತಿ ಮತ್ತು ಶ್ರವಣ್ ಗೆ  ಕಾರಲ್ಲಿ ಬಂದು ಕೂರುವಂತೆ ಆಹ್ವಾನಿಸಿದ. ದಿಪ್ತಿ ಅವಳ ಗಂಡ ಶ್ರವಣ್ ಮತ್ತವಳ ನಾದಿನಿ ಮೂರು ಜನ ಕಾರ್ ಹತ್ತಿದರು.

      ಶ್ರವಣ್ ಮುಂದೆ ವಿಶ್ವಾಸ್ ಪಕ್ಕ ಕೂತಿದ್ದ. ದಿಪ್ತಿ ಮತ್ತವಳ ನಾದಿನಿ ಹಿಂದಿನ ಸೀಟಲ್ಲಿ ಕೂತರು. "ಸಾರ್ರಿ..ಫೋನ್ ಸ್ವಿಚ್ ಆಫ್ ಆಗಿತ್ತು, ಮನೆಗೆ ಬಂದ್ಮೇಲೆ ಅಮ್ಮ ಹೇಳಿದ್ರು ಹೀಗೆಂತಾ, ಬರೋದು ಲೇಟಾಯ್ತು. ತುಂಬಾ ಹೊತ್ತು ಕಾಯಿಸ್ಬಿಟ್ಟೆ ಅನ್ಸತ್ತೆ.." ವಿಶ್ವಾ ಮಾತು ಶುರುಮಾಡಿದ.

" ಪರವಾಗಿಲ್ಲ ಬಿಡೋ.. ಅಂತೂ ಬಂದ್ಯಲ್ಲ ಅಷ್ಟೇ ಪುಣ್ಯ !! ಒಂದು ವೆಹಿಕಲ್ ಓಡಾಡಲ್ವಲ್ಲೋ ಈ ಜಾಗದಲ್ಲಿ, ಕತ್ತಲು ಬೇರೆ ಆಗ್ತಿದೆ, ಭಯ ಆಗೊಗಿತ್ತು! "

"ಬಂದ್ನಲ್ಲ ಬಿಡೇ.. ಅದ್ಯಾರೋ ಬಂದ ಕೂಡ್ಲೇ ಕೊಂಬಿನಿಂದ ಹಾಯ್ತಿನಿ ಅಂದಿದ್ರು. ಎಲ್ಲಿ ಕೊಂಬು ಕಾಣ್ತಾನೇ ಇಲ್ಲ! " ಎಂದ ತಮಾಷೆ ಮಾಡುತ್ತ.

" ಅವಳು ಹಂಗೆ ಕೋಪ ಬಂದಾಗ ಪಟಪಟ ಅಂತ ಮಾತಾಡ್ತಾಳೋ, ಆಮೇಲೆ ಶಾಂತವಾಗ್ಬಿಡ್ತಾಳೆ. ಅವಳು ಬರಲ್ಲ ಅಂದ್ರು ಒತ್ತಾಯ ಮಾಡಿ ಎಳೆದುಕೊಂಡು ಬಂದ್ವಿ ಅದ್ಕೆ ಸ್ವಲ್ಪ ಅಸಮಾಧಾನ ಇತ್ತು. ಜೊತೆಗೆ ಕಾರು ಕೆಟ್ಟು ನಡುದಾರಿಲಿ ನಿಂತಿತು, ಹೊಟ್ಟೆ ಬೇರೆ ಹಸಿದಿದೆಯಂತೆ, ಲಿಫ್ಟ್ ಇರಲಿ ಮುಖ ನೋಡೋಕು ಒಂದು ನೋಣ ಸಿಗದಿರೋ ರಸ್ತೆ, ನೀ ಬೇರೆ ಲೇಟಾಗಿ ಬಂದೆ. ಎಲ್ಲಾ ಸೇರಿ ನಿನ್ನ ರುಬ್ಬಿದ್ಲು ನೋಡು.. ನೀ ಬಲಿ ಕಾ ಬಕ್ರ ಆದೆ! " ಎಂದ ಶ್ರವಣ್. ಅವಳನ್ನು ಪರಿಚಯಿಸಿದ 'ಇವಳು ನನ್ನ ತಂಗಿ ಸೃಷ್ಟಿ ಅಂತ '

     ವಿಶ್ವಾಸ್ ತಿರುಗಿ ನೋಡದೆ "ಏನ್ರೀ ಸೃಷ್ಟಿ ನಿಮಗೆ ಹಾಯ್ ಹೇಳೊಕು ಭಯ ನಂಗೆ, ಎಲ್ಲಿ ನಿಜ್ವಾಗ್ಲೂ ಹಾಯ್ದು ಬಿಡ್ತಿರಾಂತ !!"  ಅವಳು ನಗ್ಲಿಲ್ಲ,  ಯಾವ ಉತ್ತರವೂ ಕೊಡಲಿಲ್ಲ.

"ಇಂಜಿನ್ ಇನ್ನೂ ಗರಮ್ ಇದೆ ಅನ್ಸುತ್ತೆ,ಅಲ್ವೇನೇ ದಿಪ್ತಿ?"

" ಇಲ್ವೊ ಪೆಟ್ರೋಲ್ ಖಾಲಿಯಾಗಿದೆ! ಮನೆಗೆ ಹೋಗಿ ಅತ್ತೆ ಕೈರುಚಿ ನೋಡಿದ ಮೇಲೆ ನೋಡು ಹೆಂಗ್ ಓಡುತ್ತೆಂತ!!"  ಹೀಗೆ ವಿಶ್ವಾ ದಿಪ್ತಿ ಅವಳ ಕಾಲು ಎಳಿಯುತ್ತಿದ್ರೆ "ಹೇ ಸುಮ್ನಿರೋ ಮಾರಾಯಾ ಇಷ್ಟೊತ್ತು ಇವಳ ವಟವಟ ಕೇಳಿ ತಲೆ ಕೆಟ್ಟೊಗಿದೆ, ನೀ ಬೇರೆ ತುಪ್ಪ ಸುರೀಬೇಡ್ವೊ!!" ಎಂದ ಶ್ರವಣ್.

     ಹೀಗೆ ಮಾತು ತಮಾಷೆ ಹರಟುತ್ತಾ ಕಾರು ಮನೆ ಸಮೀಪಿಸಿತ್ತು. ಮಳೆ ಇನ್ನಷ್ಟು ಜೋರಾಗೇ ಧೋ ಎಂದು ಸುರಿಯುತ್ತಿತ್ತು. ಅನ್ನಪೂರ್ಣಮ್ಮ ಮನೆ ಎದುರು ಕೊಡೆ ಹಿಡಿದುಕೊಂಡೇ ನಿಂತಿದ್ದರು. ಎಲ್ಲರಿಗೂ ಪ್ರೀತಿಯಿಂದ ಸ್ವಾಗತಿಸಿದರು. ವಿಶ್ವಾ ಮಳೆಯಲ್ಲಿ ನೆನೆಯುತ್ತಲೇ ಮನೆ ಒಳಗೆ ಓಡಿದ.

        ಒಳಗೆ ಹೋಗಿ ಅವರೆಲ್ಲ ಬರೋದನ್ನೆ ನೋಡ್ತಾ ನಿಂತವನಿಗೆ ಹೊಸ್ತಿಲೆದುರು ಆ ದಿನದ ಮದುವೆ ಮನೆ ಹುಡುಗಿ ಕಂಡಳು. ಇವಳೇನಾ  ದಿಪ್ತಿ ನಾದಿನಿ ಸೃಷ್ಟಿ??! ಆಶ್ಚರ್ಯದಿಂದ 'ಹೇ..ಮೆಂಟ್ಲು 'ಎಂದು ಬಾಯಿಂದ ಅನಾಯಾಸವಾಗಿ ಬಂದಿತ್ತು.

         ಅವಳು ತಲೆ ಎತ್ತಿ ನೋಡಿ 'ವ್ಹಾಟ್ ' ಎನ್ನಲು ಇವನು ನಾಲಿಗೆ ಕಚ್ಚಿ "ಮೆಟ್ಲು.. ಮೆಟ್ಲಿದೆ ನೋಡ್ಕೊಂಡ್ ಬನ್ನಿ " ಅಂದ!

"ಹೋಯ್... ನೀವೇನು ಇಲ್ಲಿ? ಅವತ್ತು ಮದುವೆ ಮನೇಲಿ ಇದ್ದಕ್ಕಿದ್ದಂತೆ ಮಾಯಾ ಆಗೋದ್ರಿ, ನಾನು ಎಷ್ಟು ಹುಡುಕಿದೆ ಗೊತ್ತಾ!  ನೀವ್ ಸಿಗಲೇ ಇಲ್ಲ. ನೀವು ಅನ್ನಪೂರ್ಣ ಆಂಟಿ ಮಗ ಅಂತ ನಂಗೊತ್ತೆ ಇರ್ಲಿಲ್ಲ ನೋಡಿ..!"

           ಗೊತ್ತಾಗಿದ್ರೆ ಇಲ್ಲಿಗೆ ಹುಡ್ಕೊಂಡ್ ಬಂದು ತಲೆ ತಿಂದಿರೋಳು ಮನಸ್ಸಲ್ಲೇ ಅಂದುಕೊಂಡ 'ಇನ್ನೇನು ಸಿಕ್ಕಾಕೊಂಡ್ಬಿಟ್ಟೆನಲ್ಲ, ತಲೆ ಚಟ್ನಿ ಆಗೋದು ಗ್ಯಾರೆಂಟಿ'

                ಅಷ್ಟರಲ್ಲಿ ಒಳಗಡೆಯಿಂದ ಒಂದು ವಿಚಿತ್ರ ಧ್ವನಿ ಬಂದಿತ್ತು. "ಮಾಮಾss.. ಮಾಮಾss.. ಕಾಫೀ ತಗೋಂಬಂದೆ ತಡಿ!!"

ಇಷ್ಟು ವಿಚಿತ್ರ ಮತ್ತು ವಿಶೇಷವಾಗಿ ಕೂಗೋ ಧ್ವನಿ ಒಂದೇ.‌. ಸುಂದ್ರಿ ನೇ!! ಇವಳು ಯಾವಾಗ ಬಂದ್ಳೋ !   (ಓಹ್ ಗಾಡ್.. ಎರಡೆರಡು ಲೌಡ್ ಸ್ಪೀಕರ್ ಗಳು.. ವೈ ಗಾಡ್ ವೈ..?! ನಾ ಮನೆ ಬಿಟ್ಟು ಓಡೋಗೋದೆ ವಾಸಿ ಅನ್ಸತ್ತೆ)

                    ***********

           ಸುಂದ್ರಿ ಕಾಫೀ ಕಪ್ ಹಿಡಿದು ವಯ್ಯಾರದಿಂದ ಬಂದು ವಿಶ್ವಾಸ್ ಮುಂದೆ ನಿಂತು ಮಾಮಾss.. ನಿಂಗೊಸ್ಕರ ಸ್ಪೆಷಲ್ ಕಾಫೀ ರೆಡಿ..ತಗೋ ಕುಡಿ.. ಎಂದಳು.

ನೀ ಯಾವಾಗ ಬಂದ್ಯೇ?? ಮೊದಲೇ ಒಂದು ಮಾತು ಹೇಳೋದಲ್ವ

ಹೇಳಿ ಬಂದ್ರೆ ನೀ ಸಿಗ್ತಿದ್ದಾ ಕೈಗೆ!! ಅದ್ಕೆ ಅಪ್ಪಯ್ಯ ನಾನು ಸಪ್ರೇಟ್ ವಿಜಿಟ್ ಕೊಟ್ವು! ಎಂಗೆ?? ತಕೋ ಕಾಫೀಯಾ..

ನೀ ಕೊಟ್ಟ ಸರ್ಪ್ರೈಜ್ ಶಾಕ್ ನಾ ಮಾತಲ್ಲಿ ವ್ಯಕ್ತಪಡಿಸೋಕಾಗ್ತಿಲ್ಲ!! (ಹದಿನೈದು-ಇಪ್ಪತ್ತು ದಿನ ಕಾಟಾ ತಪ್ಪಿದ್ದಲ್ಲ)  ಅವಳು ತಂದ ಕಾಫೀ ನೋಡಿ - "ಛೇ..ಛೇ.. ಮನೆಗೆ ಬಂದಿರೋ ಅತಿಥಿಗಳನ್ನ ಬಿಟ್ಟು ನಾ ಹೇಗೆ ಕುಡಿಯೋದು? ಫರ್ಸ್ಟ್ ಅವ್ರಿಗೆ ಕೊಡು" ಎಂದು ಸೃಷ್ಟಿ ಕಡೆ ಕೈ ತೋರಿಸಿ ಒಳಗೆ ರೂಂ ಸೇರಿದ.

ಎರಡೇ ಭೇಟಿಯಲ್ಲಿ ಅವನ ಮಾತಿನ ಒಳಾರ್ಥ ಅರಿತಿದ್ದ ಸೃಷ್ಟಿಗೆ ಕಾಫೀಯಲ್ಲಿ ಏನೋ ದೋಷ ಇದ್ದಂತೆ ಕಂಡಿತ್ತು. ಸುಂದ್ರಿ ಕಾಫೀ ಕೊಡಲು ಬಂದಾಗ, ಆಗತಾನೆ ಒಳಗೆ ಬಂದ ಶ್ರವಣ್ ಕಡೆ ಕೈ ಮಾಡಿ "ನವದಂಪತಿಗಳು ಫರ್ಸ್ಟ್ ಟೈಮ್ ಮನೆಗೆ ಬಂದಿದಾರೆ ಅವ್ರಿಗೆ ಕೊಡಿ ಫರ್ಸ್ಟು" ಎಂದು ಜಾರಿಕೊಂಡಳು.

ಚಳಿಗೆ ಬೇಸತ್ತ ಶ್ರವಣ್ ಸುಂದ್ರಿಯ ಸ್ಪೇಷಲ್ ಕಾಫೀ ತೆಗೆದುಕೊಂಡು ಒಂದು ಗುಟುಕು ಹೀರೀದವನೇ ಮುಖ ಸಿಂಡರಿಸಿಬಿಟ್ಟ! ದಿಪ್ತಿ ಕಡೆಗೆ ನೋಡುತ್ತಾ, ನನ್ನ ಕಷ್ಟ ಸುಖದಲ್ಲಿ ನನ್ನ ಅರ್ಧಾಂಗಿಗೂ ಪಾಲಿದೆ ಅಲ್ವಾ ಕಾಫೀನಲ್ಲೂ ಪಾಲು ಇರ್ಲಿ,  ತಗೋಳೆ ಕುಡಿ ಎಂದು ದಿಪ್ತಿ ಕೈಗಿಟ್ಟ. ಅವಳಿಗೆ ಅವನ ಮುಖ ನೋಡೇ ಕಾಫೀ ರುಚಿ ಅರ್ಥವಾಗಿತ್ತೇನೋ, ಬೇಡ ಬೇಡ ನೀವೇ ಕುಡಿರಿ ಎಂದು ಒಳಗೆ ಹೋದಳು.

ಸೃಷ್ಟಿ, ಶ್ರವಣ್ ಕಾಫೀ ಹೀರುವದನ್ನೇ ನೋಡುತ್ತಾ "ಎಂಜಾಯ್ ಬ್ರೋ.. ಇಂಥಾ ಕಾಫೀ ಮತ್ತೆ ಜೀವಮಾನದಲ್ಲಿ ಸಿಗೊಲ್ಲ, ಈಗಲೇ ಬೇಕಂದ್ರೆ ಇನ್ನೊಂದು ಕಪ್ ಆರ್ಡರ್ ಮಾಡ್ಲಾ" ಎಂದು ಛೇಡಿಸಿದಳು.

ಲೇ ಕೋತಿ ನಿನ್ನ ಕರ್ಕೊಂಡು ಬಂದಿದ್ದೆ ತಪ್ಪಾಯ್ತು ನೋಡು. ನನಗೆ ಈ ಕಲ್ಗಚ್ವು ಕುಡಿಯೋ ಹಾಗೆ ಮಾಡಿದ್ಯಲ್ಲೆ!!

ಇಲ್ಲಿಗೆ ಕರ್ಕೊಂಡು ಬಂದು, ಒಳ್ಳೆಯ ಕೆಲಸ ಮಾಡಿದೆ ಬ್ರೋ.. ಇಲ್ಲಾಂದ್ರೆ ನನ್ ಹುಡುಗನ್ನ ಹುಡುಕೊದ್ರಲ್ಲೇ ಮುದುಕಿ ಆಗೊಗ್ತಿದ್ದೆ. ನನ್ನ ಅತ್ತೆ ಮಾವನ ಮನೆಗೆ ಬರೋ ಭಾಗ್ಯನೇ ಸಿಗ್ತಿರ್ಲಿಲ್ಲ.

ಕುಡಿತಿದ್ದ ಕಲ್ಗಚ್ಚು ಅಲ್ಲಲ್ಲ.. ಕಾಫೀ ನೆತ್ತಿಗೇರಿ ಏನೂ ನಿನ್ ಹುಡುಗಾನಾ?? ಯಾರೇ??

ಇವಾಗ್ ತಾನೇ ಅವರ ಕಾರಲ್ಲೇ ಬಂದ್ವಲ್ಲ.. ಅವರೇ.. ಹಾಗೆಲ್ಲ ಗಂಡನ ಹೆಸರು ಹೇಳ್ಬಾರ್ದು ಬ್ರೋ

ವಿಶ್ವಾಸ್ ಬಗ್ಗೆ ಹೇಳ್ತಿದಿಯಾ

ಹ್ಮೂ ಹ್ಮೂ ಅವರೇ ನನ್ನ ಭಾವಿ ಯಜಮಾನರು

ಶ್ರವಣ್ ಕೋಪಿಸಿಕೊಂಡು ಸದ್ಯ ಅವನು ಕೇಳಿಲ್ಲ ನಿನ್ ಮಾತು, ಬಾವಿ ಅಲ್ಲ ಪ್ರಪಾತಕ್ಕೆ ಹೋಗಿ ಬಿಸಾಕ್ತಾನೆ ಅಷ್ಟೇ!! ಸುಮ್ನಿರೇ ಡ್ರಾಮಾ ಕ್ವೀನ್‌,  ಮರ್ಯಾದೆಯಿಂದ ಬಂದಿದಿವಿ ಮರ್ಯಾದೆಯಿಂದ ಹೋಗೋಣ.

ಹೇ ನಿಜವಾಗಲೂ ಅನ್ನೋವಾಗ್ಲೇ.... ಶಂಕರ್ ನಾರಾಯಣರು ಮತ್ತು ಶ್ರೀಕಂಠ ಅಲ್ಲಿಗೆ ಬಂದರು, ಮಾತು ಅಲ್ಲಿಗೆ ನಿಂತಿತು. ಎಲ್ಲರೂ ಪರಸ್ಪರ ಉಭಯಕುಶಲೋಪರಿ ವಿಚಾರಿಸಿದರು. ತಾನು ಯಾವುದೋ ಕಾನ್ಫರೆನ್ಸ್ ಗೆ ಬಂದದ್ದು ಅನ್ನಪೂರ್ಣಮ್ಮ ಮೂರು ದಿನ ತಮ್ಮ ಮನೆಯಲ್ಲೇ ಇರಬೇಕೆಂದು ಆರ್ಡರ್ ಮಾಡಿದಾರೆಂದು ಹೇಳಿದ ಶ್ರವಣ್. ಅದೇ ತಾನೇ ಮದುವೆಯಾದ ನವಜೋಡಿ ಮನೆಗೆ ಬಂದದ್ದು ಶಂಕರ್ ನಾರಾಯಣರಿಗೂ ತುಂಬಾ ಸಂತೋಷವಾಗಿತ್ತು.

ಎಲ್ಲರೂ ಒಟ್ಟಾಗಿ ಊಟ ಮಾಡಿದರು. ಸುಂದ್ರಿ ಮಾಡಿದ ಸ್ಪೆಷಲ್ ಕೇಸರಿಭಾತು ಸುತ್ತಿ ಬಳಸಿ ಶ್ರವಣ್ ತಟ್ಟೆಯನ್ನು ಆಯ್ದುಕೊಂಡಿತು. ಅವನೋ ಯಾರ ಮನಸ್ಸಿಗೂ ನೋವು ಮಾಡದ ಆಸಾಮಿ 'ಚೆನ್ನಾಗಿದೆ' ಅಂದಂತೆಲ್ಲಾ ಸುಂದ್ರಿ ಖುಷಿಯಾಗಿ ಅದನ್ನೇ ಬಡಿಸ್ತಾ ಇದ್ಲು!! ದಿಪ್ತಿ ಸೃಷ್ಟಿ ಮುಖ ಮುಖ ನೋಡ್ಕೊಂಡು ಒಳಗೊಳಗೆ ನಕ್ಕಿದ್ದೆ ನಕ್ಕಿದ್ದು. ವಿಶ್ವಾಸ್ "ಥ್ಯಾಂಕ್ಸ್ ಕಣಪ್ಪಾ ನನ್ನ ಕಾಪಾಡೋಕೆ ಬಂದ ದೇವ್ರು ನೀನು" ಎಂದು ಶ್ರವಣ್ ಕಿವಿಯಲ್ಲಿ ಉಸುರಿದ್ದ.

                        ******

" ವಿಶು.. ಮಲಗಿದ್ಯೇನೋ?" ಅನ್ನಪೂರ್ಣಮ್ಮ ಕೂಗುತ್ತಾ ಬಂದರು.

"ಏನೋ ತುಪ್ಪ ಸವರ್ತಿರೋ ಹಾಗಿದೆ! ಏನಾಗಬೇಕು ಮಾತೃಶ್ರೀ,? " ಕೇಳಿದ ಶ್ರವಣ್.

ದಿಪ್ತಿ ಶ್ರವಣ್ ಗೆಸ್ಟ್ ರೂಂ ಲ್ಲಿ ಮಲಗಿದರು. ನಾನು ನಿಮ್ಮಪ್ಪಾಜಿ ನಮ್ಮ ರೂಂಲ್ಲಿ ಮಲಗ್ತಿವಿ. ಸೃಷ್ಟಿ ಮತ್ತೆ ಸುಂದರಿ ಒಂದೆರಡು ದಿನ ನಿನ್ ರೂಂಲ್ಲಿ ಮಲಕ್ಕೊಳ್ಳಿ ನೀನು ಶ್ರೀಕಂಠ ಹೊರಗೆ ಹಾಲ್ ನಲ್ಲಿ ಮಲಗಿ ಆಯ್ತಾ!!

"ಹಾಲ್ನಲ್ಲಿ ಯಾಕೆ ಕೆಸರ್ನಲ್ಲಿ ಮಲಗಿಸಿಬಿಡು ನನ್ನ! ನಮ್ಮ ಗಂಡಜನ್ಮಕ್ಕೆ ಬೆಂಕಿಹಾಕಾ! ಎಲ್ಲದಕ್ಕೂ ನಾವೇ ಅಡ್ಜಸ್ಟ್ ಅಗ್ಬೇಕು ಅಲಾ.."

"ಭಾಷಣ ನಾಳೆನೂ ಮಾಡಬಹುದು ಲೇಟಾಗಿದೆ ಹೋಗು ಹೊರಗೆ ಮಲ್ಕೊ.. ಏನೋ ಒಂದೆರಡು ದಿನ ಅಡ್ಜಸ್ಟ್ ಮಾಡ್ಕೋಬೇಕಪ್ಪಾ!!"

ತನ್ನ ಲ್ಯಾಪ್‌ಟಾಪ್, ಮೊಬೈಲ್, ಹೆಡ್ ಪೋನ್ ಸಮೇತ ರೂಂ ತ್ಯಾಗ ಮಾಡಿದ. ವಟಗುಟ್ಟುತ್ತ ಹಾಲ್ ನಲ್ಲಿ ಬಂದು ಉರುಳಿದ. ಶ್ರೀಕಂಠ ಆಗಲೇ ಗಢದ್ದು ನಿದ್ದೆಗೆ ಜಾರಿದ್ದ. ಗೊರಕೆ ಸದ್ದಿಗೆ ಸೂರು ಕಿತ್ತು ಹೋಗುವಂತಿತ್ತು! ವಿಶ್ಬಾ ತಲೆ ತಲೆ ಚಚ್ಚಿಕೊಂಡು "ಇದ್ಯಾವ್ ಕರ್ಮನೋ ನಂಗೆ" ಅಂದುಕೊಂಡ.

ರೂಮ್ ನಲ್ಲಿ ಸೃಷ್ಟಿ, ಸುಂದ್ರಿ ಜೊತೆಗೆ ಮಾತಾಡುತ್ತ ಮಲಗಿದ್ದರು. "ಸುಂದ್ರಿ ನಿಮ್ ಮಾಮಾ ನಿಂಗೆ ಚಿಕ್ಕಂದಿನಿಂದಲೇ ಗೊತ್ತಲ್ವ?"

"ಓಹ್...ಹ್ಮೂ ಮತ್ತೆ , ಅವಾಗಿಂದ್ಲೂ ಮಾಮಂಗೆ ನನ್ ಕಂಡ್ರೆ ಪಂಚಪ್ರಾಣ ಗೊತ್ತಾ! ನಂಗೂ ಮಾಮಾ ಅಂದ್ರೆ ಜೀವಾ..

"ಓಹ್ ಹೌದಾ.. ಮತ್ತೆ ಮದುವೆ ಯಾಕೆ ಬೇಡ ಅಂದೆ"

"ನಾನಲ್ಲ.. ಅವನೇ ಬೇಡ ಅಂದಿದ್ದು ಯಾಕೆ ಅಂತ ಗೊತ್ತಿಲ್ಲ. "

"ಮತ್ತೆ  ನಿಮ್ದು ಮದುವೆ ನಿಶ್ಚಯವಾಗಿ ನಿಂತೊಯ್ತು ಅಂತ ಹೇಳ್ತಿದ್ರು"

"ಹೆಹೆಹೆ.. ಅದು ನಂಜೊತೆಯಲ್ಲ ಬೇರೆ ಯಾರೋ.. ಅವಳು ಎಂತ ಮರುಳು ಅಂತಿನೀ ಮೊದಲು ಮದ್ವೆಗೆ ಹ್ಮೂ ಅಂದು, ಮದ್ವೆ ಹಿಂದಿನ ದಿನ ಓಡಿ ಹೋಗಿದಾಳೆ! ತಲೆ ಕೆಟ್ಟೋಳು!! ಯಾರ್ ಜೊತೆ ಓಡಿ ಹೋದಳೋ ಏನೋ!! "

"ಅದು ಅರೆಂಜ್ ಮ್ಯಾರೇಜಾ ? ಲವ್ ಮ್ಯಾರೇಜಾ..?" ಎಂದು ಕೇಳಿದಳು ಸೃಷ್ಟಿ.

ಸುಂದ್ರಿ ಕಕ್ಕಾಬಿಕ್ಕಿಯಾಗಿದ್ದನ್ನು ಕಂಡು ' ಅಂದ್ರೆ ಅವರು ಮೊದಲೇ ಪ್ರೀತಿಸಿದ್ರಾ ? ಅವರ ಅಪ್ಪಾಮ್ಮ ನೋಡಿದ ಹುಡುಗಿನಾ??' ಎಂದು ಕೇಳಿದಳು.

"ಅದೊಂದು ಬೇರೆನೇ ಕಥೆ, ಇವ್ರೆಲ್ಲ ಹೆಣ್ಣು ನೋಡೋಕೆ ಹೋಗಿದ್ದು ಒಂದು ಹುಡುಗಿ, ಮಾಮಂಗೆ ಅವಳ ತಂಗಿ ಇಷ್ಟ ಆದ್ಲಂತೆ, ಅವ್ರು ಹಿರಿಯ ಮಗಳ ಮದುವೆ ಆಗೋವರ್ಗೂ ಚಿಕ್ಕೊಳ್ನಾ ಕೊಡಲ್ಲ ಅಂದ್ರಂತೆ. ಸರಿ ಅವ್ರನ್ನೆಲ್ಲ ಹೆಂಗೋ ಒಪ್ಪಿಸಿ ಮದುವೆ ತಯಾರಿನೂ ಆಗಿತ್ತು, ಆದ್ರೆ ಆ ಹುಡುಗಿ ಮದ್ವೆ ಹಿಂದಿನ ದಿನ ಕೈ ಕೊಟ್ಟು ಹೋದ್ಳು. ಆ ಹುಡುಗಿ ಅಪ್ಪ- ಅಮ್ಮ, ತಮ್ಮ ಹಿರಿಯ ಮಗಳನ್ನೇ ಮದುವೆಯಾಗಿ ಮರ್ಯಾದೆ ಉಳಿಸಿ ಅಂತ ಎಷ್ಟು ಗೋಗರೆದ್ರು ಮಾಮಾ ಕೇಳಲಿಲ್ವಂತೆ. ಮದುವೆನಾ ರದ್ದು ಮಾಡಿ ವಾಪಸ್ ಬಂದ್ಬಿಟ್ರಂತೆ. ಆರು ತಿಂಗಳ ಮೇಲಾಯ್ತು ಇದೆಲ್ಲಾ ನಡದು ಆದ್ರೂ ಮಾಮಾ ಯಾಕೆ ಇನ್ನೊಂದ್ ಹುಡ್ಗಿನಾ ಮದ್ವೆ ಆಗ್ಲಿಲ್ಲ ಗೊತ್ತಾ..

" ಯಾಕೆ? "

"ಮಾಮಂಗೆ ನನ್ ಮೇಲೆ ಪ್ರೀತಿ.. ಅದ್ಕೆ" ನಾಚ್ಕೊಳ್ತಾ ಉಲಿದಳು ಸುಂದ್ರಿ.

"ಓಹೋ್.. ಪುಣ್ಯವಂತೆ ಕಣೇ ನೀನು.."  ಎಂದು ಯೋಚನೆಯಲ್ಲಿ ಮುಳುಗಿದಳು‌. (ಮದುವೆಗೆ ಹ್ಮೂ ಅಂದಿದ್ದ ಹುಡುಗಿ ಓಡಿ ಯಾಕೆ ಹೋಗ್ತಾಳೆ? ಇವ್ರು ಒಂದೇ ಭೇಟಿಗೆ ಅವಳನ್ನ ಇಷ್ಟ ಪಟ್ಟಿದ್ರಾ? ಅಥವಾ ಮೊದಲೇ ಪರಿಚಯವಿತ್ತಾ?) ಕೇಳಬೇಕೆನ್ನುವಷ್ಟರಲ್ಲಿ ಸುಂದ್ರಿ ಗಾಢ ನಿದ್ರೆಗೆ ಜಾರಿ ಕನಸಲ್ಲಿ ತೇಲಿ ಹೋಗಿದ್ದಳು.

ಸೃಷ್ಟಿ ಹೊರಗೆ ಹಾಲ್ ನಲ್ಲಿ ಬಂದು ನೋಡಿದಾಗ ವಿಶ್ವಾಸ್ ಹೆಡ್ ಪೋನಲ್ಲಿ ಹಾಡು ಕೇಳ್ತಾ ಲ್ಯಾಪ್‌ಟಾಪ್ ನೋಡ್ತಾ ಸೋಫಾ ಮೇಲೆ ಮಲಗಿದ್ದ. ಅವನನ್ನೇ ನೋಡುತ್ತಾ ನಿಂತವಳು ಎಷ್ಟೋ ಹೊತ್ತಿನ ಮೇಲೆ  ರೂಂ ಸೇರಿ ನಿದ್ರೆ ಹೋದಳು.

                    **********

       ಬೆಳಗ್ಗೆ ಎಲ್ಲರೂ ತಿಂಡಿ ತಿನ್ನಲು ಕುಳಿತಾಗ ಮೆಕ್ಯಾನಿಕ್ ಕಾರ್ ರಿಪೇರಿ ಮಾಡಿ ತಂದು ಮನೆ ಮುಂದೆ ನಿಲ್ಲಿಸಿದ. ಸುಂದ್ರಿ, ವಿಶ್ವಾಸನಿಗೆಂದು ಮಾಡಿದ ಸ್ಪೇಷಲ್ ಪಲಾವ್ ಎಲ್ಲರನ್ನೂ ತೊರೆದು ಕೊನೆಗೆ ಶ್ರವಣನ ಪಾಲಿಗೆ ಬಂದಿತ್ತು. ಯಾರ ಮನಸ್ಸಿಗೂ ನೋವು ಮಾಡಬಾರದು ಎನ್ನುವಂತ ಅವನ ಸ್ವಭಾವ, ಅವನಿಗೆ ಮುಳ್ಳಾಗಿತ್ತು! ಅವನು ' ಸೂಪರ್ರಾಗಿದೆ' ಎಂದಂತೆಲ್ಲ ಸುಂದ್ರಿ ಬಡಿಸ್ತಾನೆ ಇದ್ದಳು‌. ತಿನ್ನಲಾಗದೇ ಉಗುಳಲಾಗದೆ ಶ್ರವಣ್ ಪಡುತ್ತಿದ್ದ ಪಾಡು ನೋಡಿ ಸೃಷ್ಟಿ ದಿಪ್ತಿ 'ಅಯ್ಯೋ ಪಾಪಚ್ಚಿ' ಅಂದುಕೊಂಡರು. ವಿಶ್ವಾಸ್ "ಥ್ಯಾಂಕ್ಸ್...ದೇವ್ರು.. ನೀ ಇರೋವರಗೂ ನಾನ್ ಬಚಾವು" ಎಂದು ಕಿವಿಯಲ್ಲಿ ಹೇಳಿದ.

         ವಿಶ್ವಾಸ್ ರೆಡಿಯಾಗಿ ಆಫೀಸಿಗೆ, ಶ್ರವಣ್ ಕಾನ್ಫರೆನ್ಸ್ ಗೆ ಹೊರಟು ಹೋದರು. ದಿಪ್ತಿ ಸುಂದ್ರಿ ಅಡಿಗೆ ಮನೆಯಲ್ಲಿ, ಅನ್ನಪೂರ್ಣಮ್ಮನವರು ಶ್ರೀಕಂಠನ ಜೊತೆ ಮಾತಾಡುವದರಲ್ಲಿ, ಶಂಕರನಾರಾಯಣರು ವಾರ್ತೆ ನೋಡುವದರಲ್ಲಿ ವ್ಯಸ್ತವಾಗಿದ್ದರು.

      ಸೃಷ್ಟಿ ಇದೇ ಸರಿಯಾದ ಸಮಯ ಎಂದು ವಿಶ್ವಾಸನ ಲ್ಯಾಪ್‌ಟಾಪ್ ಒಪನ್ ಮಾಡಿದಳು. ಆದರೆ ಲಾಕ್ ಇಟ್ಟಿದ್ದ ಕಾರಣ  ಲ್ಯಾಪ್‌ಟಾಪ್ ಆನ್ ಆಗಲಿಲ್ಲ. ಏನೇನೋ ಪಾಸ್ ವರ್ಡ್ ಹಾಕಿದರೂ ಪ್ರಯೋಜನವಾಗಲಿಲ್ಲ. ನಿರಾಸೆಯಿಂದ ಅದರ ಕೈ ಬಿಟ್ಟಳು ಸೃಷ್ಟಿ.

         ಆಫೀಸ್‌ನಲ್ಲಿ ಕೆಲಸ ಜಾಸ್ತಿ ಎಂಬ ನೆಪವೊಡ್ಡಿ ವಿಶ್ವಾ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದ. ನಿಜವಾದ ಕಾರಣ ಏನೆಂಬುದು ಬಹುಶಃ ಎಲ್ಲರಿಗೂ ಗೊತ್ತಿತ್ತು. ಸುಂದ್ರಿ ಒಬ್ಬಳನ್ನು ಹೊರತುಪಡಿಸಿ. ಅವಳು ವಿಶ್ವಾಸನಿಗೆ ಮಾಡುವ ಪ್ರತಿಯೊಂದು ಹೊಸರುಚಿಗೆ ಪ್ರತಿಸಲ ಶ್ರವಣ್ ಬಲಿಪಶು ಆಗುತ್ತಿದ್ದ. ದಿಪ್ತಿ ಮತ್ತೆ ಸೃಷ್ಟಿಗೆ ಇದೊಂದು ಕಾಮಿಡಿ ಶೋ ಆಗಿಹೋಗಿತ್ತು‌.

        ವಿಶ್ವಾಸ್ ಮನೆಯಲ್ಲಿ ಸಿಕ್ಕಷ್ಟು ಸಮಯ ಮಾಮಾss.. ಮಾಮಾss.‌. ಎಂದು ಸುಂದ್ರಿಯಂತೆ ಮಾತಾಡಿ, ಅವನ ಕಾಲೇಳೆಯುವುದು, ಸುಂದ್ರಿಗೆ ಹೇಳಿಸಿ ಏನೋ ತರಲೆ ಕೆಲಸ ಮಾಡುವುದು, ಅವನಿಗೆ ಇಷ್ಟ ಆಗದಿದ್ರು, ಸುಂದ್ರಿ ಕಡೆ ಜೋರಾಗಿ ಹಾಡಿಸಿ ಇರ್ರಿಟೇಟ್ ಮಾಡುವುದು, ಬೇಕಂತಲೇ ಅವನಂತೆ ನಡೆಯುವದು, ಮಾತಾಡೋದು, ಇಮಿಟೇಟ್ ಮಾಡುವುದು..ಸೃಷ್ಟಿಯ ದಿನಚರಿಯಲ್ಲೊಂದಾಗಿತ್ತು. ವಿಶ್ವಾಸ್ ಗೆ ಸದ್ಯ ಯಾವಾಗ ಮುಕ್ತಿ ಸಿಗತ್ತೆ ಈ ಪಿಶಾಚಿಯಿಂದ ಅನ್ನುವಷ್ಟು ಕಿರಿಕಿರಿಯಾಗಿತ್ತು. ಹೀಗೆ ಎರಡು ದಿನಗಳು ಕಳೆದವು.

                      ********

    ಬೆಳಗಿನ ಸೂರ್ಯ ಹೊಸ ಕಿರಣಗಳ ಹೊತ್ತು ತಂದಿದ್ದ. ಒಬ್ಬಬ್ಬರ ಬದುಕಲ್ಲಿ ಒಂದೊಂದು ಬಗೆಯ ಹೊಸ ತಿರುವುಗಳು ಎದುರು ನೋಡುತ್ತಿದ್ದವು. ಕೆಲವು ಶುಭ ಕೆಲವು ಅಶುಭ.. ಯಾರಿಗೆ ಯಾವುದೆಂದು ಸಮಯವೇ ನಿರ್ಧರಿಸಬೇಕಿದೆ.

ಯತಾರೀತಿ ಶ್ರವಣ್ ವಿಶ್ವಾಸ್ ಕೆಲಸಕ್ಕೆ ಹೋಗಾಗಿತ್ತು. ಸುಂದ್ರಿ ಮತ್ತೆ ಸೃಷ್ಟಿ ಹೀಗೆ ಸುಮ್ಮನೆ ಮಾತಾಡುತ್ತಾ "ನಿಮ್ ಮಾಮನ ಮದುವೆ ನಿಶ್ಚಯವಾದ ಹುಡುಗಿ ಹೆಸರೇನೆಂದು" ಕೇಳಿದಳು.

"ಸಹನಾ ಅಂತ.. ಯಾಕೆ.." ಅನ್ನುವಷ್ಟರಲ್ಲಿ  ಸೃಷ್ಟಿಗೆ ಏನೋ ಹೊಳೆದಂತಾಗಿ ರೂಂ ಗೆ ಹೋಗಿಯಾಗಿತ್ತು. ಲ್ಯಾಪ್‌ಟಾಪ್ ತೆಗೆದು ಪಾಸ್ ವರ್ಡ್ ಹಾಕಿದಳು "SAHANA_VISHWAS" ಪಾಸ್ ವರ್ಡ್ ಎರ್ರರ್ ಎಂದು ಬಂದಿತು. ಮತ್ತೆ ಪ್ರಯತ್ನಿಸಿದಳು.. " SAHANA143"  ಎಂದು ಟೈಪ್ ಮಾಡಲು ಲ್ಯಾಪ್‌ಟಾಪ್ ಆನ್ ಆಯಿತು. ಅದರಲ್ಲಿ ಎಲ್ಲ ಫೈಲ್ ಸರ್ಚ್ ಮಾಡಿದಾಗ ಒಂದು ಫೈಲ್  ಕಣ್ಣನ್ನು ಸೆಳೆಯಿತು "MY❤" ತಕ್ಷಣ ಒಪನ್ ಮಾಡಿ ಓದಲು ಶುರುಮಾಡಿದಳು.

     - ಮುಂದುವರೆಯುವುದು...



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ...