ವಿಷಯಕ್ಕೆ ಹೋಗಿ

ಪ್ರಕ್ಷುಬ್ಧತೆ ಭಾಗ-||


ಪ್ರಕ್ಷುಬ್ಧತೆ - ||


#file
MY ❤

[ ಹರಿಯುವ ನದಿಯು ಕೇಳಲಾರದು ಶರಧಿಯ ದಾರಿಯನ್ನು, ಹುಟ್ಟುವ ಪ್ರೀತಿಯು ಹಾಗೆ ಕಾರಣ ಹೇಳದೆ, ಅನುಮತಿ ಪಡೆಯದೆ ಹೃದಯದ ಗರ್ಭದಲ್ಲಿ ಚಿಗುರೊಡೆಯುವುದು, ಆರಂಭ ಹೇಗೆಂದು ಖಚಿತವಾಗಿ ಹೇಳಲಾಗದು ಆದರೆ ಜೊತೆಯಾದ ಸಂಗಾತಿಯ ಉಸಿರು ಸಹ ತಂಗಾಳಿಯಂತೆ ಭಾವಿಸುವಷ್ಟು ಗಾಢವಾಗಿ ಜೀವದ ಅಣುವಣುವಲ್ಲಿ ಬೆರೆತು ಹೋಗುವುದು.

ನನಗೂ ಹಾಗೆ ಆಗಿತ್ತಲ್ಲವೇ ಯಾವುದೋ ಮುಸ್ಸಂಜೆ ಸಮಯದಲ್ಲಿ ಬೆಟ್ಟದ ಮೇಲೆ ಪ್ರಶಾಂತವಾಗಿ ಕುಳಿತಾಗ ಕಂಡಿದ್ದಳವಳು ಅವಳ ಮುಗ್ಧ ನೋಟ ಎದೆಗೆ ನೇರ ದಾಳಿ ಮಾಡಿದಂತಿತ್ತು. ಒಂದೇ ಕ್ಷಣ ಅವಳನ್ನ ನೋಡಿದ್ದು ಆದರೆ ನನ್ನ ಮುಖವನ್ನೇ ಮರೆಯುವಷ್ಟರ ಮಟ್ಟಿಗೆ ಮೋಡಿ ಮಾಡಿದ ಹುಡುಗಿಯವಳು! ಮತ್ತೆ ಮತ್ತೆ ನೋಡಬೇಕಿನಿಸುವ ಮನದ ಹಠಕ್ಕೆ ಕಟ್ಟು ಬಿದ್ದು ಪ್ರತಿದಿನ ಅದೇ ಸಮಯ ಅದೇ ಜಾಗಕ್ಕೆ ಹೋಗಿ ಕಾದು ಕೂರಲು ಶುರು ಮಾಡಿದ್ದೆ.

ಆಫೀಸ್ ನಿಂದ ಬರುವಾಗ ದಾರಿಯಲ್ಲಿ ಬೆಟ್ಟದ ಮೇಲಿನ ದೇವಸ್ಥಾನದ ಕಟ್ಟೆಗೆ ಕೂತು ಸೂರ್ಯಾಸ್ತ ನೋಡುವುದೆಂದರೆ ನನಗೆ ತುಂಬಾ ಖುಷಿ. ಆ ದಿನಗಳಲ್ಲಿ ಅದು ನನ್ನ ದಿನಚರಿಯ ಮುಖ್ಯ ಭಾಗವಾಗಿತ್ತು. ಆದರೆ ಅವತ್ತಿನ ಸೂರ್ಯಾಸ್ತ ಎಂದಿಗಿಂತ ವಿಶೇಷವಾಗಿತ್ತು. ಕಾರಣ ಅವಳನ್ನ ಮೊದಲ ಬಾರಿ ನೋಡಿದೆ.

ಹುಡುಗಿಯರ ಗುಂಪೊಂದು ದೇವಸ್ಥಾನಕ್ಕೆ ಆಗಮಿಸಿತ್ತು. ಆ ಗುಂಪಲ್ಲಿ ಅವಳೂ ಒಬ್ಬಳು. ನನ್ನ ಕಠೋರ ಹೃದಯ ಅವಳ ಕಡೆಗೆ ಆಕರ್ಷಿತವಾಗಲು ಕಾರಣ ಬಹುಶಃ ವಟವಟ ಮಾತಾಡುವ ಹುಡುಗಿಯರ ಗುಂಪಿನ ನಡುವೆ ಮೌನವಾಗಿ ಮಂದಹಾಸ ಬೀರುತ್ತಾ ಪ್ರಕೃತಿಯನ್ನು ಅವಳು ಸವಿಯುತ್ತಿದ್ದ ರೀತಿ!! ಇದೊಂದೇ ಕಾರಣಕ್ಕೆ ಬಹುಶಃ ಅವಳಿಗೆ ನನ್ನ ಮನಸ್ಸು ಸೋತಿದ್ದು. ಒಂದೇ ನೋಟಕ್ಕೆ ಪ್ರೀತಿ ಹುಟ್ಟೋದರಲ್ಲಿ ನನಗೆ ನಂಬಿಕೆ ಇರಲಿಲ್ಲ. It's just an infatuation ಅಂದುಕೊಂಡೆ.

ಎರಡನೇ ದಿನ ಸೂರ್ಯಾಸ್ತ ಬರೀ ನೆಪವಾಗಿತ್ತು ಅವಳು ಇವತ್ತೂ ಬರಬಹುದಾ ಎಂದು ಮನಸ್ಸು ಪ್ರಶ್ನಿಸುತ್ತಿತ್ತು. ನನ್ನ ನೀರಿಕ್ಷೆಗೆ ಉತ್ತರವಾಗಿ ಅವಳು ಬಂದಳು. ಅದೇ ಕಲಕಲ ಮಾತಿನ ಗದ್ದಲದ ಗುಂಪಿನ ನಡುವೆ ಮೌನಗಮನಿ, ಪ್ರಕೃತಿಯನ್ನು ನೋಡುವ ಭರದಲ್ಲಿ ಮೈಮರೆತು ಎಲ್ಲಾ ಸ್ನೇಹಿತೆಯರನ್ನ ದಾಟಿ ಬೆಟ್ಟದ ತುತ್ತ ತುದಿಗೆ, ನನ್ನಡೆಗೆ ನಡೆದು ಬಂದಿದ್ದಳು. ಸೂರ್ಯ ಮತ್ತೆ ನಾಳೆ ಸಿಗೋಣಾ ಎಂದು ತಿಳಿಸಿ ಸುಂದರ ವಿದಾಯವನ್ನು ಹೇಳಿದ. ಅವಳು ಸೂರ್ಯಾಸ್ತ ನೋಡುತ್ತಿದ್ದರೆ ನಾನು ಅವಳನ್ನೇ ನೋಡುತ್ತಿದ್ದೆ. Sunsets are proof that endings can be beautiful too.. And right now she is my sunset.. ಎಂದಿತು ಮನಸ್ಸು.

ಆಕೆಗೆ ಆಗ ಪ್ರಜ್ಞೆ ಬಂದಂತೆ ಬೆದರಿ ಸುತ್ತ ಕಣ್ಣಾಡಿಸಿದಳು ಯಾರೂ ಕಾಣದೆ ನನ್ನತ್ತ ನೋಡಿ ಓಡಿ ಹೋದಳು.ಅದೇನೋ ಗೊತ್ತಿಲ್ಲ ಅವತ್ತು ಮೊದಲ ಬಾರಿ ಅವಳ ಜೊತೆ ಮಾತಾಡಬೇಕೆನಿಸಿತ್ತು. ಆದರೆ ಆಗಲಿಲ್ಲ. ಅವರೆಲ್ಲ. ಮಾತಾಡುವ ರೀತಿಯಲ್ಲಿ ಗೊತ್ತಾಗಿದ್ದು- ಅವರೆಲ್ಲ ಯಾವುದೋ ಕೋಚಿಂಗ್ ಗಾಗಿ ಅಲ್ಲಿಗೆ ಬಂದಿದ್ದರೆಂದು. ದೇವಸ್ಥಾನ ಹತ್ತಿರದಲ್ಲೇ ಇದ್ದುದರಿಂದ ಪ್ರತಿದಿನ ಸಂಜೆ ಬಂದು ಹಾಜರಿ ಹಾಕುತ್ತಿದ್ದರೆಂದು. ಅವರೆಲ್ಲ ದೇವರ ಪ್ರದಕ್ಷಿಣೆಯಲ್ಲಿ ಮುಳುಗಿದ್ದರೆ ಇವಳು ಮುಳುಗುವ ಸೂರ್ಯನನ್ನೇ ದೇವರಂತೆ ಆರಾಧಿಸುತ್ತಿದ್ದಳು. ಸೂರ್ಯಾಸ್ತಕ್ಕಿಂತ ಅವಳನ್ನ ನೋಡುವ ಹುಚ್ಚು ಹೆಚ್ಚಾಯ್ತಾ ಹೋಯಿತು. ಆದರೆ ಯಾವತ್ತೂ ಅವಳು ಮಾತಾಡೋದನ್ನೇ ಕೇಳಲಿಲ್ಲ.

ಒಮ್ಮೆ ಜನಸಂದಣಿ ಕಡಿಮೆ ಇದ್ದಾಗ  ಅವಳ ಫ್ರೆಂಡ್ಸ್ ದೇವಸ್ಥಾನಕ್ಕೆ ಹೋದ ಸಮಯ ನೋಡಿ ಅವಳ ಮುಂದೆ ಹಾರ್ಟ್ ಅಟ್ಯಾಕ್ ಆಗಿರೋ ತರ ಆ್ಯಕ್ಟ್ ಮಾಡಿದೆ. ಗಾಬರಿಯಿಂದ ಓಡಿ ಹೋಗಿ ಎಲ್ಲಾ ಫ್ರೆಂಡ್ಸ್ ನಾ ಕರೆದುಕೊಂಡು ಬಂದಳೇ ಹೊರತು ಪುಣ್ಯಾತ್ಮಳು ಒಂದು ಮಾತಾಡಲಿಲ್ಲ.

ಇವಳೇನು ಮೂಕಿನಾ ಅಂತ ಕೂಡ ಯೋಚನೆ ಮಾಡ್ತಿದ್ದೆ. ಒಂದು ದಿನ ಆಗಿದ್ದಾಗಲಿ ಎಂದು ಆಕೆ ಬೆಟ್ಟದ ತುದಿಗೆ ಒಬ್ಬಳೇ ನಿಂತಾಗ ಕೇಳಿಯೇ ಬಿಟ್ಟೆ ನಿಮಗೆ ಮಾತು ಬರಲ್ವಾ? ಅವಳು ಒಮ್ಮೆ ನನ್ನ ನಖಶಿಖಾಂತ ನೋಡಿ ಇಲ್ಲವೆಂದು ಕತ್ತು ಅಲುಗಾಡಿಸಿ ಓಡಿಯೇ ಹೋದಳು. ಅದು ಇಲ್ಲ, ಬರಲ್ಲ ಅಂತಾನಾ? ಇಲ್ಲ ಬರುತ್ತೆ ಅಂತಾನೋ ಅರ್ಥವಾಗಲಿಲ್ಲ.

ದಿನೇದಿನೇ ಅವಳೊಂದು ಯಕ್ಷಪ್ರಶ್ನೆಯಾದಳು. ಒಮ್ಮೆ ನಾನೇ ಸಂಪೂರ್ಣವಾಗಿ ಶರಣಾಗಿ ಮಾತಿಗಿಳಿದೆ, ಯಾವುದ್ರೀ ನಿಮ್ಮೂರು? ನಿಮ್ಮನೇಲಿ ನೀವೊಬ್ಬರೆ ಹೀಗಾ ಅಥವಾ ಎಲ್ಲರೂ ಹೀಗೆ ನಾ? ನಾ ಸಾಯೋ ಸ್ಥಿತಿಯಲ್ಲಿ ಇದ್ರು ಮಾತಾಡಲ್ವಲ್ರೀ ನೀವು? ಇವತ್ತು ಹೇಳಲೇ ಬೇಕು ನೀವು.. ನಿಮಗೇನಾಗಿದೆ? ಯಾಕೆ ಹೀಗೆ?

ಅವಳು ತಲೆ ತಲೆ ಚಚ್ಚಿಕೊಂಡು ಸನ್ನೆಯಲ್ಲಿ ಏನೋ ಹೇಳಿದಳು. ನನಗೆ ತಲೆ ಕೆಟ್ಟು ಮೊಬೈಲ್ ಕೊಟ್ಟು ಟೈಪ್ ಮಾಡಿ ಅಂದೆ. ಅದರಲ್ಲಿ ಬರೆದದ್ದು ಇಷ್ಟೇ "ಮೌನವ್ರತ ಮಾಡ್ತಿದೆನೆ ಇನ್ನೂ ಒಂದು ವಾರ ಮಾತಾಡೋ ಹಾಗಿಲ್ಲ"  ಅನ್ಯಾಯವಾಗಿ ಒಂದು ಹುಡುಗಿ ಮುಂದೆ ಇಷ್ಟು ಕನಿಷ್ಟ ಆದೆಯಲ್ಲೋ ವಿಶ್ವಾ ಮನಸ್ಸು ಒದ್ದಾಡಿತು. ಆದರೂ ಏನೋ ಒಂದು ಅವ್ಯಕ್ತ ಖುಷಿ ಇತ್ತು. ಸನ್ನೆಯಲ್ಲೇ ಸಾವಿರ ಮಾತುಗಳ ವಿಲೇವಾರಿ ಆಗಿತ್ತು. ಪಕ್ಕಾ ಟ್ರೆಡಿಷನಲ್ ಹುಡುಗಿ ಅಂತ ಗೊತ್ತಾಗಿತ್ತು. ಮನಸ್ಸು ಪೂರ್ತಿ ಹಾಳಾಗೋಕೆ ಇಷ್ಟು ಸಾಕಾಗಿತ್ತು. ಒಂದು ವಾರ ಉರುಳಿ ಹೋಗಿತ್ತು ಕಣ್ಣಸನ್ನೆ, ಮುಗುಳ್ನಗೆಯ ಸನ್ನಾಹದಲ್ಲಿ..

ಹೀಗೆ ಒಂದು ಸಂಜೆ ಕೇಳಿಯೇ ಬಿಟ್ಟೆ - ನಿಮ್ಮ ಸ್ವಭಾವ, ಸಹನೆ, ನಿಮ್ಮ ಸೈಲೆಂಟ್ ನೇಚರ್ ನನಗೆ ತುಂಬಾ ಇಷ್ಟವಾಯಿತು‌. ಐ ವಾಂಟ್ ಟು ಮ್ಯಾರಿ ಯು.‌. ವಿಲ್ ಯು ಬಿ ಮಾಯ್ ಲೈಫ್ ಪಾರ್ಟ್ನರ್??

ಅವಳು ಮೌನವಗೇ ನಿಂತಿದ್ದಳು. ಬೇರೆ ಹುಡುಗಿಯಾಗಿದ್ದರೆ ಚಪ್ಪಲಿ ಯಾವುದು ಅಂತ ತಿಳ್ಕೊಳ್ಳಬೇಕಿತ್ತೆನೋ ಆದರೆ ಅವಳು ತುಂಬಾ ಸೌಮ್ಯ ಹಾಗೆಲ್ಲ ಮಾಡೋದೇ ಇಲ್ಲ ಅನ್ನೋ ಕಾನ್ಫಿಡೆನ್ಸ್ ಮೇಲೆ ಪ್ರಪೋಸಲ್ ಮುಂದಿಟ್ಟಿದ್ದೆ. ಉತ್ತರ ನಾಳೆ ಹೇಳ್ತೆನೆ ಎಂದಳು ಸನ್ನೆಯಲ್ಲಿ. ನನಗೆ ಅವಳು ಯೆಸ್ ಅಂದಷ್ಟೆ ಖುಷಿಯಾಗಿತ್ತು. ಆಕಾಶಕ್ಕೆ ಇನ್ನೇನು ಮೂರೇ ಗೇಣು.‌. ಚಪ್ಪರ, ವಾಲಗದ ಸದ್ದು, ಗಟ್ಟಿಮೇಳ, ಮನಸ್ಸಿನ ಬ್ಯಾಕ್ಗ್ರೌಂಡ್ ಮ್ಯುಸಿಕ್ ಆನ್ ಆಗಿತ್ತು. ನನ್ನ ಪ್ರತ್ಯುತ್ತರಕ್ಕೂ ಕಾಯದೆ ಅವಳು ಹೋಗಿಯಾಗಿತ್ತು.

ರಾತ್ರಿ ಇಡೀ ಅದೇ ಜಪ.. ಹೌದು ನಾಳೆ ಅವಳ ಮೌನವ್ರತ ಕೂಡ ಮುಗಿಯುತ್ತೆ. ಏನು ಹೇಳುವಳೊ? ಒಂದುವೇಳೆ ರಿಜೆಕ್ಟ್ ಮಾಡಿದ್ರೆ, ಹೇ ಚಾನ್ಸೇ ಇಲ್ಲ! ಹಾಗಿದ್ರೆ ಇವತ್ತೆ ಮಾಡಿರೋಳು, ನಾಳೆವರೆಗೂ ಟೈಂ ಕೇಳ್ತಿರಲಿಲ್ಲ. ಅವಳ ಧ್ವನಿ ಹೇಗಿರಬಹುದು?  ಹೀಗೆ ತರಾವರಿ ಯೋಚನೆಗಳಲ್ಲಿ ನಿದ್ರೆ ಹೋಗಿದ್ದೆ. ಕನಸಲ್ಲೂ ಬಂದಿದ್ದಳು ಅವಳು. ಇಬ್ಬರಿಗೂ ಮದುವೆ ನಡೆದಿತ್ತು. ಇನ್ನೇನು ತಾಳಿ ಕಟ್ಟೊ ಸಮಯ, ಅಮ್ಮನ ಕಿರುಚಾಟ ಕೇಳಿತ್ತು. ಎದ್ದು ನೋಡಿದರೆ ಅಪ್ಪ ಎದೆ ನೋವಿನಿಂದ ಒದ್ದಾಡುತ್ತಿದ್ದಾರೆ. ತಕ್ಷಣ ಆಸ್ಪತ್ರೆಗೆ ಸೇರಿಸಿದೆ. 'ಮೈಲ್ಡ್ ಹಾರ್ಟ್ ಸ್ಟ್ರೋಕ್' ಡಾಕ್ಟರ್ ಹೇಳಿದರು. ಅವತ್ತು ಇಡೀ ಹಗಲು ರಾತ್ರಿ ಆಸ್ಪತ್ರೆಯಲ್ಲಿ ಕಳೆದದ್ದಾಯಿತು‌. ಮರುದಿನ ಅಪ್ಪನ್ನ ಡಿಸ್ಚಾರ್ಜ್ ಮಾಡಿದರು. ಮನೆಗೆ ಬಂದೆವು. ಈ ಮಧ್ಯೆ ಕನಸಿನ ಹುಡುಗಿ ಕನಸಲ್ಲಿಯೂ ನೆನಪಾಗಿರಲಿಲ್ಲ. ಸಮಯದ ಪರಿಧಿಯಲ್ಲಿ ನಾನು ಬಂಧಿಯಾಗಿದ್ದೆ! ಅವಳು? ಬಂದು ನನಗಾಗಿ ಕಾದಿರಬಹುದಾ? ನಾನೊಬ್ಬ ಸುಳ್ಳುಗಾರ ಎಂದು ಹಳಿದಿರಬಹುದಾ?

ಮರು ಸಂಜೆಯೇ ಬೆಟ್ಟಕ್ಕೆ ಹೊರಟೆ. ಅವತ್ತು ಅವಳು ಬರಲಿಲ್ಲ. ಅವಳ ಬದಲು ಜೋರು ಮಳೆ ಬಂದಿತ್ತು. ಭಗ್ನ ಪ್ರೇಮದ ಮುನ್ಸೂಚನೆ ಕೊಡುವಂತೆ!! ನಾನು ಅಷ್ಟು ಸುಲಭಕ್ಕೆ ಕರಗುವನಲ್ಲ ಮಳೆಯೇ ಡೊಂಟ್ ವರ್ರಿ ಅಂದೆ.

ಅದಾದ ನಂತರದ ದಿನಗಳಲ್ಲಿ ಅವಳು ಬರಲೇ ಇಲ್ಲ. ನನ್ನ ಹುಡುಕಾಟ ಶುರುವಾಯಿತು, ಎಲ್ಲ ಕೋಚಿಂಗ್ ಇನ್ಸ್ಟಿಟ್ಯೂಟ್ ತಿರುಗಿದ್ದಾಯಿತು,  ಕೋಚಿಂಗ್ ಗಾಗಿ ಎಷ್ಟೋ ಊರಿನಿಂದ ಎಷ್ಟೋ ಜನ ಬಂದು ಹೋಗಿದ್ದಾರೆ ನೀವು ಯಾರ ಬಗ್ಗೆ ಕೇಳ್ತಿದ್ದಿರಾ? ಅವಳ ಪರ್ಸನಲ್ ಡೀಟೇಲ್ಸ್ ಒಂದೂ ಗೊತ್ತಿಲ್ಲ. ಹೆಸರು ಮಾತ್ರ ಗೊತ್ತು 'ಸಹನಾ' !! ಅವಳ ಹುಡುಕಾಟಕ್ಕೆ ಸಿಕ್ಕ ಉತ್ತರಗಳೆಲ್ಲ ನಿರಾಶಾದಾಯಕವಾಗಿದ್ದವು.

ಇವುಗಳ ಮಧ್ಯೆ ಅಪ್ಪ ಚೇತರಿಸಿಕೊಂಡರು. ನನಗೆ ಬೇಗ ಮದುವೆ ಮಾಡಿ ಕಣ್ತುಂಬ ನೋಡಿ ಕಣ್ಮುಚ್ತಿನಿ ಅನ್ನೋದು ಅವರಾಸೆ! ವಿರೋಧಿಸಿ ಪ್ರಯೋಜನ ಇಲ್ಲ ಅಂತ ಗೊತ್ತಾಗಿತ್ತು‌. ಒಲ್ಲದ ಮನಸ್ಸಿನಿಂದಲೇ ಅವರೊಡನೆ ವಧು ನೋಡಲು ಹೋಗಿದ್ದೆ.

ಎಂಥ ಆಶ್ಚರ್ಯ ನನ್ನ ಕನಸಿನ ಹುಡುಗಿನೇ ಕಣ್ಮುಂದೆ ಬರೋದೆ?! ನನ್ನ ಮನಸ್ಸಿಗೆ ತೃಪ್ತಿಯಾಗಿತ್ತು. ಎಲ್ಲರೆದುರು ನಿರ್ಭಯವಾಗಿ ಹೇಳಿಯೂ ಬಿಟ್ಟೆ " ನನಗೆ ಹುಡುಗಿ ಇಷ್ಟವಾದಳು, ಮದುವೆಗೆ ನನ್ನ ಅಭ್ಯಂತರ ಏನೂ ಇಲ್ಲ "

ಅವರಪ್ಪ ಗಾಬರಿಯಿಂದ ನೀವು ಅಪಾರ್ಥ ಮಾಡ್ಕೊಂಡಿದಿರಾ, ಇವಳು ನನ್ನ ಕಿರಿಮಗಳು ಸಹನಾ ಅಂತ! ನೀವು ನೋಡೋಕೆ ಬಂದಿರೋದು ಮೊದಲನೇ ಮಗಳು ಕಾವ್ಯಾ ನಾ!!  ಅವಳನ್ನು ಕರೆದು ಕೂರಿಸಿದ್ರು. ನಾನು ಹಿಡಿದ ಹಠ ಬಿಡಲಿಲ್ಲ ಕೊನೆಗೆ ಒಳ್ಳೆಯ ಸಂಬಂಧ ಬಿಡಬಾರದು ಅಂತನ್ನಿಸಿ ಸಹನಾ ಜೊತೆಗೆ ಮದುವೆ ನಿಶ್ಚಯವಾಯಿತು.

ಆದರೆ ನಾನು ಅಂದು ಹೇಳಿದ ಸಮಯಕ್ಕೆ ಬರದ ಕಾರಣ ಸಹನಾ ನನ್ನ ಮೇಲೆ ಕೋಪಿಸಿಕೊಂಡಿದ್ದಳು. ನಾನು ಆ ದಿನ ನಡೆದದ್ದೆಲ್ಲ ಹೇಳಿದಾಗ ಅವಳ ಕೋಪ ಇಳಿದಿತ್ತು. ಅವಳ ಜೊತೆ ಅವತ್ತು ತೃಪ್ತನಾಗುವಷ್ಟು ಮಾತಾಡಿದೆ. ಲೋಕದ ಪರಿವೇ ನನಗಿರಲಿಲ್ಲ..

ಒಟ್ಟಾರೆ ಎಲ್ಲಾ ಎಷ್ಟು ಚೆನ್ನಾಗಿ ನಡೆದಿತ್ತು. ಫೋನನಲ್ಲಿ ಗಂಟೆಗಟ್ಟಲೆ ಮಾತಾಡಿದೆವು. ಅದೆಷ್ಟೋ ಕನಸುಗಳ ಬಿತ್ತಿದೆವು. ಬದುಕಿನ ದಾರಿಯಲ್ಲಿ ಜೊತೆಯಾಗುವ ಸಂಗಾತಿಯ ನಿರೀಕ್ಷೆಯಲ್ಲಿ ಒಂದೊಂದು ಕ್ಷಣವೂ ವಿಶೇಷವಾಗಿತ್ತು. ಆ ದಿನ ಬಂದೇ ಬಿಟ್ಟಿತು.

ಆದರೆ... ಆ ದಿನ...

ಬಣ್ಣ ಬಣ್ಣದ ಕನಸುಗಳ ಮದುವೆ ಮಂಟಪದ ನಡುವೆ ನನ್ನನ್ನು ಒಂಟಿಯಾಗಿ ಬಿಟ್ಟು ಅವಳು ಹೊರಟು ಹೋದಳು. ಎಲ್ಲಿಗೆ? ಯಾಕೆ? ಉತ್ತರವಿಲ್ಲ. ಈ ಹಿಂದೊಮ್ಮೆ ನಾನು ಸಮಯಕ್ಕೆ ಸರಿಯಾಗಿ ಬರದ ಕಾರಣಕ್ಕೆ ಇದು ಪ್ರತಿಕಾರವಾಗಿತ್ತಾ!! ಈ ರೀತಿ.. ಇಷ್ಟು ಕಠೋರವಾಗಿ..

ಗಂಡು ನಾನು, ಜಗದ ನಿಯಮ- ಗಂಡಿಗೆ ಅಳು ನಿಷಿದ್ಧ, ಬಿಕ್ಕಿ ಅಳುವ ಹಾಗಿಲ್ಲ, ಅತ್ತರೆ ನಗೆಪಾಟಲು.. ಮನಸ್ಸಿಗಾದ ನೋವು, ಆಘಾತ, ಯಾರಿಗೂ ಅರ್ಥವಾಗಿರಲಿಲ್ಲ. ಅರ್ಥ ಮಾಡಿಕೊಳ್ಳುವ ವ್ಯವಧಾನವೂ ಯಾರಿಗೂ ಇರಲಿಲ್ಲ. ಸಾಂತ್ವನ ಹೇಳಬೇಕಾದವರು ಬೇರೆ ಆಯ್ಕೆಯನ್ನು ಮುಂದಿಟ್ಟರು. ಅವಳಕ್ಕ ಕಾವ್ಯಾಳನ್ನು ಮದುವೆಯಾಗಲು ಒತ್ತಾಯಿಸಿದರು.

ಅವರ ಪ್ರಕಾರ ಇದೊಂದು ಕಾರ್ಯಕ್ರಮ ಅಷ್ಟೇ! ನಡೆಯಲೇಬೇಕು. ಸಹನಾ ಆದರೂ ಸರಿ ಕಾವ್ಯಾ ಆದರೂ ಸರಿ! ಬಂಧು ಬಳಗದ ಮುಂದೆ ಮರ್ಯಾದೆ ಉಳಿಯಬೇಕು. ನನ್ನ ಚೂರಾದ ಹೃದಯದ ಆರ್ತನಾದ ಕೇಳುವ ಸೂಕ್ಷ್ಮತೆ ಅಲ್ಲಿ ಯಾರಿಗೂ ಇರಲಿಲ್ಲ.

ಬಹುಶಃ ತಪ್ಪು ನನ್ನದೇ ಮೊದಲಿಂದಲೂ ನಿರ್ಭಾವುಕನಂತೆ ಬದುಕಿದವನು, ವರ್ತಿಸಿದವನು, ಅಚಾನಕ್ಕಾಗಿ ಪ್ರೀತಿ, ಪ್ರೇಮ, ಅನುರಾಗ, ಅನುಬಂಧ ನನಗೆ ಸರಿಹೊಂದದ ಪದಗಳೆಂದೆ ಅವರ ತೀರ್ಮಾನ. ಧಿಕ್ಕರಿಸಿ ನಡೆದು ಬಂದುಬಿಟ್ಟೆ ಆ ಪೊಳ್ಳು ಸಂಬಂಧದ ಮುಳ್ಳು ಹಾದಿಯನ್ನು. ಕನಸಿನೂರ ತಲುಪುವ ಕಲ್ಪನೆಯನ್ನು..

ಇದಾದ ನಂತರ ವಿಪರೀತ ಕೋಪ ಬರಬೇಕಿತ್ತು ಅವಳ ಮೇಲೆ, ಆದರೆ ಬರಲಿಲ್ಲ! ಹಾಳು ಹೃದಯ ಹೇಳುತ್ತಿತ್ತು- ಅವಳಿಗೆ ಏನೋ ಅನಿವಾರ್ಯತೆ ಇರಬಹುದು. ಅವಳು ಅದೆಲ್ಲೊ ಕುಳಿತು ನನ್ನ ಹಾಗೆ ದುಖಿಸುತ್ತಿರಬಹುದು‌.. ಇಂದಲ್ಲ ನಾಳೆ ಮತ್ತೆ ಸಿಗಬಹುದು..

ನನ್ನ ಹುಡುಕಾಟಕ್ಕೆ ಕೊನೆ ಎಂಬುದೇ ಇರಲಿಲ್ಲ. ಮರೆಯುವುದಂತೂ ದೂರದ ಮಾತು ಪ್ರತಿ ಶ್ವಾಸದಲ್ಲಿ ಅವಳ ಹೆಸರನ್ನೇ ಕೆತ್ತಲು ನಾನು ತಾಳ್ಮೆ ಅನುಯಾಯಿಯಾದೆ. ಎಲ್ಲ ನೋವನ್ನು ನಗುವಿನ ಮುಖವಾಡ ಹಾಕಿ ಮರೆಮಾಚಿದೆ. ಅಪ್ಪ ಅಮ್ಮ ಮದುವೆ ಪ್ರಸ್ತಾಪ ಎತ್ತಿದಾಗೆಲ್ಲ ಏನೋ ತಮಾಷೆ ಮಾಡಿ ಕಾಲ್ಕಿತ್ತುತ್ತಿದ್ದೆ‌.

ಬದುಕಿನಲ್ಲಿ ಅನಿರೀಕ್ಷಿತವಾಗಿ ಆಗುವ ಕೆಲವು ಭೇಟಿಗಳು ಬದುಕಿನ ಪಥವನ್ನೇ ಬದಲಿಸಿ ಬಿಡುತ್ತವೆ. ನನ್ನ ಬದುಕಲ್ಲಿ ಆ ಹೊಸ ಮುಂಜಾವು ಮೂಡಿತ್ತು.......]

ಇನ್ನೂ ಓದುತ್ತಿದ್ದ ಸೃಷ್ಟಿಗೆ ಹಿಂದೆ ಯಾರೋ ನಿಂತಂತೆ ಭಾಸವಾಯಿತು.

ತಿರುಗಿ ನೋಡಿ ಗಾಬರಿಯಿಂದ ಎದ್ದು ನಿಂತಳು. ಎದುರಿಗೆ ವಿಶ್ವಾಸ್ ಕೈ ಕಟ್ಟಿ ದೃಷ್ಟಿ ಎವೆಯಿಕ್ಕದೆ ನೋಡುತ್ತಿದ್ದ. ಸೃಷ್ಟಿ ಕಪಾಳಕ್ಕೆ ಜೋರಾಗಿ ಒಂದು ಹೊಡೆತ ಬಿದ್ದಿತು. "ಮನೆಗೆ ಬಂದ ಅತಿಥಿ ಅಂತ ಎಲ್ಲಾ ಸಹಿಸ್ಕೊಂಡೆ! ಬೇರೆಯವರ ಪರ್ಸನಲ್ ವಸ್ತು ಮುಟ್ಟಕೆ ನಾಚಿಕೆ ಆಗಲ್ವ. ನನ್ನ ಮುಂದೆ ನಿಂತ್ಕೊಬೇಡ ಎಲ್ಲಾದ್ರೂ ಹಾಳಾಗ್ ಹೋಗು.. ಗೆಟ್ ಲಾಸ್ಟ್"  ಎಂದು ರೂಂ ನಿಂದ ಆಚೆ ಹಾಕಿ ಡೋರ್ ಲಾಕ್ ಮಾಡಿದ.

ಆಳುತ್ತಿದ್ದ ಸೃಷ್ಟಿನ ಅನ್ನಪೂರ್ಣಮ್ಮ ದಿಪ್ತಿ ಸಮಾಧಾನ ಮಾಡ್ತಿದ್ದರು. ಅವರಿಗೆಲ್ಲ ಏನು ನಡೀತಿದೆ ಅನ್ನೋದೆ ಗೊತ್ತಾಗಲಿಲ್ಲ. ವಿಶ್ವಾಸ್ ಕೈಯಲ್ಲೊಂದು ಫೈಲ್ ಹಿಡಿದು ಡೋರ್ ಲಾಕ್ ಮಾಡಿಕೊಂಡು ತಿರುಗಿ ನೋಡದೆ ಆಫೀಸ್ ಗೆ ಹೊರಟು ಹೋದ.

" ಅವನು ಒಂತರಾ ಮನುಷ್ಯ ಅಂತ ಹೇಳಿದ್ದೆ ತಾನೇ, ಏನು ಕಿತಾಪತಿ  ಮಾಡೋಕೆ ಹೋಗಿದ್ದೆ. ಅವನು ಯಾವುದೋ ಫೈಲ್ ಮರೆತು ಹೋಗಿದ್ನಂತೆ ಅದ್ಕೆ ಬೇಗ ವಾಪಸ್ ಬಂದಿದಾನೆ. ಇಲ್ಲಾಂದ್ರೆ ಇಷ್ಟೆಲ್ಲಾ ಅವಾಂತರ ಆಗ್ತಿರ್ಲಿಲ್ಲ. ಹೋಗ್ಲಿ ಬಿಡೇ ಸಮಾಧಾನ ಮಾಡ್ಕೋ‌.." ದಿಪ್ತಿ ಸಮಾಧಾನ ಮಾಡಿದಳು.

ಅನ್ನಪೂರ್ಣಮ್ಮ, ಶಂಕರನಾರಾಯಣರು, ಶ್ರೀಕಂಠ, ಸುಂದ್ರಿ ಯಾರ್ ಎಷ್ಟೇ ಹೇಳಿದ್ರು ಸೃಷ್ಟಿ ಅಳು ನಿಲ್ಲಲೇ ಇಲ್ಲ.

ಶ್ರವಣ್ ಕೂಡ ಬಂದ ಮೇಲೆ ವಿಷಯ ಗೊತ್ತಾಗಿ " ನನಗೆ ಮೊದಲೇ ಗೊತ್ತಿತ್ತು ಕಣೇ, ನೀ ಮಾಡೋ ತಲೆಹರಟೆಗೆ ಇಂತದ್ದೆ ಏನೋ ಆಗತ್ತೆಂತ, ಮೊದಲೇ ಹೇಳಿದ್ದೆ ತಾನೇ ಅವನ ಸಹವಾಸಕ್ಕೆ ಹೋಗಬೇಡಾಂತ!!   ಏನೇ ಕೆನ್ನೆ ಗುಲಾಬ್ ಜಾಮೂನ್ ತರಾ ಆಗೋಗಿದೆ" ಅಂದಿದ್ದೆ ತಡ ಸುಂದ್ರಿ ನಿಮಗೆ ಜಾಮೂನ್ ಅಂದ್ರೆ ಅಷ್ಟು ಇಷ್ಟಾನಾ ರವೆಲೀ ಮಾಡಿದ ಜಾಮೂನ್ ತಿಂದಿದಿರಾ ? ಇಲ್ಲ ಅಲ್ವಾ? ಇವತ್ತೆ ಮಾಡ್ತಿನಿ ಬಿಡಿ ಎಂದಳು. ಶ್ರವಣ್ ಹೆಂಡತಿ ಮುಖ ನೋಡಿ ಅಳುಮುಖ ಮಾಡಿದ. ದಿಪ್ತಿ ತಲೆ ಚಚ್ಚಿಕೊಂಡು ಫರ್ಸ್ಟ್ ಅವಳನ್ನ ಸಮಾಧಾನ ಮಾಡಿ ಆಮೇಲೆ ನೀವು ಅಳಿ ಎಂದು ಜಾಗ ಖಾಲಿ ಮಾಡಿದಳು.

ವಿಶ್ವಾಸ್ ಮನೆಗೆ ಬರುತ್ತಲೇ ಅನ್ನಪೂರ್ಣಮ್ಮ ಭಾಷಣ ಕೊಟ್ಟಿದ್ದರು. ಅದರ ಪರಿಣಾಮ ಅವನೇ ಸೃಷ್ಟಿನ ಸಮಾಧಾನ ಮಾಡೋಕೆ ರೂಂ ಗೆ ಬಂದ.

ಇವಳು ಅಳುತ್ತಲೇ ಇದ್ದಳು. ವಿಶ್ವನಿಗೆ ರೇಗಿತ್ತು ಹೇಳಿದ - "ನೀ ಹಿಂಗೆ ಕುಂಯ್ ಕುಂಯ್ ನಾಯಿಮರಿ ತರ ಅಳ್ತಾ ಇದ್ರೆ ಇನ್ನೊಂದ್ ಕೆನ್ನೆಗೆ ಬಾರಸ್ಬೇಕಾಗತ್ತೆ! ಬೆಳಿಗ್ಗೆಯಿಂದ ಏನೂ ತಿಂದಿಲ್ವಂತೆ ಬಾ ಊಟ ಮಾಡು" ಎಂದ.

"ನೀವು ಸಾರಿ ಕೇಳೊವರೆಗೂ ನಾ ಬರಲ್ಲ..." ಅವಳು ರೇಗಿದಳು.

"ಸಾಧ್ಯಾನೇ ಇಲ್ಲ. ಅದರ ಬದಲು ಬೇರೆನಾದ್ರೂ??"

"ನಿಮ್ ಕೆನ್ನೆಗೆ ನಾನು ಒಂದ್ ಹೊಡಿತೀನಿ!!"

ಅವನು ಒಂದು ಹೆಜ್ಜೆ ಹಿಂದೆ ಸರಿದು" ನೋ ವೇ. ಬೇರೆನಾದ್ರೂ...?"

"ಅತ್ತು ಅತ್ತು ಬೇಜಾರಾಗಿದೆ ನೈಟ್ ಔಟ್ ಕರ್ಕೊಂಡು ಹೋಗಿ..ಹಾಗಾದ್ರೆ‌.."

ಎಲ್ಲಿದ್ದೆ ಮಹಾತಾಯಿ.. ನನಗ್ಯಾಕೆ ಗಂಟು ಬಿದ್ದಿದೀಯಾ ಎನ್ನುತ್ತಲೇ "ಸರಿ,  ಆದ್ರೆ ಇದು ಟಾಪ್ ಸೀಕ್ರೆಟ್ ಯಾರಿಗೂ ಹೇಳೋ ಹಾಗಿಲ್ಲ! ಎಲ್ಲರೂ ಮಲಗಿದ ಮೇಲೆ ಹೋಗೋದು! ಒಕೆ. ಈಗ ಊಟ ಮಾಡು ಬಾ" ಎಂದು ಕರೆತಂದಿದ್ದ

ಎಲ್ಲರೂ ಏನೂ ನಡದೇ ಇಲ್ಲ ಎನ್ನುವ ಹಾಗೆ ಖುಷಿಯಿಂದ ಊಟ ಮಾಡಿದರು. ಸುಂದ್ರಿಯ ರವೆ ಜಾಮೂನು ತಿಂದ ಶ್ರವಣ್ ಮುಖ ಇಂಗು ತಿಂದ ಮಂಗನಂತಾಗಿತ್ತು!!

ಎಲ್ಲರೂ ಮಲಗಿದ ಮೇಲೆ ಶ್ರೀಕಂಠ ಸುಂದ್ರಿಯ ಕಣ್ತಪ್ಪಿಸಿ ಇಬ್ಬರೂ ಸೇರಿ ಒಂದು ಲಾಂಗ್ ವಾಕ್ ಹೊರಟರು‌.  ಐಸ್ ಕ್ರೀಂ ತಿಂದರು. ಏನೇನೋ ಮಾತು ಕದನ ಹರಟೆ.... ಆ ರಾತ್ರಿಯ ಚಳಿ, ಬೆಳದಿಂಗಳು ಇಬ್ಬರ ಬದುಕಿನಲ್ಲಿ ಮರೆಯದ ಸವಿ ನೆನಪಾಗಿ ಉಳಿಯಿತು. ಮನಸ್ಸು ಪ್ರಸನ್ನವಾಗಿದ್ದವು. ನೋವಿನ ನೆನಪುಗಳೆಲ್ಲ ಕೊಚ್ಚಿ ಹೋಗಿದ್ದವು.

ಅವನ ಆಲೋಚನೆ - ಪಾಪ ಹೊಡಿಬಾರದಿತ್ತು.. ಇಡೀ ದಿನ ಅವಳನ್ನ ನನಗೆ ಗೊತ್ತಿಲ್ಲದಂತೆ ಏಕವಚನದಲ್ಲಿ ಮಾತಾಡ್ಸಿದ್ದೆ, ಅಷ್ಟು ಹತ್ರ ಯಾವಾಗಾದಳೋ ಈ ಹುಡುಗಿ

ಅವಳ ಆಲೋಚನೆ - ಇಷ್ಟು ಒಳ್ಳೆ ಹುಡುಗನ್ನ ಬಿಟ್ಟು ಹೋಗೋ ಅನಿವಾರ್ಯತೆ ಏನಿತ್ತು ಆ ಹುಡುಗಿಗೆ?? ಪ್ರೀತಿ ಇದ್ದಲ್ಲಿ ಪ್ರತೀಕಾರ ಹೇಗೆ ಬರೋಕೆ ಸಾಧ್ಯ!!

ಮರುದಿನ ಶ್ರವಣ್ ಕಾನ್ಫರೆನ್ಸ್ ಮುಗಿದಿತ್ತು. ಅವರು ತಮ್ಮ ಊರಿಗೆ ಹೊರಟು ನಿಂತರು. ಶ್ರವಣ್ ಗೆ ಮೊದಲು ಈ ಊರು ಖಾಲಿ ಮಾಡಬೇಕೆನಿಸಿತ್ತು. ರಾತ್ರಿ ತಿಂದ ರವೆ ಜಾಮೂನು ಹೊಟ್ಟೆಯಲ್ಲಿ ಗಲಭೆ ಶುರುಮಾಡಿದ್ದವು. ಅಂತದ್ದರಲ್ಲಿಯೂ ಸುಂದ್ರಿಗೆ ಪಾಕಪ್ರವೀಣೆ ಎಂಬ ಬಿರುದು ಸಹ ಕೊಟ್ಟಿದ್ದ. ಸೃಷ್ಟಿಗೆ ವಿಶ್ವಾಸ್ ನ ಅಗಲಿಕೆಯ ನೋವಿಗಿಂತ ಹೆಚ್ಚಾಗಿತ್ತು ಸುಂದ್ರಿಯ ದುಃಖ!! ಅಪರೂಪಕ್ಕೆ ಸಿಕ್ಕ ಅವಳ ಪಾಕಶಾಸ್ತ್ರದ ಅಭಿಮಾನಿ ದೂರವಾಗಿದ್ದ.

ಸೃಷ್ಟಿ, ವಿಶ್ವಾಸ್  ಮನಸ್ಸಲ್ಲಿ ಮಾತುಗಳು ಸಾವಿರ ಇದ್ದವು. ಕಣ್ಣ ವ್ಯವಹಾರದಲ್ಲೇ ಎಲ್ಲ ಲೂಟಿಯಾಗಿದ್ದವು.

              ********


ಸೃಷ್ಟಿ, ಶ್ರವಣ್ ದಿಪ್ತಿ ಹೋದ ಮೇಲೆ ಮನೆ ಬಿಕೋ ಎನ್ನಿಸಿತು ಸುಂದ್ರಿಗೆ. ಅಪ್ಪನನ್ನ ಒತ್ತಾಯ ಮಾಡಿ ಊರಿಗೆ ಎಳೆದುಕೊಂಡು ಹೊರಟು ಹೋದಳು. ಈಗ ಮನೆ ಪೂರ್ತಿ ಖಾಲಿ ಖಾಲಿ ಎನಿಸೋಕೆ ಶುರುವಾಯಿತು.

ವಿಶ್ವನಿಗೆ ಮನೆಗೆ ಬಂದ ಕೂಡಲೇ ಸೃಷ್ಟಿ ಅವನನ್ನು ಕಾಡಿಸುತ್ತಿದ್ದ ರೀತಿ, ಅವಳ ಜೊತೆಗಿನ ತುಂಟ ತಕರಾರು, ಇವನು ರೇಗಿದಷ್ಟು ಅತಿಯಾಗುತ್ತಿದ್ದ ಅವಳ ತುಂಟಾಟ, ಎಲ್ಲಾ ಏನೋ ಕಳೆದುಕೊಂಡಂತೆ ಎನ್ನಿಸಿತು. ಆದರೆ ಮೊದಲಿನ ಹಾಗೆ ಮನಸ್ಸು ಭಾರವಾಗಿರದೆ, ಯಾವುದೋ ಖುಷಿಯ ಉನ್ಮಾದತೆಯಲ್ಲಿ ತೇಲುತ್ತಿತ್ತು.  ಅನ್ನಪೂರ್ಣ ಮತ್ತು ಅವರ ಪತಿಗೆ ಮಗನ ಮದುವೆ ವಿಚಾರ ಮತ್ತೆ ತಲೆಗೆ ಏರಿತು. ಇಬ್ಬರೂ ಹೀಗೆ ಮಾತಾಡುತ್ತಿರುವಾಗ ಶಂಕರ್ ನಾರಾಯಣರು ಹೇಳಿದರು "ಆ ಹುಡುಗಿ ಸೃಷ್ಟಿ ಬಂದು ಹೋದಾಗಿಂದ ನಮ್ಮ ವಿಶ್ವಾ  ಮೊದಲಿನಂತೆ ಗೆಲುವಾಗಿದಾನೆ ಅಲ್ವಾ"

"ಹೌದು ರೀ, ನಾನು ಗಮನಿಸಿದೆ‌‌. ಇಬ್ರೂ ಕಿತ್ತಾಡ್ತಿದ್ರೂ ಏನೋ ಒಂತರಾ ಹೊಂದಾಣಿಕೆ ಇತ್ತು ಇಬ್ಬರಲ್ಲಿ, ಅವಳಿಗೂ ಮನಸ್ಸಿರೋ ಹಾಗಿದೆ! ಮತ್ತೆ ಗೊತ್ತಾ ಮದುವೆ ಮುರಿದ ಮೇಲೆ ದೇವಸ್ಥಾನಕ್ಕೆ ಹೋಗದಿರೋನು ಇತ್ತಿಚೆಗೆ ಆ ಬೆಟ್ಟದ ದೇವಸ್ಥಾನಕ್ಕೆ ಮತ್ತೆ ಹೋಗ್ಲಿಕ್ಕೆ ಶುರು ಮಾಡಿದಾನೆ! ಹಳೆಯದೆಲ್ಲ ಮರೆತು ಹೊಸ ಬದುಕು ಕಟ್ಕೊಂಡ್ರೆ ಸಾಕಲ್ವ!! ಇವನು ಸೃಷ್ಟಿನ ಇಷ್ಟ ಪಡ್ತಿದ್ರೆ ಕೂಡಲೇ ಶ್ರವಣ್ ಮೂಲಕ ಅವರ ತಂದೆ ತಾಯಿಗೆ ತಿಳಿಸಿ ವಾಲಗ ಊದಿಸಿ ಬಿಡೋಣ!! " ಹೀಗೆ ಸಾಗಿತ್ತು ದಂಪತಿಗಳ ಮಾತುಕತೆ. ವಿಶ್ವನಿಗೆ ಈ ಬಗ್ಗೆ ಕೇಳಿದಾಗ ನಿಮ್ಮಿಷ್ಟ, ಹೇಗಂತಿರೋ ಹಾಗೆ ಎಂದು ಹೇಳಿ ಸುಮ್ಮನಾಗಿದ್ದ.

                          *******

ಒಂದು ದಿನ ವಿಶ್ವಾಸ್ ಆಫೀಸಿನಲ್ಲಿದ್ದಾಗ ಒಂದು ಅಪರಿಚಿತ ನಂಬರ್ ಕರೆ ಬಂದಿತು. ಇವನು ಕೆಲಸದೊತ್ತಡದಲ್ಲಿ ಕಟ್ ಮಾಡಿದ. ಆದರೂ ಮತ್ತೆ ಮತ್ತೆ ಕಾಲ್ ಬರುತ್ತಲೇ ಇತ್ತು. ಕೊನೆಗೆ ಬೇಸತ್ತು ರೀಸಿವ್ ಮಾಡಿ ರೇಗುತ್ತ ಹಲೋ ಎಂದ. ಆಕಡೆಯಿಂದ ಒಂದು ಹೆಣ್ಣು ಧ್ವನಿ ಹಲೋ... ಎಂದಿತು. ಇವನು ಸ್ತಬ್ಧನಾದ. ಮುಂದೆ ಮಾತೇ ಹೊರಡಲಿಲ್ಲ. ಎರಡು ಕಡೇ ಮೌನ ಆವರಿಸಿತು. ಮನಸ್ಸು ಹೇಳಿತು ಅದೇ ಧ್ವನಿ.. ಅವಳೇ.. ಸಹನಾ.. ಹೇಗೆ ಮರೆಯಲು ಸಾಧ್ಯ ಆ ಧ್ವನಿ, ಎಷ್ಟು ಹಂಬಲಿಸಿ ಬಯಸಿ, ಪರದಾಡಿದ್ದೆ ಆ ಧ್ವನಿ ಕೇಳಲು.. ಈಗ ಕೇಳಿ ಇಷ್ಟು ನಿಶ್ಯಬ್ದ ಏಕಾದೆ!!

ತಕ್ಷಣ ಇನ್ನೊಂದು ಧ್ವನಿ ಕೇಳಿಸಿತು - ಏನ್ ಲವರ್ ಗಳೋ, ಏನೋಪಾ, ಎಷ್ಟೋ ದಿನಗಳ ನಂತರ ಮಾತಾಡ್ತಿದಿರಾ ಸ್ವಲ್ಪನೂ ಎಕ್ಸೈಟ್ಮೆಂಟ್ ಇಲ್ಲ! ಛೇ ನಮ್ ಅಣ್ಣಾನೇ ವಾಸಿ ಇದಕ್ಕಿಂತ.. ಸೃಷ್ಟಿ ರೇಗಿದಳು.

ನಿನ್ ಎಲ್ಲಿದೀಯಾ? ಅವಳು ಹೇಗೆ ಸಿಕ್ಳು ನಿಂಗೆ? ಕೇಳಿದ ವಿಶ್ವಾಸ್.

ಎಲ್ಲಾ ಹೇಳ್ತಿನಿ. ಈ ಕೂಡಲೇ ಚೆನ್ನೈ ಗೆ ಬಂದ್ರೆ.. ಸೃಷ್ಟಿ ಹೇಳಿದಳು.

ನೀನು? ಚೆನ್ನೈಗೆ ? ಏನೋ ಯೋಚನೆ ಮಾಡಿ ಸರಿ ಸರಿ. ಬರ್ತಿದೀನಿ ಎಂದು ಫೋನ್ ಇಟ್ಟ.

ಸಹನಾ ಸಿಕ್ಕ ಖುಷಿಗಿಂತ ಯಾವುದೋ ಆತಂಕ ಹೆಚ್ಚಾಗಿತ್ತು ಅವನಿಗೆ. ಯಾಕೆ ಎಂಬ ಪ್ರಶ್ನೆಗೆ ಉತ್ತರ ಅವನಿಗೂ ತಿಳಿದಿರಲಿಲ್ಲ. ಆಫೀಸ್ ಗೆ ರಜೆ ಹಾಕಿ ಹೊರಟ. ಅಮ್ಮನಿಗೆ ಫೋನ್ ಮಾಡಿ ಲಗೇಜ್ ಪ್ಯಾಕ್ ಮಾಡಲು ಹೇಳಿದ್ದ ಬಂದ ತಕ್ಷಣ ಆಫೀಸ್ ಕೆಲಸ ಎಂದಷ್ಟೇ ಹೇಳಿ ಚೆನ್ನೈ ಗೆ ನಿರ್ಗಮಿಸಿದ.

ದಾರಿಯುದ್ದಕ್ಕೂ ಮನದಲ್ಲಿ ಬಗೆಹರಿಯದ ಸಾವಿರ ಪ್ರಶ್ನೆಗಳು.. ಉತ್ತರ ತಿಳಿಯುವ ಕುತೂಹಲಕ್ಕಿಂತ ಯಾವುದನ್ನೋ ಕಳೆದುಕೊಳ್ಳುವ ಭಾವನೆಗೆ ಮನ ಕಂಪಿಸಿತು. ಮನಸ್ಸಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಚೈನ್ನೈ ತಲುಪಿದಾಗ ರಾತ್ರಿ 11.30pm ಆಗಿತ್ತು. ತುಂಬಾ ದಣಿವು ಹಸಿವು ಆದ ಕಾರಣ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿ ರೆಸ್ಟ್ ಮಾಡಿದ. ಸೃಷ್ಟಿ ಜೊತೆ ಫೋನ್ ನಲ್ಲಿ ಮಾತಾಡಿ ಮರುದಿನ ಭೇಟಿಯಾಗುವ ಸ್ಥಳ ಸಮಯ ನಿಗದಿ ಮಾಡಿದ. ಆ ಇಡೀ ರಾತ್ರಿ ನಿದ್ರೆ ಬರಲಿಲ್ಲ ಬದಲಾಗಿ ತಲೆ ತುಂಬಾ ಯೋಚನೆಗಳೇ ತುಂಬಿದ್ದವು. ಅವನ ಮನಸ್ಸಲ್ಲಿ ಸಾವಿರ ಯೋಚನೆಗಳ ಪ್ರಕ್ಷುಬ್ಧತೆ.. ಬಯಸಿದ್ದು ಕಳೆದು  ಹೋಗಿತ್ತು. ಬೇರೊಂದನ್ನು ಬಯಸಿಯಾಗಿತ್ತು‌. ಈಗ ಬಯಸಿರೋದೆ ಕಳದಿರೋದನ್ನಾ ಹುಡುಕಿ ಕರೆತಂದಿದೆ. ಬಯಕೆ ಬದಲಾಗಿದೆ.

                    *********

ಮರುದಿನ ಸಂಜೆ 6 ಗಂಟೆ_
ಮರೀನಾ ಬೀಚ್_

ದಡದ ನೀರವ ಮೌನವನ್ನು ಕಡಲಲೆಗಳು ತಾಕಿ ಸತಾಯಿಸುತ್ತಿದ್ದವು. ದೂರದಲ್ಲೆಲ್ಲೋ ತಂಗಾಳಿ ಇನಿದಾದ ಸಂಗೀತ ತೇಲಿಸಿ ತರುತ್ತಿತ್ತು. ಹಗಲ ಕಾರ್ಯ ಮುಗಿಸಿ ಸೂರ್ಯ ಬಾನಾಚೆ ಜಾರಿ ವಿರಮಿಸುವ ಹೊತ್ತು.. ಭುವಿಗು ಆಗಸಕೂ ಒಟ್ಟೊಟ್ಟಿಗೆ ಸೂರ್ಯ ಮುತ್ತಿಡುವ ಹೊತ್ತು.. ಮುಸ್ಸಂಜೆಯೆನ್ನುವ ಅಮಲು..

ವಿಶ್ವಾಸ್ ಬರುವಷ್ಟರಲ್ಲಿ ಸೃಷ್ಟಿ ಆಗಲೇ ಅಲ್ಲಿ ಬಂದು ಕಾಯುತ್ತಿದ್ದಳು. ಅಲೆಗಳ ಜೊತೆ ಆಟವಾಡುತ್ತಾ ಪುಟ್ಟ ಮಗುವಿನ ಹಾಗೆ.. ಪ್ರಪಂಚದ ಯಾವ ಕಿರಿಕಿರಿಯು ಇವಳ ಸಂತೋಷ ಕದಡದ ಹಾಗೆ..

ಅವನನ್ನ ಕಂಡು 'ಹಾಯ್' ಅಂದಳು ದೂರದಿಂದಲೇ.

'ಕೊಂಬು ಇನ್ನೂ ಬಂದಿಲ್ವಲ್ಲಾ ಹೇಗೆ ಹಾಯೋದು?'ಎಂದ ನಗುತ್ತಾ.

' ಸಮುದ್ರಕ್ಕೆ ಉಪ್ಪಾ.. ನಮ್ ಡೈಲಾಗ್ ನಮಗೆನಾ!'

'ಏನೂ ಇಷ್ಟು ದೂರ ಚೆನ್ನೈಗೆ ಬಂದಿದ್ದು??' ಕೇಳಿದ.

ಅದು ನಮ್ ಕಾಲೇಜಿನಿಂದ ಆರ್ಗನ್‌ ಡೋನೆಷನ್ ಕ್ಯಾಂಪ್ ಗೆ ಅಂತ ಕೆಲವು ಸ್ಟೂಡೆಂಟ್ ಸೆಲೆಕ್ಟ್ ಆಗಿದೀವಿ. ಅದ್ರಲ್ಲಿ ನಾನು ಒಬ್ಳು. ಸೋ..

ಎಲ್ಲಿ ಸಹನಾ??

ಇನ್ನೂ ಬಂದಿಲ್ಲ. ಬರ್ತಿನಿ ಅಂದಿದಾರೆ. ಟ್ರಾಫಿಕ್ ನಲ್ಲಿ ಲೇಟ್ ಆಗಿದೆ ಅನ್ಸುತ್ತೆ.

'ಸಹನಾ ಹೇಗೆ ಸಿಕ್ಳು ನಿಂಗೆ? ಆಕಸ್ಮಿಕವಾಗಿ ಅಥವಾ ಅವಳು ಇಲ್ಲಿದಾಳೆ ಅಂತ ನಿನಗೆ ಮೊದಲೇ ಗೊತ್ತಿತ್ತಾ?' ನೇರವಾಗಿ ಮುಖ್ಯ ವಿಷಯಕ್ಕೆ ಬಂದ.

ಆ್ಯಕ್ಚುಲಿ ಅವಳ ಅಕ್ಕ ಕಾವ್ಯಾ ಹೇಳಿದಳು, ಸಹನಾ ಇಲ್ಲಿ ಬ್ಯಾಂಕ್ ನಲ್ಲಿ ವರ್ಕ್ ಮಾಡ್ತಿದಾಳೆ ಅಂತ

ಅವಳ ಅಕ್ಕ ನಿನಗ್ಯಾಕೆ ಹೇಳಿದ್ಲು? ನೀ ಯಾವಾಗ ಅವರಕ್ಕನ್ನ ಭೇಟಿಯಾದೆ?

ಅವತ್ತು ನಿಮ್ ಕಥೆಯೆಲ್ಲಾ ಓದಿದ ಮೇಲೆ ಡಿಸೈಡ್ ಮಾಡಿದೆ ನಿಮ್ ಪ್ರೀತಿನಾ ಹುಡುಕಿ ಕೊಡ್ಬೇಕು, ನಿಮ್ಮಿಬ್ರನ್ನೂ ಒಂದು ಮಾಡ್ಬೇಕು ಅಂತ. ಅದ್ಕೆ ನಿಮ್ಮ ಮನೆಯಿಂದ ಹೊರಟ ಮೇಲೆ ಅತ್ತಿಗೆಗೆ ನೈಸ್ ಮಾಡಿ ಸಹನಾ ಮನೆ ಅಡ್ರೆಸ್ ಡೀಟೇಲ್ಸ್ ಎಲ್ಲಾ ತಿಳ್ಕೊಂಡೆ. ಒಮ್ಮೆ ಹೋಗಿ ಭೇಟಿಯಾದೆ..

'ನಾನು ವಿಚಾರಿಸಿದ್ದೆ ಅವರ ಮನೇಲಿ ಆಗ ಏನೂ ಗೊತ್ತೆ ಇಲ್ಲ ಅಂದಿದ್ದರು!!!' ವಿಶ್ವಾಸ್ ಹೇಳಿದ.

"ನಾನು ಕಾವ್ಯಾನ್ನ ಕೇಳಿದಾಗ ಮೊದಲು ಗೊತ್ತಿಲ್ಲ ಎಂದೇ ಅಂದ್ಳು ಆಮೇಲೆ ಸರಿಯಾಗಿ ಎರಡು ಬಿಟ್ಟೆ ನೋಡಿ ಬಾಯಿ ಬಿಟ್ಳು ಎಲ್ಲಾನೂ...

-- ನಿಮ್ಮ ಮದುವೆ ನಿಶ್ಚಯವಾದಾಗಿನಿಂದ ಕಾವ್ಯಾಗೆ ಹೊಟ್ಟೆಕಿಚ್ಚು ಶುರುವಾಗಿದೆ. ಅವಳನ್ನ ನೋಡೋಕೆ ಬಂದ ಹುಡುಗ ತಂಗಿನ ಇಷ್ಟ ಪಟ್ಟ ಅಂತ. ಮದುವೆವರೆಗೂ ಸುಮ್ಮನಿದ್ದವಳು ಅವತ್ತು ಮದುವೆ ಹಿಂದಿನ ದಿನ ಸಹನಾ ಕಾವ್ಯಾ ಇಬ್ರೇ ಇರೋವಾಗ ಕಾವ್ಯಾ ಸುಸೈಡ್ ಮಾಡ್ಕೊಳ್ಳೋಕೆ ಹೋದ್ಲಂತೆ, ಸಹನಾ ಹೋಗಿ ತಪ್ಪಿಸಿ ಯಾಕೆ ಅಂತ ಕೇಳಿದಾಗ ಆ ಹುಡುಗನ್ನ ನಾ ಇಷ್ಟ ಪಡ್ತಿದಿನಿ, ನೀನು ಮದುವೆ ಆಗ್ತಿದಿಯಾ, ನನ್ನ ಸಾವಿಗೆ ನೀನೇ ಕಾರಣ ಅಂತ ಹೆದ್ರಿಸಿದ್ದಾಳೆ. ನಾ ಹೇಳಿದ ಹಾಗೆ ಕೇಳಿದ್ರೆ ಬದುಕ್ತಿನಿ ಇಲ್ವೊ ಸಾಯ್ತಿನಿ ಅಂದ್ಲಂತೆ. ನಿಮ್ ಹುಡುಗಿ ಪಾಪ ಇನ್ನೋಸೆಂಟು ಹೆದರಿ ಅವಳು ಹೇಳಿದಂಗೆ ಕೇಳಿ ಹಿಂದಿನ ಬಾಗಿಲಿಂದ ಹೊರಟು ಹೊಗಿದಾಳೆ. ಈಗ ಇಲ್ಲಿ ಚೆನ್ನೈಯಲ್ಲಿ ಫ್ರೆಂಡ್ ಜೊತೆ ಶಿಫ್ಟ್ ಆಗಿದಾಳಂತೆ"  ನನಗೂ ಚೆನ್ನೈಗೆ ಬರೋ ಚಾನ್ಸ್ ಸಿಕ್ತು ಅವರನ್ನ ಹುಡುಕಿ ನಿಮ್ಜೊತೆ ಮಾತಾಡ್ಸಿದೆ. ಅವರು ನಿಮ್ಮ ನೆನಪಲ್ಲೇ ಹಾಗೇ ಇದ್ದಾರೆ.. " ಕಥೆ ಹೇಳಿ ಮುಗಿಸಿದಳು.

ಕಾವ್ಯಾನೇ ಕಾರಣ ಅಂತ ಮೊದಲೇ ಹೇಗೆ ಗೊತ್ತಾಯ್ತು ನಿಂಗೆ?

"ಇದೆಲ್ಲಾ ಗರ್ಲ್ಸ್ ಸೈಕಾಲಜಿ ಮಾs!! ನಿಮ್ಗೆಲ್ಲಾ ಅರ್ಥ ಆಗಲ್ಲ. ನಂಗೆ ಅವರ ಅಕ್ಕ ಕಾವ್ಯ ಮೇಲೇ ಡೌಟಿತ್ತು, ಮತ್ತೆ ಅವರಮ್ಮ ಕೂಡ ಹೇಳಿದ್ರು ಅವರೆಲ್ಲ ಏನೋ ಶಾಸ್ತ್ರದ ತಯಾರಿ ಮಾಡ್ತಿದ್ರಂತೆ ಅವತ್ತು ಸಂಜೆ ರೂಂಲ್ಲಿ ಸಹನಾ ಕಾವ್ಯಾ ಇಬ್ರೇ ಇದ್ರು ಅಂತ. ನಂಗೆ ಅನ್ನಿಸ್ತು ಕಾವ್ಯಂದೇ ಏನೋ ಕಿತಾಪತಿ ಇರಬಹುದುಂತ. ಅದ್ಕೆ ಎರಡ್ ಬಾರಿಸ್ದೆ!! ಅವಳು ಅನ್ಕೊಂಡಿದ್ಲಂತೆ ಸಹನಾ ಓಡಿ ಹೋದ್ರೆ ನೀವು ಅವಳನ್ನ ಮದುವೆ ಆಗ್ತಿರಾಂತ! ಪಾಪ ಆಸೆ ನಿರಾಸೆಯಾಯ್ತಂತೆ!"

' ನಿಜವಾಗ್ಲೂ ಹೊಡೆದ್ಯಾ ಅವಳಿಗೆ? '

ಹ್ಮೂ..ಮತ್ತೆ, ನೀವು ಕೊಟ್ಟಿದ್ ಬ್ಯಾಲೆನ್ಸ್ ಇತ್ತಲ್ವಾ! ಅವಳಿಗೆ ಬಿಟ್ಟೆ ನೋಡಿ ಸರಿಯಾಗಿ!! ನಿಜ ಹೇಳಬೆಕಂದ್ರೆ ನೀವು ನನಗೆ ಹೋಡೆಯೋಕು ಅವಳೇ ತಾನೇ ಕಾರಣ!!

ಹೇಗೆ?

ಅವಳು ಸಹನಾಗೆ ಹೆದರಿಸಿಲ್ಲ ಅಂದ್ರೆ ನಿಮ್ ಮದುವೆ ಆಗೊಗಿರೋದು. ನಿಮ್ ಲವ್ ಸ್ಟೋರಿನಾ ನಾನು ಕದ್ದು ಓದ್ತಿರ್ಲಿಲ್ಲ. ನೀವು ನಂಗೆ ಹೊಡೀತಾ ಇರ್ಲಿಲ್ಲ. ಅವಳಿಂದ ಕಥೆನೇ ಉಲ್ಟಾ ಆಗೋಯ್ತು. ನೀವು ಮತ್ತೆ ಊರಿಗೆ ಹೋಗಿ ಮದುವೆ ಆಗೋಕೆ ಅವಳು ಬಿಡೊಲ್ಲ.  ನೀವಿಬ್ರೂ ಇಲ್ಲೇ ರಿಜಿಸ್ಟರ್ ಮದುವೆ ಆಗ್ಬಿಡಿ. ನಾನು ನನ್ನ ಫ್ರೆಂಡ್ಸ್ ಸಾಕ್ಷಿಯಾಗ್ತಿವಿ ಒಕೆ..

ಹ್ಮೂ... ಮತ್ತೆ ನಮ್ ಮದುವೆ ಮಾಡಿಸಿದ ಮೇಲೆ ಹನಿಮೂನ್ ಗೂ ನೀನೇ ಟಿಕೆಟ್ ಬುಕ್ ಮಾಡಿಸ್ಬಿಡು. ಅಂದಹಾಗೆ ನಿನ್ ಮದುವೆ ಯಾವಾಗ..?

ಸೃಷ್ಟಿಗೆ ಅಳು ಬಂದರೂ ಕಣ್ಣೀರು ಜಾರಲು ಬಿಡಲಿಲ್ಲ. ಸುಮ್ನೆ ಮುಖ ತಿರುಗಿಸಿ ನಿಂತಳು. ಅಷ್ಟರಲ್ಲಿ ಸಹನಾ ಅಲ್ಲಿಗೆ ಬಂದಳು. ವಿಶ್ವಾಸನನ್ನು ನೋಡಿ ನಕ್ಕಳು.

ವಿಶ್ವಾಸ್ ಅವಳನ್ನ ನೋಡಿ ಯಾವ ಪ್ರತಿಕ್ರಿಯೆ ನೀಡಲಿಲ್ಲ. ಅವನೇ ಮಾತು ಶುರು ಮಾಡಿದ " ಏನ್ರೀ ಸಹನಾ, ನಾಳೆನೇ ರಿಜಿಸ್ಟರ್ ಆಫೀಸಲ್ಲಿ ನಮ್ಮ ಮದುವೆಯಂತೆ! ಇವಳೇ ಮುಂದೆ ನಿಂತು ಮದುವೆ ಮಾಡಸ್ತಾಳಂತೆ! ನಿಮ್ಗೆ ಒಪ್ಕೆನಾ??

ಅವಳು ಒಂದು ಕ್ಷಣ ಆಲೋಚಿಸದೆ ಹ್ಮೂ ಎಂದು ಕತ್ತು ಅಲ್ಲಾಡಿಸಿದಳು.

ನಾಳೆ ಮುಹೂರ್ತದ ಸಮಯಕ್ಕೆ ಇವಳೇ ನೀವು ಓಡಿ ಹೋಗದಿದ್ರೆ ಸಾಯ್ತಿನಿ ಅಂತ ಹೆದ್ರಿಸಿದ್ರೆ ಮತ್ತೆ ಓಡಿ ಹೋಗ್ಬಿಡ್ತಿರಾ? ಹೇಗೆ? ಅವಳು ಮೌನವಾಗಿ ನಿಂತಳು.

ಅವತ್ತು ಮದುವೆ ಮಂಟಪದಿಂದ ಓಡಿ ಹೋಗೋ ಮುಂಚೆ ಒಮ್ಮೆ ನನ್ನ ಬಗ್ಗೆ ಯೋಚನೆ ಮಾಡಿದ್ರಾ! ನನ್ನ ಪರಿಸ್ಥಿತಿ ಏನಾಗಿರುತ್ತೆ, ಹೇಗೆ ಸಹಿಸ್ಕೊಳ್ತಿನಿ ಇದನ್ನೆಲ್ಲ ಅಂತ ಒಮ್ಮೆ ಆಲೋಚಿಸಿದ್ರಾ!!  ಕಾವ್ಯಂಗೆ ಕೆನ್ನೆಗೆರೆಡು ಬಾರಿಸಿ ಬುದ್ದಿ ಹೇಳಬಹುದಿತ್ತು. ಅವಳ ಮುಂದೆ ಹೋದಂತೆ ಮಾಡಿ ಅಪ್ಪ ಅಮ್ಮಂಗೆ ಹೀಗೆ ಅಂತ ತಿಳಿಸಬಹುದಿತ್ತು, ಹೋಗ್ಲಿ ಕೈಯಲ್ಲಿ ಫೋನ್ ಇತ್ತಲ್ವಾ ನನಗೊಂದ್ ಮಾತು ಹೇಳ್ಬೆಕಿತ್ತು, ಸರಿ ಹೋಗೋದು ಹೋಗಿದ್ರಿ ಯಾವತ್ತಾದ್ರು ಒಂದು ದಿನ ಅವನು ಸತ್ತಿದಾನಾ ಬದುಕಿದ್ದಾನಾ ಅಂತ ಒಂದು ಕಾಲ್ ಮಾಡಬಹುದಿತ್ತು..

ಇವತ್ತು ಕೇಳಿದ ತಕ್ಷಣ ಕತ್ತು ಅಲ್ಲಾಡಿಸಿ ಹ್ಮೂ ಅಂತಿದಿರಲ್ಲಾ, ಒಂದು ವೇಳೆ ನಾನು ಅವತ್ತೇ ಕಾವ್ಯನ ಜೊತೆಗೆ ಮದುವೆ ಆಗಿದ್ರೆ, ಅಥವಾ ಇವತ್ತು ಸೃಷ್ಟಿ ನಮ್ಮನ್ನ ಭೇಟಿ ಮಾಡಿಸ್ದೆ ಹೋಗಿದ್ರೆ, ನೀವು ಇಲ್ಲೇ ನಾನು ಅಲ್ಲೇ, ನಿಮಗೆ ನನ್ನ ಜೊತೆ ಬಾಳೋ ಆಸೆನೇ ಇಲ್ಲ ಅನ್ಸುತ್ತೆ..

ನೀವು ನಿಜವಾಗ್ಲೂ ಪ್ರೀತಿಸಿದ್ರಾ ?ನೀವು ನಿಜವಾಗ್ಲೂ ಪ್ರೀತಿಸಿದ್ದೆ ಆದರೆ ಇಷ್ಟು ಸುಲಭಕ್ಕೆ ಸೋಲೊಪ್ತಿರಲಿಲ್ಲ. ನಿಮಗೆ ಬೇಡವಾಗಿತ್ತು ಬಹುಶಃ..! ನಾನು ಇಲ್ಲಿಯವರೆಗೆ ಬಂದಿದ್ದು ನಿಮ್ಮನ್ನ ಭೇಟಿಯಾಗೋಕೆ ಅಲ್ಲ, ನಿಮಗೆ ಇವಳನ್ನ ಭೇಟಿ ಮಾಡ್ಸೋಕೆ..

ಇಷ್ಟು ದಿನ ನಿಮ್ಮ ಹುಡುಕಾಟದಲ್ಲಿ ಬದುಕನ್ನ ಬದುಕೋದೆ ಮರೆತು ಬಿಟ್ಟಿದ್ದೆ! ಇವಳು ಬಂದಮೇಲೆ ಬದುಕು ಮತ್ತೆ ಚಿಗುರೋಕೆ ಶುರುವಾಗಿದ್ದು. ತಾನು ನನ್ನನ್ನು ಪ್ರೀತಿಸ್ತಿದ್ರೂ ಸಹ  ನನ್ನ ಖುಷಿಗೊಸ್ಕರ ನಮ್ಮಿಬ್ಬರನ್ನು ಒಂದು ಮಾಡೋಕೆ ನೋಡ್ತಿದಾಳೆ. ಇವಳ ಪ್ರೀತಿ ಮುಂದೆ ನನ್ನ ಪ್ರೀತಿ ಸುಳ್ಳು ಅನ್ನಿಸ್ತಿದೆ ನನಗೆ. ನಾನು ಪ್ರೀತಿಸಿದ ಪ್ರೀತಿಗಿಂತ ನನ್ನನ್ನು ಪ್ರೀತಿಸಿದ ಪ್ರೀತಿ ತುಂಬಾ ಚೆನ್ನಾಗಿದೆ ಅಲ್ವಾ!!

ಸಹನಾ ಮೌನವಾಗಿ ಎಲ್ಲ ಆಲಿಸಿ ಕೊನೆಗೆ "ಇಟ್ಸ್ ಮೈ ಬ್ಯಾಡ್ ಲಕ್ !! ನನ್ನ ಪರಿಸ್ಥಿತಿ ನನ್ನ ಕೈಯಲ್ಲಿ ಹಾಗೆ ಮಾಡಿಸಿತ್ತು. ನಿಮಗೆ ತುಂಬಾ ನೋವು ಅವಮಾನ ಆಗೋ ಹಾಗೆ ಮಾಡಿದೆ ಕ್ಷಮಿಸಿ.. " ಎಂದು ಅಲ್ಲಿ ನಿಲ್ಲಲಾಗದೆ ಹೊರಟೇ ಹೋದಳು.

ಅವಳು ಹೋದಮೇಲೆ ಸೃಷ್ಟಿ ವಾದಿಸಿದಳು - ಅವರು ಇಂದಿನವರೆಗೂ ನಿಮ್ಮ ನೆನಪಲ್ಲೇ ಬದುಕ್ತಿದಾರೆ ನೀವು ಹೀಗೆ ಮಾಡಬಾರದಿತ್ತು.

ನನ್ನ ನೆನಪಲ್ಲೇ ಬದುಕೊದಕ್ಕೆ ನಾನಿನ್ನೂ ಸತ್ತಿಲ್ಲ! ಬದ್ಕಿದ್ದಿನಿ! ಒಮ್ಮೆ ಫೋನ್ ಮಾಡಿದ್ರೂ ಸಾಕಿತ್ತು ಓಡಿ ಬರ್ತಿದ್ದೆ! ಅಲ್ಲಿ ನನಗೆ ನರಕ ಶಿಕ್ಷೆ ಕೊಟ್ಟು ಇಲ್ಲಿ ದೂರದಲ್ಲಿದ್ದು ಏನ್ ಸಾಧನೆ ಮಾಡಿದ್ರು, ಇವರನ್ನು ಹೆದರಿಸಿದ ಕಾವ್ಯಾನೇ ಆರಾಮಾಗಿದಾಳೆ ಇವರಿಗೇನು ಚಿಂತೆ! ನನ್ನ ಪ್ರಕಾರ ಪ್ರೀತಿಸಿದ ಮೇಲೆ ಇಡೀ ಜಗತ್ತೇ ಎದುರಾದ್ರೂ ಹೆಜ್ಜೆ ಹಿಂದಿಡಬಾರದು. ಏನೇ ಬಂದ್ರೂ ಎದುರಿಸಬೇಕು, ಎದುರಿಸೋ ಧೈರ್ಯ ಇಲ್ಲ ಅನ್ನೋದಾದ್ರೆ ಅದು ಪ್ರೀತಿನೇ ಅಲ್ಲ!! ನಾನು ಹೀಗೆ ನಿಷ್ಠುರವಾದಿ!!

"ಹೌದು, ನಾನು ನಿಮ್ಮನ್ನ ಪ್ರೀತಿಸ್ತಿನಿ ಅಂತ ಯಾವಾಗ ಹೇಳಿದ್ದೆ" ಮುನಿಸಿಕೊಂಡು ಕೇಳಿದಳು.

"ಅವತ್ತು ದಿಪ್ತಿ ಮದುವೆ ದಿನ ಅಮ್ಮನ ಕೈಗೆ ನೆಕ್ಲೆಸ್ ಕೊಟ್ಟು ಬರೋವಾಗ ನೀನು ನನ್ನ ನೋಡಿದ್ನ ನಾನು ನೋಡಿದ್ದೆ. ನಾನು ಅನ್ನಪೂರ್ಣಮ್ಮನವರ ಮಗ ಅಂತ ಗೊತ್ತಿದ್ದೆ ನಮ್ಮ ಮನೆಗೆ ಬಂದಿದ್ದು. ದಿಪ್ತಿ ನಿಂಗೆ ಫೋರ್ಸ್ ಮಾಡಿರ್ಲಿಲ್ಲ ನೀನೇ ದಿಪ್ತಿಗೆ ಮಸ್ಕಾ ಹೊಡೆದು ಅವರ ಜೊತೆ ಬಂದಿದ್ದೆ. ಮತ್ತೆ ಅವತ್ತು ಮನೆಗೆ ಬಂದ ದಿನ ನೀನು ಶ್ರವಣ್ ಜೊತೆ ಮಾತಾಡ್ತಿದ್ದಲ್ಲ ಭಾವಿ ಗಂಡನ ಮನೆ ಅಂತ ಅದನ್ನು ಕೇಳಿದ್ದೆ. ರಾತ್ರಿಯೆಲ್ಲ ಗೂಬೆ ತರಾ ಕಣ್ಣು ಬಿಟ್ಟು ನನ್ನ ನೋಡ್ತಾ ನಿಂತಿರೋದು ನನಗೆ ಗೊತ್ತಿತ್ತು. ಮತ್ತೆ..." ಏನೋ ಹೇಳುವಷ್ಟರಲ್ಲಿ,

" ಸಾಕು ಸಾಕು ಸಾಕು!! ಆದರೆ ನಾನು ಮದುವೆ ಆಗಬೇಕು ಅಂದ್ರೆ ಮೂರು ಕಂಡಿಷನ್ಸ್  ಇದೆ"

"ಏನೇ ಅದು??"

"ನಿಮ್ ಲ್ಯಾಪ್‌ಟಾಪ್ ಪಾಸ್ ವರ್ಡ್ ಚೆಂಜ್ ಮಾಡ್ಬೇಕು!"

"ಹ್ಮೂ ಆಯ್ತು ಅನ್ಕೊ"

"ಲ್ಯಾಪ್‌ಟಾಪ್ ನಲ್ಲಿರೋ  MY❤ ಫೋಲ್ಡರ್ ಡೀಲೀಟ್ ಮಾಡ್ಬೇಕು".

"ಚಾಪ್ಟರ್ ನೇ ಮುಗ್ಸಿದೀನಿ ಫೋಲ್ಡರ್ ಯಾವ ಮಹಾ!! ಆಯ್ತು ಅನ್ಕೊ. ಮೂರನೇದು?"

"ನನ್ನ ಪ್ರ್ಯಾಕ್ಟೀಸ್ ಮುಗಿಯೋಕೆ ಇನ್ನೂ ಒಂದು ವರ್ಷ ಇದೆ. ಅಲ್ಲಿವರೆಗೂ ನೀವು ಡೇಲಿ ಒಂದೊಂದು ದಿನ ಒಂದೊಂತರಾ ಪ್ರಪೋಸ್ ಮಾಡಿ ನನ್ನ ಇಂಪ್ರೆಸ್ ಮಾಡ್ಬೇಕು. ಆಮೇಲೆ ನನಗೆ ಇಷ್ಟ ಆದ್ರೆ ಮದುವೆ ಆಗ್ತಿನಿ ಇಲ್ಲಾಂದ್ರೆ ಇಲ್ಲ ಅಷ್ಟೇ!! "

"ಹೋಗೆಲೇ.. ನಿನಗಿಂತ ನನ್ ಸುಂದ್ರಿನೇ ಬೆಸ್ಟು ಅವಳನ್ನೇ ಮದುವೆ ಆದ್ರಾಯ್ತು!"

"ಪ್ಚ್ ಪಾಪ ನೀವು ಜಾಸ್ತಿ ದಿನ ಬದುಕೋದು ಡೌಟು.. ಅವಳ ರವೆ ಜಾಮೂನ್ ತಿಂದ ನಮ್ಮಣ್ಣ ಇನ್ನೂ ಸುಧಾರಿಸಿಕೊಂಡಿಲ್ಲ ಗೊತ್ತಾ! " ಇಬ್ಬರೂ ನಕ್ಕರು..

"ನೀನು ಲ್ಯಾಪ್‌ಟಾಪ್ ನಲ್ಲಿ ನನ್ ಕಥೆನಾ ಎಲ್ಲಿವರೆಗೂ ಓದಿದ್ದೆ?"

'"ಅದೇ ಅವರು ಬಿಟ್ಟು ಹೋಗೋವರೆಗೂ, ಯಾಕೆ?"

"ಸದ್ಯ, ನಾನು ಮುಂದೆ ಬರೆದಿರೋದನ್ನ ಓದಿಲ್ಲ. ಇಲ್ಲಾಂದ್ರೆ ನಿಜವಾಗ್ಲೂ ಕೊಂಬು ಬಂದು ಬಿಡ್ತಿದ್ವು ನಿನಗೆ.."

"ಹೌದಾ..ಅಂತದ್ದೇನಿತ್ತು?" ಅವನು ಹೇಳಲಿಲ್ಲ. ಅವಳು ಸತಾಯಿಸುತ್ತಲೇ ಇದ್ದಳು. ದಡದ ಮೇಲೆ ಹೆಜ್ಜೆ ಗುರುತುಗಳು ದೂರದೂರಕೆ ಸಾಗುತ್ತ ಹೋದವು...

ದೂರದಲ್ಲಿ ಸೂರ್ಯಾಸ್ತವಾಗುತ್ತಿತ್ತು. ಅದೇ ಸೂರ್ಯಾಸ್ತ. ಅವತ್ತು ಪ್ರಪಾತದಲ್ಲಿ ಮುಳುಗಿದ್ದ. ಇವತ್ತು ಸಮುದ್ರದ ಒಡಲಲ್ಲಿ ಮುಳುಗಿದ. ನೋಡೋ ಕಂಗಳು ಅದೇ‌.. ದೃಷ್ಟಿಕೋನ ಬದಲಾಗಿದೆ (every sunset brings the promise of a new dawn, be patience and stay alive)

                         _ಮುಕ್ತಾಯ_

        


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ...