ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-10


ಕಾಲ ಕೆಲವು ರಹಸ್ಯಗಳನ್ನು ತನ್ನ ಗರ್ಭದೊಳಗೆ ಹುದುಗಿಸಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತ ನವಮಾಸಗಳನ್ನು ದಾಟಿ ಬಂದಿತು. ಸತ್ಯ ಬೂದಿ ಮುಚ್ಚಿದ ಕೆಡದಂತೆ ತತ್ಕಾರಣ ಶಾಂತವಾಗಿತ್ತು. ವಾಸ್ತವದ ಗಾಳಿ ಬೀಸುವವರೆಗೂ ತನಗೇನು ಕೆಲಸವಿಲ್ಲ ಎಂಬಂತೆ..

ಹರ್ಷನ ಕೊನೆಯ ಉಡುಗೊರೆಯ ಹುಡುಕಾಟ ಪರಿಧಿಯ ಮನಸ್ಸಲ್ಲಿ ಕ್ಷಣಿಕ ಕೋಲಾಹಲ ಎಬ್ಬಿಸಿತ್ತಾದರೂ ಈ ವಿಷಯವನ್ನು ಪ್ರಸನ್ನನ ಮುಂದೆ ಹೇಳಿಕೊಂಡಾಗ 'ಜೀವಂತ ಗೊಂಬೆನಾ..ಬಹುಶಃ ನಿಮಗೆ ಸವತಿನಾ ಕರೆದುಕೊಂಡು ಬರೋ ಐಡಿಯಾ ಇತ್ತೆನೋ..' ಎಂದು ಉಡಾಫೆ ಮಾಡಿ ಮಾತು ಮರೆಸಿದ್ದ. ಸೆಕ್ರೆಟರಿ ಶೆಣೈ ಬಳಿ ಆ ವಿಚಾರ ಕೆದಕಿದಾಗ 'ಕೆಲವು ಸತ್ಯಗಳನ್ನು ತಿಳಿದುಕೊಳ್ಳಲು ಹೋಗಿ ನೆನಪುಗಳನ್ನು ಕಹಿ ಮಾಡ್ಕೊಬೇಡಿ ಮ್ಯಾಮ್.. ಮರೆತು ಬಿಡಿ ಅದನ್ನೆಲ್ಲ, ಪ್ರಾಜೆಕ್ಟ್ ಕಡೆಗೆ ಗಮನ ಹರಿಸಿ..' ಎಂದು ಅವಳ ದೂರದ ಆಸೆಗೆ ತಣ್ಣೀರೆರೆಚಿದ್ದ. ಅಲ್ಲಿಗೆ ಆ ಯೋಚನೆಗಳ ಪ್ರಾಮುಖ್ಯತೆಗೆ ಬದಲಾಗಿ ಪ್ರಾಜೆಕ್ಟ್‌ನ ಸಲುವಾಗಿ ತನ್ನ ಸಮಯವನ್ನು ಮೀಸಲಿರಿಸಿದಳು. ತನ್ನ ದುಃಖ ದುಮ್ಮಾನಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಪ್ರಪಂಚದ ದೃಷ್ಟಿಯಲ್ಲಿ ನಗುವಿನ ಮುಖವಾಡವಾದಳು. ಪ್ರಸನ್ನನ ಜೊತೆಗೆ ಆಗಾಗ ಹರ್ಷನ ನೆನಪುಗಳನ್ನು ಮೆಲುಕು ಹಾಕುತ್ತಿದ್ದಳೇ ಹೊರತು ಬೇರೆ ಯಾರೊಂದಿಗೂ ತನ್ನ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳುತ್ತಿರಲಿಲ್ಲ.

ಅವರ ನೋವಿನಲ್ಲಿ ಭಾಗಿಯಾದ ಪ್ರಸನ್ನ ಕೂಡ ಅವರ ಮನೆಯ ಸದಸ್ಯರಲ್ಲಿ ಒಬ್ಬನಾಗಿ ಬೆರೆತು ಹೋಗಿದ್ದ.  ಸುಲೋಚನ ಏನೇ ರುಚಿಯಾದ ಅಡುಗೆ ಮಾಡಿದರೂ ಅವನಿಗೆ ಟಿಫಿನ್ ನಲ್ಲಿ ಪರಿಧಿ ಜೊತೆಗೆ ಕೊಟ್ಟು ಕಳಿಸುತ್ತಿದ್ದರು. ಇಲ್ಲವೇ ಫೋನ್ ಮಾಡಿ ಮನೆಗೆ ಕರೆಸಿ ತುತ್ತು ಮಾಡಿ ತಿನ್ನಿಸುತ್ತಿದ್ದರು. ತಾತನ ಜೊತೆಗೆ ಹರಟೆ ಹೊಡೆಯುತ್ತ ಅವರ ಕಾಲದ ಪ್ರೇಮ ಪ್ರಸಂಗ, ಮದುವೆ ಮಡದಿ ಬಗ್ಗೆ ಕಥೆ ಕೇಳುತ್ತ ಅವರ ಕಾಲೆಳೆಯುತ್ತಿದ್ದ. ಹರಿಣಿ ಜೊತೆಗೆ ತುಂಟಾಟ ಮಾಡುತ್ತ, ಅವಳ ಅಭ್ಯಾಸದಲ್ಲಿ ಸಹಾಯ ಮಾಡುತ್ತ ಅವಳೊಂದಿಗೂ ಸ್ನೇಹಿತನಾಗಿ ಹೋಗಿದ್ದ. ಹರಿಣಿ ಕೂಡ ತನಗೆ ಬೇಜಾರಾದಾಗೆಲ್ಲ ಗಂಟೆಗಟ್ಟಲೆ ಅವನೊಂದಿಗೆ ಫೋನಿನಲ್ಲಿ ಹರಟುತ್ತಿದ್ದಳು. ವಿಕೇಂಡ್ ಗಳಲ್ಲಿ ಪ್ರಸನ್ನನನ್ನು ಮನೆಗೂ ಹೋಗಲು ಬಿಡದೆ ಅಲ್ಲಿಯೇ ಉಳಿಸಿಕೊಳ್ಳುತ್ತಿದ್ದಳು. ಪ್ರಸನ್ನ ಇದ್ದರೆ ಮನೆಯಲ್ಲಿ ಅದೊಂದು ರೀತಿಯ ಸಂಭ್ರಮ ಇಣುಕುತ್ತಿತ್ತು ಎಲ್ಲರ ಮನದೊಳಗೆ. ಪ್ರಸನ್ನ, ಪರಿಧಿ ಹರಿಣಿ ಜೊತೆಗೆ ಸುಲೋಚನರನ್ನು ಸಹ ಸೇರಿಸಿಕೊಂಡು ಕೇರಂ, ಚೆಸ್, ಕಾರ್ಡ್ಸ್,  ಲೂಡೋ, ಬ್ಯಾಡ್ಮಿಂಟನ್, ಇತ್ಯಾದಿ ಆಟಗಳಲ್ಲಿ ತೊಡಗಿಸಿ ಅವರ ಬೇಜಾರು ಕಳೆಯುತ್ತಿದ್ದ. ಬಿಡುವಿನ ವೇಳೆಯಲ್ಲಿ ಶಾಪಿಂಗ್ ಮೂವಿ ಪಾರ್ಕ್ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದ. ತನ್ನದೇ ಜೀವನದ ಕೆಲವು ಹಾಸ್ಯ ಪ್ರಸಂಗಗಳನ್ನು ಹೇಳಿ ನಗಿಸುತ್ತಿದ್ದ.  ಎಲ್ಲಾ ಆಟ ಓಡಾಟದ ಮಧ್ಯೆಯೂ ಹರ್ಷನ ನೆನಪುಗಳನ್ನು ತೆರೆತೆರೆಯಾಗಿ ಬಿಚ್ಚಿಡುತ್ತಿದ್ದಳು ಹರಿಣಿ. ಅಣ್ಣಾ ಹಾಗೆ ಮಾಡುತ್ತಿದ್ದ..ಹೀಗೆ ಮಾಡುತ್ತಿದ್ದ.. ಎಂದು ಅವಳು ಹೇಳುತ್ತಿದ್ದರೆ ಅದನ್ನು ಗಮನವಿಟ್ಟು ಕೇಳಿ ಅವಳ ತಲೆ ಸವರುತ್ತಿದ್ದ ಪ್ರಸನ್ನ. ಹೀಗೆ ಮೊದಲಾಗಿ ಅರಿಯದ ಬಾಂಧವ್ಯ ತಾನಾಗಿಯೇ ಶುರುವಾಗಿ ಗಟ್ಟಿಗೊಳ್ಳುತ್ತ ಹೋಗಿತ್ತು. ಪ್ರತಿದಿನದಂತೆ ಆ ಮುಂಜಾನೆ ಜಾಗಿಂಗ್ ನೆಪದಲ್ಲಿ ಮನೆಗೆ ಬಂದ ಪ್ರಸನ್ನನಿಗೆ  ಸುಲೋಚನ ತಿಂಡಿ ಉಪಚಾರ ಮಾಡುತ್ತಿರುವಾಗ..

"ಸಾಕು ಸಾಕು ಮಾ..ನೀವು ಹೀಗೆ ತಿನ್ನಿಸ್ತಾ ಇದ್ರೆ ನಾನು ಡಾ.ಮೋಟು ಆಗಿಬಿಡ್ತಿನಿ. ಆಮೇಲೆ ಯಾವ ಹುಡುಗಿನೂ ನನ್ನ ಕಡೆಗೆ ತಿರುಗಿ ನೋಡುವುದಿಲ್ಲ" ನೊಂದು ಹೇಳಿದ ಪ್ರಸನ್ನ

"ಅಯ್ಯೋ ಅದಕ್ಕೇನಂತಪ್ಪ.. ನಿನಗೆ ನಾನೇ ಹೆಣ್ಣು ನೋಡಿ ಮುಂದೆ ನಿಂತು ಮದುವೆ ಮಾಡ್ತಿನಿ. ನೀ ಯೋಚನೆ ಬಿಡು" ಎಂದರು ಸುಲೋಚನ

"ಹೆಣ್ಣು ಹುಡುಕೋ ತೊಂದರೆ ಯಾಕೆ.. ಇಲ್ಲೇ ಇದ್ದಾಳಲ್ಲ ನನ್ನ ಪ್ರಿನ್ಸೆಸ್.. ಇವಳನ್ನು ಕೊಟ್ಟು ಮದುವೆ ಮಾಡಿ!! ನೀ ಏನಂತಿಯಾ ಸ್ವೀಟಿ..?" ಹರಿಣಿಯ ಕೆನ್ನೆ ಹಿಂಡುತ್ತ ಕೇಳಿದ.

"ನೋ..ವೇ..ಐ ಡೋಂಟ್ ಲೈಕ್ ಡಾಕ್ಟರ್ಸ್.. ಆ ಹಾಸ್ಪಿಟಲ್ ಸ್ಮೆಲ್..ಇಂಜೆಕ್ಷನ್ ಯಪ್ಪಾ ನೆನಸ್ಕೊಂಡ್ರೆ ಭಯ ಆಗುತ್ತೆ"

"ಛೇ..ಹೀಗೆ ಅಂತ ಮೊದಲೇ ಗೊತ್ತಿದ್ದರೆ ನಾನು ಬೇರೆ ಕೋರ್ಸ್ ಆದ್ರೂ ಮಾಡ್ತಿದ್ದೆನಲ್ಲೆ! ಅನ್ಯಾಯವಾಗಿ ಇಷ್ಟು ಮುದ್ದಾದ ಹುಡುಗಿ ಕೈ ತಪ್ಪಿ ಹೋದ್ಳು!" ಬೇಸರಿಸಿಕೊಂಡ ಪ್ರಸನ್ನನ ಮಾತಿಗೆ ನಕ್ಕರು ಸುಲೋಚನ ಗೋಪಿ. "ಅಂದಹಾಗೆ ಈ ಸಂಡೇ ಫ್ರೀ ಇದ್ದೀರಾ ಎಲ್ಲರೂ.." ಕೇಳಿದ.

"ಯಾಕಪ್ಪಾ.. ಏನಾದ್ರೂ ವಿಶೇಷ ಇದೆಯಾ..?"

"ಹ್ಮೂ ನಮ್ಮಾ..ನನ್ನ ಮಕ್ಕಳ ಬರ್ತಡೇ ಇದೆ.. ಈ ರವಿವಾರ. ನೀವೆಲ್ಲಾ ತಪ್ಪದೇ ಬರ್ಬೇಕು.."

"ಓಹ್..ಬರ್ತಡೇ ಪಾರ್ಟಿ.. ನಾನು ಈಗಲೇ ರೆಡಿ" ಕೈ ಮೇಲೆತ್ತಿ ಕೂಗಿದಳು ಹರಿಣಿ.

"ನಿಮಗೆ ಮದುವೆಯಾಗಿ ಮಕ್ಕಳು ಬೇರೆ ಇದ್ದಾರಾ ಡಾಕ್ಟ್ರೇ.." ಹುಬ್ಬೇರಿಸಿದ ಗೋಪಿ.

"ಈ ರವಿವಾರ ನೀನು ಬಾರೋ ಗೋಪಿ. ಗೊತ್ತಾಗುತ್ತೆ.." ಎಂದವನೇ ಕೈ ತೊಳೆದು ಎದ್ದು ಹೊರಟವನ್ನು ಎದುರುಗೊಂಡ ವಿನಾಯಕ್..

"ತಗೋಳಪ್ಪಾ.. ಚೆಕ್.. ನಿನ್ನ ಮಕ್ಕಳಿಗಲ್ಲ ನಮ್ಮ ಮಕ್ಕಳಿಗೆ.. ಇನ್ಮುಂದೆ ಪ್ರತಿ ತಿಂಗಳು ಆಶ್ರಮದ ಅಕೌಂಟ್ಗೆ ಸರಿಯಾಗಿ ಬಂದು ತಲುಪುತ್ತೆ.." ಎಂದು ಭುಜ ತಟ್ಟಿ "ಐಮ್ ಪ್ರೌಡ್ ಆಫ್ ಯು.. ಮೈ ಬಾಯ್.." ಎಂದರು ಮೆಚ್ಚುಗೆಯಿಂದ. ಪ್ರಸನ್ನ ಮುಗುಳ್ನಕ್ಕು ಅವರನ್ನು ಬಿಳ್ಕೊಟ್ಟು ಹೊರನಡೆದ. ಹೊರಗೆ ಧೋ..ಎಂದು ಜೋರು ಮಳೆ ಸುರಿಯುತ್ತಿತ್ತು. ಪ್ರಸನ್ನ ತನ್ನ ಜಾಕೆಟ್ ನ ಹಿಂಭಾಗದ ಕ್ಯಾಪನ್ನು ತಲೆಗೆ ಸಿಕ್ಕಿಸಿ, ಮಳೆಯಲ್ಲಿ ತೋಯುತ್ತಾ ತನ್ನ ಬೈಕ್ ಕಿಕ್ ಮಾಡಿದ. ಮಳೆಯಲ್ಲಿ ಹಾಗೆ ಹೊರಟ ಪ್ರಸನ್ನನನ್ನು ನೋಡಿ ಗೋಪಿ..

"ಅಲ್ಲಾ ಡಾಕ್ಟ್ರೆ.. ಬರೋ ಸಂಬಳದಲ್ಲಿ ಇನ್ನೂ ಒಂದು ಕಾರು ತಗೊಂಡಿಲ್ವಾ ನೀವು.."

"ಕಾರು..ಅದಕ್ಕೆ ಸುರಿಯೋ ಡಿಸೇಲ್.. ಆ ಹಣದಲ್ಲಿ ನೂರಾರು ಮಕ್ಕಳ ಭವಿಷ್ಯ ರೂಪಿಸಬಹುದು ಕಣೋ ದಡ್ಡ..ಯಾವುದು ಮುಖ್ಯವೋ ಅದು ಮೊದಲಾಗಬೇಕು. ಹಣವನ್ನ ಅವಶ್ಯಕತೆಗಷ್ಟೇ ಬಳಸಬೇಕು.. ಆಡಂಬರಕ್ಕಲ್ಲ..ಬಾಯ್..." ಎನ್ನುತ್ತಾ ಗಡರ್ರ್.. ಸದ್ದಿನೊಂದಿಗೆ ಬೈಕ್ ಚಲಿಸಿ ಮಳೆಯಲ್ಲಿ ಮರೆಯಾದ. ಅವನ ಮಾತುಗಳನ್ನೇ ಯೋಚಿಸುತ್ತಾ ಗೋಪಿ ಒಳನಡೆದ.
      
                           ******

ಗೋವರ್ಧನ ಆಶ್ರಮ
ಬೆಳಿಗ್ಗೆ 9.00 ಗಂಟೆ

ಗೋವರ್ಧನ ಆಶ್ರಮ. ಜಾತಿ ಮತಬೇಧ ಭಾವಗಳಿಲ್ಲದೆ ಆರರಿಂದ ಹದಿನಾರು ವಯಸ್ಸಿನ ಸುಮಾರು ಐನೂರು ಅನಾಥ ಮಕ್ಕಳಿಗೆ ಆಶ್ರಯದ ತಾಣವಾಗಿದ್ದು, ಆ ಮಕ್ಕಳಿಗೆ ಊಟ ವಸತಿ ಬಟ್ಟೆ ಮೂಲ ಸೌಕರ್ಯಗಳ ಜೊತೆಗೆ ಉತ್ತಮ ಶಿಕ್ಷಣವನ್ನು ಪೂರೈಸುತ್ತ ಬಂದಿದೆ. ಉದಾರ ಮನಸ್ಸಿನ ದಾನಿಗಳ ಹಣವೇ ಆಶ್ರಮದ ಮೂಲ ಆದಾಯ. ಮತ್ತು ಅದೇ ಆಶ್ರಮದಲ್ಲಿ ಕಲಿತು ಒಳ್ಳೆಯ ಸ್ಥಾನದಲ್ಲಿರುವ ಯುವಕ ಯುವತಿಯರ ಸಹಾಯ ಸಹಕಾರವೇ ಆಶ್ರಮದ ಬುನಾದಿ.  ಅಲ್ಲಿಯ ಮುಖ್ಯ ವ್ಯವಸ್ಥಾಪಕರು ಎಂಬತ್ತು ವರ್ಷದ ಫಾದರ್ ರಿಚರ್ಡ್!! ಅವರಿಗೆ ಟೀಮಿನವರನ್ನು ಪರಿಚಯಿಸುತ್ತ "ಇವರು ಧ್ರುವ ರೊಹಿತ್.. ಇವರು ಶ್ರಾವ್ಯ ದಿವ್ಯ..  ಆಶ್ರಮದ ಇವತ್ತಿನ ಕಾರ್ಯಕ್ರಮಕ್ಕೆ ಸಹಾಯ ಮಾಡಲು ಬಂದಿದ್ದಾರೆ. ಮತ್ತೆ ಇವರು ಫಾದರ್ ರಿಚರ್ಡ್.‌. ಈ ಆಶ್ರಮದ ಆಧಾರಸ್ತಂಭ.. ನನ್ನ ಪಾಲಿನ ತಾಯಿ ತಂದೆ ಎಲ್ಲಾ.." ಎಂದ ಪ್ರಸನ್ನ. ಎಲ್ಲ ವಿಧೆಯಕ ಶಿಷ್ಯರು 'ನಮಸ್ತೆ ಫಾದರ್..' ಎಂದರು ಒಕ್ಕೊರಲಿನಿಂದ. "ಅಬ್ಬಾ..ಏನು ಒಗ್ಗಟ್ಟು.. ವ್ಹಾ..ವ್ಹಾ.." ಹಾಸ್ಯ ಮಾಡಿದ ಪ್ರಸನ್ನ.

ಫಾದರ್ ಮುಗುಳ್ನಕ್ಕು ಅವರನ್ನೆಲ್ಲ ಸ್ವಾಗತಿಸಿ "ನಿಮ್ಮಂತಹ ಯುವಕರು ಈ ಕೆಲಸಕ್ಕೆ ಮುಂದೆ ಬಂದಿರುವುದು ತುಂಬಾ ಸಂತೋಷದ ವಿಷಯ. ನಮ್ಮ ಕಾರ್ಯಕರ್ತರಿಗೆ ನಿಮ್ಮ ಸಹಕಾರ ಸಿಕ್ಕರೆ ಅವರಿಗೂ ಅನುಕೂಲ.. ಪ್ರಸನ್ನ ನೀನೇ ನೋಡ್ಕೋಬೇಕಯ್ಯ ಎಲ್ಲಾ ಜವಾಬ್ದಾರಿ.." ಎಂದರು.

"ಡೋಂಟ್ ವರಿ ಫಾದರ್.. ಎಲ್ಲಾ ಸರಿಯಾಗಿ ಆಗುತ್ತೆ. ಮಕ್ಕಳ ಖುಷಿ ಮುಖ್ಯ.." ಎಂದು ಅವರಿಗೆ ತಮ್ಮ ತಮ್ಮ ಕೆಲಸಗಳನ್ನು ಹಂಚಿಕೆ ಮಾಡಿದ. ಧ್ರುವ ರೋಹಿತ್ಗೆ ಸಂಜೆಯ ಕಾರ್ಯಕ್ರಮಕ್ಕೆ ಲೈಟ್ ಡೆಕೋರೆಷನ್ ಆಸನಗಳ ವ್ಯವಸ್ಥೆ ಮಾಡಲು ತಿಳಿಸಿದ. ಶ್ರಾವ್ಯ ದಿವ್ಯಳಿಗೆ ಮಕ್ಕಳ ವೇಷಭೂಷಣ ಉಡುಪಿನ ಸಿದ್ದತೆ ಮತ್ತು ತಿಂಡಿ ತಿನಿಸುಗಳ ವ್ಯವಸ್ಥೆ ಮಾಡಲು ತಿಳಿಸಿದ. ಆಶ್ರಮದ ಕಾರ್ಯಕರ್ತರು ಇತರ ಸಿದ್ದತೆಯಲ್ಲಿ ತೊಡಗಿದ್ದರು.

ಮಕ್ಕಳ ಸಂತೋಷದಲ್ಲಿ ಭಾಗಿಯಾಗಲು   ಉದಾರ ಶ್ರೀಮಂತ ವರ್ಗದವರು, ಪತ್ರಕರ್ತರು, ರಾಜಕೀಯ ವ್ಯಕ್ತಿಗಳು ಇನ್ನೂ ಅನೇಕ ಜನರು ಅಲ್ಲಿ ಬಂದು ನೆರೆದಿದ್ದರು. ಹರಿಣಿ ಸುಲೋಚನ ಗೋಪಿ ಜೊತೆಗೆ ಅಲ್ಲಿಗೆ ಬಂದಿದ್ದ ಪರಿಧಿ ಮಕ್ಕಳ ಜೊತೆಗೆ ಮಾತನಾಡುತ್ತಾ ಅವರೊಂದಿಗೆ ಕಳೆದು ಹೋಗಿದ್ದಳು. ಮಕ್ಕಳು ಉತ್ಸಾಹದಿಂದ ತಮ್ಮ ನೃತ್ಯ ನಾಟಕ ಸಂಗೀತದ ಝಲಕುಗಳನ್ನು ಮಾಡಿ ತೋರಿಸಿ ಆನಂದಿಸುತ್ತಿದ್ದರು.
         
ಹೊರಗಡೆ ರಂಗಮಂಟಪದ ಬಳಿ..
"ಡಾ.ಕಶ್ಯಪ್ ನಿನ್ನ ನೋಡಿದ್ರೆ ಯಾಕಲೋ ಉರಿದು ಬಿಳ್ತಾರೆ?"  ಲ್ಯಾಡರ್ ಮೇಲೆ ನಿಂತು ಲೈಟ್ ಸಿಕ್ಕಿಸುತ್ತ ಕೇಳಿದ ಧ್ರುವ

"ವೈವಾ ಏಕ್ಸಾಂಲ್ಲಿ ಒಂದು ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟೆ ನೋಡು ಮಗಾ.. ಅವತ್ತಿನಿಂದ ಅವರಿಗೆ ನನ್ನ ಮೇಲೆ ಹೊಟ್ಟೆಕಿಚ್ಚು.." ಕೆಳಗೆ ಖುರ್ಚಿಗಳನ್ನು ಸಾಲಾಗಿ ಜೋಡಿಸುತ್ತಿದ್ದ ರೋಹಿತ್ ಉತ್ತರಿಸಿದ.

"ನೀನು ಉತ್ತರಾ ಹೇಳಿದ್ಯಾ..., ಅಷ್ಟು ಈಜಿ ಇತ್ತೆನೋ ಕ್ವಶ್ಚನ್.."

"ಏನಿಲ್ಲ ಮಚ್ಚಾ.. ಒಂದು ಆರ್ಗನ್ ಮೊಡಲ್ ತೋರಿಸಿ, ಇದು ದೇಹದ ಯಾವ ಭಾಗ ಅಂತ ಕೇಳಿದ್ರು ಅಷ್ಟೇ... ನನಗೂ ಮೊದಲು ಗೊತ್ತಾಗ್ಲಿಲ್ಲ, ಸರ್ ಎನಿ ಕ್ಲೂ... ಅಂದೆ. ಅದಕ್ಕವರು ಈ ಭಾಗ ನನ್ನ ದೇಹದಲ್ಲೂ ಇಲ್ಲ ನಿನ್ನ ದೇಹದಲ್ಲೂ ಇಲ್ಲ ಅಂದ್ರು‌.. ಆಗ ಹೊಳಿತು ನೋಡು ಸರಿಯಾದ ಉತ್ತರ.."

"ಅವರ ಹತ್ರನೂ ಇಲ್ಲ.. ನಿನ್ನ ಹತ್ರನೂ ಇಲ್ಲದೇ ಇರೋವಂತದ್ದು..!! ಏನೋ ಅದು.." ಕೇಳಿದ ಧ್ರುವ ಕುತೂಹಲದಿಂದ ಯೋಚಿಸುತ್ತಾ

" it's brain yea..!! ಮಗಾ.. ಅಷ್ಟು ಹೇಳಿದ್ದೆ ತಡ.. ಗೆಟ್ ಲಾಸ್ಟ್ ಅಂತ ಕಿರುಚಿದ. ಈ ಸೀನಿಯರ್ಸ ಗಳಿಗೆ ತಮಗಿಂತ ಬ್ರಿಲಿಯಂಟ್ ಸ್ಟೂಡೆಂಟ್ಸ್ ಕಂಡ್ರೆ ಹೊಟ್ಟೆ ಉರಿ ಕಣೋ.." ತಲೆ ಅಲ್ಲಾಡಿಸಿದ ರೋಹಿತ್. ಧ್ರುವ ಜೋರಾಗಿ ನಕ್ಕುಬಿಟ್ಟ.

ನಗುತ್ತಿದ್ದ ಧ್ರುವನನ್ನು ನೋಡಿ "ಹಲೋ..ಫರ್ಸ್ಟ್ ಕೆಲಸ ಮಾಡು ಆಮೇಲೆ ಕಿಸಿಯುವಂತೆ! ಟೈಮ್ ವೆಸ್ಟ್ ಮಾಡೋ ಸೋಮಾರಿಗಳು.." ಹೀಯಾಳಿಸಿದಳು ಶ್ರಾವ್ಯ.

"ಹಲೋ.. ಬಂದಾಗಿನಿಂದ ಬಲೂನ್ ಡೆಕೋರೆಷನ್ ಹೂವಿನ ಅಲಂಕಾರ ಮಾಡಿದಿವಿ.. ಮತ್ತೆ ಆ ಕಲರ್ ಪೇಪರ್ಸ್ ಎಲ್ಲಾ ಕಟ್ ಮಾಡಿ_ ಇಟ್ಟಿದಿವಿ ಲೈಟ್ ಡೆಕೋರೆಷನ್ ಮಾಡಿದಿವಿ.. ಈಗ ಚೇರ್ ಕೂಡ ಹಾಕ್ತಿದಿವಿ..ನಿಮ್ಮ ತರಾ ಮೇಕಪ್ ಮಾಡಿಕೊಂಡು ಮಕ್ಕಳ ಜೊತೆ ಸೆಲ್ಫಿ ತೆಗೆದು ಸ್ಟೇಟಸ್ ಅಪ್ಡೇಟ್‌ ಮಾಡ್ತಾ ಕೂತಿಲ್ಲ ನಾವಿಲ್ಲಿ.." ಧೃವ ಗುಡುಗಿದ.

"ನಾನು ಮೆಕಪ್ ಆದ್ರೂ ಮಾಡಿಕೊಳ್ತಿನಿ, ಸೆಲ್ಫಿನಾದ್ರೂ ತಗೋತಿನಿ ನಿನ್ಯಾರು ಅದನ್ನೆಲ್ಲ ಕೇಳೊದಕ್ಕೆ.."

"ಸರ್... ಇಲ್ಲಿ ಫಂಕ್ಷನ್ ಗೆ ಕೇಕ್ ತಿನ್ನೋಕೆ ಅಂತ ಯಾರೋ ಭಿಕ್ಷುಕಿ ಬಂದಿದಾಳೆ ಎಲ್ಲಿ ಕೂರಿಸೋಣ.." ಅತ್ತ ನೋಡುತ್ತಾ ಹೇಳಿದ ಧ್ರುವನ ಮಾತಿಗೆ ಸುತ್ತಲಿನ ಮಕ್ಕಳೆಲ್ಲ 'ಗೊಳ್' ಎಂದು ನಕ್ಕರು. ಅವಮಾನಗೊಂಡ ಶ್ರಾವ್ಯ ಎದುರಿಗಿದ್ದ ಬಿದಿರಿನ ಬುಟ್ಟಿಯನ್ನು ಅವನತ್ತ ಎಸೆದಳು. ಧ್ರುವ ಅದರಿಂದ ತಪ್ಪಿಸಿಕೊಳ್ಳಲು ಕೆಳಗೆ ಬಗ್ಗಿದ, ಬಿದಿರಿನ ಬುಟ್ಟಿ ಹಿಂದೆ ಬರುತ್ತಿದ್ದ ಪ್ರಸನ್ನನ ತಲೆಗೆ ಬೋರಲಾಗಿ ಬಿದ್ದಿತು. ಇದನ್ನು ನೋಡಿ ಮಕ್ಕಳು ಮತ್ತಷ್ಟು ಕೇಕೇ ಹಾಕಿ ನಗುತ್ತಿದ್ದರು. ತಲೆಯ ಮೇಲಿನ ಬುಟ್ಟಿ ತೆಗೆಯುತ್ತ "ಥೋ... ಆಸ್ಪತ್ರೆ ಆಶ್ರಮ ಎಲ್ಲಿ ಹೋದ್ರು ನಿಮ್ಮ ಜಗಳ ಮಾತ್ರ ಮುಗಿಯೋದೆ ಇಲ್ಲವಲ್ಲ.."

"ಸರ್ ನಮ್ಮ ಪಾಡಿಗೆ ನಾವು ಕೆಲಸ ಮಾಡ್ತಿದಿವಿ, ಇವಳೇ ಬಂದು ಡಿಸ್ಟರ್ಬ್ ಮಾಡ್ತರೋದು.." ದೂರಿದ ಧ್ರುವ.

"ಸರ್.. ಮಕ್ಕಳ ಜೊತೆಗೆ ನೆನಪಿಗೆ ಅಂತ ಒಂದೆರಡು ಫೋಟೋ ತಗೊಂಡೆ. ಅಷ್ಟಕ್ಕೇ ವ್ಯಂಗ್ಯವಾಗಿ ಮಾತಾಡಿದ. ಅದ್ಕೆ ಕೋಪ ಬಂದು ಬುಟ್ಟಿ ಎಸೆದೆ"

"ಛೇ..ಛೇ ಬುಟ್ಟಿಯಿಂದ ಹೊಡೆದರೆ ಕೋಪ ಕಡಿಮೆ ಆಗಲ್ಲ ಶ್ರಾವ್ಯ ಮೇಡಂ. ದೊಡ್ಡ ಕಲ್ಲು ತಗೋಬೇಕು.." ನಕ್ಕು ನುಡಿದ ಪ್ರಸನ್ನ

"ಸರ್....." ರಾಗ ಎಳೆದಳು

"ನಿಮ್ಮ ಟಾಮ್ ಆ್ಯಂಡ್ ಜರಿ ಫೈಟ್ ಪಕ್ಕಕ್ಕಿಟ್ಟು ಬೇಗ ಬೇಗ ಎಲ್ಲಾ ತಯಾರಿ ಮುಗಿಸ್ರೋ.. ನಮ್ಮ ಮಕ್ಕಳ  ಬರ್ತಡೇ ಇವತ್ತೇ ಮಾಡೋದು ಮುಂದಿನ ವರ್ಷ ಅಲ್ಲ! ಅಲ್ವಾ ಮಕ್ಳಾ..." ಪ್ರಸನ್ನನ ಕೂಗಿಗೆ ಮಕ್ಕಳೆಲ್ಲ ಸಂಭ್ರಮದಿಂದ 'ಓ...' ಎಂದು ಕೂಗಿದರು.
              

ಪ್ರತಿದಿನ ಆಶ್ರಮಕ್ಕೆ ಬಂದು ಹೋಗುವ ಬೇರೆ ಮಕ್ಕಳ ಹುಟ್ಟಿದ ಹಬ್ಬದ ಆಚರಣೆ ನೋಡಿ ಚಪ್ಪಾಳೆ ತಟ್ಟಿ ಕೇಕ್ ಚಾಕೊಲೇಟ್ ತಿನಿಸು ಪಡೆದು ಖುಷಿಪಡುತ್ತಿದ್ದ ನೂರಾರು ಅನಾಥ ಮಕ್ಕಳು ವರ್ಷಕ್ಕೊಮ್ಮೆ ಆಚರಿಸುವ ತಮ್ಮದೇ ಹುಟ್ಟು ಹಬ್ಬದ ಸಂಭ್ರಮದ ಸಿಹಿ ಕ್ಷಣಗಳನ್ನು ಸವಿಯಲು ಕಾತರದಿಂದ ಕಾಯುತ್ತಿದ್ದರು.

ಸಾಯಂಕಾಲ ನಾಲ್ಕು ಗಂಟೆಗೆ ಸರಿಯಾಗಿ ಆಶ್ರಮದ ವಿಶಾಲ ಆವರಣದ ಮಧ್ಯದಲ್ಲಿ ಆಶ್ರಮದ ಎಲ್ಲಾ ಮಕ್ಕಳ ಸಮಕ್ಷಮದಲ್ಲಿ  ದೊಡ್ಡ ಪ್ರಮಾಣದ ಚಾಕೊಲೇಟ್ ಕೇಕನ್ನು ತಂದಿಡಲಾಯಿತು. ಮಕ್ಕಳೆಲ್ಲ ತಮಗೆ ನೀಡಿದ ಹೊಸ ಬಟ್ಟೆಗಳನ್ನು ಧರಿಸಿ ಜಗಮಗಿಸುತ್ತಿದ್ದರು. ಮುಖದಲ್ಲಿ ಸಂತೋಷ ಸಂಭ್ರಮ ತುಳುಕಾಡುತ್ತಿತ್ತು. ಒಂದು ಪುಟ್ಟ ಮಗುವಿನ ಕೈಯಿಂದ ದೀಪ ಬೆಳಗಿಸಿ, ಪ್ರತಿಯೊಂದು ಮಗುವಿನ ಕೈಯಿಂದ ಕೇಕ್ ಕಟ್ ಮಾಡಿಸಿ ಶುಭಾಷಯ ಕೋರಲಾಯಿತು. ಪ್ರತಿಯೊಂದು ಮಗು ಕೇಕ್ ಕಟ್ ಮಾಡುವಾಗಲೂ ಉಳಿದ ಮಕ್ಕಳು ಬೇಸರಿಸಿಕೊಳ್ಳದೆ ತುಂಬು ಹೃದಯದಿಂದ ಶುಭಾಶಯಗಳನ್ನು ಕೋರಿದವು. ನಂತರ ಅವರಿಗೆಲ್ಲ ಬಂದವರು ಉಡುಗೊರೆಗಳನ್ನು ನೀಡಿದರು. ಉಡುಗೊರೆಗಳನ್ನು ತೆಗೆದುಕೊಂಡ ಮಕ್ಕಳ ಮುಖ ಆಕಾಶದಂತೆ ಅರಳಿತ್ತು. ಪತ್ರಕರ್ತರು ಫೋಟೋ ಕ್ಲಿಕ್ಕಿಸುತ್ತಿದ್ದರು. ಮಕ್ಕಳ ಮುಖದಲ್ಲಿನ ಹರ್ಷ ಉಲ್ಲಾಸವನ್ನು ಕಣ್ಣುತುಂಬಿಕೊಂಡ ಪ್ರಸನ್ನನಿಗೆ ತನ್ನ ಜೀವನ ಸಾರ್ಥಕ ಎನಿಸುವಂತಿತ್ತು.

ಇದನ್ನು ನೋಡಿದ ಗೋಪಿ "ನೀವು ನಿಮ್ಮ ಮಕ್ಕಳು ಅಂದಿದ್ದು ಇವರನ್ನಾ ಡಾಕ್ಟ್ರೆ.. ನೀವು ತುಂಬಾ ಒಳ್ಳೆಯ ಮನಸ್ಸಿನವರು ಬುದ್ದಿ" ಎಂದ.

"ಅಯ್ಯಯ್ಯೋ.. ನಾನೇನೋ ಮಾಡಿದೀನಿ..ಡೊನೆಷನ್ ಕೊಟ್ಟವರು ಯಾರೋ.. ಎಲ್ಲಾ ಕೆಲಸವನ್ನ ಮಾಡಿದವರು ಯಾರೋ.. ನನ್ನ ಪಾತ್ರ ಏನಿಲ್ಲ ಕಣೋ ಇದರಲ್ಲಿ.. "

"ಆದರೂ ಇಷ್ಟು ಮಕ್ಕಳ ಜವಾಬ್ದಾರಿ.."

"ಅದು ನಮ್ಮ ಫಾದರ್ ರಿಚರ್ಡ್ ನೋಡ್ಕೊತಾರೆ.. ನನ್ನನ್ನು ಅವರೇ ಸಾಕಿದ್ದು.. ಗೋಪಿ ನನಗೊಂದು ದೊಡ್ಡ ಕನಸಿದೆ ಕಣೋ..ದೇಶದಲ್ಲಿ ಇರೋ ಎಲ್ಲಾ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಯಾವುದೇ ಕೊರತೆ ಇಲ್ಲದ ಹಾಗೆ ಚೆನ್ನಾಗಿ ನೋಡಿಕೊಳ್ಳಬೇಕು ಅಂತ.."

"ಅದಕ್ಕೆಲ್ಲ ತುಂಬಾ ದುಡ್ಡು ಬೇಕಾಗುತ್ತಲ್ಲ.."

"ಹ್ಮೂ..ಅದಕ್ಕೆ ಒಬ್ಬ ಶ್ರೀಮಂತ ಮಾವನ್ನ ಹುಡುಕ್ತಾ ಇದೀನಿ.."

"ಮಾವ ಶ್ರೀಮಂತ ಇದ್ರೆ ಸಾಕಾ..ಹೆಂಡತಿ ಚೆನ್ನಾಗಿ ಇಲ್ಲದಿದ್ದರೆ ಜಗಳಗಂಟಿ ಆಗಿದ್ರೆ.."

"ಹೆಂಡತಿ ಎಂಥ ಮೊಂಡು ಪಿಶಾಚಿ ಆದರೂ ಪರವಾಗಿಲ್ಲ ನಾನು ಪಳಗಿಸ್ತಿನಿ ಬಿಡು.. ಮಾವಾ ಮಾತ್ರ ಶ್ರೀಮಂತನಾಗಿರಬೇಕು."
ಈ ಮಾತಿಗೆ ಪರಿಧಿ ನಕ್ಕು "ನನಗೆ ಒಬ್ಬರು ಗೊತ್ತಿದಾರೆ.. ಐ ಥಿಂಕ್ ನಿಮಗೂ ಇಷ್ಟವಾಗಬಹುದು!"

"ನಾನು ಬೇಕಾದರೆ ಕನಸು ಕಾಣೋದನ್ನೇ ಬಿಟ್ಟು ಬಿಡ್ತಿನಿ. ನಿಮ್ಮ ಫ್ರೆಂಡ್ ಆ ಕೊಲೆಸ್ಟ್ರಾಲ್ ನ ಮಾತ್ರ ಮದುವೆ ಆಗಲ್ಲ.."

"ನಾನ್ಯಾವಾಗ ನನ್ನ ಫ್ರೆಂಡ್ ಮಾನ್ವಿ ಅಂತ ಹೇಳಿದೆ? ಒಬ್ಬರು ಗೊತ್ತು ಅಂದೆ ಅಷ್ಟೇ.."

ಪ್ರಸನ್ನನಿಗೆ ಪೇಚಿಗೆ ಸಿಲುಕಿದಂತಾಗಿ ಅದು ಹಾಳಾಗಿ ಹೋಗಲಿ ಬಿಡಿ. ಮುಂದಿನ ಕಾರ್ಯಕ್ರಮ ನೋಡುವ ಬನ್ನಿ.. ಎಂದು ಕರೆದುಕೊಂಡು ಹೋದ.

ಸಂಜೆ ಏಳು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗಮಂದಿರ ಸಿದ್ಧವಾಗಿತ್ತು. ಸಾಂಸ್ಕೃತಿಕ ಪ್ರಿಯರು ಶ್ರೀಮಂತ ವರ್ಗದವರು ಕೆಲವು ರಾಜಕೀಯ ಗಣ್ಯವ್ಯಕ್ತಿಗಳು ಪತ್ರಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪರಿಧಿ ಶ್ರಾವ್ಯ ಡ್ರೆಸ್ಸಿಂಗ್ ರೂಮಿನಲ್ಲಿ ಮಕ್ಕಳನ್ನು ಸಿದ್ದ ಮಾಡುತ್ತಿದ್ದರು. ನಿರೂಪಕಿ ಒಬ್ಬೊಬ್ಬರ ಹೆಸರು ಕೂಗಿದಂತೆ ಮಕ್ಕಳು ಬಂದು ಪ್ರದರ್ಶನ ನೀಡುತ್ತಿದ್ದರು. ಹಾಸ್ಯ ನೃತ್ಯ ನಾಟಕ ಸಂಗೀತ ಏಕಪಾತ್ರಾಭಿನಯ ಹೀಗೆ ಒಟ್ಟು ಇಪ್ಪತ್ತೆರಡು ರೀತಿಯ ಪ್ರದರ್ಶನಗಳು ನಡೆದವು. ಮಕ್ಕಳು ಅದ್ಭುತವಾದ ತಮ್ಮ ಕಲಾಸಾಮರ್ಥ್ಯವನ್ನು ಪ್ರದರ್ಶಿಸಿ ಜನರ ಮೆಚ್ಚುಗೆ ಚಪ್ಪಾಳೆಗೆ ಪಾತ್ರರಾದರು.

ಎಲ್ಲಕ್ಕಿಂತ ಹೆಚ್ಚಾಗಿ ಗಮನ ಸೆಳೆದಿದ್ದು ರುರು ಮತ್ತು ಪ್ರಮದ್ವರಳ ಪ್ರೇಮಕಥೆ! ರುರು ಮತ್ತು ಪ್ರಮಧ್ವರೆ ಪ್ರೀತಿಸಿ ಹಿರಿಯರ ಒಪ್ಪಿಗೆಯೊಂದಿಗೆ ಮದುವೆಯು ನಿಶ್ಚಯವಾಗುತ್ತದೆ. ಆದರೆ ಮದುವೆಯ ಹಿಂದಿನ ದಿನ ಪ್ರಮಧ್ವರೆ ಹಾವು ಕಚ್ಚಿ ಸತ್ತು ಹೋಗುತ್ತಾಳೆ. ಪ್ರಿಯತಮೆಗಾಗಿ ರುರುವಿನ ಆಕ್ರಂದನ ಮುಗಿಲು ಮುಟ್ಟುತ್ತದೆ. ಕಡೆಗೆ ತನ್ನ ತಪೋಶಕ್ತಿಯನ್ನೆಲ್ಲ ಧಾರೆಯೆರೆದು ರುರು ತನ್ನ ಆಯಸ್ಸಿನ ಅರ್ಧಭಾಗವನ್ನು ಆಕೆಗೆ ನೀಡಿ ಅವಳ ಪ್ರಾಣ ಉಳಿಸುತ್ತಾನೆ. ಇಬ್ಬರೂ ಅರ್ಧ ಆಯಸ್ಸಿನ ಸುಖ ಸಂಸಾರ ಮಾಡಿ ಕೊನೆಗೆ ಒಟ್ಟಿಗೆ ಕೊನೆಯುಸಿರೆಳೆಯುತ್ತಾರೆ. ಇಂತಹ ಪರಿಶುದ್ಧ ಪ್ರೀತಿಯನ್ನು ಮಕ್ಕಳು ಅದ್ಭುತವಾಗಿ ಅಭಿನಯಿಸಿ ಎಲ್ಲರಿಂದ ಪ್ರಶಂಸೆ ಬಹುಮಾನ ಗಳಿಸಿದರು. ಇದನ್ನು ನೋಡುವಾಗ  ನನ್ನ ಅರ್ಧ ಅಲ್ಲ ಪೂರ್ಣ ಆಯಸ್ಸನ್ನು ತಗೊಂಡಾದ್ರು ನನ್ನ ಹರ್ಷನ್ನ ಬದುಕಿಸೋ ದೇವರೇ.. ಎಂದು ಕೇಳಿಕೊಂಡ ಪರಿಧಿಯ ಕಣ್ಣು ಹನಿಗೂಡಿದ್ದವು.

                   ******

ಆ ರಾತ್ರಿ ಎಲ್ಲಾ ಕಾರ್ಯಕ್ರಮ ಮುಗಿಸಿ ಮನೆಗೆ ಹೊರಟಾಗ ಗಂಟೆ ಹತ್ತುವರೆಯಾಗಿತ್ತು. ದಾರಿಯುದ್ದಕ್ಕೂ ಹರಿಣಿ ಪ್ರತಿಯೊಂದು ಸನ್ನಿವೇಶವನ್ನು ಪುಟ್ಟ ಪುಟ್ಟ ಮಕ್ಕಳ ಆಟವನ್ನು ಹೇಳಿ ನಲಿಯುತ್ತಿದ್ದಳು. ಅದನ್ನೇ ಕೇಳುತ್ತಾ ಕಾರು ಓಡಿಸುತ್ತಿದ್ದಳು ಪರಿಧಿ. ಅವರೆಲ್ಲಾ ಮನೆಗೆ ಬಂದಾಗ ಹನ್ನೆರಡು ಗಂಟೆ! ಆಗ ಅರಿವಾಗಿತ್ತು ಪರಿಧಿಗೆ ತನ್ನ ಕೈಯಲ್ಲಿನ ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದು. ಕಾರಿನಲ್ಲಿ ಮನೆಯಲ್ಲಿ ಹುಡುಕಿ ಸಿಗಲಾರದೆ ಒದ್ದಾಡಿದಳು. ಅದು ಹರ್ಷನ ನೆನಪು ಮಾತ್ರವಲ್ಲ ಅವಳ ಉಸಿರು ಎಂಬಂತೆ ಜೋಪಾನ ಮಾಡುತ್ತಿದ್ದಳು. ಅದು ಕಾಣದೆ ಹೋದಾಗ ಒತ್ತರಿಸಿ ಬಂದಿತು ದುಃಖ. ನಿಶ್ಚಿತಾರ್ಥಕ್ಕೆಂದು ಹರ್ಷ ತಂದಿದ್ದ ಜೋಡಿ ರಿಂಗ್ ಗಳಲ್ಲಿ ಒಂದು ಹರ್ಷನ ಜೊತೆಗೆ ಕಳೆದು ಹೋಗಿತ್ತು ಈಗ ತನ್ನ ಅಲಕ್ಷ್ಯದಿಂದ ಇದು ಸಹ ಕಳೆದು ಹೋಗುತ್ತಾ ಎಂದು ಕಳವಳಗೊಂಡಳು.

ಬಹುಶಃ ಆಶ್ರಮದಲ್ಲಿ ಎಲ್ಲೋ ಬಿದ್ದಿರಬೇಕು ನಾನು ಹೋಗಿ ಹುಡುಕಿಕೊಂಡು ಬರ್ತಿನಿ ಅತ್ತೆ ಎಂದು ಕಾರ್ ಕೀಲಿ ಹಿಡಿದು ನಿಂತಳು‌. ಸುಲೋಚನ ಎಷ್ಟೇ ಬುದ್ದಿವಾದ ಹೇಳಿದರೂ, ನಾಳೆ ಬೆಳಿಗ್ಗೆ ಹೋಗುವಂತೆ ಎಂದರೂ ಕೇಳದೆ ಹಠ ಮಾಡಿದಳು. ಅವಳ ಹುಚ್ಚುತನ  ನೋಡಲಾಗದೆ ಸುಲೋಚನ ಪ್ರಸನ್ನನಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅದೇ ತಾನೇ ದಣಿದು ಮಲಗಿದ್ದ ಪ್ರಸನ್ನ ವಿಷಯ ಕೇಳಿ ಬೆಚ್ಚಿ  ಫೋನಿನಲ್ಲೇ ಪರಿಧಿಗೆ ಸಮಾಧಾನ ಹೇಳಲು ಪ್ರಯತ್ನಿಸಿ ಸೋತು ಮನೆಗೆ ಬಂದ. ಯಾರು ಏನೇ ಹೇಳಿದರೂ ಅವಳದು ಒಂದೇ ಹಠ.. ಹರ್ಷ ತೊಡಿಸಿದ ಉಂಗುರ..ನನಗೆ ಈಗಲೇ ಬೇಕು, ಬೆಳಗಿನವರೆಗೂ ಮತ್ತೆ ಸಿಗದೆ ಹೋದರೆ...ನನ್ನ ತಡಿಬೇಡಿ ನಾನು ಹೋಗಿ ಹುಡುಕಿಕೊಂಡು ಬರ್ತಿನಿ..ಬಿಕ್ಕುತ್ತ ಹೇಳಿದಳು.

ಅವಳ ಹಠಕ್ಕೆ ಕಟ್ಟುಬಿದ್ದು ಪ್ರಸನ್ನ ಕೂಡ ಅವಳ ಜೊತೆಗೆ ಹೊರಟ. ಅವಳು ಡ್ರೈವಿಂಗ್ ಮಾಡುತ್ತಿದ್ದರೆ ಪಕ್ಕದಲ್ಲಿ ಕುಳಿತ ಪ್ರಸನ್ನ ಆಶ್ರಮದ ಕಾಂಪೌಂಡರ್ ಗಿರಿಗೆ ಫೋನ್ ಮಾಡಿ 'ಒಂದು ಉಂಗುರ.. ಕಳೆದು ಹೋಗಿದೆ..!  ಅಲ್ಲಿದೆಯಾ.. ಹುಡುಕಿ ನೋಡೋ ಮಾರಾಯಾ..'ಎಂದು ಹೇಳಿದ ಆಕಳಿಸುತ್ತ. 


ಆ ಕಾಂಪೌಂಡರ್ ನಿದ್ದೆಗಣ್ಣಲ್ಲಿ 'ಯಾರು.. ಯಾವ ಉಂಗುರ.. ಎಲ್ಲಿ..' ಎಂದು ಪ್ರಶ್ನಿಸಿದ. ಇತ್ತ ಪ್ರಸನ್ನ 'ರಿಂಗ್ ಕಣೋ... ಬಂಗಾ..ರದು.. ದ್ವೊ...ಡ್ಡ..‌ದು ಎಂದ ಆಕಳಿಸುತ್ತ. "ಅಲ್ಲ.. ಚಿಕ್ಕದು. ಪ್ಲಾಟಿನಮ್ ರಿಂಗ್!  ಮೇಲೆ ಒಂದು ವಜ್ರದ ಹರಳಿದೆ" ತಿದ್ದಿದಳು ಪರಿಧಿ. ಪ್ರಸನ್ನ ಅದನ್ನೇ ತಿದ್ದುಪಡಿ ಮಾಡಿ ಮತ್ತೆ ಹೇಳಿದ ಆಕಳಿಸುತ್ತಲೇ. ಆದರೆ ಆಕಡೆಯಿಂದ ಗೋಪಿಯ ಧ್ವನಿಯ ಬದಲಾಗಿ ಜೋರಾದ ಗೊರಕೆ ಸದ್ದು ಕೇಳಿ ಬಂದಿತು.

 ಪ್ರಸನ್ನ ಫೋನ್ ಕಟ್ ಮಾಡಿ ತಲೆ ಚಚ್ಚಿಕೊಂಡ. ದಾರಿಯುದ್ದಕ್ಕೂ ನಿದ್ರೆ ಬಂದರೂ ಅದು ಸಭ್ಯತೆ ಅಲ್ಲವೆಂದೂ.. ಪರಿ ಭಯ ಪಡಬಹುದೆಂದು ಮುಖಕ್ಕೆ ನೀರು ಚಿಮುಕಿಸಿ ಕಿಟಕಿಯಾಚೆ ನೋಡುತ್ತಾ ಕುಳಿತ.

ಇರುಳ ಕತ್ತಲು ಭಯಾನಕವಾಗಿತ್ತು. ದಾರಿ ಸಾಗುತ್ತ ಹೋದಂತೆಲ್ಲಾ ರಸ್ತೆ ನಿರ್ಜನವಾಗುತ್ತ ಹೋಯಿತು. ಹೊರಟ ದಾರಿಯಲ್ಲೊಂದು ಸ್ಮಶಾನ ಎಡತಾಕಿತು. ಸುಮ್ಮನೆ ಕಿಟಕಿ ಯಲ್ಲಿ ನೋಡುತ್ತಿದ್ದ ಪ್ರಸನ್ನನ ಮನಸ್ಸು ಏಕೋ ಮೆಲ್ಲಗೆ ಕಂಪಿಸಿತು. ದೂರದಲ್ಲಿ ಚಿತೆಯೊಂದು ಹೊತ್ತಿ ಉರಿಯುತ್ತಿರುವಾಗ ಅದರ ಜ್ವಾಲೆಯಲ್ಲಿ ವಿಕಾರ ರೂಪ ಕಂಡಂತಾಗಿ ಉಗುಳು ನುಂಗಿ ಕಿಟಕಿ ಮುಚ್ಚಿ ಕಣ್ಣು ಮುಚ್ಚಿಕೊಂಡು 'ಎಂತೆಂತಹ ಭಯಂಕರ ಶವಗಳನ್ನು ನೋಡಿದವನು ನನಗೆ ಯಾವ ಭಯ ಎಂದು ಸಮಾಧಾನ ಮಾಡಿಕೊಂಡ. ನನಗೇ ಈ ಪರಿಸ್ಥಿತಿ.. ಇನ್ನೂ ಪಾಪ ಪರಿ ಹೇಗೆ...' ಎಂದು ಅವಳತ್ತ ತಿರುಗಿ ನೋಡಿದ. ಅವಳ ಮುಖದಲ್ಲಿ ಯಾವ ಭಾವನೆಯು ಇಲ್ಲ. ಎದುರಿನ ರಸ್ತೆ ನೋಡಿಕೊಂಡು ಅಚಲವಾಗಿ ಕಾರು ಓಡಿಸುತ್ತಿದ್ದಳು. ಅವಳ ಮುಖವನ್ನೇ ದಿಟ್ಟಿಸುತ್ತ 'ಉಂಗುರ ಕಳೆದುಕೊಂಡಿದ್ದ ಕೋಪಕ್ಕೆ.. ಹರ್ಷನ ಆತ್ಮ ಏನಾದರೂ ಇವರ ಮೈಮೇಲೆ ಬಂದಿದೆಯಾ... ಎಂದುಕೊಂಡು ಮೆಲ್ಲಗೆ ಪರಿ...ಎಂದು ಕೂಗಿದ ಅಳುಕುತ್ತ.

"ಹ್ಮ..ಹೇಳಿ.. "ಎಂದ ಅವಳ ದ್ವನಿ ಕೇಳಿ 'ಸದ್ಯ ಬದುಕ್ಕೊಂಡೆ ಮಗನೇ' ಎಂದುಕೊಂಡು..

"ಏನಾದರೂ ಮಾತಾಡಿ..ಸುಮ್ಮನೆ ಕೂತರೆ ಬೇಜಾರು.."

"ಹಾಡು ಹಾಕಲಾ..." ಕೇಳಿದಳು

"ಹೇಯ್..ಬೇಡ ಬೇಡ... " 'ಮಲಗಿರೋ ದೆವ್ವಗಳು ಎದ್ದು ಕುಣಿಯೋಕೆ ನಿಂತ್ರೆ ಕಷ್ಟ..!!! ಹೀಗೆ ಬೆಟ್ಟರ್.. ' ಮೆಲ್ಲಗೆ ಗೊಣಗಿದ. ಸ್ವಲ್ಪ ಹೊತ್ತಿಗೆ ಮುಂಚೆ ಚಿಕ್ಕ ಮಗುವಿನಂತೆ ದುಃಖಿಸಿ ಅಳುತ್ತಿದ್ದ ಹುಡುಗಿ ಈಗ ಗಂಭೀರವಾಗಿ ತದೇಕಚಿತ್ತದಿಂದ ಕಾರು ಓಡಿಸುವದನ್ನೇ ಗಮನಿಸುತ್ತಾ 'ಹರ್ಷ ತೊಡಿಸಿದ ರಿಂಗ್ ಗಾಗಿ ಈ ರೀತಿ ತವಕಿಸುವವಳು ಒಂದು ವೇಳೆ ಹರ್ಷನೇ ಸಿಗುವಂತಿದ್ದರೆ ಇನ್ನೂ ಏನು ಮಾಡುತ್ತಿದ್ದಳೋ.. ಹರ್ಷ ಸತ್ತು ಹತ್ತು ತಿಂಗಳಾದ್ರೂ ಇನ್ನೂ ಅವನ ನೆನಪು ಸ್ವಲ್ಪ ಕೂಡ ಮಾಸಿಲ್ಲವಾ.. ಪ್ರೀತಿಗೆ ಇಷ್ಟೊಂದು ಧೈರ್ಯ ಬರುತ್ತಾ ಅಥವಾ ಇದು ಹುಚ್ಚುತನವಾ.. ಅಥವಾ ನನ್ನ ಹೃದಯದಲ್ಲಿ ಭಾವನೆಗಳೇ ಇಲ್ಲವಾ..' ಅವನ ಯೋಚನೆಗಳಿಗೆ ಸ್ಥಿರವಾದ ಅರ್ಥ ಸಿಗಲಿಲ್ಲ.. ಆದರೆ ಅರ್ಧರಾತ್ರಿಯಲ್ಲಿಯೂ ಸ್ಮಶಾನವನ್ನು ದಾಟಿ ಬರಲು ಪ್ರಚೋದಿಸುವ ಪ್ರೀತಿ ಒಂದು ರಣತಂತ್ರ ಎಂದು ಹೊಸದೊಂದು ವ್ಯಾಖ್ಯಾನ ನೀಡಿದ.

ನಟ್ಟ ನಡುರಾತ್ರಿ ನಾಯಿ ನರಿಗಳು ಊಳಿಡುತ್ತಿದ್ದವು. ಕರಾಳ ಮೌನ ಎದೆ ನಡುಗಿಸುವಂತಿತ್ತು. ಆ ಸಮಯದಲ್ಲಿ ಆಶ್ರಮಕ್ಕೆ ಬಂದು ಇಪ್ಪತ್ತು ಬಾರಿ ಫೋನ್ ಮಾಡಿ ಕೂಗಿ.. ಕಿರುಚಿ.. ಕಾಂಪೌಂಡರ್ ಗಿರಿಯನ್ನು ಎಬ್ಬಿಸಿ ಕೀಲಿ ತೆಗೆಸಿದರು. ಗಿರಿ ಇಂತಹ ಸರಿ ರಾತ್ರಿಯಲ್ಲಿ ಬಂದ ಅವರಿಬ್ಬರನ್ನು ಗಾಬರಿಯಿಂದ ನೋಡುತ್ತಾ ಏನಾಯಿತೆಂದು ಕೇಳಿದ.

"ಉಂಗುರ ಕಳೆದು ಹೋಗಿದೆ ಕಣೋ..ಹುಡುಕೋಣ ಬಾ.."

"ಯಾವ ಉಂಗುರ ಪ್ರಸನ್ನಣ್ಣ.."

"ಆ್ಮ..... ದುಶ್ಯಂತ ಶಾಕುಂತಲೆಗೆ ಕೊಟ್ಟಿದ್ದು.."ತಲೆ ಕೆರೆದುಕೊಂಡ.

"ಅದ್ಯಾಕಣ್ಣೋ ಇಲ್ಲಿ ಬಂತು.." ಬೆಚ್ಚಿದ ಗಿರಿ.

"ನಮ್ಮಿಬ್ಬರ ನಿದ್ದೆ ಹಾಳು ಮಾಡೋಕೆ... ಬೇಗ ಹುಡುಕೋ ಮಾರಾಯ.. ಇಲ್ಲಾಂದ್ರೆ ಇಡೀ ರಾತ್ರಿ ಜಾಗರಣೆ ಮಾಡ್ಬೇಕಾದೀತು‌..."

ಇಬ್ಬರೂ ನಿದ್ದೆಗಣ್ಣನ್ನು ಉಜ್ಜಿಕೊಳ್ಳುತ್ತ ವರಾಂಡ, ಸುತ್ತಲಿನ ಆವರಣದಲ್ಲಿ ತಡಕಾಡಿದರು. ಪರಿ ಡ್ರೆಸಿಂಗ್ ಗೆ ಕಾಯ್ದಿರಿಸಿದ ಕೋಣೆಯಲ್ಲಿ ಹುಡುಕುತ್ತಿದ್ದಳು. ಅದೇ ಕೋಣೆಯ ಬಾಗಿಲಿನಿಂದ ಸ್ವಲ್ಪ ದೂರದಲ್ಲಿ ಹೊಳೆಯಿತು ಪ್ಲಾಟಿನಂ ರಿಂಗ್..!  ಕುಪ್ಪಳಿಸಿ ಎತ್ತಿ ಮುತ್ತಿಡುತ್ತಾ "ರಿಂಗ್ ಸಿಕ್ತು ಡಾಕ್ಟರ್.. ಬನ್ನಿ ಹೋಗೋಣ.." ಎನ್ನುತ್ತಾ ಬೆರಳಿಗೆ ಹಾಕಿಕೊಂಡಳು.

"ಏನು... ಈ ನಟ್ಟನಡು ರಾತ್ರಿಯಲ್ಲಿ ಸ್ಮಶಾನದ ದಾರಿಯಲ್ಲಿ... ವಾಪಸ್ ಹೋಗೋದಾ... ಇಂಪಾಸಿಬಲ್ ಪರಿ.." ಧ್ವನಿ ಗಡುಸಾಯಿತು.

"ಸ್ಮಶಾನದ ದಾರಿನಾ..ಎಲ್ಲಿ.‌."

"ಮೈಮೇಲೆ ಪ್ರಜ್ಞೆ ಇದ್ರೆ ತಾನೇ ಗೊತ್ತಾಗೋಕೆ.. ಈಗ ಇಲ್ಲೇ ಮಕ್ಕಳ ಜೊತೆಗೆ ಮಲಗಿ, ಬೆಳಿಗ್ಗೆ ಮನೆಗೆ ಹೋಗೋಣ.. ಅಮ್ಮಂಗೆ ನಾನು ಫೋನ್ ಮಾಡಿ ಹೇಳ್ತೆನೆ. ಹೋಗಿ ಪರಿ.." ರೇಗಿದ. 

"ಮತ್ತೆ ನೀವೆಲ್ಲಿ ಮಲಗ್ತಿರಾ.."

"ನಾನೂ ಇಲ್ಲೇ.. ಕೆಳಗೆ ಗುಂಡಿ ತೋಡಿ.. ಬೆಚ್ಚಗೆ ಮಲಗಿರ್ತಿನಿ ಬೆಳಿಗ್ಗೆ ಬಂದು ಎಬ್ಬಿಸಿ ಆಯ್ತಾ.." ನೆಲಕ್ಕೆ ಕೈ ಕುಕ್ಕಿದಂತೆ ಹೇಳಿ "ಹೇ..ಗಿರಿ ಕರ್ಕೊಂಡು ಹೋಗಿ ಮಕ್ಕಳ ಕೋಣೆಯಲ್ಲಿ ಬಿಡು ಇವ್ರನ್ನ, ಹಾಸಿಗೆ ದಿಂಬು ಕೊಟ್ಟು ಬಾ.." ಎಂದು ದರದರನೇ ಗಿರಿಯ ಕೋಣೆ ಹೊಕ್ಕನು. ಪರಿಧಿಯನ್ನು ಮಕ್ಕಳ ಕೋಣೆಗೆ ಬಿಟ್ಟು ಬಂದ ಗಿರಿ "ಆ ಅಕ್ಕಂಗೆ ಏನಾಗೆದಣ್ಣ.."

"ಲವ್ ಭೂತ ಮೆಟ್ಕೊಂಡಿದೆ.. ಇಟ್ಸ್ ವೆರಿ ಡೆಂಜರಸ್ ಯಾ.. ಸದ್ಯ ನಾನ್ ಯಾರನ್ನೂ ಪ್ರೀತಿಸಿಲ್ಲ..  ಕೊಲೆಸ್ಟ್ರಾಲ್ ಜೊತೆ ಕಿತ್ತಾಡ್ಕೊಂಡೆ ಹಾಯಾಗಿ ಇದ್ದುಬಿಡ್ತಿನಿ.." ಕಣ್ಮುಚ್ಚಿ ಗೊಣಗುತ್ತಿದ್ದ. "ಕೊಲೆಸ್ಟ್ರಾಲ್...ಆ  ಅದು ಯಾರು ಪ್ರಸನ್ನಣ್ಣ.."  ಗಿರಿಯ ಪ್ರಶ್ನೆಗೂ ಮೊದಲೇ ಪ್ರಸನ್ನ ನಿದ್ರಾಲೋಕಕ್ಕೆ ಜಾರಿ ಹೋಗಿದ್ದ.

                    ******

"ಕಳೆದುಕೊಂಡದ್ದು ಸಿಗುವ ಹಾಗಿದ್ದರೆ ಎಷ್ಟು ದೂರ ಬೇಕಾದರೂ ಹೋಗಬಹುದು..ಹುಡುಕಬಹುದು!  ಆದರೆ ಸಿಗದೆ ಇರುವುದಕ್ಕೊಸ್ಕರ ಕಾಯುವುದು..ಕೊರಗುವುದು.. ಇಟ್ಸ್ ರೆಡಿಕ್ಯೂಲಸ್ ಪರಿ.." ಬೆಳಿಗ್ಗೆ ಬೇಗ ಎದ್ದು ಮನೆಗೆ ಹೊರಡುವಾಗ ಕಾರು ಡ್ರೈವ್ ಮಾಡುತ್ತ ಹೇಳಿದ ಪ್ರಸನ್ನ.

"ಇಲ್ಲ ಅಂದುಕೊಳ್ಳುವದಕ್ಕಿಂತ ಇವತ್ತಲ್ಲ ನಾಳೆ ಸಿಗುತ್ತೆ ಅನ್ನೋ ಫೀಲಿಂಗ್.. ಮನಸ್ಸಿಗೆ ನೆಮ್ಮದಿ ಕೊಡುತ್ತೆ ಡಾ.ಪ್ರಸನ್ನ" ಅಷ್ಟೇ ಗಂಭೀರವಾಗಿ ಉತ್ತರಿಸಿದಳು ಪಕ್ಕದಲ್ಲಿರುವ ಪರಿಧಿ.

"ನೆನಪುಗಳ ಮೇಲೆ ಖರ್ಚು ಮಾಡೋಕೆ ಅಂತನೇ ಸಮಯ ವ್ಯರ್ಥ ಮಾಡುವ ಪ್ರೀತಿ ಪ್ರೇಮಗಳಲ್ಲಿ ನನಗೆ ನಂಬಿಕೆ ಇಲ್ಲ ಪರಿ..  ಕಣ್ಣ ಮುಂದೆ ಏನಿದೆಯೋ ಅದು ನಿಜವಾದ ಬದುಕು! ಅದನ್ನು ಹೊರತು ಎಲ್ಲಾ ಭ್ರಮೆ! ನಿಮ್ಮ ಪ್ರೀತಿಯನ್ನು ಹೀಯಾಳಿಸ್ತಿದಿನಿ ಅನ್ಕೊಬೇಡಿ. ನನ್ನ ಅಭಿಪ್ರಾಯ ಹೇಳಿದ ಅಷ್ಟೇ.."

"ಇದು ಭ್ರಮೆಯೂ ಅಲ್ಲ.. ವ್ಯಥೆಯೂ ಅಲ್ಲ.  ನಾಳೆಗಳನ್ನು ಸ್ವಾಗತಿಸಲು ನನಗಿರುವ ಒಂದು ನಂಬಿಕೆ ನಿರೀಕ್ಷೆ.. ಹರ್ಷ ನನ್ನ ಜೊತೆಗೆ ಇಲ್ಲದೆ ಇರಬಹುದು ನನ್ನೊಂದಿಗೆ ಅವನ ಪ್ರೀತಿ ಯಾವಾಗಲೂ ಇರುತ್ತೆ ನನ್ನೊಳಗೆ ಅವನು ಮಾತನಾಡುತ್ತಾನೆ.. ಹಾಡುತ್ತಾನೆ.. ನಗುತ್ತಾನೆ.. ನಾನು ಈಗ ಬದುಕಿರೋದಕ್ಕೆ ನನ್ನೊಳಗಿರುವ ಅವನ ಅಸ್ತಿತ್ವವೇ ಕಾರಣ.. ಹರ್ಷ ನನಗೆ ಮಾತು ಕೊಟ್ಟಿದ್ದಾನೆ, ನನ್ನ ಕೊನೆಯವರೆಗೂ ಬಿಟ್ಟು ಹೋಗಲ್ಲ. ನಾವಿಬ್ಬರು ಬದುಕಿದ್ರೂ ಸತ್ತರೂ ಒಟ್ಟಿಗೆ ಅಂತ..  ಅದೇ ನಿರೀಕ್ಷೆ.. ಇಂದಲ್ಲ ನಾಳೆ ಹರ್ಷ ಬರಬಹುದು.. ಆಗ 'ರಿಂಗ್ ಎಲ್ಲೇ ಕೋತಿ' ಅಂತ ಮುನಿಸಿಕೊಂಡ್ರೆ,"  ಎಂದು ರಿಂಗ್ ನ್ನು ಮುತ್ತಿಕ್ಕಿ ಕೈಯನ್ನು ಎದೆಗವಚಿಕೊಂಡಳು. ಏನೋ ನೆನಪಾದಂತೆ "ನಿಮಗೊತ್ತಾ ಹರ್ಷನ ಲಗೇಜಲ್ಲಿ ಅವನ ಉಂಗುರಾನೇ ಸಿಗಲಿಲ್ಲ" ಎಂದಳು.

ಈಗ ಅದನ್ನು ಹುಡುಕೋಣ ಬನ್ನಿ ಅಂತಾಳೆನೋ ಎಂದು ಗಂಭೀರವಾಗಿ ಅವಳ ಮುಖವನ್ನು ನೋಡಿದ. "ಕಾಸ್ಟ್ಲಿ ರಿಂಗ್ ಅಂತ ಯಾರಾದರೂ ತಗೊಂಡಿರಬಹುದೆನೋ.." ಎಂದು ತನಗೆ ತಾನೇ ಹೇಳಿಕೊಂಡಳು. ಪ್ರಸನ್ನ ಉಫ್..ಎಂದು ಉಸಿರಾಡಿದ. ರಾತ್ರಿ ಅವಳ ಮೇಲೆ ರೇಗಿದ್ದಕ್ಕೆ ಕ್ಷಮೆ ಕೇಳಿ...

" ಪರಿ.. ನನಗೀ ಪ್ರೀತಿ ಪ್ರೇಮ ನಿರೀಕ್ಷೆ.. ಎಲ್ಲಾ.. ಹುಚ್ಚುತನ ಅನಿಸುತ್ತೆ.  ಆದರೆ ಒಂದು ವೇಳೆ ನಿಮ್ಮ ನಿರೀಕ್ಷೆ ನಿಜವಾಗಿ.. ಭವಿಷ್ಯದಲ್ಲಿ ನಿಮ್ಮ ಪ್ರೀತಿ ನಿಮಗೆ ಸಿಗೋ ಸಣ್ಣ ಸೂಚನೆ ಸಿಕ್ಕಿದರೂ... ಆ್ಯಸ್ ಎ ಬೆಸ್ಟ್ ಫ್ರೆಂಡ್ ಐ ಪ್ರೊಮಿಸ್ ಯು.. ನಿಮ್ಮ ಪ್ರೀತಿನಾ ನಿಮ್ಮ ಕೈಗೆ ಸೇರಿಸೋ ಲಾಸ್ಟ್ ಮೂಮೆಂಟ್ ವರೆಗೂ ನಾನು ನಿಮಗೆ ಬೆಂಬಲವಾಗಿ ಜೊತೆಗಿರ್ತೆನೆ.."

"ನಿರೀಕ್ಷೆ ನಿಜವಾಗಲಿ ಅನ್ನೋದೆ ನನ್ನಾಸೆ..ಪ್ರೀತಿ ಚೈತನ್ಯವಾಗಿರಲು ಎರಡು ದೇಹಗಳು ಸದಾ ಜೊತೆಗೆ ಇರಬೇಕಂತಿಲ್ಲ ಮನಸ್ಸುಗಳು ಒಂದಾಗಿದ್ದರೆ ಸಾಕು ಪ್ರೀತಿ ಹಸಿರಾಗಿರುತ್ತದೆ "  ಅವಳ ಕಣ್ಣಿನಿಂದ ಹನಿಯೊಂದು ಜಾರಿ ಅವಳ ಉಂಗುರದ ಮೇಲಿನ ಹರಳಿನ ಮೇಲೇ ಮತ್ತೊಂದು ಮುತ್ತಿನಂತೆ ಫಳ್'ನೆ ಹೊಳೆಯಿತು.

              ******

ರಾತ್ರಿಯೆಲ್ಲ ಸರಿಯಾಗಿ ನಿದ್ರೆಯಿಲ್ಲದೆ ಉರಿಯುತ್ತಿದ್ದ ಕಣ್ಣುಗಳನ್ನು ಉಜ್ಜಿಕೊಳ್ಳುತ್ತ ಆಸ್ಪತ್ರೆಗೆ ಬಂದ ಪ್ರಸನ್ನನಿಗೆ ಬೆಳಿಗ್ಗೆ ಡ್ಯೂಟಿ ಟೈಮಿನಲ್ಲಿ...
ಲಾ..ಲಾಲಾ..ಲಾಲಾಲಾ....ಎಂದು ಕಿವಿಯಲ್ಲಿ ಏರ್ಫೋನ್ ಸಿಕ್ಕಿಸಿಕೊಂಡು ಮೊಬೈಲ್ ನೋಡುತ್ತಾ ಹಾಡು ಗುನುಗುತ್ತಿದ್ದ ಶ್ರಾವ್ಯಳನ್ನು ನೋಡಿ ರೇಗಿತು. "ಇನ್ನೂ ಸ್ವಲ್ಪ ಜೋರಾಗಿ ಹಾಡಿ ಶ್ರಾವ್ಯ.. ಮ್ಯುಸಿಕ್ ಅವಾರ್ಡ್ಸ್ ಆದರೂ ಸಿಗಬಹುದು" ಅವಳ ಕಿವಿಯಿಂದ ಏರ್ಫೋನ್ ಕಿತ್ತಿ ಬಿಸಾಕಿ ಹೇಳಿದ ಪ್ರಸನ್ನ.

"ಸರ್ ರೌಂಡ್ಸ್ ಮುಗೀತು ಅದ್ಕೆ.."

"ರೌಂಡ್ ಮುಗಿದಿದ್ರೆ ರಿಪೋರ್ಟ್ ಕಲೆಕ್ಟ ಮಾಡಿ, ನಿವ್ ಪೇಷಂಟ್ ಅಟೆಂಡ್ ಮಾಡಿ.. ಹೀಗೆ ಟೈಮ್ ವೇಸ್ಟ್ ಮಾಡಬೇಡಿ ಎಂದು ಅವಳ ಮೊಬೈಲ್ ತೆಗೆದು ಸ್ವಿಚ್ ಆಫ್ ಮಾಡಿ ಸಾಯಂಕಾಲ ಕೊಡ್ತಿನಿ" ಎಂದು ತೆಗೆದುಕೊಂಡು ಹೋದ. ಅವಳು ಸರ್..ಸರ್ ಎಂದು ನಾಲ್ಕು ಹೆಜ್ಜೆ ಸಾಗಿ ಛೇ..ಎಂದು ಸುಮ್ಮನಾದಳು.

ಅದೇ ಸಂಜೆ ಪ್ರಸನ್ನನಿಂದ ತನ್ನ ಫೋನಿಗಾಗಿ ಕಾಯುತ್ತಾ ನಿಂತಾಗ ಶ್ರಾವ್ಯ ದಿವ್ಯಳಿಗೆ ಹೇಳುತ್ತಿದ್ದಳು...
" ಹೋದವಾರ ನನ್ನ ಕಜ಼ಿನ್ ಬರ್ತಡೇ ಪಾರ್ಟಿಯಲ್ಲಿ ಒಬ್ಬ ಹುಡುಗ ಗೀಟಾರ್ ಬಾರಿಸುತ್ತಾ ಹಾಡು ಹೇಳ್ತಿದ್ದ ಕಣೇ..ಏನ್ ಸ್ಮಾರ್ಟಾಗಿದಾನೆ.. ಎಷ್ಟು ಸಖತ್ತಾಗಿ ಹಾಡ್ತಾನೆ ಗೊತ್ತಾ... ರಾಕ್ ಸ್ಟಾರ್ ತರಾನೇ‌..ನೋಡ್ತಾ ಕೂತಿದ್ದೆ.. ಈ ಸೈಕೋ ಮೊಬೈಲ್ ಕಿತ್ಕೊಂಡು ಬಿಟ್ಟ.."

"ಪಾರ್ಟಿಯಲ್ಲಿ ಒಂದು ಹಾಡು ಹೇಳಿದ್ದಕ್ಕೆ ರಾಕ್ ಸ್ಟಾರ್ ಆಗೋದ್ನಾ.. ನಿನ್ನ ತಲೆ"

"ಹೇ.. ನಿಜವಾಗಿಯೂ.. ಹಳೇ ಹಾಡನ್ನೇ ರಿಮಿಕ್ಸ್ ಮಾಡಿ ಎಷ್ಟು ಚೆನ್ನಾಗಿ ಹಾಡ್ತಾನೇ.. ತುಮ್ ದೇನಾ ಸಾಥ್ ಮೇರಾ..ಓ ಹಮ್ ನವಾಬ್.." ಅಷ್ಟು ಹೊತ್ತು ಅವರ ಮಾತಿನ ಕಡೆಗೆ ಗಮನ ಹರಿಸದೆ ಅಲ್ಲಿಯೇ ನಡೆದು ಹೋಗಿ ಕಾರಿನಲ್ಲಿ ಕುಳಿತ ಪರಿಧಿ, ಶ್ರಾವ್ಯ ಆ ಹಾಡು ಗುನುಗುತ್ತಿದ್ದಂತೆ ಕಾರಿನಿಂದ ಇಳಿದು ಓಡಿ ಬಂದು..
"ಯಾರು ಹಾಡಿದ್ದು ಈ ಹಾಡನ್ನ.. ಎಲ್ಲಿ.." ಏದುಸಿರು ಬಿಡುತ್ತ ಕೇಳಿದಳು.

"ಪರಿ, ಅದು..‌‌.ಸಿಡ್ನಿಯಲ್ಲಿ.. ನನ್ನ ಕಜ಼ಿನ್ ಬರ್ತಡೇ ಪಾರ್ಟಿಯಲ್ಲಿ..ಒಬ್ಬ ಹುಡುಗ ಹಾಡಿದ್ದು.. ನಮ್ಮ ಬ್ರೋ ವಿಡಿಯೋ ಕಳಿಸಿದ್ರು.. ಡಾ.ಪ್ರಸನ್ನ ಹತ್ರ ಇದೆ. ನಿಮಗೂ ತೋರಿಸ್ತಿನಿ ತಾಳಿ.. ಎಷ್ಟು ಚೆ....."

"ಅವರ ಹೆಸರೇನು...?" ಶ್ರಾವ್ಯಳ ಮಾತನ್ನು ತುಂಡರಿಸಿ ಕೇಳಿದಳು.

"ಸಂಕಲ್ಪ್...!!ಅಂತ.. ಯಾಕೆ..?"

ಪರಿಧಿ ನಿರಾಸೆಯಿಂದ ಏನಿಲ್ಲವೆಂದು ಹಿಂದಿರುಗಿ ಕಾರು ಸ್ಟಾರ್ಟ್ ಮಾಡಿಕೊಂಡು ಹೊರಟು ಹೋದಳು. ತದನಂತರ ಬಂದ ಪ್ರಸನ್ನ ಶ್ರಾವ್ಯಳ ಮೊಬೈಲ್ ಹಿಂದಿರುಗಿಸಿ " ಇನ್ನೊಮ್ಮೆ ಹೀಗೆ ಮಾಡಿದ್ರೆ ಮೊಬೈಲನ್ನ ಆ..ಕಿಟಕಿಯಿಂದ ಆಚೆ ಬಿಸಾಕ್ತಿನಿ..ಜೋಪಾನ " ಎಂದು ಬೈಕ್ ಏರಿ ಹೋದ.

"ದಿವಿ..ಸಿ ಹಿಯರ್.." ಎಂದು ಶ್ರಾವ್ಯಾ ಮೊಬೈಲ್ ಆನ್ ಮಾಡಿ ವಿಡಿಯೋ ತೋರಿಸುವಾಗ "ಆ ಹುಡುಗನ ಕೈಯಲ್ಲಿರುವ ರಿಂಗ್ ಪರಿ ಕೈಯಲ್ಲಿರೋ ರಿಂಗ್ ತರಾನೇ‌ ಇದೆಯಲ್ವಾ.." ಎಂದಳು ದಿವ್ಯ.

"ಹ್ಮ್ಮ..ಆದರೆ ಇದನ್ನ ಅವರ ಮುಂದೆ ಹೇಳಿ ಅವರಿಗೆ ಹರ್ಟ್ ಮಾಡಬೇಡ ಒಕೆ..." ಎಂದು ಇಬ್ಬರೂ ವಿಡಿಯೊ ನೋಡುತ್ತಾ ಕುಳಿತರು.

ಮುಂದುವರೆಯುವುದು...

                  ⚛⚛⚛⚛⚛⚛


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...