ವಿದ್ಯಾ ನಾಮನರಸ್ಯ ರೂಪಮಧಿಕಂ ಪ್ರಚ್ಛನ್ನ ಗುಪ್ತ ಧನಂ
ವಿದ್ಯಾಭೋಗಕರೀ ಯಶಃ ಸುಖಕರೀ ವಿದ್ಯಾ ಗುರುಣಾಂ ಗುರುಃ ||
ವಿದ್ಯಾಬಂಧು ಜನೋ ವಿದೇಶಗಮತೀ ವಿದ್ಯಾಪರಂ ದೈವತಂ |
ವಿದ್ಯಾ ರಾಜಸು ಪೂಜ್ಯತೀ ನಹಿ ಧನಂ ವಿದ್ಯಾವಿಹೀನಃ ಪಶುಃ ||
ವಿದ್ಯೆ ಮನುಷ್ಯನಿಗೆ ಸೌಂದರ್ಯವಿದ್ದಂತೆ. ಅದೊಂದು ದೊಡ್ಡ ಸಂಪತ್ತು, ಆದರೆ ಗುಪ್ತ ನಿಧಿಯಂತೆ ಅದು ಹೊರಗೆ ಕಾಣಿಸಲ್ಲ. ವಿದ್ಯೆಯ ಬಲದಿಂದ ನಾವು ಸಂತೃಪ್ತಿಯನ್ನು ಅನುಭವಿಸಬಹುದು. ಯಶಸ್ವಿಗೆ ಮೂಲ ಕಾರಣ ವಿದ್ಯೆ! ಗುರುಗಳಲ್ಲಿ ಅದು ಶ್ರೇಷ್ಠ ಗುರು ವಿದ್ಯೆ! ಅರಿಯದ ದೂರ ದೇಶದಲ್ಲಿ ನಿನ್ನ ಶ್ರೇಷ್ಠ ಗೆಳೆಯ ವಿದ್ಯೆಯೇ..!! ವಿದ್ಯೆಯು ಶ್ರೇಷ್ಠ ದೇವತೆ. ರಾಜ ಮಹಾರಾಜರ ಸನ್ನಿಧಾನದಲ್ಲಿ ಸಂಪತ್ತಿಗಿಂತ ವಿದ್ಯೆಗೆ ಬೆಲೆ ಹೆಚ್ಚು. ವಿದ್ಯೆ ಇಲ್ಲದವರು ಪಶು ಸಮಾನ ಅಂತ ಈ ಶ್ಲೋಕದ ಅರ್ಥ.
ಓದು ಬರೀ ಅಂಕ ಗಳಿಸಲು ಅಥವಾ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಸಂಬಳ ಎಣಿಸುವದಕ್ಕೋ ಮಾತ್ರ ಸೀಮಿತವಾಗಬಾರದು. ಓದಿದ ವಿದ್ಯೆ ಅಂಧಕಾರದಲ್ಲಿ ಮುಳುಗಿರುವ ಜಗತ್ತಿಗೆ ಜ್ಞಾನದ ದೀವಿಗೆಯಾಗಬೇಕು. ಜ್ಞಾನ ಯಾವತ್ತೂ ವ್ಯರ್ಥವಲ್ಲ!!! ಇವತ್ತು ನಾವು ಏನು ಓದುತ್ತೀವೋ ಅದು ವ್ಯರ್ಥ ಅಂದುಕೊಳ್ಳಬಾರದು. ಯಾವತ್ತೋ ಒಂದು ದಿನ ಆ ಜ್ಞಾನ ನಮ್ಮ ಬದುಕಿನಲ್ಲಿ ಸಹಾಯಕ್ಕೆ ಬರುತ್ತೆ.
ನಮ್ಮ ದೇಹದ ಹಸಿವನ್ನು ನೀಗಿಸುವುದಕ್ಕಾಗಿ ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಊಟ ಮಾಡ್ತಿವಲ್ವಾ.. ಹಾಗೇ ಮನಸ್ಸಿನ ಹಸಿವನ್ನು ನೀಗಿಸುವಂಥದ್ದು ಪ್ರೀತಿ, ಸ್ನೇಹ, ಸಂಬಂಧಗಳು! ಹಾಗೆಯೆ ನಮ್ಮ ಬುದ್ದಿಯ, ಮೆದುಳಿನ ಹಸಿವಿಗೂ ಊಟ ಹಾಕಬೇಕಲ್ವಾ..? ಅದೇ ಜ್ಞಾನಾರ್ಜನೆ..!! ಬುದ್ಧಿಗೆ ಆಹಾರ ನೀಡುವ ಕೆಲಸವು ಜೀವನ ಪೂರ್ತಿ ನಡೀತಾ ಇರಬೇಕು. ಜ್ಞಾನದ ಹಸಿವಿಗೆ ಕೊನೆ ಎಂಬುದೇ ಇರೋದಿಲ್ಲ. ಈ ರೀತಿ ವಿಚಾರ ಮಾಡಿ ಪುಸ್ತಕ ಹಿಡಿದು ಕುಳಿತು ಓದು.. ಆಗ ಓದಿನ ಕಡೆಗೆ ಮನಸ್ಸು ಏಕಾಗ್ರತೆ ಪಡೆಯುತ್ತೆ. ಮಾರ್ಕ್ಸ್ ಎಷ್ಟಾಗುತ್ತೋ..? ಎಕ್ಸಾಮ್ ಹೇಗಿರತ್ತೋ..? ಪ್ರಶ್ನೆ ತುಂಬಾ ಡಿಫಿಕಲ್ಟ್ ಇರುತ್ತೆ ಅಂತೆಲ್ಲ ಯೋಚನೆ ಮಾಡ್ತಾ ಸುಮ್ಮನೆ ಟೆನ್ಷನ್ ಮಾಡ್ಕೋಬೇಡ....
ಹೀಗೆ ಪ್ರಸನ್ನನ ಹಿತಬೋಧನೆ ಅರ್ಧಗಂಟೆಯಿಂದಲೂ ನಡೆಯುತ್ತಲೇ ಇತ್ತು! ಎದುರಿಗೆ ಗಲ್ಲಕ್ಕೆ ಕೈ ಹಚ್ಚಿ ತದೇಕಚಿತ್ತದಿಂದ ಇದನ್ನೇ ಕೇಳುತ್ತಾ ಕುಳಿತಿದ್ದ ಹರಿಣಿ ಮಧ್ಯದಲ್ಲಿ ಅವನನ್ನು ಭುಜತಟ್ಟಿ ಎಚ್ಚರಿಸಿ ಇದನ್ನೆಲ್ಲ "ಯಾಕೆ ಹೇಳ್ತಿದಿರಾ ಡಾ.ಪಚ್ಚು.." ಎಂದು ಕೇಳಿದಳು.
"ಸ್ವೀಟಿ.. ನೀನೇ ತಾನೇ ಹೇಳಿದ್ದು.. ತುಂಬಾ ಟೆನ್ಷನ್ ಆಗಿದ್ದೀನಿ, ಏನು ಅರ್ಥಾನೇ ಆಗ್ತಿಲ್ಲ ಅಂತ.. ಎಕ್ಸಾಮ್ ಶುರುವಾಯಿತಲ್ಲ ಹೀಗೆ ಆಗೋದು ಸಹಜ. ಗಾಬರಿಯಾಗಬೇಡ, ತಾಳ್ಮೆಯಿಂದ ಮನಸ್ಸು ಕೊಟ್ಟು ಓದು. ಏನಾದರೂ ಡೌಟ್ಸ್ ಇದ್ರೆ ನಿಮ್ಮ ಮಿಸ್ ನಾ ಕೇಳಿ ಕ್ಲಿಯರ್ ಮಾಡ್ಕೋ.. ಇಲ್ಲ ನನ್ನ ಕೇಳು, ನಾನು ಹೇಳಿ ಕೊಡ್ತಿನಿ ಒಕೆ.. ಟೆನ್ಷನ್ ತಗೋಬೇಡ ರಿಲ್ಯಾಕ್ಸ್ ಆಗಿರು.." ಎಂದ.
"ಅಯ್ಯೋ.. ಡಾ.ಪಚ್ಚು ಟೆನ್ಷನ್ ಆಗಿದ್ದು ಏಕ್ಸಾಮ್ ಸಲುವಾಗಿ ಅಲ್ಲ.." ಹಣೆ ಚಚ್ಚಿಕೊಂಡಳು.
"ಮತ್ತೆ... ಮನೆಯಲ್ಲಿ ಇಲ್ಲ ಶಾಲೆಯಲ್ಲಿ ಏನಾದರೂ ಸಮಸ್ಯೆನಾ.." ಗಂಭೀರವಾಗಿ ಕೇಳಿದ.
"ನೋ ನೋ... ಎಲ್ಲಾ ಫರ್ಸ್ಟ್ ಕ್ಲಾಸ್ ಇದೆ.."
"ಮತ್ತೆನೇ.. ನಿನ್ನ ತಲೆ ಹೋಗುವಂತಹ ಟೆನ್ಷನ್ನು..."
"ಅದು... ಒನ್ ಮಿನಿಟ್.." ಎಂದು ತನ್ನ ಕಬೋಡ್ ನಲ್ಲಿನ ಕೆಲವು ಬಟ್ಟೆಗಳನ್ನು ಮಂಚದ ಮೇಲೆ ಅವನೆದುರು ಹರವಿ, "ಇವನ್ನೆಲ್ಲ ನೋಡಿ ಹೇಳು.. ಯಾವುದು ಚೆನ್ನಾಗಿದೆ?" ಕೇಳಿದಳು.
ಬಟ್ಟೆ ಅಂಗಡಿಗೆ ಹೋದಾಗಲೇ ಆಕಡೆ ಈಕಡೆಗೆ ನಾಲ್ಕು ದಿಕ್ಕು ಸುತ್ತಾಡದೆ ಎದುರಿಗೆ ಕಾಣುವ ಯಾವುದೋ ಬಣ್ಣದ ಒಂದೆರಡು ಟೀ ಶರ್ಟ್ ಆರಿಸಿಕೊಂಡು ಸೈಜ್ ಸರಿಯಿದೆಯಾ ಎಂದು ಒಮ್ಮೆ ನೋಡಿ ಕೊಂಡು ತರುವ ಪ್ರಸನ್ನ ಎದುರಿಗೆ ಹರಡಿದ ರಾಶಿ ಬಟ್ಟೆಗಳನ್ನು ನೋಡಿ "ಇದೆನೋ... ಶಾಪಿಂಗ್ ಮಾಲ್ ನೇ ಮನೆಗೆ ತಂದಿದ್ದಿಯಾ.." ಎಂದ
"ನೋ.. ಯಾ.. ಎಲ್ಲಾ ಹಳೆಯದಾಗಿದೆ! ಹೊಸ ಡ್ರೆಸ್ ತಗೋಬೇಕು.." ಎಂದು ಯೋಚಿಸುತ್ತಾ "ಆದರೆ ಈಗ ಟೈಮ್ ಇಲ್ಲ ನಾಳೆನೇ ಬರ್ತಡೇ ಇರೋದು ಬೇಗ ಯಾವುದು ಚೆನ್ನಾಗಿದೆ ಸೆಲೆಕ್ಟ್ ಮಾಡು" ಎಂದು ಅವನನ್ನೇ ನೋಡಿದಳು
ತಾನು ಯಾವುದೋ ಗಂಭೀರ ಸಮಸ್ಯೆ ಎಂದು ಓಡಿ ಬಂದು, ಕಂಠಶೋಷಣೆ ಮಾಡಿಕೊಂಡು ಅರ್ಧಗಂಟೆ ಪುರಾಣ ಓದಿದ್ದು ವ್ಯರ್ಥವಾಯಿತು ಎಂದುಕೊಂಡು ಉಫ್.. ಎಂದು ಉಸಿರು ಬಿಟ್ಟು, ಎಲ್ಲಾ ಬಟ್ಟೆಗಳನ್ನು ಗಮನಿಸಿ "ಎಲ್ಲಾ ಚೆನ್ನಾಗಿಯೇ ಇದೆಯಲ್ಲ.. ಯಾವುದಾದರೂ ಹಾಕಿಕೋ.." ಎಂದ.
"ಚೆನ್ನಾಗಿದೆಯಂತ ಎಲ್ಲಾ ಹಾಕ್ಕೊಳ್ಳಕಾಗುತ್ತಾ... ಯಾವುದಾದರೂ ಒಂದು ಡ್ರೆಸ್ ಸೆಲೆಕ್ಟ್ ಮಾಡು ಪಚ್ಚು.."
"ಇದು ಚೆನ್ನಾಗಿದೆ ಹಾಕ್ಕೋ.." ಎಂದ ನೇರಳೆ ಬಣ್ಣದ ಲಾಂಗ್ ಫ್ರಾಕ್ ಕೈಯಲ್ಲಿ ಹಿಡಿದು.. "ಅಂದಹಾಗೆ ಬರ್ತಡೇ.. ಯಾರ್ದು" ಕೇಳಿದ ಚಕಿತನಾಗಿ
"ನನ್ನ ಫ್ರೆಂಡ್ ದು.. ನಾಳೆ ಸಂಜೆ ಇದೆ" ಎಂದು ಏನೋ ಯೋಚಿಸುತ್ತಾ " ಅರ್ರೆ.. ಅವಳಿಗೆ ಏನಾದರೂ ಗಿಫ್ಟ್ ಕೂಡ ತಗೋಬೇಕು ನೆನಪೇ ಇಲ್ಲ.. ಈಗ ಹೋಗೋಣ್ವಾ ಗಿಫ್ಟ್ ತರೋಕೆ.."
ಟೈಮ್ ನೋಡಿಕೊಂಡ ರಾತ್ರಿ ಒಂಬತ್ತು ಇಪ್ಪತ್ತು! "ತುಂಬಾ ಲೇಟಾಗಿದೆ ಸ್ವೀಟಿ.. ಈಗ ಬೇಡ.. ನಾಳೆ ಸ್ಕೂಲ್ ಬಿಟ್ಟ ತಕ್ಷಣ ಹೋಗಿ ಬರೋಣ! ಆಮೇಲೆ ನಾನೇ ನಿನ್ನ ಫ್ರೆಂಡ್ ಮನೆಗೆ ಡ್ರಾಪ್ ಮಾಡ್ತಿನಿ ಒಕೆ.. ಈಗ ಬಾಯ್.. ಟೆನ್ಷನ್ ಬಿಟ್ಟಾಕಿ ಚೆನ್ನಾಗಿ ಓದು ಆಯ್ತಾ.. ಎಂದು ತಲೆ ಸವರಿ ಹೊರಟ.
"ಬಾಯ್.. ನಾಳೆ ಸಂಜೆ ಬೇಗ ಬರ್ಬೇಕು" ಕೂಗಿದಳು.
"ಶ್ಯೂರ್ ಸ್ವೀಟಿ.." ಎನ್ನುತ್ತಾ ಕೆಳಗೆ ಬಂದ. ಡೈನಿಂಗ್ ಟೇಬಲ್ ಮೇಲೆ ಊಟ ಮಾಡುತ್ತ ಕುಳಿತಿದ್ದ ಅಶ್ವತ್ಥರನ್ನು, ಅವರಿಗೆ ಊಟ ಬಡಿಸುತ್ತಿದ್ದ ಸುಲೋಚನರನ್ನು ನಗುತ್ತ ಮಾತಾಡಿಸಿದ. ಅವರು ತುಂಬಾ ಒತ್ತಾಯ ಪೂರ್ವಕವಾಗಿ ಅವನಿಗೂ ಊಟ ಬಡಿಸಲು.. ಇಲ್ಲವೆನ್ನಲಾಗದೆ ಊಟದ ಶಾಸ್ತ್ರ ಮುಗಿಸಿ "ಅಮ್ಮ ಬಾಯ್.. ತಾತಾ ಗುಡ್ ನೈಟ್.." ಎಂದು ಅವರೊಂದಿಗೆ ಮಾತಾಡಿ ಹೊರಗೆ ಬಂದ ಪ್ರಸನ್ನ.
ಆಫೀಸಿನಿಂದ ಬಂದ ವಿನಾಯಕ್ ಮನೆಯ ಒಳಗೂ ಹೋಗದೆ ಕೋರ್ಟ್ ನ್ನು ಬಿಚ್ಚಿ ತಮ್ಮ ಪಕ್ಕದಲ್ಲಿ ಇಟ್ಟುಕೊಂಡು ಮನೆಯ ಹೊರಗಿನ ಕೊನೆಯ ಮೆಟ್ಟಿಲ ಮೇಲೆ ಏನೋ ಗಹನವಾದ ವಿಚಾರವನ್ನು ಯೋಚಿಸುತ್ತಾ ಕುಳಿತಿದ್ದರು!!
"ಹ್ಮ..ಹ್ಮ... ಎಂದು ಗಂಟಲು ಸರಿ ಮಾಡಿಕೊಳ್ಳುತ್ತಾ.. " ಏನೋ ಗಾಢವಾಗಿ ವಿಚಾರ ಮಾಡ್ತಿದಿರಲ್ಲಾ.. ಅಂಕಲ್! ನಿಮಗೂ ನಾಳೆ ಯಾವ ಕಲರ್ ಕೋರ್ಟ್ ಹಾಕೋಬೇಕು ಅಂತ ಟೆನ್ಷನ್ ಆಗಿದೆಯಾ.." ನಗುತ್ತಾ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಾ ಕೇಳಿದ
ಅವನ ಧ್ವನಿ ಕೇಳಿ ಅವರು ತಕ್ಷಣ ಕಣ್ಣೋರೆಸಿಕೊಂಡಿದ್ದನ್ನು ಗಮನಿಸಿದ. ವಿಷಯ ಏನೋ ಗಂಭೀರ ಅನ್ನಿಸಿತು ಅವನಿಗೆ. ಮಗ ಸತ್ತಾಗಲೂ ಅವರ ಕಣ್ಣಲ್ಲಿ ನೀರು ಬರಗೊಟ್ಟಿರಲಿಲ್ಲ ವಿನಾಯಕ್ ಅಷ್ಟು ಗಟ್ಟಿ ಮನಸ್ಸು. ಇವತ್ತು ಹೀಗೆ ಮನೆಯ ಹೊರಗೆ ಒಂಟಿಯಾಗಿ ಕುಳಿತು ಕಣ್ಣೀರಾಗುವುದು ಎಂದರೆ.. "ಅಂಕಲ್.. ಏನಾಯ್ತು ಹೇಳಿ, ಒಬ್ಬರೇ ಮನಸ್ಸಲ್ಲಿ ಕೊರಗಬೇಡಿ" ಕಾಳಜಿಯಿಂದ ಕೇಳಿದ.
ಧೀರ್ಘ ಉಸಿರೆಳೆದು ಕೊಳ್ಳುತ್ತಾ "ಇವತ್ತು ನಾನು.. ಪರಿನಾ ಫೋರ್ಸ್ ಮಾಡಿ ಪಾರ್ಟಿಗೆ ಕರೆದುಕೊಂಡು ಹೋಗಬಾರದಿತ್ತು.. ಪ್ರಸನ್ನ! "
"ಪಾರ್ಟಿನಾ... ಯಾವ ಪಾರ್ಟಿ? ಏನಾಯ್ತು ಅಂಕಲ್"
ಅವರು ವಿವರಿಸಿದರು...
" ಆ ದಿನ ಹರ್ಷ ಅಪೂರ್ಣವಾಗಿ ಬಿಟ್ಟು ಹೋದ ಎಸ್ ಆರ್ ಕಂಪನಿಯ ಬೃಹತ್ ಪ್ರಮಾಣದ ಪ್ರಾಜೆಕ್ಟ್ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಪ್ರಾಜೆಕ್ಟ್ ನಿಂದಾಗಿ 'ಭಾರ್ಗವ್ ಗ್ರುಪ್ ಆಫ್ ಕಂಪನಿ' ಕೋಟ್ಯಂತರ ಮೌಲ್ಯದ ಲಾಭವನ್ನು ಗಳಿಸಿತು. ಇದೇ ಕಾರಣಕ್ಕೆ ಕಂಪನಿ ಹಾಗೂ ಫ್ಯಾಕ್ಟರಿ ಉದ್ಯೋಗಿಗಳ ಸಂಬಳವನ್ನು ಹೆಚ್ಚು ಮಾಡುವುದರ ಜೊತೆಗೆ ಒಂದು ತಿಂಗಳ ಬೋನಸ್ ಸಹ ಕೊಡಲಾಯಿತು. ಈ ಸಂತೋಷವನ್ನು ಹಂಚಿಕೊಳ್ಳಲು ಮಧ್ಯಾಹ್ನ ಎಲ್ಲಾ ಕಾರ್ಮಿಕರು ಉದ್ಯೋಗಿಗಳಿಗೆ ವಿಶೇಷ ಭೋಜನಕೂಟ ಏರ್ಪಡಿಸಲಾಯಿತು. ಮತ್ತು ಸಂಜೆ ಕ್ಲೈಂಟ್ ಡೆಲಿಗೇಟ್ಸ್ ಎಕ್ಸಿಕ್ಯುಟಿವ್ ಮತ್ತು ಎಂಪ್ಲಾಯ್ ಗಳಿಗೆ ಚಿಕ್ಕ ಪಾರ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು. ಪರಿ 'ಇಂತಹ ಪಾರ್ಟಿ ಎಲ್ಲಾ ನನಗೆ ಇಷ್ಟವಾಗಲ್ಲ ಮಾವಾ..' ಎಂದರೂ ಕೇಳದ ವಿನಾಯಕ್ 'ನೀನು ನಮ್ಮ ಕಂಪನಿಯ ಬೋರ್ಡ್ ಮೆಂಬರ್ಸ್ ಗಳಲ್ಲಿ ಒಬ್ಬಳು.. ನೀನು ಅಲ್ಲಿ ಇರಬೇಕಾಗುತ್ತಮ್ಮ.. ಪ್ಲೀಸ್ ಹತ್ತು ನಿಮಿಷ ಇದ್ದು ಬಂದು ಬಿಡು' ಎಂದು ಹೇಳಿದರು. ಅವಳು ಒಲ್ಲದ ಮನಸ್ಸಿನಿಂದ ಒಪ್ಪಿ ಹಾಗೆಂದುಕೊಂಡೆ ಪಾರ್ಟಿಗೆ ಹೋಗಿದ್ದಳು. ಆದರೆ ಅಲ್ಲಿ ನಡೆದದ್ದೇ ಬೇರೆ..
ಅಲ್ಲಿಗೆ ಬಂದಿದ್ದ ಮುಂಬೈನ ಕ್ಲೈಂಟ್ ಒಬ್ಬ ಪರಿಧಿಯನ್ನು ಅಪ್ಪಿಕೊಂಡು ಮುತ್ತಿಡಲು ಬಂದ. ಅವಳು 'ದಿಸ್ ಇಸ್ ನಾಟ್ ಅವರ್ ಕಲ್ಚರ್ ಮಿಸ್ಟರ್..' ಎಂದು ಜೋರಾಗಿ ದೂರ ತಳ್ಳಿ ಎಚ್ಚರಿಕೆ ನೀಡಿದಳು. ಸುತ್ತಲಿನ ಜನ ಇದನ್ನು ನೋಡುವಾಗ ಅವನು ಅವಮಾನದಿಂದ ಮತ್ತಷ್ಟು ರೊಚ್ಚಿಗೆದ್ದು ಮತ್ತೆ ಅವಳ ಮೇಲೆ ಎರಗಲು ಹೋದ. ಈ ಸಾರಿ ಪರಿಧಿಯ ತಾಳ್ಮೆ ಕೆಟ್ಟಿತು ಅವಳು ತನ್ನ ಕೈಯಲ್ಲಿದ್ದ ಜ್ಯೂಸನ್ನು ಅವನ ಮುಖಕ್ಕೆ ಎರಚಿ 'ಬಿಹೇವ್ ಯುವರ್ ಸೆಲ್ಫ್ ಮಿ.ರಾಥೋಡ್...!!' ಎಂದು ಚೀರಿದಳು. ಅಲ್ಲಿ ನೆರೆದವರಿಗೆಲ್ಲ ವಿಷಯದ ಅರಿವಾಗಿ ಸುತ್ತಲೂ ಓಡಿ ಬಂದರು. ಇವರ ಆಫೀಸಿನವರು ಪರಿಧಿಯ ಬೆಂಬಲಕ್ಕೆ ನಿಂತು ರಾಥೋಡನನ್ನು ತರಾಟೆಗೆ ತೆಗೆದುಕೊಂಡರು. ಅದೇ ವೇಳೆಗೆ ವಿನಾಯಕ್ ಅವನ ಕಾಲರ್ ಹಿಡಿದು "ಹೌ ಡೆರ್ ಯು ರ್ಯಾಸ್ಕಲ್.. ಹೆಣ್ಮಕ್ಕಳನ್ನ ಏನಂತ ತಿಳ್ಕೊಂಡಿದಿಯಾ.. ಸಂಸ್ಕಾರ ಇಲ್ಲದ ನಿನ್ನಂತವರಿಗೆ ಇಲ್ಲಿ ಇದೇ ರೀತಿ ಸನ್ಮಾನ..' ಎಂದು ದವಡೆಗಚ್ಚುವಂತೆ ಎರಡು ಬಿಟ್ಟರು. ಬಾಯಿಂದ ರಕ್ತ ಚಿಮ್ಮಿತು.
ರಾಥೋಡ್ ಕೈಯಿಂದ ರಕ್ತ ಒರೆಸಿಕಳ್ಳುತ್ತ ಕೋಪದಲ್ಲಿ " ಅಪ್ನೆ ಬೆಟೆಕೋ ತೋ ಅಚ್ಚಾ ಸಂಸ್ಕಾರ ನಹೀ ದೇ ಸಕಾ.. ಬಡಾ ಆಯಾ ಮುಜೆ ಸಿಖಾನೇ.." ಎಂದು ಘರ್ಜಿಸಿದ. ಇದನ್ನು ಕೇಳಿ ಅವರ ಕೋಪ ಮತ್ತಷ್ಟು ಉದ್ವಿಗ್ನವಾಗಿ "ನನ್ನ ಮಗನ ಬಗ್ಗೆ ಮಾತಾಡ್ಬೇಡ ನೀನು.." ಎಂದು ಹೊಡೆಯಲು ಕೈ ಎತ್ತಿದಾಗ "ಮಿ.ಭಾರ್ಗವ್.. ಜಸ್ಟ್ ಸ್ಟಾಪ್ ನೌ.. ಆಸ್ಕ್ ಮಿ.ಶೆಣೈ ತೆರಾ ಬೆಟಾ ಕ್ಯಾ ಕರ್ ರಹಾ ಥಾ ಮುಂಬೈ ಮೆ.. ಏ ಸಬ್ ಕಾಮನ್ ಹೈ.." ಎಂದ.
"ನನ್ನ ಮಗ ಏನು ಅಂತ ನನಗೊತ್ತು ಬೇರೆಯವರಿಂದ ತಿಳಿದುಕೊಳ್ಳುವ ಅಗತ್ಯ ನನಗಿಲ್ಲ ಯು ಜಸ್ಟ್ ಗೆಟ್ ಲಾಸ್ಟ್ ಬಾಸ್ಟರ್ಡ್.." ಎಂದು ಅವನನ್ನು ಹೊರ ತಳ್ಳಲಾಯಿತು. ರಾಥೋಡ್ ಕೋಪದಲ್ಲಿ ಕುದಿಯುತ್ತ ಐ ಲವ್ ರಿವೆಂಜ್.. ಎಂದು ಹಲ್ಲು ಮಸೆದು ಬುಸುಗುಟ್ಟಿದ.
ಪಾರ್ಟಿ ಸಂಭ್ರಮ ತಣ್ಣಗಾಯಿತು. ಎಲ್ಲಾ ಎಂಪ್ಲಾಯ್ಸ್ ತಮ್ಮ ತಮ್ಮಲ್ಲೇ ಗುಸುಗುಸು ಚರ್ಚೆ ನಡೆಸಿದ್ದರು. ಪರಿಧಿಯ ಮನಸ್ಥಿತಿ ಡೋಲಾಯಮಾನವಾಗಿತ್ತು. ಇಲ್ಲಿಗೆ ಬಂದು ತಪ್ಪು ಮಾಡಿದೆ ಎಂದೇ ಹೇಳಿಕೊಂಡಳು ಹಲವುಬಾರಿ..
ವಿನಾಯಕ್ ಮನಸ್ಸು ತಡೆಯದೆ ಸೆಕ್ರೆಟರಿ ಶೆಣೈನನ್ನು ಈ ಬಗ್ಗೆ ವಿಚಾರಿಸಿದಾಗ ಅವನು ಹೇಳಿದ ವಿಷಯ ಪರಿ ಮತ್ತು ವಿನಾಯಕ್ ರ ಮನಸ್ಸನ್ನು ಮತ್ತಷ್ಟು ಸಂದಿಗ್ಧತೆಗೆ ದೂಡಿ ಪ್ರಶ್ನೆಗಳ ಕದಡುವಂತೆ ಮಾಡಿತು. "ಹೌದು ಸರ್.. ಮುಂಬೈಗೆ ಹೋದಾಗ ಹರ್ಷ ಸರ್ ಯಾವುದೋ ಹುಡುಗಿ ಹಿಂದೆ ಬಿದ್ದಿದ್ರು. ಅವತ್ತು ಮಧ್ಯಾಹ್ನ ಪರಿ ಮ್ಯಾಮ್.. ಫೋನ್ ಮಾಡಿದಾಗ ಅವರು ಆ ಹುಡುಗಿ ಜೊತೆಗೆ ಮಾತಾಡ್ತಾ ಇದ್ದಿದ್ದು. ಆದರೆ ನಿಮ್ಮ ಮುಂದೆ ಅದನ್ನು ಹೇಳಬೇಡ ಅಂದ್ರು.. ದಿನಾಲೂ ಪ್ರಾಜೆಕ್ಟ್ ಮೀಟಿಂಗ್ ಮುಗಿದ ಕೂಡಲೇ ಹರ್ಷ ಸರ್ ಆ ಹುಡುಗಿನಾ ಮೀಟ್ ಮಾಡೋಕೆ ಹೋಗ್ತಿದ್ರು... ಅದು.. ಚಾಕೊಲೇಟ್ ಗಿಫ್ಟ್ ಫ್ಲವರ್ ಎಲ್ಲಾ ತಗೊಂಡು..
"ಮುಗೀತಾ ಇನ್ನೂ ಇದೆಯಾ ಮಿ.ಶೆಣೈ.." ಅವನನ್ನೇ ದಿಟ್ಟಿಸುತ್ತ ಕೇಳಿದಳು ಪರಿಧಿ. ಅವನು ಏನು ಹೇಳಲಾಗದೆ ಸುಮ್ಮನೆ ತಲೆ ಕೆಳಗೆ ಮಾಡಿ "ಸಾರಿ ಮ್ಯಾಮ್.. ಅದಕ್ಕೆ ಈ ವಿಷಯ ಹೇಳಿರ್ಲಿಲ್ಲ" ಎಂದ.
ವಿನಾಯಕ್ ಕೇಳಿದರು - "ಯಾರು ಆ ಹುಡುಗಿ...? ಅವಳ ಹೆಸರು ಏನಾದರೂ ಗೊತ್ತಾ..? "
"ಇಲ್ಲ ಸರ್.. ಪ್ರಾಜೆಕ್ಟ್ ಮೀಟಿಂಗ್ ಮುಗಿದ ತಕ್ಷಣ ನನಗೆ ಯು ಕ್ಯಾನ್ ಗೋ ನೌ ಅಂತ ಕಳಿಸಿ ಬಿಡ್ತಿದ್ರು. ಆಮೇಲೆ...."
"ಮಾವಾ.. ನಾವಿನ್ನು ಹೊರಡಬೇಕು. ತುಂಬಾ ಲೇಟಾಗಿದೆ.." ಎಂದು ಶೆಣೈ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಅವರನ್ನು ಕರೆದುಕೊಂಡು ಹೊರಬಂದು ಕಾರಿನಲ್ಲಿ ಕೂರಿಸಿಕೊಂಡು ಮನೆಗೆ ಬಂದುಬಿಟ್ಟಿದ್ದಳು ಪರಿಧಿ. ದಾರಿಯುದ್ದಕ್ಕೂ ಕೊಲ್ಲುವ ಮೌನ.. ಮೌನದಲ್ಲಿ ಬಗೆಹರಿಯದ ಸಾವಿರ ಪ್ರಶ್ನೆಗಳು.. ಪ್ರಶ್ನೆಗಳ ತುಂಬಾ ಹರ್ಷನ ಯೋಚನೆ..
ಊಹಿಸದ ಘಟನೆಗೆ ಮನಸ್ಸುಗಳಲ್ಲಿ ಹೇಳಲಾಗದ ಮೌನಜ್ವಾಲೆಯೊಂದು ಹೊತ್ತಿ ಉರಿಯುತ್ತಿತ್ತು. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು ಎಂಬ ಹಿರಿಯರ ವಾಣಿಯೊಂದು ಮಾರ್ದನಿಸಿತು. ಹರ್ಷನ ಬಗ್ಗೆ ಯಾರೋ ಮೂರನೆಯ ವ್ಯಕ್ತಿ ಮಾತನಾಡಿದ ರೀತಿ ಅವರನ್ನು ಚಿಂತೆಗೀಡು ಮಾಡಿತ್ತು. ಆ ಚಿಂತೆಯಲ್ಲಿ ಹರ್ಷನ ಬಗ್ಗೆ ಅನುಮಾನಗಳಿರಲಿಲ್ಲ ಅವನಲ್ಲದ ಅವನನ್ನು ಬಿಂಬಿಸಿದ್ದಕ್ಕೆ, ಕಳಂಕವನ್ನು ಹೊರೆಸಿದ್ದಕ್ಕೆ ಕೋಪವಿತ್ತು.. ಅದಕ್ಕಿಂತಲೂ ಹೆಚ್ಚಾಗಿ ಹರ್ಷನ ಮೇಲೆ ತೀರದ ಅನುರಾಗವಿತ್ತು..
ಅವಳೇ ಮಾತಾಡಿದಳು - "ಹರ್ಷ ಏನೂಂತ ನನಗೂ ಗೊತ್ತು.. ನಿಮಗೂ ಗೊತ್ತು.. ಯಾರೋ ಮೂರನೇ ವ್ಯಕ್ತಿ ಏನೋ ಹೇಳಿದ ಅಂತ ನೀವು ಮನಸ್ಸು ಕೆಡಿಸ್ಕೊಳ್ಳಬೇಡಿ ಮಾವಾ...ಅದು ಯಾರೋ ಫ್ರೆಂಡ್ ಇರ್ಬೇಕು..!! ಈ ವಿಷಯವನ್ನು ಇಲ್ಲಿಯೇ ಮರೆತುಬಿಡಿ. ಅತ್ತೆ ತಾತನ ಮನಸ್ಸಿನವರೆಗೂ ಇದು ತಲುಪಿ ಘಾಸಿ ಮಾಡೋದು ಬೇಡ" ಎಂದು ದೃಢವಾಗಿ ಸ್ಪಷ್ಟವಾಗಿ ಹೇಳಿ ಕಾರಿನಿಂದ ಇಳಿದು ಒಳಹೋಗಿದ್ದಳು. ಆದರೆ ವಿನಾಯಕ್ ಇನ್ನೂ ಆ ಶಾಕ್ ನಿಂದ ಹೊರ ಬಂದಿರಲಿಲ್ಲ. ಹೆತ್ತ ಮಗನಿಗೆ ಎಷ್ಟೋ ಬಾರಿ ಬೈದಿದ್ದರು ಗದರಿದ್ದರು ಬುದ್ದಿ ಹೇಳಿದ್ದರು. ಆದರೆ ಅವರಿಗೆ ಗೊತ್ತು ತಮ್ಮ ಮಗನ ಸ್ವಭಾವ ಗುಣ ಚಿನ್ನದಂತದ್ದು. ಅದರಲ್ಲಿ ಲೋಪ ಹುಡುಕಲು ಸಾಧ್ಯವಿಲ್ಲ. ಎಲ್ಲಿಂದಲೋ ಬಂದ ಮೂರನೇ ವ್ಯಕ್ತಿ ತಮ್ಮ ಮಗನ ಬಗ್ಗೆ ಹಗುರವಾಗಿ ಮಾತಾಡಿದ್ದು ಅವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಪ್ರೀತಿ ಎಂದರೆ ಹಾಗೇ ಅಲ್ಲವೇ ತಮ್ಮವರನ್ನು ತಾವು ಎಷ್ಟೇ ದಂಡಿಸಿದರೂ ಅದಕ್ಕೆ ಒಂದೇ ಕಾರಣ ಪ್ರೀತಿ.. ಆದರೆ ಯಾರೋ ಅನ್ಯರು ತಪ್ಪು ಹೊರೆಸಿದರೆ ಅದು ಅಸಹನೀಯ ಅಜೀರ್ಣವಾಗಿಬಿಡುತ್ತದೆ..
ನಡೆದದ್ದನ್ನು ಕೇಳಿ ಪ್ರಸನ್ನನ ಮುಖದಲ್ಲಿ ಸಂಶಯದ ಗೆರೆಗಳು ಮೂಡಿ ಮರೆಯಾದವು. ಯಾರು ಆ ಹುಡುಗಿ? ಅವಳ ಹಿಂದೆ ಹರ್ಷ ಯಾಕೆ ಹೋಗಿದ್ದ? ಫೋನ್ ನಲ್ಲಿ ಪರಿಗೂ ಹೇಳಬೇಡ ಅಂದಿದ್ನಾ..!! ಇಷ್ಟು ತಿಂಗಳ ನಂತರ ಈ ವಿಷಯ ಹೊರಗೆ ಬಿದ್ದಿದ್ದೆಯಾ.. ಎಲ್ಲವೂ ಸಂಶಯಾಸ್ಪದ ಸಂಗತಿಯಾಗಿದ್ದವು. ಅದನ್ನು ತೋರ್ಪಡಿಸಿಕೊಳ್ಳದೆ " ಅಂಕಲ್.. ನೀವು ಸುಮ್ಮನೆ ಬೇಡದ ವಿಚಾರಗಳನ್ನು ಚಿಂತೆ ಮಾಡ್ತಿದೀರಾ.. ಹರ್ಷ ಆ ರೀತಿಯ ಹುಡುಗ ಅಲ್ಲವೆಂದು ನಿಮಗಿಂತ ಚೆನ್ನಾಗಿ ಯಾರಿಗೆ ಗೊತ್ತಿದೆ ಹೇಳಿ! ಲೋಕದ ದೃಷ್ಟಿಯಲ್ಲಿ ಹಾಲು ಕೆಲವೊಮ್ಮೆ ವಿಷವಾಗಿ ಕಾಣುತ್ತೆ. ಜಸ್ಟ್ ಇಗ್ನೊರ್ ಇಟ್.. ಎದ್ದೇಳಿ.. ನಡಿರಿ ಒಳಗೆ..!!" ಎಂದು ಅವರ ಕೋಟನ್ನು ಎಡಗೈಯಲ್ಲಿ ಹಿಡಿದು ಮತ್ತೊಂದು ಕೈಯಿಂದ ಅವರ ತೋಳು ಹಿಡಿದು ತಾನೇ ಒಳಗೆ ಕರೆದುಕೊಂಡು ಹೋದ. ಅವರನ್ನು ರೂಮ್ ಗೆ ಕಳಿಸಿದ ನಂತರ ಅವನಿಗೆ ಪರಿಧಿ ನೆನಪಾದಳು. ಇವರೇ ಹೀಗೆ ಕೊರಗುತ್ತಿರುವಾಗ ಅವರ ಪರಿಸ್ಥಿತಿ ಏನಾಗಿರಬಹುದು ಎಂದುಕೊಂಡು ಅವಳ ರೂಮಿಗೆ ನಡೆದ.
*******
ಎಳ್ಳಷ್ಟು ಸಂಶಯವಿಲ್ಲ ನಿನ್ನೊಲವ ಮೇಲೆ ನನಗೆ
ಏನಾದರೂ ಎಂತಾದರೂ ಎಂದೆಂದಿಗೂ ನೀ ನನ್ನ ಒಲವು..
ಸಿಕ್ಕರೂ ಸಿಗದಿದ್ದರೂ ಇರುವೆ ನೀ ನನ್ನೊಂದಿಗೆ ನನ್ನೊಳಗೆ
ಕೊನೆಯುಸಿರು ಮೀಸಲು ನಿನಗಾಗಿಯೇ ನೀ ನನ್ನ ಒಲವು..
ಜೊತೆಗೆ ಸಾಗುವ ಕ್ಷಣಗಳಲ್ಲಿ ಅರಿವಿನ ಕೊರತೆ ಇತ್ತು, ಸಾಗುವಾಗ ಗೊತ್ತೇ ಆಗಲಿಲ್ಲ ಮುಂದೊಮ್ಮೆ ನೆನಪಾಗಿ ಮತ್ತೆ ಆ ಕ್ಷಣವನ್ನು ಹುಡುಕುವ ಪ್ರಮೇಯ ಬರಬಹುದೆಂದು.. ಮನಸ್ಸಾಗಿದೆ ಹುಡುಗ ಮತ್ತೆ ಮನಬಿಚ್ಚಿ ನಗಲು ನಿನ್ನೊಡನೆ ಕುಳಿತು.. ನೀ ಜೊತೆಗಿಲ್ಲವೆಂಬ ನೋವೇ ನನ್ನ ನಗಲು ಬಿಡುತ್ತಿಲ್ಲ ನಾನೇನು ಮಾಡಲಿ ಹೇಳು.. ಕೂಡಿ ಕಂಡ ಕೋಟಿ ಕನಸುಗಳನ್ನು ಅರ್ಧಕ್ಕೆ ಕೈಬಿಟ್ಟು ಅಡಗಿ ಕೊಳ್ಳುವ ಅವಸರವೇನಿಲ್ಲ ಗೆಳೆಯ.. ಇನ್ನೂ ಆಡುವ ಮಾತುಗಳಿವೆ.. ಹೇಳದ ಭಾವನೆಗಳು ಮನದಲ್ಲಿ ಹಾಗೆ ಹಾಸುಹೊಕ್ಕಾಗಿ ಕಾದು ಕುಳಿತಿವೆ.. ಇರುಳಳಿದು ಹೊಸ ಬೆಳಗಿಗಾಗಿ ಕಾಯುವೆ ನಾನು ಇಳೆಯಂತೆ.. ಪ್ರೀತಿ ಕಿರಣಗಳ ಸುರಿಸಿ ನಗಿಸು ಬಾರೋ ನೀನಿನ್ನು ರವಿಯಂತೆ..
ನಮ್ಮದು ಕಣ್ಣಿಂದ ಹುಟ್ಟಿ ಮಾತಿನಿಂದ ಮೊದಲಾಗಿ ಸ್ಪರ್ಶಕ್ಕೆ ಹಾತೊರೆದ ಪ್ರೀತಿಯಲ್ಲ! ಮನಸ್ಸಿನಿಂದ ಹುಟ್ಟಿ.. ಆತ್ಮಗಳೆರಡು ಬೆಸೆದು ಎಂದಿಗೂ ದೂರಾಗದ ಪ್ರೀತಿ ಎಂದುಕೊಂಡಿರುವೆ.. ನಿಜವೋ ಹುಸಿಯೋ ನೀನೇ ಬಂದು ತಿಳಿಸೋ..
ಚಿಕ್ಕವರಿದ್ದಾಗ ಕಣ್ಣು ಮುಚ್ಚಾಲೆ ಆಟದಲ್ಲಿ ನೀ ಅಡಗಿ ಕುಳಿತಾಗ ನಿನ್ನ ಹುಡುಕಲಾಗದೆ ನಾನು ಗಾಬರಿಯಿಂದ ಅಳುವಾಗ ಓಡಿ ಬಂದು ಏಂಜಲ್..ಅಳಬೇಡ ನಾನಿಲ್ಲೇ ಇದ್ದಿನೇ.. ಎಂದು ಕಣ್ಣೊರೆಸಿ ಬೊಗಸೆ ಕೈಗಳಲ್ಲಿ ನನ್ನ ಮೊಗವ ಹಿಡಿದು ರಮಿಸಿದ್ದೆಯಲ್ಲವೇ.. ಹರ್ಷ..
ಈಗಲೂ ಹಾಗೆ ಎಲ್ಲಿಯೋ ಅಡಗಿ ಕುಳಿತಿರುವ ನಿನ್ನ ಹುಡುಕುವ ಹುಚ್ಚು ಸಾಹಸ ನನಗೆ!! ನೀನು ಸಿಗಬಹುದು ಅನ್ನುವ ನಿರೀಕ್ಷೆಗಿಂತ ನೀ ಸಿಗದೇ, ಕಂಗೆಟ್ಟು ನಾನು ಅಳುವಾಗ.. ಸಹಿಸದೆ ಮತ್ತೆ ಓಡಿ ಬಂದು ನನ್ನ ರಮಿಸವಹುದೆಂಬ ಚಿಕ್ಕ ಆಸೆ.. ಇದೇ ಜೂಟಾಟದ ಜೊತೆಗೆ ನಾನೂ ಬದುಕು ಮುಗಿಸಿ ಆಟವನ್ನು ಗೆದ್ದು ಬಿಡಬಹುದೇನೋ, ಆದರೆ ನಿನ್ನ ನೆನಪುಗಳೇ ನನ್ನ ಜೀವನದ ಸಾರವಾಗಿರುವಾಗ ನಮ್ಮ ಪ್ರೀತಿಗೆ ಸಾವಿಲ್ಲವೋ ಹುಡುಗ.. ಅದು ನಿತ್ಯ ನಿರಂತರ ನೂತನ ಚೇತನ ಕಾವ್ಯ... ನನ್ನೊಳಗೆ ಬದುಕುವ ನಿನ್ನ ಪ್ರೀತಿಯನ್ನು ನನ್ನಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದಿಗೂ ಸಾಧ್ಯವಿಲ್ಲ..
ಹೀಗೆ ತನ್ನ ಡೈರಿಯ ಜೊತೆಗೆ ಅವಳು ಮಾತಿಗಿಳಿದಾಗ ಬಾಗಿಲು ಬಡಿದ ಸದ್ದಾಯಿತು. ಅವಳು ತಿರುಗಿ ನೋಡಿದಾಗ ತೆರದ ಬಾಗಿಲೆದುರು ನಿಂತಿದ್ದ ಪ್ರಸನ್ನ "ಮೆ ಐ ಕಮಿನ್ ಟೀಚರ್.." ಎಂದ ನಸುನಕ್ಕು.
ಅವಳು ಒದ್ದೆಗಣ್ಣನ್ನು ಉಜ್ಜಿಕೊಳ್ಳುತ್ತ, ನಕ್ಕು ಕೈಯಲ್ಲಿದ್ದ ಪೆನ್ ಡೈರಿ ಮಧ್ಯೆ ಹುದುಗಿಸಿ ಡೈರಿಯನ್ನು ಮುಚ್ಚಿ ಡ್ರಾಯರ್ ನಲ್ಲಿಟ್ಟು, ತನ್ನ ಶ್ರಗ್ ಸರಿಪಡಿಸಿಕೊಳ್ಳುತ್ತ "ಬನ್ನಿ ಪ್ರಸನ್ನ.. ಕೂತ್ಕೊಳ್ಳಿ.." ಎಂದು ಎದುರಿನ ವುಡನ್ ಚೇರ್ ಕಡೆಗೆ ಕೈ ತೋರಿದಳು.
ಅವನು ನಿಂತುಕೊಂಡೆ ಡ್ರಾಯರ್ ಕಡೆಗೆ ನೋಡುತ್ತಾ "ಏನೋ ಬರಿತಿದ್ರಿ ಅನ್ಸುತ್ತೆ ಏನು.." ಕೇಳಿದ.
"ಹೀಗೆ ಸುಮ್ಮನೆ.. ಮನಸ್ಸಿನ ಮಾತುಗಳು.. ಡೈರಿ ನನ್ನ ಬೆಸ್ಟ್ ಫ್ರೆಂಡ್ ಡಾಕ್ಟರ್! ಹೇಳಿದ್ದನ್ನೆಲ್ಲ ಶಾಂತವಾಗಿ ಕೇಳುತ್ತೆ, ಆದರೆ ಯಾರ ಮುಂದೆಯೂ ನನ್ನ ಸೀಕ್ರೆಟ್ ಬಿಟ್ಟು ಕೊಡಲ್ಲ..ಅದರ ಜೊತೆಗೆ ಮಾತಾಡ್ತಿದ್ದೆ ಅಷ್ಟೇ"
"ಪಾರ್ಟಿ ವಿಷಯ ಗೊತ್ತಾಗಿ.. ಡೆತ್ ನೋಟ್ ಬರಿತಿದೀರೆನೋ ಅಂದುಕೊಂಡೆ.. ಒಮ್ಮೆ ನೋಡಿ ಬಿಡ್ಲಾ.. ನನ್ನ ಸಮಾಧಾನಕ್ಕೆ." ಹೆಜ್ಜೆ ಮುಂದಿಟ್ಟ.
ಅವನ ಮಾತಿಗೆ ಜೋರಾಗಿ ನಕ್ಕು "ನೋ ಪ್ರಸನ್ನ.. ಡೆತ್ ನೋಟ್ ಬರೆಯೋ ಪ್ರಮೇಯ ಬಂದಿಲ್ಲ.. ಬರೋದು ಇಲ್ಲ.. ಡೋಂಟ್ ವರಿ"
ಪ್ರೀತಿಗೆ ಇನ್ನೊಂದು ಹೆಸರೇ ನಂಬಿಕೆ.. ಅಷ್ಟಕ್ಕೂ ಮನುಷ್ಯರ ಮೇಲೆ ಅನುಮಾನ ಪಡಬಹುದೆನೋ.. ದೇವರ ಮೇಲೆ ಯಾವ ರೀತಿಯ ಸಂಶಯ ಪಡಲಿ.. ನನ್ನ ಬದುಕು ಆರಂಭವಾಗಿದ್ದೆ ಹರ್ಷನ ಜೊತೆಗೆ.. ಆಗಿನಿಂದಲೂ ನೋಡಿದ್ದಿನಿ ನನ್ನ ಹರ್ಷನ್ನ.. ಎರಡು ದಿನ ಅವನ ಜೊತೆಗೆ ಇದ್ದವರು ಅವನ ಬಗ್ಗೆ ಏನಾದರೂ ಹೇಳಿದಕ್ಕೆಲ್ಲ ತಲೆ ಕೆಡಿಸಿಕೊಳ್ಳುವಷ್ಟು ದುರ್ಬಲವಲ್ಲ ನನ್ನ ಪ್ರೀತಿ..
ಎಂದು ರೂಮಿನ ಎಡಭಾಗದಲ್ಲಿದ್ದ ಅಕ್ವೇರಿಯಂ ಬಳಿ ಬಂದು ಅದರಲ್ಲಿದ್ದ ಜೋಡಿ ಗೊಲ್ಡ್ ಫಿಶ್ ಗಳಿಗೆ ಆಹಾರ ಹಾಕುತ್ತಾ "ಈ ಗೊಲ್ಡ್ ಫಿಶ್ ಗಳನ್ನ ಹರ್ಷ ಎರಡು ವರ್ಷದ ಹಿಂದೆ ನನ್ನ ಬರ್ತಡೇಗೆ ಗಿಫ್ಟ್ ಕೊಟ್ಟಿದ್ದು.
ಆಗ ಹರ್ಷ ಹೇಳಿದ್ದ - 'ಮುಂದಿನ ಜನ್ಮದಲ್ಲಿ ಇಬ್ಬರೂ ರೆಪ್ಪೆಗಳೇ ಇಲ್ಲದ ಈ ಮೀನಾಗಿ ಹುಟ್ಟೋಣ ಕಣೇ.. ರೆಪ್ಪೆ ಮಿಟುಕಿಸೋ ಸಮಯವನ್ನು ವ್ಯರ್ಥ ಮಾಡದೇ ಒಬ್ಬರನ್ನೊಬ್ಬರು ಯಾವಾಗಲೂ ನೋಡ್ತಾನೇ ಇರ್ಬಹುದು.. ಮತ್ತೆ ನೀನು ನಿದ್ರೆ ಮಾಡುವಾಗ್ಲೂ.. ನಾನು ಮಲಗಿರೋ ತರಾ ನಟಿಸ್ತಾ ನಿನ್ನನ್ನೇ ಕಣ್ತುಂಬಿಕೊಳ್ತಾ ಇರ್ಬಹುದು..' ಅಂತ,
ಅದಕ್ಕೆ ನಾ ಕೇಳಿದ್ದೆ - 'ಆದ್ರೆ ಹರ್ಷ ಈ ಮೀನಿನ ನೆನಪು ಮೂರು ಸೆಕೆಂಡ್ ಮಾತ್ರವಂತೆ.. ಆಮೇಲೆ ನೀನು ನನ್ನ ಮರೆತು ಬಿಡ್ತಿಯಾ..??'
'ಅದು ಇನ್ನೂ ಒಳ್ಳೆಯದಲ್ವಾ... ಮೂರು ಸೆಕೆಂಡಿಗೊಮ್ಮೆ ನಿನ್ನೇ ಹೊಸದಾಗಿ ಪ್ರೀತಿಸ್ಬಹುದು.. ಅದೇ ಪ್ರೀತಿ ಹೊಸ ರೀತಿ..!! ಅಷ್ಟಕ್ಕೂ ಮರೆವು ಮೆದುಳಿಗೆ ಮಾತ್ರ ಸೀಮಿತ ಹೊರತು, ಮನಸ್ಸಿಗಲ್ಲ.. ನನ್ನ ಮನಸ್ಸಿನ ಪ್ರತಿ ಅನುಭೂತಿಯಲ್ಲೂ ಯಾವತ್ತಿಗೂ ನೀನೇ ಇರ್ತಿಯಾ ಪರಿ.. ನೀನು ಮಾತ್ರ.. ಮೂರು ಸೆಕೆಂಡ್ ಅಲ್ಲ ಮಿಲಿ ಸೆಕೆಂಡ್ ನೆನಪಿನಲ್ಲೂ ನಾನು ಪ್ರೀತಿಸೋದು ನಿನ್ನನ್ನೇ..' ಅಂದಿದ್ದ ಹರ್ಷ. ಅದು ನನ್ನ ಹರ್ಷನ ಪ್ರೀತಿ..
ಅಲ್ಲಿಂದ ಬಾಲ್ಕನಿಯತ್ತ ನಡೆದು ಹೋಗಿ..
ಬಾಲ್ಕನಿಯಲ್ಲಿ ತೂಗಾಡುವ ಹೂವಿನ ಗಿಡದಲ್ಲಿನ ಮೊಗ್ಗನ್ನು ಪ್ರೀತಿಯಿಂದ ಸವರುತ್ತ 'ಹೂವು ಬಾಡಿ ಹೋಯ್ತು ಅನ್ನೋ ನಿರಾಸೆ ಮತ್ತೊಂದು ಮೊಗ್ಗು ನೋಡಿದ ಕೂಡಲೇ ಹೋಗಿಬಿಡುತ್ತೆ.. ಅರಳುವ ಹೂವು ಬದುಕಿಗೆ ಹೊಸ ಭರವಸೆ ತುಂಬುತ್ತೆ.. ಯಾವತ್ತೂ ಬದುಕನ್ನು ಸಕಾರಾತ್ಮಕ ದೃಷ್ಟಿಯಲ್ಲಿ ನೋಡೋದನ್ನಾ ಕಲಿಬೇಕು..' ಇದು ನನ್ನ ಹರ್ಷನ ಪ್ರೀತಿ..
ಗಾಳಿಗೆ ಓಲಾಡುತ್ತ ವಿವಿಧ ಸ್ವರಗಳ ಕಂಪನ ಮಾಡುತ್ತಿದ್ದ ವಾಸ್ತುಬೆಲ್ ಮುಟ್ಟುತ್ತಾ 'ಇದರ ನಾದ ಕೇಳುತ್ತಾ ಮನಸ್ಸಿಗೆ ಎಷ್ಟು ನೆಮ್ಮದಿ ಸಿಗುತ್ತೆ ಅಲ್ವಾ.. ಸಂಗೀತಕ್ಕೂ ಪ್ರೀತಿಗೂ ಅವಿನಾಭಾವ ಸಂಬಂಧವಿದೆ. ಎರಡೂ ಹುಟ್ಟುವುದು ಹೃದಯದಿಂದಲೇ.. ಅದೇ ಹೃದಯವನ್ನು ಗೆದ್ದು ಅಲ್ಲಿಯೇ ಮನೆ ಮಾಡಿ ಬಿಡುತ್ತವೆ!! ಎರಡಕ್ಕೂ ಹೃದಯದ ಮಾತು ಅರ್ಥವಾಗುತ್ತೆ.. ಸಂಗೀತಕ್ಕೆ ಪ್ರೀತಿಯನ್ನು ಅಳಿಸೋದು ಗೊತ್ತು.. ಪ್ರೀತಿಗೆ ಸಂಗೀತದಿಂದ ಓಲೈಸೋದು ಗೊತ್ತು..' ನನ್ನ ಹರ್ಷನ ಪ್ರೀತಿ ತರಾ..
ನನ್ನ ರೂಮಿನಲ್ಲಿ ಇರೋ ಪುಸ್ತಕ , ಅದರ ಮಧ್ಯೆ ಇರೋ ನವಿಲುಗರಿ, ನಾನು ಗೀಚಿದ್ದನ್ನ ಗೀಚಿಸಿಕೊಳ್ಳುವ ಡೈರಿ, ನನ್ನ ಭಾವನೆಗಳಿಗೆ ಜೀವ ತುಂಬುವ ಪೆನ್ನು, ಬೀಸುವ ಗಾಳಿ, ಬೆಳಕು ಬೀರುವ ಲ್ಯಾಂಪ್, ಗಂಟೆಗೊಮ್ಮೆ ನಗು ನಗು ಅನ್ನುವ ಗಡಿಯಾರ, ಗೋಡೆ ಮೇಲೆ ಸದಾ ಹಾರುವ ಬಣ್ಣದ ಚಿಟ್ಟೆ, ಪ್ರೀತಿಯ ದ್ಯೋತಕವಾಗಿರುವ ಆ ರಾಧೆಕೃಷ್ಣನ ಮೂರ್ತಿ, ಆ ಮೀನುಗಳು, ಈ ಹೂವುಗಳು.. ಅಷ್ಟೇ ಯಾಕೆ ಈ ಬದುಕು ಕೂಡ ಹರ್ಷನ ಪ್ರೀತಿಯ ಕಾಣಿಕೆ..!! ಇದನ್ನು ತಿರಸ್ಕರಿಸಿದರೆ ಹರ್ಷನ ಪ್ರೀತಿಯನ್ನೇ ಧಿಕ್ಕರಿಸಿದ ಹಾಗೆ.. ಆ ಪಾಪ ನಾನು ಎಂದೂ ಮಾಡಲ್ಲ.. ಪ್ರಸನ್ನ.
ಕೋಣೆಯಲ್ಲಿ ಹರ್ಷ ಕೊಟ್ಟ ಪ್ರತಿಯೊಂದು ಕಾಣಿಕೆಯಲ್ಲೂ ಅವನ ಪ್ರೀತಿ ತುಂಬಿದೆ ಪ್ರತಿಯೊಂದರಲ್ಲೂ ಅವನ ಉಸಿರಿದೆ. ಅಲ್ಲಿ ದೂರದಲ್ಲಿ ಕಾಣುವ ಚಂದ್ರನಲ್ಲೂ ಹರ್ಷನ ನಗುವನ್ನು ಕಾಣಬಲ್ಲೆ ನಾನು.. ಹರ್ಷ ಇಲ್ಲ ಅಂತ ಹೇಗೆ ನಂಬಲಿ.. ಅವನು ಕೊಟ್ಟ ಪ್ರತಿ ಕಾಣಿಕೆಯಲ್ಲೂ ಜೀವವಾಗಿ ಅವನಿದ್ದಾನೆ.. ಅವನನ್ನು ಕಾಪಾಡಿಕೊಳ್ಳಲು ನಾನು ಬದುಕಬೇಕು.. ನಮ್ಮ ಪ್ರೀತಿ ಚಿಕ್ಕ ಸಂಶಯದ ನೆಪದಲ್ಲಿ ಸಾಯುವಂತದ್ದಲ್ಲ.. ಇಡೀ ಪ್ರಪಂಚವೇ ನನ್ನ ಹರ್ಷನ ಬಗ್ಗೆ ವಿರುದ್ಧ ಮಾತಾಡಿದರೂ ನಾನು ನಂಬುವುದು ಹರ್ಷನ್ನ ಮಾತ್ರ!! ಯಾಕೆಂದರೆ ಹರ್ಷ ಎನು ಅಂತ ನನಗೊತ್ತು! ನನಗೆ ಮಾತ್ರ ಗೊತ್ತು..!! ಎಂದು ಮಾತಾಡುತ್ತಲೇ ಗಳಗಳನೆ ಕಂಬನಿ ಜಾರಿದವು ಅವಳು ಕಣ್ಣೊರೆಸಿಕೊಳ್ಳುವಾಗ ಪ್ರಸನ್ನ ಅದನ್ನೇ ಗಮನಿಸುವುದನ್ನು ನೋಡಿ 'ನಾನು ಅಳ್ತಿಲ್ಲ ಡಾ.ಪ್ರಸನ್ನ.. ಇವು ಕೂಡ ಹರ್ಷನ ಕೊನೆಯ ಉಡುಗೊರೆ! ಬೇಡ ಅನ್ನೋ ಹಾಗಿಲ್ಲ.. ಯಾಕೆಂದರೆ ಇದರಲ್ಲೂ ಅವನ ಪ್ರೀತಿ ತುಂಬಿದೆ.. " ನಕ್ಕು ನುಡಿದಳು
ಪ್ರೀತಿ ಪ್ರೇಮದ ವಿಷಯದಲ್ಲಿ ಯಾವಾಗಲೂ ಉಡಾಫೆ ಮಾತಾಡುವ ಪ್ರಸನ್ನ ಕೂಡ ಅವಳ ಮಾತುಗಳನ್ನೇ ತಲ್ಲೀನನಾಗಿ ಕೇಳುತ್ತಾ ಭಾವುಕನಾಗಿದ್ದ. ಅವನಿಗೆ ಆ ಕ್ಷಣ ಅನ್ನಿಸಿತು..
ಪ್ರೀತಿ ಎಷ್ಟು ಮಧುರ!! ಬದುಕಿಗೆ ಕಾರಣವೂ ಪ್ರೀತಿ, ಬದುಕುವ ಪ್ರತಿ ಕ್ಷಣದ ಶಿಕ್ಷೆಯೂ ಪ್ರೀತಿ.. ನಗುವಿಗೂ ಕಾರಣ ಪ್ರೀತಿ.. ಕೊನೆಗೆ ಅಳುವಿಗೂ ಕಾರಣ ಪ್ರೀತಿ..
ಈ ಪ್ರೀತಿಯ ಭಾವನೆ ಅದೆಷ್ಟು ಪ್ರಿಯವೆಂದರೆ, ನಾವು ಅದರಿಂದ ಉಂಟಾಗುವ ನೋವನ್ನೂ ಪ್ರೀತಿಸುತ್ತೇವೆ. ಅದನ್ನೂ ಮರೆಯದಂತೆ ಕಾಪಾಡಿಕೊಳ್ಳುತ್ತೇವೆ. ಎಲ್ಲಿಯವೆರೆಗೆ ಗಾಯದ ನೆನಪು ಅಳಿಯುವುದಿಲ್ಲವೋ ಅಲ್ಲಿಯವರೆಗೆ ಅದು ಮಾಯುವುದೂ ಇಲ್ಲ. ಅದನ್ನು ಹಾಗೇ ಉಳಿಸಿಕೊಂಡು, ಅದರಿಂದ ಉಂಟಾಗುವ ನೋವನ್ನು ಮತ್ತೆ ಮತ್ತೆ ಕೆದಕಿ ಅನುಭವಿಸೋದು ನಮಗೆ ಅಭ್ಯಾಸವಾಗಿಬಿಡುತ್ತೆ.. ಈ ನೋವಿಗೆ ಕೊನೆ ಇದೆಯಾ.. ಅದೇ ಪ್ರೀತಿ ಮತ್ತೆ ಸಿಗಬಹುದಾ..!! ಯಾರಿಗೊತ್ತು, Love connect colors your life and makes miracles possible ಅಂತಾರೆ.. ಪರಿ ಜೀವನದಲ್ಲೂ ಈ ರೀತಿಯ ಮ್ಯಾಜಿಕ್ ಆಗಬಹುದಲ್ವಾ... ಎಂದುಕೊಂಡು
"ಪರಿ ತುಂಬಾ ಲೇಟಾಗಿದೆ ಮಲಗಿ.. ನಾಳೆ ಸಿಗೋಣ.. ಗುಡ್ ನೈಟ್!!" ಹೇಳಿ ಅಲ್ಲಿಂದ ಹೊರಟ. ಆ ಕೋಣೆಯಲ್ಲಿ ಅವಳು ಮತ್ತು ಹರ್ಷನ ನೆನಪುಗಳು ಮತ್ತೆ ಮಾತಿಗಿಳಿದವು..
ಮುಂದುವರೆಯುವುದು..
⚛⚛⚛⚛⚛
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ