ಕಳೆದ ಇರುಳ ಭಿತ್ತಿ ಚಿತ್ರದಲ್ಲಿ ನೆನಹುಗಳ ಬೈತಿರಿಸಿ, ಪ್ರತ್ಯೂಷದಲ್ಲಿ ಹೊಚ್ಚಹೊಸ ಅನುಭವಗಳ ಅನುವಾದ ಕೆತ್ತುತ್ತಿತ್ತು ಮುಗಿಲ ಮುಂಜಾವು..
ಇಲ್ಲದ ವ್ಯಂಜನಗಳ ಹುಡುಕಾಟದೊಂದಿಗೆ ಸ್ವರಗಳ ಸ್ವಾಗತಿಸುವ ಹುಚ್ಚು ಕನಸು, ಕ್ಷಣಕ್ಕೊಂದು ನವ್ಯ ಭಾವನೆ, ಸ್ತುತಿಸಿ ಮತಿಸುತ್ತಿತ್ತು ಮನದ ಮುಂಜಾವು..
ಸೂರ್ಯರಶ್ಮಿ ಇಳೆಯ ಚುಂಬಿಸಲು ಮುಗಿಲಿನಿಂದ ಮೆಲ್ಲಗೆ ಜಾರಿ ಭುವಿಗೆ ಬೀಳುತ್ತಲಿತ್ತು. ಹಕ್ಕಿಗಳ ಚಿಲಿಪಿಲಿ ಕಲರವ ಸಂಗೀತದ ಸುಧೆ ಹರಿಸುತ್ತಿತ್ತು. ಹೊಂಬಣ್ಣದ ಮುಗಿಲಂಚಿನಲ್ಲಿ ಹಾರಾಡುವ ಬಾನಾಡಿಗಳ ಹಿಂಡು, ಕುಂಚದಿ ರಚಿಸಿದ ರವಿವರ್ಮನ ಸುಂದರ ಕಲಾಕೃತಿ ಕಲಾಸೃಷ್ಟಿಯಂತೆ ಮನಸ್ಪರ್ಶಿಸುತ್ತಿತ್ತು. ಇಂತಹ ವಿಹಂಗಮ ಮುಂಜಾವಿನಲ್ಲಿ..
ಹೇ ಹೂವೇ.. ಹೇ ಹೇ ಹೂವೇ.. ನೀ ಅರಳೋ ಮುಂಜಾನೆಯಿದು..
ಆಸೆಗಳೇ.. ಆಸೆಗಳೇ.. ನೀ ಅರಳೋ ಮುಂಜಾನೆಯಿದು..
ಕನಸುಗಳೇ.. ಹೊಂಗನಸುಗಳೇ.. ಚಿಗುರೊಡೆವ ಮುಂಜಾನೆಯಿದು..
... ಎಫ್ ಎಮ್ ನಲ್ಲಿ ಇಂಪಾದ ಹಾಡು ಕೇಳುತ್ತಾ ಜಾಗಿಂಗ್ ಮಾಡುತ್ತ ತಂಪಾದ ಗಾಳಿ ಸೇವಿಸುತ್ತಿದ್ದ ಪ್ರಸನ್ನನಿಗೆ ಆಹ್ಲಾದಕರವಾಗಿತ್ತು ಆ ದಿನ. ಎದುರುಗೊಳ್ಳುವ ಎಲ್ಲರಿಗೂ ತನ್ನ ನಗುವನ್ನು ರವಾನಿಸುತ್ತ ಅವರೊಳಗೂ ಉತ್ಸಾಹದ ಚಿಲುಮೆಯನ್ನು ಹರಿಸುತ್ತ, ತನ್ನ ಪ್ಲಾಟ್ ಕೆಳಗಿನ ಟೀ ಸ್ಟಾಲ್ ನಲ್ಲಿ ಒಂದು ಕಪ್ ಬಿಸಿ ಬಿಸಿ ಕಾಫಿ ಹೀರುತ್ತ, ದಿನಪತ್ರಿಕೆ ಓದುವುದು ಅವನ ನಿತ್ಯದ ದಿನಚರಿ. ಹೀಗೆ ಹಿತವಾಗಿ ಜಾಗಿಂಗ್ ಮುಗಿಸಿ, ತಲೆಯಿಂದ ಹೆಡ್ ಫೋನ್ ಕತ್ತಿಗೆ ಇಳಿಸಿಕೊಳ್ಳುತ್ತಾ ತನ್ನ ಪ್ಲಾಟಿಗೆ ವಾಪಸ್ಸಾದ ಪ್ರಸನ್ನನಿಗೆ ಆಶ್ಚರ್ಯವೊಂದು ಎದುರು ನೋಡುತ್ತಿತ್ತು. ಅವನ ಮುಂದೆ ಒಂದಲ್ಲ ಎರಡಲ್ಲ ಸಾಲು ಸಾಲಾಗಿ ನಾಲ್ಕು ಸುಂದರವಾದ ಹೂವುಗಳ ಬೊಕ್ಕೆ!! ಒಂದೊಂದೇ ಹೂಗುಚ್ಚವನ್ನು ಆಶ್ಚರ್ಯದಿಂದ ಎತ್ತಿಕೊಳ್ಳುತ್ತಾ ಮುಂದೆ ಸಾಗಿದವನ ಮನದಲ್ಲಿ ಒಂದು ರೀತಿಯ ಕುತೂಹಲ ಭರಿತ ಸಂತೋಷ ಮೂಡಿತು. ಹೂಗಳ ಸೌಂದರ್ಯ ಸವಿಯುತ್ತ ಸುಗಂಧ ಆಘ್ರಾಣಿಸುತ್ತ ಮೈಮರೆತವನಿಗೆ ರಸಭಂಗವಾಗಿದ್ದು, ಅವುಗಳ ಮುಂದೆ ಗುಲಾಬಿ ಪಕಳೆಗಳಿಂದ ಬರೆದಿದ್ದ ಸುಭೂದಯ..!! ಅಕ್ಷರಗಳನ್ನು ಕಂಡು. ಇದನ್ನೆಲ್ಲ ನೋಡಿ ಪ್ರಸನ್ನವದನನಾಗಿದ್ದ ಪ್ರಸನ್ನ ಅದನ್ನು ಓದಿ.. 'ವ್ಹಾಟ್ ಸುಭೂದಯ..??' ಎಂದು ತಲೆ ಕರೆದುಕೊಳ್ಳುತ್ತ ಅದನ್ನೇ ಮತ್ತೆ ಮತ್ತೆ ಕನವರಿಸಿದ ನಂತರ ಅರ್ಥ ಮಾಡಿಕೊಂಡ ಅದು ಸುಭೂದಯ ಅಲ್ಲ ಶುಭೋದಯ! ಎಂದು. ಯಾವ ಪಾಪಿ.. ಪಿಶಾಚಿ.. ಕನ್ನಡ ದ್ರೋಹಿ.. ಬರೆದ್ನೋ ಇದನ್ನ.. ನನ್ನ ಶುಭೋದಯ ಯಕ್ಕುಟ್ಟೋಯ್ತು..!! ಎಂದು ಗೊಣಗಿದ. ನನ್ನ ಪುಣ್ಯ.. ಸುಬ್ಬುದಯೆ!! ಅಂತ ಬರೆದಿಲ್ಲಾ... ಎಂದು ತಲೆ ಚಚ್ಚಿಕೊಂಡು ಪುಟ್ಟ ಗುಲಾಬಿ ರಾಶಿಯನ್ನು ಬೊಗಸೆಯಲ್ಲಿ ಸುಕೋಮಲವಾಗಿ ಎತ್ತಿಕೊಳ್ಳುತ್ತಾ 'ನೇರವಾಗಿ ಶುಭೋದಯ ಹೇಳಿದ್ರೆ, ನನಗೆ ಇದನ್ನ ಕ್ಲೀನ್ ಮಾಡೋ ಕರ್ಮ ತಪ್ಪುತ್ತಿತ್ತು!!' ಎಂದು ಹಳಹಳಿಸಿದ. 'ಅಷ್ಟಕ್ಕೂ.. ಈ ಅರೆಂಜ್ಮೆಂಟ್ ಮಾಡಿದವರು ಸುಬ್ಬಾನಾ ಅಥವಾ ಯಾರಾದರೂ ಸುಬ್ಬಿನಾ??! ಆಶ್ಚರ್ಯದಿಂದ ಯೋಚಿಸುತ್ತಾ ನನಗೆ ಈ ರೀತಿ ರಾಶಿ ಗುಲಾಬಿ ಹೂ ಕಳಿಸಿ ಸುಪ್ರಭಾತ ಹೇಳುತ್ತಿರೋರು ಯಾರಿರಬಹುದು...' ಎಂದು ಮೆದುಳಿಗೆ ಕೆಲಸ ಕೊಟ್ಟ. ಅವನ ತಲೆಗೆ ಬಂದ ಮೊದಲ ಹೆಸರು ಪಕ್ಕದ ಪ್ಲಾಟ್ ನ ಶ್ವೇತ..! ಮತ್ತೊಂದು ಕ್ಷಣಕ್ಕೆ.. ನೋ ನೋ.. ಅವಳಿಗೆ ನನ್ನ ನೆರಳಿನ ಸುಳಿವು ಸಿಕ್ಕರೂ ಹೆದರಿ ನಡುಗಿ ಅಡಗಿಕೊಳ್ತಾಳೆ! ಅವಳಾಗಿರಲ್ಲ..! ಮತ್ಯಾರೇ ನೀನು ಸ್ವಪ್ನ ಮೋಹಿನಿ.. ಎಂಬ ಲಹರಿಯೊಂದಿಗೆ ಹೂದಾನಿ ಸಮೇತ ಮನೆ ಹೊಕ್ಕು ಅದನ್ನೇ ಮತ್ತೆ ಪುನರಾವಲೋಕನ ಮಾಡುತ್ತ ದಿನನಿತ್ಯದ ಕೈಂಕರ್ಯಗಳನ್ನು ಮುಗಿಸಿ ಆಸ್ಪತ್ರೆಗೆ ಸಿದ್ದನಾಗಿ ಹೊರಗೆ ಬಂದಿದ್ದ. ಎದುರಿಗೆ ಬಂದ ಶ್ವೇತಾಳ ಅಮ್ಮ 'ಗುಡ್ ಮಾರ್ನಿಂಗ್ ಡಾಕ್ಟ್ರೆ..' ಎಂದು ಮುಗುಳ್ನಕ್ಕರು. ಇವನು ನಕ್ಕು ಸುಪ್ರಭಾತ ಹಾಡಿ 'ಆಂಟಿ ಬೆಳಿಗ್ಗೆ ನಾನು ಜಾಗಿಂಗ್ ಹೋದಾಗ ನನ್ನ ಪ್ಲಾಟ್ ಗೆ ಯಾರಾದರೂ ಬಂದಿದ್ರಾ..?' ಕೇಳಿದ. 'ಏನೋ.. ನಂಗೊತ್ತಿಲ್ಲ ಡಾಕ್ಟ್ರೆ.. ನಾನೂ ಈಗಲೇ ಹೊರಗೆ ಬಂದಿದ್ದು. ಯಾಕೆ ಏನಾಯ್ತು..' ಪ್ರಶ್ನೆಗಳ ಬಾಣ ಬಿಟ್ಟರು. ಅವರ ಪ್ರಶ್ನೆಗೆ ಉತ್ತರ ತನಗೂ ಹೊಳೆಯದೆ 'ಏನಿಲ್ಲ ಬಿಡಿ ಆಂಟಿ.. ಬಾಯ್' ಎಂದು ಮುಗುಳ್ನಗುತ್ತಾ ಮುಂದೆ ಸಾಗಿದ. ಕೆಳಗೆ ಬಂದು ಬೈಕ್ ಕಿಕ್ ಮಾಡಿ ಆಸ್ಪತ್ರೆ ತಲುಪುವವರೆಗೂ ದಾರಿಯುದ್ದಕ್ಕೂ ಅವನ ಮನದಲ್ಲಿ ಯಾರ್ಯಾರದೋ ನಗುಮುಖಗಳು ಹಾದು ಹೋದವು. ಆದರೆ ಅವನ ಕಲ್ಪನೆಯಲ್ಲಿ ಸುಭೂದಯ ಸುಬ್ಬಮ್ಮ ಯಾರೆಂದು ಅವನಿಗೆ ದೃಢವಾಗಲೇ ಇಲ್ಲ.
ಆಸ್ಪತ್ರೆಗೆ ಬಂದು ತನ್ನ ಕ್ಯಾಬಿನ್ ಹೊಕ್ಕುತ್ತಿದ್ದಂತೆ "ಗು...ಡ್ ಮಾ... ರ್ನಿಂಗ್ ಸರ್..... " ಎಂಬ ಒಕ್ಕೊರೊಲಿನ ಗಜಿಬಿಜಿ ಸ್ವರಗಳ ಕೇಳಿ ಮತ್ತಷ್ಟು ತಲೆಬಿಸಿಯಾಯಿತು ಪ್ರಸನ್ನನಿಗೆ. ಬೇಸರದಿಂದ ತಲೆ ಕೊಡವಿದವನ ಎದುರಿಗೆ ಮೂವತ್ತೆರಡು ದಂತ ಪ್ರದರ್ಶನ ಮಾಡುತ್ತ ನಿಂತಿದ್ದರು ಅವನ ಟೀಮಿನವರಾದ - ಧ್ರುವ, ರೋಹಿತ್, ಶ್ರಾವ್ಯ, ದಿವ್ಯ..! ಪ್ರಸನ್ನನಿಗೆ ಅಚ್ಚರಿಯ ಜೊತೆಗೆ ಕುತೂಹಲ ಉಂಟಾಯಿತು "ಎಂದೂ ಇಲ್ಲದ ರಾಜಮಾರ್ಯಾದೆ!! ಏನು ವಿಶೇಷ.. ಅದರಲ್ಲೂ ಉತ್ತರ ಧ್ರುವ ದಕ್ಷಿಣ ಧ್ರುವಗಳು ಎರಡೂ ಒಟ್ಟಾಗಿ ಬಂದಿವೆ ಅಂದ್ರೆ ಏನೋ ಗಹನವಾದ ವಿಷಯ ಇದೆ. ಏನು??" ಕೇಳಿದ.
"ಸರ್.. ಪ್ರತಿದಿನವೂ ಒಂದೇ ರೀತಿ ಇದ್ದರೆ ಜೀವನ ಬೇಜಾರು ಅನಿಸಿಬಿಡುತ್ತೆ. ಅದಕ್ಕೆ ಸ್ವಲ್ಪ ಚೆಂಜ್ ಇರಲಿ ಅಂತ. " ಪ್ರಸನ್ನನ ಮುಂದೆ ಬಿಸಿ ಬಿಸಿ ಕಾಫಿ ಹಿಡಿದು ಹೇಳಿದ ಧ್ರುವ.
"ಸರ್.. ನಮ್ಮ ಪಿಜಿಯಲ್ಲಿ ಅಲೌಡ್ ಇಲ್ಲವೆಂದ್ರೂ ನಾನು ನಿಮಗೋಸ್ಕರ ನನ್ನ ಕೈಯಾರೆ ಕೇಸರಿಬಾತು ಮಾಡಿ ತಂದೀದಿನಿ. ತಗೋಳಿ.." ತನ್ನ ಕೈಯಲ್ಲಿದ್ದ ಟಿಫಿನ್ ಬಾಕ್ಸ್ ಮುಂದೆ ಹಿಡಿದು ನುಡಿದಳು ದಿವ್ಯ.
"ಇದನ್ನು ತಿಂದ ಮೇಲೆ ಫರ್ಸ್ಟ್ ಐಸಿಯು ಗೆ ಹೋಗ್ತಿನಾ..!? ಇಲ್ಲ ಡೈರೆಕ್ಟಾಗಿ ಮಾರ್ಚುರಿಗೆ ಹೋಗ್ತಿನಾ..!!" ವ್ಯಂಗವಾಡಿ ಹುಬ್ಬೇರಿಸಿದ ಪ್ರಸನ್ನ.
"ಸರ್..ಐ ನೋ ಕುಕಿಂಗ್ ವೆರಿ ವೆಲ್" ನುಲಿದಳು ದಿವ್ಯ.
" ಆ್ಯಂಡ್ ಐ ನೋ ಆಲ್ ಆಫ್ ಯು.. ಇಷ್ಟೊಂದು ಬೆಣ್ಣೆ ತುಪ್ಪ ಸುಮ್ಮಸುಮ್ನೇ ಹಚ್ಚೋಕೆ ಸಾಧ್ಯಾನೇ ಇಲ್ಲ ಎಂದು ಏನೋ ಹೊಳೆದಂತಾಗಿ ಬೆಳಿಗ್ಗೆ ನನ್ನ ಪ್ಲಾಟ್ ನಲ್ಲಿ ಆ ಸುಡುಗಾಡು ಸುಭೂದಯ ಬರೆದಿದ್ದು ನೀವೇ ಇರಬೇಕು ಅಲ್ವಾ..! ಪೀಠಿಕೆ ಸಾಕು. ಕಮ್ ಟು ದಿ ಪಾಯಿಂಟ್ ನೌ.." ಎಂದ.
"ಅದು....ಸರ್, ನಾವು ನಾಲ್ಕು ಜನ ಚಿಕ್ಕ ಬ್ರೇಕ್ ತಗೊಳೋಣ ಅಂತಿದ್ದಿವಿ. ಪನಂಬೂರ್ ಬೀಚ್ ಹೋಗೋ ಪ್ಲಾನ್ ಇದೆ. ಇವತ್ತು ರಾತ್ರಿ ಹೋಗಿ ನಾಳೆ, ನಾಡಿದ್ದು ಎಂಜಾಯ್ ಮಾಡಿ ಸಂಡೇ ನೈಟ್ ವಾಪಸ್ ಬಂದು ಮಂಡೆ ಮಾರ್ನಿಂಗ್ ನಿಮ್ಮ ಕಣ್ಮುಂದೆ ಇರ್ತಿವಿ.. ನಾಳೆ ಒಂದೇ ದಿನದ ಪರ್ಮಿಶನ್ ಕೊಡಿ ಸರ್..." ಪಟಪಟನೆ ಮಾತಾಡಿದಳು ಶ್ರಾವ್ಯ.
"ಓಹ್..ಅದಕ್ಕೆನಾ ಇಷ್ಟೊಂದು ಮಸ್ಕಾ ಹೊಡಿತಿರೋದು.. ನಾಲ್ಕೂ ಜನ ಒಟ್ಟಿಗೆ ಜೂಟ್ ಹೇಳಿದ್ರೆ ಹೇಗೆ.. ನಾನೊಬ್ಬ ಎಲ್ಲಾನೂ ಕತ್ತೆ ತರಾ ಹೇಗೆ ನಿಭಾಯಿಸಬೇಕು.. ಐ ಕಾಂಟ್..!! ಇನ್ನೂ ಎರಡು ತಿಂಗಳಲ್ಲಿ ಹೇಗೂ ನಿಮ್ಮ ಟ್ರೇನಿ ಪೀರಿಯಡ್ ಮುಗಿಯುತ್ತಲ್ಲ ಆಗ ಹೋಗಿ ಬೇಕಾದ್ರೆ.. ನನ್ನ ಅಭ್ಯಂತರ ಏನಿಲ್ಲ.."
ನಾಲ್ವರು ಒಕ್ಕೊರಲಿನಿಂದ ಸರ್...ಪ್ಲೀಸ್... ಎಂದರು ಪಾಪದ ಮುಖ ಮಾಡಿಕೊಂಡು. "ಇವೆಲ್ಲಾ ಸೆಂಟಿಮೆಂಟ್ ಡ್ರಾಮಾ ಬೇಡ.. ನೋ ಮಿನ್ಸ್ ನೋ..ಅಷ್ಟೇ!" ಎಂದು ಹೊರಟವನು ನಿಂತು "ಅಂದಹಾಗೆ ಆ ಸುಭೂದಯ ಬರೆದ ಪುಣ್ಯಾತ್ಮರು ಯಾರು ನಿಮ್ಮಲ್ಲಿ.." ಕೇಳಿದ.
ಹೆಮ್ಮೆಯಿಂದ ಕೈ ಎತ್ತಿದ ರೋಹಿತ್ 'ಸರ್.. ಐಡಿಯಾ ಇಷ್ಟವಾಯ್ತಾ??' ಕೇಳಿದ. ಅವನ ಬೆನ್ನಿಗೊಂದು ಜೋರಾಗಿ ಚಪ್ಪರಿಸಿ "ಶಭಾಷ್.. ಇಡೀ ಕನ್ನಡವನ್ನು ಕುಲಗೆಡಿಸೋಕೆ ನೀನೊಬ್ಬ ಸಾಕು ನೋಡು..! ಇನ್ನುಮುಂದೆ ನನ್ನ ಮುಂದೆ ಶುದ್ಧ ಕನ್ನಡದಲ್ಲಿ ಚೂರು ಅಪಭ್ರಂಶ ಇಲ್ಲದೆ ಮಾತಾಡಬೇಕು ನೀನು! ಮತ್ತೆ ಈ ಕನ್ನಡದ ಕುವರ ಇನ್ನೂ ಎರಡು ತಿಂಗಳಲ್ಲಿ ನನ್ನ ಮುಂದೆ ಅಚ್ಚಕನ್ನಡದಲ್ಲಿ ಒಂದು ಭಾಷಣ ಮಾಡಿ ತೋರಿಸ್ತಾನೆ..! ಎಂದು ಘೋಷಿಸಿ ಮಾಡ್ತಿಯಲ್ವ..?" ಮತ್ತೊಮ್ಮೆ ಕೇಳಿದ. ರೋಹಿತ್ ತಲೆ ಅಲ್ಲಾಡಿಸಿ ಪೆಚ್ಚಾಗಿ ನಕ್ಕು ಕೂದಲೆಳೆದುಕೊಂಡ.
'ಛೇ..ಯಾರೋ ಹುಡುಗಿ ಅನ್ಕೊಂಡು ಅನ್ಯಾಯವಾಗಿ ಹಾಡುಹಗಲೇ ಕನಸು ತೋರಿಸಿದ್ರಲ್ಲೋ ಪಾಪಿಗಳಾ ಎಂದು ಪ್ಚ..ಪ್ಚ..' ಮಾಡುತ್ತ ವೃತ್ತಿಯಲ್ಲಿ ಕಾರ್ಯಮಗ್ನನಾದ ಪ್ರಸನ್ನ. ನಾಲ್ವರೂ ಇನ್ನು ಪ್ರಯೋಜನವಿಲ್ಲ ಎಂಬಂತೆ ಕ್ಯಾಬಿನಿಂದ ಹೊರಬಂದಾಗ..
"ಗಾಯ್ಸ್.. ನನಗೆ ಸಿಕ್ಕಾಪಟ್ಟೆ ಬೋರಾಗಿದೆ. ಬೈ ಹುಕ್ ಆರ್ ಕ್ರುಕ್ ನಾವು ಟ್ರಿಪ್ ಹೋಗಲೇಬೇಕು.." ಹಠದಿಂದ ಹೇಳಿದಳು ಶ್ರಾವ್ಯ.
"ಹೇಯ್.. ಶ್ರಾವ್ಯ.. ನಿನ್ ಕಿವಿ ಕಿವುಡಾ... ಸರ್ ಹೇಳಿದ್ದು ತಿಳಿಲಿಲ್ವಾ.." ರಾಗವಾಗಿ ವ್ಯಂಗ್ಯ ಮಾಡಿದ ಧ್ರುವ.
"ಸಂಜೆಯೊಳಗೆ ಸರ್ ಪರ್ಮೀಷನ್ ಕೊಡೋ ಹಾಗೆ ಮಾಡಿದ್ರೆ ಎಷ್ಟು ಬೆಟ್ಸ್..!!"
"ಹೇ.. ಒಪ್ಪಿಸಿ ಬಿಡಮ್ಮಾ ನೋಡೋಣಾ... ಹೋಗೋ ಬರೋ ಟ್ರಾವೆಲ್ ಖರ್ಚು ಪೂರ್ತಿ ನಾನೇ ನೋಡ್ತಿನಿ.. ಒಕೆ" ಚಾಲೆಂಜಾಗಿ ಹೇಳಿದ ಧ್ರುವ. ಅವನ ಚಾಲೆಂಜ್ ಒಪ್ಪಿಕೊಳ್ಳುವಂತೆ ತನ್ನ ಹೆಬ್ಬೆರಳೆತ್ತಿ "ಸರಿ ಹಾಗಾದರೆ ಇವತ್ತು ರಾತ್ರಿನೇ ಹೋಗ್ತಾ ಇದೀವಿ ನಾವು.. ಜರ್ನಿಗೆ ರೆಡಿಯಾಗಿರಿ ಎಲ್ಲರೂ.. " ಸೂಚಿಸಿದಳು ಶ್ರಾವ್ಯ. ದಿವ್ಯ, ರೋಹಿತ್ ಮುಖ ಮುಖ ನೋಡಿಕೊಂಡು ಏನೋ ಕಾದಿದೆ ಎಂದುಕೊಂಡರು.
ಅದಾದನಂತರ ಇಡೀ ದಿನ ಪ್ರಸನ್ನನ ಹಿಂದೆ ಬೆನ್ನಿಗಂಟಿದ ಬೇತಾಳನಂತೆ ಪರ್ಮಿಶನ್ ಗಾಗಿ ದುಂಬಾಲು ಬಿದ್ದಿದ್ದಳು ಶ್ರಾವ್ಯ. ಅವನು ಕುಂತರೂ, ನಿಂತರೂ, ಯಾರ ಜೊತೆಗೆ ಮಾತಾಡಿದರೂ, ಪೇಷಂಟ್ ನೋಡುವಾಗಲೂ, ಒಟಿ ಸಮಯದಲ್ಲೂ, ರೌಂಡ್ಸನಲ್ಲೂ, ಕೊನೆಗೆ ಬಾತರೂಂ ಹೊರಟರೂ.. ಅವಳದ್ದೊಂದೇ ಮಂತ್ರ..ಸರ್ ಪರ್ಮಿಶನ್..!! ಸರ್ ಪರ್ಮಿಶನ್..! ಅವಳ ಮಂತ್ರಘೋಷಕ್ಕೆ ಪ್ರತಿಯಾಗಿ ಪ್ರತಿಬಾರಿ ನೋ..ನೋ.. ಎನ್ನುವ ಪ್ರಸನ್ನನ ತುಟಿಯಂಚಲಿ ತುಂಟ ಕಿರುನಗೆ ಇಣುಕಿ ಮರೆಯಾಗುತ್ತಿತ್ತು.
ಪೇಷಂಟ್ ಒಬ್ಬ ಅವನ ಮುಂದೆ ಕುಳಿತು ತನ್ನ ರಿಪೋರ್ಟ್ ತೋರಿಸುತ್ತ 'ಡಾಕ್ಟ್ರೆ ನನಗೆ ಏನಾಗಿದೆ' ಎಂದು ಕೇಳಿದರೂ ಅವನ ಉತ್ತರಕ್ಕೂ ಮೊದಲು ಇವಳ 'ಸರ್ ಪರ್ಮಿಶನ್' ಮಂತ್ರ ಕೇಳುತಿತ್ತು. ಬಂದ ಪೇಷಂಟ್ ತಬ್ಬಿಬ್ಬಾಗಿ ಅವಳ ಮುಖ ನೋಡಿದರೆ.. ಅದಕ್ಕೆ ಪ್ರಸನ್ನ ನಕ್ಕು 'ನಿಮಗೇನಾಗಿಲ್ಲ.. ಇವರಿಗೆ ಸರ್ಪರ್ಮಿಶನ್ ಅನ್ನೋ ಡಿಸಿಜ್ ಶುರುವಾಗಿದೆ!! ಸಂಜೆಯೊಳಗೆ ವಾಸಿಯಾಗುತ್ತೆ ಬಿಡಿ' ಎಂದು ರೇಗಿಸಿದ್ದ. ಶ್ರಾವ್ಯಳ ಅನುಮತಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಅವ್ಯಾಹತವಾಗಿ ಜಾರಿಯಲ್ಲಿತ್ತು.
*******
ಅದೇ ಮಧ್ಯಾಹ್ನ ಪರಿಧಿಯ ಕ್ಯಾಬಿನಲ್ಲಿ ಬಂದಿದ್ದ ಪೇಷಂಟ್ ತನ್ನ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ರಿಪೋರ್ಟ್ ತೆಗೆದುಕೊಂಡು ಹೊರಬಂದ ನಂತರ ಅವಳು ಯಾವುದೋ ಕೇಸ್ ಡಿಟೇಲ್ಸ್ ಕೈಯಲ್ಲಿ ಹಿಡಿದು ತನ್ಮಯಳಾಗಿ ನೋಡುತ್ತಾ ಕುಳಿತಿದ್ದಳು. ಅವಳ ಹಿಂದೆ ಮೆಲ್ಲಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದು ಬಂದ ಏಳು ವರ್ಷದ ಅಖಿಲಾ ಹಿಂದಿನಿಂದ ಬಂದು ಅವಳ ಕಿವಿಯಲ್ಲಿ ಓ..ವ್.... ಎಂದು ಜೋರಾಗಿ ಕಿರುಚಿ ಅವಳನ್ನು ಬೆಚ್ಚಿಬಿಳಿಸಿದಳು. ಸಣ್ಣದಾಗಿ ಕಂಪಿಸಿ ತಿರುಗಿ ನೋಡಿ "ಹೇಯ್ ಕಿಲ್ಲರ್.. ನೀನಾ.. ತಾಳು ಮಾಡ್ತಿನಿ ನಿನ್ನ.." ಎಂದು ಓಡುತ್ತಿದ್ದ ಅಖಿಲಾಳನ್ನು ಬೆಂಬತ್ತಿ ಓಡಿ ಮುದ್ದಾಗಿ ಎತ್ತಿಕೊಂಡು ಕೆನ್ನೆಗೆ ಹೂಮುತ್ತಿಟ್ಟಳು ಪರಿಧಿ. "ಏನು.. ಒಬ್ಬಳೇ ಬಂದಿದ್ದಿಯಾ.." ಎನ್ನುವಾಗ ಹಿಂದೆಯೇ ಬಂದಿದ್ದ ಅವಳ ಅಣ್ಣ ನಿಖಿಲ್! ಅವನಿಗೆ ಹನ್ನೆರಡು ವರ್ಷ. ಅಖಿಲಾಗಿಂತ ಐದು ವರ್ಷ ದೊಡ್ಡವನು. ಇವರಿಬ್ಬರೂ ಡಾ.ಆನ್ಯಾಳ ಮಕ್ಕಳಾಗಿದ್ದು, ಪರಿಧಿ ಜೊತೆಗೆ ಮೊದಲಿನಿಂದಲೂ ತುಂಬಾ ಸ್ನೇಹ ಸಲಿಗೆಯನ್ನು ಹೊಂದಿದ್ದರು. ಪರಿಧಿ ಅವರಿಬ್ಬರನ್ನು ಹೆಸರಿಗೆ ತಕ್ಕಂತೆ ಕಿಲ್ಲರ್ಸ್ ಎಂದು ಕರೆಯುತ್ತಿದ್ದರೆ ಅವರಿಬ್ಬರೂ ಅವಳನ್ನು ಕಿಟ್ ಕ್ಯಾಟ್ ಎಂದು ಕರೆಯುತ್ತಿದ್ದರು. ಪರಿಧಿ ಮೊದಲ ಬಾರಿಗೆ ಅವರಿಬ್ಬರ ಜೊತೆ ಫ್ರೆಂಡ್ ಶಿಪ್ ಮಾಡಿ ಮಾತಾಡಿಸಿದಾಗ ಕಿಟ್ ಕ್ಯಾಟ್ ಚಾಕ್ಲೇಟ್ ಕೊಟ್ಟ ಕಾರಣಕ್ಕೆ ಅದೇ ಅಂಕಿತನಾಮ ರೂಡಿ ಆಗಿಬಿಟ್ಟಿತ್ತು. ಆಗಾಗ ತಾಯಿ ಜೊತೆಗೆ ಆಸ್ಪತ್ರೆಗೆ ಬರುವ ಅಖಿಲಾ ಮತ್ತು ನಿಖಿಲ್ ಪರಿಧಿ ಜೊತೆ ತಮ್ಮ ಆಟ ಪಾಟ ಮೋಜು ಮಸ್ತಿಯ ಬಗ್ಗೆ ನಿರರ್ಗಳವಾಗಿ ಮಾತಾಡಿ ಸಮಯ ಕಳೆಯುವರು, ಅವಳನ್ನು ಗೋಳಾಡಿಸಿ ತಲೆ ತಿನ್ನುವುದು ಕೂಡ ಅವರ ಪ್ರಮುಖ ಹವ್ಯಾಸಗಳಲ್ಲೊಂದಾಗಿತ್ತು. "ಏನಿವತ್ತು.. ಇಬ್ಬರೂ ಕಿಲ್ಲರ್ಸ್ ಫುಲ್ ಮಿಂಚ್ತಾ ಇದ್ದೀರಾ.." ಅಖಿಲಾಳ ಮಿಂಚುಮಿಂಚಿನ ಸಿಂಡ್ರೆಲಾ ಡ್ರೆಸ್ ನೋಡುತ್ತಾ ಕೇಳಿದಳು ಪರಿ.
"ಹ್ಮೂ..ಮತ್ತೆ, ಎಕ್ಸಾಂ ಮುಗೀತು.. ನಮ್ಮ ಡಾರ್ಲಿಂಗ್ ಅಜ್ಜ ಅಜ್ಜಿ ಮನೆಗೆ ಹೊರಟಿದಿವಲ್ಲಾ ಅದ್ಕೆ .." ಸಂತೋಷದಿಂದ ಹೇಳಿದ ನಿಖಿಲ್. ಅವನೊಂದಿಗೆ ತಾನು ಹ್ಮೂ.. ಎಂದು ತಲೆ ಅಲ್ಲಾಡಿಸಿದಳು ಅಖಿಲಾ.
"ನಾನು ಬರ್ಲಾ ಜೊತೆಗೆ.."
"ಓಹ್... ನಿನ್ನ ಕರೆದುಕೊಂಡು ಹೋಗೋಕೆ ಬಂದಿದಿವಿ ಕಿಟ್ ಕ್ಯಾಟ್. ಮಮ್ಮಿ ಕೆಳಗೆ ಕಾಯ್ತಿದಾರೆ..ಬೇಗ ಬಾ ಹೋಗೋಣ.." ಅವಸರಿಸಿದ ನಿಖಿಲ್. ಪರಿಧಿಗೆ ಅದೇನೆಂದು ಅರ್ಥವಾಗದಿದ್ದರೂ ಸುಮ್ಮನೆ ಅವರೊಂದಿಗೆ ಹೆಜ್ಜೆ ಹಾಕುತ್ತಾ ಕೆಳಗೆ ಬಂದಳು. ಕೆಳಗಿನ ವಿಸಿಟಿಂಗ್ ಹಾಲ್ ನಲ್ಲಿ ಕುಳಿತಿದ್ದ ಡಾ.ಆನ್ಯಾ ನಗುತ್ತಾ "ಏನೇನು ಕಥೆ ಹೇಳಿದ್ರಮ್ಮ ನನ್ನ ಗಿಳಿ ಮರಿಗಳು" ಕೇಳಿದಳು.
"ನನ್ನನ್ನೂ ತಮ್ಮ ಜೊತೆಗೆ ಅಜ್ಜಿ ಊರಿಗೆ ಹಾರಿಸಿಕೊಂಡು ಹೋಗ್ತಾರಂತೆ..ಡಾಕ್ಟರ್! ಹಾರಿ ಹೋಗೋಣ ಅಂದ್ರೆ ಡ್ಯೂಟಿ ಬಿಡಬೇಕಲ್ಲ" ತುಂಟ ಬೇಸರದ ಧ್ವನಿಯಲ್ಲಿ ಹೇಳಿ ಮುಗುಳ್ನಕ್ಕಳು.
"ಅಯ್ಯೋ.. ಪೂರ್ಣ ಅಜ್ಜಿ ಊರಿಗೆ ಬರದಿದ್ದರೂ ಅಜ್ಜಿ ಊರಿಗೆ ಹೋಗುವ ಟ್ರೇನ್ ಹತ್ತಿಸೋಕೆ ನೀವೇ ಬರಬೇಕಮ್ಮ. ಇಲ್ಲಾಂದ್ರೆ ಎರಡೂ ಗಿಳಿಗಳು ಈ ಬೇಸಿಗೆ ರಜೆಗೆ ಇಲ್ಲೇ ಕಳಿಬೇಕಾಗುತ್ತೆ.." ನಾಟಕೀಯವಾಗಿ ಹೇಳಿದಳು ಆನ್ಯಾ. ಆ ಮಾತಿಗೆ ಇಬ್ಬರೂ ಮಕ್ಕಳು 'ಪ್ಲೀಸ್ ಕಿಟ್ ಕ್ಯಾಟ್ ನಮ್ಮನ್ನ ಸ್ಟೇಷನ್ ಗೆ ಡ್ರಾಪ್ ಮಾಡು.. ಪಪ್ಪಾ ಬಿಜಿ ಇದಾರಂತೆ..' ಎಂದು ರಾಗವೆಳೆದರು. ಮುದ್ದು ಮುದ್ದಾಗಿ ಗೋಗರೆದ ಅಖಿಲಾಳನ್ನು ಎತ್ತಿಕೊಳ್ಳುತ್ತಾ 'ನನಗೆನ್ ಕೊಡ್ತಿರಾ ಮತ್ತೆ.. ಡ್ರಾಪ್ ಕೊಟ್ರೆ..' ಕೇಳಿದಳು. ಅವಳ ಕೆನ್ನೆಗೆ ಜೋರಾಗಿ ಮುತ್ತಿಕ್ಕಿ ಸ್ವೀಟ್ ಸಾಕಾ ಇನ್ನೂ ಬೇಕಾ ಎಂದು ಕೇಳಿದಳು ಅಖಿಲಾ. 'ಹ್ಮ್..... ಇವತ್ತಿಗೆ ಇಷ್ಟು ಸಾಕು.. ನಾನು ಮುಂದೆ ಕೇಳಿದಾಗ ಮತ್ತೆ ಕೊಡಬೇಕು..' ಎಂದು ತಾಕೀತು ಮಾಡಿ ಅಖಿಲಾಳನ್ನು ಎತ್ತಿಕೊಂಡು ರಿಸಪ್ಷನಿಸ್ಟ್ ಬಳಿ ಕಾರ್ ಕೀ ತೆಗೆದುಕೊಂಡು, ನಿಖಿಲ್ ಕೈ ಹಿಡಿದು ಕಾರಿನತ್ತ ಕರೆದುಕೊಂಡು ಹೊರಟಳು. ಆನ್ಯಾ ಲಗೇಜ್ ಟ್ರಾಲಿ ಎಳೆದುಕೊಂಡು ಅವರನ್ನೇ ಅನುಸರಿಸಿದಳು. ಕಾರಿನಲ್ಲಿ ಕುಳಿತಾಗಿನಿಂದ ಸ್ಟೇಷನ್ ತಲುಪುವ ದಾರಿಯುದ್ದಕ್ಕೂ ಕಳೆದ ಬೇಸಿಗೆ ರಜೆಯಲ್ಲಿನ ಅಜ್ಜ ಅಜ್ಜಿಯ ಮನೆಯ ಆತಿಥ್ಯ ಪ್ರೀತಿ ವಾತ್ಸಲ್ಯದ ಸೊಬಗನ್ನು ಮೆಲುಕು ಹಾಕುತ್ತ, ಈ ಬೇಸಿಗೆ ರಜೆಗೆ ಏನೇನು ಯೋಜನೆಗಳಿವೆ ಎಂಬುದರವರೆಗೂ ಸವಿಸ್ತಾರವಾಗಿ ಬಿಡದೆ ಹೇಳಿದರು ಮಕ್ಕಳು. ಅದನ್ನು ಕೇಳುತ್ತಾ ಸ್ಟೇಷನ್ ತಲುಪಿ ಅವರನ್ನು ಟ್ರೇನ್ ಹತ್ತಿಸುವಾಗ ಮಕ್ಕಳಿಬ್ಬರೂ ಪರಿಧಿಗೆ "ಪ್ಲೀಸ್ ಕಿಟ್ ಕ್ಯಾಟ್.. ನೀನು ನಮ್ಮ ಜೊತೆಗೆ ಬಾ.. ಸಖತ್ ಮಜವಾಗಿರುತ್ತೆ" ಎಂದು ಒತ್ತಾಯಿಸಿದರು. ಪರಿಧಿ ಅವರನ್ನು "ಈಗ ನೀವು ಹೊಗಿರಿ, ನಾನು ಮುಂದೆ ಯಾವತ್ತಾದರೂ ಬರ್ತಿನಿ" ಎಂದು ಸಮಾಧಾನದಿಂದ ರಮಿಸಿದಳಾದರೂ ಮನಸ್ಸಲ್ಲಿ 'ನನ್ನ ಹರ್ಷನ್ನ ನನ್ನಿಂದ ದೂರ ಮಾಡಿದ ಆ ಊರಿಗೆ ನಾನು ಯಾವತ್ತೂ ಕಾಲಿಡಲ್ಲ!! ಐ ಹೇಟ್ ಮುಂಬೈ..!' ಎಂದುಕೊಂಡಳು. ಮುಂದೊಮ್ಮೆ ಕಳೆದುಕೊಂಡದ್ದರ ಹುಡುಕಾಟ ಅದೇ ಊರಿನಲ್ಲಿ ನಡೆಯಬಹುದು ಎಂಬುದು ಅವಳಿಗೆ ಆಗ ತಿಳಿದಿರಲಿಲ್ಲ. ಅವರನ್ನು ರಿಸರ್ವಡ್ ಸೀಟಿನಲ್ಲಿ ಕೂರಿಸಿ ಕೆಳಗಿಳಿದು ಬಂದು ಪ್ಲಾಟ್ ಫಾರಂ ಮೇಲೆ ನಿಂತು, ಕಿಟಕಿಯಲ್ಲಿ ಮಕ್ಕಳ ಜೊತೆಗೆ ಮಾತಾಡುತ್ತಿದ್ದಳು. ಆಗ ರಿಂಗಣಿಸಿತ್ತು ಅವಳ ಕೈಯಲ್ಲಿದ್ದ ಮೊಬೈಲ್! ಮಕ್ಕಳ ಜೊತೆಗೆ ಮಾತಾಡುತ್ತಲೇ ಫೋನ್ ರಿಸೀವ ಮಾಡಿದ್ದ ಪರಿಧಿ, ಆಕಡೆಯಿಂದ ಹಲೋ...ಪರಿ ಎಂಬ ಚಿರಪರಿಚಿತ ಧ್ವನಿ ಕೇಳಿ ಮತ್ತೆ ಮೊಬೈಲ್ ಸ್ಕ್ರೀನ್ ಮೇಲಿನ ನಂಬರ್ ನೋಡಿದಳು. ಹೌದು.. ಇದು ಆಲಾಪ್ ನೇ..ಎಷ್ಟೋ ದಿನಗಳ ನಂತರ ಕಾಲ್.. ಏನು ವಿಶೇಷ ಎನ್ನುತ್ತಲೇ ಹಲೋ..ಆಲಾಪ್ ಹೇಗಿದೀಯಾ..? ಎಂದು ಕೇಳಿದಳು.
"..ಐಮ್ ಗುಡ್ ಪರಿ. ಹೌ ಅರ್ ಯು.."
"ಹ್ಮ್... ಗುಡ್. ಹೇಗಿದ್ದಾರೆ.. ಸಂಜು ಮತ್ತು ಮಾನು?? "
"ಇಬ್ಬರೂ ಬಿಂದಾಸ್ ಇದ್ದಾರೆ. ನಾನೇ ಬಡಪಾಯಿ ನೋಡು ಇಬ್ಬರ ಮಧ್ಯೆ.." ನಕ್ಕ. ನಿನಗೊತ್ತಾ ಮಾನ್ವಿ........ ಎಂದು ಏನೋ ಹೇಳುವಾಗ ಟ್ರೇನ್ ವಿಪರೀತ ಶಬ್ದ ಮಾಡುತ್ತ ಹೊರಡಲು ಆರಂಭವಾಯಿತು. "............ಐಮ್ ಸೋ ಹ್ಯಾಪಿ..!" ಕೆಲವು ಮಧ್ಯದ ಮಾತುಗಳು ತುಂಡುತುಂಡಾಗಿ ಕೇಳಿದವು.
"ಹಲೋ..ಕೇಳಿಸ್ತಿಲ್ಲ ಕಣೋ. ಏನು... ಮಾನ್ವಿ ನಿಂಜೊತೆ ಮತ್ತೆ ಮಾತಾಡಿದಳಾ..?!''
"..........."
"ಏನೋ ಹೇಳ್ತಿದಿಯಾ..ಕೇಳಿಸ್ತಿಲ್ಲ. ಆಮೇಲೆ ಕಾಲ್ ಮಾಡ್ತಿನಿ..!!"
"........ಬರ್ತಿನಿ!!"
ಚಲಿಸುವ ರೈಲಿನಲ್ಲಿ ಆನ್ಯಾ ಮತ್ತು ಮಕ್ಕಳು ಕಿಟಕಿಯಿಂದ ಕೈಬೀಸುತ್ತಾ ಮುಂಬೈನಗರದ ಪ್ರಯಾಣ ಮುಂದುವರೆಸಿದ್ದರು. ಪರಿಧಿ ಕೂಡ ಕೈಬೀಸಿ ಮುಗುಳ್ನಗುತ್ತಾ ಅವರನ್ನು ಬೀಳ್ಕೊಡುವಾಗ ಹಿಂದಿನಿಂದ ಓಡಿ ಬಂದ ವ್ಯಕ್ತಿಯ ಬೆನ್ನಿಗೇರಿದ್ದ ಬೃಹತ್ ಗಾತ್ರದ ಬ್ಯಾಗ್ ಇವಳನ್ನು ಜೋರಾಗಿ ರೈಲು ಹಳಿ ಕಡೆಗೆ ಜೋರಾಗಿ ನೂಕಿತ್ತು. ಇನ್ನೇನೂ ಆಯತಪ್ಪಿ ಚಲಿಸುವ ಟ್ರೇನ್ ಗೆ ಆಹಾರವಾಗಬೇಕಾದ ಪರಿಧಿಯ ಕೈಯನ್ನು ಅದೇ ವ್ಯಕ್ತಿ ತನ್ನ ಬಲಿಷ್ಠ ಕೈಗಳಿಂದ ಹಿಡಿದು ಜಗ್ಗಿದ್ದ. ಬಿಗಿಯಾಗಿ ಉಸಿರೆಳೆದುಕೊಂಡ ಪರಿಧಿಗೆ ಒಂದು ಕ್ಷಣದಲ್ಲಿ ಏನಾಯಿತು ಎಂಬುದು ಅರಿವಿರದೆ ಮೈ ಕಂಪಿಸುತ್ತಿತ್ತು. ತನ್ನ ಕಷ್ಟದಲ್ಲಿ ಪ್ರತಿಬಾರಿ ಕೈ ಹಿಡಿದು ಕಾಪಾಡುವ ಹರ್ಷನೇ ಈಗಲೂ ತನ್ನ ಕಾಪಾಡಲು ಬಂದನಾ ಎಂದುಕೊಂಡವಳಿಗೆ ಎದುರಿನ ಅಪರಿಚಿತ ಯುವಕನ ಮುಖ ನಿರಾಸೆ ಮೂಡಿಸಿತು. ಕೂದಲೆಳೆಯ ಅಂತರದಲ್ಲಿ ಮೃತ್ಯುವಿನ ಬಾಯಿಂದ ಬಚಾವಾದ ಪರಿಧಿಗೆ ಜೀವವೇ ಬಾಯಿಗೆ ಬಂದಂತಾಗಿತ್ತು. ಗದಗದನೆ ನಡುಗುತ್ತಿದ್ದ ಅವಳನ್ನು ಕೈ ಹಿಡಿದು ಕರೆತಂದು ಬೆಂಚ್ ಮೇಲೆ ಕೂರಿಸಿ ತನ್ನ ಬಾಟಲ್ ತೆಗೆದು ನೀರು ಕುಡಿಯಲು ಕೊಟ್ಟ ಹುಡುಗ "ಕ್ಷಮಿಸಿ.. ನಾನು ಟ್ರೇನ್ ಮಿಸ್ ಆಯ್ತಲ್ಲ ಅನ್ನೋ ಆತುರದಲ್ಲಿ ನಿಮ್ಮನ್ನು ಗಮನಿಸಲಿಲ್ಲ. ದಯವಿಟ್ಟು ಕ್ಷಮಿಸಿ" ಎಂದು ಕೇಳಿಕೊಳ್ಳುತ್ತಿದ್ದರೆ, ಪರಿಧಿ ಈ ಲೋಕದಲ್ಲಿರದೇ ' ಜವರಾಯನ ದರ್ಶನ ಎಷ್ಟು ದುಬಾರಿಯೆಂದರೆ ಒಮ್ಮೆ ಅವನ ದರ್ಶನವಾದ ಮೇಲೆ ಮತ್ತೆ ನಮ್ಮ ದರ್ಶನವೂ ನಮಗೆ ದುರ್ಲಭ!! ಅಂತದ್ದರಲ್ಲಿ ಕಣ್ಣಮುಂದೆಯೇ ಯಮನ ಸಾಕ್ಷಾತ್ ದರ್ಶನ ಪಡೆದೂ ಸಹ ಅವನೊಂದಿಗೆ ಹೋಗದೇ ಬದುಕುಳಿದ ತಾನು ಕಡುಪಾಪಿಯೋ? ಅಥವಾ ಇದು ತನ್ನ ಪುಣ್ಯವೋ? ಅದೃಷ್ಟವೋ! ದುರಾದೃಷ್ಟವೋ! ದೇವರ ಪ್ರತಿಯೊಂದು ಆಟದ ಹಿಂದೆ ಒಂದು ಕಾರಣ, ಅರ್ಥ ಇದ್ದೇ ಇರುತ್ತದೆ. ಅಷ್ಟಿರದೇ ತಾನು ಇಂದು ರೈಲಿನ ಕಂಬಿಗಳ ಸಾಮೀಪ್ಯ ಸಾಧಿಸಿ ಹೀಗೆ ಎದ್ದು ಬಂದು ಕೂರುತ್ತಿರಲಿಲ್ಲವೇನೋ! ಅಬ್ಬಾ.. ಎಂತಹ ಘೋರವಾಗಿರುತ್ತೆ ಸಾವು ಅನ್ನುವುದು. ಇದ್ದಾಗ ಬದುಕಿನ ಅರಿವೇ ಇರುವುದಿಲ್ಲ ಆದರೆ ಒಂದೇ ಒಂದು ಕ್ಷಣದ ಸಾವಿನ ಭಯ ಇಡೀ ಬದುಕಿನ ಮೇಲಿದ್ದ ಅಭಾವ ಆಪಾದನೆಗಳನ್ನು ದೂರ ತಳ್ಳಿ ಬದುಕಿನ ಬೆಲೆ ತಿಳಿಸಿ ಬಿಡುತ್ತದೆಯಲ್ಲ... ಹರ್ಷ ನೀನು ಕೂಡ ಹೀಗೆ ಹಿಂಸೆ ಅನುಭವಿಸಿದ್ದೆಯೇನೋ.. ಇದಕ್ಕಿಂತ ಘೋರವಾಗಿತ್ತಾ..ಸಾವು' ಎಂದೆಲ್ಲಾ ಮನಸ್ಸು ವಿಚಾರ ವಿಮರ್ಶೆಯಲ್ಲಿ ತೊಡಗಿದ್ದರೆ ಕಣ್ಣು ಕಡಲಾಗಿತ್ತು..
"ಐಮ್ ರಿಯಲಿ ವೆರಿ ಸಾರಿ..." ಎಂದ ಹುಡುಗನ ಮಾತಿಗೆ ಎಚ್ಚೆತ್ತು ನಿಟ್ಟುಸಿರು ಬಿಡುತ್ತಾ
"ಇನ್ನೊಮ್ಮೆ ಪ್ಲಾಟ್ ಫಾರಂ ಮೇಲೆ ಬರುವಾಗ ನೋಡಿಕೊಂಡು ತಿರುಗಾಡಿ.. ಒಂದು ಟ್ರೇನ್ ಹೋದರೂ ಮತ್ತೊಂದು ಟ್ರೇನ್ ಸಿಗುತ್ತೆ, ಆದರೆ ಬದುಕು ಮತ್ತೆ ಸಿಗುವಂತದ್ದಲ್ಲ.." ಎಂದು ಹೇಳಿ ಎದ್ದು ನಿಂತು ಹೊರಟವಳಿಗೆ ಆಗ ನೆನಪಾಯಿತು ತನ್ನ ಕೈಯಲ್ಲಿನ ಮೊಬೈಲ್! ಎಲ್ಲಿ ಬಿದ್ದಿತೋ..ಎಂದು ಸುತ್ತಲೂ ಕಣ್ಣಾಡಿಸಿದಳು.
ಟ್ರೇನ್ ಸಂಪೂರ್ಣವಾಗಿ ಹೋದಕಡೆಗೆ ಹತಾಶನಾಗಿ ನೋಡುತ್ತ ನಿಂತ ಯುವಕ ಅವಳ ಹುಡುಕಾಟವನ್ನು ಗಮನಿಸಿ "ನಿಮ್ಮ ಫೋನ್ ಹುಡುಕ್ತಿದಿರಾ.. ಅದು ಇಲ್ಲಿ ಬಿದ್ದಿದೆ" ಎಂದು ಫ್ಲಾಟ್ ಫಾರಂನಿಂದ ಕೆಳಗೆ ಜಿಗಿದು ಹಳಿಯ ಮೇಲೆ ನುಚ್ಚುನೂರಾಗಿ ಬಿದ್ದ ಮೊಬೈಲ್ ಅವಶೇಷಗಳನ್ನು ಕೈಯಲ್ಲಿ ಹಿಡಿದುಕೊಂಡು "ಇದರ ಕಥೆ ಸಮಾಪ್ತಿಯಾಗಿದೆ. ಈ ಡೆಡ್ ಪೀಸಸ್ ಬೇಕಾ..." ಎಂದು ಕೇಳಿದ
ನೆನಪುಗಳ ಸರಪಳಿಯಿಂದಲೇ ದಿನಗಳನ್ನು ನೂಕುವ ಪರಿಧಿಗೆ ಸ್ನೇಹ ಪ್ರೀತಿಯ ಅನೇಕ ಸಿಹಿನೆನಪುಗಳಿಗೆ ಮುನ್ನುಡಿಯಾಗಿದ್ದ ಸಾಕ್ಷಿಯಾಗಿದ್ದ ಮೊಬೈಲ್ ತನ್ನ ಅಸ್ತಿತ್ವ ಕಳೆದುಕೊಂಡಿದ್ದನ್ನು ನೋಡಿ 'ಒಂದೊಂದು ಕ್ಷಣ ಹೀಗೆ ಕೊರಗಿ ಸಾಯುವದಕ್ಕಿಂತ ಈ ಮೊಬೈಲ್ ಬದಲು ನಾನೇ ಚೂರಾಗಿದ್ದರೆ ಒಳ್ಳೆಯದಿತ್ತು..! ಎನಿಸಿತ್ತು. ಹರ್ಷ.. ಯಾಕೋ ನನ್ನ ಮೇಲೆ ಇಷ್ಟೊಂದು ಕೋಪ ದೇವರಿಗೆ.. ಎಲ್ಲಾ ಮುಗಿದ ಮೇಲೂ ಉಳಿಯುವ ಒಂಟಿತನ ಮಾತ್ರ ನನಗೆ ಸ್ವಂತ ಎಂಬ ಶಾಪಗ್ರಸ್ಥ ಬದುಕು ಯಾಕೋ ನನಗೆ..??' ಎಂದು ಮನದಲ್ಲಿ ದಹಿಸುತ್ತಲೇ ಅವನ ಕೈಯಿಂದ ಎಲ್ಲಾ ತುಣುಕುಗಳನ್ನು ತೆಗೆದುಕೊಂಡಳು.
"ಹ್ಮ್.... ಒಂದು ಫೋನ್ ಹೋದ್ರು ಮತ್ತೊಂದು ಫೋನ್ ತಗೋಬಹುದು. ಆದ್ರೆ ಬದುಕು ಮತ್ತೆ ಸಿಗುವಂತದ್ದಲ್ಲ.. ಇದ್ದಾಗಲೇ ಬದುಕಬೇಕು!!" ಅವಳ ಮಾತಿನ ಬಾಣವನ್ನು ಅವಳ ಮೇಲೆ ಪ್ರಯೋಗಿಸುತ್ತ ಪ್ಲಾಟ್ ಫಾರಂ ಮೇಲೇರಿ ಬಂದ ಯುವಕ "ಗತದ ನೋವುಗಳನ್ನ ಪದೇ ಪದೇ ಕೆದಕುತ್ತ ಇದ್ರೆ ಭವಿಷ್ಯದಲ್ಲಿ ಗಾಯ ಇನ್ನೂ ಹಣ್ಣಾಗಿ ವಾಸಿಯಾಗದ ಕಲೆಯಾಗುತ್ತೆ.. ಹುಷಾರು ಮೇಡಂ" ಎಂದ ಅವಳ ಕಣ್ಣಲ್ಲಿದ್ದ ಕಂಬನಿಯ ಕಡಲನ್ನು ಅರ್ಥೈಸಿಕೊಂಡು. ಅವಳು ಅವನ ಕಡೆಗೆ ತಿರುಗಿಯೂ ನೋಡದೆ ತನ್ನ ಯೋಚನೆಗಳೊಂದಿಗೆ ಸ್ವಗತದಲ್ಲಿ ಮಾತಿಗಿಳಿದು ಕಾರಿನ ದಿಕ್ಕಿಗೆ ನಡೆದಿದ್ದಳು. ಮುಂದೊಮ್ಮೆ ಕಳೆದ ಬದುಕನ್ನು ಹುಡುಕಲು ಅದೇ ಯುವಕನನ್ನು ಸಹಾಯ ಯಾಚಿಸುವ ಸಂಧರ್ಭ ಬರಬಹುದು ಎಂಬ ಸೂಚನೆಯಿಲ್ಲದೆ!!
********
ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಆಪರೇಷನ್ ಮುಗಿಸಿ ವಾಶ್ ಬೇಸಿನಲ್ಲಿ ಕೈ ತೊಳೆಯುತ್ತಿದ್ದ ಪ್ರಸನ್ನನ ಮುಂದೆ ಬಂದು ಸರ್ ಪರ್ಮೀಷನ್.. ಅಂದಳು ಶ್ರಾವ್ಯ.
"ನಿಮ್ಮ ಕಷ್ಟ ನೋಡೋಕಾಗ್ತಿಲ್ಲ ಶ್ರಾವ್ಯ. ಗೋ.. ಪರ್ಮಿಶನ್ ಗ್ರಾಂಟೆಡ್!" ಎಂದಾಗ ಶ್ರಾವ್ಯಳ ಮುಖ ತಾವರೆಯಂತೆ ಅರಳಿತು. "ಹ್ಮ್.. ಆದ್ರೆ ಅರ್ಧಗಂಟೆ ಮಾತ್ರ!! ಊಟ ಮುಗಿಸಿ ಬೇಗ ಬನ್ನಿ.." ಎಂದು ಅವಳಿಗೆ ಕಾಣದಂತೆ ಮುಗುಳ್ನಕ್ಕ ಪ್ರಸನ್ನ.
"ಸರ್ ನೀವು ಬೇಕು ಅಂತ ಸತಾಯಿಸ್ತಿದೀರಾ.. ಲೈಫ್ ತುಂಬಾ ಬೇಜಾರು ಅನಿಸ್ತಿದೆ.. ಎರಡು ದಿನ ಸುತ್ತಾಡಿಕೊಂಡು ಬಂದರೆ ಸರಿ ಹೋಗುತ್ತೆ. ಅದು ಅಲ್ಲದೆ ಡಾ.ಪರಿ ಕೂಡ ನಮ್ಮ ಜೊತೆಗೆ ಬರೋಕೆ ಒಪ್ಪಿದಾರೆ. ಅವರಿಗೂ ಬೇಜಾರಾಗುತ್ತೆ ನೀವು ಬೇಡ ಅಂದ್ರೆ.." ಕೊನೆಯ ಸುಳ್ಳನ್ನು ಕೇಳಿ ದಿವ್ಯಾ ಅವಳ ಮುಖ ಮುಖ ನೋಡುತ್ತಿದ್ದರೆ ಶ್ರಾವ್ಯ ಅವಳ ಕಾಲನ್ನು ಜೋರಾಗಿ ತುಳಿದಿದ್ದಳು. ಮಾ... ಎಂದು ಕಿರುಚುತ್ತಲೇ "ಹೌದು ಸರ್.. ಹೌದೌದು.." ಎಂದಳು ದಿವ್ಯ.
"ನಿಜವಾಗಲೂ ಪರಿ ಕೂಡ ಬರ್ತಿನಿ ಅಂದಿದ್ದಾರಾ..." ಆಶ್ಚರ್ಯದಿಂದ ಕೇಳಿದ.
"ಹ್ಮೂ..ಡಾಕ್ಟರ್ ಬೇಕಾದರೆ ಇವಳನ್ನೇ ಕೇಳಿ.. ಬೆಳಿಗ್ಗೆ ನಾವು ಹೀಗೆ ಮಂಗಳೂರಿಗೆ ಲಾಂಗ್ ಡ್ರೈವ್ ಹೋಗ್ತಿದೀವಿ ಅಂದಾಗ ಅವರು ನಾನು ಬರಬಹುದಾ ನಿಮ್ಮ ಜೊತೆಗೆ ಅಂತ ಕೇಳಿದರು.." ಏನು ಅರ್ಥವಾಗದೆ ತಲೆ ಅಲ್ಲಾಡಿಸಿ ಹ್ಮೂಗುಟ್ಟಿದಳು ದಿವ್ಯಾ.
"ದ್ಯಾಟ್ಸ್ ಗುಡ್.. ಅವರಾಗೇ ಕೇಳಿದಾರಂದ್ರೆ.. ಹ್ಮ.. ನೋಡೋಣ" ಎಂದು ಟವೆಲಿಗೆ ಕೈ ಒರೆಸುತ್ತ ಹೊರನಡೆದಿದ್ದ ಪ್ರಸನ್ನ. ಅವನು ಹೊರ ಹೋಗುತ್ತಲೇ "ಯು ಇಡಿಯಟ್ ಯಾಕೆ ಸುಳ್ಳು ಹೇಳಿದೆ? ಈಗ ಪರಿ ಹಾಗೆ ಹೇಳೇ ಇಲ್ಲಂತ ಗೊತ್ತಾದ್ರೆ ನಮ್ಮಿಬ್ಬರ ಗ್ರಹಚಾರ ಏನಾಗತ್ತೋ.." ಗಾಬರಿಯಿಂದ ಕೇಳಿದಳು ದಿವ್ಯ
"ಸಂಜೆಯೊಳಗೆ ಹೇಗಾದರೂ ಪರ್ಮಿಶನ್ ತಗೋಬೇಕಿತ್ತು. ಅದ್ಕೆ ಸುಮ್ನೇ ಓಳು ಬಿಟ್ಟೆ.. ಡೋಂಟ್ ವರಿ ರಾ.. ಗೊತ್ತಾಗಲ್ಲ. ಡಾ.ಪರಿನೂ ಒಪ್ಪಿಸಿ ನಮ್ಮ ಜೊತೆಗೆ ಕರ್ಕೊಂಡು ಹೋದರಾಯಿತು. ಪರಿನಾ ಒಪ್ಪಿಸೋ ಜವಾಬ್ದಾರಿ ನನ್ನದು.." ದೃಢವಾಗಿ ಹೇಳಿದಳು ಶ್ರಾವ್ಯ.
ಇದಕ್ಕೆ ಪುಷ್ಟಿ ಕೊಡುವಂತೆ ಆ ದಿನ ಕೆಳಗಿನ ಫ್ಲೋರ್ ನಲ್ಲಿ ಇನ್ನೊಂದು ಘಟನೆ ನಡೆಯಿತು..
ಮುಂದುವರೆಯುವುದು..
⚛⚛⚛⚛⚛⚛
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ