ಆ ಮಧ್ಯಾಹ್ನ ತನ್ನ ಮಗ ಅವಿನಾಶ್ ನನ್ನು ಎತ್ತಿಕೊಂಡು ಆಟೋದಲ್ಲಿ ಆಸ್ಪತ್ರೆಗೆ ಬಂದಿಳಿದಿದ್ದ ಲಲಿತಾ ಒಂದೇ ಸಮನೆ ರೋಧಿಸುತ್ತ "ಡಾಕ್ಟ್ರೆ... ನನ್ನ ಮಗನ್ನ ಉಳಿಸಿಕೊಡಿ ಡಾಕ್ಟ್ರೆ.. ನಿಮ್ಮ ದಮ್ಮಯ್ಯ ಅಂತಿನೀ.. ಹೇಗಾದ್ರೂ ಮಾಡಿ ನನ್ನ ಮಗನ್ನ ಉಳಿಸಿ..ಎಂದು ಅಳುತ್ತ ಗೋಗರೆಯುತ್ತ ಅವಿನಾಶ್ ನನ್ನು ಆಸ್ಪತ್ರೆ ಒಳಕರೆತಂದು ಸ್ಟ್ರೇಚರ್ ಮೇಲೆ ಮಲಗಿಸಿದಳು. ಅವಳ ಗೋಳಿನ ಧ್ವನಿ ಕೇಳಿ ಓಡಿ ಬಂದ ಜೂನಿಯರ್ ಡಾಕ್ಟರ್ ಲಲಿತಾಳಿಗೆ ಸಮಾಧಾನ ಹೇಳುತ್ತಲೇ ಅವಿನಾಶ್ ನನ್ನು ಪರಿಶೀಲಿಸಿ ನೋಡಿದ. ಅವನ ಬಾಯಿಂದ ರಕ್ತ ಒಸರುತ್ತಿತ್ತು. ಕಣ್ಣು ಗುಡ್ಡೆ ಮೇಲಾಗಿ ಎದೆ ಜೋರಾಗಿ ಕಂಪಿಸುತ್ತ ಮೇಲೊಮ್ಮೆ ಕೆಳಗೊಮ್ಮೆ ಹೊಯ್ದಾಡುತ್ತಿತ್ತು. ಉಸಿರೆಳೆದುಕೊಳ್ಳಲು ಹರಸಾಹಸ ಪಡುತ್ತಿದ್ದ ಅವಿನಾಶ್ ಸಾವಿಗೆ ತುಂಬಾ ಸನಿಹದಲ್ಲಿದ್ದಂತೆ ಕಾಣುತ್ತಿತ್ತು. ಅವನನ್ನು ಸೂಕ್ಷ್ಮವಾಗಿ ಗಮನಿಸಿ " ನಿಮ್ಮ ಮಗ ಏನೋ ಪಾಯಿಜನ್ ಕುಡಿದಿದ್ದಾನೆ ಅನ್ನಿಸ್ತಿದೆ..." ಗಂಭೀರವಾಗಿ ಹೇಳಿದ ಡಾಕ್ಟರ್.
"ಅಯ್ಯೋ ಡಾಕ್ಟ್ರೆ... ಏನೋ ಗೊತ್ತಿಲ್ಲ,, ನಾನು ಮಾರ್ಕೆಟ್ ನಿಂದ ಮನೆಗೆ ಬಂದಾಗ ನನ್ನ ಮಗ ಒಂದೇ ಸಮನೆ ಒದ್ದಾಡ್ತಿದ್ದ,, ತಕ್ಷಣ ಇಲ್ಲಿಗೆ ಕರೆದುಕೊಂಡು ಬಂದೆ.. ಅಯ್ಯೋ ಭಗವಂತ ಏನೋ ಆಗಿತ್ತು ನಿನಗೆ ಪಾಯಿಜನ್ ಕುಡಿಯುವಂತದ್ದು.. ಪ್ಲೀಸ್ ಡಾಕ್ಟ್ರೆ ತಡ ಮಾಡಬೇಡಿ ನನ್ನ ಮಗನ್ನ ಬದುಕಿಸಿಕೊಡಿ ಡಾಕ್ಟ್ರೆ.. ನೀವೇ ನನ್ನ ಪಾಲಿನ ದೇವ್ರು ಈಗ..." ಡಾಕ್ಟರ್ ಕಾಲು ಹಿಡಿದು ಬೇಡಿಕೊಂಡು ಅಳುತ್ತಿದ್ದಳು.
"ಇಲ್ಲಾಮ್ಮ.. ಇದು ಸುಸೈಡ್ ಕೇಸ್ !! ಮೊದಲು ಪೋಲಿಸ್ ಕಂಪ್ಲೆಂಟ್ ಕೊಡಿ. ಅವರ ಅನುಮತಿ ಇಲ್ಲದೆ ನಾವು ಏನು ಮಾಡೋಕಾಗಲ್ಲ" ಕೈ ಅಲ್ಲಾಡಿಸಿದ ಡಾಕ್ಟರ್.
"ಅಯ್ಯೋ ಹಾಗನ್ಬೇಡಿ ಡಾಕ್ಟ್ರೆ.. ಪ್ಲೀಸ್.. ಕಂಡ ದೇವರಿಗೆಲ್ಲ ಹರಕೆ ಹೊತ್ತು ಹೆತ್ತ ನನ್ನ ಒಬ್ಬನೇ ಮಗ.. ನನ್ನ ಜೀವ, ಜೀವನ ಎರಡೂ ಇವನೇ.. ಇವನಿಗೆ ಏನಾದ್ರೂ ಆದ್ರೆ ನಾನು ಬದುಕಲ್ಲ ಡಾಕ್ಟ್ರೆ.. ದುಡ್ಡು ಎಷ್ಟಾದರೂ ಪರವಾಗಿಲ್ಲ ನಾನು ಕೊಡ್ತಿನಿ.. ಮೊದಲು ನನ್ನ ಮಗನ ಜೀವ ಉಳಿಸಿ ಡಾಕ್ಟರ್.." ಅತ್ತು ಪರಿಪರಿಯಾಗಿ ಭಿನ್ನೈಸಿದಳು..
"ಇದು ಹಣದ ಪ್ರಶ್ನೆಯಲ್ಲಮ್ಮಾ.. ನಮ್ಮ ಆಸ್ಪತ್ರೆ ರೂಲ್ಸ್.. ಮೊದಲು ಹೋಗಿ ಪೋಲಿಸ್ ಕಂಪ್ಲೆಂಟ್ ಕೊಟ್ಟು ಅವರಿಂದ ಅನುಮತಿ ತಗೊಂಡು ಬನ್ನಿ.." ಬಹಳ ಶಾಂತವಾಗಿ ಉತ್ತರಿಸಿದ ಡಾಕ್ಟರ್. ಅವಿನಾಶ್ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಮತ್ತಷ್ಟು ಗಂಭೀರವಾಗುತ್ತಿತ್ತು. ನರಳಾಡಿ ಹೊರಳುತ್ತಿದ್ದ ಮಗನ ತಲೆ ನೇವರಿಸುತ್ತ "ಇಲ್ಲ ಕಂದಾ.. ನಿನಗೆ ಏನಾಗಲ್ಲ. ಧೈರ್ಯವಾಗಿರು.." ಎನ್ನುತ್ತಲೇ ಕಂಡ ಕಂಡವರ ಕಾಲು ಹಿಡಿದು ಬೇಡಿಕೊಳ್ಳುತ್ತಿದ್ದಳು ಲಲಿತಾ.
ಡಾ.ಆನ್ಯಾ ಮತ್ತು ಅವರ ಮಕ್ಕಳನ್ನು ರೈಲ್ವೆ ಸ್ಟೇಷನ್ ಗೆ ಕಳಿಸಿ, ಮರಳಿ ಬರುತ್ತಿದ್ದ ಪರಿ, ತನ್ನ ಪಕ್ಕದಲ್ಲಿ ಇರಿಸಿದ ಮೊಬೈಲ್ ಅವಶೇಷಗಳನ್ನು ಗಮನಿಸಿ ಪ್ರೀತಿ ತುಂಬಿದ ಮಾತುಗಳು, ಸಂಭಾಷಣೆಗಳು, ಹರ್ಷನ ಧ್ವನಿ ಅವನ ನಗುಮುಖ,, ಇನ್ನೂ ಏನೇನು ಕಳೆದುಕೊಂಡಂತಾಯಿತು ಎಂಬುದನ್ನು ಅವಲೋಕಿಸುತ್ತ ಕಾರ್ ಡ್ರೈವ್ ಮಾಡುತ್ತಿದ್ದಳು. 'ಆಲಾಪ್ ಏನು ಹೇಳಿದ- ಮಾನ್ವಿ ಎಲ್ಲ ಮರೆತು ಮತ್ತೆ ಮೊದಲಿನಂತೆ ಮಾತಾಡಿದಳಾ?? ಮಾನ್ವಿ ಮಂಗಳೂರಿಗೆ ಬಂದಿದಾಳಾ?? ಮಾನ್ವಿ.... ಏನೋ ಹೇಳಿದ!! ಐಮ್ ಸೋ ಹ್ಯಾಪಿ.. ಅಂತ ಕೂಡ ಏನೋ ಹೇಳ್ತಿದ್ದ ಏನಿರಬಹುದು..?? ಮಾನ್ವಿ ಸ್ನೇಹ ಮತ್ತೆ ಸಿಗುತ್ತಾ? ಸಿಕ್ಕರೂ ಸಿಗಬಹುದೇನೋ,, ಆದರೆ ನನ್ನ ಹರ್ಷ? ಅವನ ಪ್ರೀತಿ??! ನನ್ನ ಮೌನವನ್ನು ಓದಿ ಅರ್ಥೈಸಿಕೊಳ್ಳುವವ, ಮಳೆಯ ಮಧ್ಯೆಯೂ ನನ್ನ ಕಣ್ಣೀರ ಗುರುತಿಸಿ ಅಂಗೈ ಚಾಚುವವ, ನನ್ನ ನಗುವಿನ ಮರೆಯಲ್ಲೂ ಕೊಲ್ಲುವ ನೋವನ್ನು ಹಂಚಿಕೊಂಡವ, ತನ್ನ ಪ್ರತಿ ಕೋರಿಕೆಯಲ್ಲೂ ನನ್ನ ಸಂತೋಷವನ್ನು ಕೋರುವವ, ನನ್ನನ್ನು ನನಗಿಂತಲೂ ಚೆನ್ನಾಗಿ ಅರ್ಥ ಮಾಡಿಕೊಂಡ ಜೀವ.. ತನಗಿಂತಲೂ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿದ್ದ ಹೃದಯ.. ಮತ್ತೆ ನನಗೆ ಜೊತೆಯಾಗುತ್ತಾ?? ' ಎಂಬ ಅವಳ ಅಂತರ್ಗತ ಪ್ರಶ್ನೆಗಳಿಗೆ ಸ್ಟೀರಿಯೋದಲ್ಲಿನ ಹಾಡು ಉತ್ತರಿಸಿ ಕೆಣಕಿತು.
ಕಾಣದ ಕಡಲಿಗೆ ಹಂಬಲಿಸಿದೆ ಮನ..
ಕಾಣಬಲ್ಲೇನೇ ಒಂದು ದಿನ..
ಕಡಲನು ಸೇರಬಲ್ಲೇನೇ ಒಂದು ದಿನ..
ಸಿ.ಅಶ್ವತ್ಥರ ಧ್ವನಿಯ ಹಾಡು ಮರೆಯಲಾಗದ ಗಾಯವನ್ನು ಮತ್ತೆ ಕೆದಕಿ ಅವಳನ್ನು ಅಣಗಿಸಿದಂತಿತ್ತು. ಕಣ್ಣು ಬತ್ತಿದ ಕೊಳದಂತೆ ನಿಶೂನ್ಯವಾಗಿದ್ದವು. ಇನಿಯ ಬರುವನೆಂಬ ಹುಸಿನಂಬಿಕೆಯ ಬೆರಳ ಲೇಖನಿಯ ಹಿಡಿದು ನಾಳೆಯ ಹಾಳೆಗಳನ್ನು ತುಂಬಿಸಲು ತನಗೆ ತಾನೇ ವಂಚನೆ ಮಾಡಿಕೊಳ್ಳಲು ಆಕೆ ಸನ್ನದ್ದಳಾಗಿದ್ದಳು. ಆಸ್ಪತ್ರೆಗೆ ಬಂದು ಕಾರಿನಿಂದ ಇಳಿದು ತನ್ನ ಕೋಟ್ ಸ್ಟೇಥಸ್ಕೋಪ್ ಸಮೇತ ಒಳಗೆ ಪ್ರವೇಶಿಸಿದ ಪರಿಧಿಗೆ ಲಲಿತಳ ಅಳುವಿನ ದೃಶ್ಯ ಕಂಡಿತು. ಅಳುತ್ತಿದ್ದ ಲಲಿತಳ ಭುಜ ಅಲುಗಿಸಿ ಸಮಾಧಾನಿಸುತ್ತ, ಒದ್ದಾಡುತ್ತ ಮಲಗಿದ್ದ ಅವಿನಾಶ್ ನನ್ನು ನೋಡಿ ಗಾಬರಿಯಿಂದ ಕೇಳಿದಳು "ಅವಿಗೆ.. ಏನಾಯ್ತು ಚಿಕ್ಕಮ್ಮ ಅವಿ.. ಅವಿ.." ಎಂದು ಅವನ ಕೆನ್ನೆ ತಟ್ಟುತ್ತ ಅಂಗೈ ಉಜ್ಜುತ್ತಿದ್ದಳು.
"ನೋಡೇ ಪರಿ.. ಅವಿ ಏನೋ ಪಾಯಿಜನ್ ಕುಡಿದು ಬಿಟ್ಟಿದ್ದಾನಂತೆ.. ಇವನಿಗೆ ಟ್ರೀಟ್ಮೆಂಟ್ ಕೊಡಿ ಡಾಕ್ಟ್ರೆ ಅಂದ್ರೆ.. ಅದನ್ನು ಕೊಡೋದು ಬಿಟ್ಟು ಈ ಮೂಷಂಡಿ ಡಾಕ್ಟರ್, ಪೋಲಿಸು ಕಂಪ್ಲೇಂಟು ಅದು ಇದು ಅಂತಿದಾನೆ.." ಎಂದು ಡಾಕ್ಟರ್ ಮೂತಿಯನ್ನು ಜೋರಾಗಿ ತಿವಿದು ಅಳುತ್ತ ಹೇಳಿ ಮೂಗೊರೆಸಿಕೊಂಡಳು.
"ಡಾ.ಪರಿ ಐ ಥಿಂಕ್.. ದಿಸ್ ಇಜ್ ಸುಸೈಡ್ ಕೇಸ್..!! ಪೇಷಂಟ್ ಕಂಡಿಷನ್ ಕೂಡ ತುಂಬಾ ಕ್ರಿಟಿಕಲ್ ಆಗಿದೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ನಾವು ಜೈಲಿಗೆ ಹೋಗಬೇಕಾಗುತ್ತೆ. ರಿಸ್ಕ್ ತಗೋಳೋಕೆ ಆಗಲ್ಲ.." ಅವಳ ತಿವಿತಕ್ಕೆ ಮಾರುದೂರ ಜರಿದಿದ್ದ ಜ್ಯೂನಿಯರ್ ಡಾಕ್ಟರ್ ಸಾವಿರಿಸಿಕೊಂಡು ಹೇಳಿದ.
"ಡೋಂಟ್ ವರಿ ಡಾಕ್ಟರ್ ಇದಕ್ಕೆ ನಾನು ಜವಾಬ್ದಾರಿ!! ನೀವು ಪ್ಲೀಸ್ ಡೈಗ್ನೋಸಿಸ್ ಗೆ ರೆಡಿ ಮಾಡಿ! ಸಿಸ್ಟರ್,, ಪೋಯ್ಸನ್ ಸ್ಪ್ರೆಡ್ ಆಗೋಕೆ ಮೊದಲು ಫರ್ಸ್ಟೆಡ್ ಸ್ಟಾರ್ಟ್ ಮಾಡಿ ಕ್ವಿಕ್.. ಎಂದು ತಾನೇ ಮುಂದಾದಳು ಪರಿಧಿ. 'ಅವಿ.. ಅವಿ.. ಎಚ್ಚರವಾಗಿರು ನಿನಗೇನಾಗಲ್ಲ ಕಣೋ ಧೈರ್ಯವಾಗಿರು,,' ಮೃದುವಾಗಿ ಕೆನ್ನೆ ತಟ್ಟುತ್ತ ಹೇಳಿ, ಸ್ಟ್ರೇಚರ್ ಮುಂದೆ ಕಳಿಸಿ, ರಿಸಪ್ಷನಿಸ್ಟ್ ಬಳಿ ಹೋಗಿ " ಬೇಗ ಪೋಲಿಸ್ ಗೆ ಕಾಲ್ ಮಾಡಿ ಕೇಸ್ ಇನ್ಫಾರ್ಮ್ ಮಾಡಿ.. " ಅವಸರಿಸಿದಳು.
ಪರಿಧಿ ಧೈರ್ಯದೊಂದಿಗೆ ಅವಿನಾಶ್ ನನ್ನು ಎಮರ್ಜೆನ್ಸಿ ವಾರ್ಡ್ ಗೆ ಕರೆದೊಯ್ಯಲಾಯಿತು. ಪರಿಧಿ ತಾನು ವಾರ್ಡ್ ಪ್ರವೇಶಿಸುವಾಗ ಒಳಗೆ ಹೊರಟ ಪರಿಧಿಯ ಕೈಯನ್ನು ಗಟ್ಟಿಯಾಗಿ ಹಿಡಿದೆಳೆದಳು ಲಲಿತಾ. ಏನೆಂಬಂತೆ ತಿರುಗಿ ನೋಡಿದ ಪರಿಧಿಗೆ ಲಲಿತಳ ಕಣ್ಣಲ್ಲಿ ತುಂಬಿದ ಕಂಬನಿಯ ಮಧ್ಯದಲ್ಲಿ ಉರಿಯುವ ಕಿಡಿಯೊಂದು ಭಗ್ಗೆನ್ನುವುದನ್ನು ಕಂಡು ಮೈ ಕಂಪಿಸಿತು. ಅದೇ ಕಣ್ಣುಗಳು.. ತನ್ನ ಬಾಲ್ಯದಲ್ಲೇ ತನ್ನನ್ನು ಎಲ್ಲರಿಂದಲೂ ದೂರಾಗುವಂತೆ ದಂಡಿಸಿದ ಹೆದರಿಸಿದ ಘರ್ಜಿಸುತ್ತಿದ್ದ ಕಣ್ಣುಗಳು.. "ನಿನ್ನ ದರಿದ್ರ ಕೈಯಿಂದ ನನ್ನ ಮಗನಿಗೆ ಚೂರು ಅಪಾಯವಾದ್ರೂ.. ನಾನು ನಿನ್ನನ್ನ ಜೀವಂತವಾಗಿ ಉಳಿಸೊಲ್ಲ ಪರಿ.. ನನ್ನ ಮಗ ಹುಷಾರು!!" ಎಚ್ಚರಿಕೆ ಧ್ವನಿಯಲ್ಲಿ ಹೇಳಿ ಕೈ ಸಡಿಲಿಸಿದಳು. ಪಕ್ಕದಲ್ಲಿದ್ದ ನರ್ಸ್ ಉರಿಗಣ್ಣಿಂದ ಲಲಿತಳನ್ನು ನೋಡಿ ಡಾಕ್ಟರ್ ಕಮ್ ಫಾಸ್ಟ್.. ಎಂದು ಪರಿಧಿಯನ್ನು ಒಳಗೆ ಕರೆದಳು. ಪರಿಧಿಗೆ ಲಲಿತಾಳ ಇಂತಹ ಮಾತುಗಳು ಹೊಸತೇನಲ್ಲ ಆದರೆ ಈ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಅದನ್ನು ಊಹಿಸಿರಲಿಲ್ಲ. ಧೈರ್ಯ ತುಂಬಬೇಕಾದ ಲಲಿತಳೇ ಅವಳ ಮನೋಸ್ಥೈರ್ಯವನ್ನು ಹೊಸಕಿ ಹಾಕಿದ್ದಳು. ಆದ ಆಘಾತದಿಂದ ತಕ್ಷಣ ಸುಧಾರಿಸಿಕೊಂಡಳು ಪರಿಧಿ. ಮಾತೃಹೃದಯ ಪುತ್ರಶೋಕ ತಾಳಲಾರದೆ ಹೇಳುತ್ತಿರುವ ಮಾತುಗಳವು. ತಾನು ಧೃತಿಗೆಡಬಾರದು.. ಅವಿ ಜೀವ ಮುಖ್ಯ ಎಂದು ತನ್ನ ಮನಸ್ಸಿಗೆ ಧೈರ್ಯ ಹೇಳಿಕೊಂಡು ಮುಂದುವರೆದಿದ್ದಳು. ಅವಿನಾಶ್ ಗಂಭೀರವಾದ ಪರಿಸ್ಥಿತಿಯಲ್ಲಿಯೇ ಚಿಕಿತ್ಸೆ ಆರಂಭವಾಯಿತು. ಜ್ಯೂನಿಯರ್ ಡಾಕ್ಟರ್ ಮುಖ ಗಾಬರಿಯಿಂದ ಬೆವೆತು ಹೋಗಿತ್ತು. ಏನಾದರೂ ಆದ್ರೆ ನಾವೂ ಜೈಲಿಗೆ ಬರಬೇಕಾಗುತ್ತಾ ಡಾ.ಪರಿ? ಕೇಳಿದವನನ್ನು ಗುರಾಯಿಸಿ ಜಸ್ಟ್ ಶಟಪ್!! ಎಂದು ತನ್ನ ಕರ್ತವ್ಯ ಪಾಲನೆಯಲ್ಲಿ ಮುಳುಗಿದ್ದಳು ಪರಿಧಿ. ಅಸಿಸ್ಟ್ ಮಾಡುತ್ತಿದ್ದ ನರ್ಸ್ ಸಹ ತುಂಬಾ ಕೂತುಹಲದಿಂದ ಆಗಾಗ ನೇರವಾಗಿ ಸಾಗಿ ಏರಿಳಿಯುತ್ತಿದ್ದ ಇಸಿಜಿಯ ಸೂಚಕವನ್ನೇ ಗಮನಿಸುತ್ತ ಉಸಿರು ಬಿಗಿಹಿಡಿದಿದ್ದಳು. ಹೊರಗೆ ಕೈ ಕೈ ಹೊಸಕಿ ಕೊಳ್ಳುತ್ತ ಶತಪಥ ತಿರುಗುತ್ತಿದ್ದ ಲಲಿತಾ ಇದ್ದಬಿದ್ದ ದೇವರಿಗೆಲ್ಲ ಸಾವಿರ ಹರಕೆ ಹೊತ್ತು, ಮಗನ ಜೀವ ಭಿಕ್ಷೆ ಬೇಡುತ್ತಿದ್ದಳು. ಲಲಿತಳ ಮಾತೃಪ್ರೇಮವೋ, ದೇವರ ಕೃಪೆಯೋ, ಪರಿಧಿಯ ಜಾಣ್ಮೆ ಕೌಶಲ್ಯತೆಯೋ ಅಥವಾ ಅವಳ ಕೈಗುಣವೋ ಒಟ್ಟಿನಲ್ಲಿ ಚಿಕಿತ್ಸೆ ಫಲಪ್ರದವಾಗಿ ಅವಿನಾಶ್ ಜೀವ ಸಂಘರ್ಷದಲ್ಲಿ ಯಮನನ್ನು ಸೋಲಿಸಿ ಬದುಕುಳಿದಿದ್ದ.
ಕೆಲವು ಸಮಯದ ನಂತರ ಹೊರಗೆ ಬಂದ ಸಿಸ್ಟರ್ " ನಿಮ್ಮ ಮಗ ಕ್ಷೇಮವಾಗಿದಾನೆ. ನಥಿಂಗ್ ಟು ವರಿ.. ವಾರ್ಡ್ ಗೆ ಶಿಫ್ಟ್ ಮಾಡಿದ ಮೇಲೆ ಹೋಗಿ ನೋಡಿ.. ಎಂದು ಹೇಳಿ ಹ್ಮಾ... ಅಂದಹಾಗೆ ನಿಮ್ಮ ಮಗನಿಗೆ ಟ್ರೀಟ್ ಮೆಂಟ್ ಕೊಟ್ಟಿದ್ದು ಡಾ.ಪರಿಯವರೇ.. ಅವರು ರಿಸ್ಕ್ ತಗೋಳ್ಳದೆ ಇದ್ದರೆ ನಿಮ್ಮ ಮಗನನ್ನ ನೀವು ಮತ್ತೆ ಜೀವಂತವಾಗಿ ನೋಡ್ತಿರಲಿಲ್ಲ. ಅವರ ಕೈಗುಣ ಅದೃಷಟದ್ದೆ ಆದರೆ ತುಕ್ಕು ಹಿಡಿದಿರೋ ನಿಮ್ಮ ದರಿದ್ರ ಯೋಚನೆಗಳನ್ನು ಸ್ವಲ್ಪ ಬದಲಾಯಿಸಿಕೊಳ್ಳಿ.. ಒಬ್ಬರ ಬಗ್ಗೆ ಹಗುರವಾಗಿ ಮಾತಾಡೋಕೆ ಮೊದಲು ಅವರ ವ್ಯಕ್ತಿತ್ವ ಎಂತದ್ದು ಅಂತ ತಿಳಿದು ಮಾತಾಡಿ" ಮುಖಕ್ಕೆ ನೇರವಾಗಿ ಹೇಳಿ ಹೊರಟು ಹೋಗಿದ್ದಳು. ಮಗ ಬದುಕಿದ ಸಂತೃಪ್ತ ಭಾವದಿಂದಲೂ, ಸದಾಕಾಲವೂ ತನ್ನ ಚುಚ್ಚುಮಾತುಗಳನ್ನೇ ಕೇಳಿ ನೋವುಂಡ ಪರಿಧಿಯ ವಿಶಾಲ ಹೃದಯವಂತಿಕೆಯನ್ನು ಅಭಿವಂದಿಸುತ್ತ ಅಲ್ಲಿಯೇ ಕುರ್ಚಿಯ ಮೇಲೆ ಕುಸಿದು ಕುಳಿತ ಲಲಿತಳ ಕಣ್ಣು ಮತ್ತು ಹೃದಯ ಆರ್ದ್ರತೆಯಿಂದ ಕೂಡಿದ್ದವು.
ಕೆಲ ಸಮಯ ಹಾಗೆ ಕುಳಿತಿದ್ದು, ವಾರ್ಡಿಗೆ ಶಿಫ್ಟ್ ಮಾಡಿದ ಮಗನನ್ನು ನೋಡಲು ಹೋದ ಲಲಿತ ಒಳಗಿನ ಪರಿಧಿಯ ಮಾತುಗಳನ್ನು ಕೇಳುತ್ತಾ ಬಾಗಿಲಲ್ಲೇ ನಿಂತಳು. " ಪರೀಕ್ಷೆಗೆ ಹೆದರಿ ಹೀಗೆಲ್ಲ ಮಾಡ್ಕೊಳ್ಳೋದಾ.. ನಮ್ಮ ಅವಿ, ಸೂಪರ್ ಹೀರೋ ಅನ್ಕೊಳ್ತಿದ್ದೆ ನಾನು... ಛೇ ಛೇ.."
"ಹಲೋ.. ನಾನ್ ಹೀರೋನೇ, ಆದ್ರೆ ನಮ್ಮಮ್ಮ ವಿಲನ್ ಕಣೇ ಅಕ್ಕಾ.. ಬರೀ ಓದು ಓದು ಅಂತಾ ಕಾಟ ಕೊಡ್ತಾಳೆ, ಆಟಕ್ಕೆ ಬಿಡಲ್ಲ, ಟಿವಿ ನೋಡೋಕು ಬಿಡಲ್ಲ, ಸ್ವಲ್ಪ ಕಡಿಮೆ ಮಾರ್ಕ್ಸ್ ಬಂದ್ರು ನನ್ನ ಬಡಿದು ಬಾಯಿಗೆ ಹಾಕ್ಕೊಳ್ತಾಳೆ.. ಬೇರೆ ಹುಡುಗರ ಜೊತೆಗೆ ನನ್ನ ಕಂಪೇರ್ ಮಾಡಿ ಗೇಲಿ ಮಾಡ್ತಾಳೆ! ಸುಮ್ನೇ ಅಮ್ಮನ್ನ ಹೆದರಿಸೋಣ ಅಂತ ಸ್ವಲ್ಪೇ ಸ್ವಲ್ಪ ಇಲಿ ಪಾಷಾಣ ಟೇಸ್ಟ್ ಮಾಡಿದೆ ಅಷ್ಟೇ.. ಅಬ್ಬಾ ಎಷ್ಟು ಭಯಂಕರ ಹೊಟ್ಟೆ ನೋವು ಗೊತ್ತಾ ಅಕ್ಕಾ.. ಇನ್ನೊಮ್ಮೆ ಯಾವತ್ತೂ ಹೀಗೆ ಮಾಡಲ್ಲಪ್ಪ.."
"ಟೇಸ್ಟ್ ನೋಡೋಕೆ ಅದೇನ್ ಮಿಠಾಯಿ ಅನ್ಕೊಂಡಿದ್ಯಾ ಗೂಬೆ!! ಚಿಕ್ಕಮ್ಮನ ಕನಸು ಕಣೋ, ನೀನು ಚೆನ್ನಾಗಿ ಓದಿ ದೊಡ್ಡ ವ್ಯಕ್ತಿಯಾಗಿ ಸಮಾಜದಲ್ಲಿ ಗೌರವದಿಂದ ಬಾಳಬೇಕು ಅಂತ. ಅವರು ಬೈದ್ರೂ ಹೊಡೆದ್ರೂ ನಿನ್ನ ಒಳ್ಳೆಯದಕ್ಕೆ ಅಲ್ವಾ.. ನಿನಗೆ ಹೀಗಾದಾಗ ಎಷ್ಟು ಒದ್ದಾಡಿ ಅಳ್ತಿದ್ರು ಗೊತ್ತಾ,, ಚಿಕ್ಕಮ್ಮಂಗೆ ನಿನ್ನ ಮೇಲೆ ತುಂಬಾ ಪ್ರೀತಿ ಕಣೋ ಅವರ ಮನಸ್ಸು ನೋಯಿಸಬೇಡ. ಅವರು ಹೇಳಿದ ಹಾಗೆ ಚೆನ್ನಾಗಿ ಓದಬೇಕು. ಇನ್ಮುಂದೆ ಇಂತಹ ಸಾಹಸಕ್ಕೆ ಕೈ ಹಾಕಬೇಡ ಏನು..! ಈಗ ಹೆಚ್ಚು ಮಾತಾಡ್ತಾ ಇರ್ಬೇಡ, ರೆಸ್ಟ್ ಮಾಡು.. ನಾನು ಮತ್ತೆ ಬಂದು ಮೀಟ್ ಮಾಡ್ತಿನಿ ಬಾಯ್.." ಎಂದು ಅವನ ಕೆನ್ನೆ ಸವರಿ ತಲೆ ತಡವಿ ಎದ್ದು ಹೊರಬಂದಳು.
ಹೊರಗೆ ಬಾಗಿಲಲ್ಲಿ ಇದನ್ನೇ ನೋಡುತ್ತಾ ನಿಂತಿದ್ದ ಲಲಿತಳ ಮುಖ ಸಣ್ಣತನದಿಂದ ಪಶ್ಚಾತ್ತಾಪದಿಂದ ಬಿಳಿಚಿಕೊಂಡಂತಾಗಿತ್ತು. ಪರಿಧಿಯನ್ನು ನೋಡುತ್ತಿದ್ದಂತೆ ಏನೋ ಹೇಳಬೇಕೆಂದುಕೊಂಡವಳ ಗಂಟಲುಬ್ಬಿ ಬಂದು ಮಾತು ತುಟಿಯಿಂದಾಚೆ ಹೊರಬರದೆ ಮೂಕವಾದವು. ಆದರೆ ಅವಳು ಹೇಳಬಹುದಾದ ಮಾತನ್ನೆಲ್ಲ ಧಾರಾಳವಾಗಿ ಹರಿಯುತ್ತಿದ್ದ ಅವಳ ನಯನಾಶ್ರುಗಳೇ ಬಹಿರಂಗ ಪಡಿಸಿದ್ದವು. ಏನೂ ಹೇಳಲಾಗದೆ ಸುಮ್ಮನಿರಲಾಗದೆ ಒಂದೇ ನೋಟಕ್ಕೆ ಪರಿಧಿಯನ್ನು ಜೋರಾಗಿ ತಬ್ಬಿಕೊಂಡು ಬಿಕ್ಕಿದಳು. ಅನಿರೀಕ್ಷಿತವೂ ಬಹು ಅಪರೂಪವೂ ಆಗಿದ್ದ ಲಲಿತಳ ಆ ಪ್ರೀತಿ ವಾತ್ಸಲ್ಯದ ಅಪ್ಪುಗೆ ಪರಿಧಿಗೂ ಹಿತವಾದ ಅನುಭೂತಿಯಾಗಿತ್ತು. ಎಷ್ಟೋ ವರ್ಷಗಳ ಭಯ ಹಿಂಜರಿಕೆ ನಡುಕ, ಬೆದರಿಸುವ ಕಣ್ಣನೋಟ ಉಸಿರುಗಟ್ಟುವ ಸಂಬಂಧದ ಸಂಕೋಲೆ ಎಲ್ಲವೂ ಅಶ್ರುಧಾರೆಯೊಂದಿಗೆ ಹರಿದು ಹೋಗಿ ಬಿಸಿ ಅಪ್ಪುಗೆಯೊಂದಿಗೆ ಹಳೆಯ ಸಂಬಂಧಕ್ಕೆ ಹೊಸ ಮೆರಗು ಮೂಡಿತ್ತು. ಕೆಲ ಸಮಯದ ಮಧುರಾನುಭೂತಿ ನಂತರ ಎಚ್ಚೆತ್ತ ಪರಿಧಿ ಲಲಿತಳ ಮೌನವನ್ನು ಅರ್ಥಮಾಡಿಕೊಂಡು ಅವಳ ಕಣ್ಣೋರೆಸಿ "ಚಿಕ್ಕಮ್ಮ.. ಅವಿ ಈಗ ಹುಷಾರಾಗಿದ್ದಾನೆ, ಡೋಂಟ್ ವರಿ. ಓದಿನ ವಿಷಯದಲ್ಲಿ ನೀವೂ ಅವನ ಜೊತೆ ತುಂಬಾ ಕಠೋರ ಆಗಬೇಡಿ, ಆಗಾಗ ಸ್ನೇಹಿತರ ಜೊತೆ ಆಟ ಪಾಠ ಹರಟೆಗೂ ಸ್ವಲ್ಪ ಆಸ್ಪದ ಕೊಡಿ. ಬೆಳೆಯೋ ಮಕ್ಕಳ ಮನಸ್ಸು ಎಳೆಯ ಭೂಮಿ ಹಾಗೆ ಏನೇ ನಾಟಿದರೂ ತುಂಬಾ ಬೇಗ ಬೆಳೆದು ಬಿಡುತ್ತೆ. ಅಲ್ಲಿ ಹೂವು ಬೆಳಿಬೇಕೆ ವಿನಃ ಕಸವನ್ನಲ್ಲ. ಮಾತು ಮನಸ್ಸಿಗೆ ಮುಟ್ಟುವ ಹಾಗೆ ಹೇಳಬೇಕು, ಮನಸ್ಸಿಗೆ ಚುಚ್ಚುವ ಹಾಗಲ್ಲ.. ಪ್ರೀತಿಯಿಂದ ಮಾತಾಡಿ ನೋಡಿ ನಿಮ್ಮ ಮಾತನ್ನ ಯಾಕೆ ಕೇಳಲ್ಲ ಅವನು,, ಈಗ ಸುಮ್ಮನೆ ಅಳ್ತಾ ನಿಂತಿರಬೇಡಿ ಹೋಗಿ ನೋಡಿ ನಿಮ್ಮ ಸುಪುತ್ರನ್ನ.." ಎಂದು ಲಲಿತಳನ್ನು ಒಳಗೆ ಕಳಿಸಿದಳು.
ಬಾಯಿಂದ ಒಂದು ಮಾತು ಹೊರಡದಿದ್ದರೂ 'ಇಂತಹ ಬಂಗಾರದಂತಹ ಹುಡುಗಿಗೆ ಎಷ್ಟೇ ಕಾಟ ಕೊಟ್ಟೆ ಪಾಪಿ!! ಭಗವಂತ..ಈ ಹೂವಿನಂತ ಮನಸ್ಸಿನ ಹುಡುಗಿ ಬದುಕು ಬಾಡಿ ಹೋಗೋಕೆ ಬಿಡಬೇಡ ತಂದೆ.. ಬೇಗ ಇವಳಿಗೊಂದು ಒಳ್ಳೆಯ ಬಾಳು ಕೊಟ್ಟು ಕಾಪಾಡಪ್ಪ..' ಎಂದು ಮನಸ್ಸಲ್ಲೇ ತನ್ನನ್ನು ತಾನೇ ಹಳಿದುಕೊಂಡು, ಪರಿಧಿಗೆ ಶುಭ ಹರಿಸಿದ್ದಳು ಲಲಿತಾ. ಇದುವರೆಗೆ ತನ್ನ ಸ್ವಾರ್ಥಕ್ಕಾಗೆ ಬೇಡಿಕೊಳ್ಳುವ, ಬರೀ ಬೇರೆಯವರ ಕೆಡಕನ್ನೇ ಆಲೋಚಿಸುವ ಲಲಿತೆಯ ಮೊದಲ ನಿಸ್ವಾರ್ಥ ಪ್ರಾರ್ಥನೆಗೆ ಅಸ್ತು ದೇವತೆಗಳು ದಿಗ್ಭ್ರಾಂತರಾಗಿ ತಥಾಸ್ತು ಎಂಬಂತೆ ಅದೇ ಕ್ಷಣ ಗೋಡೆ ಮೇಲಿನ ಹಲ್ಲಿಯೊಂದು ಲೊಚಗುಟ್ಟಿತ್ತು.
ಅವಿನಾಶ್ ಜೀವವೇನೋ ಉಳಿದಿತ್ತು ಆದರೆ ವಿಷಯ ತಿಳಿದ ಆಸ್ಪತ್ರೆಯ ಸಿಇಒ ಮತ್ತು ಆಡಳಿತ ವರ್ಗ ಅವಳ ನಿರ್ಧಾರವನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿ ಕೆಂಡಾಮಂಡಲವಾಗಿಯಿತು. "ಡಾ.ಪರಿ,, ಏನ್ ಅನ್ಕೊಂಡಿದ್ದಿರಾ ನಿಮ್ಮನ್ನ ನೀವು.. ಹಾಸ್ಪಿಟಲ್ ರೂಲ್ಸ್ ಗೊತ್ತಿಲ್ವ ನಿಮಗೆ.. ಓಹ್ ನೆಪೋಟಿಸಂ ಆ..!" ವ್ಯಂಗ್ಯವಾಗಿ ಹೇಳಿ " ನಿಮ್ಮ ಮನೆಯವರು ಅನ್ನೋ ಕಾರಣಕ್ಕೆ, ರೂಲ್ಸ್ ಮುರಿದು, ಆಸ್ಪತ್ರೆ ಹೆಸರು ಹಾಳು ಮಾಡೋಕು ಹಿಂದುಮುಂದು ನೋಡಲ್ಲ ಅಲ್ವಾ.."
"ಸರ್.. ದಯವಿಟ್ಟು ಕ್ಷಮಿಸಿ.. ಮಗು ಪರಿಸ್ಥಿತಿ ಕ್ರಿಟಿಕಲ್ ಆಗಿತ್ತು.ಅದಕ್ಕೆ ಅವಸರವಾಗಿ ನಿರ್ಧಾರ ತಗೊಂಡೆ. ಅದರ ಜೊತೆಗೆ ಪೋಲಿಸ್ ಗೂ ಇನ್ಫಾರ್ಮ್ ಮಾಡೋಕೆ ಹೇಳಿದ್ದೆ.. ಇನ್ನೊಂದು ಮುಖ್ಯವಾದ ವಿಷಯ ಸರ್.. ಇದು ಸ್ವಜನಪಕ್ಷಪಾತ ಅಲ್ಲ! ಅವಿ ಜಾಗದಲ್ಲಿ ಬೇರೆ ಯಾರೇ ಇದ್ರೂ ಆಗ್ಲೂ ನಾನು ಇದನ್ನೇ ಮಾಡ್ತಿದ್ದೆ.. ಜೀವ ಉಳಿಸುವುದಷ್ಟೇ ನಮ್ಮ ಕೆಲಸ, ಅವರು ನಮ್ಮವರಾದ್ರೂ ಸರಿ ಶತ್ರುಗಳೇ ಆದರೂ ಸರಿ" ಅವಳ ಮಾತುಗಳಲ್ಲಿ ಕರ್ತವ್ಯ ಪರ ನಿಷ್ಠೆ ಎದ್ದು ಕಾಣುತ್ತಿತ್ತು.
"ಒಂದು ವೇಳೆ ಆ ಮಗು ಪ್ರಾಣ ಉಳಿಯದೆ ಹೋಗಿದ್ರೆ ಸಿಚುವೇಷನ್ ಹೇಗಿರುತ್ತಿತ್ತು ಕಲ್ಪನೆ ಇದೆಯಾ ನಿಮಗೆ..!! ನಿಮ್ಮ ಹೆಸರಿನ ಜೊತೆಗೆ ಆಸ್ಪತ್ರೆ ಹೆಸರು... ಛೇ,, ದಿಸ್ ಈಸ್ ನಾಟ್ ಫೇರ್ ಡಾ.ಪರಿ.. ಯು ಆರ್ ಸಸ್ಪೆಂಡೆಡ್ !!" ಕೋಪದಲ್ಲಿ ಆಜ್ಞಾಪಿಸಿದರು. ಪರಿಧಿಗೆ ಸನ್ನಿವೇಶ ಹೀಗೆ ತಿರುವು ಪಡೆಯಬಹುದು ಎಂಬ ಸಣ್ಣ ಸೂಚನೆಯಿರದೆ ಅವಾಕ್ಕಾಗಿದ್ದಳು. 'ಸರ್...' ಎಂದು ಏನೋ ಯಾಚಿಸುವ ಮುನ್ನವೇ ಗೆಟ್ ಔಟ್ ಎನ್ನುತ್ತ ಸಸ್ಪೆಂಡ್ ಲೆಟರ್ ಅವಳ ಕೈಗಿತ್ತಿದ್ದ ಸಿಇಒ.
ಅದನ್ನು ತೆಗೆದುಕೊಂಡು ಹೊರಬಂದವಳೇ ರಿಸಪ್ಷನಿಸ್ಟ್ ಬಳಿ ತನ್ನ ಕೋಟ್ ಡಾ,ಐಡಿ ಕಳಚಿಡುವಾಗ ಯಮಯಾತನೆ ಅನುಭವಿಸಿದಳು. ವಿಷಯ ತಿಳಿದ ಸ್ಟಾಫ್ ನವರು ಎದುರುಗೊಂಡು ವಿಷಾದದಿಂದ ಅವಳ ಕೆನ್ನೆ ಸವರಿ ಡಾಕ್ಟರ್ ವಿ ಮಿಸ್ ಯು..ಎಂದು ಅಪ್ಪಿದ್ದರು.ಪರಿಧಿಗೆ ಮೊದಲ ಬಾರಿಗೆ ಹರ್ಷನ ಜೊತೆಗೆ ಈ ಆಸ್ಪತ್ರೆಗೆ ಬಂದಾಗಿನಿಂದ ಈವರೆಗಿನ ಒಂದೊಂದು ಘಟನಾವಳಿಗಳು ಕಾಲಾನುಕ್ರಮ ಕಣ್ಣಮುಂದೆ ಸರಿದು ಹೋದವು. ಪ್ರಸ್ತುತ ಜೀವನದಲ್ಲಿ ಹರ್ಷ ದೂರಾಗಿದ್ದ, ಅವನೇ ಸೇರಿಸಿದ ಆಸ್ಪತ್ರೆಯಿಂದ ತಾನು ಕೂಡ ದೂರವಾಗಬೇಕು. ವಿಧಿಯ ಕ್ರಯ ವಿಕ್ರಯ ಮಳಿಗೆಯಲ್ಲಿ ಲಲಿತಳ ಪ್ರೀತಿ ವಾತ್ಸಲ್ಯಕ್ಕೆ ಪರ್ಯಾಯವಾಗಿ ತನ್ನ ವೃತ್ತಿ ಜೀವನವನ್ನು ಅಡವಿಟ್ಟಾಗಿತ್ತು. ಬಯಸಿದ್ದೆಲ್ಲ ಒಂದೊಂದಾಗಿ ದೂರಾಗುತಿರುವಾಗ ತನ್ನ ಮುಂದಿನ ದಿನಗಳು ಹೇಗೆ,, ಎಂಬ ಪ್ರಶ್ನೆಗೆ ನೆನಪುಗಳೇ ಉತ್ತರವಾಗಿದ್ದವು.
ಹಿಂದೊಮ್ಮೆ ಹರ್ಷ ತನ್ನನ್ನು ಕಾಡಿಸಿದ ಹುಡುಗನನ್ನು ಹೊಡೆದು ಒಂದು ರಾತ್ರಿ ಜೈಲುವಾಸ ಅನುಭವಿಸಿ ಮನೆಗೆ ಬಂದಾಗ ರಾತ್ರಿಯಿಡೀ ಅತ್ತಿದ್ಧ ತನ್ನ ಕಣ್ಣುಗಳು ಕೆಂಪಾಗಿ ಮುಖ ಬಾಡಿದ ಎಲೆಯಂತಾಗಿತ್ತು, ಆದರೆ ಹರ್ಷನ ಮುಖದಲ್ಲಿ ಅದೇ ತುಂಟನಗು ಉತ್ಸಾಹ ಉದ್ವೇಗ..
'ನಿನಗೇನೂ ಮಾಡಲಿಲ್ಲ ತಾನೇ ಪೋಲಿಸನವರು?!' ಆತಂಕದಿಂದ ಕೇಳಿದ್ದಳು.
'ಟ್ರ್ರ್ರ್.. ಸುಮ್ಮನೇ ಫಾರ್ಮಲಿಟಿಗೆ ಒಂದು ರಾತ್ರಿ ಜೈಲಿಗೆ ಹಾಕಿದ್ದು, ಆದರೆ ಅಲ್ಲಿ ಸೊಳ್ಳೆ ಕಾಟ ಜಾಸ್ತಿ, ನಿದ್ರೆನೇ ಬರ್ಲಿಲ್ಲ,, ನೈಟ್ ಫುಲ್ ಅವರ ಜೊತೆಗೇ ಕಾರ್ಡ್ಸ್ ಆಡ್ತಾ ಟೈಮ್ ಪಾಸ್ ಮಾಡಿದೆ, ಬೆಳಿಗ್ಗೆ ನಗ್ ನಗ್ತಾ ಕೈಕುಲುಕಿ ಸಹಿ ಮಾಡಿಸಿ ಬಿಟ್ಟು ಬಿಟ್ರು ಅಷ್ಟೇ ಕಣೇ ಅಳುಮುಂಜಿ..' ನಕ್ಕು ರೇಗಿಸಿದ್ದ.
'ಮನೆಯವರೆಲ್ಲ ನಿನಗೋಸ್ಕರ ವರಿ ಮಾಡ್ಕೊಂಡು ರಾತ್ರಿ ಪೂರ್ತಿ ಊಟ ನೀರು ಇಲ್ಲದೆ ಜಾಗರಣೆ ಮಾಡ್ತಿದ್ರೆ, ನಿನಗೆ ತಮಾಷೆನಾ..' ತುಟಿಯುಬ್ಬಿಸಿ ಹೇಳಿದ್ದಳು.
'ಲೈಫ್ ನಲ್ಲಿ ನಡೆಯೋ ಒಂದೊಂದು ಘಟನೆನೂ ಸುಮ್ನೆ ನಡೆಯಲ್ಲ ಮೈ ಡಿಯರ್ ಏಂಜಲ್, ಒಂದೋ.. ಅದು ನಮಗೆ ಬದುಕಲ್ಲಿ ಒಳ್ಳೆಯ ಪಾಠ ಕಲಿಸುತ್ತೆ,, ಇಲ್ಲ.. ಬದುಕಲ್ಲಿ ಇದುವರೆಗೂ ನಮಗೆ ಗೊತ್ತಿರದ ಹೊಸ ಅನುಭವ, ಸಂತೋಷವನ್ನು ಹುಡುಕಿ ತಂದು ಹೊಸದೇನೋ ಅದ್ಭುತ ಸೃಷ್ಟಿಸುತ್ತೆ! ಈಗ ನನ್ನನ್ನೇ ತಗೋ.. ಜೈಲು ಅನುಭವ ಹೇಗಿರುತ್ತೆ ನಿಂಗೊತ್ತಾ?? ಇಲ್ಲ. ಆದರೆ ನಾನು.. ಒಂದೇ ರಾತ್ರಿಯಲ್ಲಿ ಜೈಲಿನ ಊಟ ಮಾಡಿ,, ಅಲ್ಲಿನ ವಾತಾವರಣ ನೋಡಿ,, ಆಲ್ಮೊಸ್ಟ್ ಇಡೀ ಪೋಲಿಸ್ ಸ್ಟಾಫ್ ಜೊತೆ ಫ್ರೆಂಡ್ ಶಿಪ್ ಮಾಡಿಕೊಂಡು ಬಂದೆ !! ಇದು ಲೈಫ್ ಅಂದ್ರೆ...ಬದುಕು ಅನುಭವ ಮತ್ತು ಕಲಿಕೆಯ ಸಾಗರ.. ಅಪ್ಪಳಿಸುವ ಪ್ರತಿ ಅನುಭವದ ಅಲೆಗಳನ್ನು ಆಲಂಗಿಸಬೇಕು.. ಆನಂದಿಸಬೇಕು.. ಅದು ಹೇಳುವ ಪಾಠವನ್ನು ಕಲಿಬೇಕು ಅದನ್ನು ಬದುಕಿಗೂ ಅಳವಡಿಸಬೇಕು..' ಮಾತುಮಾತಲ್ಲೇ ವೇದಾಂತಿಯಾಗಿ ನಾಟಕೀಯ ರೀತಿಯಲ್ಲಿ ಹೇಳುತ್ತಿದ್ದ ಹರ್ಷನನ್ನೇ ಎವೆಯಿಕ್ಕದೆ ನೋಡುತ್ತಾ, ಅವನ ಮಾತುಗಳನ್ನೇ ಆಲಿಸುತ್ತ ಮೈಮರೆತಿದ್ದಳು ಪರಿಧಿ.
ಅವಳನ್ನೇ ಗಮನಿಸಿ ಅವಳೆದುರು ಚಿಟಿಕೆ ಬಾರಿಸಿ ಎಚ್ಚರಿಸಿದ ಹರ್ಷ ' ಏನಾಯ್ತೆ? ನಿನಗೂ ಜೈಲಿಗೆ ಹೋಗಬೇಕು ಅನ್ನಿಸ್ತಿದೆಯಾ?' ಎಂದು ಕೇಳಿದಾಗ ಅವಳು ಕ್ಷಣ ಬೆದರಿ 'ಹೇಯ್ ಇಲ್ಲಾಪ್ಪಾ..' ಎಂದು ತಲೆ ಅಲ್ಲಾಡಿಸಿದಳು. 'ಹೋಗ್ಲಿ.. ಈಗ ಒಂದು ಸ್ಮೈಲ್ ಬಿಸಾಕು ನೋಡೋಣ..' ಎಂದಾಗ ಅವಳು ಬಾರದ ನಗುವನ್ನು ಬಲವಂತವಾಗಿ ಎಳೆದು ಹಿಹಿಹಿ ಎಂದಿದ್ದಳು. 'ಛೀ.... ಇಷ್ಟು ಕೆಟ್ಟದಾಗಿ ನಗ್ತಿಯಂತ ಗೊತ್ತಿರಲಿಲ್ವೇ..!!' ಛೇಡಿಸಿ ನಕ್ಕಿದ್ದ ಹರ್ಷ. ಅವಳು ಅವನ ಮೇಲೆ ಪ್ರಹಾರ ಮಾಡಲು ಸೋಫಾ ಮೇಲಿನ ದಿಂಬು ಕೈಗೆತ್ತುವಷ್ಟರಲ್ಲಿ ಅವನು ಮಾರು ದೂರ ಓಡಿ ಹೋಗಿದ್ದ, ಅವಳು ಎಸೆದ ದುಂಡನೆಯ ದಿಂಬನ್ನು ಕ್ಯಾಚ್ ಹಿಡಿದು 'ಕ್ಯಾಚ್ ಔಟ್!!' ಎಂದು ಕಿರುಚುತ್ತ ಅದನ್ನು ತಿರುಗಿ ಅವಳಿಗೆ ಎಸೆದು ಪರಾರಿಯಾಗಿದ್ದ. ನೆನಪಿನ ತುಂತುರು ಮಳೆಗೆ ಪರಿಧಿಯ ಕಂಬನಿಗಳೇ ಹನಿಯಾದರೆ ಕಿರುನಗೆಯೇ ಕೊಡೆಯಾಗಿತ್ತು.
ಒಟ್ಟೊಟ್ಟಿಗೆ ತುಟಿಯಲ್ಲಿ ಕಿರುನಗೆಯೂ ಕಣ್ಣಲ್ಲಿ ಭಾಷ್ಪವೂ ಆಗಿ ಜಾರುವ ನೆನಪುಗಳ ಮಳೆಹನಿಗೆ ಕೊಡೆ ಹಿಡಿಯುವ ಅಗತ್ಯವಿರುವುದಿಲ್ಲ ಅವಳಿಗೆ ಅದು ಅವಶ್ಯಕ ಅನ್ನಿಸಲೂ ಇಲ್ಲ.. ಸುಳಿವ ಗಾಳಿಯೇ ಕದ್ದೊಯ್ಯುತ್ತಿತ್ತು ಅವಳ ಕಣ್ಣ ಮುತ್ತುಗಳನ್ನು.. ಎಷ್ಟೋ ಹೊತ್ತಿನ ನಂತರ ಮಳೆ ಸಮಾಪ್ತಿಯಾಗಿ ಮುಗಿಲು ತಿಳಿಗೊಂಡಿತು, ಮೊಗದಲ್ಲಿ ಹೊಸ ಚೈತನ್ಯ ಆವಾಹಿಸಿತು,
ಸಸ್ಪೆನ್ಷನ್ ಆರ್ಡರ್ ಕೈಯಲ್ಲಿ ಹಿಡಿದು ಆಸ್ಪತ್ರೆಯ ಹೊರಗೆ ಬಂದವಳೇ ಬೀಸೋ ಗಾಳಿಗೆ ಕೈ ಚಾಚಿ ಧೀರ್ಘ ಉಸಿರೆಳೆದು ಆಚೆ ಬಿಟ್ಟಳು ಬಿಡುಗಡೆಯ ಹಕ್ಕಿಯಂತೆ.. ಸಂಗಾತಿಯ ಅರಸುವ ಬಾನಾಡಿಯಂತೆ..
"ಪರಿ..ಪರಿ... " ಎಂಬ ಧ್ವನಿಗೆ ತಿರುಗಿ ನೋಡಿದಾಗ ಓಡಿ ಬಂದು ಎದುರು ನಿಂತ ಶ್ರಾವ್ಯ "ಕಂಗ್ರ್ಯಾಟ್ಸ್..ಪರಿ, ಈ ನರಕದಿಂದ ತಾತ್ಕಾಲಿಕ ಮುಕ್ತಿ ಸಿಕ್ತಂತೆ!!" ಎಂದು ಕೈ ಕುಲುಕಿದಳು. "ಹ್ಮ್..ಥ್ಯಾಂಕ್ಯು.. ಆದರೆ ಅದೇ ಖುಷಿಗೆ ಪಾರ್ಟಿಯಲ್ಲ ಕೊಡಕ್ಕಾಗಲ್ಲ. ಯಾಕೆಂದರೆ ನಾನೀಗ ನಿರುದ್ಯೋಗಿ! ಕೆಲಸ ಇಲ್ಲ! ಸಂಬಳನೂ ಇಲ್ಲ!'' ಹಾಸ್ಯವಾಗಿ ಕೈ ಅಲುಗಿಸಿದಳು ಪರಿಧಿ.
"ಆ ಪಾರ್ಟಿ ನಾನೇ ಕೊಡಿಸ್ತಿನಿ ಪರಿ, ಆದರೆ ನನಗೆ ನಿಮ್ಮ ಎರಡು ದಿನಗಳ ಸಮಯ ಬೇಕು ಅಷ್ಟೇ!"
"ಎರಡು ದಿನಗಳಾ.. ಏತಕ್ಕೆ!?"
"ಯಾಕಂದ್ರೆ, ಎರಡು ದಿನ ನೀವು ನಮ್ಮ ಜೊತೆಗೆ ಬೀಚ್ ಗೆ ಬರ್ತಿದೀರಾ ಲಾಂಗ್ ಡ್ರೈವ್..!!" ತುಂಬು ಉತ್ಸುಕತೆಯಿಂದ ಹೇಳಿದಳು ಶ್ರಾವ್ಯ.
"ಬೀಚ್ ಗಾ.. ನಾನು ನಿಮ್ಮ ಜೊತೆಗೆ.. ನೋ ನೋ.. ಶ್ರಾವ್ಯ ನೀವು ಹೋಗಿ ಬನ್ನಿ, ಹ್ಯಾವ್ ಎ ನೈಸ್ ಟೈಮ್..! ಎನ್ನುತ್ತ ನನ್ನ ಫೋನ್ ಡ್ಯಾಮೆಜ್ ಆಗಿದೆ. ಒಂದು ಮೇಲ್ ಕಳಿಸಬಹುದಾ ನಿಮ್ಮ ಮೊಬೈಲಿನಿಂದಾ..?" ಕೇಳಿದಳು.
"ಹ್ಮಾ ತಗೋಳಿ ಅದಕ್ಕೇನೂ.." ಎನ್ನುತ್ತಾ ತನ್ನ ಮೊಬೈಲ್ ಪರಿಧಿಯ ಕೈಗಿಟ್ಟಳು ಶ್ರಾವ್ಯ. ಪರಿಧಿ ಆಲಾಪ್ ನಿಗೆ ಅವನು ಕರೆ ಮಾಡಿದಾಗ ತಾನು ರೈಲ್ವೆ ಸ್ಟೇಷನ್ ನಲ್ಲಿ ಇದ್ದದ್ದರಿಂದ ಏನೂ ಕೇಳಿಸಿಲ್ಲವೆಂದು, ಮೊಬೈಲ್ ಕೆಟ್ಟು ಅವನ ನಂಬರ್ ಕೂಡ ಇಲ್ಲವೆಂದು ಇಮೇಲ್ ಮುಖಾಂತರ ಸಂಕ್ಷಿಪ್ತವಾಗಿ ತಿಳಿಸುತ್ತಿದ್ದರೆ, ಎದುರಿಗೆ ಇದನ್ನ ನೋಡುತ್ತಾ ನಿಂತಿದ್ದ ಶ್ರಾವ್ಯ ಪರಿಯನ್ನು ಒಪ್ಪಿಸಲು ನಾನಾ ಬಗೆಯ ಯೋಚನೆ ಮಾಡುತ್ತಿದ್ದಳು.
"ಪರಿ ಪ್ಲೀಸ್ ಪರಿ ಎರಡೇ ದಿನ.. ರವಿವಾರ ಸಾಯಂಕಾಲ ವಾಪಸ್ ಬೆಂಗಳೂರಿನಲ್ಲಿ ಇರ್ತಿವಿ" ಶ್ರಾವ್ಯ ವಿನಂತಿಸಿಕೊಳ್ಳುವಾಗ.. ಧ್ರುವ, ದಿವ್ಯ ರೋಹಿತ್ ಕೂಡ ಅಲ್ಲಿಗೆ ಬಂದಿದ್ದರು.
ಅಷ್ಟರಲ್ಲೇ ಅವರ ಹಿಂದೆಯೇ ಬಂದ ಪ್ರಸನ್ನ "ಹಾಯ್ ಪರಿ.. ಕಂಗ್ರಾಟ್ಸ್ ಮಾ!! ಅಂತೂ ಒಂದು ಲಾಂಗ್ ವೆಕೆಷನ್ ಸಿಕ್ಕಂತಾಯ್ತು ನಿಮ್ಗೆ..ಎಂದಾಗ ಪರಿ ಮೇಲ್ ಟೈಪ್ ಮಾಡುತ್ತಲೇ ಅವನತ್ತ ನೋಡಿ ಮಂದಹಾಸ ಬೀರಿದಳು. ಸಸ್ಪೆಂಡ್ ಆಗಿದಿರಾ ಅನ್ನೊದಕ್ಕಿಂತ ಒಂದು ಜೀವ ಉಳಿಸಿದ್ರಿ ಅನ್ನೋ ವಿಷಯ ಕೇಳಿ ಮನಸ್ಸಿಗೆ ಬಹಳ ಸಂತೃಪ್ತಿಯಾಯ್ತು. ಟೇಕ್ ಇಟ್ ಇನ್ ಎ ಪಾಸಿಟಿವ್ ವೇ.. ಹೇಗೂ ಇವರ ಜೊತೆ ಮಂಗಳೂರು ಹೋಗ್ಬೇಕು ಅನ್ಕೊಂಡಿದಿರಲ್ವಾ,, ಹೋಗಿ ಒಂದೆರಡು ದಿನ ನಿಮ್ಮ ಫ್ರೆಂಡ್ಸ್ ಎಲ್ಲರನ್ನೂ ಭೇಟಿಯಾಗಿ ಎಂಜಾಯ್ ಮಾಡಿ ಬನ್ನಿ,," ಎಂದು ಹೇಳುವಾಗ, ಪರಿಧಿ ಪ್ರಶ್ನಾರ್ಥಕವಾಗಿ ಅವನ ಮುಖವನ್ನೇ ನೋಡುತ್ತಿದ್ದಳು. ಕೈ ತಪ್ಪಿ ಹೋಗುತ್ತಿದ್ದ ಸನ್ನಿವೇಶವನ್ನು ಅರ್ಥ ಮಾಡಿಕೊಂಡ ಶ್ರಾವ್ಯ ಮುಖಕ್ಕೆ ರಪ್ ಎಂದು ಹೊಡೆದುಕೊಂಡು ತನ್ನೆರಡು ಕಿವಿ ಹಿಡಿದು ವಿನಂತಿಸುವಂತೆ ಪರಿಧಿಯ ಮುಖ ಮಿಕಿಮಿಕಿ ನೋಡಿದ್ದಳು. ಅವಳ ಗುಟ್ಟನ್ನು ಅರಿತ ಪರಿಧಿ ಮನಸ್ಸೊಳಗೆ ಮುಗುಳ್ನಕ್ಕು "ಹ್ಮಾ..ಡಾ.ಪ್ರಸನ್ನ ಇವತ್ತು ರಾತ್ರಿನೇ ಹೋಗೋ ಐಡಿಯಾ ಇತ್ತು, ಆದರೆ ನಿಮ್ಮ ಪರ್ಮಿಶನ್ ಗೋಸ್ಕರ ಕಾಯ್ತಿದೀವಿ ಅಷ್ಟೇ.." ಸಪ್ಪೆಮುಖ ಮಾಡಿ ಹೇಳಿದ್ದಳು.
"ಇನ್ನೇನು ನಾನೇ ಹೇಳ್ತಿದಿನಲ್ಲಾ,, ಹೋಗಿಬನ್ನಿ ಎಲ್ಲರೂ.." ಎಂದ ಪ್ರಸನ್ನ ಶ್ರಾವ್ಯಳನ್ನು ನೋಡಿ. ಅವನ ಮುಖವನ್ನೇ ಬಿರುಸು ಕಣ್ಣಿಂದ ಗುರಾಯಿಸಿದ ಶ್ರಾವ್ಯಳ ಅಂತರಾಳ 'ಇದನ್ನ ಬೆಳಿಗ್ಗೆನೇ ಹೇಳಿದ್ರೆ ಇವ್ರ ಮಾವನ ಮನೆ ಗಂಟೇನಾದ್ರೂ ಹೋಗ್ತಿತ್ತಾ..!!' ಎಂದು ಪ್ರಸನ್ನನನ್ನು ಹಳಿಯುತ್ತಿತ್ತು. ಅವಳ ಚಹರೆಯಿಂದಲೇ ಮನಸ್ಸಿನ ಮಾತು ಅರ್ಥವಾದಂತೆ "ಬಹಳ ಕಷ್ಟಪಟ್ಟು ಪಡೆದುಕೊಳ್ಳುವ ವಸ್ತುಗಳ ಬೆಲೆ ಅವುಗಳ ನೈಜ ಬೆಲೆಗಿಂತ ತೀರಾ ಹೆಚ್ಚಾಗಿ ಬಿಡುತ್ತಂತೆ. ಹಾಗೆಯೇ ಬದುಕಿನಲ್ಲಿ ಬಯಸಿದ್ದೆಲ್ಲವೂ ಸುಲಭವಾಗಿ ಸಿಕ್ಕು ಬಿಟ್ಟರೆ, ಪಡೆದುಕೊಂಡದ್ದರ ಸಂತೋಷ ಹೆಚ್ಚು ಸಮಯ ಉಳಿಯಲ್ಲ..ಮುಂದೊಮ್ಮೆ ನಿಮ್ಮ ಮಕ್ಕಳೋ ಮಮ್ಮಕ್ಕಳಿಗೋ ಹೀಗೊಬ್ಬ ಸಿಡುಕು ಸೀನಿಯರ್ ಇದ್ದಾ ಅಂತ ಹೇಳುವಾಗಲಾದ್ರೂ ನನ್ನ ನೆನಪು ಈ ಟ್ರಿಪ್ ನೆನಪು ಬಂದೇ ಬರುತ್ತೆ ಅಲ್ವಾ ಶ್ರಾವ್ಯ.." ಎಂದ ಪ್ರಸನ್ನ. ಅವನ ಮಾತಿಗೆ ಶ್ರಾವ್ಯ ನಾಲಿಗೆ ಕೊಚ್ಚಿಕೊಂಡು ತನ್ನ ದೃಷ್ಟಿ ಬದಲಿಸಿ ಹಲ್ಲು ತೋರಿಸಿ ತಲೆ ಆಡಿಸಿದಳು.
"ಹುಡುಗಿಯರು ಜೊತೆಗೆ ಬರ್ತಿದ್ದಾರೆ ಕಣ್ರೋ ಹುಷಾರಾಗಿ ನೋಡಿಕೊಳ್ಳಿ, ಸರ್, ನೀವು.. ನಿಮ್ಮ ಯಡವಟ್ಟು ಎಕ್ಸ್ಪೆರಿಮೆಂಟ್ಸ್ ನಾ ಅವರ ಮೇಲೆ ಪ್ರಯೋಗ ಮಾಡಬೇಡಿ ಒಕೆ..!!" ಎಂದು ರೋಹಿತ್ ನ ಭುಜಕ್ಕೆ ಕೈ ಹಾಕಿ ಹೊಟ್ಟೆಗೆ ಗುಮ್ಮುತ್ತ ಹೇಳಿ, ಪಕ್ಕಕ್ಕೆ ತಿರುಗಿ "ಧ್ರುವ್.. ಟೇಕ್ ಕೇರ್ ಆಫ್ ದೆಮ್!!" ಎಂದು ಮತ್ತೊಮ್ಮೆ ಎಚ್ಚರಿಸಿದ. ರೋಹಿತ್ 'ಯೆಸ್ ಸರ್,,' ಎಂದು ತಲೆ ಆಡಿಸಿದ, ಧ್ರುವ 'ಶ್ಯೂರ್ ಸರ್,,ಡೋಂಟ್ ವರಿ,,' ಎಂದಿದ್ದ. ಕೊನೆಗೆ ಎಲ್ಲರಿಗೂ ಸೇರಿಸಿ "ಹ್ಯಾಪಿ ಜರ್ನಿ ಬಡ಼ಿಜ಼್.. ಕ್ಷೇಮವಾಗಿ ಹೋಗಿಬನ್ನಿ, ನನಗೆ, ನನ್ನ ಸ್ವೀಟಿ ಜೊತೆಗೆ ಅಪಾಯಿಂಟ್ಮೆಂಟ್ ಇದೆ ಇವತ್ತು! ಬಾಯ್..," ಎನ್ನುತ್ತ ದೂರವಾದ.
ಅವನು ಹೊರಟ ದಿಕ್ಕನ್ನೇ ನೋಡುತ್ತಿದ್ದ ದಿವ್ಯ'ಇವ್ರಿಗೆ ಈಗಾಗಲೇ ಗರ್ಲ್ ಫ್ರೆಂಡ್ ಇದ್ದಾಳಾ!!' ಎಂದು ನೊಂದುಕೊಂಡರೆ ಆ ಸ್ವೀಟಿ ಯಾರೆಂಬುದು ಅರಿತಿದ್ದ ಪರಿಧಿ ನಗು ಬಿಗಿಹಿಡಿದಿದ್ದಳು. ಶ್ರಾವ್ಯ ತಟಕ್ಕನೇ ಪರಿಧಿ ಕೈ ಹಿಡಿದು"ಪರಿ ಈಗ ನೀವು ತಪ್ಪಿಸಿಕೊಳ್ಳುವ ಹಾಗಿಲ್ಲ, ನೀವು ಬರದಿದ್ರೆ ನಮ್ಮ ಗ್ರಹಚಾರ ಕೆಟ್ಟ ಹಾಗೆ " ಎಂದು ಅವಳನ್ನು ಒತ್ತಾಯದಿಂದ ಒಪ್ಪಿಸಿ ಅಲ್ಲಿಯೇ ನಿಲ್ಲಿಸಿಕೊಂಡಳು. ಧ್ರುವ ಶ್ರಾವ್ಯ ದಿವ್ಯ ರೋಹಿತ್ ರಾತ್ರಿ ಹೊರಡುವ ಯೋಜನೆಯ ಬಗ್ಗೆ ಕಾಲ ಘಳಿಗೆ ಸಮಯ ಸ್ಥಳ ಖರ್ಚು ನೀನು ನಾನು ಆನು ತಾನು ಎಲ್ಲವನ್ನೂ ಹಾವು ಮುಂಗುಸಿ ಮೇಕೆ ನಾಯಿ ತರಹ ಕರ್ರೊಬರ್ರೋ ಎಂದು ಕಿತ್ತಾಡಿ ಚರ್ಚಿಸಿ ಕೊನೆಗೆ ಎಂಟು ಗಂಟೆಗೆ ಚಿಲ್ಡ್ರನ್ ಪಾರ್ಕಿನೆದರು ಎಲ್ಲರೂ ಬಂದು ಸೇರಬೇಕೆಂದು ನಿರ್ಧರಿಸಿದರು. ಅವರ ಒಗ್ಗಟ್ಟಿನ ಸ್ನೇಹ ಸಂಬಂಧವನ್ನು ನೋಡಿ ಟ್ರಿಪ್ ಹೇಗಿರಬಹುದು ಎಂಬುದನ್ನು ಕಲ್ಪಿಸಲು ಪ್ರಯತ್ನಿಸಿ ಅದು ಅವಳ ಕಲ್ಪನೆಯ ಕೈಗೆಟುಕದೆ ತಲೆ ಕೊಡವಿ ಸುಮ್ಮನಾದಳು ಪರಿಧಿ. ದಿಗ್ದಿಗಂತದಲಿ ಮರೆಯಾಗುತಿಹ ಸೂರ್ಯ ನಾಳೆ ಬರುವಾಗ ನಿನಗಾಗಿ, ನೀ ಎಂದೂ ಮರೆಯಲಾಗದ ವಿಶೇಷ ಉಡುಗೊರೆ ತರುವೆ ಎಂದು ಹೇಳುವಂತೆ ಸ್ವರ್ಣ ಕಲಶದಲ್ಲಿ ಬರೆದು ಹಾರುವ ಬಾನಾಡಿಗಳಿಂದ ಹಸ್ತಾಕ್ಷರ ಮಾಡಿದ. ಬದುಕಿನಲ್ಲಿ ಯಾವ ಘಟನೆಯು ಅಸಂಬದ್ಧವಲ್ಲ, ಹಾಗಂತ ಎಲ್ಲದಕ್ಕೂ ಕಾರಣಗಳು ಇರಲೇಬೇಕು ಎಂದಲ್ಲ ಆದರೆ ವಿನಾಕಾರಣ ಯಾವ ಘಟನೆಯು ಘಟಿಸುವುದಿಲ್ಲ!! ಹೊಸದೊಂದು ಅಧ್ಯಾಯಕ್ಕೆ ಕಾಲಿಡಲು ನೆಪವಾಗಿ ಬಂದಿರಲೂಬಹುದು ಅವಕಾಶ...
ಮುಂದುವರೆಯುವುದು..
⚛⚛⚛⚛⚛
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ