ಇರುಳಿನ ಮುಸುಕಿನಲ್ಲಿ ಚಂದಿರ ಮುಗುಳುನಗೆ ಬೀರುತ್ತ ಪಯಣದ ಸಂಗಾತಿಯಾಗಲು ಕಾತರದಿ ಕಾಯುತ್ತಾ ಭೂಮಿಯನ್ನೇ ಎಡಬಿಡದೆ ನೋಡುವ ಹಾಗೆ ಬೆಳದಿಂಗಳ ಚೆಲ್ಲಿದ್ದ.
ಸರಿಯಾಗಿ ಏಳುವರೆಗೆ ಚಿಲ್ಡ್ರನ್ ಪಾರ್ಕ್ ಹತ್ತಿರ, ನಿರ್ಜನ ಪ್ರದೇಶದಲ್ಲಿ ತನ್ನ ವೈಟ್ ಆಡಿ ಕಾರ್ ನಿಲ್ಲಿಸಿದ ಧ್ರುವ, ದಾರಿಯಲ್ಲಿ ತೆಗೆದುಕೊಂಡು ಬಂದ ಬಿಸಿ ಬಿಸಿ ಮೆಕ್ಕೆಜೋಳ ಸವಿಯುತ್ತ ಉಳಿದವರು ಬರುವುದನ್ನೇ ಕಾಯುತ್ತಾ ಅತ್ತಿಂದಿತ್ತ ತಿರುಗಾಡುತ್ತಿದ್ದ.
ಅವನು ಬಂದ ಸ್ವಲ್ಪ ಸಮಯಕ್ಕೆ ಒಂದು ಆಟೋ ಅಲ್ಲಿಗೆ ಬಂದು ನಿಂತಿತು. ಅದರಿಂದ ಇಳಿದ ಹುಡುಗಿಯರಿಬ್ಬರು ತಮ್ಮ ಮುಖ ಚೂರು ಗುರುತಿಸದಂತೆ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡಿದ್ದರು. ಕೈಯಲ್ಲಿ ಮಣಭಾರದ ಲಗೇಜ್ ಬ್ಯಾಗುಗಳನ್ನು ಹೊರಲಾಗದೆ ಒದ್ದಾಡುತ್ತಿದ್ದರು. ಧೃವನಿಗೆ ಅವರಿಬ್ಬರೂ ಯಾರೋ ನಕ್ಸಲೈಟ್ ಗಳಾ ಎಂಬ ಅನುಮಾನ ಬಂದಿತ್ತು. ಲಗೇಜ್ ನಲ್ಲಿ ಗನ್ ಮೆಟೀರಿಯಲ್ಸ್ ಸಪ್ಲೈ ಮಾಡುತ್ತಿದ್ದಾರಾ ಎಂದು ಶಂಕಿಸಿ ಅವರನ್ನೇ ಗಮನಿಸುತ್ತಿದ್ದ. ಆಟೋದವನ ಜೊತೆಗೆ ಮೀಟರ್ ಬಿಲ್ ಚೌಕಾಸಿ ಮಾಡುವಾಗ ಅವರ ಧ್ವನಿ ಕೇಳಿ ಧ್ರುವನಿಗೆ ಮನದಟ್ಟಾಯಿತು ಅವರಿಬ್ಬರೂ ಶ್ರಾವ್ಯ ದಿವ್ಯ ಎಂದು!! ಮಣಭಾರದ ಲಗೇಜ್ ಸಮೇತ ಅವನ ಹತ್ತಿರ ಬಂದಾಗ ಅವರನ್ನು ನೋಡಿ ದಿಗ್ಭ್ರಾಂತನಾದ ಧ್ರುವ "ನೀವೇನ್ ಟ್ರಿಪ್ ಗೆ ಬರ್ತಿದ್ದಿರಾ.. ಇಲ್ಲಾ ರಾತ್ರೋರಾತ್ರಿ ಯಾರನ್ನೋ ಕೊಲೆ ಮಾಡಿ ಲಗೇಜ್ ಎತ್ತಿಕೊಂಡು ಊರನ್ನೆ ಬಿಟ್ಟು ಗುಳೇ ಹೊರಟಿದ್ದಿರಾ..!" ಎಂದು ಕಾಲೆಳೆದು ಹುಬ್ಬೇರಿಸಿದ್ದ.
"ನಿನಗೂ ಅದಕ್ಕೂ ಸಂಬಂಧವಿಲ್ಲ. ಇವು ನಮ್ಮ ಲಗೇಜ್ ನಮ್ಮ ಇಷ್ಟ! ಅಷ್ಟಕ್ಕೂ ನೀನು ಎತ್ತಿಕೊಂಡು ಹೋಗಲ್ಲವಲ್ಲ.. ಕಾರಲ್ಲಿ ತಾನೇ ಹೋಗೋದು.." ಎಂದು ಮೂಗು ಮುರಿದಳು ಶ್ರಾವ್ಯ
"ಹ್ಮ್.. ಕಾರು ನಿಮ್ಮ ಮಾವಂದು ಅನ್ಕೊಂಡಿದ್ಯಾ.. ನಾನು ಕಾಡಿ ಬೇಡಿ ಸರ್ಕಸ್ ಮಾಡಿ ನಮ್ಮ ಬ್ರೋ ಹತ್ರ ಕಿತ್ಕೊಂಡು ಬಂದಿದ್ದು.."
"ಇವಾಗೇನೂ ನಾವು ಟ್ರಿಪ್ ಬರೋಣ್ವಾ ಬೇಡ್ವಾ" ಲಗೇಜ್ ಭಾರ ತಾಳದೆ ರೇಗಿದ್ದಳು ದಿವ್ಯ
"ಇನ್ನೇನ್ ಮಾಡೋಕಾಗುತ್ತೆ ತಂದಿದ್ದಿರಲ್ಲ ಲಗೇಜ್ ತುಂಬಿಸಿ ಢಿಕ್ಕಿನಾ.." ಕೈ ಮುಗಿದು ಢಿಕ್ಕಿ ಒಪನ್ ಮಾಡಿದ್ದ ಧ್ರುವ. ಎರಡು ಮಣಭಾರದ ಲಗೇಜ್ ಬ್ಯಾಗ್ ಗಳನ್ನು ಒಳಗಿಳಿಸಿ ಒಂದನ್ನು ಕೈಯಲ್ಲಿ ಹಿಡಿದುಕೊಂಡ ದಿವ್ಯಾಳನ್ನು "ಅದನ್ನೇನು ತಲೆ ಮೇಲೆ ಹೊತ್ಕೋತಿಯಾ.. ಇಡು ಅದನ್ನು.." ಎಂದಾಗ "ನೋ.. ಅದು ನನಗ್ ಬೇಕು. ಅದರಲ್ಲಿ ತಿನ್ನೋ ಐಟಮ್ಸ್ ಇವೆ" ಎಂದು ಢಿಕ್ಕಿ ಮುಚ್ಚಿದಳು ದಿವ್ಯ. ಧ್ರುವ ಹುಬ್ಬೇರಿಸಿ ಇಷ್ಟು ಕಡಿಮೆ ತಿಂತಿರಾ ಅಂತ ಗೊತ್ತಿರ್ಲಿಲ್ಲ.. ಎಂದು ನಕ್ಕ. ಮೂವರು ಹೊರಗೆ ನಿಂತುಕೊಂಡು ಟ್ರಿಪ್ ಬಗ್ಗೆ ಅದು ಇದು ಮಾತಾಡುವಾಗಲೇ..
ತನ್ನ ಮಾವ ವಿನಾಯಕ್ ರೊಂದಿಗೆ ಕಾರಿನಲ್ಲಿ ಬಂದಿಳಿದಳು ಪರಿಧಿ. ಮನೆಯಲ್ಲಿ ಆ ದಿನ ರೈಲ್ವೆ ಸ್ಟೇಷನ್ ಘಟನೆ, ಆಸ್ಪತ್ರೆಯಲ್ಲಿ ನಡೆದ ಎಲ್ಲಾ ಅವಗಢವನ್ನು, ತಾನು ಸಸ್ಪೆಂಡ್ ಆದದ್ದನ್ನೂ ಅತ್ತೆ ಮಾವ ಮತ್ತು ತಾತನ ಮುಂದೆ ಸವಿಸ್ತಾರವಾಗಿ ಹೇಳಿದ್ದಳು. ಮನೆಯವರೆಲ್ಲ ಕೊಂಚ ಗಾಬರಿಗೊಂಡಿದ್ದರೂ ಅವಳಿಗೆ ಯಾವುದಕ್ಕೂ ಹೆದರಬೇಡ ನಾವಿದ್ದೀವಿ ಎಂದು ಸಂತೈಸಿದ್ದರು. ತಾನು ಹೀಗೆ ಫ್ರೆಂಡ್ಸ್ ಜೊತೆಗೆ ಎರಡು ದಿನಗಳ ಮಟ್ಟಿಗೆ ಟ್ರಿಪ್ ಹೋಗುತ್ತಿರುವುದಾಗಿ ತಿಳಿಸಿದಾಗ ಎಲ್ಲರಿಗೂ ಅದು ಸರಿಯೆನ್ನಿಸಿ ಅದಕ್ಕೆ ಸಮ್ಮತಿಸಿದ್ದರು. ಅವಳಿಗೊಂದು ಮೊಬೈಲ್ ಕೊಡಿಸಿದ ವಿನಾಯಕ್ ತಾವೇ ಸ್ವತಃ ತಮ್ಮ ಕಾರಿನಲ್ಲಿ ಅವಳನ್ನು ಡ್ರಾಪ್ ಮಾಡಲು ಬಂದಿದ್ದರು. ಅವಳನ್ನು ಇಳಿಸಿ ಹ್ಯಾಪಿ ಜರ್ನಿ.. ಹುಷಾರಾಗಿ ಹೋಗಿಬನ್ನಿ ಎಂದು ತಿಳಿಸಿ ತಾವು ಹೊರಟು ಹೋದರು.
ಎಲ್ಲರೂ ಬಂದರೂ ರೋಹಿತ್ ಇನ್ನೂ ಬಂದಿರಲಿಲ್ಲ. ಎಲ್ಲರೂ ಅವನಿಗಾಗಿ ಕಾಯುತ್ತಾ ಕುಳಿತಿದ್ದರು. ಎಂಟತ್ತು ಬಾರಿ ಕಾಲ್ ಮಾಡಿ ಮಾಡಿ ಬೇಸತ್ತ ಧ್ರುವ ತಡವಾಗಿ ಬಂದಿದ್ದ ರೊಹಿತ್ ನನ್ನು ಸಿಕ್ಕಾಪಟ್ಟೆ ದಬಾಯಿಸಿದ್ದ.
"ಸೋ ಸಾರಿ ಮಗಾ,, ನನ್ನ ರೂಮೇಟ್ ನಾಣಿ ಐನೂರು ರೂಪಾಯಿ ನೋಟ್ ಕಳೆದುಕೊಂಡು ಬಿಟ್ಟಿದ್ದ.. ಅದ್ಕೆ ಲೇಟಾಯ್ತು ಕಣೋ.." ಎಂದು ಕ್ಷಮೆ ಕೋರಿದ ರೋಹಿತ್.
"ಓಹ್... ನೀನೂ ಅವನ ನೋಟ್ ಹುಡುಕೋಕೆ ಹೆಲ್ಪ್ ಮಾಡ್ತಿದ್ದಾ.. ಅದ್ಕೆ ಲೇಟಾಯ್ತಾ.. ಈ ತರಹ ಸಮಾಜ ಸೇವೆನೂ ಮಾಡ್ತಿಯೆನೋ ನೀನು.." ಆಶ್ಚರ್ಯದಿಂದ ಕೇಳಿದ ಧ್ರುವ.
" ಇಲ್ಲಾ ಮಗಾ.. ನಾನೇ ಆ ನೋಟ್ ಮೇಲೆ ಕೂತಿದ್ದೆ!! ಅವನು ಹುಡುಕಿ ಹುಡುಕಿ ಸಾಕಾಗಿ ಹೊರಗೆ ಹೋದ ನೋಡು, ಆವಾಗ ನಾನ್ ಅದನ್ನ ದೇಪ್ಕೊಂಡು ಬಂದೆ ಹಾಹಾಹಾ ಹೆಂಗೆ..!??" ಎಂದು ಗಹಗಹಿಸಿ ನಕ್ಕ. ಅವನ ಮರ್ಯಾದೆಗೆ ತೇಪೆ ಹಚ್ಚುತ್ತ "ಹಿ ವಾಸ಼್ ಸೋ ಫನ್ನಿ ಅಲ್ವಾ.." ಎಂದು ನಗುತ್ತಲೇ ಅವನ ಬೆನ್ನಿಗೆ ಜೋರಾಗಿ ಗುಮ್ಮಿ, ರೋಹಿತ್ ಗೆ ಮಾತ್ರ ಕಾಣುವಂತೆ ಕಣ್ಸನ್ನೇ ಮಾಡಿ ಬೆರಳಲ್ಲೇ ಎಚ್ಚರಿಕೆ ನೀಡಿದ ಧ್ರುವ.
ಪರಿಧಿ ಬಂದ ನಗುವನ್ನು ತಡೆಹಿಡಿದರೆ, ಶ್ರಾವ್ಯ ಮತ್ತು ದಿವ್ಯ ಮುಖ ಮುಖ ನೋಡಿಕೊಂಡು ಹುಷಾರು ಕಣೇ ದುಡ್ಡು ಎಂದುಕೊಂಡರು. ಅಂತಿಮವಾಗಿ ಎಲ್ಲಾ ಕದನಗಳಿಗೊಂದು ಅಲ್ಪ ವಿರಾಮ ನೀಡಿ ಪ್ರಯಾಣ ಆರಂಭವಾಯಿತು.
ಧ್ರುವ ಕಾರು ಚಾಲನೆ ಮಾಡುತ್ತಿದ್ದರೆ ರೋಹಿತ್ ಅವನ ಪಕ್ಕದಲ್ಲಿ ಕುಳಿತಿದ್ದ. ಹಿಂದಿನ ಸೀಟಿನಲ್ಲಿ ಶ್ರಾವ್ಯ ಪರಿಧಿ ಕಿಟಕಿಯನ್ನು ಆಯ್ದುಕೊಂಡರೆ ದಿವ್ಯ ಅವರಿಬ್ಬರ ಮಧ್ಯೆ ಕುಳಿತು ತಂದ ತಿನಿಸುಗಳನ್ನು ಖಾಲಿ ಮಾಡುವ ಇರಾದೆಯಲ್ಲಿ ಮಗ್ನವಾಗಿದ್ದಳು.
ದಿಗಂತದಲ್ಲಿ ಚಾಚಿದ ಕತ್ತಲು ಸುತ್ತಲೂ ಮುತ್ತಿದ ತಿಳಿ ಬೆಳದಿಂಗಳು ಎಲ್ಲವೂ ಮರೆಯಲಾಗದ ಕಥೆಗಳನ್ನು ಮತ್ತೆ ಮತ್ತೆ ಹೇಳಿ ನೆನಪಿಸಿ ಜೋಗುಳ ಹಾಡಿದಂತಾಗುತ್ತಿತ್ತು ಪರಿಧಿಗೆ. ಕಿಟಕಿಯ ಸಿಹಿ ತಂಗಾಳಿ ಹಿತವಾಗಿ ಕೂದಲನ್ನು ನೇವರಿಸಿ ಹರ್ಷನ ಸ್ಪರ್ಶದ ಅನುಭೂತಿಯನ್ನು ಪ್ರಸ್ತಾಪಿಸಿತು.
ಮೌನದಲ್ಲವಿತಿಹ ಭಾವನೆಗಳ ರೂವಾರಿ ನೀನು..
ಮಾತಿನಲ್ಲಿ ಸುಳಿದಾಡುವ ಧ್ಯಾನವೂ ನೀನು..
ನನ್ನೊಳಗಿನ ಮಾತು ಮೌನಗಳಿಗೆ ಕಾರಣವೂ ನೀನು..
ಮರೆಯಾದರೂ ಮರೆಯಲಾಗದ ಕವಿತೆ ನೀನು..
ಉಸಿರ ಅಣುಕಣವನ್ನು ಆವರಿಸಿರುವ ಧಮನಿ ನೀನು ಹರ್ಷ.. ನಿನ್ನ ನೋಡದೆ, ಮಾತಾಡದೆ, ಜೀವನ ಮುಗಿದು ಹೋಗಬಹುದು ಆದರೆ ನಿನ್ನನ್ನ ಪ್ರೀತಿಸದೆ,, ನೆನಪಿಸಿಕೊಳ್ಳದೆ ಒಂದು ಕ್ಷಣವೂ ನನ್ನಿಂದ ಬದುಕೋಗಾಗಲ್ಲವೋ.. ನೀ ಕೊಟ್ಟ ಆತ್ಮಸ್ಥೈರ್ಯವೇ ಬದುಕನ್ನ ಹೀಗೆ ಹಸಿರಾಗಿ ಮಾಡಿರುವಾಗ, ನನ್ನ ಕೊನೆಯವರೆಗೂ ನೀನು ನನ್ನ ಜೊತೆಗೆ ಇದ್ದಿದ್ದರೆ ಬದುಕು ಇನ್ನೆಷ್ಟು ರಂಗೇರುತ್ತಿತ್ತು.. ಅವಳ ಮನಸ್ಸಿನ ತುಂಬಾ ಹರ್ಷನದೇ ಚಿಲಿಪಿಲಿ ಯಾನ ಸಾಗಿತ್ತು.
"ಕೆಸಾ ಅಜಬ್ ಏ ಸಫರ್ ಹೈ..
ದೆಖೊ ತೋ ಹರ್ ಏಕ್ ಹಿ ಬೇಕಬರ್ ಹೈ..
ಉಸ್ಕೊ ಜಾನಾ ಕಿದರ್ ಹೈ..
ಜೋ ವಕ್ತ್ ಆಯೇ.. ಜಾನೇ ಕ್ಯಾ ದಿಖಾಯೇ.." ಸ್ಟಿರಿಯೊದಲ್ಲಿನ ದಿಲ್ ಚಹ್ತಾ ಹೈ ಹಾಡು ಹೊರಟ ದಾರಿಗೆ ಸಹಚಾರಿಯಾಗಿತ್ತು.
ದಾರಿಯಲ್ಲಿ ಆಡ್ಯಾಸ್ ಹೋಟೆಲ್ ನಲ್ಲಿ ಊಟ ಮಾಡಿ, ಮೊದಲೇ ನಿರ್ಧರಿಸಿದಂತೆ ಕೊಟ್ಟಿಗೆಹಾರದಲ್ಲಿ ರಾತ್ರಿ ವಿರಮಿಸಿ ನಸುಕಿನ ಜಾವ ಚಾರ್ಮಾಡಿ ಘಾಟ್ ಮೂಲಕ ಪ್ರಯಾಣ ಮುಂದುವರೆಸುವುದಾಗಿ ನಿರ್ಧರಿಸಿದ್ದರು. ಮಾತು ಹಾಡು ವಾಕ್ ಸಮರ ಹರಟೆಯೊಂದಿಗೆ ರಸ್ತೆ ಸಾಗುತ್ತಲೇ ಇತ್ತು. ದಿವ್ಯ ತನ್ನ ತಿಂಡಿಯ ಬ್ಯಾಗ್ ಕೈಯಲ್ಲಿ ಹಿಡಿದು ಚಿಪ್ಸ್ ಚಾಕ್ಲೆಟ್ಸ್ ಸ್ವೀಟ್ಸ್ ಕರಿದ ತಿನಿಸು ಒಂದಾದರೊಂದು ತಿನ್ನುತ್ತಲೇ ಇದ್ದಳು. ರೋಹಿತ್ ಕೇಳಿದಾಗ ಒಂದೆರಡು ಚಿಪ್ಸ್ ಕೊಟ್ಟು ಐ ಡೋಂಟ್ ಲೈಕ್ ಶೇರಿಂಗ್.. ಇನ್ನೊಮ್ಮೆ ಕೇಳಬೇಡ ಎಂದು ಬಿಟ್ಟಳು. ರೋಹಿತ್ ಗೆ ಮುಖಭಂಗವಾಗಿ ಬೇಡ ಹೋಗೆ ಎಂದು ಸುಮ್ಮನಾದ. ಸ್ವಲ್ಪ ಸಮಯದ ನಂತರ ತನ್ನ ಬಳಿಯಿದ್ದ ಚಿಂಗಮ್ ತಿನ್ನುತ್ತ ಬೇಕಾ ಎಂದು ಕೇಳಿದ್ದ. ಅವಳು ಹ್ಮೂ ಎಂದು ತೆಗೆದುಕೊಂಡು ಬಾಯಿಗೆ ಹಾಕಿದ್ದಳು. ಒಂದೆರಡು ಬಾರಿ ಜಗಿಯುವಷ್ಟರಲ್ಲಿ ಬಾಯಿ ತೆಗೆಯಲಾರದಂತೆ ತುಟಿಗಳು ಅಂಟಿಕೊಂಡು ಬಿಟ್ಟಿತ್ತು. ಅವಳು ಉಂ ಊಂ ಎಂದು ಏನೋ ಹೇಳಲು ಹರಸಾಹಸ ಪಡುತ್ತಿದ್ದಳು. ಪರಿ ಅವಳ ಬೆನ್ನು ತಟ್ಟುತ್ತ ಕುಡಿಯಲು ನೀರು ಕೊಟ್ಟಳು. ಶ್ರಾವ್ಯ ಗಾಬರಿಯಿಂದ ಏನಾಯ್ತೆ ಎಂದು ಕೇಳುತ್ತಿದ್ದಳು. ಆದರೆ ರೋಹಿತ್ ಚಪ್ಪಾಳೆ ತಟ್ಟಿ ನಗುತ್ತಾ "ಹೆಂಗಿತ್ತು ಚಮಕ್ಕು.. ಯಾರಜೊತೆ ಬೇಕಾದರೂ ಹುಡುಗಾಟ ಮಾಡು ನನ್ನಂತ ಸೈಂಟಿಸ್ಟ್ ಜೊತೆ ಮಾಡಬೇಡ ಗೊತ್ತಾಯ್ತಾ!!" ಎಂದು ವಿಭಿನ್ನ ರೀತಿಯಲ್ಲಿ ಅಭಿನಯಿಸಿದ್ದ. ಅವನ ತಲೆಗೆ ಟಪ್ ಎಂದು ಏಟು ಬಿಟ್ಟ ಧ್ರುವ "ಏನೋ ತಿನ್ನಿಸಿದೆ ಅವಳಿಗೆ" ಎಂದು ಕೇಳಿ ಗಾಬರಿಯಿಂದ ಕಾರು ನಿಲ್ಲಿಸಿದ್ದ.
"ಏನಿಲ್ವೊ ಮಚ್ಚಾ.. ಜೆಲ್ಲಿ ಕ್ಯಾಂಡಿ ಕಣೋ ಅದು.. ನಿಧಾನವಾಗಿ ಕರಗಿ ಹೋಗುತ್ತೆ..ಮಿನಿಮಮ್ ಎರಡು ಗಂಟೆ... ಅಲ್ಲಿಯವರೆಗೂ ಬಾಯಿ ತೆರೆಯಲ್ಲ ಅಷ್ಟೇ.. ಎಂದ ನಕ್ಕು. " ನೀನೋ.. ನಿನ್ನ ಸುಡುಗಾಡು ಎಕ್ಸ್ಪೆರಿಮೆಂಟೋ.. ಗಲ್ಲಿಗೇರಿಸ್ಬೇಕು ನಿನ್ನ.. " ಕಿರುಚಿದ್ದಳು ಶ್ರಾವ್ಯ ಕೋಪಿಸಿಕೊಂಡು.
"ಇರಲಿ ಬಿಡು ಎರಡು ಗಂಟೆನಾದ್ರೂ ಬಾಯಿಗೂ ರೆಸ್ಟ್ ಸಿಕ್ಕಂತಾಯ್ತು.. ಪಾಪ ಎಷ್ಟು ದಣಿದಿತ್ತೋ ಏನೋ!" ನೊಂದು ಹೇಳಿದ ಧ್ರುವ. ಎರಡು ಗಂಟೆಗಳ ಮೌನವ್ರತ ಉಪವಾಸ ವ್ರತವನ್ನು ಅನಿವಾರ್ಯವಾಗಿ ಆಚರಿಸುತ್ತಿದ್ದ ದಿವ್ಯ ಮನಸ್ಸಲ್ಲಿ ರೋಹಿತ್ ಗೆ ಹಿಡಿಶಾಪ ಹಾಕುತ್ತ, ಎಲ್ಲರ ಮಾತುಗಳನ್ನು ಆಲಿಸುತ್ತ ಬೆಪ್ಪಾಗಿ ಕುಳಿತಳು.
ಕೊಟ್ಟಿಗೆಹಾರ ತಲುಪಿದ ನಂತರ ಒಂದು ಕಡೆ ಕ್ಯಾಂಪ್ ಫೈರ್ ಹಾಕಿ ಐದೂ ಜನರು ಸುತ್ತಲೂ ಕುಳಿತು ಏನೇನೋ ಹರಟೆಯನ್ನು ಆರಂಭಿಸಿದ್ದರು. ಹೊರಗೆ ಅಷ್ಟೇನೂ ಚಳಿ ಇರಲಿಲ್ಲ ತಂಪಾದ ಗಾಳಿಯ ಹಿತ ಅನುಭವದ ಸ್ಪರ್ಶ ಆಹ್ಲಾದಕರವಾಗಿತ್ತು. ಗುನುಗುವ ಹಾಡುಗಳು, ಆಸ್ಪತ್ರೆಯ ಹಾಸ್ಯ ಪ್ರಸಂಗಗಳು, ರೋಹಿತ್ ಯಡವಟ್ಟುಗಳು, ಪ್ರಸನ್ನನ ಬಗ್ಗೆ ಒಂದಿಷ್ಟು ಚುಟುಕುಗಳೊಂದಿಗೆ ವಾತಾವರಣದ ತುಂಬ ನಗು ಮಾರ್ಧನಿಸುತ್ತಿತ್ತು. ಪ್ರಸನ್ನ ಇದ್ದಿದ್ದರೆ ಟ್ರಿಪ್ ಇನ್ನೂ ಮಜವಾಗಿರುತ್ತಿತ್ತು ಎಂದು ಎಲ್ಲರೂ ಅವನನ್ನು ಜ್ಞಾಪಿಸಿಕೊಂಡಿದ್ದರು. ನಂತರ ಧ್ರುವ ಹೇಳಿದಂತೆ ತಿಳಿ ಬೆಳದಿಂಗಳ ಮಡಿಲಲ್ಲಿ ಎಲ್ಲರೂ ಸೇರಿ ಒಂದು ವಿಷಯದ ಬಗ್ಗೆ ಚರ್ಚೆ ಶುರು ಮಾಡಿದ್ದರು. ಚರ್ಚೆಯ ವಿಷಯವಾಗಿತ್ತು ಪ್ರೀತಿ!! ಎಲ್ಲರೂ ಪ್ರೀತಿ ಬಗ್ಗೆ ಅವರವರ ಶೈಲಿಯಲ್ಲಿ ಅವರವರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು.
"ಪ್ರೀತಿ ಎಂದರೆ ಸಂಗೀತ.. ಅದೊಂದು ತಪಸ್ಸು, ಅದು ಎಲ್ಲರಿಗೂ ಒಲಿಯುವುದಿಲ್ಲ. ಅದರ ಆಳಕ್ಕೆ ಇಳಿದಂತೆಲ್ಲ ಅದು ಮತ್ತಷ್ಟು ಜಟಿಲವಾಗುತ್ತ ಹೋಗುತ್ತೆ. ಒಟ್ಟಿನಲ್ಲಿ ಅದು ಮನಸ್ಸಿಗೆ ಖುಷಿ ಕೊಡುತ್ತೆ.. ದ್ಯಾಟ್ಸ್ ವೈ ಐ ಲವ್ ಮ್ಯುಸಿಕ್!" ಎಂದಳು ಶ್ರಾವ್ಯ.
"ಮಣ್ಣಂಗಟ್ಟಿ.. ಪ್ರೀತಿ ಅನ್ನೋದು ಚೈನಾ ಸೆಟ್ ಮೊಬೈಲ್ ಇದ್ದಂಗೆ, ನೋ ಗ್ಯಾರೆಂಟಿ, ನೋ ವಾರೆಂಟಿ.. ತುಂಬಾ ಇಷ್ಟ ಪಡುತ್ತಾನೇ ಯಾವಾಗ ಕೈ ಕೊಟ್ಟು ಢಂ ಎಂದು ಹೊಗೆ ಹಾಕಿ ಬಿಡುತ್ತೋ ಗೊತ್ತು ಆಗಲ್ಲ.. ಇದೊಂದು ಟೈಮ್ ವೆಸ್ಟಿಂಗ್ ಗೇಮ್" ರೋಹಿತ್ ಶ್ರಾವ್ಯಳನ್ನು ವ್ಯಂಗ್ಯ ಮಾಡಿದ್ದ. ದಿವ್ಯ ಏನೋ ಹೇಳುವ ಮೊದಲೇ "ಅವಳ ಪ್ರಕಾರ ಪ್ರೀತಿ ಎಂದ್ರೆ ಪಾನಿಪುರಿ, ಗೋಭಿ ಮಂಚೂರಿ ಇತ್ಯಾದಿ ಇತ್ಯಾದಿ" ಎಂದು ಎಲ್ಲರೂ ಹಾಸ್ಯ ಮಾಡಿ ಅವಳ ಮಾತಿಗೆ ಇತಿಶ್ರೀ ಹೇಳಿಬಿಟ್ಟರು. ಕೊನೆಗೆ ಪರಿಧಿಯನ್ನು ಕೇಳಿದ್ದ ಧ್ರುವ "ನಿಮ್ಮ ಪ್ರಕಾರ ಪ್ರೀತಿ ಅಂದರೆ..??"
ಪ್ರೀತಿ ಬಗ್ಗೆ ಒಬ್ಬೊಬ್ಬರದು ಒಂದೊಂದು ರೀತಿಯ ಅಭಿಪ್ರಾಯ ಇರಬಹುದು. ಪ್ರೀತಿನ ನಂಬದಿರೋರು ಇರಬಹುದು ರೋಹಿತ್ ತರಾ.. ಆದರೆ ಪ್ರೀತಿ ಇಲ್ಲದೆ ಬದುಕಿಲ್ಲ,, ಜಗತ್ತಿಲ್ಲ...
ಜಿ.ಎಸ್.ಎಸ್ ಸರ್ ಬರೆದಿದ್ದಾರಲ್ಲ-
ಪ್ರೀತಿ ಇಲ್ಲದ ಮೇಲೆ -
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?
ಪ್ರೀತಿ ಇಲ್ಲದ ಮೇಲೆ -
ಮಾತಿಗೆ ಮಾತು ಕೂಡೀತು ಹೇಗೆ?
ಅರ್ಥ ಹುಟ್ಟೀತು ಹೇಗೆ?
ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ? ಅಂತ..
ನನ್ನ ಪ್ರಕಾರ ಪ್ರೀತಿ ಅಂದರೆ ಪ್ರಕೃತಿ ಹಾಗೆ..ಅದೂ ಪ್ರಕೃತಿಯಷ್ಟೇ ಸಹಜ ಸುಂದರ ಸುಮಧುರ ಬಾಂಧವ್ಯ. ಅದು ಸಮಯ ಘಳಿಗೆ ಘಟನೆ ಕಾರಣ ಪರಿಣಾಮ ಯಾವುದೂ ಗೊತ್ತಾಗದಂತೆ ಯಾವುದೋ ಒಂದು ಕ್ಷಣ ಮನಸ್ಸನ್ನು ಆವರಿಸಿಕೊಂಡು ಬಿಡುತ್ತೆ. ಬದುಕಿಗೆ ಹೊಸ ಮೆರಗು ತುಂಬುತ್ತೆ. ಬದುಕನ್ನು ಸುಂದರವಾಗಿ ಮಾಡುತ್ತೆ. ಪ್ರಕೃತಿಯಂತೆ ಆಗಾಗ ಮುನಿಸಿಕೊಳ್ಳುತ್ತೆ ಅಳುತ್ತೆ ಅಳಿಸುತ್ತೆ ಘರ್ಜಿಸುತ್ತೆ, ನಗಿಸುತ್ತೆ, ಕತ್ತಲಲ್ಲೂ ಕೈ ಬಿಡದೆ ಭರವಸೆ ನೀಡುತ್ತೆ. ಪ್ರೀತಿಗೆ ಹುಟ್ಟುವುದು ಮಾತ್ರ ಗೊತ್ತು ಅದು ಅಳಿಯುವುದಿಲ್ಲ ಮತ್ತಷ್ಟು ಹೆಚ್ಚಾಗಿ ಬೆಳೆಯಬಹುದು ನೆನಪಾಗಿ ಉಳಿಯಬಹುದು, ಯಾವುದೋ ಕೆಟ್ಟ ಘಳಿಗೆ, ಕೋಪದಲ್ಲಿ ಮನಸಲ್ಲೇ ಹೆಪ್ಪುಗಟ್ಟಬಹುದು.. ಆದರೆ ಮುಂದೊಮ್ಮೆ ಕರಗಿ ಪ್ರೀತಿ ಮಳೆಯಾಗಿ ಸುರಿಯಲೇಬೇಕು.. ಕೊನೆಯಿಲ್ಲದ ಯಾನವದು.. ವಸಂತ ಋತುವಿನಲ್ಲಿ ಹಾಡುವ ಮಾಮರದ ಕೋಗಿಲೆಗೂ ಗೊತ್ತು ಪ್ರೀತಿಯ ಸೊಗಡು..
ಪ್ರೀತಿ ಆಕಾಶದ ಹಾಗೆ, ನಾವು ಅದರ ಹೊರತಾಗಿಲ್ಲ ಆದರೆ ಅದರ ಪರಿವೂ ನಮಗಿರಲ್ಲ, ಸೋಮಾರಿಯಾಗಿ ಮುಸುಕು ಹೊದ್ದು ಮಲಗಿದ ಮುಂಜಾವಿನಲ್ಲಿ ಎಳೆ ಬಿಸಿಲ ಕಿರಣಗಳ ಚುಂಬಿಸಿ ಸುಪ್ರಭಾತ ಹೇಳಿ ಎಬ್ಬಿಸುವದು ಪ್ರೀತಿ, ಮಳೆ ಹನಿಗಳ ಮೂಲಕ ಭೂಮಿಯ ಆವರಿಸಿ ತನ್ನ ಒಲವನ್ನು ಸುರಿಸುವುದು ಪ್ರೀತಿ.. ಇರುಳ ಬೆಳದಿಂಗಳ ನಡುವಲ್ಲಿ ನೀರವತೆಯಿಂದ ಕಂಗೊಳಿಸುತ್ತ ಸಮುದ್ರದ ಅಲೆಗಳು ಉಕ್ಕುವಂತೆ ಮಾಡುವುದು ಪ್ರೀತಿ..
ನಿಜವಾದ ಪ್ರೀತಿ ಕೇವಲ ಕಣ್ಣಳತೆಯಲ್ಲಿ ಕಾಣಿಸಿ ಕಣ್ಮರೆಯಾಗುವದಿಲ್ಲ. ಸಮಯದೊಂದಿಗೆ ಬದಲಾಗುವುದಿಲ್ಲ. ಸಮಯದೊಂದಿಗೆ ಸಮಾಜ, ರೀತಿ ನೀತಿ, ಪರಿಸ್ಥಿತಿ ನೀವು ನಾನು ಬದಲಾಗಬಹುದು ಆದರೆ ಪ್ರೀತಿ ಶಾಶ್ವತ. ಪ್ರಕೃತಿ ಪ್ರತಿದಿನ ಹೊಸ ಹೊಸ ರೂಪ ಪಡೆಯುವಂತೆ ಪ್ರೀತಿಯ ಅನಾವರಣ ವಿಭಿನ್ನವಾಗಿ ಇರಬಹುದು ಆದರೆ ಪ್ರೀತಿ ಯಾವತ್ತೂ ಬದಲಾಗುವುದಿಲ್ಲ. ಭಾವನೆಗಳು ಚಂಚಲವಾಗಬಹುದು ಆದರೆ ನಿಜವಾದ ಪ್ರೀತಿಗೆ ಭಾವನೆಗಳನ್ನು ನಿಯಂತ್ರಿಸುವುದು ಗೊತ್ತು. ಅದು ಅಚಲ!
ಪ್ರೀತಿ ಸಮುದ್ರದ ಹಾಗೆ, ಅದರ ಆಳ ಅಗಲ, ಅದರಲ್ಲಿ ಮುಳುಗಿದವರಿಗೂ ಬಹುಶಃ ತಿಳಿದಿರಲ್ಲ. ಆಗಸದಿಂದ ಜಾರಿ ಬೀಳುವ ಹನಿಯೊಂದು ಕಡಲ ಎದೆಯಾಳದಲ್ಲಿ ಜಾರಿ ಚಿಪ್ಪಿನಲ್ಲಿ ಬಚ್ಚಿಕೊಳ್ಳುವಂತ ಪ್ರೀತಿ ಸ್ವಾತಿಮುತ್ತು.. ಪ್ರೀತಿಯ ಕಣ್ಣಿಗೆ ಜಗದ ನೀತಿ ನಿಯಮಗಳು ಜಾತಿ ಅಂತಸ್ತು ರೂಪ, ಲಾವಣ್ಯ ಯಾವುದೂ ಕಾಣುವುದಿಲ್ಲ. ಎಲ್ಲವನ್ನೂ ಮೀರಿ ನಿಲ್ಲುವ ಶಕ್ತಿ ಪ್ರೀತಿ. ಹಾಗಂತ ಪ್ರೀತಿ ಕುರುಡಲ್ಲ. ಪ್ರೀತಿಗೆ ಕಣ್ಣಿನ ಅವಶ್ಯಕತೆ ಇರುವುದಿಲ್ಲ. ಅದು ಮನಸ್ಸಿನಲ್ಲಿ ಗರ್ಭಧರಿಸುವಂತಹದ್ದು. ಆತ್ಮಗಳೊಂದಿಗೆ ಬೆಸೆದಂತಹುದು.. ಪ್ರೀತಿ ಬಗ್ಗೆ ಒಂದೆರಡು ಮಾತಿನಲ್ಲಿ ಹೇಳಲಾಗದು ಅದು ಮಾತಿಗೆ ನಿಲುಕದ ಪದಗಳಲ್ಲಿ ವರ್ಣಿಸಲಾಗದ ಮಾಯೆ..
ಕ್ಷಣದಲ್ಲಿ ಹುಟ್ಟಿ ಬಿಡುತ್ತೆ.. ಹ್ಮ್..ಕಾರಣಗಳು ಬೇಕಿಲ್ಲ ಷರತ್ತುಗಳು ಅನ್ವಯಿಸುವುದಿಲ್ಲ. ಯಾವ ಅಪೇಕ್ಷೆಗಳು ಇರುವುದಿಲ್ಲ. ಪ್ರೀತಿಯ ಒಂದೇ ಒಂದು ಧ್ಯೇಯ ಏನು ಗೊತ್ತಾ ಧ್ರುವ್... ತಾನು ಪ್ರೀತಿಸುವ ವ್ಯಕ್ತಿಯ ಸಂತೋಷ ಮಾತ್ರ.. ಅದಕ್ಕೋಸ್ಕರ ಏನು ಬೇಕಾದರೂ ಮಾಡಲು ಸಿದ್ದವಾಗಿರುತ್ತೆ ಮನಸ್ಸು. ಎಲ್ಲಿಯವರೆಗೆ ಎಂದರೆ,, ಕೊನೆಗೆ ತಾನು ಪ್ರೀತಿಸುವ ಮನಸ್ಸಿನ ಸಂತೋಷಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಹಿಂಜರಿಯುವುದಿಲ್ಲ. ಪ್ರೀತಿ ಬದಲಾಗಿ ಪ್ರೀತಿಯನ್ನು ಅಪೇಕ್ಷಿಸುವದು ವ್ಯವಹಾರ ಆಗಿಬಿಡುತ್ತಲ್ವಾ..!!
ಪ್ರೀತಿ ಇಲ್ಲದೆ ಜಗತ್ತು ಶೂನ್ಯ ರೋಹಿತ್.. ಎಲ್ಲವೂ ಇದ್ದು ಏನೂ ಇಲ್ಲದ ಖಾಲಿತನ..!! ನೀವು ಹೇಳ್ತಾ ಇದ್ರಿ.. ಪ್ರೀತಿ ನೋವು ಅಂತ. ನನ್ನ ಪ್ರಕಾರ ಅದು ಸುಳ್ಳು!! ಪ್ರೀತಿ ಸಂತೋಷವನ್ನು ಹೊರತು ಬೇರೆನೂ ಕೊಡಲ್ಲ! ಅದು ದೂರವಾದರೂ ನೆನಪುಗಳಲ್ಲೂ ತನ್ನ ಸಿಹಿಯನ್ನು ಉಳಿಸಿ ಹೋಗುತ್ತೆ. ನೋವು ಕೊಡೋದು ಪ್ರೀತಿಯಲ್ಲ..ಅದರ ಪರಿಣಾಮ!! ಪ್ರೀತಿಯ ಪರಿಣಾಮ ಕೆಲವೊಮ್ಮೆ ಭಯಂಕರವಾಗಿರುತ್ತೆ.ಅದು ಬದುಕನ್ನ ಅಲ್ಲೋಲ ಕಲ್ಲೋಲ ಮಾಡಿಬಿಡುತ್ತೆ.. ಹೇಳುತ್ತಲೇ ಅವಳ ಧ್ವನಿ ಗದ್ಘದಿತವಾಯಿತು.
ಅಷ್ಟೂ ಹೊತ್ತು ಅವಳ ಮಾತುಗಳನ್ನು ಕೇಳುತ್ತಾ ತಲ್ಲೀನರಾಗಿ ಕಳೆದು ಹೋಗಿದ್ದ ನಾಲ್ವರೂ ಆ ಗಧ್ಗಧಿತ ಕಂಠದ ಸ್ವರಕ್ಕೆ ಎಚ್ಚೆತ್ತಿದ್ದರು. ಧ್ರುವನಿಗೆ ತಾನು ಆ ವಿಷಯ ಕೊಟ್ಟು ನೋವು ಕೆದೆಕಿದೆನಾ ಎಂಬ ಭಾವ ಕಾಡಿತು. ಶ್ರಾವ್ಯ ಅವಳ ಕೈ ತನ್ನ ಕೈಯಲ್ಲಿ ಹಿಡಿದು ರಿಯಲಿ ನೈಸ್ ಪರಿ.. ಲವ್ ಇಸ್ ಸೋ ಬ್ಯುಟಿಫುಲ್ ಅಲ್ವಾ..ಎಂದಿದ್ದಳು.
"ಪರಿ... ನಾವೆಲ್ಲರೂ ಇದ್ದೂ ಸಹ ನೀವು ನಿಮ್ಮ ಪ್ರೀತಿನಾ ಮರೆಯೋಕೆ ಆಗದೆ ಒದ್ದಾಡ್ತಿದ್ದೀರಾ.. ಪಾಪ, ಚೈನಿಜ್ ಜಪಾನೀಸ್ ಜನ ಹೇಗೆ ಒದ್ದಾಡಬೇಡ.." ಎಂದ ರೋಹಿತ್. ಅವನ ಮಾತು ಯಾರಿಗೂ ಅರ್ಥವಾಗಲಿಲ್ಲ. "ಲೋ.. ಬೆಪ್ಪ ನನ್ಮಗನೇ.. ಚೈನೀಸ್ ಜಪಾನೀಸ್ ಯಾಕೆ ಬಂದ್ರು ಈಗ.." ಕೇಳಿದ ಧ್ರುವ
"ಅಲ್ವಾ ಮಚ್ಚಾ.. ನಮ್ಮ ದೇಶದಲ್ಲಿ ಎಲ್ಲರ ಕಲರ್ರು ಮುಖಗಳಲ್ಲಿ ವೆರೈಟಿನಾದ್ರೂ ಇರುತ್ತೆ, ಹೇಗೋ.. ಪ್ರೀತಿನಾ ಮರಿಬಹುದು. ಆದರೆ ಚೀನೀ ಜಪಾನೀಸ್ ಮುಖಗಳು ಎಲ್ಲಾ ಸೇಮ್ ಟು ಸೇಮ್!! ಅವರಿಗೆ ಎಲ್ಲರಲ್ಲೂ ತಮ್ಮ ಲವರ್ಗಳೇ ಕಾಣಿಸ್ತಿದ್ರೆ ಮರೆಯೋಕೆ ಎಷ್ಟು ಕಷ್ಟ ಆಗ್ಬೇಡ!! ಎಷ್ಟು ಬೇಜಾರಾಗ್ತಿರಲ್ಲ ಛೇ.." ಎಂದ ರೋಹಿತ್ ಮಾತಿಗೆ ಎಲ್ಲರೂ ಗೊಳ್ ಎಂದು ನಕ್ಕರು. ಧ್ರುವ ಅವನ ಬೆನ್ನು ತಟ್ಟಿ ಭೇಷ್ ಮಗಾ.. ಏಂಥಾ ಅದ್ಭುತವಾದ ಯೋಚನೆ.. ನಾನಂತೂ ಮುಂದಿನ ಜನ್ಮ ಕೂಡ ಭಾರತದಲ್ಲಿ ಹುಟ್ತಿನೋ.. ಎಂದು ಬಿದ್ದು ಬಿದ್ದು ನಕ್ಕ. ಎಲ್ಲರನ್ನೂ ಕೇಳಿದೆ ನೀನೇ ಏನೂ ಹೇಳ್ಲಿಲ್ವಲ್ಲ ಪ್ರೀತಿ ಬಗ್ಗೆ.. ಧ್ರುವನನ್ನು ಪ್ರಶ್ನಿಸಿದಳು ಶ್ರಾವ್ಯ. "ನೋಡಮ್ಮ.. ಪ್ರೀತಿ ಅನ್ನೋದು ಒಂದು ಕಲೆ..!! ಆದರೆ ನಾನು ಅಪ್ಪಟ ವಿಜ್ಞಾನದ ವಿಧ್ಯಾರ್ಥಿ!! ಸೊ.. ಅದಕ್ಕೂ ನನಗೂ ಸಂಬಂಧವಿಲ್ಲ.." ಎಂದು ಅಣಗಿಸಿ ಮಾತು ಹಾರಿಸಿದ ಧ್ರುವ. ನಾವು ಸೈನ್ಸ್ ಸ್ಟೂಡೆಂಟ್ಸ್ ಮಾ.... ಹಿಂದೆಯೇ ಒಗ್ಗಟ್ಟಿನ ಕೂಗು ಕೇಳಿಸಿತ್ತು. ಧ್ರುವ ನಕ್ಕು ಕೈಮುಗಿದು "ಸಾಕ್ ಸಾಕು ಮಲಗಿ! ನಾಲ್ಕು ಗಂಟೆ ಮಾತ್ರ ನಿದ್ರೆ, ಮುಂದೆ ಚಾರ್ಮಾಡಿ ಘಾಟ್ ನೋಡ್ತಾ ಹೋಗೋಣ. ಗುಡ್ ನೈಟ್ ಬಡಿಜ಼್.. " ಎಂದಿದ್ದ.
ಆ ರಾತ್ರಿ ಹುಡುಗಿಯರು ಕಾರಿನಲ್ಲಿ ಮಲಗಿದರೆ, ಹುಡುಗರಿಬ್ಬರೂ ಹೊರಗೆ ಶೆಡ್ ನಲ್ಲಿ ಮಲಗಿದರು. ನಸುಕಿನ ಆರು ಗಂಟೆಗೆ ಹೋಟೆಲೊಂದರಲ್ಲಿ ನೀರುದೋಸೆ ಕಾಫೀ ಹೀರಿಕೊಂಡು ಮತ್ತೆ ಪ್ರಯಾಣ ಮುಂದುವರೆಸಿದರು. ಅಂಕು ಡೊಂಕಾದ ಕಡಿದಾದ ಚಾರ್ಮಾಡಿ ಘಾಟ್ ನ ಹಚ್ಚಹಸಿರ ನೋಟ ಮನೋಹರವಾಗಿತ್ತು. ಸೆಲ್ಫೀ ವಿಡಿಯೋ ಎನ್ನುತ್ತಾ ವಿನೋದದೊಂದಿಗೆ ಹನ್ನೊಂದು ಗಂಟೆ ಹೊತ್ತಿಗೆ ಮಂಗಳೂರು ತಲುಪಿದ್ದರು. ಅಲ್ಲಿ ಹೋಟೆಲ್ ನಲ್ಲಿ ಎರಡು ರೂಮ್ ತೆಗೆದುಕೊಂಡು ಸ್ನಾನ ಇತ್ಯಾದಿ ಕಾರ್ಯಕ್ರಮ ಮುಗಿಸಿ ಸಿದ್ದರಾಗಿ ನಗರ ವೀಕ್ಷಣೆಗೆ ನಡೆದಿದ್ದರು.
ಮುಂದುವರೆಯುವುದು..
⚛⚛⚛⚛⚛
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ