ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-15


ಮಂಗಳೂರಿಗೆ ತಲುಪಿದ ನಂತರದಲ್ಲಿ ಸುತ್ತಾಟ ಆರಂಭಿಸಿದ ಧ್ರುವನ ಕಾರು ಒಂದೊಂದು ಪ್ರೇಕ್ಷಣೀಯ ಸ್ಥಳವನ್ನು ಕಣ್ತುಂಬಿಕೊಳ್ಳುತ್ತ ದಾರಿ ಹೆದ್ದಾರಿಗಳನ್ನು ಸವಿಯುತ್ತ ಸಾಗಿತ್ತು.ಅವರು ಮೊದಲು ತಣ್ಣೀರಬಾವಿ ಬೀಚ್ ಗೆ ಭೇಟಿ ನೀಡಿದರು.ಅಲ್ಲಿಯ ಪ್ರಕೃತಿ ಸೌಂದರ್ಯವನ್ನು ಮನಸಾರೆ ಆನಂದಿಸುತ್ತ ಸುಂದರ ಕ್ಷಣಗಳನ್ನು ಕ್ಯಾಮೆರಾ ಕಣ್ಣಲ್ಲಿ ಸಹ ಸೆರೆ ಹಿಡಿದಿದ್ದರು. ಬೀಚ್ ಗೆ ಸನಿಹದ ರೆಸ್ಟೋರೆಂಟ್ ಒಂದರಲ್ಲಿ ಭರ್ಜರಿ ಕಡಲ ತೀರದ ಶೈಲಿಯ ಭೋಜನವನ್ನು ಮುಗಿಸಿ ಪಾರ್ಕ್ ಮ್ಯುಸಿಯಮ್ ನೋಡುತ್ತಾ ಪರಿಧಿಯ ಒತ್ತಡದ ಮೇರೆಗೆ ಕಾಟಾಚಾರಕ್ಕೆ ಒಂದೆರಡು ದೇವಸ್ಥಾನಗಳಿಗೂ ಪಾದಾರ್ಪಣೆ ಮಾಡಿ ಬಂದಿದ್ದರು. ಅವರ ನಿಗದಿತ ಯೋಜನೆಯ ಪ್ರಕಾರ ಸುತ್ತಾಟ ಎಲ್ಲ ಮುಗಿಸಿ ಆ ಸಂಜೆ ಎಲ್ಲರೂ ಐದು ಗಂಟೆ ಹೊತ್ತಿಗೆ ಪನಂಬೂರ್ ಬೀಚ್ ಗೆ ಬಂದಿದ್ದರು.

ಬೀಚ್ ಸಮೀಪದ ರಸ್ತೆಯ ಎರಡು ಪಕ್ಕಗಳ ತೆಂಗಿನ ಮರಗಳು ಸಮುದ್ರದಿಂದ ಬೀಸಿ ಬರುವ ತಂಗಾಳಿಗೆ ಮೈಯೊಡ್ಡಿ ನರ್ತಿಸುತ್ತಿದ್ದರೆ,, ಸಮುದ್ರ ತೀರದಲ್ಲಿ ಸೂರ್ಯಾಸ್ತವನ್ನ ಆನಂದಿಸುವುದು ಒಂದು ರೀತಿಯ ಪುಳಕವೇ ಸರಿ. ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ಕೆಂಪಾದ ಕಿರಣಗಳಿಂದ ಸುತ್ತಲೂ ಪ್ರದೇಶವೂ ಕೂಡ ಕೆಂಪಾದಂತೆ ಭಾವಿಸುತ್ತದೆ.ಕಡಲ ತೀರದಲ್ಲಿ ಮುಂಜಾನೆ ಅಥವಾ ಸಂಜೆ ತೀರದ ಉದ್ದಕ್ಕೂ ಓಡಾಡಲು ಪ್ರಶಕ್ತವಾದ ಸಮಯವೆಂದು ನಿರ್ಧರಿಸಿಕೊಂಡೇ ಅವರು  ಅಲ್ಲಿಗೆ ಬಂದಿದ್ದರು. ವಾರಾಂತ್ಯ ಆದ್ದರಿಂದ ಪ್ರತಿದಿನಕ್ಕಿಂತಲೂ ಆ ದಿನ ಜನಸಂದಣಿ ಅಧಿಕ ದಟ್ಟವಾಗಿತ್ತು.

ದೂರದ ಕಡಲ ತೀರದಲ್ಲಿ ಕೆಲವು ಮಕ್ಕಳನ್ನು ಸೇರಿಸಿಕೊಂಡು ನೆಟ್ ಕಟ್ಟಿಕೊಂಡು ವಾಲಿಬಾಲ್ ಆಡುತ್ತಿದ್ದರು ಧ್ರುವ ಮತ್ತು ರೋಹಿತ್. ಟೀ ಶರ್ಟ್ ಮತ್ತು ಬರ್ಮುಡಾ ಶಾರ್ಟ್ಸ್ ಧರಿಸಿದ್ದ ಇಬ್ಬರೂ ಮಕ್ಕಳೊಂದಿಗೆ ಮಕ್ಕಳಾಗಿ ಹೋಗಿದ್ದರು.

ಇತ್ತ ಕಡಲ ದಡದ ಮರಳಿನ ರಾಶಿಯ ಮೇಲೆ ನಡೆದು ಸಮುದ್ರದ ಅಲೆಗಳಲ್ಲಿ ಕಾಲೊಡ್ಡಿ ನಿಂತುಕೊಂಡು ಒಬ್ಬರಿಗೊಬ್ಬರು ನೀರೆರೆಚುತ್ತ ಆಟವಾಡುತ್ತಿದ್ದರು ಪರಿಧಿ ಶ್ರಾವ್ಯ ಮತ್ತು ದಿವ್ಯ. "ಪರಿ...ನೀವು ಈ ಮೊದಲು ಬಂದಿದ್ದಿರಾ ಮಂಗಳೂರಿಗೆ..?" ಅಲೆಗಳೊಂದಿಗೆ ಜೂಟಾಟ ಆಡುತ್ತ ಕೇಳಿದಳು ಶ್ರಾವ್ಯ.

"ಹ್ಮಾ.... ಎರಡು ಮೂರು ವರ್ಷಗಳ ಹಿಂದೆ ನನ್ನ ಫ್ರೆಂಡ್ಸ್ ಮಾನ್ವಿ ಮತ್ತೆ ಆಲಾಪ್ ಜೊತೆಗೆ ಬಂದಿದ್ದೆ. ಮತ್ತೆ ಹರ್ಷ ಹರಿಣಿ ಜೊತೆಗೂ ಒಮ್ಮೆ ಬಂದಿದ್ದೆ. ಆಗ್ಲೂ ಸಿಕ್ಕಾಪಟ್ಟೇ ಎಂಜಾಯ್ ಮಾಡಿದ್ವಿ ನಾವು.." ಎಂದು ಹಿಂದಿನ ಕಥೆಗಳನ್ನು ಸ್ಮರಿಸುತ್ತ ಸಮುದ್ರದ ತೀರದಲ್ಲಿ ಸಿಂಪಿಗಳನ್ನು ಆಯ್ದು ಅಂಗೈಯಲ್ಲಿ ಭದ್ರವಾಗಿ ಹಿಡಿದಿದ್ದಳು ಪರಿಧಿ. ಕಡಲಲೆಗಳ ಜೊತೆಗೆ ಕೆಲವು ಸಮಯ ಆಟವಾಡಿ ಬಂದ  ಶ್ರಾವ್ಯ ದಿವ್ಯ,  ಪರಿಧಿಯನ್ನು ಧ್ರುವ ರೋಹಿತ್ ರ ವಾಲಿಬಾಲ್ ಆಟವನ್ನು ನೋಡಲು ಕೂರಿಸಿ ತಾವಿಬ್ಬರೂ ಐಸ್ ಕ್ರೀಮ್ ಮತ್ತು ಕೂಲ್ಡ್ರಿಂಕ್ಸ್ ತರಲು ಹೊರಟು ಹೋದರು. ಪರಿಧಿ ವಾಲಿಬಾಲ್ ಆಟವನ್ನು, ದೂರದ ಅಲೆಗಳನ್ನು,, ಕಡಲಲ್ಲಿ ನಿಧಾನವಾಗಿ ಅಸ್ತಂಗತನಾಗುತ್ತಿದ್ದ ನೇಸರನನ್ನೇ ಅವಲೋಕಿಸುತ್ತ ಕಲ್ಲು ಬೆಂಚಿಗೆ ಒರಗಿ ಕುಳಿತಿದ್ದಳು. ಆಯ್ದು ತಂದ ಕಡಲ ಚಿಪ್ಪುಗಳು ಕೈಯಲ್ಲಿ ಆಟವಾಡುತ್ತಿದ್ದವು.

ಕೊನೆಯೇ ಇಲ್ಲದ ಕಡಲ ತೀರವು ನಿನ್ನೆಯ ದಿನಗಳನ್ನು ಕೈ ಬೀಸಿ ಕರೆದಂತಾಯಿತು. "ಹೇ ಶರಧಿ‌... ಎಷ್ಟು ಆಳವಾದ ಮನಸ್ಸು ನಿನ್ನದು... ಅದರಲ್ಲಿ ಯಾವುದೋ ಒಂದು ಕೋಣೆಯಲ್ಲಿ ನನ್ನ ಹರ್ಷನ ಗುರುತುಗಳು ಉಳಿದು ಹೋಗಿವೆ ನೋಡು... ಹರ್ಷನೊಂದಿಗೆ ಕೈ ಹಿಡಿದು ನಡೆದಾಡಿದ ಕಡಲ ತೀರದ ಹೆಜ್ಜೆಗಳನ್ನು ಇದೇ ಅಲೆಗಳು ತಮ್ಮೊಂದಿಗೆ ಸೆಳೆದುಕೊಂಡು ನಿನ್ನೊಳಗೆ ಬಚ್ಚಿಟ್ಟುಕೊಂಡು ಹೋಗಿದ್ದವಲ್ಲವೇ... ನನ್ನ ಹರ್ಷನ ನಿಶಾನೆಗಳನ್ನು, ಅವನ ಹೆಜ್ಜೆ ಗುರುತುಗಳನ್ನು ಮರಳಿ ಕೇಳಿದರೆ ಕೊಡುತ್ತಿಯಾ ಈಗ...."  ಅವಳ ಹುಚ್ಚು ಯೋಚನೆಗೆ ಅವಳ ಮುಖದಲ್ಲಿ ವಿಷಾದದ ನಗು ಹನಿಯಾಗಿ ಮಾರ್ಪಟ್ಟಿತು.

ಅದೆಷ್ಟೋ ಸಮಯದಿಂದ ಅವಳನ್ನೇ ಗಮನಿಸುತ್ತಿದ್ದ ರೋಹಿತ್ ಧ್ರುವನನ್ನು ಹತ್ತಿರಕ್ಕೆ ಕರೆದು "ನೋಡಲ್ಲಿ.. ಪರಿ ಹೇಗೆ ಮುಖ ಸಪ್ಪಗೆ ಮಾಡಿಕೊಂಡು ಕೂತಿದ್ದಾರೆ.." ಎಂದ.

"ಹ್ಮ್...ಎಲ್ಲರಿಗೂ ಅವರವರ ನೋವು ಅವರಿಗೆ ದೊಡ್ಡದು ಕಣೋ.. ಏನ್ ಮಾಡೋಕಾಗುತ್ತೆ.. ತುಂಬಾ ಪ್ರೀತಿಸ್ತಿದ್ದ ವ್ಯಕ್ತಿಯನ್ನ ಕಳೆದುಕೊಂಡರೆ ನೋವಾಗೋದು ಸಹಜ.." ಧ್ರುವ ಬೇಜಾರಿನಿಂದ ಉತ್ತರಿಸಿದ.

"ಒಂದೇ ನಿಮಿಷದಲ್ಲಿ ಅವರನ್ನು ನಗಿಸ್ತಿನಿ ನೋಡ್ತಾ ಇರು.." ಚಿಟಿಕೆ ಬಾರಿಸಿ ಹೇಳಿದ ರೋಹಿತ್.

"ನೀನು ಏನೇ ಸರ್ಕಸ್ ಮಾಡಿದ್ರೂ... ಎಷ್ಟೇ ಕರಾಬ್ ಜೋಕ್ ಹೇಳಿದ್ರು‌.. ಅವರು ಒಂದು ಚಿಕ್ಕ ಸ್ಮೈಲ್ ಕೊಟ್ಟು ಸುಮ್ನಾಗ್ತಾರೆ. ಅವರು ಮನಸ್ಪೂರ್ತಿ ನಕ್ಕಿದ್ದನ್ನ ನಾನಂತೂ ನೋಡಿಲ್ಲ"

"ಇವತ್ತು ನೋಡ್ತಿಯಾ...?? ನೋಡಲೇ ಬೇಕು.. ಎರಡೇ ನಿಮಿಷದಲ್ಲಿ ಅವರನ್ನ ಹೇಗೆ ನಗಿಸ್ತಿನಿ ನೋಡ್ತಿರು." ಎಂದು ಕಾರಿನತ್ತ ಹೋಗಿ ಬಾಟಲ್ ಎತ್ತಿಕೊಂಡು ಗಳಗಳನೆ ನೀರು ಕುಡಿದು ಪರಿಧಿ ಪಕ್ಕದಲ್ಲಿ ಹೋಗಿ ಕುಳಿತಿದ್ದ ರೋಹಿತ್ ಪರಿಧಿಯೊಟ್ಟಿಗೆ ಮೆಲ್ಲಗೆ ಮಾತಿಗಿಳಿದಿದ್ದ.

ದೂರದಿಂದ ಅವರಿಬ್ಬರನ್ನು ಗಮನಿಸುತ್ತ ವಾಲಿಬಾಲ್ ಆಡುವದರಲ್ಲಿ ಕಳೆದು ಹೋಗಿದ್ದ ಧ್ರುವ. ಕೆಲವೇ ನಿಮಿಷಗಳಲ್ಲಿ ರೋಹಿತ್ ಜೊತೆಗೆ ಮಾತಾಡುತ್ತಿದ್ದ ಪರಿಧಿ ನಿಧಾನವಾಗಿ ನಗಲು ಶುರು ಮಾಡಿದ್ದಳು. 'ಈ ಇಡಿಯಟ್ ಏನೋ ಒಂದು ತರಲೆ ತಮಾಷೆ ಮಾಡಿ ಎಂತವರನ್ನು ನಗಿಸಿ ದುಃಖ ಮರೆಸಿಬಿಡ್ತಾನೆ..' ಧ್ರುವ ಗೆ ರೋಹಿತ್ ನ ತರಲೆ ಕೆಲಸದ ಬಗ್ಗೆ ಮೊದಲ ಬಾರಿಗೆ ಹೆಮ್ಮೆಯಾಯಿತು. ಅವರತ್ತ ನೋಡುತ್ತಲೇ ಎದುರಿನ ಹುಡುಗನಿಗೆ ಬಾಲ್ ಪಾಸ್ ಮಾಡುತ್ತಿದ್ದ ಧ್ರುವ. ಪರಿಧಿ ಇನ್ನೂ ಹಾಗೆಯೇ ನಗುತ್ತಲೇ ಇದ್ದಳು. ಹೊಟ್ಟೆ ಹಿಡಿದುಕೊಂಡು, ಬೆಂಚ್ ಗೆ ಕೈ ಬಾರಿಸಿ ಬಾರಿಸಿ ನಗುತ್ತಿದ್ದಳು. ಅವಳ ನಗು ಬಿಟ್ಟು ಬಿಡದೇ ಪ್ರವಹಿಸುತ್ತಲೇ ಇತ್ತು. ಇದನ್ನು ನೋಡಿದ ಧ್ರುವನ ಮನಸ್ಸಲ್ಲಿ ಸಂಶಯದ ಹೊಗೆಯಾಡಿತು. 'ಈ ಇಡಿಯಟ್ ಏನ್ ಹೇಳಿದಾ ಅಂತ ಇವರು ಇಷ್ಟೊಂದು ನಗ್ತಿದ್ದಾರೆ' ಎಂದುಕೊಳ್ಳುತ್ತ ಬಾಲ್ ಮಕ್ಕಳಿಗೆ ಬಿಟ್ಟು ಅವರ ಬಳಿಗೆ ಹೊರಟಿದ್ದ ಧ್ರುವ.

ಅವಳ ನಗು ಮತ್ತಷ್ಟು ಹೆಚ್ಚಾಗಿ ತಾರಕ್ಕೇರಿತ್ತು...ಗಹಗಹಿಸಿ... ಗಹಗಹಿಸಿ... ನಗುತ್ತಲೇ ಇದ್ದಳು.  ಅವರ ಬಳಿಗೆ ಹೋಗಿ "ಹಾಯ್..ಪರಿ.. ಏನಾಯ್ತು? ಏನ್ ಹೇಳಿದ ಈ ಯಡಬಿಡಂಗಿ" ಎಂದು ಕೇಳಿದ ಧ್ರುವ. ಅವಳಿಗೆ ಮಾತನಾಡಲು ಆಗದೆ  ಕೈ ಸನ್ನೆಯಲ್ಲೇ ಗೊತ್ತಿಲ್ಲ.. ಎಂದಿದ್ದಳು ನಗುತ್ತಲೇ. ಧ್ರುವ ಗೆ ರೋಹಿತ್ ಮೇಲೆ ಅನುಮಾನ... ಸಿಟ್ಟು... ಒಟ್ಟಿಗೆ ಉಕ್ಕಿ ಬಂದಿತು. "ಏನ್ ಯಡವಟ್ಟು ಮಾಡಿದ್ಯೋ ಮನೆಹಾಳ್ ನನ್ಮಗನೇ..." ಪಕ್ಕಕ್ಕೆ ಎಳೆದು ಕರೆತಂದು ಕೇಳಿದ ಸಿಡುಕಿನಿಂದ.

"ನೈಟ್ರಾಕ್ಸೈಡ್!!  N²0..!!  ಲಾಫಿಂಗ್ ಸ್ಪ್ರೇ ಬ್ರೋ.. ಮೈ ಎಕ್ಸ್ಷೆರಿಮೆಂಟ್.. ಹೆಂಗೆ...." ಎಂದು ಬರ್ಮುಡಾ ಕಿಸೆಗೆ ಕೈ ಹಾಕಿ ಪುಟ್ಟ ಸ್ಪ್ರೇ ಬಾಟಲ್ ನ್ನು ಹೊರತೆಗೆದು ತೋರಿಸಿದ. ಇದನ್ನು ಕೇಳಿದ್ದೆ ತಡ ಧ್ರುವ ರೋಹಿತ್ ನನ್ನು ಹಿಗ್ಗಾಮುಗ್ಗಾ ಜಾಡಿಸಿ ಒದ್ದು "ಬೆವಕೂಫ್ ನನ್ಮಗನೇ... ಏನೋ ಮಾಡು ಅಂದ್ರೆ ಇನ್ನೇನೋ ಯಡವಟ್ಟು ಮಾಡ್ತಿಯಲ್ಲೋ..ಥೋ.. ಏನಾದರೂ ಜೋಕ್ಸ್ ಹೇಳಿ ನಗಿಸ್ತಿಯಾ ಅನ್ಕೊಂಡಿದ್ದೆ.. ನಿನ್ನ ನಂಬಿದ್ದು ನನ್ನ ತಪ್ಪು! ಹೋಗಿ ಹೋಗಿ ನಿನಗೆ.." ಎನ್ನುತ್ತಾ ತಲೆ ಚಚ್ಚಿಕೊಂಡ.

"ಕೂಲ್....ಡಾ... ಏನಾಯ್ತು ಅಂತ ಹೀಗೆ ಅರಚ್ತಿದಿಯಾ.. ನಿಧಾನವಾಗಿ ಎದ್ದು ಹಿಂದೆ ಮೆತ್ತಿದ ಮರಳನ್ನು ಜಾಡಿಸಿಕೊಂಡು ಪ್ರತಿಯೊಬ್ಬ ವ್ಯಕ್ತಿಗೂ ಸಂತೋಷವಾಗಿರುವ ಸರ್ವ ಸ್ವಾತಂತ್ರ್ಯವಿದೆ ನಮ್ಮ ದೇಶದಲ್ಲಿ..ಪರಿಗೂ ಕೂಡ.. ಇದರಿಂದ ಏನು ಸೈಡ್ ಎಫೆಕ್ಟ್ ಇಲ್ಲ.. ನಥಿಂಗ್ ಟು ವರಿ.. ಹತ್ತಿಪ್ಪತ್ತು ನಿಮಿಷ ನಕ್ಕು ಸುಮ್ನಾಗ್ತಾರೆ.. ನೋವು ಮರೆಸೋಕೆ ಅಂತ ಇದನ್ನ ಡೆಂಟಿಸ್ಟ್ ಮತ್ತು ಲೇಬರ್ ರೂಂನಲ್ಲಿ ಉಪಯೋಗಿಸೋದು ಗೊತ್ತಲ್ವಾ ನಿನಗೂ.. ಇದರಿಂದಾಗಿ ಏನು ತೊಂದರೆ ಇಲ್ಲ ಮಗಾ. ಜಸ್ಟ್ ಚಿಲ್.. ನೋಡು ಪರಿ ಎಷ್ಟು ಚೆನ್ನಾಗಿ ನಗ್ತಿದಾರೆ..ಎಂದ ರೋಹಿತ್ ನ ಮುಖಕ್ಕೆ ತುಪಕ್ ಎಂದು ಉಗಿದ ಧ್ರುವ ಪರಿಧಿ ಕಡೆಗೆ ದೃಷ್ಟಿ ಹರಿಸಿದ್ದ.

ನಗುತ್ತಿದ್ದ ಅವಳ ಕಣ್ಣುಗಳು ಸಾವಿರ ದೀಪೋತ್ಸವದ ಬೆಳಕಿನಂತೆ ಮಿನುಗುತ್ತಿದ್ದವು.ಮುಸ್ಸಂಜೆ ಹೊತ್ತಿನಲ್ಲಿಯೇ ಚಂದ್ರ ಮೈಮರೆತು ಬೆಳದಿಂಗಳು ಚೆಲ್ಲಿದಂತೆ ಕ್ಷೀರದ ಹೊನಲು ಹರಿದಂತಾಗಿತ್ತು ಅವಳ ನಗು.. ಆಕೆ ತೊಟ್ಟ ಬಿಳಿಯ ಟಾಪ್ ಮೇಲಿನ ಕೆಂಪು ಸ್ಕಾರ್ಫ್ ಗಾಳಿಗೆ ಚೆದುರಿ ಹಾರಿ ಹೋಗಿತ್ತು. ಅದನ್ನು ಹಿಡಿಯುವ ಪ್ರಯತ್ನವೂ ಆಕೆ ಮಾಡಿರಲಿಲ್ಲ. ಅವಳ ಕತ್ತಿನಲ್ಲಿದ್ದ ಹಾರ್ಟ್ ಪೆಂಡೆಂಟ್, ಕಿವಿಯ ಪುಟ್ಟ ಹರಳಿನ ಜುಮುಕಿ ತೂಗಾಡಿ ಮಿರಿಮಿರಿ ಹೊಳೆದು ಅವಳ ನಗುವಿಗೆ ಮತ್ತಷ್ಟು ಮೆರಗು ಕೊಟ್ಟಿತ್ತು. ಗಾಳಿಯೊಂದಿಗೆ ಹೋರಾಡುತ್ತಿದ್ದ ಅವಳ ರೇಷ್ಮೆ ಕೂದಲು ಲಾಸ್ಯವಾಡುತ್ತಿದ್ದರೆ ಪ್ರಕೃತಿಯ ದೃಷ್ಟಿಯೇ ತಾಗುವಂತಾಗಿತ್ತು. ಹಾಗೆ ನಗುತ್ತಿದ್ದ ಪರಿಧಿಯ ನೋಟ ಅರೆಘಳಿಗೆಯಲ್ಲಿ ಅಕಸ್ಮಾತ್ತಾಗಿ ದೂರದಲ್ಲಿ ಎಲ್ಲೋ ಸ್ತಬ್ಧವಾಗಿತ್ತು. ಅವಳ ಮುಖಭಾವ ಬದಲಾಗಿ ಹೊಸ ರೀತಿಯ ಕಳೆ ಆವರಿಸಿತು. ಅವಳ ಮನಸ್ಸಿನ ಉತ್ಸಾಹವನ್ನು ಕುತೂಹಲವನ್ನು ಉದ್ವೇಗವನ್ನು ಸಂತೋಷವನ್ನು ಅವಳ ಉಸಿರಾಟದ ಏರಿಳಿತ,, ಅವಳ ಕೊರಳಿನ ನರಗಳ ಉಬ್ಬಸವನ್ನು ನೋಡಿಯೇ ಅಂದಾಜು ಮಾಡಿದರು ಧ್ರುವ ಮತ್ತು ರೋಹಿತ್. ಏನಾಯಿತು ಎಂದು ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡುವಾಗ ಅವಳ ಕಣ್ಣು ತುಂಬಿ ತುಳುಕಲು ಆರಂಭಿಸಿತ್ತು.

"ಈವಾಗ್ ಏನಾಯ್ತೋ.. ನೈಟ್ರಾಕ್ಸೈಡ್ ನಿಂದ ನಗಬೇಕು ತಾನೇ!! ಇವರು ಯಾಕೆ ಅಳ್ತಿದ್ದಾರೆ !" ಕೇಳಿದ ಧ್ರುವ.

"ಮೋಸ್ಟ್ಲಿ..... ಆನಂದಭಾಷ್ಪ ಇರಬೇಕು.." ಸುಧೀರ್ಘ ವಿಚಾರ ಮಾಡಿ ಗಡ್ಡ ಕೆರೆದುಕೊಂಡು ಹೇಳಿದ ರೋಹಿತ್.

ಎತ್ತಲೋ ನೋಡುತ್ತಿದ್ದ ಪರಿಧಿ ಇದ್ದಕ್ಕಿದ್ದಂತೆ ಎದ್ದು ನಿಲ್ಲಲು ಹೋಗಿ, ನಗುವಿನ ಅಮಲಲ್ಲಿ ನಿಲ್ಲಲಾಗದೆ ಬೆಂಚ್ ಮೇಲಿನಿಂದ ಕೆಳಗೆ ಕುಸಿದು ಕುಳಿತಿದ್ದಳು. ನಗುತ್ತಿದ್ದವಳ ಕಣ್ಣುಗಳು ಧಾರಾಕಾರವಾಗಿ ಕಂಬನಿಗರೆಯುತ್ತಿದ್ದವು... ಏನೋ ಹೇಳಲು ಪ್ರಯತ್ನಿಸುತ್ತಿದ್ದಳು,, ಆದರೆ ಹೇಳಲಾಗದೆ ಧ್ವನಿ ಕಂಪಿಸುತ್ತಿತ್ತು‌. ಧ್ರುವ ಮತ್ತು ರೋಹಿತ್ ಗಲಿಬಿಲಿಯಿಂದ ಅವಳ ಸನಿಹದಲ್ಲಿ ಓಡಿ ಅವಳನ್ನು ಹಿಡಿದು ಸಾವಧಾನಿಸಿ, "ಏನಾಯ್ತು ಪರಿ... ಎನಿ ಪ್ರಾಬ್ಲಮ್.." ಎಂದು ಕೇಳಿದ್ದರು ಗಾಬರಿಯಿಂದ. ಅವಳು ನಗುನಗುತ್ತಲೇ ತುಂಬಾ ಪ್ರಯಾಸದಿಂದ ಹ.....ಹ..ರ್ಷಾ...ಎಂದು ದೂರದಲ್ಲಿ ಒಬ್ಬ ವ್ಯಕ್ಥಿಯ ಕಡೆಗೆ ಕೈ ಮಾಡಿ ತೋರಿಸಿದ್ದಳು. ಇಬ್ಬರೂ ಅವಳು ಕೈ ಮಾಡಿದ ದಿಕ್ಕಿನತ್ತ ನೋಡಿದ್ದರು.
ಕಡುನೀಲಿ ಬಣ್ಣದ ಡೆನಿಮ್ ಶರ್ಟ್, ಡೆನಿಮ್ ಜೀನ್ಸ್ ಧರಿಸಿದ್ದ ಆರಡಿ ಎತ್ತರದ ಸಧೃಡ ಯುವಕ ಕಂಡಿದ್ದ. ಕಿವಿಯಲ್ಲಿ ಹೆಡ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ದಡದಲ್ಲಿ ಅಲೆಯುತ್ತಿದ್ದ ಯುವಕನನ್ನು ಅಂತಹ ದಟ್ಟ ಜನಸಂದಣಿಯ ಮಧ್ಯೆಯೂ  ಗುರುತಿಸಲು ಸಾಧ್ಯವಾಗುವುದಕ್ಕೆ ಕಾರಣ... ಅವನ ಸದೃಢವಾದ ಶರೀರ, ಮುಖದಲ್ಲಿನ ಗಂಭೀರ ತೇಜಸ್ಸು, ಆಕರ್ಷಕ ವ್ಯಕ್ತಿತ್ವ, ಶ್ರೀಮಂತಿಕೆಯ ಮೆರಗು, ಹಾಗೂ ಅವನ ಹಿಂದೆ ಇದ್ದ ಟೈಟ್ ಸೆಕ್ಯೂರಿಟಿ ಫೋರ್ಸ್!! ನಾಲ್ಕು ಜನ ಧಢೂತಿ ಆಕಾರದ ಬಾಡಿಗಾರ್ಡ್ಸ್ ಅವನನ್ನು ಹಿಂಬಾಲಿಸುತ್ತಿದ್ದರು. ಇಬ್ಬರು ಹಿಂದೆ. ಇಬ್ಬರು ಮುಂದೆ. "ಇವನು ಯಾರೋ ದೊಡ್ಡ ಸೆಲೆಬ್ರಿಟಿ ಅಂತ ಕಾಣ್ಸುತ್ತೆ ಕಣೋ.." ಅವನನ್ನೇ ಗಮನಿಸಿದ ರೋಹಿತ್ ಹೇಳಿದ.

ಪರಿಧಿಯನ್ನು ಲಕ್ಷಕೊಟ್ಟು ನೋಡಿದ್ದ ಧ್ರುವ. ಅವಳು ಎದ್ದೇಳಲಾಗದೆ  ಮಾತನಾಡಲು ಆಗದೆ ಅತೀವ ಪ್ರಯಾಸದಿಂದ ಹರ್ಷ.... ಹರ್ಷ... ಎಂದು ನಗುವಿನ ಮತ್ತಿನಲ್ಲಿ ಕನವರಿಸಿ ಕೂಗುತ್ತಲೇ ಇದ್ದಳು. ಆದರೆ ಅವಳ ಧ್ವನಿ ಕ್ಷೀಣವಾಗಿತ್ತು.  "ಯಾರವರು??  ನಿಮಗೆ ತುಂಬಾ ಬೇಕಾದವರಾ..." ಧ್ರುವ ಕೇಳಿದ್ದಕ್ಕೆ ಹ್ಮೂ ಎಂದು ಗೋಣು ಹಾಕಿ "ಪ್ಲೀಸ್....ಹರ್ಷ...." ಎಂದು ಕೈ ಮುಗಿದಳು ಕಂಬನಿ ಮಿಶ್ರಿತ ನಗುವಿನ ಧ್ವನಿಯಲ್ಲಿ.. ಧ್ರುವನಿಗೆ ಅವಳ ಈ ದಯನೀಯ ಪರಿಸ್ಥಿತಿಗೆ ತಾನೇ ಹೊಣೆಗಾರನೆಂಬ ಮುಳ್ಳು ಚುಚ್ಚಿದಂತಾಯಿತು. "ಸಮಾಧಾನ ಪರಿ. ಅವರನ್ನು ನಾವು ಹೋಗಿ ಕರೆದುಕೊಂಡು ಬರ್ತಿವಿ. ಯು ಡೋಂಟ್ ವರಿ.. ಎಂದು "ರೋಹಿ.. ಬೇಗ ಹೋಗಿ ಅವರನ್ನ ಕರೆದುಕೊಂಡು ಬಾ.. ಓಡು.‌." ಅವಸರಿಸಿದ್ದ ಧ್ರುವ.

"ಲೋ.... ಅವರು ಯಾರು ಅಂತಾನೇ ಗೊತ್ತಿಲ್ಲ. ಹೋಗಿ ಏನಂತ ಮಾತಾಡಲಿ. ಅದೂ ಅಲ್ಲದೆ ಅವನ ಹಿಂದೆ ನೋಡಲ್ಲಿ.. ಆ ಧಢೂತಿ ಬಾಡಿಗಾರ್ಡ್ಸ್!!  ಊರ ಜಾತ್ರೆಯಲ್ಲಿ ಕೋಣ ಕಡಿಯುವವರ ಹಾಗಿದ್ದಾರೆ. ಊಹ್ಮೂ...ನಾನೊಲ್ಲೆ.."

"ಅಯ್ಯೋ ನಿನ್ನ.. ಸರಿ ಇಲ್ಲೇ ನಿಂತು ಇವರನ್ನ ಹುಷಾರಾಗಿ ನೋಡ್ಕೋ.. ಮತ್ತೆ ಏನಾದರೂ ಯಡವಟ್ಟ ಮಾಡಿದೋ.. ಸಾಯಿಸಿ ಬಿಡ್ತಿನಿ ಮಗನೇ.. ಎಚ್ಚರಿಕೆ ನೀಡಿ.
" ರಿಲ್ಯಾಕ್ಸ್ ಪರಿ ನಾನು ಹೋಗಿ ಕರೆದುಕೊಂಡು ಬರ್ತಿನಿ" ಎಂದು ಹೇಳಿ ತಾನೇ ಓಡಿ ಹೋದ ಧ್ರುವ. ಜನರ ಮಧ್ಯದಲ್ಲಿ ಓಡುತ್ತ ಈಗಾಗಲೇ ತುಂಬಾ ದೂರ ಸಾಗಿದ್ದ ಆ ಯುವಕನೆಡೆಗೆ ಧಾವಿಸಿ ಹೊರಟಿದ್ದ.

                       ******

ಇತ್ತ ಪರಿಧಿ ಎದ್ದೇಳಲಾಗದೆ,, ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಅವನನ್ನೇ ನೋಡುತ್ತಾ ಹರ್ಷ.... ಹರ್ಷ...  ಎಂದು ಕೂಗುವ ಪ್ರಯತ್ನದಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಳು. ರೋಹಿತ್ ಅವಳನ್ನು ಅಲುಗಾಡಿಸಿ ಪರಿ... ಏನಾಯ್ತು ಪರಿ..  ಎಂದು ಭುಜ ಹಿಡಿದು ಎಚ್ಚರಿಸಲು ನೋಡಿದ. ಅವಳು ಮಿಸುಕಾಡಲಿಲ್ಲ. ಕೈಯನ್ನು ಹಿಡಿದು ಪರಿಶೀಲಿಸಿ ನೀರು ತಂದು ಚಿಮುಕಿಸಿದ, ನೀರು ಕುಡಿಸಲು ನೋಡಿದ, ಊಹ್ಮೂ.. ಪರಿಧಿಗೆ ಸಂಪೂರ್ಣ ಎಚ್ಚರವಾಗಲಿಲ್ಲ. ಅರೆ ಪ್ರಜ್ಞಾವಸ್ಥೆಯಲ್ಲಿಯೂ ಸಹ ಹರ್ಷನನ್ನು ಕನವರಿಸುತ್ತಿದ್ದಳು.
ಅಷ್ಟರಲ್ಲೇ ತಲಾ ಎರಡೆರಡು ಐಸ್ ಕ್ರೀಮ್ ಮತ್ತು ಒಂದು ಜ್ಯೂಸ್ ಬಾಟಲ್ ಹಿಡಿದು ಮೆಲ್ಲಗೆ ಹೆಜ್ಜೆ ಹಾಕುತ್ತಾ "ಈಗ ಇದೆ ನೋಡು ಮಜಾ, ಅವನಿಗೆ,," ಎಂದು ಹರಟುತ್ತ ಬರುತ್ತಿದ್ದ ಶ್ರಾವ್ಯ ದಿವ್ಯ.. ಪರಿಧಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ನೋಡಿ ಗಾಬರಿಯಿಂದ ಅಲ್ಲಿಗೆ ಓಡಿ ಬಂದಿದ್ದರು. ತಂದಿದ್ದ ಐಸ್ ಕ್ರೀಮ್, ಜ್ಯೂಸ್ ಬಾಟಲ್ ನ್ನು ಬೆಂಚ್ ಮೇಲಿಟ್ಟು ಅವಳನ್ನು ಎಬ್ಬಿಸಲು ನೋಡಿದರು. ಪರಿ..ಪರಿ... ಎಂದು ಕೆನ್ನೆ ತಟ್ಟಿದರು,, ಪರಿಧಿಗೆ ಎಚ್ಚರವಾಗಲೇ ಇಲ್ಲ. ಏನಾಯ್ತು ಇವರಿಗೆ ಎಂದು ಕೇಳಿದಾಗ  "ಅದೂ...ಅದೂ... ಎಂದು ತಡವರಿಸುತ್ತ ಸ್ಟ್ರೆಸ್ ಜಾಸ್ತಿಯಾಗಿ ಪ್ರಜ್ಞೆ ತಪ್ಪಿ ಬಿದ್ದರು.. ಪಲ್ಸ್ ರೇಟಿಂಗ್ ನೋಡ್ತಿದ್ರೆ,, ಐ ಥಿಂಕ್ ಬಿಪಿ ಲೋವ್ ಆಗಿದೆ" ಎಂದು ಹೇಳಿ ಗದ್ದಕ್ಕೆ ಕೈ ಹೊತ್ತು ಕುಳಿತಿದ್ದ ರೋಹಿತ್.

"ನಾವು ಐಸ್ ಕ್ರೀಂ ತರಲು ಹೋಗುವಾಗ ಚೆನ್ನಾಗೇ ಇದ್ದರಲ್ವಾ,, ಸಡನ್ನಾಗಿ ಏನಾಯಿತು..?" ದಿವ್ಯ ಕೇಳಿ ಅವನನ್ನೇ ದುರುಗುಟ್ಟಿದ್ದಳು. ಈ ಘಟನೆ ಹಿಂದೆ ಅವನದೇ ಏನೋ ಕುಚೇಷ್ಟೆ ಇದೆ ಎಂಬುದು ಅವಳ ಬಲವಾದ ಅನುಮಾನವಿತ್ತು.

"ಅದೂ ಪರಿ.. ಯಾರನ್ನೋ ನೋಡಿ ಹರ್ಷ,, ಹರ್ಷ,, ಅಂತ ಕೂಗ್ತಿದ್ರು.. ಕೂಗುತ್ತಾ  ಮೂರ್ಛೆ ಹೋಗಿಬಿಟ್ಟರು. ಎಂದು ತನ್ನ ತಪ್ಪು ಮರೆಮಾಚಿ ತೊದಲುತ್ತ  ಹೇಳುವಾಗ ಅವನ ಗಂಟಲೊಣಗಿತ್ತು. ತಕ್ಷಣ ಪಕ್ಕದಲ್ಲಿದ್ದ ಜ್ಯೂಸ್ ಬಾಟಲ್ ನ್ನು ಒಂದೇ ಗುಟುಕಿನಲ್ಲಿ ಕುಡಿದು ಖಾಲಿ ಮಾಡಿದ್ದ ರೋಹಿತ್. ಇಬ್ಬರೂ ಹುಡುಗಿಯರು ವಿಚಿತ್ರವಾಗಿ ಮುಖ ಮುಖ ನೋಡಿಕೊಂಡರು. " ಹೌದು ಹರ್ಷ ಅಂದರೆ ಯಾರು.. " ಕೇಳಿದ ರೋಹಿತ್.

"ಹರ್ಷ,, ಅವರ ವುಡ್ ಬಿ!! ಅವರು ಸತ್ತು ಒಂದು ವರ್ಷಾನೇ ಆಯ್ತು. ಈಗೆಲ್ಲಿಂದ ಬರ್ತಾರೆ??" ಜೋರು ಧ್ವನಿಯಲ್ಲಿ ಪ್ರಶ್ನಿಸಿದಳು  ಶ್ರಾವ್ಯ.

"ಹರ್ಷ ಅಂದ್ರೆ ಸತ್ತೋಗಿರೋ ಇವರ ಫಿಯಾನ್ಸಿ ನಾ.... ಹಾಗಾದರೆ ಆ ಬ್ಲೂ ಶರ್ಟ್ ನವನು?? " ಆಶ್ಚರ್ಯ, ಗಾಬರಿ ವ್ಯಕ್ತಪಡಿಸಿದ ರೋಹಿತ್ ನ ಹೊಟ್ಟೆ ಗಾಬರಿಯಿಂದಲೋ ಜ್ಯೂಸ್ ನಲ್ಲಿ ದಿವ್ಯಾ ಬೆರೆಸಿದ ದಿವ್ಯೌಷಧಿಯಿಂದಲೋ ಅದಾಗಲೇ ಗುಡುಗಲು ಶುರುಮಾಡಿತ್ತು. ಜ್ಯೂಸ್ ನಲ್ಲಿ ಏನೋ ಕಲಬೆರಕೆ ಆಗಿದೆ ಎಂದು ಅವನಿಗೂ ಅರ್ಥವಾಗಿ ಒಂದು ಕ್ಷಣವೂ ಅಲ್ಲಿ ನಿಲ್ಲಲಾಗದೆ "ಇವರನ್ನು ಬೇಗ ಆಸ್ಪತ್ರೆಗೆ ಸೇರಿಸಿ, I will join you soon.." ಎಂದು ರೋಹಿತ್ ಜಾಗ ಖಾಲಿ ಮಾಡಿದ್ದ. ಶ್ರಾವ್ಯ ಪರಿಧಿಯನ್ನು ಮಡಿಲಲ್ಲಿ ಮಲಗಿಸಿಕೊಂಡು ಪರಿ ಪರಿ.. ಎಂದು ಹಣೆ ಸವರುತ್ತ ಹಲುಬುತ್ತಿದ್ದಳು. ದಿವ್ಯ ಧ್ರುವನ ಹುಡುಕಾಟದಲ್ಲಿ ನೋಟ ಬದಲಿಸಿದ್ದಳು.

                 *******

ಅತ್ತ ಧ್ರುವ ಆ ಯುವಕನನ್ನು  ಸರ್,, ಸರ್,, ಎಂದು ಕೂಗುತ್ತಾ ಅವನ ಬಳಿಗೆ ಓಡಲು ಪ್ರಯತ್ನಿಸಿದ್ದ. ಜನಸಾಗರದ ಮಧ್ಯೆ ಅವನು ಒಮ್ಮೆ ಅಗೋಚರವಾಗಿ ಮತ್ತೆ ದೂರದಲ್ಲೆಲ್ಲೋ ಫೋನ್ ನಲ್ಲಿ ಮಾತನಾಡುತ್ತಾ ಕಂಡಿದ್ದ. ಅಷ್ಟೊತ್ತೂ ಫೋನ್ ನಲ್ಲಿ ಮಾತಾಡುತ್ತಿದ್ದ ಯುವಕನ ಎದುರು ಆಗ ಒಂದು ಬ್ಲ್ಯಾಕ್ ಮರ್ಸಿಡಿಸ್ ಬಂದು ನಿಂತಿತು. ಆ ಯುವಕ ಧ್ರುವನಿಗೆ ಮರೆಯಾಗಿ ಕಾಣಿಸದಾದ. ಧ್ರುವ ಜನಸಂದಣಿಯ ಮಧ್ಯೆ ಓಡಿ ಹೋಗುವಷ್ಟರಲ್ಲಿ ಕಾರು ಸ್ಟಾರ್ಟ್ ಆಗಿ ಹೊರಟಿತ್ತು. ಧ್ರುವನ ಕೂಗು ಸಾಗರದ ಅಲೆಗಳಲ್ಲಿ ಒಂದಾಗಿ ಜನರ ಗದ್ದಲದಿ ನಶ್ವರವಾಗಿ ಹೋಗಿತ್ತು. ಓಡುತ್ತಲೇ ಕಾರನ್ನು ಹಿಂಬಾಲಿಸಿದ ಧ್ರುವ ತನ್ನ ಸರ್ವ ಶಕ್ತಿಯನ್ನು ಕ್ರೋಡೀಕರಿಸಿ ಕಾರನ್ನು ಬೆನ್ನಟ್ಟಿದ್ದ. ತನ್ನ ಪ್ರಯತ್ನದಲ್ಲಿ ವಿಫಲವಾಗುವ ಕೊನೆಯ ಕ್ಷಣಕ್ಕೆ ತನ್ನ ಮೊಬೈಲ್ ತೆಗೆದುಕೊಂಡು ಕಾರಿನ ನಂಬರ್ ಪ್ಲೇಟ್ ನ ಫೋಟೋ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದ. ಆ ಯುವಕನನ್ನು ಹತ್ತಿಸಿಕೊಂಡ ಕಾರು ಶರವೇಗದಲ್ಲಿ ಹೊರಟು ಹೋಗಿತ್ತು, ಓಡಿ ಓಡಿ ಸುಸ್ತಾದ ಧ್ರುವ ತೀರದ ಬಳಿ ಮಂಡಿಯೂರಿ ಕುಸಿದು ಕುಳಿತು ಊಫ್...... ಎಂದು ಏದುಸಿರು ಬಿಟ್ಟ. ಹೇಗಾದರೂ ಮಾಡಿ ಈ ಕಾರ್ ನಂಬರ್ ಪತ್ತೆ ಮಾಡಿದ್ರೆ ಆ ಹರ್ಷನ್ನ ಮತ್ತೆ ಹುಡುಕಬಹುದು. ಆದ್ರೆ ಹರ್ಷ ಯಾರು..? ಪರಿ ಯಾಕೆ ಅಷ್ಟೊಂದು ಎಕ್ಸೈಟ್ ಆಗಿದ್ರು..? ಓಹ್..ನೋ ಪರಿ ಪರಿಸ್ಥಿತಿ ಏನಾಗಿದೆಯೋ...ಏನೋ..!! ಎಂದುಕೊಂಡಾಗ ಪರಿಯ ಯೋಚನೆ ಬರುತ್ತಲೇ ತಟ್ಟನೆ ಎದ್ದು ಪರಿಯ ಬಳಿಗೆ ನಡೆದಿದ್ದ.

ಅಲ್ಲಿಗೆ ಬಂದು ನೋಡುವಷ್ಟರಲ್ಲಿ ಪರಿಧಿ ಪ್ರಜ್ಞೆ ತಪ್ಪಿ ಮಲಗಿದ್ದನ್ನು ಶ್ರಾವ್ಯ ಅವಳನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದನ್ನು ಕಂಡು "ಏನಾಯಿತು ಇವರಿಗೆ.."  ಎಂದು ಗಾಬರಿಯಿಂದ ಓಡಿ ಬಂದು ಕೇಳಿದ. "ಸ್ಟ್ರೆಸ್  ನಿಂದಾಗಿ ಪ್ರಜ್ಞೆ ತಪ್ಪಿದ್ದಾರಂತೆ. ಪಲ್ಸ್ ರೇಟಿಂಗ್ ಕಡಿಮೆ ಇದೆ. ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಬಾ" ಎಂದು ಅವಸರದಲ್ಲಿ ಹೇಳಿದಳು ಶ್ರಾವ್ಯ. ಧ್ರುವ ಪರಿಧಿಯನ್ನು ಎತ್ತಿಕೊಂಡು ಕಾರಿನಲ್ಲಿ ಕೂರಿಸಿದ. ಶ್ರಾವ್ಯ ಅವಳನ್ನು ಹಿಡಿದುಕೊಂಡು ಭುಜಕ್ಕೆ ಭುಜಕೊಟ್ಟು ಕುಳಿತಳು. ಧ್ರುವ ಕಾರ್ ಸ್ಟಾರ್ಟ್ ಮಾಡುವಾಗ ಅವನಿಗೆ ನೆನಪಾಗಿದ್ದ ರೋಹಿತ್. ಈ ಇಡಿಯಟ್ ಎಲ್ಲಿ ಹೋದ ಈವಾಗ.. ಎಂದು ಕೇಳಿದ. ಇಬ್ಬರೂ ಹುಡುಗಿಯರು ಮುಖ ಮುಖ ನೋಡಿಕೊಂಡರೆ ಹೊರತು ಅವನ ಪ್ರಶ್ನೆಗೆ ಉತ್ತರಿಸಲಿಲ್ಲ. ಧ್ರುವ ರೋಹಿತ್ ಗೆ ಕಾಲ್ ಮಾಡಿ ಕೇಳಿದ - ಲೋ.. ಎಲ್ಲಿ ಸತ್ತಿದಿಯಾ? ಬೇಗ ಬಾ ಪರಿ ಪ್ರಜ್ಞೆ ತಪ್ಪಿದಾರೆ, ಅವರನ್ನ ಹಾಸ್ಪಿಟಲ್ ಕರ್ಕೊಂಡು ಹೋಗ್ಬೇಕು..."

"ಶತ್ರುವಿನ ದಾಳಿಯನ್ನು ಅರಿಯದೆ ಅವರ ಕುತಂತ್ರಕ್ಕೆ ಬಲಿಯಾಗಿರುವೆ.. ನಾನೀಗ ಬರಲಾರೆ ಮಿತ್ರ.. ನೀವು ಪರಿನಾ ಕರೆದುಕೊಂಡು ಹೋಗಿ.. ನಾನು ಆ..ಮೇಲೆ ಬರುವೆ.."

"ಇಂತಹ ಟೈಮ್ ಲ್ಲಿ ಈ ನಾಟಕದ ಡೈಲಾಗ್ ಬೇಕಾ ಮಚ್ಚಾ.. ನಿನ್ನ ಧ್ವನಿಗೆ ಏನಾಯ್ತು,..? ಯಾಕೆ ಒಂಥರಾ ರಾಗವಾಗಿ ಮಾತಾಡ್ತಿದೀಯಾ??"

       "......."

"ಮಗಾ.. ಬೇಗ ಆಸ್ಪತ್ರೆಗೆ ಹೋಗ್ಬೇಕು, ನೀನ್ ಎಲ್ಲಿದಿಯಾ ಹೇಳು ಅಲ್ಲಿಗೆ ಕಾರ್ ತಗೊಂಡು ಬರ್ತಿನಿ"

"ಅಕಟಕಟಾ.... ಒಂದು ರಹಸ್ಯ ಕಾರ್ಯಾಚರಣೆ ಮೇಲೆ ಬಂದಿರುವೆ. ನೀನು ಇಲ್ಲಿಗೆ ಬರಕೂಡದು... ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೋ ಮಿತ್ರ.. ನೀನಿನ್ನು ಹೊರಡು.."

"ಡಾ.ಪ್ರಸನ್ನ ಕನ್ನಡ ಮಾತಾಡು ಅಂದಿದ್ದನ್ನ ಈ ನನ್ಮಗ ಇಷ್ಟೊಂದು ಸಿರಿಯಸ್ಸಾಗಿ ತಗೊಂಡು ಬಿಟ್ನಾ.." ಎಂದು ಆಲೋಚಿಸುತ್ತ "ಹಾಳಾಗ್ ಹೋಗು,," ಎಂದುಕೊಂಡು ಫೋನ್ ಕಟ್ ಮಾಡಿ ಕಾರು ಸ್ಟಾರ್ಟ್ ಮಾಡುವಷ್ಟರಲ್ಲಿ ಒಂದು ನಿಮಿಷ ನಿಲ್ಲು ಎಂದು ಚೀರಿ ಕೆಳಗಿಳಿದಳು ದಿವ್ಯ. ಶ್ರಾವ್ಯ ಧ್ರುವ ಮತ್ತೇನಾಯ್ತು ಎಂದು ಆತಂಕದಿಂದ ಮುಖ ನೋಡಿಕೊಳ್ಳುವಾಗ ಬೆಂಚ್ ಮೇಲೆ ಬಿಟ್ಟು ಬಂದ ಐಸ್ ಕ್ರೀಮ್ ಗಳನ್ನು ಹಿಡಿದು ಬಂದಿದ್ದಳು ದಿವ್ಯ. ಇಂತಹ ಟೈಮ್ ನಲ್ಲೂ ತಿನ್ನೋದು ಮರೆಯದ ಅತೀ ಬುದ್ದಿಜೀವಿ ಎಂದು ತಲೆಗೆ ಹೊಡೆದುಕೊಂಡು ಕಾರನ್ನು ಆಸ್ಪತ್ರೆಯ ಕಡೆಗೆ ಚಲಿಸಿದ್ದ ಧ್ರುವ.

              ‌  ‌  ‌  ‌‌‌   *******

"ಬಿಪಿ  ಸ್ವಲ್ಪ ಲೊವ್ ಆಗಿತ್ತು ಆದರೆ ಡೋಂಟ್ ವರಿ ಡ್ರಿಪ್ಸ್ ಹಾಕಿದಿನಿ.. ಕೆಲವು ಗಂಟೆಯಲ್ಲಿ ಹುಷಾರಾಗ್ತಾರೆ.." ಪರಿಧಿಯನ್ನು ಪರಿಶೀಲಿಸಿದ ವೈದ್ಯರು ಹೀಗೆ ಹೇಳಿ ಹೊರಟು ಹೋಗಿದ್ದರು. ಅವಳ ಬೆಡ್ ಸುತ್ತಲೂ ನಿಂತು ಅವಳನ್ನೇ ನೋಡುತ್ತಿದ್ದರು ಮೂವರು.

"ಯಾವ ಅನಿಷ್ಟ ಘಳಿಗೆಯಲ್ಲಿ ಡಾಕ್ಟರ್ ಆಗ್ಬೇಕು ಅಂತ ಕನಸು ಕಂಡಿದ್ದೇನೋ ಏನೋ.. ಟ್ರಿಪ್ ಅಂತ ಬಂದ್ರು ಹಾಸ್ಪಿಟಲ್ ನಲ್ಲೇ  ಕಾಲ ಕಳೆಯೋ ಹಾಗಾಗಿದೆ.. ಪರಿ ಬೇಗ ಎದ್ದೇಳಿ ಪರಿ.." ಅವಳನ್ನೇ ನೋಡುತ್ತಾ  ಶ್ರಾವ್ಯ ಸ್ವಗತದಲ್ಲಿ ಉಸುರಿದ್ದಳು.

"ಸರಿ, ನೀವಿಬ್ರೂ ಇವರನ್ನ ಹುಷಾರಾಗಿ ನೋಡ್ಕೊಳಿ. ನನಗೆ ಸ್ವಲ್ಪ ಬೇರೆ ಕೆಲಸ ಇದೆ, ಹೋಗಿ ಬರ್ತಿನಿ.." ಕಾರ್ ಕೀ ತಿರುಗಿಸುತ್ತ ಹೇಳಿದ ಧ್ರುವ.
"ಹಲೋ..ನನಗೂ ಬೋರ್ ಆಗ್ತಿದೆ. ನಾನು ಜೊತೆಗೆ ಬರ್ತಿನಿ. " ಎಂದಳು ಶ್ರಾವ್ಯ.

" ನೀನೂ ಬಂದ್ರೆ ಪರಿನಾ ಯಾರು ನೋಡ್ಕೊತಾರೆ.." ಎಂದು ಧ್ರುವ ಹುಬ್ಬೇರಿಸಿದಾಗ..

"ದಿವಿ... ಪ್ಲೀಸ್ ಕಣೇ..." ಎಂದು ರಾಗ ಎಳೆದಳು ಶ್ರಾವ್ಯ. ಅವಳ ಸ್ವಭಾವವನ್ನು ತುಂಬಾ ಸನಿಹದಿಂದ ಅರಿತಿದ್ದ ದಿವ್ಯ "ಸರಿ ನೀವು ಹೋಗಿಬನ್ನಿ. ನಾನು ಪರಿನಾ ನೋಡ್ಕೋತಿನಿ" ಎಂದು ಜವಾಬ್ದಾರಿ ವಹಿಸಿಕೊಂಡಳು.

ಶ್ರಾವ್ಯ ಮತ್ತು ಧ್ರುವ ಕಾರಿನಲ್ಲಿ ಹೊರಡುವಾಗ ಶ್ರಾವ್ಯ ಕೇಳಿದಳು "ಎಲ್ಲಿಗೆ ಹೋಗ್ತಿದೀವಿ.."

"ದೇವಸ್ಥಾನದಲ್ಲಿ ಫ್ರೀಯಾಗಿ ಬಟ್ಟೆ ದಾನ ಮಾಡ್ತಿದಾರಂತೆ.. ನಿನಗೆ ಸಂತೋಷ ಆಗಬಹುದು ಅಂತ ಕರ್ಕೊಂಡು ಹೊರಟಿದ್ದಿನಿ. ಒಟ್ನಲ್ಲಿ ನಿನಗೆ ಫ್ರೀಯಾಗಿ ಸಿಕ್ರೆ ಸಾಕಲ್ವಾ.." ವ್ಯಂಗ್ಯವಾಗಿ ನುಡಿದನು.

ಶ್ರಾವ್ಯ ಅವನನ್ನೇ ದುರುಗುಟ್ಟಿ ನೋಡಿ, "ಪ್ಚ್... ಪಾಪ ನೀನು... ಮೊದಲೇ ಗೊತ್ತಿದ್ರೆ ನಿಮ್ಮ ಇಡೀ ವಂಶಾನೇ ಕರೆದುಕೊಂಡು ಬರ್ತಿದ್ದೇನೋ.. ಚಾನ್ಸ್ ಮಿಸ್ ಆಯ್ತು...ಛೇ.‌." ತಿರುಗಿ ರೇಗಿಸಿದಳು

"ನಿನಗಾಗಿರೋ ಬೇಜಾರನ್ನೆಲ್ಲ ನನ್ನ ಮೇಲೆ ಹಾಕ್ತಿದೀಯಾ.. ಇಟ್ಸ್ ಒಕೆ ಶ್ರವಿ... ಈಗಲೂ ಏನು ಟೈಮ್ ಮೀರಿಲ್ಲ... ನಿಮ್ಮ ಹಬ್ಬಿ ಇಲ್ಲೇ ಬರ್ತಿದ್ದಾರೆ ನೋಡು... ಅವರನ್ನು ಜೊತೆಗೆ ಕರ್ಕೊಂಡು ಹೋಗಿಬಿಡು.." ರಸ್ತೆ ಪಕ್ಕದಲ್ಲಿ ಹಳೆ ಪ್ಲಾಸ್ಟಿಕ್.... ಕಬ್ಬಿಣ.. ರದ್ದಿ ಪೇಪರ್ರ್ರ್ರ್ರ್.. ಎಂದು ಕೂಗುತ್ತಿದ್ದವನ ಕಡೆಗೆ ಕೈ ತೋರಿಸಿ ನಕ್ಕ.

ಅವನ ಭುಜಕ್ಕೆ ಜೋರಾಗಿ ಗುಮ್ಮಿ "ಮೊದಲು ನಿನ್ನ ಮುಖ ಮುಚ್ಚಿಕೋ ಗುಜರಿ ಐಟಮ್ ಅಂತ ಬೆನ್ನಟ್ಟಿದ್ರೆ ಕಷ್ಟ" ಅವನ ಚೇಷ್ಟೆಗೆ ತಿರುಮಂತ್ರ ಹಾಕಿದಳು. ಧ್ರುವ ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಮೊಬೈಲ್ ನಲ್ಲಿ ಮಾರ್ಗದ ಮ್ಯಾಪ್ ನೋಡುತ್ತ ಕಾರು ಚಲಾಯಿಸುತ್ತಿದ್ದ. ಕೆಲವೇ ನಿಮಿಷಗಳಲ್ಲಿ ಕಾರನ್ನು ಒಂದು ಮಾಲ್ ಎದುರಿಗೆ ಬಂದು ನಿಲ್ಲಿಸಿದ.

"ವ್ಹಾವ್,, ನಾವು ಶಾಪಿಂಗ್ ಗೆ ಬಂದಿದೀವಾ? ಮೊದಲೇ ಹೇಳಿದ್ರೆ ದುಡ್ಡಾದ್ರೂ ತಗೊಂಡು ಬರ್ತಿದ್ದೆ, ಈಗ ನೋಡು.. ನೀನೇ ಶಾಪಿಂಗ್ ಮಾಡಿಸ್ಬೇಕು ಮತ್ತೆ.." ಎಂದು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿ ಧ್ರುವನ ಮುಖ ನೋಡಿದಳು‌. ಆದರೆ ಅವನ ಗಮನ ಮಾತ್ರ ಪಾರ್ಕಿಂಗ್ ಯಾರ್ರ್ಡ್ ನಲ್ಲಿ ನಿಂತ ಕಾರುಗಳ ಮೇಲೆ ನೆಟ್ಟಿತ್ತು. ಅಲ್ಲಿ ನಿಂತಿದ್ದ ಸುಮಾರು ಬ್ಲ್ಯಾಕ್ ಮರ್ಸಿಡಿಸ್ ಕಾರ್ ಗಳನ್ನು ನೋಡಿ ಧ್ರುವ ತನ್ನ ತಲೆಗೂದಲಲ್ಲಿ ಕೈಯಾಡಿಸಿಕೊಳ್ಳುತ್ತ ಹ್ಮ್.... ಅವನೂ ಈಗ ಇಲ್ಲಿಗೆ ಬಂದಿರಬಹುದಾ..? ಎಂದು ಯೋಚಿಸುತ್ತಾ ತನ್ನ ಮೊಬೈಲ್ ನಲ್ಲಿನ ಕಾರ್ ನಂಬರ್ ಮತ್ತೊಮ್ಮೆ ನೋಡಿ ಮನನ ಮಾಡಿಕೊಳ್ಳುತ್ತ ಅಲ್ಲಿನ ಪ್ರತಿಯೊಂದು ಬ್ಲ್ಯಾಕ್ ಮರ್ಸಿಡಿಸ್ ಕಾರಿನ ಸಂಖ್ಯೆಯನ್ನು ನೋಡುತ್ತ ಅಲೆದಾಡಿದ. ಅವನು ಏನು ಮಾಡುತ್ತಿದ್ದಾನೆಂಬುದು ಅರ್ಥವಾಗದೆ ಶ್ರಾವ್ಯ ತಲೆ ಚಚ್ಚಿಕೊಳ್ಳುತ್ತ ಅವನನ್ನೇ ಅನುಸರಿಸಿದ್ದಳು‌. "ಏನು ಹುಡುಕ್ತಿದೀಯಾ... ಹೇಳು ನಾನು ಹೆಲ್ಪ್ ಮಾಡ್ತಿನಿ.."

"KA 19 MA 1*** ಈ ನಂಬರಿನ ಬ್ಲ್ಯಾಕ್ ಮರ್ಸಿಡಿಸ್ ಕಾರ್ ಇಲ್ಲಿ ಇದೆಯಾ ನೋಡು ಹುಡುಕು.." ಎಂದು ತನ್ನ ಮೊಬೈಲ್ ತೋರಿಸಿ ಹೇಳಿದ.

"ಯಾರ ಕಾರಿದು? ನಿನಗ್ಯಾಕೆ ಬೇಕು? ಸಿಕ್ಕರೆ ಏನು ಮಾಡ್ತಿಯಾ?" ಪ್ರಶ್ನೆಗಳ ಮಳೆ ಸುರಿಸಿದಳು.

"ಬಾಯಿ ಮುಚ್ಚಿಕೊಂಡು ಹೆಲ್ಪ್ ಮಾಡೋ ಹಾಗಿದ್ದರೆ ಮಾಡು. ಇಲ್ಲ ಸುಮ್ಮನೆ ಒಂದು ಕಡೆಗೆ ಕುಕ್ಕರಿಸು. ನನ್ನ ತಲೆ ತಿನ್ನಬೇಡ.." ಗದರಿದ.
ಅವಳು ಅವನನ್ನೇ ತಿನ್ನುವಂತೆ ಗುರಾಯಿಸಿ ನೋಡಿ ತಾನು ಕಾರಿನ ಹುಡುಕಾಟ ಆರಂಭಿಸಿದಳು. ಅಲ್ಲಿದ್ದ ಸುಮಾರು ಹದಿನೈದು ಬ್ಲ್ಯಾಕ್ ಮರ್ಸಿಡಿಸ್ ಕಾರ್ ಗಳಲ್ಲಿ ಅವರು ಶೋಧಿಸುತ್ತಿದ್ದ ನಂಬರ್ ಕಾರು ಇರಲಿಲ್ಲ. ಮತ್ತೆ ಕಾರು ಹತ್ತಿ ಕುಳಿತ ಇಬ್ಬರೂ ಮಂಗಳೂರಿನ ಖ್ಯಾತ ಹೋಟೆಲ್ ಗಳು, ಮಾಲ್ ಗಳು, ಸಿನಿಮಾ ಥಿಯೇಟರ್ ಗಳು, ಪಬ್ಬಾಸ್ ಐಸ್ ಕ್ರೀಂ ಪಾರ್ಲರ್, ಕೆಫೆಗಳು ಸಂಜೆ ಹೊತ್ತು ಸುತ್ತಾಡಬಹುದಾದ ಎಲ್ಲಾ ಸ್ಥಳಗಳನ್ನು ಪಟ್ಟಿ ಮಾಡಿಕೊಂಡರು. ಅದೇ ರೀತಿ ಒಂದು ಜಾಗವನ್ನು ಬಿಡದೇ ಪ್ರತಿಯೊಂದು ಪಾರ್ಕಿಂಗ್ ನಲ್ಲಿ, ಹೊರಟ ದಾರಿಯುದ್ದಕ್ಕೂ ಸಹ ಆ ನಂಬರಿನ ಬ್ಲ್ಯಾಕ್ ಮರ್ಸಿಡಿಸ್ ನ ಹುಡುಕಾಟ ಜಾರಿಯಲ್ಲಿತ್ತು. ಆದರೆ ಅದು ಮಾತ್ರ ಸಿಗಲಿಲ್ಲ. ಶ್ರಾವ್ಯ ಆ ಕಾರ್ ಯಾಕೆ ಬೇಕು ಎಂದು ಎಷ್ಟೇ ಪ್ರಶ್ನೆ ಕೇಳಿದರೂ... "ಅದೂ ಕದ್ದುಕೊಂಡು ಹೋಗಿ ಮಾರೋಕೆ,, ಸಿಕ್ಕಾಪಟ್ಟೆ ಲಾಭ ಬರುತ್ತಂತೆ. ನಿನಗೂ ಅರ್ಧ ಶೇರ್ ಕೊಡ್ತಿನಿ ಒಕೆ ಎಂದು ಹಾರಿಕೆಯ ಉತ್ತರ ನೀಡಿ ಅವಳನ್ನು ಸುಮ್ಮನಾಗಿಸಿದ್ದ ಧ್ರುವ. ಸುಮಾರು ಎರಡು- ಮೂರು ಗಂಟೆಗಳ ಸುತ್ತಾಟದ ನಂತರ ಬೇಸರಗೊಂಡ ಶ್ರಾವ್ಯ ಕಾರ್ ನಿಲ್ಲಿಸು ಎಂದು ಕಿರುಚಿದ್ದಳು. ಧ್ರುವ ರಸ್ತೆಯ ತಿರುವಲ್ಲಿ ಕಾರ್ ನಿಲ್ಲಿಸಿದವನೇ ಏನಾಯಿತೆಂದು ಕೇಳಿದ.

" ಯಾರು... ಏನು.. ಅಂತಾನೇ ಗೊತ್ತಿಲ್ಲದೆ ನನಗೆ ಇನ್ನೂ ಹುಡುಕಾಡೋಕೆ ಆಗಲ್ಲ. ನೀನು ಯಾರನ್ನು ಹುಡುಕುತ್ತಿದ್ದಿಯಾ ಹೇಳು ಮೊದಲು... ಅಲ್ಲಿಯವರೆಗೂ ನಾನು ಇಲ್ಲಿಂದ ಕದಲಲ್ಲ.." ಕಾರಿನಿಂದ ಕೆಳಗಿಳಿದು ನಿಂತು ಹಠ ಮಾಡಿದಳು.

"ಅದೂ.. ಪರಿಯವರಿಗೆ ತುಂಬಾ ಬೇಕಾದವರಂತೆ, ಅವರು ಬೀಚ್ ನಲ್ಲಿ ಕಾಣಿಸಿಕೊಂಡರು. ಪರಿ ಅವರನ್ನು ಕರೆದುಕೊಂಡು ಬಾ ಅಂತ ಹೇಳಿದ್ರು. ಆದರೆ ನಾನು ಓಡಿ ಹೋಗುವಷ್ಟರಲ್ಲಿ ಅವರು ಕಾರ್ ನಲ್ಲಿ ಹೊರಟು ಹೋದರು. ಬಟ್ ನಾನು ಅವರ ಕಾರ್ ನಂಬರ್ ನೋಟಿಸ್ ಮಾಡಿದೆ. ಈಗ ಅವರನ್ನೇ ಹುಡುಕ್ತಿರೋದು." ತಾನು ಕಾರಿನಿಂದ ಕೆಳಗಿಳಿದು ಅವಳನ್ನು ಒಪ್ಪಿಸುವಂತೆ ವಿವರಿಸಿದ.

"ಪರಿಗೆ ಬೇಕಾದವರಾ... ಯಾರು..?"

"ಯಾರೋ ನನಗೇನ್ ಗೊತ್ತು. ಹರ್ಷ ಹರ್ಷ ಅಂತ ಕೂಗ್ತಿದ್ರು.. ಅಷ್ಟೇ"

"ವ್ಹಾಟ್... ನಾವು ಇಷ್ಟೊತ್ತು ಹುಡುಕ್ತಿದ್ದದ್ದು ಹರ್ಷನ್ನ... ಓಹ್ ನೋ.. ಎಂದು ತಲೆ ಮೇಲೆ ಕೈ ಹೊತ್ತುಕೊಂಡು ಮೊದಲೇ ಹೇಳೊದ್ ತಾನೇ.. ಯಾವ ಹರ್ಷನ್ನ ಹುಡುಕ್ತಿಯಾ ನೀನು... ಎಲ್ಲೀ ಅಂತ ಹುಡುಕ್ತಿಯಾ.. ಹೋಗ್ಲಿ.... ಹರ್ಷ ಯಾರು ಅಂತನಾದ್ರೂ ಗೊತ್ತಾ..ನಿನಗೆ?? " ಧ್ವನಿ ಏರಿಸಿದ್ದಳು ಶ್ರಾವ್ಯ.

"ಹ್ಮೂ.... ಅದೇ ಬೀಚ್ ನಲ್ಲಿ ಇದ್ರಲ್ಲಾ.. ಅವ್ರೆ!! ನಿನಗೊತ್ತಾ ಅವರು ಯಾರಂತ..?"

" ಬೀಚ್ಂತೆ ಬೀಚ್.. ನಿನ್ನ ತಲೆ!! ಹರ್ಷ ಅಂದ್ರೆ ಪರಿ ಫೀಯಾನ್ಸಿ.. ಅವರು ಸತ್ತೋಗಿ ಎಷ್ಟೋ ದಿನಗಳಾಯ್ತು.. ಈಗ ಹೇಗೆ ಕಾಣಿಸಿಕೊಳ್ಳೋಕೆ ಸಾಧ್ಯ?? ಪರಿಗೋ ಇಪ್ಪತ್ನಾಲ್ಕು ಗಂಟೆ ಹರ್ಷನದೇ ಧ್ಯಾನ.. ಯಾರನ್ನೋ ನೋಡಿ ಏನೋ ಕೂಗಿರಬೇಕು. ಅಲ್ಲಾ.. ನಿನಗಾದ್ರೂ ಚೂರು ಬುದ್ದಿ ಬೇಡ್ವಾ.. ಹರ್ಷ ಅಂದರೆ ಯಾರು ಏನು ಎತ್ತ ಅಂತ ತಿಳ್ಕೊಂಡು ತಾನೇ ಹುಡುಕಬೇಕು.. ಇಡಿಯಟ್!! ನಿನ್ನ ಜೊತೆಗೆ ಸೇರಿ ನನ್ನ ಟೈಮ್ ಎನರ್ಜಿ ವೇಸ್ಟ್ ಆಯ್ತು. ಇದೇ ಎಫರ್ಟ್ ನನ್ನ ಕ್ರಷ್ ಹುಡುಕೋಕೆ ಹಾಕಿದ್ರೆ ನನ್ನ ರಾಕ್ ಸ್ಟಾರ್ ಜೊತೆಗೆ ಕಾಫಿ ವಿತ್ ಸೇಲ್ಫೀನಾದ್ರೂ ಸಿಕ್ಕಿರೋದು..." ಎಂದುಕೊಳ್ಳುತ್ತ ಮೊಬೈಲ್ ನಲ್ಲಿ ಸ್ಥಿರವಾದಳು.

"ಯು ಆರ್ ರೈಟ್... ಅದು ಪರಿ ಭ್ರಮೆ ಇದ್ರು ಇರಬಹುದು. ಮೊದಲೇ ಲಾಫಿಂಗ್ ಗ್ಯಾಸ್ ಎಫೆಕ್ಟ್ ನಲ್ಲಿದ್ರು ಅವರು.." ಎಂದಾಗ ಚಕ್ಕನೇ ತಲೆ ಎತ್ತಿದ ಶ್ರಾವ್ಯ ಏನು ಎಂದು ಧಿಗ್ಭ್ರಾಂತಳಾಗಿ ಕೇಳಿದಳು. ಧ್ರುವ ರೋಹಿತ್ ಮಾಡಿದ ಕಿತಾಪತಿಯಿಂದ ತಾನು ಕಾರ್ ಹಿಂದೆ ಓಡಿ ಹೋಗಿದ್ದರವರೆಗೂ ಎಲ್ಲವನ್ನೂ ಹೇಳಿ "ಯಾಕೆ ರೋಹಿ ಹೇಳಲಿಲ್ವಾ ಏನೂ.." ಎಂದು ಕೇಳಿದ್ದ.

"ಇಲ್ಲ. ಸ್ಟ್ರೆಸ್ ಹೆಚ್ಚಾಗಿ ಹಾಗಾಗಿದೆ ಅಂತ ಹೇಳಿದ ರ್ಯಾಸ್ಕಲ್.. ಇದೆಲ್ಲಾ ಮೊದಲೇ ಗೊತ್ತಾಗಿದ್ರೆ ಜ್ಯೂಸ್ ನಲ್ಲಿ ಜಮಾಲ್ಗೋಟಾ ಬದಲು ವಿಷಾನೇ ಹಾಕಿ ಕೊಡ್ತಿದ್ದೆ ಅವನಿಗೆ.." ಸಿಟ್ಟಿನಿಂದ ದವಡೆ ಕಚ್ಚಿದ್ದಳು.

"ವ್ಹಾಟ್..... ಜ್ಯೂಸ್ ನಲ್ಲಿ ಜಮಾಲ್... ಅಂದ್ರೆ ನಾನು ಕಾಲ್ ಮಾಡಿದಾಗ ಅವನು.. ಥೂ... ಎಂದು ಮುಖಕ್ಕೆ ಹೊಡೆದುಕೊಂಡ. ಶ್ರಾವ್ಯ ಜೋರಾಗಿ ನಕ್ಕಳು. " ನೀವೆಲ್ಲಾ ಟ್ರಿಪ್ ಗೆ ಎಂಜಾಯ್ ಮಾಡೋಕೆ ಬಂದಿದೀರೋ ಇಲ್ಲ ಒಬ್ಬರಿಗೊಬ್ಬರು ದ್ವೇಷ ತೀರಿಸಿಕೊಳ್ಳಲು ಅವಕಾಶಕ್ಕಾಗಿ ಬಂದಿದೀರೋ.... ಆ ಇಡಿಯಟ್ ರೋಹಿ ಎಕ್ಸ್ಷೆರಿಮೆಂಟ್ ಅಂತ ಸಾಯ್ತಾನೆ, ಆ ತಿಂಡಿಪೋತಿ ತಿನ್ನೋಕೆ ಹುಟ್ಟಿರೋ ತರಾ ಆಡ್ತಾಳೆ, ನೀನೊಂದು ವಿಚಿತ್ರ ಕ್ರಷ್ಷು ಕಾಫಿ ಸೆಲ್ಫೀ ಬಿಟ್ಟು ಬೇರೆನೂ ಗೊತ್ತಿಲ್ಲ ನಿನಗೆ... ನಿಮ್ಮಂತವರ ಜೊತೆ ಈ ಸುಡುಗಾಡ್ ಟ್ರಿಪ್ ಗೆ ಯಾಕಾದ್ರೂ ಬಂದಿದ್ದೀನೋ ಅನ್ನಿಸ್ಬಿಟ್ಟಿದೆ.." ಬೇಜಾರಿನಿಂದ ಕಾರ್ ಬಾನೆಟ್ ಏರಿ ಕುಳಿತು ನಿದ್ರೆಗೆಟ್ಟು ಉರಿಯುತ್ತಿದ್ದ ಕಣ್ಣುಜ್ಜಿಕೊಂಡ.

"ರಿಲ್ಯಾಕ್ಸ್... ನಿನ್ನ ಟೆನ್ಷನ್ ಗೆ ನನ್ನ ಹತ್ರ ಮೆಡಿಸಿನ್ ಇದೆ."

"ಯಾವ್ ಮೆಡಿಸಿನ್? ನನ್ನ ಮೇಲೆ ಏನಾದರೂ ಏಕ್ಸ್ಪೈರ್ಮೆಂಟ್ ಮಾಡ್ತಿಯಾ ಹೇಗೆ...."

"ಮ್ಯೂಸಿಕ್ ಥೆರಪಿ..!! ಹಾಡು ಕೇಳಿದ್ರೆ ಎಂತ ಟೆನ್ಷನ್ ಕೂಡ ಚಿಟಿಕೆಯಲ್ಲಿ ಮಂಗಮಾಯ ಆಗೋಗುತ್ತೆ ಗೊತ್ತಾ.. ಇದು ಕೇಳು ನನ್ನ ಹಿರೋ ಹಾಡಿರೋದು... ತುಮ್ ದೇನಾ ಸಾಥ್ ಮೇರಾ.... ಎಂದು ಹಾಡು ಗುನುಗುತ್ತ ಮೊಬೈಲ್ ನಲ್ಲಿದ್ದ ವಿಡಿಯೋವನ್ನು ಅವನ ಮುಂದೆ ಹಿಡಿದಿದ್ದಳು. ಅದನ್ನು ನೋಡುತ್ತಿದ್ದ ಧ್ರುವನ ಕಣ್ಣುಗಳು ಅಗಲವಾದವು. ಆಶ್ಚರ್ಯ ಸಂಭ್ರಮದ ಸ್ವರದಲ್ಲಿ " ಇವನೇ ಕಣೇ ಹರ್ಷ ಅಂದ್ರೆ.. ಇವರನ್ನೇ ನಾವು ಬೀಚ್ ನಲ್ಲಿ ನೋಡಿದ್ದು.." ಹೇಳಿ ಕಾರಿನ ಮೇಲಿಂದ ಕೆಳಗೆ ಜಿಗಿದು ನಿಂತಿದ್ದ.

"ಹಲೋ.. ನೀನು ಹೀಗೆ ಹೇಳಿದ ತಕ್ಷಣ ನಾನು ಇಲ್ಲದೆ ಇರೋ ಹರ್ಷನ್ನ ಹುಡುಕೋಕೆ ಬರ್ತಿನಿ ಅನ್ಕೊಂಡಿದ್ದೀಯಾ.. ನೋ ವೇ... ಅಂದಹಾಗೆ ಇವರು ಹರ್ಷ ಅಲ್ಲ ಸಂಕಲ್ಪ್ ಅಂತ!!

" ಅಲ್ಲ.. ಇದು ಹರ್ಷ!! ಪರಿ ಕಣ್ಣಲ್ಲಿದ್ದ ಖುಷಿಯನ್ನು ನಾನು ನೋಡಿದೀನಿ. ಇದು ಹರ್ಷಾನೇ.. ಹರ್ಷ ಬದ್ಕಿದ್ದಾರೆ ಅಂತಾಯ್ತು.."

"ನೋ..ನೋ.. ಇದು ಸಂಕಲ್ಪ್!! ಸಿಡ್ನಿಯಲ್ಲಿ ಇರ್ತಾರೆ.  ಅಷ್ಟಕ್ಕೂ ನೀನು ಯಾವತ್ತಾದ್ರೂ ಹರ್ಷನ್ನ ನೋಡಿದೀಯಾ...?" ಕೇಳಿದಳು

"ನೋ.. ನನಗೆ ಪರಿ ವುಡ್ ಬಿ ಹೆಸರು ಹರ್ಷ ಅಂತ ಕೂಡ ಗೊತ್ತಿರಲಿಲ್ಲ. ನೋಡೋದಂತೂ ದೂರ! ನೀನು ಯಾವತ್ತಾದ್ರೂ ನೋಡಿದೀಯಾ ಹರ್ಷನ್ನ??"

"ಇಲ್ಲ. ಅವರ ಬಗ್ಗೆ ಪರಿ ಹೇಳೊದನ್ನ ಕೇಳಿದ್ದಿನಿ. ಆದರೆ ಇದುವರೆಗೂ ಅವರು ಹೇಗಿದ್ರೋ ನೋಡಿಲ್ಲ."

"ಮತ್ತೆ ಇದು ಹರ್ಷ ಅಲ್ಲ ಸಂಕಲ್ಪ್ ಅಂತ ಹೇಗೆ ಹೇಳ್ತಿಯಾ.."

"ಹರ್ಷ ಹೇಗಿದ್ರೋ ಗೊತ್ತಿಲ್ಲ ಬಟ್ ಇವರ ಬಗ್ಗೆ ಗೊತ್ತು ನನಗೆ. ಇವರು ಸಂಕಲ್ಪ್ ಅಂತ!!  ಸಂಕಲ್ಪ್ ಅಥ್ರೇಯಾ!! ಅಥ್ರೇಯಾ ಗ್ರುಪ್ ಆಫ್ ಕಂಪನೀಸ್ ನ  ಸಿಇಒ.. ಬಾರ್ನ್ ರಿಚ್ ಮ್ಯಾನ್!!  ಗ್ರೇಟ್ ಬ್ಯುಸಿನೆಸ್ ಟೈಕೂನ್ ಗೊತ್ತಾ... ನಮ್ಮ ಕಸೀನ್ ಇವರ ಕಂಪನಿಯಲ್ಲೇ ಕೆಲಸ ಮಾಡೋದು. ಕೆಲಸದಲ್ಲಿ ಆಸಕ್ತಿ ಹೆಚ್ಚು, ಮಾತು ದುಬಾರಿ, ಸಿಟ್ಟು ಮೂಗಿನ ತುದಿಯಲ್ಲೇ ಇರುತ್ತಂತೆ, ಅಪ್ಪ ಅಮ್ಮನ ಒಬ್ಬನೇ ಮುದ್ದಿನ ಮಗ, ಅವರಿಗೂ ನನ್ನ ಹಾಗೆ ಮ್ಯುಸಿಕ್ ಅಂದ್ರೆ ಪ್ರಾಣ,, ಹುಟ್ಟಿದ್ದು ಬೆಳೆದದ್ದು ಎಲ್ಲಾ ಮಂಗಳೂರಲ್ಲೇ..  ಆಮೇಲೆ ಹೈಯರ್ ಸ್ಟಡೀಸ್.. ಬ್ಯುಸಿನೆಸ್.. ಅಂತ ವಿದೇಶಕ್ಕೆ ಹೋದ್ರಂತೆ....." ಅವಳು ಒಂದೇ ಉಸಿರಲ್ಲಿ ಇನ್ನೂ ಹೇಳುತ್ತಲೇ...

"ಅಂದ್ರೆ ಇವರು.. ಹರ್ಷ ಅಲ್ಲ ಸಂಕಲ್ಪ್ ಅಂತಿಯಾ.."  ಬೇಸತ್ತು ಕೇಳಿ ಅವಳ ಮಾತಿಗೆ ತಿಲಾಂಜಲಿ ಬಿಟ್ಟ.

"ಹ್ಮಾ... ಖಡಾಖಂಡಿತವಾಗಿ ಇದು ಸಂಕಲ್ಪ್ ನೇ"

"ಹಾಗಾದರೆ ನಮ್ಮ ಹುಡುಕಾಟ ಎಲ್ಲಾ ವ್ಯರ್ಥ,. ಬಾ ವಾಪಸ್ ಆಸ್ಪತ್ರೆಗೆ ಹೋಗೋಣ.." ಬಿಗಿ ಹಿಡಿತದೊಂದಿಗೆ ಕಾರಿನ ಡೋರ್ ತೆರೆದ.

"ಹೇಯ್... ಹಾಗಂದ್ರೆ ಹೇಗೆ! ಪರಿಗೋಸ್ಕರ ಹರ್ಷನ್ನ ಹುಡುಕೋದು ವ್ಯರ್ಥ! ಯಾಕೆಂದರೆ ಅವರು ಬದುಕಿಲ್ಲ. ಆದರೆ ನನಗೋಸ್ಕರ ನನ್ನ ಸಂಕಲ್ಪ್ ನನ್ನು ಹುಡುಕೋಣ ಪ್ಲೀಸ್..." ನುಲಿದಳು.

"ಏನು ಅನ್ಕೊಂಡಿದ್ದೀಯಾ ನನ್ನನ್ನ.. ಊರವರ ಕ್ರಷ್ಷು, ಬಾಯ್ ಫ್ರೆಂಡ್ ನ ಹುಡುಕೋ ಸಿಐಡಿ ಯಾ ನಾನು?? ಮೊದಲು ಪರಿ ಹತ್ರ ಹೋಗಿ ಇದು ಹರ್ಷ ಹೌದೋ ಅಲ್ಲವೋ ಕನ್ಫರ್ಮ್ ಮಾಡಿಕೊಂಡು.. ಆಮೇಲೆ ಮುಂದಿನ ಯೋಚನೆ ಮಾಡೋಣ. ಈಗ ತುಟಿ ಪಿಟಕ್ ಅನ್ನದೇ ಕಾರಲ್ಲಿ ಕೂತ್ಕೋ.. ಇಲ್ಲವಾ ಹೋಗ್ತಾ ಇರು ನಿನ್ನ ಸಂಕಲ್ಪ್ ಹಿಂದೆಯೇ..." ಸಿಡುಕಿ ಕಾರಲ್ಲಿ ಕುಳಿತಿದ್ದ. ಬೇರೆ ವಿಧಿಯಿಲ್ಲದೆ ಮಣಮಣ ಬೈಯುತ್ತ ತಾನು ಸೀಟಿನಲ್ಲಿ ಕುಳಿತಳು. ಸಮಯ ಒಂಬತ್ತು ವರೆಯಾಗಿತ್ತು. ಕಾರು ಆಸ್ಪತ್ರೆಗೆ ಹೊರಟಿತ್ತು.

ಮುಂದುವರೆಯುವುದು...

       


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...