ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-16


ಶ್ರಾವ್ಯ ಧ್ರುವ ಆಸ್ಪತ್ರೆಗೆ ತಲುಪಿ ಪರಿಧಿಯನ್ನು ಮಲಗಿಸಿದ ವಾರ್ಡ್ ನತ್ತ ನಡೆದಿದ್ದರು. ಅವರು ಅಲ್ಲಿಗೆ ಬಂದು ನೋಡಿದಾಗ ಬೆಡ್ ಮೇಲೆ ಪರಿಧಿ ಮಲಗಿದ್ದ ಜಾಗದಲ್ಲಿ ರೋಹಿತ್ ಡ್ರಿಪ್ಸ್ ಹಾಕಿಕೊಂಡು ಕಣ್ಮುಚ್ಚಿಕೊಂಡು ವಿರಮಿಸಿದ್ದ. ಪರಿಧಿ ಬದಲಿಗೆ ಅವನನ್ನು ಅಲ್ಲಿ ನೋಡಿ ಬೆರಗಾದ ಶ್ರಾವ್ಯ ಧ್ರುವ ಮುಖ ಮುಖ ನೋಡಿಕೊಂಡು ಗಾಬರಿಯಿಂದ ಸುತ್ತಲೂ ಕಣ್ಣಾಡಿಸಿ ಪರಿ ಎಲ್ಲಿ.... ಎಂದು ಕೇಳಿದರು ಜೋರು ಧ್ವನಿಯಲ್ಲಿ. ಬೆಚ್ಚಿ ಕಣ್ಣು ತೆರದ ರೋಹಿತ್ ಅವರಿಬ್ಬರನ್ನು ಬೆರಗಾಗಿ ನೋಡಿ ಅವರ ಗೊಂದಲ ಅರ್ಥವಾಗಿ "ಇಲ್ಲೇ ಮಲಗಿದ್ದಿನಲ್ಲಾ... ಯಾಕೆ ಏನಾಯ್ತು?" ಕೇಳಿದ ಪರಿಧಿ ಧ್ವನಿಯಲ್ಲಿ ಅವಳದೇ ಶೈಲಿಯಲ್ಲಿ..

"ಪರಿನಾ.... ಏನಾಯ್ತು ನಿಮಗೆ. ನೀವು.. ರೋಹಿತ್ ತರಾ ಯಾಕೆ ಕಾಣ್ತಿದ್ದೀರಾ" ಕಣ್ಣುಜ್ಜಿಕೊಳ್ಳುತ್ತ ಕೇಳಿದಳು ಶ್ರಾವ್ಯ.

ರೋಹಿತ್ ನ ಕಲಾಕೌಶಲ್ಯ, ತುಂಟಾಟಗಳ ಪರಿಚಯವಿದ್ದ  ಧ್ರುವ, ಶ್ರಾವ್ಯಳ ಮುಗ್ಧತೆ, ಅವಿವೇಕತನ ಕಂಡು  ತಲೆಕೊಡವಿ ಹಣೆಗೆ ಕೈ ಒತ್ತಿಕೊಂಡು ನಿಂತಿದ್ದ.

"ಶ್ರಾವ್ಯ..... " ಎಂದು ಅಳುವ ಧ್ವನಿಯಲ್ಲಿ "ರೋಹಿತ್ ನನಗೆ ಕುಡಿಯೋಕೆ ಅಂತ ಏನೋ ಜ್ಯೂಸ್ ಕೊಟ್ಟು ಮಲಗಿಸಿದ್ದ. ಈಗ ನೋಡಿದ್ರೆ ಹೀಗಾಗಿ ಬಿಟ್ಟಿದೆ.. ಓಹ್ ನೋ..." ಎಂದು ಪರಿ ಧ್ವನಿಯಲ್ಲಿ ಹೇಳಿ ಮುಖವನ್ನು ಮುಚ್ಚಿಕೊಂಡ.

"ಆ ರೋಹಿತ್ ಎಕ್ಸ್ಷೆರಿಮೆಂಟ್ ಹುಚ್ಚು ಜಾಸ್ತಿಯಾಯ್ತು.. ಆ ಮೆಂಟಲ್ ನಾ ಬೇಗ ಯಾವುದಾದರೂ ಮೆಂಟಲ್ ಹಾಸ್ಪಿಟಲ್ ಗೆ ಸೇರಿಸಬೇಕು.." ರೇಗಿದಳು. " ದಿವ್ಯ ಎಲ್ಲಿ?"

"ಅಯ್ಯೋ ದೇವರೇ... ದಿವ್ಯ ಏನಾದಳೋ.." ಎಂದು ಗೋಗರೆದ ರೋಹಿತ್ ಬಳಿ ಹೋದ ಶ್ರಾವ್ಯ ಪಕ್ಕದಲ್ಲಿದ್ದ ಸ್ಟೀಲ್ ಟ್ರೇ ನಿಂದ ಅವನ ತಲೆಗೆ ಜೋರಾಗಿ ಕುಟುಕಿ " ಡ್ರಾಮಾ, ಮಿಮಿಕ್ರಿ ತುಂಬಾ ಚೆನ್ನಾಗಿ ಮಾಡ್ತಿಯಾ ಈವಾಗ ಸೀರಿಯಸ್ಸಾಗಿ ಹೇಳು ಪರಿ ಮತ್ತೆ ದಿವಿ ಎಲ್ಲಿ?"

"ಅಮ್ಮಾsss... ಎಂದು ಕಿರುಚಿ ಅವಳು ಕುಕ್ಕಿದ ತಲೆ ಭಾಗವನ್ನು ಉಜ್ಜಿಕೊಳ್ಳುತ್ತ "ಹ್ಮೂ....ನನ್ನ ಸಿರಿಯಸ್ ಆಗೋ ಹಾಗೆ ಮಾಡಿದ್ದೇ ನೀನು!!  ಈಗ ಇನ್ನೂ ಸೀರಿಯಸ್ಸಾಗು ಅಂದ್ರೆ ಏನು ಐಸಿಯುಗೆ ಹೋಗಿ ಮಲಗ್ಲಾ" ಕೆರಳಿದ ರೋಹಿತ್.

"ಬೇಡಾ.... ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಾ.. ಬೇಗ ಬೊಗಳು ಎಲ್ಲಿ ಪರಿ ಮತ್ತೆ ದಿವಿ..

"ಬೊಗಳೊಕೆ ನಾನು ನಾಯಿಯಲ್ಲ.."

"ರೋಹಿ.. ತಮಾಷೆ ಸಾಕು ಕಣಲೋ... ಮೊದಲೇ ತಲೆ ಕೆಟ್ಟೋಗಿದೆ. ಇನ್ನಷ್ಟು ಟೆನ್ಷನ್ ಕೊಡ್ಬೇಡ. ಪರಿ ಕಂಡಿಷನ್ ಸರಿಯಿಲ್ಲ. ಡ್ರಿಪ್ಸ್  ಹಾಕಿದ್ರು. ದಿವ್ಯಾಗೆ ಅವರನ್ನು ನೋಡಿಕೊಳ್ಳಲು ಬಿಟ್ಟು ನಾವು  ಹರ್ಷನ್ನ ಹುಡುಕೋಕೆ ಹೋಗಿದ್ವಿ. ಈವಾಗ ನೋಡಿದ್ರೆ ಅವರಿಬ್ಬರೂ ಕಾಣಿಸ್ತಿಲ್ಲ! ಎಲ್ಲಿಗೆ ಹೋದ್ರು ಅವರು?" ಧ್ರುವ ಕೇಳಿದ

"ನನಗೇನ್ ಗೊತ್ತು. ಟ್ರಿಪ್ ಹೆಸರಲ್ಲಿ ಎಲ್ಲರೂ ತಮ್ಮ ತಮ್ಮ ಹುಡುಗಿ ಜೊತೆ ಸುತ್ತಾಡ್ತಿದ್ರೆ. ನಾನು ಮಾತ್ರ ಹಾಳಾದ್ ಜ್ಯೂಸ್ ಕುಡಿದು ಪಡಬಾರದ ಪಾಡು ಪಟ್ಟೆ. ಫ್ರೆಂಡ್ ಅನ್ಸ್ಕೊಂಡಿರೋ ಪಾಪಿ ತನ್ನ ಹುಡುಗಿ ಸಿಕ್ಕ ಸಂತೋಷಕ್ಕೆ ನನ್ನ ಕಾಲ್ ಕೂಡ ರಿಸೀವ್ ಮಾಡಲಿಲ್ಲ. ಕಡೆಗೆ ನನ್ನ ಶತ್ರು  ದಿವಿಗೆ ಕಾಲ್ ಮಾಡಿದಾಗ ಇಲ್ಲಿಗೆ ಬಾ ಅಂತ ಒದರಿದಳು. ಇಲ್ಲಿ ಬಂದು ನೋಡಿದ್ರೆ ಮಿತ್ರರು ಇಲ್ಲ ಶತ್ರುಗಳು ಇಲ್ಲ ಜನರು ಇಲ್ಲ.. ನಾನು ಇಲ್ಲ..  ದೇವರು ಇಲ್ಲ.. ದೆವ್ವಗಳು ಇಲ್ಲ.. ಎಲ್ಲಾ ನಶ್ವರ... ಜೀವನ ಶೂನ್ಯ ಶೂನ್ಯ...."

"ಇವನ ಹೊಟ್ಟೆ ಜೊತೆಗೆ ಇವನ ತಲೆನೂ ಕೆಟ್ಟು ಕುಲಗೆಟ್ಟು ಹೋಗಿದೆ ಅನ್ಸುತ್ತೆ. ಇವನ ಜೊತೆ ಮಾತಾಡಿ ಪ್ರಯೋಜನ ಇಲ್ಲ." ಎಂದ ಶ್ರಾವ್ಯ ದಿವ್ಯಳ ನಂಬರ್ ಗೆ ಕರೆ ಮಾಡಿದಳು. ಅವಳ ಫೋನ್ ಸ್ವಿಚ್ ಆಫ್ ಎಂದು ಸೂಚಿಸಿತು. ಮತ್ತೆ ನಾಲ್ಕೈದು ಬಾರಿ ಪ್ರಯತ್ನಿಸಿದಾಗಲೂ ಆಕಡೆಯಿಂದ ಅದೇ ಸೂಚನೆ ಪುನರಾವರ್ತಿಸಲು ಶ್ರಾವ್ಯಳ ಆತಂಕ ಹೆಚ್ಚಾಯಿತು. "ಈ ರಾತ್ರಿಯಲ್ಲಿ ಗೊತ್ತು ಗುರಿಯಿಲ್ಲದ ಊರಿನಲ್ಲಿ ಹೀಗೆ ಹೇಳದೆ ಕೇಳದೆ ಹೊರಟು ಹೋದರೆ ಎಲ್ಲಿ ಅಂತ ಹುಡುಕೋಣ ಅವರನ್ನು.. ಅಂತಹದ್ದರಲ್ಲಿ ಫೋನ್ ಬೇರೆ ಸ್ವಿಚ್ ಆಫ್ ಮಾಡಿಕೊಂಡಿದಾಳೆ ಈ ಇಡಿಯಟ್.." ಎಂದು ಹೊರಬಂದು ಅಲ್ಲಿಯೇ ಪಕ್ಕದಲ್ಲಿದ್ದ ನರ್ಸ್ ನನ್ನು ವಿಚಾರಿಸಲು "ಓಹ್ ಅವರಾ... ನೀವು ಹೋದ್ ಒಂದರ್ಧ ಅರ್ಧಗಂಟೆಗೆ ಎಚ್ಚರವಾಯ್ತ್!  ಅವಳಿಗೆಂತ ಮರ್ಳ್ ಮಾರ್ರೆ...  ಯಾರ್ ಎಷ್ಟು ಹೇಳಿದ್ರು ಕೇಳ್ದಲೆ, ಡ್ರಿಪ್ಸ್ ಅರ್ಧಕ್ಕೆ ತೆಗೆದು ಹಾಗ್ ಹೊಂಟು ಹೋಗುದಾ..‌." ಎಂದಳು. ಶ್ರಾವ್ಯ ಒಳಬಂದು ಇದನ್ನು ಧ್ರುವನಿಗೆ ತಿಳಿಸಿ "ಈಗ ಅವರನ್ನು ಎಲ್ಲಿ ಅಂತ ಹುಡುಕೋದು.."

"ಆಗಲೇ ಹೋದರಾ.. ಅವರು ಖಂಡಿತ ಹರ್ಷನ ಹುಡುಕಾಟದಲ್ಲಿ ಇರ್ತಾರೆ.. ಆದರೆ ಹೇಗೆ ಹುಡುಕ್ತಾರೆ? ಎಲ್ಲಿ ಅಂತ..? ಈಗ ಗಂಟೆ ಹತ್ತು ಇಪ್ಪತ್ತು ಎಂದ ಗಡಿಯಾರ ನೋಡಿಕೊಂಡು. ಇನ್ನೂ ಹುಡುಕ್ತಾ ಇರ್ತಾರಾ.. ಇಂತಹ ರಾತ್ರಿಯಲ್ಲಿ....??" ಎಂದು ಯೋಚಿಸಿದ ಧ್ರುವ ಏನೋ ಹೊಳೆಯುತ್ತಿದ್ದಂತೆ  "ಒಂದು ವೇಳೆ ಇಷ್ಟೊತ್ತು ಹುಡುಕಾಡಿ, ಹರ್ಷ ಸಿಗದೆ,, ಹೋಟೆಲ್ ರೂಮ್ ಗೆ ವಾಪಸ್ ಹೋಗಿರಬಹುದಲ್ವಾ.." ಎಂದ. ಶ್ರಾವ್ಯಳಿಗೂ ಅವನ ಯೋಚನೆ ಸರಿಯೆನಿಸಿತ್ತು. "ಸರಿ ಮೊದಲು ರೂಮ್ ಗೆ ಹೋಗಿ ನೋಡೋಣ. ಅಲ್ಲಿ ಇರದೇ ಹೋದರೆ ಮುಂದಿನ ಯೋಚನೆ..." ಎನ್ನುತ್ತಾ ಹೊರಡಲು ಮುಂದಾದರು. ಇಬ್ಬರೂ ಎರಡು ಹೆಜ್ಜೆ ಕಿತ್ತಿಡುತ್ತಿದ್ದಂತೆ ಹಿಂದಿನಿಂದ ರೋಹಿತ್'ನ ಶೋಕರಾಗ ಕೇಳಿಸಿತು "ದೋಸ್ತ್.... ದೋಸ್ತ್... ನಾ.. ರಹಾ...."

ಹಿಂಸೆಯಿಂದ ತಲೆ ತಲೆ ಚಚ್ಚಿಕೊಂಡು ಅವನ ಬಳಿ ಬಂದು ಅವನ ಕ್ಷೇಮವನ್ನು ವಿಚಾರಿಸಿದ ಧ್ರುವ್ ತಾನೂ ಅವನ ಆರೋಗ್ಯವನ್ನು ಪರಿಶೀಲಿಸಿ ನೋಡಿ  "ವಿಜ್ಞಾನಿ ಮಹೋದಯರೇ... ನಿಮ್ಮ ದೈಹಿಕ ಸ್ಥಿತಿ ಚೆನ್ನಾಗೇ ಇದೆ ಆದರೆ ನಿಮ್ಮ ಮಾನಸಿಕ ಸ್ಥಿತಿ ಮಾತ್ರ ಇನ್ನೂ ಸರಿಯಾಗಿಲ್ಲ!! ಬಹುಶಃ ಈ ಜನ್ಮಕ್ಕೆ ಸರಿ ಆಗೋದು ಇಲ್ಲ..." ವ್ಯಂಗ್ಯವಾಡಿದ. ಸಲೈನ್ ಬಾಟಲ್ ಚೆಕ್ ಮಾಡಿದ. ಬಹುತೇಕ ಮುಗಿಯಲು ಬಂದಿತ್ತು. "ಐದು ನಿಮಿಷ ಶ್ರಾವ್ಯ ಹೋಗೋಣ ತಾಳು.." ಎಂದು ಕೆಲಸಮಯ ಕಾದು ನಿಂತು ರೋಹಿತ್ ನನ್ನು ಡಿಸ್ಚಾರ್ಜ್ ಮಾಡಿಸಿ ಆಸ್ಪತ್ರೆ ಬಿಲ್ಲು ಕಟ್ಟಿ ಮೂವರು ಕಾರು ಹತ್ತಿ ಹೋಟೆಲ್ ಕಡೆಗೆ ಚಲಿಸಿದ್ದರು.


ರೂಮಿಗೆ ಬಂದು ನೋಡುವಷ್ಟರಲ್ಲಿ ದಿವ್ಯ ಆರಾಮವಾಗಿ  ತಾನು ಆರ್ಡರ್ ಮಾಡಿದ್ದ ಪಿಜ್ಜಾ ಮೇಯುತ್ತ ಕುಳಿತಿದ್ದಳು. ಪರಿಧಿ ಬಾಲ್ಕನಿಯಲ್ಲಿ ನಿಂತು ಯಾರ ಜೊತೆಗೋ ಫೋನಿನಲ್ಲಿ ಮಾತಾಡುತ್ತಿದ್ದಳು.
ಮಧ್ಯಾಹ್ನದ ಊಟದ ನಂತರ ಹನಿ ನೀರನ್ನು ಕುಡಿಯದ ಶ್ರಾವ್ಯಳಿಗೆ ದಿವ್ಯಳ ನೆಮ್ಮದಿಯನ್ನು ಕಂಡು ಸಿಟ್ಟು ನೆತ್ತಿಗೇರಿತ್ತು. "ಲೇ..ಬಕಾಸುರಿ, ಹಾಗೆ ಹೇಳದೆ ಕೇಳದೆ ಬಂದುಬಿಡೋದಾ? ಒಂದು ಕಾಲ್ ಮಾಡಬಹುದಿತ್ತು ತಾನೇ?? ಕಾಲ್ ಮಾಡೋದಿರಲಿ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡು ಇಲ್ಲಿ ಆರಾಮವಾಗಿ ಪಿಜ್ಜಾ ತಿಂತಿದ್ದಿಯಲ್ಲೇ.. ನಿನಗೆ ಚೂರಾದ್ರೂ ಸೆನ್ಸ್ ಇದೆಯಾ? ನಾವು ಎಷ್ಟು ಗಾಬರಿಯಾಗಿದ್ವಿ ಗೊತ್ತಾ" ರೇಗಾಡಿದಳು.

"ಐಮ್ ಸೋ ಸಾರಿ ಯಾ.. ಪರಿ ಮಾಡಿದ ಅವಾಂತರಕ್ಕೆ ನನಗೆ ದಿಕ್ಕುತಪ್ಪಿ ಏನು ಮಾಡಬೇಕೋ ತೋಚಲಿಲ್ಲ. ಅವಸರದಲ್ಲಿ ಹಾಸ್ಪಿಟಲ್ ಬಿಲ್ ಪೇ ಮಾಡಿ ಸುಮ್ಮನೆ ಅವರ ಜೊತೆಗೆ ಹೊರಟು ಹೋದೆ.. ಆಮೇಲೆ ಕಾಲ್ ಮಾಡೋಣ ಅಂದುಕೊಂಡರೂ ಚಾರ್ಜ್ ಇಲ್ಲದೇ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈಗತಾನೇ ಬಂದು ಚಾರ್ಜ್ ಮಾಡಲು ಇಟ್ಟೆ ನೋಡು.." ಎಂದು ಮೊಬೈಲಿನತ್ತ ಕೈ ತೋರಿಸಿ ಪಿಜ್ಜಾದ ತುಣುಕೊಂದನ್ನು ಬಾಯಲ್ಲಿಟ್ಟಳು.

"ಈಗ ಬಂದ್ರಾ? ಇಷ್ಟೊತ್ತು ಎಲ್ಲಿಗೆ ಹೋಗಿದ್ರಿ ಇಬ್ಬರೂ?  ಏನು ಮಾಡ್ತಿದ್ರಿ? ಕೇಳಿದ ಧ್ರುವ ಕುತೂಹಲದಿಂದ.

" ಪೋಲಿಸ್ ಸ್ಟೇಷನ್ ಗೆ... " ಕೂಲಾಗಿ ಉತ್ತರಿಸಿದಳು ದಿವ್ಯ. ಆದರೆ ಅವಳ ಉತ್ತರ ಕೇಳಿ ಎದುರಿಗೆ ನಿಂತ ಮೂವರೂ ಆಘಾತಕ್ಕೆ ಒಳಗಾದರು. "ಪೋಲಿಸ್ ಸ್ಟೇಷನ್ನಾ...? ಯಾಕೆ??"

"ಹರ್ಷನ್ನ ಹುಡುಕೋಕೆ.. ಹರ್ಷ ಬದುಕಿದ್ದಾನಂತೆ. ಇಲ್ಲೇ ಮಂಗಳೂರಲ್ಲಿ ಇದ್ದಾನಂತೆ!!"

"ಹೌದು.... ನೀವು ಏನಂತ ಕಂಪ್ಲೆಂಟ್ ಕೊಟ್ಟು ಬಂದೀದ್ದಿರಾ?" ಬೆಡ್ ಮೇಲೆ ಕುಳಿತುಕೊಳ್ಳುತ್ತ ರೋಹಿತ್ ಕೇಳಿದ.

"ಮಿಸ್ಸಿಂಗ್ ಕಂಪ್ಲೆಂಟಾ??" ಶ್ರಾವ್ಯ ಊಹಿಸಿದಳು.

"ಹರ್ಷ ಏನು ಎಳೆಯ ಮಗುನಾ ಕಳೆದು ಹೋಗೋಕೆ.." ಧ್ರುವ ಅಣುಕು ಮಾಡಿದ.

"ಅಲ್ಲಲ್ಲ... ಕಿಡ್ನಾಪಿಂಗ್ ಕೇಸ್ ಅಂತೆ...  ಹರ್ಷನ್ನ ಯಾರೋ ಕಿಡ್ನ್ಯಾಪ್ ಮಾಡಿ ಸತ್ತೋಗಿದ್ದಾನೆ ಅಂತ ಸುಳ್ಳು ಹೇಳಿದ್ದಾರಂತೆ. ಪರಿ ಇನ್ಸ್‌ಪೆಕ್ಟರ್ ಗೆ ಹೇಳ್ತಿದ್ರು.. ಕಂಪ್ಲೆಂಟ್ ಕೊಡಲು ಹೋಗೋಕೆ ಮುಂಚೆನೇ ರೂಮ್ ಗೆ ಬಂದು ಹರ್ಷನ ಫೋಟೋ ತಗೊಂಡು ಹೋಗಿದ್ವಾ.. ಎಸ್.ಐ  ಹರ್ಷನ ಫೋಟೋ ನೋಡ್ತಿದ್ದ ಹಾಗೆ ಹರ್ಷ....  ಅವರಿಗೆ ಪರಿಚಯ ಅಂತ ಹೇಳಿ ಅವನ ಬಗ್ಗೆ ಮಾಹಿತಿ ಎಲ್ಲಾ ವಿಚಾರಿಸಿದ್ರು. ಕೊನೆಗೆ ನೀವೇನು ಯೋಚನೆ ಮಾಡಬೇಡಿ, ಇವರನ್ನು ಹುಡುಕೋ ಜವಾಬ್ದಾರಿ ನನ್ನದು ಎಂದು ಕೂಡಲೇ ಎಲ್ಲಾ ಸ್ಟೇಷನ್ ಗೂ ಇನ್ಫಾರ್ಮ್ ಮಾಡಿ ಹರ್ಷನ್ನ ಹುಡುಕಾಡ್ತಿದ್ದಾರೆ ಗೊತ್ತಾ... ಒಟ್ಟಿನಲ್ಲಿ ಬೆಳಿಗ್ಗೆ ಹೊತ್ತಿಗೆ ಹರ್ಷ ಸಿಕ್ತಾರೆ ಅನ್ಸುತ್ತೆ.. ಐಮ್ ಸೋ ಎಕ್ಸೈಟೆಡ್..." ತುಂಬು ಉತ್ಸಾಹದಿಂದ ಹೇಳಿದಳು ದಿವ್ಯ.
"ನಿನಗೆ ಇನ್ನೊಂದು ವಿಚಾರ ಗೊತ್ತಾ ಶ್ರವು... ಹರ್ಷ ಬೇರೆ ಯಾರೂ ಅಲ್ಲವೇ.... ನೀನು ರಾಕ್ ಸ್ಟಾರ್ ಅಂತ ಹೊಗಳ್ತಿದ್ದೆಯಲ್ಲ.. ಅವನೇ.. ಸಾರಿ ಅವರೇ... ಅವರು ಸಂಕಲ್ಪ್ ಅಲ್ಲವಂತೆ ಹರ್ಷ ಅಂತೆ...!! ಆಶ್ಚರ್ಯದಿಂದ ಕಣ್ಣರಳಿಸಿ ಹೇಳಿದ ದಿವ್ಯ, ಶ್ರಾವ್ಯಳ ಮುಖ ಗಂಭೀರವಾದ ಯೋಚನೆಯಲ್ಲಿ ಮುಳುಗಿದ್ದನ್ನು ಗಮನಿಸಿ " ನಂಬೋಕೆ ಆಗ್ತಿಲ್ವಲ್ಲ.ನನಗೂ ಹಾಗೆ ಆಯ್ತು... " ಎಂದಳು.

"ಕಿಡ್ಯಾಪ್ ಆಗಿರೋ ವ್ಯಕ್ತಿ ಅಷ್ಟು ಫ್ರೀಯಾಗಿ ಹೆಡ್ ಫೋನಲ್ಲಿ ಹಾಡು ಕೇಳ್ತಾ ಸಮುದ್ರದ ದಡದಲ್ಲಿ ವಾಕ್ ಮಾಡ್ತಾರಾ.. " ಗೊಂದಲಗೊಂಡ ರೋಹಿತ್ ನ ಪ್ರಶ್ನೆ.

"ಎಸ್.ಐ ಕೂಡ ಹೀಗೆ ಕೇಳಿದ್ರು... ಅವರು ಹರ್ಷನನ್ನ ಬಲವಂತವಾಗಿ, ಇಲ್ಲವೇ ಏನೋ ಬ್ಲ್ಯಾಕ್ ಮೇಲ್ ಮಾಡಿ,, ಅಥವಾ ಹೆದರಿಸಿ, ಬೆದರಿಕೆ ಹಾಕಿ ತಮ್ಮ ಜೊತೆಗೆ ಇಟ್ಟುಕೊಂಡಿರಬಹುದಲ್ವಾ....ಏನೋ ಬಲವಾದ ಕಾರಣವಿದೆ..  ಅಂತ ಪರಿ ಇನ್ನೂ ಏನೇನೋ ಹೇಳ್ತಿದ್ತು.... ಹರ್ಷನ್ನ ಹೇಗಾದರೂ ಬೇಗ ಹುಡುಕಿ ಅಂತ ಕೇಳಿಕೊಂಡರು  "

"ಅದು ಒಂದು ವೇಳೆ ಹರ್ಷ ಆಗಿರದೇ ಸಂಕಲ್ಪ್ ಆಗಿದ್ರೆ... ಅವರು ತಿರುಗಿ ಪರಿ ಮೇಲೆ ಆ್ಯಕ್ಷನ್ ತಗೋಳ್ತಾರೆನೋ... ಅಲ್ವಾ... ಒಂದು ವೇಳೆ ಇದು ಕಿಡ್ನ್ಯಾಪ್ ಆಗಿದ್ರೆ, ಆಗಲೂ ಅವರಿಗೆ ಅಪಾಯ ತಪ್ಪಿದ್ದಲ್ಲ" ಶ್ರಾವ್ಯಾ ಪರಿ ಮೇಲಿನ ಕಾಳಜಿ ಮತ್ತು ಮುಂದೆ ಆಗಬಹುದಾದ ಅನಾಹುತವನ್ನು ಊಹಿಸಿ, ಆತಂಕದಿಂದ  ಧ್ರುವನಿಗೆ ಕೇಳಿದಳು.

"ಪರಿ ಇಷ್ಟೊಂದು ಖಚಿತವಾಗಿ ಹೇಳ್ತಿದ್ದಾರೆ ಅಂದ್ರೆ ಬಹುಶಃ ಅವರು ಹರ್ಷನೇ ಆಗಿರಲೂಬಹುದು ಅಲ್ವಾ..!! ಏನೇ ಆಗಲಿ ಪರಿಗೆ ಸಪೋರ್ಟ್' ಆಗಿ ನಾವು ಜೊತೆಗಿರಬೇಕು.. ಏನಾಗತ್ತೋ ಆಗಲಿ.." ಧ್ರುವ ತುಂಬ ದೃಢವಾಗಿ ಶ್ರಾವ್ಯಳ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ.
"ಆ ಕಾರ್ ನಂಬರ್ ಪೋಲಿಸ್ ನವರಿಗೆ ತಿಳಿಸಿದರೆ ಹರ್ಷನ್ನ ಹುಡುಕೋಕೆ ಸಹಾಯ ಆಗುತ್ತೆನೋ"

"ಸದ್ಯಕ್ಕೆ ಬೇಡ ಅನ್ಸುತ್ತೆ. ಈಗ ಪರಿಗೆ ಆ ಕಾರ್ ವಿಷಯ ತಿಳಿಸಿದ್ರೆ ಇಡೀ ರಾತ್ರಿ ಪೂರ್ತಿ ಬೀದಿ ಬೀದಿಗಳಲ್ಲಿ ಅಲೆದು ಅದನ್ನು ಹುಡುಕಾಡ್ತಾರೆ. ಮೊದಲೇ ಅವರ ಆರೋಗ್ಯ ಸರಿಯಿಲ್ಲ. ಈಗ ಮಲಗಿ ರೆಸ್ಟ್ ಮಾಡಲಿ. ಬೆಳಿಗ್ಗೆ ಹೇಳೋಣ..." ಶ್ರಾವ್ಯಳ ಮಾತು ಧ್ರುವನಿಗೂ ಒಪ್ಪಿಗೆಯಾಯಿತು. ಅಷ್ಟರಲ್ಲೇ ಪರಿ ಅಲ್ಲಿಗೆ ಬಂದಿದ್ದಳು. "ಧ್ರುವ ಹರ್ಷನ ಬಗ್ಗೆ ಏನಾದರೂ ಗೊತ್ತಾಯ್ತಾ??" ಲಗುಬಗೆಯಲ್ಲಿ ಕೇಳಿದಳು.

"ಅದೂ.... ಪರಿ.... ಎಂದು ತೊದಲುತ್ತಿದ್ದ ಧ್ರುವನಿಗೆ ಶ್ರಾವ್ಯ ಮತ್ತೊಮ್ಮೆ ಸಂಜ್ಞೆಯಲ್ಲೇ ಹೇಳಬೇಡವೆಂದು ತಲೆ ಅಲ್ಲಾಡಿಸಿದಳು. ಧ್ರುವ ಏನೋ ಹೇಳುವಷ್ಟರಲ್ಲಿ ಅವನ ಫೋನ್ ಗಣಗಣಿಸಿತು. ಅದೇ ಸದವಕಾಶವನ್ನು ಉಪಯೋಗಿಸಿ ಒಂದು ನಿಮಿಷ ಪರಿ.. ಎಂದು ಕಾಲ್ ರಿಸೀವ್ ಮಾಡಿ " ಗುಡ್ ಇವ್ನಿಂಗ್ ಸರ್... ಹೇಳಿ" ಎಂದ.

"ಗುಡ್ ಇವ್ನಿಂಗ್ ಆ... ಮಂಗಳೂರಲ್ಲಿ ಇನ್ನೂ ರಾತ್ರಿಯಾಗಿಲ್ವಾ...". ಹಾಸ್ಯ ಮಾಡಿದ ಪ್ರಸನ್ನ‌.

" ಸರ್... ಅದು ಹಾಗೆ ಒಂದು ಫ್ಲೋ..ನಲ್ಲಿ ಹೇಳಿದೆ ಅಷ್ಟೇ " ನಸುನಕ್ಕ.

"ಜಸ್ಟ್ ಕಿಡ್ಡಿಂಗ್ ಯಾ... ಹ್ಮ್ ಮತ್ತೆ ಹೇಗಿದೆ ಪ್ರವಾಸ..?"

"ಯಾಕೆ ಕೇಳ್ತಿರಾ ಸರ್.. ಹುಟ್ಟಿದಾಗಿಂದ ಇಲ್ಲಿವರೆಗೂ ಇಷ್ಟೊಂದು ಎಂಜಾಯ್ ಮಾಡಿರಲಿಲ್ಲ ನಾನು. ಒಂದೇ ದಿನ ಎಲ್ಲಾ ನಕ್ಷತ್ರಗಳು, ಗ್ರಹಗಳು ಒಟ್ಟಿಗೆ ಕಾಣಿಸಿಬಿಟ್ವು..." ಒಬ್ಬೊಬ್ಬರ ಮುಖವನ್ನು ದಿಟ್ಟಿಸಿ ಲೊಚಗುಟ್ಟಿದ.

"ಓಹ್... ಈಗ ಏನು ಮಾಡ್ತಿದ್ದೀರಾ!?" ಪ್ರಸನ್ನ ಕೇಳಿದ್ದಕ್ಕೆ ವಾಸ್ತವವನ್ನು ಅವನಿಗೆ ಹೇಳುವುದಾ ಬೇಡವಾ ಎಂದು ಧ್ರುವ ಯೋಚಿಸುವಾಗ ರೋಹಿತ್ ಬೇಡ ಎಂಬಂತೆ ತನ್ನ ಎರಡು ಕೈ ಅಲ್ಲಾಡಿಸಿ ಕೈ ಮುಗಿದಿದ್ದ. "ಸ..ಸರ್ ಅದೂ.... ನಾವು........ ಎಂದು ರಾಗ ಎಳೆದಾಗ ಧ್ರುವನ ಸತ್ಯ ಪ್ರಜ್ಞೆಯನ್ನು ಅರಿತಿದ್ದ ಮೂವರು ಮಿತ್ರರು ಅವನಿಗೆ ಸುಳ್ಳು ಹೇಳಲು ಸಹಾಯಾರ್ಥವಾಗಿ ಏನೇನೋ ಹಾವ ಭಾವ ಮಾಡಿ ತೋರಿಸಿದರು. ಅದನ್ನು ಅನುಸರಿಸಿ ಅವನು ಉತ್ತರಿಸಲು ಪ್ರಯತ್ನಿಸಿದ. " ಸರ್.. ನಾವೂ... ಚಪ್ಪಾಳೆ ಹೊಡಿತಿದಿವಿ... ಇಲ್ಲ ಇಲ್ಲ.. ಸೊಳ್ಳೆ ಹೊಡಿತಿದೀವಿ..  ನೊಣ?? ಜಿರಲೆ?? ಆ್ಯಕ್ಟ್ ಮಾಡಿ ಬೇಸತ್ತು ತಲೆಗೆ ರಪ್ ಎಂದು ಹೊಡೆದುಕೊಂಡ ರೋಹಿತ್ ಅಂತ್ಯಾಕ್ಷರಿ... ಎಂದು ಕಿರುಚಿದ. "ಹ್ಮಾ..ಸರ್ ನಾವು ಅಂತ್ಯಾಕ್ಷರಿ ಹೊಡಿತಿದ್ವಿ... ಅಲ್ಲಲ್ಲ ಹಾಡ್ತಿದ್ವಿ.." ಧ್ರುವ ಎಂದದ್ದೆ ತಡ ಮೂವರು ತಮ್ಮ ಕರ್ಕಶ ಕಂಠದಲ್ಲಿ ಗಾನಲಹರಿ ಹರಿಯ ಬಿಟ್ಟರು. ಪರಿಧಿ ಇವರ ವ್ಯವಹಾರಕ್ಕೂ ತನಗೂ ಸಂಬಂಧವಿಲ್ಲ ಎಂಬಂತೆ ಕಳೆದು ಹೋಗಿದ್ದಳು.

"ಧ್ರುವ್... ಸಾರಿ ಟು ಸೇ ದಿಸ್.. ನೀವು ನಾಳೆ ಬೆಳಿಗ್ಗೆನೆ ಬೆಂಗಳೂರಿಗೆ ಹೊರಟು ಬನ್ನಿ. ಇಲ್ಲಿ ತುಂಬಾ ಮುಖ್ಯವಾದ ಕೆಲಸವಿದೆ.."

"ಸರ್... ಏನಾದರೂ ತುಂಬಾ ಗಂಭೀರವಾದ ವಿಷಯ ಇದೆಯಾ?"

"ಗಂಭೀರವಾದದ್ದೇ... ಆದರೆ ನಿಮಗಲ್ಲ.. ಪರಿಗೆ... ಸೋ ಬೆಳಿಗ್ಗೆ ಸಾಧ್ಯವಾದಷ್ಟು ಬೇಗ ಬನ್ನಿ. ಗುಡ್ ನೈಟ್" ಎಂದು ಹೇಳಿ ಕಾಲ್ ಕಟ್ ಮಾಡಿದ. ಧ್ರುವನ ತಲೆಗೆ ಹೊಸದೊಂದು ಯೋಚನೆಯ ಹುಳ ಬಿಟ್ಟಿದ್ದ ಪ್ರಸನ್ನ. ಪರಿ ಎದುರಿಗೆ ಕುಳಿತಿದ್ದರಿಂದ  ಯಾರಿಗೂ ಬೆಳಿಗ್ಗೆ ಹೊರಡುವ ವಿಚಾರ ಹೇಳಲಿಲ್ಲ ಅವನು.
"ಏನಂದ್ರು ಪ್ರಸನ್ನ?" ಪರಿ ಕೇಳಿದಾಗ "ಏನಿಲ್ಲ ಸುಮ್ಮನೆ ಹಾಗೆ..." ಎಂದು ಮಾತು ತೇಲಿಸಿದ.

ಶ್ರಾವ್ಯ ಹೊಟ್ಟೆ ಹಸಿವಿನಿಂದ ಒದ್ದಾಡಿ ನಮಗೂ ಏನಾದರೂ ಉಳಿಸಿದ್ದಿಯಾ ಹೇಗೆ ಎಂದು ದಿವ್ಯಳನ್ನು ಕೇಳಿದಳು. ತಾನು ಆರ್ಡರ್ ಮಾಡಿದ ಇನ್ನೂ ನಾಲ್ಕು ಪಿಜ್ಜಾಗಳನ್ನು ಅವಳ ಮುಂದಿಟ್ಟು "ನನಗೂ ಮನುಷ್ಯತ್ವ ಇದೆ ಕಣಮ್ಮಾ..." ಎಂದಳು ದಿವ್ಯ. "ಹೌದೌದು.. ಎಷ್ಟು ಮನುಷ್ಯರ ಪಾಲಿನದೋ... ಲೆಕ್ಕನೇ ಇಲ್ಲ" ರೇಗಿಸಿ ನಕ್ಕಳು. ಶ್ರಾವ್ಯ ಧ್ರುವ ಹಸಿದ ಹೊಟ್ಟೆಗೆ ಪಿಜ್ಜಾ ನೈವೇದ್ಯ ಮಾಡಿ ಮುಗಿಸಿದರು. ರೋಹಿತ್ ಉದರ ಕಾರ್ಯಕ್ಕೆ ಆ ರಾತ್ರಿ ರಜೆ ಘೋಷಿಸಿದ. ಧ್ರುವ ಮತ್ತು ರೋಹಿತ್ ಮಲಗಲು ತಮ್ಮ ರೂಮಿಗೆ ನಡೆದಿದ್ದರು. ಬಹಳ ಆಯಾಸಗೊಂಡಿದ್ದ ಶ್ರಾವ್ಯ ದಿವ್ಯ ಬಹುಬೇಗ ನಿದ್ರೆಗೆ ಜಾರಿದ್ದರು.

ಪರಿ ಶ್ರಾವ್ಯಳ ಒತ್ತಾಯಕ್ಕೆ ಮಣಿದು ಒಂದು ಸ್ಪೈಸ್ ತಿಂದು ನಿದ್ರೆ ಬಾರದೆ ಬಾಲ್ಕನಿಯಲ್ಲಿ ಹೋಗಿ ನಿಂತು ಆಕಾಶವನ್ನು, ನಕ್ಷತ್ರಗಳನ್ನು, ಬೆಳದಿಂಗಳನ್ನು ವೀಕ್ಷಿಸುತ್ತ ಗಹನ ಆಲೋಚನೆಗೆ ಒಳಗಾಗಿದ್ದಳು.

"ನನ್ನ ನಂಬಿಕೆ ಸುಳ್ಳಾಗಲಿಲ್ಲ.. ಹರ್ಷ ಇದ್ದಾನೆ.. ಇಲ್ಲೇ.. ಇದೇ ಊರಿನಲ್ಲಿ.. ತುಂಬಾ ಸನಿಹದಲ್ಲಿ.. ಇದೇ ಬೆಳದಿಂಗಳ ಕೆಳಗೆ.. ಇದೇ ತಂಗಾಳಿ ಅವನನ್ನು ಸೋಕುತ್ತಿದೆ ಎಂದುಕೊಂಡವಳಿಗೆ ಬೀಸುವ ಗಾಳಿಯ ಸ್ಪರ್ಶವೂ ಅಪ್ಯಾಯವಾಗಿತ್ತು. ನಕ್ಷತ್ರಗಳಿಗೂ ಕೋರಿಕೆ ಸಲ್ಲಿಸಿದ್ದಳು ಬೇಗ ಹರ್ಷನ ಜೊತೆ ಸೇರಿಸುವಂತೆ... ಚಂದ್ರನ ಪ್ರತಿರೂಪದಲ್ಲಿ ಹರ್ಷನ ನಗುಮೊಗದ ಚಿತ್ತಾರ ಮೂಡಿದಂತೆನಿಸಿತ್ತು... ಅದೆಷ್ಟೇ ಸತಾಯಿಸಿದರೂ ಪರವಾಗಿಲ್ಲ, ಆ ಸತಾಯಿಸುವಿಕೆಯಲ್ಲಿಯೂ ನಿನ್ನನುರಾಗವನ್ನು ಸುಖಿಸುವುದು ನನಗೆ ರೂಢಿಗತ ಕಣೋ..ಆದರೆ ನೀನು ಮಾತಿಗೆ ತಪ್ಪಕೂಡದು... ನೀನು ಇಷ್ಟು ದಿನ ನಮ್ಮಿಂದ ದೂರ ಇರಲು ಕಾರಣವೇನು?? ಏನು ಒತ್ತಡ ಹಾಕಿದ್ದಾರೆ ನಿನ್ನ ಮೇಲೆ?? ಇದೆಲ್ಲಾ ನನಗೆ ಗೊತ್ತಿಲ್ಲ ಆದರೆ ನೀನು ವಿನಾಕಾರಣ ನಮ್ಮಿಂದ ದೂರವಾಗಿಲ್ಲ ಅನ್ನುವುದಂತೂ ಸತ್ಯ!! ಅದೇನೇ ಇರಲಿ ಕಣೋ.. ಇನ್ನು ನಿನ್ನ ಪಾಲಿನ ಅಜ್ಞಾತ ವಾಸ ನನ್ನ ಭಾಗದ ವನವಾಸ ಎರಡಕ್ಕೂ ಈ ರಾತ್ರಿಯೇ ಕೊನೆ.. ಅವಳ ಮನಸ್ಸು ಹಾರಾಡಿತು.."

                            
ಮುಂದುವರೆಯುವುದು...


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...