ತನ್ನ ರೆಸಿಡೆನ್ಸಿಯ ಒಂದು ಇಡೀ ಟೀಮ್ ಗೆ ಒಟ್ಟಿಗೆ ರಜೆ ಕೊಟ್ಟ ಕಾರಣ ಆ ದಿನ ಆಸ್ಪತ್ರೆಯಲ್ಲಿ ಪ್ರಸನ್ನನ ಕೆಲಸ ದ್ವಿಗುಣ ತ್ರಿಗುಣವಾಗಿ ಎಲ್ಲಾ ಜವಾಬ್ದಾರಿ ಅಧಿಕವಾಗಿ ಸಹಿಸಲಾಸದ್ಯವಾದಷ್ಟು ಸುಸ್ತಾಗಿದ್ದ. ಅದೂ ಅಲ್ಲದೇ ನಿಂತ ನಿಲುವಲ್ಲೇ ಒಂದಾದರೊಂದರಂತೆ ಮೂರು ಸರ್ಜರಿಗಳನ್ನು ಬಿಡಲಾರದೆ ಸುಮಾರು ಗಂಟೆಗಳ ಕಾಲ ನಿರ್ವಹಿಸಿದ್ದರಿಂದಲೋ ಏನೋ ವಿಪರೀತ ಬೆನ್ನು ನೋವು ತಲೆ ನೋವಿನಿಂದ ನರಳುತ್ತ ಸಾಯಂಕಾಲ ಸರಿಸುಮಾರು ಆರು ಗಂಟೆಗೆ ಮನೆಗೆ ಬಂದು ಸ್ನಾನ ಮುಗಿಸಿ ಫ್ರೆಶ್ ಆಗಿ ಒಂದು ಕಪ್ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದು, ಮ್ಯುಸಿಕ್ ಸಿಸ್ಟಮ್ ನಲ್ಲಿ ಸುಶ್ರಾವ್ಯ ಸಂಗೀತವನ್ನು ಹರಿಯಲು ಬಿಟ್ಟು ಕಣ್ಣುಮುಚ್ಚಿ ಹಾಗೆ ಸೋಫಾದ ಮೇಲೆ ಒರಗಿದ್ದ. ತಾನೊಬ್ಬ ವೈದ್ಯನಾಗಿ ಬೇರೆಯವರಿಗೆ ಆರೋಗ್ಯದ ಮಹತ್ವವನ್ನು ಅಗತ್ಯವನ್ನು ಕುರಿತು ಮಾರುದ್ದ ಭಾಷಣ ಹೇಳುತ್ತಿದ್ದ ಪ್ರಸನ್ನ ತನಗೆ ಆರೋಗ್ಯ ಸರಿಯಿಲ್ಲದಾಗ ಮಾತ್ರ ಕನಿಷ್ಟ ಮಾತ್ರೆಯನ್ನು ಸಹ ತೆಗೆದುಕೊಳ್ಳಲು ಬೇಸರಿಸಿಕೊಳ್ಳುವ ಸೋಮಾರಿ!! ಅವನಿಗೆ ಒತ್ತಾಯ ಮಾಡಿ ಊಟ ಮಾಡಿಸಿ ಮಾತ್ರೆ ಕೊಟ್ಟು ಆರೈಕೆ ಮಾಡುವ ಜೀವವೊಂದು ಜೊತೆಗಿದ್ದರೆ ಸರಿ ಹೋಗುತ್ತಿತ್ತೇನೋ.. ಆದರೆ ಅವನೋ ತನ್ನ ಒಂಟಿತನವನ್ನೂ ಶಾಪವಲ್ಲ ವರವೆಂದು ಭಾವಿಸಿ,, ಅದಕ್ಕೆ ಏಕಾಂತವೆಂದು ನಾಮಕರಣ ಮಾಡಿ ಅದನ್ನೂ ಆನಂದಿಸುವ ಅಂತರ್ಮುಖಿ. ದಣಿದ ದೇಹಕ್ಕೆ ವಿಶ್ರಾಮ ಸಿಕ್ಕರೆ ಸಾಕಲ್ಲವಾ ಎಂದುಕೊಂಡು ಹಾಡು ಕೇಳುತ್ತಾ ಕೆಲವು ಗಂಟೆ ಕಣ್ಣು ಮುಚ್ಚಿ ಮಲಗಿ ಬಿಡುವುದು ಅವನು ರೂಢಿಸಿಕೊಂಡ ಅಭ್ಯಾಸ. ಆದರೆ ಆ ನಿದ್ರೆಗೆ ಭಂಗ ತಂದವರಿಗೆ ಮಾತ್ರ ಆ ಕ್ಷಣ ಅವನ ಉಗ್ರ ರೂಪದ ಉಚಿತ ನೈಜ ದರ್ಶನವಾಗುತ್ತಿತ್ತು. ಇನ್ನೊಮ್ಮೆ ಅವರು ಅವನನ್ನು ಮಾತಾಡಿಸಲು ಹೆದರುವಂತೆ ಹಸನಾಗಿ ಮಾತಿನಲ್ಲೇ ತಳಿಸಿ ಬಿಡುತ್ತಾನೆ. ಅವನ ಸ್ವಭಾವ ತಿಳಿದವರು ಯಾರೂ ಅಂತಹ ಸಂದರ್ಭದಲ್ಲಿ ಅವನ ಜೊತೆ ಮಾತಾಡುವುದು ಇಲ್ಲ ಅವನ ಬಳಿಗೆ ಸುಳಿಯುವುದೂ ಇಲ್ಲ.
ಅವನು ಹಾಗೆ ಮಲಗಿ ಇಪ್ಪತ್ತು ನಿಮಿಷ ಕೂಡ ಆಗಿರಲಿಲ್ಲ ಆಗ ರಿಂಗಣಿಸಿತ್ತು ಅವನ ನಿಷ್ತಂತು ದೂರವಾಣಿ. ಪಿಚ್ಚೆನಿಸಿತಾದರೂ ಯಾರೋ? ಏನು ಮುಖ್ಯವಾದ ಕೆಲಸವೋ? ಎಂದುಕೊಂಡು ಕರೆ ಸ್ವೀಕರಿಸಿ ಹಲೋ.. ಎಂದಿದ್ದ ಕಣ್ಣು ಮುಚ್ಚಿಕೊಂಡೇ. "ಹಲೋ... ಏನ್ ಮಾಡ್ತಿದೀಯಾ?" ಆಕಡೆಯಿಂದ ಮುದ್ದಾಗಿ ಕೇಳಿದಳು ಹರಿಣಿ.
"ಹರಿ..ನಾನು ಈಗ ಮಲಗಿದ್ದೀನಿ. ನಿನಗೆ ಆಮೇಲೆ ಕಾಲ್ ಮಾಡ್ತಿನಿ. ಬಾಯ್" ಎಂದು ಕರೆ ಕಡಿತಗೊಳಿಸಿ ಮಗ್ಗಲು ಬದಲಿಸಿ ದಿಂಬು ಎದೆಗೊತ್ತಿಕೊಂಡು ಮಲಗಿದ. ಮತ್ತೆರಡು ನಿಮಿಷಗಳಲ್ಲೇ ಪುನಃ ಕರೆ ಮಾಡಿದ್ದಳು ಹರಿಣಿ. ಪ್ರಸನ್ನ ಬೇಸರದಿಂದ ದಿಂಬನ್ನು ಕಿವಿಗೊತ್ತಿ ಮಲಗಿದ. ಪದೇ ಪದೇ ಕರೆ ಬರುತ್ತಲೇ ಇದ್ದುದರಿಂದ ಅದರ ಸದ್ದಿನಿಂದ ಇರಿಸು ಮುರಿಸುಗೊಂಡ ಅವನ ಕೋಪ ಕೆರಳಿ ಸಿಟ್ಟಿನಿಂದ ಧಗ್ಗನೆ ಎದ್ದು ಕುಳಿತು ದಿಂಬು ನೆಲಕ್ಕೆಸೆದು. ಕರೆ ಸ್ವೀಕರಿಸಿ "ಏನೇ.... ಒಂದು ಸಲಕ್ಕೆ ಅರ್ಥ ಆಗಲ್ವಾ ನಿನಗೆ.. ಹೇಳಿದೆ ತಾನೇ ಆಮೇಲೆ ಕಾಲ್ ಮಾಡ್ತಿನಿ ಅಂತ.. ಪರೀಕ್ಷೆ ಟೈಮಲ್ಲಿ ಓದೋದು ಬಿಟ್ಟು ಏನ್ ನಿನ್ನ ತಲೆಹರಟೆ! ನಿನ್ನ ಕಾಟ ತಡಿಯೋಕಾಗ್ದೆನೇ ಹರ್ಷ ಬೇಗ ಹೋದ ಅನ್ಸುತ್ತೆ... ಈಗ ನನ್ನನ್ನು ಕಳಿಸಿಬಿಡು ಮೇಲೆ...ಇನ್ನೊಮ್ಮೆ ಕಾಲ್ ಮಾಡಿದ್ರೆ ನನ್ನ ಕೈಯಲ್ಲಿ ಒದೆ ತಿಂತಿಯಾ.. ಹುಷಾರು!! ಇಡೇ ಫೋನ್ ನಾ.. " ಎಂದು ಮನ ತೋಚಿದಂತೆ ಬೈದು ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿಬಿಟ್ಟ. ಅದಾದ ಕೆಲವೇ ನಿಮಿಷಕ್ಕೆ ಪ್ರಸನ್ನ ತುಸು ನಿದ್ರೆಗೆ ಜಾರುವಾಗಲೇ ಬಾಗಿಲ ಗಂಟೆ ಮೊಳಗಿತು. ಬೇಸರದಿಂದ ಪಿಚ್ಚೆಂದ ಪ್ರಸನ್ನ ಎದ್ದು ಹೋಗದಷ್ಟು ಹೊತ್ತು ಅದು ಗುಂಯ್ ಗುಟ್ಟುತ್ತಲೇ ಇತ್ತು.
'ಈ ಹರಿಗೆ ಎಷ್ಟು ಹೇಳಿದ್ರು ಅಷ್ಟೇ.. ಗೋರ್ಕಲ್ಲ ಮೇಲೆ ನೀರು ಹುಯ್ದಹಾಗೆ' ಎಂದು ಹಳಿಯುತ್ತ.. ಎದ್ದು ಬಂದು ಬಾಗಿಲು ತೆರೆದ. ಎದುರಿಗೆ ಅವನು ಎಣಿಸಿದಂತೆ ಹರಿಣಿ ಇರದೆ ಅವರ ಅಮ್ಮ ಸುಲೋಚನ ಮುಗುಳ್ನಗುತ್ತಾ ನಿಂತಿದ್ದನ್ನು ನೋಡಿ ಬಹಳ ಆಶ್ಚರ್ಯವಾಗಿತ್ತು ಅವನಿಗೆ. ಎಂದೂ ಅವನ ರೂಮಿಗೆ ಬರದಿದ್ದವರು ಇವತ್ತೇನು ಹೀಗೆ ಅಚಾನಕ್ಕಾಗಿ ಬಂದಿದ್ದಾರೆ ಎಂದು ಅಚ್ಚರಿಯಿಂದ "ಅಮ್ಮಾ...ನೀವು ಇಲ್ಲಿ..? ಬನ್ನಿ ಒಳಗೆ..." ಸ್ವಾಗತಿಸಿದ್ದ.
"ಹ್ಮ್... ಮಲಗಿದ್ದಿಯಾ..?? ನಿನಗೆ ಆರೋಗ್ಯ ಹುಷಾರಿಲ್ಲ.. ನಿನ್ನ ಯೋಗಕ್ಷೇಮ ನೋಡಿಕೊಳ್ಳಲು ಯಾರಿಲ್ಲ.. ನಾನೇ ಹೋಗ್ತಿನಿ ಅಂತ ನಮ್ಮ ಜಿಂಕೆಮರಿ ಮನೆಯೆಲ್ಲ ರಂಪ ಮಾಡಿ ಹಾರಾಡಿ ಬಿಟ್ಟಳು ಕಣೋ.. ತಾನೇ ಬಂದು ನಿನ್ನ ನೋಡ್ಕೊಳ್ತಾಳಂತೆ.. ಬೇಡ ಪರೀಕ್ಷೆ ಇದೆ ಓದ್ಕೋ... ನಾನೇ ಹೋಗಿ ನಿನ್ನ ಜೊತೆಗೆ ಇದ್ದು ನೋಡ್ಕೊತಿನಿ ಅಂತ ಸಮಾಧಾನ ಮಾಡಿ ಬರುವಷ್ಟರಲ್ಲಿ ಸಾಕು ಸಾಕಾಯ್ತು ನೋಡು.." ಎಂದು ತಾವು ತಂದಿದ್ದ ಹಾಟ್ ಬಾಕ್ಸನ್ನು ಟೇಬಲ್ ಮೇಲಿಟ್ಟರು. "ಏನಾದರೂ ತಿಂದೆಯಾ? ಹಾಗೆ ಮಲಗಿದ್ದಿಯಾ? " ಅವರು ಕೇಳುತ್ತಿದ್ದರೆ..
ಪ್ರಸನ್ನನಿಗೆ ಮೊದಲ ಬಾರಿಗೆ ತನ್ನ ಕೋಪದ ಮೇಲೆಯೇ ವಿಪರೀತ ಕೋಪ ಬಂದಿತ್ತು. ಆ ಮಗುವಿಗೆ ಇರುವಷ್ಟು ವಿವೇಚನೆ ತನಗೆ ಇಲ್ಲದೇ ಹೋಯಿತಲ್ಲ ಎಂದು ಒಳಗೆ ನೊಂದುಕೊಂಡ. ತಾನು ಅವಳಿಗೆ ಬೈದಿದಕ್ಕೆ ಬೇಜಾರುಗೊಳ್ಳದೆ ತನ್ನ ಕ್ಷೇಮವನ್ನು ಬಯಸಿತ್ತು ಆ ಪುಟ್ಟ ಜೀವ.. ಛೇ ತಪ್ಪು ಮಾಡಿದೆ!! ಹಲುಬಿದ.
"ಏನು ಯೋಚನೆ ಮಾಡ್ತಿದೀಯಾ...? ನೀನು ಏನೂ ತಿಂದಿರಲ್ಲ ಬಿಡು ನನಗೊತ್ತು.. ಬಾ ಊಟ ಮಾಡಿ, ಮೆಡಿಸಿನ್ ತಗೊಂಡು ಮಲಗುವಂತೆ.." ಒಳಗೆ ಹೋಗಿ ತಟ್ಟೆ ಚಮಚ ತೆಗೆದುಕೊಂಡು ಬಂದು ತಾವೇ ಬಡಿಸಿ ತುತ್ತು ಕಲಿಸಿ ಅವನ ಮುಂದೆ ಹಿಡಿದಿದ್ದರು. ಅಷ್ಟೊತ್ತು ಒಂದು ಮಾತು ಆಡದೇ ಮೂಕಪ್ರೇಕ್ಷಕನಂತೆ ಅವರನ್ನೇ ನೋಡುತ್ತಿದ್ದ ಪ್ರಸನ್ನನಿಗೆ ಗಂಟಲು ಕಟ್ಟಿ ಮಾತು ಬಾರದಂತಾಗಿತ್ತು. ಯಾವ ನಿರಾಕರಣೆ ಇಲ್ಲದೆ ನಿರಾಯಾಸವಾಗಿ ಬಾಯಿ ತೆರೆದಿದ್ದ. ಗಂಟಲೊಳು ಜಾರಿದ ಮೊದಲ ಕೈ ತುತ್ತು ಅಮೃತಸಮಾನವಾಗಿತ್ತು..
ಹೆಸರೇನಿಡಬೇಕು ಈ ಅರಿಯದ ಬಾಂಧವ್ಯಕ್ಕೆ...!! ಮನಸ್ಸು ಪ್ರಶ್ನಿಸಿತು. ಉತ್ತರ ಸಿಕ್ಕಿತು.. ಊಟದ ನಂತರ ಅವರ ಮಡಿಲಲ್ಲಿ ಮಲಗಿಸಿಕೊಂಡು ತಲೆ ಒತ್ತುತ್ತಾ ಕೂದಲು ನೇವರಿಸುತ್ತ ಕೇಳಿದರು "ಕೃಷ್ಣನ ತಾಯಿ ಯಾರಂತ ಗೊತ್ತಾ ನಿನಗೆ..?" ಅನವಶ್ಯಕ ಪ್ರಶ್ನೆಗೆ ವಿಚಿತ್ರವಾಗಿ ನೋಡಿ "ಹ್ಮೂ.. ಗೊತ್ತು ಯಶೋಧೆ..!!" ಹೇಳಿದ.
"ದೇವಕಿ ಅಲ್ವೇನೋ.. ನಿಜವಾದ ತಾಯಿ..," ಅವರ ಮಾತಿಗೆ ಅವನು ಸುಮ್ಮನೆ ಕಣ್ಮುಚ್ಚಿದ.
"ತಾಯಿ ಮಗನ ಬಾಂಧವ್ಯ ಗರ್ಭದಿಂದಲೇ ಆರಂಭವಾಗುವ ಹಾಗಿದ್ದರೆ ಕೃಷ್ಣನ ತಾಯಿ ಅಂದಾಕ್ಷಣ ಯಶೋಧೆ ಹೆಸರೇ ಮೊದಲು ಬರುತ್ತಿತ್ತಾ..?" ಅವರ ಮಾತಿನ ಒಳಾರ್ಥ ಅರಿತುಕೊಂಡ ಪ್ರಸನ್ನ ತಕ್ಷಣ ಬೆರಗಾಗಿ ಅವರನ್ನೇ ನೋಡಿದ."ಕೆಲವೊಮ್ಮೆ ಮನಸ್ಸಿನಿಂದ ಬೆಸೆಯುವ ಸಂಬಂಧಗಳು, ರಕ್ತಸಂಬಂಧಕ್ಕಿಂತ ಗಾಢವಾಗಿ ಮನಸ್ಸಿಗೆ ಹತ್ತಿರವಾಗಿ ಬಿಡುತ್ತಲ್ವೆನೋ? ಅದಕ್ಕೆ ಹೆಸರೇನು ಅಂತ ಹುಡುಕಬಾರದು, ಬದಲಾಗಿ ಯಾವತ್ತೂ ದೂರಾಗದಂತೆ ಗಟ್ಟಿಯಾಗಿ ಕೈ ಹಿಡಿದುಕೊಂಡು ಬಿಡಬೇಕು,, ಪ್ರಸನ್ನ... ನನಗೆ ನೀನು ಬೇರೆಯಲ್ಲ ಹರ್ಷ ಬೇರೆಯಲ್ಲ.. ಅವನನ್ನು ಕಳೆದುಕೊಂಡ ಮೇಲೆ ಅವನ ಸ್ಥಾನ ತುಂಬಲು ದೇವರೇ ನಿನ್ನನ್ನ ನಮ್ಮ ಹತ್ರ ಕಳಿಸಿದ್ದಾನೆ ಅನಿಸುತ್ತೆ.. ಇನ್ಮುಂದೆ ಕನಸಲ್ಲೂ ನಮ್ಮಿಂದ ದೂರ ಹೋಗೋ ಮಾತಾಡಬೇಡ.. ಬರೀ ಬಾಯಿ ಮಾತಲ್ಲಿ ಅಮ್ಮ ಅಂತ ಕೂಗಿದ್ರೆ ಸಾಲದು, ಮನಸ್ಸಲ್ಲೂ ಅಮ್ಮನ ಮೇಲೆ ಪ್ರೀತಿ ಇರಬೇಕು.. " ಎಂದಾಗ ಅವನು ಪ್ರಶ್ನಾರ್ಹ ದೃಷ್ಟಿಯಿಂದ ಅವರನ್ನು ನೋಡಿದ. "ಇನ್ನೇನೂ ಮತ್ತೆ ಹುಷಾರಿಲ್ಲದಾಗ ಕೂಡ ಅಮ್ಮ ನೆನಪಾಗಬೇಕಲ್ವಾ.. ಹೀಗೆ ಸುಮ್ಮನೆ ಮಲಗಿದ್ರೆ ನನಗೆ ಹೇಗೆ ಗೊತ್ತಾಗುತ್ತೆ ಹೇಳು... ಇನ್ಮುಂದೇ ನೀನು ನನ್ನ ಮಗ.. ನಾನು ನಿನ್ನ ಅಮ್ಮ!! ಅದು ನಿನ್ನ ಕುಟುಂಬ.. ನಿನ್ನ ಕಷ್ಟದಲ್ಲಿ ನಮಗೂ ಪಾಲಿದೆ... ನಿನ್ನ ಕಷ್ಟ ಸುಖ ದುಃಖ.. ನಿನಗೆ ಏನೇ ಆದರೂ ನನ್ನ ಹತ್ರ ಹೇಳ್ಬೇಕು ಗೊತ್ತಾಯ್ತಾ.." ಗದರಿದರು. ಈ ರೀತಿಯ ಪ್ರೀತಿ ಮಮಕಾರ ಆತನಿಗೆ ಹೊಸತಾಗಿತ್ತು. ಸಂತೋಷಕ್ಕೆ ಅವನ ಕಣ್ಣಿಂದ ಜಾರಿದ ಹನಿ ಅವರ ಮೆತ್ತನೆಯ ಸೀರೆಯ ಮಡಿಲಲ್ಲಿ ಹ್ಮೂನಮ್ಮ... ಎಂಬಂತೆ ಅವಚಿಕೊಂಡಿತು. ಹಾಗೆ ಮಲಗಿದವನು ಆಳವಾದ ನಿದ್ರೆಗೆ ಸರಿದಿದ್ದ.
ಅದೆಷ್ಟೋ ಸಮಯದ ನಂತರ ಎಚ್ಚರಗೊಂಡವನು ಹಿಂದೆ ನಡೆದದ್ದೆಲ್ಲಾ ಕನಸಾ.. ಎಂಬಂತೆ ತನ್ನನ್ನು ತಾನೇ ಪ್ರಶ್ನಿಸಿಕೊಂಡಿದ್ದ. ಹೊರಗೆ ಕುರ್ಚಿಯ ಮೇಲೆ ಯಾವುದೋ ಪುಸ್ತಕ ಓದುತ್ತಾ ಕುಳಿತಿದ್ದ ಸುಲೋಚನರನ್ನು ನೋಡಿದಾಗ ಮತ್ತೆ ಅದೆಲ್ಲವೂ ನಿಜವೆನ್ನಿಸಿತು. ದೇಹಸ್ಥಿತಿ ಕೂಡ ಸ್ವಲ್ಪ ಮಟ್ಟಿಗೆ ರಿಲೀಫ್ ಎನ್ನಿಸಿತು. ಕಣ್ಣು ಒರೆಸಿಕೊಳ್ಳುತ್ತ ಬೆಡ್ ಮೇಲಿಂದ ಎದ್ದು ಟೈಮ್ ನೋಡಿದ 10.36pm.
"ಅಮ್ಮಾss.. ತುಂಬಾ ರಾತ್ರಿಯಾಗಿದೆ. ಬನ್ನಿ ನಾನು ನಿಮ್ಮನ್ನು ಮನೆಗೆ ಡ್ರಾಪ್ ಮಾಡ್ತಿನಿ"
"ಹೇಗಿದೆ ಈಗ ತಲೆನೋವು..? ನೀನಿವಾಗ ಮಲಗು. ನಾನು ಇಲ್ಲೇ ಇದ್ದು ಬೆಳಿಗ್ಗೆ ಹೋಗ್ತಿನಿ.. ಆಯ್ತಾ" ಕೆನ್ನೆ ಸವರಿದರು
"ಅಯ್ಯೋ ಮಾ... ಟೆಂಪರ್ವರಿ ತಲೆನೋವಿಗೆ ಯಾಕಷ್ಟೊಂದು ಯೋಚನೆ? ಬಿಟ್ಟಾಕಿ.. ಬನ್ನಿ ಮನೆಗೆ ಹೋಗೋಣ. ನಾನು ನನ್ನ ಸ್ವೀಟಿ ಜೊತೆ ಸ್ವಲ್ಪ ಮಾತಾಡೋದಿದೆ.."
"ಸರಿ. ಆದರೆ ಒಂದು ಕಂಡಿಷನ್,, ಇವತ್ತು ಅಲ್ಲಿಯೇ ಮಲಗಬೇಕು.." ಎಂದು ತಾಕೀತು ಮಾಡಿದರು ಸುಲೋಚನ. ಅವರ ಮಾತಿಗೆ ಸಮ್ಮತಿ ಸೂಚಿಸಿ ಅವರನ್ನು ಕರೆದುಕೊಂಡು ಬೈಕ್ ಮೇಲೆ ಮನೆಗೆ ಬಂದಿಳಿದವನೇ ನೇರವಾಗಿ ಹರಿಣಿಯ ಕೋಣೆಗೆ ಹೊಕ್ಕಿದ್ದ. ಅವಳು ಅಲ್ಲಿರಲಿಲ್ಲ. ಮನೆಯೆಲ್ಲ ಸುತ್ತಾಡುವಾಗ ಹರ್ಷನ ಕೋಣೆಯಲ್ಲಿ ಬೆಳಕು ಕಂಡು ಅಲ್ಲಿಗೆ ಹೋಗಿ ನೋಡಿದ. ಹರ್ಷನ ಕಂಪ್ಯೂಟರ್ ಮುಂದೆ ಕುಳಿತು ಯಾವುದೋ ವಿಷಯದ ಬಗ್ಗೆ ಗಹನವಾದ ಅಧ್ಯಯನ ನಡೆಸಿದ್ದಳು ಹರಿಣಿ. "ಹಾಯ್ ಸ್ವೀಟಿ..." ಎಂದವನೇ ಹಿಂದಿನಿಂದ ಅವಳ ಕೆನ್ನೆ ಹಿಂಡಿ ಎಚ್ಚರಿಸಿದ. "ಪಚ್ಚು....ಎಂದು ಎದ್ದು ಜೋರಾಗಿ ಅಪ್ಪಿಕೊಂಡವಳೇ.. " ಯಾವಾಗ ಬಂದೇ?? ಹುಷಾರಾಯ್ತಾ...? ಏನಾಗಿತ್ತು ನಿನಗೆ? ಯಾಕ್ ಮಲಗಿದ್ದೆ? ನೀನು ಹಾಗೆಲ್ಲ ಸುಮ್ ಸುಮ್ಮನೆ ಮಲಗಲ್ಲವಲ್ಲಾ? ಈಗ ಹೇಗಿದೆ? " ಪ್ರಶ್ನೆಗಳ ಮಳೆ ಸುರಿಸಿದಳು.
"ಇಷ್ಟರಲ್ಲಿ ಯಾವುದಕ್ಕೆ ಮೊದಲು ಉತ್ತರಿಸಲಿ? ಹ್ಮ್.. ನನಗೇನಾಗಿಲ್ಲ. ಐಮ್ ಫೈನ್! ಮತ್ತೆ ಸಾರಿ ಕಣೋ ಬಂಗಾರ... ಕೋಪದಲ್ಲಿ ಏನೇನೋ ಅಂದೆಯಲ್ವಾ.. ಬೇಜಾರಾಯ್ತಾ"
"ಟ್ರ್ರ್ರ್ರ್.. ಬೇಜಾರೇನಿಲ್ಲ. ಪ್ರೀತಿ ಇದ್ದಲ್ಲಿ ಜಗಳ ಕಾಮನ್ ಅಂತೆ. ನಮ್ಮ ಹರ್ಷ ಹೇಳ್ತಿತ್ತು.."
"ಹರ್ಷ ಹೇಳ್ತಿತ್ತಾ.. ಅವನೇನೂ ಕುರಿನಾ ಮೇಕೆನಾ..!!"
"ನಾವು ತುಂಬಾ ಪ್ರೀತಿಸೋರನ್ನ,, ಪ್ರೀತಿಯಿಂದ ಏನೇ ಕರೆದ್ರೂ.. ಹೇಗೆ ಕರೆದ್ರೂ ಚೆಂದವಂತೆ.. ಅದನ್ನೂ ನಮ್ಮ....."
"ಗೊತ್ತಾಯ್ತು.. ಗೊತ್ತಾಯ್ತು.. ಹೌದು ಹರ್ಷನ ರೂಮಲ್ಲಿ ಏನ್ ರೀಸರ್ಚ್ ನಡೆಸಿದ್ದೆ.. ಏನಿದೆಲ್ಲಾ ಫೈಲ್ಸ್, ಪೇಪರ್ಸ್ ಹೀಗೆ ಹರಡಿದಿಯಾ..?" ಹರವಿದ ಫೈಲ್ ಗಳನ್ನು ನೋಡಿ ಕೇಳಿದ.
"ಕೆಲವು ನೋಟ್ಸ್ ಪ್ರಿಂಟೌಟ್ ತಗೋಬೇಕಿತ್ತು,, ಅದ್ಕೆ ಬಂದಿದ್ದೆ. ಅಲ್ಲಿ ಮೇಲ್ಗಡೆ B2B ಪೇಪರ್ ಇದ್ವು ಅಂತ ಪೇಪರ್ ಎಳೆದು ಕೊಳ್ಳುವಾಗ ಅದರ ಮೇಲಿದ್ದ ಫೈಲ್ ಗಳು ದುಬುದುಬು ಎಂದು ತಲೆ ಮೇಲೆ ಒಂದಾದರೊಂದರಂತೆ ಬಿದ್ದು ಬಿಟ್ವು..."
"ಏನೋ ಒಂದು ಕಿತಾಪತಿ ಮಾಡೇ ಇರ್ತಿಯಲ್ವಾ ನೀನು.. ಸರಿ ಹೋಗು ನಿನ್ನ ರೀಸರ್ಚ್ ಮುಂದ್ವರೆಸು.." ಎಂದು ಹರಿಣಿಗೆ ಪೇಪರ್ ಕೊಟ್ಟು ತಾನು ಫೈಲ್ ಗಳನ್ನು ಮರಳಿ ಜೋಡಿಸಿ ಇಡಲು ಅಣಿಯಾಗಿದ್ದ. ಒಂದೊಂದೇ ಫೈಲ್ ನೋಡುತ್ತಾ ಮೇಲೆ ಇಡುವಾಗ ಹರ್ಷನ ಮೆಡಿಕಲ್ ಫೈಲ್ ಅವನ ಕೈ ಸೇರಿತು. ಅವತ್ತು ನೋಡದೆ ಇದ್ದದ್ದು ನೆನಪಾಗಿ ಇಂದು ತೆಗೆದು ನೋಡತೊಡಗಿದ್ದ. ಇಷ್ಟು ದಿನಗಳ ಕಾಲ ರಹಸ್ಯವಾಗಿ ಅಡಗಿದ್ದ ಗುಟ್ಟೊಂದು ರಟ್ಟಾಗುವ ಸಮಯ ಸನ್ನಿತವಾಗಿತ್ತು.
ಒಂದೊಂದೇ ಪುಟಗಳನ್ನು ತಿರುವಿ ಹಾಕಿ ನೋಡಿ ಫೈಲ್ ಮುಚ್ಚಿ ಮೇಲೆ ಇಡುವಾಗ ಏನೋ ನೋಡಿದಂತೆ ಬೆಚ್ಚಿ ಫೈಲ್ ಮತ್ತೆ ತೆಗೆದು ಓದಿದ ಪ್ರಸನ್ನ ಇಡೀ ಫೈಲ್ ತಡಕಾಡಿ ಕೊನೆಗೆ ಪ್ಯಾಥೊಲೊಜಿಸ್ಟ್ ಹೆಸರು ಹಸ್ತಾಕ್ಷರದ ಕೆಳಗೆ ಕಣ್ಣು ದೌಡಾಯಿಸಿದ್ದ. ಡಾ.ಪಟ್ಟಾಭಿರಾಮ್!! ಬಾಯಿಯಿಂದ ಈ ಹೆಸರು ಹೊರಟಿತ್ತು. ಒಂದೇ ಸಮನೆ ಅವನ ರಕ್ತ ಕುದಿಯತೊಡಗಿತ್ತು. ನರಗಳು ಬಿಗಿಯಾದವು. ಡಾ.ಪಟ್ಟಾಭಿರಾಮ್ ಇವನು ಖೋಟಾ ಮರಣ ಪ್ರಮಾಣ ಪತ್ರ, ನಕಲಿ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಸೃಷ್ಟಿಸುವದರಲ್ಲಿ ಅತ್ಯಂತ ಕುಖ್ಯಾತ ವೈದ್ಯ!! ಅವನು ಸೃಷ್ಟಿಸಿದ ಪತ್ರಗಳು ನೈಜ ಪ್ರಮಾಣ ಪತ್ರಕ್ಕೆ ಸವಾಲೆಸೆಯುವ ಹಾಗೆ ಇರುತ್ತಿದ್ದುದ್ದು ಅವನ ಕೈ ಚಳಕದ ಒಂದು ಜಲಕ್ಕು..!! ಜೀವಂತ ಇರುವಾಗಲೇ ಜೀವವಿಮಾ ನಿಗಮದಿಂದ ಹಣ ದೋಚಲು ಎಷ್ಟೋ ಜನರಿಗೆ ಅವರ ಮರಣ ಪ್ರಮಾಣ ಪತ್ರವನ್ನು ಸೃಜಿಸಿ ಕೊಟ್ಟು ತಾನು ಹಣಕಾಸಿನ ವಿಷಯದಲ್ಲಿ ಸ್ಥಿತಿವಂತನಾಗಿದ್ದ ಈತನ ಅವ್ಯವಹಾರಗಳು ಒಮ್ಮೆ ಪ್ರಸನ್ನನ ಕೈಗೆ ಸಿಕ್ಕು ಬಿದ್ದು ಕೆಲಸದಿಂದ ವಜಾ ಆಗಿ ಕಾರಾಗೃಹ ಸೇರಿದ್ದ. ಅದಾದನಂತರ ಅವನ ಬಗ್ಗೆ ಯಾವ ಸುಳಿವು ಇರಲಿಲ್ಲ ಪ್ರಸನ್ನನಿಗೆ. ಈಗ ಹೀಗೆ ಅವನ ಹೆಸರನ್ನು ನೋಡಿ ಪ್ರಸನ್ನನ ಮನದಲ್ಲಿ ಅನುಮಾನಗಳು ಓಡಾಡಿದವು. ಮತ್ತೊಮ್ಮೆ ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಪ್ರಸನ್ನನಿಗೆ ಅವು ನಕಲಿ ದಾಖಲೆಗಳೆಂಬುದು ಖಚಿತವಾಗಿತ್ತು. 'ಹಾಗಾದರೆ ಹರ್ಷ..? ನಿಜವಾಗಿಯೂ ಸತ್ತಿದ್ದರೆ ಸುಳ್ಳು ದಾಖಲೆಗಳನ್ನು ಸೃಷ್ಟಿಸುವ ಅಗತ್ಯವಿರುತ್ತಿರಲಿಲ್ಲ..!! ಅಂದರೆ ಹರ್ಷ ಸತ್ತಿಲ್ಲ.. ಹಾಗಾದರೆ ಏನಾದ? ಅವನಿಗೆ ಆ್ಯಕ್ಸಿಡೆಂಟ್ ಆಗಿದ್ದಾದ್ರೂ ನಿಜಾನಾ.. ಅಥವಾ ಅದು ಸುಳ್ಳಾ..? ಎಂದು ಯೋಚಿಸಿದವನೇ ಅವನ ಮೆಡಿಕಲ್ ರಿಪೋರ್ಟ್ಸ್ ಗಳನ್ನು ತಡಕಾಡಿದ. ಫೈಲ್ ಪೂರ್ಣವಾಗಿ ನೋಡಿದವನೇ ಹರಿಣಿಗೆ ಹರ್ಷನ ಬ್ಲಡ್ ಗ್ರುಪ್ ಯಾವುದೆಂದು ಕೇಳಿದ್ದ. ಅವಳು ಉತ್ತರಿಸಿದಳು. "ಹರ್ಷನಿಗೆ ಲಂಗ್ಸ್ ಇನ್ಫೆಕ್ಷನ್ ಏನಾದ್ರೂ ಇತ್ತಾ...?" ಕೇಳಿದ.
"ನೋ..ನೋ ನನ್ನ ಬ್ರೋ.. ಫಿಟ್ ಆ್ಯಂಡ್ ಫೈನಾಗಿದ್ದ. ಯಾಕೆ? ಏನಾಯ್ತು?" ಹರ್ಷನ ಬಗ್ಗೆ ಇನ್ನೂ ಕೆಲವು ಮಾಹಿತಿಗಳನ್ನು ಕೇಳಿ ತಿಳಿದ ನಂತರ ಅವನ ಅನುಮಾನ ಬಲವಾಗಿತ್ತು. ಅದು ಹರ್ಷನ ಮೆಡಿಕಲ್ ರಿಪೋರ್ಟ್ ಅಲ್ಲವೇ ಅಲ್ಲ. ಡೆತ್ ಸರ್ಟಿಫಿಕೇಟ್ ಕೂಡ ಫೇಕ್! ಹಾಗಾದರೆ ಹರ್ಷನಿಗೆ ಆ್ಯಕ್ಸಿಡೆಂಟ್ ಆಗಿದ್ದಾದ್ರೂ ನಿಜಾನಾ.. ಅಥವಾ ಅದು ಸುಳ್ಳಾ..??
"ಏನಾಯ್ತು ಪಚ್ಚು.." ಹರಿಣಿ ಎಚ್ಚರಿಸಿದಳು.
"ಏನಿಲ್ಲ. ನೀ ಓದ್ಕೋ ಹೋಗು.." ಎಂದು ಫೈಲ್ ಅಲ್ಲಿಯೇ ಇಟ್ಟು ವಿನಾಯಕ್ ಅವರ ಕೋಣೆಗೆ ಬಂದಿದ್ದ. ಅವರು ಯಾವುದೋ ಫೈಲ್ ನೋಡುತ್ತಾ ಕುಳಿತಿದ್ದವರು ಪ್ರಸನ್ನನನ್ನು ನೋಡುತ್ತಲೇ ಅದನ್ನು ಬದಿಗಿಟ್ಟು "ಬಾರೋ.. ಏನು ತುಂಬಾ ಅಪರೂಪ ಆಗ್ತಿದಿಯಾ ಈಗೀಗ.."
"ಕೆಲಸದ ಒತ್ತಡ ಅಂಕಲ್.. ನಿಮಗೂ ಸೇಮ್ ಅಲ್ವಾ..ಹರ್ಷ ಇದ್ದಿದ್ದರೆ ನಿಮಗೂ ಕೆಲಸದ ಭಾರ ಸ್ವಲ್ಪ ಕಡಿಮೆನಾದ್ರೂ ಆಗ್ತಿತ್ತು.." ಕೇಳುತ್ತಾ ಅವರ ಭುಜಕ್ಕೆ ಕೈ ಹಾಕಿದ. ತನ್ನ ಮಾತಿನಿಂದ ಅವರಿಗೆ ನೋವಾಗುತ್ತದೆಂದು ಗೊತ್ತಿತ್ತು. ಆದರೂ ವಿಷಯ ಕೆದಕುವುದು ಅನಿವಾರ್ಯವಾಗಿತ್ತು. ಅವರು ಮರುಮಾತಾಡದೆ ತಲೆ ಕೆಳಹಾಕಿದರು.
"ನೀವು ಹರ್ಷನ್ನ ಕೊನೆಯ ಸಲ ಯಾವಾಗ ಅಂಕಲ್ ನೋಡಿದ್ದು."
"ಅವತ್ತು... ರಾತ್ರಿ ಮುಂಬೈಗೆ ಹೋಗುವಾಗ ಅವನನ್ನು ಏರ್ಪೋರ್ಟ್ ಗೆ ಡ್ರಾಪ್ ಮಾಡೋಕೆ ಹೋದಾಗ.." ಅವರ ಕಣ್ಣು ಮಂಜಾಯಿತು. ಪ್ರಸನ್ನನ ಅರಿವಿಗೆ ಬಂದಿತಾದರೂ ಅದೀಗ ನಗಣ್ಯ.
"ಮತ್ತೆ ಪೋಸ್ಟ್ ಮಾರ್ಟಮ್ ಪೂರ್ವದಲ್ಲಿ body identify ಮಾಡೋವಾಗ ಅವನನ್ನ ನೋಡಲಿಲ್ಲವಾ..?"
"ಹ್ಮ್.. ತೋರಿಸಿದರು ದೂರದಿಂದ.. ಸುಮ್ಮನೆ ಮಲಗಿದ್ದಾನೆನೋ ಅನ್ನುವ ಹಾಗನ್ನಿಸಿತು. ಈಗಲೂ ಅವನಿಲ್ಲ ಎಂದು ನಂಬೋಕೆ ಆಗ್ತಿಲ್ಲ. ಇಲ್ಲೇ ಎಲ್ಲೋ ಹೋಗಿದಾನೆ, ಇನ್ನೂ ಸ್ವಲ್ಪ ಹೊತ್ತಿಗೆ ಬಂದು ಬಿಡ್ತಾನೆ ಹಾಗನ್ನಿಸುತ್ತೆ.. ಆದರೆ.." ನೊಂದುಕೊಂಡರು.
"ಅಂಕಲ್ ಅದು ಹರ್ಷಾನೇ ಅಂತಿರಾ.. ಅಂದರೆ ಗಾಯ ಆಗಿ ಮುಖ ಗುರುತು ಸಿಕ್ತೋ ಇಲ್ವೋ.. ಅಂತ" ಸ್ವಲ್ಪ ತಡವರಿಸಿ ಕೇಳಿದ
"ತಲೆಗೆ ಬ್ಯಾಂಡೇಜ್ ಸುತ್ತಿದ್ದು ಬಿಟ್ಟರೆ ಆ ರೀತಿ ಗುರುತು ಸಿಗದ ಹಾಗೆ ಏನೂ ಆಗಿರಲಿಲ್ಲ. ಅದು ನಮ್ಮ ಹರ್ಷನೇ... ಅದರಲ್ಲಿ ಅನುಮಾನವೇ ಇಲ್ಲ.. ಆದರೆ ಅಲ್ಲಿಯ ಸ್ಟಾಫ್ ವರ್ತನೆ ಸ್ವಲ್ಪ ವಿಚಿತ್ರ ಎನಿಸಿತ್ತು ನನಗೆ. ಒಳಗೆ ಹರ್ಷನ ಹತ್ತಿರ ಹೋಗಿ ನೋಡೋಕೆ ಬಿಡಲಿಲ್ಲ ವೈರಸ್, body hygienic ಇದೆ, ಇನ್ಫೆಕ್ಷನ್ ಆಗ್ಬಹುದು ತಲೆಗೊಂದು ಮಾತು ಹೇಳಿ ದೂರದಿಂದಲೇ ಮುಖ ತೋರಿಸಿದ್ರು.. ನನಗೆ ಅವರಮ್ಮನನ್ನ ಸಂಭಾಳಿಸೋದೆ ಕಷ್ಟವಾಗಿತ್ತು. ಆಮೇಲೆ ಪೋಲಿಸ್ ಎಂಕ್ವೈರಿ, ಪೋಸ್ಟ್ ಮಾರ್ಟಂ ಕ್ರಿಮಿಷನ್ ಪ್ರೊಸೆಸ್ ಎಲ್ಲಾ... ಅದೇ ಕೊನೆಯ ಭೇಟಿ ನನ್ನ ಮಗನ ಜೊತೆ.. ಎಲ್ಲದರಲ್ಲೂ ಫಾಸ್ಟ್ ನನ್ನ ಮಗ.. ಮೇಲೆ ದೇವರ ಹತ್ರ ಹೋಗೋದರಲ್ಲೂ ಕೂಡ.. ಇದಕ್ಕೂ ಹೆಮ್ಮೆ ಪಡೋ ದೌರ್ಭಾಗ್ಯ ನನ್ನದು.." ವಿಷಾದದ ನಗೆ ನಕ್ಕರು.
ಪ್ರಸನ್ನನ ಗೊಂದಲಗಳೆಲ್ಲ ಬಗೆಹರಿದಿದ್ದವು. ಅವತ್ತು ಹರ್ಷನಿಗೆ ಆ್ಯಕ್ಸಿಡೆಂಟ್ ಆಗಿದ್ದು ನಿಜ. ಆದರೆ ಆ ದಿನ ಹರ್ಷ ಬದುಕೇ ಇದ್ದ. ಬಹುಶಃ ಪ್ರಜ್ಞೆ ಇರಲಿಲ್ಲ.. ಅಥವಾ ಕೋಮಾ.. ಸ್ಟೇಜ್ ನಲ್ಲಿರಬಹುದು. ಇವರ ದೃಷ್ಟಿಯಲ್ಲಿ ಅವನನ್ನು ಸತ್ತಂತೆ ಬಿಂಬಿಸಲಾಗಿದೆ. ಹಾಗಾದರೆ ಹರ್ಷ ಈಗ ಎಲ್ಲಿದಾನೆ? ಹೇಗಿದ್ದಾನೆ? ಯಾವ ಸ್ಥಿತಿಯಲ್ಲಿದ್ದಾನೆ? ಉತ್ತರ ಹುಡುಕಲು ಅದೇ ಆಸ್ಪತ್ರೆಗೆ ಹೋಗಬೇಕು.. ಡಾ.ಪಟ್ಟಾಭಿರಾಮ್!! ಅವನೇ ಇದಕ್ಕೆಲ್ಲ ಉತ್ತರ ಹೇಳಬೇಕು... ಪ್ರಸನ್ನನ ಮನಸ್ಸಲ್ಲಿ ಮುಗಿಯದ ರಹಸ್ಯಗಳ ಭೇಧಿಸುವ ಉದ್ವೇಗ..
ಅಷ್ಟರಲ್ಲೇ ಸುಲೋಚನ ಹಾಲಿನ ಗ್ಲಾಸ್ ಹಿಡಿದು ಒಳಬಂದರು. "ತಗೋಳೋ... ಖಾಲಿ ಹೊಟ್ಟೆಯಲ್ಲಿ ಮಲಗಬಾರದು. ಸ್ವಲ್ಪ ಹಾಲು ಕುಡಿದು ಹರ್ಷನ ರೂಮಿನಲ್ಲಿ ಮಲಗು ಆಯ್ತಾ.." ಕೂದಲಲ್ಲಿ ಬೆರಳಾಡಿಸಿದರು.
"ಅಮ್ಮ... ನಾನು ನಾಳೆ ಒಂದು ಮುಖ್ಯವಾದ ಕೆಲಸದ ಮೇಲೆ ಬೇರೆ ಊರಿಗೆ ಹೊರಟಿದ್ದಿನಿ. ಹೋದ ಕೆಲಸ ಯಶಸ್ವಿ ಆಗಲಿ ಅಂತ ಸ್ಟ್ರಾಂಗ್ ಆಗಿ ಆಶೀರ್ವಾದ ಮಾಡಿ ನೋಡೋಣ.." ಕಾಲು ಮುಟ್ಟಿ ನಮಸ್ಕರಿಸಿದ್ದ. ಅವರು ಮನಸ್ಪೂರ್ತಿ ಶುಭಹಾರೈಸಿದರು. "ನಾನು ಅಂದುಕೊಂಡ ಕಾರ್ಯ ನೇರವೆರಿದರೆ ನಿಮಗೊಂದು ದೊಡ್ಡ ಸರ್ಪ್ರೈಜ್ ಇದೆ..." ಅವರ ಮುಖದಲ್ಲೊಂದು ಮಂದಹಾಸ ಮೂಡಿ "ಸೊಸೆ ಕರ್ಕೊಂಡು ಬರ್ತಿಯೆನೊ..?" ಕಾಲೆಳೆದರು.
"ಅದು ನಿಮ್ಮ ಜವಾಬ್ದಾರಿ,, ಮಾತೃಶ್ರೀ..." ನಕ್ಕ.
ಅವರಿಗೆ ಹರ್ಷನೇ ಎದುರಿಗೆ ಬಂದು ನಿಂತಂತಾಯಿತು. "ಸರಿ,, ನಾಳೆ ಯಾವಾಗ ಹೋಗ್ತಿದಿಯಾ?" ಕೇಳಿದರು.
"ಇನ್ನೂ ಟೈಮ್ ಡಿಸೈಡ್ ಆಗಿಲ್ಲಮ್ಮ.. ಸಂಜೆಯೊಳಗೆ ಹೋಗಬಹುದು.. ಹ್ಮ್.. ಒಕೆ ನೀವು ಮಲಗಿ. ಗುಡ್ ನೈಟ್" ಎಂದು ಅವರ ಹಣೆಗೆ ಚುಂಬಿಸಿ ಹೊರಬಂದ. ಅವನ ಮನಸ್ಸು ಉಲ್ಲಾಸಗೊಂಡಿತು.
ಮರಳಿ ಹರ್ಷನ ಕೋಣೆಗೆ ಬಂದಾಗ ಹರಿಣಿ ತನಗೆ ನಿದ್ರೆ ಬಂದಿದೆಯೆಂದು ಬೆಳಿಗ್ಗೆ ಎದ್ದು ಓದುವೆನೆಂದು ಹೇಳಿ ತನ್ನ ಕೋಣೆ ಸೇರಿದಳು. ಬೆಡ್ ಮೇಲೆ ಇದ್ದ ಎಂ.ಆರ್ ಹಾಸ್ಪಿಟಲ್ ಫೈಲ್ ನೋಡುತ್ತಾ ಕೈ ಕಟ್ಟಿ ಯೋಚನೆಗೆ ಸಿಲುಕಿದ್ದ ಪ್ರಸನ್ನ..
ಎಂ.ಆರ್ ಹಾಸ್ಪಿಟಲ್..!! ಈ ಹೆಸರನ್ನ ಎಲ್ಲೋ ಕೇಳಿದ ಹಾಗಿದೆಯಲ್ಲ.. ಯಾರೋ ಮುಖ್ಯವಾದ ವ್ಯಕ್ತಿಯಿಂದ.. ತುಂಬಾ ಸಮಯದ ಹಿಂದೆ... ಎಲ್ಲಿ.... ಎಲ್ಲಿ.... ಶತಪಥ ತಿರುಗಿದ್ದ. ಕೈ ಮುಷ್ಟಿ ಮಾಡಿ ಇನ್ನೊಂದು ಕೈಗೆ ಗುದ್ದಿಕೊಳ್ಳುತ್ತ. ಎಂ.ಆರ್ ಹಾಸ್ಪಿಟಲ್... ಎಂ.ಆರ್ ಹಾಸ್ಪಿಟಲ್.. ಎಂದು ಜಪಿಸುತ್ತಿದ್ದವನು ಒಮ್ಮೆಗೆ ಎಂ.ಆರ್ ಹಾಸ್ಪಿಟಲ್ ಡೈರೆಕ್ಟರ್ ನಾನು.. ನಿನ್ನಂತ ಲಕ್ಷ ಕೋಟಿ ಜನ ಡಾಕ್ಟರ್ಸ್ ನನ್ನ ಕೈ ಕೆಳಗೆ ಸಂಬಳಕ್ಕಾಗಿ ಕೆಲಸ ಮಾಡುತ್ತಾರೆ. ನಾನು ಮನಸ್ಸು ಮಾಡಿದರೆ ನಿನ್ನನ್ನ ಚಿಟಿಕೆ ಹೊಡೆಯುವಷ್ಟರಲ್ಲಿ ಅಲ್ಲಿಂದ ತೆಗೆದು ಹಾಕಬಲ್ಲೆ ಗೊತ್ತಾ... ನನ್ನ ಮಗಳನ್ನೇ ರೆಸ್ಟಿಗೇಟ್ ಮಾಡುವಷ್ಟು ಪೊಗರಾ ನಿನಗೆ.. ಹಳೆಯ ಮಾತುಗಳು ಮರುಕಳಿಸಿ ಮನಸ್ಸಲ್ಲಿ ಮಾರ್ದನಿಸಿದವು.
ಯೆಸ್!! ಮಾನ್ವಿ ತಂದೆ ರಘುನಂದನ್ ರೈ!! ಅಂದರೆ ಈ ಎಲ್ಲಾ ಕೆಲಸದ ಹಿಂದೆ ಮಾನ್ವಿ ತಂದೆ ಇದಾರಾ? ಏನಾದ್ರೂ ಬ್ಯುಸಿನೆಸ್ ದ್ವೇಷ ಇತ್ತಾ? ಅಥವಾ ಇದನ್ನೆಲ್ಲ ಮಾಡಿದ್ದು ಆ ಪೆಡಂಭೂತ ಮಾನ್ವಿನಾ? ಪರಿ ಜೊತೆಗೆ ಸಣ್ಣಪುಟ್ಟ ಜಗಳ ಆಗಿರಬಹುದು ಅಷ್ಟಕ್ಕೇ ಹೀಗೆ ಮಾಡ್ತಾಳಾ? ನೋ ನೋ.... ಹಾಸ್ಪಿಟಲ್ ಅವರದು ಎಂದ ಮಾತ್ರಕ್ಕೆ ಅವರ ಮೇಲೆ ಆರೋಪ ಹೊರೆಸೋದು ತಪ್ಪಾಗುತ್ತೆ! ಬೇರೆ ಯಾರೋ ಹರ್ಷನ ಮೇಲಿನ ದ್ವೇಷಕ್ಕೆ ಹೀಗೆ ಮಾಡಿರಬಹುದಲ್ವಾ!? ಹೀಗೆಲ್ಲ ಮಾಡೋದ್ರಿಂದ ಯಾರಿಗೇನು ಲಾಭ... ಅವನ ಮನದಲ್ಲಿ ದ್ವಂದ್ವಗಳು ಪುಟಿದೆದ್ದವು.
ಅಪ್ಪಿತಪ್ಪಿ ಅಕಸ್ಮಾತ್ ಇದರಲ್ಲಿ ನಿನ್ನ ಕೈವಾಡ ಏನಾದರೂ ಇದ್ದರೆ... ಈ ಬಾರಿ ನಿನಗೆ ನರಕ ದರ್ಶನ ಮಾಡಿಸುವುದಂತು ನಿಶ್ಚಿತ ಮಿಸ್ ಮಾನ್ವಿ ರೈ..!! ಅವನ ಒಳಮನಸ್ಸು ಕ್ರೋಧದಿಂದ ಉಸುರಿತು.
ಈ ಎಲ್ಲಾ ವಿಚಾರವನ್ನು ಪರಿ ಮುಂದೊಮ್ಮೆ ಹೇಳಬೇಕೆಂಬ ಕಾರಣಕ್ಕೆ ಅದೇ ಸಮಯಕ್ಕೆ ಧ್ರುವನಿಗೆ ಕರೆ ಮಾಡಿ ಬೆಳಿಗ್ಗೆ ಬೇಗ ಬರುವಂತೆ ತಿಳಿಸಿದ, ಮಂಗಳೂರಿನಲ್ಲಿ ನಡೆದ ಘಟನೆಗಳ ಅರಿವಿಲ್ಲದೆ.. ತದನಂತರ ಜಾಲತಾಣಗಳಲ್ಲಿ ಆ ಆಸ್ಪತ್ರೆಯ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ,, ಮುಂಬೈನಲ್ಲಿದ್ದ ತನ್ನ ಸ್ನೇಹಿತನೊಂದಿಗೆ ಈ ವಿಷಯದ ಬಗ್ಗೆ ಧೀರ್ಘ ಸಮಯ ಚರ್ಚೆ ನಡೆಸಿದ್ದ. ನಡುರಾತ್ರಿ ಹರಿಣಿಯ ಬಳಿಗೆ ಹೋದವನೇ ಮಲಗಿದ್ದವಳ ಹಣೆಯನ್ನು ಪ್ರೀತಿಯಿಂದ ಚುಂಬಿಸಿ ಅವಳ ಕೈ ಮೇಲೆ ಕೈ ಇಟ್ಟು ಹರ್ಷನ್ನ ಮರಳಿ ಕರೆತರುವುದಾಗಿ ವಾಗ್ದಾನ ಮಾಡಿದ್ದ.
ಮುಂದುವರೆಯುವುದು...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ