ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-18


"ದಿವಿ... ಎದ್ದೇಳೆ ಮೇಲೆ... ಪರಿ ಎಲ್ಲೂ ಕಾಣಿಸ್ತಿಲ್ಲ.."
ಬೆಳಗಿನ ಜಾವ ಆರುವರೆ ಗಂಟೆಗೆ ಎಚ್ಚರಗೊಂಡ ಶ್ರಾವ್ಯ ಕೋಣೆಯಲ್ಲಿ ಪರಿ ಕಾಣದೆ ಕಂಗಾಲಾಗಿ ದಿವ್ಯಳನ್ನು ಬಡಿದೆಬ್ಬಿಸಿದಳು. ನಿದ್ದೆಗಣ್ಣಿನಲ್ಲಿ ಹೌಹಾರಿದ ದಿವ್ಯ " ವ್ಹಾಟ್...ಪರಿ ಕಾಣಿಸ್ತಿಲ್ವಾ..." ಎಂದು ಧಗ್ಗನೆ  ಎದ್ದು ಕುಳಿತು " ವಾಷ್ ರೂಂನಲ್ಲಿ..  ಹೊರಗೆ ಬಾಲ್ಕನಿಯಲ್ಲಿ.. ಎಲ್ಲಾಕಡೆಗೂ.. ಸರಿಯಾಗಿ ನೋಡಿದಿಯಾ?" ಗಾಬರಿಯಿಂದ ಕೇಳಿದಳು.

"ಹ್ಮೂ ಕಣೇ.... ಎಲ್ಲಾ ಕಡೆಗೆ ನೋಡಿದೆ ಎಲ್ಲೂ ಕಾಣಿಸ್ತಿಲ್ಲ.." ಶ್ರಾವ್ಯ ಕೂಡ ಗಾಬರಿಗೊಂಡಿದ್ದಳು. ನಿನ್ನೆಯ ಘಟನೆ ಈಗ ತೆರೆತೆರೆಯಾಗಿ ನೆನಪಾಗಿ "ಬಹುಶಃ ಹರ್ಷನ್ನ ಹುಡುಕಿಕೊಂಡು ಹೋಗಿರಬಹುದಾ!!" ಇಬ್ಬರ ಆಲೋಚನೆ ಒಂದೇ ರೀತಿಯಲ್ಲಿ ಸಾಗಿತ್ತು.
"ಅಥವಾ ಇಲ್ಲೆ ಹೊರಗೆಲ್ಲಾದರೂ ಹೋಗಿರಬಹುದಾ?!  ನೋಡೊಣ ಇರು.." ತನಗೆ ತಾನೇ ಸಮಾಧಾನ ಮಾಡಿಕೊಂಡು ಹಾಸಿಗೆಯಿಂದ ಕೆಳಗಿಳಿದ ದಿವ್ಯಳಿಗೆ ಹಾಸಿಗೆಯ ಪಕ್ಕದ ಮೇಜಿನ ಮೇಲಿದ್ದ ಡೈರಿಯ ಪುಟವೊಂದು ಗಮನ ಸೆಳೆಯಿತು. ಅದನ್ನು ಕಂಡು ಕೊಂಚ ಯೋಚಿಸುತ್ತಾ ಹಾಳೆ ಹಾರಿ ಹೋಗದಂತೆ ಅದರ ಮೇಲಿಟ್ಟಿದ್ದ ವಾಚ್ ನ್ನು ತೆಗೆದು ಹಾಳೆಯನ್ನು ಕೈಗೆತ್ತಿಕೊಂಡು ನೋಡಿದ್ದಳು ಪರಿಧಿಯ ಅಕ್ಷರಗಳು..‌.

"ಸಾರಿ ಶ್ರಾವ್ಯ ದಿವ್ಯ... ನಿಮ್ಮ ನಿದ್ರೆ ಹಾಳು ಮಾಡಲು ಇಷ್ಟವಾಗಲಿಲ್ಲ, ಅದಕ್ಕೆ ಹೇಳದೆ ಹೋಗ್ತಿದಿನಿ. ಹರ್ಷ ನಿನ್ನೆ ಬೀಚ್‌ ಗೆ ಬಂದ ಹಾಗೆ ಇವತ್ತು ಬರುವನೇನೋ ಎಂಬ ಸಣ್ಣ ಆಸೆ...  ಅದಕ್ಕೆ ನಾನು ಬೀಚ್ ಗೆ ಹೋಗುತ್ತಿದ್ದೇನೆ.  ನನ್ನಿಂದಾಗಿ ನಿಮ್ಮ ಸಂತೋಷ ಹಾಳಾಗೋದು ಬೇಡ, you guys carry-on.. have fun..!!  Bye.."

ಇದನ್ನು ಓದಿ ಮುಖ ಮುಖ ನೋಡಿಕೊಂಡ ಹುಡುಗಿಯರು ನೇರವಾಗಿ ಧ್ರುವ ರೋಹಿತ್ ಕೋಣೆ ಬಾಗಿಲು ತಟ್ಟಿ ಅವರನ್ನು ಎಚ್ಚರಿಸಿದ್ದರು. ಆಕಳಿಸುತ್ತ ಬಾಗಿಲು ತೆರೆದ ಧ್ರುವ ವಿಷಯ ತಿಳಿದದ್ದೆ ಒಂದೇ ಕ್ಷಣಕ್ಕೆ ಜಾಗೃತನಾದ. " ಪರಿ ಒಬ್ಬರೆ ಬೀಚ್'ಗಾ..!! ಆ ಹುಡುಗ ಸಿಗ್ಬಹುದಾ ಇವತ್ತು? ಅಲ್ಲಿ? " ಎಂದು ಯೋಚಿಸುತ್ತಾ "ನಾವು ಹೋಗೋಣ!! ಬೇಗ ಮುಖ ತೊಳೆದು ರೆಡಿಯಾಗಿ ಬನ್ನಿ" ಎಂದು ಅವರಿಬ್ಬರಿಗೂ ಹೇಳಿ ಕಳಿಸಿದ, ಬೆಡ್ ಮೇಲೆ ಇನ್ನೂ ಗಾಢವಾದ ನಿದ್ರೆಯಲ್ಲಿದ್ದ ರೋಹಿತನನ್ನು ಕೂಗಿ, ಕರೆದು, ಕಿರುಚಿ, ಹೊಡೆದು ಬಡಿದು, ಜಾಡಿಸಿ ಒದ್ದು ಕೊನೆಗೆ ಸಾಕಾಗಿ ಮುಖದ ಮೇಲೆ ನೀರು ಸುರಿದು ಎಬ್ಬಿಸಿ ವಿಷಯ ತಿಳಿಸಿ, ಹೊರಡಲನುವಾದ. ಎಲ್ಲರೂ ಮುಖ ತೊಳೆದು ಬಟ್ಟೆ ಬದಲಿಸಿ ಬೀಚ್ ಗೆ ಬಂದು ಕಾರಿನಿಂದ ಇಳಿದು ಪರಿಗಾಗಿ ತಡಕಾಡಿದರು.

ಮುಂಜಾವು ಬಲುಹಿತವಾಗಿತ್ತು. ತೆಂಕಣದ ತಂಗಾಳಿಗೆ ಮನಸ್ಸು ರಾಗವಾಗಿ ತೇಲುತ್ತಿತ್ತು. ತಿಳಿಬಿಸಿಲು, ಮುಗಿಲ ನೀಲಿ, ಹಾರಾಡುವ ಇನಿದನಿಯ ಹಕ್ಕಿಗಳ ಹಾಡು, ಕಡಲ ಮೊರೆತ ತುಂಬು ನಿಸರ್ಗದ ಮಧ್ಯೆ ನೀರವ ಶರದಂತೆ ಕಂಗೊಳಿಸುವ ಸ್ವಪ್ನಕನ್ಯೆಯಂತೆ ಬಿಳಿ ಚೂಡಿದಾರ ತೊಟ್ಟಿದ್ದ ಪರಿಧಿ ನೀಲಿ ಸಮುದ್ರದ ತುದಿಯಲ್ಲಿ ಹಾಲನೊರೆಯಂತೆ ಕಾಣಿಸಿದ್ದಳು. ಅನತಿ ದೂರದಲ್ಲಿ ಕಡಲ ತೀರದಲ್ಲಿ ನಿಂತು ಬರುವ ಪ್ರತಿಯೊಬ್ಬರನ್ನೂ ಬೆರಗು ಕಣ್ಣಿಂದ ನೋಡುತ್ತಾ ಅಲೆಗಳ ಜೊತೆಯಲ್ಲಿ ಅಲೆಯಾಗಿದ್ದಳು. ಅವಳನ್ನು ನೋಡಿದ್ದೆ..

"ಪ್ರೀತಿ ಅಂದರೆ ಹೀಗಿರಬೇಕು ಅಲ್ವಾ... ತಾನು ಪ್ರೀತಿಸೋ ಹುಡುಗನಿಗೋಸ್ಕರ ರಾತ್ರಿಯಿಡೀ ನಿದ್ರೆಯಿಲ್ಲದೆ ಕಾಯೋ ಹುಡುಗಿ...ಹ್ಮ್ಮ.. ನನಗೂ ಇಂತಹ ಹುಡುಗಿನೇ ಸಿಗಲಿ ಭಗವಂತ.." ಮರಳಿನ ಮೇಲೆ ನಡೆಯುತ್ತ ಬೇಡಿಕೆಯೊಂದು ಸಲ್ಲಿಸಿದ ರೋಹಿತ್.

" ಸಿಕ್ಕರೂ.. ಜಾಸ್ತಿ ದಿನ ಉಳಿಯಲ್ಲ ಬಿಡು.. ನಿನ್ನ ಸೈಂಟಿಸ್ಟ್ ಅವತಾರ ನೋಡಿ ಎರಡೇ ದಿನದಲ್ಲಿ ಓಡಿ ಹೋಗ್ತಾಳೆ" ವ್ಯಂಗ್ಯ ಮಾಡಿದಳು ದಿವ್ಯ.

"ಪರಿಗೆ ಆಗಿರೋ ಕನ್ಫ್ಯೂಜನ್ ಆದಷ್ಟು ಬೇಗ ಪರಿಹರಿಸಬೇಕು. ಅವರು ಸಿಕ್ಕ ಮೇಲೆ ಹರ್ಷ ಅಲ್ಲ ಸಂಕಲ್ಪ್ ಅಂತ ಗೊತ್ತಾದ್ರೆ ಎಷ್ಟು ನೋವಾಗುತ್ತೋ..!  ಆಮೇಲೆ ಹರ್ಟ್ ಆಗೋ ಬದಲು ಈಗಲೇ ಎಲ್ಲಾ ಕ್ಲಿಯರ್ ಮಾಡಿ ಬಿಡ್ಬೇಕು.." ಎಂದು ನಿರ್ಧರಿಸಿ ಪರಿಯನ್ನು ಸಮೀಪಿಸುತ್ತಿದ್ದಂತೆ ಹೇಳಿಯೇ ಬಿಟ್ಟಳು..

"ಪರಿ.. ಹೀಗೆ ಹೇಳದೆ ಬಂದ್ಬಿಡೋದಾ!! ನಮಗೆಷ್ಟು ಟೆನ್ಷನ್ ಆಯ್ತು ಗೊತ್ತಾ.." ಪರಿ ಏನೋ ಹೇಳುವದರಲ್ಲಿ ಅವಳ ಮಾತಿಗೆ ಅಡ್ಡಗಟ್ಟಿ "ಈಗಲೇ ನಿಮಗೊಂದು ವಿಷಯ ಹೇಳಲೇಬೇಕು..ಪರಿ, ನೀವು ತಿಳಿದುಕೊಂಡ ಹಾಗೆ ನೀವು ಕಾಯ್ತಿರೋ ಹುಡುಗ ಹರ್ಷ ಅಲ್ಲ, ಅವರ ಹೆಸರು ಸಂಕಲ್ಪ್ ಅಂತ!! ಸಿಡ್ನಿಯಲ್ಲಿ ಸೆಟ್ಲ್ ಆಗಿದ್ದಾರೆ. ರಿಚ್ ಬ್ಯುಸಿನೆಸ್ ಮ್ಯಾನ್..  ನನ್ನ ಕಜಿ಼ನ್ ಇವರ ಆಫೀಸ್ ನಲ್ಲೇ ಕೆಲಸ ಮಾಡೋದು. ನೋಡೋಕೆ ಸ್ವಲ್ಪ ಹರ್ಷನ ಹಾಗೆ ಇದ್ದಾರೆನೋ,, ನೀವು ಅವರನ್ನು ಹರ್ಷನೇ ಎಂದುಕೊಂಡು ಕನ್ಫ್ಯೂಜ್ ಆಗಿದೀರಾ ಅನಿಸುತ್ತೆ.. ನಿಮ್ಮ ನಿರೀಕ್ಷೆ ಎಲ್ಲಾ ವ್ಯರ್ಥ ಪರಿ.." ತನ್ನ ಮೊಬೈಲ್ ಅವಳ ಕೈಗಿಟ್ಟು, " ಇಲ್ನೋಡಿ, ನನ್ನ ಕಜ಼ಿನ್ ಬರ್ತಡೇ ಪಾರ್ಟಿಯಲ್ಲಿ ಇವರು ಹಾಡಿದ ವಿಡಿಯೋ ಕ್ಲಿಪ್.." ತೋರಿಸಿದಳು ಶ್ರಾವ್ಯ.

ವಿಡಿಯೋ ನೋಡುತ್ತಿದ್ದ ಪರಿಯ ಮನಸ್ಸು ಹರ್ಷೋಲ್ಲಾಸದಿಂದ ಉಕ್ಕಿ ಹಾಲ್ಗಡಲಾಗಿತ್ತು. ಹರ್ಷ.. ನನ್ನ ಹರ್ಷ.. ಮೊಗದಲ್ಲಿ ಸಂತೋಷದ ಬುಗ್ಗೆ ಚಿಮ್ಮಿತ್ತು. ಖುಷಿಯ ಹನಿಗಳು ಕೆನ್ನೆ ತಟ್ಟಿ ಸಂಭ್ರಮಿಸಿದವು. ಅದನ್ನು ನೋಡಿದ ಮೇಲೆ ಹರ್ಷನ ಹಾಡು ಕೇಳಿದ ಮೇಲೆ ಪರಿಗೆ ಖಚಿತವಾಗಿ ಹೋಯಿತು. " ಇದು ನನ್ನ ಹರ್ಷನೇ.. (ಕಣ್ಣೋರೆಸಿಕೊಂಡು) ನಿನಗೆ ಹೇಗೆ ಗೊತ್ತು ಹರ್ಷ?  ಇದು ಯಾವಾಗಿನ ವಿಡಿಯೋ? ಈಗ ಎಲ್ಲಿದಾನೆ? ನಿನಗೆ ಗೊತ್ತಾ ಅಥವಾ ಎಲ್ಲಿ ಅಂತ ತಿಳಿದುಕೊಳ್ಳೊಕೆ ಆಗುತ್ತಾ.. " ಭಾವೋದ್ವೇಗದಿಂದ ಕೇಳಿದಳು.

"ನೋ ಪರಿ.. ನಾನು ಇವರನ್ನ ಇದುವರೆಗೂ ನೇರವಾಗಿ ಭೇಟಿಯಾಗಿಲ್ಲ. ಜಸ್ಟ್ ವಿಡಿಯೋದಲ್ಲಿ ನೋಡಿದ್ದು ಅಷ್ಟೇ! ಇವರು ಸಂಕಲ್ಪ್ !! ಪರಿ.. ಸಿಡ್ನಿಯಲ್ಲಿ ಇರ್ತಾರೆ. ನನ್ನ ಕಜ಼ಿನ್ ಬಾಸ್!!"

"ನೋ... ಇವನು ಹರ್ಷ.. ನನ್ನ ಹರ್ಷ..!! ಅವನ ಪ್ರತಿ ಹಾವಭಾವಗಳನ್ನು ಬಲ್ಲೆ ನಾನು.. ಅವನ ಬೆರಳು ಗಿಟಾರ್ ತಂತಿಗಳನ್ನು ಮೀಟುವ ರೀತಿ, ಹಾಡುವಾಗ ಅವನ ತಲ್ಲೀನತೆ, ಅವನ ಪ್ರತಿ ಚರ್ಯೆಯು ನನಗೆ ಗೊತ್ತು, ಅವನ ಬೆರಳಲ್ಲಿ ನಾನು ತೊಡಿಸಿದ ಉಂಗುರ ಇನ್ನೂ ಹಾಗೆ ಇದೆ.. ಇದು ನನ್ನ ಹರ್ಷನೇ.."  ಸಂತೋಷಕ್ಕೆ ಅವಳ ಧ್ವನಿ ಕಂಪಿಸುತ್ತಿತ್ತು. ಶ್ರಾವ್ಯ ಸ್ವಲ್ಪ ಮಟ್ಟಿಗೆ  ಅವಳ ಮಾತಿಗೆ ತಲೆದೂಗಿ "ರಿಲ್ಯಾಕ್ಸ್.. ಪರಿ. ಹಾಗಾದರೆ ಎಲ್ಲರೂ ಸೇರಿ ಅವರನ್ನು ಹುಡುಕೋಣ.. ನಿಮ್ಮ ಹರ್ಷ ಸಿಕ್ಕೆ ಸಿಕ್ತಾರೆ.." ಸಮಾಧಾನಗೈದಳು.

"ಪರಿ..ಇನ್ನೊಂದು ವಿಷ್ಯ.. ಸಾರಿ ನಿನ್ನೆ ಹೇಳೋದು ಮರೆತೋಯ್ತು.. ನಿನ್ನೆ ಬೀಚ್ ನಲ್ಲಿ ನಾನು ಅವರನ್ನು ಕೂಗೋಕೆ ಅಂತ ಓಡಿ ಹೋಗುವಷ್ಟರಲ್ಲಿ ಅವರು ತಮ್ಮ ಕಾರ್ ನಲ್ಲಿ  ಹೊರಟು ಹೋದರು. ಆದರೆ ನಾನು ಅವರ ಕಾರ್ ನಂಬರ್ ನೋಟ್ ಮಾಡಿಕೊಂಡಿದ್ದೆ, ನಿನ್ನೆ ರಾತ್ರಿಯವರೆಗೂ ನಾನು ಶ್ರಾವ್ಯ ಅವರ ಕಾರನ್ನೇ ಹುಡುಕಾಡಿದ್ವೀ ಆದರೆ ಸಿಗಲೇ ಇಲ್ಲ.. ಇದೇ ಅವರ ನಂಬರ್.. ಪೋಲಿಸ್ ನವರಿಗೆ ಇದನ್ನ ತಿಳಿಸಿದ್ರೆ ಏನಾದ್ರೂ ಹೆಲ್ಪ್ ಆಗಬಹುದು ಅಲ್ವಾ..." ನಂಬರ್ ತೋರಿಸಿದ.

"ಇಂತಹ ಮುಖ್ಯವಾದ ವಿಷಯವನ್ನ ಹೇಗೆ ಮರೆತೆ ಧ್ರುವ.. ನಿನ್ನೆಯೇ ಹೇಳ್ಬೇಕು ತಾನೇ..!!  ನಾನು ಈಗಲೇ ಎಸ್.ಐ ಸರ್ ಗೆ ಫೋನ್ ಮಾಡಿ ತಿಳಿಸ್ತಿನಿ.." ಎನ್ನುತ್ತಾ ಕಾಲ್ ಮಾಡಿ ವಿಷಯ ತಿಳಿಸಲು ಫೋನ್ ತೆಗೆದುಕೊಂಡು ನಡೆದಳು.

ಅವಳು ಫೋನ್ ಮಾಡಲು ಹೋದದ್ದೆ "ಸೋ.... ನೀನು ಮತ್ತೆ ಶ್ರಾವ್ಯ.. ನಿನ್ನೆ ಈ ನಂಬರ್ ಕಾರ್ ಹುಡುಕೋಕೆ ಮಂಗಳೂರೆಲ್ಲ ಸುತ್ತಾಡಿದ್ರಾ.." ರೋಹಿತ್ ಕೇಳಿದ.

"ಹ್ಮಾ... But no use.."

"ಥೂ.. ನಿನ್ನ ಬಾಯಿಗೆ ಒಣಗಿದ ಆಲೂಗಡ್ಡೆ ಹಾಕಾ... ಕಾರ್ ನಂಬರ್ ಇಟ್ಕೊಂಡು ಐದು ನಿಮಿಷದಲ್ಲಿ ಓನರ್ ಅಡ್ರೆಸ್ ಕಂಡು ಹಿಡಿಯಬಹುದು ಗೊತ್ತಾ.."

"ಐದು ನಿಮಿಷದಲ್ಲಾ.. ಹೌ??... ಅದ್ ಹೇಗೆ??" ಆಶ್ಚರ್ಯ ವ್ಯಕ್ತಪಡಿಸಿದ ಧ್ರುವ.

"ಆರ್.ಟಿ.ಒ ರೆಕಾರ್ಡ್ಸ್ ಚೆಕ್ ಮಾಡೋದು. ಅಡ್ರೆಸ್ ಪತ್ತೆ ಹಚ್ಚೋದು. ಸೋ ಸಿಂಪಲ್!! ನನಗೆ ನಿನ್ನೆನೇ ಯಾಕೆ ಹೇಳ್ಲಿಲ್ಲ ನೀನು"

"ಓಹ್,,ಹಲೋ.. ಮಿಸ್ಟರ್ ಮೇಧಾವಿ. ರಾತ್ರಿ ಎಳೆಂಟು ಗಂಟೆಗೆ ಯಾವ ಆರ್.ಟಿ.ಒ ಆಫೀಸ್ ತೆರೆದಿರೋಲ್ಲ. ಇವತ್ತು ಸಂಡೇ.. ಇವತ್ತು ಕೂಡ ಆಫ್!! ಮತ್ತೆ ನಿನ್ನೆ ನಾನು ಓಡಿ ವಾಪಸ್ ಬರುವಷ್ಟರಲ್ಲಿ ನೀನ್ಯಾವುದೋ ರಹಸ್ಯ ಕಾರ್ಯಾಚರಣೆಗೆ ಹೊರಟು ಹೋಗಿದ್ದೆ! ಆಮೇಲೆ ಡ್ರಿಪ್ಸ್ ಹಾಕೊಂಡ್ ಮಲಗಿದ್ದೆ!! ರೂಂಗೆ ಬಂದ ತಕ್ಷಣ ಗಢದ್ದಾಗಿ ಗೊರಕೆ ಹೊಡೆಯೋಕೆ ಶುರು ಮಾಡಿದ್ದೆ. ಇಷ್ಟರ ಮಧ್ಯೆ ಯಾವಾಗಲೋ ಹೇಳಬೇಕಿತ್ತು ನಿನಗೆ...!?"

"ಹೋಪ್ss ಹೋಪ್ss ಇವಾಗ ಗೊತ್ತಾಯ್ತಲ್ಲ ನೋಡ್ತಿರು... ಐದು ನಿಮಿಷದಲ್ಲಿ ಆ ಓನರ್ ಜನ್ಮ ಜಾಲಾಡಿ ಬಿಡ್ತಿನಿ. ಅದಕ್ಕೊಸ್ಕರ ಆರ್.ಟಿ.ಒ ಆಫೀಸ್'ಗೇ ಹೋಗಬೇಕು ಅಂತಿಲ್ಲ.. ಜಸ್ಟ್ ಕಂಪ್ಯೂಟರ್ ಒಳಗೆ ಹೋದ್ರೆ ಸಾಕು.." ಎಂದು ಧ್ರುವನಿಗೆ ಕಣ್ಣು ಹೊಡೆದ ರೋಹಿತ್.

"ನೀನು ಮಾಡೋ ಸೈಬರ್ ಹ್ಯಾಕಿಂಗ್ ಬಗ್ಗೆ ನನಗೊತ್ತಿಲ್ವ... ಅದು ಕಾನೂನು ಬಾಹಿರ! ಈ ತರಾ ಅಡ್ಡದಾರಿ ಹಿಡಿಯೋದೆನೂ ಬೇಕಾಗಿಲ್ಲ ಪುಣ್ಯಾತ್ಮ... ಆಮೇಲೆ ಪೋಲಿಸ್ನವ್ರು ಹರ್ಷನ್ನ ಹುಡುಕೋ ಬದಲಿಗೆ ನಮ್ಮನ್ನೇ ಹುಡುಕಿಕೊಂಡು ಬರ್ತಾರೆ ಅಷ್ಟೇ.." ಎಂದು ಕೈ ಮುಗಿದ ಧ್ರುವ.

"ವ್ಹಾಟೆವರ್ ಧ್ರುವ್... ನಮಗೆ ಕೆಲಸ ಬೇಗ ಆಗೋದು ಮುಖ್ಯ!! ರೋಹಿ, ಈ ವಿಷಯದಲ್ಲಿ ನಾನು ನಿನ್ನ ಪರ ಕಣೋ.. ಕಾರ್ ನಲ್ಲಿ ಲ್ಯಾಪ್‌ಟಾಪ್ ಇದೆ. ಬಾ.. ಈಗ್ಲೇ ನಿನ್ನ ಕೆಲಸ ಶುರು ಮಾಡು.." ಶ್ರಾವ್ಯ ಆತುರ ಪಡಿಸಿ ರೋಹಿತ್ ನನ್ನು ಎಳೆದುಕೊಂಡು ಕಾರಿನತ್ತ ಹೊರಟಳು. ದಿವ್ಯ ಕೂಡ ಅದನ್ನು ಸರಿಯೆಂಬಂತೆ ತಲೆದೂಗಿ ನಡೆದಿದ್ದಳು. ಬೇರೆ ದಾರಿಯಿಲ್ಲದೆ ಧ್ರುವ ಕೋಪದಿಂದ ನಿಟ್ಟುಸಿರು ಹೊರಹಾಕಿ ಅವರನ್ನು ಹಿಂಬಾಲಿಸಿದ. ಲ್ಯಾಪ್‌ಟಾಪ್ ಕೈಗೆ ಸಿಗುತ್ತಿದ್ದಂತೆ ಅದನ್ನು ಕಾರಿನ ಮೇಲಿಟ್ಟು ತನ್ನ ಕೆಲಸ ಆರಂಭಿಸಿದ್ದ ರೋಹಿತ್.

"ರೋಹಿತ್ ಹೀಗೆಲ್ಲಾ ತಪ್ಪು ಮಾಡ್ತಿದ್ದಾನೆ.. ನೀವಾದ್ರೂ ಅವನನ್ನ ನಿಲ್ಲಿಸಿ" ಎಂದು ಪರಿಧಿ ಮುಂದೆ ಕೋಪಿಸಿಕೊಂಡು ದೂರು ನೀಡಿದ ಧ್ರುವ. ಆದರೆ ಈ ವಿಚಾರದಲ್ಲಿ ಪರಿ ಕೂಡ ರೋಹಿತ್ ಪರವಾಗಿ ಬೆಂಬಲಿಸಿ ಬೇಗ ಅಡ್ರೆಸ್ ಟ್ರೇಸ್ ಮಾಡಲು ಅವನನ್ನು ಅವಸರಿಸಿದ್ದಳು. ಸುತ್ತಲೂ ಇಷ್ಟೊಂದು ಕಾತರತೆ ಪ್ರೋತ್ಸಹದ ವಾತಾವರಣ ಕಂಡು ರೋಹಿತ್'ನಿಗೆ ಒಂದು ರೀತಿಯ ಜೇಮ್ಸ್ ಬಾಂಡ್ ಫಿಲಿಂಗ್ ಉಂಟಾಗಿ, ಉದ್ವೇಗ ಹೆಚ್ಚಾಗಿ ಬೆರಳುಗಳು ಗಣಕಯಂತ್ರದ ಮೇಲೆ ಸಾರಾಸಗಟಾಗಿ ಹರಿದಾಡಿದ್ದವು. ನೋಡುತ್ತಿದ್ದವರ ಕಣ್ಣುಗಳು ಒಮ್ಮೆ ಸ್ಕ್ರೀನ್ ನ್ನು ಒಮ್ಮೆ ರೋಹಿತ್ ಕಡೆಗೂ ಓಲಾಡುತ್ತಿದ್ದವು. ಕೆಲವು ವೆಬ್ ಸೈಟ್ ಗಳನ್ನು ತಡಕಾಡಿ, ಏನೇನೋ ಸುಳ್ಳು ವಿವರಣೆ ನೀಡಿ, ಕಾರ್ ನಂಬರ್ ಹಾಕಿದ ರೋಹಿತ್ ಕೆಲ ನಿಮಿಷಗಳಲ್ಲಿ ಕಿರುಚಿದ್ದ. " ಯೂರೇಕಾ!! ಯೆಸ್.. ಯೆಸ್.. ಐ ಗೊಟ್ ಇಟ್ !!
4th block,
ರೈ ಗ್ರುಪ್ಸ್ ಲಿಮಿಟೆಡ್,
ಫಳನಿ ರೋಡ್
ಮಂಗಳೂರು " ರೋಹಿತ್ ಕೂಗಿದ.

"ಐಯೀ... ಇದು ಆಫೀಸ್ ಅಡ್ರೆಸ್ ಕಣೋ.. ಮನೆ ಅಡ್ರೆಸ್ ಬೇಕಲ್ವಾ.." ದಿವ್ಯ ಕೇಳಿದಳು

"ಮನೆ ಅಡ್ರೆಸ್ ಇಲ್ಲ. ಬಟ್ ಈ ಕಂಪನಿಯ ಚೇರ್ಮನ್, ಡೈರೆಕ್ಟರ್ ಕಮ್ ಎಂ.ಡಿ ಹೆಸರು......" ರೋಹಿತ್ ಪರಿಶೀಲಿಸಿ ನೋಡಿ ಹೇಳುವಾಗ ಪರಿಧಿ ಬಾಯಿಯಲ್ಲಿ ಅನಾಯಾಸವಾಗಿ ಒಂದು ಹೆಸರು ಹೊರಡಿತ್ತು.. "ರಘುನಂದನ್ ರೈ!!'

" ಹ್ಮ್ ರೈಟ್‌... ರಘುನಂದನ್ ರೈ!!" ಎಂದು ಹೇಳಿದವನೆ ಮತ್ತೊಂದು ಕ್ಷಣಕ್ಕೆ ಅಚ್ಚರಿಯಿಂದ ಕೇಳಿದ -"ನಿಮಗ್ ಹೇಗೆ ಗೊತ್ತಾಯ್ತು..? "

"ನನಗೆ ಇವರ ಮನೆ ಕೂಡ ಗೊತ್ತು, ಬನ್ನಿ ಹೋಗೋಣ.." ಎಂದವಳೇ ಕಾರಿನಲ್ಲಿ ಕುಳಿತಳು ಪರಿ. ಅವಳ ನಡೆಯಿಂದ ಉಳಿದವರಿಗೆಲ್ಲ ಗೊಂದಲ ಸೃಷ್ಟಿಯಾಗಿತ್ತು.

"ರಘುನಂದನ್ ರೈ.. ವರ್ಲ್ಡ್ಸ್ ರಿಚೆಸ್ಟ್ ಮ್ಯಾನ್ ಪಟ್ಟಿಯಲ್ಲಿ ಹದಿನೇಳನೇ ಸ್ಥಾನದಲ್ಲಿರೋ ವ್ಯಕ್ತಿ. ನೆಟ್ ವರ್ಥ್ $46 ಬಿಲಿಯನ್. ಓಹ್ಹೋ... ಭಾರಿ ಕುಳ!!  ನಿಮಗೆ ಹೇಗೆ ಗೊತ್ತು ಪರಿ ಇವರು?? ನಿಮ್ಮ ಸಂಬಂಧಿಯಾ? ಅಥವಾ ಶತ್ರುವಾ? " ರೋಹಿತ್ ಮೊಬೈಲ್ ನಲ್ಲಿ ಅವರ ಮಾಹಿತಿಯನ್ನು ಜಾಲಾಡುತ್ತ ಕೇಳಿದ.

ಪರಿಧಿ ಮಾತ್ರ ಎದೆಗೆ ನೇರವಾಗಿ ಸಿಡಿಲು ಬಡಿದಂತೆ ಸ್ಥಬ್ಧವಾಗಿ ಕೂತಿದ್ದಳು. ತಲೆಯಲ್ಲಿ ಹಳೆಯ ಕಹಿ ಘಟನೆಗಳು ಕಹಿ ನೆನಪುಗಳ ಹಾವಳಿ ದಂಗೆಯೆದ್ದಿತು. ಆ ಸಮಯದ ಕಹಿ ವಿಷಕಾರಿ ಸಂದರ್ಭ ಅಲ್ಲಿಗೆ ಮುಗಿದು ಹೋಯಿತು ಎಂದುಕೊಂಡು ಅವಳು ಎಲ್ಲವನ್ನೂ ಮರೆಯುವ ಪ್ರಯತ್ನದಲ್ಲಿ ನಿರಾಳವಾಗಿದ್ದು ಆಕೆಯ ಬದುಕಿನ ಬಹುದೊಡ್ಡ ಪ್ರಮಾದವಾಗಿ ತೋರಿತು. ಕ್ಷಣಕಾಲ ಆಕೆಯ ಮಿದುಳು ಯಾವುದನ್ನೂ ನಂಬಲು ಸಿದ್ದವಾಗದೆ ಮತ್ತೊಂದು ಘಳಿಗೆಗೆ ಹೊಸದೊಂದು ಸಂಘರ್ಷಕ್ಕೆ ಸಿದ್ದವಾಗಿದ್ದಳು. ಅವಳ ಮೌನವನ್ನು ಕದಡಲು ಇಷ್ಟವಾಗದೆ ಸುಮ್ಮನಾಗಿದ್ದರು ಇತರರು. ಕೆಲವೇ ಕ್ಷಣಗಳಲ್ಲಿ ಕಾರು ಮಾನ್ವಿ ಮ್ಯಾನ್ಷನ್ ಮುಂದೆ ಬಂದು ನಿಂತಿತು.

ಬಂದು ನೋಡುವಾಗ ಮನೆಯ ಎದುರಿಗೆ ಪೋಲಿಸ್ ಜೀಪ್ ನಿಂತಿದ್ದು ಕಂಡರು. "ಅರೆರೆ.. ಎಲ್ಲಾ ಸಿನಿಮಾಗಳಲ್ಲಿ ಕಥೆ ಮುಗಿದ ಮೇಲೆ ಬರೋ ಪೋಲಿಸ್,, ಇವತ್ತೇನು ಇಷ್ಟು ಸರಿಯಾದ ಸಮಯಕ್ಕೆ ಬಂದ್ಬಿಟ್ಟಿದ್ದಾರೆ. ಅಂದರೆ ಇದು ಕ್ಲೈಮ್ಯಾಕ್ಸ್ ಅಲ್ವೇನೋ!! " ಅಚ್ಚರಿಯಿಂದ ಹೇಳಿದ ರೋಹಿತ್. ಅವನ ತಮಾಷೆ ಆಲಿಸುವ ವ್ಯವಧಾನ ಯಾರಿಗೂ ಇರಲಿಲ್ಲ. ಹರ್ಷ ಒಳಗೆ ಇದ್ದಾನಾ? ರಘುನಂದನ್ ಯಾರು? ಅವರನ್ನೇಕೆ ಹೀಗೆ ತಮ್ಮ ಜೊತೆ ಇಟ್ಟುಕೊಂಡಿದ್ದಾರೆ?  ಪೋಲಿಸ್ನವರು ನಮಗೆ ಸಪೋರ್ಟ್ ಮಾಡ್ತಾರಾ ಅಥವಾ ಅವರು ಸಂಕಲ್ಪ್ ಅಂತ ನಮ್ಮನ್ನೇ ಉಗಿದು ಕಳಿಸ್ತಾರಾ? ಪ್ರತಿಯೊಬ್ಬರ ತಲೆಯಲ್ಲಿ ಒಂದೊಂದು ರೀತಿಯ ಆಲೋಚನೆಗಳು ಓಡಾಡುತ್ತಿದ್ದವು.

"ಮಾನ್ವಿ.. ಎಂತಹ ಕೆಲಸ ಮಾಡಿಬಿಟ್ಟೆ!! ನಿನ್ನ ಸಿಟ್ಟು ಸಹಜವೇನೋ,, ಆದರೆ ಹರ್ಷ ಯಾಕೆ ನಿನ್ನ ಮಾತನ್ನೇ ಪಾಲಿಸ್ತಿದಾನೆ? ಇಷ್ಟು ದಿವಸ ಮನೆಯಿಂದ ದೂರ.. ಅತ್ತೆ ಮಾವ ತಾತ ಹರಿಣಿ ಎಲ್ಲರಿಗೂ ಇಷ್ಟೊಂದು ನೋವು ಕೊಟ್ಟು ದೂರವಾಗುವ ಅಂತಹ ಅನಿವಾರ್ಯತೆ ಏನಿತ್ತು ಅವನಿಗೆ? ಇನ್ನೂ ಕೆಲವೇ ಹೆಜ್ಜೆಗಳ ಅಂತರ..!! ಹರ್ಷ..." ಎಂದು ಉಲಿದ ಅವಳ ಮನಸ್ಸು ಹೂವಾಗಿತ್ತು. 

ಇವರು ಒಳಗೆ ಹೋಗುವ ಮೊದಲೇ ಎದುರಾದ ಎಸ್.ಐ ಮುಖ ಗಂಭೀರವಾಗಿತ್ತು. ಅರ್ಧ ಗಂಟೆ ಮುಂಚೆ ಅವರು ಏರ್ಪೋರ್ಟ್ ಗೆ ಹೊರಟರಂತೆ, ಫ್ಲೈಟ್ ಇನ್ನೂ ಒನ್ ಅವರ್ ಇದೆ, we will catch them ಎಂದು ಹೇಳಿ ಜೀಪ್ ಹತ್ತಿದರು. ಪೋಲಿಸ್ನವರ ಹಿಂದೆ ಬಂದ ಮನೆಗೆಲಸದ ಕಮಲಮ್ಮ ಗಾಬರಿಯಲ್ಲೂ ಪರಿಧಿಯನ್ನು ಕಂಡು ಏನೋ ಹೇಳುವ ಕೇಳುವ ಆತುರ ವ್ಯಕ್ತಪಡಿಸಿದರು. ಆದರೆ ಪರಿಗೆ ಅದರ ಬಗ್ಗೆ ಗಮನ ಹೋಗಲಿಲ್ಲ. ತಕ್ಷಣ ಎಲ್ಲರೂ ಮತ್ತೆ ಧ್ರುವನ ಕಾರು ಏರಿದರು. ಅವರ ಕಾರ್ ಸಹ ಪೋಲಿಸ್ ವ್ಯಾನ್ ನ್ನು ಹಿಂಬಾಲಿಸಿತು. ಏರ್ಪೋರ್ಟ್'ಗೆ ಬಂದು ತಲುಪಿದಾಗ ಒಬ್ಬೊಬ್ಬರ ಎದೆಬಡಿತ ಹೊರಗೆ ಕೇಳಿಸುವಷ್ಟು ಉತ್ಸುಕವಾಗಿತ್ತು. ಏರ್ಪೋರ್ಟ್ ನಲ್ಲಿ ವಿಚಾರಣೆ ನಡೆಸಿ ಬಂದ ಎಸ್.ಐ ತುಂಬಾ ಕೋಪದಲ್ಲಿ ದವಡೆ ಕಚ್ಚಿದರು.
"ಅವರು ಪ್ರೈವೇಟ್ ಫ್ಲೈಟ್ ನಲ್ಲಿ ಈಗಷ್ಟೇ ಮುಂಬೈಗೆ ಹೋದರಂತೆ. ಜಸ್ಟ್ ಮಿಸ್!! ಡೋಂಟ್ ವರಿ ಹರ್ಷನ್ನ ಸಮಸ್ಯೆಯಿಂದ ಬಿಡಿಸಿ ನಿಮಗೆ ತಲುಪಿಸೋ ಹೊಣೆ ನನ್ನದು. ಎಂದು ಕೊಂಚ ಆಲೋಚಿಸಿ ನೀವ್ ಹೇಗೆ ಆ ಮನೆಗೆ ಬಂದದ್ದು? ಅವರು ನಿಮಗೆ ಮೊದಲೇ ಪರಿಚಯಾನಾ ನಿಮಗೂ ರಘುನಂದನ್ ರೈ ಅವರಿಗೂ ಏನಾದ್ರೂ ವೈಯಕ್ತಿಕ ದ್ವೇಷ ಇತ್ತಾ??" ಎಸ್.ಐ ಪ್ರಶ್ನೆಗೆ ಪರಿ ಉಗುಳು ನುಂಗಿದಳು.

"ಇಲ್ಲಾ ಸರ್ ಹಾಗೇನಿಲ್ಲ.. ಅದೂ....  ನಾನು.. ನಾನು ಕಂಪ್ಲೆಂಟ್ ವಾಪಸ್ ತಗೋತಿನಿ. ಐ ವಿಲ್ ಹ್ಯಾಂಡಲ್ ಇಟ್ ಕ್ಷಮಿಸಿ ನಿನ್ನೆ ರಾತ್ರಿಯಿಂದ ತುಂಬಾ ಕಿರಿಕಿರಿ ಮಾಡಿಬಿಟ್ಟೆ.." ಅವಳ ಧ್ವನಿ ಕ್ಷೀಣವಾಗಿತ್ತು. ಎಸ್.ಐ ಅವರಿಗೆ ಸಂಶಯ ಹೆಚ್ಚಾಗಿ ಏನು ವಿಷಯ ಎಂದು ಅದೆಷ್ಟೇ ಬಲವಂತಪಡಿಸಿ ಕೇಳಿದರೂ ಪರಿ ಮಾತ್ರ "ಸರ್.. ಪ್ಲೀಸ್.. ಇದು ಪರ್ಸನಲ್ ಮ್ಯಾಟರ್! ನಾನೇ ಬಗೆಹರಿಸಿಕೊಳ್ತೆನೆ. " ಪ್ರಕರಣಕ್ಕೆ ವಿರಾಮ ನೀಡಿದಳು.

"ಹ್ಮ್... ಒಕೆ. ಸ್ಟೇಷನ್ ಗೆ ಬಂದು ಕಂಪ್ಲೆಂಟ್ ವಾಪಸ್ ತಗೋಳಿ. ಹೌದು ನಿಮಗೆ ಈ ಕಾರ್ ನಂಬರ್ ಹೇಗೆ ಸಿಕ್ಕಿತು? ಇದನ್ನು ನಿನ್ನೆ ಯಾಕೆ ತಿಳಿಸ್ಲಿಲ್ಲ.." ಎಸ್. ಐ ಗದರಿದರು. ಪರಿ ಧ್ರುವನ ಮುಖ ನೋಡಿದಳು. ಧ್ರುವ ಶ್ರಾವ್ಯಳ ಮುಖವನ್ನು ದುರುಗುಟ್ಟಿ ನೋಡಿದ. ಶ್ರಾವ್ಯ ಏನು ತೋಚದೆ ಮುಖ ಸಪ್ಪಗಾಗಿಸಿ ಸಾರಿ.. ಎಂದಳು ಪಿಸುದನಿಯಲ್ಲಿ.

ಅಲ್ಲಿಂದ ನೇರವಾಗಿ ಪೋಲಿಸ್ ಠಾಣೆಗೆ ತೆರಳಿ ಕಂಪ್ಲೆಂಟ್ ವಾಪಸ್ ಪಡೆದು, ದಾರಿಯಲ್ಲಿ ಬೆಳಗಿನ ನಾಷ್ಟಾ ಮಾಡಿ, ಮತ್ತೆ ಹೋಟೆಲ್ ರೂಮಿಗೆ ನಡೆದು ಸ್ನಾನ ಮುಗಿಸಿ ತಮ್ಮ ಲಗೇಜ್ ಸಿದ್ದಪಡಿಸಿಕೊಂಡು ಹೋಟೆಲ್ ಬಿಲ್ ಪಾವತಿಸಿ ಅಲ್ಲಿಂದ ಘನಿರ್ಗಮಿಸಿದ್ದರು. ಅವರೆಲ್ಲರೂ ಅದೆಷ್ಟೇ ವಿಭಿನ್ನ ರೀತಿಯಲ್ಲಿ ಪರಿಯ ಮನಸ್ಸನ್ನು ಅರಿಯಲು ಪ್ರಯತ್ನಿಸಿದರೂ ಅವಳು ತನ್ನ ಮೌನ ಮುರಿಯಲಿಲ್ಲ. ತಾನೊಬ್ಬಳೇ ಬೆಂಗಳೂರಿಗೆ ಮರಳುವುದಾಗಿ, ಅವರೆಲ್ಲರಿಗೂ ಟ್ರಿಪ್ ಮುಗಿಸಿ ಬನ್ನಿ ಎಂದರೂ ಅವರು ಅವಳ ಮಾತನ್ನು ಕೇಳದೆ ಅವಳೊಂದಿಗೆ ಬೆಂಗಳೂರಿಗೆ ಮರಳಲು ನಿರ್ಧರಿಸಿದರು.

ದಾರಿಯುದ್ದಕ್ಕೂ ರೋಹಿತ್, ಧ್ರುವ ಆ ರಘುನಂದನ್ ಬಗ್ಗೆ ಇನ್ನೂ ತಲೆ ಕೆಡಿಸಿಕೊಂಡಿದ್ದರೆ ಪರಿ ಅದಾಗಲೇ ಫೋನ್ ಮೂಲಕ ಮುಂಬೈಗೆ ಹೊರಡಲು ಟಿಕೆಟ್ ಬುಕ್ ಮಾಡಿದಳು. ಮನೆಯವರಿಗೆಲ್ಲ ಹರ್ಷನ ಜೀವಂತಿಕೆ ಬಗ್ಗೆ ತಿಳಿಸಬೇಕು ಎಂದುಕೊಂಡವಳಿಗೆ ಇದಕ್ಕೆಲ್ಲ ಕಾರಣವಾಗಿರುವ ಜೀವದ ಗೆಳತಿ ಮಾನ್ವಿಯ ಹೆಸರು ಹೇಳಲು ಮನಸ್ಸಿಗೆ ಹಿಂಸೆ ಎನ್ನಿಸಿ ಸುಮ್ಮನಾದಳು. ಈಗ ಅವಳಲ್ಲಿ ಮೊದಲಿದ್ದ ಗೊಂದಲವಾಗಲಿ ಗಾಬರಿಯಾಗಲಿ ಇರಲಿಲ್ಲ. ಒಂದೇ ಒಂದು ಸಮಾಧಾನವಿತ್ತು.. ಹರ್ಷ ಬದುಕಿದ್ದಾನೆ. ಕ್ಷೇಮವಾಗಿದ್ದಾನೆ. ಇಂದಲ್ಲ ನಾಳೆ ನನಗೆದುರಾಗುತ್ತಾನೆ. ನಾನು ಮತ್ತೆ ಹರ್ಷನ್ನ ಭೇಟಿಯಾಗುತ್ತೆನೆ. ಅವನ ಭುಜಕ್ಕೊರಗಿ ಇಷ್ಟು ದಿನಗಳ ನೋವು ಯಾತನೆಯೆಲ್ಲ ಮರೆತು ಬಿಡುತ್ತೇನೆ. ನೀನು ಹೇಳಿದ್ದೆ ಅಲ್ವಾ..ಏಳೇಳು ಜನ್ಮಕ್ಕೂ ನನ್ನ ಜೊತೆಯಾಗ್ತಿನಿ ಅಂತ.. ಏಳು ಜನ್ಮಗಳ ಭವಿಷ್ಯ ನನಗೆ ಗೊತ್ತಿಲ್ವೋ.. ಈ ಜನ್ಮಕ್ಕಂತೂ ನೀ ನನ್ನವನು.. ನೀ ನನ್ನ ಒಲವು..  ಬಹುಶಃ ನೀನು ಮರೆತೆಯೇನೋ!! ಜ್ಞಾಪಿಸೋ ಬಾಧ್ಯತೆ ನನ್ನದು.. ಎಂದುಕೊಂಡವಳ ಕಣ್ಣು ಪೊರೆಯಾಯಿತು. ನೋವಿನಿಂದಲ್ಲ, ಬೇಸರದಿಂದಲ್ಲ, ಎಂದಿಗೂ ಬತ್ತದ ತನ್ನ ಪ್ರೀತಿಯ ಮೇಲಿನ ಅಪಾರವಾದ ನಂಬಿಕೆಯ ಉಚ್ಚ ಸ್ಥಾಯಿಯಿಂದ...

                      *******

"ಗುಡ್ ಮಾರ್ನಿಂಗ್ ಸರ್,, ಹೇಗಿದೀರಾ?" ಅದೇ ತಾನೇ ಬೆಳಗಿನ ಜಾಗಿಂಗ್ ಮುಗಿಸಿ ಬಂದು ಪೇಪರ್ ಓದುತ್ತ ಎಸಿ ಹಾಲ್ ನಲ್ಲಿ ಕುಳಿತ  ಸಿಇಒ ಗೆ ನಗುಮೊಗದಿಂದ ವಿಷ್ ಮಾಡಿದ ಪ್ರಸನ್ನ.

"ಓಹ್ ಡಾ.ಪ್ರಸನ್ನ.. ಗುಡ್ ಮಾರ್ನಿಂಗ್.. ಬನ್ನಿ ಕೂತ್ಕೊಳ್ಳಿ. ಏನಿದು.. ರವಿವಾರ ದಿನ ಆಶ್ರಮದ ಕಡೆಗೆ ಹೋಗೋ ಬೈಕ್ ಈ ಕಡೆಗೆ ತಿರುಗಿದೆ! ಏನು ವಿಶೇಷ?"

"ವಿಶೇಷ ಏನಿಲ್ಲ ಸರ್, ಆದರೆ ಮುಖ್ಯವಾದ ಒಂದು ವಿಷಯ ಇದೆ. ಅದಕ್ಕೋಸ್ಕರ ಬರಬೇಕಾಯ್ತು..." ಸಿಇಒ ಏನು ಎಂಬಂತೆ ತಲೆ ಎತ್ತಿ ನೋಡಿದ. "ಇದು ನನ್ನ ಲೀವ್ ಲೆಟರ್ ಸರ್, ಒಂದು ಮುಖ್ಯವಾದ ಕೆಲಸದ ಮೇಲೆ ಮುಂಬೈಗೆ ಹೊರಟಿದ್ದಿನಿ. ಬರೋದು ಒಂದು ವಾರ ಆಗಬಹುದು ಇಲ್ಲಾ ವಾರದ ಮೇಲೆ ಮತ್ತೊಂದು ವಾರಾನಾದ್ರೂ ಆಗಬಹುದು.. ಇವು ನನ್ನ ಸದ್ಯದ ಕೇಸ್ ಡಿಟೇಲ್ಸ್ & ರಿಪೋರ್ಟ್.. ಎಲ್ಲಾ ಮೆಡಿಕಲ್ ಡಿಟೇಲ್ಸ್ ಕೂಡ ಇದರಲ್ಲೇ ಇದೆ, ಇನ್ನೂ ಏನಾದ್ರೂ ಮಾಹಿತಿ ಬೇಕಾದ್ರೆ ನನಗೆ ಕಾಲ್ ಮಾಡಿ ಇಲ್ಲ ವಿಡಿಯೋ ಕಾನ್ಫರೆನ್ಸ್ ಕೂಡ ಮಾಡಬಹುದು. " ಎಂದು ತಾನು ತಂದ ನೀಲಿ ಬಣ್ಣದ ಫೈಲ್ ನ್ನು  ಮತ್ತು ರಜೆಯ ಪತ್ರವನ್ನು ಅವರ ಮುಂದಿಟ್ಟ ಪ್ರಸನ್ನ.

"ಒನ್ ವೀಕ್ ಆರ್ ಟು ವೀಕ್?? ಏನು ತಮಾಷೆ ಮಾಡ್ತಿದೀರಾ!!  ನೋ ಡಾಕ್ಟರ್, ಅಷ್ಟೊಂದು ರಜೆ ಯಾಕೆ ಬೇಕು ನಿಮಗೆ?"

"ಅದು ನನ್ನ ವೈಯಕ್ತಿಕ!! ನೀವು ರಜೆ ಕೊಟ್ಟರೆ ಸರಿ. ಇಲ್ಲವಾದರೆ ಇದನ್ನ ತಗೋಳಿ ನನ್ನ ರೆಸಿಗ್ನೆಷನ್ ಲೆಟರ್!! ನಾನು ಅದಕ್ಕೂ ರೆಡಿಯಾಗೇ ಬಂದಿದ್ದಿನಿ" ಎಂದು ಇನ್ನೊಂದು ಫ್ಲಿಪ್ ಕವರ್ ನ್ನು ಅವರ ಮುಂದಿನ ಟೇಬಲ್ ಮೇಲಿಟ್ಟನು. ಅದೆಷ್ಟು ಪೇಚಾಡಿ ವಿನಂತಿಸಿ ಬೆಣ್ಣೆ ಹಚ್ಚಿ ಲೈಫ್ ಕೇರ್ ಹಾಸ್ಪಿಟಲ್ ನಿಂದ ತನ್ನ ಆಸ್ಪತ್ರೆಗೆ ಕರೆಸಿಕೊಂಡಿದ್ದ ಡಾ.ಪ್ರಸನ್ನನ ಈ ನಿರ್ಧಾರಕ್ಕೆ ಸಿಇಒ ಅವಾಕ್ಕಾದ. ರಜೆ ಕೊಡದಿದ್ದರೆ ಕನ್ವಿನ್ಸ್ ಮಾಡಬಹುದು ಎಂದುಕೊಂಡಿದ್ದರೆ ಹೊರತು ಹೀಗೆ ರೀಸೈನ್ ಮಾಡುತ್ತಾನೆ ಎಂದು ಯೋಚಿಸಿರಲಿಲ್ಲ. ತಕ್ಷಣ ಸಾವರಿಸಿಕೊಂಡು..

"ಡಾ.ಪ್ರಸನ್ನ, ಏನಿದು ಇಷ್ಟು ಚಿಕ್ಕ ವಿಷಯಕ್ಕೆ ರಿಸೈನ್ ಮಾಡೋದು!! ಆಲ್ ರೈಟ್ ಒಂದು ವಾರ ತಾನೇ ಹೋಗಿಬನ್ನಿ.. ಬಟ್ ನಮ್ಮ ಆಸ್ಪತ್ರೆಯನ್ನು ಬಿಟ್ಟು ಹೋಗೋ ಯೋಚನೆನಾ ಬಿಟ್ಟು ಬಿಡಿ ಒಕೆ"

"ಶ್ಯೂರ್ ಸರ್.. ಥ್ಯಾಂಕ್ಯು.. ನಾನು ನಿಮ್ಮಿಂದ ಇದೇ ಉತ್ತರ ನಿರೀಕ್ಷೆ ಮಾಡಿದ್ದೆ.." ಎದ್ದು ನಿಂತು ಮುಗುಳ್ನಕ್ಕು ಕೈ ಕುಲುಕಿದ. ಮನೆಯಿಂದ ಹೊರ ನಡೆದು ಬಂದು ತನ್ನ ಬೈಕ್ ಸ್ಟಾರ್ಟ್ ಮಾಡುವಾಗ ಸಿಇಒ ಕಡೆಗೊಮ್ಮೆ ಓರೆನೋಟ ಬೀರಿ "ಸರ್ ಯಾವುದೇ ಕಾರಣಕ್ಕೂ ಆ ಸೆಕೆಂಡ್ ಎನ್ವಿಲೊಪ್ ತೆಗೆದು ನೋಡಬೇಡಿ, ನಿಮ್ಮ ಮಂಡೇ ಬಿಸಿಯಾಗುತ್ತೆ.. ಬಾಯ್.. ಹ್ಯಾವ್ ಎ ನೈಸ್ ಸಂಡೇ.. " ಎಂದು ಹೇಳಿ ನಗುತ್ತಾ ಬೈಕಿನ ಗಡರ್ ಸದ್ದಿನೊಂದಿಗೆ ದೂರವಾದನು. ಸಿಇಒ ಗೆ ಅಲ್ಲಿಯವರೆಗೂ ಇಲ್ಲದ ಕುತೂಹಲ ಆಗ ಹೆಚ್ಚಾಯಿತು. ತಕ್ಷಣ ದಡದಡನೆ ಮೆಟ್ಟಿಲೇರಿ ಒಳಗೆ ಹೋಗಿ ಟೇಬಲ್ ಮೇಲಿದ್ದ ಆ ಕವರನ್ನು ತೆರೆದು ಮಡಿಚಿದ ಹಾಳೆ ಬಿಡಿಸಿದರು..

"ನೀವು ರಜೆ ಕೊಟ್ಟೆ ಕೊಡ್ತಿರಾ ಅಂತ ನನಗೆ ಸಂಪೂರ್ಣ ನಂಬಿಕೆಯಿದೆ. ಅಂದಮೇಲೆ ರಿಸೈನ್ ಲೆಟರ್ ಬರಿಯೋಕೆ ಪೆನ್ ಇಂಕ್.. ನನ್ನ ಟೈಮ್,  ಎನರ್ಜಿ ಯಾಕೆ ಹಾಳು ಮಾಡ್ಕೋಳ್ಳೋದು ಅಲ್ವಾ ಸರ್ 😝 ಎಂದು ಅಣುಗಿಸುವ ಚಿತ್ರ ಬರೆದಿದ್ದ. ತೆರೆದು ಓದಿದ ಸಿಇಒ ಸಿಟ್ಟಿನಿಂದ ಹಾಳೆ ಮುಗುಚಿ ಇಡಿಯಟ್!! ನಾನ್ಸೆನ್ಸ್!! ಎಂದು ಗೊಣಗಿದ. ಮತ್ತೆ ಕೆಲವು ಸೆಕೆಂಡ್ ಗಳಲ್ಲಿ  ತಮ್ಮ ಮೂರ್ಖತನಕ್ಕೋ ಅವನ ತುಂಟತನಕ್ಕೋ ಅವರ ಮುಖದಲ್ಲಿ ಕಿರುನಗೆ ಅರಳಿತ್ತು. ಅವರು ಏನೋ ಯೋಚಿಸುತ್ತಾ ತಲೆ ಚಚ್ಚಿಕೊಂಡರು.

ಮುಂದುವರೆಯುವುದು...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...