ದಾರಿಯುದ್ದಕ್ಕೂ ಶ್ರಾವ್ಯ ಪರಿಧಿಯನ್ನು ಕಂಪ್ಲೆಂಟ್ ಹಿಂದಕ್ಕೆ ಪಡೆಯಲು ಕಾರಣವೇನೆಂದು ಬಾರಿ ಬಾರಿ ಕೇಳಿದರೂ ಪರಿ ಮಾತ್ರ ತುಟಿ ಪಿಟ್ಟೆನ್ನಲಿಲ್ಲ. ಅಲ್ಲಿಯವರೆಗೆ ಮನೆಯವರಿಗೆ ಯಾವ ವಿಷಯವನ್ನು ತಿಳಿಸಲಾಗದೆ ಒದ್ದಾಡುತ್ತಿದ್ದ ಪರಿ, ಬೆಂಗಳೂರು ತಲುಪುತ್ತಿದ್ದಂತೆ ಮಂಗಳೂರಲ್ಲಿ ನಡೆದದ್ದೆಲ್ಲವನ್ನು ಪ್ರಸನ್ನನ ಮುಂದೆ ಹೇಳಿ ಹರ್ಷನನ್ನು ಹುಡುಕಲು ಪ್ರಸನ್ನನ ಸಹಾಯ ಯಾಚಿಸಲು ಮನಸ್ಸಲ್ಲೇ ನಿರ್ಧರಿಸಿದ್ದಳು. ಮಂಗಳೂರಿನಿಂದ ಬೆಂಗಳೂರಿಗೆ ತಲುಪುತ್ತಿದ್ದಂತೆ ಧ್ರುವ ಹಾಸ್ಟೆಲ್ ಕಡೆಗೆ ಹೋಗದೆ ಕಾರನ್ನು ಪ್ರಸನ್ನನ ಅಪಾರ್ಟ್ಮೆಂಟ್ ಕಡೆಗೆ ತಿರುಗಿಸಿದ. ಯಾಕೆ ಎಂದು ತಿಳಿಯದೆ ಎಲ್ಲರೂ ಅವನನ್ನು ಪ್ರಶ್ನಾರ್ಥಕವಾಗಿ ನೋಡಿದರು. ಪ್ರಸನ್ನ ನಿನ್ನೆ ರಾತ್ರಿ ವೇಳೆಯಲ್ಲಿ ಕರೆ ಮಾಡಿದ್ದು ಯಾವುದೋ ಮುಖ್ಯ ವಿಷಯವಾಗಿ ಎಂದು,, ಅದಕ್ಕಾಗಿ ಈ ಕೂಡಲೇ ಭೇಟಿಯಾಗಲು ತಿಳಿಸಿದ್ದನ್ನು ಆಗ ಧ್ರುವ ಎಲ್ಲರಿಗೂ ವಿವರಿಸಿದ. ಆದರೆ ವಿಷಯ ಏನೆಂದು ತಿಳಿಯದೆ, ಏನೂ ಅರ್ಥವಾಗದೆ ಹುಡುಗಿಯರು ಗೊಂದಲಕ್ಕೊಳಗಾದರೆ, "ನೀವು ನನ್ನ ಮೇಲೆ ಏನಾದ್ರೂ ಕಂಪ್ಲೆಂಟ್ ಮಾಡಿರ್ಬೇಕೇನೋ?? " ಎಂದು ಕೋಪಿಸಿಕೊಂಡ್ಡಿದ್ದ ರೋಹಿತ್. "ಹಾಗೆನಾದ್ರೂ ಕಂಪ್ಲೆಂಟ್ ಮಾಡೋ ಹಾಗಿದ್ದರೆ ಅಲ್ಲೇ ಮಂಗಳೂರಲ್ಲೇ ಪೋಲಿಸ್ ಕೈಗೆ ಒಪ್ಪಿಸಿ ಬರ್ತಿದ್ವು. ಇಲ್ಲಿಯವರೆಗೂ ಸರ್ ಹತ್ರ ಬರೋ ಅವಶ್ಯಕತೆ ಇರಲಿಲ್ಲ." ದಿವ್ಯ ರೇಗಿದಳು. "ನೀವಿಬ್ರೂ ಸುಮ್ನಾಗ್ತಿರಾ.. ಬೇರೆ ಏನೋ ವಿಷಯ ಇರಬಹುದು, ಅಲ್ಲಿಗೆ ಹೋದ ಮೇಲೆ ಗೊತ್ತಾಗುತ್ತೆ ಈಗ ಬಾಯಿಗೆ ಬೀಗ ಹಾಕಿ ಕೂತ್ಕೊಳ್ಳಿ.. " ಎಂದು ಕದನ ನಿಲ್ಲಿಸಿದ ದ್ರುವ್.
ಪ್ರಸನ್ನನ ರೂಮಿಗೆ ಬಂದು ಡೋರ್ ಬೆಲ್ ಮಾಡಿದಾಗ ಬಾಗಿಲು ತೆರೆದ ಪ್ರಸನ್ನ ಯಾರೊಂದಿಗೋ ಫೋನ್ ನಲ್ಲಿ ಮಾತನಾಡುತ್ತಾ ಕೈಯಿಂದ ಬನ್ನಿ ಎಂಬಂತೆ ಸನ್ನೆ ಮಾಡಿ ಒಳಗೆ ಕರೆದು ಕೂರಿಸಿ ತಾನು ಮಾತಿನಲ್ಲಿ ಮುಳುಗಿದ್ದ. ಬ್ಲ್ಯಾಕ್ ಟೀ ಶರ್ಟ್ ಧರಿಸಿದ್ದ ಕೆನೆ ಬಣ್ಣದ ಪ್ರಸನ್ನನನ್ನು ಏಕದೃಷ್ಟಿಯಲ್ಲಿ ನೋಡುತ್ತಾ ದಿವ್ಯ ಮೈಮರೆತು ಕನಸಿನಲ್ಲಿ ತೇಲುತ್ತಿದ್ದರೆ ಶ್ರಾವ್ಯ ಮೊಣಕೈಯಿಂದ ಅವಳ ಹೊಟ್ಟೆಗೆ ಗುದ್ದಿ " ನಾವಿಲ್ಲಿ ಹೆಣ್ಣು ತೋರಿಸೋಕೆ ಬಂದಿಲ್ಲ.. ನೀನು ಅವರನ್ನ ಹಾಗೆ ಕಿತ್ಕೊಂಡು ತಿನ್ನೋ ತರಾ ನೋಡೋದನ್ನ ಅವ್ರೆನಾದ್ರೂ ನೋಡಿದ್ರೆ ನಿನ್ನ ಜೊತೆ ನನಗೂ ಡಿಸ್ಕೌಂಟ್ ನಲ್ಲಿ ಉಗಿದು ಆಚೆ ಬಿಸಾಕ್ತಾರೆ.. ಬಿ ಕೇರ್ ಪುಲ್..!" ಎಂದು ಗದರಿದಳು. ದಿವ್ಯಾ ನೋಟ ಬದಲಿಸಿದ್ದಳು,
ಫೋನ್ ನಲ್ಲಿ ಮಾತು ಮುಗಿಸಿ ಬಂದ ಪ್ರಸನ್ನ ಎಲ್ಲರನ್ನೂ ಕುರಿತು ಕೇಳಿದ - "ಹಾಯ್,,, ಎವ್ರೀಬಡಿ಼,, ಹ್ಮ್,, ಹೇಗಿತ್ತು ಜರ್ನಿ.. ಆರ್ ಯು ಹ್ಯಾಪಿ ನೌ ಶ್ರಾವ್ಯ??" ತಾನು ಬೇಗ ಬರಲು ತಿಳಿಸಿದ್ದಕ್ಕೆ ಅವಳು ಖಂಡಿತ ಕೋಪಿಸಿಕೊಂಡಿರುತ್ತಾಳೆಂದು ತಿಳಿದು ಬೇಕಂತಲೇ ಕೆಣಕಿದ. ಅವಳ ಮುಖದಲ್ಲಿ ಕೋಪದ ಬದಲಾಗಿ ಹೊಸದಾದ ಕುತೂಹಲ ಕುಣಿಯುತ್ತಿತ್ತು. "ಸರ್.. ನಾವು ನಿಮಗೊಂದು ಸರ್ಪ್ರೈಜಿಂಗ್ ವಿಷಯ ಹೇಳೊಕೆ ಬಂದ್ವಿ... ನಾವು ಮಂಗಳೂರಲ್ಲಿ... " ಅವಳು ಮಾತು ಮುಂದುವರೆಸುವ ಮೊದಲೇ ಧ್ರುವ ಅವಳನ್ನು ತಡೆದಿದ್ದ. "ಸರ್.. ನೀವು ಅದೇನೋ ಮುಖ್ಯವಾದದ್ದೇನೋ ಅಂದ್ರಲ್ವಾ, ಅದನ್ನ ಹೇಳಿ ಫರ್ಸ್ಟ್.." ಧ್ರುವನ ಮಾತಿಗೆ ಪ್ರಸನ್ನ ಪರಿಯ ಕಡೆಗೊಮ್ಮೆ ದೃಷ್ಟಿ ಹಾಯಿಸಿದ. ಅವಳ ಮುಖದಲ್ಲೊಂದು ಕಾತರತೆ, ಹೊಸ ಉತ್ಸಾಹ, ಚಿಲುಮೆ ಕಂಡಿದ್ದ. ಪ್ರವಾಸ, ಜಾಗ ಬದಲಾವಣೆಯಿಂದಾದ ಸಂತೋಷ ಎಂದುಕೊಂಡು ಮುಂದುವರಿದ - "ಪರಿ..ಒಂದ್ಸಲ ಈ ರಿಪೋರ್ಟ್ಸ್ ನೋಡಿ" ಎಂದು ಎದುರಿಗಿದ್ದ ಫೈಲ್ ಅವಳ ಕೈಗಿಟ್ಟ. ಪ್ರಶ್ನೆ, ಅನುಮಾನದೊಂದಿಗೆ ಅವನ ಮುಖ ನೋಡುತ್ತಾ ಫೈಲ್ ತೆಗೆದುಕೊಂಡ ಪರಿ ಪುಟ ತಿರುವಿದಳು. ಹರ್ಷನ ಡೆತ್ ಆ್ಯಂಡ್ ಪೋಸ್ಟ್ ಮಾರ್ಟಮ್ ರಿಪೋರ್ಟ್!! ಅವಳ ಬಾಯಿಂದ ಸ್ವರ ಹೊರಡಿತ್ತು. ಒಮ್ಮೆ ಪ್ರಸನ್ನನನ್ನು ಏನು ಎಂಬಂತೆ ನೋಡಿದಳು. "ಆ ಫೈಲ್ ನಾ ಗಮನಿಸಿ ನೋಡಿ ಪರಿ.. ಅವೆಲ್ಲ ಫೇಕ್ ರಿಪೋರ್ಟ್!! ನಾನ್ ಸರ್ಟಿಫೈಡ್!! " ಅವಳು ಅಚ್ಚರಿಯಿಂದ ಫೈಲ್ ನ್ನು ಪರಿಶೀಲಿಸಿ ನೋಡುತ್ತಿದ್ದರೆ ಪಕ್ಕದಲ್ಲಿ ಇತರರು ಅದನ್ನು ಕೂತುಹಲದಿಂದ ಇಣುಕಿ ನೋಡುವದರಲ್ಲಿದ್ದರು. ಪ್ರಸನ್ನ ಹೇಳಿದ -"ಹರ್ಷ ಸತ್ತಿಲ್ಲ ಪರಿ.. ಅವನು ಸತ್ತಿದ್ದಾನೆ ಅನ್ನೋ ಹಾಗೆ ಸುಳ್ಳು ದಾಖಲೆ ಸೃಷ್ಟಿಸಿ ನಿಮಗೆ ಮೋಸ ಮಾಡಿದ್ದಾರೆ. ಇದೆಲ್ಲಾ ಯಾರು ಮಾಡಿದ್ದಾರೋ ಗೊತ್ತಿಲ್ಲ ಆದರೆ ಇದು ನಡೆದಿರೋದು ಎಂ.ಆರ್ ಹಾಸ್ಪಿಟಲ್ ನಲ್ಲಿ. ಈ ಹಾಸ್ಪಿಟಲ್ ಯಾರ ಹೆಸರಲ್ಲಿದೆ ಅಂತ ನಿಮಗ್ ಗೊತ್ತಾ? ನಿಮ್ಮ ಬೆಸ್ಟ್ ಫ್ರೆಂಡ್ ಮಾನ್ವಿ ರೈ!! ಅವಳ ತಂದೆ ರಘುನಂದನ್ ರೈ ಈ ಹಾಸ್ಪಿಟಲ್ ಡೈರೆಕ್ಟರ್! ಅದ್ಯಾಕೋ ಗೊತ್ತಿಲ್ಲ... ನನಗೆ ಈ ತಂದೆ ಮಗಳ ಮೇಲೆ ತುಂಬಾ ಸಂಶಯ ಇದೆ. ಇದೆಲ್ಲ ಅವರದ್ದೆ ಕ್ರಿಮಿನಲ್ ಮೈಂಡ್ ಅನಿಸ್ತಿದೆ!! ನಿಮ್ಮ ಮಧ್ಯೆ ಅಂತಹ ದ್ವೇಷ ಏನಾದ್ರೂ ಬೆಳೆದಿತ್ತಾ..?"
ಅವನ ಮಾತು ಕೇಳುತ್ತಿದ್ದ ಪರಿ ಮೌನಕ್ಕೆ ಶರಣಾಗಿದ್ದರೆ, ಶ್ರಾವ್ಯಳಿಗೆ ಅವರು ಹರ್ಷಾನಾ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡೀತು. ಇತರರು ಮಂಗಳೂರಲ್ಲಿ ನಡೆದದ್ದನ್ನು ಹೇಗೆ ಹೇಳಲು ಶುರು ಮಾಡುವುದು ಎಂಬ ಯೋಚನೆಯಲ್ಲಿ ಮುಖ ಮುಖ ನೋಡಿಕೊಂಡರು. "ಏಕ್ಸ್ಯಾಕ್ಟ್ಲಿ.. ಸರ್, ಹರ್ಷ ಬದ್ಕಿದ್ದಾರೆ! ಇದೇ ರಘುನಂದನ್ ರೈ ಜೊತೆಗೆ ಇದ್ದಾರೆ ಬಟ್ ಈಗ ಅವರ ಐಡೆಂಟಿಟಿ ಮಾತ್ರ ಬದಲಾಗಿದೆ. ಈಗ ಅವರ ಹೆಸರು.. ಅದೇನೊ ಬೇರೆನೆ ಇದೆ. ಏನದು..?" ರೋಹಿತ್ ಶ್ರಾವ್ಯಳತ್ತ ಕೈ ಮಾಡಿ ಕೇಳಿದ. "ಸಂಕಲ್ಪ್ ಸರ್.. ಸಂಕಲ್ಪ್ ಅಥ್ರೇಯಾ!! ಅಂತ. ಅವರು ಸಿಡ್ನಿಯಲ್ಲಿ ಇರ್ತಾರೆ. ನನ್ನ ಕಜೀನ್‌ನ ಬಾಸ್! " ಉತ್ಸಾಹದಿಂದ ಸಂಪೂರ್ಣಗಾಥೆಯನ್ನೂ ಹೇಳಿ ತನ್ನ ಮೊಬೈಲ್ ನಿಂದ ವಿಡಿಯೋ ತೋರಿಸಿದಳು. "ಇವಳ ಡೈಲಾಗ್‌ನಾ ಕೇಳಿ ಕೇಳಿ ತಲೆ ಕೆಟ್ಟೋಗಿದೆ ಮಗಾ" ಧ್ರುವ ತಲೆ ಕೆರೆದುಕೊಳ್ಳುತ್ತ ರೋಹಿತ್ ಕಿವಿಯಬಲ್ಲಿ ಪಿಸುನುಡಿದ.
ಪ್ರಸನ್ನ ಹರ್ಷನ ವಿಡಿಯೋ ನೋಡುತ್ತಿದ್ದಾಗ ಧ್ರುವ ಮತ್ತು ರೋಹಿತ್, ಹಿಂದಿನ ದಿನ ಮಂಗಳೂರಿನ ಬೀಚ್ ನಲ್ಲಿ ನಡೆದದ್ದನ್ನು, ಶ್ರಾವ್ಯ ಆ ನಂಬರ್‌ನ ಕಾರಿನ ಹುಡುಕಾಟವನ್ನು, ದಿವ್ಯ ಪೋಲಿಸ್ ಕಂಪ್ಲೆಂಟ್ ನಿಂದ ಹಿಡಿದು ಬೆಳಿಗ್ಗೆ ಏರ್ಪೋರ್ಟ್ ವರೆಗಿನ ಪ್ರತಿಯೊಂದು ಘಟನೆಯನ್ನು ವಿವರಿಸಿ ಹೇಳಿದಳು. ತಮ್ಮ ತಮ್ಮ ದೃಷ್ಟಿಕೋನದಿಂದ ನಡೆದದ್ದನ್ನು ವಿವರಿಸಿ ಹೇಳಿದ ಎಲ್ಲರೂ ತುಂಬ ಗೊಂದಲದಲ್ಲಿ ಮುಳುಗಿದ್ದರು. ಏನು ನಡೆದಿರಬಹುದು ಎಂಬ ಬಗ್ಗೆ ಆಲೋಚಿಸುತ್ತ ತರ್ಕಕ್ಕೆ ಇಳಿದಿದ್ದರು. ಪರಿ ಉಸಿರು ಬಿಗಿ ಹಿಡಿದು ಪ್ರಸನ್ನನ ಪ್ರತೀಕ್ರೀಯೆಗಾಗಿ ಎದುರು ನೋಡುತ್ತಿದ್ದಳು. ಎಲ್ಲವನ್ನೂ ತದೇಕಚಿತ್ತದಿಂದ ಕೇಳಿದ ಪ್ರಸನ್ನ ಕೆಲನಿಮಿಷ ಯೋಚನೆಯಲ್ಲಿ ಮುಳುಗಿದ್ದ. ಪ್ರತಿಯೊಬ್ಬರ ಮಾತುಗಳನ್ನು, ರಿಪೋರ್ಟ್‌ಗಳನ್ನು ತಾಳೆ ಹಾಕಿ ನೋಡಿದ ಪ್ರಸನ್ನನ ಮುಖ ಗಂಭೀರವಾಗಿ ಹುಬ್ಬು ಗಂಟಿಕ್ಕಿತ್ತು. ಪ್ರಸನ್ನ ಮಾತಾಡಿದ...
"ಹ್ಮ್... ತುಂಬಾನೇ ಬ್ರಿಲಿಯಂಟಾಗಿ ಪ್ಲ್ಯಾನ್ ಮಾಡಿದ್ದಾರೆ,, ಅವತ್ತು ಅಂಕಲ್‌ಗೆ ಕಾಲ್ ಮಾಡಿ ಹರ್ಷನಿಗೆ ಆ್ಯಕ್ಸಿಡೆಂಟ್ ಆಗಿ ಬ್ರೇನ್ ಇಂಜ್ಯೂರ್ಡ್ ಆಗಿದೆ ಅಂತ ಹೇಳಿದ್ದಾರೆ . ಆಮೇಲೆ ಸತ್ತೇಹೋದ ಅಂತ ಸುಳ್ಳು ಬೇರೆ... ಆದ್ರೆ ವಾಸ್ತವದಲ್ಲಿ ಅವತ್ತು ಹರ್ಷ ಸತ್ತಿರಲೇ ಇಲ್ಲ., ಬದುಕಿದ್ದ. ಅವತ್ತು ಅಮ್ಮ ಮತ್ತು ಅಂಕಲ್ ಮುಂಬೈಗೆ ತಲುಪೊ ಹೊತ್ತಿಗೆ ಹರ್ಷ ಕೋಮಾದಲ್ಲಿದ್ದ ಅನ್ಸುತ್ತೆ, ಅವರಿಗೆ ದೂರದಿಂದ ಹರ್ಷನ್ನ ತೋರಿಸಿ ಅವನು ಸತ್ತೋದ ಅಂತ ನಂಬಿಸಿ, ಬೇರೆ ಯಾರದೋ ಶವ ಸಂಸ್ಕಾರವನ್ನ ಅವರ ಕೈಯಲ್ಲಿ ಮಾಡಿಸಿದ್ದಾರೆ. ಇದಕ್ಕೆಲ್ಲ ಕಲಿತ ವಿದ್ಯೆಯನ್ನ ದುರುಪಯೋಗ ಮಾಡಿಕೊಳ್ಳೊ ಡಾ.ಪಟ್ಟಾಭಿರಾಮ್‌ನಂತಹ ನಕಲಿ ರಿಪೋರ್ಟ್ ಪುರಾವೆ ಬೇರೆ!! ಎಂಥ ವಿಪರ್ಯಾಸ ಅಲ್ವಾ ಬದುಕಿರೊ ವ್ಯಕ್ತಿನಾ ಇಷ್ಟು ದಿನ...ಛೇ..!!
I think it's traumatic brain injury !! ಅಂದ್ರೆ ನೇರವಾಗಿ ಮೆದುಳಿಗೆ ಬಲವಾದ ಪೆಟ್ಟು ಬಿದ್ದಿರೋದ್ರಿಂದ ಹರ್ಷ ತನ್ನ ಹಳೆಯ ನೆನಪುಗಳನ್ನು ಮರೆತಿರೋ ಚಾನ್ಸಸ್ ಇದೆ. ಇದನ್ನೇ ಆಧಾರವಾಗಿಟ್ಟುಕೊಂಡು ಹರ್ಷನನ್ನ ತಮಗೆ ಬೇಕಾದ ಹಾಗೆ ಬೇರೆ ಯಾವುದೋ ಐಡೆಂಟಿಟಿ ಕೊಟ್ಟು ತಾವು ಹೇಳಿದ ಹಾಗೆ ಕೇಳೋ ಹಾಗೆ ಮಾಡಿ ಆಟ ಆಡಿಸ್ತಿರಬಹುದು... ಉಫ್... What a dangerous world!!! " ಪ್ರಸನ್ನ ಧೀರ್ಘ ನಿಟ್ಟುಸಿರು ಬಿಟ್ಟ. ಮನುಷ್ಯನ ಅಸ್ತಿತ್ವವನ್ನೆ ನುಂಗಿ ಹಾಕುವ ದುಷ್ಟ ಜನರ ಮೇಲೆ ಅವನಲ್ಲಿ ಆವೇಶ ಉಕ್ಕುತ್ತಿತ್ತು. ಮುಷ್ಟಿ ಬಿಗಿಯಾಗಿತ್ತು.
"ಹಾಗಾದ್ರೆ, ಹರ್ಷ ಹಳೆಯದೆಲ್ಲ ಮರೆತಿದ್ದಾನೆ ಅಂತೀರಾ!!" ಪರಿ ಶೂನ್ಯ ದಿಟ್ಟಿಸಿದಳು. ಇಲ್ಲ..ಮರೆತಿಲ್ಲ... ಎನ್ನುತ್ತಿತ್ತು ಮನಸ್ಸು.
"ಡೋಂಟ್ ವರಿ ಪರಿ... ಅವರ ಇಂಜ್ಯೂರಿ ಡೆಪ್ತ್ ಎಷ್ಟಿದೆ? ಅವರ ಮೆಂಟಲ್ ಕಂಡಿಷನ್ ಹೇಗಿದೆ? ಅವರ ಮೆಡಿಕಲ್ ರಿಪೋರ್ಟ್ ಎಲ್ಲ ಸಿಕ್ಕರೆ ಅವರನ್ನ ಮತ್ತೆ ಮೊದಲಿನ ಹರ್ಷ ಮಾಡಬಹುದು.. ಅಲ್ವಾ ಸರ್..." ಧ್ರುವ ಕೇಳಿದ.
"ಅದರ ಜೊತೆಗೆ ಅವರ ಮೆಮೊರಿ ಯಾವ ಸ್ಟೆಜಲ್ಲಿದೆ ಅನ್ನೊದು ಕೂಡ ತುಂಬಾ ಮುಖ್ಯವಾಗುತ್ತೆ! ಹಳೆಯದೆಲ್ಲ ಪೂರ್ಣವಾಗಿ ಮರ್ತಿದ್ದಾರಾ ಅಥವಾ ಅಲ್ಪ ಸ್ವಲ್ಪ ನೆನಪಿದೆಯಾ ಅಂತ ತಿಳ್ಕೊಬೇಕಾಗುತ್ತೆ. ಅವರ ಮೈಂಡ್‌ಗೆ ತುಂಬಾ ಒತ್ತಡ ಹಾಕಿ ನೆನಪು ಮಾಡಿಸೋ ಹಾಗೂ ಇಲ್ಲ, ಹಾಗೆ ಮಾಡೊದ್ರಿಂದ ಅವರ ಮಾನಸಿಕವಾಗಿ ಅಸ್ವಸ್ಥರಾಗೊ ಸಂಭವವಿದೆ. ಆದ್ರೆ ಸಬ್‌ಕಾನ್ಶಿಯಸ್ ಮೈಂಡ್ ಯಾಕ್ಟೀವ್ ಇದ್ರೆ ಕ್ಯೂರ್ ಮಾಡೋದು ತುಂಬಾ ಈಜಿ.. ರೈಟ್ ಸರ್?? " ರೋಹಿತ್ ಮಧ್ಯೆ ಬಾಯಿ ಹಾಕಿದ.
"ಯಾ.. ಅಫ್‌ಕೋರ್ಸ.. ಆದರೆ ಈ ರೀತಿಯ ಪೇಷಂಟ್ ಕಂಡಿಷನ್ ತುಂಬಾ ಸೂಕ್ಷ್ಮವಾಗಿರುತ್ತೆ. ಇವರು ಅಷ್ಟು ಸುಲಭಕ್ಕೆ ಯಾರನ್ನೂ ನಂಬೋದಿಲ್ಲ, ತಮ್ಮ ಸ್ವಂತ ನೆರಳನ್ನೂ ಸಹ.. ಯಾರಜೊತೆಗೂ ಹೆಚ್ಚು ಮಾತಾಡಲ್ಲ, ಒಂಟಿಯಾಗಿ ಇರೋಕೆ ಇಷ್ಟ ಪಡ್ತಾರೆ, ಇವರ ನಂಬಿಕೆ ಗಳಿಸೋದು ತುಂಬಾ ಕಷ್ಟ,, ಯಾಕೆಂದ್ರೆ ಇವರ ಮೂಡ್ ಯಾವಾಗಲೂ ಒಂದೇ ರೀತಿ ಇರಲ್ಲ, ಕೆಲವೊಮ್ಮೆ ಕೂಲ್, ಇನ್ನೊಮ್ಮೆ ವೆರಿ ಹೈ ಟೆಂಪರ್ ಆಗಿರ್ತಾರೆ.. ಅದು ಅಲ್ಲದೆ ಈಗೀರೋ ನಂಬಿಕೆಗೆ ವಿರುದ್ಧವಾಗಿ ಹೊಸ ರೀತಿಯ ಜೀವನ ಅದು ನಿಜವಾದರೂ ಅವರ ಪಾಲಿಗೆ ಮೋಸದ ಹಾಗಿರುತ್ತೆ"
"ಹೌದು ಸರ್..ನಿಜ, ಅವರು ಯಾರ ಜೊತೆಗೂ ಜಾಸ್ತಿ ಮಾತಾಡಲ್ಲ, ತಮ್ಮ ಪಾಡಿಗೆ ತಾವು ಇರೋದಂತೆ.. ಮತ್ತೆ ಅವರಿಗೆ ಸಿಟ್ಟು ತುಂಬಾ ಬರುತ್ತಂತೆ.. ಒಮ್ಮೊಮ್ಮೆ ತೀರಾ ಸಿಟ್ಟು ಬಂದಾಗ ಆಫಿಸ್‌ನಲ್ಲಿ ಕೈಗೆ ಸಿಕ್ಕಿದ್ದನ್ನ ತಗೊಂಡು ಗೋಡೆಗೆ ಎಸೆದು ಬಿಡ್ತಾರಂತೆ.. ಒಮ್ಮೆ... " ಎಂದು ಏನೋ ಹೇಳಬೇಕೆಂದವಳು ಪರಿಗೆ ಬೇಜಾರಾಗುವದೆಂದು ಅವಳ ಮುಖ ನೋಡಿ ಸುಮ್ಮನಾದಳು ಶ್ರಾವ್ಯ.
"ಪ್ರಸನ್ನ್... ಹರ್ಷನ್ನ ಮತ್ತೆ ಮೊದಲಿನಂತೆ ಮಾಡಿ, ಮನೆಗೆ ಕರ್ಕೊಂಡು ಬರೊಕೆ ನನಗೆ ನಿಮ್ಮ ಸಹಾಯ ಬೇಕು. ಪ್ಲೀಜ್, ಐ ನೀಡ್ ಯುವರ್ ಹೆಲ್ಪ್.." ವಿನಂತಿ ಮಾಡಿದಳು ಪರಿ.
"ನೀವು ಕಂಪ್ಲೆಂಟ್ ವಾಪಸ್ ತಗೊಂಡಿದ್ಯಾಕೆ ಪರಿ?? " ಅಷ್ಟೊತ್ತು ಗಂಭೀರವಾಗಿದ್ದ ಪ್ರಸನ್ನ ಇದ್ದಕ್ಕಿದ್ದಂತೆ ಗುಡುಗಿದ. "ಪೋಲಿಸ್‌ನವರ ಬೆಂಬಲ ಬೇಡ್ವಾ ಪರಿ...??? ಯಾಕೆ..?? ಭಯಾನಾ....? ಹರ್ಷನಿಗೆ ಏನಾದ್ರೂ ಆಗುತ್ತೆ ಅಂತಾನಾ? ಅಥವಾ ನಿಮ್ ಫ್ರೆಂಡ್ ಮಾನ್ವಿಗೆ ಜೈಲು ಶಿಕ್ಷೆ ಆಗಬಹುದು ಅಂತಾನಾ?" ಕೊನೆಯ ವ್ಯಂಗ್ಯ ಮಾತಿಗೆ ಅವನ ಕೋಪ ಸಿಡಿಲೆರಗಿದಂತಿತ್ತು. ಕೈ ಮೇಜಿಗೆ ಗುದ್ದಿದ. ಪರಿ ಅವನ ಧ್ವನಿಗೆ ನಡುಗಿ ಹೋಗಿದ್ದಳು. "ಇಲ್ಲಾ.. ಮಾನ್ವಿ ಏನೂ ಮಾಡಿಲ್ಲ ಪ್ರಸನ್ನ.." ಅಷ್ಟೇ ತಾಳ್ಮೆಯಿಂದ ಉತ್ತರಿಸಿದ್ದಳು. "ಅವಳು ಒಳ್ಳೆಯವಳೇ.... ಇದನ್ನೆಲ್ಲ ಮಾಡಿಸಿದ್ದು ಅವಳಲ್ಲ... ಅವಳೊಳಗಿರೋ ದುಃಖ.. ನೋವು.. ಸಿಟ್ಟು.. ನನ್ನ ಮೇಲಿರೋ ಅಸಹನೆ.. ಅಷ್ಟೇ!!" ಪರಿಯ ತಾಳ್ಮೆ ಕಂಡು ಪ್ರಸನ್ನನ ಕೋಪ ಮತ್ತಷ್ಟು ಹೆಚ್ಚಾಯಿತು..
"ಇಷ್ಟೆಲ್ಲಾ ಆದಮೇಲೂ ಅವಳ ಪರ ವಹಿಸ್ಕೊಳ್ತಿದಿರಲ್ಲಾ ಪರಿ.. ಹರ್ಷನ ಪ್ರೀತಿ ಬಗ್ಗೆ ಮಾರುದ್ದ ಭಾಷಣ ಮಾಡ್ತಿದ್ರಿ.. ಈಗ ಹರ್ಷ ಲೆಕ್ಕಕ್ಕಿಲ್ವ.. ಅಥವಾ ಎಲ್ಲಾ ಪ್ರೀತಿ ಬರೀ ಬಾಯಿಮಾತಿಗಾ..?? ಮನೆಯಲ್ಲಿ ಅಮ್ಮ ತಾತ, ಅಂಕಲ್, ಹರಿ ಎಲ್ಲರ ಕಣ್ಣೀರಿಗೆ ಕಾರಣ ಆದವ್ರನ್ನ ಯಾಕೆ ಸುಮ್ಮನೆ ಬಿಡಬೇಕು.. ಅವರ್ಯಾರ ಕಣ್ಣೀರಿಗೂ ಬೆಲೆ ಇಲ್ವಾ! ನನ್ನ ಪ್ರಕಾರ ತಪ್ಪು ಮಾಡಿದವ್ರಿಗೆ ಶಿಕ್ಷೆಯಾಗಲೇ ಬೇಕು.. ಅದು ಫ್ರೆಂಡ್ ಆಗಿರಲಿ ಬೇರೆ ಯಾರೇ ಆಗಿರಲಿ.. ಕಂಪ್ಲೆಂಟ್ ಯಾಕೆ ಹಿಂದೆ ತಗೋಬೇಕಿತ್ತು ನೀವು..." ಅವನ ಧ್ವನಿಗೆ ಗೋಡೆ ಕಂಪಿಸಿದಂತಿತ್ತು.
"ಯಾಕೆಂದರೆ ನನಗೆ ಹರ್ಷ ಮಾನ್ವಿ ಇಬ್ಬರೂ ಬೇಕು.. ಪ್ರಸನ್ನ" ಪಟ್ಟು ಹಿಡಿದಂತೆ ಹೇಳಿದಳು ಪರಿ. "ನೀವು ತಿಳ್ಕೊಂಡಿರೊ ಹಾಗಲ್ಲ ಮಾನ್ವಿ.. ಅವಳ ಲೈಫ್ ನಲ್ಲಿ ನಡೆದಿರೋ ಕೆಲವು ಕೆಟ್ಟ ಘಟನೆಗಳು ಅವಳು ಹಾಗೆ ಮಾಡಲು ಕಾರಣ ಆಗಿರಬಹುದು.. ತುಂಬಾ ಪ್ರೀತಿಸಿದವರನ್ನ ಕಳ್ಕೊಂಡಾಗ ಆಗೋ ನೋವು ಪ್ರೀತಿ ಅನ್ನೊದಾದ್ರೆ,, ಆ ನೋವಿಗೆ ಕಾರಣ ಆದವ್ರನ್ನ ದ್ವೇಷಿಸೋದು ಕೂಡ ಪ್ರೀತಿನೇ!! ಇದು ಹಾಗೆ.. ಅವಳಿಗೆ ನನ್ನ ಮೇಲೆ ಕೋಪ ಇದೆ. ದ್ವೇಷ ಇದೆ, ಸೇಡಿದೆ.. ಅದು ಸಹಜ ಕೂಡ.. ನಮ್ಮ ಮಧ್ಯೆ ಇರೋ ಮನಸ್ತಾಪ ಸರಿ ಹೋದ್ರೆ, ಎಲ್ಲಾ ಸರಿ ಹೋಗುತ್ತೆ.. ಇದಕ್ಕೆ ಪೋಲಿಸ್ ಮಧ್ಯಸ್ಥಿಕೆ ಅವಶ್ಯ ಅನಿಸಲಿಲ್ಲ.. ಹರ್ಷನ ಮೇಲೆ ನನಗಿರೋ ಪ್ರೀತಿನಾ ಸಾಕ್ಷಿ ಸಮೇತ ರುಜುವಾತು ಮಾಡೋ ಅಗತ್ಯನೂ ನನಗಿಲ್ಲ.. ಇದೆಲ್ಲಾ ವಿಷಯನೂ ಮನೆಯವರಿಗೆ ತಿಳಿಸೋ ಹಾಗಿಲ್ಲ, ನಿಮ್ಮ ಹೊರತು ನನಗೆ ಬೇರೆ ಯಾರೂ ಗೊತ್ತು ಇಲ್ಲ, ಅದಕ್ಕೆ ನಿಮ್ಮ ಸಹಾಯ ಕೇಳ್ತಿದಿನಿ.. ಪ್ಲೀಸ್ ಬಿ ವಿತ್ ಮಿ.."
"ನಿಮ್ಮ ಈ ಫಿಲಾಸಫಿನಾ ಬೇರೆ ಯಾರಿಗಾದ್ರೂ ಹೇಳಿ, ನನಗಲ್ಲ.. ನನಗಿದೆಲ್ಲಾ ಆಗೊದೂ ಇಲ್ಲ... ಅತೀಯಾದ ಒಳ್ಳೆಯತನ ಕೂಡ ಕೆಟ್ಟದ್ದು ಪರಿ.. ಎಲ್ಲಾ ಪರಿಸ್ಥಿತಿಯಲ್ಲಿ ತಾಳ್ಮೆ ಒಳ್ಳೆಯದಲ್ಲ. ಪ್ರ್ಯಾಕ್ಟಿಕಲ್ ಆಗಿ ಥಿಂಕ್ ಮಾಡಿ..." ಜನ ದೇವರು ಎಂದು ಪೂಜಿಸೊ ವೈದ್ಯ ವೃತ್ತಿ ಸ್ವಾರ್ಥದ ಕೈಗೆ ಸಿಕ್ಕು ತನ್ನ ಅಸ್ತಿತ್ವ ಬೆಲೆ ಕಳೆದುಕೊಂಡಿರುವುದನ್ನ ಕಂಡು ಅವನ ಮನಸ್ಸು ಕದಡಿತ್ತು. ಅದಕ್ಕೆ ಕಾರಣವಾದವಳು ಮಾನ್ವಿ ಎಂದು ತಿಳಿದ ಮೇಲಂತೂ ಅವನ ಸಿಟ್ಟು, ಮಿತಿ ಮೀರಿ ಹೋಗಿತ್ತು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎನ್ನುವುದು ಅವನ ಧೋರಣೆಯಾಗಿತ್ತು.
"ಹೇಗೆ ಯೋಚನೆ ಮಾಡಿದ್ರೂ ಅವಳು ನನ್ನ ಹರ್ಷನ ಪ್ರಾಣ ಉಳಿಸಿದ್ದಾಳೆ ಅನ್ನೊದು ನಿಜ ಅಲ್ವಾ, ಇಷ್ಟು ದಿನ ಅವನನ್ನ ಕ್ಷೇಮವಾಗೇ ನೋಡಿಕೊಂಡಿದ್ದಾರೆ, ಆ ಕೃತಜ್ಞತೆಯಾದ್ರೂ ಇರಬೇಕಲ್ವಾ.. ಅಷ್ಟಕ್ಕೂ ಇದಕ್ಕೆಲ್ಲ ಮಾನ್ವಿನೇ ಕಾರಣ ಅನ್ನೋದು ಬರೀ ಅನುಮಾನ ಮಾತ್ರ,, ನಿಜವಾಗಿ ಏನು ನಡೆದಿದೆಯೋ ಅಂತ ತಿಳಿದುಕೊಂಡ ಮೇಲೆ ಮುಂದಿನ ಯೋಚನೆ.. ಇವತ್ತು ಏಳು ಗಂಟೆಗೆ ಫ್ಲೈಟ್ ಇದೆ , ನೀವು ಬರ್ತಿರಲ್ವ ನನ್ನ ಜೊತೆಗೆ.." ಅವನನ್ನೇ ಗಮನಿಸಿ ಕೇಳಿದಳು.
"ಪ್ರಾಣ ಉಳಿಸುವುದು ನಮ್ಮ ಕರ್ತವ್ಯ ಪರಿ, ಹಾಗಂತ ಆ ಜೀವದ ಮೇಲೆ ಸರ್ವಾಧಿಕಾರ ಸ್ಥಾಪಿಸೋದಲ್ಲ!! ನಾನು,, ನಿಮ್ಮಷ್ಟು.. ನಿಮ್ಮ ಮಾನ್ವಿಯಷ್ಟು ಒಳ್ಳೆಯವನಲ್ಲ ಬಿಡಿ.. ಹೋಗಿ ಆ ನಿಮ್ಮ ಒಳ್ಳೆಯ ಫ್ರೆಂಡ್ ಮಾನ್ವಿ ಹತ್ರ.. ಅವಳೇ ಹೆಲ್ಪ್ ಮಾಡಬಹುದು!! ನಾನ್ ತುಂಬಾ ಕೆಟ್ಟವನು.. ನನ್ನ ಸಹವಾಸ ಮಾಡಬೇಡಿ.. ನಿಮ್ಮ ಲೈಫ್ ನಿಮ್ಮಿಷ್ಟ ನಾನ್ಯಾರು.. ಯು ಕ್ಯಾನ್ ಗೋ ನೌ ಪರಿ.." ಕಿರುಚಿ ಬಾಗಿಲತ್ತ ಕೈ ತೋರಿಸಿದ್ದ. ಪರಿ ಮುಂದೆನೂ ಮಾತಾಡಲಾಗದೆ, ಮೌನವಾಗಿ ಅವಸರದಿಂದ ಹೊರಗೆ ನಡೆದಿದ್ದಳು.
ಅವಳು ಅತ್ತ ಹೋದ ತಕ್ಷಣ "ಧ್ರುವ, ಅವರನ್ನು ಸೇಫಾಗಿ ಮನೆಗೆ ಡ್ರಾಪ್ ಮಾಡಿಬಿಡು" ಕೋಪದಲ್ಲೇ ಆದೇಶಿಸಿದ. "ಸರ್ ನೀವ್ ಅಷ್ಟೊಂದು ರೂಡ್ ಆಗಿ ಮಾತಾಡ್ಬಾರ್ದಿತ್ತು,," ಎನ್ನುತ್ತ ಅವಳ ಹಿಂದೆ ಓಡಿದ್ದ ಧ್ರುವ.
ಇತರರು ಅವನ ರುದ್ರಾವತಾರಕ್ಕೆ ಅಂಜಿ ಲಗೇಜ್ ತೆಗೆದುಕೊಳ್ಳುವ ನೆಪ ಮಾಡಿ ಹೊರಡಲು ಎದ್ದು ನಿಂತರು. "ಶ್ರಾವ್ಯ, ನಿಮಗೊಂದು ಕೆಲಸ.." ಹೊರಟವರನ್ನ ತಡೆದು ನಿಲ್ಲಿಸಿ "ಇವತ್ತು ಸಂಜೆ ಏಳು ಗಂಟೆ ಫ್ಲೈಟ್ ಹೊರಡುವಷ್ಟರೊಳಗೆ ನಿಮ್ಮ ಕಜೀನ್ ಜೊತೆ ಮಾತಾಡಿ ಎಷ್ಟು ಸಾಧ್ಯವೋ ಅಷ್ಟು ಹರ್ಷನ ಬಗ್ಗೆ ಪಿನ್ ಟು ಪಿನ್ ಡಿಟೇಲ್ಸ್ ಕಲೆಕ್ಟ್ ಮಾಡಿ ನನಗೆ ತಿಳಿಸಬೇಕು ಒಕೆ.." ಅವನ ಆಜ್ಞೆಗೆ "ಶ್ಯೂರ್ ಸರ್.." ಎಂದು ತಲೆಯಾಡಿಸಿ "ಅಂದ್ರೆ ನೀವು ಹೋಗ್ತೀರಾ, ಅವರ ಜೊತೆ??" ಕೇಳಿದಳು. 'ಔಟ್..' ಆಚೆ ಕೈ ಮಾಡಿ ತೋರಿಸಿದ್ದ. ಅವನ ಕೋಪ ಭಗ್ಗನೆ ಉರಿಯುತ್ತಿತ್ತು. ಅವರು ಮಣಮಣ ಎನ್ನುತ್ತಾ ಹೊರಡಲನುವಾದರು. ಕೊನೆಯಲ್ಲಿ ಕಳ್ಳ ಬೆಕ್ಕಿನಂತೆ ಹೆಜ್ಜೆ ಹಾಕಿ ಹೊರಟಿದ್ದ ರೋಹಿತ್‌ನ ಕೊರಳಪಟ್ಟಿ ಹಿಡಿದು ನಿಲ್ಲಿಸಿ "ನೀವೆಲ್ಲಿಗೆ ಹೊರಟ್ರಿ ಸರ್!! ಇರಿ.. ಊಟ ಮಾಡಿ ಹೋಗುವಿರಂತೆ.." ವ್ಯಂಗ್ಯವಾಡಿದ.
ಲಾಫಿಂಗ್ ಗ್ಯಾಸ್ ಮಾಡಿದ ಯಡವಟ್ಟು ಈಗ ತನ್ನ ಮೇಲೆ ವಿರುದ್ಧ ಪರಿಣಾಮ ಬೀರುವದರಲ್ಲಿತ್ತು ಎಂದು ಅರಿತ ರೋಹಿತ್ "ಸರ್ ನಾನು ಜಸ್ಟ್ ಪರಿಯವರನ್ನ ನಗಿಸೋಕೆ ಹಾಗೆ ಮಾಡಿದ್ದು... ಅದು ಹೀಗೆಲ್ಲ ರಿವರ್ಸ್ ಆಗುತ್ತೆ ಅನ್ಕೊಂಡಿರಲಿಲ್ಲ" ಸಮಜಾಯಿಷಿ ನೀಡಿದ.
"ನಾನು ವಾರ್ನ್ ಮಾಡಿದ್ದೆ ತಾನೇ ನಿನ್ನ ಎಕ್ಸ್ಷೆರಿಮೆಂಟ್ ಎಲ್ಲಾ ಅಲ್ಲಿಟ್ಕೊ ಬೇಡ ಅಂತ..!! ಬೇರೆ ಟೈಮಲ್ಲಿ ಆಗಿದ್ರೆ ಏನು ಮಾಡ್ತಿದ್ನೋ... ಆದ್ರೆ ಈಗ ಕೆಲವರು ಮಾಡಿರೋ ಮೋಸದ ಕೆಲಸದ ಮುಂದೆ ನೀನು ಮಾಡಿರೋ ತಮಾಷೆ ಏನೂ ಅಲ್ಲ ಬಿಡು.." ಅವನ ಸಿಟ್ಟೆಲ್ಲ ಮಾನ್ವಿ ಮೇಲೆ ಹರಿ ಹಾಯುತ್ತಿತ್ತು. "ಹರ್ಷನ್ನ ಕ್ಯೂರ್ ಮಾಡೋದರ ಜೊತೆಗೆ ತಪ್ಪು ಮಾಡಿದವರಿಗೆ ಶಿಕ್ಷೆ ಕೂಡ ಕೊಡಬೇಕು ಅಲ್ವಾ.." ಪ್ರಸನ್ನ ಕೇಳಿದ್ದಕ್ಕೆ ತಲೆ ಹಾಕಿದ ರೋಹಿತ್.
' ಹ್ಮ್..... ಈ ತರಹ ಇನ್ನೂ ಏನೇನು ಮನೆಹಾಳ್ ಫಾರ್ಮುಲಾ ಇನ್ವೆಂಟ್ ಮಾಡಿದಿಯಾ??"
ಸರ್... ಎಂದು ರಾಗವೆಳೆದ ರೋಹಿತ್ "ನಾನು ಒಳ್ಳೆಯ ಉದ್ದೇಶದಿಂದಲೇ ಎಕ್ಸ್ಷೆರಿಮೆಂಟ್ ಮಾಡಿರ್ತಿನಿ ಬಟ್... ಅದು ಕೆಲವೊಮ್ಮೆ ಜಸ್ಟ್ ಮಿಸ್ ಆಗಿ ಯಡವಟ್ಟು ಆಗೋಗುತ್ತೆ....." ಕೈಗೆ ಕೈ ಗುದ್ದಿಕೊಂಡ.
"ಉದಾಹರಣೆಗೆ...??"
ಹ್ಮ...... ಹ್ಮಾ... ಸರ್,, ಹೋದ ವರ್ಷ ಚೆನ್ನೈನಲ್ಲಿ ನ್ಯಾಷನಲ್ ಸೈನ್ಸ್ ಎಕ್ಜಿವಿಷನ್ ಇತ್ತು ಗೊತ್ತಾ.. ಪ್ರಸನ್ನ ಗಂಭೀರವಾಗಿ ತಲೆದೂಗಿ ಮುಂದೆ.. ಎಂಬಂತೆ ನೋಡಿದ. "ನಾನು ಕೂಡ ಅದರಲ್ಲಿ ಭಾಗವಹಿದ್ದೆ. ನನ್ನ ಥೀಮ್/ಕಾನ್ಸೆಪ್ಟ್ ಏನು ಗೊತ್ತಾ ಸರ್ ಸೇಫ್ಟಿ ವಾಚ್!!
ಹುಡುಗಿಯರ ರಕ್ಷಣೆಯ ಉದ್ದೇಶದಿಂದ ಇದನ್ನು ಇನ್ವೆಂಟ್ ಮಾಡಿದ್ದೆ ಸರ್! ಇದನ್ನು ಕೈಗೆ ಕಟ್ಟಿಕೊಂಡಾಗ ಅವರಲ್ಲಿ ಗಾಬರಿ ಸಿಟ್ಟು ಆತಂಕ ಈ ತರಾ ನೆಗೆಟಿವ್ ಫೀಲಿಂಗ್ಸ್ ಉದ್ಭವ ಆದ್ರೆ, ವಾಚ್‌ನಲ್ಲಿರೋ ಮ್ಯಾಗ್ನೆಟಿಕ್ ಕರೆಂಟ್ ಸಿಸ್ಟಮ್ ಆ್ಯಕ್ಟಿವೇಟ್ ಆಗಿ ಅವರನ್ನು ಮುಟ್ಟಿದವರಿಗೆ ಲೈಟಾಗಿ ಕರೆಂಟ್ ಶಾಕ್ ಹೊಡೆಯುತ್ತೆ ಹುಡುಗಿಯರನ್ನು ಆಗಂತುಕರಿಂದ ಸೇವ್ ಮಾಡುತ್ತೆ . ಯಾರಾದರೂ ಹುಡುಗಿಯರ ಮೇಲೆ ಫಿಸಿಕಲಿ ಅಟ್ಯಾಕ್ ಮಾಡಿದ್ರೆ, ಆಗ ಹುಡುಗಿರು ಗಾಬರಿ ಅಥವಾ ಭಯ ಪಟ್ಟಾಗ ನನ್ನ ಈ ವಾಚ್ ಅವರನ್ನ ಸೇವ್ ಮಾಡಬೇಕು ಅನ್ನೋದು ನನ್ನ ಉದ್ದೇಶವಾಗಿತ್ತು.
"ಹ್ಮ್.... ಇಂಟರೆಸ್ಟಿಂಗ್..!! ಗುಡ್ ಕಾನ್ಸೆಪ್ಟ್!! ವರ್ಕೌಟ್ ಆಯ್ತಾ?"
"ಕ್ಲಿಕ್ ಆಗ್ತಿತ್ತೋ ಏನೋ ಸರ್ ಬಟ್ ನನ್ನ ಪ್ರಸೆಂಟೆಷನ್ ಪ್ಲ್ಯಾನ್‌ನಿಂದ ಎಲ್ಲಾ ಯಡವಟ್ಟಾಯ್ತು. ಎಲ್ಲರಿಗಿಂತ ಭಿನ್ನವಾಗಿರಲಿ ಅಂತ ಅವತ್ತು ಆ ವಾಚ್‌ನಾ ನಾನೇ ಕೈಗೆ ಹಾಕ್ಕೊಂಡು ಹೋಗಿದ್ದೆ ಸರ್,, ಪ್ರೋಗ್ರಾಂ ಹೆಡ್ ಎದುರಿಗೆ ಬಂದು ನಿಂತಾಗ ನಾನು ತುಂಬಾ ನರ್ವಸ್ ಆಗಿದ್ದಕ್ಕೋ ಏನೋ ವಾಚ್‌ನ ಕರೆಂಟ್ ಸಿಸ್ಟಮ್ ಹೈಪರ್ ಆ್ಯಕ್ಟೀವ್ ಆಗೊಗಿದೆ ಅನ್ಸುತ್ತೆ! ಶೇಕ್ ಹ್ಯಾಂಡ್ ಮಾಡಿ ಪರಿಚಯ ಮಾಡಿಕೊಳ್ಳೋಣ ಅಂತ ಎಕ್ಸಿಕ್ಯೂಟಿವ್ ಸರ್ ಕೈ ಕುಲುಕಿದ್ದೆ ತಡ ಆಸಾಮಿ ಶಾಕ್‌ನಿಂದ ಕಿರುಚಿ ಮಾರುದೂರ ಸರಿದು ನಿಂತು ಬಿಟ್ಟ. ಶಾಕ್‌ನಿಂದ ಅವನ ಹೇರ್‌ಸ್ಟೈಲ್ ಬೇರೆ ಚೆಂಜಾಗಿ ಕಾಡುಪಾಪಾ ತರಾ ಕೂದಲೆಲ್ಲ ಮೇಲೆ ಸೆಟೆದು ನಿಂತಿದ್ವು.. ಸುತ್ತಲೂ ನಿಂತವರು ಅದನ್ನು ನೋಡಿ ನಗ್ತಿದ್ರೆ, ನನಗೂ ನಗು ತಡೆಯಲಾಗಲಿಲ್ಲ ಸರ್.. ಅವಮಾನದಿಂದ ಅವನ ಮುಖ ರೆಡ್ ಚಿಲ್ಲಿ ತರಾ ಆಗೋಗಿತ್ತು.. ಆದರೂ ನಾನು ಎಚ್ಚರಿಕೆಯಿಂದ ವಾಚ್ ಬಿಚ್ಚಿ ತೋರಿಸಿ ಅದರ ಬಗ್ಗೆ ಎಕ್ಪ್ಪೇನ್ ಮಾಡೋಕೆ ಟ್ರೈ ಮಾಡಿದೆ. ಅಷ್ಟರಲ್ಲೇ ಸೆಕ್ಯೂರಿಟೀಸ್ ಕರಿಸಿ ನನ್ನ ಯಾವುದಾದರೂ ಮೆಂಟಲ್ ಹಾಸ್ಪಿಟಲ್ ಗೆ ಸೇರಿಸಿ ಅಂತ ರೇಗಿದ್ದ. ಗಾರ್ಡ್ಸ್ ನನ್ನ ಎರಡು ಕೈ ಕಾಲು ಹಿಡಿದು ರಾಜ ಮರ್ಯಾದೆಯಿಂದ ಆಚೆಗೆ ಬಿಟ್ರು.. ಪುಣ್ಯಕ್ಕೆ, ಮೆಂಟಲ್ ಹಾಸ್ಪಿಟಲ್ ಸೇರಿಸ್ಲಿಲ್ಲ ಸರ್..." ಎಂದು ನಕ್ಕ.
ಅದೇಕೋ ಆ ಸ್ಥಾನದಲ್ಲಿ ಮಾನ್ವಿಯನ್ನ ನೆನಪಿಸಿಕೊಂಡ ಪ್ರಸನ್ನನ ಮೊಗದಲ್ಲಿ ದುಷ್ಟನಗುವೊಂದು ಮೂಡಿತ್ತು. "ಬಾ... ಈಗ್ಲೇ ನಿನ್ನ ಲ್ಯಾಬ್‌ಗೆ ಹೋಗೋಣ.. ನೀನು ಮಾಡಿರೋ ಇನ್ನೂ ಹೆಚ್ಚಿನ ಇನ್ವೆನ್ಷನ್ಸ್ ಎಲ್ಲಾ ನೋಡ್ಬೇಕು ನಾನು" ಎಂದು ಅವನನ್ನು ತನ್ನ ಬೈಕ್ ಮೇಲೆ ಕರೆದೊಯ್ದ ಪ್ರಸನ್ನ ' ಎಂತ ಕ್ರಿಮಿನಲ್ ಆಗೋದೆಲ್ಲೇ ರಾಕ್ಷಸಿ!! ಪರಿ ನಿನ್ನ ಕ್ಷಮಿಸಬಹುದು, ಆದರೆ ನಾನ್ ಯಾವತ್ತು ಕ್ಷಮಿಸೊಲ್ಲ. ವೇಟ್ ಫಾರ್ ಮೈ ಟಾರ್ಚರ್!!' ಮನದಲ್ಲೇ ದವಡೆಗಚ್ಚಿದ.
ಮುಂದುವರೆಯುವುದು..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ