ಮುಂಬೈಗೆ ತಲುಪಿದ ಪರಿ ಮತ್ತು ಪ್ರಸನ್ನ ಮೊದಲು ಉಳಿದುಕೊಳ್ಳಲು ಒಂದು ಒಳ್ಳೆಯ ಹೋಟೆಲ್ ನ್ನು ಗೊತ್ತು ಪಡಿಸಿಕೊಂಡು ಇಬ್ಬರೂ ಪ್ರತ್ಯೇಕವಾಗಿ ರೂಂ ಬುಕ್ ಮಾಡಿಕೊಂಡಿದ್ದರು. ಲಗೇಜ್‌ನ್ನೆಲ್ಲ ರೂಂನಲ್ಲಿ ಇಳಿಸಿ, ವಾಷ್‌ರೂಂಗೆ ಹೋಗಿ ಮುಖಕ್ಕೆ ನೀರೆರೆಚಿಕೊಂಡು ಮುಖ ಒರೆಸಿಕೊಂಡು ಫ್ರೇಶ್‌ಪ್ ಆದ ಪರಿಗೆ ಮುಂದೆ ಏನು? ಎಂಬ ಗೊಂದಲ ಕಾಡಿತು. ಬಂದು ಕೇವಲ ಹತ್ತು ನಿಮಿಷವಾಗಿದ್ದರೂ ಮನಸ್ಸು ಕೇಳದೆ ನೇರವಾಗಿ ಪ್ರಸನ್ನನ ರೂಮಿಗೆ ದೌಡಾಯಿಸಿದ್ದಳು. ಬಾಗಿಲು ಕುಟುಕಿದ ಪರಿಯನ್ನು ಒಳಗೆ ಆಹ್ವಾನಿಸಿದ ಪ್ರಸನ್ನ ಫೋನ್‌ಲ್ಲಿ ವ್ಯಸ್ತನಾಗಿದ್ದ. ಕೆಲವು ಸಮಯ ಅವನ ಮಾತುಗಳನ್ನು ಲಕ್ಷ್ಯಕೊಟ್ಟು ಆಲಿಸಿದ ಪರಿಗೆ ಪ್ರಸನ್ನ ತನ್ನ ಯಾರೋ ಸ್ನೇಹಿತನ ಮೂಲಕ ಮಾನ್ವಿ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳಿದಿರುವನೆಂದು ಅರ್ಥವಾಗುತ್ತಿತ್ತು. ಅವನು ಕರೆಯನ್ನು ಕಡಿತಗೊಳಿಸಿದ ನಂತರ, ಅವನ ಮಾತಿಗಾಗಿ ಎದುರು ನೋಡುತ್ತ ಕುಳಿತಿದ್ದ ಪರಿಗೆ ಆತ ಉತ್ತರಿಸಿದ್ದ.. "ಒನ್ ಆಫ್ ಮೈ ಬೆಸ್ಟೆಸ್ಟ್ ಫ್ರೆಂಡ್ ವಿವೇಕ್ ಅಂತ.. ಇಲ್ಲಿಯೇ ಮುಂಬೈನಲ್ಲಿ ಒಂದು ಆ್ಯಡ್ ಕಂಪನಿ ನಡೆಸ್ತಿದ್ದಾನೆ. ಮೊನ್ನೆ ರಾತ್ರಿ ಹರ್ಷನ ಬಗ್ಗೆ ವಿಷಯ ತಿಳಿದಾಗ ನನಗೆ ಮೊದಲು ನೆನಪಾಗಿದ್ದೆ ಇವನು. ಅವನ ಜೊತೆಗೆ ಮಾತಾಡಿ ಎಂ.ಆರ್ ಹಾಸ್ಪಿಟಲ್‌ನ ಅವ್ಯವಹಾರದ ಬಗ್ಗೆ ಹೇಳಿ ಅದರ ಡೈರೆಕ್ಟರ್ ಬಗ್ಗೆ ಡಿಟೇಲ್ಸ್ ತಿಳಿದುಕೊಳ್ಳೊಕೆ ಹೇಳಿದ್ದೆ. ಅದರ ಪ್ರಕಾರ ಅವನು ಕೆಲವೊಂದಷ್ಟು ಮಾಹಿತಿ ಕಲೆ ಹಾಕಿದ್ದಾನೆ. ಮತ್ತೆ ಯಾರೋ ಎಂ.ಆರ್ ಹಾಸ್ಪಿಟಲ್ ಡಾಕ್ಟರ್ ಅಂತಾ ಹೇಳ್ತಿದ್ದ ಅವರ ಜೊತೆಗೆ ಮಾತಾಡಿ ಅವತ್ತು ಆ್ಯಕ್ಸಿಡೆಂಟ್ ನಡೆದಿದ್ದರ ಬಗ್ಗೆ ಕೂಡ ಎಲ್ಲಾ ವಿಷಯ ತಿಳ್ಕೊಂಡಿದ್ದಾನಂತೆ.. ಆದರೆ ಫೋನ್‌ಲ್ಲಿ ಎಲ್ಲಾ ಮಾತಾಡೋದು ಬೇಡಾ ಅಂತ ಈ ಕೂಡಲೇ ರೆಸ್ಟೋರೆಂಟ್‌ಗೆ ಬರೋಕೆ ಹೇಳಿದ್ದಾನೆ. ಅಲ್ಲಿಗೆ ಹೋದಮೇಲೆ ಎಲ್ಲಾ ವಿಚಾರ ತಿಳಿಯೋಕೆ ಸಾಧ್ಯ! ನೀವು ರೆಡಿನಾ, ಈಗಲೇ ಹೊರಡೋಣ್ವಾ??" ಪ್ರಸನ್ನ ಕೇಳಿ ಅವಳತ್ತ ಪ್ರಶ್ನಾರ್ಥಕವಾಗಿ ನೋಡಿದ.
"Yeah! I'm ready. ನಡೀರಿ ಈಗಲೇ ಹೊರಡೋಣ" ಹರ್ಷನ ಬಗ್ಗೆ ತಿಳಿದುಕೊಳ್ಳಲು ಪರಿ ತುದಿಗಾಲಲ್ಲಿ ಎದ್ದು ನಿಂತಿದ್ದಳು. ಅವಳ ಮುಖದಲ್ಲಿದ್ದ ಕೌತುಕತೆ ಉತ್ಸಾಹ, ಹರ್ಷನನ್ನು ಕಾಣುವ ಹಪಾಹಪಿಯನ್ನು ಗಮನಿಸಿದ ಪ್ರಸನ್ನ.. 'ಹರ್ಷ ಪರಿಯ ಕೈಗೆಟುಕದ ಬಿಸಿಲ್ಗುದುರೆಯಂತಾಗದಿರಲಿ' ಎಂಬಂತೆ ವಿಷಾದದಿಂದ ತಲೆ ಕೊಡವಿದ್ದ. ಇಬ್ಬರೂ ಟ್ಯಾಕ್ಸಿ ಮೂಲಕ ವಿನೆಸ್ಟಾ ಎನ್ನುವ ಪ್ರಖ್ಯಾತ ರೆಸ್ಟೋರೆಂಟ್ ಗೆ ತಲುಪಿದಾಗ ಗಂಟೆ 10:15!! ಇವರು ತಲುಪಿದಾಗ ಪ್ರಸನ್ನನ ಸ್ನೇಹಿತ ಇನ್ನೂ ಬಂದಿರಲಿಲ್ಲ. ಕರೆ ಮಾಡಿ ವಿಚಾರಿಸಿದಾಗ ಅವನ ಸ್ನೇಹಿತ ಬರುವುದು ಇನ್ನೂ ತಡವೆಂದು ಅರಿತು ಮಧ್ಯಾಹ್ನದಿಂದ ಏನು ತಿಂದಿರದ ಪ್ರಸನ್ನ ತನಗಿಷ್ಟದ ಖಾದ್ಯಗಳನ್ನು ತನಗೂ ಹಾಗೂ ಪರಿಗೂ ಆರ್ಡರ್ ಮಾಡಿ, ಅವಳು ಊಟ ಬೇಡವೆಂದು ಎಷ್ಟೇ ನಿರಾಕರಿಸಿದರೂ ಕೇಳದೆ ಬಲವಂತ ಹೇರಿ ಅವಳಿಗೂ ತಿನ್ನಿಸಿ,, ತಾನೂ ಊಟದ ಕಾರ್ಯಕ್ರಮ ಮುಗಿಸಿದ್ದ. ಅವನು ಅದೇ ತಾನೇ ಊಟ ಮುಗಿಸಿ ವಾಷರೂಂಗೆ ಹೋದಾಗ,, ಯಾರನ್ನೋ ಹುಡುಕುತ್ತಾ ಬಂದ ಮೊಣಕೈ ಉದ್ದದ ಕಂದು ಬಣ್ಣದ ಟೀಶರ್ಟ್ ಹಾಗೂ ಕಡುನೀಲಿ ಜೀನ್ಸ್ ಧರಿಸಿದ್ದ ಯುವಕನೊಬ್ಬ ಪರಿಯ ಟೇಬಲ್ ಎದುರು ಕುಳಿತು "ಹಾಯ್... ಮಿಸ್... ಮೊಬೈಲ್!! ನೀವೇನ್ರಿ ಇಲ್ಲಿ" ಎಂದು ಆಶ್ಚರ್ಯ ಹಾಗೂ ಕೂತುಹಲದೊಂದಿಗೆ ಮಾತನಾಡಿಸಿದ. ಅವನು ಯಾರೆಂದೇ ಅರಿಯದ ಪರಿ ಅವನನ್ನು ಹುಬ್ಬು ಗಂಟಿಕ್ಕಿ ನೋಡುತ್ತಿದ್ದಳು. ಅವಳ ವಿಚಿತ್ರ ನೋಟವನ್ನು ಅರ್ಥ ಮಾಡಿಕೊಂಡ ಯುವಕ ತಾನೇ ಮಾತು ಮುಂದುವರೆಸಿದ.. "ಇಷ್ಟು ಬೇಗ ಮರ್ತೋದ್ರೇನ್ರಿ..?? ಅದೇ ಮೊನ್ನೆ ಮಧ್ಯಾಹ್ನ ರೈಲ್ವೇ ಸ್ಟೇಷನ್‌ನಲ್ಲಿ ಮೀಟ್ ಆಗಿದ್ವಲ್ಲಾ... ಬೈ ಮಿಸ್ಟೇಕ್ ನಾನು ನಿಮಗೆ ಡಿಕ್ಕಿ ಹೊಡೆದದ್ದು,, ನಿಮ್ಮ ಮೊಬೈಲ್ ಪೂರ್ಣ ಆಹುತಿಯಾಗಿದ್ದೂ.. ನೆನಪಿಲ್ವಾ.. "
"ಓಹ್.. ಹ್ಮಾ... ನೀವು... ಗೊತ್ತಾಯ್ತು!! ನೀವೇನಿಲ್ಲಿ?" ಮೊನ್ನೆಯ ಘಟನೆ ನೆನಪಿಸಿಕೊಂಡ ಪರಿ ಆ ಯುವಕನನ್ನು ಕೇಳಿದ್ದಳು.
"ಹ್ಮ್.. ನಾನ್ ಇಲ್ಲಿಯೇ ಮುಂಬೈನಲ್ಲಿ ಇರೋದು. ನೀವು ಯಾವದಾದ್ರೂ ಕೆಲಸ ನಿಮಿತ್ತ ಬಂದಿದ್ರಾ? ಅಥವಾ ನೀವೂ ಇಲ್ಲೇ ಇರೋದಾ ??" ಹುಡುಗ ಸುತ್ತ ಮುತ್ತ ಕಣ್ಣಾಡಿಸುತ್ತ ಯಾರನ್ನೋ ಅರಸುತ್ತಾ ಕೇಳಿದ.
"ಇಲ್ಲ. ನಾನು ನನ್ನ ಫ್ರೆಂಡ್‌ನಾ ಭೇಟಿಯಾಗ್ಲಿಕ್ಕೆ ಬಂದಿದ್ದೆ. ನನ್ನ ಫ್ರೆಂಡ್ ಕೂಡ ಇದ್ದಾರೆ ನಂಜೊತೆ! ನೀವು ಏನು ಕೆಲಸ ಮಾಡ್ತಿರಾ ಇಲ್ಲಿ??" ಪರಿ ಕೇಳಿದಳು. ಆ ಯುವಕ ಉತ್ತರಿಸುವ ಮುನ್ನವೇ ವಾಷ್‌ರೂಂ ನಿಂದ ವಾಪಸ್ಸಾದ ಪ್ರಸನ್ನ ಆತನನ್ನು ಕಂಡು ಆತ್ಮೀಯವಾಗಿ ಅಪ್ಪಿಕೊಂಡು ಉಭಯ ಕುಶಲೋಪರಿ ವಿಚಾರಿಸಿದ್ದ. "ಪರಿ... ನಾನ್ ಹೇಳಿದ್ನಲ್ಲಾ ವಿವೇಕ್ ಅಂತ.. ಇವನೇ!! ನನ್ನ ಜೀವನದ ಅತ್ಯಂತ ಆತ್ಮೀಯ ಬಂಧು, ಮಿತ್ರ, ಸಹಪಾಠಿ, ನನ್ನ ವೆಲ್ ವಿಷರ್... ಆಲ್ ಆ್ಯಂಡ್ ಆಲ್..!! ನನ್ನ ಬಗ್ಗೆ ನನಗಿಂತಲೂ ಹೆಚ್ಚು ತಿಳ್ಕೊಂಡಿರೋ ಏಕೈಕ ವ್ಯಕ್ತಿ ಅಂದ್ರೂ ತಪ್ಪಾಗಲ್ಲ.. ಅಂತಹ ಡೀಪ್ ಫ್ರೆಂಡ್ ಶಿಪ್ ನಮ್ಮದು..!!" ಪರಿಗೆ ಆ ಯುವಕನೇ ವಿವೇಕ್ ಎಂದು ತಿಳಿದು ಸಂತೋಷವಾಯಿತು.
"ಹ್ಮಾ... ತುಂಬಾನೇ ಡೀಪ್ ಫ್ರೆಂಡ್ ಶಿಪ್ ನಮ್ಮದು.. ಅದ್ಕೆ ನೋಡಿ ಇಲ್ಲಿಗೆ ಬಂದ ತಕ್ಷಣ ಹೋಟೆಲ್‌ನಲ್ಲಿ ರೂಂ ಮಾಡದೇ, ಸೀದಾ ನನ್ನ ಫ್ಲಾಟ್‌ಗೆ ಓಡೋಡಿ ಬಂದಿದ್ದಾನೆ" ವಿವೇಕ್ ಕೋಪಿಸಿಕೊಂಡು ಕೊಂಕು ನುಡಿದ.
"ನಿನ್ನ ಹೆಸರಿಗೆ ಸಂಬಂಧವಿಲ್ಲದ ಹಾಗೆ ಮಾತಾಡ್ಬೇಡವೋ ಅವಿವೇಕಿ... ಅಲ್ಲಿಗ್ಯಾಕೆ ಬರೋಕಾಗಲ್ಲ ಅಂತ ಫೋನ್‌ಲ್ಲೇ ವಿಷಯ ತಿಳಿಸಿದೆ ತಾನೇ.. ಮತ್ತೆ ಮತ್ತೆ ಅದನ್ನೇ ಕೆಣ್ಕ್‌ಬೇಡ್ವೋ,, ನಾನು ಒಬ್ಬನೇ ಬರ್ತಿಲ್ಲ, ನನ್ನ ಜೊತೆ ನನ್ನ ಫ್ರೆಂಡ್ ಒಬ್ರು ಇದ್ದಾರೆ ಅಂತ ಹೇಳಿದ್ನಲ್ಲ, ಇವರೇ ಡಾ.ಪರಿಧಿ!! ಹರ್ಷ ಇವರ ಫಿಯಾನ್ಸಿ!! ಅವನ ಸಲುವಾಗಿಯೇ ನಾವು ಇಲ್ಲಿಯವರೆಗೂ ಬಂದಿದ್ದು" ಪ್ರಸನ್ನ ಪರಿಧಿಯ ಪರಿಚಯ ಮಾಡಿಕೊಟ್ಟ. ಪರಿ ಮುಗುಳ್ನಗೆಯೊಂದಿಗೆ ಕೈ ಕುಲುಕಿ ಸ್ನೇಹ ವ್ಯಕ್ತಪಡಿಸಿದಳು.
ವಿವೇಕ್ ಮುಖದಲ್ಲಿ ಆತ್ಮೀಯ ಭಾವ ಮೂಡಿತು. "ಓಹ್.. ನಿಮ್ಮನ್ನ ಮೊದಲನೇ ಸಲ ನೋಡಿದಾಗಲೇ ಅನ್ನಿಸಿತ್ತು ನಿಮ್ಮ ಲೈಫ್‌ನಲ್ಲಿ ಏನೋ ದುರಂತ ಘಟಿಸಿರಬಹುದು ಅಂತ,, ಅದು ಹೀಗೆ ಅನ್ಕೊಂಡಿರ್ಲಿಲ್ಲ. ನಾವು ಈ ರೀತಿ ಮತ್ತೆ ಭೇಟಿಯಾಗೋ ಸಂದರ್ಭ ಬರಬಹುದು ಅಂತಾನೂ ನಾನು ಊಹಿಸಿರ್ಲಿಲ್ಲ.. ಬದುಕು ಎಷ್ಟು ವಿಚಿತ್ರ ಅಲ್ವಾ.. ನಿನ್ನೆವರೆಗೂ ಅಪರಿಚಿತರಾಗಿದ್ದವರು ಇವತ್ತು ಹೀಗೆ ಎದುರು ಬದುರು ಕೂತು ಮಾತಾಡ್ತಿದ್ದಿವಿ.." ಎದುರಿದ್ದ ನೀರಿನ ಗ್ಲಾಸಿನಿಂದ ಒಂದು ಗುಟುಕು ಕುಡಿಯುತ್ತ ಹೇಳಿದ ವಿವೇಕ್.
" ಹ್ಮ್... ಬದುಕು ನಿಜಕ್ಕೂ ವಿಚಿತ್ರ ಮಿ.ವಿವೇಕ್ ಒಂದೇ ಕ್ಷಣದಲ್ಲಿ ಅಪರಿಚಿತರು ಪರಿಚಯದವರಾಗ್ತಾರೆ ಅದೇ ಘಳಿಗೆ ಪರಿಚಿತರು ಅನ್ಯರಂತಾಗ್ತಾರೆ,, ಜೀವನ ಅಂದುಕೊಂಡವರೇ ಜೀವನದಲ್ಲಿ ಇಲ್ಲವಾಗ್ತಾರೆ,, ಎದುರು ಸಿಕ್ಕರೂ ಕೈಗೆ ಎಟುಕದಷ್ಟು ದೂರವಾಗ್ತಾರೆ,, ಬದುಕು ಎಷ್ಟು ಬೇಗ ತನ್ನ ರೂಪು ರೆಷೆಗಳನ್ನ ಬದಲಿಸಿ ಬಿಡುತ್ತಲ್ವಾ...." ಪರಿಯ ಕಣ್ಣತುಂಬ ಹರ್ಷನ ಬಿಂಬ ಸುಳಿದಾಡುತ್ತಿತ್ತು. ಕುಳಿತ ಮೂವರ ಮಧ್ಯೆ ಒಂದು ಗಾಢವಾದ ಮೌನ ಏರ್ಪಟ್ಟಿತು. ಮೌನವನ್ನು ಮಥಿಸುತ್ತ ಪ್ರಸನ್ನ ಕೇಳಿದ್ದ -"ಸೋ.. ನಿಮ್ಮಿಬ್ಬರಿಗೂ ಮೊದಲೇ ಪರಿಚಯ ಇದೆಯಂತಾಯ್ತು..?"
"ಹ್ಮ್.. ಮತ್ತೆ... ಇವರಿಂದಾಗಿ ನನ್ನ ಆ್ಯಡ್‌ಗೆ ಹೊಸ ಐಡಿಯಾ ಬೇರೆ ಸಿಕ್ತು ಗೊತ್ತಾ..."
"ಐಡಿಯಾ ನಾ?! ಏನದು?"
"ಒಂದ್ ಮೊಬೈಲ್ ಕಂಪನಿ ಆ್ಯಡ್ ಗುರು.. ನಾನೂ.. ಎಷ್ಟೋ ತರಾ ಐಡಿಯಾಸ್ ಕೊಟ್ರು ಕನ್ವೆನ್ಸ್ ಆಗಿರ್ಲಿಲ್ಲ ಆ ಎಂ.ಡಿ! ರೈಲ್ವೆ ಸ್ಟೇಷನ್‌ನಲ್ಲಿ ನಡೆದ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಒಂದು ಆ್ಯಡ್ ಮಾಡಿದೆ ನೋಡು ಎಂ.ಡಿ ಇಂಪ್ರೆಸ್ ಆಗ್ಹೋದಾ! ತಮ್ಮ ಕಂಪನಿಯ ಎಲ್ಲಾ ಪ್ರಾಜೆಕ್ಟ್ಸ್‌ನ್ನು ನಮ್ಮ ಆ್ಯಡ್ ಕಂಪನಿಗೆ ಕೊಡೊದಾಗಿ ಅಗ್ರಿಮೆಂಟ್ ಬೇರೆ ಮಾಡಿಕೊಂಡ. ನಮ್ಮ ಟೀಂ ಫುಲ್ ಹ್ಯಾಪಿ ಈಗ. ಇದರ ಅರ್ಧ ಕ್ರೆಡಿಟ್ ಇವರಿಗೂ ಕೊಡಬೇಕಲ್ವಾ ಮತ್ತೆ.. ಇವರೇ ಇರದೆ ಹೋಗಿದ್ರೆ ನನಗೆ ಆ ಐಡಿಯಾ ಸಿಗ್ತಿತ್ತಾ!!" ವಿವೇಕ್ ತನ್ನ ಮಾತಿನಲ್ಲಿ ಕಳೆದುಹೋಗಿದ್ದರೆ ಪರಿ ಬೇರೆಯದೇ ಲೋಕದಲ್ಲಿ ಚಿಂತನೆಗೊಳಗಾಗಿದ್ದಳು.
"ರೈಲ್ವೇ ಸ್ಟೇಷನ್‌ನಲ್ಲಿ ಮೊಬೈಲ್ ಆ್ಯಡ್ ಆss!!! ಅಂತದ್ದೇನೋ ಕಾನ್ಸೆಪ್ಟ್ ಅದು??" ಪ್ರಸನ್ನ ಅಚ್ಚರಿಯಿಂದ ಕೇಳಿದ. ವಿವೇಕ್ ತನ್ನ ಅಡ್ವರ್ಟೈಜ್ಮೆಂಟ್ ನ್ನು ವಿವರಿಸಲಾರಂಭಿಸಿದ...
"ಒಂದು ಹುಡುಗಿ ರೆಲ್ವೆ ಫ್ಲಾಟ್‌ಫಾರ್ಮ ಮೇಲೆ ನಿಂತು ತನ್ನ ಫ್ರೆಂಡ್ ಗೆ ಬಾಯ್ ಮಾಡ್ತಿರ್ತಾಳೆ. ಅದೇ ಟೈಮಿಗೆ ಟ್ರೇನಿಗಾಗಿ ಓಡಿ ಬಂದ ಹುಡುಗನೊಬ್ಬ ಹುಡುಗಿಗೆ ಅಚಾನಕ್ಕಾಗಿ ಡ್ಯಾಷ್ ಹೊಡಿತಾನೆ. ಹುಡುಗಿ ಆಯತಪ್ಪಿ ಟ್ರ್ಯಾಕ್ ಮೇಲೆ ಬೀಳುವಾಗ ಹುಡುಗ ಅವಳ ಕೈ ಹಿಡಿದು ಅವಳನ್ನ ಸೇವ್ ಮಾಡ್ತಾನೆ. ಇಬ್ಬರ ನೋಟ ಒಂದಾಗುತ್ತೆ.. ಬ್ಯಾಗ್ರೌಂಡಲ್ಲಿ ರೊಮ್ಯಾಂಟಿಕ್ ಮ್ಯೂಸಿಕ್ ಕೇಳಿಸುತ್ತೆ. ಟ್ರೇನ್ ಅಲ್ಲಿಂದ ಪಾಸ್ ಆದ ನಂತರ ಇಬ್ಬರೂ ಸುತ್ತಲೂ ಜನರು ನೋಡುವುದನ್ನು ಗಮನಿಸಿ ಸರಿಯಾಗಿ ನಿಂತ್ಕೊತಾರೆ. ಆಗ ಇಬ್ಬರಿಗೂ ಅರಿವಾಗುತ್ತೆ ತಮ್ಮಿಬ್ಬರ ಫೋನ್ ಕೈಯಿಂದ ಜಾರಿ ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದೋಗಿರುತ್ತೆ. ಹುಡುಗ ಕೆಳಗಿಳಿದು ನೋಡ್ತಾನೆ ಹುಡುಗಿ ಫೋನ್ ನುಚ್ಚುನೂರಾಗಿರುತ್ತೆ. ಅವಳ ಮುಖ ಸಪ್ಪಗಾಗುತ್ತೆ. ಆದರೆ ಹುಡುಗನ ಫೋನ್ ಮಾತ್ರ ಹೇಗಿತ್ತೋ ಹಾಗೆ ಇರುತ್ತೆ..!! ಆಗ ಬರುತ್ತೆ ಮೊಬೈಲ್ ಹೈಲೈಟ್ಸ್.. ಜೈವಾ ಮೊಬೈಲ್ಸ್!! ಬದುಕು ಮುಗಿದರೂ ಬದುಕಿನುದ್ದಕ್ಕೂ ಜೊತೆಗಿರುವ ಸಂಗಾತಿ.. ಜೈವಾ ಮೊಬೈಲ್ಸ್!! ಕೊನೆಯಲ್ಲಿ ಹುಡುಗ ಹುಡುಗಿಗೆ ಅದೇ ಜೈವಾ ಮೊಬೈಲ್ ನಾ ಗಿಫ್ಟ್ ಮಾಡ್ತಾನೆ. ಅವರಿಬ್ಬರ ಲವ್‌ಸ್ಟೋರಿ ಶುರುವಾಗೋಕೆ ನಮ್ಮ ಫೋನ್ ಕಾರಣವಾಗುತ್ತೆ.... ಹೆಂಗೆ... " ವಿವೇಕ್ ಸಂದರ್ಭವನ್ನು ತುಂಬಾ ಸೊಗಸಾಗಿ ಅಭಿನಯಿಸುತ್ತ ವಿವರಿಸುತ್ತಿದ್ದರೆ ಪರಿಗೆ ತಲೆ ಧಿಮ್ಮೆಂದು ಹೋಗಿತ್ತು. "ಸೋ.. ಜೈವಾ ಮೊಬೈಲ್ ಎಷ್ಟು ಸ್ಟ್ರಾಂಗ್ ಅಂದರೆ ಅದರ ಮೇಲೆ ಟ್ರೇನ್ ಹಾದು ಹೋದರೂ ಮೊಬೈಲ್ ಗೆ ಏನು ಆಗಲ್ವಾ.. ಇದ್ಯಾಕೋ ಅತಿ ಅನ್ನಿಸ್ತಿಲ್ವಾ.." ಪರಿ ಹುಬ್ಬೇರಿಸಿದಳು.
"ನಮ್ ಫೀಲ್ಡೇ ಹೀಗಲ್ವಾ.. ಚಿಕ್ಕ ಪುಟ್ಟ ವಿಷಯನೂ ಅದ್ಭುತ ಅನ್ನೋ ತರಾ ತೋರಿಸೋದು. ಅಷ್ಟಕ್ಕೂ ನಮಗೇನಾಗೋದಿದೆ, ಕಂಪನಿ ಎಂ.ಡಿಗೆ ಒಪ್ಪಿಗೆಯಾಗಿದೆ ಅಷ್ಟೇ.. ನಮ್ಗೆ ಪ್ರಾಫಿಟ್ ಮುಖ್ಯ!!" ವಿವೇಕ್ ಸಮರ್ಥಿಸಿಕೊಂಡ.
" ಹಾಗಾದ್ರೆ, ಒಂದೇ ಟ್ರೇನ್ ಯಾಕೆ? ಅದರ ಹಿಂದೆನೇ ಇನ್ನೊಂದ್ ಟ್ರೇನು.. ಮೇಲೆ ಒಂದೆರಡು ಏರೋಪ್ಲೇನ್ ನು ಹಾರಿಸಿಬಿಡು ಆಗಿದ್ದಾಗಲಿ ಮೊಬೈಲ್ ಕಂಪನಿ ಇನ್ನೂ ಉದ್ದಾರಾ... ಆಗುತ್ತೆ..". ಪ್ರಸನ್ನ ಕೈ ಊರಗಲ ಚಾಚಿ ವ್ಯಂಗ್ಯ ಮಾಡಿದ. ಪರಿ ಬಂದ ನಗುವನ್ನು ತಡೆಯಲು ತುಟಿ ಬಿಗಿ ಹಿಡಿದಳು. ವಿವೇಕ್ ಹುಸಿಗೋಪದಿಂದ ಅವನ ಭುಜಕ್ಕೆ ಗುಮ್ಮಿ "ಕತ್ತರಿ ಚಾಕು ಜನರಿಗೆ ಕ್ರಿಯೆಟಿವಿಟಿ ಬಗ್ಗೆ ಏನು ಗೊತ್ತು ಹೋಗಲೋ.." ಎಂದು ದಬಾಯಿಸಿದ.
"ನಿನಗೂ ನಿನ್ನ ಕ್ರಿಯೆಟಿವಿಟಿಗೂ ಧನ್ಯೋಸ್ಮಿ ಮಾರಾಯ. ಈಗ ನಾವಿಲ್ಲಿ ನಿನ್ನ ಜಾಹಿರಾತಿನ ಮೀಟಿಂಗ್ ಗಾಗಿ ಬಂದಿಲ್ಲ. ಹರ್ಷನ ಬಗ್ಗೆ ಏನೇನ್ ಮಾಹಿತಿ ತಿಳ್ಕೊಂಡಿದಿಯಾ ಅದ್ನ ಹೇಳು ಫರ್ಸ್ಟು.." ಪ್ರಸನ್ನ ಕೇಳಿದ.
" ಮಿ.ವಿವೇಕ್.. ನನಗೆ ನಿಮ್ಮ ಸಹಾಯದ ಅವಶ್ಯಕತೆ ತುಂಬಾ ಇದೆ. ದಯವಿಟ್ಟು ಹರ್ಷನ್ನ ಆದಷ್ಟು ಬೇಗ ಪತ್ತೆ ಹಚ್ಚಲು ಸಹಾಯ ಮಾಡಿ ಪ್ಲೀಸ್...." ಪರಿ ತುಂಬು ವಿಧೇಯದಿಂದ ಆತನನ್ನು ಕೇಳಿಕೊಂಡಳು.
"ಇದರಲ್ಲಿ ಪತ್ತೆ ಹಚ್ಚೋದೆನಿದೆ ಮಿಸ್. ಪರಿ... ನಿಮ್ಮ ಹರ್ಷ ಸಿಕ್ಕಹಾಗೆ ಲೆಕ್ಕ!! ಎಂ.ಆರ್ ಹಾಸ್ಪಿಟಲ್‌ನ ಡೈರೆಕ್ಟರ್ ಮಿ.ರಘುನಂದನ್ ರೈ ಅವರ ಇಡೀ ಇತಿಹಾಸ ಮತ್ತೆ ಮನೆವಿಳಾಸಾನೇ ನನ್ನ ಕೈಯಲ್ಲಿದೆ. ಆದರೆ ಹರ್ಷನ ಮೆಂಟಲ್ ಕಂಡಿಷನ್..... " ವಿವೇಕ್ ಮುಖ ಗಂಭೀರವಾಯಿತು.
"ಹೇಗಿದೆ ಈಗ.... ?? " ಪ್ರಸನ್ನ ಕೇಳಿದ
"ಇನ್ನೊಂದು ಐದು ನಿಮಿಷ ವೇಟ್ ಮಾಡು.. ಎಲ್ಲಾ ವಿಷಯ ಗೊತ್ತಾಗುತ್ತೆ.." ಎಂದು ಹೇಳಿದ ವಿವೇಕ್ ಯಾರಿಗೋ ಕರೆ ಮಾಡಿ 'ಎಲ್ಲಿದ್ದೀರಾ.. ನಾವೆಲ್ಲರೂ ನಿಮಗೋಸ್ಕರ ವೇಟಿಂಗ್,, ಬೇಗ ಬನ್ನಿ' ಎಂದಿದ್ದ. ಬರುತ್ತಿರುವವರು ಯಾರೆಂದು ಪರಿ ಪ್ರಸನ್ನನನ್ನು ಕಣ್ಣಸನ್ನೆಯಲ್ಲಿ ಕೇಳಿದ್ದಳು. ತನಗೇನು ಗೊತ್ತು ಎಂಬಂತೆ ಪ್ರಸನ್ನ ಕೈ ಮಾಡಿ ಭುಜ ಹಾರಿಸಿದ. ವಿವೇಕ್ ಹೇಳಿದ ಆ ಅನಾಮಿಕ ಅನಾಮಧೇಯ ವ್ಯಕ್ತಿಗಾಗಿ ಇಬ್ಬರೂ ಕುತೂಹಲದಿಂದ ಕಣ್ಣು ರೆಪ್ಪೆ ತುದಿಯಲ್ಲಿ ಕಾತುರದಿಂದ ಕಾದಿದ್ದರು. ಸ್ವಲ್ಪ ಸಮಯದಲ್ಲೇ ಅದೇ ಟೇಬಲ್ ಎದುರು ಬಂದ ಹುಡುಗಿಯೊಬ್ಬಳನ್ನ ಸ್ವಾಗತಿಸಿದ ವಿವೇಕ್ ಅವಳನ್ನು ಪ್ರಸನ್ನ ಮತ್ತು ಪರಿಗೆ ಪರಿಚಯ ಮಾಡಿಕೊಟ್ಟ. "ಹಾಯ್... ಥ್ಯಾಂಕ್ಸ್ ಫಾರ್ ಕಮಿಂಗ್.. ಬನ್ನಿ ಕುತ್ಕೊಳ್ಳಿ.. ಇವರು ಡಾ.ಮಿಥಾಲಿ!! ತೀರ್ಥಹಳ್ಳಿಯವರು. ಇಲ್ಲಿ ಎಂ.ಆರ್ ಹಾಸ್ಪಿಟಲ್ ನಲ್ಲಿ ನ್ಯೂರೊಲಾಜಿಸ್ಟ್ ಆಗಿ ವರ್ಕ್ ಮಾಡ್ತಿದಾರೆ. ಆ್ಯಂಡ್ ಡಾ.ಮಾನ್ವಿಯ ಕೋಲಿಗ್/ಫ್ರೆಂಡ್ ಕೂಡ!!"
"ಇವರು ಪರಿ ಅಂತ, ಹರ್ಷ ಅವರ ಫಿಯಾನ್ಸಿ! ಇವರು ಡಾ.ಪ್ರಸನ್ನ ನನ್ನ ಬೆಸ್ಟ್ ಫ್ರೆಂಡ್!!" ಪರಿ, ಪ್ರಸನ್ನ ಮತ್ತು ಮೈಥಿಲಿ ಪರಸ್ಪರ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡರು. ತಮ್ಮ ತಮ್ಮ ವೃತ್ತಿ ಬಗ್ಗೆ ಹೇಳಿಕೊಂಡರು. ಪ್ರಸನ್ನ ವಿವೇಕ್ ಮತ್ತು ಮಿಥಾಲಿಗೆ ಊಟ ಆರ್ಡರ್ ಮಾಡಲು ಕೇಳಿದ. ಮಿಥಾಲಿ ತನ್ನ ಊಟ ಆಯಿತೆಂದು ತಿಳಿಸಿದಳು. ವಿವೇಕ್ ತನಗೆ ಬೇಕಾದ್ದನ್ನು ಆರ್ಡರ್ ಮಾಡಿ ತದನಂತರ ಮಾತು ಮುಂದುವರೆಸಿದ....
"ಅವತ್ತು ರಾತ್ರಿ ಪ್ರಸನ್ನ ಕಾಲ್ ವಿಷಯ ತಿಳಿಸಿದ ಮರುದಿನನೇ ನಾನು ಎಂ.ಆರ್ ಹಾಸ್ಪಿಟಲ್ ಗೆ ಹೋಗಿ ಹರ್ಷನ ಕೇಸ್ ಬಗ್ಗೆ ವಿಚಾರಿಸಿದ್ದೆ. ಮೊದಮೊದಲು ಯಾರೂ ಅದರ ಬಗ್ಗೆ ಬಾಯೇ ಬಿಡಲಿಲ್ಲ, ತುಂಬಾ ರಿಕ್ವೆಸ್ಟ್ ಮಾಡಿಕೊಂಡಾಗ ರಿಸಪ್ಷನಿಸ್ಟ್ ಕಂಪ್ಯೂಟರ್‌ನಲ್ಲಿ ಹರ್ಷನ ಆ್ಯಕ್ಸಿಡೆಂಟ್ ನಡೆದ ಆ ದಿನಾಂಕದಂದು ನಡೆದ ಎಲ್ಲಾ ಆಪರೇಷನ್ ಲಿಸ್ಟ್ ನೋಡಿ, ಏನೋ ಹೇಳಬೇಕೆಂದುಕೊಂಡವಳೇ ಅದ್ಯಾಕೋ ಗಾಬರಿಗೊಂಡು ಅದರ ರಿಪೋರ್ಟ್ ಸಹ ನನಗೆ ಕೊಡದೆ ಸಿಟ್ಟಿನಿಂದ ಸೆಕ್ಯೂರಿಟಿನಾ ಕರೆದು ನನ್ನನ್ನು ಹೊರಗೆ ಹಾಕಿಸಿದ್ದಳು. ಅದೇ ಸಮಯಕ್ಕೆ ಡಾ.ಮಿಥಾಲಿ ಅಲ್ಲಿ ಬಂದು ವಿಷಯ ಏನೂಂತ ಕೇಳಿ ತಿಳಿದು, ನನ್ನ ಆಚೆಗೆ ಕರೆದುಕೊಂಡು ಹೋಗಿ ನನ್ನ ಬಗ್ಗೆ ವಿಚಾರಿಸಿದರು. 'ಹರ್ಷ ನಿಮಗೆ ಏನಾಗ್ಬೇಕು? ಹರ್ಷನಿಗೂ ನಿಮಗೂ ಏನು ಸಂಬಂಧ ಅಂತೆಲ್ಲಾ' ಕೇಳಿದರು. ನಾನು ಇವರನ್ನ ನಂಬೋದಾ ಬೇಡ್ವಾ ಅಂತ ಅನುಮಾನಿಸಿ ಮೊದಲು ಏನು ಹೇಳಲಿಲ್ಲ. ಆದರೆ ಯಾವಾಗ ಇವರು ಹರ್ಷ ಮತ್ತು ಮಾನ್ವಿ ಮದುವೆ ಬಗ್ಗೆ ಹೇಳಿ, ಅದು ನಡೆದರೆ ಹರ್ಷನ ಬದುಕಿನಲ್ಲಿ ತುಂಬಾ ದೊಡ್ಡ ಅನ್ಯಾಯವೆಂದು,, ಅದನ್ನು ತಡೆಯಲು ನಾನು ನಿಮಗೆ ಸಹಾಯ ಮಾಡಬಲ್ಲೆ.. ಅಂತ ಹೇಳಿದ್ರೋ ಆಗಲೇ ನನಗೆ ಇವರ ಮೇಲೆ ವಿಶ್ವಾಸ ಬಂದಿತು. ಪ್ರಸನ್ನ ಫೋನ್‌ಲ್ಲಿ ಹೇಳಿದ ವಿಷಯವನ್ನೆಲ್ಲ ಇವರ ಮುಂದೆ ವಿವರಿಸಿದ್ದೆ. ಅವರೂ ಸಹ ನಡೆದ ಎಲ್ಲಾ ವಿಚಾರಗಳನ್ನು ನನ್ನ ಮುಂದೆ ಬಿಡಿಸಿ ಹೇಳಿದ್ರು. ಇವತ್ತು ಅವರಿಂದಾನೇ ನಿಮಗೂ ಎಲ್ಲಾ ವಿಚಾರ ಗೊತ್ತಾಗ್ಲಿ ಎಂದು ಅವರನ್ನೇ ಇಲ್ಲಿಗೆ ಬರೋಕೆ ಹೇಳಿದೆ., ಈಗ ನೀವೇ ಎಲ್ಲವನ್ನೂ ಇವರಿಗೆ ವಿವರಿಸಿ ಡಾ.ಮಿಥಾಲಿ..." ಪರಸ್ಪರ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡ ನಂತರ ವಿವೇಕ್ ಅವರನ್ನು ಭೇಟಿಯಾದದ್ದು ಹೇಗೆ ಎಂಬುದನ್ನು ವಿವರಿಸಿ ಹೇಳಿದ್ದ.
"ಡಾ.ಮಿಥಾಲಿ ನೀವು ಮಾನ್ವಿ ಫ್ರೆಂಡ್ ಆ?? ಅವಳು ಕೆನಡಾದಲ್ಲಿ ವರ್ಕ್ ಮಾಡ್ತಿದಾಳೆ ಅಂತ ಕೇಳಿದ್ದೆ. ಆದರೆ ಅವಳಿಗೆ ಹರ್ಷ ಹೇಗೆ ಸಿಕ್ಕ? ಅವನು ಸಂಕಲ್ಪ್ ಹೇಗಾದ?? ಈಗ ಹರ್ಷ ಹೇಗಿದಾನೆ?" ಪರಿ ಎಡಬಿಡದೆ ಕೇಳಿದಳು.
"ಹೌದು. ನಾನು ಮಾನ್ವಿ ಫ್ರೆಂಡ್. ಆದರೆ ತುಂಬಾ ಕ್ಲೋಸ್ ಏನಲ್ಲ. ಅದೇ ಹಾಸ್ಪಿಟಲ್‌ನಲ್ಲಿ ಕೆಲಸ ಮಾಡ್ತಿರೋದ್ರಿಂದ ಪರಿಚಯ ಅಷ್ಟೆ. ಆಗ ಮಾನ್ವಿ ಕೆನಡಾದಲ್ಲಿ ವರ್ಕ್ ಮಾಡ್ತಿದ್ದಳು. ಆದರೆ ಹೋದವರ್ಷ ಜೂನ್ ತಿಂಗಳಲ್ಲಿ ಹಾಸ್ಪಿಟಲ್‌ನ ಸಿಲ್ವರ್ ಜೂಬ್ಲಿ ಫಂಕ್ಷನ್‌ಗಾಗಿ ಮುಂಬೈಗೆ ಬಂದಿದ್ದಳು...
ಪರಿ... ನಿಮ್ಮನ್ನೆಲ್ಲ ಇದೇ ರೆಸ್ಟೋರೆಂಟ್‌ಗೆ ಯಾಕೆ ಬರೋಕೆ ಹೇಳಿದೆ ಗೊತ್ತಾ....? ಯಾಕಂದ್ರೆ ಹರ್ಷನ್ನ ನಾನು ಫರ್ಸ್ಟ್ ಟೈಮ್ ನೋಡಿದ್ದು ಇದೇ ರೆಸ್ಟೋರೆಂಟ್‌ನಲ್ಲಿ. ಅವತ್ತು ಮಧ್ಯಾಹ್ನ ಮಾನ್ವಿ ನಾನು ಮತ್ತೆ ನಮ್ಮ ಇಬ್ಬರು ಕೋಲಿಗ್ಸ್ ಜೊತೆಗೆ ಇದೇ ರೆಸ್ಟೋರೆಂಟ್ ಗೆ ಊಟಕ್ಕೆ ಬಂದಿದ್ವಿ. ಅಲ್ಲಿ ಕಾರ್ನರ್ ಟೇಬಲ್‌ನಲ್ಲಿ ಕುಳಿತಿದ್ವಿ. ಹರ್ಷ ತನ್ನ ಕ್ಲೈಂಟ್ ಜೊತೆಗೆ ಬಂದಿದ್ದ ಅನ್ಸುತ್ತೆ ಅವನು ಆ ಕಡೆಗೆ ಕುಳಿತಿದ್ದ. ಅವನು ತುಂಬಾ ಹೊತ್ತಿನಿಂದ ಮಾನ್ವಿನಾ ಗಮನಿಸೋದನ್ನ ನೋಡಿ, ನಮಗೆ ಅನುಮಾನ ಬಂದಿತ್ತು. 'ನೋಡೆ, ಯಾರೋ ಹ್ಯಾಂಡ್ಸಮ್ ಹುಡುಗ ನಿನ್ನೇ ಗುರಾಯಿಸ್ತಿದಾನೆ ಅಂತ ರೇಗಿಸಿದ್ವಿ. ಮಾನ್ವಿ ಅವನ ಕಡೆಗೊಮ್ಮೆ ತಿರುಗಿ ನೋಡಿ ಫುಲ್ ಸಿಟ್ಟಾಗಿದ್ದಳು. ಇಲ್ಲಿ ಒಂದು ಕ್ಷಣನೂ ನಿಲ್ಲದೆ ಎದ್ದು ಆಚೆ ಹೊರಟಿದ್ದಳು. ಹರ್ಷ ಅವಳನ್ನು ದಾರಿ ಮಧ್ಯದಲ್ಲಿ ಕೈ ಹಿಡಿದು ತಡೆದು ಎಲ್ಲರ ಮುಂದೆ ಅವಳಿಗೆ ಕ್ಷಮೆ ಕೇಳಿಕೊಂಡು ಏನೋ ಹೇಳಲಿಕ್ಕೆ ಪ್ರಯತ್ನಿಸ್ತಿದ್ದ. ಯಾಕೆ ಅಂತ ನಾವೆಲ್ಲರೂ ದಂಗಾಗಿ ನೋಡುತ್ತಿದ್ವಿ ಆದರೆ ಮಾನ್ವಿ ಮಾತ್ರ ಸಿಟ್ಟಿನ ಭರದಲ್ಲೇ ಅವನಿಗೆ ತನ್ನಿಂದ ದೂರ ಇರುವಂತೆ ವಾರ್ನ್ ಮಾಡಿ ಇಲ್ಲಿಂದ ಹೊರಟು ಹೋದಳು. ಆದರೆ ಹರ್ಷ ಅಷ್ಟಕ್ಕೇ ಸುಮ್ಮನಾಗದೆ ನಮ್ಮ ಹತ್ರ ಮಾತಾಡಿ ನಮ್ಮ ಹಾಸ್ಪಿಟಲ್ ಬಗ್ಗೆ ತಿಳಿದುಕೊಂಡ. ಮರುದಿನ ಕೂಡ ಹರ್ಷ ಹಾಸ್ಪಿಟಲ್‌ಗೆ ಬಂದಿದ್ದ. ಖಾಲಿ ಕೈಯಲ್ಲಲ್ಲ.... ಫ್ಲವರ್ ಬೊಕ್ಕೆ, ಚಾಕ್ಲೆಟ್ಸ್, ಗಿಫ್ಟ್ಸ್ ಸಮೇತ... ಇದನ್ನೆಲ್ಲ ನೋಡಿ, ನಮಗನ್ನಿಸಿದ್ದು ಮಾನ್ವಿ ಮತ್ತೆ ಅವನ ಮಧ್ಯೆ ಪಾಸ್ಟ್ ಲವ್‌ಸ್ಟೋರಿ ಇತ್ತೆನೋ ಅಂತ.. ತುಂಬಾ ಒಳ್ಳೆಯ ಹುಡುಗ ಅನ್ಸುತ್ತೆ.. ಕ್ಷಮಿಸಿ ಒಪ್ಕೊಂಬಿಡೆ' ಅಂತ ನಾವೆಲ್ಲ ಸಮಾಧಾನ ಹೇಳಿದ್ವಿ ಆದರೆ ಮಾನ್ವಿ ಅವನು ಯಾರೂ ಅಂತನೇ ನನಗೊತ್ತಿಲ್ಲ ಎಂದು ಹೇಳಿ ಮುಖ ತಿರುವಿದ್ದಳು. ಅವಳ ಕೋಪ ಕಡಿಮೆಯಾಗಲಿಲ್ಲ. ಅವಳು ಎಷ್ಟೇ ಕೋಪಿಸಿಕೊಂಡರೂ ಹರ್ಷ ಮಾತ್ರ ಕೂಲಾಗಿ ಮಾತಾಡಿ ಅವಳನ್ನ ಸಂತೈಸಿದ. ಹರ್ಷ ಮಾನ್ವಿಗೆ ಸಾರಿ ಕೇಳಲು ಮಾಡಿದ ಸಾಹಸ ತುಂಟತನ ಒಂದೋ ಎರಡೋ ಅಲ್ಲ.. ಒಮ್ಮೆ ಇಡೀ ದಿನ ಎಲ್ಲಾ ಪೆಷಂಟ್ಸ್ ಕಡೆಯಿಂದ ಹೂ ಕೊಟ್ಟು ಅವರ ಮೂಲಕ ಸಾರಿ ಕೇಳಿದ‌್ರೆ ಇನ್ನೊಮ್ಮೆ ಅವಳು ಹೋದಲ್ಲೆಲ್ಲ ಏನೋ ಸರ್ಪ್ರೈಜ್ ಕ್ರಿಯೇಟ್ ಮಾಡಿ ಅವಳನ್ನು ಖುಷಿ ಪಡಿಸೋಕೆ ಪ್ರಯತ್ನಿಸ್ತಿದ್ದ. ಅವನ ಚೇಷ್ಟೆ ಹುಡುಗಾಟಿಕೆ, ಮುಗ್ಧವಾಗಿ ಕ್ಷಮೆ ಕೇಳುವ ರೀತಿಗೆ ಮಾನ್ವಿ ಕೋಪ ಕರಗಿ ಹೋಗಿತ್ತು.
ಬಹುಶಃ ಅದೇ ಹರ್ಷ ಮಾಡಿದ ತಪ್ಪೇನೋ.. ಮಾನ್ವಿ ಹರ್ಷನ್ನ ಇಷ್ಟಪಡೋಕೆ ಶುರು ಮಾಡಿದ್ದಳೆನೋ.. ಆಗಲೇ ಅವಳು ಹರ್ಷನ್ನ ನಮಗೆಲ್ಲ ಪರಿಚಯ ಮಾಡಿಕೊಟ್ಟಳು. ಅಲ್ಲಿಯವರೆಗೆ ಅವರಿಬ್ಬರೂ ಲವರ್ಸ್ ಅಂದುಕೊಂಡಿದ್ದ ನಮ್ಮ ತಪ್ಪು ತಿಳುವಳಿಕೆಗೆ ಫುಲ್‌ಸ್ಟಾಪ್ ಇಟ್ಟು ಅವನು ತನ್ನ ಫ್ರೆಂಡ್‌ನ್ನು ಮದುವೆಯಾಗೋ ಹುಡುಗ, ತನ್ನ ಫ್ರೆಂಡ್ ಜೊತೆ ಆಗಿರೋ ಜಗಳ ಎಲ್ಲ ಮರೆತು ಮತ್ತೆ ಮೊದಲಿನಂತೆ ಇರೋಕೆ ತನ್ನನ್ನು ಕನ್ವಿನ್ಸ್ ಮಾಡ್ತಿದ್ದ ಅಂತ ಹೇಳಿದ್ಲು. ಆದರೆ ನಿಮ್ಮಿಬ್ಬರ ಮಧ್ಯೆ ಯಾವ ಕಾರಣಕ್ಕೆ ಜಗಳವಾಗಿತ್ತು ಅನ್ನೋದನ್ನ ಮಾತ್ರ ಬಾಯಿ ಬಿಡಲಿಲ್ಲ. ಮಾನ್ವಿಗೆ ಮನಸ್ಸಿಲ್ಲದಿದ್ದರೂ ಹರ್ಷನ ಮಾತಿಗೆ ಬೆಲೆ ಕೊಟ್ಟು ಅವನ ಜೊತೆಗೆ ಬೆಂಗಳೂರಿಗೆ ಹೋಗೋದಕ್ಕೂ ಸಿದ್ದವಾಗಿದ್ದಳು. ಅವತ್ತು ಮಧ್ಯಾಹ್ನ ಹನ್ನೊಂದು ಮೂವತ್ತಕ್ಕೆ ಫ್ಲೈಟ್ ಇದ್ದಿದ್ದು, ಆದರೆ ಹತ್ತುವರೆ ಹೊತ್ತಿಗೆ ಹರ್ಷ ಹೋಗ್ತಿದ್ದ ಕಾರ್‌ಗೆ ಆ್ಯಕ್ಸಿಡೆಂಟ್ ಆಗಿದೆ, ತಲೆಯಿಂದ ತುಂಬಾ ರಕ್ತ ಸುರಿತಿದೆ, ಕಂಡಿಷನ್ ತುಂಬಾ ಕ್ರಿಟಿಕಲ್ ಆಗಿದೆ ತಕ್ಷಣ ಆಪರೇಷನ್‌ಗೆ ವ್ಯವಸ್ಥೆ ಮಾಡಿಕೊಳ್ಳಿಯಂತ ಮಾನ್ವಿ ಆಸ್ಪತ್ರೆಗೆ ಕಾಲ್ ಮಾಡಿ ಹೇಳಿದ್ದಳು. ಎಂ.ಆರ್ ಹಾಸ್ಪಿಟಲ್‌ನ ಒನರ್ ಮಾನ್ವಿ ಆಜ್ಞೆಯಾಗಿದ್ದರಿಂದ ಯಾವ ಫಾರ್ಮಲಿಟಿನೂ ಇಲ್ಲದೆ ಹರ್ಷನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವಳು ಹರ್ಷನ್ನ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಆಪರೇಷನ್ ಗೆ ಎಲ್ಲಾ ಸಿದ್ದತೆ ಮಾಡಿಕೊಂಡಾಗಿತ್ತು. ಅವತ್ತು ಎಲ್ಲಾ ಸೀನಿಯರ್ ಡಾಕ್ಟರ್ಸ್ ಬೋರ್ಡ್ ಮಿಂಟಿಂಗ್‌ಗೆ ಹೋಗಿದ್ರು. ಆದರೆ ಮಾನ್ವಿ ಹರ್ಷನಿಗೋಸ್ಕರ ಮೀಟಿಂಗ್‌ನ್ನೇ ಕ್ಯಾನಲ್ ಮಾಡಿಸಿ ಟಾಪ್ ಡಾಕ್ಟರ್ಸಗಳನ್ನು ರೆಕಮೆಂಡ್ ಮಾಡಿ ತಾನೇ ಮುಂದೆ ನಿಂತು ಹರ್ಷನ ಪ್ರಾಣ ಉಳಿಸಲು ಶತಾಯಗತಾಯ ಒದ್ದಾಡಿದ್ದಳು! ಹರ್ಷನಿಗೆ ಬ್ಲಡ್ ಪ್ರೊವೈಡ್ ಮಾಡುವುದರಿಂದ ಹಿಡಿದು ಅವನ ಪ್ರಾಣ ಉಳಿಸೋಕೆ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ತನ್ನಿಂದಾದ ಎಲ್ಲ ಪ್ರಯತ್ನಗಳನ್ನು ಮಾಡಿದ್ದಳು. ಹರ್ಷನ ಮನೆಯವರಿಗೆ ಕಾಲ್ ಮಾಡಿ ವಿಷಯ ತಿಳಿಸಲು ಹೇಳಿದ್ದಳು. ಅವತ್ತು ಮಾನ್ವಿ ಇರದೆ ಹೋಗಿದ್ರೆ ಬಹುಶಃ ಖಂಡಿತವಾಗಿ ಹರ್ಷ ಬದುಕ್ತಿರ್ಲಿಲ್ವೆನೋ.. ಅವಳ ತುರ್ತು ನಿರ್ಧಾರಗಳು, ಅವಳ ಬೆಂಬಲದಿಂದ ಹರ್ಷನಿಗೆ ಪುನರ್ಜನ್ಮ ಸಿಕ್ಕಂತಾಗಿತ್ತು. That time, I feel proud on her!!
ಆಪರೇಷನ್ ಮುಗಿದ ಒಂದುವರೆ-ಎರಡು ಗಂಟೆ ನಂತರ ಹರ್ಷನಿಗೆ ಸ್ವಲ್ಪ ಪ್ರಜ್ಞೆ ಬಂದಿತ್ತು. ಆದರೆ ಬ್ರೆನ್ ಇಂಜ್ಯೂರಿಯಿಂದಾಗಿ ಹಿ ಲಾಸ್ಟ್ ಹಿಸ್ ಮೆಮೊರಿ! ತಾನು ಯಾರು ಅನ್ನೋದೆ ಅವನಿಗೆ ನೆನಪಾಗದೆ ಪ್ಯಾನಿಕ್ ಆಗಿದ್ದ. ಕೈಗೆ ಸಿಕ್ಕಿದ್ದನ್ನ ತಗೊಂಡು ಎದುರಿಗಿದ್ದವರಿಗೆ ಎಸೆದು ತಾನು ಯಾರು? ನೀವೆಲ್ಲಾ ಯಾರು ಎಂದು ಕಿರುಚಾಡ್ತಿದ್ದ. ಮಾನಿಟರ್ ಎಸೆದು ಬಿಸಾಕಿದ್ದ, ಆಕ್ಸಿಜನ್ ಮಾಸ್ಕ್, ಕೈಗೆ ಹಾಕಿದ್ದ ಡ್ರಿಪ್ಸ್ ಎಲ್ಲಾ ಕಿತ್ತು ಹಾಕಿ ತುಂಬಾನೇ ರಂಪ ಮಾಡಿದ್ದ. ಅವನನ್ನ ಕಂಟ್ರೋಲ್ ಮಾಡೋದು ತುಂಬಾನೇ ಕಷ್ಟವಾಗಿತ್ತು ಅದ್ಕೆ ಅನೆಸ್ತೇಷಿಯಾ ಕೊಡಲೇಬೇಕಾಯ್ತು. ಬಟ್ ಅನ್‌ಫಾರ್ಚುನೆಟ್ಲಿ ಅದರ ಎಫೆಕ್ಟ್‌ನಿಂದಾಗಿ ಅವನು ಕೋಮಾಗೆ ಹೊರಟು ಹೋದ. ಅಲ್ಲಿಯವರೆಗೂ ಅವನು ಬದುಕಿದ್ರೆ ಸಾಕು ಅಂತ ಉಸಿರು ಕೈಯಲ್ಲಿ ಹಿಡಿದಿದ್ದ ಮಾನ್ವಿ ತಲೆಯಲ್ಲಿ ಏನ್ ಯೋಚನೆ ಓಡ್ತಿತ್ತೋ ಹರ್ಷನ ಕಡೆಯವರು ಬಂದ ತಕ್ಷಣ ಬ್ರೇನ್ ಇಂಜ್ಯೂರಿಯಿಂದಾಗಿ ಹರ್ಷ ಸತ್ತೋದ ಎಂದು ಹೇಳಿ ಅಂತ ಆರ್ಡರ್ ಮಾಡಿದಳು. ನಾವೆಲ್ಲರೂ ಇದನ್ನು ವಿರೋಧಿಸಿ ಇದು ತಪ್ಪು ಎಂದು ಎಷ್ಟು ಬುದ್ದಿ ಹೇಳಿದ್ರೂ ಒಂದೇ ಕ್ಷಣದಲ್ಲಿ ಅವಳ ಬಿಹೇವಿಯರ್ ಇವಳೇನಾ ಮಾನ್ವಿ ಅನ್ನುವಷ್ಟರ ಮಟ್ಟಿಗೆ ಬದಲಾಗಿತ್ತು. ನಮ್ಮ ಯಾರ ಮಾತನ್ನು ಅವಳು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅದಕ್ಕೆ ಪರ್ಯಾಯವಾಗಿ 'ಈ ನಿಜಾನಾ ಹೊರಗೆ ಹೇಳಿದ್ರೆ ನಿಮ್ಮ ಕೆಲಸ ಉಳಿಯಲ್ಲ, ಬೇರೆ ಎಲ್ಲೂ ಕೆಲಸ ಸಿಗೋದು ಇಲ್ಲ. ಜಸ್ಟ್ ಬಿ ಕೆರ್‌ಫುಲ್!!' ಎಂದು ಬೆದರಿಕೆ ಹಾಕಿದ್ದಳು. ಅವಳ ತಂದೆ ರಘುನಂದನ್ ಸರ್ ಕೂಡ ಅವಳು ಮಾಡ್ತಿರೋದು ತಪ್ಪು ಅಂತ ಸಾಕಷ್ಟು ತಿಳಿಸಿ ಹೇಳಿ ಸಮಾಧಾನ ಮಾಡಿದ್ರೂ ಮಾನ್ವಿ 'ನನಗ್ ಹರ್ಷ ಬೇಕು,, ಅವನಿಲ್ಲದೆ ನಾನು ಸತ್ತೋಗ್ತಿನಿ.. ಅಂತ ಅತ್ತುಗರೆದು ಹಠ ಮಾಡಿದ್ದಳು. ಮಗಳ ಮೇಲೆ ಪ್ರಾಣಾನೇ ಇಟ್ಟುಕೊಂಡ ಅವರ ತಂದೆಯೂ ಅವಳ ಹಠಕ್ಕೆ ಸೋತು ಅವಳ ಮಾತಿನಂತೆ ಹರ್ಷನ ಬಗ್ಗೆ ಮೂರನೆಯವರಿಗೆ ಗೊತ್ತಾಗಬಾರದೆಂದು ಸ್ಟಾಫ್‌ಗೆ ಸ್ಟ್ರಿಕ್ಟಾಗಿ ಆರ್ಡರ್ ಮಾಡಿದ್ದರು. ಕೆಲವು ಡಾಕ್ಟರ್ಸ್, ನರ್ಸ್ ಮತ್ತೆ ಕೆಲವು ವಾರ್ಡ್‌ಬಾಯ್ಸ್ ಬಿಟ್ಟು ಈ ವಿಷಯ ಬೇರೆಯವರಿಗೆ ಗೊತ್ತೇ ಆಗಲಿಲ್ಲ.
ಸಂಜೆ ಹರ್ಷನ ತಂದೆ ತಾಯಿ ಬರುವಷ್ಟರಲ್ಲಿ ಅವರ ದಿಕ್ಕು ತಪ್ಪಿಸುವ ಎಲ್ಲಾ ವ್ಯವಸ್ಥೆ ಮಾಡಿಕೊಂಡಾಗಿತ್ತು. ಡಾ.ಪಟ್ಟಾಭಿರಾಮ ಈ ಕೇಸ್‌ಗೆ ಫೇಕ್ ರಿಪೋರ್ಟ್ ಮತ್ತೆ ಡೆತ್ ಸರ್ಟಿಫಿಕೇಟ್ ರೆಡಿ ಮಾಡಿಕೊಟ್ಟರು. ಈ ಕೇಸ್ ನಂತರ ಅವರನ್ನ ವಿದೇಶಕ್ಕೆ ಕಳಿಸಿ ಕೊಡಲಾಯ್ತು. ಪೋಲಿಸ್ನವರು ಕೂಡ ರಘುನಂದನ್ ಸರ್ ಕಡೆಯವರೇ ಆಗಿದ್ರು.. ಕಂಪ್ಲೆಂಟ್ ರಿಜಿಸ್ಟರ್ ಏನೋ ಆಗಿತ್ತು ಆದರೆ ಅದರ ತನಿಖೆ ಮುಂದುವರೆಯಲಿಲ್ಲ. ಪಾಪ ಹರ್ಷನ ಪೆರೇಂಟ್ಸ್ ಬೇರೆ ಯಾರದೋ ಶವಾನಾ ತಮ್ಮ ಮಗ ಅನ್ಕೊಂಡು..... " ಮುಂದೆ ಮಾತನಾಡಲಾಗದಂತೆ ಮಿಥಾಲಿಯ ಧ್ವನಿ ಕಂಪಿಸಿತ್ತು. ಒಂದೇ ಸಮನೆ ಅಳಲು ಶುರುವಿಟ್ಟಿದ್ದಳು. ವಿವೇಕ್ ಆಕೆಗೆ ಕಣ್ಣೊರೆಸಿಕೊಳ್ಳಲು ಟಿಷ್ಯೂ ಕೊಟ್ಟ. ಆಕೆ ಕಣ್ಣೊರೆಸಿಕೊಳ್ಳುತ್ತ ಹೇಳಿದಳು...
"ಐಮ್ ಸಾರಿ ಪರಿ... ನಾನು ಕೂಡ ಈ ಅನ್ಯಾಯದ ಕೆಲಸದಲ್ಲಿ ಭಾಗಿಯಾಗಿದ್ದಕ್ಕೆ. ಅವತ್ತು ಅವರ ತಾಯಿಯ ಕಣ್ಣೀರು ದುಃಖ ಅವರ ತಂದೆಯ ನೋವು ಇನ್ನೂ ನನ್ನ ಕಣ್ಣಲ್ಲಿ ಕಟ್ಟಿದಹಾಗಿದೆ. ಆದರೂ ನಾನು ಏನೂ ಮಾಡೋ ಪರಿಸ್ಥಿತಿಯಲ್ಲಿ ಇರಲಿಲ್ಲ. ಆಮೇಲೆ ಸಹ ಹರ್ಷನ ಬಗ್ಗೆ ತಿಳ್ಕೊಳ್ಳೊಕೆ ಪ್ರಯತ್ನ ಪಟ್ಟೆ, ಆದರೆ ಹರ್ಷ ಬೆಂಗಳೂರಿನವನು ಅನ್ನೋ ವಿಷಯ ಬಿಟ್ಟು ಬೇರೆನೂ ಗೊತ್ತಾಗಲಿಲ್ಲ ನನಗೆ.. ಈಗ ಸಮಯ ಬಂತು ಹೇಳ್ತಾ ಇದ್ದೀನಿ. ಪ್ಲೀಸ್ ನನ್ನ ಬಗ್ಗೆ ಯಾರಮುಂದೆಯೂ ಹೇಳಬೇಡಿ. ನಮ್ಮದು ಮಿಡ್ಲ್ ಕ್ಲಾಸ್ ಕುಟುಂಬ, ಅಮ್ಮ ಕಷ್ಟ ಪಟ್ಟು ನನ್ನ ಡಾಕ್ಟರ್ ಓದ್ಸಿದ್ದಾರೆ. ನನಗೆ ಇಬ್ಬರೂ ತಂಗಿಯರಿದ್ದಾರೆ. ನಮ್ಮ ಕುಟುಂಬಕ್ಕೆ ನಾನೇ ಆಧಾರ. ನನ್ನ ಕೆಲಸ ಹೋದ್ರೆ ನಮ್ಮ ಬದುಕು ದುರ್ಭರವಾಗಿ ಬಿಡುತ್ತೆ ಅದಕ್ಕೆ ಪ್ಲೀಸ್..." ಮಿಥಾಲಿಯ ಕಣ್ಣು ಆರ್ಧ್ರವಾಗಿತ್ತು.
"ಡೋಂಟ್ ವರಿ, ಮಿಥಾಲಿ. ನಿಮ್ಮ ಬಗ್ಗೆ ಯಾರಿಗೂ ಗೊತ್ತಾಗೊಲ್ಲ. ನಮ್ಮ ಮೇಲೆ ನಂಬಿಕೆಯಿರಲಿ. ಹೌದು... ಎಲ್ಲಾ ಸರಿ, ಹರ್ಷ ಸಂಕಲ್ಪ್ ಆಗಿದ್ದು ಹೇಗೆ??"
"ನಿಮಗೆ ಅಥ್ರೇಯ ಸರ್ ಗೊತ್ತಿರಬಹುದಲ್ವಾ.. ಒರೈಯನ್ ಅನ್ನೋ ಬ್ರಾಡ್‌ಬ್ಯಾಂಡ್ ಕಂಪನಿಯ ಸಿಇಒ!! ಅವರು ಮತ್ತೆ ರಘುನಂದನ್ ಸರ್ ಇಬ್ರೂ ಬ್ಯುಸಿನೆಸ್ ಪಾರ್ಟ್ನರ್ಸ್, ಅವರ ಮಗನೇ ಸಂಕಲ್ಪ್! ಅಂದ್ರೆ ಹರ್ಷ!!
"ಅದೇ ಅವರು ಹೇಗೆ ಒಪ್ಪಿಕೊಂಡರು ಇದಕ್ಕೆಲ್ಲ?? ಅವರ ನಿಜವಾದ ಮಗ ಇದ್ನಾ? ಅಥವಾ ಬರೀ ಸುಳ್ಳಾ? ಒಂದು ವೇಳೆ ಇದ್ದರೆ ಅವನೇನಾದ??" ಪ್ರಸನ್ನನ ಅನುಮಾನಗಳು ಬಗೆಹರಿಯಲಿಲ್ಲ.
"ಹರ್ಷ ಕೋಮಾ ಹೋದನಂತರ ಅವನನ್ನ ಸಿಡ್ನಿಗೆ ಶಿಫ್ಟ್ ಮಾಡಲಾಯ್ತು. ಅಲ್ಲಿ ಏನು ನಡೆದಿದೆಯೋ ನನಗೊತ್ತಿಲ್ಲ. ಆದರೆ ಅವನ ನೆನಪು ವಾಪಸ್ ಬರದೇ ಇರಲಿ ಅಂತನೇ ಅವನನ್ನ ಇಲ್ಲಿಂದ ದೂರ ಕರೆದುಕೊಂಡು ಹೋದ್ರು ಅಂತ ನಮ್ಮ ಸ್ಟಾಫ್ ಮಾತಾಡ್ತಿದ್ರು. ಈಗ ಮಾನ್ವಿ ಕೂಡ ಸಿಡ್ನಿಯಲ್ಲೇ ಇರೋದು. ಈಗ ಮದುವೆ ಮುಂಬೈನಲ್ಲಿ ಇರೋದ್ರಿಂದ ಇಲ್ಲಿಗೆ ಬಂದಿದ್ದಾರೆ. ಮೊನ್ನೆ ಎರಡು ದಿನ ಮಂಗಳೂರಿಗೆ ಹೋಗಿ ತಮ್ಮ ಮನೆ ದೇವರಿಗೆ ಪೂಜೆ ಕೂಡ ಸಲ್ಲಿಸಿದರು. ಇದು ಮದುವೆ ಅಲ್ಲಾ ಪರಿ ಬರೀ ಮೋಸ. ಇದು ನಡೆಯಕೂಡದು. ಇದೇನಾದ್ರೂ ನಡೆದರೆ ಹರ್ಷ ಲೈಫ್ ಪೂರ್ತಿ ಸಫರ್ ಮಾಡ್ಬೇಕಾಗುತ್ತೆ. ಇದನ್ನ ಹೇಗಾದ್ರೂ ನೀವೇ ತಡಿಬೇಕು ಪರಿ..
ಆದರೆ ಇನ್ನೊಂದು ವಿಷಯ...... ಅಪ್ಪಿತಪ್ಪಿ ಕೂಡ ಹರ್ಷನ ಪರಿಚಯದವರು ಯಾರಾದ್ರೂ ಸಿಕ್ಕು ಏನಾದ್ರೂ ಹೇಳ್ತಾರೆ ಅನ್ನೋ ಭಯಕ್ಕೋ ಏನೋ ಮಾನ್ವಿ ಅವನ ಬದುಕಲ್ಲಿ ಕೆಲವು ಸುಳ್ಳು ಸೃಷ್ಟಿಸಿದ್ದಾಳೆ. ಯಾರೋ ಅವನ ಸಂಬಂಧಿಯಂತೆ ಬಂದು ಅವನನ್ನ ದುಡ್ಡಿಗೋಸ್ಕರ ಮೋಸ ಮಾಡೋಕೆ ಟ್ರೈ ಮಾಡಿದ್ರಂತೆ.. ಈ ಘಟನೆ ನಡೆದ ನಂತರ ಹರ್ಷ ಯಾರನ್ನೂ ನಂಬೋದಿರಲಿ ಯಾರನ್ನೂ ತನ್ನ ಹತ್ತಿರ ಕೂಡ ಸೇರಿಸ್ತಿಲ್ವಂತೆ... ನೀವು ಹೋಗಿ ನಿಮ್ಮ ಪರಿಚಯ ಹೇಳಿಕೊಂಡರೂ ಬಹುಶಃ ಅವರು ನಿಮ್ಮನ್ನ ನಂಬದೇ ಇರಬಹುದು.." ಮಿಥಾಲಿ ಕೊಂಚ ಸಂಶಯಗೊಂಡು ಹೇಳಿದ್ದಳು.
"ನಾವಾಗೇ ಹೇಳಿದ್ರೆ ನಂಬದೇ ಇರಬಹುದು. ಆದರೆ ಅವನ ಮನಸ್ಸಿಗೆ ಒಂದು ಕ್ಷಣ ಇವರು ನನ್ನವರು ಅನ್ನೋ ಫೀಲ್ ಬಂದ್ರು ಸಾಕಲ್ವ.. ಹರ್ಷನಿಗೆ ಮತ್ತೆ ಹಳೆಯದನ್ನೆಲ್ಲ ನೆನಪಿಸೋಕೆ.." ಪರಿಧಿಯ ಮನದಲ್ಲಿ ಇನ್ನೂ ಸಣ್ಣ ಭರವಸೆಯಿತ್ತು.
"ರೈಟ್.. ಬಟ್ ಅದಕ್ಕೆ ಮೊದಲು ನೀವಿಬ್ರೂ ಮುಖಾಮುಖಿ ಭೇಟಿಯಾಗ್ಬೇಕು. ಒಂದು ವೇಳೆ ಹರ್ಷ ನಿಮ್ಮನ್ನು ಗುರುತಿಸಿ ಚೂರಾದ್ರೂ ಹಳೆಯ ನೆನಪು ಬರುತ್ತೆನೋ ನೋಡಬೇಕು.. ಇಲ್ಲವಾದರೆ ಮುಂದೆ ಏನು ಮಾಡಬೇಕೋ ಯೋಚನೆ ಮಾಡೋಣ." ಪ್ರಸನ್ನ ಹೇಳಿದ.
"ಆದರೆ ಎಲ್ಲಿ ಭೇಟಿ ಮಾಡಿಸೋದು. ಮನೆ ಮತ್ತೆ ಆಫಿಸಲ್ಲಿ ಟೈಟ್ ಸೆಕ್ಯೂರಿಟಿ ಇರುತ್ತೆ. ಅದೂಅಲ್ಲದೇ ಮಾನ್ವಿ ಅವನನ್ನ ಮೀಟ್ ಮಾಡೋಕೆ ಬಿಡದೇ ಇರಬಹುದು. ಅದು ಬಿಟ್ಟು ಹರ್ಷ ಎಲ್ಲಿ ಹೋಗ್ತಾನೇ, ಎಲ್ಲಿ ಬರ್ತಾನೇ ಯಾವುದೂ ನಮಗೊತ್ತಿಲ್ವಲ್ಲ.." ವಿವೇಕ್ ತನ್ನ ಸಂಶಯ ಮುಂದಿಟ್ಟ.
"ನನ್ನ ಹತ್ರ ಒಂದು ಪ್ಲ್ಯಾನ್ ಇದೆ.. ಎನ್ನುತ್ತ ಮಿಥಾಲಿ ತನ್ನ ಬ್ಯಾಗಿನಿಂದ ಮದುವೆ ಕಾರ್ಡ್ ಒಂದನ್ನು ಹೊರತೆಗೆದು ತೋರಿಸಿದಳು. ಇದು ನಮ್ಮ ಕೋಲಿಗ್ ಒಬ್ಬರ ಮದುವೆ ಇನ್ವಿಟೇಷನ್. ನಾಳೆನೆ ಇರೋದು. ಈ ಮದುವೆಗೆ ಮಾನ್ವಿ ಮತ್ತೆ ಹರ್ಷ ಇಬ್ಬರೂ ಬರುವವರಿದ್ದಾರೆ. ಪರಿ ನೀವು ಕೂಡ ಈ ಮದುವೆಗೆ ಹೋಗಬೇಕು. ಅಲ್ಲಿಯೇ ನಿಮ್ಮ ಮತ್ತೆ ಹರ್ಷನ ಭೇಟಿಯಾಗಲಿ.. ಅವರು ನಿಮ್ಮನ್ನ ಗುರುತಿಸಿದ್ರೆ ಸರಿ, ಇಲ್ಲವಾದರೆ ನೀವು ಹೊಸ ರೀತಿಯಲ್ಲಿ ನಿಮ್ಮ ಪರಿಚಯ ಮಾಡಿಕೊಂಡು ಅವರಿಗೆ ಹಳೆಯದನ್ನೆಲ್ಲ ನೆನಪಿಸೋ ಪ್ರಯತ್ನ ಮಾಡಿ.." ಪರಿ ಮಿಥಾಲಿಯ ಕೈಯಿಂದ ಇನ್ವಿಟೇಷನ್ ಕಾರ್ಡ್ ತೆಗೆದುಕೊಂಡು ನೋಡುತ್ತಿದ್ದಳು. ವೇಟರ್ ಬಂದು ನಾಲ್ಕು ಐಸ್‌ಕ್ರೀಂನ್ನು ಟೇಬಲ್ ಮೇಲೆ ಇರಿಸಿ ಹೋಗಿದ್ದ.
"ವ್ಹಾವ್.. ದ್ಯಾಟ್ಸ್ ಗುಡ್ ಐಡಿಯಾ. ಡಾ.ಮಿಥಾಲಿ ಅನ್ಯಾಯವಾಗಿ ಡಾಕ್ಟರ್ ಆಗಿದಿರಲ್ರೀ.. ನಮ್ಮ ಆ್ಯಡ್ ಕಂಪನಿಯಲ್ಲಿ ಇರ್ಬೇಕಿತ್ತು ನೀವು.. ನನ್ನ ಕಂಪನಿ ಎಲ್ಲೋ ಹೋಗಿರೋದು " ವಿವೇಕ್ ಮಿಥಾಲಿಯ ಕೈ ಕುಲುಕುತ್ತ ಖುಷಿಯಿಂದ ತನ್ನ ಮೆಚ್ಚುಗೆ ವ್ಯಕ್ತಪಡಿಸಿದ. ಟೇಬಲ್ ಕೆಳಗಿನಿಂದ ವಿವೇಕ್‌ನಿಗೆ ಜೋರಾಗಿ ಒದ್ದು ಅವನ ಕಾಲು ಅದುಮಿದ್ದ ಪ್ರಸನ್ನ ಅದೆಷ್ಟೋ ಸಮಯದಿಂದ ಹಿಡಿದಿದ್ದ ಮಿಥಾಲಿ ಕೈಯನ್ನು ಬಿಡುವಂತೆ ಹುಸಿನಗುತ್ತ ಸನ್ನೆ ಮಾಡಿ ಹೇಳಿದ. ವಿವೇಕ್ ಕೈ ಬಿಟ್ಟ.
"ಡಾ.ಮಿಥಾಲಿ ನಾನೊಮ್ಮೆ ಹರ್ಷನ ರಿಪೋರ್ಟ್ಸ್ ನೋಡಬೇಕು. ಇಸ್ ಇಟ್ ಪಾಸಿಬಲ್??" ಪ್ರಸನ್ನ ಐಸ್ಕ್ರೀಂ ಬಾಯಿಗಿಡುತ್ತ ಕೇಳಿದ. ನಡೆದ ಹಿನ್ನೆಲೆಯನ್ನು ಕೇಳಿ ಮಾನ್ವಿ ಮೇಲಿನ ಸಿಟ್ಟಿನಿಂದ ಅವನ ಎದೆ ಉರಿದುಹೋಗಿತ್ತು. ಆದರೆ ಎಲ್ಲರ ಮುಂದೆ ತೋರ್ಪಡಿಸಿಕೊಳ್ಳಲಿಲ್ಲ.
"ಹ್ಮ್ಮ.. ಲೆಟ್ಸ್ ಟ್ರೈ ಟು ಡು ಇಟ್.. ನಾನು ಹೇಗಾದರೂ ಮಾಡಿ ರಿಸೆಪ್ಷನಿಸ್ಟ್ ನಾ ಹತ್ತು ನಿಮಿಷ ಅಲ್ಲಿಂದ ಆಚೆ ಕರ್ಕೊಂಡು ಹೋಗ್ತಿನಿ. ಅಷ್ಟರೊಳಗೆ ನೀವು ರಿಪೋರ್ಟ್ಸ್‌ನಾ ಕಾಪಿ ಮಾಡ್ಕೋಬೇಕು. ಒಕೆನಾ..?! ಮತ್ತೆ ಇದ್ಯಾವುದು ಸಿಸಿಯಲ್ಲಿ ರೆಕಾರ್ಡ್ ಆಗಕೂಡದು.." ಮಿಥಾಲಿ ತನ್ನ ಆತಂಕ ವ್ಯಕ್ತಪಡಿಸಿದಳು.
"ಡೋಂಟ್ ವರಿ ಮಿಥಾಲಿ.. ವಿಷಯ ನನಗೆ ನಿಮಗೆ ಬಿಟ್ಟು ಮೂರನೆಯವರಿಗೆ ಗೊತ್ತಾಗಲ್ಲ ಹಾಗೆ ಮಾಡ್ತಿನಿ. ನೀವು ಹತ್ತು ನಿಮಿಷ ಆ ರಿಸೆಪ್ಷನಿಸ್ಟ್‌ನಾ ಗಮನಿಸಿಕೊಂಡ್ರೆ ಆಯ್ತು..!" ಪ್ರಸನ್ನ ಹೇಳಿದ್ದಕ್ಕೆ ಆತ್ಮವಿಶ್ವಾಸದಿಂದ ತಲೆಹಾಕಿ ಸಮ್ಮತಿ ಸೂಚಿಸಿದಳು ಮಿಥಾಲಿ. "ಸರಿ ಹಾಗಿದ್ರೆ.. ನಾಳೆ, ನಾನು ಮಿಥಾಲಿ ಜೊತೆಗೆ ಹಾಸ್ಪಿಟಲ್ ಹೋಗಿ ರಿಪೋರ್ಟ್ ಕಲೆಕ್ಟ್ ಮಾಡ್ತಿನಿ. ಬ್ರೋ.. ನೀನು ಪರಿ ಜೊತೆಗೆ ಆ ಮದುವೆ ಹಾಲ್‌ಗೆ ಹೋಗ್ತಿದಿಯಾ. ಒಕೆ ತಾನೇ" ಪ್ರಸನ್ನ ಎಲ್ಲರ ಅಭಿಪ್ರಾಯ ಕೇಳಿದ. ಈ ವಿಷಯದಲ್ಲಿ ಮಿಥಾಲಿ ಮತ್ತು ವಿವೇಕ್ ಗೆ ಯಾವ ಅಭ್ಯಂತರವೂ ಇರಲಿಲ್ಲ.
ಆದರೆ ಮೌನವಾಗಿ ಕುಳಿತಿದ್ದ ಪರಿಯ ಆತಂಕವನ್ನು ಅರ್ಥ ಮಾಡಿಕೊಂಡ ಪ್ರಸನ್ನ ಆಕೆಗೆ ಧೈರ್ಯ ಹೇಳಿದ್ದ "ಪರಿ... ಹೆದರ್ಬೇಡಿ. ಹರ್ಷನ ನೆನಪಿನ ಶಕ್ತಿ ಕಳೆದು ಹೋಗಿದೆ ಅಷ್ಟೇ.. ಆದರೆ ಅವನ ಮನಸ್ಸಿನಿಂದ ನಿಮ್ಮ ಪ್ರೀತಿ ಅಳಿಸಿ ಹೋಗೋಕೆ ಸಾಧ್ಯಾನೇ ಇಲ್ಲ. ನಿಮ್ಮಿಬ್ಬರ ಪ್ರೀತಿ ಮೇಲೆ ನನಗೆ ನಂಬಿಕೆಯಿದೆ. ನೀವಿಬ್ರೂ ಮತ್ತೆ ಒಂದಾಗ್ತಿರಾ.. ಹರ್ಷ ನಮ್ಮ ಜೊತೆಯಲ್ಲೇ ಬೆಂಗಳೂರಿಗೆ ವಾಪಸ್ ಬರ್ತಾನೆ. ಯಾವುದೇ ಕಾರಣಕ್ಕೂ ಭಾವುಕತೆಗೆ ಒಳಗಾಗಿ ಅವನ ಮುಂದೆ ಅಳೋದು, ಹಳೆಯದನ್ನೆಲ್ಲ ತಕ್ಷಣ ವಿವರಿಸೋದು ಮಾಡಬೇಡಿ. ಮೊದಲು ಅವನನ್ನ ಗಮನಿಸಿ ಅವನ ಸುತ್ತಮುತ್ತ ಸುಳಿದಾಡಿ, ಅವನ ಮೆಮೊರಿ ಲೆವೆಲ್, ಮೆಂಟಲ್ ಕಂಡಿಷನ್ ಹೇಗಿದೆ ಅನ್ನೋದನ್ನ ತಿಳ್ಕೊಳ್ಳೊಕೆ ಪ್ರಯತ್ನ ಪಡಿ. ಅವನಿಗೆ ನೀವು ನೆನಪಾದ್ರೆ ಅದಕ್ಕಿಂತ ಒಳ್ಳೆಯ ವಿಚಾರ ಮತ್ತೊಂದಿಲ್ಲ. ಒಂದು ವೇಳೆ ಹಾಗಾಗ್ದಿದ್ರೆ ಹರ್ಷನ್ನ ಕ್ಯೂರ್ ಮಾಡೋದಕ್ಕೆ ಬೇರೆ ದಾರಿ ಹುಡ್ಕೋಣ. ಹರ್ಷನ್ನ ಗುಣಪಡಿಸೋಕೆ ನಾನು ಮೊದಲು ಅವನ ಕೇಸ್ ಸ್ಟಡಿ ಮಾಡ್ಬೇಕಾಗುತ್ತೆ. ಅದೂ ಅಲ್ಲದೇ ಈಗ ಅವನು ಸಂಕಲ್ಪ್ ಅಲ್ಲ ಹರ್ಷ ಅಂತ ಪ್ರೂವ್ ಮಾಡೋದಕ್ಕೆ ನಮ್ಮ ಹತ್ತಿರ ಇರೋ ಒಂದೇ ಒಂದು ಸಾಕ್ಷಿ.. ಹರ್ಷನ ಒರಿಜಿನಲ್ ರಿಪೋರ್ಟ್ಸ್!! ಸೋ.. ನಾನು ನಾಳೆ ಹಾಸ್ಪಿಟಲ್ ಹೋಗಿ ರಿಪೋರ್ಟ್ಸ್ ತರ್ತಿದಿನಿ. ನೀವು ನಾಳೆ ಹರ್ಷನ್ನ ಭೇಟಿಯಾಗ್ತಿರಾ.. ಒಕೆ??" ಪ್ರಸನ್ನ ಆಕೆಯ ತಲೆ ತಡವಿದ. ಪರಿಗೆ ಅವನ ಮಾತುಗಳು ಭರವಸೆಯನ್ನು ನೀಡಿದವು. ತಾನು ಈ ಪಯಣದಲ್ಲಿ ಒಂಟಿಯಲ್ಲ ಎಂಬ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದವು. ಆಕೆ ಮುಗುಳ್ನಗುತ್ತ ಹ್ಮ್.. ಒಕೆ' ಎಂದುತ್ತರಿಸಿದಳು.
"ಪರಿ... ನಾಳೆ ನೀವು ಹೋಗ್ತಿರೋದು 'ಪ್ಯಾರಡೈಸ್ ಗ್ಲಾಸ್ ಹೌಸ್'ಗೆ!! ಮುಂಬೈನ ಅತ್ಯಂತ ರಿಚ್ ಮ್ಯಾರೇಜ್ ಹಾಲ್! ಅದೇ ಮ್ಯಾರೇಜ್ ಹಾಲ್‌ನಲ್ಲಿ ಮುಂದಿನ ವಾರ ಮಾನ್ವಿ ಮತ್ತೆ ಹರ್ಷನ ಮದುವೆ ಫಿಕ್ಸ್ ಆಗಿರೋದು. ನೀವು ಅದನ್ನ ನಿಲ್ಲಿಸಿ ನಿಮ್ಮ ಹರ್ಷನ್ನ ನೀವು ಪಡಿಬೇಕು ಪರಿ.. ನಿಮ್ಮ ಮತ್ತೆ ಮಾನ್ವಿ ಮಧ್ಯೆ ಯಾಕೆ ಜಗಳ ಆಗಿತ್ತೋ ನನಗೊತ್ತಿಲ್ಲ ಆದರೆ ಅದರ ಪರಿಣಾಮ ಹರ್ಷ ಮತ್ತವನ ಕುಟುಂಬದ ಮೇಲೆ ಆಗದೆ ಇರಲಿ ಅನ್ನೋದಷ್ಟೆ ನನ್ನಾಸೆ.. ಹರ್ಷ ಮತ್ತೆ ಮೊದಲಿನಂತಾಗಬೇಕು. ಅವರ ಮನೆಗೆ ಹೋಗಬೇಕು. ಮಾನ್ವಿಗೆ ತನ್ನ ತಪ್ಪು ಮನವರಿಕೆ ಆಗೋ ಹಾಗೆ ಮಾಡಬೇಕು ಪರಿ... ನಾವೆಲ್ಲರೂ ನಿಮ್ಮ ಜೊತೆ ಇದ್ದಿವಿ.. ವಿಷ್ ಯು ಆಲ್ ದಿ ವೆರಿ ಬೆಸ್ಟ್!! " ಮಿಥಾಲಿ ಸಹ ಪರಿಗೆ ಧೈರ್ಯ ನೀಡಿ ಶುಭ ಕೋರಿದಳು..
"ಥ್ಯಾಂಕ್ಯೂ.. ಮಿಥಾಲಿ ಆ್ಯಂಡ್ ವಿವೇಕ್.. ಥ್ಯಾಂಕ್ಯೂ ಸೋ ಮಚ್" ಪರಿ ಧನ್ಯವಾದ ತಿಳಿಸಿದಳು.
"ನನಗೆ ಥ್ಯಾಂಕ್ಸ್ ಹೇಳಲೇ ಇಲ್ಲ.." ಪ್ರಸನ್ನ ರೇಗಿಸಿದ್ದ.
"ನೀವು ನನಗೊಸ್ಕರ ಬಂದಿಲ್ವಲ್ಲ. ನಿಮ್ಮ ಸ್ವೀಟಿಗೊಸ್ಕರ ತಾನೇ ಬಂದಿರೋದು.. ಅವಳೇ ಹೇಳ್ತಾಳೆ" ಪರಿ ಮರುರೇಗಿಸಿದಳು.
"ಅದು ನಿಜಾನೇ... ಇರ್ಲಿ ಇರ್ಲಿ.. ಮುಂದೆ ವಿಚಾರಿಸ್ಕೊತಿನಿ. ಎನ್ನುತ್ತಾ ಐಸ್ ಕ್ರೀಂ ಚಪ್ಪರಿಸಿದ ಪ್ರಸನ್ನ. ಮಿಥಾಲಿಯನ್ನು ಡ್ರಾಪ್ ಮಾಡಲು ವಿವೇಕ್ ಗೆ ಹೇಳಿದ ಪ್ರಸನ್ನ. ನಾಲ್ವರು ಪರಸ್ಪರ ಫೋನ್ ನಂಬರ್ ವಿನಿಮಯಿಸಿಕೊಂಡರು. ಮರುದಿನ ಮತ್ತೆ ಭೇಟಿಯಾಗುವ ಸ್ಥಳ ಮತ್ತು ಸಮಯವನ್ನು ನಿರ್ಧರಿಸಿದರು. ವಿವೇಕ್ ಮತ್ತು ಮಿಥಾಲಿ ಅಲ್ಲಿಂದ ಹೊರಟ ನಂತರ ಪ್ರಸನ್ನ ಮತ್ತು ಪರಿಧಿ ಮಾತನಾಡುತ್ತಾ ತಮ್ಮ ಹೋಟೆಲ್ ರೂಮಿನತ್ತ ಹೆಜ್ಜೆ ಹಾಕಿದ್ದರು. ರಸ್ತೆಯ ತುಂಬಾ ವಾಹನಗಳ ದಟ್ಟ ಓಡಾಟ. ಫುಟ್ಪಾತ್ ಮೇಲೆ ನಡೆದು ಒಂದು ನಿರ್ಜನ ರಸ್ತೆಗೆ ಬಂದಿದ್ದರು ಇಬ್ಬರೂ. ನಿರ್ಭಯವಾದ ಆಗಸ. ತಣ್ಣಗೆ ಸುಳಿಯುವ ಗಾಳಿ. ದೂರ ತೀರದಲ್ಲಿ ಕೇಳಿಸುವ ಸಮುದ್ರದ ಭೋರ್ಗರೆತ. ಪರಿ ಹಿತವಾದ ಮೌನವನ್ನು ಸೀಳಿ ಮಾತಿಗಿಳಿದಳು. "ಪ್ರಸನ್ನ... ನಿಮಗೆ ಈ ಪ್ರೀತಿ ನಂಬಿಕೆ ಅನ್ನೋ ವಿಚಾರದಲ್ಲಿ ಎಳ್ಳಷ್ಟು ನಂಬಿಕೆ ಇಲ್ಲ ಅಲ್ವಾ. ಆದ್ರೂ ನನ್ನ ಧೈರ್ಯಕ್ಕಾಗಿ ಆ ರೀತಿ ಮಾತಾಡಿದ್ರಿ ಅಲ್ವಾ.."
"ಏನೋ.. ನಿಮ್ಮ ಮುಖ ನೋಡಿ ಹೇಳ್ಬೆಕು ಅನ್ನಿಸ್ತು ಹೇಳಿದೆ. ನಾನು ತುಂಬಾ ಪ್ರ್ಯಾಕ್ಟಿಕಲ್ ಮನುಷ್ಯ. ಕಣ್ಣಿಗೆ ಕಾಣದಿರೋ ದೇವರು ಭೂತ ಹೇಗೋ.. ನನ್ನ ಪ್ರಕಾರ ಪ್ರೀತಿ ಪ್ರೇಮ ಅನ್ನೋದು ಹಾಗೆನೇ.. ಮಣ್ಣಂಗಟ್ಟಿ. ಇದೇ ಅಂದ್ರೆ ಇದೆ. ಇಲ್ಲಾಂದ್ರೆ ಇಲ್ಲ."
"ಈಗ ಹೀಗೆ ಹೇಳ್ತಿದಿರಾ.. ನಿಮಗೂ ಒಂದಿನ ಯಾರ ಮೇಲಾದ್ರೂ ಸತ್ತು ಹೋಗುವಷ್ಟು ಪ್ರೀತಿ ಹುಟ್ಟುತ್ತಲ್ವಾ.. ಆಗ ಗೊತ್ತಾಗುತ್ತೆ ಪ್ರೀತಿ ಅಂದರೆ ಏನೂಂತ.." ಪರಿ ಛೇಡಿಸಿದಳು.
"ನಾನು ಹಾಗೆ ಸತ್ತೋಗ್ತಿನಿ ಬೇಕಾದ್ರೆ.. ಯಾರಿಗೋಸ್ಕರನೋ ಸಾಯೋ ಕರ್ಮ ನನಗ್ ಬೇಡ ಬಿಡಿ. ಪರಿ.. ಮಿಥಾಲಿ ಮಾತು ಕೇಳಿ ನಿಮಗೊಂದು ವಿಷಯ ಅರ್ಥ ಆಯ್ತಾ..?" ಪ್ರಸನ್ನ ಕೇಳಿದ.
"ಯಾವ ವಿಷಯದ ಬಗ್ಗೆ ಕೇಳ್ತಿದಿರಾ.. ಪ್ರಸನ್ನ" ಚಳಿಗೆ ತನ್ನೆರಡು ಕೈಗಳನ್ನು ಗಟ್ಟಿಯಾಗಿ ಉಜ್ಜಿಕೊಳ್ಳುತ್ತ ಕೇಳಿದಳು ಪರಿ.
"ಅದೇ ಹರ್ಷ ಫೋನ್‌ಲ್ಲಿ ಹೇಳಿದ ಜೀವಂತ ಗೊಂಬೆ ಸರ್ಪ್ರೈಜ್ ಏನು ಅಂತ ಗೊತ್ತಾಯ್ತಾ??" ಕಾಲಿನಿಂದ ಕಲ್ಲನ್ನು ಚಿಮ್ಮುತ್ತ ಕೇಳಿದ ಪ್ರಸನ್ನ.
"ಹ್ಮ್.. ಜೀವಂತ ಗೊಂಬೆ.. ಅದು ಮಾನ್ವಿ!! ಹರ್ಷ ಅವತ್ತು ಅವಳನ್ನ ಹೊಡೆದಿದ್ದಕ್ಕೆ, ಅವಳು ನನ್ನ ಜೊತೆ ಜಗಳಾಡಿದ್ದಕ್ಕೆ ಲೈಫ್‌ನಲ್ಲಿ ಫರ್ಸ್ಟ್ ಟೈಮ್ ನಾನು ನನ್ನ ಹರ್ಷನ ಮೇಲೆ ಕೋಪಿಸಿಕೊಂಡು ಎರಡು ದಿನ ಅವನೊಂದಿಗೆ ಮಾತುಬಿಟ್ಟಿದ್ದೆ. ಅವನು ಏನೇ ಸಮಾಧಾನ ಮಾಡಿದ್ರೂ ನಾನು ಕೇಳಿರ್ಲಿಲ್ಲ. ಕೊನೆಗೆ ಹರ್ಷ ನನಗೆ ಪ್ರಾಮಿಸ್ ಮಾಡಿದ್ದ 'ನಿನ್ನ ಫ್ರೆಂಡ್‌ನಾ ಒಂದಿನಾ ಸಮಾಧಾನ ಮಾಡಿ ನಿಮ್ಮಿಬರ ಫ್ರೆಂಡ್ ಶಿಪ್ ಸರಿ ಮಾಡ್ತಿನಿ ನೋಡ್ತಿರು ಅಂತ..' ಅದಕ್ಕೆ ಮಾನ್ವಿನಾ ಒಪ್ಪಿಸಿ ತನ್ನ ಜೊತೆ ಕರ್ಕೊಂಡು ಬರೋಣ ಅನ್ಕೊಂಡಿದಾನೆ. ಆದರೆ ಮಾನ್ವಿ.... ಅವಳು ಮಾತು ಅರ್ಧಕ್ಕೆ ನಿಲ್ಲಿಸಿ ಎನೋ ಯೋಚಿಸಿದಳು. "ನಾನು ಹರ್ಷ ಯಾಕೆ ಬರಲಿಲ್ಲವೆಂದು ಏರ್ಪೋರ್ಟ್ ಹೋದಾಗ ಪ್ಯಾಸೆಂಜರ್ ಲಿಸ್ಟ್ ನಾ ಸರಿಯಾಗಿ ನೋಡಬೇಕಿತ್ತು ಪ್ರಸನ್ನ. ಮಾನ್ವಿ ಕೂಡ ಬರೋ ವಿಷಯ ಅವತ್ತೇ ಗೊತ್ತಾಗ್ತಿತ್ತು. ಹರ್ಷ ಇಷ್ಟು ದಿನ ನಮ್ಮಿಂದ ದೂರ ಇರ್ತಿರ್ಲಿಲ್ಲ.. " ತನಗೆ ತಾನೇ ಪಶ್ಚಾತ್ತಾಪ ಪಟ್ಟಳು ಪರಿ.
"ಒಂದುವೇಳೆ ಮಾನ್ವಿ ನಿಜವಾಗಲೂ ಹರ್ಷನ್ನ ಪ್ರೀತಿಸ್ತಿದ್ರೆ..ಆಗ ನಿಮ್ಮ ನಿರ್ಧಾರ ಏನು??" ಭಾರವಾದ ಪ್ರಶ್ನೆಯನ್ನು ಎತ್ತಿಹಾಕಿದ ಪ್ರಸನ್ನ ಓರೆ ನೋಟದಲ್ಲಿ ಅವಳನ್ನು ಗಮನಿಸಿದ. ಅವಳ ಮುಖ ಗಂಭೀರವಾಗಿ, ಮುಂದೆ ಹೆಜ್ಜೆ ಕಿತ್ತದೆ ನಿಂತಲ್ಲೇ ಶಿಲೆಯಂತೆ ನಿಂತು ಬಿಟ್ಟಳು. ಪ್ರಸನ್ನ ತಪ್ಪು ಮಾತಾಡಿದೆ ಎಂಬಂತೆ ನಾಲಿಗೆ ಕಚ್ಚಿ ಮುಷ್ಟಿಯಿಂದ ಹಣೆ ಚಚ್ಚಿಕೊಳ್ಳುತ್ತ "ಅವಳು ಪ್ರೀತಿಸಿದ್ರೆ ಆಗೋಯ್ತಾ.. ಹರ್ಷ ಕೂಡ ಅವಳನ್ನ ಪ್ರೀತಿಸ್ಬೇಕಲ್ವಾ.. ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ ಅಲ್ವಾ ಪರಿ.." ತನ್ನ ಮಾತಿಗೆ ತಾನೇ ತೇಪೆ ಹಾಕಿದ.
ಆದರೆ ಪರಿಯ ಮನಸ್ಸಿನಲ್ಲಿ ಶುರುವಾದ ಕೋಲಾಹಲ ನಿಲ್ಲಲಿಲ್ಲ. ಒಂದು ವೇಳೆ ಮಾನ್ವಿ ನಿಜವಾಗಿಯೂ ಹರ್ಷನ್ನ ಪ್ರೀತಿಸ್ತಿದ್ರೆ.. ಅದೇ ಪ್ರಶ್ನೆ ಅವಳಿಗೆ ಪ್ರತಿಧ್ವನಿಸುತ್ತಿತ್ತು. ಅವಳ ಮೊದಲ ಪ್ರೀತಿ ದೂರಾಗಲು ನಾನೇ ಕಾರಣ ಅಂದುಕೊಂಡಿದ್ದಾಳೆ. ಈಗ ಮತ್ತದೇ ಸನ್ನಿವೇಶ ಮರುಕಳಿಸುತ್ತಾ? ಅಥವಾ ಈ ಬಾರಿ ಅವಳ ಪ್ರೀತಿ ಅವಳಿಗೆ ಸಿಗುವಂತೆ ಮಾಡಬೇಕಾ?? ಮಾನ್ವಿನ ಮತ್ತದೇ ಸ್ಥಿತಿಯಲ್ಲಿ ಕೈ ಬಿಡಬೇಕಾ? ಹರ್ಷ ನಿನ್ನ ಮನಸ್ಸಲ್ಲಿ ಏನಿದೆಯೋ.. ನನಗೆ ನಿನ್ನ ಸಂತೋಷ ಮುಖ್ಯ ಕಣೋ.. ನಿನ್ನ ನಿರ್ಧಾರಾನೇ ನನ್ನ ನಿರ್ಧಾರ.. ಆದರೆ ಅದಕ್ಕೂ ಮೊದಲು ನೀನು ಸರಿ ಹೋಗಬೇಕು ಕಣೋ.. ಮೊದಲಿನಂತೆ ನಗಬೇಕು, ನಗಿಸಬೇಕು, ಚೇಷ್ಟೆ ತುಂಟತನ ತುಂಬಿದ ಆ ಹರ್ಷ ಆಗಬೇಕು. ಮನಸ್ಸು ಪರಿಯೊಂದಿಗೆ ಮಾತಿಗಿಳಿದಿತ್ತು. ಪರಿ ತನ್ನ ಕೈಯಲ್ಲಿನ ಉಂಗುರವನ್ನು ಗಟ್ಟಿಯಾಗಿ ಎದೆಗವಚಿಕೊಂಡಳು.
ಮುಂದುವರೆಯುವುದು....
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ