ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-22


                            M.R HOSPITAL

"ಭಾರತದ ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಅತ್ಯಂತ ಹೆಚ್ಚು ಪ್ರಖ್ಯಾತಿಯನ್ನು ಗಳಿಸಿದಂತಹ ಆಸ್ಪತ್ರೆ. ದೇಶದ ಟಾಪ್ ಫೈವ್ ಹಾಸ್ಪಿಟಲ್ ‌ಗಳಲ್ಲಿ ಇದೂ ಒಂದು. ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ವರ್ಗ ಮೀಟರ್ ವಿಸ್ತಾರವಾದ ಬೃಹತ್ ಪ್ರಮಾಣದ ಇಪ್ಪತ್ತೈದು ಅಂತಸ್ತಿನ ಆಸ್ಪತ್ರೆ. ಇಲ್ಲಿ 5000 ಬೆಡ್ ಫೆಸಿಲಿಟಿ ಇವೆ. ಮಲ್ಟಿ ಸ್ಪೆಷಲ್ ಟ್ರೀಟ್‌ಮೆಂಟ್ ಪ್ರೋವೈಡ್ ಆಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಮೇಲಿನ ಅಂತಸ್ತಲ್ಲಿ ಹೆಲಿಪ್ಯಾಡ್ ಕೂಡ ಇದೆ. ಇಲ್ಲಿ ಮೆಡಿಕಲ್ ರಿಸರ್ಚ್ ಸೆಂಟರ್, ಶಿಕ್ಷಣ ಸಂಸ್ಥೆಗಳು, ಹಾಗೂ ಟ್ರೇನಿಂಗ್ ಸೆಂಟರ್‌ಗಳು ಕೂಡ ಇವೆ. ನಮ್ಮ ಆಸ್ಪತ್ರೆಯು 24 ಮೆಡಿಕಲ್ ಮತ್ತು ಪ್ಯಾರಾ ಮೆಡಿಕಲ್ ಶಾಖೆಗಳನ್ನು ಸಹ ಒಳಗೊಂಡಿದೆ. ಇದರಲ್ಲಿ 8 ವಿಭಾಗಗಳು ರಾಷ್ಟ್ರೀಯ ಪ್ರಮುಖ ವಿಷಯಗಳನ್ನು ಗಮನಿಸುತ್ತವೆ, ಮತ್ತು  ಹದಿನೈದು ಇತರೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತವೆ.  ಅವು ರಾಷ್ಟ್ರೀಯ ಆರೋಗ್ಯ ಕೇಂದ್ರದಿಂದ ಸನ್ಮಾನಿತಗೊಂಡಿರುವಂತವು. ಇದರ ಡೈರೆಕ್ಟರ್ ರಘುನಂದನ್ ರೈ ಸರ್! ಮತ್ತೆ ಕೆಲವು ದೊಡ್ಡ ರಾಜಕಾರಣಿಗಳು, ಬ್ಯುಸಿನೆಸ್ ಅಡ್ಮಿನಿಸ್ಟ್ರೇಟರ್ಸ್ ಇದರ ಬೋರ್ಡ್ ಮೆಂಬರ್ಸ್! ಅನುಭವಸ್ಥ ವೈದ್ಯರು,  ಎಲ್ಲಾ ರೀತಿಯ ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ಆಸ್ಪತ್ರೆ. ಹೀಗಾಗಿ ಬಿಲ್ ಕೂಡ ಲಕ್ಷದ ಲೆಕ್ಕದಲ್ಲಿ.. ಇದರಿಂದಾಗಿ ತುಂಬಾ ಶ್ರೀಮಂತ ವರ್ಗದವರಿಗೆ ಮಾತ್ರ ಈ ಆಸ್ಪತ್ರೆ ಮೀಸಲು ಅನ್ನಿಸುತ್ತೆ " ಆಸ್ಪತ್ರೆಯ ಕಾಂಪೌಂಡ್‌ನಿಂದ ಹತ್ತು ಹೆಜ್ಜೆ ದೂರದಲ್ಲಿರುವಾಗ ಪ್ರಸನ್ನನಿಗೆ ಮಿಥಾಲಿ ತಮ್ಮ ಆಸ್ಪತ್ರೆಯನ್ನು ತೋರಿಸುತ್ತ ಅದರ ಬಗ್ಗೆ ಮಾಹಿತಿ ನೀಡುತ್ತಿದ್ದಳು.

ಆಸ್ಪತ್ರೆಯನ್ನು ಅಡಿಯಿಂದ ಮುಗಿಲವರೆಗೂ ತಲೆಯೆತ್ತಿ ನೋಡಿದ ಪ್ರಸನ್ನ "ಹ್ಮ್... ಮೇಲ್ನೋಟಕ್ಕೆ ಎಲ್ಲಾ ಶ್ರೀಮಂತಿಕೆ, ಮಾಡೋ ಕೆಲಸ ಮಾತ್ರ ಮಣ್ಣು ತಿನ್ನುವಂತಹದ್ದು.." ತಿರಸ್ಕಾರದಿಂದ ನುಡಿದಿದ್ದ.

"ನೋ ಪ್ರಸನ್ನ. ನಮ್ಮ ಆಸ್ಪತ್ರೆ ತುಂಬಾ ಪ್ರಾಮಾಣಿಕವಾಗಿ, ಇಲ್ಲಿಯ ನುರಿತ ಪ್ರೋಫೆಸರ್ಸ್, ಡಾಕ್ಟರ್ಸ್ ಮತ್ತು ಒಳ್ಳೆಯ ಕೆಲಸಗಾರರ ಪರಿಶ್ರಮದಿಂದ ಹೆಸರು ಗಳಿಸಿ ಮೇಲೆ ಬಂದಿರುವಂತದ್ದು. ರಘುನಂದನ್ ಸರ್ ಕೂಡ ಅಷ್ಟೇ, ತುಂಬಾ ಪ್ರಾಮಾಣಿಕ ಹಾಗೂ ಸಮಯಕ್ಕೆ ಬೆಲೆ ಕೊಡುವಂತಹ ವ್ಯಕ್ತಿ. ಒಳ್ಳೆಯ ಕೆಲಸಕ್ಕೆ ಎಲ್ಲರಿಗೂ ಪ್ರೋತ್ಸಾಹ ನೀಡ್ತಾರೆ. ಕೆಲಸದವರು, ಹೆಚ್ಚು ಕಡಿಮೆ, ಮೇಲು ಕೀಳು ಅನ್ನೋ ಭೇದ ಭಾವ ಇಲ್ಲ. ಅವರ ಕಷ್ಟಕ್ಕೆ ನೆರವಾಗ್ತಾರೆ. ಸಂಬಳ, ಬಡ್ತಿ, ವಿಷಯದಲ್ಲಿ ತುಂಬಾ ಧಾರಾಳತನ. ಇಲ್ಲಿ ಬರೋ ಪ್ರತಿಯೊಬ್ಬರನ್ನೂ ಗೌರವದಿಂದ ಕಾಣೋ ವ್ಯಕ್ತಿ. ಆದರೆ ಅವರ ಒಂದೇ ಒಂದು ವಿಕ್ನೆಸ್ ಮಾನ್ವಿ..!! ಮಗಳ ಪ್ರೀತಿ ಮುಂದೆ ಬೇರೆ ಏನು ಯೋಚನೆ ಮಾಡಲ್ಲ. ಅದು ಯಾರೇ ಆಗಿರಲಿ, ಏನೇ ಆಗಿರಲಿ, ಅವಳು ಹೇಳಿದ್ದನ್ನ ಚಾಚು ತಪ್ಪದೆ ಕೇಳ್ತಾರೆ. ಒಟ್ಟಾರೆ ಅವಳು ಸಂತೋಷವಾಗಿರಬೇಕು.. ಇದೊಂದು ವಿಚಾರದಲ್ಲಿ ಸ್ವಾರ್ಥಿ ಎನ್ನಬಹುದು. ಹರ್ಷನ ಒಂದು ಕೇಸ್ ಬಿಟ್ಟು ಈ ಆಸ್ಪತ್ರೆಯಲ್ಲಿ ಬೇರೆ ಯಾವ ರೀತಿಯ ಅವ್ಯವಹಾರಗಳಾಗಲಿ, ಅನ್ಯಾಯವಾಗಲಿ ಇದುವರೆಗೂ ನಡೆದಿಲ್ಲ. ಮಾನ್ವಿಯ ಒಂದು ದುಡುಕು ನಿರ್ಧಾರದಿಂದ ಇಡೀ ಸಂಸ್ಥೆಗೆ ಕೆಟ್ಟ ಹೆಸರು.." ಮಿಥಾಲಿ ತಮ್ಮ ಆಸ್ಪತ್ರೆಯ ಹೆಗ್ಗಳಿಕೆ ಬಗ್ಗೆ ಹೆಮ್ಮೆಯಿಂದ ಹೇಳಿ ಮಾನ್ವಿಯ ಕೃತ್ಯಕ್ಕೆ ಬೇಸರಿಸಿಕೊಂಡಳು.
ಅದು ಬಿಡಿ. ಬಂದ ಕೆಲಸದ ಬಗ್ಗೆ ಯೋಚಿಸೋಣ. ಈಗ ಒಳಗೆ ಹೋದ ತಕ್ಷಣ ಎಂಟರೆನ್ಸ್‌ನಲ್ಲೇ ಮೂರು ಸಿಸಿ ಕ್ಯಾಮರಾ ಇವೆ. ನೀವು ಸಿಕ್ಕಿ ಹಾಕಿಕೊಂಡರೆ, ನನಗೂ ಫಜೀತಿ ತಪ್ಪಿದ್ದಲ್ಲ. ಯಾವುದಕ್ಕೂ ನೀವು ಈ ಡಾಕ್ಟರ್ ಕೋರ್ಟ್ ಮತ್ತೆ ಈ ಪೊಲ್ಯುಷನ್ ಮಾಸ್ಕ್ ಹಾಕ್ಕೊಳ್ಳೋದು ಒಳ್ಳೆಯದು. " ಎಂದು ತನ್ನ ಕೈಯಲ್ಲಿದ್ದ ಡಾಕ್ಟರ್ ಕೋರ್ಟ್, ಪೊಲ್ಯುಷನ್ ಮಾಸ್ಕ್ ಕೊಟ್ಟಳು ಮಿಥಾಲಿ.

"ನಾನು ನನ್ನ ಡ್ಯೂಟಿ ಮಾಡೋವಾಗಲೇ ಕೋಟ್ ಹಾಕಲ್ಲ. ಈವಾಗ ಹಾಕಬೇಕಾ??" ಪ್ರಸನ್ನ ಆಲಸ್ಯದಿಂದ ನೋಡಿದ.

"ಹ್ಮ್... ನಿಮ್ಮ ಬಗ್ಗೆ ಪೇಪರ್‌ಗಳಲ್ಲಿ ಕೆಲವು ಆರ್ಟಿಕಲ್ಸ್ ಓದಿದ್ದೆ, ಒಂದಿಷ್ಟು ಹೊಗಳಿಕೆ, ಮತ್ತೊಂದಷ್ಟು.. ಬೇಡ ಬಿಡಿ. ಆದರೆ ನೀವು ಟಾಪ್ ಡಾಕ್ಟರ್ ಅನ್ನೋದನ್ನ ಮರೆಯೋಕಾಗಲ್ಲ. ನಿಮ್ಮ ಆಸ್ಪತ್ರೆಯಲ್ಲಿ ನೀವು ಹೇಗಾದ್ರೂ ಇರಿ. ಆದರೆ ನೀವಿಲ್ಲಿಗೆ ಬಂದಿರೋದು ಪಾರ್ಟಿ ಮಾಡೊದಕ್ಕಲ್ಲ,, ಯಾರಿಗೂ ಗೊತ್ತಾಗದಂತೆ ಕಂಪ್ಯೂಟರ್ ನಿಂದ ಡಾಟಾ ಕಳ್ಳತನ ಮಾಡೋಕೆ. ಇದೂ ಒಂದು ರೀತಿಯ ಕ್ರೈಂ ತಾನೇ? ಸಿಕ್ಕಿ ಬೀಳಬಾರದು. ಅದಕ್ಕೆ ಈ ಮುನ್ನೆಚ್ಚರಿಕೆ ಕ್ರಮ.." ಮಿಥಾಲಿ ಕೊಂಚ ರೇಗಿದಳು.

"ಪರ್ಫೆಕ್ಟ್ ಕ್ರೈಂ ಮಾಡೋದ್ರಲ್ಲೂ ಈಗ ಹುಡುಗಿಯರದೇ ಮೇಲುಗೈ..!!" ಪ್ರಸನ್ನ ತಮಾಷೆ ಮಾಡುತ್ತ ಕೋಟ್ ಭುಜಕ್ಕೆರೆಸಿದ.

"ವಾಟ್ ಡು ಯು ಮೀನ್..? ನಾನು ಕ್ರಿಮಿನಲ್ ಅಂತಾನಾ??" ಮಿಥಾಲಿ ಕೋಪದಿಂದ ದುರುಗುಟ್ಟಿದಳು. ಅವಳ ಉರಿನೋಟ ಕಂಡು,  ಬಂದ ಕೆಲಸ ಕೆಟ್ಟಿತೆಂದುಕೊಂಡು ನಾಲಿಗೆ ಕಚ್ಚಿದ ಪ್ರಸನ್ನ.

"ನಾನು ಮಾನ್ವಿನ ದೃಷ್ಟಿಯಲ್ಲಿಟ್ಟುಕೊಂಡು ಹೇಳಿದ್ದು. ಆದರೆ ನನಗೆ ಇವತ್ತು ಒಂದು ನಿಜ ಗೊತ್ತಾಯ್ತು.. ಇಂಟೆಲಿಜೆನ್ಸ್ ಹುಡುಗಿಯರು ಕೋಪಿಸಿಕೊಂಡಾಗ ಇನ್ನೂ ಮುದ್ದಾಗಿ ಕಾಣ್ತಾರಂತೆ ಎಲ್ಲೋ ಕೇಳಿದ್ದೆ.. ಇವತ್ತು ನಿಮ್ಮನ್ನ ನೋಡಿ ನಿಜ ಅನ್ನಿಸ್ತು.." ಮಾತಿನ ದಾಟಿಯನ್ನೇ ಬದಲಿಸಿದ್ದ ಪ್ರಸನ್ನ. ಅವನ ಹೊಗಳಿಕೆಗೆ ಮಿಥಾಲಿಯ ಮುಖದಲ್ಲಿ ಕಂಡು ಕಾಣದ ಮಂದಹಾಸ ಅರಳಿತು. ಕೆನ್ನೆ ಕೆಂಪಾಯಿತು.

"ಇದೆಲ್ಲ ಡ್ರಾಮಾ ಬೇಡ. ಬನ್ನಿ ಹೋಗೋಣ" ಅವಳು ಮುಂದೆ ಹೋದಳು. ಮಾಸ್ಕ್ ಧರಿಸಿದ ಪ್ರಸನ್ನ ಅವಳಿಂದ ಹತ್ತು ಅಡಿ ಹಿಂದೆಯೇ ನಡೆದು ಹೋದ. ಲಾಬಿಯಲ್ಲಿ ಪ್ರವೇಶಿಸುತ್ತಿದ್ದಂತೆ ಜನದಟ್ಟಣೆ ಅಧಿಕವಾಗಿತ್ತು. ಸುಮಾರು ಜನ ಡಾಕ್ಟರ್ಸ್ ಪೇಷಂಟ್ಸ್ ವರ್ಕರ್ಸ್ ತಿರುಗಾಡುತ್ತಿದ್ದರು. ವೇಟ್ ಮಾಡುತ್ತಿದ್ದರು. ಮಾತನಾಡುತ್ತಿದ್ದರು. ಪ್ರಸನ್ನ ಆಸ್ಪತ್ರೆಯ ಇಂಚಿಂಚನ್ನು ಗಮನಿಸಿದ. ಎಲ್ಲೆಲ್ಲಿ ಕ್ಯಾಮರಾ ಇವೆ. ರಿಸೆಪ್ಷನಿಸ್ಟ್ ಎದುರು ಎಷ್ಟು ಜನ ನಿಂತಿದ್ದಾರೆ. ಎದುರಿದ್ದ ದೊಡ್ಡ ಗಡಿಯಾರ. ಲಿಫ್ಟ್ ಯಾವ ಕಡೆಗಿದೆ? ತಾನು ಮುಂದೆ ಯಾವ ರೀತಿ ಸಮಯ ಸಾಧಿಸಿ ರೆಕಾರ್ಡ್ಸ್ ಕಾಪಿ ಮಾಡಬಹುದು ಎಂಬುದನ್ನು ಮನದಲ್ಲಿ ಲೆಕ್ಕ ಹಾಕುತ್ತ ಸಾಗಿದ.

ಲಿಫ್ಟ್ ನೊಳಗೆ ಹೋಗುತ್ತಿದ್ದಂತೆ ಜೊತೆಯಾದ ಮಿಥಾಲಿ ಆಸ್ಪತ್ರೆಯ ಪ್ರತಿ ವಿಭಾಗವನ್ನು, ಡಾಕ್ಟರ್ ಛೇಂಬರ್, ಡೈರೆಕ್ಟರ್ ಕ್ಯಾಬಿನ್, ರೆಸ್ಟ್ ರೂಂ,  ವಿಸಿಟಿಂಗ್ ಹಾಲ್, ಮೀಟಿಂಗ್ ಹೌಸ್, ಮೇಲಿನ ಲಾಬಿ, ರಿಸರ್ಚ್ ಲ್ಯಾಬ್ ಎಲ್ಲವನ್ನೂ ಮಾಹಿತಿ ಸಮೇತ ತೋರಿಸುತ್ತಿದ್ದಳು. ಮಾರ್ಚುರಿ ಡೌನ್ ಫ್ಲೋರ್ ನಲ್ಲಿದೆಯೆಂದು ತಿಳಿಸಿದಳು. ಎದುರು ಸಿಕ್ಕ ಡಾಕ್ಟರ್ಸ್ ಮತ್ತು ನರ್ಸ್‌ಗಳಿಗೆ ಗುಡ್ ಮಾರ್ನಿಂಗ್ ಎನ್ನುತ್ತ ಅವರ ಮುಂದಿನ ಪ್ರಶ್ನೆಗೆ ಅವಕಾಶ ಕೊಡದಂತೆ ಮುನ್ನಡೆದಿದ್ದಳು. ಹಾಗೆ ಸುತ್ತುವಾಗ ಒಂದು ಫ್ಲೋರ್‌ನಲ್ಲಿ ಕೆಲವು ಬಡ ವರ್ಗದ ಪೇಷಂಟ್‌ಗಳನ್ನು ಕಂಡು "ಶ್ರೀಮಂತರ ಆಸ್ಪತ್ರೆ ಅಂತ ಹೇಳ್ತಿದ್ರಿ, ಮತ್ತೆ ಇವರೆಲ್ಲ.." ಪ್ರಸನ್ನ ಪ್ರಶ್ನಾರ್ಥಕವಾಗಿ ಮಿಥಾಲಿ ಕಡೆಗೆ ನೋಡಿದ.

"ಇದು ಮಾನ್ವಿಯ ಕೃಪೆಯಿಂದ ಆಗಿರೋ ವ್ಯವಸ್ಥೆ. ಬೋರ್ಡ್ ಮೀಟಿಂಗ್ ‌ನಲ್ಲಿ ಅವಳು ತೆಗೆದುಕೊಂಡ ನಿರ್ಧಾರ.. ಆಸ್ಪತ್ರೆಗೆ ಬರುವ ಪ್ರಾಫಿಟ್ ‌ನಲ್ಲಿ ನಲ್ವತ್ತು ಪ್ರತಿಶತದಷ್ಟು ಬಡಜನರ ಆರೋಗ್ಯಕ್ಕೆ ಮೀಸಲು ಎಂದು‌. ಅವರಿಗಾಗಿ ಒಂದು ಪ್ರತ್ಯೇಕವಾದ ವಾರ್ಡ್ ವಿತ್ ಆಲ್ ಫೆಸಿಲಿಟಿ ಲಭಿಸುವಂತೆ ಮಾಡಬೇಕೆಂದು. ಕೆಲವು ಬೋರ್ಡ್ ಮೆಂಬರ್ಸ್ ಇದನ್ನು ವಿರೋಧಿಸಿದರು. ಆದರೆ ರಘುನಂದನ್ ಸರ್ ಮಗಳು ಹೇಳಿದ್ದಕ್ಕೆ ಇಲ್ಲ ಅಂದಿದ್ದು ಇತಿಹಾಸದಲ್ಲೇ ಇಲ್ಲ. ಮಿಕ್ಕವರನ್ನು ಅವರೇ ಒಪ್ಪಿಸಿದರು. ಅವರ ಮಾತಿಗೆ ಎಲ್ಲಾ ಒಪ್ಪಲೇಬೇಕು ಕೂಡ ಅಂತಹ ವ್ಯಕ್ತಿತ್ವ ಅವರದ್ದು. ಆಗಿನಿಂದಲೂ ಇದೊಂದು ಫ್ಲೋರ್‌ನಾ, ಸೋಷಿಯಲ್ ವಾರ್ಡ್ ಎಂದೇ ಕರೆಯಲಾಗುತ್ತೆ. ಇಲ್ಲಿ ಬಡವರಿಗೆ ಉಚಿತವಾಗಿ ಒಂದು ಪೈಸೆ ಖರ್ಚಿಲ್ಲದೆ ಚಿಕಿತ್ಸೆ ನೀಡಲಾಗುತ್ತದೆ. ಮತ್ತೆ ಪ್ರತಿ ತಿಂಗಳ ಕೊನೆಯಲ್ಲಿ ಮೂರು ದಿನ ಫ್ರೀ ಮೆಡಿಕಲ್ ಕ್ಯಾಂಪ್ ಇರುತ್ತೆ. ಎಲ್ಲ ವರ್ಗದವರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತೆ. ಅದರ ಜೊತೆಗೆ ಬ್ಲಡ್ ಡೋನೆಷನ್ ಕ್ಯಾಂಪ್, ಆರ್ಗನ್ ಡೋನೆಷನ್ ಕ್ಯಾಂಪ್ ಕೂಡ ಇರುತ್ತೆ.. ಇದು ಕೂಡ ಮಾನ್ವಿ ದೇವಿ ಕೃಪಾಕಟಾಕ್ಷ.,." ಮಿಥಾಲಿ ನಗುತ್ತ ನುಡಿದಳು. ಇದನ್ನೆಲ್ಲ ಕೇಳಿ ಪ್ರಸನ್ನನಿಗೆ ಮಾನ್ವಿ ಬಗ್ಗೆ ಇದ್ದ ಅಸಮಾಧಾನ ಕೊಂಚ ಮಟ್ಟಿಗೆ ತಣ್ಣಗಾಯಿತು. ಸ್ವಲ್ಪ ಹೆಮ್ಮೆ ಸ್ವಲ್ಪ ಸಿಟ್ಟು ಮನಸ್ಸಲ್ಲೇ ಪೈಪೋಟಿಗಿಳಿದಿತ್ತು. ಮಿಥಾಲಿ ಅವನ ಕಡೆಗೆ ಗಮನಿಸದೆ ಮಾತು ಮುಂದುವರೆಸಿದಳು.. "ಮಾನ್ವಿಗೂ ಒಳ್ಳೆಯ ಮನಸ್ಸಿದೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡೋ ಗುಣವಿದೆ. ಬೇರೆಯವರ ನೋವಿಗೆ ಸ್ಪಂದಿಸ್ತಾಳೆ... " ಎನ್ನುವಾಗ ಪ್ರಸನ್ನ ತಲೆ ಕೊಡವಿ ವ್ಯಂಗ್ಯವಾಗಿ ನಕ್ಕ. ಅದನ್ನು ಗಮನಿಸಿದ ಮಿಥಾಲಿ...

"ನಿಜಾ ಕಣ್ರೀ.. ಮಾನ್ವಿ ನಿಜವಾಗಲೂ ತುಂಬಾ ಒಳ್ಳೆಯವಳು. ಆದರೆ ಹರ್ಷನ ವಿಚಾರದಲ್ಲಿ ಮಾತ್ರ ಯಾಕಿಷ್ಟು ಕ್ರೂರಿಯಾಗಿ ಕಠೋರವಾಗಿ ವರ್ತಿಸ್ತಿದ್ದಾಳೋ ನನಗೊತ್ತಿಲ್ಲ.. ನಿಮಗ್ಗೊತ್ತಾ ಅವಳ ಲೈಫ್‌ನಲ್ಲಿ ಇನ್ನೊಬ್ಬ ಮಿಸ್ಟಿರಿಯಸ್ ವ್ಯಕ್ತಿ ಇದ್ದಾನೆ. ಅದ್ಯಾರನ್ನೋ ಹಿಟ್ಲರ್ ಹಿಟ್ಲರ್ ಅಂತ ಆಗಾಗ ಬೈಕೋತಿರ್ತಾಳೆ. ಒಂದಿನ ತಾನು ಮಾಡಿರೋ ಈ ಎಲ್ಲಾ ಒಳ್ಳೆಯ ಕೆಲಸವನ್ನು ಅವನಿಗೆ ತೋರಿಸಿ, ಅವನಿಂದ ಒಮ್ಮೆ ತಾನು ಕೂಡ ಒಳ್ಳೆಯ ಡಾಕ್ಟರ್ ಅನ್ನಿಸ್ಕೊಬೇಕು ಅನ್ನೋದು ಅವಳಾಸೆಯಂತೆ, ಆ ಹಿಟ್ಲರ್‌ನಂತೂ ಮುಷಾಂಡಿ, ಪಿಷಾಂಡಿ, ರಾಕ್ಷಸ, ಸೈಕೋ, ಗೂಬೆ ಪಿಶಾಚಿ ಅದು ಇದು ಇನ್ನೂ ಏನೇನೋ ಉಗಿತಿದ್ದಳು ಗೊತ್ತಾ‌..." ಮಿಥಾಲಿ ಹೇಳುತ್ತಲೇ ಇದ್ದಳು. ಪ್ರಸನ್ನನಿಗೆ ಈ ರೀತಿಯ ಹೊಗಳಿಕೆಗಳು ಹೊಸದೇನಲ್ಲ. ಯಾವತ್ತೂ ಯಾವುದಕ್ಕೂ ತಲೆ ಕೆಡಿಸಿಕೊಂಡವನಲ್ಲ. ಅತ್ತ ಗಮನಹರಿಸಿದವನೂ ಅಲ್ಲ. ಆದರೆ ಈಗ ಅದೇಕೋ ಅವೆಲ್ಲ ಮಾತುಗಳನ್ನು ಕೇಳಿ ಅಸಮಾಧಾನ ಉಂಟಾಯಿತು..  ಮಾನ್ವಿ ದೃಷ್ಟಿಯಿಂದ ತನ್ನ ಬಗ್ಗೆ ಇನ್ನಷ್ಟು ತಿಳಿಯಬೇಕೆನಿಸಿತು ಅವನಿಗೆ.. "ಹಿಟ್ಲರ್ ಆ.. ಯಾರವನೂ? ಇವಳಿಗೆ ಏನ್ ಮಾಡಿದ್ನಂತೆ?"ಅವನು ಕೇಳಿದ.

"ಹಿಟ್ಲರ್ ಅಂದ್ರೆ ಮಾನ್ವಿಯ ಸಿನೀಯರ್ ರೆಸಿಡೆಂಟ್ಂತೆ. ಹೆಸರೇನೋ ಗೊತ್ತಿಲ್ಲ! ಇವಳು ಮಾಡಿದ ಚಿಕ್ಕ ತಪ್ಪಿಗೆ ಹಾಸ್ಪಿಟಲ್ ನಿಂದಾನೇ ರೆಸ್ಟಿಗೇಟ್ ಮಾಡಿದ್ನಂತೆ. ಅದಕ್ಕೆ ಅವಳು ಯುಎಸ್‌ಗೆ ಹೋಗಿದ್ದಂತೆ, ಅದರಿಂದ ಅವಳ ಇಡೀ ಜೀವನಾನೇ ಹಾಳಾಯ್ತಂತೆ, ತನ್ನ ಫ್ರೆಂಡ್ಸ್ ಎಲ್ಲರೂ ದೂರವಾದ್ರಂತೆ, ತನ್ನ ಬೆಸ್ಟ್ ಫ್ರೆಂಡ್ ಕೂಡ ಬದಲಾಗಿ ಬಿಟ್ಟಳಂತೆ, ಏನೋ, ಒಗಟೋಗಟಾಗಿ ಹೇಳ್ತಿದ್ದಳು. ಅದಕ್ಕೆ ಅವನ ಮೇಲೆ ಇನ್ನೂ ಕೋಪ ಇದೆ ಅವಳಿಗೆ. ಆ ಹಿಟ್ಲರ್ ಯಾರೋ? ಏನೋ? ಎಂತವನೋ? ಇಷ್ಟಕ್ಕೆಲ್ಲ ಪರ್ಯಾಯವಾಗಿ ಅವನೇ ಕಾರಣ ಅನ್ನಿಸುತ್ತಲ್ವಾ.. ನಾನ್ಸೆನ್ಸ್! ಅವತ್ತು ಅವನು ರೆಸ್ಟಿಗೇಟ್ ಮಾಡದೇ ಇದ್ರೆ ಇವತ್ತು ಇಷ್ಟೆಲ್ಲಾ ಅನಾಹುತ ನಡಿತಿರ್ಲಿಲ್ವೆನೊ..! ಚಿಕ್ಕ ಪುಟ್ಟ ತಪ್ಪಿಗೆ ರೆಸ್ಟಿಗೇಟ್ ಮಾಡ್ಬಿಡೋದಾ? ಸೀನಿಯರ್ ಅನ್ನೋ ದುರಹಂಕಾರ ಅವನಿಗೆ! ಒಮ್ಮೆ ನನಗೆ ಸಿಗಬೇಕಿತ್ತು ಆ ಸೀನಿಯರ್. ಸರ್ಯಾಗಿ ಕ್ಲಾಸ್ ತಗೋತಿದ್ದೆ.." ಮಿಥಾಲಿ ತುಸು ಕೋಪದಿಂದ ಕೈಗೆ ಕೈ ಗುದ್ದಿಕೊಂಡಳು.

ಮಾನ್ವಿಯ ಚಿಕ್ಕ ತಪ್ಪು ಏನೆಂದು ಹೇಳಿ, ಆ ಸೀನಿಯರ್ ತಾನೇ, ಏನಿವಾಗ? ಎನ್ನಬೇಕೆಂದುಕೊಂಡ ಪ್ರಸನ್ನ ಸದ್ಯಕ್ಕೆ ಬಂದ ಕೆಲಸ ಮುಖ್ಯ ಎಂದುಕೊಂಡು ಸುಮ್ಮನಾದ. ಒಂದೇ ಮಾತಲ್ಲಿ ಇಡೀ ಅಪವಾದವನ್ನೇ ತನ್ನ ಮೇಲೆ ಎತ್ತಿ ಹಾಕಿದ ಮಿಥಾಲಿಯನ್ನು ಓರೆ ನೋಟದಲ್ಲಿ ನೋಡಿ ವಿಷಾದದಿಂದ ಸುಮ್ಮನೆ ತಲೆ ಹಾಕಿ ಹೌದೌದು ಎಂದ. ಬಂದ ಕೆಲಸ ಮುಗಿಲಿ ಆಮೇಲೆ ಇವಳನ್ನು ವಿಚಾರಿಸುವಾ ಎಂದುಕೊಂಡು "ಸಿಸಿ ಆಪರೇಟಿಂಗ್ ರೂಮ್ ಎಲ್ಲಿ?" ವಿಷಯವನ್ನು ಬದಲಿಸಿ ಬಂದ ಕೆಲಸದ ಕಡೆಗೆ ಗಮನ ಹರಿಸಿದ.

"23rd ಫ್ಲೋರ್, ಲೆಫ್ಟ್ ಕಾರ್ನರ್." ಆಕೆ ಹೇಳಿದಳು. ತಾನು ಕರೆ ಮಾಡಿದ ತಕ್ಷಣ ರಿಸೆಪ್ಷನಿಸ್ಟನ್ನು ಅಲ್ಲಿಂದ ಹತ್ತು ನಿಮಿಷ ಕರೆದುಕೊಂಡು ಹೋಗುವಂತೆ ಆಜ್ಞಾಪಿಸಿ ಆಕೆಯನ್ನು ಅಲ್ಲಿಂದ ಕಳಿಸಿದ ಪ್ರಸನ್ನ.

ಲಿಫ್ಟ್ ಮೂಲಕ 23rd  ಫ್ಲೋರ್‌ಗೆ ಹೋದ ಪ್ರಸನ್ನ ಸಿಸಿ ಆಪರೇಟಿಂಗ್ ರೂಮ್ ಎದುರು ಬಂದು ನಿಂತ. ಕಾರ್ನರ್ ರೂಂ ಆದ್ದರಿಂದ ಜನರ ಸಂಚಾರ ಇರದೆ ಪ್ರಶಾಂತವಾಗಿತ್ತು. ಅಲ್ಲಿದ್ದ ಮಧ್ಯವಯ್ಯಸ್ಸಿನ ನೀಲಿ ಬಣ್ಣದ ಯುನಿಫಾರ್ಮ್‌ನಲ್ಲಿದ್ದ ಮರಾಠಿ ವ್ಯಕ್ತಿಯನ್ನು ಗಮನಿಸಿದ ಪ್ರಸನ್ನ. ಡಾಕ್ಟರ್ ವೇಶದಲ್ಲಿದ್ದ ಪ್ರಸನ್ನನನ್ನು ನೋಡಿ ಅವನು "ಕಾಯ್ ಡಾಕ್ಟರ್?" ಎಂದು ಕೇಳಿದ.

"ಅಣಿ ಕೇಶವನಾಥ ನಾ?" ನೀವು ಕೇಶವನಾಥ ತಾನೇ ಎಂದು, ಅವನ ಬ್ಯಾಚ್ ಮೇಲಿನ ಹೆಸರು ಗಮನಿಸಿ ಕೇಳಿದ್ದ ಪ್ರಸನ್ನ.

"ಹ್ಮಾ.. ಡಾಕ್ಟರ್ ಮೀ ಕೇಶವನಾಥ. ಕಾಂಯ್ ಝಾಲ..?" ಆ ವ್ಯಕ್ತಿ ತಾನೇ ಕೇಶವನಾಥ ಎಂದು ಏನು ವಿಷಯವೆಂದು ಕೇಳಿದ.

" ಹ್ಮಾ.. ಆಪಲಾ.. ಡಾ‌. ಮಾನ್ವಿ ತುಮ್ಚಾವರ್ ಓರಡತ್ ಹೋತೆ.  ಜಾ ಆಥಾ" ಹೌದು ನಿಮ್ಮನ್ನೇ ಡಾ.ಮಾನ್ವಿ ಕೂಗ್ತಿದಾರೆ. ಹೋಗಿ ಬೇಗ ಎಂದು ಹೇಳಿದ ಪ್ರಸನ್ನ.

" ಕಾಯ್? ಡಾ.ಮಾನ್ವಿ ಮೇಡಂ..? ಮಾಜಾ? ಕಾ? ಕುಠೆ ಡಾಕ್ಟರ್?" ಏನೂ.. ಡಾ.ಮಾನ್ವಿ ಮೇಡಂ? ನನ್ನನ್ನಾ? ಯಾಕೆ? ಎಲ್ಲಿಗೆ ಡಾಕ್ಟರ್ ಎಂದು ಕೇಳಿದ ಅವನು.

"ಮಲಾ ಮಾಹಿತ ನಾಹೀ. ಫರ್ಸ್ಟ್ ಫ್ಲೋರ್ ಆಪಣ್ ಪಟಕ್‌ನ್ ಜಾ.." ಅದು ನನಗೊತ್ತಿಲ್ಲ. ನೀವು ಬೇಗ ಫರ್ಸ್ಟ್ ಫ್ಲೋರ್‌ಗೆ ಹೋಗಿ ಎಂದು ಅವರನ್ನು ಅವಸರದಿಂದ ಅಲ್ಲಿಂದ ಕಳಿಸಿದ ಪ್ರಸನ್ನ. ಆ ವ್ಯಕ್ತಿ ಗಾಬರಿಯಿಂದ ಏನು ಕಾದಿದೆಯೋ ಎಂದು, ಮತ್ತೊಂದು ಆಲೋಚನೆ ಮಾಡದೆ ಅಲ್ಲಿಂದ ಓಡಿ ಲಿಫ್ಟ್ ನತ್ತ ಹೋಗುತ್ತಲೇ~ ಪ್ರಸನ್ನ ಆಪರೇಟಿಂಗ್ ರೂಂನೊಳಗೆ ಹೊಕ್ಕಿದ್ದ. ತಕ್ಷಣ ಎಲ್ಲಾ ಸಿಸಿ ಕ್ಯಾಮರಾಗಳನ್ನು ಪೌಸ಼್ ಮಾಡಿದ್ದ. ಮತ್ತು ಐದು ನಿಮಿಷಗಳ ಹಿಂದೆ ತಾನು ಒಳಗೆ ಬಂದಿದ್ದ ಕಾರ್ನರ್ ಕ್ಲಿಪ್‌ನ್ನು ಡಿಲೀಟ್ ಮಾಡಿದ. ಮಿಥಾಲಿಗೆ ಕಾಲ್ ಮಾಡಿ ರಿಸೆಪ್ಷನಿಸ್ಟ್ ‌ನ್ನು ಅಲ್ಲಿಂದ ಕರೆದೊಯ್ಯಲು ಸೂಚನೆ ನೀಡಿದ. ರೂಂನಿಂದ ಹೊರ ಬಂದು ಬಾಗಿಲನ್ನು ಭದ್ರ ಪಡಿಸಿ, ಕೀಲಿ ಬಿಗಿದು, ಕೀಯನ್ನು ಪಕ್ಕದಲ್ಲಿದ್ದ ಎರಡನೇ ಹೂವಿನ ಕುಂಡದಲ್ಲಿ ಎಸೆದು. ಏನೂ ನಡೆದೇ ಇಲ್ಲವೆಂಬಂತೆ ದರದರನೆ ಅಲ್ಲಿಂದ ಸಾಗಿ ಲಿಫ್ಟ್ ಮೂಲಕ ಫರ್ಸ್ಟ್ ಫ್ಲೋರ್ ಗೆ ಬಂದಿದ್ದ. ಮಿಥಾಲಿ  ರಿಸೆಪ್ಷನಿಸ್ಟ್ ಜೊತೆ ಮಾತನಾಡುತ್ತ ನಿಂತಿದ್ದನ್ನು ದೂರದಿಂದಲೇ ಕಂಡ. ಮಿಥಾಲಿ ಅವಳನ್ನ ಕರೆದೊಯ್ಯಲು ತುಂಬಾ ದುಂಬಾಲು ಬಿದ್ದಂತಿತ್ತು. ಮೊದಲು ಆಗಲ್ಲವೆನ್ನುತ್ತಿದ್ದ ರಿಸೆಪ್ಷನಿಸ್ಟ್ ತದನಂತರ ಕೆಲವು ಜನರಿಗೆ ಫಾರ್ಮ್ ಕೊಟ್ಟು ತುಂಬಲು ಹೇಳಿ ಕೂತ ಜಾಗದಿಂದ ಎದ್ದು ಕೌಂಟರ್‌ನಿಂದ ಹೊರಬಂದಳು. ಮಿಥಾಲಿ ಅವಳನ್ನ ಕರೆದುಕೊಂಡು ಕ್ಯಾಂಟಿನ್‌ ಕಡೆಗೆ ಹೊರಟಳು. ಹಿಂದಿನಿಂದ ಪ್ರಸನ್ನನಿಗೆ ಆಲ್ ದ ಬೆಸ್ಟ್ ಎಂದೂ, ಕೇವಲ ಹತ್ತು ನಿಮಿಷ ಎಂದು ಕೈ ಮಾಡಿದ್ದಳು.

ಅವರತ್ತ ಹೋಗುತ್ತಲೇ ಪ್ರಸನ್ನ ರಿಸೆಪ್ಷನಿಸ್ಟ್ ಜಾಗಕ್ಕೆ ಹೋಗಿ ಕುಳಿತಿದ್ದ. ನೋಡುವವರ ದೃಷ್ಟಿಯಲ್ಲಿ ಅವನು ಅಲ್ಲಿಯ ಒಬ್ಬ ಡಾಕ್ಟರ್ ಆದ್ದರಿಂದ ಯಾರು ಆ ಕಡೆಗೆ ಗಮನ ಹರಿಸಲಿಲ್ಲ.
ಗಡಿಯಾರ ನೋಡಿದ ಗಂಟೆ10:38.

ಬೇಗ ರೆಕಾರ್ಡ್ಸ್ ನೋಡಲು ಕಂಪ್ಯೂಟರ್ ಆನ್ ಮಾಡುತ್ತಿದ್ದಂತೆ ಅದು ಎಂಟರ್ ದಿ ಪಾಸ್‌ವರ್ಡ್ ಎಂದು ಕೇಳಿತು. ಪ್ರಸನ್ನನಿಗೆ ಪೇಚಿಗಿಟ್ಟಿತು. ತನಗೆ ತೋಚಿದ ಒಂದೆರಡು ಪಾಸ್ವರ್ಡ್ ಹಾಕಿ ನೋಡಿದ. ಪ್ರಯೋಜನವಾಗಲಿಲ್ಲ. ಟೆನ್ಷನ್‌ನಿಂದ ಕಂಪ್ಯೂಟರ್ ಎತ್ತಿ ಬಿಸಾಕುವಂತೆನಿಸಿತು. ಸಮಯ ನೋಡಿದ 10:44. ಬೆವರಿಳಿದ ಹಣೆ ಉಜ್ಜಿಕೊಂಡ. ಕೈ ಮೇಜಿಗೆ ಗುದ್ದುತ್ತಲೇ ಇದ್ದ. ಕೊನೆಗೆ ಮಿಥಾಲಿಗೆ ಒಂದು ಮೆಸೆಜ್ ಹಾಕಿದ.
"What's the password?"
ಅವಳು ಮೆಸೇಜ್ ನೋಡುತ್ತಾಳೊ ಇಲ್ಲವೋ ಎನ್ನುವ ಟೆನ್ಷನ್ ಒಂದು ಕಡೆಯಾದರೆ, ಅವಳಿಗಾದ್ರೂ ಪಾಸ್ವರ್ಡ್ ಗೊತ್ತಿದೆಯಾ? ಎಂಬುದು ಮತ್ತೊಂದು ಟೆನ್ಷನ್! ಯಾರಾದ್ರೂ ಬಂದರೆ? ಎಂಬ ಟೆನ್ಷನ್ ಜೊತೆಗೆ ಓಡುವ ಸಮಯದೊಂದಿಗೆ ಎದೆಬಡಿತ ಜೋರಾಗಿತ್ತು. ಕೆಲನಿಮಿಷಗಳಲ್ಲಿ ಆಕೆಯಿಂದ ಮೆಸೇಜ್ ಬಂದಿತು.

"Manvi' alphabetical code" ಆಕೆಯ ಪ್ರತ್ಯುತ್ತರ.

ನೇರವಾಗಿ ಪಾಸ್ವರ್ಡ್ ಹೇಳೋದು ಬಿಟ್ಟು ಇದು ಬೇರೆ ಎಂದು ರೇಗುತ್ತ ಪಾಸ್ವರ್ಡ್ ಹಾಕಿದ ಪ್ರಸನ್ನ.
13114229

ಸಿಸ್ಟಮ್ ಆನ್ ಆಯಿತು. ಪೇಷಂಟ್ಸ್ ಹಳೆಯ ರೆಕಾರ್ಡ್ಸ್‌ಗಳನ್ನು ಸರ್ಚ್ ಮಾಡಿದ. ಕಳೆದ ವರ್ಷದ ಜೂನ್ ತಿಂಗಳ ಲೇಡ್ಜರ್ ತೆಗೆದು ಹರ್ಷನ ರಿಪೋರ್ಟ್ ಹುಡುಕುತ್ತಿದ್ದ. ಅಷ್ಟರಲ್ಲಿ ಒಬ್ಬ ಮಹಿಳೆ ಫಾರ್ಮ್ ಹಿಡಿದು ಕೌಂಟರ್ ಎದುರು ಬಂದು ನಿಂತಳು. ಆ ಮಹಿಳೆಗೆ ಐದು ನಿಮಿಷ ಕಾಯಲು ಹೇಳಿದ ಪ್ರಸನ್ನ. ಹಾಗೆ ಸುತ್ತಲೂ ಕಣ್ಣಾಡಿದ. ಸಿಸಿ ಆಪರೇಟರ್ ಕೇಶವನಾಥ ಉಗ್ರ ಕೋಪದಿಂದ ಲಿಫ್ಟ್ ಕಡೆಗೆ ಓಡುತ್ತಿರುವುದನ್ನು ಕಂಡ. ಅವನು ಆಪರೇಟಿಂಗ್ ರೂಂ ಸೇರುವ ಮೊದಲೇ ತನ್ನ ಕಾರ್ಯ ಮುಗಿಸಬೇಕೆಂದು ಮತ್ತೆ ಅವಸರದಲ್ಲಿ ಕಂಪ್ಯೂಟರ್ ನಲ್ಲಿ ರೆಕಾರ್ಡ್ಸ್ ಹುಡುಕಾಟದಲ್ಲಿ ತೊಡಗಿದ. ಟೆನ್ಷನ್‌ ಹೆಚ್ಚಾಗಿ ಎಲ್ಲ ಫೈಲ್‌ಗಳ ಮಧ್ಯೆ ಹರ್ಷನ ರಿಪೋರ್ಟ್ ಹುಡುಕುವುದು ಕಷ್ಟವಾಯಿತು. ಆದದ್ದಾಗಲಿ ಎಂದು ಜೂನ್ ತಿಂಗಳ ಎಲ್ಲಾ ರೆಕಾರ್ಡ್ಸ್ ಗಳನ್ನು ತನ್ನ ಪೆನ್‌ಡ್ರೈವ್ ಗೆ ಕಾಪಿ ಮಾಡಲು ನಿರ್ಧರಿಸಿದ. ಫೈಲ್ ಕಾಪಿಯಾಗುತ್ತಿರುವಾಗ ಮಿಥಾಲಿ ಕಡೆಯಿಂದ ಸಂದೇಶ ಬಂದಿತು.
"Is it done?? We are coming back.."

ಪ್ರಸನ್ನನ ಹೃದಯದ ಬಡಿತ ಅವನಿಗೆ ಕೇಳಿಸುವಷ್ಟು ಜೋರಾಯಿತು. ಆತಂಕದಿಂದ ಮೊಬೈಲ್ ನಲ್ಲಿ ಟೈಪ್ ಮಾಡಿ ಕಳಿಸಿದ
"Noooo.. Wait.."

"But our Coffee is over.. "

90% ಫೈಲ್ ಕಾಪಿಯಾಗಿತ್ತು. ಇನ್ನೂ ಕೆಲವೇ ನಿಮಿಷಗಳ ಅವಶ್ಯಕತೆ ಇತ್ತು. ಆತಂಕ ಮತ್ತು ಒತ್ತಡದಿಂದಾಗಿ ಪ್ರಸನ್ನನ ಮುಂಗೈ ಬೆವರಿತ್ತು. ಸಿಡಿಮಿಡಿಯಾಗಿ ಮತ್ತೆ ಮೆಸೇಜ್ ಮಾಡಿದ.
"Then try some poison!! 😣"

"🙄😒"

"😋😄 sorry..."

ಕೊನೆಯ ಮೆಸೇಜ್ ಕಳಿಸುವ ಹೊತ್ತಿಗೆ ಫೈಲ್ ಸಂಪೂರ್ಣ ಕಾಪಿಯಾಗಿತ್ತು. ಕಂಪ್ಯೂಟರ್ ಆಫ್ ಮಾಡುವುದಷ್ಟೇ ಬಾಕಿಯಿತ್ತು. ಅವರಿಬ್ಬರೂ ಕ್ಯಾಂಟೀನ್ ದಾರಿಯಲ್ಲಿ ಬರುವುದನ್ನು ದೂರದಿಂದ ನೋಡಿದ ಪ್ರಸನ್ನ ಕುರ್ಚಿಯಿಂದ ಕೆಳಗಿಳಿದು, ಕಂಪ್ಯೂಟರ್ ಆಫ್ ಮಾಡಲು ಬಗ್ಗಿ ಕೆಳಗೆ ಕುಳಿತ. ಅವನು ಬಗ್ಗಿ ಕೂರುವುದನ್ನು ಕಂಡ ಮಿಥಾಲಿ ರಿಸೆಪ್ಷನಿಸ್ಟ್ ಸ್ವಾತಿಗೆ ಬೇರೆ ಕಡೆಗೆ ಕೈ ಮಾಡಿ ತೋರಿಸುತ್ತ ಏನೋ ಹೇಳುತ್ತಿದ್ದಳು. ಇದೇ ಸಮಯ ಸಾಧಿಸಿ ಪ್ರಸನ್ನ ತುರ್ತಾಗಿ ಕಂಪ್ಯೂಟರ್ ಆಫ್‌ ಮಾಡಿ, ತನ್ನ ಪೆನ್‌ಡ್ರೈವ್ ತೆಗೆದುಕೊಂಡು ಜೇಬಿನಲ್ಲಿ ಸಿಕ್ಕಿಸಿ, ಕೌಂಟರ್ ನಿಂದ ಆಚೆ ಬಂದು ಸಾವಧಾನವಾಗಿ ಆಸ್ಪತ್ರೆಯಿಂದ ಹೊರ ನಡೆದಿದ್ದ. ಅದನ್ನು ನೋಡಿದ ಮಿಥಾಲಿ ಉಫ್ ಎಂದು ಧೀರ್ಘ ಉಸಿರು ಬಿಟ್ಟಳು.

ಹೊರಗೆ ಬಂದ ಪ್ರಸನ್ನ ಜನರ ಮಧ್ಯೆ ನುಸುಳಿಕೊಂಡು ಆಸ್ಪತ್ರೆಯಿಂದ ತುಂಬಾ ದೂರ ನಡೆದು ಬಂದು ರಸ್ತೆಯ ಪಕ್ಕದ ಬೆಂಚಿನ ಮೇಲೆ ಧರಿಸಿದ್ದ ಮಾಸ್ಕ್ ಮತ್ತು ಕೋಟ್‌ನ್ನು ಬಿಚ್ಚಿ ಎಸೆದು ಎದುಸಿರು ಬಿಡುತ್ತ ಕುಳಿತ. ಕೆಲವು ಕ್ಷಣ ಹಿಂದಕ್ಕೊರಗಿ ಸಾವರಿಸಿಕೊಂಡ. ಜೇಬಿನಿಂದ ಪೆನ್‌ಡ್ರೈವ್ ಮತ್ತು ಮೊಬೈಲ್ ಹೊರತೆಗೆದು, ಪೆನ್‌ಡ್ರೈವ್ ನ್ನು ತನ್ನ ಮೊಬೈಲ್ ಗೆ ಕನೆಕ್ಟ್ ಮಾಡಿ ಆತುರದಿಂದ ಹರ್ಷನ ರಿಪೋರ್ಟ್ ನೋಡಲು ಮುಂದಾದ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಮಿಥಾಲಿ ಅವನ ಮುಖ ತುಂಬಾ ಗಂಭೀರವಾಗಿದ್ದನ್ನು ಕಂಡು,
"ಹರ್ಷನ ರಿಪೋರ್ಟ್ ನೋಡಿದ್ರಾ? ಎನಿಥಿಂಗ್ ಸಿರಿಯಸ್?" ಎಂದು ಅವನಿಗೆ ಕುಡಿಯಲು ನೀರಿನ ಬಾಟಲ್ ಕೊಡುತ್ತ ಕೇಳಿದಳು.

"ಆಪರೇಷನ್ ಸಕ್ಸೆಸ್ ಬಟ್ ಪೇಷಂಟ್ ಡೆಡ್" ಆತ ನಿರಾಸೆಯಿಂದ ತಲೆ ಅಲ್ಲಾಡಿಸುತ್ತ ಬಾಟಲ್ ಮುಚ್ಚಳ ತೆಗೆದು ನೀರು ಕುಡಿಯತೊಡಗಿದ.

"ಅಂದ್ರೆ.....? ಫೈಲ್ ಕಾಪಿ ಆಗ್ಲಿಲ್ವಾ?" ಮಿಥಾಲಿ ಪ್ರಶ್ನಾರ್ಹವಾಗಿ ನೋಡಿದಳು.

" ವಿವೇಕ್ ಇಲ್ಲಿಗೆ ಬಂದ ವಿಷಯ ಮಾನ್ವಿಗೆ ಗೊತ್ತಾಗಿದೆ!" ಅವಳ ಪ್ರಶ್ನೆಗೆ ಕಿವಿಗೊಡದೆ ಸ್ವಗತವಾಗಿ ಹೇಳಿಕೊಂಡ ಪ್ರಸನ್ನ.

"ನೋ ವೇ...  ಮಾನ್ವಿಗೆ ಗೊತ್ತಾಗೋಕೆ ಸಾಧ್ಯನೇ ಇಲ್ಲ. ಅವರೆಲ್ಲರೂ ತಮ್ಮ ಮನೆ ದೇವರ ಪೂಜೆಗೆ ಮಂಗಳೂರಿಗೆ ಹೋಗಿದ್ರು ಆದಿನ."

"ಡಾ.ಮಿಥಾಲಿ, ಫೈಲ್ ಏನೋ ಕಾಪಿಯಾಗಿದೆ. ಜೂನ್ ತಿಂಗಳ ಎಲ್ಲಾ ರೆಕಾರ್ಡ್ಸ್ ಅದರಲ್ಲಿವೆ. ದಿನಾಂಕ ಅನುಸರಿಸಿ ನೋಡುತ್ತ ಹದಿಮೂರನೇ ತಾರೀಖಿನ ರೆಕಾರ್ಡ್ಸ್ ಚೆಕ್ ಮಾಡಿದೆ. 12ನೇ ತಾರೀಖಿನ ನಂತರ 14, 15, 16....ರ ರೆಕಾರ್ಡ್ಸ್ ಗಳು ಇವೆ ಹೊರತು, ಹರ್ಷನ ಆಪರೇಷನ್ ಡಿಟೇಲ್ಸ್ ಯಾವುದೂ ಸಿಗಲೇ ಇಲ್ಲ" ಪ್ರಸನ್ನ ತನ್ನ ಮೊಬೈಲ್ ಅವಳ ಕೈಗಿಟ್ಟ.
"ಐಮ್ ಶ್ಯೂರ್. ಮಾನ್ವಿಗೆ ವಿಷಯ ಗೊತ್ತಾಗಿದೆ. ಅದ್ಕೆ ಹರ್ಷನ ಆ್ಯಕ್ಸಿಡೆಂಟ್ ನಡೆದ ದಿನದ ಎಲ್ಲಾ ರೆಕಾರ್ಡ್ಸ್ ಡಿಲೀಟ್ ಮಾಡ್ಸಿದಾಳೆ" ಪ್ರಸನ್ನನ ನೋಟ ಶ್ಯೂನ್ಯವಾಗಿತ್ತು. ಮಿಥಾಲಿ ಸಹ ನಿರಾಸೆಯಿಂದ ಹಣೆಗೆ ಕೈ ಹಚ್ಚಿ ಕುಳಿತು ಬಿಟ್ಟಳು.
"ಹಾಗಾದರೆ ಈಗ ಸಂಕಲ್ಪ್ ನೇ ಹರ್ಷ ಅಂತ ಪ್ರೂವ್ ಮಾಡೋದು ಹೇಗೆ?" ಮಿಥಾಲಿ ಕೇಳಿದಳು.

"ಇನ್ನೊಂದು ದಾರಿಯಿದೆ..!! ಪ್ರತಿ ಹಾಸ್ಪಿಟಲ್ ನವರು ಫೈನಾನ್ಸಿಯಲ್ ಸ್ಟೇಟ್ ಮೆಂಟ್ ಗೋಸ್ಕರ ಅರ್ಲಿ ರೆಕಾರ್ಡ್ಸ್‌ಗಳನ್ನ ಮೆಂಟೇನ್ ಮಾಡ್ತಾರೆ. ಆ ರೆಕಾರ್ಡ್ಸ್ ನಿಂದ ರಿಪೋರ್ಟ್ ಡಿಲಿಟ್ ಮಾಡೋಕೆ ಸಾಧ್ಯಾನೇ ಇಲ್ಲ ಯಾಕಂದ್ರೆ ಬೋರ್ಡ್ ಮೆಂಬರ್ಸ್ ಗಳಿಗೆ ಮತ್ತೆ ಸರ್ಕಾರಕ್ಕೆ ಆಸ್ಪತ್ರೆಯ ಲೆಕ್ಕಪತ್ರ, ಹಣಕಾಸಿನ ಸರಿಯಾದ ಮಾಹಿತಿ ನೀಡಬೇಕಾಗುತ್ತದೆ. ನಾವು ಆ ರೆಕಾರ್ಡ್ಸ್ ಹುಡುಕಿದ್ರೆ..." ಪ್ರಸನ್ನನ ಮಾತಿನ ಮಧ್ಯೆ ಬಾಯಿ ಹಾಕಿದ ಮಿಥಾಲಿ..

"ನೋ ವೇ ಡಾ.ಪ್ರಸನ್ನ... ಆ ರೆಕಾರ್ಡ್ಸ್ ಎಲ್ಲಾ ರಘುನಂದನ್ ಸರ್ ಕ್ಯಾಬಿನ್ ನಲ್ಲಿವೆ. ನೀವೇ ನೋಡಿದಿರಲ್ಲ, ಅವರ ಕ್ಯಾಬಿನ್ ಸುತ್ತಲೂ ಇರುವ ಸೆಕ್ಯೂರಿಟಿ ಹೇಗಿದೆಯಂತ.. ಅವರು ತಿಂಗಳಿಗೊಮ್ಮೆ ಮಾತ್ರ ಹಾಸ್ಪಿಟಲ್ ಗೆ ಭೇಟಿ ಕೊಡೊದು. ಎಲ್ಲಾ ರೆಕಾರ್ಡ್ಸ್ ಸ್ಟೇಟ್ ಮೆಂಟ್ಸ್ , ಚೆಕ್ ಮಾಡೊದು. ಆದರೂ ಹಾಸ್ಪಿಟಲ್ ನಲ್ಲಿ ಒಂದು ಚಿಕ್ಕ ವ್ಯತ್ಯಾಸ ನಡೆದ್ರೂ ಅವರ ಗಮನಕ್ಕೆ ಬರದೇ ಇರಲ್ಲ. ಅಂತ ಹದ್ದಿನ ಕಣ್ಣು ಅವರದ್ದು. ಅದೂ ಅಲ್ಲದೇ ಅವರ ಕ್ಯಾಬಿನ್ ಡೋರ್ ಗೆ ಫಿಂಗರ್ ಲಾಕ್ ಇದೆ. ಅವರ ಥಂಬ್ ಇಂಪ್ರೆಷನ್ ಇಲ್ಲದೆ ಬಾಗಿಲೇ ತೆರೆಯಲ್ಲ. ಇನ್ನೂ ಒಳಗಡೆ ಸಿಸ್ಟಮ್ ಯಾವ ರೀತಿ ಇದೆಯೋ ಐ ಡೊಂಟ್ ನೊ.. ಒಟ್ಟಾರೆ ಇದು ಆಗದೆ ಇರೋ ಮಾತು!!" ಮಿಥಾಲಿ ಗಾಬರಿಯಿಂದ ಎದುಸಿರಲ್ಲಿ ಹೇಳಿದಳು.

"ಸಂಕಲ್ಪ್ ಆಗಿರೋ ಹರ್ಷನ್ನ,, ಹರ್ಷ ಅಂತ ಪ್ರೂವ್ ಮಾಡೋದಕ್ಕೆ ನಮಗಿರೋ ಆಧಾರ ಅದೊಂದೇ. ಬೈ ಹುಕ್ ಆರ್ ಕ್ರುಕ್ ನಾನು ಅದನ್ನ ಪಡೆದುಕೊಳ್ಳಲೇ ಬೇಕು. ಅದು ನನಗೆ ಬಿಟ್ಟ ವಿಷಯ ನೀವಿನ್ನು ಹೊರಡಿ ಡಾ.ಮಿಥಾಲಿ. ಥ್ಯಾಂಕ್ಯೂ ನಿಮ್ಮ ಸಹಾಯಕ್ಕೆ.." ಪ್ರಸನ್ನ ಮಾತು ಮುಗಿಸಿದ.

"ಸಹಾಯ ಏನಿಲ್ಲ. ಮಾಡಿರೋ ತಪ್ಪಿಗೆ ಪ್ರಾಯಶ್ಚಿತ್ತ ಅಷ್ಟೇ!! ನಿಮಗೆ ಬೇರೆ ಏನೇ ಮಾಹಿತಿ ಬೇಕಿದ್ರೂ ನನಗೆ ಕಾಲ್ ಮಾಡಿ. ಒಕೆ. ನಾನಿನ್ನು ಹೊರಡ್ತೆನೆ" ಎಂದು ಕೈ ಕುಲುಕಿ ಅಲ್ಲಿಂದ ಹೊರಟು ಹೋದಳು ಮಿಥಾಲಿ.

ಮಾನ್ವಿಗೆ ವಿವೇಕ್ ಬಂದು ಹೋದ ವಿಷಯ ಗೊತ್ತಾಗಿದೆ ಅಂದಮೇಲೆ ಅವನ ಬಗ್ಗೆ ಎಲ್ಲಾ ವಿಷಯಾನೂ ಗೊತ್ತಾಗಿದೆಯಾ? ವಿವೇಕ್ ನನ್ನ ಫ್ರೆಂಡ್ ಅನ್ನೋದು? ನಾವಿಲ್ಲಿಗೆ ಬಂದಿದ್ದು? ಒಂದು ವೇಳೆ ಗೊತ್ತಾಗಿದ್ರೆ ಮದುವೆಗೆ ಹರ್ಷನ ಜೊತೆ ಬಂದಿರ್ತಾಳಾ? ಪರಿ ಅದೇನ್ ಹೊಸ ಅವಾಂತರ ಮಾಡಿಕೊಂಡು ಬರ್ತಾರೋ? ಆಲೋಚನೆಗಳೊಂದಿಗೆ ಪರಿಗೆ ಫೋನ್ ಮಾಡಿದ ಪ್ರಸನ್ನ.

"ಒಂದು ಚಿಕ್ಕ ಯಡವಟ್ಟಾಗೋಯ್ತು ಮಗಾ.." ಪರಿಯ ಮೊಬೈಲ್ ರಿಸೀವ್ ಮಾಡಿದ ವಿವೇಕ್ ನುಡಿದಿದ್ದ.

"ಏನಾಯ್ತು?" ಪ್ರಸನ್ನ ಗಾಬರಿಯಿಂದ ಎದ್ದು ನಿಂತ.

"ನಾನು ಕಾರ್ ಪಾರ್ಕ್ ಮಾಡುವಷ್ಟರಲ್ಲಿ ಪರಿಯವ್ರು ಒಳಗೆ ಹೊರಟೋಗಿದ್ದಾರೆ. ಮೊಬೈಲ್ ಬೇರೆ ಕಾರಲ್ಲೇ ಬಿಟ್ಟು ಹೋಗಿದ್ರು. ಕೊಡೋಣಾ ಅಂತ ತಗೊಂಡು ಹಿಂದೆ ಹೋದೆ. ಆದರೆ ಸೆಕ್ಯೂರಿಟಿ ಯವನು ಇನ್ವಿಟೇಷನ್ ಇರದೆ ಒಳಗೆ ಬಿಡಲ್ಲ ಅಂತಿದಾನೆ. ಇರೋ ಒಂದು ಇನ್ವಿಟೇಷನ್ ನಾ ಪರಿಯವರು ತಗೊಂಡು ಒಳಗೆ ಹೋಗಿದ್ದಾರೆ. ಕಾಲ್ ಮಾಡೋಣ ಅಂದ್ರೆ ಫೋನ್ ಕೂಡ ನನ್ನ ಕೈಯಲ್ಲೇ ಇದೆ. ನಾ  ಹೇಗೆ ಒಳಗ್ ಹೋಗೋದು ಈಗ??" ಫೋನ್‌ಲ್ಲಿ ವಿವೇಕ್ ಕೇಳಿದ.

ಮೊದಲೇ ಕೆಲಸ ನೆರವೇರದೆ ನಿರಾಸೆ ಹತಾಶೆಯಿಂದ ಕುಳಿತಿದ್ದ ಪ್ರಸನ್ನ ಅವನ ಮಾತುಗಳನ್ನು ಕೇಳಿ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಕ್ಕೆ ರಪ್ ಎಂದು ಕೈ ಮುಖಕ್ಕೆ ಬಡಿದುಕೊಂಡು ತಲೆ ಕೊಡವಿದ. "ನೀನು ಒಳಗೆ ಹೋಗಿ ಮಾಡೋ ಘನಂದಾರಿ ಕೆಲಸನಾದ್ರೂ ಏನಿದೆ. ಅವರು ಬರೋವರೆಗೂ ಅಲ್ಲೆ ಸಾಯ್.."
" ನಿನಗೂ, ಪರಿಗೂ, ಮತ್ತೆ ಮೊಬೈಲ್ ಗೂ ಜನ್ಮ ಜನ್ಮಗಳ ಏನೋ ಸಂಬಂಧ ಇರೋ ಹಾಗಿದೆ. ಪ್ರತಿಸಲ ಮೊಬೈಲ್‌ನಿಂದನೇ ಏನೋ ಒಂದು ಗೊಂದಲ ಶುರುವಾಗತ್ತೆ."

"ನೀನು ಪುರಾಣ ಎಲ್ಲಾ ಹೇಳಬೇಡ, ಈಗ ನಾನೇನ್ ಮಾಡ್ಲಿ ಹೇಳು..?"

"ಅವರು ಆಚೆ ಬರೋವರ್ಗೂ ಒಂದು ರೌಂಡ್ ಕೆಲಸ ಮುಗಿಸಿ ಬಾ,, ಇಲ್ಲಾ... ಅಲ್ಲೇ ಕಾರಲ್ಲಿ ಕೂತು ಇದೇ ಕಾನ್ಸೆಪ್ಟ್ ಹಾಕಿ ಒಂದ್ ಆ್ಯಡ್ ರೆಡಿ ಮಾಡು.. " ಪ್ರಸನ್ನ ಅಣುಕು ಹೇಳಿದ.

"ಹೌದು, ನೀನು ಹೋದ ಕೆಲಸ ಏನಾಯ್ತು?? ನಿನ್ನ ಅತ್ತಿಗೆನೂ ಇದ್ದಾರಾ ಪಕ್ಕದಲ್ಲಿ??" ವಿವೇಕ್ ಉಲಿದಿದ್ದ.

"ಲೋ.. ಪುಣ್ಯಾತ್ಮ,, ಇರೋ ಒಂದು ಲವ್‌ಸ್ಟೋರಿನೇ ಮುಗಿತಿಲ್ಲ ಇಲ್ಲಿ.. ಮಧ್ಯದಲ್ಲಿ ನಿಂದ್ ಬೇರೆನಾ... ಬೇಡ್ವೋ...". ಹಣೆ ಉಜ್ಜಿಕೊಂಡ ಪ್ರಸನ್ನ " ಇಲ್ಲೊಂದು ಮುಗಿಯಲಾರದ ದೊಡ್ಡ ಸಮಸ್ಯೆ ಎದುರಾಗಿದೆ. ಷರ್ಲಾಕ್ ಹೋಮ್ಸ್‌‌ನೇ ಬರಬೇಕೇನೋ ಇದನ್ನೆಲ್ಲ ಬಗೆಹರಿಸೋಕೆ!! ಅಲ್ಲಿಗೇ ಬಂದು ಹೇಳ್ತೆನೆ ತಾಳ್ ಮಾರಾಯಾ.." ಪ್ರಸನ್ನ ಫೋನ್ ಕಟ್ ಮಾಡಿದ.

ಮುಂದುವರೆಯುವುದು...


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...