PARADISE GLASS HOUSE
ಬೆಳಿಗ್ಗೆ ಪ್ರಸನ್ನ ಮಿಥಾಲಿ ಜೊತೆ ಹಾಸ್ಪಿಟಲ್ ಗೆ ಹೋದಾಗಿನಿಂದ ಹರ್ಷನ ನೆನಪುಗಳಲ್ಲೇ ಮುಳುಗಿ ಮೊಬೈಲ್‌ನಲ್ಲಿನ ಅವನ ಫೋಟೋಗಳನ್ನು ನೋಡುತ್ತ, ವಿವೇಕ್ ಬರುವುದನ್ನೇ ಕಾಯುತ್ತಾ ಹೋಟೆಲ್‌ನ ಲೌಂಜ್ ನಲ್ಲಿ ಕುಳಿತಿದ್ದಳು ಪರಿ. ಹತ್ತು ಗಂಟೆಗೆ ಬರುವುದಾಗಿ ಹೇಳಿದ್ದವನು, ಟ್ರಾಫಿಕ್‌ನಿಂದಾಗಿ ತಡವಾಗಿ ಹತ್ತುವರೆ ಗಂಟೆಗೆ ಅವಳನ್ನ ಕರೆದೊಯ್ಯಲು ಬಂದಿದ್ದ. ಹರ್ಷನ ಭೇಟಿಗಾಗಿ ಬಿಳಿ ಮತ್ತು ತಿಳಿ ಗುಲಾಬಿ ಮಿಶ್ರಿತ ಬಣ್ಣದ ಶಿಫಾನ್ ಸೀರೆಯುಟ್ಟು, ಸರಳವಾಗಿ ಅಲಂಕಾರ ಮಾಡಿಕೊಂಡರೂ ತನ್ನ ಸಹಜತೆಯಿಂದ ಸುಂದರವಾಗಿ ಕಾಣುತ್ತಿದ್ದ ಪರಿಯೆಡೆಗೆ ವಿವೇಕ್ ಮೆಚ್ಚುಗೆಯ ನೋಟ ಬೀರಿದ್ದ. ಅವನಿಗಾಗಿ ಕಾಯುತ್ತಿದ್ದ ಪರಿಗೆ ಅವನು ತಡಮಾಡಿ ಬಂದಿದ್ದಕ್ಕೆ ಕೊಂಚ ಅಸಮಾಧಾನ ಆಗಿತ್ತಾದರೂ ಅದನ್ನು ವ್ಯಕ್ತಪಡಿಸದೆ ಕಾರು ಹತ್ತಿ ಕುಳಿತಿದ್ದಳು. ದಾರಿಯುದ್ದಕ್ಕೂ ಇಬ್ಬರ ಮಧ್ಯೆ ಬರೀ ಮೌನ, ಸ್ಟಿರಿಯೊದಲ್ಲಿ ಗುನುಗುತ್ತಿತ್ತು ಕೈಲಾಶ್ ಖೇರ್‌ರ 'ತೇರಿ ದಿವಾನಿ..' ಗಾನ. ಕೇಳುತ್ತಾ ಮೈಮರೆತವಳ ಮನಸ್ಸಿನ ತುಂಬಾ ಹರ್ಷನ ಭೇಟಿಯಾಗುವ ಘಳಿಗೆಯ ತವಕ ತಲ್ಲಣ.. ಅರ್ಧಗಂಟೆಯಲ್ಲಿ ಕಾರು ಪ್ಯಾರಡೈಸ್ ಗ್ಲಾಸ್ ಹೌಸ್ ಎದುರು ನಿಲ್ಲುತ್ತಿದ್ದಂತೆ ಅವಳೆದೆ ಬಡಿತ ಮಿತಿಮೀರಿತ್ತು. ಮುಖ್ಯ ದ್ವಾರದ ಮುಂದೆ ತನ್ನ ಬ್ಯಾಗ್ ಸಮೇತ ಕೆಳಗಿಳಿದಿದ್ದಳು ಪರಿ.
"ನೀವು ಹೋಗ್ತಾ ಇರಿ. ನಾನು ಕಾರ್ ಪಾರ್ಕ್ ಮಾಡಿ ಬರ್ತಿನಿ" ವಿವೇಕ್ ಹೇಳಿದ. ಅವನ ಮಾತಿಗೆ ತಲೆಯಾಡಿಸಿದ ಪರಿ ಒಳಹೋಗಲು ತಿರುಗಿ ನಿಂತಳು. ಹೆಸರಿಗೆ ತಕ್ಕಂತೆ ಅಕ್ಷರಶಃ ಗುಮ್ಮಟಾಕಾರದ ಗಾಜಿನ ಬೃಹದಾಕಾರದ ಮಹಲು. ಎಲ್ಲಿ ನೋಡಿದರಲ್ಲಿ ಸ್ವರ್ಗವೇ ಧರೆಗಿಳಿದಂತಹ ಭವ್ಯ ವೈಭವದ ಮೆರುಗು. ಅದನ್ನು ಕಣ್ಣಲ್ಲೇ ಸವಿಯುತ್ತ ಗೇಟ್ ಒಳಗಡೆಗೆ ನಡೆದ ಪರಿಧಿಯಿಂದ ಇನ್ವಿಟೇಷನ್ ಕಾರ್ಡ್ ತೆಗೆದುಕೊಂಡ ಸೆಕ್ಯೂರಿಟಿ ಅವಳನ್ನ ಚೆಕಿಂಗ್ ಮಷಿನ್‌ನಿಂದ ಪರಿಶೀಲಿಸಿ ಒಳಗೆ ಹೋಗಲು ಅನುಮತಿ ಸೂಚಿಸಿದ. ಒಳಗೆ ಹೋಗುವಾಗ ರೆಡ್ ಕಾರ್ಪೆಟ್ ಮೇಲೆ ಅವಳಿಡುವ ಒಂದೊಂದು ಹೆಜ್ಜೆಯೂ ಮಿಥಾಲಿಯ ಮಾತುಗಳನ್ನು ನೆನಪಿಸುತ್ತಿತ್ತು. ಹರ್ಷನ ನೆನಪು ಮರಳದಿದ್ದರೆ ಇದೇ ಹಾಲ್‌ನಲ್ಲಿ ಮುಂದಿನ ವಾರ ಹರ್ಷ ಮತ್ತು ಮಾನ್ವಿ ಮದುವೆ!! ಅವಳ ಮೈ ಕಂಪಿಸಿತ್ತು. ಪ್ರೀತಿಯನ್ನು ಕಳೆದುಕೊಳ್ಳುವ ಭಯದಿಂದಲ್ಲ, ದ್ವೇಷ, ಪ್ರತಿಕಾರದ ಕೈಯಲ್ಲಿ ಏನು ಅರಿಯದ ಪ್ರೀತಿ ನಲುಗುತ್ತಿರುವುದಕ್ಕೆ ಮರುಗಿ..
ಮೆಟ್ಟಿಲೇರಿ ಒಳ ಸಾಗುವಾಗ ಸ್ವಾಗತ ಕೋರಿದ ಆಡಂಬರದ ಅಲಂಕಾರ ಮಾಡಿಕೊಂಡ ಸುಂದರ ಯುವತಿಯರು ತಲೆಗೆ ಪನ್ನೀರು ಎರಚಿ, ಕೈಗೊಂದಷ್ಟು ಸುಗಂಧ ದ್ರವ್ಯ ಸವರಿ, ಕೆಂಗುಲಾಬಿ ಹೂವೊಂದನ್ನು ಕೈಯಲ್ಲಿ ಕೊಟ್ಟು ಮುಗುಳ್ನಗುತ್ತ ಎಲ್ಲರನ್ನೂ ಆಮಂತ್ರಿಸುವಂತೆ ಆಕೆಯನ್ನು ಸ್ವಾಗತಿಸಿ ಒಳಗೆ ಕಳುಹಿಸಿದ್ದರು. ಒಳಗೆ ಕಾಲಿಟ್ಟ ಕ್ಷಣ ಭವ್ಯ ಬೆಳಕಿನ ಗಾಜಿನ ಮಹಲು ಫಳಫಳನೆ ಹೊಳೆಯುತ್ತ, ನವರಂಗುಗಳನ್ನು ಪ್ರತಿಫಲಿಸುತ್ತ ತನ್ನೊಳಗೆ ಅವಳನ್ನು ಆಕ್ರಮಿಸಿಕೊಳ್ಳುವಂತೆ ಬೃಹದಾಕಾರವಾಗಿ ಗೋಚರಿಸಿತು. ಪರಿ ಅರೆಕ್ಷಣ ಜಗತ್ತಿನ ಪರಿವಿಲ್ಲದಂತೆ ಮೈಮರೆತು ಬಿಟ್ಟಿದ್ದಳು. ವಿವೇಕ್ ಯಾಕೆ ಬರಲಿಲ್ಲ ಎನ್ನುವದಾಗಲೀ, ತನ್ನ ಮೊಬೈಲ್ ಎಲ್ಲಿ ಎಂದಾಗಲಿ ಯಾವ ಯೋಚನೆಯು ಅವಳತ್ತ ಸುಳಿಯಲಿಲ್ಲ. ಎಡ ಬಲಗಳಲ್ಲಿ ಮಹಡಿ ಏರಲು ಹೂಗಳಿಂದ ಅಲಂಕೃತವಾದ ಮೆಟ್ಟಿಲುಗಳ ಸರಣಿಯಿತ್ತು. ಎದುರಿಗೆ ಬಣ್ಣ ಬಣ್ಣದ ಕಾರಂಜಿಗಳ ಚಿತ್ತಾರದ ನರ್ತನ! ಮೇಲ್ಬಾಗದಲ್ಲಿ ಹೊಳೆಯುವ ಗಾಜಿನ ಬೆಲೆ ಬಾಳುವ ಝೂಮರ್!! ಅಲ್ಲಿಂದ ಮುಂದೆ ಸಾಗಿದಾಗ ವಿಶಾಲವಾದ ಲಾಂಜ್! ಸುತ್ತಲೂ ಅಲ್ಲಲ್ಲಿ ಮದುವೆಗೆ ಬಂದ ಅತಿಥಿಗಳು ಗುಂಪು ಗುಂಪಾಗಿ ನಿಂತು ಮಾತನಾಡುತ್ತಿದ್ದರು. ಪರಿ ಆ ಸಂದಣಿಯಲ್ಲಿ ಹರ್ಷನನ್ನು ಹುಡುಕಿದಳು. ಇಲ್ಲ. ಹರ್ಷ ಮತ್ತು ಮಾನ್ವಿ ಅಲ್ಲೆಲ್ಲೂ ಕಾಣಲಿಲ್ಲ. ತಕ್ಷಣ ಮೇಲಿನ ಅಂತಸ್ತಿಗೆ ಹೋಗಲು ನಿರ್ಧರಿಸಿ ಮೆಟ್ಟಿಲುಗಳ ಬಳಿ ಬಂದಳು. ಮಕ್ಮಲ್ಲಿನ ಕಾರ್ಪೆಟ್ ಮೇಲೆ ಹೆಜ್ಜೆ ಇಡುತ್ತ ಮೇಲೆ ಬರುವಾಗ ಅದೇಕೋ ಹರ್ಷ ತನ್ನನ್ನು ನೋಡುತ್ತಿರುವನೆಂಬ ಭಾವನೆ. ಆಕೆ ಸುತ್ತಮುತ್ತ ಗಮನಿಸಿ ನೋಡಿದಳು. ಇಲ್ಲ ಹರ್ಷ ಎಲ್ಲಿಯೂ ಕಾಣಲಿಲ್ಲ. ಪರಿ ಅದೇ ಸಂಶಯದೊಂದಿಗೆ ಮೇಲೆ ಬಂದಾಗ ಮೇಲಿನ ಅಂತಸ್ತು ಕೆಳಗಿನದ್ದಕ್ಕಿತಲೂ ವೈಭವೋಪೇತವಾಗಿತ್ತು. ಹೂವಿನ ಅಲಂಕರಣ, ಅಮೃತಶಿಲೆಯ ಪ್ರದರ್ಶನ ಮೂರ್ತಿಗಳು, ಅಲ್ಲಲ್ಲಿ ಸಿಂಗರಿಸಿದ ಬಣ್ಣ ಬಣ್ಣದ ವಿವಿಧಾಕಾರದ ಟ್ರಾನ್ಫರೆನ್ಸ್ ಪರದೆಗಳು,, ಹಿನ್ನೆಲೆಯಲ್ಲಿ ಹಿತವಾಗಿ ಗುನುಗುತ್ತಿದ್ದ ಸಿತಾರ್ ವಾದನ.. ನೋಡಲು ಇತಿಹಾಸದ ಯಾವುದೋ ರಾಜ ಅರಮನೆಗೆ ಕಾಲಿಟ್ಟ ಅನುಭವ. ಅಲ್ಲಿ ಎಡಬಲಗಳಲ್ಲಿ ಮತ್ತು ನೇರವಾಗಿ ಮೂರು ಕಡೆಗೂ ದಾರಿ ಕಂಡವು. ಮೇನ್ ಹಾಲ್ ಯಾವ ಕಡೆಗೆಂದು ಆಕೆಗೆ ಗೊತ್ತಾಗಲಿಲ್ಲ.
ಅಲ್ಲಿಯೇ ಪಕ್ಕದಲ್ಲಿದ್ದ ಹುಡುಗಿಯರ ಗುಂಪಿನಲ್ಲಿರುವ ಒಬ್ಬ ಯುವತಿಯನ್ನು ಮಾತನಾಡಿಸಿದಳು ಪರಿ "ಎಕ್ಸ್‌ಕ್ಯೂಸ್ ಮಿ, ಯಂಹಾ ಸೇ ಮೇನ್ ಹಾಲ್ ಕಂಹಾ ಹೈ??"
"ಯಂಹಾ ಸೇ ಸೀದೇ ಜಾಕೆ, ದಾಯೆ.." ಹುಡುಗಿ ಮಧ್ಯದ ದಾರಿ ತೋರಿಸಿ ಹೇಳಿದಳು
"ಕ್ಯಾ,,ಆಪ್ ಜಾನ್ತೆ ಹೈ ಕಿ, ಡಾ.ಮಾನ್ವಿ ಕಂಹಾ ಹೈ?" ಪರಿ ಮತ್ತೆ ಪ್ರಶ್ನಿಸಿದಳು.
"ನಹೀ,, ಶಾಯದ್ ವೋ ಅಭಿ ನಹೀ ಆಯಿ" ಹುಡುಗಿ ಉತ್ತರಿಸಿದಳು.
ಮಾನ್ವಿ ಬಂದಿದ್ದಾಳೋ ಇಲ್ಲವೋ? ಸಂಶಯ ಕಾಡಿತು. ಮಿಥಾಲಿಗೆ ಕೇಳಿ ತಿಳಿಯಲು ಫೋನ್ ತಡಕಾಡಿದಳು. ಆಗ ನೆನಪಾಯಿತು, ಮೊಬೈಲ್ ಮರೆತು ಬಂದ ವಿಷಯ, ವಿವೇಕ್ ಇನ್ನೂ ಒಳಗೇಕೆ ಬಂದಿಲ್ಲವೆಂಬ ವಿಚಾರ. ತನ್ನ ದುಡುಕುತನವನ್ನು ತಾನೇ ಹಳಿದುಕೊಂಡು ಕೆಳಗೆ ಹೋಗಲು ಮೆಟ್ಟಿಲ ಬಳಿ ಬಂದು ಎರಡು ಮೆಟ್ಟಿಲು ಇಳಿಯುವಾಗ ಸ್ಪೀಕರ್ ನಲ್ಲಿ ಅದುವರೆಗೂ ಗುನುಗುತ್ತಿದ್ದ ಸಂಗೀತದ ಶಬ್ದ ನಿಂತು ಹೋಯಿತು. ಸದ್ದು ಗದ್ದಲದ ಗೂಡಾಗಿದ್ದ ಮದುವೆ ಮಂಟಪದಲ್ಲಿ ಏಕಾಏಕಿ ನಿಶ್ಯಬ್ದವೊಂದು ಆವರಿಸಿಕೊಂಡಿತು. ಪರಿಯ ಗಮನಕ್ಕೂ ಅದು ಬಂದಿತ್ತಾದ್ದರೂ ಆಕೆ ಅದರೆಡೆ ಲಕ್ಷ್ಯವಹಿಸದೆ ಕೆಳಗಿಳಿಯುತ್ತಿದ್ದಳು. ಸ್ಪೀಕರ್ ಮತ್ತೆ ಆನ್ ಆಯಿತು. ಈ ಬಾರಿ ಸಿತಾರ್ ಸಂಗೀತದ ಬದಲಾಗಿ ಗೀಟಾರ್‌ನ ತಂತಿಗಳ ಕಂಪನ ಕೇಳಿಸಿತ್ತು. ಪರಿ ಸ್ತಬ್ಧವಾಗಿ ನಿಂತು ಬಿಟ್ಟಳು. ಹರ್ಷ ನುಡಿಸುವ ಪ್ರತಿ ರಾಗವನ್ನು ಬಲ್ಲವಳಿಗೆ, ಅದು ಹರ್ಷನೇ ನುಡಿಸುತ್ತಿದ್ದದ್ದು ಎಂಬುದರಲ್ಲಿ ಯಾವ ಅನುಮಾನವೂ ಇರಲಿಲ್ಲ.. ಆಕೆ ತಕ್ಷಣ ಮತ್ತೆ ಮೆಟ್ಟಿಲೇರಿ ಮೇಲೆ ದೌಡಾಯಿಸಿದಳು. ಎಲ್ಲೆಲ್ಲೂ ಸ್ಪೀಕರ್ ಗಳಲ್ಲಿ ಹರ್ಷನ ಧ್ವನಿ, ಅವನ ಹಾಡು ಪ್ರತಿಧ್ವನಿಸಲು ಆರಂಭಿಸಿತು..
ಲಗ್‌ಜಾ.. ಗಲೇ.. ಕೆ ಫಿರ್ ಎ,, ಹಸೀನ್ ರಾತ್ ಹೋ ನಾ ಹೋ
ಶಾಯದ್.. ಫಿರ್ ಇಸ್ ಜನಮ್ ಮೇ,, ಮುಲಾಕಾತ್ ಹೋ ನಾ ಹೋ....।।
ಅದೆಷ್ಟೋ ಕಾಲದ ನಂತರ ಹರ್ಷನ ಧ್ವನಿ, ಅವನ ಹಾಡು ಕೇಳಿದ ಪರಿಗೆ ಸಂತೋಷದಿಂದ ಕೊರಳು ತುಂಬಿ ಬಂದಿತ್ತು. ಅವಸರಿಸಿ ಓಡುತ್ತಿದ್ದ ಅವಳನ್ನ ನೆರೆದ ಜನಸ್ತೋಮ ವಿಚಿತ್ರವಾಗಿ ನೋಡುತ್ತಿತ್ತು. ಆಕೆಗೆ ಪ್ರಪಂಚದ ಪರಿವಿರಲಿಲ್ಲ. ಹರ್ಷನನ್ನು ಕಾಣುವ ಅದಮ್ಯ ಬಯಕೆ ಕಾತರತೆಗೆ ತಾಳ್ಮೆಯ ಸೂಕ್ಷ್ಮ ಬಂಧನವಿರಲಿಲ್ಲ. ಅವಳು ಎದುಸಿರು ಬಿಡುತ್ತ ನೇರವಾಗಿ ಸಾಗಿ ಎಡಗಡೆಗೆ ತಿರುಗಿ ಗಾಜಿನ ಗುಮ್ಮಟದ ಹಾಲ್ ಎದುರಿಗೆ ಬಂದು ನಿಂತಿದ್ದಳು. ಗ್ಲಾಸ್ ಹೌಸ್‌ನ ಒಳಗೆ ಮಂಟಪದ ವೇದಿಕೆ ಮೇಲೆ ಹರ್ಷ ಗಿಟಾರ್ ಹಿಡಿದು ನುಡಿಸುತ್ತಿದ್ದ. ಇವಳ ಕಣ್ಣ ತುಂಬಾ ಅವನ ಬಿಂಬ. ಮರೆಯಲಾಗದ ಬಂಧವೊಂದು ಮತ್ತೆ ತಳುಕು ಹಾಕಿಕೊಳ್ಳುವ ಶುಭಘಳಿಗೆ. ಅವನನ್ನು ನೋಡುತ್ತಿದ್ದ ಪರಿ ಮೈ ಮರೆತಿದ್ದಳು. ಮನಸ್ಸಲ್ಲೇ ಸಾವಿರ ಕನಸುಗಳು ಕೈಗೂಡಿದಂತಹ ಸಂಭ್ರಮ. ಹರ್ಷನನ್ನು ಕಂಡ ಹರ್ಷಕ್ಕೆ ಭಾವ ವಿವಶವಾಗಿತ್ತು. ಕಂಗಳು ಭಾಷ್ಪಾವೃತವಾಗಿತ್ತು. ಮಧ್ಯಂತರ ಸಂಗೀತದ ನಂತರ ಹರ್ಷನ ಹಾಡು ಮುಂದುವರಿದಿತ್ತು...
ಹಮ್ಕೋ ಮಿಲೀ ಹೈ,, ಆಜ್ ಎ ಘಡಿಯಾ,, ನಸೀಬ್ ಸೇ..
ಝೀ ಭರ್‌ಕೆ ದೇಖ್ ಲಿಜಿಯೇ,, ಹಮ್ಕೋ ಕರೀಬ್ ಸೇ..
ಫಿರ್ ಆಪ್..ಕೆ ನಸೀಬ್ ಮೇ,, ಎ ಬಾತ್ ಹೋ ನಾ ಹೋ..
ಶಾಯದ್.. ಫಿರ್ ಇಸ್ ಜನಮ್ ಮೇ,, ಮುಲಾಕಾತ್ ಹೋ ನಾ ಹೋ..।
ಲಗ್ ಜಾ... ಗಲೇ... ಕೇ ಫಿರ್ ಎ, ಹಸೀನ್ ರಾತ್ ಹೋ ನಾ ಹೋ..
ಶಾಯದ್.. ಫಿರ್ ಇಸ್ ಜನಮ್ ಮೇ,, ಮುಲಾಕಾತ್ ಹೋ ನಾ ಹೋ..।।
ಹರ್ಷ ಪ್ರತಿಸಾಲನ್ನು ಹಾಡುವಾಗಲು, ಇವಳತ್ತಲೇ ನೋಡುತ್ತ, ಇವಳಿಗಾಗಿಯೇ ಹಾಡುತ್ತಿರುವಂತೆ ಭಾಸವಾಗುತ್ತಿತ್ತು. ಅವನ ಕಂಗಳು ಇವಳನ್ನೇ ಅರಸುತ್ತಿತ್ತಾ?? ಅಥವಾ ಅದು ಈಕೆಯ ಭ್ರಮೆಯಾ? ಸಮಯವಂತೂ ಪರೀಕ್ಷೆಯೊಂದನ್ನು ಸಿದ್ದಪಡಿಸಿತ್ತು. ಪರಿ ಹರ್ಷನನ್ನು ರೆಪ್ಪೆ ಮಿಟುಕಿಸದೆ ತನ್ನ ಭಾವಚಿತ್ತಗಳಲ್ಲೂ ಅವನನ್ನ ತುಂಬಿಸಿಕೊಳ್ಳುತ್ತಿದ್ದಳು. ಅವನ ಮುಖದಲ್ಲಿ ಮೊದಲಿದ್ದ ತುಂಟತನ ಕಾಣಲಿಲ್ಲ. ನಿಸ್ತೇಜ ಕಂಗಳು. ಎಲ್ಲವನ್ನೂ ಕಳೆದುಕೊಂಡ ಶೂನ್ಯ ಭಾವ. ಯಾಂತ್ರಿಕವಾದ ಹುಸಿನಗು. ಗಂಭೀರವಾದ ವದನ. ಗೀಟಾರ್‌ನ ಬಿಗಿ ಹಿಡಿತದಲ್ಲಿ ಏನೋ ಅಸಮಾಧಾನ. ಹಾಡುತ್ತಿದ್ದ ಕೊರಳ ಕಂಪನದಲ್ಲೂ ಯಾವುದೋ ಅಭಾವ, ನೋವು.. ಪ್ರತಿಯೊಂದು ಸೂಕ್ಷವನ್ನು ಪರಿ ಗ್ರಹಿಸಿದ್ದಳು. ಅವನ ಈ ಪರಿಸ್ಥಿತಿಗೆ ಕಾರಣವಾದ ಮಾನ್ವಿ ಮೇಲೆ ಮೊದಲ ಬಾರಿಗೆ ಕೆಂಡದಂತ ಕೋಪ ಬಂದು, ಮುಷ್ಟಿ ಬಿಗಿಯಾಗಿತ್ತು.
ಲಗ್ ಜಾ... ಗಲೇ... ಕೇ ಫಿರ್ ಎ, ಹಸೀನ್ ರಾತ್ ಹೋ ನಾ ಹೋ..
ಶಾಯದ್.. ಫಿರ್ ಇಸ್ ಜನಮ್ ಮೇ,, ಮುಲಾಕಾತ್ ಹೋ ನಾ ಹೋ..।।
ಅವನ ಹಾಡು ಕೇಳಿದ ಈಕೆಗೂ ಅವನನ್ನು ಒಮ್ಮೆ ಜೋರಾಗಿ ಬಿಗಿದಪ್ಪಿ ಮನದ ಭಾವ ಭಾರಗಳಿಂದ ಮುಕ್ತಳಾಗಬೇಕೆನಿಸಿತು. ಪಕ್ಕದಲ್ಲಿದ್ದ ಗ್ಲಾಸ್ ಹೌಸ್ ಒಳಹೋಗುವ ದ್ವಾರದ ಕಡೆಗೆ ಹೋಗಲು ಪರಿಧಿ ಹೆಜ್ಜೆ ಮುಂದಿರಿಸಿದಳು. ಹಿಂದಿನಿಂದ ಯಾರೋ ರಟ್ಟೆ ಹಿಡಿದು ಅವಳನ್ನು ಎಳೆದಂತಾಯಿತು. ಆ ಸ್ಪರ್ಶ ಹೊಸತಲ್ಲ ಅವಳಿಗೆ. ಐದಾರು ವರ್ಷಗಳ ಪರಮಾಪ್ತವಾದ ಸ್ನೇಹದ ಹಿಡಿತ ಅದು ಹೇಗೆ ತಾನೇ ಮರೆಯಲು ಸಾಧ್ಯ!. ಪರಿಯ ರಟ್ಟೆ ಹಿಡಿದುಕೊಂಡು ರಭಸದಿಂದ ಅವಳನ್ನ ಅಲ್ಲಿಂದ ದೂರ ಎಳೆದುಕೊಂಡು ಹೊರಟಿದ್ದ ಕೈಗಳನ್ನು ಬಿಡಿಸಿಕೊಳ್ಳುತ್ತ ಪರಿ ಕೂಗಿದ್ದಳು.. "ಮಾನ್ವಿ... ನನ್ನ ಕೈ ಬಿಡು. ನಾನು ಹರ್ಷನ ಹತ್ರ ಹೋಗ್ಬೇಕು. ಹರ್ಷ ನನ್ನನ್ನು ನೋಡಿ ಕೂಗ್ತಿದ್ದಾನೆ.."
"He can't see you! Because it's one way mirror!!" ಗಂಭೀರ ಧ್ವನಿಯಲ್ಲಿ ಹೇಳಿದ ಮಾನ್ವಿ ಅವಳ ಕೈ ಹಿಡಿದು ಎಳೆದುಕೊಂಡು ದರದರನೆ ನಡೆದಿದ್ದಳು. ಇಷ್ಟು ಹೊತ್ತು ಹರ್ಷ ತನ್ನನ್ನೇ ನೋಡುತ್ತಿದ್ದನೆಂಬ ಪರಿಯ ನಂಬಿಕೆ ಭ್ರಮಾ ನಿರಸನವಾಯಿತು. ಅವಳ ಶಕ್ತಿ ಕುಂದಿದಂತಾಯಿತು. ಪರಿ ಎಷ್ಟೇ ಕೈ ಕೊಸರಿಕೊಂಡರೂ ಮಾನ್ವಿಯ ಆವೇಶದ ಮುಂದೆ ಅವಳ ಪ್ರಯತ್ನ ವ್ಯರ್ಥವಾಗಿತ್ತು.
ಮಾನ್ವಿ ಕೋಪದಿಂದ ಭುಸುಗುಡುತ್ತ ಅವಳ ಕೈ ಎಳೆದುಕೊಂಡು ಸಾಲು ಸಾಲಾಗಿದ್ದ ಡ್ರೆಸಿಂಗ್ ರೂಂ ಗಳಲ್ಲಿ ಯಾವುದೋ ಒಂದು ರೂಂನ ಒಳಗೆ ಕರೆದುಕೊಂಡು ಹೋಗಿ ಬಾಗಿಲು ಭದ್ರಪಡಿಸಿ ಕೈ ಕಟ್ಟಿ ಅವಳೆದುರು ನಿಂತಿದ್ದಳು. ಮಾನ್ವಿ ಅವಳನ್ನು ಒಳಗೆ ತಳ್ಳಿದ ವೇಗಕ್ಕೆ ಪರಿ ಕುಸಿದು ಬೀಳುತ್ತಿದ್ದವಳು ಎದುರಿನ ಡ್ರೆಸಿಂಗ್ ಟೇಬಲ್ ಹಿಡಿದು ಸಾವರಿಸಿಕೊಂಡು ನಿಂತಳು.
"ಮತ್ಯಾಕೆ ಬಂದೆ ನನ್ನ ಬದುಕಲ್ಲಿ..??" ಮಾನ್ವಿಯ ಧ್ವನಿ ಕೋಣೆಯಲ್ಲಿ ಮಾರ್ದನಿಸಿತು. ಸಿಟ್ಟಿನಿಂದ ಆಕೆಯ ಕಣ್ಣು ಕೆಂಪಾಗಿ, ತುಟಿ ಅದರುತ್ತಿತ್ತು.
"ಬರೋ ಉದ್ದೇಶ ಯಾವತ್ತೂ ಇರಲಿಲ್ಲ. ಆದರೆ ನೀನೇ ಬರೋ ಹಾಗೆ ಮಾಡಿದ್ದು, ನನ್ನ ಹರ್ಷನ್ನ ನಿನ್ನ ಬದುಕಿಗೆ ಮೋಸದಿಂದ ಕರೆತಂದು..!" ಪರಿಗೆ ಅವಳೊಂದಿಗೆ ಅಷ್ಟು ಕಠೋರವಾಗಿ ಮಾತನಾಡುವ ಉದ್ದೇಶವಿರಲಿಲ್ಲ. ಆದರೆ ಹರ್ಷನನ್ನು ಕಾಣಬೇಕೆನ್ನುವ ತವಕ, ಅವನ ಸೋತ ಮುಖ, ಮಾನ್ವಿಯಿಂದಾಗಿ ಮನೆಯವರ ವೇದನೆ ಎಲ್ಲವೂ ಅವಳಿಂದ ಆ ಮಾತುಗಳನ್ನಾಡಿಸಿತು.
"ಯಾವ ಹರ್ಷ? ಇಲ್ಲಿ ಹರ್ಷ ಅನ್ನುವವರು ಯಾರು ಇಲ್ಲ. ನೀನಿಲ್ಲಿಂದ ಈಗಲೇ ಹೊರಡ್ತಿದಿಯಾ ಅಷ್ಟೇ..!!" ತೋರ್ಬೆರಳಿನಿಂದ ಎಚ್ಚರಿಕೆ ನೀಡಿದಳು ಮಾನ್ವಿ.
"ಓಹ್.. ಹೌದಲ್ವಾ.. ಈಗ ಅವನ ಹೆಸರು,, ಅದೇನದು,, ಸಂಕಲ್ಪ್ ಅಥ್ರೇಯಾ ಅಂತಾ ಅಲ್ವಾ!! ನೀನೇ ಇಟ್ಟಿದ್ದಾ? ಚೆನ್ನಾಗಿದೆ. ಆದರೆ ಹಾಗಂತ ನಿಜವಾದ ವ್ಯಕ್ತಿತ್ವ ಬದಲಾಗಲ್ಲ ಅಲ್ವಾ ಡಾ.ಮಾನ್ವಿ?? ಮದುವೆ ಬೇರೆ ಫಿಕ್ಸ್ ಆಯ್ತಂತೆ, ಬೆಸ್ಟ್ ಫ್ರೆಂಡ್ ನಾ ಮದುವೆಗೆ ಕರಿಬೇಕು ಅಂತ ಅನ್ನಿಸ್ಲಿಲ್ವಾ ಅಥವಾ ಅವಳು ಬಂದ್ರೆ ಮದುವೆ ನಡೆಯಲ್ಲ ಅನ್ನೋ ಭಯಾನಾ??" ಮುಗ್ಧವಾಗಿ ನಟಿಸುತ್ತ ತನ್ನ ಅಸಮಾಧಾನ ವ್ಯಕ್ತಪಡಿಸಿದಳು ಪರಿ.
"ಪರವಾಗಿಲ್ವೆ,, ಹಸು ತರಾ ಇದ್ದುಕೊಂಡೇ ಎಲ್ಲಾ ವಿಚಾರ ತಿಳ್ಕೊಂಡಿದ್ದೀಯಾ? ಗುಡ್ ಗುಡ್.." ಚಪ್ಪಾಳೆ ತಟ್ಟಿದಳು ಮಾನ್ವಿ. "ಎಷ್ಟೇ ಆದರೂ ಗೋಮುಖ ವ್ಯಾಘ್ರ ಅಲ್ವಾ ನೀನು.. ಒಳ್ಳೆಯವಳಾಗಿ ಇದ್ದುಕೊಂಡೆ ಇನ್ನೊಬ್ಬರ ಬದುಕನ್ನ ನರಕ ಮಾಡ್ತಿಯಾ! ನಂಬಿಸಿ ಮೋಸ ಮಾಡೋದು ಹೇಗೆ ಅಂತ ನಾನು ನಿನ್ನಿಂದನೇ ಅಲ್ವಾ ಕಲಿತದ್ದು. ಹೇಗೆ ಅಂತ ನಿನಗೂ ನೆನಪಿರಬಹುದು..! ನಿನ್ನಿಂದ ಕಲಿತದ್ದನ್ನ ನಿನ್ನ ಮೇಲೆ ಪ್ರಯೋಗ ಮಾಡ್ತಿದಿನಿ. ಮೊದಲನೇ ಆಟ ನೀನಾಡಿದೆ. ಈಗ ನನ್ನ ಬಾರಿ.. ಹೇಗಿದೆ? ನನ್ನ ಟರ್ನ್!!" ವ್ಯಂಗ್ಯವಾಗಿ ನುಡಿದಳು ಮಾನ್ವಿ.
"ಮಾನ್ವಿ... ನಾನ್ ನಿನಗೆ ಯಾವ ಮೋಸವನ್ನು ಮಾಡಿಲ್ಲ ಕಣೇ... ನಿಜ ಹೇಳಬೇಕೆಂದರೆ ಆಲಾಪ್ ಸಂಜೀವಿನಿ ಪ್ರೀತಿಸ್ತಿರೋ ವಿಷಯ ನನಗೂ ಅವತ್ತೇ ಗೊತ್ತಾಗಿದ್ದು. ಅಷ್ಟೊತ್ತಿಗೆ ಸಮಯ ಮೀರಿ ಹೋಗಿತ್ತು. ಇಬ್ಬರ ಮದುವೆ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಆಮೇಲೆ ನೀನು ಬಂದು ಎಲ್ಲಾ ಅಪಾರ್ಥ ಮಾಡಿಕೊಂಡು... "
"ಸಾಕು... ಎಷ್ಟು ಅಂತ ಸುಳ್ಳು ಹೇಳ್ತಿಯಾ... ಹಿಂಸೆಯಾಗುತ್ತೆ.. ನಿನ್ನ ಸುಳ್ಳು ಪುರಾಣ ಕೇಳೋಕೆ ಟೈಮ್ ಇಲ್ಲ ನನ್ನ ಹತ್ರ.. ಯಾರು ನಿನ್ನ ಇಲ್ಲಿ ಬಿಟ್ಟಿದ್ದು? ಬೇಗ ಇಲ್ಲಿಂದ ತೊಲಗಿ ಹೋಗು ಅಷ್ಟೇ.. " ಚಿಟಿಕೆ ಬಾರಿಸಿ ಹೇಳಿದಳು ಮಾನ್ವಿ
"ಹೋಗ್ತಿನಿ. ಈಗಲೇ ಹೋಗ್ತಿನಿ,, ಹರ್ಷನ್ನು ನನ್ನ ಜೊತೆಗೆ ಕರೆದುಕೊಂಡು.." ಆತ್ಮವಿಶ್ವಾಸದಿಂದ ಹೇಳಿದಳು ಪರಿ
"ಇಲ್ಲಿರೋದು ಹರ್ಷ ಅಲ್ಲ. ನಿನ್ನ ಹರ್ಷ ಸತ್ತೋಗಿ... "
"ಜಸ್ಟ್ ಶಟ್‌ಪ್ ಮಾನ್ವಿ. ಯಾಕೀತರ ಮೃಗದ ಹಾಗೆ ವರ್ತಿಸ್ತಿದಿಯಾ? ಏನಾಗಿದೆ ನಿನಗೆ? ಒಕೆ. ನಿನಗೆ ಸಿಟ್ಟಿರೋದು ನನ್ನ ಮೇಲೆ ತಾನೇ, ನನಗೆ ಏನು ಶಿಕ್ಷೆ ಬೇಕಾದರೂ ಕೊಡು. ನಾನು ಅನುಭವಿಸ್ತಿನಿ. ಆದರೆ ಹರ್ಷನಿಗೆ ಅವನ ಇಡೀ ಕುಟುಂಬಕ್ಕೆ ಈ ರೀತಿ ಕತ್ತಲಲ್ಲಿ ಬದುಕೋ ಹಾಗೆ ಮಾಡಿದ್ದು ಸರಿಯಲ್ಲ. ಅವನಿಗೆ ಎಲ್ಲಾ ನಿಜ ಹೇಳಿ, ವಾಪಸ್ ಮನೆಗೆ ಕಳಿಸಿಕೊಡು.."
"ನಿಜ ಹೇಳಬೇಕಾ? ಹಾಗಾದರೆ ಕೇಳು.... ನಾನು, ಸಂಕಲ್ಪ್ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸ್ತಾ ಇದ್ದೀವಿ. ಮುಂದಿನ ಗುರುವಾರನೇ ನಮ್ಮಿಬ್ಬರ ಮದುವೆ!! ಸಂಕಲ್ಪ್ ಕೂಡ ನನ್ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿದ್ದಾನೆ, ಮದುವೆಗೂ ಒಪ್ಪಿದ್ದಾನೆ. ಈಗ ನಮ್ಮ ಲವ್‌ಸ್ಟೋರಿ ಗೆ ನೀನೇ ವಿಲನ್ ಆಗ್ಬೇಡ. ಯಾಕೆಂದರೆ ನೀನೇ ಹೇಳಿರೋ ಪ್ರಕಾರ, ಹರ್ಷ ಕೂಡ ನನ್ನನ್ನು ಪ್ರೀತಿಸೋದಾದ್ರೆ ಧಾರಾಳವಾಗಿ ಅವನಿಂದ ದೂರ ಹೋಗ್ತಿನಿ. ಅವನ ಸಂತೋಷನೇ ನಿನಗೆ ಮುಖ್ಯ ಅಂತ! ಹಿಂದೆ ಒಮ್ಮೆ ನೀನೇ ಹೇಳಿದ್ದೆ, ನೆನಪಿದೆಯಾ??"
"ಹೌದು ಹೇಳಿದ್ದೆ. ಈಗಲೂ ಅದೇ ಮಾತು ಹೇಳ್ತಿನಿ. ಪ್ರೀತಿ ತಾನಾಗಿ ಮನಸ್ಸಿನಿಂದ ಹುಟ್ಟಬೇಕೇ ಹೊರತು ಹೀಗೆ ಸುಳ್ಳು ಅನ್ಯಾಯದಿಂದಲ್ಲ. ಅವನು ನಿನ್ನ ಪ್ರೀತಿಸ್ತಿಲ್ಲ, ಅದು ಕೇವಲ ಅನಿವಾರ್ಯತೆ! ಆ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ನೀನೇ, ನಿನ್ನೀ ಕೃತ್ಯದಿಂದ ಅವನು ಖಂಡಿತ ಸಂತೋಷವಾಗಿಲ್ಲ. ಅವನ ಮನಸ್ಸಲ್ಲಿರೋ ಅಪಾರವಾದ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ.. ನಿನಗೆ ಇನ್ನೊಂದು ಸತ್ಯ ಗೊತ್ತಾ,, ಹರ್ಷ ಈಗಲೂ ನನ್ನನ್ನೇ ಪ್ರೀತಿಸ್ತಿದ್ದಾನೆ. ನನ್ನನ್ನೇ ಜೀವಿಸ್ತಿದ್ದಾನೆ.. ಅವನು ನನ್ನ ಮರೆತಿಲ್ಲ. ಮರೆಯೋಕೆ ಸಾಧ್ಯಾನೂ ಇಲ್ಲ." ದೃಢವಾದ ಸ್ವರದಲ್ಲಿ ಹೇಳಿದಳು ಪರಿ.
"ಓಹೋ.. ಇಷ್ಟೊಂದು ಓವರ್ ಕಾನ್ಫಿಡೆನ್ಸ್!! ಸರಿ ಹಾಗಾದ್ರೆ, ಈಗ ಇನ್ನೊಂದು ಚಿಕ್ಕ ಗೇಮ್ ಆಡೋಣ್ವಾ.. ಇವತ್ತಿನಿಂದ ಬುಧವಾರದವರೆಗೂ ಅಂದ್ರೆ,,, ನಿನ್ನ ಹತ್ರ ಒಂದು ಎರಡು ಮೂರು ನಾಲ್ಕು............. ಹತ್ತು ದಿನ ಟೈಮ್ ಇದೆ. ಅಷ್ಟರೊಳಗೆ, ಹರ್ಷ ನಿನ್ನ ಮರೆತಿಲ್ಲ, ಈಗಲೂ ನಿನ್ನೇ ಪ್ರೀತಿಸ್ತಿದ್ದಾನೆ ಅಂತ ಪ್ರೂವ್ ಮಾಡು. ಅದರ ಮರುದಿನನೇ ಅಂದ್ರೆ ಗುರುವಾರ, ನಾನೇ ಮುಂದೆ ನಿಂತು ನಿಮ್ಮಿಬ್ಬರ ಮದುವೆ ಮಾಡಿಸ್ತಿನಿ.. ಒಕೆ." ಮಾನ್ವಿಯ ಮಾತಿಗೆ ಪರಿಯ ಮುಖದಲ್ಲಿ ಸಂತೋಷ ಅರಳಿತು. ಅವಳು ಈ ಮಾತಿಗೆ ಒಪ್ಪಿದಂತೆ ಸಮ್ಮತಿ ಸೂಚಿಸಿದಳು.
"ಆದರೆ ಒಂದು ವೇಳೆ ನೀನು ನಿನ್ನ ಪ್ರಯತ್ನದಲ್ಲಿ ಸೋತರೆ,,, ನೀನು ಹರ್ಷನ್ನ ಶಾಶ್ವತವಾಗಿ ಮರೆತು ಚ'ಕಾರ ಎತ್ತದೆ, ನಮ್ಮಿಂದ ದೂರ ಹೋಗಬೇಕು.." ಮಾನ್ವಿಯ ಈ ನುಡಿಗೆ ಪರಿಯ ಸಂತೋಷ ಬಾಡಿತು. ಆದರೂ ಅವಳಿಗೆ ತನ್ನ ಹರ್ಷನ ಪ್ರೀತಿಯ ಮೇಲಿದ್ದ ಅಪಾರ ನಂಬಿಕೆ ಅವಳಲ್ಲಿ ಅದಮ್ಯ ವಿಶ್ವಾಸ ತುಂಬಿತು.
"ಸರಿ ಮಾನ್ವಿ. ನೀನು ಹೇಳಿದ ಹಾಗೆ ಹರ್ಷ ನನ್ನ ಪ್ರೀತಿಸ್ತಿದ್ದಾನೆ ಅಂತ ನಾನು ನಿರೂಪಿಸ್ತಿನಿ. ಇದಾದ ನಂತರ ನೀನು ಹಳೆಯದನ್ನೆಲ್ಲ ಮರೆತು ಮತ್ತೆ ನಮ್ಮ ಜೊತೆ ಒಂದಾಗಬೇಕು.. ಮತ್ತೆ ಮೊದಲಿನ ಹಾಗೆ.." ಮುಗ್ಧವಾಗಿ ಹೇಳಿದ ಪರಿಯ ಮಾತಲ್ಲಿ ಮತ್ತೆ ಮಾನ್ವಿ ಒಂಟಿತನದ ಕೂಪಕ್ಕೆ ಭಾಜನಳಾಗಬಾರದು ಎಂಬ ಕಾಳಜಿಯಿತ್ತು..
"ಹ್ಮ್,, ಎಂದು ವ್ಯಂಗ್ಯವಾಗಿ ನಕ್ಕು ನೋಡೋಣ.. ಆದರೆ ಮೊದಲು ಗೇಮ್ ರೂಲ್ಸ್ ಕೇಳು... ಈ ಗೇಮ್ ಮುಗಿಯೋವರೆಗೂ ನೀನು ಹರ್ಷನ ಕಣ್ಣಿಗೆ ಕಾಣೋಹಾಗಿಲ್ಲ. ಅವನೆದುರಿಗೆ ಬರೋ ಹಾಗಿಲ್ಲ.!! ಅವನ ಜೊತೆಗೆ ಮಾತಾಡೋ ಹಾಗಿಲ್ಲ." ಮಾನ್ವಿ ಕಠಿಣ ಷರತ್ತನ್ನು ವಿಧಿಸಿದಳು. ಅವಳ ಷರತ್ತುಗಳನ್ನು ಕೇಳಿ ಪರಿಧಿಗೆ ಅವಳ ಕುಹಕ ಬುದ್ದಿಯ ಅನಾವರಣವಾಯಿತು.
"ನಾನು ಅವನ ಎದುರಿಗೆ ಬರದೆ, ಅವನ ಜೊತೆಗೆ ಮಾತು ಆಡದೆ, ಹೇಗೆ ಅವನಿಗೆ ನನ್ನ ಬಗ್ಗೆ ಗೊತ್ತಾಗುತ್ತೆ?? ಏನು ಹುಡುಗಾಟ ಆಡ್ತಿದಿಯಾ ನಮ್ಮಿಬ್ಬರ ಬಾಳಲ್ಲಿ...??"
"ಛೇ,ಛೇ.. ಇಲ್ಲಮ್ಮ. ನಾನ್ಯಾಕೆ ಹುಡುಗಾಟ ಮಾಡಲಿ? ನೀನೇ ಹೇಳ್ತಿದ್ದೆ ಅಲ್ವಾ,, ನಿನ್ನ ಹರ್ಷನ ಪ್ರೀತಿ, ನಿನ್ನ ಮುಖ ನೋಡಿ ಹುಟ್ಟಿದ್ದಲ್ಲ, ನೀನಿನ್ನು ತಾಯಿ ಗರ್ಭದಲ್ಲಿ ಇರುವಾಗಲೇ ಬೆಸೆದಂತ ಅನುಬಂಧ, ಅನುರಾಗ ಅಂತ,, ಸೋ ಮುಖ ನೋಡುವ ಅವಶ್ಯಕತೆ ಏನಿದೆ? ಅದೂ ಅಲ್ಲದೇ ನಿನ್ನ ಹರ್ಷನಿಗೆ ನಿನ್ನ ಮನಸ್ಸಿನ ಪ್ರತಿ ಮಾತು ಹೇಳದೆನೇ ಅರ್ಥ ಆಗುತ್ತಲ್ವಾ.. ನೀನು ದೂರದಿಂದಲೇ ಮನಸ್ಸಿನಿಂದ ಕೂಗು ನಿನ್ನ ಹರ್ಷ ಓಡಿ ಬರ್ತಾನೆ..ಆದರೆ ಅವನ ಕಣ್ಮುಂದೆ ಮಾತ್ರ ಬರಕೂಡದು..! ಇದು ಗೇಮ್ ರೂಲ್ಸ್!!" ಮಾನ್ವಿಯ ಮಾತಿನಲ್ಲಿದ್ದ ಕಪಟತನ ವ್ಯಂಗ್ಯ ಹೀಯಾಳಿಕೆ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿದಳು ಪರಿ.
"ನೋ.. ಇದು ನನಗೆ ಒಪ್ಪಿಗೆ ಇಲ್ಲ. ಅಷ್ಟಕ್ಕೂ ನಾನ್ಯಾಕೆ ನಿನ್ನ ಮಾತನ್ನು ಕೇಳಬೇಕು??" ಪರಿಯ ತಾಳ್ಮೆ ಅಲ್ಲಿಗೆ ನಿಶ್ಯೇಷವಾಯಿತು.
"ನೀನು ಕೇಳಲೇಬೇಕು. ಕೇಳ್ತಿಯಾ ಕೂಡ. ಯಾಕೆಂದರೆ ನಿನ್ನ ಹರ್ಷನ ಪ್ರಾಣ ಉಳಿಸಿದವಳು ನಾನು. ಈಗ ಪ್ರಸ್ತುತ ನಿನ್ನ ಹರ್ಷ ನಂಬುವ ಏಕೈಕ ವ್ಯಕ್ತಿ ನಾನು. ನನ್ನ ಹೊರತು ಬೇರೆ ಯಾರನ್ನೂ ಆತ ನಂಬುವುದೂ ಇಲ್ಲ. ಹತ್ರನೂ ಸೇರಿಸಲ್ಲ..! ಸದ್ಯಕ್ಕೆ ಅವನ ಹೆಲ್ತ್ ಕಂಡಿಷನ್, ಅವನ ಮೆಂಟಲ್ ಕಂಡಿಷನ್ ಬಗ್ಗೆ ಗೊತ್ತಿರೋದು ನನಗೆ ಮಾತ್ರ. ಆ್ಯಕ್ಸಿಡೆಂಟ್ ನಂತರ ಅವನು ಎರಡು ತಿಂಗಳು ಕೋಮಾದಲ್ಲಿದ್ದ ಅದು ಗೊತ್ತಾ ನಿನಗೆ?? ಈಗ ಸ್ವಲ್ಪ ಚೇತರಿಸಿಕೊಂಡಿದ್ದಾನೆ. ನೀನು ಸಡನ್ನಾಗಿ ಅವನೆದುರು ಹೋದರೆ, ಅವನಿಗೆ ಹಳೆಯದು ನೆನಪಾಗುತ್ತೋ ? ಇಲ್ಲ ಶಾಕ್‌ನಿಂದಾಗಿ ಅವನು ಮತ್ತೆ ಕೋಮಾ ಹೋಗ್ತಾನೋ? ಇಲ್ಲಾ, ಪೂರ್ತಿ ಹುಚ್ಚಾನೇ ಆಗ್ತಾನೋ?? ಅಥವಾ ಇನ್ನೇನೋ ಆಗುತ್ತೋ? ಯಾರಿಗೊತ್ತು.." ಪರಿಯ ದೌರ್ಬಲ್ಯವನ್ನು ಅಸ್ತ್ರವಾಗಿ ಬಳಸಿ ಅವಳನ್ನ ಮೌನಿಯನ್ನಾಗಿಸಿದ್ದಳು ಮಾನ್ವಿ..
"ಆದಿನ ಆ್ಯಕ್ಸಿಡೆಂಟ್ ನಡೆದಾಗ ಹರ್ಷನ ಸ್ಥಿತಿ ಎಷ್ಟು ಗಂಭೀರವಾಗಿತ್ತು ಅಂತ ಗೊತ್ತಾ ನಿನಗೆ? ಅವನನ್ನ ನಾನು ಹಾಸ್ಪಿಟಲ್ ಸೇರಿಸಿ ಟ್ರೀಟ್ಮೆಂಟ್ ಕೊಡಿಸದೆ ಹೋಗಿದ್ರೆ, ನಿನ್ನ ಹರ್ಷ ಇಷ್ಟೊತ್ತಿಗೆ ಹರೋಹರ.. " ಮಾನ್ವಿಯ ಮಾತು ಕುಹಕವಾದರೂ ಸತ್ಯವಾಗಿತ್ತು. ಪರಿ ಆ ದಿನ ಮಾನ್ವಿ ಮಾಡಿದ ಸಹಾಯಹಸ್ತವನ್ನು ಮನದಲ್ಲೇ ಸ್ಮರಿಸಿ ವಂದಿಸಿದಳು.
"ಸೋ, ನಿನ್ನ ಹರ್ಷನ ಪ್ರಾಣ ಉಳಿಸಿದ್ದಕ್ಕೆ ಕೃತಜ್ಞತೆ ಅನ್ನೋದು ಇರಬೇಕಲ್ವ ನಿನಗೆ.. ಆ ಕೃತಜ್ಞತೆ ಪರವಾಗಿ,,, ಬೇಡ, ಆ್ಯಟ್‌ಲೀಸ್ಟ್ ಡಾಕ್ಟರ್ ಫೀಸ಼್ ಅಂತನಾದ್ರೂ ನೀನು ಈ ಕ್ಷಣ ನನ್ನ ಮಾತು ಒಪ್ಕೋಳ್ತಿಯಾ. ನನಗೆ ಭಾಷೆ ಕೊಡ್ತಿಯಾ... ಹರ್ಷನಿಗೆ ನಿನ್ನ ಮೇಲಿನ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ, ಅವನು ನಿನ್ನ ಮರೆತಿಲ್ಲ ಅನ್ನೋದು ಸಾಬೀತಾಗೋವರೆಗೂ ನೀನು ಅವನ ಕಣ್ಣಿಗೆ ಬೀಳಲ್ಲ, ಅವನ ಜೊತೆ ಮಾತಾಡಲ್ಲ ಅಂತ,,! ಹಾಗಂತ ಫೋಟೋ, ವಿಡಿಯೋ ಕಳಿಸೋ ಚೀಪ್ ಟ್ರಿಕ್ಸ್ ಯುಸ಼್ ಮಾಡ್ಬೇಡ ಒಕೆ!! ಒಂದು ವೇಳೆ ಈ ಚಾಲೆಂಜ್ ನಲ್ಲಿ ನೀನು ಗೆದ್ದರೆ.. ನಾನೇ ನಿನ್ನ ಹರ್ಷನಿಗೆ ಎಲ್ಲಾ ನಿಜ ಹೇಳಿ ಒಪ್ಪಿಸಿ ನಿನ್ನ ಜೊತೆ ಕಳಿಸಿ ಕೊಡ್ತಿನಿ ಆಯ್ತಾ?? ಈಗ ಪ್ರಮಾಣ ಮಾಡು" ಮಾನ್ವಿ ತನ್ನ ಕೈ ಮುಂದೆ ಚಾಚಿದಳು.
ಪರಿಯ ಮನಸ್ಸು ಚಂಚಲವಾಗಿತ್ತು. ಮಾನ್ವಿಯ ಮಾತುಗಳನ್ನು ಧಿಕ್ಕರಿಸಿ ಹರ್ಷನೆದುರು ಹೋಗಿ ಬಿಡಲೇ ಅವಳ ಆಂತರ್ಯ ಹವಣಿಸಿತು. ಒಂದು ವೇಳೆ ಮಾನ್ವಿ ಹೇಳಿದಂತೆ ಹರ್ಷನಿಗೆ ಏನಾದರೂ ತೊಂದರೆ ಆಗಬಹುದಾ?? ಮಾತು ಕೊಡಲಾ? ಬೇಡವಾ? ಅವಳ ದ್ವಂದ್ವಗಳು ಬಗೆಹರಿಯಲಿಲ್ಲ. ಸಂಶಯದ ಮಧ್ಯೆಯೇ ಅವಳು ತನ್ನ ಕೈಯನ್ನು ನಿಧಾನವಾಗಿ ಮುಂದೆ ಚಾಚಿ ಅವಳ ಕೈ ಮೇಲಿಟ್ಟು ಭಾಷೆ ಕೊಟ್ಟಳು. "ಹರ್ಷನಿಗೆ ನನ್ನ ಪ್ರೀತಿ ನೆನಪಾಗೋವರೆಗೂ ನಾನು ಅವನ ಕಣ್ಣೆದುರು ಬರಲ್ಲ. ಅವನ ಜೊತೆ ಮಾತು ಆಡಲ್ಲ. ಆದ್ರೆ ನೋಡ್ತಿರು.. ಕೆಲವೇ ದಿನಗಳಲ್ಲಿ ಹರ್ಷನೇ ನನ್ನನ್ನ ಜ್ಞಾಪಿಸಿಕೊಂಡು, ನನ್ನ ಹುಡುಕಿಕೊಂಡು ನನ್ನ ಹತ್ರ ಬರ್ತಾನೆ. ಅವನನ್ನ ನೀನು ಕೂಡ ತಡೆಯೋಕಾಗಲ್ಲ.." ಪರಿಯ ಮುಖದಲ್ಲಿ ತೆಳುವಾದ ಗೆಲುವಿನ ನಗುವಿತ್ತು.
"ಇಟ್ಸ್ ಇಂಪಾಸಿಬಲ್ ಪರಿ. ನನಗೊತ್ತು ಒಂದು ಸಲ ಮಾತು ಕೊಟ್ಟ ಮೇಲೆ ನೀನು ಮಾತಿಗೆ ತಪ್ಪಲ್ಲ ಅಲ್ವಾ!! ಯೂ ಫೂಲ್.. ಬ್ರೇನ್ ಹ್ಯಾಮ್ರೆಜ್ ಆಗಿರೋ ವ್ಯಕ್ತಿಗೆ ನೇರವಾಗಿ ಎಲ್ಲಾ ತೋರಿಸಿ ಹಳೆಯದನ್ನೆಲ್ಲ ನೆನಪಿಸಿದ್ರೂ ತಿಂಗಳುಗಳ ಕಾಲ ಸಮಯ ಹಿಡಿಯುತ್ತೆ. ಅಂತಹದ್ದರಲ್ಲಿ ಹತ್ತೇ ದಿನಗಳಲ್ಲಿ, ಅವನೆದುರಿಗೂ ಬರದೇ, ಅವನ ಜೊತೆ ಮಾತು ಆಡದೇ ನಿನ್ನ ಪ್ರೀತಿ ನಿರೂಪಿಸ್ತಿಯಾ?? ಸೋ ಪೂರ್ ಪರಿ!! ಪ್ಚ್.. ಈ ಪಂದ್ಯದಲ್ಲಿ ನೀನು ಸೋಲೋದು ನಿಶ್ಚಿತ. ಹರ್ಷ,, ಅಲ್ಲಲ್ಲ., ಸಂಕಲ್ಪ್ ಏನಿದ್ದರೂ ನನ್ನವನು..! ನೀನು ಅವನ ಬದುಕಿನ ಭೂತಕಾಲ ಮಾತ್ರ! ನಾನು ಅವನ ವರ್ತಮಾನ, ಭವಿಷ್ಯ!!" ಮಾನ್ವಿಯ ಧ್ವನಿಯಲ್ಲಿ ಗಾಂಭೀರ್ಯವಿತ್ತು. ಆದರೂ ಅವಳ ಮಾತು ಕೇಳಿ ಪರಿ ಗಹಗಹಿಸಿ ನಕ್ಕು ಬಿಟ್ಟಳು. ಮಾನ್ವಿಗೆ ಪರಿಯ ವರ್ತನೆ ವಿಚಿತ್ರ ಎನಿಸಿತು. "ಏನಾಗಿದೆ ನಿನಗೆ " ಮಾನ್ವಿ ಹುಬ್ಬು ಗಂಟಿಕ್ಕಿದಳು.
"ಇಷ್ಟು ಹೊತ್ತಿನಿಂದ ಅವನನ್ನು ನಿನ್ನ ಹರ್ಷ, ನಿನ್ನ ಹರ್ಷ ಅಂತ ಹೇಳುತ್ತಲೇ ನೀನೇ ನನ್ನನ್ನು ಅರ್ಧ ಗೆಲ್ಲಿಸಿಬಿಟ್ಟೆ ಕಣೇ.. ಹೌದು ಹರ್ಷ ನನ್ನವನೇ!! ಯಾವತ್ತಿದ್ದರೂ ಅವನು ನನ್ನ ಹರ್ಷನೇ!! ನಿನಗೂ ಹರ್ಷನ ಮೇಲಿರೋದು ಪ್ರೀತಿಯಲ್ಲ, ಅದು ನನ್ನ ಮೇಲಿನ ದ್ವೇಷದ ಭಾವನೆ ಅಂತನೂ ಅರ್ಥವಾಯ್ತು ನನಗೆ. ಇಲ್ಲಿ ಹಳೆಯದನ್ನೆಲ್ಲ ಮರ್ತಿರೋದು ಹರ್ಷ ಮಾತ್ರ ಅಲ್ಲ, ನೀನು ಕೂಡ! ಸಾಧ್ಯವಾದರೆ ಒಮ್ಮೆ ಜ್ಞಾಪಿಸಿಕೊಳ್ಳುವ ಪ್ರಯತ್ನ ಮಾಡು. ಒನ್ ಮೋರ್ ಥಿಂಗ್,, ತುಂಬಾ ತುಂಬಾ ಥ್ಯಾಂಕ್ಸ್.. ನನ್ನ ಹರ್ಷನ ಪ್ರಾಣ ಉಳಿಸಿ, ಇಷ್ಟು ದಿನ ಜೋಪಾನವಾಗಿ ನೋಡಿಕೊಂಡಿದ್ದಕ್ಕೆ!!" ಎಂದು ಹೇಳಿದ ಪರಿ ಮಾನ್ವಿಯನ್ನು ಜೋರಾಗಿ ಬಿಗಿದಪ್ಪಿದಳು. ಅವಳ ಈ ಚರ್ಯೆಗೆ ಮಾನ್ವಿ ಗರಬಡಿದಂತೆ ನಿಂತಿದ್ದಳು. ಹಿಂದೆಲ್ಲಾ ಭೇಟಿಯಾದ ತಕ್ಷಣ ತಾನು ಅವಳನ್ನ ಬಿಗಿದಪ್ಪಿ ಎತ್ತಿ ಸುತ್ತ ತಿರುಗುತ್ತಿದ್ದ ದಿನಗಳು, ಕುಡಿ ಕಳೆದ ಹಾಸ್ಟೆಲ್ ನೆನಪುಗಳು ಹಸಿಹಸಿರಾಗಿ ಕಣ್ಮುಂದೆ ಬಂದಂತಾಗಿ ಕಣ್ಣು ಒದ್ದೆಯಾಯಿತು. ಮತ್ತೊಂದು ಕ್ಷಣಕ್ಕೆ ಮತ್ತದೇ ಮತ್ಸರದ ನೆನಪಾಗಿ ಪರಿಯನ್ನು ದೂರ ತಳ್ಳಿದಳು.
"ನಿನ್ನ ಮುಖವಾಡ ಕಳಚಿ ಬಿದ್ದು ತುಂಬಾ ದಿನ ಆಯ್ತು. ಈಗ ಈ ನಾಟಕ ಬೇಡ. ಈ ಆಟಕ್ಕೆ ನಿಮ್ಮ ಫ್ಯಾಮಿಲಿ, ನಿಮ್ಮ ನೆರೆಹೊರೆಯವರ ಸಹಾಯನೂ ಬೇಕಿದ್ರೆ ತಗೋಬಹುದು.. ನಿನ್ನ ಪ್ರೀತಿ ಮೇಲೆ ನಿನಗೆ ನಂಬಿಕೆ ಇಲ್ಲ, ಅನ್ಸಿದ್ರೆ ಮಾತ್ರ...!!! ಮಾನ್ವಿಯ ಮುಖದಲ್ಲಿ ದುಷ್ಟನಗುವಿತ್ತು.
"ಈಗ ಕೊಟ್ಟ ಮಾತಿಗೆ ಬದ್ದಳಾಗಿ ಸಂಕಲ್ಪ್ ಕಣ್ಣಿಗೆ ಕಾಣದೆ ಮೊದಲು ಇಲ್ಲಿಂದ ಹೊರಡು.." ಎಂದು ಬಾಗಿಲು ತೆರೆದು ಮುಂದೆ ಬಂದ ಮಾನ್ವಿಯ ಎದುರಿಗೆ ಹರ್ಷ ನಿಂತಿದ್ದ. ಮಾನ್ವಿಯ ಉಸೀರೇ ಸ್ತಬ್ಧವಾದಂತಾಗಿತ್ತು. "ಸಂಕು... ನೀನು ಇಲ್ಲಿ..?? ಯಾವಾಗ ಬಂದೆ??" ತುಸು ಗಾಬರಿಯಿಂದ ಕೇಳುತ್ತಾ ಹೊರಬಂದು ಬಾಗಿಲು ಮುಚ್ಚಿದಳು ಮಾನ್ವಿ.
"ಜಸ್ಟ್ ನೌ! ಯಾಕಷ್ಟು ಗಾಬರಿ? ಯಾರಿದ್ದಾರೆ ಒಳಗೆ??" ಹರ್ಷನ ಬಿರುಸು ಗಂಭೀರ ಕಂಠದಲ್ಲಿ ಕುತೂಹಲವಿತ್ತು.
ಮುಚ್ಚಿದ ಬಾಗಿಲ ಹಿಂದಿದ್ದ ಪರಿಗೆ ಹರ್ಷನ ಧ್ವನಿ ಕೇಳಿಸುತ್ತಿತ್ತು. ಕಾಣದ ದೇವರಿಗಾಗಿ ಅಹೋರಾತ್ರಿ ಮಾಡುವ ತಪಸ್ಸಿಗಿಂತಲೂ ಚಿತ್ತ ಕಠೋರವಾಗಿತ್ತು,, ಕಣ್ಣೆದುರೇ ಇರುವ ತನ್ನ ಆರಾಧ್ಯದೈವ ತನ್ನ ಜೀವ, ಭಾವ, ಸರ್ವಸ್ವವಾಗಿದ್ದ ಹರ್ಷನಿಂದ ದೂರ ಉಳಿದು ಕಾಣದೆ ಮಾತಾಡದೆ ಮಾಡಬೇಕಾದ ಅಂತ್ಯವಿಲ್ಲದ ತಪಸ್ಸು..!! ಅವಳ ಆಂತರ್ಯ ಕೂಗಿ ಕಿರುಚಾಡುತ್ತಿತ್ತು ಎಲ್ಲಾ ಆಣೆ ಪ್ರಮಾಣಗಳ ಮರೆತುಬಿಡು, ಹೋಗಿ ಒಮ್ಮೆ ಅವನನ್ನ ತಬ್ಬಿ ಬಿಕ್ಕಿ ಬಿಡು.. ಹೇಳದ ಮಾತುಗಳನ್ನು ಆಲಿಸುವ ಗೆಳಯನಿಗೆ ಕಣ್ಣೀರ ಭಾಷೆ ಅರ್ಥವಾಗದೇನೂ!! ಮರುಘಳಿಗೆಯೇ ಮಾನ್ವಿಯ ಎಚ್ಚರಿಕೆ ಮಾತುಗಳು ಜೊತೆಯಾದವು. ಬೇಡ ಎಂದಿತ್ತು ಬುದ್ದಿ.. ಕಾರಿರುಳ ನಡುವಲ್ಲೂ ನಸುನಗುವ ಹರಿಸುವ ಅವನ ಇರುವಿಕೆಯೇ ಸಾಕು! ಇನ್ನೂ ಸನಿಹವಾಗುವ ದುರಾಸೆಗೆ ಭರವಸೆಯ ಕನಸುಗಳು ಕಹಿಯಾದರೆ ಕಷ್ಟ! ಮನಸ್ಸು ಜಾಗೃತವಾಯಿತು. ಅವಳ ಪ್ರೀತಿಯ ಮೇಲಿನ ಅವಳ ನಂಬಿಕೆ ಅಚಲವಾಗಿತ್ತು. ಹರಿವ ಕಂಬನಿಯನ್ನು ಮುಂಗೈಯಿಂದ ವರೆಸಿಕೊಂಡಳು.
"ಅದೂ.... ನನ್ನ ಫ್ರೆಂಡ್ ಪ...ಪ.. ಪಾವನಿ!!" ತಡವರಿಸುತ್ತ ಹೇಳಿ ಅವನ ಕೈ ಹಿಡಿದು ಹೊರಡೋಣ ಎಂಬಂತೆ ನೋಡಿದಳು ಮಾನ್ವಿ.
"ಐ ಥಿಂಕ್ ನಿನ್ನ ಫ್ರೆಂಡ್ ಅಳ್ತಿದ್ದಾರೆ. ಏನಾದ್ರೂ ಪ್ರೊಬ್ಲಮ್ ನಿಮ್ಮ ಮಧ್ಯೆ..??" ಅವಳು ಅವನ ಕೈ ಹಿಡಿದು ಎಳೆದರೂ ಅಲ್ಲಿಂದ ಕಾಲು ಕಿತ್ತದೆ, ಬಾಗಿಲತ್ತ ನೋಡುತ್ತ ಕೇಳಿದ ಹರ್ಷ.
"ಅಳ್ತಿದ್ದಾಳಾ?? ನೋ.. ನೋ.. ಡ್ರೆಸ್ ಚೆಂಜ್ ಮಾಡ್ತಿದ್ದಾಳೆ. ನೀನು ಏನೇನೋ..... ಬಾ ಅಕ್ಷತೆ ಟೈಮ್ ಆಯ್ತು.." ಜೋರಾಗಿ ಎಳೆಯುತ್ತಿದ್ದಳು ಮಾನ್ವಿ. ಅವನು ಮಿಸುಕಾಡಲಿಲ್ಲ. ನೋಟ ಬಾಗಿಲತ್ತ ಕೇಂದ್ರೀಕೃತವಾಗಿತ್ತು.
"ನಿನ್ನ ಫ್ರೆಂಡ್ ನಾ ಮೀಟ್ ಮಾಡಿಸಲ್ವಾ ನನಗೆ??" ಓರೆನೋಟದಲ್ಲಿ ಕೇಳಿದ ಹರ್ಷ. ಮಾನ್ವಿಯ ಎದೆ ಢವಗುಟ್ಟುತ್ತಿತ್ತು.
"ಅವಳೂ ಡ್ರೆಸ್ ಚೇಂಜ್ ಮಾಡಿ ಮೇನ್ ಹಾಲ್‌ಗೆ ಬರ್ತಾಳಲ್ಲ, ಆಗ ಮೀಟ್ ಮಾಡುವಂತೆ ಈಗ ಬಾ.." ಮಾನ್ವಿ ಪುಟ್ಟ ಮಗುವಂತೆ ಅವನ ಕೈಗೆ ಜೋತು ಬಿದ್ದು ಎಳೆಯುತ್ತಿದ್ದಳು.
"ಶ್ಯೂರ್ ಬರ್ತಾರಾ??" ಸಂಶಯದಿಂದ ಕೇಳಿದ ಹರ್ಷನ ದೃಷ್ಟಿ ಬಾಗಿಲ ಕಡೆಗೆ ನೆಟ್ಟಿತ್ತು.
"ಹ್ಮಾ... ಬರ್ತಾಳೆ. ಏನಾಗಿದೆ ನಿನಗೆ? ಬಾ ಹೋಗೋಣ" ಮಾನ್ವಿ ಅವಸರಿಸಿದಳು..
"ಡೋಂಟ್ ನೋ.... ಮನಸ್ಸು ಯಾಕೋ ಸಮಾಧಾನ ಆಗ್ತಿಲ್ಲ. ಅವರನ್ನೊಮ್ಮೆ ನೋಡೋಣ ಅಂತ.." ಹರ್ಷ ಹಠ ಹಿಡಿದಿದ್ದ.
"ಸೋ.. ನಿನಗೆ ನನಗಿಂತ ನನ್ನ ಫ್ರೆಂಡ್ ಹೆಚ್ಚಾದಳು ಅಲ್ವಾ??" ಅಸಹನೆಯಿಂದ ಮಾನ್ವಿಯ ಕಣ್ಣು ಕೊಳವಾಗಿದ್ದವು. ಅವಳ ಕಣ್ಣೀರಿಗೆ ಕರಗಿ ಸಿಡಿಮಿಡಿಗೊಂಡ ಹರ್ಷ "ಯಾಕೆ? ಯಾವಾಗಲೂ ಚಿಕ್ಕ ಚಿಕ್ಕ ವಿಷಯಕ್ಕೂ ಅಳ್ತಿಯಾ? ಒಕೆ. ಕಮ್ ಲೆಟ್ಸ್ ಗೋ.." ಎಂದು ಅವಳೊಂದಿಗೆ ಹೆಜ್ಜೆ ಹಾಕಿದ್ದ. ಆದರೆ ಹೊರಟ ದಾರಿಯಲ್ಲಿ ಅವನ ದೇಹ ಮಾತ್ರ ಇತ್ತು. ಮನಸ್ಸು ಬಾಗಿಲ ಮರೆಯ ಹುಡುಗಿಯ ಬಳಿ ಕಳೆದು ಹೋಗಿತ್ತು. ಯಾರೆಂದು ತಿಳಿಯುವ ಕುತೂಹಲಕ್ಕೆ ಕಣ್ಣ ನೋಟ ಹಿಂದಿನಿಂದಲೂ ಅತ್ತ ಕಡೆಯೇ ಗಮನಿಸುತ್ತಿತ್ತು. ಈ ವಿಷಯ ಮಾನ್ವಿ ಗಮನಕ್ಕೂ ಬಂದಿತ್ತು. ಈ ಜನ್ಮದಲ್ಲಿ ನಿನ್ನ ಹರ್ಷ ನಿನಗೆ ಸಿಗಲ್ವೆ ಅವಳ ದ್ವೇಷ ಕಿಡಿಕಾರುತ್ತಿತ್ತು..
ಸಮಯದ ಎರಡು ಅಲಗಿನ ಹರಿತವಾದ ಕತ್ತಿ ತೂಗುತ್ತಲಿತ್ತು. ಇತ್ತ ಸ್ನೇಹ, ಅತ್ತ ಪ್ರೀತಿಯಿತ್ತು. ಒಂದನ್ನು ಪಡೆಯಲು ಮತ್ತೊಂದರ ಅಗಲುವಿಕೆ ಅನಿವಾರ್ಯವಾಗಿತ್ತು. ಆದರೆ ಪರಿಗೆ ಎರಡೂ ಮಾಣಿಕ್ಯಗಳ ಬೆಲೆಯು ಅಮೂಲ್ಯವಾಗಿತ್ತು. ಸ್ನೇಹ ಪ್ರೀತಿ ಎರಡನ್ನೂ ಬದುಕಲ್ಲಿ ಉಳಿಸಿಕೊಳ್ಳುವ ಸಲುವಾಗಿ ಪರಿಯ ಮನಸ್ಸು ಯೋಜನೆಗಳನ್ನು ರೂಪಿಸುತ್ತಿತ್ತು. ಗೆಲುವು ಪ್ರೀತಿಗೋ? ಸ್ನೇಹಕ್ಕೋ? ಅಥವಾ ಅರಿಯದೆ ಅಪಾರ್ಥದಿಂದ ಹುಟ್ಟಿ ಜ್ವಲಿಸುತ್ತಿರುವ ದ್ವೇಷ ಮತ್ಸರಕ್ಕೋ? ವಿಧಿಯ ತೀರ್ಮಾನ ನಿರ್ಣಾಯಕವಾಗಿತ್ತು.
ಮುಂದುವರೆಯುವುದು..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ