ಮಾನ್ವಿ ಹರ್ಷನನ್ನು ಒತ್ತಾಯದಿಂದ ಅಲ್ಲಿಂದ ಕರೆದುಕೊಂಡು ಹೊರಟು ಹೋದ ಕೆಲ ಸಮಯದ ನಂತರ ಬಾಗಿಲು ತೆರೆದು ಹೊರಬಂದ ಪರಿ, ಸುತ್ತಲೂ ಕಣ್ಣಾಡಿಸಿ ಹರ್ಷ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಮ್ಯಾರೇಜ್ ಹಾಲ್ ನಿಂದ ಹೊರಹೋಗಲು ಹೆಜ್ಜೆ ಮುಂದುಡಿದ್ದಳು. ಚಲನೆ ಯಾಂತ್ರಿಕವಾಗಿತ್ತು. ಜೀವ ಈಗಲೂ ಹರ್ಷನತ್ತ ಸೆಳೆಯುತ್ತಿತ್ತು. ಮೆಟ್ಟಿಲಿಳಿಯುವ ಮುನ್ನ ಇನ್ನೊಂದು ಬಾರಿ ಹರ್ಷನನ್ನ ಕಣ್ಣಾರೆ ನೋಡುವಾಸೆ ಎದೆಯಲ್ಲಿ ಪುಟಿಯಿತು. ಆಕೆ ತಕ್ಷಣ ಮತ್ತೊಂದು ಯೋಚನೆ ಮಾಡದೆ ದಿಕ್ಕು ಬದಲಿಸಿ ಮೇನ್ ಹಾಲ್ ಎದುರಿಗೆ ಬಂದು ನಿಂತು ಗ್ಲಾಸ್ ಹೌಸ್ ನ ಒಂದು ಭಾಗದಿಂದ ದೂರದಿಂದಲೇ ಹರ್ಷನನ್ನು ಹುಡುಕಿದ್ದಳು. ಎಡ ಬಲಗಳ ಎರಡೂ ಬದಿಯಲ್ಲಿ ಸುಖಾಸನಗಳ ಮಧ್ಯದಲ್ಲಿನ ಹೂ ಹಾಸಿನ ದಾರಿಯಲ್ಲಿ ಯಾರೋ ಒಬ್ಬ ಹಿರಿಯ ವ್ಯಕ್ತಿಯ ಜೊತೆಗೆ ಮಾತನಾಡುತ್ತ ನಿಂತಿದ್ದ ಹರ್ಷ. ಅವನ ಪಕ್ಕದಲ್ಲಿ ಅವನ ಕೈ ಗಟ್ಟಿಯಾಗಿ ಹಿಡಿದು ನಿಂತಿದ್ದಳು ಮಾನ್ವಿ. ಅವನನ್ನು ಕಾಣುತ್ತಿದ್ದ ಪರಿಯ ಮುಖದಲ್ಲಿ ಮಿಂಚೊಂದು ಮಿನುಗಿತ್ತು. ಚಿಟಿಕೆಯಲ್ಲಿ ಮಾತನಾಡುತ್ತಾ ನಿಂತಿದ್ದ ಹರ್ಷನ ನೋಟ, ಯಾರೋ ಕೂಗಿ ಕರೆದಂತೆ ಇವಳತ್ತ ಹೊರಳಿತ್ತು. ಅವನು ತನ್ನನ್ನೇ ನೋಡುತ್ತಿದ್ದಾನಾ? ಪರಿ ತಕ್ಷಣ ಗಾಬರಿಯಿಂದ ತನ್ನ ಮುಖ ಬೇರೆಡೆ ಹೊರಳಿಸಿ ನಿಂತಳು. ಇಲ್ಲ. ಇದು ಒನ್ ವೇ ಮಿರರ್! ಅವನಿಗೆ ಕಾಣುತ್ತಿರುವುದು ಕನ್ನಡಿಯಲ್ಲಿ ಅವನದೇ ಬಿಂಬ ಮಾತ್ರ! ತನಗೆ ತಾನೇ ಸಮಜಾಯಿಷಿ ನೀಡಿ ಮತ್ತೆ ಅವನೆಡಗೆ ತಿರುಗಿದಳು. ಇವಳೆಡೆಗೆ ನೋಡುತ್ತಿದ್ದ ಹರ್ಷನ ಚಡಪಡಿಕೆ, ಭಾವೋದ್ವೇಗ, ತಲ್ಲಣಗಳು ಈಕೆಗೂ ಅರ್ಥವಾಗಿದ್ದವು. ಮಾನ್ವಿಗೂ ಏನೋ ಸಂಶಯ ಕಾಡಿತು. ಅವಳು ಅವನನ್ನೇ ದಿಟ್ಟಿಸುತ್ತ ಕೈ ಮತ್ತಷ್ಟು ಗಟ್ಟಿಯಾಗಿ ಹಿಡಿದಿದ್ದಳು.
ತನ್ನದೇ ಪ್ರೀತಿಯನ್ನು, ಜೀವದ ಭಾಗವನ್ನು ಹೀಗೆ ಕದ್ದು ನೋಡುವ ತನ್ನ ಶುಷ್ಕ ಪರಿಸ್ಥಿತಿಗೆ ವಿಷಾದದ ನಗೆ ಬೀರಿದಳು ಪರಿಧಿ. 'ಇನ್ನೂ ಕೆಲವೇ ದಿನ ಕಣೋ ಹರ್ಷ.. ಮಾನ್ವಿ ಮನಸ್ಸನ್ನು ಪರಿವರ್ತಿಸುವೆ. ನಿನ್ನ ಬದುಕು ನಿನ್ನ ವ್ಯಕ್ತಿತ್ವ, ನಿನ್ನ ಅಸ್ತಿತ್ವವನ್ನು ನಿನಗೆ ಸಿಗುವಂತೆ ಮಾಡುವೆ.. ಅಂದೊಮ್ಮೆ ನನಗೆ ನಾನೇ ಬೇಡವಾದಾಗಲೂ ನನ್ನನ್ನು ಪ್ರೀತಿಸಿದವನು ನೀನು, ಕಗ್ಗತ್ತಲಲ್ಲಿ ಅವಿತಿದ್ದ ನನ್ನ ತಿದ್ದಿ ತೀಡಿ ರಮಿಸಿ, ಕಾಡಿಸಿ ಪೀಡಿಸಿ, ನಗಿಸಿ ಭವ್ಯ ಬದುಕಿನ ಕನಸುಗಳನ್ನು ಕೊಟ್ಟವನು ನೀನು.. ಇಂದು ನಿನಗೆ ನೀನೇ ಹೀಗೆ ಅಪರಿಚಿತನಾಗಿ, ದ್ವಂದ್ವದಲ್ಲಿ ನಿಂತಿರುವೆ. ನಿನ್ನನ್ನು ನಿನಗೆ ಪರಿಚಯಿಸುವ ಹೊಣೆ ಋಣ ಎರಡೂ ನನ್ನದು ಕಣೋ ಹುಡುಗ.. ಹೆಜ್ಜೆ ಹೆಜ್ಜೆಗೂ ಮಾಸದ ನೆನಪುಗಳನ್ನು ಕೊಟ್ಟ ನನ್ನ ಬದುಕಿನ ಕೊನೆಯಿರದ ನಿಧಿ ನೀನು.. ನೀ ಕೊಟ್ಟ ನೆನಪುಗಳನ್ನ ನಿನಗೆ ಮರಳಿಸುವುದು ನನಗೆ ಕಷ್ಟವೇನಲ್ಲ ಬಿಡು!! ಅಲ್ಲಿಯವರೆಗೂ ಈ ಚಡಪಡಿಕೆ ಒಂಚೂರು ಇರಲಿ ನನಗೆ. ವಿರಹದ ಬಿಸಿ ತಾಕದೆ ಒಡಮೂಡಿದ ಒಲವಿಗೆ ಈ ಜಗದಲ್ಲಿ ಬೆಲೆಯೆಲ್ಲಿದೆ? ಇದೊಂದು ರೀತಿಯ ನಮ್ಮಿಬ್ಬರ ಒಲವ ಪರೀಕ್ಷೆ.. ನಂಬಿಕೆ ಇದೆ ನನಗೆ ನಾವು ಸೋಲಲ್ಲ ಕಣೋ ಹುಡುಗ.. ನಮ್ಮ ಪ್ರೀತಿ ಅಷ್ಟು ಕೇವಲವೂ ಅಲ್ಲ, ದುರ್ಬಲವೂ ಅಲ್ಲ.. ನನ್ನೊಳಗೆ ನನಗೂ ಜಾಗವಿರದಂತೆ ನನ್ನನ್ನು ಆವರಿಸಿಕೊಂಡಿಹೆ ನೀನು.. ನಿನ್ನ ತೊರೆದು ಬದುಕುವ ಸ್ಥೈರ್ಯ ನನಗಾದರೂ ಎಲ್ಲಿದೆ ಹೇಳು..' ಅವಳ ಆಂತರ್ಯ್ಯದ ನುಡಿಗಳಿಗೆ ಕಣ್ಣ ಹನಿಯೊಂದು ಜಿನುಗಿತ್ತು.
ದೂರದಲ್ಲಿ ಈ ಕಡೆಗೆ ನೋಡುತ್ತಿದ್ದ ಹರ್ಷ ಏನೋ ಪ್ರಮಾದ ಘಟಿಸಿದಂತೆ ಹುಬ್ಬು ಗಂಟಿಕ್ಕಿ ಎರಡು ಹೆಜ್ಜೆ ಮುಂದಿಟ್ಟಿದ್ದ. ಆದರೆ ಮಾನ್ವಿ ಅವನನ್ನ ಹೋಗಲು ಬಿಡದೆ, ಅವನ ಗಮನ ಬೇರಡೆ ಸೆಳೆಯಲು ಏನೇನೋ ಮಾತನಾಡಿಸುತ್ತಿದ್ದಳು. ಪರಿಯ ಮುಖದಲ್ಲಿ ಗೆಲುವಿನ ಮಂದಹಾಸ ಮೂಡಿತ್ತು. ತಕ್ಷಣ ಹ್ಯಾಂಡ್ ಬ್ಯಾಗ್ ನಿಂದ ತನ್ನ ಕರವಸ್ತ್ರವನ್ನು ಹೊರತೆಗೆದು ಅದನ್ನು ತುಂಟ ಕಿರುನಗೆಯೊಂದಿಗೆ ನಿಂತ ಜಾಗದಲ್ಲಿ ಬೀಳಿಸಿದ್ದಳು. ಅದು ಕೈ ಸೇರುವುದೆಂಬ ನಂಬಿಕೆಯಾ? ಅದು ಹರ್ಷನಿಗೆ ಅವಳು ನೀಡುತ್ತಿದ್ದ ಸಣ್ಣ ಸುಳಿವಾ? ಏನೋ.. ಅವಳ ಮನಸ್ಸಿಗೆ ತೋಚಿದ್ದನ್ನು ಆಕೆ ಮಾಡಿದ್ದಳು. ಮತ್ತು ತಡಮಾಡದೆ ಅಲ್ಲಿಂದ ಹೊರ ನಡೆದಿದ್ದಳು.
ಆಕೆ ಗ್ಲಾಸ್ ಹೌಸ್ ನಿಂದ ಹೊರಬಂದು ಊಹಿಸಿದಂತೆ ನೇರವಾಗಿ ಕಾರ್ ಪಾರ್ಕಿಂಗ್ ಕಡೆಗೆ ನಡೆದಿದ್ದಳು. ಯಾವುದೋ ಗಹನವಾದ ಆಲೋಚನೆಯಲ್ಲಿ ಮುಳುಗಿದ್ದ ವಿವೇಕ್ ಇವಳನ್ನು ನೋಡಿ ಒಳಗೆ ಏನು ನಡೆಯಿತು ಎಂದು ತಿಳಿಯಲು ಉತ್ಸುಕನಾಗಿದ್ದ. ಫೋನ್‌ನಲ್ಲಿ ತನ್ನ ಟೀಮ್ ನವರೊಂದಿಗೆ ಮಾತನಾಡುತ್ತ ಯಾವುದೋ ಕೇಸ್ ಬಗ್ಗೆ ಸಲಹೆ ನೀಡುತ್ತಿದ್ದ ಪ್ರಸನ್ನನಿಗೆ ಪರಿಯ ಮುಖ ಲಕ್ಷಣಗಳನ್ನು ನೋಡಿಯೇ ಬಹುಶಃ ಹರ್ಷ ಇವರನ್ನು ಗುರುತಿಸಿಲ್ಲ ಎಂಬ ಅನುಮಾನ ಬಂದಿತು.
"ಏನ್ರೀ ನೀವು, ನಾನು ಸುಮ್ಮನೆ ಮಾತಿಗೆ ಹೋಗ್ತಾ ಇರಿ ಅಂದ್ರೆ, ನನ್ನನ್ನೇ ಬಿಟ್ಟು ಹೋಗಿಬಿಡೋದಾ? ಜೊತೆಗೆ ಮೊಬೈಲ್ ಕೂಡ ಇಲ್ಲೇ ಮರೆತೋಗಿದ್ದಿರಾ! ನಿಮ್ಮ ಅತ್ತೆಯವರು ಒಂದಿಪ್ಪತ್ತು ಬಾರಿ ಕಾಲ್ ಮಾಡಿದ್ರು. ತಗೋಳ್ಳಿ." ಅವಳ ಮೊಬೈಲ್ ಅವಳ ಕೈಗಿಟ್ಟ ವಿವೇಕ್. ಪರಿ ಮೊಬೈಲ್ ತೆಗೆದುಕೊಂಡವಳೇ ಕಾರ್‌ನಲ್ಲಿ ಕೂರುತ್ತಾ ಸುಲೋಚನರಿಗೆ ಕರೆ ಮಾಡಿ ತನ್ನ ಕ್ಷೇಮವಿಚಾರ ತಿಳಿಸಿದ್ದಳು, ಆದರೆ ಸುಲೋಚನ ಅರೆಘಳಿಗೆ ತಮ್ಮ ಮನದಲ್ಲಿ ನಡೆದ ದುಗುಡ ದುಮ್ಮಾನಗಳನ್ನು ಅವಳಿಗೆ ತಿಳಿಸುವಾಗ, ಪರಿಗೆ ಹರ್ಷನ ಇರುವಿಕೆಯನ್ನು ಹೇಳುವ ಮನಸ್ಸಾಯಿತು. ಆದರೆ ಕೊಟ್ಟ ಮಾತು ಗಡುವು ನೆನಪಾಗಿ ತುಟಿ ಕಚ್ಚಿ ಸುಮ್ಮನಾದಳು. ಮಗನ ನೆನಪಲ್ಲಿ ಕೊರಗುವ ತಾಯಿ, ತನಗೇ ತಾನು ಅಪರಿಚಿತನಾಗಿ ಇನ್ಯಾರಿಗೋ ಮಗನಾಗಿರುವ ಹರ್ಷ, ವಿಧಿಯ ಆಟಕ್ಕೆ ಕೊನೆ ಮೊದಲಿಲ್ಲ.. ದುಃಖಕ್ಕೆ ಹನಿ ಜೊತೆಯಾಗಿದ್ದವು.. ಮುಂಗೈಯಿಂದ ಕಣ್ಣು ಒರೆಸಿಕೊಳ್ಳುತ್ತ ಮನೆಯವರ ಬಗ್ಗೆ ಕೇಳುತ್ತಾ ಸಹಜವಾಗಿ ಮಾತಾಡಿ ಮಾತು ಮುಗಿಸಿದ್ದಳು. ತದನಂತರ ಡಾ.ಆನ್ಯಾಳಿಗೆ ಕರೆ ಮಾಡಿ ಕೆಲನಿಮಿಷ ಮಾತಾಡಿದ್ದಳು. ಅಷ್ಟರಲ್ಲಿ ಪ್ರಸನ್ನ ಕೂಡ ಅವಳೆದುರಿಗೆ ಬಂದು ನಿಂತಿದ್ದ. "ಹರ್ಷನ ರಿಪೋರ್ಟ್ ಸಿಕ್ಕಿದಾವಾ? ಏನಿದೆ ಅದರಲ್ಲಿ?" ಪ್ರಸನ್ನನನ್ನು ನೋಡುತ್ತಿದ್ದಂತೆ ಕೇಳಿದಳು ಪರಿ.
"ಇಲ್ಲ. ಅದಕ್ಕೆ ಇನ್ನೂ ಸ್ವಲ್ಪ ಟೈಮ್ ಬೇಕಾಗುತ್ತೆ. ನಿಮ್ಮ ಬಗ್ಗೆ ಹೇಳಿ, ಹರ್ಷನ್ನ ನೋಡಿದ್ರಾ? ಏನಾದ್ರೂ ಮಾತಾಡಿದ್ನಾ ನಿಮ್ಜೊತೆ? " ಪ್ರಸನ್ನ ವಿಷಯ ತಿಳಿಯಲು ಕಾತರನಾಗಿ ಕೇಳಿದ್ದ.
"ಹ್ಮ್, ನಾನು ಹರ್ಷನ್ನ ನೋಡಿದೆ. ಆದರೆ ಅವನು ನನ್ನ ನೋಡಲಿಲ್ಲ. ಮೊದಲು ಇಲ್ಲಿಂದ ಹೋಗೋಣ. ಆಮೇಲೆ ಎಲ್ಲವನ್ನೂ ವಿವರಿಸ್ತಿನಿ ಪ್ರಸನ್ನ." ಅವಸರಿಸಿದ್ದಳು ಪರಿ. ಇಬ್ಬರೂ ಸ್ನೇಹಿತರು ಏನಾಗಿರಬಹುದೆಂದು ಮುಖ ಮುಖ ನೋಡಿಕೊಂಡೇ ಕಾರ್ ಹತ್ತಿದ್ದರು. ಚಾಲನೆ ಆರಂಭಿಸಿದ ವಿವೇಕ್ ಕಾರ್‌ನ್ನು ಒಂದು ಹಸಿರಾದ ಪಾರ್ಕ್ ಎದುರು ತಂದು ನಿಲ್ಲಿಸಿದ್ದ. ತಂಪಾದ ಮರದ ಕೆಳಗಿನ ಬೆಂಚ್ ಮೇಲೆ ಕುಳಿತು ತಲೆಯೆತ್ತಿ ಮರವನ್ನೇ ನೋಡುತ್ತಿದ್ದಳು ಪರಿ. ಇವಳ ಈ ಆತಂಕರಹಿತ ನಿಶ್ಚಿಂತ ಮನೋಭಾವ ಪ್ರಸನ್ನನ ತಾಳ್ಮೆಯನ್ನು ಪರೀಕ್ಷಿಸುತ್ತಿತ್ತು.
"ಪರಿ,, ಅಲ್ಲಿ ಏನ್ ನಡೀತು ಅಂತ ನಮಗೂ ಬಿಡಿಸಿ ಹೇಳ್ತಿರಾ ಸ್ವಲ್ಪ??" ಪ್ರಸನ್ನ ಕೇಳಿದ.
ಪರಿಧಿ ಮದುವೆ ಮಂಟಪದಲ್ಲಿ ಕಾಲಿಟ್ಟ ಕ್ಷಣದಿಂದ ನಡೆದದ್ದೆಲ್ಲವನ್ನು, ಮಾನ್ವಿ ಜೊತೆಗೆ ಮಾತಾಡಿದ ಮಾತುಗಳನ್ನು, ಅವಳು ಆರಂಭಿಸಿದ ಆಟ, ಅದರ ನಿಯಮ, ಹರ್ಷನ ಪ್ರಸ್ತುತ ಪರಿಸ್ಥಿತಿ ಎಲ್ಲವನ್ನೂ ಚಾಚುತಪ್ಪದೇ ವಿವರಿಸಿ ಹೇಳಿದಳು. ಅದನ್ನು ಕೇಳುತ್ತಿದ್ದ ವಿವೇಕ್ ಸ್ತಂಭಿಭೂತನಾಗಿ ನಿಂತು ಬಿಟ್ಟಿದ್ದ. ಪ್ರಸನ್ನ ಹುಬ್ಬು ಗಂಟಿಕ್ಕಿ ಅವಳು ಹೇಳುವುದೆಲ್ಲವನ್ನು ಅವಲೋಕಿಸುತ್ತಿದ್ದ. ಮಾನ್ವಿಯ ಈ ಕುತಂತ್ರದ ಹಿಂದೆ ಏನೋ ಬಲವಾದ ರಹಸ್ಯವಿದೆ ಎಂದು ಅವನಿಗೆ ಸಂಶಯ ಶುರುವಾಗಿತ್ತು. ಪರಿನಾ ನೋಡಿದ ತಕ್ಷಣ ಹರ್ಷನಿಗೆ ಎಲ್ಲಾ ನೆನಪಾಗಬಹುದಾ? ವ್ಹಾಟ್ ನಾನ್ಸೆನ್ಸ್!! ನೆನಪು ಮರಳಲು ಕೆಲವು ದಿನಗಳು ತಿಂಗಳು ವರ್ಷಗಳೇ ತಗಲಬಹುದು. ಅದರ ಮಧ್ಯೆ ಈ ರಾಕ್ಷಸಿಯ ನಿಬಂಧನೆಗಳು ಬೇರೆ!! ರಿಪೋರ್ಟ್ ಸಿಗದಿದ್ದಕ್ಕೆ, ತಲೆ ಬಿಸಿಯಾಗಿದ್ದ ಪ್ರಸನ್ನನಿಗೆ ಪರಿಯ ಎಲ್ಲಾ ಮಾತುಗಳನ್ನು ಕೇಳಿ ತಲೆ ಚಿಟ್ಡು ಹಿಡಿದೇ ಹೋಗಿತ್ತು. ತಲೆಗೆ ಕೈ ಹೊತ್ತು ಎದುರಿದ್ದ ಬೆಂಚ್ ಮೇಲೆ ಕುಸಿದು ಕುಳಿತ. ಹರ್ಷನ ರಿಪೋರ್ಟ್ ಇಲ್ಲದೆ, ಅವನು ಸಂಕಲ್ಪ್ ಅಲ್ಲ ಹರ್ಷ ಎಂಬ ತಮ್ಮ ಮಾತುಗಳನ್ನು ಕಾನೂನು ಸಹ ಒಪ್ಪಲಾರದು. ಸದ್ಯದ ಪರಿಸ್ಥಿತಿಯಲ್ಲಿ ಹರ್ಷನೂ ನಮ್ಮನ್ನ ನಂಬಲ್ಲ. ಆ ರಾಕ್ಷಸಿ ಅವನಿಗೆ ನಿಜ ಹೇಳಲ್ಲ. ಈ ಪರಿ ಫ್ರೆಂಡ್ ಮಾತಿಗೆ ಕಟ್ಟುಬಿದ್ದು ಅವನ ಮುಂದೆ ಹೋಗಲ್ಲ, ಮಾತಾಡಲ್ಲ. ಹಾಗಾದರೆ ಮುಂದೆ...??' ಪ್ರಸನ್ನ ಹಣೆ ಉಜ್ಜಿಕೊಂಡ.
"ಈಗ ಮುಂದೆ ಏನ್ ಮಾಡೋದು ಬ್ರೋ??" ವಿವೇಕ್ ಅವನೆದುರು ನಿಂತು ಕೇಳಿದ. ತಕ್ಷಣ ತಲೆ ಎತ್ತಿದ ಪ್ರಸನ್ನ ಅವನನ್ನೇ ದುರುಗುಟ್ಟುತ್ತ....
"ಅಲ್ಲಿ...... ಅವರು ಕೂತಿದ್ದಾರಲ್ಲ... ಆ ಮರದ ಕೆಳಗೆ ಒಂದು ದೇವಸ್ಥಾನ ಕಟ್ಟಿಸ್ಬಿಡು. ಇವರನ್ನ ಅಲ್ಲೇ ದೇವತೆ ಅಂತ ಪ್ರತಿಷ್ಠಾಪನೆ ಮಾಡ್ಬಿಡೋಣ. ಹೋಗೋ ಬರೋ ಜನ ಎಲ್ಲಾ ಪೂಜೆ ಮಾಡಿ ಕೈಯಾದ್ರೂ ಮುಗಿದು ಹೋಗಲಿ ಇವರಿಗೆ.." ಪ್ರಸನ್ನ ಪರಿಯತ್ತ ಕೈ ಮಾಡಿ ಕೋಪದಿಂದ ಸಿಡುಕಿದ. ಪರಿ ಅವನನ್ನೇ ನುಂಗುವಂತೆ ತೀಕ್ಷ್ಣವಾಗಿ ನೋಡುತ್ತಿದ್ದಳು.
"ಹ್ಮಾ... ಇದೇ ಬಿರುನೋಟ ಮಾನ್ವಿ ಮೇಲೆ ಪ್ರಯೋಗ ಮಾಡಿ ಕಪಾಳಕ್ಕೆರಡು ಬಾರಿಸಿ, ಎಳೆದು ಸೈಡ್ ಬಿಸಾಕಿ ಹರ್ಷನ ಮುಂದೆ ಹೋಗಿ ಮಾತಾಡಿದ್ರೆ ಇಲ್ಲಿ ಈ ಪರಿಸ್ಥಿತಿ ಇರುತ್ತಿರಲಿಲ್ಲ,, ಈಗ ನನ್ನನ್ನ ಹೀಗೆ ಗುರಾಯಿಸ್ತಿದ್ರೆ ಏನ್ ಸಿಗುತ್ತೆ ನಿಮಗೆ!! ಅವತ್ತೇ ಹೇಳಿದ್ದೀನಿ, ಅತಿಯಾದ ಒಳ್ಳೆಯತನ ಕೂಡ ಒಳ್ಳೆಯದಲ್ಲ, ಸ್ವಲ್ಪ ಸ್ಟ್ರಾಂಗ್ ಆಗಿ, ನಿಮಗಾಗಿರೋ ಅನ್ಯಾಯವನ್ನು ಪ್ರಶ್ನೆ ಮಾಡಿ,. ಅನ್ಯಾಯ ಮಾಡುವವರಿಗಿಂತ ಅದನ್ನು ಸಹಿಸಿಕೊಳ್ಳುವವರೇ ದೊಡ್ಡ ತಪ್ಪಿತಸ್ಥರು ಅಂತಾ.. ಗೊತ್ತು ತಾನೇ ನಿಮಗೆ!! ಮಾನ್ವಿ ಮಾಡೋ ಪ್ರತಿ ತಪ್ಪನ್ನು ಹೀಗೆ ಸಮರ್ಥಿಸಿಕೊಳ್ಳುತ್ತ ನೀವೂ ಅದೇ ತಪ್ಪಿನಲ್ಲಿ ಭಾಗಿಯಾಗ್ತಿದ್ದಿರಾ ಪರಿ!! This is not fare! ಅವಳು ಹೇಳಿದ್ಲಂತೆ ಇವ್ರು ಮಾತು ಕೊಟ್ರಂತೆ..! ಜೀವನಾನೇ ಆಟ ಅನ್ಕೊಂಡಿದೀರಾ? ಒಂದು ಮಾತು ನೆನಪಿರ್ಲಿ,, ಇದು ಕೇವಲ ನಿಮ್ಮ ಮತ್ತು ಮಾನ್ವಿಯ ಬದುಕಿನ ಪ್ರಶ್ನೆಯಲ್ಲ.. ಅವನ ಪ್ರೀತಿಸೋ ಇಡೀ ಕುಟುಂಬದ ಪ್ರಶ್ನೆ! ಅವರ ಭಾವನೆಗಳು ಗಣನೆಗೆ ಇಲ್ವಾ? ಮತ್ತೆ ಹರ್ಷನ್ನೇನು ಆಟದ ಗೊಂಬೆನೋ ಇಲ್ಲ ಚಾಕೊಲೇಟ್ಟೋ ಅನ್ಕೊಂಡಿದೀರಾ ನೀವಿಬ್ರೂ? ಗೆದ್ರೆ ನಿನಗೆ, ಸೋತ್ರೆ ನನಗೆ ಅನ್ನೋಕೆ.. ಹುಡುಗನ ಫೀಲಿಂಗ್ಸ್‌ಗೇನು ಬೆಲೆನೇ ಇಲ್ವಾ.." ಒಂದೇ ಸಮನೆ ರೇಗುತ್ತಿದ್ದ ಪ್ರಸನ್ನ
"ಹುಡುಗರ ಪಾಡೇ ಇಷ್ಟು ಬಿಡು.. ಈಗ ಮುಂದೆ ಏನ್ಮಾಡೋದು ಅದನ್ನ ಯೋಚನೆ ಮಾಡು.." ವಿವೇಕ್ ಸಮಾಧಾನಿಸಿದ
"ನನ್ನೇನ್ ಕೇಳ್ತಿಯಾ? ಮಾತು ಕೊಟ್ಟು ದೊಡ್ಡ ಸಾಧನೆ ಮಾಡಿ ಬಂದಿದ್ದಾರಲ್ಲ ಮಹಾತಾಯಿ.. ಜಗದಂಬೆ.. ಅವ್ರನ್ನೇ ಕೇಳು? ಇದಕ್ಕೆ ಪರಿಹಾರಾನೂ ಇರುತ್ತೆ ಅವರ ಹತ್ರ." ಪ್ರಸನ್ನ ಮತ್ತೆ ರೇಗಿದ.
"ಮಿ. ವಿವೇಕ್ ಈಗಲೇ ಹೋಟೆಲ್ ರೂಂ ಹೋಗೋಣಾ. ನಾನು ಲಗೇಜ್‌ನ್ನೆಲ್ಲ ತಗೊಂಡು ನನ್ನ ಫ್ರೆಂಡ್ ಡಾ.ಆನ್ಯಾ ಜೊತೆ ಶಿಫ್ಟ್ ಆಗ್ತಿದಿನಿ. ಹತ್ತು ದಿನ ಹೋಟೆಲ್ ನಲ್ಲಿ ಉಳಿಯೋದು ಸೇಫ್‌ಲ್ಲ ಸೋ...." ಪರಿ ಸಾವಧಾನವಾಗೇ ಹೇಳಿದಳು. ಪ್ರಸನ್ನ ತಲೆ ಕೊಡವುತ್ತಾ ಅವಳ ಮುಖ ಸಹ ನೋಡದೆ ಅಲ್ಲಿಂದ ಎದ್ದು ಹೋಗಿ ರಭಸದಿಂದ ಕಾರ್‌ನ ಡೋರ್ ಎಳೆದು ಒಳಗೆ ಕುಳಿತು ಧನ್ ಎಂದು ಡೋರ್ ಮುಚ್ಚಿದ್ದ. ಅವನ ಚರ್ಯೆಯಿಂದಲೇ ಅವನ ಕೋಪದ ತೀವ್ರತೆ ಅರ್ಥವಾಗಿತ್ತು ಪರಿಗೆ. "ಅವನಿಗೆ ಸಿಟ್ಟು ಬರೋದು ಅಪರೂಪ, ಆದರೆ ಬಂದ್ರೆ ಹೀಗೆ ಸ್ವಲ್ಪ ಜಾಸ್ತಿನೇ., ನೀವು ಬೇಜಾರಾಗ್ಬೇಡಿ." ವಿವೇಕ್ ಸಮಾಧಾನ ಮಾಡಿದ. ಪರಿ ಮುಗ್ದವಾಗಿ ನಕ್ಕು ಬಿಟ್ಟಳು. ವಿವೇಕ್ ಗೆ ಅವಳ ನಗುವಿಗೆ ಕಾರಣ ಅರ್ಥವಾಗಲಿಲ್ಲ. "ವಿಪರ್ಯಾಸ ನೋಡಿ, ನನ್ನ ಲೈಫ್‌ನಲ್ಲಿ ಇರೋ ಬಹುತೇಕರದ್ದು ಇದೇ ತರಾ ಸ್ವಭಾವ ಮಿ.ವಿವೇಕ್.. ಸಿಟ್ಟು ಅಪರೂಪ. ಬಂದ್ರೆ ಉಗ್ರರೂಪ!! ಹರ್ಷ ಮಾನ್ವಿ, ಪ್ರಸನ್ನ ಮೂವರು ಹೀಗೆ..!! ಕೋಪ ಮಾಡಿಕೊಂಡಾಗ ಚಿಕ್ಕ ಮಕ್ಕಳ ತರಾ ಅನ್ನಿಸ್ತಾರೆ ಇವರೆಲ್ಲ ನನಗೆ" ಪರಿಯ ಮಾತಿಗೆ ವಿವೇಕ್ ಸಹ ಮುಗುಳ್ನಕ್ಕ, ಇಬ್ಬರೂ ಕಾರಿನತ್ತ ನಡೆದಿದ್ದರು
ಹೋಟೆಲ್ ರೂಂ ನಿಂದ ಪರಿ ತನ್ನ ಲಗೇಜ್‌ನ್ನೆಲ್ಲ ತೆಗೆದುಕೊಳ್ಳಲು ಹೋದಾಗ, ಪ್ರಸನ್ನನ ಲಗೇಜನ್ನ ಸಹ ಒತ್ತಾಯದಿಂದ ತೆಗೆದುಕೊಂಡು ಬಂದ ವಿವೇಕ್ ಅವನನ್ನು ತನ್ನೊಂದಿಗೆ ಇರಲು ಒಪ್ಪಿಸಿದ್ದ. ಪರಿ ಮುಂದೆ ಹೋಗಬೇಕಾದ ಅಪಾರ್ಟ್ಮೆಂಟ್ ವಿಳಾಸ ತಿಳಿಸಿದಳು. ಪ್ರಸನ್ನ ತನಗೆ ವಿಪರೀತ ಹಸಿವಾಗಿದೆಯೆಂದು ಮೊದಲು ರೆಸ್ಟೋರೆಂಟ್ ಗೆ ಹೋಗುವಂತೆ ವಿವೇಕ್ ಗೆ ತಿಳಿಸಿದ. ಕಾರು ರೆಸ್ಟೋರೆಂಟ್ ಎದುರು ನಿಲ್ಲಿಸಿದ ವಿವೇಕ್. ಪರಿ ತನಗೆ ಹಸಿವಿಲ್ಲವೆಂದಳಾದರೂ ಕಾರ್ ನ ಡೋರ್ ತೆಗೆದು ಎದುರು ನಿಂತ ಪ್ರಸನ್ನನ ಬಿರುಸು ನೋಟವನ್ನು ಎದುರಿಸಲಾಗದೆ ಇಳಿದು ಒಳನಡೆದಿದ್ದಳು ಪರಿ. ಮೂರು ಜನರಿಗೂ ಊಟ ಆರ್ಡರ್ ಮಾಡಿದ್ದರು. ಬಿಸಿ ಬಿಸಿ ದಾಲ್ ರೋಟಿ, ಪಾಪಡ್ ದಹೀ, ಫ್ರೈಡ್ ರೈಸ್ ತಂದಿಟ್ಟಿದ್ದ ವೇಟರ್. ಪ್ರಸನ್ನ ಮತ್ತು ವಿವೇಕ್ ರ ತಟ್ಟೆಗಳು ಖಾಲಿಯಾಗುತ್ತ ಬಂದರೂ ಪರಿ ಇನ್ನೂ ಎರಡು ತುತ್ತು ಸಹ ತಿಂದಿರಲಿಲ್ಲ. ಇದನ್ನು ಗಮನಿಸಿದ ಪ್ರಸನ್ನ "ಹ್ಮ್... ಎರಡು ತುತ್ತು ಗಬಗಬ ತಿನ್ನೋಕೂ ಬರಲ್ಲ, ಹರ್ಷನ ಪಡೆಯೋ ಹುಚ್ಚು ಆಸೆ ಬೇರೆ!! ನೀವಲ್ಲೇ ಮನೆಯಲ್ಲಿಯೇ ಇರಬೇಕಿತ್ತು!! ಇಷ್ಟು ದೂರ ಬಂದಿದ್ದು ವ್ಯರ್ಥ!! ಬ್ರೋ.. ನಾನೊಂದು ಗೆಸ್ ಮಾಡ್ಲಾ?? ಈಗ ನನ್ನ ಊಟ ಮೊದಲು ಮುಗಿದ್ರೆ ಇವರಿಗೆ ಈ ಜನ್ಮದಲ್ಲಿ ಹರ್ಷ ಸಿಗಲ್ಲ ನೋಡ್ತಿರು! ಒಂದುವೇಳೆ ಅವರ ಊಟ ಫರ್ಸ್ಟ್ ಮುಗಿದ್ರೆ, ಅದು ಮುಗಿಯಲ್ಲ. ಒಂದು ವೇಳೆ ಮುಗಿದ್ರೆ.. ಇವರು ಮಾನ್ವಿಯ ಚಾಲೆಂಜ್ ಗೆಲ್ತಾರೆ ಹರ್ಷನ್ನ ಮತ್ತೆ ಮನೆಗೆ ಕರೆದುಕೊಂಡು ಹೋಗ್ತಾರೆ ಅಂತ ಅರ್ಥ!! ಒಕೆ!" ಅವಳನ್ನ ಓರೆ ನೋಟದಲ್ಲಿ ಗಮನಿಸುತ್ತ ಹೇಳಿದ ಪ್ರಸನ್ನ. ಅವನ ಮಾತಿಗೆ ಕಣ್ಣು ನಿಬ್ಬೆರಗಾಗಿಸಿದ ಪರಿ ಅವನ ತಟ್ಟೆ ನೋಡುತ್ತಲೇ ಅವನಿಗಿಂತ ಮೊದಲೇ ಗಬಗಬನೆ ಊಟವನ್ನು ಮಾಡಿ ಮುಗಿಸಿದ್ದಳು. ಅವಳ ಮುಖದಲ್ಲೊಂದು ಗೆಲುವು! ನಿರಾಳತೆ! ಅವಳ ಮುಗ್ದತೆ, ಪ್ರಸನ್ನನ ಚಾಣಾಕ್ಷತೆಯನ್ನು ಮಂದಹಾಸದಿ ನೋಡುತ್ತಿದ್ದ ವಿವೇಕ್ ಮಿತ್ರನನ್ನು ಮನದಲ್ಲೇ 'ಭಾರಿ ಚಾಣಾಕ್ಷ ಕಣೋ ನೀನು, ಬೈಯುತ್ತಾನೆ ಅವ್ರಿಗೆ ಊಟ ಮಾಡಿಸ್ಬಿಟ್ಟೆ' ಎಂದು ಪ್ರಶಂಸಿದ್ದ.
"ಹೊಟ್ಟೆ ತುಂಬಾ ತಿಂದ ತಕ್ಷಣ ಹರ್ಷ ಸಿಕ್ಕ ಹಾಗಲ್ಲ, ಮುಂದೆ ಏನ್ಮಾಡ್ಬೇಕು ಅನ್ನೋ ಯೋಚನೆ ಯೋಜನೆ ಕೂಡ ಸಿದ್ದ ಮಾಡ್ಕೋಬೇಕು. ಕಡಿಮೆ ಟೈಮ್ ನಲ್ಲಿ ತಟ್ಟೆ ಖಾಲಿ ಮಾಡಿದಷ್ಟು ಸುಲಭವಲ್ಲ ನೋಡದೆ ಮಾತಾಡದೆ ಹತ್ತು ದಿನಗಳಲ್ಲಿ ಹರ್ಷನ್ನ ಒಲಿಸಿಕೊಳ್ಳೊದು!!" ಪ್ರಸನ್ನ ಮತ್ತೆ ಸಿಡುಕಿದ. ಪರಿ ತಲೆ ಕೊಡವಿ ಅಲ್ಲಿಂದ ಎದ್ದು ಹೋದಳು. "ಥೂ.. ಯಾಕೋ ಅವ್ರನ್ನ ಹೀಗೆ ಮಾತಲ್ಲೇ ಚುಚ್ತಿದ್ದಿಯಾ?" ಗೊಣಗಿಕೊಂಡ ವಿವೇಕ್. ಪ್ರಸನ್ನ ಪರ್ಸ್ ನಿಂದ ದುಡ್ಡು ತೆಗೆದು ಬಿಲ್ ತೆತ್ತು ಮಾತನಾಡದೆ ಅಲ್ಲಿಂದ ಎದ್ದು ನಡೆದಿದ್ದ. ಇಬ್ಬರ ಮೌನ ವಿವೇಕ್ ನಿಗೆ ಸಹಿಸಲಾಗದ ಪೇಚಾಟವಾಗಿತ್ತು. ಕಾರ್ ಕೀ ಎತ್ತಿಕೊಂಡು ಸುಮ್ಮನೆ ಅವನನ್ನು ಹಿಂಬಾಲಿಸಿದ್ದ.
******
ಭವಾನಿ ಅಪಾರ್ಟ್ಮೆಂಟ್ ಕಟ್ಟಡದ ಎದುರು ಕಾರ್ ನಿಲ್ಲಿಸಿದ ವಿವೇಕ್ ಇಲ್ಲಾ?? ಎಂದು ಕೇಳಿದ. ಪರಿ ಹೌದೆಂಬಂತೆ ತಲೆ ಹಾಕಿದಳು. 7thಫ್ಲೊರ್, ರೂಂ ನಂ #332 ವಿಜಯ್ ಮೆಹ್ತಾ retd major officer. ಬಾಗಿಲೆದುರು ಹೀಗೊಂದು ಬೋರ್ಡ್ ಇತ್ತು.
ಡೋರ್ ಬೆಲ್ ಬಾರಿಸುತ್ತಿದ್ದಂತೆ ಅರವತ್ತರ ವ್ಯಕ್ತಿಯೊಬ್ಬರು ಬಾಗಿಲು ತೆರೆದಿದ್ದರು. ಪರಿಯನ್ನು ನೋಡಿದ್ದೇ "ಡಾ.ಪರಿ ಅಲ್ವಾ..? ಬಾಮ್ಮಾ.. ಬನ್ನಿ ಬನ್ನಿ" ಎಂದು ಎಲ್ಲರನ್ನೂ ಒಳಕರೆದರು. ಆ ವ್ಯಕ್ತಿಯ ನಿಲುವು, ವರ್ಚಸ್ಸು, ನಡೆಯುವ ಠೀವಿಯನ್ನು ನೋಡಿಯೇ ಹೇಳಬಹುದಿತ್ತು ಅವರೊಬ್ಬ ಸಮರ್ಥ ಸೇನಾಧಿಕಾರಿ ಎಂದು. ಪ್ರಸನ್ನ ತುಂಬು ಹೆಮ್ಮೆಯಿಂದ ಅವರೊಂದಿಗೆ ಕೈ ಕುಲುಕಿ ತನ್ನ ಪರಿಚಯ ಹೇಳಿಕೊಂಡಿದ್ದ. ಪರಿ ಮತ್ತು ಅವಳ ಹಿಂದಿಂದೆ ವಿವೇಕ್ ಮತ್ತು ಪ್ರಸನ್ನ ಒಳನಡೆದಿದ್ದರು. ಪರಿ ಒಳಗೆ ಕಾಲಿಡುತ್ತಿದ್ದಂತೆ ಕಿಟ್‌ಕ್ಯಾಟ್ ಎಂದು ಓಡಿ ಬಂದ ಅಖಿಲಾ ಅವಳನ್ನು ಬಾಚಿ ತಬ್ಬಿಕೊಂಡಿದ್ದಳು. ಅವಳ ಹಿಂದೆಯೇ ಓಡಿ ಬಂದ ನಿಖಿಲ್ ಸಹ " ಹೋ.. ಕಿಟ್‌ಕ್ಯಾಟ್ ಇನ್ಮುಂದೆ ನಮ್ಮ ಜೊತೆಗೆ ಇರ್ತಾಳಂತೆ" ಎಂದು ಜೋರಾಗಿ ಕೂಗಿ ಸಂಭ್ರಮಿಸಿದ್ದ. ಪರಿ ಇಬ್ಬರೂ ಮಕ್ಕಳನ್ನು ಅಪ್ಪಿಕೊಂಡು ಮುದ್ದುಗರೆದು ಚಾಕೊಲೇಟ್ ಮತ್ತು ತಿನಿಸುಗಳನ್ನು ಕೊಡುತ್ತ "ಈ ಸಲ ಸಮ್ಮರ್ ವೆಕೆಷನ್, ಮೂರು ಜನ ಸೇರಿ ಚಿಂದಿ ಉಡಾಯ್ಸೋಣ ಒಕೆ" ಎಂದು ಹೈ ಫೈವ್ ಮಾಡಿದಳು. ಇಬ್ಬರೂ ಮಕ್ಕಳ ಸಂತೋಷಕ್ಕಂತೂ ಪಾರವೇ ಇರಲಿಲ್ಲ. ವಿವೇಕ್ ಮತ್ತು ಪ್ರಸನ್ನ ಮೇಜರ್ ಆಣತಿಯಂತೆ ಸೋಫಾ ಮೇಲೆ ಕುಳಿತಿದ್ದರು.
"ನಮ್ಮ ಆನ್ಯಾ ಆಗಲೇ ಹೇಳಿದಳಮ್ಮ ನೀನು ಬರ್ತಿದೀಯಾ ಅಂತ. ಇನ್ಮುಂದೆ ನೀನು ಇಲ್ಲೇ ನಮ್ಮ ಜೊತೆಗೆ ಇರ್ತಿಯಾ! ನಮ್ಮ ಅತಿಥಿಯಾಗಿ!! ಮನೇಲಿ ಇರೋದೆ ನಾನು ನನ್ನ ಅರ್ಧಾಂಗಿ ಮತ್ತೆ ನಮ್ಮ ಈ ಚಿಲ್ಟಾರಿಗಳು ಮಾತ್ರ..ನೀನು ಯಾವುದಕ್ಕೂ ಸಂಕೋಚ ಪಟ್ಕೊಬೇಡ ಆಯ್ತಾ.." ಮೇಜರ್ ಸರ್ ಹೇಳಿದ್ದರು.
"ನೋ ಸರ್. ಆನ್ಯಾ ಹೇಳಿದ್ರು ಇಲ್ಲಿ ನಿಮ್ಮ ಅಪಾರ್ಟ್ಮೆಂಟ್ ನಲ್ಲಿ ಒಂದು ಫ್ಲ್ಯಾಟ್ ಖಾಲಿ ಇದೆಯಂತ.. ನಾನು ಅದಕ್ಕೋಸ್ಕರ.." ಎನ್ನುತ್ತಿದ್ದ ಪರಿಯ ಮಾತನ್ನು ತಡೆದು "ನಿನ್ನ ಸ್ವಭಾವ ಹೀಗಂತಾನೆ ತಿಳಿದೇ ನನ್ನ ಮಗಳು ನಿನಗೆ ಸುಮ್ಮನೆ ಹಾಗೆ ಹೇಳಿರಬಹುದು!! ಈಗ ನಾನು ಹೇಳ್ತಿದ್ದಿನಲ್ಲಾ.. ನೀನು ಇಲ್ಲೇ ಇರ್ತಿಯಾ ಅಷ್ಟೇ! No more arguments okay. ಹ್ಮಾ ಇನ್ನೊಂದು ಸರ್ ಬೇಡ ಅಂಕಲ್ ಅನ್ನು" ಮೇಜರ್ ಅವರ ಆಜ್ಞೆಯಾಗಿತ್ತು. ಪರಿಗೆ ಬೇರೆ ಮಾತೇ ಹೊರಡದೆ ಹ್ಮೂಗುಟ್ಟಿದಳು.
"ಏನಪ್ಪಾ ವಿವೇಕ್ ನೀನು ಇವ್ರ ಜೊತೆ??" ಕೇಳಿದರು ಮೇಜರ್.
"ಅಂಕಲ್ ಇವರು ನಮ್ಮ ಫ್ರೆಂಡ್ಸ್. ಇವನು ಡಾ.ಪ್ರಸನ್ನ. ಅವರು ಡಾ.ಪರಿ. ಇನ್ಮುಂದೆ ಇವನು ನನ್ನ ಜೊತೆಗೆ ಇರ್ತಾನೆ. " ವಿವೇಕ್ ಹೇಳಿದ್ದ.
"ನಿಮಗೆ ಇವರು ಮೊದಲೇ ಗೊತ್ತಾ ಮಿ.ವಿವೇಕ್?" ಪರಿ ಆಶ್ಚರ್ಯದಿಂದ ಕೇಳಿದಳು.
"ಗೊತ್ತಾ... ಏನಮ್ಮ. ಇವನು ಎರಡು ವರ್ಷದಿಂದ ಇಲ್ಲಿಯೇ ಮೇಲ್ಗಡೆ ಫ್ಲಾಟ್ ನಲ್ಲಿ ಇರೋದು. ತುಂಬಾ ಪರಿಚಯ.." ವಿವೇಕ್ ಗಿಂತ ಮೊದಲೇ ಮೇಜರ್ ಉತ್ತರಿಸಿದ್ದರು.
"ಹ್ಮೂ.. ಮತ್ತೆ ವರ್ಷದಲ್ಲಿ ಕನಿಷ್ಟ ಆರು ತಿಂಗಳು ಇವರ ಮನೆಯಲ್ಲಿ ಊಟ ನನ್ನದು. ಆಂಟಿ ಕೈ ರುಚಿ ತಿಂದವರು ಇವರ ಮನೆಗೆ ಆಗಾಗ ಬರ್ತಾನೆ ಇರಬೇಕು ಅಷ್ಟು ರುಚಿಯಾಗಿರುತ್ತೆ ಗೊತ್ತಾ" ವಿವೇಕ್ ಹೊಗಳಿದ್ದ.
" ನೀವು ನನಗೆ ಹೇಳಲೇ ಇಲ್ಲ ಇದು ನಿಮ್ಮ ಅಪಾರ್ಟ್ಮೆಂಟ್ ಅಂತ " ಪರಿ ವಿವೇಕ್ ನತ್ತ ದೃಷ್ಟಿ ಬೀರಿದಳು
"ಯಾಕೆಂದರೆ ಇದು ನನ್ನ ಅಪಾರ್ಟ್ಮೆಂಟ್ ಅಲ್ಲ ಪರಿ. ನಾನು ಇಲ್ಲಿ ಜಸ್ಟ್ ಬಾಡಿಗೆಗೆ ಇರೋದು" ವಿವೇಕ್ ತಮಾಷೆ ಮಾಡಿದ. ಅವನ ಮಾತಿಗೆ ನಕ್ಕ ಮೇಜರ್ ತಮ್ಮ ಧರ್ಮಪತ್ನಿ ವೈದೇಹಿ ಅವರನ್ನು ಕೂಗಿದ್ದರು. ಸರಳ ಸಾತ್ವಿಕ ಕಳೆಯ ವೈದೇಹಿಯವರು ಟ್ರೇ ನಲ್ಲಿ ಜ್ಯೂಸ್ ಹಿಡಿದು ತಂದು ಎಲ್ಲರಿಗೂ ಕೊಡುತ್ತ ಮುದ್ದು ನಗುವಿನೊಂದಿಗೆ ಎಲ್ಲರ ಪರಿಚಯ ಮಾಡಿಕೊಂಡರು. ವೈದೇಹಿಯವರು ಪರಿಗೆ ಅವಳ ರೂಂ ತೋರಿಸಿ ಅವಳ ಜೊತೆಗೆ ಕುಳಿತು ಕೊಂಚ ಹರಟೆ ಹೊಡೆಯುತ್ತ ಕುಳಿತರು. ವಿವೇಕ್ ಮೇಜರ್ ಸರ್ ಜೊತೆಗೆ ಹರಟೆಗಿಳಿದಿದ್ದ. ನಂತರ ವೈದೇಹಿಯವರು ಎಲ್ಲರನ್ನೂ ಊಟ ಮಾಡಲು ಒತ್ತಾಯಿಸಿದ್ದರು. ವಿವೇಕ್ ತಾವು ಮೂರು ಜನ ಈಗ ತಾನೇ ಊಟ ಮಾಡಿ ಬಂದಿರುವುದಾಗಿ ತಿಳಿಸಿ ನಿರಾಕರಿಸಿದ. ಮೇಜರ್ ತಮಗೆ ಇನ್ಸ್ಟಿಟ್ಯೂಟ್ ನಲ್ಲಿ ಕೆಲಸ ಇರುವುದಾಗಿ ತಿಳಿಸಿ ಹೊರಗೆ ಹೊರಟು ಹೋಗಿದ್ದರು. ಪ್ರಸನ್ನ ವಿವೇಕ್ ಮಕ್ಕಳ ಆಟವನ್ನು ನೋಡುತ್ತ ಮಾತನಾಡುತ್ತಾ ಕುಳಿತರು.
ಅಖಿಲಾ ಮತ್ತು ನಿಖಿಲ್ ಬಲೂನುಗಳೊಂದಿಗೆ ಆಟವಾಡುತ್ತಿದ್ದರು. ಮೇಲೆ ಹಾರಿಸುವುದು ಮತ್ತೆ ಎತ್ತಿ ಹಿಡಿಯುವುದು ಬಲೂನು ಗಾಳಿಯಲ್ಲಿ ತೇಲಾಡುತ್ತಿದ್ದವು. ಅಚಾನಕ್ಕಾಗಿ ನಿಖಿಲ್ ಅಖಿಲಳ ಬಲೂನ್ ಮೇಲೆ ಕಾಲಿಟ್ಟು ಬಿಟ್ಟ. ಬಲೂನ್ ಢಬ್... ಎಂಬ ದೊಡ್ಡ ಸದ್ದಿನೊಂದಿಗೆ ಒಡೆದು ಹೋಗಿತ್ತು. ಅಖಿಲಳ ಜೋರು ಧ್ವನಿಯ ಅಳು ಧಾರಾಕಾರವಾಗಿ ಹರಿಯಿತು. ಪರಿ ಮತ್ತು ವೈದೇಹಿ ಅದೆಷ್ಟು ಸಮಾಧಾನ ಮಾಡಿದರೂ ಅಖಿಲಳ ಅಳು ನಿಲ್ಲಲಿಲ್ಲ. ನಿಖಿಲ್ ಬೇಕು ಅಂತ ಮಾಡಿಲ್ಲ, ಮಿಸ್ ಆಗಿ ನೋಡದೆ ತುಳಿದುಬಿಟ್ಟೆ ಎಂದು ಸಾರಿ ಕೇಳಿದರೂ ಅಖಿಲಾ ತಾನೂ ಅವನ ಬಲೂನ್ ಅನ್ನು ಒಡೆದೇ ತೀರುವುದಾಗಿ ಹಠ ಮಾಡಿದಳು. ಪರಿ ತಕ್ಷಣ "ನೀನು ಹೀಗೆ ಹಠ ಮಾಡ್ತಿದ್ರೆ, ಆ ಅಂಕಲ್ ನಿನ್ನ ಎಳೆದು ಕಪಾಳಕ್ಕೆ ಎರಡು ಬಾರಿಸ್ತಾರೆ ನೋಡು ಮತ್ತೆ" ಎಂದು ಪ್ರಸನ್ನನ ಕಡೆಗೆ ಬೆರಳು ತೋರಿಸಿ ಎಚ್ಚರಿಕೆ ನೀಡಿದಳು. ಅಖಿಲಳ ಅಳು ಹೆಚ್ಚಾಯಿತು. ಪರಿ ಅವಳ ಕಿವಿಯಲ್ಲಿ ಏನೋ ಪಿಸುಗುಟ್ಟುತ್ತಿದ್ದಂತೆ ಅಖಿಲ ಕಿಲಕಿಲ ನಕ್ಕು ಬಿಟ್ಟು ಹ್ಮೂ ಎಂದು ತಲೆ ಹಾಕಿದಳು. "ಮಿ.ವಿವೇಕ್ ಮಕ್ಕಳು ಹಠ ಮಾಡಿದಾಗ ರಮಿಸಿ ಬುದ್ದಿ ಹೇಳಬೇಕೇ ವಿನಃ ಕಪಾಳಕ್ಕೆ ಹೊಡೆದು ಬಡೆದು ಅಲ್ಲ. ಸರಿ ತಾನೇ!"ಮಾತು ಪರೋಕ್ಷವಾಗಿ ಪ್ರಸನ್ನನ ಕಡೆಗೆ ಹರಿದಿತ್ತು.
"ಮಕ್ಕಳ ಮನಸ್ಸಿಗೂ ಮಕ್ಕಳ ಹಾಗೆ ವರ್ತಿಸುವವರ ಮನಸ್ಸಿಗೂ ಅಜಗಜಾಂತರ ವ್ಯತ್ಯಾಸ ಇರುತ್ತೆ. ಅದನ್ನು ಅರ್ಥ ಮಾಡಿಕೊಳ್ಳುವ ವಿವೇಚನೆ ನಮಗಿರ್ಬೇಕು. ಅಲ್ವೇನೋ!" ಪ್ರಸನ್ನ ವಿವೇಕ್ ಮೇಲೆ ಹರಿಹಾಯ್ದ. ವಿವೇಕ್ ನಿಗೂ ಈ ಮಧ್ಯಸ್ಥಿಕೆಯ ಗೊಜಲು ಬೇಸರವಾಗಿತ್ತು.
"ಪರಿ ಎಂಜಾಯ್ ದೇರ್ ಕಂಪನಿ. ನಾವಿನ್ನು ಹೊರಡ್ತೆವೆ." ವಿವೇಕ್ ಹೇಳಿದ.
"ಹ್ಮೂ.. ಮಾಡ್ತಾರೆ ಮಾಡ್ತಾರೆ... ಎಂಜಾಯ್ ಮಾಡೋದಕ್ಕೆ ತಾನೇ ಬಂದಿರೋದು ಅವರು. ಮತ್ತೇನಿದೆ ಕೆಲಸ ಅವರಿಗೆ!!" ಪ್ರಸನ್ನನ ಕೊಂಕು ಮಾತು ತಾಳದೆ ವಿವೇಕ್ ಪರಿಗೆ ಬಾಯ್ ಹೇಳಿ ಅವನನ್ನ ದರದರನೆ ತನ್ನ ಫ್ಲೋರ್ ಗೆ ಕರೆದುಕೊಂಡು ಹೊರಟಿದ್ದ.
'ನೋಡ್ತಾ ಇರಿ ಪ್ರಸನ್ನ, ನಾಳಿನ ಮುಂಜಾವಿನ ಕಿರಣಗಳು ಹರ್ಷನ ಪಾಲಿಗೆ ಹೊಸ ಉತ್ಸಾಹ ಹೊಸ ಚೇತನವನ್ನು ಹೊತ್ತು ತರುತ್ತವೆ. ಎದುರು ಹೋಗಿ ಮಾತಾಡದಿದ್ದರೇನಂತೆ ಬೀಸೋ ಗಾಳಿಯಲ್ಲಿ ಹರಡಿ ಬಿಡುವೆ ನನ್ನೆಲ್ಲ ಒಲವನ್ನು.. ಅವನಿಂದ ಸರ್ವಸ್ವವನ್ನೂ ಪಡೆದ ನನ್ನ ಪ್ರೀತಿಯಲ್ಲಿ ಕೊಂಚ ಸ್ವಾರ್ಥವಿರಬಹುದೇನೋ ಆದರೆ ನನ್ನ ಹರ್ಷನ ಯಾವುದೇ ಆಕಾಂಕ್ಷೆಗಳಿಲ್ಲದ ನಿಸ್ವಾರ್ಥ ನಿಷ್ಕಲ್ಮಷ ಪ್ರೀತಿಗೆ ನನ್ನ ಆಂತರ್ಯದ ಪಿಸುಮಾತು ಅರಿಯುವುದು ಕಷ್ಟವಾಗಲಾರದು.' ಪ್ರಸನ್ನನ ಹೀಯಾಳಿಕೆಗೆ ಪರಿಯ ಮೌನ ಉತ್ತರವಿದು.
"ಯಾಕೋ... ಅವರಿಗೆ ಹಾಗೆ ಚುಚ್ಚಿ ಚುಚ್ಚಿ ಮಾತಾಡ್ತಿದ್ದೆ? ಪಾಪದ ಹುಡುಗಿ ಅದು. ಎಲ್ಲರನ್ನೂ ನಂಬುತ್ತೆ. ಅವರ ಜೊತೆಗಿದ್ದು ಧೈರ್ಯ ಹೇಳೋದು ಬಿಟ್ಟು..." ತನ್ನ ರೂಂ ಬಾಗಿಲು ತೆಗೆಯುತ್ತ ವಿವೇಕ್ ರಾಗವೆಳೆದಿದ್ದ.
"ಧೈರ್ಯ...? ನಾನು...? ಅವರಿಗೆ...? ಹೋಗಲೋ... ಹರ್ಷನ ವಿಷಯದಲ್ಲಿ ಅವರಿಗಿರುವಷ್ಟು ಧೈರ್ಯ ಬಹುಶಃ ನನಗೂ ಇಲ್ವೆನೋ..!!(ಪ್ರಸನ್ನನ ಸ್ಮೃತಿಯಲ್ಲಿ ಕರಾಳರಾತ್ರಿಯ ಸ್ಮಶಾನ ಎದುರುಗೊಂಡಿತ್ತು) ನನಗೊತ್ತು ಅವರು ಸುಮ್ಮನೆ ಕೂರೋ ಹುಡುಗಿ ಅಲ್ಲ. ಹರ್ಷನ ಸಲುವಾಗಿ ಯಾವ ಹಂತಕ್ಕೂ ಬೇಕಾದರೂ ಹೋಗ್ತಾರೆ, ಏನ್ಬೇಕಾದ್ರೂ ಮಾಡ್ತಾರೆ. ನಾನು ಜಸ್ಟ್ ಅವರನ್ನ ಪ್ರೋವೋಕ್ ಮಾಡೊಕೆ ಹಾಗೆ ಮಾತಾಡಿದ್ದು ಅಷ್ಟೇ!!"
"ಪ್ಚ್.. ಆದರೆ ರಿಪೋರ್ಟ್ ನನ್ನ ಕೈ ಸಿಕ್ಕಿದ ನಂತರ ಆ ರಾಕ್ಷಸಿನಾ ಭೇಟಿಯಾಗಿ ಚೆನ್ನಾಗಿ ಆಟ ಆಡ್ಸೋಣ ಅನ್ಕೊಂಡಿದ್ದೆ. ಆದರೆ ಈಗ ಅವಳನ್ನ ಬೇರೆ ರೀತಿಯಲ್ಲಿಯೇ ನೋಡ್ಕೋಬೇಕು. ಗೇಮ್ ಅಂತೆ, ರೂಲ್ಸ್ ಅಂತೆ, ಆಡಲಿ.. ಆಡಲಿ.. ಅವಳಿಗೇನ್ ಗೊತ್ತು.. ಈ ಗೇಮ್ ನಲ್ಲಿ ಯಾವ ರೂಲ್ಸ್‌ನ್ನು ಫಾಲೋ ಮಾಡದ ಶುದ್ಧ ಮೊಂಡ ಪ್ಲೇಯರ್ ಒಬ್ಬ ಇದ್ದಾನೆ ಅಂತಾ!!" ಪ್ರಸನ್ನ ವ್ಯಂಗ್ಯ ನಗು ನಕ್ಕ.
"ರಿಪೋರ್ಟ್ಸ್ ಅಂತೂ ಸಿಗಲಿಲ್ಲ. ಈಗ ಮುಂದೆ ಏನ್ಮಾಡೋದು?" ವಿವೇಕ್ ಕೇಳಿದ.
"ಹರ್ಷನ ನಂಬಿಕೆ ಗಳಿಸೋದು. ಅವನ ಜೊತೆಗೆ ಇರೋದು. ಹತ್ತು ದಿನಗಳಲ್ಲಿ ಅವನ ನೆನಪು ಬರುತ್ತೋ ಇಲ್ವೋ ಗೊತ್ತಿಲ್ಲ ಆದರೆ ಮಾನ್ವಿ ಮುಖವಾಡ ಅಂತೂ ಕಳಚಿ ಬೀಳುತ್ತೆ. ಅವಳ ಬಾಯಿಂದಾನೇ ಎಲ್ಲಾ ಸತ್ಯ ಹರ್ಷನಿಗೆ ಹೇಳೊ ಹಾಗೆ ಮಾಡ್ತಿನಿ ನೋಡ್ತಿರು.." ಪ್ರಸನ್ನ ಕೂಲಾಗಿ ಹೇಳಿದ್ದ.
"ನೀನು ಹರ್ಷನ ಜೊತೆಗೆ ಇರ್ತಿಯಾ? ಅದ್ಹೇಗೆ? ಹರ್ಷ ನಂಬ್ತಾನಾ ನಿನ್ನ? ಆ ಮಾನ್ವಿ ಸುಮ್ಮನೆ ಒಪ್ಕೊಳ್ತಾಳಾ?"
"ಅವಳೇ ನನ್ನ ಅವನ ಜೊತೆ ಭೇಟಿ ಮಾಡಿಸಿ, ಅವನ ಮನೆಗೂ ಕರೆದುಕೊಂಡು ಹೋಗ್ತಾಳೆ. ಹೋಗ್ಬೇಕು.. ಇಲ್ಲಾಂದ್ರೆ... ಅದು ಬಿಡು. ಈಗಲೇ ನಿನ್ನ ಆ್ಯಡ್ ಕಂಪನಿಗೆ ಹೋಗೋಣ ಬಾ. ಒಂದು ಚಿಕ್ಕ ಶೂಟಿಂಗ್ ಇದೆ." ಪ್ರಸನ್ನ ಕಣ್ಣು ಮಿಟುಕಿಸಿ ನಕ್ಕ. ಬಹುಶಃ ವಿವೇಕ್ ಗೂ ಅವನ ಯೋಜನೆ ಅರ್ಥವಾಯಿತೇನೋ ಅವನು ಉತ್ಸಾಹದಿಂದ ಅವನ ಬೆನ್ನು ತಟ್ಟಿ ಭುಜಕ್ಕೆ ಕೈ ಹಾಕಿದ.
ಮುಂದುವರೆಯುವುದು..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ