ಕಿಟ್ಟಿ ಸ್ಯೂ ಕ್ಲಬ್, ಮುಂಬೈ
ರಾತ್ರಿ 9.45 ಗಂಟೆ.
ಮಧ್ಯಪಾನದಲ್ಲಿ ಮಗ್ನರಾಗಿ ಅರೆನಗ್ನ ಆಧುನಿಕ ಉಡುಗೆಯ ಯುವಕ ಯುವತಿಯರ ಮಾದಕ ನೃತ್ಯಗಳ ಭೂಗತ ಸ್ವರ್ಗವದು!! ಕಲರ್ ಕಲರ್ ತೂಗುದೀಪಗಳು, ಮಿಣ ಮಿಣ ಮಿನುಗುವ ಮಂದ ಲೈಟುಗಳು... ಕಿವಿಯ ತಮಟೆ ಕಿತ್ತು ಹೋಗುವಂತೆ ಚೀರುವ ಡಿಜೆ ಮ್ಯೂಸಿಕ್... ಅದಕ್ಕೆ ತಕ್ಕಂತೆ ಕತ್ತೆಯಂತೆ ಕುಣಿದು ಕುಪ್ಪಳಿಸುವ ಯುವಜನಾಂಗ.. ಮುಂಬೈನ ನಿಶಾಚರ ಲೋಕದೊಳಗೆ ಇದೆಲ್ಲಾ ದಿನನಿತ್ಯದ ಸಾಮಾನ್ಯ ಸಂಗತಿಗಳು. ಆದರೆ ಆ ರಾತ್ರಿ ಆ ಕ್ಲಬ್ ಗೆ ವಿಶೇಷ ಮೆರಗು ನೀಡಿದ್ದು, ಅಲ್ಲಿಗೆ ಬಂದಿದ್ದ ಆಗರ್ಭ ಶ್ರೀಮಂತರ ಮಕ್ಕಳಾದ ಸಂಕಲ್ಪ್ ಮತ್ತು ಮಾನ್ವಿ.
ಅಚ್ಚಬಿಳಿ ಟೀ ಶರ್ಟ್ ಮೇಲೆ ಕಪ್ಪು ಬ್ರಾಂಡೆಡ್ ಜರ್ಕಿನ್, ಅದರೊಳಗೆ ಮಿಂಚುವ ಗಾಗಲ್, ರಿಚ್ ವಾಚ್, ಸ್ಪೋರ್ಟ್ಸ್ ಶ್ಯೂಸ಼್ ಧರಿಸಿದ್ದ ಸಂಕಲ್ಪ್ (ಹರ್ಷ) ಹುಡುಗಿಯರ ಪಾಲಿನ ಕನಸಿನ ದೊರೆಯಾಗಿದ್ದರೆ,, ಮೊಣಕಾಲವರೆಗಿನ ತಿಳಿನೀಲಿ ಜೀನ್ಸ್ ಫ್ರಾಕ್ ತೊಟ್ಟು, ಬಿಚ್ಚು ರೇಷ್ಮೆ ಕೂದಲನ್ನು ಹಾರಿಸುತ್ತ ವೈಯಾರವಾಗಿ ಬಂದ ಹಾಲ್ಗೆನ್ನೆ ಚೆಲುವೆ ಮಾನ್ವಿ ಹುಡುಗರೆದೆಗೆ ಕಿಚ್ಚು ಹಚ್ಚುವಂತಿದ್ದಳು. ಈ ಮೊದಲು ಹರ್ಷನ ತುಂಟ ಕಿರುನಗುವಿನ ತೇಜಸ್ಸಿಗೆ ಬದಲಾಗಿ ಈಗ ಮುಖದ ಗಾಂಭೀರ್ಯ ಮತ್ತು ಮೂಗಿನ ತುದಿಯ ಕೋಪ ಅವನ ಆಭೂಷಣವಾಗಿತ್ತು. ನಡೆಯುವ ಶೈಲಿಯಲ್ಲಿನ ಆ ಗತ್ತು ಅವನ ವ್ಯಕ್ತಿತ್ವವನ್ನು ವರ್ಣಿಸುತ್ತಿತ್ತು. ಅವನ ಜೊತೆಗೆ ಹೆಜ್ಜೆ ಹಾಕುವುದೇ ಮಾನ್ವಿಗೊಂದು ಹೆಮ್ಮೆಯ ಗರ್ವದ ವಿಚಾರವಾಗಿತ್ತು. ಅವರ ಅಕ್ಕ ಪಕ್ಕದಲ್ಲಿ ನಡೆದು ಬಂದಿತ್ತು ನಾಲ್ಕು ಜನ ಬಾಡಿಗಾರ್ಡ್ಸ್ ಸವಾರಿ ಸಹ.
ಅವರು ಬರುತ್ತಿದ್ದಂತೆ ಒಂದು ಪ್ರತ್ಯೇಕ ಟೇಬಲ್ ಕಡೆಗೆ ಅವರನ್ನು ಆಮಂತ್ರಿಸಿ ಕೂರಿಸಿದ್ದ ಮ್ಯಾನೇಜರ್. ಮಾನ್ವಿ ಸಾಫ್ಟ್ ಡ್ರಿಂಕ್ ಆರ್ಡರ್ ಮಾಡಿದರೆ ಸಂಕಲ್ಪ್ ವಿಸ್ಕಿ ಆರ್ಡರ್ ಮಾಡಿದ. "ವಿಸ್ಕಿ ಆ.. ನೋ ಸಂಕು.. ನಿನ್ನ ಹೆಲ್ತ್ ಬಗ್ಗೆ ಗೊತ್ತಿದೆ ತಾನೇ?? ವಿಸ್ಕಿ ಬೇಡ. ಲೈಟಾಗಿ ಸಾಫ್ಟ್ ಡ್ರಿಂಕ್ಸ್ ತಗೋ.." ಮಾನ್ವಿ ರಮಿಸಿದಳು.
"ಮಾನ್ವಿ,,, ಮೊದಲೇ ನನ್ನ ಮೂಡ್ ಸರಿಯಿಲ್ಲ. ನೀನ್ ಬೇರೆ ನನ್ನ ತಲೆ ತಿನ್ಬೇಡ!! ಮನಶ್ಯಾಂತಿನೇ ಇಲ್ಲದ ಮೇಲೆ ಯಾವ ಆರೋಗ್ಯ ಕಟ್ಕೊಂಡು ನನಗೇನಾಗೋದಿದೆ. ನಿನಗಿಷ್ಟವಿಲ್ಲದಿದ್ರೆ ಎದ್ದು ಹೋಗು. ನನ್ನ ತಡಿಬೇಡ.." ಸಂಕಲ್ಪ್ ನ ನಿಷ್ಠುರ ಕಟುವಾದ ಮಾತಿಗೆ ಮಾನ್ವಿ ತೆಪ್ಪಗೆ ಅಲ್ಲಿಂದ ಎದ್ದು ಕೌಂಟರ್ ಕಡೆಗೆ ಹೋಗಿದ್ದಳು. ಕೌಂಟರ್ ಎದುರಿನ ದುಂಡನೆಯ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾ ವೇಟರ್ ಗೆ ಏನೋ ಕೇಳುತ್ತಿದ್ದಳು. ವೇಟರ್ ಅವಳಿಗೆ ಜ್ಯೂಸ್ ಸರ್ವ್ ಮಾಡಿದ್ದ. ಸಂಕಲ್ಪ್ ಕಡೆಗೆ ನೋಡುತ್ತ ಜ್ಯೂಸ್ ಗ್ಲಾಸ್ ತೆಗೆದುಕೊಳ್ಳುವಾಗ ಅವಳ ಮೊಬೈಲ್ ವೈಬ್ರೆಟ್ ಆಗಿತ್ತು. ತೆಗೆದು ನೋಡಿ ಯಾವುದೋ ಅನಾಮಧೇಯ ಸಂಖ್ಯೆಯ ಕರೆ ಎಂದು ಕರೆಯನ್ನು ಕಡಿತಗೊಳಿಸಿದ್ದಳು. ಜ್ಯೂಸ್ ಒಂದು ಸಿಪ್ ಗುಟುಕುವಷ್ಟರಲ್ಲಿ ಮತ್ತದೇ ಸಂಖ್ಯೆಯಿಂದ ಕರೆ ಬಂದಿತ್ತು. ಆಕೆ ಮತ್ತೆ ಕಾಲ್ ಕಟ್ ಮಾಡಿದಳು. ಐದು ನಿಮಿಷಗಳ ನಂತರ ಅದೇ ಸಂಖ್ಯೆಯಿಂದ ಒಂದು ಸಂದೇಶವನ್ನು ಕಳಿಸಲಾಯಿತು. "ಎಂ.ಆರ್ ಹಾಸ್ಪಿಟಲ್ ನ ಅಕ್ರಮ ವ್ಯವಹಾರ'' ಶೀರ್ಷಿಕೆಯ ಅಡಿಯಲ್ಲಿ ಒಂದು ವಿಡಿಯೋವನ್ನು ಸಹ ಕಳಿಸಲಾಗಿತ್ತು. ಯಾವುದೋ ಅಪರಿಚಿತ ನಂಬರ್ ಎಂದುಕೊಂಡು ನಿರ್ಲಕ್ಷ್ಯ ತೋರಿದ ಮಾನ್ವಿಯ ಗಮನ ಆಗ ಆ ಕಡೆಗೆ ಕೇಂದ್ರೀಕೃತವಾಯಿತು. ಎದೆ ಯಾವುದೋ ಅಶುಭ ಸೂಚನೆ ಎಂಬಂತೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಸದ್ದುಗದ್ದಲದಿಂದ ದೂರ ಹೊರ ನಡೆದು ಆ ವಿಡಿಯೋದಲ್ಲಿ ಏನಿದೆ ನೋಡಬೇಕೆಂದು ಎದ್ದು ಹೊರಟಳು. ಹೊರಡುವ ಮುನ್ನ ಸೆಕ್ಯೂರಿಟಿ/ಬಾಡಿಗಾರ್ಡ್ಸ್ ಗೆ ಕಣ್ಸನ್ನೆಯಲ್ಲಿ 'ಸಂಕಲ್ಪ್ ಹುಷಾರು' ಎಂಬಂತೆ ಎಚ್ಚರಿಕೆ ನೀಡಿ ಹೋಗಿದ್ದಳು. ಕ್ಲಬ್ ನ ಮೇನ್ ಡೋರ್ ನಿಂದ ಆಚೆಗಿನ ಲೌಂಜ್ ನಲ್ಲಿ ಬಂದು ಆ ವಿಡಿಯೋ ಏನೆಂದು ತೆಗೆದು ನೋಡಿದವಳು ಗರಬಡಿದಂತೆ ನಿಷ್ಕ್ರಿಯಳಾಗಿ ನಿಂತು ಬಿಟ್ಟಳು...
ಕೂದಲು ಕೆದರಿ, ಬಟ್ಟೆ ಅಲ್ಲಲ್ಲಿ ಹರಿದುಹೋದ, ತಲೆ ಬಾಯಿಯಿಂದ ರಕ್ತ ಒಸರುತ್ತಿದ್ದ ವ್ಯಕ್ತಿಯೊಬ್ಬ ಜೋಲುಮುಖ ಹಾಕಿಕೊಂಡು ಯಾರಿಗೋ ಹೆದರಿ ಹೆದರಿ ಮಾತನಾಡುತ್ತಿದ್ದ. "ಮೇ ಸಬ್ ಸಚ್ ಬತಾತಾ ಹ್ಮೂ, ಸಾಹೇಬ್, ಮತ್ ಮಾರೋ.. ಆಪ್ ಜಿಸ್ ಕೇ ಬಾರೆ ಮೇ ಪುಚ್ ರಹೇ ಹೈ.... ಹರ್ಷ!! ವೋ ಅಸಲ್ ಮೆ ಮರಾ ನಹೀ ಹೈ... ಜಿಂದಾ ಹೈ! ಮಾನ್ವಿ ಔರ್ ರಘು ಸರ್ ನೇ ಉಸ್ಕೊ ಸಂಕಲ್ಪ್ ನಾಮ್ ದೇ ಕೆ ಅಪ್ನೆ ಸಾತ್ ಸಿಡ್ನಿ ಲೇ ಗಯೇ ಥೆ!! ವೋ ಕ್ಯಾ ಹೈ ನಾ ಉಸ್ಕಿ ಪುರಾನಿ ಯಾದಾಶ್ ಚಲಾ ಗಯಾ ಹೈ! ವೋ ಅಬ್ ಸಬ್ ಕುಚ್ ಬುಲ್ ಗಯಾ ಹೈ.. ಔರ್ ಜಬ್ ಹರ್ಷ ಕೆ ಮಾ ಬಾಪ್ ಹಾಸ್ಪಿಟಲ್ ಆಯೆ ಥೇ ನಾ ಉನ್ಕೊ ಝೂಟಿ ರಿಪೋರ್ಟ್ ಔರ್ ಡೆಡ್ ಬಾಡಿ ದಿಖಾಕೆ ಯಂಹಾ ಸೇ ರಫಾ ದಫಾ ಕರ್ದಿಯಾ! ಇಸ್ ದೋಖೆ ಮೆ ಡಾ.ಮಾನ್ವಿ ರಘುನಂದನ್ ಸರ್, ಡಾ.ಪಟ್ಟಾಭಿರಾಮ ಔರ್ ಕುಚ್ ಡಾಕ್ಟರ್ಸ್ ಭಿ ಶ್ಯಾಮಿಲ್ ಹೈ....."
ವಿಡಿಯೋ ಇನ್ನೂ ಓಡುತ್ತಿತ್ತು ಆದರೆ ಇದನ್ನು ನೋಡುತ್ತಿದ್ದ ಮಾನ್ವಿಯ ಕೈ ಕಾಲುಗಳು ತಣ್ಣಗಾಗಿ ಎದೆ ಢವಗುಟ್ಟಲು ಶುರು ಮಾಡಿತ್ತು. ಇದುವರೆಗೂ ಯಾರಿಗೂ ಗೊತ್ತಾಗದಂತೆ ಮುಚ್ಚಿಟ್ಟ ರಹಸ್ಯ ಬಯಲಾಗುವ ಸೂಚನೆ ಕಂಡುಬಂದಿತ್ತು. ಯಾರಿವನು? ಇವನಿಗೆ ಹೇಗೆ ಗೊತ್ತು ಅದೆಲ್ಲ? ಇವನ ಬಾಯಿಂದ ಸತ್ಯ ಹೇಳಿಸಿ ಈ ವಿಡಿಯೋ ಮಾಡಿದ್ಯಾರು? ಓಹ್,, ಗಾಡ್!! ಮಾನ್ವಿ ಎದುಸಿರು ಬಿಡುತ್ತಿದ್ದಳು. ಆ ಅಪರಿಚಿತ ಸಂಖ್ಯೆ ಯಾರದೆಂದು ಮೊಬೈಲ್ ತೆಗೆದು ನೋಡುವಾಗ ಅದೇ ಸಂಖ್ಯೆಯಿಂದ ಮತ್ತೊಂದು ಸಂದೇಶ ಬಂದಿತು. " ನಾನು ಯಾರೂ ಅನ್ನೋ ಕುತೂಹಲನಾ? ಈಗಲೇ ಕಾರ್ ಪಾರ್ಕಿಂಗ್ ಹತ್ರ ಬಾ.." ಓದುತ್ತಿದ್ದ ಮಾನ್ವಿಯ ಜೀವ ಬಾಯಿಗೆ ಬಂದಂತಾಗಿತ್ತು. ಆದರೂ ಅದು ಯಾರೆಂದು ತಿಳಿದು ಈ ವಿಷಯವನ್ನು ಇಲ್ಲಿಗೆ ಬಗೆಹರಿಸಬೇಕಿತ್ತು. ತನ್ನ ಜೊತೆಗೆ ಬಾಡಿಗಾರ್ಡ್ಸ್ ಯಾರೂ ಕೂಡ ಬಂದಿರದ ಕಾರಣ, ಹಿಂದೆಮುಂದೆ ನೋಡುತ್ತ ಕೊಂಚ ಅಳುಕುತ್ತಲೇ ಪಾರ್ಕಿಂಗ್ ನತ್ತ ಮೆಲ್ಲಗೆ ಹೆಜ್ಜೆ ಹಾಕಿದ್ದಳು.
ಪಾರ್ಕಿಂಗ್ ಯಾರ್ಡ್ ನಲ್ಲಿ ನಿಂತು anybody is there? ಎಂದು ಕೂಗಿದ್ದಳು. ಆದರೆ ಯಾರು ಕಾಣದಂತಾದಾಗ ಆ ಅಪರಿಚಿತ ವ್ಯಕ್ತಿಗಾಗಿ ನಿಶ್ಯಬ್ದ ನೀರವ ರಾತ್ರಿಯಲ್ಲಿ ಕಾದು ನಿಂತಿದ್ದ ಮಾನ್ವಿಗೆ ಹಿಂದಿನಿಂದ 'ಓಯ್.... ಕೊಲೆಸ್ಟ್ರಾಲ್' ಎಂಬ ಪರಿಚಿತ ಧ್ವನಿ ಕೇಳಿ ಬೆಚ್ಚಿ ಬೆರಗಾಗಿದ್ದಳು. ಮರೆಯುವಂತ ಧ್ವನಿಯಲ್ಲ ಅದು. ಮರೆಯುವಂತ ವ್ಯಕ್ತಿಯೂ ಅಲ್ಲ ಆತ. ಅವನಿಂದಾಗಿ ಅದೆಷ್ಟು ಪಾಡು ಪಟ್ಟಿದ್ದಳು. ತನ್ನ ಸುಕೋಮಲ, ತೊಳೆದು ಮುಟ್ಟಬೇಕಾದಂತ ಕೈಗಳಿಂದ ಆಸ್ಪತ್ರೆಯ ರೋಗಿಗಳ ಗಲೀಜು ಬಟ್ಟೆಗಳನ್ನು ಒಗೆಸಿದ್ದ.. ಮಾಡದ ತಪ್ಪಿಗೆ, ಕ್ಯಾಂಟೀನ್ ನ ಎಂಜಲು ಪಾತ್ರೆಗಳನ್ನು ತೊಳೆಯುವಂತೆ ಮಾಡಿದ್ದ.. ಅವರಿವರು ಉಗಿದ ಹೊಲಸು ಫ್ಲೋರ್ ನ್ನು ಸ್ವಚ್ಛ ಮಾಡಿಸಿದ್ದ.. ಅರಿಯದೆ ಮಾಡಿದ ಸಣ್ಣ ತಪ್ಪಿಗೆ ಕ್ಷಮೆ ನೀಡುವ ಬದಲಾಗಿ ಯುನಿವರ್ಸಿಟಿ ಯಿಂದಲೇ ಹೊರದಬ್ಬಿದ್ದ.. ಈ ಜನ್ಮದಲ್ಲಿ ಯಾರ ಮುಖವನ್ನು ಮತ್ತೆಂದೂ ನೋಡಬಾರದೆಂದುಕೊಂಡಿದ್ದಳೋ ಅವನ ಧ್ವನಿ ಕೇಳಿಯೇ ಹೊಟ್ಟೆ ರುಂ ಎಂದು ಹೋಗಿತ್ತು ಮಾನ್ವಿಗೆ. ಅದು ಅದೇ ಹಿಟ್ಲರ್ ಧ್ವನಿ ಎಂಬುದು ನಿಜವೋ ಅಥವಾ ಕೇವಲ ತನ್ನ ಭ್ರಮೆಯೋ ಎಂಬ ಸಂಶಯದೊಂದಿಗೆ ನಿಧಾನವಾಗಿ ಹಿಂತಿರುಗಿ ನೋಡಿದ ಮಾನ್ವಿ, ತನ್ನ ಎರಡು ಕೈಗಳನ್ನು ಜೇಬಿಗಿಳಿಸಿ, ಕೃಷ್ಣನಂತೆ ಕಾಲೂರಿ, ಮುಖದ ತುಂಬಾ ನಗುಚೆಲ್ಲಿ ತನ್ನೆದುರು ನಿಂತ ಪ್ರಸನ್ನನನ್ನು ನೋಡಿ " ನೀನಾ...??" ಎಂದು ಉದ್ಘರಿಸಿದ್ದಳು. ಅವನನ್ನ ಅಡಿಯಿಂದ ಮುಡಿವರೆಗೆ ಗಮನಿಸಿ ಅದೇ ದಟ್ಟವಾದ ಕೂದಲು, ಒರಟು ಗಡ್ಡ, ಫಾರ್ಮಲ್ ಡ್ರೆಸ್, ಅದೇ ಟೈಟನ್ ವಾಚ್, ಅದೇ ಕಾಮನ್ ಚಪ್ಪಲಿ, ಜಗತ್ತು ಎಲ್ಲಿಂದ ಎಲ್ಲಿಗೋ ಸಾಗಿ ಹೋದರೂ ಚೂರು ಬದಲಾಗಿಲ್ಲ ಈ ಮನುಷ್ಯ! ಡಾಕ್ಟರ್ ಲಕ್ಷಣಗಳು ಒಂದು ಕಾಣಲ್ಲ ಇವನಲ್ಲಿ. ಶುದ್ಧ ಅಬ್ಬೇಪಾರಿ, ರೌಡಿ, ಉಡಾಳ, ಮುಠ್ಠಾಳ.. ಮನಸ್ಸಲ್ಲೇ ವಟವಟನೆ ಗೊಣಗುತ್ತಿದ್ದಳು.
"ನೀನೇನ್ ಮಹಾ ಬದಲಾಗಿ ಮದರ್ ಥೆರೆಸಾ ಆಗಿದಿಯಾ ಈಗ? ನೀನು ಹಾಗೇ ಇದೀಯಾ! ಅದೇ ಕೋಳಿ ಜುಟ್ಟು, ಅದೇ ಎಲ್.ಕೆ.ಜಿ ಫ್ರಾಕ್ಕು, ಸರ್ಕಸ್ ಮಾಡೋ ತರಾ ನಡಿಯೊಕೆ ಹೈ ಹೀಲ್ಸು, ಕಣ್ಣಲ್ಲಿ ಅದೇ ಪೊಗರು ದುರಹಂಕಾರ, ಮಾತಲ್ಲಿ ದರ್ಪ ದೌರ್ಜನ್ಯ, ಎಲ್ಲಿ ಬಿಡ್ತಿಯಾ ನಿನ್ನ ಹಾಳು ಬುದ್ದಿ ಥೂ ನಿನ್.." ಪ್ರಸನ್ನ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದರೆ, ಅವನೆಂತ ಜೀನಿಯಸ್ ಮೈಂಡ್ ರೀಡರ್ ಎಂಬುದನ್ನು ಮರೆತು ಹಾಗೆ ಗೊಣಗಿಕೊಂಡದ್ದು ತನ್ನದೇ ತಪ್ಪು ಎಂದು ಮಾನ್ವಿ ತಲೆ ಕೊಡವಿದ್ದಳು.
"ಲುಕ್ ಡಾ....????? (ಯೋಚಿಸಿ ಹೊಳೆಯದೆ) ವಾಟೆವರ್, ನಿನ್ನ ಜೊತೆ ಜಗಳ ಮಾಡೋಕೆ ನನಗೆ ಟೈಮ್ ಇಲ್ಲ , ಈ ವಿಡಿಯೋ ನೀನೇ ಕಳಿಸಿದ್ದಾ? ನಿನಗೆ ಹೇಗೆ ಸಿಕ್ತು? ಅದ್ರಲ್ಲಿರೋ ವ್ಯಕ್ತಿ ಯಾರು?
"ನಿನಗೆ ಹೇಗೆ ನೆನಪಿರುತ್ತೆ ನನ್ನ ಹೆಸರು, ಬರೀ ಪೆಟ್ ನೇಮ್ಸ್ ನಿಂದ ಕರಿಯೋದಲ್ವ ನೀನು ನನ್ನನ್ನ.. ಹೋಗ್ಲಿ ಬಿಡು, ಈಗ ಚೆನ್ನಾಗ್ ನೆನಪಿಟ್ಕೊ.. ನನ್ನ ಹೆಸ್ರು ಡಾ.ಪ್ರಸನ್ನ! ಇನ್ಮುಂದೆ ಲೈಫ್ ಲಾಂಗ್ ಮರಿಯಲ್ಲ ಬಿಡು ಈ ಹೆಸ್ರನ್ನ.. ಅವತ್ತು ನಿನ್ನ ಅರ್ಧಕ್ಕೆ ರೆಸ್ಟಿಗೇಟ್ ಮಾಡಿ ತಪ್ಪು ಮಾಡ್ಬಿಟ್ಟೆ ಕಣೇ, ಅದೇ ಪಶ್ಚಾತ್ತಾಪದಿಂದ ನೊಂದು, ಬೆಂದು, ಹೇಗಾಗಿದ್ದಿನಿ ನೋಡು.. ಈಗ ಬಂದಿದೀನಲ್ಲ ಆ ತಪ್ಪನ್ನೆಲ್ಲ ಸರಿ ಮಾಡ್ತಿನಿ ಒಕೆ. ಡೋಂಟ್ ವರಿ ಹರ್ಷನ ಮೆಮೊರಿ ಸರಿ ಮಾಡೋದರ ಜೊತೆಗೆ ನಿನ್ನ ಕೊಲೆಸ್ಟ್ರಾಲ್ ನ್ನು ಪೂರ್ತಿ ಇಳಿಸೇ ಇಲ್ಲಿಂದ ಹೋಗೋದು!!" ಕೂಲಾಗಿ ನುಡಿದಿದ್ದ ಪ್ರಸನ್ನ.
" ಬಾಯಿಗೆ ಬಂದ್ಹಾಗೆ ಮಾತಾಡ್ಬೇಡ. ಯಾವ ಹರ್ಷ? ನಿನಗೂ ಅವನಿಗೂ ಏನ್ ಸಂಬಂಧ? ಈ ವಿಡಿಯೋ ಹೇಗೆ ಸಿಕ್ತು ನಿನಗೆ? ಈ ವ್ಯಕ್ತಿ ಯಾರು??" ರೇಗಾಡಿದಳು ಮಾನ್ವಿ.
"ರಿಲ್ಯಾಕ್ಸ್.. ಪಿಶಾಚಿ, ಇಷ್ಟೊಂದು ಹೈಪರ್ ಆದ್ರೆ ಹಾರ್ಟ್ ಗೆ ಒಳ್ಳೆಯದಲ್ಲ. ಹರ್ಷ ಅಂದ್ರೆ ಈಗ ನಿನ್ನ ಜೊತೆ ಇಲ್ಲಿ ಕ್ಲಬ್ ಗೆ ಬಂದಿದ್ದಾನಲ್ಲ, ಅವನೇ..! ನೀನು ಸತ್ತೋಗಿದ್ದಾನೆ ಅಂತ ಫೆಕ್ ರಿಪೋರ್ಟ್ಸ್ ತೋರಿಸಿ, ಬೇರೆ ಯಾವುದೋ ಹೆಸರು, ಐಡೆಂಟಿಟಿ ಕೊಟ್ಟು ಯಾಮಾರಿಸ್ತಾ ಇದೀಯಲ್ಲಾ.. ಅದೇ ಹರ್ಷ! ಇನ್ನೊಂದು ವಾರದಲ್ಲಿ ಯಾರ್ಜೊತೆ ಮದುವೆ ಆಗ್ತಿದೀಯಲ್ಲಾ ಅದೇ ಹರ್ಷ! ಅವನಿಂದ ನನಗೇನು ಆಗ್ಬೇಕಿಲ್ಲ, ಆದರೆ ನೀನು ಮಾಡಿರೋ ಕಲ್ಯಾಣ ಕಾರ್ಯವನ್ನ ಜಗತ್ತಿಗೆ ಪ್ರಚಾರ ಮಾಡಿ ನಿನ್ನನ್ನ ವರ್ಲ್ಡ್ ಫೇಮಸ್ ಮಾಡೋಣಾಂತ"
" ಏನು.. ನೀನು, ನನ್ನ ಫೇಮಸ್ ಮಾಡ್ತಿಯಾ? ಹ್ಮ್... ನಮ್ಮ ಡ್ಯಾಡ್ ಬಗ್ಗೆ ನಿನಗಿನ್ನು ಗೊತ್ತಿಲ್ಲ ಅನ್ಸುತ್ತೆ! ಮೊದಲು ಗೂಗಲ್, ವಿಕಿಪೀಡಿಯದಲ್ಲಿ ಅವರ ಬಗ್ಗೆ ತಿಳ್ಕೊಂಡು ಆಮೇಲೆ ನನ್ನ ಜೊತೆ ಮಾತಾಡು. ಪೂರ್ ಡಾಕ್ಟರ್!! ಏನು ಆ ವಿಡಿಯೋ ನಾ ಪೋಲಿಸ್ ಗೆ ಒಪ್ಪಿಸ್ತಿಯಾ? ವೇಟ್ ಕಮಿಷನರ್ ಅಂಕಲ್ ನೇ ಇಲ್ಲಿಗೆ ಕರಿಸ್ತಿನಿ. ಪಾಪ, ನಿನಗ್ಯಾಕೆ ಸ್ಟೇಷನ್ ಹೋಗೊ ತೊಂದರೆ " ಎನ್ನುತ್ತಾ ಮೊಬೈಲ್ ಸವರಿದಳು.
"ನೀನು ಡಾಕ್ಟರ್ ಕೆಲಸ ಬಿಟ್ಟು ಈ ಸೋಷಿಯಲ್ ಸರ್ವಿಸ್, ಸಿಬಿಐ ಕೆಲಸ ಎಲ್ಲಾ ಯಾವಾಗ ಶುರು ಮಾಡಿದೆ? ನಿನಗ್ಯಾಕೆ ಈ ಉಸಾಬರಿ ಎಲ್ಲಾ?? ಕೊನೆಯ ಸಲ ಹೇಳ್ತಿದಿನಿ ನೀನು ಈ ವಿಷಯದಲ್ಲಿ ತಲೆ ಹಾಕ್ದಿದ್ರೆ ನಿನಗೆ ಒಳ್ಳೆಯದು. ಇಲ್ಲಾಂದ್ರೆ ಯು ವಿಲ್ ಪೇ ಫಾರ್ ಇಟ್" ಮೊಬೈಲ್ ನಿಂದ ಯಾವುದೋ ಸಂಖ್ಯೆ ಅದಮುತ್ತಾ ಹೇಳಿದಳು.
"ಮಾಡು ಮಾಡು.. ಕಮಿಷನರ್ ಅವಶ್ಯಕತೆನೂ ಬೇಕಾಗುತ್ತೆ." ಪ್ರಸನ್ನ ಚಿಂಗಮ್‌ನ್ನು ಬಾಯಿಗೆ ಹಾಕಿ ಅಗಿಯುತ್ತ ಹೇಳಿದ.
"ನಿನಗೂ ಹರ್ಷನಿಗೂ ಏನು ಸಂಬಂಧ? ಸುಮ್ಮನೆ ನಿನಗ್ಯಾಕೆ ಈ ಬೇಡದ ಉಸಾಬರಿ. ಕೊನೆಯ ಸಲ ಹೇಳ್ತಿದಿನಿ ಆ ವಿಡಿಯೋ ಡಿಲಿಟ್ ಮಾಡಿ ಹೊರಟು ಹೋಗು ಇಲ್ಲಿಂದ" ಎಚ್ಚರಿಕೆ ನೀಡಿದಳು
"ನೀನು ಡಾಕ್ಟರ್ ಓಥ್ ಏನಂತ ಮಾಡಿದ್ಯೇ??? ನಾನು ಪ್ರತಿಯೊಂದು ಆಪರೇಷನ್ ಮಾಡಿದಾಗಲೂ ಆ ಪೇಷಂಟ್ ಕಡೆಯಿಂದ ಏನಾದರೂ ಒಂದನ್ನು ಕಿತ್ಕೊಂಡೆ ತೀರುವೆ ಅಂತನಾ??!ಅವತ್ತು ನೋಡಿದ್ರೆ ಆ ಮಗುವಿನ ಕಣ್ಣು ಕಿತ್ಕೊಂಡೆ, ಈಗ ಈ ಹರ್ಷನ ಇಡೀ ಜೀವನಾನೇ ಬಲಿಪಶು ಮಾಡಿದೀಯಾ! ನಿನ್ನನ್ನು ನೀನು ಏನಂತ ಅನ್ಕೊಂಡಿದೀಯಾ ನೀ.. ರಾಕ್ಷಸಿ ತಂದು..! ಹರ್ಷನಿಗೂ ನನಗೂ ಯಾವ ಸಂಬಂಧ ಇಲ್ಲ. ಆದರೆ ನಿನ್ನ ಸೀನಿಯರ್ ಆಗಿದ್ದ ಕರ್ಮಕ್ಕೆ ನೀನು ಮಾಡೋ ತಪ್ಪನ್ನೆಲ್ಲ ಸರಿ ಮಾಡೋ ಹೊಣೆ ನನ್ನದು!! ಅವತ್ತು ಆ ಮಗುವನ್ನ ನೋಡಿಕೊಂಡಿದ್ದಾಯ್ತು. ಈಗ ಈ ಹರ್ಷನ್ನ ನೋಡಿ ಸರಿ ಮಾಡೋಣಾಂತ ಬಂದಿರೋದು"
"ನೀನೆನ್ ಸರಿ ಮಾಡೋದು, ಅವನು ಆರಾಮಾಗೇ ಇದ್ದಾನೆ. ನಿನ್ನ ಅವಶ್ಯಕತೆ ಇಲ್ಲ ಈಗ. ಆ ವಿಡಿಯೋ ಈಗಲೇ ಡಿಲಿಟ್ ಮಾಡು.. ಇಲ್ಲಾ ಗ್ರಹಚಾರ ಸರಿಯಿರಲ್ಲ ನಿನಗೆ"
"ಡಿಲೀಟ್ ಮಾಡಲ್ಲ, ಪೋಲಿಸ್ ಗೂ ಕೊಡಲ್ಲ. ಅಲ್ಲಿ ಹಿಂದೆ ವ್ಯಾನ್ ನಲ್ಲಿ ನೋಡು ಸ್ವಲ್ಪ.." ಮಾನ್ವಿ ಅವನ ಹಿಂದುಗಡೆ ಇಣುಕಿ ನೋಡಿದಳು. ಒಬ್ಬ ವ್ಯಕ್ತಿ ಕ್ಯಾಮರಾ ಹಿಡಿದು ನಿಂತಿದ್ದರೆ ಮತ್ತೊಬ್ಬ ಯುವತಿ ಮೈಕ್ ಹಿಡಿದು ಇನ್ನೇನು ವಾರ್ತೆ ಸಿಕ್ಕರೇ ಸಾಕು ಎನ್ನುವಂತೆ ಬಕಪಕ್ಷಿಯ ಹಾಗೆ ಕಾದು ನಿಂತಿದ್ದರು. ಅವರ ವೇಷಭೂಷಣ, ವ್ಯಾನ್, ನೋಡಿ ಅವರು ಮಿಡಿಯಾದವರೆಂದು ಖಚಿತವಾಗಿತ್ತು. ಅವರನ್ನೇ ಬಿಟ್ಟ ಕಣ್ಣಿಂದ ನೋಡುತ್ತಿದ್ದ ಮಾನ್ವಿಯ ಮೈ ಮನ ಕಂಪಿಸಿ ಹೋಯಿತು. "ಮ,,ಮ,,ಮೀಡಿಯಾ??" ಅವಳ ಬಾಯಿಂದ ತೊದಲು ನುಡಿ ಹೊರಬಂದಿತು.
"ಹ್ಮ್... ಲೋಕಲ್ ನೀವ಼್ಸ್ ಚಾನಲ್ ನವರು! ಪಾಪ ಏನು ವಿಷಯ ಇಲ್ಲದೇ ನೊಣ ಹೊಡಿತಾ ಕೂತಿದ್ರು. ನಾನೇ ಸ್ವತಃ ಹೋಗಿ MR HOSPITAL ಬಗ್ಗೆ ಒಂದು ಬ್ರೇಕಿಂಗ್ ನಿವ಼್ಸ್ ಇದೆ ಬನ್ನಿ ಅಂತ ಕರ್ಕೊಂಡು ಬಂದೆ. ಆದರೆ ವಿಷಯ ಏನಂತ ಇನ್ನೂ ಪೂರ್ತಿಯಾಗಿ ತಿಳಿಸಿಲ್ಲ. ನೀನು ಹ್ಮೂ ಅಂದ್ರೆ ಈಗಲೇ ಕರೆದು ಶೋ ಸ್ಟಾರ್ಟ್ ಮಾಡಿಸ್ಲಾ??" ಪ್ರಸನ್ನ ಹುಬ್ಬು ಹಾರಿಸುತ್ತ ಕೇಳಿದ.
ಅವನು ಹೀಗೆ ಹೇಳುತ್ತಿದ್ದಂತೆ ಕ್ಯಾಮರಾ ಮ್ಯಾನ್ ಅಲರ್ಟ್ ಆಗಿ, ಕ್ಯಾಮರಾ ಆನ್ ಮಾಡಿದ. ಮೈಕ್ ಹಿಡಿದ ಹುಡುಗಿ ಅವಳೆದುರು ಬಂದು ನಿಂತು ಕ್ಯಾಮರಾ ಕಡೆಗೆ ನೋಡುತ್ತ ಮಾತು ಮುಂದುವರೆಸಿದ್ದಳು.. "ಗುಡ್ ಇವನಿಂಗ್ ಮುಂಬೈ,, ಮೆ ಹೂ ಆಪ್ಕಿ ಧಾನಿ ಗುಪ್ತಾ,,, ಔರ್ ಆಪ್ ದೇಖ ರಹೇ ಹೈ,, ರಾಜಧಾನಿ ನಿವ಼್ಸ್!! ಆಜ್ ಹಮ್ ಆಪ್ಕೊ ಬತಾನೇ ಜಾ ರಹೇ ಹೈ ಏಕ್ ಮಶಹೂರ್ ಹಾಸ್ಪಿಟಲ್ ಮೆ ಹುಯಿ ಏಕ್ ದೋಖೆ ಕೆ ಬಾರೆ ಮೆ!! ಆಪ್ ಜಾನನಾ ಚಾಹ್ತೆ ಹೈ.. ಉಸ್ ಹಾಸ್ಪಿಟಲ್ ಕಾ ನಾಮ್??...."
"ಜಸ್ಟ್ ಸ್ಟಾಪ್ ಇಟ್ ನೌ!! ನಿಲ್ಲಿಸು ಇದನ್ನ ಇಲ್ಲಿಗೆ" ಕಿರುಚಿದ್ದಳು ಮಾನ್ವಿ. ಆ ಹುಡುಗಿ ಕೈಯಿಂದ ಮೈಕ್ ಕಿತ್ತುಕೊಂಡು, ಕ್ಯಾಮರಾದ ಕ್ಯಾಪ್ ಮುಚ್ಚಿ ಅವರನ್ನು ಹಿಂದೆ ತಳ್ಳಿದಳು. ಪ್ರಸನ್ನ ಕಣ್ಸನ್ನೆ ಮಾಡುತ್ತಿದ್ದಂತೆ ಅವರಿಬ್ಬರೂ ದೂರ ಸರಿದು ನಿಂತರು. "ಏನು ಇದನ್ನೆಲ್ಲ ಪಬ್ಲಿಕ್ ಮಾಡಿ ನಮ್ಮ ಹೆಸರು, ಹಾಸ್ಪಿಟಲ್ ಪ್ರೆಸ್ಟಿಜ಼್ ಹಾಳು ಮಾಡೋಣ ಅನ್ಕೊಂಡಿದೀಯಾ!! ಅದಕ್ಕೂ ಮುಂಚೆ ಒಂದು ಮಾತು ಗಮನ ಇರ್ಲಿ, ಈ ವಿಷಯ ಎಲ್ಲಾ ಹರ್ಷನಿಗೆ ಗೊತ್ತಾದ್ರೆ ಅವನು ಮೆಂಟಲ್ಲಿ ಡಿಸ್ಟರ್ಬ್ ಆಗ್ತಾನೆ. ಹುಚ್ಚು ಹಿಡಿಬಹುದು, ಎಲ್ಲರ ಮೇಲಿರೋ ನಂಬಿಕೆ ಹಾಳಾಗಿ ತನಗೆ ತಾನೇ ಏನಾದ್ರೂ ಮಾಡ್ಕೊಬಹುದು..!!"
"ಸತ್ತರೆ ಸಾಯಲಿ ಬಿಡು ಅವನನ್ನ ಕಟ್ಕೊಂಡು ನನಗೇನಾಗ್ಬೇಕು! ಅವನೇನು ನನ್ನ ಅಣ್ಣಾನಾ, ತಮ್ಮಾನಾ? ಬಂಧುನಾ! ಅವನೇನಾದ್ರೆ ನನಗೇನು..! ನನಗೆ ನಿನ್ನ ನಿನ್ನಪ್ಪನ್ನ ಜೈಲಿಗೆ ಕಳಿಸೋದಷ್ಟೆ ಮುಖ್ಯ!" ಮನಸ್ಸಲ್ಲೇ ಹರ್ಷನ ಬಗ್ಗೆ ವಿಪರೀತ ಕಾಳಜಿಯಿದ್ದರೂ ಪರಿಸ್ಥಿತಿಯನ್ನು ಎದುರಿಸಲು ಈ ರೀತಿ ನಿರ್ಭಾವುಕನಾಗಿ ಮಾತಾಡಿದ್ದ ಪ್ರಸನ್ನ. ಅವನ ಈ ಮಾತಿಗೆ ಮಾನ್ವಿಯ ಸಿಟ್ಟು ನೆತ್ತಿಗೇರಿ ಅವಳ ಕೈ ಅವನ ಕೆನ್ನೆಗೆ ಬಿಸಿ ಮುಟ್ಟಿಸಲು ಎತ್ತಿತ್ತು. ತಕ್ಷಣ ಅವಳ ಕೈ ಬಿಗಿಯಾಗಿ ಹಿಡಿದಿದ್ದ ಪ್ರಸನ್ನ. "ಓಹ್,, ಹರ್ಷನ ಬಗ್ಗೆ ತುಂಬಾ ಪ್ರೀತಿ ಕಾಳಜಿ ಇರೋ ಹಾಗಿದೆ?? ಅಷ್ಟಿದ್ದವಳು ಅವನ ಬದುಕಿನ ಜೊತೆ ಯಾಕೆ ಆಟ ಆಡ್ತಿದೀಯಾ??" ವ್ಯಂಗ್ಯವಾಗಿ ಹೇಳುತ್ತ ಹಿಡಿದ ಕೈ ಸಡಲಿಸಿದ.
"ಹರ್ಷನ ಬಗ್ಗೆ ಇನ್ನೊಮ್ಮೆ ಈ ತರಾ ಮಾತಾಡಿದ್ರೆ, ನಾನೇ ನಿನ್ನ ಸಾಯಿಸ್ಬಿಡ್ತಿನಿ! ಅವನಿಗೆ ಏನು ಆಗ್ಬಾರ್ದು" ಕೋಪದಿಂದ ಉಸುರಿ ದೀರ್ಘವಾದ ಉಸಿರೆಳೆದುಕೊಂಡಳು ಮಾನ್ವಿ.
"ಒಕೆ ಲೆಟ್ಸ್ ಕಮ್ ಟು ದಿ ಪಾಯಿಂಟ್ ನೌ.. ಈ ವಿಷಯನಾ ಇಲ್ಲಿಗೆ ಮುಗಿಸೋಕೆ ಎಷ್ಟು ಬೇಕು ನಿನಗೆ?"
"ಅರೆರೆ.. ಇಂತಹ ವಿಷಯ ಎಲ್ಲಾ ಎಷ್ಟು ಬೇಗ ಅರ್ಥ ಆಗ್ಬಿಡುತ್ತಲ್ವಾ!! ಜಾಣ ರಾಕ್ಷಸಿ!! ಕನ್ನಿಂಗ್ ಫಾಕ್ಸ್..! ಗುಡ್.. ನಿನಾಗೇ ಅರ್ಥ ಮಾಡ್ಕೊಂಡಿದ್ದು ಒಳ್ಳೆಯದೇ. ಆದರೆ ಎಷ್ಟು ಬೇಕು? ಅಲ್ಲ. ಏನು ಬೇಕು? ಅಂತ ಕೇಳು."
"ಗೊತ್ತಿತ್ತು ನನಗೆ ನಿನ್ನ ಚಿಲ್ಲರೆ ಬುದ್ದಿ..! ಆದರ್ಶ, ತತ್ವ, ಜನಸೇವೆ ಅಂತ ದೊಡ್ಡದಾಗಿ ಭಾಷಣ ಬಿಗಿಯೋದಷ್ಟೆ ಮಾಡೋದೇ ಬೇರೆ! ಏನೋ ಸ್ವಾರ್ಥ ಇಟ್ಕೊಂಡೆ ಬಂದಿರ್ತಿಯಾ! ಸರಿ ಏನ್ ಬೇಕು ಬೊಗಳು, ಬಿಸಾಕ್ತಿನಿ. ಆ ವಿಡಿಯೋ ಡಿಲಿಟ್ ಮಾಡಿ, ಬಾಯಿ ಮುಚ್ಕೊಂಡು ಇಲ್ಲಿಂದ ದೂರ ಹೊರಟು ಹೋಗು" ಮಾನ್ವಿಯ ದರ್ಪದ ಮಾತಿಗೆ ಪ್ರಸನ್ನನ ಮುಷ್ಟಿ ಬಿಗಿಯಾಗಿತ್ತು. ತೆಗೆದು ಎರಡು ಬಾರಿಸೋಣ ಎನ್ನುವಷ್ಟು ಸಿಟ್ಟು ಬಂದರೂ ತುಂಬಾ ಸಾವಧಾನವಾಗಿ ಮಾತು ಮುಂದುವರೆಸಿದ..
"ಒಂದು ನಾಯಿ ಬೊಗಳ್ತಿರೋವಾಗ ಇನ್ನೊಂದು ನಾಯಿ ಹೇಗೆ ಬೊಗಳ್ಬೇಕು ಹೇಳು,, ಅರೆ ಛೇ.. ನಿನ್ನ ನಾಯಿಗೆ ಹೋಲಿಸಿ ನಾಯಿ ಜಾತಿಗೂ ಅವಮಾನ ಮಾಡ್ಬಿಟ್ನಲ್ಲೆ,, ಅವಕ್ಕೆ ಇರೋ ನೀಯತ್ತು ನಿನಗೆಲ್ಲಿ ಬರ್ಬೇಕು.. ಥೂ..ನಿನ್ನ ಬಾಯಿಗೆ ಸಗಣಿ ಹಾಕಾ.. ನಿನ್ನ ಜನ್ಮಕ್ಕಿಷ್ಟು ಬೆಂಕಿಹಾಕಾ.." ಕ್ಯಾಕರಿಸಿ ಉಗಿದು ಸಿಟ್ಟು ದಮನ ಮಾಡಿಕೊಂಡ.
"ಛೀ... ಡಾಕ್ಟರ್ ಆಗಿ ಇಷ್ಟು ಛೀಪ್ ಲಾಂಗ್ವೇಜ್ ಮಾತಾಡ್ತಿಯಲ್ಲ ನಾಚಿಕೆ ಆಗಲ್ವಾ?"
"ಡಾಕ್ಟರ್ ಆಗಿ ಒಬ್ಬರ ಬದುಕನ್ನೇ ಸರ್ವನಾಶ ಮಾಡ್ತಿದೀಯಲ್ಲಾ ನಿನಗೆ ನಾಚಿಕೆ ಆಗ್ತಿದೆಯಾ??" ಅವಳು ಮೌನವಾದಳು. "ಹ್ಮಾ.. ಇದು ಹಾಗೆ, ತಪ್ಪು ಮಾಡ್ತಿರೋ ನಿನಗೆ ಇಷ್ಟು ಪೊಗರು ಇರೋವಾಗ, ನಿನ್ನ ವಿರುದ್ದ ಸಾಕ್ಷಿ ಇರೋ ನಾನೆಷ್ಟು ಮೆರಿಬೇಡ! ಈಗ ನಿನಗಿರೋ ಆಯ್ಕೆ ಒಂದೇ.. ನಾನು ಹೇಳಿದ್ಹಾಗೆ ನೀನು ಕೇಳ್ಬೆಕು... ಕೇಳ್ತಿಯಾ, ಅಷ್ಟೇ.."
"ಸರಿ ಏನ್ ಮಾಡ್ಬೇಕು..?" ಧುಮುಗುಡುತ್ತ ಕೇಳಿದಳು ಮಾನ್ವಿ.
"ಮೀಟ್ ಮಾಡಿಸ್ಬೇಕು ಒಂದ್ಸಾರಿ ನಿಮ್ಮ ಅಪ್ಪನ್ನಾ ಮತ್ತೆ ಈ ಹರ್ಷನ್ನ!! ನಿಮ್ಮಪ್ಪ ಈಗ ದೇಶ ಬಿಟ್ಟು ಹೋಗಿದಾನಂತೆ!! ಅವರನ್ನ ಇನ್ನೊಮ್ಮೆ ಯಾವಾಗಾದ್ರೂ ಮಾಡ್ಸು, ಈಗ ಸದ್ಯಕ್ಕೆ ಹರ್ಷನ ಜೊತೆ ಒಂದು ಚಿಕ್ಕ ಭೇಟಿ, ಏನ್ ಸುಳ್ಳು ಹೇಳ್ತಿಯೋ ಅದು ನಿನಗೆ ಬಿಟ್ಟಿದ್ದು.. " ಪ್ರಸನ್ನ ಹೇಳುತ್ತಿದ್ದರೆ, ತನ್ನ ತಂದೆಯ ಬಗ್ಗೆಯೂ ಇಂಚಿಂಚು ಮಾಹಿತಿ ತಿಳಿದ ಇವನು ಯಾವುದೋ ಮುಖ್ಯ ಉದ್ದೇಶ ಇಟ್ಟುಕೊಂಡೇ ಇಲ್ಲಿಗೆ ಬಂದಿದ್ದಾನೆ ಎನ್ನುವುದು ಮಾನ್ವಿಗೆ ಖಾತ್ರಿಯಾಯಿತು.
"ನಮ್ ಡ್ಯಾಡ್ ಮತ್ತೆ ಹರ್ಷನ್ನ?? ಯಾಕೆ?? " ಸೌಮ್ಯವಾಗಿ ಕೇಳಿದಳು
"ಅದೆಲ್ಲ ನಿನಗೆ ಬೇಡದಿರೋ ವಿಷಯ, ಜಸ್ಟ್ ನಾನು ಹೇಳಿದ್ದನ್ನ ಕೇಳೋದಷ್ಟೆ ನಿನ್ನ ಕೆಲಸ.." ಚಿಟಿಕೆ ಬಾರಿಸಿ ಹೇಳಿದ ಪ್ರಸನ್ನ
"ಹರ್ಷ ಹಾಗೆಲ್ಲ ಎಲ್ರನ್ನೂ ನಂಬಲ್ಲ. ಏನೂಂತ ಹೇಳಿ ಪರಿಚಯ ಮಾಡಿಸ್ಲಿ?" ಹೊಟ್ಟೆಯಲ್ಲಿ ಬೆಂಕಿ ಕುದಿಯುತ್ತಿದ್ದರೂ ನಾಟಕೀಯವಾಗಿ ತಣ್ಣಗೆ ಮಾತಾಡುತ್ತಿದ್ದಳು ಮಾನ್ವಿ.
"ಏನ್ ನಿಜ ಇದೆಯೋ ಅದೇ ಹೇಳು. ನಾನು ನಿನ್ನ ಸೀನಿಯರ್ ಅಂತ.."
"ನನ್ನ ಸೀನಿಯರ್ ಕಂಡ್ರೆ ನನಗಾಗಲ್ಲ ಅಂತ ಅವನಿಗೂ ಗೊತ್ತು. ಈಗ ಇದ್ದಕ್ಕಿದ್ದಂತೆ ಹೀಗೆ ಪರಿಚಯ ಮಾಡಿಸಿದ್ರೆ ಯಾಕೆ ಏನು? ಹೇಗೆ? ನೂರೆಂಟು ಪ್ರಶ್ನೆ ಕೇಳಿ ತಲೆ ಹುಚ್ಚು ಹಿಡಿಸ್ತಾನೆ..! ಅದು ಸಾಧ್ಯವಿಲ್ಲ." ನಿರಾಕರಿಸಿದಳು ಮಾನ್ವಿ.
"ಹಾಗಾದ್ರೆ ಬೇರೆ ಏನಾದ್ರೂ,, ನಾವಿಬ್ರೂ ಚೈಲ್ಡ್ ಹುಡ್ ಫ್ರೆಂಡ್ಸು.. ಕಾಲೇಜ್ ವರೆಗೂ ಜೊತೆಗೆ ಓದಿದ್ದು. ಹೈಯರ್ ಸ್ಟಡೀಸ್ ಮತ್ತೆ ಕೆಲಸದ ಸಲುವಾಗಿ ದೂರ ಇದ್ವಿ.. ಹೀಗೆ ಏನಾದ್ರೂ ಹೇಳು.. ಜಸ್ಟ್ ಒಂದು ಸಲ ಮೀಟ್ ಮಾಡಿಸು ಸಾಕು. ಆಮೇಲೆ ನಾನೇ ಆ ವ್ಯಕ್ತಿ ಮತ್ತೆ ಆ ವಿಡಿಯೋ ಎರಡನ್ನೂ ನಿನ್ನ ಕೈಗೆ ಕೊಟ್ಟು ಹೊರಟೋಗ್ತಿನಿ. ಐ ಸ್ವೇರ್..!" ಪ್ರಸನ್ನ ನುಡಿದಿದ್ದ. ಬೆಳಿಗ್ಗೆ ಪರಿಧಿ ಬಂದು ಹೋಗಿದ್ದು ಈಗ ಈ ಪ್ರಸನ್ನ ಬಂದಿದ್ದು ಮಾನ್ವಿಗೆ ಸಣ್ಣ ಸಂಶಯದ ವಾಸನೆ ಬಂದಿತ್ತು. ಇವನನ್ನು ಪರಿಧಿ ಕಳಿಸಿರಬಹುದಾ? ಆದರೆ ಯೋಚಿಸಲು ಸಮಯವಿರಲಿಲ್ಲ. ಇದನ್ನು ಸೂಕ್ಷ್ಮವಾಗಿ ಬಗೆಹರಿಸಬೇಕು ಎಂದುಕೊಂಡ ಮಾನ್ವಿ..
"ಹೌದು.... ಆ ವಿಡಿಯೋದಲ್ಲಿರೋ ವ್ಯಕ್ತಿ ಯಾರು?" ಕೇಳಿದಳು.
"ನಿನ್ನ ಹಾಸ್ಪಿಟಲ್ ನಲ್ಲಿ ಕೆಲಸ ಮಾಡೋರ ಬಗ್ಗೆ ನಿನಗೆ ಗೊತ್ತಿರ್ಬೇಕು. ನನಗೇನ್ ಗೊತ್ತು" ಭುಜ ಹಾರಿಸಿದ ಪ್ರಸನ್ನ. "ನಿನ್ನ ಈ ಕ್ರಿಮಿನಲ್ ಕೆಲಸ ಪತ್ತೆ ಹಚ್ಚುವಾಗ ಅನುಮಾಸ್ಪದವಾಗಿ ಸಿಕ್ಕ, ನಾಲ್ಕು ತದ್ಕಿದೆ, ಎಲ್ಲಾ ವಿಷಯ ಬಾಯ್ಬಿಟ್ಟ.." ಪ್ರಸನ್ನ ಕಾಲರ್ ಮೇಲೆತ್ತಿಕೊಳ್ಳುತ್ತ ನುಡಿದ.
"ನಮ್ಮ ಹಾಸ್ಪಿಟಲ್ ನವನಾ?? ಆದ್ರೆ ಅವನ ಹೆಸರು? ಊರು? ಏನ್ಮಾಡ್ತಿದ್ದ?"
"ನನ್ನ ತಾಳ್ಮೆ ಪರೀಕ್ಷೆ ಮಾಡ್ತಿದಿಯೇನೇ.. ಅದನ್ನೆಲ್ಲ ಹೇಳುವಷ್ಟು ಪುರುಸೊತ್ತಿಲ್ಲ ನನಗೆ. ಆದರೆ ಈಗವನು ನನ್ನ ಕಸ್ಟಡಿಯಲ್ಲೇ ಇದ್ದಾನೆ, ಸಾಕ್ಷಿ ಬೇಕಲ್ವಾ ಅದ್ಕೆ!! ಟಿವಿ ನ್ಯೂಸ್ ನಲ್ಲಿ ಅವನು ಬರ್ತಾನೆ ಆಗ ಎಲ್ಲಾ ಡೀಟೆಲ್ಸ್ ಹೇಳ್ತಿನಿ ಒಕೆ! ನಿನಗೆ ಈ ಡೀಲ್ ಬೇಡ ಅನ್ಸುತ್ತೆ.... ಸರಿ ಬಿಡು ನಾವು ನಮ್ಮ ಕೆಲಸ ಶುರು ಮಾಡ್ತಿವಿ. ಹೇ ಬಾರಮ್ಮ ನೀನು.." ರಿಪೋರ್ಟ್ ರನ್ನು ಕೂಗಿದ ಪ್ರಸನ್ನ. ರಿಪೋರ್ಟರ್ ಮತ್ತು ಕ್ಯಾಮರಾ ಮ್ಯಾನ್ ಓಡೋಡಿ ಬಂದರು.
"ನೋ... ಈ ವಿಷಯ ಯಾರಿಗೂ ಗೊತ್ತಾಗಬಾರದು. ಸ್ಪೇಷಲ್ಲಿ ಸಂಕುಗೆ.. ಪ್ಲೀಸ್ ಸ್ಟಾಪ್ ಇಟ್.." ಕಿರುಚಿದ್ದಳು ಮಾನ್ವಿ
"ಒಕೆ ನಾನು ಅವನ ಜೊತೆ ನಿನ್ನ ಪರಿಚಯ ಮಾಡಿಸ್ತಿನಿ, ಬಟ್ ಆಮೇಲೆ ನೀನು ಆ ವಿಡಿಯೋ ಡಿಲಿಟ್ ಮಾಡ್ತಿಯಂತ ಏನ್ ಗ್ಯಾರೆಂಟಿ?"
"ಏನಿವಾಗ ಬಾಂಡ್ ಪೇಪರ್ ಮೇಲೆ ಬರೆದು ಕೊಡ್ಬೇಕಾ? ನಂಬೋದಾದ್ರೆ ನಂಬು ಇಲ್ಲಾ ಫೆಮಸ್ ಆಗೋಕೆ ರೆಡಿಯಾಗು. ಮೇಕಪ್ ಇಷ್ಟು ಸಾಕಾ,, ಇನ್ನೊಂಚೂರು ಮಾಡ್ಕೋಳ್ತಿಯೋ?" ಪ್ರಸನ್ನ ಕ್ಯಾಮರಾ ಮ್ಯಾನ್ ಕಡೆಗೆ ಕೈ ಮಾಡಿ ಕರೆಯುತ್ತ ಹೇಳಿದ. ಮಾನ್ವಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿ ಒದ್ದಾಡಿ ಹೋದಳು. ಬೀಸುವ ದೊಣ್ಣೆಯಿಂದ ಬಚಾವಾಗಲು ಸುಮ್ಮನೆ ಒಪ್ಪಿಕೊಂಡರಾಯಿತು ಎಂದುಕೊಂಡಳು. ಅವಳು ಪ್ರಸನ್ನನಿಗೆ ಏನೋ ಹೇಳುವಷ್ಟರಲ್ಲಿ ಅವಳ ಮೊಬೈಲ್ ವೈಬ್ರೆಟ್ ಆಗಿತ್ತು. ನಂಬರ್ ನೋಡಿ ತಕ್ಷಣ ರಿಸೀವ್ ಮಾಡಿದವಳೇ ವ್ಹಾಟ್..!! ಎಂದು ಗಾಬರಿಯಿಂದ ಕಿರುಚಿ "ವೇಟ್ ಐಮ್ ಕಮಿಂಗ್' ಎಂದು ಕಾಲ್ ಕಟ್ ಮಾಡಿದಳು.
" ಏನಾಯ್ತು " ಪ್ರಸನ್ನ ಕೇಳಿದ.
"ಈ ಇಷ್ಯೂನಾ ಇಲ್ಲಿಗೆ ಸ್ಟಾಪ್ ಮಾಡು, ನನಗೆ ಯೋಚನೆ ಮಾಡೋಕೆ ಸ್ವಲ್ಪ ಟೈಮ್ ಬೇಕು.." ಅವಸರವಾಗಿ ಹೇಳುತ್ತಾ ಆತಂಕದಿಂದ ಕ್ಲಬ್ ಕಡೆಗೆ ಧಾವಿಸಿದಳು. ಪ್ರಸನ್ನ ರಿಪೋರ್ಟರ್ ಮತ್ತೆ ಕ್ಯಾಮರಾ ಮ್ಯಾನ್ ಗೆ ಪ್ಯಾಕ್‌ಪ್ ಎಂದು ಹೇಳಿ, ತಾನು ಅವಳ ಹಿಂದೆ ಕ್ಲಬ್ ಒಳಗೆ ಹೊರಟ. ಇಂತಹ ಜಾಗಗಳ ಬಗ್ಗೆ ಕೇಳಲು ಸಹ ಸಮಯ ವ್ಯರ್ಥ ಮಾಡದ ಪ್ರಸನ್ನ ಮೊದಲ ಬಾರಿಗೆ ತನ್ನ ಆದರ್ಶಗಳನ್ನ ಬಲಿಕೊಟ್ಟು ಕ್ಲಬ್ ನೊಳಗೆ ಪಾದಾರ್ಪಣೆ ಮಾಡಿದ. ತುಂಡು ಬಟ್ಟೆಯ ಲಲನೆಯರು, ಪಾನ ಮತ್ತರಾದ ಯುವಕರು ಒಂದು ಕೈಯಲ್ಲಿ ವೈನ್ ಗ್ಲಾಸ್ ಮತ್ತೊಂದು ಕೈಯಲ್ಲಿ ಸಿಗರೆಟ್ ಹೊಗೆ.. ನೋಡುತ್ತ ಸಾಗುತ್ತಿದ್ದ ಪ್ರಸನ್ನನ ಮೈಮೇಲೆ ಉದ್ದ ಕೂದಲಿನವಳೊಬ್ಬಳು ದೊಪ್ಪನೆ ಬಿದ್ದಳು. ತಕ್ಷಣ ಅವಳ ಭುಜ ಹಿಡಿದು ಎಬ್ಬಿಸಿ ನಿಲ್ಲಿಸಿದ ಪ್ರಸನ್ನ. ಆಕೆ ಹಿಂತಿರುಗಿ ನೋಡಿ 'ಥ್ಯಾಂಕ್ಸ್ ಬ್ರೋ' ಎಂದು ಗ್ಲಾಸ್ ಬಾಯಿಗಿಟ್ಟದ್ದೆ, ಆಗ ಗೊತ್ತಾಯಿತು ಪ್ರಸನ್ನನಿಗೆ ಅದು ಅವಳಲ್ಲ, ಅವನು!! ಎಂದು. ಎಂಥ ವೇಷಭೂಷಣ, ಏನೇನೋ ಅವತಾರ ಎಂಬ ಅಯೋಮಯವಾದ ಗೊಂದಲದೊಂದಿಗೆ ಹುಬ್ಬು ಗಂಟಿಕ್ಕಿ ಮುಂದೆ ನಡೆದಿದ್ದ ಪ್ರಸನ್ನ. "ಭಗವಂತ.. ಈ ಕಣ್ಣಿಂದ ಇನ್ನೂ ಏನೇನ್ ನೋಡ್ಬೇಕೋ!! ಹರ್ಷ ಎಲ್ಲಿದೀಯೋ ಪುಣ್ಯಾತ್ಮ?" ಮನದಲ್ಲಿ ಗೊಣಗೊಣಿಸಿದ.
ಕೌಂಟರ್ ಎದುರಿಗೆ ಕಂಡಿದ್ದ ಹರ್ಷ, ವಿಪರೀತ ಸಿಟ್ಟಿನಿಂದ ವೇಟರ್‌ನ ಕಾಲರ್ ಹಿಡಿದು ಕೂಗಾಡುತ್ತಿದ್ದ. ಅವನ ಬಾಡಿಗಾರ್ಡ್ಸ್ ಅವನನ್ನ ಕಂಟ್ರೋಲ್ ಮಾಡಲಾಗದೆ ಒದ್ದಾಡುತ್ತಿದ್ದರು. "ಸಂಕು... ಬಿಡು ಅವನನ್ನ" ಮಾನ್ವಿ ಕಿರುಚುತ್ತಿದ್ದಳು. ಹರ್ಷನನ್ನ ದೂರದಿಂದ ನೋಡುವಾಗ 'ನಮ್ಮಣ್ಣ ಕೂಡ ನಿನ್ನ ಹಾಗೆ ತುಂಬಾ ಜಾಲಿ ಮತ್ತೆ ಫ್ರೆಂಡ್ಲಿ,,ಯಾವಾಗಲೂ ತಮಾಷೆ ಮಾಡೊ ಸ್ವಭಾವ! ನೀನು ಅವನು ಒಮ್ಮೆ ಮೀಟಾಗೋದನ್ನ ನಾ ನೋಡ್ಬೇಕಿತ್ತು. ಲೈಫು, ಫುಲ್ ಆಫ್ ಫನ್ ಆಗಿರೋದು.. ಆದರೆ...' ಮುಖ ಸಪ್ಪಗೆ ಮಾಡಿ ನುಡಿದಿದ್ದ ಹರಿಣಿ ನೆನಪಾದಳು. 'ಈ ಅವತಾರದಲ್ಲಿ ನಿಮ್ಮಣ್ಣನ್ನ ಅಂಕಲ್ ನೋಡಿದ್ರೆ ತೆಗೆದು ಕಪಾಳಕ್ಕೆ ಎರಡು ಬಾರ್ಸಿರೋರು! ಅಮ್ಮ, ದೇವರ ಮನೆಯ ಗಂಗಾಜಲನೆಲ್ಲ ಪ್ರೋಕ್ಷಣೆ ಮಾಡಿರೋರು! ಹ್ಮ್.. ಇವನನ್ನ ಮೊದಲಿನ ಹಾಗೆ ಬದಲಾಯಿಸೋವರೆಗೂ ನನಗೆ ನೆಮ್ಮದಿ ಇಲ್ಲ ಕಣೇ ಹರಿ.. ಆದರೆ ಒಮ್ಮೆ ಇವನು ನನ್ನನ್ನ ನಂಬಬೇಕು... ಅಷ್ಟಾದ್ರೆ ಸಾಕು.. ನೋಡ್ತಿರು ಹರ್ಷನ್ನ ಮೊದಲಿನಂತೆ ಹೇಗೆ ಪರಿವರ್ತಿಸ್ತಿನಿ ಅಂತ..' ಪ್ರಸನ್ನನ ಅಂತರ್ಗತ ಮಾತುಕತೆ ನಡೆದಿತ್ತು.
ಸಾಫ್ಟ್ ಡ್ರಿಂಕ್ಸ್ ಕೊಟ್ಟು ಅದನ್ನೇ ವಿಸ್ಕಿ ಎಂದು ಯಾಮಾರಿಸಿದನಂತೆ ವೇಟರ್. ಬಾಡಿಗಾರ್ಡ್ ಒಬ್ಬ ದೂರು ವಿವರಿಸಿದ. ''ಅವೆರಡಕ್ಕೂ ವ್ಯತ್ಯಾಸ ಅರಿಯದ ಫೂಲ್ ಅನ್ಕೊಂಡಿದ್ದಾನಾ ನನ್ನ,, ಈ ಲೋಫರ್'' ಹರ್ಷ ಕಿರುಚುತ್ತಿದ್ದ.
"ಸಂಕು... ಹೋಗ್ಲಿ ಬಿಡು, ಪಾಪ! " ಮಾನ್ವಿ ಸಮಾಧಾನ ಮಾಡುತ್ತಿದ್ದಳು.
'ಆ ರೀತಿ ಮಾಡೋಕೆ ಹೇಳಿದ್ದೆ ಈ ಮೇಡಂ ಎಂದು ವೇಟರ್ ಮಾನ್ವಿಯತ್ತ ಕೈ ಮಾಡಿ ಹೇಳುತ್ತಿದ್ದಂತೆ ಮಾನ್ವಿ ಮುಖ ಗಂಭೀರವಾಯಿತು. "ನಿನ್ನ ಹೆಲ್ತ್ ಗೆ ವಿಸ್ಕಿ ಒಳ್ಳೆಯದಲ್ಲ,, ಅದ್ಕೆ.." ಮಾನ್ವಿ ಮೆಲ್ಲಗೆ ತೊದಲಿದಳು. ಅವನ ಬಗ್ಗೆ ಮಾನ್ವಿಯ ಕಾಳಜಿ ನೋಡಿ ಪ್ರಸನ್ನನಿಗೆ ಅಚ್ಚರಿಯಾಗಿತ್ತು.
"ನಿನ್ನ ಈ ಅತೀಯಾದ ಕಾಳಜಿಯಿಂದ ನನ್ನ ಉಸಿರುಗಟ್ಟುತ್ತೆ ಮಾನ್ವಿ.. ನನ್ನನ್ನ ನನ್ನ ಪಾಡಿಗೆ ಬಿಟ್ಬಿಡು, ಇದು ನನ್ನ ಬದುಕು ಅಂತ ಅನ್ನಿಸ್ತಿಲ್ಲ ನನಗೆ.. ನನ್ನ ಇಷ್ಟದ ಹಾಗೆ ಬದ್ಕೋಕೆ ಬಿಡು ನನಗೆ!!" ಹರ್ಷ ಅವಳನ್ನೇ ದುರುಗುಟ್ಟುತ್ತ ಎದುರಿದ್ದ ದುಂಡನೆಯ ಕುರ್ಚಿಯನ್ನು ಬೂಟುಗಾಲಿಂದ ಜಾಡಿಸಿ ಒದ್ದು ಅಲ್ಲಿಂದ ಗಾಂಭೀರ್ಯವಾಗಿ ನಡೆದು, ಪ್ರಸನ್ನನ ಪಕ್ಕದಲ್ಲೇ ಹಾದು ಹೋದ. ಮಾನ್ವಿಯ ಬೆರಳ ಆಜ್ಞೆಯಂತೆ ಬಾಡಿಗಾರ್ಡ್ಸ್ ಅವನನ್ನೇ ಅನುಸರಿಸಿದ್ದರು. ಮಾನ್ವಿ ನಷ್ಟದ ಬಿಲ್ ತುಂಬುತ್ತ ನಿಂತಳು. ಹರ್ಷನನ್ನೇ ನೋಡುತ್ತಿದ್ದ ಪ್ರಸನ್ನ ಪರಿಚಯಕ್ಕೆ ಇದು ಸರಿಯಾದ ಸಮಯವಲ್ಲವೆಂದು ಸುಮ್ಮನಾದ. ಕಾರ್ ಪಾರ್ಕಿಂಗ್ ಕಡೆಗೆ ಹೋದ ಹರ್ಷ ಒಂದು ಸಿಗರೇಟ್ ಹೊತ್ತಿಸಿಕೊಂಡು ಶತಪಥ ತಿರುಗುತ್ತ ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳಲು ಪ್ರಯತ್ನಿಸಿದ.
ಈ ಕಡೆಗೆ ಕ್ಲಬ್‌ನಿಂದ ಹೊರ ಬರುತ್ತಿದ್ದಂತೆ ಮಾನ್ವಿಯನ್ನು ಎದುರಾದ ಪ್ರಸನ್ನ.. "ಈಗ ಅವನ ಮೂಡ್ ಸರಿಯಿಲ್ಲ. ಸೋ ನೀನು ನಾಳೆ ಬೆಳಿಗ್ಗೆ ಏಳು ಗಂಟೆಗೆ ಹರ್ಷನ್ನ ಕರ್ಕೊಂಡು ಮರೀನ್ ಡ್ರೈವ್ ಬೀಚ್‌ಗೆ ಜಾಗಿಂಗ್ ಬರ್ತಿಯಾ..!" ಆಜ್ಞೆ ಮಾಡಿದ.
"ಇಂಪಾಸಿಬಲ್. ಮನೇಲೇ ಜಿಮ್ ಇದೆ. ಅವನ್ಯಾಕೆ ಹೊರಗಡೆ ಬರ್ತಾನೆ! ಅಷ್ಟಕ್ಕೂ ಅವನು ಏಳೋದೆ ಏಳು ಗಂಟೆ ಮೇಲೆ.." ಮಾನ್ವಿ ನಿರಾಕರಿಸಿದಳು.
"ಓಹ್.. ಸರಿಬಿಡು ಎಂಟು ಗಂಟೆಗೆ ಟಿವಿ ಆನ್ ಮಾಡಿ ನಿವ಼್ಸ್ ಆದ್ರೂ ನೋಡೋಕೆ ಹೇಳು. ನಿನ್ನ, ನಿಮ್ಮಪ್ಪನ್ನ ಜನ ಕಲ್ಲು ತಗೊಂಡು ಹೊಡೆಯಕ್ಕೆ ಮನೆಗೆ ಹುಡ್ಕೊಂಡು ಬರ್ಬಹುದು, ನೀನು ರೆಡಿಯಾಗಿರು.." ಪ್ರಸನ್ನ ತನ್ನ ಒಂದು ಕೈಯಿಂದ ಮೊಬೈಲ್ ತಿರುಗಿಸುತ್ತ ಹೇಳಿದ
"ನಾನು ಹೇಳಿದೆ ತಾನೇ ಆ ಬಗ್ಗೆ ಯೋಚನೆ ಮಾಡೋಕೆ ಟೈಮ್ ಬೇಕಂತ.. ಪದೇ ಪದೇ ಮೀಡಿಯಾ ವಿಚಾರ ಎತ್ತಬೇಡ" ಸಿಟ್ಟಿನಿಂದ ರೇಗಿದಳು ಮಾನ್ವಿ.
"ಯೋಚನೆ ಮಾಡೋಕೆ ಈ ಇಡೀ ರಾತ್ರಿ ಟೈಮ್ ಇದೆ ನಿನಗೆ. ಯೋಚನೆ ಮಾಡು. ಬೆಳಿಗ್ಗೆ ಏಳು ಗಂಟೆಗೆ ನಾನು ಹೇಳಿದ ಜಾಗಕ್ಕೆ ಹರ್ಷನ್ನ ಕರ್ಕೊಂಡು ಬರ್ತಿಯಾ.. ಬರ್ಬೆಕು... ನಮ್ಮಿಬ್ಬರ್ಗೂ ಪರಿಚಯ ಮಾಡಿಸ್ತಿಯಾ! ಇದೇ ಫೈನಲ್.. ನೀನು ಬರೋದು ಐದು ನಿಮಿಷ ತಡವಾದ್ರೂ ಗೊತ್ತಲ್ಲ.. ಧಾನಿ ಗುಪ್ತಾ!! " ಪ್ರಸನ್ನ ಕೂಡ ಅಷ್ಟೇ ಸಿಟ್ಟಿನಿಂದ ಹೇಳಿದ.
'ಈ ರಾತ್ರಿಯೇ ಆ ವಿಡಿಯೋದಲ್ಲಿರೊ ವ್ಯಕ್ತಿ ಯಾರು? ಏನು? ಕಂಡು ಹಿಡಿದು, ಅವನನ್ನ ಬಿಡಿಸಿ, ಆ ವಿಡಿಯೋ ಡಿಲಿಟ್ ಮಾಡಿಸಿ ಇವನನ್ನ ಇಲ್ಲಿಂದ ಹೇಗಾದರೂ ಮಾಡಿ ಓಡಿಸ್ಬೇಕು. ಆದರೆ ಅಲ್ಲಿವರೆಗೂ ಇವನು ಹೇಳಿದಂತೆ ಕೇಳಿ ಸುಮ್ಮನಿರೋದೆ ವಾಸಿ' ಎಂದುಕೊಂಡ ಮಾನ್ವಿ ಗೋಣು ಹಾಕಿ "ಹ್ಮ್.. ಒಕೆ" ಎಂದಳು.
"ಅದೇನದು.. ಮಾತು ಮಾತಿಗೂ ಶಂಖು.. ಶಂಖು.. ಅಂತಿದ್ದೆ?"
"ಇಟ್ಸ್ ನಾಟ್ ಶಂಖು. ಇಟ್ಸ್ ಸಂಕು.. ಸಂಕಲ್ಪ್..!"
"ಏನ್ ಸಂಕಲ್ಪ ಮಾಡಿದ್ದೆ? ಬದುಕಿದ್ದಾಗಲೇ ಅವನ ಹೆಸರಿಗೆ ಶಂಖ ಊದಿಸ್ತಿನಿ ಅಂತಾನಾ!! ಅದೇ ಹೆಸರ್ಯಾಕೆ?" ಎಂದು ಕೇಳುತ್ತಲೇ ಅವಳ ಮೊಬೈಲ್ ಕಸಿದುಕೊಂಡು ಹರ್ಷನ ನಂಬರ್ ಸೇವ್ ಮಾಡಿಕೊಂಡು, ಅದರಲ್ಲಿದ್ದ ಫೋಟೋಗಳನ್ನು ನೋಡುತ್ತಿದ್ದ.
"ನಿನಗೂ.. ಇಲ್ಲಿ ನಡಿತಿರೋದಕ್ಕೂ.. ಯಾವ ಸಂಬಂಧವೂ ಇಲ್ಲ. ನಿನಗೆ ಇದನ್ನೆಲ್ಲ ತಿಳಿದ್ಕೊಳ್ಳುವ ಅವಶ್ಯಕತೆನೂ ಇಲ್ಲ" ಮಾನ್ವಿ ಹೇಳುತ್ತಿರುವಾಗ ಅವಳ ಫೋನ್ ವೈಬ್ರೆಟ್ ಆಗಿತ್ತು. ಅದರಲ್ಲಿದ್ದ ಅಪರಿಚಿತ ನಂಬರ್ ನೋಡಿ ಮಾನ್ವಿ 'ಮತ್ತೆ ಇದು ಯಾವ ಗ್ರಹಚಾರನೋ!!' ಎಂದುಕೊಂಡರೆ,, ಪ್ರಸನ್ನ ತನಗೆ ತಿಳಿದ ಆ ನಂಬರ್ ನೋಡಿ ಆಶ್ಚರ್ಯ ಚಕಿತನಾಗಿದ್ದ.
ಮುಂದುವರೆಯುವುದು....
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ