ಪ್ರಸನ್ನನ ಕೈಯಿಂದ ತನ್ನ ಮೊಬೈಲ್ ಕಸಿದುಕೊಂಡ ಮಾನ್ವಿ ಕರೆ ಮಾಡಿದವರು ಯಾರೆಂದು ತಿಳಿಯಲು ಕರೆ ಸ್ವೀಕರಿಸಿ ಮೊಬೈಲ್ ಕಿವಿಗೆ ಹಿಡಿದಳು. ಪ್ರಸನ್ನ ಅವಳ ಮಣಿಕಟ್ಟನ್ನು ಬಿಗಿಯಾಗಿ ಹಿಡಿದು ಕೈ ಮುಂದಕ್ಕೆ ಹಿಡಿದೆಳೆದು ಸ್ಪೀಕರ್ ಆನ್ ಮಾಡಿದ್ದ. ಮಾನ್ವಿ ಅವನನ್ನೇ ದುರುಗುಟ್ಟುತ್ತ 'ಹಲೋ...' ಎಂದಿದ್ದಳು.
"ಡಾಕ್ಟರ್....!!!! ನಿಮ್ಮ ಹಾಸ್ಪಿಟಲ್‌ನವರು ಕೊಟ್ಟ ಮಾತ್ರೆ ನುಂಗಿದಾಗಿಂದ ನನ್ನ ಮಗಳು ರೋಜಿ ಏನೂ ಮಾತೇ ಆಡ್ತಿಲ್ಲ. ತುಂಬಾ ಡಲ್ ಆಗಿ ಕುತ್ಬಿಟ್ಟಿದ್ದಾಳೆ! ಖಂಡಿತ ನೀವು ಕೊಟ್ಟ ಮಾತ್ರೆಗಳಲ್ಲಿ ಏನೋ ಪ್ರಾಬ್ಲಮ್ ಇದೆ. ನಿಮ್ಮ ಹಾಸ್ಪಿಟಲ್ ಮೇಲೆ ಕೇಸ್ ಹಾಕ್ತಿನಿ.. ನಿಮ್ಮನ್ನೆಲ್ಲ ಕೋರ್ಟ್ ಗೆ ಎಳಿತಿನಿ ನಾನು... ಸುಮ್ನೆ ಬಿಡಲ್ಲ ನಿಮ್ನ.. " ಅರಚಿತ್ತು ಫೋನ್‌ಲ್ಲಿನ ಗಂಡು ಧ್ವನಿ.
ಹೊಸದೊಂದು ತಲೆ ನೋವು ಶುರುವಾಯಿತು ಮಾನ್ವಿಗೆ... "ಯಾರ್ ಸರ್ ನೀವು? ಫೋನ್‌ಲ್ಲಿ ಹೀಗೆ ಹೇಳಿದ್ರೆ ಏನರ್ಥವಾಗುತ್ತೆ? ಒಮ್ಮೆ ಹಾಸ್ಪಿಟಲ್ ಬಂದು ನನ್ನ ಮೀಟ್ ಮಾಡಿ."
"ನಿಮ್ನ ಮೀಟ್ ಮಾಡುವಷ್ಟರಲ್ಲಿ ನನ್ನ ಮಗಳು ರೋಜಿಗೆ ಏನಾದ್ರೂ ಆದ್ರೆ..... ಅದೆಲ್ಲ ಗೊತ್ತಿಲ್ಲ ಈಗಲೇ ನನ್ನ ಮಗಳ ಜೊತೆ ಮಾತಾಡಿ, ಅವಳಿಗೆ ಮಾತು ಬರೋ ಹಾಗೆ ಮಾಡಿ.." ಫೋನ್‌ಲ್ಲಿ ಗಂಡು ಧ್ವನಿ ಘರ್ಜಿಸಿತ್ತು.
"ಏನಾಗಿದೆ, ನಿಮ್ಮಗಳಿಗೆ? ಸರಿ ಕೊಡಿ." ಇರುಸುಮುರಿಸಿನಿಂದ ಸಿಡುಕುತ್ತ ಹೇಳಿದ ಮಾನ್ವಿ ಮಗು ಜೊತೆಗೆ ಮುದ್ದಾಗಿ ಮಾತನಾಡಲು ಪ್ರಯತ್ನಿಸಿದಳು.
"ಹಾಯ್ ರೋಜಿ ಪುಟ್ಟ.,. ಯಾಕಮ್ಮ ಏನಾಯ್ತು ನಿನಗೆ? ಡ್ಯಾಡಿ ಬೈದ್ರಾ? ಯಾಕೋ ಪುಟ್ಟ ಮಾತೇ ಆಡ್ತಿಲ್ವಂತೆ! ನಾನು ಡಾಕ್ಟರ್ ಅಲ್ವಾ.. ನನ್ನ ಹತ್ರನೂ ಹೇಳಲ್ವಾ... ಮಾತಾಡು ಕಂದಾ ಏನಾದ್ರೂ........ " ಮಾನ್ವಿಯ ಐದು ನಿಮಿಷಗಳ ಅವಿರತ ಪ್ರಯತ್ನದ ನಂತರ ಆಕಡೆಯಿಂದ ಧ್ವನಿಯೊಂದು ಹೊರಡಿತ್ತು "ವೌ..ವ್.... ವೌವೌ.... ವೌವ್.. ವೌವೌ" ಮಾನ್ವಿ ವಿಚಿತ್ರವಾಗಿ ತನ್ನ ಮೊಬೈಲ್ ಕಡೆಗೆ ನೋಡುತ್ತ ಹಣೆ ಉಜ್ಜಿಕೊಳ್ಳುತ್ತಿದ್ದಳು.
"ವ್ಹಾವ್.. ವ್ಯಾಟ್ ಎ ಮಿರ್ಯಾಕಲ್ ಡಾ. ನಮ್ಮ ರೋಜಿ ಮಾತಾಡ್ಬಿಟ್ಟಳು. ಥ್ಯಾಂಕ್ಯೂ ಡಾಕ್ಟರ್ ಥ್ಯಾಂಕ್ಯೂ ಸೋ ಮಚ್... " ಎಂದು ತುಂಬು ಸಂತೋಷದಿಂದ ಹೇಳಿ ಆ ಕಡೆಯಿಂದ ಕಾಲ್ ಕಟ್ ಆಯ್ತು. ಅಲ್ಲಿಯವರೆಗೂ ಗಮನವಿಟ್ಟು ಕೇಳುತ್ತಿದ್ದ ಪ್ರಸನ್ನನ ನಗುವಿನ ಕಟ್ಟೆಯೊಡೆದು ಹೊಟ್ಟೆ ಹಿಡಿದು ಎದ್ದು ಬಿದ್ದು ನಗುತ್ತಿದ್ದ. "ವ್ಹಾಟ್ ಎ ಮಿರ್ಯಾಕಲ್.. ನಾಯಿಗೆ ಬೊಗಳಲು ಕಲಿಸಿದ ದಿ ಗ್ರೇಟ್ ವಂಡರ್ ಡಾ.ಮಾನ್ವಿ!!!" ಚಪ್ಪಾಳೆ ತಟ್ಟಿ ತಟ್ಟಿ ನಗುತ್ತಿದ್ದ ಪ್ರಸನ್ನ.
'ಇದು ಯಾವುದೋ ವೆಟರ್ನರಿ ಡಾ.ಗೆ ಹೋಗಬೇಕಾದ ಕಾಲ್ ತನಗೆ ಬಂದಿದ್ದಾ.. ಅಥವಾ ಯಾರೋ ಬೇಕಂತಲೇ ತನ್ನನ್ನು ಫೂಲ್ ಮಾಡಲು ಹೀಗೆ ಮಾಡಿದ್ದಾ..!!' ಮಾನ್ವಿ ಮುಖ ಸಿಂಡರಸಿ ಯೋಚನೆಗೆ ಬಿದ್ದಿದ್ದಳು.
" ಪ್ಚ್... ನೀನು ಇಷ್ಟು ಒಳ್ಳೆಯ ಡಾಕ್ಟರ್ ಅಂತ ನಂಗೊತ್ತಿರ್ಲಿಲ್ಲ" ಮತ್ತೆ ನಗು. ಅವನ ಅಣುಕು ಸಹಿಸಲಾರದೆ ಹೊರಟು ನಿಂತಳು ಮಾನ್ವಿ. ನಾಲ್ಕು ಹೆಜ್ಜೆ ಸಾಗುತ್ತಿದ್ದಂತೆ ಕೂಗಿ ನಿಲ್ಲಿಸಿದ ಪ್ರಸನ್ನ ಅವಳೊಂದಿಗೆ ಒಂದೆರಡು ಸೆಲ್ಫೀ ಕ್ಲಿಕ್ಕಿಸಲು ಕೇಳಿಕೊಂಡ. ಅವಳ ಭುಜಕ್ಕೆ ಕೈ ಹಾಕಿ ನಿಂತು "ಒಂಚೂರು ಹಲ್ಲು ಕಿಸಿದ್ರೆ ಚೆನ್ನಾಗಿರತ್ತೆ" ಗೊಣಗಿದ. ಈಗ ಇವೆಲ್ಲ ಯಾಕೆ ಎಂಬಂತಿತ್ತು ಅವಳ ನೋಟ. "ನಿನ್ನ ಜೊತೆಗೆ ಕಳೆದ ಈ ಮೂಮೆಂಟ್ ನನಗೆ ಲೈಫ್ ಲಾಂಗ್ ನೆನಪಿನಲ್ಲಿ ಉಳಿಯೋಕೆ ಮಾನು.." ಪ್ರೀತಿಯಿಂದ ಹೇಳಿದ ಪ್ರಸನ್ನ ಅವಳೊಂದಿಗೆ ಕೆಲವು ಸೆಲ್ಫಿಗಳನ್ನು ತೆಗೆದುಕೊಂಡು ಬಿಟ್ಟಿದ್ದ. 'ಇವನ ಉದ್ದೇಶವಾದ್ರೂ ಏನಿರಬಹುದು?' ಮಾನ್ವಿ ಯೋಚಿಸುತ್ತಲೇ ಮತ್ತೆ ಹೆಜ್ಜೆ ಮುಂದಿಟ್ಟಳು. ಅಷ್ಟರಲ್ಲಿ ಮತ್ತೆ ಪ್ರೀತಿಯಿಂದ ಕೂಗಿದ್ದ ಪ್ರಸನ್ನ "ಮಾನು... ಗುಡ್ ನೈಟ್! ಇವೆಲ್ಲಾ ಯೋಚನೆ ತೆಗೆದು ಹಾಕಿ, ನೆಮ್ಮದಿಯಿಂದ ನಿದ್ದೆ ಮಾಡು ಒಕೆ..." ಅವನ ಈ ರೀತಿಯ ಪ್ರೀತಿಯ ಮಾತು ಕೇಳಿ ಮಾನ್ವಿಗೆ ದಿಗ್ಭ್ರಮೆಯಾಗಿತ್ತು.
'ಯಾಕೆಂದ್ರೆ, ನಾಳೆಯಿಂದ ನಿನಗೂ ನೆಮ್ಮದಿಗೂ ದೂರ ದೂರದವರೆಗೂ ಸಂಬಂಧವೇ ಇರಲ್ಲ' ಮನಸ್ಸಲ್ಲೇ ನಕ್ಕ ಪ್ರಸನ್ನ. ಆದರೆ ಮಾನ್ವಿಯ ನೆಮ್ಮದಿಗೆ ಈಗಾಗಲೇ ಕಿಚ್ಚು ಬಿದ್ದಾಗಿತ್ತು. ಕಾರ್ ಪಾರ್ಕಿಂಗ್ ಕಡೆಗೆ ಹೊರಟ ಮಾನ್ವಿ ಈ ರಾತ್ರಿಯೇ ಈ ಸಮಸ್ಯೆಯ ಇತ್ಯರ್ಥಕ್ಕೆ ಯೋಜನೆ ಹಾಕಿದ್ದಳು. ಇಬ್ಬರು ಬಾಡಿಗಾರ್ಡ್ಸ್‌ನ್ನು ಪಕ್ಕಕ್ಕೆ ಕರೆದು ಪ್ರಸನ್ನನನ್ನು ಹಿಂಬಾಲಿಸಲು ಆಜ್ಞಾಪಿಸಿ ತಾನು ಹರ್ಷನೊಂದಿಗೆ ಕಾರಿನಲ್ಲಿ ಹೊರಟಿದ್ದಳು.
*******
ಮಾನ್ವಿ ಆ ಕಡೆಗೆ ಹೋಗುತ್ತಿದ್ದಂತೆ ರೋಹಿತ್‌ಗೆ ಕರೆ ಮಾಡಿದ್ದ ಪ್ರಸನ್ನ.. "ಹಲೋ.. ಡಾ.ರೋಹಿತ್ ಅವ್ರೆ ಏನ್ಮಾಡ್ತಿದ್ದಿರಾ?"
"ಸರ್.. ಇವತ್ತು ನನ್ನದು ನೈಟ್ ಶಿಫ್ಟ್. ಹಾಸ್ಪಿಟಲ್ ನಲ್ಲಿ ಡ್ಯೂಟಿ ಮಾಡ್ತಿದ್ದಿನಿ." ರೋಹಿತ್ ಉತ್ತರಿಸಿದ್ದ.
"ಏನು ಡ್ಯೂಟಿ ನಿಮ್ದು?? ಸಿಕ್ಕ ಸಿಕ್ಕ ಹುಡುಗಿಯರ ನಂಬರ್ ಗೆ 'ಪ್ರ್ಯಾಂಕ್ ಕಾಲ್' ಮಾಡೋದಾ??" ಗದರಿದ ಪ್ರಸನ್ನ.
"ಸರ್sss......." ರಾಗವೆಳೆದ ರೋಹಿತ್
"ಮಾನ್ವಿಗ್ಯಾಕೆ ಕಾಲ್ ಮಾಡಿ ಪ್ರ್ಯಾಂಕ್ ಮಾಡಿದ್ದು??"
"ಯಾವ ಮಾನ್ವಿ ಸರ್..? ನನಗ್ಯಾವ ಮಾನ್ವಿನೂ ಗೊತ್ತಿಲ್ಲ" ಗೊಂದಲದಿಂದ ಉತ್ತರಿಸಿದ ರೋಹಿತ್.
"ಅದೇ ನಿನ್ನ ಮಗಳು ರೋಜಿಗೆ ಈಗತಾನೇ ಮಾತು ಬರ್ಸಿದ್ರಲ್ಲಾ.. ಅದೇ ಮಾನ್ವಿ..!!"
"ಸರ್.. ಅದೆಲ್ಲಾ ನಿಮಗೆ ಹೇಗೆ ಗೊತ್ತಾಯ್ತು!!"
"ನಾನು ಕೇಳಿದ್ದಕ್ಕೆ ಉತ್ತರ ಕೊಡು ಮೊದ್ಲು.."
"ಅದು ಸರ್.. ಡಾ.ಪರಿ ನಾಳೆ ಒಬ್ಬರ ಧ್ವನಿನಾ ಅನುಕರಣೆ ಮಾಡ್ಬೇಕು ಆಗತ್ತಾ? ಅಂತ ಕೇಳಿದ್ರು, ಟ್ರೈ ಮಾಡ್ತಿನಿ ಅಂದೆ. ಅದ್ಕೆ ಈ ನಂಬರ್ ಕೊಟ್ರು, ಐದು ನಿಮಿಷ ಧ್ವನಿ ಕೇಳಿ ಆಮೇಲೆ ಹೇಳ್ತಿನಿ ಅಂತಂದೆ. ಅದಕ್ಕೆ ಸರ್, ಕಾಲ್ ಮಾಡಿದ್ದು. ಬೇರೆ ಯಾವ ಉದ್ದೇಶನೂ ಇರ್ಲಿಲ್ಲ. ನೀವು ಹೇಳೋವರೆಗೂ ಅವರ ಹೆಸರು ಸಹ ನಂಗೊತ್ತಿರ್ಲಿಲ್ಲ" ಸಪ್ಪೆ ಧ್ವನಿಯಲ್ಲಿ ಹೇಳಿದ ರೋಹಿತ್.
"ಓಹ್ ವಾಯ಼್ಸ್ ಡಬ್ಬಿಂಗು... ಹ್ಮ್... ಬರುತ್ತಾ ಈ ಧ್ವನಿ ನಿನಗೆ? ಅಷ್ಟಕ್ಕೂ ಏನಂತ ಮಾತಾಡೋಕೆ ಹೇಳಿದ್ರು?"
"ಹ್ಮ್... ಡಾ.ಪರಿ ಇನ್ನೂ ಏನ್ ಮಾತಾಡ್ಬೇಕನ್ನೋದು ಹೇಳಿಲ್ಲ ಸರ್.. ಇವ್ರ ಧ್ವನಿ, ಅಂತಹ ಭಾರಿ ಕೋಗಿಲೆ ಕಂಠ ಏನಲ್ಲ. ಕಾಲ್ ರೆಕಾರ್ಡ್ ಆಗಿದೆ, ಸ್ವಲ್ಪ ಪ್ರ್ಯಾಕ್ಟೀಸ್ ಮಾಡಿದ್ರೆ ಈಸ಼ಿಯಾಗಿ ಮಾಡಬಲ್ಲೆ."
"ಸರಿ. ಹಾಗಂತ ಮೊಬೈಲ್ ನಲ್ಲೇ ಕೂತಿರ್ಬೇಡ. ಪೇಷಂಟ್ಸ್ ಕಡೆಗೂ ಗಮನವಿರಲಿ. ಬಾಯ್.." ಎಂದು ಕರೆ ಕಡಿತಗೊಳಿಸಿದ ಪ್ರಸನ್ನ. 'ಈ ಪರಿ ಏನು ಮಾಡಲು ಹೊರಟಿದ್ದಾರೆ? ಮಾನ್ವಿ ಧ್ವನಿಯಲ್ಲಿ ಹರ್ಷನಿಗೆ ಸತ್ಯ ತಿಳಿಸುವ ಐಡಿಯಾ ನಾ? ಎದುರಿದ್ದ ವ್ಯಕ್ತಿಗಳನ್ನೇ ನಂಬದವನು, ಬರೀ ಒಂದು ಕಾಲ್ ನಂಬುತ್ತಾನಾ?? ಮಾನ್ವಿ ಜೊತೆ ಒಮ್ಮೆ ಮಾತಾಡಿದ್ರೆ ಅದು ಫೇಕ್ ಕಾಲ್ ಅಂತ ಗೊತ್ತಾಗುತ್ತೆ!! ಆಮೇಲೆ?? ಪರಿ.. ನೀವು ಮಾತು ಕೊಟ್ಟು ತಪ್ಪು ಮಾಡಿದ್ರಿ.. ನೀವೊಂತರಾ! ಈ ಹರ್ಷ ಒಂತರಾ! ಇನ್ನೂ ಆ ಪಿಶಾಚಿ ಒಂದೊಂತರಾ!! ಇದೆಲ್ಲಾ ಎಲ್ಲಿ ಹೋಗಿ ತಲುಪುತ್ತೋ' ಪ್ರಸನ್ನ ಸಂಕಟ ಪಡುತ್ತ ರೂಂ ಗೆ ಹೊರಡಲು ಟ್ಯಾಕ್ಸಿಯತ್ತ ಕೈ ಮಾಡಿದ.
ಒಂದು ಟ್ಯಾಕ್ಸಿ ಎದುರು ಬಂದು ನಿಲ್ಲಲು, ಅದರಲ್ಲಿ ಹತ್ತಿ ಕುಳಿತು ಹೋಗಬೇಕಾದ ಅಪಾರ್ಟ್ಮೆಂಟ್ ಅಡ್ರೆಸ್ ಹೇಳಿದ ಪ್ರಸನ್ನ. ಟ್ಯಾಕ್ಸಿ ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಹಿಂದೆ ಬರುತ್ತಿದ್ದ ಬೈಕ್ ಸವಾರರನ್ನು ಪ್ರಸನ್ನ ಪಕ್ಕದಲ್ಲಿರುವ ಮಿರರ್ ನಲ್ಲಿ ಗಮನಿಸಿದ. ಹರ್ಷನ ಜೊತೆಗಿದ್ದ ದಡೂತಿಗಳು. ನಿಸ್ಸಂದೇಹವಾಗಿ ಇದು ಮಾನ್ವಿಯ ಷಡ್ಯಂತ್ರವೆಂದು ಅರಿತುಕೊಳ್ಳಲು ತಡವಾಗಲಿಲ್ಲ ಪ್ರಸನ್ನನಿಗೆ. ಕೂಡಲೇ ತಾನು ಹೊರಟ ದಿಕ್ಕನ್ನು ಬದಲಿಸಲು ಡ್ರೈವರ್ ಗೆ ತಿಳಿಸಿದ. ದಾಂಡಿಗರು ಅವನ ಟ್ಯಾಕ್ಸಿಯನ್ನು ಹಿಂಬಾಲಿಸುತ್ತಲೇ ಇದ್ದರು. ಟ್ಯಾಕ್ಸಿ ಮೇನ್ ರೋಡ್ ಬಿಟ್ಟು ಒಂದೆರಡು ಮೂರು ಸಂದುಗೊಂದುಗಳಲ್ಲಿ ಸುತ್ತಾಡಿ ಮತ್ತೆ ಮೇನ್ ರೋಡ್ಗೆ ಬಂದಿತ್ತು. ದಾರಿ ಮಧ್ಯೆ ಟ್ರಾಫಿಕ್ ಸಿಗ್ನಲ್ ಕಂಡು ನಿಂತಿತು. ಹಿಂದಿದ್ದ ಬಾಡಿಗಾರ್ಡ್ಸ್ ಕಣ್ಣು ಅದೇ ಟ್ಯಾಕ್ಸಿ ಮೇಲೆ ನೆಟ್ಟಿತ್ತು. ಸಿಗ್ನಲ್ ಗ್ರೀನ್ ಆಗುತ್ತಿದ್ದಂತೆ ಮತ್ತೆ ಹಿಂಬಾಲಿಸುವ ಕಾಯಕ ಮೊದಲಾಗಿತ್ತು. ಅರ್ಧಗಂಟೆ ಎಲ್ಲೆಡೆ ಸುತ್ತಾಡಿದ ಟ್ಯಾಕ್ಸಿ ಕೊನೆಗೆ ಒಂದು ರೆಸ್ಟೋರೆಂಟ್ ಎದುರಿಗೆ ಬಂದು ನಿಂತಿತು. ಯುವತಿಯೊಬ್ಬಳು ಟ್ಯಾಕ್ಸಿ ಏರಿ ಕುಳಿತಿದ್ದಳು. ಅವಳನ್ನ ಹತ್ತಿಸಿಕೊಂಡ ಟ್ಯಾಕ್ಸಿ ಮತ್ತೆ ಪ್ರಯಾಣ ಆರಂಭಿಸಿ ಆಕೆಯನ್ನು ಮನೆ ತಲುಪಿಸಿತ್ತು. ಟ್ಯಾಕ್ಸಿ ಒಳಗೆ ಆ ವ್ಯಕ್ತಿ ಇದ್ದಾನಾ? ಇಲ್ವಾ? ಹಿಂಬಾಲಿಸುತ್ತಿದ್ದ ದಾಂಡಿಗರಿಗೆ ಸ್ವಲ್ಪ ಸ್ವಲ್ಪ ಅನುಮಾನ ಶುರುವಾಯಿತು. ಯುವತಿಯನ್ನು ಇಳಿಸುತ್ತಿದ್ದಂತೆ ತಾವು ಅವಸರದಿಂದ ಟ್ಯಾಕ್ಸಿ ಬಳಿ ಹೋಗಿ ಇಣುಕಿ ನೋಡಿದರು. ಡ್ರೈವರ್ ಹೊರತು ಒಳಗೆ ಯಾರೂ ಇರಲಿಲ್ಲ. ಎಲ್ಲಿ ಆ ವ್ಯಕ್ತಿ ಎಂದು ಕೇಳಿದಾಗ, 'ಯಾವ ವ್ಯಕ್ತಿ?' ಮರುಪ್ರಶ್ನಿಸಿದ ಡ್ರೈವರ್. ಅವನ ಕೊರಳಪಟ್ಟಿ ಹಿಡಿದು ಕಿರುಚಿ ಕೇಳಿದಾಗ, 'ಆಗಲೇ ಟ್ರಾಫಿಕ್ ನಲ್ಲಿ ಎಡಗಡೆಯಿಂದ ಮೆಲ್ಲಗೆ ಇಳಿದು ಹೋದದ್ದನ್ನು' ಡ್ರೈವರ್ ತಿಳಿಸಿದ್ದ. ಅವರ ಗಮನ ಟ್ಯಾಕ್ಸಿ ಮೇಲೆ ಇತ್ತೇ ಹೊರತು ಒಳಗಿನ ವ್ಯಕ್ತಿ ಕಡೆಗೆ ಅವರು ಗಮನಹರಿಸಿರಲಿಲ್ಲ. ಅವರಿಗೆ ಚಳ್ಳೆಹಣ್ಣು ತಿನ್ನಿಸಿದ ಪ್ರಸನ್ನ ಅದಾಗಲೇ ವಿವೇಕ್ ನ ರೂಮ್ ಸೇರಿ ನಾಳೆಯ ಪ್ಲ್ಯಾನಿಂಗ್ ನಡೆಸಿದ್ದ.
*******
ಮಾನ್ವಿ ಹರ್ಷನನ್ನು ಅವನ ಔಟ್ ಹೌಸ್ ಗೆ ಡ್ರಾಪ್ ಮಾಡಿ ಮನೆಯ ಅಡಿಗೆ ಜವಾಬ್ದಾರಿ ವಹಿಸಿಕೊಂಡಿದ್ದ ಅರವತ್ತರ ಜಾನಕಮ್ಮಗೆ ಮತ್ತು ಮನೆಯ ಕೆಲಸಗಳಿಗೆ ಸಹಾಯಕನಾಗಿದ್ದ ಡೇವಿಡ್ ಗೆ ಅವನನ್ನ ಹುಷಾರಾಗಿ ನೋಡಿಕೊಳ್ಳಲು ಹೇಳಿ ಅಲ್ಲಿಂದ ಹೊರಟು ಹೋದಳು. ಕ್ಲಬ್ ನಿಂದ ಮನೆಗೆ ಬಂದ ಹರ್ಷ ಜಾನಕಮ್ಮ ಊಟಕ್ಕೆ ಕೂಗಿದರೂ ಕೇಳದೆ, ಅವರ ಮುಖ ಸಹ ನೋಡದೆ, ನೇರವಾಗಿ ತನ್ನ ರೂಂ ಗೆ ಧಾವಿಸಿ ತನ್ನ ಜಾಕೆಟ್ ಬಿಚ್ಚಿ ದೂರ ಎಸೆದು ಬೆಡ್ ಮೇಲೆ ಕುಸಿದು ಕುಳಿತು ಚಿಟ್ಟು ಹಿಡಿದಿದ್ದ ತಲೆಯನ್ನು ಗಟ್ಟಿಯಾಗಿ ಒತ್ತಿಕೊಳ್ಳುತ್ತಿದ್ದ.
ಗಂಭೀರ ವದನ, ಮೂಗಿನ ತುಟ್ಟ ತುದಿಯಲ್ಲಿ ಕೋಪ, ಕೆಂಡಕಾರುವ ಕಂಗಳು, ಬಿಗಿದ ತುಟಿಗಳು, ಗಂಟಿಕ್ಕಿದ ಹುಬ್ಬು..
'who are you' ಕನ್ನಡಿಯಲ್ಲಿ ಕಾಣಿಸುತ್ತಿದ್ದ ತನ್ನದೇ ಪ್ರತಿಬಿಂಬಕ್ಕೆ ಅವನ ಪ್ರಶ್ನೆ. ಪ್ರತ್ಯುತ್ತರ ಗಾಢವಾದ ಮೌನ.. ಮತ್ತೆ ಮತ್ತೆ ಕೂಗಿ ಕೂಗಿ ಕೇಳಿದ. ಕನ್ನಡಿ ಸಹ ನಿರುತ್ತರವಾಗಿತ್ತು ಅವನಂತೆ.. ಮತ್ತೆ ಶುರುವಾಗಿತ್ತು ಹೃದಯದ ಬಡಿತದಲ್ಲೊಂದು ಹೊಸ ಕಂಪನ,, ಅಲೆ ಅಲೆಯಾಗಿ ಮೂಡಿ ಬರುತ್ತಿತ್ತು ಯಾವುದೋ ಹೆಣ್ಣಿನ ನಗು... ಅವನ ಸಹನೆಯ ಹೆಜ್ಜೆ ಅಳುಕಿತು. ಪಕ್ಕದಲ್ಲಿದ್ದ ಗಾಜಿನ ಲ್ಯಾಂಪ್ ಎತ್ತಿ ಕನ್ನಡಿ ಎಡೆಗೆ ಬಿಸಾಕಿದ. ಕನ್ನಡಿ ಪುಡಿ ಪುಡಿ.. ಒಡೆದ ಚಿಕ್ಕ ಪುಟ್ಟ ಚೂರುಗಳಲ್ಲೂ ಅವನದೇ ನೂರು ನೂರು ಬಿಂಬಗಳು.... ಮತ್ತೆ ಅಣುಗಿಸಿತ್ತು.. " ಯಾರು ನೀನು??? ಸಂಕಲ್ಪ್ ಅಥ್ರೇಯಾನಾ?? ನಿಜವಾ??" ಯಾಕೋ ಸಂಪೂರ್ಣವಾಗಿ ನಂಬುತ್ತಿಲ್ಲ ಅಂತರಾಳ..!! ಹಾಗಾದರೆ ಯಾರು ನಾನು?? ತನ್ನೊಳಗೆ ಒಂದು ಯಕ್ಷಪ್ರಶ್ನೆ!!
ಕುಳಿತ ಜಾಗದಿಂದ ಎದ್ದು ಸಿಗರೇಟ್ ಒಂದನ್ನು ಬಾಯಿಗಿಟ್ಟುಕೊಂಡು ಲೈಟರ್ ನಿಂದ ಕಿಡಿ ಹಚ್ಚಿ ಹೊಗೆ ಊದಿದ. ಕಿಡಿ ಹೊತ್ತಿದ ಲೈಟರನ್ನು ಆರಿಸದೆ ಬೇಕೆಂದೇ ಹಾಸಿಗೆ ಮೇಲೆ ಎಸೆದು ಬಿಟ್ಟ. ಹತ್ತಿದ ಬೆಂಕಿ ಇಡೀ ಮೆತ್ತನೆಯ ಹತ್ತಿಯ ಹಾಸಿಗೆಯನ್ನು ಆವರಿಸಿ, ದಗದಗನೇ ಉರಿಯುತ್ತಿರುವಾಗ, ಅದನ್ನು ಆರಿಸುವ ಪ್ರಯತ್ನ ಸಹ ಮಾಡದೇ, ಅದನ್ನೇ ಎವೆಯಿಕ್ಕದೆ ನೋಡಿದ.. ತನ್ನ ಕೈಯನ್ನು ಬೆಂಕಿಯಲ್ಲಿ ಹೊರಳಿಸುತ್ತ, ದಹಿಸುವ ನೋವನ್ನು ವಿಷಾದದ ನಗೆಯೊಂದಿಗೆ ಆನಂದಿಸುತ್ತಿದ್ದ. ಆಗಿನಿಂದ ಅವನ ಹಿಂದೆ ಬಂದು ಇವನ ಚರ್ಯೆಯನ್ನು ಗಮನಿಸುತ್ತ ನಿಂತಿದ್ದ ಡೇವಿಡ್, ತಕ್ಷಣ ಗಾಬರಿಯಿಂದ ಫೈರ್ ಅಲಾರಾಂ ಆನ್ ಮಾಡಲು ಓಡಿದ್ದ. ಹೊತ್ತಿಕೊಂಡ ಬೆಂಕಿಯ ಹೊಗೆಗೆ ಜೋರಾಗಿ ಅಲಾರಾಂ ಹೊಡೆದುಕೊಂಡಿತ್ತು. ತಕ್ಷಣ ಸ್ಪಿಂಕ್ಲರ್ ಆನ್ ಆಗಿ ಚುಮು ಚುಮು ನೀರು ಜಿನುಗಿ ಬೆಂಕಿಯನ್ನು ನಂದಿಸಿತು. ಎಲ್ಲಾ ಯಾಂತ್ರಿಕವಾಗಿ ನಡೆಯುತ್ತಿತ್ತು. ಹರ್ಷ ತನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ..
ಹೊರಗೆ ಬಾಲ್ಕನಿಗೆ ಬಂದು ತಂಗಾಳಿಗೆ ಮೈಯೊಡ್ಡಿ ನಿಂತ. ಕಲ್ಪನೆಯಲ್ಲಿ ಮೂಡುವ ಅವಳ ಸನಿಹವಿಲ್ಲದ ಆ ತಂಗಾಳಿಯ ಸ್ಪರ್ಶ ಕೂಡ ಅವನಿಗೆ ಚೇಳು ಕುಟುಕಿದ ಅನುಭವ.. ತಿಳಿ ಮೋಡಗಳ ಮರೆಯಲ್ಲಿ ಮೆಲ್ಲಗೆ ನಗುತ್ತಿದ್ದ ಚಂದಿರ.. ಆಗೊಮ್ಮೆ ಎರಡು ಜೋಡಿ ಕಂಗಳಲ್ಲಿ ಸೆರೆಯಾಗಿ ಕವಿತೆಯ ಸಾಲಾಗಿದ್ದ... ಆದರೆ ಈಗಿನ ಒಂಟಿ ಯಾತನೆಗೆ ಸಾಕ್ಷಿಯಾದ ಕಂಗಳಿಗೆ ಮುಳ್ಳುಮುಳ್ಳಾಗಿ ಕಾಣಿಸುತ್ತಿದ್ದ...
ನಿಟ್ಟುಸಿರು ಹೊರಚೆಲ್ಲಿ, ಅಲ್ಲಿಯೇ ಎದುರಿದ್ದ ಆರಾಮ್ ಚೇರ್ ಮೇಲೆ ಆಸೀನನಾಗಿದ್ದ. ಏನೋ ನೆನಪಾಗಿ ಜೇಬಿನಲ್ಲಿ ತಡಕಾಡಿ ಬೆಳಿಗ್ಗೆ ಬಚ್ಚಿಟ್ಟ ಮೆತ್ತನೆಯ ವೆಲ್ವೆಟ್ ಕರವಸ್ತ್ರವೊಂದನ್ನು ಹೊರತೆಗೆದ. ಎರಡು ರೆಕ್ಕೆಗಳುಳ್ಳ ಪುಟ್ಟ ಏಂಜಲ್ ಚಿತ್ರವಿದ್ದ ತಿಳಿ ಗುಲಾಬಿಯ ಲೇಡೀಸ್ ಕರ್ಚೀಫ್!! ಬೆಳಿಗ್ಗೆ ಪ್ಯಾರಡೈಸ್ ಹಾಲ್‌ನಲ್ಲಿ ಯಾರೋ ಕೂಗಿದಂತೆ ಭಾಸವಾದಾಗ, ಅವನ ಕೈ ಗಟ್ಟಿಯಾಗಿ ಹಿಡಿದ ಮಾನ್ವಿಯ ಕೈ ಕೊಸರಿಕೊಂಡು ಯಾರೆಂದು ನೋಡಲು ಗ್ಲಾಸ್ ಹೌಸ್ನಿಂದ ಹೊರಗೋಡಿ ಬಂದಿದ್ದ. ಅವನು ಹೊರಬರುವಷ್ಟರಲ್ಲಿ ಆ ಜಾಗದಲ್ಲಿ ಯಾರು ಇರಲಿಲ್ಲ, ಬದಲಾಗಿ ಅದೇ ಜಾಗದಲ್ಲಿ ಕೆಳಗೆ ಬಿದ್ದಿದ್ದ ಈ ಕರವಸ್ತ್ರ ಅವನಿಗೆ ಸಿಕ್ಕಿತು. ಯಾರದೆಂದು ಬಗ್ಗಿ ಎತ್ತಿಕೊಳ್ಳುವಾಗ ಅದರ ಮೃದು ಸ್ಪರ್ಶದಲ್ಲೂ ಮಧುರಾನುಭೂತಿ.. ಮೊದಲ ಬಾರಿಗೆ ಪುಟ್ಟ ಮಗುವಿನ ಬೆರಳ ಸ್ಪರ್ಶಿಸಿದಂತ ಆಹ್ಲಾದತೆ.. ಅವಳ ಮೈಯ ಘಮವನ್ನು ಅವನ ನಾಸಿಕ ಗ್ರಹಿಸಿತ್ತು. ಆ ಘಮಲು ಮರೆತು ಹೋದ ಹಳೆಯ ಪುಟಗಳನ್ನು ತಿರುವಿ ಹಾಕುವ ಪ್ರಯತ್ನದಲ್ಲಿತ್ತು. ಅದರ ಮಡಿಕೆ ಬಿಡಿಸಿ ನೋಡಿದಾಗ ಕಂಡ ಪುಟ್ಟ ಚಿತ್ರ ನೋಡಿ ಮನಸ್ಸು- ಭಾವನೆ-ಮಾತು ಒಟ್ಟಿಗೆ ತೊದಲಿದ್ದವು 'ಏಂಜಲ್....!!' ಆ ಹೆಸರು ಉಚ್ಚರಿಸುವಾಗಲೂ ಸಹ ಅವನ ಎದೆಯಲ್ಲಿ ಮೃದು ಮಧುರ ವೀಣೆ ಮಿಟಿದಂತಹ ತಲ್ಲಣ… ಮಾತಲ್ಲಿ ವ್ಯಕ್ತಪಡಿಸಲಾಗದ ಸಂತೋಷದ ಚಿತ್ತಾರ... ತನ್ನದೇ ಒಂದು ಅಂಶವನ್ನು ಮತ್ತೆ ಸೇರುವ ಆಶಾಕಿರಣ... ಪ್ರತಿ ಹೆಸರಿಗೂ ಈ ರೀತಿ ಮಿಡಿಯುವುದಿಲ್ಲ ಹೃದಯ,, ಮಿಡಿಯುವ ಹೃದಯಕ್ಕೂ ತನ್ನದೇ ನಿಯಮವಿದೆ.. ವೃಥಾ ಯಾರದೋ ಹೆಸರಿಗೆ ಹೀಗೆಲ್ಲ ಕಂಪಿಸದು.. ಅರಿಯದ ವಯ್ಯಸ್ಸಿನಲ್ಲಿ, ತಾಯಿಗೂ ಕಾಣದೆ ಗರ್ಭದಲ್ಲಿ ಕುಳಿತ ತನ್ನ ಪ್ರೀತಿ ಪಾತ್ರಳಿಗೆ ತಾನೇ ಮಾಡಿದ ನಾಮಕರಣ.. ಆದರೆ ಇಂದು ಅಪರಿಚಿತ..
ಹಿಂದೆ ಬಂದ ಮಾನ್ವಿ ಏನಾಯ್ತೆಂದು ಕೇಳಲು, ಅವಳಿಗೆ ಕಾಣದಂತೆ ಕೂಡಲೇ ಕೋರ್ಟಿನ ಜೇಬಿನಲ್ಲಿ ಬಚ್ಚಿಟ್ಟುಕೊಂಡಿದ್ದ ಕರ್ಚೀಫ್!!
ಯಾರದಿದು ಕರ್ಚೀಫ್? ನನಗ್ಯಾಕೆ ಈ ಚಿತ್ರ, ಈ ಸ್ಪರ್ಶ, ಈ ಸುಗಂಧ ಇಷ್ಟೊಂದು ಆಪ್ತವೆನಿಸ್ತಿದೆ? ಅಲ್ಲಿ ನಿಜವಾಗಿಯೂ ಯಾರೋ ನನ್ನ ಕೂಗಿದ್ದರಾ? ಈ ವಿಷಯ ಮಾನ್ವಿಯಿಂದ ಮುಚ್ಚಿಡಬಾರದಿತ್ತಾ? ಯಾಕೆ ನನ್ನದೇ ಬದುಕು ನನಗೆ ಅಪರಿಚಿತ ಅನ್ನಿಸ್ತಿದೆ? ಸುತ್ತ ಇರುವ ಸಾವಿರಾರು ಜನರ ಮಧ್ಯೆ ನನ್ನ ಕಣ್ಣು ಯಾಕೆ ಯಾವಾಗಲೂ ಯಾರನ್ನೋ ಹುಡುಕುತ್ತೇ? ಕಲ್ಪನೆಯಲ್ಲಿ ಕಾಣುವ ಆ ಅಸ್ಪಷ್ಟ ಚಹರೆಗಳು ಯಾರವರು?? ಆ ಕಲ್ಪನೆಯ ಕನ್ನಿಕೆ.. ನಿಜವಾಗಿಯೂ ಮಾನ್ವಿನಾ? ನೋ... ಮತ್ಯಾರು?? ಆ ಮುಗ್ದನಗುವಿನ ಶರಧಿ ಚೆಲುವೆ ಮತ್ತೆ ಸಿಗಬಹುದಾ? ಅಥವಾ ಅವಳು ಬರೀ ನನ್ನ ಕಲ್ಪನೆಯಾ?? ಆದಿ ಅಂತ್ಯವಿಲ್ಲದ ಸಾವಿರ ಪ್ರಶ್ನೆಗಳ ನಡುವೆ ಬದುಕು ಗೊಜಲು ಗೋಜಲಾಗಿತ್ತು ಹರ್ಷನಿಗೆ..
ಅಷ್ಟರಲ್ಲಿ ಡೇವಿಡ್ ಹಾಲು ಮತ್ತು ಮಾತ್ರೆ ತಂದು ಕೊಟ್ಟ. ಮೊದಲು ಬೇಡವೆನಿಸಿತ್ತಾದರೂ ತಾನು ಒಪ್ಪದಿದ್ದರೆ ಮಾನ್ವಿ ಬಂದು ಹಠ ಮಾಡಿ ಮಾತ್ರೆ ನುಂಗಿಸುವ ಕಿರಿಕಿರಿ ಬೇಡವೆಂದು ತುಟಿ ಪಿಟ್ಟೆನ್ನದೆ ಗಟಗಟನೆ ಹಾಲು ಕುಡಿದು ಮಾತ್ರೆ ನುಂಗಿದ್ದ. ಅಷ್ಟರಲ್ಲಿ ಎದೆಯಲ್ಲಿ ಅವಳ ಆರ್ತನಾದದ ಮೊಳಗುವಿಕೆ ಶುರುವಾಯಿತು. ಮಾತ್ರೆ ಮಂಪರಿಗೆ ನಿದ್ರೆ ಆವರಿಸಿದಂತಾಯಿತು. ಆರಾಮ್ ಕುರ್ಚಿಯ ಹಿಂದಕ್ಕೊರಗಿ ಮಲಗುವಾಗ ಕೈಯಲ್ಲಿನ ಉಂಗುರಕ್ಕೆ ಪ್ರೀತಿಯಿಂದ ಮುತ್ತಿಕ್ಕಿ,, ಕೈಯಲ್ಲಿದ್ದ ಏಂಜಲ್ ಕರ್ಚೀಫ್‌ನ್ನು ಗಟ್ಟಿಯಾಗಿ ಎದೆಗೊತ್ತಿಕೊಂಡಿದ್ದ. ಜಾತ್ರೆಯ ಗದ್ದಲದ ಮಧ್ಯೆ ಕಳೆದು ಹೋದ ಮಗುವಿಗೆ ಬಹುದಿನಗಳ ನಂತರ ತಾಯಿಯ ಮಡಿಲಲ್ಲಿ ಮಲಗಿದಂತಹ ಅನುಭೂತಿ.. ಅವನ ಮುಖದಲ್ಲೊಂದು ಅರ್ಧ ಚಂದಿರನ ನಗು.. "ಅವಳು ನನ್ನ ಪ್ರೀತಿಸ್ತಿದ್ರೆ ಖಂಡಿತ ನನ್ನ ಹುಡುಕಿಕೊಂಡು ಬರ್ತಾಳೆ.. i don't know who you are. but you are in my breath.. you are my heartbeat.." ಅವನ ನಿದ್ದೆಗಣ್ಣ ಕನವರಿಕೆಗಳು ಅವಳಿಗೆ ಮೀಸಲಾಗಿದ್ದವು.
********
ಹರ್ಷನನ್ನು ಮನೆಗೆ ಬಿಟ್ಟು ನೇರವಾಗಿ ತಮ್ಮ ಆಸ್ಪತ್ರೆಗೆ ಬಂದಿದ್ದ ಮಾನ್ವಿ ಒಮ್ಮೆ ತನ್ನ ತಂದೆಗೆ ಈ ವಿಷಯವನ್ನು ತಿಳಿಸಬೇಕು ಎಂದುಕೊಂಡಳು. ಆದರೆ ಇಷ್ಟು ಚಿಕ್ಕ ವಿಷಯಕ್ಕೆ ಅವರಿಗೇಕೆ ಗಾಬರಿ ಪಡಿಸಬೇಕೆಂದು ತಾನೇ ಈ ಸಮಸ್ಯೆ ಬಗೆಹರಿಸಲು ನಿರ್ಧರಿಸಿದಳು. ಆಸ್ಪತ್ರೆಗೆ ಬಂದ ತಕ್ಷಣ ರಿಸೆಪ್ಷನಿಸ್ಟ್ ಮತ್ತು ಸಿಸಿ ಆಪರೇಟರ್ ನನ್ನು ತನ್ನ ಕ್ಯಾಬಿನ್ ಗೆ ಬರುವಂತೆ ಹೇಳಿ, ರಿಸೆಪ್ಷನಿಸ್ಟ್ ನ್ನು ಹರ್ಷನ ಕೇಸ್ ವಿಚಾರವಾಗಿ ಬಂದ ವ್ಯಕ್ತಿಯ ಬಗ್ಗೆ ಕೇಳಿದಳು. ರಿಸೆಪ್ಷನಿಸ್ಟ್ 'ಆ ದಿನ ಒಬ್ಬ ವ್ಯಕ್ತಿ ಬಂದಿದ್ದ, ಆದರೆ ತಾನು ಹರ್ಷನ ಕುರಿತು ಯಾವ ಮಾಹಿತಿಯನ್ನು ನೀಡಲಿಲ್ಲವೆಂದು,, ಮತ್ತೆ ಆ ವ್ಯಕ್ತಿ ಇಲ್ಲಿಗೆ ಬಂದಿಲ್ಲವೆಂದು' ತಿಳಿಸಿದಳು.
ಸಿಸಿ ಆಪರೇಟರ್ ಕಡೆಯಿಂದ ಆ ದಿನದ ಫೂಟೇಜ್ ತರಿಸಿಕೊಂಡು ನೋಡಿದಾಗ ಅದು ಪ್ರಸನ್ನನೇ ಎಂದುಕೊಂಡ ಅವಳ ಊಹೆ ಸುಳ್ಳಾಗಿತ್ತು. 'ಇತ್ತೀಚೆಗೆ ಆಸ್ಪತ್ರೆಯಲ್ಲಿ ಏನಾದರೂ ಅನುಮಾನಾಸ್ಪದ ಘಟನೆಗಳು ನಡೆದಿವೆಯಾ?' ಎಂದು ಮಾನ್ವಿ ಆಪರೇಟರ್ ನ್ನು ಕೇಳಿದಾಗ, ಆತ, 'ಬೆಳಿಗ್ಗೆ ಯಾರೋ ತನ್ನನ್ನು ಯಾಮಾರಿಸಿ ಕೆಲವು ನಿಮಿಷಗಳ ಕಾಲ ಸಿಸಿ ಪೌಸ್ ಆಗಿದ್ದು ಹಾಗೂ ಕೆಲವು ಕ್ಲಿಪ್‌ಗಳನ್ನು ಡೀಲಿಟ್ ಮಾಡಿದ' ವಿಷಯವನ್ನು ಭಯದಿಂದ ತೊದಲುತ್ತಲೇ ನುಡಿದಿದ್ದ. ಆ ವ್ಯಕ್ತಿ ಪ್ರಸನ್ನನೇ ಎಂಬುದರಲ್ಲಿ ಯಾವ ಸಂಶಯವಿರಲಿಲ್ಲ ಮಾನ್ವಿಗೆ.. 'ಹಾಗಾದರೆ ಅವನು ಆಸ್ಪತ್ರೆಗೆ ಬಂದಿದ್ದು ನಿಜ! ಆ ಕೆಲವೇ ನಿಮಿಷಗಳಲ್ಲಿ ವಿಡಿಯೋದಲ್ಲಿರೊ ನಮ್ಮ ಆಸ್ಪತ್ರೆಯ ವ್ಯಕ್ತಿನಾ ಭೇಟಿಯಾಗಿ ತನ್ನ ಜೊತೆಗೆ ಕರೆದುಕೊಂಡು ಹೋಗಿರಬಹುದಾ?!!' ಅವಳ ತಲೆ ಕೆಟ್ಟು ಹೋಗಿತ್ತು. ಪ್ರಸನ್ನನ ಮೇಲಿನ ಸಿಟ್ಟನ್ನೆಲ್ಲ ಬಡಪಾಯಿ ಆಪರೇಟರ್ ಮೇಲೆ ತೀರಿಸಿಕೊಂಡು, ತನ್ನ ಮೊಬೈಲ್ ತೆಗೆದು ಪ್ರಸನ್ನ ಕಳಿಸಿದ ವಿಡಿಯೋದಲ್ಲಿನ ವ್ಯಕ್ತಿ ಬಗ್ಗೆ ಕೇಳಿದಳು. ತಮಗೆ ಅವನು ಗೊತ್ತಿಲ್ಲವೆಂದಿದ್ದರು ಆಪರೇಟರ್ ಮತ್ತು ರಿಸೆಪ್ಷನಿಸ್ಟ್!!
ಇಬ್ಬರಿಗೂ ಇನ್ನುಮುಂದೆ ಹುಷಾರಾಗಿರುವಂತೆ ಎಚ್ಚರಿಕೆ ನೀಡಿ ಅಲ್ಲಿಂದ ಕಳಿಸಿದಳು. ನಂತರ ಕಂಪ್ಯೂಟರ್ ನಲ್ಲಿ ಆಸ್ಪತ್ರೆಯ ಎಲ್ಲಾ ಸ್ಟಾಫ್' ಗಳ ಡಾಕ್ಯುಮೆಂಟ್ ಗಳನ್ನು ತಪಾಸಣೆ ಮಾಡಲು ಮುಂದಾಗಿದ್ದಳು. ಸುಮಾರು ಮೂವತ್ತು ಸಾವಿರಕ್ಕೂ ಮೇಲ್ಪಟ್ಟ ಡಾಕ್ಟರ್ಸ್, ಲಕ್ಷಾಂತರ ವಾರ್ಡಬಾಯ್ಸ್ ನರ್ಸ್, ಅದರ ಅರ್ಧದಷ್ಟು ಸಂಖ್ಯೆಯ ಟ್ರೇನಿಗಳು.. ಪ್ರತಿ ತಿಂಗಳು ಎಷ್ಟೋ ಜನ ಹೊಸದಾಗಿ ಬರುತ್ತಾರೆ, ಎಷ್ಟೋ ಜನ ಹೋಗುತ್ತಾರೆ.. ಹೀಗಿರುವಾಗ ಒಂದು ವರ್ಷದ ಹಳೆಯ ಕೇಸ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿದ್ದ, ಹೆಸರು ಸಹ ಗೊತ್ತಿರದ ಆ ವಿಡಿಯೋದಲ್ಲಿನ ವ್ಯಕ್ತಿ ಯಾರೆಂದು ಕಂಡು ಹಿಡಿಯುವುದು ಮತ್ತು ಅವನು ನಿಜವಾಗಿಯೂ ಪ್ರಸನ್ನನ ಸುಪರ್ದಿಯಲ್ಲಿ ಇದ್ದಾನಾ? ಇಲ್ಲವಾ? ಎಂಬುದನ್ನು ತಿಳಿಯುವುದು ದೊಡ್ಡ ಪ್ರಮಾಣದ ತಲೆನೋವಾಯಿತು ಮಾನ್ವಿಗೆ.
ಎಲ್ಲರ ಮುಖ ಮತ್ತು ಅವರ ವರದಿ ನೋಡುತ್ತ ಕುಳಿತರೆ ಈ ಕೆಲಸ ಬೆಳಗಿನವರೆಗೂ ಬಗೆಹರಿಯುವುದಿಲ್ಲ ಎಂದು ತಿಳಿದು ಬೇರೆಯೇ ಉಪಾಯ ಮಾಡಿದ್ದಳು. ಇಡೀ ಸ್ಟಾಫ್ ನವರಿಗೆಲ್ಲಾ ಕೇವಲ ಒಂದು ಗಂಟೆ ಒಳಗಾಗಿ ಆಸ್ಪತ್ರೆಯ ಅಸೆಂಬ್ಲಿ ಹಾಲ್ ಗೆ ಬರಲು ಆಜ್ಞಾಪಿಸಿದಳು. ನೈಟ್ ಶಿಫ್ಟ್ ಇದ್ದವರಿಗೆ ಯಾವುದೇ ಅಭ್ಯಂತರವಿರಲಿಲ್ಲ. ಆದರೆ ಅದಾಗಲೇ ಮನೆಗೆ ಸೇರಿದ್ದ ಉಳಿದ ಡಾಕ್ಟರ್ಸ್ ಹಾಗೂ ಇತರರಿಗೆ ಸರಿರಾತ್ರಿ ಇದ್ದಕ್ಕಿದ್ದಂತೆ ಕಾನ್ಫರೆನ್ಸ್ ಕರೆಸಿದ ವಿಷಯ ಕಿರಿಕಿರಿಯಾಗಿತ್ತು. ಆದರೆ ಅದನ್ನು ಆಸ್ಪತ್ರೆಯ ಅಧಿಕೃತ ಒಡತಿ ಡಾ.ಮಾನ್ವಿ ಎದುರು ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ. ಅವರಿಗೆ ಬೇಗ ಬರಲು ಅನುಕೂಲವಾಗುವಂತೆ ಕ್ಯಾಬ್ ವ್ಯವಸ್ಥೆಯನ್ನು ಕೂಡ ಮಾಡಲಾಯಿತು. ಕೇವಲ ಒಂದು ಗಂಟೆಯಲ್ಲಿ ಅಸೆಂಬ್ಲಿ ಹಾಲ್ ಪೂರ್ತಿ ನಿದ್ದೆಗಣ್ಣಿನಲ್ಲಿ ಓಲಾಡುತ್ತ, ಕಣ್ಣುಜ್ಜಿಕೊಳ್ಳುತ್ತ, ಬೇಸತ್ತ ಮುಖ ಹೊತ್ತ ಡಾಕ್ಟರ್ಸ್ ಗಳಿಂದ ತುಂಬಿತ್ತು.
ಎಲ್ಲರೂ ಬಂದ ನಂತರ ಪ್ರಾಜೆಕ್ಷನ್ ಸ್ಕ್ರೀನ್ ಮೇಲೆ ಆ ವಿಡಿಯೋ ದಲ್ಲಿದ್ದ ವ್ಯಕ್ತಿಯ ಫೋಟೊ ತೋರಿಸಿ ಈ ವ್ಯಕ್ತಿಯನ್ನು ಇದೇ ಆಸ್ಪತ್ರೆಯಲ್ಲಿ ನೋಡಿದ್ದಿರಾ? ಯಾರಿಗಾದರೂ ಇವನ ಬಗ್ಗೆ ಗೊತ್ತಾ? ಎಂದು ಆಂಗ್ಲಭಾಷೆಯಲ್ಲಿ ವಿಚಾರಣೆ ಆರಂಭಿಸಿದಳು. ಕೆಲವರು ಕಣ್ಮುಚ್ಚಿಕೊಂಡೆ ಆಕಳಿಸುತ್ತ ಡೋಂಟ್ ನೋ! ಎಂಬ ಹಾರಿಕೆಯ ಉತ್ತರ ಕೊಟ್ಟರೆ, ಇನ್ನೂ ಕೆಲವರು ಈ ವ್ಯಕ್ತಿಯನ್ನು ಎಲ್ಲೋ ನೋಡಿದ ಹಾಗನ್ನಿಸಿದರೂ, ಎಲ್ಲಿ ಎಂದು ಜ್ಞಾಪಕವಾಗದೆ ಸುಮ್ಮನಾದರು. ಇನ್ನುಳಿದವರು ಅಲ್ಲಲ್ಲಿ ಗಾಯಗೊಂಡು ತುಂಬಾ ವಿಭಿನ್ನವಾಗಿ ಕಾಣುತ್ತಿದ್ದ ಆ ವ್ಯಕ್ತಿ, ತಾವು ನೋಡಿದ ವ್ಯಕ್ತಿನೇನಾ?!! ಎಂಬ ಗೊಂದಲದಲ್ಲೇ ಗೋಣು ಅಲ್ಲಾಡಿಸಿದ್ದರು. ಕೆಲವರಿಗೆ ಖಚಿತವಾಗಿ ಗೊತ್ತಿದ್ದರೂ ಸಹ ಈ ನಡುರಾತ್ರಿಯಲ್ಲಿ ಯಾಕೆ ಬೇಡದ ಉಸಾಬರಿ ಎಂದು ಸುಮ್ಮನಾಗಿದ್ದರು.
ಡಾಕ್ಟರ್ಸ್ ಗಳಿಂದ ಆ ವ್ಯಕ್ತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದಿದ್ದಾಗ, ತದನಂತರ ಆಸ್ಪತ್ರೆಯ ಸಿಸ್ಟರ್ಸ್ ವಾರ್ಡ್ಬಾಯ್ಸ್, ಕ್ಲೀನಿಂಗ್ ಡಿಪಾರ್ಟ್ಮೆಂಟ್ ಇತರರನ್ನು ಕೂರಿಸಿ ಅದೇ ವ್ಯಕ್ತಿಯ ಬಗ್ಗೆ ಕೇಳಲಾಯಿತು. ಅವರು ಕೊಟ್ಟ ಉತ್ತರಗಳು ಮೊದಲಿನದ್ದಕ್ಕೆ ವ್ಯತಿರಿಕ್ತವಾಗಿರಲಿಲ್ಲ. ಗೊತ್ತಿಲ್ಲ! ಗೊತ್ತಿಲ್ಲ! ಗೊತ್ತಿಲ್ಲ! ಅಷ್ಟರಲ್ಲಿ ತಾನು ಕಳಿಸಿದ ಬಾಡಿಗಾರ್ಡ್ಸ್ ಸಹ ಕರೆ ಮಾಡಿ ಪ್ರಸನ್ನನನ್ನು ಹಿಂಬಾಲಿಸುವಲ್ಲಿ ವಿಫಲರಾದೆವೆಂದು ಬೇಸರ ವ್ಯಕ್ತಪಡಿಸಿದರು. ಮಾನ್ವಿಯ ತಲೆ ಸಿಡಿದು ಹೋಗುವಂತಾಗಿತ್ತು.
ತಲೆ ಒತ್ತಿಕೊಳ್ಳುತ್ತಾ ತನ್ನ ಕ್ಯಾಬಿನ್ ನಲ್ಲಿ ಕುಳಿತು ಒಂದು ಕಪ್ ಕಾಫೀ ಆರ್ಡರ್ ಮಾಡಿದ್ದಳು. ಪ್ರಸನ್ನ, ಹರ್ಷನ ಬಗ್ಗೆ ಸತ್ರೆ ಸಾಯಲಿ ಎಂದು ಕಠೋರವಾಗಿ ಆಡಿದ ಮಾತು ಕೇಳಿ ಇವನನ್ನು ಪರಿ ಕಳಿಸಿಲ್ಲ ಎಂದು ಅವಳ ಒಳಮನಸ್ಸು ನುಡಿದಿತ್ತು. ಒಂದು ಸಿಪ್ ಬಿಸಿಬಿಸಿ ಕಾಫೀ ಹೀರಿದವಳೇ ಪ್ರಸನ್ನನಿಗೆ ಕರೆ ಮಾಡಿದ್ದಳು. ವಿವೇಕ್ ತನ್ನ ಲ್ಯಾಪ್‌ಟಾಪ್ ನಲ್ಲಿ ಏನೋ ಮಾಡುತ್ತಿದ್ದರೆ, ಅವನ ಪಕ್ಕದಲ್ಲೇ ಕುಳಿತು ಅದನ್ನೇ ತದೇಕಚಿತ್ತದಿಂದ ನೋಡುತ್ತ ಫೋರ್ಕ್ ನಿಂದ ನ್ಯೂಡಲ್ಸ್ ಬಾಯಿಗೆ ತುರುಕುತ್ತಿದ್ದ ಪ್ರಸನ್ನ. ಮೊಬೈಲ್ ರಿಂಗ್ ಆದಾಕ್ಷಣ ಯಾರೆಂದು ಸಹ ನೋಡದೆ ಕರೆ ಸ್ವೀಕರಿಸಿದ..
"ಎಲ್ಲಿದ್ದಿಯಾ ನೀನು..?" ಮಾನ್ವಿ ಅರಚಿದ್ದಳು. ಅವಳ ಧ್ವನಿ ಗ್ರಹಿಸಿದ ಪ್ರಸನ್ನ ತಟ್ಟನೆ ವ್ಯಂಗ್ಯವಾಗಿ ಒತ್ತಿ ಹೇಳಿದ್ದ...
"ಸುಡುಗಾಡ್ನಲ್ಲಿ... ಯಾಕೆ? ಬರ್ತಿಯಾ!!"
'ದೆವ್ವಗಳು ಅಲ್ಲೇ ಇರ್ಬೇಕಾದ್ದೆ!!' ಮನಸ್ಸಲ್ಲೇ ಗೊಣಗಿ "ಅಲ್ಲೇನ್ ಮಾಡ್ತಿದ್ದೆ??" ಖಾರವಾಗೇ ಕೇಳಿದ್ದಳು
"ನಾಳೆ ಒಬ್ಬರ ಮಣ್ಣು ಮಾಡಬೇಕಿತ್ತು... ಅದಕ್ಕೆ ಗುಂಡಿ ತೋಡ್ತಾ.. ಇದ್ದೀನಿ. ಏನ್ ವಿಷಯ ಬೊಗಳೆ ಸಾಕು.." ಅವನು ಅಷ್ಟೇ ಖಾರವಾಗಿ ನುಡಿದಿದ್ದ. ಪಕ್ಕದಲ್ಲಿದ್ದ ವಿವೇಕ್ ಬಾಯಿಗೆ ಕೈ ಅಡ್ಡವಿಟ್ಟು ನಗುತಡೆದಿದ್ದ.
"ಮಣ್ಣಾ..?? ಯಾರನ್ನಾ??" ಅವಳ ಕಾಳಜಿ ಗಮನ ಇದ್ದದ್ದು ಹರ್ಷನ ಕಡೆಗೆ..
"ಇವತ್ತು ಯಾರೋ ಪಾಪಿ, ಪಿಶಾಚಿ, ಹಿಡಂಬಿ ನನ್ನ ಹಿಂದೆ ರೌಡಿಗಳನ್ನು ಬಿಟ್ಟಿದ್ದಳು, ಅವಳನ್ನ!! ನೀನೆನ್ ವರಿ ಮಾಡ್ಕೋಬೇಡ ಬಿಡು.. ಹ್ಮಾ... ಆ ನಿನ್ನ ಬಾಲಂಗೋಚಿಗಳು ವಾಪಸ್ ಬಂದ್ವಾ? ಇನ್ನೂ ಪೆಟ್ರೋಲ್ ಹಾಳ್ ಮಾಡ್ಕೊಂಡು ಅದೇ ಟ್ಯಾಕ್ಸಿ ಹಿಂದೆ ಅಲಿತಿದ್ದಾವೋ??" ಅವನ ಮಾತಿಗೆ ದೀರ್ಘ ಶ್ವಾಸ ಎಳೆದುಕೊಂಡ ಮಾನ್ವಿ ತಲೆ ಕೊಡವಿ...
"ನೀನು ತೋರಿಸಿದ ವಿಡಿಯೋದಲ್ಲಿರೋ ವ್ಯಕ್ತಿ ನಮ್ಮ ಹಾಸ್ಪಿಟಲ್ ನವಲ್ಲ.." ನೇರವಾಗಿ ವಿಷಯಕ್ಕೆ ಬಂದಳು
"ಓಹ್ ಗಾಡ್!!! ಅಂದ್ರೆ ಅವನು ನಿಮ್ಮ ಹಾಸ್ಪಿಟಲ್‌ನವನಲ್ವಾ... ಎಂಥಾ ಮೋಸ... ಅವನು ಕೂಡ ಫ್ರಾಡ್ ಆss... ನಾನವನನ್ನು ಸುಮ್ಮನೆ ಬಿಡಲ್ಲ, ಈಗಲೇ ಮಿಡಿಯಾದವರಿಗೆ ವಿಡಿಯೋ ತೋರಿಸಿ ಪೋಲಿಸ್ ಗೆ ಇನ್ಫಾರ್ಮ್ ಮಾಡಿ ಅವನನ್ನ ಒಳಗೆ ಹಾಕಿಸ್ತಿನಿ.." ನ್ಯೂಡಲ್ಸ್ ಬಾಯಿಗೆ ತುಂಬುತ್ತ ರೊಚ್ಚಿಗೆದ್ದು ಹೇಳಿದ ಪ್ರಸನ್ನ
"ಸೋ... ಏನೇ ಆದರೂ ನೀನು ಆ ವಿಡಿಯೋ ಲೀಕ್ ಮಾಡಲೇಬೇಕು ಅಂತ ಡಿಸೈಡ್ ಮಾಡಿದ್ದೀಯಾ??" ಎದುರಿದ್ದ ಟೇಬಲ್ ಗೆ ಕೈ ಗುದ್ದಿದ್ದಳು ಮಾನ್ವಿ.
"yeah! of course! ಪಿಶಾಚಿ, ಎಷ್ಟು... ಕಷ್ಟ ಪಟ್ಟು, ಟೈಮ್ ಏನರ್ಜಿ ಹಾಳು ಮಾಡ್ಕೊಂಡು ಈ ವಿಡಿಯೋ ಮಾಡಿದೀನಿ. ಹಾಗೆ ಬಿಡೋಕಾಗುತ್ತಾ?? ಹ್ಮಾ.. ಆದರೆ ನೀನು ಹರ್ಷನ ಜೊತೆ ಮೀಟಿಂಗ್ ಮಾಡಿಸೋಕೆ ಒಪ್ಪೋದಾದ್ರೆ, ನನ್ನ ನಿರ್ಧಾರ ಬದಲಾಗ್ಬಹುದು.." ರಾಗವೆಳೆದು ಪಕ್ಕದಲ್ಲಿದ್ದ ವಿವೇಕ್ ಗೆ ಕಣ್ಣು ಮಿಟುಕಿಸಿದ.
ತನ್ನ ಮೊಬೈಲ್ ಡೆಸ್ಕ್ ಮೇಲೆ ಕುಕ್ಕಿ ಕೆಲಸಮಯ ಸುದೀರ್ಘ ಆಲೋಚನೆಯಲ್ಲಿ ಮುಳುಗಿದಳು ಮಾನ್ವಿ. 'ಇಷ್ಟು ದಿನ ಕಷ್ಟ ಪಟ್ಟು ಮಾಡಿದ ಪ್ಲ್ಯಾನೆಲ್ಲ ತಲೆ ಕೆಳಗೆ ಮಾಡ್ತಿದ್ದಾನೆ ಈ ಹಿಟ್ಲರ್!! ನೋ.. ಹಾಗಾಗ್ಬಾರದು, ನಾನಂದುಕೊಂಡ ಹಾಗೆ ಆಗ್ಬೇಕು. ಪರಿಗೆ ಸರಿಯಾಗಿ ಪಾಠ ಕಲಿಸ್ಬೇಕು ಅಂದ್ರೆ ಈ ವಿಷಯ ಇಲ್ಲಿಗೆ ಮುಚ್ಚಿ ಹಾಕ್ಬೇಕು. ಒಂದೇ ಭೇಟಿಯಲ್ಲಿ ಇವನೇನು ತಾನೇ ಮಾಡೋಕೆ ಸಾಧ್ಯ!! ಅಷ್ಟಕ್ಕೂ ಹರ್ಷ ಇವನನ್ನು ಹತ್ರ ಸೇರಿಸಿದ್ರೇ ತಾನೇ ಏನಾದ್ರೂ ಹೇಳಲು ಸಾಧ್ಯ!! ಹ್ಮ್.. ಸುಮ್ಮನೆ ಹಾಯ್-ಬಾಯ್ ಅಷ್ಟೇ! ಒಮ್ಮೆ ಮಾತಾಡಿಸಿ ಈ ಪೀಡೆಯಿಂದ ಕೈ ತೊಳೆದುಕೊಳ್ಳಲಾ??'
"ಹ್ಮ್.. ಸರಿ, ನಾಳೆ ಬೆಳಿಗ್ಗೆ ನಿನ್ನನ್ನು ಸಂಕು ಜೊತೆ ಭೇಟಿ ಮಾಡಿಸ್ತಿನಿ. ಅದರ ನೆಕ್ಸ್ಟ್ ಸೆಕೆಂಡ್ ನೀನು ಆ ವಿಡಿಯೋ ಡಿಲಿಟ್ ಮಾಡಿ ಇಲ್ಲಿಂದ ಹೊರಟ್ಹೋಗ್ತಿಯಾ!!"
"ಆ...ಗಬಹುದು..! ಈವಾಗ ನಾನು ಮಲಗ್ಬೇಕು. ಡೋಂಟ್ ಡಿಸ್ಟರ್ಬ್ ಮಿ.. ನೀನು ಬಿದ್ಕೋ.." ಎಂದು ಹೇಳಿ ಕಾಲ್ ಕಟ್ ಮಾಡಿದ ಪ್ರಸನ್ನ 'ಬೆಳಿಗ್ಗೆ ನಿನಗೆ ಕಾ..ದಿದೆ' ಮನಸ್ಸಲ್ಲೇ ಗೊಣಗಿದ.
*********
ಅಂದು ಮಧ್ಯಾಹ್ನ ಪರಿಧಿ ಮೇಜರ್ ಅವರ ಮನೆಗೆ ಬಂದಾಗಿನಿಂದ ವೈದೇಹಿಯವರಿಗೆ ಒಂದು ಚಿಕ್ಕ ಕೆಲಸವನ್ನು ಮಾಡಲು ಸಹ ಅವಕಾಶ ನೀಡಿರಲಿಲ್ಲ. ವೈದೇಹಿಯವರು ಎಷ್ಟೇ ಬೇಡವೆಂದರೂ ಕೇಳದೆ, 'ನಾನು ನಿಮ್ಮ ಮಗಳು ಅಂದ್ರಿ ತಾನೇ, ನನ್ನ ಮನೇಲಿ ನಾನು ಕೆಲಸ ಮಾಡಿದ್ರೆ ಏನ್ ತಪ್ಪು' ಎಂದು ಮಧ್ಯಾಹ್ನದ ಪಾತ್ರೆ ತೊಳೆದಳು. ಸಂಜೆ ಕಸಗುಡಿಸಿ ಮುಖ ತೊಳೆದು ದೇವರ ಮುಂದೆ ದೀಪ ಬೆಳಗಿ, ಮಕ್ಕಳನ್ನು ರೆಡಿ ಮಾಡಿ ಶಾಪಿಂಗ್ ಕರೆದುಕೊಂಡು ಹೋಗಿದ್ದಳು. ವಾಪಸ್ ಬಂದ ನಂತರವೂ ರಾತ್ರಿ ಅಡುಗೆ ತಾನೇ ತಯಾರಿಸಿ ತನ್ನ ಕೈ ರುಚಿಯನ್ನು ಚಪ್ಪರಿಸುವಂತೆ ಮಾಡಿದ್ದಳು. ಮಕ್ಕಳಿಗೂ ತಾನೇ ಊಟ ಮಾಡಿಸಿ, ಪಾತ್ರೆ ತೊಳೆದು ಇಟ್ಟಿದ್ದಳು. ವೈದೇಹಿಯವರ ಮಂಡಿನೋವಿಗೆ ಅವರ ತೈಲವನ್ನು ಹಚ್ಚಿ ಮಸಾಜ್ ಮಾಡಿ ಮೇಜರ್ ಅವರಿಗೂ ಬಿಪಿ, ಶುಗರ್ ಮಾತ್ರೆ ಕೊಟ್ಟು ಗುಡ್ ನೈಟ್ ಹೇಳಿ ಬಂದಿದ್ದಳು. ಮಕ್ಕಳೊಂದಿಗೆ ತಾನು ಮಗುವಾಗಿ ಮನೆ ತುಂಬಾ ಓಡಾಡಿಕೊಂಡಿದ್ದ ಪರಿ ಬಂದ ಅರ್ಧ ದಿನದಲ್ಲಿಯೇ ಮೇಜರ್ ಸರ್ ಹಾಗೂ ವೈದೇಹಿಯವರ ಮನಸ್ಸಿನಲ್ಲಿ ಅಪೂರ್ವ ಸ್ಥಾನ ನಿರ್ಮಿಸಿಕೊಂಡಿದ್ದಳು. ನೋಡಿದರೆ ಮಾಯೆ ಬರುವಂತಹ ಮುದ್ದು ಪರಿಧಿಯನ್ನು ಕಂಡು ಮೇಜರ್ ಸರ್ ಚೆನ್ನೈನಲ್ಲಿರುವ ತಮ್ಮ ಕಿರಿಯ ಮಗನಿಗೆ ಪರಿಧಿಯನ್ನು ತಂದುಕೊಳ್ಳುವ ಬಗ್ಗೆ ತಮ್ಮ ಪತ್ನಿಯ ಬಳಿ ಪೀಠಿಕೆ ಮುಂದಿಟ್ಟರು.
ಆಗ ವೈದೇಹಿಯವರು 'ನೀವು ಹೇಳಿದಂತೆ ಆಗಿದ್ರೆ ಚೆನ್ನಾಗಿತ್ತು ಆದ್ರೆ ಅವಳ ಬದುಕಿನಲ್ಲಿ ಈಗಲೇ ಒಂದು ಹುಡುಗ ಮನೆ ಮಾಡ್ಬಿಟ್ಟಿದ್ದಾನೆ. ಅವನಿಗೋಸ್ಕರನೇ ಆ ಮಗು ಇಲ್ಲಿಯವರೆಗೂ ಬಂದಿದೆ' ಎಂದು ಹೇಳಿ, ಪರಿ ಅವರಿಗೆ ಸಂಕ್ಷಿಪ್ತವಾಗಿ ವಿವರಿಸಿದ ಅರೆಬರೆ ಸತ್ಯವನ್ನು ವೈದೇಹಿಯವರು ಮೇಜರ್ ಅವರಿಗೆ ತಿಳಿಸಿದರು. ಎಲ್ಲಾ ವಿಚಾರ ತಿಳಿದ ಮೇಜರ್ ಮೊದಲು ಕೋಪಗೊಂಡದ್ದು ಎಂ. ಆರ್ ಹಾಸ್ಪಿಟಲ್ ಆಡಳಿತ ನಿರ್ವಹಣೆ ಬಗ್ಗೆ!! ಹೀಗೆ ಸುಮ್ಮನಿದ್ದರೆ ಇಂತಹ ಅದೆಷ್ಟು ಅಮಾಯಕ ಕುಟುಂಬಗಳು ನಾಶವಾಗುತ್ತವೋ ಎಂದು! ಅವರ ಗಮನ ಸೆಳೆದ ಮತ್ತೊಂದು ವಿಚಾರವೆಂದರೆ ಹರ್ಷನ ಆ್ಯಕ್ಸಿಡೆಂಟ್ ಕೇಸ್‌ನ್ನು ತನಿಖೆ ಮಾಡದೆ ಮುಚ್ಚಿ ಹಾಕಿದ್ದು. ಅದು ನಿಜವಾಗಿಯೂ ಅಪಘಾತವಾ? ಇಲ್ಲ ಕೊಲೆಯ ಪ್ರಯತ್ನವಾ? ಒಂದು ವೇಳೆ ಕೊಲೆ ಪ್ರಯತ್ನವಾಗಿದ್ದರೆ, ಈಗ ಕೂಡ ಅವನ ಜೀವಕ್ಕೆ ಅಪಾಯ ತಪ್ಪಿದ್ದಲ್ಲ! ಅವರ ಮಿಲಿಟರಿ ಬುದ್ದಿ ತುಂಬಾ ಚುರುಕಾಗಿ ಕಾರ್ಯ ನಿರ್ವಹಿಸಿತ್ತು. ಅವಳೊಂದಿಗೆ ಇದೇ ವಿಷಯ ಚರ್ಚಿಸಲು ಪರಿಯ ರೂಂ ನತ್ತ ನಡೆದರು.
ಮಕ್ಕಳೊಂದಿಗೆ ದಿಂಬಿನ ಗುದ್ದಾಟವಾಡುತ್ತ ನಲಿಯುತ್ತಿದ್ದಳು ಪರಿ. 'ಸಾಕು, ಲೇಟಾಯ್ತು ಮಲಗಿ ಈಗ' ಪರಿ ಹೇಳುತ್ತಿದ್ದಳು. 'ನೋ.. ಕಿಟ್‌ಕ್ಯಾಟ್. ನೀನು ಕಥೆ ಹೇಳಿದ್ರೆ ನಾವು ಮಲಗೋದು' ಮಕ್ಕಳು ಹಠ ಮಾಡುತ್ತಿದ್ದರು. ಮೇಜರ್ ಸರ್ ಅವರ ಆಟವನ್ನೇ ನೋಡುತ್ತ ನಿಂತರು.
ಆಕೆ ಕಥೆ ಹೇಳಲು ಶುರು ಮಾಡಿದಳು " ಹೀಗೆ ಒಂದೂರಲ್ಲಿ ಒಬ್ಬ ಚಂದದ ಪುಟ್ಟ ರಾಜಕುಮಾರ ಇದ್ನಂತೆ. 'ಯು ಮೀನ್ ಪ್ರಿನ್ಸ್?' ಅಖಿಲಾ ಕೇಳಿದಳು. ಹ್ಮ್.. ಪ್ರಿನ್ಸ್! ಅವನು ಬೆಳ್ಳಗೆ ದುಂಡಗೆ ಮುದ್ಮುದ್ದಾಗಿದ್ನಂತೆ.. ನಮ್ಮ ನಿಖಿಲ್ ತರಾ! ಇವನ ಹಾಗೆ ತುಂಬಾ ತರಲೆ ತುಂಟಾಟ ಮಾಡಿ ಅಪ್ಪನ ಹತ್ರ ಬೈಸ್ಕೊಳ್ತಿದ್ನಂತೆ ಯಾವಾಗಲೂ.. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ದೆ ಖುಷ್ ಖುಷಿಯಾಗಿ ಇರ್ತಿದ್ನಂತೆ.... ಆದರೆ ಅವನ ಜೊತೆಗೆ ಆಟ ಆಡೋಕೆ ಯಾರು ಇರಲಿಲ್ಲವಂತೆ. ಆಗವನು ಒಂದಿನ ದೇವರ ಹತ್ರ ಕೇಳ್ಕೊಂಡ್ನಂತೆ.. 'ಏನಂತ???' ಅಖಿಲಾ ಕಣ್ಣರಳಿಸಿದಳು..
ದೇವ್ರೆ ದೇವ್ರೇ.. ನನ್ನ ಜೊತೆ ಆಟ ಆಡೋಕೆ ಪುಟ್ಟ ಏಂಜಲ್ ನಾ ಕಳಿಸ್ಕೊಡು ಪ್ಲೀಸ್ ಅಂತ.. ದೇವರು ತಕ್ಷಣ ತಥಾಸ್ತು ಹೇಳಿ ಏಂಜಲ್ ನಾ ಭೂಮಿಗೆ ಬಿಟ್ಟು ಮಾಯಾ ಆಗ್ಬಿಟ್ನಂತೆ. ಪುಟ್ಟ ರಾಜಕುಮಾರನಿಗೆ ತುಂಬಾ ಖುಷಿಯಾಗೋಯ್ತು ಏಂಜಲ್ ನೋಡಿ.. ಚಿಕ್ಕ ಚಿಕ್ಕ ಕಣ್ಣು, ಪುಟಾಣಿ ಮೂಗು, ತುಂಬಾ ಕ್ಯೂಟ್ ಇದ್ಲಂತೆ.. ನಮ್ಮ ಅಖಿಲಾ ತರಾ,, ಎಂದು ಅವಳಿಗೆ ಕಚಗುಳಿ ಇಟ್ಟಳು. ಅಖಿಲಾ ಕಿಲಕಿಲನೆ ನಗುತ್ತಿದ್ದಳು.
ಆದರೆ ಅವನ ಏಂಜಲ್ ಹೀಗೆ ನಗ್ತಾನೆ ಇರ್ಲಿಲ್ವಂತೆ.. ಯಾವಾಗಲೂ ಸಪ್ಪೆ ಮುಖ ಮಾಡಿ ಉಮ್ಮಂತ ಕೂತಿರ್ತಿದ್ಳಂತೆ. ಪ್ರಿನ್ಸ್ ಗೆ ತುಂಬಾ ಬೇಜಾರಾಗೋಯ್ತು ಅವಳನ್ನ ಹಾಗೆ ನೋಡಿ. ಅದ್ಕೆ ಪ್ರಿನ್ಸ್ ಅವಳ ಜುಟ್ಟು ಎಳೆದು, ಕೆನ್ನೆ ಹಿಂಡಿ ರೇಗಿಸಿ ಮುದ್ದಿಸಿ, ಕಾಡಿಸಿ, ಪೀಡಿಸಿ ಅಣುಗಿಸಿ ತನ್ನ ಜೊತೆ ಆಟವಾಡಿಸ್ತಾ ಆಡಿಸ್ತಾ ನಗೋದನ್ನು ಕಲಿಸಿದ್ನಂತೆ. ಏಂಜಲ್ ಅವನ ಜೊತೆಗೆ ತುಂಬಾ ಖುಷಿಯಾಗಿದ್ದಳಂತೆ. ಜಗತ್ತಿನ ಪರಿವೆ ಇಲ್ಲದಷ್ಟು ಅವನನ್ನ ಹಚ್ಚಿಕೊಂಡು ಬಿಟ್ಳಂತೆ.. ಪರಿ ಭಾವುಕಳಾಗಿ ಮೈಮರೆತಳು. 'ಮುಂದೇನಾಯ್ತು ಕಿಟ್‌ಕ್ಯಾಟ್?' ನಿಖಿಲ್ ಪ್ರಶ್ನೆ ಅವಳನ್ನ ಎಚ್ಚರಿಸಿತು.
ಅವರಿಬ್ಬರೂ ಹೀಗೆ ಆಟಾಡ್ತಾ ಬೆಳೆದು ದೊಡ್ಡವರಾದ್ರಂತೆ.. ಇಬ್ಬರಿಗೂ ಮದುವೆ ನಿಶ್ಚಯ ಆಯ್ತಂತೆ. ಆದರೆ ಅಷ್ಟರಲ್ಲಿ ಪ್ರಿನ್ಸ್ ಅಕಸ್ಮಾತ್ತಾಗಿ ಸತ್ತೋದ್ನಂತೆ. ಏಂಜಲ್ ಒಂಟಿಯಾಗಿ ಅವನಿಗೋಸ್ಕರ ಅಳ್ತಾ ಕೂತ್ಬಿಟ್ಟಳಂತೆ. ಅಖಿಲಾ ಬೇಜಾರಿನಿಂದ 'ಪ್ಚ್..ಪಾಪ ಏಂಜಲ್' ಎಂದುಸುರಿದಳು. ಹ್ಮ್.. ರಾತ್ರಿ ಹಗಲು ಅವಳು ಅಳೋದನ್ನ ನೋಡೋಕಾಗ್ದೆ ದೇವರು ಪ್ರತ್ಯಕ್ಷ ಆಗಿ ಏನ್ ಬೇಕು ಅಂತ ಕೇಳಿದ್ರಂತೆ,, ಆಗ ಏಂಜಲ್ ತನಗೆ ತನ್ನ ಪ್ರಿನ್ಸ್ ವಾಪಸ್ ಬೇಕು ಅಂತ ಗೋಗರೆದಳಂತೆ ಏಂಜಲ್.. ಅದ್ಕೆ ದೇವರು ಮತ್ತೆ ಪ್ರಿನ್ಸ್ ಗೆ ಜೀವ ಬರೋ ಹಾಗೆ ಮಾಡ್ತೆನೆ ಆದರೆ ಅವನು ಹಳೆಯದನ್ನೆಲ್ಲ ಮರೆತು ಹೋಗಿರ್ತಾನೆ, ನೀನೇ ಅವನಿಗೆ ಹಳೆಯದನ್ನೆಲ್ಲ ಜ್ಞಾಪಿಸಬೇಕು ಅಂದ್ನಂತೆ. ಏಂಜಲ್ ಫುಲ್ ಖುಷಿಯಿಂದ ಆಯ್ತು ಅಂತ ಒಪ್ಕೊಂಡ್ಳಂತೆ. ಆದರೆ ದೇವರು ಪ್ರಿನ್ಸ್ ಜೊತೆಗೆ ಅವಳು ಮಾಡಿದ ಯಾವುದೋ ತಪ್ಪಿಗೆ ಒಂದು ಶಾಪ ಕೂಡ ಕೊಟ್ರಂತೆ..
"ಶಾಪಾನಾ?? ಏನಂತ?? " ಇಬ್ಬರೂ ಒಕ್ಕೊರಲಿನಿಂದ ಕೇಳಿದರು.
"ಪ್ರಿನ್ಸ್ ತಾನಾಗಿಯೇ ಏಂಜಲ್‌ನಾ ನೆನಪು ಮಾಡ್ಕೊಳ್ಳೊವರೆಗೂ ಏಂಜಲ್, ಪ್ರಿನ್ಸ್ ಎದುರು ಹೋಗೋ ಹಾಗಿಲ್ಲ, ಮಾತಾಡೋ ಹಾಗೂ ಇಲ್ಲಾಂತ.. "
" ನೋಡದೆ, ಮಾತಾಡದೆ ಹೇಗೆ ನೆನಪಾಗುತ್ತೆ ಪ್ರಿನ್ಸ್ ಗೆ? ಈಗ ಏಂಜಲ್ ಏನ್ ಮಾಡ್ತಾಳೆ?" ಇಬ್ಬರೂ ಒಂದೊಂದು ಪ್ರಶ್ನೆ ಎಸೆದರು.
"ಏಂಜಲ್ ಈಗ ಒಂಟಿಯಾಗ್ಬಿಟ್ಟಿದ್ದಾಳಂತೆ.. ನೀವಿಬ್ರೂ ಹೆಲ್ಪ್ ಮಾಡಿದ್ರೆ ಅವಳಿಗೆ ಅವಳ ಪ್ರಿನ್ಸ್ ಸಿಗ್ತಾನಂತೆ.." ಅಖಿಲಾಳ ಕಡೆಗೆ ಪಿಳಿಪಿಳಿ ನೋಡುತ್ತ ಹೇಳಿದಳು ಪರಿ.
"ನಾವಿಬ್ರೂನಾ?? ಏನ್ ಹೆಲ್ಪ್ ಮಾಡ್ಬೇಕು" ನಿಖಿಲ್ ಕೇಳಿದ
"ರಿಕ್ರಿಯೆಟಿಂಗ್ ಚೈಲ್ಡ್ ಹುಡ್ ಮೂಮೆಂಟ್ಸ್!! ಅಂದ್ರೆ ಪ್ರಿನ್ಸ್ ಮತ್ತೆ ಏಂಜಲ್ ಚಿಕ್ಕವರಿದ್ದಾಗ ಹೇಗಿದ್ರು? ಏನೆನೆಲ್ಲಾ ಮಾಡ್ತಿದ್ರು? ಅನ್ನೋದನ್ನ ಪ್ರಿನ್ಸ್ ಗೆ ಕಾಣೋ ಹಾಗೆ ಆ್ಯಕ್ಟ್ ಮಾಡೋದು. ಆಗ ಪ್ರಿನ್ಸ್ ಗೆ ಎಲ್ಲಾ ನೆನಪಾಗ್ತಾ ಹೋಗುತ್ತೆ. ಅವನು ಏಂಜಲ್ ನಾ ಹುಡುಕ್ತಾನೆ ಆಗ ಅವರಿಬ್ಬರೂ ಒಂದಾಗ್ತಾರೆ.. ಅಷ್ಟೇ!!"
"ವಾವ್.... ಸೋ ಎಕ್ಸೈಟಿಂಗ್! ಅಂದ್ರೆ ನಾನು ಪ್ರಿನ್ಸ್ ತರಾ, ಇವಳು ಏಂಜಲ್ ತರಾ ಡ್ರಾಮಾ ಮಾಡ್ಬೇಕಾ ಕಿಟ್‌ಕ್ಯಾಟ್?? ನಾನು ರೆಡಿ!!" ಉದ್ವೇಗದಿಂದ ಹೇಳಿದ ನಿಖಿಲ್. "ಆದ್ರೆ ಈ ಗೂಬೆಗೆ ಆ್ಯಕ್ಟಿಂಗ್ ಬರಲ್ಲ" ಅಖಿಲಾಳನ್ನು ಅಣುಗಿಸಿದ. ತಕ್ಷಣ ಅವನ ಕುತ್ತಿಗೆಗೆ ಜಿಗಿದು ಅವನ ಕೂದಲು ಹಿಡಿದು ಎಳೆಯುತ್ತಿದ್ದ ಅಖಿಲಾ "ನಾನಲ್ಲ. ನೀನೇ ಗೂಬೆ" ಮೊಟಕಿದಳು. ನಿಖಿಲ್ ಕಿರುಚುತ್ತಾ ಅವಳಿಂದ ಬಿಡಿಸಿಕೊಳ್ಳುತ್ತಿದ್ದ. ಪರಿ ಅಖಿಲಾಳನ್ನು ಗಟ್ಟಿಯಾಗಿ ಎಳೆದು ತನ್ನ ಎದೆಗೆ ಅಪ್ಪಿಕೊಳ್ಳುತ್ತ... "ನೀವಿಬ್ರೂ ಹೀಗೆ ಮಾಡ್ತಿದ್ರೆ, ಏಂಜಲ್ ಗೆ ಅವಳ ಪ್ರಿನ್ಸ್ ಸಿಗೋದೇ ಇಲ್ವೇನೋ, ಅವರಿಬ್ಬರೂ ಒಂದಾಗೋದೇ ಇಲ್ವಾ!!" ಬೇಸರಿಸಿಕೊಂಡಳು.
"ಸಾರಿ,, ಸಾರಿ,, ಕಿಟ್‌ಕ್ಯಾಟ್.. ನಾವಿಬ್ರೂ ಏಂಜಲ್ ಗೆ ಹೆಲ್ಪ್ ಮಾಡ್ತಿವಿ. ಇನ್ಮುಂದೆ ಜಗಳಾಡಲ್ಲ" ನಿಖಿಲ್ ಸಂಭಾಳಿಸಿದ.
"ಇದು ರಿಯಲ್ ಕಥೆನಾ ಅಥವಾ ಫೇರಿಟೇಲಾ??" ಅಖಿಲಾಳ ಪುಟ್ಟ ಮೆದುಳಿನ ಸಂಶಯವಿದು.
"ಹ್ಮ್ಮ್ಮ.. ಇದೂ...... ರಿಯಲ್ ಲೈಫ್ ನಲ್ಲಿ ನಡಿತಿರೋ ಫೇರಿಟೇಲ್!! ನೀವಿಬ್ರೂ ಅದರ ಒಂದು ಕ್ಯಾರೆಕ್ಟರ್ಸ್!" ಪರಿ ಯೋಚಿಸಿ ಹೇಳಿದಳು.
"ಮತ್ತೆ ನಾವಿನ್ನೂ ಡ್ರಾಮಾ ಪ್ರ್ಯಾಕ್ಟೀಸ್ ಮಾಡೇ ಇಲ್ವಲ್ಲಾ" ನಿಖಿಲ್ ಕೇಳಿದ
"ಈಗ ಮಲ್ಕೊಳ್ಳಿ ಬೆಳಿಗ್ಗೆಯಿಂದ ಪ್ರ್ಯಾಕ್ಟೀಸ್ ಶುರು." ಪರಿ ಎರಡೂ ಬದಿಗೆ ಇಬ್ಬರನ್ನೂ ಮಲಗಿಸುತ್ತ ತಾನು ಮಧ್ಯೆ ಮಲಗಿದಳು.
"ಇದರಲ್ಲಿ ಏಂಜಲ್ ಯಾರು? ಪ್ರಿನ್ಸ್ ಯಾರು?" ಅಖಿಲಾ ಮಲಗಿದ್ದಲ್ಲೇ ಪ್ರಶ್ನಿಸಿದಳು.
"ಏಂಜಲ್ ಪ್ರಿನ್ಸ್ ಹುಡುಕಿದ್ರೆ ಮಾತ್ರ ಸಿಗ್ತಾಳೆ. ಇಲ್ಲಾಂದ್ರೆ ಯಾವತ್ತೂ ಸಿಗಲ್ಲ. ಮತ್ತೆ ಪ್ರಿನ್ಸ್ ನಾ ನಾಳೆ ತೋರಿಸ್ತಿನಿ ಒಕೆ ಈಗ ಮಲಗಿ ಇಬ್ಬರೂ" ಎಂದು ಅವರ ತಲೆ ನೇವರಿಸಿದಳು. ಬಾಗಿಲಾಚೆ ನಿಂತು ಎಲ್ಲವನ್ನೂ ನೋಡುತ್ತಿದ್ದ ಮೇಜರ್ ಅವರು ಸಹ ಮಾತು ಬರದಂತಾಗಿ ಅಲ್ಲಿಂದ ಸುಮ್ಮನೆ ತಮ್ಮ ರೂಮಿಗೆ ಹೊರಟು ಹೋದರು. ಮೇಲ್ನೋಟಕ್ಕೆ ಲವಲವಿಕೆಯಿಂದ ಕಾಣುತ್ತಿದ್ದ ಪರಿಯ ಮನಸ್ಸು ಮಾತ್ರ ತನ್ನ ಹರ್ಷನ ಪರಿಸ್ಥಿತಿಯನ್ನು ನೆನೆ ನೆನೆದು ಆರ್ದ್ರವಾಗಿತ್ತು.
ಇವಳದು ಪ್ರೀತಿಯನ್ನು ಪಡೆಯುವ ಹಂಬಲದ ಪ್ರಯತ್ನ.. ಅವನದು ಕಳೆದು ಹೋದ ಬೃಂದಾವನ ಕುಟುಂಬದ ನಗುವನ್ನು ಮರಳಿಸುವ ಪ್ರಯತ್ನ! ಮತ್ತೋರ್ವಳದು ಎರಡನ್ನೂ ಸೋಲಿಸಿ ತನ್ನ ಪ್ರತೀಕಾರ ತೀರಿಸಿಕೊಳ್ಳುವ ಪ್ರಯತ್ನ.. ಇದ್ಯಾವುದರ ಅರಿವಿಲ್ಲದೆಯೇ ಮುಗ್ದವಾಗಿ ಸೋತಿರುವ ಅಲ್ಲೊಬ್ಬನದು ತನ್ನದೇ ಅಸ್ತಿತ್ವವನ್ನು ಹುಡುಕುವ ಅವಿರತ ಪ್ರಯತ್ನ... ಬರುವ ಮುಂಜಾನೆಗಳಲ್ಲಿ ಅಡಗಿ ಕುಳಿತ ಭವಿಷ್ಯಕ್ಕೆ ಸಮಯದ ಕೈಗೆ ನಿಲುಕದೆ ಓಡುವ ಪ್ರಯತ್ನ...
ಮುಂದುವರೆಯುವುದು...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ