ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-27


ಮರೀನ್ ಡ್ರೈವ್ ಬೀಚ್
ಗಂಟೆ : 7.30AM

ಬೇಸಿಗೆಯ ಮುಂಜಾವು ಬಲು ಹಿತವಾಗಿತ್ತು. ಪ್ರತ್ಯೂಷದ ಕಿರಣಗಳು ನಾ ಮುಂದು ತಾ ಮುಂದು ಎನ್ನುವ ಪೈಪೋಟಿಯೊಂದಿಗೆ ಭುವಿಯ ಸ್ಪರ್ಶಿಸಿ ಸಮುದ್ರದ ಅಲೆಗಳ ಮೇಲೆ ಮಿನುಗುತ್ತಿದ್ದವು.  ತೀರದಲ್ಲಿ ತಂಪಾದ ಗಾಳಿ ಸುಯ್ಯನೆ ಅಲೆಯುತ್ತಿತ್ತು. ಜಾಗಿಂಗ್ ಬಂದ ಸಹಸ್ರ ಜನರಿಂದ ಕಡಲ ತೀರ ಕಳಕಳೆಯಾಗಿತ್ತು.

ರಾತ್ರಿಯೆಲ್ಲ ನಿದ್ರೆ ಇಲ್ಲದೆ ಬೆಳಗಿನ ದಾರಿಯನ್ನೇ ಕಾಯುತ್ತಿದ್ದ ಮಾನ್ವಿ ಅದ್ಯಾವ ಘಳಿಗೆ ಮುಸುಕು ಹೊದ್ದು ಮಲಗಿದಳೋ ಬಂದೇ ಬಿಟ್ಟಿತ್ತು ಪ್ರಸನ್ನನ ಕರೆ. ರಿಸೀವ್ ಮಾಡಿದವಳೇ ಅವನ ಧ್ವನಿ ಕೇಳಿ ಹೌಹಾರಿ ಎಚ್ಚೆತ್ತು ಕುಳಿತು ಆಗಲೇ ಬೆಳಗಾಗಿದ್ದಕ್ಕೆ ಶಪಿಸಿದ್ದಳು. ಹರ್ಷನನ್ನು ಭೇಟಿ ಮಾಡಿಸಲು ಕೊನೆಯ ಎಚ್ಚರಿಕೆಯಯೊಂದನ್ನು ನೀಡಿ ಕರೆ ಕಡಿತಗೊಳಿಸಿದ್ದ ಪ್ರಸನ್ನ. ಅವನ ಹೆಸರಿಗೆ ಸಹಸ್ರನಾಮ ಮಾಡುತ್ತಲೇ ಮುಖ ತೊಳೆದು, ಕೂದಲನ್ನು ಒತ್ತು ಮಾಡಿ ಮೇಲೆ ಪೋನಿಟೆಲ್ ಹಾಕಿ, ಜಾಗಿಂಗ್ ಸೂಟ್, ಶೂ ಧರಿಸಿ ಸಿದ್ದವಾಗಿ, ಹರ್ಷನ ಬಳಿ ಬಂದ ಮಾನ್ವಿ ಮಲಗಿದ್ದ ಹರ್ಷನನ್ನು ನೀರು ಚುಮುಕಿಸಿ ಒತ್ತಾಯದಿಂದ ಎಬ್ಬಿಸಿ, ಒಪ್ಪಿಸಿ ಜಾಗಿಂಗ್ ಗೆ ಕರೆದುಕೊಂಡು ಬಂದಿದ್ದಳು. ಒಲ್ಲದ ಮನಸ್ಸಿನಿಂದಲೇ ಜಾಗಿಂಗ್ ಬಂದಿದ್ದ ಹರ್ಷ ಕಿವಿಯಲ್ಲಿ ಹೆಡ್ಪೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ, ಕೈಯಲ್ಲಿ ಜ್ಯೂಸ್ ಬಾಟಲ್ ಹಿಡಿದು ಜ್ಯೂಸ್ ಕುಡಿಯುತ್ತ ನಿಧಾನಕ್ಕೆ ಹೆಜ್ಜೆ ಮುಂದೆ ಕಿತ್ತಿಡುತ್ತಿದ್ದ. ರಾತ್ರಿಯಿಡೀ ನಿದ್ದೆಯಿಲ್ಲದೆ ಉರಿಯುತ್ತಿರುವ ಕಣ್ಣುಗಳನ್ನು ಉಜ್ಜಿಕೊಳ್ಳುತ್ತ ಮೆಲ್ಲಗೆ ಜಾಗಿಂಗ್ ಮಾಡುತ್ತಿದ್ದ ಮಾನ್ವಿ, ಪ್ರಸನ್ನ ಯಾವಾಗ ಬರಬಹುದು ಎಂದು ಸುತ್ತಲೂ ಕಣ್ಣಾಡಿಸುತ್ತ ಹರ್ಷನ ಹಿಂದಿಂದೆಯೇ ಹೋಗುತ್ತಿದ್ದಳು. ಅವರ ಅಕ್ಕಪಕ್ಕಗಳಲ್ಲಿ ನಾಲ್ಕು ಜನ ಸೆಕ್ಯೂರಿಟಿಸ್ ಕೂಡ ಹೆಜ್ಜೆ ಹಾಕುತ್ತಿದ್ದರು.

ತುಸು ದೂರ ಸಾಗುತ್ತಿದ್ದಂತೆ, ಎದುರಿಗೆ.... ಬಿಳಿ ಜರ್ಕಿನ್ ಧರಿಸಿ ಕಿವಿಯಲ್ಲಿ ಏರ್ಫೋನ್ ಸಿಕ್ಕಿಸಿಕೊಂಡು  ಕೆಳಗೆ ಬಗ್ಗಿ ಕುಳಿತು ತನ್ನ ಷೂ ಲೇಸ್ ಕಟ್ಟಿಕೊಳ್ಳುತ್ತಿದ್ದ ಪ್ರಸನ್ನ ಮಾನ್ವಿಗೆ ಕಾಣಿಸಿದ್ದ. ' ಇವನನ್ನು ಹೇಗೆ ಪರಿಚಯ ಮಾಡಿಸೋದು? ಏನೆಂದು ಹೇಳೋದು? ಹರ್ಷ ಸಿಟ್ಟು, ಟೆನ್ಷನ್ ಮಾಡಿಕೊಳ್ಳದಿದ್ರೆ ಅಷ್ಟೇ ಸಾಕು' ಎಂದುಕೊಳ್ಳುತ್ತ ಅಳುಕುತ್ತಲೇ ಮುಂದೆ ನಡೆದಿದ್ದಳು ಮಾನ್ವಿ. ಯಾವ ಪರಿವೇ ಇಲ್ಲದೆ ಮುಂದೆ ಓಡುತ್ತಿದ್ದ ಹರ್ಷ.

ಅವನನ್ನು ದೂರದಿಂದಲೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪ್ರಸನ್ನ. ಕೆಲವು ತಿಂಗಳುಗಳಿಂದ ಕೇವಲ ಫೋಟೋಗಳಲ್ಲಷ್ಟೆ ನೋಡಿದ ಹರ್ಷನ ಮುಗ್ಧ ಮುಖ ಎಂದಿಗಿಂತಲೂ ಅಪ್ರಾಪ್ತವೂ ಅಪ್ಯಾಯಮಾನವಾಗಿಯು ಕಂಡಿತ್ತು. ಹರಿಣಿ ಪರಿ ಅಮ್ಮ ಅವನ ಬಗ್ಗೆ ಹೇಳುತ್ತಿದ್ದ ಮಾತುಗಳೆಲ್ಲ ನಿಜ ಎನ್ನಿಸಿದ್ದವು. ಸರಳ ಸುಂದರ ಸಹಜವಾದ ತೇಜಸ್ಸಿನ ಮೊಗ, ನಿಷ್ಕಲ್ಮಷ ಕಂಗಳು, ತಿದ್ದಿ ತೀಡಿದ ತುಟಿಗಳು ಆದರೆ ನಗುವಿಗೆ ಮಾತ್ರ ಬರಗಾಲ!! ಹರಿ.. ನಿಮ್ಮಣ್ಣ ನನ್ನ ನಂಬ್ತಾನೆನೇ?? ಮನಸ್ಸಲ್ಲೇ ಪ್ರಶ್ನೆಯೊಂದು ಸುಳಿದಾಡುತ್ತಿತ್ತು.
ಹರ್ಷ ಎದುರು ಬರುತ್ತಿದ್ದಂತೆ ಆಶ್ಚರ್ಯದಿಂದ ಮುಂದೆ ಬಂದ ಪ್ರಸನ್ನ ಕಣ್ ಮಿಟುಕಿಸುವಷ್ಟರಲ್ಲಿ ಅವನನ್ನು ತುಂಬು ಸಂತೋಷದಿಂದ ಜೋರಾಗಿ ಬಿಗಿದಪ್ಪಿ ಬೆನ್ನು ಚಪ್ಪರಿಸಿ "ವ್ಹಾವ್... ವ್ಹಾಟ್ ಎ ಸರ್ಪ್ರೈಜ್ ಬ್ರೋ.." ಎಂದು ಉದ್ಘರಿಸಿ..
"ಹಾಯ್ ಬ್ರೋ.... ಎಷ್ಟು ವರ್ಷ ಆಗೋಗಿತ್ತು ನಿನ್ನ ನೋಡಿ.. ಓಹ್ ಗಾಡ್..." ಎಂದು ಸಂತೋಷದ ಉನ್ಮಾದದಲ್ಲಿ ಪುಟಿಯುತ್ತಿದ್ದ. ಅವನನ್ನ ಜೋರಾಗಿ ಹಿಂದಕ್ಕೆ ತಳ್ಳಿದ ಹರ್ಷ "who the hell are you!!!!" ಎಂದು ರೇಗಿದ. ಅವನ ಸಿಟ್ಟು ನೋಡಿ ಸೆಕ್ಯೂರಿಟಿ ಕೂಡ ಪ್ರಸನ್ನ ಅಪರಾಧಿ ಎಂಬಂತೆ ಅವನನ್ನು ಹಿಡಿದು ಬಿಟ್ಟರು.

"ನಾನು ಕಣೋ ಪ್ರಸನ್ನ. ನಿನ್ನ ಬೆಸ್ಟೆಸ್ಟ್ ಫ್ರೆಂಡ್ ಕಣೋ.." ಪ್ರಸನ್ನ ಅವರ ಕೈ ತಡವಿ, ಹರ್ಷನ ಕೈ ಬಿಗಿಯಾಗಿ ಹಿಡಿಯುತ್ತ ಹೇಳಿದ.

"ಬಟ್ ನನಗೆ ನೀನ್ಯಾರು ಅಂತ ಗೊತ್ತಿಲ್ಲ. Stay away....!  ಮಾನ್ವಿ ಯಾರಿವ್ನು?" ಪ್ರಸನ್ನನ ಕೈ ಬಿಡಿಸಿಕೊಳ್ಳುತ್ತ ಹಿಂದೆ ಸರಿದು, ಮಾನ್ವಿಯನ್ನು ಕೇಳಿದ ಹರ್ಷ.

"ಉಫ್... ಮಾನು ನೀನೇ ಬೆಟ್ಸ್ ಗೆದ್ದೆ ಕಣೇ.. ತನ್ನ ಬಾಲ್ಯದ ಗೆಳೆಯಾನೇ ನೆನಪಿಲ್ಲ ಈ ಇಡಿಯಟ್‌ಗೆ" ಮಾನ್ವಿಗಿಂತ ಮುಂಚಿತವಾಗಿ ಮಾತಾಡಿದ್ದ ಪ್ರಸನ್ನ ಹಣೆಯುಜ್ಜಿಕೊಳ್ಳುತ್ತ ಬೇಸರಿಸಿಕೊಂಡ. ಅವನು ಹೇಳುವುದನ್ನು ಕೇಳುತ್ತಿದ್ದ ಮಾನ್ವಿ ಈತ ಏನೆಲ್ಲಾ ಲೆಕ್ಕಾಚಾರ ಹಾಕಿಕೊಂಡು ಇಲ್ಲಿಗೆ ಬಂದಿರುವನೋ? ಮುಂದೆನು ಹೇಳುವನೋ? ಎಂದು ಮಾತು ಬಾರದೆ ದಿಗ್ಙೂಡಳಾಗಿ ಅವನತ್ತಲೇ ಪಿಳಿಪಿಳಿ ನೋಡುತ್ತ ನಿಂತಿದ್ದಳು.

"ಮಾನು.... ನಿನ್ನನ್ನೇ ಕೇಳ್ತಿರೋದು.. ಯಾರಿದು? ಏನಿದೆಲ್ಲಾ? ಏನ್ ಬೆಟ್ಸ್?" ಸಿಡುಕಿದ ಹರ್ಷ. ಮಾನ್ವಿ "ಹ್ಮ್.. ಅದು..ಇವನು.." ಎಂದು ಬಾಯಿ ತೆರೆಯುವ ಮೊದಲೇ ಪ್ರಸನ್ನ...

"ಅದೇ ಕಣೋ ನಿನ್ನೆ ಕ್ಲಬ್‌ನಲ್ಲಿ ಮಾನು ಭೇಟಿಯಾದಾಗ ನಿನಗೆ ಆ್ಯಕ್ಸಿಡೆಂಟ್ ಆಗಿ ಹಳೆಯದೆಲ್ಲಾ ಮರ್ತೋಗಿದೆ, ನನ್ನನ್ನು ಮರ್ತಿದೀಯಾ ಅಂತ ಹೇಳಿದ್ಲು!  ನಾನು ನೋ ಚಾನ್ಸ್.. ನನ್ನ ಬೆಸ್ಟ್‌ಫ್ರೆಂಡ್ ನನ್ನನ್ನ ಮರೆಯೋಕೆ ಸಾಧ್ಯಾನೇ ಇಲ್ಲ ಅಂತ ಬಿಲ್ಡಪ್ ತಗೊಂಡು ಇವಳ ಜೊತೆಗೆ ಬೆಟ್ಸ್ ಕಟ್ಟಿದ್ದೆ!  ಆದರೆ ಛೇ....  ನೀನ್ ನೋಡಿದ್ರೆ ನನ್ನನ್ನೇ ಯಾರು ಅಂತ ಕೇಳ್ತಿದೀಯಾ!!" ಪ್ರಸನ್ನ ತುಂಬಾ ವ್ಯಥೆಯಿಂದ ಕಣ್ಣುಜ್ಜಿಕೊಂಡ. ಅವನ ಬೂಟಾಟಿಕೆಗೆ ಕೊನೆಗಾಣಿಸಲು ಮಾನ್ವಿ ಮಾತು ಮುಂದುವರೆಸಿದಳು..

"ಸಂಕು... ಇವನು ಡಾ.ಪ್ರಸನ್ನ ಅಂತ. ಒಂದು ಕಾಲದಲ್ಲಿ ನಿನ್ನ ಫ್ರೆಂಡ್ ಆಗಿದ್ದ. ಈಗಲ್ಲ. ಅದೂ ಬರೀ ಜಸ್ಟ್ ಫ್ರೆಂಡ್ ಅಷ್ಟೇ!" ಮುಖ ತಿರುವಿದಳು ಮಾನ್ವಿ

"ಜಸ್ಟ್ ಫ್ರೆಂಡಾ.... ನೋ.... ಹರ್,,ಷ್' ಎನ್ನುತ್ತಿದ್ದವನು ಸುಧಾರಿಸಿಕೊಂಡು "ಸಂಕು... ನಾವಿಬ್ರೂ ಬೆಸ್ಟ್ ಫ್ರೆಂಡ್ಸ್ ಕಣೋ, ಚಿಕ್ಕಂದಿನಿಂದಲೂ ಒಟ್ಟಿಗೆ ಕಲಿತಿದ್ದು ಸೇಂಟ್ ಜೋಸೆಫ್ ಸ್ಕೂಲ್‌ನಲ್ಲಿ. ಆಮೇಲೆ ಹೈಸ್ಕೂಲ್ ಪಿಯುಸಿ ಕೂಡ ಜೊತೆಗೆ ಓದಿದ್ದು. ಆದರೆ ಇವಳಿಗೆ ಆವಾಗಿನಿಂದನೂ ನಮ್ಮಿಬ್ರ ಸ್ನೇಹ ಕಂಡ್ರೆ ಹೊಟ್ಟೆಯುರಿ ಕಣೋ.. ಅದ್ಕೆ ಹೀಗೆ ಹೇಳ್ತಿದಾಳಷ್ಟೇ!!
ನೀನು ಗ್ರಾಜ್ಯುವೇಷನ್‌ಗೆ ಅಬ್ರಾಡ್ ಹೋದ್ಮೇಲೆ, ನಾನು ಮಾನು ಇಬ್ಬರೂ ಒಂದೇ ಮೆಡಿಕಲ್ ಕಾಲೇಜ್ ನಲ್ಲಿ ಓದಿದ್ದು‌. ಬೇಕಾದ್ರೆ ಕೇಳು ಅವಳನ್ನ.. ಆಗಲೂ ನನ್ನ ಕಂಡ್ರೆ ಉರಿದು ಬೀಳ್ತಿದ್ಲು. ನನಗೂ ಇವಳನ್ನ ಕಂಡ್ರೆ ಅಷ್ಟಕ್ಕಷ್ಟೇ..! ಏನೋ ನಿನ್ನ ಮುಖ ನೋಡಿ ಇವಳನ್ನ ಸಹಿಸ್ಕೊಳ್ತಿದ್ದೆ ಅಷ್ಟೇ..." ಪ್ರಸನ್ನ ಉರಿಗಣ್ಣಿಂದ ಮಾನ್ವಿಯತ್ತ ನೋಡುತ್ತ ಹೇಳಿದ.

"ನೋ ನೋ.. ಸಂಕು.. ಇವನು ನಿನಗೆ ಒಂದು ಕಾಲದಲ್ಲಿ ಜಸ್ಟ್ ಫ್ರೆಂಡ್ ಆಗಿದ್ದ ಅಷ್ಟೇ!! ನಿನಗೂ ಅವನಿಗೂ ಅಷ್ಟೊಂದು ಬಾಂಡಿಂಗ್ ಏನಿರ್ಲಿಲ್ಲ" ಮಾನ್ವಿ ಮಾತಿಗೆ ಹರ್ಷ ತಲೆ ಕೊಡವಿ ಮುಂದೆ ಹೋಗುವವನಿದ್ದ. ಅಷ್ಟರಲ್ಲಿ ಪ್ರಸನ್ನ..

"ಎಲಾ ಮಂಗ್ಳೂರ್ ಬಾಂಗಡಿ ಮೀನೇ.. ಹೀಗಾ ಸುಳ್ಳು ಹೇಳುವುದು ನಿನ್ನೆ ರಾತ್ರಿ ಕ್ಲಬ್‌ನಲ್ಲಿ ಸಿಕ್ಕಾಗ, ಸಂಕು ಮೂಡ್ ಈಗ ಸರಿಯಿಲ್ಲ, ನಾಳೆ ಬೆಳಿಗ್ಗೆ ಬೀಚ್‌ನಲ್ಲಿ ಸಿಗೋಣ, ಮಾತಾಡೋಣ, ಸಂಕುಗೆ ಹಳೆಯ ದಿನಗಳನ್ನೆಲ್ಲ ನೆನಪಿಸೋಣ ಅಂದಿದ್ದೆ‌.. ಇವಾಗೇನಾಯ್ತೇ ಹೀಗೆಲ್ಲ ಕಥೆ ಹೇಳ್ತಿದ್ದಿಯಾ!! " ಮತ್ತೊಂದು ಬಾಣ ಎಸೆದಿದ್ದ. ಬಾಣ ಸರಿಯಾಗಿ ನಾಟಿತು ಕೂಡ.

"ಓಹ್... ಅದಕ್ಕೆನಾ ಮಾನು,  ಇವತ್ತು ಇಷ್ಟೊಂದು ಒತ್ತಾಯದಿಂದ ನನ್ನನ್ನ ಜಾಗಿಂಗ್ ಕರ್ಕೊಂಡು ಬಂದಿದ್ದು.. " ಹರ್ಷ ಹುಬ್ಬು ಗಂಟಿಕ್ಕಿ ಮಾನ್ವಿಯನ್ನು ಗುರಾಯಿಸಿದ. ತತ್ತರಿಸಿ ಹೋಗಿದ್ದಳು ಮಾನ್ವಿ ಮಾತು ಬಾರದೆ!

"ಹರ್ಷ' ಎನ್ನುತ್ತಿದ್ದವ ತಟ್ಟನೆ ಬಾಯಿ ಮುಚ್ಚಿಕೊಂಡು ಬ್ರೋ... ನಾನು ನಿಜ ಹೇಳ್ತಿದಿನೋ ನಿನ್ನೆ ರಾತ್ರಿ ಇವಳು ಕ್ಲಬ್ ನಲ್ಲಿ ಸಿಕ್ಕಿದ್ದಳು. ತುಂಬಾ ವರ್ಷಗಳ ನಂತರ ಭೇಟಿಯಾದ್ವಲ್ಲ ತುಂಬಾ ವಿಚಾರ ಮಾತಾಡ್ಕೊಂಡ್ವಿ. ನಿಮ್ಮ ಮದುವೆ ವಿಷಯ ಹೇಳಿದ್ಳು.. ಹಾಗೆ ನಿನ್ನ ಆ್ಯಕ್ಸಿಡೆಂಟ್ ವಿಷಯ ಕೂಡ ಹೇಳಿದಳು." ಪ್ರಸನ್ನನ ಮಾತನ್ನು ಹರ್ಷ ಗಮನಕೊಟ್ಟು ಕೇಳುತ್ತಿದ್ದ.
" ಇಟ್ಸ್ ಫೈನ್ ಬ್ರೋ.... ಆಗೋದೆಲ್ಲ ಒಳ್ಳೆಯದಕ್ಕೆ.. ಹಳೆಯ ನೆನಪು ಹೋದರೇನಂತೆ,, ಸ್ವಲ್ಪ ದಿನಗಳಲ್ಲಿ ಮತ್ತೆ ಜ್ಞಾಪಕವಾಗುತ್ತೆ. ಆದರೆ ಜೀವ ಉಳಿದಿದೆಯಲ್ಲ ಅದು ತುಂಬಾ ಮುಖ್ಯ ಕಣೋ.. ಪಾಪ, ನಿನಗೋಸ್ಕರ ಅದೆಷ್ಟು ಜನ ಅನ್ನ ನೀರು ಬಿಟ್ಟು ಹರಕೆ ಹೊತ್ತಿದ್ದರೋ ಏನೋ!! ಅವರಿಗೋಸ್ಕರ ಅಂತೂ ನೀನು ಬದುಕುಳಿದಿದ್ದಿಯಾ!!"

"ಸಂಕು, ಇವತ್ತು ಯಾವುದೋ ಇಂಪಾರ್ಟೆಂಟ್ ಮೀಟಿಂಗ್ ಇದೆಯಂತ ಡ್ಯಾಡ್ ಹೇಳ್ತಿದ್ರು. ಬೇಗ ಹೊರಡ್ಬೇಕು ಬಾ.." ಮಾನ್ವಿ ಅವನ ಕೈ ಹಿಡಿದು ಕರೆಯುತ್ತ ಹೇಳಿದಳು. ಆದರೆ ಹರ್ಷನ ಮನಸ್ಸು ಪ್ರಸನ್ನನ ಕೊನೆಯ ಮಾತಿನಲ್ಲಿ ಸಿಲುಕಿಕೊಂಡಿತ್ತು. 'ಯಾರೋ ನನಗಾಗಿ ಹರಕೆ ಹೊತ್ತಿದ್ದರಾ? ಜೊತೆಗಿರೋ ಅಪ್ಪ-ಅಮ್ಮನೇ ಒಂದಿನನೂ ಪ್ರೀತಿಯಿಂದ ಮಾತಾಡ್ತಿಲ್ಲ, ನನಗೋಸ್ಕರ ದೇವರಿಗೆ ಮೊರೆ ಹೋದವರ್ಯಾರೋ!!' ಮನಸ್ಸಲ್ಲೇ ಗೊಂದಲ ಸೃಷ್ಟಿಯಾಗಿತ್ತು. ಅವನು ಪ್ರಸನ್ನನನ್ನೇ ನೋಡುತ್ತ "ನಾನು ನಿನ್ನನ್ನ ಹೇಗೆ ನಂಬೋದು??" ಪ್ರಶ್ನೆ ಎಸೆದಿದ್ದ. ಅವನ ಪ್ರಶ್ನೆಗೆ ಮುಗುಳ್ನಗುತ್ತ ಪ್ರಸನ್ನ ಹೇಳಿದ...

"ಕೃತ್ರಿಮವೋ ಜಗವೆಲ್ಲ I ಸತ್ಯತೆಯದೆಲ್ಲಿಹುದೋ?
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು
ಚತ್ರವೀ ಜಗವಿದರೋಳಾರ ಗುಣವೆಂತಹುದೋ
ಯಾತ್ರಿಕನೆ, ಜಾಗರಿರೋ – ಮಂಕುತಿಮ್ಮ 

ಈ ಇಡೀ ಜಗತ್ತೇ ಕಪಟ ಮೋಸದಿಂದ ತುಂಬಿರುವಾಗ ಯಾರನ್ನು ಯಾರೂ ನಂಬೋಹಾಗಿಲ್ಲ‌. ಸತ್ಯ ಯಾವುದು ಸುಳ್ಳು ಯಾವುದು ಒಂದೂ ಗೊತ್ತಾಗಲ್ಲ ಈಗೀನ ಕಾಲದಲ್ಲಿ, ಈ ಜಗತ್ತನ್ನು ಸೃಷ್ಟಿಸಿದ ದೇವರೇ ಯಾರಿಗೂ ಕಾಣದಂತೆ ಗುಪ್ತವಾಗಿ ಅಡಗಿ ಕುಳಿತುರುವಾಗ,, ಇನ್ನು ಇಲ್ಲಿರೋ ಮನುಷ್ಯರ ಗುಣ ಹೇಗೋ ಏನೋ ಬಲ್ಲವರ್ಯಾರು!! ನಿನ್ನೆಚ್ಚರಿಕೆಯಲ್ಲಿ ನೀನಿರೋ ಯಾತ್ರಿಕ' ಅಂತ ನಮ್ಮ ಗುಂಡಪ್ಪಜ್ಜನೇ ಹೇಳಿದ್ದಾರೆ...  ಹೀಗಿರುವಾಗ ನನ್ನನ್ನು ನಂಬು ಅಂತ ನಿನ್ನನ್ನು ಒತ್ತಾಯದಿಂದ ನಂಬಿಸೋಕೆ ನನ್ನಿಂದ ಸಾಧ್ಯವಿಲ್ಲ ಕಣೋ...

ಆದರೆ ನಾನು ನಿನ್ನ ಶುಭವನ್ನೆ ಬಯಸೋ ನಿನ್ನ ಮಿತ್ರ ಅಷ್ಟು ಮಾತ್ರ ಖಚಿತವಾಗಿ ಹೇಳಬಲ್ಲೆ. ನಿನ್ನನ್ನ ಅದೆಷ್ಟು ಸಲ ನೆನಪಿಸ್ಕೊಂಡಿದಿನೋ ಲೆಕ್ಕವೇ ಇಲ್ಲ. ಪ್ರತಿ ಸಲ ನಿನ್ನನ್ನು ಭೇಟಿಯಾಗಬೇಕು ಅನ್ಕೊಂಡಾಗೆಲ್ಲ ಏನೇನೋ ಅನಿವಾರ್ಯತೆಗಳು! ಹೀಗಾಗಿ ನಿನಗೆ ಮತ್ತೆ ಸಿಗೋಕೆ ಆಗಲಿಲ್ಲ. ಈಗ ಸಿಕ್ಕಿದಿವಿ ಆದರೆ ನಿನಗೆ ನಾನೇ ನೆನಪಿಲ್ಲ! ಬದುಕು ಎಂಥ ವಿಪರ್ಯಾಸ ಅಲ್ವಾ!!

ಇಲ್ನೋಡು ಲಾಸ್ಟ್ ಟೈಮ್ ನೀನು ಫಾರಿನ್ ಹೋಗೋ ಮೊದಲು ನನಗೆ ಕಟ್ಟಿದ ಫ್ರೆಂಡ್ ಶಿಪ್ ಬ್ಯಾಂಡ್!!" ಎಂದು ತನ್ನ ಕೈಗೆ ಹರಿಣಿ ತೊಡಿಸಿದ ಸಿಲ್ವರ್ ಬ್ಯಾಂಡ್ ತೋರಿಸಿ, ಅದನ್ನು ಬಿಚ್ಚಲು ನೋಡಿದ. ಅದನ್ನು ಹಿಂದೆ ಮುಂದೆ ಎಳೆದು ಸ್ವಲ್ಪ ತಿರುಗಿಸಿ ಎಷ್ಟೇ ಕೊಸರಾಡಿದರೂ ಬ್ಯಾಂಡ್ ಲಾಕ್ ಬಿಡಿಸಲು ಸಹ ಬರಲಿಲ್ಲ ಪ್ರಸನ್ನನಿಗೆ.

ಅದನ್ನೇ ಗಮನಿಸುತ್ತಿದ್ದ ಹರ್ಷ ತಕ್ಷಣ ಅವನ ಕೈ ತನ್ನತ್ತ ಎಳೆದುಕೊಂಡು ಅದನ್ನು ಪರಿಶೀಲನಾ ದೃಷ್ಟಿಯಿಂದ ನೋಡುತ್ತಿದ್ದ. ತನ್ನ ಕೈಯಲ್ಲಿದ್ದ ಜ್ಯೂಸ್ ಬಾಟಲ್ ಪ್ರಸನ್ನನ ಕೈಗೆ ಕೊಟ್ಟು ಲಾಕ್ ನ ಒಂದು ತುದಿಯನ್ನು ಜೋರಾಗಿ ಅದುಮಿ ಹಿಡಿದು, ಅದರಿಂದ ತೆರೆದುಕೊಂಡ ಕೊಂಡಿಯಿಂದ ಬ್ಯಾಂಡ್ ನ ಎಳೆಯನ್ನು ಬಿಡಿಸಿದ್ದ. ಅಷ್ಟರಲ್ಲಿ ಪ್ರಸನ್ನ ಅವನು ಕೊಟ್ಟ ಬಾಟಲ್‌ನಿಂದ ಜ್ಯೂಸ್ ಗುಟುಕುತ್ತ "ಹ್ಮ್ಮ್ಮ.... ಥ್ಯಾಂಕ್ಸ್ ಬ್ರೋ.. ಗಂಟಲು ಒಣಗೋಗಿತ್ತು" ಎಂದಿದ್ದ. ತನ್ನ ಎಂಜಲು ಎಂದು ಸಹ ನೋಡದೆ ಜ್ಯೂಸ್ ಕುಡಿಯುತ್ತಿದ್ದ ಪ್ರಸನ್ನ ನಿಜವಾಗಿಯೂ ತನ್ನ ಆಪ್ತಸ್ನೇಹಿತನೆಂಬ ಭಾವ ಬಂದಿತು ಹರ್ಷನಿಗೆ.
ತುಂಬಾ ಸುಲಭವಾಗಿ ಜಾಗರೂಕತೆಯಿಂದ ಬ್ಯಾಂಡ್‌ನ್ನು ಅವನ ಕೈಯಿಂದ ಹೊರತೆಗೆದು ಅದನ್ನು ತನ್ನ ಕೈಯಲ್ಲಿ ಹಿಡಿದು ಗಮನಿಸಿ ನೋಡಿದ. ಸಿಲ್ವರ್ ಪ್ಲೇಟೆಡ್ ಬ್ಯಾಂಡ್. ಮಧ್ಯದಲ್ಲಿ ಪುಟ್ಟ ಪುಟ್ಟ ನಕ್ಷತ್ರಗಳ ಸಾಲು.. ಪ್ರತಿಯೊಂದು ನಕ್ಷತ್ರದ ಮೇಲೂ ಕೆಲವು ಅಕ್ಷರಗಳು.. FRIENS FOREVER* ಹರ್ಷ ಅದನ್ನು ಕೈಯಲ್ಲಿ ಹಿಡಿದು ನೋಡುತ್ತ ಏನೋ ಅದ್ಭುತ ನೋಡುವಂತೆ ಕಳೆದು ಹೋಗಿದ್ದ. ಅವನ ಮನದ ಸ್ಮೃತಿಯಲ್ಲಿ ಏನೆಲ್ಲಾ ಗೋಜಲು ಗೊಂದಲ ತುಮುಲಗಳು... ಅದನ್ನು ಅರಿಯದ ಮಾನ್ವಿ ಅವನ ಕೈ ಹಿಡಿದೆಳೆದು "ಸಂಕು... ಲೇಟ್ ಆಗ್ತಿದೆ, ಬಾ ಹೋಗೋಣ" ಅರಚಿದಳು. ನಿಧಾನವಾಗಿ ಅವಳ ಕೈ ಕೊಸರಿಕೊಂಡ ಹರ್ಷ ಹೆಜ್ಜೆ ಕಿತ್ತಲಿಲ್ಲ.
ಅವನ ನೋಟವನ್ನು ಅರ್ಥ ಮಾಡಿಕೊಂಡ ಪ್ರಸನ್ನ 'ಈ ಬ್ಯಾಂಡ್ ಹಿಂದೆ ಏನೋ ದೊಡ್ಡ ಪುರಾಣ ಇತಿಹಾಸ ಇರೋ ಹಾಗಿದೆಯಲ್ಲ? ಹರಿ ನನಗೇನು ಹೇಳಲೇ ಇಲ್ಲ!' ಎಂದು, ಇನ್ನು ತನ್ನ ದಾರಿ ಸುಲಭ ಎಂದೂ ಯೋಚಿಸಿ..

"ನೋಡಿದಾ? ನೀನೇ ಕಟ್ಟಿದ್ದು.. ಇದನ್ನು ನೋಡಿ ನಿನಗೆ ಏನಾದ್ರೂ ನೆನಪಾಗ್ತಾ ಇದೆಯಾ?" ಕೇಳಿದ. ಮಾನ್ವಿ ಸಿಟ್ಟಿನಿಂದ ಹಲ್ಲು ಮಸೆಯುತ್ತಿದ್ದಳು. ಹರ್ಷನಿಂದ ಯಾವ ಉತ್ತರವಿಲ್ಲ. ಪ್ರಸನ್ನನೇ ಮಾತು ಮುಂದುವರೆಸಿದ...

"ನೋಡು ಸಂಕು.... ನಮ್ಮ ಮೆದುಳು ಹೇಗೆ ಕೆಲಸ ಮಾಡುತ್ತೆ ಗೊತ್ತಾ. sensory nervous system ಮೂಲಕ ಅಂದ್ರೆ ಕಣ್ಣುಗಳು ನೋಡುತ್ತೆ, ಮೂಗು ಆಘ್ರಾಣಿಸುತ್ತೆ, ಕಿವಿಗಳು ಕೇಳುತ್ತವೆ, ಬಾಯಿ ಮಾತಾಡುತ್ತೆ, ಚರ್ಮ ಸ್ಪರ್ಶವನ್ನು ಗ್ರಹಿಸುತ್ತೆ. ಈ ಐದು ಇಂದ್ರಿಯಗಳು ಕೆಲಸ ಮಾಡೋದು ನಮ್ಮ ಮೆದುಳಿನಿಂದಲೇ.

ಒಂದು ಚಿಕ್ಕ ಮಗು ಮೊದಲನೇ ಸಲ ಗೊತ್ತಿಲ್ಲದೆ ದೀಪವನ್ನು ಮುಟ್ಟುತ್ತೆ, ಅದರಿಂದಾದ ಬಿಸಿ ಅನುಭವ ಚರ್ಮದಿಂದ ಮೆದುಳಿಗೆ ರವಾನೆಯಾಗಿ ಮಗುವಿನ ಗ್ರಹಿಕೆಗೆ ಬರುತ್ತೆ. ಆಗ ಮಗುಗೆ ಗೊತ್ತಾಗುತ್ತೆ ಇದು ಬಿಸಿ, ಮುಟ್ಟಿದ್ರೆ ಸುಡುತ್ತೆ ಅಂತ! ಮೆದುಳಿನಲ್ಲಿ ಕೂಡ ಇದು ಫಿಕ್ಸ್ ಆಗಿಬಿಡುತ್ತೆ. ಅದೇ ಮಗು ಸ್ವಲ್ಪ ಬೆಳೆದು ದೊಡ್ಡವನಾಗಿ ಯಾವುದೋ ಕಾರಣಕ್ಕೆ ಅದರ ಜ್ಞಾಪಕಶಕ್ತಿ ಹೊರೊಟೋಯ್ತು ಅನ್ಕೊ.... ಈಗ ಆ ಮಗು ಮುಂದೆ ಅದೇ ದೀಪವನ್ನು ತಗೊಂಡು ಹೋಗಿ ಇಟ್ರೆ‌.... ಮಗು ದೀಪ ಮುಟ್ಟುತ್ತೋ??  ಇಲ್ವೋ??" ಪ್ರಶ್ನೆ ಹಾಕಿ ತಾನೇ ಮಾತು ಮುಂದುವರೆಸಿದ ಪ್ರಸನ್ನ..
ಅದು ಮುಟ್ಟಲ್ಲ. ಯಾಕೆಂದರೆ ದೀಪವನ್ನು ಮುಟ್ಟಿದ್ರೆ ಬಿಸಿ ತಾಕತ್ತೆ, ಅಂತ ಮಗುಗೆ ಗೊತ್ತು! ಮಗುವಿನ ಜ್ಞಾಪಕಶಕ್ತಿ ಹೋದ್ಮೇಲೆ ಅದು ಆ ವಿಷಯವನ್ನು ಮರಿಬೇಕಿತ್ತಲ್ವಾ? ಮರೆತಿಲ್ಲ. ಯಾಕಂದ್ರೆ ಮರೆತಿರೋದು ಮಗುವಿನ ಕಾನ್ಸಿಯಸ್ ಮೈಂಡ್ ಮಾತ್ರ! ಮಗುವಿನ ಸಬ್‌ಕಾನ್ಷಿಯಸ್ ಮೈಂಡ್ ನಲ್ಲಿ ಇನ್ನೂ ಆ ಘಟನೆ ಹಾಗೆ ಸ್ಟೋರ್ ಆಗಿರುತ್ತೆ. ಆ ರೀತಿ ನೆನಪುಗಳು ಮರುಕಳಿಸೋಕೆ ನಮ್ಮ ಇಂದ್ರಿಯಗಳೂ ಸಹಾಯ ಮಾಡುತ್ತವೆ. ಈಗ ಆ ಮಗುಗೆ ದೀಪ ನೋಡಿದ (ಕಣ್ಣು) ತಕ್ಷಣ ಗೊತ್ತಾಗುತ್ತೆ ಇದು ಬಿಸಿ ಅಂತ.

ಹೀಗೆ ಈ ಪ್ರಪಂಚ ಅನ್ನೋದು.. ಎಷ್ಟೋ ಅದ್ಬುತ, ನಿಗೂಢ ವಿಸ್ಮಯಕಾರಿ ವಿಷಯಗಳ ಮೂಟೆ!!!  ಅದ್ರಲ್ಲಿ ನಮಗೆ ತುಂಬಾ ಸನಿಹದಲ್ಲಿರುವ ವಿಸ್ಮಯವಾದ ವಿಷಯ ಅಂದ್ರೆ ನಮ್ಮ ಈ ಮನಸ್ಸು  ಕಣೋ..
ಜಗತ್ತು ವಿಜ್ಞಾನ ತಂತ್ರಜ್ಞಾನ ಸಂಶೋಧನೆಯ ಕ್ಷೇತ್ರದಲ್ಲಿ ಅದೆಷ್ಟೇ ಸಾಧನೆ ಮಾಡಿದೆಯಂದ್ರೂ ಅದಕ್ಕೆ ಮುಖ್ಯ ಕಾರಣ ನಮ್ಮ ಈ ಮೆದುಳಿನ ಬುದ್ದಿಶಕ್ತಿಯಿಂದ..
ಈ ಮೆದುಳನ್ನು ನೋಡಬಹುದು ಮುಟ್ಟಬಹುದು ಆದರೆ ನಮ್ಮ ಮೈಂಡ್ ಅಂದ್ರೆ ಮನಸ್ಸು ಅನ್ನೋದೇನಿದೆ ಅದಕ್ಕೆ ತನ್ನದೇಯಾದ ನಿರ್ದಿಷ್ಟ ಆಕಾರ, ರೂಪ ಇಲ್ಲ. ನಮ್ಮ ದೇಹದಲ್ಲಿ ಮನಸ್ಸಿಗೊಂದು ನಿಖರವಾದ ಫಿಸಿಕಲ್ ಎಕ್ಸಿಸ್ಟೆನ್ಸ್ ಇಲ್ಲ. ಆದರೂ ಮನಸ್ಸು ಅನ್ನೋದು ಇದೆ ಅಂತ ನಮಗೊತ್ತು... ಅದೊಂದು ಅನುಭೂತಿ. ನಮ್ಮ ಎಲ್ಲಾ ರೀತಿಯ ಭಾವನೆಗಳಿಗೂ ಈ ಮನಸ್ಸೇ ಕಾರಣ.. 'ಮನಸ್ಸಿದ್ದಲ್ಲಿ ಮಾರ್ಗ' ಅಂತ ಒಂದು ಮಾತಿದೆ ಗೊತ್ತಾ‌.. ನಮ್ಮೆಲ್ಲಾ ಕ್ರಿಯೆಗಳು, ಉನ್ನತಿ ಏಳ್ಗೆ ತೃಪ್ತಿ ಅತೃಪ್ತಿಗೂ ಮನಸ್ಸೇ ಮೂಲ.

ನನಗೊತ್ತು ಈಗ ನಿನ್ನ ಕಾನ್ಸಿಯಸ್ ಮೈಂಡ್ ಗೆ ನಾನು ಯಾರಂತ ನೆನಪಿಲ್ಲ ಆದರೆ ನಿನ್ನ ಸಬ್‌ಕಾನ್ಸಿಯಸ್ ಮೈಂಡ್ ಅಂದ್ರೆ ಸುಪ್ತ ಮನಸ್ಸಿಗೆ ನಾನ್ಯಾರು ಅಂತ ಗೊತ್ತು.. ನಿನ್ನ ಸೂಪ್ತ ಮನಸ್ಸಲ್ಲಿರೋ ನೆನಪುಗಳನ್ನ ಚೇತನ ಮನಸ್ಸಿಗೆ ಅಂದ್ರೆ ಕಾನ್ಸಿಯಸ್ ಮೈಂಡ್ ಗೆ ತರಲು ನಿನ್ನ ಇಂದ್ರಿಯಗಳು ನಿನಗೆ ಸಹಾಯ ಮಾಡುತ್ತವೆ. ಈಗ ನೋಡು ಈ 'ಫ್ರೆಂಡ್ ಶಿಪ್ ಬ್ಯಾಂಡ್' ನೋಡ್ತಿದ್ದ ಹಾಗೆ ನಿನಗೆ ಏನೋ ಫೀಲ್ ಆಗ್ತಿದೆಯಲ್ವಾ ಹಾಗೆ...
ನಿನ್ನ ಮೆದುಳು ಹಳೆಯದನ್ನೆಲ್ಲ ಮರೆತಿರಬಹುದು ಆದ್ರೆ ನಿನ್ನ ಮನಸ್ಸಿಗೆ ಕೇಳೋ ನಾನ್ಯಾರು ಅಂತ! ಒಂದು ನಿಮಿಷ ನಿಧಾನವಾಗಿ ಯೋಚನೆ ಮಾಡಿ ಹೇಳು ನಿನ್ನ ಮನಸ್ಸಿಗೆ ನಾನು ಹೇಳ್ತಿರೋದು ನಿಜ ಅನ್ಸಿದ್ರೆ ಮಾತ್ರ ನನ್ನನ್ನು ನಂಬು.. ಇಲ್ಲಾ ನಾನು ಯಾರಂತನೇ ಗೊತ್ತಿಲ್ಲ ಅನ್ನೋದಾದ್ರೆ ನಾನು ಈಗಲೇ ಇಲ್ಲಿಂದ ಹೊರಟು ಹೋಗ್ತಿನಿ. " ಪ್ರಸನ್ನ ದೀರ್ಘವಾಗಿ ಉಸಿರುಬಿಟ್ಟ.

ಮಾನ್ವಿಗೆ ಇದನ್ನೆಲ್ಲ ನೋಡಿ ಪರಿಸ್ಥಿತಿ ಕೈ ಮೀರಿ ಹೋದಂತೆ ಭಾಸವಾಗಿತ್ತು. "ಸಂಕು..... ಇವಾಗೇನು, ನೀನು ಬರ್ತಿದಿಯೋ? ನಾನು ಒಬ್ಳೇ ಹೋಗಬೇಕಾ?" ಕೊನೆಯ ಬಾರಿ ಎಂಬಂತೆ ಕೇಳಿದಳು. ಹರ್ಷನ ಪ್ರತಿಕ್ರಿಯೆಗೂ ಮೊದಲೇ ಪ್ರಸನ್ನ...

"ನಮ್ಮಿಬ್ಬರ ಫ್ರೆಂಡ್ ಶಿಪ್ ಇಡೀ ಸ್ಕೂಲ್ ಹೈಸ್ಕೂಲ್ ಕಾಲೇಜ್ ತುಂಬಾ ಫೇಮಸ್ ಗೊತ್ತೆನೋ.... ನಮ್ಮನ್ನ ಕಂಡ್ರೆ ಹೊಟ್ಟೆ ಉರ್ಕೋಳ್ಳೋರು ಒಬ್ರಾ,, ಇಬ್ರಾ,, ಎನ್ನುತ್ತಾ ಮಾನ್ವಿ ಕಡೆಗೆ ನೋಡಿ "ಅದರಲ್ಲಿ ಈ ಪಿಶಾಚಿ ಕೂಡ ಒಬ್ಳು!! ನಮ್ಮ ಸ್ನೇಹ ಮುರಿಯೋದಕ್ಕೆ ಎಷ್ಟೆಲ್ಲಾ ಕುತಂತ್ರ ಮಾಡ್ತಿದ್ದಳು, ಶಕುನಿ ವಂಶದವಳು..!! ಆದರೆ ನಾವಿಬ್ರೂ ಯಾವತ್ತೂ ಒಬ್ಬರನ್ನೊಬ್ಬರು ಬಿಟ್ಟು ಕೊಡ್ತಿರ್ಲಿಲ್ಲ. ಆದರೆ ಯಾವುದೋ ಒಂದು ಚಿಕ್ಕ ವಿಷಯಕ್ಕೆ ಇಬ್ಬರ ಮಧ್ಯೆ ಮನಸ್ತಾಪ ಶುರುವಾಯ್ತು. ಆಗ ನಿಧಾನಕ್ಕೆ ಇಬ್ಬರ ನಡುವೆ ಮಾತು ಕಡಿಮೆಯಾಯ್ತು. ನೀನು ಸ್ಟಡೀಸ್ ಸಲುವಾಗಿ ಅಬ್ರಾಡ್ ಹೋದೆ. ಇಬ್ಬರ ಮಧ್ಯೆ ಕಮ್ಯುನಿಕೇಷನ್ ಕೂಡ ನಿಂತೋಯ್ತು. ಅದಾದನಂತರ ಈಗಲೇ ನಿನ್ನ ನೋಡ್ತಿರೋದು." ಎಂದು ಯೋಚಿಸಿ,,
" ನೋ..ನೋ.. ನಿನ್ನೆ ಕ್ಲಬ್‌ನಲ್ಲಿ ನೋಡಿದೆ ಆದರೆ ಮಾತಾಡ್ಸೋಕೆ ಇವಳು ಬಿಡಲಿಲ್ಲ. ನಿನ್ನ ಮೂಡ್ ಸರಿಯಿಲ್ಲ, ಕೋಪದಲ್ಲಿದಿಯಾ ನಾಳೆ ಮೀಟ್ ಮಾಡಿಸ್ತಿನಿ ಅಂತ ಹೇಳಿದ್ಲು. ಹ್ಮ್..... ನನ್ನ ಮಾತು ಸುಳ್ಳಾದ್ರೆ ನೋಡಿಲ್ಲಿ, ನಾವಿಬ್ರೂ ನಿನ್ನೆ ಜೊತೆಗೆ ತೆಗೆದುಕೊಂಡ ಫೋಟೋಸ್" ಎಂದು ತನ್ನ ಮೊಬೈಲ್ ಹರ್ಷನ ಕೈಗಿಟ್ಟ. ಹರ್ಷ ಒಂದೊಂದೇ ಫೋಟೋ ಸರಿಸುತ್ತ ಕೂಲಂಕುಷವಾಗಿ ನೋಡತೊಡಗಿದ್ದ. ಮಾನ್ವಿ ಸಿಟ್ಟು ನೆತ್ತಿಗೇರಿ ಪ್ರಸನ್ನನನ್ನೇ ನುಂಗುವಂತೆ ದುರುಗುಟ್ಟುತ್ತಿದ್ದಳು. ಪ್ರಸನ್ನ ಐ ಡೋಂಟ್ ಕೇರ್ ಎಂಬಂತೆ ನಾಲಿಗೆ ಹೊರಚಾಚಿ ಅಣುಗಿಸಿ "ಬೇಕಾದ್ರೆ ನಾನು-ಮಾನ್ವಿ ನಿನ್ನೆ ರಾತ್ರಿ, ಇವತ್ತು ಬೆಳಿಗ್ಗೆ ಮಾತಾಡಿದ ಕಾಲ್ ಹಿಸ್ಟರಿ ಕೂಡ ಇದೆ ನೋಡು" ಎಂದಿದ್ದ. ಹರ್ಷ ಅದನ್ನೆಲ್ಲ ನೋಡಿದಾಕ್ಷಣ ಅವನ ಕೈಯಿಂದ ತನ್ನ ಮೊಬೈಲ್ ಕಸಿದುಕೊಂಡು "ನೋಡಿದೆಯಲ್ಲಾ, ನನ್ನತ್ರ ಇದಕ್ಕಿಂತ ಹೆಚ್ಚಾಗಿ ಹೇಳೋಕೆ ಏನಿಲ್ಲ.  ಈಗ ನನ್ನನ್ನು ನಂಬೋದು ಬಿಡೋದು ನಿನಗೆ ಬಿಟ್ಟದ್ದು" ಎಂದು ಮಾತು ಮುಗಿಸಿ ಮೊಬೈಲ್ ಜೇಬಿಗಿಳಿಸಿದ ಪ್ರಸನ್ನ.

ಕೆಲನಿಮಿಷ ಅವನನ್ನು, ತನ್ನ ಕೈಯಲ್ಲಿನ ಬ್ಯಾಂಡನ್ನು ಗಮನಿಸುತ್ತಿದ್ದ ಹರ್ಷನ ಮುಖದಲ್ಲಿ ತೆಳುವಾದ ಮಂದಹಾಸ ಮೂಡಿತ್ತು. ಪ್ರಸನ್ನನ ಕೈಯನ್ನು ಮೆಲ್ಲಗೆ ತನ್ನೆಡೆಗೆ ಎಳೆದು ತನ್ನ ಕೈಯಲ್ಲಿದ್ದ ಬ್ಯಾಂಡ್ ನ್ನು ಮತ್ತೆ ಪ್ರಸನ್ನನ ಕೈಗೆ ಕಟ್ಟಿ, "ಮೊದಲಿನ ಫ್ರೆಂಡ್ ಶಿಪ್ ಬಗ್ಗೆ ಅಂತೂ ಗೊತ್ತಿಲ್ಲ, ಆದರೆ ಮನಸಾರೆ ಹೇಳ್ತಿದ್ದೆನೆ, ಈ ಕ್ಷಣದಿಂದ ನೀನು ನನ್ನ ಗೆಳೆಯ " ತುಂಬು ವಿಶ್ವಾಸದಿಂದ ಹೇಳಿದ ಹರ್ಷ ಅವನನ್ನು ಆಪ್ತವಾಗಿ ಅಪ್ಪಿಕೊಂಡ. ಇದನ್ನು ನೋಡುತ್ತಿದ್ದ ಮಾನ್ವಿಗೆ ಆಕಾಶ ಕಳಚಿ ತಲೆ ಮೇಲೆ ಬಿದ್ದಂತಾಯಿತು. "ಸಂಕು.. ತಲೆ ಕೆಟ್ಟಿದೆಯಾ ನಿಂಗೆ? ಹ್ಯಾವ್ ಯು ಗಾನ್ ಮ್ಯಾಡ್? ಇವನು ಸರಿಯಿಲ್ಲ. ಪೋರ್ಕಿ, ರೌಡಿ ಮೆಂಟಲ್.. ಇವನ ಜೊತೆಗಿದ್ರೆ ನೀನು ಹಾಗೆ ಆಗೋಗ್ತಿಯಾ! ಮಾತು ಮುಗಿತಲ್ಲ, ಸಾಕು ಬಾ ಹೋಗೋಣ.." ಸಿಟ್ಟಿನಿಂದ ರೇಗಾಡಿ ಅವನ ಕೈ ಹಿಡಿದು ಎಳೆದುಕೊಂಡು ಹೊರಟಳು.

"ಜಸ್ಟ್ ಸ್ಟಾಪ್ ಇಟ್ ಮಾನ್ವಿ,,, ಅವನು ಹೇಗೆ ಇರಲಿ, ಏನೇ ಆಗಿರಲಿ..   ಈ ಕ್ಷಣದಿಂದ ಅವನು ನನ್ನ ಫ್ರೆಂಡು, ನೀನು ನಮ್ಮಿಬ್ಬರ ಮಧ್ಯೆ ಬರಬೇಡ. ನಿನಗವನು ಇಷ್ಟವಿಲ್ಲ ಅನ್ನೋದಾದ್ರೆ ನೀನು ಅವನ ಜೊತೆ ಮಾತಾಡ್ಬೇಡ. ನನಗೂ ಮಾತಾಡಬೇಡ ಅನ್ನೋ ಅಧಿಕಾರ ನಿನಗಿಲ್ಲ. ನಿನಗೆ ಅವಸರ ಇದ್ರೆ ನೀನು ಧಾರಾಳವಾಗಿ ಹೋಗಬಹುದು.. ಡ್ರೈವರ್, ಸೆಕ್ಯೂರಿಟಿ' ಎಂದು ಕೂಗಿ ಅವಳ ಕೈಯಿಂದ ತನ್ನ ಕೈ ಬಿಡಿಸಿಕೊಂಡ ಹರ್ಷ. ಅವಳನ್ನು ಮನೆಗೆ ತಲುಪಿಸುವಂತೆ ಅವರಿಗೆ ಆದೇಶಿಸಿದ. ಮಾನ್ವಿ ಹೋಗಲು ನಿರಾಕರಿಸಿ ಮುನಿಸಿಕೊಂಡು ಸಮುದ್ರದ ಕಡೆಗೆ ಮುಖ ಮಾಡಿ ನಿಂತಳು.

" ಸಾರಿ ಡ್ಯುಡ್.. ಇವಳ ಸ್ವಭಾವ ನಿನಗೆನೂ ಹೊಸದಲ್ಲ, ಅಲ್ವಾ.. ನೀನೆನ್ ತಪ್ಪು ತಿಳ್ಕೋಬೇಡ. ಸೋ... ನೀನು ಹೇಳೋ ಪ್ರಕಾರ ನನಗೆ ಹಳೆಯದೆಲ್ಲ ಮತ್ತೆ ನೆನಪಾಗೋ ಸಾಧ್ಯತೆ ಇದೆಯಾ? ಕೆಲವೊಂದು ವಸ್ತುಗಳನ್ನ, ಸ್ಥಳಗಳನ್ನ ನೋಡಿದಾಗ ನನಗೆ ಎಲ್ಲೋ ನೋಡಿದ ಹಾಗೆ ಭಾಸವಾಗುತ್ತೆ, ಬಹುಶಃ ನನಗೂ ಅದಕ್ಕೂ ಏನೋ ಸಂಬಂಧ ಇರಬಹುದಲ್ವಾ? " ಕೇಳಿದ ಹರ್ಷನ ಸ್ಮೃತಿಯಲ್ಲಿ ಏನೆನೋ ಚಿತ್ರಗಳು ಸುಳಿಯುತ್ತಿದ್ದವು. ಓರೆ ನೋಟದಲ್ಲಿ ಮಾನ್ವಿ ಅವನನ್ನೇ ಗಮನಿಸುತ್ತಿದ್ದಳು. ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಳು‌. ಅವಳೆದೆಯಲ್ಲಿ ಯಾರಿಗೂ ಹೇಳಲಾಗದ ಆತಂಕ.

"ನಾನು ನಿನಗೆ ಹೇಳೋಕೆ ಹೊರಟಿರೋದು ಅದನ್ನೇ ಬ್ರೋ...  ಈಗ ನಿನಗೆ ಆ್ಯಕ್ಸಿಡೆಂಟ್ ಆಗಿ ಮೆದುಳಿಗೆ ಪೆಟ್ಟಾಗಿ ಹಳೆಯ ವಿಚಾರಗಳನ್ನು ನೀನು ಮರೆತಿರ್ಬಹುದು ಆದರೆ ನಿನ್ನ ಸೆನ್ಸ್‌ಸ್ ಇನ್ನೂ ಹಳೆಯ ವಿಚಾರಗಳಲ್ಲಿ ಆ್ಯಕ್ಟಿವ್ ಎನ್ ಅಡಿಕ್ಟಿವ್ ಆಗಿರುತ್ವೆ. ಸೋ...  ನಿನಗೆ ಅರಿವಿಲ್ಲದೆಯೇ  ನಿನ್ನ ಬೇಕು ಬೇಡಗಳು ಇಷ್ಟ ಕಷ್ಟಗಳು  ಇನ್ನೂ ಅದೇ ರೀತಿ ಇರುತ್ತೆ. ಏನೋ ಒಂದು ವಸ್ತು ನೋಡಿದಾಗ, ಯಾವುದೋ ತಿನಿಸು ತಿನ್ನೋವಾಗ, ಯಾವುದೋ ವಿಶೇಷ ಪರಿಮಳದ ಕಂಪು ಸೂಸಿದಾಗ ನಿನಗೆ ಅದು ತುಂಬಾ ಆಪ್ತ ಅಂತ ಅನ್ನಿಸಬಹುದು. ಹಾಗಂತ ಬ್ರೇನ್‌ಗೆ ಒತ್ತಡ ಹಾಕಬೇಡ, ನಿಧಾನವಾಗಿ ಯೋಚನೆ ಮಾಡು ಸಾಕು. ಮನೋಬಲ ಗಟ್ಟಿಯಾಗಿದ್ರೆ ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಇನ್ನು ಈ ನೆನಪುಗಳು ಮರಳಿ ಬರೋದು ಯಾವ ಮಹಾ..." ಪ್ರಸನ್ನ ಧೈರ್ಯ ತುಂಬಿದ.

"ಬೇಕಾದ್ರೆ ನಿನ್ನ ಮೆಮೊರಿ ಸ್ಟೇಜ್ ಚೆಕ್ ಮಾಡೋಣ....
ಉದಾಹರಣೆಗೆ....   ಒಂದು ಕಡೆ ಸುಶ್ರಾವ್ಯ ಹಿಂದಿ ಹಾಡುಗಳು ಮತ್ತೊಂದು ಕಡೆ ಕಿರುಚಾಟದ ಪಾಪ್ ಇಂಗ್ಲೀಷ್ ಮ್ಯೂಸಿಕ್ ಕೇಳ್ತಿದೆ ಅಂದ್ಕೋ,, ನೀನು ಯಾವ ಕಡೆಗೆ ಹೋಗ್ತಿಯಾ?" ಪ್ರಸನ್ನನ ಪ್ರಶ್ನೆಗೆ ಹರ್ಷ ಇನ್ನು ಯೋಚಿಸುತ್ತಿರುವಾಗಲೇ ಪ್ರಸನ್ನ ತಾನೇ ನುಡಿದಿದ್ದ
"ನಾನು ಹೇಳಲಾ? ಮೆಲೋಡಿಯಸ್ ಹಿಂದಿ ಸಾಂಗ್ ಕಡೆಗೆ!! ಯಾಕಂದ್ರೆ ನಿನಗೆ ಅದೇ ಇಷ್ಟ!! ಹೌದೋ ಅಲ್ವೋ??" ಪ್ರಸನ್ನನ ಮಾತಿಗೆ ಹರ್ಷ ಹೌದೆಂಬಂತೆ ತಲೆ ಹಾಕಿ ಆಲೋಚನೆಗೆ ಸಿಲುಕಿದ‌.

ಇನ್ನೊಂದು ಉದಾಹರಣೆ ಒಂದು ಕಡೆಗೆ ಬಿಸಿ ಬಿಸಿ ಪಲಾವ್, ಪಾಯಸ, ಪಕೋಡ ಮತ್ತೊಂದು ಕಡೆಗೆ ಪಿಜ್ಜಾ ಬರ್ಗರ್, ಮೊಮೋಸ್ ಇದೆ ಅಂದ್ಕೋ.. ನಿನ್ನ ಆಯ್ಕೆ ಏನು?? " ಪ್ರಸನ್ನನ ಪ್ರಶ್ನೆಗೆ ಹರ್ಷ ತಟ್ಟನೆ ಉತ್ತರಿಸಿದ್ದ..

"Obviously​...  ಪಲಾವ್ ಪಾಯಸ ಪಕೋಡ.. ನನಗಿಷ್ಟ ಅವು"

"ನನಗೊತ್ತು ಕಣೋ ನಿನಗವು ಇಷ್ಟ ಅಂತ. ಈಗ... ಅದೇರೀತಿ ಒಂದ್ಕಡೆ ಮಾನ್ವಿ ಮತ್ತೊಂದು ಕಡೆಗೆ...." ಎಂದು ಏನೋ ಹೇಳಹೊರಟವನು ಮಾನ್ವಿಯ ಕಡೆಗೊಮ್ಮೆ ನೋಡಿ ಇದು ಈಗಲೇ ಬೇಡ ಎಂದುಕೊಂಡು ಮಾತು ಬದಲಿಸಿದ್ದ "ನೋಡಿದೆಯಾ... ನೀನು ಹಳೆಯದನ್ನೆಲ್ಲ ಮರೆತರೂ ನಿನ್ನ ಇಷ್ಟಗಳು ಬದಲಾಗಿಲ್ಲ. ಯಾಕೆಂದರೆ ಮರೆವು ಮೆದುಳಿಗೆ ಮಾತ್ರ ಸೀಮಿತ, ಮನಸ್ಸಿಗಲ್ಲ, ಈಗಲೂ ನಿನ್ನ ಮನಸ್ಸಿಗೆ ನಿನಗೆ ಏನು ಇಷ್ಟ ಅನ್ನೋದೆಲ್ಲಾ ಗೊತ್ತು!!  ಸೋ ಇನ್ಮುಂದೆ ನೀನು ನಿನ್ನ ಮನಸ್ಸಿಗೆ ಸರಿ ಅನ್ನಿಸಿದ್ದನ್ನೇ ಮಾಡು. ಏನೇ ಗೊಂದಲ ಸೃಷ್ಟಿಯಾದ್ರೂ ಒಂದು ಕ್ಷಣ ಕಣ್ಣು ಮುಚ್ಚಿ ಮನಸ್ಸಿನ ಮಾತು ಆಲಿಸು‌.."

"ನಿನ್ನ ಮಾತು ಕೇಳ್ತಿದ್ರೆ ಏನೋ ಒಂತರಾ ನೆಮ್ಮದಿ ಸಿಕ್ಕಹಾಗೆ ಅನ್ನಿಸ್ತಿದೆ.. ನನ್ನ ಬಗ್ಗೆ ಮತ್ತಷ್ಟು ಏನಾದರೂ ಹೇಳು... ಐ ಮೀನ್ ನಾನು ಕಾಲೇಜ್ ಟೈಮ್ ನಾವು ಹೇಗಿದ್ದೆವು, ಏನೆನೆಲ್ಲ ಮಾಡ್ತಿದ್ದೆ‌ವು.. ?" ಹರ್ಷ ತಮ್ಮ ಬಗ್ಗೆ ಕೇಳಿದ. ಮಾನ್ವಿ ಆತಂಕದಿಂದ ಬೆಂದು ಹೋಗಿದ್ದಳು. ಪ್ರಸನ್ನನ ವಾಕ್ ಚಾತುರ್ಯ, ಅವನ ಸಾಮರ್ಥ್ಯದ ಅರಿವಿದ್ದು ಸಹ ಅವನನ್ನು ಹತ್ತಿರ ಬಿಟ್ಟುಕೊಂಡ ತಪ್ಪಿಗೆ ಪಶ್ಚಾತ್ತಾಪದಿಂದ ಕುದಿಯುತ್ತಿದ್ದಳು. ಆದರೆ ಏನು ಮಾಡಲಾಗದೆ ಕೈ ಕೈ ಹಿಸುಕಿಕೊಳ್ಳುತ್ತಿದ್ದಳು.

"ಇನ್ನು ನಿನಗೆ ನಾನು ಫ್ರೆಂಡ್ ಅಂತ ಗೊತ್ತಾಯ್ತಲ್ಲ ಬಿಡು. ಇನ್ನು ನಿನಗೆ ಹಳೆಯದನ್ನೆಲ್ಲ ನೆನಪು ಮಾಡಿಸೇ ನಿನ್ನ ಬೆನ್ನು ಬಿಡೋದು ನಾನು..

ಅಗರ್ ಬಿಖಿ ತೇರಿ ದೋಸ್ತಿ...
ತೋ ಪೆಹೆಲೆ ಖರಿದಾರ್ ಹಮ್ ಹೋಂಗೆ..!
ತುಜೇ ಖಬರ್ ನಾ ಹೋಗಿ ತೇರಿ ಕೀಮತ್..
ಪರ್ ತುಜೇ ಪಾಕರ್ ಸಬ್ಸೇ ಅಮೀರ್ ಹಮ್ ಹೋಂಗೆ‌..!
ದೋಸ್ತ್ ಸಾಥ್ ಹೋ ತೊ ರೋನೆ ಮೆ ಭಿ ಶಾನ್ ಹೈ..
ದೋಸ್ತ್ ನಾ ಹೋ ತೊ ಮೆಹೆಫಿಲ್ ಭಿ ಶಮ್ಷಾನ್ ಹೈ..!
ಸಾರಾ ಖೇಲ್ ದೋಸ್ತಿ ಕಾ ಹೈ ಏ, ಮೇರೆ ದೋಸ್ತ್..
ವರ್ನಾ ಜನಾಜ಼ಾ ಔರ್ ಬಾರಾತ್ ಏಕ್ ಹಿ ಸಮಾನ್ ಹೈ!

ನೀನು ಯಾವಾಗಲೂ ಹೇಳ್ತಿದ್ದ ನಿನ್ನಿಷ್ಟದ ಹರಿವಂಶ ರೈ ಬಚ್ಚನ್ ಅವರ ಕವಿತೆ.. ನಿನ್ನ ಬಾಯಿಂದ ಕೇಳಿ ಕೇಳಿ ನನಗೂ ಎಷ್ಟು ಇಷ್ಟವಾಗಿ ಹೋಗಿತ್ತು ಗೊತ್ತಾ... ಸ್ನೇಹಕ್ಕೆ ನೀನು ಅಪಾರ ಮನ್ನಣೆ ಕೊಡ್ತಿದ್ದೆ.  ಯಾರಿಗೂ ಯಾವತ್ತೂ ಕೆಟ್ಟದನ್ನ ಬಯಸಿದವನಲ್ಲ. ಎಲ್ಲರ ಜೊತೆಗೂ ತುಂಬಾ ಲವಲವಿಕೆಯಿಂದ ನಗುತ್ತ ನಗಿಸುತ್ತ ಇರ್ತಿದ್ದೆ. ಆದರೆ ಈಗ ತುಂಬಾ ಬದಲಾಗಿದ್ದಿಯಾ. ಹೋಗ್ಲಿ ಬಿಡು ಎಲ್ಲಾ ಈಗಲೇ ಒಟ್ಟಿಗೆ ಹೇಳಿದ್ರೆ ನಿನಗೆ ಸ್ಟ್ರೆಸ್ ಆಗಬಹುದು. ಸೋ.. ನಿಧಾನವಾಗಿ ಮಾತಾಡೋಣ. ಬೆಸ್ಟ್ ಫ್ರೆಂಡ್ ನಾ, ನಿಮ್ಮ ಮದುವೆಗೆ ಇನ್ವೈಟ್ ಮಾಡಲ್ವಾ ಮತ್ತೆ??" ಹರ್ಷ ಮತ್ತು ಮಾನ್ವಿ ಇಬ್ಬರ ಕಡೆಗೂ ನೋಡುತ್ತ ಮುಗುಳ್ನಕ್ಕು ಕೇಳಿದ ಪ್ರಸನ್ನ.

"ಖಂಡಿತ ಯು ಆರ್ ಹಾರ್ಟ್ಲಿ ವೆಲ್ಕಮ್.. ಈಗ ಎಲ್ಲಿರೋದು ನೀನು?" ಹರ್ಷ ಕೇಳಿದ.

"ನಾನಿರೋದು ಬೆಂಗಳೂರ್ನಲ್ಲಿ. ಯಾವುದೋ ಕೆಲಸದ ಮೇಲೆ ಮುಂಬೈ ಬಂದಿದ್ದೆ, ಹೋಟೆಲ್ ನಲ್ಲಿ ಉಳಿದಿದ್ದೆ. ಬಂದ ಕೆಲಸ ನಿನ್ನೆ ಮುಗೀತು. ಇವತ್ತು ಸಾಯಂಕಾಲ ವಾಪಸ್ ಹೊರಡ್ತಾ ಇದ್ದಿನಿ ಬೆಂಗಳೂರಿಗೆ.. ಒಂದು ಸಲ ನಿನ್ನನ್ನ ಮೀಟ್ ಮಾಡೋಣಾಂತ ಬಂದೆ ಅಷ್ಟೇ" ತುಂಬಾ ಮುಗ್ದವಾಗಿ ನುಡಿದ ಪ್ರಸನ್ನ "ನಿನಗೆ ಏನೋ ಮೀಟಿಂಗ್ ಇದೆಯಂತೆ, ಸರಿ, ಬಾಯ್... ನಾನಿನ್ನು ಹೊರಡ್ತಿನಿ. ಬಾಯ್ ಮಾನು.." ಎಂದು ಹರ್ಷನ ಕೈ ಕುಲುಕಿ ಹೊರಡಲನುವಾದ. ಐದೇ ನಿಮಿಷಗಳ ಭೇಟಿಯಲ್ಲಿ ತನ್ನ ಅಸ್ತಿತ್ವದ ನೈಜ ಪರಿಚಯ ಮಾಡಿಸಿದ ಪ್ರಸನ್ನ ಹರ್ಷನಿಗೆ ಬಹಳ ಆಪ್ತನೆನಿಸಿಬಿಟ್ಟಿದ್ದ. ಅವನನ್ನು ದೂರ ಮಾಡಿಕೊಳ್ಳಲು ಹರ್ಷನ ಮನಸ್ಸು ಒಪ್ಪಲಿಲ್ಲ. ಅವನ ಕೈಯನ್ನು ಬಿಗಿಯಾಗಿ ಹಿಡಿದು ಕೇಳಿದ..

"ಈಗತಾನೇ ಹೇಳಿದೆ, ನನಗೆ ಹಳೆಯ ನೆನಪು ಮರುಕಳಿಸೋವರೆಗೂ ನನ್ನ ಬಿಟ್ಟು ಹೋಗಲ್ಲ ಅಂತ. ಇಷ್ಟು ಬೇಗ ಮಾತು ಮರೆತೋಯ್ತಾ??" ಪ್ರಸನ್ನ ಬಾಯಿ ತೆರೆಯುವಷ್ಟರಲ್ಲಿ ಹರ್ಷ ನುಡಿದಿದ್ದ..
"ನೋ... ಏನು ಮಾತಾಡ್ಬೇಡ. ನೀನು ಇವತ್ತು ಬೆಂಗಳೂರಿಗೆ ಹೋಗ್ತಿಲ್ಲ. ಇವತ್ತಿನಿಂದ ನಮ್ಮ ಮದುವೆ ಮುಗಿದು ನಾವು ಸಿಡ್ನಿ ವಾಪಸ್ ಹೋಗೋವರೆಗೂ ನೀನು ಇಲ್ಲಿಯೇ ಇರ್ಬೇಕು. ನನ್ನ ಜೊತೆನೇ.. ನಮ್ಮ ಹೌಸ್‌ನಲ್ಲಿ.." ಹರ್ಷನ ಮಾತಿಗೆ ಪ್ರಸನ್ನನಿಗೆ ಆಕಾಶವೇ ಕೈಗೆಟುಕಿದಷ್ಟು ಸಂತೋಷವಾಯಿತು. 'ನನಗೂ ಅದೇ ಬೇಕಾಗಿರೋದು ಕಣೋ.. ಆದರೆ ಒಂದು ತಿದ್ದುಪಡಿ, ಈ ಮದುವೆನೂ ನಡೆಯಲ್ಲ, ನೀನು ಸಿಡ್ನಿಗೂ ಹೋಗಲ್ಲ, ನಮ್ಮ ಜೊತೆಗೆ ಬೆಂಗಳೂರಿಗೆ ಬರ್ತಿಯಾ! ಪರಿ ನಿನಗೋಸ್ಕರ ಎಷ್ಟು ಒದ್ದಾಡ್ತಿದಾರೆ, ಹರಿಣಿ ಅಮ್ಮ, ಅಂಕಲ್ ತಾತ ಪ್ರತಿದಿನ ನಿನ್ನ ನೆನೆದು ಹೇಗೆ ಕಣ್ಣೀರಿಡ್ತಿದ್ದಾರೆ ಗೊತ್ತೇನೋ ನಿನಗೆ... ಅವರಿಗೋಸ್ಕರ ನೀನು ಬೇಗ ಗುಣವಾಗ್ಬೇಕು. ಆಗ್ತಿಯಾ! ಇನ್ನು ಈ ಕೊಲೆಸ್ಟ್ರಾಲ್ ಕಥೆ ಸ್ವಾಹಃ...' ಪ್ರಸನ್ನನ ಮನದಾಳದಲ್ಲಿ ಸಮಾಲೋಚನೆ ನಡೆದಿದ್ದರೆ, ಈ ಕಡೆಗೆ ಮಾನ್ವಿಗೆ ಚೇಳು ಕುಟುಕಿದಂತಹ ವೇದನೆ ಆತಂಕ ತೀವ್ರವಾಯಿತು.

"ಸಂಕು...."  ಎಂದು ಚೀರುತ್ತ ಹರ್ಷನ ಕೈ ಹಿಡಿದು ಪಕ್ಕಕ್ಕೆ ಎಳೆದುಕೊಂಡು ಹೋದಳು. "ಸಂಕು.. ಲುಕ್,  ಅವನನ್ನ ನಂಬಬೇಡ. ಪಕ್ಕಾ 420 ಅವನು... ಏನೋ ಸ್ವಾರ್ಥ ಉದ್ದೇಶ ಇಟ್ಕೊಂಡೇ ನಿನ್ನತ್ರ ಬಂದೀರ್ತಾನೆ. ಮಾತಾಡಿದ್ದಾಯ್ತಲ್ಲ, ಈಗ ಸುಮ್ಮನೆ ಕಳಿಸಿಬಿಡು. ಮನೆಗೆ ಕರೆದು ಉಪಚಾರ ಮಾಡೋ ಅವಶ್ಯಕತೆ ಇಲ್ಲ."

"ನನಗೆ ಒಂದು ಮಾತು ನಿಜ ಹೇಳು ಅವನು ನಮ್ಮ ಫ್ರೆಂಡ್ ಹೌದೋ ಅಲ್ವೋ?" ಹರ್ಷ ಕೇಳಿದ್ದಕ್ಕೆ ಮಾನ್ವಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿ "ಹೌದು ಆದರೆ ಅವನು ಒಂತರಾ ವಿಚಿತ್ರ ಮನುಷ್ಯ...  ಐ ಜಸ್ಟ್ ಹೇಟ್ ಹಿಮ್!!" ಕೈ ಮುಷ್ಟಿ ಹಿಡಿದು ಗುದ್ದಿಕೊಂಡಳು.

"ಅಷ್ಟೊಂದು ದ್ವೇಷಿಸೋಳು ನಿನ್ನೆ ರಾತ್ರಿ ಅವನ ಜೊತೆ ಅಷ್ಟೋತ್ತು ಏನ್ ಮಾತಾಡ್ತಿದ್ದೆ, ಸೆಲ್ಫಿ ಬೇರೆ ತಗೋಂಡಿದಿಯಾ.‌.... ನಿಜ ಹೇಳಬೇಕೆಂದರೆ, ನಾನು ನಿನ್ನೆನೇ ನೀವಿಬ್ರೂ ಮಾತಾಡ್ತಿರೋದನ್ನ ದೂರದಿಂದಲೇ ನೋಡಿದ್ದೆ... ಆದರೆ ಅದನ್ನು ಪ್ರಶ್ನೆ ಮಾಡೋದು ಸೌಜನ್ಯತೆಯಲ್ಲ ಎಂದು ಸುಮ್ಮನಾಗಿದ್ದೆ." ಮಾನ್ವಿ ಒಂದರ ಮೇಲೊಂದು ಶಾಕ್ ತಗಲುತ್ತಿದ್ದವು. ನಲುಗಿ ಹೋಗಿ ಉಗುಳು ನುಂಗಿದಳು‌. 'ಸದ್ಯ, ಏನು ಮಾತಾಡಿದೆವೆಂದು ಕೇಳಿಸಿಕೊಂಡಿಲ್ಲ' ಉಸಿರು ಹೊರದಬ್ಬಿದಳು.

"ಲುಕ್ ಮಾನ್ವಿ.... ನನಗೆ ಅವನು ಫ್ರೆಂಡ್ ಹೌದೋ ಅಲ್ವೋ,, ಅವನಿಂದ ನನಗೆ ಒಳ್ಳೆಯದಾಗುತ್ತೋ ಕೆಟ್ಟದಾಗುತ್ತೋ,, ನನ್ನನ್ನ ಅವನು ಕೊಲ್ಲೋಕೆ ಬಂದಿದ್ದರೂ ಪರವಾಗಿಲ್ಲ!! ಐ ಡೋಂಟ್ ಕೇರ್!  ಅವನ ಮಾತಲ್ಲಿ ಒಂದು ರೀತಿಯ ಹಿತವಾದ ನೆಮ್ಮದಿ ಸಿಗುತ್ತೆ ನನಗೆ. ಸ್ಪೆಶಲ್ ಪಾಸಿಟಿವ್ ಫೀಲಿಂಗ್ ಇದೆ. ಯಾಕೋ ಗೊತ್ತಿಲ್ಲ, ನನಗವನು ತುಂಬಾ ಇಷ್ಟವಾದ. ಇಷ್ಟು ದಿನ ನನ್ನ ಫ್ರೆಂಡ್ಸ್ ಅಂತ ನೀನು ಮೀಟ್ ಮಾಡಿಸ್ತಿದ್ದೆಯಲ್ಲಾ,, ಅವರಲ್ಲಿ ಕಾಣದಿರೋ ಆತ್ಮೀಯತೆನಾ ನಾನು ಇವನಲ್ಲಿ ಕಾಣ್ತಿದೀನಿ...  ನನಗೂ ನನ್ನ ಭಾವನೆಗಳನ್ನು ಹಂಚ್ಕೊಳ್ಳೋಕೆ ಒಬ್ಬ ಒಳ್ಳೆಯ ಫ್ರೆಂಡ್ ಬೇಕು ಮಾನ್ವಿ....
ನಿನ್ನ ಫ್ರೆಂಡ್ಸ್ ಬಗ್ಗೆ ನಾನು ಯಾವತ್ತೂ ಆಕ್ಷೇಪಣೆ  ಮಾಡಿಲ್ಲ! ಅದೇ ರೀತಿ ನೀನು ಕೂಡ ನನ್ನ ಫ್ರೆಂಡ್ ನಾ ಎಕ್ಸೆಪ್ಟ್ ಮಾಡ್ತಿಯಾ ಅನ್ಕೊಂಡಿದೀನಿ! ಇನ್ಮುಂದೆ ಅವನು ನನ್ನ ಜೊತೆಗೆ ಇರ್ತಾನೆ ಇಟ್ಸ್ ಫೈನಲ್ ಒಕೆ!!
ನಿನಗೂ ಅವನಿಗೂ ಸರಿಬರಲ್ಲ ಅಂತ ಗೊತ್ತು. ಆದರೆ ಹೇಳ್ತಾರಲ್ಲ like likes the like ಅಂತ... ನೀನು ನನ್ನ ನಿಜವಾಗಿಯೂ ಇಷ್ಟ ಪಡುತ್ತಿದ್ರೆ, ನಾನು ಇಷ್ಟ ಪಡೋ ವ್ಯಕ್ತಿ, ನಿನಗೂ ಖಂಡಿತ ಇಷ್ಟವಾಗ್ತಾನೆ ಅನ್ಕೊಂಡಿದೀನಿ.." ಹರ್ಷನ ನಿರ್ಧಾರ ಅಂತಿಮವಾಗಿ ಹೋಗಿತ್ತು.
ಅವನ ಮಾತು ಕೇಳುತ್ತಿದ್ದ ಮಾನ್ವಿ ಸ್ತಬ್ಧಳಾಗಿದ್ದಳು. ಅವಳಿಗೆ ಏನು ಹೇಳಬೇಕೆನ್ನುವುದು ಸಹ ಅರ್ಥವಾಗದೆ ಅವನನ್ನೇ ನಿಶೂನ್ಯಳಾಗಿ ದಿಟ್ಟಿಸುತ್ತಿದ್ದಳು. ಮುಂದೆ ಒದಗಬಹುದಾದ ಅನಾಹುತಗಳು ಅವಳ ಕಲ್ಪನೆಯ ತರ್ಕಕ್ಕೆ ಅತೀತವಾಗಿದ್ದವು.

ಮುಂದುವರೆಯುವುದು..


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...