ಹರ್ಷನನ್ನು ಮನವೊಲಿಸಿ ಪ್ರಸನ್ನನನ್ನು ದೂರಮಾಡಲು ಯತ್ನಿಸಿದ ಮಾನ್ವಿಯ ಪ್ರಯತ್ನ ವಿಫಲವಾಯಿತು. ಇನ್ನುಮುಂದೆ ಪ್ರಸನ್ನ ತನ್ನ ಜೊತೆಗೆ ಇರುವನೆಂದು ಹರ್ಷ ತನ್ನ ಅಂತಿಮ ನಿರ್ಧಾರವನ್ನು ತಿಳಿಸಿಯಾಗಿತ್ತು. ಮಾನ್ವಿ ಅವನ ಮಾತಿಗೆ ಚಕಾರ ಎತ್ತದೆ ಮೌನವಹಿಸಿ ಕೋಪ ತಡೆದುಕೊಂಡಳು.
ಇಬ್ಬರೂ ತುಸು ಹೊತ್ತು ಮಾತಾಡಿ ಮರಳಿ ಪ್ರಸನ್ನನ ಬಳಿ ಬಂದಾಗ ಅವರತ್ತಲೇ ನೋಡುತ್ತ ನಿಂತಿದ್ದ ಪ್ರಸನ್ನ ಕೇಳಿದ "ಏನಂತೇ ಇವಳ್ದು?? ನಮ್ಮಿಬ್ಬರ ಮಧ್ಯೆ ಕಲಹ ತಂದಿಡೋಕೆ ಏನೇನೋ ಹೇಳಿರಬೇಕಲ್ವಾ!! ನೀನು ನನ್ನ ಜೊತೆ ಕ್ಲೋಸ್ ಆಗಿದ್ರೆ ಹೊಟ್ಟೆಯುರಿ ಕಣೋ ಇವಳಿಗೆ.. ಒಂದು ರೀತಿಯ ಪಾಸೆಸೀವ್ನೆಸ್!! ಆದ್ರೆ ನಮ್ಮಿಬ್ರಿಗೂ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಜಾಸ್ತಿ ಅದ್ಕೆ ಇನ್ನೂವರೆಗೂ ನಮ್ಮ ಫ್ರೆಂಡ್‌ಶಿಪ್ ಹಾಗೇ ಇದೆ. ನಿನ್ನ ಮುಖ ನೋಡಿ ಇವಳನ್ನ ಇಲ್ಲಿವರೆಗೂ ಸಹಿಸ್ಕೊಂಡಿದೀನಿ ಕಣೋ... ಇಲ್ಲಾಂದ್ರೆ ಈ ಪೆಡಂಭೂತದ ಜೊತೆಗೆ ಯಾರೋ ಫ್ರೆಂಡ್ ಶಿಪ್ ಮಾಡ್ತಾರೆ" ಸಿಡುಕಿದ.
"ಏಯ್... ಬಾಯಿಗೆ ಬಂದಹಾಗೆಲ್ಲ ಮಾತಾಡ್ಬೇಡ ಒಕೆ. ನಾನೂ ಸಂಕು ಮಾತಿಗೆ ಬೆಲೆ ಕೊಟ್ಟು ಸುಮ್ನೆ ಇದ್ದೀನಿ. ಇಲ್ಲಾಂದ್ರೆ ನಿನ್ನಂತವನ ಜೊತೆಗೆ ಇಷ್ಟೊತ್ತು ನಿಂತು ಮಾತಾಡೋಕೆ ನನಗ್ಯಾವ ಕರ್ಮ...!" ಅವಳು ಎದುರಾಡಿದಳು.
"ನೀನೇನ್ ಮಾತಾಡೋದು ನಿನ್ನ ಮುಖ ನೋಡೋಕು ಕಷ್ಟ ಆಗ್ತಿದೆ ನನಗೆ... ಅದ್ಯಾವ್ ಗ್ಯಾಪ್‌ನಲ್ಲಿ ಇವಳನ್ನ ಇಷ್ಟ ಪಟ್ಟು ಮದುವೆಗೆ ಒಪ್ಕೊಂಡೆ ಬ್ರೋ.. ಜೀವನಪೂರ್ತಿ ಅದೆಂಗೆ ಏಗ್ತಿಯೋ ಈ ಕೆಂಭೂತಾನಾ!!" ಕೈ ಅವಳ ತಲೆಗೆ ಮೊಟಕಿದ. ಮಾನ್ವಿ ಅವನನ್ನೇ ಸುಡುವಂತೆ ಕೆಂಡಕಾರಿ ನೋಟ ಬೀರಿದಳು.
"ಅದೂ.... ಎಂದು ಯೋಚಿಸುತ್ತ, ಆ್ಯಕ್ಸಿಡೆಂಟ್ ಗಿಂತ ಮೊದಲೇ ನಾವಿಬ್ರೂ ಒಬ್ಬರನ್ನೊಬ್ಬರು ಪ್ರೀತಿಸ್ತಿದ್ವಂತೆ, ಎಂಗೆಜ್ಮೆಂಟ್ ಕೂಡ ಆಗಿತ್ತಂತೆ.. ಎಡಗೈಯಲ್ಲಿನ ಉಂಗುರವನ್ನೇ ನೋಡುತ್ತ ಹೇಳಿದವ " ಬಹುಶಃ ನಿಜ ಇರಬಹುದು.. ಆದರೆ ನನಗೆ ಅದ್ಯಾವುದೂ ನೆನಪಿಲ್ಲ. ನನಗೆ ಹಳೆಯದೆಲ್ಲ ನೆನಪಾಗಬಹುದು ಅಂತ ಇಷ್ಟು ದಿನ ಕಾಯ್ದರು ಮನೆಯವರೆಲ್ಲ. ಆದರೆ ಅದಾಗಲಿಲ್ಲ, ರಘು ಅಂಕಲ್‌ಗೆ ಮಾನ್ವಿ ಅಂದ್ರೆ ಪ್ರಾಣ! ಅವರು ತುಂಬಾ ಒತ್ತಾಯ ಮಾಡಿದ್ದಕ್ಕೆ ಮದುವೆಗೆ ಒಪ್ಪಲೇಬೇಕಾಯಿತು." ಹತಾಶೆಯಿಂದ ನುಡಿದ.
ಹರ್ಷನ ಪ್ರತಿ ಚಲನವಲನ ಹಾವಭಾವಗಳನ್ನು ಪರಿಶೀಲನಾ ದೃಷ್ಟಿಯಿಂದ ಅವಲೋಕಿಸುತ್ತಿದ್ದ ಪ್ರಸನ್ನನಿಗೆ ಒಂದು ವಿಷಯವಂತೂ ಸ್ಪಷ್ಟವಾಗಿತ್ತು,, ಹರ್ಷ ತನಗೆ ದೊರೆತ, ಗೋಚರಿಸುವ ವಸ್ತುಗಳ ಮುಖಾಂತರ ತನ್ನ ಗತಜೀವನವನ್ನು ಗ್ರಹಿಸುವ ಸಾಮರ್ಥ್ಯವನ್ನು ಕ್ಷಮತೆಯನ್ನು ಹೊಂದಿದ್ದಾನೆ ಅಥವಾ ಗ್ರಹಿಸಲು ಪ್ರಯತ್ನಿಸುತ್ತಿದ್ದಾನೆ. ಅದೇ ಕಾರಣದಿಂದ ತನ್ನ ಕೈಯಲ್ಲಿನ ಬ್ಯಾಂಡ್ ನೋಡಿ ತನ್ನನ್ನು ನಂಬಿದ್ದ. ಅದೇ ರೀತಿಯಲ್ಲಿ ತನ್ನ ಬೆರಳಲ್ಲಿರೋ ಈ ಉಂಗುರವನ್ನು ನೋಡಿ ಬಹುಶಃ ಮಾನ್ವಿ ಮಾತನ್ನು ನಿಜವೆಂದು ನಂಬಿರಬಹುದು... ಪ್ರಸನ್ನ ಅವಲೋಕಿಸಿದ.
"ವ್ಹಾಟ್!! ಅಂದರೆ ನೀನು ಇವಳ ನೆನಪೇ ಇಲ್ಲದೆ, ಇವಳನ್ನು ಪ್ರೀತಿಸ್ತಿದ್ದೆಯೋ ಇಲ್ವೋ ಅದು ಸಹ ಗೊತ್ತಿಲ್ಲದೆ, ಇವಳನ್ನ ಇಷ್ಟ ಕೂಡ ಪಡದೆ ಮದುವೆ ಆಗ್ತಿದಿಯಾ?? ಅದೂ ಅವರಪ್ಪ ಒತ್ತಾಯ ಮಾಡಿದ್ರು ಅಂತ!! ವ್ಹಾಟ್ ಎ ಜೋಕ್,, ಹ,,ಹ,ಹ,,," ಗಹಗಹಿಸಿ ಚಪ್ಪಾಳೆ ತಟ್ಟಿ ನಗುತ್ತಿದ್ದ.
"ಹ್ಮ್.. ಏನ್ಮಾಡೋದು ಎಲ್ಲಾ ನನ್ನ ಕರ್ಮ! ಅನುಭವಿಸ್ಬೇಕಲ್ಲ" ಬಾಯಿತಪ್ಪಿ ನುಡಿದ ಹರ್ಷ, ಮಾನ್ವಿಯ ಸಾನಿಧ್ಯ ಕಂಡು ನಾಲಿಗೆ ಕಚ್ಚಿಕೊಂಡ.
"ಸಂಕು... ನನ್ನ ಮದುವೆಯಾಗೋದು ನಿನ್ನ ಕರ್ಮನಾ? ನನ್ನ ಕಂಡ್ರೆ ನಿನಗೆ ಇಷ್ಟ ಇಲ್ವಾ?? ಐ ಹೇಟ್ ಯು ಸಂಕು.." ಗುಡುಗಿದಳು. ಹರ್ಷ ಏನೋ ಸಬೂಬು ನೀಡುವಷ್ಟರಲ್ಲಿ "ಏನು ಬೇಕಾಗಿಲ್ಲ ಹೋಗು.. ನೀನೂ ಈ ಇಡಿಯಟ್ ಜೊತೆ ಸೇರಿ ನನಗೆ ಅವಮಾನ ಮಾಡ್ತಿದಿಯಾ!!" ಮಾನ್ವಿ ಕಣ್ಣು ತುಂಬಿ ಬಂದಿತ್ತು. ಅವರನ್ನು ತೊರೆದು ಕಣ್ಣುಜ್ಜುತ್ತ ಕಡಲ ಕಡೆಗೆ ಧಾವಿಸಿದಳು. ಹರ್ಷ ಒಂದೆರಡು ಬಾರಿ ಅವಳನ್ನ ಕೂಗಿ ಕರೆದು ಕಿರಿಕಿರಿಯಿಂದ ಬೇಸರಿಸಿ.. "ನೀನೇ ತಾನೇ ಮೊದಲು ಮದುವೆ ವಿಷಯ ತೆಗೆದಿದ್ದು, ನಿನ್ನಿಂದನೇ ಅವಳು ಅಳ್ತಿರೋದು... ಈಗ ನೀನೇ ಹೋಗಿ ಅವಳನ್ನ ಸಮಾಧಾನ ಮಾಡು" ಎಲ್ಲಾ ಆರೋಪ ಪ್ರಸನ್ನನ ಮೇಲೆ ಹೊರೆಸಿ ತಾನು ಮೆಲ್ಲಗೆ ಜಾರಿಕೊಂಡ.
"ಏನೂ....? ಸಮಾಧಾನ... ನಾನು... ಅದು ಈ ರಾಕ್ಷಸಿಗೆ..!! ಹೋಗಲೋ... ಬೇಕಾದ್ರೆ ಎತ್ತಿ ಸಮುದ್ರಕ್ಕೆ ಬಿಸಾಕು ಅನ್ನು ಬಿಸಾಕ್ತಿನಿ!! ಈ ದೆವ್ವವನ್ನು ರಮಿಸೋದು ನನ್ನ ಕೈಯಿಂದಾಗಲ್ಲ" ಕೈ ಅಲ್ಲಾಡಿಸಿದ.
ಅಷ್ಟರಲ್ಲಿ ಹರ್ಷನ ಮೊಬೈಲ್ ರಿಂಗಾಯಿತು. ಅವನು ಜಾಕೆಟ್‌ನೊಳಗಿಂದ ಮೊಬೈಲ್ ತೆಗೆದು ನೋಡಿ "ಡ್ಯಾಡ್ ಕಾಲ್ ಮಾಡಿದ್ದಾರೆ. ನೀನು ನಿಜವಾಗಿಯೂ ನನ್ನ ಫ್ರೆಂಡ್ ಆಗಿದ್ರೆ ನಾನು ಮಾತಾಡಿ ಬರುವಷ್ಟರಲ್ಲಿ ನೀನು ಅವಳನ್ನ ಸಮಾಧಾನ ಮಾಡ್ಬೇಕು. ಇಲ್ಲಾಂದ್ರೆ ನನ್ನ ಜೊತೆ ಮಾತಾಡ್ಬೇಡ!" ಅಷ್ಟು ಹೇಳಿ ಮೊಬೈಲ್ ಹಿಡಿದು ಮುಂದಕ್ಕೆ ಅಡಿಯಿಟ್ಟ ಹರ್ಷ. ಸೆಕ್ಯುರಿಟೀಸ್ ಅವನನ್ನೇ ಹಿಂಬಾಲಿಸಿದರು.
'ಯಾಕೋ ಏನೋ ಇವನ ಪಾಲಿನ ಗ್ರಹಚಾರ ಎಲ್ಲಾ ನನ್ನ ಪಾಲಿಗೆ ಬರೋ ಹಾಗೆ ಕಾಣ್ತಿದೆಯಲ್ಲ; ಎಷ್ಟು ಜಾಣ್ಮೆಯಿಂದ ಈ ತನ್ನ ತಲೆನೋವನ್ನ ನನ್ನ ತಲೆಗೆ ಕಟ್ಟಿ ಹೋದ್ನಲ್ಲ ಇವ್ನು.. ಇದೇ ಮುಂದ್ವರಿದ್ರೆ ನನ್ನ ಗತಿ ಏನಾಗ್ಬೇಡ' ಎಂದು ಮಣಗುಟ್ಟುತ್ತ, ಸಿಟ್ಟು ಅಸಮಾಧಾನ ದುಗುಡದಿಂದ ಭುಸುಗುಟ್ಟುತ್ತ ಕಣ್ಣು ಒತ್ತಿಕೊಳ್ಳುತ್ತ ತೀರದತ್ತ ನಡೆದಿದ್ದ ಮಾನ್ವಿಯನ್ನು 'ಇದಾವ ಜನ್ಮದ ಪ್ರಾರಬ್ಧ ಕರ್ಮವೋ!!' ಎಂದುಕೊಂಡೇ ಹಿಂಬಾಲಿಸಿದ ಪ್ರಸನ್ನ. "ಓಯ್... ಕೊಲೆಸ್ಟ್ರಾಲ್ ನಿಂತ್ಕೊಳೆ ಒಂದ್ನಿಮ್ಷ..." ಅವಳು ಕೆಂಡಕಾರುವಂತೆ ಅವನನ್ನು ನೋಡಿ ನಡಿಗೆಯ ವೇಗ ಹೆಚ್ಚಿಸಿದ್ದಳು.
"ಏನ್ ಹೀಗ್ ಗುರಾಯಿಸ್ತಿದ್ದೀಯಾ? ನೀನು ಮಾಡಿರೋ ಮೋಸಕ್ಕೆ ನಾನು ನಿನ್ನ ಕೆನ್ನೆಗೆರಡು ಬಾರಿಸ್ಬೇಕು. ನಿನ್ನೆ ಇಬ್ಬರ ಮಧ್ಯೆ ಡೀಲ್ ಆಗಿತ್ತು ತಾನೇ! ಇವತ್ತೇನು ಮಾತೇ ಬರದವಳ ಹಾಗೆ ದುರುಗುಟ್ಟುತ್ತ ನಿಂತಿದ್ದೆ.. ಸದ್ಯ ನಾನೇ ಏನೋ ಒಂದು ಹೇಳಿ ಕವರ್ ಮಾಡಿದೆ." ಅವಳನ್ನ ಹಿಂಬಾಲಿಸುತ್ತಲೇ ಹೇಳಿದ.
"ಡೀಲ್ ಆಗಿದ್ದು ಬರೀ ಒಂದೇ ಸಲ ಮೀಟ್ ಮಾಡಿಸ್ಬೇಕು ಅಂತ. ಅದಾದನಂತರ ನೀನಿಲ್ಲಿಂದ ಹೊರಟೋಗ್ತಿನಿ ಅಂತ ಹೇಳಿದ್ದೆ ತಾನೇ?? ಆದರೆ ನೀನೇನು ಇಲ್ಲೇ ಟೆಂಟ್ ಹಾಕೋ ಪ್ಲ್ಯಾನ್ ಮಾಡಿರೋ ಹಾಗಿದೆ?" ಗಂಭೀರವಾಗಿ ಕೈ ಕಟ್ಟಿಕೊಂಡು ನಿಂತು ಕೇಳಿದಳು.
"ಮೊದಲನೇಯದಾಗಿ, ನೀನು ನನಗೆ ಹರ್ಷನ ಪರಿಚಯ ಮಾಡಿಸಿಲ್ಲ,, ನಾನಾಗೇ ಪರಿಚಯ ಮಾಡ್ಕೊಂಡಿದ್ದು.. ಆ ಪ್ರಕಾರ ನೀನೇ ಮೊದಲು ಮಾತಿಗೆ ತಪ್ಪಿದ್ದು, ಹೀಗಾಗಿ ನಾನು ಮಾತಿನ ಪ್ರಕಾರ ನಡೆದುಕೊಳ್ಳುವ ಅಗತ್ಯವೇ ಇಲ್ಲ!! ನೀನೇ ಮಾತು ತಪ್ಪಿದ ಮೇಲೆ ನಾನು ನ್ಯಾಯದಿಂದ ಇದ್ರೆ, ಇಬ್ಬರ ಮಧ್ಯೆ ಸಮಾನತೆ ಇರಲ್ವೆ ಪಿಶಾಚಿ!! ಅದ್ಕೆ ನಾನು ಲೈನ್ ಕ್ರಾಸ್ ಮಾಡಿದ್ದು... ಇನ್ಮುಂದೆ ಇಲ್ಲೇ ಇದ್ದು.. ನಿನ್ನ ಮದುವೆ,, ತಿಥಿ,, ಶ್ರಾದ್ಧ.. ಏನೇನಿದಿಯೋ ಎಲ್ಲಾ ಮುಗಿಸೇ ಹೋಗೋದು"
"ನನ್ನ ಹೆಸರು ಪಿಶಾಚಿಯಲ್ಲ! ಡಾ.ಮಾನ್ವಿ!! ಅಂತ. ಪದೇ ಪದೇ ಹಾಗೆಲ್ಲ ಕೂಗಬೇಡ ಒಕೆ!! ಇರೋದಾದ್ರೆ ಇರು... ಇಲ್ಲೇ ಇದ್ದು ಏನು ಸಾಧಿಸ್ತಿಯೋ ನಾನು ನೋಡ್ತಿನಿ! ಹ್ಮ್.." ಗಟ್ಟಿಸಿ ಹೇಳಿ ಮುಖ ತಿರುವಿದಳು.
"ಎಷ್ಟು ಚಂದದ ಹೆಸರು ಮಾನ್ವಿ! ಆದರೆ... ಹೆಸರಲ್ಲಿರೋ ಮಾನವೀಯತೆ ನಿನಗಿಲ್ವಲ್ಲೆ..! ಆ ಹೆಸರಿಗೂ ನಿನಗೂ ಯಾವ ದಿಕ್ಕಿನಿಂದನೂ ಹೋಲಿಕೆನೇ ಕಾಣಿಸಲ್ವಲ್ಲ.. ಅದ್ಕೆ ನಿನಗೆ ಸರಿಹೊಂದುವ ಹೆಸರಿಂದ ಅತೀ ಪ್ರೀತಿಯಿಂದ ಕೂಗೋದು ನಾನು.. ರಾಕ್ಷಸಿ ಪಿಶಾಚಿ, ಡಾಯನ್, ಶೂರ್ಪನಕಿ ಹಿಡಂಬಿ, ಪುಲಂದೇವಿ, ಲೆಟೆಸ್ಟಾಗಿ ಇಡೋದಾದ್ರೆ ಲೇಡಿ ಡಾನ್!!ಚೆನ್ನಾಗಿದೆಯಲ್ಬಾ? ನೋಡೋಕು ಚೂರು ಹಾಗೆ ಇದೀಯಾ.." ಪ್ರಸನ್ನ ಕೂಲಾಗಿ ಒಂದೇಸಮನೆ ಉಸುರುತ್ತಿದ್ದರೆ ಮಾನ್ವಿ ಹಲ್ಲು ಕಚ್ಚುತ್ತ, ಕಣ್ಮುಚ್ಚಿ, ಕೈ ಮುಷ್ಟಿ ಹಿಡಿದು ಕೋಪ ನಿಗ್ರಹಿಸಿಕೊಳ್ಳುತ್ತ ಕೊತಕೊತನೆ ಕುದಿಯುತ್ತಿದ್ದಳು.
"ನಿನ್ನ ಯೋಗ್ಯತೆಗೆ ತಕ್ಕ ಹಾಗೆ ನೀನು ಮಾತಾಡ್ತಿಯಾ ಬಿಡು! ನಿನ್ನ ತಪ್ಪಲ್ಲ. ನನಗೆ ಸಂಬಂಧವೇ ಇಲ್ಲದವರ ಮಾತಿಗೆ ಬೆಲೆ ಕೊಡಲ್ಲ ನಾನು! ಕೆಸರಿನಲ್ಲಿ ಕಲ್ಲೆಸೆಯೋ ಅಭ್ಯಾಸವಿಲ್ಲ ನನಗೆ.." ಶಾಂತವಾಗಿ ನುಡಿದಳು.
" ಅದೂ ನಿಜ, ನಿನ್ನ ಮೇಲೆ ನೀನೇ ಕಲ್ಲು ಹಾಕ್ಕೊಳ್ಳೊಕೆ ನಿನಗೇನು ತಲೆ ಕೆಟ್ಟಿದೆಯಾ?!!" ಪ್ರಸನ್ನ ಅವಳ ಪರ ಮಾತಾಡುತ್ತಲೇ ಅವಳ ಕಾಲೆಳೆದ. ಕೆಲ ಸೆಕೆಂಡ್ಸ್ ನಂತರ ಅವನ ಮಾತಿನ ಒಳಾರ್ಥ ತಿಳಿದು "ವಾಟ್ ಡು ಯು ಮೀನ್... ಅಂದ್ರೆ ನಾನು ಕೆಸರಾ..?" ಗಂಟಲು ಕಿತ್ತುವಂತೆ ಅರಚಿದಳು
"ನಿನ್ನ ಬಗ್ಗೆ ನಿನಗೆ ಚೆನ್ನಾಗಿ ಗೊತ್ತಿರ್ಬೇಕು... ನಾನೇನು ಹಾಗೆ ಹೇಳಲಿಲ್ವಲ್ಲ" ಮುಗ್ದವಾಗಿ ನುಡಿದ
" ಯಾಕ್ ಬಂದಿದೀಯಾ ನೀನಿಲ್ಲಿ? ಅಷ್ಟಕ್ಕೂ ಏನು ನಿನ್ನ ಉದ್ದೇಶ? ಯಾಕೆ ನಮ್ಮ ಹಿಂದೆ ಬಿದ್ದಿದ್ದಿಯಾ?" ಮತ್ತೆ ಸಿಟ್ಟು ನೆತ್ತಿಗೇರಿತು.
"ನಿಜ ಹೇಳಲಾ...!" ಅವಳ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ.
"........."
"ಹರ್ಷನ್ನ ಅವನ ಮನೆಗೆ ವಾಪಸ್ ಕಳಿಸಿ ನಿನ್ನ ಜೊತೆಗೆ ಮದುವೆ ಮಾಡ್ಕೋಳ್ಳೋಣಾ ಅನ್ಕೊಂಡಿದೀನಿ, ನಿನಗೆ ಒಕೆ ನಾ?" ಕೈಯಲ್ಲಿನ ಖಾಲಿ ಬಾಟಲ್ ಹೊಸೆಯುತ್ತ ತುಸು ನಾಚುತ್ತ ಕೇಳಿದ.
"ನಿನ್ನೀ ಡ್ರಾಮಾ ಎಲ್ಲಾ ಹರ್ಷನ ಮುಂದೆ ಇಟ್ಕೋ, ನನ್ನ ಜೊತೆಗಲ್ಲ.. ನಿನಗ್ಯಾಕೆ ಅವನನ್ನು ಮನೆಗೆ ಕಳಿಸೋ ಕಾಳಜಿ, ಇನ್ನು ಹತ್ತು ದಿನ ಅಷ್ಟೇ.. ಮದುವೆ ಮುಗಿಯುತ್ತೆ. ಆಮೇಲೆ ನಾನೇ ಅವನಿಗೆ ಎಲ್ಲಾ ನಿಜ ಹೇಳಿ ಮನೆಗೆ ಕರೆದುಕೊಂಡು ಹೋಗ್ತಿನಿ. ಅಲ್ಲಿವರೆಗೂ ನೀನು ಅವನಿಗೆ ಏನು ಹೇಳೋ ಹಾಗಿಲ್ಲ! ಹೇಳೋಕೆ ನಾನು ಬಿಡೋದು ಇಲ್ಲ!!" ಹಮ್ಮಿನಿಂದ ನುಡಿದಳು
"ಬೆಸ್ಟ್ ಆಫ್ ಲಕ್ ಕೊಲೆಸ್ಟ್ರಾಲ್,!! ನೋಡೋಣ ನೀನಾ? ನಾನಾ?? .
"ಹ್ಮ್.. ಸರಿ ಹಾಗಿದ್ರೆ, ಹೋಗಿ ಹೇಳು ಅವನ ಹತ್ರ.. ಮಾನ್ವಿ ಕೆಟ್ಟವಳು, ನಿನಗೆ ಹೀಗೆ ಮೋಸ ಮಾಡ್ತಿದ್ದಾಳೆ, ಅವಳನ್ನ ನಂಬಬೇಡ ಅಂತ..."
"ಹ್ಮ್... ಹೇಳೋಣ ಹೇಳೋಣ.. ಈಗತಾನೇ ಫ್ರೆಂಡ್ ಶಿಪ್ ಶುರುವಾಗಿದೆ, ನಿಧಾನಕ್ಕೆ ಹೇಳೋಣ..ನೀನು,, ನಿನ್ನ ಕುತಂತ್ರಗಳು,,, ನಿನ್ನ ಕ್ರಿಮಿನಲ್ ಮೆಂಟಾಲಿಟಿ.. ಎಲ್ಲಾನೂ ಹೇಳೋಣ.. ಸದ್ಯಕ್ಕೆ ನನ್ನ ಮೇಲಿನ ನಂಬಿಕೆ ಧೃಡವಾಗಬೇಕು. ಬಹುಶಃ ನಿನಗೆ ಸುಳ್ಳು ಸತ್ಯದ ನಡುವಿನ ವ್ಯತ್ಯಾಸ ಗೊತ್ತಿಲ್ಲ ಅನ್ಸುತ್ತೆ..." ಅವಳು ಮೌನ. ಅವನೇ ಮುಂದುವರೆದ..
"ಸತ್ಯ ಅತ್ಯಂತ ಪ್ರಬುದ್ಧವಾದುದು. ಅದಕ್ಕೆ ವಿವೇಚನೆ, ಅರ್ಥ, ನೈಜತೆಯ ಅಗತ್ಯವಿದೆ! ಅದಕ್ಕೆ ನಿಖರವಾದ ಸಾಕ್ಷಾಧಾರ ಅವಶ್ಯ. ಅದು ಬೆತ್ತಲು ಸುಲಭವಾಗಿ ಎದುರಿಗೆ ನಿಲ್ಲಲ್ಲ. ಆದರೆ ಸುಳ್ಳು ಹಾಗಲ್ಲ... ಅದು ಶುದ್ಧ ಅವಿವೇಕಿ.. ಅದಕ್ಕೆ ವಿವೇಚನೆಯ ಅಗತ್ಯವಿಲ್ಲ, ಅದಕ್ಕೆ ಸಾಕ್ಷಿಗಳು ಹೇಗೆ ಬೇಕೋ ಹಾಗೆ ಸೃಷ್ಟಿಯಾಗುತ್ತವೆ. ಸುಳ್ಳು ಅಗಣಿತ ಮುಖವಾಡಗಳ ಕಪಟಿ, ಒಂದಾದಮೇಲೊಂದು ಹುಟ್ಟುತ್ತಾ ಹೋಗುತ್ತೆ,, ಮುಖ್ಯವಾಗಿ ಅದಕ್ಕೆ ಕೊನೆಯೇ ಇಲ್ಲ.. ಅಂತಹ ನೀನೇ ಸೃಷ್ಟಿಸಿರೋ ಈ ಒಂದು ಸುಳ್ಳಿನ ಪ್ರಪಂಚದೊಳಗೆ ನಾನು ಕಾಲಿಟ್ಟಾಯ್ತು!! ಈಗ ಇಲ್ಲಿ ನಾನು ಸುಳ್ಳು, ನೀನು ಸುಳ್ಳು! ಅಂದಹಾಗೆ ಸುಳ್ಳಿನ ಇನ್ನೊಂದು ಮುಖ್ಯವಾದ ಅಂಶ... ಸುಳ್ಳಿಗೆ ಆಯಸ್ಸು ಕಡಿಮೆ!! ಎಷ್ಟು ಬೇಗ ಹುಟ್ಟುತ್ತೋ ಅಷ್ಟೇ ಬೇಗ ಸತ್ತೂ ಬಿಡುತ್ತೆ! ಯಾವತ್ತಿಗೂ ಶಾಶ್ವತವಾಗಿ ಉಳಿಯೋದು ಸತ್ಯ ಮಾತ್ರ.. ನೆನಪಿರಲಿ!" ಎಚ್ಚರಿಕೆ ಧ್ವನಿಯಲ್ಲಿ ಒತ್ತಿ ಹೇಳಿದ.
"ನಿನ್ನೀ ಕಂತೆ ಪುರಾಣ ನಿನ್ನತ್ರನೇ ಇಟ್ಕೋ,, ನಿನ್ನ ಉಪದೇಶ ಕೇಳೋ ಆಸಕ್ತಿ ನನಗಿಲ್ಲ. ಅದರ ಅಗತ್ಯ ಅನಿವಾರ್ಯತೆಯೂ ಇಲ್ಲ"
"ಯಾಕಿಲ್ವೆ ರಾಕ್ಷಸಿ..... ಇದೆ. ಅನಿವಾರ್ಯತೆ ಇದೆ. ಯಾಕಂದ್ರೆ ಆ ವಿಡಿಯೋ ಇನ್ನೂ ನನ್ನ ಹತ್ರನೇ ಇದೆ! ಮರ್ತಿದೀಯಾ? ಇನ್ನೊಮ್ಮೆ ತೋರಿಸ್ಲಾ?" ಮೊಗದಗಲ ನಗುವರಳಿಸಿ ಹೇಳಿದ. ಮಾನ್ವಿಗೆ ಆ ವಿಡಿಯೋ ನೆನಪಾಗಿ ಮುಖದಲ್ಲಿ ಬೇಸರದ ಛಾಯೆ. "ಹರ್ಷ ಈ ಕಡೆಗೆ ಬರ್ತಿದಾನೆ, ಎಲ್ಲಿ, ಹಲ್ಲುಜ್ಜಿದಿಯಾ ನೋಡೋಣ" ಗೊಣಗಿದ. ಅವಳು ಬಾರದ ನಗುವಿನ ಮುಖವಾಡ ಧರಿಸಿ ಊರಗಲ ಮುಖ ಅರಳಿಸಿದಳು.
ಅಷ್ಟರಲ್ಲಿ ಹರ್ಷ ಕೈ ಬೆರಳುಗಳಲ್ಲಿ ಮೊಬೈಲ್ ತಿರುಗಿಸುತ್ತ ಇವರ ಬಳಿ ಬಂದ. ಇಬ್ಬರ ನಡುವಿನ ಮೌನ ಮಂದಹಾಸ ಕಂಡು ವಿಷಯ ಇತ್ಯರ್ಥವಾಗಿದೆ ಎಂದು ತಿಳಿದು "ಸರಿ,, ಹಾಗಾದ್ರೆ ಹೊರಡೋಣ್ವಾ ಮನೆಗೆ? " ಕೇಳಿದ
"ಹ್ಮಾ ಖಂಡಿತ. ಎಷ್ಟೋ ವರ್ಷಗಳ ನಂತರ ನೀವು ಸಿಕ್ಕಿದ್ದಿರಾ, ಅದರ ಜೊತೆಗೆ ನಿಮ್ಮ ಮದುವೆ ಬೇರೆ ಹತ್ತಿರ ಬಂತು ಕೆಲಸ ತುಂಬಾ ಇದೆ. ಸ್ನೇಹಿತನಾಗಿ ನಾನೇ ಇಲ್ಲಾಂದ್ರೆ ಹೇಗೆ ಅಲ್ವಾ ಮಾನು.." ಕೇಳಿದ. ಆಕೆ ಮೂತಿ ತಿರುಗಿಸಿ "ಡ್ರೈವರ್... ಕಾರ್!" ಎಂದು ಚಿಟಿಕೆ ಬಾರಿಸಿ ಆಜ್ಞೆ ಮಾಡಿದಳು.
ಒಂದು ಕಾರಿನಲ್ಲಿ ಮಾನ್ವಿ ಹರ್ಷ, ಮತ್ತೊಬ್ಬ ಸೆಕ್ಯೂರಿಟಿ ಕುಳಿತರು. ಬೇಕೆಂದೇ ಪ್ರಸನ್ನನನ್ನು ಹಿಂದಿಕ್ಕಿ ಅವನಿಗಷ್ಟೇ ಗೋಚರಿಸುವಂತೆ ವ್ಯಂಗ್ಯವಾಗಿ ನಕ್ಕಳು ಮಾನ್ವಿ. ಇನ್ನೊಂದು ಕಾರಿನಲ್ಲಿ ಇಬ್ಬರೂ ದಡೂತಿಗಳ ಮಧ್ಯೆ ಸಿಲುಕಿ ಕುಳಿತಿದ್ದ ಪ್ರಸನ್ನ. ಹಿಂದಿನ ದಿನ ಅವನನ್ನು ಹಿಂಬಾಲಿಸಿದ ಅದೇ ಧಢೂತಿ ದೇಹಗಳು. "ಹೊಟ್ಟೆಗೇನ್ರೋ ತಿಂತಿರಾ? ಹಿಂಗಿದಿರಾ? ಒಳಗಿರೋ ಹಾರ್ಟು ಬ್ಲಡ್ ಸರ್ಕ್ಯೂಲೆಷನ್ ಮಾಡೋಕಾಗ್ದೆ ಸುಸ್ತಾಗಿ ಒಂದಿನಾ ವ್ಯಾಲೆಂಟ್ರಿ ರಿಟೈರ್ಮೆಂಟ್ ತಗೋಂಡ್ಬಿಡುತ್ತೆ! ಹುಷಾರು ಕಣ್ರೋ.." ಎಂದು ಅವರ ಹೆಗಲಿಗೆ ಕೈ ಹಾಕಿ ತನ್ನ ವಾಚಾಳಿತನ ಶುರುವಿಟ್ಟಿದ್ದ. ಅವನ ಮಾತು ಎಷ್ಟು ಅರ್ಥವಾಗಿತ್ತೋ ಏನೋ "ಜಿಮ್ ಬಾಡಿ, ನೋ ರಿಟೈರ್ಮೆಂಟ್" ಎಂದು ಹರಕು ಮುರುಕಾಗಿ ಉತ್ತರಿಸಿದರು. ಅವರೊಂದಿಗೆ ಹೀಗೆ ಹರಟೆಗೆ ಮೊದಲಾಗಿದ್ದ ಪ್ರಸನ್ನ.
ಅರ್ಧಗಂಟೆಯಲ್ಲಿ ಕಾರು ಮನೆಯ ಸಮೀಪದ ಸರ್ಕಲ್ ತಿರುವಿನಲ್ಲಿ ಹೊರಳುವಾಗ ಹರ್ಷನ ಚಿತ್ತ ತಮ್ಮ ಕಾರಿಗೆ ವಿರುದ್ಧ ದಿಕ್ಕಿನೆಡೆ ಹೋಗುತ್ತಿದ್ದ ಇನ್ನೊಂದು ಕಾರಿನ ಮೇಲೆಯೇ ನೆಟ್ಟಿತ್ತು. ತಿರು ತಿರುಗಿ ಅದನ್ನೇ ಪರಿಶೀಲಿಸಿ ನೋಡಿದ. ಆದರೆ ಸೈಡ್ ವಿಂಡೋಸ್ ಎಳೆದದ್ದರಿಂದ ಯಾರೆಂದು ಗೋಚರಿಸಲಿಲ್ಲ. ಮಾನ್ವಿ ಅವನ ಕುತೂಹಲವನ್ನು ಗಮನಿಸಿ ಯೋಚನೆಗೊಳಗಾದಳು. ಅಷ್ಟರಲ್ಲಿ ಕಾರು ಮನೆಯ ಎದುರಿಗೆ ಬಂದು ನಿಂತಿತು.
ಕಾರಿನಿಂದಿಳಿದ ಹರ್ಷ ಪ್ರಸನ್ನನಿಗಾಗಿ ಕಾದು ನಿಂತ. ಅಷ್ಟರಲ್ಲಾಗಲೇ ಆ ದಢೂತಿ ಸೆಕ್ಯೂರಿಟಿಗಳ ಜೊತೆ ಬಂದ ಪ್ರಸನ್ನ ಅವರೊಂದಿಗೆ ಕೈ ತಟ್ಟಿ ನಗು ನಗುತ್ತ ಕೆಳಗಿಳಿದ. ಅವನ ಆ ಸ್ನೇಹ ಮನೋಭಾವ ವರ್ತನೆ ಹರ್ಷನಿಗೆ ಮತ್ತಷ್ಟು ಇಷ್ಟವಾಯಿತು. ಅವನನ್ನು ಸ್ವಾಗತಿಸುತ್ತ "ಇದೇ ನನ್ನ ಮನೆ. ಇನ್ಮುಂದೆ ನೀನು ನನ್ನ ಜೊತೆಗೆ ಇಲ್ಲಿಯೇ ಇರ್ಬೇಕು. ಇವತ್ತು 11.30 ಕ್ಕೆ ಒಂದು ಇಂಪಾರ್ಟೆಂಟ್ ಮೀಟಿಂಗ್ ಇದೆ. ನಾನು ಮುಗಿಸಿ ಬರುವಷ್ಟರಲ್ಲಿ ನೀನು ನಿನ್ನ ಲಗೇಜ್‌ನ್ನೆಲ್ಲ ತಗೊಂಡು ಬಂದ್ಬಿಡು, ಸಂಜೆ ಇಬ್ರೂ ಕೂತು ಮಾತಾಡೋಣ ಒಕೆ.. " ಎಂದು ಮಾತಾಡುತ್ತ ಮುಂದೆ ಮುಂದೆ ನಡೆಯುತ್ತಿದ್ದ ಹರ್ಷ.
ಊರಿನಿಂದ ಸುಮಾರು ಮೈಲಿಗಳ ದೂರದಲ್ಲಿದ್ದ ದೊಡ್ಡ ವಿಲ್ಲಾ.5bhk flot . ಸುಮಾರು ಒಂದು ಕಿಮೀ ದೂರದವರೆಗೂ ಮನುಷ್ಯರ ಸಂಪರ್ಕವೇ ಸಿಗದಂತ ಒಂಟಿ ರಾಕ್ಷಸನಂತಹ ಮೂರಂತಸ್ತಿನ ಕಟ್ಟಡ. ಸುತ್ತ ತೆಂಗಿನ ಮರಗಳಿಂದ ಆವೃತವಾದ ಸುಂದರ ತೋಟ. ನೀರವ ಮೌನ. ಹಕ್ಕಿಗಳ ಕಲರವ. ಮನೆಗೆ ಇಪ್ಪತ್ತು ಅಡಿಗಳ ಅಂತರದ ಕಾಲುದಾರಿಯಿತ್ತು. ಹರ್ಷನ ಹಿಂದೆ ಮೆಲ್ಲಗೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ಪ್ರಸನ್ನ ಆ ಸ್ಥಳವನ್ನು ನೋಡಿ ಮೈ ಮರೆತಿದ್ದ. ಹರ್ಷನ ಮಾತುಗಳು ಅವನ ಕಿವಿಗೆ ಬೀಳಲಿಲ್ಲ.
"ಬ್ರೋ.. ಈ ಸ್ಥಳ ಒಂತರಾ ನಿಗೂಢವಾಗಿದೆ ಅಲ್ವಾ? " ಕೇಳಿದ.
"ಅಲ್ವಾ.... ನನಗೂ ಒಮ್ಮೊಮ್ಮೆ ಹಾಗೆ ಅನ್ಸುತ್ತೆ. ಯಾರನ್ನೋ ಕಿಡ್ನಾಪ್ ಮಾಡಿ ಕೂಡಿ ಹಾಕಿರೋ ಜಾಗದ ರೀತಿ ಇದೆಯಲ್ವಾ!?" ಹರ್ಷ ಮುಂದೆ ನಡೆಯುತ್ತಲೇ ಉಸುರಿದ.
"ಜಗತ್ತಿನ ಬೆಸ್ಟ್ ಕಿಡ್ನಾಪರ್ ಅಂತ ಅವಾರ್ಡ್ ಏನಾದ್ರೂ ಇದ್ರೆ ಅದು ನಿನಗೇ ಕಣೇ ಪಿಶಾಚಿ,, ಕಿಡ್ನಾಪ್ ಆಗಿರುವವನಿಗೇ ಗೊತ್ತಿಲ್ಲ ತಾನು ಕಿಡ್ನಾಪ್ ಆಗಿದ್ದೀನಿ ಅಂತ!! ಇದಕ್ಕಿಂತ ಬೆಸ್ಟ್ ಕಿಡ್ನಾಪ್ ಯಾವುದಿರೋಕೆ ಸಾಧ್ಯ ಅಲ್ವಾ!! ಟೈಮ್ ಬರ್ಲಿ, ಈ ಸಾಧನೆಗೊಂದು ಒಳ್ಳೆಯ ಅವಾರ್ಡ್ ಕೊಡ್ಸೋಣ ನಿನಗೆ" ಹಿಂದೆ ಇದ್ದ ಮಾನ್ವಿ ಕಿವಿಯಲ್ಲಿ ಪಿಸುಗುಟ್ಟಿದ ಪ್ರಸನ್ನ. ಅವನ ಬಿಸಿಯುಸಿರ ಕಂಪನಕೆ ಅವಳ ಮೈಯಲ್ಲಾ ಉರಿದು ಹೋಯಿತು. "ಸಾಧ್ಯವಾದಷ್ಟು ನನ್ನಿಂದ ದೂರ ಇರು. ಇಲ್ಲಾ, ಅನ್ಯಾಯವಾಗಿ ಸಾಯ್ತಿಯಾ!!" ಬೆರಳು ತೋರಿಸಿ ಎಚ್ಚರಿಸಿದಳು.
"ನಿಜವಾಗ್ಲೂ ಸಾಯಿಸ್ತಿಯಾ? ಅಥವಾ ನನಗೂ ಮೆಮೊರಿ ಲಾಸ್ ಮಾಡಿಸಿ, ಮದುವೆ ಮಾಡ್ಕೊಳ್ಳೋ ಯೋಚನೆ ಏನಾದ್ರೂ ಇದೆಯಾ? ನಿನ್ನ ಜನ್ಮಕ್ಕಿಷ್ಟು....." ಅವನು ಮಣಮಣ ಬೈಯುತ್ತಿದ್ದರೆ, ಅದರ ಪರಿವಿಲ್ಲದೆ ಅವಳ ಲಕ್ಷ್ಯ ಎದುರಿಗೆ ಹರ್ಷನ ಕಡೆಗೆ ಸರಿದಿತ್ತು.
ಗೇಟ್ ಬಳಿ ಹೋಗುತ್ತಿದ್ದಂತೆ ಮುಗುಳ್ನಗುತ್ತ ಸ್ವಾಗತಿಸಿದ ವಾಚ್ಮನ್, ಹರ್ಷನಿಗೆ ಗುಡ್ ಮಾರ್ನಿಂಗ್ ಸಾಬ್' ಎಂದು ವಿಷ್ ಮಾಡಿ, ಅವನ ಕೈಗೊಂದು ತಿಳಿ ಗುಲಾಬಿ ಬಣ್ಣದ ಎನ್ವಿಲೊಪ್ ಕೊಟ್ಟ. ಹರ್ಷ ಅದೆನೆಂಬಂತೆ ಅವನ ಮುಖವನ್ನು ಪ್ರಶ್ನಾರ್ಥಕವಾಗಿ ದಿಟ್ಟಿಸಿದ. " ಸಾಬ್ ಆಪ್ಕೆ ಲಿಯೆ ಅಂದರ್ ಔರ್ ಭಿ ಸರ್ಪ್ರೈಜ್ ಹೈ... ಆಪ್ ಅಂದರ್ ತೋ ಜಾಯಿಯೇ" ಅಂದ. ಹರ್ಷ ಆಶ್ಚರ್ಯದಿಂದ ಎನ್ವಿಲಪ್ ನೋಡುತ್ತ, ಅದನ್ನು ಅಪ್ಯಾಯವಾಗಿ ಸವರಿದ. ಸ್ಪರ್ಶದನುಭೂತಿಗೆ ಮನಸ್ಸು ಹೂವಾಯಿತು. ಅದರಿಂದ ಬೀಸಿದ ಸೌಗಂಧವು ಶ್ವಾಸಕ್ಕೆ ಅತೀ ಹತ್ತಿರವೆನಿಸಿತು. ಅದರ ಮೇಲೆ ಮೂಡಿದ ಅಕ್ಷರಗಳಲ್ಲೇ ಕಳೆದು ಹೋಗಿ, ಯಾಂತ್ರಿಕವಾಗಿ ಮುನ್ನಡೆದಿದ್ದ. ಎನ್ವಿಲಪ್ ಮೇಲಿದ್ದ ಅಕ್ಷರಗಳು..
"To,
My dear happiness.."
ಕೆಲವು ಹೆಜ್ಜೆಗಳ ಅಂತರದಲ್ಲಿ ಇದನ್ನು ಗಮನಿಸಿದ ಮಾನ್ವಿ ಕೂಗಿದ್ದಳು..
"ಸಂಕು,, ಸಂಕು,," ಅವಳ ಕೂಗು ಅವನಿಗೆ ಕೇಳಿಸಲಿಲ್ಲ.
"ಯು ಇಡಿಯಟ್! ಕಿಸ್ಕಾ ಲೆಟರ್ ಥಾ ವೋ? ಕಿಸ್ನೆ ದಿಯಾ? " ಸನಿಹ ಬಂದು ವಾಚ್‌ಮನ್ ನನ್ನು ಗದರಿದಳು.
"ವೋ, ಮೆಮ್‌ಸಾಬ್ ಆಪ್ನೆ ಜೊ ಇಂಟಿರಿಯರ್ ಡೆಕೋರೆಟರ್ಸ್ ಭೇಜಾ ಥಾ, ವೋ ಆಯೇ ಥೆ! ಉನ್ಕೆ ಸಾಥ್ ಜೋ ಏಕ್ ಲಡ್ಕಿ ಆಯಿ ಥಿ, ಉಸ್ನೆ ದಿಯಾ ವೋ ಲೆಟರ್, ಬೋಲಿ ಕೆ ಆತೆ ಹೀ ಸಾಬ್ ಕೋ ದೆದೆ! ಆಪ್ನೆ ಕೋಯಿ ಸರ್ಪ್ರೈಜ್ ಪ್ಲ್ಯಾನ್ ಕಿಯಾ ಹೈ ಸರ್ ಕೆ ಲಿಯೆ"
" ಕೊನ್ ಲಡ್ಕಿ? ಕ್ಯೂ ಆಯಿತಿ? ತುಮೆ ಬೋಲಾ ಥಾ ನಾ,, ಮೇರೆ ಪರ್ಮಿಶನ್ ಕೆ ಬಿನಾ ಕಿಸಿಕೋ ಘರ್ ಮೆ ಆನೇ ಮತ್ ದೇನಾ! ಮೇನೆ ಕೋಯಿ ಇಂಟಿರಿಯರ್ ಡೆಕೋರೆಟರ್ಸ್ ನಹೀ ಬೇಜಾ ಥಾ!!"
"ಬಟ್ ಮೆಮ್‌ಸಾಬ್, ವೋ ಲಡ್ಕಿ ಆಪ್ಸೆ ಬಾತ್ ಕರ್ತೆ ಹುಯೇ ಆಯಿ.. ಆಪ್ನೆ ಹೀ ತೋ ಫೋನ್ ಪೆ ಬೋಲಾ ಕಿ, ಉನ್ಹೆ ಆಪ್ನೆ ಹೀ ಬೆಜಾ ಹೈ! ಉನ್ಕೊ ಅಂದರ್ ಜಾನೇ ದೆ!" ವಾಚ್‌ಮನ್ ಗೊಂದಲದಿಂದ ಉತ್ತರಿಸಿದ
"ಮೆನೇ? ಫೋನ್ ಪೆ? ಕಬ್?" ಕಿರುಚಿದಳು ಮಾನ್ವಿ. ಪ್ರಸನ್ನನಿಗೆ ಫೋನ್‌ನಲ್ಲಿ ಮಾನ್ವಿ ಧ್ವನಿಯಲ್ಲಿ ಮಾತಾಡಿದವನು ರೋಹಿತ್ ಎಂದು ಅರ್ಥವಾಗಿ ತುಟಿಯಂಚಲಿ ನಗು ಸುಳಿಯಿತು.
"ಶಾಯದ್ ಆಪ್ ಭೂಲ್ ಗಯಿ ಹೈ, ಆವಾಜ್ ತೋ ಆಪ್ಕಿ ಹೀ ಥಿ!" ವಾಚ್‌ಮನ್ ಖಚಿತವಾಗಿ ಹೇಳಿದ
"ವೋ ಲಡ್ಕಿ ದೇಖ್ನೆ ಮೆ ಕೇಸಿ ಥಿ?" ಮುಷ್ಟಿ ಬಿಗಿಯುತ್ತ ಕೋಪ ನುಂಗಿ ಕೇಳಿದಳು
"ಬಹುತ್ ಸುಂದರ ಥಿ.... ಬ್ಲೂ ಔರ್ ವೈಟ್ ಡ್ರೆಸ್ ಪೆಹ್ನಾ ಥಾ ಉಸ್ನೆ. ಉಸ್ಕೆ ಲಂಬೇ ಬಾಲ್ ಥೇ, ಇತ್ನಿ ಸುಂದರ ಥಿ, ಕಿ ಚಾಂದ್ ಜಮೀನ್ ಪರ್ ಉತ್ರಾ ಹೋ ಜೈಸೆ.. ಆಪ್ಸೆ ಭಿ ಜ್ಯಾದಾ ಸುಂದರ ಥೀ..." ಎಂದವನು ತಪ್ಪನ್ನರಿತಂತೆ "ನಹಿ ನಹಿ ಆಪ್ಸೆ ಜ್ಯಾದಾ ನಹಿ... ಅಭಿ 5ಮಿನಿಟ್ ಪೆಹ್ಲೆ ಹಿ ಗಯಿ" ಎಂದ.
ಅವನ ಮಾತನ್ನು ಕೇಳುತ್ತಿದ್ದ ಮಾನ್ವಿಗೆ ಯಾರೆಂದು ಅರ್ಥವಾಗಿ ಅನಾಯಾಸವಾಗಿ ಬಾಯಿಂದ "ಪರಿ..." ಹೆಸರು ಉಚ್ಚಾರವಾಯಿತು. ಪ್ರಸನ್ನ ಅವಳ ಇಂಗು ತಿಂದ ಮುಖವನ್ನು ನೋಡುತ್ತ ಲೆಟರ್ ಬಗ್ಗೆ ಯೋಚಿಸಿದ್ದ. ತಕ್ಷಣ ಇಬ್ಬರೂ ಗೇಟನ್ನು ಮುಂದಕ್ಕೆ ದೂಡಿ ಒಳಗೊಡಿದರು. ಇಬ್ಬರು ಒಟ್ಟಿಗೆ ಓಡಿದರಾದರೂ ಇಬ್ಬರ ಮನಸ್ಸಿನ ಭಾವನೆಗಳು ಭಿನ್ನವಾಗಿದ್ದವು. ಅವಳು ಆತಂಕ ಭಯದಿಂದಾಗಿ ತಲ್ಲಣಿಸಿದರೆ ಅವನು ಕೌತುಕ ಕುತೂಹಲದಿಂದ ಒಳಗೆ ನಡೆದಿದ್ದ. ಒಳಗೆ ಬಂದು ನೋಡುವಷ್ಟರಲ್ಲಿ ಹರ್ಷ ಆ ಎನ್ವಿಲಪ್ ಬಿಡಿಸಿ ಎರಡು ಪುಟಗಳ ಪತ್ರವನ್ನು ಕೈಯಲ್ಲಿ ಹಿಡಿದು ಏನೋ ನೋಡುತ್ತ ಮೂರ್ತನಾಗಿ ನಿಂತಿದ್ದ. ಅವನ ಹಿಂದೆಯೇ ಓಡಿ ಬಂದು ನಿಂತ ಇಬ್ಬರೂ ಅವನ ಕೈಯಲ್ಲಿರುವ ಪತ್ರವನ್ನೊಮ್ಮೆ ಗಮನಿಸಿ ಎದುರಿಗೆ ನೋಡಿದರು. ಸುಂದರವಾದ ಎರಡು ನವಿಲುಗಳ ನರ್ತನದ ಚಿತ್ತಾರದ ರಂಗೋಲಿ. ಹಸಿರು ನೀಲಿ, ಬಿಳಿ, ಕಡುಕೆಂಪು ನಾನಾ ಬಣ್ಣಗಳ ನಡುವೆ ಮೂಡಿದ ರಂಗೋಲಿ.. ಅದನ್ನೇ ಎವೆಯಿಕ್ಕದೆ ನೋಡುತ್ತಿದ್ದ ಹರ್ಷ. 'ಅದರಲ್ಲೇನಿದೆ ಮಹಾ' ಎಂಬಂತೆ ಇಬ್ಬರೂ ಮುಖ ಮುಖ ನೋಡಿಕೊಂಡರು. ಅವರ ದೃಷ್ಟಿಯಲ್ಲದು ಬರೀ ರಂಗೋಲಿ. ಆದರೆ ಹರ್ಷನ ಸ್ಮೃತಿಯಲ್ಲಿ ಯಾರಿಗೂ ಹೇಳಲಾಗದ, ತನಗೂ ಸ್ಪಷ್ಟತೆ ಸಿಗದ ನೆನಪುಗಳ ಹಾವಳಿ ಕದನಕ್ಕಿಳಿದಿತ್ತು.
'ಏನಿರಬಹುದು ಆ ಲೆಟರ್ ನಲ್ಲಿ?' ಅವಳ ಮನಸ್ಸು ಗೊಣಗಿತು
'ನಿನ್ನ ಸುಳ್ಳು ನಾಟಕಕ್ಕೆ ಅಂತ್ಯ!! ರೂಲ್ಸ್ ಹಾಕೋವಾಗ ನೋಡಬಾರದು, ಮಾತಾಡಬಾರದು ಅನ್ನೋದರ ಜೊತೆಗೆ ಪತ್ರ ಬರೆಯಬಾರದು ಅನ್ನೋ ಕಂಡಿಷನ್ ಮರೆತು ಹೋಗಿದ್ದೆ ಅನ್ಸುತ್ತೆ' ಪ್ರಸನ್ನ ಮನಸ್ಸಲ್ಲೇ ನಕ್ಕ.
********
ಹರ್ಷನ ಕೋಣೆಯನ್ನು ನೋಡಿದ ನಂತರ ಪರಿಧಿಯ ಮನಸ್ಸು ವಿಹ್ವಲವಾಗಿತ್ತು. ಒಡೆದು ಚೂರಾದ ಕನ್ನಡಿ, ಸುಟ್ಟು ಕರಕಲಾದ ಹಾಸಿಗೆಯ ಅವಶೇಷ, ಇದೆಲ್ಲಾ ನೋಡಿ ಅವನ ಮನಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟರಬಹುದೆಂದು ಊಹಿಸಿಯೇ ಅವಳ ಮನಸ್ಸು ಹಿಂಡಿದಂತಾಯಿತು. ಜೀವಕ್ಕಿಂತ ಹೆಚ್ಚಾಗಿದ್ದ ಗೆಳೆಯ, ಹೊಸ ಜೀವನವನ್ನೇ ಉಡುಗೊರೆ ಕೊಟ್ಟ ಇನಿಯ, ತನ್ನ ಪ್ರತಿ ನೋವನ್ನು ಮರೆಸಿ ನಗಲು ಕಲಿಸಿದವ, ಪ್ರತಿ ಹೆಜ್ಜೆಗೂ ಜೊತೆಗಿದ್ದು ಬದುಕನ್ನು ಸವಿಯಲು ಕಲಿಸಿದವ ಈಗ ತನಗೆ ತಾನಪರಿಚಿತನಾಗಿ ಮಾನಸಿಕ ತೊಳಲಾಟದಲ್ಲಿ ಬಳಲುತ್ತಿರುವ ಕಲ್ಪನೆಯನ್ನು ಸಹಿಸದಾದಳು. ಅವಳ ಕಣ್ಣಂಚಲ್ಲಿ ನಿಲ್ಲದ ಕಂಬನಿಯ ಒರತೆ..
"ಪರಿ, ಯಾಕಳ್ತಿದಿರಾ? ಸುಮ್ನಾಗಿ. ಹರ್ಷನಿಗೆ ನಿಮ್ಮ ನೆನಪಾಗೋ ಹಾಗೆ ಮಾಡಿದಿವಲ್ಲಾ.. ಇನ್ನೂ ಏನೇನು ಸಾಧ್ಯವೋ ಎಲ್ಲಾ ಪ್ರಯತ್ನ ಪಡೋಣ. ನಿಮ್ಮ ಜೊತೆಗೆ ನಾವಿದ್ದಿವಲ್ಲಾ ಚಿಂತೆ ಬಿಡಿ ಆಯ್ತಾ!" ಪಕ್ಕದಲ್ಲಿ ಕಾರು ಚಲಾಯಿಸುತ್ತಿದ್ದ ವಿವೇಕ್ ಅವಳ ಅಳು ಕಂಡು ಸಮಾಧಾನ ಮಾಡಿದ. ಅವಳ ಚಿಂತೆ ಹರ್ಷ ಸಿಗುವನೋ ಇಲ್ಲವೋ ಎಂದಲ್ಲ, ಹರ್ಷ ಹರ್ಷನಾಗಿಲ್ಲವಲ್ಲ ಎಂಬುದಾಗಿತ್ತು. ಅವಳ ಮನದ ಮಾತುಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಏಕೈಕ ಜೀವ ತನ್ನನ್ನೇ ತಾನು ಅರಸುತಿರುವಾಗ ಇವಳ ಮನದಳಲನ್ನು ವ್ಯಾಖ್ಯಾನಿಸುವುದು ವ್ಯರ್ಥವೆನಿಸಿತು.
ಅಪಾರ್ಟ್ಮೆಂಟ್ ತಲುಪಿ ಕಾರು ನಿಲ್ಲಿಸಿ ಲಿಫ್ಟ್ ಕಡೆಗೆ ಹೋಗುವ ಮಾರ್ಗದಲ್ಲಿ ಮೇಜರ್ ಸರ್ ಎದುರಾಗಿದ್ದರು. "ಗುಡ್ ಮಾರ್ನಿಂಗ್ ಏಂಜಲ್,, ಯಾವ ಕಡೆಗೆ ಹೋಗಿತ್ತು ಸವಾರಿ? ಹೇಗಿದ್ದಾನೆ ನಿನ್ನ ಪ್ರಿನ್ಸ್?" ಉತ್ಸಾಹ ಹಾಗೂ ಲವಲವಿಕೆಯಿಂದ ಕೇಳಿದರು. ಅವಳು ಆಶ್ಚರ್ಯದಿಂದ ಅವರ ಮುಖ ನೋಡಿ "ಅಂಕಲ್ ನಿಮಗೆ..." ಎನ್ನುತ್ತಿದ್ದಂತೆ, ಅವರೇ ಹೇಳಿದರು..
"ನಿನ್ನೆ ರಾತ್ರಿ ನನಗೂ ನಿದ್ರೆ ಬಂದಿರ್ಲಿಲ್ಲ ಪುಟ್ಟಾ.. ಅದ್ಕೆ ನಾನು ಏಂಜಲ್ ಕಥೆ ಕೇಳ್ತಾ ನಿಂತಿದ್ದೆ. ಈ ಕಥೆಗೆ ನಾನು ಸೇರ್ಕೊಳ್ಳೋಣಾ ಅನ್ಕೊಂಡಿದೀನಿ ಆಗಬಹುದಾ? ಯಾವುದೇ ಕಾರಣಕ್ಕೂ ಏಂಜಲ್‌ನಾ ಒಂಟಿಯಾಗಿ ಅಳೊದಕ್ಕಂತೂ ಬಿಡೊಲ್ಲ ನಾನು" ಅವರು ಹಾಗಂದಿದ್ದೆ ತಡ ತಡೆಹಿಡಿದ ದುಃಖವೆಲ್ಲ ಉಮ್ಮಳಿಸಿ ಬಂದು ಅವರನ್ನು ಬಿಗಿಯಾಗಿ ಅಪ್ಪಿಕೊಂಡು ಬಿಕ್ಕಿದಳು. "ದಾರಿಪೂರ್ತಿ ಹೀಗೆ ಅಳ್ತಿದ್ರು ಅಂಕಲ್, ನಾನೆಷ್ಟು ಸಮಾಧಾನ ಮಾಡಿದ್ರೂ ಕೇಳಲಿಲ್ಲ" ವಿವೇಕ್ ದೂರಿದ.
"ಅಳೋದ್ಯಾಕೆ ಪುಟ್ಟಾ.. ನಿನ್ನ ಮೇಲೆ ತುಂಬಾ ಜವಾಬ್ದಾರಿ ಇದೆ ಈಗ. ಇಂತಹ ಸಮಯದಲ್ಲಿ ಹೀಗೆ ಭಾವನೆಗಳಿಗೆ ಸಿಲುಕಿ ಕರಗಿ ಹೋದ್ರೆ ಅಂದುಕೊಂಡ ಗುರಿ ತಲುಪೋಕಾಗುತ್ತಾ ಹೇಳು! ಬಿ ಬ್ರೇವ್ ಮೈ ಗರ್ಲ್! ಅದ್ಯಾವ ದೈವ ನನ್ನ ಮಗಳನ್ನು ಸೋಲಿಸುತ್ತೋ ನಾನು ನೋಡ್ತಿನಿ! ನಿನ್ನ ಪ್ರೀತಿಗೆ ದೇವರು ಸೋಲಬೇಕು ಆ ವಿಧಿನೂ ಸೋಲಬೇಕು! ಹೆದರಬೇಡ, ಕುಗ್ಗಬೇಡ, ನಿನ್ನ ಜೊತೆಗೆ ನಾನಿದ್ದಿನಿ ಧೈರ್ಯವಾಗಿರು.." ಅವರ ಆತ್ಮೀಯ ನುಡಿಗಳು ಅವಳ ಅತ್ಮಸ್ತೈರ್ಯವನ್ನು ಹೆಚ್ಚಿಸಿದವು. ಬಹುಶಃ ಬಾಲ್ಯದಲ್ಲೇ ಅವಳನ್ನು ತಂದೆ ತಾಯಿಯರ ಪ್ರೀತಿ ವಾತ್ಸಲ್ಯದಿಂದ ವಂಚಿತಳನ್ನಾಗಿ ಮಾಡಿದ ಪಶ್ಚಾತ್ತಾಪಕ್ಕೋ ಏನೋ ದೇವರು ಅವಳಿಗೆ ಯಾವುದೋ ರೂಪದಲ್ಲಿ ಬಂದು ಆ ಪ್ರೀತಿಯನ್ನೆಲ್ಲ ಮೊಗೆ ಮೊಗೆದು ಧಾರೆಯೆರೆಯುತ್ತಿದ್ದ. ಅವಳು ಕಣ್ಣೋರೆಸಿಕೊಂಡು ಮುಗುಳ್ನಗುತ್ತ ಅಲ್ಲಿಂದ ಹೊರಡುವಾಗ ಅವರು ಹೇಳಿದರು..
"ಪುಟ್ಟಾ.. ಲಾಸ್ಟ್ ಟೈಮ್ ನಿನ್ನ ಪ್ರಿನ್ಸ್ ಮುಂಬೈಗೆ ಬಂದಿದ್ದು, ಆ್ಯಕ್ಸಿಡೆಂಟ್ ಆಗಿದ್ದ ದಿನಾಂಕ ಸ್ಥಳ, ಅವನು ಉಳಿದುಕೊಂಡ ಲಾರ್ಡ್ಜ್ ಡಿಟೇಲ್ಸ್ ಮತ್ತೆ ಅವನು ಯಾವ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದ ಅನ್ನೋದನ್ನ ವಿವರವಾಗಿ ಬರೆದು ಕೊಡು. ಅದು ಬರೀ ಆ್ಯಕ್ಸಿಡೆಂಟಾ ಅಥವಾ ಬೇರೆ ಏನಾದ್ರೂ ಪಿತೂರಿ ನಡೆದಿದೆಯಾ ಅಂತ ಅನುಮಾನ ನನಗೆ" ಅವರ ಮಾತಿಗೆ ವಿವೇಕ್ ಹೌಹಾರಿದ.
"ಆದರೆ ಅಂಕಲ್ ಈ ವಿಷಯ ಎಲ್ಲಾ ಹೊರಗಡೆ ಗೊತ್ತಾಗೋದ್ರೆ..." ಅವಳ ಸಂಶಯಕ್ಕೂ ಮೊದಲೇ ಅವರುತ್ತರಿಸಿದರು..
"ಡೋಂಟ್ ವರಿ, ಯಾರಿಗೂ ಗೊತ್ತಾಗದ ಹಾಗೆ ವಿಚಾರಣೆ ಮಾಡ್ತಿನಿ. ಈಗ ಅವನು ಮುಂಬೈನಲ್ಲಿ ಇರೋದ್ರಿಂದ ಮತ್ತೆ ಯಾವ ತೊಂದ್ರೆನೂ ಆಗದಿರಲಿ ಅಂತ ಅಷ್ಟೇ! ನೀನು ಗಾಬರಿಯಾಗಬೇಡ. ಹೋಗು ನಿನ್ನ ಕಿಲ್ಲರ್ಸ್ ಕಾಯ್ತಿದಾರೆ ನಿನಗೋಸ್ಕರ" ನಕ್ಕು ಅವಳನ್ನು ಕಳಿಸಿದರು. ಅವಳು ಅತ್ತ ಹೋದ ನಂತರ ವಿವೇಕ್ ನೊಂದಿಗೆ ಅದೇ ವಿಷಯ ಕುರಿತು ಚರ್ಚೆಗೆ ತೊಡಗಿದರು.
ಮುಂದುವರೆಯುವುದು..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ