ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-29


[hi.. my dear happiness...

ಬದುಕಿನಾರಂಭದಲ್ಲೆಲ್ಲೋ ಬೆಸೆದ ಬೆರಳುಗಳ ಸ್ಪರ್ಶದಿಂದ ಮೊದಲಾಗಿ ಅನವರತವಾಗಿ ಒಲವಧಾರೆಯನ್ನೇ ಸ್ಪುರಿಸುತ್ತ ಬಂದ ಅವ್ಯಾಹತ ಪ್ರೇಮಿಗೆ ಇದಕ್ಕಿಂತ ಚಂದದ ಹೆಸರು ಬೇರೆನಿದೆಯೋ ಗೆಳೆಯ! ಹೌದು.. ನೀನೇ ತಾನೇ ನನ್ನ ಪಾಲಿನ ಅಮಿತ ಸಂತೋಷ.. ನನ್ನ ಸಂತೃಪ್ತಿ.. ನನ್ನ ಹರ್ಷ... ನಿನ್ನೆದುರು ಹೇಳಬೇಕೆಂದ ಮಾತುಗಳೆಲ್ಲ ನೋಟದ ದಾಳಿಗೆ ಸಿಲುಕಿ ಮೌನಕ್ಕೆ ಶರಣಾಗಿರಲು, ಪದ ಪತ್ರದ ಸಹಾಯ ಅನಿವಾರ್ಯವೇ ಅಲ್ಲವೇ..

ಪ್ರೀತಿ ಎಂದರೆ.. ಮಳೆಗೆ ಮಿಂದ ಭುವಿ ಸೂಸುವ ಸುಮಧುರ ಸೌಗಂಧ.. ಮಳೆ ನಿಂತ ಮೇಲೂ ಗರಿಕೆಯ ಮೇಲೆ ಉಳಿದು ಹೋಗುವ ಇಬ್ಬನಿ.. ನಿದ್ರೆಯಲ್ಲಿ ನಗುವ ಕಂದನ ತುಟಿಯಂಚಲಿ ಮಿನುಗುವ ನಕ್ಷತ್ರ.. ಬೆಳ್ಳಂಬೆಳಿಗ್ಗೆ ಇನಿದನಿಯಲಿ ಹಾಡುತ್ತಾ ಆಗಸದೆತ್ತರ ಹಾರುವ ಹಕ್ಕಿಗಳ ಇಂಚರ.. ಮನಸ್ಸಲ್ಲೇ ಕೂಗುವ ದನಿಗೆ ಭಗವಂತನ ಅಸ್ತು ಲಭಿಸುವ ನಿಷ್ಕಲ್ಮಷ ಪ್ರಾರ್ಥನೆ.. ಸಾವಿರ ಸೋಲಿನ ನಡುವೆಯೂ ಬೆರಳು ಹಿಡಿದು ನಡೆಸುವ ಸ್ಪೂರ್ತಿ.. ದಟ್ಟ ಕತ್ತಲ ಇರುಳಿನಲ್ಲಿಯೂ ತಣ್ಣನೆಯ ಬೆಳದಿಂಗಳ ಸೂಸುವ ಶಶಾಂಕ.. ಉಪ್ಪೆಂದು ತಿಳಿದು ಸಹ ಕಡಲನ್ನೇ ಸೇರಬಯಸುವ ಸಿಹಿ ತೊರೆ..  ಪ್ರೀತಿ ಎಂದರೆ ದೋಚುವ ಅಲೆಗಳಿಂದಲೂ ಹೆಜ್ಜೆ ಗುರುತುಗಳನ್ನು ಮಾಸಲಾಗದಂತೆ ಮನಸ್ಸಲ್ಲೇ ನೆನಹುಗಳಾಗಿ ಬಚ್ಚಿಟ್ಟುಕೊಂಡ ರಹಸ್ಯ.. ಅಲ್ಲವೇನೋ ಹುಡುಗ..?? ಇಂತಹ ಅತ್ಯಮೂಲ್ಯ ಪ್ರೀತಿಯನ್ನು ಹರ್ಷದಿ ಪರಿಪರಿಯಾಗಿ ನನಗೆ ಕಲಿಸಿಕೊಟ್ಟ ಆರಾಧ್ಯ ನೀನು. ಈಗ ನೀನೇ ಆ ಪ್ರೀತಿಯಿಂದ ವಿಮುಖನಾಗಿರುವಾಗ ನನ್ನ ಪಾಡು ಏನೆಂದು ಅರುಹಲಿ..!

ನನ್ನ ಪ್ರೀತಿಯಲ್ಲಿ ಕಾರಣಗಳು ನೂರಾರು ಇರಬಹುದು. ಸ್ವಾರ್ಥಿ ನಾನು!! ಪ್ರತಿಯೊಂದಕ್ಕೂ ನಿನ್ನನ್ನೇ ಅವಲಂಬಿಸಿದ್ದೆ. ಎಲ್ಲರೂ ದೇವರ ಮುಂದೆ ಕೋರಿಕೆಯನ್ನು ಕೇಳಿದರೆ, ನನ್ನ ಕೋರಿಕೆಗೂ ಮುನ್ನ  ಎಲ್ಲವನ್ನೂ ಮೊಗೆದು ಕೊಡುವ ನಿನ್ನನ್ನೇ ದೈವದಂತೆ ಆರಾಧಿಸುವದರಲ್ಲಿ ತಪ್ಪೇನಿದೆ ಹೇಳು.. ಇಲ್ಲಿಯವರೆಗೂ ನಿನ್ನ ಕ್ಷೇಮದ ಹೊರತು ಬೇರೆನೂ ಕೇಳಿಕೊಂಡವಳಲ್ಲ ನಾನು, ಏಕೆಂದರೆ ನನ್ನ ಎಲ್ಲಾ ಕೋರಿಕೆಗೂ ಮುನ್ನ ನಾನು ಬಯಸಿದ್ದನ್ನು ನನ್ನ ಮುಂದೆ ತಂದಿಡುತ್ತಿದ್ದ ನೀನು ಜೊತೆಗಿದ್ದರೆ ಬಾಳು ಸಂಪೂರ್ಣ ಎಂದುಕೊಳ್ಳುವ ಪರಮಸ್ವಾರ್ಥಿ ನಾನು...

ಹೌದು ಗೆಳೆಯ.. ಮೊದಲ ಬಾರಿಗೆ ನೀ ನನ್ನ ಬೆರಳು ಹಿಡಿದಾಗ ಪೂರ್ಣ ಚಂದ್ರನೇ ಕೈಗೆ ಸಿಕ್ಕಷ್ಟೇ ಸಂತೋಷ! ನೀ ನನ್ನ ಬಾಳ ಬೆಳಕು, ನೀ ಜೊತೆಗಿದ್ದರೆ ಜಗವನ್ನೇ ಎದುರಿಸಿ ಗೆಲ್ಲುವ ಹುಚ್ಚು ಹುಮ್ಮಸ್ಸು, ಬದುಕಿನ ಅರ್ಥವೇ ಗೊತ್ತಿರದ ನನಗೆ ಬದುಕೆಂದರೆ ಏನೆಂದು ತೋರಿಸಿದೆ, ಯಾರಿಗೂ ಪ್ರವೇಶವಿಲ್ಲದ ನಿನ್ನ ಹೃದಯದ ಕೋಣೆಗೆ ನನ್ನನ್ನು ಆಮಂತ್ರಿಸಿ ಕೃತಾರ್ಥಳಾಗಿಸಿದೆ.. ಕತ್ತಲೆಯ ಸೆರೆಯಿಂದ ಬಿಡುಗಡೆ ಮಾಡಿ ಬೆಳಗಿನ ಆಗಸವಾದೆ, ನನ್ನ ಪಾಲಿನ ಸೂರ್ಯನಾದೆ, ಕಾರಿರುಳ ನಡುವಲ್ಲೂ ತಂಪು ಬೆಳದಿಂಗಳಾದೆ. ಬೆಳಕು ಚೆಲ್ಲುವ ಸೂರ್ಯನಿಗೆ ಮಂಕು ಕವಿದರೆ, ನನ್ನ ಪಾಲಿಗೆ ಮತ್ತದೆ ಕತ್ತಲೆಯೇ ಶಾಶ್ವತವೇ?  ಈಗ ಎದುರಿದ್ದು ಕೈಗೆಟುಕದ ಚಂದ್ರನಾಗಿರುವ ನಿನ್ನನ್ನು ನೋಡಲು ದಿನಗಳ ಸುಂಕ ಪಾವತಿಸಬೇಕೇ?

ನನ್ನ ಕಿವಿ ಹಿಡಿದೆಳೆದು ನೀ ಕಾಡಿದಾಗಲೂ ಬೇಸರವಾಗಿರಲಿಲ್ಲ, ನನ್ನಾಟಿಕೆಗಳನ್ನು ಮುರಿದು ನೀ ನಕ್ಕಾಗಲೂ ಬೇಸರವಾಗಿರಲಿಲ್ಲ. ನನ್ನಂತೆ ನಟಿಸಿ ನೀ ಅಣುಗಿಸಿದಾಗಲೂ ಬೇಸರವಾಗಿರಲಿಲ್ಲ. ನಾ ಕಟ್ಟಿದ ಮರಳಿನ ಗೂಡನ್ನು ನೀ ಕಾಲಿಂದ ತುಳಿದು ಓಡಿ ಹೋಗಿ ಚಪ್ಪಾಳೆ ತಟ್ಟಿದಾಗಲೂ ಬೇಸರವಾಗಿರಲಿಲ್ಲ. ನನ್ನೆರಡು ಜಡೆಗಳನ್ನು ಕೊಂಬು ಮಾಡಿ ನೀ ರೇಗಿಸಿದಾಗಲೂ ಬೇಸರವಾಗಿರಲಿಲ್ಲ.
ಆದರೆ ಇಂದು ನಾನು ಯಾರೆಂಬುದನ್ನೇ ಮರೆತು ನನ್ನನ್ನೇ ನೀ ಅಪರಿಚಿತಳನ್ನಾಗಿ ಕಾಣುತಿರುವಾಗ ಅದೇಕೋ ದುಃಖ ತಡೆಯಲಾಗುತ್ತಿಲ್ಲ ಕಣೋ ಇನಿಯ...

ಮನಸ್ಸಿನ ಪ್ರತಿ ಭಾವನೆಗಳನ್ನು ಹೇಳದೆ ಅರಿಯುವ ನಿನ್ನ ಮುಂದೆ ಇನ್ನೂ ಹೇಗೆ ನನ್ನ ಪ್ರೀತಿಯನ್ನು ತೋರಿಕೊಳ್ಳಬೇಕೋ ನನಗೆ ತಿಳಿಯುತ್ತಿಲ್ಲವೋ.. ನಾನು ಹೇಳುವ ಮುನ್ನವೇ ನನ್ನ ಮನದ ಪ್ರತಿ ಮಾತನ್ನು ಅರಿಯುವ ನಿನ್ನ ಮನಸ್ಸನ್ನೇ ಒಮ್ಮೆ ಶಂಕಿಸಿ ಪರೀಕ್ಷೆಗೊಡ್ಡಿದ್ದೆ ನೆನಪಿದೆಯಾ..? ಮಧ್ಯದಲ್ಲೊಂದು ರಟ್ಟಿನ ಗೋಡೆ ಕಟ್ಟಿ ನಾನು ಬರೆಯುವ ರಂಗೋಲಿಯನ್ನೇ ನೀನು ಬರೆಯಬೇಕೆಂದು ಸವಾಲೆಸೆದಿದ್ದೆ! ನೀನು ಅಮಾಯಕನಂತೆ ನಕ್ಕು 'ನನ್ನಿಂದ ಸಾಧ್ಯವಿಲ್ಲ ಬಿಡು, ನೀನೇ ಗೆದ್ದೆ' ಎಂದು ಅಣುಗಿಸಿಯೇ ರಂಗೋಲಿ ಬರೆಯಲು ಮುಂದಾಗಿದ್ದೆ. ನಾನು ಬಲಗಡೆಗೆ ನೀನು ಎಡಗಡೆಗೆ ಒಬ್ಬರನ್ನೊಬ್ಬರು ಇಣುಕಿ ನೋಡದೆ ಬರೆದ ರಂಗೋಲಿಯಲ್ಲಿ ಎರಡು ನವಿಲುಗಳು ಗರಿಬಿಚ್ಚಿ ಕುಣಿವಂತೆ ಎದುರು ಬದುರಾಗಿದ್ದವು ಅಂದು. ನಾನು ಬರೆದ ನವಿಲಿನ ಚಿತ್ರವನ್ನೇ ನೀನೂ ಸಹ ಬರೆದಿದ್ದು (ವಕ್ರ ವಕ್ರವಾಗಿ:p)  ಆಶ್ಚರ್ಯವಾಯಿತಾದರೂ ಅದನ್ನು ತೋರಗೊಡದೆ ನಿನ್ನ ನವಿಲಿನಲ್ಲಿದ್ದ ವಾಸ್ತು ದೋಷಗಳನ್ನ ಎತ್ತಿ ತೋರಿಸಿ ಕಾಟ ಕೊಟ್ಟಿದ್ದೆ. ಅದಕ್ಕೆ ನೀನು 'ನಿನ್ನ ನವಿಲು ಎಡಗಡೆಗೆ ನೋಡುತ್ತಿದೆ. ಆದರೆ ನನ್ನ ನವಿಲು ಬಲಗಡೆಗೆ ತಿರುಗಿ ಅದಕ್ಕೆ ಮುದ್ದು ಮಾಡುತ್ತಿದೆ' ಎಂದು ಕಣ್ ಮಿಟುಕಿಸಿ ನವಿಲು ಸಹ ನಾಚುವಂತೆ ಮಾಡಿದ್ದೆ.]

ಇದನ್ನು ಓದಿದಾಕ್ಷಣವೇ ಹರ್ಷ ಕೆಳಗಿನ ರಂಗೋಲಿಯನ್ನು ತುಳಿಯದಂತೆ ಹೆಜ್ಜೆ ಹಿಂದಿಕ್ಕಿ ಅದನ್ನು ದಿಟ್ಟಿಸುತ್ತ ನಿಂತಿದ್ದ. ಅವನ ಮನದ ಮುಗಿಲಲ್ಲಿ ಘಟನೆಗಳ ಅಸ್ಪಷ್ಟ ಹಾವಳಿ.. ಇದೇ ನವಿಲುಗಳ ಸಮಕ್ಷಮದಲ್ಲೇ ಅವಳ ಬೆರಳಿಗೆ ಉಂಗುರ ತೊಡಿಸಿದಂತೆ, ಬಣ್ಣಗಳ ಎರಚಾಟವಾಡುತ್ತಿರುವಂತೆ ಭಾಸವಾಗುತ್ತಿತ್ತು‌. ನಿಜವಾ? ಭ್ರಮೆಯಾ? ಅವಳ ಮುಖ ಮಾತ್ರ ಪ್ರಶ್ನಾರ್ಹ.. ಅವನ ಯೋಚನಾಲಹರಿ ಹರಿದಾಡುವಾಗಲೇ ಮಾನ್ವಿ ಮತ್ತು ಪ್ರಸನ್ನ ಓಡಿ ಬಂದು ಅದನ್ನು ಗಮನಿಸಿದ್ದರು. ಅವರ ಪರಿವಿಲ್ಲದೆ ಹರ್ಷ ಪತ್ರ ಓದಲು ಮುಂದುವರೆಸಿದ..

[ಈ ರೀತಿ ಅದಮ್ಯ ಪ್ರೀತಿಯನ್ನು ಧಾರೆಯೆರೆದ ನೀನೇ,, ನನ್ನೊಲವನ್ನು ಮರೆಯಲು ಹೇಗೆ ಸಾಧ್ಯವೋ..!

'ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ' ಅನ್ನುವಂತೆ ಪ್ರತಿ ಮುಂಜಾವಿನ ಹೊಸ ಹುಟ್ಟುವಿಕೆಗೂ ದೇವರು ನಮಗೆ ಎರಡು ಉಡುಗೊರೆಗಳನ್ನು ವರವಾಗಿ ಕೊಡುವನಂತೆ.. ಒಂದು, ಈ ಸೊಗಸಾದ ಪ್ರಪಂಚವನ್ನು ನೋಡಲು ತೆರೆದುಕೊಳ್ಳುವ ನಮ್ಮ ಈ ಕಂಗಳು! ಮತ್ತೊಂದು, ........]

ಅಲ್ಲಿಗೆ ಒಂದು ಪುಟ ಮುಗಿದಿತ್ತು. ಪುಟವನ್ನು ತಿರುಗಿಸುತ್ತಲೇ, ಮೆಲ್ಲಗೆ ರಂಗೋಲಿಯನ್ನು ದಾಟಿ ಒಳಗೆ ನಡೆದ ಹರ್ಷ. ಈ ಮಧ್ಯೆ ಪ್ರಸನ್ನ ಕೇಳಿದ 'ಯಾರು ಬರೆದ ಲೆಟರ್ ಬ್ರೋ?'. ಹರ್ಷನ ಮನಸ್ಸು ಅಲ್ಲಿರದೆ ಮಾತು ಸಹ ಕಿವಿಗೆ ಹಾಕಿಕೊಳ್ಳದೆ ಮುಂದೆ ನಡೆದಿದ್ದ. ಮಾನ್ವಿ ಪರಿಸ್ಥಿತಿ ಅತಂತ್ರ. ಇಬ್ಬರೂ ಮುಖ ಮುಖ ನೋಡಿಕೊಂಡರು. ಅವಳು ತಿರಸ್ಕಾರದಿಂದ ಮೂಗು ಮುರಿದು ಮುಖ ತಿರುವಿದಳು. ಅವನು 'ನಿಧಾನ‌.. ನಿಧಾನ.. ಮೂಗೇ ಕಳಚಿ ಬಿದ್ರೆ ಕಷ್ಟ' ಎಂದು ವ್ಯಂಗಮಾಡುತ್ತ   ಅವಳ ಹಿಂದೆ ನಡೆದ.

ಒಳಗಿನ ಡ್ರಾಯಿಂಗ್ ಹಾಲ್‌ನ ಮಾರ್ಬಲ್ ಫ್ಲೋರ್ ಮೇಲೆ ಕಾಲಿಡುತ್ತಿದ್ದಂತೆ, ಜಗಮಗಿಸುವ ಸೀಲಿಂಗ್ ಬೆಳಕಿನ ಮುಕ್ತ ಸ್ವಾಗತ. ಆದರೆ ಆಶ್ಚರ್ಯಗೊಳಿಸಿದ್ದು ಅದಲ್ಲ,  ಗೋಡೆಯ ತುಂಬಾ ಸಾಲು ಸಾಲು ದೊಡ್ಡ ಗಾತ್ರದ ಫೋಟೋಗಳು!! ಹರ್ಷನ ಚಿಕ್ಕಂದಿನಿಂದ ಹಿಡಿದು ಇಲ್ಲಿಯವರೆಗಿನ ಎಲ್ಲ ಬಗೆಯ ಫೋಟೋಗಳನ್ನು ಕ್ರಮವಾಗಿ ಜೋಡಿಸಲಾಗಿತ್ತು. ಪ್ರತಿ ಚಿತ್ರದಲ್ಲೂ ನಗುಮೊಗದ ಹರ್ಷನ ಪ್ರತಿಬಿಂಬ. ಕಂಗಳಲಿ ಅಪ್ಯಾಯತೆ, ತುಟಿಯಂಚಲಿ ನಗುವಿನ ಹೂರಣ, ಚಾಚಿದ ನಾಲಿಗೆಯಲ್ಲಿ ತುಂಟತನ, ವಿವಿಧ ವೇಷಭೂಷಣಗಳು, ವಿವಿಧ ಆಕಾರದ ಭಂಗಿಗಳಲ್ಲಿ ನಿಂತು ತೆಗೆಸಿಕೊಂಡ ಛಾಯಾಚಿತ್ರಗಳು. ಡ್ರಾಯಿಂಗ್ ಹಾಲ್ನಿಂದ ಡೈನಿಂಗ್ ಹಾಲ್, ಮೆಟ್ಟಿಲುಗಳ ಸರಣಿ, ಅಲ್ಲಿಂದ ಬೆಡ್ ರೂಂ ವರೆಗಿನ ದಾರಿಯುದ್ದಕ್ಕೂ ರಾರಾಜಿಸುತ್ತಿತ್ತು ಅವನ ನಗುವಿನ ಸಂಭ್ರಮ. ಅವನ್ನೆಲ್ಲ ನೋಡುತ್ತ ಅಡಿಗಡಿಗೂ ಪುಳಕಗೊಂಡಿದ್ದ ಹರ್ಷ. ಈ ಎಲ್ಲಾ ಚಿತ್ರಗಳಲ್ಲಿರುವುದು ನಾನೇನಾ ಎಂಬಷ್ಟು ಆಶ್ಚರ್ಯ.. ಪ್ರತಿ ಪೋಟೋವನ್ನು ಭಾವಪರವಶನಾಗಿ ಸವರುತ್ತ ಮಂತ್ರಮುಗ್ಧನಾಗಿದ್ದ. ಪ್ರತಿ ಚಿತ್ರದ  ಹಿಂದೆಯೂ ಒಂದೊಂದು ನೆನಪುಗಳ ಸುರುಳಿ. ಪೂರ್ಣ ನವಿರಾಗಿ ಬಿಡಿಸಲಾಗದಿದ್ದರೂ ತುಣುಕು ತುಣುಕಾಗಿ ಮಸುಕು ಮಸುಕಾಗಿ ಗೋಚರಿಸಲಾರಂಭಿಸಿತ್ತು. ಜೊತೆಗಿದ್ದ ಇಬ್ಬರೂ ಸ್ತಬ್ಧ ಸ್ತಬ್ಧ. ಹರ್ಷ ಮೆಟ್ಟಿಲೇರಿ ಹೋದ ನಂತರ ಮಾನ್ವಿ, ಡೈನಿಂಗ್ ರೂಂನ ಎದುರಿಗೆ ಬಂದ ಡೇವಿಡ್ ಕೆನ್ನೆಗೆ ಛಟಾರನೇ ಬಾರಿಸಿ, 'ಅವಳನ್ನ ಒಳಗಡೆ ಯಾಕೆ ಕರೆದುಕೊಂಡೆ?' ಎಂದು ದಬಾಯಿಸಿದಳು. 'ನಿನ್ನೆ ರಾತ್ರಿ ಕನ್ನಡಿ ಒಡೆದದ್ದು, ಹಾಸಿಗೆ ಸುಟ್ಟಿದ್ದಕ್ಕೆ ನೀವೇ ರೂಂ ಡೆಕೊರೇಟರ್ಸ್ ಕರೆಸಿದ್ದು ಅಂದುಕೊಂಡೆ. ವಾಚ್‌ಮನ್ ಕೂಡ ನೀವೇ ಫೋನ್‌ಲ್ಲಿ ಹೇಳಿದ್ದಿರೆಂದ, ಅದಕ್ಕೆ..' ಎಂದು ರಾಗವೆಳೆದ ಡೇವಿಡ್. ಅವಳ ದಬ್ಬಾಳಿಕೆಯನ್ನು ನೋಡಿ ಪ್ರಸನ್ನ ಹುಬ್ಬು ಗಂಟಿಕ್ಕಿ, ಮುಷ್ಟಿ ಬಿಗಿಹಿಡಿದು ತಾಳ್ಮೆಯಿಂದ ಹರ್ಷನನ್ನ ಹಿಂಬಾಲಿಸಿದ. ಎಲ್ಲಾ ಫೋಟೋಗಳನ್ನು ಅವಲೋಕಿಸುತ್ತ ಬೆಡ್ ರೂಂ ಎದುರಿಗೆ ಬಂದ ಹರ್ಷ ಮತ್ತೆ ಪತ್ರದಲ್ಲಿ ಕಣ್ಣಾಡಿಸಿದ..

[ಹ್ಮ.... ಗೊತ್ತಾಯ್ತಲ್ಲ,, ಪ್ರತಿದಿನ ದೇವರು ಕೊಡುವ ಮತ್ತೊಂದು ಕೊಡುಗೆ..? ನಿನ್ನ ಈ ನಗು ಕಣೋ.. ಇದನ್ನು ಯಾವತ್ತೂ ಯಾವುದೇ ಕಾರಣಕ್ಕೂ ಎಂತಹುದೇ ಪರಿಸ್ಥಿತಿಯಲ್ಲಿಯೂ ಕಳೆದುಹೋಗಲು ಬಿಡಬೇಡ. ಆ ನಗುವೇ ದೈವದ ಪ್ರತೀಕ. ನಗುವೇ ಧೈರ್ಯದ ಪ್ರತೀಕ..
ಅದರೊಂದಿಗೆ ಇನ್ನೊಂದು ಮಹತ್ವದ ವಿಚಾರ, 'ಪರರ ಸ್ವತ್ತು ಪಾಷಾಣಕ್ಕೆ ಸಮಾನವಂತೆ' ನಿನ್ನದಲ್ಲದ ವಸ್ತುವಿನ ಆಸೆ ನಿನಗ್ಯಾಕೋ ಹುಡುಗ, ಬಿಸಾಕು ಅದನ್ನ.. ನಿನ್ನ ಮೂಗಿನ ಮೇಲಿರುವುದನ್ನ! ]

ತಕ್ಷಣ ಹರ್ಷ ತನ್ನ ಮೂಗಿನೆಡೆ ಕಣ್ ತಗ್ಗಿಸಿ, ಮುಟ್ಟಿ ನೋಡಿ ಕೈಯಿಂದ ಎರಡು ಬಾರಿ ಒರೆಸಿ, ಮತ್ತೆ ಪತ್ರದಲ್ಲಿ ಮುಳುಗಿದ..

[ಅಯ್ಯೋ ಪೆದ್ದು.. ನಾನು ಹೇಳಿದ್ದು, ನಿನ್ನ ಮೂಗಿನ ತುದಿಯಲ್ಲಿ ಕೂತಿರೋ ಕೋಪದ ಬಗ್ಗೆ! ಹೇಗೆ ಕೆಂಪಗಾಗಿದೆ ನೋಡು ಸಿಟ್ಟನ್ನೇ ಧರಿಸಿಕೊಂಡು! (ಅವನ ತುಟಿಯಂಚಲಿ ಮಂದಹಾಸ) 'ಶಾಂತಿ ಪರರ ವೈರಿಯಾದರೆ, ಕೋಪ ನಮ್ಮ ವೈರಿಯಂತೆ' ನನಗೆ ಬುದ್ದಿ ಹೇಳುತ್ತಿದ್ದ ನೀನೇ ಹೀಗೆ ಕೋಪದಿಂದ ಕುದಿದರೆ ಹೇಗೆ ಹೇಳು.. ಸದಾ ನಗುತ್ತಿದ್ದ ಮುಖದಲ್ಲಿ ಈ ಗಾಂಭೀರ್ಯ ಅದೇಕೋ,, ನಕ್ಕು ಬಿಡೋ ಹುಡುಗ ಮನಸಾರೆ.. ನೀನು ಮಗುವಂತೆ ನಗುವಾಗ ನಕ್ಷತ್ರದಂತೆ ಹೊಳೆಯುವ ನಿನ್ನ ಕಣ್ಣ ಆ ಬೆಳಕಲ್ಲಿ ನಾಳೆಯಿಂದ ನಾನು ಮುಂಜಾವು ಕಾಣಬೇಕು ಆದೀತಾ??  ನಿನಗಾಗಿ ನನ್ನ ಕಡೆಯಿಂದ ಚಿಕ್ಕ ಸರ್ಪ್ರೈಜ್ ಕಾಯುತ್ತಿದೆ ನೋಡು.‌.]

ಹರ್ಷನ ಕುತೂಹಲ ಕೆರಳಿತು‌. ಮುಚ್ಚಿದ ರೂಂ ಬಾಗಿಲು ತೆರೆದ, ಅವಳು ಬಂದುಹೋದ ಗುರುತಿನಂತೆ ಕೋಣೆಯ ತುಂಬೆಲ್ಲಾ ಅವಳ ಸೌಗಂಧವೇ ಹರಡಿತ್ತು. ಕಾಲತುದಿಯಲ್ಲಿ ಅವಳ ಮುಡಿಯಿಂದ ಉದುರಿದ ದುಂಡುಮಲ್ಲಿಗೆಯ ಹೂವೊಂದು ಕಿರುನಕ್ಕಿತು. ಅದನ್ನು ಅಪ್ಯಾಯವಾಗಿ ಎತ್ತಿಕೊಂಡ. ಆಘ್ರಾಣಿಸಿದ. ಹೂವಿನ ನಗು ಅವನ ತುಟಿಯಲ್ಲಿ ಪಸರಿಸಿತು. ಕೋಣೆಯನ್ನು ಪ್ರವೇಶಿಸಿದ. ನಿನ್ನೆಯವರೆಗಿನ ತನ್ನದೇ ಕೋಣೆಯಾ ಇದು? ವಿಸ್ಮಯ! ಆಶ್ಚರ್ಯ! ಕಣ್ಣರಳಿಸಿ ನೋಡುತ್ತಲೇ ಇದ್ದುಬಿಟ್ಟ. ರೂಮಿನ ಅವತಾರವೇ ಬದಲಾಗಿ ಹೋಗಿತ್ತು. ತಿಳಿನೀಲಿ ಮತ್ತು ಬಿಳಿ ಬಣ್ಣದ ಕರ್ಟನ್‌ಗಳು, ಒಪ್ಪವಾಗಿರಿಸಿದ ಹಾಸಿಗೆ, ನಗುವಿನ ಆಕಾರದ ದಿಂಬುಗಳು, ಶೋಕೆಸ್‌ನಲ್ಲಿ ಜೋಡಿಸಿಟ್ಟ ಪುಟ್ಟ ಫ್ಯಾಂಟಮ್ ಮತ್ತು ಸೂಪರ್ ಮ್ಯಾನ್ ಗೊಂಬೆಗಳು, ಪುಟ್ಟ ರೇಸ್ ಬೈಕ್ ಮತ್ತು ಕಾರುಗಳು, ರ್ಯಾಕ್‌ನಲ್ಲಿ ಜೋಡಿಸಿದ್ದ ಕೆಲವು ಪುಸ್ತಕಗಳು, ಕೆಲವು ಮ್ಯೂಸಿಕ್ ಅಲ್ಬಮ್‌ಗಳು, ರೂಂನಲ್ಲಿ ಅಲ್ಲಲ್ಲಿ ತೂಗಾಡುತ್ತಿದ್ದ ಚೈನೀಸ್ ಬೆಲ್ಸ್, ಕೋಣೆಯ ನೀಲಿ ಗೋಡೆಯ ಮೇಲೆ ಚಿಕ್ಕ ಚಿಕ್ಕ ನಕ್ಷತ್ರಗಳ ರಾಶಿ, ಮಧ್ಯದಲ್ಲಿ ಅರ್ಧ ಚಂದಿರ.. ಅದರ ಮೇಲೆ ಕುಳಿತ ರೆಕ್ಕೆ ಬಿಚ್ಚಿ ಕೈಯಲ್ಲಿ ಮ್ಯಾಜಿಕ್ ಸ್ಟಿಕ್ ಹಿಡಿದ ಪುಟ್ಟ ಏಂಜಲ್ ನ ಸುಂದರವಾದ ಚಿತ್ರ. ಅವನ ಮನಸ್ಸು ಪ್ರಫುಲ್ಲ.
ಹೊಸ ಕನ್ನಡಿಯ ಮೇಲೆ ಸ್ಮೈಲ್ ಪ್ಲೀಸ್ ಎಂದು ಕೈಯಿಂದ ಸೂಚಿಸಿ ಕಣ್ಣು ಹೊಡೆದ ಮಿಕ್ಕಿ ಮೌಸ್‌ ಸ್ಟಿಕರ್.
ಡ್ರೆಸ್ಸಿಂಗ್ ಟೇಬಲ್ ಮೇಲೆ.. ಈ ಮೊದಲು ಅವನ ಬಹುಇಷ್ಟದ ಪರ್ಫ್ಯೂಮ್ ಬಾಟಲ್, ಅದರ ಕೆಳಗೆ ವಾಟರ್ ಪಾರ್ಕ್‌ನ ಎರಡು ಟಿಕೆಟ್‌ಗಳು. ಪಕ್ಕದಲ್ಲೊಂದು ಕೆಂಪು ಹೂಗುಚ್ಚ. ಮತ್ತೊಂದು ಗಿಫ್ಟ್ ಬಾಕ್ಸ್. ತನ್ನ ಕೈಯಲ್ಲಿದ್ದ ಪತ್ರವನ್ನು ಪಕ್ಕಕ್ಕಿಟ್ಟು ಮೊದಲು ಗಿಫ್ಟ್ ಬಾಕ್ಸ್ ಬಿಡಿಸಿದ. ಅದರೊಳಗಿತ್ತು ಷಟ್ಕೋನಾಕಾರದ ಸೊಬರ್ ಬ್ಲ್ಯೂ ಬಣ್ಣದ ಫಿಜ಼ೆಟ್ ಸ್ಪಿನ್ನರ್!! ಇದನ್ನು ಸ್ಟ್ರೆಸ್ ಕಡಿಮೆ ಮಾಡಲು, ಕೋಪವನ್ನು ನಿಗ್ರಹಿಸಲು ಕೈಯಲ್ಲಿ ಹಿಡಿದು ತಿರುಗಿಸುವುದು ರೂಢಿ. ಅದನ್ನೊಮ್ಮೆ ಕೈಯಲ್ಲೆತ್ತಿ ಮೃದುವಾಗಿ ತಿರುಗಿಸಿದ. ಮನಸ್ಸಿಗೇನೋ ತೃಪ್ತಭಾವ. ಅದನ್ನು ಕೆಳಗಿಟ್ಟು ಅಲ್ಲೇ ಇದ್ದ ಹೂಗುಚ್ಚವನ್ನೊಮ್ಮೆ ಕೈಯಲ್ಲಿ ತೆಗೆದುಕೊಂಡು ನೋಡುವಷ್ಟರಲ್ಲಿ ಅವನ ಕೈ ಬಿಗಿ ಹಿಡಿತಕ್ಕೆ ಅದರಲ್ಲಿದ್ದ ನೀರು ಚುಮುಕ್ಕನೆ ಅವನ ಮುಖಕ್ಕೆ ರಾಚಿತು. ಕ್ಷಣ ಚಕಿತನಾದರೂ ತುಟಿಯಲ್ಲಿ ವಿನಾಕಾರಣದ ನಗುವೊಂದು ಚಿಮ್ಮಿತ್ತು. ತಕ್ಷಣ ಅದನ್ನು ದೂರ ಹಿಡಿದು ಕೈಯಿಂದ ಮುಖ ಒರೆಸಿಕೊಳ್ಳುತ್ತ ಅದನ್ನು ಕೆಳಗಿರಿಸಿದ. ಅದರ ಕೆಳಗಿನ ಪುಟ್ಟ ನೋಟ್ ಬಿಡಿಸಿ ಓದಿದ‌..

["ಸಾರಿ... ಕಣೋ:p  ನೆನಪಿದೆಯಾ, ಮೊದಲೆಲ್ಲ ನೀನು ಹೀಗೆ ಏನೇನೋ ತರಲೆ ಮಾಡಿ ನನ್ನನ್ನು ಗೊಳಾಡಿಸುತ್ತಿದ್ದೆ. ಈಗ ನಿನ್ನ ನೆನಪುಗಳನ್ನು ಕೆದಕಲು ಅದೇ ತಂತ್ರಗಳನ್ನು ನಿನ್ನ ಮೇಲೆ ಪ್ರಯೋಗಿಸಿಬೇಕಾಗಿದೆ. ಇನ್ನೂ ಈ ರೀತಿಯ ಅಸ್ತ್ರಗಳು ತುಂಬಾ ಇವೆ. ನಿನಗೆ ಅನುಭವಿಸಲು ಕಷ್ಟವೆಂದಾದರೆ ಬೇಗ ನನ್ನ ಜ್ಞಾಪಿಸಿಕೊಳ್ಳೊ ಹುಡುಗ.." ]
ಅವನಿಗೇಕೋ ನಗು ತಡೆಯಲಾಗಲಿಲ್ಲ. ನಕ್ಕು ಬಿಟ್ಟ ಮನಸಾರೆ.. ಅದೆಷ್ಟೋ ಮಾಸಗಳ ನಂತರ.. ವಿನಾಕಾರಣ.. ನಿಶ್ಚಿಂತನಾಗಿ.. ಮತ್ತೆ ಬದಿಗಿರಿಸಿದ ಪತ್ರವನ್ನು ಎತ್ತಿಕೊಂಡ..

[ಇಷ್ಟೆಲ್ಲಾ ಬರೆದ ನಾನ್ಯಾರೆಂದು ತಿಳಿಯುವ ಕುತೂಹಲ ಇಲ್ಲವೇ? ಖಂಡಿತ ಇರುತ್ತಲ್ಲವಾ..

ಇನ್ನೂ ಕೆಲವೇ ದಿನಗಳಲ್ಲಿ ನಿನ್ನೊಂದಿಗೆ ಕಾಯಾ ವಾಚಾ ಮನಸಾ ನನ್ನ ಸಂಪೂರ್ಣ ಜೀವನವನ್ನು ಹಂಚಿಕೊಳ್ಳಲು ಸಿದ್ದಳಾಗಿರುವ ನಿನ್ನ ಭಾವಿ ಅರ್ಧಾಂಗಿ ಕಣೋ.. ನಾವಿಬ್ಬರೂ ಏಳು ಜನ್ಮದ ನಂಟಸ್ತಿಕೆಯ ಹೆಸರಿಗೆ ಭಾಜನರಾಗಲು ಹೊರಟವರು. ಏಳು ಹೆಜ್ಜೆಗಳನ್ನು ಹಾಕುವಾಗ ಏಳೇಳು ಜನ್ಮಗಳು ಜೊತೆಗಿರುವ ಭಾಷೆ ಕೊಡುವ ಮೊದಲು ನಿನ್ನ ಮನದಲ್ಲಿ ನನ್ನ ಪ್ರತಿಬಿಂಬವನ್ನು ಕಾಣುವಾಸೆ.. ಕೊರಳಿಗೆ ಮಾಂಗಲ್ಯದ ಮೂರು ಗಂಟು ಬಿಗಿಯುವಾಗ, ಹಣೆ ಮೇಲೆ ಮುತ್ತೈದೆಯ ಗುರುತೊಂದು ಅಲಂಕರಿಸುವಾಗ, ಕಾಲ ಬೆರಳಿಗೆ ಕಾಲುಂಗುರದ ಆಭೂಷಣವಾಗುವಾಗ ನಿನ್ನ ಕಣ್ಣಲ್ಲಷ್ಟೇ ಅಲ್ಲ, ನಿನ್ನ ಮನದ ಪ್ರತಿ ಕೋಣೆಯಲ್ಲೂ, ನಿನ್ನುಸಿರ ಧಮನಿಯಲ್ಲೂ, ನನ್ನನ್ನು ಕಾಣುವಾಸೆ, ನೀ ನನಗೆ ತೋರಿದ ಕಲಿಸಿದ ಅದೇ ಪ್ರೀತಿಯಲ್ಲಿ ಮತ್ತೊಮ್ಮೆ ಮಿಂದೆಳುವಾಸೆ.‌. (ಅವನ ಕಣ್ಣುಗಳು ಮಾನ್ವಿಯನ್ನು ಹುಡುಕಾಡಿದವು, ಅವಳಿರಲಿಲ್ಲ)

ಮದುವೆಯ ಕೊನೆಯ ಕ್ಷಣದವರೆಗೂ ನಿನ್ನ ನೆನಪುಗಳಲ್ಲಿ ಅವಿತಿರುವ ನನ್ನ ಪ್ರೀತಿಯನ್ನು ಕೆಣಕುವ ಚಿಕ್ಕ ಕೋರಿಕೆ.. ಸದಾ ಕೆಲಸದಲ್ಲಿ ವ್ಯಸ್ತವಾಗಿರುವ ನೀನು ನನಗಾಗಿ ಕೊಂಚ ಸಮಯವನ್ನು ಮೀಸಲಿರಿಸಿದರೆ ಅದೇ ನೀನು ನನಗೆ ಕೊಡುವ ಮರುಕಾಣಿಕೆ.. ಕೊಡುತ್ತಿಯಲ್ಲವಾ?!!

ಇದನ್ನೆಲ್ಲ ನಾನು ನಿನಗೆ ನೇರವಾಗಿಯೇ ಹೇಳಬಹುದಿತ್ತು ಆದರೆ ಮಾತುಗಳು ಗಾಳಿಯೊಂದಿಗೆ ಕಳೆದು ಹೋಗುವಂತವು. ಆದರೆ ಅಕ್ಷರಗಳು ಮನದ ಪುಟದಲ್ಲಿ ಮಾಸದ ಹಸ್ತಾಕ್ಷರ ಹಾಕಿ ಎಂದೂ ಮರೆಯಲಾಗದ ಅನುಭೂತಿಯನ್ನು ಕೊಡುವಂತವು. ಬರಹದ ಶಕ್ತಿಯೇ ಅದು.. ಪದಗಳ ಮಾಯಾಜಾಲಕ್ಕೆ ಮಾಂತ್ರಿಕತೆಗೆ ಸೋಲದ ಮನಸ್ಸಿಲ್ಲ.. ಒಂದೆರಡು ಕಾವ್ಯದ ಸಾಲುಗಳನ್ನು ಲಯವಾಗಿ ಹೇಳಿದರೆ ಎಂತಹ ಅಶಿಕ್ಷಿತಕನಿಗೂ ಅದರಲ್ಲಿ ಆಸಕ್ತಿ ಬರುವುದಂತೆ. ಅದಕ್ಕೆ ಈ ಹೊಸ ರೀತಿಯ ಭಿನ್ನಹ.. ಪ್ರತಿದಿನದ ಹೊಸ ಕೌತುಕ ಕೊಡುಗೆಗೆ ನಿನ್ನ ಸಮ್ಮತಿ ಇರುವುದೆಂದು ಭಾವಿಸಿರುವೆ..


                                    ಇಂತಿ ನಿನ್ನ ಪ್ರೀತಿಯ ಹುಡುಗಿ..]


ಇಡೀ ಪತ್ರವನ್ನು ಕನಿಷ್ಟ ಮೂರು ಬಾರಿ ಪಠಿಸಿ, ಧೀರ್ಘ ಶ್ವಾಸ ಎಳೆದುಕೊಂಡ ಹರ್ಷ. ಏನೋ ಹೇಳಲಾಗದ ಸಂತೋಷ ಸಂಭ್ರಮವೊಂದು ಅವನೊಳಗೊಳಗೆ ಪುಟಿಯುತ್ತಿತ್ತು. ಅವನ ಹಿಂದೆ ಬಂದ ಪ್ರಸನ್ನ ಕೋಣೆಯನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿ ನೋಡಿದ. ಥೇಟ್ ಹರ್ಷನ ಕೋಣೆಯದೇ ಛಾಪು! 'ಕೇವಲ ಒಂದು ಗಂಟೆಯೊಳಗೆ ಇಷ್ಟೆಲ್ಲಾ ಮಾಡಲು ಸಾಧ್ಯವಾ?! ಒಂದು ಘಳಿಗೆ ಕಣ್ಮುಂದೆ ಸ್ಮಶಾನ ಹಾದು ಹೋದಂತಾಗಿ ತಲೆ ಕೊಡವಿ 'ಪರಿ ಯು ಆರ್ ರಿಯಲಿ ಎ ಮ್ಯಾಜಿಶಿಯನ್!' ಮನದಲ್ಲಿ ಪ್ರಶಂಸೆ. ಆದರೆ ಆ ಪತ್ರದಲ್ಲಿ ಏನಿದೆ? ಕುತೂಹಲದಿಂದ ಅವನ ಭುಜಕ್ಕೆ ಕೈ ಹಾಕಿ ಒಂದೇ ಉಸಿರಲ್ಲಿ ಓದುತ್ತಾ ಹಿಂದಿನಿಂದ ಹಣೆ ಚಚ್ಚಿಕೊಂಡ. 'ಭಾವಿ ಅರ್ಧಾಂಗಿ?? ಇವನಿಗೆ ಹಳೆಯ ನೆನಪಾದ್ರೆ ಆ ಅರ್ಧಾಂಗಿ ಪರಿ! ಇಲ್ಲದಿದ್ದರೆ ಈ ಶೂರ್ಪಣಕಿ!'

ಅಷ್ಟರಲ್ಲಿ ಒಳಗೆ ಬಂದ ಮಾನ್ವಿಯನ್ನು ಆತ್ಮೀಯವಾಗಿ ಅಪ್ಪುಗೆ ಮಾಡಿ "ಥ್ಯಾಂಕ್ಯೂ ಸೋ ಮಚ್ ಮಾನು.. ನಿನ್ನೀ ಸರ್ಪ್ರೈಜ್ ತುಂಬಾನೇ ಇಷ್ಟವಾಯ್ತು ನನಗೆ.. ಇನ್ಮುಂದೆ ಮೊದಲಿನ ಹಾಗೆ ನಗ್‌ನಗ್ತಾ ಇರೋಕೆ ಟ್ರೈ ಮಾಡ್ತಿನಿ. ಎನ್ ಕೋಪ ಕೂಡ ಕಡಿಮೆ ಮಾಡ್ಕೊಳ್ತಿನಿ. ನನ್ನ ನೆನಪುಗಳನ್ನು ಮರಳಿಸೋಕೆ ನೀನು ಇಷ್ಟೆಲ್ಲಾ ಮಾಡ್ತಿರೋವಾಗ, ನಿನಗೋಸ್ಕರ ಸ್ವಲ್ಪ ಟೈಮ್ ಕೊಡೋಕಾಗಲ್ವಾ ನನಗೆ! ಇವತ್ತು ಸಂಜೆ ವಾಟರ್ ಪಾರ್ಕ್ ಪ್ರೋಗ್ರಾಂ ಫಿಕ್ಸ್ ಒಕೆ.." ಪ್ರೀತಿಯಿಂದ ಅವಳ ತಲೆ ತಡವಿದ. ಏನೂ ಅರಿಯದ ಅವಳ ಮುಖ ಗೊಂದಲಮಯ. ಆದರೂ ಮೇಲೆ ಹುಸಿನಗೆಯ ಲೇಪನ.
"ಶಾರ್ಟ್ ಸರ್ಕ್ಯೂಟ್ ‌ನಿಂದಾಗಿ ಮನೆಗೆ ಬೆಂಕಿ ಹೊತ್ತಿ ಎಲ್ಲಾ ಅಲ್ಬಮ್ ಸುಟ್ಟೋದ್ವು ಅಂತ ಹೇಳಿದ್ದೆಯಲ್ಲಾ.. ಮತ್ತೆ ಇವೆಲ್ಲ ಫೋಟೋ ಹೇಗೆ..?"

ಮಾನ್ವಿ ಪಾಡಂತೂ ಬಿಸಿ ತುಪ್ಪ ನುಂಗಿದಂತಾಗಿತ್ತು. ನುಂಗುವ ಹಾಗಿಲ್ಲ ಉಗುಳುವ ಹಾಗಿಲ್ಲ. ಪತ್ರದಲ್ಲಿ ಏನಿದೆಯೋ ಅದೂ ಗೊತ್ತಿಲ್ಲ. ಎಲ್ಲಾ ಅಯೋಮಯ. ಬಲೆಗೆ ಸಿಕ್ಕ ಮೀನಿನಂತೆ ಜೀವ ಹೊಡೆದುಕೊಳ್ಳತೊಡಗಿತ್ತು. ಗೊಂದಲದಿಂದ ಪ್ರಸನ್ನನ ಮುಖ ನೋಡಿದಳು. ಅವಳ ಪರಿಸ್ಥಿತಿ ಕಂಡು ಅವನಿಗೆ ಖುಷಿಯೋ ಖುಷಿ.
"ಇವನಿದ್ದಾನಲ್ಲ,, ಇವನ್ಹತ್ರ ಇದ್ವು ಇವೆಲ್ಲ ಫೋಟೋಸ್... ಇವನೇ ಕೊಟ್ಟ. ಅವನ್ನೆಲ್ಲ ಎನ್ಲಾರ್ಜ್ ಮಾಡ್ಸಿ, ಇಂಟಿರಿಯರ್ ಡೆಕೋರೆಶನ್ ಮಾಡಿಸಿ, ನಿನಗೆ ಸರ್ಪ್ರೈಜ್ ಕೊಡೊಣಾ ಅಂತ ನಾವು ಮಾತಾಡ್ಕೊಂಡಿದ್ದು ನಿನ್ನೆ." ಪ್ರಸನ್ನನೆಡೆ ಕೈ ಮಾಡಿ ಆ ಕ್ಷಣಕ್ಕೆ ಬಾಯಿಗೆ ಬಂದದ್ದನ್ನು ಹೇಳಿ ಎದೆಯ ಮೇಲಿನ ಭಾರ ಇಳಿಸಿದಂತೆ ಹಗುರಾದಳು. ಈ ಬಾರಿ ಪ್ರಸನ್ನನಿಗೆ ಅಚ್ಚರಿ. ಹರ್ಷ ಅವನನ್ನ ಬಿಗಿದಪ್ಪಿ "ನಿಜವಾದ ಬೆಸ್ಟೀ ನೀನೇ ಕಣೋ... ಚಿಕ್ಕಂದಿನ ಫೋಟೋ ಇನ್ನೂ ಸೇಫಾಗಿಟ್ಕೊಂಡಿದಿಯಾ!! I'm blessed to have you in my life guys.. " ಮೆಚ್ಚುಗೆಯಿಂದ ನುಡಿದ. ಅವನ ಆ ಹೆಮ್ಮೆಯ ಮಾತು ಇಬ್ಬರು ಸುಳ್ಳುಗಾರರ ಮುಖಕ್ಕೆ ಉಗಿದ ಹಾಗೆ ಭಾಸವಾಗಿ ನಾಚಿಕೆಯಾಯಿತು. "ನಮ್ಮ ಮೂರು ಫ್ರೆಂಡ್ಸ್ ಜೊತೆಗಿರೋ ಫೋಟೋಸ್ ಇಲ್ವಾ.." ಅವನ ಪ್ರಶ್ನೆ ತಲೆಗೆ ಸುತ್ತಿಗೆಯಿಂದ ಹೊಡೆದಂತಾಯಿತು ಪ್ರಸನ್ನನಿಗೆ ‌
"ಇರಬಹುದೇನೋ.. ಊರಲ್ಲಿ.. ಈಗ ಇಲ್ಲ. ಅದ್ಸರಿ,, ವಾಟರ್ ಪಾರ್ಕ್ ಟಿಕೆಟ್ ಎರಡೇ ಇರೋದಲ್ವಾ. ಮತ್ತೆ ನಾನು..." ಪ್ರಸನ್ನ ವಿಷಯಾಂತರಿಸಿದ.

ತನ್ನ ಆತುರದಿಂದ ಪ್ರಸನ್ನ ಹರ್ಷನಿಗೆ ಮತ್ತಷ್ಟು ಹತ್ತಿರವಾಗಿದ್ದು ಮಾನ್ವಿಗೆ ಅಸಮಾಧಾನವಾಯಿತು. 'ವಾಟರ್ ಪಾರ್ಕ್ ನಲ್ಲಿ ಮತ್ತೇನು ಕಿತಾಪತಿ ನಡ್ಸಿದ್ದಾಳೋ ಈ ಪರಿ. ಇವತ್ತು ಅಲ್ಲಿಗೆ ಹೋದ್ರೆ ತಾನೇ..' ಮನಸ್ಸಲ್ಲೇ ಯೋಚಿಸಿ "ನಿನಗೆ ಆನ್ಲೈನ್ ಟಿಕೆಟ್ ಬುಕ್ ಮಾಡಿದಿನಿ. ಡೋಂಟ್ ವರಿ ಪರ್ಚು" ಕೆಣಕಿ ಕೊಂಕು ನಗೆಬೀರಿದಳು.

'ಪರ್ಚ್ತಿನೋ ಇಲ್ವೋ ಗೊತ್ತಿಲ್ಲ ನಿನ್ನ ಪಾತಾಳಕ್ಕಂತೂ ಕಳಿಸೇ ತೀರ್ತಿನಿ. ಭಾವಿ ಅರ್ಧಾಂಗಿನಾ ನೀನು? ಸಾಧ್ಯಾನೇ ಇಲ್ಲ. ಅಲ್ಲಿವರೆಗೂ ನೀನು ನೆಟ್ಟಗಿರೋದೆ ಡೌಟು‌‌! ನೀನು ಅರ್ಧಾಂಗಿ ಆಗೋ ಮುನ್ನವೇ ನಿನ್ನ ಯಾವುದಾದರೂ ಪಾಳು ಬಾವಿಗೆ ನೂಕೋದಂತೂ ನಿಶ್ಚಿತ ಕಣೇ ಪಿಶಾಚಿ' ಮನಸ್ಸಲ್ಲೇ ಕುದಿದ.

ಅವರಿಬ್ಬರ ಯೋಚನಾಲಹರಿಯ ಪರಿವಿಲ್ಲದ ಹರ್ಷ ಮಾತ್ರ ನಿಶ್ಚಿಂತ ನಿರಾಳ ಖುಷಿಯ ಉನ್ಮಾದದಲ್ಲಿದ್ದ. ಇನ್ನೂ ಮುಂದೆ ಕಾದಿರುವ ಸರ್ಪ್ರೈಜ್ ಗಳ ನಿರೀಕ್ಷೆಯಲ್ಲಿದ್ದ. ಡೇವಿಡ್ ನನ್ನು ಕೂಗಿ ಪಕ್ಕದ ರೂಂ ಕ್ಲೀನ್ ಮಾಡಿ ಪ್ರಸನ್ನನಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ಆದೇಶಿಸಿದ. ಪ್ರಸನ್ನ ತನ್ನ ಲಗೇಜ್‌ನ್ನೆಲ್ಲ ತರಲು ಹೊರಟ. ಆದರೆ ಹರ್ಷ ಅವನನ್ನು ಹೋಗಲು ಬಿಡದೆ ಸದ್ಯಕ್ಕೆ ಸ್ನಾನ ಮಾಡಿ ನನ್ನ ಬಟ್ಟೆ ಹಾಕಿಕೋ. ಆಮೇಲೆ ಹೋಗುವಂತೆ ಎಂದು ತಡೆದ. ಈ ಅತೀಯಾದ ಬಾಂಧವ್ಯ ನೋಡಿ ಮಾನ್ವಿ ಸಹನೆ ರೋಸಿಹೋಯಿತು.
"ಸಂಕು.. ನೀನು ಹೋಗಿ, ಬೇಗ ಸ್ನಾನ ಮಾಡಿ ರೆಡಿಯಾಗು. ಮೀಟಿಂಗ್ ಲೇಟಾಗ್ತಿಲ್ವಾ. ನಿನ್ನ ಜೊತೆ ಸ್ವಲ್ಪ ಮಾತಾಡ್ಬೇಕು ಬಾ ಆಚೆಗೆ" ಹರ್ಷನಿಗೆ ಅವಸರಿಸಿ ಪ್ರಸನ್ನನನ್ನು ಹೊರಗೆಳೆದುಕೊಂಡು ಹೊರಟಳು.
ಅವರಿಬ್ಬರೂ ಆಚೆ ಹೋಗುತ್ತಿದ್ದಂತೆ ಹರ್ಷ ತನ್ನ ಕೋಣೆಯನ್ನು ಕಣ್ತುಂಬ ನೋಡಿದ. ಸ್ವಂತಿಕೆಯ ಕುರುಹುಗಳ ಮನನ. ಪುಸ್ತಕಗಳು ಅಲ್ಬಮ್ ಗಳು, ಕಾರ್ಟೂನ್ ಕ್ಯಾರೆಕ್ಟರ್ ಗಳು.. ತನ್ನದೇ ಅಸ್ತಿತ್ವದ ಒಂದು ತುಣುಕು. ಎಲ್ಲವನ್ನೂ ನೋಡಲು ಸಮಯವಿರದೆ, ಸ್ನಾನಕ್ಕೆ ಹೊರಟ. ಆದರೂ ಆ ಕಲ್ಪನೆಗಳಲ್ಲಿ ಇರುವುದು ಮಾನ್ವಿನಾ! ಅನುಮಾನ ಬಗೆಹರಿಯುತ್ತಿಲ್ಲ. ಬಟ್ಟೆ ತೆಗೆದುಕೊಳ್ಳಲು ಕಬೋರ್ಡ್ ಕಡೆಗೆ ಹೊರಟವನ ಕಣ್ಣಿಗೆ ಬಿದ್ದಿತ್ತು ಬಿಳಿಯ ಕರ್ಚೀಫ್! ಮಂಚದ ತುದಿಯಲ್ಲಿ ಬಿದ್ದಿದ್ದ ಅದನ್ನು ಎತ್ತಿಕೊಂಡು ಬಿಡಿಸಿ ನೋಡಿದ. ಮತ್ತದೇ ರೆಕ್ಕೆಬಿಚ್ಚಿದ ಏಂಜಲ್ ಚಿತ್ರದ ಕರ್ಚೀಫ್! 'ಮನೆಗೆ ಬಂದು ಹೋಗಿದ್ದು, ನಿನ್ನೆ ಮದುವೆಗೆ ಬಂದ ಅದೇ ಹುಡುಗಿ ಇರಬಹುದಾ? ಏನೋ ಸೆಳೆತ ಇದೆ ಅವಳಲ್ಲಿ. ಯಾಕೆ ನನಗಷ್ಟು ಇಷ್ಟವಾಗುತ್ತೆ ಅವಳ ಇರುವಿಕೆಯಲ್ಲೆಲ್ಲ.‌. ಒಮ್ಮೆ ಇವಳನ್ನ ಮೀಟ್ ಮಾಡ್ಲೇಬೇಕು. ಈ ಕರ್ಚೀಫ್ ಕೊಡೋ ನೆಪದಲ್ಲಾದ್ರೂ..' ಅವನೆಂದುಕೊಂಡ.


ಮುಂದುವರೆಯುವುದು..


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...