ಬರೆದಷ್ಟು ಹೊಸತು, ಅರೆಗಳಿಗೆಯು ನಿನ್ನ ಅಗಲಿಕೆ ಸಹಿಸದ ಮನದ ಮಧುರ ಭಾವನೆಗಳು. ಹೇಳು, ಹೇಗೆ ಅರುಹಲಿ ನಿನ್ನೆದುರು ಹೆಣ್ತನದ ಲಜ್ಜೆಯೊಳಗಿನ ಮೂಕ ವಿರಹ ಸಂವಾದವನ್ನು. ಮೂಡುವ ಪ್ರತಿ ಕಲ್ಪನೆಗಳಲ್ಲಿ ನಿನ್ನದೆ ಪಹರೆ ಇರಲು ನನ್ನದೆನ್ನುವದೇನಿಲ್ಲ ನೀನಿರದೆ.. ಹೀಗೆ ಒಂದೆರಡು ಸಾಲು ಗೀಚುತ್ತಾ ಕಣ್ಮುಚ್ಚಿ ಮಲಗಿದ ಪರಿಧಿ ಆ ಬೆಳಿಗ್ಗೆ ಬೇಗ ಎದ್ದು ಹರ್ಷನಿಗೆ ಶುಭೋದಯ ತಿಳಿಸಿ ಅವನಿಂದ ಬರಬಹುದಾದ ಉತ್ತರಕ್ಕೆ ಕಾದು ಕುಳಿತಳು.
ಆಗತಾನೇ ಹಾಸಿಗೆಯಿಂದೆದ್ದು ಕಣ್ಣುಜ್ಜಿಕ್ಕೊಳ್ಳುತ್ತ ನಿಧಾನವಾಗಿ ಕಣ್ತೆರೆದ ಹರ್ಷನಿಗೆ ಒಂದು ಕ್ಷಣ ದಿಗ್ಭ್ರಮೆಯಾಯಿತು. ತಾನು.. ಎಲ್ಲಿದ್ದೇನೆಂದು ನೆನಪಿಸಿಕೊಳ್ಳುತ್ತಲೇ ರಾತ್ರಿಯಷ್ಟೇ ಮನೆ ತೊರೆದು ಮುಂಬೈನ ಹೊಟೇಲಿನಲ್ಲಿ ಉಳಿದುಕೊಂಡಿದ್ದು ನೆನಪಾಯಿತು. ದೂರದೂರಿಗೆ ಬಂದು ಬರೀ ಹತ್ತು ಗಂಟೆಗಳಾಗಿದ್ದರೂ ಎಷ್ಟೋ ದಿನಗಳು ಆದಂತೆನಿಸಿತು. ಪರಿಧಿಯ ಮುದ್ದು ಮುಖ ಕಣ್ಮುಂದೆ ಬಂದಂತಾಯಿತು. ಫೋನ್ ತೆಗೆದುಕೊಂಡವನಿಗೆ ಮೊದಲು ಕಂಡಿದ್ದೆ ಅವಳ ಶುಭೋದಯ. ಅದಕ್ಕೆ ಪ್ರತ್ಯುತ್ತರ ನೀಡಹೊರಟವನು ಅದರಲ್ಲಿನ ಅವಳ ಚಿತ್ರ ನೋಡುತ್ತಾ ಮೈಮರೆತು ಏನೋ ನೆನಪು ಮೆಲಕು ಹಾಕುತ್ತ ಕುಳಿತ. ಅವಳಿಗೊಂದು ಕರೆ ಮಾಡಿ ಮಾತಾಡಬೇಕು ಎಂದುಕೊಂಡವನಿಗೆ ತಕ್ಷಣ ಯಾವುದೋ ಕರೆ ಬಂದಿತು. ಫೋನ್ ಎತ್ತಿದಾಗ ಸೆಕ್ರೆಟರಿ ಶಣೈ ಧ್ವನಿ 'ಹಲೋ ಸರ್.. ಗುಡ್ ಮಾರ್ನಿಂಗ್' ಎಂದಿತು. ಎಂಟು ಗಂಟೆಗೆ ಮೀಟಿಂಗ್ ಇರುವುದಾಗಿ ಮತ್ತು ಆ ದಿನದ ವಹಿವಾಟು ಎಲ್ಲವನ್ನೂ ತಿಳಿಸಿ ಆತ ಫೋನ್ ಇರಿಸಿದ. ಅದಾಗಲೇ ಹರ್ಷ ಪರಿಧಿ ಮಂಪರಿನಿಂದ ಹೊರ ಬಂದು ವ್ಯವಹಾರದ ಕಡೆಗೆ ಗಮನಹರಿಸಿ ಬೇಗ ಬೇಗ ತಯಾರಾಗಲು ಸ್ನಾನಗೃಹಕ್ಕೆ ತೆರಳಿದ.
ಇತ್ತ ಪರಿಧಿ ಅವನಿಂದ ಬರುವ ಪ್ರತಿಕ್ರಿಯೆಗೆ ಕಾದು ಬೇಸತ್ತು ಅವನಿಗೆ ಒಂದೆರಡು ಬಾರಿ ಕರೆ ಮಾಡಿದ್ದಳು. ಅವನು ಸ್ನಾನಕ್ಕೆ ಹೋಗಿದ್ದರಿಂದ ಕರೆ ಸ್ವೀಕರಿಸಲಿಲ್ಲ. ಅವಳಿಗೆ ಸ್ವಲ್ಪ ಆತಂಕವಾಗಿ ಮತ್ತೆ ಮತ್ತೆ ಕರೆ ಮಾಡುತ್ತ ಕುಳಿತಳು. ಹರ್ಷ ಸ್ನಾನ ಮುಗಿಸಿ ಹೊರಬಂದು ಅವಳ ಕರೆಗೆ ಉತ್ತರಿಸುವವರೆಗೂ ಅವಳ ಪ್ರಯತ್ನ ಮುಂದುವರೆದಿತ್ತು. ಫೋನ್ ಎತ್ತಿದ ಹರ್ಷ "ಅಬ್ಬಾ.. ಏನಮ್ಮ ನಿನ್ನ ಗೋಳು ಒಂದ್ನಾಲ್ಕು ದಿನ ನಿನ್ನಿಂದ ದೂರ ಹಾಯಾಗಿ ಇರೋಣ ಅಂತ ಬಂದ್ರೆ, ಅದೆಷ್ಟು ಕಾಡುತ್ತಿಯೇ? "
"ನೀನು ಬೆಳಿಗ್ಗೆಯಿಂದ ಒಂದು ಗುಡ್ ಮಾರ್ನಿಂಗ್ ವಿಷ್ ಕೂಡ ಮಾಡಿಲ್ಲ ಅದಕ್ಕೆ ನಾನೇ ಮಾಡಿದೆ" ಎಂದಳು ಹುಸಿಕೋಪದಿಂದ
"ಮಾಡಲ್ವೇ ಇವತ್ತಲ್ಲ ಇನ್ಮುಂದೆ ಯಾವತ್ತೂ ಮಾಡಲ್ಲ ಬಾಯ್.." ಎಂದ ಕೋಪದಿಂದ ಆದರೆ ಮನಸ್ಸಲ್ಲೇ ನಗುತ್ತಿದ್ದ.
"ಹರ್ಷ.." ಎಂದವಳ ಧ್ವನಿ ಕಂಪಿಸಿತು. "ಏನಾಯ್ತೊ" ಕೇಳಿದಳು.
"ನಿನ್ನೆ ಬರೋವಾಗ ನಾ ಕೇಳಿದ್ದು ಕೊಡಲಿಲ್ಲ, ನನ್ನ ಮೇಲೆ ಚೂರು ಪ್ರೀತಿನೇ ಇಲ್ಲ. ನಿನ್ನ ಜೊತೆ ನಾ ಯಾಕೆ ಮಾತಾಡ್ಲಿ"
"ಅಯ್ಯೋ ಅದಾ ವಿಷಯ.. ನೀ ವಾಪಸ್ ಬಂದ ಮೇಲೆ ಖಂಡಿತ ಕೊಡ್ತಿನಿ ಒಕೆ ನಾ"
"ಏನು ಬೇಕಾಗಿಲ್ಲ. ನನಗೆ ಮೀಟಿಂಗ್ ಗೆ ತಡವಾಗುತ್ತೆ ಬಾಯ್" ಎಂದು ಫೋನ್ ಕಟ್ ಮಾಡಿದ.
ಹರ್ಷನ ತರಲೆ ಕದನ ಹುಸಿಮುನಿಸು ಪರಿಧಿಗೆ ಹೊಸದೇನಲ್ಲ. ಅದರಲ್ಲೂ ಅಡಗಿರುವ ಪ್ರೀತಿಯನ್ನು ಬಲ್ಲವಳವಳು. 'ದೂರ' ಪ್ರೇಮಿಗಳಿಗೆ ಪ್ರೀತಿಯ ಸತ್ವಪರೀಕ್ಷೆಯನ್ನು ಒಡ್ಡುತ್ತದೆ. ಗೆಲ್ಲಲು ತಾಳ್ಮೆ ಸಹನೆ ಜೊತೆಗೆ ನೆನಪುಗಳ ಮಡಿಲು ಕೂಡ ತಾನಾಗಿಯೇ ಅನುವು ಮಾಡಿಕೊಡುತ್ತದೆ. ಹೀಗೆಯೇ ಹಳೆಯ ನೆನಪುಗಳ ಜಾಡು ಹಿಡಿದು ಪರಿಧಿಯ ಮನಸ್ಸು ಅಲೆದಾಡ ಹೊರಟಿತು. ಹರ್ಷನಿಂದ ಶುರುವಾದ ನೆನಪುಗಳು ಅಲೆಯುತ್ತಾ ಎಲ್ಲಿಗೋ ಸಾಗಿದ್ದವು. ಅದರೊಂದಿಗೆ ದೈನಂದಿನ ಚಟುವಟಿಕೆಯಲ್ಲಿ ತೊಡಗಿದಳು ಪರಿಧಿ..
ದೂರವಾದಾಗಲೇ ಪ್ರೀತಿ ಪ್ರಾಮುಖ್ಯತೆ ಎಷ್ಟೊಂದು ಅರಿವಾಗುತ್ತದೆ. ಪರಿಧಿ ಕೂಡ ನೆನಪಿಸಿಕೊಂಡಳು ಆ ದಿನ ಡಾಕ್ಟರ್ ಆಗುವ ಕನಸಿಗಾಗಿ ದೂರ ಹೋದಾಗಲೇ ಹರ್ಷನ ಪ್ರೀತಿಯ ಬೆಲೆ ತನಗೆ ಅರಿವಾದದ್ದು. ಅಲ್ಲಿಯವರೆಗೂ ಜೊತೆಗೇ ಇದ್ದ, ಅತಿ ಸಾಮಾನ್ಯ ಎನ್ನುವಂತಿದ್ದ ತಮ್ಮ ನಡುವೆ ಇಂತಹ ಗಾಢವಾದ ಬಾಂಧವ್ಯ ಇದೆಯೆಂದು ತಿಳಿದಿರಲಿಲ್ಲ. ಇಂತಹ ಭಾಂಧವ್ಯ ಬೆಳೆದಿದ್ದಾದರೂ ಯಾವಾಗ ಎಂಬುದು ಇಂದಿಗೂ ಇಬ್ಬರಿಗೂ ತಿಳಿದಿಲ್ಲ.
ಜೀವನದಲ್ಲಿ ವಿಧಿ ಹೊರೆಸಿದ ಅಪವಾದಗಳಿಂದ ಮುಕ್ತಳಾಗಲು ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದ ಪರಿಧಿ, ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತಮ ಸ್ಥಾನ ಗಳಿಸಿದ್ದಳು. ಧಾರವಾಡದ ಪ್ರತಿಷ್ಟಿತ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಸೀಟು ಕೂಡ ದೊರಕಿತ್ತು. ಆದರೆ ಎಲ್ಲರನ್ನೂ ಬಿಟ್ಟು ದೂರದ ಊರಿಗೆ ಹೋಗಲು ಪರಿಧಿ ಕೊಂಚ ಅಳುಕಿದ್ದಳು, ಆಗ ಹರ್ಷ ಅವಳಿಗೆ ಅವಳ ಕನಸುಗಳನ್ನೆಲ್ಲ ನೆನಪಿಸಿ 'ಸಾಧನೆಗೆ ಪ್ರೀತಿ ತಡೆಯಾಗಬಾರದು, ಅತೀಯಾದ ಭಾವುಕತೆಗೆ ಒಳಗಾಗಿ ಕನಸನ್ನು ಬಲಿಕೊಡಬೇಡ' ಎಂದು ಹುರಿದುಂಬಿಸಿ ಕಲಿಯಲು ಧಾರವಾಡಕ್ಕೆ ಹೋಗಲು ಒಪ್ಪಿಸಿದ್ದ. ಮೇಲ್ನೋಟಕ್ಕೆ ಅವಳಿಗೆ ಧೈರ್ಯ ಹೇಳುತ್ತಿದ್ದನಾದರೂ ವಾಸ್ತವದಲ್ಲಿ ತನಗೇ ತಾನೇ ಆ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳುತ್ತಿದ್ದ. ಪರಿಧಿಯನ್ನು ಬಿಟ್ಟಿರುವುದು ಅವನಿಗೂ ಕಷ್ಟಸಾಧ್ಯವಾದ ಕೆಲಸವಾಗಿತ್ತು. ಅವಳನ್ನು ಹಾಸ್ಟೆಲಿನಲ್ಲಿ ಬಿಟ್ಟು ಬರುವ ಮುನ್ನ ಅವಳ ರೂಮೇಟ್ ಮಾನ್ವಿ ಜೊತೆಗೆ ಸ್ನೇಹದಿಂದ ಮಾತಾಡಿ ಪರಿಚಯಿಸಿಕೊಂಡು ಪರಿಧಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆಯೂ, ಇಬ್ಬರೂ ಹೊಂದಾಣಿಕೆಯಿಂದ ಇರುವಂತೆಯೂ ತಿಳಿಸಿ ಬಂದಿದ್ದ. ಅಲ್ಲಿಂದ ಹೊರಡುವಾಗ ದೇಹದ ಒಂದು ಭಾಗವನ್ನೇ ಕಳಚಿಕೊಂಡಂತೆ ಹರ್ಷನ ಹೃದಯ ವಿಲಪಿಸಿತ್ತು. ಪರಿಧಿಯ ನೋಟದಲ್ಲಿದ್ದ ಮಾರ್ದವತೆ ಕಂಡು ಅವನ ತಾಳ್ಮೆ ತಪ್ಪಿತ್ತು. ಒಮ್ಮೆ ಬಿಗಿಯಾಗಿ ಅಪ್ಪಿ, ಹಣೆಗೊಂದು ಮುತ್ತಿನ ಮುದ್ರೆಯೊತ್ತಿ, ತಲೆ ನೇವರಿಸಿ 'ಹುಷಾರು ಕಣೇ' ಎಂದು ಹೇಳಿ ಹಿಂತಿರುಗಿ ಸಹ ನೋಡದೆ ಹೊರಟು ಬಿಟ್ಟಿದ್ದ.
ಪರಿಧಿಗೆ ಒಂದೆರಡು ದಿನಗಳ ಕಾಲ ಹೊಸ ವಾತಾವರಣ ಕಷ್ಟವಾಗಿತ್ತಾದರೂ ಮನೆಯ ಪರಿಸರದಿಂದ ದೂರಾಗಿ ಅಲ್ಲಿನ ಪರಿಸರಕ್ಕೆನೋ ಹೊಂದಿಕೊಂಡು ಬಿಟ್ಟಿದ್ದಳು. ಆದರೆ ಮೊದಲ ದಿನದ ಪ್ರ್ಯಾಕ್ಟಿಕಲ್ ಕ್ಲಾಸಿನಲ್ಲಿ ಅಲ್ಲಿಯ ವಾತಾವರಣ ಶವ, ಅಸ್ಥಿಪಂಜರ, ಸಹಿಸಲಾಗದ ಕೆಮಿಕಲ್ ಗಳ ವಾಸನೆ ಎಲ್ಲವನ್ನೂ ನೋಡಿ ಭಯಗೊಂಡು ಮೂರ್ಛೆ ಹೋಗಿದ್ದಳು. ವಿಷಯ ತಿಳಿದ ನಂತರ ಸುಲೋಚನ ಮತ್ತು ಮನೆಯವರೆಲ್ಲ ಈ ಕೋರ್ಸ್ ಬೇಡವೇ ಬೇಡ ಬೇರೆ ಯಾವುದಾದರೂ ಕೋರ್ಸ್ ಮಾಡು ಇದನ್ನು ಬಿಟ್ಟು ಬಂದು ಬಿಡು ಎಂದು ಹೇಳಿದ್ದರೂ ಹರ್ಷ ಮಾತ್ರ ಅದಕ್ಕೆ ತದ್ವಿರುದ್ಧವಾಗಿದ್ದ. ಪರಿಧಿ ತನ್ನ ಬದುಕಿನ ಗುರಿಯನ್ನು ಆಯ್ಕೆ ಮಾಡುವುದರಲ್ಲಿ ಎಷ್ಟು ಗಂಭೀರವಾಗಿದ್ದಳೋ ಗೊತ್ತಿಲ್ಲ ಆದರೆ ಹರ್ಷ ಅದಾಗಲೇ ಅವಳನ್ನು ಡಾಕ್ಟರ್ ಮಾಡಲೇಬೇಕು ಎಂದು ಪಣತೊಟ್ಟಿದ್ದ. ಅದಕ್ಕೆ ತಕ್ಕಂತೆ ಅವಳ ಮನಸ್ಸಿಗೆ ಧೈರ್ಯ ಹೇಳಿದ್ದ. 'ಮನಸ್ಸು ಏನಾದರೂ ಬಯಸಿದ ಮೇಲೆ ಅದನ್ನು ಮಾಡಿಯೇ ತೀರಬೇಕು. ಕಂಡ ಕನಸನ್ನು ಅರ್ಧಕ್ಕೆ ಬಿಡುವುದು ಹೇಡಿತನ. ನಡೆಯುವ ದಾರಿ ಎಷ್ಟೇ ಕಷ್ಟ ಇರಲಿ ಒಮ್ಮೆ ಕಣ್ಣು ಮುಚ್ಚಿ ತಲುಪಬೇಕಾದ ಗಮ್ಯವನ್ನು ಊಹಿಸಿಕೊ.. ಹೇಗಿದೆ? ತುಂಬಾ ಅದ್ಭುತವಾಗಿದೆ ಅಲ್ವಾ!! ಯಶಸ್ಸಿನ ಶಿಖರದ ತುತ್ತ ತುದಿಯಲ್ಲಿ ಎಂತಹ ಅದ್ಭುತವಾದ ದೃಶ್ಯ ಕಾಣ್ತಿದೆಯಲ್ವಾ!! ಇಂತಹ ಯಶಸ್ಸನ್ನು ಸವಿಯಲು ಇಷ್ಟು ತೃಣ ಮಾತ್ರದ ಹೆದರಿಕೆ, ಕಷ್ಟಗಳನ್ನು ಹಿಮ್ಮೆಟ್ಟಿಸಲಾರೆಯಾ!' ಎಂದೆಲ್ಲಾ ಧೈರ್ಯ ತುಂಬಿದ್ದ. ಯಾವಾಗಲೂ ಚೇಷ್ಟೆ ಮಾಡುತ್ತಾ, ನಗುತ್ತಾ ನಗಿಸುತ್ತ, ಯಾವ ಚಿಂತೆಗಳನ್ನು ಬಳಿಗೂ ಸುಳಿಯಗೊಡದ ಹುಡುಗನೊಳಗೆ ಈ ರೀತಿಯ ಪ್ರಬುದ್ಧ ವ್ಯಕ್ತಿ ಕೂಡ ಅಡಗಿದ್ದಾನಾ ಎನಿಸಿತ್ತು ಅವಳಿಗೆ. ಹರ್ಷನ ಮಾತುಗಳು ಹೆದರಿ ಹಿಂಜರಿದ ಪರಿಧಿಯ ಪಾಲಿಗೆ ಅನೀರ್ವಚನೀಯ ವಾಕ್ಯಗಳಾಗಿದ್ದವು. ಆಗ ಶುರುವಾಗಿತ್ತು ಅವಳ ಕನಸಿನ ನಿಜವಾದ ಪಯಣ. ಪುಸ್ತಕಗಳ ಮಧ್ಯೆ ಕಳೆದು ಹೋದರೆ ಜಗತ್ತಿನ ಪರಿವಿಲ್ಲದಂತೆ ಓದಿದರೂ ಮುಗಿಯದ ಐದು ವರ್ಷದ ಎಂಬಿಬಿಎಸ್ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಹಗಲು ರಾತ್ರಿಗಳ ವ್ಯತ್ಯಾಸವೇ ಗೊತ್ತಾಗದಂತ ವ್ಯಸ್ತ ಜೀವನ. ಈ ಹೊಸ ಜೀವನದ ಹೊಸ ರಹದಾರಿಯಲ್ಲಿ ಸಂಚಾರಿಯಾಗಿ ಸಿಕ್ಕವರೇ ಮಾನ್ವಿ, ಸಂಜೀವಿನಿ ಮತ್ತು ಆಲಾಪ್.
ಪರಿಧಿಯ ರೂಮೇಟ್ ಮಾನ್ವಿ ಶ್ರೀಮಂತ ಹುಡುಗಿಯಾಗಿದ್ದರೂ ತುಂಬಾ ಒಳ್ಳೆಯ ಮನಸ್ಸಿನವಳು. ತಂದೆ ತಾಯಿಯ ಏಕಮಾತ್ರ ಸುಪುತ್ರಿ, ಅವಳು ಕೇಳಿದ್ದನ್ನು ಇಲ್ಲವೆನ್ನದೇ ಕೊಡಿಸಿದ್ದರಿಂದಲೋ ಏನೋ ಸ್ವಲ್ಪ ಹಠಮಾರಿತನ ಎದ್ದು ಕಾಣಿಸುತ್ತಿತ್ತು. ಕಾಲೇಜಿನ ಮೊದಲ ದಿನವೇ ಮಾನ್ವಿ ತನ್ನ ಆಪ್ತ ಸ್ನೇಹಿತ ಆಲಾಪ್ ನನ್ನು ಪರಿಚಯಿಸಿದಳು, ಆಲಾಪ್ ಮತ್ತು ಮಾನ್ವಿ ಇಬ್ಬರೂ ಮಂಗಳೂರಿನವರಾಗಿದ್ದು ಇಬ್ಬರೂ ಬಾಲ್ಯಸ್ನೇಹಿತರು. ಒಂದೇ ತಟ್ಟೆಯಲ್ಲಿ ಉಂಡು ಒಟ್ಟಿಗೆ ಓದಿ ಬೆಳೆದವರು, ಬಯಸಿ ಒಂದೇ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಹ ಗಿಟ್ಟಿಸಿಕೊಂಡಿದ್ದರು. ಅವರಿಬ್ಬರ ಸ್ನೇಹ ಅಸಾಮಾನ್ಯವಾಗಿತ್ತು. ಇಬ್ಬರಿಗೂ ಪ್ರತಿಯೊಬ್ಬರ ಗುಣಾವಗುಣ, ಅಭಿರುಚಿ ಬಗ್ಗೆ ತಿಳಿದಿತ್ತು. ಇಬ್ಬರ ನಡುವೆ ಯಾವುದೇ ಮುಚ್ಚುಮರೆ ರಹಸ್ಯಗಳಿರಲಿಲ್ಲ. ಅತಿರೇಕವಾಗಿ ಹೇಳುವುದಾದರೆ ಇಬ್ಬರಲ್ಲಿ ಒಬ್ಬರು ಯಾರ ಜೊತೆಗಾದರೂ ಜಗಳ ಮಾಡಿದರೆ ಇನ್ನೊಬ್ಬರು ಸಹ ಆ ವ್ಯಕ್ತಿ ಜೊತೆಗೆ ಮಾತಾಡುತ್ತಿರಲಿಲ್ಲ. ಮಾನ್ವಿಯ ತಂದೆ ಹಾಗೂ ಆಲಾಪ್ ತಂದೆ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು ಅದೇ ಪರಂಪರೆ ಮುಂದುವರಿದು ಮಾನ್ವಿ ಆಲಾಪ್ ಸಹ ಜೀವದ ಸ್ನೇಹಿತರಾಗಿದ್ದರು. ಇಬ್ಬರ ರುಚಿ ಅಭಿರುಚಿಗಳು ಹವ್ಯಾಸಗಳು ಸ್ವಭಾವ ಬೇರೆ ಬೇರೆಯಾಗಿದ್ದವು. ಮಾನ್ವಿ ಆಧುನಿಕ ಬಟ್ಟೆಗಳನ್ನು ಧರಿಸುತ್ತಿದ್ದಳು, ಪಾಶ್ಚಾತ್ಯ ಸಂಗೀತವನ್ನು ಕೇಳುತ್ತಿದ್ದಳು, ಸಾಹಿತ್ಯದ ಗಾಳಿಗಂಧವೂ ಉಸಿರಾಡದವಳು, ಪಿಜ್ಜಾ ಬರ್ಗರ್ ಮೋಹಕ್ಕೆ ಒಳಗಾಗಿದ್ದಳು. ಆದರೆ ಆಲಾಪ್ ತುಂಬಾ ಸರಳತೆಯ ಜೀವನ ಇಷ್ಟ ಪಡುತ್ತಿದ್ದ. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ. ಕುವೆಂಪು ಭೈರಪ್ಪನವರ ಪುಸ್ತಕಗಳನ್ನು ಓದುತ್ತಿದ್ದ, ಕನ್ನಡ ಹಾಡುಗಳನ್ನು ಇಷ್ಟಪಡುತ್ತಿದ್ದ, ಮನೆಯ ಊಟ ಅದರಲ್ಲೂ ಅಮ್ಮನ ಕೈರುಚಿಯನ್ನು ತುಂಬಾ ಮೆಚ್ಚುತ್ತಿದ ಆದರೆ ಧಾರವಾಡಕ್ಕೆ ಕಲಿಯಲು ಬಂದು ಹಾಸ್ಟೆಲ್ ಊಟ ಅನಿವಾರ್ಯವಾಗಿ ಅವನಿಗೆ ಬೇಸರ ತರಿಸಿತ್ತು. ಇಷ್ಟೆಲ್ಲಾ ತದ್ವಿರುದ್ಧವಾದ ಯೋಚನೆ ಇದ್ದರೂ ಇಬ್ಬರೂ ಯಾವಾಗಲೂ ಕಿತ್ತಾಡುತ್ತಿದ್ದರೂ ಒಬ್ಬರನ್ನೊಬ್ಬರು ಯಾವತ್ತೂ ಬಿಟ್ಟು ಕೊಡುತ್ತಿರಲಿಲ್ಲ. ಒಬ್ಬರು ಏನೋ ತಪ್ಪು ಮಾಡಿ ಸಿಕ್ಕ ಬಿದ್ದರೆ ಇನ್ನೊಬ್ಬರು ಅವರನ್ನು ಸಮರ್ಥಿಸಿಕೊಂಡು ಅವರ ಪರ ಮಾತನಾಡುತ್ತಿದ್ದರು. ಇವರಿಬ್ಬರ ಮಿತ್ರತ್ವ ಮೊದಮೊದಲು ಪರಿಧಿಗೆ ವಿಚಿತ್ರವೂ ಅಯೋಮಯವೂ ಆಗಿ ಹೋಗಿತ್ತು. ಯಾವಾಗ ಜಗಳಾಡುತ್ತಾರೊ ಯಾವಾಗ ಇಬ್ಬರೂ ಒಂದಾಗಿ ಎದುರಿಗಿರುವವರ ಬೆವರಿಳಿಸುತ್ತಾರೋ ಒಂದು ಗೊತ್ತಾಗುತ್ತಿರಲಿಲ್ಲ. ಕೆಲವೊಮ್ಮೆ ಅವರಿಬ್ಬರ ನಡುವಿನ ಕದನ ಸಹಿಸಲಾಗದೆ ಮಧ್ಯಸ್ಥಿಕೆ ವಹಿಸಿಕೊಂಡಾಗ ಮಾತಿನ ಭರಾಟೆಯಲ್ಲಿ ಅದಾಗಲೇ ಅವರಿಬ್ಬರೂ ಒಂದಾಗಿ ಪರಿಧಿಯನ್ನೇ ವಿರೋಧಿಯನ್ನಾಗಿ ಭಾವಿಸಿ ವಾದವಿವಾದ ಎಲ್ಲಿಂದ ಎಲ್ಲಿಗೋ ಹೋಗಿತ್ತು. ಕೊನೆಗೆ ಕದನದ ಮೂಲ ಕಾರಣವೇ ಮರೆತು ಹೋಗಿ ಮೂರು ಜನ ಮುಖ ಮುಖ ನೋಡಿಕೊಂಡು ನಕ್ಕಿದ್ದರು.
ಪರಿಧಿ ಮತ್ತು ಮಾನ್ವಿ ಇದ್ದ ಹಾಸ್ಟೆಲ್ ಕಾಲೇಜಿಗೆ ಸಮೀಪದಲ್ಲೇ ಇದ್ದುದರಿಂದ ಇಬ್ಬರೂ ನಡೆದುಕೊಂಡೇ ಕಾಲೇಜಿಗೆ ಹೋಗುವುದು ಬರುವುದು ಮಾಡುತ್ತಿದ್ದರು. ಆಲಾಪ್ ನ ಬಾಯ್ಸ್ ಹಾಸ್ಟೆಲ್ ಕಾಲೆಜಿನಿಂದ ತುಂಬಾ ದೂರವಿದ್ದುದರಿಂದ ಅವನು ಬೈಕ್ ತೆಗೆದುಕೊಂಡು ಬರುತ್ತಿದ್ದ.
ಅದೊಂದು ದಿನ ಬೆಳಿಗ್ಗೆ ಮಾನ್ವಿ ಮತ್ತು ಪರಿಧಿ ಕಾಲೇಜಿಗೆ ಮಾತಾಡುತ್ತ ನಡೆದುಕೊಂಡು ಬರುವಾಗ ಕಾಲೇಜು ಆವರಣದಲ್ಲಿ ಕೆಲವು ಹುಡುಗರು ಏನೋ ಹೇಳುತ್ತಿದ್ದರೆ ಅವರ ಎದುರು ನಿಂತಿದ್ದ ಒಂದು ಹುಡುಗಿ ಮುಖ ಕೆಳಗೆ ಮಾಡಿ ಅಳುತ್ತ ನಿಂತಿದ್ದಳು. ಇದನ್ನು ನೋಡಿದ ಮಾನ್ವಿ ಮತ್ತು ಪರಿಧಿ ಏನೆಂದು ಪರಸ್ಪರ ಮುಖ ನೋಡಿಕೊಂಡು ಅದನ್ನು ತಿಳಿಯಲು ಆ ಹುಡುಗಿ ಬಳಿ ಹೋದರು. ಅಳುತ್ತಿದ್ದ ಹುಡುಗಿಯನ್ನು ಪರಿಧಿ ಸಮಾಧಾನ ಮಾಡಿದಳು. ಎದುರಿಗಿದ್ದ ಹುಡುಗರನ್ನು ಮಾನ್ವಿ ದಬಾಯಿಸುತ್ತಿದ್ದಳು. ಅವರೆಲ್ಲರೂ ಸೀನಿಯರ್ಸಗಳೆಂದು ಈ ಹುಡುಗಿಯನ್ನು ರ್ಯಾಗಿಂಗ್ ಮಾಡುತ್ತಿದ್ದರೆಂದು ತಿಳಿದ ಮೇಲಂತೂ ಮಾನ್ವಿ ಕೋಪ ನೆತ್ತಿಗೇರಿತ್ತು. ತಕ್ಷಣವೇ ಹೋಗಿ ಪ್ರಿನ್ಸಿಪಲ್ ಗೂ ಕೂಡ ದೂರು ನೀಡಿದ್ದಳು. ಪ್ರಿನ್ಸಿಪಲ್ ಆ ಸೀನಿಯರ್ಸ್ ಹುಡುಗರನ್ನು ಕರೆದು ಬುದ್ದಿ ಹೇಳಿ ಇದೇ ತಪ್ಪು ಮುಂದುವರೆದರೆ ಈ ಕಾಲೇಜಿನಲ್ಲಿ ನಿಮಗೆ ಜಾಗವಿರಲ್ಲವೆಂದು ಎಚ್ಚರಿಕೆ ನೀಡಿದ್ದರು. ಅಷ್ಟರಲ್ಲಾಗಲೇ ಪರಿಧಿ ಆ ಹುಡುಗಿ ಇಬ್ಬರೂ ಸ್ನೇಹಿತೆಯರಾಗಿದ್ದರು. ಆ ಹುಡುಗಿ ಹೆಸರು ಸಂಜೀವಿನಿ. ಅವಳು ಅಲ್ಲಿಯೇ ಧಾರವಾಡದವಳು. ಮಧ್ಯಮ ವರ್ಗದ ಸಂಜೀವಿನಿ ತುಂಬಾ ಮೃದು ಹಾಗೂ ಸಂಕೋಚ ಸ್ವಭಾವದವಳು. ಹೆಚ್ಚಿಗೆ ಯಾರೊಂದಿಗೂ ಮಾತಾಡುತ್ತಿರಲಿಲ್ಲ. ನೋಡಲು ತುಂಬಾ ಸರಳ ಸುಂದರ ಅಪ್ಪಟ ಕನ್ನಡತಿಯಂತೆ ಇದ್ದಳು. ಅವಳು ಉತ್ತರ ಕರ್ನಾಟಕ ಭಾಷೆಯಲ್ಲಿ ಹೌದ್ರಿ ಇಲ್ರೀ ಎಂದು ಏನೇನೋ ಮಾತಾಡುತ್ತಿದ್ದರೆ ಕೆಲವೊಮ್ಮೆ ಅರ್ಥವಾಗದೆ ಮಾನ್ವಿ ಮತ್ತು ಪರಿಧಿ ತಬ್ಬಿಬ್ಬಾಗಿ ಬಿಡುತ್ತಿದ್ದರು. ಕೆಲವೊಮ್ಮೆ ಮಾನ್ವಿ ತಡೆಯಲಾರದೆ ನಕ್ಕುಬಿಡುತ್ತಿದ್ದಳು. ಮತ್ತೆ ನಿಮ್ಮ ಭಾಷೆ ಕೇಳೋಕೆ ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ಸೂಚಿಸುತ್ತಿದ್ದಳು. ಹೀಗೆ ಕ್ಲಾಸಿನಲ್ಲಿ ಹೋಗಿ ಕುಳಿತಾಗ ತಡವಾಗಿ ಬಂದ ಆಲಾಪನಿಗೆ ಮಾನ್ವಿ ಆ ದಿನದ ತನ್ನ ಸಾಹಸಮಯ ಕಾರ್ಯವನ್ನು ವಿಸ್ತರಿಸಿ ಹೇಳಿ ಸಂಜೀವಿನಿಯನ್ನು ಪರಿಚಯ ಮಾಡಿಸಿದಳು. ಬರೀ ಹಾಯ್ ಹಲೋಗಳಲ್ಲಿ ಆಲಾಪ್ ಸಂಜೀವಿನಿ ಮಾತು ಇತಿಶ್ರೀಯಾಗಿತ್ತು. ಅವತ್ತು ಮಧ್ಯಾಹ್ನ ಊಟದ ಸಮಯ ಎಲ್ಲರೂ ಕ್ಯಾಂಟೀನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ ಸಂಜೀವಿನಿ ಮಾತ್ರ ಕ್ಲಾಸಿನಲ್ಲಿ ಕುಳಿತಿದ್ದನ್ನು ಕಂಡು ಪರಿಧಿ ಅವಳನ್ನು ಮಾತಾಡಿಸಿ ಊಟಕ್ಕೆ ಕರೆದಳು. ಸಂಜೀವಿನಿ ತಾನು ಮನೆಯಿಂದ ಊಟ ತಂದಿರುವೆನೆಂದು ಹೇಳಿದ್ದಳು. ಅದನ್ನು ಕೇಳಿದ ಆಲಾಪ್ 'ನಮ್ಮನ್ನೆಲ್ಲ ಊಟಕ್ಕೆ ಕರೆಯೊದಿಲ್ಲವಾ' ಎಂದು ಅವಳ ಮುಂದೆ ಔತಣಕ್ಕೆ ಕರೆದಂತೆ ಕೂತುಬಿಟ್ಟಿದ್ದ. ಅವನ ಸ್ವಭಾವ ಅಭಿರುಚಿ ತಿಳಿದಿದ್ದ ಮಾನ್ವಿ ಸಂಜೀವಿನಿಗೆ 'ಇನ್ನೂ ನಿನ್ನ ಪಾಲಿನ ಊಟ ಈ ಬಕಾಸುರನ ಹೊಟ್ಟೆಗೆ ಹೋದಂತೆ' ಎಂದು ಚೇಡಿಸಿದ್ದಳು. ಸಂಜೀವಿನಿ ಸಂತೋಷದಿಂದಲೇ ತನ್ನ ಲಂಚ್ ಬಾಕ್ಸ್ ಆಲಾಪ್ ನಿಗೆ ಕೊಟ್ಟು ಅವರ ಜೊತೆ ಕ್ಯಾಂಟೀನ್ ಊಟ ಮಾಡಿದ್ದಳು. ಎಲ್ಲರೂ ಬೇಸರದಿಂದ ಕ್ಯಾಂಟೀನ್ ಊಟ ಮಾಡುತ್ತಿದ್ದರೆ ಆಲಾಪ್ ಸಂಜೀವಿನಿಯ ಅಮ್ಮನ ಕೈ ರುಚಿಯ ಚಪಾತಿ ಆಲೂಗಡ್ಡೆ ಪಲ್ಯ ಅನ್ನ ಕೆನೆಮೊಸರನ್ನು ಹೊಗಳಿ ಹೊಗಳಿ ಚಪ್ಪರಿಸಿ ಸವಿಯುತ್ತಿದ್ದ.
ಈ ಪರಿಪಾಟಲು ಒಂದೇ ದಿನಕ್ಕೆ ಸ್ಥಗಿತಗೊಳ್ಳದೆ ಹೀಗೆ ದಿನವೂ ಮುಂದುವರೆದಿತ್ತು. ಎಷ್ಟೋ ಬಾರಿ ತನಗೆ ಇಷ್ಟವಾಗುತ್ತಿದ್ದ ಊಟದ ಪಟ್ಟಿಯನ್ನು ಮೊದಲೇ ಹೇಳಿರುತ್ತಿದ್ದ ಅವಳು ಅವರಮ್ಮನಿಂದ ಮಾಡಿಸಿಕೊಂಡು ತಂದು ಕೊಡುತ್ತಿದ್ದಳು. ಆ ಸಂಜೆ ಕಾಲೇಜು ಮುಗಿದ ನಂತರ ಮಾನ್ವಿ ಮತ್ತು ಪರಿಧಿ ತಮ್ಮ ಹಾಸ್ಟೆಲ್ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ ಸಂಜೀವಿನಿ ತಮ್ಮ ಮನೆ ಕಡೆಗೆ ಒಬ್ಬಳೇ ನಡೆದುಕೊಂಡು ಹೊರಟಿದ್ದಳು. ಮಾನ್ವಿಯ ಕಣ್ಣು ಹಿಂದೆ ಬೈಕ್ ಸುತ್ತಲೂ ನಿಂತಿದ್ದ ಸೀನಿಯರ್ ಮೇಲೆ ಬಿದ್ದಿತು. ತಕ್ಷಣ ಏನೋ ಹೊಳೆದಂತೆ ಆಲಾಪ್ ನನ್ನು ಕರೆದು 'ಹೇಗೂ ನೀನು ಅದೇ ದಾರಿಯಲ್ಲಿ ತಾನೇ ಹೋಗೋದು ಸಂಜೀವಿನಿಯನ್ನು ಮನೆಗೆ ಬಿಟ್ಟು ಹೋಗು' ಎಂದು ಹೇಳಿದ್ದಳು. ಸಂಜೀವಿನಿ ಎಷ್ಟೇ ಬೇಡ ಬೇಡವೆಂದರೂ ಬಿಡದ ಆಲಾಪ್ ಅವಳನ್ನು ಬೈಕ್ ಹತ್ತಿಸಿಕೊಂಡು ಹೊರಟಿದ್ದ. ಇಬ್ಬರೂ ಗೆಳತಿಯರು ತಮ್ಮ ಹಾಸ್ಟೆಲ್ ಕಡೆಗಿನ ದಾರಿ ಹಿಡಿದಿದ್ದರು.
ಈ ಮೂವರ ಸ್ನೇಹ ಹರ್ಷನ ಖಾಲಿ ಜಾಗವನ್ನೇನೋ ಆಕ್ರಮಿಸಿಕೊಂಡಿತು. ಆದರೂ ಈ ದೂರ ಪರಿಧಿಗೆ ಹರ್ಷನ ಮೇಲಿನ ಪ್ರೀತಿಯನ್ನು ಇಮ್ಮಡಿಗೊಳಿಸಿತ್ತು . ಅವನ ಪ್ರೀತಿಯ ಪರಿಯೇ ಬೇರೆ. ಯಾವತ್ತೂ ಹೇಳಿಕೊಳ್ಳುತ್ತಿರಲಿಲ್ಲ ಆದರೆ ಅವನ ಅಕ್ಕರೆ ಆರೈಕೆ, ಕಾಳಜಿಯಲ್ಲಿ ಪ್ರೀತಿ ತುಂಬಿ ಹರಿಯುತ್ತಿತ್ತು. ಪ್ರತಿ ಪ್ರಾತಃಕಾಲದ ಹರ್ಷನ ಮುಗುಳ್ನಗೆಯ ಶುಭೋದಯದ ಒಂದು ಸಂದೇಶ ಪರಿಧಿ ಆ ದಿನಪೂರ್ತಿ ಉತ್ಸಾಹದ ಚಿಲುಮೆಯಂತೆ ಪುಟಿಯಲು ನೆರವಾಗುತ್ತಿತ್ತು. ವಾರಕ್ಕೊಮ್ಮೆ ಕನಿಷ್ಠ ಒಂದು ಗಂಟೆಯಾದರೂ ಇಬ್ಬರೂ ಫೋನಿನಲ್ಲಿ ಮಾತಾಡಿ ಪ್ರತಿಯೊಂದು ವಿಚಾರವನ್ನು ಆ ವಾರದ ಆಗುಹೋಗುಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಅವರು ಮಾತಾಡುವ ಮಾತಿನಲ್ಲಿ ಬಹುತೇಕವಾಗಿ ಪರಿಧಿಯ ವಿಧ್ಯಾಭ್ಯಾಸ, ಅವಳ ಸ್ನೇಹಿತರು, ಅವಳ ಕಾಲೇಜು ವಿಚಾರಗಳೇ ಅಧಿಕವಾಗಿರುತ್ತಿತ್ತು.
ಪರಿ ಆರತಿ ತಗೋಳೆ..ಪರಿ... ಪರಿ... ಎಂದು ಅತ್ತೆ ಸುಲೋಚನ ಧ್ವನಿ ಕೇಳಿಂದಲೇ ಪರಿಧಿ ನೆನಪಿನ ಲೋಕದಿಂದ ಆಚೆ ಬಂದಿದ್ದು. ಹ್ಮಾ.. ಹೇಳಿ ಏನು? ಎಂದು ಕೇಳಿದಳು.
"ಆರತಿ ತಗೊಳಮ್ಮ, ಯಾಕೆ ಹುಷಾರಿಲ್ಲವಾ? ಎಲ್ಲೋ ಕಳೆದು ಹೋಗಿದಿಯಾ!"
"ಏನಿಲ್ಲ ಅತ್ತೆ, ಚೆನ್ನಾಗೇ ಇದಿನಲ್ಲ" ಅನ್ನುವಾಗ ಹಿಂದೆ ಬಂದ ಹರಿಣಿ "ಇನ್ನೆಲ್ಲಿ ಕಳೆದು ಹೋಗ್ತಾರೆ ಅವರ ಯಜ್ಮಾನ್ರನ್ನ ನೆನಪಿಸ್ಕೊತಿರ್ಬಹುದು" ಎಂದು ಕಣ್ಣು ಹೊಡೆದಳು. ಪರಿಧಿ ಅವಳ ತಲೆಗೆ ಮೃದುವಾಗಿ ಹೊಡೆದು "ತಲೆಹರಟೆ ಸಾಕು ಬಾ, ನಿನ್ನ ಶಾಲೆಗೆ ಬಿಟ್ಟು ಹೋಗ್ತಿನಿ" ಎಂದಳು. ದೇವರಮನೆಯಿಂದ ಸುಲೋಚನ ಇಬ್ಬರೂ ತಿಂಡಿ ಮಾಡಿ ಹೋಗ್ರೆ ಎನ್ನುತ್ತಿದ್ದರೆ ಇಬ್ಬರೂ ಬೇಡ ಬೇಡ ಎನ್ನುತ್ತಾ ಹೊರಟಾಗಿತ್ತು. ದಾರಿಯಲ್ಲಿ ಹರಿಣಿಯನ್ನು ಅವಳ ಶಾಲೆಗೆ ಬಿಟ್ಟು ತಾನು ಆಸ್ಪತ್ರೆಗೆ ಹೊರಟಾಗ ಆ ದಿನ ಹರ್ಷ ಅವಳ ಜೊತೆಗೆ ಸರಿಯಾಗಿ ಮಾತಾಡದೇ ಮುನಿಸಿಕೊಂಡಿದ್ದು ನೆನಪಾಗಿ ಮನಸ್ಸು ಉದಾಸೀನವಾಯಿತು.
ಮುಂದುವರೆಯುವುದು..
⚛⚛⚛⚛⚛⚛
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ