ಪ್ರಸನ್ನ ತನ್ನ ಲಗೇಜ್ ಇರಿಸಲು ಹರ್ಷನ ಫ್ಲಾಟ್ ಗೆ ಹೋದಾಗ ಮಾನ್ವಿ ಅಲ್ಲಿರಲಿಲ್ಲ. ಎಲ್ಲಿ ಹೋದಳೆಂದು ಕೇಳಿದಾಗ, 'ಬಹುಶಃ ಆಸ್ಪತ್ರೆಗೆ ಹೋಗಿರಬಹುದೆಂದು' ಉತ್ತರಿಸಿದ ಡೇವಿಡ್. ಲಗೇಜ್ ರೂಮಿನಲ್ಲಿಟ್ಟು ಪ್ರಸನ್ನ ಹೊರಬರುವಾಗ ಡೇವಿಡ್ ಪೋನ್‌ಗೆ ಕೈ ಅಡ್ಡವಿರಿಸಿ ಬಹಳ ಮೆಲುದನಿಯಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದ. ಪ್ರಸನ್ನನಿಗೆ ಅವನ ಮೇಲೆ ಅನುಮಾನ ಬಂದು ಮೆಲ್ಲಗೆ ಮೆಟ್ಟಿಲಿಳಿದು ಹಿಂದೆ ನಿಂತು ಅವನ ಮಾತು ಕೇಳಿಸಿಕೊಳ್ಳಲು ನೋಡಿದ. ಆದರೆ ಅಷ್ಟರಲ್ಲಾಗಲೇ ಹಿಂತಿರುಗಿ ವಿಚಲಿತಗೊಂಡ ಡೇವಿಡ್ ಗಾಬರಿಯಿಂದ ಮಾತು ಮುಗಿಸಿ ಪೋನ್ ಜೇಬಿನೊಳಗೆ ಸೇರಿಸಿದ. ಪ್ರಸನ್ನ ಅದೇ ಸಂದೇಹದೊಂದಿಗೆ ಅವನನ್ನು ಪರಿಶೀಲಿಸಿ ನೋಡುತ್ತ ಹೊರನಡೆದ. ಆ ಕ್ಷಣದಿಂದ ಡೇವಿಡ್ ಮೇಲಿನ ಅನುಮಾನ ಮಾತ್ರ ಅವನ ಮನಸ್ಸಲ್ಲೇ ಬಲವಾಗುತ್ತ ಹೋಯಿತು.
*******
ಮಾನ್ವಿ ಆಸ್ಪತ್ರೆಗೆ ಬರುವಾಗ ರಸ್ತೆ ಮಧ್ಯೆ ಅವಳ ಫೋನ್ ರಿಂಗಣಿಸಿತು. ಸ್ಕ್ರೀನ್ ಮೇಲೆ ಪರಿಯ ಹೆಸರು ಕಂಡು ಲಗುಬಗನೆ ಕಾರು ನಿಲ್ಲಿಸಿ ಕರೆ ಸ್ವೀಕರಿಸಿದಳು.
"ಬೆಳಿಗ್ಗೆ ನಾನು ಕಾಲ್ ಮಾಡಿದ್ರೆ ರಿಸೀವ್ ಮಾಡೋಕೆ ಏನಾಗಿತ್ತೇ ನಿನಗೆ?" ಗಟ್ಟಿಯಾಗಿ ಕೇಳಿದಳು.
"ಅದೂ.. ಮಕ್ಕಳು ಗೇಮ್ ಆಡ್ತಿದ್ರು, ಗೊತ್ತಾಗ್ದೆ ಕಟ್ ಮಾಡಿದ್ದಾರೆ ಅನ್ಸುತ್ತೆ. ಏನು ವಿಷಯ??" ಗಲಿಬಿಲಿಯಾದಳು
"ಮಕ್ಳಾ?? ಯಾವ ಮಕ್ಳು? ಯಾರ ಮಕ್ಳು? ಯಾರ್ಜೊತೆ ಬಂದಿದೀಯಾ ನೀನಿಲ್ಲಿ?" ಸಿಟ್ಟಿನಿಂದ ಕೇಳಿದಳು. ಪರಿ ಕಣ್ಣು ಕಿವುಚಿ ನಾಲಿಗೆ ಕೊಚ್ಚಿಕೊಂಡು..
"ಯಾಕೆ? ಏನಾಯ್ತು" ಪ್ರತಿಪ್ರಶ್ನೆ ಹಾಕಿದಳು.
"ಆ ಸೀನಿಯರ್ ರೆಸಿಡೆಂಟ್ ಡಾ.ಪ್ರಸನ್ನನ ಜೊತೆಗೆ ತಾನೇ?? ನೀನು ಎದುರಿಗೆ ಬರೋಕಾಗ್ದೆ, ಅವನನ್ನ ಹರ್ಷನ ಹತ್ರ ಕಳ್ಸಿದ್ದಿಯಾ! ವೆರಿ ಬ್ರಿಲಿಯಂಟ್ ಕಣೇ.." ವ್ಯಂಗ್ಯವಾಗಿ ನಕ್ಕಳು
"ಏನೂ,, ಡಾ.ಪ್ರಸನ್ನಾ?? ಇಲ್ಲಿಗೆ ಬಂದಿದ್ದಾರಾ?ಈಗ ಹರ್ಷನ ಹತ್ರನೇ ಇದ್ದಾರಾ? ಹೇಗೆ? ಯಾವಾಗ?" ಅವಳಿಗೆ ಮರುಪ್ರಶ್ನೆ ಹಾಕಿದಳು ಪರಿ. ಮಾನ್ವಿಯ ಯೋಚನೆ ಹಳಿತಪ್ಪಿತು. ಅವಳಿಗೂ ಪ್ರಸನ್ನನನ ಬಗ್ಗೆ ಏನೂ ತಿಳಿದಿಲ್ಲ ಎಂಬುದು ಖಾತ್ರಿಯಾಗಿ, ಇನ್ನು ಮಾತಾಡಿ ಪ್ರಯೋಜನವಿಲ್ಲವೆಂದು ಕಾಲ್ ಕಟ್ ಮಾಡಿ ಮೊಬೈಲ್ ಸೀಟ್ ಮೇಲೆಸೆದಳು. ಅತ್ತ ಪರಿಗೆ 'ತನಗೆ ಮಾನ್ವಿಯ ನಂಬರ್ ಮಿಥಾಲಿ ಕಡೆಯಿಂದ ಸಿಕ್ಕಿತ್ತು. ಆದರೆ ಮಾನ್ವಿಗೆ ತನ್ನ ನಂಬರ್ ಹೇಗೆ ಸಿಕ್ಕಿರಬಹುದು?' ಎಂಬ ಸಂಶಯ ಬಹುವಾಗಿ ಕಾಡಿತು.
********
ಮಧ್ಯಾಹ್ನದ ಹೊತ್ತಿಗೆ ಎಂ.ಆರ್ ಆಸ್ಪತ್ರೆಗೆ ಬಂದ ಪ್ರಸನ್ನ ಮಾನ್ವಿಯನ್ನು ಅವಳ ಕ್ಯಾಬಿನ್ನಿಂದ ಬೇತಾಳನಂತೆ ಹಿಂಬಾಲಿಸಿದ್ದ. "ನೀನು ಹರ್ಷನ್ನ ನಿಜವಾಗ್ಲೂ ಪ್ರೀತಿಸ್ತಿದಿಯಾ? ಅವನನ್ನ ಸಿಡ್ನಿಗೆ ಯಾಕೆ ಕರ್ಕೊಂಡು ಹೋದೆ? ಸಂಕಲ್ಪ್ ಅಥ್ರೇಯ ಅನ್ನೋ ಹೆಸರೇ ಯಾಕಿಟ್ಟೆ? ಅವನ ಅಪ್ಪ ಅಮ್ಮ ಅಂತಿರೋರೆಲ್ಲ ಯಾವ ಡ್ರಾಮಾ ಕಂಪನಿಯವರು? ನಿನಗೆ ಬುದ್ದಿ ಇಲ್ಲಾಂದ್ರೆ ನಿಮ್ಮಪ್ಪ ಅಮ್ಮಂಗಾದ್ರೂ ಬುದ್ದಿ ಇಲ್ವಾ? ನೀನು ಹೇಳ್ದಂಗೆಲ್ಲಾ ಕುಣಿಯೋದಾ?" ಇಂತಹವೇ ಸಾಲು ಸಾಲು ಪ್ರಶ್ನೆಗಳ ಸುರಿಮಳೆ..
ಕೇಳಿ ಕೇಳಿ ಅವಳಿಗೂ ರೇಗಿ ಹೋಗಿತ್ತು. ಅಷ್ಟರಲ್ಲಿ ಎದುರಿಗೆ ಬಂದ ಸೀನಿಯರ್ ಡಾಕ್ಟರ್ ಒಬ್ಬರು ಪ್ರಸನ್ನನನ್ನು ಗುರುತಿಸಿ ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ಕುಶಲ ಕ್ಷೇಮ ಮಾತಾಡಿದ ನಂತರ ಅಲ್ಲಿಯ ಮೆಡಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಸೆಮಿನಾರ್ ನಡೆಯುತ್ತಿರುವ ಬಗ್ಗೆ ತಿಳಿಸಿ "ವೈ ಡೋಂಟ್ ಯು ಜಾಯ್ನ್ ಅಸ್ ಆ್ಯಸ್ ಗೆಸ್ಟ್" ಎಂದು ಕೇಳಿ ಮೆಡಿಕಲ್ ಸ್ಟೂಡೆಂಟ್ಸ್ ಗೆ ನ್ಯೂರಾಲಜಿ ಕುರಿತು ಸೆಮಿನಾರ್ ನೀಡಬೇಕೆಂದು ಕೋರಿದರು. ಇದನ್ನು ಕೇಳಿ ಕೆಲಕಾಲ ಇವನ ಕಾಟ ತಪ್ಪುವುದೆಂದು ಮಾನ್ವಿ ನಿಟ್ಟುಸಿರು ಬಿಟ್ಟಳು. ಆದರೆ ತಾನೇನು ಅಂತಹ ದೊಡ್ಡ ವ್ಯಕ್ತಿಯಲ್ಲ ಎಂದು ಮಾತು ತಳ್ಳಿದ ಪ್ರಸನ್ನ, ಕೊನೆಗೆ ಅವರ ಅಪಾರ ಒತ್ತಾಯಕ್ಕೆ ಒಪ್ಪಿಕೊಂಡ. 'ಅದೂ ತನ್ನ ಜೊತೆಗೆ ಮಾನ್ವಿ ಬರುವುದಾದರೆ ಮಾತ್ರ' ಎಂಬ ಷರತ್ತಿನ ಮೇರೆಗೆ..
"ಆಫ್‌ಕೋರ್ಸ್ ಬರ್ತಾರೆ. ಅಲ್ವಾ ಡಾ.ಮಾನ್ವಿ" ಅವಳ ಮುಖ ನೋಡಿದರು ಹಿರಿಯ ವೈದ್ಯರು. ಪ್ರಸನ್ನನನ್ನ ನುಂಗುವಂತೆ ನೋಡುತ್ತಲೇ ಸಮ್ಮತಿ ನೀಡಿದಳು ಮಾನ್ವಿ. ಅವರು ಆ ಕೂಡಲೇ ಸೆಮಿನಾರ್ ವ್ಯವಸ್ಥೆ ಮಾಡಲು ನಡೆದರು.
ಫಂಕ್ಷನ್ ಹಾಲ್‌ನಲ್ಲಿ ವೈಟ್ ಕೋಟ್ ಧರಿಸಿದ ಅಸಂಖ್ಯ ವಿದ್ಯಾರ್ಥಿಗಳು ನೆರೆದಿದ್ದರು. ಪ್ರೊಫೆಸರ್ ಒಬ್ಬರು ಪ್ರಸನ್ನನ ಕಿರು ಪರಿಚಯ ಮಾಡಿಕೊಟ್ಟು, ಆತನನ್ನು ವೇದಿಕೆಗೆ ಆಹ್ವಾನಿಸಿದರು.
"ಹಾಯ್ ಮೈ ಡಿಯರ್ ಫ್ರೆಂಡ್ಸ್..." ಎಂದು ವೇದಿಕೆ ಏರಿದ ಪ್ರಸನ್ನ ಆಂಗ್ಲದಲ್ಲಿ ಮಾತು ಮುಂದುವರೆಸಿದ. "ಎಲ್ರದ್ದೂ ಊಟ ಆಯ್ತಾ??" ಕೇಳಿದ
" ಯೆಸ್ ಸರ್" ಜೋರಾದ ಉಧ್ಘಾರ..
"ಆದ್ರೆ ನಂದಿನ್ನೂ ಊಟ ಇಲ್ಲ. ತುಂಬಾ ಹಸಿವು. ಅದ್ಕೆ ಸ್ವಲ್ಪ ನಿಮ್ಮ ತಲೆ ತಿನ್ಕೊಂಡ ಹೋಗೋಣಾಂತ ಬಂದೆ..." ಹಾಸ್ಯವಾಡಿ " ತಲೆ ಇದೆ ತಾನೇ ಎಲ್ಲರದ್ದೂ" ತಮಾಷೆಯಾಗಿ ಕೇಳಿದ. ಎಲ್ಲೆಡೆ ನಗುವಿನ ಸದ್ದು. ಮಧ್ಯದಲ್ಲೊಬ್ಬ ಯುವಕ ಎದ್ದುನಿಂತು "ಸರ್ ತಲೆ ಎನೋ ಇದೆ. ಬಟ್ ಒಳಗೆ ಬ್ರೇನ್ ಇದ್ಯೋ ಇಲ್ವೋ ಡೌಟು" ಎಂದ. ಮತ್ತೆ ನಗುವಿನ ಹಾಹಾಕಾರ. ಪ್ರಸನ್ನ ಕೂಡ ಮುಗುಳ್ನಕ್ಕು "ಹಾಗಾದ್ರೆ ನಾವೆಲ್ಲ ಒಂದೇ ಕುಲದವರು. ಇನ್ನು ನಿಶ್ಚಿಂತವಾಗಿ ಮಾತಾಡಬಹುದು" ಎಂದು ನಿಡುಸುಯ್ದ. ಚಿಕ್ಕ ನಗುವಿನಲೆ
ಎಲ್ಲಿಯೇ ಭಾಷಣ, ಸೆಮಿನಾರ್ ಮಾಡಿದರೂ ಎಲ್ಲರ ಚಿತ್ತವನ್ನು ತನ್ನೆಡೆಗೆ ಸೆಳೆದುಕೊಂಡ ನಂತರ ಮುಖ್ಯ ವಿಷಯದ ಬಗ್ಗೆ ಮಾತನಾಡುವುದು ಅವನ ಶೈಲಿ. ಎಲ್ಲರ ಗಮನ ಸೆಳೆಯುವದರಲ್ಲಿ ಹಾಸ್ಯದ ಪಾತ್ರ ಅಧಿಕ. ಅದಕ್ಕಾಗಿ ಕೊಂಚ ಹಾಸ್ಯದ ಲೇಪನ.
"ಇದುವರೆಗೆ ನೀವೆಲ್ಲ ಕೆಲವು ಸೆಮಿನಾರ್ ಕೇಳಿರಬಹುದು. ಅದರಲ್ಲಿ ತುಂಬಾ ಜನ ಸ್ಪೆಷಲಿಸ್ಟ್ಸ್ ನಿಮಗೆ, ಡಾಕ್ಟರ್ ಆದವರು ಹೇಗಿರಬೇಕು? ಒಬ್ಬ ಒಳ್ಳೆಯ ಡಾಕ್ಟರ್ ಆಗೋಕೆ ಏನು ಮಾಡ್ಬೇಕು? ಯಾವ ಪರಿಸ್ಥಿತಿಯಲ್ಲಿ ಯಾವ ರೀತಿಯ ಟ್ರೀಟ್ಮೆಂಟ್ ಮುಖ್ಯ? ಪೇಷಂಟ್ ಜೊತೆಗೆ ಹೇಗೆ ವರ್ತಿಸಬೇಕು? ಇವೇ ಮುಂತಾಗಿ ಹೇಳಿರಬಹುದು ಅಲ್ವಾ.... ಆದರೆ ನಾನಿವತ್ತು ನಿಮಗೆ ಅದಕ್ಕೆ ಪರ್ಯಾಯವಾಗಿ ಹೇಳ್ಬೇಕು ಅನ್ಕೊಂಡಿದೀನಿ. 'ಎಂತಹ ಡಾಕ್ಟರ್ ಆಗಬಾರದು! ಎಂತಹ ಡಾಕ್ಟರ್ ಇರೋದ್ರಿಂದ ಮನುಷ್ಯತ್ವದ ಮೇಲಿನ ನಂಬಿಕೆ ಕಡಿಮೆ ಆಗ್ತಿದೆ!' ಅನ್ನೋದರ ಬಗ್ಗೆ.. ಎಲ್ಲರೂ ವಿಚಿತ್ರವಾಗಿ ಮುಖ ಮುಖ ನೋಡಿಕೊಂಡು, ವ್ಹಾಟ್! ಎಂಬ ಉದ್ಘಾರ ತೆಗೆದರು... ಏನು ಹೇಳಬೇಕಂತಿದ್ದಾರೆ ಇವರು? ಎಲ್ಲರ ಮನದ ಪ್ರಶ್ನೆ.
" ಡಾಕ್ಟರ್ ಆಗೋ ಪೂರ್ವದಲ್ಲಿ ನಾವೊಂದು ಶಪಥ ಮಾಡುತ್ತೇವೆ. ಹಿಪೋಕ್ರೆಟಿಕ್ ಓಥ್ ಅಂತ... ಎಲ್ಲರೂ ಸ್ಥಬ್ದರಾಗಿ ಅವನ ಮಾತು ಕೇಳುತ್ತಿದ್ದರು.
"ಯಾವಾಗಲೂ ಸತ್ಯ ಹಾಗೂ ಪ್ರಾಮಾಣಿಕತೆ ಯಿಂದ ಕೆಲಸ ಮಾಡ್ತೆವೆ, ಪ್ರತಿಯೊಂದು ಜೀವವನ್ನು ಅತ್ಯಮೂಲ್ಯ ಎಂದು ಪರಿಗಣಿಸಿ ಅವರನ್ನು ಆದರಿಸುತ್ತೇವೆ. ಆ ಅಮೂಲ್ಯ ಜೀವವನ್ನು ಉಳಿಸಿಕೊಳ್ಳಲು ನಮ್ಮ ಶತಾಯಗತಾಯ ಪ್ರಯತ್ನ ಸುರಿಸುತ್ತೇವೆ.. ನಮ್ಮ ಪೇಷಂಟ್ ಗಳಿಗೆ ನಮಗಿಂತಲೂ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ." ಹೀಗೆ ಪ್ರಮಾಣ ಮಾಡೋದು ತುಂಬಾ ಸುಲಭ. ಆದರೆ ಅದನ್ನು ನಿಭಾಯಿಸೋದು ಅಷ್ಟೇ ಕಠಿಣ..
ನಾನು ಕಂಡ ಒಂದು ಘಟನೆ ನನ್ನ ವೃತ್ತಿ ಮೇಲೆ ನನಗೆ ಅಸಹ್ಯ ಹುಟ್ಟಿಸುವಂತೆ ಮಾಡಿತು. ಸಾಮಾನ್ಯವಾಗಿ ನಮ್ಮ ಹತ್ತಿರ ಯಾವುದಾದರೂ ಆ್ಯಕ್ಸಿಡೆಂಟ್ ಕೇಸ್ ಬಂದಾಗ ಪೇಷಂಟ್ ಜೀವ ಉಳಿಸೋದು ನಮ್ಮ ಮೊದಲ ಆದ್ಯ ಕರ್ತವ್ಯ ಆಗಿರುತ್ತೆ ಅಲ್ವಾ.. ಆ ಸಮಯದಲ್ಲಿ ಅವರು ನಮ್ಮ ಶತ್ರುವೇ ಆಗಿದ್ದರೂ ಸರಿ,, ಅವರ ಪ್ರಾಣ ಉಳಿಸೋದೊಂದೆ ನಮ್ಮ ಗುರಿಯಾಗಿರಬೇಕು.
ಆದರೆ ನನಗೆ ತಿಳಿದು ಬಂದ ಒಂದು ಕೇಸ್‌ನಲ್ಲಿ ಕೆಲ ಡಾಕ್ಟರ್ಸ್ ತಮ್ಮ ಸ್ವಾರ್ಥಕ್ಕಾಗಿ ಕುತಂತ್ರದಿಂದ, ಒಬ್ಬ ವ್ಯಕ್ತಿ ಆ್ಯಕ್ಸಿಡೆಂಟ್ ನಲ್ಲಿ ಬದುಕುಳಿದರೂ ಸಹ ಅವರ ತಂದೆ-ತಾಯಿ ಮನೆಯವರಿಗೆಲ್ಲ ಆತ ಸತ್ತೇ ಹೋದನೆಂದು ನಂಬಿಸ್ತಾರೆ. ಆ ರೀತಿ ಸುಳ್ಳು ದಾಖಲೆ ಸೃಷ್ಟಿಸ್ತಾರೆ. ಅದನ್ನು ನಂಬಿದ ಮುಗ್ದಜನ ಬೇರೆ ಯಾವುದೋ ದೇಹವನ್ನು ತಮ್ಮ ಮಗನೆಂದು ಭಾವಿಸಿ ಅಂತ್ಯಕ್ರಿಯೆ ಮಾಡ್ತಾರೆ. ಮಗನನ್ನು ಕಳೆದುಕೊಂಡ ತಾಯಿ ಹಗಲು ರಾತ್ರಿ ದೇವರ ಮುಂದೆ ಕುಳಿತು ಕಣ್ಣೀರು ಸುರಿಸುತ್ತಾ ನಿನಗೆ ಏನು ಕಡಿಮೆ ಮಾಡಿದ್ದೆ ಅಂತ ನನ್ನ ಮಗನನ್ನ ಕಿತ್ಕೊಂಡೆ ಎಂದು ಊಟ ನಿದ್ರೆ ಬಿಟ್ಟು ಮಗನಿಗಾಗಿ ಗೋಳಾಡ್ತಾಳೆ. ಆದರೆ ಆ ತಾಯಿಗೆ ಹೇಗೆ ಗೊತ್ತಾಗ್ಬೇಕು ಮಗನನ್ನು ದೂರ ಮಾಡಿದ್ದು ದೇವರಲ್ಲ. ದೇವರು ಅಂತ ಜನ ನಂಬಿರುವ, ಪೂಜಿಸುವ ವೈದ್ಯರು ಅನ್ನೋದು.. ಅವಳ ತಪಸ್ಸು, ಆಚರಣೆಗೆ ಮೆಚ್ಚಿಯೋ ಏನೋ,, ಎಲ್ಲೋ ಒಂದು ಕಡೆ ಮಗನಂತೂ ಬದುಕಿದ್ದ ನಿಜ. ಆದರೆ ಅವನಿಗೆ ತನಗೆ ತಾನೇ ಯಾರೆಂಬುದು ನೆನಪಿಲ್ಲದ ಅತಂತ್ರ ಸ್ಥಿತಿ. ಅವನು ತಾನಾಗಿಯೇ ಬರಲಾರ. ಅವನನ್ನು ಆ ಸ್ಥಿತಿಗೆ ತಂದವರು ನಿಜ ಹೇಳಲು ತಯಾರಿಲ್ಲ. ಆ ತಾಯಿ ರೋಧನೆಗೆ ಕೊನೆಯಿಲ್ಲ..
ಈಗ ಹೇಳಿ.. ಇಲ್ಲಿ ತಪ್ಪು ದೇವರದೋ? ಅಥವಾ ದೇವರು ಅನ್ಕೊಂಡಿರೋ ಈ ಡಾಕ್ಟರ್ ಗಳದ್ದೋ? ಇಂತಹ ಡಾಕ್ಟರ್ಸ್ ಗೆ ಏನ್ ಶಿಕ್ಷೆ ಕೊಡಬೇಕು?" ಪ್ರಸನ್ನನ ಧ್ವನಿಯಲ್ಲಿ ಆಕ್ರೋಶವಿತ್ತು. ನೋಟ ಮಾನ್ವಿಯೆಡೆಗೆ ಚುಚ್ಚುತ್ತಿತ್ತು. ವಿದ್ಯಾರ್ಥಿಗಳಲ್ಲಿ ಗುಸುಗುಸು ಚರ್ಚೆ ಶುರುವಾಗಿತ್ತು.
" ಇಂತಹ ಡಾಕ್ಟರ್ಸಗಳನ್ನು ಜೈಲಿಗೆ ಹಾಕಬೇಕು. ಲೈಸೆನ್ಸ್ ಕಿತ್ಕೊಬೇಕು. ಸಾಯೋ ಹಾಗೆ ಹೊಡಿಬೇಕು. ವಿಷ ಹಾಕಿ ಕೊಲ್ಬೇಕು." ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದವು.
"ಸರ್, ಆ ವ್ಯಕ್ತಿ ಯಾರು? ಡಾಕ್ಟರ್ಸ್ ಯಾರು? ಎಲ್ಲಿ ನಡೆದಿದ್ದು? ಯಾವಾಗ? ಈಗ ಆ ವ್ಯಕ್ತಿ ಎಲ್ಲಿದ್ದಾನೆ? ಹೇಗಿದ್ದಾನೆ?" ಪ್ರಶ್ನೆಗಳು ಸುರಿದವು.
"ಹೇಯ್ ಗಾಯ್ಸ್ ರಿಲ್ಯಾಕ್ಸ್... ನೀವು ಭವಿಷ್ಯದಲ್ಲಿ ಒಬ್ಬ ಒಳ್ಳೆಯ ಡಾಕ್ಟರ್ ಆಗದಿದ್ದರೂ ಪರವಾಗಿಲ್ಲ ಆದರೆ ದಯವಿಟ್ಟು ಈ ರೀತಿಯ ಡಾಕ್ಟರ್ ಆ್ಲಗ್ಬೇಡಿ ಅನ್ನೋ ಕಾರಣಕ್ಕೆ ಇದ್ನ ಹೇಳಿದೆ, ಯಾವತ್ತೂ ಈ ರೀತಿಯ ಅನ್ಯಾಯದ ಕೆಲಸ ಮಾಡಬೇಡಿ. ಕಣ್ಣೆದುರು ಇಂತಹ ಅನ್ಯಾಯ ನಡೆದರೂ ಅದನ್ನು ವಿರೋಧಿಸಿ. ನಿಮ್ಮ ವೃತ್ತಿಗೆ ನ್ಯಾಯ ಒದಗಿಸಿ. ಅದರ ಘನತೆ ಗೌರವ ಮರ್ಯಾದೆ ಉಳಿಸಿ....
ಪ್ರಸನ್ನನ ಮಾತು ಹೀಗೆ ಮುಂದುವರಿದಿತ್ತು. ಮಾನ್ವಿಯ ಮುಖ ಮ್ಲಾನವಾಗಿತ್ತು. ಶೂನ್ಯದಲ್ಲಿ ಯೋಚನೆಗೆ ಜಾರಿದವಳು ತಕ್ಷಣ ಅಲ್ಲಿಂದ ಎದ್ದು ಹೊರಗೆ ಅವಸರದಿ ನಡೆದಳು. ಪ್ರಸನ್ನ ಅವಳತ್ತ ನೋಡಿ, ನೋಡದಂತೆ ಮಾತನಾಡುತ್ತಲೇ ಇದ್ದ. ವೃತ್ತಿ ಜೀವನ ಕುರಿತು,, ನ್ಯೂರಾಲಜಿ, ನ್ಯೂರೋಸೈನ್ಸ್, ಆಧುನಿಕ ಚಿಕಿತ್ಸಾ ಕ್ರಮಗಳು ಉಪಕರಣಗಳು ಹೀಗೆ ಸೆಮಿನಾರ್ ಮುಂದುವರೆದಿತ್ತು.
ಕೆಲವು ಸಮಯದ ನಂತರ ಸೆಮಿನಾರ್ ಮುಗಿಸಿ ಆಚೆ ಬಂದವನೇ ಮಾನ್ವಿಯನ್ನು ಹುಡುಕಾಡಿದ. ಅವಳ ಕ್ಯಾಬಿನ್ ನಲ್ಲಿ ಬಂದು ನೋಡಿದ. ಅವಳು ಆಗಷ್ಟೇ ವಾಷ್‌ರೂಂ ನಿಂದ ಹೊರಬಂದಳು. ಕಣ್ಣು ಕೆಂಪಾಗಿ ಊದಿಕೊಂಡಂತೆ ಕಾಣಿಸಿತು.
" ಮುಗೀತಾ... ನಿನ್ನ ಭಾಷಣ! ನಿನ್ನ ದೃಷ್ಟಿಯಲ್ಲಿ ನಾನು ಕೆಟ್ಟವಳೇ ಆಗಿರಬಹುದು ಆದರೆ ಒಂದು ನೆನಪಿರ್ಲಿ, ನಾನು ಇರ್ದಿದ್ರೆ ಹರ್ಷ ಇಲ್ಲಿವರೆಗೂ ಬದುಕಿರ್ತಿರ್ಲಿಲ್ಲ.." ತೋರ್ಬೆರಳು ತೋರಿಸಿ ಎಚ್ಚರಿಸಿದಳು. ಅವನು ಅವಳ ಭಾವನೆಗಳನ್ನು ಇನ್ನಷ್ಟು ಕೆಣಕಿದರೆ ಆಳದ ಸತ್ಯಗಳೆಲ್ಲ ಹೊರಬೀಳುತ್ತಿದ್ದವೇನೋ... ಆದರೆ ಅಷ್ಟರಲ್ಲಿ ಅವಳ ಫೋನ್ ರಿಂಗಾಯಿತು. ಎತ್ತಿ ಮಾತಾಡಿದವಳೇ ಗಾಬರಿಯಿಂದ ಹೊರನಡೆದಳು. ವಿಷಯ ತಿಳಿಯದೆ ಕಂಗಾಲಾದ ಪ್ರಸನ್ನ ಕೂಡ ಅವಳನ್ನ ಹಿಂಬಾಲಿಸಿದ.
ಕಾರನ್ನು ಹತ್ತಿ ಕುಳಿತು ಹೊರಡುವಾಗ ಏನಾಯ್ತೆಂದು ಕೇಳಿದ.
"ಮೀಟಿಂಗ್ ಮುಗಿದ ನಂತರ ಹರ್ಷ ಆಫಿಸ್‌ನಲ್ಲೆಲ್ಲೂ ಕಾಣ್ತಿಲ್ವಂತೆ.. ಸೆಕ್ಯೂರಿಟಿ ಇಲ್ದೆ ಎಲ್ಲಿಗೆ ಹೋಗಿದ್ದಾನೋ! ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ" ಆತಂಕದಿಂದ ಎಸಿ ಕಾರಿನಲ್ಲಿ ಸಹ ಅವಳ ಮುಖ ಬೆವೆತು ಹೋಗಿತ್ತು.
"ದ್ಯಾಟ್ಸ್ ಗುಡ್ ನಿವ್ಸ್.. ಹಕ್ಕಿ ಪಂಜರದಿಂದ ಹಾರಿ ಹೋಗಾಯ್ತು. ಗೂಡು ಸೇರೋದೊಂದು ಬಾಕಿ.." ನಿರಾಳವಾಗಿ ನುಡಿದ.
ಆಕೆಗವನ ಮಾತಿನೆಡೆ ಗಮನವಿರಲಿಲ್ಲ. ಅದೇ ಧಾವಂತದಿಂದ ಆಫಿಸಿನತ್ತ ಕಾರು ಡ್ರೈವ್ ಮಾಡುತ್ತಿದ್ದಳು. ಅಷ್ಟರಲ್ಲಿ ಮತ್ತೆ ಬಂದಿತು ಡೆವಿಡ್ ನ ಕರೆ. ಎತ್ತಿ ಮಾತಾಡಿದವಳು 'ಉಫ್' ಎಂದು ನಿಟ್ಟುಸಿರು ಬಿಟ್ಟು, ಕಾರನ್ನು ಯುಟರ್ನ್ ತೆಗೆದುಕೊಂಡು ಮನೆಯ ಕಡೆಗೆ ಚಲಾಯಿಸಿದಳು. ಮನೆಗೆ ಬರುವಷ್ಟರಲ್ಲಿ ಹರ್ಷ ಸ್ಪಿನ್ನರ್ ತಿರುಗಿಸುತ್ತ ಆರಾಮವಾಗಿ ಹಾಲ್‌ನಲ್ಲಿ ಕುಳಿತಿದ್ದ.
"ಹೇಳದೆ ಕೇಳದೆ ಎಲ್ಲೋಗಿದ್ದೆ ನೀನು? ನನಗೆಷ್ಟು ಗಾಬರಿಯಾಗಿತ್ತು ಗೊತ್ತಾ?" ಏದುಸಿರಲ್ಲೇ ಒಳಗೋಡಿ ಬಂದು ಕೇಳಿದಳು.
"ರಿಲ್ಯಾಕ್ಸ್ ಮಾನು.. ಏನಾಯ್ತಿವಾಗ? ಯಾಕೆ ಗಾಬರಿ?" ಅವಳನ್ನ ಕೂರಿಸಿ ನೀರು ಕುಡಿಸಿದ
"ನೀನು ಎಲ್ಲೋಗಿದ್ದೆ ಮೊದಲು ಅದ್ನ ಹೇಳು.."
"ನೀನು ಸರ್ಪ್ರೈಜ್ ಕೊಟ್ರೆ ಆಯ್ತಾ,,, ನಾನು ಕೊಡೋದು ಬೇಡ್ವಾ.. ಅದ್ಕೆ.." ಎಂದವನೇ ಕೈಯಲ್ಲಿ ಅದುಮಿಟ್ಟ ಪ್ಲಾಟಿನಂ ಚೈನ್ ಒಂದನ್ನು ಅವಳ ಮುಂದೆ ಜಾರಿಸಿದ. ಅದನ್ನು ನೋಡಿ ಅವಳಿಗೆ ಮಾತೇ ಬರದಂತಾಯಿತು. ಅವಳಿಗೆ ತೊಡಿಸಲು ಆತ ಮುಂದೆ ಬಾಗಿದ. ಆಕೆ ಶಾಕ್‌ನಿಂದ ಎಚ್ಚೆತ್ತಂತೆ ಎದ್ದು ನಿಂತು "ಈಗ್ಬೇಡ. ನಾನು ಹೇಳಿದಾಗ.." ಎಂದು ಮುಗುಳ್ನಕ್ಕು, ಅದನ್ನು ಕೈಯಲ್ಲಿ ಜೋಪಾನವಾಗಿ ಹಿಡಿದು ಕೋಣೆಗೆ ಹೋದಳು.
"ನಿಜವಾಗ್ಲೂ ಈ ಸರ್ಪ್ರೈಜ್ ಗೋಸ್ಕರನೇ ಹೋಗಿದ್ದಾ ನೀನು?" ಎಲ್ಲವನ್ನೂ ಮುಖಪ್ರೇಕ್ಷಕನಂತೆ ನೋಡುತ್ತಿದ್ದ ಪ್ರಸನ್ನ ಕೈ ಉಜ್ಜಿಕೊಳ್ಳುತ್ತ ಕೇಳಿದ. ಹರ್ಷ ಅವನ ಮುಖ ನೋಡಿ ಮಂದಹಾಸ ಬೀರಿ ಹೊರಟು ಹೋದ. ಆ ನಗೆಯ ಹಿಂದಿನ ಅರ್ಥ ಪ್ರಸನ್ನನಿಗೆ ಶೀಘ್ರದಲ್ಲೇ ತಿಳಿಯುವದರಲ್ಲಿತ್ತು.
*********
ಹರ್ಷ, ಪ್ರಸನ್ನ ಟೀಶರ್ಟ್, ಶಾರ್ಟ್ ಮತ್ತು ಸ್ಪೋರ್ಟ್ಸ್ ಶ್ಯೂಸ್ ನೊಂದಿಗೆ ಒಂದು ಜೊತೆ ಬಟ್ಟೆ ಇಟ್ಟುಕೊಂಡ ಬ್ಯಾಗ್ ಹೆಗಲೇರಿಸಿ ಇಳಿಸಂಜೆ ಹೊತ್ತಿಗೆ ವಾಟರ್ ಪಾರ್ಕ್ ಗೆ ಸಿದ್ದರಾಗಿದ್ದರು. ಕೆಲ ಹೊತ್ತಾದರೂ ಮಾನ್ವಿ ಇನ್ನೂ ಕೆಳಗೆ ಬರದಿದ್ದಾಗ ಇಬ್ಬರೂ ಒಕ್ಕೊರಲಿನಿಂದ ಅವಳ ಹೆಸರು ಕೂಗಿದರೂ ಅವಳ ಸುಳಿವಿಲ್ಲ. ಕಡೆಗೆ ಬ್ಯಾಗ್ ಅಲ್ಲಿಯೇ ಬಿಸುಟಿ ಮೇಲಿನ ಅವಳ ಕೋಣೆಗೆ ಬಂದಾಗ ರೂಂ ಬಾಗಿಲು ತೆರೆದೇ ಇತ್ತು. ಒಳಹೋಗಿ ನೋಡಲು, ಅವಳು ಹಾಸಿಗೆ ಮೇಲೆ ಒದ್ದಾಡುತ್ತ ಮಲಗಿದ್ದಳು. ಇಬ್ಬರೂ ಮುಖ ಮುಖ ನೋಡಿಕೊಂಡು ಸನಿಹ ಧಾವಿಸಿದರು.
"ಮಾನು.. ಏನಾಯ್ತು?" ಅವಳ ತಲೆ ತಡವುತ್ತ ಕೇಳಿದ ಹರ್ಷ.
"ಸಂಕು.. ತುಂಬಾ ಹೊಟ್ಟೆ ನೋವು... ಸಹಿಸ್ಕೊಳ್ಳೊಕೇ ಆಗ್ತಿಲ್ಲ" ಒದ್ದಾಡುತ್ತ, ಸಂಕಟದಿಂದ ಹೇಳಿದಳು. ಪ್ರಸನ್ನನಿಗೆ ಅವಳ ನಾಟಕ ಹಾಗೂ ಅದರ ಹಿಂದಿರುವ ಉದ್ದೇಶ ಅರ್ಥವಾಯಿತು.
"ಓಹ್.. ನೋ ಎಷ್ಟು ಪ್ರೀತಿಯಿಂದ ವಾಟರ್ ಪಾರ್ಕ್ ಪ್ರೋಗ್ರಾಂ ಮಾಡಿದ್ದೆ. ಈಗಲೇ ಹೀಗಾಗ್ಬೇಕಾ! ಪರವಾಗಿಲ್ಲ, ಪಾರ್ಕ್ ಗೆ ಇನ್ನೊಂದಿನ ಹೋದ್ರಾಯ್ತು.. ಈಗ ಮೊದ್ಲು ನೀನು ಹುಷಾರಾಗೋದು ಮುಖ್ಯ. ಯಾವ ಡಾಕ್ಟರ್ ಗೆ ಕಾಲ್ ಮಾಡ್ಲಿ?" ಅವಳ ಮೊಬೈಲ್ ಹರ್ಷನ ಕೈಯಲ್ಲಿತ್ತು
"ಹೇಯ್.. ರಿಲ್ಯಾಕ್ಸ್ ಬ್ರೋ.. ಡಾಕ್ಟರ್ ಮನೆಲೇ ಇರೋವಾಗ, ಕಾಲ್ ಮಾಡೋದ್ಯಾಕೆ!! ನಾನಿದೀನಲ್ಲ.. ಇವಳ್ನ ಸರ್ಯಾಗಿ ರಿಪೇರಿ ಮಾಡೋಕೆ!! ಐ ಮೀನ್ ಕ್ಯೂರ್ ಮಾಡೋಕೆ.. ನೀನಿಕಡೆ ಬಾ.." ಹರ್ಷನನ್ನು ಪಕ್ಕಕ್ಕೆ ಸರಿಸಿ ಅವಳ ಕಣ್ಣು, ಬಾಯಿ, ಹೊಟ್ಟೆ ಪರೀಕ್ಷೆ ಮಾಡಿ ನೋಡಿ ಕೇಳಿದ " ಮಧ್ಯಾಹ್ನ ಏನ್ ತಿಂದೆ?"
"ಏನೂ ಇಲ್ಲ" ತಟ್ಟನೆ ಉತ್ತರಿಸಿ ಮುಖ ತಿರುಗಿಸಿದಳು.
"ಹ್ಮಾ... ಅದೇ ಮತ್ತೆ, ಡಾಕ್ಟರ್ ಆಗಿ ಟೈಮಿಗೆ ಸರಿಯಾಗಿ ಊಟ ಮಾಡ್ದಿದ್ರೆ ಆ್ಯಸಿಡಿಟಿ ಪ್ರಾಬ್ಲಂ ಆಗುತ್ತೆ ಅನ್ನೋದು ಗೊತ್ತಾಗಲ್ವ ನಿನಗೆ.. " ಹಿಡಿದಿದ್ದ ಅವಳ ಕೈಯನ್ನು ಅವಳ ಮುಖದ ಮೇಲೆ ರಪ್ ಎಂದು ಬಿಟ್ಟ.
"ಜಸ್ಟ್ ಆ್ಯಸಿಡಿಟಿ ಪ್ರಾಬ್ಲಮ್ಮಾ.. ನಾನು ಏನಾಯ್ತೋ ಅಂತ ಗಾಬರಿಯಾಗಿದ್ದೆ" ನಿಟ್ಟುಸಿರು ಚೆಲ್ಲಿದ ಹರ್ಷ.
"ಗಾಬರಿಯಾಗೋದೇನಿಲ್ಲ.. ನಾನು ಕೊಡೋ ಹೋಮ್ ರೆಮಿಡಿಗೆ ನೋವೆಲ್ಲ ಮಾಯವಾಗುತ್ತೆ ನೋಡ್ತಿರು.." ಎಂದು ಹೇಳಿ ಕೆಳಗೆ ಹೋದ. ಅವನು ಹೇಳಿ ಹೋದ ಶೈಲಿ ನೋಡಿಯೇ ಏನೋ ಭಯಂಕರ ಔಷಧಿಯ ಸುಳಿವು ಸಿಕ್ಕಿತ್ತು ಮಾನ್ವಿಗೆ. ಮಲಗಿದಲ್ಲಿಯೇ ಚಡಪಡಿಸಿದಳು. ಹರ್ಷ ಅವಳ ಹಣೆ ಸವರುತ್ತ "ನಥಿಂಗ್ ಟು ವರಿ.. ಪ್ರಸನ್ನ ಇದಾನಲ್ವ" ಧೈರ್ಯ ನುಡಿದ. ಅವನೇ ಅವಳ ಪಾಲಿನ ಮಹಾವ್ಯಾಧಿ ಎನ್ನುವುದನ್ನು ಅರಿಯದೆ!!
ಅಷ್ಟರಲ್ಲಿ ಒಂದು ಗ್ಲಾಸಿನ ತುಂಬ ಹಸಿರು ಬಣ್ಣದ ದ್ರವ್ಯವನ್ನು ಹಿಡಿದು ತಂದ ಪ್ರಸನ್ನ. ನಿಧಾನವಾಗಿ ಅದನ್ನು ಹರ್ಷನ ಕೈಗೆ ಕೊಟ್ಟು ಕುಡಿಸುವಂತೆ ಹೇಳಿದ.
"ಏನಿದು?" ಮಾನ್ವಿ ಕಕ್ಕಾಬಿಕ್ಕಿಯಾದಳು.
"ವೆಜಿಟೇಬಲ್ ಜ್ಯೂಸ್ ಮಾನು.. ಹೆಲ್ತ್ ಗೆ ತುಂಬಾ ಒಳ್ಳೆಯದು ಕುಡಿ" ಪ್ರಸನ್ನ ಹೇಳಿದ್ದೆ, ಹರ್ಷ ಅವಳ ತಲೆಯನ್ನು ಎತ್ತಿ ಗ್ಲಾಸ್ ಅವಳ ತುಟಿಗಿಟ್ಟ. ಅನುಮಾನಿಸುತ್ತಲೇ ಗ್ಲಾಸಿಗೆ ಬಾಯಿಟ್ಟಳು. ಒಂದೇ ಗುಟುಕಿನ ಒಂದೇ ಹನಿ ನಾಲಿಗೆಗೆ ಸೋಕುತ್ತಿದ್ದಂತೆ ಮುಖ ಸಿಂಡರಿಸಿ ವಾಕರಿಸಿಕೊಂಡಳು. ಅಷ್ಟರಲ್ಲಿ ರೂಮಿಗೆ ಕಾಲಿಟ್ಟ ಜಾನಕಮ್ಮನವರಿಗೆ ಬೇವಿನೆಲೆ ಹಾಗಲಕಾಯಿಯ ಮಿಶ್ರ ದ್ರಾವಣದ ಕಾರಣ ತಿಳಿದು ಕುತೂಹಲ ಮಾಯವಾಯಿತು. ಅವರು ಏನೋ ಹೇಳಬೇಕೆಂದರೂ, ಪ್ರಸನ್ನ ಅವರಿಗೆ 'ಮಾನ್ವಿಗೆ ಟ್ರೀಟ್ಮೆಂಟ್ ನಡಿತಿದೆ. ಡಿಸ್ಟರ್ಬ್ ಮಾಡಬೇಡಿ' ಎಂದು ಆಚೆ ಸಾಗಹಾಕಿದ.
ಹರ್ಷ ಮಾನ್ವಿಯ ತಲೆ ತಡವುತ್ತ ರಮಿಸುತ್ತ ಬಲವಂತವಾಗಿ ಜ್ಯೂಸ್ ಕುಡಿಸುತ್ತಿದ್ದ. ಆ ಕ್ಷಣ ಅವನ ಮನದಲ್ಲೇನೊ ಇರಿಸುಮುರಿಸು.. ಕಾರಣ ತಿಳಿಯದು. ಅವಳೋ ಕೊಸರಾಡುತ್ತ, ನಿರಾಕರಿಸುತ್ತಲೇ ಜೀವನದ ಕೊನೆಯ ಕ್ಷಣವೇನೋ ಎನ್ನುವಂತೆ ಅದನ್ನು ಗುಟುಕುತ್ತಿದ್ದಳು.
ಆಗ ಪ್ರಸನ್ನ ನುಡಿದ "ನೆನಪಿದೆಯಾ.. ಮೊದಲಿಂದಲೂ ಇವಳಿಗೆ ಕಹಿ ಔಷಧಿ ಕಷಾಯ ಕುಡಿಯೋದುಂದ್ರೆ ಚಿತ್ರಹಿಂಸೆ. ಆಗೆಲ್ಲ ನೀನೇ ಹೀಗೆ ಸಮಾಧಾನದಿಂದ ರಮಿಸ್ತಾ ಕಷಾಯ ಕುಡಿಸ್ತಿದ್ದೆ. ಕೆಲವೊಮ್ಮೆ ಅವಳಿಗೆ ಚೀರ್ಸ್ ಮಾಡೋಕೆ ನೀನು ಕಷಾಯ ಕುಡಿದಿದ್ದಿಯಾ" ನಕ್ಕ. ಹರ್ಷನ ಸ್ಮೃತಿಯಲ್ಲಿ ಅವನಾಡಿದ ಮಾತುಗಳೇ ಸನ್ನಿವೇಶದ ರೂಪತಳೆದವು. 'ಹೌದು.. ಇದೇ ರೀತಿ ತುಂಬಾ ಸಲ ಔಷಧಿ ಕೊಟ್ಟಂತೆ, ಕಾಳಜಿಯಿಂದ ನೋಡಿಕೊಂಡಂತೆ ನೆನಪು. ಕಣ್ರೆಪ್ಪೆ ಸಹ ಮುಚ್ಚದೆ ರಾತ್ರಿಯಿಡೀ ಎದ್ದು ಕೂತಂತೇ ಭಾಸ. ಆ ಹುಡುಗಿ ಇವಳೇನಾ?' ಮನಸ್ಸು ಪ್ರಶ್ನಿಸಿತು. ಕಣ್ಣು ಗಟ್ಟಿಯಾಗಿ ಮುಚ್ಚಿ ತಲೆ ತಡವಿದ. ಮಾನ್ವಿಯ ಸಾನಿಧ್ಯ ಅಸಹನೀಯ ಎನಿಸಿತು. ಗ್ಲಾಸ್ ಪ್ರಸನ್ನನ ಕೈಗಿಟ್ಟು "ನೀನೇ ಕುಡಿಸು" ಎಂದು ಕೂದಲಲ್ಲಿ ಬೆರಳಾಡಿಸುತ್ತ ಅತ್ತಿತ್ತ ತಿರುಗಾಡಿದ.
ಮಾನ್ವಿಯ ಪಕ್ಕದಲ್ಲಿ ಕುಳಿತ ಪ್ರಸನ್ನ "ಮಾನು..." ಎಂದು ನಾಟಕೀಯವಾಗಿ ಕೂಗುತ್ತಾ ಅವಳ ಮೂಗಿಡಿದು ಕಹಿರಸವನ್ನು ಸವಿಸಿದ. ಮಾಡಿದ ತಪ್ಪಿಗೆ ಸುಂಕ ಭರಿಸುವಂತೆ ಅವಳೂ ಹಿಡಿಶಾಪ ಹಾಕುತ್ತಲೇ ವಾಕರಿಸುತ್ತ ಮುಖ ಕಿವುಚುತ್ತ ಅದನ್ನು ಪೂರ್ಣ ಕುಡಿದು ಖಾಲಿ ಮಾಡಿದಳು. ನಿಜಾರ್ಥದಲ್ಲಿ ಪ್ರಸನ್ನ ಖಾಲಿ ಮಾಡಿಸಿದ ಎಂದರೆ ಸರಿಹೋಗಬಹುದು! ಇದನ್ನೆಲ್ಲ ಬಿಟ್ಟ ಕಣ್ಣಿನಿಂದ ನೋಡುತ್ತ, ಎಲ್ಲಿ ಬೊಗಳಿದರೆ ತನಗೂ ಜ್ಯೂಸ್ ಕುಡಿಸುವರೇನೋ ಎಂದು ಬೆದರಿದ ಅವಳ ಮುದ್ದಿನ ಸ್ಟೋನಿ, ಬೊಗಳುವುದನ್ನು ಮರೆತು ಬಾಲ ಮುದುರಿಕೊಂಡು ಎದುರಿಗೆ ಕೌಚ್ ಮೇಲೆ ಕುಳಿತಿತ್ತು.
"ಹೊಟ್ಟೆ ನೋವು ವಾಸಿಯಾಯ್ತಾ? ಅಥವಾ ಇನ್ನೊಂದು ಗ್ಲಾಸ್ ಜ್ಯೂಸ್ ಬೇಕಾ?" ಕಣ್ಣು ಪಿಳಿಕಿಸಿದ ಪ್ರಸನ್ನ.
"ನೋ.... ಐಮ್ ಆಲ್ರೈಟ್ ನೌ.. ನಾನು ರೆಸ್ಟ್ ಮಾಡ್ಬೇಕು. ನೀವು ಹೊರಗೆ ಹೋಗಿ" ಹೌಹಾರಿದಂತೆ ಉತ್ತರಿಸಿ ಇಬ್ಬರನ್ನೂ ಆಚೆಗಟ್ಟಿದಳು. ಹರ್ಷ ಬಂದ ನಂತರ ಪ್ರಸನ್ನ ಅವಳ ರೂಮ್ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಮೆಲ್ಲಗೆ ಅವನ ಹಿಂದೆ ಹೆಜ್ಜೆ ಹಾಕಿದ.
ಅವಳ ರೂಮಿನಿಂದ ಹೊರಬಂದ ನಂತರವೂ ಹರ್ಷನ ತಲ್ಲಣಗಳು ತಣಿಯಲಿಲ್ಲ. ಅವನು ಯಾವುದೋ ಧ್ಯಾನದಲ್ಲಿ ಮುಳುಗಿದ್ದನ್ನು ಕಂಡು ಪ್ರಸನ್ನ ಎಚ್ಚರಿಸಿದ. "ಬ್ರೋ... ಹೇಗಿದ್ರೂ ಅವಳು ಆರಾಮವಾಗಿ ರೆಸ್ಟ್ ಮಾಡ್ತಿದ್ದಾಳೆ. ನಾವಿಬ್ರೂ ಹೋಗಿ ವಾಟರ್ ಪಾರ್ಕ್ ಸುತ್ತಾಡಿ ಬರೋಣ್ವಾ?"
"ಅವಳೇ ಪ್ಲ್ಯಾನ್ ಮಾಡಿದ್ದು, ಈಗ ಅವಳನ್ನೇ ಬಿಟ್ಟು ಹೋಗೋದಾ!" ಹರ್ಷ ನಿರಾಕರಿಸಿದ.
"ಅದಕ್ಯಾಕೆ ಬೇಜಾರು.. ಅವಳ ಜೊತೆ ಇನ್ನೊಮ್ಮೆ ಹೋಗುವಂತೆ.. ಈಗ ಎರಡೇ ಟಿಕೆಟ್ ಇರೋದಲ್ವ, ಈ ಬಡಪಾಯಿ ಫ್ರೆಂಡ್ ಜೊತೆಗೆ ಒಂದು ಸಲ ಬಂದ್ಬಿಡು. ಪ್ಲೀಸ್ ಮಗಾ... ತುಂಬಾ ಬೋರ್ ಹೊಡಿತಿದೆ ಹೋಗ್ಬರೋಣ್ವಾ" ದುಂಬಾಲು ಬಿದ್ದ. ಹರ್ಷನಿಗೂ ತನ್ನ ಯೋಚನೆಗಳಿಂದ ಕೊಂಚ ವಿರಾಮ ಬೇಕೆನ್ನಿಸಿತು. ಅವನೂ ಸಮ್ಮತಿಸಿದ. "ಆದರೆ ಮಾನುಗೆ ಬೇಜಾರಾಗುತ್ತೇನೋ" ಅನುಮಾನಿಸಿದ
"ಡೋಂಟ್ ವರಿ ಬ್ರೊ.. ಅವಳು ಏಳುವಷ್ಟರಲ್ಲಿ ಬಂದ್ಬಿಡೋಣ" ಪ್ರಸನ್ನ ಬ್ಯಾಗ್ ಹೆಗಲಿಗೇರಿಸುತ್ತ ಹೇಳಿದ. ಹರ್ಷನ ಕೈ ಎಳೆದುಕೊಂಡು ಹೊರಟ. ಹೋಗುವ ಮುನ್ನ "ಮಾನ್ವಿ ರೆಸ್ಟ್ ಮಾಡ್ತಿದಾಳೆ, ಯಾವುದೇ ಕಾರಣಕ್ಕೂ ಅವಳನ್ನ ಡಿಸ್ಟರ್ಬ್ ಮಾಡ್ಬೇಡಿ" ಎಂದು ಎಚ್ಚರಿಕೆ ನೀಡಿದ
ಮುಂದುವರೆಯುವುದು..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ