ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-32


ವಾಟರ್ ಪಾರ್ಕ್

ಅಲ್ಲಿಗೆ ಬಂದ ತರುವಾಯ ಕಾರ್ ಪಾರ್ಕ್ ಮಾಡಲು ಆಜ್ಞಾಪಿಸಿ ಪಾರ್ಕ್ ಒಳಹೊರಟ ಹರ್ಷನನ್ನು ಬಾಡಿಗಾರ್ಡ್ಸ್ ಅಲ್ಲಿಗೂ ಸಹ ಬೆಂಬಿಡದೆ ಹಿಂಬಾಲಿಸಿದರು. ಆದರೆ ಬುಕಿಂಗ್ ಫುಲ್ ಆದ್ದರಿಂದ ಅವರಿಗೆ ಟಿಕೆಟ್ ಸಿಗದೆ ಒಳಗೆ ಪ್ರವೇಶ ಸಿಗಲಿಲ್ಲ. 'ಕೆಲವು ಸಮಯವಾದರೂ ಇವರ ಕಾಟ ತಪ್ಪುವುದಲ್ಲ' ನಿಶ್ಚಿಂತನಾದ ಹರ್ಷ. ಪ್ರಸನ್ನ ತನಗಾದ ಸಂತೋಷಕ್ಕೆ ಅವನ ಭುಜಕ್ಕೆ ಕೈಹಾಕಿ ಕುತ್ತಿಗೆಗೆ ಜೋತು ಬಿದ್ದಂತೆ ಕೇಕೇ ಹಾಕುತ್ತ ಒಳಗೆ ನಡೆದ.

ಬೇಸಿಗೆ ರಜೆಯಾದ್ದರಿಂದ ಪಾರ್ಕ್ ಚಿಕ್ಕ ಚಿಕ್ಕ ಮಕ್ಕಳು ಅವರ ಪೋಷಕರು, ಟೀನೇಜ್‌ರ್ಸ್ ಗಳಿಂದ ತುಂಬಿದಂತಾಗಿತ್ತು‌. ಸ್ವಿಮ್ಮಿಂಗ್ ಪೂಲ್ ಬಳಿ ಒಂದಿಷ್ಟು ಜನ ಈಜುತ್ತಾ, ತಮ್ಮ ಆಪ್ತರಿಗೆ ನೀರೆರೆಚುತ್ತಾ ಮೋಜು ಮಾಡುತ್ತಿದ್ದರು. ಎತ್ತರದ ಜಾರುವೇಗದಿಂದ ವಾಟರ್ ಟಬ್‌ನಲ್ಲಿ ರೊಯ್ಯನೆ ಜಾರಿ ಬರುತ್ತಿದ್ದ ಜನರು ನೀರಲ್ಲಿ ಧುಮುಕಿ ಸಂಭ್ರಮಿಸಿ ಕಿರುಚಾಡುತ್ತಿದ್ದರು. ರೇಸರ್, ಫೋರ್ಸ್ ರ್ಯಾಡನ್, ವೊರ್ಟೆಕ್ಸ್, ಸ್ಪ್ಲಾಷಿಂಗ್ ಹಿಲ್, ಸ್ನೇಕ್ ಪೀಟ್ ಹೀಗೆ ಅನೇಕಾನೇಕ ಫನ್ ಮತ್ತು ಅಡ್ವೆಂಚರ್‌ ಆಟಗಳು ಅಲ್ಲಿ ಲಭ್ಯವಿದ್ದವು. ತಂಪೆರೆಯಲು ಪಾನೀಯಗಳು ಐಸ್ ಕ್ರೀಂ ಇತರೆ ತಿಂಡಿ ತಿನಿಸುಗಳ ಸೌಲಭ್ಯವಿತ್ತು. ನೆರಳಿಗಾಗಿ ಬೆಳೆಸಿದ ವಿವಿಧ ಗಿಡ ಮರಗಳ ಹಸಿರು ಕಣ್ಣಿಗೆ ತಂಪೆರೆಯುತಿತ್ತು.

ಸುತ್ತಲೂ ಒಂದು ಬಾರಿ ಕಣ್ಣಾಡಿಸುತ್ತ ಪ್ರಸನ್ನ ದೀರ್ಘ ಶ್ವಾಸ ಎಳೆದುಕೊಂಡು ಕೇಳಿದ "ವ್ಹಾವ್ ಎಷ್ಟು ದಿನ ಆಗೋಗಿತ್ತು ಈ ರೀತಿ ವೆಕೆಷನ್ ಎಂಜಾಯ್ ಮಾಡದೇ! ಇದೇ ಚಾನ್ಸ್ ಫುಲ್ ಮಸ್ತಿ ಮಾಡೋಣ.. ಹೇಳು ಮೊದಲು ಯಾವ ಕಡೆಗೆ ಹೋಗೋಣ?"

"ನಾನಾ..? ನೀರಲ್ಲಾ..?  ನೋ ವೇ.. ನನಗೂ ನೀರಿಗೂ ಆಗಿಬರಲ್ಲ. ನೀನು ಹೋಗಿ ಆಡು, ನಾನು ಜಸ್ಟ್ ನೋಡಿ ಖುಷಿ ಪಡ್ತೆನೆ" ಹರ್ಷ ಕೈ ಅಡ್ಡಲಾಗಿ ಅಲ್ಲಾಡಿಸುತ್ತ ಹೇಳಿದ

"ಏನ್ ಬ್ರೋ ತಮಾಷೆ ಮಾಡ್ತಿದಿಯಾ? ದೇವರ ಮೇಲೆ ನಂಬಿಕೆ ಇಲ್ಲದವ್ರು ದೇವಸ್ಥಾನಕ್ಕೆ ಹೋಗ್ಬಾರ್ದು, ಡಯಟ್ ಮಾಡೋವ್ರು ಮದುವೆ ಮನೆಗೆ ಹೋಗ್ಬಾರ್ದು. ಕೂದಲೇ ಇಲ್ದವ್ರು ಸಲೂನ್‌ಗೆ ಹೋಗ್ಬಾರ್ದು, ಅದೇ ರೀತಿ ನೀರು ಕಂಡ್ರೆ ಆಗದವ್ರು ವಾಟರ್ ಪಾರ್ಕಿಗೇ ಬರ್ಬಾರ್ದು. ಇಲ್ಲಿವರ್ಗೂ ಬಂದು ಆಗಲ್ಲ ಗೀಗಲ್ಲ ಅಂದ್ರೆ...  ಅದೆಲ್ಲಾ ಗೊತ್ತಿಲ್ಲ, ನೀನು ನನ್ನ ಜೊತೆಗೆ ಬರ್ಲೇಬೇಕು" ಒತ್ತಾಯ ಮಾಡಿದ.

"ಸಾಧ್ಯಾನೇ ಇಲ್ಲ. ಸುಮ್ಮನೆ ನನಗೆ ಇರಿಟೆಟ್ ಮಾಡ್ಬೇಡ. ನೀನು ಹೋಗಿ ಏಂಜಾಯ್ ಮಾಡು.. ಗೋ ನೌ" ಪ್ರಸನ್ನನನ್ನು ಮುಂದುಗಡೆ ಜೋರಾಗಿ ನೂಕಿ ಹಿಂದೆ ಸರಿದ ಹರ್ಷ. ಅವನು ತಳ್ಳಿದ ಫೋರ್ಸಿಗೆ ಪ್ರಸನ್ನ ಪೂಲ್ ನಲ್ಲಿ ಬಿದ್ದುಬಿಟ್ಟ. "ಇದನ್ನ ಚೀಟಿಂಗ್ ಅಂತಾರೆ"  ಹುಸಿಗೋಪಗೊಂಡು ಬಲಗೈಯಿಂದ ಬಲವಾಗಿ ಅವನೆಡೆಗೆ ನೀರೆರೆಚಿದ.

"ಹಾಗಾದ್ರೆ ಚೀಟರ್ ಜೊತೆ ನಿನಗೇನ್ ಮಾತು.. ಯು ಜಸ್ಟ್ ಏಂಜಾಯ್ ಡ್ಯುಡ್.." ನಗುತ್ತಲೇ ಅವನಿಂದ ದೂರ ಸರಿದು, ಸ್ವಲ್ಪ ದೂರದಲ್ಲಿದ್ದ ತೆಂಗಿನ ಮರದ ಕೆಳಗೆ ಎರಡೂ ಕೈ ಜೇಬಿಗಿಳಿಸಿ ಬಲಗಾಲನ್ನು ಮರಕ್ಕೆ ಆನಿಸಿ ನಿಂತ. ಪ್ರಸನ್ನನಿಗೆ ಪೂಲ್‌ನಲ್ಲಿ ಆಡಲು ಕಂಪ್ಯಾನಿಯನ್ಸ್ ಕೊರತೆಯೇನು ಇರಲಿಲ್ಲ. ಕಾಲೇಜು ಯುವಕ ಯುವತಿಯರ ಸಮೂಹವೇ ಸುತ್ತುವರೆದಿತ್ತು. ಅವನು ಅವರೊಂದಿಗೆ ಮೋಜಿಗಿಳಿದಿದ್ದ.

ಅಷ್ಟರಲ್ಲಿ ಹರ್ಷನ ಮುಂದೆ ಹೋಗುತ್ತಿದ್ದ ಪುಟ್ಟ ಹೆಣ್ಣು ಮಗು ಅವನ ಕಾಲು ತಾಕಿ ಎಡವಿ ಬೀಳುತ್ತಿದ್ದಳು. ಕಣ್ ಮಿಟುಕಿಸುವಷ್ಟರಲ್ಲಿ ಹರ್ಷ ಅವಳನ್ನು ಬೀಳದಂತೆ ಹಿಡಿದು ನಿಲ್ಲಿಸಿ 'ಮೆಲ್ಲಗೆ..' ಎಂದ. ಪುಟ್ಟ ಮೂಗು, ಗುಬ್ಬಚ್ಚಿಯಂತ ಪುಟ್ಟ ಕೆಂದುಟಿಯ ಬಾಯಿ, ಮಿನುಗು ಕಂಗಳು, ತಲೆಗೆ ಎರಡು ಜುಟ್ಟು, ಬಿಳಿ ಹಳದಿ ಬಣ್ಣದ ಟಾಪ್, ಕಡುನೀಲಿ ಫ್ರಾಕ್ ತೊಟ್ಟ ಮುದ್ದಾದ  ಆ ಮಗು ಪಿಳಿಪಿಳಿ ಕಣ್ಣು ಬಿಡುತ್ತ ಅವನನ್ನೇ ಎವೆಯಿಕ್ಕದೆ ನೋಡುತ್ತಿತ್ತು. ತಾನಿರುವ ತಾಣ ಮುಂಬೈ ಎಂದರಿವಾಗಿ, ತನ್ನ ಭಾಷೆ ಅರ್ಥವಾಗಲಿಲ್ಲವೆನೋ ಎಂದುಕೊಂಡ ಹರ್ಷ ಬೇರೆ ಭಾಷೆಯಲ್ಲಿ ಏನೋ ಹೇಳುವಾಗ... ಹಿಂದೆ ಬಂದ ಅವಳಿಗಿಂತ ಚೂರು ಎತ್ತರದ ಪೋರ,, ದಟ್ಟ ಕೂದಲು, ಸ್ಪೈಕ್ ಹೇರಗ ಸ್ಟೈಲ್, ದುಂಡು ಗಲ್ಲ, ನಸುಗೆಂಪು ತುಟಿ, ಕಡೆದ ಬೆಣ್ಣೆಯಂತಿದ್ದವ ನೀಲಿ ಜಾಕೆಟ್, ಶಾರ್ಟ್ ಧರಿಸಿದ್ದ.  "ಹಲೋ... ಬಾಸ್.. ಅವಳು ನನ್ನ ಏಂಜಲ್.. ಅವಳ್ನ ನಾನು ನೋಡ್ಕೊಳ್ತಿನಿ! ಸೈಡ್ ಪ್ಲೀಸ್." ಗತ್ತಿನಿಂದ ಹೇಳಿದ. ಹರ್ಷ ಕ್ಷಣ ಅವಾಕ್ಕಾದ. ಮತ್ತೊಂದು ಘಳಿಗೆಯಲ್ಲಿ ಮುಗುಳ್ನಕ್ಕು "ಒಕೆ ಸರ್.." ಎಂದು ತಲೆದೂಗಿ ಹಿಂದೆ ಸರಿದ.

"ಓಡಿ ಹೋಗ್ಬೇಡಾಂತ ಎಷ್ಟು ಬಡ್ಕೋಳ್ಳೋದು ನಿನಗೆ. ನಿಧಾನಕ್ಕೆ ಬಾ, ನೀರೆಲ್ಲೂ ಓಡಿ ಹೋಗಲ್ಲ.. ಏನಾದ್ರೂ ಪೆಟ್ಟಾಯ್ತೇನೋ...? ಎಲ್ಲಿ ನೋವಾಯ್ತು? " ಸ್ವಲ್ಪ ಗದರಿ, ಮತ್ತೆ ನಯವಾಗಿ ಕೇಳುತ್ತಾ ಅವಳ ಕೈ  ಕಾಲು ಮುಟ್ಟಿ ನೋಡಿದ ಬಾಲಕ. ಏನಾಗಿಲ್ಲವೆಂಬಂತೆ ಮುಗುಳ್ನಗುತ್ತ ಗೋಣು ಅಲ್ಲಾಡಿಸಿದಳು ಹುಡುಗಿ. ಪೋರ ಅವಳ ಕೈ ಹಿಡಿದು 'ಬಾ ಹೋಗೋಣ... ಮೆಲ್ಲಗೆ ಬಾ' ಎಂದು ಮುದ್ದಾಗಿ ಅವಳ ಕೈ ಹಿಡಿದು ಕರೆದುಕೊಂಡು ಹೊರಟ. ಈ ಮಕ್ಕಳ ಚರ್ಯೆ ಹರ್ಷನ ಮನಸ್ಸಿಗೆ ಏನೋ ಒಂಥರ ಮುದ ನೀಡಿತು. ಅವರತ್ತಲೇ ನೋಡುತ್ತ ಕಳೆದು ಹೋದ. ಅಷ್ಟರಲ್ಲಿ ಆ ಪುಟ್ಟ ಹುಡುಗಿ ಹಿಂತಿರುಗಿ ಎರಡು ಕೈ ತಲೆ ಮೇಲೆತ್ತಿ ನಾಲಿಗೆ ಹೊರಚಾಚಿ ಅವನೆಡೆ ನೋಡಿ ಅಣುಗಿಸಿದಳು. ಹರ್ಷನ ಎದೆಯೊಳಗೆ ಯಾರೋ ಹೆಸರಿಲ್ಲದ ಅತಿಥಿ ಕಾಲಿಟ್ಟಂತ ಖುಷಿ.. ಆ ಮಕ್ಕಳನ್ನೇ ಹಿಂಬಾಲಿಸಿ ಹೊರಟ. ಮರದ ಮರೆಯಲ್ಲಿ ನಿಂತು ಅವರನ್ನೇ ನೋಡುತ್ತಿದ್ದ ಪರಿ ಹರ್ಷನ ಹರ್ಷವನ್ನು ಕಣ್ತುಂಬಿಕೊಂಡು ಅಖಿಲಾ ನಿಖಿಲ್ ಇಬ್ಬರಿಗೂ ಮನದಲ್ಲೇ ಅಭಿವಂದಿಸಿದಳು. ಶುಭಹರಿಸಿದಳು. ಇನ್ನೂ ಮುಂದೆ ಮಕ್ಕಳು ಮಾಡಬೇಕಾದ ಹರ್ಷನ ಮನದ ನೆನಹುಗಳ ಕದತಟ್ಟುವ ಕಾರ್ಯಕ್ಕೆ ಯಾವುದೇ ವಿಘ್ನ ಬರದಿರಲೆಂದು ಕಣ್ಮುಚ್ಚಿ ದೇವರನ್ನು ಪ್ರಾರ್ಥಿಸಿದಳು.

ಹರ್ಷ ಮಕ್ಕಳ ಹಿಂದೆ ಹೋಗುತ್ತಲೇ ಪ್ರಸನ್ನ ನೆಮ್ಮದಿಯ ಉಸಿರು ಬಿಟ್ಟು ಪೂಲ್ನಿಂದ ಹೊರಬಂದು ಅವನ ಹಿಂದೆ ಹೊರಟ. ಮುಂದೆ ಮಕ್ಕಳು, ಹಿಂದೆ ಹರ್ಷ ಅವನ ಹಿಂದಿಂದೆ ಪ್ರಸನ್ನ, ತೆರೆಮರೆಯಲ್ಲಿ ಪರಿ.. ನಾಟಕವೀಗ ಆರಂಭವಾಗುವದರಲ್ಲಿತ್ತು.. ಅಷ್ಟರಲ್ಲಿ ಮಾನ್ವಿ ಕಾರು ಪಾರ್ಕಿನ ಆಚೆ ಬಂದು ನಿಂತಿತು.



"ಲೇ.. ಕೋತಿ, ಈ ಅಣುಗಿಸೋದು ನಮ್ಮ ಡ್ರಾಮಾದಲ್ಲೇ ಇರ್ಲಿಲ್ಲ. ಯಾಕೇ ಅಣುಗಿಸ್ದೆ?" ಅವಳ ಕೈ ಎಳೆದು ದಬಾಯಿಸಿದ ನಿಖಿಲ್.

"ಪ್ರಿನ್ಸ್ ನಮ್ಕಡೆಗೆ ನೋಡ್ತಿದ್ದಾನೋ ಇಲ್ವೋ.. ಅಂತ ಟೆಸ್ಟ್ ಮಾಡ್ದೆ. ಒಂದ್ವೇಳೆ ನೋಡ್ದಿದ್ರೆ ನಮ್ಮ ಡ್ರಾಮಾ ಎಲ್ಲಾ ವೇಸ್ಟ್‌ ಆಗ್ಬಿಡುತ್ತಲ್ವಾ" ಮುಗ್ದತೆಯಿಂದ ನುಡಿದಳು ಅಖಿಲಾ

"ಪ್ರಿನ್ಸ್ ಗೆ ಮರೆವು ಅಷ್ಟೇ!! ಅವನೇನೂ ಕುರುಡ ಅಲ್ಲ. ಎಲ್ಲಾ ನೋಡ್ತಾನೆ. ನೀನು ಒವರ್ ಡ್ರಾಮಾ ಮಾಡದೆ ಸುಮ್ನೆ ಬಾ.." ಅವಳ ಕೈ ಬಿಗಿಯಾಗಿ ಹಿಡಿದುಕೊಂಡ.

"ನೀನ್ ಹಿಂಗೆ ಅವಾಜ಼್ ಹಾಕ್ತಿದ್ರೆ.. ಸೀದಾ ಹೋಗಿ ಪ್ರಿನ್ಸ್ ಹತ್ರ ಇದೆಲ್ಲಾ ಬರೀ ಡ್ರಾಮಾ ಅಂತ ಹೇಳ್ಬಿಡ್ತಿನಿ ನೋಡಿವಾಗಾ.." ಅವಳೂ ದಬಾಯಿಸಿದಳು. ಆತ ಮೆತ್ತಗಾದ. ದೂರದಿಂದ ಗಮನಿಸುತ್ತಿದ್ದ ಪರಿಗೆ ಅಖಿಲಾ ಮುಖದಲ್ಲಿ ಕೋಪ ನೋಡಿ ಏನೋ ಕದನ ಶುರುವಾಗಿದೆ ಎಂದು ತಿಳಿಯಿತು. 'ಇಲ್ಲಿಗೆ ಪೂರ್ಣ ನಾಟಕ ಧ್ವಂಸವಾಯಿತೆಂದು' ಹಣೆಗೆ ಕೈ ಹಚ್ಚಿಕೊಂಡು ಯೋಚಿಸುತ್ತಿದ್ದಳು.

*****

ಪಾರ್ಕ್ ಒಳಬರಲು ಟಿಕೆಟ್ ಲಭ್ಯವಿರದೆ ಮಾನ್ವಿಗೆ ಅಲ್ಲಿಯೇ ನಿಲ್ಲಿಸಲಾಯಿತು. ಅದು ಕೆಲವೇ ಸೆಕೆಂಡ್ ಮಾತ್ರ. ಅವಳ ತಂದೆಯ ಶ್ರೀಮಂತಿಕೆ ಅಧಿಕಾರ ದರ್ಪ ಪ್ರದರ್ಶಿಸಿ, ತಾನು ಮನಸ್ಸು ಮಾಡಿದರೆ ಐದೇ ನಿಮಿಷದಲ್ಲಿ ಇಡೀ ಪಾರ್ಕನ್ನೇ ಕೊಂಡುಕೊಳ್ಳಬಲ್ಲೆ ಎಂದು ಎಚ್ಚರಿಸಿ ಹಣದ ಕಂತೆ ಮುಂದಿಟ್ಟಳು. ತಕ್ಷಣ ಅಲ್ಲಿನ ಮ್ಯಾನೇಜರ್ ಚಾಣಾಕ್ಷತನದಿಂದ ಅವಳನ್ನ ನಿಭಾಯಿಸಿ, ಹಣ ಜೇಬಿಗಿಳಿಸಿ ಒಳಹೋಗಲು ಅನುಮತಿ ನೀಡಿದ. ಇಂಥ ಕ್ಷುಲ್ಲಕ ವಿಷಯಕ್ಕೆ ಹಣ ಸುರಿಯುವ ಇವಳು ಹುಚ್ಚಿಯೋ ದಡ್ಡಿಯೋ ಮ್ಯಾನೇಜರ್ ಉಡಾಫೆಯಿಂದ ಅವಳು ಹೋದಕಡೆಗೆ ನೋಡಿದ.

******

"ಚಿನ್ನು... ಬಂಗಾರ... ನನ್ನ ಮುದ್ದು.. ನನ್ನ ಜಾಣಿಯಲ್ವ ನೀನು.. ಹಾಗೆಲ್ಲ ಡ್ರಾಮಾ ಮಧ್ಯದಲ್ಲೇ ಹಾಳು ಮಾಡ್ಬಾರ್ದು ಪುಟ್ಟ. ಐಮ್ ಸಾರಿ ಒಕೆ... " ರಮಿಸಿ ಕೆನ್ನೆ ಹಿಂಡಿದ ನಿಖಿಲ್ ಅವಳ ಕೋಪ ತಣ್ಣಗಾಗಿಸಲು ಯತ್ನಿಸಿದ. ಅವಳು ಪಕಪಕನೆ ನಕ್ಕು "ಹ್ಮ.. ಹಾಗ್ಬಾ ದಾರಿಗೆ.." ಸೊಂಟದ ಮೇಲೆ ಕೈಯಿಟ್ಟು ಹೇಳಿ ಮುಂದೆ ಹೆಜ್ಜೆ ಹಾಕಿದಳು.

ಅವರ ಹಿಂದಿಂದೆ ನಡೆಯುತ್ತಿದ್ದ ಹರ್ಷನಿಗೆ ಅವರ ಮುನಿಸು ರಮಿಸು ಕಾಣಿಸಿತೇ ಹೊರತು ಏನು ಮಾತಾಡುತ್ತಿದ್ದರೆಂದು ಕೇಳಿಸುತ್ತಿರಲಿಲ್ಲ. ಅವರನ್ನು ಇನ್ನೂ ಸನಿಹದಿಂದ ಹಿಂಬಾಲಿಸಿದ. ಪರಿ ನಿಟ್ಟುಸಿರು ಬಿಟ್ಟಳು. ಹರ್ಷನಿಗೆ ತನ್ನನ್ನು ಯಾರೋ ಹಿಂಬಾಲಿಸಿದಂತೆ ಭಾಸವಾಗಿ ಹಿಂತಿರುಗಿ ನೋಡಿದ. ಪ್ರಸನ್ನನನ್ನು ಕಂಡು, "ಏಂಜಾಯ್ ಮಾಡು ಹೋಗೋ.. ನನ್ನ ಹಿಂದೆ ನಿನಗೇನ್ ಕೆಲಸ" ಕೂಗಿ, ಮಕ್ಕಳೆಡೆಗೆ ಗಮನಿಸಿದ. ಪ್ರಸನ್ನ ಏನೂ ಕೇಳದಂತೆ ಮುಗುಳ್ನಕ್ಕು ಒದ್ದೆಗೂದಲನ್ನು ಸರಿಪಡಿಸಿಕೊಂಡ. ಅವನ ಹಿಂದೆ ಹೊರಟವನು ಇದ್ದಕ್ಕಿದ್ದಂತೆ ಬಿರುಗಾಳಿಯ ಸೂಚನೆ ಸಿಕ್ಕಂತಾಗಿ ಹಿಂದಿರುಗಿ ನೋಡಿದವನೆ ಭೂತ ಕಂಡಂತೆ ಬೆಚ್ಚಿದ. ಏದುಸಿರು ಬಿಡುತ್ತ ಬೆಂಕಿ ಲಾವಾ ಚಿಮ್ಮುವಂತೆ ರೌದ್ರವಾಗಿ ಕಂಡಳು ಮಾನ್ವಿ.. "ನನಗೆ ಕಹಿವಿಷ ಕುಡಿಸಿ, ನನಗೆ ವಾಂತಿ ಬರೋತರ ಮಾಡಿ, ಡೋರ್ ಲಾಕ್ ಮಾಡಿ, ಪುಸಲಾಯಿಸಿ ಹರ್ಷನ್ನ ಇಲ್ಲಿಗೆ ಕರ್ಕೊಂಡ ಬಂದ ಉದ್ದೇಶ ಏನು? ಎಲ್ಲಿ ಹರ್ಷ??" ಉರಿವ ಸಿಟ್ಟಲ್ಲೂ ತಣ್ಣಗಿತ್ತು ಧ್ವನಿ. ತಿರುವಿನಲ್ಲಿ ಹೊರಳಿದ ಹರ್ಷ ಅವಳಿಗೆ ಕಂಡಿಲ್ಲವೆಂದು ಮನದಟ್ಟಾಗಿ, ಅವಳ ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ.
"ಹರ್ಷನ ಕಥೆ ಹಾಗಿರ್ಲಿ, ನಿನ್ನ ಕಥೆ ಹೇಳು ಮೊದ್ಲು.. ಡೋರ್ ಲಾಕ್ ಹೇಗೆ ತೆಗೆದೆ? ನಾವಿಲ್ಲಿ ಬಂದಿದ್ನ ಹೇಗೆ ತಿಳ್ಕೊಂಡೆ? ಇಷ್ಟು ಫಾಸ್ಟಾಗಿ ಇಲ್ಲಿಗೆ ಹೇಗೆ ಬಂದೆ? "  ಹುಬ್ಬು ಭುಜ ಪಾದ ಕುಣಿಸುತ್ತ ಕೇಳಿದ

"ಹ್ಮ್.... ನೀನೊಬ್ನೇ ಬುದ್ದಿವಂತ ಅನ್ಕೊಂಡಿದೀಯಾ!! ಡೋರ್ ಲಾಕ್ ಮಾಡಿ ಯಾರಿಗೂ ಮೆಲೋಗ್ಬೇಡಾಂದ್ರೆ ಆಗೋಯ್ತಾ.. ನನ್ನ ಕೈಯಲ್ಲಿರೋ ಫೋನ್ ಮರೆತ್ಬಿಟ್ಟೆ ಅನ್ಸುತ್ತೆ. ಒಂದ್ ಕಾಲ್ ಮಾಡಿದ್ರು ಸಾಕು,, ನನ್ನ ಸೇವೆ ಮಾಡೋಕೆ ಕ್ಯೂ ಕ್ಯೂ ನಿಲ್ತಾರೆ ಜನ.." ಮಾತಲ್ಲಿ ಗರ್ವವಿತ್ತು. "ಬರೋಕು ಮೊದಲೇ ಸೆಕ್ಯೂರಿಟಿ ಅವಾಯ್ಡ್ ಮಾಡಿದ್ರೆ, ನಿನ್ನ ಬುದ್ದಿವಂತ ಅನ್ಬಹುದಿತ್ತು. ಇಡಿಯಟ್ ನೀನು; ಮತ್ತೆ ಹೇಗೆ ಗೊತ್ತಾಯ್ತು ಅಂತ ಬೇರೆ ಕೇಳ್ತಾನೆ!!" ಸ್ವಗತದಲ್ಲಿ ಹಳಿದು, ಅಲ್ಲೆಲ್ಲೆಡೆ ಹರ್ಷನಿಗಾಗಿ ತಡಕಾಡಿದಳು.

"ಯು ಆರ್ ಜಿನಿಯಸ್ ಕೊಲೆಸ್ಟ್ರಾಲ್.. ಐಮ್ ರಿಯಲಿ ಇಂಪ್ರೆಸ್ಡ್ ಯಾ,, ನಿನ್ನ ಬುದ್ಧಿವಂತಿಕೆ ಚಾಣಾಕ್ಷತೆ ನೋಡ್ತಿದ್ರೆ ನನಗೆ ನಿನ್ನ ಬಿಟ್ಟು ದೂರ ಹೋಗೋಕೆ ಮನಸ್ಸಾಗ್ತಿಲ್ವೆ" ಒಂದೊಂದೇ ಹೆಜ್ಜೆ ಅವಳೆಡೆ ಧಾವಿಸಿದ. ಅವನ ಈ ವ್ಯತಿರಿಕ್ತ ಪ್ರತಿಕ್ರಿಯೆಗೆ ಕಣ್ಣು ಕಿರಿದು ಮಾಡಿ ದ್ವಂದ್ವಗೊಂಡು ಹಿಂದೆ ಸರಿಯುತ್ತ "ತಲೆ ನೆಟ್ಟಗಿದೆ ತಾನೇ! ಬರೋ ಧಾವಂತದಲ್ಲಿ ಬ್ರೇನ್ ಎಲ್ಲಾದ್ರೂ ಬೀಳ್ಸೊಂಡ್ಬಿಟ್ಟೆ ಏನೋ..  ನನ್ಹತ್ರ ಇದೆಲ್ಲಾ ಡ್ರಾಮಾ ಬೇಡ. ಹರ್ಷ ಎಲ್ಲಿ....." ಅವಳ ಮಾತು ಪೂರ್ಣವಾಗುವದಕ್ಕೆ ಮೊದಲೇ ಆಕೆ ಆಯತಪ್ಪಿ, ಅಮ್ಮಾ.... ಎಂದು ಕಿರುಚುತ್ತ ವಾಟರ್ ಟಬ್ಬೊಂದರಲ್ಲಿ  ಜಾರಿದಳು‌. ಅದು ಪೂರ್ತಿ ಒಂದು ಸುತ್ತು ತಿರುಗಿ ಬರಲು ಕನಿಷ್ಟ ಹತ್ತು-ಹದಿನೈದು ನಿಮಿಷ. ಅಲ್ಲಿವರೆಗೂ ಪೀಡೆ ತೊಲಗಿತೆಂದು ಪ್ರಸನ್ನ ನಿರಾಳನಾಗಿ ಚಿಪ್ಸ್ ಕೊಂಡು ಮೆಲ್ಲುತ್ತ ಕುಳಿತ. ಮತ್ತೆ ಮರಳಿ ಬಂದರೆ ಮತ್ತೊಂದು ಕೂಪಕ್ಕೆ ನೂಕಲು ಸನ್ನದ್ದನಾಗಿ.

*****

ಚಿಕ್ಕ ಪೂಲ್‌ನಲ್ಲಿ ಕೆಲ ಸಮಯ ಆಟವಾಡಿದಳು ಅಖಿಲಾ. ನಿಖಿಲ್ ದೂರದಲ್ಲೇ ನಿಂತು ನೋಡುತ್ತಿದ್ದ. ಅವಳು ಅವನನ್ನು ಆಟವಾಡಲು ಬಾ ಎಂದು ಎಷ್ಟೋ ಬಲವಂತ ಮಾಡಿ ಕೂಗಿದಳು. "ನನಗೂ ನೀರಿಗೂ ಸರಿಹೋಗಲ್ವೇ.. ನೀನಾಡು,, ನಿನ್ನ ನೋಡಿ ನಾ ಖುಷಿ ಪಡ್ತಿನಿ.." ನಿಖಿಲ್ ದೂರವೇ ಉಳಿದ. ಹರ್ಷ ಅವರ ಪ್ರತಿ ನಡೆಯನ್ನು ಗಮನವಿಟ್ಟು ನೋಡುತ್ತಿದ್ದ. ಅದೇಕೋ (ತನಗೆ ಅರಿಯದ) ತನ್ನ ಗತವನ್ನೇ ಕನ್ನಡಿಯಲ್ಲಿ ನೋಡಿಕೊಂಡಂತೆ ಆಭಾಸವಾಯಿತವನಿಗೆ. ಅಖಿಲಾ ನೀರಾಟವಾಡಿ ಹೊರ ಬರುವಷ್ಟರಲ್ಲಿ ನಿಖಿಲ್ ಕೈ ಹಿಂದೆ ಮಾಡಿ ಏನೋ ಬಚ್ಚಿಟ್ಟುಕೊಂಡ. ಅವಳಿಗೆ ಕುತೂಹಲ ತಾಳಲಾಗಲಿಲ್ಲ. "ಏನಿದೆ ನಿನ್ನ ಕೈಯಲ್ಲಿ?" ಉಗುರು ಕಚ್ಚುತ್ತ ಕೇಳಿದಳು.

"ಎಷ್ಟು ಸಲ ಹೇಳೋದು ನಿಂಗೆ.. ಹಾಗೆಲ್ಲ ಉಗುರು ಕಚ್ಬೇಡ ಅಂತ.."  ಅವಳ ಬಾಯಿಂದ ಕೈ ಸರಿಸಲು, ಅವನು ತನ್ನ ಕೈ ಮುಂದೆ ಚಾಚಿದ‌. ಅವನು ಕೈಯಲ್ಲಿ ಹಿಡಿದಿದ್ದ ಐಸ್ ಕ್ರೀಮ್ ಕಂಡಾಕ್ಷಣ ಅವಳು ಜಿಗಿದಾಡಿ ಬಿಟ್ಟಳು. "ಹೇಯ್... ನಿನ್ ಕೈಯಲ್ಲಿ ಐಸ್ಕ್ರೀಂ ಇದೆ. ನಂಗೊತ್ತಾಯ್ತು.." ಕೇಕೇ ಹಾಕಿಕುಣಿದಳು. ಅವನು ನಾಲಿಗೆ ಕಚ್ಚಿದ.
"ನನಗೆ ಐಸ್ ಕ್ರೀಂ ತಿನ್ಬೇಕು ಅನಿಸ್ತಿದೆ ಅಂತ ನಿನಗ್ ಹೆಂಗೊತ್ತಾಯ್ತು.." ಕೇಳುತ್ತಾ ಐಸ್ ಕ್ರೀಂ ತೆಗೆದುಕೊಂಡು ಚಪ್ಪರಿಸಿದಳು.

"ಅದೇ ನೀನು ನೀರಲ್ಲಿ ಆಡ್ತಾ ಆಡ್ತಾ ಐಸ್ ಕ್ರೀಂ ಶಾಪ್ ನ್ನೇ ನುಂಗೋ ಹಾಗೆ ನೋಡ್ತಿದ್ದೆಲ್ಲಾ,, ಆಗ್ಲೇ ಗೊತ್ತಾಯ್ತು" ನಕ್ಕ. ಅವಳು ಗುಮ್ಮನೆ ಅವನನ್ನೇ ಗುರಾಯಿಸಿ ಮೂಗು ಮುರಿದು, ತುಸು ಐಸ್ ಕ್ರೀಂ ಅವನ ಮುಖಕ್ಕೆ ಸವರಿ, ನಗುತ್ತ ಮುನ್ನಡೆದಳು. ಅವನು ತೋಳಿನಿಂದ ಮುಖ ಒರೆಸಿಕೊಳ್ಳುತ್ತ ಅವಳ ಹಿಂದೆ ನಡೆದ. ಹರ್ಷನಿಗೆ ಅವರಿಬ್ಬರ ಪ್ರತಿ ಚರ್ಯೆಯನ್ನು ಗಮನಿಸುವಾಗ ತುಟಿಯಂಚಲಿ ತಿಳಿಯದ ನಗುವೊಂದು ಸುಮ್ಮನೆ ಚಿಗುರಿ ಮರೆಯಾಗುತ್ತಿತ್ತು. ಎಲ್ಲವನ್ನೂ ಕಣ್ಣಂಚಲಿ ಸೆರೆಹಿಡಿಯುತ್ತ ತೆರೆ ಹಿಂದೆ ನಿಂತಿದ್ದ ಪರಿಗೆ ತಾನು ಉಗುರು ಕಚ್ಚುತ್ತ ನಿಂತ ಭಂಗಿ ಅರಿವಾಗಿ ಆ ನಗೆಯು ಸಾಲಂಕೃತವಾಯಿತು. ಕೆಲವು ಚಟಗಳೇ ಹಾಗೇ.. ನಮಗೆ ಅವು ರೂಢಿ ಎನ್ನುವುದಕ್ಕಿಂತ ಅದನ್ನು ನೋಡಿ ನಮ್ಮವರು ಪ್ರೀತಿಯಿಂದ ಗದರುವ ರೀತಿಗೆ ರೂಢಿಗತವಾಗಿ ತೀರ ಅಪ್ಯಾಯವೆಂಬಂತೆ ಬದುಕಿನ ಅವಶೇಷವಾಗಿ ಉಳಿದುಬಿಡುತ್ತವೆ. ನಮಗಾಗಿ ಅಲ್ಲದಿದ್ದರೂ ನಮ್ಮವರ ನೆನಪಿಗಾಗಿ.. ಅವಳಿಗೂ ಆ ಕ್ಷಣ ಹಾಗೆ ಎನ್ನಿಸಿತ್ತು‌. ತಕ್ಷಣ ಬಾಯಲ್ಲಿ ಕಚ್ಚುತ್ತಿದ್ದ ಉಗುರನ್ನು ನೋಡಿ ಕೈ ತೆಗೆದು ಹಣೆ ಚಚ್ಚಿಕೊಂಡು ಮುಗುಳ್ನಕ್ಕಳು. ಮತ್ತೆ ನೋಟ ಹರ್ಷನನ್ನು ಅರಸಿತು.


ಒಂದು ಸುತ್ತು ಪೂರ್ಣ ಮಾಡಿ ಬರುವಷ್ಟರಲ್ಲಿ ಮಾನ್ವಿಗೆ ತಲೆ ಸುತ್ತು ಬಂದಂತಾಯಿತು. ತಲೆ ಹಿಡಿದುಕೊಂಡೇ ನೀರಿಂದ ಆಚೆ ಬಂದಳು. ಅವಳಿಗಾಗೇ ಕಾದು ಕುಳಿತಿದ್ದ ಅವಳ ಆಜನ್ಮ ಶತ್ರು ಪ್ರಸನ್ನ ಚಿಪ್ಸ್ ಅವಳ ಬಾಯಿಗೆ ತುರುಕಿ "ಮಜವಾಗಿತ್ತಲ್ವಾ ಪೋರ್ಸ್ ರ್ಯಾಡನ್!! ನೆಕ್ಸ್ಟ್ ಯಾವ ಗೇಮ್ ಆಡ್ತಿಯಾ?" ಅತ್ತಿತ್ತ ನೋಡಿ ಕೇಳಿದ.

ಮಧ್ಯಾಹ್ನದ ಅವನ ಭಾಷಣ, ಅವಳ ಅಳು, ಉಪವಾಸ, ಗುಟುಕಿದ ಕಹಿಕಷಾಯ, ಹೊಟ್ಟೆ ಸಂಕಟ, ಈಗ ಈ ತಿರುವು ಮುರುವಿನ ನೀರಾಟ ಅವಳು ನಿತ್ರಾಣಗೊಂಡಿದ್ದಳು‌. ಆದರೂ ಗತ್ತಿನಲ್ಲಿ ಮಾರ್ಪಾಡಿಲ್ಲ. "ಹರ್ಷ ಎಲ್ಲಿದಾನೆ? ಇಲ್ಲಿಗ್ಯಾಕೆ ಕರೆದುಕೊಂಡು ಬಂದೆ?" ತೋರ್ಬೆರಳ ದರ್ಪದಿ ಕೇಳಿ "ಹೀಗೆ ಮಾಡ್ತಿದ್ರೆ ನೀ ಸಾಯ್ತಿಯಾ ನನ್ನ ಕೈಯಿಂದ"

'ಎಲಾ ಪಿಶಾಚಿ.... ಇನ್ನೂ ಪೊಗರಾ...' ಎಂದುಕೊಂಡು "ಹರ್ಷ ಅಲ್ಲಿ ಸ್ನೇಕ್ ಪೀಟ್ ಹತ್ರ ಆಡ್ತಿದ್ದ ಬಾ ನೋಡೋಣ" ಕೈ ಎಳೆದುಕೊಂಡು ಹೊರಟ. ಆಕೆ ಕೊಸರಿಕೊಂಡರೂ ಬಿಡಲಿಲ್ಲ. ಒತ್ತಾಯದಿಂದ ಒಂದಿಷ್ಟು ಬೇರೆ ಬೇರೆ ದಿಕ್ಕಿನಲ್ಲಿ ತಿರುಗಾಡಿಸಿ, ಸ್ನೇಕ್ ಪೀಟ್ ಗೇಮ್ ಆಡುವಾಗ ಒಬ್ಬ ಮನುಷ್ಯ ಜಾರುವಷ್ಟು ಒಂದು ಕೊಳವೆಯಲ್ಲಿ ತೂರಿಕೊಂಡು ಹೋಗಿ ಕೊನೆಯಲ್ಲಿ ಆರಂಭದ ನೀರಿನ ಪೂಲ್ ಗೆ ಬೀಳುವರು. ಮಾನ್ವಿಯನ್ನು ಒಳಗೆ ತಳ್ಳುವಾಗ ಅವನನ್ನು ಗಟ್ಟಿಯಾಗಿ ಹಿಡಿದಿದ್ದರಿಂದ ಅವಳೊಂದಿಗೆ ಅವನು ಕೊಳವೆ ಒಳಗೆ ಜಾರಿದ. ಹತ್ತು ನಿಮಿಷದಲ್ಲಿ ಇಬ್ಬರೂ ಜೊತೆ ಜೊತೆಗೆ ನೀರು ಪಾಲಾದರು. ಅವನ ಶರ್ಟ್ ಭದ್ರವಾಗಿ ಹಿಡಿದವಳು ಆಗಲೂ ಹಾಗೇ ಹಿಡಿದಿದ್ದಳು. ಅವನೇ ವಾಚ್ ನೋಡಿಕೊಂಡು ಅವಳ ಕೈ ಬಿಡಿಸಿಕೊಂಡ. ಅವಳಿಗೆ ಸ್ತ್ರೀ ಸಹಜ ನಾಚಿಕೆಗಿಂತ, ಶತೃವಿನೆದುರು ಬಲಹೀನಳಾದೆನೆಂಬ ಭಾವವೇ ಅಧಿಕವಿತ್ತು‌‌. ಅವನ ಮುಖ ಸಹ ನೋಡದೆ ತಲೆ ಉಜ್ಜಿಕೊಳ್ಳುತ್ತ ಹೊರಬಂದಳು. ಹೀಗೆ ಕೆಲವು ಫನ್ ಗೇಮ್ ಆಡಿಸುತ್ತ ಅವಳ ಸಮಯವನ್ನು ಲೋಪ ಮಾಡಿದ್ದ.

*****

ನಿಖಿಲ್ ಅಖಿಲಾ ಆಟವಾಡುತ್ತ ಪಾರ್ಕ್ ಸುತ್ತ ತಿರುಗಾಡಿದರು. ಕೆಲವೊಮ್ಮೆ ಅವನು ಅವಳ ಮೋಟು ಜುಟ್ಟುಗಳನ್ನು ಒಂದೊಂದಾಗಿ ಹಿಡಿದು ಎಳೆದು 'ಒನ್ ಫಾರ್ ಏಂಜಲ್ ಒನ್ ಫಾರ್ ಹರ್ಷ; ಶಿ ಇಸ್ ಜೋಕರ್ ಹಿ ಇಸ್ ಬಾದ್‌ಷಾ' ರೇಗಿಸುತ್ತಿದ್ದ. ಆಕೆ ಮೂತಿಯುಬ್ಬಿಸಿ 'ನಾನು ಜೋಕರ್ ಅಲ್ಲಾ..' ಕಿರುಚಿ ಹೊಡೆಯಲು ಬೆನ್ನಟ್ಟುತ್ತಿದ್ದಳು. ಅವನಿಗದೇ ಬೇಕಾಗಿತ್ತು ಎಂಬಂತೆ ಖುಷಿಯಿಂದ ಓಡಿ ಪರಾರಿಯಾಗುತ್ತಿದ್ದ. ತುಸು ಕಾಡಿಸಿ ಪೀಡಿಸಿ ಅವಳ ಕೈಗೆ ಸಿಕ್ಕಾಗ ಅವನ ಕಿವಿ, ಕೂದಲು, ಶರ್ಟ್ ಎಳೆದು ಪರಚಾಡಿ "ನಾನು ಜೋಕರ್ ಆ..?" ಕೇಳಿದಳು. ಸಿಕ್ಕ ಅವಕಾಶವನ್ನು ಅಖಿಲಾ ತಮ್ಮ ಹಳೆಯ ಲೆಕ್ಕಗಳನ್ನು ಸರಿದೂಗಿಸಲು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಳು. ನಿಖಿಲ್ ಗೆ ಅದು ಅರ್ಥವಾಗಿ ಮೆಲುದನಿಯಲ್ಲಿ "ಲೇ.. ಮೆತ್ತಗೆ.. ಹೀಗಾ.. ಚೂರೋದು!" ಎಂದು ಗದರಿ, ಮತ್ತೆ ನಕ್ಕು "ನೋ.. ನೋ.. ತಪ್ಪು ತಪ್ಪು" ಕೆನ್ನೆ ತಟ್ಠಿಕೊಂಡು " ನೀನು ಜೋಕರ್ ಅಲ್ವೇ ಅಲ್ಲ.. ನೀನು ಮ್ಯಾಡ್ ಕಣೇ'' ಮತ್ತೆ ಓಡಿ ಹೋಗುವನು. ಅವಳು ಎರಡು ಕೈ ಮುಷ್ಟಿ ಮಾಡಿ ಆssss ಕಿರುಚುತ್ತಾ ಮತ್ತೆ ಹಿಂಬಾಲಿಸುವಳು. ಹರ್ಷ ಮನಸೋ ಇಚ್ಛೆ ನಗುತ್ತ ಅವರ ಆಟ ಸವಿಯುತ್ತಿದ್ದರೆ, ಮಧ್ಯೆ ಮಧ್ಯ ಲಯತಪ್ಪುತ್ತಿದ್ದ ಮಕ್ಕಳ ನಟನೆ, ವರ್ತನೆ ನೋಡಿ, ಎಲ್ಲಿ ನಿಜವಾಗಿಯೂ ಕಿತ್ತಾಡಿಕೊಂಡು ಏನು ಯಡವಟ್ಟು ಮಾಡಿಕೊಳ್ಳುವರೋ ಎಂದು ಪರಿಗೆ ಆತಂಕ ಕಾಡುತ್ತಲೇ ಇತ್ತು.

ಹೀಗೆ ಮಕ್ಕಳ ಚೇಷ್ಟೆಗಳನ್ನು ನೋಡುತ್ತ ನಡೆಯುವಾಗ ಅಖಿಲಾ ಕಾರಂಜಿಗಳ ಬುಗ್ಗೆ ಕೆಳಗೆ ಮೈ ತೋಯ್ದುಕೊಂಡು, ಎರಡು ಕೈ ಚಾಚಿ,  ಮುಗಿಲತ್ತ ನಗುಮೊಗವ ಹರಿಸಿ,  ಮನಸಾರೆ ನೀರಲ್ಲಿ ನೆನೆಯುತ್ತ ತಿರುಗುತ್ತಾ ಖುಷಿ ಪಡುತ್ತಿದ್ದಳು. ಹೆಸರಿಗೆ ಮಾತ್ರ ಅದೊಂದು ನಾಟಕವಾಗಿತ್ತಾದರೂ... ಅಖಿಲಾ ಮನಸ್ಪೂರ್ವಕವಾಗಿ ನೀರಾಟವನ್ನು ಆನಂದಿಸುತ್ತಿದ್ದಳು. "ಐ ಲವ್ ರೇನ್..... (ಮಧ್ಯದಲ್ಲಿ ಅವನ ಹೆಸರು ನೆನಪಿಗೆ ಬರಲಿಲ್ಲ ಅವಳಿಗೆ. ಅದನ್ನೇ ಎರಡು ಮೂರು ಬಾರಿ ಹೇಳಿ, ತಲೆ ಕರೆದುಕೊಂಡು ಕೊನೆಗೆ)..... ನೀನು ಬಾರೋ...." ಅದೇ ಸಂತಸದ ಉನ್ಮತ್ತದಲ್ಲಿ ಕೂಗಿದಳು. 'ಹೆಸರೇ ನುಂಗಿ ಹಾಕ್ಬಿಟ್ತು ಕೋತಿ' ಮನದಲ್ಲಿ ಬೈದುಕೊಂಡ‌ ನಿಖಿಲ್..
"ನಾನಾ... ನೋ ವೇ.. ನನಗೆ ನೀರಲ್ಲಿ ನೆನೆಯೋಕಿಷ್ಟ ಇಲ್ಲ ಕಣೇ"

"ಏನಾಗಲ್ಲ ಕಣೋ... ಬಾ.. ನಾನೀದಿನಿ..." ಧೈರ್ಯ ತುಂಬುವಂತೆ ಸೊಂಟಕ್ಕೆ ಕೈಯಿಟ್ಟು ಕೂಗಿದಳು

"ನನಗೇನು ಭಯಾನಾ!! ಹೋಗೆ.. ನೀರಲ್ಲಿ ನೆನೆದ್ರೆ ಶೀತ ಆಗುತ್ತೆ. ನೆಗಡಿ ಬರುತ್ತೆ. ಸೀನು ಬಂದ್ರೆ ನನಗೆ ಇರಿಟೇಟ್ ಆಗುತ್ತೆ. ಮೂಗನ್ನೇ ಕೂಯ್ದು ಬಿಸಾಕೋಣ ಅನ್ಸುತ್ತೆ. ಸೋ ಐ ಡೋಂಟ್ ಲೈಕ್ ರೇನ್.."

"ಸರಿ, ಬಿಡು.. ನಿನಗೆ ಇಷ್ಟವಿಲ್ಲದ್ದು ನನಗೂ ಇಷ್ಟವಿಲ್ಲಾ.. ನನಗೂ ಬೇಡ.. ಈ ನೀರು.. ಮಳೆ.. ಆಟ.. ಯಾವುದೂ..!!" ಮುಖ ಸಪ್ಪಗಾಗಿಸಿ ಬಂದು ಅವನ ಪಕ್ಕದಲ್ಲಿದ್ದ ತೆಂಗಿನ ಕಟ್ಟೆಯ ಮೇಲೆ ಎರಡೂ ಕೈ ಗದ್ದಕ್ಕೆ ಊರಿಕೊಂಡು ಮುಖ ಕೆಳಹಾಕಿ ಕೂತುಬಿಟ್ಟಳು. ಅವಳ ತಲೆ ಮುಖದಿಂದ ಇಬ್ಬನಿಯಂತೆ ನೀರು ತೊಟ್ಟಿಕ್ಕುತ್ತಿತ್ತು. ಇಷ್ಟೋತ್ತು ಆ ಮಗುವಿನ ನಗುಮೊಗವನ್ನೇ ಕಣ್ತುಂಬಿಕೊಂಡ ಹರ್ಷನಿಗೂ ಅವಳ ಸಪ್ಪೆ ಮುಖ ನೋಡಿ ಪಿಚ್ಚೆನಿಸಿತ್ತು. ಆ ಹುಡುಗನ ಮೇಲೆ ಸಿಟ್ಟು ಬಂದಂತಾಯಿತು. 'ಸ್ವಲ್ಪ ನೀರಲ್ಲಿ ಆಡೋಕೆ, ಏನಾಗಿತ್ತು ಇವನಿಗೆ! ಗೂಬೆ, ಅನ್ಯಾಯವಾಗಿ ಅವಳ ಸಂತೋಷ ಹಾಳು ಮಾಡಿದ' ಹಳಿದ ಹುಡುಗನನ್ನೇ ದುರುಗುಟ್ಟುತ್ತ.

ಹುಡುಗಿ ಅಷ್ಟು ಸಪ್ಪಗಾದರೂ ಆ ಪೋರನ ಮುಖದಲ್ಲಿ ಅದೇ ಸ್ನಿಗ್ಧ ನಗು. ಅದೇ ಮಂದಹಾಸದೊಂದಿಗೆ ಮೆಲ್ಲಗೆ ಹೆಜ್ಜೆ ಮುಂದಿಟ್ಟನವ.. 'ಏನ್ಮಾಡಲು ಹೊರಟಿದ್ದಾನೆ ಇವ್ನು! ಅವಳನ್ನ ಮತ್ತೆ ನಗಿಸ್ತಾನಾ?' ಹರ್ಷನಿಗೂ ಕಾತರ. ರೆಪ್ಪೆ ಅಲುಗಿಸದೆ ಅವಲೋಕಿಸುತ್ತಿದ್ದ.

ನಿಖಿಲ್ ನಿಧಾನವಾಗಿ ನಿಂತ ಜಾಗದಿಂದ ಕದಲಿ ಕಾರಂಜಿ ಕೆಳಗೆ ಬಂದ. ಹನಿಗಳು ಅವನನ್ನು ಸುತ್ತುವರೆದು ನಖಶಿಖಾಂತ ನೆನೆಸಿದವು. ನೀರ ಕೆಳಗೆ ನಿಂತು ಎರಡೂ ಕೈಗಳನ್ನು ಅಗಲಿಸಿ ಚಾಚಿ ಕೂಗಿದ್ದ.. "ಏಂಜಲ್...." ಅಖಿಲಾ ಮೆಲ್ಲಗೆ ಕತ್ತೆತ್ತಿ ನೋಡಿ ಕಣ್ಣರಳಿಸಿದಳು. ತುಟಿ ಅರಳಿದವು. ನಕ್ಷತ್ರದಂತೆ ಹೊಳೆಯುವ ಕಂಗಳೇ ಅವಳಿಗಾದ ಸಂತೋಷಕ್ಕೆ ಮಿತಿ ಇಲ್ಲವೆಂದು ತಿಳಿಸುತ್ತಿದ್ದವು. ನಿಖಿಲ್ ಕಾರಂಜಿಯ ಬುಗ್ಗೆಯಲ್ಲಿ ನೆನೆಯುತ್ತ ಮತ್ತೆ ಕೂಗಿದ "ಏಂಜಲ್.... ಎನಿಥಿಂಗ್ ಫಾರ್ ಯು..."

ಅವಳು ಖುಷಿಯಿಂದ ಚಪ್ಪಾಳೆ ತಟ್ಟುತ್ತಾ ಓಡಿ ಹೋಗಿ ಮತ್ತೆ ನೀರಲ್ಲಿ ನೆನೆಯುತ್ತ ಅವನ ಕೆನ್ನೆಗೆ ಮುತ್ತಿಟ್ಟಳು. ಅವನು ಅವಳನ್ನ ಎತ್ತಿ  ಗಿರಗಿರನೆ ತಿರುಗಿಸಿದ. ಇಬ್ಬರೂ ಕೈ ಕೈ ಹಿಡಿದು ಕುಣಿದಾಡಿದರು.. ಜಿಗಿದಾಡಿದರು.. ಸಂಭ್ರಮಿಸಿದರು.. ವಿಜೃಂಭಿಸಿದರು.. ಅವರ ಸಂಭ್ರಮಾಚರಣೆಗೆ ಯಾವ ಇತಿಮಿತಿ ಇರಲಿಲ್ಲ. ಅಡೆತಡೆಗಳಿರಲಿಲ್ಲ. ಕಟ್ಟುಪಾಡುಗಳಿರಲಿಲ್ಲ. ಭೇಧಬಿನ್ನತೆ ಇರಲಿಲ್ಲ. ಆಡಿದರು, ಹಾಡಿದರು, ಕುಲುಕುಲು ನಕ್ಕರು, ಒಬ್ಬರಿಗೊಬ್ಬರು ನೀರೆರೆಚಿದರು, ಕಾಡಿಸಿದರು, ರೇಗಿಸಿದರು, ಜೂಟಾಟವಾಡಿದರು.. ಅವರದೇ ಒಂದು ಸ್ವಂತ,, ಸರ್ವಸ್ವತಂತ್ರ ಲೋಕ.. ಬೇರೆಯಾರಿಗೂ ಅಲ್ಲಿ ಪ್ರವೇಶವಿರಲಿಲ್ಲ.. ಎಷ್ಟೋ ಕಂಗಳ ದೃಷ್ಟಿ ಅವರನ್ನು ತಾಕಿ, ಆ ಸಂತಸದಲ್ಲಿ ಪಾಲುಗಾರಿಕೆ ಪಡೆದು ಮೊಗದ ತುಂಬಾ ಉಲ್ಲಾಸ ಭರ್ತಿ ಮಾಡಿಕೊಂಡು ಸಾಗಿದ್ದವು. ಆ ಮುಗ್ಧ ಮನಗಳ ನರ್ತನ ಸಂಭ್ರಮ ಎಲ್ಲ ನೀರಸ, ನೀರವ ಜಗದ ಜಂಜಾಟಗಳಿಗೆ ಕ್ಷಣಕಾಲದ ವಿರಾಮವನ್ನು ನೀಡುವಂತಿತ್ತು.

ಅರಿತೂ ಅರಿಯದೆ ಹರ್ಷನ ಕಣ್ಣು ಹನಿಗೂಡಿದ್ದವು. 'ನನಗೂ ಬೇಕು ನನ್ನ ಬಾಲ್ಯ,, ನನ್ನ ಕನಸು,, ನನ್ನ ಏಂಜಲ್.. ' ಮನಸ್ಸು ಮುಷ್ಕರ ಹೂಡಿತ್ತು. 'ಹೇಗಿತ್ತು ನನ್ನ ಬಾಲ್ಯ? ನನ್ನ ಬದುಕಲ್ಲಿ ಇವೆಲ್ಲವೂ ಘಟಿಸಿರಬಹುದಾ? ಹೌದೆಂದಿತು ಒಳದನಿ. ಹಾಗದ್ರೆ ನನ್ನ ಏಂಜಲ್??' ಇದಕ್ಕೆ ಉತ್ತರವಾಗಿ ಎದೆಬಡಿತ ಮಾತ್ರ ಜೋರಾಯಿತು. ಯಾರೋ ತನ್ನನ್ನು ಗಮನಿಸುತ್ತಿರುವಂತೆ ಮನ ಕಂಪಿಸಿ ಎಚ್ಚರಿಸಿತು. ಸುತ್ತಲೂ ತಿರುಗಿ ನೋಡಿದ.  ನೆರೆದ ಜನರ ಮಧ್ಯೆ ಅವಳ ಸುಳಿವಿಲ್ಲ. ನೆನಹು ಹೊಸದಾಗಿ ಕಂಡಿತ್ತು ಆದರೆ ಈ ಅನುಭವ ಮಾತ್ರ ಹೊಸತಲ್ಲ.. ಅವನ ಗಮನಕ್ಕೆ ಬಂದಿತು. ಮನ ದುಗುಡದಿಂದ ಭಣಗುಟ್ಟಿತು. ಮನಸ್ಸನ್ನು ತಣಿಸಬೇಕಿತ್ತು.. ನಿಧಾನವಾಗಿ ತಾನು ನೀರಿಗಿಳಿದ. ಕಾರಂಜಿ ಭೇಧ ತೊರದೆ ಅವನನ್ನು ಸ್ವಾಗತಿಸಿತು, ಆಲಂಗಿಸಿತು.. ಹನಿಹನಿಗಳ  ತಾಕುವಿಕೆಗೆ ನೆನಹುಗಳ ಕಹಳೆ ಊದತೊಡಗಿದ್ದವು. ಕಾರಂಜಿಗಳ ಚಿಲುಮೆ ಮಳೆಯ ನೆನಪಾಗಿಸಿತ್ತು. ಸುಮ್ಮನೆ ಕಣ್ಮುಚ್ಚಿ ಕೈ ಬಾನಗಲ ಹಬ್ಬಿಸಿ ನೆನೆಯುತ್ತ ತನ್ಮಯನಾದ..

ಜೋರು ಮಳೆ.. ಹುಡುಗಿಯೊಬ್ಬಳು ಮಳೆಯಲ್ಲಿ ನೆನೆಯುತ್ತ ಸಂಭ್ರಮದಿ ಕುಣಿವಳು.. "ಐ ಲವ್ ರೇನ್..' ಕೂಗುವಳು.. ಜೊತೆಗಿದ್ದ ಹುಡುಗನ ಕೈ ಹಿಡಿದು ಎಳೆವಳು.. ಅವನು ಮೊದಮೊದಲು ನಿರಾಕರಿಸಿದನಾದರೂ ಅವಳ ಸಂತೋಷಕ್ಕೆ ಸೋಲೊಪ್ಪಿ ತಾನು ನೀರಲ್ಲಿ ನೆನೆವನು. ಅವಳ ನಗುವಿನಲೆ ಅವನ ಕಿವಿಯಲ್ಲಿ ಮಾರ್ದನಿಸಿತು. ಮಣ್ಣಕಂಪಿನ ವಾಸನೆ,, ಅವನನ್ನಪ್ಪಿದ ಅವಳ ಮಲ್ಲಿಗೆ ಕಂಪು ಒಂದಕ್ಕೊಂದು ಪೈಪೋಟಿ ನಡೆಸಿದಂತಹ ಭಾವ.. ಮನಸ್ಸು ಕೂಗೆಂದಿತು.. ಅವನು ಜೋರಾಗಿ ಕೂಗಿದ "ಏಂಜಲ್..... ಎನಿಥಿಂಗ್ ಫಾರ್ ಯು..." ಮನಸ್ಸಿಗೆ ಅವಿನಾಭಾವ ಸಂತೋಷ ಉಂಟಾಯಿತು.

ಸ್ವಲ್ಪ ಸನಿಹದಲ್ಲೇ ನಿಂತಿದ್ದ ಮಕ್ಕಳಿಬ್ಬರೂ ತಮ್ಮ ಪ್ರಯತ್ನ ಫಲಿಸಿತೆಂದು ಉತ್ಸಾಹದಿಂದ ಕೈಕೈ ತಟ್ಟಿ ಹೈಫೈ ಮಾಡಿದರು. ದೂರದಲ್ಲಿ ನಿಂತು ನೋಡುತ್ತಿದ್ದ ಪ್ರಸನ್ನ ಬೆರಳು ಬಾಯಿಗಿಟ್ಟು ವಿಜಲ್ ಬಾರಿಸಿದ. ಮಾನ್ವಿ ಏನೊಂದು ಅರ್ಥವಾಗದೆ ಕಣ್ಬಾಯಿ ಬಿಟ್ಟುಕೊಂಡು 'ಏನ್ ನಡಿತಿದೇ ಇಲ್ಲಿ..?' ಆತುರಾತುರ ಕೇಳಿದಳು. ಅವಳ ಮುಖದ ಮುಂದೆ ಕೈಯಾಡಿಸಿ "ಶಾಕ್‌ಗೆ ಕಣ್ಣು ಮಂಜಾಯ್ತಾ ಪಿಶಾಚಿ.. ಮಹಾಭಾರತದ ಧೃತರಾಷ್ಟ್ರನ ಹಾಗೆ ಕೇಳ್ತಿದಿಯಲ್ಲ.. ಕಣ್ಣು ಕಾಣ್ತಿಲ್ವಾ‌.. ನಿನ್ನ ಶಂಖು ಅವನ ಏಂಜಲ್ ‌ನಾ ಕೂಗ್ತಿದಾನೆ.. ಇನ್ನು ನಿನ್ನ ಕಥೆ ಮುಗಿದ್ಹಾಗೆ.. ಅವನಿಗೆ ಎಲ್ಲಾ ನೆನಪಾಗ್ತಾ ಇದೆ.. ನಿನ್ನ ಮೋಸ ಗೊತ್ತಾದ್ರೆ ನಿನಗೆ ಆಗ ಕಾದಿದೆ." ಅವಳನ್ನ ಮತ್ತಷ್ಟು ಕುಗ್ಗಿಸಿದ. ಸಾವಿಗಿಂತ ಭಯಂಕರವಾದದ್ದು, ಅದು ಬರುತ್ತದೆ ಎಂಬ ಭಯ! ಸೋಲಿಗಿಂತ ದುರ್ಬಲವಾದದ್ದು ಸೋಲುತ್ತಿದ್ದೆನೆ ಎಂಬ ಮನೋಭಾವ! ಇದನ್ನೇ ಅಸ್ತ್ರವಾಗಿಸಿಕೊಂಡು ಮಾನ್ವಿಯ ಆತ್ಮವಿಶಾಸವನ್ನು ಕದಡಿದ‌. ಅವನ ಮಾತಿನಿಂದ ಅವಳು ವಿಚಲಿತಳಾದಂತೆ ಕಾಣಲಿಲ್ಲ. ಅವಳನ್ನ ಸೂಕ್ಷ್ಮವಾಗಿ ಗಮನಿಸಿ ನೋಡಿದ. ಶೂನ್ಯಭಾವ ಕಂಡು ಅವನಿಗವಳೂ ಇನ್ನೂ ನಿಗೂಢವೆನಿಸಿದಳು. ಭುಜ ಅಲುಗಿಸಿ ಎಚ್ಚರಿಸಿದ. ಅವನನ್ನೊಮ್ಮೆ ಕುಕ್ಕುವಂತೆ ನೋಡಿ ಹರ್ಷನೆಡೆಗೆ ಹೊರಟಳು.

ಹರ್ಷನ ಅಪರಿಮಿತ ಪ್ರೀತಿಗೆ ಕೊನೆಯಿಲ್ಲ. ಅದು ಅಂದಿನಂತೆ ಇಂದಿಗೂ ಅಪೂರ್ವ ಪರಿಶುದ್ಧ.. ಅಂದಿಗಿಂತ ಇಂದಿಗೆ ಇನ್ನೂ ಸಜೀವ.. ಪರಿ ತನಗಾದ ಸಂತೋಷಕ್ಕೆ ಸ್ಥಿಮಿತ ತಪ್ಪಿ ಗೋಡೆಗೆ ಆನಿಸಿ ನಿಂತು ನಿಟ್ಟುಸಿರು ಚೆಲ್ಲಿದಳು. ಮುಖದಲ್ಲಿ ಹೊಸ ಕಾಂತಿ ಚಿಮ್ಮಿತ್ತು. ಕಣ್ಣು ಸಂಭ್ರಮದ ತೇರು. ನಾಚಿಕೆಗೋ ಪ್ರೀತಿಯ ನವ ಪರಿಭಾಷೆಗೋ ಕೆನ್ನೆ ಕೆಂಡಸಂಪಿಗೆಯಾಗಿತ್ತು. 'ಗೊತ್ತು ಕಣೋ ನನಗೆ... ನಿನ್ನ ಪ್ರೀತಿ ಇಷ್ಟು ಬೇಗ ಮರೆತು ಮುಗಿದು ಹೋಗುವ ನಭವಲ್ಲ.. ಯಾರೆಷ್ಟೇ ದೋಚಿದರೂ ಮೊಗೆದಷ್ಟು ಮತ್ತಷ್ಟು ಸ್ಪುಟಿಸಿ ದೊರೆವ ನಿಕ್ಷೇಪದಂತೆ.. ಇನ್ನು ನಮ್ಮ ಪ್ರೀತಿಗೆ ಸೋಲಿಲ್ಲ ಬಿಡು..' ತೃಪ್ತಳಾಗಿ ಮಕ್ಕಳಿಗೆ ಮೊದಲೇ ತಿಳಿಸಿದ ಸ್ಟೇ ಹೋಮ್ ಕಡೆ ಹೊರಟಳು.

ಅದೇ ಸಂತಸದೊಂದಿಗೆ ಕಣ್ತೆರೆದು ಇಷ್ಟು ಹೊತ್ತು ಮರೆತ ಆ ಮಕ್ಕಳಿಗಾಗಿ ಹುಡುಕಾಡಿದ. ಊಹ್ಮೂ.. ಅವರೆಲ್ಲೂ ಕಾಣಲಿಲ್ಲ. ಅಮೂಲ್ಯವಾದ ಕಾಣಿಕೆಯನ್ನು ಕಳೆದುಕೊಂಡ ನಿರಾಸೆ. ನೀರಿನಿಂದ ಹೊರಬಂದು ತಲೆ ಮೇಲೆ ಕೈಯಾಡಿಸಿಕೊಳ್ಳುತ್ತ ಅವರಿಗಾಗಿ ಆಚೀಚೆ ಎಲ್ಲಾ ಕಡೆಗೂ ನೋಡತೊಡಗಿದ. ಅವನ ಕಾಲುಗಳು ಸ್ಟೇ ಹೋಂ ಕಡೆಗೆ ನಡೆದವು. ಗ್ಲಾಸ್ ಡೋರ್ ತೆಗೆಯಲು ಮುಂದಾಗುತ್ತಿದ್ದ ಹರ್ಷನ ಭುಜದ ಮೇಲೆ ಕೈಯಿಟ್ಟಳು ಮಾನ್ವಿ. ಅವಳನ್ನ ಅಲ್ಲಿ ನಿರೀಕ್ಷಿಸದೆ ತಬ್ಬಿಬ್ಬುಗೊಂಡ. "ಹುಷಾರಾಯ್ತಾ ನಿನಗೆ"

"ಯಾಕೆ? ಆಗ್ಬಾರ್ದಿತ್ತಾ!" ಕೊಂಕು ಉತ್ತರ. ಅವನು ತಲೆ ನೇವರಿಸಿ, ಮುಗುಳ್ನಕ್ಕು "ನೀನು ನೀರಲ್ಲಿ ಆಡಿರೋ ಹಾಗಿದೆ! ಬಾ ಮೊದ್ಲು ಡ್ರೆಸ್ ಚೆಂಜ್ ಮಾಡೋಣ" ಒಳಗೆ ಕರೆದ.

"ಇಲ್ಬೇಡ.. ಮನೇಗೆ ಹೋಗಿ ಚೇಂಜ್ ಮಾಡಿದ್ರಾಯ್ತು‌. ಈಗ ಬಾ ಇಲ್ಲಿಂದ" ಎಳೆದುಕೊಂಡು ಹೊರಟು ಹೋದಳು. ಗ್ಲಾಸ್ ಡೋರ್ ಹಿಂದಿದ್ದ ಪರಿ ಟವೆಲಿನಿಂದ ಎರಡೂ ಮಕ್ಕಳ ತಲೆ ಒರೆಸುತ್ತ, ಬಟ್ಟೆ ಬದಲಿಸುವಲ್ಲಿ ತೊಡಗಿದ್ದಳು. ಅಖಿಲಾ ನಿಖಿಲ್ ಸಂತೋಷದ ರಭಸ ಮುಗಿಯುತ್ತಲೇ ಇರಲಿಲ್ಲ. ನಡೆದ ಪ್ರತಿಯೊಂದನ್ನು ವಿವರಿಸಿ ಹೇಳಿ ಚಪ್ಪಾಳೆ ತಟ್ಟಿ ತಟ್ಟಿ ನಗುತ್ತಿದ್ದರು‌. "ಪ್ರಿನ್ಸ್ ಎಷ್ಟು ಕ್ಯೂಟಾಗಿದ್ದಾನೆ ಕಿಟ್‌ಕ್ಯಾಟ್.‌‌‌. ನನ್ನ ಇಲ್ಲಿ ಮುಟ್ಟಿ ಬೀಳ್ದಿರೋ ಹಾಗೆ ಹಿಡಿದ ಗೊತ್ತಾ.. ಯಾವುದೋ ಮ್ಯಾಜಿಕಲ್‌ ಮೂಮೆಂಟ್ ಎಂಬಂತೆ ಭುಜ ತೋರಿದಳು. ಪರಿಗೂ ಆ ಸ್ಪರ್ಶ ಅಪರೂಪದ್ದೆನ್ನಿಸಿ ಅವಳನ್ನೇ ಅಪ್ಪಿಕೊಂಡಳು. " ಮತ್ತೆ ಅವನ ಏಂಜಲ್ ಹೇಗಿದಾಳೆ?" ಕೇಳಿದ ನಿಖಿಲ್

"ಅದ್ನ ಪ್ರಿನ್ಸ್ ಬಾಯಿಂದ ಕೇಳಿ.. ಹೇಳ್ತಾನೆನೋ ನೋಡೋಣ" ತಮಾಷೆಯಾಗಿ ನುಡಿದಳು. ಮಕ್ಕಳು ಗಂಭೀರವಾಗಿ ಮುಖ ಮುಖ ನೋಡಿಕೊಂಡರು. ಆಗವಳಿಗೆ ಗೊತ್ತಾಗಲೇ ಇಲ್ಲ. ಮುಂದೊಂದು ದಿನ ಈ ಮಕ್ಕಳು ನಿಜವಾಗಿಯೂ ಅವನಿಗೆ ಆ ಪ್ರಶ್ನೆ ಕೇಳೇ ಬಿಡುವರೆಂದು...


ಮುಂದುವರೆಯುವುದು..


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...