"ನನ್ನ ಆರೋಗ್ಯ ಸರಿಯಿಲ್ಲ ಅಂತ ಗೊತ್ತಾದ್ಮೇಲೂ, ನನ್ನ ಬಿಟ್ಟು ಪಾರ್ಕಿಗೆ ಹೋಗೋಕೆ ಮನಸ್ಸಾಯಿತಾ?" ಕಾರು ಡ್ರೈವ್ ಮಾಡುತ್ತ ಗಂಭೀರವಾಗಿ ಕೇಳಿದಳು ಮಾನ್ವಿ.
"ನೋ... ಹೋಗೋ ವಿಚಾರ ಇರಲಿಲ್ಲ. ಇವನ ಒತ್ತಾಯಕ್ಕೆ ಹೋದೆ. ಆದರೆ ಈಗನ್ನಿಸ್ತಿದೆ ಪಾರ್ಕಿಗೆ ಹೋಗಿದ್ದು ವ್ಯರ್ಥವಾಗಲಿಲ್ಲ." ಎದುರಿನ ರಸ್ತೆಯನ್ನು ಶೂನ್ಯ ನೋಟದಲ್ಲಿ ದಿಟ್ಟಿಸುತ್ತ ಅದೇ ಸ್ವರದಲ್ಲಿ ಮಾರ್ನುಡಿದ ಹರ್ಷ. ಅವನ ಮಾತು ಒಗಟು ಎನಿಸಿತ್ತವಳಿಗೆ.
"ವಾಟ್ ಡು ಯು ಮೀನ್..?" ಅವನೆಡೆಗೆ ತಿರುಗಿ ಕೇಳಿದಳು
"ಮೀನೂ ಇಲ್ಲ ಮೊಸಳೇನೂ ಇಲ್ಲ.. ಮೊದಲು ಮುಂದೆ ನೋಡ್ಕೊಂಡ್ ಡ್ರೈವ್ ಮಾಡೇ ಮಹಾತಾಯಿ... ಯಾವ್ದಾದ್ರೂ ಲಾರಿ ಬಂದು ಗುದ್ದಿದ್ರೆ ಸ್ವರ್ಗಕ್ಕೆರಡು ನರಕಕ್ಕೊಂದು ಟಿಕೆಟ್ ಬುಕ್ ಆಗುತ್ತೆ.." ಹಿಂದಿನ ಸೀಟಿನಲ್ಲಿ ಮಧ್ಯ ಭಾಗದಲ್ಲಿ ಕುಳಿತು ಸೀಟಿಗೆ ಗದ್ದವೂರಿ ಎದುರಿಗೆ ನೋಡುತ್ತಿದ್ದ ಪ್ರಸನ್ನ ಎಚ್ಚರಿಸಿದ. ಅವನ ದೃಷ್ಟಿಯಲ್ಲಿ ನರಕಕ್ಕೆ ಭಾಜನವಾದವಳು ಮಾನ್ವಿ. ಅದೂ ಅವಳಿಗೂ ಅರ್ಥವಾಗಿ ಕಾರಿಗೆ ಬ್ರೇಕ್ ಹಾಕಿ ನಿಲ್ಲಿಸಿ ಅವನನ್ನೇ ಕೆಕ್ಕರಿಸಿ ನೋಡಿದಳು.
"ಆ್ಯಕ್ಸಿಡೆಂಟ್ ಮಾಡಿದ್ರೆ, ಡೈರೆಕ್ಟಾಗಿ ಯಮನ ಹತ್ರ ಹೋಗೋ ತರಾ ಮಾಡು ಅಡ್ಡಿಯಿಲ್ಲ. ಅದು ಬಿಟ್ಟು ಬಾಡಿಯಲ್ಲಿರೋ ಯಾವುದೋ ಒಂದು ಪಾರ್ಟ್ ಲ್ಯಾಪ್ಸಾಗಿ ಲೈಫ್ ಟೈಮ್ ಪೇಷಂಟ್ ಆಗೋತರ ಮಾತ್ರ ಮಾಡ್ಬೇಡ ಒಕೆ" ಫ್ರೀಯಾಗಿ ಡ್ರೈವಿಂಗ್ ಅಡ್ವೈಸ಼್ ಕೊಟ್ಟ.
"ಹೊಟ್ಟೆಗೇನ್ ತಿಂತಿಯಾ ನೀನು?" ರೇಗಿದಳು.
"ನಿನ್ನ ಹಾಗೆ ಬೇರೆಯವರ ಶಾಂತಿ ನೆಮ್ಮದಿಯನ್ನಂತೂ ಖಂಡಿತ ತಿನ್ನಲ್ಲ.."
"ನಿನ್ ಬಾಯಲ್ಲಿ ಸಾಯೋದು, ಸಾಯ್ಸೋದು, ಬಿಟ್ಟು ಒಳ್ಳೆ ಮಾತೇ ಬರೋದಿಲ್ವಾ"
"ಇಟ್ ಡಿಪೆಂಡ್ಸ್... ಯಾರ ಜೊತೆಗೆ ಮಾತಾಡ್ತಿರ್ತಿನೋ ಅವರ ಸ್ಟೈಲ್ನಲ್ಲೇ ಮಾತಾಡೋದು ರೂಢಿ ನನಗೆ! ನಿನೊಂತರಾ ರಾಕ್ಷಸ ಗಣದವಳು.. ಸಾವಿನಾಟ... ನಿನಗಿದೆಲ್ಲ ಇಷ್ಟ ಅಲ್ವಾ.." ಅವನ ಮಾತಿನ ಚಾಟಿ ಏಟಿಗೆ ಅವಳು ತತ್ತರಿಸಿ ಮೂಕವಾದಳು. ಹರ್ಷ ನೆಪಮಾತ್ರಕ್ಕೆ ಅಲ್ಲಿ ಕುಳಿತಿದ್ದನೇ ಹೊರತು ಅವನ ಮನಸ್ಸು ಕೈ ತಪ್ಪಿ ಹೋಗಿತ್ತು. ಮಾನ್ವಿ ಕಳೆದುಹೋದ ಅವನನ್ನು ಅಲುಗಿಸಿ ಕೇಳಿದಳು..
"ಆರ್ ಯು ಆಲ್‌ರೈಟ್??" ಅವಳ ಮಾತಿಗೆ ಮುಗುಳ್ನಕ್ಕ ಹರ್ಷ..
"ಐಮ್ ಪರ್ಫೆಕ್ಟ್ಲಿ ಆಲ್‌ರೈಟ್ ನೌ.." ಅವನ ನಡವಳಿಕೆ ವಿಚಿತ್ರವೆನಿಸಿತು. ಅನುಮಾನದೊಂದಿಗೆ ಆಕೆ ಕಾರು ಸ್ಟಾರ್ಟ್ ಮಾಡಿದಳು. ಪ್ರಸನ್ನನ ಮಧ್ಯಸ್ತಿಕೆಯಿಂದಾಗಿ ಕೆಲವು ವಿಚಾರಗಳು ಬಗೆಹರಿಯದೆ ಗೌಪ್ಯತೆ ಪಡೆದುಕೊಂಡವು.
********
"ಹಾಯ್ ಸ್ವೀಟಿ, ಎಕ್ಸಾಂ ಹೇಗ್ ನಡಿತಿವೆ?" ಫೋನ್ ಕಾಲ್‌ನಲ್ಲಿ ಕೇಳಿದ ಪ್ರಸನ್ನ
"ನಡಿಯೋದೆನು,, ಮ್ಯಾರಥಾನ್ ಸ್ಪೀಡ್ನಲ್ಲಿ ಓಡ್ತಿವೆ. ಓದೋಕೆ ಟೈಮೇ ಸಾಲ್ತಿಲ್ಲ... ಅದೇನ್ ಪ್ರಶ್ನೆಗಳೋ ಏನ್ ಉತ್ತರಗಳೋ.. ತಲೆ ಕೆಟ್ಟೋಗಿದೆ. ಪಾಸೋ ಫೇಲೋ.. ಹೆಂಗಾನ ಪರೀಕ್ಷೆ ಬರೆದು ಬಿಸಾಕಿ ಮುಗಿಸಿದ್ರೆ ಸಾಕಾಗಿದೆ.." ಕಿರಿಕಿರಿ ಸ್ವರದಲ್ಲಿ ಉತ್ತರಿಸಿದಳು ಹರಿಣಿ.
"ಅಪರೂಪಕ್ಕೊಮ್ಮೆ ಪುಸ್ತಕಗಳನ್ನ ತೆಗೆದು ನೋಡಿದ್ರೆ ತಲೆ ಕೆಡದೇ ಇನ್ನೇನಾಗುತ್ತೆ!! ನಿನ್ನ ಆನ್ಸರ್ ಶೀಟ್ ಓದಿ ವ್ಯಾಲ್ಯೂವೇಟರ್ ಗೆ ಹುಚ್ಚು ಹಿಡಿದಿದ್ರೆ ಅದೇ ಪುಣ್ಯ! ಹ್ಮ್,, ಮನೇಲೆಲ್ಲ ಹೇಗಿದ್ದಾರೆ?" ಓದಿನಲ್ಲಿ ತಕ್ಕಮಟ್ಟಿಗೆ ಚುರುಕಾದರೂ ತೀರ ದಡ್ಡಿಯೇನಲ್ಲ ಎಂಬುದನ್ನರಿತು ಮಾತು ಬದಲಿಸಿದ.
"ಎಲ್ರೂ ಫಸ್ಟ್ ಕ್ಲಾಸ್! ಹೋಗಿ ಎರಡು ದಿನ ಆದ್ಮೇಲೆ ನೆನಪಾದ್ನಾ ನಾನು?!" ತುಸು ಗರಂ ಆದಳು.
"ಹಾಗಲ್ವೋ,, ಕೆಲಸದಲ್ಲಿ ಸ್ವಲ್ಪ ಬಿಜ಼ಿ ಇದ್ದೆ.. ಇವತ್ತು ಫ್ರೀ ಟೈಮ್ ಸಿಕ್ತು.. ವಾಟರ್ ಪಾರ್ಕ್ ನಲ್ಲಿ ಏಂಜಾಯ್ ಮಾಡಿ ಬಂದ್ವಾ.. ನಿನ್ನನ್ನೇ ಮಿಸ್ ಮಾಡ್ಕೊಳ್ತಿದ್ದೆ.. ನೀನು ಇರ್ಬೇಕಿತ್ತು.. ಸಖತ್ ಜಾಲಿಯಾಗಿರೋದು... ಸದ್ಯಕ್ಕೆ ಏಕ್ಸಾಂ ಚೆನ್ನಾಗ್ ಬರಿ. ಆಮೇಲೆ ಫನ್ ಇದ್ದದ್ದೇ" ಸಮಾಧಾನಿಸಿದ.
"ಕೆಲಸದ ನೆಪ ಹೇಳ್ಕೊಂಡು ಓತ್ಲಾ ಹೊಡಿತಿರೋ ಹಾಗಿದ್ಯಲ್ಲ... ಹೌದು, ವಾಪಸ್ ಬರೋದ್ಯಾವಾಗ?"
"ಇನ್ನೊಂದು ವಾರ ಆಗ್ಬಹುದು" ಕೇಳಲೊ ಬೇಡವೋ ಎಂದು ಶಂಕಿಸುತ್ತಲೇ ಮತ್ತೆ ಕೇಳಿದ...
" ಸ್ವೀಟಿ..... ಬರೋವಾಗ ನನ್ನ ಕೈಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿದ್ದೆಲ್ಲಾ, ಅದು ನಿನಗೆ ತುಂಬಾ ಇಂಪಾರ್ಟೆಂಟ್ ಆಗಿತ್ತಾ?" ರಾಗವೆಳೆದ
"ನೀನು ಕೇಳೋ ರೀತಿಯಲ್ಲೇ ಗೊತ್ತಾಗ್ತಿದೆ, ಏನೋ ಯಡವಟ್ಟಾಗಿದೆಯಂತ!! ಕಳ್ಕೊಂಡ್ಬಿಟ್ಟಿದಿಯಾ ಹೇಗೆ....?" ಅವನು ಮೌನವಹಿಸಿದ. ಆ ಮೌನವನ್ನು ತನಗನಿಸಿದಂತೆ ಅರ್ಥೈಸಿಕೊಂಡಳವಳು...
" ಸ್ವಲ್ಪನಾದ್ರೂ ಜವಾಬ್ದಾರಿ ಇದ್ಯಾ ನಿನಗೆ... ದೊಡ್ಡ ಸರ್ಜನ್ ಅಂತೆ ಸರ್ಜನ್... ಯಾವ್ದಾದ್ರೂ ಪೇಷಂಟ್ ಹೊಟ್ಟೆಯೊಳಗೋ ತಲೆಯೊಳಗೋ ಮರೆತು ಬಿಟ್ಟಿದೀಯ ಅನ್ಸುತ್ತೆ; ನಿನ್ ಪೇಷಂಟ್ ಗತಿ ಹೇಗೋ ಏನೋ... ದೇವ್ರೆ ಕಾಪಾಡ್ಬೇಕು.. ಹೋಗಿ ಹೋಗಿ ನಿನ್ ಕೈಗೆ ಬ್ಯಾಂಡ್ ಕಟ್ಟಿದ್ನಲ್ಲ ನನಗ್ ಬುದ್ದಿಯಿಲ್ಲ.. ಅದು ಯಾರ ಫ್ರೆಂಡ್ ಶಿಪ್ ಬ್ಯಾಂಡ್ ಅಂತಾನಾದ್ರೂ ಗೊತ್ತಾ...?" ಅವನಿಗೂ ಅದೇ ತಿಳಿಯಬೇಕಾಗಿತ್ತು.
"ಅದು.. ಹರ್ಷನದ್ದು.. ಲಾಸ್ಟ್ ಇಯರ್ ಪರಿ ಧೀ ಅಣ್ಣಂಗೆ ಕಟ್ಟಿದ್ ಬ್ಯಾಂಡ್ ಅದು!! ಸ್ಟಾರ್ಸ್ ಹಿಂದ್ಗಡೆ ಇಬ್ಬರ ಹೆಸರು ಬರ್ದಿತ್ತು. ಅವನ ರೂಮಿಂದ ತಗೋಂಡ್ಬದ್ದು ನಾನು ತೆಗೆದಿಟ್ಕೊಂಡಿದ್ದೆ. ನಿನ್ನ ಕೈಯಲ್ಲಾದ್ರೂ ಇರುತ್ತಲ್ಲ ಅಂತ ಕಟ್ಟಿದ್ದೆ. ಹೀಗೆ ಕಳ್ದೋಗಿದೆ ಅಂತ ನಮ್ಮ ಪಂಡರೀಬಾಯಿಗೇನಾದ್ರೂ ಗೊತ್ತಾದ್ರೆ, ಗೋಳೋ ಅಂತ ಅತ್ತೇ ಬಿಡ್ತಾಳೆ.. ಅವಳಿಗೆನೂ ಹೇಳ್ಬೇಡ..
ಛೇ... ಇನ್ಮುಂದೆ ಅಣ್ಣನ ರೂಮಿಂದ ಏನು ತಗೊಂಡ್ಬರ್ಬಾರ್ದು...." ಬೇಸರಿಸಿಕೊಂಡು ಇನ್ನೂ ಏನೇನೋ ಒದರುತ್ತಲೇ ಇದ್ದಳು..
ಪ್ರಸನ್ನನಿಗೆ ಅವಳ ಮಾತಿನ ದಾಳಿಯಲ್ಲಿ ತನ್ನ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಆ ಬ್ಯಾಂಡ್ ಹಿನ್ನೆಲೆ ತಿಳಿಯಿತು. ಅದುವರೆಗಿನ ತನ್ನ ಜೀವಮಾನದಲ್ಲಿ ತನ್ನ ಗುರುಗಳು ಶಿಕ್ಷಕಿಯರು, ತನ್ನ ಮಿತ್ರರು ಸಹಪಾಠಿಗಳು, ಅಷ್ಟೇ ಏಕೆ ತನ್ನ ಬೆಳೆಸಿದ ಫಾದರ್ ಸಹ ಆತನಿಗೆ ಈ ರೀತಿಯಲ್ಲಿ ಉಗಿದು ಮಂಗಳಾರತಿ ಎತ್ತಿರಲಿಲ್ಲ. ಬಹುಶಃ ಹೋದ ಜನ್ಮದಲ್ಲಿ ಇವಳು ನನ್ನ ಅತ್ತೆನೋ ಕತ್ತೆನೋ ಆಗಿದ್ಳು ಅನ್ಸುತ್ತೆ; ಈ ಜನ್ಮದಲ್ಲಿ ಬ್ಯಾಲೆನ್ಸ್ ಕ್ಲಿಯರ್ ಮಾಡ್ಕೊಳ್ತಿದ್ದಾಳೆ ಎಂದುಕೊಂಡ.
ಅವನ ದೃಷ್ಟಿಯಲ್ಲಿ ಇಡೀ ಹೆಣ್ಣು ಕುಲವೇ ಒಂದು ವಿಚಿತ್ರವಾದ ಸೃಷ್ಟಿ. ಒಬ್ಬೊಬ್ಬರ ಯೋಚನೆ ಆಲೋಚನೆ ವಿಡಂಬನೆ ತರ್ಕ, ಆತುರಾತುರ ನಿರ್ಧಾರ ಎಲ್ಲವೂ ವೈಪರೀತ್ಯ.. ಇತ್ತೀಚಿನ ದಿನಗಳಲ್ಲಿ ಕಂಡು ಬಂದ ಸಹನಾಮೂರ್ತಿ ಪರಿ, ದುರಹಂಕಾರಿ ಮಾನ್ವಿ, ಪಕ್ಕದ ಫ್ಲಾಟ್ ಶ್ವೇತ, ತನ್ನ ರೆಸಿಡೆನ್ಸಿಗಳಾದ ದಿವ್ಯ ಶ್ರಾವ್ಯ, ಮೈಥಿಲಿ, ಅಷ್ಟೇ ಯಾಕೆ ಚೋಟುದ್ದದ ಅಖಿಲಾ ಈಗ ಈ ಹರಿಣಿ ಎಲ್ಲರೂ ಕಣ್ಣಮುಂದೆ ಒಂದು ಸುತ್ತು ಗಿರಕಿ ಹೊಡೆದಂತಾಯಿತವನಿಗೆ. ಒಬ್ಬೊಬ್ಬರದು ಒಂದೊಂದು ಬಗೆಯ ಅಜೀಬು ವರ್ತನೆ. ಅರ್ಥ ಮಾಡಿಕೊಂಡಷ್ಟು ನಿಗೂಢ ಜಾತಿಯವು. ತನಗೆ ಆಜೀವನ ಬ್ರಹ್ಮಚರ್ಯವೇ ಅತೀಸೂಕ್ತ. ಈ ಹೆಣ್ಮಕ್ಕಳ ಸಹವಾಸ ಬೇಡವೇ ಬೇಡಪ್ಪ ಎನ್ನಿಸಿಬಿಟ್ಟಿತವನಿಗೆ. ಅವಳ ಮಾತು ಕೇಳುತ್ತಾ ಬೇಸರಿಕೆಯಿಂದ ಆಕಳಿಸಿದ.
"ಹಲೋ.. ನಾನಿಲ್ಲಿ ವಟವಟ ಗೊಣಗ್ತಿದ್ರೆ, ನಿನಗೆ ಲಾಲಿ ಹಾಡು ಕೇಳ್ದಂಗೆ ನಿದ್ರೆ ಬರ್ತಿದ್ದೆಯಾ? ನನ್ನ ನೆಮ್ಮದಿ ಹಾಳು ಮಾಡಿ ಸುಮ್ನೆ ಕೂತ್ರೆ ಬಿಟ್ಬಿಡ್ತಿನಾ... ಸಿಗು ನನ್ನ ಕೈಗೆ, ನೋಡ್ಕೋಳ್ತಿನಿ.." ಕೋಪದಿಂದ ಗೊಣಗಿದಳು
"ಲೇ, ಮರಿಪಿಶಾಚಿ.. ನಾನು ಜಸ್ಟ್ ಕೇಳಿದ್ದಷ್ಟೆ, ಬ್ಯಾಂಡ್ ನನ್ನ ಕೈಯಲ್ಲೇ ಇದೆ. ಯಾಕೆ ವಟಗುಡ್ತಿಯಾ? ಇನ್ಮುಂದೆ ನನ್ಹತ್ರನೇ ಸೇಫಾಗೇ ಇರುತ್ತೆ ಬಿಡು. ನೀನು ಚಿಂತೆ ಮಾಡಿ ಸೊರಗ್ಬೇಡ. ಹೋಗಿ ಸ್ಟಡೀಸ್ ಕಡೆಗೆ ಗಮನ ಕೊಡು.."
"ಅದು ಸರಿ.. ಇವಾಗ್ ನನಗೆ ಇನ್ನೊಂದ್ ಡೌಟ್ ಬರ್ತಿದೆ"
"ಮತ್ತೇನಮ್ಮ.. ಡೌಟ್ ನಿಂದು"
"ನನ್ನನ್ನ ಮರಿಪಿಶಾಚಿ ಅಂತನೇ ಯಾಕೆ ಕರೆದೆ? ಹಾಗೆ ಪಿಶಾಚಿ ಅಂದಿದ್ರೇ ಆಗ್ತಿರ್ಲಿಲ್ವಾ.."
"ನೀನು ಚಿಕ್ಕವಳಲ್ವಾ ಅದ್ಕೆ ಮರಿಪಿಶಾಚಿ ಅಂದಿದ್ದು.. ಅದ್ರಲ್ಲೇನಿದೆ" ಸಹಜವಾಗಿ ಹೇಳಿದ
"ಊಹ್ಮೂ.. ನಾನು ಮರಿಪಿಶಾಚಿ ಅನ್ನೋದಾದ್ರೆ, ನನಗಿಂತ ದೊಡ್ಡ ಪಿಶಾಚಿ ಯಾವುದೋ ಅಲ್ಲಿ ಸಿಕ್ಕಿರಬೇಕು ಅಲ್ವಾ...! ಯಾರದು? ಏನ್ ಹೆಸ್ರು? ಜಗಳಾಡ್ಕೊಂಡ್ರಾ? ಹೇಗಿತ್ತು ಫರ್ಸ್ಟ್ ಮೀಟ್?" ಸಾಲು ಸಾಲು ಸಂಶಯದ ಪ್ರಶ್ನೆಗಳು..
"ಉಫ್..... ಇರೋ ಬುದ್ಧಿವಂತಿಕೆಯನ್ನ ಓದೋದಕ್ಕೆ ಖರ್ಚು ಮಾಡು, ಉದ್ದಾರನಾದ್ರೂ ಆಗ್ತಿಯಾ! ಇವತ್ತಿಗಿಷ್ಟು ಮಾತುಕತೆ ಸಾಕು. ಟಾಕ್ ಟು ಯು ಟುಮಾರೊ... ಬಾಯ್.." ಅವಳಿನ್ನೂ ಏನೋ ಹೇಳುವುದರಲ್ಲಿ ಇವನು ಕರೆ ತುಂಡರಿಸಿದ. ಮನೆಯ ಕಡೆಗೆ ಪ್ರಸ್ತಾಪವಾಗುತ್ತಿದ್ದಂತೆ ಅಮ್ಮ ಕಳಿಸಿದ ತಿನಿಸುಗಳು ನೆನಪಾದವು. ಅವನ್ನು ಕೈಯಲ್ಲಿ ಹಿಡಿದು ಹರ್ಷನ ರೂಮಿಗೆ ಹೊರಟ. ಇದನ್ನು ನೋಡಿದ ಡೇವಿಡ್, ಮಾನ್ವಿ ಬಳಿಗೆ ಧಾವಿಸಿದ.
ಪ್ರಸನ್ನ ಕೋಣೆಗೆ ಬರುವಷ್ಟರಲ್ಲಿ ಸಿಗರೇಟೊಂದನ್ನು ಬಾಯಿಂದ ಬಿಡಿಸಿ ಹೊಗೆಯೂದುತ್ತ, ಫೈಲ್ ನೋಡುತ್ತ ನಿಂತಿದ್ದ ಹರ್ಷ. ಅದರ ಘಾಟಿಗೆ ಕೆಮ್ಮುತ್ತ ಬಳಿ ಬಂದ ಪ್ರಸನ್ನ, "ಇದೇನಿದು ಅನಿಷ್ಟ ಚಟ... ನೀನ್ಯಾವಾಗಿಂದ ಶುರು ಮಾಡಿದೆ ಸಿಗರೇಟ್ ಸೇದೋದು!!" ಎನ್ನುತ್ತಾ ಮರುಮಾತಿಗೂ ಅವಕಾಶ ಕೊಡದೆ ಅವನ ಕೈಯಿಂದ ಅದನ್ನು ಕಿತ್ತು ಆ್ಯಷ್ ಟ್ರೇನಲ್ಲಿ ಹೊಸಕಿ ಹಾಕಿದ.
ಪಾರ್ಕ್ ನಲ್ಲಿ ನಡೆದ ಘಟನೆಗಳ ಹಾವಳಿಯಿಂದ ಹೊರಬರದ ಹರ್ಷ, ತನ್ನ ದ್ವಂದ್ವ ಯೋಚನೆಗಳಿಗೆ ಸ್ಪಷ್ಟ ಅರ್ಥ ಸಿಗದೆ ತೊಳಲಾಡುತ್ತಿದ್ದ. ಪ್ರಸನ್ನನ ಮಾತು ಅಷ್ಟಾಗಿ ಕಿವಿಗೆ ಹಾಕಿಕೊಳ್ಳಲಿಲ್ಲ. ಸುಮ್ಮನೆ ಫೈಲ್ ಮುಚ್ಚಿ ಅವನನ್ನು ಗಮನಿಸಿದ.
"ಇದೇನು ಕೈಯಲ್ಲಿ??" ಪ್ರಸನ್ನನ ಕೈಯಲ್ಲಿದ್ದ ಬಾಕ್ಸ್ ನೋಡಿ ಕೇಳಿದ
"ನಿನಗೆ ಇಷ್ಟವಾದ ತಿನಿಸುಗಳು... ಏನಿರ್ಬಹುದು.. ಗೇಸ್ ಮಾಡು ನೋಡೋಣ.." ಪ್ರಸನ್ನ ಬಾಕ್ಸ್ ಎತ್ತಿ ತೋರಿಸಿದ.
"......" ಅದೇಷ್ಟೇ ತರ್ಕಿಸಿದರೂ ಹರ್ಷನಿಗೆ ಹೊಳೆಯಲಿಲ್ಲ. ಕೊನೆಗೆ ಪ್ರಸನ್ನ..
"ಸರಿ. ಕಣ್ಮುಚ್ಚು.. ಇದನ್ನು ಟೇಸ್ಟ್ ಮಾಡಿ,, ಏನು ಅಂತ ಹೇಳ್ಬೇಕು ಒಕೆ.." ಪ್ರಸನ್ನನ ಮಾತಿಗೆ ತಲೆದೂಗಿದ ಹರ್ಷ ಕಣ್ಮುಚ್ಚಿಕೊಂಡ.
ಬಾದಾಮಪುರಿಯೊಂದನ್ನು ತೆಗೆದುಕೊಂಡು ಹರ್ಷನ ಬಾಯಿಗಿಟ್ಟ ಪ್ರಸನ್ನ. ಒಂದು ತುಣುಕು ಚಪ್ಪರಿಸಿದವನೇ ಶಾಕ್ ಒಳಗಾದವನಂತೆ ಬೆಚ್ಚಿ ಕಣ್ತೆರೆದ.
'ಅಮ್ಮಾss.... ನೀ ಮಾಡಿರೋ ಪೂರಿ ನಿನಗಿಂತ್ಲೂ ಸ್ವೀಟು... ನಾನಂತೂ ಯಾರಿಗೂ ಉಳಿಸೋದಿಲ್ಲ. ಅದೇನಾದ್ರೂ ಮಾಡ್ಕೋಳ್ಳಿ..' ಸುತ್ತಲೂ ನಾನಾ ಕಂಠಗಳು, ಮಾತುಗಳು ಅಸ್ಪಷ್ಟ, ಅದೃಶ್ಯ, ಅಗೋಚರ, ಗೋಜಲು ಗೋಜಲು.. ಸಿಹಿಪುರಿ ಅವನ ಮಸ್ತಿಷ್ಕದೊಳಗೆ ರಾಶಿ ನೆನಪುಗಳ ತಲ್ಲಣ ಎಬ್ಬಿಸಿ ಅವನ ನೆಮ್ಮದಿ ಕದಡಿತು.
"ಯಾರ್ ಮಾಡಿದ್ದು ಇದನ್ನ?" ತವಕದಿಂದ ಕೇಳಿದ
"ಇನ್ಯಾರು ನಮ್ಮಮ್ಮ.... ಅವರ ಕೈರುಚಿ, ಒಮ್ಮೆ ತಿಂದ್ರೆ ಲೈಫ್ ಲಾಂಗ್ ಮರೆಯೋಕೆ ಸಾಧ್ಯಾನೇ ಇಲ್ಲ ಗೊತ್ತಾ.." ಹೆಮ್ಮೆಯಿಂದ ಉತ್ತರಿಸಿದ್ದ, ಆದರೆ ಎದೆಯೊಳಗೆ ಜೇನು ಸವಿದ ಜೇನುಹುಳು ಕಡಿದ ಮಿಶ್ರ ಅನುಭವ. ಹುಟ್ಟು ಅನಾಥನ ಬಾಯಿಂದ ಮೊಟ್ಟ ಮೊದಲ ಬಾರಿಗೆ ಅಮ್ಮನ ಪ್ರಶಂಸೆ! ಅದೇನೋ ಹೆಮ್ಮೆ ಎನಿಸುತ್ತದಲ್ಲ,, ಅಮ್ಮ ಮಾಡಿದ ತಿನಿಸು ಗೆಳೆಯನೊಂದಿಗೆ ಹಂಚಿಕೊಂಡು ತಿನ್ನುವುದು.. ಅಮ್ಮನನ್ನ ಹಾಡಿ ಹೊಗಳುವುದು, ಅವನ ಮನಸ್ಸಿಗೆ ಹಾಯೆನಿಸಿತು. ಆದರೆ ಅವನೆದುರೇ ಅವರಮ್ಮನನ್ನು ತನ್ನಮ್ಮನೆಂದು ಪರಿಚಯಿಸಿಕೊಳ್ಳುವ ದುರ್ದೈವಕ್ಕೆ ಏನೆನ್ನಬೇಕೋ ತಿಳಿಯಲಿಲ್ಲ!!
'ಹೌದು.. ನನಗೂ ಒಬ್ಬ ಅಮ್ಮ... ಎಲ್ಲಾ ವಿಧಿಯಾಟ. ಇಲ್ಲದಿದ್ದರೆ ನನಗೆಲ್ಲಿತ್ತು ಈ ಮಾತನ್ನು ಹೇಳುವ ಅವಕಾಶ' ಕಣ್ಣೆಕೋ ತೇವವಾದಂತಾಯಿತು. ಪಕ್ಕಕ್ಕೆ ವಾಲಿ ಜೇಬು ತಡವಿಕೊಂಡ. ತನ್ನ ನೋವು ಭಾವುಕತೆಯನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕುವುದು ಅವನಿಗೆ ಹೊಸತೇನಲ್ಲ. ಬಾಲ್ಯದಿಂದಲೂ ರೂಢಿ. ಆ ಕಾರಣಕ್ಕೆ ಜನರ ದೃಷ್ಟಿಯಲ್ಲಿ ಆತ ಶುದ್ಧ ನಿರ್ಭಾವುಕ, ಅಬ್ಬೇಪಾರಿ. ಅವನೊಳಗಿನ ಭಾವುಕ ಪ್ರಪಂಚದೊಳಗೆ ಇದುವರೆಗೂ ಯಾರಿಗೂ ಪ್ರವೇಶವಿರಲಿಲ್ಲ.
"ನಿನಗೆ ಅಂತ ಗೊತ್ತಾಗಿದ್ರೆ ಇನ್ನೂ ಹೆಚ್ಚಿಗೇ ಮಾಡಿ ಕಳ್ಸಿರೋರು.. ನಮ್ಮಮ್ಮನಿಗೆ ನಿನ್ನ ಕಂಡ್ರೆ ನನಗಿಂತ ಜಾಸ್ತಿ ಪ್ರೀತಿ.." ಮಾತಿಗೆಳೆದ.
" ಹೌದಾ... ನಾನು ನಿಮ್ಮಮ್ಮನ್ನ ನೋಡಿದೀನಾ? ಹೇಗಿದಾರೆ ಅಮ್ಮ?" ಕೇಳುತ್ತಲೇ ಬಾಕ್ಸ್ ತನ್ನ ಕೈಗೆತ್ತಿಕೊಂಡು ಪುರಿ ಜೊತೆಗೆ ಚಕ್ಕಲಿ ಕೊಡ್ಬಳೆಯನ್ನು ಮೆಲುಕು ಹಾಕಲು ಶುರು ಮಾಡಿದ.
"ಓಹ್... ನೋಡೋದೇನು! ಮನೆಗೂ ಬಂದಿದ್ದಿಯಾ,, ಮಾತಾಡಿದ್ದಿಯಾ,, ಅವರ ಕೈತುತ್ತು ತಿಂದಿದಿಯಾ...."
ಸಿಕ್ಕ ಅವಕಾಶ ಬಿಡಲಾದೀತೆ? ಹೇಳುತ್ತಲೇ ತಕ್ಷಣ ತನ್ನ ಮೊಬೈಲ್ ತೆಗೆದು, ಹರ್ಷನ ತಾಯಿಯ ಫೋಟೋ ತೆಗೆದು ತೋರಿಸುವಷ್ಟರಲ್ಲಿ ಹಿಂದಿನಿಂದ ಓಡಿ ಬಂದ ಮಾನ್ವಿ ಅವನಿಗೆ ಜೋರಾಗಿ ಡಿಕ್ಕಿ ಹೊಡೆದಳು. ಅವನ ಕೈಯಲ್ಲಿದ್ದ ಮೊಬೈಲ್ ಉರುಳಿ ಕೌಚ್ ಕೆಳಗೆ ಜಾರಿ ಅವಿತುಕೊಂಡಿತು. ಒಡತಿಯ ಹಿಂದೆ ಬಂದ ಸ್ಟೋನಿ ಪ್ರಸನ್ನನನ್ನು ಕಂಡು ಬೊಗಳಲಾರಂಭಿಸಿತು.
"ವ್ಹಾವ್.. ವ್ಹಾಟ್ ಎ ಟೈಮಿಂಗ್... ಅದ್ಕೆ ಕಣೇ ನಾನ್ ನಿನ್ನನ್ನ ಪಿಶಾಚಿ ಅಂತ ಕರೆಯೋದು.. ಹೆಸರಿಗೆ ತಕ್ಕಂತೆ ಸರಿಯಾಗಿದ್ದಿಯಾ ಬೇತಾಳನ ವಂಶದವ್ಳೆ..! ಯಾವ ಘನಕಾರ್ಯ ಮಾಡೋಕೆ ಹೀಗ್ ಓಡ್ಬಂದೆ.. ಮೊಟ್ಟೆ ಇಟ್ಟಿದ್ದಿಯಾ ಇಲ್ಲಿ? ಕಾವು ಕೊಟ್ಟು ಮರಿ ಮಾಡೋಕೆ ಬಂದ್ಯಾ?!" ಉಗಿದು ಅಪಹಾಸ್ಯ ಮಾಡಿದ.
"ಏಯ್.. ಚುಪ್!! ಬೊಗಳಿದ್ರೆ ಸಾಯಿಸ್ಬಿಡ್ತಿನಿ!" ಬೆರಳ ಎಚ್ಚರಿಕೆಯಲ್ಲಿ ನಾಯಿಗೂ ತಾಕೀತು ಮಾಡಿದ. ಅವನ ಬೆದರಿಕೆ ರೀತಿಗೆ ಬೆಚ್ಚಿ ಅದೂ ಸಹ ಕುಂಯ್ಗುಟ್ಟಿ ಸುಮ್ಮನಾಯಿತು. ಹರ್ಷ ಇವರಿಬ್ಬರ ಜಗಳ ಬೇಗ ಬಗೆಹರೆಯದೆಂದು ಅರಿತು, ತಲೆ ಕೊಡವಿ ಬಾಕ್ಸ್ ಸಮೇತ ಹೊರನಡೆದ.
" ಜಸ್ಟ್ ಶಟಪ್ ಒಕೆ. ನೀನೇನ್ ಮಾಡ್ತಿದಿಯಾ ಇಲ್ಲಿ? ಅದೂ ಇಷ್ಟೊತ್ತಿಗೆ?" ಹುಬ್ಬು ಹಾರಿಸಿ ಕೇಳಿದಳು
"ಫ್ರೆಂಡ್ಸ್ ಕಣಮ್ಮಾ ನಾವು.. ಯಾವಾಗಬೇಕಾದ್ರೂ ಮಾತಾಡ್ತಿವಿ. ಏನಾದ್ರೂ ಮಾಡ್ಕೋತಿವಿ. ನಿನಗೆ ಎಲ್ಲಾನೂ ಹೇಳೋ ಅವಶ್ಯಕತೆ ಇಲ್ಲ." ಫೋನಿಗಾಗಿ ಅರಸಿದ.
"ಆದ್ರೆ ತಿಳ್ಕೊಳ್ಳೋ ಅನಿವಾರ್ಯತೆ ನನಗಿದೆಯಲ್ಲಾ... ಯಾಕ್ ನಮ್ಮ ಹಿಂದೆ ಬಿದ್ದಿದ್ದಿಯಾ? ಏನ್ ಬೇಕಾಗಿದೆ ನಿನಗೆ? ಅದನ್ನಾದ್ರೂ ಹೇಳಿ ಸಾಯಿ!" ಹರ್ಷ ಹೊರ ಹೋಗಿದ್ದನ್ನು ಗಮನಿಸಿ, ಹುಬ್ಬು ಗಂಟಿಕ್ಕಿ ಮೆತ್ತಗೆ ಗಂಭೀರ ಸ್ವರದಲ್ಲಿ ಕೇಳಿದಳು. ಅವಳನ್ನ ಅಡಿಯಿಂದ ಮುಡಿಯವರೆಗೆ ನೋಡಿ ಸಮೀಪ ಬರುವಂತೆ ಕಣ್ಣಲ್ಲೇ ಸನ್ನೆ ಮಾಡಿದ. ಅವಳು ಗುಟ್ಟು ಕೇಳುವವಳಂತೆ ಕಿವಿ ಅವನೆಡೆ ಚಾಚಿದಳು. ಅವನು ಪಿಸುಗುಟ್ಟಿದ.
"ರಾತ್ರಿ ಟೈಮಲ್ಲಿ ಈ ರೀತಿಯ ಬಟ್ಟೆ, ಮೇಕಪ್ ಹಾಕ್ಕೊಂಡು ತಿರುಗಾಡ್ಬೇಡ. ದೆವ್ವಗಳು ತಮ್ಮ ಪೈಕಿಯವಳು ಅನ್ಕೊಂಡು ಎತ್ತಾಕೊಂಡ್ ಹೋಗ್ಬಿಟ್ಟಾವು,, ಹುಷಾರು.." ಕಾಳಜಿಯಿಂದ ನುಡಿದು ತಲೆ ಸವರಿದ. ಅವಳು ತಕ್ಷಣ ತನ್ನನ್ನು ಕನ್ನಡಿಯಲ್ಲಿ ನೋಡಿಕೊಂಡಳು.
ಬೆಳ್ಳಿ ಬಣ್ಣದ ಮಾಡರ್ನ್ ನೈಟ್ ಗೌನ್. ಬಿಚ್ಚು ಕೂದಲು.. ಅರೆಬರೆ ಲೋಷನ್ ಪುಸಿಕೊಂಡಿದ್ದ ಮುಖ.. ಮೋಹಿನಿಯ ಅಪರಾವತಾರದಂತೆ ಎನಿಸಿತ್ತು. ಡೇವಿಡ್ ಪ್ರಸನ್ನನ ಬಗ್ಗೆ ಹೇಳಿದ ಕೂಡಲೇ ಯಾತಾರೀತಿಯಲ್ಲಿ ಎದ್ದು ಓಡಿ ಬಂದಿದ್ದಳು. ಅದೇಕೋ ಮೊದಲ ಬಾರಿಗೆ ತನ್ನ ಮೇಲೆ ತನಗೆ ಅವಮಾನವೆನಿಸಿತವಳಿಗೆ. ಮುಖ ಹಿಂಡಿ, ಕೈ ಮುಷ್ಟಿಗಟ್ಟಿ ಕೋಪ ನಿಗ್ರಹಿಸಿದಳು. ಆತ ನಿರಾತಂಕವಾಗಿ ಬಗ್ಗಿ ತನ್ನ ಮೊಬೈಲ್ ತೆಗೆದುಕೊಂಡು ಹೋದ.
ಕೆಳ ಬರುವಷ್ಟರಲ್ಲಿ ಹರ್ಷ ಆಗಲೇ ಅರ್ಧ ಬಾಕ್ಸ್ ಖಾಲಿ ಮಾಡಿಯಾಗಿತ್ತು. "ಪಾಪಿ ನನ್ಮಗನೇ.. ಅಮ್ಮ ನನಗೇ ಅಂತ ಕಳ್ಸಿದ್ದು. ಒಂದೂ ಬಾಯಿಗಿಟ್ಟಿರ್ಲಿಲ್ಲ ನಾನು. ಆಗಲೇ ಅರ್ಧ ಖಾಲಿ ಮಾಡಿದ್ದಿಯಾ? ನನಗೂ ಕೊಡ್ಬೇಕು ಅನ್ನಿಸ್ಲಿಲ್ವೇನೋ ನಿನಗೆ" ಅವರಮ್ಮನ ಫೋಟೋ ತೋರಿಸುವದಕ್ಕಿಂತಲೂ, ಅಮ್ಮ ಅವನಿಗೆಂದೇ ಮಾಡಿದ ತಿನಿಸು ಮುಖ್ಯವೆನಿಸಿಬಿಟ್ಟಿತವನಿಗೆ. ಕೊಂಚ ಇರ್ಷ್ಯೆ ಇಣುಕಿ ಹೋಯಿತು.
"ನೀನು ಬೇಕಾದ್ರೆ ಮನೆಗೆ ಹೋದ್ಮೆಲೆ ಮತ್ತೆ ಮಾಡಿಸ್ಕೊಂಡು ತಿನ್ಬೋದು. ಆದ್ರೆ ನನಗೆ ಮತ್ತೆ ಮತ್ತೆ ಸಿಗುತ್ತಾ ಹೇಳು.." ಮುಗ್ದವಾಗಿ ನುಡಿದ ಹರ್ಷ
'ನಿನಗೆ ಸಾಕಾಗುವಷ್ಟು ಸಿಗುತ್ತೆ.. ಆದರೆ ನೀನು ವಾಪಸ್ ಬಂದ್ಮೇಲೆ ನನಗೆ ಸಿಗುತ್ತೋ ಇಲ್ವೋ ಗ್ಯಾರಂಟಿ ಇಲ್ಲಾ' ಪ್ರಸನ್ನನ ಮನಸ್ಸು ಸ್ವಾರ್ಥಪರ ವಿಷಾದವಾಯಿತು.
"ಅದಕ್ಕೇನಂತೆ ನೀನು ಬಾ ಮನೆಗೆ ಇಬ್ರೂ ಒಟ್ಟಿಗೆ ಮಾಡಿಸ್ಕೊಂಡ್ ತಿನ್ನೋಣ.." ಮೇಲ್ನೋಟಕ್ಕೆ ನುಡಿದ.
"ನಾನು, ನಿಮ್ಮನೆಗಾ? ಇಂಪಾಸಿಬಲ್! ಸಿಕ್ಕಾಪಟ್ಟೆ ಕೆಲಸ ಪೆಂಡಿಂಗ್ ಇದೆ ಸಿಡ್ನಿಯಲ್ಲಿ.. ಮದುವೆಗೆ ಅಂತ ಬಿಡುಗಡೆ ಸಿಕ್ಕಿದೆಯಷ್ಟೆ. ಮದುವೆ ಮುಗಿದ ತಕ್ಷಣ ಹೊರಡ್ಬೇಕು.." ಅವನ ಮಾತಿನಲ್ಲಿ ಖೇದವಿತ್ತು. ಪ್ರಸನ್ನ ಮರುನುಡಿಯಲಿಲ್ಲ. ಆದರೆ ಅವನ ನಿರ್ಧಾರ ಧೃಢವಾಗಿತ್ತು. 'ಈ ಮದುವೆನೂ ನಡೆಯಲ್ಲ. ಹರ್ಷ ಸಿಡ್ನಿಗೂ ಹೋಗಲ್ಲ. ಬರೋದು ನಮ್ಮ ಜೊತೆಗೆ ಬೆಂಗಳೂರಿಗೆ..'
"ನೀನು ಕ್ಲಬ್ ಗೆ ರೆಗ್ಯೂಲರ್ರಾಗಿ ಹೋಗ್ತಿಯಾ?" ಪ್ರಸನ್ನನ ಮೌನವನ್ನು ಸೀಳುತ್ತ ಹರ್ಷ ಕೇಳಿದ.
" ರೆಗ್ಯೂಲರ್ ಏನಿಲ್ಲಾ.. ಹೀಗೆ ಯಾವಾಗ್ಲಾದ್ರೂ ಸ್ಪೆಷಲ್ ಒಕೆಶನ್ ಇದ್ದಾಗ; ಫ್ರೆಂಡ್ಸ್ ಜೊತೆ ಪಾರ್ಟಿ ಬರ್ತಡೇ,.. ಇದ್ದಾಗಷ್ಟೇ" ಸುಳ್ಳಾಡಿದ. ಅಷ್ಟರಲ್ಲಿ ಒಪ್ಪವಾಗಿ ಕೂದಲು ಕಟ್ಟಿಕೊಂಡು ಮುಖ ತೊಳೆದು, ಬಟ್ಟೆ ಬದಲಿಸಿ ಬಂದ ಮಾನ್ವಿ ಅವನನ್ನೇ ದುರುದುರು ನೋಡಿದಳು.
'ನಿನ್ ಮುಸುಡಿಗೆ ಕ್ಲಬ್ ಬೇರೆ ಕೇಡು. ಆಶ್ರಮ ಮಕ್ಕಳು, ಆಸ್ಪತ್ರೆ ಪೇಷಂಟ್ಸು ಇಷ್ಟು ಬಿಟ್ರೆ ಬೇರೆ ಜಗತ್ತಾದ್ರೂ ಗೊತ್ತಿದ್ಯಾ ನಿನಗೆ.. ಥೂ' ಕಣ್ಣಲ್ಲೇ ತುಪಕ್ ಎಂದುಗಿದಳು. ಅವನು ಉಡಾಫೆಯಿಂದ ನಾಲಿಗೆ ಹೊರಚಾಚಿದ.
"ತುಂಬಾ ದಿನಗಳ ನಂತರ ನಾವು ಮತ್ತೆ ಭೇಟಿಯಾದ ಸಂತೋಷಕ್ಕೆ, ಇವತ್ತು ಪಬ್ ಹೋಗಿ ಬರೋಣ್ವಾ.." ಹರ್ಷನ ಮಾತಿಗೆ ಮಾನ್ವಿ ಪ್ರಸನ್ನ ಇಬ್ಬರೂ ಮಿಕಮಿಕ ನೋಡಿದರು. ಮಾನ್ವಿ ಮುಖದಲ್ಲಿ ಅವನನ್ನು ತಡೆಯುವಂತೆ ದೈನ್ಯತೆಯಿತ್ತು.
ಇವನು ಪಬ್‌ಗೆ ಹೊರಟ ಉದ್ದೇಶ ಸ್ಪಷ್ಟವಾಗಿತ್ತು. ಹೋದನಂತರ ಅಲ್ಲಿ ನಡೆಯುವ ಅವಾಂತರಗಳು ಸಾಮಾನ್ಯವಲ್ಲ. ಅದನ್ನು ತಡೆಯಲೆಂದು ಪ್ರಸನ್ನ..
" ಸಂತೋಷ ನಮ್ಮೊಳಗಿರಬೇಕೇ ಹೊರತು ಹೊರಗೆಲ್ಲೋ ಹುಡುಕಿ ಆಚರಿಸುವಂತದ್ದಲ್ಲ. ಪಬ್‌ಗೇ ಯಾಕ್ ಹೋಗ್ಬೇಕು?" ಸೂಕ್ಷ್ಮವಾಗಿ ಅಲ್ಲಗಳೆದ.
"ಐ ವಾಂಟ್ ಟು ಕಿಲ್ ದಿಸ್ ಸೈಲೆನ್ಸ್...ಬಿಫೋರ್ ದಿಸ್ ಸೈಲೆನ್ಸ್ ಕಿಲ್ಸ್ ಮಿ..!! ರಾತ್ರಿಯ ನೀರವತೆಯಲ್ಲಿ ಏನೇನೋ ಸದ್ದು ಧ್ವನಿ ಕಿರುಚಾಟ, ಯಾವುದಕ್ಕೂ ಸ್ಥಿರವಿರಲ್ಲ ಕಣೋ... ಮನಸ್ಸು ಹೊಯ್ದಾಡುತ್ತೆ... ಜನರ ಮಧ್ಯೆ ಕಳೆದು ಹೋಗ್ಬೇಕು ಅನ್ಸುತ್ತೆ" ಹರ್ಷ ಅನ್ಯಮನಸ್ಕನಾಗಿ ನುಡಿದ. ಅವನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲ ಪ್ರಸನ್ನ. ಅದನ್ನು ನಿಗ್ರಹಿಸುವ ಚಾತುರ್ಯವನ್ನು ಬಲ್ಲ.
" ಮೌನವನ್ನು ಭೇಧಿಸೋಕೆ ಪಬ್ ಒಂದೇ ದಾರಿಯಲ್ಲ. ಇನ್ನೂ ಬೇರೆ ಪರಿಹಾರ ಇವೆ, ಸಂಗೀತ ಕೇಳು, ಪುಸ್ತಕ ಓದು.. ಬೇಡವಾ... ನಾವಿದ್ದಿವಲ್ವ.. ನಮ್ಮ ಜೊತೆ ಮಾತಾಡು.." ಪ್ರಸನ್ನ ಇಷ್ಟು ಹೇಳಿದ್ದೆ ಹರ್ಷನಿಗೆ ಆ ದಿನ ತನ್ನ ರೂಮಿನಲ್ಲಿ ಪೇರಿಸಿಟ್ಟ ಪುಸ್ತಕಗಳು ಸಿಡಿಗಳ ಕಲೆಕ್ಷನ್ ನೆನಪಾದವು. ಬೆಳಗಿನ ಧಾವಂತದಲ್ಲಿ ಅವುಗಳನ್ನು ಸರಿಯಾಗಿ ನೋಡಲಾಗಿರಲಿಲ್ಲ. ಇದೇ ಸರಿಯಾದ ಸಮಯ ಎಂದು ತಿಳಿದು ಅವರಿಬ್ಬರಿಗೂ ಗುಡ್ ನೈಟ್ ಹೇಳಿ ಅಲ್ಲಿಂದ ಹೋದ. ತಿನಿಸುಗಳ ಬಾಕ್ಸ್ ತೆಗೆದುಕೊಂಡು ಹೋಗುವುದನ್ನು ಮರೆಯಲಿಲ್ಲ
"ಮಾನುssss.. ಗುಡ್ ನೈಟ್.. ಚೆನ್ನಾssಗ್ ನಿದ್ರೆ ಮಾಡು..." ಪ್ರಸನ್ನ ಹೇಳಿ ಹೋದ ರೀತಿಯಲ್ಲೇ ಏನೋ ಕುತಂತ್ರ ಗೋಚರಿಸಿತು ಮಾನ್ವಿಗೆ. ತುಸು ಎಚ್ಚರಿಕೆಯಿಂದ ಇರಬೇಕು ಎಂದುಕೊಂಡಳು. ಹರ್ಷನ ನೆನಪುಗಳಲ್ಲಿ ಉಂಟಾಗಿದ್ದ ತಲ್ಲಣಗಳ ಬಗ್ಗೆ ಕೂಡ ಆಕೆಗೆ ಇನ್ನೂ ಯಾವ ಸುಳಿವು ಇರಲಿಲ್ಲ. ಬರೀ ಪತ್ರ ಪುಸ್ತಕ ಹಾಡು,ಪಾರ್ಕು ಇಷ್ಟರಲ್ಲೇ ಅದೇನು ಮಹಾ ಸಾಧಿಸಲು ಸಾಧ್ಯ ಎಂದುಕೊಂಡ ಅಸಡ್ಡೆ ತೋರಿದಳೇನೋ! ಹೀಗಾಗಿ ಆಕೆ ಅವನೆಡೆ ಅಂತಹ ವಿಶೇಷ ಗಮನ ಹರಿಸಲೂ ಇಲ್ಲ.
*********
ಆ ರಾತ್ರಿ ಹರ್ಷನ ಪಾಲಿಗೆ ಬಹುದಿನಗಳ ನಂತರದ ಒಂದು ನೆಮ್ಮದಿಯ ರಾತ್ರಿಯಾಗಿತ್ತು. ಅವ್ಯಕ್ತ ಸಂತೋಷವೊಂದು ಕಣ್ಣ ಕೊರಳ ಆಲಂಗಿಸಿ ಸಾಂತ್ವನ ಹೇಳಿದಂತಿತ್ತು. ಮುಂಜಾವಿನ ಪತ್ರ, ವಿಶೇಷ ಉಡುಗೊರೆ, ತನ್ನ ಪ್ರತಿರೂಪದ ಬಿಂಬ, ಸಂಜೆಯ ಮಕ್ಕಳಾಟ, ಅಮ್ಮನ ಕೈರುಚಿ ಎಲ್ಲವೂ ಹಿಡಿಯಲು ಸಾಧ್ಯವಾಗದಷ್ಟು ನೆನಪುಗಳನ್ನು ಮರಳಿಸಿತ್ತು ಅವನ ಮನಸ್ಸಿಗೆ ಕೆಲವು ವಿಷಯಗಳು ಮನವರಿಕೆ ಯಾಗತೊಡಗಿದ್ದವು.
ರೂಮಿಗೆ ಬಂದವನೇ, ರೂಮನ್ನೊಮ್ಮೆ ಪರಿಶೀಲಿಸಿ ನೋಡಿದ. ಸಿಡಿಗಳ ಮೇಲೆ ಕೈಯಾಡಿಸಿದ. ಎಲ್ಲಾ ಹಳೆಯ ಹಿಂದಿ ಹಾಡುಗಳು. ಜಗಜಿತ್ ಸಿಂಗ್ ಅವರ ಘಜ಼ಲ್ ಕಲೆಕ್ಷನ್ ಒಂದನ್ನು ಆಯ್ದುಕೊಂಡು ರೆಕಾರ್ಡರ್ ಆನ್ ಮಾಡಿದ.
"ಝುಕಿ ಝುಕಿ ಸೀ ನಜ಼ರ್, ಬೇಕರಾರ್ ಹೈ ಕೆ ನಹೀ..
ದಬಾ ದಬಾ ಸಾ ಸಹೀ, ದಿಲ್ ಮೇ ಪ್ಯಾರ್ ಹೈ ಕೆ ನಹೀ.." ಹಾಡು ಗುನುಗುನಿಸಿತು
ಅವಳು ಪ್ರತಿಬಾರಿ ಅವನನ್ನು ಮದುವೆಯಾಗಲು ಹೆದರಿ ಹಿಂಜರಿವಾಗ ಅವನು ಗುನುಗುತ್ತಿದ್ದ ಹಾಡದು... ನಿನಗೂ ನನ್ನ ಮೇಲೆ ಪ್ರೀತಿ ಇದೆಯೋ ಇಲ್ಲವೋ' ಎಂದು ಪರೋಕ್ಷವಾಗಿ ಕೇಳಿದ ರೀತಿಯದು.. ಹೇಗೆ ತಾನೇ ಮರೆತಾನೂ! ಅವನು ಮರೆತರೂ.. ಅವನೊಳಗೆ ಬಂಧಿಯಾದ ಅವಳ ಮನಸ್ಸು ಅದಕ್ಕೆ ಆಸ್ಪದ ನೀಡಬಹುದೇ?
ಹಾಡು ಕಿವಿಯಲ್ಲಿ ಲಹರಿ ಹರಿಸುತ್ತಲೇ ಇತ್ತು.. ಆತ ಮೆಲ್ಲಗೆ ಪುಸ್ತಕಗಳನ್ನು ತಡವಿದ ಕೆಲವು ಕಥೆ ಕವನ ಕಾದಂಬರಿಗಳ ಸುಮಾರು ಹತ್ತಾರು ಪುಸ್ತಕಗಳು. ಅವನ ಮನಸ್ಸೆಳೆದಿದ್ದು ಅವುಗಳ ಕೊನೆಯಲ್ಲಿದ್ದ ಕಪ್ಪು ನೀಲಿ ಮಿಶ್ರಣದ ಡೈರಿ. ಅದನ್ನು ಕೈಗೆತ್ತಿಕೊಂಡು ಕೆಲವು ಪುಟ ತಿರುವಿ ನೋಡಿದ. ಹೊಚ್ಚ ಹೊಸ ಡೈರಿ ಖಾಲಿ ಖಾಲಿಯಾಗಿತ್ತು. ಮೊದಲೆರಡು ಪುಟ ತಿರುವಿದಾಗ ಏನೋ ಬರೆದಿದ್ದನ್ನು ಕಂಡು ಓದತೊಡಗಿದ.
"ತಿರಸ್ಕಾರದ ಬೇಗುದಿಯ ತಾಪದಲ್ಲಿ ಬೆಂದ ನನಗೆ ಸಾವು ನಿತ್ಯದ ಬಂಧುವಾಗಿತ್ತು ಕಣೋ ಹುಡುಗ.. ನೊಂದಿದ್ದೆ, ಬೇಸತ್ತಿದ್ದೆ ಜಗದ ಮೂಡನಂಬಿಕೆಗಳ ಕಡು ಶಾಪಕ್ಕೆ... ನನ್ನ ಮೇಲೆ ನನಗೇ ತಿರಸ್ಕಾರ ಮೂಡಿದ ಅಶುಭ ಘಳಿಗೆಯವು... ಅಂತಹ ವಿಷಮ ಸ್ಥಿತಿಯಲ್ಲಿಯೂ ನನ್ನನ್ನು ನನಗಿಂತ ತುಸು ಹೆಚ್ಚಾಗಿಯೇ ಪ್ರೀತಿಸಿದವನು ನೀನು..
ಸತ್ತರೂ ಮತ್ತೆ ಹುಟ್ಟುವಂತೆ ಸಾಯಬೇಕಂತ ಧೈರ್ಯ ಹೇಳುತ್ತಿದ್ದೆ ನೀ ನನಗೆ... ನಿನ್ನ ಮಾತುಗಳೇ ಒಗಟೆನಿಸುತ್ತಿತ್ತು.. ಅದರ ಹಿಂದೆ ಸಾಲು ಸಾಲು ಸವಾಲು ಕೇಳುತಿದ್ದೆ ನಾನು.. ಹಾಗಂದ್ರೆ...?
ಹುಟ್ಟು ಸಾವು ಸಹಜ. ಪ್ರಕೃತಿಯ ನಿಯಮವವು. ಆದರೆ ಈ ಸತ್ತೂ ಮತ್ತೆ ಹುಟ್ಟುವುದಿದೆಯಲ್ಲ ಅದೊಂದು ಬೇರೆಯೇ ಲೋಕ! ಅದರೊಳಗೆ ಒಮ್ಮೆ ಪ್ರವೇಶಿಸಿ ನೋಡು.. ವಾಸ್ತವದ ನಿಗದಿತ ನಿಯಮಿತ ಜಗದ ಮೊಂಡು ವಾದ ವಿವಾದ, ದ್ವೇಷ ತಿರಸ್ಕಾರ ಎಲ್ಲರಿಂದಲೂ ದೂರವಾಗಿ ಹೊಸದೊಂದು ಪ್ರಪಂಚದೊಳಗೆ ಕಳೆದು ಹೋಗುತ್ತಿಯಾ ಎಂದು ನನ್ನ ಕೈಗೆ ಪುಸ್ತಕಗಳ ಲೋಕವನ್ನಿಟ್ಟು, ಅದರೊಳಗೆ ನಾನು ಕಳೆದುಹೋಗುವಂತೆ ಮಾಡಿದ್ದೆ. ಅದೆಷ್ಟೋ ಕಥೆ ಕವನ ಕಾದಂಬರಿಗಳನ್ನು ನಿನ್ನ ಭುಜಕ್ಕೊರಗಿ ಓದಿದ ನೆನಪಿನ್ನು ಹಸಿಹಸಿಯಾಗಿದೆ ಕಣೋ ನನ್ನೆದೆಯಲ್ಲಿ..
ನೀನೇ ತಾನೇ ಪುಸ್ತಕ ಓದುವ ಗೀಳು ಆರಂಭಿಸಿದ್ದು.. ಇಂದಿಗೂ ನನ್ನ ಬಿಟ್ಟು ಹೋಗಿಲ್ಲ... ಆದರೆ ಓದುವ ಗೀಳು ಹಚ್ಚಿದ ನೀನೇ ಸಾಹಿತ್ಯದ ಸಹವಾಸದಿಂದ ದೂರವಾದಂತಿದೆ! ಅಕ್ಷರ ಎನ್ನುವ ಅನರ್ಘ್ಯದೊಡನೆ ನಿನ್ನ ಒಲವಿನ ಸಿಹಿ ಅಮೃತ ಸಿಂಚನ ನನ್ನ ಮನದ ಪ್ರತಿ ಕದನ, ವ್ಯಸನ, ಭ್ರಾಂತಿಗೆ ಹೊಸದೇ ಮುನ್ನುಡಿ ಬರೆದಿತ್ತು. ನನ್ನೆಡೆಗೆ ತಳೆದಿದ್ದ ಅಸಹನೆ, ಕೇಳಿ ಬರುತ್ತಿದ್ದ ಅಪಸ್ವರದ ನುಡಿಗಳಿಗೆ ನಾನು ಕಿವಿಗೊಡದಂತೆ ನನ್ನನ್ನು ತಮ್ಮ ತೋಳತೆಕ್ಕೆಯಲ್ಲಿ ಬಂಧಿಸಿದ್ದವು ನೀ ಕೊಟ್ಟ ಕಾಣಿಕೆಗಳು... ಮಾತು ಬಾರದ ಮಿತ್ರರು.. ಏನೆಲ್ಲಾ ಹೇಳಿದವು.. ಏಷ್ಟೆಲ್ಲಾ ಧೈರ್ಯ ನೀಡಿದವು.. ಒಂಟಿತನ ದೂರ ಮಾಡಿದವು.. ಹೊಸದೇ ಪ್ರಪಂಚ ಸುತ್ತಿಸಿದ್ದವು..
"ಮಲೆಗಳಲ್ಲಿ ಮಧುಮಗಳು" ನೆನಪಿದೆಯಾ,, ನನಗೆ ನೀ ಕೊಟ್ಟ ಮೊದಲ ಕಾದಂಬರಿಯದು. ಅದನ್ನು ಓದುವಾಗಲಂತೂ ನಾನೇ ಚಿನ್ನಮ್ಮನೆಂದು, ನೀನು ಮುಕುಂದನೆಂದೇ ಊಹಿಸಿ ಒಂದು ನವಿರಾದ ಪ್ರೇಮಕಥೆಯನ್ನು ಮನಸ್ಸಲ್ಲೇ ಆಸ್ವಾದಿಸಿದ್ದೆವು.ಇಡೀ ಕಾದಂಬರಿಯನ್ನು ಅಕ್ಷರ ಸಹ ಬಿಡದಂತೆ ಅರೆದು ಕಬಳಿಸಿದ್ದೆವು. ಹೂವಳ್ಳಿಯ ಅಂಗಳದಲ್ಲಿ ಆಗತಾನೇ ಮಳೆ ಜಿನುಗುತ್ತಿತ್ತು.. ಮಧ್ಯಾಹ್ನವಾಗಿತ್ತು. ಸುತ್ತಲೂ ಕತ್ತಲಿನ ವಾತಾವರಣ, ಮೋಡ ಮುಸುಕಿ ಮತ್ತೂ ಕತ್ತಲಾಯಿತು. ಓದುತ್ತಾ ಕುಳಿತವರಿಗೆ ಮಳೆಯಾಗಿದ್ದು ಕಾದಂಬರಿಯಲ್ಲೋ? ಮನೆಯ ಅಂಗಳದಲ್ಲೋ? ಗ್ರಹಿಸಲು ಆಗದಷ್ಟು ಭಾವನಾತ್ಮಕವಾಗಿ ಅದರೊಳಗೆ ಅನುರಾಗಿಯಾಗಿದ್ದೆವು. ಇದು ಸಾಹಿತ್ಯಕ್ಕಿರುವ ಶಕ್ತಿ..! ನಿನ್ನ ಭುಜಕ್ಕೆ ತಲೆಯಾನಿಸಿ ಮತ್ತದೇ ಲೋಕದೊಳಗೆ ಅಕ್ಷರಶಃ ಮಾಯವಾಗುವ ಆಸೆಯಾಗಿದೆ ಗೆಳೆಯ.. ಸಮ್ಮತಿಸು..
ನಿನಗೆ ಗೊತ್ತಾ.. ಸದ್ಯದ ಪರಿಸ್ಥಿತಿಯಲ್ಲಿ ನಾವಿಬ್ಬರೂ ಸಹ ಇದೇ ರೀತಿಯ ಕಥೆಯೊಂದರ ಪಾತ್ರಧಾರಿಗಳು. ಆದರೆ ಅದೆಷ್ಟೋ ಪುಟಗಳ ಅಂತರವಿದೆ ನಮ್ಮ ಮಧ್ಯೆ.. ಆದಷ್ಟೂ ಬೇಗ ನಿನ್ನರವಳಿಕೆಯಲ್ಲಿ ನನ್ನ ಪ್ರತಿಬಿಂಬವೊಂದು ಮೂಡಿ ಈ ಅಂತರ ಸರಿದುಹೋಗಲೆಂದೇ ನನ್ನೆಲ್ಲ ಪ್ರಾಮಾಣಿಕ ಪ್ರಯತ್ನ, ಆಶಯ..
ಭಾವನೆಗಳನ್ನು ವ್ಯರ್ಥ ಮಾಡಬಾರದೆಂದು ಅವನ್ನು ಪದಗಳಲ್ಲಿ ಹಿಡಿದಿಡುವ ಕೆಲಸ ಬರಹ. ನಿನ್ನೆಲ್ಲ ಭಾವನೆಗಳಿಗೂ ಅಕ್ಷರಗಳ ರೂಪ ನೀಡಿ ಮುಂದೊಮ್ಮೆ ನನ್ನೆದುರು ತೆರೆದಿಡುವೆ ಎಂದಾಶಿಸಿ ಈ ಡೈರಿಯ ಖಾಲಿ ಪುಟಗಳನ್ನು ನಿನಗಾಗಿ ಅರ್ಪಿಸಿರುವೆ.. "
ಅಲ್ಲಿಗೆ ಡೈರಿಯ ಸಂಭಾಷಣೆ ಕೊನೆಯಾಗಿತ್ತು. ಓದಿದವನ ಮನಸ್ಸು ಮೂಕಮರ್ಮರ.. ಅಂಗೈ ಮೇಲೆ ಕುಳಿತಿದ್ದು ಕೈಗೆಟುಕದ ಬಣ್ಣದ ಚಿಟ್ಟೆಯಂತಹ ಸೂಕ್ಷ್ಮಾತೀಸೂಕ್ಷ್ಮ ನೆನಪಿನ ಲಾಸ್ಯಗಳು.. ಇನ್ನೂ ಇನ್ನೂ ಕೇಳಬೇಕೆನ್ನಿಸುವ ಓದಬೇಕೆನ್ನಿಸುವ ಅವಳ ಚಂದದ ಸಾಲುಗಳು.. ಅವನು ಪುಸ್ತಕಗಳತ್ತ ಮತ್ತೆ ನೋಟ ಹರಿಸಿದ. ಎದುರು ಕಂಡ ಪುಸ್ತಕದ ಪುಟ ತಿರುವಿದವನಿಗೆ ಆರಂಭದಲ್ಲೇ ಕೆಲವು ಸಾಲುಗಳ ಕೆಳಗೆ ಗೆರೆ ಎಳೆದದ್ದನ್ನು ಗಮನಿಸಿ ಓದಿದ..
"ಮತ್ತೆ ಮತ್ತೆ ಉಕ್ಕುತಿದೆ ನಿನ್ನ ಮೇಲೆ ಮೋಹ
ಚಿತ್ತಮಧುವ ನೆಕ್ಕುತಿದೆ ದೇಹ ಕೆಳಸಿ ದೇಹ.
ದೇವರಿಚ್ಚೆಗಿದಿರೇ ಹೇಳು ನನ್ನ ನಿನ್ನ ಭೇಟ?
ಅವನು ಒಪ್ಪುವನಕ ತಾಳಲೆಮ್ಮ ನೇಹ ನೋಟ:
ಅವನು ಒಪ್ಪಿದೊಲವೆ ನಮಗೆ ಬಾಳೊಳಮೃತದೂಟ
ಅವನು ಒಪ್ಪದಿರಲು ಅದುವೇ ಮೃತ್ಯು ಕಾಳಕೂಟ
ಅವಸರವೇಕೊಲಿವುದೆಮಗೆ ಜನುಮ ಜನುಮದಾಟ!!"
ಕುವೆಂಪುರವರ ಪ್ರೇಮ ಕಾಶ್ಮೀರ ಕಾವ್ಯ ಸಂಕಲನವದು.
ಕುವೆಂಪು ರವರು ಯಾವ ಭಾವಾರ್ಥವನ್ನು ಇಟ್ಟುಕೊಂಡು ಬರೆದಿದ್ದರೋ ಕಾಣೇ, ಆದರೆ ಆ ಸಾಲುಗಳಿಂದ ಹರ್ಷ ಮಾತ್ರ ತನ್ನ ತುಮುಲಗಳಿಗೆಲ್ಲ ಒಂದು ನಿಶ್ಚಿತ ನಿಲ್ದಾಣ ಗಿಟ್ಟಿಸಿಕೊಂಡಂತೆ ಮುಗುಳ್ನಗೆಯೊಂದ ಬೀರಿದ. ಆ ನಗೆಯಲ್ಲಿ ಅವಳ ನೆನಪಿತ್ತು, ಗುರುತಿತ್ತು, ಸ್ನೇಹವಿತ್ತು, ಪ್ರೀತಿಯಿತ್ತು, ಮುಖ್ಯವಾಗಿ ಅವಳ ಗೆಲುವಿತ್ತು.. ಆದರೆ ಅವಳನ್ನ ತಲುಪುವ ದಾರಿ ಮಾತ್ರ ಅಗೋಚರ.. ನಿಗೂಢ.. ಅವನು ಮತ್ತೆ ಮತ್ತೆ ಅವಳ ಪ್ರೇಮಪಾಶದಲ್ಲಿ ಬಂಧಿಯಾಗಲು ಕಾತರಿಸಿದ. ಅವಳು ಕೊಟ್ಟ ಡೈರಿಯಲ್ಲಿ ತನ್ನ ಮನದ ಭಾವನೆಗಳನ್ನು ಅಕ್ಷರವಾಗಿಸಲು ಮುಂದಾದ..
ಮುಂದುವರೆಯುವುದು..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ