ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-34


ಹರ್ಷ ತನ್ನ ರೂಮಿನಲ್ಲಿ ಡೈರಿ ಬರೆಯುವಲ್ಲಿ ವ್ಯಸ್ತನಾಗಿದ್ದರೆ, ಹೊರಗೆ ಶತಪಥ ತಿರುಗುತ್ತಿದ್ದ ಮಾನ್ವಿ ಪ್ರಸನ್ನ ಒಬ್ಬರಿಗೊಬ್ಬರು ಮುಯ್ಯಿ ತೀರಿಸಲು ಅವಕಾಶಕ್ಕಾಗಿ ಕಾಯುತ್ತಿದ್ದರು.

ಆ ರಾತ್ರಿ ಡೇವಿಡ್ ಹರ್ಷನ ರೂಮಿನೆಡೆಗೆ ನೀರು ಮತ್ತೆ ಟ್ಯಾಬ್ಲೆಟ್ ತೆಗೆದುಕೊಂಡು ಹೊರಟಿದ್ದನ್ನು ಕಂಡು ಅವನನ್ನ ನಿಲ್ಲಿಸಿದ ಪ್ರಸನ್ನ. ಅವು ಯಾವ ಮಾತ್ರೆಗಳೆಂದು ಸ್ಲಿಪ್ ಕೈಗೆತ್ತಿಕೊಂಡು ನೋಡಿದ. ಎರಡು ರೀತಿಯ ಮಾತ್ರೆಗಳಿದ್ದವು. ಒಂದು ಹೈಪರ್ ಫೀಲಿಂಗ್ಸ್ ಕಂಟ್ರೋಲ್ ಮಾಡುವ ಮಾತ್ರೆ. ಮತ್ತೊಂದು ಮೆದುಳಿನ ಸೆಲ್ಸ್ ಆ್ಯಕ್ಟೀವ್ ಮಾಡಿ ನೆನಪಿನ ಶಕ್ತಿ ಮರಳಿಸುವಂತಹದ್ದು.. ಸದ್ಯಕ್ಕೆ ಹರ್ಷನಿಗೆ ಅತೀ ಅವಶ್ಯಕವಾಗಿ ನೀಡಬೇಕಾದ ಮಾತ್ರೆಗಳವು. ಇದರಿಂದ ಅವನ ಮಾನಸಿಕ ಸಮತೋಲನ ಹದಗೆಡವುವುದಿಲ್ಲ. ಮತ್ತು ನಿಧಾನವಾಗಿ ಹಳೆಯದನ್ನೆಲ್ಲ ಮತ್ತೆ ನೆನಪು ಮಾಡಿಕೊಳ್ಳಲು ಅವು ಪ್ರೇರೇಪಿಸುತ್ತವೆ. ಇದನ್ನು ಪರಿಶೀಲಿಸಿದ ಪ್ರಸನ್ನ, ಡೇವಿಡ್ ಗೆ ಹೋಗಲು ಅನುಮತಿಸಿದ. 'ಹರ್ಷನ್ನ ಪ್ರೀತಿಸ್ತಿದ್ದು, ಮದುವೆಯಾಗೋ ಉದ್ದೇಶ ಇರೋಳು, ಅವನಿಗೆ ಹೀಗೆ ಸರಿಯಾದ ಮೆಡಿಸಿನ್ ಕೊಡ್ತಿರ್ಲಿಲ್ಲ. ಅವನಿಗೆ ಹಳೆದೆಲ್ಲ ನೆನಪಾದ್ರೆ ಇವಳಿಗೇ ತೊಂದ್ರೆಯಲ್ವಾ! ಒಂದ್ವೇಳೆ ಅವನ ಒಳಿತನ್ನೇ ಬಯಸ್ತಿದ್ರೆ, ಮತ್ತೆ ಪರಿನಾ ಹರ್ಷನಿಂದ ದೂರ ಇರಿಸಿದ್ಯಾಕೆ? ಅವನಿಗೆ ಇಷ್ಟು ದಿನ ಏನನ್ನೂ ಹೇಳದೆ ಮುಚ್ಚಿಟ್ಟಿದ್ಯಾಕೆ? ಈ ಪಿಶಾಚಿ ದಿನೇ ದಿನೇ ನನ್ನ ಬ್ರೇನ್ ಡ್ಯಾಮೇಜ್ ಮಾಡ್ತಿದಾಳೆ. ಅವಳ ಉದ್ದೇಶ ಏನಿದೆಯಂತ ಮೊದಲು ತಿಳ್ಕೋಬೇಕು ಡಾ.ಪ್ರಸನ್ನ' ತನ್ನ ಮನಸ್ಸಿಗೆ ಎಚ್ಚರಿಸಿದ.


ಹರ್ಷನ ರೂಂ ಎದುರಿಗೆ ಕಾಣುತ್ತಿದ್ದ ಲಾಂಜ್ನಲ್ಲಿ ಇಂಗ್ಲಿಷ್ ಪತ್ತೇದಾರಿ ಕಾದಂಬರಿಯೊಂದನ್ನ ಓದುವುದರಲ್ಲಿ ಮಗ್ನಳಾಗಿದ್ದಳು ಮಾನ್ವಿ. ಆ ಮೂಲಕ ತನ್ನ ಟೆನ್ಷನ್‌ನ್ನು ಸ್ವಲ್ಪ ಸಮಯ ಮರೆಮಾಚಲು ಪ್ರಯತ್ನಿಸಿದ್ದಳು. ಅದೊಂದು ಕೊಲೆಯೊಂದರ ಸುತ್ತ ಹೆಣೆದ ಕಥೆ. ಕೊಲೆಯ ಆಪಾದನೆ ಹೀರೋ ತಲೆ ಮೇಲಿತ್ತು. ಆದರೆ ಕೊಲೆಗಾರ ಆತನಲ್ಲ. ಮತ್ಯಾರು..?

ಕತೆಯಲ್ಲಿ ಸಂಪೂರ್ಣವಾಗಿ ಕಳೆದವಳನ್ನ ಹಿಂದೆ ಬಂದ ಪ್ರಸನ್ನ ಅವಳ ತಲೆಗೆ ಮೊಟಕಿ ಎಚ್ಚರಿಸಿದ. ಒಮ್ಮೆ ತಿರಸ್ಕಾರದಿಂದ ತಿರುಗಿ ನೋಡಿ ಮತ್ತೆ ಪುಸ್ತಕದಲ್ಲಿ ಮುಖವಿರಿಸಿದಳು. ಅವಳ ಕೈಯಲ್ಲಿದ್ದ ಪುಸ್ತಕದ ಮುಖಪುಟ ನೋಡಿ,
"ಆ ಹಿರೊಯಿನ್ ತಂದೆನೇ ಕೊಲೆ ಮಾಡಿ ಹಿರೋ ಮೇಲೆ ಹಾಕಿರ್ತಾನಲ್ವಾ... ಅದೇ ಕಥೆ ತಾನೇ ಇದು... ಡಬ್ಬಾ ಸ್ಟೋರಿ.. ಟೈಮ್ ವೇಸ್ಟ್.." ಗೊಣಗಿದ.

ಒಂದೇ ವಾಕ್ಯದಲ್ಲಿ ಇಡೀ ಕಥೆಯ ಸ್ವಾರಸ್ಯವನ್ನು ಸತ್ಯಾನಾಶ ಮಾಡಿ ದಂತ ಪ್ರದರ್ಶಿಸಿ, ಪಿಳಿಪಿಳಿ ಅವಳ ಮುಖ ನೋಡಿದ. ಅದೇ ಬುಕ್ ಎತ್ತಿ ಅವನ ತಲೆಗೆ ಕುಕ್ಕಿ ಬಡಿದು ಅವನ ಕೈಗಿಕ್ಕಿ ಜಾಗ ಕಿತ್ತಿದಳು. "ಓಯ್ ಪಿಶಾಚಿ ನಿಲ್ಲೇ.. ಏನೋ ಕೇಳ್ಬೇ...ಕಿ..ತ್ತು" ಅವನು ಕೂಗುವದರಲ್ಲಿ ಅವಳು ಅಲ್ಲಿಂದ ಕೊಸರಿಕೊಂಡಳು.

ಬೆಳಗಿನಿಂದ ತನ್ನನ್ನು ಯಾವುದೋ ರೀತಿಯಲ್ಲಿ ಕಾಟ ಕೊಡುತ್ತಲೇ ಇದ್ದ ಪ್ರಸನ್ನನನ್ನು ಸುಮ್ಮನೆ ಬಿಡಬಾರದೆಂದು ಮಾನ್ವಿ ಒಳದ್ವನಿ ಎಚ್ಚರಿಸಿತು. ಅವನಿಗೆ ತಿರುಮಂತ್ರ ಹಾಕಲು ಈ ರಾತ್ರಿಯೇ ಸರಿಯಾದ ಸಮಯ ಎನ್ನಿಸಿತು. ಕೆಳಬಂದು ಡೇವಿಡ್ ನನ್ನು ಕೂಗಿ ಅವನಿಗೆ ಮಾತ್ರ ಕೇಳುವಂತೆ ಮೆಲುದನಿಯಲ್ಲಿ ಏನೋ ಉಸುರಿ ಹಮ್ಮಿನಿಂದ ಮುಗುಳ್ನಕ್ಕಳು.

ಡೇವಿಡ್ ಅಡುಗೆ ಮನೆಗೆ ಹೋಗಿ ಒಂದು ಲೋಟ ಬಿಸಿ ಬಿಸಿ ಹಾಲಿಗೆ ಮಾನ್ವಿ ಹೇಳಿದ ಪೌಡರ್ ಕಲಕಿ, ಅದನ್ನು ತೆಗೆದುಕೊಂಡು ಪ್ರಸನ್ನನ ರೂಮಿಗೆ ಹೊರಟ. ಅದನ್ನು ನೋಡಿ 'ಇನ್ನವನ ಕಾಟ ಇರದೆಂದು' ಸಂತೃಪ್ತಿಯಿಂದ ಕೈ ಹೊಸೆದುಕೊಳ್ಳುತ್ತ ಮಾನ್ವಿ ತನ್ನ ರೂಮಿಗೆ ಮಲಗಲು ಹೊರಟಳು.

ಅವಳು ತನ್ನ ಕೋಣೆಯೊಳಗೆ ಹೋಗುವಾಗ ಅವಳ ಸ್ಟೋನಿ ಒಂದೇ ಸಮನೆ ಬೊಗಳಿ ಅವಳ ಸ್ಕರ್ಟ್ ಹಿಡಿದು ಎಳೆದು ತಡೆಯಿತು. ಅದು ಯಾಕೆ ಹಾಗೆ ಮಾಡುತ್ತಿರಬಹುದು ಎಂಬ ಸೂಕ್ಷ್ಮವನ್ನೂ ಅರ್ಥ ಮಾಡಿಕೊಳ್ಳದ ಮಾನ್ವಿ ಅದನ್ನು ಗದರಿ ಒಳಗೆ ಎತ್ತುಕೊಂಡು ಹೋಗಿ ಬೆಡ್ ಮೇಲೆ ಮಲಗಿದಳು. ಅದು ಅಲ್ಲಿಂದ ಪುಟಿದು ಕೆಳಗಿಳಿದು ಮತ್ತೆ ಯತಾರೀತಿ ಬೊಗಳತೊಡಗಿತು. ಇಡೀ ದಿನದ ಟೆನ್ಷನ್ ಮಧ್ಯೆ ಅದರ ಕೂಗಾಟ ಕೇಳಿ ತಲೆ ಸಿಡಿಯುವಂತಾಗಿ ಅದರ ಕಿವಿ ಹಿಡಿದು ಆಚೆಗಟ್ಟಿ ಬಾಗಿಲು ಜಡಿದು ಬಂದು ನೆಮ್ಮದಿಯಿಂದ ಹಾಸಿಗೆಗೊರಗಿದಳು.

ಬೆಡ್ ಏನೋ ಹೊಸ ಸುಗಂಧ ದ್ರವ್ಯದ ವಾಸನೆಯಿಂದ ಮನಸೆಳೆದಿತ್ತು. ಅದೇ ಮತ್ತಿನಲ್ಲಿ ಕೆಲವೇ ಸೆಕೆಂಡ್ ಗಳಲ್ಲಿ ನಿದ್ರಾದೇವಿಯ ಮಡಿಲಲ್ಲಿ ಕಣ್ಣು ಜಾರುತ್ತಿದ್ದವು. ಕ್ಷಣದಲ್ಲೇ ಕೈಗೆ ಸೊಳ್ಳೆ ಕಚ್ಚಿದಂತಾಗಿ ಟಕ್ಕನೇ ಎಚ್ಚರವಾಯಿತು. ಎಸಿ ಕೋಣೆ.. ಕ್ವಾಯಿಲ್ ಮಷಿನ್ ಆನ್ ಇತ್ತು. ತಣ್ಣನೆಯ ಗಾಳಿ ಮಧ್ಯೆ ಸೊಳ್ಳೆಗೆಲ್ಲಿಯ ಅವಕಾಶ!! ತಲೆ ತಡವಿ ಮತ್ತೆ ಹೊದ್ದು ಮಲಗಿದಳು. ಸಾಧ್ಯವಾಗಲಿಲ್ಲ. ಮೈಯ ತುಂಬೆಲ್ಲಾ ಸೊಳ್ಳೆಗಳು ಕಚ್ಚಿದ ಅನುಭವವಾದಂತಾಗಿ ಹೊದಿಕೆಯನ್ನು ಕಿತ್ತೆಸೆದು ಮೈ ಪರಚಿಕೊಳ್ಳಲು ಆರಂಭಿಸಿದಳು.

ಮೊದಲು ಕೈ, ಆಮೇಲೆ ಭುಜ, ಕತ್ತು, ಕಾಲು ಎಲ್ಲೆಡೆ ತುರಿಕೆ ಶುರುವಾಯಿತು. ಅವಳು ಗಾಬರಿಯಿಂದ ಧಗ್ಗನೇ ಎದ್ದು ಕುಳಿತಳು. ಸುತ್ತಲೂ ಒಂದು ಸೊಳ್ಳೆ ಇಲ್ಲ ಆದರೆ ತುರಿಕೆ ಮಾತ್ರ ನಿಲ್ಲುತ್ತಿಲ್ಲ. ಆಕೆಗೇನೋ ಅಪಶಂಕೆಯಾಯಿತು.  ಹಾಗೆ ಕೈ ಒಸರಿಕೊಳ್ಳುತ್ತ ಆಚೆ ಬಂದಳು. ಸ್ಟೋನಿ ಇನ್ನೂ ಬೊಗಳುತ್ತಲೇ ಇತ್ತು. ಪ್ರಸನ್ನ ಹಾಲಿನ ಗ್ಲಾಸ್ ಹಿಡಿದು ಅವಳಿಗಾಗಿಯೇ ಕಾಯುತ್ತಾ ರೂಂ ಎದುರು ಕತ್ತರಿಗಾಲಲ್ಲಿ ನಿಂತಿದ್ದ. ಅವಳು ಮೈ ಉಜ್ಜಿಕೊಳ್ಳುವದನ್ನು ನೋಡುತ್ತಿದ್ದಂತೆ ಗಹಗಹಿಸಿ ನಗಲಾರಂಭಿಸಿದ. "ಯುರೆಕಾ.... ಇಟ್ ವರ್ಕ್ಸ್‌!!" ಹಾಲಿನ ಗ್ಲಾಸ್ ಟ್ರೋಫಿಯಂಬಂತೆ ಗಾಳಿಯಲ್ಲಿ ಎತ್ತಿ ಕಿರುಚಿದ. ಅವನೆಡೆಗೆ ಕಣ್ಣು ಕಿರಿದಾಗಿಸಿ ಪ್ರಶ್ನಾತ್ಮಕ ನೋಟ ಬೀರಿದಳವಳು.

"ನನ್ನ ಜೂನಿಯರ್ ಮಾಡಿರೋ ಇನ್ವೆನ್ಷನ್! ಪರ್ಫ್ಯೂಮ್ ಸ್ಮೆಲ್ ಚೆನ್ನಾಗಿದೆ ಅಲ್ವಾ..?! ಆದ್ರೆ ಇದು ಸಾಮಾನ್ಯವಾಗಿ ಉಪಯೋಗಿಸುವ ಪರ್ಫ್ಯೂಮ್ ಅಲ್ಲ. ಒಂಟಿ ಹೆಣ್ಮಕ್ಳನ್ನ ಈ ರೋಡ್ ರೋಮಿಯೊಗಳು ಕಿರಿಕ್ ಮಾಡಿದಾಗ ಅವರ ಆತ್ಮರಕ್ಷಣೆಯ ಉದ್ದೇಶದಿಂದ ತಯಾರಿಸಿದ್ದು. ಫರ್ಸ್ಟ್ ಎಕ್ಸ್ಪೆರಿಮೆಂಟ್ ನಿನ್ನ ಮೇಲೇನೇ.. ಇಟ್ ವರ್ಕ್ಸ್ ಸೋ ಕ್ವಿಕ್ ಯಾ.. ನಂಬೋಕೆ ಆಗ್ತಿಲ್ಲ.." ಉತ್ಸಾಹದಿಂದ ಹೇಳಿದ.

"ಹೌ ಡೇರ್ ಯು... ಏನೂಂತ ಅನ್ಕೊಂಡಿದೀಯಾ ನನ್ನ? ಕುರಿ ಕೋತಿ ಮೇಕೆ ‌... ಯಾವುದೋ ಗೊತ್ತು ಗುರಿಯಿಲ್ಲದ ಕೆಮಿಕಲ್ ಪ್ರಾಡಕ್ಟ್ ನಾ ನನ್ನ ಮೇಲೆ ಪ್ರಯೋಗ ಮಾಡ್ತಿದಿಯಲ್ಲಾ.. ಮನುಷ್ಯತ್ವ ಇದೆಯಾ ನಿನಗೆ? ನನ್ನ ಸ್ಕಿನ್ಗೇನಾದ್ರೂ  ಆಗ್ಬೇಕು ಆಗಿದೆ ನಿನಗೆ...!!" ಹಲ್ಲುಕಚ್ಚಿ, ಕಠೋರ ಧ್ವನಿಯಲ್ಲಿ ಎಚ್ಚರಿಕೆ ನೀಡಿದಳು ಮೈ ಕೈ ಉಜ್ಜಿಕೊಳ್ಳುತ್ತ..

"ಆ ಮನುಷ್ಯತ್ವ ನಿನಗಿದ್ದಿದ್ರೆ ನಾನಿವತ್ತು ನಿನ್ನೆದುರಿಗೆ ಇರದೆ, ನನ್ನ ಪಾಡಿಗೆ ಆರಾಮಾಗಿರ್ತಿದ್ದೆ." ನಿರ್ಲಿಪ್ತನಾಗಿ ನುಡಿದು ತನ್ನ ಮೊಬೈಲ್ ನಲ್ಲಿ ಅವಳ ಕಪಿಯಂತ ನಾಟ್ಯವನ್ನು ರೆಕಾರ್ಡ್ ಮಾಡತೊಡಗಿದ.
"ಸೋಷಿಯಲ್ ಮೀಡಿಯಾಗೆ ಬಿಟ್ರೆ, ಒಳ್ಳೆಯ ಎಂಟರ್ಟೇನ್ಮೆಂಟ್..!!" ಮತ್ತೆ ನಕ್ಕ.

"ಏಯ್... ನನ್ನ ಜೊತೆಗೆ ಹುಡುಗಾಟ ಸರಿಯಲ್ಲ ತಿಳ್ಕೋ... ಪರಿಣಾಮ ತುಂಬಾ ಕೆಟ್ಟದಾಗಿರುತ್ತೆ" ಅವನ ಮೊಬೈಲ್ ಕಸಿದುಕೊಳ್ಳಲು ಎಗರಾಡಿದಳು. ಊಹ್ಮೂ ಅವನೆತ್ತರಕ್ಕೆ ಆಕೆ ಸಮವಾಗಲಿಲ್ಲ. ಬದಲಿಗೆ ಅವನ ಕೈಯಲ್ಲಿದ್ದ ಹಾಲಿನ ಗ್ಲಾಸ್ ಕೆಳಗೆ ಉರುಳಿ ಫಳ್ ಎಂದು ಒಡೆದು ಹಾಲೆಲ್ಲ ಕೆಳಚೆಲ್ಲಿತ್ತು.

"ಛೇ... ಬರ್ಗೆಟ್ಟವ್ಳೆ.. ನನ್ನ ಹಾಲು ನೆಲಕ್ಕೆ ಸಮರ್ಪಣೆ ಮಾಡ್ಬಿಟ್ಟಾ.." ಬೇಸರಿಸಿದ

" ಸ್ವಲ್ಪಾನೂ ಕುಡಿದಿರ್ಲಿಲ್ವಾ...?" ಕತ್ತು ಪರಚಿಕೊಳ್ಳುತ್ತ ಗೊಂದಲದಿ ಕೇಳಿದಳು.

"ನಿನ್ನ ಅವತಾರ ನೋಡಿದ ನಂತರ ಸೆಲಿಬ್ರೇಟ್ ಮಾಡ್ತಾ ಕುಡಿಯೋಣ ಅನ್ಕೊಂಡಿದ್ದೆ. ಅಷ್ಟರಲ್ಲಿ.. ಇದಿಯಲ್ಲಾ ನೀನು ಕಾಡುಬೆಕ್ಕು..." ಬೇಸರಿಸಿ ಕೋಪಿಸಿಕೊಂಡ. ಅವಳ ದಾಳ ನೆಲಕಚ್ಚಿತು. ಯಾವ ಜನ್ಮದ ಪುಣ್ಯವೋ ಪ್ರಸನ್ನನಿಗೆ ಆ ರಾತ್ರಿಯ ಉದರ ಜಾಗರಣೆ ತಪ್ಪಿತು. ಅವಳು ಮುಖಕಿವುಚಿ ಹಣೆ ಚಚ್ಚಿಕೊಂಡಳು.

"ಈಗ ಇದಕ್ಕೆ ಸೊಲ್ಯುಷನ್ ಏನು?" ಬೇಸತ್ತು ಸೋತು ಇನ್ನೂ ತುರಿಕೆಯ ರೋದನೆ ತಾಳದೆ ನೆಲಕ್ಕೆ ಪಟಪಟ ಕಾಲು ಬಡಿಯುತ್ತ ಕೇಳಿದಳು.

"ನನಗೇನ್ ಗೊತ್ತು... ನಿನ್ನ ಪ್ರಾರಬ್ಧ ಕರ್ಮ.. ಅನುಭವಿಸು. ನಂಗಂತೂ ಸಿಕ್ಕಾಪಟ್ಟೆ ನಿದ್ರೆ ಬರ್ತಿದೆ. ನಾನ್ ಹೊರಟೆ. ಗುಡ್ ನೈಟ್ ಮಾssನು.. ಸ್ವೀಟ್ ಡ್ರೀಮ್ಸ್.." ರಾಗವೆಳೆದು ಆಕಳಿಸುತ್ತ ಹೊರಟ. ಮತ್ತೆ ಏನೋ ನೆನಪಾದಂತೆ ಹಿಂದೆ ತಿರುಗಿ "ಹ್ಮಾ.. ಅಪ್ಪಿತಪ್ಪಿಯೂ ನೀರಲ್ಲಿ ಮಿಂದುಬಿಡಬೇಡ. ತುರಿಕೆ ಇನ್ನೂ ಹೆಚ್ಚಾಗುತ್ತಂತೆ. ಹುಷಾರು.." ಹಲ್ಕಿರಿದು ನಿರ್ಗಮಿಸಿದ.

ಮಾನ್ವಿ ಪಾಡು ಘನಘೋರ. ಪರಚಿಕೊಂಡ ಕಡೆಯಲ್ಲ ಕೆಂಪಾದ ಚರ್ಮ. ನಿಲ್ಲದ ಮೈಯುರಿ. ಎರಡು ಕೈ ಸಾಲದೆಂಬಂತಹ ವೇದನೆ. ಹುಚ್ಚು ಹಿಡಿವಂತಾಯಿತು. ಪ್ರಸನ್ನನ ಮಾತಿಗೆ ವ್ಯತಿರಿಕ್ತವಾಗಿ ನೀರಲ್ಲಿ ಸ್ನಾನ ಮಾಡಿದ್ದರೆ ಬಹುಶಃ ಅವಳ ಆ ರಾತ್ರಿಯ ಜಾಗರಣೆ ತಪ್ಪಿರುತ್ತಿತ್ತು..! ಆದರೆ ಆಕೆ ತಕ್ಷಣ  ಒಳ್ಳೆಯ ಡರ್ಮಟಾಲಜಿಸ್ಟ್‌ನ್ನು ಸಂಪರ್ಕಿಸಿ ಆ ಕೂಡಲೇ ಆಸ್ಪತ್ರೆಗೆ ಧಾವಿಸಿದಳು. ಇಡೀ ರಾತ್ರಿ ತನ್ನ ಆರೈಕೆಯಲ್ಲಿ ನಿದ್ರೆಗೆಟ್ಟು ಒದ್ದಾಡಿ ಹೋದಳು.

            ************

ಆ ಮುಂಜಾವಿನ ಮಂಜು ಮುಸುಕಿದ ಸೂರ್ಯನ ಹೊಂಗಿರಣಗಳು ಹರ್ಷನ ಮುಖಕ್ಕೆ ಚುಂಬಿಸುತ್ತಿದ್ದಂತೆ ಯಾರೋ ಕೂಗಿ ಕರೆದಂತೆ ಎದ್ದು ಕುಳಿತ ಹರ್ಷ. ಪ್ರತಿದಿನವೂ ಹೊಸತು ಉಡುಗೊರೆ.. ಹೊಸತು ನೆನಪಿನ ಮುಗುಳ್ನಗೆಯ, ಅವಳ ಪದಗಳ ಮೋಡಿಗೆ ಒಳಗಾಗಿದ್ದನಾತ. ಆ ಬೆಳಗಿನ ವಿಶೇಷ ಏನಿರಬಹುದೆಂಬ ಕಾತುರತೆ ಅವನ ಮೊಗದಲ್ಲಿ ಮಿನುಗುತ್ತಿತ್ತು. ಇನ್ನೇನಿದ್ದರೂ ಅವನ ನಿರೀಕ್ಷೆಗಳೆಲ್ಲ ಅವಳಿಗಾಗಿಯೇ... 

ಹಾಸಿಗೆಯಿಂದೆದ್ದು ಮೈ ಮುರಿದು, ಗೋಡೆಯ ಮೇಲಿನ ಏಂಜಲ್ ಬಿಂಬವನ್ನೊಮ್ಮೆ ಪ್ರೀತಿಯಿಂದ ಸವರಿ, ತೂಗುತ್ತಿದ್ದ ಬೆಲ್‌ಗಳನ್ನು ತಡವಿ ಬಾತರೂಂ ಹೊಕ್ಕ. ಅವುಗಳ ಗಳಗಳ ಶಬ್ದದ ಜೊತೆಗೆ ಹಿನ್ನೆಲೆಯಲ್ಲಿ ಮಂದವಾಗಿ ಹಳೆಯ ಹಾಡೊಂದು ಗುನುಗುತ್ತಲೇ ಇತ್ತು.

ಹಲ್ಲುಜ್ಜಿ ಮುಖ ತೊಳೆದು, ಜಾಗಿಂಗ್ ಸೂಟ್, ಸ್ಪೋರ್ಟ್ಸ್ ಶ್ಯೂಸ್ ಧರಿಸಿ ಸಿದ್ದನಾಗಿ ರೂಂ ನಿಂದ ಆಚೆ ಬಂದ.

ಬೆಳಗಿನ ಜಾವ ಏಳು ಗಂಟೆಗೂ ಮೊದಲೇ ಜಾಗಿಂಗ್ ಹೊರಡಲುನುವಾಗಿ ಬಂದ ಹರ್ಷನನ್ನು ಕಂಡು ಪ್ರಸನ್ನನಿಗೆ ಪರಮಾಶ್ಚರ್ಯ! ತಾನು ಈಗ ಅವನನ್ನು ಎಬ್ಬಿಸಲು ಬಂದಿದ್ದ. ಆದರೆ ಅಷ್ಟರೊಳಗೆ ತಯಾರಾಗಿ ನಿಂತಿದ್ದ ಹರ್ಷನನ್ನ ಕಂಡು ಕುತೂಹಲ ತಾಳದಾದ.

"ಏನಿದು? ಇಷ್ಟು ಬೇಗ ಎದ್ದು ಜಾಗಿಂಗ್ ಹೋಗುವ ಸಂಭ್ರಮ.." ಕೇಳಿಯೂ ಬಿಟ್ಟ.

"ಯಾಕೆ ಏನು ಅದೆಲ್ಲಾ ನನಗೂ ಗೊತ್ತಿಲ್ಲ. ಮನಸ್ಸಿಗೆ ತೋಚಿದ್ದನ್ನ ಮಾಡಿಬಿಡೋದು.. ಮನಸ್ಸಿಗೆ ಖುಷಿಯಾಗೋ ಜಾಗಕ್ಕೆ ಹೊರಟಬಿಡೋದು.." ಮೈಮುರಿಯುತ್ತ ನುಡಿದ.
" ಇವಾಗೇನೂ ನೀನು ನಡೆದುಕೊಂಡು ಬರ್ತಿಯೋ ಇಲ್ಲಾ ಎತ್ತಾಕೊಂಡು ಹೋಗಬೇಕೋ?" ಆಪ್ತವಾಗಿ ಗದರಿದ

"ಹ್ಮ.. ಐದು ನಿಮಿಷ. ಬಂದೆ ಇರು." ಕಣ್ಣುಜ್ಜುತ್ತ ಒಳ ಹೊರಟ ಪ್ರಸನ್ನನಿಗೆ ಒಂದೇ ದಿನದಲ್ಲಿ ಹರ್ಷನಲ್ಲಾದ ಬದಲಾವಣೆ ತುಂಬಾ ವಿಸ್ಮಯವನ್ನು ಉಂಟು ಮಾಡಿತ್ತು.

ಇಬ್ಬರೂ ಮಾತನಾಡುತ್ತಾ ಕೆಳಗೆ ಬಂದಾಗ ಸೋಫಾ ಮೇಲೆ ಬಾಯ್ತೆರೆದು ಬೊರಲು ಮಲಗಿದ್ದಳು ಮಾನ್ವಿ.
"ನಾನಿವಳನ್ನ ಮರೆತೇ ಬಿಟ್ಟಿದ್ದೆ." ಪ್ರಸನ್ನನ ಮುಖ ನೋಡಿ, ಹಣೆಗೆ ಬೆರಳಿಟ್ಟ ಹರ್ಷ..
"ಮಾನು.... ಎದ್ದೇಳು.. ಜಾಗಿಂಗ್ ಬರಲ್ವಾ.." ಅವಳ ಭುಜ ತಡವಿದ.

"ಬರಲ್ಲ ಕಣಲೋ.. ಏನೋ ಮಾಡ್ತಿಯಾ.... ನೀನೇನ್ ದೊಡ್ಡ ಅದಾ ಇದಾ... ನೀ ಕರೆದ ತಕ್ಷಣ ನಾನು ಓಡಿ ಬಂದ್ಬಿಡ್ತಿನಾ.. ಹೋಗೋಲೆ. ಈ ಸಲ ಖಂಡಿತ ಬರಲ್ಲ. ಅದೇನ್ ಮಾಡ್ತಿಯೋ ಮಾಡ್ಕೋ ಹೋಗ್.. ಯು ****...." ಇರುಳೆಲ್ಲ ಚರ್ಮದ ಆರೈಕೆ ಮಾಡಿ, ಆಗತಾನೇ ಮಲಗಿದ್ದವಳು, ನಿದ್ರೆ ಮಂಪರಿನಲ್ಲಿ ಕನವರಿಸುತ್ತ ಒಂದೆರಡು ಲೋಕಲ್ ನುಡಿಮುತ್ತುಗಳನ್ನು ಸರಾಗವಾಗಿ ಉದುರಿಸಿದ್ದಳು.

ಹರ್ಷನಿಗೆ ಹಿಂದೆಂದೂ ಕಂಡಿರದ ಮಾನ್ವಿಯ ವಿಚಿತ್ರ ಪ್ರಲಾಪ ಗೊಂದಲಕ್ಕೀಡು ಮಾಡಿತು. ಇದ್ದಕ್ಕಿದ್ದಂತೆ ಇವಳಿಗೇನಾಯ್ತು ಎಂದು ತೋರುಬೆರಳಿಂದ ಹಣೆ ಕೆರೆಯುತ್ತ ಯೋಚಿಸುತ್ತ ನಿಂತ.

ಕನಸು ಕನವರಿಕೆಯಲ್ಲೂ ತನ್ನನ್ನೇ ನೆನೆಯುವ ಅವಳ ಅಪೂರ್ವ ದ್ವೇಷದ ಪರಿಯ ಕಂಡು ಪ್ರಸನ್ನ ಹಸನ್ಮುಖನಾದ. ರಾತ್ರಿಯ ಕಾಟಕ್ಕೆ ಆಗ ಸಾರ್ಥಕತೆ ದೊರಕಿದ ಸಂತೋಷವದು.

"ಬ್ರೋ... ನಿನಗೆ ಚೂರು ಮರ್ಯಾದೆ ಕೊಡದಿರೋ ಈ ಹಿಡಂಬಿಯನ್ನ ಮದ್ವೆಯಾಗಿ ಜೀವನ ಪರ್ಯಂತ ಸಂಕಟ ಪಡೋ ಬದಲು, ಈಗಲೇ ಎಚ್ಚೆತ್ಕೋ... ಮನಸ್ಸು ಬದಲಾಯಿಸ್ಕೋ.. ಇವಳ ಜೊತೆ ಇಡೀ ಜೀವನ ಬಾಳಬಲ್ಲೆಯಾ ನೀನು?" ಅವನಿಗೆ ಪ್ರಹಾರ ಮಾಡಲು ಅಸ್ತ್ರಗಳೇ ಬೇಕಿರಲಿಲ್ಲ. ಮಾನ್ವಿಯ ಆಲಸ್ಯ, ಮುಂಗೋಪವೇ ಸಾಕಿತ್ತು.

ಹರ್ಷನದು ಇವೆಲ್ಲ ಮುಖ್ಯ ಅಲ್ಲವೇ ಅಲ್ಲ ಎಂಬ ಧೋರಣೆ. ಅದೇನೋ ಯೋಚನೆ.. ಎಲ್ಲಿಯೋ ಗಮನ.. ಪ್ರಸನ್ನನ ಮಾತಿಗೆ ಉತ್ತರವಿಲ್ಲ. ಅವನೇ ಮೈ ತಡವಿ ಎಚ್ಚರಿಸಿದ.

"ಅವಳಿಗೆ ಜೋರು ನಿದ್ರೆ. ಬಾ.. ನಾವಿಬ್ರೇ ಹೋಗಿ ಬರೋಣ." ಮರುಮಾತಿಗೂ ಅವಕಾಶ ಕೊಡದೆ ಹೊರನಡೆದ. ಪ್ರಸನ್ನ ಮೊಬೈಲ್ ಕೈಗೆತ್ತಿಕೊಂಡು ರಾತ್ರಿ ಪರಿ ಕಳಿಸಿದ ಮೆಸೇಜ್ ಮತ್ತೊಮ್ಮೆ ಓದಿದ. "ನಾಳೆ ಬೆಳಿಗ್ಗೆ. 7 ಗಂಟೆಗೆ ಬೀಚ್ ಜಾಗಿಂಗ್ ಸ್ಪಾಟ್"

                 ********

ಇಬ್ಬರ ಪಾಲಿಗೆ ಜಾಗಿಂಗ್ ಒಂದು ನೆಪಮಾತ್ರವಾಗಿತ್ತು. ಮನಸ್ಸು ಬೇರೆಲ್ಲೋ ವಿಹರಿಸುತ್ತಿತ್ತು. ನೇಮಕ್ಕೆ ಒಂದಷ್ಟು ಹೆಜ್ಜೆ ಓಡಿ ದಣಿದು ಮಂದಗತಿಯಲ್ಲಿ ಸಾಗಿದವು ಕಾಲುಗಳು. ಹಿಂದೆ ಬರುತ್ತಿದ್ದ ಸೆಕ್ಯೂರಿಟಿ ದಂಡು ಯತಾರೀತಿ ಬಾಲಂಗೋಚಿಯಂತೆ ಇದ್ದಿತು. ಇಬ್ಬರ ನೋಟ ಏನನ್ನೋ ಅರಸುತ್ತಿತ್ತು. ಪ್ರಸನ್ನ ಕಾಲ್ ನೆಪಮಾಡಿ ಅವನಿಂದ ದೂರಾಗಿ ಪರಿಯನ್ನು ಹುಡುಕಿದ.

ಅವನ ಹೊರತು ಮುಂದೆ ಸಾಗುತ್ತಿದ್ದ ಹರ್ಷನ ಕಣ್ಣು ಮಿನುಗಿದವು. ಜಾಗಿಂಗ್ ಬಂದದ್ದು ವ್ಯರ್ಥವಾಗಲಿಲ್ಲವೆನಿಸಿತು.

ಅಲ್ಲಿ ನಿನ್ನೆ ಕಂಡ ಮಕ್ಕಳನ್ನು ಕಂಡು ಅವನ ಮನದಲ್ಲಿ ಏನೋ ಉತ್ಸಾಹ ಪುಟಿದೆದ್ದಿತು. ಅಖಿಲಾ ನಿಖಿಲ್ ಅಲೆಗಳೊಂದಿಗೆ ಆಟವಾಡುತ್ತಿದ್ದರು. ರಭಸದಿ ಬಂದು ಹೋಗುವ ಅಲೆಗಳನ್ನು ಕಾಲಡಿ ಮುಟ್ಟಿ ಓಡಿ ದೂರ ಸರಿಯುವ ಜೂಟಾಟ.. ಪ್ರತಿಬಾರಿ ಅಲೆಗಳಿಂದ ಸೋತಾಗ ಅಖಿಲಾ ಜೋರಾಗಿ ಕೂಗಿ ಕೇಕೆಹಾಕಿ ಕೈಕೈ ತಟ್ಟಿ ನಗುತ್ತಿದ್ದಳು. ನಿಖಿಲ್ ಅವಳ ನಗುವನ್ನೇ ತಾನು ಕದಿಯುತ್ತಿದ್ದ. ಅದರಲ್ಲಿ ಪಾಲುಗಾರನಾಗಿದ್ದ.

ಹರ್ಷ ಅವರಿಗೆ ಇನ್ನೂ ಸನಿಹವಾಗಿ ಅವರಾಟ ನೋಡತೊಡಗಿದ.
ಕಡಲ ತೀರದ ಮರಳ ರಾಶಿಯಲ್ಲಿ ಇಬ್ಬರೂ ಏನೋ ಗೀಚುತ್ತಿದ್ದರು. ತುಂಬಿದ ಜನಸಂದಣಿಯಲ್ಲೂ ಹರ್ಷ ಅವರಿಬ್ಬರನ್ನೇ ಗಮನಿಸುತ್ತಿದ್ದ. ಆಕೆ 'ಹರ್ಷ' ಎಂದು ಬರೆದಿದ್ದರೆ ಆತ 'ಏಂಜಲ್' ಎಂದು ಗೀಚಿದ್ದ. ಆ ಹೆಸರುಗಳಲ್ಲಿ ಅವನ ನೈಜ ಅಸ್ತಿತ್ವದ ಅನಾವರಣವಾಯಿತು. ಆ ಸೂಕ್ಷ್ಮ ಅವನ ಮನಸ್ಸಿಗೂ ತಾಕಿತ್ತು. ಹೆಸರುಗಳು ತುಂಬಾ ಆಪ್ತವೆನಿಸಿದವು. ಪದೇ ಪದೇ ಅದೇ ಮಾರ್ದನಿಸತೊಡಗಿತು. ಅಷ್ಟರಲ್ಲಿ ಅಲೆಗಳು ಧಾವಿಸಿ ಬಂದು ಹೆಸರುಗಳನ್ನು ಕದ್ದುಕೊಂಡು ತಮ್ಮೊಂದಿಗೆ ಸೆಳೆದು ಹೋದವು. ಇಬ್ಬರೂ ಹೋ... ಎಂದರಚಿದರು. ಹರ್ಷನ ಮೊಗದಲ್ಲೊಂದು ಸುಪ್ತ ಮುಗುಳ್ನಗು..

ಸ್ವಲ್ಪ ದೂರದಲ್ಲಿ ಕಾರಿನಲ್ಲಿ ಕುಳಿತು ಸ್ಪಷ್ಟವಾಗಿ ಕಾಣಿಸುತ್ತಿದ್ದ ಇವರ ಆಟವನ್ನು ಹರ್ಷನ ಮುಖಭಾವದಲ್ಲಿ ಉಂಟಾಗುವ ಬದಲಾವಣೆಗಳನ್ನು ತೀಕ್ಷ್ಣವಾಗಿ ಗಮನಿಸುತ್ತಿದ್ದಳು ಪರಿ. ಅಲ್ಲಿಯವರೆಗೂ ಅವಳಲ್ಲಿ ಮನೆ ಮಾಡಿದ್ದ ಆತಂಕ ಹರ್ಷನ ಮುಗುಳ್ನಗುವನ್ನು ಕಂಡು ಶಮನವಾಗಿತ್ತು. ಮಂದವಾದ ನಿಟ್ಟುಸಿರು ಸೂಸಿದಳು. ಪ್ರಸನ್ನ ಕೂಡ ಅಲ್ಲಿ ಬಂದ. ಡ್ರೈವಿಂಗ್ ಸೀಟ್ ಪಕ್ಕದಲ್ಲಿ ಕುಳಿತು ಹರ್ಷನನ್ನ ನೋಡಿದ.
"ಪರಿ, ನಮ್ಮ ಪ್ರಯತ್ನ ಸಾಲದು ಅನ್ನಿಸ್ತಿದೆ. ಇನ್ನೂ ಬೇಗ ಏನಾದ್ರೂ ಮಾಡಲೇಬೇಕು." ಅವಳು ಅವಲೋಕಿಸಿದಳು.

"ಈಗ ಹೇಗಿದೆ ಹರ್ಷನ ವರ್ತನೆ? ಏನಾದ್ರೂ ಇಂಪ್ರೂವ್ಮೆಂಟ್?"

"ಮಚ್ ಬೆಟರ್. ಕೋಪ ಸ್ವಲ್ಪ ಕಡಿಮೆಯಾಗಿದೆ. ನಗ್‌ನಗ್ತಾ ಮಾತಾಡ್ತಾನೆ. ತನ್ನ ಭಾವನೆಗಳ ಮೇಲೆ ತುಂಬಾ ಕಂಟ್ರೋಲ್‌ ಇದೆ.. ಆದರೆ ಪೂರ್ತಿಯಾಗಿ ಒಪನ್‌ ಅಪ್ ಆಗ್ತಿಲ್ಲ. ಅದೇ  ಸಮಸ್ಯೆ.."

"ಮಾನ್ವಿ ಹೇಗಿದ್ದಾಳೆ?" ಆಪ್ತ ಗೆಳತಿಯ ಪ್ರಸ್ತುತ ಪರದಾಟ ತಿಳಿದರೆ ಮುಂದಿನ ಮಾತೇ ಬದಲಾಗುತ್ತಿತ್ತು. ಆದರೆ ಪ್ರಸನ್ನ ಏನೂ ಹೇಳದೆ ದುರುದುರು ನೋಡಿ ಸುಮ್ಮನಾದ. 'ಅವಳು ಹೇಗಿದ್ರೇ ನಿಮಗೇನು..' ಎಂಬ ಭಾವವದು. ಪರಿ ತಲೆ ಜಾಡಿಸಿದಳು.

"ನೋಡಿ ಪ್ರಸನ್ನ, ಹರ್ಷನ್ನ ಕ್ಯೂರ್ ಮಾಡುವುದರ ಜೊತೆಗೆ ಮಾನ್ವಿಯ ಮನಸ್ಸನ್ನು ಪರಿವರ್ತಿಸೋ ಪ್ರಯತ್ನ ಮಾಡಿ. ಅದು ಬಿಟ್ಟು ದ್ವೇಷ ಸಾಧಿಸುತ್ತ ಕುಳಿತರೆ ಇಲ್ಲಿ ಯಾರಿಗೂ ಒಳ್ಳೆಯದಲ್ಲ."

" ನಿಜ‌. ನಾನು ಅದೇ ಕಾರ್ಯದಲ್ಲಿ ಮಗ್ನನಾಗಿದ್ದಿನಿ. ವಾಪಸ್ ಹೋಗುವಷ್ಟರಲ್ಲಿ ಮಾನು ಜನ್ಮ ಜಾಲಾಡೋದೆ... ಐ ಮೀನ್ ಅವಳನ್ನ ಪರಿವರ್ತಿಸೋದೆ!"  ಅವನು ತಲೆಯಾಡಿಸಿ ನುಡಿದ. ಬಾಯಲ್ಲಿ ಅಗಿಯುತ್ತಿದ್ದ ಚಿಂಗಮ್‌ನಿಂದ ಬಬಲ್ ಊದಿ ಡಮ್ ಎನಿಸಿದ. ಅವನ ವರ್ತನೆ ಆಕೆಗೆ ಹೊಸತಲ್ಲ. ಮಕ್ಕಳು, ಹರ್ಷನ ಕಡೆಗೆ ನೋಟ ಕೇಂದ್ರೀಕರಿಸಿದಳು. ಅದರೊಂದಿಗೆ ಸಾಕಷ್ಟು ಹೊಸ ಪ್ರಯತ್ನಗಳು ಆಗುಹೋಗುಗಳ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು.

**********

ಆಟ ಮುಗಿಸಿ ಇಬ್ಬರೂ ದಡಕ್ಕೆ ಬಂದಾಗ ಅಖಿಲಾ ಬೂಟ್ ಹಾಕಿಕೊಳ್ಳಲಾಗದೆ ಜೂಜಾಡುತ್ತಿದ್ದಳು. ಕಡೆಗೆ ನಿಖಿಲ್ ತಾನೇ ಬಗ್ಗಿ ಮಂಡಿಯೂರಿ ಕುಳಿತು ಅವಳಿಗೆ ಶೂ ತೊಡಿಸಿ ಲೇಸ್ ಕಟ್ಟ ತೊಡಗಿದ. ಅಲ್ಲಿಯವರೆಗೂ ಒಂಟಿಗಾಲಲ್ಲಿ ನಿಂತು ಅವನ ಕೂದಲನ್ನೇ ಆಸರೆಯಾಗಿ ಹಿಡಿದು ಜಗ್ಗಾಡಿದಳವಳು. ಅವನು ಆ್ಮ... ಎಂದು ಕಿರುಚಿ ರೇಗಿದ. ಅವಳು ನಕ್ಕು ಕೂದಲು ಸಡಿಲಿಸಿದಳು.

ಬೂಟ್ ಧರಿಸಿದ  ಅಖಿಲಾ ಓಡಿಹೋಗುತ್ತಿರುವಾಗ ಎಡವಿ ಬಿದ್ದಳು. ಅವಳ ಹಿಂದೆಯೇ ಓಡಿ ಬಂದ ನಿಖಿಲ್ ಅವಳನ್ನ ಎಬ್ಬಿಸಿ ನಿಲ್ಲಿಸಿದರೂ ಅವಳ ಕಾಲು ನೋವು ವಾಸಿಯಾಗಲಿಲ್ಲ. ಆಕೆಗೆ ನಡೆಯಲಾಗಲಿಲ್ಲ. ಅವಳ ಮುಖ ಬಾಡಿಹೋಯಿತು. ತಕ್ಷಣ ನಿಖಿಲ್ ಅವಳನ್ನ ತನ್ನ ಬೆನ್ನಮೇಲೆ ಹೊತ್ತುಕೊಂಡ.
"ಹೇಯ್.... ಐಮ್ ಆನ್ ಟಾಪ್ ಆಫ್ ದಿ ವರ್ಲ್ಡ್ ನೌ..."ಅಖಿಲಾ ಚೀರಿದಳು

"ಅಯ್ಯೋ ಗೂಬೆ...  ನೀನು ನನ್ನ ಮೇಲೆ ಕೂತಿದಿಯಾ, ಏನೋ ಭಾರಿ ಜಗತ್ತೇ ಗೆದ್ದಹಾಗೆ ಖುಷಿ ಪಡ್ತಿದಿಯಲ್ಲ"

"ಹೌದು ಮತ್ತೆ ಜಗತ್ತನ್ನೇ ಗೆದ್ದ ಹಾಗೆ ಯಾಕಂದ್ರೆ ನೀನೇ ತಾನೇ ನನ್ನ ಜಗತ್ತು.." ಮುದ್ದಾಗಿ ಅವನ ಕಿವಿ ಹಿಂಡಿ ಕೆಳಗಿಳಿದು ಓಡಿದಳು. ಅವಳ ಕಾಲು ನೋವಿನ ಕುಂಟುನೆಪ, ತುಂಟಾಟಕ್ಕೆ ಹುಸಿಮುನಿದು ಒಳಗೊಳಗೇ ಅವನು ಮುಗುಳ್ನಕ್ಕ.

ಹರ್ಷನ ಸಂತೋಷಕ್ಕೆ ಪಾರವೇ ಇರಲಿಲ್ಲ. ವಿಚಿತ್ರ ಸಂವೇದನೆಯೊಂದು ಆಂತರ್ಯವನ್ನು ಕಲಕಿ ಕೂಗಿ ಕೂಗಿ ಸಾರುತ್ತಿತ್ತು.. ಅವಳು ನನ್ನವಳು.. ನನ್ನೊಲವು.. ಅವಳು ಇಲ್ಲಿಯೇ ಎಲ್ಲೋ ಇರಬಹುದು.. ಸುತ್ತ ಮುತ್ತಿದ ಜನಸಾಗರದ ಮಧ್ಯೆಯೂ ಅವನು ಅವಳ ಧ್ಯಾನದಲ್ಲಿ ಮುಳುಗಿದ. ಅವಳ ಒಂದು ಕಿರುನೋಟಕ್ಕಾಗಿ ಹಾತೊರೆದ. ಆದರೆ ಪಾಲಿಗೆ ದಕ್ಕಿದ್ದು ನೆನಪುಗಳ ಪುಳಕ ಮಾತ್ರ..

ಅಖಿಲಾ ದಡದಲ್ಲಿ ಮರಳಿನ ಗೂಡು ಕಟ್ಟುವ ಕಾರ್ಯದಲ್ಲಿರುವಾಗ ನಿಖಿಲ್ ಕೈಯಲ್ಲೊಂದು ಮಡಚಿದ ಕೊಡೆಯನ್ನು ಹಿಡಿದು ತಂದು ನಿಂತಿದ್ದ. ಅವಳು ಕತ್ತೆತ್ತಿ ಮೇಲೆ ನೋಡಿ "ಮಳೆ ಬರ್ತಿಲ್ವಲ್ಲ. ಕೊಡೆ ಯಾಕೆ?" ಎನ್ನಲು, ಆತ ಮಡಿಚಿದ ಕೊಡೆಯನ್ನು ಸಡಲಿಸಿದ. ಹೂವಿನಂತೆ ಅರಳಿದ ಕೊಡೆಯಿಂದ ರಾಶಿ ರಾಶಿ ಚಾಕೊಲೇಟ್ಸ್ ಅವಳ ಮೇಲೆ ಮಳೆಯಂತೆ ಸುರಿದವು. ಅಪಾದಮಸ್ತಕ ಅವಳಿಷ್ಟದ ಚಾಕಲೇಟ್‌ಗಳಿಂದ ಅಭಿಷೇಕವಾದಂತಾಯಿತು. ಅವಳಿಗೆ ಆಶ್ಚರ್ಯದೊಂದಿಗೆ ತಾಳಲಾರದಷ್ಟು ಅಪರಿಮಿತ ಸಂತೋಷ.. ಕೇಕೇ ಹಾಕಿ ಕೂಗಿದಳು. ಮತ್ತರೆಗಳಿಗೆ ಚೂರು ಭಾವುಕಳಾದಳು..

"ನೀನು ಯಾವತ್ತೂ ನನ್ನ ಜೊತೆಗೆ ಇರ್ತಿಯಲ್ವಾ? ನನ್ನ ಬಿಟ್ಟು ಎಲ್ಲೂ ಹೋಗಲ್ಲ ತಾನೇ?" ಸಂತಸದ ಮಧ್ಯೆ ಗಂಭೀರವಾಗಿ ಕೇಳಿದಳು
"ಪ್ರಾಮಿಸ್ ಮಾಡು.. ನನ್ನನ್ನು ಯಾವತ್ತೂ ಒಂಟಿಯಾಗಿ ಬಿಡೊಲ್ಲಂತ"

"ನೆವರ್‌... ನಿನ್ನ ಬಿಟ್ಟು ನಾನೆಲ್ಲೂ ಹೋಗೋಕೆ ಸಾಧ್ಯಾನೇ ಇಲ್ಲ." ಅವಳ ಕೈಯಲ್ಲಿ ಕೈಯಿಟ್ಟು ಭದ್ರವಾಗಿ ಹಿಡಿದುಕೊಂಡ.
" ಯಾಕಂದ್ರೆ ನೀ ನನ್ನ ಏಂಜಲ್ ಕಣೇ.. ತಾತ ಹೇಳೋ ಕತೆಯಲ್ಲಿ ರಾಜನ ಪ್ರಾಣ ಅವನು ಸಾಕಿರೋ ಗಿಳಿಯಲ್ಲಿ ಇರೋ, ಹಾಗೆ ನನ್ನ ಜೀವ ನಿನ್ನೊಳಗೆ ಬಚ್ಚಿಟ್ಟಿದೀನಿ ಗೊತ್ತಾ... ಷ್... ಈ ಸೀಕ್ರೆಟ್ ಯಾರಿಗೂ ಹೇಳ್ಬೇಡ" ಬಾಯಿ ಮೇಲೆ ಬೆರಳಿಟ್ಟು ಮೆಲ್ಲಗೆ ನುಡಿದ. ಅವನ ಕೊನೆಯ ನುಡಿಗೆ ಆಕೆ ಹೂ ನಕ್ಷತ್ರ ಸಿಡಿದು ಚದುರುವಂತೆ ಮುದ್ದಾಗಿ ನಕ್ಕು ಬಿಟ್ಟಳು. ಅವನೂ ನಕ್ಕ.

ನೋಡುತ್ತಿದ್ದ ಹರ್ಷನ ಕಂಗಳಲ್ಲಿಯೂ ಸಂಭ್ರಮದ ಕ್ಷಣ ಆವರಿಸಿತು. ಮೊದಲ ಬಾರಿಯ ಬೆರಳ ಸ್ಪರ್ಶ, ನಗು-ಅಳು, ಕೊಟ್ಟ ಮಾತು, ತರಲೆ ತಕರಾರು, ಕೂಡಿ ಕಳೆದ ಕ್ಷಣಗಳು, ಸಮೃದ್ಧ ಕುಟುಂಬದ ಚಿತ್ರಣ ಮನದಲ್ಲಿ ಹಾದುಹೋಯಿತು. ತನ್ನ ಪ್ರತಿ ಉಸಿರನ್ನು ಅವಳ ಸಂತಸಕ್ಕಾಗಿಯೇ ಮುಡಿಪಾಗಿಟ್ಟ ಜೀವವದು.. ಅವಳನ್ನ ಮರೆತು ಬಾಳುವ ಬದುಕಿಗೆ ಆ ಉಸೀರೇ ಭಾರವಾದಂತಾಗಿತ್ತು.. ಈಗೀಗ ನೆನಹುಗಳ ವ್ಯಾಪ್ತಿಯಲ್ಲಿ ಉಸಿರ ಹಾರಾಟಕ್ಕೆ ಮುಕ್ತ ಬಿಡುಗಡೆ ಸಿಕ್ಕಿತ್ತು.. ಶೂ ಬಿಟ್ಟ ತಣ್ಣನೆಯ ಅಲೆಗಳಲ್ಲಿ ತಲ್ಲೀನನಾದ. ಕಡಲು ಭೋರ್ಗರೆಯುತ್ತಿತ್ತು. ಅವನ ಮನದ ಕಡಲೂ ಸಹ.. ಆಳವನ್ನು ಅಳೆಯಲು ಮಾತ್ರ ಯಾರಿಗೂ ಸಾಧ್ಯವಿಲ್ಲ.

ಪ್ರತಿಬಾರಿ ಮನದ ಕದವ ತಟ್ಟಿ ರಗಳೆ ಎಬ್ಬಿಸುವ ತುಂಟ ನೆನಪುಗಳೇ ಒಮ್ಮೆಗೆ ದೋಚಿಬಿಡಬಾರದೇ ನನ್ನ ಹೃದಯವನ್ನು..!! ಮತ್ತವಳ ನಗುವಲ್ಲಿ ಅನುರಾಗಿಯಾಬೇಕಿದೆ.. ಮತ್ತದೇ ಭಾವಾಂತರಂಗದಲ್ಲಿ ಮುಳುಗಿ ಏಳಬೇಕಿದೆ‌‌.. ಮತ್ತೊಮ್ಮೆ ಒಲವಿನ ರಸಪಾಕದ ಸವಿಯ ಸವಿಯಬೇಕಿದೆ.. ಮತ್ತೆಲ್ಲೋ ಅವಳ ಗುಣಗಾನದಲ್ಲಿ ನಾನೇ ಕಳೆದು ಹೋಗಬೇಕಿದೆ.. ಮತ್ತೆಲ್ಲೂ ಸಿಗದ ನೆಮ್ಮದಿಯ ನೀಡುಸಿರ ಅವಳ ಬಾಹುಬಂಧನದಿ ಜೀವಿಸಬೇಕಿದೆ..' ಅವನ ಮನ ಚಡಪಡಿಸಿತು. ಮಕ್ಕಳಿಗಾಗಿ ಸುತ್ತ ನೋಡಿದ. ಇವನು ಭಾವಲೋಕದಲ್ಲಿ ತೇಲುವಾಗ ಅವರು ಚಾಕ್ಲೇಟ್ಸ್ ಸಮೇತ ಕಾರು ಹತ್ತಿ ಹೊರಟಾಗಿತ್ತು

ಹೇಗಾದರೂ ಮಾಡಿ ಆ ಮಕ್ಕಳನ್ನು ಒಮ್ಮೆ ಮಾತನಾಡಿಸಬೇಕು ಎಂಬ ಹಂಬಲ ಆ ಕ್ಷಣ ಅವನಲ್ಲಿ ಮೂಡಿತು.

********

ಹರ್ಷ ಪ್ರಸನ್ನ ಮನೆಗೆ ಬಂದರೂ ಮಾನ್ವಿಗಿನ್ನೂ ಬೆಳಗಾಗಿರಲಿಲ್ಲ. ಹರ್ಷ ಸ್ನಾನಕ್ಕೆ ಹೋದ. ಪ್ರಸನ್ನ ಅವಳ ಬಳಿಯೇ ಕೂತು ನಿದ್ರೆ ಹಾಳು ಮಾಡುವ ಹುನ್ನಾರದಲ್ಲಿದ್ದ. ಕಿವಿಗೆ ಗರಿಕೆ ಹಾಕಿ ಕಚಗುಳಿಸುವುದು, ಬಿಸಿ ಕಾಫಿ ತಾಕಿಸುವುದು.. ನೀರು ಚಿಮುಕಿಸುವುದು.. ಆದರೆ ಇಂತಹ ಸಣ್ಣಪುಟ್ಟ ಟ್ರಿಕ್‌ಗಳಿಂದ ಅವಳು ವಿಚಲಿತಳಾಗಲಿಲ್ಲ.

ಮುಚ್ಚಿದ ಮೃದು ಕಂಗಳು, ಚೆಂದುಟಿ, ಪುಟ್ಟ ಮೂಗು, ಮುಂಜಾವಿನ ತಂಗಾಳಿಗೆ ತೂರಾಡುತ್ತಿದ್ದ ರೇಷ್ಮೆ ಕೂದಲು,ಮಲಗಿದ್ದ ಮಾನ್ವಿ ಪುಟ್ಟ ಮಗುವಿನ ಹಾಗೆ ಕಂಡಳು. ಇನ್ನೂ ಅವಳನ್ನ ಗೋಳಾಡಿಸುವ ಮನಸ್ಸಾಗದೇ ಪ್ರಸನ್ನ ನ್ಯೂಸ್ ಪೇಪರ್ ಓದುತ್ತಾ ಅವಳು ಏಳುವದನ್ನು ಕಾಯುತ್ತ ಕುಳಿತ.

ಅಹೋರಾತ್ರಿ ನಿದ್ರೆಗೆಟ್ಟ ಮಾನ್ವಿ, ಪಕ್ಕದಲ್ಲೇ ಕುರುಕ್ಷೇತ್ರ ಯುದ್ಧ ನಡೆದರೂ ಎಚ್ಚರಗೊಳ್ಳದಂತೆ ಗಾಢವಾಗಿ ಮಲಗಿದ್ದಳು. ಹೊರಗಿನಿಂದ ಓಡಿ ಬಂದ ಡೇವಿಡ್ ಕೂಗಲೋ ಬೇಡವೋ ಎಂದು ಅರೆಕ್ಷಣ ಯೋಚಿಸಿದ. ಏಕೆಂದರೆ ಪ್ರಸನ್ನ ಹರ್ಷ ಜಾಗಿಂಗ್ ಹೋದ ವಿಷಯ ತಿಳಿಸಲು ಅವಳನ್ನು ಎಬ್ಬಿಸುವ ಪ್ರಯತ್ನದಲ್ಲಿ ಅದಾಗಲೇ ಎರಡು ಬಾರಿ ಕಪಾಳಮೋಕ್ಷ ಮಾಡಿಸಿಕೊಂಡಿದ್ದ. ಆದರೆ ಹೇಳಲಾಗಿರಲಿಲ್ಲ.

ಆದರೆ ಈಗ ನಿರವಾಹವಿಲ್ಲವೆಂದು ಮತ್ತೆ ಒಂದೇ ಸಮನೆ ಮ್ಯಾಮ್..ಮ್ಯಾಮ್... ಎಂದು ಕರ್ಕಶವಾಗಿ ಕಿರುಚಿ ಅರಚಿ, ಕುರ್ಚಿ ಮೇಜು ಅಲ್ಲಾಡಿಸಿ ಸದ್ದು ಮಾಡಿ ಅವಳನ್ನ ಎಬ್ಬಿಸಿದ. ಅವನನ್ನು ತನ್ನದೇ ಭಾಷೆಯಲ್ಲಿ ಸಹಸ್ರಾರ್ಚನೆ ಮಾಡುತ್ತ ಮಲಗಿದ್ದಲ್ಲೇ ಹೊದಿಕೆ, ಕಣ್ತೆರೆದು, ಏನು? ಎಂದು ಅವನ ಮುಸುಡಿ ದುರುಗುಟ್ಟಿದಳು. ಪೇಪರ್ ಮರೆಯಲ್ಲಿ ಪ್ರಸನ್ನ ನಗುತ್ತಿದ್ದ.

"ಹೊರಗೆ ಯಾರೋ ಹುಡುಗ ಬಂದಿದ್ದಾನೆ. ಸಂಕಲ್ಪ್ ಸರ್‌ನಾ ಕೇಳುತ್ತಿದ್ದಾನೆ" ಹಿಂದಿಯಲ್ಲಿ ನುಡಿದ. ಮಾನ್ವಿ ನಿದ್ರೆ ಮಂಪರು ಸುಯ್ಯನೇ ಮಾಯವಾಗಿ ಧಡಕ್ಕನೇ ಎದ್ದು ನಿಂತು ಚೇತನಗೊಂಡಳು. ಪ್ರಸನ್ನ ಕೂಡ ಕೌತುಕದಿಂದ ಎದ್ದು ನಿಂತ. ಹೊರಬಂದು ನೋಡಿದರು.

ಕೈಯಲ್ಲಿ ಕವರ್ ಹಿಡಿದು ನಿಂತಿದ್ದ ಯುವಕನನ್ನು ನೋಡಿ ಯಾರೆಂದು ಕೇಳಿದಳು ಮಾನ್ವಿ.

"ಮೇಡಂ, ನಾನು ಪ್ಯಾರಡೈಸ್ ಹೌಸ್ ನಿಂದ ಬಂದೀದಿನಿ. ನಿನ್ನೆ ಸರ್, ಅವರ ಫ್ರೆಂಡ್ ಮದುವೆ ಸಿಸಿ ಫೊಟೆಜ್‌ಗೋಸ್ಕರ ಅಂತ ಬಂದಿದ್ರು. ಇದರಲ್ಲಿ ಆ ದಿನದ ಕಂಪ್ಲೀಟ್ ಕವರೇಜ್ ಇದೆ. ಇದನ್ನೇ ಕೊಟ್ಟು ಹೋಗೋಕೆ ಬಂದಿದ್ದೆ. ಸಂಕಲ್ಪ್ ಸರ್ ಇಲ್ವಾ‌.." ಹಿಂದಿಯಲ್ಲಿ ಕೇಳಿದ.

"ಯಾವ ಫ್ರೆಂಡ್? ಯಾರ ಮದುವೆ?" ಗಲಿಬಿಲಿಗೊಂಡು ಕೇಳಿದಳು. ಹುಡುಗ ಹೆಸರು ವಿಳಾಸ ದಿನಾಂಕ ಸಮೇತ ಹೇಳಿದ. ಆಕೆಯ ಗಂಟಲು ಒಣಗಿತು. ಹುಡುಗನ ಕೈಯಿಂದ ಕವರ್ ತೆಗೆದುಕೊಂಡು ಆತನನ್ನು ಕಳಿಸಿಬಿಟ್ಟಳು. ಕವರ್ ಬಿಡಿಸಿ ಸಿಡಿ ಹೊರತೆಗೆದಳು.

ಎರಡು ದಿನದ ಹಿಂದೆ ನಡೆದ ಮದುವೆಯ ಸಿಸಿ ಫೊಟೆಜ್. ಆ ಮದುವೆಗೆ ಬಂದ ಪರಿ ಕೂಡ ಅದರ ಒಂದು ಭಾಗ. ಅದು ಹರ್ಷನ ಕೈಗೆ ಸಿಗುವ ಮುನ್ನ ಇವಳ ಕೈಸೇರಿತ್ತು.

'ಅಂದ್ರೆ ಹರ್ಷ ನಿನ್ನೆ ಆಫೀಸ್‌ನಿಂದ ಏಕಾಏಕಿ ಮಾಯವಾಗಿದ್ದು, ಪ್ಯಾರಡೈಸ್ ಹಾಲ್‌ಗೆ... ಪರಿ ಅಲ್ಲಿಗೆ ಬಂದಿರುವ ಸುಳಿವು ಅವನಿಗಿತ್ತಾ? ಈ ಪಿಶಾಚಿ ಏನೋ ಲೆಕ್ಕಾಚಾರ ಹಾಕ್ತಿದೆ! ಮೊದಲು ಈ ಸಿಡಿ ಅವನಿಗೆ ಸೇರೋ ಹಾಗೆ ಮಾಡ್ಬೇಕು.' ಪ್ರಸನ್ನ ಅವಳ ಕೈಯಿಂದ ಅದನ್ನು ಕಿತ್ತುಕೊಳ್ಳಲು ಹೋದ. ಆಕೆ ಸಿಟ್ಟಿನಿಂದ ಅದನ್ನು ದೂರ ಎಸೆದಳು. ಸಿಡಿ ಬೂಮರ್ಯಾಂಗ್‌ನಂತೆ ಹಾರಿ ಗಾರ್ಡನ್ನಿನ ಹುಲ್ಲು ಹಾಸಿನ ಮೇಲೆ ಬಿದ್ದಿತು.

"ಎಸೆದು ಬಿಟ್ರೆ, ಮಾಡಿರೋ ಮೋಸ ಮುಚ್ಚಿ ಹೋಗುತ್ತಾ.. ತಗೊಂಡು ಬರೋಕೆ ಎಷ್ಟೋತ್ತು..." ಎಂದು ಹಮ್ಮಿನಿಂದ ಅತ್ತ ಹೊರಟಿದ್ದ. ಅವನಿಗಿಂತ ಮುಂಚಿತವಾಗಿ ಓಡಿ ಹೋದ ಸ್ಟೋನಿ ಒಡತಿಯ ಕಟ್ಟಾ ಆಜ್ಞಾ ಪರಿಪಾಲಕನಂತೆ ಸಿಡಿಯನ್ನು ಕಾಲಿನುಗುರಿಂದ ಕೆದರಿ ಉಜ್ಜಿ ಬಾಯಲ್ಲಿ ಕಚ್ಚಿ ಹಿಡಿದು ತಂದು ಮಾನ್ವಿಗೆ ಕೊಟ್ಟಿತು. ಅವಳು ನಿಶ್ಚಿಂತಳಾಗಿ ಉಸಿರು ಬಿಟ್ಟಳು.

ಪ್ರಸನ್ನ ಏಯೇಯ್.. ಎನ್ನುವಷ್ಟರಲ್ಲಿ ನಡೆದ ಅಚಾತುರ್ಯದಿ ಒಂದು ಗುರುತು ನಾಶವಾಗಿ ಹೋಗಿತ್ತು. ವಿಕೆಟ್ ಮಿಸ್ ಆದ ಫೀಲ್ಡರ್ ನಂತೆ ಎರಡು ಕೈಗಳನ್ನ ತಲೆ ಹಿಂದೆ ಕಟ್ಟಿ ಬೇಸರಿಸಿಕೊಂಡ.

ಆ ಸಿಡಿಯನ್ನು ಯತಾರೀತಿ ಕವರ್‌ನೊಳಗೆ ಹಾಕಿ ಹರ್ಷನಿಗೆ ಕೊಡುವಂತೆ ಡೇವಿಡ್ ಕೈಗೆ ಕೊಟ್ಟು ಕಳಿಸಿದಳು. ಪ್ರಸನ್ನನ ಕಡೆಗೊಮ್ಮೆ ಚೂಪುನೋಟ ಬೀರಿ ತುಟಿ ಕೊಂಕಿಸಿ ನಕ್ಕು ಒಳಹೋದಳು.

ಸದ್ಯದಲ್ಲೇ ಹರ್ಷ ಪರಿಯನ್ನು ಕಾಣಬಹುದಾದ ಅವಕಾಶ, ಕೂದಲೆಳೆ ಅಂತರದಲ್ಲಿ ತಪ್ಪಿ ಹೋಗಿತ್ತು. ಪ್ರಸನ್ನನಿಗೆ ಆ ಬೇಸರದಲ್ಲಿಯೂ ಗೆಲುವಿನ ನಗುವೊಂದು ಮೂಡಿತು. ತಾವು ಯಾರೂ ಊಹಿಸದ, ಕಲ್ಪಿಸದ ರೀತಿಯಲ್ಲಿ ಹರ್ಷ ಅವಳಿಗಾಗಿ ಹುಡುಕುತ್ತಿದ್ದಾನೆ. ಅವಳನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾನೆ ಎಂದಾಯಿತು. ತಾನು ಅವನ ಪ್ರಯತ್ನಕ್ಕೆ ಪುಷ್ಟಿ ಕೊಡಬೇಕು. ಚುಮುಚುಮು ಮಂಜಿನ ಚಳಿಯಲ್ಲಿ ಪ್ರಸನ್ನ ಎರಡು ಕೈ ಬಿಸಿಯಾಗಿ ಉಜ್ಜುತ್ತ ಒಳನಡೆದ.


ಮುಂದುವರೆಯುವುದು..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...