ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-35


ಪ್ರಸನ್ನನ ಮೇಲೆ ಮುಯ್ಯಿಗೆ ಹೊಂಚು ಹಾಕುತ್ತಿದ್ದ ಮಾನ್ವಿಯ ಯೋಚನೆ ಈಗ ಹರ್ಷನ ಕಡೆಗೆ ವಾಲಿತು. ನಿದ್ರೆ ಮಂಪರು ಹೇಳು ಹೆಸರಿಲ್ಲದೆ ಮಾಯವಾಗಿತ್ತು. ಗಂಭೀರವಾಗಿ ತಲೆಗೆ ಕೈ ಹೊತ್ತು ಕುಳಿತು ಗಹನವಾದ ಯೋಚನೆಯಲ್ಲಿ ಕಳವಳಗೊಂಡಿದ್ದಳು.

ಒಳಬಂದ ಪ್ರಸನ್ನ ಅವಳನ್ನ ಓರೆನೋಟದಲ್ಲಿ ಗಮನಿಸಿ ತನ್ನ ರೂಮಿಗೆ ಹೋಗಿದ್ದ. ಮತ್ತೆರಡು ನಿಮಿಷಗಳಲ್ಲೇ ಡೇವಿಡ್ ಮತ್ತೆ ಕಿರುಚುತ್ತ ಬಂದ. ಅವಳ ಎದೆ ಕಂಪಿಸಿದಂತಾಗಿ ಅವನ ಕಪಾಳಕ್ಕೊಂದು ಬಾರಿಸಿ, 'ಏನು? ' ಎಂದು ಗುಡುಗಿದಳು.

"ಪಾರ್ಸಲ್ ಬಂದಿದೆ. ಸಂಕಲ್ಪ್ ಸರ್‌ಗೆ..." ತಲೆ ತಗ್ಗಿಸಿ ಹೇಳಿದ. ಹುಬ್ಬು ಗಂಟಿಕ್ಕಿಕೊಂಡೆ ಹೊರಬಂದು ನೋಡಿದಳು. ಚೌಕಾಕಾರದ ಗಿಫ್ಟ್ ಪಾರ್ಸಲ್ ಹಿಡಿದುಕೊಂಡು ನಿಂತಿದ್ದ ಹುಡುಗ. 'ಸಂಕಲ್ಪ್ ಸರ್...?' ಕೇಳಿದ. ಆಕೆ ಡೇವಿಡ್ ಮುಖ ದುರುಗುಟ್ಟಿದಳು.

" ಡಿಕ್ಟೇಟರ್ ಮೂಲಕ ಚೆಕ್ ಮಾಡಿಯೇ ಒಳಗೆ ಕಳಿಸಿದ್ದು. ನಥಿಂಗ್ ಹಾರ್ಮ್ ಫುಲ್ ಮ್ಯಾಮ್" ಅವಳ ಆತಂಕವನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದ ಡೇವಿಡ್ ಸಮಜಾಯಿಷಿ ನೀಡಿದ್ದ. ತಲೆ ಸಿಡಿದು ಹೋಗಿತ್ತು ಅವಳದು.

"ಹಿ ಇಸ್ ಬ್ಯುಜಿ.." ಎಂದು ತಾನೇ ಸಹಿ ಮಾಡಿ ಅದನ್ನು ರಿಸೀವ್ ಮಾಡಿದಳು. ಕೊರಿಯರ್ ಹುಡುಗ  ಅದನ್ನು ಮೆತ್ತಗೆ ಎತ್ತಿಕೊಂಡು ಬಂದು ಹಾಲ್ ಮಧ್ಯದ ಟೀಪಾಯಿ ಮೇಲಿರಿಸಿ ಹೊರಟು ಹೋದ. ಅದರೊಂದಿಗೆ ಇದ್ದ ಲೆಟರ್ ಫ್ಲಿಪ್‌ನ್ನು ಕೈಗೆತ್ತಿಕೊಂಡು ತೆರೆದು ಓದುವಷ್ಟರಲ್ಲಿ  'ಸಂಕಲ್ಪ್ ಸರ್ ಮೆಟ್ಟಿಲಿಳಿದು ಬರುತ್ತಿದ್ದಾರೆಂದು' ಡೇವಿಡ್ ಎಚ್ಚರಿಸಿದ. ಕೂಡಲೇ ಲೆಟರ್‌ನ್ನು ತನ್ನ ಜಾಕೆಟ್‌ನ ಕಿಸೆಯೊಳಗೆ ತುರಕಿ ಕೈ ಹಿಂದೆ ಕಟ್ಟಿ ನಿಂತಳು

ಕೆಳಗಿಳಿದು ಬರುತ್ತಿದ್ದ ಹರ್ಷನ ಮುಖ ಕಳವಳ ಹಾಗೂ ಅಪೂರ್ಣ ಗೊಂದಲಗಳಿಂದ ಭರ್ತಿಯಾಗಿ ಸಿಡುಕುಗೊಂಡಿತ್ತು.
ಅವನು ಯಾವುದೋ ಉದ್ದೇಶದಿಂದ ಬಯಸಿದ್ದ ಸಿಸಿಟಿವಿ ಫೊಟೆಜ್, ಸ್ಟ್ರಕ್ ಆಗಿ ಅವನ ಯೋಜನೆ ತಲೆಕೆಳಗಾಗಿದ್ದಕ್ಕೆ ಅವನಿಗೆ ಬೇಸರವಾಗಿರಬಹುದೆಂದು ಊಹಿಸಿದಳು ಮಾನ್ವಿ. ಮತ್ತೆ ಆ ವಿಷಯವನ್ನು ಕೆಣಕುವ ದುಸ್ಸಾಹಸ ಮಾಡಲಿಲ್ಲ. ಹುಬ್ಬು ಕಿರಿದಾಗಿಸಿ ಮುಖ ಬಿಗಿದುಕೊಂಡೇ ಕೆಳಗೆ ಬಂದ ಹರ್ಷನ ಎದುರಿಗೆ ಚೌಕಾಕಾರದ ಗಿಫ್ಟ್ ಬಾಕ್ಸ್ ರಾರಾಜಿಸುತ್ತಿತ್ತು.

"ಮಾನು.... ವಾಟ್ ಇಸ್ ದಿಸ್?" ತನ್ನ ಬೇಸರವನ್ನು ತೋರ್ಪಡಿಸಿಕೊಳ್ಳದೆ ಕೇಳಿದ.

"ನಿನಗೋಸ್ಕರ... ಸರ್ಪ್ರೈಜ್...  ತೆರೆದು ನೋಡು..." ಮುಖದ ತುಂಬಾ ನಗುವರಳಿಸಿ ನುಡಿದಳು. ಆದರೆ ಒಳಗೆ ಏನಿದೆಯೋ ಎಂಬ ಆತಂಕ ಮನದಲ್ಲಿ ಭುಸುಗುಡುತ್ತಲೇ ಇತ್ತು.

ಹರ್ಷ ಮೆಲ್ಲಗೆ ಗಿಫ್ಟ್ ಬಾಕ್ಸ್‌ನ್ನು ಸವರಿ ಮೇಲಿನ ಮಿಂಚುಪಟ್ಟಿ, ತೆಳು ಹಾಳೆಯನ್ನು ಬಿಡಿಸಿ ತೆರೆಯತೊಡಗಿದ. ಅದರ ಪ್ರತಿ ಸ್ಪರ್ಶದಲ್ಲೂ ವಿಶೇಷ ಅನುಭೂತಿಯನ್ನು ಭವಿಸಿದ. ಅದು ಅವನ ಮನದೊಳಗೆ ನಿಕ್ಷಿಪ್ತವಾಗಿತ್ತು. ತೆರೆದ ಬಾಕ್ಸ್ ಒಳಗೆ ಗಾಜಿನ ಅಕ್ವೇರಿಯಂ ಫಳಫಳಿಸಿತು. ಅದರೊಳಗೆ ಶ್ವೇತಸ್ವರ್ಣ ಮಿಶ್ರ ವರ್ಣದ ಎರಡು ಜೋಡಿ ಗೋಲ್ಡ್ ಫಿಶ್ ಗಳು ಮುದ್ದಾಗಿ ನೀರಲ್ಲಿ ಈಜಾಡುತ್ತಿದ್ದವು. ಅದನ್ನು ನೋಡುತ್ತಿದ್ದ ಹರ್ಷನ ಕಂಗಳು ಮಂತ್ರಮುಗ್ಧ. ಕ್ಷಣದಲ್ಲೇ ಅವನ ಮುಖದಲ್ಲಿ ಉತ್ಸಾಹ ಚಿಮ್ಮಿತ್ತು. ಮಾನ್ವಿ ಕಕ್ಕಾಬಿಕ್ಕಿಯಾದರೂ ಅದನ್ನು ತೋರ್ಗೊಡದೆ ಮಂದಹಾಸ ಬೀರಿದಳು

ಎರಡೂ ಮುದ್ದು ಮೀನುಗಳು ಒಂದನ್ನೊಂದು ಅನುನಯಿಸಿ ಅನುರಾಗದಿ ತೇಲಾಡುತ್ತ ಸಂಧಿಸುತ್ತಿರುವಾಗ ಅದನ್ನೇ ಕಣ್ಣೆವೆಯಿಕ್ಕದೆ ಹರ್ಷ ನೋಡುತ್ತ ಮೈಮರೆತಿದ್ದ.

'ಮೀನಿನ ನೆನಪು ಮೂರು ಸೆಕೆಂಡ್ ಮಾತ್ರವಂತೆ! ಆಮೇಲೆ ನನ್ನ ಮರೆತು ಬಿಡ್ತಿಯಾ?
ಒಳ್ಳೆದಲ್ವಾ.. ಮೂರು ಸೆಕೆಂಡಿಗೊಮ್ಮೆ ನಿನ್ನೆ ಹೊಸದಾಗಿ ಪ್ರೀತಿಸ್ತಿನಿ ಅದೇ ಪ್ರೀತಿ ಹೊಸ ರೀತಿ!
ಮೂರು ಸೆಕೆಂಡ್ ಅಲ್ಲ ಮಿಲಿಸೆಕೆಂಡ್ ನೆನಪಲ್ಲೂ ನಾನು ಪ್ರೀತಿಸೋದು ನಿನ್ನನ್ನೇ.. ನಿನ್ನನ್ನು ಮಾತ್ರ....' ಮನಸ್ಸಿನಲ್ಲಿ ನೆನಪುಗಳ ತುಕಡಿಗಳು ಒಂದೊಂದಾಗಿ ಮರುಜೋಡಣೆಯಾಗುತ್ತಲಿದ್ದವು. ಮಾತಿಗೆ ನಿಲುಕದ ವ್ಯಾಪ್ತಿಯದು. ವಿವರಣೆಗೆ ಅರ್ಥವಾಗದ ದೃಗ್ಗೋಚರ ಮಸುಕು ನೆನಹು..

ಅವನ ಆ ಸ್ತಬ್ಧ ಮೌನವನ್ನು ತನ್ನ ಅವನತಿಯಂತೆ ಭಾವಿಸಿದ ಮಾನ್ವಿ ತಕ್ಷಣ ಒಂದು ಥರ್ಮಾಕೋಲ್ ತುಂಡನ್ನು ಎರಡು ಮೀನುಗಳ ಮಧ್ಯೆ ಗೋಡೆಯಂತೆ ಅಡ್ಡವಿರಿಸಿ ಎರಡನ್ನೂ ಅಗಲಿಸಿದಳು. ಅಲ್ಲಿವರೆಗೂ ಬಾಹ್ಯ ಪ್ರಪಂಚಕ್ಕೂ ತನಗೂ ಸಂಬಂಧವಿರದಂತೆ ನಿಂತಿದ್ದ ಹರ್ಷ ಅವಳನ್ನೇ ನುಂಗುವಂತೆ ನೋಡಿದ.
"ಎರಡೂ ತುಂಬಾ ಕಿತ್ತಾಡ್ತಾ ಇದ್ದವು ಅದ್ಕೆ..." ತನ್ನದೇಯಾದ ಹೇಳಿಕೆ ನೀಡಿದಳು.

"ಅವು ಕಿತ್ತಾಡ್ತಾ ಇಲ್ಲ. ತಮ್ಮ ಮನಸ್ಸಿನ ಪಿಸುಮಾತುಗಳನ್ನು ವಿನಿಮಯಿಸುತ್ತಿವೆ. ಅದು ಅವೆರಡಕ್ಕೂ ಮಾತ್ರ ಅರ್ಥವಾಗುವಂತಹ ಭಾಷೆ" ಹೇಳುತ್ತ ಅವಳಿಟ್ಟ ಅಡ್ಡಗೋಡೆಯನ್ನು ಕಿತ್ತೆಸೆದ. ಹೊಳೆವ ಕಂಗಳ ಮೀನುಗಳೆರಡು ಬಾಯಿ ಲೊಚಗುಡುತ್ತ ಮತ್ತೆ ಗುಟ್ಟು ಹಂಚಿಕೊಳ್ಳತೊಡಗಿದವು. ಅವಳು ಅವನೆಡೆಗೆ ಅವಾಕ್ಕಾಗಿ ನೋಡಿದಳು.

"ಬೈ ದಿ ವೇ,, ವೇರಿ  ಬ್ಯೂಟಿಫುಲ್ ಗಿಫ್ಟ್ ಮಾನು.. ಥ್ಯಾಂಕ್ಯೂ" ಮುಗುಳ್ನಕ್ಕ. "ಇವತ್ತು ಲೆಟರ್ ಇಲ್ವಾ..?" ಕುತೂಹಲದಿ ಕೇಳಿದ

"ಅದೂ.. ಅದೂ.... ನೀ ಕೇಳಿದಾಗ ಕೊಟ್ಟರೆ ಅದು ಸರ್ಪ್ರೈಜ್ ಹೇಗಾಗುತ್ತೆ? ಸಿಗೋ ಟೈಮ್ ಗೆ ಸಿಗುತ್ತೆ ಬಿಡು." ನಿರ್ಲಿಪ್ತವಾಗಿ ನುಡಿದಳು. ಹರ್ಷ ಆ ಅಕ್ವೇರಿಯಂನ್ನು ತನ್ನ ಕೋಣೆಗೆ ತೆಗೆದುಕೊಂಡು ಹೋಗುವಂತೆ ಡೆವಿಡ್ ಗೆ ಆಜ್ಞಾಪಿಸಿದ.

ಹರ್ಷ ಆಫೀಸ್ ಹೊರಡಲು ಸಜ್ಜಾಗಿ, ತಿಂಡಿ ತಿನ್ನಲು ಡೈನಿಂಗ್ ಟೇಬಲ್ ಎದುರಿಗೆ ಕುಳಿತಿದ್ದ. ಮಾನ್ವಿ ಸ್ನಾನಕ್ಕೆ ಹೋಗಬೇಕು ಎಂದುಕೊಂಡವಳು, ಪ್ರಸನ್ನ ಸ್ನಾನ ಮುಗಿಸಿ ಸಿದ್ದವಾಗಿ ಬರುವುದನ್ನು ಕಂಡು 'ಇನ್ನೇನು ಯಡವಟ್ಟು ಮಾಡುವನೋ' ಎಂದುಕೊಂಡು ತಾನು ಒಂದು ಕುರ್ಚಿ ಎಳೆದುಕೊಂಡು ಅಲ್ಲಿಯೇ ಕುಳಿತು ಜಾನಕಮ್ಮಗೆ ಒಂದು ಕಪ್ ಬಿಸಿ ಕಾಫಿ ತರಲು ಹೇಳಿದಳು.

ಯಾವುದೋ ಹಳೆಯ ಹಾಡನ್ನು ಗುನುಗುತ್ತ, ಶಿಳ್ಳೆ ಹೊಡೆಯುತ್ತ ಮೆಟ್ಟಿಲ ಸರಳಿನ ಉದ್ದಕ್ಕೂ ಜಾರುಬಂಡೆಯಂತೆ ಜಾರಿ, ನೆಗೆದು, ಪುಟಿಪುಟಿದು ಕೆಳಗಿಳಿದು ಬಂದ ಪ್ರಸನ್ನ ಟೇಬಲ್ ಎದುರಿಗೆ ಕುಳಿತು ಟೇಬಲ್‌ನ್ನು ತಮಟೆಯಂತೆ ಬಾರಿಸುತ್ತ "ಮಾತೃಶ್ರೀ... ಏನಿದೆ ತಿನ್ನೋಕೆ?" ಕೂಗಿದ
'ಬಾಲ ಒಂದೇ ಕಡಿಮೆ ಇವನಿಗೆ' ಮಾನ್ವಿ ಗೊಣಗಿಕೊಂಡಳು.
ಹರ್ಷನಿಗೆ ತನ್ನದೇ ವ್ಯಕ್ತಿತ್ವದ ಪ್ರತಿರೂಪ ಎದುರಾದಂತೆ ಭಾಸವಾಯಿತು. ತಾನು ಹೀಗೆ ಇದ್ದೆನಲ್ಲವೆ ಎಂದು ಅನ್ನಿಸಿತ್ತಾದರೂ ಅದಕ್ಕೆ ಸ್ಪಷ್ಟತೆ ಇರಲಿಲ್ಲ. ಆದರೆ ಅವನ ಪ್ರತಿ ಹಾವಭಾವಗಳನ್ನು ಚಲನೆಯನ್ನು ಗಮನವಿಟ್ಟು ನೋಡಿದ. ತನಗೆ ತಿಳಿಯದಂತೆ ಅನುಕರಿಸಲಾರಂಭಿಸಿದ. ಅವನ ಎಡಗೈ ತನ್ನಷ್ಟಕ್ಕೆ ತಾನೇ ತಾಳ ಹಾಕುತ್ತಿತ್ತು.

"ಅಯ್ಯೋ.. ಮರ್ತೇಬಿಟ್ಟಿದ್ದೆ. ಇದು ಮುಂಬೈಯಲ್ವಾ..  ಮನೇಲೇ ಇರೋ ತರಾ ಫೀಲಿಂಗ್ ನನಗೆ.." ಮಾತಿಗೆ ತೇಪೆ ಹಚ್ಚಿ ತಟ್ಟೆ ಎಳೆದುಕೊಂಡ. "ಹೌದು...ಅದೇನದು ಅಕ್ವೇರಿಯಂ?" ಡೇವಿಡ್ ತೆಗೆದುಕೊಂಡು ಹೊರಟಿದ್ದನ್ನು ನೋಡಿ ಕೇಳಿದ.

"ಮಾನು ಗಿಫ್ಟ್ ಮಾಡಿದ್ದು ನನಗೆ.." ತಿಂಡಿ ತಿನ್ನುತ್ತಿದ್ದ ಹರ್ಷ ಉತ್ತರಿಸಿದ

"ನೆಟ್ಟಗೆ ಮರ್ಯಾದೆ ಕೊಡೊದು ಗೊತ್ತಿಲ್ಲ, ಇವಳ ಮೂತಿಗೆ ಗಿಫ್ಟ್ ಬೇರೆ ಕೇಡು" ವ್ಯಂಗ್ಯವಾಗಿ ನುಡಿದ.

"ಕಾಯ್ತಿರ್ತಿಯ ಅಲ್ವಾ ಏನಾದ್ರೂ ಹಂಗಿಸೋಕೆ.. ನನಗೆ ಏನಾದ್ರೂ ಚೇಡಿಸ್ದೆ ಇದ್ರೆ ತಿಂದನ್ನ ಅರಗಲ್ವಾ ನಿನಗೆ? ಯಾವ ಅನಿಷ್ಟ ಘಳಿಗೆ ಸಿಕ್ಕೇಯೋ ನೀ ನನಗೆ... ಬದುಕೇ ಸರ್ವನಾಶ ಆಗೋಗಿದೆ" ರಾತ್ರಿಯ ಮೈಯುರಿ, ನಿದ್ರಾಹೀನತೆ ಆವೇಶವಾಗಿ ಹೊರ ಹೊಮ್ಮಿತು.

"ನನಗೆ ಮರ್ಯಾದೆ ಕೊಡದಿದ್ರೂ ಪರವಾಗಿಲ್ಲ...  ಕಟ್ಕೊಳ್ಳೊ ಗಂಡನಿಗಾದ್ರೂ ಮರ್ಯಾದೆ ಕೊಡೋದನ್ನ ಕಲಿತ್ಕೊ ಮೊದಲು.. ಆಮೇಲೆ ಮದುವೆ ಆಗುವಿಯಂತೆ"

"ಅವನಿಗೆ ಅವಮಾನ ಆಗುವಂತದ್ದು ನಾನೇನು ಮಾಡಿಲ್ಲ ಒಕೆ. ಇನ್ಫ್ಯಾಕ್ಟ್ ಐ ಲವ್ ಹಿಮ್ ಸೋ ಮಚ್" ಮುಖ ತಿರುಗಿಸಿದಳು

"ಥೂ.. ನಿನ್ ಲವ್‌ಗಿಷ್ಟು ಬೆಂಕಿ ಹಾಕಾ..... ಬೆಳ್ಳಂಬೆಳಿಗ್ಗೆ ನೀ ಮಾಡಿದ ಗುಣಗಾನ ಕೇಳಿ ಕಿವಿಗಳು ಪಾವನವಾದವು. ಅಂತಹ ಕರ್ಣ ಕಠೋರ ಮಂತ್ರಗಳನ್ನ ಪಠಿಸಿ, ಈಗ ಲವ್ ಅಂತೆ ಲವ್ವು..." ಎರಡು ಕೆನ್ನೆ ತಟ್ಟಿಕೊಳ್ಳುವಂತೆ ನಟಿಸಿದ. ಮಾನ್ವಿ ಕಣ್ಣು ಕಿರಿದಾಗಿಸಿ ಏನಂದಿದ್ದೆ ಎಂದು ಜ್ಞಾಪಿಸಿಕೊಳ್ಳಲು ಯತ್ನಿಸಿ ವಿಫಲಳಾದಳು.
"ನಿಜವಾಗಿಯೂ ಅವನ ಮೇಲೆ ಪ್ರೀತಿ ಇದ್ರೆ ಬರೀ ಗಿಫ್ಟ್ ಕೊಡೊದಲ್ಲ, ಅವನ ಶ್ರೇಯಸ್ಸಿಗೋಸ್ಕರ ಏನಾದ್ರೂ ಮಾಡ್ಬೇಕು.." ಅವಳನ್ನ ಉದ್ರೇಕಿಸಿದ.

"ಏನ್ ಮಾಡ್ಬೇಕು.. ಸಂಕುಗೆ ಒಳ್ಳೆದಾಗುತ್ತಂದ್ರೆ ನಾನು ಏನು ಮಾಡೊಕು ರೆಡಿ. ಹೇಳು.. ಏನ್ ಮಾಡ್ಬೇಕು" ಅವನನ್ನೇ ನೋಡುತ್ತ ಗಟ್ಟಿಯಾಗಿ ನಿಶ್ಚಲವಾಗಿ ನುಡಿದಳು.

"ಮಾನು... ಜಸ್ಟ್ ಕಾಮ್ ಡೌನ್. ನನಗಾಗಿ ನೀನು ಏನು ಮಾಡುವ ಅಗತ್ಯವಿಲ್ಲ." ಹರ್ಷ ಅಲ್ಲಗಳೆದರೂ ಮಾನ್ವಿ ಕೇಳಲಿಲ್ಲ. ಅವನನ್ನೇ ಗದರಿ ಸುಮ್ಮನಾಗಿಸಿ
"ಹೇಳು.. ನನ್ನ ಪ್ರೀತಿನಾ ನಿರೂಪಿಸೋಕೆ ಏನ್ ಮಾಡ್ಬೇಕು ನಾನು" ಧ್ವನಿ ಏರಿಸಿದಳು

"ಸರಿ ಹಾಗಿದ್ರೆ ಅವನಿಗೊಸ್ಕರ  ದೇವರೆದುರು ಹರಕೆ ಕಟ್ಕೋ.. ಆ ಪ್ರಕಾರ ದಿನ ಒಂದೊಂದು ವ್ರತ ಮಾಡು.. ಉಪವಾಸ ಉರುಳುಸೇವೆ, ಆ ಸೇವೆ ಈ ಸೇವೆ..  ಹೀಗೆ ಮಾಡೋದ್ರಿಂದ, ದೇವರ ಕೃಪೆ ಸಿಕ್ಕು ಅವನ ನೆನಪು ಮರುಕಳಿಸುತ್ತೇನೋ ನೋಡೋಣ.
ಇವತ್ತು ಇಡೀ ದಿನ, ಅಂದ್ರೆ ಈಗಿನಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ಏನೂ ತಿನ್ನದೇ, ಒಂದು ಹನಿ ನೀರು ಸಹ ಬಾಯಿಗೆ ಹಾಕದೆ ನೀರಾಹಾರ ಮಾಡ್ಬೇಕು.. ನಿನಗೆ ಆಗುತ್ತಾ" ತಣ್ಣಗೆ ನುಡಿದ ಪ್ರಸನ್ನ ಅವಳೆಡೆ ಓರೆನೋಟ ಬೀರಿದ. ಹರ್ಷ 'ಊಪ್ಸ್' ಎಂದು ಪಾಪದ ಮುಖ ಮಾಡಿ ಹುಬ್ಬೆರಿಸಿದ.

ಮಾನ್ವಿ ತನ್ನ ಕಾಲ ಮೇಲೆ ತಾನೇ ಚಪ್ಪಡಿಕಲ್ಲು ಹಾಕಿಕೊಂಡ ಶಾಕ್‌ನಲ್ಲಿ ಊರಗಲ ಕಣ್ಣು ಅಗಲಿಸಿದಳು. ಇಡೀ ದಿನ ಉಪವಾಸ! ನಿನ್ನೆಯಿಂದ ಸರಿಯಾಗಿ ಊಟವಿಲ್ಲ. ಈಗಲೇ ಹೊಟ್ಟೆ ಚುರುಗುಟ್ಟುತ್ತಿದೆ. ನನ್ನ ಕೈಲಾಗಲ್ಲ!' ಮನಸ್ಸು ಉಲಿಯಿತು‌.

 ಮುಂದೆ ಕುಳಿತ ಹರ್ಷನ ಮನಸ್ಸಿಗೆ ಸಂಶಯ ಬಾರದಂತೆ ನೋಡಿಕೊಳ್ಳಲು ಅವನೆದುರು "ಸರಿ. ಈ ಕ್ಷಣದಿಂದ ನಾನು ಏನನ್ನೂ ಸೇವಿಸುವುದಿಲ್ಲ. ರಾತ್ರಿವರೆಗೂ ನನ್ನ ಉಪವಾಸ ಜಾರಿಯಲ್ಲಿರುತ್ತೆ" ಎಂದು ಎರಡು ಕೈ ಟೇಬಲ್ ಮೇಲೆ ಬಡಿದು ಘಂಟಾ ಘೋಷಣೆ ಮಾಡಿದಳು.

ಅಷ್ಟರಲ್ಲಿ ಜಾನಕಮ್ಮ ತಂದಿಟ್ಟ ಬಿಸಿ ಕಾಫಿಯನ್ನು ಕಂಡು ಅವಳ ನಾಲಿಗೆ ಹಪಹಪಿಸಿತು. 'ಇದೊಮ್ಮೆ ಒಂದೇ ಒಂದು ಸಲ ಕುಡಿದು ಬಿಡಲಾ' ಮನಸ್ಸು ಮರುಗಿತು. ತಕ್ಷಣ ಅವಳೆದುರಿನ ಕಾಫಿ ಕಪ್ ಎತ್ತಿಕೊಂಡ  ಪ್ರಸನ್ನ ಸೊರ್ರ್.. ಎಂದು ಬಾಯಿ ಚಪ್ಪರಿಸಿದ.
"ಸರಿ ಹಾಗಿದ್ರೆ.. ನಿನ್ನ ಪ್ರೇಮ ಪರೀಕ್ಷೆ ಈ ಕ್ಷಣದಿಂದ ಆರಂಭವಾಗಲಿ. ಬೆಸ್ಟ್ ಆಫ್ ಲಕ್.." ತೃಪ್ತನಾಗಿ ನುಡಿದು ತಟ್ಟೆಯಲ್ಲಿನ ಪೂರಿಯನ್ನು ತುಂಡರಿಸಿ ಸಾಗುವಿನೊಡನೆ ಅದ್ದಿ ಬಾಯಿಗಿಡುತ್ತ ಆಸ್ವಾದಿಸಿದ.

ಮಾನ್ವಿ ಸ್ಥಿತಿ ಅಯೋಮಯ.. ತಿನ್ನುವ ಅವಕಾಶ ತಪ್ಪಿದಾಗಲೇ ಹಸಿವು ಮತ್ತಷ್ಟು ಉಲ್ಬಣಗೊಂಡು ಹೊಟ್ಟೆ ತಾಳ ತಂಬೂರಿ ಮೀಟಿತು.. ಅವಳ ಹೊಟ್ಟೆ ಉರಿಸಲೆಂದು ಮುದ್ದಾಮು ರುಚಿಯನ್ನು ಹೊಗಳುತ್ತ ನಾಲಿಗೆ ಚಪ್ಪರಿಸಿ ತಿನ್ನತೊಡಗಿದ. ಸ್ಟೋನಿ ತನ್ನ ನಾಲಿಗೆ ಹೊರಚಾಚಿ ಅವನೆಡೆಗೆ ಗುರಾಯಿಸಿತು. ಮಾನ್ವಿಯ ನೋಟವೂ ಅದಕ್ಕಿಂತ ಭಿನ್ನವಾಗಿರಲಿಲ್ಲ.

ಹರ್ಷನಿಗೆ ಇವನ ಚೇಷ್ಟೆಗಳು ಮಾನ್ವಿಯ ಮೊಂಡುತನ, ಅವಳ ಪರಿಪಾಟಲು ಕಂಡು ನಗು ತಾಳಲಾರದೆ ಆಫೀಸ್ ನೆಪವೊಡ್ಡಿ ಅಲ್ಲಿಂದ ಎದ್ದು ನಡೆದ. ಪ್ರಸನ್ನ ತಾನು ಅವನೊಡನೆ ಹೋಗಲು ಅಪೇಕ್ಷಿಸಿದ. ಆದರೆ ಹರ್ಷ
"ಕೆಲಸದ ಮಧ್ಯೆ ನಿನ್ನ ಜೊತೆಗೆ ಮಾತಾಡಲಾಗದು. ನಿನಗೂ ಬೇಸರವಾಗಬಹುದು. ನೀನು ಮಾನ್ವಿ ಜೊತೆಗೆ ಆಸ್ಪತ್ರೆಗೆ ಹೋಗಿರು. ಸಂಜೆ ಮತ್ತೆ ಸಿಗೋಣ" ಎಂದು ಪ್ರೇರೆಪಿಸಿದ. ಹೆಚ್ಚಿನ ಒತ್ತಡ ಹಾಕಲು ಪ್ರಸನ್ನನಿಗೂ ಸರಿಯೆನಿಸಲಿಲ್ಲ. ಸುಮ್ಮನಾದ.

ಹರ್ಷ ಹೋದ ನಂತರ ಮಾನ್ವಿಯನ್ನು ಹದ್ದಿನ ಕಣ್ಣಿನಿಂದ ಕಾಯತೊಡಗಿದ ಪ್ರಸನ್ನ. ಅವಳು ಕದ್ದು ಮುಚ್ಚಿ ತಿನ್ನಲು ಮಾಡಿದ ಪ್ರಯತ್ನಗಳನ್ನೆಲ್ಲ ಈತ ಸ್ವಾಹಾಃ ಮಾಡಿದ. ಈ ಹಸಿವಿನ ಮಧ್ಯೆ ಮಾನ್ವಿ ಸ್ನಾನಕ್ಕೆ ಮುನ್ನ ಬಿಚ್ಚಿ ಎಸೆದ ಜಾಕೆಟ್ ನಲ್ಲಿ ತುರುಕಿದ ಲೆಟರ್ ಓದುವುದನ್ನು ಮರೆತೇ ಬಿಟ್ಟಿದ್ದಳು.

**********

ಆಸ್ಪತ್ರೆಗೆ ಬಂದ ನಂತರ ಕೂಡ ಒಂದು ಕ್ಷಣವೂ ಪ್ರಸನ್ನ ಮಾನ್ವಿಯನ್ನು ಬಿಟ್ಟು ಅಗಲಲಿಲ್ಲ. ಅವನನ್ನ ಕಂಡಾಗಲೆಲ್ಲ ಅವಳ ಹಸಿವು ಮತ್ತಷ್ಟು ತಾರಕಕ್ಕೇರಿ ನರ್ತಿಸುತ್ತಿತ್ತು. ಅವಳ ಪಾಡು ನೋಡಿ ಅವನ ಪ್ರಸನ್ನತೆ ಅಧಿಕವಾಗುತ್ತಿತ್ತು‌.

ಹೀಗೆ ಆಸ್ಪತ್ರೆಯ ಮೇಲ್ವಿಚಾರಣೆ ಮಾಡುತ್ತ ಸಾಗುವಾಗ ದಾರಿಯಲ್ಲಿ ಎದುರುಗೊಂಡ ಮಿಥಾಲಿ, ಮಾನ್ವಿ ಪ್ರಸನ್ನನನ್ನು ಒಟ್ಟಿಗೆ ನೋಡಿ ಗಲಿಬಿಲಿಗೊಂಡಳು. 'ಇಬ್ಬರೂ ಮೊದಲೇ ಪರಿಚಯವಾ? ಅಥವಾ ಈಗ ಮಾನ್ವಿಯ ಬಗ್ಗೆ ತಿಳಿದುಕೊಳ್ಳಲು ಹೀಗೆ ಪರಿಚಯ ಮಾಡಿಕೊಂಡಿದ್ದಾರಾ?' ಅವಳು ಆಲೋಚಿಸಿದಳು.
"ಹಾಯ್. ಡಾ‌.ಮಾನ್ವಿ. ಯಾರಿವರು??"

"ಮೀಟ್ ಡಾ.ಪ್ರಸನ್ನ. ಮಾಯ್ ಸೀನಿಯರ್ ರೆಸಿಡೆಂಟ್!! (ಅದೇ ಹಿಟ್ಲರ್) ಎಂದು ಕಿವಿಯಲ್ಲಿ ಹೇಳಿ, ಒನ್ಸ್ ಅಪಾನ್ ಎ ಟೈಮ್" ಎಂದು ಗಟ್ಟಿಸಿ ನುಡಿದಳು. " ಆ್ಯಂಡ್ ಇವರು ಡಾ.ಮಿಥಾಲಿ. ನನ್ನ ಫ್ರೆಂಡ್ ಮತ್ತು ಕೊಲಿಗ್" ಪರಿಚಯಿಸಿದಳು.

ಮಿಥಾಲಿಗೆ ಸೀನಿಯರ್ ರೆಸಿಡೆಂಟ್- ಹಿಟ್ಲರ್ ಅನ್ನೋ ಮಾತು ಕೇಳಿ ಹೃದಯ ಬಾಯಿಗೆ ಬಂದು ಜೀವ ಹೊಡೆದು ಕೊಂಡಂತಾಯಿತು. ಆ ದಿನ ಅವನ ಮುಂದೆಯೇ ಅವನ ಬಗ್ಗೆಯೇ ಬಾಯಿಗೆ ಬಂದಂತೆ ಮಾತಾಡಿದ್ದಳು‌. ಅಷ್ಟಲ್ಲದೇ ಅವನ ಮುಂದೆಯೇ ಮಾನ್ವಿಯ ಕುತಂತ್ರಗಳೆಲ್ಲವನ್ನು ಬಿಡಿಸಿ ಬಿಡಿಸಿ ಹೇಳಿದ್ದಳು‌. ನಿಜಾಂಶ ಹೊರ ಬಿದ್ದರೆ ತನ್ನ ಪಾಡು ನೆನೆದು ಆತಂಕಗೊಂಡಳು.

"ಹಾಯ್ ಡಾ.ಮಿಥಾಲಿ ನಿಮ್ನ ಮೀಟ್ ಮಾಡಿ ತುಂಬಾ ಖುಷಿಯಾಯ್ತು" ಕೈ ಕುಲುಕಿದ. ಅವಳು ನಕ್ಕು ಕೈ ಕುಲುಕಿದಳು ಎದೆ ಢವಗುಡುತ್ತಿತ್ತು. ಅವರನ್ನು ಮಾತಿಗೆ ಸಿಲುಕಿಸಿ, ಅದೇ ಅವಕಾಶ ಎಂಬಂತೆ ನುಣುಚಿಕೊಂಡಳು ಮಾನ್ವಿ.

" ಹಿಂದೊಮ್ಮೆ ನಾನು ಈ ಹಾಸ್ಪಿಟಲ್ ಗೆ ಬಂದಾಗ ಇದೇ ಜಾಗದಲ್ಲಿ ನಿಂತ್ಕೊಂಡು ತಾವು ಆ ರೆಸಿಡೆಂಟ್ ಯಾರೋ ನಾನ್ಸೆನ್ಸ್, ದುರಹಂಕಾರಿ, ಒಮ್ಮೆ ಸಿಕ್ರೆ ಸರ್ಯಾಗಿ ಕ್ಲಾಸ್ ತಗೋತಿನಿ ಅಂತ ಹೇಳಿದ ನೆನಪು.. ನಾನೇ ಆ ಅನಾಮಧೇಯ ರೆಸಿಡೆಂಟ್! ಈಗ ಹೇಳಿ... ಕ್ಲಾಸ್ ಇಲ್ಲೇ ಹೊರಗೆ ತಗೋತಿರೋ, ಅಥವಾ ಕ್ಯಾಬಿನ್ ಒಳಗೆ ತಗೋತಿರೋ.." ಎರಡು ಕೈ ಜೇಬಿಗಿಳಿಸಿ ಕೇಳಿದ

"ಐಮ್ ರಿಯಲಿ ಸಾರಿ ಡಾ.ಪ್ರಸನ್ನ.. ಅದು ನೀವೇ ಅಂತ ಗೊತ್ತಿಲ್ಲದೆ ಏನೇನೋ ಒದರಿಬಿಟ್ಟೆ. ನಾನು ನಿಮ್ಮ ಮುಂದೆ ಹೇಳಿದ ವಿಷಯನೆಲ್ಲ ಮಾನ್ವಿಗೆ ಹೇಳಬೇಡಿ ಪ್ಲೀಸ್.." ವಿನೀತಳಾಗಿ ಹೇಳಿದಳು

"ಯಾವ ವಿಷಯ?? ರೆಸಿಡೆಂಟ್ ಬಗ್ಗೆ ಅಂದ್ರೆ ನನ್ನ ಬಗ್ಗೆ ಹೇಳಿದ್ದನ್ನಾ? ಹಾಸ್ಪಿಟಲ್ ಬಗ್ಗೆ ಹೇಳಿದ್ದನ್ನಾ? ಅಥವಾ ಹರ್ಷನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಕೊಟ್ಟಿದ್ದನ್ನಾ?" ಅವನ ಮಾತಿನ ದಾಟಿಗೆ ಆಕೆ ಬೆಚ್ಚಿದಳು.

"ಅಂದ್ರೆ ಏನು ನಿಮ್ಮ ಮಾತಿನ ಅರ್ಥ? ಮಾನ್ವಿಗೆ ಎಲ್ಲಾನೂ ಹೇಳ್ಬೇಕು ಅಂತಿದೀರಾ!!"

"ಇಲ್ಲ ಹಾಗೆನಿಲ್ಲ. ಈಗ ನಾವು ನೀವು ಫ್ರೆಂಡ್ಸು... ನಿಮ್ಮ ಮೇಲೆ ಆಪಾದನೆ ಮಾಡೋಕಾಗುತ್ತಾ..!" ನಟಿಸಿ ನುಡಿದ. ಆಕೆ ನಿರಾಳವಾಗಿ ಉಸಿರು ಬಿಟ್ಟಳು.
"ನಾಳೆ ಸಂಜೆ ಫ್ರೀ ಇದೀರಾ?" ಕೇಳಿದ

"ಯಾಕೆ?" ಮೊನಚಾಗಿತ್ತು ಅವಳ ಪ್ರಶ್ನೆ.

"ಫ್ರೆಂಡ್ಸ್ ಎಲ್ರೂ ಮೂವಿ ನೋಡೋಕೆ ಹೋಗ್ತಿದೀವಿ. ನೀವು ಖಂಡಿತ ಬರ್ಬೇಕು. ನೀವು ನಮ್ಮ ಫ್ರೆಂಡ್ ತಾನೇ.. ಬರ್ತಿರಲ್ವಾ" ಕೊನೆಯ ಪ್ರಶ್ನೆಯಲ್ಲಿ ಎಚ್ಚರಿಕೆ ಇತ್ತು.

"ಹ್ಮಾ...ಹ್ಮಾ.. ಖಂಡಿತ ಬರ್ತಿನಿ. ಏನೇ ಪ್ರೋಗ್ರಾಂ ಇದ್ರು ಕ್ಯಾನ್ಸಲ್ ಮಾಡಿ ಬರ್ತಿನಿ. ಎಲ್ಲಿ ಯಾವಾಗ ಎಷ್ಟೋತ್ತಿಗೆ ಅಂತ ಕಾಲ್ ಮಾಡಿ ತಿಳಿಸಿ. ಈಗ ತುಂಬಾ ಕೆಲಸ ಇದೆ. ಬಾಯ್ ಬಾಯ್.." ಎನ್ನುತ್ತಾ ಅಲ್ಲಿಂದ ಕಾಲುಕಿತ್ತಳು. ಪ್ರಸನ್ನ ತನ್ನ ಗೆಳೆಯನ ಪ್ರೇಮ ಪ್ರಸ್ತಾಪಕ್ಕೆ ಮಧ್ಯಸ್ಥಿಕೆ ವಹಿಸಿದ.



ಆತ ಅಲ್ಲಿಂದ ಮಾನ್ವಿ ಕ್ಯಾಬಿನ್ ಕಡೆಗೆ ಹೋದಾಗ ಆಕೆ ಯಾರೊಂದಿಗೋ ಗಹನವಾದ ಮಾತುಕತೆಯಲ್ಲಿ ತೊಡಗಿದ್ದಳು. ಸ್ಟಾಫ್ ಒಳಹೋಗಲು ಅನುಮತಿಸಲಿಲ್ಲ. ಗ್ಲಾಸ್ ಡೊರ್‌ನಿಂದ ಆಕೆಯ ಆತಂಕದ ಮುಖಭಾವವನ್ನು ಎದುರಿದ್ದ ಯುವಕನನ್ನು ನೋಡಿದ. ಆತ ಯಾವುದೇ ಕೋನದಲ್ಲಿ ಚಿಕಿತ್ಸೆಗೆ ಬಂದವನಂತೆ ಕಾಣಲಿಲ್ಲ. ಮಾನ್ವಿ ದೈನ್ಯವಾಗಿ ಏನೋ ಹೇಳುತ್ತಲೇ ಇದ್ದಳು. ಯುವಕ ಗಂಭೀರವಾಗಿ ಕೇಳಿ ಸಕಾರಾತ್ಮಕವಾಗಿ ಗೋಣು ಆಡಿಸುತ್ತಿದ್ದ. ಐದತ್ತು ನಿಮಿಷಕ್ಕೆ ಯುವಕ ಹೋದ ನಂತರ ಪ್ರಸನ್ನ ಒಳಗೆ ಬಂದ. "ಯಾರವನು?"

"ನಿನಗೂ ಅದಕ್ಕೂ ಸಂಬಂಧ ಇಲ್ಲ. ನಿಂದೆಷ್ಟಿದೆಯೋ ಅಷ್ಟು ನೋಡ್ಕೋ ಸಾಕು" ಗದರಿದಳು. ಅವಳ ದುಗುಡವನ್ನು ಆತ ಸಂಶಯವಾಗಿ ನೋಡುತ್ತಿದ್ದ.

ಅದೇ ಸಮಯದಲ್ಲಿ ಹೊರಗೆ ಏನೋ ಕೋಲಾಹಲ ನಡೆದಿತ್ತು. ಮಾನ್ವಿ ಎದ್ದು ಹೋಗಿ ಅದೇನೆಂದು ವಿಚಾರಿಸಲು ತಿಳಿದು ಬಂದಿದ್ದು.. ಡಾ.ವೃಷಭ್ ಎನ್ನುವ ಸರ್ಜನ್ ಒಂದು ಟ್ಯೂಮರ್ ಕೇಸ್ ಅಟೆಂಡ್ ಮಾಡುವಾಗಲೇ ಆಪರೇಷನ್ ಥಿಯೇಟರ್ ನಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದರು. ವಿಪರ್ಯಾಸ! ಆದರೆ ನಂಬಲೇಬೇಕಾದ ಸತ್ಯ..! ಜೀವ ಉಳಿಸುವ ಸಮಯದಲ್ಲೇ ಜೀವ ಉಳಿಸಬೇಕಾದ ವೈದ್ಯನ ಜೀವಕ್ಕೆ ಯಾವುದೇ ಖಚಿತತೆ ಇರುವುದಿಲ್ಲ. ಸಾವು ಯಾರ ಅಡಿಯಾಳು ಅಲ್ಲವಲ್ಲ, ಹೇಳಿ ಕೇಳಿ ಬರಲು.. ಸೃಷ್ಟಿ ನಿಯಮವದು. ಬಂದಾಗ ಬರಸೆಳೆದು ಅಪ್ಪಲೇಬೇಕು. ಅಲ್ಲಿಯು ಅದೇಯಾಗಿತ್ತು.

ತೀರಿಹೋದ ವೈದ್ಯ ತೆರೆದಿಟ್ಟ ವ್ಯಕ್ತಿಯ ಸ್ಕಲ್ ಇನ್ನೂ ಅಪೂರ್ಣವಾಗಿ ಹಾಗೆ ಇತ್ತು. ಆಪರೇಷನ್ ಪೂರ್ಣಗೊಳ್ಳದಿದ್ದರೆ ವ್ಯಕ್ತಿ ಜೀವಕ್ಕೆ ಅಪಾಯ. ಕೇಸ್ ಹಿನ್ನೆಲೆ ತಿಳಿಯದೆ ಶಸ್ತ್ರಚಿಕಿತ್ಸೆ ಮಾಡಲು ಮಿಕ್ಕವರು ಹಿಂಜರಿದರು. ಪೇಷಂಟ್ ಕಡೆಯವರು ತೀವ್ರವಾಗಿ ಗಲಾಟೆ ಆರಂಭಿಸಿದರು.

" ಡಾ.ಮಾನ್ವಿ ವಾಟ್ ಟು ಡು ನೌ? ಬೇಗ ನೀವೇ ನಿರ್ಧಾರ ತೆಗೆದುಕೊಳ್ಳಿ. ನೀವೇ ಯಾಕೆ ಕೇಸ್ ಅಟೆಂಡ್ ಮಾಡಬಾರದು" ಅಸಿಸ್ಟೆಂಟ್ ಡಾಕ್ಟರ್ ಆಂಗ್ಲದಲ್ಲಿ ಕೇಳಿದಳು

'ನೋ ಐ ಕಾಂಟ್.. ರಾತ್ರಿ ನಿದ್ರೆ ಇಲ್ಲದೆ ಕಣ್ಣು ಉರಿತಿವೆ. ನಿಶ್ಯಕ್ತಿ ಬೇರೆ, ನಾನು ಆಪರೇಷನ್ ಮಾಡುವ ಸ್ಥಿತಿಯಲ್ಲಿ ಖಂಡಿತ ಇಲ್ಲ' ಸ್ವಗತದಲ್ಲೇ ಹೇಳಿಕೊಂಡಳು

" ಈಗ ನೀವೇ ಏನಾದರೂ ತುರ್ತು ನಿರ್ಧಾರ ತೆಗೆದುಕೊಳ್ಳಬೇಕು. ಬೇಗ.. "

ಮಾನ್ವಿ ಪ್ರಸನ್ನನ ಕಡೆಗೆ ದೈನ್ಯದಿಂದ ನೋಡಿ "ಪ್ಲೀಸ್..." ಎಂದು ಮಾತ್ರವೇ ನುಡಿದಳು. ಆತನಿಗೂ ಪರಿಸ್ಥಿತಿಯ ಒತ್ತಡ ಅರ್ಥವಾಗಿತ್ತು.

"ನನಗೆ ಈ ಕೂಡಲೇ ಕೇಸ್ ಹಿಸ್ಟರಿ ಮತ್ತೆ ಇಲ್ಲಿವರೆಗಿನ ಪ್ರಾಸಿಜರ್ ಡಿಟೇಲ್ಸ್ ಬೇಕು. ಇನ್ನೂ ಹತ್ತು ನಿಮಿಷದಲ್ಲಿ ಆಪರೇಷನ್ ಕಂಟಿನ್ಯೂ ಮಾಡೋಣ. ಒನ್ ಮೋರ್ ಕಂಡಿಷನ್.. ಆಪರೇಷನ್ ಮುಗಿಯುವವರೆಗೂ ನೀನು ನನ್ನ ಕಣ್ಣಮುಂದೆನೇ ಇರಬೇಕು ಎಲ್ಲೂ ಹೋಗೋ ಹಾಗಿಲ್ಲ" ಮಾನ್ವಿಯತ್ತ ಬೆರಳು ತೋರಿ ಹೇಳಿದ. ಮಾನ್ವಿ ಕಣ್ಣಲ್ಲೇ ಸಮ್ಮತಿ ನೀಡಿದಳು. ಆಂಗ್ಲದಲ್ಲಿ ಸಂವಾದ ನಡೆದಿತ್ತು. ಇದನ್ನು ನೋಡಿದ ಅಸಿಸ್ಟೆಂಟ್ ಡಾಕ್ಟರ್..

"ಇವರು ನಿಮ್ಮ ಬಾಯ್‌ಫ್ರೆಂಡಾ??" ನಾಚಿ ನಗು ತಡೆದು ಕೇಳಿದಳು. ಮಾನ್ವಿ ಕಣ್ಣು ಕೆಂಡದಂತಾಗಿದ್ದವು. ಅವಳ ನೋಟವನ್ನು ಅರ್ಥ ಮಾಡಿಕೊಂಡವಳೇ..
"ಒಕೆ ಡಾಕ್ಟರ್. ನಾನು ಎಲ್ಲಾ ವ್ಯವಸ್ಥೆ ನೋಡಿಕೊಳ್ಳುತ್ತೇನೆ" ಎಂದು ಓಡಿದಳು

" ನಿನಗೆ ಯಾವಾಗ, ಯಾರಮುಂದೆ, ಏನು ಮಾತಾಡ್ಬೇಕಂತ ಗೊತ್ತಾಗಲ್ವ" ಪ್ರಸನ್ನನಿಗೆ ಗದರಿದಳು

"ನಾನೇನ್ ತಪ್ಪು ಹೇಳಿದೆ. ಆಪರೇಷನ್ ಮುಗಿಯುವವರೆಗೂ ನೀ ನನ್ನ ಮುಂದೆನೇ ಇರ್ಬೇಕು ಅಂದೆ ಅಷ್ಟೇ.. ಯಾಕೆ..? ಇದೇ ಚಾನ್ಸು ಅಂತ ಗಡದ್ದಾಗಿ ಊಟ ಮಾಡೋ ಪ್ಲ್ಯಾನ್ ಇತ್ತಾ? ಇವತ್ತು ಇಡೀ ದಿನ ನಿನಗೆ ಉಪವಾಸ. ನೆನಪಿದೆ ತಾನೇ" ಎಚ್ಚರಿಸಿದ.

ಇದಕ್ಕೂ ಮೀರಿ ವಿವರಣೆ ನೀಡಲು ಆಕೆ ಶಕ್ತಳಾಗಲಿಲ್ಲ. ರಿಪೋರ್ಟ್ಸ್ ಮತ್ತು ಕೇಸ್ ಫೈಲ್ ಅವನ ಸುಪರ್ದಿಗೆ ಒಪ್ಪಿಸಿದಳು. ಆತ ಕೂಲಂಕಷವಾಗಿ ಪರಿಶೀಲಿಸಿ ನೋಡಿದ. ಮುಂದಿನ ಹತ್ತು ನಿಮಿಷದಲ್ಲಿ ಪ್ರಸನ್ನನ ಮುಖ್ಯಸ್ಥಿಕೆಯಲ್ಲಿ‌ ಆಪರೇಷನ್ ಮುಂದೊರೆದಿತ್ತು. ಮಾನ್ವಿ ಒ.ಟಿ ಯೊಳಗೆ ಸೀಟಿಗೊರಗಿ ಕೂತಿದ್ದಳು. ಕಣ್ಣು ಊದಿಕೊಂಡಿದ್ದರೂ ಟೆನ್ಷನ್ ನಿಂದ ನಿದ್ರೆ ಸುಳಿಯಲಿಲ್ಲ.

ಸುಮಾರು ಐದು ಘಂಟೆಗಳ ಕಾಲ ನಡೆದ ಸುಧೀರ್ಘ ಶಸ್ತ್ರಚಿಕಿತ್ಸೆ ಫಲಪ್ರದವಾಗಿ ಮುಕ್ತಾಯಗೊಂಡಿತು. ಕೆಲವು ವೈದ್ಯರು ಪ್ರಸನ್ನನನ್ನು ಅಭಿನಂದಿಸಿದರು. ಅವನ ಸಮಯ ಪ್ರಜ್ಞೆ ಮೇಧಾವ್ಯಕ್ಕೆ ಮೆಚ್ಚುಗೆ ಸೂಚಿಸಿದರು. ವ್ಯಕ್ತಿ ಕಡೆಯವರು ಕೃತಜ್ಞತೆಗಳ‌ನ್ನು ತಿಳಿಸಿದರು. ಮಾನ್ವಿಯ ಕಣ್ಣಲ್ಲಿ ಅವನ ಬಗ್ಗೆ ಧನ್ಯತೆ ಹಾಗೂ ಮೆಚ್ಚುಗೆ ಕಂಡಿತು. ಆದರೆ ಬಾಯಿಬಿಟ್ಟು ಏನನ್ನೂ ಹೇಳಲಿಲ್ಲ. ಅವನೂ ಅವಳಿಂದ ಏನನ್ನೂ ಅಪೇಕ್ಷೆ ಮಾಡಿರಲೂ ಇಲ್ಲ.


ಕ್ಯಾಂಟೀನ್ ನಲ್ಲಿ ಕುಳಿತು ಊಟ ಮಾಡುತ್ತಿದ್ದ ಪ್ರಸನ್ನ. ಅವನೆದುರು ಕುಳಿತು ಅವನು ಹದ ಮಾಡಿಕೊಂಡು ತಿನ್ನುವ ಚಂದವನ್ನೇ ಕಣ್ಣ ತುಂಬಿಕೊಳ್ಳುತ್ತ ತನ್ನ ಹೊಟ್ಟೆಗೆ ಸಮಾಧಾನ ಹೇಳುತ್ತಿದ್ದಳು ಮಾನ್ವಿ. ತಿನ್ನುವಷ್ಟೂ ಸಮಯ ಒಂದೊಂದು ವ್ಯಂಜನವನ್ನು ಹೊಗಳಿ ಚಪ್ಪರಿಸಿ ಅವಳು ಹೊಟ್ಟೆಯುರಿದುಕೊಳ್ಳುವಂತೆ ಮಾಡಿದ.

ತನ್ನ ಊಟವಾದ ನಂತರ ಕೈ ತೊಳೆದುಕೊಳ್ಳಲು ಹೋದವನು ಮರಳಿ ಬರುವಾಗ ಮತ್ತೊಂದು ತಟ್ಟೆ ಊಟ ಹಿಡಿದುಕೊಂಡು ಬಂದಿದ್ದ. ಅದನ್ನು ನೋಡಿ ಮಾನ್ವಿ "ನೀನೇನು ಮನುಷ್ಯನಾ ರಾಕ್ಷಸನಾ? ಎಷ್ಟು ಹೊಟ್ಟೆ ಇವೆ ನಿನಗೆ?" ಮುಂತಾಗಿ ಕೇಳುವದರಲ್ಲಿ ತಟ್ಟೆ ಅವಳ ಮುಂದಿಟ್ಟು ತಿನ್ನು ಎಂದ.

ಆಕೆ ಅವನ ಮುಖವನ್ನು ಗಮನಿಸಿ ನೋಡಿದಳು. ಯಾವ ಅಪಹಾಸ್ಯ ಕಾಣಲಿಲ್ಲ. ಆದರೂ ಅಳುಕಿದಳು.

"ಡೋಂಟ್ ವರಿ. ಹರ್ಷನಿಗೆ ಹೇಳಲ್ಲ. ತಿನ್ನು" ಮತ್ತೆ ಒತ್ತಾಯಿಸಿದ. ಸಿಕ್ಕಿದ್ದೇ ಚಾನ್ಸ್ ಎಂದುಕೊಂಡವಳು ಎರಡು ದಿನದ ನೀಗದ ಹಸಿವನ್ನು ಒಂದೇ ಬಾರಿ ಜಡಿದು ಬಾರಿಸಿದಳು. ಆಕೆ ಊಟ ಮಾಡುವಷ್ಟು ಸಮಯ ಅವಳೆದುರಿಗೆ ಕುಳಿತು ಅವಳನ್ನೇ ನೋಡುತ್ತಿದ್ದ ಪ್ರಸನ್ನ, ಅವಳು ಕೊನೆಯ ತುತ್ತು ತಿನ್ನುವಾಗ ಮಾತು ಆರಂಭಿಸಿದ..

"ಒಂದೇ ಒಂದು ದಿನ ಊಟ ಇಲ್ಲದೆ ಇಷ್ಟು ಒದ್ದಾಡ್ತಿದ್ದಿಯಲ್ಲ.. ಮಗನ ಕಳೆದುಕೊಂಡ ದುಃಖದಲ್ಲಿ ಹರ್ಷನ ಮನೆಯವರು ಅದೆಷ್ಟು ದಿನ ಉಪವಾಸ ಮಾಡಿರಬಹುದು, ಅದೆಂತಹ ವೇದನೆ ಅನುಭವಿಸಿರಬಹುದು, ಆ ಬಗ್ಗೆ ನಿನಗೆ ಕಿಂಚಿತ್ತಾದರೂ ಕಲ್ಪನೆ ಇದೆಯಾ.. " ಆಕೆಯ ಕೈಯಲ್ಲಿದ್ದ ತುತ್ತು ತಟ್ಟೆಗೆ ಜಾರಿತು. ಕತ್ತು ಮೇಲೆತ್ತಿ ಅವನನ್ನೇ ನೋಡಿದಳು

"ಹೊಟ್ಟೆ ಹಸಿದಿರುತ್ತೆ, ಕಣ್ಣ ಮುಂದೆ ತಟ್ಟೆ ತುಂಬಾ ಊಟ ಇರುತ್ತೆ, ಆದರೆ ದಿನಾ ಈ ಹೊತ್ತಿಗೆ ಮನೆಗೆ ಬರುತ್ತಿದ್ದ ಮಗ ಇನ್ನೂ ಬರ್ಲಿಲ್ವಲ್ಲ ಅನ್ನೋ ಯೋಚನೆಗೆ ಮನಸ್ಸು ವ್ಯಾಕುಲವಾಗುತ್ತೆ. ಆ ಕೂಡಲೇ ಮತ್ತೊಂದು ಸತ್ಯ ನೆನಪಾಗುತ್ತೆ.. ಮಗ ಇನ್ನು ಯಾವತ್ತೂ ಮರಳಿ ಬರಲ್ಲ ಅಂತ.., ತುತ್ತು ಅನ್ನ ಗಂಟಲಿಗಿಳಿಯಲ್ಲ. ಹಸಿವು ಒಡಲನ್ನು ಸಾಯಿಸ್ತಿದ್ರು, ಯಾರಿಗಾಗಿ ಬದುಕ್ಬೇಕು ಎನ್ನುವಂತಹ ಜಿಗುಪ್ಸೆ ಮೂಡಿ ಊಟಕ್ಕೆ ವಿದಾಯ ಹೇಳು ಅನ್ನುತ್ತೆ ಜೀವನ.. ಯಾವತ್ತಾದ್ರೂ ಅನುಭವಿಸಿದಿಯಾ ಈ ರೀತಿಯ ಸಂಕಟ.." ಅವಳ ಕಣ್ಣು ತುಂಬಿದ ಕೊಳವಾಗಿತ್ತು. ದೃಷ್ಟಿ ಅವನನ್ನೇ ದಿಟ್ಟಿಸಿತ್ತು.

"ಒಂದೇ ರಾತ್ರಿ ನಿದ್ರೆಗೆಟ್ಟಿದ್ದಕ್ಕೆ ಕಣ್ಣುರಿ ನಿನಗೆ...  ವರ್ಷದಿಂದ ಬದುಕಿರೋ ಮಗನ ಫೋಟೋಗೆ ಹಾರ ಹಾಕಿ, ದೀಪ ಹಚ್ಚಿ ಅವನ ನೆನಪಲ್ಲೇ ನಿದ್ರೆಯಿಲ್ಲದೆ ಕೊರಗ್ತಾ, ನೆಮ್ಮದಿಯಿಲ್ಲದೆ ಬದುಕ್ತಿರೋ ಅವರೇನು ಮಾಡಬೇಕು ಹೇಳು‌...

ನಿನಗೆ ಉಪವಾಸ ಸಾಯಿಸಿಯೋ ಅಥವಾ ರಾತ್ರಿಯಿಡೀ ನಿದ್ರೆಗೆಡಿಸಿ ನೋಡಿಯೋ ವಿಕೃತ ಸಂತೋಷ ಪಡುವಷ್ಟು ಹುಚ್ಚು ಮನಸ್ಥಿತಿ ನನಗಿಲ್ಲ. ಹರ್ಷನ ಮನೆಯವರ ದುಃಖ ಕಷ್ಟ ವ್ಯಥೆ ಹೇಗಿದೆಯಂತ ನಿನಗೆ ಚಿಕ್ಕ ಅನುಭವ ಮಾಡಿಸಬೇಕಿತ್ತು. ಮಾಡಿಸಿದೆ ಅಷ್ಟೇ..
ತುಂಬಾ ಕಷ್ಟ ಅಲ್ವಾ ಒಬ್ಬರನ್ನು ಮರೆತು ಬದುಕೋದು.. ಈಗಲೂ ಸಮಯ ಮೀರಿಲ್ಲ. ಹರ್ಷನ ಬದುಕಲ್ಲಿ ನಡೆದದ್ದನ್ನು ನಿಧಾನವಾಗಿ ಅವನೆದುರು ವಿವರಿಸಿ ಹೇಳಿ ಅವನ ಲೈಫ್ ಅವನಿಗೆ ಮರಳಿಸಿಬಿಡು. ಇದೇ ನೀನು ಅವನಿಗೆ ಕೊಡಬಹುದಾದ ಒಂದೊಳ್ಳೆ ಗಿಫ್ಟ್.. ಯೋಚನೆ ಮಾಡು" ಅವಳ ಕಣ್ಣಿಂದ ಧುಮುಕಿದ ಕಂಬನಿ ಎಂಜಲು ಕೈ ಮೇಲೆ ಜಾರಿ ತಟ್ಟೆ ಸೇರತೊಡಗಿತ್ತು.

"ಕಣ್ಣೀರಲ್ಲಿ ಕೈ ತೊಳೆಯೋದು ಅಂದ್ರೆ ಇದೆನಾ??"ವಿಷಾದದಿಂದ ನಕ್ಕು ಪರಿಹಾಸ್ಯ ಮಾಡಿದ. ಆಕೆ ಅಲ್ಲಿಂದ ಧಡಕ್ಕನೇ ಎದ್ದು ಮರು ಮಾತಾಡದೆ ಹೋದಳು.

ಅವನು ಅವಳ ಮನದ ಭಾವನೆಗಳನ್ನು ಓದುವಲ್ಲಿ ಮತ್ತೆ ಸೋತು ಹೋಗಿದ್ದ. ಇನ್ನೂ ಸ್ವಲ್ಪ ಸೂಕ್ಷ್ಮವಾಗಿ ಕೆಣಕಿದರೆ ಒಳಹುಳುಕು ಹೊರ ಬೀಳುತ್ತಿತ್ತೇನೋ ಅವನು ದುಡುಕಿದ. ಅಷ್ಟರಲ್ಲಿ ವಿವೇಕ್ ಕರೆ ಮಾಡಿ 'ಹರ್ಷನ ಬಗ್ಗೆ ಮುಖ್ಯವಾದ ವಿಷಯವನ್ನು ಮಾತಾಡುವುದಿದೆ. ಮೇಜರ್ ಅಂಕಲ್ ಬರಲು ತಿಳಿಸಿದ್ದಾರೆ, ಈ ಕೂಡಲೇ ಫ್ಲಾಟ್ ಗೆ ಬಂದುಬಿಡು' ಎಂದು ಹೇಳಿದ. ತಕ್ಷಣ ಪ್ರಸನ್ನ ಮಾನ್ವಿಯನ್ನು ಅವಳ ಪಾಡಿಗೆ ಬಿಟ್ಟು ಅಲ್ಲಿಂದ ಮೇಜರ್ ಅವರನ್ನು ಭೇಟಿಯಾಗಲು ನಡೆದ.


ಮುಂದುವರೆಯುವುದು.‌.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...