ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-36


ಹಾಲ್‌ನಲ್ಲಿ ಪ್ರಸನ್ನ ಪರಿಧಿ ವಿವೇಕ್ ಕುಳಿತಿದ್ದರು.  ಮೇಜರ್ ಪೆನ್ ಡ್ರೈವ್ ಕನೆಕ್ಟ್ ಮಾಡಿ ಲ್ಯಾಪ್‌ಟಾಪ್ ನ್ನು ಮೂವರಿಗೂ ಕಾಣುವಂತೆ ಎದುರಿದ್ದ ಮೇಜಿನ ಮೇಲಿಟ್ಟರು.ಏನು ವಿಡಿಯೋ ಇದೆಂದು ಮೂವರು ಮುಖ ಮುಖ ನೋಡಿಕೊಂಡರು. ಆ ವಿಡಿಯೋದಲ್ಲಿ ಇದ್ದದ್ದಿಷ್ಟು..

ಒಂದು ಲಾರಿ ಹೈವೇಯಿಂದ ದೂರದಲ್ಲಿ ಎಷ್ಟೋ ಸಮಯದಿಂದ ನಿಂತಿತ್ತು. ಕೆಲವೇ ನಿಮಿಷಗಳಲ್ಲಿ ಅದು ನಿಧಾನವಾಗಿ ಚಲಿಸಲು ಆರಂಭಿಸಿ ರಸ್ತೆ ತಿರುವಿನಲ್ಲಿ ವೇಗವನ್ನು ಹೆಚ್ಚಿಸಿತ್ತು. ಹಾಗೇ ಸಾಗುವಾಗ ಎದುರಿಗೆ ಬರುತ್ತಿದ್ದ ಕ್ಯಾಬ್ ಒಂದಕ್ಕೆ ಎಡಭಾಗದಲ್ಲಿ ಜೋರಾಗಿ ಢಿಕ್ಕಿ ಹೊಡೆದಿತ್ತು. ಕ್ಯಾಬ್ ಆ ಘರ್ಷಣೆಗೆ ಎರಡು ಬಾರಿ ಪಲ್ಟಿ ಹೊಡೆದು ನುಜ್ಜು ಗುಜ್ಜಾಗಿ ಪಕ್ಕಕ್ಕೆ ಉರುಳಿತು. ಗಾಜಿನ ಫಳಕುಗಳು, ರಕ್ತರಂಜಿತವಾಗಿ ರಸ್ತೆಗೆ ಚಿಮ್ಮಿದವು. ಲಾರಿ ಸ್ವಲ್ಪವೂ ಮಿಸುಕಾಡದೆ ನಿರ್ಭಯವಾಗಿ ಯಥಾವತ್ತಾಗಿ ತಾನು ಮುಂದೆ ಸಾಗಿತ್ತು. ಉರುಳಿದ ಕ್ಯಾಬ್ ಸುತ್ತಲೂ ಜನ ಗುಂಪುಗಟ್ಟಿದ್ದರು.

ನೋಡುತ್ತಿದ್ದ ಮೂವರು ಸ್ತಬ್ಧ. ಮೇಜರ್ ನುಡಿದರು "ಆ ಆ್ಯಕ್ಸಿಡೆಂಟ್ ಯಾವುದು ಗೊತ್ತಾ??" ಕೋಣೆಯಲ್ಲಿ ಮೌನ ಆವರಿಸಿತು.
"ಆ ದಿನ ಹರ್ಷ ಏರ್ಪೋರ್ಟ್ ಹೋಗುವಾಗ ನಡೆದ ಆ್ಯಕ್ಸಿಡೆಂಟ್ ಅದು! ಆ್ಯಕ್ಚುಲಿ ಆ್ಯಕ್ಸಿಡೆಂಟ್ ಅಲ್ಲ.. ಇನ್ಫ್ಯಾಕ್ಟ್, ಇಟ್ಸ್ ಫ್ರೀ ಪ್ಲ್ಯಾನ್‌ಡ್ ಮರ್ಡರ್ ಅಟೆಮ್ಟ್! ಅವನನ್ನ ಕೊಲ್ಲುವ ಉದ್ದೇಶದಿಂದ ಯಾರೋ ಮಾಡಿರೋ ಕೊಲೆಯ ಪ್ರಯತ್ನವದು!"

ಅದರೊಳಗೆ ಇದ್ದವನು ತನ್ನ ಹರ್ಷ. ಆ ಕ್ಷಣ ಅವನು ಅದೆಷ್ಟು ನೋವು ಅನುಭವಿಸಿರಬಹುದು ಎಂಬ ಕಲ್ಪನೆಗೆ ಪರಿಯ ಮೈ ಕಂಪಿಸಿತು. ಎದೆ ಜಿಲ್ಲೆಂದಿತು. ಪ್ರಸನ್ನ ತನ್ನ ಊಹೆ ನಿಜವೆಂದು ತಿಳಿದು ಇದನ್ನು ಮಾಡಿಸಿದ್ದು ಯಾರೆಂಬ ಯೋಚನೆಗೆ ಬಿದ್ದ. ಮೇಜರ್ ಮಾತು ಮುಂದುವರೆಸಿದರು..

"ಪರಿ ಕೊಟ್ಟ ಮಾಹಿತಿ ಪ್ರಕಾರ ಆ ತಾರೀಖಿನ ಟ್ರಾಫಿಕ್ ಸಿಸಿ  ರೆಕಾರ್ಡ್ಸ್ ಮೂಲಕ ಸಿಕ್ಕ ವಿಡಿಯೋ ಕ್ಲಿಪ್ಸ್ ಇವು. ಆ ಲಾರಿ ಎಷ್ಟೋ ಹೊತ್ತು ಅವನ ಕ್ಯಾಬ್ ಗಾಗಿ ಹೊಂಚು ಹಾಕಿ ಕಾದು ನಿಂತು, ಅವನು ಬರುತ್ತಿದ್ದಾನೆ ಎಂಬ ಸೂಚನೆ ಸಿಗುತ್ತಿದ್ದಂತೆ, ರಸ್ತೆಗಿಳಿದಿದೆ. ಕ್ಯಾಬ್ ವಿರುದ್ಧದ ದಿಕ್ಕಿನಲ್ಲಿ ಒವರ್ ಸ್ಪೀಡಾಗಿ ಎದುರಾಗಿ ಪಕ್ಕಕ್ಕೆ ತಳ್ಳಿಕೊಂಡು ಮುಂದೆ ನುಗ್ಗಿ ಹೋಗಿದೆ‌. ಸಿಸಿಟಿವಿ ಯಲ್ಲಿ ಕಾಣುತ್ತಿರೋ ಈ ಲಾರಿ ನಂಬರ್ ಟ್ರ್ಯಾಪ್ ಮಾಡಲಾಯಿತು. ಇದು....
ರೈ ಗ್ರುಪ್ ಆಫ್ ಇಂಡಸ್ಟ್ರಿ ಗೆ ಸಂಬಂಧಿಸಿದ ಸ್ಟೀಲ್ ಫ್ಯಾಕ್ಟರಿ ಲಾರಿ!!ಇದು ಮಾನ್ವಿ ರೈ ಹೆಸರಲ್ಲಿದೆಯಾದರೂ ಇದರ ಸಂಪೂರ್ಣ ಕಾರ್ಯ ನಿರ್ವಹಣೆ ರಘುನಂದನ್ ರೈ ಅವರದೇ.. ಈಗ ಈ ಆ್ಯಕ್ಸಿಡೆಂಟ್ ಮಾಡ್ಸಿದ್ದು  ಅವರೇನಾ? ಅಥವಾ ಅವರ ಮಗಳಾ ಅನ್ನೋದು ಅನುಮಾನ"

"ನೋ.. ಮಾನ್ವಿ ಈ ತರಾ ಕೆಲಸ ಮಾಡೋಕೆ ಸಾಧ್ಯಾನೇ ಇಲ್ಲ..." ಶೂನ್ಯ ದಿಟ್ಟಿಸುತ್ತ ತನ್ನೊಳಗೆ ಬಡಬಡಿಸಿದಳು ಪರಿ

" ಐ ಅಗ್ರೀ ವಿತ್ ಯು ಪರಿ.. ಮಾನ್ವಿ ಇದನ್ನ ಮಾಡ್ಸಿಲ್ಲ. ಆದರೆ ಅವಳ ತಂದೆ?? " ಪ್ರಸನ್ನ ಕೇಳಿದ್ದಕ್ಕೆ 'ಗೊತ್ತಿಲ್ಲ' ಎಂಬಂತೆ ತಲೆದೂಗಿದಳಾಕೆ.

"ಆದರೆ ಅವರಿಗೆ ಹರ್ಷನ ಮೇಲೆ ಏನು ವೈಷಮ್ಯ ಇರೋಕೆ ಸಾಧ್ಯ!"

" ನೀವು ಬಹುಶಃ ಮರ್ತಿದೀರಾ ಅನ್ಸುತ್ತೆ.. ಆಲಾಪ್ ಸಂಜೀವಿನಿ ಮದುವೆಯಾಗೋಕೆ ಪರೋಕ್ಷವಾಗಿ ಹರ್ಷನೇ ಕಾರಣ. ಅದರಿಂದಲೇ ಮಾನ್ವಿ ಡಿಪ್ರೆಸ್ಡ್ ಆಗಿದ್ದು. ಅದೂ ಅಲ್ಲದೆ ಅವತ್ತು ಹರ್ಷ ಮಾನ್ವಿಗೆ ಹೊಡೆದಿದ್ದ. ಟಾಪ್ ಬ್ಯುಸಿನೆಸ್ ಮ್ಯಾಗ್ನೆಟ್ ರಘುನಂದನ್ ರೈ ಮಗಳ ಕೆನ್ನೆಗೆ ಹೊಡೆದಿದ್ದ!! ಈ ವಿಷಯ ಗೊತ್ತಾಗಿ ಅದೇ ಸಿಟ್ಟಿನಿಂದ ಹೀಗೆ ಮಾಡಿರಬಹುದು. ರಘುನಂದನ್ ಒಂದೇ ವಿಕ್ನೇಸ್ ಅವನ ಮಗಳು ಮಾನ್ವಿ. ಅವಳಿಗೆ ಚೂರು ನೋವಾದ್ರೂ ಅವರು ಸಹಿಸೊಲ್ಲ"

"ಇಷ್ಟು ಮಾತ್ರಕ್ಕೆ ಹರ್ಷನ ಜೀವ ಜೀವನದ ಜೊತೆಗೆ ಆಟ ಆಡ್ತಿದ್ದಾರಾ?! ಹೌ ಕ್ರ್ಯೂಯಲ್" ಅವಳ ಯೋಚನೆ ಗತದೆಡೆಗೆ ವಾಲಿತ್ತು. ಬೇರೆ ಯಾವುದೋ ಬಲವಾದ ಕಾರಣ ಇರಬಹುದು ಎಂದು ಮನ ಶಂಕಿಸಿತು.

"ವಾಟೆವರ್... ತಪ್ಪು ಯಾರೇ ಮಾಡಿರಲಿ. ಶಿಕ್ಷೆಯಂತೂ ತಪ್ಪಿದ್ದಲ್ಲ. ಆದರೆ ಇದನ್ನೆಲ್ಲ ಸಾಬೀತು ಪಡಿಸಲು ಇನ್ನೂ ಸಾಕ್ಷ್ಯಾಧಾರಗಳು ಬೇಕಾಗಬಹುದು ಅಲ್ವಾ ಸರ್.." ಪ್ರಸನ್ನ ಕೇಳಿದ. ವಿವೇಕ್ ಎಲ್ಲವನ್ನೂ ಗಂಭೀರವಾಗಿ ಮೂಕಪ್ರೇಕ್ಷನಂತೆ ನೋಡುತ್ತಿದ್ದ

"ಯೆಸ್ ಡಾ.ಪ್ರಸನ್ನ. ಅದೇ ಕೆಲಸದ ಮೇಲೆ ನಾನು ಎರಡು ದಿನ ಸಾತ್ಪುರಕ್ಕೆ ಹೊರಟಿದ್ದೇನೆ. ಎಸ್.ಪಿ ನಾಯರ್‌ಗೆ ಈಗ ಅಲ್ಲಿ ಪೋಸ್ಟಿಂಗ್ ಆಗಿದೆಯಂತೆ. ಬೇಜಾನ್ ಲಂಚ ತಿಂದು ಹರ್ಷನ ಕೇಸ್ ಫೈಲ್ ಕ್ಲೋಸ್ ಮಾಡಿದ್ದು ಇದೇ ಹರಾಮ್‌‌ಖೋರ್!! ಇವನು ಬಾಯ್ಬಿಟ್ರೆ ಎಲ್ಲಾ ಸತ್ಯ ಹೊರಗ್ಬರುತ್ತೆ. ನನ್ನ ಮಿಲಿಟರಿ ಇನ್ಫ್ಲ್ಯೂಯನ್ಸ್ ಬಳಸಿಯಾದ್ರು ಪರವಾಗಿಲ್ಲ, ಸತ್ಯ ಏನೂಂತ ತಿಳ್ಕೊಂಡು ಸಾಕ್ಷಿ ಸಮೇತ ವಾಪಸ್ ಬರ್ತಿನಿ. ಆದರೆ ಅಲ್ಲಿಯವರೆಗೂ ಹರ್ಷನನ್ನ ಕಾಪಾಡುವ ಜವಾಬ್ದಾರಿ ನಿಮ್ಮದು. ಜೊತೆಗೆ ಅವನ ಸುತ್ತಮುತ್ತ ಏನಾದ್ರೂ ಅವ್ಯವಹಾರ ನಡಿತಿದ್ರೆ, ಅನುಮಾನಾಸ್ಪದ ವ್ಯಕ್ತಿಗಳು ಕಂಡ್ರೆ ತಕ್ಷಣ ನನಗೆ ತಿಳಿಸಿ" ಕಂಚಿನ ಕಂಠದಿಂದ ಆಜ್ಞಾಪಿಸಿದರು

"ಶ್ಯೂರ್ ಸರ್. ನಾನು ಇನ್ಮುಂದೆ ಸದಾ ಅವನ ಜೊತೆಗೆ ಇದ್ದು, ಏನೇ ಮಾಹಿತಿ ಇದ್ದರೂ ನಿಮಗೆ ತಿಳಿಸ್ತಿನಿ." ಗಾಂಭೀರ್ಯದಿಂದ ನುಡಿದ. ಮನಸ್ಸನಾಳದಲ್ಲಿ ಬೇರೆ ಚರ್ಚೆ ನಡೆದಿತ್ತು.

'ಮಾನ್ವಿಯ ಕಣ್ಣೀರು ಅವಳ ಪಶ್ಚಾತ್ತಾಪ, ಆಸ್ಪತ್ರೆಯಿಂದ ಕಾಣೆಯಾದ ರಿಪೋರ್ಟ್, ಹರ್ಷನಿಗೆ ಕೊಡಲಾಗುವ ಮೆಡಿಸಿನ್, ಆಸ್ಪತ್ರೆಗೆ ಬಂದು ಹೋದ ಯುವಕ, ಎಲ್ಲವನ್ನೂ ವಿಶ್ಲೇಷಿಸಿದಾಗ ಪ್ರಸನ್ನನಿಗೆ ಅನಿಸಿದ್ದು.. ಹರ್ಷನ ಕೊಲೆ ಹಿಂದೆ ಖಂಡಿತ ರಘುನಂದನ್ ಕೈವಾಡ ಇದೆ. ಆದರೆ ಹರ್ಷನನ್ನ ಮಾನ್ವಿ ಪ್ರೀತಿಸ್ತಿದಾಳೆ ಅನ್ನೋ ಕಾರಣಕ್ಕೆ ಅವನಿಗೆ ಜೀವ ಭಿಕ್ಷೆ ಸಿಕ್ಕಿರಬಹುದು. ಅಂದ್ರೆ ಮಾನ್ವಿಗೆ ಎಲ್ಲಾ ವಿಷಯ ಗೊತ್ತು. ಆದರೆ ತಂದೆ ಮೇಲಿನ ಅಕ್ಕರೆಯಿಂದ ನಿಜ ಬಾಯಿ ಬಿಡುತ್ತಿಲ್ಲ. ಅವರಪ್ಪನ್ನ ಕನ್ವೆನ್ಸ್ ಮಾಡಿ ಹರ್ಷನ ಲೈಫ್ ಸರಿ ಮಾಡೋದು ಅವಳಿಗೆ ಚಿಟಿಕೆ ಹೊಡೆದಷ್ಟು ಸುಲಭದ ಕೆಲಸ. ಅದುಬಿಟ್ಟು ಇಷ್ಟೆಲ್ಲಾ ಹೈಡ್ರಾಮಾ ಮಾಡೋ ಅಗತ್ಯ ಏನಿದೆ? ಅಂದರೆ ಅವಳು ಹರ್ಷನ್ನ ನಿಜವಾಗಿಯೂ ಪ್ರೀತಿಸ್ತಿದ್ದಾಳಾ?? ಹಾಗಿದ್ರೆ ನೆನಪಿನ ಮಾತ್ರೆ ಕೊಡುವ ಉದಾರ ಕೆಲಸ ಯಾಕೆ? ಏನು ಮಾಡಬೇಕೆಂದು ಯೋಚಿಸಿದ್ದಾಳೆ ಇವಳು? ಪೀಡೆ ಪಿಶಾಚಿ ರಾಕ್ಷಸಿ ಬ್ರಹ್ಮ ರಾಕ್ಷಸಿ... ಇವಳ ಬಗ್ಗೆಯೇ ಹೀಗೆ ಯೋಚನೆ ಮಾಡ್ತಿದ್ರೆ ನನಗೆ ಹುಚ್ಚು ಹಿಡಿಯೋದಂತೂ ಗ್ಯಾರೆಂಟಿ‌... ಡ್ರಾಪ್ ಇಟ್ ಪ್ರಸನ್ನ' ಕ್ರಾಪ್‌ನಲ್ಲಿ ಕೈಯಾಡಿಸಿಕೊಂಡ

"ಏನ್ ಯೋಚನೆ ಮಾಡ್ತಿದ್ದೀರಾ ಪ್ರಸನ್ನ? ಎನಿ ಪ್ರಾಬ್ಲಮ್"

"ನಥಿಂಗ್ ಸರ್. ಆದಷ್ಟು ಬೇಗ ಹರ್ಷನ ರಿಪೋರ್ಟ್ ಕಲೆಕ್ಟ್ ಮಾಡ್ಬೇಕು, ಆದ್ರೆ ಹೇಗೆ ಅಂತ ಯೋಚಿಸ್ತಿದ್ದೆ. ಈ ಕೇಸ್ ಗೆ ಇನ್ನೊಬ್ಬ ಮುಖ್ಯವಾದ ಪ್ರತ್ಯಕ್ಷ ಸಾಕ್ಷಿಯಂದ್ರೆ ಡಾ.ಪಟ್ಟಾಭಿರಾಂ. ಅವನನ್ನ ಹೇಗಾದರೂ ಮಾಡಿ ಇಲ್ಲಿಗೆ ಬರೋ ಹಾಗೆ ಮಾಡ್ಬೇಕು."

"ಅದ್ಕೆ ನನ್ನ ಹತ್ತಿರ ಒಂದು ಐಡಿಯಾ ಇದೆ." ಅಷ್ಟೊತ್ತು ಎಲ್ಲವನ್ನೂ ಗಮನಿಸುತ್ತಿದ್ದ ವಿವೇಕ್ ಕೂಗಿದ.
"ಅಂಕಲ್ ನಿಮ್ಮ ಇನ್ಸ್ಟಿಟ್ಯೂಟ್ ನಲ್ಲಿ ಒಂದು ಕಲ್ಚರಲ್ ಪ್ರೋಗ್ರಾಂ ಇದೆಯಂತ ಹೇಳಿ, ಅದಕ್ಕೆ ನೀವೇ ಅತಿಥಿಯಾಗಿ ಬರಬೇಕು ಅಂತ ಪಟ್ಟಾಭಿರಾಂನ ಆಮಂತ್ರಿಸೋದು‌.. ಸನ್ಮಾನ ಮಾಡ್ತಿವಿ ಅಂದ್ರೆ ಬರದೇ ಇರ್ತಾನಾ.. ಬಂದಾಗ ಸರ್ಯಾಗಿ ಮಾಡಿದ್ರಾಯ್ತು, ಸನ್ಮಾನ.." ಮುಷ್ಟಿ ಬಿಗಿದ

"ಈಗವನು ಎಲ್ಲಿದ್ದಾನೆ? ಏನ್ಮಾಡ್ತಿದ್ದಾನೆ?" ಕೇಳಿದರು ಮೇಜರ್

"ಅದನ್ನೆಲ್ಲ ನಾನು ಡಿಟೆಕ್ಟ್ ಮಾಡಿ ನಿಮಗೆ ತಿಳಿಸ್ತಿನಿ. ನೀವು ಕಾಲ್ ಮಾಡಿ ಮಾತಾಡಿದ್ರೆ ಆಯ್ತು" ವಿವೇಕ್ ಆ ಜವಾಬ್ದಾರಿ ಹೊತ್ತ

"ಸರಿ ಹಾಗಿದ್ರೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಅವನನ್ನ ಟ್ರಾಪ್ ಮಾಡು. ಮುಂದಿನದು ನಾನು ನೋಡಿಕೊಳ್ತಿನಿ" ಅವರು ಪೆನ್‌ಡ್ರೈವ್ ತೆಗೆದುಕೊಂಡು ಹೊರಡಲು ಅನುವಾದರು.

"ಸರ್. ಯಾವುದೇ ಕಾರಣಕ್ಕೂ ಈ ಕೇಸ್ ಬಗ್ಗೆ ವಿಚಾರಣೆ ಮಾಡ್ತಿರೋದಾಗ್ಲಿ, ಪಟ್ಟಾಭಿರಾಂ ಇಲ್ಲಿಗೆ ಬರುತ್ತಿರೋ ವಿಚಾರವಾಗಲಿ, ಪಬ್ಲಿಕ್ ಆಗದಿರೋ ಹಾಗೆ...." ಪ್ರಸನ್ನನ ಮಾತಿನ ಮಧ್ಯೆಯೇ ಅವರು..

" ಡೋಂಟ್ ವರಿ ಯಂಗ್‌ಮ್ಯಾನ್.. ನನ್ನ ಅನುಭವದಷ್ಟು ನೀನಿನ್ನು ಕ್ಯಾಂಡಲ್ ಬೆಳಗಿಲ್ಲ" ನಕ್ಕು ಭುಜ ತಟ್ಟಿ ಹೋದರು.

"ಏನ್ ಹಾಗಂದ್ರೆ? ಅನುಭವಕ್ಕೂ ಕ್ಯಾಂಡಲ್‌ಗೂ ಏನೋ ಸಂಬಂಧ" ವಿವೇಕ್ ತಲೆ ಕೆರೆದುಕೊಂಡ

"ಅವರಿಗಿರೋ ವರ್ಕ್ ಎಕ್ಸ್ಪಿರಿಯನ್ಸ್ ಮುಂದೆ ನಾನಿನ್ನು ಚಿಕ್ಕವನು ಅಂತ ಅದರರ್ಥ" ಅವನನ್ನ ಅಡಿಯಿಂದ ಮುಡಿಯವರೆಗೆ ದಿಟ್ಟಿಸಿದ ವಿವೇಕ್...

"ಯಾರು.. ನೀನಾ.. ಊದುಕಡ್ಡಿ ಕೊಟ್ರೆ ಊರಿಗೆ ಬೆಂಕಿ ಹಚ್ಚಿ ಬರ್ತಿಯಾ! ನೀನು ಚಿಕ್ಕವನಾ.." ನಕ್ಕ. ಅವನ ವ್ಯಂಗ್ಯಕ್ಕೆ ಪ್ರತಿಕ್ರಿಯಿಸುವ ವ್ಯವಧಾನ ಪ್ರಸನ್ನನಿಗೆ ಇರಲಿಲ್ಲ. ಆತ ಪರಿಯೆಡೆ ಕಣ್ಣಲ್ಲೇ ಭರವಸೆಯ ನೋಟ ಬೀರಿ ಅವಸರದಿ ಮನೆ ಕಡೆಗೆ ಧಾವಿಸಿದ.

ಇಲ್ಲಿಯವರೆಗೆ ಹರ್ಷನದು ಆಕಸ್ಮಿಕವಾಗಿ ನಡೆದ ಅಪಘಾತ ಎಂದು ಭಾವಿಸಿದ್ದ ಪರಿ ಅದು ಕೊಲೆಯ ಪ್ರಯತ್ನ ಎಂದು ತಿಳಿದು ಕಂಗಾಲಾಗಿ ಹೋಗಿದ್ದಳು. ಮಾಡಿದ್ದು ಯಾರು? ಯಾಕೆ? ಏನು ಸಾಧಿಸಲು? ಎಂಬ ಪ್ರಶ್ನೆಗಳು ಆಕೆಯನ್ನು ಬಿಡದೆ ಕಾಡಿದವು. ಶತೃವನ್ನು ಬುಡ ಸಮೇತ ಕೀಳದಿದ್ದರೆ ಭವಿಷ್ಯದಲ್ಲಿ ಮತ್ತೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಆಕೆಯ ನೆಮ್ಮದಿಯನ್ನು ಕಸಿದಿತ್ತು. ಆಕೆಯ ಯೋಚನೆ ಬೇರೆ ದಿಶೆಯಲ್ಲಿ ಸಾಗಿತ್ತು.

'ರಘು ಅಂಕಲ್.. ಒಬ್ಬ ಪರ್ಫೆಕ್ಟ್ ಬ್ಯುಸಿನೆಸ್ ಮ್ಯಾನ್. ಅವರಿಗೆ ಬ್ಯುಸಿನೆಸ್ ವಿಚಾರದಲ್ಲಿ ಹರ್ಷನ ಮೇಲೆ ಏನಾದ್ರೂ ಕೋಪವಿತ್ತಾ!' ಈ ವಿಚಾರ ಹೊಳೆದಿದ್ದೆ ತಕ್ಷಣ ತನ್ನ ಮಾವ ವಿನಾಯಕರಿಗೆ ಕರೆ ಮಾಡಿದ್ದಳು.

"ಹಲೋ.. ಮಾವ.. ಲಾಸ್ಟ್ ಇಯರ್ ಹರ್ಷ  ಕಂಪನಿ ಪ್ರಾಜೆಕ್ಟ್ ಗೋಸ್ಕರ ಮುಂಬೈ ಬಂದಿದ್ನಲ್ವ.. ಆ ಪ್ರಾಜೆಕ್ಟ್ ಗಾಗಿ ಬೇರೆ ಯಾವ ಯಾವ ಕಂಪನಿಗಳು ಟೆಂಡರ್ ಅಪ್ಲೈ ಮಾಡಿದ್ದವು? ಆ ಡೀಟೆಲ್ಸ್ ನನಗೆ ಮೇಲ್ ಮಾಡಿ ಬೇಗ" ಅವಸರಿಸಿದಳು

"ಹೇ.. ಪುಟ್ಟ ಹೇಗಿದ್ದಿಯೋ.. ಹೋಗಿ ಮೂರು ದಿನಗಳ ನಂತರ ಕಾಲ್ ಮಾಡಿದಿಯಾ, ಅದು ಇಷ್ಟು ಆತುರದಲ್ಲಿ.. ಏನು ವಿಷಯ?" ಮೆಲ್ಲಗೆ ಜಾರುತ್ತಿದ್ದ ಸೂರ್ಯನನ್ನು ನೋಡುತ್ತ ಕಾರು ಹತ್ತುತ್ತಿದ್ದ ವಿನಾಯಕ ಕೇಳಿದರು. ಕಾರು ಚಲಿಸಿತು.

"ಮಾವ, ನಾನು ಚೆನ್ನಾಗಿದ್ದಿನಿ. ಆದ್ರೆ ಹರ್ಷ... " ಎಂದು ಮಾತು ತೊದಲಿಸಿ ನಿಂತಿತು.

"ಪ್ಚ್.... ಅಲ್ಲಿ ಹೋದರೂ ನೀನಿನ್ನು ಅವನದೇ ಧ್ಯಾನದಲ್ಲಿದ್ದಿಯಾ.." ಅವರೂ ಸಹ ಮರೆಯಲು ಹೆಣಗಾಡಿ ಪರಿತಪಿಸುತ್ತಿರುವ ಮಗನ ನೆನಪು ಮತ್ತೆ ಎದೆಗೆ ಚುಚ್ಚಿ ಘಾಸಿಯಾಯಿತವರಿಗೆ. ರೇಗಿದರು.
" ಅವನಿಲ್ಲ ಪರಿ. ನೀನೆಷ್ಟೆ ಅತ್ತರೂ ಗೋಗರೆದರೂ ಅವನು ಮರಳಿ ಬರಲ್ಲ. ಅವನು ಸತ್ತು ಹೋಗಿ....

" ನೋ ಮಾವಾ.... ಹರ್ಷ ಬದುಕಿದ್ದಾನೆ‌. ಕ್ಷೇಮವಾಗಿದ್ದಾನೆ. ಪ್ಲೀಸ್ ಇನ್ಯಾವತ್ತೂ ಹೀಗೆಲ್ಲ ಮಾತಾಡ್ಬೇಡಿ." ಅವರಿಗಿಂತ ಜೋರಾಗಿ ನುಡಿದಳು.

"ಪರಿ ಏನಾಗಿದೆ ನಿನಗೆ? ಯಾಕೆ ಹೀಗೆಲ್ಲ ಹೇಳಿ ಮತ್ತೆ ಮತ್ತೆ ನನ್ನ ಎದೆಯುರಿಸಿ ನರಳಿಸ್ತಿಯಾ"
ಎತ್ತಿ ಮುದ್ದಾಡಿದ, ಭುಜದೆತ್ತರ ಬೆಳೆದ ಮಗನ ಚಿತೆಗೆ ಸಾಕ್ಷಿಯಾದ ಹೃದಯಕ್ಕೆ ಇನ್ನೂ ದುಃಖ ಸಹಿಸಲು ಹಿಂಸೆಯಾಯಿತು. ಅವರ ಗಧ್ಘದಿತ ಕಂಠ ಅವಳನ್ನ ದುರ್ಬಲಗೊಳಿಸಿತು. ಇನ್ನೂ ಅವರೆದುರು ವಿಷಯ ಮುಚ್ಚಿಡುವುದು ಸರಿಯಲ್ಲವೆನಿಸಿತು. ಆ ಕೂಡಲೇ ಮಂಗಳೂರಿನಲ್ಲಿ ಹರ್ಷನನ್ನ ಕಂಡಾಗಿನಿಂದ ಇಲ್ಲಿಯವರೆಗೂ ನಡೆದ ಎಲ್ಲವನ್ನೂ ಮರೆಮಾಚದೆ ಅವರ ಮುಂದೆ ವರದಿ ಒಪ್ಪಿಸಿದಳು. ಈಗಲೇ ಮನೆಯಲ್ಲಿ ಯಾರಿಗೂ ವಿಷಯ ಹೇಳದಂತೆ ವಿನಂತಿಸಿದಳು ಕೂಡ.

ನೋವಿನಿಂದ ಬಳಲುತ್ತಿದ್ದ ಹೃದಯಕ್ಕೆ ಒಮ್ಮೆಗೆ ಮಗನ ಜೀವಂತಿಕೆಯ ಸುವಿಚಾರ ಸಂತೋಷದ ಬುಗ್ಗೆಯನ್ನು ತಂದೊಡ್ಡಿತು. ಮೈ ನವಿರೆದ್ದು, ಕಣ್ಣ ಹನಿಗಳು ಆನಂದದಿ ಜಿನುಗಿದವು. ನಂಬಲು ಅಸಾಧ್ಯ ಆದರೆ ಕೇಳಲು ತುಂಬಾ ಹಿತಕರವಾದ ಆ ವಾಸ್ತವಕ್ಕೆ ಅವರು ಬೆರಗಾದರು. ಒಂದು ಘಳಿಗೆ ಮಗನ ಯೋಗಕ್ಷೇಮ ವಿಚಾರಿಸಿದ ಅವರು, ಮಗನ ಹಂತಕನನ್ನು ಕಠೋರ ಶಿಕ್ಷೆಗೆ ಒಳಪಡಿಸಬೇಕೆಂದು ನಿರ್ಧರಿಸಿ ಕರೆ ತುಂಡರಿಸಿದರು, ಕಾರನ್ನು ಆಫೀಸಿನೆಡೆ ತಿರುಗಿಸಲು ಹೇಳಿದರು. ಪ್ರಾಜೆಕ್ಟ್ ಸಂಬಂಧಿ ಕಡತಗಳನ್ನು ರಭಸದಿಂದ ಹುಡುಕತೊಡಗಿದರು. ಮಗನ ಇರುವಿಕೆಯ ಸಿಹಿಸುದ್ದಿ ಅವರ ವಯ್ಯಸ್ಸನ್ನು ಕಡಿಮೆ ಮಾಡಿ ಹುಮ್ಮಸ್ಸನ್ನು ಹೆಚ್ಚಾಗಿಸಿತ್ತು.

***********


ಆ ಸಂಜೆ ಪ್ರಸನ್ನ ಮರಳಿ ಬಂದಾಗ ಮನೆ ಮೂಕವಾಗಿತ್ತು. ಸ್ಟೋನಿಯ ಬೊಗಳುವಿಕೆ ಇಲ್ಲ. ಜಾನಕಮ್ಮ ಡೇವಿಡ್ ಹರ್ಷ ಮಾನ್ವಿ ಯಾರೂ ಕಾಣಲಿಲ್ಲ. ಅಷ್ಟರಲ್ಲಿ ಮೆಟ್ಟಿಲಿಳಿದು ಬಂದ ಡೇವಿಡ್‌ನನ್ನು ನೋಡಿ
"ಎಲ್ಲರೂ ಎಲ್ಲಿ?" ಕೇಳಿದ.

"ಮ್ಯಾಮ್ ಗೆ ಹುಷಾರಿಲ್ಲ. ಮೇಲೆ ಮಲಗಿದಾರೆ. ಸಂಕಲ್ಪ್ ಸರ್ ಕೂಡ ಅವರ ಜೊತೆಗಿದ್ದಾರೆ" ಖಾಲಿ ಟ್ರೇ ಹಿಡಿದು ಹೋದನವ

'ಇವಳಿಗೇನಾಯ್ತು ಈಗ' ಎಂದುಕೊಳ್ಳುತ್ತ ಕೋಣೆಗೆ ಕಾಲಿಟ್ಟ ಪ್ರಸನ್ನನನ್ನು ಕಂಡ ಕೂಡಲೇ ಸ್ಟೋನಿ ಆರ್ಭಟ ಶುರುವಾಯಿತು. ಪ್ರಸನ್ನ ಒಂದು ಆ್ಯಂಗ್ರೀ ಲುಕ್ ಕೊಟ್ಟ ತಕ್ಷಣ ತೆಪ್ಪಗಾಯಿತದು.ಮಾನ್ವಿ ಬೆಡ್ ಮೇಲೆ ಮುಲುಗುತ್ತ ಮಲಗಿದ್ದಳು.

"ಯಾವ ಸೀಮೆ ಡಾಕ್ಟ್ರೇ ನೀನು.. ಯಾವಾಗಲೂ ಪೇಷಂಟ್ ಹಾಗೆ ನರಳ್ತಾನೆ ಇರ್ತಿಯಲ್ಲ. ಏನ್ ದೊಡ್ರೋಗ ಬಂತೀಗ??" ಅವನು ಅವಳ ಯೋಗ ಕ್ಷೇಮ ವಿಚಾರಿಸುವ ರೀತಿಯದು.

"ನಾನು ಹೇಳಿದ್ದೆ ತಾನೇ ಉಪವಾಸ ವನವಾಸ ಬೇಡಾಂತ. ಈಗ ನೋಡು ಮತ್ತೆ ಹೊಟ್ಟೆ ನೋವಂತೆ.. ಬಹುಶಃ ಉಪವಾಸ ಮಾಡಿದ್ದಕ್ಕೆ ಇರಬಹುದು" ಅವಳ ಪಕ್ಕದಲ್ಲಿ ಕುಳಿತು ತಲೆ ನೇವರಿಸುತ್ತ ನುಡಿದ ಹರ್ಷ. ಆ ಮಾತಿಗೆ ಗಹಗಹಿಸಿ ನಕ್ಕು ಬಿಟ್ಟ ಪ್ರಸನ್ನ.

"ಇವಳ ಉಪವಾಸ ನೋಡೋಕೆ ಎರಡು ಕಣ್ಣು ಸಾಲದು. ನೋಡಿಲ್ಲಿ ವಿಡಿಯೋ..." ತೋರಿಸಿದ‌. ಮಾನ್ವಿ ಗಬಗಬನೆ ತಿನ್ನುತ್ತಿದ್ದಳು. ತಿನ್ನುತ್ತಿದ್ದಳು, ತಿನ್ನುತ್ತಲೇ ಇದ್ದಳು..

'ಇವನು ಇದನ್ನೆಲ್ಲ ವಿಡಿಯೋ ಬೇರೆ ಮಾಡಿದ್ದಾನಾ' ಮಾನ್ವಿ ಪ್ರಸನ್ನನನ್ನು ಗುರಾಯಿಸಿದಳು.

"ಈ ರೀತಿ ಯದ್ವಾತದ್ವಾ ತಿಂದ್ರೆ ಹೊಟ್ಟೆ ನೋವು ಬರದೆ ಇನ್ನೇನಾಗುತ್ತೆ" ವಿಡಿಯೋ ನೋಡಿ ಹರ್ಷ ಉದ್ಘರಿಸಿದ.

"ನಾನು ತಿಂದಿದ್ದಕ್ಕಲ್ಲ ಹೊಟ್ಟೆ ನೋವು ಬಂದಿದ್ದು. ಇವನು ಕೆಕ್ಕರಿಸಿಕೊಂಡು ನೋಡಿದ್ದಕ್ಕೆ ದೃಷ್ಟಿ ಆಗಿ ಬಂದಿದೆ.''

" ಹ್ಮೂ... ನನ್ನ ದೃಷ್ಟಿ ತಾಕಿ ಬಂದಿರೋ ಹೊಟ್ಟೆ ನೋವನ್ನ ನಾನೇ ವಾಸಿ ಮಾಡ್ತಿನಿ. ನೀ ಬಾರಲೋ ಈಕಡೆ" ಶರ್ಟಿನ ಎರಡು ತೋಳುಗಳನ್ನು ಮೊಣಕೈವರೆಗೂ ಮಡಚುತ್ತ ಹರ್ಷನಿಗೆ ಹೇಳಿದ.
"ಲವ್ವಂತೆ ಲವ್ವು,, ಹುಡುಗನಿಗಾಗಿ ಅರ್ಧ ದಿನ ಕೂಡ ಉಪವಾಸ ಮಾಡಲಾಗಲಿಲ್ಲ."

"ಅವಳಿಗೆ ವ್ರತ ನಿಯಮ ಉಪವಾಸ ಆಚರಣೆ ಇವೆಲ್ಲ ಅಭ್ಯಾಸ ಇಲ್ಲ ಕಣೋ.. ಸುಮ್ನೆ ಒತ್ತಾಯ ಮಾಡಬೇಡ" ಹೇಳುತ್ತ ಹರ್ಷ ಜಾಗ ಬಿಟ್ಟು ಕೊಟ್ಟ. ತಾನು ಪಕ್ಕದಲ್ಲಿದ್ದ ಮೆತ್ತಗಿನ ಸ್ಪಂಜ್ ಚೇರ್ ಮೇಲೆ ಕುಳಿತ. ಕೆಳಗೆನೋ ಇದ್ದಂತೆ ಅನ್ನಿಸಿ ಎದ್ದು ನೋಡಿದ. ಮಾನ್ವಿಯ ಜಾಕೆಟ್ ಮುದುರಿಕೊಂಡಿತ್ತು. ಎತ್ತಿ ಕೈಯಲ್ಲಿ ಹಿಡಿದು ಕುಳಿತುಕೊಂಡ.

ಇದನ್ನು ಕಂಡ ಮಾನ್ವಿ ಶಾಕ್ ತಗುಲಿದಂತೆ ಧಿಗ್ಗನೇ ಎದ್ದು ಕುಳಿತಳು. 'ಬೆಳಿಗ್ಗೆ ಪರಿ ಕಳಿಸಿದ ಲೆಟರ್ ಅದರಲ್ಲೇ ಇತ್ತು. ಹರ್ಷನ ಕೈಗೆ ಸಿಕ್ಕರೇ!! ಏನು ಬರೆದಿದ್ದಾಳೋ ಏನೋ, ಒಮ್ಮೆ ಓದ್ಬೇಕಿತ್ತು, ಛೇ,..' ಹಳಿದುಕೊಂಡಳು

"ಏನಾಯ್ತು? ಮಲ್ಕೊ,, ಮತ್ತೆ ಹಸಿವಾಗ್ತಿದೆಯಾ??" ಅವಳ ಕೈ ಹಿಡಿದು ಮಲಗಿಸಲು ಹೋದ ಪ್ರಸನ್ನನ ಕೈ ಸರಿಸಿ ಹಿಂದೆ ನೂಕಿದಳು

"ನಾನು ತಗೋಬೇಕಾದ ಮೆಡಿಸನ್ ತಗೊಂಡಿದಿನಿ.. ನೀನು ಯಾವುದೇ ತೊಂದರೆ ತಗೊಬೇಡ ಒಕೆ" ಆಕೆಯ ನೋಟ ಜಾಕೆಟ್ ಮೇಲೆಯೇ  ನೆಟ್ಟಿದ್ದು ನೋಡಿ ಪ್ರಸನ್ನ ಗಡ್ಡ ಕೆರೆದುಕೊಂಡ

"ಬ್ರೋ ಆ ಜಾಕೆಟ್ ಒಳಗೆ ಏನೋ ಇದೆ ಅನ್ನಿಸ್ತಿದೆ. ಏನಾದ್ರೂ ತಿನ್ನೋ ಐಟಮ್ ಬಚ್ಚಿಟ್ಟಿದ್ದಾಳಾ ನೋಡು.." ಪ್ರಸನ್ನ ಹೇಳಿದ್ದೇ ಮಾನ್ವಿ

''ನೋ... ಏನಿಲ್ಲ..'' ಎಂದು ಕಿರುಚಿದಳು. ಹರ್ಷನಿಗೂ ಕುತೂಹಲ ಕೆರಳಿತು. ತಕ್ಷಣ ಜಾಕೆಟ್ ಕೊಡವಿದ. ಜೇಬಿಗೆ ಕೈ ಹಾಕುವ ಮೊದಲೇ  ಒಳಗಿದ್ದ ಲೆಟರ್ ಜಾರಿ ಅವನ ಕಾಲಡಿಯಲ್ಲಿ ಬಿದ್ದಿತು.

"ಹೇಯ್.... ಮಾನು ಐ ಗಾಟ್ ದಿ ಲೆಟರ್" ಅದನ್ನು ಕೈಗೆತ್ತಿಕೊಂಡ ಹರ್ಷ ಖುಷಿಯಿಂದ ಕೂಗಿದ. ಮಾನ್ವಿ ರಪ್ಪನೇ ಬೊಗಸೆಯಲ್ಲಿ ಮುಖ ಹುದುಗಿಸಿದಳು.

ಪ್ರಸನ್ನ ಚಪ್ಪಾಳೆ ತಟ್ಟಿ "ಓಹೋ‌... ಇದನ್ನ ಮುಚ್ಚಿಟ್ಟಿದ್ದಳಾ! ಅಂತೂ ಸಿಕ್ತಲ್ಲ, ಇದನ್ನ ಇಲ್ಲಿಯೇ ಓದಿದ್ರೆ ಇವಳಿಗೆ ನಾಚಿಕೆ ಆಗಬಹುದು ನಿನ್ನ ರೂಮಿಗೆ ಹೋಗಿ, ಪ್ರಶಾಂತವಾಗಿ ಓದು.."  ಹರ್ಷ ಸರಿಯೆಂಬಂತೆ ಕತ್ತು ಹಾಕಿ ಅಲ್ಲಿಂದ ನಿರ್ಗಮಿಸಿದ.

"ಪ್ಚ್, ಪ್ಚ್, ಮಾನು.... ನಿನಗೆ ಹೀಗಾಗಬಾರದಿತ್ತು.. ಗಿಳಿಯೂ ಪಂಜರದೊಳಿಲ್ಲ, ಮಾನೂ.. ಮಾನೂ...." ಕರ್ಕಶವಾಗಿ ಆಲಾಪಿಸಿದ.

"ಜಸ್ಟ್ ಸ್ಟಾಪ್ ಇಟ್!! ಕೆಳಕ್ಕಾಗ್ತಿಲ್ಲ. ಎಷ್ಟು ಕೆಟ್ಟದಾಗಿ ಹಾಡ್ತಿಯಾ.."

"ನನ್ನ ಹಾಡು ಬಿಟ್ಟಾಕು.. ನಿನ್ನ ಪ್ರೀತಿಯ ಹುಡುಗ ಕೈ ಜಾರಿ ಹೋಗ್ತಿದಾನೆ. ಬೇಜಾರಾಗ್ತಿಲ್ವಾ?" ಅವಳ ಅಂತರಾಳ ತಿಳಿಯಲು ಯತ್ನಿಸಿದ

"ಇದಕ್ಕೆಲ್ಲ ನೀನೇ ತಾನೇ ಕಾರಣ.. ನನಗೆ ಊಟದಲ್ಲಿ ಕೂಡ ಏನೋ ಬೆರೆಸಿದ್ದೆ ಅನ್ಸುತ್ತೆ ಅದ್ಕೆ ಹೀಗಾಗ್ತಿದೆ.." ಹೊಟ್ಟೆ ಅಮುಕಿಕೊಂಡಳು.
" ನಿನ್ನ ಮಾತ್ರ ಸುಮ್ಮನೆ ಬಿಡಲ್ಲ.."  ದಿಂಬು ತೆಗೆದುಕೊಂಡು ಅವನತ್ತ ಬೀಸಿದಳು. ಅದ್ಯಾವ ಮಹಾ ಎಂಬಂತೆ ಆತ ಮುಗುಳ್ನಕ್ಕು ಕ್ಯಾಚ್ ಹಿಡಿದ.
" ಒಂದು ವೇಳೆ ಊಟದಲ್ಲಿ ನಾನೇನಾದ್ರೂ ಬೆರೆಸಿ ಕೊಟ್ಟಿದ್ರೆ ನಿನಗೆ ರೆಸ್ಟ್ ತಗೋಳೋ ಅವಶ್ಯಕತೆ ಇರ್ತಿರ್ಲಿಲ್ಲ. ಡೈರೆಕ್ಟ್ ರೆಸ್ಟ್ ಇನ್ ಪೀಸ್ ಆಗೋಗ್ತಿದ್ದೆ" ನಕ್ಕನವ. ಅವಳ ಕೋಪ ತೀವ್ರವಾಯಿತು

ಅವನನ್ನ ಬೆಡ್ ಮೇಲೆ ಹಿಡಿದೆಳೆದು ಅವನ ಮುಖಕ್ಕೆ ದಿಂಬು ಒತ್ತಿ ಉಸಿರಾಡದಂತೆ ಬಿಗಿಯಾಗಿ ಗುದ್ದಿದಳು, ಶಕ್ತಿ ಮೀರಿ ಹಿಸುಕಿದಳು. ಆದರೂ ಅವಳ ಮೃದು ಹಿಡಿತದಿಂದ ಬಿಡಿಸಿಕೊಳ್ಳುವುದು ಅವನಿಗೆನೂ ಕಷ್ಟವಾಗಲಿಲ್ಲ.

"ನಿಮ್ಮಪ್ಪನ ಬುದ್ದಿನೇ ಬಂದಿದೆಯಲ್ಲೇ ನಿನಗೆ! ಅವರು ಸುಪಾರಿ ಕೊಟ್ಟು ಕೊಲ್ಲಿಸಿದ್ರೆ, ನೀನು ಡೈರೆಕ್ಟಾಗಿ ಕೊಲ್ತಿಯಾ ಭೇಷ್!" ಏದುಸಿರು ಬಿಡುತ್ತ ಕೂದಲು ಸರಿ ಮಾಡಿಕೊಂಡನವ. ತಕ್ಷಣ ಅವಳು ಕೈಯಲ್ಲಿನ ದಿಂಬು ಕೆಳಗೆ ಎಸೆದಳು.

* ಗೆಟ್ ಔಟ್" ಕಿರುಚಿದಳು

"ನಿಮ್ಮಪ್ಪ ಯಾವಾಗ ಬರ್ತಿದಾರೆ ? ನನಗೆ ಯಾವಾಗ ಅವರ ದರ್ಶನ ಭಾಗ್ಯ?"

"ಒಂದು ಸಲ ಹೇಳಿದ್ರೆ ಅರ್ಥ ಅಗಲ್ವ ತೊಲಗು ಅಂದೆ." ರೌದ್ರವಾಗಿತ್ತು ಅವಳ ಮುಖ

"ಹೊಟ್ಟೆ ನೋವು ಹೇಗಿದೆ ಈಗ? ನಿನ್ನೆ ಮಾಡಿದ ಕಷಾಯ ಮಾಡಿ ಕೊಡ್ಲಾ?" ಅವಳನ್ನ ಕೆಣಕಿದಷ್ಟು ಸಂತೃಪ್ತಿ ಅವನಿಗೆ. ಆಕೆ ಎದ್ದು ಬಂದು ಅವನನ್ನ ಆಚೆ ತಳ್ಳಿ ಬಾಗಿಲು ಮುಚ್ಚಿಕೊಂಡು ಒಂದೇ ಸಮನೆ ರೋಧಿಸಿದಳು.

"ಡಾ.ಕುಮಾರ್ ಕೂಡ ಇಲ್ಲಿಗೆ ಬಂದಿದಾರಂತೆ. ಒಮ್ಮೆ ಬಂದು ಹೋಗೋಕೆ ಹೇಳಲಾ?" ಹೊರಗಿನಿಂದ ಕೂಗಿದ. ಆಕೆ ಕ್ಷಣ ಅಳು ನಿಲ್ಲಿಸಿ ಡಾ.ಕುಮಾರ್ ಯಾರೆಂದು ಯೋಚಿಸಿದಳು. ಮೊದಲ ಭೇಟಿ ನೆನಪಾಯಿತು. ಡಾ.ಕುಮಾರ್ ಫೇಮಸ್ ಸೈಕ್ಯಾಟ್ರಿಸ್ಟ್!! ಮತ್ತೆ ಸಿಟ್ಟು ಬಂದಿತು. ಕೈಗೆ ಸಿಕ್ಕ ಫ್ಲವರ್ ವೇಸ್ ತೆಗೆದುಕೊಂಡು ಬಾಗಿಲಾಚೆ ಬೀಸಿ ಎಸೆದಳು. ಪ್ರಸನ್ನ ಸರಿದುಕೊಂಡ. ಅದು ಆಗತಾನೇ ಅಲ್ಲಿಗೆ ಬಂದ ಡೇವಿಡ್ ತಲೆಗೆ ಜೋರಾಗಿ ಅಪ್ಪಳಿಸಿತು. ಪ್ರಸನ್ನ ಅವನ ಹಣೆ ಮುಟ್ಟಿ ನೋಡಲು ಓಡಿದ. ಗಟ್ಟಿಯಾಗಿ ಹಣೆ ಒತ್ತಿಕೊಂಡ ಡೇವಿಡ್ ಅದಕ್ಕೆ ಆಸ್ಪದ ಕೊಡದೆ ಕೆಳಗಿಳಿದು ಹೋದ. ಹಣೆಗೆ ಚಿಕ್ಕ ಗಾಯವಾಗಿ ರಕ್ತ ಒಸರುತ್ತಿತ್ತು.

'ತುಜೇ ತೋ ಏಸಿ ಮೌತ್ ಮಾರುಂಗಾ ಕೀ ಮೌತ್ ಭಿ ಡರ್ ಸೇ ಕಾಪೇಗಿ' (ಸಾವು ಕೂಡ ಭಯದಿಂದ ನಡುಗಬೇಕು ಆ ರೀತಿ ಸಾಯಿಸ್ತಿನಿ ನಿನ್ನನ್ನು) ಹಲ್ಲು ಮಸೆಯುತ್ತ ಹಲುಬಿದನಾತ.



ಮುಂದುವರೆಯುವುದು..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...