ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-37


[ ಶುಭೋದಯ... 
                         ಮೌನದೊಳಗೆ ಹುದುಗಿ ಹೋದ ನನ್ನ ಭಾವನೆಗಳಿಗೆ ಭಾಷೆಯಾಗಿದ್ದ ಪ್ರಿಯ ಸಖನೇ... ಸೂರ್ಯ ಹೊತ್ತ ಹೊನ್ನ ಕಲಶದಿ, ಸುರಿವ ಪ್ರತಿಯೊಂದು ಬೆಳ್ಳಿ ಕಿರಣವೂ ನಿನ್ನ ಪಾಲಿಗೆ ಖುಷಿಯ ಸಿಂಚನವಾಗಲಿ ಎಂದು ಹಾರೈಸುವೆ...

ನಿನ್ನನ್ನು ಎಷ್ಟು ಅತಿಯಾಗಿ ಪ್ರೀತಿಸುತ್ತೇನೋ, ಅಷ್ಟೇ ತೀವ್ರವಾಗಿ ದ್ವೇಷಿಸುತ್ತೇನೆ ಕಣೋ.. ಇನ್ನೇನು ಮತ್ತೆ; ನಿನ್ನ ಪ್ರೀತಿಯನ್ನು ಈ ಪರಿಯಾಗಿ ರೂಢಿ ಮಾಡಿಸಿ, ಹೆಜ್ಜೆ ಹೆಜ್ಜೆಗೂ ಮಾಸದ ನೆನಪುಗಳ ಮೂಟೆಯನ್ನು ಹೊರಿಸಿ, ಇನ್ನೂ ನೀನಿಲ್ಲದೆ ಬದುಕಲಾರೆ ಎಂಬಂತಹ ಘಳಿಗೆಯಲ್ಲಿ ದಿಢೀರನೆ ಮಾಯವಾದರೆ! ಹೇಗೋ ಬದುಕಬೇಕೋ ಈ ಪುಟ್ಟ ಜೀವ?!  ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ಚೂರಾದರೂ ಸಿಟ್ಟು ಮುನಿಸು ತುಂಟತನ ಸಹಜವೇ ಬಿಡು! ಆದರೂ ಈ ಪರಿಯಾಗಿ ಕಾಣೆಯಾಗಿ ಕಾಡುವುದು ಸರಿಯಲ್ಲ ಕಣೋ..

ಪ್ರೀತಿ ಬಾಂಧವ್ಯದ ಅರ್ಥವೇ ಅರಿಯದಿದ್ದಾಗಲೂ ಜೊತೆಯಾಗಿ ಆಡಿಕೊಂಡವರು ನಾವು.. ಅದಾವ ಘಳಿಗೆ ಸಂಬಂಧದ ಮೊದಲ ಹೆಜ್ಜೆಯ ಪ್ರತೀಕವಾಗಿ, ಬೆರಳ ಉಂಗುರ ಬದಲಿಸಿದೆವೋ.. ಬಯಲಾದ ಪ್ರೀತಿಗೆ, ಜಗದ ಕೆಟ್ಟ ದೃಷ್ಟಿ ತಾಗಿತ್ತು ಎನಿಸುತ್ತದೆ. ನೀ ನನ್ನಿಂದ ದೂರಾಗುತ್ತಲೇ ಹೋದೆ, ಹಂತ ಹಂತವಾಗಿ.. ಕೈಯಿಂದ.. ಸ್ಪರ್ಶದಿಂದ.. ನೋಟದಿಂದ.. ಮಾತುಗಳಿಂದ.. ಆದರೆ ಮನಸ್ಸಿನಿಂದಲ್ಲ.. ನೆನಪುಗಳಿಂದಲ್ಲ.. ಉಸಿರಿನಿಂದಲ್ಲ.. ಅದೃಷ್ಟವಶಾತ್ ಯಾವುದೋ ಮಾಯೆಯಂತೆ,, ಯಾವುದೋ ಜಾತಕ ಕಥೆಯೊಳಗಿನ ಪಾತ್ರದಂತೆ ನೀನು ಸಾವನ್ನು ಗೆದ್ದು ಬಂದೆ!! ಆದರೆ ನಾನು ಮಾತ್ರ ನಿನ್ನ ಪ್ರೀತಿಯನ್ನು ಸೋತು ಶಾಪಗ್ರಸ್ಥಳಾದೆ! ನಿನ್ನ ಮರೆವಿನಿಂದಾಗಿ..

ಮರೆವು ನಿನಗೆ ಶಾಪವೇನೋ! ಆದರೆ ನಿನ್ನ ನೆನಪೇ ನನಗೆ ವರವಾಗಿತ್ತು ನೋಡು.. ಬದುಕಿಗೆ ಯಾವತ್ತೋ ವಿದಾಯ ಹೇಳಬೇಕೆಂದುಕೊಂಡ ನಾನು ಇನ್ನೂ ಬದುಕುಳಿದಿರಲು ಕಾರಣವೇ,, ನಿನ್ನನ್ನು ಸಾಯುವಷ್ಟು ಅದಮ್ಯವಾಗಿ ಪ್ರೀತಿಸುತ್ತಿರುವುದು..!!

"ನನ್ನ ಜೀವ ನೀನು! ನನ್ನ ಹೃದಯ ನನ್ನಲ್ಲಿಲ್ಲ. ನಿನ್ನಲ್ಲಿದೆ! ನಿನ್ನ ಹೃದಯ ಮಿಡಿಯುವಷ್ಟು ಕಾಲ ನನ್ನ ಜೀವಕ್ಕೆ ಯಾವ ಹಾನಿಯೂ ಆಗಲ್ಲ ಕಣೇ"  ಎಂದು ನೀನೇ ಹೇಳಿದ್ದ ಮಾತೇ, ಇಲ್ಲಿಯವರೆಗೂ ನನ್ನನ್ನು ನಾನು ಪ್ರೀತಿಸುವಂತೆ ಮಾಡಿದೆ.  ನೀ ದೂರವಾದ ಕ್ಷಣದಿಂದ ನಾನು ಇನ್ನಿಲ್ಲದಂತೆ ಹಂಬಲಿಸಿದ್ದು, ನಿನ್ನನ್ನು ಮಾತ್ರವಲ್ಲ! ನೀನಿರದ ನನ್ನನ್ನು, ನನ್ನ ನಗುವನ್ನು, ನನ್ನ ಹರ್ಷವನ್ನು ಸಹ.. ಈ ಪರಿಯಾಗಿ ಆವರಿಸಿರುವೆ ಇನಿಯ,, ನೀ ನನ್ನೊಳಗೆ... ನೀನೇ ನಾನೆಂಬಂತೆ..

ನನ್ನನ್ನು ನನಗಿಂತಲೂ ತುಸು ಹೆಚ್ಚಾಗಿಯೇ, ನಿನ್ನದೇ ಉಸಿರೆಂಬಂತೆ ಪ್ರೀತಿಸಿದ್ದ ಹುಡುಗ ನೀನು.. ನಿನ್ನದೇ ಉಸಿರನ್ನು ಮರೆಯಲು ಸಾಧ್ಯವಾ ಹೇಳು.. !

ಹಳೆಯ ನೆನಪಿನ ದೋಣಿಯಲ್ಲಿ ಒಮ್ಮೆ ಹಾದು ಹೋಗು ಸಾಕು.. ರಿಂಗಣಿಸುವ ಮೊದಲ ಅಲೆ ನಾನಾಗಿರುವೆ..  ಮೌನದ ತಂಟೆ ತಕರಾರುಗಳಿಗೆ ಕಿವಿಯಾಗು.. ಕೇಳುವ ಮೊದಲ ಭಾಷೆಯೇ, ಪದವೇ ನಾನಾಗಿರುವೆ.. ನಿಶ್ಯಬ್ದತೆಯನ್ನು ಭಾಷಾಂತರ ಮಾಡಿ ಅರ್ಥೈಸಿಕೊಳ್ಳುವ ಗೋಜಿಗೆ ಹೋಗಬೇಡವೋ ಗೆಳೆಯ... ಸುಮ್ಮನೆ ನಿಶ್ಯಬ್ದದ ಕಥೆಗಳನ್ನು ಆಲಿಸಿ ಮನಸ್ಸಲ್ಲೇ ಆಹ್ಲಾದಿಸಿ ನೋಡು... ನಿನ್ನನ್ನು ನಿನ್ನಿಂದಲೇ ಭಾಗಿಸಿದರೂ ಕೂಡ ನಿನ್ನೊಳಗೆ ಉಳಿದು ಹೋಗುವ ಕೊನೆಯ ಅವಶೇಷ ನಾನು!! ಮತ್ತೆಲ್ಲೋ ಹುಡುಕದಿರು ನನ್ನ ನಿನ್ನಲ್ಲೇ ಅವಿತಿರುವೆ ನಾನು..

ಈ ಪ್ರೀತಿ ಬಗ್ಗೆ ನಿನಗೊಂದು ಕಥೆ ಗೊತ್ತಾ...

ಭಾವನೆಯನ್ನೋ ಲೋಕದಲ್ಲಿ ಪ್ರೀತಿ ತಾಳ್ಮೆ ಮತ್ತು ‌ನಂಬಿಕೆ ಅನ್ನೋ ಮೂರೂ ಒಳ್ಳೆಯ ಸ್ನೇಹಿತರಿದ್ದವಂತೆ. ಅವು ಯಾವಾಗಲೂ ಒಟ್ಟಿಗೆ ಒಂದಕ್ಕೊಂದು ಅಂಟಿಕೊಂಡು ಓಡಾಡಿಕೊಂಡು ಖುಷಿಯಿಂದ ಇದ್ದವಂತೆ. ಒಮ್ಮೆ ಕಾರಣ ನಿಮಿತ್ತವಾಗಿ ತಾಳ್ಮೆ ಮತ್ತು ನಂಬಿಕೆ ಬೇರೆಡೆಗೆ ಹೋಗಲೇಬೇಕಾದ ಸಂದರ್ಭ ಬಂದಿತು. ಆಗ ಪ್ರೀತಿ ಗೋಗರೆದಿತ್ತು - 'ನೀವಿಬ್ರೂ ಹೊರಟು ಹೋದ್ರೆ, ನಾನು ಬದುಕಲಾರೆ. ನನ್ನನ್ನು ಬಿಟ್ಟು ಹೋಗಬೇಡಿ ಮಿತ್ರರೇ..' ಎಂದು.

ಆದರೆ ಪ್ರೀತಿಗೆ ಸಮಾಧಾನ ಹೇಳಿದ ಎರಡೂ,, ಬೇಗ ಬರುವೆವೆಂದು ಭಾಷೆಯಿತ್ತು ಹೋಗೆ ಬಿಟ್ಟವಂತೆ. ಪ್ರೀತಿ ಮಿತ್ರರಿಗಾಗಿ ತಿಂಗಳಾನುಗಟ್ಟಲೇ ಕಾಯುತ್ತಾ  ಕೊರಗುತ್ತಲೇ ಇತ್ತು. ಕೆಲವು ದಿನಗಳ ನಂತರ ತಾಳ್ಮೆ ಮರಳಿ ಬಂದಾಗ 'ಪ್ರೀತಿ' ತನ್ನ ಕೊನೆಯ ಉಸಿರೆಳೆಯುತ್ತಿತ್ತಂತೆ. ಆದರೆ ನಂಬಿಕೆ ಮರಳಿ ಬರುವಷ್ಟರಲ್ಲಿ  ಸತ್ತೇ ಹೋಗಿತ್ತು 'ಪ್ರೀತಿ'.

ಎರಡಕ್ಕೂ ತಮ್ಮ ಮೇಲೆ ತಮಗೆ ಕೋಪ ಬಂದಿತು. ಅವು ಅಂದುಕೊಂಡವಂತೆ 'ನಾವು ಪ್ರೀತಿಯನ್ನು ಹೀಗೆ ಒಂಟಿಯಾಗಿ ಬಿಟ್ಟು ಹೋಗದಿದ್ದರೆ ಪ್ರೀತಿ ಇನ್ನೂ ಬದುಕಿರುತ್ತಿತ್ತು' ಎಂದು. ಸಮಯ ಮೀರಿಯಾಗಿತ್ತು. ಪ್ರೀತಿ ತನ್ನ ಜೀವ ತ್ಯಜಿಸಿ ಬೇರೆ ಲೋಕಕ್ಕೆ ಹೋಗಿಯಾಗಿತ್ತು. ಎರಡೂ ಮಿತ್ರರು ಗೋಳೋ ಎಂದು ಅತ್ತವು. ದೇವರ ಮೊರೆ ಹೋದವು. ಎದುರು ಬಂದು ನಿಂತ ಅಶ್ವಿನಿ ದೇವತೆ ಏನೆಂದು ಕೇಳಲು 'ಪ್ರೀತಿಯನ್ನು ಮತ್ತೆ ಬದುಕಿಸುವಂತೆ' ಕೇಳಿದವವು.

ಮುಗುಳ್ನಕ್ಕ ಅಸ್ತು ದೇವತೆ, ತನ್ನ ನಿರ್ಬಂಧವೊಂದನ್ನು ಹೇರಿದಳು - ''ನಿಮ್ಮ ಕೋರಿಕೆಯನ್ನು ಪೂರೈಸುವೆ. ಆದರೆ ನೀವಿಬ್ಬರೂ (ತಾಳ್ಮೆ & ನಂಬಿಕೆ) ಪ್ರೀತಿ ಜೊತೆಗೆ ಇರುವಷ್ಟು ಕಾಲ ಮಾತ್ರ ಅದರ ಆಯಸ್ಸು.. ಯಾವ ಕ್ಷಣ ನೀವು ಅದರಿಂದ ದೂರವಾಗಿವಿರೋ ಆ ಕ್ಷಣವೇ 'ಪ್ರೀತಿ' ಮತ್ತೆ ಗತಿಸಿ ಹೋಗುವುದು. ಮತ್ತೆಂದೂ ಮರಳಿ ಬಾರದು " ಎಂದು.

ಮಿತ್ರರಿರ್ವರು ಸಂತೋಷದಿಂದ ಸಮ್ಮತಿ ತಿಳಿಸಿದವು. ಪ್ರೀತಿ ಬದುಕಿತು. ತಾಳ್ಮೆ ನಂಬಿಕೆಯ ಆಸರೆಯಿಂದ ಅದು ಮರುಜನ್ಮ ತಳೆಯಿತು. ಅದೇ ರೀತಿ ಅವೆರಡರ ಸ್ನೇಹಹಸ್ತದೊಂದಿಗೆ ಅದು ಜೀವಂತವಾಗಿದೆ.. ಪ್ರೀತಿಸೋ ಹೃದಯಗಳಲ್ಲಿ ಅದು ಅಜರಾಮರ..

ಕಟ್ಟು ಕಥೆಯಾದರೂ ಸತ್ಯವೇ ಅಲ್ಲವಾ.. ತಾಳ್ಮೆ ನಂಬಿಕೆಯೇ ಪ್ರೀತಿಗೆ ಬುನಾದಿ ಕಣೋ. ಅವೇ ಇಲ್ಲದ ಮೇಲೆ ಪ್ರೀತಿಗೆ ಅಸ್ತಿತ್ವವಿಲ್ಲ. ಏನನ್ನೇಯಾಗಲಿ ಸಾಧಿಸಲು ಮೊದಲು ಅದರ ಮೇಲೆ ಉತ್ಕಟ ಪ್ರೇಮವಿರಬೇಕು. ಅದನ್ನು ತಲುಪುವವರೆಗೂ ತಾಳ್ಮೆಯಿರಬೇಕು. ಅದನ್ನು ಪಡೆದೇ ಪಡೆಯುತ್ತೇನೆಂಬ ಅಚಲ ನಂಬಿಕೆಯೂ ಬೇಕು.

ಒಂದೇ ದಿನದಲ್ಲಿ ಬೀಜ ಮರವಾಗಲ್ಲ, ಮಂಜು ಹಿಮಪರ್ವತವಾಗಲ್ಲ, ಚಂದ್ರ ಪೂರ್ಣ ಪ್ರಮಾಣದಲ್ಲಿ ಹೊಳೆಯುವುದಿಲ್ಲ. ನದಿ ಸಾಗರವನ್ನು ಸೇರುವುದಿಲ್ಲ. ಮಳೆ ಹನಿ ಸ್ವಾತಿಮುತ್ತಾಗಲ್ಲ. ಋತುಗಳೂ ಬದಲಾಗಲ್ಲ. ಎಲ್ಲದಕ್ಕೂ ಅದರದೇಯಾದ ಸಮಯ ಕೂಡಿ ಬರಬೇಕು. ದೈವ ಸಂಕಲ್ಪವಿದ್ದರೆ ನಮ್ಮದು ಎನ್ನುವುದು ನಮಗೆ ಸಿಕ್ಕೇ ಸಿಗುತ್ತದೆ. ಸಿಗಲೇಬೇಕು.. ಯಾರ ಅಡತಡೆಯೂ ಆಗ ಪರಿಗಣನೆಗೆ ಒಳಪಡುವುದಿಲ್ಲ.

ನಿನ್ನ ಸ್ಮೃತಿಯೂ ಅಷ್ಟೇ... ಕರಗುವ ಇಬ್ಬನಿಯಂತೆ ಚಲಿಸುವ ಮೋಡದಂತೆ ನಿಧಾನವಾಗಿ ಒಂದು ರೂಪ ಪಡೆಯಲು ಅದಕ್ಕೂ ಕಾಲ ಸನ್ನಿಹಿತವಾಗಬೇಕು. ಅಲ್ಲಿಯವರೆಗೂ ತಾಳ್ಮೆಯಿರಲಿ..

ಪ್ರೀತಿ ಅಂದರೆನೇ ತಾಳ್ಮೆ, ನಂಬಿಕೆ, ಸಹನೆ, ಸ್ವತಂತ್ರ, ದೈವೀಕ, ಮುಗ್ಧ ಅಭಿಮಾನ, ಔದಾರ್ಯ,ನಿಷ್ಕಾಮ, ನಿತ್ಯ ನಿರಂತರ..

ಪ್ರೀತಿ ಆಗೋ ಈಗೋ ಮುಗಿದು ಹೋಗುವಂತದ್ದಲ್ಲ, ಯಾರದೋ ಮೇಲಿನ ಅಸೂಯೆಯಲ್ಲ, ಹಿರಿಮೆ ಹೆಗ್ಗಳಿಕೆಯಲ್ಲ, ಯಾವಾಗಲೂ ಅಂಟಿಕೊಂಡೇ ಇರುವುದಲ್ಲ, ಯಾರನ್ನೋ ತುಚ್ಚವಾಗಿ ಕಾಣುವುದಲ್ಲ, ಯಾರದೋ ಮೇಲಿನ ದ್ವೇಷದ ಪರಾಮರ್ಶೆಯಲ್ಲ, ಪಡೆಯಲೇ ಬೇಕೆಂಬ ಹಠವಲ್ಲ, ನನ್ನದೇ ಅನ್ನುವ ಸ್ವಾರ್ಥವಲ್ಲ..

ಅದು ಹರಿಯುವ ತಿಳಿನೀರ ಝರಿಯಂತೆ ಸ್ವಚ್ಛಂದ.. ಕಣ್ಣಿಗೆ ತಂಪು, ಕಿವಿಗೆ ಇಂಪು, ಮನಸ್ಸಿಗೆ ಆಹ್ಲಾದ, ಅದು ಕೈ ಸೋಕಿದರೆ ನಲುಗುವ ಸೂಜಿಮಲ್ಲೆಯಂತೆ.. ಸಂವೇದಿಸುವಂತದ್ದು.. ಅಮೋಘ ಅನುಭೂತಿಯನ್ನು ನೀಡುವಂತದ್ದು ಕಣೋ..

ನೀ ನನ್ನ ಪಾಲಿಗೆ ಬರೀ ಸಖನಲ್ಲವೋ.. ಮಾತಿಗೂ ಮೀರಿದ ಸಂಬಂಧ ನೀ, ಬಹುಜನ್ಮಗಳ ಬೇಡಿಕೆ ನೀ,  ನನ್ನ ಹಾರೈಕೆ ಪ್ರಾರ್ಥನೆ ನೀ, ನನ್ನ ಪ್ರತಿ ಕೋರಿಕೆಗಳ ಪ್ರತ್ಯುತ್ತರ ನೀ, ಮನಸ್ಸಲ್ಲೇ ಉಳಿದು ಹೋದ ಕವಿತೆ ನೀ, ತೆರೆದ ಕಂಗಳಲಿ ತೂಕಡಿಸುವ ಕನಸು ನೀ, ಹೃದಯದ ಪಿಸುಮಾತು ನೀ, ಪ್ರಸ್ತುತ ಎದುರಿದ್ದು ಕೈಗೆಟುಕದಷ್ಟು ದೂರವಿರಬಹುದು..  ಇಂದಲ್ಲ ನಾಳೆ ಸಿಗಲೇಬೇಕು ಏಕೆಂದರೆ  ನನ್ನವನು ನೀ, ನನ್ನ ಒಲವು ನೀ....


ನಿನ್ನೆದೆಯ ಉಸಿರಿನಲಿ ನನ್ನದೊಂದು ಹೆಸರಿರಲಿ
ನಿನ್ನೊಲವ ಪರಿಧಿಯೊಳಗೆ ನನಗೊಂದು ನೆಲೆಯಿರಲಿ,
ಹಬ್ಬಿರುವ ನೂರಾರು ನೋವುಗಳ ಮಧ್ಯೆ,
ತಬ್ಬಿರುವ ಕಷ್ಟ ಕೋಟಲೆಗಳ ಸುತ್ತ,
ನಸು ಕಂಪಿಸುವ ಮಿಡಿತಗಳ ಚಿತ್ತದಲಿ
ಪ್ರೀತಿಯೊಂದು ಹರ್ಷದಿ ನಗುತಿರಲಿ,
ನಿನ್ನೆದೆಯ ಉಸಿರಲಿ ನನ್ನದೊಂದು ಹೆಸರಿರಲಿ...."


ಕಂಡು ಕಾಣದ ನಿನ್ನ ನಗೆಯ ಮೊಗವ ನೆನೆಯುತ್ತ ತೀರದಲ್ಲಿ ಕುಳಿತು ಮರಳಿನ ಮೇಲೆ ನಿನ್ನ ಹೆಸರ ಗೀಚುವ ಹುಚ್ಚಿ ನಾ.. ಮನದ ಮೋಹವನ್ನು ರೆಪ್ಪೆಯಂಚಿನ ಚೂಪು ಸರಳಲಿ ಬಂಧಿಸಿ, ಹೊಸತು ರಾಗವ ಹೊಸೆಯುವ ಮುಸ್ಸಂಜೆಗಳಲ್ಲಿ, ನಿನ್ನ ಹೆಜ್ಜೆ ಮೇಲೆ ಹೆಜ್ಜೆಯೂರಿ ನಡೆಯಲು ದಾರಿ ಕಾದಿರುವವಳು ನಾ.. ತವಕಕ್ಕೊಂದು ಮುತ್ತಿನ ವಿರಾಮ, ವಿರಹಕೊಂದು ಬಿಸಿಯಪ್ಪುಗೆಯ ಕಂದಾಯ ವಸೂಲಿ ಮಾಡಲು ತುದಿಗಾಲಲ್ಲಿ ನಿಂತವಳು ನಾ‌.. ಆದರೆ ನೀನೇ, ಎಲ್ಲವನ್ನೂ ಮರೆತಂತೆ ನಟಿಸುತ್ತ ಮತ್ತೆ ಮತ್ತೆ ನನ್ನ ಕಾಡುವವನು..

ನಿನ್ನನ್ನು ಕಾಡುವುದು, ನಿನ್ನಿಂದ ಕಾಡಿಸಿಕೊಳ್ಳುವದರಲ್ಲೂ ಏನೋ ಮಜವಿದೆ ಗೊತ್ತಾ.. ಅದೇನೆಂದು‌ ಮಾತಲ್ಲಿ ವಿವರಿಸಲಾರೆ. ಪದಗಳಲ್ಲಿ ಗೀಚಲಾರೆ.. ಜೊತೆಗೋ, ಸನಿಹವೋ, ನನ್ನೊಳಗೋ, ನನ್ನೊಂದಿಗೋ, ಅಥವಾ ಎದುರಿದ್ದು ಕೈಗೆ ಸಿಗದಷ್ಟು ಬಹುದೂರವೋ.. ನಿನ್ನಿರುವಿಕೆಯೇ ಸಾಕು ನನಗೆ, ಈ ಜನುಮ ಜೀಕಲು.. ನಿನ್ನಿರುವಿಕೆ ನೀಡುವ ಕಚಗುಳಿಯ ಖುಷಿಯ ಪರಿಯೇ ಬೇರೆ;  ಎದುರಿದ್ದಾಗ ಕಾಡುತ್ತಿದ್ದವನ ತುಂಟತನ, ಲೀಲಾಜಾಲವಾಗಿ ಮಾತಿನ ಮಳೆ ಸುರಿಸಿ ಮೂಕಗೊಳಿಸುವ ಮುದ್ದುತನಕ್ಕಿಂತ ಹೊಸದಾಗಿ ಕಾಣುವ ಈ ಕಳ್ಳನೋಟ ವಿಶೇಷವೆನಿಸುತ್ತೆ ಕಣೋ..

ಹೇಗಿದೆ ಉಡುಗೊರೆ..? ಉಡುಗೊರೆಗಳ ಆಯ್ಕೆ ವಿಚಾರದಲ್ಲಿ ನಿನ್ನನ್ನು ಮೀರಿಸಲಾಗದು ಬಿಡು. ನಿನ್ನ ಪ್ರತಿಯೊಂದು ಕಾಣಿಕೆಯೂ ವಿಶೇಷವೇ.. ಪ್ರತಿಯೊಂದೂ ಜೀವಂತಿಕೆಯ ದ್ಯೋತಕ.. ಬದುಕಿಗೆ ಹೊಸ ಸ್ಪೂರ್ತಿ..
ಈ ಜೋಡಿ ಗೋಲ್ಡನ್ ಫಿಶ್ ವಿಶೇಷ ಏನು ಗೊತ್ತಾ.. ಪ್ರತಿ ಮೂರು ಸೆಕೆಂಡಿಗೊಮ್ಮೆ ತಮ್ಮ ಜ್ಞಾಪಕಶಕ್ತಿ ಕಳೆದುಕೊಳ್ಳುವ ಈ ಅನ್ಯೋನ್ಯ ಮೀನುಗಳು, ತಮ್ಮ ಸಂಗಾತಿಯನ್ನು ಮಾತ್ರ ಕ್ಷಣವೂ ಮರೆಯದೇ ಅದೆಷ್ಟು ಗಾಢವಾಗಿ ಪ್ರೀತಿಸುತ್ತವೆ ಎಂದರೆ, ಒಂದು ಮೀನು ಮಡಿದರೆ ಮತ್ತೊಂದು ಸಂಗಾತಿ ಮೀನೂ ಒಂದು ಕ್ಷಣ ಸಹ ಬದುಕುಳಿಯಲ್ಲವಂತೆ, ನನ್ನ ಪರಿಸ್ಥಿತಿಯೂ ಅದಕ್ಕೆ ಹೊರತಲ್ಲ ಬಿಡು!

ನೀನಿರದ ಸಮಯದಲ್ಲಿ ನಿನ್ನೊಂದಿಗೆ ಕೂಡಿ ಕಳೆದ ಕ್ಷಣಗಳನ್ನು ಮತ್ತೆ ಸ್ಮರಿಸುತ್ತ ಸದಾ ಅದೇ ನೆನಪಿನ ಕಟ್ಟೆಯ ಮೇಲೆ ಕೂತಿರುತ್ತೇನೆ, ನಿನಗಾಗಿ ಕಾಯುತ್ತಾ.., ನೀನು ಮಾತ್ರ ಬರುವುದೇ ಇಲ್ಲ!
ಆಗೊಮ್ಮೆ ಈಗೊಮ್ಮೆ ಖಾಲಿ ತೂಗುಯ್ಯಾಲೆ ಕೈ ಬೀಸಿ ಕರೆಯುತ್ತದೆ. ನಾನೂ ಓಡಿ ಹೋಗಿ ಅಪ್ಪಿ ಖುಷಿಯಿಂದ ಕೂರುತ್ತೇನೆ. ಆದರೆ ಹಿಂದೆ ತಿರುಗಿ ನೋಡಿದರೆ ಉಯ್ಯಾಲೆ ತೂಗುತ್ತಿದ್ದ ನೀನೇ ಮಾಯ!!  ನಾನು ಅಳುತ್ತೇನೆ.. ದುಖಿಸಿ,, ಬಿಕ್ಕಿ ಬಿಕ್ಕಿ... ಆದರೂ ಸಾಂತ್ವನಗೈಯಲು ನೀನಂತೂ ಬರುವುದೇ ಇಲ್ಲ..!
ನಿನ್ನುಸಿರನ್ನು ಬಂಧಿಸಿದ ಬಲೂನನ್ನೂ ಸಹ ಇಂದಿಗೂ ನಾಜೂಕಿನಿಂದ ಕಾಯುತ್ತಾ ಅದರೊಂದಿಗೆ ಮಾತಿಗಿಳಿಯುತ್ತೇನೆ. ನೀ ಕೊಟ್ಟ ಅಷ್ಟೂ ಕಾಣಿಕೆಗಳು ನನಗೆ ಆಪ್ತರೀಗ.. ಅವು ಗತದ ಕಥೆ ಹೇಳುತ್ತವೆ, ನಾನು ಕಿವಿಯಾಗುತ್ತೇನೆ.
ಪ್ರತಿಬಾರಿ ಜಡೆ ಹೆಣೆಯುವಾಗ ಹೆರಳು ಸಹ ಕೇಳುವುದು 'ಎಲ್ಲಿ ಅವನು? ನನ್ನನ್ನು ಬಿಡದೇ ಕಾಡಿ ಎಳೆಯುವ ತುಂಟ' ಎಂದು!  ನನ್ನದೋ ಅದೇ ಮುಗಿಯದ ಮೌನ.
ನೀರವ ರಾತ್ರಿಯಲ್ಲಿ ಕೊರೆವ ಚಳಿಯಲ್ಲಿ ಮಹಡಿ ಮೇಲೆ ಒಂಟಿಯಾಗಿ ಕುಳಿತು ನಕ್ಷತ್ರಗಳ ದಿಬ್ಬಣವನ್ನು ಲೆಕ್ಕ ಹಾಕುತ್ತೇನೆ. ಫಳ್'ನೇ ಜಾರುವ ನಕ್ಷತ್ರವೊಂದು ಅಕಸ್ಮಾತ್ ಜಾರಿ ಮಡಿಲಿಗೆ ಬಿದ್ದರೆ ನಿನ್ನನ್ನು ಮರಳಿ ದೊರಕಿಸಿ ಕೊಟ್ಟಿತೇನೋ ಎಂಬ ದೂರದ ಆಸೆ ಕಣೋ ನನಗೆ,, ನಿನಗಂತೂ ಯಾವುದು ಬೇಕಾಗಿಯೇ ಇಲ್ಲ ಎಂಬ ಆ ಚಂದ್ರನ ಧೋರಣೆ!
ಸುತ್ತಲೂ ಗಸ್ತು ಹೊಡೆದು, ಆಟವಾಡಿದ, ಹತ್ತಲು ಹೋಗಿ ಜಾರಿ ಬಿದ್ದು ಗಾಯ ಮಾಡಿಕೊಂಡ ಮನೆಯೆದುರಿನ ಮರವಿನ್ನೂ ಹಸಿರಾಗಿಯೇ ಇದೆ. ಇಳಿಸಂಜೆ ಹೊತ್ತಲ್ಲಿ ನನಗೂ ಅದಕ್ಕೂ ಜೋರು ವಾಗ್ಝರಿ.. ಆ ಮಾತಲ್ಲೂ ನಿನ್ನದೇ ಗುಣಗಾನ.. ನಿನ್ನದೇ ಕೊಂಡಾಟ..! ನೀನಂತೂ ಎಲ್ಲದರಿಂದಲೂ ವಿಮುಖ!
ವರ್ಷಾಕಾಲದಿ ಸುರಿವ ಜಿಟಿಜಿಟಿ ಮಳೆಹನಿಗಳ ಪುಳಕವೇನೋ ಹೊಸತಲ್ಲ ನನಗೆ ಆದರೆ ಬೊಗಸೆಯಲ್ಲಿ ಹಿಡಿದ ಮಳೆನೀರನ್ನು ಚುಮುಕಿಸಿ ಕಾಡಿ ನಲಿಯಲು ಪಕ್ಕದಲ್ಲಿ ನೀನಿರದ ನೋವು ಮಾತ್ರ ವಿಷಾದಕರ! ನಿನಗಂತೂ ಯಾವುದು ಪರಿವೇ ಇಲ್ಲ; ಅಥವಾ ನನ್ನನ್ನು ಗೋಳಾಡಿಸಲು ಅರಿತು ಅರಿಯದ ಹುಸಿನಟನೆಯೋ?!

ಅದೋ ಬಾಲ್ಯದ ತೆರೆಮರೆ ಆಟಗಳಿನ್ನೂ ಸ್ಮೃತಿಯಿಂದ ಅಳಿದಿರಲಿಲ್ಲ, ಬದುಕು ತನ್ನದೇ ಹೊಸತು ಕಣ್ಣಾಮುಚ್ಚಾಲೆ ಮಜಲನ್ನು ಆರಂಭಿಸಿ ಬಿಟ್ಟಿದೆ ನೋಡು,, ನಾನು ನಿನ್ನ ಸ್ಮರಣಿಕೆಯಲ್ಲೀಗ ಅವಿತು ಕುಳಿತಿರುವ ಅಪರಿಚಿತೆಯಂತೆ.. ನೆನಹುಗಳ ಕದ ತೆರೆದು, ನೀ ನನ್ನ ಹುಡುಕಲು ಬರುವ ಬೇಹುಗಾರನಂತೆ..  ಈ ಆಟದಲ್ಲಿ ನನ್ನ ಹುಡುಕಿ ಸೋಲಿಸಬಲ್ಲೆಯೇನೋ ಹುಡುಗ?? ಸೋಲಿಸಿ ನನ್ನ ಗೆಲ್ಲಿಸಬಲ್ಲೆಯಾ ಗೆಳೆಯ? ಬಹುಮಾನವಾಗಿ ನಿನ್ನನ್ನೇ ನನಗೆ ಮತ್ತೆ ಒಪ್ಪಿಸಬಲ್ಲೆಯಾ? ನೋಡೋಣ.. ;)

ಸಮಯ ಎಲ್ಲವನ್ನೂ ಮರೆಸುತ್ತೆ ನಿಜ.. ಆದರೆ ಪುಸ್ತಕಗಳ ಮೇಲೆ ಧೂಳು ಮೆತ್ತಿದ ಮಾತ್ರಕ್ಕೆ, ಹಾಳೆ ಹರಿದು ಹೋದ ಮಾತ್ರಕ್ಕೆ ಅದರೊಳಗಿನ ಕಥೆ ಬದಲಾಗುವುದಿಲ್ಲವಲ್ಲ.. ಧೂಳನ್ನು ಊದಿ ಸರಿಸಬಹುದು. ಹರಿದ ಹಾಳೆಯನ್ನು ಜೋಡಿಸಿ ಮತ್ತೆ ಓದಬಹುದು. ಆಘಾತವಾದದ್ದು ಮೆದುಳಿಗೆ ಮಾತ್ರ; ಮನಸ್ಸಿಗಲ್ಲವಲ್ಲ ಗೆಳೆಯ! ಸ್ಮೃತಿಗೆ ಮಬ್ಬು ಕವಿದ ಮಾತ್ರಕ್ಕೆ ನಿನ್ನಾಂತರ್ಯದಲ್ಲಿ ಶಾಶ್ವತವಾಗಿ ನಿಕ್ಷಿಪ್ತವಾಗಿರುವ ನನ್ನ ಮೇಲಿನ ಪ್ರೀತಿ ಸುಳ್ಳಾಗಲು ಸಾಧ್ಯವಿಲ್ಲ ಅಲ್ಲವಾ...

ಇದೆನಪ್ಪಾ.. ಇವಳು ಇಷ್ಟೊಂದು ಫಿಲಾಸಫಿ ಯಾವಾಗ ಕಲಿತಳು? ಹೀಗೆಲ್ಲ ವೇದಾಂತ ಮಾತಾಡ್ತಿದ್ದಾಳೆ,, ಅನ್ನಿಸ್ತಿದೆಯಾ!! ನನಗೂ ಅದೇ ಆಶ್ಚರ್ಯ! ನಾನ್ಯಾವ ಘಳಿಗೆ ಇಷ್ಟೊಂದು ಪ್ರಬುದ್ಧಳಾದೆ ಅಂತ..! ಎಲ್ಲೋ ಓದಿದ ಸಾಲು ಆಗ ನಿಜ ಎನಿಸುತ್ತೆ...  'ಆಳವಾದ ನೋವು, ಎಂತಹ ಬಾಲೀಶರನ್ನು ತನ್ನದೇ ಶೈಲಿಯಲ್ಲಿ ಪ್ರಬುದ್ಧರನ್ನಾಗಿ ಮಾಡಿಯೇ ಬಿಡುತ್ತದಂತೆ' ನಿಜವೇ ಅಲ್ಲವಾ..  ಎಲ್ಲಾ ನೋವಿಗೂ ಒಂದು ಪೂರ್ಣ ವಿರಾಮ ಅನ್ನುವುದು ಇರಲೇಬೇಕು. ಸದ್ಯಕ್ಕೆ ನನ್ನೆಲ್ಲ ದುಃಖ ದುಮ್ಮಾನಗಳಿಗೆ ಅಂತ್ಯ ಹಾಡುವ ಹೊಣೆ ನಿನ್ನದೇ. ಸ್ಮೃತಿಯಲ್ಲಿರಲಿ...


                            ಇಂತಿ ನಿನ್ನವಳಾಗಲು ಕಾದಿರುವ ನಿನ್ನವಳೇಯಾದ ನಿನ್ನವಳು..]


ಈ ರೀತಿಯಾಗಿ ತನ್ನ ಭಾವನೆಗಳನ್ನು ಸೂಕ್ಷ್ಮವಾಗಿ ಹರಿಯ ಬಿಟ್ಟಿದ್ದಳಾಕೆ. ಎಲ್ಲ ಹೇಳಿಯೂ ಏನೂ ಹೇಳದಂತೆ.. ಕ್ಲುಪ್ತವಾಗಿ, ಸಂಕ್ಷಿಪ್ತವಾಗಿ... ತನ್ನತನವನ್ನು ಬಿಚ್ಚಿಟ್ಟು..

ಪತ್ರವನ್ನು ಎದೆಗೊತ್ತಿಕೊಂಡ ಹರ್ಷ ಧೀರ್ಘ ಶ್ವಾಸವೆಳೆದುಕೊಂಡ. ಮೀನುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಮೊಣಕಾಲಿನ ಮೇಲೆ ಕುಸಿದು ಕುಳಿತು ಹನಿ ಕಂಬನಿಯಾದ. ಕಾರಣ ಏನೆಂದು ಅರಿಯದಿದ್ದರೂ ಎದೆಯಲ್ಲಿ ನೋವೊಂದು ಭಾಧಿಸುತ್ತಿತ್ತು. ತನ್ನ ಆ ಸಂಗಾತಿಯ ಜೊತೆಯಾಗಲು ಬಹುಶಃ ಮನಸ್ಸು ಹಪಹಪಿಸಿತು. ಎದುರಿದ್ದ ಕಾಣಿಕೆ, ಕೈಯಲ್ಲಿರುವ ಪತ್ರ ಅದರಲ್ಲಿನ ಅವಳ ಭಾವನೆಗಳು, ಅಕ್ಷರಗಳು, ಸ್ಪರ್ಶದನುಭೂತಿಯ ಹೊರತು ಬೇರೆನೂ ಆತನ ಸಾಂಗತ್ಯಕ್ಕಿರಲಿಲ್ಲ.

ಇಡೀ ಪತ್ರವನ್ನು ಒಂದಕ್ಷರ ಬಿಡದೇ ಓದಿದವನಿಗೆ ಅನಿಸಿತು 'ಪತ್ರ ಬೆಳಿಗ್ಗೆನೇ ಬಂದಿತ್ತು. ಆದರೆ ತನ್ನ ಕೈ ಸೇರಿರಲಿಲ್ಲ. ಬಹುಶಃ ಸೇರುತ್ತಲೂ ಇರಲಿಲ್ಲ. ಪತ್ರ ಬರೆಯುತ್ತಿರೋದು ಮಾನ್ವಿಯಲ್ಲ! ಬೇರೆ ಯಾರೋ! ನನ್ನ ಮತ್ತು ಆ ಅವಳ ಮಧ್ಯೆ ಮಾನ್ವಿ ಯಾಕೆ ತಡೆಗೋಡೆ ಒಡ್ಡಿರುವಳು?!! ಸಾಲು ಒಗಟುಗಳು.. ಕೆಲವು ಅಸ್ಪಷ್ಟ ನೆನಪುಗಳು..
ನೀನು ಶಾಪಗ್ರಸ್ಥಳಾಗಿರೋದು ನನ್ನ ಮರೆವಿನಿಂದಲ್ಲವೇ ಹುಡುಗಿ.. ಮಾನ್ವಿಯ ಹುಡುಗಾಟದಿಂದ! ಪತ್ರದಲ್ಲಿ ನೀನು ಹೇಳಬೇಕೆಂದುಕೊಂಡೂ ಬರೆಯಲಾಗದ ಭಾವನೆಗಳನ್ನು ಸಹ ಓದಿಬಿಟ್ಟೆ ನಾನು! ನೋವಿನಲ್ಲೂ ಮುಗುಳ್ನಕ್ಕ. ಇನ್ನೂ ನಿನ್ನನ್ನು ದುಃಖದ ಮಡುವಿನಲ್ಲಿ ಒಂಟಿಯಾಗಿ ಬಿಡುವುದಿಲ್ಲ ಉಸಿರೇ.. ಆದಷ್ಟು ಬೇಗ ಈ ಒಗಟುಗಳನ್ನ ಬಿಡಿಸಲೇ ಬೇಕು!!'

***************

ಆ  ಇಳಿ ಸಂಜೆ ಪ್ರಸನ್ನ ಹರ್ಷ ಇಬ್ಬರೂ ಬಾಲ್ಕನಿಯಲ್ಲಿ ಚೆಸ್ ಆಟದಲ್ಲಿ ತೊಡಗಿದ್ದರು. ಮಾನ್ವಿ ಸ್ಟೋನಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಾಡುತ್ತ ಬಿಸ್ಕತ್ತು ತಿನ್ನಿಸುತ್ತಿದ್ದಳು. ಪ್ರಸನ್ನ ಆಟದ ಕಡೆಗೆ ಗಮನ ಕೊಡದೆ ಅವಳ ಕಾಯಕವನ್ನೇ ನೋಡುತ್ತಲಿದ್ದ. ಅವನ ನೋಟದಿಂದ ಇರುಸು ಮುರಿಸುಗೊಂಡ ಆಕೆ "ಅದಕ್ಕೆ ದೃಷ್ಟಿಯಾಗುತ್ತೆ. ಹಾಗೆ ನೋಡಬೇಡ. ನಿನಗೂ ಬೇಕಾ ಬಿಸ್ಕೆಟ್ಸ್? ತಿಂತಿಯಾ?" ಸ್ಟೋನಿ ಬಾಯಿಗೆ ಸೇರಬೇಕಾದ ಬಿಸ್ಕೆಟ್ ಅವನೆಡೆಗೆ ತೋರಿಸಿ ವ್ಯಂಗ್ಯವಾಗಿ ಕೇಳಿದಳು. ಪ್ರಸನ್ನ ದುರುಗುಟ್ಟಿ ಅವಳನ್ನ ಹೇಗೆ ಹೊರ ದಬ್ಬುವುದು ಎಂದು ಯೋಚಿಸಿದ. ಹರ್ಷನಿಗೆ ನಗು ತಡೆಯಲಾಗಲಿಲ್ಲ. 

"ಅದಕ್ಕೆ ತಿನ್ನಿಸೋ ನೆಪದಲ್ಲಿ ನೀನು ಒಂದೆರಡು ಬಾಯಿಗೆ ಹಾಕ್ತಿಯೇನೋ ಅಂತ ನೋಡ್ತಿದ್ದೆಯಷ್ಟೆ!" ಅವನ ಪ್ರತ್ಯುತ್ತರ ಸಿದ್ಧವಾಗಿತ್ತು.

"ನಾನು ನಿನ್ನ ಹಾಗಲ್ಲ. ಫ್ರೀಯಾಗಿ ಸಿಗುತ್ತೆ ಅಂತ ತಿನ್ನುತ್ತಾ ಕೂತ್ಕೊಳ್ಳಕ್ಕೆ!" ಬೇಕೆಂದೇ ಅವಮಾನಿಸಿದಳು

"ಮಾನ್ವಿ.... ಅವನು ನನ್ನ ಗೆಳೆಯ! ಇನ್ನೊಂದು ಮಾತು ಅವನ ಬಗ್ಗೆ ಹಗುರವಾಗಿ ಮಾತಡಿದ್ರೂ ಚೆನ್ನಾಗಿರಲ್ಲ‌. ಅಷ್ಟಕ್ಕೂ ಅವನೇನು ಸ್ವ ಇಚ್ಛೆಯಿಂದ ಇಲ್ಲಿ ಉಳಿದಿಲ್ಲ. ಅವನನ್ನ ಬಲವಂತವಾಗಿ ನಾನೇ ಉಳಿದುಕೊಳ್ಳಲು ಹೇಳಿದ್ದು ಗೊತ್ತು ತಾನೇ! ನೀನಾಡಿದ ಮಾತಿನಿಂದ ಅವನಿಗೆ ನೋವಾಗಿದೆ.  ಕ್ಷಮೆ ಕೇಳು." ಕೋಪದಿಂದ ಗದರಿದ್ದ. ಹರ್ಷನ ಬೆಂಬಲ ಸಿಗುತ್ತಿದ್ದಂತೆ ಪ್ರಸನ್ನ ಮುಖ ಮತ್ತಷ್ಟು ಚಿಕ್ಕದಾಗಿ ಮಾಡಿ ಪಾಪದವನಂತೆ ಕುಳಿತ. ಮಾನ್ವಿಗೆ ಹರ್ಷನೆದುರು ವಾದ ಮಾಡಲಾಗಲಿಲ್ಲ.

"ಐಮ್ ಸಾರಿ.." ತೆಪ್ಪಗೆ ಹೇಳಿದ್ದಳು. ಪ್ರಸನ್ನ ಕೇಳಲೇ ಇಲ್ಲವೆಂದು ಮತ್ತೆ ಮೂರು ಬಾರಿ ಅದನ್ನೇ ಕೇಳಿ ಕೇಳಿ ಸಂತೃಪ್ತನಾದ.

"ಬ್ರೋ... ನಾನೊಂದು ಕೇಳಲಾ?" ಮೆಲ್ಲಗೆ ಪೀಠಿಕೆ ಹಾಕಿದ. ಹರ್ಷ ಏನು ಎಂಬಂತೆ ನೋಡಿದ.

"ಇವಳು ಈ ನಾಯಿಗೆ ಇಷ್ಟೊಂದು ಪ್ರೀತಿ ತೋರಿಸುತ್ತಾಳಲ್ಲ, ನಿನಗಾಗಿ ಇದುವರೆಗೂ  ತನ್ನ ಕೈಯಾರೆ ಏನಾದ್ರೂ ಮಾಡಿ ತಿನ್ನಿಸಿದ್ದಾಳಾ?" ಕಣ್ ಮಿಟುಕಿಸಿ ಕೇಳಿದ. ಹರ್ಷನಿಗೆ ಆತನ ಸನ್ನೆ ಅರ್ಥವಾದಂತೆ ತೋರಿತು.

"ಏನಾದ್ರೂ ಮಾಡಿ ತಿನ್ನಿಸಿದ್ರೆ ಮಾತ್ರ ಪ್ರೀತಿ ಇದೆಯಂತ ಅರ್ಥಾನಾ? ಅವಳ ಪ್ರೀತಿ ಎಂತದ್ದು ಅಂತ ನನಗೆ ಮಾತ್ರ ಗೊತ್ತು" ಓರೆನೋಟದಲ್ಲಿ ಅವಳನ್ನ ಗಮನಿಸುತ್ತ ತನ್ನ ಕಾಯಿ ಬಿಟ್ಟ. ಅವಳ ಕಣ್ಣಲ್ಲಿ ಮರುಕವಿತ್ತು.

"ಅದನ್ನು ಬರೀ ಮಾತಲ್ಲಿ ಹೇಳುವುದಷ್ಟೇ ಅಲ್ಲ. ಪ್ರೂವ್ ಮಾಡಬೇಕು. ನಿನಗೋಸ್ಕರ ಏನಾದ್ರೂ ತಿನ್ನೊಕೆ ರೆಡಿ ಮಾಡಲಿ ನೋಡೋಣ! ಅಡುಗೆ ಮನೆನೇ ನೋಡಿಲ್ಲ, ಇವಳೇನು ಮಾಡ್ತಾಳೆ ಬಿಡು" ನಕ್ಕ.

"ಏನು ನಿನ್ನ ಮಾತಿನ ಅರ್ಥ? ಅವಳಿಗೆ ಆಗಲ್ಲ ಅಂತನಾ? ನನಗೋಸ್ಕರ ಅವಳು ಏನು ಬೇಕಾದರೂ ಮಾಡುತ್ತಾಳೆ. ಅಡುಗೆ ಬರಲ್ಲ ಅಂದ್ರೂ ಕಲಿತುಕೊಂಡಾದ್ರೂ ಮಾಡ್ತಾಳೆ. ಅಲ್ವಾ ಮಾನು..." ಇಬ್ಬರ ವಾಗ್ವಾದದಲ್ಲಿ ಮಿಕ ಆದವಳು ಏನು ತಾನೇ ಹೇಳಿಯಾಳು! ಪುಕಪುಕ ಮುಖ ನೋಡಿ ಗೋಣು ಹಾಕಿದಳು.

ಅಷ್ಟರಲ್ಲಿ ಚೆಕ್ ಮೇಟ್ ಹೇಳಿ ಆಟ ಗೆದ್ದ ಪ್ರಸನ್ನ.
"ಹ್ಮ್.... ಹಾಗಾದ್ರೆ ನಿನಗೆ ಇಷ್ಟವಾದ ಯಾವುದಾದರೂ ತಿನಿಸು ಹೇಳು. ಅವಳು ತನ್ನ ಕೈಯಾರೆ ಮಾಡಿ ನಿನಗೆ ತಿನ್ನಿಸಬೇಕು. ಈಗಲೇ!"

"ನನಗೆ ಏನಿಷ್ಟ ಅಂತ ನಿನಗೆ ಗೊತ್ತಲ್ವ ಮಾನು...   ಹೋಗಿ ಮಾಡ್ತಿಯಲ್ವಾ" ಕೇಳಿದ. ಆಕೆ ಒಮ್ಮೆ ಹ್ಮೂ ಎಂದು ಒಮ್ಮೆ ಊಹ್ಮೂ ಎಂದು ಕತ್ತು ಅಡ್ಡಡ್ಡ ಉದ್ದುದ್ದ ಅಲ್ಲಾಡಿಸುತ್ತ ಎದ್ದು ಅಡುಗೆ ಮನೆಯ ಕಡೆಗೆ ಹೋದಳು.

ಏನು ಮಾಡಬೇಕೆಂದು ತೋಚದೆ  ಗೊಂದಲದಲ್ಲಿ ಅವಳು ಶತಪಥ ತಿರುಗುತ್ತಿರುವಾಗ ಜಾನಕಮ್ಮನೊಡನೆ ಬಂದ ಪ್ರಸನ್ನ "ಇವಳಿಗೆ ಪಕೋಡ ಮಾಡೋಕೆ ಹೇಳಿಕೊಡಿಮಾ.." ಮಾನ್ವಿ ಅವನನ್ನೇ ನುಂಗುವಂತೆ ನೋಡಿ "ಜಾನಕಮ್ಮನೇ ಮಾಡಿ ಕೊಡ್ತಾರೆ. ನಾನ್ಯಾಕೆ?"  ರೇಗಿದಳು

"ಹಾಗಾದ್ರೆ ಮದುವೆನೂ ಅವರೇ ಆಗ್ಲಿ ಬಿಡು. ನೀನ್ಯಾಕೆ?" ಹಂಗಿಸಿದ ಹಿಂದಿಯಲ್ಲಿ. ಅವರು ನಕ್ಕರು.

"ಯಾವುದೇ ಕಾರಣಕ್ಕೂ ನೀವು ಪಕೋಡ ಮಾಡಬೇಡಿ ಮಾಜಿ. ಅವಳ ಕೈಯಿಂದಲೇ ಮಾಡಿಸಿ, ಅವಳು ಮಾಡೋದನ್ನ ಇದರಲ್ಲಿ ರೆಕಾರ್ಡ್ ಮಾಡಿ" ಎಂದು ಸೂಚನೆ ನೀಡಿ ಅವರ ಕೈಗೆ ಮಾನ್ವಿಯ ಫೋನ್ ಆನ್ ಮಾಡಿ ಕೊಟ್ಟು ಹೋದ. ಹೋಗುವಾಗ ಅವಳಿಗೆ 'ಆಲ್ ದಿ ಬೆಸ್ಟ್' ಹೇಳುವುದನ್ನು ಮರೆಯಲಿಲ್ಲ.


ಅವನೆಣಿಸಿದಂತೆ ಹರ್ಷನೊಂದಿಗೆ ಏಕಾಂತವನ್ನು ಸಾಧಿಸಿದ ಪ್ರಸನ್ನ. ಮತ್ತೆ ಆಟದೆಡೆಗೆ ಗಮನ ಹರಿಸಿದ. ಎರಡನೇ ಆಟ ಆರಂಭವಾಯಿತು. ಹರ್ಷ ಬಿಳಿ ಕಾಯಿಗಳನ್ನು ಪ್ರಸನ್ನ ಕಪ್ಪು ಕಾಯಿಗಳನ್ನು ಆಯ್ದುಕೊಂಡರು. ಮೊದಲ ಅಸ್ತ್ರವಾಗಿ ತನ್ನ ಕುದುರೆಯನ್ನು ಮೂವ್ ಮಾಡಿದ ಹರ್ಷ. ಪ್ರತಿಯಾಗಿ ತನ್ನ ಸೈನಿಕನನ್ನು ಎದುರಾಳಿಯಾಗಿ ಬಿಟ್ಟ ಪ್ರಸನ್ನ. ಹೀಗೆ ಮುಂದುವರಿದ ಆಟ ಕೊನೆಯ ಹಂತದಲ್ಲಿ ಬಂದು ನಿಂತಿತ್ತು. ಹರ್ಷನ ಎಲ್ಲ ಕಾಯಿಗಳು ಹತವಾಗಿ ರಾಜ, ರಾಣಿ(ಚೆಸ್ ಆಟದಲ್ಲಿ ತುಂಬಾ ಶಕ್ತಿಯುತ ಕಾಯಿ) ಮತ್ತು ಮೂರು ಸೈನಿಕ ಮಾತ್ರ ಉಳಿದಿದ್ದವು. ಪ್ರಸನ್ನ ರಾಣಿ ಮತ್ತು ನಾಲ್ಕು ಸೈನಿಕ ಕಾಯಿಗಳನ್ನು ಮಾತ್ರ ಕಳೆದುಕೊಂಡಿದ್ದು ತನ್ನ ಉಳಿದ ಎಲ್ಲ ಕಾಯಿಗಳಿಂದ ಅವನ ರಾಜನನ್ನು ಮುತ್ತಿಗೆ ಹಾಕಿದ.

"ಇನ್ನು ನಿನ್ನ ರಾಜ ಸತ್ತ ಹಾಗೆನೇ...!" ಪ್ರಸನ್ನ ಗೆಲುವಿನ ನಗೆ ಬೀರಿದ.

"ನೋ ವೇ.. ನನ್ನ ಏಂಜಲ್ (ಆಟದಲ್ಲಿ ಕ್ವೀನ್) ನನ್ನ ಜೊತೆಗೆ ಇರೋವಾಗ ನನ್ನನ್ನು ಅಷ್ಟು ಸುಲಭವಾಗಿ ಸೋಲಲು ಬಿಡುವುದಿಲ್ಲ." ಎಂದು ಉತ್ತರಿಸಿದ ಹರ್ಷ ತನ್ನ ಪಕ್ಕದಲ್ಲಿ ಹೊರಳಿ ನೋಡಿದ. ಅಲ್ಲಿ ಯಾರೋ ಇರಬೇಕಿತ್ತು. ಈಗಿಲ್ಲ. ತಾನೇಕೆ ಏಂಜಲ್ಂದೆ? ಆತನಿಗೆ ಗೊಂದಲ. ಮನದ ಸ್ಮೃತಿ ಪಟಲದಲ್ಲಿ ಹಿಂದೆ ಬಹಳ ಸಲ ಇದೇ ಮಾತನ್ನು ಬಾರಿ ಬಾರಿ ಆಡಿದ ಹಾಗನ್ನಿಸಿತು.  ಅದೇ ರಾಣಿಯ ಸಹಾಯದಿಂದ ಪ್ರಸನ್ನನ ಆನೆ ಕುದುರೆ ಒಂಟೆಗಳನ್ನ ಹೊಡೆದುರುಳಿಸಿದ. ಅಂತಿಮವಾಗಿ ಅವನ ರಾಜನಿಗೆ ಚೆಕ್ ಮೇಟ್ ಕೂಗಿದ. ಆಟದಲ್ಲಿ ಗೆದ್ದಿದ್ದು ಹರ್ಷ! ‌ಆದರೆ ಸೋತು ಗೆದ್ದಿದ್ದು ಮಾತ್ರ ಪ್ರಸನ್ನ!!

"ನನ್ನ ಸ್ವೀಟಿನೂ ಹೀಗೆ ಹೇಳ್ತಿರ್ತಾಳೆ! ಅವಳಿಗೂ ಕ್ವೀನ್ ಇಲ್ಲದಿದ್ದರೆ ಆಟ ತುಂಬಾ ಕಷ್ಟ! ಕ್ವೀನ್ ಇಲ್ಲಾಂದ್ರೆ ಎಲ್ಲಾ ಚೆಲ್ಲಾಪಿಲ್ಲಿ ಮಾಡಿ ಎದ್ದು ಹೋಗ್ತಾಳೆ"  ಪ್ರಶಸ್ತ ಸಮಯ ಸಾಧಿಸಿ ತನ್ನ ಥೆರಪಿ ಆರಂಭಿಸಿದ.

"ಸ್ವೀಟಿ ನಾ ಯಾರು?" ಕೇಳಿದ ಹರ್ಷ. ಪ್ರಸನ್ನನಿಗೂ ಅದೇ ಬೇಕಿತ್ತು. ತನ್ನ ಮೊಬೈಲ್ ಕೈಗೆತ್ತಿಕೊಂಡ.




ಪಕೋಡ ಮಾಡಲು ಎಲ್ಲಾ ಸಿದ್ದ ಮಾಡಿಕೊಂಡ ಮಾನ್ವಿ ಕಡಲೆಹಿಟ್ಟಿನ ಮಿಶ್ರಣವನ್ನು ಕಲಕಲು ಚಮಚ ಎತ್ತಿದಳು. ಕೈಯಿಂದಲೇ ಕಲಕಬೇಕು ಸಲಹೆಯಿತ್ತರು ಜಾನಕಮ್ಮ. ಯಾವುದೋ ಪೇಷಂಟ್ ಹೊಟ್ಟೆಯೊಳಗೆ ಕೈ ಹಾಕುವಂತೆ ಅನಿಸಿತ್ತವಳಿಗೆ. ಮೆಲ್ಲಗೆ ಕೈ ಹಾಕಿ ಆಡಿಸಿದಳು. ದಪ್ಪಗೆ ಹೆಚ್ಚಿದ್ದ ಈರುಳ್ಳಿ ಚೂರುಗಳು ಕೈ ತಾಕಿದವು. ಮಿಶ್ರಣವನ್ನು ಕಲಕಿದಳು. ತುಂಬಾ ಹಿಟ್ಟಿಟ್ಟು ಅನ್ನಿಸಿ ನೀರು ಸುರಿದಳು. ಈಗ ಸ್ವಲ್ಪ ಅಳಕು ಬಳಕು ಎನ್ನಿಸಿ ಮತ್ತೆ ಹಿಟ್ಟು, ಖಾರ ಉಪ್ಪು ಹಾಕಿ ಹದಮಾಡಿದಳು. ಗಟ್ಟಿ ತೆಳುವಿನ ಈ ಆಟ ಹತ್ತು ನಿಮಿಷ ಮುಂದುವರಿದು ಕೊನೆಗೆ ಹಿಟ್ಟಿಗೇ ಬೇಜಾರಾಗಿ ಅದು ಹದಕ್ಕೆ ಬಂದಿತ್ತು. ಮುಂದೆ? ಪಿಳಿಪಿಳಿ ಮುಖ ನೋಡಿದಳು. ಜಾನಕಮ್ಮ ಮುಂದಿನ ವಿಧಿ ವಿಧಾನವನ್ನು ವಿವರಿಸಿದರು.

ಮಂದ ಉರಿಯಲ್ಲಿ ಎಣ್ಣೆ ಕಾಯುತ್ತಲಿತ್ತು.
"ಆರಾಮಾಗಿ ರೆಸ್ಟ್ ಮಾಡ್ತಿದ್ದೆ.‌ ಇದೆಲ್ಲಾ ನನಗೆ ಯಾಕೆ ಬೇಕಿತ್ತು!!" ಅವಳ ಮನಸ್ಸು ಕುದಿಯುತ್ತಲಿತ್ತು. ಪಾತ್ರೆಗೆ ಪಕೋಡ ಇಳಿಸುವಾಗ ಎಣ್ಣೆ ಚಿಳ್‌ನೇ ಸಿಡಿಯಲು ಬಾಂಬ್ ವಿಸ್ಪೋಟವಾದಂತೆ ಮಾರು ದೂರ ಚಂಗನೇ ಜಿಗಿದು ನಿಲ್ಲುತ್ತಿದ್ದಳು. ವಿಡಿಯೋ ಮಾಡುತ್ತಿದ್ದ ಜಾನಕಮ್ಮ ನಗಲಾಗದೆ, ನಗದಿರಲೂ ಆಗದೆ ಗಂಟಲಲ್ಲೇ ಕಿಸಕ್ಕೆಂದರು. ಹೀಗೆ ಸಾಗಿತ್ತು ಅವಳ ಪಾಕಶಾಸ್ತ್ರದ ಪ್ರಥಮ ಪ್ರಯತ್ನ..




"ಇವಳೇ ನನ್ನ ಸ್ವೀಟಿ! " ನಗುಮೊಗದ ಹರಿಣಿಯ ಫೋಟೋ ಹರ್ಷನ ಮುಂದಿತ್ತು. ತೀರ ಗಹನವಾಗಿ ಅವಲೋಕಿಸಿದ ಹರ್ಷ.
"ಓದ್ತಿರೋದು ಎಸ್ ಎಸ್ ಎಲ್ ಸಿ, ಶುದ್ಧ ತಲೆ ಹರಟೆ. ನಮ್ಮನೆಯ ರೆಡಿಯೋ ಜಾಕಿ. ಇದು ಮನೆಯಲ್ಲಿದ್ರೆ ವಟವಟ ಯಾವತ್ತೂ ಆನ್ ಮೋಡ್‌ಲ್ಲೇ ಇರುತ್ತೆ." ನಗುತ್ತಲೇ ನುಡಿದ ಪ್ರಸನ್ನ.

"ಇವರು ನಮ್ಮಮ್ಮ." ಸುಲೋಚನಾರನ್ನು ತೋರಿಸಿ ಹೇಳಿದ.
"ದೇವರ ಮನೆ ಅಡಿಗೆ ಮನೆ ಇವರ ಸಾಮ್ರಾಜ್ಯ! ದೇವರೇ ಬೇಸತ್ತು ಓಡಿ ಹೋದರೂ ಹುಡುಕಿ ತಂದು ಕೂರಿಸಿ ಕಾಲುಪೂಜೆ ಮಾಡುವಂತಹ ದೈವಭಕ್ತರು ಇವ್ರು.‌ ಮಕ್ಕಳು ಮನೆ ಕುಟುಂಬ ಅಂದ್ರೆ ಪ್ರಾಣ ನಮ್ಮಮ್ಮಂಗೆ. ಯಾವಾಗಲೂ ನಮ್ಮ ಒಳಿತನ್ನೇ ಬಯಸೋ ಜೀವ. ನಾ ಮನೆಗೆ ಹೋಗೋದು ಚೂರು ತಡವಾದ್ರೂ ಎಷ್ಟು ಒದ್ದಾಡಿ ಬಿಡ್ತಾರೆ ಗೊತ್ತಾ.." ಹೀಗೆಲ್ಲ ಹೇಳುವಾಗ ಅವನ ಕಣ್ಣಂಚು ಒದ್ದೆಯಾಗಿತ್ತು.

"ನಾನು ಇವರನ್ನು ನೋಡಿದ್ದಿನಿ ಕಣೋ.. ಬರೀ ನೋಡುವುದಲ್ಲ ಮಾತಾಡಿದ್ದಿನಿ ಕೂಡ.. ಒಂದೋ ಎರಡೋ ಬಾರಿ ಅಲ್ಲ ಸುಮಾರು ಸಲ.. ಆದರೆ ಎಲ್ಲಿ ಯಾವಾಗ?" ತನ್ನಲ್ಲೇ ಬಡಬಡಿಸಿದ ಹರ್ಷ ಜ್ಞಾಪಿಸಿಕೊಳ್ಳುವ ಯತ್ನದಲ್ಲಿ 'ಅಮ್ಮಾsss' ಎಂದು ನೋವಿಂದ ನರಳಿ ತಲೆ ಅದುಮಿಕೊಂಡ. ಮಿದುಳಿನ ನರಗಳು ಸೆಳೆಯುತ್ತಿದ್ದವು. ಆತ ಏನೇನೋ ಗೊಣಗಿದ. ಮಾತುಗಳು ಅಸ್ಪಷ್ಟ. ಮೈ ಕಂಪಿಸುತ್ತಿತ್ತು. ಎದುರಿದ್ದ ಚೆಸ್ ಬೋರ್ಡ್ ದೂರಕ್ಕೆ ಚಿಮ್ಮಿದ.

ತಕ್ಷಣ ಅವನಿಗೆ ನೀರು ಕುಡಿಸಿದ ಪ್ರಸನ್ನ. ಅವನ ಕೈ ಬಿಗಿಯಾಗಿ ಹಿಡಿದು ರಿಲ್ಯಾಕ್ಸ್ ಎಂದು ಭರವಸೆ ತುಂಬುತ್ತ ಸಮಾಧಾನ ಮಾಡಿದ. ತಲೆಗೆ ಮಸಾಜ್ ಮಾಡಿದ. ಮಾನಸಿಕ ತುಮುಲಗಳನ್ನ ನಿಗ್ರಹಿಸಲು ಅವನ ಕೈಗೆ ಅಕ್ಯುಪಂಕ್ಚರ್ ಬಾಲ್ ಕೊಟ್ಟ. ಅವನನ್ನ ಮೊದಲಿನ ಸ್ಥಿತಿಗೆ ತರಲು ಒದ್ದಾಡಿ ಸಾಕು ಸಾಕಾಯಿತವನಿಗೆ.

ಕೆಲವು ನಿಮಿಷಗಳ ಧೀರ್ಘ ನಿಶ್ಯಬ್ದ... ಹರ್ಷ ಕಣ್ಮುಚ್ಚಿ ನಿರಾಳನಾದ. ಪ್ರಸನ್ನ ಧೀರ್ಘ ಉಸಿರೆಳೆದು ಉಫ್' ಎಂದು ನಿಡುಸುಯ್ದು ಹಣೆಯ ಬೆವರೊರೆಸಿಕೊಂಡ. 'ಇಷ್ಟು ಸೂಕ್ಷ್ಮ ಮನಸ್ಥಿತಿಯಲ್ಲಿ ಇವನಿಗೆ ವಾಸ್ತವವನ್ನು ಹೇಳುವುದಾದರೂ ಹೇಗೆ?' ಚಿಂತಿತನಾದ.

ಅಷ್ಟರಲ್ಲಿ ತಟ್ಟೆಯಲ್ಲಿ ಬಿಸಿ ಬಿಸಿ ಪಕೋಡ ರೆಡಿ ಮಾಡಿ ತಂದು ಅವನ ಮುಂದೆ ಹಿಡಿದು ನಿಂತಳು ಮಾನ್ವಿ. ಮೊದಲೇ ತಲೆ ಬಿಸಿಯಾಗಿತ್ತವನದು. ಅವಳ ಮುಖವನ್ನೊಮ್ಮೆ ತಟ್ಟೆಯನ್ನೊಮ್ಮೆ ದಿಟ್ಟಿಸಿ ನೋಡಿ ಸಿಡುಕಿದ - "ಏನಿದು?"

"ಪಕೋಡ!! ನಾನೇ ನನ್ನ ಕೈಯಾರೆ ಮಾಡಿದ್ದು." ಹೆಮ್ಮೆಯಿಂದ ನುಡಿದಳು. "ಬೇಕಾದ್ರೆ ವಿಡಿಯೋ ನೋಡು" ಮೊಬೈಲ್ ಕೊಟ್ಟಳು.

"ಅಂಗೈ ಹುಣ್ಣಿಗೆ ಕನ್ನಡಿ ಬೇರೆ!! ಇವುಗಳ ಆಕಾರ ನೋಡೇ ಗೊತ್ತಾಯ್ತು ನೀನೇ ಮಾಡಿದ್ದುಂತ... ಇವನ್ನು ಪಕೋಡ ಅಂತಾರಾ ಯಾರಾದ್ರೂ,,!" ವ್ಯಂಗ್ಯವಾಗಿ ಕೇಳಿದ

"ಇನ್ಹೇಗ್ ಕಾಣಿಸ್ತಿವೆ ನಿನಗೆ??"  ರೇಗಿದಳು

"ಈಗತಾನೇ ಸ್ವಿಮ್ಮಿಂಗ್ ಪೂಲ್‌ನಿಂದ ಎದ್ದು ಬಂದಿರೋ ಅಮಿಬಾ ತರಾ ಕಾಣ್ತಿವೆ. ಇವು ಪಕೋಡ ನಾ! ಇಂಥಾ ಹಾಳು ಮೂಳು ಜಲಚರ ನಾನ್ ತಿನ್ನಲ್ಲ" ಕೈ ಮುಗಿದ

"ಮಾಡಿದ್ದು ನಿನಗಲ್ಲ ಸಂಕುಗೆ.. ಸಂಕು... ಟೇಸ್ಟ್ ಮಾಡಿ ಹೇಳು ಹೇಗಿದೆಯಂತ.." ಹರ್ಷನ ಬಳಿ ಹೋದಳು. ಅವನಿಗೆ ಅವಳ ಮೇಲೆ ಯಾಕೋ ಸಿಟ್ಟು. ವಿನಾಃಕಾರಣ ಏನಲ್ಲ. ಅವಳನ್ನೇ ಪರಿಶೀಲನಾತ್ಮಕವಾಗಿ ನೋಡುತ್ತಲೇ ಇದ್ದ. ಅವಳ ಕಣ್ಣಲ್ಲಿ ಅಮಾಯಕತೆ ಹುಡುಗುತನ ಕಾಣಿಸಿತ್ತೆ ವಿನಃ ಕಪಟ ವಂಚನೆಯಲ್ಲ. ಸಿಡುಕಬೇಕಿದ್ದವನು ಮೆತ್ತಗಾದ.

"ನಿನಗೆ ಅಡುಗೆ ಬರಲ್ಲ ಎಂದು ಅವಮಾನಿಸಿದವನು ಅವನು, ಮೊದಲು ಅವನು ತಿನ್ನಲಿ, ಆಮೇಲೆ ನಾನು" ಗಂಭೀರವಾಗಿ ನುಡಿದು ಹುಬ್ಬುಗಳ ಮಧ್ಯೆ ಕೈ ಒತ್ತಿಕೊಂಡ. ಪ್ರಸನ್ನನ ಬಾಣ ತಿರುಗಿ ಅವನೆಡೆಗೆ ಬಂದಿತ್ತು.

ಕ್ರಿಕೆಟ್ ಮ್ಯಾಚ್ ನೋಡುವ ನೆಪವೊಡ್ಡಿ ಆತ ಬಾಲ್ಕನಿಯಿಂದ ಒಳಗೋಡಿ ಬಂದ. ರೂಮಿನೊಳಗೆ ನಿಂತಿದ್ದ ಡೇವಿಡ್ ಅವನನ್ನ ನೋಡಿ ಉಗುಳು ನುಂಗಿದ. "ಏನಾದ್ರೂ ಬೇಕಿತ್ತಾ ಸರ್?" ಕೇಳಿದ ಆಗತಾನೇ ಬಂದವನಂತೆ. ಅವನ ಮಾತಿಗೆ ತಲೆಯಾಡಿಸಿ ಕೆಳಗಿಳಿದ ಪ್ರಸನ್ನ. ಅವನ ಮೇಲೆ ಅನುಮಾನವಂತೂ ಕಾಡುತ್ತಲೇ ಇತ್ತು.

ಪ್ರಸನ್ನ ಹರ್ಷ ಇಬ್ಬರೂ ಮ್ಯಾಚ್ ನೋಡಲು ಕಾತರರಾಗಿದ್ದರೆ, ಮಾನ್ವಿ ತಾನು ಮೊಟ್ಟ ಮೊದಲ ಬಾರಿಗೆ ಕಷ್ಟ ಪಟ್ಟು ಮಾಡಿದ ಪಕೋಡ ತಿನ್ನಿಸಲು ಪಟ್ಟು ಹಿಡಿದಳು. ಟಿವಿ ಎದುರು ನಿಂತು ಮ್ಯಾಚ್ ನೋಡಗೊಡದೆ ತಿನ್ನಲೇಬೇಕೆಂದು ರಂಪ ಮಾಡಿದಳು. ಹರ್ಷ ಒತ್ತಾಯದಿಂದ ಪ್ರಸನ್ನನ ಬಾಯಿಗೆ ಮೊದಲ ನೈವೇದ್ಯ ಮಾಡಿದ. ಇಷ್ಟವಿಲ್ಲದೆ ಗೊಣಗುತ್ತ ತಿಂದು "ನಾಳೆವರೆಗೂ ಬದುಕಿದ್ರೆ ಮತ್ತೆ ಸಿಗೋಣ ಬ್ರೋ.. " ಕೊನೆಯ ಮಾತೆಂಬಂತೆ ಉಸುರಿದ. ಆಕೆ ಅವನಿಗೊಂದು ಮೊಟಕಿದಳು.

ಮುಂದಿನ ಬಲಿ ಎಂಬಂತೆ ತಟ್ಟೆ ಹರ್ಷನ ಮುಂದೆ ಹಿಡಿದಳು. ಅವನು ಮನಸ್ಸಲ್ಲೇ ದೇವರಿಗೆ ಪ್ರಾರ್ಥಿಸಿ ತಾನೊಂದು ಪಕೋಡ ತಿಂದ. "ಹ್ಮ್... ನಾಟ್ ಬ್ಯಾಡ್ ಮಾನು.." ಅವಳ ಸಮಾಧಾನಕ್ಕೆ ನುಡಿದು ಪಕ್ಕಕ್ಕೆ ತಿರುಗಿ ಕಷ್ಟದಿಂದ ಅದನ್ನು ನುಂಗಿಕೊಂಡ. ತೃಪ್ತಳಾದ ಅವಳೂ ಅವರಿಬ್ಬರ ಮಧ್ಯದಲ್ಲಿ  ಕೂತು ತಡರಾತ್ರಿಯವರೆಗೂ ಮ್ಯಾಚ್ ನೋಡಿದಳು.

ಭಾರತದ ಆಟಗಾರರು ಫೋರ್, ಸಿಕ್ಸ್ ಬಾರಿಸಿದಾಗ, ಪ್ರತಿಸ್ಪರ್ಧಿಗಳ ವಿಕೆಟ್ ಎಗರಿಸಿದಾಗ, ಮೂವರು ಕೈ ಕೈ ತಟ್ಟಿ ಕೂಗಿದರು. ಕೇಕೆ ಹಾಕಿದರು. ಖುಷಿ ಪಟ್ಟರು. ಜಾಹಿರಾತಿನ ಮಧ್ಯಂತರದಲ್ಲಿ ವಾಸ್ತವ ಆಗಾಗ ನುಸುಳಿ ಹೋಗುತ್ತಿತ್ತು.

'ಎಷ್ಟು ವರ್ಷಗಳಾಗಿತ್ತು, ನಾನು ಈ ರೀತಿ ಮನಸಾರೆ ನಕ್ಕು ಸಂಭ್ರಮಿಸಿ! ಇದಕ್ಕೆ ಕಾರಣ..' ಎಂದುಕೊಂಡು ಪ್ರಸನ್ನೆಡೆಗೆ ನೋಡಿದಳು ಮಾನ್ವಿ. ತನ್ನ ಹಳೆಯ ಸ್ನೇಹದ ದಿನಗಳು ನೆನಪಾಗುತ್ತಿದ್ದವು. ಹರ್ಷನಿಗೆ ಹರಿಣಿ ಹಾಗೂ ಅಮ್ಮನ ಮುಖ ಮನಸ್ಸಲ್ಲೇ ಅಚ್ಚೊತ್ತಿತ್ತು. ಪತ್ರದ ಸಾಲುಗಳು ಕಾಡುತ್ತಿದ್ದವು. ಅಂತರಾಳ ನೆನಹುಗಳ ಶೋಧನೆಯಲ್ಲಿ ತೊಡಗಿಯೇ ಇತ್ತು. ಪ್ರಸನ್ನ 'ಹರ್ಷನಿಗೆ ಸತ್ಯವನ್ನು ಹೇಗೆ ಹೇಳುವುದು? ಈ ಡೇವಿಡ್ ಯಾರು? ರಘುನಂದನ್ ಕಡೆಯವನೇ ಇರಬಹುದು. ಅವನಿಂದ ಎಚ್ಚರಿಕೆಯಿಂದ ಇರಬೇಕು' ಎಂಬ ಯೋಚನೆಯಲ್ಲಿದ್ದ.

ಸಂತೋಷಕರ ಕ್ಷಣಗಳ ಮಧ್ಯೆ ಪ್ರಸನ್ನ ಮಾನ್ವಿ ಎರಡು ಬಾರಿ ಹೈಫೈ  ಮಾಡಿಕೊಂಡರು ತಮಗೆ ಅರಿವಿಲ್ಲದೆ.. ಆಟ ರೋಮಾಂಚಕಾರಿ ತಿರುವು ಪಡೆದಾಗ ಮೂವರು ತಮ್ಮ ತಮ್ಮ ಅಭಿಪ್ರಾಯ ಮುಂದಿಟ್ಟು ವಾದಿಸಿದರು. ಕ್ರಿಕೆಟ್ ಪಂದ್ಯದ ಹೆಸರಲ್ಲಿ ಮೂರು ಜನರು ಬಹಳ ವರ್ಷಗಳಿಂದ ಆಪ್ತರೇನೋ ಎನಿಸುವಷ್ಟು ನಿಕಟವಾಗಿದ್ದರು. ಆದರೆ ಈ ಸಂತೋಷವನ್ನು ಛಿದ್ರಗೊಳಿಸುವ ಕ್ಷುದ್ರದೃಷ್ಟಿಯೊಂದು ಮೇಲೆ ನಿಂತು ಎಲ್ಲವನ್ನೂ ಗಮನಿಸುತ್ತಲಿತ್ತು.


ಮುಂದುವರೆಯುವುದು..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...