"ನನಗೆ ಹೊಸ ಡ್ರೆಸ್ ಕೊಡಿಸೋವರೆಗೂ ನಾನು ಎಲ್ಲಿಗೂ ಬರಲ್ಲ, ಯಾರ ಮಾತು ಕೇಳೋಲ್ಲ" ಹೀಗೊಂದು ಘೋಷಣೆ ಕೂಗಿ ಮುನಿಸಿಕೊಂಡು ಬೊರಲು ಮಲಗಿಕೊಂಡು ಬಿಟ್ಟಿದ್ದಳು ಅಖಿಲಾ.
"ಇವತ್ತೇ ಕೊಡಿಸ್ತಿನಿ ಕಣೋ ಮುದ್ದು.. ಇದೊಮ್ಮೆ ನಾನು ಹೇಳೋದನ್ನ ಕೇಳು.. ಪ್ಲೀಸ್... ಏಂಜಲ್ ಮತ್ತೆ ಪ್ರಿನ್ಸ್ ಒಂದಾಗಬೇಕೋ ಬೇಡ್ವೋ??" ಪರಿ ರಮಿಸುತ್ತಿದ್ದಳು.
"ಆಗಬೇಕು. ಆದರೆ ಅದಕ್ಕೂ ಮೊದಲು ನನಗೆ ನನ್ನ ಹೊಸ ಡ್ರೆಸ್ ಬೇಕು" ಅಖಿಲಾ ಹಠ ಜಾರಿಯಲ್ಲಿತ್ತು.
ಬೆಳಿಗ್ಗೆ ಬೆಳಿಗ್ಗೆ ನಡೆದದ್ದಿಷ್ಟೇ.... ಮೇಜರ್ ಸರ್ ಕೆಲಸ ನಿಮಿತ್ತ ಸಾತ್ಪುರಕ್ಕೆ ಹೊರಟು ಹೋದ ನಂತರ ಅಖಿಲಾ ನಿಖಿಲ್ ಇವತ್ತು ಬೀಚ್ ನಲ್ಲಿ ಹೇಗೆ ಅಭಿನಯಿಸಬೇಕು ಎಂಬುದನ್ನು ಚರ್ಚೆ ಮಾಡುತ್ತಿದ್ದರು. ಮಾತಿನ ಚಕಮಕಿಯಲ್ಲಿ ಇಬ್ಬರಿಗೂ ಸಣ್ಣದಾಗಿ ಕದನ ಶುರುವಾಗಿತ್ತು. ಅವಳು ಅವನಿಗೆ, ಅವನು ಅವಳಿಗೆ ಒಂದೆರಡು ಏಟು ಬಡಿದದ್ದು ಆಗಿ ಹೋಯ್ತು. ಕೋಪದಿಂದ ಈಕೆ ಅವನ ಕೂದಲು ಹಿಡಿದು ಎಳೆದರೆ, ಆತ ಅವಳ ಹೊಸ ಏಂಜಲ್ ಫ್ರಾಕ್ ಮೇಲೆ ಜ್ಯೂಸ್ ಎರಚಿಬಿಟ್ಟಿದ್ದ. ಅದೇ ದೊಡ್ಡ ಪ್ರಮಾದವಾಗಿ ಹೋಗಿತ್ತು. ಪರಿ ಓಡಿ ಬಂದು ಡ್ರೆಸ್ ನ್ನು ನೀರಿನಿಂದ ಉಜ್ಜಿ ಸ್ವಚ್ಛ ಮಾಡಿದರೂ ಕಿಲ್ಲರ್ ಪಟ್ಟು ಸಡಿಲವಾಗಲಿಲ್ಲ. ಆಗಿನಿಂದಲೂ ಹೊಸ ಬಟ್ಟೆಗಾಗಿ ಮುಷ್ಕರ ಆರಂಭವಾಗಿ ಹೋಗಿತ್ತು. ನಿಖಿಲ್ ಕ್ಷಮೆ ಕೇಳಿದ, ಪರಿ ಸಮಾಧಾನ ಮಾಡಿ ಏನೇನೋ ಕಥೆ ಹೇಳಿ ಭಿನ್ನೈಸಿಕೊಂಡರೂ ಅವಳು ಬೀಚ್ ಗೆ ಹೋಗಲು ಸುತಾರಾಂ ಒಪ್ಪಲಿಲ್ಲ. ಹೋಗಬೇಕೆಂದರೆ ಹೊಸ ಡ್ರೆಸ್ ಬೇಕು. ಆ ಸಮಯಕ್ಕೆ ಅದು ಅಸಾಧ್ಯವಾದ ಮಾತು. ಅಖಿಲಳ ಹಟದಿಂದಾಗಿ ಅವತ್ತಿನ ಅವಕಾಶವೊಂದು ಕೈತಪ್ಪಿ ಹೋದಂತಾಯಿತು. ಆದರೆ ಅವಳ ಮುಗ್ಧ ಹಟವೇ ಆ ದಿನ ಪರಿ ಹರ್ಷನ ಮೊದಲ ಪರೋಕ್ಷವಾದ ರೀತಿಯ ಭೇಟಿಗೆ ಮುನ್ನುಡಿಯನ್ನು ಬರೆದಿತ್ತು.
ರಾತ್ರಿ ತುಂಬಾ ತಡವಾಗಿ ಮಲಗಿದರೂ ನಸುಕಿನಲ್ಲಿ
ಭಾರ್ಗವನ ಆಗಮನಕೂ ಮೊದಲೇ ದಿಢೀರನೆ ಎಚ್ಚರವಾಯಿತು ಹರ್ಷನಿಗೆ. 'ಇವತ್ತು ಆ ಮಕ್ಕಳನ್ನು ಒಮ್ಮೆ ಮಾತಾಡಿಸಲೇಬೇಕು' ಎಂದುಕೊಂಡವನೇ ಬೇಗ ಬೇಗ ಜಾಗಿಂಗ್ ಗೆ ಸಿದ್ದವಾಗಿದ್ದ. ಪ್ರಸನ್ನ ಮಾನ್ವಿ ಗಾಢವಾದ ನಿದ್ರೆಯಲ್ಲಿ ಇದ್ದರು. ಅವರನ್ನು ಎಬ್ಬಿಸುವ ಗೋಜಿಗೂ ಹೋಗಲಿಲ್ಲ. ತನ್ನ ಕೆಲಸಕ್ಕೆ ಅಡಚಣೆ ಆಗಬಹುದೇನೋ ಎಂದು!
ಬೀಚ್ ಎಂದಿನಂತೆ ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿತ್ತು. ಮುಂಜಾವಿನ ತಂಪು ಗಾಳಿ, ತಿಳಿ ಕಿರಣಗಳ ಶಾಖ, ಅಲೆಗಳ ಪುಳಕ, ಅವುಗಳ ಮೇಲೆ ಮಿನುಗುವ ಪ್ರಖರ ಸೂರ್ಯನ ಮಿಂಚು.. ಕಲಾವಿದನ ಅಮಲೇರಿಸುವ ಚಿತ್ರ ಕೃತಿಯಂತೆ!! ಸುತ್ತಲೂ ಜನರಿಂದ ಮುತ್ತುವರೆದಿತ್ತು.
ಹರ್ಷ ತನ್ನ ಎರಡೂ ತೋಳುಗಳನ್ನು ಸೂರ್ಯನೆಡೆಗೆ ಚಾಚಿ ಒಂದು ಕ್ಷಣ ಕಣ್ಮುಚ್ಚಿ ತಿಳಿ ಬಿಸಿಲನ್ನು, ಸುಂದರವಾದ ಪ್ರಕೃತಿಯನ್ನು ಆಹ್ವಾನಿಸಿದ.. ಆಹ್ಲಾದಿಸಿದ... ತೀರದಲ್ಲಿ ಮೆಲ್ಲಗೆ ಜಾಗ್ ಮಾಡುತ್ತ ದೂರ ದೂರದವರೆಗೂ ಕಣ್ಣು ಹಾಯಿಸಿದ. ಪುಟ್ಟ ಮಕ್ಕಳಿಗಾಗಿ.. ಊಹ್ಮೂ ಕಾಣಲಿಲ್ಲ. ಬಹುಶಃ ತಡವಾಗಿ ಬರಬಹುದು ಎಂದು ಅವರಿಗಾಗಿ ಎದುರು ನೋಡಿದ ಸುಮಾರು ಸುತ್ತುಗಳನ್ನು ಸುತ್ತಿದ. ಸೆಕ್ಯೂರಿಟಿ ಅವನನ್ನು ಬೆಂಬಿಡದ ಭೂತದಂತೆ ಹಿಂಬಾಲಿಸುತ್ತಿದ್ದರು. ಅದವನಿಗೆ ಕಿರಿಕಿರಿ ಎನಿಸಿದರೂ ಬೇರೆ ವಿಧಿಯಿಲ್ಲ!
ಅವನ ಮನಸ್ಸಿನ ಸಂವೇದನೆಯೊಂದು ಹೇಳುತ್ತಿತ್ತು, ಮಕ್ಕಳು ಇಲ್ಲೇ ಇದ್ದಾರೆಂದು ಆದರೆ ಅವನಿಗೆ ಸಿಗಲಿಲ್ಲ... ಎಂಟು ಗಂಟೆವರೆಗೂ ಕಾದವನು ಯಾವುದೋ ಫೋನ್ ಕಾಲ್ ಬಂದ ತಕ್ಷಣ ನಿರಾಸೆಯಿಂದ ಹೊರಟು ನಿಂತ. ಹೊರಡುವಾಗ ಕೂಡ ಸುತ್ತ ಮುತ್ತ ತಿರುಗಿ ನೋಡುತ್ತಲೇ ಇದ್ದ. ಬೇಕಾದದ್ದು ಸಿಕ್ಕಲಿಲ್ಲ.. ಅನತಿ ದೂರದಲ್ಲಿ ಮರದ ಮರೆಯಲ್ಲಿ ನಿಂತು ಅವನ ಪ್ರತಿ ಚಲನೆಯನ್ನು ಗಮನಿಸುತ್ತಿದ್ದ ಪರಿ, ಅವನು ತಿರುಗಿ ನೋಡುವಾಗಲೆಲ್ಲ ಬಚ್ಚಿಟ್ಟುಕೊಂಡು ಬಿಡುತ್ತಿದ್ದಳು. ಮೊಗದಲ್ಲೊಂದು ತುಂಟನಗು! ಅವನ ಅಂತರಂಗದ ತಳಮಳ ಅವಳಿಗೆ ಅರ್ಥವಾಗಿತ್ತು. ಹುಡುಕಾಟದ ಪ್ರಕ್ರಿಯೆ ಆರಂಭಗೊಂಡಿದೆ. ಇದಕ್ಕೊಂದು ನಿಶ್ಚಿತ ರೂಪ ಸಿಗುವುದಷ್ಟೇ ಬಾಕಿ!! ಅವಳು ಭಾರವಾದ ಉಸಿರು ಹೊರದಬ್ಬಿ ಹಗುರಾದಳು.
ಹರ್ಷ ಮನೆಗೆ ಬರುವಷ್ಟರಲ್ಲಿ ಡೇವಿಡ್ ಗಾಬರಿಯಿಂದ ತನ್ನ ಬೆನ್ನ ಹಿಂದೆ ಏನೋ ಬಚ್ಚಿಟ್ಟುಕೊಂಡತೆ ಕಂಡಿತು. ಅದನ್ನು ಹರ್ಷ ಗಮನಿಸಿದ್ದ, ಡೇವಿಡ್ ನನ್ನು ಗದರಿ ಪರಿಶೀಲಿಸಿ ನೋಡಿದಾಗ ಸಿಕ್ಕಿತ್ತು... ಮೆಟ್ಯಾಲಿಕ್ ಬ್ಲೂ ಬಣ್ಣದ ಗಿಟಾರ್! ಅದರ ಎಡಬದಿಯಲ್ಲಿ Angel ಎಂಬ ಸೈನ್ ಮಾರ್ಕ್‌ನ್ನು ಹೊಂದಿತ್ತು! ಅದನ್ನು ನೋಡಿದ ಹರ್ಷನ ಮೊಗದಲ್ಲಿ ಕಿರುನಗೆ..
" ಇದರೊಂದಿಗೆ ಒಂದು ಲೆಟರ್ ಕೂಡ ಇರಬೇಕಿತ್ತಲ್ವ...??"
" ನೋ ಸರ್, ಯಾವ ಲೆಟರ್ ಇರಲಿಲ್ಲ" ತುಸು ಭಯದಿಂದ ಉಲಿದ ಡೇವಿಡ್.
"ನನ್ನಿಂದ ಇದನ್ನ ಮುಚ್ಚಿಡೋ ಪ್ರಯತ್ನ ಯಾಕೆ??" ಒರಟಾಗಿ ಕೇಳಿದ. ಹುಬ್ಬು ಗಂಟಿಕ್ಕಿ.
"ಸಾರಿ ಸರ್! ನಿಮ್ಮ ಅನುಮತಿ ಇಲ್ಲದೆ ಗಿಫ್ಟ್ ಪ್ಯಾಕ್ ಒಪನ್ ಮಾಡ್ಬಿಟ್ಟೆ.. ಅದು ನಿಮ್ಮ ಸೆಕ್ಯೂರಿಟಿ ದೃಷ್ಟಿಯಿಂದ ಮಾತ್ರ! ಬೇರೆ ಯಾವ ಉದ್ದೇಶ ಇರಲಿಲ್ಲ. ನೀವು ಕೋಪ ಮಾಡ್ಕೊಬಹುದೇನೋಂತ..." ರಾಗವೆಳೆದ
"ಜಸ್ಟ್ ಶಟಪ್ ಡೇವಿಡ್! ಇನ್ಮುಂದೆ ನನಗೆ ಬರೋ ಪ್ರತಿಯೊಂದು ಕೊರಿಯರ್ ಮೊದಲು ನನ್ನ ಕೈಗೆ ಸೇರಬೇಕು. ಇನ್ನೊಮ್ಮೆ ಇಂತಹ ಉದ್ದಟತನ ಮಾಡಬೇಡ" ಎಚ್ಚರಿಸಿದ. ಡೇವಿಡ್ ಸುಮ್ಮನೆ ತಲೆ ಹಾಕಿ, ಮನಸ್ಸಲ್ಲೇ ದುಷ್ಟ ನಗೆ ಬೀರಿದ. 'ಡೋಂಟ್ ವರಿ, ಇದೇ ನಿನಗೆ ಬಂದ ಕೊನೆಯ ಪಾರ್ಸಲ್! ಇನ್ಮುಂದೆ ಮಿಸ್ಟೇಕ್ ಗೆ ಅವಕಾಶವೇ ಇಲ್ಲ'
ಒಳಬಂದ ಹರ್ಷ ಗಿಟಾರ್‌ನ್ನು ಮಗುವಂತೆ ಅಪ್ಯಾಯವಾಗಿ ಎತ್ತಿಕೊಂಡು ಆ ಹೆಸರನ್ನು ಮೃದುವಾಗಿ ಸವರಿದ. ಅದರ ತಂತಿಗಳನ್ನು ಮೀಟಿದ. ನಾದವೊಂದು ಝೇಂಕರಿಸಿತು.
ಅಷ್ಟರಲ್ಲಿ ಅವನ ದೃಷ್ಟಿ ಅವತ್ತಿನ ನ್ಯೂಸ್ ಪೇಪರ್ ಮೇಲಿದ್ದ ಜಾಹಿರಾತಿನ ಭಿತ್ತಿಪತ್ರದ ಮೇಲೆ ಬಿತ್ತು. ಗಿಟಾರ್ ಪಕ್ಕಕ್ಕಿಟ್ಟು ಅದನ್ನೆತ್ತಿಕೊಂಡ.
'ಮುಂಬೈನಲ್ಲಿ ಸತತ ಏಳು ದಿನಗಳವರೆಗೂ ನಡೆಯಲಿರುವ ಮ್ಯುಸಿಕಲ್ ಫೆಸ್ಟಿವಲ್! ಸಮಯ ರಾತ್ರಿ ಎಂಟು ಗಂಟೆಗೆ. ಪ್ರತಿದಿನವೂ ವೈವಿಧ್ಯಮಯ ರಸಮಂಜರಿ, ಹೊಸ ಹೊಸ ಗಾಯಕರು, ಖ್ಯಾತ ಸಂಗೀತ ಕಲಾವಿದರು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ದಿನದ ಕಾರ್ಯಕ್ರಮದ ವೇಳಾಪಟ್ಟಿ ಮತ್ತು ಟಿಕೆಟ್ ದೊರೆಯುವ ಸ್ಥಳ ಮತ್ತು ಅದರಲ್ಲಿ ಭಾಗವಹಿಸುವ ಕಲಾವಿದರ ಹೆಸರನ್ನು ಸಹ ಅದರಲ್ಲಿ ಸೂಚಿಸಲಾಗಿತ್ತು. ಅದನ್ನು ಎತ್ತಿಕೊಂಡು ಓದಿದ ಹರ್ಷನ ತುಟಿಯಂಚಲಿ ಮುಗುಳ್ನಗು. ಕೂಡಲೇ ತನ್ನ ಮೊಬೈಲ್ ಎತ್ತಿ ಅದರಲ್ಲಿ ನಮೂದಿತ ಸಂಖ್ಯೆಗೆ ಕರೆ ಮಾಡಿದ. ತನ್ನ ಪರಿಚಯವನ್ನು ತಿಳಿಸಿ ಅವರೊಂದಿಗೆ ಕೆಲವು ನಿಮಿಷ ಮಾತನಾಡಿದ.
ಆಗತಾನೇ ಎದ್ದು ಬಂದು ಇದನ್ನೆಲ್ಲ ನೋಡುತ್ತಿದ್ದ ಪ್ರಸನ್ನ ಅವನ ನಡೆಯನ್ನು ಅದರ ಉದ್ದೇಶವನ್ನು ಅರಿಯದೆ ಕಕ್ಕಾಬಿಕ್ಕಿಯಾದ. "ಬ್ರೋ... ಏನು ಮಾಡ್ತಿದಿಯಾ ನೀನು?"
"ನನಗೆ ಸರ್ಪ್ರೈಜ್ ಕೊಡ್ತಿರೋ ನನ್ನ ಹುಡುಗಿಗೆ, ನಾನೂ ಸರ್ಪ್ರೈಜ್ ಕೊಡೊದು ಬೇಡ್ವಾ??"
"ಇದು ಯಾವ ರೀತಿಯ ಸರ್ಪ್ರೈಜ್? ಏನು ಮಾಡ್ಬೇಕು ಅಂದ್ಕೊಂಡಿದಿಯಾ?" ತುಸು ಅಚ್ಚರಿಯಿಂದ ಕೇಳಿದ
"ಅದೂ...." ಎಂದು ಅವನ ಕಿವಿಯ ಬಳಿ ಬಂದು "ಸರ್ಪ್ರೈಜ್.....!!" ಎಂದು ಮೆಲ್ಲಗೆ ಉಸುರಿದ ಹರ್ಷ, ನಕ್ಕು ಗಿಟಾರ್ ಹಿಡಿದು ಹಾಡೊಂದು ಗುನುಗಿದ. ಆತನ ಒಳ್ಳೆಯ ಮೂಡ್ ನೋಡಿ ಪ್ರಸನ್ನನೂ ಸಂತೋಷದಿ ಹಾಡಿಗೆ ಧ್ವನಿ ಸೇರಿಸಿದ್ದ.
ಹೇ.. ಅಪ್ನಾ ದಿಲ್ ತೋ ಆವಾರಾ
ನಾ ಜಾನೇ ಕಿಸ್ಪೆ ಆಯೆಗಾ..
ಜಮಾನಾ ದೇಖಾ ಸಾರಾ..
ಹೇ ಸಬ್ಕಾ ಸಹಾರಾ
ಏ ದಿಲ್ ಹಿ ಹಮಾರಾ
ಹುವಾ ನಾ ಕಿಸಿಕಾ..
ಸಫರ್ ಮೆ ಹೇ,, ಏ ಬೇಚಾರಾ..
ನಾ ಜಾನೇ ಕಿಸ್ಪೆ ಆಯೆಗಾ..
ಆಗತಾನೇ ಎದ್ದು ಆಕಳಿಸುತ್ತ ಕಣ್ಣುಜ್ಜುತ್ತ ಬಂದ ಮಾನ್ವಿ, ಹರ್ಷನ ಕೈಯಲ್ಲಿ ಗಿಟಾರ್, ಹಾಡು ಸಂತೋಷದ ವಾತಾವರಣ ನೋಡಿ ಆಶ್ಚರ್ಯದಿ ನಿಂತಳು.
"ಥ್ಯಾಂಕ್ಯೂ ಸೋ ಮಚ್ ಮಾನು.. " ಹರ್ಷನ ಕೂಗಿಗೆ ಅವಳು ಯಾಕೆ ಎಂಬಂತೆ ನೋಟ ಸಂಕುಚಿತಗೊಳಿಸಿದಳು.
" ಮಾನು ಇತ್ತೀಚೆಗೆ ನನಗಿಂತ ನಿನಗೇ ಮರೆವು ಹೆಚ್ಚಾಗಿದೆ ಅನ್ನಿಸ್ತಿಲ್ವಾ, ನೀನೇ ಕೊಟ್ಟ ಗಿಫ್ಟ್ ನಿನಗೆ ಮರೆತೋಯ್ತಾ?" ವಾರೆಗಣ್ಣಿನಲ್ಲಿ ನೋಡಿ ಕಿರುನಕ್ಕ
ಅವಳು ಮನದಲ್ಲಿ ಪರಿಯನ್ನು ಹಳಿದುಕೊಂಡಳು. 'ಅವಳದೇ ಇರಬೇಕು ಈ ಕಿತಾಪತಿ. ನನ್ನ ಪಾಲಿಗೆ ಫಜೀತಿ!' ಬೊಗಸೆಯಲ್ಲಿ ಮುಖ ಉಜ್ಜಿಕೊಳ್ಳುತ್ತ
"ಅದೂ... ರಾತ್ರಿ ಸರಿಯಾಗಿ ನಿದ್ರೆ ಇಲ್ವಲ್ಲ... ಅದೇ ಮಂಪರಿನಲ್ಲಿ ಬೇಗ ನೆನಪಾಗಲಿಲ್ಲ" ಸಂಭಾಳಿಸುತ್ತ ಸೋಫಾ ಮೇಲೆ ಕುಳಿತಳು.
ಹರ್ಷ ಮತ್ತೆ ಹಾಡು ಗುನುಗುವಾಗಲೇ ಮಾನ್ವಿಯ ಫೋನ್ ರಿಂಗಣಿಸಿತು. ಸ್ಕ್ರೀನ್ ಮೇಲೆ ಮೂಡಿದ ಹೆಸರು ನೋಡಿ ಆಕೆ ಬೆಚ್ಚಿ ಎದ್ದುನಿಂತಳು. ''ಒಂದ್ನಿಮಿಷ ಬಂದೆ.. '' ಎದ್ದು ಗಾರ್ಡನ್ ಕಡೆಗೆ ಹೋಗಿ ಮಾತಾಡತೊಡಗಿದಳು.
ಪ್ರಸನ್ನ ಗಂಭೀರವಾಗಿ ನ್ಯೂಸ್ ಪೇಪರ್ ಓದುವವನಂತೆ ಅದನ್ನು ಅಡ್ಡ ಹಿಡಿದುಕೊಂಡಿದ್ದನಾದರೂ ಓರೆ ನೋಟದಲ್ಲಿ ಅವಳನ್ನೇ ಗಮನಿಸುತ್ತಿದ್ದ. ಅವಳ ಮುಖದಲ್ಲಿ ಆತಂಕ ಸಿಟ್ಟು, ಉಸಿರು ಬಿಗಿಹಿಡಿದ ಹಾವಬಾವ. ಮಾತನಾಡುತ್ತಿದ್ದವಳು ಒಮ್ಮೆಗೆ ಬೆಚ್ಚಿ ಪ್ರಸನ್ನನ ಕಡೆಗೆ ನೋಡಿ ಮತ್ತೆ ಮಾಮೂಲಿಯಾಗಿ ಮಾತು ಮುಂದುವರಿಸಿದಳು. ಆದರೂ ಅವಳು ಬಚ್ಚಿಟ್ಟ ಭಯವನ್ನು ಹಣೆಯ ಬೆವರು ಸಾರಿ ಹೇಳುತ್ತಿತ್ತು.. ಅವನು ಕಣ್ಣು ಕಿರಿದಾಗಿಸಿ ಅವಳನ್ನೇ ನೋಡುತ್ತ ಪೇಪರ್ ಬದಿಗಿಟ್ಟ. 'ಏನೋ ವಿಷಯ ಇದೆ. ಶಿ ಇಸ್ ಟ್ರ್ಯಾಪ್ಡ್.. ಅವನಿಗನ್ನಿಸಿತ್ತು. ಇವಳೊಂದು ಗೊಂಬೆ ಮಾತ್ರ! ಸೂತ್ರ ಬೇರೆ ಯಾರದೋ ಕೈಯಲ್ಲಿದೆ! ರಘುನಂದನ್? ' ಕೇವಲ ಊಹೆ ಮಾತ್ರ. ಖಚಿತವಾಗಿ ಹೇಳಲಾಗುತ್ತಿಲ್ಲ.
ಕೆಲ ನಿಮಿಷ ಮಾತನಾಡಿ ಒಳಗೆ ಬಂದ ಮಾನ್ವಿ ಡೇವಿಡ್ ಗೆ ಒಂದು ಕಪ್ ಬಿಸಿ ಕಾಫಿ ತರಲು ಹೇಳಿ ಉಸಿರು ಚೆಲ್ಲಿ ಕೂತಳು.
" ಕಾಲ್ ಮಾಡಿದ್ದು ರಘು ಅಂಕಲ್ ಆ?" ಕೇಳಿದ್ದ ಹರ್ಷ. ಸುಮ್ಮನೆ ಹ್ಮೂ ಎಂದು ತಲೆ ಹಾಕಿದಳು.
"ನನಗೂ ಮಾಡಿದ್ರು ಆಗಲೇ..." ಮುಗ್ದವಾಗಿ ನುಡಿದ
"ಯಾಕೆ??" ಬೆಚ್ಚಿ ಕೇಳಿದಳು
"ಇವತ್ತು ಸಂಜೆ ಡೈರೆಕ್ಟರ್ಸ್ ಬೋರ್ಡ್ ಮೀಟಿಂಗ್!
ಅಂಕಲ್ ಬೆಳಿಗ್ಗೆ ಫ್ಲೈಟ್ ಗೆ ಮುಂಬೈ ಏರ್ಪೋರ್ಟ್ ಬರ್ತಿದಾರೆ! ಸೋ ಅವರನ್ನು ಪಿಕ್‌ಪ್ ಮಾಡೋಕೆ 'ಬರ್ತಿಯಾ ತಾನೇ' ಅಂತ ಕೇಳಿದ್ರು. ಶ್ಯೂರ್ ಅಂಕಲ್ ಅಂದೆ.
ಯಾಕೆ ನಿನಗೆ ವಿಷಯ ಹೇಳಲಿಲ್ಲವಾ?" ತಿರುಗಿ ಪ್ರಶ್ನೆ ಹಾಕಿದ.
ಅಷ್ಟರಲ್ಲಿ ಡೇವಿಡ್ ತಂದು ಕೊಟ್ಟ ಕಾಫಿಯನ್ನು ತೆಗೆದುಕೊಂಡು ಒಂದು ಸಿಪ್ ಕುಡಿದಿದ್ದ ಮಾನ್ವಿ, ಸುಡುವ ಕಾಫಿಯನ್ನು ಅವನ ಮುಖಕ್ಕೆ ಎರಚಿದ್ದಳು. ಆತ ಕಾಫಿಯ ಉರಿಯಿಂದ ಚಿಟ್ಟನೇ ಚೀರಿ ನಲುಗುತ್ತ ಮುಖ ಒರೆಸಿಕೊಳ್ಳತೊಡಗಿದ. ಆಕ್ರೋಶದಿಂದ ಹಲ್ಲು ಕಡಿಯುತ್ತ, " ಇಷ್ಟು ತಣ್ಣಗಿರೋ ಕಾಫಿ ಕೊಡೊದಾ?" ಸಿಟ್ಟಿನಲ್ಲಿ ರೇಗಿದ ಅವಳ ಮೈ ಕಂಪಿಸುತ್ತಿತ್ತು.
"ಮಾನ್ವಿ.. ಇಷ್ಟು ಚಿಕ್ಕ ವಿಷಯಕ್ಕೆ ಹೀಗಾ ಪನಿಷ್ ಮಾಡೋದು?!! ಹರ್ಷ ಗದರಿದ.ಆಕೆ ಕಾಲು ನೆಲಕ್ಕಪ್ಪಳಿಸಿ ಅಲ್ಲಿಂದ ಹೊರಟಳು. ಜಾನಕಮ್ಮ ಓಡಿಬಂದು ಡೇವಿಡ್‌ನನ್ನು ಒಳಗೆ ಕರೆದೊಯ್ದರು.
" ಏರ್ಪೋರ್ಟ್ ಗೆ ನೀನು ಬರ್ತಿಯಲ್ವ...
ಇತ್ತೀಚೆಗೆ ನೀನು ಅಂಕಲ್ ಜೊತೆ ಸರಿಯಾಗಿ ಮಾತೇ ಆಡ್ತಿಲ್ವಂತೆ... ಅವರು ತುಂಬಾ ಟೆನ್ಷನ್ ಆಗಿದಾರೆ... ಏನಾಗಿದೆ ನಿನಗೆ... " ಹರ್ಷನ ಕೂಗು ಕೇಳಿದರೂ ಕೇಳದಂತೆ ಮೆಟ್ಟಿಲೇರಿ ಹೊರಟವಳ ಕಂಗಳಲಿ ನಿಲ್ಲದೆ ಸುರಿವ ಅಶ್ರುಧಾರೆ!!
"ಏರ್ಪೋರ್ಟ್ ಗಾ..... ನಾನ್ ಬರ್ತಿನಿ ಬ್ರೋ" ಮಾನ್ವಿಗೂ ಮೊದಲೇ ಪ್ರಸನ್ನ ತನ್ನ ನಿರ್ಧಾರ ಧೃಡಪಡಿಸಿದ್ದ. ಬೇಗ ಸಿದ್ದವಾಗಲು ಹೇಳಿದ ಹರ್ಷ ಗೀಟಾರ್ ಸಮೇತ ರೂಂ ಸೇರಿಕೊಂಡ.
'ನಿಜವಾಗಿಯೂ ಈ ಪಿಶಾಚಿ ಫೋನ್‌ಲ್ಲಿ ಮಾತಾಡಿದ್ದು ಇವಳ ತಂದೆ ರಘುನಂದನ್ ಜೊತೆಗೆನಾ? ನಿಜಾನಾ? ಏನು ಹೇಳಿರಬಹುದು ಇಷ್ಟು ಕೋಪ ಬರುವಂತದ್ದು? ತಂದೆ ಮೇಲೆ ಸಿಟ್ಟು ಸಾಧಿಸಲು ಸಾಧ್ಯವಾಗದೆ ಒಳಬಂದು ಡೇವಿಡ್ ಮೇಲೆ ಕೆಂಡ ಕಾರಿದಳಾ? ಈ ಡೇವಿಡ್ ಕೂಡ ಒಂತರಾ ನಿಗೂಢವಾಗಿ ಕಾಣ್ತಿದ್ದಾನೆ. ಅವನಿಂದ ಹರ್ಷ ದೂರ ಇದ್ದಷ್ಟು ಒಳ್ಳೆಯದು, ಈ ಡೇವಿಡ್ ರಘುನಂದನ್ ಕಡೆಯವನೇ ಇರಬಹುದಾ?!' ಪ್ರಸನ್ನ ಈ ತರ್ಕಕ್ಕೆ ಯೋಚನೆಯಿಂದ ಎಚ್ಚರಗೊಂಡ.
ಪ್ರಸನ್ನ ಸ್ನಾನಕ್ಕೆ ಹೋಗುವ ಮುನ್ನ ಬಂದ ಪರಿಯ ಕರೆಯನ್ನು ಸ್ವೀಕರಿಸಿದ.
"ಸಾರಿ ಪರಿ ಇವತ್ತು ಹರ್ಷನ ಜೊತೆಗೆ ಬೀಚ್ ಬರಲಾಗಲಿಲ್ಲ. ಹೇಗಿತ್ತು ಇವತ್ತಿನ ರಿಯಾಕ್ಷನ್?"
"ನೋ ಪ್ರಸನ್ನ ... ಇವತ್ತು ಅಖಿಲಾ ಮೇಡಂ ಸ್ಟ್ರೈಕ್! ಅದ್ಕೆ ಪ್ಲ್ಯಾನ್ ಕ್ಯಾನ್ಸಲ್ ಆಗೋಯ್ತು. ಆದರೆ ಒಂದು ಬೆಳವಣಿಗೆ ಕಂಡಿತು. ಹರ್ಷ ಬೀಚ್ ನಲ್ಲಿ ನನಗೋಸ್ಕರ ಹುಡುಕಾಡಿದ" ಅವಳ ಖುಷಿಯ ಮಾತಿಗೆ ಪ್ರಸನ್ನ ತಲೆ ಕೊಡವಿದ.
"ನಿಮ್‌ತಲೆ!! ಅವನು ಮಕ್ಕಳಿಗಾಗಿ ಹುಡುಕಿರಬಹುದು ನಿಮ್ಮನ್ನಲ್ಲ. ಅಂತಹ ಭ್ರಮೆಯಲ್ಲಿ ಬದುಕಬೇಡಿ" ತುಸು ರೇಗಿದ. ಅವಳಿಗದು ಹೊಸತಲ್ಲ. ಕೆಲಹೊತ್ತಿನ ಮಾತುಕತೆಯ ನಂತರ ಪ್ರಸನ್ನನಿಗೆ ಅರ್ಥವಾಗದ ಪ್ರಶ್ನೆ- 'ಗಿಟಾರ್ ಜೊತೆಗೆ ಲೆಟರ್ ಕೂಡ ಬಂದಿತ್ತು. ಆದರೆ ಅದು ಹರ್ಷನ ಕೈಗೆ ಸೇರಲಿಲ್ಲ. ಮಾನ್ವಿಯಂತೂ ಇನ್ನೂ ಎದ್ದಿರಲಿಲ್ಲ. ಮತ್ತೆ ಎಲ್ಲಿ?? .... ಡೇವಿಡ್!!! ಏನು ಮಾಡಿರಬಹುದು ಲೆಟರ್ ನಾ?' ಅದೇ ಯೋಚನೆಯಲ್ಲಿ ಮೊಬೈಲ್ ಬೆಡ್ ಮೇಲೆ ಎಸೆದು ಸ್ನಾನಕ್ಕೆ ಹೋದ.
ಪ್ರಸನ್ನ ಸ್ನಾನಕ್ಕೆ ಹೋದಾಗ ಅವನ ರೂಮಿಗೆ ಏರ್ಪೋರ್ಟ್ ಹೋಗಲು ರೆಡಿಯಾಗಿ ಬಂದ ಹರ್ಷ ಅವನನ್ನು ಕೂಗಿದ್ದ. ಪ್ರಸನ್ನ
"ಫೈವ್ ಮಿನಿಟ್ಸ್... " ಎಂದು ಉತ್ತರಿಸಿ ಸ್ನಾನ ಮುಂದುವರೆಸಿದ್ದ.
ಅವನಿಗಾಗಿ ಕಾಯುತ್ತಾ ಹರ್ಷ ತನ್ನ ಮೊಬೈಲ್ ನೋಡುತ್ತ ಕುಳಿತಿದ್ದ. ಆಗ ರಿಂಗಾಯಿತು ಪ್ರಸನ್ನನ ಫೋನ್!! ಯಾರಿರಬಹುದು? ಪ್ರಸನ್ನ ಸ್ನಾನ ನಿಲ್ಲಿಸಿ ಅವಲೋಕಿಸಿದ. ಹರ್ಷ ಮರು ಆಲೋಚನೆ ಇಲ್ಲದೆ ಮೊಬೈಲ್ ಎತ್ತಿಕೊಂಡ. 'ಅಮ್ಮ' ಎಂದು ಹೆಸರು ಸೂಚಿಸಿತ್ತು ಮೊಬೈಲ್ ಸ್ಕ್ರೀನ್! ಹರ್ಷನ ಸಂಭ್ರಮ ಗರಿಗೆದರಿತು. ಸಂತಸದಿಂದ ಕರೆ ಸ್ವೀಕರಿಸಿದ್ದ.
"ಹಲೋ ಅಮ್ಮಾss.." ಕೇಕೆ ಹಾಕಿದಂತಿತ್ತು ಧ್ವನಿ.
ಅ ಮಾತೃ ಹೃದಯಕ್ಕೆ ತಣ್ಣನೆಯ ಗಾಳಿ ಸೋಕಿದಂತ ಭಾವ. ಎಷ್ಟೋ ಮಾಸಗಳಿಂದ ಕೇಳಲು ಹಾತೊರೆದ ಮಾತು.. ಧ್ವನಿ.. "ಹರ್ಷಾ......" ಅವರು ಆರ್ದ್ರತೆಯಿಂದ ತೊದಲಿದರು.
"ಹರ್ಷ...?? ಅಲ್ಲಮ್ಮ ನಾನು ಸಂಕಲ್ಪ್ ಅಂತ. ಪ್ರಸನ್ನನ ಫ್ರೆಂಡ್!!" ತನ್ನ ಪರಿಚಯ ಕೊಟ್ಟ. ಅವರಿಗೆ ಅವನ ಮಾತಿನಲ್ಲಿ ಇನ್ನೂ ನಂಬಿಕೆ ಬರುತ್ತಿಲ್ಲ. ಅಪರೂಪಕ್ಕೆ ದಕ್ಕಿದ ಮಗನ ಧ್ವನಿಯನ್ನು ಸುಮ್ಮನೆ ಆಲಿಸುತ್ತ ಮೈಮರೆತಿದ್ದರು.
"ಮೊನ್ನೆ ನೀವು ಮಾಡಿ ಕಳಿಸಿದ ಸ್ವೀಟ್ಸ್ ಚಕ್ಕುಲಿ ಕೊಡ್ಬಳೆ ತುಂಬಾ ರುಚಿಯಾಗಿತ್ತಮ್ಮಾ. ಎಲ್ಲಾ ನಾನೇ ತಿಂದ್ಬಿಟ್ಟೆ. ನಿಮ್ಮ ಮಗನಿಗೆ ಏನು ಉಳಿಸಲೇ ಇಲ್ಲ. ಆದರೂ ನನಗೆ ತೃಪ್ತಿಯಿಲ್ಲ. ನನಗೆ ಇನ್ನೂ ಬೇಕಮ್ಮ..." ಪಟಪಟ ಮಾತಾಡಿದ ನಗುತ್ತ.
" ಅಯ್ಯೋ ಅದಕ್ಕೆನಂತೆ ಕಂದಾ... ಮನೆಗೆ ಬಾಪ್ಪ! ಸಾಕು ಸಾಕು ಅನ್ನುವಷ್ಟು ಮಾಡಿ ತಿನ್ನಿಸ್ತಿನಿ." ಅವರು ನಕ್ಕರು. ಅವರ ಮನಸ್ಸು ಹೊಯ್ದಾಡುತ್ತಲಿತ್ತು. ಅನಿಸಿದ್ದನ್ನು ಕೇಳಿಯೇ ಬಿಟ್ಟರು
"ನಿನ್ನ ಧ್ವನಿ ಕೇಳಿ ಥೇಟ್ ನನ್ನ ಮಗನ ಧ್ವನಿಯನ್ನೇ ಕೇಳಿದಂತಾಯ್ತಪ್ಪ. ನನಗೆ ನಿನ್ನನ್ನೊಮ್ಮೆ ನೋಡ್ಬೇಕು ಅನ್ನಿಸ್ತಿದೆ ಕಂದಾ.. ಆಗಬಹುದಾ??" ಅವರ ಮನಸ್ಸು ತಲ್ಲಣಿಸುತಿತ್ತು. ತಾಯಿ ಪ್ರೀತಿಗೆ ಸೋತು ಹೋಗಿದ್ದನಾತ.
ಒಳಗಿನ ಬಾಗಿಲ ತುದಿಯಿಂದ ಹರ್ಷನ ಮಾತು ಕೇಳುತ್ತಿದ್ದ ಪ್ರಸನ್ನ, ಫೋನ್ ಮಾಡಿದ್ದು ಅಮ್ಮನೆಂದು ತಿಳಿದು ಬೇಕಂತಲೇ ಮಧ್ಯ ಪ್ರವೇಶಿಸಲಿಲ್ಲ. ಇದರಿಂದಾಗಿ ಹರ್ಷನಲ್ಲಿ ಏನಾದರೂ ಪರಿವರ್ತನೆ ಆಗಬಹುದಾ? ಎಂದವನೆಣಿಕೆ.
"ಓಹ್.. ಅದಕ್ಕೆನಂತೆ ಅಮ್ಮಾ.. ಈಗಲೇ ವಿಡಿಯೋ ಕಾಲ್ ನಲ್ಲಿ ಮಾತಾಡೋಣ್ವಾ..." ಹರ್ಷನ ಪ್ರಶ್ನೆ ಕೇಳಿ ಬೆಚ್ಚಿ ಬಿದ್ದ ಪ್ರಸನ್ನ. ಸಡನ್ನಾಗಿ ಹರ್ಷನ್ನ ನೋಡಿ ಅಮ್ಮ ಏನು ಅಂದ್ಕೊಬೇಕು? ಹೇಗೆ ರಿಯಾಕ್ಟ್ ಮಾಡಬಹುದು! ಶಾಕ್ ಆಗ್ಬಿಟ್ಟರೆ?? ಯೋಚಿಸಿದವನೇ ದಿಗಂಬರ ಅವತಾರದಲ್ಲಿದ್ದವ ಮೈಮೇಲೆ ನೀರು ಹೊಯ್ದು ಒಂದು ಟವಲ್ ಸುತ್ತಿಕೊಂಡು ಅವಸರದಿ ಹೊರಬಂದ.
" ನೋ..... ವಿಡಿಯೋ ಕಾಲ್ ಬೇಡ" ಕಿರುಚಿದ.
" ಯಾಕೆ ??" ಹರ್ಷ ಹುಬ್ಬು ಗಂಟಿಕ್ಕಿದ.
"ಅದರಲ್ಲಿ ಮುಖ ದೆವ್ವದ ಹಾಗೆ ಕಾಣುತ್ತೆ. ನಮ್ಮಮ್ಮ ನಿನ್ನ ನೋಡಿ ಹೆದರ್ತಾರೆ!! ಬೇಡ" ಹರ್ಷನ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಹೋದ.
"ಏನಾಗಲ್ಲ. ಒಂದೇ ಸಲ... ಅಮ್ಮನ ಜೊತೆಗೆ...." ಹರ್ಷ ಮೊಬೈಲ್ ಮೇಲಕ್ಕೆತ್ತಿ ಬೆಡ್ ಮೇಲೆ ನಿಂತು ಕೇಳುತ್ತಿದ್ದ.
" ಏನು ಬೇಡ, ಮಾತಾಡಿದ್ದು ಸಾಕು" ಅವನ ಉಕ್ತಿಯನ್ನು ಅರ್ಧಕ್ಕೆ ತುಂಡರಿಸಿ, ಮೊಬೈಲ್ ಗಾಗಿ ಕೈ ಚಾಚುತ್ತಿದ್ದ ಪ್ರಸನ್ನ.
ಹರ್ಷ ಮೊಬೈಲ್ ಕೊಡದೆ ದೂರ ಓಡುವವ. ಪ್ರಸನ್ನ ಬಿಡಲೊಲ್ಲದವ. ಇಬ್ಬರ ಬರಿದೇ ಕದನದಲ್ಲಿ ಕರೆ ನಿಷ್ಕ್ರಿಯಗೊಂಡಾಗಿತ್ತು. ಆದರೆ ಇಬ್ಬರ ಜೂಟಾಟ ಮಾತ್ರ ಯಥಾರ್ಥ ಸಾಗಿತ್ತು.
ಅಷ್ಟರಲ್ಲೇ ಧೀಢಿರನೇ ಬಾಗಿಲು ತೆರೆದು ರೂಮಿಗೆ ಬಂದ ಮಾನ್ವಿ ಕಿಟಾರನೆ ಕಿರುಚಿ ಮುಖ ಮುಚ್ಚಿಕೊಂಡಳು. ಇಬ್ಬರೂ ಓಟದ ಮತ್ತಿನಿಂದ ಹೊರಬಂದು ಏನಾಯ್ತೆಂದು ಅವಳ ಕಡೆಗೇ ನೋಡಿದರು. ಏನೂ ಅರ್ಥವಾಗದೆ ಹರ್ಷ ಪ್ರಸನ್ನನ ಕಡೆಗೊಮ್ಮೆ ನೋಡಿ ಬೆಚ್ಚಿ ಬಿದ್ದ. ಅವನ ನೋಟವರಿತ ಪ್ರಸನ್ನ ತನ್ನನ್ನೊಮ್ಮೆ ತಲೆ ತಗ್ಗಿಸಿ ನೋಡಿಕೊಂಡು ಹೌಹಾರಿದ. ಅವನ ಟಾವೆಲ್ ಉದುರಿ ಹೋಗಿತ್ತು. ಅವನ ದಿಗಂಬರ ವಿಶ್ವರೂಪವನ್ನು ಮಾನ್ವಿ ನೋಡಿಯಾಗಿತ್ತು. ಶಾಕ್ ತಗುಲಿದಂತೆ ಪ್ರಸನ್ನ ತಟ್ಟನೆ ಟವೆಲ್ ಎತ್ತಿ ಸುತ್ತಿಕೊಂಡ. ಮಾನ್ವಿ ಕಣ್ಣು ಮುಚ್ಚಿಕೊಂಡೇ ಅಲ್ಲಿಂದ ಕಾಲ್ಕಿತ್ತಿದ್ದಳು. ಪ್ರಸನ್ನ ಕಳ್ಳ ಹೆಜ್ಜೆಯೊಂದಿಗೆ, ತನ್ನ ಫೋನ್ ಸಮೇತ ಮತ್ತೆ ಬಾತ್ರೂಂ ಹೊಕ್ಕರೆ, ಹರ್ಷ ನಡೆದ ಘಟನೆಯನ್ನು ಮತ್ತೆ ಮತ್ತೆ ಮೆಲುಕು ಹಾಕಿ ಹಾಸ್ಯ ಮಾಡಿ ಬಿದ್ದು ಬಿದ್ದು ನಗತೊಡಗಿದ.
ಈ ದುರ್ಘಟನೆಯನ್ನು ಸುಲಭವಾಗಿ ಮರೆಯಲಾಗಲಿಲ್ಲ ಪ್ರಸನ್ನನಿಗೆ. ಪದೇ ಪದೇ ತನ್ನ ಅಳಲು ತೋಡಿಕೊಂಡ ಹರ್ಷನೆದುರು.
"ಓಹ್ ದುರ್ವಿದಿಯೇ... ಇಪ್ಪತ್ತೆಂಟು ವರ್ಷದ ನನ್ನ ಬ್ರಹ್ಮಚರ್ಯ ಹರಣವಾಗಿ ಹೋಯಿತಲ್ಲ! ಅದು ಅವಳ ಮುಂದೆ,, ಆ ಪಿಶಾಚಿ ಮುಂದೆ.... ಇನ್ನು ಮುಂದೆ ನಾನು ಹೇಗೆ ತಲೆ ಎತ್ತಿ ತಿರುಗಾಡಬೇಕು!!" ನಡೆದದ್ದನ್ನು ನೆನೆದು ತಲೆ ತಲೆ ಚಚ್ಚಿಕೊಂಡ. ರೂಮಿನಿಂದ ಆಚೆ ಬರುವ ಮೊದಲು ಜಿಪ್ ಹಾಕಿದಿನಾ, ಬಟ್ಟೆ ಎಲ್ಲಾ ಸರಿಯಾಗಿ ಇದೆಯಾ ಬಾರಿ ಬಾರಿ ನೋಡಿಕೊಂಡ. ಅದನ್ನು ನೋಡಿ ಹರ್ಷ..
"ನಿನ್ನ ನೋಡಿ ನನಗೊಂದು ಗಾದೆ ನೆನಪಾಗ್ತಿದೆ ಕಣೋ..
ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದ್ರಂತೆ!!" ಗೊಳ್ಳನೆ ನಕ್ಕ ಹರ್ಷ. ಪ್ರಸನ್ನನಿಗೆ ಪೇಚಾಟ.
ಕೆಳಬಂದ ನಂತರವೂ ಮಾನ್ವಿಗೆ ಮುಖ ತೋರಿಸಲು ಒಂದು ರೀತಿಯ ಮುಜುಗರ ಉಂಟಾಗಿ ತಿಂಡಿ ಸಹ ತಿನ್ನದೆ ಮುಖ ಪಕ್ಕಕ್ಕೆ ಹೊರಳಿಸಿಯೇ ಹೊರಬಿದ್ದ. ಮಾನ್ವಿಗೂ ಆ ಘಟನೆ, ಪ್ರಸನ್ನನ ಪೀಕಲಾಟ ನೋಡಿ ಒಳಗೊಳಗೆ ಮುಸಿ ಮುಸಿ ನಗುತ್ತಿದ್ದಳು.
ಪ್ರಸನ್ನ ಹೊರಬಂದಾಗ ಸ್ಟೋನಿ ಗಾರ್ಡನ್ ಮೂಲೆಯಲ್ಲಿ ಏನೋ ಮುಸುತ್ತಿದ್ದನ್ನು ಕಂಡು, ಅನುಮಾನದಿಂದ ಅತ್ತ ಓಡಿ ಹೋಗಿ ನೋಡಿದ್ದ. ಸುಟ್ಟ ಹಾಳೆಯ ಕಪ್ಪು ಬೂದಿ! ಅದು ಪರಿ ಕಳಿಸಿದ್ದ ಲೆಟರ್! ಆದರೆ ಸುಟ್ಟಿದ್ದು ಯಾರು? ಡೇವಿಡ್?? ಆದರೆ ಯಾಕೆ? ಪ್ರಸನ್ನನ ಹಣೆಯಲ್ಲಿ ಗೆರೆಗಳು ಮೂಡಿದವು.
ಹರ್ಷ ಮಾನ್ವಿಯನ್ನು ಏರ್ಪೋರ್ಟ್ ಬರಲು ಸಾಕಷ್ಟು ಒತ್ತಾಯಿಸಿದರು ಅವಳು ಒಪ್ಪಲಿಲ್ಲ. ಹರ್ಷ ಪ್ರಸನ್ನ ಮಾತ್ರ ಹೊರಟು ನಿಂತರು. ಪ್ರಸನ್ನ ಬಹಳ ಒತ್ತಾಯ ಮಾಡಿ ಡ್ರೈವರ್ ಗೆ ವಿರಾಮ ನೀಡಿ ಡ್ರೈವಿಂಗ್ ಜವಾಬ್ದಾರಿ ತಾನೇ ವಹಿಸಿದ. ಒಂದು ಕಾರಿನಲ್ಲಿ ಹರ್ಷ ಮತ್ತು ಪ್ರಸನ್ನ! ಅವನ ಹಿಂದೆ ಮುಂದೆ ಎರಡು ಕಾರುಗಳಲ್ಲಿಯೂ ಸೆಕ್ಯೂರಿಟಿಯ ಪಡೆ!
ಏರ್ಪೋರ್ಟ್ ರಸ್ತೆ ಬರುತ್ತಿದ್ದಂತೆ ಪ್ರಸನ್ನ ಬೇಕೆಂದೇ ಕಾರನ್ನು ಓವರ್ ಸ್ಪೀಡಾಗಿ ಓಡಿಸಿ ಸೆಕ್ಯೂರಿಟಿಯನ್ನು ಹಿಂದಿಕ್ಕಿದ.ಆ ರಸ್ತೆಯಲ್ಲಿ ಕಾರನ್ನು ಇನ್ನೂ ವೇಗವಾಗಿ ಹಾಗೂ ತುಂಬಾ ಒರಟಾಗಿ ಡ್ರೈವ್ ಮಾಡಿದ. ಪರಿಯ ಲೆಟರ್ ಸುಟ್ಟದ್ದನ್ನು ನೋಡಿ ಅವನಲ್ಲಿ ರಕ್ತ ಕುದಿಯುತ್ತಿತ್ತು. ಭಂಡಧೈರ್ಯ ಬುಗಿಲೆದ್ದಿತು. ಹರ್ಷ ಗೋ ಸ್ಲೋ ಎಂದು ಎಷ್ಟೇ ಕೂಗಿದರು ಕೇಳದೆ ಎದುರು ಬರುವ ಟ್ರಕ್ ಜೀಪ್ ಲಾರಿ ಇತರೆ ವಾಹನಗಳನ್ನು ಲೆಕ್ಕಿಸದೆ ಪಕ್ಕಕ್ಕೆ ಜರುಗಿಸಿ ಓಡಿಸಿದ. ಅವನ ವೇಗಕ್ಕೆ ಹರ್ಷನ ತಲೆ ಧಿಮ್ಮೆಂದಿತು. 'ಮನೆ..ಒಂದು ತುಂಬು ಕುಟುಂಬ... ಅಪ್ಪ ಅಮ್ಮ ತಂಗಿ ತಾತ ಅವಳು, ಏನೋ ಮಸುಕು ನೆನಪುಗಳು....ಅದೇ ರಸ್ತೆ, ಅದೇ ಸಮಯ , ಅದೇ ವೇಗ, ಎದುರುಗೊಂಡ ಲಾರಿ.. ಒಂದು ಜೋರಾದ ಘರ್ಷಣೆ, ತಿರುಗಿ ಬಿದ್ದ ಕಾರ್... ರಕ್ತದ ಮಡುವಿನಲ್ಲಿ ತಾನು.. ಹರ್ಷನ ಮಿದುಳು ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸುತ್ತಿದೆ. ಅವನ ಉಸಿರು ಬಿಸಿಯಾಗುತ್ತಿದೆ. ಎದೆಬಡಿತ ಸ್ಪಷ್ಟವಾಗಿ ಕೇಳುವಷ್ಟು ಜೋರಾಗಿದೆ. ಇನ್ನು ಉದ್ವೇಗ ತಾಳಲಾರದೆ ಕಿರುಚಿದ್ದ -"ಪರಿ.... "
ಪ್ರಸನ್ನ ತಕ್ಷಣ ಕಾರಿಗೆ ಬ್ರೇಕ್ ಹಾಕಿ ನಿಲ್ಲಿಸಿದ. ಅವನ ಯೋಜನೆ ಫಲಿಸಿದ ಸೂಚನೆ ಸಿಕ್ಕಿತ್ತು. ಹರ್ಷ ತನ್ನನ್ನು ತಾನು ಸಂಭಾಳಿಸಿಕೊಂಡು ಹಿಂದೆ ಸೀಟಿಗೊರಗಿ ಕಣ್ಮುಚ್ಚಿಕೊಂಡ. ನಿಧಾನವಾಗಿ ಯೋಚಿಸಿದ.. ' ಏನೇ ಆಘಾತವಾದರೂ ಅಮ್ಮ ಅಂತ ಕೂಗೋದು ಸಹಜ! ಇವತ್ತು ತಾನೇಕೆ ಆ ಹೆಸರು ಕೂಗಿದೆನೋ!! ಇದು ಕಲ್ಪನೆಯೋ? ಭ್ರಮೆಯೋ? ಹಳೆಯ ನೆನಪೊ?' ಅವನಿಗೆ ಅರ್ಥವಾಗಲಿಲ್ಲ. ಸ್ವಲ್ಪ ಸುಧಾರಿಸಲು ಕೆಳಗಿಳಿದ ಹರ್ಷ ಮುಖಕ್ಕೆ ನೀರೆರೆಚಿಕೊಂಡ. 'ಪರಿ.....? ಯಾರದು? ನನಗೂ ಅವಳಿಗೂ ಏನು ಸಂಬಂಧ? ' ತನ್ನಲ್ಲೇ ಪ್ರಶ್ನಿಸಿಕೊಂಡ. ಉತ್ತರ ಅಸ್ಪಷ್ಟ.
ಕಾರು ಪುನಃ ಸ್ಟಾರ್ಟ್ ಆಯಿತು. ಈ ಬಾರಿ ವೇಗ ನಿಯಂತ್ರಣದಲ್ಲಿತ್ತು. ಕಾರು ಓಡಿಸುತ್ತಿದ್ದ ಪ್ರಸನ್ನ ಭಾವರಹಿತನಾಗಿ ಕುಳಿತಿದ್ದ. ಮೊದಲ ಬಾರಿಗೆ ಅವನಲ್ಲಿ ಈ ರೀತಿಯ ಗಾಂಭೀರ್ಯ ಕಂಡಿದ್ದ ಹರ್ಷ. ಪ್ರಶ್ನೆ ಕೇಳುವ ರೇಜಿಗೆ ಹೋಗದೆ, ತನ್ನ ಮಿದುಳಿಗೆ ನೆನಪಿನ ಪೊರೆ ಕಳಚುವ ಕೆಲಸ ನೀಡಿದ್ದ. ಪ್ರಸನ್ನನ ಸದ್ಯದ ಗಾಂಭೀರ್ಯತೆಯ ಹಿಂದೆ ಇದ್ದ ಏಕೈಕ ವ್ಯಕ್ತಿ ರಘುನಂದನ್! ಮತ್ತು ಅವರೊಂದಿಗಿನ ಮೊದಲ ಭೇಟಿ!!!
ಮುಂದುವರೆಯುವುದು..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ