ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-39




ಏರ್ಪೋರ್ಟ್ ಬರುತ್ತಿದ್ದಂತೆ ಫ್ಲೈಟ್ ಬಂದಾಗಿತ್ತು. ಇಮಿಗ್ರೆಷನ್ ಕೌಂಟರ್ ನಿಂದ ಹಲವಾರು ಪ್ರಯಾಣಿಕರು ಹೊರ ಬರುತ್ತಿದ್ದರು. ಅಷ್ಟೂ ಜನರ ಮಧ್ಯೆ ಪ್ರಸನ್ನನ ಕಣ್ಣುಗಳು ರಘುನಂದನ್ ಗಾಗಿ ಎದುರು ನೋಡುತ್ತಿದ್ದವು. ಅವರು ಹೇಗಿದ್ದಾರೆಂದು ಸಹ ತಿಳಿದಿರದೆ ಪ್ರತಿಯೊಬ್ಬರನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ.

ಆಗ ಹರ್ಷ ಒಂದೆಡೆ ನೋಡಿ ಮಂದಹಾಸ ಬೀರಿದಾಗ ಪ್ರಸನ್ನನ ಕಣ್ಣು ಆಕಡೆಗೆ ಹೊರಳಿದವು. ಐದಡಿ ಎತ್ತರ ಸದೃಢ ಶರೀರ, ಕಪ್ಪು ಬಣ್ಣದ ಸೂಟ್ ಧರಿಸಿದ ಗಂಭೀರವಾದ ನಡಿಗೆಯಲ್ಲಿ ನಡೆದು ಬರುತ್ತಿದ್ದರು ಅರವತ್ತೆರಡರ ರಘುನಂದನ್!! ಅವರ ಮುಖದ ಓಜಸ್ಸಿನಿಂದಲೇ ಅವರೇ ರಘುನಂದನ್ ಎಂದು ಅರ್ಥ ಮಾಡಿಕೊಂಡು ಬಿಟ್ಟ ಪ್ರಸನ್ನ.  ಯುವಕರನ್ನು ನಾಚಿಸುವಂತೆ ಕಟ್ಟು ಮಸ್ತು ದೇಹದಾರ್ಢ್ಯ. ಮುಖದಲ್ಲಿ ಗಾಂಭೀರ್ಯತೆ ತಾಂಡವವಾಡುತ್ತಿತ್ತು. ಕೆಲವರು ಅದನ್ನು ಅಹಂಕಾರ ಸೊಕ್ಕು, ಗತ್ತು ಎಂದು ಉತ್ಪ್ರೇಕ್ಷಿಸಿದರೂ ಕೂಡ ಅವರ ಪಾಲಿಗದು ಸ್ವಾಭಿಮಾನ; ಸ್ವಂತಿಕೆಯ ಮೆರುಗು!

ಸನಿಹ ಬಂದುದೇ "ಹೌ ಆರ್ ಯು ಮೈ ಸನ್?"ಹರ್ಷನನ್ನು ಬಿಗಿದಪ್ಪಿ ಭುಜ ಚಪ್ಪರಿಸಿದರು.

"ಫೈನ್ ಅಂಕಲ್. ನೀವೇನು.. ದಿನೇ ದಿನೇ ಮತ್ತಷ್ಟು ಯಂಗ್ ಆಗ್ತಿದಿರಲ್ಲಾ... ಏನಿದರ ರಹಸ್ಯ??" ಹಾಸ್ಯವಾಗಿ ಕೇಳಿದ ಹರ್ಷ. ನಕ್ಕು ಬಿಟ್ಟರು ಅವರು.

"ಎಷ್ಟೆಲ್ಲಾ ಚಿಂತೆಗಳ ಮಧ್ಯೆ ಕೂಡ ನಿನ್ನಂಥ ಅಳಿಯ ಸಿಕ್ಕಿರೋದೇ ನನ್ನೀ ಉತ್ಸಾಹದ ರಹಸ್ಯ! ನಿನ್ನಂಥ ಅಳಿಯ ಸಿಕ್ಕಿರೋವಾಗ ನನಗೇನು ಕೊರತೆ ಹೇಳು...!" ಹೆಮ್ಮೆಯಿಂದ ನುಡಿದು ಅವನ ಭುಜಕ್ಕೆ ಕೈ ಹಾಕುತ್ತ, ಪಕ್ಕದಲ್ಲಿರುವ ಪ್ರಸನ್ನನ ಕಡೆಗೆ ಪ್ರಶ್ನಾರ್ಹವಾಗಿ ನೋಡಿದರು.

"ಇವನು ನನ್ನ ಫ್ರೆಂಡ್. ಡಾ.ಪ್ರಸನ್ನ! ಇವರು ಮಾನ್ವಿ ತಂದೆ! ಐ ಥಿಂಕ್ ನಿಮ್ಮಿಬ್ಬರಿಗೂ ಮೊದಲೇ ಪರಿಚಯ ಇರಬಹುದೇನೋ ಅಲ್ವಾ..." ಇಬ್ಬರನ್ನೂ ಪರಿಚಯಿಸುತ್ತ ಕೇಳಿದ. ಪ್ರಸನ್ನ ಮುಗುಳ್ನಕ್ಕ ಔಪಚಾರಿಕವಾಗಿ. ಅವರು ಮುಖ ಗಂಭೀರವಾಗಿಸಿ ಕಾರಿನತ್ತ ಹೊರಟರು.  ಪ್ರಸನ್ನನ ಅವರೆಡೆಗಿನ ಅವಲೋಕನೆ ಜಾರಿಯಲ್ಲಿತ್ತು. ಅವರು ಹೋಗುತ್ತಿದ್ದಂತೆ ಸೆಕ್ಯೂರಿಟಿಯವನು ಕಾರ್‌ ಡೋರ್ ತೆಗೆದ.
"ಎಲ್ಲಿ ನನ್ನ ಪ್ರಿನ್ಸೆಸ್? ಅವಳು ಬರಲಿಲ್ಲವಾ?" ಮಗಳನ್ನು ಜ್ಞಾಪಿಸಿಕೊಂಡರು ಒಳಗೆ ಕೂರುತ್ತಾ‌.

"ನೋ ಅಂಕಲ್. ನಾನೂ ಎಷ್ಟೋ ಒತ್ತಾಯ ಮಾಡಿದೆ. ಅವಳು ಬರೋಕೆ ಒಪ್ಪಲಿಲ್ಲ." ಹರ್ಷನ ಮಾತಿಗೆ ರಘುನಂದನ್ ಮುಖ ಚಿಂತಾಕ್ರಾಂತವಾಯಿತು‌.

ಮುಂದೆ ಕುಳಿತು ಕಾರು ಸ್ಟಾರ್ಟ್ ಮಾಡಿದ ಪ್ರಸನ್ನ. ಹಿಂದಿನ ಸೀಟಿನಲ್ಲಿ ಕುಳಿತ ಹರ್ಷ ಅವರೊಂದಿಗೆ ವ್ಯವಹಾರದ ಬಗ್ಗೆಯೇ ಚರ್ಚೆ ಮಾಡತೊಡಗಿದ್ದ. ಎದುರಿನ ಕನ್ನಡಿಯಲ್ಲಿ ಆಗಾಗ ರಘುನಂದನ್ರನ್ನೇ ಗಮನಿಸುತ್ತಿದ್ದ ಪ್ರಸನ್ನ. ಅವರಿಗೆ ವ್ಯವಹಾರದ ವಿಷಯದಲ್ಲಿ ಆಸಕ್ತಿ ಇದ್ದಂತೆ ತೋರಲಿಲ್ಲ. ಅವನ ಮಾತನ್ನು ಪೂರ್ಣ ಕೇಳಿಸಿಕೊಂಡ ನಂತರ ಅವರು ಹೇಳಿದರು...

"ಲುಕ್ ಸಂಕಲ್ಪ್.. ಈ ಹಣಕಾಸು ವ್ಯವಹಾರ ಲಾಭ ನಷ್ಟ ಇವೆಲ್ಲ ನನಗೆ ಹೊಸತಲ್ಲ. ಇದ್ಯಾವುದು ನನಗೆ ತೀರ ಮುಖ್ಯವೂ ಅಲ್ಲ. ಎಲ್ಲದಕ್ಕಿಂತಲೂ ನನಗೆ ಮುಖ್ಯವಾದದ್ದು ನನ್ನ ಪ್ರಿನ್ಸೆಸ್!! ಅವಳ ಸುಖ ಸಂತೋಷ; ನೆಮ್ಮದಿ! ಅವಳಿಗೊಸ್ಕರನೇ ತಾನೇ ನನ್ನೀ ದುಡಿಮೆ ಪರಿಶ್ರಮ, ಆದಾಯ, ಗಳಿಕೆ ಸಂಪತ್ತು ಎಲ್ಲಾ... ಅವಳೇ ಸಂತೋಷವಾಗಿಲ್ಲ ಅಂದಮೇಲೆ ಇದೆಲ್ಲಾ ತೃಣಸಮಾನ! ನಿನ್ನ ಜೊತೆಗೆ ನನ್ನ ಮಗಳು ತುಂಬಾನೇ ಸುಖವಾಗಿ ಇರ್ತಾಳೆ ಅನ್ನೋ ನಂಬಿಕೆ ನನಗಿದೆ. ಅದಕ್ಕೆ ಈ ಮದುವೆಗೂ ಒಪ್ಪಿಕೊಂಡದ್ದು. ಆದರೆ ನಿನ್ನ ಮೇಲಿನ ಅತಿಯಾದ ಪ್ರೀತಿಯಿಂದಾಗಿ ನನ್ನ ಮಗಳು ನನ್ನಿಂದ ದೂರವಾಗ್ತಿದ್ದಾಳೆ ಅಂತ ಚೂರು ಅಸೂಯೆ ಕೂಡ ಉಂಟಾಗ್ತಿದೆ!"

"ಅಂದ್ರೆ.... ನಿಮ್ಮ ಪ್ರಕಾರ, ತಂದೆ ಮಗಳ ಮಧ್ಯೆ ನನ್ನಿಂದಾಗಿ ಬಿರುಕು ಮೂಡ್ತಿದೆ ಅಂತಾನಾ...?" ಹರ್ಷನ ಮಾತಿಗೆ ಮಂದಹಾಸ ಬೀರಿದರವರು..

"ನನ್ನ ಮಾತಿನರ್ಥ ಅದಾಗಿರಲಿಲ್ಲ ಸಂಕಲ್ಪ್. ದೂರವಾಗ್ತಿರೋ ನನ್ನ ಮಗಳನ್ನು ಮತ್ತೆ ನನಗೆ ಹತ್ತಿರವಾಗುವಂತೆ ಮಾಡಬೇಕಾದವನು ನೀನೇ ಅಂತ ಹೇಳಿದೆ ಅಷ್ಟೇ! ಮದುವೆಗೆ ಇನ್ನು ಕೆಲವೇ ದಿನ ಉಳಿದಿವೆ.‌ ಅಲ್ಲಿವರೆಗಾದರೂ ಮಗಳ ಜೊತೆ ನಾವು ಸ್ವಲ್ಪ ಸಮಯ ಕಳೆಯೋದು ಬೇಡವಾ!" ಮದುವೆ ಪ್ರಸ್ತಾಪವಾಗುತ್ತಿದ್ದಂತೆ ಹರ್ಷನ ಮುಖ ಬಿಳುಚಿಕೊಂಡಿತು.

"ನಿಜ ಅಂಕಲ್. ಮದುವೆನಾ ಕ್ಯಾನ್ಸಲ್ ಮಾಡಿ ಬಿಡೋಣ್ವಾ??" ಅನ್ಯಮನಸ್ಕನಾಗಿ ಕೇಳಿದ

"ನೋ ವೇ.. ಯಾವುದೇ ಕಾರಣಕ್ಕೂ ಈ ಮದುವೆ ನಿಲ್ಲಕೂಡದು! " ತುಸು ಜೋರಾಗಿಯೇ ಗದರಿದರು.
"ನನ್ನ ಪ್ರಿನ್ಸೆಸ್ ನಿನ್ನನ್ನು ತನ್ನ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸ್ತಿದ್ದಾಳೆ. ಈ ಮದುವೆ ನಿಂತು ಅವಳ ಸಂತೋಷ ಹಾಳಾಗಬಾರದು...
ಮಾನು ಈಗ ನಿನ್ನ ಜೊತೆಗೆ ಗೆಸ್ಟ್ ಹೌಸ್ ನಲ್ಲಿಯೇ ಇದ್ದಾಳಂತ ಕೇಳ್ಪಟ್ಟೆ! ಅದರ ಬದಲು  ಮದುವೆ ಮುಗಿಯುವವರೆಗೂ ನೀನೇ  ನಮ್ಮ ಜೊತೆಗೆ ಬಂದು ಇರಬಹುದಲ್ವಾ.." ತಮ್ಮ ಅಭಿಪ್ರಾಯ ತಿಳಿಸಿದರವರು. ಹರ್ಷ ಏನೋ ಹೇಳಲು ಬಯಸಿ ಹೇಳಲಾಗದೆ

"ಈ ಬಗ್ಗೆ ನಾನು ಯೋಚನೆ ಮಾಡ್ತಿನಿ ಅಂಕಲ್!" ಎಂದು ಮೊಟಕಾಗಿ ಉತ್ತರಿಸಿ, ಪ್ರಸನ್ನನಿಗೆ ಮನೆಯ ಮಾರ್ಗ ಸೂಚಿಸಿದ.

"ನೋ. ನನ್ನನ್ನ ಆಫೀಸ್ ಗೆ ಡ್ರಾಪ್ ಮಾಡು." ಅವರು ಬೇರೆ ದಿಕ್ಕಿನೆಡೆಗೆ ಕೈ ತೋರಿಸಿದರು.

"ಇಟ್ಸ್ ಒಕೆ ಅಂಕಲ್.  ನೀವು ಮನೆಗೆ ಹೋಗಿ ರೆಸ್ಟ್ ಮಾಡಿ. ಆಫೀಸ್ ವರ್ಕ್ ನಾನು ನೋಡಿಕೊಳ್ತಿನಿ" ಹರ್ಷ ತಡೆದ.

" ಕಮ್ಮೊನ್ ಮೈ ಬಾಯ್.. ಮದುವೆಗೆ ಒಂದು ವಾರ ಕೂಡ ಉಳಿದಿಲ್ಲ. ಈಗಲೂ ಕೆಲಸದ ಜಪ ಮಾಡ್ತಿದ್ರೆ ಹೇಗೆ, ಕಪಲ್ಸ್ ಇಬ್ಬರೂ ಜಾಲಿಯಾಗಿ ಸುತ್ತಾಡಿ ಏಂಜಾಯ್ ಮಾಡಿ ಶಾಪಿಂಗ್ ಗೀಪಿಂಗ್ ಹೋಗಿ. ಮೂವಿ ನೋಡಿ... ನಿನಗೆ ಕೆಲಸದ ಬಗ್ಗೆ ಚಿಂತೆ ಬೇಡ. ನಾನೆಲ್ಲ ನೋಡಿಕೊಳ್ತಿನಿ. ನೀನು ಸಂಜೆ ಶಾರ್ಪ್ 4:30ಗೆ ಮೀಟಿಂಗ್ ಬಂದ್ಬಿಟ್ರೆ ಸಾಕು. " ಆತ್ಮೀಯವಾಗಿ ನುಡಿದರು. ಹರ್ಷ ವಾದ ಮಾಡದೆ ಸುಮ್ಮನಾದ.

"ಇವನು ಕೂಡ ನಿಮ್ಮ ಜೊತೆಗೆ ಇದ್ದಾನಾ??" ಪ್ರಸನ್ನನನ್ನು ದಿಟ್ಟಿಸುತ್ತ ಕೇಳಿದರು.

"ಯೆಸ್ ಅಂಕಲ್. ತುಂಬಾ ದಿನಗಳ ನಂತರ ಭೇಟಿಯಾದ. ನನ್ನ ಜೊತೆಗೆ ಉಳಿಸಿಕೊಂಡೆ."

"ಸ್ನೇಹಾನೇ ಬೇರೆ.. ಸಂಬಂಧಗಳೇ ಬೇರೆ.. ಎರಡಕ್ಕೂ ಅದರದೇಯಾದ ಸ್ಥಾನ, ಮಾನ,  ಬೆಲೆ ಇದೆ ನಿಜ... ಹಾಗಂತ ಯಾವತ್ತೂ ತಲೆ ಮೇಲೆ ಹೊತ್ತು ತಿರುಗೋದಲ್ಲ!  ಸಂಕಲ್ಪ್...  ಯಾವುದಕ್ಕೆ ಯಾವಾಗ ಎಷ್ಟು ಪ್ರಾಮುಖ್ಯತೆ ಕೊಡಬೇಕು ಅನ್ನೋದು ನಮ್ಮ ನಮ್ಮ ವಿವೇಚನೆಗೆ ಬಿಟ್ಟದ್ದು. ಸದ್ಯದಲ್ಲೇ ಮದುವೆಯಾಗೋ ಹುಡುಗ ನೀನು, ನಿನ್ನ ಮೊದಲ ಆದ್ಯತೆ ಏನಿದ್ದರೂ ನಿನ್ನ ಹೆಂಡತಿಯಾಗುವವಳಿಗೇ ಸಿಗಬೇಕೇ ಹೊರತು.... " ಅವರು ಮುಂದೆ ಮಾತಾಡಲಿಲ್ಲ. ಮಾತಾಡುವ ಅವಶ್ಯಕತೆಯೂ ಇರಲಿಲ್ಲ. ಅವರ ಮಾತಿನ ಹಿಂದಿನ ಉದ್ದೇಶ, ಒಳಾರ್ಥ ಮಿತ್ರರಿಬ್ಬರಿಗೂ ತಿಳಿಯಿತು.

"ಡೋಂಟ್ ವರಿ ಅಂಕಲ್, ಯಾವುದೇ ಪರಿಸ್ಥಿತಿಯಲ್ಲಿಯೂ ಮಾನುಗೆ ಅನ್ಯಾಯವಾಗೋಕೆ ನಾನು ಬಿಡಲ್ಲ. ಅವಳಿಗೆ ಸಲ್ಲಬೇಕಾದ ಪ್ರೀತಿ ಅವಳದೇ..." ಹರ್ಷ ಅವರ ಕೈ ಅದುಮಿ ಭರವಸೆ ನೀಡಿದ.

ರಘುನಂದನ್ ರ ನಡುವಳಿಕೆ, ಮಾತು, ವರ್ತನೆ ನೋಡಿದ ನಂತರ ಪ್ರಸನ್ನನಿಗೆ ಅವರ ಮೇಲಿದ್ದ ಅಭಿಪ್ರಾಯ ಸ್ವಲ್ಪ ಪ್ರಮಾಣದಲ್ಲಿ ಬದಲಾಗಿತ್ತು. ಆದರೆ ಅವರ ಮೇಲಿನ ಅನುಮಾನ ಇನ್ನೂ ಅಳಿದಿರಲಿಲ್ಲ. ಕಾರಿಳಿದು ಹೋಗುವ ಮುನ್ನ ಅವರೂ ಸಹ ಅವನನ್ನು ತೀಕ್ಷ್ಣವಾಗಿ ನೋಡಿ ''ಸಂಜೆ ಒಂದು ಚಿಕ್ಕ ಪಾರ್ಟಿ ಇದೆ. ನೀನು ಬರಲೇಬೇಕು. ಸ್ವಲ್ಪ ಪರ್ಸನಲ್ಲಾಗಿ ಮಾತಾಡೋದಿದೆ'' ಎಂದು ಆಹ್ವಾನಿಸಿ ಹೋಗಿದ್ದರು.

ಅವರನ್ನು ಆಫೀಸ್ ಗೆ ಡ್ರಾಪ್ ಮಾಡಿ ಬರುವಾಗ ಪ್ರಸನ್ನ ಕೇಳಿದ -
"ಈ ಎಂ.ಆರ್ ಗ್ರುಪ್ ಆಫ್ ಕಂಪನಿ ರಘುನಂದನ್ ಅವರದ್ದೇ ತಾನೇ, ಮತ್ತೆ ನಿನ್ನದು ಹೇಗಾಯ್ತು?"

"ಕಂಪನಿ ಶುರು ಮಾಡಿದ್ದು ರಘು ಅಂಕಲ್, ಆದರೆ ನಂತರದಲ್ಲಿ ನಮ್ಮ ತಂದೆ ಅವರ ಕಂಪನಿಯಿಂದ 50% ಶೇರ್ ಖರೀದಿ ಮಾಡುವ ಮೂಲಕ ಅದರ ಪಾರ್ಟ್ನರ್ಸ್ ಆದರಂತೆ. ಸಿಡ್ನಿ, ಕ್ಯಾಲಿಫೋರ್ನಿಯಾ, ಸ್ವೀಡನ್ ಹೀಗೆ ಕೆಲವು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಲ್ಲಿ ಈ ಕಂಪನಿಯ ಬ್ರ್ಯಾಂಚ್‌ಸ್ ತೆಗೆಯಲ್ಪಟ್ಟವಂತೆ. ಮೊದಲಿನಿಂದಲೂ ನಮ್ಮ ಡ್ಯಾಡ್ ಮತ್ತು ರಘು ಅಂಕಲ್ ತುಂಬಾ ಕ್ಲೋಸ್ ಫ್ರೆಂಡ್ಸ್ ಅಂತೆ. ಇಬ್ಬರೂ ಒಂದೊಂದು ಕಡೆಗೆ ಜವಾಬ್ದಾರಿ ವಹಿಸಿ ಕಂಪನಿ ನೋಡಿಕೊಳ್ತಿದ್ದಾರೆ. ವ್ಯವಹಾರದಲ್ಲಿ ಲಾಭ ನಷ್ಟ ಏನೇ ಉಂಟಾದರೂ ಇಬ್ಬರೂ ಒಬ್ಬರಿಗೊಬ್ಬರು ಹೆಗಲಾಗಿ ಸರಿತೂಗಿಸಿಕೊಂಡು ಹೋಗ್ತಿದಾರೆ."ಹರ್ಷ ವಿವರಣೆ ನೀಡಿದ.

"ನನಗೆ ಈ ವ್ಯವಹಾರದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ನೀನು ಹೇಳುವ ಪ್ರಕಾರ ಕಂಪನಿಯ ಮೇಲೆ ಸಂಪೂರ್ಣ ಅಧಿಕಾರ ಇರೋದು ರಘುನಂದನ್ ಅವರ ಕೈಯಲ್ಲಿ. ಅವರ ನಿರ್ಧಾರವೇ ಅಂತಿಮ. ಎಲ್ಲದಕ್ಕೂ ಅವರೇ ಜವಾಬ್ದಾರಿ! ಕಂಪನಿಯ ಲಾಭಾಂಶದಲ್ಲಿ ಮಾತ್ರ ನಿಮಗೆ ಹಕ್ಕು ಅಂತ ಅಲ್ವಾ..???"

"ಹೌದು. ಇಲ್ಲಿ ಭಾರತದಲ್ಲಿ ಕಂಪನಿ ಆರಂಭಿಸಿದ್ದು ಅವರೇ ಆದ್ದರಿಂದ ಕಂಪನಿ ಅವರ ಹೆಸರಲ್ಲೇ ಇದೆ. ಆದರೆ ಸಿಡ್ನಿಯಲ್ಲಿ ಮತ್ತೆ ಕೆಲವು ಕಡೆ ಇರೋ ಕಂಪನಿ ನಮ್ಮ ತಂದೆ ಹೆಸರಲ್ಲಿವೆ. ಅವುಗಳ ಸಂಪೂರ್ಣ ಅಧಿಕಾರ, ಆಡಳಿತ ನಮ್ಮ ಡ್ಯಾಡ್ ದೇ"

"ಆದರೆ ನನಗೆ ಅರ್ಥವಾಗದೆ ಇರೋ ಪ್ರಶ್ನೆ... ಕಂಪನಿಯಲ್ಲಿ 50% ಶೇರ್ ಇನ್ವೆಸ್ಟ್ ಮಾಡಿರೋ ನಿಮ್ಮ ತಂದೆಗೂ ಕೂಡ ಕಂಪನಿಯಲ್ಲಿ ಸಮಾನ ಅಧಿಕಾರ ಇರಬೇಕಿತ್ತಲ್ವ?"

"ಹೇಳಿದ್ನಲ್ಲ,, ಅವರಿಬ್ಬರೂ ತುಂಬಾ ಆಪ್ತರು. ‌ಒಬ್ಬರ ಮೇಲೊಬ್ಬರಿಗೆ ನಂಬಿಕೆ ಜಾಸ್ತಿ. ಸೋ ಇದುವರೆಗೂ ಇಬ್ಬರ ಮಧ್ಯೆ ಆ ರೀತಿ ಯಾವ ತಕರಾರು ಬಂದಿಲ್ಲ." ಎಲ್ಲವನ್ನೂ ತಿಳಿದುಕೊಂಡ ಪ್ರಸನ್ನನ ತಲೆಯಲ್ಲಿ ಮತ್ತಷ್ಟು ಗೊಂದಲಗಳು ಸೃಷ್ಟಿಯಾದವು..

'ಕೇವಲ ತನ್ನ ಮಗಳ ಸಂತೋಷಕ್ಕಾಗಿ ಒಬ್ಬ ವ್ಯಕ್ತಿಯ ಸಂಪೂರ್ಣ ಬದುಕನ್ನೇ ಕೃತ್ರಿಮಗೊಳಿಸಿದ್ದಲ್ಲದೇ, ಅದರಲ್ಲಿ ಸುಳ್ಳು ಪಾತ್ರಗಳು ಬೇರೆ! ತಂದೆಯಂತೆ ತಾಯಿಯಂತೆ, ಫ್ರೆಂಡಂತೆ, ಬಿಜಿನೆಸ್ ಪಾರ್ಟ್ನರ್ಸಂತೆ... ಯಾವುದು ನಿಜ? ಯಾವುದು ಸುಳ್ಳು ಸೃಷ್ಟಿ?  ಮಿ.ರಘುನಂದನ್ ನನಗೂ ನಿಮ್ಮ ಹತ್ತಿರ ತುಂಬಾ ವಿಷಯ ಕ್ಲಿಯರ್ ಮಾಡಿಕೊಳ್ಳುವುದಿದೆ. ನಿಮ್ಮ ಜೊತೆ ಮಾತನಾಡಲು ನಾನು ಉತ್ಸುಕನಾಗಿದ್ದಿನಿ' ಕೈ ಸ್ಟೇರಿಂಗ್ ಮೇಲೆ ಗುಮ್ಮಿದ.

*******

ಪ್ರಸನ್ನ ಹರ್ಷ ಏರ್ಪೋರ್ಟ್ ಹೋಗುತ್ತಲೇ ಪರಿಧಿಗೆ ಕರೆ ಮಾಡಿದ ಮಾನ್ವಿ, ಇನ್ನುಮುಂದೆ ಹರ್ಷನಿಗೆ ಯಾವುದೇ ಗಿಫ್ಟ್ ಅಥವಾ ಲೆಟರ್ ಕಳಿಸಬಾರದೆಂದು ಎಚ್ಚರಿಕೆ ನೀಡಿದಳು.

"ಭೇಟಿಯಾಗಬೇಡ, ಮಾತಾಡಬೇಡ, ಕಣ್ಣಿಗೂ ಕಾಣಬೇಡ ಅಂದೆ.. ನಾನೂ ಎಲ್ಲದಕ್ಕೂ ಒಪ್ಪಿಕೊಂಡೆ. ಈಗ ಪತ್ರ ಕೂಡ ಬೇಡ ಅಂದ್ರೆ ನಾನು ಹೇಗೆ ಹರ್ಷನಿಗೆ ಹಳೆಯದನ್ನೆಲ್ಲ ಜ್ಞಾಪಿಸೋದು..?? ಮಾನು... ಯಾಕೆ ನೀನು ಇಷ್ಟೊಂದು ಒರಟಾಗಿ ವರ್ತಿಸ್ತಿದಿಯಾ? ನೀನು ಹೀಗಿರಲಿಲ್ಲ. ಇದು ನೀನಲ್ಲ.." ನೊಂದುಕೊಂಡಳು ಪರಿ.

"ನೀನು ನೀನಾಗಿ ಉಳಿಯದಿರುವಾಗ, ನಾನು ಹೇಗೆ ನಾನಾಗಿ ಕಾಣ್ತಿನಿ ನಿನಗೆ!! ಮುಖವಾಡ ಧರಿಸಿದ ಹಾವು ನೀನು.. ಸ್ನೇಹ ಸಂಬಂಧ ಯಾವುದನ್ನೂ ಲೆಕ್ಕಿಸದೆ ವಿಷ ಕಕ್ಕುವುದಷ್ಟೇ ನಿನ್ನ ಗುಣ.
ನೀನು ಏನ್ಮಾಡ್ತಿಯೋ ಅದು ನಿನಗೆ ಬಿಟ್ಟದ್ದು.. ಇನ್ನುಮುಂದೆ ನಿನ್ನ ಕಡೆಯಿಂದ ಹರ್ಷನಿಗೆ ಏನೂ ತಲುಪಕೂಡದು."

"ನಾನು ಇದಕ್ಕೆ ಒಪ್ಪಲ್ಲ." ಮಾನ್ವಿ ಮಾತನ್ನು ನಿಷ್ಠುರವಾಗಿ ತಿರಸ್ಕರಿಸಿದಳು ಪರಿ.

"ನಾಳೆ ಒಂದು ವೇಳೆ ನಿನ್ನ ಗಿಫ್ಟ್ ಬಂದದ್ದೆ ಆದ್ರೆ... ಹರ್ಷ ನಿನ್ನವನಾಗಬಹುದೋ ಏನೋ... ಆದರೆ ಈ ಮಾನ್ವಿಯಂತೂ ಭೂಮಿ ಮೇಲೆ ಜೀವಂತವಾಗಿ ಇರೋದಿಲ್ಲ!!! ಮುಂದಿನ ನಿರ್ಧಾರ ನಿನಗೆ ಬಿಟ್ಟದ್ದು..." ಎಂದು ಹಲ್ಲುಕಡಿದ ಮಾನ್ವಿ ಮೊಬೈಲ್‌ನ್ನು ಜೋರಾಗಿ ಬೆಡ್ ಮೇಲೆ ಎಸೆದು, ಕುಸಿದು ಕುಳಿತು ದೀರ್ಘ ನಿಟ್ಟುಸಿರು ಬಿಟ್ಟರೆ, ಅತ್ತ ಮಾನ್ವಿಯ ಕೊನೆಯ ಮಾತುಗಳಿಗೆ ಪರಿ ನಿಶ್ಚೇಷ್ಟಿತಳಾಗಿ ನಿಂತು ಬಿಟ್ಟಿದ್ದಳು.

*********

ಮನೆಗೆ ತಲುಪುತ್ತಿದ್ದಂತೆ ಮಾನ್ವಿಯನ್ನು ಕರೆದುಕೊಂಡು ಒಂದು ಖ್ಯಾತ ಶಾಪಿಂಗ್ ಮಾಲ್‌ಗೆ ಬಂದಿದ್ದರು ಹರ್ಷ & ಪ್ರಸನ್ನ. ವಿಧಿ ವಿಪರ್ಯಾಸವೆಂಬಂತೆ ಅದೇ ಸಮಯದಲ್ಲಿ ಪರಿ, ವೈದೇಹಿಯವರು ಕೂಡ ಮಕ್ಕಳೊಂದಿಗೆ ಅದೇ ಶಾಪಿಂಗ್ ಮಾಲ್‌ನ ಒಳಗಿದ್ದರು.

ಕಾರು ಪಾರ್ಕ್ ಮಾಡುತ್ತಿದ್ದಂತೆ ಬೇತಾಳನ ಹಾಗೆಯೇ ಹಿಂಬಾಲಿಸಿದ ಸೆಕ್ಯೂರಿಟಿ ಯವರನ್ನು ಕಂಡು ತಲೆ ಕೊಡವಿದ ಹರ್ಷ.
"ಶಾಪಿಂಗ್ ಮಾಡೋವಾಗ ಕೂಡ ಸೆಕ್ಯೂರಿಟಿ ಬೇಕಾ?" ಕಿರಿಕಿರಿಯಿಂದ ಹೇಳಿದಾಗ ಮಾನ್ವಿ ಕಣ್ಣ ಸನ್ನೆಯಲ್ಲಿ ಅವರನ್ನು ಅಲ್ಲೇ ನಿಲ್ಲುವಂತೆ ಸೂಚಿಸಿದಳು‌. ಅವಳ ಆಜ್ಞೆ ಪಾಲಿಸಿದರು ದೂತರು.

"ಅದ್ಯಾಕೆ ಸೆಕ್ಯೂರಿಟಿ ಯವರು ನಿನ್ನ ಮಾತು ಕೇಳದೆ ಅವಳ ಮಾತನ್ನೇ ಕೇಳ್ತಾರೆ?" ಪ್ರಸನ್ನ ಚೂಪು ನೋಟ ಬೀರಿದ.

"ಯಾಕೆಂದರೆ ಅವರನ್ನು ಅಪಾಯಿಂಟ್ ಮಾಡಿದ್ದು ಅವಳೇ!! ನನಗೆ ಶತ್ರುಗಳ ಹಾವಳಿ ಜಾಸ್ತಿಯಂತೆ. ಈ ಮೊದಲು ನನಗಾದ ಆ್ಯಕ್ಸಿಡೆಂಟ್ ಕೂಡ, ಫ್ರೀ ಪ್ಲ್ಯಾನ್ ಅಂತೆ. ಅದೇ ರೀತಿ ಮತ್ತೆ ಸಂಭವಿಸದಿರ್ಲಿ ಅನ್ನೋ ಕಾರಣಕ್ಕೆ ಅವಳ ಈ ಮುಂಜಾಗ್ರತೆ!!" ನಿರ್ಲಕ್ಷ್ಯದಿಂದ ನುಡಿದ ಹರ್ಷ,
'ಅವತ್ತೇ ಬದುಕು ಮುಗಿದು ಹೋಗಿದ್ದರೆ ಚೆನ್ನಾಗಿತ್ತು. ಯಾವ ಪುರುಷಾರ್ಥಕ್ಕಾಗಿ ಇನ್ನೂ ಬದುಕಿದ್ದಿನೋ..!' ಮಸ್ತಿಷ್ಕದಲ್ಲಿ ಉಂಟಾಗುವ ಕೋಲಾಹಲಗಳಿಂದ ಬೇಸತ್ತು ಮನಸ್ಸಲ್ಲೇ ಹಳಿದುಕೊಂಡ.

'ಇವಳೇ ದೊಡ್ಡ ಲೇಡಿ ಡಾನ್!!  ಇವಳಿಂದ ನಿನಗೆ ಸೆಕ್ಯೂರಿಟಿ ಸೌಲಭ್ಯದ ಮಹತ್ಕಾರ್ಯ ಬೇರೆ!!  ಕರ್ಮ..!' ಗೊಣಗಿದ ಪ್ರಸನ್ನ ಅಕಸ್ಮಾತ್ತಾಗಿ ಅವಳತ್ತ ಹೊರಳಿದ್ದ. ಅದುವರೆಗೂ ಅವನನ್ನೇ ದಿಟ್ಟಿಸುತ್ತಿದ್ದವಳು ಅವನು ನೋಡುತ್ತಿದ್ದಂತೆ ಪಕ್ಕನೇ ನಕ್ಕಳು. ಅವನಿಗೆ ಬೆಳಗಿನ ಘಟನೆ ನೆನಪಾಗಿ ಮುಖ ಕಿವುಚಿ ಅವಳಿಂದ ಗಾವುದ ದೂರ ನಡೆದು ಬಿಟ್ಟ.

ಪ್ರಸನ್ನನಿಗೆ ಕೊಳ್ಳುವುದೇನು ಇರಲಿಲ್ಲ ಸುಮ್ಮನೆ ಹರ್ಷ ಬಟ್ಟೆಗಳನ್ನು ಆಯ್ಕೆ ಮಾಡುತ್ತ ನಡೆದರೆ, ಅವನನ್ನು ಗಮನಿಸುತ್ತ ಆಕಡೆ ಈಕಡೆ ಸುಳಿದಾಡುತ್ತಿದ್ದ. ಹರ್ಷನ ಖರೀದಾರಿ ಏನಿದ್ದರೂ ಪ್ರಸನ್ನನಿಗಾಗಿಯೇ ನಡೆದಿತ್ತು. ಅವನಿಗೆ ಸರಿಹೋಗುವ ಕೆಲವು ಬ್ಲೇಸರ್, ಬ್ರಾಕೆಟ್ಸ್ ಗಳನ್ನು ಆಯ್ಕೆ ಮಾಡುತ್ತ ಅವನ ಅಭಿಪ್ರಾಯ ಕೇಳುತ್ತಿದ್ದ. ಪ್ರಸನ್ನ ಇಂಥಹ ದುಂದುವೆಚ್ಚಗಳಲ್ಲಿ ತೀರ ನಿರ್ಲಿಪ್ತ! ಏನೇ ತೋರಿಸಿದರೂ ಬೇಡವೆಂದು ತಲೆ ಅಲ್ಲಾಡಿಸಿ ಮುಂದೆ ಹೋಗಿ ಬಿಡುತ್ತಿದ್ದ.

ಹರ್ಷ ಪ್ರಸನ್ನನಿಗೆ ನೀಡುತ್ತಿದ್ದ ಪ್ರಾಮುಖ್ಯತೆಯನ್ನು ಕಂಡು ಮಾನ್ವಿಯ ಕಣ್ಣು ಕುಕ್ಕಿ, ಹೊಟ್ಟೆ ಉರಿದುಹೋಗಿತ್ತು. ಪ್ರಸನ್ನನನ್ನು ತನ್ನ ದಾರಿಯಿಂದ ಎತ್ತಿ ಬಿಸಾಕಲು ಉಗುರು ಕಚ್ಚಿ ಏನೇನೋ ಕುತಂತ್ರಗಳನ್ನು ಆಲೋಚಿಸಿದಳು. ಅವಳ ಕುಂಟು ಬುದ್ದಿಗೆ ತಕ್ಷಣ ಏನೋ ಹೊಳೆದಿತ್ತು. ಹರ್ಷನಿಗಾಗಿ ಕೆಲವು ಜೀನ್ಸ್ ಬ್ರಾಕೆಟ್ಸ್ ಟೀ ಶರ್ಟ್ ಆಯ್ದುಕೊಂಡು ಅವುಗಳನ್ನು ಧರಿಸಿ ನೋಡಿ ಹೇಳುವಂತೆ ಅವನನ್ನು ಬಲವಂತವಾಗಿ ಟ್ರಯಲ್ ರೂಂ ಗೆ ಕಳುಹಿಸಿಬಿಟ್ಟಳು.

*********

ಆ ಮಧ್ಯಾಹ್ನ ಕಿಲ್ಲರ್ಸ್ ಮತ್ತು ವೈದೇಹಿಯವರೊಂದಿಗೆ ಅದೇ ಶಾಪಿಂಗ್ ಮಾಲ್ ಗೆ ಬಂದಿದ್ದ ಪರಿಗೆ ಹರ್ಷನನ್ನ ಸಂಪರ್ಕಿಸುವ ಯಾವ ಮಾರ್ಗವೂ ಉಳಿಯದೆ, ಮುಂದಿನ ದಾರಿ ತೋಚದಂತಾಗಿತ್ತು. ಈ ಕಡೆಗೆ ಪುಟಾಣಿಗಳ ಕೀಟಲೆ ಭರ್ಜರಿಯಾಗಿ ನಡೆದಿತ್ತು. ಮಾಲ್ ಪೂರ್ತಿ ಓಡಾಡುವುದು,ಜಿಗಿದಾಡುವುದು, ಬಟ್ಟೆಗಳನ್ನು ಕಿತ್ತಾಡುವುದು, ಒಣಜಗಳ ಮಾಡುವುದು,,, ಅವರನ್ನು ಹಿಡಿಯುವುದೇ ಪರಿ ಮತ್ತು ವೈದೇಹಿಯವರಿಗೆ ದೊಡ್ಡ ಹರಸಾಹಸವಾಗಿ ಹೋಗಿತ್ತು.

ಅದೆಂತಹ ಸುಂದರ ವೈವಿಧ್ಯಮಯ ನವನವೀನ ಡ್ರೆಸ್ ಗಳನ್ನು ತೋರಿಸಿದರೂ ಅಖಿಲಾಳ ಮೆಚ್ಚುಗೆಗೆ ಅವು ಪಾತ್ರವಾಗಿರಲಿಲ್ಲ. ಅದು ಹಾಗೆ ಇದು ಹೀಗೆ... ಎರಡು ಘಂಟೆ ಕಳೆದರೂ ಅವಳ ವಸ್ತ್ರ ಶೋಧನೆ ಮುಗಿಯುತ್ತಲೇ ಇಲ್ಲ.  ಅವಳ ಹಿಂದಿಂದೆ ಸುತ್ತಾಡುತ್ತಾ ಸುಸ್ತಾದ ವೈದೇಹಿಯವರು 'ಹೀಗೆ ಬಿಟ್ಟರೆ, ಈ ವರ್ಷ ನಾವು ಮತ್ತೆ ಮನೆ ಕಾಣಲ್ಲ' ಎಂದುಕೊಂಡು, ಒಂದಷ್ಟು ಚಂದದ, ಬಣ್ಣ ಬಣ್ಣದ ಫ್ರಾಕ್‌ಗಳನ್ನು ಆಯ್ಕೆ ಮಾಡಿ ತಮ್ಮ ಮೊಮ್ಮಗಳನ್ನ ಟ್ರೈಲ್ ರೂಂ ಕಡೆಗೆ ಎಳೆದುಕೊಂಡು ಹೋದರು.

ಈ ಕಡೆಗೆ ಒಂದು ಕಡೆಗೆ ನಿಂತಲ್ಲಿ ನಿಲ್ಲದೆ, ಕೂತಲ್ಲಿ ಕೂರದೆ ಮಂಗನಂತೆ ಪುಟಿದಾಡುವ ನಿಖಿಲ್ ನನ್ನು ಹಿಡಿಯುವುದು ಪರಿಯ ಪಾಲಿನ ಸವಾಲಾಗಿ ಹೋಗಿತ್ತು. ಏನೇನೋ ಕೀಟಲೆ ತುಂಟಾಟ ಮಾಡುತ್ತ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಲೇ ಇದ್ದ. ಅವನನ್ನ ಓಡಿ ಹೋಗಿ ಹಿಡಿದು ತಂದು ಒಂದೆಡೆ ನಿಲ್ಲಿಸಿ ಅವನಿಗೆ ಬಟ್ಟೆ ಆಯುವುದೇ ಅವಳಿಗೊಂದು ದೊಡ್ಡ ಕೆಲಸ. ಹೀಗೆ ಅವಳ ಕಣ್ತಪ್ಪಿಸಿ ಓಡುವ ಭರದಲ್ಲಿ ಆತ ಮುಂದೆ ನುಗ್ಗಿ ಕಿಡ್ಸ್ ಜೋನ್ ಕಂಪಾರ್ಟ್ಮೆಂಟ್ ನಿಂದ ಮೇಲಿನ ಕಂಪಾರ್ಟ್ಮೆಂಟ್ ಕಡೆಗೆ ಹೋಗುವ ಏಕ್ಸಲೇಟರ್ ಮೇಲೆ ಧಾವಿಸಿದ. ಅವಳೂ ಅವನನ್ನು ಬೆನ್ನಟ್ಟಿದಳು. ಆಗ ಸಂಭವಿಸಿತ್ತು ಒಂದು ಘಟನೆ!!

*********

ಹರ್ಷ ಟ್ರಯಲ್ ರೂಂ ಗೆ ಹೋಗಿದ್ದ, ಇತ್ತ ಪ್ರಸನ್ನ ಕೈಗಳನ್ನು ಹಿಂದೆ ಕಟ್ಟಿಕೊಂಡು ಸುತ್ತ ಕಣ್ಣಾಡಿಸುತ್ತ ಒಂಟಿ ಸಲಗನಂತೆ ಅಲೆದಾಡುತ್ತಿದ್ದ. ಅವನನ್ನು  ಅರೆಘಳಿಗೆ ಗಮನಿಸಿದ ಮಾನ್ವಿ, ಡ್ರೆಸ್ ನೋಡುವಂತೆ ಸುಮ್ಮನೆ ಅವನ ಹಿಂದೆ ಮುಂದೆ ಸುಳಿಯುತ್ತ, ಅವಕಾಶ ಸಾಧಿಸಿ, ಅವನ ಎಡಭಾಗದಲ್ಲಿ ಹೊರಟಿದ್ದ ಮಹಿಳೆಯೊಬ್ಬಳ ಸೆರಗಿನ ಅಂಚನ್ನು ಮೆಲ್ಲಗೆ ಅವನ ವಾಚ್‌ಗೆ ಸಿಕ್ಕಿಸಿ, ಸೆರಗನ್ನು ಜೋರಾಗಿ ಎಳೆದು ಬೇರೆಡೆ ಮುಖ ಮಾಡಿ ಹೋಗಿ ಬಿಟ್ಟಳು. ಕೂಡಲೇ ಸೆರಗು ಸಂಬಾಳಿಸಿಕೊಂಡ ಆ ಮಹಿಳೆ ಕೆಂಡಾಮಂಡಲವಾಗಿ ಕಾಳಿಕಾವತಾರ ತಾಳಿ ಅವನೆದುರು ನಿಂತು ಮರಾಠಿಯಲ್ಲಿ ಇದ್ದ ಬಿದ್ದ ಬೈಗುಳಗಳನ್ನು ಸುರಿಸಲಾರಂಭಿಸಿದ್ದಳು. ಮೊದಮೊದಲು ಏನಾಯಿತೆಂದೇ ತಿಳಿಯದೆ ಗಡ್ಡ ಕೆರೆದುಕೊಂಡ ಬಡಪಾಯಿ ಪ್ರಸನ್ನ, ತನ್ನ ವಾಚ್‌ಗೆ ಅವಳ ಸೀರೆ ಸಿಕ್ಕಿದನ್ನು ಕಂಡು ಬೆಚ್ಚಿ, ಅದನ್ನು ಬಿಡಿಸಿ ಕ್ಷಮೆ ಯಾಚಿಸಿದ ಅವಳ ಭಾಷೆಯಲ್ಲೇ.

ಆಕೆ ನಲ್ವತ್ತರ ಆಸುಪಾಸಿನ ಅವಿವಾಹಿತೆ; ಸುರಸುಂದರಿ(ಅವಳ ದೃಷ್ಟಿಯಲ್ಲಿ)! ಅವಳ ಪ್ರಕಾರ ಹುಡುಗರು ಚುಡಾಯಿಸಿದರೆ ಅದು ಹೆಮ್ಮೆಯ ವಿಚಾರ, ತನ್ನ ಸೌಂದರ್ಯದ ಪ್ರತಿಷ್ಠೆ! ಆದರೆ ಅವಳ ದುರಾದೃಷ್ಟಕ್ಕೆ ಇದುವರೆಗೂ ಆ ಆಸೆ ನೆರವೇರಿರಲಿಲ್ಲ. ಸಿಕ್ಕ ಅವಕಾಶವನ್ನು ಪ್ರಸನ್ನನಂತಹ ಸ್ಫುರದ್ರುಪಿ ತರುಣನನ್ನು ಸುಮ್ಮನೆ ಬಿಡಬಹುದೇ?!!  ಅವನು ಅವಳೊಂದಿಗೆ ಫ್ಲರ್ಟ್ ಮಾಡಿದ, ಸೀರೆ ಸೆರಗೆಳೆದು ರೇಗಿಸಿದ; ಹಾಗೆ ಹೀಗೆ ಎಂದು ಪುಕಾರು ಹಬ್ಬಿಸಿ ಬಿಟ್ಟಳು. ಎರಡೇ ನಿಮಿಷಗಳಲ್ಲಿ ಶಾಪಿಂಗ್ ಬಂದ ಜನರ ಗುಂಪು ಅವರನ್ನು ಸುತ್ತುವರೆದಿತ್ತು. ಅವಳಿಗೆ ತೃಪ್ತಿಕರವಾಗಿ ಪ್ರಚಾರ ಗಿಟ್ಟಿತು. ದ್ರೌಪದಿಯ ಶೀಲಹರಣ ಮಾಡಿದ ದುಶ್ಯಾಸನನ ಸ್ಥಾನದಲ್ಲಿ ಅಮಾಯಕ ಪ್ರಸನ್ನ ನಿಂತಿದ್ದ.

ಎಲ್ಲರೆದುರೇ ಪ್ರಸನ್ನನ ಕೈ ಗಟ್ಟಿಯಾಗಿ ಹಿಡಿದು ಕೆಳಗೆ ಎಳೆದುಕೊಂಡು ಹೊರಟಳು. ಅಪರಾಧಿ ಪ್ರಜ್ಞೆಯಿಂದಲೋ ಅಥವಾ ಹಠಾತ್ ಸಂಭವಿಸಿದ ಈ ಸನ್ನಿವೇಶದಲ್ಲಿ ಅಜಾನುಭಾಹು ಸ್ತ್ರೀ ಎದುರಿಗೆ ಮುಜುಗರದಿಂದಲೋ  ಪ್ರಸನ್ನನ ಕಂಠ ಉಡುಗಿಹೋಗಿತ್ತು. 'ಏನೋ ಗೊತ್ತಿಲ್ಲದೆ  ನಡೆದು ಹೋಗಿದೆ ಕ್ಷಮಿಸಿ' ಎಂದು ಸಣ್ಣಗೆ ಆತ ಕೇಳಿಕೊಳ್ಳತ್ತಲಿದ್ದರೂ ಅವಳು ತಲೆ ಕೆಡೆಸಿಕೊಳ್ಳದೆ ಮಾಲ್ ಆಚೆಗೆ ಎಳೆತಂದು ರಂಪ ಮಾಡಲು ಆರಂಭಿಸಿದಳು.  ಹೊರಗೆ ನಿಂತಿದ್ದ ಪೋಲಿಸರಿಗೂ ಈ ವಿಷಯ ಅನಾವರಣವಾಯಿತು. ಪ್ರಸನ್ನನನ್ನು ಅವರ ಕೈಗೆ ಒಪ್ಪಿಸಿದಳು. ಪ್ರಸನ್ನ ಅವಾಕ್ಕಾದ.

ಅಲ್ಲಿಯವರೆಗೂ ಇದೆಲ್ಲಾ ಕೇವಲ ತಮಾಷೆ ಎಂಬಂತೆ ನೋಡುತ್ತ ಒಳಗೊಳಗೆ ನಗುತ್ತಲೇ ಅವರನ್ನು ಹಿಂಬಾಲಿಸುತ್ತಿದ್ದ ಮಾನ್ವಿ, ಇಷ್ಟು ಚಿಕ್ಕ ವಿಷಯ ಈ ರೀತಿ ಗಂಭೀರ ಆಗಬಹುದೆಂದು ಊಹಿಸಿರಲಿಲ್ಲ. ಅವಳು ಬರುವಷ್ಟರಲ್ಲಿ ಪ್ರಸನ್ನ ಮತ್ತು ಮಹಿಳೆಯನ್ನು ಕೂರಿಸಿಕೊಂಡ ಪೋಲಿಸ್ ಜೀಪ್ ದೂರ ಸಾಗಿತ್ತು.

ಆದದ್ದೆಲ್ಳ ಒಳ್ಳೆಯದಕ್ಕೆ ಎಂದುಕೊಂಡ ಮಾನ್ವಿ ನೆಮ್ಮದಿಯ ನಿಟ್ಟುಸಿರು ಸೂಸಿ, ತಕ್ಷಣ ಯಾರಿಗೋ ಫೋನಾಯಿಸಿದಳು.

ಆಕಡೆಗೆ -

ಟ್ರಯಲ್ ರೂಂ ನಿಂದ ಹೊರಬಂದ ಹರ್ಷ, ಮಾನ್ವಿ ಪ್ರಸನ್ನನನ್ನು ಸುತ್ತಲೂ ಅರಸಿದ.‌ ಆ ಭಾಗ ಪೂರ್ತಿ ಸುತ್ತಾಡಿ ಇಬ್ಬರೂ ಅಲ್ಲೆಲ್ಲೂ ಕಾಣಿಸದಾದಾಗ, ಕೆಳಗಿನ ಫ್ಲೋರ್ ಗೆ ಬರಲು ಏಕ್ಸಲೇಟರ್ ಮೇಲೆ ಕಾಲಿಟ್ಟ. ಜಾರುವೇಗದಲ್ಲಿ ಮೆಟ್ಟಿಲು ಸರಣಿ ಕೆಳಗೆ ಇಳಿಯುತ್ತಲಿತ್ತು. ಹರ್ಷ, ಮಾನ್ವಿ ಪ್ರಸನ್ನರನ್ನು ಕಣ್ಣಳತೆ ದೂರದವರೆಗೂ ಅರಸುತ್ತಲೇ ಇದ್ದ. ಅದೇ ಸಮಯಕ್ಕೆ ಸರಿಯಾಗಿ ನಿಕಿಲ್‌ನನ್ನು ಹಿಡಿಯಲು ಏಕ್ಸಲೇಟರ್ ನಿಂದ ಮೇಲೆ ಅವಸರದಲ್ಲಿ ಓಡುತ್ತಿದ್ದ ಪರಿಯ ಅಂಗೈ  ಅವನ ಕೈಗೆ ಮೆಲ್ಲಗೆ ಹಗುರವಾಗಿ ಮೃದುವಾಗಿ ನವಿಲುಗರಿಯಂತೆ ನವಿರಾಗಿ ಸೋಕಿ ಹೋಯಿತು!!

ಒಂದೇ ಒಂದು ಕ್ಷಣದ ಸ್ಪರ್ಶ,, ಹರ್ಷನ ದೇಹದ ಅಣುಕಣಗಳಲ್ಲಿ ಮಿಂಚು ಹರಿಯುವಂತೆ ಮಾಡಿತ್ತು. ಯಾವುದೋ ಒಂದು ಮಧುರಾನುಭೂತಿ.. ಹಿತವಾದ ಸಖ್ಯ.. ಅದು ತನ್ನದೇ ಎನ್ನುವ ಭಾವ... ಬದುಕಿನಾರಂಭದಲ್ಲೇ ಬೆಸೆದ ಬೆರಳುಗಳ ಸ್ಪರ್ಶದಿಂದ ಮೊದಲಾದ ಬಾಂಧವ್ಯ.. ಅದೇಕೋ ಆ ಕ್ಷಣ ಅವಳ ಪತ್ರದ ಕೆಲವು ಸಾಲುಗಳು ನೆನಪಾದವು. ಪುಟ್ಟ ಕೈಗಳು ತನ್ನ ಬೆರಳನ್ನು ಗಟ್ಟಿಯಾಗಿ ಹಿಡಿದುಕೊಂಡಂತಹ ಅನುಭವ..  ತತ್‌ಕ್ಷಣವೇ ಹರ್ಷ ಅವಳತ್ತ ತಿರುಗಿ ನೋಡಿದ್ದ.

ವ್ಯತಿರಿಕ್ತವಾಗಿ ಚಲಿಸುವ ಏಕ್ಸಲೇಟರ್‌ಗಳು ಅದಾಗಲೇ ಇಬ್ಬರನ್ನೂ ಅಗಲಿಸಿಯಾಗಿತ್ತು. ಮೇಲ್ಮುಖವಾಗಿ ಹೊರಟವಳ ಮುಖ ಕಾಣಲಿಲ್ಲ. ಮಧ್ಯದಲ್ಲೊಂದು ಕ್ಲಿಪ್ ಸಿಕ್ಕಿಸಿಕೊಂಡ ಅವಳ ಮಾರುದ್ದದ ಬಿಚ್ಚು ಕೂದಲು, ಜಲಪಾತದಂತೆ ದುಮ್ಮಿಕ್ಕುತ್ತಿದ್ದವು. ಆಕೆ ಮುಡಿದ ದುಂಡುಮಲ್ಲೆಯ ಕಂಪು ಕಣ್ಮನವನ್ನು ತಂಪಾಗಿಸಿತ್ತು. ಆಕೆ ಮುಂಗುರುಳನ್ನು ಕಿವಿಹಿಂದೆ ಸರಿಸಿಕೊಳ್ಳುವಾಗ ಫಳ್'ನೇ  ಹೊಳೆದಿತ್ತು ಅವಳ ಬೆರಳಲ್ಲಿನ ಉಂಗುರ! ಥೇಟ್ ಅವನ ಬಳಿ ಇರುವಂತಹುದೇ ವಜ್ರದ ಹರಳಿನ ಪ್ಲಾಟಿನಂ ಉಂಗುರ!   ಇದು ಯಾರೋ ರಚಿಸಿದ ಅಥವಾ ನಿರ್ಧರಿಸಿದ  ಪೂರ್ವಾಯೋಜಿತ ಕಾರ್ಯವಾಗಿರದೆ ಕಾಕತಾಳೀಯವಾಗಿ ಸಂಭವಿಸಿದ ದೈವ ಸಂಕಲ್ಪವಾಗಿತ್ತು!!


ತರಾತುರಿಯಲ್ಲಿ ಏಕ್ಸಲೇಟರ್ ಮೇಲೆ ಹೋಗುವಾಗ, ಅವಳ ಕೈ ಅಚಾನಕ್ಕಾಗಿ ಯಾವುದೋ ಕೈಯನ್ನು ಸ್ಪರ್ಶಿಸಿದ್ದು ಅವಳ ಅನುಭವಕ್ಕೂ ಬಂದಿತ್ತು. ತಣ್ಣನೆಯ ಮಂಜಿನ ಹನಿಯನ್ನು ಸೋಕಿದಂತ ಮಧುರಾನುಭೂತಿ. ಅವನು ಉಸಿರಾಡಿದ ಶ್ವಾಸ ಸಾಕವಳಿಗೆ ಅದು ಅವನೇ ಎಂದು ಹೇಳಲು.. ಹೀಗಿರುವಾಗ ಬಹುದಿನಗಳ ತಪಸ್ಸಿನ ನಂತರ ಮರಳಿ ಪಡೆದ ಆರಾಧ್ಯನ ಹಸ್ತ ಸ್ಪರ್ಶದ ಅನುಭೂತಿಯದು... ಅವಳಲ್ಲೂ ಸಂಚಲನವನ್ನು ಉಂಟು ಮಾಡಿತು!! ಅದು ಅವನೇ ಅವಳ ಹರ್ಷ! ಮನಸ್ಸು ತವಕಿಸಿದರೂ ತಿರುಗಿ ನೋಡಲಿಲ್ಲ; ನೋಡುವಂತಿಲ್ಲ; ಅವಳಿಗೆ ಮಾನ್ವಿಯ ಷರತ್ತು ಆಕ್ಷೇಪಣೆಯಾಗಿತ್ತು‌. ಸ್ನೇಹ ಪ್ರೀತಿ ಎರಡನ್ನೂ ಉಳಿಸಿಕೊಳ್ಳುವ ಅನಿವಾರ್ಯತೆ ಅವಳದಾಗಿತ್ತು. ಆದರೆ ಅವನು ಕೂಗಿದ್ದ ಜೋರಾಗಿ  -  "Hello.... Excuse me....."

ಅವಳ ಎದೆಬಡಿತ ಸ್ಪಷ್ಟವಾಗಿ ಕೇಳುವಷ್ಟು ಜೋರಾಗಿ ಹೊಡೆದುಕೊಳ್ಳತೊಡಗಿತು. ಅವನ ಕೂಗು ಕೇಳಿಯೂ ಕೇಳದಂತೆ ಮುಂದಕ್ಕೆ ಸಾಗಿದಳು. ನಿಖಿಲ್ ನನ್ನು ಬಾಚಿಕೊಂಡಿದ್ದ  ಅವಳು ಉಸಿರು ಬಿಗಿಹಿಡಿದು ಮುಂದೆ ಮುಂದೆ ರಭಸದಿಂದ ನಡೆದು ಹೋದಳು. ಜನಜಂಗುಳಿ ಮಧ್ಯೆ ದಾರಿ ಅರಸಿಕೊಂಡು ಹೊರಟವಳಿಗೆ ಮುಂದೆ ಏನು ಮಾಡಬೇಕು ಎಲ್ಲಿ ಹೋಗಬೇಕು ಎಂಬ ಸಣ್ಣ ಅರಿವು ಇರಲಿಲ್ಲ.

ಒಂದೆರಡು ಬಾರಿ ಅವಳನ್ನು ಕೂಗಿದ ಹರ್ಷ ಅವಳು ನಿಲ್ಲದೆ ಹೋದುದನ್ನು ಕಂಡು ಓಡುತ್ತಾ ಅವಳನ್ನೇ ಹಿಂಬಾಲಿಸಿದ. ಜನರಿಂದ ಕೂಡಿದ್ದ ಏಕ್ಸಲೇಟರ್ ಮೇಲೆರುತ್ತಿದ್ದರೂ ಕ್ಷಣವೂ ವ್ಯಯ ಮಾಡದೆ ಆ ಗದ್ದಲ ಮಧ್ಯೆಯೂ ನುಗ್ಗಿ, ಎಲ್ಲರನ್ನೂ ಪಕ್ಕಕ್ಕೆ ಜರುಗಿಸಿ ಸರಿಸಿ, ರಭಸದಿಂದ ಮೆಟ್ಟಿಲುಗಳನ್ನು ಏರಿ ಸುತ್ತಲೂ ಅವಳನ್ನು ಹುಡುಕಾಡಿದ. ಅಷ್ಟರಲ್ಲಿ ಜನರ ನಡುವೆ ಮಾಯವಾದ ಅವಳು ಮತ್ತೆ ಅವನಿಗೆ ಗೋಚರಿಸಲೇ ಇಲ್ಲ. ಎಡಕ್ಕೆ ಬಲಕ್ಕೆ ತಿರುತಿರುಗಿ ಅವಲೋಕನ ಮಾಡಿದ ಹರ್ಷ, ಅದೇಕೋ ಎಡಗಡೆಗೆ ಯಾರೋ ಕೂಗಿ ಕರೆದ ಭಾವನೆಯೊಂದಿಗೆ ಗಹನವಾಗಿ ನಡೆದು ಹೊರಟಿದ್ದ. ಫುಡ್ ಕೌಂಟರ್ ದಾಟಿ ಮುಂದೆ ತಿರುವಿನಲ್ಲಿ ಹಾಗೆಯೇ ಅವಳಿಗಾಗಿ ಅಲೆಯುತ್ತಿದ್ದ ಅವನ ಹೆಜ್ಜೆಗಳು ವಾಷ್‌‌ರೂಂ ಎದುರಿಗೆ ತಟಸ್ಥಗೊಂಡವು.

"ಹಲೋ..... ಮಿಸ್ ದುಂಡು ಮಲ್ಲಿಗೆ.. ನೀವು ಇಲ್ಲೇ ಇದಿರಲ್ವಾ.." ಬಾಗಿಲು ಬಾರಿಸಿದ್ದ. ಆಕಡೆಯಿಂದ ಪ್ರತ್ಯುತ್ತರವಿಲ್ಲ.

"ನೋಡಿ.... ನನಗೊತ್ತು ನೀವು ಇಲ್ಲೇ ಇದ್ದೀರಾಂತ!! ನಿಮ್ಮ ಮೌನವೇ  ಕೂಗಿ ಹೇಳ್ತಿದೆ ನಾನು ಹುಡುಕ್ತಿದ್ದದ್ದು ನಿಮ್ಮನ್ನೇ ಅಂತ!  ನೀವ್ಯಾರೋ ನನಗೆ ಗೊತ್ತಿಲ್ಲ!  ನೀವು ನನಗೇನಾಗಬೇಕೋ? ಅದೂ ಗೊತ್ತಿಲ್ಲ!  ಆದರೆ ಒಂದು ಸತ್ಯ ಗೊತ್ತಾ... I can feel your presence!! ಪ್ರತಿಸಲ ನೀವು ನನ್ನ ಸಾಮಿಪ್ಯದಲ್ಲಿ ಸುಳಿದಾಗಲೆಲ್ಲ ನನ್ನೊಳಗೆ ಒಂದು ರೀತಿಯ ಚೈತನ್ಯ ಉತ್ಸಾಹ ಚಿಮ್ಮುತ್ತೆ‌. ಹೃದಯ ಎಗ್ಗಿಲ್ಲದೆ ಹೊಡೆದುಕೊಳ್ಳಲು ಆರಂಭಿಸುತ್ತೆ. ಸುಖಾಸುಮ್ಮನೇ ಹೀಗಾಗುವುದಿಲ್ಲ ಅಲ್ವಾ.... ನನಗೂ ನಿಮಗೂ ಏನೋ ಗಾಢವಾದ ಬಾಂಧವ್ಯ ಇರಲೇಬೇಕು! ಮತಿ ಅರಿಯದಿರ್ದೊಡೆಂ ಮನವರಿಯದೆ..!! " ನಕ್ಕು ನುಡಿದ
"ಹಾಗಿದ್ದಾಗ ಈ ಮುಚ್ಚು ಮರೆ ಆಟವೆಲ್ಲ ಯಾಕೆ? ನಿಜ ಹೇಳಿ, ನೀವು ಯಾರು? ನನಗೂ ನಿಮಗೂ ಏನ್ ಸಂಬಂಧ?" ಅವನು ಒಂದೇ ಸಮನೆ ಮಾತಾಡುತ್ತಲೇ ಇದ್ದ. ನಿರೀಕ್ಷಿತ ಪ್ರತ್ಯುತ್ತರ ಮಾತ್ರ ಸಿಗಲಿಲ್ಲ. ಅವನೇ ಮುಂದುವರೆದ....

"ನೀವು  ನನ್ನಿಂದ ಅದೆಷ್ಟೇ ದೂರ ಹೋಗೋ ಪ್ರಯತ್ನ ಪಟ್ಟರೂ ನಿಮ್ಮ ಇರುವಿಕೆಯನ್ನು ನನ್ನ ಮನಸ್ಸು ಊಹಿಸಿ ಬಿಡುತ್ತೆ. ಇದೇ ಮೊದಲಲ್ಲ ನನಗೆ ಹೀಗಾಗ್ತಿರೋದು..!  ಈ ಕ್ಷಣ ನಿಮ್ಮೊಳಗೆ ಉಂಟಾಗ್ತಿದೆಯಲ್ಲ ಆತಂಕ ಗೊಂದಲ ಚಂಚಲತೆ ಅದನ್ನು ಕೂಡ  ನಿಮ್ಮ ಉಸಿರಾಟದ ಏರಿಳಿತದ ಕಂಪನ ನನಗೆ ತಿಳಿಸ್ತಿದೆ. ನೀವ್ಯಾರು? ನಾನು ಒಂದೇ ಒಂದು ಸಲ ನಿಮ್ಮನ್ನು ನೋಡಬೇಕು ಪ್ಲೀಸ್..." ಗೋಗರೆದ. ಕೂಗಿದ. ಅಸಹನೆಯಿಂದ ದಬದಬನೆ ಬಾಗಿಲು ಬಡಿದ. ಆಕಡೆಯಿಂದ ಯಾವ ಪ್ರತಿಕ್ರಿಯೆಯೂ ಇಲ್ಲ. ಆಚೆ ವಾಷ್‌ರೂಂ ಗೆ ಬಂದ ಕೆಲ ಸ್ತ್ರೀಯರು ಅವನ ವರ್ತನೆಯನ್ನ ವಿಚಿತ್ರವಾಗಿ ನೋಡುತ್ತ ತಮ್ಮ ದಿಕ್ಕು ಬದಲಿಸಿ ಮರಳಿದ್ದರು. ಅವನ ಗಮನ ಏನಿದ್ದರೂ ಅವಳತ್ತ ಮಾತ್ರ. ಜಗದ ಪರಿವು ಅವನಿಗಿರಲಿಲ್ಲ.

"ನಾನು ಇಷ್ಟು ಪರಿಪರಿಯಾಗಿ ಕೇಳಿಕೊಂಡರು ನಿಮ್ಮ ಮನಸ್ಸು ಕರಗಲಿಲ್ವಲ್ಲ.. ಹ್ಮ್... ಒಕೆ. ನಿಮ್ಮ ಹಠ ನಿಮಗಿರಲಿ. ಆದರೆ ಒಂದು ಮಾತು ನೆನಪಿಟ್ಕೊಳ್ಳಿ,, ಸದ್ಯದಲ್ಲೇ ನಾನು ನಿಮ್ಮನ್ನ ಹುಡುಕಿ ಕಂಡು ಹಿಡಿದೇ ಹಿಡಿತಿನಿ. ನೀವು ನನ್ನಿಂದ ತಪ್ಪಿಸಿಕೊಳ್ಳಲು ಆಗದ ಹಾಗೆ ಕೂಡಿ ಹಾಕ್ತಿನಿ,, ನನ್ನ ಮನದಲ್ಲಿ.. " ಕಿರುನಗೆ ಬೀರಿದ.

ಅಷ್ಟರಲ್ಲಿ ದೂರದಲ್ಲಿ ಬರುತ್ತಿದ್ದ ಮಾನ್ವಿ ಆತನನ್ನು ಕಂಡು 'ಸಂಕು..' ಎಂದು ಕೂಗಿದ್ದಳು. ಹರ್ಷ ಅವಳ ಉನ್ಮತ್ತಿನಿಂದ ಎಚ್ಚರಗೊಂಡು ವಾಸ್ತವಕ್ಕೆ ಮರಳಿದ.

"ವಾಷ್‌ರೂಂ ನಲ್ಲಿ ಎಷ್ಟೋತ್ತು ಅಂತ ಬಚ್ಚಿಟ್ಕೋತಿರಾ... ಉಸಿರು ಕಟ್ತಿಲ್ವಾ..! ಸರಿ. ನಾನು ಹೋಗ್ತಿದಿನಿ. ಬೇಗ ಆಚೆ ಬಂದ್ಬಿಡಿ ಆಯ್ತಾ?!" ಎಲ್ಲೋ ನೋಡುತ್ತ ಮೆಲ್ಲಗೆ ಉಸುರಿದ. ಅವನೆದುರು ಬಂದು ನಿಂತ ಮಾನ್ವಿ ಅವನನ್ನ ವಿಚಿತ್ರವಾಗಿ ನೋಡಿದಳು.

"ಇಲ್ಲೇನು ಮಾಡ್ತಿದಿಯಾ??"

"ನಾ,,ನು... ವಾಷ್‌ರೂಂ ಬಂದಿದ್ದೆ" ರಾಗವೆಳೆದ.

"ಇದು ಲೇಡೀಸ್ ವಾಷ್‌ರೂಂ!!! " ಗಡುಸಾಗಿ ಹೇಳಿದಳು

"ಓಹ್... ಹ್ಮಾ.... ಅದು, ನಾನು, ನಿನ್ನ ಹುಡುಕೋಕೆ ಬಂದಿದ್ದೆ. ನೀನೆಲ್ಲಿ ಹೋಗಿದ್ದೆ? ಪ್ರಸನ್ನ ಎಲ್ಲಿ? ಅಲ್ಲೆಲ್ಲೂ ಕಾಣಿಸಲಿಲ್ಲ ನೀವಿಬ್ರೂ!" ಅವನ ಪ್ರಶ್ನೆಗೆ ಆಕೆ ತಬ್ಬಿಬ್ಬಾದಳು.

"ಅದೂ... ಹಳೆಯ ಫ್ರೆಂಡ್ಸ್ ಸಿಕ್ಕಿದ್ರು ಅವರ ಜೊತೆ.... ಓಹ್.. ನೋ.  ತುಂಬಾ ಲೇಟ್ ಆಗಿದೆ. ಸಂಜೆ ಮೀಟಿಂಗ್ ಬೇರೆ ಹೋಗ್ಬೇಕು. ಎಲ್ಲಾ ಹೇಳ್ತಿನಿ, ಮೊದಲು ಮನೆಗೆ ಹೋಗೋಣ ಬಾ.." ವಾಚ್ ನೋಡಿಕೊಳ್ಳುತ್ತ ಮಾತು ಬದಲಿಸಿ ಅವನ ಕೈ ಹಿಡಿದೆಳೆದಳು. ಮೆಲ್ಲಗೆ ಆಕೆಯ ಕೈ ಕೊಸರಿಕೊಂಡ ಆತ ನಿಂತ ಜಾಗದಿಂದಲೇ ಕೈ ಚಾಚಿ ಕೂಗಿದ...

"ತೇರಿ ಕುಶ್ಬೂ ಸೇ ಖಿಲ್ತಿ ಹೇ, ಮುಸ್ಕಾನ್ ಮೇರಿ!
ತೇರಿ ಏಕ್ ಮುಸ್ಕಾನ್ ಕೆ ಲಿಯೇ, ತರಸ್ತಿ ಹೇ ಜಿ಼ಂದಗಿ ಮೇರಿ!
ಚಾಹೆ ಸಾರಾ ದುನಿಯಾ ರೂಟ್ ಜಾಯೇ, ತುಜ್ಮೆ ಗುಲ್ ಜಾಯೆಂಗೆ ಹಮ್..
ದರಕಾಸ್ತ್ ಹೇ ತುಮ್ಸೆ, ಸಿರ್ಫ್ ಏಕ್ ದಫಾ..ಥಾಮ್ ಲೋನಾ ಹಾಥ್ ಮೇರಿ!!
I LOVE YOU... LOVE YOU MORE THAN MYSELF... "

ನೋಟ ಮಾನ್ವಿಯ ಕಡೆಗೆ ಇತ್ತಾದರೂ ಮನಸ್ಸು ಬೇರೆಡೆಗೆ ಇತ್ತು. ಹೇಳಿದ್ದು ಮಾನ್ವಿಗಾದರೂ ಅದು ತಲುಪಬೇಕಾದ ಪ್ರಿಯವ್ಯಕ್ತಿಗೆ ತಲುಪಿಯಾಗಿತ್ತು. ಪಾಪದ ಪ್ರಾಣಿ ಪ್ರಸನ್ನನ ಗತಿಯನ್ನು ಯೋಚಿಸುತ್ತಿದ್ದ ಮಾನ್ವಿಗೆ ಹರ್ಷನ ಬಾಯಿಂದ ಮೊಟ್ಟಮೊದಲ ಬಾರಿಗೆ ಈ ರೀತಿಯ ಪ್ರೀತಿ ಮಾತು ಕೇಳಿ, ಅವನ ಈ ಹೊಸ ವರಸೆ ಕಂಡು ಅಯೋಮಯ ಸ್ಥಿತಿಯಲ್ಲಿ ಭೂಮಿ ತಿರುಗಿದಂತಾಗಿತ್ತು. ಪೇಲವವಾಗಿ ನಕ್ಕು, "ಲವ್ ಯು ಟು ಸಂಕು.." ಅವನ ಕೈಯೊಳಗೆ ಕೈಯಿಟ್ಟು ಉಲಿದು, ಅವನೊಡನೆ ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿದಳು.

ಅವರಿಬ್ಬರೂ ಅಲ್ಲಿಂದ ಹೊರಟು ಹೋದದ್ದನ್ನು ಇಣುಕಿ ನೋಡಿ ಖಾತ್ರಿಪಡಿಸಿಕೊಂಡು  ನಿಧಾನವಾಗಿ ಬಾಗಿಲು ತೆರೆದು ಆಚೆಗೆ ಬಂದಳು ಪರಿ ನಿಖಿಲ್ ಸಮೇತ. ಹರ್ಷನ ಮಾತು ಭಾವನೆ, ಧ್ವನಿ ಕೇಳಿದ, ಸಂತೋಷಕ್ಕೋ, ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಿದ ಸಂತೃಪ್ತಿಗೋ ಹುರುಪಿನಿಂದ ಗಾಳಿಯಲ್ಲಿ ಕೈ ತೂರಿ ಕೇಕೆ ಹಾಕಿದಳು.

"ಕಿಟ್‌ಕ್ಯಾಟ್...!! ಬುದ್ದಿ ಇಲ್ವಾ ನಿನಗೆ, ನಾನು ಗಂಡು ಹುಡುಗ! ನನ್ನನ್ನು ಲೇಡೀಸ್ ವಾಷ್‌ರೂಂ ಗೆ ಎಳೆದುಕೊಂಡು ಹೋಗಿದ್ದಿಯಲ್ಲಾ!! ಛೇ ನನ್ನ ಬಗ್ಗೆ ಜನ ಎಷ್ಟು ತಪ್ಪು ತಿಳ್ಕೋಬೇಡ!" ಬೇಸರದಿ ಕೈ ಹಣೆಗೊತ್ತಿಕೊಂಡ ನಿಖಿಲ್. "ಅದ್ಯಾರು ಅಷ್ಟೊಂದು ಕೂಗ್ತಿದ್ರೂ?  ನೀನೂ ಮಾತಾಡದೇ, ನನಗೂ ಮಾತಾಡೋಕೆ ಬಿಡದೇ ಬಾಯಿ ಮುಚ್ಚಿದ್ಯಾಕೆ? ಯಾರವ್ರು?" ಕೇಳಿದ.

ಅವನ ತುಂಟಾಟದಿಂದಲೇ ತನಗೆ ಮತ್ತೊಂದು ಹೆಜ್ಜೆ ಹರ್ಷನಿಗೆ ಸನಿಹವಾಗುವ ಅವಕಾಶ ಲಭಿಸಿದ ಖುಷಿಗೆ ಅವನನ್ನು ಬಿಗಿಯಾಗಿ ಅಪ್ಪಿ ಕೆನ್ನೆ ಗಿಲ್ಲಿ ಲೊಚಲೊಚನೆ ಮುತ್ತಿಟ್ಟಳು ಪರಿ.

"ಕಿಟ್‌ಕ್ಯಾಟ್!!!  ಯು ಆರ್ ಗಾನ್ ಮ್ಯಾಡ್! " ರೇಗಿದ ನಿಖಿಲ್ ಕೆನ್ನೆ ಒರೆಸಿಕೊಳ್ಳುತ್ತ ಅವಳ ಕೈ ಎಳೆದುಕೊಂಡು ಹೊರಟ. ಅವಳ ಸಂತೋಷ ಮುಗಿಲು ಮುಟ್ಟಿದಂತಾಗಿತ್ತು.

ಖರೀದಿ ಮಾಡಿದ ಬಟ್ಟೆಗಳನ್ನು ಕಾರಿಗೆ ಸಾಗಿಸಲು ಸೆಕ್ಯೂರಿಟಿಗೆ ಹೇಳಿ, ಹೊರನಡೆದಿದ್ದ ಹರ್ಷನ ಕಣ್ಣಿಗೆ ಕಂಡಿದ್ದಳು ಅಖಿಲಾ. ಪಕ್ಕದಲ್ಲಿದ್ದ ಅವರಜ್ಜಿ ಪರಿ ನಿಖಿಲ್ ನನ್ನು ಹುಡುಕುತ್ತಿದ್ದರು. ಅವನನ್ನು ನೋಡಿದ ಅಳಿಲಾ ನಾಲಿಗೆ ಹೊರಚಾಚಿ, ಮೂಗು ತಿರುಚಿ ಅಣುಗಿಸಿದಳು. ನಕ್ಕು ಕಣ್ಣು ಮಿಟುಕಿಸಿದ ಹರ್ಷ. ಎರಡು ಕೈಯಿಂದ ತನ್ನ ಹೊಸ ಡ್ರೆಸ್ ಅಗಲಿಸಿ ತೋರಿಸಿ ಹೇಗಿದೆ?  ಎಂದು ಕಣ್ಣಲ್ಲೇ ಕೇಳಿದಳಾಕೆ. ಕೈಯ ಸನ್ನೆಯಲ್ಲೇ ಸೂಪರ್ ಎಂದು ಮೆಚ್ಚುಗೆ ಸೂಚಿಸಿದ ಹರ್ಷ ಮುಗುಳ್ನಕ್ಕ. ಅವನ ಕೈ ಗಟ್ಟಿಯಾಗಿ ಹಿಡಿದುಕೊಂಡ ಮಾನ್ವಿ ಅವನನ್ನು ಅಲ್ಲಿಂದ ಕರೆದುಕೊಂಡು ಹೋದಳು ಆತುರದಿಂದ.

ಮುಂದುವರೆಯುವುದು..


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...