ಆಸ್ಪತ್ರೆಗೆ ಬಂದ ಪರಿಧಿ ಇನ್ನೂ ಹರ್ಷನ ಗುಂಗಿನಲ್ಲಿಯೇ ಮುಳುಗಿದ್ದಳು. ಅವನು ಮುನಿಸಿಕೊಂಡಾಗೆಲ್ಲ ಅವನಿಗೆ ಇಷ್ಟವಾದ ಪಾಯಸವೋ ಕೀರು ಮಾಡಿ ಮುಂದೆ ಇಟ್ಟು ಬಿಟ್ಟರೆ ಕೋಪ ಮಾಡಿಕೊಂಡ ಪ್ರಜ್ಞೆಯೇ ಇಲ್ಲದೆ ಖುಷಿಯಿಂದ ಬೆಣ್ಣೆಯಂತೆ ಕರಗಿ ಸವಿಯುತ್ತ ಹ್ಮ.. ಸೂಪರ್ ಎಂದು ಅದರ ವರ್ಣನೆ ಮಾಡುತ್ತ ಮಾತಿನಲ್ಲಿ ಮುಳುಗಿಬಿಡುತ್ತಿದ್ದ ಆದರೆ ಈಗ ಅನತಿ ದೂರದಲ್ಲಿರುವ ಹರ್ಷನ ಕೋಪ ಹೇಗೆ ಶಮನಗೊಳಿಸುವುದೆಂದು ಪರಿಧಿ ಯೋಚಿಸುತ್ತಿದ್ದಳು.
ಅದೇ ಯೋಚನೆಯಲ್ಲಿ ನಡೆಯುತ್ತಿದ್ದವಳು ಎದುರಿಗೆ ಬಂದ ಯುವಕನನ್ನು ನೋಡದೆ ಢಿಕ್ಕಿ ಹೊಡೆದಿದ್ದಳು. ಅವನ ಕೈಯಲ್ಲಿದ್ದ ಫೈಲ್ ಮತ್ತು ಕೆಲವು ಹಾಳೆಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದವು. ಪರಿಧಿಗೆ ತನ್ನ ಎಡವಟ್ಟು ಅರಿವಾಗಿ ತಕ್ಷಣ ಕೆಳಗೆ ಬಗ್ಗಿ ಹಾಳೆಗಳನ್ನು ಆಯ್ದುಕೊಳ್ಳುತ್ತಾ ಸಾರಿ ಕೇಳಿದ್ದಳು. ಆ ಯುವಕ ಕೂಡ ಹಾಳೆಗಳನ್ನು ಜೋಡಿಸಿಕೊಳ್ಳುತ್ತಾ ಪರವಾಗಿಲ್ಲ ಎಂದಿದ್ದ. ಎದ್ದು ನಿಂತು ಪರಿಧಿ ತಾನು ಜೋಡಿಸಿದ ಹಾಳೆಗಳನ್ನು ಕೊಡುತ್ತ ಅವನನ್ನು ನೋಡಿದಳು. ಅವನು ಹಾಳೆಗಳನ್ನು ತೆಗೆದುಕೊಳ್ಳುತ್ತ ಅವಳನ್ನು ನೋಡಿದ. ತಕ್ಷಣ ಇಬ್ಬರೂ ಒಬ್ಬರ ಮುಖವನ್ನೊಬ್ಬರು ಪ್ರಶ್ನಾರ್ಥಕವಾಗಿ ನೋಡುತ್ತಾ ಡಾ.ಪ್ರಸನ್ನ..?! ಡಾ.ಪರಿಧಿ..?! ಎಂದು ಒಬ್ಬರ ಹೆಸರನ್ನೊಬ್ಬರು ಸಂಶಯಾತ್ಮಕವಾಗಿ ಸಂಭೋಧಿಸಿದ್ದರು. ತಕ್ಷಣ ತಮ್ಮ ಪರಿಚಯದ ನೆನಪಾಗಿ, ತಮ್ಮ ಪ್ರಶ್ನೆಗೆ ತಾವೇ ನಕ್ಕುಬಿಟ್ಟರು. "ಡಾ.ಪ್ರಸನ್ನ ನೀವೇನಿಲ್ಲಿ" ಎಂದು ಕೇಳಿದಳು ಪರಿಧಿ. "ಅದೊಂದು ದೊಡ್ಡ ಕಥೆ.. ಲಂಚ್ ಬ್ರೇಕ್ ನಲ್ಲಿ ಸಿಗೋಣ. ಸದ್ಯಕ್ಕೆ ಡ್ಯೂಟಿ ರಿಪೋರ್ಟ್ ಮಾಡ್ಬೇಕು! ಬಾಯ್.." ಎಂದು ಕೈಯಲ್ಲಿದ್ದ ಚಾಕೊಲೇಟ್ ಕೊನೆಯ ಬೈಟ್ ಬಾಯಿಗೆ ಹಾಕುತ್ತ ನಡೆದು ಹೋದ. ಪರಿಧಿ ಕೂಡ ತಲೆಯಲ್ಲಾಡಿಸಿ ಮುಗುಳ್ನಕ್ಕು ತನ್ನ ವಾರ್ಡಿನತ್ತ ಸಾಗಿದಳು. ಎರಡು ವರ್ಷಗಳ ನಂತರದ ಪ್ರಸನ್ನನ ಭೇಟಿಯಿಂದ ಅವಳ ಮನಸ್ಸು ಪ್ರಸನ್ನವಾಯಿತು.
*****
ಪರಿಧಿ ಒಂದು ವರ್ಷದ ಇಂಟರ್ನಶಿಪ್ ಗಾಗಿ ಲೈಫ್ ಕೇರ್ ಆಸ್ಪತ್ರೆಗೆ ಹೋಗಿದ್ದಾಗ ಡಾ.ಪ್ರಸನ್ನನ ಪರಿಚಯವಾಗಿತ್ತು. ಇಂಟರ್ನಶಿಪ್ ಮೊದಲ ದಿನ ಮಾನ್ವಿ ಲೈಫ್ ಕೇರ್ ಆಸ್ಪತ್ರೆಗೆ ಬಂದಾಗ ತನ್ನ ಸ್ಕೂಟಿ ಪಾರ್ಕ್ ಮಾಡಲು ನಿರ್ದಿಷ್ಟ ಸ್ಥಳವಿಲ್ಲದೆ ಬೇರೆ ಜಾಗ ನೋಡುತ್ತಿದ್ದಳು. ಸಾಲು ಸಾಲಾಗಿ ನಿಂತ ಬೈಕ್ ಗಳನ್ನು ಒಂದೊಂದಾಗಿ ಕಷ್ಟ ಪಟ್ಟು ಹೆಣಗಾಡುತ್ತ ಪಕ್ಕ ಪಕ್ಕಕ್ಕೆ ಸರಿಸಿ ನಿಲ್ಲಿಸಿ ತನ್ನ ಸ್ಕೂಟಿ ನಿಲ್ಲಿಸಲು ಸ್ವಲ್ಪ ಜಾಗ ಖಾಲಿ ಮಾಡಿದ್ದಳು. ಇನ್ನೇನೂ ತನ್ನ ಸ್ಕೂಟಿ ತಂದು ಅಲ್ಲಿ ನಿಲ್ಲಿಸಬೇಕು ಎನ್ನುವಷ್ಟರಲ್ಲಿ ಒಬ್ಬ ಯುವಕ ಆಕೆಗೂ ಮೊದಲೇ ಸ್ಪೀಡಾಗಿ ಬಂದು ಆ ಜಾಗದಲ್ಲಿ ಬೈಕ್ ಪಾರ್ಕ್ ಮಾಡಿ ಬಿಟ್ಟಿದ್ದ.
ಬೈಕ್ ತೆಗೆಯಲು ಹೇಳಿದ್ದರೆ ಅವನು ತೆಗೆಯುತ್ತಿದ್ದನೇನೋ ಆದರೆ ಬಿಸಿಲ ಬೇಗೆಯಿಂದಲೂ, ಬೈಕ್ ಸರಿಸಿದ ಆಯಾಸದಿಂದಲೂ ಬೆವೆತಿದ್ದ ಮಾನ್ವಿ ಸಿಟ್ಟಿನಿಂದ ಕೆಂಡಾಮಂಡಲವಾದಳು. ಆ ಕ್ಷಣ ಏನನ್ನೂ ಯೋಚಿಸದೆ ಹಿಂದುಮುಂದು ನೋಡದೆ ಆ ಯುವಕನನ್ನು ಹಿಗ್ಗಾಮುಗ್ಗಾ ಬಾಯಿಗೆ ಬಂದಂತೆ ಬೈದು ಅವನನ್ನು ಶಪಿಸಿದ್ದಳು. ಆ ಯುವಕ ಅವಳನ್ನೇ ಗಮನಿಸುತ್ತ, ಅವಳ ಒಂದೊಂದು ಬೈಗುಳ ಪದಗಳನ್ನು ಅರ್ಥಶಃ ಅನ್ವಯಿಸುತ್ತ ಕೆಲವು ಬೈಗುಳಗಳ ಅರ್ಥ ತಿಳಿಯಲಾಗದೆ ಸೋತು ಕೊನೆಗೆ ನಗುತ್ತಲೇ "ನೀವು ಇಲ್ಲಿಗೆ ಬೇಗ ಬಂದು ಒಳ್ಳೆಯ ಕೆಲಸ ಮಾಡಿದ್ದಿರಾ. ಸೆಕೆಂಡ್ ಫ್ಲೋರ್ ಹದಿಮೂರನೇ ವಾರ್ಡಲ್ಲಿ ಡಾ.ಕುಮಾರ್ ಅಂತ ಇದ್ದಾರೆ ಅವ್ರನ್ನ ತಕ್ಷಣ ಭೇಟಿ ಮಾಡಿ" ಎಂದು ಹೇಳಿ ಅವಳ ಮರುಮಾತು ಹೇಳುವುದಕ್ಕೂ ಮೊದಲೇ ಆಸ್ಪತ್ರೆ ಒಳಗೆ ನಡೆದು ಹೋಗಿದ್ದ. ಅವನು ಹೋದ ದಾರಿಯನ್ನೇ ನೋಡುತ್ತ ನಿಂತ ಮಾನ್ವಿ 'ಎಷ್ಟು ಪೊಗರು ಈ ಪೊರ್ಕಿಗೆ!! ನಾನು ಕಷ್ಟ ಪಟ್ಟು ಜಾಗ ಮಾಡಿಕೊಂಡ್ರೆ ತಾನು ಬೈಕ್ ತಂದು ನಿಲ್ಸಿದ' ಎಂದು ಅವನ ಬೈಕನ್ನು ಜೋರಾಗಿ ಒದ್ದಳು. ಒದೆತಕ್ಕೆ ತನ್ನ ಕಾಲಿಗೆ ನೋವಾಗಿ ಆsss ಎಂದು ಕಿರುಚಿದಳು.
'ಹೌದು.. ಅವನ್ಯಾಕೆ ಹಾಗ್ ಹೇಳಿದ ಡಾಕ್ಟರ್ ಕುಮಾರ್ ಅಂದ್ರೆ ಯಾರು? ನಾನ್ಯಾಕೆ ಅವ್ರನ್ನ ಭೇಟಿ ಮಾಡ್ಬೇಕು' ಎಂದು ಕೋಪದಲ್ಲೇ ಯೋಚಿಸುವಾಗ ಪರಿಧಿ ಮತ್ತು ಸಂಜೀವಿನಿ ಮತ್ತೊಂದು ಸ್ಕೂಟಿಯಲ್ಲಿ ಬಂದಿಳಿದರು. 'ಏನಾಯ್ತೆ.. ಏನು ಮಂತ್ರ ಓದ್ತಾ ನಿಂತಿದ್ದಿಯಾ' ಎಂದವರು ಕೇಳಿದಾಗ ಮಾನ್ವಿ ಅದೇ ಸಿಟ್ಟಿನಲ್ಲಿ ನಡೆದದ್ದನ್ನು ವಿವರಿಸಿದಳು. ಅವರಿಬ್ಬರೂ ಮಾನ್ವಿಯನ್ನು ಸಮಾಧಾನ ಮಾಡಿ ಅಲ್ಲಿಯೇ ಬೇರೆ ಕಡೆಗೆ ಮರದ ಕೆಳಗೆ ಸ್ಕೂಟಿ ನಿಲ್ಲಿಸಿ ಮೂವರು ಮಾತನಾಡುತ್ತಾ ಒಳಗೆ ನಡೆದರು. ಒಳಗೆ ಹೋದಾಗ ಎದುರಿಗೆ ಸಿಕ್ಕ ನರ್ಸ್ ನನ್ನು ಮಾತಾಡಿಸಿ 'ಡಾ,ಕುಮಾರ್ ಅಂದ್ರೆ ಯಾರು' ಎಂದು ಕೇಳಿದ್ದಳು ಮಾನ್ವಿ. ಆ ನರ್ಸ್ 'ಡಾ,ಕುಮಾರ್ ಗೊತ್ತಿಲ್ವಾ, ಹಿ ಈಸ್ ಫೇಮಸ್ ಸೈಕಿಯಾಟ್ರಿಸ್ಟ್' ಎಂದಿದ್ದಳು. ಇದನ್ನು ಕೇಳಿ ಗೆಳತಿಯರಿಬ್ಬರೂ ಕಿಸಕ್ ಎಂದು ನಕ್ಕರು, ಮಾನ್ವಿ 'ನನ್ನೇನೂ ಹುಚ್ಚಿ ಅನ್ಕೊಂಡಿದ್ದಾನಾ ಆ ಈಡಿಯಟ್!' ಎಂದು ಕೋಪದಿಂದ ಕುದಿಯುತ್ತಿದ್ದಳು.
ಆ ದಿನ ಪ್ರತಿಯೊಬ್ಬ ಇಂಟರ್ನಶಿಪ್ ಅಭ್ಯರ್ಥಿಗಳನ್ನು ಅವರ ಆಯ್ಕೆಯ ಡಿಪಾರ್ಟ್ಮೆಂಟ್ ಅನುಸಾರ ವಿಂಗಡಿಸುವಾಗ ಆತ ಕೂಡ ಅಲ್ಲಿಗೆ ಬಂದಿದ್ದ. ಅದೇ ಬೈಕ್ ಹುಡುಗ, ಕಪ್ಪು ಟೀಶರ್ಟ್ ಬೂದು ಬಣ್ಣದ ಜೀನ್ಸ್ ಮೇಲೆ ಡಾಕ್ಟರ್ ಕೋಟ್ ಹಾಕ್ಕೊಂಡಿದ್ದನ್ನು ನೋಡಿ ಈ ಲೋಫರ್ ಕೂಡ ಇಂಟರ್ನಶಿಪ್ ಗಾಗಿ ಬಂದಿದ್ದಾನಾ ಅಂದುಕೊಂಡಿದ್ದಳು ಮಾನ್ವಿ. ಆಮೇಲೆ ಚೀಫ್ ಹೇಳಿದಾಗ ಅವಳಿಗೆ ಗೊತ್ತಾಗಿತ್ತು ಬೈಕ್ ಪಾರ್ಕ್ ಮಾಡಿದ ವ್ಯಕ್ತಿ ಡಾ.ಪ್ರಸನ್ನ ಎಂದು ಮತ್ತು ಅವನೇ ಮಾನ್ವಿ ಮತ್ತು ಸಂಜೀವಿನಿಯ ಡಿಪಾರ್ಟ್ಮೆಂಟ್ ಹೆಡ್ ಹಾಗೂ ಮೆಂಟರ್ ಕೂಡ ಎಂದು. ವಿಷಯ ಗೊತ್ತಾಗಿ ಮಾನ್ವಿ ಇವನು ಮೆಂಟರ್ ಅಲ್ಲಾ ಕಣ್ರೆ ಮೆಂಟಲ್..! ರೌಡಿ.. ರ್ಯಾಸ್ಕಲ್.. ಇನ್ನೂ ಮುಂದೆ ನಾನು ಇವನ ಕೆಳಗೆ ವರ್ಕ್ ಮಾಡ್ಬೇಕಾ!! ದೇವ್ರೆ.. ಏನೇನು ಕಾದಿದೆಯೋ..!! ಎಂದು ಒಳಗೊಳಗೆ ಗೊಣಗಿದ್ದಳು.
ಡಾ.ಪ್ರಸನ್ನ ಲೈಫ್ ಕೇರ್ ಹಾಸ್ಪಿಟಲ್ ನ ಪ್ರಖ್ಯಾತ ವೈದ್ಯ. ಒಂದರ್ಥದಲ್ಲಿ ಆ ಆಸ್ಪತ್ರೆಯ ಕಿರೀಟ ಎನ್ನಬಹುದಾಗಿತ್ತು. ಏಕೆಂದರೆ ಅಲ್ಲಿನ ಸಿಇಒ ಟ್ರಸ್ಟಿ ಎಲ್ಲರ ವಿಶ್ವಾಸ ಗಳಿಸಿದ ಪ್ರಾಮಾಣಿಕ ಹಾಗೂ ಶ್ರಮಜೀವಿಯಾಗಿದ್ದ. ನೋಡಲು ಸುರದೃಪಿ, ಯಾವಾಗಲೂ ಹಸನ್ಮುಖಿ, ಅಪ್ರತಿಮ ಬುದ್ದಿವಂತ, ಬಹುಭಾಷಾ ಪ್ರವೀಣ, ಚತುರ ವಾಗ್ಮಿ, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ, ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಸಹೃದಯಿ, ಬದುಕಿನ ಪ್ರತಿ ಕ್ಷಣವನ್ನು ಆನಂದದಿ ಆಸ್ವಾದಿಸುವ ಉತ್ಸಾಹಿ ಯುವಕ. ಅತಿ ಕಡಿಮೆ ಅವಧಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬೃಹತ್ ಸಾಧನೆಗೈದಿದ್ದ. ಇವನು ಕೈ ಹಿಡಿದ ಯಾವ ಶಸ್ತ್ರಚಿಕಿತ್ಸೆಯೂ ಇದುವರೆಗೂ ಫೇಲಾದ ಉದಾಹರಣೆಯೇ ಇರಲಿಲ್ಲ. ಪ್ರಶಸ್ತಿಗಳು ಸನ್ಮಾನಗಳು ವಿದೇಶಿ ಅವಕಾಶಗಳು ಅವನನ್ನು ಅರಸಿಕೊಂಡು ಬಂದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಯತಾರ್ಥವಾಗಿ ತನ್ನಿಷ್ಟದಂತೆ ಬದುಕುವ ನಿರ್ಲಿಪ್ತ ಜೀವಿ. ಇವನ ಹಿಂದೆ ಬಿದ್ದ ಹುಡುಗಿಯರ ಸಂಖ್ಯೆ ಬಹುಶಃ ಲೆಕ್ಕಕ್ಕೆ ಇರಲಿಲ್ಲ ಆದರೆ ಇವನು ಮಾತ್ರ ತಾನಾಯಿತು ತನ್ನ ಪಾಡಾಯಿತು ಎಂದು ಅದೆಲ್ಲಾ ಜಂಜಾಟದಿಂದ ದೂರವೇ ಇರುತ್ತಿದ್ದ. ಇವನ ಜೀವನರೀತಿ, ನಿಶ್ಚಿಂತ ವ್ಯಕ್ತಿತ್ವ ಕೆಲವರಿಗೆ ಹೊಟ್ಟೆಕಿಚ್ಚು ಬರಿಸುವಂತ್ತಿತ್ತು. ಅಂತವರು ಇವನನ್ನು ಸೋಮಾರಿ, ಶುದ್ದ ಅಬ್ಬೇಪಾರಿ ನಿರ್ಲಕ್ಷ್ಯ ಬೇಜವಾಬ್ದಾರಿ ಮನುಷ್ಯ ಎಂದೆಲ್ಲಾ ಹಿಮ್ಮುಖವಾಗಿ ಹೊಗಳುತ್ತಿದ್ದರು. ಅವೆಲ್ಲ ಪ್ರಶಂಸೆಗಳು ಯಾರದೋ ಮೂಲಕ ಪ್ರಸನ್ನನಿಗೆ ತಲುಪಿದರೂ ಅದನ್ನು ಆಲಿಸಿ ನಕ್ಕು ಹಗುರಾಗುತ್ತಿದ್ದನೇ ವಿನಃ ಕಿಂಚಿತ್ತೂ ಬೇಜಾರು ಅಸಹನೆಗೊಳ್ಳದೆ ಸದಾ ಪ್ರಸನ್ನವಾಗಿಯೇ ಇರುತ್ತಿದ್ದ.
ಪರಿಧಿ ಮತ್ತು ಆಲಾಪ್ ಕಾರ್ಡಿಯಾಲಜಿ ಡಿಪಾರ್ಟ್ಮೆಂಟ್ ಸೇರಿದ್ದರಿಂದ ಮಾನ್ವಿ ತಾನು ನ್ಯೂರಾಲಜಿ ಬದಲಿಗೆ ಬೇರೆ ಆಯ್ಕೆ ಮಾಡಿಕೊಂಡಿದ್ದರೆ ಇವನ ಸಹವಾಸ ಇರುತ್ತಿರಲಿಲ್ಲ ಎಂದುಕೊಂಡಳು. ಆದರೆ ಅದಕ್ಕೆ ಸಮಯ ಮೀರಿಹೋಗಿತ್ತು. ವಿರಸದಿಂದ ಶುರುವಾದ ಮಾನ್ವಿ ಮತ್ತು ಪ್ರಸನ್ನನ ಪರಿಚಯ ಹಾಗೇಯೇ ಮುಂದುವರಿದಿತ್ತು. ಮಾನ್ವಿಯ ಮುಂಗೋಪ, ಸಿಡುಕು ಸ್ವಭಾವ ಹಠವನ್ನು ಕಂಡು ಪ್ರಸನ್ನ "ವೈದ್ಯರಾಗಲೂ ವಿದ್ಯಾರ್ಹತೆ ಜೊತೆಗೆ ಮಾನವೀಯತೆ ಕೂಡ ತುಂಬಾ ಮುಖ್ಯ, ಸ್ವಲ್ಪ ನಯ ವಿನಯ ವಿಧೇಯತೆ ಕಲಿತುಕೊಂಡರೆ ಒಳ್ಳೆಯದು" ಎಂದು ಆರಂಭದಲ್ಲಿ ತಿಳಿಹೇಳಿದ್ದ. ಆದರೆ ಮಾನ್ವಿ ಅವನು ಹೇಳಿದ ಮಾತನ್ನು ಸಂಪೂರ್ಣ ಧಿಕ್ಕರಿಸಿ ಅದಕ್ಕೆ ವ್ಯತಿರಿಕ್ತವಾಗಿ ಅವನಿಗೆ ಮತ್ತಷ್ಟು ಕೋಪ ಬರುವಂತೆ ನಡೆದುಕೊಂಡಳು. ಅವನೊಂದು ಪೇಷಂಟ್ ರಿಪೋರ್ಟ್ ತಯಾರು ಮಾಡಲು ಹೇಳಿದರೆ ಅವಳು ಬೇರೆಯೇ ಪೇಷಂಟ್ ರಿಪೋರ್ಟ್ ತಂದು ಅವನ ಮುಂದಿಡುತ್ತಿದ್ದಳು. ಅವನು 'ನಾನು ಹೇಳಿದ್ದು ಈ ಪೇಷಂಟ್ ಅಲ್ಲ' ಎಂದರೆ 'ಗೊತ್ತು.. ಆ ಪೇಷಂಟ್ ನನಗೆ ಇಷ್ಟ ಆಗ್ಲಿಲ್ಲ' ಎನ್ನುತ್ತಿದ್ದಳು. 'ಇಷ್ಟ ಆಗೋಕೆ ನೀನೇನು ಮದುವೆ ಆಗ್ಬೇಕಿದೆಯಾ?? ಎಲ್ಲರನ್ನೂ ಸಮಾನವಾಗಿ ನೋಡಬೇಕು, ವೈದ್ಯೋ ನಾರಾಯಣೋ ಹರಿ ಅಂತಾರೆ ಅಂದ್ರೆ ವೈದ್ಯ..' ಎಂದು ಅವನು ಬುದ್ದಿ ಹೇಳುತ್ತಿದ್ದರೆ 'ಜಸ್ಟ್ ಶಟಪ್ ಒಕೆ. ನಾನು ಇರೋದೆ ಹೀಗೆ.. ನಿನ್ನಿಂದ ಬುದ್ದಿ ಕಲಿಯೋ ಅವಶ್ಯಕತೆ ನನಗಿಲ್ಲ' ಎಂದಿದ್ದಳು.
ಆಗ ಪ್ರಸನ್ನ ಅವಳನ್ನು "ನಿನಗೆ ಕೊಬ್ಬು ಜಾಸ್ತಿ ಆಗಿದೆ ಅನ್ಸುತ್ತೆ.. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ, ಡೊಂಟ್ ವರಿ ನಾನು ಕಡಿಮೆ ಮಾಡ್ತಿನಿ" ಎಂದು ಆಗಿನಿಂದ ಅವಳನ್ನು 'ಕೊಲೆಸ್ಟ್ರಾಲ್' ಎಂದೇ ಕರೆಯಲು ಆರಂಭಿಸಿದ್ದ. ಎಷ್ಟೇ ತಿದ್ದಿ ಬುದ್ದಿ ಹೇಳಿದರೂ ಪ್ರಸನ್ನನ ಮಾತು ಅವಳಿಗೆ ಸರ್ವಾಧಿಕಾರದಂತೆ ಅನಿಸುತ್ತಿತ್ತು. ಅವಳ ಸ್ವಾಭಿಮಾನ ಅದಕ್ಕೆ ವಿರುದ್ಧದ ದಿಕ್ಕಿನಲ್ಲಿ ತನ್ನ ಕಾರ್ಯ ಸಾಧಿಸುತ್ತಿತ್ತು.
ಮಾನ್ವಿಯ ಹಠಮಾರಿತನವನ್ನು ನಿಶ್ಯೇಷ ಮಾಡಲು ಪ್ರಸನ್ನ ಬೇರೆಯೇ ಅಸ್ತ್ರ ಪ್ರಯೋಗ ಮಾಡಿದ. ಪ್ರತಿಸಲ ಅವಳು ಅವನ ಆಜ್ಞೆಯನ್ನು ಉಲ್ಲಂಘಿಸಿದಾಗ, ಅವನು ಹೇಳಿದ ಕೆಲಸವನ್ನು ಬೇಕಂತಲೆ ತಳ್ಳಿ ಹಾಕಿದಾಗ ಶಿಕ್ಷೆ ವಿಧಿಸಲು ಆರಂಭಿಸಿದ. ಅವನು ಮಾನ್ವಿಗೆ ಕೊಡುವ ಶಿಕ್ಷೆಗಳು ಕೆಲವರ ಪಾಲಿಗೆ ತಮಾಷೆಯಾಗಿ, ಕೆಲವರಿಗೆ ಸಹಾಯಕವಾಗಿ, ಕೆಲವರಿಗೆ ವಿಚಿತ್ರವಾಗಿ ಕಂಡರೆ, ಅವಳ ಪಾಲಿಗೆ ಮಾತ್ರ ಯಮಪಾಶ ಸಮಾನವಾಗಿದ್ದವು.
ಒಮ್ಮೆ ಆಸ್ಪತ್ರೆಯ ಫ್ಲೋರ್ ಸ್ವಚ್ಛಗೊಳಿಸುವದು. ಮತ್ತೊಮ್ಮೆ ಬಾತರೂಂ ಕ್ಲೀನ್ ಮಾಡಿಸುವುದು, ರೋಗಿಗಳ ಬಟ್ಟೆ ಒಗೆದು ಕೊಡುವುದು, ಅವರಿಗೆ ಊಟ ಮಾಡಿಸುವುದು. ಪರದೆಯ ಧೂಳು ಹೊಡೆಯುವುದು, ರೋಗಿಗಳ ಕೈಕಾಲು ಒತ್ತುವುದು ಅವರ ಸೇವೆ ಮಾಡುವುದು ಇತ್ಯಾದಿ ಕೆಲಸಗಳು. ಆಗರ್ಭ ಶ್ರೀಮಂತನ ಏಕಮಾತ್ರ ಪುತ್ರಿಯಾದ ಮಾನ್ವಿ ತನ್ನ ಮನೆಯಲ್ಲೇ ಮೈ ಬಗ್ಗಿಸಿದವಳಲ್ಲ ಅಂತದ್ದರಲ್ಲಿ ಪ್ರಸನ್ನ ವಿಧಿಸುವ ಈ ಎಲ್ಲಾ ಶಿಕ್ಷೆಗಳು ಆಕೆಗೆ ಚಿತ್ರಹಿಂಸೆಯಾಗಿದ್ದವು. ಒಮ್ಮೆ 'ನಾನೇನು ಡಾಕ್ಟರ್ ಟ್ರೇನಿಂಗ್ ಗೆ ಬಂದಿದೀನೋ ಮನೆಕೆಲಸದ ಟ್ರೇನಿಂಗ್ ಬಂದಿದೀನೋ' ಎಂದು ಜೋರು ಧ್ವನಿಯಲ್ಲಿ ಕಿರುಚಿದ್ದಳು. ಪ್ರಸನ್ನ ಶಾಂತವಾಗಿ ಉತ್ತರಿಸಿದ್ದ "ನಿನ್ನ ಡಾಕ್ಟರ್ ಮಾಡೋಕೆ ಮೊದಲು ನಿನ್ನಲ್ಲಿರೋ ಕೊಲೆಸ್ಟ್ರಾಲ್ ಸ್ವಲ್ಪ ಕಡಿಮೆ ಮಾಡೋಣ ಅಂತ" ಮಾನ್ವಿ ಕೋಪದಿಂದ ಆಸ್ಪತ್ರೆಯ ಸಿಇಒಗೆ ದೂರು ನೀಡಿದರೂ ಅವರು ಡಾ.ಪ್ರಸನ್ನನ ವಿರುದ್ಧ ಒಂದು ಮಾತಾಡಲು ಸಿದ್ದರಿರಲಿಲ್ಲ. ಅಷ್ಟಕ್ಕೂ ತಪ್ಪು ತನ್ನದೇ ಆದ್ದರಿಂದ ಡಿಪಾರ್ಟ್ಮೆಂಟ್ ಹೆಡ್ ಆಗಿದ್ದ ಪ್ರಸನ್ನನ ಶಿಕ್ಷೆಯನ್ನು ಅನುಭವಿಸದೆ ಮಾನ್ವಿಗೆ ಬೇರೆ ದಾರಿಯಿರುತ್ತಿರಲಿಲ್ಲ. ಅದೇ ಕಾರಣಕ್ಕೆ ರೆಸಿಡೆನ್ಸಿಯಿಂದ ತೆಗೆದು ಹಾಕುವ ಅಧಿಕಾರ ಕೂಡ ಅವನಿಗಿತ್ತು. ಹೀಗಾಗಿ ವಿಧಿಯಿಲ್ಲದೆ ಶಿರಸಾವಹಿಸಿ ಅವನ ಆಜ್ಞೆ ಪಾಲಿಸಬೇಕಾಗಿತ್ತು. ಅವನ ಜಾಗದಲ್ಲಿ ಬೇರೆಯವರಾಗಿದ್ದರೆ ಅವಳ ತಂದೆಯ ಶ್ರೀಮಂತಿಕೆಯಿಂದ ಹೆದರಿಸಿ ಮಣಿಸುತ್ತಿದ್ದಳೆನೋ ಆದರೆ ಡಾ. ಪ್ರಸನ್ನ ಅಂತಹ ಮೇರು ವ್ಯಕ್ತಿತ್ವ ಇಂತಹುದಕ್ಕೆಲ್ಲ ಬಗ್ಗುವವನಲ್ಲ ಎಂದು ಮಾನ್ವಿಗೆ ಅರಿವಾಗಿತ್ತು.
ಯಾರಿಗೂ ಮಣಿಯದ ಮಾನ್ವಿ ಬಡಪಾಯಿಯಂತೆ ನೆಲ ಒರೆಸುತ್ತಿದ್ದರೆ ಆಲಾಪ್ ಅವಳಿಗೊದಗಿದ ಪರಿಸ್ಥಿತಿಯನ್ನು ಕಂಡು "ಇದು ಯಾರು ಬರೆದ ಕಥೆಯೋ..ಟಿಡಿಡಿಂ..! ನಿನಗಾಗಿ ಬಂದ ವ್ಯಥೆಯೋ..ಟಿಡಿಡಿಂ!!!" ಎಂದು ಹಾಡು ಹೇಳುತ್ತಾ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತ 'ಮುಂದೆ ನಿನ್ನ ಗಂಡನಿಗೆ ತೋರಿಸ್ಲಿಕ್ಕೆ ಬೇಕಾಗ್ತದೆ' ಎಂದು ಕೀಟಲೆ ಮಾಡಿ ನಗುತ್ತಿದ್ದ. ಅವಳು ಸಿಟ್ಟಿನಿಂದ ದುರುಗುಟ್ಟಿ ನೋಡಿ ಅಸಾಹಯಕತೆಯಿಂದ ಕೆಲಸ ಮುಂದುವರೆಸುತ್ತಿದ್ದಳು. ಹೋಗುವವರು ಬರುವವರು ಅವಳನ್ನು ವಿಚಿತ್ರವಾಗಿ ನೋಡುತ್ತಾ ಹೋಗುತ್ತಿದ್ದರೆ ಅವಳಿಗೆ ಮುಜುಗರದಿಂದ ತಲೆ ಕೆಳಗಾಗಿ ಪ್ರಸನ್ನನ ಮೇಲೆ ದ್ವೇಷ ಉಕ್ಕುತ್ತಿತ್ತು. ರೋಗಿಗಳ ಬಟ್ಟೆಗಳನ್ನು ಮುಟ್ಟಲೋ ಬೇಡವೋ ಎನ್ನುವಂತೆ ಎರಡೇ ಬೆರಳುಗಳಿಂದ ಹಿಡಿದು ಮುಖ ಕಿವುಚುತ್ತ ಎತ್ತಿ ಮೆಲ್ಲಗೆ ನೆಲದ ಮೇಲಿಟ್ಟು ನೀರು ಹಾಕಿ ಒಗೆಯುತ್ತಿದ್ದರೆ ಅದನ್ನೇ ಸ್ವಲ್ಪ ಹೊತ್ತು ಗಮನಿಸುತ್ತಿದ್ದ ಸಂಜೀವಿನಿ 'ನೀ ಈ ಬಟ್ಟಿಗೋಳ್ನ ಇದss ಜನ್ಮದಾಗ ಒಗಿದು ಮುಗಿಸ್ತಿ...?!!' ಎಂದು ಪ್ರಶ್ನಾರ್ಥಕವಾಗಿ ಅವಳ ಮುಖ ನೋಡುತ್ತಿದ್ದಳು. ' ಇನ್ನೇನೂ ನೀನು ಒಗೆದು ಕೊಡ್ತಿಯಾ..ಬಾರೆ.. ಬಾ...' ಎಂದು ಮಾನ್ವಿ ಕೋಪದಿಂದ ಕಿರುಚಾಡಿದರೆ ಸಂಜೀವಿನಿ 'ಹಿಂಗ್ಯಾಕೆ ನಾಗವಲ್ಲಿ ತರಾ ಆಡ್ತಿ.. ನನಗ ಬ್ಯಾರೆ ಕೆಲಸೈತಿ, ಆಮ್ಯಾಲೆ ಸಿಗ್ತಿನಿ.. ನೀ ಒಗಿ ಒಗಿ..' ಎಂದು ಜಾಗ ಕಿತ್ತುತ್ತಿದ್ದಳು. ಪರಿಧಿಗೂ ಮಾನ್ವಿಯ ಗೋಳು ನೋಡಲಾಗದೆ 'ಸುಮ್ಮನೆ ಅವರ ಆರ್ಡರ್ ಫಾಲೋ ಮಾಡಿದ್ರೆ ಹೀಗಾಗಲ್ಲ. ಯಾಕೆ ವಿರುದ್ಧ ಕೆಲಸ ಮಾಡ್ತಿಯಾ' ಎಂದು ಬುದ್ದಿ ಹೇಳಿದ್ದಳು. ಆದರೆ ಮಾನ್ವಿ 'ಆ ದೆವ್ವದ ಮುಖ ನೋಡ್ತಿದ್ರೆ ಏನೋ ಮಾಡೋಕೆ ಹೋಗಿ ಏನೋ ಮಾಡಿಬಿಡ್ತಿನೆ, ಅವನು ಆರ್ಡರ್ ಮಾಡೋ ರೀತಿಗೆ ಸಿಟ್ಟು ಬರುತ್ತೆ.. ಹಿ ಇಸ್ ಸೋ ಇರಿಟೇಟಿಂಗ್' ಎಂದಿದ್ದಳು.
ಒಂದು ದಿನ ಮಾನ್ವಿ ಡಾ.ಪ್ರಸನ್ನನ ಕ್ಯಾಬಿನ್ ಗೆ ರೋಗಿಯ ರಿಪೋರ್ಟ್ ತೋರಿಸಲು ಹೋದಾಗ ಪ್ರಸನ್ನ ಅಲ್ಲಿರಲಿಲ್ಲವಾದ್ದರಿಂದ ಅವನಿಗೆ ಶಪಿಸುತ್ತ ಅಲ್ಲಿಯೇ ಕಾಯುತ್ತ ಕೂತಿದ್ದಳು. ಆಗ ವಾರ್ಡ್ ಬಾಯ್ ಬಂದು ಪ್ರಸನ್ನನಿಗೆ ಬಿಸಿ ಬಿಸಿ ಕಾಫಿಯನ್ನು ಟೇಬಲ್ ಮೇಲಿಟ್ಟು ಹೋಗಿದ್ದ. ಅವನಿಗಾಗಿ ಕಾಯುತ್ತ ಕುಳಿತಿದ್ದ ಮಾನ್ವಿಗೆ ಈ ದೃಶ್ಯ ನೋಡಿ ಏನೋ ಹೊಳೆದಂತಾಗಿ ಪ್ರಸನ್ನ ಬರುವ ಮುನ್ನ ಅವನ ಕುಡಿಯುವ ಕಾಫಿಯಲ್ಲಿ ಯಾವುದೋ ಕೆಮಿಕಲ್ ಕಲಕಿ ಇಟ್ಟು ಬಿಟ್ಟಿದ್ದಳು. ತದನಂತರ ಬಂದ ಪ್ರಸನ್ನ ಅವಳನ್ನು ಮಾತಾಡಿಸುತ್ತಾ ಅವಳು ತಂದ ಮೆಡಿಕಲ್ ರಿಪೋರ್ಟ್ ನೋಡುತ್ತಾ ಕಾಫಿ ಹೀರಿ ಬಿಟ್ಟಿದ್ದ. ಬಾಯಲ್ಲಿ ಕೆಟ್ಟ ಕಹಿ ಅನುಭವವಾಗಿ, ಕುಡಿದಿದ್ದ ಕಾಫಿ ನುಂಗಲೂ ಆಗದೆ ಉಗುಳಲೂ ಆಗದೆ ಮುಖ ಸಿಂಡರಿಸಿ ತಕ್ಷಣ ಕೈಯಲ್ಲಿದ್ದ ಫೈಲನ್ನು ಎಸೆದು, ಕಪ್ ಅವಳ ಕೈಗಿಟ್ಟು ವಾಷ್ ರೂಂಗೆ ಓಡಿ ಹೋಗಿದ್ದ. ಇಷ್ಟು ದಿನ ಅವನ ಶಿಕ್ಷೆಗಳನ್ನೆ ಅನುಭವಿಸಿ ಬೇಸತ್ತ ಮಾನ್ವಿಗೆ ಈ ಕೃತ್ಯ ಮನಸ್ಸಿಗೆ ತುಸು ನೆಮ್ಮದಿ ನೀಡಿತ್ತು. ಅವನ ಪರಿಸ್ಥಿತಿ ನೋಡಿ ಅವಳಿಗೆ ನಗುತಡೆಯಲಾಗಿರಲಿಲ್ಲ. ಆ ದಿನ ಪೂರ್ತಿ ಅವನಿಗೆ ಅದೇ ಕಹಿಯ ಅನುಭವದಿಂದ ಆರೋಗ್ಯ ಸರಿಯಿಲ್ಲದೆ ರಜೆ ಹಾಕಿ ಮನೆ ಹಾದಿ ಹಿಡಿದಿದ್ದ. ಅದೊಂದು ಪೂರ್ತಿ ದಿನ ಮಾನ್ವಿ ಇಡೀ ಸ್ವರ್ಗವನ್ನೇ ಗೆದ್ದಷ್ಟು ಖುಷಿಯಿಂದ ನೆಮ್ಮದಿಯ ಉಸಿರಾಡಿದ್ದಳು. ಕಾಫಿ ತಂದಿಟ್ಟವನು ವಾರ್ಡ್ ಬಾಯ್ ಆದರೂ ಅದರಲ್ಲಿ ಏನೋ ಬೆರೆಸಿ ಈ ಕಿತಾಪತಿ ಮಾಡಿದ್ದು ಈ ಕೊಲೆಸ್ಟ್ರಾಲ್ ಎಂದು ಅವನು ತಿಳಿದಿದ್ದನಾದರೂ ಅವಳನ್ನು ನೇರವಾಗಿ ಪ್ರಶ್ನಿಸಲು ಯಾವುದೇ ಸಾಕ್ಷಿ ಪುರಾವೆಗಳಿರದೆ ಆತ ಸುಮ್ಮನಾಗಿದ್ದ. ಆದರೆ ಆ ತಪ್ಪಿಗೆ ಶಿಕ್ಷೆ ನೀಡಲು ಅವಳ ಬೇರೆ ತಪ್ಪುಗಳ ಅವಕಾಶಕ್ಕಾಗಿ ಕಾಯುತ್ತಿದ್ದ. ಮಾನ್ವಿಯ ಬೇಜವಾಬ್ದಾರಿತನದ ಪರಿಚಯವಿದ್ದ ಪ್ರಸನ್ನನಿಗೆ ಆ ದಿನ ಕೂಡ ತುಂಬಾ ದೂರವಿಲ್ಲ ಎಂದು ತಿಳಿದಿತ್ತು. ಒಂದು ದಿನ ಬೆಳಿಗ್ಗೆ ಬಂದಾಗ ಎಲ್ಲರೂ ಗುಡ್ ಮಾರ್ನಿಂಗ್ ವಿಷ್ ಮಾಡುತ್ತಿದ್ದಾಗ ಮಾನ್ವಿಯನ್ನು ಗಮನಿಸಿದ ಪ್ರಸನ್ನ 'ಐಡಿ ಕಾರ್ಡ್ ಎಲ್ಲಿ' ಎಂದು ಕೇಳಿದ. ತನ್ನ ಬ್ಯಾಗ್ ಚೆಕ್ ಮಾಡಿಕೊಂಡ ಮಾನ್ವಿ 'ಬಹುಶಃ ಸ್ಕೂಟಿಯಲ್ಲಿ ಇಟ್ಟಿದ್ದೆ ಅನ್ಸುತ್ತೆ' ಎಂದು ತರಲು ಓಡಿ ಹೋಗಿದ್ದಳು. ಹತ್ತು ನಿಮಿಷದ ನಂತರ ಬಂದವಳೇ 'ಸಾರಿ ಡಾಕ್ಟರ್ ಐಡಿ ಕಾರ್ಡ್ ಎಲ್ಲೂ ಸಿಗ್ತಿಲ್ಲ. 'ಎಲ್ಲಿ ಮರೆತು ಬಂದೆ ನೆನಪಾಗ್ತಿಲ್ಲ' ಎಂದಾಗ ಅದೇ ನೆಪ ಮಾಡಿಕೊಂಡು ಐಡಿ ಕಾರ್ಡ್ ಇಲ್ಲದೆ ಬಂದದ್ದಕ್ಕೆ ಆ ದಿನದ ಕ್ಯಾಂಟೀನ್ ಎಲ್ಲಾ ಪಾತ್ರೆಗಳನ್ನು ತೊಳೆಯುವ ಶಿಕ್ಷೆ ವಿಧಿಸಿದ್ದ. ಅವಳು ಎಷ್ಟೇ ತಕರಾರು ಮಾಡಿದರೂ ಸಿಇಓ ಗೆ ದೂರು ನೀಡಿದ್ದರೂ ಐಡಿ ಕಾರ್ಡ್ ಕಳೆದುಕೊಂಡ ತಪ್ಪು ಇವಳದ್ದೇ ಆದ್ದರಿಂದ ಅನಿವಾರ್ಯವಾಗಿ ಶಿಕ್ಷೆಗೆ ಒಪ್ಪಲೇ ಬೇಕಾಯಿತು. ಆ ದಿನ ಮಧ್ಯಾಹ್ನ ಕ್ಯಾಂಟೀನಿನ ಎಲ್ಲಾ ಪಾತ್ರೆಗಳನ್ನು ತೊಳೆಯುತ್ತ ಕುಳಿತಾಗ ಅವಳಿಗೆ ಮೊದಲ ಬಾರಿ ಅಳು ಬಂದಿತ್ತು. ಅವನ ಮೇಲೆ ಅಸಾಧಾರಣವಾದ ಸಿಟ್ಟು ದ್ವೇಷ ಉಕ್ಕಿ ಬಂದಿತ್ತು. ಮನಸ್ಸಲ್ಲೇ ಶಪಿಸಿ ತಟ್ಟೆಗಳನ್ನು ಕುಕ್ಕುತ್ತಾ ತೊಳೆದು ಮುಗಿಸಿದಳು. ಎಲ್ಲಾ ಕೆಲಸ ಮುಗಿಸಿ ಸಂಜೆ ಆಸ್ಪತ್ರೆ ಹೊರಗೆ ಮಾನ್ವಿ ತನ್ನ ಪಾಡಿಗೆ ತಾನು ಸ್ಕೂಟಿ ಸ್ಟಾರ್ಟ್ ಮಾಡುವಾಗ ಪ್ರಸನ್ನ ಅವಳನ್ನು ಕೂಗಿದ. ಜೊತೆಗಿದ್ದ ಪರಿಧಿ ಮತ್ತು ಸಂಜೀವಿನಿ ನೋಡೆ, ನಿನಗೆ ಇಷ್ಟು ಚಿಕ್ಕ ವಿಷಯಕ್ಕೆ ಶಿಕ್ಷೆ ಕೊಟ್ಟಿದ್ದಕ್ಕೆ ಕ್ಷಮೆ ಕೇಳೊಕೆ ಬರ್ತಿದ್ದಾರೆ ಅನ್ಸುತ್ತೆ' ಅಂದರು. ಮೂವರು ಆ ಕಡೆಗೆ ನೋಡುತ್ತಿರುವಾಗ ಹತ್ತಿರ ಬಂದ ಪ್ರಸನ್ನ ಹೇಳಿದ "ಐಡಿ ಕಾರ್ಡ್ ಮಹತ್ವ ಏನು ಅಂತ ಇವಾಗಾ ಗೊತ್ತಾಗಿರ್ಬಹುದು ಅಲ್ವಾ.. ತಗೋ ಇದನ್ನ ಬೆಳಿಗ್ಗೆ ಇಲ್ಲೇ ಸ್ಕೂಟಿ ಮೇಲೆ ಇತ್ತು. ನನ್ನಂತ ಒಳ್ಳೆ ಮನುಷ್ಯನಿಗೆ ಸಿಕ್ತು ಸರಿ, ಬೇರೆಯವರ ಕೈಗೆ ಸಿಕ್ಕಿದ್ರೆ ಏನ್ ಗತಿ" ಎಂದು ಮಾನ್ವಿಯ ಐಡಿ ಕಾರ್ಡ್ ಅವಳ ಕೈಯಲ್ಲಿಟ್ಟ. "ಈ ಶಿಕ್ಷೆ ಐಡಿ ಕಾರ್ಡ್ ಗೊಸ್ಕರ ಅಲ್ಲ, ನೀ ಮಾಡಿದ ಬೇರೆ ತಪ್ಪಿಗೆ" ಎಂದು ಹೇಳಿ ತುಟಿಯಂಚಲ್ಲೇ ನಗುತ್ತ ಸಿಳ್ಳೆ ಹೊಡೆಯುತ್ತ ಜೇಬಿನಲ್ಲಿ ಕೈ ಹಾಕಿ ಹಿಂತಿರುಗಿದ್ದ. ಇದನ್ನು ಬಿಟ್ಟ ಕಣ್ಣಿನಿಂದ ನೋಡುತ್ತಿದ್ದ ಮೂವರು ಗೆಳತಿಯರಲ್ಲಿ ಮೊದಲು ಸುಧಾರಿಸಿಕೊಂಡ ಸಂಜೀವಿನಿ 'ಅಂದ್ರ ಮುಂಜಾನಿಂದ ಇಕಿನ್ ಐಡಿ ಕಾರ್ಡ್ ಅವನ ಕಡೆನೇ ಇತ್ತಾ? ಎಂದು ಹುಬ್ಬೆರಿಸಿದಳು. ಅವನು ತನ್ನ ಬಳಿ ಕ್ಷಮೆ ಕೇಳಲು ಬರ್ತಿದ್ದಾನೆ ಎಂದ ಗೆಳತಿಯರ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದಳು ಮಾನ್ವಿ. "ಹೌದು ಅದೇನೂ ಬೇರೆ ತಪ್ಪು" ಎಂದು ಕೇಳಿದ ಪರಿಧಿ ಮಾತಿಗೆ ಉತ್ತರಿಸದೇ ಮಾನ್ವಿ ತನ್ನ ಸ್ಕೂಟಿ ಸ್ಟಾರ್ಟ್ ಮಾಡಿ ಪಿಜಿ ದಾರಿ ಹಿಡಿದಿದ್ದಳು. ಅವಳ ಮನಸ್ಸಲ್ಲಿ ಅವನ ಬಗ್ಗೆ ಹುಟ್ಟಿದ ದ್ವೇಷಕ್ಕೆ ಆಗ ಮತ್ತಷ್ಟು ತುಪ್ಪ ಸುರಿದಂತಾಗಿತ್ತು.
ಪರಿಧಿ ಇವರಿಬ್ಬರ ಕದನ ವಿಪರೀತವಾಗುವ ಮುನ್ನ ತಾನೇ ಏನಾದರೂ ಮಾಡಬೇಕೆಂದು ಪ್ರಸನ್ನನ ಜೊತೆಗೆ ಮಾತಾಡಲು ಅವನ ಕ್ಯಾಬಿನ್ ಗೆ ಹೋಗಿದ್ದಳು. ಅಲ್ಲಿ ಆಗಲೇ ಯಾರದೋ ಜೊತೆಗೆ ಮಾತಾಡುತ್ತಿದ್ದ ಪ್ರಸನ್ನ. ಅಲ್ಲಿ ಬಂದಿದ್ದವರು ತಾವು ಆಸ್ಪತ್ರೆ ಖರ್ಚನ್ನು ಕಟ್ಟಲಾಗದೆ ತಮ್ಮ ಪರಿಸ್ಥಿತಿಯನ್ನು ಅಸಾಹಯಕತೆಯನ್ನು ಹೇಳಿಕೊಳ್ಳುತ್ತಿದ್ದರೆ ಪ್ರಸನ್ನ ಅವರಿಗೆ ಸಮಾಧಾನ ಮಾಡಿ ಆಪರೇಷನ್ ಖರ್ಚನ್ನು ತಾನೇ ನೋಡಿಕೊಳ್ಳುವದಾಗಿ ಭರವಸೆ ಕೊಡುತ್ತಿದ್ದ. ಅದರ ಬದಲಿಗೆ ಒಂದು ಒಳ್ಳೆಯ ಊಟ ಮಾಡಿಸಬೇಕು ನಿಮ್ಮನೇಲಿ, ತಿನ್ನೊದ್ರಲ್ಲಿ ನಾನು ಬ್ರಹ್ಮರಾಕ್ಷಸ.. ನೋಡಿ ಮಾತು ತಪ್ಪಬಾರ್ದು.. ಎಂದು ತಮಾಷೆ ಮಾಡುತ್ತಿದ್ದ. ಚಿಕ್ಕಂದಿನಿಂದ ಅನಾಥಾಶ್ರಮದಲ್ಲೇ ಬೆಳೆದಿದ್ದ ಪ್ರಸನ್ನ ಒಳ್ಳೆಯ ಶಿಕ್ಷಣ ಪಡೆದು ಸ್ಕಾಲರ್ಶಿಪ್ ಮತ್ತು ಪಾರ್ಟ್ ಟೈಮ್ ಕೆಲಸ ಮಾಡುತ್ತ ಅದರಿಂದ ಬಂದ ಹಣದಿಂದ ಸತತ ಪರಿಶ್ರಮದಿಂದ ವೈದ್ಯನಾಗಿದ್ದ. ಯಾವಾಗಲೂ ನಗುಮೊಗದಿಂದ ಎಲ್ಲರೊಂದಿಗೆ ಬೆರೆಯುವ ಅಪ್ರತಿಮ ಬುದ್ಧಿಮತ್ತೆಯ ಪ್ರಸನ್ನ ಈಗಲೂ ತನ್ನ ಸಂಬಳದ ಅರ್ಧಭಾಗವನ್ನು ಅದೇ ಅನಾಥಾಶ್ರಮಕ್ಕೆ ಕೊಡುತ್ತಿದ್ದ. ಅಷ್ಟಲ್ಲದೆ ಹೀಗೆ ಬೇರೆಯವರ ಕಷ್ಟಕ್ಕೂ ನೆರವಾಗುವ ಪ್ರಸನ್ನ ಒಂದೇ ಭೇಟಿಯಲ್ಲಿ ಪರಿಧಿಯ ಮೆಚ್ಚುಗೆಗೆ ಪಾತ್ರನಾಗಿದ್ದ. ಆ ದಿನ ಪರಿಧಿ ತನ್ನ ಗೆಳತಿ ಮಾನ್ವಿ ಪರವಾಗಿ ಕ್ಷಮೆ ಕೋರಿ ಅವಳಿಗೆ ಮುಂದೆ ಯಾವ ಶಿಕ್ಷೆನೂ ಕೊಡಬಾರದೆಂದು ವಿನಂತಿಸಿಕೊಂಡಿದ್ದಳು. ಆದರೆ ಪ್ರಸನ್ನ "ಆ ಕೊಲೆಸ್ಟ್ರಾಲ್ ಪರ ಮಾತಾಡ್ತಿದ್ದಿರಾ..! ಅವಳಿಗೆ ಬುದ್ದಿ ಹೇಳ್ರಿ ಮೊದ್ಲು, ನಾನೊಂದು ಪೇಷಂಟ್ ನೋಡು ಅಂದ್ರೆ ಅವಳು ಬೇರೆ ಪೇಷಂಟ್ ಜೊತೆಗೆ ಹರಟೆ ಹೊಡಿತಾ ಕೂತಿರ್ತಾಳೆ, ಆಪರೇಷನ್ ಮಾಡುವಾಗ ಅಸಿಸ್ಟ್ ಮಾಡೋದು ಬಿಟ್ಟು ದುರುಗುಟ್ಟಿ ನೋಡ್ತಾ ನಿಂತಿರ್ತಾಳೆ ಹೀಗೆ ಆದ್ರೆ ಒಂದಿನ ಯಾರನ್ನಾದ್ರೂ ಸಾಯಿಸ್ತಾಳೆ ನಿಮ್ ಫ್ರೆಂಡು" ಎಂದಿದ್ದ. ಇಬ್ಬರ ನಡುವೆ ಮಾಡಬೇಕೆಂದ ಪರಿಧಿಯ ಸಂಧಾನ ಕಾರ್ಯ ವಿಫಲವಾಯಿತಾದರೂ ಆ ದಿನದಿಂದ ಡಾ.ಪ್ರಸನ್ನ ಜೊತೆಗಿನ ಪರಿಚಯ ಚೆನ್ನಾಗಿ ಬೆಳೆದಿತ್ತು.
*****
ಆ ದಿನ ಮಧ್ಯಾಹ್ನ ಪರಿಧಿ ಮತ್ತೆ ಹರ್ಷನಿಗೆ ನಾಲ್ಕೈದು ಬಾರಿ ಫೋನ್ ಮಾಡಿ ಅವನು ರಿಸೀವ್ ಮಾಡದೆ ಬೇಜಾರಾಗಿ ಕುಳಿತಿದ್ದಳು. ಕೊನೆಗೆ ಹರ್ಷನ ಸೆಕ್ರೆಟರಿಗೆ ಫೋನ್ ಮಾಡಿದಾಗ ಅವನು ಯಾವುದೋ ಕ್ಲೈಂಟ್ ಜೊತೆಗೆ ಊಟಕ್ಕೆ ಹೋಗಿದ್ದಾನೆಂದು ತಿಳಿದು ಸ್ವಲ್ಪ ಸಮಾಧಾನಗೊಂಡಳು. ಬೆಳಿಗ್ಗೆ ಸಿಕ್ಕ ಡಾ.ಪ್ರಸನ್ನನ ನೆನಪಾಗಿ ಇಲ್ಲಿ ಯಾಕೆ ಬಂದಿದ್ದಾರೆ ಎಂದು ತಿಳಿಯಲು ಆಸ್ಪತ್ರೆಯ ಎಲ್ಲಾ ಕಡೆಗೆ ಅವನನ್ನು ಹುಡುಕಾಡಿ ಕೊನೆಗೆ ಅವನು ಹೊರಗೆ ಗಾರ್ಡನ್ನಲ್ಲಿ ಇದ್ದಾನೆಂದು ತಿಳಿದು ಅಲ್ಲಿಗೆ ಬಂದಳು. ಅಲ್ಲಿ ಹೊರಗೆ ಗಾರ್ಡನ್ನಿನ ಬೆಂಚ್ ಮೇಲೆ ಕುಳಿತಿದ್ದ ಡಾ.ಪ್ರಸನ್ನ. ಹಳದಿ ಬಣ್ಣದ ಟೀಶರ್ಟ್ ನೀಲಿ ಜೀನ್ಸ್ ಧರಿಸಿದ್ದ. ಕೂದಲು ಗಾಳಿಗೆ ಹಾರಾಡಿ ಕೆದರಿದಂತಾಗಿದ್ದವು. ಡಾಕ್ಟರ್ ಕೋಟ್ ಇಲ್ಲ ಸ್ಟೇಥಸ್ಕೊಪ್ ಇಲ್ಲ.. ಎರಡು ಮೊಣಕೈಯನ್ನು ಮೊಣಕಾಲ ಮೇಲೆ ಊರಿ ಬಿಂಚ್ ಮೇಲೆ ತನ್ನ ಮುಂದೆ ಹರವಿದ ಕಡಲೆಕಾಯಿ ತಿನ್ನುತ್ತಾ ಕುಳಿತಿದ್ದ. ಯಾರಾದರೂ ಅಪರಿಚಿತರಿಗೆ ಅವನನ್ನು ತೋರಿಸಿ ಅವನೊಬ್ಬ ಪ್ರಖ್ಯಾತ ಡಾಕ್ಟರ್ ಎಂದು ಹೇಳಿದರೆ ನಂಬಲಾರರೆನೋ!! ಊರೆಲ್ಲಾ ಕೆಲಸಕ್ಕಾಗಿ ಅಲೆದು ಕೆಲಸ ಸಿಗದೆ ಅಬ್ಬೇಪಾರಿಯಾಗಿ ಕಡಲೆಕಾಯಿ ತಿನ್ನುತ್ತ ಕುಳಿತ ಪೊಕಿರಿ ಎನ್ನುವರೆನೋ!! ಹಾಗಿದ್ದ ಅವನನ್ನು ನೋಡಿ ಮುಗುಳ್ನಗುತ್ತಾ ಪರಿಧಿ 'ಹಾಯ್ ಡಾಕ್ಟರ್' ಎಂದಳು. ಅವನು ನಗುತ್ತಾ 'ಬನ್ನಿ ಬನ್ನಿ ಪರಿಧಿ' ಎಂದು ಆಮಂತ್ರಿಸಿ 'ಬರೀ ಪರಿಧಿ ಒಕೆನಾ ಅಥವಾ ಡಾ.ಪರಿಧಿ ಅಂತನೇ ಕರಿಬೇಕಾ?' ಎಂದು ಕೇಳಿದ. ಆಕೆ ನಕ್ಕು 'ನನ್ನ ಹೆಸರು ಈಗ್ಲೂ ಪರಿಧಿನೇ ಹಾಗೆ ಕರಿಬಹುದು' ಎಂದಳು. 'ನೀವು ಹೇಗೆ ಇಲ್ಲಿ' ಎಂದು ಕೇಳಿದಳು. 'ಮೊದಲು ಕಡಲೆಕಾಯಿ ತಗೋಳಿ ತಿನ್ನಿ' ಎಂದ. ದೊಡ್ಡ ಆಸ್ಪತ್ರೆಯ ಎದುರು, ಇಬ್ಬರು ನುರಿತ ವೈದ್ಯರು ಹೀಗೆ ಕಡಲೆಕಾಯಿ ತಿನ್ನುತ್ತಾ ಕುಳಿತಿರುವದನ್ನ ನೋಡಿ ಊಹಿಸಲಾರದೆ ಅವಳಿಗೆ ನಗುತ್ತಿದ್ದಳು. ಅದನ್ನು ಅರ್ಥ ಮಾಡಿಕೊಂಡ ಪ್ರಸನ್ನ "ಇದೇ ನಾವು ಮಾಡೋ ಮೊದಲ ತಪ್ಪು.. ಯಾವತ್ತೂ ನಾವು ಏನು ಅನ್ನೋದನ್ನು ನಮಗೆ ನಾವೇ ನೆನಪಿಸ್ಕೊಳ್ತಾ ಇರ್ತಿವಿ. ಆದ್ರೆ ಅದೇ ಭರಾಟೆಯಲ್ಲಿ ನಾವು ಯಾರು ಅನ್ನೋದನ್ನೇ ಮರೆತು ಬಿಡ್ತಿವಿ. ಚಿಕ್ಕ ಮಗುವಿದ್ದಾಗ ಯಾವ ಐಡೆಂಟಿಟಿ ತಿಳಿಯದ ಕಾರಣಕ್ಕೆ ಬಾಲ್ಯ ಅಷ್ಟು ಅಮೂಲ್ಯವಾಗಿತ್ತೇನೋ! ಈಗ ನಾನು ಹಾಗೆ ನಾನು ಹೀಗೆ.. ನನ್ನ ಪ್ರತಿಷ್ಠೆ ನನ್ನ ಗೌರವ ಅಂತೆಲ್ಲಾ ಯೋಚನೆ ಮಾಡ್ತಾ ಬದುಕೊದನ್ನೇ ಮರೆತು... ಛೇ ನೀವು ನನಗೂ ನೆಮ್ಮದಿಯಿಂದ ತಿನ್ನೋಕೆ ಬಿಡ್ತಿಲ್ಲ ನೋಡಿ" ಎಂದ.
"ಸಾರಿ ಸಾರಿ.. ನೀವು ಮುಂದುವರಿಸಿ. ಎಂದವಳು ಸ್ವಲ್ಪ ಯೋಚಿಸುತ್ತ ನೀವು.. ಲೈಫ್ ಕೇರ್ ಹಾಸ್ಪಿಟಲ್ ಬಿಟ್ಟು ಇಲ್ಲಿ...??" ಎಂದು ಕೇಳಿದಳು.
ಅದೊಂದು ದೊಡ್ಡ ಕಥೆ ಎಂದೇ ಹೇಳಲು ಶುರು ಮಾಡಿದ ಪ್ರಸನ್ನ "ಕಳೆದ ವಾರ ನಮ್ಮ ಆಸ್ಪತ್ರೆಗೆ ಆ್ಯಕ್ಸಿಡೆಂಟ್ ಆಗಿರೋ ಒಂದು ಎಮರ್ಜೆನ್ಸಿ ಕೇಸ್ ಬಂದಿತ್ತು. ಆಪರೇಷನ್ ಗೆ ಎಲ್ಲಾ ತಯಾರಾಗಿತ್ತು. ಅದೇತಾನೇ ಒಂದು ಪೇಷಂಟ್ ನೋಡಿ ಬಂದ ನನಗೆ ತುಂಬಾ ಹಸಿವಾಗಿತ್ತು. ಈ ಆಪರೇಷನ್ ಬಿಡೋ ಹಾಗಿಲ್ಲ, ಹಸಿವು ತಡೆಯೋ ಹಾಗಿಲ್ಲ ಅದಕ್ಕೆ ಸದ್ಯಕ್ಕೆ ಆಗ ಒಂದು ಬಾಳೆಹಣ್ಣು ತಿನ್ನುತ್ತಾ ಒಟಿಗೆ ಹೋದೆ. ಆಪರೇಷನ್ ಏನೋ ಸರಿಯಾಯ್ತು. ಆದರೆ ಹೊಸ ಸಿಇಒಗೆ ನಾನು ಆಪರೇಷನ್ ಥಿಯೇಟರ್ ಗೆ ಹಾಗೆ ಹೋಗಿದ್ದು ಇಷ್ಟವಾಗಲಿಲ್ಲ. ಶಿಸ್ತು ಇಲ್ಲ ಅದು ಇಲ್ಲ ಎಂದು ರೇಗಾಡಿದ. ಕ್ಷಮಾಪಣೆ ಪತ್ರ ಬರೆದು ಕೊಡಿ ಅಂತ ಹೇಳಿದ. ಮಾಡಿರೋ ತಪ್ಪನ್ನೇ ಒಪ್ಪಲ್ಲ ನಾನು ಇನ್ನೂ ಮಾಡದೆ ಇರೋ ತಪ್ಪಿಗೆ ಕ್ಷಮೆ ಕೇಳ್ತಿನಾ.. ನನಗೂ ಆ ಸ್ಥಳ ಬೇಜಾರಾಗಿತ್ತು ಸಾಕಾಗಿ ಕೆಲಸಕ್ಕೆ ರಾಜಿನಾಮೆ ಕೊಟ್ಟೆ. ಇಲ್ಲಿ ಕಾಲ್ಫಾರ್ಮ ಸಿಕ್ತು ಅದ್ಕೆ ಬಂದೆ. ನೀವೇ ಹೇಳಿ ಹೊಟ್ಟೆ ಹಸಿದುಕೊಂಡು ಯಾರ್ರೀ ಕೆಲಸ ಮಾಡ್ತಾರೆ, ಮಾಡಿದ್ರು ಅದು ಸರಿಯಾಗಿ ಹೇಗೆ ಮಾಡ್ತಾರೆ." ಎಂದು ತನ್ನ ಪುರಾಣ ಹೇಳಿದ ಮೇಲೆ "ಹೇಗಿದ್ದಾರೆ ನಿಮ್ಮ ಹರ್ಷ" ಎಂದು ಕೇಳಿದ.
"ನಿಮಗೆ ಹೇಗೆ ಗೊತ್ತು ಹರ್ಷ" ಆಶ್ಚರ್ಯದಿಂದ ಕೇಳಿದಳು.
"ನಿಮ್ಮ ನೆನಪಿನ ಮಡಿಕೆಗೆ ದೊಡ್ಡ ತೂತಾಗಿದೆ ಅನ್ಸುತ್ತೆ, ಎಲ್ಲಾ ಮರೆತು ಹೋಗಿದಿರಾ, ರೀ ಪರಿಧಿ ನೀವೇ ತಾನೇ ಕಾಫೀಡೇ ನಲ್ಲಿ ಪರಿಚಯ ಮಾಡಿಕೊಟ್ಟಿದ್ದು"
"ಹ್ಮಾ... ಹೌದೌದು ಈಗ ನೆನಪಾಯ್ತು. ಚೆನ್ನಾಗಿದಾನೆ ಹರ್ಷ! ನಮ್ಮ ನಿಶ್ಚಿತಾರ್ಥ ಕೂಡ ಆಯ್ತು"
"ಓಹ್... ತುಂಬಾ ಸಂತೋಷ.. ಕಂಗ್ರ್ಯಾಟ್ಸ್. ನಿಶ್ಚಿತಾರ್ಥಕ್ಕೆ ಕರಿಲಿಲ್ಲ. ಮದುವೆಗೆ ಮರಿಬೇಡಿ" ಎಂದು ತನ್ನ ನಂಬರ್ ಕಾರ್ಡ್ ಕೊಟ್ಟ.
"ಶ್ಯೂರ್ ಡಾಕ್ಟರ್!!"
"ಮತ್ತೆ.. ಎಲ್ಲಿ ನಿಮ್ಮ ಕೊಲೆಸ್ಟ್ರಾಲ್ ಫ್ರೆಂಡು" ಎಂದು ಕಡಲೆಕಾಯಿ ತಿನ್ನುತ್ತ ಕೇಳಿದ.
ಅಷ್ಟೊತ್ತು ನಗು ಮುಖದಿಂದ ಇದ್ದ ಪರಿಧಿ ತಕ್ಷಣ ಗಂಭೀರವೂ ಅನ್ಯಮನಸ್ಕಳೂ ಆದಳು. ದೃಷ್ಟಿ ಶೂನ್ಯದಲ್ಲಿ ನೆಟ್ಟು ಎಲ್ಲೋ ಕಳೆದುಹೋಗಿದ್ದಳು. ಅವನು "ಹಲೋ ಪರಿಧಿ..ಏನಾಯ್ತು.!" ಎಂದಾಗ "ಬರ್ತಿನಿ ಡಾ.ಪ್ರಸನ್ನ ಡ್ಯೂಟಿ ಇದೆ" ಎಂದು ಸರಸರನೆ ಹೊರಟು ಹೋದಳು. ಅವಳ ಕಣ್ಣಲ್ಲಿದ್ದ ಆರ್ದ್ರತೆಯನ್ನು ಗಮನಿಸಿದ ಪ್ರಸನ್ನ ಏನಾಗಿರಬಹುದು ಎಂದು ಯೋಚಿಸುತ್ತ ಅವಳು ಹೊಗುವದನ್ನೇ ನೊಡುತ್ತಿದ್ದ.
ಮುಂದುವರಿಯುವುದು...
⚛⚛⚛⚛⚛
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ