ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-40


ಜೀಪಿನಲ್ಲಿ ಕುಳಿತಾಗಿನಿಂದ ಹರ್ಷನಿಗೆ ವಿಷಯ ತಿಳಿಸಲು ಕರೆ ಮಾಡುತ್ತಲೇ ಇದ್ದ ಪ್ರಸನ್ನ. ಕಾರಿನಲ್ಲೇ ಮರೆತಿದ್ದ ಹರ್ಷನ ಫೋನ್ ರಿಂಗಾಗುತ್ತಿತ್ತೇ ವಿನಃ ಯಾರೂ ರಿಸೀವ್ ಮಾಡಲಿಲ್ಲ. ಆ ನಂತರ ಪ್ರಸನ್ನನಿಗೆ ನೆನಪಾದವನೇ ತನ್ನ ಆಪ್ತಮಿತ್ರ ವಿವೇಕ್! ಆದರೆ ಅವನನ್ನೇ ಗುರಾಯಿಸುತ್ತಿದ್ದ ಪೋಲಿಸ್ ಪೇದೆ ಮೊಬೈಲ್ ಕೊಡುವಂತೆ ಆವಾಜ್ ಹಾಕಿದ.  ಅವಸರದಿ ವಿವೇಕ್ ಗೆ ಮೆಸೇಜ್ ಮೂಲಕ ಇಂಥದೊಂದು ಸ್ಟೇಷನ್ ಬರುವಂತೆ ಮುಗುಮ್ಮಾಗಿ ತಿಳಿಸಿ ಮೊಬೈಲ್ ಪೇದೆಗೆ ಒಪ್ಪಿಸಿದ್ದ ಪ್ರಸನ್ನ.

ಅಜಾನುಬಾಹು ದೇಹ, ಮಡಿಕೆಯಂತ ಮುಖ, ಕಾಲು ಕೆಜಿಯಷ್ಟು ಮೇಕಪ್, ಅರ್ಧ ಗೋಡೆಗೆ ಬಣ್ಣ ಬಳಿಯಬಹುದಾದ ಲಿಪ್ ಸ್ಟಿಕ್ ಮೆತ್ತಿಕೊಂಡ ತುಟಿಗಳು.. ಕಾಡಿಗೆಯಿಂದ ಆವರಿಸಿದ್ದ ಕಪ್ಪು ಕಣ್ಣುಗಳು.. ಕ್ರೀಮ್ ಕಲರ್ ಶಿಫಾನ್ ಸ್ಯಾರಿ, ಮೇಲೆ ಕಡುಗೆಂಪು ರವಿಕೆ  ತೊಟ್ಟಿದ್ದ ಆಕೆ,  ಪ್ರಸನ್ನ ಹೇಗೆ ತನ್ನನ್ನು ಚುಡಾಯಿಸಿದ, ರೇಗಿಸಿದ, ಸೀರೆ ಹಿಡಿದೆಳೆದನೆಂದು ಒಂದೇ ಸಮನೆ ಉಸಿರು ಬಿಡದೇ ಗಂಟಲು ಕಿತ್ತಿ ಹೋಗುವಂತೆ ಅರಚುತ್ತಿದ್ದಳು. ತನ್ನ ಅಮಾಯಕತೆಯನ್ನು ಸಾರಿ ಸಾರಿ ಹೇಳಿ, ಅವಳೆದುರಿಗೆ ಅದು ವ್ಯರ್ಥ ಕಂಠ ಶೋಷಣೆ ಎಂದು ಅರಿತು ಮೌನವಾಗಿ ಮುಂದೆ ಏನೇನಾಗಬಹುದೆಂಬ ಅನಿಶ್ಚಿತ ಅಪಾಯದ ನಿರೀಕ್ಷೆಯಲ್ಲಿ ಕಾದು ಕೂತಿದ್ದ ಪ್ರಸನ್ನ. ಆಕೆ ಪ್ರಸನ್ನನ ವಿರುದ್ಧ ಕಠಿಣವಾದ ಲೈಂಗಿಕ ಕಿರುಕುಳದ ಆರೋಪ ಹೊರಿಸುವ ಹುನ್ನಾರದಲ್ಲಿದ್ದಳು. ಪ್ರಸನ್ನ ದಿಙ್ಮೂಢನಾಗಿದ್ದ.

ಆ ಮಹಿಳೆಯನ್ನು, ಅವಳ ವರಾತವನ್ನು ಅಪಾದಮಸ್ತಕ ನೋಡಿದ ಎಸ್.ಐ ಪ್ರಸನ್ನನನ್ನು ತನ್ನ ಹತ್ತಿರಕ್ಕೆ ಕರೆದ ಸನ್ನೆಯಲ್ಲಿ. ಲಂಚ ಕೇಳಬಹುದೇನೋ ಎಂದು ಅನುಮಾನಿಸಿದ ಪ್ರಸನ್ನ ಟೇಬಲ್ ಆಕಡೆಗೆ ಬಾಗಿ ಅವರೆಡೆಗೆ ಕಿವಿ ಚಾಚಿದ್ದ.

" ಮಿ. ನಿಮಗೆ ಫ್ಲರ್ಟ್ ಮಾಡೋಕೆ, ಮಾಲ್‌ನಲ್ಲಿ ಬೇರೆ ಯಾವ ಹುಡುಗಿನೂ ಕಾಣಿಸಲೇ ಇಲ್ಲವಾ?!!!" ಅನುಕಂಪದಿಂದ ಕಿವಿಯಲ್ಲಿ ಉಸುರಿದ ಎಸ್.ಐ.  ಪ್ರಸನ್ನ ಆಕೆಯ ಕಡೆಗೊಮ್ಮೆ ಓರೆನೋಟ ಬೀರಿದ. ಆಕೆ ಬಿಂಕದಿಂದ ಮೂಗು ಮುರಿದು ಮುಖ ತಿರುಗಿಸಿದಳು.
'ಅಬ್ಬಾ ಸುಂದರಿಯೇ...!!' ಪ್ರಸನ್ನ ದುರ್ವ್ಯಥೆಯಿಂದ ಕೈ ಮುಷ್ಟಿ ಮಾಡಿ ಎದೆಗೆ ಗುದ್ದಿಕೊಂಡ.

ಎಸ್.ಐ ಬಳಿ ತನ್ನ ಬಗ್ಗೆ ಪರಿಚಯ ನೀಡಿದ ಪ್ರಸನ್ನ, ತನ್ನ ಐಡಿ ತೋರಿಸಿ, ಇದರಲ್ಲಿ ತನ್ನದೇನು ತಪ್ಪಿಲ್ಲ, ಇದೊಂದು ಕೇವಲ ಆಕಸ್ಮಿಕವಾಗಿ ನಡೆದ ಘಟನೆ ಎಂದೂ, ತಾನು ಆ ರೀತಿಯ ಅಸಭ್ಯ ವ್ಯಕ್ತಿ ಅಲ್ಲವೆಂದೂ ಪ್ರಲಾಪಿಸಿದ.

ಪಾಲಿಗೆ ಬಂದ ಭಾಗ್ಯ ಬೇಡವೆಂದರೆ ಬಿಟ್ಟಿತೇ.. ಅವಳು  ಅವನ ವಿರುದ್ಧ sexual herassment ಕೇಸ್ ಹಾಕಲು ಸಿದ್ದವಾಗಿದ್ದಳು. ಪ್ರಸನ್ನ ಅವಳನ್ನು ವಿನಮ್ರವಾಗಿ ಯಾಚಿಸುತ್ತ ಕ್ಷಮೆ ಕೋರಿ ಕೇಸ್ ಹಾಕದಂತೆ ಕೇಳಿಕೊಳ್ಳ ತೊಡಗಿದ. ಅವನ ಮೃದು ಮಾತಿಗೆ ಕರಗಿದವಳು ಒಂದಷ್ಟು ಹಣ ಬಿಚ್ಚುವಂತೆ ಕೈ ಸನ್ನೆ ಮಾಡಿದಳು. ಪ್ರಸನ್ನ ತನ್ನ ಪಾಕೆಟ್ ತೆರೆದು ನೋಡಿದ. ಕೆಲವು ಕಾರ್ಡ್ಸ್, ಐಡಿ, ಮಧ್ಯದಲ್ಲಿ ಒಂದು- ಐದು ನೂರರ ನೋಟು, ನಾಲ್ಕು- ನೂರರ ನೋಟುಗಳು, ಒಟ್ಟು ಏಳು ನೂರು ರೂಪಾಯಿಗಳು ಮತ್ತು ಒಂದಷ್ಟು ಚಿಲ್ಲರೆಗಳಿದ್ದವು. ಅವನ್ನೇ ತೆಗೆದು ಅವಳಿಗೆ ಕೊಡಲು ಮುಂದಾದ. ಆಕೆ ಅವನನ್ನು ತಿರಸ್ಕೃತವಾಗಿ ನೋಡಿ, 'ಇಷ್ಟೇನಾ?? ಐದು ಸೊನ್ನೆಯಷ್ಟು ಹಣ ಕೊಡುವುದಾದರೆ ಮಾತ್ರ!(ಲಕ್ಷದ ಲೆಕ್ಕದಲ್ಲಿ)' ಎಂದು ನಿಷ್ಠುರವಾಗಿ ನುಡಿದಳು.

ಪ್ರಸನ್ನನ ಮುಖ ಪೆಚ್ಚಾಯಿತು. ಇಲ್ಲದ ಹಣ ಎಲ್ಲಿಂದ ತರುವುದು! ಅದೂ ಮಾಡದ ತಪ್ಪಿಗೆ!! ಹೆಣ್ಣು ಕುಲದ ಮೇಲಿದ್ದ ಅವನ ಅಲ್ಪಮಾತ್ರದ ದ್ವೇಷ, ತಿರಸ್ಕಾರಗಳು ಮತ್ತಷ್ಟು ಧಗಧಗಿಸಿ ಉಲ್ಬಣಿಸಿ ನಖಶಿಖಾಂತ ಉರಿದು ಹೋಯಿತವನಿಗೆ.

ಆಕೆ ಮತ್ತೆ ನುಲಿಯುತ್ತ ಕೇಳಿದಳು- " ನಿಮಗೆ ಮದುವೆ ಆಗಿದೆಯಾ?"

ಆಗಿಲ್ಲವೆಂದು ತೀರ ಅನುಮಾನದಿಂದಲೇ ಗೋಣು ಅಲ್ಲಾಡಿಸಿದ ಪ್ರಸನ್ನ. ವಯಸ್ಸಿನ ವೇಗದಲ್ಲಿ ಮುದುಡಿದ ಅವಳ ಮೊಗ ತಾವರೆಯಂತೆ ಅರಳಿತು ಆ ಕ್ಷಣ.
"ಸರಿ. ಕೇಸ್ ಹಾಕುವುದಿಲ್ಲ. ಆದರೆ ನನ್ನ ಸೀರೆ ಎಳೆದ ತಪ್ಪಿಗೆ ನೀವೇ ನನ್ನನ್ನ ಮದುವೆಯಾಗಿ.." ಸೆರಗು ಬೆರಳಿಗೆ ಸುರುಳಿ ಸುತ್ತುತ್ತಾ ಉಲಿದಳು. ಪ್ರಸನ್ನನ ತಲೆ ಗಿರ್ರೆಂದಿತು. ತಕ್ಷಣ ಮೈ ಕೊಡವಿ..

"ಸರ್, ನಾನು ಅಪರಾಧಿ.. ಒಬ್ಬ ಸ್ತ್ರೀ ಗೆ ಅವಮಾನ ಮಾಡಿದ ಮಹಾದೋಷಿ... ನನ್ನನ್ನು ಕೂಡಲೇ ಜೈಲಿನಲ್ಲಿ ಬಂಧಿಸಿ. ನನಗೆ ಕಠಿಣವಾದ ಶಿಕ್ಷೆ ಕೊಡಿ.."  ಎಂದು ಬೇಡಿಕೊಳ್ಳುತ್ತ ತಾನೇ ಸೆಲ್ ಒಳಗೆ ಹೋಗಿ, ಪೇದೆಗೆ ಲಾಕ್ ಹಾಕಲು ಹೇಳಿದ.

ಇವರಿಬ್ಬರ ಬಗೆಹರಿಯದ ಚೌಕಾಸಿ ಲೆಕ್ಕದ ವ್ಯವಹಾರ ಕಂಡು ಪೋಲಿಸಿನವರಿಗೂ ಹುಚ್ಚು ಹಿಡಿದಂತಾಗಿತ್ತು. ಪ್ರಸನ್ನನನ್ನು ಹೊರಗಿನಿಂದ ಲಾಕ್ ಮಾಡಿ, ಅವನ ಮೇಲೊಂದು ದೂರು ಬರೆದು ಕೊಡಲು ತಿಳಿಸಿದರು ಆಕೆಗೆ. ಆಕೆ ದೂರು ಬರೆಯುತ್ತಾ ಕುಳಿತಾಗ ದಡಬಡಾಯಿಸಿ ಒಳಗೆ ಬಂದಿದ್ದ ವಿವೇಕ್, ತನ್ನ ಸ್ನೇಹಿತ ಪ್ರಸನ್ನನನ್ನು ಕುರಿತು ವಿಚಾರಿಸಿದ. ಎಸ್ ಐ. ಅವನ ಪೂರ್ವಾಪರವನ್ನು ವಿಚಾರಿಸಿ, ಮಾಲ್ ನಲ್ಲಿ ನಡೆದದ್ದನ್ನು ತಿಳಿಸಿದರು.

"ಸೆಕ್ಷನ್365 ಪ್ರಕಾರ sexual herassment  ಕೇಸ್ ರಿಜಿಸ್ಟರ್ ಆಗಿದೆ. ಬೇಲ್ ಇಲ್ಲದೆ ಇವರನ್ನ ಬಿಡುಗಡೆ ಮಾಡಲು ಸಾಧ್ಯವಿಲ್ಲ! ಬೇಕಾದರೆ ಒಮ್ಮೆ ಭೇಟಿ ಮಾಡಿ ಹೊರಡಿ." ಎಂದು ಎಚ್ಚರಿಕೆ ಸಹ ನೀಡಿದರು.

ಲಾಕ್‌ಪ್ ಬಳಿ ಬಂದ ವಿವೇಕ್, ಕಂಬಿಗಳ ಹಿಂದೆ ನಿಂತಿದ್ದ ಪ್ರಸನ್ನನ  ಭುಜ ತಟ್ಟಿದ ಆಶ್ಚರ್ಯದಿಂದ
" ಯಾರೋ ಅವಳು ಅಪ್ಸರೆ!! ನಿನ್ನಂತವನ ಕಲ್ಲು ಮನಸ್ಸು ಕೆಡೆಸಿ, ನೀನು ಫ್ಲರ್ಟ್ ಮಾಡುವ ಹಾಗೆ ಮಾಡಿದ ಕುವರಿ!!" ಕಣ್ಣು ಹೊಡೆಯುತ್ತ ಕೇಳಿದ. ಮೊದಲೇ ಹೊತ್ತಿ ಉರಿಯುತ್ತಿದ್ದ ಪ್ರಸನ್ನ, ಅವನನ್ನೇ ನುಂಗುವಂತೆ ದುರುಗುಟ್ಟುತ್ತ ಅವನ ದವಡೆಯನ್ನು ಒತ್ತಿ ಹಿಡಿದು ಮುಖ ಅವಳೆಡೆಗೆ ತಿರುಗಿಸಿದ. ದೂರು ಬರೆಯುತ್ತಿದ್ದ ನಲ್ವತ್ತರ ಚೆಲುವೆಯನ್ನು ಕಂಡ ವಿವೇಕ್ ಮಾತು ಬರದೇ ಮೂಕವಿಸ್ಮಿತ!!

"ನಿನಗೇನೋ ಬಂದಿತ್ತು ಈ ಆಂಟಿಗೆ ಲೈನ್ ಹೊಡೆಯುವಂತದ್ದು!! ಬುದ್ದಿ ನೆಟ್ಟಗಿದೆ ತಾನೇ??" ಹುಬ್ಬೇರಿಸಿದ.

"ನನ್ನ ಬುದ್ದಿ ಬಗ್ಗೆ ಆಮೇಲೆ ಯೋಚನೆ ಮಾಡೋಣ. ಸಂಜೆಯೊಳಗೆ ಮೊದಲು ನನಗೆ ಬೇಲ್ ವ್ಯವಸ್ಥೆ ಮಾಡಲೋ.. ಇಲ್ಲಾಂದ್ರೆ ಇಡೀ ರಾತ್ರಿ ಜೈಲ್‌ನಲ್ಲೇ ಇರಬೇಕಾಗುತ್ತೆ!! " ಪ್ರಸನ್ನ ಗೋಗರೆದ. ಅವನಿಗೆ ಭರವಸೆ ನೀಡಿದ ವಿವೇಕ್ ಕೂಡಲೇ ತನಗೆ ಪರಿಚಯದ ಲಾಯರ್ ಬಳಿಗೆ ಹೊರಟ.

                   *******


            AMPLUS GLOBAL TRADES

ಮುಂಬೈ ನಗರದಲ್ಲಿ ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡ ಈ ಕಂಪನಿ ಅಲ್ಲಿನ ಅನೇಕ ಪ್ರಮುಖ ಟೆಕ್ಸ್‌ಟೈಲ್ಸ್ ಕಂಪನಿಗಳಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಪ್ರಖ್ಯಾತಿಯನ್ನು ಪಡೆದಂತಹ ಕಂಪನಿ.

ವಿನಾಯಕ ಭಾರ್ಗವ್ ಅವರ ಬಳಿಯಿಂದ ಕಂಪನಿಯ ಪ್ರಾಜೆಕ್ಟ್ ಡೀಟೆಲ್ಸ್ ನ್ನು ಪಡೆದು, ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನೋಡಿದಾಗ ಅವುಗಳಲ್ಲಿ ಅತೀ ಮುಖ್ಯ ಎನಿಸುವ ಕೆಲವು ಕಂಪನಿಗಳ ಮೇಲೆ ಪರಿಯ ಗಮನ ಹರಿದಿತ್ತು. ಅವುಗಳ ಪೈಕಿ ಒಂದೆರಡು ಕಂಪನಿಗಳನ್ನು ಈಗಾಗಲೇ ಭೇಟಿ ನೀಡಿ ಅವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಳು. ಯಾವುದೇ ಅನುಮಾನಕರ ವ್ಯಕ್ತಿ ಅಥವಾ ಸೂಚನೆಗಳು ಆಕೆಗೆ ಸಿಕ್ಕಿರಲಿಲ್ಲ.

ಅದೇ ಪ್ರಯತ್ನದಲ್ಲಿ ಸಿಕ್ಕ ಸುಳಿವಿನ ಸರದಿಯಲ್ಲಿ ಈ ಕಂಪನಿ (AGT) ಕೂಡ ಒಂದು. ಅಷ್ಟೇ ಅಲ್ಲ, ಈ ಮೊದಲು ಹರ್ಷ ಎಸ್. ಆರ್ ಕಂಪನಿಯ ಪ್ರಾಜೆಕ್ಟ್ ಗಾಗಿ ಮುಂಬೈ ಬಂದಾಗ ಫೋನ್‌ಲ್ಲಿ ಕೆಲವು ಬಾರಿ ಈ ಕಂಪನಿಯ ಬಗ್ಗೆ ಪ್ರಸ್ತಾಪ ಮಾಡಿದ್ದ ಕೂಡ. ಭಾರ್ಗವ ಕಂಪನಿಯ ನಂತರದ ಲೀಡಿಂಗ್ ಸ್ಥಾನದಲ್ಲಿರುವ ಈ ಸಂಸ್ಥೆ ಬಹುಕೋಟಿ ಲಾಭದ ಉದ್ದೇಶದಿಂದ SR ಪ್ರಾಜೆಕ್ಟ್‌ನ್ನು ತನ್ನದಾಗಿಸಿಕೊಳ್ಳಲು ಭಾರ್ಗವ್ ಇಂಡಸ್ಟ್ರೀಸ್ ನೊಂದಿಗೆ ಸಾಕಷ್ಟು ಪೈಪೋಟಿಯನ್ನು ಮಾಡಲು ಪ್ರಯತ್ನಿಸಿತ್ತು. ಆದರೆ ಅದೃಷ್ಟವಶಾತ್ ಪ್ರಾಜೆಕ್ಟ್‌ನಲ್ಲಿ ಯಶಸ್ಸು ಹರ್ಷನಿಗೆ ಲಭಿಸಿತ್ತು. ಹರ್ಷನ ಮರಣಾನಂತರ ಕೂಡ ಅವನ ಅನುಪಸ್ಥಿತಿಯಲ್ಲಿಯೂ ಪರಿಧಿ ಮತ್ತು ವಿನಾಯಕ ಭಾರ್ಗವ್ ಅವರ ಸತತ ಪರಿಶ್ರಮದಿಂದ ಭಾರ್ಗವ್ ಇಂಡಸ್ಟ್ರೀಸ್ ಗೆ ಬಹುಮೌಲ್ಯದ ಲಾಭವನ್ನು ಗಳಿಸಿ ಕೊಟ್ಟಿತ್ತು. ಅದೇ ರೀತಿಯ ಕೆಲವು ಸಂಶಯದ ಎಳೆಗಳು ಪರಿಧಿಯನ್ನು ಇಲ್ಲಿಯವರೆಗೂ ಎಳೆದು ತಂದಿದ್ದವು.

ಸಂಜೆ ನಾಲ್ಕರ ಸಮಯ ಆ ಕಂಪನಿಯ ಎಂ.ಡಿ ಯನ್ನು ಭೇಟಿ ಮಾಡಲು ಬಂದಿದ್ದಳು ಪರಿ. ಈ ಮೊದಲೇ ರಿಸೆಪ್ಷನಿಸ್ಟ್ ಗೆ ಕರೆ ಮಾಡಿ, ಬೇರೆ ಹೆಸರಿನೊಂದಿಗೆ ತನ್ನ ಪರಿಚಯ ತಿಳಿಸಿ, ಎಂ.ಡಿ ಯೊಂದಿಗೆ ಭೇಟಿಯಾಗಲು ಪೂರ್ವಾನುಮತಿಯನ್ನು ಪಡೆದಿದ್ದಳು.

"Excuse me. ನಾನು ಸಹನಾ ಅಂತ. ನಿಮ್ಮ ಎಂ.ಡಿ ವೈಭವ ಅವರನ್ನು ಮೀಟ್ ಮಾಡೋಕೆ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದೆನಲ್ಲ.. Can I go inside?" ಆಂಗ್ಲದಲ್ಲಿ ಕೇಳಿದಳು ರಿಸೆಪ್ಷನಿಸ್ಟ್‌ನ್ನು.

"Sorry ma'am... You are late!  ಸರ್ ಒಂದು ಮುಖ್ಯವಾದ ಬೋರ್ಡ್ ಮೀಟಿಂಗ್ ಗೆ ಹೋಗಿದ್ದಾರೆ. ಬರೋದು ಇನ್ನೂ ಒಂದು- ಒಂದುವರೆ ಗಂಟೆ ಆಗಬಹುದು! ವಿಜಿಟಿಂಗ್ ರೂಂ ನಲ್ಲಿ ವೇಟ್ ಮಾಡಿ" ನಮ್ರವಾಗಿ ನುಡಿದಳು ರಿಸೆಪ್ಷನಿಸ್ಟ್

ಅವಳ ಮಾತಿನಿಂದ ಪರಿಗೆ ನಿರಾಸೆಯಾಯಿತು. ಒಂದು ಗಂಟೆ ಕಾಯುತ್ತಾ ಕುಳಿತರೂ ಅಡ್ಡಿಯಿಲ್ಲ, ಇವತ್ತು ಆ ಎಂ.ಡಿ ಯಾರೆಂದು ತಿಳಿದುಕೊಂಡೇ ಇಲ್ಲಿಂದ ನಿರ್ಗಮಿಸಬೇಕೆಂದು, ವಿಸಿಟರ್ ರೂಂ ನಲ್ಲಿ ಕಾದು ಕುಳಿತಳು ಪರಿಧಿ.


ಅದೇ ಸಮಯಕ್ಕೆ ಸರಿಯಾಗಿ -

MR GROUP OF COMPANY ಯಲ್ಲಿ ಆಯೋಜಿಸಲಾಗಿದ್ದ ಬೋರ್ಡ್ ಆಫ್ ಡೈರೆಕ್ಟರ್ಸ್ ಮೀಟಿಂಗ್, ಬೋರ್ಡ್ ನ ಚೇರ್ಮನ್ ಆದಂತಹ ರಘುನಂದನ್ ರೈ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡು ಕೆಲವು ಚರ್ಚೆಗಳೊಟ್ಟಿಗೆ ಸಾಗಿತ್ತು. ಆ ವರ್ಷದ ವ್ಯವಹಾರದ ಲಾಭ ನಷ್ಟಗಳ ಬಗ್ಗೆ, ಕಂಪನಿಯ ಏಳ್ಗೆಗಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ, ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್ ರಿಪೋರ್ಟ್ ಬಗ್ಗೆ, ಇತ್ಯಾದಿ ವ್ಯವಹಾರ ವಹಿವಾಟು ವಿಚಾರಗಳ ಕುರಿತು ನೆರೆದಿದ್ದ ಕೆಲವು ಪ್ರಖ್ಯಾತ ಉದ್ಯಮಿಗಳು, ಬೋರ್ಡ್ ಮೆಂಬರ್ಸ್, ಶೇರ್ ಹೋಲ್ಡರ್ಸ್ ಮುಂತಾದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ದೀರ್ಘ ಸಮಾಲೋಚನೆ ನಡೆಸಿದ್ದರು. ಹೀಗೆ ಮುಂದುವರೆದಿದ್ದ ಮೀಟಿಂಗ್ ಸಾಂಗೋಪವಾಗಿ ಮುಗಿದು ಹೋಗಿತ್ತು.

ಕೊನೆಯಲ್ಲಿ ಹೊರಡುವ ಮುನ್ನ ಹರ್ಷನ ಬಳಿ ಬಂದ ಯುವ ಉದ್ಯಮಿಯೊಬ್ಬ "ಹಲೋ.. ಮಿ.ಸಂಕಲ್ಪ್ ಹೇಗಿದ್ದಿರಾ?" ಆತ್ಮೀಯವಾಗಿ ಕೈ ಚಾಚಿದ. ತಕ್ಷಣ ಏನೋ ನೆನಪಾದಂತೆ,
" ಓಹ್.... ನೋ... ಐಮ್ ಸೋ ಸಾರಿ... ನಿಮಗೆ ಹಳೆಯದ್ಯಾವುದು ನೆನಪಿಲ್ಲ ಅಲ್ವಾ...!! ಪರವಾಗಿಲ್ಲ. ಈಗ ಹೊಸದಾಗಿ ಪರಿಚಯ ಮಾಡಿಕೊಳ್ಳೋಣ,, ನಾನು ವೈಭವ ಶುಕ್ಲಾ. AGT ಕಂಪನಿಯ ಎಂ.ಡಿ. " ತನ್ನನ್ನು ಪರಿಚಯಿಸಿಕೊಂಡ.

" ಹಾಯ್..." ಕೈ ಕುಲುಕಿದ ಹರ್ಷ.
" ಮಿ.ವೈಭವ. ನಾವು ಈ ಮೊದಲು ಭೇಟಿಯಾಗಿದ್ದೀವಾ? ಎಲ್ಲಿ? ಯಾವಾಗ?" ಕೈ ಕುಲುಕುತ್ತಲೇ ಕೇಳಿದ.

"ಹ್ಮ್... ಕೆಲವು ವರ್ಷಗಳ ಹಿಂದೆ.. ಹೀಗೆ ಮೀಟಿಂಗ್ ಒಂದರಲ್ಲಿ. ಇಟ್ಸ್ ಜಸ್ಟ್ ಎ ಕ್ಯಾಜುವಲ್ ಮೀಟ್. ಹೋಗ್ಲಿ ಬಿಡಿ. ಹೆಚ್ಚು ಯೋಚನೆ ಮಾಡಬೇಡಿ. ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ." ಕೊನೆಯ ಮಾತಿನಲ್ಲಿ ಕುಹಕ ನಗುವಿತ್ತು.

"ಸಂಜೆ ಪಾರ್ಟಿಯಲ್ಲಿ ಸಿಗೋಣ. ಬಾಯ್"  ಮಂದಹಾಸ ಬೀರಿ ಅವನಿಂದ ದೂರಾದ ಹರ್ಷನಿಗೆ ಆ ಕ್ಷಣ ಋಣಾತ್ಮಕ ಭಾವನೆಯೊಂದು ಸುಳಿದು ಹೋದಂತಾಯಿತು.

                           *******

ವಿವೇಕ್ ಲಾಯರ್ ಜೊತೆಗೆ ಬೇಲ್ ಸಮೇತ ಸ್ಟೇಷನ್ ಗೆ ಬಂದಿದ್ದ ಹೊರಟ ಒಂದು ಗಂಟೆಯೊಳಗೆ. ಅಷ್ಟರಲ್ಲಿ ತನ್ನ ವರಸೆ ಬದಲಾಯಿಸಿದ್ದ ಎಸ್ ಐ.  ಪ್ರಸನ್ನನನ್ನು ಬಿಡುಗಡೆ ಮಾಡಲು ನಿರಾಕರಿಸಿದ. ಬೇಲ್ ಸ್ವೀಕರಿಸಲು ಸಮ್ಮತವಿಲ್ಲ. ಯಾವ ಆಧಾರದ ಮೇಲೆ ಒಳಗೆ ಕೂಡಿ ಹಾಕಿದ್ದೀರಿ ಎಂದು ಕಾರಣ ಕೇಳಿದರೂ ಅದಕ್ಕೂ ಉತ್ತರವಿಲ್ಲ. ಲಾಯರ್ ತನ್ನ ಚಾಣಾಕ್ಷತನದಿಂದ ಕಾನೂನು ಪ್ರಕಾರ ಮಾತಾಡಿ ಜೋರಾಗಿ ದಬಾಯಿಸಿದಾಗ ಎಸ್ ಐ ಬಾಯಿಂದ ಹೊರಡಿದ ಮಾತು ಪ್ರಸನ್ನ ಮತ್ತು ವಿವೇಕ್ ರನ್ನು ಬೆಚ್ಚಿ ಬೀಳಿಸುವಂತೆ ಮಾಡಿತು.

"ಯಾವ ಕೇಸ್, ಎಫ್ ಆರ್ ಐ,  ಕೋರ್ಟು ಎಂಥದೂ ಇಲ್ಲ. ಬೇಲ್ ತಂದರೂ ಬಿಡುಗಡೆ ಮಾಡುವುದಿಲ್ಲ. ಇನ್ನೊಂದು ವಾರ ಈ ವ್ಯಕ್ತಿ ಜೈಲ್ ನಲ್ಲಿಯೇ ಇರಬೇಕು. ಇರ್ತಾನೆ! ಯಾವ ಜುಜಬಿ ಲಾಯರ್ ಕರ್ಕೊಂಡು ಬಂದ್ರೂ ಅಷ್ಟೇ, ಇವನನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ!" ಕರ್ಣ ಕರ್ಕಶವಾಗಿ ಅರಚಿದ ಎಸ್ ಐ.

ಪ್ರಸನ್ನನಿಗೆ ಆಕಾಶವೇ ಕಳಚಿ ಬಿದ್ದಂತೆ ಭಾಸವಾಯಿತು. ಇದರ ಹಿಂದೆ ಯಾರ ಕೈವಾಡ ಇರಬಹುದೆಂಬ ಅಂದಾಜು ಸಿಕ್ಕಿತು. ಒಂದು ವಾರ ತಾನು ಜೈಲ್ ಪಾಲು - ಅಲ್ಲಿ ಮಾನ್ವಿ ಹರ್ಷನ ಮದುವೆ - ಆಮೇಲೆ ತನ್ನ ಬಿಡುಗಡೆ!? ಮಾನ್ವಿಯನ್ನು ನೆನೆದವನ ದವಡೆ ಬಿಗಿಯಾಯಿತು. ಲಾಯರ್ ತನ್ನ ಕಾನೂನಿನ ಪರಿಪಾಠವನ್ನು ಮುಂದುವರೆಸಿದ್ದ. ವಿವೇಕ್ ಗೆಳೆಯನ ಕಡೆಗೊಮ್ಮೆ ದೃಷ್ಟಿ ಹರಿಸಿದ.

ಮೇಜರ್ ಸರ್ ಗೆ ಕರೆ ಮಾಡುವಂತೆ! - ವಿವೇಕ್ ಗೆ ಸೂಕ್ಷ್ಮವಾಗಿ ಹೇಳಿದ   ಪ್ರಸನ್ನ.

ವಿವೇಕ್ ಸ್ಟೇಷನ್ ನಿಂದ ಹೊರಬಂದು ಮೇಜರ್ ಅವರಿಗೆ ಕರೆ ಮಾಡಿದ. ಕೆಲವು ವಿಫಲ ಪ್ರಯತ್ನಗಳ ತರುವಾಯ ಅವರೊಂದಿಗೆ ಕರೆಗೆ ಸಂಪರ್ಕ ಲಭಿಸಿತು. ಮೇಜರ್ ರೊಂದಿಗೆ ಮುಕ್ತವಾಗಿ ಮಾತನಾಡಿದ ವಿವೇಕ್ ತನ್ನ ಅರಿವಿಗೆ ತಿಳಿದಷ್ಟು ಸಂಗತಿಯನ್ನು ಅವರೆದುರು ಬಿಡಿಸಿ ಹೇಳಿ ಪರಿಸ್ಥಿತಿಯನ್ನು ಅರ್ಥ ಮಾಡಿಸಿದ.

ಎಲ್ಲವನ್ನೂ ಗಮನವಿಟ್ಟು ಆಲಿಸಿದ ಮೇಜರ್ ಫೋನ್ ನ್ನು ಎಸ್ ಐ ಗೆ ಕೊಡಲು ತಿಳಿಸಿದರು. ಕಡು ನಿರ್ಲಕ್ಷ್ಯದಿಂದ ಮೊಬೈಲ್ ತೆಗೆದುಕೊಂಡ ಎಸ್ ಐ, ಆಕಡೆಯಿಂದ ಮೇಜರ್ ಅವರ ಘರ್ಜನೆಯ ಧ್ವನಿಯನ್ನು, ಕೇಳಿ ಬೆಚ್ಚಿ ಎದ್ದು ನಿಂತು 'ಎಸ್ ಸರ್..' ಎಂದು ವಿಧೇಯಕನಾಗಿ ನುಡಿದ.

ಮೇಜರ್ ಅವನ ಕರ್ತವ್ಯ ಲೋಪವನ್ನು ಕಟುವಾಗಿ ಟೀಕಿಸಿ ತರಾಟೆಗೆ ತೆಗೆದುಕೊಂಡರು. ಎಸ್ ಐ ಮುಖ ಬೆವೆತು ಬಸವಳಿದು ಹೋಗಿತ್ತು. ಆತ ಪಶ್ಚಾತ್ತಾಪದ ಧ್ವನಿಯಲ್ಲಿ "ಸಾರಿ ಸರ್.. ನನಗೆ ಮೇಲಿನಿಂದ ಆರ್ಡರ್ ಬಂದಿತು ಹೀಗೆ ಮಾಡಲು.. ಅವರ ಆಜ್ಞೆ ಪಾಲಿಸುವುದು ಕೂಡ ನಮ್ಮ ಕರ್ತವ್ಯ ಹೀಗಾಗಿ..."

"ಅರೆಸ್ಟ್ ಮಾಡುವ ಮೊದಲು ಸರಿ ತಪ್ಪು ಸಮೀಕ್ಷೆ ಮಾಡಿ. ತಪ್ಪು ಮಾಡಿದ್ದೇ ನಿಜವಾದಲ್ಲಿ ಕಾನೂನು ರೀತ್ಯಾ ಅಪರಾಧಿಗೆ ಶಿಕ್ಷೆ ಕೊಡಿ. ಅದು ಬಿಟ್ಟು ಹೀಗೆ ಇಲ್ಲಸಲ್ಲದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಕೂಡಿ ಹಾಕುವುದು ನಿಮ್ಮ ವೃತ್ತಿ ಧರ್ಮಕ್ಕೆ ಶ್ರೇಯಸ್ಸಲ್ಲ." ಮೇಜರ್ ಗದರಿದರು.

"ಐಮ್ ರಿಯಲಿ ಸಾರಿ ಸರ್! ಇದರಲ್ಲಿ ಅವರ ಯಾವ ತಪ್ಪುಇರಲಿಲ್ಲ. ಆ ಹೆಂಗಸು ದುಡ್ಡಿನ ಆಸೆಗೆ ಈ ರೀತಿಯ ತಂತ್ರ ಹೂಡಿದ್ದಳೇನೋ, ಇವರಿಂದ ಏನೂ ಲಾಭವಿಲ್ಲವೆಂದು ತಿಳಿದು ದೂರು ದಾಖಲಿಸಿ ಹೋದಳು. ನಾನು ಈಗಲೇ ಇವರನ್ನು ಬಿಡುಗಡೆ ಮಾಡ್ತಿನಿ ಸರ್‌.." ಮೆತ್ತಗಾದ ಎಸ್ ಐ, ಪ್ರಸನ್ನನನ್ನು ಬಿಡುಗಡೆ ಮಾಡುವಂತೆ ಪೇದೆಗೆ ಆಜ್ಞಾಪಿಸಿದ‌.

ಕೆಲವೇ ನಿಮಿಷಗಳಲ್ಲಿ ಆಚೆ ಬಂದ ಪ್ರಸನ್ನ ಕೆಲವು ಪೇಪರ್ ಮೇಲೆ ಸಹಿ ಮಾಡುವಾಗ ಕೇಳಿದ - "ನನ್ನ ಒಂದು ವಾರ ಇಲ್ಲಿ ಕೂಡಿ ಹಾಕಲು ನಿಮಗೆ ಒತ್ತಡ ಹಾಕಿದವರು ಯಾರು?"

"ಅದೆಲ್ಲ ನಿಮಗ್ಯಾಕೆ? ನಿಮ್ಮನ್ನು ಬಿಡುಗಡೆ ಮಾಡಿ ಆಯ್ತಲ್ಲ. ನೀವಿನ್ನು ಹೊರಡಿ" ಎಸ್ ಐ ಬಾಗಿಲ ಕಡೆಗೆ ಕೈ ತೋರಿಸಿ ಹೇಳಿದ.

ವಿವೇಕ್ ಬಿಟ್ರೆ ಸಾಕಪ್ಪ.. ಎನ್ನುವ ತಣ್ಣನೆಯ ಉಸಿರಿನೊಂದಿಗೆ ಗೆಳೆಯನನ್ನು ಹೊರಗೆ ಎಳೆದುಕೊಂಡು ಬಂದ.

"ಲೋ... ಘೋರ ತಪಸ್ವಿ ತರಹ ಯಾವಾಗಲೂ ನೀನಾಯ್ತು ನಿನ್ನ ಕೆಲಸ ಆಶ್ರಮ ಅಂತ ಇದ್ದವನು, ಇವತ್ತೇನು ಆ ಹೆಂಗಸಿನ ಸೀರೆ ಎಳೆಯೋ ದುಸ್ಸಾಹಸ ಮಾಡಿದ್ದು? ರೇಗಿಸೋದು ರೇಗಿಸಿದೆ ಯಾವ್ದಾದ್ರೂ ಚೆನ್ನಾಗಿರೋ ಹುಡುಗಿನಾದ್ರೂ ರೇಗಿಸ್ಬಾರ್ದಿತ್ತಾ!!! ಆ ಆಂಟಿನೇ ಬೇಕಿತ್ತಾ"  ಹಾಸ್ಯ ಮಾಡಿದ ವಿವೇಕ್ ಘೊಳ್'ನೇ ನಕ್ಕ.

" ಯಾಕೋ ಇವತ್ತು ಬೆಳಿಗ್ಗೆ ಎದ್ದ ಘಳಿಗೆನೇ ಸರಿಯಿಲ್ಲ ಕಣೋ ಮಾರಾಯಾ.. ಬೆಳ್-ಬೆಳಿಗ್ಗೆ ಹಾಗೆ ಮರ್ಯಾದೆ ಹರಾಜಾಯ್ತು. ಈಗ ನೋಡಿದ್ರೆ ಈ ರೀತಿಯಾಗಿ... ಛೇ... " ಬೇಸರಿಸಿಕೊಂಡ ಪ್ರಸನ್ನ

"ಬೆಳಿಗ್ಗೆ ಏನಾಯ್ತು?" ವಿವೇಕ್ ಅಚ್ಚರಿಯಿಂದ ಕೇಳಿದ. ಅದನ್ನೆಲ್ಲ ಬಿಡಿಸಿ ಹೇಳಿ ತನ್ನ ಅಳಿದುಳಿದ ಮಾನವನ್ನು ವೃಥಾ ಹಾಳು ಮಾಡಿಕೊಳ್ಳಲು ಇಚ್ಚಿಸದೇ ಪ್ರಸನ್ನ ಮಾತು ಬದಲಿಸಿದ.

ತಾನು ಮಾಲ್‌ನಲ್ಲಿ ಹೇಗೆ ಹೊರಟಿದ್ದ , ಆ ಮಹಿಳೆ ಯಾವ ಕಡೆಯಿಂದ ಬರುತ್ತಿದ್ದಳು, ಅವಳ ಸೀರೆ ತನ್ನ ವಾಚ್ ಗೆ ಹೇಗೆ ಸಿಲುಕಿಕೊಂಡಿತು ಎಂದೆಲ್ಲಾ ಯತಾರೀತಿ ಅನುಕರಿಸಿ ತೋರಿಸುತ್ತ ವಿವೇಕ್ ಗೆ ವಿವರಿಸುತ್ತಿದ್ದ ಪ್ರಸನ್ನ. ಆಗ ಅವನಿಗೆ ಫ್ಲ್ಯಾಶ್‌‌‌ ಆಗಿತ್ತು. ತಾನು ಎರಡು ಕೈ ಹಿಂದೆ ಕಟ್ಟಿದ್ದೆ, ಮಹಿಳೆ ಹೋಗುತ್ತಿದ್ದುದು ನನ್ನ ಎಡಗಡೆಗೆ, ಅದೂ ಮೂರು ಹೆಜ್ಜೆ ಅಂತರದಲ್ಲಿ. ಹೇಗೆ ತರ್ಕಿಸಿ ನೋಡಿದರೂ ಅಪ್ಪಿತಪ್ಪಿ ಕೂಡ ಅವಳ ಸೀರೆಯ ಅಂಚು ಅವನ ವಾಚ್ ಗೆ ಸಿಲುಕಲು ಅವಕಾಶವಿಲ್ಲ. ಯಾರಾದ್ರೂ ಬೇಕೆಂದೇ ಸಿಕ್ಕಿಸದ ಹೊರತು!  ಅಂದ್ರೆ....  ಇದೆಲ್ಲಾ ಅವಳದೇ ಮಸಲತ್ತು? ಆಲೋಚಿಸಿದ.

"ಯಾರು??? ಕಂಪ್ಲೆಂಟ್ ಕೊಟ್ಟ ಆ ಆಂಟಿನಾ? " ವಿವೇಕ್ ಕಾರಿನಲ್ಲಿ ಕೂರುತ್ತಾ ಕೇಳಿದ ನಗುತ್ತ.

"ಅವರಲ್ಲ. ಆ ಪಿಶಾಚಿ ಮಾನ್ವಿ!! ನನ್ನ ಹಿಂದೆ ಹಿಂದೆಯೇ ತಿರುಗಾಡ್ತಿದ್ದಳು‌. ನಾನು ಅವಳನ್ನ ಅಲಕ್ಷ್ಯ ಮಾಡಬಾರದಿತ್ತು. ಹೆಣ್ಣು ಪಿಶಾಚಿ...." ಕೋಪದಿಂದ ದವಡೆ ಕಚ್ಚಿ, ಗಾಳಿಯಲ್ಲಿ ಕೈ ಗುದ್ದಿದ. ಆ ಪಂಚ್ ವಿವೇಕ್ ನ ಮುಖಕ್ಕೆ ರಪ್ಪನೇ ರಾಚಿ ಆತ ತಿರುಗಿ ಅವನ ತಲೆಗೊಂದು ಮೊಟಕಿದ.

"ನಿನಗೆ ಈ ಹೆಣ್ಣು ಸಂಕುಲದ ಮೇಲೆ ಯಾಕಲೋ ಇಷ್ಟೊಂದು ತಾತ್ಸಾರ??"

"ಎಲ್ಲರ ಮೇಲೆ ಅಲ್ಲ. ಈ ಮಾನ್ವಿಯಂತಹ ಮನಸ್ಥಿತಿ ಇರುವಂತವಹವರ ಮೇಲೆ... ಪ್ರೀತಿ ವಾತ್ಸಲ್ಯ ತಾಳ್ಮೆಯ ಗುಣ ಚೂರು ಇಲ್ಲದ ಇಂತವಳನ್ನ ಕಂಡರೆ ನನಗೆ...." ಕೋಪದ ಭರದಲ್ಲಿ ಮುಂದೆ ಹೇಳಲಾಗದೆ ಮನಸ್ಸು ಕಲ್ಲು ಮಾಡಿಕೊಂಡ ಪ್ರಸನ್ನ. ಯಾರಲ್ಲೂ ಹೇಳಿಕೊಳ್ಳದ ನೋವಿನ ತುಣುಕೊಂದು ಇಂಚಿಂಚಿಗೂ ಅವನೆದೆಯನ್ನು ಬಗೆಯುತ್ತಿತ್ತು. ಆದರೂ ಆತ ನಿರ್ಭಾವುಕ ಅಬ್ಬೇಪಾರಿ. ನಿರ್ಲಿಪ್ತ ನಿರ್ಮೋಹ ಮೇಧಾವಿ. ಲೋಕದ ದೃಷ್ಟಿಯಲ್ಲಿ!! ಆದರೆ ಆಂತರ್ಯದಲ್ಲಿ..? ತಾನೇನೆಂದು ಅವನು ಮಾತ್ರ ಬಲ್ಲ!!

                    ********

"ಹಲ್ಲೋ..... ಮಿಸ್ ಪರಿಧಿ! ಓವ್.. ಸಾರಿ ಸಾರಿ ಡಾಕ್ಟರ್ ಪರಿಧಿ ರೈಟ್...!! ಹೀಗೊಂದು ಗಡಸು ಧ್ವನಿ ಪರಿಧಿಯ ಭುಜದ ಮೇಲೆ ಕೈ ಉರುತ್ತ ಉಸುರಿತು. ಮ್ಯಾಗಜೀನ್ ಹಿಡಿದು ಓದುತ್ತಾ ಕುಳಿತಿದ್ದ ಪರಿಧಿ ಬೆಚ್ಚಿ, ತಕ್ಷಣ ಧ್ವನಿ ಬಂದ ಕಡೆಗೆ ತಿರುಗಿ ನೋಡಿದಳು.

ಕಪ್ಪು ಸೂಟ್, ಬೂಟ್, ಕೂಲಿಂಗ್ ಗ್ಲಾಸ್ ಧರಿಸಿದ ರಾಥೋಡ್ ಅವಳನ್ನೇ ನಿರುಕಿಸುತ್ತ ಹಲ್ಲು ಗಿಂಜುತ್ತಿದ್ದ. ಆಕೆ ಚೇಳು ಕುಟುಕಿದಂತೆ ತಕ್ಷಣ ಎದ್ದು ನಿಂತು ಭುಜದ ಮೇಲಿನ ಅವನ ಕೈ ಕೊಡವಿದಳು.

"ರಾಥೋಡ್!!! ನೀವು ಇಲ್ಲಿ??" ಅಚ್ಚರಿಯಿಂದ ಕೇಳಿದಳು

"ವೆಲ್, ಆ ಪ್ರಶ್ನೆಯನ್ನು ನಾನು ನಿಮಗೆ ಕೇಳಬೇಕು. ನೀವು ಇಲ್ಲಿ?? ಅದು ಬೇರೆ ಯಾವುದೋ ಹೆಸರು ಹೇಳಿಕೊಂಡು? ಹಹಹಾ... ನನ್ನನ್ನ ಗುಪ್ತವಾಗಿ ಭೇಟಿಯಾಗೋಕೆ ಬಂದಿದ್ದಿಯಲ್ವಾ??" ಅಸಹ್ಯ ರೀತಿಯಲ್ಲಿ ಕೇಳಿದ ಆಂಗ್ಲದಲ್ಲಿ.

"ಮೈಂಡ್ ಯುವರ್ ಟಂಗ್ ಒಕೆ!! ನಾನು ಎಂ.ಡಿ ವೈಭವ ಅವರನ್ನು ಭೇಟಿಯಾಗೋಕೆ ಬಂದಿದ್ದು. ನೀವು ಇದೇ ಕಂಪನಿಯಲ್ಲಿ ಇರೋದಂತಾ ಮೊದಲೇ ತಿಳಿದಿದ್ದರೆ ಖಂಡಿತ ಇಲ್ಲಿಗೆ ಬರುವ ಪ್ರಮೇಯ ಇರುತ್ತಿರಲಿಲ್ಲ"  ಗುಡುಗಿದವಳೇ ಬ್ಯಾಗ್ ಹೆಗಲಿಗೆ ಹಾಕಿ, ಮೊಬೈಲ್ ತೆಗೆದುಕೊಂಡು ದುಡುದುಡು ಆಚೆ ನಡೆದಳು..

ಆಕೆ ಆಫೀಸಿನ ಎಕ್ಸಿಟ್ ಡೋರ್ ನಿಂದ ಹೊರಬಂದು ನಾಲ್ಕು ಹೆಜ್ಜೆ ಸಾಗುವಷ್ಟರಲ್ಲಿ ಎಂಡಿ ಕಾರು ಗೇಟ್ ನಿಂದ ಒಳಬರುವದನ್ನು ಕಂಡಳು. ಹೇಗಾದರೂ ಸರಿ ಇಲ್ಲಿಯವರೆಗೂ ಬಂದದ್ದಾಗಿದೆ, ಒಮ್ಮೆ ಈ ಎಂ.ಡಿ ಯನ್ನು ಮೀಟ್ ಮಾಡಿಯೇ ಬಿಡಬೇಕು ಎಂದು ಗಟ್ಟಿ ನಿರ್ಧಾರ ಮಾಡಿ ಅಲ್ಲಿಯೇ ನಿಂತು ಅವನಿಗಾಗಿ ಎದುರು ನೋಡಿದಳು.

ಕಾರು ಡೋರ್ ತೆಗೆದು ಕೆಳಗಿಳಿದ ಎಂ.ಡಿ ವೈಭವ ಶುಕ್ಲಾ ನನ್ನು ನೋಡಿದ್ದೆ ಅವಳ ಅಂತರಂಗದ ಧೈರ್ಯವೆಲ್ಲ ಇಂಗಿಹೋದಂತಾಯಿತು‌. ಹೆಜ್ಜೆ ಕಂಪಿಸಿದವು. ಉಸಿರು ನಿಂತೇ ಹೋಯಿತೇನೋ ಅನ್ನುವಂತಾಯಿತು. "ಇವನೇನಾ ವೈಭವ್ ಶುಕ್ಲಾ????'' ಮನಸ್ಸು ಹಲವು ಬಾರಿ ಪ್ರಶ್ನಿಸಿತು. ಇನ್ನು ಅವನನ್ನು ಭೇಟಿಯಾಗುವುದು ವ್ಯರ್ಥ ಎಂದು ಅರಿತು ಪಕ್ಕಕ್ಕೆ ಸರಿದು ಅವನು ಆಫೀಸ್ ಒಳಹೋಗುವವರೆಗೂ ಮರೆಯಲ್ಲಿ ನಿಂತು, ನಂತರ ಅಲ್ಲಿಂದ ಕದಲಿದಳು.

ನಿಧಾನಗತಿಯಲ್ಲಿ ಮನೆಗೆ ಹೆಜ್ಜೆ ಹಾಕುತ್ತಿದ್ದವಳ ಮನದಲ್ಲಿ ಉಳಿದು ಹೋದ ಒಂದು ಬಹು ದೊಡ್ಡ ಪ್ರಶ್ನೆ " ರಘುನಂದನ್ ಅವರಿಗೂ ಈ ವೈಭವ್ ಗೂ ಏನು ಸಂಬಂಧ? ಹರ್ಷನ ಸಾವಿನಿಂದ ವೈಭವ್ ಕಂಪನಿಗೆ ಲಾಭ ಆಗಬಹುದಿತ್ತು ನಿಜ. ಆದರೆ ರಘು ಅಂಕಲ್ ಯಾಕೆ ಇದರಲ್ಲಿ ಮಧ್ಯಸ್ಥಿಕೆ ವಹಿಸಿಕೊಂಡರು? ನಿಜವಾಗಿಯೂ ಅವರು ಈ ಅಪರಾಧದಲ್ಲಿ ಪಾಲುದಾರರಾ?"

ಮುಂದುವರೆಯುವುದು...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...