ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-41


"ಒಬ್ಬನೇ ಬಂದೆಯಾ? ಫ್ರೆಂಡ್ಸ್ ಎಲ್ಲಾ ಎಲ್ಲಿ?"

ಅದೇ ತಾನೇ ಮನೆಗೆ ಬಂದ ಪ್ರಸನ್ನನನ್ನು ನೋಡುತ್ತಲೇ ಕೇಳಿದ್ದ ಹರ್ಷ. ಯಾವುದೋ ಧ್ಯಾನದಲ್ಲಿದ್ದ ಪ್ರಸನ್ನ ಹ್ಮಾ..!?? ಎಂದು ಮರು ಪ್ರಶ್ನೆ ಹಾಕಿದ.

"ಅದೇ.. ಮಾಲ್ ನಲ್ಲಿ ಯಾರೋ ಹಳೆಯ ಫ್ರೆಂಡ್ಸ್ ಸಿಕ್ಕಿದ್ರಂತೆ, ನೀನು ಅವರ ಜೊತೆ ತಾನೇ ಹೋಗಿದ್ದು? ನಾನು ಮೊಬೈಲ್ ಕಾರ್ ನಲ್ಲಿ ಮರೆತಿದ್ದೆ, ಆದರೆ ಆಮೇಲೆ ಕಾಲ್ ಮಾಡಿದಾಗ ನಿನ್ನ  ಮೊಬೈಲ್ ಸ್ವಿಚ್ಆಫ್ ಆಗಿತ್ತು. ಯಾಕೆ? ಎಲ್ಲಿ ಹೋಗಿದ್ದೆ ಅವರೊಂದಿಗೆ?"

ಹರ್ಷನ ಮಾತಿನ ವೈಖರಿ ನೋಡಿ ಮಾನ್ವಿ ಏನೇನೆಲ್ಲ ಸುಳ್ಳು ಹೇಳಿ ಹರ್ಷನನ್ನ ನಂಬಿಸಿದ್ದಾಳೆ ಎಂದು ಪ್ರಸನ್ನನಿಗೆ ಅರ್ಥವಾಯಿತು. ಬಲಗೈಯಿಂದ ಎರಡು ಕಣ್ಣುಜ್ಜುತ್ತ ತನ್ನ ಮುಖದ ಭಾವ ತೋರಗೊಡದೆ, ಮೊಬೈಲ್ ಕೈಗೆತ್ತಿಕೊಂಡು ನುಡಿದ -

"ಮೊಬೈಲ್ ನಲ್ಲಿ ಚಾರ್ಜ್ ಇಲ್ಲ ಅದಕ್ಕೆ ಸ್ವಿಚ್ಆಫ್ ಆಗಿರಬಹುದು. ಫ್ರೆಂಡ್ಸುsss ನಾಳೆ ಹೇಗೂ ಮನೆಗೆ ಬರ್ತಾರಲ್ಲಾ ಭೇಟಿಯಾಗುವಂತೆ! ನಿನಗೂ ಗೊತ್ತು ಅವರೆಲ್ಲಾ.. "

''ಹೌದಾ.. ಯಾರು??'' ಯೋಚನೆಗೆ ಬಿದ್ದ ಹರ್ಷ.

"ಅದಿರ್ಲಿ,, ನೀನು ಎಲ್ಲಿಗೋ ಹೊರಟ ಹಾಗಿದೆ??" ಕಪ್ಪು ಸೂಟ್ ಪ್ಯಾಂಟ್ ಮತ್ತು ಬೂಟ್  ಧರಿಸಿ ಸಿದ್ದನಾಗಿದ್ದ ಹರ್ಷನನ್ನ ನೋಡಿ ಕೇಳಿದ. ಹರ್ಷ ಯೋಚನೆಯ ಲೋಕದಿಂದ ಹೊರಬಂದು ತಲೆ ಕೊಡವಿ..

"ಸರಿ. ಪಾರ್ಟಿಗೆ ಲೇಟ್ ಆಗ್ತಿದೆ. ನೀನು  ಬೇಗ ಹೋಗಿ ರೆಡಿಯಾಗು. ನಾನು ನಿನಗೋಸ್ಕರ ಚೂಜ಼್ ಮಾಡಿಟ್ಟಿರುವ ಸೂಟ್'ನ್ನೇ ಹಾಕಿ ಕೊಳ್ಳಬೇಕು." ತಾಕೀತು ಮಾಡಿ ಅವಸರಿಸಿದ. ಅವಾಂತರಗಳ ನಡುವೆ ಮರೆತು ಹೋದ ಬೆಳಗಿನ ರಘುನಂದನ್ ಅವರ ಆಹ್ವಾನ ಆಗ ನೆನಪಾಯಿತು ಪ್ರಸನ್ನನಿಗೆ.

ರಘುನಂದನ್ ಜೊತೆಗೆ ಮಾತನಾಡುವ ಧಾವಂತದೊಂದಿಗೆ ಕೋಣೆಗೆ ದೌಡಾಯಿಸಿ ಹೋಗಿ ಹತ್ತು ನಿಮಿಷಗಳಲ್ಲಿ ಸಿದ್ದನಾಗಿ ಕೋಣೆಯಿಂದ ಆಚೆ ಬಂದ. ನೀಲಿ ಶರ್ಟ್ ಮೇಲೆ ಬಿಳಿಯ ಕೋಟ್ ಮತ್ತು ಪ್ಯಾಂಟ್ ಅದಕ್ಕೆ ಒಪ್ಪುವ ಬೂಟ್‌ ಸಹ ಹಾಕಿಕೊಂಡು ಸಿದ್ದನಾಗಿದ್ದ ಪ್ರಸನ್ನ ತುಂಬಾ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಕಾಣುತ್ತಿದ್ದ.

"ಮಾನ್ವಿ... ಎಷ್ಟೊತ್ತು ರೆಡಿಯಾಗೋದು??"
ಪ್ರಸನ್ನ ಮೆಟ್ಟಿಲ ಬಳಿ ಬರುವಾಗ ಅವಳಿಗಾಗಿ ಕಾದು ಬೇಸತ್ತು ಅಸಹನೆಯಿಂದ ಕೂಗಿದ ಹರ್ಷ.

ಕೇವಲ ಐದು ನಿಮಿಷ ಎಂದು ಹೇಳುತ್ತಾ ಒಂದುವರೆ ಗಂಟೆಯಿಂದ ರೆಡಿಯಾಗುತ್ತಿದ್ದ ಮಾನ್ವಿ ಕಡುಕೆಂಪು ಸಲ್ವಾರ್ ದುಪಟ್ಟಾ ಹೈ ಹೀಲ್ಡ್ಸ್ ಧರಿಸಿ, ತಿಳಿಯಾದ ಮೇಕಪ್ ಮಾಡಿಕೊಂಡು ಅಪ್ಸರೆಯಂತೆ ನಡೆಯುತ್ತ ಮೆಟ್ಟಿಲಿಳಿದು ಬರುತ್ತಿದ್ದವಳು ಆ ಕ್ಷಣ ಊಹಿಸದ ರೀತಿಯಲ್ಲಿ ಹೊಸ ಅವತಾರದಲ್ಲಿ ಪ್ರಸನ್ನನನ್ನು ಕಂಡು ಬೆಚ್ಚಿದಳು.

ಆಕೆ ಅದೇ ಗಲಿಬಿಲಿಯಲ್ಲಿ ಅವನನ್ನು ದಾಟಿ ಮುಂದಿನ ಮೆಟ್ಟಿಲು ಇಳಿಯುವಾಗ ಪ್ರಸನ್ನ, ಹಿಂದೆ ನೆಲ ಸವರುತ್ತಿದ್ದ ಅವಳ ಸಲ್ವಾರ್ ಸೂಟ್ ಮೇಲೆ ತನ್ನ ಕಾಲಿಟ್ಟುಬಿಟ್ಟ. ಕೆಳಗೆ ನೋಡದೆ ಹೆಜ್ಜೆ ಕಿತ್ತಿಟ್ಟ ಮಾನ್ವಿ ಮುಗ್ಗರಿಸಿ ಕೆಳಗೆ ಬೀಳುವವಳಿದ್ದಳು. ಅದನ್ನು ನೋಡಿದ ಹರ್ಷ ಆತಂಕದಿಂದ ತನಗೆ ಅರಿವಿಲ್ಲದೆ ಕೂಗಿದ ''ಪರಿ....... ಹುಷಾರು!!''
ಅವನ ಮಸ್ತಿಷ್ಕದಲ್ಲಿ ನೆನಪುಗಳ ಹಾವಳಿ ಕೇಕೆ ಹಾಕಿದವು. ತಲೆಗೆ ಕೈ ಒತ್ತಿಕೊಂಡ ಹರ್ಷ ಕುಸಿದು ಕುಳಿತ.

ಮೆಟ್ಟಿಲಿನಿಂದ ಬೀಳುವ ಕೊನೆಯ ಕ್ಷಣದಲ್ಲಿ, ಥಟ್ಟನೆ ಮಾನ್ವಿಯ ಕೈ  ಹಿಡಿದು ತನ್ನೆಡೆಗೆ ಮೇಲೆಳೆದಿದ್ದ ಪ್ರಸನ್ನ. ಅರೆಘಳಿಗೆಯಲ್ಲಿ ಆಕೆ ಅವನ ಎದೆಗೆ ಒರಗಿ ಬಾಹು ಬಂಧಿಯಾಗಿದ್ದಳು. ಗಾಬರಿಯಿಂದ ಬಿಗಿಹಿಡಿದ ಉಸಿರನ್ನು ನಿಧಾನವಾಗಿ ಹೊರಚೆಲ್ಲಿದಳು‌.

ಆಕೆಗೆ ತಾನು ಬೀಳುವದಕ್ಕಿಂತ ಹೆಚ್ಚಿನ ಆತಂಕ ಉಂಟಾಗಿದ್ದು ಹರ್ಷನ ಬಾಯಿಯಿಂದ ಪರಿಯ ಹೆಸರು ಕೇಳಿದ್ದಕ್ಕೆ. ತಲೆ ಎತ್ತಿ ಪ್ರಸನ್ನನ ಮುಖ ಗಮನಿಸಿದಳು. ಅವನ ಗೆಲುವಿನ ನಗುಮೊಗ ಕಂಡು, 'ಅದು ಅವನದೇ ಚೆಲ್ಲಾಟ ಎಂದು ತಿಳಿದು' ದವಡೆ ಕಚ್ಚಿ, ಅವನನ್ನು ದೂರ ತಳ್ಳಿದಳು.

"ಇದನ್ನ ಶಾಕ್ ಟ್ರೀಟ್ಮೆಂಟ್ ಅಂತಾರೆ. ನಡೆದು ಹೋದ ಕೆಲವು ಘಟನೆಗಳು ಪುನರಾವರ್ತನೆ ಆದಾಗ ಈ ರೀತಿ ಹಳೆಯ ನೆನಪುಗಳು ಮರುಕಳಿಸೋದುಂಟು! ಯಾಕೆ? ನಿನಗೂ ಶಾಕ್ ಆಯ್ತಾ?? ಜೈಲಿನಲ್ಲಿ ಇರಬೇಕಾದವನು ಇಲ್ಲಿ ಹೇಗೆ ಅಂತ??" ತನ್ನದೇ ವೈದ್ಯಕೀಯ ಶೈಲಿಯಲ್ಲಿ ನುಡಿದು ನಕ್ಕ.

" ಅವನಿಗೆ ಶಾಕ್ ಕೊಡುವ ನೆಪದಲ್ಲಿ ನನ್ನನ್ನ ಬಲಿಪಶು ಮಾಡುವ ಅಗತ್ಯವಿತ್ತಾ?" ಕೊನೆಯ ಮಾತು ಕೇಳಿಯೇ ಇಲ್ಲವೆಂಬಂತೆ ರೇಗಿದಳು

"ಹಾಗೆ ಯೋಚನೆ ಮಾಡಿದ್ರೆ, ಈಗ ನಿನ್ನ ಕೈ ಹಿಡಿಯದೆ ಬೀಳಲು ಬಿಡ್ಬೇಕಿತ್ತು!! ಮೇಲಿನಿಂದ ಜಾರಿ ಬಿದ್ದು ನಿನ್ನ ಕಾಲು ಫ್ರ್ಯಾಕ್ಚರ್ ಆಗ್ಬೇಕಿತ್ತು, ಆದನಂತರ ಹರ್ಷನೇ ನಿನ್ನ ಸೇವೆ ಮಾಡ್ಬೇಕಾಗಿತ್ತು!  ಆದರೆ ಪಾಪ, ಖುಷಿಯಿಂದ ಪಾರ್ಟಿಗೆ ಹೊರಟಾಗ ಈ ಸೀನ್ ಎಲ್ಲಾ ಬೇಡ ಅಂತ ಕೈ ಹಿಡಿದೆ" ಮಾನ್ವಿ ಅವನನ್ನ ದುರುದುರು ನೋಡಿ ತನ್ನ ಡ್ರೆಸ್ ಸರಿಪಡಿಸಿಕೊಳ್ಳುತ್ತ ಕೆಳಗೆ ಬಂದಳು.

"ಶ್ವೇತ ಶಾಂತಿಯ ಸಂಕೇತವಾದರೆ, ಕೆಂಪು ಕ್ರೌರ್ಯದ ಪ್ರತೀಕ! It's too dangerous!" ಅವಳ ಹಿಂದಿಂದೆ ಬಂದ ಪ್ರಸನ್ನ ಅವಳ ಕಿವಿಯಲ್ಲಿ ಉಸುರಿದ. ಮೊದಲು ಅರ್ಥವಾಗದೆ ಪಿಳಿಗುಟ್ಟಿದ ಮಾನ್ವಿ ತಮ್ಮಿಬ್ಬರ ಬಟ್ಟೆಗಳನ್ನು ಹೋಲಿಸಿ ನೋಡಿ ಮಾತಿನ ಒಳಾರ್ಥ ತಿಳಿದು ಕುಪಿತಳಾದಳು.

"ಪರಿ ಅಂದ್ರೆ ಯಾರು?? ನನಗೆ ತುಂಬಾ ಬೇಕಾದವರಾ?"

"ನೋನೋ..... ಅದೂ.. ನನ್ನ ಹೆಸರೇ! ಚಿಕ್ಕವಳಿದ್ದಾಗ ಹೀಗೆ ಸುಮ್ನೆ ಕರೆಯುತ್ತಿದ್ರು. ಈಗ ಅವೆಲ್ಲ ಯಾಕೆ? ಬಾ ಬೇಗ"

ತಲೆಗೆ ಕೈಹೊತ್ತು ಕುಳಿತ ಹರ್ಷ ಕೇಳಿದ ಸಾಲು ಸಾಲು ಪ್ರಶ್ನೆಗಳಿಗೆ ಹೀಗೆ ತನಗೆ ತೋಚಿದ ಸುಳ್ಳು ಸಮಜಾಯಿಷಿ ಹೇಳಿ ಅವನನ್ನು ಅಲ್ಲಿಂದ ಕರೆದುಕೊಂಡು ಹೊರಟಳು ಮಾನ್ವಿ.  ಕ್ಷಣದಲ್ಲೇ ಸುಳ್ಳನ್ನು ನಿಜವಾಗಿಸುವ ಅವಳ ಚಾಣಾಕ್ಷತೆಯನ್ನು ಕಂಡು ಪ್ರಸನ್ನ ಬೆರಗಾಗಿದ್ದ‌.

********

ಪಾರ್ಟಿಗೆ ಬಂದ ತರುವಾಯ ಮಾನ್ವಿ ತನ್ನ ತಂದೆಯನ್ನು ಸಂತೋಷದಿಂದ ಅಪ್ಪಿಕೊಂಡು ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದಳು. ಹರ್ಷ ತನ್ನ ವೃತ್ತಿ ಮಿತ್ರರೊಡನೆ ಮಾತಿನಲ್ಲಿ ವ್ಯಸ್ತನಾದ. ಅಷ್ಟರಲ್ಲಿ ಗುಲಾಬಿ ಹೂಗಳ ಟ್ರಾನ್ಸ್ಫರೆನ್ಸ್ ಸೀರೆ, ತೋಳಿಲ್ಲದ ರವಿಕೆ ತೊಟ್ಟ ಸುಂದರ ಆಧುನಿಕ ಸ್ತ್ರೀಯೊಬ್ಬಳು ಪ್ರಸನ್ನನೆಡೆಗೆ ಕೈ ಬೀಸಿ ಕರೆದಂತಾಯಿತು. ಗಲಿಬಿಲಿಗೊಂಡ ಪ್ರಸನ್ನ ಹರ್ಷನ ಕೈಯನ್ನು ಗಿಲ್ಲಿ "ಯಾವುದೋ ಹುಡುಗಿ ನನ್ನನ್ನ ಕರಿತಿರೋ ಹಾಗಿದೆ ಕಣೋ!!"

ನಗುತ್ತಲೇ ಅತ್ತ ತಿರುಗಿ ನೋಡಿದ ಹರ್ಷ, ತಕ್ಷಣ ಕೋಪದಿಂದ ಪ್ರಸನ್ನನ ಕಾಲನ್ನು ಜೋರಾಗಿ ಅದುಮಿ
"ಅವರು ನಿನ್ನನ್ನಲ್ಲ, ನನ್ನನ್ನ ಕೂಗ್ತಿರೋದು! ಅವರು ಮಾನಸಾ ಆಂಟಿ. ಮಾನ್ವಿಯ ಅಮ್ಮ!" ಅತ್ತ ಹೊರಡುತ್ತ ಹೇಳಿದ.

"ಮಾನ್ವಿ ಅಮ್ಮಾನಾ?? ಅಕ್ಕಾನೋ ತಂಗಿನೋ ಅನಿಸ್ತಾರೆ!!" ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತ ನಿಂತಿದ್ದ ಪ್ರಸನ್ನ. ಅದೇ ಸಮಯದಲ್ಲಿ  ಪ್ರಸನ್ನನನ್ನು ರಘುನಂದನ್ ತಮ್ಮ ಮೇಲಿನ ಕೋಣೆಗೆ ಕರೆದೊಯ್ದರು.

"ಡಾ.ಪ್ರಸನ್ನ??? ಸ್ವಲ್ಪ ಯೋಚಿಸಿದ ರಘುನಂದನ್..  " ನನ್ನ ಮಗಳನ್ನು ರೆಸ್ಟಿಗೇಟ್ ಮಾಡಿದ ಅದೇ ಪ್ರಸನ್ನ ತಾನೇ ನೀನು?? ಈಗ ಇಲ್ಲಿಯವರೆಗೂ ಬಂದ ಉದ್ದೇಶ?" ಹುಬ್ಬುಗಂಟಿಕ್ಕಿ ಕೇಳಿದರು.

"ಓಹ್.. ನನ್ನ ಹೆಸರು ಸಹ ನೆನಪಿದೆ ನಿಮಗೆ!!" ಆಶ್ಚರ್ಯ ವ್ಯಕ್ತಪಡಿಸಿದ ಪ್ರಸನ್ನ.

"ಮರೆಯಲು ಹೇಗೆ ಸಾಧ್ಯ ಹೇಳು? ಮೊದಲನೇ ಬಾರಿ ನನ್ನ ಪ್ರಿನ್ಸೆಸ್ ಕಣ್ಣಲ್ಲಿ ಅಷ್ಟೊಂದು ಕಣ್ಣೀರು ನೋಡಿದ್ದು ನಾನು! ಅದಕ್ಕೆ ಕಾರಣವಾದವನು ನೀನು! " ಧ್ವನಿಯಲ್ಲಿ ಕ್ರೋಧವಿತ್ತು.

" ಮಕ್ಕಳ ಮೇಲೆ ಪ್ರೀತಿ ಇರಬೇಕು ನಿಜ. ಆದರೆ ಆ ಪ್ರೀತಿ ಇಷ್ಟೊಂದು ಕುರುಡಾಗ್ಬಾರ್ದು! ನಾನು ಅವಳನ್ನ ರೆಸ್ಟಿಗೆಟ್ ಮಾಡಿದ್ದೇ ಮಹಾ ಅಪರಾಧ ಎನ್ನುವ ನಿಮಗೆ ನಿಮ್ಮ ಮಗಳು ಮಾಡಿದ ತಪ್ಪು ಏನು? ಎಂತದ್ದು? ಅದರಿಂದ ಯಾರು, ಎಷ್ಟು ನೋವು ಅನುಭವಿಸಿದರು ಅನ್ನೋದು ಗೊತ್ತಿದೆಯಾ? " ಪ್ರಸನ್ನ ಕೂಡ ಅದೇ ಗಂಭೀರ ಧ್ವನಿಯಲ್ಲಿ ಪ್ರಶ್ನಿಸಿದ.

"ಲುಕ್ ಮಿ.ಪ್ರಸನ್ನ.."

" ಡಾಕ್ಟರ್,, ಡಾ.ಪ್ರಸನ್ನ!!'' ಅವರನ್ನು ತಿದ್ದಿದ

"ವಾಟೆವರ್, ನನ್ನ ಮಗಳು ಬಯಸಿದ್ದೆಲ್ಲ ಅವಳಿಗೆ ಸಿಗಬೇಕು. ಸಿಗಲೇಬೇಕು ಅಷ್ಟೇ! ಅವಳ ಸಂತೋಷಕ್ಕೆ ಅಡ್ಡಿಯಾಗೋ ಯಾರೇ ಆಗಿರಲಿ ನನಗೆ ಇರುವೆಗೆ ಸಮಾನ. ಹೊಸಕಿ ಹಾಕಿಬಿಡ್ತಿನಿ" ಸಿಗರೇಟ್ ತುಂಡನ್ನು ಹೊಸಕುತ್ತ ಚೂಪು ನೋಟ ಬೀರಿದರು.

" ಓಹ್ ಗೊತ್ತು ಗೊತ್ತು!! ಅದಕ್ಕೆ ತಾನೇ ಹರ್ಷನನ್ನ ಸಂಕಲ್ಪ್ ಅಂತ ಬದಲಾಯಿಸಿ ಗೊಂಬೆ ತರಾ ನಿಮ್ಮ ಪ್ರಿನ್ಸೆಸ್ ಕೈಯಲ್ಲಿ ಆಟ ಆಡೋಕೆ ಕೊಟ್ಟಿರೋದು!!" ವ್ಯಂಗ್ಯವಾಗಿ ನುಡಿದನು

"ಲುಕ್, ನಿನಗೂ ಅದಕ್ಕೂ ಯಾವ ಸಂಬಂಧನೂ ಇಲ್ಲ. ಅಪ್ಪಿತಪ್ಪಿ ಅವರಿಬ್ಬರ ಮದುವೆಗೆ ಅಡ್ಡವಾಗಿ ಬಂದದ್ದೇ ಆದಲ್ಲಿ,, ನೀನು ಇಲ್ಲಿಂದ ಜೀವಂತವಾಗಿ ಹೋಗಲ್ಲ " ಎಚ್ಚರಿಸಿದರು.

"ಏನ್ಮಾಡ್ತಿರಾ? ಹರ್ಷನ ಹಾಗೆಯೇ ನನ್ನನ್ನು ಆ್ಯಕ್ಸಿಡೆಂಟ್ ಮಾಡಿ ಸಾಯಿಸ್ತಿರಾ? ಅಥವಾ ಬೇರೆ ರೀತಿಯಲ್ಲಿ....? "

"ವಾಟ್ ರಬಿಷ್ ಯು ಆರ್ ಟಾಕಿಂಗ್? " ಕಿರುಚಿದ ರಘುನಂದನ್ ಅವನ ಕೊರಳ ಪಟ್ಟಿಯನ್ನು ಬಿಗಿಯಾಗಿ ಹಿಡಿದಿದ್ದರು. ಅಷ್ಟರಲ್ಲಿ ಒಳಗೆ ಬಂದ ಹರ್ಷನನ್ನು ನೋಡಿ ನಗುವ ನಟನೆ ಮಾಡುತ್ತ ಅವನ ಕಾಲರ್ ಸರಿ ಮಾಡಿದರು.

"ಸಾರಿ ಟು ಡಿಸ್ಟರ್ಬ್,, ಏನಾದ್ರೂ ಮುಖ್ಯವಾದ ಮಾತುಕತೆ ನಡಿತಿತ್ತಾ?" ಹರ್ಷ ಕೇಳಿದ

"ನೋ.. ಹಾಗೆ ಸ್ವಲ್ಪ ಯೋಗಕ್ಷೇಮ ವಿಚಾರಿಸ್ತಿದ್ದೆ" ದವಡೆ ಕಚ್ಚುತ್ತ ಪ್ರಸನ್ನನಿಗೆ ಬೆರಳಲ್ಲೇ ಎಚ್ಚರಿಕೆ ನೀಡಿದರು.

"ಆಯ್ತಲ್ವಾ,, ನೀ ಬಾರೋ, ನನ್ನ ಫ್ರೆಂಡ್ಸ್‌ನೆಲ್ಲ ಮೀಟ್ ಮಾಡಿಸ್ತಿನಿ. ಅಂಕಲ್ ಪ್ಲೀಸ್ ಡೋಂಟ್ ಮೈಂಡ್'' ಹರ್ಷ ಅವಸರದಿ ಅವನನ್ನು ಅಲ್ಲಿಂದ ಕರೆದುಕೊಂಡು ಹೋದ.

ಹರ್ಷ ತನ್ನ ಮಿತ್ರರನ್ನು ಪರಿಚಯ ಮಾಡಿಕೊಟ್ಟ. ಅದರಲ್ಲಿ ಒಬ್ಬರೇ ಒಬ್ಬರು ಕೂಡ ಒಳ್ಳೆಯ ಮನಸ್ಸಿನವರು ಎಂಬ ಭಾವನೆ ಬರಲಿಲ್ಲ ಪ್ರಸನ್ನನಿಗೆ. ಹಣದ ಮದವೇರಿದ ದುರಹಂಕಾರದ ಪ್ರತಿಮೂರ್ತಿಗಳು! ಒಮ್ಮೆ ಔಪಚಾರಿಕವಾಗಿ ಮುಗುಳ್ನಕ್ಕು ಹಸ್ತ ಲಾಘವ ಮಾಡಿ ಅವರಿಂದ ಸಂಕಲ್ಪ್‌ನ (ಹರ್ಷ) ಬಗ್ಗೆ ಒಂದಷ್ಟು ಮಾಹಿತಿ ಪಡೆದು ದೂರವೇ ಉಳಿದ. ದೊರಕಿದ ಮಾಹಿತಿ ಕೂಡ ಸುಳ್ಳು ಎಂದೇ ಗೋಚರಿಸಿತು. ಆದರೆ ಇಲ್ಲದ ವ್ಯಕ್ತಿಯ ಬಗ್ಗೆ ಏಕಾಏಕಿ ಈ ರೀತಿಯ ಕಥೆ ಹೆಣೆಯಲು ಹೇಗೆ ಸಾಧ್ಯ? ಪ್ರಸನ್ನನಿಗೆ  ಯಕ್ಷಪ್ರಶ್ನೆಯಾಯಿತು.

ರಘುನಂದನ್ ಮಾನ್ವಿ ಮತ್ತು ಹರ್ಷನನ್ನು ಬಳಿಗೆ ಕರೆದು ಪಾರ್ಟಿಯಲ್ಲಿ ಅವರಿಬ್ಬರ ಮದುವೆ ವಿಚಾರವನ್ನು ಹರ್ಷೊಲ್ಲಾಸದಿಂದ ಘೋಷಿಸಿ, ಬಂಧು ಮಿತ್ರರನ್ನು ಆ ಮೂಲಕವೇ ಮದುವೆಗೆ ಆಮಂತ್ರಿಸಿದರು. ಹರ್ಷ ಕೆಂಡದ ಮೇಲೆ ನಿಂತಂತೆ ಚಡಪಡಿಸಿ ಅವರಿಂದ ದೂರ ಸರಿದು ಹೋದ. ಚಪ್ಪಾಳೆಗಳ ಸದ್ದಿನೊಂದಿಗೆ ಪಾರ್ಟಿ ಮುಂದುವರೆದಿತ್ತು.

ಇಡೀ ಪಾರ್ಟಿಯಲ್ಲಿ ಪ್ರಸನ್ನನಿಗೆ ಒಂಟಿತನ ಕಾಡುತ್ತಿತ್ತು. ಮನೆಯಲ್ಲಿ ಸದಾ ಒಂಟಿಯಾಗಿದ್ದರೂ ಸಹ ತನ್ನ ಇಚ್ಛೆಯಂತೆ ಬದುಕುವ ಅವನಿಗೆ ಹೈ ಫೈ ಜನರ ಮಧ್ಯೆ ಉಸಿರು ಕಟ್ಟುವಂತೆ ಆಗಿತ್ತು. ಅತ್ತಿತ್ತ‌ ಸುತ್ತ ನಿರುಕಿಸುತ್ತ ನಿಂತವನಿಗೆ ಮಾನ್ವಿ ಯಾರೊಂದಿಗೊ ತುಂಬಾ ಹೊತ್ತು ಮಾತನಾಡುತ್ತಿದ್ದುದು ಗಮನ ಸೆಳೆಯಿತು.

ತುಂಬಾ ಸಮಯ ಆ ವ್ಯಕ್ತಿಯೊಂದಿಗೆ ಮಾತನಾಡುತ್ತಾ ನಿಂತಿದ್ದ ಮಾನ್ವಿ ಪ್ರಸನ್ನನತ್ತ ನೋಟ ಹೊರಳಿಸಿ ಅವನ ಬಳಿ ಬಂದಾಗ ಕೇಳಿದ - "ಯಾರವನು?"

"ವೈಭವ್ ಶುಕ್ಲಾ ಅಂತ. AGT ಕಂಪನಿಯ ಡೈರೆಕ್ಟರ್"

" ತುಂಬಾನೇ ಕ್ಲೋಸ್ ಫ್ರೆಂಡ್ ಅನ್ಸುತ್ತೆ, "

"ಹಾಗೇನಿಲ್ಲ. ಹೀಗೆ ಪಾರ್ಟಿಯಲ್ಲಿ ಆಗಾಗ ಭೇಟಿ ಆಗ್ತಿರ್ತಾರೆ ಅಷ್ಟೇ; "

"ಅವತ್ತು ಆಸ್ಪತ್ರೆಗೆ ಬಂದವನೂ??" ಅಷ್ಟೊತ್ತು ಯಾವುದೋ ಧ್ಯಾನದಲ್ಲಿ ಅವನು ಕೇಳಿದ್ದಕ್ಕೆಲ್ಲ ಉತ್ತರಿಸುತ್ತಿದ್ದ ಮಾನ್ವಿ ಒಮ್ಮೆಗೆ ಎಚ್ಚೆತ್ತುಕೊಂಡಳು.

"ಡ್ಯಾಡ್ ನಿನ್ನನ್ನು ಮೇಲೆ ಕರೆದುಕೊಂಡು ಹೋಗಿದ್ರಲ್ವಾ? ಅವರ ಜೊತೆಗೆ ಏನು ಮಾತಾಡಿದೆ?" ಮಾತು ಬದಲಿಸಿದಳು.

"ಅದೇ.... ನಮ್ಮಿಬ್ಬರ ಮದುವೆ ವಿಚಾರ" ಓರೆನೋಟ ಬೀರಿದ.

"ವ್ಹಾಟ್...!!" ಕಿರುಚಿದಳು.

"ಶ್... ಮೆಲ್ಲಗೆ!
  ನಿಮ್ಮ ಮಗಳ್ನ ಹರ್ಷನಿಗೆ ಬದಲು ನನಗೆ ಕೊಟ್ಟು ಮದುವೆ ಮಾಡಿ ನಾನು ಅವಳನ್ನ, ಅವನಿಗಿಂತ ತುಂಬಾ ಸುಖವಾಗಿ ಸಂತೋಷವಾಗಿ ನೋಡಿಕೊಳ್ತಿನಿ. ಯಾಕಂದ್ರೆ ಐ ಲವ್ ಮಾ... "

"ಜಸ್ಟ್ ಶಟ್ ಪ್ ಒಕೆ. ನಾನು ಸಿರಿಯಸ್ಸಾಗಿ ಕೇಳ್ತಿದಿನಿ ಏನು ಮಾತಾಡಿದೆ ಡ್ಯಾಡ್ ಜೊತೆ" ಮಧ್ಯದಲ್ಲೇ ಗದರಿದಳು.

"ನಾನೂ ಸಿರಿಯಸ್ಸಾಗೆ ಹೇಳ್ತಿದಿನಿ. ಇದನ್ನೇ ಹೇಳಿದ್ದು.. ನಮ್ಮ ಭವಿಷ್ಯದಲ್ಲಿ ನಾನು ಮಾನು ಚೆನ್ನಾಗಿ ಇರ್ಬೇಕು ಅಂತಾನೇ ನಾನು ನಿಮ್ಮ ಮಗಳಿಗೆ ಕಸ - ಮುಸುರೆ, ಪಾತ್ರೆ ತೊಳೆಯೋದು, ಬಟ್ಟೆ ಒಗೆಯೋದು ಎಲ್ಲಾ ರೀತಿಯ ಟ್ರೇನಿಂಗ್ ಕೊಟ್ಟಿದ್ದು. ಈಗ ನೋಡಿದ್ರೆ ನನ್ನ ಮಾನುನಾ ಯಾರದೋ ಜೊತೆಗೆ ಮದುವೆ ಮಾಡ್ತಿದಿರಲ್ಲಾ ಛೇ...! ನಾನು ಕೊಟ್ಟ ಟ್ರೇನಿಂಗ್ ಎಲ್ಲಾ ವೇಸ್ಟ್‌ ಆಯ್ತಲ್ಲ ಅಂತ ತುಂಬಾ ಬೇಜಾರಾಗ್ತಿದೆ." ಅವನ ಹುಸಿ ವೇದನೆ ಮುಂದುವರೆದಿತ್ತು. ಅದೆಲ್ಲ ಪೊಳ್ಳು ಎಂದು ಮಾನ್ವಿಗೂ ಅರ್ಥವಾಗಿ, ಅವನನ್ನು ನಿರ್ಲಕ್ಷಿಸಿದಳು.

ಬೇರರ್ ತಂದ ಗ್ಲಾಸ್‌ ನಿಂದ ಒಂದು ಗುಟುಕು ಹೀರಿದ ಮಾನ್ವಿ, " ನಿಜವಾಗಿಯೂ ನನ್ನ ಮೇಲೆ ಪ್ರೀತಿ ಇದ್ರೆ, ಒಂದು ಪೆಗ್ ಹಾಕು ನೋಡೋಣ " ಸವಾಲೆಸೆದಳು.

"ನಿನಗೆ ಈ ಚಟ ಬೇರೆ ಇದೆಯೋ?" ಮುಖ ಸಿಂಡರಿಸಿದ.

"ಬಾವಿಯೊಳಗಿನ ಕಪ್ಪೆ ನೀನು. ನಿಂಗೇನು ಗೊತ್ತು, ಸಮುದ್ರದ ಆಳ! ಪ್ರಪಂಚ ಹೇಗಿದೆ ಅಂತ ಗೊತ್ತಿದೆಯಾ ನಿನಗೆ? ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು. ಹ್ಮ್ ಟ್ರೈ..." ಗ್ಲಾಸ್ ಅವನಿಗೆ ಆಫರ್ ಮಾಡಿದಳು.

" ನನಗೆ ಇವೆಲ್ಲ ಗೊತ್ತಿಲ್ಲ ಅಂದ್ಕೊಂಡೆಯಾ,,, ನನಗೂ ಗೊತ್ತಮ್ಮಾ.. ಇದು ವೈನ್ ತಾನೇ? "ಸ್ವಲ್ಪ ಹಿಂಜರಿಯುತ್ತಲೇ ಗ್ಲಾಸ್ ಎತ್ತಿ ಒಂದೇ ಗುಟುಕಿನಲ್ಲಿ ಕುಡಿದು ಬಿಟ್ಟ. ಏನೂ ವ್ಯತ್ಯಾಸವೆನಿಸಲಿಲ್ಲ‌. ಮತ್ತೆ ಒಂದೊಂದಾಗಿ ಏಳೆಂಟು ಪೆಗ್ ಗುಟುಕಿ ನಿಲ್ಲಲಾಗದೇ ತೂರಾಡತೊಡಗಿದ.

"ಭೂಮಿ ಸುತ್ತು,ತ್ತಾ ಇದೆ... ನನಗೆಲ್ಲ ಎರಡೆರಡು ಕಾ,ಣಿಸ್ತಿವೆ" ಅಮಲಿನಲ್ಲಿರುವಂತೆ ತೊದಲಿದ.

"ಇಷ್ಟೇನಾ ಸುಳ್ಳು ಗೊತ್ತಿರೋದು..  ವೈನ್'ಗೂ ಸಾಫ್ಟ್ ಡ್ರಿಂಕ್ಸ್'ಗೂ ವ್ಯತ್ಯಾಸ ಗೊತ್ತಿಲ್ಲ!! ಓವರ್ ಆ್ಯಕ್ಟಿಂಗ್ ಬೇರೆ.." ಪ್ರಸನ್ನನ ಮುಗ್ದತೆಗೋ ಮುರ್ಖತನಕ್ಕೋ ವ್ಯಂಗ್ಯನಗೆ ಬೀರಿದಳು. ಮತ್ತೊಮ್ಮೆ ಅವಳೆದುರಿಗೆ ಅವಮಾನಕರ ಸೋಲು ಅನುಭವಿಸಿದ ಪ್ರಸನ್ನ ನೆಟ್ಟಗೆ ನಿಂತು "ಅಂದ್ರೆ ಇದು ವೈನ್ ಅಲ್ವಾ??" ಗಂಟಲು ಸರಿಪಡಿಸಿಕೊಳ್ಳುತ್ತ ಕೇಳಿದ. ತನ್ನದೇ ಭ್ರಮೆಗೆ ತಾನು ಹಾಗೆ ಮಾಡಿದ್ದನ್ನು ನೆನೆದು ಗಂಭೀರವಾದ. ಅವನ ಪೀಕಲಾಟ ಕಂಡು ಅವಳ ನಗು ಅಲೆ ಅಲೆಯಾಗಿ ಮೂಡಿ ಬಂತು. ದೂರದಲ್ಲಿದ್ದರೂ ರಘುನಂದನ್ ಇದನ್ನೆಲ್ಲ ಗಮನವಿಟ್ಟು ನೋಡುತ್ತಲಿದ್ದರು. ಮಗಳ ಮಂದಹಾಸ ಕಂಡು ಅವರ ಮನಸ್ಸು ಪ್ರಶಾಂತವಾಗಿತ್ತು.

********

ಆ ದಿನ ವೈಭವ್ ಶುಕ್ಲಾನನ್ನು ನೋಡಿದ ನಂತರ ಪರಿಯ ಮನಸ್ಸು ಅಲ್ಲೋಲ ಕಲ್ಲೋಲವಾಗಿ ಹೋಗಿತ್ತು. ಅವನ ಕಂಪನಿ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿದಳು. ಅದಕ್ಕಾಗಿ ವಿವೇಕ್‌ನ ಸಹಾಯವನ್ನು ಕೋರಿದ್ದಳು‌. ಆ ಸಂಜೆ AGT ಕಂಪನಿಗೆ ಹೋಗಿ ಬಂದ ವಿಷಯವನ್ನು ಪ್ರಸ್ತಾಪಿಸಿದಳು. ಎಲ್ಲವನ್ನೂ ನಿರುಮ್ಮಳವಾಗಿ ಕೇಳಿಸಿಕೊಂಡ ವಿವೇಕ್ ಕೇಳಿದ -

"ಈ ವೈಭವ್ ಯಾರು? ಕೇವಲ ಬಿಜಿನೆಸ್ ಸ್ಪರ್ಧಿನಾ ಅಥವಾ ನಿಮಗೂ ಅವನಿಗೂ ವೈಯಕ್ತಿಕ ವೈಷಮ್ಯ ಏನಾದ್ರೂ ಇದೆಯಾ?"

"ಹೌದು. ಅವನು ಬರೀ ವ್ಯವಹಾರದ ದೃಷ್ಟಿಯಿಂದ ಹೀಗೆ ಮಾಡಿರಲಾರ. ನಾನೂ ಹರ್ಷ ಅವನ ಮದುವೆ ನಿಲ್ಲಿಸಿದಕ್ಕೆ, ಆದ ಅವಮಾನದಿಂದ ದ್ವೇಷದಿಂದ ಹೀಗೆಲ್ಲ ಮಾಡಿರಲೂಬಹುದು. ಅವತ್ತೇ ನೋಡಿದ್ದೆ ಅವನ ಕಣ್ಣಲ್ಲಿದ್ದ ಅಸೂಯೆಯನ್ನ.. ಅವನೊಬ್ಬ ಮೃಗಜಾತಿಯವನು"

"ನೀವು ಅವನ ಮದುವೆ ನಿಲ್ಲಿಸಿದ್ರಾ? ಅಂದ್ರೆ... ಐ ಮೀನ್ ಯಾಕೆ??" ವಿವೇಕ್ ಕಾತರದಿಂದ ಮುಂದೆ ಸರಿದು ಕೂತ.

"ಅವನು ನನ್ನ ಫ್ರೆಂಡ್ ಸಂಜೀವಿನಿಯನ್ನ ಮದುವೆ ಆಗಬೇಕಾಗಿದ್ದ ಹುಡುಗ. ಆದರೆ ಅವಳು ಆಲಾಪ್‌ನನ್ನ ಪ್ರೀತಿಸಿದ್ದಳು..." ಗತದ ಕಥೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದಳು. ಆ ಒಂದು ಘಟನೆ ಅವಳ ಬದುಕನ್ನೇ ಶೂಲಕ್ಕೆ ಮೂಲವಾಗಿಸಿತ್ತು.

"ಇಷ್ಟೆಲ್ಲಾ ನಡಿತಿದ್ರು ಆ ನಿಮ್ಮ ಫ್ರೆಂಡ್ಸ್‌ಗೆ ಯಾವ ವಿಷಯವನ್ನು ಹೇಳಲಿಲ್ವಾ ನೀವು? "

"ಇಲ್ಲ. ಮಾನ್ವಿಗೆ ಮಾತು ಕೊಟ್ಟಿದ್ದಿನಿ. ಮಾತಿಗೆ ತಪ್ಪಿ ಅವಳಿಗೆ ಮೋಸ ಮಾಡಲ್ಲ" ಸ್ನಿಗ್ಧ ಸೌಮ್ಯ ಮುಖದಲ್ಲಿ ಗಂಭೀರತೆ ಮನೆಮಾಡಿತ್ತು.

"ಹಾಗಂತ ಹರ್ಷನನ್ನ ಬಿಟ್ಟು ಕೊಡೋಕೆ ತಯಾರಿದ್ದಿರಾ?" ಅವನ ಮಾತಿಗೆ ನಸುನಕ್ಕಳು ಆಕೆ.

"ನಾನು ಅವನನ್ನ ಬಿಟ್ಟು ಕೊಟ್ಟರೂ, ಅವನು ನನ್ನನ್ನು ಬಿಟ್ಟು ಕೊಡಲ್ಲ. ಆ ನಂಬಿಕೆ ನನಗಿದೆ. ನನ್ನ ಹರ್ಷನ ಪ್ರೀತಿ ಅಂತದ್ದು.." ಅವಳ ನಂಬಿಕೆಗೆ ಕೊನೆಯಿರಲಿಲ್ಲ.

ಇವಳು ತಿಳಿಸದ ಎಲ್ಲ ವಿಚಾರವನ್ನು ಪ್ರಸನ್ನ ಅದಾಗಲೇ ಸಂಜೀವಿನಿ& ಆಲಾಪ್‌‌ಗೆ ತಿಳಿಸಿ ಬಿಟ್ಟಿದ್ದ.

************

ಆ ರಾತ್ರಿ ಪಾರ್ಟಿಯಲ್ಲಿ ಸಿಕ್ಕಾಪಟ್ಟೆ ಶರಾಬಿನ ಪಾನ ಮಾಡಿದ ಹರ್ಷನನ್ನ ಪ್ರಸನ್ನನೇ ಭುಜದ ಮೇಲೆ ಕೈ ಹಾಕಿ ಕರೆದುಕೊಂಡು ಹೋಗಬೇಕಾಯಿತು.

ಅವನ ಕೋಣೆಗೆ ಕರೆದುಕೊಂಡು ಹೋಗಿ ಹಾಸಿಗೆ ಮೇಲೆ ಮಲಗಿಸಿ ಹೊರಟ ಪ್ರಸನ್ನನ ಕೈಯನ್ನು ಗಟ್ಟಿಯಾಗಿ ಹಿಡಿದ ಹರ್ಷ "ಪ್ಲೀಸ್ ಕಣೋ ನನ್ನ ಬಿಟ್ಟು ಎಲ್ಲೂ ಹೋಗ್ಬೇಡ್ವೋ... ಇಲ್ಲಿ ಯಾವ್ದೂ ಸರಿಯಿಲ್ಲ. ಎಲ್ರೂ ನನ್ನಿಂದ ಏನೋ ಮುಚ್ಚು ಮರೆ ಮಾಡ್ತಿದಾರೆ.." ಅಮಲಿನಲ್ಲೇ ಕನವರಿಸಿದ.

" ಏನಾಯ್ತು ಈಗ? ನಾನಿದ್ದಿನಿ ತಾನೇ ನಿನ್ನ ಜೊತೆ. " ಕೈ ಅದುಮಿ ಧೈರ್ಯ ನೀಡಿದ ಪ್ರಸನ್ನ.

"ರಘು ಅಂಕಲ್ ನಾಳೆ ಬೆಳಿಗ್ಗೆ ಅವರ ಜೊತೆಗೆ ಶಿಫ್ಟ್ ಆಗೋಕೆ ಹೇಳಿದ್ದಾರೆ. ಇನ್ನು ಮದುವೆ ಕಾರ್ಯಗಳು  ಆರಂಭವಾಗುತ್ತಂತೆ. ನನಗೆ ಈ ಮದುವೆ ಇಷ್ಟ ಇಲ್ಲ!'' ವಿಷಾದದಿಂದ ಕನಲಿದ.

" ಹಾಗಾದ್ರೆ ಆಗಲ್ಲ ಅಂತ ನಿಷ್ಠುರವಾಗಿ ತಿರಸ್ಕರಿಸು. ಯಾರದೋ ಒತ್ತಾಯಕ್ಕೆ ನಿನ್ನ ಬದುಕು ಯಾಕೆ ಹಾಳು ಮಾಡ್ಕೋಳ್ತಿಯಾ?" ಪ್ರಸನ್ನ ಉದ್ವಿಗ್ನನಾಗಿ ಹೇಳಿದ.

"ಅದೂ... ಮಾನ್ವಿಗೋಸ್ಕರ.." ಹರ್ಷನ ಧ್ವನಿ ಕ್ಷೀಣವಾಯಿತು.

" ಮಾನ್ವಿ?? ಅವಳು ಏನ್ ಮಾಡಿದ್ಲು?" ಉತ್ತರ ತಿಳಿಯಲು ಪ್ರಸನ್ನ ಉತ್ಸುಕನಾಗಿದ್ದ. ಆದರೆ ಅಷ್ಟರಲ್ಲಿ ಹರ್ಷ ಗಾಢ ನಿದ್ರೆಗೆ ಜಾರಿದ್ದ.

ಯೋಚನೆಗೆ ಸಿಲುಕಿದ ಪ್ರಸನ್ನ ಅದೇ ಸರಿಯಾದ ಸಮಯವೆಂದು ಬಗೆದು, ಹರ್ಷನ ಬೀರುವನ್ನು ಕಿತ್ತಾಡತೊಡಗಿದ. ಬಟ್ಟೆ ಬರೆ, ಕೆಲವು ಫೈಲ್ಸ್'ಗಳ ಮಧ್ಯೆ ಡ್ರಾ ಎಳೆದವನಿಗೆ ಅಚ್ಚರಿಯೊಂದು ಕಾದಿತ್ತು. ಅದರೊಳಗಿದ್ದದ್ದು ಒಂದು ಕೆಂಪು ಸ್ಕಾರ್ಫ್, ಲೇಡೀಸ್ ಕರ್ಚೀಫ್, ಒಂದಷ್ಟು ಕಡಲ ಚಿಪ್ಪುಗಳು ಮತ್ತು ಒಂದು ಕೈಯಿಂದ ಬರೆದ ಚಿತ್ರ.. ಅದನ್ನು ನೋಡಿದ ಪ್ರಸನ್ನನ ಸಂತೋಷ ಗರಿಗೆದರಿತು. ಅದರೊಂದಿಗೆ ಇದ್ದ  ಹರ್ಷನ ಡೈರಿಯನ್ನು ಅತ್ಯುತ್ಸಾಹದಿಂದ ಓದಲು ಮೊದಲಾದ.


ಮುಂದುವರೆಯುವುದು...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...