ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ- 42


(ರಾತ್ರಿ ಪಾರ್ಟಿಯಿಂದ ಬಂದ ನಂತರ ಹರ್ಷ ನಶೆಯ ಅಮಲಿನಲ್ಲಿ ನಿದ್ರೆಗೆ ಜಾರಿದ. ಅದೇ ಸಮಯ ಸಾಧಿಸಿ ಪ್ರಸನ್ನ ಅವನ ರೂಂ ತಡಕಾಡಿದಾಗ ಹರ್ಷನ ಡೈರಿ ಜೊತೆಗೆ ಒಂದಷ್ಟು ವಸ್ತುಗಳು ಸಿಕ್ಕವು. ಡೈರಿ ತೆಗೆದುಕೊಂಡು ಪ್ರಸನ್ನ ಓದಲು ಪ್ರಾರಂಭಿಸಿದ)

ಬದುಕಿನುದ್ದಕ್ಕೂ ಪ್ರಶ್ನೆಗಳು ಎದುರಾಗುವುದು, ಉತ್ತರಗಳ ಹಂಬಲಕ್ಕೆ ಸಾವಿನೊಂದಿಗೆ ಸೆಣಸಾಡುವುದು ಸಹಜವೇನೋ... ಆದರೆ ಬದುಕೇ ಒಂದು ಯಕ್ಷ ಪ್ರಶ್ನೆಯಾದಾಗ ಉತ್ತರಕ್ಕಾಗಿ ಸಾವಿನ ಮೊರೆ ಹೋಗುವುದು ಅನಿವಾರ್ಯ!! ಹಾಗೆಂದು ನಾನೊಬ್ಬ ಪುಕ್ಕಲು ಪಲಾಯನವಾದಿಯಲ್ಲ. ಕ್ಷಣಕ್ಷಣವೂ ನಿರ್ಜೀವ ಜೀವದೊಂದಿಗೆ ಜೀವನ ಸಾಗಿಸುವ ಹೊಣೆ ಹೊತ್ತ ಅಲೆಮಾರಿ ಪಯಣಿಗ..

ಹತ್ತು ಹಲವು ರಾಕ್ಷಸ ಯೋಚನೆಗಳು ಮನಸ್ಸನ್ನು ಮುತ್ತಿಕೊಂಡು ನನ್ನ ಮನಶ್ಯಾಂತಿಯನ್ನು ಕಬಳಿಸಿ ಹಾಕಿರುವಾಗ, ನನಗೆ ನಾನೇ ಯಾರೆಂಬುದು ನಿಶ್ಚಿತವಿಲ್ಲದಿರುವಾಗ ಗೀಚುವುದಾದರೂ ಏನನ್ನೂ..

ಕೊನೆಯಿಲ್ಲದ ಭಾವನೆಗಳಿಗೆ ಅಕ್ಷರಗಳ ಮೂರ್ತರೂಪ ನೀಡುವ ಬರವಣಿಗೆಯ ಕಕ್ಷೆಯಲ್ಲಿ ನುರಿತಿಲ್ಲ ನಾನು...

ಆದರೂ ಬರೆಯಲು ಪ್ರಯತ್ನಿಸುವೆ, ನಿನಗಾಗಿ.. ನಿನ್ನ ಸಂತಸಕ್ಕಾಗಿ.. ನನಗಾಗಿ ನೀ ಪಡುತ್ತಿರುವ ಈ ಪರಿಶ್ರಮಕ್ಕಾಗಿ..

ದಿಗ್ಗನೇ ಎದ್ದು ಕೂರುವ ನಡುರಾತ್ರಿಯ ಕನಸು ಕಲ್ಪನೆಗಳಿಗೆ ಹಳೆಯ ನೆನಪುಗಳನ್ನು ಕೆದಕುವ ಚಾಳಿಯೇಕೋ.. ಸ್ಮೃತಿಗೆ ನಿಲುಕದ ಕೆಲವು ಘಟನೆ ಬಹುಶಃ ಸೂಪ್ತ ಮನಸ್ಸಿಗೆ ಬಹಳವೇ ಹತ್ತಿರವೇನೋ..

ಅದಾವ ವಿಷಮ ಘಳಿಗೆ ಅಪಘಾತ ಸಂಭವಿಸಿತ್ತೋ ಏನೋ,, ತಗುಲಿದ ಪೆಟ್ಟು ಮೆದುಳನ್ನು ಘಾಸಿ ಮಾಡಿದ್ದಕ್ಕಿಂತ, ಪ್ರತಿ ಕ್ಷಣವೂ ಮನಸ್ಸಿಗೆ ನೋವಿನ ಬಾಧೆ ನೀಡುತ್ತಿರುವುದೇ ಹೆಚ್ಚು!

ನಿನ್ನನ್ನೆಲ್ಲೋ ನೋಡಿದಂತಿದೆ ಎನ್ನುವ ಕನ್ನಡಿಯಲ್ಲಿ ಕಾಣುವ ನನ್ನದೇ ಪ್ರತಿಬಿಂಬ, ನನ್ನನ್ನೇ ಅಣುಗಿಸುತ್ತಿರುತ್ತದೆ. ಆಗಿನಿಂದ ನನಗೆ ನಾನೇ ಪರಿಚಿತ ಅಪರಿಚಿತ.. ಹೇಳಲಾಗದ ಮೂಕವೇದನೆ! ಸಂವೇದನೆಯೇ ಇರದ ಜನರ ಸಮೂಹದೊಳಗೆ ಬಂಧಿಯಾದ ಖೈದಿಯಂತಹ ವಿಷಾದ! ಇರಲಾರೆ ತೊರೆದೂ ಹೋಗಲಾರೆ, ಮಾತಾಗಲಾರೆ ಮೌನವಾಗಲಾರೆ, ಬದುಕಲಾರೆ, ಸಾವನ್ನೂ ಸಮೀಪಿಸಲಾರೆ.. ಅದಾವುದೋ ಕ್ಷೀಣ ಮಧುರ ಧ್ವನಿಯೊಂದು ನನ್ನನ್ನು ನಿದ್ರೆಗನಸಿನಿಂದ ಬಡಿದೆಬ್ಬಿಸುತ್ತದೆ. ಬದುಕಲು ಹುರಿದುಂಬಿಸುತ್ತದೆ. ಕನಸಲ್ಲಿ ಕಂಡು ಕಾಣದ ಅಸ್ಪಷ್ಟ ಚಹರೆಯೊಂದನ್ನು ಕಾಣುವ ಹಂಬಲಕೆ ಮನ ಮತ್ತೆ ಮತ್ತೆ ಮಿಡಿಯುತ್ತಿರುತ್ತದೆ..

ಸರಿರಾತ್ರಿ ನೆನಪುಗಳಿಗಾಗಿ ತಪಗೈಯುತ್ತ, ಒಂದೊಂದು ಕ್ಷಣವೂ ನೆನಪಿಗಾಗಿ ಕೊರಗುತ್ತ,, ಸ್ವಲ್ಪ ಎಚ್ಚರ ತಪ್ಪಿದಂತೆ, ಕೆಲವೊಮ್ಮೆ ನಶೆಯೇರಿದಂತೆ, ಏನೂ ಅರ್ಥವಾಗದೆ ಮನಸ್ಸು ಹೊಯ್ದಾಡುವಾಗ ಬೇಕೆನಿಸುವದು ಸ್ಪಂದನೆಯೊಂದು !! ಅದು ಅವಳೇ ಆಗಿರಲೆಂಬುದು ಹುಚ್ಚು ಮನದ ಕೋರಿಕೆಯು..
ಹೇಳಲು ಮಾತ್ರ ನನ್ನದೇ ಹೃದಯ, ಮಿಡಿತಗಳು  ಇನ್ಯಾರಿಗೋ ಮೀಸಲು!  ಬೆಪ್ಪು ಮನಸ್ಸು, ಅವಳು ವಾಸ್ತವವೋ ಕಲ್ಪನೆಯೋ ಎಂಬುದನ್ನೂ ಅರಿಯದೆ ಅವಳಿಗಾಗಿ ಕೊರಗುವುದು.. ಜಪಿಸುವುದು..
ಅಣುವಣುವಲ್ಲೂ ವ್ಯಾಪಿಸಿರುವ, ಪ್ರತಿ ಶ್ವಾಸದಲ್ಲೂ ಬೆರೆತಿರುವ, ಮುದ್ದು ಹುಡುಗಿಯೊಬ್ಬಳು ಆಗಿನಿಂದ ನನ್ನ ಪ್ರಾಣ,, ಮಳೆಯಲ್ಲಿ ಹನಿಯಾಗಿ, ಹೃನ್ಮನದ ಕಥೆಯಾಗಿ, ಹೃದಯದಿಂದ ಹೃದಯದ ಪಿಸುಗುಟ್ಟುವ ಸ್ವರವಾಗಿ ನನ್ನನ್ನು ಸೂರೆಗೊಳ್ಳುವಳು.

ಸಿಡ್ನಿಯ ಹೃದಯ ವಿಹಂಗಮ ಪ್ರಕೃತಿಯ ಮಡಿಲಲ್ಲಿ ಕುಳಿತಾಗಲೂ ಹೊರಗಡೆ ಸಮುದ್ರ ಭೋರ್ಗರೆಯುತ್ತಿದ್ದರೆ, ನನ್ನೆದೆಯ ಕಡಲಲ್ಲಿ ನೆನಪುಗಳು ಭೋರ್ಗರೆಯುತ್ತಿದ್ದವು. ಆದರೆ ಸ್ಮೃತಿಯ ದಡದಲ್ಲಿ ಯಾವೊಂದು ಅಲೆಯೂ ಅಪ್ಪಳಿಸುತ್ತಿಲೇ ಇರಲಿಲ್ಲ. ಆ ಕರಾಳ ಮೌನ ಸಾವಿಗಿಂತಲೂ ಹೀನ ಎನಿಸುತ್ತಿತ್ತು ಒಮ್ಮೊಮ್ಮೆ.
ಮನಸ್ಸಲ್ಲಿ ಏನೋ ಒಂದು ರೀತಿಯ ಕೋಲಾಹಲ ಸೃಷ್ಟಿಯಾಗುತ್ತಿತ್ತು. ಏನೋ ಬೇಕು ಎನ್ನಿಸುವ ಕಳವಳ, ಏನೋ ಪಡೆಯುವ ಹಂಬಲ. ಎದೆಯಲ್ಲಿ ನಡೆಯುವ ಕದನಕ್ಕೆ ಪೂರ್ಣ ವಿರಾಮ ಎಂಬುದೇ ಇರಲಿಲ್ಲ. ನನ್ನ ಭಾವನೆಗಳಿಗೆ ಅರ್ಥವೇ ಕೊಡಲಾಗದೆ ನಾನು ದಹಿಸಿಹೋಗಿ ಅಮಲಿನ ಮತ್ತಿನಲಿ ಜಾರಿ ಹೋಗುವ ಗೀಳಿಗೆ ಶರಣಾದೆ; ಹಂತ ಹಂತವಾಗಿ..

ಮಾನ್ವಿ'  a sweet humble and caring friend!! ನನ್ನನ್ನು, ನನ್ನ ಉಗ್ರ ಕೋಪತಾಪ, ನಶೆಯ ಗೀಳು, ಅಸ್ಥಿಮಿತ ಬುದ್ಧಿಯನ್ನು ನಿಗ್ರಹಿಸಲು ಅದೆಷ್ಟು ಹೆಣಗಾಡಿ ಬಿಟ್ಟಿತು ಹುಡುಗಿ! ಅದೆಷ್ಟು ಬಾರಿ ನಿರ್ದಾಕ್ಷಿಣ್ಯವಾಗಿ ಹೊಡೆದಿಲ್ಲ ನಾನವಳಿಗೆ! ಅದೆಷ್ಟು ಸಲ ಕೈಯಲ್ಲಿ ಸಿಕ್ಕ ಸಿಕ್ಕಿದನ್ನೆಲ್ಲ ಬೀಸಿ ಎಸೆದು ರಕ್ತ ಸುರಿವಂತೆ ಗಾಯಗೊಳಿಸಿಲ್ಲ! ಆದರೂ ಚೂರು ಕೋಪಿಸಿಕೊಳ್ಳದೆ ನನ್ನನ್ನು ಅಮ್ಮನಂತೆ ಕಾಳಜಿ ಮಾಡುವ ಹುಡುಗಿಯನ್ನು ಕಂಡರೆ ಅನುಕಂಪಕ್ಕಿಂತ ಅತೀಯಾದ ನಂಬಿಕೆಯೊಂದು ಬೆಳೆಯುತ್ತ ಸಾಗಿತ್ತು. ಅವಳೇ ನನ್ನ ಬದುಕಿನ ಕಥೆಗಳನ್ನು ಹೇಳುತ್ತಾ ಹೋದಳು, ಅಪ್ಪ ಅಮ್ಮ, ಸ್ನೇಹಿತರು, ಬಂಧು ಬಳಗ, ನಾನು-ನನ್ನವರು,ನಾನೇನು? ಹೇಗಿದ್ದೆ? ಎಲ್ಲವನ್ನೂ...  ನಾನು ನಂಬಿದೆ; ಯಾವ ಅಪನಂಬಿಕೆಗೂ ಮರು ಅವಕಾಶವಿಲ್ಲದಂತೆ! ಆದರೆ  ಇವತ್ತಿಗೂ ಮನಸ್ಸಿಗೆ ಆ ಅಸ್ತಿತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ.

ನಂಬಿಕೆಯ ಸೌಧ ಗಟ್ಟಿಯಾದ ಸಂಧರ್ಭ ನೋಡಿ, ಅದೊಂದು ಸಂಜೆ ಆಕೆ, ನನ್ನ ಮತ್ತು ಅವಳ ಪ್ರೀತಿ ಪಯಣವನ್ನು ನೆನಪಿಸಲು ಮುಂದಾದಳು. ನಮ್ಮಿಬ್ಬರ ನಿಶ್ಚಿತಾರ್ಥ ಕೂಡ ನಡೆದು ಹೋಯಿತೆಂಬುದಾಗಿ ತಿಳಿಸಿದಳು. ಆರಂಭದಲ್ಲಿ ನಂಬಿಕೆ ಬರಲಿಲ್ಲ. ಆದರೆ ನನ್ನ ಕೈಬೆರಳ ಉಂಗುರ ಸಾರಿ ಸಾರಿ ಹೇಳುತ್ತಿತ್ತು ಇದೊಂದು ಪ್ರೀತಿ ದ್ಯೋತಕವೆಂದು. ನಂಬದೆ ವಿಧಿಯಿರಲಿಲ್ಲ. ನಂಬಿದೆ! ಒತ್ತಡ ಒತ್ತಾಯಗಳ ಮಧ್ಯೆ ಮದುವೆಗೂ ಸಮ್ಮತಿಸಿದೆ!

ಮನೆಯಲ್ಲಿ ಮದುವೆಯ ಮಾತುಕತೆಗಳು ಶುರುವಾದವು. ಮದುವೆಯ ದಿನಾಂಕ ಕೂಡ ನಿಶ್ಚಯವಾಯಿತು. ಎಲ್ಲವೂ ಶೀಘ್ರವಾಗಿ ನಡೆದು ಹೋಗುತ್ತಲೇ ಇತ್ತು. ಆದರೆ ಎಲ್ಲೋ ಒಂದು ಕಡೆಗೆ ಯಾವುದೂ ಸರಿಯಿಲ್ಲ ಎಂಬುದೇ ಮನದ ಇಂಗಿತವಾಗಿತ್ತು‌. ಕನಸುಗಳ ಹಾವಳಿಯಲ್ಲಿ ಯಾರದೋ ಬಿಂಬ ಇಣುಕಿ ಮರೆಯಾಗುತ್ತಲೇ ಇತ್ತು. ದಿನಗಳೆದಂತೆ ಈ ಅನುಭವ ಹೆಚ್ಚಾಗುತ್ತಲೇ ಹೋಯಿತು.

'ನನ್ನುಸಿರಲ್ಲಿ ಬೆರೆತವಳು ಯಾರೋ? ನನ್ನನ್ನೇ ನಾನು ಮರೆತಿರುವಾಗ ನೆನಪಾಗಿ ಕಾಡುವವಳು ಯಾರೋ? ಹೃದಯದ ಪ್ರತಿ ಮಿಡಿತದಲೂ ಪ್ರವಹಿಸುವ ಅವಳ ಹೆಸರೆನೋ? ಅವಳು ನನಗೆ  ಹೇಗೆ ಗೊತ್ತೋ? ನಾನವಳಿಗೆ ಏನಾಬೇಕೋ? ನಾನವಳನ್ನು ಮರೆತರೂ, ಅವಳಿಗೆ ನನ್ನ ನೆನಪಿರುವುದಿಲ್ಲವಾ? ಮರೆತುಬಿಟ್ಟಿರುವಳಾ? ಅಥವಾ ನನಗಾಗಿ ಒಮ್ಮೆ ಹುಡುಕಿ ಬರಬಹುದಾ? ಅಲ್ಲಿವರೆಗೂ ಈ ಉಸಿರು ಬಿಗಿಹಿಡಿದು ನಾ ಕಾಯಬೇಕು; ಕಾಯುವೆ. ಎಡಬಿಡದೆ ಅವಳನ್ನ ಎದುರುಗೊಳ್ಳಲು..'

ನನ್ನ ಯೋಚನೆಗಳು ಹೀಗಿರುವಾಗಲೇ ಮದುವೆಯ ತಯಾರಿಗಾಗಿ ಮುಂಬೈಗೆ  ಬಂದಾಯಿತು. ಮದುವೆಗೂ ಮುಂಚೆ ಮನೆ ದೇವರ ದರ್ಶನಕ್ಕೆಂದು ಮಂಗಳೂರಿಗೆ ಬಂದ ತರುವಾಯ ನನ್ನಲ್ಲೊಂದು ವಿಚಿತ್ರ ಪರಿವರ್ತನೆ..!! ಅದಕ್ಕೆ ಕಾರಣ ಆ ಮುದ್ದು ಹುಡುಗಿ...

ಸುಖಾಸುಮ್ಮನೇ ಯಾರೂ ನಮ್ಮ ಬದುಕಿನ ಪಯಣದಲ್ಲಿ ನುಸುಳಿ ಹೋಗುವುದಿಲ್ಲ. ನಮಗೆ ಎದುರಾಗುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಅವರದೇಯಾದ ಕಥೆ ಇದೆ. ವ್ಯಥೆ ಇದೆ. ಮುಂದಿನ ಭವಿಷ್ಯವಿದೆ. ಮತ್ತದು ಯಾವುದೋ ಒಂದು ಕ್ಷಣದಲ್ಲಿ ನಮ್ಮ ಬಾಳಕಥೆಗೂ ನಂಟನ್ನು ಹೊಂದಿಬಿಡಬಹುದು‌. ಅಥವಾ ಈಗಾಗಲೇ ಬೆಸೆದ ಹಳೆಯ ‌‌ಬಂಧವೊಂದು ನಿಡುಸುಯ್ಯುತ್ತ ಕೊನೆಯುಸಿರ ಹಂತದಲ್ಲಿರಬಹುದು. ಯಾವುದನ್ನು ಅಲಕ್ಷ್ಯ ಮಾಡಬಾರದು. ಅನುಭವ ನನಗೆ ಹೇಳಿ ಕೊಟ್ಟ ಮೊದಲ ಪಾಠವದು!

ಸಣ್ಣ ಪುಟ್ಟ ನೆಪಗಳೇ ಸಾಕು,, ಎರಡು ಕಥೆಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಒಂದಾಗಿ ಬಿಡುತ್ತವೆ. ಕೆಲವರು ಹತ್ತಿರವಿದ್ದರೂ ಅಪರಿಚಿತ ಎನಿಸುವಂತಾದರೆ, ಇನ್ನೂ ಕೆಲವರು ಒಂದೇ ನೋಟದಲ್ಲಿ ತುಂಬಾ ಸನಿಹದವರಂತೆ, ಆಪ್ತರಂತೆ ಭಾಸವಾಗುತ್ತಾರೆ. ಅವತ್ತು ಹೀಗೆ ಆಗಿತ್ತು..

ಇಳಿಸಂಜೆ ಹೊತ್ತಿನಲ್ಲಿ ಮಂಗಳೂರಿನ ಬೀಚ್ ನಲ್ಲಿ ಅಲೆದಾಡುವಾಗ ಕಂಡ ಆ ಹುಡುಗಿಯ ಕಣ್ಣಲ್ಲಿನ ಹೊಳಪು ನನಗೆ ನನ್ನನ್ನು ಮೊದಲ ಬಾರಿಗೆ ಪರಿಚಯ ಮಾಡಿಸಿದಂತಿತ್ತು. ಅವಳ ಕಂಗಳ ದಿವ್ಯ ಕಾಂತಿಗೆ ಉರಿವ ಸೂರ್ಯನು ಲಜ್ಜೆಯಿಂದ ಕೆಂಪಾಗಿ ಹೋಗಿದ್ದ. ಆ ಸೂರ್ಯಾಸ್ತ ನನ್ನ ಅಲೆಮಾರಿ ಬದುಕಿನಲ್ಲಿ ವಿಶೇಷ ತಿರುವು ತಂದಿತ್ತು.

ಬಿಳಿಯ ಟಾಪ್, ಕೆಂಪು ಸ್ಕಾರ್ಫ್ ತೊಟ್ಟ ಚೆಲುವೆಯೊಬ್ಬಳು ಒಂದೇ ಕ್ಷಣದ ನೋಟದಲ್ಲಿ ಮನಸ್ಸನ್ನು ದೋಚಿಬಿಟ್ಟಿದ್ದಳು.

ಶರಧಿಯ ತಪೋ ತೇಜಸ್ಸನ್ನ ತಾನೇ ಭವಿಸಿದಂತ ಸೌಂದರ್ಯ.., ಚಂದ್ರನಿಂದ ಕದ್ದುಕೊಂಡ ಹಾಲ್ಬೆಳದಿಂಗಳ ನಗು.. ಕಪ್ಪು ಮುಗಿಲ ಮೋಡಗಳನ್ನು ನಾಚಿಸುವಂತಹ ಹಾರಾಡುವ ದಟ್ಟ ರೇಷ್ಮೆ ಕೂದಲು.. ಕಿವಿಯಲ್ಲಿ ಮಿನುಗುವ ಪುಟ್ಟ ಜುಮುಕಿ, ನಾಜುಕಿನ ಕೊರಳು, ಅಲ್ಲಿ ನಕ್ಷತ್ರದಂತೆ ಮಿಂಚಿದ ಪೆಂಡೆಂಟ್..  ಒಂದೇ ಉಸಿರಿಗೆ ಹೃದಯಕ್ಕೆ ಲಗ್ಗೆ ಹಾಕಿ ಧುಮುಕಿದ್ದಳು ಹುಡುಗಿ. ಅಥವಾ ಅದು ನನ್ನ ಭ್ರಮೆಯಾ? ಅವಳು ಸಂತಸದಿಂದ ನಗುತ್ತಲೇ ಇದ್ದರೆ ನನ್ನೊಳಗೂ ಖುಷಿಯ ವಿಸ್ಫೋಟ! ಅದೆಷ್ಟು ಕಾಲ ನೋಡಿದರೂ ತಣಿಯದ ಅವಳಂದವನ್ನು ಕ್ಷಣ ಕ್ಷಣಕ್ಕೂ ಕಣ್ತುಂಬಿಸಿಕೊಂಡೆ. ಮತ್ತೆ ಇಂತಹ ಅವಕಾಶ ಸಿಕ್ಕಿತೋ ಇಲ್ಲವೋ ಎಂಬ ಭಯದೊಂದಿಗೆ. 

ಆ ಕ್ಷಣ ಅವಳನ್ನು ಕಂಡಾಗ ನನಗೆ ನನ್ನ ಅಸ್ತಿತ್ವದ ನೈಜಬಿಂಬ ಕಂಡಂತಾಯಿತು. ಈ ಮೊದಲೇ ನಮ್ಮ ನಡುವೆ ಸಡಿಲವಾಗದ ಬಾಂಧವ್ಯವೊಂದು ಇರುವಂತೆ ತೋರಿತು. ಮನಸ್ಸಿನಲ್ಲಿ ವಿಚಿತ್ರವಾದ ಕೋಲಾಹಲ ಸೃಷ್ಟಿಯಾಯಿತು. ಆ ಕೂಡಲೇ ಅವಳ ಸನಿಹ ಹೋಗಿ ಮಾತನಾಡಿಸುವ ಮನಸ್ಸಾಯಿತಾದರೂ ಅವಳ ಜೊತೆಗಿದ್ದ ಹುಡುಗನನ್ನು ನೋಡಿ ನನ್ನ ಅಭಿಪ್ರಾಯ ಬದಲಾಯಿತು. ಅವಳು ನನಗೆ ತುಂಬಾ ಬೇಕಾದವಳು ಎಂಬ ನನ್ನ ಅನಿಸಿಕೆ ಕೇವಲ ನನ್ನ ಭ್ರಮೆಯಾಗಿದ್ದರೆ ಎಂಬ ಆತಂಕದಿಂದ ನನ್ನ ಉದ್ವೇಗವನ್ನು ಹತ್ತಿಕ್ಕಿಕೊಂಡೆ.

{ಹರ್ಷನ ಡೈರಿಯ ಕೆಲವು ಪುಟಗಳನ್ನು ಮಾತ್ರ ತಿರುವಿದ್ದ ಪ್ರಸನ್ನ ದಂಗಾಗಿ ಹೋಗಿದ್ದ. ಅದದೇ ಸಾಲುಗಳನ್ನು ಮರಳಿ ಮರಳಿ ಓದಿದ. ಆ ಕೆಂಪು ಸ್ಕಾರ್ಫ್ ಕರವಸ್ತ್ರ ಕೈಯಿಂದ ಬಿಡಿಸಿದ ಚಿತ್ರ ಎಲ್ಲವನ್ನೂ ಮತ್ತೆ ಕೈಗೆತ್ತಿಕೊಂಡು ಪರಿಶೀಲನಾ ದೃಷ್ಟಿಯಿಂದ ನೋಡಿದಾಗ ಅವನಿಗೆ ಅವು ಪರಿಯದೇ ನಿಶಾನೆಗಳು , ಆ ಚಿತ್ರದಲ್ಲಿರುವುದು ಪರಿ ಎಂಬುದು ಧೃಡವಾಗಿತ್ತು. ಅಂದರೆ, ಬೀಚ್ ನಲ್ಲಿಯೇ ಹರ್ಷ ಪರಿಯನ್ನು ನೋಡಿದ್ದ! ಪ್ರಸನ್ನನ ಮೊಗದಲ್ಲಿ ಸಂತಸ ಕವಲೊಡೆಯಿತು‌. ಆದರೆ ಪರಿಯ ಜೊತೆಗಿದ್ದ ಹುಡುಗ? ರೋಹಿತ್ ಅಥವಾ ಧ್ರುವ್ ಇರಬಹುದಾ? ಯೋಚಿಸಿದ. ಮುಂದೇನಾಯಿತು? ಕುತೂಹಲದಿಂದ ಮುಂದಿನ ಪುಟ ತಿರುವಿದ.  }

ಕವಿಯೊಬ್ಬ ಹೇಳುತ್ತಾನೆ..

ಯಾರನ್ನೋ ಕಂಡಾಗ ಮೊದಲ ನೋಟದಲ್ಲೇ ನಮ್ಮನ್ನು ನಾವೇ ಭೇಟಿಯಾದಂತಹ ಭಾವನೆ ಪ್ರೀತಿಯಂತೆ.. ಯಾರದೋ ಕಣ್ಣಲ್ಲಿ ನಮ್ಮದೇ ಪ್ರತಿಬಿಂಬ ಮೂಡಿದರೆ ಅದು ಪ್ರೀತಿಯಂತೆ.., ಯಾರನ್ನೋ ತಿಳಿದುಕೊಳ್ಳಲು ಹೋಗಿ ನಮಗೆ ನಾವೇ ಪರಿಚಿತರಾದರೆ ಅದು ಪ್ರೀತಿಯಂತೆ.. ಅವರ ಕಣ್ಣಲ್ಲಿ ನಮಗಾಗಿ ಕಾಣುವ ಪ್ರೀತಿ ನೋಡಿ ನಮ್ಮ ಮೇಲೆ ನಮಗೆ ಒಲವಾದರೆ ಅದು ಪ್ರೀತಿಯಂತೆ.. ಒಬ್ಬರೊಡನೆ ಮಾತನಾಡುವಾಗ ಸಮಯದ ಪರಿವೆ ಇರದ‌ಂತಹ ಭಾವನೆ ಪ್ರೀತಿಯಂತೆ.. ಒಂದು ಜೀವಕ್ಕಾಗಿ ನಮ್ಮ ಜೀವ ಜೀವನವನ್ನು ಪಣಕ್ಕಿಟ್ಟು ಹೋರಾಡುವ ಶಕ್ತಿ ಪ್ರೀತಿಯಂತೆ..

ನಾನವಳ ಜೊತೆಗೆ ಆಗ ಮಾತಾಡಲಿಲ್ಲ ನಿಜ, ಆದರೆ ಈ ಮೊದಲು ತುಂಬಾ ಮಾತನಾಡಿದ ಹಾಗೆ ಕಲ್ಪನಾತ್ಮಕ ದೃಶ್ಯಗಳು ಅಸ್ಪಷ್ಟವಾಗಿ ಗೋಚರಿಸಿದವು. ಅವಳ ಕಣ್ಣಲ್ಲಿ ನನ್ನನ್ನ ನಾನು ಕಂಡಿದ್ದೆ. ಅವಳ ನಗುವಿಗೆ ನಾನು ಅನುರೂಪಿಯಾಗಿದ್ದೆ. ಹಾಗಾದರೆ ನನಗೆ ಅವಳ ಮೇಲೆ ಒಲವಾಗಿತ್ತಾ? ಅವಳ ಒಲವ ಸಾನಿಧ್ಯ ಬೇಕು ಎನ್ನಿಸುತ್ತಿತ್ತಾ? ಪ್ರಶ್ನೆಗೆ ಉತ್ತರ ಸಿಗುವ ಮೊದಲೇ ಅಚಾನಕ್ಕಾಗಿ ಆಕೆ ಕೂಡ ನನ್ನೆಡೆಗೆ ತಿರುಗಿ ನೋಡಿ ಬಿಟ್ಟಳು. ಅವಳ ನೋಟವನ್ನು ಎದುರಿಸಲಾಗದೇ ನನಗೇನೋ ಗೊಂದಲ ಉಂಟಾಯಿತು, ತಪ್ಪಿತಸ್ಥ ಭಾವನೆಯಿಂದ ಮುಖ ತಿರುಗಿಸಿ ಹೊರಟು ಬಿಟ್ಟಿದ್ದೆ. ಮತ್ತೇ ಮತ್ತೇ ಅವಳನ್ನ ನೋಡಬೇಕು ಎನ್ನಿಸುವ ಉದ್ವೇಗವನ್ನು ತುಂಬಾ ಕಷ್ಟ ಪಟ್ಟು ನಿಗ್ರಹಿಸಿ ಮುನ್ನಡೆದೆ.

ಆ ಸಂಜೆ ಮುಂಬೈಗೆ ವಾಪಸ್ ಹೊರಡಲು ಎಲ್ಲಾ ಸಿದ್ದತೆಯಾಗಿತ್ತು. ಮಾನ್ವಿ ಕೂಡ ಕರೆ ಮಾಡಿ ಬೇಗ ಬರಲು ಅವಸರಿಸಿದ್ದಳು. ಕಾರು ಎದುರು ಬಂದು ನಿಂತಿರಲು, ಒಲ್ಲದ ಮನಸ್ಸಿನಿಂದ ಹತ್ತಿ ಕುಳಿತಿದ್ದೆ.

ಅವಳನ್ನ ಕಂಡ ಖುಷಿಗೋ ಅಥವಾ ಅವಳಿಂದ ದೂರಾಗುತಿಹ ದುಃಖಕ್ಕೋ, ಎದೆಬಡಿತ ಮಿತಿಮೀರಿ ಹೊಡೆದುಕೊಳ್ಳುತೊಡಗಿತ್ತು. ಕ್ಷಣ ಕ್ಷಣಕ್ಕೂ ವೇದನೆಯಿಂದ ಮನಸ್ಸು ಪರಿತಪಿಸುತ್ತಿತ್ತು. 'ನಾನು ಅವಸರಿಸಿ ತಪ್ಪು ಮಾಡಿಬಿಟ್ಟೆ' ದಾರಿಯಲ್ಲಿ ಹೊರಡುವಾಗ ಅನ್ನಿಸಿತ್ತು. ಒಮ್ಮೆ ಅವಳೊಂದಿಗೆ ಮಾತಾಡಬೇಕಿತ್ತು. ನನ್ನರಿವಿಗೆ ನಿಲುಕದ ಬದುಕಿನ ತಿರುವುಗಳಲ್ಲಿ ಅವಳ ಪಾತ್ರವೇನಾದರೂ ಇರಬಹುದಾ? ಅರ್ದ ದಾರಿಯಲ್ಲಿ ಬಂದರೂ ಕೆಲವೇ ನಿಮಿಷಗಳಲ್ಲಿ  ನನ್ನ ಆಜ್ಞೆಯಂತೆ ಕಾರು ಮತ್ತೆ ಬೀಚ್ ಕಡೆಗೆ ಹೊರಳಿತ್ತು. ಅವಳಿಗಾಗಿ ಅರಸುತ್ತಾ ಇಡೀ ಬೀಚ್  ಅಲೆದಾಡಿದೆ. ಆದರೆ ಅವಳಂತೂ ಸಿಗಲಿಲ್ಲ. ಅಮೂಲ್ಯವಾದದ್ದನ್ನು ಕಳೆದುಕೊಂಡವನಂತೆ ಅವಳು ಕೂತಿದ್ದ ಅದೇ ಬೆಂಚ್ ಮೇಲೆ ಸೋತು ಕುಳಿತು ಬಿಟ್ಟೆ.

ಆಗ ನೋವಿಗೆ ಸಾಂತ್ವನ ಹೇಳುವಂತೆ  ಕೆಂಪು ಸ್ಕಾರ್ಫ್ ಒಂದು ಕೈಗೆ ತಾಕಿತ್ತು. ಅದು ಅವಳದೇ.. ಅದರ ಸ್ಪರ್ಶ ಘಮ ಅನುಭೂತಿ ತುಂಬಾ ಪರಿಚಿತ ಎನಿಸಿತ್ತು. ನಾನು ಮಗ್ನನಾದೆ.‌ ಕನಸಲ್ಲಿ ಕಂಡ ಅಸ್ಪಷ್ಟ ಚಹರೆಗೆ ಅವಳ ರೂಪ ನೀಡಿದ್ದೆ. ನಿಜವೋ? ಕೇವಲ ಭ್ರಮೆಯೋ? ಊಹ್ಮೂ ತರ್ಕಗಳಿಗೆ ನನ್ನಲ್ಲಿ ವ್ಯವಧಾನವಿಲ್ಲ. ಎದ್ದು ಹೊರಡುವಾಗ  ಕಾಲಡಿಯಲ್ಲಿ ಬಿದ್ದಿದ್ದ ಕಡಲ ಶಂಕು ಚಿಪ್ಪುಗಳನ್ನು ಆಯ್ದುಕೊಂಡು ಜೋಪಾನವಾಗಿ ಜೇಬಿಗಿಳಿಸಿದ್ದೆ. ಆ ಕ್ಷಣ ನಾನ್ಯಾಕೆ ಹಾಗೆ ಮಾಡಿದೆ? ಈಗಲೂ ಅವುಗಳನ್ನು ಯಾಕೆ ಜತನ ಮಾಡ್ತಿದ್ದಿನಿ? ಅವನ್ನು ನೋಡಿದಾಗಲೆಲ್ಲ ನನಗೇಕೆ ಖುಷಿಯಾಗುತ್ತೆ?  ನನಗೀಗಲೂ ಸ್ಪಷ್ಟತೆ ಇಲ್ಲ .

ಆದರೆ ಆ ಕ್ಷಣದಿಂದ ಹುಚ್ಚುತನವೊಂದು ಮೈಗೂಡಿತ್ತು. ನಾನವಳನ್ನು ಪ್ರೀತಿಸಲು ಆರಂಭಿಸಿದ್ದೆ. ಅವಳಿಗಾಗಿ ಏನು ಬೇಕಾದರೂ ಮಾಡಲು ಸಿದ್ದನಿದ್ದೆ. ಹಠಮಾರಿತನ ಪೈಪೋಟಿಗಿಳಿದು ಅವಳು ನನ್ನವಳೇ.. ಎಂದು ಕೂಗಿ ಹೇಳುತ್ತಲಿತ್ತು. ಮುಂಬೈಗೆ ಹೊರಡುವದನ್ನು ನಿರಾಕರಿಸಿದೆ. ಸಂಜೆಯ ಫ್ಲೈಟ್ ಟಿಕೆಟ್ ರದ್ದಾದವು. ಆ ಇಡೀ ರಾತ್ರಿ ಅದೇ ಬೀಚ್ ನ ಬೆಂಚ್ ಮೇಲೆ ಕುಳಿತು ಅವಳಿಗಾಗಿ ಹಂಬಲಿಸಿದ್ದೆ. ಮರಳಿ ಮನೆಗೆ ಬರಲು ತಿಳಿಸುವ ಒತ್ತಾಯದ ಕರೆಗಳಿಗೆ ಕೊರತೆಯಿರಲಿಲ್ಲ. ಯಾವುದಕ್ಕೂ ಪ್ರತಿಕ್ರಿಯೆ ನೀಡುವ ಮನಸ್ಥಿತಿಯಲ್ಲಿ ನಾನಿರಲಿಲ್ಲ. ಕೊನೆಗೆ ನನ್ನನ್ನು ಮನೆಗೆ ಕರೆದೊಯ್ಯಲು ಮಾನ್ವಿ ಸ್ವತಃ ತಾನೇ ಬಂದಳು.

ನನ್ನ ನಿರ್ಧಾರ ಸ್ಪಷ್ಟವಾಗಿತ್ತು. ಆ ಸಂಜೆಯ ಅನುಭವವನ್ನು ವಿವರಿಸಿ, ನನಗೆ ಆ ಹುಡುಗಿ ಮೇಲೆ ಒಲವಾಗಿದೆ. ಬಹುಶಃ ಈ ಮೊದಲೇ ಅವಳು ನನಗೆ ಪರಿಚಯವೂ ಇರಬಹುದು. ನಿನ್ನೊಂದಿಗೆ ಮದುವೆ ಅಸಾಧ್ಯವಾದ ಮಾತು! ಖಡಾಖಂಡಿತವಾಗಿ ನುಡಿದಿದ್ದೆ. ಒಂದೇ ನೋಟದಲ್ಲಿ ಪ್ರೀತಿ ಹೇಗೆ ಸಾಧ್ಯ? ಅವಳು ಯಾರೆಂದೂ ತಿಳಿಯದೆ ಅವಳಿಗಾಗಿ ಹೀಗೆ ಕಾಯುವುದು ವ್ಯರ್ಥ! ಮಾನ್ವಿ ವಿರೋಧಿಸಿದಳು. ನಾನು ಹಿಡಿದ ಪಟ್ಟು ಬಿಡಲಿಲ್ಲ. ಕುಳಿತ ಜಾಗದಿಂದ ಕದಲಲಿಲ್ಲ.

ಇರುಳು ಸರಿದು ಮುಂದೆ ಹೋಗುತ್ತಲೇ ಇತ್ತು. ನಮ್ಮಿಬ್ಬರ ವಾದ ವಿವಾದಗಳೂ.. ಅದಕ್ಕೆ ಕೊನೆಗಾಣುವಂತೆ ಮಾನ್ವಿ ಒಂದು ಸಮಾಧಾನ ನುಡಿದಳು.

"ನಿಜವಾಗಿಯೂ ಅವಳು ನಿನಗೆ ಪರಿಚಯ ಅನ್ನುವ ಹಾಗಿದ್ದರೆ ಎಲ್ಲಿದ್ದರೂ ನಿನ್ನನ್ನು ಹುಡುಕಿಕೊಂಡು ಬರಬೇಕಿತ್ತಲ್ಲವಾ? ಇಷ್ಟು ದಿನ ಯಾಕೆ ಬರಲಿಲ್ಲ? ಈಗಲೂ ನಿನ್ನನ್ನು ನೋಡಿದ ತಕ್ಷಣ ನಿನ್ನ ಬಳಿ ಬಂದು ಮಾತನಾಡಿಸಿದಳಾ? ಇಲ್ವಲ್ಲಾ... ಇದೆಲ್ಲಾ ನಿನ್ನ ಭ್ರಮೆಯಷ್ಟೇ! ಯಾರಿಗೊತ್ತು, ಆ ಹುಡುಗಿಗೆ ಈಗಾಗಲೇ ಮದುವೆ ಆಗಿರಬಹುದು. ಜೊತೆಗಿದ್ದ ಹುಡುಗ ಅವಳ ಗಂಡ ಇರಬಹುದು! ಇಲ್ಲದ್ದನ್ನು ಯೋಚನೆ ಮಾಡಿ ಸುಮ್ಮನೆ ಮೈಂಡ್ ಡಿಸ್ಟರ್ಬ್ ಮಾಡ್ಕೋಬೇಡ. ನಮ್ಮ ಮದುವೆಗೆ ಇನ್ನೂ ದಿನಗಳಿವೆ. ಈಗ ಇವೆಲ್ಲ ಕ್ಷುಲ್ಲಕ! ಆದರೂ ನಿನ್ನ ಪ್ರೀತಿಯನ್ನು ನಾನು ಗೌರವಿಸ್ತಿನಿ. ನಮ್ಮ ಮದುವೆಗೆ ಮೊದಲೇ ಮತ್ತೆ ಆ ಹುಡುಗಿ ನಿನಗೆ ಸಿಕ್ಕಿದಾದಲ್ಲಿ, ಅವಳು ನಿನ್ನನ್ನು ಪ್ರೀತಿಸಿದ್ದೇ ಆದಲ್ಲಿ ನಾನೇ ಮುಂದೆ ನಿಂತು ನಿಮ್ಮಿಬ್ಬರ ಮದುವೆ ಮಾಡಿಸ್ತಿನಿ. ಆದರೆ ಅವಳಿಗಾಗಿ ನೀ ಹೀಗೆ ಆರೋಗ್ಯ ಹಾಳು ಮಾಡಿಕೊಳ್ಳೊದು ನನಗಿಷ್ಟವಿಲ್ಲ‌. ಈ ವಿಷಯ ಮನೆಯಲ್ಲಿ ಗೊತ್ತಾದ್ರೆ ಎಲ್ಲರ ನೆಮ್ಮದಿ ಕೂಡ ಹಾಳು. ಈಗ ನೀನೇ ಯೋಚನೆ ಮಾಡು, ನಿನ್ನ ನಿರ್ಧಾರದಿಂದ ಮನೆಯವರ ಪಾಡು ಏನಾಗಬಹುದೆಂದು"

ಅಲ್ಲಿಯವರೆಗೂ ತೀರಾ ಸ್ವಾರ್ಥಿಯಾಗಿದ್ದ ನಾನು ಅವಳ ಮಾತಿಗೆ ಕರಗಿ, ಮನೆಯವರೆಲ್ಲರ ಹಿತದೃಷ್ಟಿಯಿಂದ ತಲೆದೂಗಿದ್ದೆ. ಮರುದಿನ ಬೆಳಿಗ್ಗೆ ಮೊದಲನೇ ಫ್ಲೈಟ್ ಗೆ ಮುಂಬೈಗೂ ಬಂದಾಯಿತು. ಆದರೆ ಮಂಗಳೂರಿನಲ್ಲಿ ಕಂಡ ಹುಡುಗಿ ಮತ್ತೆ ಇಲ್ಲಿ ಸಿಗಬಹುದಾ? ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ.


ಇಷ್ಟು ಓದಿದವನ ಕೈ ಮುಷ್ಟಿ ಬಿಗಿಯಾಯಿತು ಕೋಪದಿಂದ. ಮಾನ್ವಿಯ ಇಬ್ಬದಿಯ ಷರತ್ತುಗಳ ಆಟ ಈಗ ಪ್ರಸನ್ನನಿಗೆ ಅರ್ಥವಾಗಿ ಹೋಯಿತು. "ಹರ್ಷನಿಗೆ ಪರಿ ಎದುರಾದರೆ ಮಾನ್ವಿಯ ಗೇಮ್ ಓವರ್! ಅದೇ ಕಾರಣಕ್ಕಾಗಿ ಪರಿಗೆ ಹರ್ಷನೆದುರಿಗೆ ಬರದಿರುವಂತೆ ಏನೇನೋ ನೀತಿ ನಿಯಮ ಷರತ್ತು ಸುಡುಗಾಡು ಎಂದು ಹೇಳಿ ಅವಳನ್ನು ತಡೆದಿದ್ದು!! ಎಂಥ ಖತರ್ನಾಕ್ ಇದೀಯೇ ಪಿಶಾಚಿ" ಮನಸ್ಸಲ್ಲೇ ಗೊಣಗಿದ.

ಓದಲು  ಮುಂದಿನ ಪುಟ ತಿರುಗುವಷ್ಟರಲ್ಲಿ  ಯಾರೋ ಮೆಟ್ಟಿಲೇರಿ ಬಂದ ಸದ್ದಾಯಿತು. ಎಲ್ಲ ವಸ್ತುಗಳನ್ನು ಯಾತಾರೀತಿ ಇಟ್ಟ ಪ್ರಸನ್ನ ಒಂದೇ ನೆಗೆತದಲ್ಲಿ ಮಂಚದ ಹಿಂದೆ ಅವಿತುಕೊಂಡ. ಡೇವಿಡ್ ಒಳಗೆ ಬಂದವನೇ ಹರ್ಷ ಮಲಗಿದ್ದನ್ನು ಖಚಿತ ಪಡಿಸಿಕೊಂಡು ಯಾರೊಂದಿಗೊ ಫೋನ್‌ಲ್ಲಿ ಮಾತಾಡುತ್ತ ನಿಂತಿದ್ದ. ಏದುಸಿರು ಬಿಡುತ್ತ ಅಲ್ಲಿಗೆ ಓಡಿ ಬಂದ ಮಾನ್ವಿ 'ಏನ್ ಮಾಡೋಕೆ ಬಂದೆ?' ಅವನನ್ನು ಗದರಿದಳು. ಆತ ಹೆದರಲಿಲ್ಲ, ಕೊಂಕುನಗೆ ಬೀರಿ ಸೀರಿಂಜ್ ಒಂದನ್ನು ಕೈಗೆತ್ತಿಕೊಂಡು

"ಇವನು ಇವತ್ತು ಮಾತ್ರೆ ನುಂಗಿಲ್ಲ. ಅದ್ಕೆ ಸರ್.." ಅವನ ಮಾತಿಗೂ ಮೊದಲೇ

"ಇದೆಲ್ಲಾ ಬೇಡ. ಮಾತ್ರೆ ತಗೊಂಡು ಬಾ. ನಾನು ಕೊಡ್ತಿನಿ"

ನಿದ್ರೆಗಣ್ಣಿನಲ್ಲಿದ್ದ ಹರ್ಷನನ್ನ ಎಬ್ಬಿಸಿ ತಲೆ ಎತ್ತಿ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಕೆಲನಿಮಿಷದಲ್ಲಿ ಡೇವಿಡ್ ತಂದುಕೊಟ್ಟ ಮಾತ್ರೆಯನ್ನು ನುಂಗಿಸಿ ನೀರು ಕುಡಿಸಿ ಮಲಗಿಸಿದಳು. ತೃಪ್ತಿಗೊಂಡ ಡೇವಿಡ್ ಅಲ್ಲಿಂದ ಹೊರಟು ಹೋಗುತ್ತಿದ್ದಂತೆ  ಮಂಚದ ಹಿಂದೆ ಅವಿತ ಪ್ರಸನ್ನನ ಎದುರಿಗೆ ಕೈಕಟ್ಟಿ ನಿಂತ ಮಾನ್ವಿ ಕೋಪದಿಂದ ಕಿಡಿ ಕಾರಿದಳು.

"ಸರ್ಪ್ರೈಜ್...." ಕಳ್ಳತನ ಸಿಕ್ಕಿಬಿದ್ದರೂ ತೋರಗೊಡದೇ, ಉತ್ಸಾಹದಿಂದ ಅವಳೆದುರು ನಿಂತ.

"ಈ ರಾತ್ರಿ ವೇಳೆಯಲ್ಲಿ ಈ ರೂಮಲ್ಲಿ ನಿನಗೇನು ಕೆಲಸ?"

"ಆ್ಮ..... ಹೈಡ್ ಆ್ಯಂಡ್ ಸಿಕ್ ಆಟ ಆಡ್ತಿದ್ದೆ ಒಬ್ಬನೇ" ಉಡಾಫೆ ಮಾತಾಡಿದ.ಕೋಪ ಬಂದಿದ್ದರೂ ಸಹಜವಾಗಿ ಮಾತನಾಡಿದ್ದ. ಅವಳಿಗೆ ಅನುಮಾನ ಬರದಿರಲೆಂದು. ಆಕೆ ಅದೇ ಪ್ರಶ್ನೆ ಪುನರಾವರ್ತಿಸಿದಳು.

"ಅದೂ..‌. ಹ್ಮಾ, ನನ್ನ ರೂಮಲ್ಲಿ ಬಾತ್ರೂಂ ಡೋರ್ ಸ್ಟ್ರಕ್ ಆಗಿತ್ತು. ಅದ್ಕೆ ಇಲ್ಲಿ....."

"ಅದ್ಕೆ ಇಲ್ಲಿ,, ಮಂಚದ ಹಿಂದೆ ..?" ಅವನ ಸುಳ್ಳಿಗೆ ಅವಳದು ಅಪಹಾಸ್ಯ.

ಏನೂ ಹೇಳಲಾಗದೆ ಪ್ರಸನ್ನ ಗಲಿಬಿಲಿಯಿಂದ ಮುಖ ಉಜ್ಜಿಕೊಳ್ಳುತ್ತ ಆಕಳಿಸಿದ ನಿದ್ರೆ ಬಂದವನಂತೆ. ಅವನ ಕೈಹಿಡಿದು ಆಚೆ ಎಳೆದುಕೊಂಡು ಹೋದ ಮಾನ್ವಿ ರೂಂ ಬಾಗಿಲು ಹಾಕಿ "ತುಂಬಾ ರಾತ್ರಿಯಾಗಿದೆ ಹೋಗಿ ಮಲಗು" ತೋರ್ಬೆರಳು ಆದೇಶಿಸಿತು. ಅವನು ಹಿಂದಿಂದೆ ತಿರುಗಿ ನೋಡುತ್ತ ತನ್ನ ರೂಂ ಸೇರುವವರೆಗೂ ಕಣ್ಗಾವಲು ಕಾದವಳು ಎಷ್ಟೋ ಸಮಯದ ಪಹರೆಯ ನಂತರ ತನ್ನ ಕೋಣೆ ಸೇರಿದಳು.

ಇಷ್ಟು ದಿನ ಹರ್ಷನಿಗೆ ಹಳೆಯದನ್ನೆಲ್ಲ ಹೇಳುವುದು ಹೇಗೆ ಎಂಬ ಯೋಚನೆಗೆ ಸಿಲುಕಿದ ಪ್ರಸನ್ನನ ದಾರಿ ಈಗ ಸುಗಮವಾಯಿತು. ಯಾವುದೋ ಒಂದು ನೆಪದಲ್ಲಿ ಪರಿ ಒಮ್ಮೆ ಹರ್ಷನಿಗೆ ಎದುರಾದರೂ ಸಾಕು ಈ ಮಾನ್ವಿ ಕುತಂತ್ರ ಅಲ್ಲಿಗೆ ಮುಗಿದಹಾಗೆ! ಅದಕ್ಕೆ ಪೂರ್ವ ಸಿದ್ದತೆಯಂತೆ ಕೂಡಲೇ ವಿವೇಕ್ ಗೆ ಕರೆ ಮಾಡಿ ಮರುದಿನ ಪರಿಯನ್ನು ಹೇಗಾದರೂ ಒಪ್ಪಿಸಿ ಮೂವಿಗೆ ಕರೆದುಕೊಂಡು ಬರುವಂತೆ ಹೇಳಿದ. ವಿವೇಕ್ ಅದಕ್ಕೆ ಹ್ಮೂಗುಟ್ಟುವ ಜೊತೆಗೆ ಆ ದಿನ ಪರಿ ಹೇಳಿದ ವೈಭವ್ ಶುಕ್ಲಾ ಬಗ್ಗೆ ಎಲ್ಲ ವಿಚಾರವನ್ನು ಅವನಿಗೆ ತಿಳಿಸಿದ.

ಪ್ರಸನ್ನನಿಗೆ ಪಾರ್ಟಿಯಲ್ಲಿ ನೋಡಿದ ಅವನ ಮುಖ, ಮಾನ್ವಿ ಜೊತೆಗೆ ಮಾತಾಡುವ ದೃಶ್ಯ ನೆನಪಾಗಿ ಮೈ ಸೆಟೆದುಕೊಂಡಿತು. ಹರ್ಷನ ಈ ಸ್ಥಿತಿಗೆ ಭಗ್ನ ಪ್ರೇಮಿಗಳಿಬ್ಬರೂ ಕಾರಣವೆಂದು ಭಾವಿಸಿದ. ಇದಕ್ಕೆಲ್ಲ ಶೀಘ್ರದಲ್ಲೇ ಅಂತ್ಯ ಘೋಷಿಸಿ ಇಲ್ಲಿಂದ ಬೇಗ ಮನೆಗೆ ಮರಳುವ ಮನಸ್ಸಾಯಿತವನಿಗೆ. ಆದರೆ ತೀರ ಸರಳವಾಗಿ ಪರಿಗಣಿಸಿದ ಹರ್ಷನ ಕೊಲೆಯ ಹಿಂದಿದ್ದ ಭೂಗತ ಜಗತ್ತಿನ ಕರಾಳತೆಯ ಅರಿವು ಅವನಿಗಿರಲಿಲ್ಲ. ಓದದೆ ಉಳಿದ ಡೈರಿಯ ಪುಟಗಳಲ್ಲಿ ಅಡಗಿದ್ದ ಹರ್ಷನ ಮನದ ಮಾತುಗಳು ಕೂಡ ಅವನಿಗೆ ತಿಳಿಯದೆ ಅಪೂರ್ಣವಾದವು.

ಮುಂದುವರೆಯುವುದು...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...