ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-43


ಹೊಂಗಿರಣದ ಸೂರ್ಯನ ಕಾಂತಿ ವಸುಧೆಯನ್ನು ಪುಳಕಗೊಳಿಸಿತ್ತು. ಹಕ್ಕಿಗಳ ಇಂಚರಕ್ಕೆ ಮನಸ್ಸು ಕುಣಿಯುತ್ತಿತ್ತು. ಪವನ ಮಂದವಾಗಿ ಬೀಸುತ್ತ ಶ್ವಾಸದಲ್ಲಿ ಜೀವ ತುಂಬುತ್ತಿತ್ತು. ಹಿತವಾದ ಮುಂಜಾವಿಗೆ ಇಷ್ಟು ಸಾಕೇ?? ಇನ್ನೊಂದಿದೆ.. ನಮ್ಮ ಪ್ರೀತಿಪಾತ್ರರ ಒಂದು ಮುಗುಳ್ನಗುವಿನ ನೋಟ! ಅದೊಂದು ಸಿಕ್ಕರೆ ಆ ದಿನ ಸಂಪೂರ್ಣ!

ಪರಿ ಕೂಡ ಅದೇ ಒಂದು ಆಸೆಯಿಂದ ಎಂದಿನಂತೆ ಬೀಚ್ ಗೆ ಬಂದಿದ್ದಳು ಮಕ್ಕಳ ಸಮೇತ. ಮಕ್ಕಳು ಮರಳಿನಲ್ಲಿ ಗೂಡು ಕಟ್ಟುವ ಆಟದಲ್ಲಿ ತೊಡಗಿದ್ದರು. ಪರಿ ಹರ್ಷನ ಆಗಮನಕ್ಕೆ ಕಾದು ನಿಂತಿದ್ದಳು. ಎಷ್ಟು ಸಮಯವಾದರೂ ಹರ್ಷ ಬರದಿದ್ದಾಗ ಪ್ರಸನ್ನನನ್ನು ಕರೆ ಮಾಡಿ ವಿಷಯ ತಿಳಿದುಕೊಂಡಳು. ನಿರಾಸೆಯಿಂದ ಅವಳ ಮುಖ ಬಾಡಿತು.

"ಅಖಿ, ಇವತ್ತು ಪ್ರಿನ್ಸ್ ಬರಲ್ವಂತೆ!! ಬಾ ಮನೆಗೆ ಹೋಗೋಣ" ನಿಖಿಲ್ ಹೇಳಿದ

"ಯಾಕಂತೆ? ಪ್ರಿನ್ಸ್‌ಗೇನು ಬುದ್ದಿ ಇಲ್ಲವಾ... ನನ್ನ ಹೊಸ ಡ್ರೆಸ್ ನೋಡೋಕಾದ್ರೂ ಬರ್ಬೇಕು ತಾನೇ! ಛೇ, ನಮ್ಮ ಡ್ರಾಮಾ ಎಲ್ಲಾ ವೇಸ್ಟ್‌ ಆಯ್ತು.." ಬೇಸರಿಸಿಕೊಂಡಳು ಅಖಿಲಾ

"ಅವನು ಪ್ರಿನ್ಸ್ ಕಣೇ ಗೂಬೆ! ನಿನ್ನ ಸರ್ವಂಟ್ ಅಲ್ಲಾ, ನೀ ಹೇಳಿದಂಗೆ ಕೇಳೋಕೆ!" ಛೇಡಿಸಿದ ನಿಖಿಲ್

"ಪರವಾಗಿಲ್ಲ ಕಿಲ್ಲರ್ಸ್, ಪ್ರಿನ್ಸ್ ಇನ್ನೊಮ್ಮೆ ಸಿಕ್ಕಾಗ ಇದನ್ನ ನೆನಪಿಸೋಣ ಒಕೆ. ಇಬ್ಬರೂ ಇಲ್ಲೇ ನಿಂತಿರಿ ಕಾರ್ ತಗೊಂಡು ಬರ್ತಿನಿ. ಮನೆಗೆ ಹೋಗೋಣ" ಸಮಾಧಾನ ಮಾಡಿ ಹೋದಳು ಪರಿ

" ಪಾಪ ಏಂಜಲ್ ಎಲ್ಲಿದ್ದಾಳೋ ಹೇಗಿದ್ದಾಳೋ?  ಈ ಪ್ರಿನ್ಸ್ ಗೆ ನಿಜವಾಗ್ಲೂ ಏನೂ ನೆನಪಿಲ್ವಾ?" ಕಾಲಿಂದ ಮರಳು ಚಿಮ್ಮಿ ಆಟವಾಡುತ್ತ ಕೇಳಿದಳು ಅಖಿಲಾ

"ಹೀಗೆ ಬಿಟ್ಟರೆ ಪ್ರಿನ್ಸ್ ಮತ್ತೆ ಏಂಜಲ್ ಒಂದಾಗೋದೇ ಇಲ್ವೆನೋ" ಅವನು ಬೇಸರಿಸಿಕೊಂಡ

"ನಾನ್ ಬಿಟ್ ಬಿಡ್ತಿನಾ‌... ಪ್ರಿನ್ಸ್ ಇನ್ನೊಮ್ಮೆ ನನ್ನ ಕೈಗೆ ಸಿಗಲಿ, ಎಲ್ಲಾ ಕಥೆನೂ ಹೇಳಿ ಬಿಡ್ತಿನಿ. ತಲೆಗೆ ಸುತ್ತಿಗೆ ತಗೊಂಡು ಕುಟ್ಟಿ ಕುಟ್ಟಿ ಹೊಡೆದಾದ್ರೂ ಏಂಜಲ್ ನೆನಪು ಮಾಡಿಸ್ತಿನಿ ನೋಡ್ತಿರು." ಮುಂಗೈ ಗುದ್ದಿಕೊಳ್ಳುತ್ತ ನುಡಿದಳು

"ಅಲ್ಲಿಗೇ... ಪ್ರಿನ್ಸ್ ಕಥೆ ಗೋವಿಂದ.." ಅಖಿಲಳ ಮಾತಿಗೆ ನಿಖಿಲ್ ನಕ್ಕು ನುಡಿದ

"ಹೌದು, ಈ ಏಂಜಲ್  ಹೇಗಿರ್ತಾಳೆ ನೋಡೋಕೆ? ಏಂಜಲ್ ಗೆ ವಿ‌ಂಗ್ಸ್ ಇರುತ್ತಲ್ವಾ? ಅವಳನ್ನ ಈಜಿಯಾಗಿ ಹುಡುಕ್ಬಹುದಾ?" ಕುತೂಹಲದಿಂದ ಕೇಳಿದಳು

"ಹೇಗೂ ಸುತ್ತಿಗೆಯಿಂದ ಹೊಡೆದು ನೆನಪು ಮಾಡಿಸ್ತಿಯಲ್ಲ, ಆಗ ಪ್ರಿನ್ಸ್‌ನೇ ಎಲ್ಲಾ ಹೇಳ್ತಾನೆ, ಕೇಳು. ಹ್ಹಹ್ಹಹ್ಹಾ...." ನಕ್ಕ ನಿಖಿಲ್. ಅಖಿಲಾ ಅಪಮಾನಗೊಂಡು ಮೂತಿಯುಬ್ಬಿಸಿದಳು.

ಪರಿ ಕಾರ್ ತಂದು ಎದುರು ನಿಲ್ಲಿಸಲು ಇಬ್ಬರೂ ಆ ವಿಷಯವನ್ನು ಅಲ್ಲಿಯೇ ಮರೆತು ಸೀಟ್ ನಲ್ಲಿ ಕುಳಿತರು. ಕಾರು ಚಲಿಸಿತು.

*********

ಬೆಳಿಗ್ಗೆ ಎದ್ದಾಗಿನಿಂದ ಮಾನ್ವಿಗೆ ಹರ್ಷನನ್ನ ತನ್ನ ಮನೆಗೆ ಕರೆದುಕೊಂಡು ಹೋಗುವ ಧಾವಂತ. ಅದಾಗಲೇ ಪೋರ್ಟಿಕೋದಲ್ಲಿ ರಘುನಂದನ್ ಅವರ ಆಜ್ಞಾಧಾರಿತ ಕಾರು ಸಿದ್ದವಾಗಿ ನಿಂತಿತ್ತು. ಲಗೇಜ್‌ನ್ನೆಲ್ಲ ಕೂಡ ಪ್ಯಾಕ್ ಮಾಡಿಯಾಗಿತ್ತು. ಆದರೆ ಆ ದಿನ ಜಾಗಿಂಗ್ ನೆಪದಲ್ಲಿ ಮಕ್ಕಳ ತುಂಟತನ ಕಾಣುವ ಅವಕಾಶ ಕೈ ಜಾರಿ ಹೋಗಿದ್ದಕ್ಕೆ ಹರ್ಷ ನಿರಾಶನಾಗಿದ್ದ. ಆದರೂ ಕೊನೆಯ ಕ್ಷಣದಲ್ಲಿ ಎದುರುಗೊಳ್ಳಬಹುದಾದ ಅವಳ ಚಂದದ ಉಡುಗೊರೆಯಾದರೂ ಕೈಗೆ ಸಿಕ್ಕಿತೆಂಬ ದೂರದ ಆಸೆಯೊಂದು ಮನದಿ ಪುಟಿದು ಉತ್ತೇಜನ ನೀಡಿತು.

ಅವನು ಕ್ಷಣ ಕ್ಷಣವೂ ಕೂತುಹಲ ಕೌತುಕದ ನಿರೀಕ್ಷೆಯಲ್ಲಿ ಕಳೆದದ್ದೇ ಆಯಿತೇ ಹೊರತು ಯಾವ ಕಾಣಿಕೆಯೂ ಕೈ ಸೇರಲಿಲ್ಲ. ಒಂದು ನಿರಾಸೆಗೆ ಮತ್ತೊಂದು ಹತಾಶೆ ಉಚಿತವಾಗಿತ್ತಷ್ಟೇ;

ಬಹು ವಿಜೃಂಭಣೆಯಿಂದ ಅಳಿಯನನ್ನು ಸ್ವಾಗತ ಮಾಡಿದ ರಘುನಂದನ್ ಅವನ ಆತಿಥ್ಯದಲ್ಲಿ ಯಾವ ಕೊರತೆಯನ್ನು ಮಾಡಿರಲಿಲ್ಲ.  ಹಾಗೆಯೇ ಪ್ರಸನ್ನನನ್ನು ಅವನಿಂದ ದೂರವೇ ಇಡುವ ಎಲ್ಲಾ ಯೋಜನೆಗಳು ಸಿದ್ದವಿದ್ದವು. ಸಂಬಂಧಿ ಸ್ನೇಹಿತರ ಗುಂಪೊಂದು ಸದಾ ಅವರ ಬೆಂಗಾವಲಾಗಿರುತ್ತಿತ್ತು. ಹಾಡು ಹರಟೆ ತಮಾಷೆಗಳ ಮಧ್ಯೆ ಮದುವೆಯ ತಯಾರಿಗಳು ನಡೆಯುತ್ತಿದ್ದವು. ರಘುನಂದನ್ ಮನೆಗೆ ಕಾಲಿಟ್ಟ ಘಳಿಗೆಯಿಂದ ಒಂದು ರೀತಿಯ ಪಂಜರದಲ್ಲಿ ಬಂಧಿಯಾದ ಹಕ್ಕಿಯ ಪರಿಸ್ಥಿತಿ ಉಂಟಾಗಿತ್ತು ಹರ್ಷ-ಪ್ರಸನ್ನನಿಗೆ. ಹೊರಗೆ  ಎಲ್ಲಿಯೂ ಹೋಗಲು ಅವಕಾಶ ಇರಲಿಲ್ಲ. ಹೋದರೂ ಸೆಕ್ಯೂರಿಟಿಯ ಒಂದು ಇಡೀ ದಂಡು ಅವರ ಹಿಂದೆ ಸಜ್ಜಾಗಿ ನಿಂತು ಬಿಟ್ಟಿರುತ್ತಿತ್ತು. ಸಮಯದ ಕಾಲಿಗೆ ಮುಳ್ಳು ಚುಚ್ಚಿದಂತೆ ಮಂದವಾಗಿ ಸಾಗುತ್ತಲಿತ್ತು. ಆ ಮಧ್ಯೆ ಹರ್ಷ ಪ್ರಸನ್ನನ ಮಾತಿಗೆ ಸಿಲುಕದಂತೆ ಕೆಲವು ಆಫಿಸ್ ಜವಾಬ್ದಾರಿಗಳು ಸಹ ಅವನ ಹೆಗಲೇರಿದ್ದವು. ಜೊತೆಗೆ ಹರ್ಷನ ಪರ್ಸನಲ್ ಕೇರ್ ಟೇಕರ್ ಡೇವಿಡ್‌ನ ಹದ್ದಿನ ಕಣ್ಣು ಸತತವಾಗಿ ಅವನ ಮೇಲೆಯೇ ಇರುತ್ತಿತ್ತು.

ಅದಾಗ್ಯೂ  ಮಾನ್ವಿ ಮುಖಾಂತರ ಆ ಸಂಜೆ ಮೂವಿ ನೋಡುವ ನೆಪವೊಡ್ಡಿ ಹೊರಗೆ ಹೋಗಲು ಅವಕಾಶವನ್ನು ಕಲ್ಪಿಸಿದ ಪ್ರಸನ್ನ. ಆಗ ಮಾನ್ವಿಗೆ ಅದರ ಹಿಂದಿನ ವಾಸ್ತವಿಕ ಉದ್ದೇಶ ತಿಳಿದಿದ್ದರೆ ಖಂಡಿತ ಹೊರ ಹೋಗಲು ಒಪ್ಪುತ್ತಿರಲಿಲ್ಲವೆನೋ, ಆದರೆ ಈಗ ಥಿಯೇಟರ್ ನಲ್ಲಿ ಊಹಿಸಲು ಸಾಧ್ಯವಿರದ ಸನ್ನಿವೇಶಗಳಿಗೆ ಸಾಕ್ಷಿಯಾಗುವ ಹೊರತು ಬೇರೆ ದಾರಿಯಿರಲಿಲ್ಲ.

           ******

ಎಸ್ ಆರ್ ಕಂಪನಿಯ ಮೀಟಿಂಗ್ ಹಾಲ್ ನಿಂದ ಶುರುವಾದ ಪರಿಯ ತನಿಖೆ ಕೆಲವು ಗೌಪ್ಯ ಸಂಗತಿಗಳನ್ನು ಹೊರಹಾಕುವಲ್ಲಿ ಯಶಸ್ವಿಯಾಯಿತು. ಹರ್ಷನ ಆ್ಯಕ್ಸಿಡೆಂಟ್ ಹಿಂದೆ ನಿಜವಾಗಿಯೂ ಯಾರ ಕೈವಾಡ ಇರಬಹುದು ಎಂಬ ಸಂದೇಹದಿಂದ ಪರಿ ಆ ದಿನ ಮೀಟಿಂಗ್ ಮುಗಿದ ನಂತರ ಏನೇನೆಲ್ಲ ನಡೆಯಿತು ಎಂಬ ಮಾಹಿತಿ ಕಲೆ ಹಾಕಿದಾಗ ನಿಗೂಢವಾದ ಘಟನೆಗಳ ಅನಾವರಣವಾಯಿತು. ಆ ಪ್ರಕಾರ ಪ್ರಾಜೆಕ್ಟಿಗೆ ಸಂಬಂಧಿಸಿದಂತೆ ಫೈನಲ್ ಮೀಟಿಂಗ್ ನಂತರ ಹರ್ಷ ಮತ್ತು ವೈಭವ್ ಶುಕ್ಲಾ ನಡುವೆ ಸಣ್ಣ ಮನಸ್ತಾಪ ಉಂಟಾಗಿತ್ತು.

ಹರ್ಷನ ಸೆಕ್ರೆಟರಿಗೆ ಶೆಣೈಗೆ ಕರೆ ಮಾಡಿ ಹಳೆಯ ವಿಚಾರಗಳನ್ನು ಕೆದಕಿ ಆ ಬಗ್ಗೆ ಕೇಳಿದಾಗ ಆತ "ಈಗ ಅದೆಲ್ಲಾ ಯಾಕೆ ಬಿಡಿ ಮ್ಯಾಮ್? ಹೋಗಿರೋ ಹರ್ಷ ಸರ್ ಮತ್ತೆ ಸಿಗ್ತಾರಾ" ಎಂದು ಹಾರಿಕೆಯ ಉತ್ತರ ನೀಡಿದ

"ಜಸ್ಟ್ ಶಟ್‌ಪ್ ಮಿ.ಶೆಣೈ, ಕೇಳಿದ್ದಕ್ಕೆ ಮಾತ್ರ ಉತ್ತರ ಕೊಡಿ. ಮೀಟಿಂಗ್ ಮುಗಿದ ನಂತರ ಏನೇನಾಯ್ತು ಪ್ರತಿಯೊಂದು ಡಿಟೇಲ್ ಬೇಕು ನನಗೆ. ಯಾವುದನ್ನು ಮುಚ್ಚಿಡದೆ ಎಲ್ಲಾ ನಿಜ ಹೇಳಿ" ಮೊದಲ ಬಾರಿಗೆ ಅವಳ ಧ್ವನಿಯಲ್ಲಿ ಬಿರುಸುತನ ಕೇಳಿದ್ದನವ. ಗಂಭೀರನಾದ.

"ಅದು ಮ್ಯಾಮ್, ಅವತ್ತು ಮೀಟಿಂಗ್ ಮುಗಿದ ನಂತರ ಹರ್ಷ ಸರ್ ತುಂಬಾ ಸಂತೋಷವಾಗಿದ್ರು. ದೊಡ್ಡ ಪ್ರಾಜೆಕ್ಟ್ ಗೆದ್ದ ಖುಷಿಯಲ್ಲಿದ್ರು‌. ಎಲ್ಲರೂ ಬಂದು ಅವರಿಗೆ ಶೇಕ್ ಹ್ಯಾಂಡ್ ಮಾಡಿ ವಿಷ್ ಮಾಡ್ತಿರೋವಾಗ AGT ಕಂಪನಿಯ ಎಂ.ಡಿ ವೈಭವ್ ಶುಕ್ಲಾ ಮಾತ್ರ ಅದನ್ನು ಸಹಿಸಲಾರದೆ ಅವರನ್ನು ಹೀಯಾಳಿಸಿದ. ಏನೇನೋ ಹಳೆಯ ವಿಷಯ ಮಾತಾಡಿದ. ಬಹುಶಃ ಹರ್ಷ ಸರ್'ಗೂ ಅವನಿಗೂ ಮೊದಲೇ ಪರಿಚಯ ಇದ್ದಂತೆ ಕಾಣುತ್ತೆ. ಏನೋ ಮಾತಿನ ಚಕಮಕಿ ನಡೆದಿತ್ತು. ಅದು ಅಲ್ಲಿಗೆ ಮುಗಿಯಲಿಲ್ಲ.

ಮೀಟಿಂಗ್ ಹಾಲ್‌ನಿಂದ ಆಚೆ ಬಂದಮೇಲೂ, ಅವರ ಏಂಗೇಜ್ಮೆಂಟ್ ಆಗಿರೋ ಹುಡುಗಿ ಅಂದ್ರೆ ನಿಮ್ಮ ಬಗ್ಗೆ ಕೂಡ ತುಂಬಾ ಕೆಟ್ಟದಾಗಿ ಮಾತಾಡಿದ. ಅಲ್ಲಿಯವರೆಗೂ ಯಾವುದನ್ನು ಕೇರ್ ಮಾಡದ ಹರ್ಷ ಸರ್ ಗೆ ಆಗ ಕೋಪ ತಡೆಯೋಕಾಗ್ಲಿಲ್ಲ,,,," ಕೆಲವು ಸೆಕೆಂಡ್‌ ಮೌನವಹಿಸಿದನಾತ.

"ಅದೇ ಸಿಟ್ಟಲ್ಲಿ ಹರ್ಷ ಸರ್ ಅವನಿಗೆ ಮುಖ ಮೂತಿ ನೋಡದೆ ಹೊಡೆದು ಬಿಟ್ರು. ಅವನು ತಿರುಗಿ ಹೊಡೆಯೋಕೆ ಹೋದ ಆದ್ರೆ ಹರ್ಷ ಸರ್ ಅದ್ಕೆ ಅವಕಾಶ ಕೊಡದೆ ಹೊಡಿತಾನೇ ಇದ್ರು.. ಅವನು ನೋವಿನಿಂದ ನರಳ್ತಿದ್ದ‌. ನಾನೇ ಸರ್‌'ನಾ ಸಮಾಧಾನ ಮಾಡಿ ಅಲ್ಲಿಂದ ಕರೆದುಕೊಂಡು ಹೋದೆ. ಹೋಟೆಲ್ ರೂಂ'ಗೆ ಬರುವಷ್ಟರಲ್ಲಿ ಸರ್ ಕೋಪ ಇಳಿದಿತ್ತು. ಅವನನ್ನು ಅಷ್ಟೊಂದು ಹೊಡೆದಿದ್ದಕ್ಕೆ ಬೇಸರ ಮಾಡಿಕೊಂಡಿದ್ದರು. ಒಮ್ಮೆ ಅವನ ಜೊತೆಗೆ ಮಾತಾಡಿ ಆರೋಗ್ಯ ವಿಚಾರಿಸಿಕೊಂಡು ಬರ್ತಿನಿ ಅಂತ ಹೋದ್ರು.

ಅದೇನಾಯಿತೋ ಏನೋ, ಆಮೇಲೆ ವಾಪಸ್ ಬಂದವರೇ ನನಗೆ ಕೂಡಲೇ ಬೆಂಗಳೂರಿಗೆ ವಾಪಸ್ ಹೊರಟು ಹೋಗುವಂತೆ ವಾರ್ನ್ ಮಾಡಿ, ತಾವು ಮರುದಿನ ಬರುವುದಾಗಿ ಹೇಳಿದ್ರು ಮ್ಯಾಮ್.. ಇಷ್ಟೇ ಆಗಿದ್ದು" ತನಗೆ ತಿಳಿದಷ್ಟು ವಿಷಯವನ್ನು ಅರುಹಿದ.

"ವಾಪಸ್ ಬಂದ ನಂತರ ಹರ್ಷ, ಆ ಎಂ.ಡಿ ಬಗ್ಗೆ ಏನಾದ್ರೂ ಹೇಳಿದ್ನಾ?" ಕೇಳಿದಳು

" ನೋ ಮ್ಯಾಮ್, ಬೇರೇನೂ ಹೇಳಲಿಲ್ಲ. ಆದ್ರೆ ಅವರ ಕಣ್ಣಲ್ಲಿ ಮೊದಲಿದ್ದ ಸಂತೋಷ ಇರಲಿಲ್ಲ.."

"ಅಂದರೆ ಅಲ್ಲಿ ಏನಾದರೂ ನಡೆದಿರಬಹುದಾ?"

"ಐ ಡೋಂಟ್ ನೋ ಮ್ಯಾಮ್. ಸರ್ ಏನೂ ಹೇಳ್ಲಿಲ್ಲ. ಆದ್ರೆ ನಾನು ಅವರ ಜೊತೆಗೆ ಇರೋದಾಗಿ ಹೇಳಿದ್ರು ಕೇಳದೆ, ನನಗೆ ಅಲ್ಲಿಂದ ಒತ್ತಾಯ ಮಾಡಿ ಕಳಿಸಿಬಿಟ್ರು. ಮುಗಿದು ಹೋಗಿರುವ ವಿಷಯವನ್ನ ಮತ್ತೆ ಹೇಳಿ ಸುಮ್ಮನೆ ನಿಮ್ಮ ನೆಮ್ಮದಿ ಕದಡುವುದು ಬೇಡಾಂತ ನಾನು ಈವರೆಗೆ ಈ ವಿಷಯನೆಲ್ಲ ಹೇಳಿರಲಿಲ್ಲ ಮ್ಯಾಮ್.. ಐಮ್ ಸಾರಿ..."

"ಶೆಣೈ,,,, ಆ ಎಂ.ಡಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ? ಅಂದ್ರೆ ಆ ವ್ಯಕ್ತಿ ಹೇಗೆ?" ಗೊಂದಲ ಪರಿಹರಿಸಿಕೊಳ್ಳಲು ಕೇಳಿದಳು

"ತುಂಬಾ ದುರಹಂಕಾರಿ ಮ್ಯಾಮ್. ಯಾವಾಗಲೂ ಎಲ್ಲದರಲ್ಲೂ ತನ್ನದೇ ಮೇಲುಗೈ ಸಾಧಿಸೋ ದುರಾಸೆ ಅವನಿಗೆ. ಪ್ರಾಜೆಕ್ಟ್ ನಮ್ಮ ಕಂಪನಿಗೆ ಸಿಕ್ಕಿದ್ದನ್ನು ಸಹಿಸಲಾರದೆ ಸರ್ ಜೊತೆ ಗಲಾಟೆ ಮಾಡಿದ್ದು ಅದೇ ಕಾರಣಕ್ಕೆ. ಅವನೊಂದಿಗೆ ಕಂತೆಗೆ ತಕ್ಕ ಬೊಂತೆಯಂತೆ ಆ ರಾಥೋಡ್ ಬೇರೆ"

"ರಾಥೋಡ್‌?? ಅವನಿಗೂ ವೈಭವ್ ‌ಗೂ ಏನು ಸಂಬಂಧ?"

"ರಾಥೋಡ್ AGT ಕಂಪನಿಯ ಲೀಗಲ್ ಅಡ್ವೈಸರ್ ಮ್ಯಾಮ್ ! ವೈಭವ್ ಶುಕ್ಲಾ ಅವನ ಆಣತಿ ಇಲ್ಲದೆ ಯಾವ ಕೆಲಸವನ್ನು ಮಾಡೋದಿಲ್ಲ‌. ಶುಕ್ಲಾ ಬೆನ್ನೆಲುಬು ಈ ರಾಥೋಡ್! ಅವನ ಕಂಪನಿಯ ವ್ಯವಹಾರ ಪತ್ರ, ಇತ್ಯಾದಿ ನೋಡಿಕೊಳ್ಳುವವನು ಇದೇ ರಾಥೋಡ್.." ಶೆಣೈನೊಂದಿಗೆ ಕೆಲ ಸಮಯ ಮಾತಾಡಿದವಳಿಗೆ ತನ್ನ ಅನುಮಾನದ ಎಳೆ ಸರಿಯಾಗಿಯೇ ಇದೆ ಎನ್ನಿಸಿತ್ತು.ಆದರೆ ಈ ಎಳೆ ಎಲ್ಲಿ ಯಾರ ಬಳಿ ಹೋಗಿ ತಲುಪುತ್ತದೆ? ಇದನ್ನೆಲ್ಲ ಯಾಕೆ ಮಾಡಿದರು? ಎಂಬುದು ಈಗಲೂ ಪ್ರಶ್ನೆಯೇ..

ಅವಳ ಮುಂದೆ ದೊಡ್ಡ ಸವಾಲಾಗಿ ನಿಂತಿತ್ತು ಹರ್ಷನ ಮೇಲೆ ನಡೆದ ಕೊಲೆಯ ಪ್ರಯತ್ನ! ಅದನ್ನು ಭೇಧಿಸುವ ಸಲುವಾಗಿ, ಇಷ್ಟವಿಲ್ಲದಿದ್ದರೂ ದುಷ್ಟರ ಸಹವಾಸ ಮಾಡುವುದು ಅನಿವಾರ್ಯವಾಗಿತ್ತು.

ರಾಥೋಡ್ ನ ಫೋನ್ ನಂಬರ್ ಸಂಪಾದಿಸುವುದು ಆಕೆಗೆ ಕಷ್ಟದ ಕೆಲಸ ಏನಾಗಿರಲಿಲ್ಲ. ಆ ಕೂಡಲೇ ಅವನ ನಂಬರಿಗೆ ಫೋನಾಯಿಸಿ ನಯವಾಗಿ ಮಾತನಾಡಿದಳು. ಮೊದಲಾದರೆ ಹೆದರಿ ಹಿಂಜರಿಯುತ್ತಿದ್ದಳೇನೋ,  ಹರ್ಷನ ಧಾರುಣವಾದ ಅಪಘಾತದ ದೃಶ್ಯ ಕಣ್ಣಿಗೆ ಕಟ್ಟಿದಂತೆ ಭಾಸವಾಗಿ ಈಗ ಅವಳಲ್ಲಿ ಭಂಡ ಧೈರ್ಯವನ್ನು ತುಂಬಿತ್ತು. ಅವನಿಗೆ ಮುಂದೆ ಒದಗಬಹುದಾದ ಆಪತ್ತನ್ನು ತಾನು ಆಹ್ವಾನ ಮಾಡಿಕೊಳ್ಳಲು ಸರ್ವ ಸಿದ್ದಳಾಗಿದ್ದಳಾಕೆ.

"ನನಗೊತ್ತಿತ್ತು, ನೀನು ನನಗೆ ಕಾಲ್ ಮಾಡೇ ಮಾಡ್ತಿಯಾ ಅಂತ. ಏ ಶಹರ್ ಕಿ ಹವಾ ಹೈ ಹೀ ಏಸಿ.. ಅಚ್ಚೇ ಅಚ್ಚೋಂಕೊ ಬಿಗಾಡ್ ದೇತಿ ಹೈ.." ನಕ್ಕ ರಾಥೋಡ್

"ಹ್ಮ.. ಎಲ್ಲಿ ಸಿಕ್ತಿರಾ ಹೇಳಿ.. ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕಿತ್ತು." ಗಂಭೀರವಾಗಿ ನುಡಿದಳು

" ಮಾತು?? ಹ್ಹ ಹ್ಹ ಹ್ಹ... ನನ್ನದು ಮಾತು ಕಡಿಮೆ ಕೆಲಸ ಜಾಸ್ತಿ " ತನ್ನ ಜೋಕಿಗೆ ತಾನೇ ಕೆಟ್ಟದಾಗಿ ನಕ್ಕ.

ಪರಿಗೆ ಅವನ ಕತ್ತು ಹಿಸುಕುವಷ್ಟು ಕೋಪ ಬಂದಿತಾದರೂ ನಿಗ್ರಹಿಸಿಕೊಂಡಳು.

"ಇವತ್ತು ಸ್ವಲ್ಪ ಬಿಜಿ ಇದ್ದಿನಿ. ನಾಳೆ ಬೆಳಿಗ್ಗೆ ಸಿಗೋಣ ಒಕೆ. " ಹೊಟೆಲ್ ಹಾಗೂ ರೂಂ ನಂಬರ್ ತಿಳಿಸಿ "ಬಾಯ್ ಡಾರ್ಲಿಂಗ್.. " ಅಸಹ್ಯ ಹುಟ್ಟುವಂತೆ ನುಡಿದ. ಅವಳು ಮುಷ್ಟಿಯಲ್ಲಿದ್ದ ಫೋನ್ ದೂರ ಹಿಡಿದು ಕೋಪದಿಂದ ಹಲ್ಲು ಕಡಿದಳು.

"ಒಕೆ.. ನಾನು ನಾಳೆವರೆಗೂ ಕಾಯ್ತೆನೆ ನಿಮಗೋಸ್ಕರ."
'ಸತ್ಯ ತಿಳಿಯುದಕ್ಕೊಸ್ಕರ' ಮನಸ್ಸು ಉಲಿಯಿತು.

***********


ಮನುಷ್ಯ ಅದೆಷ್ಟೇ ಪ್ರಬುದ್ಧ ಚತುರನಾಗಿರಬಹುದು. ವಿಜ್ಞಾನ ತಂತ್ರಜ್ಞಾನಗಳ ಪ್ರಭಾವದಿಂದ ನಾಳೆಗಳನ್ನು ಬದಲಿಸಬಲ್ಲ ಸಾಮರ್ಥ್ಯ ಹೊಂದಿರಬಹುದು. ಆದರೆ ವಿಧಿಯ ಆಟದ ಮುಂದೆ ಅವನಾಟ ಏನೂ ನಡೆಯಲಾರದು ಎಂಬುದನ್ನು ಆಗಾಗ ಮರೆತು ಬದುಕುವನು ತಾನೇ ಎಂಬ ಅಹಂನಲ್ಲಿ.. ಅದನ್ನು ಮುರಿಯಲೆಂದೆ ವಿಧಿಯು ತನ್ನ ಎದುರಾಟವನ್ನು ಆಡಿ ನಕ್ಕು ಸಂಭ್ರಮಿಸುವುದು ತನ್ನ ಗೆಲುವನ್ನು.. ಮನುಜನ ಸೋಲನ್ನು..

ಫಿಲ್ಮ್ ನೋಡಲು ಥಿಯೇಟರ್ ಗೆ ಬಂದರೂ, ಬೆನ್ನ ಹಿಂದೆ ಬರುತ್ತಿದ್ದ ಸೆಕ್ಯೂರಿಟಿ ಪಡೆಯನ್ನು ನೋಡಿದರೆ ಯಾವುದೋ ಯುದ್ದಕ್ಕೆ ಹೊರಟಂತಹ ಭಾಸವಾಗಿ ತಲೆ ಕೊಡವಿದ ಪ್ರಸನ್ನ.

ಒಳಗೆ ಹೋಗುವ ಮುನ್ನ ತನ್ನ ಸ್ನೇಹಿತನೊಬ್ಬ ಬರುತ್ತಿರುವುದಾಗಿ ಮಾನ್ವಿ ಹರ್ಷನನ್ನ ಅಲ್ಲಿಯೇ ತಡೆದು ನಿಲ್ಲಿಸಿಕೊಂಡ. 'ಈಗ ಕಾರಿನಲ್ಲಿ ವಿವೇಕ್ ಜೊತೆಗೆ ಪರಿ ಬರ್ತಾರೆ, ಹರ್ಷ ಅವಳನ್ನು ನೋಡ್ತಾನೆ, ಮಾನ್ವಿ ಷರತ್ತುಗಳೆಲ್ಲ ಮಣ್ಣು ಪಾಲಾಗುತ್ತೆ, ಮದುವೆ ಕ್ಯಾನ್ಸಲ್ ಆಗುತ್ತೆ, ಪರಿ-ಹರ್ಷ ಒಂದಾಗ್ತಾರೆ' ಹೀಗೆಲ್ಲ ಯೋಚಿಸುತ್ತಿದ್ದ ಪ್ರಸನ್ನ ಉತ್ಸುಕತೆಯಿಂದ ದಾರಿ ನೋಡುತ್ತ ನಿಂತಿದ್ದ. ಪ್ರಸನ್ನನ ಉತ್ಸಾಹ ಕಂಡು ಮಾನ್ವಿಗೆ ಅನುಮಾನದ ಹೊಗೆಯಾಡಿತು. ಅಷ್ಟೊತ್ತಿಗೆ ವಿವೇಕ್'ನ ಕಾರು ಕಾಣಿಸುತ್ತಿದ್ದಂತೆ "ಎಸ್, ಎಸ್ಸ್... ನನ್ನ ಫ್ರೆಂಡ್ ಬಂದ..." ಉದ್ಘರಿಸಿದ ಪ್ರಸನ್ನ. ಹರ್ಷನ ನೋಟ ಆಕಡೆಗೆ ಹೊರಳಿತು. ಕಾರಿನಿಂದ ಇಳಿದ ವಿವೇಕ್ ಹುಡುಗಿಯೊಂದಿಗೆ ಇವರತ್ತ ನಡೆದು ಬಂದ. ಆದರೆ ಆ ಹುಡುಗಿ ಪರಿಯಲ್ಲ, ಮಿಥಾಲಿ!!

ಪ್ರಸನ್ನನ ಎಣಿಕೆಯಂತೆ ಎಲ್ಲ ನಡೆದು ಹೋಗಿದ್ದರೆ ಕಥೆಯೇ ಬೇರೆಯಿತ್ತು. ಆದರೆ ಮಿಥಾಲಿಯೊಂದಿಗೆ ನಗುತ್ತಲೇ ಥಿಯೇಟರ್ ಗೆ ಬಂದ ವಿವೇಕ್ ನನ್ನು ನೋಡಿ ಅವನ ಯೋಚನೆಯೆಲ್ಲ ತಲೆ ಕೆಳಗಾಯಿತು.

ಮಾನ್ವಿ ನಿಟ್ಟುಸಿರು ಬಿಟ್ಟಳಾದರೂ, 'ಮಿಥಾಲಿ ನೋಡಲು ಇವನಿಗೇಕೆ ಇಷ್ಟೊಂದು ಉತ್ಸಾಹ!' ಎಂದು ವಿಚಿತ್ರ ನೋಟ ಬೀರಿದಳು. ಹರ್ಷ, ವಿವೇಕ್ ಮತ್ತು ಮಿಥಾಲಿಯನ್ನು ಪರಿಚಯ ಮಾಡಿಕೊಂಡ. ಪ್ರಸನ್ನನ ನಿರಾಸೆಯ ಮುಖ ನೋಡಿ ಹರ್ಷ 'ಏನಾಯ್ತೆಂದು?' ಕೇಳಿದ.

"ಏನಿಲ್ಲ. ನಾವು ಬರ್ತಿವಿ. ನೀವು ಹೊರಡಿ.." ಮುಂದೆ ಕಳಿಸಿದ.

ಮಿಥಾಲಿ, ಮಾನ್ವಿ, ಹರ್ಷ ಮಾತಾಡುತ್ತ ಒಳನಡೆದರೆ, ವಿವೇಕ್‌ನ ಹೊಟ್ಟೆಗೊಂದು ಗುಮ್ಮಿ ತರಾಟೆಗೆ ತೆಗೆದುಕೊಂಡ ಪ್ರಸನ್ನ.

"ಹೇಳಿದ್ದೇ ತಾನೇ ಪರಿನಾ ಕರ್ಕೊಂಡು ಬಾ ಅಂತ. ಓಹ್...ಆ ಮಿಥೈಲ್ ಸಿಕ್ಕ ಖುಷಿಗೆ ಮಿಕ್ಕಿದ್ದೆಲ್ಲ ಮರೆತೋಯ್ತಾ?" ಮತ್ತೊಂದು ಗುಮ್ಮು ಬಿತ್ತು.

"ಅವರ ಹೆಸರು ಮಿಥೈಲ್ ಅಲ್ಲ. ಮಿಥಾಲಿ!" ನರಳುತ್ತಲೇ ತಿದ್ದಿದ

"ಹುಡುಗಿ ಹೆಸರು ನೆನಪಿರುತ್ತೆ, ಹೇಳಿದ ಕೆಲಸ ಮಾಡೋಕಾಗಲ್ಲ ಅಲ್ವಾ" ಮೊಟಕಿದ

"ಅಬ್ಬಾ‌... ಇಲ್ಲ ಕಣೋ. ನಾನು ಬೆಳಿಗ್ಗೆನೇ ಹೇಳಿದ್ದೆ ಮಕ್ಕಳ ಜೊತೆಗೆ ಸಂಜೆ ಮೂವಿಗೆ ಹೋಗೋಣ ರೆಡಿಯಾಗಿರಿ ಅಂತ. ಆದರೆ ಆ ಮಕ್ಕಳ ಬಗ್ಗೆ ನಿನಗೆ ಗೊತ್ತಿಲ್ಲ, ಏನಾದ್ರೂ ಬೇಕು ಅಂತ ಬಾಯಿಗೆ ಬಂದ್ರೆ ಅದನ್ನು ಕೊಡಿಸೋವರೆಗೂ ಬಿಡಲ್ಲ. ಈಗ ಮೂವಿ ಇಷ್ಟ ಇಲ್ವಂತೆ ಐಸ್ ಕ್ರೀಂ ತಿನ್ನೋಕೆ ಹೋಗೋಣಾಂತ ಒಂದೇ ಸಮನೆ ಹಠ ಹಿಡಿದಿದ್ರು. ಪರಿ ಅವರನ್ನ ರಮಿಸುತ್ತಾ ನನಗೆ ಹೊರಡೋಕೆ ಹೇಳಿದ್ರು. ಅದ್ಕೆ ನಾನು ಮಿಥಾಲಿ ಜೊತೆ ಬಂದ್ಬಿಟ್ಟೆ." ಪ್ರಸನ್ನನ ಒಂದು ಕಲ್ಲು ಗುರಿ ತಪ್ಪಿತ್ತು. ಮತ್ತೊಂದು ಪ್ರಯತ್ನವಾದರೂ ಫಲಿಸುವದಾ ಎಂಬ ನಿರೀಕ್ಷೆಯಲ್ಲಿ..

"ಇಲ್ಲಿ ಸಮೀಪದಲ್ಲಿ ಯಾವುದಾದ್ರೂ ಒಳ್ಳೆಯ ಐಸ್ ಕ್ರೀಂ ಪಾರ್ಲರ್ ಇದೆಯಾ?"

"ಬೇರೆ ಕಡೆಗೆ ಯಾಕೆ? ಒಳಗೆ  ಐಸ್ ಕ್ರೀಂ, ಚಿಪ್ಸ್ ಸ್ನ್ಯಾಕ್ಸ್, ಕೋಲ್ಡ್ ಡ್ರಿಂಕ್ಸ್ ಎಲ್ಲಾ ಸಿಗುತ್ತೆ " ವಿವೇಕ್ ಮಾತಿಗೆ ಹಣೆ ಒತ್ತಿಕೊಂಡ ಪ್ರಸನ್ನ..

"ಕೇಳಿದ್ದಕ್ಕೆ ಮಾತ್ರ ಉತ್ತರ ಕೊಡು" ತಾಕೀತು ಮಾಡಿದ

" ಹ್ಮಾ, ಇಲ್ಲೇ ಎದುರಿನ ರಸ್ತೆಯಲ್ಲಿ ಒಂದಿದೆ. ಆದರೆ ಯಾಕೆ?

"ಈಗ ಪರಿಗೆ ಕಾಲ್ ಮಾಡಿ ಅದೇ ಪಾರ್ಲರ್ ಗೆ ಬರೋಕೆ ಹೇಳು"

" ಒಕೆ ಬಟ್ ಯಾಕೆ? "

"ಪ್ರಶ್ನೆ ಕೇಳಬೇಡ, ಹೇಳಿದಷ್ಟು ಮಾಡು. ಬೇಗ..." ವಿವೇಕ್ ಪರಿಗೆ ಕರೆ ಮಾಡಿ ಅದೇ ರೀತಿ ಹೇಳಿದ. ಪ್ರಸನ್ನ ಮನಸ್ಸಲ್ಲೇ ಏನೋ ಲೆಕ್ಕಾಚಾರ ಹಾಕುತ್ತಾ ಒಳನಡೆದ.

ಚಲನಚಿತ್ರ ಆರಂಭವಾಗಿತ್ತು. ವಿವೇಕ್ ಮಿಥಾಲಿ ಬೇರೆಡೆಗೆ ಕುಳಿತಿದ್ದರು. ಮಾನ್ವಿ, ಹರ್ಷ, ನಂತರ ಅವನ ಪಕ್ಕದಲ್ಲಿ ಕುಳಿತಿದ್ದ ಪ್ರಸನ್ನ. ಅವರ ಹಿಂದಿನ ಸೀಟುಗಳು ಸೆಕ್ಯೂರಿಟಿ ಪಡೆಗೆ ಮೀಸಲಾಗಿದ್ದವು. ಅರ್ಧ ಗಂಟೆ ಕಳೆದರೂ ಕಥೆ ಏನೆಂಬುದೇ ಅರ್ಥವಾಗದ ಹೊಚ್ಚ ಹೊಸ ಸಸ್ಪೆನ್ಸ್ ಹಿಂದಿ ಸಿನಿಮಾ ಅದು. ಆಕಳಿಕೆ ತೂಕಡಿಕೆ ಒತ್ತರಿಸಿ ಬರುತ್ತಿದ್ದವು‌ ಹರ್ಷನಿಗೆ. ಪಕ್ಕದಲ್ಲಿದ್ದ ಪ್ರಸನ್ನ ಗೊರಕೆ ಹೊಡೆಯುವ ಹಂತಕ್ಕೆ ತಲುಪಿದ್ದ‌.

"ನೀನೇ ಆಯ್ಕೆ ಮಾಡಿದ ಮೂವಿ ತಾನೇ, ಎದ್ದೇಳು ನೋಡು..." ಕೈಗೆ ಚಿವುಟಿ, ಕೆನ್ನೆ ಅಲುಗಿಸಿ ಎಬ್ಬಿಸಿದ ಅವನನ್ನು.

"ನನ್ನ ಟೇಸ್ಟ್ ಇಷ್ಟೊಂದು ಕೆಟ್ಟದಾಗೇನಿಲ್ಲ! ಮೂವಿಗೆ ಹೋಗೋಣಾ ಅಂದಿದ್ದು ನಾನೇ ಆದರೆ ಟಿಕೆಟ್ ಬುಕ್ ಮಾಡಿದ್ದು ಈ ಗೂಬೆ ಮೂತಿಯವಳು" ಮಾನ್ವಿ ಕಡೆಗೆ ಬೆರಳು ಮಾಡಿದ. ಇಬ್ಬರೂ ಏಕಕಾಲಕ್ಕೆ ಅವಳತ್ತ ನೋಡಿದರು. ಕಣ್ಣು ಮಿಟುಕಿಸದೆ  ಮೂವಿಯನ್ನ ನೋಡುತ್ತ ಪಾಪ್ ಕಾರ್ನ್ ಮೆಲ್ಲುತ್ತಾ ಆನಂದಿಸುತ್ತಿದ್ದವಳು ಅವಳೊಬ್ಬಳೇ!

"ನಿನಗೇನಾದ್ರೂ ಕಥೆ ಅರ್ಥ ಆಗ್ತಿದೆಯಾ?"  ಪ್ರಸನ್ನ ಪಿಸುಗುಟ್ಟಿದ ಹರ್ಷನ ಕಿವಿಯಲ್ಲಿ.

"ಕಥೆ ಇದ್ದರೆ ತಾನೇ ಅರ್ಥ ಆಗೋಕೆ! ಇನ್ನೂ ಐದು ನಿಮಿಷ ಇಲ್ಲೇ ಇದ್ರೆ, ಹುಚ್ಚು ಹಿಡಿಯೋ ಹಾಗಾಗಿದೆ ನನಗೆ.." ಅವನ ಮನದ ಚಡಪಡಿಕೆ ಬೇರೆನೇ ಇದ್ದಿತು.

"ಹಾಗಾದ್ರೆ, ಇವಳು ನೋಡ್ತಾ ಇರ್ಲಿ. ನಾವು ಎದ್ದು ಹೋಗೋ...." ಪ್ರಸನ್ನನ ಮಾತು ಪೂರ್ಣವಾಗುವದರಲ್ಲಿ ಪೋಲಿಸ್ ಸೈರನ್ ಸೌಂಡ್ ಜೋರಾಗಿ ಮೊಳಗಿತು.

ಕೆಲವೇ ನಿಮಿಷದಲ್ಲಿ ಮೂವಿ ಸ್ಥಗಿತವಾಗಿ, ಕತ್ತಲಾಗಿ, ಒಮ್ಮೆಗೆ ಥಿಯೇಟರ್ ಲೈಟ್ಸ್ ಬೆಳಗಿದವು. ಎದ್ದು ನಿಂತ ಜನರೆಲ್ಲರ ಕೂಗಾಟ ಕಿರುಚಾಟದ ಗದ್ದಲ ಆರಂಭಗೊಂಡಿತು. ಮೂವಿ ನೋಡಿ ತಲೆಕೆಟ್ಟು ಬೇಸತ್ತ ಜನತೆಗೆ ಒಂದು ರಿಲೀಫ್ ಸಿಕ್ಕಹಾಗೆ ಕೇಕೆ ಹಾಕಿ ಕೂಗಿತು. ಆಸಕ್ತಿಯಿಂದ ಕೂತವರ ಕೋಪ ಪ್ರಕಟವಾಯಿತು. ಆದರೆ ಯಾರಿಗೂ ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಕೋಪದಿಂದ ಗೊಣಗುವವರು ಯಾರೋ, ಕೈಗೆ ಸಿಕ್ಕದ್ದನ್ನು ಎಸೆದು ಮೂವಿ ಆನ್ ಮಾಡಲು ಹೇಳುವವರು ಯಾರೋ, ಬಾಯಿಗೆ ಬಂದಂತೆ ಬೈಯ್ಯುವವರು ಯಾರೋ....

"ಜಸ್ಟ್ ಸೈಲೆನ್ಸ್ ಪ್ಲೀಸ್...." ಗಂಭೀರ ಅಧಿಕಾರಯುತ ಧ್ವನಿಯೊಂದು ಹೊರಡಿತು. ಜನ ಸ್ತಬ್ಧವಾದರು.

" ಗಲ್ಲುಶಿಕ್ಷೆಗೆ ಗುರಿಯಾದ ಖೈದಿಯೊಬ್ಬನನ್ನು ಕೋರ್ಟಿನಿಂದ ಜೈಲಿಗೆ ಕರೆದುಕೊಂಡು ಹೋಗುವ ಸಂಧರ್ಭದಲ್ಲಿ ಆತ ಮೋಸದಿಂದ ನಮ್ಮ ಪೋಲಿಸರ ಕೈಯಿಂದ ತಪ್ಪಿಸಿಕೊಂಡು ಓಡಿ ಬಂದು  ಇದೇ ಥಿಯೇಟರ್ ಒಳಗೆ ಬಂದು ಅಡಗಿಕೊಂಡಿದ್ದಾನೆ. ದಯವಿಟ್ಟು ನೀವೆಲ್ಲ ನಿಮ್ಮ ನಿಮ್ಮ ಜಾಗಗಳಲ್ಲಿ ಶಾಂತವಾಗಿ ಕುಳಿತರೆ ನಾವು ಅವನನ್ನು ಹಿಡಿಯಲು ಸುಲಭವಾಗುತ್ತೆ. ಕೋ-ಆಪರೇಟ್ ಅಸ್, ಜಸ್ಟ್ ಸಿಟ್ ಡೌನ್" ಪೋಲಿಸ್ ಅಧಿಕಾರಿಯೊಬ್ಬರು ಆಂಗ್ಲ ಹಿಂದಿ ಭಾಷೆಯಲ್ಲಿ ಅಧಿಕಾರಯುತ ಧ್ವನಿಯಲ್ಲಿ ಆದೇಶಿಸಿದರು.

ಜನಸ್ತೋಮ ಕ್ಷಣ ಕಾಲ ಶಾಂತವಾಗಿ ಕೇಳಿ ಮತ್ತೆ ಗುಸುಗುಸು ಪಿಸುಪಿಸು ಕಲರವದೊಂದಿಗೆ ಕುಳಿತುಕೊಂಡಿತು. ಅಪರಾಧಿಗಾಗಿ ಪೋಲಿಸರ ಹುಡುಕಾಟ ಮುಂದುವರೆದಿತ್ತು. ಪ್ರತಿ ಸಾಲುಗಳಲ್ಲಿ ಇಬ್ಬಿಬ್ಬರು ಪೋಲಿಸರು ತಪಾಸಣೆ ಮಾಡುತ್ತಿದ್ದರು. ಪ್ರತಿಯೊಬ್ಬರನ್ನೂ ಗಮನಿಸಿ ಪರಿಶೀಲಿಸಿ ನೋಡುತ್ತ ಸಾಗುವಾಗ ಇದ್ದಕ್ಕಿದ್ದಂತೆ ಎಲ್ಲಿಂದಲೋ ಕೇಳಿ ಬಂದಿತು.. ಢಂ, ಢಂ ಎಂದು ಎರಡು ಬುಲೆಟ್ ಹಾರಿದ ಸದ್ದು!!

ಅಲ್ಲಿಯವರೆಗೂ ಭಯದಿಂದ ಜೀವ ಹಿಡಿದುಕೊಂಡು ಕುಳಿತಿದ್ದ ಜನರಲ್ಲಿ ಕೋಲಾಹಲ ಸೃಷ್ಟಿಯಾಯಿತು. ಯಾವುದೋ ಅಪಾಯದ ಮುನ್ಸೂಚನೆ ಅರಿತ ಜನರು ತಕ್ಷಣ ಅಲ್ಲಿಂದ ಓಡಿ ಹೋಗಿ ಪ್ರಾಣಪಾಯದಿಂದ ಬಚಾವಾದರೆ ಸಾಕು ಎಂಬ ಧೋರಣೆಯಿಂದ ದಿಕ್ಕಾಪಾಲಾಗಿ ಓಡತೊಡಗಿದ್ದರು. ಆಗ ಪೋಲಿಸರ ಆಜ್ಞೆ ಆದೇಶ, ಲೌಡ್ ಸ್ಪೀಕರ್ ನಲ್ಲಿನ ಕೂಗು ಯಾವುದಕ್ಕೂ ಬೆಲೆ ಇರಲಿಲ್ಲ. ಮುಚ್ಚಿದ ಥಿಯೇಟರ್ ಡೋರನ್ನು ಬಲವಂತವಾಗಿ ನೂಕಿ ತೆರೆದು, ನಾ ಮುಂದು ತಾ ಮುಂದು ಎಂದು, ಚಿಕ್ಕವರು- ದೊಡ್ಡವರು ಕನಿಷ್ಟ ಮನುಷ್ಯರು ಎಂಬುದನ್ನು ಲೆಕ್ಕಿಸದೆ ಕಾಲಿಗೆ ಸಿಕ್ಕವರನ್ನು ತುಳಿದಾದರೂ ಸೈ ಎಂದು ಪೈಪೋಟಿಯಿಂದ ಹೊರಗೋಡುತ್ತಿದ್ದ ಜನರ ಗದ್ದಲ ಗಲಾಟೆಯ ಮಧ್ಯೆ  ಅಪರಾಧಿ ಸಹ ಪಲಾಯನಗೈದಿದ್ದ.

"ಸರ್, ಖೈದಿ ಡಿಪಾರ್ಟ್ಮೆಂಟ್ ವ್ಯಕ್ತಿಯೊಬ್ಬರನ್ನು ಅವರದೇ ಗನ್‌ನಿಂದ ಶೂಟ್ ಮಾಡಿ ಇಲ್ಲಿಂದ ತಪ್ಪಿಸಿಕೊಂಡಿದ್ದಾನೆ" ಪಿಸಿಯೊಬ್ಬ ಮರಾಠಿಯಲ್ಲಿ ಮಾಹಿತಿ ಕೊಟ್ಟ.

"ಇಷ್ಟು ಕಡಿಮೆ ಸಮಯದಲ್ಲಿ ಇಲ್ಲಿಂದ ತುಂಬಾ ದೂರ ಹೋಗಿರಲ್ಲ. ಇಲ್ಲೇ ಹೊರಗೆ ಸುತ್ತ ಮುತ್ತ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇರ್ಬಹುದು. ಕಮಾನ್ ಕ್ವಿಕ್.. ಕ್ಯಾಚ್ ಹಿಮ್,, " ಹಿರಿಯ ಅಧಿಕಾರಿಯ ಆದೇಶ.

ಇಷ್ಟೊಂದು ಅಲ್ಲೋಲ ಕಲ್ಲೋಲಗಳ ಮಧ್ಯೆ ಹರ್ಷ ಮಾನ್ವಿ ಪ್ರಸನ್ನ ಆಘಾತದಿಂದ ಏನೂ ತೋಚದೆ  ಸ್ಥಂಭೀಭೂತರಾಗಿ ನಿಂತುಬಿಟ್ಟಿದ್ದರು.

                *******

ಆ ಸಂಜೆ ಐಸ್ ಕ್ರೀಂ ತಿನ್ನಲು ಹೋಗುವ ಸಂಭ್ರಮದಲ್ಲಿದ್ದರು ಕಿಲ್ಲರ್ಸ್. ಪರಿ ಮತ್ತು ಮಕ್ಕಳ ಒತ್ತಾಯಕ್ಕೆ ವೈದೇಹಿಯವರು ಅವರೊಂದಿಗೆ ಹೊರಟರು. ವಿವೇಕ್ ಹೇಳಿದ ಅದೇ ಐಸ್ ಕ್ರೀಂ ಪಾರ್ಲರ್'ಗೆ ಕರೆದುಕೊಂಡು ಹೋಗುವುದನ್ನು ಮರೆಯಲಿಲ್ಲ ಪರಿ. ಮಕ್ಕಳು ತಮಗೆ ಇಷ್ಟದ ಐಸ್ ಕ್ರೀಂ ಆರ್ಡರ್ ಮಾಡಿ ತಿನ್ನತೊಡಗಿದರು.

ಪರಿ ಬಿಲ್ ಕೊಡಲು ಮುಂದಾದಾಗ ಶುರುವಾಯಿತು ಅಖಿಲಳ ಹೊಸ ವರಾತ. "ನನಗೆ ಇನ್ನೊಂದು ಐಸ್ ಕ್ರೀಂ ಬೇಕು"

ವೈದೇಹಿಯವರು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ರಮಿಸುತ್ತಾ ಬೇಡವೆಂದು ಹೇಳಿದರೂ ಅಖಿಲಾ ಬಿಡದೆ ಹಠ ಹಿಡಿದಳು. ಪರಿಯ ಓಲೈಕೆಯ ಮಾತಿಗೂ ಅವಳು ಬಗ್ಗದಿದ್ದಾಗ "ಐಸ್ ಕ್ರೀಂ ತಿಂದ್ರೆ ಶೀತ ಆಗಿ, ಆರೋಗ್ಯ ಹಾಳಾಗುತ್ತೆ. ಆಮೇಲೆ ನಿಮ್ಮಮ್ಮ ನನ್ನನ್ನ ಬೈಯ್ತಾಳೆ. ಈಗತಾನೇ ಒಂದು ತಿಂದೆ ತಾನೇ. ಸಾಕು. ನಡೆ ಮನೆಗೆ " ಗದರಿದರು ವೈದೇಹಿ.

ಕೋಪಿಸಿಕೊಂಡ ಅಖಿಲಾ ಅವರ ಕೈಯಲ್ಲಿದ್ದ ಪರ್ಸ್ ಕಿತ್ತುಕೊಂಡು "ನೀ ಕೊಡಿಸದಿದ್ರೆ ಕತ್ತೆ ಬಾಲ.. ನಾನೇ ತಗೊಂಡು ತಿಂತೆನೆ" ನಾಲಿಗೆ ಚಾಚಿ ಅಣುಗಿಸಿ ಓಡಿ ಹೋದಳು.

ನಿಖಿಲ್ ಅಜ್ಜಿಯ ಮೆಚ್ಚುಗೆ ಗಳಿಸಲು ಎದ್ದು ನಿಂತು "ಡೋಂಟ್ ವರಿ ಅಜ್ಜಿ, ನಾನು ಅವಳನ್ನ ಹಿಡ್ಕೊಂಡು ಬರ್ತೆನೆ" ಪ್ರತಿಸ್ಪರ್ಧಿಯಂತೆ ಅವಳನ್ನು ಹಿಡಿಯಲು ಅಟ್ಟಿಸಿಕೊಂಡು ಹೋದ. ಅಖಿಲಳ ತುಂಟತನಕ್ಕೆ ಮುಗುಳ್ನಗುತ್ತ ಪರಿ ಬಿಲ್ ಕೊಡಲು ನಿಂತಳು.

ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಹೋದ ಮೊಮ್ಮಕ್ಕಳನ್ನು ಹಿಡಿಯಲು ವೈದೇಹಿಯವರು ಹಿಂದಿಂದೆ ಹೋದರು. ಅಖಿಲಾ ಜಿದ್ದಿಗೆ ಬಿದ್ದು ಸೋಲೊಪ್ಪದವಳಂತೆ ಓಡುತ್ತಿದ್ದರೆ, ನಿಖಿಲ್ ಅವಳನ್ನ ಹಿಂಬಾಲಿಸುತ್ತ ಸಾಗಿದ. ಇಬ್ಬರೂ ರಸ್ತೆ ಎಂಬ ಪರಿವಿಲ್ಲದೆ ವಾಹನಗಳ ದಟ್ಟಣೆಯ ಮಧ್ಯೆ ರಸ್ತೆ ದಾಟಿ ಓಡಿ ಹೋದರು.

ಆದರೆ ಅವರನ್ನು ಹಿಡಿಯಲು ಹಿಂದೆ ಬಂದ ವೈದೇಹಿಯವರಿಗೆ ಕಾರೊಂದು ಅಡ್ಡ ಬಂದಿತು. ತಕ್ಷಣ ಬ್ರೇಕ್ ಹಾಕಿದ ಡ್ರೈವರ್. ಆಯತಪ್ಪಿ ಕೆಳಗೆ ಬಿದ್ದರು ವೈದೇಹಿ. ಬಿಲ್ ಕೊಟ್ಟು ಆಚೆ ಬಂದ ಪರಿಗೆ ಇದೊಂದು ಆಘಾತ! ಶೀಘ್ರವಾಗಿ ಓಡಿ ಹೋಗಿ ಅವರ ತಲೆಯನ್ನು ಎತ್ತಿ ಮಡಿಲಲ್ಲಿ ಮಲಗಿಸಿಕೊಂಡು ಕೆನ್ನೆ ತಟ್ಟಿದಳು, ನಾಡಿ ಹಿಡಿದು ನೋಡಿದಳು. ಕಾರ್ ಡ್ರೈವರ್ ಗಾಬರಿಯಿಂದ ಕೆಳಗಿಳಿದು ಬಂದು ನೀರಿನ ಬಾಟಲ್ ಕೊಟ್ಟ. ಗುಟುಕು ಗುಟುಕಾಗಿ ನೀರು ಕುಡಿದರಾದರೂ ಪೂರ್ಣ ಪ್ರಜ್ಞೆ ಇರಲಿಲ್ಲ ಅವರಿಗೆ. ಪರಿ ಕೋಪದಿಂದ ಡ್ರೈವರ್ ನನ್ನು ಹಳಿದಳು. ಅವನೂ 'ತಪ್ಪು ಅವರದೇ, ರಸ್ತೆ ಮಧ್ಯೆ ಹೀಗೆ ಓಡಿ ಬರಬಾರದೆಂದು ಗೊತ್ತಾಗಲ್ವ' ವಾದಿಸಿದ್ದ.

ಮೊಣಕಾಲಿಗೆ, ತಲೆಗೆ ಸ್ವಲ್ಪ ತೆರಚು ಗಾಯವಾಗಿತ್ತು. ಬಿಟ್ಟರೆ, ವೈದೇಹಿಯವರಿಗೆ ಜೀವ ಪ್ರಮಾದವೇನಾಗಿರಲಿಲ್ಲ. ಆಘಾತದಿಂದ ಪ್ರಜ್ಞೆ ತಪ್ಪಿದ್ದರಷ್ಟೇ. ಅದೇ ಡ್ರೈವರ್ ಸಹಾಯದಿಂದ ಅವರನ್ನು ಎತ್ತಿ ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೊರಟವಳಿಗೆ ಆತಂಕದಲ್ಲಿ ಮರೆತು ಹೋದ ವಿಷಯವೊಂದು ದಾರಿ ಮಧ್ಯದಲ್ಲಿ ಆಗ ನೆನಪಾಗಿತ್ತು - "ಕಿಲ್ಲರ್ಸ್ ಎಲ್ಲಿ?"


ಮುಂದುವರೆಯುವುದು.....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...