ವಿಷಯಕ್ಕೆ ಹೋಗಿ

ನೀ ನನ್ನ ಒಲವು‌..❤ ಸಂಚಿಕೆ-44


ಥಿಯೇಟರ್ ನಲ್ಲಿ ನಡೆಯುತ್ತಿದ್ದ ಜನರ ಹಾಹಾಕಾರ, ಕೋಲಾಹಲ ನೋಡುತ್ತ ಮಾನ್ವಿ ಅಚೇತನಳಾಗಿ ನಿಂತಿದ್ದಳು. ಹೊರಗೆ ಹೋಗಲು ಅವಸರಿಸಿದ ಪ್ರಸನ್ನ ಹರ್ಷನನ್ನ ತಳ್ಳಿಕೊಂಡು 'ಬೇಗ ಬೇಗ' ಅಲ್ಲಿಂದ ಆಚೆ ನಿರ್ಗಮಿಸಲು ಹವಣಿಸಿದ.

ಜನ ಜಂಗುಳಿಯ ನೂಕಾಟದ ನಡುವೆ ಮುಂದೆ ಮುಂದೆ ಹೆಜ್ಜೆ ಇರಿಸುತ್ತಿದ್ದ  ಹರ್ಷ ಆ ಜನಸಂದಣಿಯಲ್ಲಿ ಹಿಂತಿರುಗಿ ನೋಡಿ ಮಾನ್ವಿ ಪ್ರಸನ್ನನನ್ನು ಕೂಗಿದರೂ ಪ್ರಯೋಜನವಾಗದೆ ಜನರೊಂದಿಗೆ ಬೆರೆತು ಹೋದ.

ಆಕಡೆಗೆ ಮಾನ್ವಿ ಗಲಭೆಗೆ ಬೆದರಿ ಪ್ರಸನ್ನನ ತೋಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಳು. ಮೊದಲ ಮುಖ್ಯ ಮಾರ್ಗದಲ್ಲಿ ಹೋಗುವ ಅವಕಾಶ ಸಿಗದಿದ್ದಾಗ, ಜನರ ತಿಕ್ಕಾಟದ ನಡುವೆ ಎರಡನೇ ಮುಖ್ಯ ದ್ವಾರದ ಮೂಲಕ ಅವನೇ ಅವಳನ್ನು ಆಚೆ ಎಳೆದುಕೊಂಡು ಬಂದಿದ್ದ. ಅಲ್ಲಿಯವರೆಗೂ ಭದ್ರತಾ ಭಾವನೆಯಿಂದ ಅವನ ಕೈಯನ್ನು ಬಿಗಿಯಾಗಿ ಹಿಡಿದಿದ್ದ ಮಾನ್ವಿ ಕೂಡಲೇ ಕೈ ತೊರೆದು ದೂರ ಸರಿದು ನಿಂತಳು. ಹರ್ಷನಿಗಾಗಿ  ಅರಸುತ್ತಾ ಇಬ್ಬರೂ ಒಂದೊಂದು ದಿಕ್ಕಾದರು.

ಕೂಡಲೇ ಪ್ರಸನ್ನ ಹರ್ಷನಿಗೆ ಕರೆ ಮೂಲಕ "ಎದುರಿನ ಐಸ್ ಕ್ರೀಂ ಪಾರ್ಲರ್ ನಲ್ಲಿ ಸಿಗೋಣ ಅಲ್ಲಿಗೆ ಹೋಗಿರು" ಎಂದು ಅದರ ಹೆಸರು ತಿಳಿಸಿದ.

ಮಾನ್ವಿಗೆ ಹರ್ಷ ಅಲ್ಲೆಲ್ಲೂ ಕಾಣದಾದಾಗ, ಅವನಿಗೆ ಕರೆ ಮಾಡಲು ಫೋನ್ ಕೈಗೆತ್ತಿಕೊಂಡಳು.  ಅಷ್ಟರಲ್ಲಿ ಆ ಗಲಾಟೆಯ ಮಧ್ಯೆ ಕಳೆದು ಹೋದ ಒಂದುವರೆ ವರ್ಷದ ಹೆಣ್ಣು ಮಗುವೊಂದು ಅಳುತ್ತಲೇ ಆಕೆಯನ್ನು ತಬ್ಬಿಕೊಂಡಿತು. ಮಾನ್ವಿ ಅಪ್ಯಾಯವಾಗಿ ಮಗುವನ್ನು ಎತ್ತಿಕೊಂಡು ತಲೆ ಸವರುತ್ತ ಬೆನ್ನು ಉಜ್ಜುತ್ತ ಸಮಾಧಾನ ಮಾಡಿದಳು. "ಯಾರು ಪುಟ್ಟ ನೀನು? ಮಮ್ಮಿ ಡ್ಯಾಡಿ ಎಲ್ಲಿ?"  ಮುಂತಾಗಿ ರಮಿಸುತ್ತ ಕೇಳಿದಳು.

ಅಳುತ್ತಿದ್ದ ಮಗುವಿನ ಬಾಯಿಂದ ಬಂದದ್ದು ಒಂದೇ ಉತ್ತರ 'ಮಾಮಿ.. ಮಾಮಿ......' ಮಗುವಿನ ಮುದ್ದು ತೊದಲು ನುಡಿಗೆ ಆಕೆ ಕರಗಿ ಹೋಗಿ ಅಪ್ಪಿಕೊಂಡಳು. ಹಾಲ್ಗೆನ್ನೆಯ ಎಳೆಯ ಮಗುವಿನ ಅಳು ಹರ್ಷನನ್ನ ಆ ಕ್ಷಣ ಮರೆಸಿಬಿಟ್ಟಿತು. ಮಗುವಿನ ತಂದೆ ತಾಯಿಗಾಗಿ ಸುತ್ತಲೂ ಹುಡುಕಾಡಿದಳು. ಎದುರಿಗೆ ಸಿಕ್ಕವರನ್ನು ಈ ಮಗು ನಿಮ್ಮದಾ? ಈ ಮಗುವಿನ ಪೇರೆಂಟ್ಸ್ ನೋಡಿದಿರಾ? ಎಂದೆಲ್ಲಾ ಕೇಳಿದಳು. ಆದರೆ ಯಾರೂ ಸಹ ಗೊತ್ತಿಲ್ಲ ಎಂಬಂತೆ ತಲೆ ಹಾಕಿ ಓಡಿ ಹೋಗಿ ಪ್ರಾಣ ಉಳಿಸಿಕೊಳ್ಳುವ ಧಾವಂತದಲ್ಲಿದ್ದರು.

ಅಷ್ಟರಲ್ಲಿ ಬಂದ ಪೋಲಿಸ್ ಕಾನ್ಸ್‌ಟೇಬಲ್ ಒಬ್ಬ " ಓಹೋ ಇದೇ ಚಾನ್ಸ್ ಅಂತ ಮಗುನಾ ಕಿಡ್ನ್ಯಾಪ್ ಮಾಡುವ ಯತ್ನದಲ್ಲಿ ಇದೀಯಾ? ನಡಿಯೇ ಸ್ಟೇಷನ್ ಗೆ!!" ಹಿಂದಿಯಲ್ಲಿ ಗದರಿದ

"ವ್ಹಾಟ್! ನಾನು ಮಗು ಕಿಡ್ನ್ಯಾಪ್ ಮಾಡೋದಾ? ಮೈಂಡ್ ಯುವರ್ ಟಂಗ್ ಒಕೆ! ನಾನು ಯಾರಂತ ಗೊತ್ತಾ ನಿಮಗೆ " ಮಗುವಿನ ಬೆನ್ನು ಸವರುತ್ತ ನುಡಿದಳು

"ಹ್ಮಾ ಗೊತ್ತು ಗೊತ್ತು,, ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದು ಹೀಗೆ ಪಿಕ್ ಪಾಕೆಟ್ ಮಾಡೋ ಕಳ್ಳಿ. ಈಗ ಮಗುನ ಕದಿಯೋ ಪ್ಲ್ಯಾನಾ?! ಚಲೋ..ಚಲೋ.." ಮತ್ತೆ ಗದರಿದ

ಮಾನ್ವಿ ಏನೇ ಹೇಳಿದರೂ ಕೇಳುವ ವ್ಯವಧಾನ ಇರಲಿಲ್ಲ ಪೇದೆಗೆ. ಪರಿಸ್ಥಿತಿಯೂ ಹಾಗಿತ್ತು. ಕೈಗೆ ಕೋಳ ಹಾಕಿಯೇ ಬಿಟ್ಟ. ದೂರದಲ್ಲಿ ಇದನ್ನು ನೋಡಿ ಕಣ್ಣು ತುಂಬಿಸಿಕೊಳ್ಳುತ್ತ ನಿಂತಿದ್ದ ಪ್ರಸನ್ನ ನಿಜಕ್ಕೂ ಪ್ರಸನ್ನನಾದ.

ನಿಜವನ್ನು ನಂಬದ ಪೇದೆಗೆ ಸುಳ್ಳು ಹೇಳುವುದೇ ಉಚಿತ ಎನ್ನಿಸಿತವಳಿಗೆ. ಸ್ವಲ್ಪ ಯೋಚನೆ ಮಾಡಿ....

"ಸರ್, ಇದು ನನ್ನದೇ ಮಗು! ನೋಡಿ ಇಲ್ಲಿ,  ಕಣ್ಣು ಬಾಯಿ ಮೂಗು.." ಹೋಲಿಕೆಗಳನ್ನು ತೋರಿಸುತ್ತ ಹೇಳಿದಳು. "ಡ್ರೆಸ್ ಕೂಡ ಪಿಂಕ್ ಪಿಂಕ್ ಇಬ್ಬರದೂ ಒಂದೇ" ಪಿಳಿಪಿಳಿ ನೋಡಿದಳು. ಆಕೆಯ ಪಿಂಕ್ ಟಾಪ್ ಮತ್ತು ಜೀನ್ಸ್, ಮಗುವಿನ ಪಿಂಕ್ ಫ್ರಾಕ್'ಗೆ ಮ್ಯಾಚ್ ಆದ ಮಾತ್ರಕ್ಕೆ ಅದನ್ನು ನಿಜವೆಂದು ನಂಬಲು ಅವನೇನು ಮೂರ್ಖನೇ...!

"ಓಹೋ.. ಇದನ್ನ ನಾನು ನಂಬಬೇಕಾ?? ಸಾಕ್ಷಿ ಏನಿದೆ ಅದಕ್ಕೆ?  ಎಲ್ಲಿ ಈ ಮಗುವಿನ ತಂದೆ?" ಲಾಠಿ ನೆಲಕ್ಕೆ ಕುಟ್ಟುತ್ತ ಕೇಳಿದ ಗಡುಸಾಗಿ.

ಉಗುರು ಕಚ್ಚುತ್ತ ಯೋಚನೆ ಮಾಡಿದ ಮಾನ್ವಿ ದೂರದಲ್ಲಿ ಕಂಡ ಪ್ರಸನ್ನನನ್ನು ತೋರಿಸಿ "ನೋಡಿ ಸರ್ ಇದು ನನ್ನದೇ ಮಗು! ಅಲ್ಲಿ ನಿಂತಿದ್ದಾರಲ್ಲ ಅವರೇ ನಮ್ಮ ಯಜಮಾನ್ರು.. ಬೇಕಾದ್ರೆ ಅವರನ್ನೇ ಕೇಳಿ.."ಅವನನ್ನು ಕೂಗಿ ಕರೆದಳು ನಾಟಕೀಯವಾಗಿ. ಹಣೆ ಕರೆಯುತ್ತ ಬಂದ ಪ್ರಸನ್ನ.

" ಇವನಾ??? ಇವ್ನೇ ಹೇಳಿದ್ದು ನೀನು ಪಿಕ್ ಪಾಕೆಟರ್ ಅಂತ! ಈಗ ಇವನನ್ನೇ ಗಂಡ ಅಂತಿದಿಯಾ? ಕ್ಯಾ ಚಲ್ ರಹಾ ಹೈ ಯಂಹಾ?" ಲಾಠಿ ಕುಟುಕಿದ ಪೇದೆ ಕೋಪದಿಂದ.

ಮಾನ್ವಿ ಉರಿವ ಕಣ್ಣಿಂದ ಪ್ರಸನ್ನನನ್ನು ನೋಡಿ " ಅದೂ..... ನನಗೂ ಅವರಿಗೂ ಸ್ವಲ್ಪ ಜಗಳ ಆಗಿತ್ತು. ಅದೇ ಸಿಟ್ಟಿನಲ್ಲಿ ಹೀಗೆ ಹೇಳಿದ್ದಾರೆ ಅಷ್ಟೇ! ಅಲ್ವಾ_" ಎಂದು ಅವನ ಸೊಂಟಕ್ಕೆ ತಿವಿದಳು‌.

ಸುಳ್ಳನ್ನು ಸತ್ಯವಾಗಿಸುವ ಅವಳ ವಾಕ್ಚಾತುರ್ಯಕ್ಕೆ ಬೆರಗಾದ ಅವನು "ಆ್ಮ...ಊ್ಮ... ಹ್ಮ.. ಹೌದು" ಎಂದು ತೊದಲಿ ತಲೆ ಹಾಕಿದ‌. ಪೇದೆ ತುಸು ಅಚ್ಚರಿಗೊಂಡು ಪಕ್ಕನೇ ನಕ್ಕು "ಭೀವಿ ಸೇ ಪಂಗಾ... ಭಾರಿ ಪಡೆಗಾ" ಅವನ ಭುಜ ಚಪ್ಪರಿಸಿ ಹೊರಟು ಹೋದ.

"ಒಂದೇ ಒಂದು ಕ್ಷಣದಲ್ಲಿ ನನ್ನಂತಹ ಬ್ರಹ್ಮಚಾರಿಯನ್ನು ಸಂಸಾರಿಯಾಗಿಸಿ, ಮದುವೆ ಹೆಂಡತಿ ಅಲ್ಲದೇ ರೆಡಿಮೇಡ್ ಮಗು ಬೇರೆ ಸೃಷ್ಟಿಸಿಬಿಟ್ಟೆಯಲ್ಲೇ..!! ನೀನು ಸಾಮಾನ್ಯ ಪಿಶಾಚಿ ಅಲ್ಲವೇ ಅಲ್ಲ" ಕೈಮುಗಿದು ಬಿಟ್ಟ.

"ನಾನು ಪಿಕ್ ಪ್ಯಾಕೆಟರ್ರಾ?? ಮಗು ಕಿಡ್ನ್ಯಾಪ್ ಮಾಡ್ತಿದೀನಾ?! ಸ್ವಲ್ಪನಾದ್ರೂ ಬುದ್ದಿ ಇದೆಯಾ ನಿನಗೆ? ಅವನು ನನ್ನನ್ನ ಅರೆಸ್ಟ್ ಮಾಡಿದ್ದಿದ್ರೆ...?" ಕೆಂಡಾಮಂಡಲವಾದಳು.

"ನಾನು ಹುಡುಗಿ ಜೊತೆ ಫ್ಲರ್ಟ್ ಮಾಡ್ತಿನಿ ಅಂದಮೇಲೆ ನೀನು ಕಿಡ್ನ್ಯಾಪ್‌ರ್ ಆಗೋದ್ರಲ್ಲಿ ತಪ್ಪಿಲ್ಲ ಬಿಡು!! ನಾನು  ಹುಡುಗಿ ಸೀರೆ ಎಳೆದು ಜೈಲಿಗೆ ಹೋಗಿ ಬಂದೆನಲ್ಲ.... ಅಷ್ಟೇ ಸಿಂಪಲ್ಲಾಗಿ ನಿನಗೂ ಜೈಲಿನ ದರ್ಶನ ಯೋಗ ಸಿಕ್ಕಿರೋದು!! ಒಂದು ವಾರ ಅಲ್ಲದಿದ್ದರೂ ಕೆಲವು ನಿಮಿಷಗಳಾದ್ರು..! " ಒಂದೇ ಮಾತಿನಲ್ಲಿ ಎಲ್ಲಾ ಸಿಟ್ಟು ತೀರಿಸಿಕೊಂಡ

ಮಾನ್ವಿಗೆ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಂತಾಗಿ ಪೆಚ್ಚಾಗಿ ದೃಷ್ಟಿ ಬದಲಿಸಿದಳು.‌

"ನಮ್ಮ ಜಗಳ ಇದ್ದಿದ್ದೆ... ಮೊದಲು ಈ ಮಗುವಿನ ಪೇರೆಂಟ್ಸ್ ಹುಡುಕು"  ಅವನ ಬಾಯಿ ಮುಚ್ಚಿಸಿದಳು.

ಅಷ್ಟರಲ್ಲಿ ಬಂದ ಸೆಕ್ಯೂರಿಟಿಯವರು "ಮ್ಯಾಮ್ ಸರ್ ನಹೀ ಮಿಲ್ ರಹೇ"

"ಅವನೇನು ಚಿಕ್ಕ ಮಗುನಾ ಹುಡ್ಕೋಕೆ,, ಸಿಗ್ತಾನೆ ಬಿಡಿ. ಮೊದಲು ಈ ಮಗುವಿನ ಪೇರೆಂಟ್ಸ್ ಹುಡುಕಿ. ಸದ್ಯಕ್ಕೆ ಇದು ಮುಖ್ಯವಾದ ಕೆಲಸ" ಮಾನ್ವಿಗೂ ಮೊದಲೇ ತಾನು ಆಜ್ಞೆ ಮಾಡಿದ ಪ್ರಸನ್ನ. ಅವರು ಮಾನ್ವಿ ಮುಖ ನೋಡಿದರು. ಎಷ್ಟೆಂದರೂ ಶಂಖದಿಂದ ಬಂದ್ರೆನೇ ತೀರ್ಥ ಅಲ್ಲವೇ! ಅವಳಿಗೂ ಅದೇ ಸರಿಯೆನ್ನಿಸಿ ಮಗುವಿನ ತಂದೆ ತಾಯಿ ಹುಡುಕಲು ಹೇಳಿದಳು. ಅವರು ಮಗುವಿನ ಫೋಟೋ ಕ್ಲಿಕ್ಕಿಸಿ ಅವರಿವರನ್ನೂ ಕೇಳುತ್ತ ಹೋದರು.

ಎಷ್ಟೋ ಹೊತ್ತು ಥಿಯೇಟರ್ ಆಚೀಚೆ ಸುತ್ತಾಡಿದರೂ ಆ ಮಗುವಿನ ತಂದೆ ತಾಯಿ ಬಗ್ಗೆ ಸುಳಿವು ಸಿಗಲೇ ಇಲ್ಲ.

***********

ರಸ್ತೆ ದಾಟಿ ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಬಂದ ಮಕ್ಕಳಿಬ್ಬರು ಥಿಯೇಟರ್ ಪಕ್ಕದ ರಸ್ತೆಯ ಕಾರು ಪಾರ್ಕಿಂಗ್ ಕಡೆಗೆ ಬಂದು ಬಿಟ್ಟಿದ್ದರು. ಸುತ್ತ ಮುತ್ತ ಜನರ ಕೋಲಾಹಲ, ವಾಹನಗಳ ವೇಗದ ಓಡಾಟದ ಪರಿವು ಮಕ್ಕಳಿಗಿರಲಿಲ್ಲ.

ಓಡಿ ಸುಸ್ತಾದ ಅಖಿಲಾ ಎದುಸಿರು ಬಿಡುತ್ತ ಒಂದು ಮರ್ಸಿಡಿಸ್ ಪಕ್ಕ ನಿಂತುಕೊಂಡು, "ಟೈಮ್ ಪ್ಲೀಸ್..." ಎಂದಳು

"ಮೊದಲು ಅಜ್ಜಿ ಪರ್ಸ್ ಕೊಡು. ಆಮೇಲೆ ಗೇಮ್ ಕಂಟಿನ್ಯೂ ಮಾಡೋಣ" ನಿಖಿಲ್ ಸಹ ತೇಕುತ್ತ ಅವಳ ಸನಿಹ ಸರಿದ.

"ಊಹ್ಮೂ.,.. ಕೊಡಲ್ಲ. ಇನ್ನೊಂದು ಐಸ್ ಕ್ರೀಂ ತಿಂದಮೇಲೆ..." ಎನ್ನುತ್ತಾ ಹಿಂದೆ ಸರಿಯುತ್ತಿದ್ದವಳನ್ನು ಕಾರ್ ಹಿಂದಿನಿಂದ ಬಂದ ರಾಕ್ಷಸ ತೋಳುಗಳು ಬಿಗಿಯಾಗಿ ಬಂಧಿಸಿದವು. ಅವಳ ಹಣೆಗೆ ಗನ್ ಪಾಯಿಂಟ್ ಇಟ್ಟಿದ್ದ ಭಯಾನಕ ರೌಡಿ ಪೋಲಿಸರಿಂದ ತಪ್ಪಿಸಿಕೊಳ್ಳಲು ಅಖಿಲಳನ್ನು ತನ್ನ ರಕ್ಷಣೆಯ ದಾಳವಾಗಿ ಬಳಸಿಕೊಂಡಿದ್ದ.

ಈ ಹಠಾತ್ ಪ್ರವೃತ್ತಿಗೆ ನಿಖಿಲ್ ಭಯಭೀತನಾಗಿ ಕಿರುಚಾಡಿ ಅಖಿಲಳ ಹೆಸರು ಕೂಗಿದ್ದ. ಅಲ್ಲಿ ನೆರೆದಿದ್ದ ಜನ ಸಹ ಅಲರ್ಟ್ ಆಗಿ, ಮತ್ತೂ ಗದ್ದಲ ಹೆಚ್ಚಾಯಿತು. ಕೂಡಲೇ ಪೋಲಿಸ್ ಫೋರ್ಸ್ ಅಲ್ಲಿಗೆ ಧಾವಿಸಿತು. ಅಖಿಲಾ ಒಂದೇ ಸಮನೆ ಕೊಸರಾಡುತ್ತ, ಅವನು ಪರ್ಸ್ ಕದಿಯಲು ಬಂದಿರುವನೆಂದೇ ತಿಳಿದು ಅದನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿದ್ದಳು.

ಅವಳ ಹಣೆಗೆ ಗನ್ ಪಾಯಿಂಟ್ ಇಟ್ಟು ಪೋಲಿಸರಿಗೆ ಬೆದರಿಕೆ ಒಡ್ಡಿ  ಅವರಿಂದಲೇ ಓಡಿ ಹೋಗಲು ಕಾರಿನ ವ್ಯವಸ್ಥೆ ಮಾಡಿಕೊಂಡ ಕಿರಾತಕ.

ಇನ್ನೊಂದು ಕ್ಷಣ ಆತ ಕಾರು ಹತ್ತಬೇಕು ಆಗಲೇ ಬಿದ್ದಿತು ಅವನ ತಲೆಹೊಂದು ಬಲವಾದ ಪೆಟ್ಟು. ಹಿಂದಿನಿಂದ ಬಂದ ಹರ್ಷ ತನ್ನ ಮೊಣಕೈಯಿಂದ ಆಗಂತುಕನ ತಲೆಗೆ ಜೋರಾಗಿ ಕುಕ್ಕಿದ್ದ. ಕೈಯಲ್ಲಿದ್ದ ಗನ್ ಅಖಿಲಳಿಂದ ಸರಿಸಿ ಅವನೆಡೆಗೆ ಗುರಿಯಿಟ್ಟು ಹೊಡೆಯಲು ನೋಡಿದ ರೌಡಿ. ಅಷ್ಟರಲ್ಲಿ ಅವನ ಕೈಯನ್ನು ಹಿಂದಕ್ಕೆ ತಿರುವಿ ಹಾಕಿ, ಮುಷ್ಟಿಯಿಂದ ಹೊಟ್ಟೆಗೊಂದು  ಗುಮ್ಮಿದ ಹರ್ಷ.  ನರಳುತ್ತ ಮೊಣಕಾಲ ಮೇಲೆ ಕುಸಿದ ರೌಡಿ,  ಎಡಗೈಯಲ್ಲಿದ್ದ ಅಖಿಲಳನ್ನು ಸಡಿಲ ಬಿಟ್ಟು, ಹೊಡೆಯಲು ಕೈ ಎತ್ತಿದ. ತಕ್ಷಣ ಅವನಿಂದ ಬಿಡಿಸಿಕೊಂಡ ಅಖಿಲಾ ಪರ್ಸ್ ಎದೆಗವಚಿ ಓಡುತ್ತಾ ನಿಖಿಲ್ ತೆಕ್ಕೆಗೆ ಸೇರಿಕೊಂಡಳು. ಅವನ ಕೈಯಿಂದ ಗನ್ ಕಸಿದುಕೊಂಡ ಹರ್ಷ ಸಿಟ್ಟು ನೆತ್ತಿಗೇರಿದವನಂತೆ ಅವನ ಹೊಟ್ಟೆಗೆ, ಬೆನ್ನಿಗೆ ಉರುಳಾಡಿಸಿ ಒದೆಯುತ್ತಲೇ ಇದ್ದ. ಅವನ ಏಟಿಗೆ ಖೈದಿ ಸಂಪೂರ್ಣ ಶರಣಾಗತನಾಗಿದ್ದ.   ನೆರೆದಿದ್ದ ಪೋಲಿಸರ ಪಡೆ ಅವನನ್ನು ತಕ್ಷಣ ವಶಕ್ಕೆ ಪಡೆದು ಎಳೆದುಕೊಂಡು ಹೋದರು. ಪೋಲಿಸ್ ಕಮಿಷನರ್ ಮೆಚ್ಚುಗೆಯಿಂದ ಹರ್ಷನ ಕೈ ಕುಲುಕಿ  ಶ್ಲಾಘಿಸಿದರು.

"ಸರಿಯಾದ ಟೈಮ್ ಗೆ ಪ್ರಿನ್ಸ್ ಬರದಿದ್ರೆ ಆ ಡಾನ್ ನಿನ್ನ ಎತ್ಕೊಂಡು ಹೋಗ್ಬಿಡ್ತಿದ್ದಾ ಕಣೇ.. ಹೆಂಗೆ ಹೊಡೆದು ಬಿಸಾಕಿಬಿಟ್ಟಾ ಅಲ್ವಾ ಸೂಪರ್ ಹೀರೋ ತರಾ..." ನಿಖಿಲ್ ಕಣ್ಣಲ್ಲಿ ಅದ್ಭುತವನ್ನು ಕಂಡಂತಹ ಮಿಂಚು.

"ಏನಿಲ್ಲ... ನಾನು ಒಂದು ಗುದ್ದಿದ್ದಕ್ಕೆ ಕೆಳಗೆ ಬಿದ್ದು ಬಿಟ್ಟ. ಇನ್ನೊಂದು ಗುದ್ದಿದ್ರೆ ಅಪ್ಪಚ್ಚಿಯಾಗಿಬಿಡ್ತಿದ್ದಾ ಆ ಡುಮ್ಮಾ.. " ಮುಷ್ಟಿ ಕೈ ತಿರುವುತ್ತ ಹೆಮ್ಮೆ ಪಟ್ಟಳು ಅಖಿಲಾ

" ವ್ಹಾವ್.. ತುಂಬಾ ಸ್ಟ್ರಾಂಗ್ ನೀನು!! ಹೆಂಗೆ ಇದೆಲ್ಲಾ .." ಅಖಿಲಳ ಮಾತಿಗೆ ಮುಗುಳ್ನಗುತ್ತ ನುಡಿದ ಹರ್ಷ. ಇಬ್ಬರಿಗೂ ಅವನು ಪಕ್ಕದಲ್ಲೇ ಬಂದು ನಿಂತದ್ದು ತಿಳಿದಿರಲಿಲ್ಲ. ಪಿಳಿಪಿಳಿ ಮುಖ ನೋಡಿಕೊಂಡರು.

"ಬೆಳಿಗ್ಗೆ ಬೀಚ್ ಗೆ ಯಾಕೆ ಬರಲಿಲ್ಲ? ನಮಗೆ ಕಾದು ಕಾದು ಸಾಕಾಗೋಯ್ತು" ಅಖಿಲಾ ಕೇಳಿದಳು

"ಬೇರೆನೋ ಕೆಲಸ ಬಂತು ಅದ್ಕೆ..." ಎನ್ನುತ್ತಾ ಏನೋ ಹೊಳೆದಂತೆ "ನೀವು ನನಗೋಸ್ಕರ ಕಾಯ್ತಿದ್ರಾ? ಯಾಕೆ?" ಅಚ್ಚರಿಯಿಂದ ಕೇಳಿದ.

"ಮತ್ತೇನಕ್ಕೆ..? ಡ್ರಾಮಾ ಮಾಡೋಕೆ...! " ಬಾಯಿತಪ್ಪಿ ಹೇಳಿದ ನಿಖಿಲ್ ನಾಲಿಗೆ ಕೊಚ್ಚಿಕೊಂಡ‌.

"ಡ್ರಾಮಾನಾ? ಯಾವ ಡ್ರಾಮಾ? ಏನಾದ್ರೂ ಕಾಂಪಿಟೇಷನ್ ಇದೆಯಾ?" ಅವನ ಪ್ರಶ್ನೆಗೆ ಇಬ್ಬರೂ ಮುಖ ನೋಡಿಕೊಂಡು ಯೋಚನೆಗೆ ಬಿದ್ದರು.

"ನನ್ನ ಹೆಸರು ಸಂಕಲ್ಪ್.. ನಿಮ್ಮ ಹೆಸರು??" ಸ್ನೇಹ ಹಸ್ತ ಚಾಚಿದ. ಇಬ್ಬರೂ ತಮ್ಮ ಹೆಸರು ಹೇಳಿ ಅವನನ್ನು  ಸ್ನೇಹಿತನಾಗಿ ಒಪ್ಪಿ, 'ಫ್ರೆಂಡ್' ಎಂದು ಸಂಭೋಧಿಸಿದರು.

"ಸರಿ.... ಎಲ್ಲಿ ನಿಮ್ಮ ಮಮ್ಮಿ ಪಪ್ಪಾ? ಯಾರಜೊತೆಗೆ ಬಂದೀದ್ದಿರಾ?" ಸುತ್ತ ತಿರುಗಿ ನೋಡಿದ.

"ಇಲ್ಲ, ನಾವು ಅಜ್ಜಿ ಮತ್ತೆ ಕಿಟ್‌ಕ್ಯಾಟ್ ಜೊತೆಗೆ ಐಸ್ ಕ್ರೀಂ ತಿನ್ನೋಕೆ ಬಂದಿದ್ವಿ" ಎಂದು ಅಲ್ಲಿಯವರೆಗಿನ ವೃತಾಂತವನ್ನು ವಿವರಿಸಿದ ನಿಖಿಲ್. ಅಖಿಲಾ ತನ್ನ ಅಜ್ಜಿಯ ಪರ್ಸ್ ಕಿತ್ತುವ ಕಾರ್ಯದಲ್ಲಿ ತೊಡಗಿದ್ದಳು.

" ಕಿಟ್‌ಕ್ಯಾಟ್ ಅಂದ್ರೆ?? " ಕೇಳಿದ ಹರ್ಷ.

"ನಮ್ಮ ಫ್ರೆಂಡು... ಇಲ್ಲೇ ಐಸ್ ಕ್ರೀಂ ಪಾರ್ಲರ್'ನಲ್ಲಿದ್ದಾಳೆ. " ಕೈ ತೋರಿದ

"ಕೇ....ಹೂ.... ನನಗೆ ದುಡ್ಡು ಸಿಕ್ತು. ನಾನು ಎಷ್ಟು ಐಸ್ ಕ್ರೀಂ ಬೇಕಾದ್ರೂ ತಿನ್ನಬಹುದು ಈಗ" ಕುಣಿದಾಡಿದಳು ಅಖಿಲಾ. ನಿಖಿಲ್ ಹಣೆ ಚಚ್ಚಿಕೊಂಡ. ಹರ್ಷ ನಸುನಕ್ಕು ಡ್ರೈವರ್ ನಿಂದ ಕಾರ್ ಕೀ ಪಡೆದು ಮಕ್ಕಳನ್ನು ಜೋಪಾನವಾಗಿ ಅಲ್ಲಿಗೆ ಬಿಡಲು ಹೊರಟ‌.

ಐಸ್ ಕ್ರೀಂ ಪಾರ್ಲರ್'ನಲ್ಲಿ ಪರಿ, ವೈದೇಹಿಯವರು ಕಾಣದಿದ್ದಾಗ..
"ಮನೆ ಅಡ್ರೆಸ್ ಗೊತ್ತಿದೆಯಾ? ನಾನು ನಿಮ್ಮನ್ನು ಮನೆಗೆ ಡ್ರಾಪ್ ಮಾಡಿ ಹೋಗ್ತಿನಿ." ಹೇಳಿದ ಹರ್ಷ

"ನೋ.... ನನಗೆ ಇನ್ನೊಂದು ಐಸ್ ಕ್ರೀಂ ಕೊಡಿಸೋವರೆಗೂ ಎಲ್ಲಿಗೂ ಬರಲ್ಲ" ಟೇಬಲ್ ಏರಿ ಕುಳಿತಳು ಚೂಟಿ ಅಖಿಲಾ.

"ಐಸ್ ಕ್ರೀಂ ತಿಂದ್ರೆ ಶೀತ ಆಗುತ್ತೆ. ಜಾಸ್ತಿ ತಿನ್ನಬಾರದು!" ನಿಖಿಲ್ ಎಚ್ಚರಿಸಿದ. ಅವಳು ಕೈ ಕಟ್ಟಿ ಮುಖ ಊದಿಸಿಕೊಂಡು ಧರಣಿ ಕೂತ ರೀತಿ ನೋಡಿ ಹರ್ಷ ಒಂದು ಐಸ್ ಕ್ರೀಂ ಆರ್ಡರ್ ಮಾಡಿಯೇ ಬಿಟ್ಟ. ಅಖಿಲಾ ತನ್ನಿಷ್ಟದ ಫ್ಲೇವರ್ ಹೇಳಿದಳು.

"ಒಂದೇ ನಾ?? ಮತ್ತೆ ನನಗೆ?" ನಿಖಿಲ್ ಕೇಳಿದ.

"ಈಗತಾನೇ ಯಾರೋ ಹೇಳಿದ್ರು ಐಸ್ ಕ್ರೀಂ ತಿಂದ್ರೆ ಶೀತವಾಗುತ್ತೆ. ತಿನ್ನಬಾರದು ಅಂತ..." ಹರ್ಷನ ಮಾತಿಗೆ ಅಖಿಲಾ ಎರಡು ಕೈ ತಟ್ಟಿ ಗಲ್ಲನೇ ನಕ್ಕಳು. ದಾಳಿಂಬೆಯಂತ ದಂತ ಪಂಕ್ತಿಗಳ ಮಿನುಗುವ ಅವಳ ಮುದ್ದು ನಗು ಅವನಿಗೆ ಯಾರದೋ ನೆನಪು ತರಿಸುತ್ತಿತ್ತು. ಆ ನಗುವಿನ ಮುಂದೆ ಬೇರೆಲ್ಲಾ ಗೌಣ ಎನಿಸುತ್ತಿತ್ತು. ನಸುನಗುತ್ತ ಎರಡು ಐಸ್ ಕ್ರೀಂ ಆರ್ಡರ್ ಮಾಡುತ್ತಿದ್ದಂತೆ ಇಬ್ಬರ ಮುಖ ಅರಳಿತು.

"ನಿಮ್ಮನೆ ಎಲ್ಲಿ?"  ಕೇಳಿದ. ಆದರೆ ಇಬ್ಬರೂ ಐಸ್ ಕ್ರೀಂ ಮೆಲ್ಲುವ ಕಾರ್ಯದಲ್ಲಿ ವ್ಯಸ್ತರಾಗಿದ್ದು ಉತ್ತರಿಸಲಿಲ್ಲ. ಅಷ್ಟರಲ್ಲಿ ಪರ್ಸ್ ನಲ್ಲಿನ ವೈದೇಹಿಯವರ ಫೋನ್ ರಿಂಗಣಿಸಿತು. ಹರ್ಷ ಅದನ್ನು ತೆಗೆದು ನೋಡಿದ. 'ಕಿಟ್‌ಕ್ಯಾಟ್' ಸ್ಕ್ರೀನ್ ಮೇಲೆ ಹೆಸರು ಮೂಡಿತು. ಫೋನ್ ರಿಸೀವ್ ಮಾಡುತ್ತಿದ್ದಂತೆ ಕೇಳಿತ್ತು ಅವಳ ಧ್ವನಿ.....

"ಕಿಲ್ಲರ್ಸ್,, ಎಲ್ಲಿದೀರಾ ಇಬ್ರೂ... ಆರ್ ಯು ಆಲ್‌ರೈಟ್??" ಗಾಬರಿಯಿಂದ ಅವಳ ಧ್ವನಿ ಕಂಪಿಸುತ್ತಿತ್ತು. ಹರ್ಷನಿಗೆ ಆ ಧ್ವನಿ ಕಿವಿಗಷ್ಟೇ ಅಲ್ಲದೆ ಹೃದಯಾಂತರಾಳದಲ್ಲಿ ಅಪ್ಪಳಿಸಿ ಮನಸ್ಸು ಕಲುಕಿದಂತಾಯಿತು. ನೆನಪಿನ ಬಾವಿಯೊಳಗೆ ಅದೇ ಸ್ವರ ಮತ್ತೆ ಮತ್ತೆ ಪ್ರತಿಧ್ವನಿಸಿತು. ಅವನು ನಿಷ್ಕ್ರಿಯನಾಗಿ ಆಲಿಸುತ್ತಿದ್ದ. ಪರಿ ಒಂದೇ ಸಮನೆ ಕೇಳುತ್ತಿದ್ದರೂ ಹರ್ಷ ಏನೂ ಹೇಳದಾದಾಗ ನಿಖಿಲ್ ಫೋನ್ ತನ್ನೆಡೆ ಎಳೆದುಕೊಂಡು..

"ಕಿಟ್‌ಕ್ಯಾಟ್ ನಾವು ಐಸ್ ಕ್ರೀಂ ತಿಂತಿದೀವಿ. ತಿಂದು ಮನೆಗೆ ಬರ್ತೆವೆ. ಡೋಂಟ್ ವರಿ.." ಅವನ ಮಾತು ಕೇಳಿ ಸಮಾಧಾನಗೊಂಡು

"ಸರಿ. ಅಲ್ಲೇ ಇರಿ. ವಿವೇಕ್ ಅಂಕಲ್ ಬರ್ತಾರೆ. ಅವರ ಜೊತೆಗೆ ಮನೆಗೆ ಹೋಗಿರಿ. ನಾನು-ಅಜ್ಜಿ, ಸ್ವಲ್ಪ ಹೊತ್ತಿಗೆ ಮನೆಗೆ ಬರ್ತಿವಿ ಒಕೆ.."

"ಒಕೆ. ವಿವೇಕ್ ಅಂಕಲ್ ಬರೋದು ಬೇಡ. ನಮ್ಮ ಹೊಸ ಫ್ರೆಂಡ್ ಜೊತೆಗೆ ಮನೆಗೆ ಹೋಗ್ತಿವಿ. "

"ಹೊಸ ಫ್ರೆಂಡ್...?? ಯಾರು?" ಅಚ್ಚರಿಗೊಂಡಳು.

"ಕಿಟ್ ಕ್ಯಾಟ್ ಏನಾಯ್ತು ಗೊತ್ತಾ... " ಎಂದು ಮಾತು ಶುರು ಮಾಡಿದ ನಿಖಿಲ್ ಎಲ್ಲವನ್ನೂ ವಿವರಿಸಿ ಹೇಳಿದರೂ ಆ ಫ್ರೆಂಡ್ ಯಾರು ಎಂಬುದನ್ನು ಮಾತ್ರ ಬಿಡಿಸಿ ಹೇಳಲಿಲ್ಲ. ಮಕ್ಕಳ ಪ್ರಾಣ ಉಳಿಸಿದ ವ್ಯಕ್ತಿ ಮೇಲೆ ಆಕೆಗೆ ಗೌರವಾಭಿಮಾನ ಹುಟ್ಟಿತು. ಫೋನ್ ಅವರಿಗೆ ಕೊಡುವಂತೆ ಹೇಳಿ..

"ಸರ್.‌. ಮಕ್ಕಳ ಪ್ರಾಣ ಉಳಿಸಿದ ನಿಮಗೆ ಹೇಗೆ ಕೃತಜ್ಞತೆ ಹೇಳಬೇಕೋ ತಿಳಿಯುತ್ತಿಲ್ಲ‌. ತುಂಬಾ ಧನ್ಯವಾದಗಳು.." ಅವನಿನ್ನು ಅವಳ ಪರಿಚಿತ ಸುಮಧುರ ಧ್ವನಿಯ ಗುಂಗಿನಿಂದ ಚೇತರಿಸಿಕೊಂಡಿರಲಿಲ್ಲ. ಮೌನವಾಗಿ ಉಳಿದ.

" ನಿಮಗೆ ಅಭ್ಯಂತರವಿಲ್ಲದಿದ್ರೆ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿರ್ತಿರಾ.. ಪ್ಲೀಸ್.. ಕೀ ಅದೇ ಪರ್ಸ್‌ನಲ್ಲಿದೆ. ಸ್ವಲ್ಪ ಹೊತ್ತಿನಲ್ಲಿ ನಾವು ಬರ್ತಿವಿ. ಮನೆಯಲ್ಲೇ ಭೇಟಿಯಾಗಬಹುದು"
"ಹಲೋ...‌ ಸರ್, ಹಲೋ..." ಪರಿಯ ಕೂಗಿಗೆ ಅಖಿಲಾ ಅವನ ತೋಳು ಹಿಡಿದು ಅಲುಗಿಸಿದಳು.

"ಹ್ಮ್.... ಹ್ಮಾ ಇಟ್ಸ್ ಒಕೆ. ನೋ ಪ್ರಾಬ್ಲಮ್.. ನಾನು ಕರೆದುಕೊಂಡು ಹೋಗ್ತಿನಿ." ಎಚ್ಚರಗೊಂಡು ಉತ್ತರಿಸಿದ. ಅವನ ಧ್ವನಿ ಕೇಳಿ ಅವಳಿಗೂ ಆಶ್ಚರ್ಯ!

"ನಿಮ್ಮ ಹೆಸರು...?" ಕೇಳಿದಳು ಅನುಮಾನದಿಂದ

"ಐಮ್ ಸಂಕಲ್ಪ್! ಸಂಕಲ್ಪ್ ಅಥ್ರೇಯ..!" ಅಷ್ಟು ಹೊತ್ತು ಮಾತಾಡಿದ್ದು ಹರ್ಷನೊಂದಿಗೆ ಎಂದು ತಿಳಿದು ಸಂತಸದ ಕಿರುನಗು, ಕಣ್ಣಹನಿ ಒಟ್ಟಿಗೆ ಮೂಡಿ ಅವಳ ಅಂದದ ಮೊಗ ಅರಳಿತು. ಅದು ಒಂದೇ ಕ್ಷಣ... ಮಾನ್ವಿಯ ಮುಖ ನೆನಪಾಗುತ್ತಿದ್ದಂತೆ ಫೋನ್ ತುಂಡರಿಸಿಬಿಟ್ಟಳು.

ಅಪಘಾತದಲ್ಲಿ ನಿಶ್ಯಕ್ತಗೊಂಡ ವೈದೇಹಿಯವರು ಆಸ್ಪತ್ರೆಯ ಬೆಡ್ ಮೇಲೆ ಡ್ರಿಪ್ಸ್ ಹಾಕಿಕೊಂಡು ಕಣ್ಣುಮುಚ್ಚಿ ಮಲಗಿದ್ದರು. ಮನೆಗೆ ಹೋಗುವುದಾ ಬೇಡವಾ? ಎಂಬ ಆಲೋಚನೆಯಲ್ಲಿ ಪರಿ ಕಳೆದುಹೋದಳು.

ಅತ್ತ ಅವಳನ್ನು ಕಾಣುವ ಕಾತುರತೆಯೊಂದಿಗೆ ಮಕ್ಕಳನ್ನು ಮನೆಗೆ ಕಳುಹಿಸಲು ಹೊರಟಿದ್ದ ಹರ್ಷನಿಗೆ ಕಿಂಚಿತ್ತೂ ಸೂಚನೆಯಿರಲಿಲ್ಲ ಆ ದಿನ ತನ್ನ ನೈಜ ಅಸ್ತಿತ್ವದ ಪರಿಚಯ ಆಗುವುದೆಂದು..

                    ******************

ಮಗುವಿನ ಅಳು ನಿಲ್ಲದಾದಾಗ ತಿನಿಸು ಕೊಡಿಸಲು  ಕರೆದುಕೊಂಡು ಹೊರಟಳು ಮಾನ್ವಿ. ಹರ್ಷ ಅದಾಗಲೇ ಒಂದು ಕಾರು ತೆಗೆದುಕೊಂಡು ಹೊರಟು ಹೋದದ್ದನ್ನು ತಿಳಿಸಿದ ಡ್ರೈವರ್. ಮಾನ್ವಿ ಹರ್ಷನಿಗೆ ಕರೆ ಮಾಡಿದರೂ ಆತನ ಫೋನ್ ಸ್ವಿಚ್ ಆಫ್ ಬಂದಿತು. ಕೂಡಲೇ ಸೆಕ್ಯೂರಿಟಿಗೆ ಅವನನ್ನು ಪತ್ತೆ ಹಚ್ಚಲು ಕಳುಹಿಸಿ, ತಾನು ಮಗುವಿನೊಂದಿಗೆ  ಉಳಿದಳು.

ಹರ್ಷನ ಬಗ್ಗೆ, ಮತ್ತು ಮಗುವಿನ ಬಗ್ಗೆ ಎಲ್ಲ ತಿಳಿದಿದ್ದ ಪ್ರಸನ್ನ ಮಾತ್ರ ನಿರಾಳನಾಗಿದ್ದ. ಮಾನ್ವಿಯ ಗಮನ ಸರಿಸಲು "ಈ ಮಗುವಿನ ಪೇರೆಂಟ್ಸ್ ಪಕ್ಕದ ರೆಸ್ಟೋರೆಂಟ್'ಗೆ ಹೋಗಿರಬಹುದೇನೋ,, ನೋಡೋಣವಾ?" ಕೇಳಿದ. ಆಕೆಗೂ ಬೇರೆ ದಾರಿ ಕಾಣಲಿಲ್ಲ; ಒಪ್ಪಿದಳು.

ಜೊತೆಗೆ ಇರುವಷ್ಟು ಸಮಯ ಮಗುವಿನ ಲಾಲನೆ ಪಾಲನೆ ಊಟ ಉಪಚಾರ ಆರೈಕೆಯ ಹೊಣೆ ಮಾನ್ವಿಯದಾಯಿತು. ಮೂರು ಬಾರಿ ಬಾತ್ರೂಂ ಸೇವೆ ಕೂಡ ಆಗಿ ಹೋಯಿತು. ಅವಳು ಬೇಸರ ಮಾಡಿಕೊಳ್ಳದೆ ಮಗುವನ್ನು ಸಂತೋಷದಿಂದ ನೋಡಿಕೊಂಡಳು. ಮಗುವಿನೊಂದಿಗೆ ಮಗುವಾಗಿ ನಟಿಸುತ್ತ, ಆಡಿಸುತ್ತ, ಅಣುಗಿಸುತ್ತ ತುಂಬಾ ಮೋಜಿನಲ್ಲಿದ್ದಳು. ಕಳೆದು ಹೋದ ಬಾಲ್ಯ ಮರಳಿ ಸಿಕ್ಕಹಾಗೆ.. ಅವಳ ಈ ಪ್ರವರ್ತನೆ ಪ್ರಸನ್ನನಿಗೆ ಹೊಸತು, ವಿಶೇಷ ಕೂಡ.. ಮೆಚ್ಚುಗೆಯಿಂದ ನೋಡಿದವನ ಮೀಸೆಯಂಚಲಿ ಅವನಿಗೂ ತಿಳಿಯದ ಮುಗುಳ್ನಗು. ಮೊದಲ ಬಾರಿ ಅವನೆದೆಯಲ್ಲಿ ಕಚಗುಳಿಯ ಭಾವನೆ. ರೆಪ್ಪೆ ಮಿಟುಕಿಸದೆ ನೋಡುತ್ತಿದ್ದವನು ಯಾವುದೋ ಯೋಚನೆಗೆ ತಲೆ ಕೊಡವಿ ದೃಷ್ಟಿ ಬದಲಿಸಿದ. ಅವಳಿಗೆ ಮಗುವಿನ ಬಗ್ಗೆ ಇದ್ದ ಕಾಳಜಿ ಆತಂಕ ಅವನಿಗೆ ಇರಲಿಲ್ಲ. ಆತ ಯತಾರೀತಿ ನಿರ್ಲಿಪ್ತನಾಗೇ ಇದ್ದ.

ಫೋನ್ ಎತ್ತಿ ಯಾರೊಂದಿಗೊ ಮಾತನಾಡುತ್ತಾ ಅವನು ತನ್ನ ಜಾಗದಿಂದ ಎದ್ದು ಹೊರನಡೆದ. ಮಾನ್ವಿ ಮಗುವಿನ ಜೊತೆ ಮುದ್ದಾಗಿ ಆಟವಾಡುತ್ತ ಮೈಮರೆತಿದ್ದಳು. ಎರಡೇ ನಿಮಿಷದಲ್ಲಿ ಅವಳ ಎದುರು ಬಂದು ಕುಳಿತವನನ್ನು ಮುಖ ಎತ್ತಿ ಸಹ ನೋಡದೆ ಪ್ರಸನ್ನ ಎಂದೇ ಭಾವಿಸಿ ಕೇಳಿದಳು -  "ಮಗು ಎಷ್ಟು ಕ್ಯೂಟಾಗಿದೆ ಅಲ್ವಾ... ಹೆಸರೇನಿರ್ಬಹುದು??"

"ಮಾನ್ವಿ...!!" ಪರಿಚಿತ ಧ್ವನಿ ಉತ್ತರಿಸಿತ್ತು. ಆ ಧ್ವನಿಯನ್ನು ಬಹುದಿನಗಳ ನಂತರ ಕೇಳಿ ಆಶ್ಚರ್ಯ ಆಘಾತ ಒಟ್ಟಿಗೆ ಉಂಟಾಗಿ ತಲೆ ಎತ್ತಿ ನೋಡಿದವಳೇ, ಎದೆಯಲ್ಲಿ ಜ್ವಾಲಾಮುಖಿ ಸ್ಪೋಟವಾದಂತೆ ಸ್ತಬ್ಧಳಾದಳು.

ಎದುರಿಗೆ ಕುಳಿತಿದ್ದು ಪ್ರಸನ್ನನಲ್ಲ;  ಆಲಾಪ್! ಮೂರ್ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ಅವನನ್ನು ನೋಡುತ್ತಿದ್ದಳು. ತುಂಬಾ ಬದಲಾಗಿದ್ದ. ಪೀಚು ಗಡ್ಡದ ಬದಲಿಗೆ ಶೇವ್ಡ್ ಮಾಡಿದ ಶುದ್ಧ ಮುಖ. ಫ್ರೇಮ್ ಲೆಸ್ ಸ್ಪೆಕ್ಟ್, ಹುಡುಗುತನದ ಬದಲಿಗೆ ಮುಖದಲ್ಲೊಂದು ಗಾಂಭಿರ್ಯತೆ, ಪ್ಯೂರ್ ಪ್ರೊಫೆಷನಲ್ ಡಾಕ್ಟರ್ ಲುಕ್ ಅವನದು!!  ಆಕೆ ಕನಸೋ ನನಸೋ ಎಂಬ ಗೊಂದಲಕ್ಕೆ ಒಳಗಾದಳು.

"ಮಗು ಹೆಸರು... ಮಾನ್ವಿ...! ಅದೇ ಹೆಸರು ಯಾಕಿಟ್ಟೆ ಗೊತ್ತಾ, ನನ್ನ ಬೆಸ್ಟ್ ಫ್ರೆಂಡ್ ಒಬ್ಬಳಿದ್ದಳು, ಐ ಮೀನ್ ಇದ್ದಾಳೆ ಶುದ್ದ ತಲೆಹರಟೆ,, ಹಠಮಾರಿ, ಮುಂಗೋಪಿ, ಜಗಳಗಂಟಿ!! ಮೇಲ್ನೋಟಕ್ಕೆ ಹಾಗೆ ಕಾಣ್ತಿದ್ದರೂ ಅವಳ ಮನಸ್ಸು ಮಗುತರಾ.. ಒಂದು ಕಡೆ ನಿಂತಲ್ಲಿ ನಿಲ್ತಿರ್ಲಿಲ್ಲ ಕೂತಲ್ಲಿ ಕೂರ್ತಿರ್ಲಿಲ್ಲ, ಲೈಫ್ ಅಂದ್ರೆ ಅವಳ ಪ್ರಕಾರ ರೇಸ್ ಇದ್ದಹಾಗೆ. ತುಂಬಾ ಸ್ಪೀಡಾಗಿ ಓಡ್ತಾ ಇರ್ಬೇಕು.. ಏನೇ ಆಗಲಿ ಎಂತದ್ದೇ ಸಮಸ್ಯೆ ಬರಲಿ ಯಾವುದಕ್ಕೂ ತಲೆ ಕೆಡಿಸ್ಕೊಳ್ಳದೇ ನಗನಗ್ತಾ ಇರೋ   ಹುಡುಗಿ.  ಯಾವಾಗ್ಲೂ ನನ್ನ ಹಿಂದೆ ಮುಂದೆ ಸುಳಿದಾಡೋಳು, ನನ್ನನ್ನ ರೇಗಿಸೋಳು, ಜಗಳ ಕಾಯೋಳು. ಆದ್ರೆ ಯಾವತ್ತೂ ಬೇರೆಯವರ ಮುಂದೆ ನನ್ನನ್ನ ಸೋಲೋಕೆ ಬಿಡ್ತಿರ್ಲಿಲ್ಲ. ಯಾಕೆಗೊತ್ತಾ..? ಯಾಕಂದ್ರೆ ಅವಳಿಗೆ ನಾನಂದ್ರೆ ಪ್ರಾಣ!!

ಎಷ್ಟು ಚೆನ್ನಾಗಿತ್ತು ಆ ಬಾಲ್ಯ, ಆ ಹುಡುಗಾಟ, ನಮ್ಮ ಗೆಳೆತನ ಆ ದಿನಗಳು...  ಪ್ಚ್.. ಈಗ ಅವೆಲ್ಲ ಕನಸಿನ ಹಾಗೆ ಕಾಣುತ್ತವೆ.. ಈಗವಳು ನನ್ನ ಜೊತೆ ಮಾತು ಸಹ ಆಡೋದಿಲ್ಲ ಗೊತ್ತಾ.... ಕಾಲ್ ಪಿಕ್ ಮಾಡಲ್ಲ. ಮೇಲ್ ಗೆ ರಿಪ್ಲೈ ಮಾಡಲ್ಲ. ಮನೆಗೆ ಭೇಟಿಯಾಗೋಕೆ ಹೋದರೆ ಇದ್ದರೂ ಮನೆಲಿಲ್ಲ ಅಂತ ಹೇಳಿ ದೂರ ಮಾಡಿಬಿಡ್ತಾಳೆ. ಆ ಹಳೆಯ ಫ್ರೆಂಡ್ ನೆನಪಿಗಾಗಿ ನನ್ನ ಮಗಳಿಗೂ ಅದೇ ಹೆಸರಿಟ್ಟೆ ನಾನು.. ವಿಚಿತ್ರ ಏನಂದ್ರೆ ಇವಳೂ ಅವಳ ಹಾಗೆ.. ಅದೇ ಹಠ, ಕೋಪ, ತುಂಟತನ ಅವಳಷ್ಟೇ ಮುದ್ದು..." ಆಲಾಪ್ ಮಗುವಿನ ಎಳೆಯ ಕೈಗೆ ಮುತ್ತಿಟ್ಟ.

ಅವನ ಮಾತಿನ್ನೂ ಮುಗಿದಿರಲಿಲ್ಲ ಮಾನ್ವಿಗೆ ಹಳೆಯ ದಿನಗಳು ನೆನಪಾಗಿ ಕಣ್ಣು ಆರ್ದ್ರತೆಯಿಂದ ತುಂಬಿ ತುಳುಕುವ ಹಂತದಲ್ಲಿದ್ದವು. ಆಕೆ ಕಣ್ಣೀರು ಮರೆಮಾಚಲು ಮಗುವನ್ನು ಅವನ ಕೈಗಿತ್ತು ಹೊರಡಲು ಅನುವಾದಳು.

"ಇನ್ನೂ  ಹೋಗಿಲ್ವಾ ನನ್ನ ಮೇಲಿನ ಕೋಪ!! ಪ್ರೀತಿಸಿ ಮದುವೆಯಾದದ್ದು ಅಷ್ಟೊಂದು ದೊಡ್ಡ ಅಪರಾಧಾನಾ? ನನ್ನ ತಪ್ಪಿಗೆ ಕ್ಷಮೆ ಇಲ್ಲವಾ?"

"ಪ್ರೀತಿಸಿ ಮದುವೆಯಾದದ್ದು ತಪ್ಪಲ್ಲ ಕಣೋ.. ಹೊಸ ಬಟ್ಟೆ ಕೊಳ್ಳುವಾಗ, ಹೆರ್ಸ್ಟೈಲ್ ಚೆಂಜ್ ಮಾಡುವಾಗ, ಅಷ್ಟೇ ಯಾಕೆ ಒಂದು ಜೊತೆ ಚಪ್ಪಲಿ ಕೊಳ್ಳುವಾಗ ಕೂಡ ನನ್ನ ಅಭಿಪ್ರಾಯ ಕೇಳ್ತಿದ್ದವನು,, ನಿನ್ನ ಜೀವನದ ಇಷ್ಟೊಂದು ಮಹತ್ವದ ನಿರ್ಧಾರವನ್ನ ತೆಗೆದುಕೊಳ್ಳುವಾಗ ನನಗೂ ಒಂದು ಮಾತು ಹೇಳಲಿಲ್ವಲ್ಲ ಅದು ತಪ್ಪು ‌.. ನನ್ನ ಮುಂದೆ ನಿನ್ನ ಜೀವನದ ಪ್ರತಿಯೊಂದು ಗುಟ್ಟನ್ನು ಹೇಳ್ತಿದ್ದವನು, ನಿನ್ನ ಪ್ರೀತಿ ವಿಷಯ ನನ್ನಿಂದ ಮುಚ್ಚಿಟ್ಟೆಯಲ್ಲ ಅದು ತಪ್ಪು.. ಎಲ್ಲರಿಗಿಂತ ನಾನೇ ಮುಖ್ಯ ಎನ್ನುವ ಸ್ಥಾನ ಕೊಟ್ಟವನು, ನನಗೇ ಕೊನೆಯಲ್ಲಿ ಮದುವೆಗೆ ಕರೆದೆ ನೋಡು ಅದು ತಪ್ಪು.. ನಿನ್ನ ಲೈಫಲ್ಲಿ ನಾನು ಏನೂ ಅಲ್ಲವೆಂದಮೇಲೆ ನನಗೆ ಅತಿಯಾದ ಸಲುಗೆ ಕೊಟ್ಟು ನಿನ್ನನ್ನೇ ಅವಲಂಬಿಸಿ ಅತಿಯಾಗಿ ಹಚ್ಚಿಕೊಳ್ಳುವವರೆಗೂ ಸುಮ್ಮನಿದ್ದೆಯಲ್ಲ,ಅದು ತಪ್ಪು.... ಯಾಕೋ ಕೊಟ್ಟೆ ಅಷ್ಟೊಂದು ಸಲುಗೆ? " ಅಷ್ಟು ದಿನಗಳ ಅಸಹನೆ ಕೋಪವಾಗಿ ಹೊರಹೊಮ್ಮಿತು.
"ಅಷ್ಟಕ್ಕೂ.. ನಿನ್ನನ್ನು ಕ್ಷಮಿಸೋಕೆ ನಾನ್ಯಾರು ಹೇಳು? ನಿನಗೆ ಸರಿಕಂಡದ್ದನ್ನ ನೀನು ಮಾಡಿದೆ. ನನಗೆ ಸರಿ ಅನ್ನಿಸಿದ ಹಾಗೆ ನಾನು ಬದುಕ್ತಿದ್ದೇನೆ." ಬೆನ್ನು ತೋರಿ ನಿಂತಳು.

"ಮಾನು... ನನ್ನನ್ನ ಅರ್ಥ ಮಾಡ್ಕೊಳ್ಳೆ, ಆಗಿನ ಪರಿಸ್ಥಿತಿ ಹಾಗಿತ್ತು." ಮೃದುವಾಗಿ ನುಡಿದ

"ಪರಿಸ್ಥಿತಿ?? ಈಗ ಹೇಗಿದೆ? ಎಲ್ಲಾ ಕ್ಷೇಮ ತಾನೇ! ಸುಖವಾಗಿರು ನಿನ್ನ ಹೆಂಡತಿ ಮಗು ಜೊತೆ.. ನನ್ನ ಡಿಸ್ಟರ್ಬ್ ಮಾಡಬೇಡ"

"ಇಷ್ಟೇನಾ ಫ್ರೆಂಡ್ ಶಿಪ್ ಅಂದ್ರೆ?"

"ನಿನ್ನ ಪಾಲಿಗೆ ಇಷ್ಟೇನೆ! ಪ್ರೀತಿಸೋ ಹುಡುಗಿ ಸಿಕ್ಕ ತಕ್ಷಣ ಬೇರೆ ಎಲ್ಲಾ ಕಾಲುಕಸ ನಿನಗೆ!! ಅಲ್ವಾ.." ಸಿಟ್ಟಿನಿಂದ ಟೇಬಲ್ ಮೇಲೆ ಹೊಡೆದಳು

"ಯಾಕೆ ಈ ತರಾ ಮಾತಾಡ್ತಿದೀಯಾ? ಒಪ್ಕೊಳ್ತಿನಿ, ಸಂಜೀವಿನಿ ಬಗ್ಗೆ ನಿನ್ನ ಮುಂದೆ ಹೇಳಲಿಲ್ಲ. ಅದಕ್ಕೆ ಕಾರಣ ಅವಳ ಸಂಕೋಚ ಸ್ವಭಾವ! ಆ ರೀತಿ ಮದುವೆ ನಡೆಯುತ್ತೆ ಅಂತ ನನಗೂ ಗೊತ್ತಿರಲಿಲ್ಲ. ಅದು ಆಕಸ್ಮಿಕ! ಫ್ರೆಂಡಾಗಿ ನೀನು ನನ್ನ ಅರ್ಥ ಮಾಡ್ಕೋಳ್ತಿಯಾ ಅಂದ್ಕೊಂಡಿದ್ದೆ. "

"ನೀನಾಗಿಯೇ ಎಲ್ಲವನ್ನೂ ಹೇಳಿದ್ದರೆ ಬಹುಶಃ ಅರ್ಥ ಮಾಡಿಕೊಳ್ತಿದ್ದೆನೆನೋ.. ಅದು ಬಿಟ್ಟು ಆಗಷ್ಟೇ ಪರಿಚಯವಾದ ಪರಿ ಮೂಲಕ ವಿಷಯ ಗೊತ್ತಾಯ್ತು ನೋಡು.. ನಿನ್ನ ಮೇಲಿದ್ದ ನಂಬಿಕೆ ನುಚ್ಚು ನೂರಾಗಿ ಹೋಯ್ತು.. ನನಗಿಂತ ಹೆಚ್ಚಾಗಿದ್ದಳಾ ಅವಳು??" ಹುಬ್ಬು ಗಂಟಿಕ್ಕಿದಳು

"ನೋ ಮಾನು... ನೀನು ಪರಿ ಬಗ್ಗೆ ತಪ್ಪು ತಿಳಿದಿದ್ದಿಯಾ. ಅಸಲಿಗೆ ಅವಳಿಗೂ ವಿಷಯ ಅವತ್ತೇ ಗೊತ್ತಾಗಿದ್ದು.. ಸುಮ್ನೆ ಏನೇನೋ ಅಪಾರ್ಥ ಮಾಡಿಕೊಂಡು ಹರ್ಷ ಪರಿ ಲೈಫಲ್ಲಿ ಆಟ ಆಡಬೇಡ. ಮಾನು ನಿಲ್ಲಿಸೋ ನಿನ್ನ ಹುಚ್ಚಾಟವನ್ನ...." ಅವಳನ್ನ ರಮಿಸಿದ

"ಈಗಲೂ ಅವಳದೇ ವಕಾಲತ್ತು.. ಗುಡ್ ಗುಡ್, ನೆನ್ನೆ ಮೊನ್ನೆ ಸಿಕ್ಕ ಪರಿ ಬಗ್ಗೆ ತುಂಬಾ ತಿಳಿದಿದ್ದಿಯಾ!! ಆದ್ರೆ ಚಿಕ್ಕ ವಯಸ್ಸಿನಿಂದ ಜೊತೆಗೆ ಆಡಿ ಬೆಳೆದ ನಾನು ಲೆಕ್ಕಕ್ಕೆ ಇಲ್ಲ. ವಾವ್ಹ್!!" ಚಪ್ಪಾಳೆ ತಟ್ಟಿದಳು ವ್ಯಂಗ್ಯವಾಗಿ.

"ಹರ್ಷ ಮತ್ತು ಪರಿ ಒಬ್ಬರಿಗಾಗೇ ಒಬ್ಬರು ಹುಟ್ಟಿದವರು.. ಅಷ್ಟೊಂದು ಪ್ರೀತಿಸೋ ಅವರನ್ನು ದೂರ ಮಾಡಿ ನೀನೇನು ಸಾಧಿಸಬೇಕು ಅಂತಿದ್ದಿಯಾ! ಯಾಕಿಷ್ಟೊಂದು ದ್ವೇಷ ಅವರ ಮೇಲೆ? ಸುಮ್ನೆ ಯಾಕೋ ಇದೆಲ್ಲಾ ರಗಳೆ... ಈ ಮದುವೆ ಕ್ಯಾನ್ಸಲ್ ಮಾಡು ಮಾನು. ಹರ್ಷನಿಗೆ ನಿಜ ಹೇಳಿಬಿಡು"

''ನೀನು ನನಗೋಸ್ಕರ ಬಂದಿದ್ದಿಯೆಂದು  ಒಂದು ಕ್ಷಣ ಖುಷಿಪಡ್ತಿದ್ನಲ್ವೋ... ಭ್ರಮೆ ನನ್ನದು!! ಈಗ ಗೊತ್ತಾಯ್ತು ಈಗಲೂ ನೀನು ಬಂದಿರೋದು, ನನಗಾಗಿಯಲ್ಲ, ಅವಳಿಗಾಗಿ!! ಅವಳ ಲೈಫ್ ಸೆಟ್ಲ್ ಮಾಡೋದಕ್ಕೆ ರೈಟ್?!! " ಅವಳ ವರ್ತನೆಗೆ ಆತ ರೋಸಿ ಹೋಗಿ...

" ಹೌದು.‌.. ನಾನು ಪರಿಗೋಸ್ಕರನೇ ಬಂದಿರೋದು. ಅವಳನ್ನ ಹರ್ಷನನ್ನ ಒಂದು ಮಾಡಿಯೇ ಹೋಗೋದು!! ಏನಿವಾಗಾ?  ಪ್ರೀತಿ ಅರ್ಥ ಗೊತ್ತಿದೆಯೇನೆ ನಿನಗೆ? ಯಾವತ್ತಾದ್ರೂ ಯಾರನ್ನಾದರೂ ಪ್ರೀತಿಸಿದ್ರೆ ತಾನೇ ಗೊತ್ತಾಗೋಕೆ! ಮೂಗಿನ ತುದಿಯಲ್ಲೇ ಕೋಪ.. ಅದೊಂದೇ ಗೊತ್ತಿರೋದು!" ರೇಗಿದ ಕೋಪದಿಂದ..

ಯಾರನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸಿದ್ದಳೋ ಅವನೇ ಕೇಳುತ್ತಿದ್ದ 'ಪ್ರೀತಿ ಅರ್ಥ ಗೊತ್ತಾ ನಿನಗೆ?' ಯಾಕೆ ಗೊತ್ತಿಲ್ಲ.. ವರ್ಷಾನುಗಟ್ಟಲೆ ಅದೇ ನೋವಿನ ತಾಪದಲ್ಲಿ ಬೆಂದವಳು ನಾನು..!
'ನಿನ್ನ ಪ್ರೀತಿ ವಿಷಯ ಮೊದಲೇ ತಿಳಿದಿದ್ದರೆ ನನ್ನ ಮನಸ್ಸನ್ನು ನಾನು  ಆಳವಾದ ಪ್ರೀತಿಕೂಪಕ್ಕೆ ಬೀಳಲು ಬಿಡುತ್ತಿರ್ಲಿಲ್ಲ. ಅದು ನಿನಗೆ ಗೊತ್ತಿಲ್ವೇ..' ಒಳದನಿ ಮಾರ್ದನಿಸಿತು. ಸಿಟ್ಟು ಹೆಚ್ಚಾಯಿತು.

"ಹೌದು ! ನನಗೆ ಪ್ರೀತಿಯ ಅರ್ಥ ಗೊತ್ತಿಲ್ಲ. " ಟೇಬಲ್ ಕವರ್ ಎಳೆದು ಬಿಸಾಕಿದಳು. ಅದರ ಮೇಲಿದ್ದ ಪ್ಲೇಟ್ ಗ್ಲಾಸ್ ಎಲ್ಲವೂ ಚೂರುಚೂರಾಗಿ ಹರಡಿದವು. ಮಗು ಮತ್ತೆ ಚೀರಿ ಅಳತೊಡಗಿತು. ಮಗುವಿನ ಮುಖ ನೋಡಿ ಅವಳ ಮನಸ್ಸು ದ್ರವಿಸಿತು

"ಮಾನ್ವಿ.. ತಲೆ ಕೆಟ್ಟಿದೆಯಾ ನಿನಗೆ? ಯಾಕೀತರ ಸೈಕೋ ತರಹ ಆಡ್ತಿದೀಯಾ?" ಶಾಕ್‌ನಲ್ಲಿ ಗದರಿದ ಆಲಾಪ್.

"ಹೌದು ಸೈಕೋನೆ! ಎಲ್ಲರ ಕೈಯಲ್ಲಾಡೋ ಗೊಂಬೆನಾ ನಾನು? ನನಗೆ ಭಾವನೆಗಳಿಲ್ವಾ? ಅವಕ್ಕೆ ಬೆಲೆ ಇಲ್ವಾ? ಯಾರು ಹೇಗೆಂದರೆ ಹಾಗೆ ಕೇಳಿ ನಂಬಿ ಮೋಸ ಹೋಗೋದು! ಕೊನೆಗೆ ಒಬ್ಬಳೇ ಅಳುತ್ತಾ ಕೊರಗೊದು!! ಇಷ್ಟೇನಾ ನನ್ನ ಲೈಫು?" ತಾನು ಏನು ಮಾತಾಡುತ್ತಿದ್ದಾಳೆಂಬ ಅರಿವು ಸ್ವತಃ ಅವಳಿಗೆ ಇರಲಿಲ್ಲ. ಆಲಾಪ್ ಆಲೋಚನೆಗೊಳಗಾದ.

ಮ್ಯಾನೇಜರ್ ಕೈಗೆ ಕಾರ್ಡ್ ಇಟ್ಟು ಉಮ್ಮಳಿಸುತ್ತಿದ್ದ ದುಃಖ ತಡೆದು ಆಚೆ ಬಂದಾಗ ಸಂಜೀವಿನಿ ಮತ್ತು ಪ್ರಸನ್ನ ಮಾತನಾಡುತ್ತಾ ನಿಂತಿದ್ದರು..

ಒಪ್ಪವಾಗಿ ಸೀರೆಯುಟ್ಟು, ಮುಡಿಯ ತುಂಬಾ ಹೂ ಮುಡಿದ  ಸಂಜೀವಿನಿ ಅದೇ ನಿಷ್ಕಪಟ ಕಂಗಳಲಿ ಮುಗುಳ್ನಗುತ್ತ ಅವಳನ್ನು ಆಲಂಗಿಸಲು ಮುಂದೆ ಬಂದಳು. ಬಲಗೈಯಿಂದ ದೂರ ತಡೆದು ಹೆಜ್ಜೆ ಮುಂದಿಟ್ಟಳು ಮಾನ್ವಿ. ಅವಳ ಕೊರಳಲ್ಲಿನ ಮಾಂಗಲ್ಯ ಕಂಡು ಮಾತ್ಸರ್ಯ ಇಣುಕಿ ಅಸಹಾಯಕತೆಯಿಂದ ದುಃಖದ ಮೊರೆ ಹೋಯಿತು.

"ಪರವಾಗಿಲ್ಲ ಮಿಸೆಸ್ ಆಲಾಪ್, ಹೇಗೂ ಮದುವೆ ಮುಗಿಯೋವರೆಗೂ ಇಬ್ಬರೂ ಅವಳ ಜೊತೆಗೆ ಇರ್ತಿರಲ್ವಾ.. ಮನೆಯಲ್ಲಿ ಕುಳಿತು ತುಂಬಾ ಮಾತಾಡೋಣ ನಡಿರಿ" ಪ್ರಸನ್ನ ಅವಳ ಅನುಮತಿಯನ್ನು ಕೇಳದೆ ಅವರನ್ನು ಆಮಂತ್ರಿಸಿದ.

ಗಕ್ಕನೇ ತಿರುಗಿ ನೋಡಿದ ಮಾನ್ವಿಗೆ ಒಂದೇ ನೋಟದಲ್ಲಿ ಅರ್ಥವಾಯಿತು ಇದೆಲ್ಲಾ ಅವನದೇ ಫ್ರೀ ಪ್ಲ್ಯಾನ್ ಎಂದು.ಅವನನ್ನು ನೋಡಿದ ಅವಳ ಕಣ್ಣು ಕಿಡಿಕಿಡಿಯಾದವು.  ಅವಳು ಟ್ಯಾಕ್ಸಿಯಲ್ಲಿ ಕುಳಿತು ಹೊರಟು ಹೋದಳು.

"ಸರ್, ಬಹುಶಃ ಅವಳು ಯಾವುದೋ ಇಕ್ಕಟ್ಟಿನಲ್ಲಿ ಸಿಲುಕಿದ್ದಾಳೆ. ಮಾನು ಯಾವತ್ತೂ ಈ ರೀತಿ ದ್ವೇಷ ಸಾಧಿಸುವ ಹುಡುಗಿಯಲ್ಲ. ಅವಳ ಸಿಟ್ಟು ಕ್ಷಣಿಕ ಬಿಡಿ.... ನಾನು ಅವಳನ್ನ ಕನ್ವೆನ್ಸ್ ಮಾಡ್ತೆನೆ. ಎಲ್ಲಾ ಸರಿಹೋಗುತ್ತೆ.." ಆಲಾಪ್ ಅನ್ಯಮನಸ್ಕನಾಗಿ ನುಡಿದ. ಮಾನ್ವಿಯ ವರ್ತನೆ ಆತನನ್ನು ಚಿಂತೆಗೀಡು ಮಾಡಿತ್ತು.

" ಹೌದು ಸರ್, ಅವಳ ಜೊತೆಗೆ ಐದು ವರ್ಷ ಕಳೆದಿದ್ದಿನಿ, ಯಾವತ್ತೂ ಯಾರಿಗೂ ಕೆಟ್ಟದ್ದು ಬಯಸಿದವಳಲ್ಲ ಮಾನು.. ಅವಳು ಯಾವುದೋ ಅನಿವಾರ್ಯತೆ ಗೊಳಪಟ್ಟು ಹೀಗೆ ಮಾಡ್ತಿರಬಹುದು"ಸಂಜೀವಿನಿ ಧ್ವನಿ ಸೇರಿತು

'ಈ ಇಡೀ ಜಗತ್ತಿನಲ್ಲಿ ಆ ಪಿಶಾಚಿಯನ್ನ ಹೊಗಳದೇ ಇರೋ ಪ್ರಾಣಿ ನಾನೊಬ್ಬನೇ ಏನೋ' ಗೊಣಗಿಕೊಂಡ‌. ಇಬ್ಬರೂ ಏನಾಯ್ತು ಸರ್.. ಎನ್ನಲು

"ಏನಿಲ್ಲ, ಮದುವೆ ಮಾಡೋಕೆ ಬಂಧುಬಳಗ ಒಂದಾಗುವುದು ಸಂಪ್ರದಾಯ! ಆದರೆ ಒಂದು ಮದುವೆ ನಿಲ್ಲಿಸೋದಕ್ಕೆ ಇಷ್ಟು ಜನ ಒಗ್ಗಟ್ಟಾಗಿರೋದು ಹಿಸ್ಟರಿಯಲ್ಲಿ ಇದೇ ಮೊದಲೇನೋ"  ನಕ್ಕ.

ಅವನ ಹಾಸ್ಯಪ್ರಜ್ಞೆ ತಿಳಿದ ಸಂಜೀವಿನಿ  - "ಸರ್, ನೀವು ಸ್ವಲ್ಪ ಕೂಡ ಬದಲಾಗಿಲ್ಲ‌.. ನಿಮ್ಮನ್ನ ನೋಡಿ ಹಳೆಯ ದಿನಗಳು ನೆನಪಾದ್ವು‌.. ಪಾಪ,, ಮಾನ್ವಿನಾ ಎಷ್ಟು ಗೋಳಾಡಿಸಿಬಿಡ್ತಿದ್ರಿ!! ನಿಮಗೂ ಮಾನ್ವಿಗೂ ಈಡುಜೋಡು ಸರಿಯಾಗಿದೆ. ನೀವ್ಯಾಕೆ.." ಎನ್ನುತ್ತಿದ್ದವಳು ಅವನ ದುರುದುರು ನೋಟ ಅರ್ಥ ಮಾಡಿಕೊಂಡು ಬಾಯಿಗೆ ಕೈ  ಅಡ್ಡಗಟ್ಟಿದಳು ನಸುನಗುತ್ತ.

ದಾರಿಯಲ್ಲಿ ಹೋಗುವಾಗ ದಂಪತಿಗಳು ಮಗುವಿನೊಂದಿಗೆ ಖುಷಿಯಾಗಿರುವುದನ್ನು ಕಂಡ ಪ್ರಸನ್ನ 'ಒಂದು ವೇಳೆ ನಾನು, ಮಾನ್ವಿ ಇವನನ್ನು ಪ್ರೀತಿಸಿದ ವಿಷಯ ತಿಳಿಸಿದ್ದರೆ ಈ ಜೋಡಿಗಳ ಅನ್ಯೋನ್ಯತೆ ಹೀಗೆ ಇರುತ್ತಿತ್ತಾ? ನೋ... ಗತಿಸಿದ ನೋವನ್ನು ಮತ್ತೆ ಕೆದರಿ ಹೊಸ ಗಾಯ ಮಾಡದಿರುವುದೇ ಒಳ್ಳೆಯದು' ಎಂದುಕೊಂಡವನು ತಾನು ಅವರೊಂದಿಗೆ ಮಾತಿಗಿಳಿದ.

                   **********

ಮುಂದುವರೆಯುವುದು...



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...