ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-45


"ನಿಮ್ಮ ಫ್ರೆಂಡ್ ಕಿಟ್‌ಕ್ಯಾಟ್ ಬಗ್ಗೆ ಹೇಳಿ... ಹೇಗೆ ನೀವು ಫ್ರೆಂಡ್ಸ್ ಆಗಿದ್ದು..." ಕಾರಿನಲ್ಲಿ ಕೂರುತ್ತ ಕೇಳಿದ್ದ ಹರ್ಷ. ದಾರಿಯುದ್ದಕ್ಕೂ ಅವಳ ಬಗ್ಗೆ ಹೇಳುತ್ತಾ ಬಂದರು ಮಕ್ಕಳು. ಆ ಮೂಲಕ ಅವಳು ಬೆಂಗಳೂರಿನವಳು, ಡಾಕ್ಟರ್ ಎಂಬ ವಿಷಯ ತಿಳಿದುಕೊಂಡ.

ಮನೆಗೆ ಬರುತ್ತಿದ್ದಂತೆ ಮಕ್ಕಳ ಕೂಗಾಟ ಹಾರಾಟ ಯತಾರೀತಿ ಮುಂದುವರೆದಿತ್ತು. ಫುಟ್ಬಾಲ್ ಒದೆಯುತ್ತ, ಷೋ ಪಿಸ್ ಗಳನ್ನು ಉರುಳಿ ಕೆಳಗೆ ಬೀಳಿಸುತ್ತ ಸ್ಪರ್ಧೆಗೆ ಇಳಿದಿದ್ದರು ಕಿಲ್ಲರ್ಸ್.

"ನಿಮ್ಮ ಹೆಸರು ಅಖಿಲಾ ನಿಖಿಲ್ ತಾನೇ? ಮತ್ತೆ ವಾಟರ್ ಪಾರ್ಕಿನಲ್ಲಿ ಹರ್ಷ-ಏಂಜಲ್ ಅಂತೆಲ್ಲ ಕೂಗ್ತಿದ್ರೀ?" ಕೇಳಿದ

"ಅದು ಬರೀ ಡ್ರಾಮಾ.. ನಿನಗೆ ಬೇಗ ಏಂಜಲ್ ನೆನಪಾಗಲಿ ಅಂತ.." ಅಖಿಲಳ ಉತ್ತರ

"ಏಂಜಲ್ ನೆನಪಾಗ್ಲಿ ಅಂತಾನಾ....?? ಯಾವ ಏಂಜಲ್? " ಗಲಿಬಿಲಿಗೊಂಡ ಹರ್ಷ

"ಅದನ್ನು ನೀನು ಹೇಳಬೇಕು... ಪ್ರಿನ್ಸ್ ನೀನು ತಾನೇ??" ನಿಖಿಲ್ ಪ್ರಶ್ನಿಸಿದ

"ಪ್ರಿನ್ಸ್ ಆsss... ನಾನಾ? ಯಾರು ಹೇಳಿದ್ದು ನಿಮಗೆ?" ಅವನಿಗೆ ಎಲ್ಲವೂ ಸೋಜಿಗ ಎನಿಸಿತು

"ಕಿಟ್‌ಕ್ಯಾಟ್!!" ಮಕ್ಕಳ ಒಕ್ಕೊರಲ ನಾದ

"ಇನ್ನೂ ಏನೇನು ಹೇಳಿದ್ದಾಳೆ ನಿಮ್ಮ ಫ್ರೆಂಡ್ ಕಿಟ್‌ಕ್ಯಾಟ್??" ಕುತೂಹಲದಿಂದ ನೆಲದ ಮೇಲೆ ಮಂಡಿಯೂರಿ ಕುಳಿತ. ಕಿಲ್ಲರ್ಸ್, ಪರಿ ಹೇಳಿದ ಏಂಜಲ್ ಕಥೆಯನ್ನು ಪೂರ್ತಿಯಾಗಿ ತಮ್ಮ ಶೈಲಿಯಲ್ಲಿ ಹೇಳಿದ್ದಲ್ಲದೆ ವಾಟರ್ ಪಾರ್ಕ್ ಮತ್ತು ಬೀಚ್'ನಲ್ಲಿ ನಡೆದ ನಾಟಕದ ಬಗ್ಗೆ ಕೂಡ ತಿಳಿಸಿದರು.

ಹರ್ಷನಿಗೆ ಎಲ್ಲವೂ ಗೊಂದಲಮಯ... ನಾನು ಪ್ರಿನ್ಸ್? ಹಾಗಾದ್ರೆ ಏಂಜಲ್ ಯಾರು? ಅವಳಿಗೆ ನನ್ನೆದುರು ಬರಲಾಗದ ಶಾಪ ಏನು? ಯಾರು ಕೊಟ್ಟ ಶಾಪ? ಈ ಕಿಟ್‌ಕ್ಯಾಟ್ ಯಾರು? ಈ ಮಕ್ಕಳ ಮೂಲಕ ನನಗೇನನ್ನು ನೆನಪಿಸುವ ಪ್ರಯತ್ನ ಮಾಡ್ತಿದ್ದಾಳೆ? ನನಗೂ ಅವಳಿಗೂ ಏನು ಸಂಬಂಧ? ಇಂತಹುದೇ ನೂರಾರು ಪ್ರಶ್ನೆಗಳು ತಲೆ ಕದಡಿದವು. 'ಆದರೆ ಆ ಮಕ್ಕಳನ್ನ ಪ್ರತಿಸಲ ಕಂಡಾಗಲೂ ತನ್ನ ಗತದ ನೆರಳು ಬೆನ್ನತ್ತಿದ್ದಂತೂ ಸುಳ್ಳಲ್ಲ..' ಅವನೆಂದುಕೊಂಡ.

"ನಿನಗೆ ಈವಾಗ್ಲೂ ಏಂಜಲ್ ನೆನಪಾಗದಿದ್ರೆ ನಾನು ಇದನ್ನು ತಗೊಂಡು ನಿನ್ನ ತಲೆಗೆ ಹೊಡಿತೇನೆ. ಆಗ ಎಲ್ಲಾ ನೆನಪಾಗುತ್ತೆ" ಕೈಯಲ್ಲಿ ಕೋಲು ಹಿಡಿದು ನಿಂತಿದ್ದಳು ಅಖಿಲಾ. ಹರ್ಷ ತಬ್ಬಿಬ್ಬಾದ. ಎಲ್ಲಿ ಹೊಡೆದೇ ಬಿಡುವಳೆಂದು ಹೆದರಿ ನಿಖಿಲ್ ಕಣ್ಮುಚ್ಚಿದ

"ಇದನ್ನೂ ನಿಮ್ಮ ಕಿಟ್‌ಕ್ಯಾಟ್ ಹೇಳಿದ್ದಾಳಾ.."

"ಇಲ್ಲ,ಇಲ್ಲ... ಇದನ್ನ ಕಾರ್ಟೂನ್'ಲ್ಲಿ ನೋಡಿದ್ದೆ. ಹಿಂಗ್ ಮಾಡಿದ್ರೆ ನೆನಪು ಬರುತ್ತೆ ಗೊತ್ತಾ.." ಅಖಿಲಾ ಪ್ರಶ್ನಾರ್ಥಕವಾಗಿ ನೋಡಿದಳು. ಫಜೀತಿಗೆ ಸಿಲುಕಿದ ಹರ್ಷ...ಅಂತ ಪರಿಸ್ಥಿತಿಯಲ್ಲೂ ನಗು ತಡೆಯಲಾಗಲಿಲ್ಲ ಅವನಿಗೆ...

"ಪರವಾಗಿಲ್ವೆ.. ಈಗಲೇ ಡಾಕ್ಟರ್ ಬುದ್ದಿ ಬಂದ್ಬಿಟ್ಟಿದೆ ನಿನಗೆ... ಅದೇನೋ ಬೆಳಿಗ್ಗೆ ಡ್ರಾಮಾಗೆ ರೆಡಿಯಾಗಿದ್ರಲ್ಲಾ.. ಅದನ್ನ ಮಾಡಿ ನೋಡೋಣ" ಲಕ್ಷ್ಯ ಬೇರೆಡೆ ತಿರುಗಿಸಿ ಕೋಲು ತೆಗೆದುಕೊಂಡ.

"ಹ್ಮ...ಹೌದಲ್ವ.. ಅದಕ್ಕೆ ಹೊಸ ಡ್ರೆಸ್ ಬೇಕು. ಮೊದಲು ರೆಡಿಯಾಗಿ ಬಂದು ಆಮೇಲೆ ಡ್ರಾಮಾ ಮಾಡ್ತಿನಿ" ಒಳಗೆ ಹೋದಳು ಚಿನಕುರುಳಿ. ಇನ್ನೇನು ಅವಾಂತರ ಕಾದಿದೆಯೋ' ಎಂದು ನಿಖಿಲ್ ಹಿಂದೆ ಓಡಿದ.

ಕೆಲವು ನಿಮಿಷ ಹೊರಗೆ ಬರಲಿಲ್ಲ ಇಬ್ಬರೂ.
"ಏಯ್ ಇಡಿಯಟ್ ಅದು ಕಿಟ್ ಕ್ಯಾಟ್ ಬ್ಯಾಗ್ ತಾನೇ... ಅದರಲ್ಲಿ ನಿನ್ನ ಡ್ರೆಸ್ ಯಾಕಿರುತ್ತೆ? ಅದನ್ನು ಮುಟ್ಟಬೇಡ" ನಿಖಿಲ್ ಕಿರುಚಾಡಿದರೆ ವಿರುದ್ದವಾಗಿ ಅಖಿಲಾ ಧ್ವನಿ ಕೂಡ ಮೇಳೈಸಿತು.

ಗಲಾಟೆ ಧ್ವನಿ ಕೇಳಿ ತಾನೇ ಎದ್ದು ಒಳಗೆ ಇಣುಕಿದ ಹರ್ಷ, ಅಖಿಲಾ ಇದ್ದಬಿದ್ದ ಬಟ್ಟೆಗಳನ್ನೆಲ್ಲ ಬೆಡ್ ಮೇಲೆ ಹರವಿ ಚೆಲ್ಲಾಪಿಲ್ಲಿ ಮಾಡಿಬಿಟ್ಟಿದ್ದನ್ನು ಕಂಡು ಹಣೆಗೆ ಕೈಹೊತ್ತು 'ಇವರಿಗೆ ಡ್ರಾಮಾ ಮಾಡಲು ಹೇಳಿದ್ದೇ ತಪ್ಪಾಯ್ತು' ಎಂದು ಹಳಿದುಕೊಂಡ

ಅಲ್ಲಿ  ಡ್ರೆಸ್ ಸಿಗದೆ ಪಕ್ಕದ ರೂಂ ಗೆ ಓಡಿದ ಅಖಿಲಳನ್ನು ಬಾಲಂಗೋಚಿಯಂತೆ ಹಿಂಬಾಲಿಸಿದ ನಿಖಿಲ್  ಅವಳ ಕಿತಾಪತಿಯನ್ನು ತಡೆಯಲು.. ಅವರ ಹಿಂದೆ ಹೊರಟ ಹರ್ಷ ಇದ್ದಕ್ಕಿದ್ದಂತೆ ನಿಂತು ಬಿಟ್ಟ. 'ಕಿಟ್ ಕ್ಯಾಟ್ ಬ್ಯಾಗ್!!'. ಯಾರಿವಳು? ಆಸಕ್ತಿ ಕೆರಳಿತವನಿಗೆ. ಅದೇ ಕುತೂಹಲ ಅವನ ಅಸ್ತಿತ್ವವನ್ನು ಮತ್ತೊಮ್ಮೆ ಮರಳಿಸಲು ಸಿದ್ದವಾಗಿ ಕೈ ಬೀಸಿ ಕರೆದಿತ್ತು.

ರೂಮಿನೊಳಗೆ ಕಾಲಿಟ್ಟ ಕ್ಷಣವೇ ಅವಳ ಸೌಗಂಧದ ಘಮ ಅವನ ಮೈ ಮರೆಸಿತ್ತು. ಯಾಂತ್ರಿಕವಾಗಿ ಹೆಜ್ಜೆ ಹಾಕಿದವ ಬೆಡ್ ಮೇಲೆ ಹರವಿದ ರಾಶಿ ಬಟ್ಟೆಗಳನ್ನು ನೋಡಿದ. ಅವಳ ಕಲ್ಪನೆಯೂ ಮನದಲ್ಲಿ ಹೇಳತೀರದ ಸ್ವರಾಗಿಣಿಯಂತೆ ಸುಮಧುರ ಗಾನ ಮೀಟಿದಂತಾಯಿತು. ಬಟ್ಟೆಯ ಸ್ಪರ್ಶದಲ್ಲಿಯೂ ಅವಳ ಅನುಭೂತಿಯನ್ನು ಸ್ಮರಿಸುತ್ತ ಮತ್ತೆ ಕೈ ಜಾರಿ ಹೋಯಿತು ಹೃನ್ಮನದ ವಾಸ್ತವದ ಧ್ಯಾನ. ಎಲ್ಲೆಡೆ ಹರಡಿದ ಬಟ್ಟೆ ಬರೆ ಸರಿಸಿ ನೋಡುವಾಗ ಕೈಗೆ ಸಿಕ್ಕವು ಕೆಲವು ಫೈಲ್ಸ್ ಹಾಗೂ ಫೋಟೋ ಅಲ್ಬಮ್ಗಳು.....!! ಅಲ್ಲಿಗೆ ಅವನ ಸ್ಮೃತಿಯಿಲ್ಲದ ಅಜ್ಞಾತ ವಾಸಕ್ಕೆ ಅಂತ್ಯವೊಂದು ಘೋಷಣೆಯಾಯಿತು.

ಫೈಲ್ ಕೈಗೆತ್ತಿಕೊಂಡು ನೋಡಿದವ ಮನ ಅಲ್ಲೋಲ ಕಲ್ಲೋಲ....
ಹರ್ಷ ಭಾರ್ಗವ್!! 
ಬರ್ತ್ ಸರ್ಟಿಫಿಕೇಟ್ ನಿಂದ ಮೊದಲಾಗಿ (ನಕಲಿ)ಡೆತ್ ಸರ್ಟಿಫಿಕೇಟ್ ವರೆಗಿನ ಎಲ್ಲ ಮಾಹಿತಿಯನ್ನು ಒಳಗೊಂಡ ಕರಡು.
ಶೈಕ್ಷಣಿಕ ಪ್ರಮಾಣಪತ್ರಗಳು ತಂದೆ ತಾಯಿ ಜನನ, ಊರು, ವಿಳಾಸ ಪ್ರತಿಯೊಂದನ್ನು ಸಾರಿ ಸಾರಿ ಹೇಳುತ್ತಿದ್ದವು. ಸಾಂಸ್ಕೃತಿಕ ಹವ್ಯಾಸಗಳು ಅವುಗಳಲ್ಲಿ ಪಡೆದ ಕೊಡುಗೆಗಳು.. ಅದರಲ್ಲಿ ಇದ್ದದ್ದು ಬೇರೆ ಯಾರದೋ ಚಿತ್ರವಲ್ಲ. ತನ್ನದೇ ಬಾಲ್ಯ ಮತ್ತು ಆದರಾಚೆಗಿನ  ಗುರುತಿನ ಚಿತ್ರ!! ತಾನು ಸಂಕಲ್ಪ್ ಅಥ್ರೇಯ ಅಲ್ಲವಾ... ಹರ್ಷ ಭಾರ್ಗವ್!!! ತಂದೆ- ವಿನಾಯಕ್ ಭಾರ್ಗವ್! ತಾಯಿ-ಸುಲೋಚನ ವಿನಾಯಕ್ ಇನ್ನೂ ಓದುತ್ತಾ ಹೋದವನ ಮೈಯೆಲ್ಲ ಬೆವೆತು ಹೋದಂತಾಯಿತು. ಹೃದಯದ ಬಡಿತವಂತೂ ಎಣಿಕೆಗೂ ನಿಲ್ಲದಷ್ಟು ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಫೈಲ್ ಮಧ್ಯದಲ್ಲಿದ್ದ ಪೆನ್ ಡ್ರೈವ್‌ ಅಂಗೈಯಲ್ಲಿ ಬಿಗಿ ಹಿಡಿದು ಫೈಲ್ ಬದಿಗಿಟ್ಟು ಅಲ್ಬಮ್ ತೆಗೆದುಕೊಂಡ.

ಅಲ್ಬಮ್ ತೆರೆದು ನೋಡಿದವನ ಮನಸ್ಸಿನಲ್ಲಿ ಹೇಳಿತೀರದ ಕಂಪನ!! ಅದು ಆಘಾತವೋ ಆನಂದವೋ? ಆಶ್ಚರ್ಯವೋ? ಆಕಸ್ಮಿಕವಾಗಿ ಆದ ನೈಜ ಅಸ್ತಿತ್ವದ ಅನಾವರಣವೋ ಅದನ್ನು ಕಂಡು ಅವನು ನಿಶ್ಚೇಷ್ಟಿತನಾಗಿದ್ದ.

ಅಲ್ಬಂ ನಲ್ಲಿದ್ದದ್ದು ಸಾಲು ಸಾಲು ತನ್ನನ್ನೇ ಪ್ರತಿಬಿಂಬಿಸುವ ಫೋಟೋಗಳು.. ಅಪ್ಪ- ಅಮ್ಮ- ಹರಿಣಿ-ಪರಿ-ತಾತ, ಸ್ನೇಹ ಸಂಬಂಧಗಳು, ಬಂಧು ಬಳಗ... ಹುಟ್ಟಿ ಬೆಳೆದ ಆಟವಾಡಿದ ಮನೆ ಉದ್ಯಾನ ಉಯ್ಯಾಲೆ..., ತುಂಟತನ ತರಲೆ ತಲೆಹರಟೆಯ ಸಾವಿರಾರು ಇಣುಕು ನೋಟಗಳು..... ಊಟ ಮಾಡುವಾಗ, ನಿದ್ದೆ ಮಾಡುವಾಗ, ಪುಟ್ಟ ಪರಿಯ ಜುಟ್ಟು ಹಿಡಿದು ಎಳೆದಾಗ, ಅವಳು ಅಳುವುದನ್ನು ನಟಿಸಿ ರೇಗಿಸಿದಾಗ, ಪುಟ್ಟ ಹರಿಣಿಯನ್ನು ಎತ್ತಿಕೊಂಡಾಗ, ಹಬ್ಬ ಹರಿದಿನ, ಪೂಜೆ, ಶಾಲೆಯ ಸಭೆ ಸಮಾರಂಭ, ಹುಟ್ಟು ಹಬ್ಬಗಳ ಆಚರಣೆ,  ಹುಟ್ಟಿದಾರಂಭದಿಂದ ಸದ್ಯದ ವಯೋಮಾನದ ಅನೇಕ ಮಜಲುಗಳ ನಗುವಿಗು ಅಳುವಿಗು ಸಾಕ್ಷಿಯಾಗಿ ಕ್ಲಿಕ್ಕಿಸಿದ  ರಾಶಿ ರಾಶಿ ನೆನಪುಗಳ ಮೂಟೆ ಹೊತ್ತ ಛಾಯಾಚಿತ್ರಗಳ ಹೊತ್ತಿಗೆಯದು.

ಹರ್ಷನ ಅಂತರಂಗದಲ್ಲಿ ಆರ್ದ್ರ ಭಾವನೆಗಳ ಹಾಹಾಕಾರ ಭೋರ್ಗರೆಯತೊಡಗಿತು... 

ಮೂಕ ಛಾಯಾಚಿತ್ರಗಳು ಜೀವ ಪಡೆದುಕೊಂಡವು ಅವನ ನೆನಪಿನಂಗಳದಲ್ಲಿ.. ಅವು ಮಾತಾಡುತ್ತಿದ್ದವು... ಕಥೆ ಹೇಳುತ್ತಿದ್ದವು... ಹರ್ಷ ಮಾತು ಮರೆತು ಮೂಕವಿಸ್ಮಿತನಾಗಿ ಪ್ರೇಕ್ಷಕನಂತೆ ಕಳೆದು ಹೋಗಿದ್ದ.

ಮನೆಯ ದಾರಿ ಬಾ ಎಂದು ಕೂಗಿದಂತಾಯಿತು. ಅಮ್ಮನ ಮಮತೆ ವಾತ್ಸಲ್ಯ ಆರೈಕೆ ಕೈತುತ್ತು, ಅಪ್ಪನ ಗದರುವಿಕೆ, ಎಚ್ಚರಿಕೆ ತಾಕೀತುಗಳು, ಅದರ ಹಿಂದಿದ್ದ ಅಪಾರ ಪ್ರೀತಿ, ತಂಗಿಯ ತಮಾಷೆ ಮಾತುಗಳು, ತಾನವಳನ್ನು ಛೇಡಿಸಿ ಗೋಳಾಡಿಸುತ್ತಿದ್ದದ್ದು, ತಾತನ ಜೊತೆಗಿನ ಹರಟೆ ಜೂಟಾಟ, ಕಥೆಯ ಮೆಲುಕು, ತನ್ನ ಪ್ರತಿ ತಪ್ಪಿನಲ್ಲೂ ವಹಿಸಿ ಮಾತಾಡುವ ಅವರ ಫ್ರೆಂಡ್ಲಿ ನೇಚರ್, ಮನೆಯವರ ಮಧ್ಯದ ಆ ಬಾಂಧವ್ಯ ವಿಶ್ವಾಸ, ಹಂತ ಹಂತವಾಗಿ ಎದೆಯ ದಡವನ್ನು ಕಲುಕಿತು. ಇಷ್ಟೆಲ್ಲಾ ಮರೆಯಲು ಸಾಧ್ಯವೇ? ಹೇಗೆ ಮರೆತೇ ನಾನು? ಮನದ ಆರ್ದ್ರತೆ ಕಣ್ಣ ಮೇಲಿನ ಪೊರೆಯಾಯಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ಕಿಲ್ಲರ್ಸ್ ಹರ್ಷನಿಗೆ ತಮ್ಮ ಕಡೆಗೆ ನೋಡುವಂತೆ ಸೂಚಿಸಿ ಅಭಿನಯ ಆರಂಭಿಸಿದ್ದರು. ಅವನ ಪರಿಸ್ಥಿತಿಯ ಬಗ್ಗೆ ಆ ಮಕ್ಕಳಿಗಾದರೂ ಏನು ತಾನೇ ಅರ್ಥವಾದೀತು..

ಕೈಯಲ್ಲಿ ಆಗತಾನೆ ವಾಸ್ತವಿಕ ಅಸ್ತಿತ್ವ ವ್ಯಕ್ತಿತ್ವದ ಅನಾವರಣ ಕಂಡು ಮುಕವೇದನೆಯಿಂದ ಆತ ಹನಿಗಂಬನಿಯಾಗಿದ್ದರೆ.... ಈಗ ಎದುರಲ್ಲಿ  ನೆನಪಿನ ಅಲೆಯನ್ನು ಕದಡುವ ಮಕ್ಕಳ ಪ್ರಯತ್ನ...  ಅವರು ಒಂದೊಂದು ಮಾತಾಡುವಾಗ ಅದರಲ್ಲೂ ಅಖಿಲಾಳ ಮುದ್ದು ತೊದಲು ನುಡಿ ಕೇಳುವಾಗ ಅವನ ಕಣ್ಣು ತುಳುಕಿತು. ಅದರ ಪರಿವಿಲ್ಲದೆ ಪುಟಾಣಿಗಳ ಜಗಳ ಜೂಟಾಟ ನಗು ಸಾಗಿತ್ತು...

ಅವಳ ನಗು ಅಳು ಗೆಜ್ಜೆ ಸಪ್ಪಳ, ದುಂಡುಮಲ್ಲಿಗೆ ಕಂಪು, ಮುನಿಸು ರಮಿಸು, ಚೂರು ಸದ್ದಾದರೂ ಬೆದರುವ ಅವಳ ಚೂಪು ಕಣ್ಣುಗಳು,ತನ್ನ ಪ್ರತಿ ಯಶಸ್ಸಿಗೂ ಜಗತ್ತೇ ಗೆದ್ದಷ್ಟು ಬೀಗುವ ಅವಳ ಪ್ರೀತಿ, ಘಳಿಗೆ ಕೂಡ ಬಿಟ್ಟಿರದೆ ಯಾವಾಗಲೂ ತನನ್ನೇ ಅವಲಂಬಿಸುವ ಅವಳ ಒಲವಿನ ಮಧುರ ಕ್ಷಣಗಳು.. ಇಷ್ಟು ದಿನ ಹೇಗಿದ್ದೆಯೇ ಹುಡುಗಿ ನನ್ನ ಬಿಟ್ಟು.. ನಾನಿಲ್ಲದ ಬದುಕಿನಲ್ಲಿ ಅದೆಷ್ಟು ನೊಂದಿರಬಹುದು.. ಹೊಟ್ಟೆಯಲ್ಲಿ ಸಂಕಟವಾಯಿತವನಿಗೆ

ಹರ್ಷನಿಗೆ ಗತ ಜೀವನದ ತುಣುಕುಗಳು ಗೋಚರಿಸಿದವಾ? ಸಂಪೂರ್ಣ ನೆನಪಾಗಿತ್ತಾ? ಅಸ್ಪಷ್ಟ. ಆದರೆ ಅದಕ್ಕೂ ಮಿಗಿಲಾಗಿ... ಇಷ್ಟು ದಿನ ಸುಳ್ಳನ್ನೇ ನಿಜವೆಂದು ನಂಬಿದವನಿಗೆ ಸತ್ಯದ ದರ್ಶನವಾಗಿತ್ತು. ಮಾನ್ವಿ ಪರಿಚಯಿಸಿದ ಆ ನಕಲಿ ಪ್ರಪಂಚದ ಮುಖವಾಡ ಕೊನೆಗೂ ಕಳಚಿ ಬಿದ್ದಿತು‌. ಅವನಿಗೆ ಇಂದಿಗೂ ಆ ಬದುಕಿನ ಮೇಲೆ ನಂಬಿಕೆಯೇ ಇರಲಿಲ್ಲ. ಸದ್ಯ ಎದುರಿರುವ ಸಾಕ್ಷ್ಯಚಿತ್ರಗಳ ಮೇಲೆ ಅಪನಂಬಿಕೆಯ ಪ್ರಶ್ನೆಯೇ ಇಲ್ಲ. ಏಕೆಂದರೆ ಇದಕ್ಕೆ ಮನಸ್ಸಿನ ಸಮ್ಮತಿಯಿತ್ತು. ಭಾವನೆಗಳು ಸ್ಪಂದಿಸಿದ್ದವು.

ಯಾರೋ ಹೇಳಿದ್ದಲ್ಲ, ಸೃಷ್ಟಿಸಿದ್ದಲ್ಲ ತನ್ನ ಮನಸ್ಸೇ ಒಪ್ಪಿದ ಅಸ್ತಿತ್ವವಿದು.  ಮಕ್ಕಳ ಮುದ್ದು ಮಾತುಗಳ ನಡುವೆ ಪುಟಿದೆದ್ದ ನೆನಪುಗಳ ಬೆನ್ನೇರಿ ಹರ್ಷ ಗತಕಾಲವನ್ನು ಸುತ್ತಿದ.

ಎಲ್ಲವೂ ಒಂದೇ ಸಮನೆ ತಲೆಯಲ್ಲಿ ಗಿರಕಿ ಸುತ್ತಿದಂತಾಗಿ ತಲೆ ಧಿಂ ಎಂದಿತು. ಗಟ್ಟಿಯಾಗಿ ಅದುಮಿದ ಹಣೆಯನ್ನು‌...

ಅವನನ್ನು ಗಮನಿಸಿದ ಅಖಿಲ ಅವನ ಕೈ ಹಿಡಿದು ಏನಾಯ್ತು? ಎಂದು ಕೇಳಲು, ಅಷ್ಟು ದಿನಗಳ ಹೆಪ್ಪುಗಟ್ಟಿದ ದುಃಖದ ಕಟ್ಟೆ ಒಡೆದು ಹೋಯಿತು. ಮೊಣಕಾಲ ಮೇಲೆ ಕುಸಿದು ಕುಳಿತು ಅಖಿಲಾಳನ್ನು ಬಿಗಿಯಾಗಿ ಅಪ್ಪಿಕೊಂಡವನ ಕಣ್ಣಲ್ಲಿ ನಿಲ್ಲದೇ ಹರಿಯುತ್ತಿದ್ದವು ಅಶ್ರುಧಾರೆ...

"ಏಂಜಲ್ ಎಲ್ಲಿದಾಳೆ ನೆನಪಾಯ್ತಾ??" ಉತ್ಸುಕನಾಗಿದ್ದ ನಿಖಿಲ್. ಹೌದೆಂಬಂತೆ ತಲೆ ಹಾಕಿದ ಹರ್ಷ. ಅಖಿಲಾ ಖುಷಿಯಿಂದ ಚಪ್ಪಾಳೆ ತಟ್ಟಿ ತನ್ನ ಪುಟ್ಟ ಕೈಗಳಿಂದ ಅವನ ಕಣ್ಣೊರೆಸಿ ಕೆನ್ನೆ ತಡವಿದಳು.

"ಹೇ..... ನಾನೂ ನೋಡ್ಬೇಕು ಏಂಜಲ್'ನಾ... ಎಲ್ಲಿದ್ದಾಳೆ? ಈಗ್ಲೇ ಹೋಗೋಣಾ?" ಕೇಳಿದಳು

"ಈಗ ಬೇಡ. ನಾಳೆ... ಸರ್ಪ್ರೈಜ್....  ರಾತ್ರಿ ಎಂಟು ಗಂಟೆಗೆ ನನ್ನ ಮ್ಯುಸಿಕ್ ಕಾನ್ಸರ್ಟ್ ಇದೆ. ಅಲ್ಲಿಗೆ ನೀವು ನಿಮ್ಮ ಫ್ರೆಂಡ್ ಕಿಟ್‌ಕ್ಯಾಟ್ ಜೊತೆ ಬಂದ್ರೆ ಆಗ ನಾನು ನನ್ನ ಏಂಜಲ್ ನಾ ಮೀಟ್ ಮಾಡಿಸ್ತಿನಿ.. "

"ನಿಜವಾಗ್ಲೂ...? ಪ್ರಾಮೀಸ಼್?" ಕೈ ಮುಂದೆ ಚಾಚಿದಳು.

"ಪಕ್ಕಾ.. ಪ್ರಾಮೀಸ಼್!!ಆದ್ರೆ ಈ ಸೀಕ್ರೆಟ್ ಯಾರಿಗೂ ಹೇಳಕೂಡ್ದು.. ನಿಮ್ಮ ಕಿಟ್‌ಕ್ಯಾಟ್ ಗೂ.. "ಅವಳ ಪುಟ್ಟ ಕೈಯನ್ನು ಬಳಸಿ ಮುತ್ತಿಟ್ಟ. ಮುಂದೆನೋ ಹೇಳುವಾಗ ಡೋರ್ ಬೆಲ್ ಸದ್ದಾಯಿತು.

ನಿಖಿಲ್ 'ಕಿಟ್‌ಕ್ಯಾಟ್ ಮತ್ತೆ ಅಜ್ಜಿ ಬಂದ್ರು.,' ಎಂದು ಓಡಿದ. ಅಖಿಲಾ ಕೂಡ ಬೆನ್ನತ್ತಿದಳು. ಅವಸರದಿಂದ ಹರ್ಷ ಪೆನ್ಡ್ರೈವ್‌‌ನ್ನು ಜೇಬಿಗಿಳಿಸಿ,  ಕೆಲವು ಫೋಟೋಸ಼್ ಮತ್ತು ಡೈರಿಯನ್ನು ಜರ್ಕಿನ್ ಒಳಗಿರಿಸಿ ಹೊರಬಂದ.

ಮಕ್ಕಳು ವಿವೇಕ್ ನೊಂದಿಗೆ ವಿಚಾರಣೆ ಆರಂಭಿಸಿದ್ದರು 'ಅಜ್ಜಿ ಪರಿ ಎಲ್ಲಿ' ಎಂದು... ಅವನು ಸಮಜಾಯಿಷಿ ಕೊಡುತ್ತಿದ್ದ.  ಅವತ್ತು ಸಂಜೆ ತಾನೇ ಹರ್ಷ-ವೀವೆಕ್ ಪರಿಚಯವಾಗಿದ್ದು ಈಗ ಹೀಗೆ ಮತ್ತೊಂದು ಅನಿರೀಕ್ಷಿತ ಭೇಟಿ ಇಬ್ಬರಿಗೂ ಖುಷಿ ಕೊಟ್ಟಿತು‌. ಕೆಲ ಸಮಯ ಮಾತನಾಡಿದ ಹರ್ಷ ಮಕ್ಕಳ ಜವಾಬ್ದಾರಿ ಅವನಿಗೊಪ್ಪಿಸಿ ಅಲ್ಲಿಂದ ಹೊರಟ.

ಕಾರು ಮಿತಿಮೀರಿದ ವೇಗ ಪಡೆದುಕೊಂಡಿತ್ತು ಆ ಕ್ಷಣ.‌ ನಂಬಿಕೆ ದ್ರೋಹದ ವಿಷಾದ, ತನ್ನ ಅಗಲುವಿಕೆಯಿಂದ ಕುಟುಂಬ ಪಟ್ಟಿರಬಹುದಾದ ಪಾಡು, ತಾನು ಇಷ್ಟು ಸಮಯ ತನ್ನೆಲ್ಲವನ್ನು ಕಳೆದುಕೊಂಡು ಅನುಭವಿಸಿದ ವೇದನೆ, ತನ್ನನ್ನೇ ಬದುಕು ಎಂದುಕೊಂಡ ಪರಿಯ ಸಂತಾಪ ಎಲ್ಲವೂ ಅವನ ಮನವನ್ನು ಕದಡಿ ರಾಡಿ ಮಾಡಿದ್ದವು. ಈಗಲಾದರೂ ಈ ಕಪಟತನಕ್ಕೆ ತೆರೆ ಬಿದ್ದು ತನ್ನವರ ಬಳಿ ಧಾವಿಸುವ ಯೋಚನೆ ಮನಸ್ಸಿಗೆ ಸಂತೋಷ ನೀಡಿತು. ಅದಕ್ಕೂ ಮೊದಲು ತನ್ನ ಈ ಸ್ಥಿತಿಗೆ ಕಾರಣ ಯಾರು? ಯಾಕೆ? ಎಂಬುದನ್ನು ತಿಳಿಯಬೇಕಿತ್ತು ಅವನಿಗೆ...

ಮನೆಯ ದಾರಿ ಬದಲಾಗಿ ಕಾರು ನಿರ್ಜನ ಕಾನನ ಪ್ರದೇಶದಲ್ಲಿ ಬಂದು ನಿಂತಿತು. ನಿಸರ್ಗದ ಝೀಂ ಎನ್ನುವ ಸದ್ದು. ಗವ್ವೆನ್ನುವ ಕತ್ತಲ ರಸ್ತೆ,  ಮೌನದೊಳಗೆ ಮಾತಿನ ಲಹರಿ ಆರಂಭಿಸಿದವು ಡೈರಿಯ ನೆನಪಿನ ಪುಟಗಳು...

ಹರ್ಷನ ಮೇಲಿನ ಅವಳ ಅಗಾಧ ಪ್ರೀತಿ, ಅವನ ಅಗಲುವಿಕೆ, ಅವಳ ಸಂಕಟ ಪರಿತಾಪ, ಮಂಗಳೂರಿನಲ್ಲಿ ಮತ್ತೆ ಅಚಾನಕ್ ಹರ್ಷನ ಕಾಣುವಿಕೆ, ಅವನಿಗಾಗಿ ಹುಡುಕಾಟ, ಮಾನ್ವಿಯ ಷರತ್ತು, ನೆನಪುಗಳ ಜಾಗೃತಗೊಳಿಸುವ ಅವಳ ಪ್ರಯತ್ನ, ಪತ್ರಗಳು ಉಡುಗೊರೆಗಳು‌.. ಮಕ್ಕಳ ಮೂಲಕ ಬಾಲ್ಯದ ಮರುಸೃಷ್ಟಿ, ಇವೆಲ್ಲದಕ್ಕೂ ಪ್ರಸನ್ನ ವೀವೆಕ್ ಮಿಥಾಲಿಯ ಸಹಾಯ, ಮಾನ್ವಿಯ ಎಚ್ಚರಿಕೆ ಕರೆ, ಹರ್ಷನ ಕೊಲೆಯ ಪ್ರಯತ್ನ, ವೈಭವ್ ಮೇಲಿನ ಅವಳ ಸಂಶಯ.... ರೂಢಿಗತವಾಗಿ ಅವಳು ಬರೆದ ಡೈರಿಯ ಸಂಕ್ಷಿಪ್ತ ಟಿಪ್ಪಣಿಗಳು ಹರ್ಷನ ಎಲ್ಲಾ ಗೊಂದಲಮಯ ಪ್ರಶ್ನೆಗಳಿಗೂ ಉತ್ತರ ನೀಡಿದ್ದವು.

ಲ್ಯಾಪ್‌ಟಾಪ್ ಗೆ ಪೆನ್ ಡ್ರೈವ್ ಸಿಕ್ಕಿಸಿದವನ ಕಣ್ಣಮುಂದೆ ನೆನಪಿನ ಮುದ್ರೆಯೊತ್ತುವ ಅನೇಕ ವಿಡಿಯೋ ಕ್ಲಿಪ್ಸ್.. ಅವಳಿಗಾಗಿ ಹಾಡಿದ ಹಾಡು, ಅವಳನ್ನು ನಗಿಸಲು ಮಾಡಿದ ಚಿತ್ರ ವಿಚಿತ್ರ ಪ್ರಯೋಗಗಳು, ಹರಿಣಿ ಪರಿ ಜೊತೆಗಿನ ವಾಗ್ಯುದ್ದ, ಗಂಟೆಗಟ್ಟಲೆ ಪರಿಯೊಂದಿಗೆ ಮಾತನಾಡಿದ ಕಾಲ್ ರೆಕಾರ್ಡ್ಸ್... ಪ್ರೇಮ ನಿವೇದನೆ, ಸರಸ ಸಲ್ಲಾಪ, ಕವಿತೆಯ ಲಹರಿ, ಸಂಗೀತ...
ಎಲ್ಲವನ್ನೂ ನೋಡುತ್ತ ಕೇಳುತ್ತ ಕಳೆದುಕೊಂಡ ಸಮಯ ಮತ್ತೆ ಸಿಕ್ಕಷ್ಟು ಹರ್ಷವಾಯಿತವನಿಗೆ...
ಹೀಗೆಯೇ ಆ ಇರುಳು ಅದೇ ಗುಂಗಿನಲಿ ಮುಂಜಾವಿನ ಕಡೆಗೆ ಸಾಗಿತ್ತು.

********

ಅತ್ತ ತಲೆಗೆ ಪಟ್ಟಿ ಕಟ್ಟಿಕೊಂಡು ಪರಿಯ ಭುಜ ಬಳಸಿ ಕುಂಟುತ್ತಾ ಬಂದ ವೈದೇಹಿಯವರನ್ನು ಕಂಡಿದ್ದೆ ತಡ ಅಖಿಲಳ ಸಂತೋಷ ಜರ್ರನೇ ಇಳಿದು ಅಳು ಅವ್ಯಾಹತವಾಗಿತ್ತು. ಅಜ್ಜಿಯ ಈ ಸ್ಥಿತಿಗೆ ತಾವೇ ಎಂಬ ಕಾರಣ ತಿಳಿದು ನಿಖಿಲ್ ಸಹ ಹನಿಗಣ್ಣಾದ. ಅವರಿಬ್ಬರನ್ನು ಸಮಾಧಾನ ಮಾಡುವುದೇ ಮತ್ತೊಂದು ಹರಸಾಹಸದ ಕೆಲಸವಾಯಿತು ಪರಿ ವಿವೇಕ್ ಮತ್ತು ವೈದೇಹಿಯವರಿಗೆ...

"ಅಯ್ಯೋ... ಅಳುವಂತಾದ್ದು ಏನಾಯ್ತೀಗ? ನೋಡಿ ಇಲ್ಲಿ ಎಷ್ಟು ಫೈನ್ ಆಗಿದೀನಿ! ನೀವು ಹೀಗೆಲ್ಲ ಅಳ್ತಿದ್ರೆ ತಲೆನೋವು ಶುರುವಾಗುತ್ತಷ್ಟೇ. ಸುಮ್ನಾಗೋ ಚಿನ್ನಮ್ಮ" ಅಖಿಲಳ ಕೆನ್ನೆ ಹಿಂಡಿದರು ವೈದೇಹಿ. ಕ್ರಮೇಣ ಕಡಿಮೆಯಾದ ದುಃಖ, ಅಜ್ಜಿಗೆ ಈ ಗತಿ ತಂದಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಅವರ ಕೈಕಾಲು ಒತ್ತುವ ಸೇವೆಯಲ್ಲಿ ನಿರತವಾಯಿತು.

ಪರಿ ರೂಮಿನಲ್ಲಿ ಹರಡಿದ ಬಟ್ಟೆಗಳನ್ನು ಅವಸರದಲ್ಲಿ ಮಡಿಚಿ ಅಡುಗೆ ಕೆಲಸದಲ್ಲಿ ತೊಡಗಿದಳು. ಊಟದ ನಂತರ ಕೂಡ ಎಲ್ಲರೂ ವೈದೇಹಿಯವರ ಜೊತೆಗೆ ಮಲಗಿದ್ದರು. ಪರಿಗೆ ಹರ್ಷ ಮನೆಗೆ ಬಂದು ಹೋದ ಅನುಭವ ಕಚಗುಳಿ ಕೊಟ್ಟಿತಾದರೂ, ಆ ಬಗ್ಗೆ ಮಕ್ಕಳಲ್ಲಿ ಕೇಳುವ ಅವಕಾಶವೇ ಸಿಗಲಿಲ್ಲ. ಬೆಳಿಗ್ಗೆ ಕೆಳೋಣ ಎಂದು ಸುಮ್ಮನಾದಳು.

*************

ಇರುಳು ಕತ್ತಲೆಯಲ್ಲಿ ನಕ್ಷತ್ರಗಳ ಬೆಳಕಿನ ಕೆಳಗೆ ಉಯ್ಯಾಲೆಯಲ್ಲಿ ತೂಗುತ್ತಾ ಕುಳಿತಿದ್ದಳು ಮಾನ್ವಿ. ಮನಸ್ಸು ಮೂಕ ಮೂಕ..

"ಸ್ಟಾರ್ಸ್ ಎಣಿಸ್ತಿದಿಯಾ? ನಾನು ಹೆಲ್ಪ್ ಮಾಡ್ಲಾ...." ಆಲಾಪ್ ಪಕ್ಕದಲ್ಲಿ ಬಂದು ಕುಳಿತು ಒನ್ ಟು ಥ್ರೀ... ಎಣಿಸುವಂತೆ ನಟಿಸಿದ. ಅವಳದು ಅದೇ ಅನ್ಯಮನಸ್ಕತೆ...

ಕೆಲನಿಮಿಷ ಶೂನ್ಯನಾದ ಆತ ಮೆಲ್ಲಗೆ ಕೇಳಿದ... "ತುಂಬಾ ಪ್ರೀತಿಸ್ತಿದ್ದೆಯಾ ನನ್ನನ್ನ?" ಬೆಳಗಿನ ಮಾನ್ವಿಯ ವರ್ತನೆ ಕಂಡು ಅವನ ಅನುಮಾನದ ಪ್ರಶ್ನೆ.  ಆ ಪ್ರಶ್ನೆಗೆ ಅವಾಕ್ಕಾದ ಮಾನ್ವಿ ಅಷ್ಟೇ ಶಾಂತವಾಗಿ....

"ತುಂಬಾ ಬೇಗ ಗೊತ್ತಾಯ್ತಲ್ವ ನಿನಗೆ.." ವಿಷಾದದಿಂದ ನಕ್ಕಳು.

" ಚಿಕ್ಕಂದಿನಿಂದಲೇ ತುಂಬಾ ಸಲುಗೆ ಕೊಟ್ಟಿದ್ದೆನಲ್ಲ, ಈಗಲೂ ಅದೇ ಸ್ನೇಹ ಸಲುಗೆ ಮುಂದುವರೆದಿತ್ತು.. ಆ ಸಲುಗೆಗೂ ಈ ಸಲುಗೆಗೂ ವ್ಯತ್ಯಾಸ ಮಾಡಲಿಲ್ಲ ನಾನು‌... ಆ್ಯಸ್ ಎ ಫ್ರೆಂಡಾಗಿ ನಿನ್ನನ್ನ ಸಂತೋಷವಾಗಿ ನೋಡೋದಷ್ಟೆ ನನ್ನಾಸೆಯಾಗಿತ್ತು.  ಇಲ್ಲಿಯವರೆಗೂ ಅದೇ ರೀತಿಯ ಸ್ನೇಹ ಭಾವದಿಂದ ನಿನ್ನನ್ನು ನೋಡಿದ್ದೆ ಕಣೇ.... ಗೊತ್ತೇ ಆಗಲಿಲ್ಲ.  ನಿನ್ನೊಳಗೆ ಆ ಸ್ನೇಹ ಬೆಳೆದು ಪ್ರೀತಿಯಾಗಿ ಅದು ಕೈಗೆ ಸಿಗದೆ ದ್ವೇಷವಾಗಿ ಇವತ್ತು ಈ ರೀತಿ ಇನ್ನೊಬ್ಬರ ಬದುಕಿಗೆ ವಿಷವಾಗುತ್ತೆ ಅಂತ!! ಮೊದಲೇ ತಿಳಿದಿದ್ದರೆ ಅವತ್ತೇ......"

"ನನ್ನನ್ನ ಹತ್ತಿರ ಕೂಡ ಸೇರಿಸದೆ ದೂರದಲ್ಲಿ ಇಡುತ್ತಿದ್ದೆಯೆನೋ.." ಅವನಿಗೂ ಮೊದಲೇ ಮಾತು ಪೂರ್ಣಗೊಳಿಸಿ ನಕ್ಕಳು.

"ಕೊಂದು ಬಿಡ್ತಿದ್ದೆ.... ನನ್ನ ಪ್ರೀತಿನಾ ಮನಸಲ್ಲೇ!! ಸಂಜೀವಿನಿ ಅನ್ನುವವಳು ಒಬ್ಬಳು ನನ್ನ ಮನಸ್ಸಿಗೆ ಇಷ್ಟವಾಗಿದ್ಲು ಅನ್ನೋದನ್ನೇ ಮರೆತು ಬಿಡ್ತಿದ್ದೆ! ಮಾನು‌... ನಿನ್ನ ಸಂತೋಷಕ್ಕಿಂತ ಹೆಚ್ಚಿನದು ಯಾವುದು ಇಲ್ಲ ಕಣೇ ನನಗೆ!! ನೀನೂ ಹೀಗೆ ಯೋಚಿಸ್ತಿಯಾ, ನಾನೇನೇ ಮಾಡಿದ್ರು ನನ್ನ ಸಪೋರ್ಟ್ ಆಗಿರ್ತಿಯಾ ಅನ್ನೋ ನಂಬಿಕೆ ಮೇಲೆ ನಾನು ಸಂಜೀವಿನಿನಾ ಪ್ರೀತ್ಸಿದ್ದು.. ಮದುವೆಯಾಗಿದ್ದು! ನಿನ್ನಿಂದ ಒಂದು ವಿಷಯ ಮುಚ್ಚಿಟ್ಟಿದೀನಿ ಅಂತ ಒಮ್ಮೆ ಹೇಳಿದ್ದೇ ಕೂಡ. ಆದರೆ....'' ಒಂದೇ ಮಾತಿನಲ್ಲಿ ಅವಳ ಸಿಟ್ಟು ಅಸಹನೆಯನ್ನ ಶಮನಗೊಳಿಸಿದ್ದ‌. ಅವನು ತನ್ನ ಬಗ್ಗೆ ತೋರಿದ ಕಾಳಜಿ ಅಕ್ಕರೆಗೆ ಕೂಡಿಟ್ಟ ದ್ವೇಷಾಸೂಯೆ, ಮನದ ವೇದನೆ ಕರಗಿ ಹನಿಯಾದವು.. ಅವನ ಬದುಕಿನಲ್ಲಿ ತನ್ನ ಪ್ರಾಮುಖ್ಯತೆಯನ್ನು ತಿಳಿದು ಸಂತಸವೇ ಆಗಿತ್ತವಳಿಗೆ‌‌. ನೊಂದ ಮನಸ್ಸಿಗೆ ಸಾಂತ್ವನಕೂ ಮಿಗಿಲಾಗಿ ಇನ್ನೆನು ಬೇಕು!!

"ಮಾನು..... ಐ ಟೂ ಲವ್ ಯು ಯಾ... ನಾನೂ ನಿನ್ನನ್ನ ಪ್ರೀತಿಸ್ತಿನಿ ಕಣೇ... ಯಾವ ಚೌಕಟ್ಟು ಇಲ್ಲದ ನಿಸ್ವಾರ್ಥ ಸ್ನೇಹದಿಂದ ಪ್ರೀತಿಸ್ತಿನಿ.. ಒಬ್ಬ ಹಿತೈಶಿಯಾಗಿ, ಒಬ್ಬ ಒಳ್ಳೆಯ ಮಿತ್ರನಾಗಿ ಪ್ರೀತಿಸ್ತಿನಿ.. ಪ್ರೀತಿ ಇದೆ ಅನ್ನೋದು  ತಾನೇ ಮುಖ್ಯ!! 
ನಿನ್ನನ್ನ ಕೊನೆಯವರೆಗೂ ನನ್ನ ಬೆಸ್ಟಿ ಅಂತ ಹೇಳೊಕೆ ಇಷ್ಟ ಪಡ್ತಿನೆ ಹೊರತು ನನ್ನ ಹೆಂಡತಿಯಂತಲ್ಲ... ಆಗಿರೋದನ್ನ ಬದಲಾಯಿಸೋಕೆ ನನ್ನಿಂದ ಸಾಧ್ಯವಿಲ್ವೆ,, ಯಾಕಂದ್ರೆ ಒಂದಲ್ಲ ಎರಡು ಜೀವಗಳು ನನ್ನನ್ನ ನಂಬಿ ಬದುಕ್ತಿದಾವೆ!!

ಈಗಲೂ ನಾನು ನಿನ್ನ ಕಣ್ಮುಂದೆ ಇರೋದ್ರಿಂದ ನಿನಗೆ ನೋವಾಗುತ್ತೆ ಅನ್ನೋದಾದ್ರೆ ಹೇಳು,, ನಾನಿವತ್ತೇ ಇಲ್ಲಿಂದ ಹೊರಟೋಗ್ತಿನಿ. ಯಾವತ್ತೂ ನಿನ್ನೆದುರಿಗೆ ಬರಲ್ಲ. ಆದರೆ ಒಬ್ಬ ಒಳ್ಳೆಯ ಬೆಸ್ಟ್ ಫ್ರೆಂಡ್ ನಾ ಕಳ್ಕೊಂಡೆ ಅನ್ನೋ ಗಿಲ್ಟ್ ಜೀವನಪೂರ್ತಿ ನನ್ನನ್ನ ಕಾಡೋದಂತು ಸತ್ಯ... ಹೇಳು, ಮತ್ತೆ ಅದೇ ಬಾಲ್ಯದ ಗೆಳತಿಯಾಗಿ ಇರಬಲ್ಲೆಯಾ ಅಥವಾ ನಾನು..." ಅವನನ್ನು ಗಟ್ಟಿಯಾಗಿ ತಬ್ಬಿ ಬಿಕ್ಕಿ ಬಿಕ್ಕಿ ಅತ್ತಳಾಕೆ. ದ್ವೇಷದ ತಾಪದಲ್ಲಿ ಕೊನರುತ್ತಿದ್ದ ಗಿಡಕ್ಕೆ ಒಲವಿನ ಸಿಂಚನ ಸಿಕ್ಕಂತಾಗಿತ್ತು. ಅವಳ ತಲೆ ಸವರಿ ಸಮಾಧಾನ ಮಾಡುತ್ತಲೇ ಇದ್ದ.

" ಮೊದಲಿನ ಹಾಗೆ ಬೆಸ್ಟ್ ಫ್ರೆಂಡಾಗಿ ಇರ್ತಿಯಲ್ವಾ..." ಕಂಬನಿ ತೊಡೆದು ಕೇಳಿದಳು

"ಅಫ್ಕೋರ್ಸ್ ಮಾನು..."

" ನಾನು ಹೇಳಿದ್ದೆಲ್ಲ ಕೇಳ್ತಿಯಾ? "

"ಊಪ್ಸ್.... ಮತ್ತೆ ನಿನ್ನ ವಟವಟ ಕೇಳ್ಬೇಕಾ?" ಛೇಡೀಸಿದ. "ಏಯ್...." ಎಚ್ಚರಿಸಿದಳು‌. "ಸರಿ ಸರಿ..." ಎಂದು ತಲೆ ಹಾಕಿದ.

"ಸಪೋಸ಼್...  ನಿನ್ನ ಹೆಂಡ್ತಿಗೂ ನನಗೂ ಒಟ್ಟಿಗೆ ಜ್ವರ ಬಂದ್ರೆ ಮೊದಲು ಯಾರಿಗೆ ಟ್ರೀಟ್ಮೆಂಟ್ ಕೊಡ್ತಿಯಾ?" ಪ್ರಶ್ನೆ ಎಸೆದಳು. ಯಾವ ಉತ್ತರ ಕೊಟ್ಟರೂ ತಲೆದಂಡ ಖಚಿತ ಎಂದರಿತು...

"ನಾನು ನನ್ನ ಹೆಂಡ್ತಿನಾ ಟ್ರೀಟ್ ಮಾಡ್ತಿನಿ, ನಿನ್ನನ್ನ ಡಾ.ಪ್ರಸನ್ನ ನೋಡ್ಕೊತಾರೆ" ಹಾರಿಕೆಯ ಮಾತಾಡಿ ಜೋರಾಗಿ ನಕ್ಕ.

"ಅವನ್ಯಾಕೆ ನೋಡ್ಕೋಬೇಕು ನನ್ನ?" ಹುಬ್ಬು ಗಂಟಿಕ್ಕಿದಳು

"ಫ್ಯೂಚರ್ ಹಸ್ಬಂಡ್ ಕಣೇ ಅವ್ರು ನಿಂಗೆ,, ಮರ್ಯಾದೆ ಕೊಟ್ಟು ಮಾತಾಡು" ಪ್ರ್ಯಾಕ್ಟೀಸ್ ದಿನಗಳಿಂದಲೂ ಅವಳನ್ನು ರೇಗಿಸುವ ಏಕೈಕ ಅಸ್ತ್ರವದು. ಎದ್ದು ಓಡಿದ. ಅವಳು ಗೊಣಗುತ್ತ ಬೆನ್ನಟ್ಟಿದಳು ಹೊಡೆಯಲು..

ಹೀಗೆ ಸಮಯದೊಂದಿಗೆ ಕೋಪ ಕರಗಿ ಸ್ನೇಹದ ಹೊನಲಾಗಿ ಹರಿದಿತ್ತು. ಹಳೆಯ ನೆನಪುಗಳಿಗೆ ಹೊಸ ರಂಗು ಮೂಡಿತ್ತು.

"ಹ್ಮ ಈಗ ಹೇಳು... ಪರಿ ಹರ್ಷನ ಮದುವೆ ಯಾವಾಗ?" ಅವನ ಪ್ರಶ್ನೆಗೆ ಅವಳು ಮತ್ತೆ ಗಂಭೀರವಾದಳು.

"ಮಾನು.... ನನಗೊತ್ತು, ನೀನು ಇದನ್ನೆಲ್ಲ ಮಾಡಿರೋಕೆ ಸಾಧ್ಯಾನೇ ಇಲ್ಲ.. ಏನ್ ನಡಿತಿದೆ ಇಲ್ಲಿ?" ಮತ್ತೆ ಕೆಣಕಿದ. ಕ್ಷಣಕಾಲ ಮೌನವಹಿಸಿ....

" ನಾನು ಅವರನ್ನ ನಂಬಿ ಹರ್ಷನಿಗೆ ಮೋಸ ಮಾಡ್ಬಿಟ್ಟೆ ಕಣೋ" ದುಃಖಿಸಿದಳು.

"ಯಾರನ್ನ ನಂಬಿ.‌..?"

"ಮ್ಯಾಮ್,, ಮ್ಯಾಮ್...." ಕೂಗುತ್ತ ಬಂದ ಡೇವಿಡ್ "ಸೆಕ್ಯೂರಿಟಿ ಎಲ್ಲಾ ಕಡೆಗೂ ಹುಡ್ಕಿದಾರೆ, ಆದರೆ ಸಂಕಲ್ಪ್ ಸರ್ ಎಲ್ಲೂ ಸಿಗ್ಲಿಲ್ವಂತೆ,  ಫೋನ್ ಕೂಡ ಸ್ವಿಚ್ಮಾಫ್ ಇದೆ" ಗಾಬರಿಯಿಂದ ನುಡಿದ.

ಅವರಿಬ್ಬರೂ ಮಾತು ನಿಲ್ಲಿಸಿ ಕೆಳಗೆ ಬಂದರು. ರಾತ್ರಿಯಿಡೀ ಹರ್ಷನಿಗಾಗಿ ಹುಡುಕಾಟ ನಡೆದೇ ಇತ್ತು.. ಎಲ್ಲರ ಮನಸ್ಸು ಆತಂಕದಲ್ಲಿತ್ತು. ನಿಶ್ಚಿಂತವಾಗಿದ್ದವನು ಒಬ್ಬನೇ... ಪ್ರಸನ್ನ! ಹರ್ಷ ಎಲ್ಲಿದ್ದಾನೆ ಎಂಬುದು ತಿಳಿಯದಿದ್ದರೂ, ಹೇಗಿದ್ದಾನೆ, ಅವನ ಮನಸ್ಥಿತಿ ಹೇಗಿದೆ ಎಂಬುದರ ಅರಿವು ಆತನಿಗಿತ್ತು.

ರಘುನಂದನ್ ಊಟ ಉಪಚಾರ ತೊರೆದು ತಮ್ಮ ಹೈ ಇನ್ಫ್ಲೂಯನ್ಸ್ ಬಳಸಿ ಹರ್ಷನನ್ನ ಪತ್ತೆ ಹಚ್ಚಲು ಮುಂದಾಗಿದ್ದರು. ಗಡದ್ದಾಗಿ ಊಟ ಮುಗಿಸಿ ಜೂನಿಯರ್ ಮಾನ್ವಿ ಮತ್ತು ಸ್ಟೋನಿ ಜೊತೆಗೆ ಗಾರ್ಡನ್ ನಲ್ಲಿ ರಿಂಗ್ ಆಟವಾಡುತ್ತ ತಿಂದ್ದದನ್ನು ಅರಗಿಸಿಕೊಳ್ಳುತ್ತಿದ್ದ ಪ್ರಸನ್ನನ ನೆಮ್ಮದಿ ಕಂಡು ಅವರ ಅಂತರಾತ್ಮ ಹಲುಬುತ್ತಿತ್ತು.

'ಹತ್ತು ತಲೆಮಾರು ಕೂತು ತಿಂದರೂ ಕರಗದ ಆಸ್ತಿ ಅಂತಸ್ತು.. ಒಂದು ದಿನ ಕೂಡ ಸಂತೃಪ್ತಿಯಿಂದ ಊಟ ಮಾಡಲಿಲ್ಲ. ಮಗಳ ಜೊತೆ ಸೇರಿ ಖುಷಿಯಿಂದ ಆಟವಾಡಲಿಲ್ಲ. ಸಂಸಾರದ ಕಷ್ಟ ಸುಖ ಮಾತಾಡಲಿಲ್ಲ. ನಿಜವಾಗಿಯೂ ಶ್ರೀಮಂತ ನಾನಾ? ಅಥವಾ ಅವನಾ?'  ಈ ಮಂಥನವೇ ಮುಂದೆ ಪ್ರಸನ್ನನ ಪಾಲಿಗೆ ಮೂಗುದಾರ ಸಿದ್ದಮಾಡಲು ಪ್ರೇರೇಪಿಸಿತು.

ಮುಂದುವರೆಯುವುದು.....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...