ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-46


ರಾತ್ರಿಯಿಡೀ ಯಾವುದೋ ಕಾನನ ಪ್ರದೇಶದಲ್ಲಿ ಅರವಳಿಕೆಯ ಮಥನದಲ್ಲಿದ್ದ ಹರ್ಷ‌ ಬೆಳಿಗ್ಗೆ 9 ಗಂಟೆಗೆ ರೈ ಮ್ಯಾನ್ಷನ್ಗೆ ಮರಳಿದ್ದ. ಅವನ ನಿರೀಕ್ಷೆಯಲ್ಲಿ ಅಹೋರಾತ್ರಿ ನಿದ್ರೆಯಿಲ್ಲದೆ ಕಾದು ಕುಳಿತಿದ್ದ ರಘುನಂದನ್ ಕಣ್ಣುಗಳು ಕೋಪದಿಂದಲೋ, ನಿದ್ರಾಹೀನತೆಯಿಂದಲೋ ಕೆಂಪಡರಿದ್ದವು. ಬರುತ್ತಲೇ ಹರ್ಷನನ್ನ ಕೇಳಿದರು..
"ಇಡೀ ರಾತ್ರಿ ಎಲ್ಲಿ ಹೋಗಿದ್ದೆ? ನಿನಗಾಗಿ ಎಲ್ಲೆಲ್ಲಿ ಹುಡುಕಾಡಿದ್ದಿವಿ. ಎಷ್ಟು ಆತಂಕ ಪಟ್ಟೆವು. ಸ್ವಲ್ಪನಾದ್ರೂ ಜವಾಬ್ದಾರಿ ಇದೆಯಾ ನಿನಗೆ? ಫೋನ್ ಬೇರೆ ಸ್ವಿಚಾಫ್ ಮಾಡ್ಕೊಂಡಿದೀಯಾ! ಏನಿತ್ತು ಅಂತಹ ಘನಂದಾರಿ ಕೆಲಸ ನಿನಗೆ? ನಿನ್ನ ತಂದೆ ಈಗಾಗಲೇ ಹತ್ತಿಪ್ಪತ್ತು ಬಾರಿ ಕಾಲ್ ಮಾಡಿ ವಿಚಾರಿಸಿದ್ರು... ಏನಂತ ಉತ್ತರ ಕೊಡೋದು ನಾನು ನನ್ನ ಮಿತ್ರನಿಗೆ?" ಅವರ ಪ್ರಶ್ನೆಗೆ ಉತ್ತರಿಸುವ ಅಗತ್ಯವೇ ಇಲ್ಲವೆಂಬಂತೆ ಹರ್ಷ ಮುಂದೆ ನಡೆದಿದ್ದ

"ಸಂಕಲ್ಪ್..,. ಮೈ ಮೇಲೆ ಪ್ರಜ್ಞೆ ಇದೆ ತಾನೇ?? " ಮತ್ತೆ ಕಿರುಚಿದರು ಗಡುಸಾಗಿ. ಮನೆಯ ಆಳು ಕಾಳು ಸದಸ್ಯರು ಮೂಕ ಪ್ರೇಕ್ಷಕರಾಗಿ ಬೆಚ್ಚಿ ನೋಡುತ್ತ ನಿಂತಿದ್ದರು.ಆ ಸಮಯಕ್ಕೆ ಸರಿಯಾಗಿ ಮಾನ್ವಿ ಮತ್ತು ಇತರರು ಅಲ್ಲಿಗೆ ಬಂದರು.

ಅವರ ಕೂಗಿಗೆ ನಿಂತು ಹಿಂತಿರುಗಿ ನೋಡಿದವನ ಎದುರಿಗೆ ಅವತ್ತಿನ ದಿನಪತ್ರಿಕೆ ಮತ್ತು ಜೊತೆಗಿದ್ದ ಪಾಂಪ್ಲೆಟ್ ಜೋರಾಗಿ ಬಿಸುಟಿ....
" ಏನಿದು ಹೊಸ ದೊಂಬರಾಟ? ಮ್ಯುಸಿಕ್ ಕಾನ್ಸರ್ಟ್ ಅಂತೆ, ಮೈ ಫುಟ್!! ಇದನ್ನ ಅನೌನ್ಸ್ ಮಾಡೋಕು ಮೊದಲು ಒಂದು ಮಾತು ಹೇಳ್ಬೇಕು ತಾನೇ" ದ್ವನಿ ತಾರಕಕ್ಕೇರಿತು. ಹರ್ಷ ನಿರ್ಲಿಪ್ತನಾಗಿ ಅದನ್ನು ಕೈಗೆತ್ತಿ ಮಂದಹಾಸ ಬೀರಿದ.

" ಈಗ ಅದರ ಅವಶ್ಯಕತೆ ಏನಿತ್ತು? ಮದುವೆ ದಿನ ಹತ್ತಿರ ಬರ್ತಿದೆ. ಬಿಸ್ನೆಸ್ ವರ್ಕ್ಸ್ ಪೆಂಡಿಂಗ್ ಇವೆ. ಈ ಮಧ್ಯೆ ಇದೊಂದು ಗೋಳು ಬೇಕಿತ್ತಾ ನಿನಗೆ?" ಅವರ ಗೊಣಗುವಿಕೆ ಮುಂದುವರೆದಾಗ, ಹರ್ಷ ಅಷ್ಟೇ ಶಾಂತವಾಗಿ...

''ಯಾರು ಹೇಳಿದ್ದು ಅಂಕಲ್ ಮ್ಯುಸಿಕ್ ಗೋಳು ಅಂತ... ಮನುಷ್ಯನ ಜೀವನದ ಬುನಾದಿನೇ ಸಂಗೀತ... ಬೇಕಾದ್ರೆ ನಿಮ್ಮ ಎದೆಗೆ ಕೈಯಿಟ್ಟು ಕೇಳ್ನೋಡಿ..‌‌. ಪ್ರತಿ ಮಿಡಿತಗಳಿಗೂ ಒಂದು ರಿದಮ್ ಇದೆ. ಅದು ನಿಂತೊದ್ರೆ ಬದುಕೇ ಮುಗಿದ ಹಾಗೆ...
ಸಂಗೀತ.. ನನ್ನಿಷ್ಟ, ನನ್ನುಸಿರು ನನ್ನ ಸಂತೋಷ... ನಾನು ಹಾಡುವುದು ನಿಮಗೆ ಇಷ್ಟವಿಲ್ಲದಿದ್ರೆ ಅದು ನನ್ನ ತಪ್ಪಲ್ಲ. ನಾನು ಬದುಕೋದು ನನಗಾಗೇ ಹೊರತು ನಿಮಗಾಗಿ ಅಲ್ಲ!!" ಅವನ ಪ್ರತ್ಯುತ್ತರ ಕೇಳಿ ರಘುನಂದನ್ ಶಾಕ್ ತಗುಲಿದಂತಾದರು. ಇದುವರೆಗೆ ಸಂಕಲ್ಪ್/ಹರ್ಷ ಅವರಿಗೆ ಈ ರೀತಿಯಾಗಿ ಎದುರು ವಾದಿಸಿರಲಿಲ್ಲ. ಹರ್ಷನ ನಿಷ್ಠುರ ನುಡಿಗೆ ಹಲ್ಮುಡಿ ಬಿಗಿದು ಮುಷ್ಟಿಗಟ್ಟಿದರು. ಮರುಘಳಿಗೆಯೇ ಮಗಳ ದಯನೀಯ ಮುಖ ನೋಡಿ ಕೈ ಸಡಿಲಗೊಳಿಸಿದರು.

"ಇಷ್ಟವಿಲ್ಲ ಎಂದಲ್ಲ... ಮಿಲಿಯನೇರ್ ರಘುನಂದನ್ ರೈ ಅಳಿಯನಾಗುವವನು ನೀನು,, ಈ ರೀತಿ ಸ್ಟೇಜ್ ಷೋ ಕೊಡೊದು ಏನು ಚೆನ್ನಾಗಿರುತ್ತೆ?!  ಅದೂ ಅಲ್ಲದೇ ಈ ಮೊದಲೇ ಒಮ್ಮೆ ಸತ್ತು ಸತ್ತು ಬದುಕಿದ್ದಿಯಾ! ನಿನ್ನ ಜೀವದ ಬೆಲೆ ನಿನಗೆ ಗೊತ್ತಿಲ್ಲ ಸಂಕಲ್ಪ್.. ನಿನ್ನ ಜೀವ ತಗೋಳೋಕೆ ಅಂತಲೇ ಕೆಲವರು ಹೊಂಚು ಹಾಕ್ತಿದ್ದಾರೆ. ನೀನು ಒಬ್ಬೊಬ್ಬನೇ ತಿರುಗಾಡೋದು ಸರಿಯಲ್ಲ!  ಅದೇ ಕಾರಣಕ್ಕಾಗಿ ಇದುವರೆಗೂ ನನ್ನ ಮಗಳು ಮತ್ತೆ ನಿನ್ನ ಮದುವೆ ವಿಚಾರವನ್ನು ಮೀಡಿಯಾ& ಪ್ರೆಸ್ ಎದುರು ಪ್ರಸ್ತಾಪ ಮಾಡದೇ ಗೌಪ್ಯವಾಗಿ ಇಟ್ಟಿರೋದು.... ಟ್ರೈ ಟು ಅಂಡರ್ಸ್ಟ್ಯಾಂಡ್.." ನಿಟ್ಟುಸಿರು ಬಿಟ್ಟರು

'ನನ್ನ ಜೀವರಕ್ಷಣೆಗಿಂತ ಎಲ್ಲಿ ನಿಮ್ಮ ಬಂಡವಾಳ ಬಯಲಾಗುತ್ತೆ ಅನ್ನೋ ಭಯ ನಿಮಗೆ'' ಮನಸ್ಸಲ್ಲೇ ನಕ್ಕ ಹರ್ಷ
"ವರಿ ಮಾಡಬೇಡಿ ಅಂಕಲ್,, ಯಾವ ಪ್ರಾಬ್ಲಮ್ ಆಗಲ್ಲ. ನೀವು ಮನಸ್ಸು ಮಾಡಿದ್ರೆ.... ಐ ಮೀನ್ ನಿಮ್ಮ ಆಶಿರ್ವಾದ ಜೊತೆಗಿದ್ರೆ...!" ಎಂದುತ್ತರಿಸಿ ರೂಮಿಗೆ ಧಾವಿಸಿದ. ಅವನ ಮಾತಿನಲ್ಲಿದ್ದ ವ್ಯಂಗ್ಯ ಅರಿತಿದ್ದರು ರಘುನಂದನ್. ಕೂಡಲೇ ಯಾರಿಗೋ ಫೋನಾಯಿಸಿ ಮಾತನಾಡಿ ನಿರಾಳರಾದರು.

ಸ್ನಾನ ಮುಗಿಸಿ ಎಲ್ಲಿಗೋ ಹೊರಡಲು ರೆಡಿಯಾದವನ ಮುಂದೆ ನಿಂತಿದ್ದರು ಮಾನ್ವಿ ಪ್ರಸನ್ನ ಸಂಜೀವಿನಿ ಆಲಾಪ್..

ಪ್ರಸನ್ನ ಹಳೆಯ ಸ್ನೇಹಿತರ ಹೊಸ ಪರಿಚಯ ಮಾಡಿಸಿದ. ಹರ್ಷ ಮುಗುಳ್ನಗುತ್ತ ಕೈಕುಲುಕಿ ಮಾತನಾಡಿದ.
"ಶೀ ಈಸ್ ಲಿಟ್ಲ್ ಮಾನು"  ಜ್ಯೂನಿಯರ್ ಮಾನ್ವಿ ಕೆನ್ನೆಗೆ ಮುತ್ತಿಡುತ್ತಾ ನುಡಿದ ಪ್ರಸನ್ನ. ಅದೇಕೋ ಮಾನ್ವಿ ಮುಖ ಸಿಂಡರಿಸಿ ತನ್ನ ಕೆನ್ನೆಯನ್ನು ಉಜ್ಜಿ ಉಜ್ಜಿ ಒರೆಸಿಕೊಂಡಳು.  ಹರ್ಷ ಮಗುವನ್ನು ಎತ್ತಿ ಮುದ್ದಾಡುವಾಗ...

"ಈಗ ಎಲ್ಲಿಗೆ ರಾಯರ ಸವಾರಿ?? " ಪ್ರಸನ್ನ ಕಾಲೆಳೆದ

"ರಾತ್ರಿಯ ಪ್ರೊಗ್ರಾಮ್ ಗೆ ಸ್ವಲ್ಪ ತಯಾರಿ ಮಾಡಿಕೊಳ್ಳುವುದಿತ್ತು. ನೀವೆಲ್ಲ ಬರ್ತಿರಲ್ವ ಕಾನ್ಸರ್ಟ್ ಗೆ?" ಕೇಳಿದವನ ನೋಟ ಮಾನ್ವಿಯೆಡೆಗೆ ಇತ್ತು.

"ಅಫ್ಕೋರ್ಸ್ ಕಣೋ... ನಾವಿಲ್ದೆ,, ಸ್ಪೇಷಲ್ಲಿ ಮಾನು ಇಲ್ದೇ ಷೋ ಸ್ಟಾರ್ಟಾದ್ರೂ ಆಗುತ್ತಾ?" ಎಂದವನಿಗೆ ಪ್ರತ್ಯುತ್ತರವಾಗಿ ಆಲಾಪ್ "ಆಂಕ್ಷಿ.." ಎಂದು ಒಂಟಿ ಸೀನಿನ ಅಪಶಕುನದ ಮುನ್ಸೂಚನೆ ನೀಡಿದ.

"ಅದೂ ನಿಜಾನೇ.. ಅದಕ್ಕಿಂತ ಮುಂಚೆ ಮಾನ್ವಿ, ನಾ ನಿನ್ನೊಂದಿಗೆ ಸ್ವಲ್ಪ ಮಾತಾಡಬೇಕಿತ್ತು. ಬಾ ನನ್ನ ಜೊತೆ..." ಕರೆದುಕೊಂಡು ಹೋದ ಹರ್ಷ.

ವಿಶಾಲವಾದ ಬಾಲ್ಕನಿಯ ಹೂದೋಟದ ಮಧ್ಯೆ ನಿಂತಿದ್ದರು ಇಬ್ಬರು. ಕೆಲವು ನಿಮಿಷಗಳೇ ಕಳೆದು ಹೋದರೂ ಇಬ್ಬರ ನಡುವೆ ಒಂದು ಮಾತಿಲ್ಲ ಕಥೆಯಿಲ್ಲ. ಏನು ಹೇಳಬಹುದು ಎಂದು ಅವಳು ತಲ್ಲಣಿಸಿ ಕೈ ಕೈ ಹೊಸೆದುಕೊಂಡರೆ ಹೇಗೆ ಹೇಳುವುದು ಎಂದು ಅವನು ವಿಲಪಿಸುತ್ತಿದ್ದ.

"ಮಾನ್ವಿ ನಿನಗೊಂದು ಮಾತು ಕೇಳ್ತಿನಿ. ನಿಜ ಹೇಳ್ತಿಯಾ?" ಅವನ ಪ್ರಶ್ನೆಗೆ ಆಕೆ ಕ್ಷಣ ಯೋಚಿಸಿ ಹ್ಮ್' ಎಂದು ತಲೆ ದೂಗಿದಳು.

"ನಾವಿಬ್ರೂ.... ನಿಜವಾಗಿಯೂ ಪ್ರೀತಿಸಿದ್ವಾ? " ಊಹಿಸಿರದ ಹರ್ಷನ ಪ್ರಶ್ನೆ ಅವಳಲ್ಲಿ ದಿಗಿಲು ಹುಟ್ಟಿಸಿತು. ಏನು ಹೇಳಬೇಕೆಂದು ತೋಚದೆ ಆಕೆ ಮೌನದಲ್ಲೇ ತತ್ತರಿಸಿ ಹೋದಳು. ಮೊದಲೆಲ್ಲ ದ್ವೇಷದ ಭರದಲ್ಲಿ ಸರಾಗವಾಗಿ ಸುಳ್ಳು ಪೋಣಿಸುವ ಮಾನ್ವಿ ಸದ್ಯದ ಪರಿಸ್ಥಿತಿಯಲ್ಲಿ ಭಾವನೆಗಳ ದ್ವಂದ್ವ ಸೆಳೆತಕ್ಕೆ ಸಿಕ್ಕಿ ನಲುಗಿದಳು.

"ಹೇಳು ಮಾನು.‌.... ಇದನ್ನ ಕೊನೆಯ ಅವಕಾಶ ಅಂದ್ಕೋ... ನಿಜ ಹೇಳು... ನಾವಿಬ್ರೂ ನಿಜವಾಗಿಯೂ ಪ್ರೀತಿಸಿದ್ವಾ? ನಿಜವಾಗ್ಲೂ ನಮ್ಮಿಬ್ಬರ ನಿಶ್ಚಿತಾರ್ಥ ಆಗಿತ್ತಾ? " ಆಕೆ ಮೌನವಾಗಿ ತಲೆತಗ್ಗಿಸಿ ನಿಂತಿದ್ದಳು. "ಹೋಗ್ಲಿ... ನನಗಂತೂ ಹಳೆಯ ನೆನಪಿಲ್ಲ, ನಿನಗೆ ನನ್ನ ಮೇಲೆ ಪ್ರೀತಿ ಇರೋದು ನಿಜಾನಾ? " ಒಂದೇ ಪ್ರಶ್ನೆಯನ್ನು ಅಳೆದು ತೂಗಿ ವಿಧ ವಿಧವಾಗಿ ಕೇಳಿದ್ದನವ.

"ನೀನು ತುಂಬಾ ಸಂಕೋಚ ಪಡ್ತಿದಿಯಾ ಅನ್ಸುತ್ತೆ.. ನಾನೇ ಒಂದು ನಿಜ ಹೇಳ್ತೆನೆ ಕೇಳು..... ಅವತ್ತು ಆಫೀಸ್ನಿಂದ ಹೇಳದೆ ಕೇಳದೆ ಹೋದವನು, ನಿನಗಾಗಿ ಪೆಂಡೆಂಟ್ ತರಲು ಹೋಗಿದ್ದೆ ಅಂತ ಹೇಳಿದ್ದೆ ನೆನಪಿದೆಯಾ..? ಅದು ಸುಳ್ಳು! ಅವತ್ತು ನಾನು ಪ್ಯಾರಡೈಸ್ ಗ್ಲಾಸ್ ಹೌಸ್ ಗೆ ಹೋಗಿದ್ದೆ. ಮದುವೆಯ ದಿನದ ಫೂಟೇಜ್ ನೋಡೊಕೆ.." ಇದು ಅವಳಿಗೂ ಗೊತ್ತಿದ್ದ ವಿಷಯವೇ.. ಆಕೆ ಸುಮ್ಮನೆ ಅವನ ಮಾತನ್ನು ಆಲಿಸುತ್ತ ನಿಂತಳು.

"ಆ ದಿನವೇ ನಾನು ಆ ಫೂಟೇಜ್‌ನ್ನು ನೋಡಿದ್ದೇ ಕೂಡ!! " ಮಾನ್ವಿಗೆ ಮೈ ಕಂಪಿಸಿದಂತಾಯಿತು. ತಲೆ ಎತ್ತಿ ಅವನನ್ನು ದಿಟ್ಟಿಸ ಹೋದಳು. ತಪ್ಪಿತಸ್ಥ ಭಾವವೊಂದು ಕಾಡತೊಡಗಿತು.

" ಮಂಗಳೂರಿನಲ್ಲಿ ಸಿಕ್ಕ ಹುಡುಗಿ ಅಲ್ಲಿಗೂ ಬಂದಿದ್ದಳು ಅಲ್ವಾ... ಅದು ನನಗೋಸ್ಕರ... ನನ್ನನ್ನ ಹುಡುಕಿಕೊಂಡು..!! ಆದರೆ ನೀನು ಅವಳ ಕೈ ಹಿಡಿದು ಎಳೆದುಕೊಂಡು ಹೋಗಿದ್ದೆ.... ಆ ವಿಡಿಯೋ ನೋಡಿದಾಗಲೇ ನನಗೆ ಅನುಮಾನಗಳು ಶುರುವಾಗಿದ್ದು. ನನ್ನ ಬದುಕಿನಲ್ಲಿ ನನಗೂ ಅರ್ಥವಾಗದ ನಿಗೂಢವಾದ ಕಥೆಯಿದೆ ಎಂದು... ನೇರವಾಗಿ ಕೇಳಿದ್ರೆ ನೀನು ಹೇಳುವುದಿಲ್ಲ ಅನ್ನೋದು ಗೊತ್ತಿತ್ತು. ಅದಕ್ಕೆ ಆ ಫೂಟೇಜ್ ಕಾಪಿನಾ ಮನೆಗೆ ತಲುಪಿಸೋಕೆ ಹೇಳಿ ಬಂದಿದ್ದೆ. ಆ ಬೆಳಿಗ್ಗೆ ಹುಡುಗ ಸಿಡಿ ತಂದು ಕೊಟ್ಟಾಗ ನಿನ್ನ ಮುಖದಲ್ಲಾದ ಬದಲಾವಣೆಯನ್ನು ನಾನು ಗಮನಿಸಿದೆ. ನೀನು ಅದನ್ನು ನಾಶಪಡಿಸಲು ಪ್ರಯತ್ನಿಸಿದ್ದು, ಪ್ರಸನ್ನ ಅದನ್ನು ನನಗೆ ತಲುಪಿಸಲು ತವಕಿಸಿದ್ದು ಎಲ್ಲವನ್ನೂ ಮೇಲಿನಿಂದಲೇ ನೋಡಿದ್ದೆ. ನನಗೆ ಅನುಮಾನ ಬಲವಾಗುತ್ತ ಹೋಗಿತ್ತು. ನೀನು ನನ್ನಿಂದ ಏನೋ ಮರೆಮಾಚುತ್ತಿದ್ದಿಯಾಂತ...." ಕ್ಷಣಕಾಲ ಅವಳನ್ನು ಅವಲೋಕಿಸಿ ಮತ್ತೆ ಮಾತಾಡಿದ.

"ನೋಡು ಮಾನ್ವಿ.... ನಂಬಿಕೆ ಅನ್ನೋದು ಪರಿಶುದ್ಧ ಹಾಲಿನ ಹಾಗೆ.. ಒಮ್ಮೆ ಒಡೆದು ಹೋದ್ರೆ ಅದೇ ರೂಪದಲ್ಲಿ ಮತ್ತೆ ಸಿಗೋದಿಲ್ಲ. ನಂಬುಗೆ ಕಳೆದುಕೊಂಡ ವ್ಯಕ್ತಿನಾ ಕ್ಷಮಿಸಬಹುದು ಆದರೆ ಮೊದಲಿನಂತೆ ಅಷ್ಟೇ ಧೃಡವಾಗಿ ನಂಬೋಕೆ ಸಾಧ್ಯವೇ ಇಲ್ಲ.

ನಂಬಿಕೆ ಎನ್ನುವ ಸೂಕ್ಷ್ಮ ಪರದೆಯ ಈ ಕಡೆಗೆ ಸುಳ್ಳಿನ ಪ್ರಪಂಚವಿದ್ದರೆ ಆಕಡೆಗೆ ಸತ್ಯದ ಪ್ರಪಂಚ!! ಒಂದೇ ಒಂದು ಹೆಜ್ಜೆ... ನಾನು ಈ ಕಡೆಯಿಂದ ಆಕಡೆಗೆ ಸುಲಭವಾಗಿ ಹೋಗಬಹುದೇನೋ ಆದರೆ ತಿರುಗಿ ನೋಡಿದಾಗ ನೀನು ಒಂಟಿಯಾಗಿ ಇದೇ ಸುಳ್ಳು ಪ್ರಪಂಚದಲ್ಲಿ ನಿಂತಿರುತ್ತಿಯಾ. ಇಬ್ಬರ ನಡುವಿನ ನಂಬಿಕೆ ಸತ್ತು ಹೋಗಿರುತ್ತೆ. ನನಗದು ಇಷ್ಟವಿಲ್ಲ ಮಾನ್ವಿ... ನನ್ನ ಪ್ರಾಣ ಉಳಿಸಿದವಳು ನೀನು, ಮತ್ತೊಂದು ಮರುಜನ್ಮ ಕೊಟ್ಟವಳು ನೀನು.. ಅಮ್ಮನಂತ ಸ್ನೇಹಿತೆ... ಜೀವ ಕೊಟ್ಟವಳು ಜೀವನ ಹಾಳು ಮಾಡಲಾರಳು ಅನ್ನೋ ನಂಬಿಕೆ ಇನ್ನೂ ಇದೆ....  ನೀನೇ ನನಗೆ ಆ ಸತ್ಯದ ಪರಿಚಯ ಮಾಡಿಸಿದ್ರೆ... ನನ್ನ ನಂಬಿಕೆಗೆ  ಒಂದು ಅರ್ಥ ಸಿಗುತ್ತೆ!!"  ತೀರ ಸೂಕ್ಷ್ಮವಾಗಿ ಅವಳಿಂದಲೇ ಸತ್ಯ ತಿಳಿಯಲು ಬಯಸಿದ್ದ ತನ್ನ ಮನದಿಂಗಿತ ತಿಳಿಸಿದ್ದ.

ಅವನ ಮಾತಿನ ಒಳಾರ್ಥ ತಿಳಿಯದಷ್ಟು ಮುರ್ಖಳಲ್ಲ ಅವಳು. ಬಹುಶಃ ಅವನಿಗೆ ಗತದ ನೆನಪಾಗಿದೆ. ಅವನ ಮನಸ್ಥಿತಿ ಈಗ ಹೇಗಿರಬಹುದು ಎಂಬ ವಿವೇಚನೆ ಅವಳಿಗಿತ್ತು. ತನ್ನೆಲ್ಲಾ ಮೋಸ ತಿಳಿದು ಸಹ 'ಅಮ್ಮನಂತ ಸ್ನೇಹಿತೆ' ಎಂಬ ಬಿರುದು ಕೊಟ್ಟ ಹರ್ಷನ ಮುಂದೆ ತಾನು ತುಂಬಾ ಚಿಕ್ಕವಳು ಎನ್ನಿಸಿಬಿಟ್ಟಿತವಳಿಗೆ. ಶಕ್ತಿಯೆಲ್ಲ ಕುಗ್ಗಿ ಹೋಗಿ ಮೊಣಕಾಲ ಮೇಲೆ ಕುಸಿದು ಕುಳಿತ ಮಾನ್ವಿಯ ಭುಜ ತಡವಿದ ಹರ್ಷ.

" ಎಲ್ಲಾ ಸುಳ್ಳುಗಳು ಸತ್ಯವಲ್ಲ. ಕೆಲವು ಸುಳ್ಳುಗಳು ಅನಿವಾರ್ಯತೆಯಿಂದ ಸೃಷ್ಟಿಯಾಗಿ ಬಿಡುತ್ತವೆ. ನನ್ನನ್ನ ಕ್ಷಮಿಸು... " ಇಷ್ಟು ಮಾತ್ರ ಹೇಳಿ ತನ್ನ ಬೆರಳಲ್ಲಿದ್ದ ಉಂಗುರವನ್ನು ಬಿಚ್ಚಿ ಎಸೆದಳು. ಅದು ಕೆಳಗಿನ ಸ್ವಿಮ್ಮಿಂಗ್ ಫೂಲ್‌ನೊಳಗೆ ಮುಳುಗಿ ಮರೆಯಾಯಿತು. ಅವಳು ಖಾಲಿ ಕೈ ಅವನ ಮುಂದೆ ತೋರಿಸಿ "ಇದೇ ಸತ್ಯ..!! ಇದಕ್ಕಿಂತ ಹೆಚ್ಚಾಗಿ ನಾನೇನು ಹೇಳಲಾರೆ" ಪರೋಕ್ಷವಾಗಿ ತಮ್ಮಿಬ್ಬರ ನಿಶ್ಚಿತಾರ್ಥ ಸುಳ್ಳು ಎಂಬುದನ್ನು ಸಾರಿದ್ದಳು.

ಹರ್ಷನಿಗೆ ಅವಳ ಪ್ರಾಮಾಣಿಕತೆ ಮೇಲೆ ಚೂರು ಸಂಶಯವಿರಲಿಲ್ಲ. ಮೆಲ್ಲಗೆ ಅವಳ ಕೈ ಅದುಮಿ
"ಏನೇ ಸಮಸ್ಯೆ ಇದ್ರು ನನ್ನ ಮುಂದೆ ಹೇಳು. ನಿನ್ನ ಜೊತೆ ನಾನಿದ್ದೀನಿ" ಧೈರ್ಯ ನೀಡಿದ. ಅವಳು ಏನೋ ಹೇಳುವ ಮೊದಲೇ ನೋಟ ಕೆಳಗೆ ನಿಂತಿದ್ದ ಡೇವಿಡ್ ಮೇಲೆ ಹರಿದು ಧೀಡೀರನೆ ಅಲ್ಲಿಂದ ಎದ್ದು ಹೊರಟು ಹೋದಳು. ಹರ್ಷ ಅವಳು ಹೋದ ದಿಕ್ಕನ್ನೇ ನೋಡುತ್ತ ನಿಂತ.

ಸುಮಾರು ಹೊತ್ತಿನಿಂದ ಅವರಿಬ್ಬರನ್ನು ಗಮನಿಸುತ್ತಿದ್ದ ಡೇವಿಡ್ಗೆ ಇಬ್ಬರ ನಡುವಿನ ಮಾತುಕತೆ ತಿಳಿಯದಿದ್ದರೂ, ಮಾನ್ವಿ ಉಂಗುರ ಎಸೆದದ್ದು ತಮಗೆ ಯಾವುದೋ ಅಪಾಯಕರ ಸೂಚನೆ ಎಂದು ನಿರ್ಧರಿಸಿದ್ದ.

******************

ಆ ದಿನ ಪತ್ರಿಕೆಯೊಂದಿಗಿನ ಕಾನ್ಸರ್ಟ್ ಆ್ಯಡ್ ನೋಡಿ ಮಕ್ಕಳು ಖುಷಿಯಿಂದ ಕುಣಿದಾಡಿ, "ಇವತ್ತು ಪ್ರಿನ್ಸ್ ಮ್ಯುಸಿಕ್ ಷೋ ಇದೆ. ಕಿಟ್‌ಕ್ಯಾಟ್, ನಾವು ಹೋಗೋಣ" ಅವಳ ಹೆಗಲಿಗೆ ಜೋತು ಬಿದ್ದಳು ಅಖಿಲ. ಅವರ ದುಂಬಾಲಿಗೆ ಮಣಿದು 'ಸರಿ ಸರಿ..' ಎಂದು ಸಮ್ಮತಿ ಸೂಚಿಸಿದಳಾದರೂ ಮನಸ್ಸು 'ಈ ಪರಿಸ್ಥಿತಿಯಲ್ಲಿ ಹರ್ಷ ಷೋ ಅನೌನ್ಸ್ ಮಾಡಿದ್ದರ ಉದ್ದೇಶವೇನು?' ಎಂದು ವಿಚಾರ ನಡೆಸಿತ್ತು. ಆ ಕುರಿತು ತಿಳಿಯಲು " ಹಿಂದಿನ ದಿನ ಪ್ರಿನ್ಸ್ ಜೊತೆಗೆ ಏನು ಮಾತಾಡಿದ್ರಿ?" ಎಂದು ಮಕ್ಕಳನ್ನು ಕೇಳಿದಾಗ ಮಾತ್ರ ಇಬ್ಬರೂ 'ಸರ್ಪ್ರೈಜ್..!'  ಎಂದು ಕೂಗಿ ಅಜ್ಜಿ ಬಳಿಗೆ ಓಡಿ ಹೋದರು ಷೋ ಬಗ್ಗೆ ಹೇಳಲು...



"ಕಿಟ್‌ಕ್ಯಾಟ್ ನಾನು ಬರ್ತೆನೆ" ಪರಿ ಹೊರಹೋಗುವಾಗ ಅಖಿಲಾ ಹಠ ಮಾಡಿದಳು.

"ಸಾಯಂಕಾಲ ಮ್ಯುಸಿಕ್ ಶೋಗೆ ಬರುವಂತೆ ಈಗ ಬೇಡ್ವೋ ಬಂಗಾರ" ರಮಿಸಿ ಮುದ್ದಿಸಿ ಹೊರಟಳು ರಾಥೋಡ್‌ನನ್ನು ಭೇಟಿಯಾಗಲು.

ವಿವೇಕ್ ನೊಂದಿಗೆ ಕಾರಿನಲ್ಲಿ ಪರಿ ಅತ್ತ ಹೋಗುತ್ತಲೇ ಮರಳಿ ಬಂದಿದ್ದರು ಸಾತ್ಪುರಕ್ಕೆ ಹೋಗಿದ್ದ ಮೇಜರ್.. ಅವರು ಎರಡು ನಿಮಿಷ ಮೊದಲೇ ಬಂದಿದ್ದು, ಪರಿ ಎಲ್ಲಿ ಹೋಗುತ್ತಿರುವಳೆಂಬ ಷಯ ಅವರಿಗೆ ತಿಳಿದಿದ್ದರೆ ಖಂಡಿತ ಅವಳನ್ನು ಹೋಗಲು ಬಿಡುತ್ತಿರಲಿಲ್ಲ ಆ ಪಾತಕ ಪಾಶದೊಳಗೆ....

ಹೋಟೆಲ್ ಎದುರಿಗೆ ಕಾರು ನಿಲ್ಲಿಸಿದ ವಿವೇಕ್ "ಏನೇ ಅಪಾಯದ ಮುನ್ಸೂಚನೆ ಕಂಡರೂ ನನ್ನನ್ನ ಕೂಗಿ, ನಾನು ಇಲ್ಲಿಯೇ ಕಾಯ್ತಿರ್ತಿನಿ ಒಕೆ". ಅವನ ಮಾತಿಗೆ ಸಮ್ಮತಿಸಿದ ಪರಿ ಕಿವಿಗೆ ಬ್ಲೂ ಟೂತ್ ಸಿಕ್ಕಿಸಿಕೊಂಡು ತನ್ನ ಬ್ಯಾಗ್ ಮತ್ತು ಮೊಬೈಲ್ ಸಮೇತ ಕೆಳಗಿಳಿದಳು.

ರಿಸೆಪ್ಷನಿಸ್ಟ್ ಬಳಿ ರಾಥೋಡ್ ಹೆಸರು ಹೇಳಿ ರೂಂ ಕೀ ಪಡೆದು ಲಿಫ್ಟ್ ಹತ್ತಿ ಕೋಣೆ ಸೇರಿಕೊಂಡಳು. ಹವಾ ನಿಯಂತ್ರಿತ ತಂಪಾದ ಏರ್ ಕಂಡಿಷ್ನರ್ ರೂಂ ನಲ್ಲಿಯೂ ಅವಳ ಮುಖ ಬೆವೆತು ಗಂಟಲು ಪಸೆ ಆರಿಹೋಗಿತ್ತು. ಅಂತಹ ಗಾಬರಿಯಲ್ಲಿ ಸಹ ಮಾಡಬೇಕಾದ ಸಿದ್ಧತೆಯನ್ನು ನಾಜೂಕಾಗಿ ಮಾಡಿ ಮುಗಿಸಿ ಅವನಿಗಾಗಿ ಕಾದು ಕುಳಿತಿದ್ದಳು. ಕೆಲವೇ ನಿಮಿಷದಲ್ಲಿ ರಾಥೋಡ್ ರೂಮಿಗೆ ಬಂದ..

" ತುಂಬಾ ಕಾಯಿಸಿಬಿಟ್ಟೆನಾ?" ಕಿರುನಗುತ್ತ ಕೇಳಿದ

"ಹಾಗೇನಿಲ್ಲ. ಕೆಲಸ ಆಗಬೇಕಂದ್ರೆ ಕತ್ತೆ ಕಾಲು ಹಿಡಿಬೇಕಲ್ವ" ನಗುತ್ತಲೇ ಅಣಕವಾಡಿದಳು. ಇಬ್ಬರ ಸಂಭಾಷಣೆ ಹಿಂದಿಯಲ್ಲಿ ಸಾಗಿತ್ತು.

"Unfortunately  ಆ ಕತ್ತೆ ನಾನೇ ತಾನೇ! ಹ್ಹಹ್ಹಹ್ಹಾ... ಪರವಾಗಿಲ್ಲ ಈಗ ನಾನು ಒಳ್ಳೆಯ ಮೂಡ್ನಲ್ಲಿದ್ದಿನಿ. ಕತ್ತೆಯಲ್ಲ ಕೋಡಂಗಿ ಅಂದ್ರೂ ನನಗೆ ವ್ಯತ್ಯಾಸ ಬೀಳಲ್ಲ... ನಿನ್ನ ಜೊತೆಗೆ ಟೈಮ್ ಸ್ಪೆಂಡ್ ಮಾಡೋಣಾಂತ ಎಲ್ಲಾ ಅಪಾಯಿಂಟ್ಮೆಂಟ್ ಕ್ಯಾನ್ಸಲ್ ಮಾಡಿ ಬಂದಿದೀನಿ. ಡೋಂಟ್ ವೇಸ್ಟ್‌ ಮೈ ಟೈಂ ಕಮ್ ಬೇಬ್..." ಎಂದು ಕೋಟ್ ಬಿಚ್ಚಿ ಬದಿಗೆಸೆದು ಟೈ ಸಡಿಲಗೊಳಿಸಿದ. ಅವನ ಚರ್ಯೆಯನ್ನು ಮೊದಲೇ ಊಹಿಸಿದ್ದವಳು ಸ್ವಲ್ಪವೂ ವಿಚಲಿತಳಾಗದೇ..

"ಅದೂ.... ನಾನು ಮುಖ್ಯವಾದ ವಿಷಯದ ಬಗ್ಗೆ ನಿಮ್ಮ ಜೊತೆ ಮಾತಾಡಬೇಕಿತ್ತು.. ಮೊದಲು ಅದನ್ನ..." ಅವಳ ಮಾತು ಪೂರ್ತಿಯಾಗುವ ಮುನ್ನವೇ..

" ವ್ಹಾಟ್... ಬರೀ ಮಾತಾಡೋದಕ್ಕೆ ಹೋಟೆಲ್ ರೂಂ ಗೆ ಬಂದಿದ್ದೀಯಾ? ನೀನು ಇಂತಹ ಸೂಕ್ಷ್ಮ ವಿಷಯ ಅರ್ಥವಾಗದ ಮುಗ್ದೆ ಅಲ್ಲ‌ ಅಂದುಕೊಳ್ತೆನೆ" ತುಟಿ ಕೊಂಕಿಸಿದ. ಅವನ ಗಾಂಭೀರ್ಯ ಅರಿತು ಅವಳು ಹಾವಭಾವಗಳನ್ನು ಬದಲಾಯಿಸಿದಳು.

"ಕಮ್ಮಾನ್ ಮಿಸ್ಟರ್ ರಾಥೋಡ್.... ಮೊದಲು ಸ್ವಲ್ಪ ಮಾತು.  ಆಮೇಲೆ ಅದೆಲ್ಲ..." ನಸುನಾಚುತ್ತ ಮಾದಕವಾಗಿ ನುಡಿದಳು. ಸೌಂದರ್ಯದ ಒಡತಿಯ ಲಜ್ಜೆ ನೋಡಿ ರಾಥೋಡ್ ಮನಸ್ಸೋತಿದ್ದ. ಅವಳ ಆಣತಿಯಂತೆ ಮಂಚದ ಒಂದು ಪಕ್ಕಕ್ಕೆ ಕುಳಿತ. ಆಕೆಯ ಹೊಟ್ಟೆಯೊಳಗೆ ಕೆಂಡದ ಕಾವು ಉರಿಯುತ್ತಿತ್ತು. "ಟೇಕ್ ಎ ಡ್ರಿಂಕ್" ಮೊದಲೇ ಸಿದ್ದಪಡಿಸಿದ ಗ್ಲಾಸ್ ಅವನ ಕೈಗಿಟ್ಟಳು. ಅವನು ಕುಡಿಯಲು ಆರಂಭಿಸುತ್ತಿದ್ದಂತೆ ತಾನು ಎದುರಿನ ಸೋಫಾಗೆ ಒರಗಿ, ಒಂದು ಗ್ಲಾಸ್ ಸುಮ್ಮನೆ ತುಟಿತಾಗಿಸಿ ಮಾತಿಗಿಳಿದಳು...

"ಮಿಸ್ಟರ್ ರಾಥೋಡ್.. ನಾನು ಒಂದು ಪ್ರಾಜೆಕ್ಟ್ ಮೇಲೆ ಇಲ್ಲಿಗೆ ಬಂದಿದ್ದೆ. ಆದರೆ ಆ ಪ್ರಾಜೆಕ್ಟ್ ನನ್ನ ಕೈ ತಪ್ಪಿ ಹೋಗುವ ಹಾಗಿದೆ. ನಿಮ್ಮ ಅಡ್ವೊಕೇಟ್ ಬುದ್ದಿಯಿಂದ  ಅದನ್ನು ನನಗೆ ಸಿಗೋ ಹಾಗೆ ಮಾಡೋಕಾಗುತ್ತಾ" ನೇರವಾಗಿಯೇ ಕೇಳಿದಳು

"ಅಷ್ಟೇನಾ... ಒಂದಲ್ಲ ನಾಲ್ಕು ದಾರಿ ಇವೆ. ಸಾಮ ಧಾಮ ಭೇದ ದಂಡ..  ಟೆಂಡರ್ ಯಾವ ಕಂಪನಿಗೆ ಸಿಗೋ  ಚಾನ್ಸ್ ಇದೆಯೋ ಆ ಕಂಪನಿ ಜೊತೆ ಒಪ್ಪಂದ ಮಾಡ್ಕೋ, ಸಮಾಧಾನಕರ ಮಾತಿನಿಂದಲೋ ಅಥವಾ (ಧಾಮ) ಹಣದಿಂದಲೋ ಅಥವಾ ಇನ್ಯಾವುದೇ ಆಮಿಷದಿಂದಲೋ ಪ್ರಾಜೆಕ್ಟ್‌ನಿಂದ ಹಿಂದೆ ಸರಿಯೋ ಹಾಗೆ ಮಾಡು..." ತೀರ ಸಿಂಪಲ್ ಎನ್ನುವಂತೆ ಹೇಳಿದ

"ಒಂದು ವೇಳೆ ಅದಕ್ಕೆ ಆ ಕಂಪನಿ ಒಪ್ಪದಿದ್ರೆ...."

"ಆಗ ಭೇದ,, ಆ ಕಂಪನಿ ಬಗ್ಗೆ ಇಲ್ಲದ ಅಪಪ್ರಚಾರ ಮಾಡು. ಹೆಸರು ಮಣ್ಣುಪಾಲಾದ ಕಂಪನಿಗೆ  ಪ್ರಾಜೆಕ್ಟ್ ಕೊಡಲು ಯಾವ ಎಂ.ಎನ್‌.ಸಿ ಮುಂದೆ ಬರುತ್ತೆ ಹೇಳು. ಆಗ ಪ್ರಾಜೆಕ್ಟ್ ನಿನಗೆ.." ಹೇಳುತ್ತ ಮತ್ತೊಂದು ಡ್ರಿಂಕ್ ಗಂಟಲೊಳಗೆ ಇಳಿಯಿತು.

"ಅದೂ ಆಗದಿದ್ರೆ.‌." ಅವಳ ನೋಟ ತೀಕ್ಷ್ಣವಾಗಿತ್ತು

"ಲಾಸ್ಟ್ ಆಪ್ಷನ್, ದಂಡಂ ದಶಗುಣಂ ಭವಃ..  ಆ ಕಂಪನಿ ಎಂ.ಡಿ ನೇ ಎತ್ತಿಬಿಡು ಪ್ರಾಬ್ಲಮ್ ಸಾಲ್ವ್.. ಅದಕ್ಕೆ ಏನಾದ್ರೂ ಸಹಾಯ ಬೇಕಾದ್ರೆ ಹೇಳು ನಾನಿದ್ದೀನಿ" ಗಹಗಹಿಸಿ ನಕ್ಕ.

" ನನ್ನ ಹರ್ಷನನ್ನು ಹೀಗೆ ಕೊಂದ್ರಾ?" ಶೂನ್ಯ ದೃಷ್ಟಿಯಲ್ಲಿ ಕುಳಿತಿದ್ದಳಾಕೆ

ಅವನ ನಗು ಇನ್ನೂ ಜೋರಾಯಿತು. "ನಿನ್ನ ಹರ್ಷ..???  ಇದನ್ನು ತಿಳಿದುಕೊಳ್ಳಲು ಇಷ್ಟೆಲ್ಲಾ ಪೀಠಿಕೆನಾ??  ಪ್ರಾಜೆಕ್ಟ್ ಸಲುವಾಗಿ ಕೊಲ್ಲಬೇಕೆಂದಿದ್ದರೆ ಅವನನ್ನ ಮೊದಲೇ ಕೊಲ್ತಿದ್ವಿ. ಪ್ರಾಜೆಕ್ಟ್ ಫೈನಲೈಸ಼್ ಆದ್ಮೇಲಲ್ಲ... " ನಗುತ್ತಲೇ ಹಾಸಿಗೆಯ ಮೇಲುರುಳಿದ.

ಗ್ಲಾಸ್ ನಲ್ಲಿನ ಬೀಯರ್ ಖಾಲಿಯಾಗಿತ್ತು. ಅದರಲ್ಲಿ ಬೆರೆಸಿದ್ದ ಸೋಡಿಯಂ ಪೆಂಟೋಥಾಲ್ ಎಂಬ ಮಂಪರಿನ ಔಷಧಿ ತನ್ನ ಕೆಲಸ ಆರಂಭಿಸಿತ್ತು.  ಆತನ ಧ್ವನಿ ಕ್ಷೀಣವಾಯಿತು.

"ಅಂದ್ರೆ ಏನು ನಿಮ್ಮ ಮಾತಿನ ಅರ್ಥ? ಮತ್ಯಾಕೆ ಕೊಂದ್ರಿ ಹರ್ಷನ್ನ?" ಆಕೆ ಎದ್ದು ಅವನ ಸನಿಹ ಬಂದು ನಿಂತಳು.

ಅವತ್ತು......

ಹರ್ಷ ಮತ್ತು ವೈಭವ್ ಮಧ್ಯೆ ಜಗಳವಾದ ನಂತರ ವೈಭವ್ ಮನಸ್ಥಿತಿ ಡೋಲಾಯಮಾನವಾಗಿತ್ತು. ಯಾವುದೇ ಪರಿಸ್ಥಿತಿಯಲ್ಲೂ ಹರ್ಷನ ಎದುರಿಗೆ ಸೋಲು ಅನುಭವಿಸುವುದು ಅವನಿಗೆ ಇಷ್ಟವಿರಲಿಲ್ಲ. ಅವನ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುವುದು ಎಂದು ಆಲೋಚಿಸುತ್ತ ಶತಪಥ ತಿರುಗ ತೊಡಗಿದ್ದ. ಅದೇ ಸಮಯದಲ್ಲಿ ಅವನ ಆಫೀಸಿಗೆ ಹರ್ಷ ಬಂದಿದ್ದನು.. ದುಡುಕಿ ಅವನ ಮೇಲೆ ಕೈ ಮಾಡಿದ್ದಕ್ಕೆ ಕ್ಷಮೆ ಯಾಚಿಸಲು...

ಹರ್ಷನ ಮೃದು ಮಾತಿಗೆ ವೈಭವ್ ಮನಸ್ಸು ಕರಗಲಿಲ್ಲವಾದರೂ ಅವನ ಲೀಗಲ್ ಅಡ್ವೈಸರ್ ರಾಥೋಡ್ ಮಾತಿಗೆ ಸುಮ್ಮನಾಗಿ ಸಮಾಧಾನದಿಂದ ಮಾತಾಡಿ ಅವನನ್ನು ಕ್ಷಮಿಸಿ ಅಲ್ಲಿಂದ ಕಳುಹಿಸಿದ್ದ.

ಈ ಸಂಧಾನ ಕಾರ್ಯದಲ್ಲಿ ರಾಥೋಡ್ ಸ್ವಾರ್ಥ ಕೂಡ ಇತ್ತು. ಅಭಿವೃದ್ಧಿ ಹೊಂದುತ್ತಿರುವ ಭಾರ್ಗವ್ ಇಂಡಸ್ಟ್ರೀಸ್ ಜೊತೆಗೆ ಒಳ್ಳೆಯ ಮಿತ್ರತ್ವ ಬೆಳೆಸಿ ಅದರ ಒಂದು ಭಾಗವಾಗುವುದು ಅವನ ದುರಾಲೋಚನೆಯಾಗಿತ್ತು. ಅದೇ ಕಾರಣಕ್ಕೆ ವೈಭವ್ ಮತ್ತು ಹರ್ಷನ ಮಧ್ಯದ ಭಿನ್ನಾಭಿಪ್ರಾಯ ಹೋಗಲಾಡಿಸಿ ತಾನು ಒಳ್ಳೆಯವನಂತೆ ಸೋಗು ನಟಿಸಿದ್ದ.

ಹರ್ಷ ಅಲ್ಲಿಂದ ಹೊರಟು ನಿಂತಾಗ ತಾನೇ ಡ್ರಾಪ್ ಮಾಡುವುದಾಗಿ ಕಾರಿನಲ್ಲಿ ಆಹ್ವಾನಿಸಿ ಕೂರಿಸಿಕೊಂಡಿದ್ದ ಕೂಡ. ಆದರೆ ರಾಥೋಡ್ ಗೆ ಯಾವುದೋ ಎಮರ್ಜೆನ್ಸಿ ಕರೆ ಬಂದಿದ್ದರಿಂದ ಮೊದಲು ತನ್ನನ್ನು ಲೈಟ್ ಹೌಸ್ ಬಳಿ ಇಳಿಸಿ ನಂತರ ಹರ್ಷನನ್ನ ಅವನ ರೂಮಿಗೆ ಬಿಡಲು ತಿಳಿಸಿದ ಡ್ರೈವರ್‌ಗೆ!!

ಲೈಟ್ ಹೌಸ್ ಬಳಿ ಇಳಿಯುತ್ತಿದ್ದಂತೆ ರಾಥೋಡ್ ಗಡ್ಡಧಾರಿ ಮುಸ್ಲಿಂ ವ್ಯಕ್ತಿಯೊಂದಿಗೆ ಮಾತನಾಡುತ್ತಾ ನಡೆದಿದ್ದ. ಸುತ್ತಲಿನ ವಾತಾವರಣ ಕಂಡ ಹರ್ಷನಿಗೆ ಏನೋ ಅನುಮಾನ ಸುಳಿದು ತುಸು ದೂರದಲ್ಲೇ ಕಾರಿನಿಂದ ಇಳಿದು ಡ್ರೈವರ್‌ನನ್ನು ಹೋಗುವಂತೆ ಸೂಚಿಸಿ ತಾನು ಮತ್ತೆ ರಾಥೋಡ್ ನಡೆದ ಅದೇ ದಾರಿಯಲ್ಲಿ ಮುನ್ನಡೆದಿದ್ದ. ಅದು ಹರ್ಷನ ಅತಿದೊಡ್ಡ ಪ್ರಮಾದವಾಗಿತ್ತು.

ಲಾರಿಗಳು, ಶಿಪ್, ಅಲ್ಲಿನ ವಾತಾವರಣ ನೋಡಿ ಆತನ ಆತಂಕ ನಿಜವಾಗಿತ್ತು. ಲಾರಿಯಿಂದ ಕಟ್ಟಿಗೆಯ ಕಂಟೇನರ್ ಗಳನ್ನು ಶಿಪ್ ಒಳಗೆ ಇರಿಸಲಾಗುತ್ತಿತ್ತು. ಏನನ್ನೋ ಕಳ್ಳ ಸಾಗಾಣಿಕೆ ಮಾಡುತ್ತಿರುವರಾ ಎಂಬ ಹರ್ಷನ ಸಂಶಯ ನಿಜವಾಗಿತ್ತು. ಅವನು ಅವಸರ ಪಡಲಿಲ್ಲ. ಮೂಲವನ್ನು ಕಂಡು ಹಿಡಿಯಲು ಸನ್ನದ್ದನಾಗಿ ಎಲ್ಲವನ್ನೂ ತನ್ನ ಮೊಬೈಲಿನಲ್ಲಿ ಸೆರೆ ಹಿಡಿಯತೊಡಗಿದ್ದ. ಇತ್ತ ಎಲ್ಲ ಲೋಡ್ ರವಾನೆಯಾಗುವವರೆಗೂ ಹದ್ದಿನ ಕಾವಲಿನಂತೆ ನಿಂತಿದ್ದ ರಾಥೋಡ್ ತದನಂತರ ಗಢ್ಢದಾರಿ ಮುಸ್ಲಿಂ ವ್ಯಕ್ತಿಯೊಡನೆ ಅವನ ಕಾರಿನಲ್ಲಿ ಹೊರಟು ಹೋದ. ಖಾಲಿಯಾದ ಲಾರಿಗಳು ಹೊರಟು ನಿಂತಾಗ ಅವುಗಳನ್ನು ಹಿಂಬಾಲಿಸಿದ ಹರ್ಷನಿಗೆ ಭೂಗತ ಲೋಕದ ಕರಾಳ ಸತ್ಯದ ಮುಖಾಮುಖಿ ಪರಿಚಯವಾಗಿತ್ತು.

ಎಂ.ಆರ್ ಸ್ಟೀಲ್ ಇಂಡಸ್ಟ್ರಿಯಲ್ ಫ್ಯಾಕ್ಟರಿ ಆವರಣದಲ್ಲಿ ನಿಂತಿದ್ದವು ಲಾರಿಗಳು. ಗೋದಾಮಿನ ಕೆಳಗಿನ ನೆಲಮಾಳಿಗೆಯಲ್ಲಿ ತಯಾರಾಗುತ್ತಿದ್ದವು ವಿಧ ವಿಧದ ಗನ್ ರೈಫಲ್ ಬುಲೆಟ್ ಇತ್ಯಾದಿ ಸ್ಪೋಟಕ ಸಾಮಗ್ರಿಗಳು..

ಮುಂಬೈ ನಗರದ ಗಲ್ಲಿಗಲ್ಲಿಗಳಲ್ಲಿ ರೌಡಿ ಶೀಟರ್‌ಗಳು,  ಬಡಬಗ್ಗರ ಬಳಿ ಹಫ್ತಾ ವಸೂಲಿ ಮಾಡಿ ಧನವಂತರೆನಿಸಿಕೊಳ್ಳುವ ಡಾನ್ ಮಾದರಿಯ ಭಾಯ್‌ಗಳು ಹಾಗೂ ಅವರ ಅನುಯಾಯಿಗಳದೇ ಪುಂಡಾಟ.... ಇಂತವರೇ ಈ ಅಕ್ರಮ ದಂಧೆಯ ಕುಶಲಕರ್ಮಿಗಳು.. ಇವರ ಕಾಯಕ ಆರಂಭವಾಗುವುದೇ ಪ್ರಪಂಚ ಮಲಗಿದ ನಂತರ.. ಇವರು ತಯಾರಿಸಿದ ಮಾಲುಗಳು ಪಾಕಿಸ್ತಾನ ಕರಾಚಿ, ಕೆಲವು ಅರಬ್ ರಾಷ್ಟ್ರಗಳಿಗೆ ಸಮುದ್ರ ಮಾರ್ಗದ ಮೂಲಕ ರವಾನೆಯಾಗುವುದಷ್ಟೇ ಅಲ್ಲದೇ ದೇಶದ ಒಳಗೂ ಸರಬರಾಜು ಆಗುತ್ತಿದ್ದವು. ದೇಶದಲ್ಲಿ ಮತೀಯ ಹೋರಾಟಗಳು ಆತಂರಿಕ ಗಲಭೆಗಳು ನಡೆವಾಗ ಇಂತಹ ಸ್ಪೋಟಕ ಸಾಮಗ್ರಿಗಳ ಉಪಯೋಗ ವ್ಯಾಪಕ!! ಇವುಗಳಿಂದ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ರಾಜಕೀಯ ಗುಂಪುಗಳು ಕ್ಷೇತ್ರದಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿ ಆಳ್ವಿಕೆಯನ್ನು ಆರಂಭಿಸಿ ಬಿಡುತ್ತವೆ. ಇಂತಹ ಕ್ಷೇತ್ರಗಳಲ್ಲಿ ಪ್ರಜಾಸತ್ತಾತ್ಮಕತೆ ಸತ್ತಹಾಗೆ ಲೆಕ್ಕ!

ಆಗತಾನೇ ಯಾವ ಪೋಲಿಸ್ ಅಡೆತಡೆಗಳು ಇಲ್ಲದೆ ದೊಡ್ಡ ಪ್ರಮಾಣದ ಲಾಭದಾಯಕ ಗನ್ ಮೆಟೀರಿಯಲ್ಸ್ ರಫ್ತು ಮಾಡಿ ಬಂದ ಸಂಭ್ರಮದಲ್ಲಿ ಮುಳುಗಿ ಅಮಲಿನಲ್ಲಿ ತೇಲುತ್ತಿದ್ದ ಪುಡಾರಿಗಳಿಗೆ ವಾಸ್ತವ ಜಗತ್ತಿನ ಗಮನವಿರಲಿಲ್ಲ. ಅಲ್ಲಿ ನಡೆಯುತ್ತಿದ್ದ ಅವ್ಯವಹಾರದ ಪ್ರತಿಯೊಂದು ತುಣುಕನ್ನು ಹರ್ಷ ಮೆಲ್ಲಗೆ ಗುಪ್ತ ಮಾರ್ಗದಲ್ಲಿ ಸಾಗಿ ಮೊಬೈಲಿನಲ್ಲಿ ಸೆರೆ ಹಿಡಿದು, ಯಾರಿಗೂ ಗೊತ್ತಾಗದಂತೆ ಆಚೆ ಬಂದಿದ್ದ.

ಈ ವಿಷಯವನ್ನು ಹರ್ಷ ಅದೇ ರಾತ್ರಿ ಅಲ್ಲಿನ ಎಸ್ಪಿ ನಾಯರ್ ಬಳಿ ಕಂಪ್ಲೆಂಟ್ ಮಾಡಲು ಹೋಗಿದ್ದ. ಎಸ್ಪಿ ನಾಯರ್ ಕಂಪ್ಲೇಂಟ್ ಏನೋ ತೆಗೆದುಕೊಂಡ. ಹರ್ಷನ ಬಳಿಯಿದ್ದ ವಿಡಿಯೋ ಸಹ ಶೇರ್ ಮಾಡಿಕೊಂಡ. ಆದರೆ ಅವನ ಸ್ವಾರ್ಥದ ಉದ್ದೇಶದಿಂದ ಮಾತ್ರ!! ತನ್ಮೂಲಕ ರಾಥೋಡ್‌ನನ್ನು ಬ್ಲ್ಯಾಕ್ ಮೇಲ್ ಮಾಡಿ ತನ್ನ ಬ್ಯಾಂಕ್ ಅಕೌಂಟ್ ಭರ್ತಿ ಮಾಡಿಕೊಂಡನೇ ಹೊರತು ಯಾವುದೇ ಆ್ಯಕ್ಷನ್ ತೆಗೆದುಕೊಳ್ಳಲಿಲ್ಲ. ತಮ್ಮ ಕಾಳದಂಧೆಯ ವಿಷಯ ಹರ್ಷನಿಗೆ ತಿಳಿದಿದ್ದು ರಾಥೋಡ್‌ಗೆ ನುಂಗಲಾರದ ತುತ್ತಾಯಿತು. ತಮ್ಮ ಅವ್ಯವಹಾರದ ಮೂಲವನ್ನು ಬಲ್ಲವನಿಗೆ ಇನ್ನು ಬದುಕುವ ಹಕ್ಕಿಲ್ಲವೆಂದು ಮರುದಿನವೇ ಹರ್ಷನ ಕೊಲೆಯ ಪ್ಲ್ಯಾನ್ ಜಾರಿಗೆ ತರಲಾಗಿತ್ತು.'

ರಾಥೊಡ್ ಬಾಯಿಂದ ಇಷ್ಟೆಲ್ಲಾ ಕೇಳಿದ ಪರಿ ಇಹದ ಪರಿವಿಲ್ಲದೆ ಮೂರ್ತಳಾಗಿ ಕೂತು ಬಿಟ್ಟಿದ್ದಳು. ಎಲ್ಲೋ ಓದಿದ್ದ ಕೇಳಿದ್ದ ಗನ್ ಮಾಫಿಯಾದ ಪಾತಕ ಕಣ್ಣೆದುರಿಗೆ ಪ್ರತ್ಯಕ್ಷವಾಗಿರುವಾಗ ಅವಳ ಬೆನ್ನಲ್ಲಿ ನಡುಕ ಹುಟ್ಟಿತು

"ಅಂದ್ರೆ.... ನೀವು ಗನ್ ಮಾಫಿಯಾದಲ್ಲಿ ಶಾಮೀಲಾಗಿದ್ದೀರಾ?"

"ನಾನೊಬ್ಬ ಸಾಮಾನ್ಯ ಡೀಲರ್ ಮಾತ್ರ... ಈ ಧಂಧೆಗೆ ಯಾವ ವಿಘ್ನ ಬರದಂತೆ ನೋಡಿಕೊಳ್ಳುವುದು,  ಈ ವ್ಯವಹಾರದಲ್ಲಿ ತೊಡಗಿರುವವರು ಚಿಕ್ಕ ಪುಟ್ಟ ತಪ್ಪುಗಳಲ್ಲಿ ಸಿಕ್ಕಿಬಿದ್ದ ರೌಡಿಗಳನ್ನು ಬಿಡಿಸಿಕೊಡುವುದು ನನ್ನ ಕೆಲಸ! ಇದರ ಮೇಲಿನ ಬಿಗ್ ಬಾಸ್ 'ರಘುನಂದನ್! "

"ರಘು ಅಂಕಲ್ ಇಂತಹ ಕೆಲಸ...." ನಂಬಲಾಗಲಿಲ್ಲ ಅವಳಿಗೆ. ತಲೆಗೆ ಕೈ ಹೊತ್ತು ಕೂತಳು. "ನಿಮಗೂ ಅವರಿಗೂ ಹೇಗೆ ಪರಿಚಯ? ನೀವು ಅವರು ಹೇಳಿದಂತೆ ಕೇಳೋದಾ? ಯಾವಗಿನಿಂದ ನಡಿತೀದೆ ಇದೆಲ್ಲಾ?"

"ಯಾವಾಗಲೂ ಬಿಜಿನೆಸ್ ಮೀಟಿಂಗ್, ಕಾನ್ಫರೆನ್ಸ್ ಅಂತ ದೇಶ ವಿದೇಶ ಸುತ್ತೋ ರಘುನಂದನ್ ಮುಂಬೈ ನಲ್ಲಿ ಇರೊದೇ ಇಲ್ಲ‌.. ಹೀಗಾಗಿ ಅವನ ಬಲಗೈ  ಭಂಟ ಡೇವಿಡ್‌ನೇ ಇದನ್ನೆಲ್ಲ ನೋಡಿಕೊಳ್ಳೋದು. ಈ ವ್ಯವಹಾರ ಎಲ್ಲಾ ತುಂಬಾ ಹಳೆಯದೇನೋ.... ಆದರೆ ನನಗೆ ಡೇವಿಡ್ ಸಿಕ್ಕಿದ್ದು, ಮೂರು ವರ್ಷದ ಹಿಂದೆ ಒಂದು ಕೋರ್ಟ್ ಕೇಸ್ ವಿಚಾರದಲ್ಲಿ. ಆಗಿನಿಂದ ನಾನು ಈ ವ್ಯವಹಾರದ ಒಂದು ಭಾಗವಾದೆ. ಕೋಟಿಗಟ್ಟಲೇ ಲಾಭವಾದ್ರೂ ನನಗೆ ಕೊಡೋದು ಕೇವಲ ಹತ್ತು ಪರ್ಸೆಂಟ್ ಮಾತ್ರ ಬ್ಲಡಿ ಬಾಸ್ಟರ್ಡ್!!  ವಿಚಿತ್ರ ಅಂದ್ರೆ ನನಗೂ ರಘುನಂದನ್ ಗೂ ಇದುವರೆಗೂ ಮುಖಾಮುಖಿ ಭೇಟಿಯಾಗಿಲ್ಲ. ಒಂದು- ಫೋನ್‌ಲ್ಲಿ ಮಾತುಕತೆ ಇಲ್ಲಾ ಡೇವಿಡ್ ಮೂಲಕ ಸಂದೇಶ ರವಾನೆ ಆಗೋದು" ಮತ್ತಿನಲ್ಲಿ ತೊದಲುತ್ತ ನುಡಿದಿದ್ದ

"ಇಷ್ಟೆಲ್ಲಾ  ಆದಮೇಲೆ ಹರ್ಷ ಬದುಕಿರೋದು ನಿಮಗೆ ಗೊತ್ತಿಲ್ವಾ.." ಅನುಮಾನದಿಂದ ಕೇಳಿದಳು.

"ಹ್ಹಹ್ಹಹ್ಹಾ.... ಗೊತ್ತಿಲ್ದೇ ಏನು...!! ಅವನನ್ನ ಆಸ್ಪತ್ರೆಗೆ ಸೇರಿಸಿದ ನಂತರ ಕೂಡ ಎರಡು ಬಾರಿ ಕೊಲ್ಲಲು ಪ್ರಯತ್ನ ಮಾಡಿಯಾಗಿತ್ತು. ಆದರೆ ಲಾಸ್ಟ್ ಮೂಮೆಂಟ್ ರಘುನಂದನ್ ಮಗಳು ಅವನನ್ನ ಪ್ರೀತಿಸ್ತಿದ್ದಾಳೆ ಅನ್ನೋ ಕಾರಣಕ್ಕೆ ಬದುಕಿ ಬಿಟ್ಟ ಲಕ್ಕಿ ಫೆಲ್ಲೋ... ಅದೂ ಅಲ್ಲದೇ ಅವನು ಹಳೆಯದೆಲ್ಲ ಮರೆತಿದ್ದರಿಂದ ನಮಗೆ ಯಾವ ತೊಂದರೆಯೂ ಇರಲಿಲ್ಲ."

"ಇದರಲ್ಲಿ ವೈಭವ್ ಶುಕ್ಲಾ ಕೂಡ ಭಾಗಿಯಾಗಿದ್ದಾನಾ?"

"ಪೂವರ್ ಬಾಯ್... ನಾನು ಹೇಳಿದ್ದನ್ನೇ ವೇದ ವಾಕ್ಯ ಅನ್ಕೊಂಡಿದಾನೆ ಮೂರ್ಖ... ಅವನನ್ನ ಅವಮಾನ ಮಾಡಿದ್ದಕ್ಕೆ ಹರ್ಷನ್ನ ಈ ಅತಂತ್ರ ಸ್ಥಿತಿಗೆ ತಂದಿದ್ದೀನಿ ಅಂತ ಹೇಳಿದೆ. ನಂಬಿಬಿಟ್ಟ. ತನ್ನ ದ್ವೇಷ ಸಾಧಿಸಿದ ಸಂತೋಷಕ್ಕೆ  ಅವನ ಕಂಪನಿಯಲ್ಲಿ ನನಗೆ ಉನ್ನತ ಸ್ಥಾನಮಾನ ಕೊಟ್ಟ. ನನ್ನ ಪ್ರತಿಷ್ಠೆ ಹೆಚ್ಚಾಯಿತು. ಆನೆ ಇದ್ದರೂ ಲಾಭ ಸತ್ತರೂ ಲಾಭ ಅನ್ನೋ ಹಾಗೆ ಈ ಹರ್ಷನಿಂದ ನನಗೆ ಪ್ರಾಫಿಟ್!!" ಮಂಪರಿನಲ್ಲೂ ಅವನ ಮುಖದಲ್ಲಿ ನಗು ಮೂಡಿತ್ತು.

ಎಲ್ಲಾ ವಿಷಯ ಸಂಗ್ರಹಿಸಿದ ಪರಿ ಇನ್ನು ತಡಮಾಡಬಾರದೆಂದು ಮೊದಲೇ ಸಜ್ಜುಗೊಳಿಸಿಟ್ಟ ಮೊಬೈಲ್ ನಲ್ಲಿ ವಿಡಿಯೋ ಸೇವ್ ಮಾಡಿ,  ತನ್ನ ಮೊಬೈಲ್ ಹಾಗೂ ಬ್ಯಾಗ್ ಸಮೇತ ಅಲ್ಲಿಂದ ನಿರ್ಗಮಿಸಿದಳು. ಹರ್ಷನ ಸಾವಿನ ಹಿಂದೆ ಇಷ್ಟೆಲ್ಲಾ ನಿಗೂಢತೆ ಅಡಗಿದೆಯೆಂದು ಅರಗಿಸಿಕೊಳ್ಳಲು ಅವಳಿಗೆ ಕಷ್ಟವಾಗಿತ್ತು. ದಾರಿಯಲ್ಲಿ ವಿವೇಕ್ ‌ಗೂ ಕೂಡ ಎಲ್ಲಾ ವಿಚಾರಗಳನ್ನು ಮನದಟ್ಟು ಮಾಡಿದಳು.

ಮನೆಗೆ ಮರಳಿದಾಗ ಮೇಜರ್ ಅವರ ಮುಖ ನೋಡಿದ ನಂತರವಷ್ಟೇ ಅವರಿಬ್ಬರ ಆತಂಕ ಚೂರು ಶಮನವಾಯಿತು. ಅವರನ್ನು ವಿವೇಕ್ ಪ್ಲಾಟ್ಗೆ ಕರೆತಂದು ಈ ಎರಡು ದಿನಗಳಲ್ಲಿ ನಡೆದ ಪ್ರತಿ ಘಟನೆಯನ್ನು ಅವರಿಗೆ ವಿವರಿಸಿದ್ದಳು ಪರಿ. ವಿಡಿಯೋ ತೋರಿಸಿದಳು ರಾಥೋಡ್‌ನ ನಿಜಮುಖ ಬಯಲು ಮಾಡುತ್ತ...

ಶಾಂತವಾಗಿ ಪರಿ ವಿವೇಕ್ ಮಾತನ್ನು ಕೇಳಿಸಿಕೊಂಡ ಮೇಜರ್ ಅವರು ಯಾವ ಪೂರ್ವ ಯೋಜನೆ ಇಲ್ಲದೇ ತೆಗೆದುಕೊಂಡ ದುಡುಕು ನಿರ್ಧಾರಕ್ಕೆ ಅವರಿಬ್ಬರನ್ನು ಗದರಿದರು. ಈ ದುಸ್ಸಾಹಸಕ್ಕೆ ಇಳಿಯುವ ಮುನ್ನ ತಮ್ಮನ್ನು ಒಂದು ಮಾತು ಕೇಳಬೇಕಿತ್ತೆಂದು ಆಕ್ಷೇಪಿಸಿದರು.

"ಡೋಂಟ್ ವರಿ ಅಂಕಲ್ ರಾಥೋಡ್‌ಗೆ ಎಚ್ಚರ ಆದಮೇಲೆ ನಡೆದದ್ದೇನೂ ನೆನಪಿರೋಲ್ಲ. ನೀವು ಸಾತ್ಪುರಕ್ಕೆ ಹೋದ ಕೆಲಸ ಏನಾಯ್ತು? ಎಸ್ಪಿ ನಾಯರ್ ಸಿಕ್ಕಿದ್ರಾ?" ಕೇಳಿದಳು

ಮೇಜರ್ ಸಾತ್ಪುರಿನಲ್ಲಿ ತಾವು ಕಲೆಹಾಕಿದ ಮಾಹಿತಿಯನ್ನು ವಿಶ್ಲೇಷಿಸಿದರು....

ಹರ್ಷನ ಆ್ಯಕ್ಸಿಡೆಂಟ್ ವಿಚಾರವಾಗಿ ಎಸ್ಪಿ ನಾಯರ್ ಬಳಿ ವಿಚಾರಣೆ ನಡೆಸಿದಾಗ ಮೊದಲು ಯಾವ ಕೇಸ್ ಎಂದು ತಾತ್ಸಾರ ಮಾಡಿದ್ದ ಎಸ್ಪಿ. ತದನಂತರ ಅವನ ಬ್ಯಾಂಕ್ ಡೀಟೆಲ್ ಹಾಗೂ ವರ್ಷದ ಹಿಂದಿನ ಕಾಲ್ ರೆಕಾರ್ಡ್ಸ್ ಪತ್ತೆ ಹಚ್ಚಿ, ಅವನು ಲಂಚ ತೆಗೆದುಕೊಂಡ ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಮೇಜರ್ ಅವರ ಕೈಯಾರೆ ಒಂದೆರಡು ಬಿಸಿ ಏಟು ತಿಂದ ಮೇಲೆಯೇ ಆತ ನಿಜಾಂಶವನ್ನು ಬಾಯ್ಬಿಟ್ಟಿದ್ದು.

ಎಂ‌.ಆರ್ ಸ್ಟೀಲ್ ಇಂಡಸ್ಟ್ರೀಸ್‌ ಮೇಲ್ನೋಟಕ್ಕೆ ಮಾತ್ರ ಒಂದು ಪ್ರತಿಷ್ಠಿತ ಉದ್ಯಮ. ಕಚ್ಚಾವಸ್ತುಗಳನ್ನು ಇಡಲು ನಿರ್ಮಿಸಿದ ವಿಶಾಲವಾದ ಗೋದಾಮಿನ ಕೆಳಮನೆಯಲ್ಲಿ ಸ್ಪೋಟಕ ವಸ್ತುಗಳ ಉತ್ಪಾದನೆ ಹಾಗೂ ಹಡಗುಗಳ ಮೂಲಕ ಅವುಗಳ ಆಮದು ರಫ್ತು ನಡೆಸಲಾಗುತ್ತದೆ ಅಲ್ಲಿ. ರಘುನಂದನ್ ರೈ ಎನ್ನುವ ಗಣ್ಯ ಹೆಸರಿನಿಂದಾಗಿ ಅವರ ಕಂಪನಿಯ ಯಾವುದೇ ಲಾರಿ ಅಥವಾ ಕಂಟೇನರ್ ಗಳು ಹೆಚ್ಚಾಗಿ ಪೋಲಿಸ್ ತಪಾಸಣೆಗೂ ಒಳಪಡುವುದಿಲ್ಲ. ಎಲ್ಲೋ ಒಬ್ಬಿಬ್ಬರು ತುಂಬಾ ಸ್ಟ್ರಿಕ್ಟ್ ಆಫೀಸರ್ ಇದ್ದರೆ ಅಂತವರನ್ನ ದುಡ್ಡು ಕೊಟ್ಟು ಪಳಗಿಸೋದು ರಘುನಂದನ್ ಗೆ ಚಿಟಿಕೆ ಹೊಡೆಯುವಷ್ಟು ಸುಲಭದ ಕೆಲಸ. ಆಫೀಸರ್ ಅದಕ್ಕೂ ಬಗ್ಗದಿದ್ದರೆ ಅವನು ಭೂಮಿ ಮೇಲೆ ಹುಟ್ಟಿದ್ದ ಎನ್ನುವ ಗುರುತು ಇಲ್ಲದಂತೆ ನಿರ್ನಾಮವಾಗಿ ಹೋಗುತ್ತಾನೆ.

ಕೆಲವು ತಿಂಗಳ ಹಿಂದೆ ಇದೇ ಜಾಲದಲ್ಲಿ ಹರ್ಷ ಸಿಕ್ಕು ಬಿದ್ದಿದ್ದು ಎಂದು ಆ ದಿನ ಹರ್ಷ ಮಾಡಿದ್ದ ವಿಡಿಯೋವನ್ನು ಅವರ ಕೈಗೆ ಒಪ್ಪಿಸಿ ಎಲ್ಲವನ್ನೂ ವಿವರಿಸಿದ್ದ ಎಸ್ಪಿ ನಾಯರ್. ಮರುದಿನ ಲಾರಿ ಮೂಲಕ ಹರ್ಷನಿಗೆ ಆ್ಯಕ್ಸಿಡೆಂಟ್ ಮಾಡಿಸಿದ್ದು  ರಘುನಂದನ್ ನ ಖಾಸಾವ್ಯಕ್ತಿ ಡೇವಿಡ್!! ಕೇಸ್ ಕ್ಲೋಸ್ ಮಾಡಲು & ಹರ್ಷನ ಪೋಸ್ಟ್ ಮಾರ್ಟಂ ರಿಪೋರ್ಟ್‌ನ್ನು ಅನುಮೋದಿಸಲು ರಘುನಂದನ್ ಅಕೌಂಟ್ ನಿಂದಲೇ ಹಣ ಸಂದಾಯವಾಗಿದ್ದು ಎಂದು ನಿಜ ಅರುಹಿದ್ದ ಎಸ್ಪಿ ನಾಯರ್.

ಇದೊಂದು ದೇಶದ್ರೋಹಿ ಕೆಲಸವಾಗಿದ್ದು ಕಾನೂನು ಪಾಲಕನಾಗಿ ಇಂತಹ ಕೆಲಸಕ್ಕೆ ಭಾಗಿಯಾಗಿದ್ದ ನಾಯರ್ ಈಗ ಮಿಲಿಟರಿ ಪಡೆಯ ಅಂಡರ್ ಕಸ್ಟಡಿಯಲ್ಲಿದ್ದ. ರಘುನಂದನ್‌ನ ಎಲ್ಲಾ ಅವ್ಯವಹಾರಗಳನ್ನು ಸಂಪೂರ್ಣವಾಗಿ ತಿಳಿಯಲು ಗುಪ್ತಚರರನ್ನು ಸಹ ನೇಮಿಸಲಾಗಿತ್ತು. ಆದರೆ ಕೇಸ್ ಬಗೆಹರಿಯುವವರೆಗೂ ಈ ವಿಷಯ ತಮ್ಮಲ್ಲೇ ಗೌಪ್ಯವಾಗಿ ಇರಬೇಕೆಂದು ಆಜ್ಞಾಪಿಸಿದರು ಮೇಜರ್. ವಿವೇಕ್ ತಲೆದೂಗಿ ಹ್ಮೂಗುಟ್ಟಿದರೆ, ಪರಿ ಅನ್ಯಮನಸ್ಕಳಾಗಿ ಕೂತಿದ್ದಳು. 

ಅವಳ ಯೋಚನೆಯೆಲ್ಲ ಹರ್ಷನ ಕಡೆಗೆ.. 'ಹರ್ಷನ ಜೀವ ತೆಗೆಯಲು ಪ್ರಯತ್ನಿಸಿದ ಡೇವಿಡ್ ನೇ ಈಗವನ ಕೇರ್ ಟೇಕರ್!! ಅದೇ ರಘುನಂದನ್ ರೈ ಮನೆಯಲ್ಲಿ ಹರ್ಷನ ವಾಸ! ಅವನಿಗೆ ಯಾವುದು ನೆನಪಿಲ್ಲ ಎಂಬುದು ಅವರ ನಿರಾಳತೆ. ಒಂದು ವೇಳೆ ಹರ್ಷನಿಗೆ ಎಲ್ಲಾ ನೆನಪಾದ್ರೆ ಅವನ ಸ್ಥಿತಿ...' ಮುಂದೆ ಊಹಿಸದಾದಳು ಅವಳು. ಅದೇ ರಾತ್ರಿ ಅವಳಿಗಾಗಿ ಒಂದೆಡೆ ಸಂತೋಷ ಸಂತಾಪ ಎರಡೂ ಒಟ್ಟಿಗೆ ಬಂದೊದಗುವ ಕಲ್ಪನೆಯೂ ಅವಳಿಗಿರಲಿಲ್ಲ.

************** 

ರಾತ್ರಿ 8 ಗಂಟೆ
ಮಹಾಲಕ್ಷ್ಮಿ ರೆಸ್ಕೊರ್ಸ್

    ತುಂಬಿದ ಜನಸ್ತೋಮದ ನಡುವೆ T ಆಕಾರದ ವೇದಿಕೆ, ಗಾಯನ ಪ್ರದರ್ಶನಕ್ಕೆ ರಂಗುರಂಗಾಗಿ ಕಂಗೊಳಿಸುತ್ತಿತ್ತು. ಜಗಮಗಿಸುವ ಸೀರಿಯಲ್ ಲೈಟುಗಳು ವಿವಿಧ ಬಗೆಯ ವಾದ್ಯಗಳು ಮೈಕ್ ಸೌಂಡ್ ಟ್ರ್ಯಾಕ್ ಗಳು ಸಂಗೀತ ಸುಧೆಯನ್ನು ಹರಿಸಲು ಸಿದ್ದವಾಗಿದ್ದವು. ಬ್ಯಾಂಡ್ ಆರ್ಕೆಸ್ಟ್ರಾ ಬಾಯ್ಸ್ ಹುರುಪಿನಿಂದ ಕೂಡಿದ್ದರು. ಆ್ಯಂಕರ್ ಬಂದು ಒಂದು ಚಿಕ್ಕ ಪರಿಚಯ ನೀಡಿ ಹರ್ಷನನ್ನ ವೇದಿಕೆಗೆ ಆಮಂತ್ರಿಸಿದಳು‌. ಕೌಂಟ್ಡೌನ್ ಸ್ಟಾರ್ಟ್ ಆಗಿತ್ತು 3...2...1...

ಕೆಲನಿಮಿಷ ಯಾವುದೋ ನಿರೀಕ್ಷೆಯಲ್ಲಿದ್ದ ಹರ್ಷ, ತನ್ನ ಮನಸ್ಸು ಕೂಗಿ ಕರೆದಂತಾಗ ಸ್ಟೇಜ್ ಹಿಂದಿನಿಂದ ಎದುರಿಗೆ ಬಂದಿದ್ದ.
ವೈಟ್ ಟೀ ಶರ್ಟ್ ಮೇಲೆ ಬ್ಲೂ ಬ್ಲೇಸರ್, ಜೀನ್ಸ್,  ವೈಟ್ ಶೂಸ್ ಧರಿಸಿ, ಕಿವಿಗೆ ವೈರ್ಲೆಸ್ ಹೆಡ್ ಸೆಟ್ ಮೈಕ್ರೊಫೋನ್ ಸಿಕ್ಕಿಸಿ...

ಏಂಜಲ್ ಸೈನ್ಮಾರ್ಕಿನ ಮೆಟ್ಯಾಲಿಕ್ ಬ್ಲೂ ಬಣ್ಣದ ಗೀಟಾರ್ ಭುಜಕ್ಕಿಳಿಸಿ ವೇದಿಕೆಗೆ ಬಂದ ಹರ್ಷ ಆಕರ್ಷಕ ವ್ಯಕ್ತಿತ್ವ ಹಾಗೂ ತನ್ನ ನಗುಮೊಗದಿಂದ ಎಲ್ಲರ ಮನಸ್ಸೆಳೆದಿದ್ದ. ಕೆಲವು ಫಂಕ್ಷನ್ಗಳಲ್ಲಿ ಹಾಡಿದ್ದನ್ನು ಬಿಟ್ಟರೆ ಈ ರೀತಿಯ ಕಾನ್ಸರ್ಟ್ ಗಳಲ್ಲಿ ಹಾಡುತ್ತಿರುವುದು ಆತನಿಗೆ ತೀರ ಹೊಸತು. ಗೀಟಾರ್ ತಂತಿಗಳನ್ನು ಮೀಟುತ್ತಾ ಹಾಡು ಆರಂಭಿಸುತ್ತಿದ್ದಂತೆಯೇ ಒಂದೇ ಕ್ಷಣದಲ್ಲಿ ಅವನ ಕಂಠಸಿರಿ ಜನಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆತನ ಧ್ವನಿಯೇ ಹಾಗಿತ್ತು. ಹಾಡಿದರೆ ಕೇವಲ ಕಿವಿಗಲ್ಲ ಮನಸ್ಸಿನಾಳಕ್ಕೆ ಮುಟ್ಟುವಂತೆ.. ಒಮ್ಮೆ ಕೇಳಿದರೆ ಮರೆಯದಂತೆ.. ಮತ್ತೆ ಮತ್ತೆ ಕೇಳಬೇಕು ಎನಿಸುವಂತೆ..

ತೊಂಬತ್ತರ ದಶಕದ ಹಳೆಯ ಹಿಂದಿ ಹಾಡುಗಳಿಂದ ಆರಂಭವಾಗಿ ಇಂದಿನ ಪೀಳಿಗೆಗೆ ರುಚಿಸುವಂತಹ ಹಾಡುಗಳವರೆಗೂ ವಿಭಿನ್ನ ರಾಗಸಂಯೋಜನೆಯೊಂದಿಗೆ (ರಿಮಿಕ್ಸ್) ತುಂಬಾ ಮನೋರಂಜನಾತ್ಮಕವಾಗಿ ಸಾಗಿತ್ತು ಹರ್ಷನ ಮ್ಯುಸಿಕ್ ಕಾನ್ಸರ್ಟ್... ನೆರೆದಿದ್ದವರಲ್ಲಿ ಬಹುತೇಕವಾಗಿ ಯುವಕ ಯುವತಿಯರ ಗುಂಪೇ‌...  ಒನ್ಸ್ ಮೋರ್ ಚೀರಾಟಗಳು.. ಕುಣಿತ.. ಸಂತಸದ ವಾತಾವರಣ ಅವನಿಗೆ ಮತ್ತಷ್ಟು ಉತ್ತೇಜನ ನೀಡಿದ್ದವು. ನಲವತ್ತು ನಿಮಿಷಗಳ ವರೆಗೆ ನಿರಂತರವಾಗಿ ತನ್ನ ಸಂಗೀತದಿಂದ ಯುವಜನತೆಯನ್ನು ಆಕರ್ಷಿಸಿದ ಹರ್ಷ ಒಂದು ಕ್ಷಣ ವಿರಾಮ ತೆಗೆದುಕೊಂಡ.

"ಒನ್ ಲಾಸ್ಟ್ ಸಾಂಗ್ ಫಾರ್ ಮೈ ಲವ್... " ಎಂದು ಘೋಷಿಸಿದ್ದ. ಓ್ವssss.... ಹುಡುಗಿಯರ ಧ್ವನಿಯ ಕೇಕೆ ಕೇಳಿಬಂತು. ನಸುನಗುತ್ತ ಹಾಡಲು ಮೊದಲಾಗಿ ಗೀಟಾರ್ ತಂತಿ ಮೀಟಿದ...

"ಜಬ್ ಕೋಯಿ ಬಾತ್ ಬಿಗಡ್ ಜಾಯೇ.. ಜಬ್ ಕೋಯಿ ಮುಷ್ಕಿಲ್ ಪಡ್ ಜಾಯೇ..
ತುಮ್ ದೇನಾ ಸಾಥ್ ಮೇರಾ... ಓಹ್ ಹಮ್ನವಾಜ಼್...

ನಾ ಕೋಯಿ ಹೈ.. ನಾ ಕೋಯಿ ಥಾ.. ಜಿಂದಗಿ ಮೇ.. ತುಮ್ಹಾರೆ ಸಿವಾ...
ತುಮ್ ದೇನಾ ಸಾಥ್ ಮೇರಾ... ಓಹ್ ಹಮ್ನವಾಜ಼್... "

ಅವನ ಹಾಡು ತೇಲಿಬರುತ್ತಿದ್ದರೆ ವೇದಿಕೆಯ ತೀರ ಸನಿಹದಲ್ಲೇ, ಕೆಳನಿಂತ ಮಾನ್ವಿ ಕಂಪಿಸಿ ಹೋದಳು. ಹರ್ಷ ಪರಿಗಾಗಿ ಹಾಡಿದ ಹಾಡು... ಅವನಿಗೆ ಗತದ ನೆನಪು ಬಂದ ಸುಳಿವು ಮೊದಲೇ ಸಿಕ್ಕಿತ್ತಾದರೂ ಅವನು ಹೀಗೆ ಬಹಿರಂಗವಾಗಿ ಸಾರುವನೆಂದು ಆಕೆ ಊಹಿಸಿರಲಿಲ್ಲ. ಅಪಾಯದ ಸೂಚನೆ ಸಿಕ್ಕಿತ್ತು ಅವಳಿಗೆ. ಆದರೆ ಸಂಜೀವಿನಿ ಆಲಾಪ್ ಪ್ರಸನ್ನ ತುಂಬಾ ಖುಷಿಯಲ್ಲಿದ್ದರು. ಹಾಡು ಮುಗಿಯುತ್ತಿದ್ದಂತೆ ಚಪ್ಪಾಳೆ ಸದ್ದು... ಆಗ ಮಾತನಾಡಿದ ಹರ್ಷ ಹಿಂದಿಯಲ್ಲಿ...

"ಹಲೋ ಫ್ರೆಂಡ್ಸ್.... ನೀವೂ ಕೂಡ ಯಾವುದೋ ಒಂದು ಕ್ಷಣ ಯಾರನ್ನೋ ತುಂಬಾ ಪ್ರೀತಿಸಿರುತ್ತಿರಾ ಅಲ್ವಾ... (ಕೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ಯ್ಯಾ... ಎಂಬ ಕೂಗು ಜನರಿಂದ)

ಪ್ರೀತಿ ಎಂದ ಕೂಡಲೇ ಎಲ್ಲರಿಗೂ ನಿಮ್ಮ ಪ್ರೀತಿಸಿದವರ ಮುಖ ಕಣ್ಣೆದುರಿಗೆ ಬಂದು ತುಟಿಯಂಚಲಿ ಒಂದು ಕಿರುನಗು ಹಾಗೇ ಹಾದು ಹೋಗಿಬಿಡುತ್ತಲ್ವಾ.... (ಮೆಲುವಾದ ನಗು..)

ಆದರೆ ಫ್ರೆಂಡ್ಸ್ ನನ್ನ ಪರಿಸ್ಥಿತಿ ಅದಕ್ಕೆ ವ್ಯತಿರಿಕ್ತವಾಗಿತ್ತು... ಹರ್ಷನ ಮುಖ ಸಪ್ಪಗಾಯಿತು. ಏನೋ ಕುತೂಹಲ ಕೆರಳಿತು ಪ್ರೇಕ್ಷಕರಿಗೆ..

ನನ್ನ ಲವ್ ಸ್ಟೋರಿ ಕೇಳೋ ಆಸಕ್ತಿ ಇದೆಯಾ? - ಕೇಳಿದ. 'ಅಫ್ಕೋ...ರ್ಸ್' ಉದ್ಘಾರ ಹೊರಡಿತ್ತು.

ನಾನು ಒಂದು ಹುಡುಗಿನಾ ತುಂಬಾ ಪ್ರೀತಿಸಿದ್ದೆ ಫ್ರೆಂಡ್ಸ್... ಈಗಲೂ ಪ್ರೀತಿಸ್ತಿದ್ದೀನಿ..  ಎಷ್ಟು ಅಂದ್ರೆ ಆ ಆಕಾಶ ಈ ಭೂಮಿಯನ್ನು ಪ್ರೀತಿಸುವಷ್ಟು... ಅದು ಹೋದಲೆಲ್ಲ ಆವರಿಸುವಷ್ಟು...(ತೋಳು ಚಾಚಿ ಕೂಗಿದ್ದ)
ಪ್ರಪೋಸ್ ಕೂಡ ಮಾಡಿಬಿಟ್ಟಿದ್ದೆ. ಅವಳು ನನ್ನ ಒಪ್ಪಿದ್ದಳು‌. ನಿಶ್ಚಿತಾರ್ಥ ಕೂಡ ನಡೆದಿತ್ತು. ಉಂಗುರ ನೋಡಿಕೊಂಡ.  ಇನ್ನೇನೂ ಮದುವೆ ಕೂಡ ಆಗಬೇಕಿತ್ತು. ಅಷ್ಟರಲ್ಲಿ ನನಗೆ.... ಆ್ಯಕ್ಸಿಡೆಂಟ್ ಆಗಿಬಿಟ್ಟಿತ್ತು‌!! ನಿಶ್ಯಬ್ದತೆ ಆವರಿಸಿತು.

ಈಗೇ ಒಂದು ವರ್ಷದ ಹಿಂದೆ ನಡೆದ ಆ ಆ್ಯಕ್ಸಿಡೆಂಟ್ ನಲ್ಲಿ ನಾನು ನನ್ನ ಜ್ಞಾಪಕಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡು ಬಿಟ್ಟೆ. ಯಾರೋ ಅಪರಿಚಿತರ ಮಧ್ಯೆ ನನ್ನ ಅಸ್ತಿತ್ವ ಮರೆತು ಬದುಕಿದ್ದೆ.  ನನಗೆ ನಾನು ಯಾರು ಅನ್ನೋದೇ ಮರೆತು ಹೋಗಿರುವಾಗ ನಾನು ಪ್ರೀತಿಸೋ ಹುಡುಗಿ ಯಾರು ಅನ್ನೋದು ಹೇಗೆ ನೆನಪಾಗುತ್ತೆ ಹೇಳಿ..

ಆದರೂ ಪ್ರತಿಸಲ ಪ್ರೀತಿ ಅನ್ನೋ ಮಾತು ಬಂದಾಗ ನನಗೆ ಅವಳ ಕಲ್ಪನೆ ಎದುರಾಗೋದು... ಅವಳು ಹೇಗಿದ್ದಾಳೋ, ಎಲ್ಲಿದ್ದಾಳೊ, ಏನ್ ಮಾಡ್ತಿದ್ದಾಳೋ? ಊಹ್ಮೂ... ಯಾವ ನಿರ್ದಿಷ್ಟವಾದ ಉತ್ತರ ತಿಳಿಯದಿದ್ರೂ ಅವಳು ನನ್ನೊಳಗೆ ಕನಸು ಕನವರಿಕೆಯಾಗೇ ಉಳಿದಿದ್ದಳು....

ಇದೇ ಕೆಲವು ದಿನಗಳ ಹಿಂದೆಯಷ್ಟೇ ನಾನು ಅವಳನ್ನ ಮತ್ತೆ ಮೊದಲ ಬಾರಿಗೆ ನೋಡಿದೆ. ನನಗೆ ಅವಳೇ ನನ್ನವಳು ಎಂಬ ಪರಿವಿರಲಿಲ್ಲ. ಬಹುಶಃ ಅವಳು ನನ್ನನ್ನ ನೋಡಿರಬಹುದು. ಆದರೆ ಅವಳಿಗೆ ನನ್ನ ಮೇಲೆ ಕೋಪ.. ಅದು ಸಹಜನೇ ಅಲ್ವ... ಜೀವಕ್ಕಿಂತ ಮಿಗಿಲಾಗಿ ಪ್ರೀತಿಸ್ತಿನಿ ಕೊನೆಯವರೆಗೂ ಜೊತೆಗೆ ಇರ್ತಿನಿ ನಿನ್ನೆಲ್ಲ ಕಷ್ಟ ಸುಖದಲ್ಲಿ ನಿನ್ನ ಬಿಟ್ಟು ಹೋಗಲ್ಲ ಅಂತೆಲ್ಲ ಮಾತು ಕೊಟ್ಟು,, ಇದಕ್ಕಿದ್ದಂತೆ ಎಲ್ಲಾ ಮರೆತು ಯಾವುದೋ ದೂರದ ದೇಶದಲ್ಲಿ ಕಣ್ಮರೆಯಾದರೆ ಆ ಹುಡುಗಿ ತಾನೇ ಏನು ಮಾಡಬೇಕು?!!

ಆದರೂ ಅವಳು ಬಂದಿದ್ದಳು, ನನ್ನನ್ನ ಹುಡುಕಿಕೊಂಡು.. ಭೇಟಿಯಾಗೋಕೆ.. ಒಂದು ಮದುವೆ ಫಂಕ್ಷನ್ ಹಾಲ್‌ಗೆ... ಅಲ್ಲಿ ನನ್ನ ದೂರದಿಂದಲೇ ನೋಡಿದವಳಿಗೆ ನನ್ನ ಮರೆವಿನ ವಿಷಯ ಗೊತ್ತಾಗಿತ್ತು. ಆದರೂ ಅವಳು ಒಂದೂ ಮಾತಾಡದೆ ತನ್ನದೊಂದು ಗುರುತನ್ನು ನನಗಾಗಿ ಉಳಿಸಿ ಹೊರಟು ಹೋಗಿದ್ದಳು. 
'ನನಗೆ ತಾನಾಗಿಯೇ ಅವಳ ಮೇಲಿನ ಪ್ರೀತಿ ನೆನಪಾಗಲಿ! ನಮ್ಮ ಪ್ರೀತಿ ಇಷ್ಟು ಕ್ಷುಲ್ಲಕ ಕಾರಣಕ್ಕೆ ಮುಗಿದು ಹೋಗುವಂತದ್ದಲ್ಲ  ಎಂಬುದನ್ನು ನಿರೂಪಿಸೋದೇ' ಅವಳ ಉದ್ದೇಶವಾಗಿತ್ತೇನೋ..

ಆ ಗುರುತು ಏನು ಗೊತ್ತಾ...

ಫರ್ಸ್ಟ್ ಟೈಮ್ ಅವಳನ್ನ ಹಾಸ್ಟೆಲ್ ಬಿಡಲು ಹೋದಾಗ ನಾನು ಅವಳಿಗೆ ಕೊಟ್ಟ ಗಿಫ್ಟ್!!  ಮನೆಯನ್ನು ಬಿಟ್ಟು ದೂರ ಹೊರಟವಳಿಗೆ ಅದೊಂತರಾ ಸಂಕಟ... ಮನೆಯಿಂದ ಶುರುವಾದ ಅಳು ಹಾಸ್ಟೆಲ್ ರೂಂ ತಲುಪುವವರೆಗೆ ಅವ್ಯಾಹತವಾಗಿ ಹರಿಯುತ್ತಲೇ ಇತ್ತು. ಏನು ಹೇಳಿದರೂ ಸಮಾಧಾನವಾಗದ ಹುಡುಗಿ,, ನಾನು ಕೊಟ್ಟ ಗಿಫ್ಟ್ ನೋಡಿ ಕೋಪಗೊಂಡು ಹೊಡೆಯಲು ಬಂದು ತನ್ನ ದುಃಖವನ್ನು ಮರೆತು ನಕ್ಕು ಬಿಟ್ಟಿದ್ದಳು.. ಇದನ್ನ ನೋಡಿ ಅವಳ ರೂಮೇಟ್ ಸಹ ನಕ್ಕು ಬಿಟ್ಟಿದ್ದಳು... ನೆನಪಿದೆಯಾ ಮಾನ್ವಿ... ನಾನು ಕೊಟ್ಟ ಗಿಫ್ಟ್..? " ಮಾನ್ವಿಯೆಡಗೆ ನೋಡಿದ.

ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕೋ? ಅಥವಾ ಹರ್ಷನಿಗೆ ಪರಿಯ ಮೇಲಿದ್ದ ಪ್ರೀತಿಯನ್ನು ಕಂಡೋ? ಮಾನ್ವಿಯ ಕಂಗಳು ತುಂಬಿ ಬಂದವು.. ಕಿರುನಗು ಸೂಸಿ ಹೌದೆಂಬಂತೆ ಗೋಣು ಹಾಕಿದಳು. ಹರ್ಷ ಮಾತು ಮುಂದುವರೆಸಿದ...

ನಾನವಳಿಗೆ ಕೊಟ್ಟಿದ್ದು..‌.. ಕರ್ಚೀಫ್ ಕಿಟ್!! ಹಿಂದೆಲೆ ಉಜ್ಜಿಕೊಳ್ಳುತ್ತ ನಕ್ಕ ಹರ್ಷ. ಜನರ ನಗುವು ಅಲೆಯಾಯಿತು. ಅಳುಮುಂಜಿ ಹುಡುಗಿಗೆ ಅದೇ ತಾನೇ ಮುಖ್ಯ ಅಂತ ‌ನಾನೇ ಹೇಳಿ ರೆಡಿ ಮಾಡಿಸಿದ್ದ  ಪಿಂಕ್ ಆ್ಯಂಡ್ ವೈಟ್ ಏಂಜಲ್ ಕರ್ಚೀಫ್....!! ವಿಚಿತ್ರ ಏನಪ್ಪಾ ಅಂದ್ರೆ ಅವಳು ಇಂದಿಗೂ ಅದೇ ತೆರನಾದ ಕರ್ಚೀಫ್ ಬಳಸುತ್ತಾಳೆ. ಅವತ್ತು ಮ್ಯಾರೇಜ್ ಹಾಲ್‌ನಲ್ಲಿ ಬಿಟ್ಟು ಹೋದ ಗುರುತು ಕೂಡ ಅದೇ...

ಅವಳಿಗೊಸ್ಕರನೇ ಒಂದು ಸರ್ಪ್ರೈಜ್.... ಎಂದು ನೋಟ ಮೇಲ್ಗಡೆ ಹೊರಳಿಸಿದ..    ನಕ್ಷತ್ರಗಳ ಸಮೂಹವೇ ಪ್ರೇಮ ನಿವೇದನೆಗೆ ಧರೆಗಿಳಿದಂತೆ ಒಂದೆಡೆ ರಾಕೆಟ್ ಬಾಣಗಳು ಸಿಡಿದು ಚಿತ್ತಾರ ಮೂಡಿಸಿದರೆ, ಮತ್ತೊಂದೆಡೆ ಸಾಲು ಸಾಲು ಆಕಾಶ ದೀಪಗಳು ಮೇಲೆ ತೇಲುತ್ತ ಪ್ರೀತಿಗೆ ಶುಭಕೋರಿದ್ದವು.. ಎಲ್ಲರ ಕಂಗಳಲಿ ಆ ಮಿನುಗು ಪ್ರಜ್ವಲಿಸುತ್ತಿತ್ತು..

"ಏಂಜಲ್... ನನ್ನ ಏಂಜಲ್ ಗೆ ಈ ಆಕಾಶ ದೀಪಗಳೆಂದರೆ ತುಂಬಾ ಇಷ್ಟ..  ಹೌದು ಕಣೇ ಏಂಜಲ್... ನನಗೆ ನೀನೂ... ನಿನ್ನ ಪ್ರೀತಿ... ಎಲ್ಲವೂ ನೆನಪಾಗಿದೆ. ಬೆರಳ ಮೊದಲ ಸ್ಪರ್ಶ, ಮುದ್ದು ಮುಖ, ಪೆದ್ದು ನೋಟ, ನಿನ್ನ ನಗು-ಅಳು ನನ್ನ ಹುಡುಗಾಟ ನಿನ್ನ ಮುನಿಸು ನನ್ನ ಮೇಲಿನ ನಿನ್ನ ಅದಮ್ಯ ಪ್ರೀತಿ ಎಲ್ಲವೂ...

ನೀನು ಮತ್ತೆ ನನಗೆ ಬೇಕು ಕಣೇ..  ನಾನಿಲ್ಲದೆ ಇಷ್ಟು ದಿನ ಅದೆಷ್ಟು ನೋವು ಹಿಂಸೆ ಅನುಭವಿಸಿದೆಯೋ ನಾನರಿಯೇ.... ಆದರೆ ಈ ಕ್ಷಣದಿಂದ ನಿನ್ನ ಬದುಕಿನ ಎಲ್ಲಾ ಕ್ಷಣಗಳನ್ನು ಹರ್ಷದಿಂದ ತುಂಬಿ ತುಳುಕುವಂತೆ ಮಾಡುವುದು ನನ್ನ ಹೊಣೆ!

ನನಗೊತ್ತು ನೀನು ಈಗಲೂ ಇಲ್ಲಿಗೆ ಬಂದಿದ್ದಿಯೆಂದು ‌... ನಿನಗೋಸ್ಕರವೇ ತಾನೇ ನಾನು ಈ ಮ್ಯುಸಿಕ್ ಕಾನ್ಸರ್ಟ್ ಅರೆಂಜ್ ಮಾಡಿಸಿದ್ದು..." ಜನರಲ್ಲಿ ಕುತೂಹಲ ಮೂಡಿತ್ತು. ಆ ಲಕ್ಕಿ ಗರ್ಲ್ ಯಾರೆಂದು?

ವೇದಿಕೆ ಹೊರತು ಮಿಕ್ಕೆಲ್ಲ ಕಡೆಗೂ ಕತ್ತಲಾವರಿಸಿತ್ತು. ಹರ್ಷ ಗೀಟಾರ್ ಬಿಚ್ಚಿ ಬದಿಗಿಟ್ಟು ಸ್ಟೇಜ್ನಿಂದ ಕೆಳಗಿಳಿದು ಜನರ ಮಧ್ಯೆ ನಡೆದಿದ್ದ. ಮೂವಿಂಗ್ ಲೈಟ್ಸ್ ಅವನನ್ನೇ ಹಿಂಬಾಲಿಸಿದವು. ಹಿಂದೆ ಹಿಂದೆ ಸಾಗುತ್ತಾ ನುಡಿದಿದ್ದ....

ಸಣ್ಣ ಪುಟ್ಟ ತಪ್ಪು ಮಾಡಿದಾಗ ನನ್ನ ಬೆರಳ ಹಿಡಿದು ತಡೆದವಳು.. ಎಡವಿ ಬಿದ್ದು ಪೆಟ್ಟು ನನಗಾದರೂ ದುಃಖಿಸಿ ಅವಳು ಅಳುವವಳು.. ಸರಿ ತಪ್ಪುಗಳ ಗ್ರಹಿಕೆ ಇಲ್ಲದ ಆ ಬಾಲ್ಯದಲ್ಲಿ ಪ್ರೀತಿಯ ಭಾವ ತುಂಬಿದವಳು.. ನನಗಾಗಿ ಹುಟ್ಟಿದವಳು.. ನನಗಾಗಿ ಮಿಡಿಯುವವಳು.. ಅಪ್ಪ ಅಮ್ಮನಿಗಿಂತ ಹೆಚ್ಚೇನಲ್ಲ, ಆದರೂ ಅವರಷ್ಟೇ ಪ್ರೀತಿ ತೋರಿದ್ದೆ ನಾನವಳಿಗೆ, ಅವಳು ನನ್ನ ಪುಟ್ಟ ಮಗುವಾದಳು.., ಕಷ್ಟದ ಸಮಯದಲ್ಲಿ ನನ್ನ ಕೈಹಿಡಿದವಳು.., ಬಾಳಪೂರ್ಣ ಜೊತೆಗೆ ಇರುವೆಯಲ್ಲ ಎಂದು ಭಾಷೆ ಪಡೆದವಳು.. ಸ್ಮೃತಿಯ ನೆರಳಾಗಿ ಉಳಿದವಳು.. ಒಲವ ಉಸಿರಲ್ಲಿ ಬೆರೆತವಳು... ಅವಳು... ನನ್ನ ಪಾಲಿನ ಮುಗಿಯದ ಕಡಲು.. ಅಲೆಯು.. ಮೋಡ.‌. ಮುಗಿಲು..ಮಳೆಯು.. ಇಳೆಯು..  ಹೇಗೆ ಮರೆಯಲು ಸಾಧ್ಯ ಇಂತಹ ಒಲವಿನ ಹುಡುಗಿಯನ್ನು ‌..... ಹುಡುಗಿ ನೀ ನನ್ನ ಒಲವು..

ಹೇಳುತ್ತ ಏದುಸಿರಿನೊಂದಿಗೆ..
ಅವನು ಅವಳ ಎದುರಿಗೆ ಬಂದು ನಿಂತಿದ್ದ. ಅವನನ್ನೇ ಹಿಂಬಾಲಿಸುತ್ತಿದ್ದ ಫ್ಲ್ಯಾಶ್‌‌‌ ಲೈಟ್ಸ್ ಅವರಿಬ್ಬರ ಮೇಲೆ ಕೇಂದ್ರೀಕೃತವಾಗಿದ್ದವು. ಅಕ್ಕಪಕ್ಕದ ಸೀಟುಗಳ ಮೇಲೆ ನಿಂತಿದ್ದ ಅಖಿಲಾ ನಿಖಿಲ್ ಪಿಳಿಪಿಳಿ ಕಣ್ಣಿಂದ ಅವನನ್ನೇ ಎವೆಯಿಕ್ಕದೆ ನೋಡುತ್ತಿದ್ದರು. ಮುಖಕ್ಕೆ ತಿಳಿ ಗುಲಾಬಿ ಬಣ್ಣದ ಸ್ಕಾರ್ಫ್ ಕಟ್ಟಿಕೊಂಡ ಪರಿಯ ಕಂಗಳು ಮಾತ್ರ ಅವನಲ್ಲಿ ತಲ್ಲೀನವಾಗಿದ್ದವು. ಹಣೆಯಲ್ಲಿ ಹೊಳೆಯುತ್ತಿದ್ದ ಪುಟ್ಟ ಬಿಂದಿ ಇನಿಯನ ಹಾಜರಾತಿಗೆ ಮತ್ತಷ್ಟು ಮಿನುಗಿತು. ಅವನು ಮೆಲ್ಲಗೆ ಅವಳ ಮುಖದ ಮೇಲಿನ ಸ್ಕಾರ್ಫ್ ತೆಗೆಯತೊಡಗಿದ್ದ. ಅವಳ ರೆಪ್ಪೆಗಳು ಪಟಪಟನೆ ಚಡಪಡಿಸಿದವು‌. 'ಇದೆಲ್ಲಾ ಕನಸೋ ನನಸೋ ಎಂಬ ಭ್ರಮೆಯೊಳಗೆ'

ಅವಳ ಸ್ನಿಗ್ಧ ಸುಂದರ ಮೊಗದ ಕಾಂತಿಗೆ ಆ ಇರುಳ ಚಂದ್ರಿಕೆಯು ನಾಚಿ ಮೋಡದಲ್ಲಿ ಅವಿತು ಹೋದಳು ಆ ಕ್ಷಣ.. ಹರ್ಷನ ಮೇಲಿನ ಅವಳ ಪ್ರೇಮಪಲ್ಲವಿಗೆ  ಅವನ ಒಲವ ಬಹುಮಾನ ಸಂಧ ಸಂಭ್ರಮದ ಘಳಿಗೆಯದು.. ಆಕೆಯ ಕಣ್ಣು ಮಂಜಾಗಿ ಹನಿಯಾಗಿ ದ್ರವಿಸಿ ಕೆನ್ನೆಯ ಮೇಲೆ ಜಾರಲು, ತನ್ನ ಬೊಗಸೆ ಕೈಗಳಲ್ಲಿ ಅವಳ ಮೊಗವ ಹಿಡಿದು ಹೆಬ್ಬೆರಳಿನಿಂದ ಕಣ್ಣೀರ ತೊಡೆದ ಹರ್ಷ. ಕಂಗಳು ಮೌನವಾಗಿ ಮಾತಿಗಿಳಿದಿದ್ದವು.

"ಪ್ಚ್..... ಇಂಥ ಹ್ಯಾಪಿ ಮೂಮೆಂಟ್ನಲ್ಲೂ ಅಳೋದಾ? ಕರ್ಚೀಫ್ ಕೊಡ್ಲಾ..?"  ಮುದ್ದಾಗಿ ಅವಳ ಮೂಗು ಹಿಂಡಿ ನಕ್ಕ. ಅವಳ ತಡೆಹಿಡಿದ ವೇದನೆಗೆ ಪ್ರತಿಯಾಗಿ ದೈವಸ್ವರೂಪಿ ವರವೊಂದು ಎದುರಿತ್ತು. ಅವಳ ಸಂತೋಷಕ್ಕೆ ಇನ್ನು ಎಣೆಯಿಲ್ಲ. ಅಶ್ರುವಿನೊಂದಿಗೆ ನಗುವೂ ಬೆರೆತು 'ಹರ್ಷ....' ಎಂದಳು ಬಿಕ್ಕುತ್ತ. ಅವನನ್ನು ಗಟ್ಟಿಯಾಗಿ ತಬ್ಬಿದಳು. ಉಸಿರು ಕೊನೆಯಾದರೂ ಇನ್ನು ನಿನ್ನ ಬಾಹುಬಂಧನದಲ್ಲೇ ಎಂಬಂತೆ...

ಅಷ್ಟರಲ್ಲಿ ಕೇಳಿ ಬಂದವು ಜನರ ಚಪ್ಪಾಳೆಗಳು ಶಿಳ್ಳೆಗಳು ಕೇಕೇಯ ಹರ್ಷೋದ್ಘಾರ... ಒಂದು ಸುಂದರ ನವಿರಾದ ಪ್ರೇಮಕಥೆಗೆ ಪ್ರತ್ಯಕ್ಷ ಸಾಕ್ಷಿಯಾದ ಸಂಭ್ರಮವದು..

ಅವನ ಕೈ ಕೂಡ ಬಿಗಿಯಾದವು ಅವಳ ಕೊರಳ ಸುತ್ತ... ಬೆರಳು ಅವಳ ಕೂದಲು ನೇವರಿಸಿ ಸಾಂತ್ವನ ಹೇಳುತ್ತಿದ್ದವು. ಕ್ಷಣಮಾತ್ರದಲ್ಲಿ ಅವಳಿಂದ ದೂರ ಸರಿದ ಹರ್ಷ, "ಕಿಲ್ಲರ್ಸ್... ಏಂಜಲ್ ಯಾರು ಹೇಗಿರ್ತಾಳೆ? ಅಂತ ಕೇಳಿದ್ರಲ್ವಾ... ಇವಳೇ..ಇವಳೇ ನನ್ನ ಮುದ್ದು ಏಂಜಲ್! ನನ್ನ ಪರಿ..." ತನ್ನೆರಡು ತೋಳು ಚಾಚಿ ಮಂಡಿಯೂರಿ ಕುಳಿತು ಹೇಳಿದ. ಅದಾಗಲೇ ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟುತ್ತ ನಿಂತಲ್ಲೇ ಪುಟಿಯುತ್ತಿದ್ದರು.

"ಕ್ಷಮಿಸಿ ಬಿಡೇ ಏಂಜಲ್.... ನಿನ್ನನ್ನ ಇಷ್ಟು ದಿನ ತುಂಬಾ ಗೋಳಾಡಿಸಿಬಿಟ್ಟೆನಲ್ವಾ... ಅದಕ್ಕೆ ಶಿಕ್ಷೆಯಾಗಿ ಇನ್ನು ಇಡೀ ಜೀವನ,, ಅಷ್ಟೇ ಯಾಕೆ ಮುಂದಿನ ಪ್ರತಿಜನ್ಮ ನಾನು ನಿನ್ನವನಾಗಿ ನಿನ್ನೊಲವ ಬಂಧಿಯಾಗಿ ಇರ್ತಿನಿ. ಆಗಬಹುದಾ.." ಅವಳ ಸಂಭ್ರಮ ಹೇಳತೀರದಾಗಿತ್ತು..

ಹರ್ಷನ ಗತದ ನೆನಪು.. ಬಹಿರಂಗ ಪ್ರೇಮ ನಿವೇದನೆ.. ಪರಿ ಕೂಡ ಅಲ್ಲಿಗೆ ಬಂದ ವಿಷಯ.. ಮಾನ್ವಿ ಮುಂದೆ ಸಂಭವಿಸುವ ಅನಾಹುತಗಳನ್ನು ತಡೆಯಲು ಅವರತ್ತ ಧಾವಿಸಿದ್ದಳು.  ಅದರ ಬಗ್ಗೆ ತಿಳಿಯದೆ ಅವಳ ಕೈಗಳನ್ನು ಬಲವಾಗಿ ಹಿಡಿದಿದ್ದ ಪ್ರಸನ್ನ ಮಾತ್ರ ತುಂಬಾ ಸಂತಸದಲ್ಲಿದ್ದ.


ಮುಂದುವರೆಯುವುದು..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ...