"ಬಾಸ್, ಓ ಫೋಟೋವಾಲಿ ಲಡ್ಕಿ ಟೀಕ್ ಮೇರೆ ಸಾಮ್ನೆ ಖಡಿ ಹೇ! ಪಾಂಚ್ ಮಿನಿಟ್ ಮೆ ಉಸ್ಕಾ ಚಾಪ್ಟರ್ ಖತ್ಮ್ ಕರ್ದೂಂಗಾ ಔರ್ ಉಸ್ಕಾ ಮೊಬೈಲ್ ಆಪ್ಕೆ ಪಾಸ್ ಹೋಗಾ..!"
ಫೋನ್‌ಲ್ಲಿ ಹೀಗೆ ಗತ್ತಿನಿಂದ ಮಾತಾಡುತ್ತಿದ್ದ, ಮುಂಬೈನ ಕುಖ್ಯಾತ ಶಾರ್ಪ್ ಶೂಟರ್, ರೆಸ್ಕೋರ್ಟ್ ಎದುರು ನಿಂತು ಕಾನ್ಸರ್ಟ್ ಗೆ ಬರುವ ಪ್ರತಿಯೊಬ್ಬರನ್ನೂ ಗಮನಿಸುತ್ತ ಮಕ್ಕಳೊಂದಿಗೆ ಬಂದ ಪರಿ ಸ್ಕಾರ್ಫ್ ಕಟ್ಟಿಕೊಂಡು ಒಳಗೆ ಬರುವುದನ್ನು ನೋಡಿ, ತುಟಿ ಕೊಂಕಿಸಿ ನಕ್ಕು ಅವಳನ್ನು ಹಿಂಬಾಲಿಸಿದ್ದ.
ಒಂದು ವೇಳೆ ಹರ್ಷ ಪರಿಯ ಬಳಿ ಬರದಿದ್ದರೆ ಈಗಾಗಲೇ ಸದ್ದಿಲ್ಲದೆ ಪರಿಯ ಜೀವ ಹೋಗಿ, ಅವಳ ಮೊಬೈಲ್ ಅವನ ಕೈಸೇರಿರುತ್ತಿತ್ತೇನೋ ಆದರೆ ಯೋಜನೆ ತಲೆ ಕೆಳಗಾಗಿತ್ರು. ಸನ್ನಿವೇಶ ಪಲ್ಲಟಗೊಂಡಿತ್ತು.
ಅನಿರೀಕ್ಷಿತವಾಗಿ ಹರ್ಷ ಪರಿಯ ಸನಿಹ ಬಂದು ಅವಳನ್ನು ಆಲಂಗಿಸಿದ್ದ. ಪ್ರೀತಿ ತೋಡಿಕೊಂಟಿದ್ದ. ಫ್ಲಾಶ್ ಲೈಟ್ಸ್ ಅವರ ಮೇಲಿದ್ದವು. ಜನರ ಗಮನ ಕೂಡ.. ಹೀಗಾಗಿ ಶೂಸ್ನಲ್ಲಿ ಬಚ್ಚಿಟ್ಟಿದ್ದ ಗನ್ ಮತ್ತೆ ಸ್ವಸ್ಥಾನ ಸೇರಿತ್ತು. ಆತ ಸಮಯಕ್ಕಾಗಿ ಹೊಂಚು ಹಾಕಿ ಕಾಯತೊಡಗಿದ್ದ.
ಆಗಲೇ ಮಾನ್ವಿ ಯಾವುದೋ ಅನಾಹುತದ ಮುನ್ಸೂಚನೆ ಸಿಕ್ಕು ಅವರಿಬ್ಬರ ಬಳಿ ಓಡಿ ಬರಲು ಹವಣಿಸಿದ್ದಳು. ಓಡಲು ಪ್ರಯತ್ನಿಸುತ್ತಿದ್ದವಳನ್ನು ಪ್ರಸನ್ನ ತಡೆ ಹಿಡಿದಿದ್ದ.
ಹರ್ಷ ಪರಿಯೆದುರು ಮಂಡಿಯೂರಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡ ಆ ಘಳಿಗೆ ಎಲ್ಲರ ಚಪ್ಪಾಳೆ ಶಿಳ್ಳೆ ಕೂಗು ಕೇಕೆಗಳ ಹರ್ಷೊದ್ಘಾರ ಕೇಳಿ ಬಂದಿತ್ತು.
ಪ್ರಸನ್ನ ಸಂಜೀವಿನಿ ಆಲಾಪ್ ಪ್ರತಿಯೊಬ್ಬರ ಮುಖದಲ್ಲಿ ಸಂಭ್ರಮದ ಹೊನಲಿದ್ದರೆ, ಮಾನ್ವಿ ಮಾತ್ರ ಇದಕ್ಕೆ ಹೊರತಾಗಿ ಆತಂಕದಿಂದ ತಲ್ಲಣಿಸುತ್ತ ಪ್ರಸನ್ನನಿಂದ ಕೈ ಬಿಡಿಸಿಕೊಳ್ಳಲು ಕೊಸರಾಡಿದಳು.
"ನೀನೇ ತಾನೇ ಹೇಳಿದ್ದು ಹರ್ಷನಿಗೆ ತಾನಾಗಿಯೇ ಪರಿ ನೆನಪಾದ್ರೆ ನೀನೇ ಮುಂದೆ ನಿಂತು ಅವರಿಬ್ಬರ ಮದುವೆ ಮಾಡ್ತಿನಿ ಅಂತ. ಈಗ್ಯಾಕೆ ಅವರಿಬ್ಬರನ್ನು ದೂರ ಮಾಡೋ ಆತುರ..." ಪ್ರಸನ್ನ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ.
"ಯು.... ಡ್ಯಾಮಿಟ್! ಕೈ ಬಿಡು. ಇಲ್ಲಾಂದ್ರೆ ಆಗೋ ಅನಾಹುತಕ್ಕೆ ನೀನೇ ಹೊಣೆ ಆಗ್ತಿಯಾ?" ಅವಳ ಕಣ್ಣಲ್ಲಿ ಸಿಟ್ಟು ಆತಂಕದ ಜೊತೆಗೆ ಕಂಬನಿಯನ್ನು ಕಂಡ
" ಏನ್ ಅನಾಹುತ?" ಕೇಳುತ್ತಾ ಕೈ ಸಡಿಲಿಸಿದ. ಒಂದು ಕ್ಷಣವೂ ವ್ಯರ್ಥ ಮಾಡದೇ ಮಾನ್ವಿ ಅವರ ಬಳಿ ಓಡುತ್ತಿದ್ದರೆ ಪ್ರಸನ್ನ ಅವಳನ್ನು ಹಿಂಬಾಲಿಸಿದ.
ಮಂಡಿಯೂರಿ ಕುಳಿತ ಹರ್ಷನನ್ನ ಎಬ್ಬಿಸಿ ಪಕ್ಕಕ್ಕೆ ಜರುಗಿಸಿ ಪರಿಯನ್ನು ಅಲ್ಲಿಂದ ದರದರನೆ ಹೊರಗೆ ಎಳೆದುಕೊಂಡು ಹೊರಟಳು. ಪರಿ ಹೊರದಾರಿಯ ಮೆಟ್ಟಿಲು ಬಳಿ ಮಾನ್ವಿಯನ್ನು ನಿಲ್ಲಿಸಿಕೊಂಡು ಸಮಾಧಾನದಿಂದ ಏನೋ ಹೇಳುತ್ತಲಿದ್ದಳು...
ಇದೇ ಸರಿಯಾದ ಸಮಯವೆಂದು ಭಾವಿಸಿದ ಶೂಟರ್, ಶೂ ನಿಂದ ಬಚ್ಚಿಟ್ಟ ಗನ್ ಮೆಲ್ಲಗೆ ಕೈಗೆತ್ತಿಕೊಂಡು ಟ್ರಿಗರ್ ಮೇಲೆ ಬೆರಳಿಟ್ಟ. ಗನ್ ಪಾಯಿಂಟ್ ಪರಿಯ ಮೇಲಿತ್ತು.
"ನೀನು ಇಲ್ಲಿಗೆ ಬಂದಿದ್ದೆ ದೊಡ್ಡ ತಪ್ಪು!! ಹೊರಟು ಹೋಗೇ... ಜಸ್ಟ್ ಗೋ ಅವೇ.." ಮಾನ್ವಿ ಪರಿಯನ್ನು ದೂರ ನೂಕಿದ್ದಳು. ಪರಿ ಏನೋ ಹೇಳಲು ಮುಂದಾಗುವಾಗ, ಅವಳ ಎದೆ ಸೀಳಬೇಕಾಗಿದ್ದ ಸೈಲೆಂಟ್ ಗನ್ ನಿಂದ ಪಾಸಾದ ಬುಲೆಟ್ ಅವಳಿಗೆ ಗೋಡೆಯಂತೆ ಎದುರು ನಿಂತ ಮಾನ್ವಿಯ ಹಿಂಬದಿಯ ಎಡ ಭುಜಕ್ಕೆ ಸಿಡಿದಿತ್ತು. ಒಂದೇ ಬುಲೆಟ್.. ಒಂದೇ ಸೆಕೆಂಡ್ .. ಗುರಿ ಮಾತ್ರ ತಪ್ಪಿ ಹೋಗಿತ್ತು.
"ಶಿಟ್!! " ಗೊಣಗಿದ್ದ ಸ್ಟೇಜ್ ಪಕ್ಕದಲ್ಲಿದ್ದ ಡೇವಿಡ್, ವಾಕಿ-ಟಾಕಿ ಮೂಲಕ ಸೆಕ್ಯೂರಿಟಿ ಗೆ ಆದೇಶ ನೀಡುತ್ತ, ಅಸಮಾಧಾನದಿಂದ ಕಾಲು ನೆಲಕ್ಕಪ್ಪಳಿಸಿದ.
ಮಾನ್ವಿಯ ರಕ್ತ ಜಿಲ್ಲನೇ ಚಿಮ್ಮುವುದಕ್ಕೂ ಅವಳ "ಅಮ್ಮಾ..' ಎಂಬ ಆಕ್ರಂದನ ಅದರೊಂದಿಗೆ ಬೆರೆತು ಹೋಗುವುದಕ್ಕೂ ಸರಿದೂಗಿತ್ತು. ಎದುರಿದ್ದ ಪರಿಗೆ ಏನೊಂದು ತಿಳಿಯದೆ ಕುಸಿಯುತ್ತಿದ್ದ ಅವಳನ್ನು ಬರಸೆಳೆದು ತೋಳಲ್ಲಿ ಒರಗಿಸಿಕೊಂಡಳು. ಹಿಂದೆ ನಿಂತ ಪ್ರಸನ್ನ ಹರ್ಷ ಒಂದೇ ಉಸಿರಲ್ಲಿ ಮಾನ್ವಿ ಎಂದು ಕಿರುಚಿ ಓಡಿ ಬಂದರು. ಹರ್ಷ ಲೈಟ್ಸ್ ಆನ್ ಮಾಡುವಂತೆ ಮೈಕ್ ಮೂಲಕ ಸೂಚಿಸಿದ. ಎಲ್ಲಾ ಲೈಟ್ಸ್ ಬೆಳಗುತ್ತಿದ್ದಂತೆ ಸುತ್ತಲೂ ಕಣ್ಣಾಡಿಸಿದ ಹರ್ಷ, ಮೆಲ್ಲಗೆ ದೂರ ಸಾಗುತ್ತಿದ್ದ, ಮಂಕಿಕ್ಯಾಪ್ ನಿಂದ ಮುಖ ಮುಚ್ಚಿಕೊಂಡ ಒಬ್ಬ ವ್ಯಕ್ತಿಮೇಲೆ ಅನುಮಾನಗೊಂಡು ಆತನನ್ನು ಬೆನ್ನಟ್ಟಿದ್ದ. ಆತ ಜನರ ಮಧ್ಯೆ ಸೀಟ್ ಜಂಪ್ ಮಾಡುತ್ತ ಓಡತೊಗಿದ್ದ. ಹರ್ಷನ ಅನುಮಾನ ಬಲವಾಯಿತು. ಅಷ್ಟರಲ್ಲಿ ಜನರ ಮಧ್ಯೆ ಕೋಲಾಹಲ ಸೃಷ್ಟಿಯಾಗಿತ್ತು. ಆದರೆ ಯಾರಿಗೂ ಏನು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿದಿರಲಿಲ್ಲ.
ಪ್ರಸನ್ನ ಮಾನ್ವಿಯ ಕೈ ಹಿಡಿದು ನಾಡಿಮಿಡಿತ ಪರೀಕ್ಷಿಸುತ್ತ ಅವಳನ್ನ ಪರಿಯಿಂದ ತನ್ನಾಸರೆಯಲ್ಲಿ ತೆಗೆದುಕೊಂಡ. ಪರಿಗೆ ತನ್ನ ಕೈ ಮೈ ತುಂಬಾ ಮಾನ್ವಿಯ ನೆತ್ತರು ಕಂಡಾಗಲೇ ಪರಿಸ್ಥಿತಿ ಅರ್ಥವಾದದ್ದು.. ಕಂಪಿಸುವ ದನಿಯಲ್ಲಿ ಅವಳ ಕೆನ್ನೆ ತಟ್ಟಿ ಎಚ್ಚರಗೊಳಿಸಲು ಪ್ರಯತ್ನಿಸಿದಳು.
ತ್ರಾಣವಿಲ್ಲದ ಮಾನ್ವಿ ಮೈಯೆಲ್ಲ ಬೆವೆತು ಹೋಗಿತ್ತು. ಉಸಿರು ಬಿಗಿಯಾಗಿ ಹಿಡಿದು "ಐಮ್ ಸಾ...ರಿ ಪರಿ" ಎಂದಷ್ಟೇ ಉಸುರಿದಳು.
ಪರಿಗೆ ಮತಿಭ್ರಮಿಸಿದಂತೆ ರೋಧಿಸುತ್ತಿದ್ದರೆ ಅಖಿಲಾ ಅವಳ ಕೊರಳಿಗೆ ಕೈ ಸುತ್ತಿ ತಾನು ಅಳತೊಡಗಿದಳು. ಧೃತಿಗೆಡದ ಪ್ರಸನ್ನ ಮಾನ್ವಿಯನ್ನು ಎತ್ತಿಕೊಂಡು ಹರ್ಷನಿಗೆ ಕಾರು ತೆಗೆಯಲು ಕೂಗಿದ. ಹರ್ಷ ಸೆಕ್ಯೂರಿಟಿಯವರಿಗೆ ಶೂಟರ್ ನನ್ನು ಹಿಡಿಯುವಂತೆ ಆಜ್ಞಾಪಿಸಿ ಮರಳಿ ಬಂದ.
ಅಕ್ಕಪಕ್ಕದ ಕೆಲವರು ಈ ಆಘಾತ ಕಂಡು ಗಾಬರಿಗೊಂಡು ಗುಂಪು ನೆರೆದಿದ್ದರು. ಅವರನ್ನು ಸರಿಸುತ್ತಲೇ ಮಾನ್ವಿಯನ್ನು ಕಾರಿನ ಬಳಿ ಕರೆತರಲಾಯಿತು. ಪರಿ ಮತ್ತು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಆಲಾಪ್ ಗೆ ವಹಿಸಿ, ಹರ್ಷ ಕಾರು ಸ್ಟಾರ್ಟ್ ಮಾಡಿದ್ದ. ಹಿಂದಿನ ಸೀಟಿನಲ್ಲಿ ಮಾನ್ವಿ ಪ್ರಸನ್ನನ ಭುಜಕ್ಕೊರಗಿದ್ದಳು.
"ಪ್ರತಿ ಸಲ ಸಾಯಿಸ್ಬಿಡ್ತಿನಿ.. ಅಂತಿದ್ದೆಯಲ್ಲ... ನೋಡೀಗ ನಾನೇ ಹೊರಟೆ" ಅವಳ ನಿಸ್ತೇಜ ಕಂಗಳು ಪ್ರಸನ್ನನನ್ನು ನೋಡಿ ಗೇಲಿ ಮಾಡಿದ್ದವು. ಮಾನ್ವಿಯ ನೆತ್ತರಿನಿಂದ ಕೆಂಪಾದ ಕೈಗಳು ಬಟ್ಟೆ ನೋಡಿಕೊಂಡವನ ಕಣ್ಣುಗಳು ಮಂಜಾದವು. ಅರೆಮಿಲಿತ ಕಂಗಳು, ನಿಷ್ಕಲ್ಮಶವಾದ ಅವಳ ಮುಖಾರವಿಂದ ನೋಡಿ ಅವನ ಮನಸ್ಸು ಆರ್ದ್ರವಾಗಿತ್ತು. ಕ್ಷಣಕ್ಕೊಮ್ಮೆ ದೀರ್ಘವಾಗಿ ಉಸಿರು ಒಳಗೆಳೆದು ಆಕೆ ಕಂಪಿಸಿದಾಗ ಪ್ರಸನ್ನನ ಎದೆಬಡಿತ ನಿಂತು ಹೋದಂತಾಗುತ್ತಿತ್ತು . ಅದೆಷ್ಟೋ ಬಾರಿ ಕೋಪದಲ್ಲಿ ಅವಳ ಮೇಲೆ ರೇಗಿದ್ದ, ಹೀಯಾಳಿಸಿ ಬೈದಿದ್ದ, ಅದೇ ಮಾನ್ವಿ ಇಂದು ಸಾವಿನ ಜೊತೆಗೆ ಗುದ್ದಾಡುತಿದ್ದರೆ ಅವನು ತಲ್ಲಣಿಸಿ ಹೋಗಿದ್ದ. ಅವನ ಕಂಗಳಲಿ ಮೊದಲ ಬಾರಿಗೆ ಅವಳ ಪ್ರತಿ ಮೃದುವಾದ ಭಾವ ಮೂಡಿತ್ತು. ಏನಾದರಾಗಲಿ ನಿನ್ನನ್ನ ಬದುಕಿಸಿಕೊಳ್ಳುವೆ ಎಂಬ ದಿಟ್ಟ ಹಠ ಕೂಡ ಜೊತೆಯಾಗಿತ್ತು.
ಮಾನ್ವಿಯನ್ನು ಸಮೀಪದ ಒಂದು ಸಾಧಾರಣ ಆಸ್ಪತ್ರೆಗೆ ಸೇರಿಸಲಾಯಿತು. ಆಲಾಪ್ ಕಡೆಯಿಂದ ಮತ್ತು ಸೆಕ್ಯೂರಿಟಿ ಕಡೆಯಿಂದ ರಘುನಂದನ್ ಗೆ ಎರಡು ಬಾರಿ ವಿಷಯ ಮುಟ್ಟಿತು.
ರಘುನಂದನ್ ರೈ ಹೆಸರನ್ನು ಬಳಸಿ ಯಾವುದೇ ಫಾರ್ಮಾಲಿಟಿ ಇಲ್ಲದೆ ಮಾನ್ವಿಯ ಚಿಕಿತ್ಸೆ ಆರಂಭವಾಗಿತ್ತು. ರಾತ್ರಿಯ ಆ ವೇಳೆಯಲ್ಲಿ ಯಾವ ಸ್ಪೆಷಲಿಸ್ಟ್ ಇಲ್ಲದ ಕಾರಣ ತನ್ನ ಪ್ರೊಫೆಷನಲ್ ಐಡಿ ತೋರಿಸಿ ಒಟಿ ಒಳಗೆ ಪ್ರವೇಶ ಪಡೆದಿದ್ದ ಪ್ರಸನ್ನ, ಆಪರೇಶನ್ ಮಾಡಲು ಸ್ವತಃ ತಾನೇ ಮುಂದಾಗಿದ್ದ. ಎಂದಿಗಿಂತ ಹೆಚ್ಚಿನ ಮುತುವರ್ಜಿಯಿಂದ, ಕಾಳಜಿಯಿಂದ.. ಆಸ್ಥೆಯಿಂದ.. ಪ್ರೀತಿಯಿಂದ..!
ಕೆಲವೇ ಗಂಟೆಗಳಲ್ಲಿ ರಘುನಂದನ್ ಹಾಗೂ ಅವರ ಪತ್ನಿ ಮಾನಸಾ ಮಗಳಿಗಾಗಿ ಹಂಬಲಿಸಿ ಧಾವಂತದಿಂದ ಬಂದಿದ್ದರು. ಒಳಗಡೆ ಇನ್ನೂ ಆಪರೇಶನ್ ನಡೆಯುತ್ತಲಿತ್ತು. ರಘುನಂದನ್ ಯಾವುದಾದರೂ ದೊಡ್ಡ ಆಸ್ಪತ್ರೆಗೆ ಸೇರಿಸಬೇಕಿತ್ತು ಎಂದು ಘರ್ಜಿಸಿ ಆಕ್ಷೇಪಿಸಿದರೆ, ಕಣ್ಣಂಚು ಒತ್ತಿಕೊಳ್ಳುತ್ತಿದ್ದ ಅವರ ಪತ್ನಿ ಇದೆಲ್ಲ ಹೇಗಾಯಿತೆಂದು ವಿಚಾರಿಸಿದ್ದರು.
ಹರ್ಷ ಅವರನ್ನು ಸಮಾಧಾನ ಮಾಡುತ್ತಿರುವಾಗಲೇ ಓಟಿಯ ಕೆಂಪು ದೀಪ ನಂದಿ, ಆಪರೇಶನ್ ಮುಗಿದ ಸೂಚನೆ ನೀಡಿತ್ತು. ಕಳವಳಗೊಂಡ ಎಲ್ಲರ ಚಿತ್ತ ಮಾನ್ವಿಯ ಕಡೆ ಸರಿಯಿತು.
ಓಟಿಯಿಂದ ಆಚೆ ಬಂದ ಪ್ರಸನ್ನನ ಮುಖವನ್ನೇ ಗಮನಿಸಿದ್ದರು ಎಲ್ಲರೂ.. ಕೆಲ ನಿಮಿಷ ರಘುನಂದನ್ ಮುಖ ದಿಟ್ಟಿಸಿದ ಪ್ರಸನ್ನ.. "ಬುಲೆಟ್ ಆಚೆ ತೆಗೆದು ಆಪರೇಶನ್ ಏನೋ ಮಾಡಲಾಗಿದೆ. ಆದರೆ ಇನ್ನೂ ಹತ್ತು ಗಂಟೆ ಅಬ್ಸರ್ವೇಶನ್‌ಲ್ಲಿ ಇರಬೇಕಾಗುತ್ತೆ. ಅಲ್ಲಿವರೆಗೂ ಏನೂ.." ಪ್ರಸನ್ನನ ಮಾತಿಗೂ ಮೊದಲೇ ರಘುನಂದನ್ ಅವನ ಕುತ್ತಿಗೆಗೆ ಕೈ ಹಾಕಿ ಗೋಡೆಯತ್ತ ನೂಕಿದರು.
"ನನ್ನ ಮಗಳ ಈ ಪರಿಸ್ಥಿತಿಗೆ ನೀನೇ ಕಾರಣ... ನಿನ್ನನ್ನ ಜೀವಂತವಾಗಿ ಉಳಿಸಲ್ಲ ನಾನು" ಕಿರುಚಿ ಕತ್ತು ಅದುಮಿದರು. ಗಾಬರಿಗೊಂಡ ಹರ್ಷ ಅವರ ಕೈಯನ್ನು ಬಿಡಿಸಿ ಅವರನ್ನು ಹಿಂದಕ್ಕೆಳೆದುಕೊಂಡ.
"ಕಾಮ್ ಡೌನ್..ಅಂಕಲ್... ಇದರಲ್ಲಿ ಇವನ ತಪ್ಪೇನೂ ಇಲ್ಲ. ಅಲ್ಲಿ ಆ್ಯಕ್ಚುಲೀ ಏನು ನಡೀತು ಅಂತಾದ್ರೂ ನಿಮಗೊತ್ತಾ? " ಗದರಿದ
"ಎಲ್ಲಾ ಗೊತ್ತಾಯ್ತು.. ಸೆಕ್ಯೂರಿಟಿ ಎಲ್ಲಾ ವಿಷಯನೂ ಹೇಳಿದ್ರು! ಕಾನ್ಸರ್ಟ್ ನಲ್ಲಿ ನೀನು ನನ್ನ ಮಗಳಿಗೆ ಪ್ರಪೋಸ್ ಮಾಡಿದ್ದು, ಆಗ ಯಾರೋ ನಿನಗೆ ಶೂಟ್ ಮಾಡೋಕೆ ಪ್ರಯತ್ನ ಪಟ್ಟಿದ್ದು, ನನ್ನ ಮಗಳು ನಿನಗೆ ಅಡ್ಡ ಬಂದು ನಿನ್ನನ್ನ ಕಾಪಾಡಿದ್ದು ಎಲ್ಲಾ ಗೊತ್ತಾಯ್ತು.... ಆ ಶೂಟರನ್ನು ಕಳಿಸಿದ್ದು ಇವನೇ... ಅದು ನಿನಗೊತ್ತಾ??" ರಘುನಂದನ್ ದೂರುತ್ತಿದ್ದರೆ ಹರ್ಷ ಪ್ರಸನ್ನ ಹುಬ್ಬು ಗಂಟಿಕ್ಕಿ ಮುಖ ನೋಡಿಕೊಂಡು ಸೆಕ್ಯೂರಿಟಿಯನ್ನೊಮ್ಮೆ ದಿಟ್ಟಿಸಿದರು.
" ಆ ಶೂಟರ್ ಕೂಡ ಸಿಕ್ಕು ಬಿದ್ದು ಎಲ್ಲಾ ನಿಜ ಬಾಯ್ಬಿಟ್ಟನಂತೆ.. ನಿನ್ನನ್ನ ಸಾಯ್ಸೋಕೆ ಸುಪಾರಿ ಕೊಟ್ಟಿದ್ದೆ ಈ ಪ್ರಸನ್ನ..!! ಇವನನ್ನು ಸುಮ್ಮನೆ ಬಿಡಬಾರದು.." ಆ ಕೂಡಲೇ ಪೋಲಿಸರಿಗೆ ಸಹ ಕರೆ ಮಾಡಿ ಪ್ರಸನ್ನನನ್ನು ಬಂಧಿಸಲು ಆದೇಶಿಸಿದರು. ಬೆಚ್ಚಿ ಬಿದ್ದಿದ್ದರು ಹರ್ಷ-ಪ್ರಸನ್ನ.
ಕೆಲವು ನಿಮಿಷ ಅವರೊಡನೆ ಮಾತನಾಡಿದ ಹರ್ಷ, 'ಮೊದಲು ಮಾನ್ವಿಗೆ ಪ್ರಜ್ಞೆ ಬರಲಿ ಆಮೇಲೆ ಅವಳ ಅಭಿಪ್ರಾಯ ಕೇಳಿ ನಿರ್ಧಾರಕ್ಕೆ ಬನ್ನಿ' ಎಂದು ಸಾವಧಾನಿಸಿ ಅಲ್ಲಿಗೆ ವಿಷಯ ಇತ್ಯರ್ಥ ಮಾಡಿದ.
" ಬೆಳಿಗ್ಗೆ ನಾನು ಕಾನ್ಸರ್ಟ್ ಮ್ಯಾನೇಜರ್ ಗೆ ಕಾಲ್ ಮಾಡಿ, ಈ ಶೋ ರೆಕಾರ್ಡ್ ಆಗಕೂಡದು ಮತ್ತು ಯಾವುದೇ ಮಾಧ್ಯಮದಲ್ಲಿ ಇದು ವೈರಲ್ ಆಗಬಾರದು, ಎಲ್ಲರನ್ನೂ ಚೆಕ್ ಮಾಡಿ ಒಳಗೆ ಬಿಡಬೇಕು, ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಇರಬೇಕು ಅಂತ ಏನೆಲ್ಲಾ ಮುಂಜಾಗ್ರತೆ ವಹಿಸಿದ್ದೆ ಆದರೆ ಶತ್ರು ಪಕ್ಕದಲ್ಲೇ ಇರೋವಾಗ., " ರಘುನಂದನ್ ಹಣೆಗೆ ಕೈ ಹೊತ್ತು ಹಿಂದಕ್ಕೊರಗಿದರು. ಮಗಳ ಮೇಲಿನ ಅವರ ಮಮಕಾರ ಹನಿಗಳ ರೂಪ ತಾಳಿತು. ಕಂಬನಿ ಮಿಡಿಯುತ್ತಿದ್ದ ಅವರ ಪತ್ನಿ, ಸನಿಹ ಬಂದು ಅವರ ಎದೆ ಭಾಗ ಸವರುತ್ತ "ರಘು, ಡೋಂಟ್ ಬಿ ಪ್ಯಾನಿಕ್! ಕೂಲ್ ಡೌನ್!" ಸಮಾಧಾನಗೈದರು.
ಅವರಿಬ್ಬರ ಅಳು, ದುಃಖ, ಸಿಲುಕಿಕೊಂಡ ಪರಿಸ್ಥಿತಿಗೆ ಹರ್ಷ ಪ್ರಸನ್ನನ ಬಾಯಿ ಕಟ್ಟಿ ಹಾಕಿದಂತಾಗಿತ್ತು. ಮಗಳ ನೋವಿಗೆ ಏನೇನೋ ಮಾತಾಡುತ್ತಿರಬಹುದು ಎಂದು ತಿಳಿದರಾದರೂ, ಅವರ ಸೆಕ್ಯುರಿಟಿಯವರೇ ಯಾಕೆ ಇಲ್ಲಸಲ್ಲದ ಸುಳ್ಳು ಹೇಳಿದರು ಎಂಬುದು ಮತ್ತು ಆ ಶೂಟರ್ ಪ್ರಸನ್ನನ ಹೆಸರಿನ ಹೇಳಿಕೆ ಕೊಟ್ಟಿದ್ದು ಅವರನ್ನು ದಿಗ್ಭ್ರಾಂತಗೊಳಿಸಿತ್ತು. ಸಂಶಯವೊಂದು ಮೊಳಕೆಯೊಡೆದಿತ್ತು.
ಸಂಜೀವಿನಿಯನ್ನು ಮಕ್ಕಳೊಂದಿಗೆ ಮನೆಯಲ್ಲಿ ಬಿಟ್ಟು ಆಗತಾನೇ ಆಸ್ಪತ್ರೆಗೆ ಬಂದ ಪರಿ ಮತ್ತು ಆಲಾಪ್ ಸಹ ರಘುನಂದನ್ ಮಾತು ಕೇಳಿ ಗರಬಡಿದಂತೆ ನಿಂತಿದ್ದರು.
ಪರಿಗೆ ರಘುನಂದನ್ ವಾಸ್ತವಿಕತೆ ತಿಳಿದು ಕೋಪ ಬಂದಿತ್ತಾದರೂ, ಸದ್ಯದ ಪರಿಸ್ಥಿತಿಯಲ್ಲಿ ಮಗಳಿಗಾಗಿ ಪರಿತಪಿಸುತ್ತಿದ್ದ ಅವರನ್ನು ಕಂಡು ಮರುಕ ಹುಟ್ಟಿತ್ತು. ಆಲಾಪ್ ಮತ್ತು ಹರ್ಷ ರಘುನಂದನ್ ಸಮಾಧಾನ ಮಾಡುತ್ತಿದ್ದರೇ, ಪರಿ ಮಾನಸಾರನ್ನು ಬಳಸಿ ಸಾಕಷ್ಟು ಸಮಯ ಸಾಂತ್ವನಗೈದಳು. ಪರಿ ಬಂದಾಗಿನಿಂದ ಡೇವಿಡ್ ದೃಷ್ಟಿ ಅವಳ ಮೇಲೆಯೇ ಇತ್ತು. ಇದು ಹರ್ಷನ ಗಮನಕ್ಕೂ ಬಂದಿತ್ತು.
ಪ್ರಸನ್ನನಿಗೆ ಒಂದೆಡೆ ಮಾನ್ವಿಯ ಕಾಳಜಿಯಾದರೆ ಮತ್ತೊಂದೆಡೆ ರಘುನಂದನ್ ಸೆಕ್ಯೂರಿಟಿ ಮೇಲೆ ತೀವ್ರ ಅನುಮಾನ ವ್ಯಕ್ತವಾಗಿತ್ತು. 'ಅವರೇ ನೇಮಿಸಿದ ಸೆಕ್ಯೂರಿಟಿ ಸಿಬ್ಬಂದಿ ಅವರಿಂದಲೇ ಸತ್ಯ ಮರೆಮಾಚಿ ಸುಳ್ಳು ಕಥೆ ಕಟ್ಟಿದ್ದು ವಿಚಿತ್ರ ಎನಿಸಿತು.'
ಹರ್ಷ ಕೂಡ ಡೇವಿಡ್ ಹಾಗೂ ಇತರೆ ಸಿಬ್ಬಂದಿಗಳನ್ನು ಸಂಶಯದ ದೃಷ್ಟಿಯಿಂದ ಅವಲೋಕಿಸಿ ಸೋತಿದ್ದ. ಎಲ್ಲಾ ಗೊಂದಲಗಳಿಗೂ ಶೀಘ್ರದಲ್ಲೇ ಹೊಸ ತಿರುವು ಸಿಗುವುದರಲ್ಲಿತ್ತು.
**********
ಮಧ್ಯರಾತ್ರಿ ಒಂದು ಮುಕ್ಕಾಲು ಸಮಯ..
ಯಾರೊಬ್ಬರೂ ಹನಿ ನೀರು ಗುಟುಕರಿಸದೆ, ಮಾನ್ವಿಯ ಚೇತರಿಕೆಯ ಪ್ರಾರ್ಥನೆಯಲ್ಲಿ ನಿರ್ಲಿಪ್ತರಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಘಳಿಗೆಗೊಮ್ಮೆ ವೈದ್ಯರು ರೌಂಡ್ ಹಾಕಿ ಹೋಗುತ್ತಿರುವುದು ನಡೆದಿತ್ತು.
ಆದರೆ ಯಾವುದೇ ಕಾರಣಕ್ಕೂ ಪ್ರಸನ್ನ ಮಾತ್ರ ಐಸಿಯು ಒಳಗೆ ಹೋಗದಂತೆ ರಘುನಂದನ್ ಕಟ್ಟುನಿಟ್ಟಾದ ತಡೆಯೊಡ್ಡಿದ್ದರು.
"ಯಾಕೆ ನಾನು ಡಾ.ಪಟ್ಟಾಭಿರಾಂ ತರಹ ಕಾಣಿಸ್ತಿದೀನಾ??" ಪ್ರಸನ್ನ ವ್ಯಂಗ್ಯವಾಗಿ ಉತ್ತರಿಸಿದಾಗ ಪಾಪ ಪ್ರಜ್ಞೆಯಿಂದ ಅವರ ಜಂಘಾಬಲವೇ ಉಡುಗಿಹೋಗಿತ್ತು. ಆದರೂ ಅವರ ಆಣತಿಯಂತೆ ಆತ ಹೊರಗೆ ಕಾವಲು ಕಾದಿದ್ದ.
ಎಲ್ಲರ ಮುಖದ ಸಂತಾಪ ವಿಷಾದ, ಕಳಾಹೀನತೆ ನೋಡುತ್ತ ಕುಳಿತ ಪರಿಗೆ ನಡೆದ ಘಟನೆ ನೆನಪಾಗಿ ದುಃಖ ಉಮ್ಮಳಿಸಿತ್ತು. ಕಣ್ಣೀರು ತಡವುತ್ತ ಮುಖ ತಿರುಗಿ ಅಲ್ಲಿಂದ ಕೆಳ ಹೊರಟಿದ್ದಳು. ಆಗ ಡೇವಿಡ್ ಯಾರೊಂದಿಗೊ ಫೋನ್‌ಲ್ಲಿ ವ್ಯಸ್ತನಾಗಿದ್ದರೆ, ಇನ್ನೂ ಕೆಲವು ಸೆಕ್ಯೂರಿಟಿಜ಼್ ಸಿಗರೇಟ್ ಗುಂಗಲ್ಲಿ, ಹರಟೆಯಲ್ಲಿ, ನಿದ್ರೆ ಮಂಪರಿನಲ್ಲಿದ್ದರು. ಎಲ್ಲ ಗಮನಿಸಿದ ಹರ್ಷ ಅವಳನ್ನು ಅನುಸರಿಸಿದ್ದ.
ಆಸ್ಪತ್ರೆಯ ಗಾರ್ಡನ್ ಪಕ್ಕದ ಕಲ್ಲು ಬೆಂಚಿಗೆ ಒರಗಿ ಒಂದೇ ಸಮನೆ ಬಿಕ್ಕುತ್ತಿದ್ದ ಪರಿಯ ಭುಜದ ಮೇಲೆ ಕೈಯಿಟ್ಟ ಹರ್ಷ..
"ಇಷ್ಟಕ್ಕೆಲ್ಲ ನಾನೇ ಕಾರಣ.. ನನ್ನಿಂದ ಯಾರಿಗೂ ಒಳ್ಳೆಯದಾಗಲ್ಲ. ಅಪಶಕುನ ನಾನು, ಕಾಲಿಟ್ಟಲ್ಲೆಲ್ಲ ಕೆಟ್ಟದ್ದು ನಡೆಯುತ್ತೆ. ಚಿಕ್ಕಮ್ಮ ಸರಿಯಾಗೇ ಹೇಳ್ತಿದ್ದರು. ಈಗ ನೋಡು ನನ್ನನ್ನ ಕಾಪಾಡಲು ಹೋಗಿ ಮಾನ್ವಿಗೆ ಹೀಗಾಯ್ತು. ಹರ್ಷ ನಿನ್ನನ್ನ ಪಡೆಯೋದಕ್ಕೆ ಮಾನ್ವಿ ಜೀವ ಬೆಲೆ ಕಟ್ಟಬೇಕಾಗುತ್ತೆಂತ ಗೊತ್ತಿದ್ರೆ ಖಂಡಿತ ನಿಮ್ಮ ಬದುಕಿನಲ್ಲಿ ನಾನು ಮತ್ತೆ ಬರ್ತಿರಲಿಲ್ಲ ಕಣೋ..." ಅವಳ ಕಂಬನಿ ಹರಿಯುತ್ತಲಿತ್ತು. ಶಾಂತವಾಗಿ ಅವಳ ಬಿಕ್ಕುವ ಮಾತು ಕೇಳಿದ ಹರ್ಷ ಒಮ್ಮೆ ನಿಟ್ಟುಸಿರು ಚೆಲ್ಲಿದ.
"ನೀನು ಕಳಿಸಿದ್ದ ಲೆಟರ್ ಗಳನ್ನು ಹತ್ತಿಪ್ಪತ್ತು ಬಾರಿ ಓದಿ, ಪರವಾಗಿಲ್ಲ ನನ್ನ ಹುಡುಗಿ ಈಗ ಬದಲಾಗಿದ್ದಾಳೆ. ಆಲೋಚನೆಗಳು ಪ್ರಬುದ್ದವಾಗಿವೆ ಅಂದ್ಕೊಂಡಿದ್ದೆ... ಇವಳು ನಿಜವಾಗಿಯೂ ನನ್ನ ಪರಿನಾ ಅಂತ ಅನುಮಾನವಾಗಿತ್ತು.. ಈಗ ಕನ್ಫರ್ಮ್ ಕಣೇ!! ಇದು ನೀನೇನೆ.." ಮೃದುವಾಗಿ ತಲೆಗೆ ಮೊಟಕಿ ಭುಜಕ್ಕೆ ಕೈ ಹಾಕಿದ. ಓರೆಗಣ್ಣಲ್ಲಿ ಅವನನ್ನ ನೋಡಿದವಳ ಕಣ್ಣು ಇನ್ನೂ ತೇವ.
"ಎಲ್ಲರ ಬದುಕಿಗೂ ಒಂದು ಉದ್ದೇಶ ಗುರಿ ಅಂತ ಇರುತ್ತೆ ರೈಟ್? ನಾನು ಕೂಡ ಚಿಕ್ಕವಯಸ್ಸಿನಲ್ಲೇ ಒಂದು ಮಹತ್ವದ ಕನಸು ಕಂಡಿದ್ದೆ. ಅದೇನು ಗೊತ್ತಾ? ಯಾವಾಗಲೂ ಉಮ್ಮಂತ ಜೋಲು ಮುಖ ಮಾಡಿಕೊಂಡಿದ್ದ ನನ್ನ ಏಂಜಲ್ ನ ಮೊಟ್ಟಮೊದಲ ಸಲ ನಗುವಂತೆ ಮಾಡಿದಾಗಲೇ ನಿರ್ಧರಿಸಿದ್ದೇ.. ನನ್ನ ಇಡೀ ಬದುಕಿನ ಮುಖ್ಯ ಧ್ಯೇಯ ಇದೇ ಅಂತ !! ನನ್ನ ಏಂಜಲ್‌ನಾ ಯಾವಾಗ್ಲೂ ಖುಷ್-ಖುಷಿಯಾಗಿ ನೋಡ್ಕೋಬೇಕು ಅನ್ನೋದು! ನೀನು ಹೀಗೆ ಅಳ್ತಿದ್ರೆ ನನ್ನ ಬಗ್ಗೆ ನನಗೆ ಕೋಪ ಬರ್ತಿದೆ ಕಣೇ.. ಪ್ಚ್" ನಾಟಕೀಯವಾಗಿ ಬೇರೆಡೆ ನೋಡುತ್ತ ತಲೆ ಕೊಡವಿದ. ಅವಳು ಕಣ್ಣೊರೆಸಿಕೊಂಡು, ಅವನ ಮುಖ ತನ್ನೆಡೆಗೆ ತಿರುಗಿಸಿ..
"ಸರಿ, ಅಳಲ್ಲ.. ಆದರೆ ನನ್ನಿಂದಾಗಿ ಮಾನ್ವಿ ಸ್ಥಿತಿ..." ಮತ್ತೆ ಸಪ್ಪಗಾದಳು
"ಏನೂ ಆಗಲ್ಲ ಮಾನ್ವಿಗೆ.. ಶಿ ವಿಲ್ ಬಿ ಆಲ್ರೈಟ್! ನನ್ನ ಮಾತನ್ನು ನಂಬದಿದ್ರೆ ಬೇಡ, ಡಾ.ಪ್ರಸನ್ನನ ಮಾತಿನ ಮೇಲೆ ನಂಬಿಕೆಯಿದೆ ತಾನೇ.. ಅವನೇ ಹೇಳಿದ್ದು ಹೀಗಂತ.. " ಅವಳ ಕೈ ಹಿಡಿದು ಭರವಸೆ ನೀಡಿದ. ಕೆಲ ನಿಮಿಷಗಳು ಮೌನವಾಗಿ ಕಳೆದವು. ಹರ್ಷ ಏನೋ ನೆನಪು ಮಾಡಿಕೊಂಡ..
"ಅದೇನು ನಿನ್ನ ಕಾಪಾಡಲು ಹೋಗಿ ಮಾನ್ವಿಗೆ ಹೀಗಾಯ್ತು ಅಂತಿದ್ದೆ.. ಅಂದರೆ ಏನರ್ಥ?"
"ಹರ್ಷ, ನಿನಗೆ ನಿಜವಾಗಿಯೂ ಎಲ್ಲಾ ನೆನಪಾಗಿದೆಯಾ?" ಗಂಭೀರವಾಗಿ ಕೇಳಿದಳು
"ನಾಟ್ ಎವ್ರಿಥಿಂಗ್! ಅಲ್ಪ ಸ್ವಲ್ಪ ಮಟ್ಟಿಗೆ.." ಎಂದು ಹಿಂದಿನ ದಿನ ತನಗೆ ಸಿಕ್ಕ ಡೈರಿ ಪೆನ್ಡ್ರೈವ್ ಡಾಕ್ಯುಮೆಂಟ್ ವಿಷಯ ತಿಳಿಸಿದ.
"ಇನ್ನೊಂದು ಮುಖ್ಯವಾದ ವಿಷಯವೊಂದಿದೆ, ನಿನ್ನನ್ನು ಆ್ಯಕ್ಸಿಡೆಂಟ್ ನೆಪದಲ್ಲಿ ಕೊಲ್ಲಲು ಪ್ರಯತ್ನಿಸಿದ್ದು ಬೇರೆ ಯಾರೋ ಅಲ್ಲ. ಇದೇ ರಘುನಂದನ್...! ಆ ಆ್ಯಕ್ಸಿಡೆಂಟ್ ಮಾಡಿದ್ದು ಸಹ ಇದೇ ಡೇವಿಡ್! ನೀನು ಅವರಿಂದ ಹುಷಾರು... !" ಎಂದು ಬೆಳಿಗ್ಗೆ ರಾಥೋಡ್ ನಿಂದ ತಿಳಿದ ಸಂಪೂರ್ಣ ಮಾಹಿತಿ ಅರುಹಿದಳು. ಅದೇ ಕಾರಣಕ್ಕೆ ಬಹುಶಃ ತನ್ನ ಮೇಲೆ ಹಲ್ಲೆ ನಡೆದಿರಬಹುದೆಂದೂ ಮಾನ್ವಿಯ ಮಧ್ಯಪ್ರವೇಶದಿಂದ ಆ ಪ್ರಮಾದ ಅವಳಿಗೆ ತಾಕೀರಬಹುದೆಂದೂ ಊಹಿಸಿದ್ದಳು. ಅದೇ ನಿಜವಾಗಿತ್ತು ಕೂಡ.
ಕಹಿಸತ್ಯದ ವಾಸ್ತವ ತಿಳಿದ ಹರ್ಷ ಅಚೇತನನಾಗಿ ಕುಳಿತು ತನ್ನ ಬದುಕಿನ ದಿಕ್ಕನ್ನೇ ಬದಲಿಸಿದ ಆ ಘಟನೆಗಳನ್ನು ಮೆಲುಕು ಹಾಕುತ್ತ ಆಲೋಚಿಸಿದ..
'ಹಾಗಾದ್ರೆ ರಘು ಅಂಕಲ್ ಗೆ ಎಲ್ಲಾ ನಿಜ ಗೊತ್ತಾ? ಆದರೂ ಸುಳ್ಳು ಹೇಳಿದ್ರಾ? ಶೂಟರ್ ಪ್ರಸನ್ನನ ಹೆಸರು ಹೇಳುತ್ತಿರೋದಕ್ಕೂ ಇವರೇ ಕಾರಣಾನಾ? ಅವರನ್ನು ನೋಡ್ತಿದ್ರೆ ಹಾಗನ್ನಿಸೋದಿಲ್ಲ. ವಿಷಯ ಬೇರೆನೋ ಇದೆಯಾ? ಯಾವುದು ನಿಜ ಯಾವುದು ಸುಳ್ಳು..? '
*****
"ಹೌ ವಾಜ್ ಹರ್ ಕಂಢಿಷನ್ ಡಾಕ್ಟರ್?"
ಐಸಿಯು ನಿಂದ ಹೊರಬಂದ ವೈದ್ಯನೊಬ್ಬನಿಗೆ ಪ್ರಸನ್ನ ಪ್ರಶ್ನಿಸಿದ್ದ.
"ಹ್ಮಾ..?!! ಯಾ.. ಶಿ ಇಜ಼್ ಫೈನ್.." ಕ್ಲುಪ್ತವಾಗಿ ತೊದಲು ತೊದಲಾಗಿ ನುಡಿದ ವೈದ್ಯ ಮಾಸ್ಕ್ ಸರಿ ಮಾಡಿಕೊಳ್ಳುತ್ತ ಅಲ್ಲಿಂದ ಕಾಲ್ಕಿತ್ತ. ಪ್ರಸನ್ನನ ಅನುಮಾನ ಅತೀವವಾಯಿತು. ಆಲಾಪ್ ಗೆ ಒಮ್ಮೆ ಮಾನ್ವಿಯನ್ನೊಮ್ಮೆ ಚೆಕ್ ಮಾಡುವಂತೆ ಕೂಗಿ ಅವನನ್ನು ಹಿಂಬಾಲಿಸಿದ.
ತುಸು ಜೋರಾಗಿ ನಡೆಯುತ್ತಿದ್ದ ವೈದ್ಯ ಪ್ರಸನ್ನ ಹಿಂಬಾಲಿಸಿದ್ದನ್ನು ಗಮನಿಸಿ ಓಡಲಾರಂಭಿಸಿದ. ಸರಿರಾತ್ರಿಯಲ್ಲಿ ಆಸ್ಪತ್ರೆ, ಉದ್ಯಾನ, ಮುಂದಿನ ರಸ್ತೆಗಳು ನಿರ್ಜನವಾಗಿದ್ದವು. ಆತ ಓಡುತ್ತಲೇ ಇದ್ದ. ಪ್ರಸನ್ನ ಕೂಡ ಸೋಲೊಪ್ಪಲಿಲ್ಲ.
" ಡಾ.ಪ್ರಸನ್ನ ಯಾರೋ ಡಾಕ್ಟರ್ ಹಿಂದೆ ಓಡ್ತಿದ್ದಾರೆ...!!" ಪರಿ ಹರ್ಷನನ್ನ ಎಚ್ಚರಿಸಿದಳು. ತಕ್ಷಣ ಅವರು ಸಹ ಅವನನ್ನು ಅನುಸರಿಸಿದ್ದರು.
ಓಡಿ ಓಡಿ ಸುಸ್ತಾದ ಆ ವ್ಯಕ್ತಿ ಆಸ್ಪತ್ರೆಯಿಂದ ಸುಮಾರು ದೂರದಲ್ಲಿ ಟಾರು ರಸ್ತೆಯಲ್ಲಿ ಎಡವಿ ಬಿದ್ದಿದ್ದ. ಅವನ ಕೊರಳಪಟ್ಟಿ ಹಿಡಿದ ಪ್ರಸನ್ನ ಮೊದಲು ಅವನ ಮುಖಕ್ಕೆ ಧರಿಸಿದ್ದ ಮಾಸ್ಕ್ ಕಿತ್ತು ಬಿಸಾಕಿದ. ಅವನ ಮುಖ ಎಲ್ಲಿಯೋ ನೋಡಿದಂತೆ ಭಾಸವಾಯಿತು. ಎಲ್ಲಿ? ಪ್ರಸನ್ನ ಯೋಚನೆಗೊಳಗಾದ.
ತುಂಬಾ ಓಡಾಟದಿಂದ ಇಬ್ಬರು ಏದುಸಿರು ಬಿಡುತ್ತಿದ್ದರು.
"ಡಾ.ಪ್ರಸನ್ನ ರೈಟ್?" ಕೇಳಿದ ಆ ವ್ಯಕ್ತಿ ಪ್ರಸನ್ನನಿಂದ ಕೈ ಬಿಡಿಸಿಕೊಂಡ. ರಸ್ತೆ ಮಧ್ಯೆಯೇ ಎದ್ದು ಕುಳಿತು ಧರಿಸಿದ್ದ ಡಾಕ್ಟರ್ ಕೋಟ್ ಬಿಚ್ಚಿ ಬಿಸಾಕಿ, ಜೇಬಿನಿಂದ ಹೊರತೆಗೆದ ಸಿಗರೇಟ್ ಒಂದನ್ನು ಹೊತ್ತಿಸಿ, ಪ್ರಸನ್ನನಿಗೂ ಆಫರ್ ಮಾಡಿದ.
ಇಷ್ಟೊತ್ತು ಬಿಟ್ಟು ಬಿಡದೆ ಓಡಿ ಬಂದು ಈಗ ಕೂಲಾಗಿ ಕುಳಿತಿರುವ ವ್ಯಕ್ತಿಯನ್ನು ವಿಚಿತ್ರವಾಗಿ ಕಂಡ ಪ್ರಸನ್ನ ಏದುಸಿರು ಬಿಡುತ್ತಲೇ ಸಿಗರೇಟ್ ಬೇಡವೆಂದು ತಲೆ ಅಲ್ಲಾಡಿಸುತ್ತ ಅವನೆದುರು ರಿಲ್ಯಾಕ್ಸ್ ಆದ.
"ಐಮ್ ಅದ್ವೈತ್! ಮಾನ್ವಿ ಫ್ರೆಂಡ್! " ಎನ್ನುತ್ತಾ ಆತ ಕೈ ಮುಂದೆ ಮಾಡಿದ. ಪ್ರಸನ್ನ ಆಸಕ್ತಿ ತೋರಲಿಲ್ಲ.
"ಫ್ರೆಂಡ್ ಆಗಿದ್ರೆ ನೇರವಾಗಿ ಬರಬಹುದಿತ್ತಲ್ವ.. ಈ ರೀತಿ ಬರೋ ಅವಶ್ಯಕತೆ ಏನಿತ್ತು? "
"ಮಾನ್ವಿ ಹೇಳಿದ್ದು ನಿಜ, ನೀವೊಂತರಾ ವಿಚಿತ್ರ ಮನುಷ್ಯ! ಪೆಡಂಭೂತ, ಬೇತಾಳನ ವಂಶ, ಬೆನ್ನಿಗೆ ಬಿದ್ರೆ ಬಿಡೋದಿಲ್ಲ!" ಹೊಗೆ ಹೊರಬಿಡುತ್ತ ನಕ್ಕ.
"ನನ್ನ ಹೊಗಳಿದ್ದು ಸಾಕು, ಯಾಕೆ ಬಂದಿದ್ದೆ? ಏನು ಮಾಡಲು ಬಂದಿದ್ದೆ? ಅದನ್ನ ಬೊಗಳು.. " ದವಡೆ ಕಚ್ಚಿದ ಪ್ರಸನ್ನ. ಅವನನ್ನು ಹಿಂದೊಮ್ಮೆ ಎಂ.ಆರ್ ಆಸ್ಪತ್ರೆಯಲ್ಲಿ ಮಾನ್ವಿ ಕ್ಯಾಬಿನಲ್ಲಿ ನೋಡಿದ ನೆನಪಾಗಿತ್ತು.
ಅಷ್ಟರಲ್ಲಿ ಪರಿಧಿ ಮತ್ತು ಹರ್ಷ ಸಹ ಅವರನ್ನು ಅನುಸರಿಸಿ ಅಲ್ಲಿಗೆ ಧಾವಿಸಿ ಬಂದಿದ್ದರು.
"ಯಾರಿವನು? ಇವನನ್ಯಾಕೆ ಅಟ್ಟಿಸಿಕೊಂಡು ಬಂದೆ?" ಹರ್ಷ ಕೇಳಿದ
"ಕಂಗ್ರಾಟ್ಸ್ ಮಿ.ಹರ್ಷ.. ಹಳೆಯ ಪ್ರೀತಿಯನ್ನು ಮತ್ತೆ ಸೇರಿದ್ದಕ್ಕೆ" ಪ್ರಸನ್ನನಿಗಿಂತ ಮೊದಲೇ ಆತ ಮಾತಾಡಿಸಿದ. ಪರಿ ಹರ್ಷ ಮುಖ ಮುಖ ನೋಡಿಕೊಂಡರೆ, ತಾಳ್ಮೆಗೆಟ್ಟ ಪ್ರಸನ್ನ ಅವನ ದವಡೆಗೊಂದು ಬಾರಿಸಿ, ಮೊದಲು ಕೇಳಿದ ಪ್ರಶ್ನೆಗೆ ಉತ್ತರಿಸಲು ಹೇಳಿದ.
ಹಿಂದೊಮ್ಮೆ ಮಾನ್ವಿ ಅವನೆದುರು ಏನೋ ಬೇಡಿಕೊಳ್ಳುತ್ತಿದ್ದ ಅಂದಿನ ಘಟನೆಗೆ ಈಗ ಉತ್ತರ ಸಿಗಲಿತ್ತು.
ಮುಂದುವರೆಯುವುದು..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ