ಪ್ರಸನ್ನ ಕೋಪದಿಂದ ಆ ಅದ್ವೈತ್‌ನ ದವಡೆಗೆ ಬಾರಿಸಿ 'ಈ ಸರಿರಾತ್ರಿಯಲ್ಲಿ ಈ ರೀತಿ ಡಾಕ್ಟರ್ ವೇಷದಲ್ಲಿ ಮಾನ್ವಿ ನೋಡಲು ಯಾಕೆ ಬಂದೆ? ಯಾರು ನೀನು?' ಎಂದು ಕೇಳಿದ್ದ. ಆಗ ಅದ್ವೈತ ಕೂಲಾಗಿ....
" ರಿಲ್ಯಾಕ್ಸ್ ಡ್ಯುಡ್, ಅದನ್ನ ಹೇಳೋಕೆ ತಾನೇ ಇಷ್ಟು ದೂರ ಓಡಿಸ್ಕೊಂಡು ಬಂದಿದ್ದು, ಹೇಳ್ತೆನೆ ತಾಳು ಗುರುವೇ.." ಮಾತು ಶುರುವಿಟ್ಟ.
"ನಾನು ಇಲ್ಲೇ ಭಾರತದ ಒಂದು ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿಯಲ್ಲಿ ಕೆಲಸ ಮಾಡ್ತಿದೀನಿ. ಎರಡು ವರ್ಷಗಳ ಹಿಂದೆ ಒಂದು ಕೇಸ್ ವಿಷಯವಾಗಿ ಕೆನಡಾದ 'ರಾಯಲ್ ಜುಬ್ಲಿ' ಆಸ್ಪತ್ರೆಗೆ ಹೋಗಿದ್ದಾಗ ಮೊದಲನೇ ಸಲ ಡಾ.ಮಾನ್ವಿನಾ ಭೇಟಿಯಾಗಿದ್ದೆ. ಹಾಗೆ ಸ್ನೇಹ ಶುರುವಾಗಿತ್ತು. ಅವಳದು ಮಾತು ಕಡಿಮೆ, ನಾನೇ ಏನೇನೋ ಹೇಳ್ತಾ ಅವಳೊಂದಿಗೆ ಇರೋಕೆ ಇಷ್ಟ ಪಡ್ತಿದ್ದೆ. ನನ್ನ ಕೇಸ್ ಸಂಪೂರ್ಣವಾಗಿ ಮುಗಿದು ಹೋದ್ರು ಕೂಡ ನನಗೆ ಅವಳನ್ನ ಒಂದಿನ ನೋಡದೆ ಇರೋಕೆ ಆಗ್ತಿರಲಿಲ್ಲ. ಏನೋ ನೆಪ ಮಾಡಿಕೊಂಡು ದಿನಕ್ಕೊಮ್ಮೆ ಅವಳನ್ನ ಭೇಟಿ ಮಾಡ್ತಿದ್ದೆ. ಮಾನ್ವಿಗೆ ಅದು ಸರಿ ಬರಲಿಲ್ಲ. ಒಮ್ಮೆ ನೇರಾನೇರ ಕೇಳಿಯೇ ಬಿಟ್ಟಳು.. 'ಏನು ಲವ್ವಾ?' ಅಂತ. ನನಗೆ ಅವಳ ಬೋಲ್ಡ್ ಆ್ಯಟಿಟ್ಯುಡ್ ಮತ್ತೂ ಇಷ್ಟವಾಯ್ತು. ಮೌನವಾಗೇ ಮುಗುಳ್ನಕ್ಕಿದ್ದೆ. ಅವಳ ಬದುಕಲ್ಲಿ ಈ ಪ್ರೀತಿ ಪ್ರೇಮ ಅನ್ನೋ ಪದಗಳೆಲ್ಲ ಯಾವತ್ತೋ ಡಿಲಿಟ್ ಆಗೋಗಿವೆ. ಅವಳ ಸಲುವಾಗಿ ನನ್ನ ಸಮಯ ಹಾಳು ಮಾಡ್ಕೊಬೇಡವೆಂದು ಸಾರಾಸಗಟಾಗಿ ತಳ್ಳಿಹಾಕಿ ಹೊರಟು ಹೋದಳು. ತುಂಬಾ ನೋವಾಗಿತ್ತು ಮನಸ್ಸಿಗೆ.. ಹಾಗಂತ ಅವಳ ನೆನಪಲ್ಲೇ ಕೊರಗುವ ದೇವದಾಸ್ ಏನಲ್ಲ ನಾನು, ಹಾಗಂತ ಹಿಂದೆ ಬಿದ್ದು ಪ್ರೀತಿ ಪಡೆಯೋ ಹಠ ಕೂಡ ನನಗಿರಲಿಲ್ಲ. ಅವಳಿಷ್ಟದಂತೆ ಸುಮ್ಮನಾಗಿಬಿಟ್ಟೆ ಅಷ್ಟೇ. ಅದಾದನಂತರ ಮತ್ಯಾವತ್ತು ನಮ್ಮ ಭೇಟಿ ಆಗಲೇ ಇಲ್ಲ.
ಈಗೇ ಎರಡು ತಿಂಗಳ ಹಿಂದಷ್ಟೇ ಯಾರಿಂದಲೋ ನನಗೆ ಒಂದು ಮೇಲ್ ಬಂದಿತ್ತು. ತೆಗೆದು ನೋಡಿದಾಗ "ಐಮ್ ಮಾನ್ವಿ. ಐಮ್ ಇನ್ ಟ್ರಬಲ್. ಐ ನೀಡ್ ಯುವರ್ ಹೆಲ್ಪ್.." ಅಂತ ಇತ್ತು. ಫೇಕ್ ಮೇಲ್ ಐಡಿಯಿಂದ ಹೀಗೆ ಕಳಿಸಿದ್ದು ನೋಡಿ ಮಾನ್ವಿ ಯಾವುದೋ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ ಅನ್ನಿಸಿ, ಸೀಕ್ರೆಟ್ ಆಗಿ ಭೇಟಿಯಾಗಲು ನಿರ್ಧರಿಸಿ ದಿನಾಂಕ ವೇಳೆ ಸ್ಥಳ ನಿಗದಿ ಮಾಡಿದೆವು.
ಯು ನೋ ವ್ಹಾಟ್.. ನಾವು ಭೇಟಿಯಾದ ಸೀಕ್ರೆಟ್ ಪ್ಲೇಸ್ - ಸಿಡ್ನಿಯ ಹಾಸ್ಪಿಟಲ್ ನ ಓಟಿ ಒಂದರಲ್ಲಿ! ಹೊರಗಿನವರಿಗೆ ಯಾವುದೋ ಆಪರೇಶನ್ ನಡಿತಿದೆ ಅನ್ನಿಸಿರಬೇಕು. ಒಳಗೆ ನಮ್ಮ ಮಾತುಕತೆ ನಡೆದಿತ್ತು. (ನಕ್ಕ) ಅವತ್ತು ಮಾನ್ವಿ ನನ್ನ ಜೊತೆ ಮನಸ್ಸು ಬಿಚ್ಚಿ ಎಲ್ಲಾ ವಿಷಯವನ್ನು ಮಾತಾಡಿದಳು. ಅವಳ ಬದುಕು, ಬಾಲ್ಯ, ಆಲಾಪ್ ಜೊತೆ ಲವ್ ಸ್ಟೋರಿ, ನೀವು (ಡಾ.ಪ್ರಸನ್ನ) ರೆಸ್ಟಿಗೇಟ್ ಮಾಡಿದ್ದಕ್ಕೆ ಅವಳು ಅಬ್ರಾಡ್ ಹೋಗಿದ್ದು, ಪರಿ ಹರ್ಷನ ಸಮ್ಮುಖದಲ್ಲಿ ಆಲಾಪ್ ಮದುವೆ, ಆಮೇಲೆ ಪರಿ ಜೊತೆ ಜಗಳ, ಆನಂತರ ಮುಂಬೈನಲ್ಲಿ ಹರ್ಷನ ಅನಿರೀಕ್ಷಿತ ಭೇಟಿ ಎಲ್ಲವನ್ನೂ ಹೇಳಿದಳು.
ಎಲ್ಲಾ ಸರಿ.. ಏನೋ ಸಮಸ್ಯೆ ಎಂದು ಹೇಳಿ ಈ ರೀತಿ ಕದ್ದು ಮುಚ್ಚಿ ಮೀಟ್ ಮಾಡಲು ಹೇಳಿದ್ದೇಕೆ? ಕೇಳಿದಾಗ ಅವಳು ಹೇಳಿದ್ದನ್ನು ಕೇಳಿ ನನಗೂ ಮೈ ಕಂಪಿಸಿಹೋಯಿತು. "
"ಅಂತದ್ದೇನಾಗಿತ್ತು? ಯಾವ ಕಾರಣಕ್ಕಾಗಿ ಮಾನ್ವಿ ಇಷ್ಟು ದಿನ ಹೀಗೆಲ್ಲ ಮಾಡಿದ್ದು?" ಪ್ರಸನ್ನನ ಪ್ರಶ್ನೆಗೆ ಆತ ಎಲ್ಲವನ್ನೂ ವಿವರಿಸಲು ಆರಂಭಿಸಿದ.
(ಕೆಲವು ತಿಂಗಳುಗಳ ಹಿಂದೆ......)
ವರ್ಷದ ಹಿಂದೆ ಹರ್ಷನ ಭೇಟಿ, ಅವನು ಮಾನ್ವಿಯ ಕೋಪವನ್ನು ತಣಿಸಿದ ರೀತಿ, ಮಾನ್ವಿ ಪರಿಯನ್ನು ಕ್ಷಮಿಸಿ ಮತ್ತೆ ಅವಳನ್ನು ಭೇಟಿಯಾಗಲು ಒಪ್ಪಿದ್ದು ಎಲ್ಲವನ್ನೂ ವಿವರಿಸಿದ ಅದ್ವೈತ..
ಆ್ಯಕ್ಸಿಡೆಂಟ್ ಹಿಂದಿನ ದಿನವೇ ಬೆಂಗಳೂರಿಗೆ ಮರಳಬೇಕಿತ್ತು ಹರ್ಷ, ಆದರೆ ಮಾನ್ವಿ ಮರುದಿನ ಅವನೊಡನೆ ಬೆಂಗಳೂರಿಗೆ ಬರಲು ಒಪ್ಪಿ ಕರೆ ಮಾಡಿದಾಗ, ಹರ್ಷ ಅದಕ್ಕೆ ಸಂತೋಷದಿಂದ ಒಪ್ಪಿದ. (ಆಗಿನ್ನು ಆತ ರಾಥೋಡ್ ಜೊತೆ ಕಾರಿನಲ್ಲಿ ಹೊರಟಿದ್ದ, ತಾನು ಮರುದಿನ ಬೆಂಗಳೂರಿಗೆ ಹೋಗುತ್ತಿರುವುದಾಗಿ ಆಗಲೇ ರಾಥೋಡ್ ಗೆ ತಿಳಿಸಿದ್ದ.) ರೂಮಿಗೆ ಬಂದ ನಂತರ ತನ್ನ ಸೆಕ್ರೆಟರಿಗೆ ಅವತ್ತೇ ಹೋಗುವಂತೆಯೂ ತಾನು ಮರುದಿನ ಬರುವುದಾಗಿಯೂ ಹೇಳಿ ಬೆಂಗಳೂರಿಗೆ ಕಳಿಸಿದ್ದ.
ಮಾರನೆಯ ದಿನ ಬೆಳಿಗ್ಗೆ ಏರ್ಪೋರ್ಟ್ ನಲ್ಲಿ ಮಾನ್ವಿ ಹರ್ಷನಿಗಾಗಿ ಕಾಯುತ್ತಾ ನಿಂತಾಗ ಫ್ಲೈಟ್ ಟೈಮ್ ಆದ್ರೂ ಹರ್ಷ ಇನ್ನೂ ಏರ್ಪೋರ್ಟ್ ಗೆ ಬರದಿದ್ದದ್ದು, ಪದೇ ಪದೇ ಕಾಲ್ ಮಾಡಿದರೂ ಆತನ ಮೊಬೈಲ್ ಸ್ವಿಚಾಫ್ ಬರತೊಡಗಿದ್ದು ಆಕೆಗೆ ಆತಂಕವಾಗಿತ್ತು.
ಆಗಷ್ಟೇ ಏರ್ಪೋರ್ಟ್ ಗೆ ಬಂದ ಕೆಲವು ಜನ ರಸ್ತೆಯಲ್ಲಿ ತಮ್ಮ ಕಣ್ಣೆದುರೇ ನಡೆದ ಟ್ಯಾಕ್ಸಿ ಆ್ಯಕ್ಸಿಡೆಂಟ್ ಬಗ್ಗೆ ಮಾತಾಡುವುದನ್ನು ಕೇಳಿ, ಕಳವಳದಿಂದ ತಕ್ಷಣ ಅಲ್ಲಿಗೆ ಧಾವಿಸಿದ್ದ ಮಾನ್ವಿ, ಅಲ್ಲಿ ರಕ್ತದ ಮಡುವಿನಲ್ಲಿದ್ದ ಹರ್ಷನನ್ನು ಕಂಡು ದಿಙ್ಮೂಡಳಾಗಿದ್ದಳು. ಸೂಚನೆ ಇಲ್ಲದೆ ಕಂಬನಿ ಹರಿಯತೊಡಗಿತ್ತು. ಕ್ಯಾಬ್ ಡ್ರೈವರ್ ಪ್ರಾಣವಂತೂ ಹಾರಿಯೇ ಹೋಗಿತ್ತು. ಕ್ಷಣಿಕದಲ್ಲಿ ಸ್ಥಳಿಯರು ಹಾಗೂ ತನ್ನ ಡ್ರೈವರ್ ಸಹಾಯದಿಂದ ಹರ್ಷನನ್ನು ತನ್ನ ಕಾರ್ ನಲ್ಲಿ ತಮ್ಮದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಮೊದಲೇ ಆಪರೇಶನ್ ಸಿದ್ದತೆ ಮಾಡಿಕೊಳ್ಳಲು ಸೂಚಿಸಿದ್ದರಿಂದ, ಅವಳು ಆಸ್ಪತ್ರೆಗೆ ಬರುತ್ತಿದ್ದಂತೆ ಹರ್ಷನನ್ನ ಓಟಿಗೆ ಕರೆದೊಯ್ಯಲಾಯಿತು.
ಆ ಸಮಯದಲ್ಲಿ, ಆ್ಯನುವಲ್ ಬೋರ್ಡ್ ಮೀಟಿಂಗ್'ಗೆ ಬಂದಿದ್ದ ರಘುನಂದನ್ 'ಜಸ್ಟ್ ಸ್ಟಾಪ್ ದಿಸ್ ನಾನ್ಸೆನ್ಸ್ ಮಾನು... ಇದು ಆ್ಯಕ್ಸಿಡೆಂಟ್ ಕೇಸ್! ಪೋಲಿಸ್ ಪರ್ಮಿಷನ್ ಇಲ್ಲದೆ ಪೇಷಂಟ್ ದಾಖಲು ಮಾಡಿಕೊಳ್ಳೊದು ಅಪರಾಧ!' ತಮ್ಮ ಆಸ್ಪತ್ರೆಯ ರೂಲ್ಸ್ ಮಂಡಿಸಿದರು.
ತಂದೆಯ ಮಾತಿಗೂ ಕಿವಿಗೊಡದ ಮಾನ್ವಿ ತನ್ನ ಹಠ ಸಾಧಿಸಿ, ನಡೆದಿದ್ದ ಬೋರ್ಡ್ ಮೀಟಿಂಗನ್ನು ಸಹ ರದ್ದು ಮಾಡಿಸಿ ಸೀನಿಯರ್ ಸ್ಪೇಷಲಿಸ್ಟಗಳ ಮುಖಾಂತರ ಹರ್ಷನ ಶಸ್ತ್ರಚಿಕಿತ್ಸೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಳು. ಈ ಮಧ್ಯೆ ಭಾರ್ಗವ್ ಕಂಪನಿಯ ನಂಬರ್ ಹುಡುಕಿ ಆ ಮೂಲಕ ಹರ್ಷನ ತಂದೆಗೆ ವಿಷಯವನ್ನು ತಲುಪಿಸಿದ್ದಳು.
ಆಪರೇಶನ್ ಮುಗಿದ ಕೆಲವು ಗಂಟೆ ಹರ್ಷನಿಗೆ ಇನ್ನೂ ಪ್ರಜ್ಞೆ ಮರಳಿರಲಿಲ್ಲ. ಆಗ ಹರ್ಷನ ಆಕ್ಸಿಜನ್ ಮಾಸ್ಕ್ ತೆಗೆದು ದಿಂಬಿನಿಂದ ಉಸಿರುಗಟ್ಟಿಸಿ ಕೊಲ್ಲುವ ಪ್ರಯತ್ನವೊಂದು ನಡೆದಿತ್ತು. ಅಷ್ಟರಲ್ಲಿ ಅಲ್ಲಿಗೆ ಮಾನ್ವಿ ಬಂದಿದ್ದರಿಂದ ಸಂಭವನೀಯ ಅನಾಹುತ ತಪ್ಪಿತು. ಕೊಲ್ಲಲು ಬಂದ ಮುಸುಕುಧಾರಿಯೊಬ್ಬ ತಪ್ಪಿಸಿಕೊಂಡು ಹೊರಗೋಡಿದ್ದ. ಆ ಸಮಯದಲ್ಲಿ ರಘುನಂದನ್‌ರ ಬ್ಯುಸಿನೆಸ್ ಪಾರ್ಟ್ನರ್/ಅವರ ಅತ್ಯಾಪ್ತ ವಿಶ್ವಾಸನೀಯ ಸ್ನೇಹಿತ ಅಥ್ರೇಯ ಕೂಡ ಅಲ್ಲಿ ಮಾನ್ವಿಯ ಜೊತೆಗೆ ಇದ್ದರು.
ಅದೇ ಮೊದಲ ಬಾರಿಗೆ ಅಥ್ರೇಯ ಹರ್ಷನನ್ನ ನೋಡಿದ್ದು. ನೋಡಿ ವಿಸ್ಮಯಗೊಂಡಿದ್ದು! ಆಕ್ಸಿಜನ್ ನ ನಿಲ್ಲಿಕೆ ಪೂರೈಕೆಯ ಹಡಾವಿಡಿಯಲ್ಲಿ ಅದೇ ಸಮಯದಲ್ಲಿ ಹರ್ಷನ ಎದೆಬಡಿತ ಮೇಲ್ಕೆಳಗಾಗಿ ಎಚ್ಚರಿಕೆ ಬಂದಿತ್ತು. ಆಗಲೇ ಆತ ತನ್ನ ಗತ ಜೀವನವನ್ನು ಮರೆತು ಹೋಗಿ ತಾನಾರೆಂಬುದನ್ನೇ ಅರಿಯದೇ ಕೋಲಾಹಲ ಸೃಷ್ಟಿಸಿದ್ದು...
ಹರ್ಷ ಎಲ್ಲಾ ವಸ್ತುಗಳನ್ನು ಎತ್ತಿ ಬಿಸಾಡಿ ಚೆಲ್ಲಾಪಿಲ್ಲಿ ಮಾಡುತ್ತಿದ್ದರೆ ಮಾನ್ವಿ ಮತ್ತು ಇತರೆ ನರ್ಸ್ ಗಳು ಅವನನ್ನು ಸಂಭಾಳಿಸಲಾಗದೆ ಒದ್ದಾಡುತ್ತಿದ್ದರು.
ಸಮಯ ಸಾಧಿಸಿದ ಅಥ್ರೇಯ ಯಾರೊಂದಿಗೊ ಫೋನ್‌ಲ್ಲಿ ಮಾತುಕತೆ ಮುಗಿಸಿ ಒಳಬಂದಿದ್ದ. ನರ್ಸ್ ಹರ್ಷನಿಗೆ ಅನೆಸ್ತೇಶಿಯಾ ಕೊಡುತ್ತಿರುವಾಗ, ಮಾನ್ವಿಯನ್ನು ತಮ್ಮ ಜೊತೆಗೆ ಕರೆದುಕೊಂಡು ಹೋದ ಅಥ್ರೇಯ "ಈ ಹುಡುಗ ನಿನಗೆ ಹೇಗೆ ಗೊತ್ತು?" ಕೇಳಿದರು
"ಅವನು ನನ್ನ ಫ್ರೆಂಡ್ ಹರ್ಷ!! ಯಾಕೆ ಅಂಕಲ್?" ಕ್ಲುಪ್ತವಾಗಿ ಉತ್ತರಿಸಿದಳು
"ಅದೂ... ಅವನನ್ನು ಕೊಲ್ಲಲು ಪ್ರಯತ್ನಿಸಿದ ವ್ಯಕ್ತಿ ಸೆಕ್ಯೂರಿಟಿ ಕೈಗೆ ಸಿಕ್ಕು ಬಿದ್ದಿದ್ದಾನೆ. ಹಿ ಇಜ್ ಇನ್ ಡೇಂಜರ್ ಪುಟ್ಟ.. ಬಾ ನಂಜೊತೆ" ಮಾನ್ವಿಯ ಕೈ ಹಿಡಿದು ಕರೆದುಕೊಂಡು ಹೋದರು.
ಆಸ್ಪತ್ರೆಯ ಕಾರಿಡಾರ್ ಒಳಗೆ ಕೂತಿದ್ದ ಆ ವ್ಯಕ್ತಿ ತನ್ನ ಹೆಸರನ್ನು 'ಡೇವಿಡ್' ಎಂದು ಹೇಳಿದ್ದ.
"ಹರ್ಷನ್ನ ಯಾಕೆ ಕೊಲ್ಲೋಕೆ ಬಂದಿದ್ದೆ?" ಮಾನ್ವಿ ಕೆನ್ನೆಗೆ ಬಾರಿಸೇ ಕೇಳಿದಳು. ಆತ ಕೋಪದಿಂದ ಹಲ್ಲು ಮಸೆದ. ಅಥ್ರೇಯ ಕೂಡ ನಾಲ್ಕು ಒದ್ದಾಗ ಆತ ಮಾತಾಡಿದ್ದ..
" ಅವನಿಗೆ ನಮ್ಮ ಧಂಧೆಯ ಸೀಕ್ರೇಟ್ಸ್ ಗೊತ್ತಾಗಿ ಹೋಗಿತ್ತು. ಅದಕ್ಕೆ ಬಾಸ್ ಅವನನ್ನು ಮುಗಿಸಿ ಬಿಡಲು ಹೇಳಿದರು" ಧುಮುಗುಡುತ್ತ ಹೇಳಿದ.
"ಬಾಸ್... ಯಾರದು? ಏನು ನಿಮ್ಮ ಧಂಧೆ?" ಮಾನ್ವಿ ಕೆರಳಿದಳು.
" ಅದೂ.... ಎಂ.ಆರ್ ಸ್ಟೀಲ್ ಇಂಡಸ್ಟ್ರೀಸ್ ಚೇರ್ಮನ್, ನಿಮ್ಮ ತಂದೆ.. ರಘುನಂದನ್ ರೈ!! " ತಮ್ಮ ಗನ್ ಮಾಫಿಯಾದ ಬಗ್ಗೆ ಮಾಹಿತಿ ನೀಡಿದ್ದ.
ಮೊದಮೊದಲು ಇದನ್ನು ನಂಬದ ಮಾನ್ವಿ ಆತ ಕೊಟ್ಟ ವ್ಯವಹಾರದ ಸೂಕ್ಷ್ಮ ಮಾಹಿತಿಗಳನ್ನು ಕೇಳಿ ತನ್ನ ತಂದೆಯ ಬಗ್ಗೆ ಅವಳಿಗೆ ಜಿಗುಪ್ಸೆ ಉಂಟಾಯಿತು.
ಎಲ್ಲ ವಿಷಯ ತಿಳಿದ ಮಾನ್ವಿ ಹಣೆಗೆ ಕೈ ಹೊತ್ತು ಕುಸಿದು ಕೂತಳು. ತಂದೆಯ ಮೇಲಿದ್ದ ಅಪಾರ ಪ್ರೀತಿ ಒಂದೇ ಉಸಿರಿಗೆ ಸತ್ತು ಹೋಗಿ ಗೌರವದ ಸ್ಥಾನವನ್ನು ಅಸಹ್ಯ ಸಿಟ್ಟು ಆಕ್ರಮಿಸಿಕೊಂಡವು. ಬದುಕಿನಲ್ಲಿ ಅದಾಗಲೇ ಪ್ರೀತಿ ಸ್ನೇಹ ವಿಶ್ವಾಸದಿಂದ ವಂಚಿತಳಾಗಿ ಒಂಟಿತನದೊಂದಿಗೆ ದಿನ ನೂಕುತ್ತಿದ್ದ ಮಾನ್ವಿಗೆ ತಂದೆಯ ಮೋಸ ಕೊಲೆಪಾತಕ ಕ್ರೂರತ್ವ ನೋಡಿ ದೊಡ್ಡ ಆಘಾತವಾಗಿ ಕೊನೆಯ ನಿಟ್ಟುಸಿರು ತನ್ನ ಪಾಲಿಗೆ ಇಲ್ಲವಾಗಿತ್ತು. ಬಿಕ್ಕಿ ಬಿಕ್ಕಿ ಅತ್ತಳು ತನ್ನ ಅಸಹಾಯಕತೆಗೆ.. ತನ್ನ ತಂದೆಯಿಂದ ಹರ್ಷನಿಗಾದ ಅನ್ಯಾಯಕ್ಕೆ...
ಆಗ ಅವಳನ್ನು ಸಂತೈಸಿದ ಅಥ್ರೇಯ ಅವಳ ನಂಬಿಕೆ ಗಳಿಸುವಲ್ಲಿ ಯಶಸ್ವಿಯಾಗಿದ್ದ. ಮುಳುಗುವ ದೋಣಿಗೆ ಅಲೆಯೊಂದು ಮೇಲೆತ್ತಿದಂತೆ ಅವರ ಭುಜಕ್ಕೊರಗಿ ರೋಧಿಸಿದಳು.
"ಹೌದಮ್ಮ.. ನಾನು ರಘುಗೆ ತುಂಬಾ ಸಲ ಹೇಳಿದೆ ಈ ಕೆಲಸ ಎಲ್ಲಾ ತಪ್ಪು. ಬಿಟ್ಟು ಬಿಡು ಅಂತ ಆದರೆ ಅವನು ನನ್ನ ಮಾತೇ ಕೇಳಲಿಲ್ಲ. ಏನೋ ದುಡ್ಡಿನ ಮೋಹಕ್ಕೆ ಹೀಗೆಲ್ಲ ಮಾಡ್ತಾನೆ ಅಂದ್ಕೊಂಡಿದ್ದೆ, ಆದರೆ ಹೀಗೆ ಒಂದು ಜೀವ ತೆಗೆಯುವಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾನೆ ಅಂದ್ಕೊಂಡಿರಲಿಲ್ಲ. " ತಲೆ ಸವರಿ ರಮಿಸುತ್ತಾ ನುಡಿದರು.
" ಇಂತಹ ನೀಚ ದೇಶದ್ರೋಹಿ ಕೆಲಸ ಮಾಡಿ ನನ್ನನ್ನ ಸಾಕಿದ್ದಾರಾ! ಇಷ್ಟು ದಿನ ತೊಟ್ಟ ಬಟ್ಟೆ, ತಿಂದ ಅನ್ನ, ಕಲಿತ ವಿದ್ಯೆ ಎಲ್ಲಾ ಈ ಮೋಸದ ಗಳಿಕೆಯಿಂದಲೇನಾ! ಛೀ.. ನನ್ನ ಡ್ಯಾಡ್ ಒಬ್ಬ ಹೀರೋ ಅನ್ಕೊಂಡಿದ್ದೆ. ಹೆಮ್ಮೆ ಪಡ್ತಿದ್ದೆ. ಈಗ ಅವರನ್ನು ನನ್ನ ತಂದೆ ಎಂದು ಹೇಳಿಕೊಳ್ಳೊದಕ್ಕೂ ನಾಚಿಕೆಯಾಗ್ತಿದೆ! ಇಲ್ಲ ಅಂಕಲ್ ನಾನು ಡ್ಯಾಡ್ ನಾ ಸುಮ್ನೆ ಬಿಡಲ್ಲ. ಹರ್ಷನ್ನ ಇಂತಹ ಸ್ಥಿತಿಗೆ ತಂದ ಅವರನ್ನು ಜೈಲಿಗೆಳೆದು ಶಿಕ್ಷೆ ಕೊಡಿಸೋವರೆಗೂ ನನಗೆ ನೆಮ್ಮದಿ ಇಲ್ಲ" ಕಣ್ಣೀರು ಒರೆಸಿ ಧೃಡ ನಿರ್ಧಾರದಿಂದ ಎದ್ದು ನಿಂತಳು.
"ದುಡುಕಬೇಡ ಪುಟ್ಟ,, ತಾಳ್ಮೆಯಿಂದ ಯೋಚಿಸು,, ನಿನಗೆ ನಿನ್ನ ಫ್ರೆಂಡ್ ಪ್ರಾಣ ಉಳಿಯೋದು ಮುಖ್ಯನೋ ಅಥವಾ ರಘುನಾ ಜೈಲಿಗೆ ಹಾಕಿಸೋದು ಮುಖ್ಯನೋ..?" ಕೇಳಿದರು ಅಥ್ರೇಯ
ತುಸು ದಿಗ್ಭ್ರಾಂತಳಾದ ಮಾನ್ವಿ ಸಾವರಿಸಿಕೊಂಡು "ಅಂದ್ರೆ... ಏನು ನಿಮ್ಮ ಮಾತಿನ ಅರ್ಥ?"
"ನೀನು ರಘುನ ಜೈಲಿಗೆ ಕಳಿಸಿದ್ರೂ ಅವನ ಹಣಬಲ ಅಧಿಕಾರ ಬಲದಿಂದ ಐದೇ ನಿಮಿಷದಲ್ಲಿ ಈ ಕೇಸ್ನಿಂದ ಆಚೆ ಬರ್ತಾನೆ. ಅದೂ ನಿನಗೂ ತಿಳಿದಿರೋದೆ! ಆನಂತರ ಹರ್ಷನ ಮೇಲಿನ ದ್ವೇಷ ಎರಡು ಪಟ್ಟು ಹೆಚ್ಚೇ ಆಗಿರುತ್ತೆ. ಆಗ ಅವನನ್ನ ಸುಮ್ಮನೆ ಬಿಡ್ತಾನಾ? ತಂದೆಯಂತನೂ ನೋಡದೆ ಜೈಲಿಗೆ ಕಳಿಸಿ ಮರ್ಯಾದೆ ತೆಗೆದ ನಿನ್ನನ್ನು ಕ್ಷಮಿಸ್ತಾನಾ"
" ನನಗೆ ಏನಾದ್ರೂ ಪರವಾಗಿಲ್ಲ, ಯಾವುದೇ ಕಾರಣಕ್ಕೂ ಹರ್ಷನಿಗೆ ಏನು ಆಗಬಾರದು. ನಾನು ಈಗಲೇ ಡ್ಯಾಡ್ ಜೊತೆ ಮಾತಾಡಿ ಹರ್ಷನ್ನ ಬಿಟ್ಟು ಬಿಡಲು ಹೇಳ್ತೆನೆ. ಅವರು ನನ್ನ ಮಾತು ಮೀರಲ್ಲ" ನಿರ್ಧಾರ ಬದಲಿಸಿದಳು.
"ಹ್ಮ್, ನಿನ್ನ ತಂದೆ ಮೇಲೆ ನಿನಗಿರುವ ನಂಬಿಕೆಯನ್ನು ನಾನೇಕೆ ಹಾಳು ಮಾಡಲಿ. ಸರಿ, ಹೋಗಿ ಮಾತಾಡು.. ಆದರೆ ಒಪ್ಪದೇ ಹೋದ್ರೆ? ನಿನಗೂ ಅವನ ಅವ್ಯವಹಾರ ಗೊತ್ತಾಗಿದೆ, ನೀನು ಹರ್ಷನ್ನ ಸೇವ್ ಮಾಡ್ತಿದಿಯಾ ಅನ್ನೋ ಸೂಕ್ಷ್ಮ ಅನುಮಾನ ಬಂದರೂ ಸಾಕು, ನಿನ್ನ ವಿಷಯ ಗೊತ್ತಿಲ್ಲ; ಆದರೆ ಹರ್ಷನ ಜೀವಕ್ಕಂತೂ ನೋ ಗ್ಯಾರಂಟಿ" ಮತ್ತೊಮ್ಮೆ ಎಚ್ಚರಿಸಿದರು.
" ಹಾಗಾದ್ರೆ ಈಗ ಏನ್ಮಾಡೋಣಾಂತೀರಾ... " ಶೂನ್ಯ ದಿಟ್ಟಿಸುತ್ತ ಕೇಳಿದಳು.
"ಹರ್ಷನಿಗೆ ಸಂಪೂರ್ಣ ಹುಷಾರಾಗಿ ಎಲ್ಲಾ ನೆನಪಾಗುವವರೆಗೂ ಇಲ್ಲಿಂದ ದೂರ ಕರೆದುಕೊಂಡು ಹೋಗೋಣ. ಆ ನಂತರ ಅವನನ್ನು ಅವನ ಮನೆಯವರಿಗೆ ಒಪ್ಪಿಸಿ, ರಘುನ ಮಾಫಿಯಾ ಬಂಡವಾಳವನ್ನು ಬಯಲಿಗೆ ತರೋಣ. ಏನಂತಿಯಾ?" ಮೊದಲು ಇದೆಲ್ಲಾ ಅಸಾಧ್ಯ ಎನ್ನಿಸಿದರೂ ಹರ್ಷನ ಜೀವ ಮುಖ್ಯ ಎನ್ನಿಸಿ ಮಾನ್ವಿಗೂ ಅದೇ ಸರಿಯೆನ್ನಿಸಿತು. ಮೊದಲು ಹರ್ಷ ಗುಣಮುಖನಾಗಬೇಕು ಎಂಬುದು ಅವಳ ಉದ್ದೇಶವಾಗಿತ್ತು.
"ಆದ್ರೆ ಇದೆಲ್ಲಾ ಡ್ಯಾಡ್ ಗೆ ಗೊತ್ತಾಗದಂತೆ ಹೇಗೆ ಮಾಡೋದು?"
"ರಘುನೇ ಸ್ವತಃ ಹರ್ಷನ್ನ ಕಳಿಸಿಕೊಡುವಂತಾದ್ರೆ...?" ಅಥ್ರೇಯನ ಮಾತು ವಿಚಿತ್ರ ಎನಿಸಿತ್ತು ಮಾನ್ವಿಗೆ.
"ನೀನು ಈಗಲೇ ರಘು ಹತ್ತಿರ ಹೋಗಿ, 'ನಾನು ಹರ್ಷನ್ನ ಪ್ರೀತಿಸ್ತಿದೀನಿ ಅವನು ನನಗೆ ಬೇಕೇ ಬೇಕು' ಅಂತ ಹಠ ಮಾಡು ಸಾಕು. ಮಗಳ ಸಂತೋಷಕ್ಕೋ ಅಥವಾ ಹೇಗೂ ಹರ್ಷನಿಗೆ ಹಳೆಯದೆಲ್ಲ ನೆನಪಿಲ್ಲ ಅನ್ನೋ ನಿರ್ಲಕ್ಷ್ಯದಿಂದಲೋ ಇದಕ್ಕೆ ಒಪ್ಪಿದ್ರೂ ಒಪ್ಪಬಹುದು! ಒಮ್ಮೆ ಒಪ್ಪಿಗೆ ಸಿಕ್ಕರೆ ಕೆಲಸ ಆದಹಾಗೆ, ಒಪ್ಪದಿದ್ರೆ ಬೇರೆ ದಾರಿ ಹುಡುಕ್ತಿನಿ! ಐ ಮೀನ್ ಹುಡುಕೋಣ. " ಅವರ ಧ್ವನಿ ಗಂಭೀರವಾಗಿತ್ತು.
"ನಾನು ಈಗಾಗಲೇ ಅವರ ಮನೆಯವರಿಗೆ ವಿಷಯ ತಿಳಿಸಿದ್ದಿನಿ ಅವರಿಗೆ ಏನಂತ ಹೇಳೋದು?" ಅಮಾಯಕಳಂತೆ ಕೇಳಿದಳು
" ಅವರ ಮನೆಯವರ ದೃಷ್ಟಿಯಲ್ಲಿ ಸ್ವಲ್ಪ ದಿನ ಅವನು ಸತ್ತು ಹೋದ್ರೆನೇ ಒಳ್ಳೆಯದು. ಈ ಡೇವಿಡ್ ಯಾವ ವಿಷಯವನ್ನು ರಘುಗೆ ತಿಳಿಸದ ಹಾಗೆ ನಾನು ಮಾಡ್ತಿನಿ. ಹೆದರಬೇಡ, ನೀನು ಹೋಗು ಪುಟ್ಟ.."
"ನೋ ವೇ.... ಅಂಕಲ್, ನಿಮಗೊತ್ತಿಲ್ಲ.. ಹರ್ಷನ ಮನೆಯವರಿಗೆ ಅವನಂದ್ರೆ ಪ್ರಾಣ!! ಅವನಿಗೆ ಏನೇ ಆದರೂ ಅವರು ತುಂಬಾ ನೊಂದುಕೊಳ್ತಾರೆ. ಅದರಲ್ಲೂ ಪರಿ..? ಓ ಗಾಡ್...! ಸತ್ತಿದ್ದಾನೆ ಅಂತೆಲ್ಲ ಹೇಳೋದು ಬೇಡ. ನಾನು ಅವನನ್ನು ಪ್ರೀತಿಸ್ತಿನಿ ಅಂತ ಹೇಳಿದ್ರೆ ಡ್ಯಾಡ್ ಅವನನ್ನು ಏನು ಮಾಡಲ್ಲ, ಅಷ್ಟು ಸಾಕು ಅಂಕಲ್!"
''ಅವರ ಮನೆಯವರ ಜೊತೆಗಿದ್ರೆ ಅವನಿಗೆ ಹಳೆಯದೆಲ್ಲ ನೆನಪಾಗುತ್ತೆ ಅನ್ನೋ ಕಾರಣಕ್ಕೆ ನಿಮ್ಮಪ್ಪ ಅವನನ್ನ ಕೊಂದು ಬಿಡ್ತಾನೆ ಮಾನು... ಯೋಚನೆ ಮಾಡೋಕೆ ಟೈಂ ಇಲ್ಲ. ಅವನ ಕಡೆಯವರು ಬರುವಷ್ಟರಲ್ಲಿ ಎಲ್ಲಾ ನಿರ್ಧಾರ ಆಗಬೇಕು. ಡೋಂಟ್ ಬಿ ಏಮೋಷ್ನಲ್.. ಸ್ವಲ್ಪ ದಿನಗಳಲ್ಲಿ ಎಲ್ಲಾ ಸರಿಹೋಗುತ್ತೆ. ಬೇಗ ಒಂದು ನಿರ್ಧಾರಕ್ಕೆ ಬಾ, ಹರ್ಷನ ಜೀವ ಮುಖ್ಯನಾ? ಅವರ ಮನೆಯವರ ದುಃಖ ಮುಖ್ಯಾನಾ?" ಅವರ ಕಂಠದಲ್ಲಿ ಒಂದು ಕಮಾಂಡ್ ಇತ್ತು. ಆ ಒತ್ತಡದಲ್ಲಿ ಮಾನ್ವಿಯ ಮನಸ್ಥಿತಿ ಅವರ ಮಾತನ್ನು ಸಮ್ಮತಿಸಿತು.
ಅಥ್ರೇಯ ಮಾತನ್ನು ನಂಬಿದ ಮಾನ್ವಿ ನೇರವಾಗಿ ತಂದೆಯ ಬಳಿ ಹೋಗಿ ತನ್ನ ಬೇಡಿಕೆಯನ್ನು ಮುಂದಿಟ್ಟಿದ್ದಳು. ರಘುನಂದನ್, ಮಿಥಾಲಿಯನ್ನು ಸೇರಿ ಜೊತೆಗಿದ್ದ ಸಿಬ್ಬಂದಿಗಳು ಸಹ ಅವಳ ನಿರ್ಧಾರ ಸರಿಯಲ್ಲವೆಂದು ಬುದ್ದಿ ಹೇಳಿದ್ದರು. ಯಾರು ಏನೇ ಹೇಳಿದರೂ ಮಾನ್ವಿ ತನ್ನ ಹಠ ಬಿಡದೆ ಆತ್ಮಹತ್ಯೆ ಬೆದರಿಕೆಯೊಡ್ಡಿದಳು. ಹರ್ಷನಿಲ್ಲದೆ ತಾನು ಬದುಕಲ್ಲ ಎಂದು ಪಟ್ಟು ಹಿಡಿದು ಭಿಕ್ಕಿದಳು. ಹಣೆ ನೀವಿಕೊಂಡ ರಘುನಂದನ್ ಅಲ್ಲಿಂದ ತೆರಳಿದರು.
ಅವರು ಕ್ಯಾಬಿನಲ್ಲಿ ಚಿಂತಾಕ್ರಾಂತರಾಗಿ ಕುಳಿತಾಗ ಅವರ ಬಳಿ ಬಂದ ಅಥ್ರೇಯ ಅವರ ಭುಜ ಚಪ್ಪರಿಸಿ, " ರಘು ಇಲ್ಲಿಯವರೆಗೂ ಮಗಳು ಬೇಡಿದ್ದನ್ನು ಅಲ್ಲಗಳೆದವನಲ್ಲ. ಈಗೇಕೆ ಇಷ್ಟೊಂದು ಯೋಚನೆ? ನೀನು ಹ್ಮೂ ಅನ್ನು ಸಾಕು ನಾನೆಲ್ಲವನ್ನು ನೋಡಿಕೊಳ್ತಿನಿ "
"ಅದೇ, ಅದೇ ನಾನು ಮಾಡಿದ ದೊಡ್ಡ ತಪ್ಪು! ಒಬ್ಬಳೇ ಮಗಳಂತ ಮುದ್ದು ಮಾಡಿ ಅವಳು ಕಾಲಲ್ಲಿ ತೋರಿಸಿದ್ದನ್ನು ತಲೆ ಮೇಲೆ ಹೊತ್ತು ಮಾಡಿದೆ ನೋಡು... ಕಷ್ಟ ನಷ್ಟ ಯಾವುದರ ಪರಿಚಯವೇ ಇಲ್ಲ ಅವಳಿಗೆ..! ಗೊಂಬೆ ಕೇಳೋ ರೀತಿ ಮನುಷ್ಯನ್ನ ಕೇಳ್ತಿದಾಳೆ; ಬೇಕೇ ಬೇಕಂತೆ.. ಅವನು ಎಲ್ಲಾ ಮರೆತಿದ್ದಾನಂತೆ ದೂರ ಕರೆದುಕೊಂಡು ಹೋಗ್ತಾಳಂತೆ! ಅವನಿಗೂ ಅವನ ತಂದೆ ತಾಯಿ ಸಂಸಾರ ಇರುತ್ತೆ ಹೇಗೋ ಸಾಧ್ಯ ಇದೆಲ್ಲಾ? ನನಗಂತೂ ಸಾಕಾಗಿದೆ ಇವಳ ಹಠ. ನೀನೇ ಏನ್ಮಾಡ್ತಿಯೋ ಮಾಡು" ಮಗಳ ಮೇಲಿನ ಅಕ್ಕರೆಗೆ ಒಲ್ಲದ ಮನಸ್ಸಿನಿಂದ ರಘುನಂದನ್ ತಲೆದೂಗಿ ಸುಮ್ಮನಾದರು.
ಮೀಸೆ ತಿರುವಿ ಕುಹಕವಾಗಿ ನಕ್ಕ ಅಥ್ರೇಯನ ಅಸಲಿ ಆಟ ಆಗ ಶುರುವಾಗಿತ್ತು...
ಆ ಕೂಡಲೇ ರಘುನಂದನ್ ಬ್ಯಾಂಕ್ ಖಾತೆಯಿಂದ ಎಸ್ಪಿ ನಾಯರ್, ಪ್ಯಾಥಲಾಜಿಸ್ಟ್ ಪಟ್ಟಾಭಿರಾಂ ಹಾಗೂ ಹರ್ಷನ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾದ ಡಾಕ್ಟರ್ ಇತರೆ ಸಿಬ್ಬಂದಿಗಳಿಗೆ ಹಣ ಸಂದಾಯ ಮಾಡಲಾಯಿತು. ಈ ವಿಷಯ ಹೊರಗಡೆ ಎಲ್ಲಿಯೂ ಬಹಿರಂಗವಾಗಬಾರದು ಎಂದು ಸ್ವತಃ ರಘುನಂದನ್ ಕಡೆಯಿಂದ ಎಲ್ಲರಿಗೂ ಎಚ್ಚರಿಕೆಯೊಂದನ್ನು ನೀಡಲಾಯಿತು.
ಪೂರ್ವ ನಿಯೋಜಿತ ಯೋಜನೆಯಂತೆ, ಆಸ್ಪತ್ರೆಗೆ ಧಾವಿಸಿದ ಹರ್ಷನ ತಂದೆ ತಾಯಿಗೆ ಕೋಮಾದಲ್ಲಿದ್ದ ಹರ್ಷನನ್ನ ತೋರಿಸಿ ಬ್ರೇನ್ ಇಂಜ್ಯೂರಿಯಿಂದ ಆತ ಮೃತಪಟ್ಟ, ಅದು ಅವನ ನಿರ್ಜೀವ ದೇಹ, ಶವವೆಂದು ನಂಬಿಸಲಾಯಿತು. ಶವ ಸ್ಥಳಾಂತರ ಮಾಡುವ ಸ್ಥಿತಿಯಲ್ಲಿಲ್ಲವೆಂದು ಸಬೂಬು ನೀಡಿ, ಶವಸಂಸ್ಕಾರಕ್ಕೆ ಬೇರೊಂದು ಮೃತದೇಹವನ್ನು ಸಿದ್ದಪಡಿಸಿ ಅವರ ಕಣ್ಣೆದುರೇ ಸುಡಲಾಯಿತು.
ಒಂದೆಡೆ ವಿನಾಯಕ್ ಮತ್ತು ಅವರ ಪತ್ನಿ ಬೇರೆ ಯಾವುದೋ ಶವವನ್ನು ಮಗನೆಂದು ಭಾವಿಸಿ ರೋಧನೆಯಿಂದ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರೆ,
ಮತ್ತೊಂದೆಡೆ ಅದೇ ಸಮಯದಲ್ಲಿ ಆಸ್ಪತ್ರೆಯ ಮೇಲಿನ ತುರ್ತು ಹೆಲಿಕಾಪ್ಟರ್ ಮೂಲಕ ಕೋಮಾದಲ್ಲಿದ್ದ ಹರ್ಷನನ್ನು ಚಿಕಿತ್ಸೆಗಾಗಿ ಸಿಡ್ನಿಗೆ ಕರೆದೊಯ್ಯಲಾಯಿತು.
ಆಗಿನಿಂದ ಮಾನ್ವಿ ತಂದೆಯನ್ನು ಕಂಡರೆ ಚೇಳು ಕುಟುಕಿದಂತೆ ಬೆಚ್ಚಿ ಬೀಳುತ್ತಿದ್ದಳು. ದೇಶದಿಂದ ದೂರವಾದಳು. ಅವರೊಂದಿಗಿನ ಮಾತುಕತೆ ನಿಂತು ಹೋಯಿತು. ಆ ಮಧ್ಯೆ ಅವರಿಗೆ ಚಿಕ್ಕ ಹೃದಯದ ಸಮಸ್ಯೆ ಉಂಟಾಗಿತ್ತು. ಆದರೂ ಮಾನ್ವಿ ತಂದೆಯ ಭೇಟಿ ಮಾಡಲು ಬರಲಿಲ್ಲ. ತಾಯಿ ಜೊತೆಗಂತೂ ಆಪ್ತ ಭಾವಗಳು ಮೊದಲೇ ಇರಲಿಲ್ಲ. ಅವರ ಬುದ್ದಿಮಾತಿಗೂ ಬೆಲೆ ಕೊಡಬೇಕೆಂದು ಆಕೆಗೆ ಅನ್ನಿಸಲಿಲ್ಲ.
ಸಮಯ ಜರುಗುತ್ತ ಒಂದುವರೆ ತಿಂಗಳು ಕಳೆದರೂ ಹರ್ಷ ಇನ್ನೂ ಪ್ರಜ್ಞಾವಸ್ಥೆಗೆ ಮರಳಿರಲಿಲ್ಲ. ಮಾನ್ವಿ ಪ್ರತಿಕ್ಷಣ ಪ್ರತಿದಿನ ಊಟ ನಿದಿರೆ ಪರಿವಿಲ್ಲದೆ ಕಣ್ಣರೆಪ್ಪೆಯಂತೆ ಅವನನ್ನು ಜತನ ಮಾಡಿದ್ದಳು.
ಹೀಗಿರುವಾಗ ಮತ್ತೊಂದು ವಾರದ ಬಳಿಕ, ಒಂದು ಮುಂಜಾನೆ ಮಾನ್ವಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ವಾರ್ಡ್ ನಲ್ಲಿ ಹರ್ಷ ಇರಲಿಲ್ಲ. ಗಾಬರಿಯಿಂದ ಸಿಸ್ಟರ್‌ನ್ನು ಕೇಳಿದಾಗ 'ಆತನಿಗೆ ರಾತ್ರಿಯೇ ಪ್ರಜ್ಞೆ ಬಂದಿತ್ತು. ಬೆಳಿಗ್ಗೆ ಅಥ್ರೇಯ ಅವರು ತಮ್ಮ ಜೊತೆಗೆ ಮನೆಗೆ ಕರೆದೊಯ್ದರು' ಎಂದು ತಿಳಿಸಿದ್ದಳು. ಮಾನ್ವಿ ಹರ್ಷನ ಕಂಡಿಷನ್ ಬಗ್ಗೆ ಕೂಡ ಕೇಳಿದಾಗ ತನ್ನ ಹಳೆಯ ಜ್ಞಾಪಕವನ್ನು ಕಳೆದುಕೊಂಡ ಹರ್ಷ, ಚಿತ್ತ ಸ್ಥಿಮಿತತೆಯನ್ನು ಕಳೆದುಕೊಂಡಿದ್ದು, ನರ್ಸ್ ವಾರ್ಡ್ ಬಾಯ್ಗಳಿಗೆ ಕೈಗೆ ಸಿಕ್ಕಿದ್ದನ್ನು ಎಸೆದು ರಂಪ ಕೂಡ ಮಾಡಿದ್ದನೆಂದು ತಿಳಿಯಿತು.
ಕೂಡಲೇ ಅಥ್ರೇಯ ವಾಸವಿದ್ದ ಮನೆಗೆ ದಡಬಡಾಯಿಸಿ ಬಂದವಳನ್ನು ಸೆಕ್ಯೂರಿಟಿ ಹೊರಗೆ ನಿಲ್ಲಿಸಿ, ಪರಿಶೀಲನೆ ಮಾಡಿ ಅಥ್ರೇಯನ ಆಜ್ಞೆ ಪಡೆದು ಒಳಗೆ ಬಿಟ್ಟ. ಅಥ್ರೇಯನ ವರ್ತನೆ ಸಹ ಎಂದಿನಂತಿರಲಿಲ್ಲ. ಮಾನ್ವಿಗೆ ಹರ್ಷನ ಸನಿಹವಿರಲಿ, ಅವನ. ಮುಖ ನೋಡಲು ಬಿಡಲಿಲ್ಲ.
ಮಾನ್ವಿಗೆ ಆಘಾತದೊಂದಿಗೆ ಅನುಮಾನ ಶುರುವಾಯಿತು. ಅವಳಿಗೆ ಹರ್ಷನನ್ನ ವಿಷಮ ಸ್ಥಿತಿಯಲ್ಲಿ ಅವರೊಂದಿಗೆ ಬಿಟ್ಟು ಬಿಡಲು ಮನಸ್ಸೊಪ್ಪಲಿಲ್ಲ.
ಅಥ್ರೇಯನ ಆಣತಿಗೂ ಮಣಿಯದೆ ಹರ್ಷನ ಕೋಣೆ ಹೊಕ್ಕು ಅವನನ್ನು ಪರೀಕ್ಷಿಸಿದಾಗ ಆಕೆಗೆ ಕಂಡ ದೃಶ್ಯ ಬೆಚ್ಚಿ ಬೀಳಿಸುವಂತಿತ್ತು. ಹರ್ಷನನ್ನ ಕಂಟ್ರೋಲ್ ಮಾಡುವುದಕ್ಕೊಸ್ಕರ ಹೈಯೋಸ಼ಿನ್ ಎಂಬ ಡ್ರಗ್ ಇಂಜೆಕ್ಟ್ ಮಾಡಲಾಗುತ್ತಿತ್ತು. ಸಿಟ್ಟಿನ ರಭಸದಲ್ಲಿ ಮಾನ್ವಿ ಅಲ್ಲಿದ್ದ ಡಾಕ್ಟರ್ ಕೈಯಿಂದ ಇಂಜೆಕ್ಷನ್ ಕಿತ್ತು ಎಸೆದಳು. ಅದೇ ಕೋಪದಲ್ಲಿ ಅಥ್ರೇಯನ ಕೊರಳಪಟ್ಟಿ ಹಿಡಿದು ದುಮುಗುಟ್ಟಿದಳು. "ಯಾಕೆ? ಯಾಕೆ ಹರ್ಷನ ಜೊತೆ ಹೀಗೆಲ್ಲ ಮಾಡ್ತಿದಿರಾ? "
" ಹರ್ಷ?? ಯಾವ ಹರ್ಷ? ಇವನು ನನ್ನ ಮಗ ಸಂಕಲ್ಪ್ ಅಥ್ರೇಯ!!" ಅವರ ಬದಲಾದ ಧ್ವನಿ ಕಠೋರವಾದ ಹಾವಭಾವ ನೋಡಿ ಅಚೇತನಳಾದಳು ಮಾನ್ವಿ
"ಅಂಕಲ್ ನೀವು ತಮಾಷೆ ಮಾಡ್ತಿದಿರಾ? ಇವನು ಹರ್ಷ. ಹರ್ಷ ಭಾರ್ಗವ್. ಅಲ್ಲೇ ಇದ್ರೆ ಅವನಿಗೆ ನನ್ನ ಡ್ಯಾಡ್ ಏನಾದ್ರೂ ಅಪಾಯ ಮಾಡಬಹುದು ಅಂತ ತಾನೇ ಇಲ್ಲಿಗೆ ಕರೆದುಕೊಂಡು ಬಂದಿದ್ದು. ಇಲ್ಲಿ ಯಾವ ತೊಂದರೆಯೂ ಇಲ್ಲ. ಈಗ ಅವನಿಗೆ ಪ್ರಜ್ಞೆ ಕೂಡ ಬಂದಿದೆ ಎಲ್ಲಾ ನಿಜ ಹೇಳೋಣ. ಇವನನ್ನು ಕ್ಯೂರ್ ಮಾಡಿ ಅವರ ಕುಟುಂಬಕ್ಕೆ ವಿಷಯ ತಿಳಿಸೋಣ" ರಮಿಸುವಂತೆ ಹೇಳಿದಳು. ಯಾವುದೋ ಅಪಾಯಕರ ಸೂಚನೆ ಅವಳಿಗೆ ಸುಳಿದಿತ್ತು.
ಗಹಗಹಿಸಿ ನಗಲಾರಂಭಿಸಿದ ಅಥ್ರೇಯ...
"ಯು ಸಿಲ್ಲಿ ಗರ್ಲ್ ಯಾರ್ ಏನೇ ಹೇಳಿದ್ರು ನಂಬ್ತಿಯಾ..
ನಿಜವಾಗಿಯೂ ನಿನ್ನ ಫ್ರೆಂಡ್ ಜೀವಾಪಾಯದಿಂದ ಬಚಾವಾದ್ನಾ? ಹ್ಹಹ್ಹಹ್ಹಾ ನನ್ನ ಮೇಲೆ ನಂಬಿಕೆ ಇಟ್ಟು ನನ್ನಾಸೆ ನೇರವೇರಿಸಿದ್ದಕ್ಕೆ ಥ್ಯಾಂಕ್ಸ್ ಪುಟ್ಟ..."
" ಅಂಕಲ್... ಏನಾಗಿದೆ ನಿಮಗೆ? ಯಾಕೆ ಏನೇನೋ ಮಾತಾಡ್ತಿದೀರಾ? ಪ್ಲೀಸ್ ಅಂಕಲ್.. ಹೀಗೆಲ್ಲ ಮಾತಾಡಬೇಡಿ, ನನಗೆ ದಿಕ್ಕೇ ತೋಚದಂತಾಗುತ್ತೆ" ಇವರು ಸಹ ತಂದೆಯೊಂದಿಗೆ ಶಾಮೀಲಾದರೋ ಏನೋ ಎಂಬುದು ಆಕೆಯ ಕಳವಳ.
"ವಾಸ್ತವ... ವಾಸ್ತವ ಹೇಳ್ತಿದಿನಿ ಮಾನು ಪುಟ್ಟ.. ನಾನು ಅವತ್ತು ರಾತ್ರೋರಾತ್ರಿ ಮುಂಬೈಗೆ ಹೊರಟು ಬಂದದ್ದೆ ಈ ಹರ್ಷನ ಕಥೆ ಮುಗಿಸೋಣಂತ. ಆದರೆ ಅವನ ಅದೃಷ್ಟ ಚೆನ್ನಾಗಿತ್ತು, ಟ್ಯಾಕ್ಸಿ ಡ್ರೈವರ್ ಸತ್ತರೂ ಇವನು ಬದುಕುಳಿದ. ಜೊತೆಗೆ ನನ್ನ ಅದೃಷ್ಟ ಕೂಡ ಚೆನ್ನಾಗಿತ್ತು ಅವನು ತನ್ನ ಹಳೆಯ ಜ್ಞಾಪಕಶಕ್ತಿ ಕಳೆದುಕೊಂಡ" ವ್ಯಂಗ್ಯ ಹಾಗೂ ಉಗ್ರವಾಗಿ ಮಾತನಾಡುತ್ತಿದ್ದ ಅಥ್ರೇಯ. ಮಾನ್ವಿ ಅವನ ವರ್ತನೆಯಲ್ಲಾದ ಬದಲಾವಣೆಗಳನ್ನು ಕಂಡು ಶಾಕ್ ತಗುಲಿದಂತೆ ನಿಂತಿದ್ದಳು.
"ಮಾನು.... ಇನ್ನೂ ಈ ಸಸ್ಪೆನ್ಸ್ ಎಲ್ಲಾ ಯಾಕೆ, ಎಲ್ಲಾ ನಿಜ ಹೇಳ್ತಿನಿ ಕೇಳು... ಸ್ಟೀಲ್ ಇಂಡಸ್ಟ್ರೀಸ್ ಗೋದಾಮಿನ ನೆಲಮಾಳಿಗೆಯಲ್ಲಿ ನಡಿತೀರೋ ಗನ್ ಮಾಫಿಯಾ.. ಅದು ನಿಮ್ಮಪ್ಪ ಅಲ್ಲ. ನಾನು ಮಾಡ್ತಿರೋದು!! ಎಷ್ಟೋ ವರ್ಷಗಳ ಶ್ರಮದಿಂದ ನಾನು ಕಟ್ಟಿದ ಕತ್ತಲೆ ಸಾಮ್ರಾಜ್ಯವನ್ನು ಹಾಳು ಮಾಡೋಕೆ ಹೊರಟಿದ್ದ ಈ ಹರ್ಷ! ಅದಕ್ಕೆ ಬೇರೆ ದಾರಿಯಿಲ್ಲದೇ ಇವನ ಕಥೆ ಮುಗಿಸಬೇಕಾಯ್ತು.." ಅಥ್ರೇಯ ಹೇಳುವುದನ್ನು ಕೇಳಿ ಮಾನ್ವಿ ಎದೆ ನಡುಗಿ ಹೋಯಿತು.
"ಅಂದ್ರೆ ಇಷ್ಟು ದಿನ ನಾನು ನನ್ನ ಡ್ಯಾಡ್ ಬಗ್ಗೆ ತಿಳಿದುಕೊಂಡಿದ್ದೆಲ್ಲ ಸುಳ್ಳಾ?? ಹರ್ಷನ ಮೇಲೆ ಅಟ್ಯಾಕ್ ಮಾಡಿಸಿದ್ದು ನೀನಾ??" ಶಾಕ್ ಮೇಲೆ ಶಾಕ್ ತಗುಲುತ್ತಲೇ ಇತ್ತು.
"ಯು... ಬ್ಲಡಿ... ಯಾಕೆ ಹೀಗೆಲ್ಲ ಮೋಸ ಮಾಡಿದೆ? ಏನ್ ಮಾಡ್ಬೇಕು ಅಂತಿದೀಯಾ ಹರ್ಷನ್ನ? " ಅವನ ಕೊರಳಪಟ್ಟಿ ಬಿಗಿ ಹಿಡಿದು ಕಿರುಚಿದಳು
ಅವಳ ಕಿರುಚಾಟಕ್ಕೆ ಅವನ ಮೊಗ ಇನ್ನಷ್ಟು ಅರಳಿತು.
"ರಿಲ್ಯಾಕ್ಸ್ ಮಾನು.. ಅದೇ ಪಾಯಿಂಟ್ ಗೆ ಬರ್ತಿದೀನಿ. ಅವತ್ತು ಹರ್ಷ ಬದುಕುಳಿದದ್ದು ನನ್ನ ಪಾಲಿನ ಅದೃಷ್ಟ ಯಾಕಂದ್ರೆ...
ಬಾ ನಂಜೊತೆ.."
ರೂಮಿನೊಳಗೆ ಕೈ ಹಿಡಿದು ಎಳೆದೊಯ್ದ. ಅಲ್ಲಿ ಗೋಡೆಗಳ ತುಂಬ ಹರ್ಷನದೇ ಫೋಟೋಗಳು ರಾರಾಜಿಸುತ್ತಿದ್ದವು. ಮಾನ್ವಿ ರೆಪ್ಪೆ ಮಿಟುಕಿಸದೆ ಉಸಿರು ಬಿಗಿ ಹಿಡಿದು ಎಲ್ಲವನ್ನೂ ನೋಡುತ್ತ ನಿಂತು ಬಿಟ್ಟಳು.
" ಹರ್ಷನ ಫೋಟೋಗಳು ಇಲ್ಲಿ ಹೇಗೆ ಅಂತ ನೋಡ್ತಿದಿಯಾ? ಫೋಟೋಗಳಲ್ಲಿರೋದು ಹರ್ಷ ಅಲ್ಲ.... ನನ್ನ ಮಗ ಸಂಕಲ್ಪ್!! ಸಂಕಲ್ಪ್ ಅಥ್ರೇಯ!! ಥೇಟ್ ಹರ್ಷನ ಹಾಗೆ ಇದ್ದಾನಲ್ವ...
ನೀನು ನೋಡಿಲ್ಲ ಬಿಡು.. ಶಾಲೆ ಕಾಲೇಜು ಉನ್ನತ ವ್ಯಾಸಂಗ, ನನ್ನ ಮಗ ಭಾರತಕ್ಕೆ ಬಂದಿದ್ದು ತುಂಬಾ ಕಡಿಮೆ! ಈಗ ಇಲ್ಲೇ ಸಿಡ್ನಿಯಲ್ಲಿ ಕಂಪನಿ ವ್ಯವಹಾರ ನೋಡಿಕೊಳ್ತಿದ್ದ. ಆದರೆ ಇದೇ ಮಹಡಿ ಮೇಲಿನಿಂದ ಬಿದ್ದು..." ಮಾತು ನಿಲ್ಲಿಸಿದ ಅಥ್ರೇಯ.
"ಸತ್ತು ಒಂದು ವರ್ಷವಾಯ್ತು. ಇಲ್ಲೇ ಸಿಡ್ನಿಯಲ್ಲಿ! ಆದರೆ ಈ ವಿಷಯ ನನಗೆ ನಿಮ್ಮಪ್ಪನಿಗೆ ಬಿಟ್ಟು ಪ್ರಪಂಚಕ್ಕೆ ಗೊತ್ತಿಲ್ಲ. ಅಷ್ಟೇ ಯಾಕೆ ನನ್ನ ಧರ್ಮಪತ್ನಿ ಅಂದರೆ ಅವನ ಹೆತ್ತ ತಾಯಿಗೂ ಸಹ ಗೊತ್ತಿಲ್ಲ. ಅಷ್ಟು ರಹಸ್ಯವಾಗಿದೆ ಈ ವಿಷಯ! ಜಗತ್ತಿನ ದೃಷ್ಟಿಯಲ್ಲಿ ಆತ ಇನ್ನೂ ಜೀವಂತ..
ಅವತ್ತು ಆಸ್ಪತ್ರೆಯಲ್ಲಿ ಹರ್ಷನ್ನ ಮೊದಲ ಬಾರಿ ನೋಡಿದಾಗಲೇ ನನಗೆ ಆಶ್ಚರ್ಯವಾಯ್ತು. ನನ್ನ ಮಗನನ್ನೇ ಮತ್ತೆ ನೋಡಿದ ಸಂತೋಷ ಅದು! ನಿಮ್ಮಪನ್ನ ಒಪ್ಪಿಸಿದ್ದು ಇದೇ ಕಾರಣಕ್ಕೆ.."
"ನಿಮ್ಮ ಮಗ ಸತ್ತೋದ ಅಂತ ಬೇರೆ ಯಾರನ್ನೋ ಹೀಗೆ ನಿಮ್ಮ ಮಗ ಮಾಡಿಕೊಳ್ಳಲು ಹೊರಟಿದ್ದೀರಾ... ನಾಚಿಕೆ ಆಗಲ್ವಾ ನಿಮಗೆ... ನಾನು ಅದಕ್ಕೆ ಅವಕಾಶ ಕೊಡಲ್ಲ ಮಿ.ಅಥ್ರೇಯ, ಹರ್ಷನಿಗೆ ಅವರ ಕುಟುಂಬಕ್ಕೆ ಅನ್ಯಾಯ ಆಗೋದಕ್ಕೆ ನಾನು ಬಿಡಲ್ಲ. "
" ಇವನನ್ನು ಮಗ ಅಂತ ಸಾಕಿ ಸಲುಹಿ ಉಪಚಾರ ಮಾಡೋಕೆ ನನಗೂ ತಲೆ ಕೆಟ್ಟಿಲ್ಲ. ನನಗೆ ಬೇಕಾಗಿರೋದು ನನ್ನ ಮಗನ ಹೆಸರಲ್ಲಿರೋ ಹತ್ತು ಸಾವಿರ ಕೋಟಿ ಆಸ್ತಿ..! ಅದು ನನಗೆ ಸಿಕ್ಕಮೇಲೆ ನೀನು ನಿನ್ನ ಹರ್ಷ ಸ್ವತಂತ್ರ. ಆದರೆ ಅಲ್ಲಿಯವರೆಗೂ ನೀನು ನಾನು ಹೇಳಿದ ಹಾಗೆ ಕೇಳಬೇಕು!"
"ನಾನೇನು ನಿಮ್ಮ ಅಡಿಯಾಳಲ್ಲ ನೀವು ಹೇಳಿದ್ದನ್ನು ಕೇಳೋಕೆ; ಈಗಲೇ ಡ್ಯಾಡ್ ನಾ ಕರೆಸಿ ನಿಮ್ಮ ಕುತಂತ್ರ ಎಲ್ಲಾ ಬಯಲು ಮಾಡ್ತಿನಿ" ತಕ್ಷಣ ಬೇರೆ ದೇಶದಲ್ಲಿದ್ದ ತನ್ನ ತಂದೆಗೆ ಕರೆ ಮಾಡಿ ಮುಖ್ಯವಾದ ಕೆಲಸವಿದೆ ಎಂದು ಬರಹೇಳಿದಳು.
"ಎಂ.ಆರ್ ಇಂಡಸ್ಟ್ರೀಸ್ ಇರೋದು ನಿಮ್ಮಪ್ಪ ರಘುನಂದನ್ ಹೆಸರಲ್ಲಿ! ಅದರ ಸಂಪೂರ್ಣ ಲೀಗಲ್ ಅಥೋರಿಟಿ ಅವನದೇ! ನಾನು ಕೇವಲ ಒಬ್ಬ ಶೇರ್ ಇನ್ವೆಸ್ಟ್‌ರ್ ಮಾತ್ರ. ಫಿಫ್ಟಿ ಪರ್ಸೆಂಟ್ ಶೇರ್ ಇನ್ವೆಸ್ಟ್ ಮಾಡಿದ್ದಕ್ಕೆ ರಘು ನನ್ನನ್ನ ತನ್ನ ಬ್ಯುಸಿನೆಸ್ ಪಾರ್ಟ್ನರ್ ಅಂತ ಮಾಡಿಕೊಂಡದ್ದೇನೋ ನಿಜ, ಆದರೆ ಅದು ಬರೀ ಮಾತಿನ ಒಡಂಬಡಿಕೆ! ನಾನು ಆ ಕಂಪನಿಯ ಪಾರ್ಟ್ನರ್ ಎನ್ನುವುದಕ್ಕೆ ಯಾವುದೇ ಡಾಕ್ಯುಮೆಂಟ್ ಅಥವಾ ಲೀಗಲ್ ಪೇಪರ್‌ಗಳ ಲಿಖಿತ ಪುರಾವೆಯಿಲ್ಲ. ನನ್ನ ಮೇಲಿನ ನಂಬಿಕೆಯಿಂದ ಫ್ಯಾಕ್ಟರಿ ಕಡೆಗೆ ತಲೆ ಕೂಡ ಹಾಕಲ್ಲ ನಿಮ್ಮಪ್ಪ. ಬರೋ ಲಾಭ ನಷ್ಟದ ಬಗ್ಗೆ ನನಗೂ ಚಿಂತೆಯಿಲ್ಲ. ಯಾಕಂದ್ರೆ ಅದರ ಐವತ್ತರಷ್ಟು ಗಳಿಕೆ ಮಾಫಿಯಾದಿಂದ ಸಿಗುತ್ತೆ. ನಿಮ್ಮಪ್ಪನಿಗೆ ಫ್ಯಾಕ್ಟರಿಯ ಅಂಡರ್ ಗ್ರೌಂಡ್‌ನಲ್ಲಿ ನಡೆಯುವ ಯಾವ ವಿಷಯವೂ ಗೊತ್ತಿಲ್ಲ. ಆದರೂ ಅಲ್ಲಿ ನಡೆಯುವ ಅವ್ಯವಹಾರವೆಲ್ಲ ರಘುನಂದನ್ ಹೆಸರಿನಿಂದಲೇ ಕುಖ್ಯಾತಿ ಪಡೆದಿದೆ. ಅದಕ್ಕೆಲ್ಲ ಅವನೇ ಹೊಣೆ!
ಒಂದು ಫೋನ್ ಕಾಲ್ ಸಾಕು,, ಮುಂಬೈನಲ್ಲಿ ಅಜಾನುಬಾಹು ರೌಡಿಗಳು ನನ್ನ ಆಜ್ಞೆ ಪಾಲಿಸುತ್ತಾರೆ. ಆದರೆ ಹೆಸರು ಮಾತ್ರ ರಘುನಂದನ್! ಡೇವಿಡ್ ಮತ್ತು ಕೆಲವರನ್ನು ಹೊರತುಪಡಿಸಿ ಇದರ ರೂವಾರಿ ನಾನು ಅನ್ನೋದು ಯಾರಿಗೂ ತಿಳಿದಿಲ್ಲ. ತಿಳಿಯೋದು ಇಲ್ಲ.
ನೀನು ಪೋಲಿಸ್ ಕಂಪ್ಲೇಂಟ್ ಕೊಟ್ಟರೂ ಅರೆಸ್ಟ್ ಆಗೋದು ನಿಮ್ಮಪ್ಪ. ಹೆಸರು ಹಾಳಾಗೋದು ನಿಮ್ಮಪ್ಪನದೇ. ಮುಂದೆ ನಿನ್ನಿಷ್ಟ..." ಅಥ್ರೇಯ ನಸುನಗುತ್ತ ಸೋಫಾ ಮೇಲೆ ಮೈ ಚೆಲ್ಲಿ ಹಾಯಾಗಿ ಕಣ್ಮುಚ್ಚಿದ.
"ನನ್ನ ಡ್ಯಾಡ್ ನಿಮ್ಮನ್ನು ಎಷ್ಟು ನಂಬಿದ್ದಾರೆ, ಗೌರವಿಸ್ತಾರೆ. ನಿಮ್ಮ ಕಂಪನಿಗೆ ಲಾಸ್ ಆದಾಗ ನಿಮಗೆ ಆಸರೆಯಾಗಿದ್ದವರು ನನ್ನ ಡ್ಯಾಡ್! ಅವರ ಮೇಲೆ ಯಾಕೆ ನಿಮಗೆ ಇಷ್ಟೊಂದು ದ್ವೇಷ?" ಕುಪಿತಳಾದಳು.
"ಒಂದು ಕಾಲದಲ್ಲಿ ಶಾಲೆ ಕಲಿಯಲು ನನ್ನಿಂದ ದುಡ್ಡಿನ ಸಹಾಯ ಬೇಡ್ತಿದ್ದ ಆ ನಾಯಿ, ನನಗೆ ಆಸರೆಯಾಗಿದ್ದಲ್ಲ; ನನ್ನ ಋಣಭಾರ ತೀರಿಸ್ತಿದ್ದಾನೆ ಅಷ್ಟೇ! ಭಿಕಾರಿ ಹಾಗೆ ಇದ್ದ, ಈಗ ಟಾಪ್ ಬ್ಯುಸಿನೆಸ್ ಮ್ಯಾನ್, ರಿಚೆಸ್ಟ್ ಪರ್ಸನ್ ಏನೆಲ್ಲಾ ಹೊಗಳಿಕೆ ಸನ್ಮಾನ ಆತಿಥ್ಯ!!" ತಕ್ಷಣ ಗುಡುಗಿದ ಅಥ್ರೇಯ.
"ಟಾಪ್ ಬ್ಯುಸಿನೆಸ್ ಮ್ಯಾನ್, ' ಆ ಸ್ಥಾನ ಯಾವತ್ತಿಗೂ ನನ್ನದು.. ರೂಲ್ಸ್ ರೆಗ್ಯೂಲೇಶನ್ ಅಂತ ಸಾಯೋ ಭಿಕಾರಿ ನಿಮ್ಮಪ್ಪನಿಗಲ್ಲ.. ನನ್ನ ಗುರಿಯನ್ನು ಈಡೇರಿಸುವ ನನ್ನ ಏಕೈಕ ದಾಳ ಈ ಹರ್ಷ!! ಕನ್ನಡಿಯೊಳಗಿನ ಗಂಟಿನಂತೆ ಕೊಳೆಯುತ್ತಿರುವ ಕೋಟ್ಯಾನುಕೋಟಿ ಆಸ್ತಿ, ಅದನ್ನು ನನಗೆ ಸಿಗುವಂತೆ ಮಾಡಬಲ್ಲವನು ಇದೇ ಹರ್ಷ! " ಅವನ ಕಣ್ಣಲ್ಲಿ ದುಡ್ಡಿನ ವ್ಯಾಮೋಹ ಎದ್ದು ಕಾಣುತ್ತಿತ್ತು.
"ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ ಮಿ.ಅಥ್ರೇಯ. ಡ್ಯಾಡ್ ಬರುತ್ತಿದ್ದ ಹಾಗೆ ನಿನ್ನ ಮುಖವಾಡ ಕಳಚಿ ಬೀಳುತ್ತೆ! ಭಿಕಾರಿಯಾಗೋಕೆ ನೀನು ರೆಡಿಯಾಗಿರು" ಚಿಟಿಕೆ ಹೊಡೆದು ಎಚ್ಚರಿಸಿದಳು. ಅಥ್ರೇಯ ಮಂದಸ್ಮಿತನಾಗಿ ತಲೆ ಕೊಡವಿದ.
*********
ಕೆಲವೇ ಗಂಟೆಗಳಲ್ಲಿ ಮಗಳ ಎದುರು ಹಾಜರಾಗಿದ್ದರು ರಘುನಂದನ್. ಏನು ವಿಷಯ? ಯಾಕೆ ಗಾಬರಿಯಿಂದ ಫೋನ್ ಮಾಡಿದ್ದೆ? ಮುಂತಾಗಿ ವಿಚಾರಿಸಿದರು. ಒಂದು ರೂಮಿನೊಳಗೆ ಅವರನ್ನು ವೈಯಕ್ತಿಕವಾಗಿ ಕರೆತಂದು ಕೂರಿಸಿ, ತಲೆ ತಗ್ಗಿಸಿ ಅವರ ಬಳಿ ಕ್ಷಮೆಯಾಚಿಸಿ ಅಥ್ರೇಯನ ಮೋಸ, ದುರ್ಬುದ್ದಿ, ಹರ್ಷನಿಗಾದ ಪ್ರಮಾದವನ್ನು ವಿವರಿಸ ತೊಡಗಿದ್ದಳು ಮಾನ್ವಿ. ತಾನು ಹತ್ತು ಮಾತಾಡಿದರೂ ತಂದೆಯಿಂದ ಒಂದೇ ಒಂದೂ ಪ್ರತಿಕ್ರಿಯೆ ಬರದಿದ್ದಾಗ ತಲೆಯೆತ್ತಿ ನೋಡಿದವಳು ಕಂಪಿಸಿ ಹೋದಳು. ರಘುನಂದನ್ ಬೆವರಿನಿಂದ ತೊಪ್ಪನೆ ತೊಯ್ದು, ಕಣ್ಣು ಮೇಲೆ ಮಾಡಿ, ಎದೆ ಹಿಡಿದುಕೊಂಡು ಮಾತು ಹೊರಬಾರದೆ ನರಳುತ್ತಿದ್ದರು.
ಕೂಡಲೇ ಅವರನ್ನು ಪಿಎ, ಸೆಕ್ಯೂರಿಟಿಯವರ ಸಹಾಯದಿಂದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಅವರ ಸ್ಥಿತಿ ಸುಧಾರಿಸಿತು. ಮಲಗಿ ವಿಶ್ರಾಮ ತೆಗೆದುಕೊಳ್ಳುತ್ತಿದ್ದರು.
ತಾನು ಹೇಳಿದ ವಿಷಯ ಕೇಳಿ ಹೀಗಾಗಿರಬಹುದೇ ಎಂದು ಗಾಜಿನ ಬಾಗಿಲಿನಿಂದ ತಂದೆಯನ್ನೇ ನೋಡುತ್ತಿದ್ದ ಮಾನ್ವಿ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುತ್ತಿದ್ದರೆ ಮಂದಹಾಸದಿಂದ ಅವಳನ್ನು ಎದುರುಗೊಂಡಿದ್ದ ಅಥ್ರೇಯ..
"ನೀನು ನಿಜ ಹೇಳುವ ಸಮಯಕ್ಕೆ ಸರಿಯಾಗಿ ನಿಮ್ಮಪ್ಪನಿಗೆ ಹಾರ್ಟ್ ಅಟ್ಯಾಕ್ ಹೇಗೆ ಬಂತು ಅಂತ ಯೋಚನೆ ಮಾಡ್ತಿದಿಯಾ? " ಕೇಳಿದ. ಅನುಮಾನದಿಂದ ಅವನುತ್ತರಕ್ಕಾಗಿ ಎದುರು ನೋಡಿದಳಾಕೆ.
"ಕೆಲವು ದಿನಗಳ ಹಿಂದೆ ರಘುಗೆ ಹಾರ್ಟ್ ಪ್ರಾಬ್ಲಮ್ ಬಂದಿತ್ತು ನೆನಪಿದೆಯಾ?" ಅವರ ಮೇಲಿನ ಸಿಟ್ಡಿಗೆ ತಂದೆ ಎಂಬ ಕಾಳಜಿಯಿಂದ ಸಹ ಒಮ್ಮೆ ನೋಡಲು ಹೋಗಿರಲಿಲ್ಲ ತಾನು. ಅವಳ ಕಣ್ಣು ತೇವವಾಯಿತು.
"ರಘುಗೆ ಏನು ಸಮಸ್ಯೆಯಾಗಿತ್ತು ಅನ್ನೋದು ಬಹುಶಃ ನಿನಗೆ ಗೊತ್ತಿಲ್ಲ ಅನ್ಸುತ್ತೆ..
ಅವತ್ತು ನಿಮ್ಮಪ್ಪನ ಹಾರ್ಟ್ ಪಲ್ಸ್ ರೇಟಿಂಗ್ ಕಡಿಮೆಯಾಗಿತ್ತು. ಅದನ್ನು ನಾರ್ಮಲ್ ಕಂಡಿಷನ್ ಗೆ ತರಲು ಅವನ ದೇಹದಲ್ಲಿ ಪೇಸ್‌ಮೇಕರ್‌ನ್ನು ಅಳವಡಿಸಲಾಯ್ತು. ಅದೇ ಪೇಸ್‌ಮೇಕರ್‌ನಿಂದ ನಿಮ್ಮಪ್ಪ ಇಲ್ಲಿಯವರೆಗೂ ಬದುಕಿರೋದು. ಅದೇ ಪೇಸ್‌ಮೇಕರ್‌ನಿಂದ ನಿಮ್ಮಪ್ಪ ಇವತ್ತು ಸಾಯ್ತಿದ್ದ ಕೂಡ..." ನಕ್ಕ. ಮಾನ್ವಿ ಕಣ್ಣು ಅಗಲವಾದವು.
"ಅರ್ಥ ಆಗಲಿಲ್ವಾ.. ಅಲ್ಲಿನೋಡು.. " ಎಂದು ರಘುನಂದನ್‌ನ ಪಿಎ ಕಡೆಗೆ ಕೈ ತೋರಿಸಿದ ಅಥ್ರೇಯ. ಪಿಎ ತನ್ನ ಮೊಬೈಲ್ ಹೊರ ತೆಗೆದು ಒಂದತ್ತು ಬಾರಿ ಮೊಬೈಲ್ ಟ್ಯಾಪ್ ಮಾಡುತ್ತಿದ್ದಂತೆ ಒಳಗಿದ್ದ ರಘುನಂದನ್ ಎದೆ ನೋವಿನಿಂದ ಹೊರಳಾಡುತ್ತಿದ್ದರು. ಮಾನ್ವಿ ತತ್ತರಿಸಿಹೋಗಿ ಅವನನ್ನು ತಡೆದಳು. ರಘುನಂದನ್ ಹೊರಳಾಟ ನಿಂತಿತು. ಅಲ್ಲಿ ನಡೆಯುತ್ತಿರುವುದೆಲ್ಲ ಆಕೆಗೆ ಅಯೋಮಯವೆನಿಸಿತ್ತು.
"ರಘು ದೇಹದಲ್ಲಿನ ಪೇಸ್‌ಮೇಕರ್ ಹ್ಯಾಕ್ ಮಾಡಲಾಗಿದೆ. ಅವನ ಪ್ರಾಣ ಈಗ ನನ್ನ ಕೈಯಲ್ಲಿದೆ ಡಾ.ಮಾನ್ವಿ!! ಅವನ ಪಿಎ, ಸೆಕ್ರೆಟರಿ, ಅಷ್ಟೇ ಅಲ್ಲ ಅವನ ಬಾಡಿಗಾರ್ಡ್ಸ್ ಕೂಡ ನನ್ನ ಕಡೆಯವರೇ.. ಈಗ ಹೋಗಿ ನಿಜ ಹೇಳು ನಿಮ್ಮಪ್ಪನಿಗೆ.." ಅಥ್ರೇಯ ಒಂದೇ ಮಾತಿನಲ್ಲಿ ಬಿಡಿಸಿ ಹೇಳಿ ಗಹಗಹಿಸಿ ನಕ್ಕ. ಮಾನ್ವಿಗೆ ದೇಹದ ತ್ರಾಣವೆಲ್ಲ ಕುಸಿದು ಹೋಗಿ ನಿರ್ಜೀವಳಂತೆ ನೆಲಕ್ಕಪ್ಪಳಿಸಿದಳು.
[*ಪೇಸ್‌ಮೇಕರ್ - ಒಬ್ಬ ಸಾಮಾನ್ಯ ವ್ಯಕ್ತಿಯ ಎದೆಬಡಿತ ನಿಮಿಷಕ್ಕೆ ಸುಮಾರು 60 ರಿಂದ 100 ಬೀಟ್ಸ್. ಆದರೆ ಕೆಲವೊಮ್ಮೆ ಅನಿಯಮಿತ ಆಹಾರ ಸೇವನೆ, ಆರೋಗ್ಯದ ನಿರ್ಲಕ್ಷ್ಯ, ವಯಸ್ಸು, ಮತ್ತಿತರ ಆರೋಗ್ಯ ವ್ಯತ್ಯಯದಿಂದ ಪಲ್ಸ್ ರೇಟಿಂಗ್ ಕಡಿಮೆಯಾಗಬಹುದು. ಪಲ್ಸ್ ರೇಟಿಂಗ್ ನಿಮಿಷಕ್ಕೆ 40 ಬೀಟ್ಸ್ ಗಿಂತ ಕಡಿಮೆಯಾದಾಗ ಪೇಸ್‌ಮೇಕರ್‌ನ್ನು ಹೃದಯದ ಸನಿಹದಲ್ಲೇ ಚರ್ಮದ ಕೆಳಗೆ ಚಿಕ್ಕ ಸರ್ಜರಿ ಮೂಲಕ ಅಳವಡಿಸಲಾಗುತ್ತದೆ. ಇದರ ಸೆನ್ಸರ್ ಟಿಪ್ ಹೃದಯದೊಂದಿಗೆ ನೇರಸಂಪರ್ಕ ಹೊಂದಿರುತ್ತದೆ. ಹೃದಯದ ಬಡಿತ ಕಡಿಮೆಯಾದಾಗ ಅಂಗೈಯಗಲದ ಈ ಇಲೆಕ್ಟ್ರಾನಿಕ್ ಡಿವೈಸ್ಗೆ ಸೆನ್ಸರ್ ಮೂಲಕ ಸಿಗ್ನಲ್ ರವಾನೆಯಾಗುತ್ತದೆ. ಆ ಕೂಡಲೇ ಡಿವೈಸ್ ಹೃದಯಕ್ಕೆ ಸೂಕ್ಷ್ಮ ಗಾತ್ರದ ವಿದ್ಯುದ್ಘಾತ ನೀಡಿ ಅದರ ಪಲ್ಸ್ ರೇಟಿಂಗ್‌ನ್ನು ಸಹಜ ಸ್ಥಿತಿಯಲ್ಲಿ ಇರಿಸುವಂತೆ ಕಾರ್ಯ ನಿರ್ವಹಿಸುತ್ತದೆ.
ಈ ಇಲೆಕ್ಟ್ರಾನಿಕ್ ಡಿವೈಸ್‌ನ್ನು ಸಾಮಾನ್ಯ ಮೊಬೈಲ್ಗಳಂತೆಯೇ ಹ್ಯಾಕ್ ಕೂಡ ಮಾಡಬಹುದು. ಈಗ ಅಥ್ರೇಯ ಮಾಡಿದ್ದು ಅದನ್ನೇ.. ಡೈವೈಸ್ ಹ್ಯಾಕ್ ಮಾಡಿ ಹೃದಯಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಶಾಕ್ ಕೊಟ್ಟು ಎದೆಬಡಿತ ಹೆಚ್ಚಾಗಿ ರಘುನಂದನ್ ಆಘಾತದಿಂದ ಬಳಲುವಂತೆ ಮಾಡಿದ್ದ. ಈ ಪ್ರಕ್ರಿಯೆ ಇನ್ನೂ ಅತೀಯಾಗಿದ್ದರೆ ರಘುನಂದನ್ ಪ್ರಾಣ ಕೂಡ ಹೋಗಬಹುದಿತ್ತು.]
*****
ಅದಾದನಂತರ ಎರಡು ದಿನಗಳು ದೀರ್ಘ ಆಲೋಚನೆಯಲ್ಲಿ ಮುಳುಗಿದಳು ಮಾನ್ವಿ. ತಂದೆಯೊಂದಿಗೆ ಮಾತು ಮಿತವಾಯಿತು. ಅವರನ್ನು ಕಂಡರೆ ಸಾಕು ಕಂಬನಿ ಧಾರಾಕಾರವಾಗಿ ಹರಿದು ಹೋಗುತ್ತಿತ್ತು. ಯಾಕೆ ಎಂಬ ಪ್ರಶ್ನೆಗೆ ಅವಳಲ್ಲಿ ಉತ್ತರವಿರಲಿಲ್ಲ. ಹೇಳಲಾಗದ ಅನಿವಾರ್ಯತೆ ಹೊರತು!
ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಅಥ್ರೇಯ..
"ಮಾನು ಪುಟ್ಟ.. ರಘು ಮುಂದೆ ಏನದು ನಿನ್ನ ಫಾರ್ಮಲಿಟಿ. ನೇರವಾಗಿ ಹೇಳು 'ಬೇಗ ನಿನಗೂ ಸಂಕಲ್ಪ್ ಗೂ ಮದುವೆ ಮಾಡಿಯಂತ' ಇಷ್ಟೊಂದು ನಾಚಿಕೆಯಾ!" ಅವಳು ಮೌನಧಾರಣೆ ಮಾಡಿಬಿಟ್ಟಿದ್ದಳು. ರಘುನಂದನ್ ಅದನ್ನೇ ನಿಜವೆಂದು ಭಾವಿಸಿ ಹರ್ಷನ ಆರೋಗ್ಯದ ಬಗ್ಗೆ ವಿಚಾರಿಸಿದರು. ಅಥ್ರೇಯ ಅವನಿಗೆ ಪ್ರಜ್ಞೆ ಬಂದ ವಿಷಯ ತಿಳಿಸಿ ಮದುವೆ ಮಾತುಕತೆ ಕೂಡ ಮುಗಿಸಿ ಬಿಟ್ಟರು.
ಮಾರನೆಯ ದಿನ ಧೃಡ ನಿರ್ಧಾರದಿಂದ ಅಥ್ರೇಯನ ಬಳಿ ಬಂದ ಮಾನ್ವಿಯ ವರ್ಚಸ್ಸು ಕೂಡ ತುಂಬಾ ಬದಲಾಗಿತ್ತು.
"ಅಂಕಲ್, ನಿಮಗೆ ಬೇಕಾಗಿರುವ ಆಸ್ತಿ ನಿಮ್ಮ ಕೈಗೆ ಸಿಗುತ್ತೆ. ಅದಕ್ಕಾಗಿ ಏನು ಮಾಡಬೇಕು ಹೇಳಿ, ನಾನು ಮಾಡ್ತಿನಿ. ಆದರೆ ಹರ್ಷನಿಗೆ ಯಾವ ತೊಂದರೆಯೂ ಆಗಬಾರದು. ಅವನಿಗೆ ಇಂಜೆಕ್ಟ್ ಮಾಡ್ತಿರೋ ಡ್ರಗ್ಸ್ ಓವರ್ ಡೋಸ಼್ ಆದರೆ ಅವನ ಪ್ರಾಣಕ್ಕೆ ಅಪಾಯ. ಅದನ್ನು ಕೂಡಲೇ ನಿಲ್ಲಿಸಿ" ಸೋಫಾ ಮೇಲೆ ಕುಳಿತು ಕಾಲು ಮೇಲೆ ಕಾಲು ಹಾಕಿ ಗತ್ತಿನಿಂದ ನುಡಿದಳು.
" ಒಂದೇ ರಾತ್ರಿಯಲ್ಲಿ ಜ್ಞಾನೋದಯ ಆಯ್ತಾ? ಗುಡ್, ವೆರಿ ಗುಡ್,, ಆದರೆ ಡ್ರಗ್ಸ್ ಇಲ್ಲದೆ ಅವನ ಕಿರುಚಾಟ ರಂಪಾಟ ಉಫ್ ನನಗೆ ತಲೆನೋವು!! ಅಷ್ಟಕ್ಕೂ ಕೆಲಸ ಮುಗಿದ ಮೇಲೆ ಅವನಿದ್ದರೆಷ್ಟು ಸತ್ತರೆಷ್ಟು.."
"ಅಂಕಲ್, ಇನ್ನೊಮ್ಮೆ ಈ ಮಾತು ನಿಮ್ಮ ಬಾಯಿಂದ ಬರಕೂಡದು.. ನನಗೆ ಹರ್ಷ ಬೇಕು. ಬಿಕಾಜ್ ಐ ರಿಯಲಿ ಲವ್ ಹಿಮ್! ನಾನು ಒಬ್ಬ ಡಾಕ್ಟರ್ ಅಂಕಲ್, ಅವನನ್ನು ಸಂಭಾಳಿಸೋ ಜವಾಬ್ದಾರಿ ನನಗೆ ಬಿಡಿ"
"ಐ ಪ್ರಾಮೀಸ಼್, ನಿಮ್ಮ ವಿಷಯ ಯಾರಿಗೂ ಗೊತ್ತಾಗಲ್ಲ. ನಿಮಗೆ ಆಸ್ತಿ ಮುಖ್ಯ, ನನಗೆ ಹರ್ಷ ಮುಖ್ಯ, ನಾನು ನಿಮ್ಮ ತಂಟೆಗೆ ಬರಲ್ಲ" ಆಶ್ವಾಸನೆ ಕೊಟ್ಟಳು.
"ಹ್ಮ... ಸರಿ, ಅವನ ಹಳೆಯ ನೆನಪು ಮರುಕಳಿಸಿದರೇ?"
"ಸಾಧ್ಯಾನೇ ಇಲ್ಲ. ಬರೋದಕ್ಕೆ ನಾನು ಬಿಡಲ್ಲ. ಅವನಿಗೆ ಹಿಂದಿನ ನೆನಪು ಬಂದ್ರೆ ಹರ್ಷ ನನಗೆ ಸಿಗಲ್ಲ. ನನಗವನು ಬೇಕು. ಅದಕ್ಕೋಸ್ಕರ ಏನು ಬೇಕಾದರೂ ಮಾಡ್ತಿನಿ" ಅವಳ ಕಣ್ಣಲ್ಲಿ ಕಿಚ್ಚಿತ್ತು. ಒಂದೇ ರಾತ್ರಿಯಲ್ಲಿ ಅವಳಲ್ಲಿ ಉಂಟಾದ ಬದಲಾವಣೆ ಮೇಲೆ ಸಂಶಯ ಮೂಡಿ, ಅಂದಿನಿಂದ ಅವಳ ಪ್ರತಿ ನಡೆಯ ಮೇಲೊಂದು ನಿಗಾ ಇಡಲಾಯಿತು.
ಈ ರೀತಿ ಹರ್ಷನ ಜವಾಬ್ದಾರಿ ಮಾನ್ವಿ ಹೆಗಲೇರಿತು. ಯಾವುದರ ಪರಿವಿಲ್ಲದೆ ಕಣ್ಮುಚ್ಚಿ ತನ್ನ ಅಸ್ತಿತ್ವಕ್ಕಾಗಿ ಕನವರಿಸುತ್ತಿದ್ದ ಹರ್ಷನ ಮುಗ್ದತೆ ಅವಳನ್ನ ಭಾವುಕಳನ್ನಾಗಿಸಿತು. ಅವನ ಅಂಗೈಯನ್ನು ಬೊಗಸೆಯಲ್ಲಿ ಹಿಡಿದು ಮನಸ್ಸಲ್ಲೇ ಕ್ಷಮೆ ಕೋರಿ ಅವನಿಗೆ ಯಾವುದೇ ಪ್ರಮಾದವಾಗದಂತೆ ಪ್ರಮಾಣ ಮಾಡಿದ್ದಳು.
ದಿನಗಳೆದಂತೆ ಹರ್ಷನೊಂದಿಗೆ ಪ್ರೀತಿಯಿಂದ ಮಾತಾಡಿ ಮಗುವಿನಂತೆ ರಮಿಸಿ ಅವನ ಓಲೈಸಿದವಳು ಮಾನ್ವಿ! ಅವನ ಅಸ್ಥಿಮಿತ ಮನಸ್ಥಿತಿಯನ್ನು ತಹಬದಿಗೆ ತಂದು ಮಾಮೂಲಿನಂತೆ ಮಾಡಿದಳು.
ಗತಜೀವನದ ನೆನಪು ಇಲ್ಲವೆನ್ನುವುದೊಂದು ಬಿಟ್ಟರೆ ಹರ್ಷ ಮೊದಲಿಗಿಂತ ಸಾಕಷ್ಟು ಸಂಯಮದಿಂದ ನಡೆದುಕೊಳ್ಳ ತೊಡಗಿದ. ಒಂಟಿತನದಲ್ಲೇ ದಿನವಿಡೀ ಕಳೆಯುತ್ತಿದ್ದ. ಯಾರೊಂದಿಗೂ ಹೆಚ್ಚು ಮಾತಿಲ್ಲ ಕಥೆಯಿಲ್ಲ. ಮಾನ್ವಿ ಅವನ ನಂಬುಗೆ ಗಳಿಸುವಲ್ಲಿ ಸಫಲಳಾದಳು. ಅಥ್ರೇಯನ ಆಜ್ಞೆಯಂತೆ ಅವನನ್ನು ಸಂಕಲ್ಪ್ ಎಂಬ ಹೊಸ ಪರಿಚಯ ನೀಡಲಾಯಿತು. ತಂದೆ ತಾಯಿ ಸ್ನೇಹಿತರನ್ನು ಪರಿಚಯಿಸಲಾಯಿತು.
ಅವನ ತಾಯಿ ಶ್ರೀಮತಿ ಅರುಣಾ ಅಥ್ರೇಯ, ಮಗನ ಆ್ಯಕ್ಸಿಡೆಂಟ್ ಸುದ್ದಿ ತಿಳಿದ ವಾರಗಳ ನಂತರ ನೋಡಲು ಬಂದಿದ್ದರು. ಮಗನಿಗೆ ಹೀಗಾಯಿತಲ್ಲ ಎನ್ನುವುದಕ್ಕಿಂತ ವ್ಯವಹಾರ ನಿಂತು ದಿನಕ್ಕೆ ಇಂತಿಷ್ಟು ನಷ್ಟವಾಯ್ತಲ್ಲ ಎಂಬ ನೋವೇ ಹೆಚ್ಚಾಗಿತ್ತು. ಅವನಿಗೆ ಬಳುವಳಿಯಾಗಿ ಕೊಡಲು ಅವರ ಬಳಿ ನೆನಪುಗಳೊಂದು ಇರಲಿಲ್ಲ. ಪ್ರೀತಿಯಿಂದ ಮಾತಾಡಲಿಲ್ಲ ತಲೆ ಸವರಲಿಲ್ಲ. ಆಳುಗಳಿಗೆ ಒಂದಷ್ಟು ಬಿಟ್ಟಿ ಸಲಹೆ ನೀಡಿ ಹೊರಟು ಹೋಗಿದ್ದರು.
ಹರ್ಷನ ಅರಿವಿಗೆ ಬಾರದಂತೆ ಅವನ ಬೆರಳಚ್ಚು ಸಂಪಾದಿಸಿ ಸಂಕಲ್ಪ್ ಎಂಬ ಹೊಸ ಐಡೆಂಟಿಟಿಯನ್ನು (ಪಾಸ್‌ಪೋರ್ಟ್ ವೀಸಾ, ಬ್ಯಾಂಕ್ ಕಾರ್ಡ್ಸ್, ಇತ್ಯಾದಿಗಳ ಹೊಸ ಆವೃತ್ತಿ) ಸೃಷ್ಟಿಸಲಾಯಿತು. ಅವನಿಗೆ ಸಂಕಲ್ಪ್ ನ ಸಹಿಯ ವಿಧಾನವನ್ನು ತರಬೇತಿ ಕೊಡಲಾಯಿತು. ಅದು ಚೂರು ತಪ್ಪದಾರೂ ಅಪಘಾತದಲ್ಲಿ ಸ್ಮೃತಿ ಕಳೆದುಕೊಂಡ ರಿಪೋರ್ಟ್ ಅವರ ಸಹಾಯಕ್ಕಿತ್ತು.
ಎಲ್ಲಾ ವ್ಯವಸ್ಥೆಗಳು ಮುಗಿದ ನಂತರ ಮಾನ್ವಿ ಕೇಳಿದ್ದಳು..
"ಯಾವಾಗ ಮತ್ತೆ ಎಲ್ಲಿ ಸಹಿ ಮಾಡಬೇಕು ಅಂತ ಹೇಳಿ ಅವನನ್ನು ಒಪ್ಪಿಸೋ ಜವಾಬ್ದಾರಿ ನನ್ನದು"
"ಅದು ಅಷ್ಟು ಸುಲಭದ ಮಾತಲ್ಲ" ಧೀರ್ಘ ಉಸಿರೆಳೆದು ಬಿಟ್ಟ ಅಥ್ರೇಯ..
"ಈ ಆಸ್ತಿಯೆಲ್ಲ ನನ್ನ ಮಾವ ಅಂದ್ರೆ ನನ್ನ ಹೆಂಡತಿ ತಂದೆ ಮೋಹನ್ ರಾವ್ ಗೆ ಸೇರಿದ್ದು. ಅವರು ಸಾಯೋ ಮುನ್ನ ಬರೆದ ಉಯಿಲಿನ ಪ್ರಕಾರ ಅವರ ಸಂಪೂರ್ಣ ಆಸ್ತಿ ಅವರ ಮೊಮ್ಮಗ ಸಂಕಲ್ಪ್ ಅಥ್ರೇಯನಿಗೆ ಸೇರಬೇಕು. ಅದೂ ಅವನಿಗೆ ಇಪ್ಪತ್ನಾಲ್ಕು ವರ್ಷ ತುಂಬಿದ ನಂತರ! ಹಾಗೇ ಆಗಿತ್ತು ಕೂಡ!
ಆಸ್ತಿ ಅವನಿಗೆ ಸೇರಿದ ನಂತರ, ಒಂದು ವೇಳೆ ಅವನದನ್ನು ಬೇರೆ ಯಾರಿಗಾದರೂ ಹಸ್ತಾಂತರಿಸಬೇಕಿದ್ದರೆ ಅದಕ್ಕೆ ರಾಜ್ಯದ ಮುಖ್ಯ ನ್ಯಾಯಾಧೀಶರ ಎದುರಿಗೆ ಅವನು ಹಾಗೂ ಅವನ ಹೆಂಡತಿಯ ಸಮ್ಮತಿ ಹಾಗೂ ರುಜುವಾತು ಆಗಬೇಕು!
ಒಂದು ವೇಳೆ ಅದಕ್ಕೂ ಮೊದಲೇ ಸಂಕಲ್ಪ್ ನಿಗೆ ಅಪಘಾತ ಅಥವಾ ಯಾವುದೇ ರೀತಿಯ ದುರ್ಮರಣ ಸಂಭವಿಸಿದರೆ ಅವರ ಸಕಲ ಚರಾಚರ ಆಸ್ತಿಯೂ ಅದ್ಯಾವುದೋ ದರಿದ್ರ ಅನಾಥಾಶ್ರಮಕ್ಕೆ ಸಲ್ಲತಕ್ಕದ್ದು." ಎಂದು ಬರ್ದಿಟ್ಟಿದ್ದಾನೆ ಮುದುಕ..!
" ನನ್ನ ಮಗ ಸತ್ತ ವಿಷಯ ಪ್ರಪಂಚಕ್ಕೆ ತಿಳಿದರೆ ಆಸ್ತಿಯೆಲ್ಲ ಯಾವುದೋ ಸುಡುಗಾಡು ಆಶ್ರಮದ ಪಾಲಾಗುತ್ತೆ. ಅದಕ್ಕೆ ಅದನ್ನು ರಹಸ್ಯವಾಗಿ ಇಟ್ಟಿರೋದು.. "
"ಅಂದ್ರೆ ಆಸ್ತಿ ನಿಮಗೆ ಸಿಗಬೇಕಾದರೆ ಮೊದಲು ಸಂಕಲ್ಪ್ ಮದುವೆ ಆಗಬೇಕು ಆಮೇಲೆ ಗಂಡ-ಹೆಂಡತಿ ಇಬ್ಬರು ಜಡ್ಜ್ ಎದುರಿಗೆ ಒಪ್ಪಿಗೆ ಸೂಚಿಸಿ ಆಸ್ತಿ ಪತ್ರದ ಮೇಲೆ ಸಹಿ ಮಾಡಬೇಕು...!"
"ಎಸ್. ಎಕ್ಷ್ಯಾಕ್ಟ್ಲೀ.. ಅದಕ್ಕೆ ನಿಮ್ಮಪ್ಪನ ಮುಂದೆ ಅವತ್ತೇ ಮದುವೆ ಪ್ರಸ್ತಾಪ ಮಾಡಿದ್ದು. ನಿಮ್ಮಪ್ಪನಿಗೆ ನಾನಿದನ್ನೆಲ್ಲ ಆಸ್ತಗೋಸ್ಕರ ಮಾಡ್ತಿದಿನಿ ಅನ್ನೋದು ಗೊತ್ತಿಲ್ಲ. ಸೋ ಇದೆಲ್ಲಾ ಆದಷ್ಟು ಬೇಗ ಆಗಬೇಕು"
ಹರ್ಷನನ್ನು ಮದುವೆಗೆ ಒಪ್ಪಿಸಲು ಕೆಲವು ತಿಂಗಳು ಕಳೆದುಹೋಯ್ತು. ಒತ್ತಾಯದಿಂದ ಹರ್ಷ ಮದುವೆಗೆ ಒಪ್ಪಿದ ನಂತರ ದಿನಾಂಕ ಹಾಗೂ ಸ್ಥಳವನ್ನು ನಿಗದಿ ಮಾಡಲಾಯಿತು. ಅಥ್ರೇಯನಿಗೆ ತೀರ ಸಿಂಪಲ್ಲಾಗಿ ರಿಜಿಸ್ಟರ್ ಮದುವೆ ಮಾಡಿ ಮುಗಿಸಿ ಕೈ ತೊಳೆದುಕೊಳ್ಳಬೇಕಂಬ ಹುನ್ನಾರವಿತ್ತು. ಆದರೆ ರಘುನಂದನ್ ಒಬ್ಬಳೇ ಸುಪುತ್ರಿಯ ಮದುವೆ ವಿಜೃಂಭಣೆಯಿಂದ ನಡೆಯಬೇಕೆಂಬ ಆಸೆಯಿಂದ, ವಿವಾಹವನ್ನು ಸಕಲ ಬಂಧು ಮಿತ್ರರು ಸೇರಲು ಅನುಕೂಲವಾಗುವಂತೆ ಮುಂಬೈಯಲ್ಲಿ ಏರ್ಪಡಿಸಿದ್ದರು.
ಅಥ್ರೇಯ ಆಸ್ತಿ ಪತ್ರಗಳನ್ನು ರೆಡಿ ಮಾಡಿಸುವ ಕಾರ್ಯದಲ್ಲಿ ವ್ಯಸ್ಥನಾಗಿದ್ದ. ಅದೇ ಸಮಯದಲ್ಲಿ ಮಾನ್ವಿ ಅದ್ವೈತನನ್ನು ಸಂಪರ್ಕಿಸಿ ತಾನು ಸಿಲುಕಿಕೊಂಡ ಪರಿಸ್ಥಿತಿಯನ್ನು ವಿವರಿಸಿ, ಅವನ ಸಹಾಯ ಕೋರಿದ್ದಳು.
*****
ಮಾನ್ವಿ ತಿಳಿಸಿದ ಎಲ್ಲಾ ವೃತ್ತಾಂತವನ್ನು ಅವರ ಮುಂದೆ ಬಿಚ್ಚಿಟ್ಟಿದ್ದ ಅದ್ವೈತ.
"ನೀವು ತಿಳಿದುಕೊಂಡ ಹಾಗೆ ಈ ಷಡ್ಯಂತ್ರವೆಲ್ಲ ಮಾನ್ವಿ ಅಥವಾ ರಘುನಂದನ್ ಅವರದಲ್ಲ, ಅವರ ಫ್ರೆಂಡ್/ಪಾರ್ಟ್ನರ್ ಮಿ.ಅಥ್ರೇಯನದು!!
ಅವರ ದೃಷ್ಟಿಯಲ್ಲಿ ಮಾನ್ವಿ ಅವರ ಪರವಾಗಿಯೇ ಇದ್ದು ಹರ್ಷನ ಪ್ರಾಣ ಕಾಪಾಡಿ, ಅವನನ್ನು ಗುಣಪಡಿಸಲು ಪ್ರಯತ್ನಿಸಿದಳು. ಅಥ್ರೇಯನ ಕಡೆಯ ಡಾಕ್ಟರ್ ಎದುರು ಮರೆವಿನ ಮಾತ್ರೆ ತೋರಿಸಿ ಹರ್ಷನಿಗೆ ನೆನಪು ಮರುಕಳಿಸುವ ಔಷಧಗಳನ್ನು ಕೊಡುತ್ತಾ ಬಂದಳು. ಹರ್ಷನ ಸ್ಥಿತಿ ಸ್ವಲ್ಪ ಸುಧಾರಿಸಿತ್ತು. ನಿಜವನ್ನು ಹೇಳಿದರೆ ಗ್ರಹಿಸುವ ಸಾಮರ್ಥ್ಯವನ್ನು ಪಡೆದಿತ್ತು. ಆದರೆ ಅಥ್ರೇಯನ ಕಡೆಯವರ ಹದ್ದಿನ ಕಣ್ಣು ಸದಾ ಅವರ ಮೇಲೆ ಇರುತ್ತಿದ್ದರಿಂದ ಸತ್ಯ ಹೇಳುವ ಅವಕಾಶ ಅವಳಿಗಿರಲಿಲ್ಲ. ಅದನ್ನು ಹರ್ಷ ಹೇಗೆ ಪರಿಗಣಿಸುವನೋ ಎಂಬ ಭಯವೂ ಆಕೆಗಿತ್ತು.
ಆಗಲೇ ಆಕೆ ನನ್ನ ಸಹಾಯ ಕೇಳಿದ್ದು,... 'ಮದುವೆಗೂ ಮೊದಲೇ ಹೇಗಾದರೂ ಮಾಡಿ ಅಥ್ರೇಯನ ಅವ್ಯವಹಾರದ ಸಾಕ್ಷಿಗಳನ್ನು ಕ್ರೋಡೀಕರಿಸಬೇಕು. ಕಾನೂನಿನ ನೆರವು ಪಡೆದು ತನ್ನ ತಂದೆಯನ್ನು ಕಾಪಾಡಿಕೊಂಡು ಅಥ್ರೇಯನನ್ನು ಜೈಲಿಗೆ ಹಾಕಿ ಶಿಕ್ಷೆ ಕೊಡಿಸಬೇಕೆಂಬುದು' ಅವಳ ಉದ್ದೇಶವಾಗಿತ್ತು.
ಆದರೆ ಅಷ್ಟರಲ್ಲಿ ನಿಮ್ಮ ಎಂಟ್ರಿಯಾಗೋಯ್ತು" ಪ್ರಸನ್ನ ಪರಿಯ ಮುಖ ನೋಡುತ್ತ ಹೇಳಿದ.
"ಪರಿ, ನೀವು ಹರ್ಷನ ಜೊತೆ ಮಾತಾಡಿದ್ರೆ ನಿಮ್ಮ ಜೀವಕ್ಕೂ ತೊಂದರೆ ಆಗಬಹುದೆಂದು ಏನೇನೋ ಚಾಲೆಂಜ್ ಮಾಡಿ ನಿಮ್ಮನ್ನು ಅವನಿಂದ ದೂರ ಇಟ್ಟಿದ್ದು.ಆದರೂ ನೀವು ಕಳಿಸುವ ಗಿಫ್ಟ್ ಲೆಟರ್‌ನಿಂದ ಡೇವಿಡ್ ಗೆ ಅನುಮಾನ ಶುರುವಾಗಿತ್ತು. ಇನ್ನೊಂದು ಗಿಫ್ಟ್ ನಿಮ್ಮ ಕಡೆಯಿಂದ ಹೋಗಿದ್ದರೂ ಡೆಲಿವರಿ ಬಾಯ್ ನಿಂದ ನಿಮ್ಮ ಬಗ್ಗೆ ತಿಳಿದುಕೊಂಡು ನಿಮ್ಮ ಕಥೆ ಮುಗಿಸಬೇಕೆಂದು ಅವನ ಪ್ಲ್ಯಾನ್ ಆಗಿತ್ತು. ಅದನ್ನು ಮಾನ್ವಿ ತಪ್ಪಿಸಿದಳು.
ಇನ್ನು ಡಾ.ಪ್ರಸನ್ನ, ನಿಮ್ಮ ಫ್ರೆಂಡ್ ವಿವೇಕ್ ಆಸ್ಪತ್ರೆಗೆ ಬಂದು ಹೋದ ದಿನವೇ ಅನುಮಾನ ಬಂದಿತ್ತು, ಯಾರಿಗೋ ವಿಷಯ ಗೊತ್ತಾಗಿದೆ ಎಂದು. ಅದಕ್ಕೆ ಆ ಕೂಡಲೇ ಹರ್ಷನ ರಿಪೋರ್ಟ್ ಡಿಲಿಟ್ ಮಾಡಿಸಿದ್ಳು. ಆದರೆ ಅದು ನೀವೇ ಅಂತ ಗೊತ್ತಿರಲಿಲ್ಲ. ನಿಮ್ಮನ್ನು ಅವನಿಂದ ದೂರ ಇಡಲು ಏನೆಲ್ಲಾ ಪಾಡು ಪಟ್ಟಳು. ಆದರೆ ನೀವು ಯಾವುದಕ್ಕೂ ಮಣಿಯಲಿಲ್ಲ" ನಕ್ಕನಾತ.
ಇಷ್ಟು ದಿನ ತಂದೆಯೆಂದು ಗೌರವಿಸಿದ ವ್ಯಕ್ತಿಯ ನಿಜವಾದ ಗುಣ ಗೊತ್ತಾಗಿ ಹರ್ಷನ ರಕ್ತ ಕುದಿಯತೊಡಗಿತ್ತು.
"ನಾನು ಸಿಗುವ ಮೊದಲು ಅಫೀಶಿಯಲ್ ಪೇಪರ್ಸ್ ಗೆ ಸಹಿ ಹೇಗಾಗ್ತಿತ್ತು?" ಕೇಳಿದ
"ಫೋರ್ಜರಿ ಸಿಗ್ನೇಚರ್! ಕೆಲವೊಂದು ಮುಖ್ಯವಾದ ಮೀಟಿಂಗ್ ರದ್ದಾಗಿ ಕಂಪನಿಗೆ ಲಾಸ್ ಕೂಡ ಆಗಿತ್ತಂತೆ"
"ರಘು ಅಂಕಲ್ ಗೆ ನಿಜವಾಗಿಯೂ ಅವರ ಫ್ಯಾಕ್ಟರಿಯಲ್ಲಿನ ವಿಷಯ ಯಾವುದು ಗೊತ್ತಿಲ್ವಾ?"ಪರಿ ಕೇಳಿದಳು
" ಇಲ್ಲ. ಅವರು ಆ ಕಡೆಗೆ ಹೋಗೋದು ಕಡಿಮೆಯಂತೆ, ಹೋದ್ರು ಅವರು ಹೋಗೋ ವಿಚಾರ ಬಾಡಿಗಾರ್ಡ್ಸ್ ಡ್ರೈವರ್ ಮೂಲಕ ಮೊದಲೇ ಗೊತ್ತಾಗಿ ಎಲ್ಲ ಎಚ್ಚರಿಕೆ ವಹಿಸಲಾಗುತ್ತೆ. ರಘುನಂದನ್ ಸುತ್ತಮುತ್ತ ಇರುವವರೆಲ್ಲ ಅಥ್ರೇಯನ ಕಡೆಯವರೇ" ಅದ್ವೈತ ಹೇಳಿದ ನಂತರ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಹಾಗೇಕೆ ಸುಳ್ಳು ನುಡಿದರು ಎಂಬುದು ಅರ್ಥವಾಯಿತು ಎಲ್ಲರಿಗೂ..
"ಇನ್ನೇನೂ ಹರ್ಷನಿಗೆ ಹಳೆಯದೆಲ್ಲ ನೆನಪಾಯ್ತು ಆದಷ್ಟು ಬೇಗ ಇಲ್ಲಿಂದ ಹೋಗೋಣಾಂತಿದ್ದೆ, ಅಷ್ಟರಲ್ಲಿ.....
ಮೊದಲು ಮಾನ್ವಿ ಆಮೇಲೆ ಅವರಪ್ಪ, ಈಗ.. ಅವಳ ಲವ್ವರು, ಆ ಅಥ್ರೇಯ, ಸತ್ತೋಗಿರೋ ಅವನ ಮಗ, ಅವನ ಹೆಸರಲ್ಲಿರೋ ಆಸ್ತಿ, ಅವರ ತಾತನ ಕಂಡಿಷನ್ಸು... ಥುಥುಥುಥುಥೂ..." ಹಣೆ ನೀವಿಕೊಂಡು ತಲೆ ಕೊಡವಿ ಸಾಕು ಸಾಕೆಂದು ಕೈ ಅಲ್ಲಾಡಿಸಿಬಿಟ್ಟ ಪ್ರಸನ್ನ.
"ನೀವೇ ಹೀಗೆ ಬೇಸರ ಮಾಡಿಕೊಂಡ್ರೆ ಹೇಗೆ ಡಾಕ್ಟ್ರೇ... ಇವನು ಹರ್ಷ! ಸಂಕಲ್ಪ್ ಅಲ್ಲ ಅಂತ ಪ್ರೂವ್ ಮಾಡೋದ್ರಿಂದ ನಿಮಗೆ ದೊಡ್ಡ ಲಾಭ! ಅದಕ್ಕೆ ನಿಮ್ಮನ್ನು ಜೈಲಿಗೆ ಅಟ್ಟೋ ಪ್ಲ್ಯಾನು" ನಗುತ್ತಲೇ ನುಡಿದ ಅದ್ವೈತ
"ನನಗೇನು ಲಾಭ?" ಹುಬ್ಬುಗಂಟಿಕ್ಕಿದ ಪ್ರಸನ್ನ
"ಮೈಸೂರಿಗೆ ಹೋಗುವ ರಸ್ತೆಯಲ್ಲಿರುವ ಗೋಕುಲ ಅನಾಥಾಶ್ರಮ ನಿಮ್ಮದೇ, ಐ ಮೀನ್ ನಿಮ್ಮ ಮನೆ ತರಾ ತಾನೇ?"
ಪ್ರಸನ್ನ ಹ್ಮೂಗುಟ್ಟಿದರೆ, ಹರ್ಷ "ವ್ಹಾಟ್? ನೀನು ಆಶ್ರಮದಲ್ಲಿ ಬೆಳೆದದ್ದಾ?" ಅಚ್ಚರಿಗೊಂಡ
"ಒಂದು ಫ್ಲ್ಯಾಶ್‌ಬ್ಯಾಕ್ ಕೇಳಿದ್ದು ಸಾಕಾಗಿಲ್ವಾ ನಿನಗೆ, ನನ್ನ ಫ್ಲ್ಯಾಶ್‌ಬ್ಯಾಕ್ ಬೇರೆ ಕೇಳಬೇಕಾ ಈಗ? ಸ್ವಲ್ಪ ಸುಮ್ನಿರು ಮಾರಾಯಾ...
ನೀ ಏನೋ ಹೇಳ್ತಿದ್ದೇ.." ಅದ್ವೈತನನ್ನು ಕೇಳಿದ.
"ನೀವು ಇಲ್ಲಿಗೆ ಯಾಕೆ ಬಂದಿದಿರೋ ಗೊತ್ತಿಲ್ಲ. ಆದರೆ ಅಥ್ರೇಯ ತಿಳಿದುಕೊಂಡಿರೋದು ನೀವು ಆಸ್ತಿನಾ ನಿಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಬಂದಿದ್ದಿರಾ ಎಂದು!!
ಯೆಸ್. ಸಂಕಲ್ಪ್ ಅವರ ತಾತ ಉಯಿಲಿನಲ್ಲಿ ಬರೆದ ಆಶ್ರಮ ಅದೇ.. 'ಗೋಕುಲ ಅನಾಥಾಶ್ರಮ'
ಪ್ರಸನ್ನನ ಮಾತೇ ನಿಂತು ಹೋದವು. ಕಣ್ಣಮುಂದೆ ಸಾವಿರಾರು ಮಕ್ಕಳ ಭವಿಷ್ಯದ ಕನಸುಗಳೇ ಬಿಂಬವಾದವು.
" ಅಥ್ರೇಯ ವಿರುದ್ಧ ಸಂಗ್ರಹಿಸಿದ ಸಾಕ್ಷಿಗಳೆಲ್ಲ ಈಗ ಎಲ್ಲಿವೆ?" ಪರಿ ಕೇಳಿದಳು. ಅದ್ವೈತ ಏನೋ ಹೇಳುವ ಮೊದಲೇ ಎದುರಿನಿಂದ ರಿಚ್ ಕಾರೊಂದು ಬರುತ್ತಿತ್ತು. ರಸ್ತೆ ಮಧ್ಯದಿಂದ ಎಲ್ಲರೂ ಒಂದು ಪಕ್ಕಕ್ಕೆ ಜರುಗಿದರು.
ಕಾರು ಮುಂದೆ ಸಾಗದೆ ಅವರ ಎದುರಿಗೆ ನಿಂತಿತು. ಅದರಿಂದ ಕೆಳಗಿಳಿದ ವ್ಯಕ್ತಿಯೊಬ್ಬ "ಏನು.. ಮಿಡ್‌ನೈಟ್ ಮೀಟಿಂಗ್ ಮುಗೀತಾ? ಇನ್ನೂ ಇದೆಯಾ? ಕ್ಯಾನ್ ಐ ಜಾಯ್ನ್ ಯು ಯಂಗ್‌ಸ್ಟರ್ಸ?" ಕೇಳಿದ.
ಪ್ರಸನ್ನ ಪರಿ ಗಲಿಬಿಲಿಗೊಂಡು ಮುಖ ಮುಖ ನೋಡಿದರೇ ಅದ್ವೈತ ಮತ್ತು ಹರ್ಷ ಕೋಪದಿಂದ "ಮಿ.ಅಥ್ರೇಯ..!!" ಎಂದು ಉಚ್ಚರಿಸಿದರು.
ಮುಂದುವರೆಯುವುದು...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ