ಅಥ್ರೇಯನ ನೋಡಿದ್ದೇ ಹರ್ಷನ ಕೋಪ ರೋಷ ಉಕ್ಕಿ ಬಂದಿತ್ತು. ಅವನ ಕೋಟ್ ಗಟ್ಟಿಯಾಗಿ ಹಿಡಿದೆಳೆದು ದವಡೆಗಚ್ಚಿ ಸಿಟ್ಟನ್ನು ತೀರಿಸಿಕೊಳ್ಳುವ ಮೊದಲೇ ಅಥ್ರೇಯ ಜೋರಾಗಿ ನಕ್ಕು...
"ಯಾಕೋ ಮೈ ಡಿಯರ್ ಸನ್... ಇಷ್ಟೊಂದು ಕೋಪ?? ವೆರಿ ಬ್ಯಾಡ್!! ಕೈ ಬಿಡು ಕಂದಾ.." ಪುಟ್ಟ ಮಗುವನ್ನು ರಮಿಸುವಂತೆ ನಟಿಸಿ ಕೈ ತೆಗೆಯಲು ಹೋದ. ಹರ್ಷನ ಸಿಟ್ಟು ಅತೀರೇಕವಾಗಿ ಕುತ್ತಿಗೆಗೆ ಕೈ ಬಿಗಿದವು. ಅಥ್ರೇಯನ ಹಿಂದಿದ್ದ ಅವನ ರೌಡಿ ಬಳಗ ಧಾವಿಸಿ ಬಂದು ಹರ್ಷನನ್ನ ದೂರ ಎಳೆದರು.
"ಅಂದರೆ.. ಮೀಟಿಂಗ್ ನಲ್ಲಿ ನಮ್ಮ ಡ್ಯುಪ್ಲಿಕೇಟ್ ಸಂಕಲ್ಪ್ ಗೆ ಎಲ್ಲಾ ನಿಜ ಗೊತ್ತಾಗಿದೆ ಅಂತಾಯ್ತು. " ಮಣಮಣಿಸಿದ ಅಥ್ರೇಯ.
"ಥೂ.... ನಿನ್ನಂತವನನ್ನ ಅಪ್ಪ ಎಂದುಕೊಂಡು ಗೌರವದಿಂದ ನೋಡಿದ್ನಾ? ನೀನು ಹೇಳಿದ ಪ್ರತಿಯೊಂದು ಕೆಲಸವನ್ನು ಚಾಚೂ ತಪ್ಪದೇ ಪಾಲಿಸಿದ್ದೆನಾ? ಏನೋ ದ್ರೋಹ ಮಾಡಿದ್ದೇ ನಾ ನಿನಗೆ? ಯಾಕೆ ನನ್ನ ಬದುಕನ್ನು ಹೀಗೆ ಇಂಚಿಂಚಾಗಿ ಕೊಲ್ತಿದೀಯಾ? " ಹರ್ಷನ ಆವೇಶ ಮಾತಿಗಿಳಿದು ಹೀನಾಮಾನವಾಗಿ ಬೈದಿತ್ತು.
"ಪ್ಚ್.. ಪ್ಚ್... ಇಷ್ಟೊಂದು ಉದ್ವೇಗ ಒಳ್ಳೆಯದಲ್ಲ ಕಂದಾ.. ಕೂಲ್....
ಇದರಲ್ಲಿ ನಿನ್ನದೂ ತಪ್ಪಿದೆ. ಒಂದಲ್ಲ ಎರಡು!! ನನ್ನ ಮಗನ ಹೋಲಿಕೆಯನ್ನೇ ಪಡೆದು ಹುಟ್ಟಿರೋದು ನಿನ್ನ ಮೊದಲನೇ ತಪ್ಪು. ಎರಡನೇಯದು, ಆ ರಾತ್ರಿ ನನ್ನ ವ್ಯವಹಾರದ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದು!!" ಅಥ್ರೇಯನ ಧ್ವನಿ ಗಡುಸಾಯಿತು.
"ನನ್ನ ಸ್ವಂತ ಮಗ ನನ್ನ ಮಾತಿಗೆ ಬೆಲೆ ಕೊಟ್ಟು, ನಾನು ಹೇಳಿದ ಹಾಗೆ ಕೇಳಿದ್ದರೆ ನಿನಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲವೇನೋ.. ಚೆನ್ನಾಗಿ ಓದಿ ಪ್ರಪಂಚ ಜ್ಞಾನ ಪಡೆಯಲೆಂದು ವಿದೇಶಕ್ಕೆ ಕಳಿಸಿದ್ರೆ, ಲವ್ವಂತೆ ಲಿವ್ ಇನ್ ರಿಲೇಶನ್ಶಿಪ್ ಅಂತೆ; ರಾಸ್ಕಲ್,, ಮದುವೆನೂ ಆಗಲ್ಲ ಆಸ್ತಿ ಪತ್ರಕ್ಕೆ ಸಹಿನೂ ಮಾಡಲ್ಲವೆಂದು ರಗಳೆ ಮಾಡಿಬಿಟ್ಟ. ನಾನೂ ಮತ್ತಿನಲ್ಲಿದ್ದೆ. ಸಿಟ್ಟೂ ನೆತ್ತಿಗೇರಿತ್ತು.. ಒಮ್ಮೆಲೇ ಹಿಂದೆ ನೂಕಿಬಿಟ್ಟೆ.. ಹೇಗಾಯ್ತೋ ಗೊತ್ತೇ ಆಗಲಿಲ್ಲ. ಮೇಲಿನಂತಸ್ತಿನಿಂದ ಕೆಳಗೆ ಬಿದ್ದವನು ಕ್ಷಣದಲ್ಲಿ ಶವವಾಗಿ ಹೋಗಿದ್ದ." ಅಥ್ರೇಯನ ಕೆಂಪಡರಿದ ಕಂಗಳು ಹಳೆಯ ಘಟನೆ ನೆನೆದು ಪಶ್ಚಾತ್ತಾಪ ಸೂಚಿಸಿದ್ದವು. ಅದೂ ಕೇವಲ ಒಂದು ಘಳಿಗೆ ಮಾತ್ರ.. ಮತ್ತೊಂದು ಕ್ಷಣಕ್ಕೆ ಅವನೊಳಗಿನ ರಾಕ್ಷಸತ್ವ ಜಾಗೃತನಾಗಿ ದವಡೆ ಬಿಗಿಯಾದವು. ಆವೇಶದ ಉಸಿರು ಮೇಲು ಕೆಳಗೂ ಧುಮುಗುಟ್ಟಿತು.
"ಸ್ವಂತ ಮಗ ಸತ್ತರೂ ಆ ನೋವು ಕಿಂಚಿತ್ತೂ ಇಲ್ಲದೆ ಅದರಲ್ಲೂ ಲಾಭ ಹುಡುಕೋ ನನ್ನ ಮನಸತ್ವ, ಮನುಷ್ಯತ್ವದ ಬಗ್ಗೆ ನಿಮಗೆ ಈಗಾಗಲೇ ಕ್ಲಾರಿಟಿ ಸಿಕ್ಕಿರಬೇಕಲ್ವ! " ಎಲ್ಲರನ್ನೂ ಮುಖವನ್ನು ದಿಟ್ಟಿಸುತ್ತ ನುಡಿದಿದ್ದ.
ಎಲ್ಲರಿಗೂ ಇದುವರೆಗೂ ಸಂಕಲ್ಪ್ ಇಲ್ಲವೆಂಬುದು ಮಾತ್ರ ತಿಳಿದಿತ್ತು. ಈಗ ಅವನು ತನ್ನ ಸ್ವಂತ ತಂದೆಯಿಂದಲೇ ಹತನಾದನೆಂಬ ನಿಜಾಂಶ ಎದುರು ನಿಂತವರ ಉಸಿರುಗಟ್ಟಿಸಿತ್ತು. ಆಘಾತದಿಂದ ಪ್ರತಿಯೊಬ್ಬರೂ ಮುಖ ಮುಖ ನೋಡಿಕೊಂಡರು.
" ನಿನ್ನೆ ರಾತ್ರಿಯಿಡೀ ನೀನು ಮನೆಗೆ ಬರದಿದ್ದಾಗಲೇ ನನಗೆ ಅನುಮಾನ ಶುರುವಾಗಿತ್ತು. ಮೊಬೈಲ್ ಬೇರೆ ಸ್ವಿಚಾಫ್! ಬೆಳಿಗ್ಗೆ ಆನ್ ಆದಾಗ ಪ್ಲೇಸ್ ಟ್ರ್ಯಾಕ್ ಮಾಡೋಣ ಅನ್ನುವಷ್ಟರಲ್ಲಿ ನಿನ್ನ ಫೋನಿಂದ ಒಂದು ಕಾಲ್ ಪಾಸಾಗಿತ್ತು.. ಅದೂ ಭಾರ್ಗವ್ ಕಂಪನಿ ನಂಬರ್ ಗೆ!! ತುಂಬಾ ದಿನಗಳ ನಂತರ ತಂದೆ ಮಗನ ನಡುವೆ ವಾತ್ಸಲ್ಯ ಮಮಕಾರ ಅನುರಾಗ ಬಾಂಧವ್ಯದ ಮಾತುಕತೆ! ಅಮ್ಮ, ತಂಗಿ ಅಜ್ಜ ಅಜ್ಜಿ ತಾತ ಮುತ್ತಾತ ಇಡೀ ವಂಶದ ಕುಶಲೋಪರಿ ಅಬ್ಬಬ್ಬಬ್ಬಾ...
ಆಗಲೇ ಗೊತ್ತಾಯ್ತು ನಿನಗೆ ಹಳೆಯ ನೆನಪು ಮರುಕಳಿಸಿದ ವಿಷಯ! ಆದರೆ ಹೇಗೆ? ನನ್ನ ಪ್ಲ್ಯಾನ್ ಎಲ್ಲಿ ಫೇಲ್ ಆಯ್ತು ಅಂತ ಸೂಕ್ಷ್ಮವಾಗಿ ಎಲ್ಲವನ್ನೂ ಯೋಚನೆ ಮಾಡಿದಾಗ ಗೊತ್ತಾಯ್ತು ಮಾನ್ವಿಯ ಡಬಲ್ ಗೇಮ್ ಬಗ್ಗೆ!!! ಅವಳು ಛೂ ಬಿಟ್ಟ ಈ ಜಾಸೂಸ್ ನಾಯಿ ಬಗ್ಗೆ ಕೂಡ ಆಗಲೇ ಮಾಹಿತಿ ಹೊರಗೆ ಬಿತ್ತು.
ವ್ಹಾ ವ್ಹಾ ವ್ಹಾ... ಒಬ್ಬೊಬ್ಬರ ಜಾಣ್ಮೆಯನ್ನೂ ಮೆಚ್ಚಬೇಕಾದ್ದೆ...(ಚಪ್ಪಾಳೆ ತಟ್ಟಿದ) ನನ್ನ ಎದುರೇ ಇದ್ದುಕೊಂಡು ನನಗೆ ತಿರುಮಂತ್ರ ಹಾಕಿದ ಡಾ.ಮಾನ್ವಿ!
ಹರ್ಷನ ಎದುರಿಗೆ ಬರದೆ ಬರೀ ಗಿಫ್ಟ್ಸ್, ಲೆಟರ್ ಮೂಲಕ ಅವನ ನೆನಪು ಮರಳುವಂತೆ ಮಾಡಿದ ಡಾ.ಪರಿಧಿ! ಅಷ್ಟು ಸಾಲದೇ ರಾಥೋಡ್ ಬಲಹೀನತೆ ಬಳಸಿಕೊಂಡು ಅವನಿಂದ ಎಲ್ಲಾ ನಿಜ ಬಯಲು ಮಾಡುವ ದುಸ್ಸಾಹಸ ಬೇರೆ! ಪ್ಚ್.. ಆ ಮಾನ್ವಿ ಅಡ್ಡ ಬರದಿದ್ದರೆ ನಿನೀಗ ಇಲ್ಲಿ ನಿಂತಿರುತ್ತಿರಲಿಲ್ಲ. ಹ್ಮ್, ಆಯಸ್ಸು ಗಟ್ಟಿ ಇದೆ!
ಇನ್ನು ಇವ್ನು,, ಯಾವುದೋ ಮೂರ್ಕಾಸಿನ ಆ್ಯಡ್ ಹುಡುಗನಿಂದ ವಿಡಿಯೋ ಮಾಡ್ಸಿ. ತಗಡು ನಿವ್ಸ್ ರಿಪೋರ್ಟ್‌ರ್ ಕರ್ಕೊಂಡು ಬಂದು... ಮಾನ್ವಿನ ಬ್ಲ್ಯಾಕ್ ಮೇಲ್ ಮಾಡಿ.. ಹರ್ಷನ ಫ್ರೆಂಡ್ ಅಂತ ಹತ್ತಿರ ಆಗಿ... ಅವನಿಗೆ ಟ್ರೀಟ್ಮೆಂಟ್ ಕೊಡ್ತಿರೋ ಡಾ.ಪ್ರಸನ್ನ! ಹಣ ಅಂದರೆ ಹೆಣಾನೂ ಬಾಯಿ ಬಿಡುತ್ತಂತೆ, ನಿನ್ನ ನಿಯತ್ತು ಹಾದಿ ತಪ್ಪಿದ್ದರಲ್ಲಿ ಯಾವ ತಪ್ಪಿಲ್ಲ ಬಿಡು. ಆದರೆ ನಿನ್ನಾಸೆ ನೆರವೇರಲು ನಾನು ಅವಕಾಶ ಕೊಡಲ್ಲ! ಧ್ವನಿ ಕಡುಗಂಭೀರವಾಯಿತು.
ಓಹ್, ಇಲ್ಲೊಬ್ಬ ಪಾಗಲ್ ಪ್ರೇಮಿ, ನಿರಾಕರಣೆ ನಂತರ ಕೂಡ ಪ್ರೀತಿಸಿದ ಹುಡುಗಿಗಾಗಿ ಜೀವಾನೇ ಪಣಕ್ಕಿಟ್ಟು ನನ್ನ ವಿರುದ್ಧ ಸಾಕ್ಷಿ ಕಲೆಹಾಕಿದ ಮಾಡರ್ನ್ ಮಜ್ನು ಡಿಟೆಕ್ಟಿವ್ ಅದ್ವೈತ!! (ಒಬ್ಬೊಬ್ಬರನ್ನೇ ಉದ್ದೇಶಿಸಿ ಮಾತಾಡಿ ನಿಟ್ಟುಸಿರು ಬಿಟ್ಟ)
ಗುಡ್ ಗುಡ್.. ಇಲ್ಲಿಯವರೆಗೂ ಎಲ್ಲರೂ ತುಂಬಾ ಚೆನ್ನಾಗಿ ಆಟ ಆಡಿದ್ದೀರಾ. ಇನ್ನು ಮುಂದೆ ಕೂಡ ಆಡಬೇಕು... ಆಟದ ಲೆವೆಲ್ಸ್ ಸ್ವಲ್ಪ ಕಠಿಣ ಆಗಬಹುದು. ರೂಲ್ಸ್ ಚೆಂಜ್ ಆಗಬಹುದು. ಪ್ಲೇಯರ್ಸ್ ಕೂಡ ಕಡಿಮೆ ಆಗ್ತಾ ಹೋಗಬಹುದು. ಆದರೆ ಯಾವುದೇ ಕಾರಣಕ್ಕೂ ನನಗೆ ಬೇಕಾಗಿರೋದು ನನ್ನ ಕೈ ಸೇರೋವರೆಗೂ ಆಟ ನಿಲ್ಲಿಸೋ ಹಾಗಿಲ್ಲ!! ನನಗೆ ಸೋಲು ಆಗಿಬರಲ್ಲ. ಬೇರೆಯವರನ್ನು ಗೆಲ್ಲೋದಕ್ಕೆ ನಾನು ಬಿಡಲ್ಲ!!! " ಗಹಗಹಿಸಿ ನಕ್ಕ ಅಥ್ರೇಯ.
"ಹಲೋ... ಮಿ.ಅಥ್ರೇಯ ಇದುವರೆಗೂ ಏನಾಯ್ತೋ ಅದು ನಿಮ್ಮ ಆಟ. ಹಾಗಂತ ಯಾವಾಗಲೂ ನೀವು ಹೇಳಿದ ಹಾಗೆ ನಡೆಯುತ್ತದೆ, ನೀವೇ ಗೆಲ್ತಿರಾ ಅನ್ನೋದು ನಿಮ್ಮ ಭ್ರಮೆ!! ನಿಮ್ಮ ಅಸಲಿ ಮುಖವಾಡ ಬಯಲು ಮಾಡಲು ನಮಗೆ ಹತ್ತು ನಿಮಿಷ ಸಾಕು.." ಪ್ರಸನ್ನ ಎಚ್ಚರಿಸಿದ
"Come on ಡಾ.ಪ್ರಸನ್ನ, ಈ ಟೈಮಲ್ಲೂ ಜೋಕಾss...!! ನಿಮ್ಮ ಮಕ್ಕಳಾಟ ಮುಗಿದಿದ್ರೆ ಈಗ ಮುಖ್ಯವಾದ ವಿಷಯಕ್ಕೆ ಬರೋಣ..
ಲುಕ್ ಹರ್ಷ, ಇನ್ಮುಂದೆ ಕೂಡ ನೀನು ಎಲ್ಲರೆದುರು ಸಂಕಲ್ಪ್ ಆಗಿಯೇ ಮುಂದುವರಿಬೇಕು. ಅದರಲ್ಲೂ ರಘು ಮತ್ತೆ ನನ್ನ ಹೆಂಡತಿ ಅರುಣಾ ಮುಂದೆ ತುಂಬಾ ಜಾಗರೂಕತೆಯಿಂದ ಯಾವುದೇ ಅನುಮಾನ ಬರದಂತೆ ನಡೆದುಕೊಳ್ಳಬೇಕು!!
ಇನ್ನು ಐದು ದಿನಗಳಲ್ಲಿ ನಿನ್ನ ಮಾನ್ವಿ ಮದುವೆ! ಆಮೇಲೆ ರಿಜಿಸ್ಟ್ರೆಷನ್ ಮತ್ತು ಒಂದಷ್ಟು ಪ್ರೋಸಿಜರ್ಸ್! ನಂತರ ಕೋರ್ಟ್ ನಲ್ಲಿ ಜಡ್ಜ್ ಎದುರಿಗೆ ನೀನು ಮತ್ತೆ ಮಾನ್ವಿ ಆಸ್ತಿ ಪತ್ರಗಳಿಗೆ ಸಹಿ ಮಾಡ್ತಿರಾ! ಕೋಟಿ ಕೋಟಿ ಪ್ರಾಪರ್ಟಿ ನನ್ನ ಕೈ ಸೇರುತ್ತೆ! ಆನಂತರ ಯು ಆರ್ ಫ್ರೀ.. ಎಲ್ಲಾದರೂ ಹಾಳಾಗಿ ಹೋಗು, ಐ ಡೋಂಟ್ ಕೇರ್!!" ಅಥ್ರೇಯ ತನ್ನ ನಿರ್ಧಾರ ತಿಳಿಸಿದ.
"ಏನೂ... ಕನಸು ಕಾಣ್ತಾ ಇದ್ದಿಯಾ? ನಿಜ ಗೊತ್ತಾದ ಮೇಲೂ ನಿನ್ನ ಮಾತು ಕೇಳಿ, ಮೋಸದ ಪಾಲುಗಾರನಾಗೋಕೆ ನನಗೇನು ಹುಚ್ಚಾ?? ಆಸ್ತಿಯಲ್ಲಿ ಬಿಡಿಗಾಸು ನಿನ್ನ ಕೈ ಸೇರೋಕೆ ನಾನು ಬಿಡಲ್ಲ. ನಾನು ಸಂಕಲ್ಪ್ ಅಲ್ಲವೇ ಅಲ್ಲ, ನಿಜವಾದ ಸಂಕಲ್ಪ್ ಸತ್ತು ಹೋಗಿದ್ದಾನೆ. ಅವನನ್ನು ಕೊಂದವನು ನೀನೇ ಅಂತ ಒಮ್ಮೆ ಪ್ರಪಂಚಕ್ಕೆ ಗೊತ್ತಾದ್ರೆ ನಿನ್ನ ಕಥೆ..." ಬೆರಳು ತೋರಿಸಿ ಮಾತಾಡುತ್ತಿದ್ದ ಹರ್ಷನ ಕೈ ಪಕ್ಕಕ್ಕೆ ಸರಿಸಿದ ಅಥ್ರೇಯ..
"ಗೊತ್ತಿತ್ತು ನನಗೆ.... ಇದೇ ಉತ್ತರ ಬರುತ್ತೆ ಅಂತ, ನೀನ್ಯಾಕೆ ನನಗೋಸ್ಕರ ಇಷ್ಟೆಲ್ಲಾ ಮಾಡ್ತಿಯಾ ಹೇಳು? ಬೇಡ ಬಿಡು, ನನಗೋಸ್ಕರ ಅಲ್ಲದಿದ್ದರೂ ನಿಮ್ಮ ನಿಜವಾದ ಅಪ್ಪ ಅಮ್ಮನಿಗೋಸ್ಕರ ಈ ಕೆಲಸ ಮಾಡ್ತಿಯಲ್ವಾ ಹರ್ಷ...??" ರಾಗವೆಳೆದ ಅಥ್ರೇಯ ತನ್ನ ಮೊಬೈಲ್ ಗಿರಗಿರ ತಿರುಗಿಸುತ್ತ ವ್ಯಂಗ್ಯವಾಗಿ ನಕ್ಕು ಓರೆನೋಟ ಬೀರಿದ.
ಅನುಮಾನದಿಂದ ಹುಬ್ಬು ಗಂಟಿಕ್ಕಿ ಅವನನ್ನೇ ನೋಡಿದರು ನಾಲ್ವರು.
"ಅದೇ..... ಬೆಳಿಗ್ಗೆ ನೀನು ಮೊಬೈಲ್ ಆನ್ ಮಾಡಿದ ತಕ್ಷಣ ಭಾರ್ಗವ್ ಕಂಪನಿಗೆ ಕರೆ ಮಾಡಿ ತಂದೆ ಜೊತೆಗೆ ಮಾತಾಡಿದೆಯಲ್ಲ, ನಿಮ್ಮಪ್ಪ ಸಂತೋಷದಿಂದ ನಿನ್ನ ನೋಡೋಕೆ ಪತ್ನಿ ಸಮೇತ ಇವತ್ತು; ಓಹ್ ಸಾರಿ (ಗಡಿಯಾರ ನೋಡಿಕೊಂಡ. ಗಂಟೆ 3.00AM ಆಗಿತ್ತು) ನಿನ್ನೆ ಮಧ್ಯಾಹ್ನನೇ ಮುಂಬೈಗೆ ಬಂದು ಇಳಿದಿದ್ದರು. ನಮ್ಮ ಹುಡುಗ್ರು ಅವರನ್ನು ರಾಜ ಮರ್ಯಾದೆಯಿಂದ ಕರೆದುಕೊಂಡು ಹೋಗಿ ನೋಡ್ಕೋತಿದಾರೆ!! ಯು ಡೋಂಟ್ ವರಿ..
ಎಲ್ಲಿಯವರೆಗೂ ನೀನು ನನಗೆ ಬದ್ದವಾಗಿ ಇರುತ್ತಿಯೋ ಅಲ್ಲಿಯವರೆಗೂ ಅವರಿಗೆ ಯಾವ ತೊಂದರೆಯೂ ಆಗಲ್ಲ. ಆದ್ರೆ ನನ್ನ ಮಾತಿಗೆ ವಿರುದ್ಧವಾಗಿ ಇಲ್ಲಿ ಏನೇ ನಡೆದರೂ ಅವರು ಸೇಫಾಗಿ ಇರ್ತಾರೆ ಅನ್ನೋ ಯಾವುದೇ ಗ್ಯಾರೆಂಟಿ ಇಲ್ಲ!! "
ಪರಿ ಹರ್ಷ ಮತ್ತು ಪ್ರಸನ್ನ ಬೆಚ್ಚಿ ಬಿದ್ದರು. ಬೂದಿ ಮುಚ್ಚಿದಂತಿದ್ದ ಕೆಂಡದಲ್ಲಿ ಕೈ ಸಿಕ್ಕಿಸಿಕೊಂಡಂತೆ ಚಡಪಡಿಸಿ ಹೋದರು. 'ವಿನಾಯಕ್ ಮತ್ತು ಸುಲೋಚನ ಅವರು ಅಥ್ರೇಯನ ಕಪಿಮುಷ್ಠಿಯಲ್ಲಿರುವ ವಿಷಯ ಪ್ರಸನ್ನನ ಮನಸ್ಸನ್ನು ಬಹುವಾಗಿ ಕಲುಕಿತ್ತು'
"ಈಗ ಅವರನ್ಯಾಕೆ ಮಧ್ಯದಲ್ಲಿ ಎಳಿತಿದೀಯಾ? ಅವರಿಂದ ಏನಾಗಬೇಕು ನಿನಗೆ?" ಹರ್ಷ ಕೋಪದಿಂದ ಅವನ ಮೇಲೆ ಕೈ ಮಾಡಲು ಮುಂದಾದರೆ, ಪರಿ & ಪ್ರಸನ್ನ ಅವನನ್ನು ಹಿಡಿದು ನಿಗ್ರಹಿಸಿದರು.
"ದೌರ್ಬಲ್ಯ...!! ಮನುಷ್ಯರನ್ನು ಆಳಲು ಬೇಕಾಗಿರುವ ಏಕೈಕ ಅಸ್ತ್ರವದು. ಹೇಗೆ ಮಾನ್ವಿಗೆ ಅವಳ ತಂದೆ, ರಘುಗೆ ತನ್ನ ಮಗಳೇ ದೌರ್ಬಲ್ಯವೋ ಹಾಗೆ ನಿನ್ನ ದೌರ್ಬಲ್ಯ ನಿನ್ನ ಕುಟುಂಬ! ಸರಿತಾನೇ? ಈಗ ಬುದ್ದಿ ಸ್ಥಿಮಿತಕ್ಕೆ ಬರುತ್ತೆ. " ಹರ್ಷನ ಮೌನ ಕಂಡು ನಿರಾಳನಾದ ಅಥ್ರೇಯ..
"ನನ್ನ ವಿರುದ್ಧ ಅದೇನೇನು ಸಾಕ್ಷಿ ಸಿಕ್ಕವು ನಿನಗೆ?" ಅದ್ವೈತನನ್ನು ಪ್ರಶ್ನಿಸಿದ್ದ.
"ತುಂಬಾ ಮೆರೆದದ್ದಾಯಿತು ಮಿ.ಅಥ್ರೇಯ ಇನ್ನು ನಿಮ್ಮ ಆಟ ಮುಗೀತು. ಒಂದು ಸಲ ಎಲ್ಲಾ ಪ್ರೂಫ್ ಪೋಲಿಸರಿಗೆ ಸಿಗಲಿ ಆಗ ಗೊತ್ತಾಗುತ್ತೆ..."
ಅವನ ಮಾತಿಗೂ ಮೊದಲೇ ಅಥ್ರೇಯನ ಕಡೆಯ ವ್ಯಕ್ತಿಯೊಬ್ಬ ಅವನ ಮುಖಕ್ಕೆ ಮುಷ್ಟಿಯಿಂದ ಗುಮ್ಮಿದ.
" ತಲೆಯೆಲ್ಲ ಮಾತಾಡಬೇಡ, ಈಗ ಸಾಕ್ಷಿ ಎಲ್ಲಿವೆ?" ಗುಡುಗಿದ ಅಥ್ರೇಯ
" ಸೇಫಾದ ಜಾಗ ಸೇರಿವೆ. ಎಲ್ಲಿ ಅನ್ನೋದು ನನಗ್ ಮಾತ್ರ ಗೊತ್ತು. ಆದ್ರೆ ನಿನಗೆ ಹೇಳಲ್ಲ..!! ಬ್ಲ್ಯಾಕ್ ಮೇಲ್ ಮಾಡೋಕೆ ನನಗೆ ಹಿಂದುಮುಂದು ಅಕ್ಕಪಕ್ಕ ಮೇಲೆ ಕೆಳಗೆ, ಟ್ರ್ರ್ರ್.. ಯಾರೂ ಇಲ್ಲ... ಅಬ್ ತೇರಾ ಕ್ಯಾ ಹೋಗಾ ಅಥ್ರೇಯ??" ತೀರ ಉಡಾಫೆಯಿಂದ ನುಡಿದು ನಕ್ಕ ಅದ್ವೈತ. ಅಥ್ರೇಯನಿಗೆ ಅವನ ಹುಡುಗುತನ ಕಂಡು ಸಿಟ್ಟು ಕೆರಳಿತು.
" ನನ್ನ ಜೊತೆಗೆ ಹುಡುಗಾಟ ಒಳ್ಳೆಯದಲ್ಲ. ಸಾಕ್ಷಿ ಎಲ್ಲಿದೆಯಂತ ಗೊತ್ತಿರೋದು ನಿನಗೆ ಮಾತ್ರ ಅಂದಮೇಲೆ ನೀನೇ ಇಲ್ಲವಾದರೆ ಸತ್ಯ ಶಾಶ್ವತವಾಗಿ ನಿನ್ನ ಜೊತೆಗೆ ಮಣ್ಣಾಗಿ ಹೋಗುತ್ತೆ..! ಜೀವದ ಮೇಲೆ ಆಸೆ ಇದ್ರೆ ಕೊನೆಯ ಅವಕಾಶ ಇದೆ. ನಿಜ ಹೇಳು, ಎಲ್ಲಿ ಸಾಕ್ಷಿ?? " ಅದ್ವೈತ ಜೋರಾಗಿ ನಕ್ಕನೇ ಹೊರತು ಬೇರೆನು ಹೇಳಲಿಲ್ಲ.
ಅಥ್ರೇಯ ತನ್ನ ಕಡೆಯವರಿಗೆ ಕೈ ಸನ್ನೆಯಲ್ಲಿ ಅವನ ಕಥೆ ಮುಗಿಸುವಂತೆ ಸೂಚಿಸಿದ. ಒಬ್ಬ ವ್ಯಕ್ತಿ ಫೋನ್‌ಲ್ಲಿ ಯಾರೊಂದಿಗೊ ಮಾತಾಡತೊಡಗಿದ.
ಮತ್ತೊಬ್ಬ ದಾಂಡಿಗ ಅದ್ವೈತನ ಬಳಿ ಬಂದು ಒದೆಯುತ್ತ ಪ್ರೂಫ್ ಎಲ್ಲಿ ಎಂದು ಕೇಳುತ್ತಲಿದ್ದ. ಹರ್ಷನ ತಡೆಯುವ ಪ್ರಯತ್ನಕ್ಕೆ ಅಥ್ರೇಯ ಅವನ ತಾಯಿ ತಂದೆಯ ಬೆದರಿಕೆಯ ತಡೆಯೊಡ್ಡಿದ. ಪ್ರಸನ್ನನ ಹೋರಾಟ ವ್ಯರ್ಥವಾಗಿ ಅವನಿಗೂ ಒಂದೆರಡು ಒದೆತ ಪ್ರಾಪ್ತವಾದವು. ಪರಿಯ ದೈನ್ಯತೆಯ ಬೇಡಿಕೆಗಂತೂ ಅಲ್ಲಿ ಕಿಂಚಿತ್ತೂ ಬೆಲೆ ಸಿಗಲಿಲ್ಲ.
ಅಷ್ಟಾದರೂ ಅದ್ವೈತ ಸತ್ಯ ಅರುಹದಿದ್ದಾಗ ಅವನನ್ನು ಜೋರಾಗಿ ರಸ್ತೆಯ ಮುಂಭಾಗಕ್ಕೆ ನೂಕಲಾಯಿತು.
ಅದೇ ಸಮಯಕ್ಕೆ ಆ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದು ಅವನ ದೇಹಕ್ಕೆ ಬಲವಾಗಿ ಗುದ್ದಿಕೊಂಡು ಮುಂದೆ ಸಾಗಿತ್ತು. ಅದ್ವೈತನ ದೇಹ ಕ್ಷಣದಲ್ಲಿ ಗಾಳಿಯಲ್ಲಿ ತೇಲಿ, ಅವನ ಚೀತ್ಕಾರ ಆಕ್ರಂದನದ ಮೊಳಗಿನೊಂದಿಗೆ ಭೂಮಿಗಪ್ಪಳಿಸಿತ್ತು. ರಸ್ತೆಯ ಪಕ್ಕದಲ್ಲಿ ಬಿದ್ದ ಕಡುಗೆಂಪು ನೆತ್ತರಿನ ಮಡುವಲ್ಲಿನ ಅವನ ದೇಹ ಕೊನೆಯುಸಿರನ್ನು ಬಿಗಿಯಾಗಿ ಹಿಡಿದಿತ್ತು.
ಹಠಾತ್ತಾಗಿ ನಡೆದ ಈ ದುರ್ಘಟನೆಗೆ ಉಳಿದ ಮೂವರ ಎದೆ ನಡುಗಿ ಹೋಯಿತು. ಕೂಡಲೇ ಹರ್ಷ ಪ್ರಸನ್ನ ಅವನತ್ತ ಧಾವಿಸಿದ್ದರು. ಅವರ ಹಿಂದೆಯೇ ಹೆಜ್ಜೆ ಹಾಕಿದ ಪರಿಯ ಮೈ ಮನುಷ್ಯರ ವಿಕೃತ ಅಟ್ಟಹಾಸ ಕಂಡು ಕಂಪಿಸತೊಡಗಿತ್ತು. ಬೆದರಿದ ಕಂಗಳು ರೆಪ್ಪೆ ಬಡಿಯುವದನ್ನು ಮರೆತು ಅದ್ವೈತನ ರಕ್ತಸಿಕ್ತ ದೇಹವನ್ನು ದಿಟ್ಟಿಸತೊಡಗಿದವು.
ಪ್ರಸನ್ನ ಅವನನ್ನು ಬದುಕಿಸಬಹುದಾ ಎಂಬ ಪ್ರಯತ್ನದಿಂದ ನಾಡಿ ಮಿಡಿತ ಪರಿಶೀಲಿಸುತ್ತಿದ್ದರೆ, ಅದ್ವೈತ ತನ್ನ ಕೊನೆಯ ಮಾತುಗಳನ್ನು ಅವನ ಮುಂದಿಟ್ಟಿದ್ದ..
"ಡು ಮಿ ಎ ಫೇವರ್ ಪ್ರ..ಸನ್.. ಮಾನ್ವಿ,,,ಗ್ಗೆ ಹೇಳಿ... ಐ ಸ್ಟಿಲ್ ಲವ್ ಹರ್,,,, ವ,,ವ್ವೆರಿ ಮಚ್ ಅಂ...ತ !!" ಕೊನೆಯ ಮಾತಿನೊಂದಿಗೆ ಕೊನೆಯ ಉಸಿರು ಬೆರೆತು ಆತ್ಮ ದೇಹವನ್ನು ತೊರೆದು ಹೋಗಿತ್ತು.
ಪ್ರಸನ್ನ ಅವನನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಅಸಹಾಯಕತೆಯಿಂದ ಹನಿಗಂಬನಿಯಾದ. ಹರ್ಷ ತನ್ನ ಕೋಪ ತಾಪಗಳನ್ನೆಲ್ಲ ಅವಡುಗಚ್ಚಿ, ಮುಷ್ಟಿ ಬಿಗಿಹಿಡಿದು ನಿಗ್ರಹಿಸುತ್ತ ಕಾಲು ನೆಲಕ್ಕಪ್ಪಳಿಸಿದ್ದ. ಸಂಬಂಧವೇ ಇಲ್ಲದ ಅಪರಿಚಿತನೊಬ್ಬ ತಮ್ಮ ಸಹಾಯಕ್ಕಾಗಿ ಬಂದು ಅನ್ಯಾಯವಾಗಿ ತನ್ನ ಪ್ರಾಣ ಕಳೆದುಕೊಂಡಿದ್ದ. ಪರಿ ಮೊಣಕಾಲ ಮೇಲೆ ಕುಸಿದು ಕುಳಿತು ಮೌನವಾಗಿ ರೋಧಿಸಿದ್ದಳು
ಅದ್ವೈತನನ್ನು ಸಾವಿನ ಕೂಪಕ್ಕೆ ತಳ್ಳಿದ ಕಾರು ತಿರುಗಿ ಬಂದಿತ್ತು. ಅದರೊಳಗಿಂದ ಇಳಿದ ಡೇವಿಡ್ ತನ್ನ ಗುಂಡಾ ಮಿತ್ರರಿಗೆ ಕೈ ಮಿಲಾಯಿಸುತ್ತ ಕೇಸಾ ಥಾ ಮೇರಾ ಶಾಟ್? ಎಂದೆಲ್ಲ ಕೊಚ್ಚಿಕೊಳ್ಳುತ್ತಿದ್ದ.
ಪ್ರಸನ್ನನಿಗೂ ಆವೇಶ ಹೆಚ್ಚಾಗಿ ಒಂದೇ ವೇಗದಲ್ಲಿ ಡೇವಿಡ್ ಎದುರು ನಿಂತು ಮುಖ ಮೂತಿ ನೋಡದೆ ಅವನನ್ನು ಹೊಡೆಯಲಾರಂಭಿಸಿದ.
ಕೂಡಲೇ ಅವನನ್ನು ಮುತ್ತಿಗೆ ಹಾಕಿ ತಡೆದಿದ್ದರು ಉಳಿದ ರೌಡಿಗಳು
"ಬಹುತ್ ಉಚಲ್ ರಹಾ ಹೈ, ಇಸೇ ಭೀ ಉಸ್ಕೆ ಸಾಥ್ ಬೇಜ್ದೇ ಕ್ಯಾ ಬಾಸ್?" ಕೇಳಿದರು. ಅಥ್ರೇಯ ಮುಗುಳ್ನಕ್ಕು ಸಮ್ಮತಿ ನೀಡಿದ್ದ.
ಅಥ್ರೇಯನ ಕಡೆಯ ರೌಡಿಗಳು ಪ್ರಸನ್ನನ ಕುತ್ತಿಗೆಗೆ ಕೈ ಹಾಕುತ್ತಿದ್ದಂತೆ, ಅವರ ಬಳಿಯಿದ್ದ ವೆಪನ್ ಕಸಿದುಕೊಂಡ ಹರ್ಷ ಅದರ ತುದಿಯನ್ನು ನೇರ ತನ್ನ ಹಣೆಗೆ ಒತ್ತಿ ಬೆರಳು ಟ್ರಿಗರ್ ಮೇಲೆ ಹಿಡಿದಿದ್ದ. ಪರಿ ಅವನನ್ನು ತಡೆಯಲು ಹೋದಳು.
"ಬಿಡು ಪರಿ, ನನ್ನಿಂದ ತಾನೇ ಇಷ್ಟೊಂದು ಅವಾಂತರ,, ನಾನೇ ಇಲ್ಲವಾದರೆ ಇವನೇನು ತಾನೇ ಮಾಡಬಲ್ಲ!! " ಹರ್ಷನ ವಾಗ್ಬಾಣಕ್ಕೆ ಅಥ್ರೇಯ ತತ್ತರಿಸಿ ಹೋದ. ಅವನ ಗುರಿ ಸಾಧನೆಯ ಮೂಲ ಮಂತ್ರವೇ ಹರ್ಷ! ಅವನೇ ಇಲ್ಲವಾದರೆ ಕೈಗೆಟುಕಬೇಕಾದ ಆಸ್ತಿ ಯಾವುದೋ ಆಶ್ರಮದ ಪಾಲಾಗುವುದು.
"ನೋ... ಜಸ್ಟ್ ಸ್ಟಾಪ್ ಇಟ್ ಹರ್ಷ." ಕಿರುಚಿದ ಜೋರಾಗಿ.
"ಲುಕ್, ಮಿ.ಅಥ್ರೇಯ ನೀನು ಹೇಳಿದ್ದು ನಿಜ. ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲಾ ಒಂದು ದೌರ್ಬಲ್ಯ ಇದ್ದೇ ಇರುತ್ತೆ. ಅದೇ ದೌರ್ಬಲ್ಯ ಇನ್ನೊಬ್ಬರ ಪಾಲಿಗೆ ಬ್ರಹ್ಮಾಸ್ಥ್ರವಾಗಿಬಿಡುತ್ತೆ!! ನಿನಗೆ ಯಾವುದೇ ದೌರ್ಬಲ್ಯವೂ ಇಲ್ಲ ಎಂದುಕೊಂಡ ನಿನ್ನ ಅತಿಯಾದ ಆತ್ಮವಿಶ್ವಾಸ ನಿನ್ನ ಮೊದಲ ದೌರ್ಬಲ್ಯ! ನೀನು ವ್ಯಾಮೋಹಿಸೋ ದುಡ್ಡು ನಿನ್ನ ಎರಡನೇ ದೌರ್ಬಲ್ಯ! ಅದನ್ನು ಪಡೆಯಲು ಬೇಕಾಗಿರುವ ನಾನು ಕೂಡ ಸದ್ಯಕ್ಕೆ ನಿನ್ನ ಪಾಲಿನ ದೊಡ್ಡ ದೌರ್ಬಲ್ಯ! ಯೋಚನೆ ಮಾಡು, ಇವರನ್ನು ಸಾಯಿಸೋದು ಮುಖ್ಯವೋ ಇಲ್ಲ ನಾನು ಬದುಕೋದು ಮುಖ್ಯವೋ?!!" ಹರ್ಷನ ಏದಿರೇಟು ಸರಿಯಾಗಿ ಬಿಸಿ ಮುಟ್ಟಿಸಿತು. ಕೆನ್ನೆ ಮುಟ್ಟದೆ ಜೋರಾಗಿ ಕಪಾಳಕ್ಕೆ ಹೊಡೆಸಿಕೊಂಡಂತಾಗಿತ್ತು ಅಥ್ರೇಯನಿಗೆ. ತನ್ನ ಕಡೆಯವರಿಗೆ ಪ್ರಸನ್ನನನ್ನು ಬಿಟ್ಟು ಬಿಡುವಂತೆ ಹೇಳಿದ.
"ನಾನು ಈ ಕೂಡಲೇ ನನ್ನ ಅಪ್ಪ ಅಮ್ಮನ್ನ ನೋಡಬೇಕು. " ಹರ್ಷ ಬೇಡಿಕೆ ಮುಂದಿಟ್ಟ.
"ಇವತ್ತು ನಿನ್ನಿಂದಾಗಿ ಕ್ಯಾನ್ಸಲ್ ಆಗಿರೋ ಮೀಟಿಂಗ್ ನಾಳೆ ಬೆಳಿಗ್ಗೆ ಪೋಸ್ಟ್ ಪೋನ್ಡ್ ಆಗಿದೆ. ಅದನ್ನ ಅಟೆಂಡ್ ಮಾಡು. ಆಮೇಲೆ ನಿನ್ನ ತಂದೆ ತಾಯಿ ಭೇಟಿ" ಅಥ್ರೇಯ ತನ್ನ ಕಂಡಿಷನ್ ಹಾಕಿದ.
"ಅವರಿಗೆ ಯಾವುದೇ ತೊಂದರೆಯೂ ಆಗಕೂಡದು!"
"ಎಲ್ಲಿಯವರೆಗೆ ನನ್ನ ಇಷ್ಟದ ಪ್ರಕಾರ ಎಲ್ಲಾ ನಡೆಯುತ್ತದೆಯೋ ಅಲ್ಲಿಯವರೆಗೂ ಅವರು ಕ್ಷೇಮ!"
"ಡೇವಿಡ್, ಇವರನ್ನ ವಾಪಸ್ ಕರೆದುಕೊಂಡು ಹೋಗು. ಬಿ ಕೇರ್ ಫುಲ್!!" ಎಚ್ಚರಿಕೆ ನೀಡಿದ್ದ.
ಕಾರು ಹತ್ತುವ ಮುನ್ನ ಪರಿ ಮತ್ತು ಪ್ರಸನ್ನನ ಫೋನ್ ಕಸಿದುಕೊಂಡರು. "ಇನ್ಮುಂದೆ ನೀನು ಎಲ್ಲಿಗೂ ಹೋಗುವ ಹಾಗಿಲ್ಲ, ಈ ವಿಷಯವನ್ನು ಯಾರ ಬಳಿಯೂ ಪ್ರಸ್ತಾಪ ಮಾಡುವಂತಿಲ್ಲ" ಕಣ್ಣ ಬೆದರಿಕೆಯಲ್ಲಿ ಪರಿಗೆ ಎಚ್ಚರಿಕೆ ನೀಡಿದ.
"ನೀನು ಸಾಮಾನ್ಯದವನಲ್ಲ ಅಂತ ಗೊತ್ತು! ಏನಾದ್ರೂ ಡಬಲ್ ಗೇಮ್ ಆಡಿದ್ರೆ, ನಿನಗೇನು ಮಾಡಲ್ಲ, ನಿನ್ನ ಆಶ್ರಮನೇ ಧ್ವಂಸ ಮಾಡಿ ಬಿಡ್ತಾನೆ ಈ ಅಥ್ರೇಯ.. ಬಿ ಕೇರ್ಫುಲ್!!" ಮೆಲ್ಲಗೆ ಪ್ರಸನ್ನನ ಭುಜ ಹಿಸುಕಿ ಎಚ್ಚರಿಕೆ ನೀಡಿದ್ದ. ಪ್ರಸನ್ನನ ಎದೆ ಜಿಲ್ಲೆಂದಿತು. ಮೌನವಾಗಿ ಕಾರಿನ ಮುಂದಿನ ಸೀಟಲ್ಲಿ ಕುಳಿತ.
ಕಾರು ಹತ್ತುವ ಮುನ್ನ ಕೊನೆಯ ಬಾರಿ ಹರ್ಷ ಅದ್ವೈತನ ಕಡೆಗೆ ತಿರುಗಿ ನೋಡಿದ್ದ.
"ಅವನ ಬಗ್ಗೆ ಯೋಚಿಸ್ಬೇಡ,, ಪ್ರತಿದಿನ ನಮ್ಮ ದೇಶದಲ್ಲಿ ಸುಮಾರು 1214 ಆ್ಯಕ್ಸಿಡೆಂಟ್ ಗಳು ನಡೆದು ಹೋಗುತ್ತವೆ. 321 ಕೇಸ್ ಸತ್ತು ಹೋದರೆ, ಉಳಿದವು ಕೈಕಾಲು ಕಳೆದುಕೊಂಡು ಮೂಳೆ ಮುರಿದುಕೊಂಡು ಇಂಜ್ಯೂರ್ಡ್ ಆಗ್ತವೆ. ಕೆಲವು ಬೆಳಕಿಗೆ ಬಂದು ಹಗರಣ ಆದ್ರೆ ಕೆಲವೊಂದು ಕತ್ತಲ ಮರೆಯಲ್ಲೇ ಮುಚ್ಚಿ ಹೋಗುತ್ತವೆ. ತುಂಬಾ ಬುದ್ದಿ ಖರ್ಚು ಮಾಡಿ ಅಪರಾಧಿಗಳನ್ನು ಹಿಡಿಯೋವಷ್ಟು ವ್ಯವಧಾನ ಅಧಿಕಾರಿಗಳಿಗಿಲ್ಲ. ಇದ್ದರೂ ಅಂತವರನ್ನ ನಾವುಗಳು ಬದುಕೋಕೆ ಬಿಡಲ್ಲ. ಹತ್ತರಲ್ಲಿ ಹನ್ನೊಂದು ಇವನ ಕೇಸು ಅಷ್ಟೇ...! ನಿನಗ್ಯಾಕೆ ಆತನ ಚಿಂತೆ? ಹೊರಡು... ನೀನು ಮಾತಿಗೆ ತಪ್ಪಿದರೆ ಮುಂದೊಮ್ಮೆ ನಿನ್ನ ತಂದೆ ತಾಯಿ ದೇಹಾನೂ ಹೀಗೆ.."
"ಬೇಡ ಅಥ್ರೇಯ!!" ಹರ್ಷ ದವಡೆಗಚ್ಚಿ ಬೆರಳ ತುದಿಯಲ್ಲಿ ತಾಕೀತು ಮಾಡಿದ.
"ರಿಲ್ಯಾಕ್ಸ್.. ನೀನು ನನ್ನ ಕನಸು ನನಸು ಮಾಡು. ನಾನು ನಿನ್ನ ತಂದೆ ತಾಯಿನಾ ಕ್ಷೇಮವಾಗೇ ಒಪ್ಪಿಸ್ತಿನಿ"
ಡೇವಿಡ್, ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗು.. ರಘುಗೆ ಇಲ್ಲಿನ ಯಾವುದೇ ಘಟನೆ ತಿಳಿಯಕೂಡದು!!" ಮತ್ತೊಮ್ಮೆ ಎಚ್ಚರಿಸಿದ
ಅವರ ಕಾರು ಹೋಗುತ್ತಿದ್ದಂತೆ ಅಥ್ರೇಯ ತನ್ನ ಕಡೆಯವರಿಗೆ ಅದ್ವೈತನ ಸಂಪೂರ್ಣ ಮಾಹಿತಿ ಹಾಗೂ ಅವನ ಪರಿಚಿತರ ಬಗ್ಗೆ ವಿಚಾರಿಸಿ ಸಾಕ್ಷ್ಯಾಧಾರಗಳನ್ನು ಹುಡುಕಿ ನಾಶಪಡಿಸಲು ಹೇಳಿದ.
ಅದ್ವೈತನ ಮೃತದೇಹವನ್ನು ಕಣ್ಣಲ್ಲಿ ತುಂಬಿಕೊಂಡು ನಿರ್ಜಿವದಂತೆ ಕಾರು ಹತ್ತಿ ಕುಳಿತಿದ್ದರು ಮೂವರು. ಭೇಟಿಯಾಗಿ ಕೆಲವೇ ಕ್ಷಣಗಳು ಉರುಳಿದ್ದವು ಅಷ್ಟೇ, ಆದರೂ ಅವನ ಮಾತು ನಗುಮುಖ ಹುಡುಗುತನ ಎದೆಗಾರಿಕೆ ಆತ್ಮೀಯತೆಯಿಂದ ಮಾತಾಡುವ ಶೈಲಿ.. ಬಹಳ ವರ್ಷಗಳಿಂದ ಪರಿಚಿತನೇನೋ ಎನ್ನಿಸುವಷ್ಟು ಮನಸ್ಸಿಗೆ ಹತ್ತಿರವಾಗಿದ್ದ ಹುಡುಗ. ಕೊನೆಯಲ್ಲಿಯೂ ತನ್ನ ಮಂದಸ್ಮಿತವನ್ನೇ ನೆನಪಿಗೆ ಅಚ್ಚೆ ಹಾಕಿ ಪ್ರೀತಿಯನ್ನು ಸಾರಿ ಹೇಳಿ ಇಹಲೋಕವನ್ನು ತ್ಯಜಿಸಿದ್ದ.
ಕ್ಷಣದಲ್ಲಿ ಹತ್ತಿರವಾಗಿ ದೂರವಾದವನ ನೆನೆದು ಪ್ರಸನ್ನನ ಮನಸ್ಸು ಆರ್ದ್ರವಾಗಿ ಹೋಗಿತ್ತು. ಒಂದೆಡೆ ಅತ್ತೆ-ಮಾವನ ಜೀವ, ಒಂದೆಡೆ ಮಾನ್ವಿಯ ತಂದೆ ಪ್ರಾಣ, ಮತ್ತೊಂದೆಡೆ ಹರ್ಷ ಮತ್ತು ಮಾನ್ವಿಯ ಮದುವೆ!! ಪರಿ ಹರ್ಷನ ಕೈಯಲ್ಲಿ ಕೈ ಬೆಸೆದು ಬದುಕು ಅವನ ಕೈಗೊಪ್ಪಿಸಿ ದಿಙ್ಮೂಢಳಾಗಿ ಕುಳಿತಿದ್ದಳು. ಅವಳ ಆಲೋಚನೆ ಅವನ ಕಣ್ಣಲ್ಲಿ ಪ್ರಶ್ನೆ ಕೇಳಿತು. ಹರ್ಷ ಅವಳ ಕೈಯನ್ನು ಬಿಗಿಯಾಗಿ ಹಿಡಿದು 'ನಾನಿದ್ದೇನೆ ಯೋಚಿಸಬೇಡ' ಎಂದು ಕಣ್ಣಲ್ಲೇ ಧೈರ್ಯ ನೀಡಿದ್ದ. ಅವನ ನಿರ್ಧಾರ ಸ್ಥಿರವಾಗಿತ್ತು. ಮೊದಲು ತನ್ನ ತಂದೆ ತಾಯಿಯನ್ನು ಈ ವ್ಯೂಹದಿಂದ ಹೊರತಂದು, ಈ ಮದುವೆಗೂ ಮುನ್ನ ಅಥ್ರೇಯನ ಮುಖವಾಡ ಕಳಚುವ ಬಗೆಯನ್ನು ಯೋಚಿಸಲಾರಂಭಿಸಿದ್ದ ಆತ.
************
ಆಸ್ಪತ್ರೆಗೆ ಮರಳಿ ಬಂದಾಗ ಸಮಯ ನಾಲ್ಕರ ಜಾವ,
"ಮಾನ್ವಿ ಇಸ್ ಪರ್ಫೆಕ್ಟ್ಲಿ ಆಲ್‌ರೈಟ್ ಡಾ.ಪ್ರಸನ್ನ. ನೀವ್ಯಾಕೆ ಹಾಗೆ ಕಿರುಚಿ ಓಡಿ ಹೋಗಿದ್ದು ? ನೀವೆಲ್ಲ ಎಲ್ಲಿ ಹೋಗಿದ್ರಿ ಇಷ್ಟೊತ್ತು,?". ಬರುತ್ತಲೇ ಕೇಳಿದ ಆಲಾಪ್
ಮೂವರು ಮುಖ ಮುಖ ನೋಡಿಕೊಂಡು ಚಹಾದ ನೆಪ ಹೇಳಿದರು. ಆಲಾಪ್ ಇನ್ನೇನೋ ಕೇಳುವ ಮೊದಲೇ ಪ್ರಸನ್ನ ಅವನಿಂದ ಮುಂದೆ ಸಾಗಿ ಮಿ& ಮಿಸೆಸ್ ರಘುನಂದನ್ ಅವರ ಎದುರಿಗೆ ಬಂದು ನಿಂತ. ಮಗಳಿಗಾಗಿ ತಂದೆ ಪಡುತ್ತಿದ್ದ ಯಾತನೆ ಡಾಂಭಿಕವಲ್ಲ ನಿಜವೆಂದು ಅರಿವಾಗಿತ್ತು ಅವನಿಗೆ. ಅವರ ಪರಿಸ್ಥಿತಿ ನೆನೆದು ಮರುಕವುಂಟಾಯಿತು.
"ಸರ್, ಐಮ್ ಸಾರಿ... ಒಂದು ಚಿಕ್ಕ ಸುಳ್ಳು ಹೇಳಿದ್ದೆ.." ಅಲವತ್ತುಕೊಂಡ. ರಘುನಂದನ್ ತಲೆಯೆತ್ತಿ ನಿರುಕಿಸಿದರು. ಅವರ ಸೆಕ್ಯೂರಿಟಿ, ಡೇವಿಡ್ ಇತರ ಎಲ್ಲರ ಹದ್ದಿನಕಣ್ಣು ಅವನ ಮುಂದಿನ ಮಾತಿನ ಮೇಲಿದ್ದವು. ಪಿಎ ಯುದ್ಧದ ಸಿದ್ಧತೆಯಂತೆ ಮೊಬೈಲ್ ಕೈಗೆತ್ತಿಕೊಂಡ.
"ಅದೂ... ಮಾನ್ವಿ ಕ್ಷೇಮವಾಗೇ ಇದ್ದಾಳೆ. ಬುಲೆಟ್ ತಾಗಿದ್ದು ಅವಳ ತೋಳಿಗೆ, ಅದೂ ಡೀಪಾಗಿ ಹೋಗಿರಲಿಲ್ಲ, ಅವಳ ಜೀವಕ್ಕೆ ಯಾವುದೇ ಅಪಾಯ ಇಲ್ಲ. ನೋವು ಕಡಿಮೆ ಆಗಲೆಂದು ಕೊಟ್ಟ ಮಾತ್ರೆ ಪ್ರಭಾವದಿಂದಾಗಿ ನಿದ್ರೆಹೋಗಿದ್ದಾಳೆ ಅಷ್ಟೇ!! ನೀವು ನಿರಾತಂಕವಾಗಿರಿ." ಕೈ ಅದುಮಿ ಸಮಾಧಾನ ಧೈರ್ಯ ನೀಡಿದ್ದ.
ಮಗಳ ಕ್ಷೇಮದ ವಿಚಾರ ಕೇಳಿ ಅವರ ಮೊಗದಲ್ಲಿ ಕಾಂತಿಯೊಂದು ಚಿಮ್ಮಿತು. ಕೋಪಿಸಿಕೊಳ್ಳುವ ಬದಲಾಗಿ ಅವನನ್ನೇ ಬಿಗಿದಪ್ಪಿ ಭುಜ ಚಪ್ಪರಿಸಿ ಥ್ಯಾಂಕ್ಸ್ ಹೇಳಿದ್ದರು. ಏನು ಹೇಳುವನೆಂದು ಆತಂಕಪಟ್ಟ ಸುತ್ತಲಿನ ಬಿಗುವಾತಾವರಣ ಹಗುರಾಯಿತು. ಇದರಿಂದ ತಮಗೆ ಯಾವ ಪ್ರಮಾದವಿಲ್ಲವೆಂದು ಅರಿತು!
ಒಳಹೊಕ್ಕು ಮುಗ್ದವಾಗಿ ಮಲಗಿದ್ದ ಮಗಳ ಹಣೆ ನೇವರಿಸಿ, ಮುತ್ತಿಟ್ಟರು ರಘುನಂದನ್. ಕೈ ಬೆರಳ ಸವರಿ ಕಣ್ಣಿಗೊತ್ತಿ ದುಃಖಿಸುವಾಗ ಒಳಬಂದ ಪ್ರಸನ್ನ..
" ಮಗಳ ಜೀವ ಉಳಿಯುವುದೋ ಇಲ್ಲವೋ ಎಂದು ಕೇವಲ ಹತ್ತು ಗಂಟೆ ಕಾಯಲು ಇಷ್ಟೊಂದು ಆತಂಕ ದುಃಖ ಯಾತನೆ ಪಟ್ಟಿರಲ್ಲ, ಸ್ವಲ್ಪ ಯೋಚನೆ ಮಾಡಿ, ತಮ್ಮ ಮಗ ಬದುಕಿದ್ದರೂ ಅವನು ಸತ್ತುಹೋದ ಎಂದು ಭ್ರಮಿಸಿದ್ದ ಹರ್ಷನ ತಂದೆ ತಾಯಿ ಕುಟುಂಬದ ವ್ಯಥೆ ಹೇಗಿರಬಹುದು?? ಅದನ್ನು ಅರ್ಥ ಮಾಡಿಸಲು ಹೀಗೆ..."
"ಸರ್, ಅಥ್ರೇಯ ಸರ್ ಆನ್- ಲೈನ್" ಫೋನ್ ಅವರ ಕೈಗಿಟ್ಟ ಪಿಎ ಪ್ರಸನ್ನನಿಗೆ ಹೋಗುವಂತೆ ಸನ್ನೆ ಮಾಡಿದ. ಪ್ರಸನ್ನ ಹೊರಹೋಗುತ್ತಿದ್ದರೆ ರಘುನಂದನ್ ಅವರ ನೋಟ ಅವನ ಮೇಲೆಯೇ ನೆಟ್ಟಿತ್ತು.
*********
ಅಥ್ರೇಯನ ಕ್ರೂರತ್ವದ ಶಬ್ದಶಃ ಪರಿಚಯವಾದ ನಂತರ ಎದೆಯಲ್ಲಿ ಭಯದ ವಾತವರಣ ಉಲ್ಬಣಗೊಂಡು ಬಿಟ್ಟಿತ್ತು.
"ಅವರು ಅತ್ತೆ ಮಾವನ್ನ ಎಲ್ಲಿ ಕೂಡಿ ಹಾಕಿರಬಹುದು? ಊಟ ನೀರು ಕೊಟ್ಟಿರ್ತಾರಾ? ಏನು ಹಿಂಸೆ ಕೊಡ್ತಿದ್ದಾರೋ ಏನೋ?" ಪರಿಯ ಕಂಗಳು ತಂತಾನೆ ಜಾರಿದವು.
ಅನ್ಯಮನಸ್ಕನಾಗಿ ಕುಳಿತಿದ್ದ ಹರ್ಷ ವಾಸ್ತವಕ್ಕೆ ಮರಳಿ ಅವಳ ಕಂಬನಿಗೆ ಕೈ ಚಾಚಿದ. "ಹೇಯ್... ಶ್... ಹಾಗೆಲ್ಲ ಏನಾಗಿರಲ್ಲ. ಬೆಳಿಗ್ಗೆ ಮೀಟಿಂಗ್ ಮುಗಿದ ತಕ್ಷಣವೇ ನಾವಿಬ್ರೂ ಅವರನ್ನು ಭೇಟಿ ಮಾಡ್ತಿವಿ. ಅಲ್ಲಿವರೆಗೂ ಈ ನೆಗೆಟಿವ್ ಯೋಚನೆ ಎಲ್ಲಾ ಬಿಟ್ಬಿಡು ಒಕೆ... " ಅವಳ ಕೆನ್ನೆ ತಡವಿ ಧೈರ್ಯ ಹೇಳಿದ್ದ. ತನ್ನ ಮನದ ತಲ್ಲಣಗಳನ್ನು ತನ್ನಲ್ಲೇ ಬಚ್ಚಿಟ್ಟು ಮುಗುಳ್ನಕ್ಕ. ಅವಳಿಗೂ ಅವನ ಸಾಂಗತ್ಯ ಹಿತಕರವಾದ ಸ್ಥೈರ್ಯ ತುಂಬಿತ್ತು.
ಅಷ್ಟರಲ್ಲಿ ಐಸಿಯು ನಿಂದ ಹೊರಬಂದ ಪ್ರಸನ್ನ ಅವರಿಬ್ಬರ ಮಧ್ಯೆ ಬಂದು ಜಾಗ ಆಕ್ರಮಿಸಿಕೊಂಡ.
"ನೀವಿಬ್ರೂ ಸ್ವಲ್ಪ ದಿನ ಅಪರಿತರಂತೆ ದೂರ ದೂರನೇ ಇದ್ರೆ ಒಳ್ಳೆಯದು. ಅಲ್ಲಿ ಅಪ್ಪ ಅಮ್ಮನ ಜೀವದ ಪ್ರಶ್ನೆ!" ಖಾರವಾಗಿ ನುಡಿದ. ಅವನ ಮಾತು ನಿಜವೆನ್ನಿಸಿ ಪರಿ ನೋಟ ಬದಲಿಸಿದಳು. ಹರ್ಷನ ಮೊಗದಲ್ಲಿ ಬೇಸರದ ಬದಲು ತನ್ನ ತಂದೆ ತಾಯಿ ಬಗ್ಗೆ ತನಗಿಂತ ಹೆಚ್ಚು ಕಾಳಜಿಯಿದೆಯಲ್ಲ ಇವನಿಗೆ ಎಂದು ಆಶ್ಚರ್ಯ ವ್ಯಕ್ತವಾಯಿತು.
"ನಾವು ಅವರ ಬಗ್ಗೆಯೇ ಆಲೋಚಿಸುತ್ತಿದ್ದೆವು.." ಕ್ಲುಪ್ತವಾಗಿ ನುಡಿದ.
"ಅವರು ಸೇಫಾಗಿ ನಮಗೆ ಸಿಗೋವರೆಗೂ ಯಾವ ರಿಸ್ಕ್‌ನ್ನು ತೆಗೆದ್ಕೊಳ್ಳಲು ಆಗಲ್ಲ. ಅದಕ್ಕಾಗಿ ಮೊದಲು ಅವರನ್ನು ಎಲ್ಲಿ ಬಂಧಿಸಿಟ್ಟಿದ್ದಾರೆ ಅನ್ನೋದನ್ನ ತಿಳ್ಕೊಬೇಕು. "
"ಆ ವಿಷಯ ಆದಷ್ಟು ಬೇಗ ಗೊತ್ತಾಗುತ್ತೆ. " ಪ್ರಸನ್ನನ ಮಾತಿಗೆ ಹರ್ಷ ಕಾನ್ಫಿಡೆಂಟಾಗಿ ಉತ್ತರಿಸಿದ್ದ.
"ಅನ್ಯಾಯವಾಗಿ ಅದ್ವೈತನ ಪ್ರಾಣ ತೆಗೆದುಕೊಂಡ ಪಾಪಿ... ಅವನ ವಿರುದ್ಧ ಸಂಗ್ರಹಿಸಿದ ಸಾಕ್ಷಿಗಳನ್ನು ಅದ್ವೈತ ಎಲ್ಲಿ ಬಚ್ಚಿಟ್ಟಿರ್ಬಹುದು? ಅದನ್ನು ಹೇಗೆ ಹುಡುಕೋದು?" ಅಲ್ಲಲ್ಲಿ ಸುತ್ತುವರೆದಿದ್ದ ಸೆಕ್ಯೂರಿಟಿಗಳಿಗೆ ಕೇಳದಷ್ಟು ಮೆಲುವಾಗಿ ಬಾಯಿಗೆ ಕೈ ಅಡ್ಡವಿಟ್ಟು ಕೇಳಿದಳು. ಹರ್ಷ ಪ್ರಸನ್ನನ ಯೋಚನೆಗಳು ತರಹೇವಾರಿ ಸಾಗಿದ್ದವು.
"ಸಾಯೋ ಮೊದಲು ಮಾನ್ವಿಗೆ ಲವ್ ಕನ್ಫೇಶನ್ ಮಾಡೋ ಬದಲು ಆ ಪುಣ್ಯಾತ್ಮ ಪ್ರೂವ಼್ಸ್ ಬಗ್ಗೆ ಹೇಳಿದ್ರೆ ಚೆನ್ನಾಗಿರ್ತಿತ್ತು" ಯೋಚಿಸಿ ತಲೆ ಕೆಟ್ಟು ಗೊಣಗಿದ ಪ್ರಸನ್ನ. ಅಂತಹ ಗಂಭೀರ ಸಮಸ್ಯೆಯ ನಡುವೆ ಉಢಾಫೆ ಮಾತಾಡಿದ ಪ್ರಸನ್ನನನ್ನು ಎಡ ಬಲದಲ್ಲಿನ ಚೂಪು ನೋಟಗಳು ನುಂಗುವಂತೆ ನೋಡಿದವು.
"Death is nothing at all.. ಎಲ್ರೂ ಒಂದಿನ ಸಾಯಲೇಬೇಕು ತಾನೇ ಅವನು ಸ್ವಲ್ಪ ಬೇಗ ಹೋದ ಅಷ್ಟೇ.. ಅದೂ ಅನ್ಯಾಯವಾಗಿ..! ಹಾಗಂತ ನಮ್ಮ ಬದುಕನ್ನೂ ಬಲಿ ಕೊಡಬೇಕಾ? ಯೋಚನೆ ಮಾಡಿ. ನಾಳೆ ಹೊತ್ತಿಗೆ ನಾವು ಇರುತ್ತೆವೋ ಇಲ್ವೋ ಯಾರಿಗ್ಗೊತ್ತು..." ಅವನು ಸಮರ್ಥನೆ ನೀಡತೊಡಗಿದ.
"ಹೌದು... ಒಂದು ನಿಜ ಹೇಳಿ, ನೀವು ಇಲ್ಲಿಗೆ ನಿಜವಾಗಿಯೂ ನನಗೆ ಸಹಾಯ ಮಾಡೋದಕ್ಕೆ ಬಂದ್ರಾ ಅಥವಾ ನಿಮ್ಮ ಆಶ್ರಮದ ಪಾಲಿನ ಆಸ್ತಿಗೋಸ್ಕರ ಬಂದಿದ್ದಾ?" ಮಧ್ಯೆ ಪ್ರಶ್ನಿಸಿದಳು ಪರಿ
"ನಿಮಗ್ಯಾಕ್ರಿ ಬಂತು ಇಂತಹ ಕೆಟ್ಟ ಸಂಶಯ?? ಆ ಅದ್ವೈತ ಹೇಳೋವರೆಗೂ ಈ ವಿಷಯ ನನಗೆ ಗೊತ್ತು ಸಹ ಇರಲಿಲ್ಲ. ನಾನು ಮುಂಬೈವರೆಗೂ ಬಂದಿದ್ದು ಹರ್ಷನನ್ನ ಮತ್ತೆ ಆ ಮನೆಗೆ ಕರೆದುಕೊಂಡು ಹೋಗೊದಕ್ಕೆ.. ಆದರೆ ಇಲ್ಲಿಗೆ ಬಂದ್ಮೇಲೆ ಏನೇನೋ ನಡಿತಿವೆ."
"ಸಂಕಲ್ಪ್‌ನ ತಾತ ಯಾಕೆ ಎಲ್ಲ ಆಸ್ತಿಯನ್ನು ನಿಮ್ಮ ಆಶ್ರಮದ ಹೆಸರಿಗೆ ಮಾಡಿದ್ರು? ನಿಮ್ಮ ಆಶ್ರಮಕ್ಕೂ ಅವರಿಗೂ ಏನಾದ್ರೂ ಹಳೆಯ ಪರಿಚಯ ಸಂಬಂಧ ಇತ್ತಾ?" ಹರ್ಷ ಕೇಳಿದ.
"ಹ್ಮ್... ಮೋಹನ್ ರಾವ್ ಅನ್ನೋ ಹೆಸರೇನೋ ಕೇಳಿದೀನಿ. ಆಶ್ರಮಕ್ಕೆ ಪ್ರತಿ ವರ್ಷ ತಪ್ಪದೇ ದೊಡ್ಡ ಪ್ರಮಾಣದ ಹಣವನ್ನು ಡೋನೆಟ್ ಮಾಡೋ ವ್ಯಕ್ತಿ! ಇದುವರೆಗೂ ನಾನವರನ್ನು ನೋಡಿಲ್ಲ. ಅವರು ಇದೇ ಮೋಹನ್ ರಾವ್ ಹೌದೋ ಅಲ್ವೋ ಗೊತ್ತಿಲ್ಲ. ಅಕಸ್ಮಾತ್ ಅವರೇ ಆಗಿದ್ರೂ ಅಷ್ಟೂ ಆಸ್ತಿಯನ್ನು ಆಶ್ರಮಕ್ಕೆ ಬರೆಯಲು ಬೇರೆನೋ ಬಲವಾದ ಕಾರಣ ಇರ್ಬಹುದಾ?? ಅವರಿಗೂ ಅಥ್ರೇಯನ ನೀಚತನ ಗೊತ್ತಿತ್ತಾ? " ಮತ್ತಷ್ಟು ದ್ವಂದ್ವಗಳು ಸೃಷ್ಟಿಯಾದವು. ತಲೆ ಕೊಡವಿದ ಪ್ರಸನ್ನ ಹಿಂದೆ ಚೇರ್ ಗೆ ತಲೆಯಾನಿಸಿ ಕಣ್ಮುಚ್ಚಿದ.
"ಮನೆಯಲ್ಲಿ ಹರಿಣಿ ಮತ್ತೆ ತಾತ ಟೆನ್ಷನ್ನಾಗಿರ್ತಾರೆ. ಒಮ್ಮೆ ಮನೆಗೆ ಕಾಲ್ ಮಾಡಿ ಅತ್ತೆ ಮಾವ ನಾವೆಲ್ಲ ಕ್ಷೇಮವಾಗೇ ಇದ್ದೀವಿ ಅಂತ ತಿಳಿಸಬೇಕು." ಪ್ರಸನ್ನನ ಭುಜ ತಡವಿ ಪರಿ ಆತಂಕ ವ್ಯಕ್ತಪಡಿಸಿದಳು.
"ನಮ್ಮ ಫೋನ್ ಆ ಪಾಪಿಗಳ ಪಾಲಾಯ್ತು. ಇವನ ಪೋನ್ ಟ್ರ್ಯಾಪಾಗಿದೆ. ಆಲಾಪ್ ಮುಂದೆ ಏನೂ ಹೇಳೋ ಹಾಗಿಲ್ಲ. ಏನು ಮಾಡೋದು?" ದೂರದಲ್ಲಿ ಫೋನ್‌ಲ್ಲಿ ಮಾತಾಡುತ್ತಿದ್ದ ಆಲಾಪ್ ನನ್ನು ನೋಡುತ್ತ ಹಣೆ ಉಜ್ಜಿಕೊಂಡ ಪ್ರಸನ್ನ
"ಬೇರೆ ಯಾರದಾದ್ರೂ ಮೊಬೈಲಿನಿಂದ ಕಾಲ್ ಮಾಡಲು ಪ್ರಯತ್ನಿಸಬಹುದಾ?" ಹರ್ಷ ಮೆಲ್ಲಗೆ ಉಸುರಿದ್ದ. ಸುತ್ತಲೂ ನೆರೆದಿದ್ದ ಧಢೂತಿ ದೇಹದ ಬಾಡಿಗಾರ್ಡ್ಸ್ ಕಡೆಗೆ ದೃಷ್ಟಿ ಹಾಯಿಸಿದ ಪ್ರಸನ್ನ "ಅಷ್ಟು ಸುಲಭವಲ್ಲ" ಎಂಬ ನೋಟ ಬೀರಿ ತಲೆ ಕೊಡವಿದ.
"ಮೂರು ಜನ ಒಟ್ಟಿಗೆ ಇದ್ದರೆ ಈ ಸಮಸ್ಯೆ. ನಾವು ದೂರ ದೂರ ಆದ್ರೆ ಅವರ ಗಮನ ಕೂಡ ಬೇರೆ ಬೇರೆ ಕಡೆಯಾಗುತ್ತೆ. " ಹರ್ಷ ಮೆಲ್ಲಗೆ ತನ್ನ ಯೋಜನೆಯ ಹೊಂಚು ಹಾಕಿದ್ದ. ಪ್ರಸನ್ನ ಅವನ ಯೋಚನೆ ಒಪ್ಪಿಕೊಂಡ. ಗಡಿಯಾರ ನೋಡಿಕೊಂಡ ಪರಿ "ತಾತ ಇನ್ನೂ ಮಲಗಿರ್ತಾರೆ, ಈಗ ಬೇಡ. ಆಮೇಲೆ ಕಾಲ್ ಮಾಡೋಣ'' ಎಂದಳು
" ಪರಿ, ಇಷ್ಟು ದಿನ ಹರ್ಷನಿಗಾಗಿ ಪರಿತಪಿಸುತ್ತಿದ್ದೀರಿ, ಈಗ ಹರ್ಷ ನಿಮ್ಮ ಕಣ್ಣೆದುರಿಗೆ ಇದ್ದಾನೆ, ನಿಮ್ಮನ್ನೇ ಪ್ರೀತಿಸ್ತಿದ್ದಾನೆ ಕೂಡ, ಆದರೂ ನೀವೇ ಮುಂದೆ ನಿಂತು ಅವನನ್ನು ಮಾನ್ವಿ ಜೊತೆಗೆ ಮದುವೆ ಮಾಡಿಸೋ ಪರಿಸ್ಥಿತಿ ಬಂದೋದಗಿದೆ! ಒಂದು ವೇಳೆ ನಮ್ಮ ಯಾವುದೇ ಪ್ಲ್ಯಾನ್ ವರ್ಕ್ ಆಗದೆ ಹರ್ಷ ಮತ್ತು ಮಾನ್ವಿ ಮದುವೆ ಮಾಡಲೇಬೇಕಾದ ಅನಿವಾರ್ಯತೆ ಉಂಟಾದರೆ ಆಗ ನಿಮ್ಮ ನಿರ್ಧಾರ ಏನು!? ಜೀವನ ಪೂರ್ತಿ ಹರ್ಷನನ್ನ ಬಿಟ್ಟು ಇರಬಲ್ಲೀರಾ!!" ಮೆಲ್ಲಗೆ ಪ್ರಶ್ನೆಯೊಂದನ್ನು ಎಸೆದಿದ್ದ. ಅದೇ ಪ್ರಶ್ನೆಯನ್ನು ಪರಿ ಹರ್ಷನ ಕಣ್ಣಲ್ಲಿ ಪ್ರಶ್ನಿಸಿ ಉತ್ತರವಾಗಿ ಅವನ ಮಂದಹಾಸವನ್ನು ಪಡೆದು ನಿರುಮ್ಮಳಾದಳು. ಪ್ರೇಮಿಗಳ ಈ ಮೌನ ಭಾಷೆಯನ್ನು ಅರಿಯಲಾಗದ ಬಹುಭಾಷಾ ವಾಙ್ಮಿ ಸೋತು ನಿದ್ರೆಗೆ ಜಾರಿದ.
ಮುಂದುವರೆಯುವುದು...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ