ಕಾರ್ಮೋಡ ಕವಿದ ಇಳಿಸಂಜೆ ಇರುಳಾಗಿ ಮಾರ್ಪಟ್ಟಿತ್ತು. ಸುಳಿವ ತಂಗಾಳಿ ಎಲ್ಲಿಂದಲೋ ಸುಮಧುರ ಭಾವನೆಗಳ ಹೊತ್ತು ತರುತ್ತಿತ್ತು. ಬಿಸಿಲಿಗೆ ಬೆಂದ ಭೂಮಿಗೆ ಗಗನ ಹನಿಗಳ ಮುತ್ತೆರೆದು ತಂಪುಣಿಸುತ್ತಿತ್ತು. ವರ್ಷದ ಮೊದಲ ವೃಷ್ಟಿಯಲ್ಲಿ ಮೀಯುತ್ತ ಸೃಷ್ಟಿಯ ಸಕಲ ಚರಾಚರಗಳು, ಮೈಮನಸ್ಸುಗಳು ಹೊಸ ಜೀವಕಳೆ ಪಡೆಯುತ್ತಿದ್ದವು. ಆಗತಾನೆ ಆಸ್ಪತ್ರೆಯ ಕೆಲಸ ಮುಗಿಸಿ ಮನೆಗೆ ಹೊರಡಲು ಹೊರಗೆ ಬಂದಿದ್ದಳು ಪರಿಧಿ. ಮಳೆಯನ್ನು ಕಂಡವಳೇ ಸುತ್ತಲಿನ ಜಗತ್ತು ಮರೆತು ಪುಟ್ಟ ಮಗುವಂತೆ ಮುಗಿಲ ಕಡೆಗೆ ಮುಖ ಮಾಡಿ ಕೈಬಿಚ್ಚಿ ನವಿಲಿನಂತೆ ಗಿರಗಿರ ಸುತ್ತುತ್ತಿದ್ದಳು. ಹರ್ಷ ಇನ್ಮುಂದೆ ಕಾರು ತಗೊಂಡು ಹೋಗು, ಮಳೆಗಾಲ.. ಎಂದಿದ್ದು ನೆನಪಾಗಿ ನಾಲಿಗೆ ಕಚ್ಚಿ ಸಾರಿ ಕಣೋ.. ಎಂದುಕೊಂಡಳು ಮನಸ್ಸಲ್ಲೇ. ಆ ಸಂಜೆಯ ತಂಪು ಮಳೆಗೆ ಮನಸ್ಸು ಪ್ರಫುಲ್ಲವಾಯಿತು. ಮಳೆಯಲ್ಲಿ ನೆನೆಯುತ್ತ ಸ್ಕೂಟಿ ತೆಗೆಯುವಾಗ ಹಿಂದೆ ಬಂದ ಪ್ರಸನ್ನ ಮಳೆ ನಿಂತ ಮೇಲೆ ಹೋಗಿ ಎಂದಿದ್ದ. ಪರವಾಗಿಲ್ಲ ನನಗೂ ಮಳೆಗೂ ಅವಿನಾಭಾವ ಬಾಂಧವ್ಯವಿದೆ ಎಂದು ನಗುತ್ತ ಹೊರಟಿದ್ದಳು. ಆದರೆ ಪ್ರಸನ್ನನನ್ನು ನೋಡಿ ಮಳೆಯ ಖುಷಿ ಮಾಯವಾಗಿ ಮಧ್ಯಾಹ್ನ ಅವನು ಕೇಳಿದ ಪ್ರಶ್ನೆ ನೆನಪಾಗಿತ್ತು. ಎಲ್ಲಿ ಮಾನ್ವಿ?? ನಿಜವಾಗಿಯೂ ಅವಳೆಲ್ಲಿದ್ದಾಳೋ? ಏನಾದಳೋ? ಒಂದು ಗೊತ್ತಿಲ್ಲ. ಏನೋ ಅಂದುಕೊಂಡ ಬದುಕು ಏನೋ ಆಗಿಹೋಯಿತು ಎಂದು ದೀರ್ಘವಾದ ನಿಟ್ಟುಸಿರು ಬಿಟ್ಟಳು. ಮಳೆಯ ಹನಿಗಳ ಜೊತೆಗೆ ಒಂದೆರಡು ಕಣ್ಣಹನಿಗಳು ಜಾರಿ ಭೂಮಿ ಪಾಲಾದವು. ಆದರೂ ಮನಸ್ಸು ಮಾತ್ರ ತಹಬದಿಗೆ ಬರಲಿಲ್ಲ. ಸ್ನೇಹ ಪ್ರೀತಿಗಳ ಸುಳಿಯಲ್ಲಿ ಸಿಲುಕಿ ತಾನು ತೆಗೆದುಕೊಂಡ ನಿರ್ಧಾರಗಳು ಎಷ್ಟು ಸರಿ ಎಷ್ಟು ತಪ್ಪು.. ಅಷ್ಟಕ್ಕೂ ತಾನು ಮಾಡಿದ ತಪ್ಪಾದರೂ ಏನು ಎಂಬುದು ಅವಳಿಗೆ ಈಗಲೂ ಅರ್ಥವಾಗದ ಪ್ರಶ್ನೆಯಾಗಿ ಕಾಡುತ್ತಿತ್ತು!!
ಯೋಚನೆ ಆಲೋಚನೆಗಳ ಸಮಾಗಮದೊಡನೆ ಮಳೆಯಲ್ಲಿ ಪೂರ್ತಿಯಾಗಿ ನೆನೆದು ಮನೆಗೆ ಬಂದ ಪರಿಧಿಯ ಒದ್ದೆ ತಲೆಯನ್ನು ಟವೆಲಿನಿಂದ ಒರೆಸುತ್ತ 'ಏನಮ್ಮ..ಪರಿ ಮಳೆಯಲ್ಲಿ ಹೀಗೆ ನೆನೆದರೆ ಶೀತ ಆಗುತ್ತೆ ಆರೋಗ್ಯ ಹಾಳಾಗುತ್ತೆ ಅಂತ ಗೊತ್ತಾಗಲ್ವ.. ನೀನೇನು ಚಿಕ್ಕ ಮಗುನಾ ಬುದ್ದಿ ಹೇಳಿಸ್ಕೊಳ್ಳೊಕೆ ಎಂದು ಸುಲೋಚನ ಬುದ್ದಿ ಹೇಳುತ್ತಿದ್ದರು. 'ಸಾರಿ ಅತ್ತೆ.. ವರ್ಷದ ಮೊದಲ ಮಳೆ ನೋಡಿ ಮನಸ್ಸಿಗೆ ತುಂಬಾ ಖುಷಿಯಾಗೋಯ್ತು... ಆ ಕ್ಷಣ ನನಗೆ ಯಾವುದು ಲಕ್ಷ್ಯಕ್ಕೆ ಬರಲಿಲ್ಲ' ಎನ್ನುತ್ತಿದ್ದಳು ಪರಿಧಿ. 'ಇದೊಂದು ಚೆನ್ನಾಗಿ ಹೇಳ್ತಿಯಾ.. ಬೇಗ ಬಟ್ಟೆ ಬದಲಾಯಿಸಿ ಬಾ ಬಿಸಿ ಬಿಸಿ ಕಾಫೀ ಕೊಡ್ತಿನಿ' ಎಂದು ಹೇಳಿ ಅಡಿಗೆ ಮನೆಗೆ ಹೋದರು ಸುಲೋಚನ. ಪರಿಧಿ ಬಟ್ಟೆ ಬದಲಿಸಿ ಕಾಫಿ ಹೀರುತ್ತ ತನ್ನ ಮಂಚದ ಮೇಲೆ ಕುಳಿತಾಗ ಹರಿಣಿ ತನ್ನ ರಾಶಿ ರಾಶಿ ಪುಸ್ತಕಗಳನ್ನು ತಂದು ಅವಳ ಮುಂದೆ ಹರಡಿದ್ದಳು. ಏನೇ..ಹೀಗಾ ಪುಸ್ತಕ ಓದೋದು ಎಂದು ಪರಿಧಿ ಕೇಳಿದಾಗ 'ಒಟ್ಟೊಟ್ಟಿಗೆ ನಾಲ್ಕು ವಿಷಯದ ಅಸೈನ್ಮೆಂಟ್ ಕೊಟ್ಟಿದ್ದಾರೆ ಧೀ.. ನೀನು ಹೆಲ್ಪ್ ಮಾಡ್ತಿಯಲ್ವ..ಪ್ಲೀಸ್..' ಎಂದು ಪಾಪದ ಮುಖ ಮಾಡಿ ಪಿಳಿ ಪಿಳಿ ಕಣ್ಣು ಬಿಟ್ಟಳು. 'ಸರಿ ಬಾ ಕೂತ್ಕೋ' ಎಂದು ಪರಿಧಿ ಅವಳ ಪುಸ್ತಕಗಳನ್ನು ತೆಗೆದು ನೋಡುತ್ತಾ ಒಂದೊಂದಾಗಿ ಪ್ರಶ್ನೋತ್ತರ ಹುಡುಕಿ ಹೇಳುತ್ತಿದ್ದರೆ ಹರಿಣಿ ಅವನ್ನೆಲ್ಲ ಅಸೈನ್ಮೆಂಟ್ ಹಾಳೆಗಳ ಮೇಲೆ ಅನುಕ್ರಮವಾಗಿ ಬರೆದು ಫೈಲ್ ತಯಾರಿಸಿದಳು. ಹೀಗೆ ಮೂರುವರೆ ಗಂಟೆ ಕಾಲ ಇಬ್ಬರು ಸೇರಿ ಅಸೈನ್ಮೆಂಟ್ ಮುಗಿಸಿದ್ದರು. ಹರಿಣಿ ಥ್ಯಾಂಕ್ಸ್ ಹೇಳಿ ತನ್ನ ಪುಸ್ತಕಗಳನ್ನೆಲ್ಲ ಜೋಡಿಸಿಕೊಂಡು ಹೋಗುವಾಗ ಹಿಂತಿರುಗಿ ಪರಿಧಿಗೆ "ಧೀ..ಅಣ್ಣಂಗೆ ಬರೋವಾಗ ದೊಡ್ಡದು, ಅಂದ್ರೆ ನನ್ನಷ್ಟೇ ಎತ್ತರದ್ದೂ ಟೆಡ್ಡಿ ತಗೊಂಡ್ಬಾ ಅಂತ ಹೇಳಿದ್ದೆ. ಅಣ್ಣ ಫೋನ್ ಮಾಡಿದ್ರೆ ನೀನೊಮ್ಮೆ ನೆನಪು ಮಾಡು ಒಕೆ" ಎಂದು ನೆನಪಿಸಿದಳು. ಪರಿಧಿ 'ಬಾ ಈಗಲೇ ಫೋನ್ ಮಾಡ್ತಿನಿ... ನೀನೇ ಮಾತಾಡುವಂತೆ' ಎಂದು ಕರೆದರೆ 'ಧೀ.. ನಂಗೆ ತುಂಬಾ ಹಸಿವಾಗ್ತಿದೆ ನೀನೇ ಹೇಳ್ಬಿಡು..' ಎಂದು ಅಲ್ಲಿಂದ ಓಡಿದ್ದಳು. ಪರಿಧಿ ಹರ್ಷನಿಗೆ ಫೋನ್ ಮಾಡಿದಾಗ ಅದು ಸ್ವಿಚಾಫ್ ಎಂದು ಸೂಚಿಸಿತು. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ನೋಡೋಣ ಎಂದು ಸುಮ್ಮನಾಗಿ ಯಾವುದೋ ಪುಸ್ತಕ ತಿರುವಿ ಹಾಕುತ್ತ ಕುಳಿತಿದ್ದ ಪರಿಧಿಗೆ, ಹರಿಣಿ ಜೊತೆಗೆ ಅಸೈನ್ಮೆಂಟ್ ಮಾಡುವಾಗ ಮಾನ್ವಿಯ ಜೊತೆಗೆ ಮಾತಾಡಿದ ಹಾಗನ್ನಿಸಿದ್ದು ನೆನಪಾಯಿತು. ಮಾನ್ವಿಯ ಸ್ನೇಹ ಮತ್ತೆ ಬೇಕೆನಿಸಿತ್ತು. ಹಾಸ್ಟೆಲ್ ನಲ್ಲಿ ಮಾನ್ವಿ ಜೊತೆಗೆ ಕಳೆದ ದಿನಗಳು ಸ್ಮೃತಿಯಲ್ಲಿ ಮರುಕಳಿಸಿದವು.
ಹಾಸ್ಟೆಲ್ ನಲ್ಲಿ ಹೀಗೆ ರಾತ್ರಿ ಹಗಲು ವ್ಯತ್ಯಾಸವಿಲ್ಲದೇ ಓದಿದ ದಿನಗಳು ಹೇಗೆ ತಾನೇ ಮರೆಯಬಹುದು ಎಂದುಕೊಂಡಳು. ಸ್ನೇಹಿತೆಯರಿಬ್ಬರು ಪುಸ್ತಕ ಮುಂದಿಟ್ಟುಕೊಂಡು ಓದುವಾಗ ಪುಸ್ತಕದ ಮೇಲೆಯೇ ತಲೆ ಇಟ್ಟು ಮಲಗಿ ಹೋಗುತ್ತಿದ್ದರು. ಒಬ್ಬರ ತಲೆ ಒಬ್ಬರ ಭುಜದ ಮೇಲೆ.. ಬೆಳಿಗ್ಗೆ ಎದ್ದಾಗ ತಾವು ಪುಸ್ತಕದೊಳಗೋ.. ಪುಸ್ತಕ ತಮ್ಮೊಳಗೋ.. ಎನ್ನುವಂತಾಗಿರುತ್ತಿತ್ತು. ಹಾಸ್ಟೆಲ್ ಜೀವನದ ಬಗ್ಗೆ ಆರಂಭದಲ್ಲಿ ಇದ್ದ ಭಯ ಮಾನ್ವಿಯ ಸ್ನೇಹದಿಂದ ಹೇಳು ಹೆಸರಿಲ್ಲದೆ ಮಾಯವಾಗಿತ್ತು. ಒಂದೇ ವರ್ಷದಲ್ಲಿ ಅವರಿಬ್ಬರ ಸ್ನೇಹ ಎಲ್ಲಾ ಗುಟ್ಟುಗಳನ್ನು ಹಂಚಿಕೊಳ್ಳುವ ಮಟ್ಟಕ್ಕೆ ಬಂದು ನಿಂತಿತ್ತು. ಸ್ನೇಹ ಎಂದರೆ ಬರೀ ಮಾತಾಡುವದಲ್ಲ, ಸ್ನೇಹ ಎಂದರೆ ಬರೀ ಕೊಡುವುದು ತೆಗೆದುಕೊಳ್ಳುವುದಲ್ಲ, ಸ್ನೇಹ ಎಂದರೆ ಒಬ್ಬರಿಗೊಬ್ಬರು ಆಸರೆಯಾಗುವುದು, ಹೇಳದ ಮಾತುಗಳನ್ನು ಕಣ್ಣಲ್ಲೇ ಓದಿ ಅರ್ಥೈಸಿಕೊಳ್ಳುವುದು, ಗುಟ್ಟುಗಳು ಕಪಟಗಳಿಗೆ ಅಲ್ಲಿ ಅವಕಾಶವಿರುವುದಿಲ್ಲ. ಮನಸ್ಸಿಗೆ ತೋಚಿದ್ದನ್ನು ನೇರಾನೇರ ಮನಸ್ಸು ಬಿಚ್ಚಿ ಮಾತಾಡುವುದು. ಒಬ್ಬರಿಗೊಬ್ಬರ ಕೊರತೆ ಓರೆಕೋರೆಗಳ ಗುಣಾವಗುಣ ಪರಿಚಯವಿದ್ದು ಒಬ್ಬರನ್ನೊಬ್ಬರು ಯತಾರೀತಿ ಒಪ್ಪಿಕೊಂಡಿರುವುದು. ಒಬ್ಬರ ತಪ್ಪನ್ನೊಬ್ಬರು ಕ್ಷಮಿಸಿ ತಿದ್ದಿ, ನೋವಿಗೆ ಹೆಗಲಾಗಿ ನಿಲ್ಲುವುದು..! ಮಾನ್ವಿ ಮತ್ತು ಪರಿಧಿ ನಡುವೆ ಸಹ ಇದೇ ರೀತಿಯ ಸ್ನೇಹ ಸೌಹಾರ್ದ ಬೆಳೆದು ನಿಂತಿತ್ತು. ಬೆಳಿಗ್ಗೆ ಎದ್ದಾಗಿನಿಂದ ಕಾಲೇಜು ಲ್ಯಾಬ್ ಲೈಬ್ರರಿ ಕೊನೆಗೆ ಮತ್ತೆ ಹಾಸ್ಟೆಲ್ ಎಲ್ಲಾ ಕಡೆಗೂ ಜೊತೆಯಾಗಿ ಇರುತ್ತಿದ್ದರು. ಒಬ್ಬರ ಮುಖ ಒಬ್ಬರು ನೋಡಿಯೇ ದಿನದ ಆರಂಭವಾಗುತ್ತಿತ್ತು. ಬರೀ ಕಣ್ಣುಗಳಲ್ಲೇ ಅವರ ಮನಸ್ಸಿನ ಭಾವನೆಗಳನ್ನು ಓದಿ ಅರ್ಥೈಸಿಕೊಳ್ಳುವ ಮಟ್ಟಿಗೆ ಸ್ನೇಹ ಗಟ್ಟಿಯಾಗಿತ್ತು. ಒಂದು ರಾತ್ರಿ ಅಕಸ್ಮಾತ್ತಾಗಿ ಮಾನ್ವಿಗೆ ವಿಪರೀತ ಜ್ವರ ಬಂದು ಒದ್ದಾಡುತ್ತಿದ್ದರೆ ಪರಿಧಿ ಇಡೀ ರಾತ್ರಿ ಎದ್ದು ಕುಳಿತು ಅವಳ ಹಣೆಗೆ ತಣ್ಣೀರು ಬಟ್ಟೆ ಹಚ್ಚುತ್ತಾ ಅವಳನ್ನು ಮಗುವಿನ ಹಾಗೆ ನೋಡಿಕೊಂಡಿದ್ದಳು. ಬೆಳಿಗ್ಗೆ ಡಾಕ್ಟರ್ ಬಳಿ ತೋರಿಸಿ ಔಷಧಿ ತಂದು ಅವಳಿಗೆ ಊಟ ಮಾಡಿಸಿ ಔಷಧಿ ಕೊಟ್ಟು ಮಲಗಿಸಿ ಆ ದಿನ ತಾನು ಕಾಲೇಜಿಗೆ ಹೋಗದೆ ಅವಳ ಪಕ್ಕದಲ್ಲೇ ಕುಳಿತು ಆರೈಕೆ ಮಾಡಿದ್ದಳು. ಇದನ್ನೆಲ್ಲ ಗಮನಿಸಿದ ಮಾನ್ವಿ ಆ ದಿನ ಪರಿಧಿಯನ್ನು ಬಿಗಿಯಾಗಿ ಅಪ್ಪಿಕೊಂಡು 'ಯಾವ ಜನ್ಮದಲ್ಲಿ ನನ್ನ ತಾಯಿಯಾಗಿದ್ದೆ ನೀನು.. ಇಷ್ಟು ಪ್ರೀತಿ ನನ್ನಮ್ಮ ಕೂಡ ನನಗೆ ತೋರ್ಸಿಲ್ಲ..' ಎಂದು ಬಿಕ್ಕಿದ್ದಳು. ಪರಿಧಿಗೆ ಚೂರು ತಲೆ ನೋವು ಬಂದರೂ ಮಾನ್ವಿ ಅವಳನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ತಲೆ ಒತ್ತುತ್ತಾ 'ಈ ಎಂಬಿಬಿಎಸ್ ಮಾಡಿ ತಲೆ ನೋವಿನ ಜೊತೆಗೆ ಸಂಬಂಧ ಬೆಳೆಸಿದಂಗಾಗಿದೆ ಕಣೇ..' ಎನ್ನುತ್ತಿದ್ದಳು. ದಿನಗಳೆದಂತೆ ಇಬ್ಬರ ವೇಷಭೂಷಣಗಳು ಪರಸ್ಪರ ವಿನಿಮಯಗೊಂಡು ಉಡುಗೆ ತೊಡುಗೆಗಳಲ್ಲಿ ಮಾರ್ಪಾಡಾಗಿತ್ತು. ಊಟ ಬೇಡವೆನಿಸಿದ್ದರೂ ಒಬ್ಬರ ಸಲುವಾಗಿ ಒಬ್ಬರು ಕೈತುತ್ತು ತಿನಿಸುತ್ತಾ ಊಟ ಮಾಡಿಸುತ್ತಿದ್ದರು. ಹಾಸ್ಟೆಲ್ ನಲ್ಲಿ ಇವರನ್ನು ನೀವಿಬ್ಬರೂ ಅಕ್ಕತಂಗಿನಾ ಎಂದು ಕೇಳಿದ್ದರು. ಅದಕ್ಕೆ ಮಾನ್ವಿ ನಕ್ಕು ಹೌದೌದು ಎನ್ನುತ್ತಿದ್ದಳು. ಆಲಾಪ್ ಕೂಡ 'ಏನೇ ಹೊಸ ಫ್ರೆಂಡ್ ಸಿಕ್ಳು ಅಂತ ನನ್ನ ಮರ್ತೇಬಿಟ್ಟಾ ಹೇಗೆ' ಎಂದಿದ್ದ. 'ಎಲ್ಲಾದ್ರೂ ಉಂಟಾ..!! ಯು ಆರ್ ಮೈ ಫೋರೆವರ್ ಬೆಸ್ಟೀ ಕಣೋ..' ಎಂದು ಭುಜಕ್ಕೆ ಕೈಹಾಕಿದ್ದಳು ಮಾನ್ವಿ. ಆ ದಿನ ಆಲಾಪ್ ನ ಹುಟ್ಟು ಹಬ್ಬಕ್ಕೆ ಮಾನ್ವಿ ಅವನಿಗಿಷ್ಟವಾಗುವ ಹನ್ನೆರಡು ಪುಸ್ತಕಗಳನ್ನ ಉಡುಗೊರೆಯಾಗಿ ಕೊಟ್ಟು, ಮುಂದಿನ ವರ್ಷದ ಹುಟ್ಟಿದ ಹಬ್ಬದ ವರೆಗೂ ಇವನ್ನು ಓದ್ತಾ ನನ್ನ ನೆನಪಿಸ್ಕೊಬೇಕು ಎಂದಿದ್ದಳು. ಆ ದಿನ ಅವನಿಗೆ ಇಷ್ಟವಾಗುವ ನೀಲಿ ಬಣ್ಣದ ಸೀರೆ ಉಟ್ಟಿದ್ದಳು. ಅವಳನ್ನು ಆ ರೀತಿ ಸೀರೆಯಲ್ಲಿ ನೋಡಿ ಆಲಾಪ್ ತನ್ನ ಎರಡೂ ಕೈಗಳಿಂದ ದೃಷ್ಟಿ ತೆಗೆಯುವಂತೆ ಮಾಡಿ 'ಎಷ್ಟು ಮುದ್ದಾಗಿ ಕಾಣ್ತಿಯೇ ಮಾನು..' ಎಂದು ಮೆಚ್ಚುಗೆ ಸೂಚಿಸಿದ್ದ. ಆ ದಿನ ಅವಳ ಕಣ್ಣಲ್ಲಿದ್ದ ಮಿಂಚು ನೋಡಿ ಪರಿಧಿ "ನೀನು ಆಲಾಪ್ ನಾ ಪ್ರೀತಿಸ್ತಿದ್ದಿಯಾ ಅಲ್ವಾ..!" ಎಂದು ಕೇಳಿಯೇ ಬಿಟ್ಟಿದ್ದಳು. ಅದಕ್ಕೆ ಮಾನ್ವಿ "ಶ್... ಅವನಿಗೆ ಹೇಳ್ಬೇಡ" ಎಂದು ಅವಳ ಬಾಯಿಗೆ ಕೈ ಅಡ್ಡವಿಟ್ಟಿದ್ದಳು. ಪರಿಧಿ ಆಗ ಅಲ್ಲಿಗೆ ಸುಮ್ಮನಾಗಿ ಹಾಸ್ಟೆಲ್ ಸೇರಿದ ನಂತರ 'ಅವನೂ ನಿನ್ನ ಪ್ರೀತಿಸ್ತಿದ್ದಾನಾ' ಎಂದು ಕೇಳಿದ್ದಳು. 'ಖಂಡಿತ ಪ್ರೀತಿಸ್ತಿದ್ದಾನೆ, ನೋಡಿದ್ರೆ ಗೊತ್ತಾಗಲ್ವ ನನಗೊಸ್ಕರ ಏನು ಬೇಕಾದರೂ ಮಾಡ್ತಾನೆ ಗೊತ್ತಾ' ಎಂದಿದ್ದ ಮಾನ್ವಿ ಅದನ್ನು ನಿರೂಪಿಸಲು ತನಗೆ ಹಾವು ಕಚ್ಚಿ ಸತ್ತು ಹೋದಳೆಂದು ತಾನೇ ವದಂತಿಯನ್ನು ಸೃಷ್ಟಿಸಿ ಆ ಸುದ್ದಿ ಆಲಾಪನಿಗೆ ತಲುಪುವಂತೆ ಮಾಡಿದ್ದಳು. ಅದನ್ನು ನಿಜವೆಂದು ನಂಬಿ ಎದೆಬಿರಿಯುವಂತೆ ಅತ್ತಿದ್ದ ಆಲಾಪ್. ಅದೇ ದುಃಖದಲ್ಲೇ ಆ ದಿನ ಹಾಸ್ಟೆಲ್ ಗೂ ಓಡಿ ಬಂದಿದ್ದ. ಮೈಮೇಲೆ ಪರಿವಿಲ್ಲದೆ ಓಡಿ ಬರುವಾಗ ಕೈಗೆ ಏನೋ ಹರಿತವಾದ ವಸ್ತು ತಾಗಿ ಕೈಯಲ್ಲಿ ರಕ್ತ ಸೋರುತ್ತಿತ್ತು. ಇದನ್ನು ನೋಡಿ ಮಾನ್ವಿಗೆ ತನ್ನ ತಪ್ಪಿನ ಅರಿವಾಗಿ ತಾನೇ ಕ್ಷಮೆ ಕೇಳಿ ಅವನ ಕೈಗೆ ಶುಶ್ರೂಷೆ ಮಾಡಿದ್ದಳು. ಆಲಾಪ್ ತನ್ನ ಕೈಗಾದ ಗಾಯದ ನೋವಿಗಿಂತ ಅವಳು ಚೆನ್ನಾಗೇ ಇರುವುದನ್ನು ನೋಡಿ ಸಂತೋಷದಿಂದ ಅವಳನ್ನು ಬಿಗಿದಪ್ಪಿದ್ದ. 'ತಲೆ ಕೆಟ್ಟಿದೆಯೆನೇ ನಿನಗೆ..ಹೀಗಾ ತಮಾಷೆ ಮಾಡೋದು' ಎಂದು ಗದರಿದ್ದ. ಮಾನ್ವಿ ಆ ಕ್ಷಣ ಪರಿಧಿಯನ್ನು ನೋಡಿ ಕಣ್ಣು ಹೊಡೆದು 'ನೋಡಿದಿಯಾ ಹೆಂಗೆ' ಎಂದು ಸನ್ನೆಯಲ್ಲೇ ಜಂಬ ಪಟ್ಟಿದ್ದಳು. ಅವರಿಬ್ಬರ ಅನ್ಯೋನ್ಯತೆ ನೋಡಿ ಪರಿಧಿ 'ಇವರಿಬ್ಬರೂ ಯಾವಾಗಲೂ ಹೀಗೆ ಸಂತೋಷವಾಗಿರಲಿ ದೇವರೆ..' ಎಂದು ಬೇಡಿಕೊಂಡಿದ್ದಳು. ಈ ಘಟನೆ ನಂತರ ಒಮ್ಮೆ ಆಲಾಪ್ ಮಾನ್ವಿಗೆ ತಮ್ಮ ಮಧ್ಯೆ ಇದುವರೆಗೂ ಯಾವುದೇ ಗುಟ್ಟು ಇರಲಿಲ್ಲ ಆದರೆ ಈಗೀಗ ತಾನು ಅವಳಿಂದ ಏನೋ ಮುಚ್ಚಿಟ್ಟಿದ್ದೆನೆ ಎಂದು ತಲೆ ತಗ್ಗಿಸಿ ಹೇಳಿದ್ದ. ಆಲಾಪ್ ತನ್ನನ್ನು ಪ್ರೀತಿಸುವ ವಿಷಯವನ್ನು ತನಗೆ ಹೇಳದೆ ಮುಚ್ಚಿಟ್ಟಿರುವದಕ್ಕೆ ಹೀಗೆ ಹೇಳುತ್ತಿದ್ದಾನೆಂದುಕೊಂಡ ಮಾನ್ವಿ ನಗುತ್ತ 'ಪರವಾಗಿಲ್ಲ ಟೈಮ್ ಬಂದಾಗ ಹೇಳು' ಎಂದು ಭುಜಕ್ಕೆ ಕೈ ಹಾಕಿದ್ದಳು. ಅದೇ ಸಂಜೆ ಪರಿಧಿ ಮುಂದೆ ಈ ವರದಿಯನ್ನು ಒಪ್ಪಿಸಿದ್ದಳು. ಮತ್ತು ಪರಿಧಿಯಿಂದ ತಾನಾಗಿಯೇ ಹೇಳುವವರೆಗೂ ತಾನು ಆಲಾಪ್ ನನ್ನು ಪ್ರೀತಿಸೋ ವಿಷಯ ಅವನಿಗೆ ಹೇಳಬಾರದೆಂದು ಪ್ರಮಾಣ ಮಾಡಿಸಿಕೊಂಡಿದ್ದಳು. ಈ ಪ್ರೇಮಪ್ರಕರಣದ ನಂತರ ಇಬ್ಬರೂ ಗೆಳತಿಯರು ತಮ್ಮ ಬಾಲ್ಯದ ನೆನಪುಗಳನ್ನು ಮನಸಾರೆ ಮೆಲುಕು ಹಾಕುತ್ತಿದ್ದರು. ಪರಿಧಿ ತನ್ನ ಮತ್ತು ಹರ್ಷನ ಬಾಂಧವ್ಯದ ಬಗ್ಗೆ ಹೇಳಿದರೆ ಮಾನ್ವಿ ತನ್ನ ಮತ್ತು ಆಲಾಪ್ ನ ಬಾಲ್ಯದ ತುಂಟಾಟಗಳನ್ನು ಹೇಳುತ್ತಿದ್ದಳು.
ಅಪರೂಪಕ್ಕೊಮ್ಮೆ ಸಿಗುವ ಸೆಮಿಸ್ಟರ್ ರಜೆಗಳಲ್ಲಿ ಎಲ್ಲರಿಗೂ ತಮ್ಮ ತಮ್ಮ ಮನೆಗೆ ಹೋಗುವ ಸಂಭ್ರಮ. ತುಂಬಾ ದಿನಗಳ ನಂತರ ಸಿಗುವ ಆತ್ಮೀಯರ ಬರಪೂರ ಪ್ರೀತಿಗೆ ಹೃದಯದ ಸಂತೋಷದ ಕಟ್ಟೆ ಒಡೆದು ಬಂದಂತಾಗುತ್ತಿತ್ತು. ಅತ್ತೆಯ ಮಮತೆ, ಹರಿಣಿ ಹರ್ಷನ ತುಂಟಾಟ ಕದನಗಳನ್ನು ಮತ್ತೆ ನೋಡಲು ಸಿಗುತ್ತಿತ್ತು ಪರಿಧಿಗೆ. ಹಾಸ್ಟೆಲ್ ನಿಂದ ಮಕ್ಕಳು ಮನೆಗೆ ಬರುತ್ತಾರೆಂದರೆ ಸಾಕು ಮನೆಯಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಯಾಗಿರುತ್ತದೆ. ಮನೆಯಲ್ಲಿ ಇರುವಷ್ಟು ದಿನ ಊಟ ಉಪಚಾರ ಪ್ರೀತಿಗೆ ಎಳ್ಳಷ್ಟು ಕೊರತೆ ಇರಲಾರದು. ಆದರೆ ಮಾನ್ವಿ ಮನೆ ಇದಕ್ಕೆ ಅಪವಾದವಾಗಿತ್ತು. ಪರಿಧಿ ಎಷ್ಟೇ ನಿರಾಕರಿಸಿದರೂ ಮಾನ್ವಿ ಒತ್ತಾಯ ಮಾಡಿ ಅವರ ಅತ್ತೆ ಮಾವ ಹರ್ಷನ ಅನುಮತಿ ಪಡೆದು ಒಮ್ಮೆ ಪರಿಧಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ಅವರ ತಂದೆ ತಾಯಿ ಪರಿಚಯ ಮಾಡಿಸಿದ್ದಳು. ಮಾನ್ವಿ ಕೇಳಿದ್ದನ್ನೆಲ್ಲ ತಂದು ಅವಳ ಕಾಲಲ್ಲಿ ಎಸೆಯುವಷ್ಟು ಶ್ರೀಮಂತಿಕೆ ಆದರೆ ಮಗಳ ಯೋಗಕ್ಷೇಮ ವಿಚಾರಿಸಲು ಅವರ ಬಳಿ ಸಮಯವಿರಲಿಲ್ಲ. ತಾಯಿ ಲೇಡೀಸ್ ಕ್ಲಬ್ ಕಿಟಿ ಪಾರ್ಟಿಯಲ್ಲಿ ಬಿಜಿ ತಂದೆಗೆ ಬಿಜಿನೆಸ್ ಹೊರತು ಬೇರೆ ಪ್ರಪಂಚವೇ ಗೊತ್ತಿರಲಿಲ್ಲ. ಇದನ್ನು ನೋಡಿ ತನಗೆ ತಂದೆ ತಾಯಿ ಇಲ್ಲದಿದ್ದರೂ ಅತ್ತೆ ಮಾವ ತಾತ ಹರಿಣಿ ಹರ್ಷ ಪ್ರತಿಯೊಬ್ಬರೂ ತೊರಿಸುವ ಆಕಾಶದಷ್ಟು ಪ್ರೀತಿ ನೆನಪಾಗಿ ಮಾನ್ವಿಗಿಂತ ಪ್ರೀತಿಯಲ್ಲಿ ತಾನೇ ಶ್ರೀಮಂತಳು ಎನಿಸಿತ್ತು ಪರಿಧಿಗೆ. ಮಾನ್ವಿ ಆಲಾಪ್ ನನ್ನು ಅತಿಯಾಗಿ ಹಚ್ಚಿಕೊಳ್ಳಲು ಇದೇ ಕಾರಣವಿರಬಹುದು ಎನಿಸಿತ್ತು. ಅವರ ಮನೆಯಲ್ಲಿದ್ದ ನಾಲ್ಕು ದಿನ ಪರಿಧಿಯನ್ನು ಮಾನ್ವಿ ತನ್ನ ಕೋಣೆಯಲ್ಲಿ ಮಲಗಿಸಿಕೊಂಡಿದ್ದಳು. ಇಬ್ಬರೂ ರಾತ್ರಿಯಿಡೀ ಕೂತು ಹರಟೆ ಹೊಡೆಯುತ್ತ ಹಾರರ್ ಸಿನೆಮಾ ನೋಡಿ ಕಿರುಚಾಡಿ ನಗುತ್ತ ಮಜಾ ಮಾಡಿದ್ದರು. ಮಾನ್ವಿ ತನ್ನ ಮತ್ತು ಆಲಾಪ್ ನ ಸ್ನೇಹದ ಆರಂಭ, ಆಡಿದ ಆಟ ತುಂಟಾಟ ಎಲ್ಲವನ್ನೂ ಅಭಿನಯಿಸಿ ಹೇಳಿದ್ದಳು. ಚಿಕ್ಕವರಿದ್ದಾಗ ಆಡುತ್ತಿದ್ದ ಅಪ್ಪ-ಅಮ್ಮನ ಆಟ, ಅದರಲ್ಲಿ ಯಾವಾಗಲೂ ಗಂಡ-ಹೆಂಡತಿಯಾಗುವ ಆಲಾಪ್-ಮಾನ್ವಿ ತಮ್ಮ ಪಾತ್ರಗಳನ್ನು ಬೇರೆ ಯಾರಿಗೂ ಬಿಟ್ಟು ಕೊಡುತ್ತಿರಲಿಲ್ಲವೆಂದು ಹೇಳಿ ನಕ್ಕಿದ್ದಳು. ಆಲಾಪ್ ಕೊಟ್ಟ ಪ್ರತಿಯೊಂದು ಚಿಕ್ಕ ಚಿಕ್ಕ ಉಡುಗೊರೆ ಮಾನ್ವಿಯ ಕೋಣೆಯಲ್ಲಿ ಅಲ್ಲಿಯವರೆಗೂ ರಾರಾಜಿಸುತ್ತಿದ್ದವು. ಅವಳು ಅವನ್ನೆಲ್ಲ ಈಗಲೂ ತುಂಬಾ ಅಪ್ಯಾಯತೆಯಿಂದ ಕೈಯಲ್ಲಿ ಹಿಡಿದು ತೋರಿಸಿದ್ದಳು. ಚಾಕೊಲೇಟ್ ಹಾಳೆಯಿಂದ ಹಿಡಿದು ಖಾಲಿಯಾದ ಪೆನ್ನಿನವರೆಗೂ ಎಲ್ಲಾ ವಸ್ತುಗಳು ಇನ್ನೂ ಸುರಕ್ಷಿತವಾಗಿದ್ದು ಅವಳ ಪ್ರೀತಿಗೆ ಮೆರಗು ನೀಡಿದ್ದವು. ಅವರಿಬ್ಬರ ಚಿಕ್ಕಂದಿನ ಫೋಟೋಗಳನ್ನು ತೋರಿಸುತ್ತ ಒಂದೊಂದರ ಹಿಂದಿನ ಘಟನೆಗಳನ್ನು ಹೇಳಿ ನಕ್ಕು ನಗಿಸಿದ್ದಳು. ಇದನ್ನೆಲ್ಲ ನೋಡಿ ಪರಿಧಿ 'ಯಾವಾಗ ನಿಮ್ಮ ಪ್ರೀತಿ ಬಹಿರಂಗ ಆಗೋದು' ಎಂದು ಕೇಳಿದಾಗ ಮಾನ್ವಿ 'ಇಂಟರ್ನಶಿಪ್ ಮುಗಿತಿದ್ದ ಹಾಗೆ ಹೇಳಿಬಿಡ್ತಿನಿ' ಎಂದಿದ್ದಳು.
ಹಾಸ್ಟೆಲ್ ನಲ್ಲಿ ಯಾವಾಗಲೂ ಜಂಟಿಯಾಗಿರುವ ಗೆಳತಿಯರು ಕಾಲೇಜು ಸೇರುತ್ತಲೇ ಇನ್ನಿಬ್ಬರು ಸ್ನೇಹಿತರ ಜೊತೆ ಸೇರಿ ನಾಲ್ವರಾಗುತ್ತಿದ್ದರು. ಕಾಲೇಜಿನಲ್ಲಿ ಪರಿಧಿ ಸಂಜೀವಿನಿ ಆಲಾಪ್ ಮಾನ್ವಿ ನಾಲ್ಕು ಜನರು ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಓದಿನ ವಿಷಯವಿರಲಿ ತಮಾಷೆಯಿರಲಿ ತುಂಟಾಟ ಜಗಳ ಏನೇ ಇರಲಿ ತಮ್ಮ ತಮ್ಮ ನಡುವೆಯೇ ನಡೆದು, ನಗುವಿನೊಂದಿಗೆ ಕೊನೆಯಾಗುತ್ತಿತ್ತು. ಓದಿನ ನಡುವೆಯೂ ವೀಕೆಂಡ್ ನಲ್ಲಿ ನಾಲ್ವರು ಸೇರಿ ದೇವಸ್ಥಾನ, ಶಾಪಿಂಗ್ ಮಾಲ್, ಕಾಫಿ ಡೇ, ಥಿಯೇಟರ್ ಸುತ್ತಾಟಗಳಿಗೂ ಸ್ವಲ್ಪ ಸಮಯ ಮೀಸಲಾಗಿರಿಸಿದ್ದರು. ಎಲ್ಲೇ ಹೋದರೂ ಜೊತೆಯಾಗಿರುತ್ತಿದ್ದರಾದರೂ ಮಾನ್ವಿ ಆಲಾಪ್ ಮಾತುಕತೆ ಒಂದು ವಿಷಯದ್ದಾದರೆ ಸಂಜೀವಿನಿ ಪರಿಧಿಯ ಚರ್ಚೆಯ ವಿಷಯಗಳೇ ಭಿನ್ನವಾಗಿರುತ್ತಿದ್ದವು. ದಿನವೂ ಸಂಜೀವಿನಿಯ ಮನೆಯ ಊಟದಲ್ಲಿ ಪಾಲುಗಾರನಾಗಿದ್ದ ಆಲಾಪ್ ದಿನವೂ ಅವಳನ್ನು ಬೈಕ್ ಮೇಲೆ ಮನೆಗೆ ತಲುಪಿಸುವ ಹೊಣೆಯನ್ನು ಹೊತ್ತಿದ್ದ. ಅಷ್ಟಲ್ಲದೇ 'ನಾನು ನಿನ್ನನ್ನು ಬೈಕ್ ನಲ್ಲಿ ಮನೆಗೆ ಬಿಡುವಾಗ ಅರ್ಧ ಕಿಲೊಮೀಟರ್ ದೂರದಲ್ಲೇ ಬೈಕ್ ನಿಲ್ಲಿಸು ಅಂತಿಯಾ, ನಾನು ಇದುವರೆಗೂ ನಿಮ್ಮ ಮನೆ, ನಿಮ್ಮ ತಂದೆ ತಾಯಿ ನೋಡಿಲ್ಲ, ನಮ್ಮನ್ನೆಲ್ಲ ನಿಮ್ಮ ಮನೆಗೆ ಕರೆದುಕೊಂಡು ಹೋಗಲ್ಲವಾ' ಎಂದು ದುಂಬಾಲು ಬೀಳುತ್ತಿದ್ದ. ಸಂಜೀವಿನಿ ತಮ್ಮ ತಂದೆಯ ಸ್ವಭಾವ ಮನೆಯ ಬಿಗಿ ವಾತಾವರಣದ ಬಗ್ಗೆ ತಿಳಿಸಿ ನೇರವಾಗಿ ನಿರಾಕರಿಸಿ ಬಿಡುತ್ತಿದ್ದಳು.
ಆದರೆ ಅದೊಮ್ಮೆ ಮನೆಯಲ್ಲಿ ಲಕ್ಷ್ಮೀ ಪೂಜೆ ಎಂಬ ನೆಪವಾಗಿ ಸಂಜೀವಿನಿ ಮೂವರು ಸ್ನೇಹಿತರನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿದ್ದಳು. ಜೊತೆಗೆ ತಮ್ಮ ಮನೆಯ ಸಂಪ್ರದಾಯಗಳ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದಳು. ಅದರಂತೆ ಮಾನ್ವಿ ಮತ್ತು ಪರಿಧಿಗೆ ಸೀರೆಯನ್ನೇ ಉಟ್ಟುಕೊಳ್ಳಲು ತಿಳಿಸಿದ್ದಳು. ಅವತ್ತು ಪರಿಧಿ, ಮಾನ್ವಿ ಸೀರೆ ಉಟ್ಟುಕೊಂಡಿದ್ದರೆ ಆ ದಿನ ಸಂಪ್ರದಾಯಸ್ಥನಂತೆ ಆಲಾಪ್ ಸಹ ಬಿಳಿ ಶರ್ಟ್ ಜೊತೆ ಪಂಚೆ ಕಟ್ಟಿಕೊಂಡು ಬಂದಿದ್ದ. ಪಂಚೆ, ಆತನ ಜೊತೆಗೆ ವಿರಸಗೊಂಡಂತೆ ಪದೇಪದೇ ಕೆಳಗಿಳಿಯುತ್ತಿದ್ದರೆ ಆತ ಅದನ್ನು ಜೋಪಾನವಾಗಿ ಎತ್ತಿ ಕಟ್ಟಿ ಸಂಭಾಳಿಸುವ ರೀತಿ ನೋಡಿ ಮಾನ್ವಿ ಪರಿಧಿ "ನಾವೆನೂ ಪೂಜೆಗೆ ಹೋಗ್ತಿದ್ದಿವೋ, ಹೆಣ್ಣು ಕೇಳೊಕೆ ಹೋಗ್ತಿದ್ದಿವೋ" ಎಂದು ರೇಗಿಸಿ ನಕ್ಕಿದ್ದರು. ಸಂಜೀವಿನಿಯ ತಂದೆ ಕಾಲೇಜು ಪ್ರಾಧ್ಯಾಪಕರು, ಹೋದ ತಕ್ಷಣ ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಂಡರಾದರೂ ಆಲಾಪ್ ನನ್ನು ನೋಡಿ ಅವರ ಮುಖದ ಭಾವ ಬದಲಾಗಿದ್ದನ್ನೂ ನಾಲ್ವರೂ ಗಮನಿಸಿದ್ದರು. ಅವರ ನೋಟದ ತೀಕ್ಷ್ಣತೆಗೆ ಆಲಾಪ್ ಗೂ ಸಹ ಯಾಕಾದರೂ ಬಂದೆನೋ ಎನ್ನಿಸಿಬಿಟ್ಟಿತ್ತು. ಹುಡುಗಿಯರು ಒಳಗೆ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದರೆ, ಆಲಾಪ್ ಒಬ್ಬನೇ ಹೊರಗೆ ಪ್ರಾಧ್ಯಾಪಕರು ಕೇಳುವ ಶತಮಾನಗಳ ಪುರಾತನ ಪ್ರಶ್ನೆಗಳಿಗೆ ತಲೆ ಕೆರೆದುಕೊಳ್ಳುತ್ತಾ ಉತ್ತರ ಹೇಳುತ್ತಾ 'ಇವತ್ತು ಪೂಜೆ ಜೊತೆಗೆ ಕ್ವೀಜ್ ಶೋ ಕೂಡ ಇದೆ ಅಂತ ಗೊತ್ತಿದ್ರೆ, ದೇವ್ರಾಣೆ ಇಲ್ಲಿಗೆ ಬರ್ತಿರ್ಲಿಲ್ಲ' ಎಂದುಕೊಳ್ಳುತ್ತಿದ್ದ ಮನಸ್ಸಲ್ಲೇ. ಆ ದಿನದ ವಿಶೇಷ ಎಂದರೆ ಯಾವತ್ತೂ ಮರೆಯಲಾಗದ ಔತಣಕೂಟ!! ಹುಗ್ಗಿ, ಹೋಳಿಗೆ ತುಪ್ಪ ಚಪಾತಿ ಕೊಸಂಬರಿ ಹಪ್ಪಳ ಸಂಡಿಗೆ ಚಿತ್ರಾನ್ನ... ಆಲಾಪ್ ಅಂತೂ ಒಂದು ಜನ್ಮಕ್ಕಾಗುವಷ್ಟು ತೃಪ್ತಿಯಿಂದ ಊಟ ಮಾಡಿದ್ದ. ಜೊತೆಗೆ ಇನ್ನೊಮ್ಮೆ ಖಂಡಿತ ಯಾವ ಪೂಜೆಗೂ ಸಂಜೀವಿನಿ ಮನೆಗೆ ಹೋಗಲೇಬಾರದು, ಒಂದು ವೇಳೆ ಹೋದರೂ ಇತಿಹಾಸದ ಪುಸ್ತಕ ಓದಿಕೊಂಡೇ ಹೋಗಬೇಕು ಎಂದು ಶಪಥ ಮಾಡಿದ್ದ.
ಮೆಡಿಕಲ್ ಕಾಲೇಜಿನಲ್ಲಿ ಕೊನೆಯ ವರ್ಷ ಸಂಜೀವಿನಿಯ ಹುಟ್ಟಿದ ಹಬ್ಬಕ್ಕೆ ಮೂವರು ಸ್ನೇಹಿತರು ಸೇರಿ ಅವಳಿಗೊಂದು ಸರ್ಪ್ರೈಜ್ ಟ್ರೀಟ್ ಕೊಟ್ಟಿದ್ದರು. ಮೂವರು ಅವಳಿಗಾಗಿ ಏನೆನೋ ಉಡುಗೊರೆಗಳನ್ನು ತಂದಿದ್ದರು. ಪರಿಧಿ ಮಾನ್ವಿ ಅವಳಿಗೆ ಹುಟ್ಟಿದ ಹಬ್ಬದ ಶುಭಾಶಯ ತಿಳಿಸಿ ಉಡುಗೊರೆ ಕೊಟ್ಟಿದ್ದರು. ಆದರೆ ಆಲಾಪ್ ಮಾತ್ರ ತಾನು ತಂದ ಉಡುಗೊರೆಯನ್ನು 'ನೀನು ನನ್ನ ಬೆಸ್ಟ್ ಫ್ರೆಂಡ್, ಸೋ ನೀನೇ ಕೊಡು' ಎಂದು ಮಾನ್ವಿ ಕೈಯಿಂದ ಸಂಜೀವಿನಿಗೆ ಕೊಡಿಸಿದ್ದ. ಏನ್ ಗಿಫ್ಟ್ ಇದು ಎಂದು ಮಾನ್ವಿ ಕೇಳಿದಾಗ 'ಡಿವಿಜಿಯವರ ಪುಸ್ತಕ' ಎಂದಷ್ಟೇ ಹೇಳಿದ್ದ. ಅದಕ್ಕೆ ಮಾನ್ವಿ ಕೂಡ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಬಹುಶಃ ಆ ದಿನ ಮಾನ್ವಿ ಅದನ್ನು ತೆಗೆದು ನೋಡಿದ್ದರೆ ಆಲಾಪ್ ಅವಳಿಂದ ಮುಚ್ಚಿಟ್ಟ ಮೊದಲ ಗುಟ್ಟು ಏನೆಂದು ಗೊತ್ತಾಗುತ್ತಿತ್ತು.ಮುಂದೆ ಆಗುವ ಅವಗಢಗಳಿಗೆ ಆಗಲೇ ಒಂದು ಪೂರ್ಣ ವಿರಾಮ ಸಿಗುತ್ತಿತ್ತು. ವಿಪರ್ಯಾಸವೆಂದರೆ ಅವತ್ತು ಮಾನ್ವಿ ತಾನು ಪ್ರೀತಿಸಿದ ಹುಡುಗನ ಮೊದಲ ಪ್ರೇಮಪತ್ರವನ್ನು ತನಗೇ ಅರಿವಿಲ್ಲದೆ ತನ್ನ ಕೈಯಾರೆ ಅವನು ಪ್ರೀತಿಸುವ ಹುಡುಗಿ ಕೈಗೆ ಕೊಟ್ಟು ಬಿಟ್ಟಿದ್ದಳು!!
ಹೀಗೆ ಓದು ಸುತ್ತಾಟ ಸ್ನೇಹದ ಒಕ್ಕೂಟದ ಜೊತೆಗೆ ಕಾಲೇಜು ಜೀವನ ನೆನಪಿನ ಪುಟ ಸೇರಿತ್ತು. ಇಂಟರ್ನಶಿಪ್ ಶುರುವಾದ ಮೊದಲ ದಿನವೇ ಮಾನ್ವಿ ಮತ್ತು ಡಾ.ಪ್ರಸನ್ನ ಮಧ್ಯೆ 'ವಾರ್ ಆ್ಯಟ್ ಫರ್ಸ್ಟ್ ಸೈಟ್' ಶುರುವಾಗಿತ್ತು. ಇಂಟರ್ನಶಿಪ್ ಗಾಗಿ ಲೈಫ್ ಕೇರ್ ಆಸ್ಪತ್ರೆಗೆ ಬಂದ ನಂತರ ಮಾನ್ವಿ ಸಂಜೀವಿನಿ ಒಂದು ದಿಕ್ಕಾದರೆ ಆಲಾಪ್ ಪರಿಧಿ ಮತ್ತೊಂದು ದಿಕ್ಕಾದರು. ಡಾ.ಪ್ರಸನ್ನನ ಶಿಕ್ಷೆ ಭರಿಸುವದರಲ್ಲೇ ಮಾನ್ವಿಯ ದಿನ ಕಳೆದುಹೋಗುತ್ತಿತ್ತು, ಯಾರೊಡನೆಯೂ ಮಾತಾಡಲು ಸಮಯವಿರುತ್ತಿರಲಿಲ್ಲ. ಇತ್ತ ಒಂದೇ ಡಿಪಾರ್ಟ್ಮೆಂಟಿನವರಾದ ಪರಿಧಿ ಮತ್ತು ಆಲಾಪ್ ಮೊದಲಿಗಿಂತ ತುಂಬಾ ಹತ್ತಿರವಾಗಿದ್ದರು. ಪೇಷಂಟ್ ಗಳಿಗೆ, ಕೆಲಸಕ್ಕೆ ಸಂಬಂಧಿಸಿದಂತೆ ಇಬ್ಬರು ತುಂಬಾ ಮಾತಾಡುತ್ತಿದ್ದರೆ ಮಾನ್ವಿ ಇದನ್ನು ನೋಡಿ ಏನೇನೋ ಅಪಾರ್ಥ ಮಾಡಿಕೊಂಡಳು. ಪರಿಧಿಗೆ ನೇರವಾಗಿ 'ನೀನು ಆಲಾಪ್ ಜೊತೆಗೆ ಅತಿಯಾಗಿ ಮಾತಾಡೋದು ನನಗೆ ಇಷ್ಟ ಆಗ್ತಿಲ್ಲ' ಎಂದು ಹೇಳಿಬಿಟ್ಟಳು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಪರಿಧಿ ಅವಳಿಗೆ ಸಮಾಧಾನ ಮಾಡಿ ತಮ್ಮ ಮಧ್ಯೆ ಸ್ನೇಹದ ಹೊರತು ಬೇರೆನಿಲ್ಲ ಎಂದು ತಿಳಿಸಿ ಆಲಾಪ್ ನಿಂದ ಕೊಂಚ ಅಂತರವಿಟ್ಟುಕೊಂಡಳು. ಇದನ್ನು ಗಮನಿಸಿದ ಮಾನ್ವಿಗೆ ಕ್ರಮೇಣ ತನ್ನ ತಪ್ಪಿನ ಅರಿವಾಗಿ ತಾನಾಗಿಯೇ ಬಂದು ಪರಿಧಿಗೆ ಕ್ಷಮೆ ಕೇಳಿ ಅಪ್ಪಿಕೊಂಡು ಮಗುವಿನಂತೆ ಅತ್ತಿದ್ದಳು. ಡಾ.ಪ್ರಸನ್ನ ಮಾನ್ವಿಯನ್ನು ರೆಸಿಡೆನ್ಸಿಯಿಂದ ತೆಗೆದು ಹಾಕಿರದೆ ಹೋಗಿದ್ದರೆ ಬಹುಶಃ ಮಾನ್ವಿ ಮತ್ತು ತನ್ನ ಮಧ್ಯೆ ಈ ಬಿರುಕು ಬರುತ್ತಿರಲಿಲ್ಲವೆನೊ ಈಗಲೂ ಇಬ್ಬರೂ ಜೊತೆಯಾಗಿ ಇರುತ್ತಿದ್ದೆವೆನೋ ಎಂದುಕೊಂಡಳು ಪರಿಧಿ. ಆಗ ಫೋನ್ ರಿಂಗಣಿಸಿದ ಸದ್ದಿಗೆ ನೆನಪುಗಳಿಂದ ಬೆಚ್ಚಿ ಎಚ್ಚೆದ್ದು ಬಂದಿದ್ದು ಹರ್ಷನ ಫೋನ್ ಎಂದು ತಿಳಿದು ಖುಷಿಯಿಂದ ಹಲೋ... ಹರ್ಷ.. ಎಂದಳು.
"ಎಷ್ಟಮ್ಮ ಟೈಮ್ ಇವಾಗಾ..?"
"ನೀನೆನೋ ಭಾರತವನ್ನೇ ಬಿಟ್ಟು ಹೋದವರ ಹಾಗೆ ಕೇಳ್ತಿದಿಯಾ.. ಮುಂಬೈನಲ್ಲಿ ಎಷ್ಟೋ ಇಲ್ಲಿ ಅಷ್ಟೇ ತಾನೇ.. ಹತ್ತು ಗಂಟೆ, ಹದಿನೈದು ನಿಮಿಷ..!"
"ಹ್ಮೂ..ಅದೇ ಮತ್ತೆ ಇಷ್ಟೊತ್ತಾದ್ರೂ ಇನ್ನೂ ಊಟ ಇಲ್ವಂತೆ ತಮ್ಮದು, ಮಳೆಲಿ ಬೇರೆ ಆಟ ಆಡಿ ಬಂದೆಯಂತೆ.. ಎಷ್ಟೇ ನಿನ್ನ ಮೇಲೆ ಕಂಪ್ಲೇಂಟು.. ಬರ್ತಾ ಬರ್ತಾ ರಾಯರ ಏಂಜಲ್ ಅದೇನೋ ಆಗ್ತಿರೋ ಹಾಗಿದೆ.. ಯಾಕೆ?!"
"ಹ್ಮೂ ಮತ್ತೆ ರಾಯರು ಒಂದು ಫೋನ್ ಇಲ್ಲ ಮೆಸೇಜ್ ಇಲ್ಲ ಏಂಜಲ್ ಏನ್ಮಾಡ್ತಾಳೆ ಹೇಳಿ.. ಅಂದಂಗೆ ತಮ್ಮ ಭೋಜನ ಆಯ್ತೋ.."
"ನಾವು ಬಿಡು.. ಏನೇ ಆದರೂ ಹೊಟ್ಟೆಗೆ ಮೋಸ ಮಾಡ್ಕೊಳ್ಳಲ್ಲ. ಮೊದಲು ಹೊಟ್ಟೆ ಪೂಜೆ ಆಗ್ಬಿಡ್ಬೇಕು. ನೀನು ಊಟ ಮಾಡ್ತಾ ಮಾತಾಡ್ತಿಯೋ.. ಅಥವಾ ಊಟ ಮಾಡಿದ್ಮೇಲೆ ಮಾತಾಡ್ತಿಯೋ..." ಎಂದು ಫೋನಲ್ಲಿ ಮಾತಾಡುತ್ತಲೇ ಒತ್ತಾಯ ಪೂರ್ವಕವಾಗಿ ಪರಿಧಿಗೆ ಊಟ ಮಾಡಿಸಿದ್ದ ಹರ್ಷ. ಇಬ್ಬರಿಗೂ ಬೆಳಗಿನ ಮುನಿಸು ರಮಿಸು ಯಾವುದೂ ಅರಿವಿರದೆ ಆ ದಿನದ ಎಲ್ಲಾ ಆಗುಹೋಗುಗಳನ್ನು ಯಥೇಚ್ಛವಾಗಿ ಮಾತಾಡಿದ್ದರು. ಅವನು ತನ್ನ ಕಂಪನಿ ಮೀಟಿಂಗ್ ವಿಚಾರ ಹೇಳಿದರೆ ಪರಿಧಿ ಪ್ರಸನ್ನನ ಬಗ್ಗೆ ಹೇಳಿದ್ದಳು. ಒಂದು ಗಂಟೆಗಳ ಸುಧೀರ್ಘ ಮಾತುಗಳ ನಂತರ ಕೊನೆಗೆ "ಅಂದಹಾಗೆ.. ಹರಿಣಿ ಗಿಫ್ಟ್ ನೆನಪಿದೆ ತಾನೇ" ಎಂದು ಕೇಳಿದ್ದಳು.
"ನೆನಪಿಲ್ಲದೆ ಏನು ಟೆಡ್ಡಿ ತರದೆ ಹೋದ್ರೆ ನನ್ನ ತಲೆ ಉಳಿಯಲ್ಲಂತ ಗೊತ್ತು ನಂಗೆ, ಅವಳಿಗೊಂದು ಟೆಡ್ಡಿ ಬೇರ್.. ನಿನಗೊಂದು ಜೀವಂತ ಗೊಂಬೆ.. ತಗೊಂಡೇ ಬರೋದು..."
"ಜೀವಂತ ಗೊಂಬೆ ನಾ... ಏನೋ ಅದು!!"
"ಸರ್ಪ್ರೈಜ್.. ಬಂದ ಮೇಲೆ ಗೊತ್ತಾಗುತ್ತೆ, ನಿನಗೆ ತುಂಬಾ ಇಷ್ಟವಾಗೋದು"
ನೀನು ಕ್ಷೇಮವಾಗಿ ಬೇಗ ಬಾರೋ..ಅದೇ ನನ್ನ ಪಾಲಿನ ದೊಡ್ಡ ಸರ್ಪ್ರೈಜ್ ಎಂದುಕೊಂಡಳು ಪರಿಧಿ ಮನಸ್ಸಿನಲ್ಲೇ.
ಮುಂದುವರೆಯುವುದು...
⚛⚛⚛⚛⚛⚛
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ